ಕನ್ನಡ ಹಸ್ತಪ್ರತಿ ಪುಷ್ಪಿಕೆಗಳು ದೇಸಿ ಜ್ಞಾನ ಸಂಸ್ಕೃತಿ ಪರಂಪರೆಯ ವಾಹಕಗಳು
ಡಾ.ಸಿ.ನಾಗಭೂಷಣ
ಹಸ್ತಪ್ರತಿ ಎಂದರೆ ಕೇವಲ “ಮೂಲಕೃತಿಯ
ಪ್ರತಿರೂಪ”ವಲ್ಲ. ಅದು ತನ್ನದೇ ಆದ ಚರಿತ್ರೆ ಹೊಂದಿರುವ ಸಾಂಸ್ಕೃತಿಕ ಘಟಕವಾಗಿದೆ. ಹಸ್ತಪ್ರತಿಯೆಂದರೆ
ಕೇವಲ ಒಂದು ಕೃತಿಯ ಹಳೆಯ ಪ್ರತಿಯಲ್ಲ; ಅದು ಒಂದು ಕಾಲದ
ಜ್ಞಾನವ್ಯವಸ್ಥೆ, ಸಾಮಾಜಿಕ ಸಂಬಂಧ, ಧಾರ್ಮಿಕ
ನಂಬಿಕೆ, ಆರ್ಥಿಕ ವ್ಯವಸ್ಥೆ, ಭಾಷಿಕ ಚಲನೆ,
ಶ್ರಮಿಕ ಸಂಸ್ಕೃತಿ ಮತ್ತು ಸಮುದಾಯದ ಸ್ಮೃತಿಯನ್ನು ತನ್ನೊಳಗೆ ಒಳಗೊಂಡಿರುವ
ಸಾಂಸ್ಕೃತಿಕ ದಾಖಲೆ. ಹಸ್ತಪ್ರತಿ ಸಂಸ್ಕೃತಿ ಎಂದರೆ ಒಂದು ಸಮಾಜದಲ್ಲಿ ಜ್ಞಾನವನ್ನು ಬರೆಯುವ,
ಪ್ರತಿಮಾಡುವ, ಸಂರಕ್ಷಿಸುವ, ಓದುವ, ಕೇಳುವ, ಹಂಚುವ, ಮಾರುವ, ದಾನಮಾಡುವ ಮತ್ತು ಪುನರ್ ಅರ್ಥೈಸುವ ಸಮಗ್ರ
ಸಾಮಾಜಿಕ ಪ್ರಕ್ರಿಯೆ. ಹಸ್ತಪ್ರತಿಗಳನ್ನು
ಯಾವುದೋ ಒಂದು ಕಾಲದಲ್ಲಿ ರಚಿಸಲ್ಪಟ್ಟು ಸ್ಥಿರವಾಗಿ ಉಳಿದಿರುವ “ಏಕಘನ ಪಠ್ಯ”ಗಳೆಂದು ನೋಡಬಾರದು.
ಅವು ನಕಲು, ಬಳಿನಕಲು, ಮರುನಕಲು, ಪಠಣ, ಶ್ರವಣ ಮತ್ತು ಪ್ರಸರಣಗಳ ಮೂಲಕ ಕಾಲದಿಂದ ಕಾಲಕ್ಕೆ
ಪುನಾರಚನೆಗೊಳ್ಳುತ್ತಾ ಬಂದವುಗಳು. ಸಮಾಜ, ಭಾಷೆ,
ಧರ್ಮ, ಜ್ಞಾನ, ಆರ್ಥಿಕತೆ,
ರಾಜಕೀಯ, ಕಲೆ ಮತ್ತು ಜನಜೀವನದ ಪರಸ್ಪರ ಕ್ರಿಯೆಯಿಂದ
ನಿರಂತರವಾಗಿ ಪುನರ್ರಚನೆಯಾಗುವ ಚರಪಠ್ಯ. ಹಸ್ತಪ್ರತಿ ಸಂಪೂರ್ಣವಾಗಿ
“ಲಿಖಿತ” ಸಂಸ್ಕೃತಿಯ ಉತ್ಪನ್ನವಲ್ಲ. ಅದರೊಳಗೆ: ಓದು → ಕೇಳು → ನೆನಪು → ಹೇಳು → ಬರೆಯು → ಮತ್ತೆ ಓದು ಎಂಬ ಚಕ್ರವಿದೆ. ಹೀಗಾಗಿ ಹಸ್ತಪ್ರತಿಯು ಲಿಖಿತ ಮತ್ತು ಮೌಖಿಕ ಸಂಸ್ಕೃತಿಗಳ ಸಂಧಿಸ್ಥಳ. ಇದು ದೇಸಿ
ಸಾಹಿತ್ಯದ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಅತ್ಯಂತ ಮುಖ್ಯ. ಒಂದು ಹಸ್ತಪ್ರತಿಯ ನಿರ್ಮಿತಿಯ ಹಿಂದೆ ಕವಿಯ ಸೃಜನಶೀಲತೆ,
ಲಿಪಿಕಾರನ ಶ್ರಮ, ಪ್ರತಿಕಾರನ ಭಾಷಿಕ ಸ್ವರೂಪ,
ಪೋಷಕರ ಆಶಯ, ಗ್ರಂಥದಾನದ ಧಾರ್ಮಿಕ ಮನೋಭಾವ, ಕರಕುಶಲಕರ್ಮಿಗಳ ಕೌಶಲ, ಓದುಗರ ಆಸಕ್ತಿ, ಸಮುದಾಯದ ನಂಬಿಕೆಗಳು, ಆರ್ಥಿಕ ವ್ಯವಹಾರಗಳು, ಪ್ರಾದೇಶಿಕ ಭಾಷೆಯ ಪ್ರಭಾವ ಇವುಗಳನ್ನು ಕಾಣಬಹುದಾಗಿದೆ. ಕನ್ನಡ
ಹಸ್ತಪ್ರತಿಗಳ ಅಧ್ಯಯನವು ಕೇವಲ ಪ್ರಾಚೀನ ಕಾಗದ ಅಥವಾ ತಾಳೆಗರಿಗಳ ಭೌತಿಕ ಪರಿಶೀಲನೆಯಲ್ಲ.
ಅದು ಕರ್ನಾಟಕದ ಸಾಂಸ್ಕೃತಿಕ, ಆರ್ಥಿಕ, ಸಮಾಜೋ-ಭಾಷಿಕ ಮತ್ತು ಜ್ಞಾನಮೀಮಾಂಸಾ ನೆಲೆಗಳನ್ನು ಮರುನಿರ್ವಚಿಸುವ ಒಂದು ಬಹುಶಿಸ್ತೀಯ
ಜ್ಞಾನಶಿಸ್ತು. ಸಾಂಪ್ರದಾಯಿಕ ಗ್ರಂಥಸಂಪಾದನೆಯು ಮೂಲ ಲೇಖಕನ ‘ಏಕೈಕ ಶುದ್ಧ ಮೂಲಪಾಠ’ವನ್ನು
ಶೋಧಿಸುವುದನ್ನೇ ಪರಮಗುರಿಯಾಗಿಸಿಕೊಂಡಿತ್ತು. ಆದರೆ ಹಸ್ತಪ್ರತಿ ಸಂಸ್ಕೃತಿಯ ವಾಸ್ತವ ಇದಕ್ಕೆ
ತದ್ವಿರುದ್ಧವಾಗಿದೆ. ಕನ್ನಡ ಹಸ್ತಪ್ರತಿಗಳು ಗತಕಾಲದ ಜಡ
ವಸ್ತುಗಳಲ್ಲ; ಅವು ಜೀವಂತ ಸಂಸ್ಕೃತಿಯ ವಾಹಕಗಳು.
ಹಸ್ತಪ್ರತಿಗಳ ಮರುಮೌಲ್ಯೀಕರಣವೆಂದರೆ ಕೇವಲ ಪ್ರಾಚೀನ ಗ್ರಂಥಗಳ ಸಂಪಾದನೆಯಲ್ಲ, ಬದಲಾಗಿ ನಮ್ಮ ನಾಡಿನ ಕಳೆದುಹೋದ ಸ್ಥಳೀಯ ಇತಿಹಾಸ, ಅಂಚಿಗೆ
ತಳ್ಳಲ್ಪಟ್ಟ ಶ್ರಮಿಕ ಮತ್ತು ಸ್ತ್ರೀ ಸಂವೇದನೆ, ಜನಪದ ಆಡುನುಡಿ ಮತ್ತು ನಿಸರ್ಗಪರ ದೇಸಿ ಜ್ಞಾನಪರಂಪರೆಯನ್ನು ಇಂದಿನ ವೈಚಾರಿಕ
ಜಗತ್ತಿನೊಂದಿಗೆ ಮುಖಾಮುಖಿಯಾಗಿಸುವ ಬೌದ್ಧಿಕ ಚಳವಳಿಯಾಗಿದೆ. ಕನ್ನಡ
ಹಸ್ತಪ್ರತಿ ಪರಂಪರೆಯು ಕೃತಿ ಮತ್ತು ಸಂಸ್ಕೃತಿಯ ನಡುವಿನ ಸಾವಯವ ಬೆಸುಗೆಯಾಗಿದೆ. ಪ್ರಾಚೀನ
ಕನ್ನಡಿಗರ ಬೌದ್ಧಿಕ, ಲೌಕಿಕ, ಧಾರ್ಮಿಕ
ಹಾಗೂ ಪ್ರಾಯೋಗಿಕ ಆಶೋತ್ತರಗಳು ಹಸ್ತಪ್ರತಿಗಳ ಗರ್ಭದಲ್ಲಿ ನಿಕ್ಷೇಪಗೊಂಡಿವೆ. ಆಧುನಿಕ ಪೂರ್ವ
ಸಮಾಜದಲ್ಲಿ ಹಸ್ತಪ್ರತಿಗಳ ನಿರ್ಮಾಣವು ಕೇವಲ ಸಾಹಿತ್ಯ ಸೃಷ್ಟಿಗೆ ಮಾತ್ರ ಸೀಮಿತವಾಗಿರಲಿಲ್ಲ;
ಅದು ಆಯುರಾರೋಗ್ಯ, ಪುತ್ರಸಂತಾನ, ಸಕಲೈಶ್ವರ್ಯ ಸಿದ್ಧಿ, ರೋಗರುಜಿನಗಳ ನಿವಾರಣೆ, ಅನಿಷ್ಟ ಪರಿಹಾರ, ಮಳೆ-ಬೆಳೆಗಳ ಸಮೃದ್ಧಿ, ದಾನಧರ್ಮ ಮತ್ತು ಮೋಕ್ಷಸಾಧನೆಯಂತಹ ಹತ್ತುಹಲವು ಲೌಕಿಕ ಹಾಗೂ ಅಲೌಕಿಕ
ಜೀವನಾವಶ್ಯಕತೆಗಳೊಂದಿಗೆ ತಳುಕುಹಾಕಿಕೊಂಡಿತ್ತು.
