ಮಂಗಳವಾರ, ಜನವರಿ 6, 2026

               ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅಧಿಕೃತ ಆಕರಗಳಾಗಿ ಪಂಪಪೂರ್ವಯುಗದ 

               ಭಾಷಿಕ-ಸಾಹಿತ್ಯಕ ಮೌಲ್ಯವುಳ್ಳ ಶಾಸನಗಳು

                                             ಡಾ.ಸಿ.ನಾಗಭೂಷಣ

ಕನ್ನಡ ಭಾಷೆ-ಸಾಹಿತ್ಯದ ಪ್ರಾಚೀನತೆಯನ್ನು ಕುರಿತು ನಡೆದ ಅಧ್ಯಯನದಲ್ಲಿ  ಶಾಸನಗಳನ್ನು ಆಧರಿಸಿದ ಸಂಶೋಧನೆಯು ಮಹತ್ತರ ಪಾತ್ರ ವಹಿಸಿದೆ. ಶಾಸನಗಳು ಕಾವ್ಯವಾಗಿ ಉದ್ದಿಷ್ಟವಾಗದ ವ್ಯವಹಾರಿಕ ದಾಖಲೆಗಳು ಆಗಿರುವುದರಿಂದ ಸಹಜವಾಗಿ ಒಂದು ಭಾಷೆಯ ಆರಂಭಕಾಲದಲ್ಲಿಯೇ ಅವು ಕಾಣಿಸಿಕೊಂಡಿವೆ. ಹೀಗಾಗಿ  ಯಾವುದೇ ಭಾಷೆಯ ಮತ್ತು ಸಾಹಿತ್ಯದ ಉಗಮದ ವಿಷಯವಾಗಿ ಶಾಸನಗಳ ನೆರವು ಅಪೇಕ್ಷಣೀಯ. ಈ ಅನಿಸಿಕೆ ಕನ್ನಡ ಭಾಷೆ ಮತ್ತು ಸಾಹಿತ್ಯದ ವಿಷಯದಲ್ಲಿಯೂ ಹೊರತಲ್ಲ. ಆರಂಭಕಾಲದ ಶಾಸನಗಳಲ್ಲಿ ಭಾಷೆ ಸಂಸ್ಕೃತವಾದರೂ ಕೆಲವೆಡೆ ದತ್ತಿ ನೀಡಿದ ಭೂಮಿಯ ವಿವರಗಳು, ಮೇರೆಗಳ ವಿವರಗಳನ್ನು ಕೊಡುವಾಗ ಕನ್ನಡ ಭಾಷೆಯನ್ನು ಉಪಯೋಗಿಸಿವೆ. ಕದಂಬರ, ಬಾದಾಮಿ ಚಾಲುಕ್ಯರ, ಗಂಗರ ಹಾಗೂ ರಾಷ್ಟ್ರಕೂಟ ಅರಸುಮನೆತನಗಳ ಕಾಲದ ಶಾಸನಗಳು ಕನ್ನಡ ಭಾಷೆಯನ್ನು ಅದರಲ್ಲಿಯೂ ವ್ಯವಹಾರಿಕ ಭಾಷೆಯನ್ನು ಅಲ್ಲಲ್ಲಿ ಬಳಸಲ್ಪಟ್ಟಿವೆ.  ಶಾಸನಗಳು ಸಮಾಜದ ಅನೇಕ ವಿಷಯಗಳ ದಾಖಲೆಗಳನ್ನು ಒದಗಿಸಿದರೂ ಅದು ಭಾಷೆಯಲ್ಲಿಯೇ ಅಂತಸ್ಥಗೊಂಡಿರುತ್ತದೆ ಎಂಬುದು ಗಮನಿಸ ತಕ್ಕ ಸಂಗತಿಯಾಗಿದೆ. 9 ನೇ ಶತಮಾನಕ್ಕಿಂತ ಮುಂಚೆಯೇ ಕನ್ನಡ ಭಾಷೆಯ ಒಂದು ಸ್ಥಿತಿ (ಪೂರ್ವದ ಹಳೆಗನ್ನಡ) ಆಗಿ ಹೋಗಿರುವ ಬಗೆಗೆ ಮತ್ತು ಕ್ರಿ.ಶ.5 ನೇ ಶತಮಾನಕ್ಕಿಂತ  ಪೂರ್ವದಲ್ಲಿಯೂ ಕನ್ನಡ  ಇದ್ದಿದ್ದು ಅದು ಮೂಲ ಕನ್ನಡ ಎಂಬುದಾಗಿ ಈಗಾಗಲೇ ವಿದ್ವಾಂಸರಿಂದ  ಗುರುತಿಸಲ್ಪಟಿದೆ. ಮೂಲ ಕನ್ನಡದ ಚಹರೆಗಳನ್ನು ಆ ಕಾಲ ಘಟ್ಟದ ಶಾಸನಗಳಲ್ಲಿ ಗುರುತಿಸ ಬಹುದಾಗಿದೆ.

    ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಭಾಷಾ ವಿದ್ವಾಂಸ ಜಾರ್ಜ್ ಎಲ್.  ಹಾರ್ಟ್ ಎಂಬುವವರು ಶಾಸ್ತ್ರೀಯ ಭಾಷೆಗೆ ಈ ಕೆಳಕಂಡ ಚಹರೆಗಳನ್ನು ಗುರುತಿಸುತ್ತಾರೆ. ಭಾಷೆಯ ದಾಖಲಾದ ಇತಿಹಾಸ ಒಂದು ಸಾವಿರ ವರ್ಷಕ್ಕೂ ಪುರಾತನವಾಗಿರಬೇಕು. ಪುರಾತನ ಸಾಹಿತ್ಯ ತಲೆ ತಲೆಮಾರುಗಳ ಜನರಿಂದ ಅತ್ಯಂತ ಮೌಲಿಕ ಪರಂಪರೆಯೆಂದು ಪರಿಗಣಿತವಾಗಿರಬೇಕು. ಸಾಹಿತ್ಯ ಪರಂಪರೆ ಸ್ವೋಪಜ್ಞವಾಗಿದ್ದು, ಬೇರೆ ಭಾಷೆ- ಸಮುದಾಯದಿಂದ ಸ್ವೀಕಾರವಾಗಿರಬಾರದು. ಕ್ಲಾಸಿಕಲ್ ಭಾಷೆ ಮತ್ತು ಅದರ ಸಾಹಿತ್ಯ , ಪ್ರಸ್ತುತ ಭಾಷೆ- ಸಾಹಿತ್ಯಕ್ಕಿಂತ ಭಿನ್ನವಾಗಿರಬೇಕು. ಇವರ ಈ ಚಹರೆಗಳು ಪರಿಪೂರ್ಣವಾಗಿ ಕನ್ನಡ ಭಾಷೆಗೆ ಅನ್ವಯವಾಗುತ್ತವೆ.

    ನಮ್ಮ  ಕೇಂದ್ರ ಸರ್ಕಾರವು ಒಂದು ಭಾಷೆಯನ್ನು ಕ್ಲಾಸಿಕಲ್ ಎಂದು ಘೋಷಿಸಲು ನಿಗದಿಪಡಿಸಿರುವ ಮಾನದಂಡಗಳಲ್ಲಿ ಅತ್ಯಂತ ಪ್ರಮುಖವಾದುದು ಭಾಷೆಯ ದಾಖಲಿತ ಚರಿತ್ರೆ ಅಥವಾ ಪ್ರಾಚೀನ ದಾಖಲೆಗಳು ಸಾವಿರ ವರ್ಷಗಳಿಗೂ ಹಿಂದಿನವಾಗಿರಬೇಕು ಎಂಬುದು.  ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಕೇಂದ್ರ ಸರಕಾರ ನೇಮಿಸಿದ ತಜ್ಞರ ಸಮಿತಿಯೊಂದು ಒಂದು ಭಾಷೆಯನ್ನು ಶಾಸ್ತ್ರೀಯ ಎಂದು ಘೋಷಿಸಲು ಕೆಲವು ಮಾನದಂಡಗಳನ್ನು ಸೂಚಿಸಿತು.

· 1500-2000 ವರ್ಷಗಳಷ್ಟು ಪುರಾತನ ಲಿಪಿ ಅಥವಾ ದಾಖಲಾಗಿರುವ ಇತಿಹಾಸವಿರಬೇಕು

· ಆ ಭಾಷೆಯನ್ನಾಡುವವರು ಅನೇಕ ಪೀಳಿಗೆಗಳಿಂದ ತಮ್ಮ ಅಮೂಲ್ಯ ಪರಂಪರೆ ಎಂದು ಪರಿಗಣಿಸುವ ಪುರಾತನ ಸಾಹಿತ್ಯವಿರಬೇಕು .

· ಈ ಸಾಹಿತ್ಯ ಪರಂಪರೆ ಬೇರಾವುದೇ ಭಾಷಾ ಸಮುದಾಯದ ಕವಲಾಗಿ ಬೆಳೆಯದೆ,ತಾನೇ ತಾನಾಗಿ ಅಭಿವೃದ್ಧಿಯಾಗಿರಬೇಕು.

· ಈ ಶಾಸ್ತ್ರೀಯ ಸ್ವರೂಪದ ಪುರಾತನ ಭಾಷೆ ಹಾಗೂ ಸಾಹಿತ್ಯ, ಅವುಗಳ ಆಧುನಿಕ ಸ್ವರೂಪದಿಂದ ವಿಶಿಷ್ಟವಾಗಿದ್ದು, ಇವೆರಡು ಸ್ವರೂಪಗಳ ನಡುವಿನ ಕೆಲ ಕೊಂಡಿಗಳು ಕಳಚಿರುವ ಸಾಧ್ಯತೆಗಳೂ ಇರಬಹುದು.

ಈ ಸೂಚನೆಗಳನ್ನು ಅಂಗೀಕರಿಸಿದ ಸರಕಾರವು, 2004ರಲ್ಲಿ ಈ ಮಾನದಂಡಗಳನ್ನು ಅನ್ವಯಿಸಿ, ತಮಿಳನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿತು. ಇದರ ಹಿಂದೆಯೇ, 2005ರಲ್ಲಿ ಸಂಸ್ಕೃತಕ್ಕೂ ಈ ಪಟ್ಟವನ್ನು ನೀಡಲಾಯಿತು. ಪುರಾತನ ಹಾಗೂ ಶ್ರೀಮಂತ ಭಾಷಾ, ಸಾಹಿತ್ಯಿಕ ಪರಂಪರೆಯಿರುವ ಕನ್ನಡಕ್ಕೇಕಿಲ್ಲ ಶಾಸ್ತ್ರೀಯ ಸ್ಥಾನ ಎಂಬ ಧ್ವನಿಗಳು ದೊಡ್ಡದಾಗತೊಡಗಿದವು. ನಂತರದ ಕಾಲದಲ್ಲಿ ಅಂದರೆ 2008ಅಕ್ಟೋಬರ್  31ರಂದು ಆಗಿನ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಅವರು ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಿ ನವೆಂಬರ್  1 ರ ಕರ್ನಾಟಕ ರಾಜ್ಯೋತ್ಸವವನ್ನು ಸ್ಮರಣೀಯಗೊಳಿಸಿದರು. ಅಂತು ಕನ್ನಡ ಭಾಷೆಗೂ ಶಾಸ್ತ್ರೀಯ ಸ್ಥಾನ ಲಭಿಸಿತು.

   ಕನ್ನಡ ಶಾಸ್ತ್ರೀಯ ಸ್ಥಾನಮಾನದ ಪರಿಕಲ್ಪನೆಯ ಹಿನ್ನೆಲೆಯಲ್ಲಿ  ಕನ್ನಡದ್ದೇ ಆದ  ಒಂದು ಪರಂಪರೆಯನ್ನು, ಕನ್ನಡ ಜೀವನ ವಿಧಾನವನ್ನು, ಕನ್ನಡ ಆಹಾರ ಪದ್ಧತಿಯನ್ನು, ಕನ್ನಡ ನೈತಿಕತೆಯನ್ನು, ಕನ್ನಡಿಗರ ಗುಣಸ್ವಭಾವಗಳ ಹಿರಿಮೆಯನ್ನು ಕನ್ನಡತನವನ್ನು, ನಮ್ಮಕಲೆ, ಸಂಗೀತವನ್ನು ಹುಡುಕಿಕೊಂಡು ಗಟ್ಟಿತನ ಗೊಳಿಸಿಕೊಳ್ಳ ಬೇಕಾಗಿದೆ.   ಶಾಸ್ತ್ರೀಯ ಭಾಷಾ ಅಧ್ಯಯನವೆಂದರೆ ಕನ್ನಡದ ಬರಹ ಸಂಸ್ಕೃತಿಯನ್ನು ಅಧ್ಯಯನ ಮಾಡುವಷ್ಟೇ ಮುಖ್ಯವಾಗಿ ಮೌಖಿಕ ಸಂಪ್ರದಾಯವನ್ನು ಅಧ್ಯಯನ ಮಾಡಬೇಕಾಗುತ್ತದೆ. ಏಕೆಂದರೆ ಕನ್ನಡ ಸಾಹಿತ್ಯ ದೃಷ್ಟಿ ಈ ಎರಡೂ ಪ್ರಕಾರಗಳಲ್ಲಿ ಆಗಿದೆ. ಹಾಗಾಗಿ ಮೌಖಿಕ ಮತ್ತು ಲಿಖಿತ ಸಾಂಸ್ಕೃತಿಕ ಪಠ್ಯಗಳ ಪೂರಕ ಅಧ್ಯಯನ ಅಗತ್ಯ. ಬರಹ ಸಂಸ್ಕೃತಿಯು ಮೌಖಿಕ ಸಂಸ್ಕೃತಿಯ ಒಂದು ಅಂಗವಾಗಿಯೇ ಕೆಲಸ ಮಾಡುತ್ತಿತ್ತು.