ಹಸ್ತಪ್ರತಿಯನ್ನು ಕೇವಲ ಪ್ರಾಚೀನ ಗ್ರಂಥದ ಪ್ರತಿಯೆಂದು, ಅಥವಾ
ಶುದ್ಧಪಾಠವನ್ನು ಸ್ಥಾಪಿಸಲು ಬಳಸುವ ಗ್ರಂಥಸಂಪಾದನಾ ಸಾಮಗ್ರಿಯೆಂದು ಮಾತ್ರ ನೋಡಬಾರದು ಎಂಬುದು
ಇತ್ತೀಚಿನ ಬೆಳವಣಿಗೆಯಾಗಿದೆ. ಹಸ್ತಪ್ರತಿ ಜ್ಞಾನಪರಂಪರೆಯ ವಾಹಕ, ಸಮಾಜದ ಸ್ಮೃತಿಭಂಡಾರ ಮತ್ತು ದೇಸಿ ಬದುಕಿನ ಬಹುಮುಖ ದಾಖಲೆಯಾಗಿದೆ. ಇಂದು ಹಸ್ತಪ್ರತಿ
ಅಧ್ಯಯನವನ್ನು ಸಾಹಿತ್ಯಶಾಸ್ತ್ರದ ವ್ಯಾಪ್ತಿಯಿಂದ ಹೊರತಂದು ಜ್ಞಾನಚರಿತ್ರೆಯ ಅಧ್ಯಯನವಾಗಿ
ವಿಸ್ತರಿಸಬೇಕಾಗಿದೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಇತಿಹಾಸವನ್ನು ಅರಿಯುವಲ್ಲಿ
ಹಸ್ತಪ್ರತಿಗಳು ಅತ್ಯಂತ ಮಹತ್ವದ ಪ್ರಾಥಮಿಕ ಆಕರಗಳಾಗಿವೆ. ಆದರೆ ಹಸ್ತಪ್ರತಿಯನ್ನು ಕೇವಲ ಒಂದು
ಕೃತಿಯ ಹಳೆಯ ಪ್ರತಿಯಾಗಿ ಅಥವಾ ಮುದ್ರಿತ ಪಠ್ಯದ ಪೂರ್ವರೂಪವಾಗಿ ಪರಿಗಣಿಸುವ ಸಾಂಪ್ರದಾಯಿಕ
ದೃಷ್ಟಿಕೋನವು ಅದರ ಬಹುಮುಖ ಸಾಂಸ್ಕೃತಿಕ ಅರ್ಥವ್ಯಾಪ್ತಿಯನ್ನು ಸಂಪೂರ್ಣವಾಗಿ ಗ್ರಹಿಸಲು
ಸಾಧ್ಯವಾಗುವುದಿಲ್ಲ. ಹಸ್ತಪ್ರತಿಯೊಳಗೆ ಕೇವಲ ಒಂದು ಸಾಹಿತ್ಯಕೃತಿ ಮಾತ್ರ ಇರುವುದಿಲ್ಲ; ಅದರ ನಿರ್ಮಾಣದ
ಸಂದರ್ಭ, ಪ್ರತೀಕರಣದ ಉದ್ದೇಶ, ಲಿಪಿಕಾರನ
ವೈಯಕ್ತಿಕತೆ, ಆಶ್ರಯದಾತನ ಪಾತ್ರ, ಧಾರ್ಮಿಕ–ಸಾಮಾಜಿಕ ಸಂಸ್ಥೆಗಳ ಪ್ರಭಾವ, ʻ ಸ್ಥಳೀಯ ಭಾಷೆಯ
ರೂಪಗಳು, ಆರ್ಥಿಕ ವ್ಯವಹಾರಗಳು, ವೃತ್ತಿಪರ
ಸಂಬಂಧಗಳು, ಕಲಾತ್ಮಕ ವಿನ್ಯಾಸ, ಪಾಠಾಂತರಗಳು
ಮತ್ತು ಜ್ಞಾನ ಪ್ರಸರಣದ ವಿಧಾನಗಳು ಅಡಕವಾಗಿರುತ್ತವೆ. ಕನ್ನಡ ಹಸ್ತಪ್ರತಿಗಳು ಕೇವಲ ಪ್ರಾಚೀನ
ಸಾಹಿತ್ಯಪಠ್ಯಗಳ ಪ್ರತಿಗಳಲ್ಲ; ಅವು ನಿರ್ದಿಷ್ಟ ಕಾಲಘಟ್ಟದ ಭಾಷೆ,
ಸಮಾಜ, ಆರ್ಥಿಕತೆ, ಧರ್ಮ,
ಜ್ಞಾನ, ಸ್ಥಳೀಯ ಇತಿಹಾಸ ಮತ್ತು ಸಾಂಸ್ಕೃತಿಕ
ಸ್ಮೃತಿಯನ್ನು ಒಳಗೊಂಡ ಬಹುಪದರದ ಜ್ಞಾನ ದಾಖಲೆಗಳಾಗಿವೆ.” ಹಸ್ತಪ್ರತಿಯ ಆದಿ-ಅಂತ್ಯದ ಪುಷ್ಪಿಕೆಗಳು ಕೇವಲ ಮಾಹಿತಿಯಲ್ಲ, ಅವು ಶಾಸನಗಳು
ದಾಖಲಿಸದ ಸ್ಥಳೀಯ ಚರಿತ್ರೆಯ ಉಪಪಠ್ಯಗಳಾಗಿವೆ.
ಹಸ್ತಪ್ರತಿ ಪುಷ್ಪಿಕೆಯು ಹಸ್ತಪ್ರತಿಯ ಅಂಚಿನ ಮಾಹಿತಿ ಅಲ್ಲ; ಅದು ಸಾಮಾಜಿಕ,
ಭಾಷಿಕ ಮತ್ತು ಐತಿಹಾಸಿಕ ದತ್ತಾಂಶ. ಹಸ್ತಪ್ರತಿಲಿಪಿಕಾರನು
ಕೇವಲ ಪ್ರತಿಲಿಪಿಗಾರನಲ್ಲ; ಅವನು ಸಾಂಸ್ಕೃತಿಕ ಮಧ್ಯವರ್ತಿ. ಪಾಠಾಂತರವನ್ನು
ಕೇವಲ ದೋಷವೆಂದು ತಿದ್ದುವುದರಿಂದ ಇತಿಹಾಸದ ಮಹತ್ವದ ಮಾಹಿತಿಗಳು ಕಳೆದುಹೋಗಬಹುದು. ಹಸ್ತಪ್ರತಿ
ಭಾಷೆ ಕನ್ನಡದ ಪ್ರಾದೇಶಿಕ ನುಡಿ. ಕನ್ನಡದ ಇತಿಹಾಸಕ್ಕೆ ಮಹತ್ವದ
ಸಾಕ್ಷ್ಯವಾಗಿದೆ. ಹಸ್ತಪ್ರತಿಗಳು ಸ್ಥಳೀಯ ಮತ್ತು ಸೂಕ್ಷ್ಮ ಇತಿಹಾಸದ
ಪರ್ಯಾಯ ಆಕರಗಳಾಗಿವೆ. ಹಸ್ತಪ್ರತಿ ಅಧ್ಯಯನವನ್ನು ‘ಪಠ್ಯ ಓದುವ’ ಕ್ರಮದಿಂದ ‘ಪಠ್ಯ–ಸಂದರ್ಭ–ಸಂಸ್ಕೃತಿ’ಗಳನ್ನು ಸಮಗ್ರವಾಗಿ
ಓದುವ ಕ್ರಮಕ್ಕೆ ಪರಿವರ್ತಿಸುವ ಅಗತ್ಯವಿದೆ. ಹಸ್ತಪ್ರತಿ
ಸಂಸ್ಕೃತಿಯು ಕೇವಲ “ಪಂಡಿತ ಸಂಸ್ಕೃತಿ” ಅಲ್ಲ. ಅದು ಜನಮುಖಿ ಜ್ಞಾನಪರಿಚಲನ ವ್ಯವಸ್ಥೆ ಕೂಡ ಎಂಬುದನ್ನು
ಮನಗಾಣಬೇಕಾಗಿದೆ. ಒಂದು ಕೃತಿಯ ಹಸ್ತಪ್ರತಿಗಳ
ಸಂಖ್ಯೆ ಹೆಚ್ಚಿದ್ದರೆ ಅದರ ಸಾಮಾಜಿಕ ಚಲನೆಯನ್ನೂ ಅಧ್ಯಯನ ಮಾಡಬಹುದು. ಧಾರ್ಮಿಕ ಮತ್ತು
ನಿತ್ಯೋಪಯೋಗಿ ಕೃತಿಗಳ ಚಲನಶೀಲತೆ ತೀವ್ರವಾಗಿದ್ದು, ಕೆಲವು
ಶಾಸ್ತ್ರಕೃತಿಗಳ ಚಲನಶೀಲತೆ ನಿಧಾನವಾಗಿರುತ್ತದೆ ಎಂದು ಹೇಳುತ್ತದೆ. ಇದರಿಂದ ಒಂದು
ಹೊಸ ಪರಿಕಲ್ಪನೆ:Manuscript Mobility Index ಅಂದರೆ
ಒಂದು ಕೃತಿ ಎಷ್ಟು ಪ್ರದೇಶಗಳಿಗೆ, ಸಮುದಾಯಗಳಿಗೆ, ಪೀಳಿಗೆಗಳಿಗೆ ಸಂಚರಿಸಿತು ಎಂಬುದನ್ನು ಅಧ್ಯಯನ ಮಾಡುವ ಸಾಧ್ಯತೆಯನ್ನು
ಕಂಡುಕೊಳ್ಳಬಹುದಾಗಿದೆ. ಹಸ್ತಪ್ರತಿಗಳ ವಿಶೇಷತೆ ಎಂದರೆ
ಅಧಿಕೃತ ಇತಿಹಾಸದಿಂದ ಹೊರಗುಳಿದ ಧ್ವನಿಗಳು ಅವುಗಳಲ್ಲಿ ಉಳಿದಿರಬಹುದು. ಉದಾಹರಣೆಗೆ, ಸಣ್ಣ ಸ್ಥಳೀಯ ಅಧಿಕಾರಿಗಳು, ಲಿಪಿಕಾರರು, ಕರಕುಶಲ ಕರ್ಮಿಗಳು, ಗ್ರಾಮಸ್ಥರು, ಕುಟುಂಬಗಳು,
ಪ್ರಾದೇಶಿಕ ಭಾಷಿಕರು ಇತ್ಯಾದಿ. ಅವರ ಬದುಕು ರಾಜಕೀಯ
ಇತಿಹಾಸದಲ್ಲಿ ಕಾಣದಿದ್ದರೂ ಪುಷ್ಪಿಕೆಗಳಲ್ಲಿ ಕಾಣಬಹುದು. ಹೀಗಾಗಿ
ಹಸ್ತಪ್ರತಿ ಅಧ್ಯಯನವು ಮರೆತುಹೋದ ಧ್ವನಿಗಳ ಪುನರುಜ್ಜೀವನವೂ ಆಗಿದೆ. ಇಂದು ನಾವು ಹಸ್ತಪ್ರತಿಗಳನ್ನು
“ನಾಡಿನ ಸಂಸ್ಕೃತಿಯ ಭಂಡಾರಗಳು” ಎಂದು ಗುರುತಿಸುವುದರ ಜೊತೆಗೆ ಅವು ಸಾಹಿತ್ಯ, ಧರ್ಮ, ಕಲೆ, ಆಚರಣೆ, ಸಾಮಾಜಿಕ–ಆರ್ಥಿಕ–ರಾಜಕೀಯ ಪ್ರಕ್ರಿಯೆಗಳ ಒಟ್ಟು ಸಂಕಲನಗಳೆಂದು ನಿರೂಪಿಸುವತ್ತ
ಗಮನವನ್ನು ಕೇಂದ್ರೀಕರಿಸ ಬೇಕಾಗಿದೆ. “ಹಸ್ತಪ್ರತಿಯನ್ನು
ಉಳಿಸುವುದು ಎಂದರೆ ಹಳೆಯ ಕಾಗದ ಅಥವಾ ಓಲೆಯನ್ನು ಉಳಿಸುವುದಲ್ಲ; ಒಂದು
ಸಮಾಜದ ಮರೆತುಹೋದ ಜ್ಞಾನ, ಭಾಷೆ, ಸ್ಮೃತಿ,
ಶ್ರಮ, ಅನುಭವ ಮತ್ತು ಸಾಂಸ್ಕೃತಿಕ ಆತ್ಮವನ್ನು ಪುನಃ
ಓದುವ ಅವಕಾಶವನ್ನು ಉಳಿಸುವುದು.” ಅವು ಸಾಹಿತ್ಯ, ಧರ್ಮ, ಕಲೆ ಮತ್ತು ಆಚರಣೆಗಳ ಸಂಕಲನವಾಗಿರುವುದರ ಜೊತೆಗೆ ಸಮುದಾಯದ ಸಾಮಾಜಿಕ–ಆರ್ಥಿಕ–ರಾಜಕೀಯ ಬದುಕಿನೊಂದಿಗೂ ಸಂಬಂಧ ಹೊಂದಿವೆ. ಪರಂಪರಾಗತ ಸಂಗ್ರಹ–ಸಂರಕ್ಷಣೆ–ಸಂಪಾದನೆಯ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು
ಸೂಕ್ಷ್ಮ ಅಧ್ಯಯನಗಳನ್ನು ಅಳವಡಿಸಿಕೊಂಡು ಹಸ್ತಪ್ರತಿ ಅಧ್ಯಯನವನ್ನು ಸಮಕಾಲೀನಗೊಳಿಸಬೇಕು. ಅರಮನೆ,
ಗುರುಮನೆ, ಮಠ, ಬಸದಿ ಮತ್ತು
ಪಂಡಿತರ ಮನೆಗಳು ಹಸ್ತಪ್ರತಿಗಳ ಪ್ರಮುಖ ಕೇಂದ್ರಗಳಾಗಿದ್ದರೂ ಜನಸಾಮಾನ್ಯರ ಪಾಲ್ಗೊಳ್ಳುವಿಕೆಯೂ ಈ
ಪರಂಪರೆಯ ಬೆಳವಣಿಗೆಯಲ್ಲಿ ಮುಖ್ಯವಾಗಿತ್ತು. ಜೈನರ
ಶಾಸ್ತ್ರದಾನ, ವೀರಶೈವರ ವಿದ್ಯಾದಾನ ಮತ್ತು
ಗ್ರಂಥದಾನ, ಹರಿಕಥೆ, ಭಜನೆ, ತತ್ವಪದ, ದೇವ–ದೇವಿಯರ ಸ್ತುತಿ ಮುಂತಾದ ಜನಸಂವಹನ ಮಾಧ್ಯಮಗಳು ಲಿಖಿತ ಮತ್ತು
ಮೌಖಿಕ ಲೋಕಗಳ ನಡುವೆ ಸೇತುವೆಯಾಗಿ ಹಸ್ತಪ್ರತಿಗಳು ಕಾರ್ಯನಿರ್ವಹಿಸಿವೆ. ಪುಷ್ಪಿಕೆ
ಒಂದು ‘ಅಂಚಿನ ಮಾಹಿತಿ’ಯಿಂದ ‘ಕೇಂದ್ರ ಸಂಶೋಧನಾ ಆಕರ’ವಾಗಿ ಪರಿವರ್ತಿಸುತ್ತದೆ. ಹಸ್ತಪ್ರತಿಗಳಲ್ಲಿ ಕಂಡುಬರುವ ಸಾಮಾಜಿಕ ಅಂಶಗಳನ್ನು ಸಮಾಜದ ಸ್ಥಿತಿಯ ಕನ್ನಡಿಯೆಂದು
ಪರಿಗಣಿಸಿ, ಭಿನ್ನಪಾಠಗಳನ್ನು ಸಾಂಸ್ಕೃತಿಕ ಹಿನ್ನೆಲೆಯಲ್ಲಿಯೂ ಓದಬೇಕಾಗಿರುವು ಅಗತ್ಯವಾಗಿದೆ. ಹಸ್ತಪ್ರತಿಗಳನ್ನು—“ಹಳೆಯ ಪುಸ್ತಕಗಳು”ಎಂಬ ಸೀಮಿತ ಕಲ್ಪನೆಯಿಂದ ಹೊರತೆಗೆದು—ಸಮಾಜದ ಜೀವಂತ ಸಾಂಸ್ಕೃತಿಕ ದಾಖಲೆಗಳು ಎಂಬ ಮಟ್ಟಕ್ಕೆ ಏರಿಸುತ್ತದೆ.ಈ
ಹಿನ್ನೆಲೆಯಲ್ಲಿ ಹಸ್ತಪ್ರತಿ ಅಧ್ಯಯನವು ಜ್ಞಾನ ಯಾರ ಬಳಿ ಇತ್ತು? ಎಂಬ ಪ್ರಶ್ನೆಯನ್ನು ಮೀರಿ ಜ್ಞಾನ ಹೇಗೆ ಚಲಿಸಿತು? ಎಂಬ
ಪ್ರಶ್ನೆಯತ್ತ ಸಾಗಬೇಕು. ಇದು ಅತ್ಯಂತ ಮಹತ್ವದ ಸಾಂಸ್ಕೃತಿಕ ಪರಿವರ್ತನೆ. ಹಸ್ತಪ್ರತಿ
ಪರಂಪರೆ ಒಂದು ರೀತಿಯ ಆಧುನಿಕ ಪೂರ್ವ ಜ್ಞಾನಸಂಪರ್ಕ ವ್ಯವಸ್ಥೆ ಎಂದು ಪರಿಭಾವಿಸ
ಬೇಕಾಗುತ್ತದೆ. ಹಸ್ತಪ್ರತಿಯೊಳಗೆ ಕವಿ ಇದ್ದಾನೆ; ಆದರೆ
ಕವಿಯೊಬ್ಬನೇ ಇಲ್ಲ. ಅಲ್ಲಿ ಲಿಪಿಕಾರನಿದ್ದಾನೆ, ಓಲೆ ತಯಾರಿಸಿದ
ಕುಶಲಕರ್ಮಿಯಿದ್ದಾನೆ, ಚಿತ್ರಕಾರನಿದ್ದಾನೆ, ಗ್ರಂಥವನ್ನು
ಬರೆಯಿಸಿದ ಆಶ್ರಯದಾತನಿದ್ದಾನೆ, ಅದನ್ನು ಸಂಗ್ರಹಿಸಿದ ಕುಟುಂಬವಿದೆ,
ಓದಿದ ಸಮುದಾಯವಿದೆ ಮತ್ತು ಅದರ ಮೂಲಕ ತನ್ನ ಜ್ಞಾನವನ್ನು ಮುಂದಿನ ತಲೆಮಾರಿಗೆ
ಕವಿ → ಪ್ರತಿ → ಬಳಿನಕಲು → ಮರುನಕಲು → ಮತ್ತೊಂದು ಪ್ರತಿ → ಮತ್ತೊಂದು ಸಮುದಾಯ → ಮತ್ತೊಂದು ಭಾಷಿಕ ಪರಿಸರ ಎಂಬ ಸರಪಳಿಯಲ್ಲಿ
ಸಾಗುತ್ತದೆ.