   ಕನ್ನಡ ಭಾಷೆಯ ಶಾಸ್ತ್ರೀಯ ಅಧ್ಯಯನ ಮಾಡಲು ಹಳೆಗನ್ನಡದ ಪ್ರವೇಶ ಅತ್ಯಂತ  ಇಂದು ಮುಖ್ಯವಾಗಿ ಆಗಬೇಕಾಗಿದೆ. ಕನ್ನಡ ಭಾಷೆ ಶಾಸ್ತ್ರೀಯವಾದುದ್ದು ಎಂದು  ನಿರ್ದಿಷ್ಟ ಮಾನದಂಡದ ಹಿನ್ನೆಲೆಯಲ್ಲಿ ನಾವು ತೋರಿಸಬೇಕಾದ ಆಕರಗಳೆಂದರೆ ಶಾಸನಗಳೇ ಆಗಿವೆ.  ಕನ್ನಡ ಶಾಸ್ತ್ರೀಯ ಸ್ಥಾನಮಾನದ  ಪರಿಕಲ್ಪನೆಯ ಬಗೆಗೆ ಶಾಸನಗಳು ಒದಗಿಸುವ ಮಾಹಿತಿಗಳು ನೇರವಾಗಿ ಹಾಗೂ  ಕೆಲವೆಡೆ ಪರೋಕ್ಷವಾಗಿ ಕನ್ನಡದ ಅಸ್ತಿತ್ವದ ಹಳಮೆಯ ಬಗೆಗೆ ಮಾಹಿತಿಯನ್ನು  ನೀಡಿವೆ. ಆರಂಭಕಾಲದಲ್ಲಿ ಕನ್ನಡ ಭಾಷೆಯನ್ನು ಒಂದು ಪ್ರಮಾಣ ಬದ್ದ ಭಾಷೆ ಎಂದೋ, ರಾಜ ಮನ್ನಣೆ ಪಡೆದ ಭಾಷೆ ಎಂತಲೋ ಗುರುತಿಸಬೇಕಾದರೆ ಮತ್ತು  ಆ ಭಾಷೆಯಲ್ಲಿ   ಪ್ರಮಾಣಬದ್ಧವಾಗಿ ಮಾತನಾಡುವ ಮತ್ತು ಲಿಖಿತ ರೂಪದ ಸಾಹಿತ್ಯ ಸೃಷ್ಟಿ ಆಗಿದೆ ಎಂದು ಸಾಧಿಸಿ ತೋರಿಸುವಲ್ಲಿ ಶಾಸನಗಳ ಭಾಷೆಯ ಅಧ್ಯಯನವನ್ನೇ  ಪ್ರಮುಖ ಆಕರಗಳಾಗಿ ತೆಗೆದು ಕೊಳ್ಳ ಬೇಕಾಗುತ್ತದೆ. ಕನ್ನಡ ಶಾಸನಗಳಲ್ಲಿ ಬಳಕೆಯಾದ  ಕನ್ನಡ ಯಾವ ಬಗೆಯದ್ದು, ಪ್ರಮಾಣೀಕರಣ ರೂಪದ್ದೇ? ಆಡು ಮಾತಿನ ರೂಪದ್ದೇ? ಪ್ರಮಾಣಿಕ ರೂಪದ್ದೇ ಎಂದು ಹೇಳಿದರೂ ಅದರಲ್ಲಿ ಆಡುಮಾತಿನ ರೂಪಗಳು ದೊರೆಯುವುದಿಲ್ಲವೇ ಎಂಬ ನೆಲೆಯಲ್ಲಿ ಶಾಸನಗಳನ್ನು ಭಾಷಿಕವಾಗಿ ನೋಡಬಹುದಾಗಿದೆ. ಕನ್ನಡ ಭಾಷೆ, ನಾಡು, ಸಾಹಿತ್ಯ ಕುರಿತು ಬಗೆದಷ್ಟು ದೊರೆಯುವ ಇಂತಹ ಆಧಾರಗಳಿಂದ ಕನ್ನಡ ಭಾಷೆಯ ಪ್ರಾಚೀನತೆಯನ್ನು ಅಧ್ಯಯನ ಮಾಡಲು ಕೆಲವು ಸಾಕ್ಷ್ಯಗಳು ಸಿಕ್ಕಂತಾಗುತ್ತವೆ. ಭಾಷೆಯೇ ಇಷ್ಟು ಹಳಮೆಯನ್ನು ಪಡೆದಿದೆ ಎಂದ ಮೇಲೆ ಕನ್ನಡ ಸಾಹಿತ್ಯಕ್ಕೂ ಅಷ್ಟೇ ಇತಿಹಾಸವಿದ್ದಿರಬೇಕು. ಆದರೆ ಕನ್ನಡ ಸಾಹಿತ್ಯದ ಆರಂಭಿಕ ಘಟ್ಟವನ್ನು ಅರಿಯಲು ನಮ್ಮಲ್ಲಿ ಖಚಿತವಾದ ಆಕರಗಳು ಸಿಗುವುದಿಲ್ಲ. ನಮಗೆ ದೊರೆತಂತಹ ಆಧಾರಗಳ ಮೇಲೆ ನಮ್ಮ ಸಾಹಿತ್ಯವನ್ನು ನಿರ್ದಿಷ್ಟ ಕಾಲಘಟ್ಟದ ಮೂಲಕ ಗುರುತಿಸಿ ಅದಕ್ಕೂ ಪೂರ್ವದ ಸಾಹಿತ್ಯದ ಸತ್ವವನ್ನು ಊಹಿಸಲು ಮಾತ್ರ ಸಾಧ್ಯವಿದೆ. ಪ್ರೌಢವಾದ ಕನ್ನಡ ಭಾಷೆ ಮೊದಲಿಗೆ ಕಂಡು ಬಂದಿರುವುದು ಶಾಸನಗಳಲ್ಲಿಯೇ. ಪ್ರೌಢವಾದ ಮತ್ತು ಪ್ರಮಾಣ ರೂಪದ ಭಾಷೆಯೊಂದು ಬಳಕೆಯಾಗಬೇಕಾದರೆ ಆ ಭಾಷೆಗೆ ಒಂದು ಸಮೃದ್ಧವಾದ ಮತ್ತು ದೀರ್ಘವಾದ ಇತಿಹಾಸ ಇರಲೇ ಬೇಕು ಎಂದೆನ್ನಿಸುತ್ತದೆ. ಮೊದಲು  ಆಡು ಮಾತಿನ ರೂಪದಲ್ಲಿ ಒಂದು ಭಾಷೆಯನ್ನು ಕಾಣುತ್ತೇವೆ. ಅನಂತರ ಅದರ ಲಿಖಿತ ರೂಪದ ಪ್ರಮಾಣ ಬದ್ಧ ಭಾಷೆಯನ್ನು ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ಶಾಸನಗಳಲ್ಲಿ ಕನ್ನಡ ಬಳಕೆಯಾದ ಕಾಲ ಘಟ್ಟಕ್ಕಿಂತ ಮುಂಚೆ ಸಮೃದ್ಧವಾಗಿ ಕನ್ನಡ ಭಾಷೆ ಬೆಳೆದಿತ್ತು  ಎಂದು  ನಿರ್ಣಯಿಸ ಬಹುದಾಗಿದೆ. ಶಾಸನಗಳ  ಹಿನ್ನೆಲೆಯಲ್ಲಿ 5 ನೇ ಶತಮಾನದ ವೇಳೆಗಾಗಲೇ ಕನ್ನಡದಲ್ಲಿ ಪ್ರಮಾಣಬದ್ಧ ಕನ್ನಡ ಮತ್ತು ಆಡು ಮಾತಿನ ಕನ್ನಡದ ಎರಡು ರೂಪಗಳು ಇದ್ದವು  ಎಂದು ಹೇಳ ಬಹುದಾಗಿದೆ.

   ಕ್ರಿ.ಶ. 450ರ ದೆಂದು ಬಹಳ ಮಂದಿ ವಿದ್ವಾಂಸರು ತೀರ್ಮಾನಿಸಿರುವ ಹಲ್ಮಿಡಿ ಶಾಸನವೇ ಕನ್ನಡ ನುಡಿಯ ಅತ್ಯಂತ ಪ್ರಾಚೀನತಮ ದಾಖಲೆ. ಹಲ್ಮಿಡಿ ಶಾಸನದ ಹಿಂದು ಮುಂದಿನ ಒಂದು ಶತಮಾನದ ಅವಧಿಯಲ್ಲಿ, ದೀರ್ಘತೆ ಮತ್ತು ಪ್ರೌಢಿಮೆಯಲ್ಲಿ ಅದನ್ನು ಸರಿಗಟ್ಟುವ ಬೇರೆ ಶಾಸನಗಳಿಲ್ಲ. ಇಲ್ಲಿಯ ಪ್ರೌಢ ಭಾಷಾ ಸ್ವರೂಪವನ್ನು ಗಮನಿಸಿದರೆ, ಈ ಶಾಸನಕ್ಕಿಂತ ಕೊನೆಯಪಕ್ಷ ಎರಡು ಶತಮಾನಗಳ ಹಿಂದೆ ಕನ್ನಡ ಭಾಷೆಯ ಬರವಣಿಗೆ ಪ್ರಾರಂಭವಾಗಿರಬೇಕೆಂದೂ ಅದಕ್ಕಿಂತ ಒಂದು ಶತಮಾನದ ಹಿಂದೆಯಾದರೂ ಈ ಭಾಷೆ ಅಸ್ತಿತ್ವಕ್ಕೆ ಬಂದಿರಬೇಕೆಂದೂ ಭಾವಿಸಲು ಅಡ್ಡಿಯಿಲ್ಲ ಎಂಬ ಅನಿಸಿಕೆಯು ಕೆಲವು ವಿದ್ವಾಂಸರಿಂದ ವ್ಯಕ್ತವಾಗಿದೆ. ಇದಾದ ಮೇಲೆ ತಮಟಕಲ್ಲು ಪದ್ಯ ಶಾಸನ ದೊರೆತಿದ್ದು ಹಲ್ಮಿಡಿ ಶಾಸನದಂತೆ ಇದೂ ಸಂಸ್ಕೃತ ಭೂಯಿಷ್ಠವಾಗಿದೆ. ಗುಣ ಮಧುರನೆಂಬ ವ್ಯಕ್ತಿಯ ಪ್ರಶಸ್ತಿಯ ವಿವರಣೆ ಇದರಲ್ಲಿದೆ. ಕನ್ನಡ ಸಾಹಿತ್ಯದ ಹಳಮೆಯನ್ನು ಶೋಧಿಸಲು ಹೊರಟಾಗ ಕನ್ನಡ ಸಾಹಿತ್ಯಕ ಗ್ರಂಥಗಳು ನಮಗೆ ಹತ್ತನೆಯ ಶತಮಾನದಲ್ಲಿ ಸಿಗುತ್ತದೆ. ಒಂಬತ್ತನೇ ಶತಮಾನದ ಕವಿರಾಜಮಾರ್ಗ ಕನ್ನಡದ ಮೊದಲ ಗ್ರಂಥ ಎನಿಸಿದರೂ ಈ ಕೃತಿಯಲ್ಲಿ ಸಿಗುವ ಹಲವು ಪ್ರಮಾಣಗಳು ನಮಗೆ 9ನೇ ಶತಮಾನಕ್ಕೂ ಮೊದಲೇ ಒಂದು ಶಿಷ್ಟ ಕನ್ನಡ ಸಾಹಿತ್ಯವಿದ್ದಿತ್ತೆಂದು ನಿರೂಪಿಸುತ್ತದೆ. ಆ ಕನ್ನಡ ಸಾಹಿತ್ಯದ ಬೆನ್ನಟ್ಟಿ ಹೋದಾಗ ನಮಗೆ ಪ್ರಾಥಮಿಕ ಆಧಾರಗಳಾಗಿ ಮೂಡುವುದೇ ಶಾಸನಗಳು. ಹಲ್ಮಿಡಿ ಶಾಸನದಲ್ಲಿ ನಮಗೆ ಕನ್ನಡ ಭಾಷೆಯ ಮೊದಲ ಕುರುಹು ಸಿಗುತ್ತದೆ. ಈ ಶಾಸನದಲ್ಲಿ ಕೆಲವು ಕನ್ನಡ ಪದಗಳಿದ್ದು ಪೂರ್ವದ ಹಳಗನ್ನಡ ಭಾಷೆಯಲ್ಲಿದೆ. ಜೊತೆಗೆ ಸಾಹಿತ್ಯಾತ್ಮಕ ಹಾಗೂ ಛಂದಸ್ಸಿನ ಮೊದಲ ಉಲ್ಲೇಖ ಕ್ರಿ.ಶ 500ರ ತಮಟಕಲ್ಲಿನ ಶಾಸನದಲ್ಲಿ ಕಾಣಬಹುದು. ಆದ್ದರಿಂದ ೫ನೇ ಶತಮಾನದ ಈ ಶಾಸನಾಧರಗಳಿಂದ ದಾಖಲಿತ ಕನ್ನಡ ಸಾಹಿತ್ಯದ ಆರಂಭವನ್ನು ಗುರುತಿಸಬಹುದು. ಕರ್ನಾಟಕದ ಶಾಸನಗಳು ಸಾಹಿತ್ಯ ದಾಖಲೆಗೆ ದಾಖಲೆ ಎನಿಸಿದೆ. ಇಲ್ಲಿ ಸಾಹಿತ್ಯಕ ಗುಣದ ಪ್ರಮಾಣ ಅಧಿಕವಾಗಿರುವುದರಿಂದಲೇ ಅವುಗಳನ್ನು ನಮ್ಮ ಪ್ರಾಚೀನ ಸಾಹಿತ್ಯದ ಒಂದು ಮುಖ್ಯ ಭಾಗವೆಂದು ಪರಿಗಣಿಸಿದೆ, ಗ್ರಂಥ ಸಾಹಿತ್ಯಕ್ಕೂ ಪೂರ್ವದ ಕನ್ನಡ ಸಾಹಿತ್ಯದ ಅವಸ್ಥೆಯು ಕಂಡು ಬರುವುದು ಶಾಸನಗಳಲ್ಲಿ. ಕವಿರಾಜಮಾರ್ಗ ಮತ್ತು ವಡ್ಡಾರಾಧನೆ ಕೃತಿಗಳು ನಮಗೆ ಕನ್ನಡದಲ್ಲಿ ಲಭ್ಯವಾಗುವ ಮೊದಲ ಸಂಪೂರ್ಣ ಸಾಹಿತ್ಯ ಪ್ರತಿಗಳು. ಆದರೆ ೯ನೇ ಶತಮಾನಕ್ಕೂ ಹಿಂದಿನ ಕನ್ನಡ ಸಾಹಿತ್ಯದ ಮಜಲುಗಳನ್ನು ಅರಿಯಲು ಶಾಸನಗಳೇ ಪ್ರಮುಖ ಮಾಧ್ಯಮ. ಈ ಗ್ರಂಥಪೂರ್ವ ಕಾಲದ ಕನ್ನಡ ಸಾಹಿತ್ಯ ಅಂಶಗಳಾದ ಕನ್ನಡ ಭಾಷಾ ವೈವಿಧ್ಯತೆ, ಗದ್ಯ, ಪದ್ಯಗಳ ಚಾತುರ್ಯತೆ, ಕನ್ನಡ ಕವಿಗಳ ಸೃಜನಶೀಲತೆ, ಛಂದಸ್ಸು, ವ್ಯಾಕರಣಗಳ ಪ್ರಯೋಗತೆ ಮುಂತಾದ ಸಾಹಿತ್ಯ ಪರಿಕರಗಳಿಗೆ, ಸ್ಥಿತ್ಯಂತರಗಳ ಅರಿವಿಗೆ ಶಾಸನಗಳ ಕೊಡುಗೆ ಮಹತ್ವವಾದುದು. ಕನ್ನಡ ಸಾಹಿತ್ಯದ ಮೊದಲ ಘಟ್ಟದ ಅಧ್ಯಯನಕ್ಕೆ ಇರುವ ಪ್ರಮುಖ ಮತ್ತು ಏಕೈಕ ಮಾರ್ಗವೆಂದರೆ ಶಾಸನಗಳು ಮಾತ್ರ.   