ಪ್ರತೀಕರಣದ ಪ್ರತಿಹಂತದಲ್ಲೂ ಪಠ್ಯವು
ತನ್ನ ಹಿಂದಿನ ರೂಪವನ್ನು ಸಂಪೂರ್ಣವಾಗಿ ಪುನರಾವರ್ತಿಸುವುದಿಲ್ಲ. ಬದಲಾಗಿ ಕೆಲವು ಪದಗಳು
ಬದಲಾಗುತ್ತವೆ; ಕೆಲವು ಸಾಲುಗಳು ಸೇರುತ್ತವೆ; ಕೆಲವು ಅಳಿದುಹೋಗುತ್ತವೆ; ಭಾಷೆ ಪ್ರಾದೇಶಿಕವಾಗುತ್ತದೆ;
ಲಿಪಿಕಾರನ ಅಭಿವ್ಯಕ್ತಿ ಪ್ರವೇಶಿಸುತ್ತದೆ; ಓದುಗರ ಅಗತ್ಯಕ್ಕೆ ಅನುಗುಣವಾಗಿ ಪಠ್ಯ ರೂಪಾಂತರಗೊಳ್ಳುತ್ತದೆ.
ಹೀಗಾಗಿ ಹಸ್ತಪ್ರತಿಯ “ಬದಲಾವಣೆ”ಯನ್ನೇ ಅದರ ಜೀವಂತಿಕೆಯ ಗುರುತು ಎಂದು ನೋಡಬೇಕು. ಹಸ್ತಪ್ರತಿಯನ್ನು
ಕೇವಲ ಈಗಾಗಲೇ ನಿರ್ಮಿತ ಜ್ಞಾನವನ್ನು ಸಂಗ್ರಹಿಸುವ ಭಂಡಾರವೆಂದು ನೋಡುವುದು ಅಪೂರ್ಣ. ಅದರೊಳಗೆ
ಜ್ಞಾನ ಸೃಷ್ಟಿಯಾಗುತ್ತದೆ, ಆಯ್ಕೆಯಾಗುತ್ತದೆ, ಪರಿಷ್ಕೃತವಾಗುತ್ತದೆ, ಸ್ಥಳೀಯವಾಗುತ್ತದೆ, ಪೀಳಿಗೆಗೆ ವರ್ಗಾವಣೆಯಾಗುತ್ತದೆ, ಪುನರ್ ಅರ್ಥೈಸಲ್ಪಡುತ್ತದೆ.
ಹಸ್ತಪ್ರತಿಯನ್ನು ಕೇವಲ ಗ್ರಂಥವಾಗಿ ನೋಡಬಾರದು; ಅದನ್ನು
ಸಂಸ್ಕೃತಿಯ ಜೀವಂತ ಸ್ಮೃತಿಯಾಗಿ ಓದಬೇಕು. ಹೀಗಾಗಿ ಭವಿಷ್ಯದ ಕನ್ನಡ ಹಸ್ತಪ್ರತಿ ಅಧ್ಯಯನವು
“ಮೂಲಪಾಠದ ಹುಡುಕಾಟ”ದಿಂದ “ಪಠ್ಯದ ಸಾಮಾಜಿಕ ಜೀವನದ ಶೋಧನೆ”ಯತ್ತ ಸಾಗಬೇಕು. ಆಗ ಮಾತ್ರ
ಹಸ್ತಪ್ರತಿಗಳಲ್ಲಿ ಅಡಗಿರುವ ದೇಸಿ ಜ್ಞಾನ, ಪ್ರಾದೇಶಿಕ ಸ್ಮೃತಿ,
ಬಹುಭಾಷಿಕತೆ, ಶ್ರಮಿಕ ಸಂಸ್ಕೃತಿ ಮತ್ತು ಕನ್ನಡಿಗರ
ಸಮಷ್ಟಿ ಪ್ರಜ್ಞೆಯ ವಿಶಾಲ ಜಗತ್ತು ಸಂಪೂರ್ಣವಾಗಿ ಅನಾವರಣಗೊಳ್ಳುತ್ತದೆ. ಹಸ್ತಪ್ರತಿ ಒಂದು ಕೃತಿ
ಮಾತ್ರವಲ್ಲ; ಅದು ಒಂದು ಕಾಲದ ಸಮಾಜ ತನ್ನನ್ನು ತಾನು ಬರೆದುಕೊಂಡ
ಸಾಂಸ್ಕೃತಿಕ ಆತ್ಮಚರಿತ್ರೆ. ಪಠ್ಯ ಬದಲಾಗಿರುವುದರಿಂದ ಅದು
ಹಾಳಾಗಿಲ್ಲ; ಬದಲಾಗಿ ಅದು ಬದುಕಿದೆ.
ಇಂದಿನ ಪುಸ್ತಕ, ಮುದ್ರಣ, ಡಿಜಿಟಲ್ ಜಾಲ ಮತ್ತು ಮಾಹಿತಿಪ್ರಸರಣ ವ್ಯವಸ್ಥೆಗಳ
ಪೂರ್ವರೂಪವನ್ನು ನಾವು ಹಸ್ತಪ್ರತಿ ಸಂಸ್ಕೃತಿಯಲ್ಲಿ ಕಾಣಬಹುದು. ವ್ಯತ್ಯಾಸವೆಂದರೆ ಅಂದಿನ
ಪರಿಚಲನೆಯ ವೇಗ ಕಡಿಮೆ; ಆದರೆ ಅದರ ಸಾಮಾಜಿಕ ಪಾಲ್ಗೊಳ್ಳುವಿಕೆ
ಗಾಢವಾಗಿತ್ತು.
ಹಸ್ತಪ್ರತಿಗಳಲ್ಲಿನ ಸಾಮಾಜಿಕ
ಅಂಶಗಳನ್ನು ಸಮಾಜದ ಸ್ಥಿತಿಗತಿಯ ಪ್ರತಿಬಿಂಬವೆಂದು ನೋಡಬೇಕು, ಹಸ್ತಪ್ರತಿ ಅಧ್ಯಯನವನ್ನು ಕೇವಲ ಗ್ರಂಥಸಂಪಾದನೆಯ ಚೌಕಟ್ಟಿನಲ್ಲಿ ಬಂಧಿಸಿದರೆ ಅದರ
ಸಾಂಸ್ಕೃತಿಕ ಮಹತ್ವ ಮರೆಯಾಗುತ್ತದೆ. ಹಸ್ತಪ್ರತಿ ಪುಷ್ಪಿಕೆಗಳು ಮತ್ತು
ಭಿನ್ನಪಾಠಗಳಲ್ಲಿ ಅಡಗಿರುವ ಸಾಂಸ್ಕೃತಿಕ–ಸಾಹಿತ್ಯಿಕ ವಿವರಗಳು ಸಂಸ್ಕೃತಿಯ ಪುನರ್ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕವಿ ಕೃತಿಯನ್ನು ರಚಿಸಿದರೆ, ಲಿಪಿಕಾರ ಅದನ್ನು ಕಾಲದಾಚೆಗೆ
ಸಾಗಿಸುತ್ತಾನೆ. ಮುದ್ರಣ ಯುಗಕ್ಕೂ ಮುನ್ನ ಸಾಹಿತ್ಯದ ಸಂರಕ್ಷಣೆ ಸಂಪೂರ್ಣವಾಗಿ ಮಾನವಶ್ರಮದ ಮೇಲೆ
ಅವಲಂಬಿತವಾಗಿತ್ತು. ಹಸ್ತಪ್ರತಿಗಳ ಪರಂಪರಾಗತ ಸಂಗ್ರಹ–ಸಂರಕ್ಷಣೆ–ಸಂಪಾದನಾ ಕಾರ್ಯಗಳ ಜೊತೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಸೂಕ್ಷ್ಮ ಅಧ್ಯಯನವನ್ನು
ಕೈಗೊಳ್ಳಬೇಕಾಗಿದೆ. ಕನ್ನಡ ಹಸ್ತಪ್ರತಿಗಳ ಪುನರ್ಮೌಲ್ಯೀಕರಣವೆಂದರೆ
ಕೇವಲ ಹಳೆಯ ಗ್ರಂಥಗಳನ್ನು ಮತ್ತೆ ಪ್ರಕಟಿಸುವ ಮತ್ತು ಉಳಿಸುವ
ಕೆಲಸವಲ್ಲ. ಅದು ಕನ್ನಡ ಸಮಾಜದ ಮರೆತುಹೋಗಿರುವ ಜ್ಞಾನಸ್ಮೃತಿಯನ್ನು ಪುನಃ ಓದುವ, ದೇಸಿ ಜ್ಞಾನಪರಂಪರೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಕನ್ನಡದ ಸಾಂಸ್ಕೃತಿಕ
ಚರಿತ್ರೆಯನ್ನು ಹೊಸ ದೃಷ್ಟಿಯಿಂದ ಮರುರಚಿಸುವ ಬೌದ್ಧಿಕ ಯೋಜನೆಯಾಗಿದೆ.