 ಕವಿರಾಜಮಾರ್ಗದಂತಹ ಲಕ್ಷಣ ಕೃತಿಗಳನ್ನು ಪರಿಶೀಲಿಸುವವರಿಗೆ ಅದಕ್ಕೂ ಹಿಂದೆ ಕನ್ನಡದಲ್ಲಿ ರಚನೆಯನ್ನು ಮಾಡಿದ ಗದ್ಯ-ಪದ್ಯ ಕವಿಗಳ ಉಲ್ಲೇಖ ಮಾತ್ರ ವಿದಿತವಾಗುವುದಲ್ಲದೆ, ಅಂತಹ ಕವಿಗಳ ಕಾವ್ಯದ ಸ್ವರೂಪ ಯಾವ ವಿಧವಾಗಿದ್ದಿತು ಎಂಬುದನ್ನು ತಿಳಿಯುವಲ್ಲಿ ಆ ಕಾಲದ ಶಾಸನ ಸಾಹಿತ್ಯದತ್ತ ಹೊರಳಿ ನೋಡಬೇಕಾಗುತ್ತದೆ. ಕನ್ನಡ ಸಾಹಿತ್ಯ ಮತ್ತು ಭಾಷೆಯ ಪ್ರಾಚೀನತೆಯನ್ನು ಗುರುತಿಸುವಲ್ಲಿ ಶಾಸನಗಳನ್ನೇ ಅವಲಂಬಿಸಬೇಕಾಗಿದೆ. ಕವಿರಾಜಮಾರ್ಗ ಮತ್ತು ಇನ್ನಿತರ ಆಧಾರಗಳು ಕ್ರಿ.ಶ.850ಕ್ಕಿಂತ ಹಿಂದೆ ಕನ್ನಡ ಭಾಷೆ ಮತ್ತು  ಸಾಹಿತ್ಯವಿದ್ದಿತು ಎಂಬುದಕ್ಕೆ ಆಧಾರಗಳೇ ಹೊರತು ಎಷ್ಟು ಹಿಂದೆ ಎಂಬುದಕ್ಕಲ್ಲ.    ಕನ್ನಡದಲ್ಲಿ ಕ್ರಿ..450 ಮತ್ತು ನಂತರದ ಕಾಲದ ಅರಸುಮನೆತನಗಳ  ಶಾಸನಗಳು ಲಭ್ಯವಾಗಿವೆಕದಂಬರು, ಗಂಗರು, ಬದಾಮಿ ಚಾಲುಕ್ಯರು ಮತ್ತು ಶ್ರವಣ ಬೆಳಗೊಳದ ನಿಸದಿ ಶಾಸನಗಳು ಕ್ರಿ..8 ನೇ ಶತಮಾನದ ಅವಧಿಯಲ್ಲಿಯೇ ಲಭ್ಯವಿವೆ. ಬಾದಾಮಿ ಚಾಲುಕ್ಯರ ಮತ್ತು ಅದಕ್ಕೂ ಪೂರ್ವದ ಕಾಲದ ಹಲವಾರು ಕನ್ನಡ ಶಾಸನಗಳು ನಮಗೆ ಲಭ್ಯ ಇವೆ. ಇವುಗಳಿಂದ ಈ ಶಾಸನಗಳಲ್ಲಿ ಮಾತ್ರವಲ್ಲದೆ ಹೊರಗಡೆಯಲ್ಲಿಯೂ ಆ ಕಾಲದ ಕನ್ನಡ ಸಾಹಿತ್ಯದ ಸ್ವರೂಪ ಯಾವ ರೀತಿಯಲ್ಲಿ ಇದ್ದಿತು ಎಂಬುದು ಕೆಲಮಟ್ಟಿಗೆ ತಿಳುವಳಿಕೆಯಾಗುತ್ತದೆ.  7-8 ನೇ ಶತಮಾನಗಳ  ಕಾಲದಿಂದ ಕನ್ನಡ ಸಾಹಿತ್ಯ ಸ್ವತಂತ್ರವಾಗಿ ಮತ್ತು ಸುಪುಷ್ಟವಾಗಿ ಬೆಳೆದು ಬಂದಿದ್ದಿತು ಎಂಬುದಕ್ಕೆ ಶಾಸ್ತ್ರಕೃತಿ ಮತ್ತು ಪ್ರಾಚೀನ ಸಂಕಲನ  ಕೃತಿಗಳಾದ ಕವಿರಾಜಮಾರ್ಗ, ಸೂಕ್ತಿಸುಧಾರ್ಣವ, ಕಾವ್ಯಸಾರ, ಶಬ್ದಮಣಿದರ್ಪಣ ಮುಂತಾದ ಕೃತಿಗಳಲ್ಲಿ ಉಲ್ಲೇಖಿತ ರಾಗಿರುವ ಮಾರ್ಗಕವಿಗಳ ಕೃತಿಗಳು ಇಂದು ಲಭ್ಯವಿಲ್ಲ. ಕವಿರಾಜ ಮಾರ್ಗಕ್ಕಿಂತ ಪೂರ್ವದಲ್ಲಿ ದೊರೆಯುವ ಶಾಸನಗಳ ಪದ್ಯದ ಭಾಷೆಗೂ ಕವಿರಾಜಮಾರ್ಗದ ಭಾಷೆಗೂ ಸಾಕಷ್ಟು ವ್ಯತ್ಯಾಸ ಇರುವುದು ಎದ್ದು ಕಾಣುತ್ತದೆ. ಕವಿರಾಜಮಾರ್ಗದಲ್ಲಿ ಪೂರ್ವದ ಹಳಗನ್ನಡದ ಗ್ರಹಿಕೆಯನ್ನು ಕಾಣುವುದು ದುಸ್ತರವಾಗಿದೆ. ಶಾಸನ ಪದ್ಯಗಳಲ್ಲಿಯಾದರೂ ಪೂರ್ವದ ಹಳಗನ್ನಡ ಸ್ವರೂಪವನ್ನು ಗುರುತಿಸಬಹುದಾಗಿದೆ. ಈ ಶಾಸನಗಳ ಪದ್ಯಗಳಲ್ಲಿ ಸಂಸ್ಕೃತ-ಪ್ರಾಕೃತಗಳಿಂದ ಎರವಲು ಪಡೆದ ಪದಗಳೇ ಅಧಿಕೃತವಾಗಿರುವುದು ಕಂಡುಬರುತ್ತವೆಯಾದರೂ ಅಚ್ಚಗನ್ನಡ ಪ್ರಯೋಗಗಳು ಬಳಕೆಯಾಗಿವೆ.ಹಲ್ಮಿಡಿ ಶಾಸನ, ತಮಟಕಲ್ಲು ಶಾಸನ, ಬಾದಾಮಿಯ ಕಪ್ಪೆ ಅರಭಟನ ಶಾಸನ, ಶ್ರವಣ ಬೆಳಗೊಳದ 22, 76, 88ನೇ ಸಂಖ್ಯೆಯ ಶಾಸನಗಳು ಮತ್ತು ವಳ್ಳಿಮಲೆ ಶಾಸನಗಳಲ್ಲಿ ಸಂಸ್ಕೃತ ಮತ್ತು ಕನ್ನಡಗಳು ಹದವಾಗಿ ಬೆರೆತುಕೊಂಡಿರುವುದು ಕಂಡುಬರುತ್ತದೆ. ಈ ಶಾಸನ ಪದ್ಯಗಳು ಕರ್ನಾಟಕದಾದ್ಯಂತ ದೊರೆತಿರುವುದು ಅಂದಿನ ಕನ್ನಡ ಸಾಹಿತ್ಯದ ಪ್ರಮಾಣ(Standard) ಭಾಷೆಯನ್ನು ಪ್ರತಿನಿಧಿಸುತ್ತದೆ. ಅಂದಿನ ಕಾಲದ ಸಾಹಿತ್ಯಾಚಾರ್ಯರಿಂದ ಮನ್ನಣೆ ಪಡೆದ ಭಾಷೆಯ ಸ್ವರೂಪ ಬಹುಶಃ ಈ ಶಾಸನಗಳ ಪದ್ಯಗಳ ಭಾಷೆ ಯಂತಿದ್ದಿರಬಹುದು ಎಂದು ಭಾವಿಸಿದರೆ ಆರಂಭ ಕಾಲದ ಕನ್ನಡ ಸಾಹಿತ್ಯ ಕೃತಿಗಳು ಭಾಷಿಕವಾಗಿ ಹೇಗಿದ್ದವು ಎಂಬುದನ್ನು ಊಹೆ ಮಾಡಿಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಚಾರಿತ್ರಿಕವಾಗಿ ಗುರುತಿಸಬಹುದಾದರೆ ಅದಕ್ಕೆ ನಿಶ್ಚಿತವಾದ ಮಾನದಂಡವನ್ನು ಶಾಸನಗಳಲ್ಲಿ ಹುಡುಕಬಹುದು. ಅನೇಕ ಸಾಹಿತ್ಯಕ ಪರಿಕರಗಳಿಗೆ ಶಾಸನಗಳು ಆಗರವಾಗಿದೆ. ಕನ್ನಡ ಸಾಹಿತ್ಯದ ಅಧ್ಯಯನದಲ್ಲಿ ಶಾಸನಗಳನ್ನು ಮುಖ್ಯ ಆಕರಗಳಾಗಿ ಏಕೆ ಪರಿಗಣಿಸಬೇಕು ಎಂಬುದಕ್ಕೆ ಉತ್ತರವಾಗಿ ಕೆಲವು ಅಂಶಗಳನ್ನು ಹೀಗೆ ಕಾಣಬಹುದು. ಕವಿರಾಜಮಾರ್ಗ ಪೂರ್ವದ ಕನ್ನಡ ಸಾಹಿತ್ಯ ನೆಲೆ, ಸ್ವರೂಪ ಹಾಗೂ ಅವಸ್ಥಾಂತರಗಳನ್ನು ಅರಿಯಲು ಕನ್ನಡ ಶಾಸನಗಳು ಏಕಮೂಲ ಆಧಾರವಾಗಿವೆ. ಪೂರ್ವದ ಹಳೆಗನ್ನಡ ಸಾಹಿತ್ಯ ಎಂದು ಗುರುತಿಸಲು ಶಾಸನಗಳು ನೀಡುವ ಆಧಾರಗಳು ಪ್ರಮುಖ ಎನಿಸಿವೆ.

    ಕನ್ನಡ ಸಾಹಿತ್ಯದ ಪ್ರಥಮ ಘಟ್ಟದ ಅವಶೇಷಗಳೆಂದರೆ ಶಾಸನಗಳು. ಪಂಪಪೂರ್ವ ಯುಗದಲ್ಲಿ ಶ್ರೀಮಂತ ಸಾಹಿತ್ಯ ಕಂಡುಬರುವುದು ಶಾಸನಗಳಲ್ಲಿ ಮಾತ್ರ. ಕವಿರಾಜಮಾರ್ಗಕ್ಕಿಂತ ಪೂರ್ವದಲ್ಲಿ ಸಿಗುವ ಸಾಹಿತ್ಯಕ ಸಾಮಗ್ರಿಗಳೆಂದರೆ ಶಾಸನ ಸಾಮಗ್ರಿ. ಕವಿರಾಜಮಾರ್ಗದವರೆಗಿನ ಕನ್ನಡ ಸಾಹಿತ್ಯ ಚರಿತ್ರೆ ಶಾಸನ ಚರಿತ್ರೆಯೇ ಆಗಿದೆ. ಆರಂಭದ ಕನ್ನಡ ಶಾಸನಗಳಲ್ಲಿ ಕಂಡು ಬರುವ ಭಾಷೆ ಗದ್ಯಮಯವಾಗಿದ್ದು  ಸಂಸ್ಕೃತ ಮತ್ತು ಕನ್ನಡ ಎರಡನ್ನು ಒಳಗೊಂಡಿದೆ. ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಅರ್ಥಾತ್ ಪಂಪಪೂರ್ವಯುಗದ ಸಾಹಿತ್ಯದ ಸ್ವರೂಪವನ್ನು ಗುರುತಿಸುವಲ್ಲಿ ಶಾಸನಗಳನ್ನೇ ಅವಲಂಬಿಸಬೇಕಾಗಿದೆ. ನಮ್ಮ ಪ್ರಥಮ ಶಾಸನವಾದ, ಸು.450 ರ ಹಲ್ಮಿಡಿ ಶಾಸನ ಒಂದು ಗದ್ಯ ಶಾಸವೇ ಆಗಿದೆ. ಹಲ್ಮಿಡಿ ಶಾಸನದ ಭಾಷೆ ಪೂರ್ವದ ಹಳಗನ್ನಡ ಗದ್ಯವಾಗಿದ್ದು ಆಗಲೇ ಸಂಸ್ಕೃತ ಭಾಷೆಯ ಪೂರ್ಣಪ್ರಭಾವಕ್ಕೆ ಒಳಗಾಗಿರುವುದನ್ನು ಗುರುತಿಸಬಹುದಾಗಿದೆ.ಹಲ್ಮಿಡಿ ಶಾಸನದ ಈ ಗದ್ಯ ಭಾಷೆಯನ್ನು ಆಧಾರವಾಗಿಟ್ಟುಕೊಂಡು ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಕ್ರಿ.ಶ.5ನೇ ಶತಮಾನಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ. ಈ ಶಾಸನದಿಂದ ೧-೨ ಶತಮಾನಗಳ ಹಿಂದಿನಿಂದಲೂ ಕನ್ನಡ ಗ್ರಾಂಥಿಕ ಭಾಷೆಯಾಗಿ ಬೆಳೆಯತೊಡಗಿತ್ತು ಎಂದು ಊಹಿಸ ಬಹುದಾಗಿದೆ. ಈ ಕಾಲ ಸಂಸ್ಕೃತದ ಒತ್ತಡಕ್ಕೆ ಒಳಗಾದ ಕನ್ನಡದ ಪ್ರಯೋಗ ಕಾಲವೆಂದು ಹೇಳಬಹುದು. ಹಲ್ಮಿಡಿ ಶಾಸನದ ಕವಿಯು  ಉಭಯ ಭಾಷಾ ವಿಶಾರದನಾಗಿದ್ದು ಕನ್ನಡದಲ್ಲಿಯೂ ಕಾವ್ಯ ರಚಿಸ ಬಲ್ಲಷ್ಟು ಬಲ್ಲಿದ ನಾಗಿದ್ದನೆಂದು ಹೇಳ ಬಹುದಾಗಿದೆ.

   ಹಲ್ಮಿಡಿ ಶಾಸನವು ಸಂಸ್ಕೃತ ಪ್ರಾಚುರ್ಯ ಪಡೆದಿದ್ದ ಕಾಲಘಟ್ಟದಲ್ಲಿ ರಚಿತವಾದ  ಶಾಸನವಾಗಿದ್ದರೂ ಕನ್ನಡ ಭಾಷೆ ಸಂಸ್ಕೃತದ ಪೊರೆಯನ್ನು ಕಳಚಿ ಹೊರ ಬರುತ್ತಿದ್ದ ಸಂಕ್ರಮಣಾವಸ್ಥೆಯ  ಶಾಸನವಾಗಿದೆ.  ಹೀಗಾಗಿ ಈ ಶಾಸನವು ಕನ್ನಡ ಭಾಷೆ, ವ್ಯಾಕರಣ, ಸಾಹಿತ್ಯ ಮತ್ತು ಪದಪ್ರಯೋಗಗಳ ದೃಷ್ಟಿಯಿಂದ ಬಹಳಷ್ಟು ವಿದ್ವಾಂಸರ ಚರ್ಚೆಗೆ ಒಳಗಾಗಿ ಕನ್ನಡದ ಪ್ರಾಚೀನತೆಯನ್ನು ದಾಖಲಿಸುವ ಪ್ರಮುಖ ದಾಖಲೆಯಾಗಿ ಹೊರಹೊಮ್ಮಿದೆ. ಪೆತ್ತ ಜಯನ್ ಎನ್ನುವ ಪದವಂತೂ ಸಂಸ್ಕೃತ ಕನ್ನಡ ಪದಗಳ ವೈಶಿಷ್ಟ್ಯಯುತವಾದ ಸಮಾಸಪದವಾಗಿದ್ದು ಕನ್ನಡದ ಸಮನ್ವಯ ಪ್ರವೃತ್ತಿಗೆ ಪ್ರತ್ಯಕ್ಷ ನಿದರ್ಶನವಾಗಿದೆ. ಇಲ್ಲಿ ಸಂಸ್ಕೃತ-ಕನ್ನಡಗಳ ಪದಮೈತ್ರಿ ಸುಂದರವಾಗಿದೆ.

ಗದ್ಯ ಬರಹದ ಶಾಸನಗಳಲ್ಲಿ ಸಾಹಿತ್ಯದ ಸೊಗಸಿಗೆ ಹಲ್ಮಿಡಿ ಶಾಸನವೇ ಆದಿ. ಕನ್ನಡ ಭಾಷೆಯು ಕ್ರಿ.. 450 ರಲ್ಲಿಯೇ ಲಿಖಿತ ರೂಪವನ್ನು ಪಡೆಯ ಬೇಕಾದರೆ ಅದಕ್ಕಿಂತ ನೂರಾರು ವರ್ಷಗಳ ಹಿಂದೆಯೇ ಆಡು ಮಾತಿನ ರೂಪದ ಕನ್ನಡ ಭಾಷೆ ಇದ್ದಿತು ಎಂದು ಸಾಧಿಸ ಬಹುದಾಗಿದೆ. ಏಕೆಂದರೆ ಒಂದು ಭಾಷೆಯಲ್ಲಿ ಲಿಖಿತ ರೂಪದ ಭಾಷಾ ನಿರ್ಮಾಣ ಆಗ ಬೇಕಾದರೆ ಅದರಲ್ಲಿ ಅದಕ್ಕಿಂತ ಹಿಂದೆ ಆಡು ಮಾತಿನ ರೂಪ ಬಹಳ ದೀರ್ಘಕಾಲ ಇದ್ದಿರ ಬೇಕು. ಹಲ್ಮಿಡಿ ಶಾಸನದಲ್ಲಿ ಕರ್ಮಣಿ ಪ್ರಯೋಗದ ಬಳಕೆ ಆಗಿರುವುದರಿಂದ ಆ ಕಾಲಕ್ಕೆ ಕನ್ನಡ ಭಾಷೆ ಹಲವು ಪ್ರಯೋಗಗಳಿಗೆ ಆಹ್ವಾನ ನೀಡಿತ್ತು ಎಂದೇಳಬಹುದಾಗಿದೆ. ಕನ್ನಡ ಒಂದು ಸ್ವತಂತ್ರ ಭಾಷೆಯಾಗಿ ಬೆಳೆದ ಮೇಲೆ ಅನೇಕ ಶತಮಾನಗಳ ಕಾಲ ಲಿಖಿತ ರೂಪಕ್ಕಿಳಿಯದೆ ಕೇವಲ ಆಡುನುಡಿಯಾಗಿ ಉಳಿದಿದ್ದಂತೆ ತೋರುತ್ತದೆ. ಕನ್ನಡ ಭಾಷೆಯು ಕ್ರಿ.. 450 ರಲ್ಲಿಯೇ ಲಿಖಿತ ರೂಪವನ್ನು ಪಡೆಯ ಬೇಕಾದರೆ ಅದಕ್ಕಿಂತ ನೂರಾರು ವರ್ಷಗಳ ಹಿಂದೆಯೇ ಆಡು ಮಾತಿನ ರೂಪದ ಕನ್ನಡ ಭಾಷೆ ಇದ್ದಿತು ಎಂದು ಸಾಧಿಸ ಬಹುದಾಗಿದೆ. ಹಲ್ಮಿಡಿ ಶಾಸನದಲ್ಲಿ ದೊರೆತಿರುವುದು ಕೆಲವೇ ಶಬ್ದಗಳಾದರೂ ಅವು ಕನ್ನಡದ ಪ್ರೌಢ ಗದ್ಯ ರಚನೆ, ಸುಂದರವಾದ ವ್ಯಾಕರಣ, ದೇಸೀ ಪದಗಳ ಬಳಕೆ ಮುಂತಾದ ಅಂಶಗಳಿಗೆ ಪ್ರಥಮಾಧಾರಗಳು.

     ಸಂಸ್ಕೃತ ಭಾಷೆಯ ಬೆಂಬಲದಿಂದ ವಚನ ರೂಪವಾಗಿ ಪ್ರಕಟವಾದ ಹಲ್ಮಿಡಿ ಶಾಸನವು ಕನ್ನಡ ಸಾಹಿತ್ಯದ ಉಗಮದ ಕುರುಹುಗಳ ಪ್ರತೀಕವಾಗಿ ಪರಿಣಮಿಸಿದೆ.  ಇದು ಕನ್ನಡ ಭಾಷೆ ಸಾಹಿತ್ಯಗಳ ಪ್ರಾಚೀನತೆಯನ್ನು ತಿಳಿಯಲು ಪ್ರಮುಖ ಆಕರವಾಗಿರುವುದರ ಜೊತೆಗೆ  ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ದಾಖಲಿಸುತ್ತದೆ. ಕನ್ನಡದ ಮೊತ್ತಮೊದಲ ಶಾಸನವಾದ ಹಲ್ಮಿಡಿ ಶಾಸನವು ಕನ್ನಡ ಭಾಷೆಯಲ್ಲಿ ಮೊದಲ ಲಿಖಿತ ದಾಖಲೆಯೂ ಹೌದು. “ನಮಃ ಶ್ರೀಮತ್ಕದಂಬಪನ್ ತ್ಯಾಗಸಂಪನ್ನನ್ ಕಲಭೋರನಾ ಅರಿ ಕ| ಕುಸ್ಥ ಭಟ್ಟೋರನಾಳೆ ನರಿದಾವಿಳೆನಾಡುಳೆ ಮೃಗೇಶ ನಾ| ಗೇಂದ್ರಭೀಳರ್ ಭಟಹರಪ್ಪೊರ್ ಶ್ರೀ ಮೃಗೇಶ ನಾಗಾಹ್ವಯ | ರಿರ್ವರಾ ಬಟರಿಕುಲಾಮಲವ್ಯೋಮ ತಾರಾಧಿನಾಥನ್ನಳಪ | ಗಣಪಶುಪತಿಯಾ ದಕ್ಷಿಣಾಪಥ ಬಹುಶತವಹನಾ |ಹವದುಳ್ ಪಶುಪ್ರದಾನ ಶೌರ್ಯೋದ್ಯಮಭರಿತೋನ್ ದಾನಪ | ಪಶುಪತಿಯೆಂದು ಪೊಗಳ್ಪೊಟ್ಟಣ ಪಶುಪತಿ |ನಾಮಧೇಯನಾಸರೆಕ್ಕೆಲ್ಲ ಭಟಾರಿಯಾ ಪ್ರೇಮಾಲಯ | ಸುತಂಗೆ ಸೇಂದ್ರಕ ಬಣೋಭಯದೇಶದಾ ವೀರಾಪುರ ಸಮಕ್ಷ | ದೆ ಕೇಕಯ ಪಲ್ಲವರು ಕಾದೆರಿದು ಪೆತ್ತ ಜಯನಾ ವಿಜ |ಅರಸಂಗೆ ಬಾಳ್ಗಳ್ಚ್  ಪಲ್ಮಿಡಿಉಂ ಮೂಳವಳ್ಳಿಉಂ ಕೊ | ಟ್ಟಾರ್...”ಎಂಬ ಪಠ್ಯವನ್ನು ಹೊಂದಿದೆ.

   ಕದಂಬ ರಾಜನಾದ ಕಾಕುತ್ಸವರ್ಮನು ರಾಜ್ಯವಾಳುತ್ತಿದ್ದಾಗ ಸೇಂದ್ರಕ ಮತ್ತು ಬಾಣರ ಸೈನ್ಯವನ್ನೊಳಗೊಂಡ ಕದಂಬರಿಗೂ ಕೇಕೆಯ ಸೈನ್ಯವನ್ನೊಳಗೊಂಡ ಪಲ್ಲವರಿಗೂ ನಡೆದ ಒಂದು ಯುದ್ಧದಲ್ಲಿ ಭಟಾರಿಯ ಮಗನಾದ ವಿಜಾ ಅರಸನು ಮಿಗಿಲಾದ ಶೌರ್ಯದಿಂದ ಹೋರಾಡಿ ಪಲ್ಲವರನ್ನು ಪರಾಭವ ಗೊಳಿಸಲು ಆತನಿಗೆ ನರಿದಾವಿಳೆ ನಾಡಿನ ಅಧಿಕಾರಿಗಳಾದ ಮೃಗೇಶ ಮತ್ತು ನಾಗರೆಂಬುವರು ಪಲ್ಮಡಿ ಮತ್ತು ಮೂಳವಳ್ಳಿಗಳೆಂಬ ಎರಡು ಗ್ರಾಮಗಳನ್ನು ಕೊಡುಗೆಯಾಗಿ ಕೊಟ್ಟರು ಎಂಬುದು ಶಾಸನದ ಸಾರಾಂಶ. ಈ ದಾನಶಾಸನದ ಗದ್ಯ ಭಾಷೆ ಪಕ್ವವಾದುದೆಂದು ಕೆಲವರೂ ಅಪರಿಷ್ಕೃತವೆಂದು ಕೆಲವರೂ ವಾದಿಸುವುದುಂಟು. ಆದಾಗ್ಯೂ ಸಂಸ್ಕೃತದ ಪ್ರಭಾವವನ್ನೂ ಅಚ್ಚಕನ್ನಡತನವನ್ನು ಒಟ್ಟಿಗೆ ಕಂಡುಕೊಳ್ಳುಕೊಳ್ಳುವುದರ ಮೂಲಕ ಹಳಗನ್ನಡದ ಒಂದು ಮಾದರಿಯನ್ನಿಲ್ಲಿ ಕಾಣಬಹುದು.  ಹಲ್ಮಿಡಿ ಶಾಸನದಲ್ಲಿ ೨೫ ಕನ್ನಡ ಶಬ್ದಗಳನ್ನು ಹೊರತು ಪಡಿಸಿದರೆ ಉಳಿದ ಪದಗಳೆಲ್ಲವೂ ಸಂಸ್ಕೃತ ಪದಗಳು. ಹಲ್ಮಿಡಿ ಶಾಸನದ ಕವಿಯು  ಉಭಯ ಭಾಷಾ ವಿಶಾರದನಾಗಿದ್ದು ಕನ್ನಡದಲ್ಲಿಯೂ ಕಾವ್ಯ ರಚಿಸ ಬಲ್ಲಷ್ಟು ಬಲ್ಲಿದ ನಾಗಿದ್ದನೆಂದು ಹೇಳ ಬಹುದಾಗಿದೆ. ಈ ಶಾಸನದಲ್ಲಿ `ಶ್ರೀ ಮತ್ ಕದಂಬಪನ್, ತ್ಯಾಗ ಸಂಪನ್ನನ, ಕಲಭೋರ ನಾ ಅರಿ ಕಕುಸ್ಥಭಟ್ಟೋರನ್' ಅಳಪಗಣಪಶುಪತಿಯೂ ಆದ ಪಶುಪತಿ ಇತ್ಯಾದಿ ವರ್ಣನೆ ಈ ಶಾಸನದಲ್ಲಿದೆ. ಶಾಸನ ಕವಿಗೆ ಸಂಸ್ಕೃತ ಭೂಯಿಷ್ಠವಾದ ಕನ್ನಡದಲ್ಲಿ ಉಪಮೆ,ರೂಪಕ ಮೊದಲಾದ ಅಲಂಕಾರಗಳನ್ನು ಎರಕ ಹೊಯ್ಯ ಬಲ್ಲ ಸಾಮರ್ಥ್ಯವಿದ್ದುದನ್ನು ಸೂಚಿಸುತ್ತದೆ. ಈ ಗದ್ಯ ಶಾಸನದಲ್ಲಿ ಸ್ವಲ್ಪ ಮಟ್ಟಿಗೆ ಕಾವ್ಯಾತ್ಮಕ ಅಲಂಕಾರ ಉಕ್ತಿಗಳನ್ನು ಕಾಣಬಹುದಾಗಿದೆ. ಪಶುಪತಿ ಎಂಬುವನು ಬಟರಿಕುಲವೆಂಬ ಗಗನವನ್ನು ಬೆಳಗಿದ ಚಂದ್ರನೆಂಬುದನ್ನು `ಬಟರಿ ಕುಲಾಮಲವ್ಯೋಮ ತಾರಾಧಿನಾಥನ್' ಎಂಬ ರೂಪಕದಲ್ಲಿ, ಆತ ನೂರಾರು ಯುದ್ಧಗಳೆಂಬ ಯಜ್ಞಗಳಲ್ಲಿ ಶತ್ರುಗಳನ್ನು ಬಲಿಯಾಗಿ ನೀಡುವ ಶೌರ್ಯವುಳ್ಳಾತನೆಂದು ಕೀರ್ತಿಸುವಲ್ಲಿ ಕಂಡು ಬರುವ ಶ್ಲೇಷ, ವಿಜ ಅರಸನನ್ನು ಪ್ರೇಮಾಲಯ ಸುತನೆಂದು ಕರೆದಿರುವಲ್ಲಿ ಕಂಡು ಬರುವ ಅಲಂಕಾರೋಕ್ತಿ ವಿನ್ಯಾಸ ಅಲ್ಲದೆ ಈ ಶಾಸನದಲ್ಲಿ ಬರುವ ಕೊಟ್ಟಾರ್ ಎಂಬ ಕ್ರಿಯಾಪದ, ಪೊಗಳೆಪ್ಪೊಟ್ಟ(ಹೊಗಳಲ್ಪಟ್ಟ) ಎಂಬ ಕರ್ಮಣಿ ಪ್ರಯೋಗ, ಪೆತ್ತಜಯನ್(ಜಯಶಾಲಿ) ಎಂಬ ವಿಲಕ್ಷಣ ರೂಪ ಇತ್ಯಾದಿಗಳನ್ನು ಗಮನಿಸಿದರೆ `ಸಂಸ್ಕೃತದ ಪ್ರಭಾವಕ್ಕೆ ಒಳಗಾಗಿರುವ ಮತ್ತು ಸಂಸ್ಕೃತದಲ್ಲಿ ವಾಕ್ಯಗಳನ್ನು ಕಲ್ಪಿಸಿಕೊಂಡು ಅವುಗಳನ್ನು ಕನ್ನಡಕ್ಕೆ ಅನುವಾದಿಸಿರುವ ಒಬ್ಬ ಸಂಸ್ಕೃತ ವಿದ್ವಾಂಸನ ಭಾಷೆಯನ್ನು  ಅಲ್ಲಿ ಕಾಣಬಹುದಾಗಿದೆ ಎಂಬ ಎಂ.ಚಿದಾನಂದಮೂರ್ತಿಯವರ ಅನಿಸಿಕೆ ಗಮನಾರ್ಹವಾಗಿದೆ.(ಹೊಸತು ಹೊಸತು, ಪು ೫೪)  ಈ ಶಾಸನದಲ್ಲಿ ಬಳಕೆಯಾಗಿರುವ  ನಾಡುಳ್, ಅಪ್ಪೋರ್, ಇರ್ವ್ವರ್, ಎನ್ನುವ ರೂಪಗಳನ್ನು ಬಾಳ್ಗಳ್ಚ್ ಪದಗಳ ಬಳಕೆಯನ್ನು ಗಮನಿಸ ಬೇಕಾಗುತ್ತದೆ. ಹಲ್ಮಿಡಿ ಶಾಸನವು ಕನ್ನಡದ ಪ್ರಾರಂಭಿಕ ಗದ್ಯಕ್ಕೆ ಉತ್ಕೃಷ್ಟ ಮಾದರಿ ಎಂಬುದಾಗಿ ವಿದ್ವಾಂಸರಿಂದ ಪ್ರಶಂಸೆಗೆ ಒಳಗಾಗಿದೆ. ಹಲ್ಮಿಡಿ ಶಾಸನದಲ್ಲಿ ಬರುವ  ಪಲ್ಮಿಡಿಉಂ ಮೂಳವಳ್ಳಿಉಂ' ಎಂಬ ಶಿಥಿಲ ಸಂಧಿ,`ಭಟಾರಿ ಕುಲದೊನಳುಕದಮ್ಬನ್ನಳ್ದೊನ್ ಮಹಾಪಾತಕನ್' ಎಂಬ ಸಂಧಿಗ್ಧ ವಾಕ್ಯ, `ಭಟ್ಟಗ್ಗೀಗಳ್ದೆ ಒಡ್ಡಲಿಆಪತ್ತೊಂದಿವಿಟ್ಟಾರಕರ'ಎಂಬ ವಾಕ್ಯದ ತೊಡಕು, `ಬಟರಿ ಕುಲಾಮಲ ವ್ಯೋಮ ತಾರಾಧಿ ನಾಥನ್ನಳಪಗಣಪಶುಪತಿಮಾ ದಕ್ಷಿಣಾಪಥ ಬಹುಶತ ಹವಾನಾಹವದುಳ್ ಪಶುಪ್ರಧಾನ ಶೌರ್ಯೋದ್ಧಮ ಭರಿತೋನ್ದಾನ್' ಇತ್ಯಾದಿ ಸಂಸ್ಕೃತ ವಾಗಾಡಂಬರಗಳು ಈ ಗದ್ಯದ ಲಕ್ಷಣಗಳಾಗಿರುವುದರ ಜೊತೆಗೆ ಕನ್ನಡವು ಸಂಸ್ಕೃತದ ವರ್ಚಸ್ಸನ್ನು ಹೇಗೆ ಒಳಗಾಗುತ್ತಾ ಮುನ್ನೆಡೆದಿತ್ತು ಎಂಬುದನ್ನು ಸೂಚಿಸುತ್ತವೆ.  ಈ ಶಾಸನವು ಕದಂಬರ ಆಳ್ವಿಕೆ ಕುರಿತು, ಒಂದು ಯುದ್ಧದ ವಿವರ ಹಾಗೂ ನಂತರದ ಪರಿಣಾಮಗಳನ್ನು ತಿಳಿಸುತ್ತದೆ.

      ಸಂಸ್ಕೃತಭೂಯಿಷ್ಠವಾದ ಈ ಶಾಸನದಲ್ಲಿ ಸಾಮಾನ್ಯ ನಾಮಪದಗಳು, ಹಳ್ಳಿಗಳ ಹೆಸರುಗಳು ಭಾಷಾ ಹಾಗೂ ಸಾಹಿತ್ಯ ದೃಷ್ಠಿಯಿಂದ ಪ್ರಮುಖವಾಗಿದೆ. ವಿಭಕ್ತಿ ಪ್ರತ್ಯಯಗಳಾದ ಅದಾನ್, ಕಲಭೋರನಾ, ನಾಡುಳ್‌, ಆಹವದುಳ್ ಬಳಕೆಗಳು ಪೂರ್ವದ ಹಳಗನ್ನಡದ ಲಕ್ಷಣಗಳನ್ನು ತಿಳಿಸಲು ಇರುವ ವಿಶೇಷಣಗಳು ಎನ್ನಬಹುದು. ಸಂಖ್ಯಾವಾಚಕಗಳಾದ ಒನ್ದು, ಇರ್ (ಎರಡು), ಪತ್ತುಗಳು ಕನ್ನಡದವಾಗಿದೆ. ಹಲ್ಮಿಡಿಯು ತನ್ನ ಗದ್ಯದಲ್ಲಿ ಅಪರಿಚಿತವಾಗಿ, ಅನ್ಯ ಭಾಷೆಯನ್ನು ಕಲಿತಂತೆ ಸಂಸ್ಕೃತವನ್ನು ಬಳಸಿಕೊಂಡಿರುವುದನ್ನು ಗಮನಿಸಬಹುದು. ಪರಭಾಷಾ ಪ್ರಭಾವವಿದ್ದರೂ ತನ್ನತನವನ್ನು ಉಳಿಸಿಕೊಳ್ಳುವ ಗುಣವನ್ನಿಲ್ಲಿ ಕಾಣಬಹುದು.

 ಲ್ಮಿಡಿ ಶಾಸನದ ಕಾಲದಿಂದಲೇ ಕನ್ನಡ ಭಾಷೆಯು ತನ್ನದೇ ಆದ ಲಿಪಿಯನ್ನು ಗಳಿಸುವ ಯತ್ನದಲ್ಲಿತ್ತೆಂಬುದನ್ನು ಹಲ್ಲಿಡಿ ಶಾಸನವು ಅತ್ಯಂತ ಖಚಿತವಾಗಿ ದಾಖಲಿಸಿಕೊಟ್ಟಿದೆ. ಕನ್ನಡ ಭಾಷೆಯು ಕ್ರಿ.. 450 ರಲ್ಲಿಯೇ ಲಿಖಿತ ರೂಪವನ್ನು ಪಡೆಯ ಬೇಕಾದರೆ ಅದಕ್ಕಿಂತ ನೂರಾರು ವರ್ಷಗಳ ಹಿಂದೆಯೇ ಆಡು ಮಾತಿನ ರೂಪದ ಕನ್ನಡ ಭಾಷೆ ಇದ್ದಿತು ಎಂದು ಸಾಧಿಸ ಬಹುದಾಗಿದೆ. ಏಕೆಂದರೆ ಒಂದು ಭಾಷೆಯಲ್ಲಿ ಲಿಖಿತ ರೂಪದ ಭಾಷಾ ನಿರ್ಮಾಣ ಆಗ ಬೇಕಾದರೆ ಅದರಲ್ಲಿ ಅದಕ್ಕಿಂತ ಹಿಂದೆ ಆಡು ಮಾತಿನ ರೂಪ ಬಹಳ ದೀರ್ಘಕಾಲ ಇದ್ದಿರ ಬೇಕು.