ಹಸ್ತಪ್ರತಿ
ಲಿಪಿಕಾರರು ತಮ್ಮ ಪ್ರತೀಕರಣ ಕಾರ್ಯದಲ್ಲಿ, ಕೃತಿಗಳನ್ನು ಓದಿದರು, ಗ್ರಹಿಸಿದರು, ನಕಲು
ಮಾಡಿದರು, ಕೆಲವೊಮ್ಮೆ ತಿದ್ದುಪಡಿ ಮಾಡಿದರು, ಭಾಷಿಕವಾಗಿ ಹೊಂದಿಸಿದರು, ಪಠ್ಯವನ್ನು ಹೊಸ ಸಮುದಾಯಗಳಿಗೆ
ತಲುಪಿಸಿದರು. ಹೀಗಾಗಿ ಲಿಪಿಕಾರನನ್ನು ಕೇವಲ “ಪ್ರತಿಕಾರ” ಎಂದು ಕರೆಯುವುದು ಸಾಕಾಗುವುದಿಲ್ಲ. ಅವನು:1. ಜ್ಞಾನ
ಸಂರಕ್ಷಕ 2. ಪಠ್ಯ ಪ್ರಸಾರಕ 3. ಭಾಷಿಕ
ಮಧ್ಯವರ್ತಿ 4. ಸಾಂಸ್ಕೃತಿಕ ಪುನರ್ಸೃಷ್ಟಿಕರ್ತ ೫. ಸಾಮಾಜಿಕ ದಾಖಲೆಗಾರ ೬. ಕೆಲವೊಮ್ಮೆ ಪಠ್ಯ ಪುನರ್ಸೃಷ್ಟಿಕರ್ತ. ಇದರಿಂದ ಹಸ್ತಪ್ರತಿ ಸಾಹಿತ್ಯಕೃತಿಯಿಂದ ಸಾಂಸ್ಕೃತಿಕ ಘಟನೆಯಾಗಿ ಪರಿವರ್ತಿತವಾಗುತ್ತದೆ ಹಸ್ತಪ್ರತಿ ಲಿಪಿಕಾರ ನಕಲುಗಾರನಲ್ಲ, ಸಂಸ್ಕೃತಿಯ
ಸಹ-ಸೃಷ್ಟಿಕರ್ತ. ಹಸ್ತಪ್ರತಿ ಲಿಪಿಕಾರರು ಕ್ರಿಯಾಶೀಲವಾಗಿ ಬರೆಯುವವರು, ಕನ್ನಡ ಭಾಷೆಗೆ
ಚಲನಶೀಲತೆಯನ್ನು ತಂದವರು ಮತ್ತು ಹೊಸ ಪ್ರಾದೇಶಿಕ ಭಾಷಿಕ ನೆಲೆಗಳನ್ನು ರೂಪಿಸಿದವರು ಎಂಬ
ನೆಲೆಯಲ್ಲಿ ನೋಡ ಬೇಕಾಗುತ್ತದೆ.
ಗ್ರಂಥಸಂಪಾದನೆಯಲ್ಲಿ, ಒಂದು ಭಿನ್ನಪಾಠವನ್ನು ಗ್ರಂಥಸಂಪಾದಕನು
“ಸ್ಖಾಲಿತ್ಯ” ಎಂದು ಗುರುತಿಸಬಹುದು. ಆದರೆ ಸಾಂಸ್ಕೃತಿಕ ಅಧ್ಯಯನಕಾರನು ಅದೇ ಭಿನ್ನತೆಯಲ್ಲಿ, ಪ್ರಾದೇಶಿಕ ಭಾಷೆಯ ಗುರುತು, ಜನಭಾಷೆಯ ಪ್ರವೇಶ, ಮೌಖಿಕ ಪರಂಪರೆಯ ಪ್ರಭಾವ, ಧಾರ್ಮಿಕ ಸಮುದಾಯದ ಪಠ್ಯಗ್ರಹಿಕೆ, ಕಾಲಾನುಸಾರ ನಡೆದ
ಅರ್ಥಪಲ್ಲಟ ಇವುಗಳನ್ನು ಕಾಣಬಹುದು.ಇದೇ ಹಸ್ತಪ್ರತಿ ಅಧ್ಯಯನದ ಮೂಲಭೂತ ಪರಿವರ್ತನೆ. ಒಬ್ಬ
ಪ್ರತಿಕಾರನು ಯಾವುದೋ ಪದವನ್ನು ಬದಲಿಸಿದ್ದಾನೆ ಎಂದರೆ ಅದನ್ನು ತಕ್ಷಣ ತಪ್ಪು ಎಂದು
ಹೇಳಲಾಗುವುದಿಲ್ಲ. ಆ ಬದಲಾವಣೆಗೆ ಕಾರಣ ಇರಬಹುದು. ಪ್ರಾದೇಶಿಕ ಭಾಷಾ ಪ್ರಭಾವ, ಉಚ್ಚಾರಣಾ ವ್ಯತ್ಯಾಸ, ಮೌಖಿಕ ಪಠಣ, ಕಾಲಾಂತರದ ಭಾಷಾ ಬದಲಾವಣೆ, ಸಮುದಾಯದಬಳಕೆ, ಅರ್ಥಗ್ರಹಿಕೆಯ ವ್ಯತ್ಯಾಸ. ಪಠ್ಯದಲ್ಲಿಯೇ
ಪ್ರತೀಕರಣ ಕ್ರಿಯೆಯನ್ನು ಕೇವಲ ಭಾಷಿಕ ಶುದ್ಧ–ಅಶುದ್ಧತೆಯ ಪ್ರಶ್ನೆಯಾಗಿ ನೋಡದೆ, ಪ್ರತಿಕಾರನ ಭಾಷಾ ಬಳಕೆಯ ಹಿಂದಿರುವ ಭಾಷಾವ್ಯವಸ್ಥೆ ಮತ್ತು ಸಾಂಸ್ಕೃತಿಕ
ಹಿನ್ನೆಲೆಯನ್ನು ಗಮನಿಸಬೇಕು.
ಭಿನ್ನಪಾಠದಿಂದ ತಿಳಿಯಬಹುದಾದವು: ಅಧ್ಯಯನ ಕ್ಷೇತ್ರ ತಿಳಿಯಬಹುದಾದ ಸಂಗತಿ
ಭಾಷಾವಿಜ್ಞಾನ: ಪ್ರಾದೇಶಿಕ ಭಾಷಾ ರೂಪಗಳು
ಸಮಾಜಶಾಸ್ತ್ರ: ಸಮುದಾಯದ ಪಠ್ಯಗ್ರಹಿಕೆ
ಇತಿಹಾಸ: ಪಠ್ಯದ ಕಾಲಾನುಸಾರ ಪ್ರಸರಣ
ಧರ್ಮ ಸಂಪ್ರದಾಯಗಳ
ವ್ಯಾಖ್ಯಾನ ಬದಲಾವಣೆ
ಸಾಹಿತ್ಯ ಕಥನ
ಮತ್ತು ಅರ್ಥವಿಕಾಸ
ಜನಪದ ಮೌಖಿಕ
ಅಂಶಗಳ ಪ್ರವೇಶ
ಸಂಸ್ಕೃತಿ ಸ್ಥಳೀಯ
ಜೀವನದ ಪ್ರಭಾವ ಹೀಗಾಗಿ ಭಿನ್ನಪಾಠವನ್ನು “ತೆಗೆದುಹಾಕಬೇಕಾದ ಕಳಪೆ ಭಾಗ”ವೆಂದು ನೋಡುವುದಕ್ಕಿಂತ
ಸಾಂಸ್ಕೃತಿಕ ಸಾಕ್ಷ್ಯವೆಂದು ನೋಡಬೇಕಾಗಿದೆ.
ಹಸ್ತಪ್ರತಿಗಳನ್ನು ದೇಸಿ
ಜ್ಞಾನಪರಂಪರೆಯ ವಾಹಕ ಎಂದು ಗುರುತಿಸಬೇಕಾಗುತ್ತದೆ. “ಹಸ್ತಪ್ರತಿಯಲ್ಲಿ ಸರಿಯಾದ ಪಾಠ ಯಾವುದು?” ಎಂಬ ಪ್ರಶ್ನೆಯಿಂದ
“ಹಸ್ತಪ್ರತಿ ಯಾವ ಸಮಾಜದ, ಯಾವ ಕಾಲದ, ಯಾವ
ಜ್ಞಾನಪರಂಪರೆಯ ಬದುಕನ್ನು ದಾಖಲಿಸುತ್ತದೆ?” ಎಂಬ ಪ್ರಶ್ನೆಯೆಡೆಗೆ
ಸಾಗುವ ಬದಲಾವಣೆಯಾಗಿ ನೋಡಬೇಕು. ಸಾಂಪ್ರದಾಯಿಕ ಸಂಪಾದನೆಯಲ್ಲಿ 'ದೋಷ'ವೆಂದು ಕೈಬಿಡುವ ಪಾಠಾಂತರಗಳು ವಾಸ್ತವದಲ್ಲಿ ಆಯಾ ಕಾಲದ ಪ್ರಾದೇಶಿಕ ಭಾಷೆ, ಆಡುನುಡಿ ಮತ್ತು ಸಾಮಾಜಿಕ ಉಚ್ಚಾರಣಾ ಕ್ರಮದ ಅಧಿಕೃತ ದಾಖಲೆಗಳಾಗಿವೆ.
ಹಸ್ತಪ್ರತಿಗಳ ಪುಷ್ಪಿಕೆಯ ಹಿನ್ನೆಲೆಯಲ್ಲಿ “ದೇಸಿ” ಎಂದರೆ ಕೇವಲ ಸಂಸ್ಕೃತೇತರ ಸಾಹಿತ್ಯವಲ್ಲ.
ಇಲ್ಲಿ ದೇಸಿ ಎಂದರೆ:
- ಸ್ಥಳೀಯ ಅನುಭವ,
- ಪ್ರಾದೇಶಿಕ ಭಾಷೆ,
- ಜನಪದ ಜ್ಞಾನ,
- ಬದುಕಿನ ಆಚರಣೆ,
- ಸಮುದಾಯದ ಸ್ಮೃತಿ,
- ಸ್ಥಳೀಯ ವೈದ್ಯಜ್ಞಾನ,
- ಕೃಷಿಜ್ಞಾನ,
- ಧಾರ್ಮಿಕ ಆಚರಣೆ,
- ಸಾಮಾಜಿಕ ಸಂಬಂಧಗಳು ಇವುಗಳ ಸಮಗ್ರತೆಯಾಗಿದೆ.
ಹೀಗಾಗಿ ಹಸ್ತಪ್ರತಿ ಅಧ್ಯಯನವು ದೇಸಿ
ಸಾಹಿತ್ಯವನ್ನು ಮಾತ್ರವಲ್ಲ, ದೇಸಿ ಜ್ಞಾನಸಂಸ್ಕೃತಿಯನ್ನು ಮರುಪಡೆಯುವ ಕೆಲಸವಾಗಿದೆ. ಇದು ಕನ್ನಡ ಸಂಸ್ಕೃತಿಯ ಪುನರ್ಮೌಲ್ಯೀಕರಣದಲ್ಲಿ ಮಹತ್ವದ
ಹೆಜ್ಜೆಯಾಗಿದೆ.
ಹಸ್ತಪ್ರತಿಗಳು ಸಾಹಿತ್ಯದ ಆಕರಗಳಷ್ಟೇ ಅಲ್ಲ, ಕನ್ನಡಿಗರ ಜ್ಞಾನಚರಿತ್ರೆ, ಭಾಷಾಇತಿಹಾಸ, ಸಾಮಾಜಿಕ
ಇತಿಹಾಸ, ಧಾರ್ಮಿಕ ಸಂಸ್ಕೃತಿ, ಪ್ರಾದೇಶಿಕ ಬದುಕು, ಕರಕುಶಲ ಪರಂಪರೆ,ಆರ್ಥಿಕವ್ಯವಹಾರ, ದೃಶ್ಯಸಂಸ್ಕೃತಿ
; ಜನಸ್ಮೃತಿ ಇವೆಲ್ಲವನ್ನೂ ಒಳಗೊಂಡ ಬಹುಪದರಗಳ ಸಾಂಸ್ಕೃತಿಕ ದಾಖಲೆಗಳು
ಆಗುತ್ತವೆ. ಇವುಗಳನ್ನು
ಆಧುನಿಕ ಗ್ರಂಥಸಂಪಾದನೆಯ ‘ಶುದ್ಧ-ಅಶುದ್ಧ’ ಎಂಬ ಏಕಮುಖ ಚೌಕಟ್ಟಿನಿಂದ ಹೊರತಂದು, ಸಾಂಸ್ಕೃತಿಕ ಹಾಗೂ ಬಹುಶಿಸ್ತೀಯ ನೆಲೆಗಳಲ್ಲಿ ನೋಡಿದಾಗ ಅವುಗಳ ಮಹತ್ವವು
ಸ್ಪಷ್ಟವಾಗುತ್ತದೆ. ಸಾಂಪ್ರದಾಯಿಕ
ಗ್ರಂಥಸಂಪಾದನಾ ಶಾಸ್ತ್ರವು ಪಾಶ್ಚಾತ್ಯ ಗ್ರಂಥಸಂಪಾದನೆಯ ಪ್ರಭಾವದಿಂದಾಗಿ
‘ಮೂಲಪಾಠ’ ಅಥವಾ ‘ಶುದ್ಧಪಾಠ’ವನ್ನು ಶೋಧಿಸುವ ಭರದಲ್ಲಿ, ಹಸ್ತಪ್ರತಿಯೊಂದು
ಸಮಾಜದ ನಡುವೆ ಪಡೆದುಕೊಂಡ ಚಾರಿತ್ರಿಕ ಮತ್ತು ಸಾಂಸ್ಕೃತಿಕ ವಿಸ್ತರಣೆಯನ್ನು ಕಡೆಗಣಿಸುತ್ತಾ
ಬಂದಿದೆ. ಹಸ್ತಪ್ರತಿಯನ್ನು ಕೇವಲ ಕೃತಿಕಾರನ ಆಸ್ತಿಯಾಗಿ ನೋಡದೆ, ಅದನ್ನು
ಸೃಷ್ಟಿಸಿದ, ನಕಲು ಮಾಡಿದ, ಪೋಷಿಸಿದ,
ಓದಿದ ಮತ್ತು ಕೇಳಿದ ಇಡೀ ಸಮಾಜದ ಸಮಷ್ಟಿ ಅಭಿವ್ಯಕ್ತಿಯಾಗಿ ಗ್ರಹಿಸಿದಾಗ ಮಾತ್ರ
ದೇಸಿ ಸಂಸ್ಕೃತಿಯ ನೈಜ ಪುನರ್ಮೌಲ್ಯೀಕರಣ ಸಾಧ್ಯವಾಗುತ್ತದೆ. ಬಸವಪುರಾಣ, ಕುಮಾರವ್ಯಾಸ ಭಾರತ, ಜೈಮಿನಿ
ಭಾರತದಂತಹ ದೇಸಿ ಕಾವ್ಯಗಳು ಲಿಖಿತಗೊಂಡರೂ, ವಾಚನ-ಗಮಕಗಳ
ಮೂಲಕ ಮೌಖಿಕ ಸಂವಹನದ ಜೀವಂತಿಕೆಯನ್ನು ಉಳಿಸಿಕೊಂಡದ್ದು ಸಾಹಿತ್ಯದ ಪ್ರಜಾಪ್ರಭುತ್ವೀಕರಣದ
ಸಂಕೇತವಾಗಿದೆ. ಹಸ್ತಪ್ರತಿಯು ಓದುವ ಮತ್ತು ಕೇಳುವ ಎರಡು ನೆಲೆಗಳಲ್ಲಿ ಏಕಕಾಲಕ್ಕೆ
ಸಂವಹನಗೊಳ್ಳುತ್ತಿತ್ತು. ಹೀಗಾಗಿ ಲಿಖಿತ ಪರಂಪರೆಯು ಶ್ರವಣ ಪರಂಪರೆಯ ಸತ್ವವನ್ನು ಒಳಗೊಂಡೇ
ಜೀವಂತವಾಗಿತ್ತು. ಹಸ್ತಪ್ರತಿಗಳ ಈ ಬಹುಮುಖಿ ನೆಲೆಯನ್ನು ಅರ್ಥಮಾಡಿಕೊಳ್ಳಲು ಸಾಹಿತ್ಯಕ
ದೃಷ್ಟಿಕೋನದ ಜೊತೆಗೆ ಸಮಾಜಶಾಸ್ತ್ರ, ಮಾನವಶಾಸ್ತ್ರ, ಭಾಷಾವಿಜ್ಞಾನ, ಆಡಳಿತ ಇತಿಹಾಸ ಮತ್ತು ತಂತ್ರಜ್ಞಾನದಂತಹ
ಬಹುಶಿಸ್ತೀಯ ಪರಿಕರಗಳನ್ನು ಅನ್ವಯಿಸುವುದು ಇಂದಿನ ಸಂಶೋಧನೆಯ ಪ್ರಮುಖ ಅಗತ್ಯವಾಗಿದೆ.
ಹಸ್ತಪ್ರತಿಗಳು ಮೌಖಿಕತೆ ಮತ್ತು ಲಿಖಿತತೆಯ ದ್ವಂದ್ವವಿಲ್ಲದ ನೆಲೆಗಳು: ಭಾರತೀಯ, ವಿಶೇಷವಾಗಿ ದ್ರಾವಿಡ/ಕನ್ನಡ ಪರಂಪರೆಯಲ್ಲಿ ಬರವಣಿಗೆ ಮತ್ತು ವಾಚನ ಬೇರೆ
ಬೇರೆಯಾಗಿರಲಿಲ್ಲ. ಕೃತಿಗಳು ತಾಳೆಗರಿಯಿಂದ ಗಮಕಿಯ ಕಂಠಕ್ಕೆ, ಕಂಠದಿಂದ
ಜನರ ನೆನಪಿಗೆ, ನೆನಪಿನಿಂದ ಮರಳಿ ಮತ್ತೊಬ್ಬ ಲಿಪಿಕಾರನ ಮೂಲಕ ತಾಳೆಗರಿಗೆ ನಿರಂತರವಾಗಿ ಚಲಿಸುತ್ತಿದ್ದವು.