   ಈ ದಾನಶಾಸನದ ಗದ್ಯ ಭಾಷೆ ಪಕ್ವವಾದುದೆಂದು ಕೆಲವರೂ ಅಪರಿಷ್ಕೃತವೆಂದು ಕೆಲವರೂ ವಾದಿಸುವುದುಂಟು. ಆದಾಗ್ಯೂ ಸಂಸ್ಕೃತದ ಪ್ರಭಾವವನ್ನೂ ಅಚ್ಚಕನ್ನಡತನವನ್ನು ಒಟ್ಟಿಗೆ ಕಂಡು  ಕೊಳ್ಳುವುದರ ಮೂಲಕ ಹಳಗನ್ನಡದ ಒಂದು ಮಾದರಿಯನ್ನಿಲ್ಲಿ ಕಾಣಬಹುದು. ಹಲ್ಮಿಡಿ ಶಾಸನವು ಕನ್ನಡದ ಪ್ರಾರಂಭಿಕ ಗದ್ಯಕ್ಕೆ ಉತ್ಕೃಷ್ಟ ಮಾದರಿ ಎಂಬುದಾಗಿ ವಿದ್ವಾಂಸರಿಂದ ಪ್ರಶಂಸೆಗೆ ಒಳಗಾಗಿದೆ. ಈ ಶಾಸನಾರಂಭದಲ್ಲಿರುವ ಸಂಸ್ಕೃತ ಶ್ಲೋಕವು ವಿಷ್ಣುಪರವಾದ ಸ್ತುತಿಯಾಗಿದೆ. ಶ್ರೀಯಿಂದ ಆಲಂಗಿಸಲ್ಪಟ್ಟ ಶಾರ್ಙ್ಗವನ್ನು ಎಳೆದು ಹಿಡಿದವನೂ ಶಿಷ್ಯರಿಗೆ ಸುದರ್ಶನನಾಗಿ ದಾನವರಿಗೆ ಕಾಲಾಂತಾಗ್ನಿಯಾಗಿರುವವನೂ ಆದ ಅಚ್ಚುತನು ಗೆಲ್ಲುತ್ತಾನೆ ಎಂದಿರುವ ವರ್ಣನೆ ಶಾಸನಕಾರನ ಉತ್ತಮ ಮಟ್ಟದ ಕವಿತಾ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ಕದಂಬರ ಆಶ್ರಯದಲ್ಲಿ ಕುಬ್ಜನಂಥ ಕವಿಗಳಿದ್ದುದರಿಂದ ಸಂಸ್ಕೃತದಲ್ಲಿ ಇಂಥಾ ಕವಿತಾ ರಚನೆ ಅಂದು ಸಹಜವಾದ ಸಂಗತಿಯಾಗಿತ್ತು.  ಈ ಶ್ಲೋಕದ ಸಹಾಯದಿಂದ ನಾವು ಈ ಶ್ಲೋಕ ರಚಕನು ಉಭಯ ಭಾಷಾ ವಿಶಾರದನಾಗಿದ್ದನೆಂದೂ ಕನ್ನಡದಲ್ಲಿಯೂ ಕಾವ್ಯ ರಚಿಸುವ ಸಾಮರ್ಥ್ಯ ಅವನಲ್ಲಿದ್ದುದು ಅಸಂಭವವಲ್ಲವೆಂದೂ ಊಹಿಸಬಹುದು.

    ಈ ವಿಷಯದಲ್ಲಿ ರಂ.ಶ್ರೀ ಮುಗಳಿಯವರ ಅನಿಸಿಕೆ ಈ ರೀತಿ ಇದೆ. `ಈ ಶಾಸನಕಾರನು ಪ್ರೌಢ ಸಂಸ್ಕೃತಕ್ಕೆ ಮಾರುವೋದ ಪಂಡಿತ ಕವಿಯೆಂಬುದನ್ನು ಅವನ ಒಂದೆರಡು ರೂಪಕಗಳೂ ಸಮಸ್ತ ಪದಗಳೂ ತಿಳಿಸುತ್ತವೆ. ಆದರೆ ಶಾಸನದ ತೀರ ಸಂಕ್ಷಿಪ್ತವಾದ ಚಾರಿತ್ರಿಕ ನಿವೇದನದಲ್ಲಿ ಕವಿತ್ವಕ್ಕೆ ಹೆಚ್ಚಿನ ಅವಕಾಶ ದೊರೆತಿಲ್ಲ. ಇದರಲ್ಲಿ ಪೆತ್ತಜಯನ್ ಎಂಬ ಸಮಾಸವೂ ಕನ್ನಡ ಸಂಸ್ಕೃತಗಳ ಚಿರಕಾಲ ಸಂಬಂಧಕ್ಕೆ ಸಾಕ್ಷಿ ಯಾಗಿದೆ. ಯಾಕೆಂದರೆ ಕನ್ನಡದ ಕ್ರಿಯ ರೂಪವೊಂದು ಸಂಸ್ಕೃತ ಶಬ್ದದೊಡನೆ ನಿರ್ದೋಷವಾಗಿ ಬೆರೆತಿರುವುದು ಸಂಬಂಧವು ಹೊಸತಾಗಿದ್ದಾಗ ಸಾಧ್ಯವಿಲ್ಲ. ಈ ಶಾಸನದಿಂದ ೧ ಮತ್ತು ನೇ ಶತಮಾನಗಳ ಹಿಂದಿನಿಂದ ಕನ್ನಡವೂ ಗ್ರಾಂಥಿಕ ಭಾಷೆಯಾಗಿ ಬೆಳೆಯ ತೊಡಗಿತು ಎಂದು ಹೇಳಬಹುದೇ ಹೊರತು ಬಹಳ ಹಿಂದಿನಿಂದಲೂ ಮೊದಲಾಗಿ ಚೆನ್ನಾಗಿ ಬೆಳೆದು ಬಲಿತ ಭಾಷೆಯಾಗಿತ್ತು. ಎಂದೆನ್ನುವಂತಿಲ್ಲ ಉಳಿದ ಪೂರ್ವದ ಹಳಗನ್ನಡ ನಿದರ್ಶನಗಳಂತೆ ಇದೂ ರೂಪಗೊಳ್ಳುತ್ತಲಿದ್ದ ಹಳಗನ್ನಡದ ಸಂಕ್ರಾಮಣಾವಸ್ಥೆಗೆ ನಿದರ್ಶನವಾಗಿದೆ. ( ರಂ.ಶ್ರೀ. ಮುಗಳಿ, ಕನ್ನಡ ಸಾಹಿತ್ಯ ಚರಿತ್ರೆ, ಪು.೧೦-೧೧, ೧೯೫೩)ಬಳಕೆಯ ಕನ್ನಡದಲ್ಲಿ ಇದಕ್ಕಿಂತ ಪೂರ್ವದಲ್ಲಿ ಸಂಸ್ಕೃತ ಪದಗಳು ಸೇರಿ ಕನ್ನಡವೇ ಎನ್ನುವಷ್ಟೇ ಒಂದಾಗಿರಬೇಕು. ಶಾಸನದ ಭಾಷೆ ಕನ್ನಡ ಸಂಸ್ಕೃತ ಭಾಷೆಗಳ ಗಾಢವೂ ವ್ಯಾಪಕವೂ ಪ್ರಾಚೀನವೂ ಆದ ಸಂಬಂಧವನ್ನು ಸ್ವಲ್ಪ ಮಟ್ಟಿಗಾದರೂ ಸಾಹಿತ್ಯಿಕ ಭಾಷೆಯ ಲಕ್ಷಣಗಳನ್ನು ತೋರಿಸುತ್ತವೆಂದು ಹೇಳುವುದಕ್ಕೆ ಅವಕಾಶವಿದೆ. ಹಲ್ಮಿಡಿ ಶಾಸನದಲ್ಲಿ ಕಂಡುಬರುವಂತಹ, ಉಪಮೇಯ, ರೂಪಕವು ಅಂಕಾರೋಕ್ತಿವಿನ್ಯಾಸಗಳೇ ನಿದರ್ಶನ. ʻಬಾಳ್ಗೞ್ಚ್’ಎಂಬ ವೀರೋಚಿತ ಪದ,ʼ `ಕುಱಿಮ್ಬಿಡಿ’ಎಂಬ ತೆರಿಗೆಯ ಪದ ಹಾಗೂ `ಪತ್ತೊನ್ದಿ’ ಎಂಬ ಗಣಿತ ವಿಧಾನವು ಕನ್ನಡ ಸಂಸ್ಕೃತಿ ಸಾಕಷ್ಟು ಹಿಂದಿನಿಂದ ಸ್ವತಂತ್ರವಾಗಿ ಬೆಳೆದು ಕೊಂಡು ಬರುತ್ತಿದ್ದುದ್ದನ್ನು ಸೂಚಿಸುತ್ತದೆ. ಇದುವರೆಗೆ ಲಭ್ಯವಿರುವ ಅತ್ಯಂತ ಪ್ರಾಚೀನ ಕನ್ನಡದ ಭಾಷಿಕ ಸ್ವರೂಪ ಅಧ್ಯಯನವನ್ನು ಮಾಡುವ  ಅಧ್ಯಯನಕಾರರೆಲ್ಲರೂ ಹಲ್ಮಿಡಿ ಶಾಸನೋಕ್ತ ಪದಗಳನ್ನು, ಹಲ್ಮಿಡಿ ಶಾಸನದ ಭಾಷಿಕ ಸ್ವರೂಪ ಲಕ್ಷಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಪದಗಳ ಭಾಷಾಮೂಲ, ಅರ್ಥ, ವ್ಯಂಜನಪ್ರಯೋಗ, ವ್ಯಾಕರಣ,ಸಂಧಿ, ವಿಭಕ್ತಿಪ್ರತ್ಯಯ, ಧಾತು, ಅಲಂಕಾರ ಹೀಗೆ ಎಲ್ಲಾ ನೆಲೆಗಳಲ್ಲಿ ಅಧ್ಯಯನ ಮಾಡಿದ್ದಾರೆ. ತನ್ನ ಕಾಲದಲ್ಲಿ ಕನ್ನಡ ನೆಲದಲ್ಲಿದ್ದ ಭಾಷೆ, ಲಿಪಿಗಳ ಅತಿಪ್ರಾಚೀನ ಸ್ವರೂಪಗಳನ್ನು ಅಧಿಕೃತವಾಗಿ ಪರಿಚಯಿಸುವಲ್ಲಿ ಸಹಕಾರಿಯಾಗಿದೆ. ಹೀಗಾಗಿ ಈ ಶಾಸನವು ಕನ್ನಡ ಭಾಷೆ, ವ್ಯಾಕರಣ, ಸಾಹಿತ್ಯ ಮತ್ತು ಪದಪ್ರಯೋಗಗಳ ದೃಷ್ಟಿಯಿಂದ ಬಹಳಷ್ಟು ವಿದ್ವಾಂಸರ ಚರ್ಚೆಗೆ ಒಳಗಾಗಿ ಕನ್ನಡದ ಪ್ರಾಚೀನತೆಯನ್ನು ದಾಖಲಿಸುವ ಪ್ರಮುಖ ದಾಖಲೆಯಾಗಿ ಹೊರಹೊಮ್ಮಿದೆ. ಈ ಅಂಶಗಳು ಕನ್ನಡದ ಶಾಸ್ತ್ರೀಯ ಸ್ಥಾನಮಾನದ ಪ್ರಾಚೀನತೆಯ ಬಲಿಷ್ಠ ಆಧಾರಗಳಾಗಿವೆ.

        ಪಂಪಪೂರ್ವ ಯಗದಲ್ಲಿ ಶ್ರೀಮಂತ ಸಾಹಿತ್ಯ ಕಂಡುಬರುವುದು ಅಥವ ಕಾವ್ಯಗುಣಗಳುಳ್ಳ ಬಿಡಿಮುಕ್ತಕಗಳು ಕಂಡುಬರುವುದು ಚಿತ್ರದುರ್ಗದ ತಮಟ ಕಲ್ಲಿನ ಶಾಸನ ಮತ್ತು ಶ್ರವಣಬೆಳಗೊಳದ ನಿಷಿಧಿಶಾಸನಗಳಲ್ಲಿ. ನಿಷಿಧಿ ಶಾಸನಗಳನ್ನು ನಾಡಿನ ಪ್ರಥಮ ಸಾಹಿತ್ಯ ಪಾಠಗಳೆಂದು ವಿದ್ವಾಂಸರು ಗುರುತಿಸಿರುವುದು ಪರಿಶೀಲನಾರ್ಹವಾಗಿದೆ.  ಪೂರ್ವ ಹಳಗನ್ನಡದ ಭಾಷೆಯನ್ನು ಒಳಗೊಂಡು ಸಾಹಿತ್ಯ ದೃಷ್ಟಿಯಿಂದ ಗಮನಾರ್ಹವಾದ ಶಾಸನವೆಂದರೆ ಚಿತ್ರದುರ್ಗ ಜಿಲ್ಲೆಯ ತಮಟಕಲ್ಲಿನ ಶಾಸನ (E.C.V 11. ಚಿತ್ರದುರ್ಗ 43) ಇದರ ಕಾಲ ನಿರ್ದಿಷ್ಟವಾಗಿ ಗೊತ್ತಿಲ್ಲವಾದರೂ ಸುಮಾರು ಐದನೆಯ ಶತಮಾನದ್ದಿರ ಬೇಕೆಂಬ ಊಹೆ ಸ್ವೀಕಾರಾರ್ಹವಾಗಿದೆ. ಕನ್ನಡ ಸಾಹಿತ್ಯ ಮತ್ತು ಕನ್ನಡ ಶಾಸನ ಸಾಹಿತ್ಯದ ಮೊದಲ ಉಪಲಬ್ಧ ಪದ್ಯವೇ ಈ ಶಾಸನ. ಪೂರ್ವದ ಹಳಗನ್ನಡದಲ್ಲಿದ್ದು, ಸಾಹಿತ್ಯಮಯವಾಗಿರುವ, ಚಿಕ್ಕದಾದ, ಚೊಕ್ಕದಾದ ಸ್ವಭಾವಚಿತ್ರವಾಗಿದೆ. ಶೌರ್ಯತೆ ಮತ್ತು ಸೌಂದರ್ಯಗಳ ಮೂರ್ತಿಯಾದ ಗುಣಮಧುರಾಂಕ ಎಂಬುವನ ವೀರತೆಯನ್ನು ವರ್ಣಿಸಿರುವ ಪ್ರಶಸ್ತಿ ಶಾಸನ. ಇಲ್ಲಿ ಈ ಪದ್ಯದ ವಿಶೇಷತೆ ಏನೆಂದರೆ ಇದರ ಛಂದೋಬಂಧ. ೪ ಪಾದವುಳ್ಳ ಈ ಪದ್ಯ ಪ್ರತಿಪಾದದಲ್ಲೂ ೧೭ ಅಕ್ಷರವುಳ್ಳ ʻಸುಮಂಗಲಿʼ ಎಂಬ ಅಪರೂಪದ ವೃತ್ತದಲ್ಲಿದೆ.  ಈ ವರ್ಣವೃತ್ತವನ್ನು ಕನಕಾಬ್ಜಿನಿ ಅಥವಾ ನರ್ಕುಟಕ ಎಂತಲೂ ಕರೆಯುವರು.

ಕ್ರಿ.ಶ. 500 ರ ಚಿತ್ರದುರ್ಗದ ತಮಟಕಲ್ಲು ಶಾಸನದಲ್ಲಿ  ಬರುವ   ಬಿಣಮಣಿ ಅಂತು ಭೋಗಿ ಎಂಬ ಶಾಸನದ ಸಾಲುಗಳು ಬಾದಾಮಿ ಚಾಲುಕ್ಯರ ಕಾಲದಲ್ಲಿಯೇ ಕನ್ನಡವು ಸಾಹಿತ್ಯದ ಅಥವಾ ಕಾವ್ಯಭಾಷೆಯಾಗಿ ವಿಕಸನ ಹೊಂದಿದ್ದಿತು ಎಂಬುದನ್ನು ಸೂಚಿಸುತ್ತದೆ.  ಈ ಕೆಲವು ಶಾಸನಗಳಿಂದ ಆರನೆಯ ಶತಮಾನದಲ್ಲಿ ಹಳೆ ಮತ್ತು ಹೊಸ ರೂಪಗಳು ಒಟ್ಟೊಟ್ಟಿಗೆ ಪ್ರಯೋಗದಲ್ಲಿದ್ದವೆಂದು ಕಂಡು ಬರುತ್ತದೆ.