ಇವು ಪ್ರಜಾಪ್ರಭುತ್ವೀಕರಣದ ಸಂಕೇತ: ಪಂಪ, ರನ್ನರಂತಹ ಮಾರ್ಗ ಕವಿಗಳ ಚಂಪೂ
ಕೃತಿಗಳು ಬೆರಳೆಣಿಕೆಯ ಪ್ರತಿಗಳಲ್ಲಿ ದೊರೆತರೆ; ಕುಮಾರವ್ಯಾಸ,
ಜೈಮಿನಿ ಭಾರತ, ವಚನಗಳು ಮತ್ತು ಕೀರ್ತನೆಗಳು ನೂರಾರು
ಪ್ರತಿಗಳಲ್ಲಿ ಲಭ್ಯವಿರುವುದಕ್ಕೆ ಕಾರಣ ಅವುಗಳಲ್ಲಿದ್ದ ಜನಪರ ದೇಸಿ ಸಂವೇದನೆ. ಇದು ಸಾಹಿತ್ಯದ
ಸ್ವೀಕರಣೆಯಲ್ಲಿ ಜನಸಾಮಾನ್ಯರ ಪಾತ್ರವನ್ನು ಸ್ಪಷ್ಟಪಡಿಸುತ್ತದೆ.
ಮುದ್ರಿತ ಪುಸ್ತಕದಲ್ಲಿ ಸಾಮಾನ್ಯವಾಗಿ ಒಂದು ನಿರ್ದಿಷ್ಟ
ಪಠ್ಯವನ್ನು “ಅಧಿಕೃತ” ಎಂದು ಪರಿಗಣಿಸಲಾಗುತ್ತದೆ. ಆದರೆ ಹಸ್ತಪ್ರತಿ ಪರಂಪರೆಯಲ್ಲಿ ಪಠ್ಯವು
ಒಂದೇ ರೂಪದಲ್ಲಿ ಉಳಿಯುವುದಿಲ್ಲ.
ಒಬ್ಬ ಲಿಪಿಕಾರನು ನಕಲು ಮಾಡುವಾಗ:
• ಕೆಲವು ಪದಗಳನ್ನು ತನ್ನ ಪ್ರಾದೇಶಿಕ ಭಾಷೆಗೆ ಹೊಂದಿಸಬಹುದು;
• ಅರ್ಥವಾಗದ ಪದಗಳನ್ನು ಬದಲಾಯಿಸಬಹುದು;
• ಹೊಸ ವಿವರಣೆಗಳನ್ನು ಸೇರಿಸಬಹುದು;
• ಕೆಲವು ಭಾಗಗಳನ್ನು ಕೈಬಿಡಬಹುದು;
• ಸ್ಥಳೀಯ ಧಾರ್ಮಿಕ ನಂಬಿಕೆಗಳನ್ನು ಸೇರಿಸಬಹುದು;
• ಪಠ್ಯವನ್ನು ಓದುವ ಸಮುದಾಯದ ಅಗತ್ಯಕ್ಕೆ ಅನುಗುಣವಾಗಿ
ರೂಪಾಂತರಿಸಬಹುದು.
ಹೀಗಾಗಿ ಹಸ್ತಪ್ರತಿಯ ಪ್ರತಿಯೊಂದು ರೂಪವೂ ಕೇವಲ “ಮೂಲದ
ದೋಷಪೂರಿತ ಪ್ರತಿ” ಅಲ್ಲ. ಅದು ಆ ಕಾಲದ ಸಾಮಾಜಿಕ ಮತ್ತು ಭಾಷಿಕ ಬದುಕಿನ ಒಂದು ಹೊಸ ಪದರವಾಗಿದೆ.
ಪಠ್ಯದಲ್ಲಿಯೂ ಹಸ್ತಪ್ರತಿಗಳ ಪ್ರಸರಣ, ಪ್ರತೀಕರಣ ಮತ್ತು
ಸಾಂಸ್ಕೃತಿಕ ಪಲ್ಲಟದ ಪ್ರಕ್ರಿಯೆಯನ್ನು ಮುಖ್ಯ ಅಧ್ಯಯನ ವಿಷಯವಾಗಿ ಪರಿಗಣಿಸಲಾಗಿದೆ. ವಿಶೇಷವಾಗಿ
ಹಸ್ತಪ್ರತಿಗಳನ್ನು ಭಾಷೆಯ “ಶುದ್ಧ–ಅಶುದ್ಧ” ಎಂಬ ಏಕಮುಖ ಮಾನದಂಡಕ್ಕಿಂತ ಪಠ್ಯದ ಚಲನಶೀಲತೆ
ಮತ್ತು ಭಾಷಿಕ ಸಮುದಾಯದ ಸಾಮಾಜಿಕ ನೆಲೆಯನ್ನು ಗಮನಿಸಬೇಕು.
ಹಸ್ತಪ್ರತಿಯೊಂದು ಸಿದ್ಧವಾಗುವ ಪ್ರಕ್ರಿಯೆಯ ಹಿಂದೆ
ಒಂದು ದೊಡ್ಡ ಜನಸಮುದಾಯದ ಸಂಘಟಿತ ಶ್ರಮವಿದೆ. ಇದನ್ನು ಭೌತಿಕ ಸಂರಚನೆ (ಅಲೇಖನ ಹಂತ) ಮತ್ತು
ಬೌದ್ಧಿಕ ಸಂರಚನೆ (ಲೇಖನ-ಗ್ರಥನ ಹಂತ) ಎಂದು ಎರಡು ಪ್ರಮುಖ ಭಾಗಗಳಾಗಿ ವಿಭಾಗಿಸಬಹುದು.
ಹಸ್ತಪ್ರತಿ ನಿರ್ಮಾಣ ಪ್ರಕ್ರಿಯೆ
ಭೌತಿಕ ಸಂರಚನೆ (ಅಲೇಖನ ಹಂತ)
ಬರವಣಿಗೆಗೆ ಮುನ್ನ ತಾಳೆಗರಿ ಅಥವಾ ಕಾಗದವನ್ನು
ಹದಗೊಳಿಸುವ ಕೆಲಸವು ನಾಡಿನ ವಿವಿಧ ಕಾಯಕವರ್ಗಗಳಿಗೆ ಸೇರಿದ್ದಾಗಿತ್ತು:
- ಓಲೆಕಾರರು: ಕಾಡಿನಿಂದ
ತಾಳೆಗರಿಯನ್ನು ಸಂಗ್ರಹಿಸಿ, ಬೇಯಿಸಿ,
ಹದಮಾಡಿ, ನಯಗೊಳಿಸಿ, ಕತ್ತರಿಸಿ
ಬರವಣಿಗೆಗೆ ಯೋಗ್ಯವಾಗಿಸುತ್ತಿದ್ದರು.
- ಲೋಹಕಾರರು: ಗರಿಯ
ಮೇಲೆ ಬರೆಯಲು ಬೇಕಾದ ಕಬ್ಬಿಣ ಅಥವಾ ಕಂಚಿನ ಮೊನಚಾದ ಕಂಟಕಗಳನ್ನು (ಗಂಟಂ)
ರೂಪಿಸುತ್ತಿದ್ದರು.
- ಬಡಿಗರು: ಹಸ್ತಪ್ರತಿಯ ಗರಿಗಳು
ಮುರಿಯದಂತೆ ಭದ್ರಪಡಿಸಲು ಬೇಕಾದ ಸುಂದರ ಮರದ ಪಟ್ಟಿಕೆಗಳನ್ನು (ಹಲಗೆಗಳನ್ನು) ಕೆತ್ತಿ
ಸಿದ್ಧಪಡಿಸುತ್ತಿದ್ದರು.
- ಮಸಿಕಾಯಕದವರು: ದೀರ್ಘಕಾಲ
ಅಕ್ಷರಗಳು ಮಾಸಿಹೋಗದಂತೆ ನೈಸರ್ಗಿಕ ಎಣ್ಣೆ, ಕಾಡಿಗೆ, ಗಿಡಮೂಲಿಕೆಗಳ ರಸಗಳನ್ನು ಬೆರೆಸಿ ವಿಶಿಷ್ಟ
ಕಪ್ಪು ಮಸಿಯನ್ನು ತಯಾರಿಸುತ್ತಿದ್ದರು.
- ವಸ್ತ್ರಕಾರರು: ಕೀಟಗಳು
ಮತ್ತು ತೇವಾಂಶದಿಂದ ಹಸ್ತಪ್ರತಿಗಳನ್ನು ರಕ್ಷಿಸಲು ಬಟ್ಟೆಗಳನ್ನು ನೇಯ್ದು
ಒದಗಿಸುತ್ತಿದ್ದರು. ತಾಳೆಗರಿ ಹದಮಾಡುವ ಓಲೆಕಾರ, ಕಂಟಕ ರೂಪಿಸುವ ಕಮ್ಮಾರ, ಪಟ್ಟಿಕೆ ಕೊರೆಯುವ ಬಡಿಗ,
ಮಸಿ ತಯಾರಿಸುವ ಕಾಯಕದವರು—ಹೀಗೆ ಕೆಳಸ್ತರದ ಕುಶಲಕರ್ಮಿಗಳ ಸಮಷ್ಟಿ ಬೆವರಿನಿಂದ
ಹಸ್ತಪ್ರತಿಗಳು ರೂಪುಗೊಂಡವು. ಇದರ
ಮೂಲಕ ಹಸ್ತಪ್ರತಿಯನ್ನು:“ಸಾಹಿತ್ಯಕ ಉತ್ಪನ್ನ”ದಿಂದ “ಸಾಮೂಹಿಕ ಕರಕುಶಲ ಉತ್ಪನ್ನ”ಎಂದು
ಮರುಪರಿಗಣಿಸಬಹುದು.