   ಇದರ ಲಿಪಿ ಮತ್ತು ಭಾಷೆಗಳೆರಡೂ ಇದು ಬಹುಪ್ರಾಚೀನ ಎಂಬುದಕ್ಕೆ ಸಾಕ್ಷಿಯಾಗಿರುವುದು ಮಾತ್ರವಲ್ಲದೆ. ವೃತ್ತದ ಛಂದಸ್ಸು ಅತ್ಯಂತ ಅಪೂರ್ವವಾದುದು. ಇದರಲ್ಲಿನ ಸಂಸ್ಕೃತ ಶಬ್ದ ಬಾಹುಳ್ಯವು ಗಮನಾರ್ಹವಾಗಿರುವಂತೆ ಇದರ ಕಾವ್ಯ ಗುಣವು ಮನೋಜ್ಞವಾಗಿದೆ. ಇಂತಹ ಕಾವ್ಯಮಯವಾದ ಶಿಲಾಶಾಸನ ಹುಟ್ಟಬೇಕಾದರೆ ಅದಕ್ಕೂ ಹಿಂದೆ ಸಾಕಷ್ಟು ಸೃಷ್ಟಿ ನಡೆದಿರಬಹುದು ಎಂದು ಊಹಿಸಲು ಅವಕಾಶವಿದೆ. ಕನ್ನಡ ನಾಡಿನ ಯಾವುದೇ ಪ್ರಮುಖ ರಾಜ ಮನೆತನಕ್ಕೆ ಸೇರಿರದ ವ್ಯಕ್ತಿಯ ಗುಣ ವಿಶೇಷಗಳನ್ನು ಕುರಿತ ಕಾವ್ಯಸ್ವರೂಪದ ದಾಖಲೆಯ ಲಿಪಿಯೂ ಕನ್ನಡವೇ ಆಗಿದೆ. ಒಬ್ಬನೇ ವ್ಯಕ್ತಿಗೆ ಸಂಬಂಧಿಸಿದಂತೆ ಇರುವ ಎರಡು ಪ್ರತ್ಯೇಕ ವೀರ ಅಥವಾ ಪ್ರಶಸ್ತಿ ಶಾಸನಗಳ ಪೈಕಿ ಒಂದು ಕನ್ನಡ ಭಾಷೆ ಮತ್ತು ಲಿಪಿಯಲ್ಲೂ, ಮತ್ತೊಂದು ಸಂಸ್ಕೃತ ಭಾಷೆ ಮತ್ತು ಕನ್ನಡ ಲಿಪಿಯಲ್ಲೂ ಇವೆ. ಒಬ್ಬನೇ ವೀರನ ಎರಡು ಪ್ರಶಸ್ತಿ ಶಾಸನಗಳು ಒಂದೆಡೆಯೇ ಇರುವುದು ಒಂದು ಅಪರೂಪ ಎಂದೇ ಹೇಳಬೇಕು. ಶಾಸನದಲ್ಲಿ ದಾನ ಅಥವಾ ವೀರನ ಸಾವಿನ ಪ್ರಸ್ತಾಪ ಇಲ್ಲ. ಅಪ್ಪಟ ಗುಣ ವರ್ಣನೆ ಇದೆಶಾಸನವು ಸಂಸ್ಕೃತ ಮತ್ತು ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿದೆ.

    ಸಂಸ್ಕೃತ ಶಾಸನದ ಪಾಠ ಇಂತಿದೆ. ಮಾಸಿಕ್ಕಾಪುರಾಧಿಪತಿಯಾದ ಭಾರದ್ವಾಜ ವಂಶದ ಧನಾಗಮನ ಮಗ ಗುಣಮಧುರನು ತ್ಯಾಗವಂತನೆಂದು ಹೆಸರಾದವನು ಎಂಬ ವಿಶೇಷ ಗುಣವನ್ನು ಪ್ರಸ್ತಾಪಿಸುವ ಶಾಸನದ ಭಾಷೆ ಸಂಸ್ಕೃತ ಮತ್ತು ಲಿಪಿ ಕನ್ನಡ. ಶಾಸನದ ಪಕ್ಕದಲ್ಲೇ ಇರುವ ಗುಣಮಧುರನನ್ನೇ ಕುರಿತ ಕನ್ನಡ ಶಾಸನವೂ ಕಾವ್ಯಾತ್ಮಕವಾಗಿದೆ.

 ಬಿಣಿಮಣಿ (ಫಣಮಣಿ) ಅನ್ತುಭೋಗಿ ಬಿಣಿ (ಫಣ) ದುಳ್ಮಣಿ ವಿಲ್ಮನದೋನ್

ರಣಮುಖದುಳ್ಳೆ  ಕಾಲನರಿರ್ಕ್ಕುಮನಿದ್ದ್ಯ ಗುಣನ್

ಪ್ರಣಯಿ ಜನಕ್ಕೆ ಕಾಮನಸಿತೋತ್ಫ ವರ್ಣನವನ್

ಗುಣಮಧುರಾನ್ಕ ದಿವ್ಯಪುರುಷನ್ ಪುರುಷ ಪ್ರವರನ್

           ( ಶಾಸನ ಸಂಗ್ರಹ, ಸಂ. ಎ,ಎಂ. ಅಣ್ಣೀಗೇರಿ ಮತ್ತು ಆರ್‌ ಶೇಷಶಾಸ್ತ್ರಿ, ಪು.೨) 

  ಗುಣಮಧುರನು  ಹಣೆ(ಹೆಡೆ)ಯಲ್ಲಿ ರತ್ನವುಳ್ಳ ನಾಗನಂತೆ ಭೋಗಿ(ಸುಖಿ: ಹೆಡೆಯುಳ್ಳುದು). ಹಣೆಯಲ್ಲಿ ಭಾಗುವಿಕೆಯಿಲ್ಲದ ಮನಸ್ಸಿನವನು.(ಬಿಣದುಳ್-ಮಣಿವು-ಇಲ್-ಮನದೋನ್ಅರ್ಥಾತ್ ಶತ್ರುಗಳಿಗೆ ಎಂದಿಗೂ ತಲೆಬಾಗದ ಧೀರನು. ಯುದ್ಧದಲ್ಲಿ ತನ್ನಲ್ಲಿರುವ ಬಾಣಗಳಿಂದ ತಿವಿಯುವವನು. ನಿಂದ್ಯವಲ್ಲದ ಗುಣವುಳ್ಳವನು. ಪ್ರಣಯಿಗಳಿಗೆ ಮನ್ಮಥನು. ನೀಲೋತ್ಫಲದ ಬಣ್ಣವುಳ್ಳವನು. ದಿವ್ಯ ಪುರುಷನು. ಪೌರುಷವುಳ್ಳವರಲ್ಲಿ ಶ್ರೇಷ್ಠನು.

   ಶಾಸನದ ಮೂಲಕ ಕನ್ನಡದಲ್ಲಿ ಆರನೆಯ ಶತಮಾನದ  ಹೊತ್ತಿಗಾಗಲೇ  ಕಾವ್ಯ ಮೌಲ್ಯವುಳ್ಳ ಪದ್ಯರಚನೆ ಪ್ರಾರಂಭವಾಗಿದ್ದರ ಜೊತೆಗೆ ಸಂಸ್ಕೃತ ವರ್ಣ ವೃತ್ತಗಳನ್ನು ಬಳಸುತ್ತಿದ್ದರು ಎಂಬುದು ತಿಳಿದು ಬರುತ್ತದೆ. ಸಂಸ್ಕೃತ ಶಾಸನದಲ್ಲಿ ಪರಿಚಯಗೊಂಡ ಗುಣಮಧುರನ ಗುಣಸ್ವಭಾವಗಳನ್ನು ಕನ್ನಡ ವೃತ್ತದಲ್ಲಿ ವಿವರಿಸಲಾಗಿದೆ. ಕಾಮನಸಿತೋತ್ಫ ವರ್ಣನವನ್ ಎಂಬಲ್ಲಿ ಉಪಮೆ ಇದೆ. ಗುಣಮಧುರ ಯಾವುದೇ ಪ್ರಸಿದ್ಧ ರಾಜಮನೆತನಕ್ಕೆ ಸೇರಿದ ವ್ಯಕ್ತಿಯಲ್ಲ. ಒಂದು ಪಟ್ಟಣದ ವ್ಯಾಪ್ತಿಗೆ ಸೇರಿದ್ದ ಪ್ರದೇಶದ ಅಧಿಪತಿ ಅಷ್ಟೇ. ಇಂತಹ ವ್ಯಕ್ತಿಯ ಪ್ರಶಸ್ತಿಗೆ  ಸಂಸ್ಕೃತ ಮತ್ತು ಕನ್ನಡ ಭಾಷೆಗಳೆರಡರ  ಬಳಕೆ ಆಗಿರುವುದು ಗಮನಿಸಬಹುದು. ಇನ್ನೊಂದು ಸಂಗತಿ ಎಂದರೆ ಸಂಸ್ಕೃತ ಭಾಷೆಯಲ್ಲಿ ಕೇವಲ ಪರಿಚಯವಿದೆ. ಗುಣ ವಿಶೇಷಣಗಳು ಕನ್ನಡದಲ್ಲಿವೆ. ವಿಷಯವನ್ನು ಗಮನಿಸಿದಾಗ ಪ್ರಬಲವಾಗುತ್ತಿದ್ದ ಕನ್ನಡ ಮತ್ತು ಸಾಂಪ್ರದಾಯಿಕವಾಗಿ ಮಾತ್ರ ಬಳಕೆಯಾಗುತ್ತಿದ್ದ ಸಂಸ್ಕೃತದ ಸ್ಥಿತಿಯನ್ನು ಗಮನಿಸಬಹುದು. ಸಂಸ್ಕೃತ ಮತ್ತು ಕನ್ನಡ ಎರಡು ಭಾಷೆಗಳನ್ನು ಶಾಸನಗಳಲ್ಲಿ ಬಳಸುವ ಕ್ರಮವು ಕ್ರಿ.. ಐದನೆಯ ಶತಮಾನದ ಕೊನೆಯ ಭಾಗದಲ್ಲಿ ಕಾಣಿಸಿ ಕೊಂಡಿದೆ.    

   ಕ್ರಿ.ಶ. 700ರ  ಬಾದಾಮಿಯ ಕಪ್ಪೆ ಆರಭಟ್ಟನ ಶಾಸನವು ಕನ್ನಡ ಮತ್ತು ಸಂಸ್ಕೃತಗಳ ಮಿಶ್ರಣವಾಗಿದೆ. ಇದು ವ್ಯಕ್ತಿ ಚಿತ್ರಣ ಹಾಗೂ ಛಂದಸ್ಸಿನ ಗುಣದಿಂದ ಮಹತ್ವದ್ದಾಗಿದೆ. ಕಪ್ಪೆ ಅರಭಟ್ಟನ ವೀರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಸುಂದರವಾದ ದೇಸಿ ಛಂದಸ್ಸಾದ ತ್ರಿಪದಿ ಶಾಸನ ಅತ್ಯಂತ ಪ್ರಸಿದ್ಧಿ. ಹತ್ತು ಸಾಲುಗಳಲ್ಲಿರುವ ಈ ಶಾಸನದಲ್ಲಿ ಮೊದಲ ೨ ಸಾಲು ಗದ್ಯದಲ್ಲಿದೆ. ಉಳಿದೆಲ್ಲಾ ಭಾಗ ಪದ್ಯದಲ್ಲಿದೆ. ಹಾಗೂ ಇಲ್ಲಿಯ ೩ ತ್ರಿಪದಿಗಳು ಕನ್ನಡದ ಮೊದಲ ತ್ರಿಪದಿಗಳಾಗಿವೆ. ಇಲ್ಲಿನ ತ್ರಿಪದಿ ಕಟ್ಟುವಿಕೆಯನ್ನು ಗಮನಿಸಿದಾಗ ಈ ಶಾಸನಕ್ಕೂ ಹಿಂದೆಯೇ ತ್ರಿಪದಿಯ ಬಳಕೆಯು ಇದ್ದಿರ ಬಹುದು ಎಂದೆನಿಸುತ್ತದೆ.      ಇಲ್ಲಿಯ ಭಾಷೆಯಲ್ಲಿ ಪೂರ್ವದ ಹಳಗನ್ನಡದಿಂದ ಹಳಗನ್ನಡಕ್ಕೆ ಹೊರಳುತ್ತಿರುವ ಅಂಶವನ್ನು ಗಮನಿಸಬಹುದು.

    ಅಚ್ಛಗನ್ನಡ ದೇಶಿ ಛಂದೋರೂಪದ ಈ ಶಾಸನವು ಕನ್ನಡ ವೀರನೊಬ್ಬನ ಸುಸಂಸ್ಕೃತವಾದ ಗುಣವೈಶಿಷ್ಟ್ಯವನ್ನು ತಿಳಿಸುತ್ತದೆ. ಪ್ರಾಚೀನ ಕನ್ನಡ ಶಾಸನ ಸಾಹಿತ್ಯದಲ್ಲಿ ವ್ಯಕ್ತಿ ಚಿತ್ರಣಕ್ಕೆ ಪ್ರಾಧಾನ್ಯತೆ ದೊರೆತಿರುವುದು ಇದರಿಂದ ವ್ಯಕ್ತವಾಗುತ್ತದೆ. ಬಾದಾಮಿಯ ಶಾಸನವು ಭಾಷಾಶಾಸ್ತ್ರ, ಛಂದಸ್ಸು ಮತ್ತು ಸಾಹಿತ್ಯ ಎಂಬ ಮೂರು ನೆಲೆಗಳಿಂದಲೂ ಬಹಳ ಮುಖ್ಯವಾದುದು.  ಕನ್ನಡ ಭಾಷೆಯ ಹಳೆಗಾಲದ ಒಂದು ಅವಸ್ಥೆಯನ್ನು ತಿಳಿಯಲು ತಕ್ಕ ಸಾಮಗ್ರಿಯನ್ನು ಒಳಗೊಂಡಿದೆ.  ಈ ಅಂಶಗಳಿಂದಾಗಿ ಕನ್ನಡ ನಾಡಿನ ಸಂಸ್ಕೃತಿ ಮತ್ತು ಸಾಹಿತ್ಯಗಳ ಅಧ್ಯಯನಕಾರರು ಈ ಶಾಸನಪಾಠವನ್ನು ಆಗಾಗ ಉದ್ಧರಿಸುತ್ತ, ಅದರ ಆಶಯವನ್ನು ಆಗಾಗ ಉಲ್ಲೇಖಿಸುತ್ತ ಇರುವುದು ಕಂಡುಬರುತ್ತದೆ.    ಬಾದಾಮಿ ಶಾಸನದ ತ್ರಿಪದಿಗಳು ಆ ಕಾಲಕ್ಕಿಂತಲೂ ಹಿಂದಿನಿಂದಲೇ ಕನ್ನಡದಲ್ಲಿ ಪ್ರಚಲಿತವಾಗಿದ್ದ ಜನಪದ ಗೀತ ಸಾಹಿತ್ಯವಿದ್ದಿರಬೇಕು ಎಂಬ ಅರಿವನ್ನು ಮೂಡಿಸುತ್ತದೆ.  ಕ್ರಿ.. ಸು. 700 ಬಾದಾಮಿಯ ಕಪ್ಪೆ ಅರಭಟನ ಶಾಸನದ ಭಾಷೆಯ ಹೆಚ್ಚು ಭಾಗ ಕನ್ನಡ. ಒಟ್ಟು ಹತ್ತು ಸಾಲಿನ ಶಾಸನದಲ್ಲಿ ಎರಡು ಸಾಲು ಮಾತ್ರ ಸಂಸ್ಕೃತ ಭಾಷೆಯನ್ನು ಒಳಗೊಂಡಿದೆ. ಸಂಸ್ಕೃತ ಶಾಸನವನ್ನು ದಾಖಲಿಸಲು ಕನ್ನಡ ಲಿಪಿಯನ್ನು ಬಳಸಲಾಗಿದೆ. ಪ್ರಾಚೀನ ಕನ್ನಡ ಸಂಸ್ಕೃತಿಯ ಒಂದಂಶವನ್ನು ಕಾವ್ಯರೂಪದಲ್ಲಿ ಸಾಮಾನ್ಯ ಜನತೆಗೆ ಮನವರಿಕೆ ಮಾಡಿಕೊಡುವ ಸಾಹಿತ್ಯಾರಂಭಕಾಲದ ಆಕರ್ಷಕ ಪ್ರಯತ್ನಗಳಲ್ಲಿ ಪ್ರಮುಖವಾಗಿರುವುದು. ಪ್ರಶಸ್ತಿ ಶಾಸನದಲ್ಲಿ ಸಂಸ್ಕೃತ ಭಾಷೆಯ ಪ್ರಭಾವವು ಕೇವಲ ಒಂದು ಲೋಕ ನುಡಿಯನ್ನು ದಾಖಲಿಸಲಷ್ಟೇ ಬಳಕೆ ಆಗಿದೆ. ವರನ್ತೇಜಸ್ವಿನೋ ಮೃತ್ಯುರ್ನತುಮಾನಾವ ಖಡ್ಣನಮ್ , ಮೃತ್ತ್ಯುಸ್ತತ್ಕ್ಷಣಿಕೋದುಃಖ ಮ್ಮಾನಭನ್‌ ದಿನೇದಿನೇತಮಟ ಕಲ್ಲಿನ ಶಾಸನದನಂತರ ಕಾವ್ಯಾತ್ಮಕ ಶೈಲಿಯಲ್ಲಿರುವ ಶಾಸನ ಇದಾಗಿದೆ. ಜೊತೆಗೆ ಶಾಸನವು ಒಂದು ಸಾಹಿತ್ಯ ರೂಪವನ್ನು ಮತ್ತು ಎರಡು ಭಾಷೆಯನ್ನು ಒಳಗೊಂಡಿದೆ. ಇದು ಕನ್ನಡ ಮತ್ತು ಸಂಸ್ಕೃತಗಳಲ್ಲಿ ರಚಿತವಾಗಿರುವ ದ್ವಿಭಾಷಾ ಶಾಸನ. ಶಾಸನ ಪಾಠದಲ್ಲಿ ಕನ್ನಡ ಪ್ರಭಾವವೇ ಅಧಿಕ. ಅಲ್ಲದೆ  ಕಾಲದ ಜನರ ಪಾಂಡಿತ್ಯ ಮತ್ತು ದ್ವಿಭಾಷೆಗಳ ಮೇಲೆ ಇರತಕ್ಕ ಹಿಡಿತವನ್ನು ಸೂಚಿಸುತ್ತದೆ. ಈ ಶಾಸನದಲ್ಲಿ ಬಳಸಿರುವ ಕನ್ನಡವು ಪೂರ್ವದ ಹಳಗನ್ನಡವು ಹಳಗನ್ನಡವಾಗಿ ಪರಿವರ್ತನೆಯಾಗುತ್ತಿದ್ದ ಹಂತಕ್ಕೆ ಸೇರಿದ್ದು,  ಪದರಚನೆ ಮತ್ತು ವಾಕ್ಯರಚನೆಗೆ ಸಂಬಂಧಿಸಿದ ಕೆಲವು ಅಂಶಗಳು ಈ ಸಂಗತಿಯನ್ನು ಸ್ಪಷ್ಟಪಡಿಸುತ್ತವೆ. ಕ್ರಿ.ಶ. 7ನೆಯ ಶತಮಾನದ ಬಾದಾಮಿ ಶಾಸನವು ಅನೇಕ ಕಾರಣಗಳಿಗಾಗಿ ಮುಖ್ಯವಾಗಿದೆ. ಕಪ್ಪೆ ಅರಭಟ್ಟನನ್ನು ಕುರಿತ ಪದ್ಯಗಳೆಲ್ಲವೂ ಕನ್ನಡದಲ್ಲಿ ಮತ್ತು ಆ ಭಾಷೆಯ ಅತ್ಯಂತ ಹಳೆಯದಾದ ಛಂದೋರೂಪಗಳಲ್ಲಿ ಒಂದಾದ ತ್ರಿಪದಿಯಲ್ಲಿ ರಚಿತವಾಗಿವೆ. ಬಾದಾಮಿ ಶಾಸನವು ಹತ್ತು ಸಾಲುಗಳಲ್ಲಿ ಸುಮಾರು ಐವತ್ತು ಪದಗಳಲ್ಲಿ ಕೆತ್ತಲ್ಪಟ್ಟಿದೆ. ಇದು ಎಂಟನೆಯ ಶತಮಾನದ ಬಾದಾಮಿ ಚಾಳುಕ್ಯರ ಲಿಪಿಯನ್ನು ಬಹುಮಟ್ಟಿಗೆ ಹೋಲುತ್ತಿರುವುದನ್ನು ಲಿಪಿ ಶಾಸ್ತ್ರಜ್ಞರು ಗುರುತಿಸಿದ್ದಾರೆ ಈ ಶಾಸನ ರೂವಾರಿಯೂ   ಸಮರ್ಥ ಲಿಪಿಕಾರನೂ ಶಿಲ್ಪಿಯೂ ಆಗಿದ್ದನಲ್ಲದೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳನ್ನು ಬಲ್ಲವನೂ ನಾಗರೀ ಲಿಪಿಯ ಬಗೆಗೆ ತಿಳಿವಳಿಕೆ ಉಳ್ಳವನು ಆಗಿದ್ದಾನೆ.  ಸಂಸ್ಕೃತ ಭಾಷೆಯ  ದಟ್ಟವಾದ ಪ್ರಭಾವ ಮತ್ತು ಸಂಸ್ಕೃತ-ಕನ್ನಡ ಪದಗಳ ವ್ಯವಸ್ಥಿತ ಬಳಕೆ ಇಲ್ಲಿ ಎದ್ದುಕಾಣುತ್ತದೆ.  ʻಸುಮಾರು ಐವತ್ತು ಪದಗಳಲ್ಲಿ, ಹದಿನೆಂಟು ಸಂಸ್ಕೃತ, ಹನ್ನೆರಡು ಸಂಸ್ಕೃತ-ಕನ್ನಡಮಿಶ್ರ ಪದಗಳನ್ನು (ಅಂದರೆ ಒಟ್ಟಾರೆ ಮೂವತ್ತುಸಂಸ್ಕೃತ ಮೂಲಪದಗಳ) ಮತ್ತು ಹತ್ತೊಂಬತ್ತುಕನ್ನಡ ಪದಗಳನ್ನು ಇಲ್ಲಿ ಗುರುತಿಸಬಹುದು.ಒಂದೆರಡು ಕನ್ನಡ ಪದಗಳು ತಮ್ಮ ಪ್ರಾಕೃತಬೇ ರುಗಳನ್ನು (ಉದಾ. ಸಿಂಘ) ಪ್ರದರ್ಶಿಸಿರುವುವು. ಪದ ಬಳಕೆಯಲ್ಲಿ ಎದ್ದುಕಾಣುವ ಅಂಶಗಳೆಂದರೆ ಅನುಸ್ವಾರ (ಮಾಧುರ್ಯಮ್) ಮತ್ತು ಅನುನಾಸಿಕ (ಮಾಧುರ್ಯನ್‌), ವ್ಯಂಜನಾಂತ್ಯ (ವರನ್, ಈತನ್)ಮತ್ತು ಶಕಟರೇಫ (ಪೆನ್, ಅದಂತೆ)ಗಳು( ಹಳಗನ್ನಡ ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ ಸಂ: ಷ.ಶೆಟ್ಟರ್‌, ಪು. ೨೮೪)

ಈ ಶಾಸನದಲ್ಲಿ  ಕಂಡು ಬರುವ ಕೆಲವು ವಿಶೇಷತೆಗಳನ್ನು ಈಗಾಗಲೇ ವಿದ್ವಾಂಸರು  ಗುರುತಿಸಿದ್ದಾರೆ.   ಈ ಶಾಸನದಲ್ಲಿ  ಕಂಡು ಬರುವ ಶುದ್ಧ ಸಂಸ್ಕೃತ ಪದಗಳು, ಕನ್ನಡಾಂತ್ಯ ಸಂಸ್ಕೃತ ಪದಗಳು ಮತ್ತು ಶುದ್ಧ ಕನ್ನಡ ಪದಗಳು ಈ ಕೆಳ ಕಂಡಂತಿವೆ.

1. ಶುದ್ಧ ಸಂಸ್ಕೃತ ಪದಗಳು: ಶಿಷ್ಟಜನ (ಸಾ.1), ಕಷ್ಟಜನ, ಕಲಿಯುಗ (ಸಾ.2), ವರನ್-ತೇಜಸ್ವಿನೋ, ಮೃತ್ಯುರ್ನತು, ಮಾನಾವಖಂಡನಂ (ಸಾ,3), ಮೃತ್ಯುಸ್, ತ್ಷ್ಕಣಿಕೋ, ದುಃಖಮ್, ಮಾನಭಂಗನ್‌, ದಿನೇದಿನೇ (ಸಾ.4), ಸಾಧು, ಮಾಧುರ್ಯಮ್ (ಸಾ. 5), ಕಲಿಯುಗ ವಿಪರೀತನ್,

2. ಕನ್ನಡಾಂತ್ಯ ಸಂಸ್ಕೃತ ಪದಗಳು : ಅರಭಟ್ಟನ್, ಪ್ರಿಯನ್ (ಸಾ.1), ವಿಪರೀತನ್,ವರ್ಜಿತನ್‌ (ಸಾ. 2), ಸಾಧುಗೆ, ಮಾಧುರ್ಯ್ಯನ್ (ಸಾ. ), ಕಲಿಗೆ (ಸಾ. 6,7,9), ಇ (ಸಾ. 8) ವಿಪರೀತನೆ, ಅಹಿತರ್ಕ್ಕಳ್ (ಸಾ.10).

3. ಶುದ್ಧ ಕನ್ನಡ ಪದಗಳು: ಕಪ್ಪೆ (ಸಾ.1), ಬಾದಿಪ್ಪ (ಸಾ. 5) ಈತನ್, ಪೆನಲ್ಲ (ಸಾ.6), ಒಳ್ಳಿತ್ತ, ಕೆಯ್ಯೋರ, ಮೊಲ್ಲದುಮ್, ಅದರಂತೆ, ಬಲ್ಲಿತ್ತು (ಸಾ. 7), ಸಂದಿಕ್ಕುಮ್-ಅದು-ಒಂದು (ಸಾ. 8), ಕಟ್ಟಿದ, ಸಿಂಘಮನ್, ಕೆಟ್ಟೊಡ್, ಏನ್-ಎಮಗೆಂದು, ಬಿಟ್ಟವೊಲ್ (ಸಾ. 9), ಸತ್ತರ್, (ಸಾ. 10),

 ಆ ಶಾಸನದಲ್ಲಿಯ ಒಳ್ಳಿತ್ತು, ಪೊಲ್ಲದ, ಬಲ್ಲಿತ್ತು, ಕಟ್ಟೋದೇನ್, ಎಮಗೆಂದು ಎನ್ನುವ ಪದಗಳು ಕನ್ನಡತನಕ್ಕೆ ಸಾಕ್ಷಿಯಾಗಿವೆ.

 ಭಾಷಿಕ ದೃಷ್ಟಿಯಿಂದ ಹೇಳುವುದಾದರೇ ಪುಲ್ಲಿಂಗವಾಚಿ ಇನ್ ಪ್ರತ್ಯಯ ಇಲ್ಲಿ ಬಳಕೆಯಾಗಿದೆ.

ಉದಾ: ಅರಭಟ್ಟನ್, ವಿಪರೀತನ್, ಈತನ್, ಪೆರನ್ ಇತ್ಯಾದಿ

ಅನುಸ್ವಾರದ ಬದಲಿಗೆ ಅಗತ್ಯಕ್ಕೆ ತಕ್ಕಂತೆ ಅನುನಾಸಿಕಗಳನ್ನು ಬಳಸಲಾಗಿದೆ.

 ನಿದರ್ಶನಕ್ಕೆ: ಖಣ್ಡನಂ, ಮಾಧುರ್ಯಂಗೆ ಇತ್ಯಾದಿ

ಪದಾಂತ್ಯದಲ್ಲಿ ವ್ಯಂಜನಾಂತ್ಯಗಳು ಇಲ್ಲಿ  ಬಳಕೆಯಾಗಿವೆ ಆದರೆ 12 ನೇಶತಮಾನನಂತರದಲ್ಲಿ ಬಹು ಮಟ್ಟಿಗೆ ಸ್ವರಾಂತ್ಯಗಳೇ ಬಳಕೆಯಾಗಿವೆ. ಭಟ್ಟನ್, ವರನ್, ತತ್, ಈತನ್, ಪೆರನ್, ಆರ್, ಅಹತರ್, ಸತ್ತರ್ ಇತ್ಯಾದಿ. ಈ ಶಾಸನದಿಂದ ಪೂರ್ವದ ಹಳಗನ್ನಡವು ಹಳಗನ್ನಡಕ್ಕೆ ವಾಲುತ್ತಿರುವುದನ್ನು ಕಾಣಬಹುದು. ಸಜ್ಜನಿಕೆ, ಗಾಂಭೀರ್ಯ, ಶೌರ್ಯ ಇವು ಮುಪ್ಪುರಿಗೊಂಡಿದ್ದ ಕನ್ನಡಿಗ ವೀರನೊಬ್ಬನ ವ್ಯಕ್ತಿ ಚಿತ್ರವನ್ನು ಪ್ರಸ್ತುತಶಾಸನ ನಮ್ಮ ಕಣ್ಣೆದುರು ಕಟ್ಟಿ ನಿಲ್ಲಿಸಲು ಸಮರ್ಥವಾಗಿದೆ; ಕರ್ತೃಮಾತ್ರ ಅಜ್ಞಾತದಲ್ಲಿ ಸೇರಿದ್ದಾನೆ. ತ್ರಿಪದಿಯ ಮಟ್ಟಿನ ಮೊಟ್ಟ ಮೊದಲನೆಯ ರೂಪವು ಅದರಲ್ಲಿದೆ. ‘ಒಬ್ಬ ಕನ್ನಡ ವೀರನ ಆವೇಶಯುತವಾದ ಸ್ವಭಾವಚಿತ್ರವು ಅಲ್ಲಿದೆ. ಅದರಲ್ಲಿ ಭಾವ ಭಾಷೆಗಳ ಯೋಗ್ಯ ಮಿಲನವುಳ್ಳ ಸ್ವಯಂ ಪೂರ್ಣವಾದ ಭಾವಗೀತೆಯ ಸತ್ವವೂ ತುಂಬಿದೆ.’ ಬಾದಾಮಿ ಶಾಸನದ ಕನ್ನಡ ಹಳಗನ್ನಡವಾದರೂ, ಅದು ಬೇಗ ಅರ್ಥವಾಗದಷ್ಟು ಕಷ್ಟಪದಗಳಿಂದ ಕೂಡಿದ್ದೇನಲ್ಲ. ಕ್ರಿ.ಶ. 7ನೆಯ ಶತಮಾನದ ಬಾದಾಮಿ ಶಾಸನವು ಅನೇಕ ಕಾರಣಗಳಿಗಾಗಿ ಮುಖ್ಯವಾಗಿದೆ. ಆದರೆ, ಕಪ್ಪೆ ಅರಭಟ್ಟನನ್ನು ಕುರಿತ ಪದ್ಯಗಳೆಲ್ಲವೂ ಕನ್ನಡದಲ್ಲಿ ಮತ್ತು ಆ ಭಾಷೆಯ ಅತ್ಯಂತ ಹಳೆಯ ಛಂದೋರೂಪಗಳಲ್ಲಿ ಒಂದಾದ ತ್ರಿಪದಿಯಲ್ಲಿ ರಚಿತವಾಗಿವೆ. ಈ ಶಾಸನವು ಕನ್ನಡದಲ್ಲಿ ಸಿಕ್ಕಿರುವ ಮೊಟ್ಟಮೊದಲ ತ್ರಿಪದಿಗಳನ್ನು ಒಳಗೊಂಡಿದೆ. ಈ ಶಾಸನದಲ್ಲಿ ಬಳಸಿರುವ ಕನ್ನಡವು ಪೂರ್ವದ ಹಳಗನ್ನಡವು ಹಳಗನ್ನಡವಾಗಿ ಪರಿವರ್ತನೆಯಾಗುತ್ತದ್ದ ಹಂತಕ್ಕೆ ಸೇರಿದ್ದು, ಪದರಚನೆ ಮತ್ತು ವಾಕ್ಯರಚನೆಗೆ ಸಂಬಂಧಿಸಿದ ಕೆಲವು ಅಂಶಗಳು ಈ ಸಂಗತಿಯನ್ನು ಸ್ಪಷ್ಟಪಡಿಸುತ್ತವೆ. ಅಪಕೀರ್ತಿಗಿಂತ ಮರಣವೇ ಲೇಸು’ ಎಂದು ಬಗೆಯುತ್ತಿದ್ದ ಕಪ್ಪೆ ಅರಭಟ್ಟನೆಂಬ ಸಾಧುಪುರುಷನ ಕೀರ್ತಿಯನ್ನು ಕನ್ನಡದಲ್ಲಿ ತ್ರಿಪದಿಗಳಲ್ಲಿ  ವರ್ಣಿಸಿದೆ. ಹಲ್ಮಿಡಿ ಮತ್ತು ಬಾದಾಮಿ ಶಾಸನಗಳು ಕನ್ನಡ ಸಾಂಸ್ಕೃತಿಕ ಚರಿತ್ರೆಯ ಎರಡು ನಿರ್ಣಾಯಕ ಘಟ್ಟಗಳನ್ನು ಪ್ರತಿನಿಧಿಸುತ್ತವೆ.  ಈ ಎರಡು ಶಾಸನಗಳ ನಡುವಿನ ಹಾದಿಯು, ಕನ್ನಡ ಪ್ರಜ್ಞೆಯು ಸಾಂಸ್ಥಿಕ ಮತ್ತು ವ್ಯಾವಹಾರಿಕ ಚೌಕಟ್ಟನ್ನು ಭೇದಿಸಿ ವೈಯಕ್ತಿಕ ಶೌರ್ಯ, ನೈತಿಕ ಆದರ್ಶ ಮತ್ತು ಕಾವ್ಯಾತ್ಮಕ ಅಭಿವ್ಯಕ್ತಿಯೆಡೆಗೆ  ಸಾಗಿದೆ ಎಂಬುದನ್ನು   ಸೂಚಿಸುತ್ತದೆ. ಈ ಶಾಸನದ ಭಾಷೆಯು ಆಡಳಿತಾತ್ಮಕ ದಾಖಲೆ ಯಿಂದ ಕಾವ್ಯಾತ್ಮಕ ಅಭಿವ್ಯಕ್ತಿಗೆ ಪರಿವರ್ತನೆಗೊಂಡಿರುವುದನ್ನು ಸಂಕೇತಿಸುತ್ತದೆ. ಹಲ್ಮಿಡಿ ಶಾಸನವು ಶಾಸನದ ಮೂಲಕ ಕನ್ನಡದ ಅಕ್ಷರ ಪರಂಪರೆಗೆ ಪ್ರಾಚೀನ ತಳಪಾಯವನ್ನು ಹಾಕಿದರೆ, ತಳಪಾಯದ ಮೇಲೆ ರೂಪುಗೊಂಡ ಮೊದಲ ಕಾವ್ಯಶಿಲ್ಪವಾಗಿ ಬಾದಾಮಿ ಶಾಸನ ಕಂಡು ಬರುತ್ತದೆ. ಎರಡುನೂರ ಐವತ್ತು ವರ್ಷಗಳ ಅವಧಿಯಲ್ಲಿ ಕನ್ನಡ ನಾಡಿನ ರಾಜಕೀಯ ಮತ್ತು ಸಾಂಸ್ಕೃತಿಕ ವಿಚಾರಧಾರೆಗಳು ತಲುಪಿದ ಮಹತ್ವಪೂರ್ಣ ಬೆಳವಣಿಗೆಗೆ ಈ ಎರಡೂ ಶಾಸನಗಳು  ಮಾದರಿಯಾಗಿರುವುದನ್ನು ನಾವು ಮನಗಾಣಬಹುದಾಗಿದೆ

    ಶ್ರವಣಬೆಳ್ಗೊಳದ ಬಿಡಿಮುಕ್ತಕಗಳಂತಿರುವ ನಿಸದಿ ಶಾಸನಗಳಲ್ಲಿ ಕೆಲವು ಒಳ್ಳೆಯ ಕಾವ್ಯದ ತುಣುಕುಗಳೇ ಆಗಿವೆ. ಕ್ರಿ.ಶ. 7ನೆಯ ಶತಮಾನದ ಶ್ರವಣ ಬೆಳಗೊಳದ ಈ ಶಾಸನವು ಸನ್ಯಸನ ವಿಧಿಯಿಂದ ದೇಹತ್ಯಾಗ ಮಾಡಿದ ಮುನಿಯೊಬ್ಬನನ್ನು ಕುರಿತ ಸಂಗತಿ ಅಥವಾ ನಿರೂಪಣೆಗೆ ಮಾತ್ರ ಸೀಮಿತವಾಗದೆ ಕಾವ್ಯೋಚಿತವಾದ ಉಪಮೆರೂಪಕಗಳ ಮೂಲಕ ಆ ಸನ್ನಿವೇಶವನ್ನು ಕಾವ್ಯಮಯವಾಗಿ ವರ್ಣಿಸುವ ಉದ್ದೇಶವುಳ್ಳದ್ದಾಗಿದೆ. ಈ ಶಾಸನಗಳನ್ನು ಬರೆದವರು ಕಾವ್ಯರಚನೆಯನ್ನು ಬಲ್ಲವರಾಗಿರಬೇಕು.      

ಸುರಚಾಪಂಬೊಲೆ ವಿದ್ಯುಲ್ಲತೆಗಳ ತೆರವೋಲ್ ಮಂಜುವೋಲ್ ತೋರಿ ಬೇಗಂ

ಪಿರಿಗುಂ ಶ್ರೀ ರೂಪ ಲೀಲಾ ಧನ ವಿಭವ ಮಹಾರಾಶಿಗಳ್ನಿಲ್ಲವಾರ್ಗ್ಗಂ

ಪರಮಾರ್ಥಂ ಮೆಚ್ಚೆನಾನೀ ಧರಿಣಿಯುಳಿರವಾನೆನ್ದು ಸನ್ಯಾಸನಂಗೆ

ಯ್ದುರು ಸತ್ವನ್ ನಂದಿಸೇನ ಪ್ರವರ ಮುನಿವರನ್ ದೇವಲೋಕಕ್ಕೆ ಸನ್ದಾನ್||  ( ಶಾಸನ ಸಂಗ್ರಹ, ಸಂ. ಎ,ಎಂ. ಅಣ್ಣೀಗೇರಿ ಮತ್ತು ಆರ್‌ ಶೇಷಶಾಸ್ತ್ರಿ, ಪು.೫) 

   ಆಧ್ಯಾತ್ಮಿಕ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಯತಿಯೊಬ್ಬರ ಮನಸ್ಸು ಲೋಕದ ಸೌಂದರ್ಯ ಮತ್ತು ಸಂಪತ್ತು ರೂಪ ವೈಭವಗಳು ಸುರಚಾಪದಹಾಗೆ ಮಿಂಚಿನ ಬಳ್ಳಿಗಳಹಾಗೆ ಮಂಜಿನ ಹಾಗೆ ಕ್ಷಣಾರ್ಧದಲ್ಲಿ ಇಲ್ಲವಾಗುತ್ತವೆ, ಎಂಬ ಅಚಲ ನಿರ್ಧಾರವನ್ನು ತೆಗೆದುಕೊಂಡು ಸನ್ಯಾಸನ ವಿಧಿಯಿಂದಾಗಿ ದೇವಲೋಕಕ್ಕೆ ಸಂದ ಸಂಗತಿಯನ್ನು ಕ್ರಮಬದ್ಧವಾಗಿ ವರ್ಣಿಸುತ್ತದೆ. ಕವಿರಾಜಮಾರ್ಗದ ಪೂರ್ವದಲ್ಲಿಯೆ ಲಭ್ಯವಿರುವ ಶಾಸನ ಪದ್ಯ ನಿಜಕ್ಕೂ ಅಂದಿನ ಕನ್ನಡ ಕಾವ್ಯಸಾಧನೆಯ ದಾಖಲೆಯಾಗಿ ಕಂಡಿದ್ದುಕನ್ನಡದ ನಿಜವಾದ ಶಾಸನಕಾವ್ಯಎಂದು ಕರೆಯಬಹುದಾಗಿದೆ. ಮನುಷ್ಯನ ಜೀವನ ಹಾಗೂ ಅದರ ಸುಖ ಭೋಗಗಳು ನಶ್ವರವೆಂಬುದನ್ನು ಸಂಕೇತಿಸುವ ಸುರಚಾಪ (ಕಾಮನಬಿಲ್ಲು) ಮಿಂಚಿನ ಬಳ್ಳಿ (ವಿದ್ಯುಲತೆ) ಮಂಜಿನ ಹನಿ ಇತ್ಯಾದಿ ರೂಪಕಗಳು ಶ್ರವಣಬೆಳಗೊಳದ ಶಾಸನದಲ್ಲಿ ಕಾವ್ಯಮಯವಾಗಿ ಅಭಿವ್ಯಕ್ತಗೊಂಡಿದೆ. ನಂದಿಸೇನ ಮುನಿಯು ಸಲ್ಲೇಖನ ವ್ರತದಿಂದ ದೇಹತ್ಯಾಗ ಮಾಡಿದ ಸಂದರ್ಭದ ವರ್ಣನಾ ಶಾಸನ. ಇದು ೪ ಸಾಲುಗಳ ಮಹಾಸ್ರಗ್ದರಾವೃತ್ತದಲ್ಲಿ ಮೂಡಿರುವ ಶಾಸನ. ಸಿರಿ, ಸಂಪತ್ತು, ವೈಭವಗಳ, ಪ್ರಪಂಚದ ನಶ್ವರತೆಯನ್ನು ಸುಂದರವಾದ ಉಪಮೆಗಳ ಮೂಲಕ ನಾಟಕೀಯವಾಗಿ, ಪರಿಣಾಮಕಾರಿಯಾಗಿ ಅಭಿವ್ಯಕ್ತಪಡಿಸಿದೆ. ಶಾಸನ ಪದ್ಯದಲ್ಲಿಯ ಬದುಕಿನ ನಶ್ವರ ಮನೋಹರತೆಯನ್ನು ವರ್ಣಿಸುವ, ವೈರಾಗ್ಯಪರವಾದ ಭಾವವನ್ನು ಹೇಳುವ ಉಪಮಾ ಸಾಮಗ್ರಿಯಲ್ಲಿಯ ಅಭಿವ್ಯಕ್ತಿಗೆ ನಂತರದ  ಜೈನಕವಿಗಳು ಪ್ರಭಾವಿತರಾಗಿದಾರೆಂದು ಖಚಿತವಾಗಿ ಹೇಳಬಹುದು.ಕನ್ನಡದ ಪ್ರಮುಖ ಚಂಪೂ ಕವಿಗಳಾದ ಪಂಪ, ದುರ್ಗಸಿಂಹ, ಹಾಗೂ ಜನ್ನರ ಕಾವ್ಯಗಳಲ್ಲಿ ಅನುರಣನಗೊಂಡಿರುವುದನ್ನು ಮನಗಂಡರೆ ಕ್ರಿ.. 7ನೇ ಶತಮಾನದ ಶಾಸನದಲ್ಲಿಯೇ ಪದ್ಯ ಸಾಹಿತ್ಯದ ದೃಷ್ಠಿಯಿಂದ ಮಹತ್ತರವಾದುದು ಎಂದೆನಿಸುತ್ತದೆ. ವೈರಾಗ್ಯ ಗೀತೆಯಂತಿರುವ ಶಾಸನದಲ್ಲಿ ಮಾತುಗಳ ಮೋಡಿ ಹಾಗೂ ಜೋಡಣೆಗಳು ಶಾಸನ ಕರ್ತೃವಿನ ಕವಿ ಹೃದಯವನ್ನು ದಿಗ್ಧರ್ಶಿಸುತ್ತವೆ. ಇಂತಹ ಪದ್ಯ ರಚನೆ ಶ್ರವಣಬೆಳಗೊಳದ ಸುಮಾರು 30 ನಿಸದಿ ಶಾಸನಗಳಲ್ಲಿ ದೊರೆಯುತ್ತವೆ ಎಂಬುದಾಗಿ ತಿಳಿದುಬರುತ್ತದೆ. ಶಾಸನ ಕರ್ತೃಗಳಲ್ಲಿ ಕೆಲವರು ಕಾವ್ಯ ಕರ್ತೃಗಳಾಗಿದ್ದರೂ ಇರಬಹುದೆಂದು ಊಹಿಸಲು ಅವಕಾಶವಿದೆ. ಶ್ರವಣಬೆಳಗೊಳದ ನಿಷದಿ ಶಾಸನ ಪದ್ಯಗಳು ಕನ್ನಡ ಸಾಹಿತ್ಯದಲ್ಲಿ ಕವಿತ್ವರಚನೆ ಅದರ ಆರಂಭದ ದೆಸೆಯಲ್ಲಿ ತೊಟ್ಟು ತೊಟ್ಟಾಗಿ ತೊಡಗಿತೆಂಬುದನ್ನು ಸೂಚಿಸುತ್ತವೆ. ವೃತ್ತಬಂಧಗಳ ವಿಶ್ಲೇಷಣೆಯಿಂದಲೂ ಅಂಶವನ್ನು ಸಮರ್ಥಿಸಿರುವುದು ಕಂಡುಬರುತ್ತದೆ. ಒಟ್ಟಾರೆ ಸದ್ಯಕ್ಕೆ ಲಭ್ಯವಿರುವ ಆರಂಭಕಾಲೀನ ಸಾಹಿತ್ಯ ಮೌಲ್ಯವಿರುವ ಶಾಸನಗಳ ಅಧ್ಯಯನದ ಮೂಲಕ   ಕನ್ನಡ ಭಾಷೆ-ಸಾಹಿತ್ಯದ ಮೊದಲಾದವು ಪ್ರಾಚೀನತೆಯನ್ನು ತಿಳಿಯಲು ಅಧಿಕೃತತೆಯನ್ನು ಒದಗಿಸಿವೆ. ಭಾಷೆ ಸಾಹಿತ್ಯಗಳಿಗೆ ಸಂಬಂಧಿಸಿ ಹೇಳುವುದಾದರೆ ಶಾಸನಗಳ ಅಧ್ಯಯನದ ಮೂಲಕ ನಮ್ಮ ಭಾಷೆ ಬೆಳೆದು ಬಂದಿರುವ ರೀತಿ ಗೊತ್ತಾಗಿದೆ; ಸಾಹಿತ್ಯದ ಪ್ರಾಚೀನತೆ, ಬೆಳವಣಿಗೆ, ಸತ್ವ ಸೌಂದರ್ಯಗಳು ಮನವರಿಕೆಯಾಗಿವೆ; ಗ್ರಂಥಸ್ಥ ಸಾಹಿತ್ಯದ ಸಂಶೋಧನೆಗೆ ಪೂರಕ ಸಾಮಗ್ರಿ ದೊರೆತಿದೆ; ಹೊಸ ಸಂಗತಿಗಳ ತಿಳುವಳಿಕೆಯು ಹಳೆಯ ಸಮಸ್ಯೆಗಳ ಪರಿಹಾರವೂ ಸಾಧ್ಯವಾಗಿವೆ.  ಕ್ರಿ.ಶ. ಐದನೆಯ ಶತಮಾನದಿಂದ ಎಂಟನೆ ಶತಮಾನದವರೆಗಿನ ಸಾಹಿತ್ಯಕ ಮತ್ತು ಭಾಷಿಕವಾಗಿ ಮಹತ್ತರತೆಯನ್ನು ಪಡೆದುಕೊಂಡ ಈ ಶಾಸನಗಳು ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅಧಿಕೃತತೆಯನ್ನು ನಿರೂಪಿಸುವ ಮಾನದಂಡಗಳಾಗಿವೆ.

ಪರಾಮರ್ಶನ ಗ್ರಂಥಗಳು:

೧. ಎಂ.ಬಿ.ನೇಗಿನಹಾಳ: ಪೂರ್ವದ ಹಳಗನ್ನಡ ಶಾಸನಗಳ ಸಾಹಿತ್ಯಕ ಅಧ್ಯಯನ

   ಪ್ರಸಾರಾಂಗ,ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ, 1994

೨. ಹಳಗನ್ನಡ:ಭಾಷೆ, ವಿಕಾಸ, ಭಾಷಾ ಬಾಂಧವ್ಯ ಸಂ. ‍ಷ‍.ಶೆಟ್ಟರ್ಅಭಿನವ ಪ್ರಕಾಶನ, ಬೆಂಗಳೂರು,೨೦೧೭

೩. ಟಿ.ವಿ.ವೆಂಕಟಾಚಲ ಶಾಸ್ತ್ರೀ: ಶಾಸ್ತ್ರೀಯ ಸಂ.2, ಸ್ವಪ್ನಬುಕ್ ಹೌಸ್, ಬೆಂಗಳೂರು,1999 

೪. ಕನ್ನಡ ಶಾಸ್ತ್ರೀಯ ಭಾಷೆ ನಡೆದು ಬಂದ ದಾರಿ ಸಂ: ಜೆ.ಎನ್‌,ಶಾಮರಾವ್

   ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು, ೨೦೧೨

೫. ಸಿ.ನಾಗಭೂಷಣ: ಕನ್ನಡ ಸಾಹಿತ್ಯ ಸಂಸ್ಕೃತಿ ಬಾಗಿನ

  ಸ್ನೇಹಾ ಪ್ರಿಂಟರ್ಸ್, ಬೆಂಗಳೂರು2೦೨೦

೬.ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ (ಸಂ: ಜಿ.ಎಸ್.ಶಿವರುದ್ರಪ್ಪ) ಸಂಪುಟ-೧,

 ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ೧೯೭೪

೭. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆ (ಸಂ) ಹಾ.ಮಾ ನಾಯಕ,

  ಎರಡನೇ ಸಂಪುಟ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು,೧೯೭೫

೮. ಶಾಸನಗಳು ಮತ್ತು ಕನ್ನಡ ಶಾಸ್ತ್ರೀಯತೆ ಸಂ: ಮಾರುತಿ ಆರ್.ತಳವಾರ ಮತ್ತು ರಾಜಶೇಖರ ಮಠಪತಿ

    ಕುಕ್ಕೆಶ್ರೀ ಪ್ರಕಾಶನ,ಬೆಂಗಳೂರು 2009    

                 ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅಧಿಕೃತ ಆಕರಗಳಾಗಿ ಪಂಪಪೂರ್ವಯುಗದ                 ಭಾಷಿಕ-ಸಾಹಿತ್ಯಕ ಮೌಲ್ಯವುಳ್ಳ ಶಾಸನಗಳು                 ...