೨. ಬೌದ್ಧಿಕ
ಸಂರಚನೆ (ಲೇಖನ ಹಂತ - ಲಿಪಿಕಾರರ ಜ್ಞಾನಶಿಸ್ತು)
ಮೂಲ ಪಠ್ಯದ ಗ್ರಹಿಕೆ ಮತ್ತು
ಲಿಪ್ಯಂತರ
ಪ್ರಾದೇಶಿಕ ಭಾಷಾ ರೂಪಗಳ ಅಳವಡಿಕೆ
ಅಲಂಕಾರ, ಚಿತ್ರ
ಮತ್ತು ವಿನ್ಯಾಸ ರಚನೆ
ಪುಷ್ಪಿಕೆಗಳ ದಾಖಲಾತಿ ಮತ್ತು
ಸಮರ್ಪಣೆ
- ಹಸ್ತಪ್ರತಿಪುಷ್ಪಿಕೆಯಲ್ಲಿ ದೊರೆಯಬಹುದಾದ ಮಾಹಿತಿಗಳು:
• ಬರೆಯಲಾದ ದಿನಾಂಕ,
• ಸ್ಥಳ,
• ಲಿಪಿಕಾರನ ಹೆಸರು,
• ತಂದೆಯ ಹೆಸರು,
• ಆಶ್ರಯದಾತ,
• ರಾಜ ಅಥವಾ ಸ್ಥಳೀಯ
ಆಡಳಿತಗಾರ,
• ಗ್ರಂಥವನ್ನು
ಬರೆಯಿಸಿದ ವ್ಯಕ್ತಿ,
• ಗ್ರಂಥದಾನ,
• ಸಂಭಾವನೆ,
• ಧಾರ್ಮಿಕ ಆಶಯ,
• ಕುಟುಂಬ ಸಂಬಂಧ,
• ಸ್ಥಳೀಯ ಘಟನೆಗಳು.
ಹೀಗಾಗಿ ಹಸ್ತಪ್ರತಿ
ಪುಷ್ಪಿಕೆಗಳು ಒಂದು ರೀತಿಯಲ್ಲಿ ಹಸ್ತಪ್ರತಿಯ ಸಾಮಾಜಿಕ ಆತ್ಮಚರಿತ್ರೆ
ಎಂದರೂ ತಪ್ಪಾಗಲಾರದು.
ಹಸ್ತಪ್ರತಿ ಪುಷ್ಪಿಕೆಗಳು: ಹಸ್ತಪ್ರತಿಯ
ಆದಿ ಮತ್ತು ಅಂತ್ಯದಲ್ಲಿ ಬರುವ ‘ಪುಷ್ಪಿಕೆ’ಗಳು (Colophons) ಕೇವಲ
ಗ್ರಂಥ ಮುಕ್ತಾಯದ ಮಾತುಗಳಲ್ಲ; ಅವು ಇತಿಹಾಸ ರಚನೆಯ ಅತ್ಯಮೂಲ್ಯ
ಪ್ರಾಥಮಿಕ ದಾಖಲೆಗಳು. ಶಿಲಾಶಾಸನಗಳು ರಾಜರ ಅಧಿಕೃತ ವಿಜಯಗಳನ್ನು ವೈಭವೀಕರಿಸಿದರೆ, ಪುಷ್ಪಿಕೆಗಳು ಶಾಸನಗಳಲ್ಲಿ ಮರೆಯಾಗಿರುವ ಸೂಕ್ಷ್ಮ ಆಡಳಿತಾತ್ಮಕ, ವಂಶಾವಳಿಯ ಮತ್ತು ಪ್ರಾದೇಶಿಕ ಚರಿತ್ರೆಯನ್ನು ಹಿಡಿದಿಡುತ್ತವೆ. ಮರೆಮಾಚಿದ ಇತಿಹಾಸದ ದಾಖಲೆಗಳು. ಹಸ್ತಪ್ರತಿ ಪುಷ್ಪಿಕೆಗಳು ಚಾರಿತ್ರಿಕ
ನೆಲೆ ಮತ್ತು ಸ್ಥಳೀಯ ರಾಜಕೀಯ ಸಂರಚನೆಯ ನೆಲೆಗಳಾಗಿವೆ. ಶಿಲಾಶಾಸನಗಳಲ್ಲಿ ದಾಖಲಾಗದ ಸ್ಥಳೀಯ ಪಾಳೆಯಗಾರರು ಹಾಗೂ ಅರಸುಮನೆತನಗಳಾದ ಬಿಜ್ಜಾವರದ
ಮಹಾನಾಡ ಪ್ರಭುಗಳು, ಹಾಗಲವಾಡಿ, ಹದಿನಾಡು, ಕೆಳದಿ, ಕಳಲೆ ಹಾಗೂ
ಮೈಸೂರು ಒಡೆಯರ ಸೂಕ್ಷ್ಮ ರಾಜಕೀಯ ವಿವರಗಳು ಹಸ್ತಪ್ರತಿ ಪುಷ್ಪಿಕೆಗಳಿಂದ ಬೆಳಕಿಗೆ ಬರುತ್ತವೆ. ಚಾರಿತ್ರಿಕ ಆಕರಗಳಾಗಿ ಹಸ್ತಪ್ರತಿ ಪುಷ್ಪಿಕೆಗಳು ಹಸ್ತಪ್ರತಿಗಳ ಆದಿ-ಅಂತ್ಯಗಳಲ್ಲಿ
ಬರುವ ಪುಷ್ಪಿಕೆಗಳು (Colophons) ರಾಜಕೀಯ ಇತಿಹಾಸದ
ಮರುರಚನೆಗೆ ಅಗತ್ಯವಾದ ಅಪರೂಪದ ಆಕರಗಳಾಗಿವೆ. ದೊಡ್ಡ ಚರಿತ್ರೆಯಲ್ಲಿಲ್ಲದ ಸಣ್ಣ ಇತಿಹಾಸಗಳು
ಹಸ್ತಪ್ರತಿಗಳಲ್ಲಿ ಉಳಿದಿರಬಹುದು. ಅಂದರೆ
ಹಸ್ತಪ್ರತಿಗಳನ್ನು Subaltern History, Micro
History, Local History ನಿರ್ಮಾಣಕ್ಕೆ ಮಹತ್ವದ ಆಕರಗಳಾಗಿ
ಬಳಸಿಕೊಳ್ಳಬಹುದು
ರಾಜರು ಮತ್ತು ಸಾಮ್ರಾಜ್ಯಗಳ
ಇತಿಹಾಸದ ಹೊರತಾಗಿ ಹಸ್ತಪ್ರತಿ ಪುಷ್ಪಿಕೆಗಳು ಸಣ್ಣ ಪ್ರದೇಶಗಳು, ಕುಟುಂಬಗಳು, ಸ್ಥಳೀಯ ಅಧಿಕಾರಿಗಳು, ಗ್ರಾಮಗಳು, ವೃತ್ತಿಗಳು ಮತ್ತು ವೈಯಕ್ತಿಕ ಜೀವನದ
ವಿವರಗಳನ್ನು ಒದಗಿಸಬಲ್ಲವು. ಇದರಿಂದ ಸೂಕ್ಷ್ಮ ಇತಿಹಾಸಕ್ಕೆ ಹಸ್ತಪ್ರತಿಗಳು ಮಹತ್ವದ
ಆಕರಗಳಾಗುತ್ತವೆ.ಒಂದು ಪುಷ್ಪಿಕೆಯನ್ನು ಆಧರಿಸಿ ಸಂಶೋಧಕನು: ವ್ಯಕ್ತಿ → ಕುಟುಂಬ → ಗ್ರಾಮ → ವೃತ್ತಿ → ಸಂಸ್ಥೆ → ಆಡಳಿತ → ಪ್ರದೇಶ → ಕಾಲಘಟ್ಟ ಎಂಬ ಸಂಶೋಧನಾ ಸರಣಿಯನ್ನು ನಿರ್ಮಿಸಬಹುದು.ಈ
ವಿಧಾನವು ‘ಕೆಳಮಟ್ಟದಿಂದ ಇತಿಹಾಸ ಬರೆಯುವ’ ಸಾಧ್ಯತೆಯನ್ನು ಸೃಷ್ಟಿಸುತ್ತದೆ.
ಸ್ಥಳೀಯ ಚರಿತ್ರೆಯ ಶೋಧ: ಬಿಜ್ಜಾವರ,
ಹಾಗಲವಾಡಿ ಮತ್ತು ಕೆಳದಿಯಂತಹ ಅಧೀನ ಸಂಸ್ಥಾನಗಳ ಸೂಕ್ಷ್ಮ ರಾಜಕೀಯ, ಆಡಳಿತ ವಿಭಾಗಗಳು ಮತ್ತು ವಂಶಾವಳಿಗಳು ಪುಷ್ಪಿಕೆಗಳಿಂದ ಮಾತ್ರ ನಿಖರವಾಗಿ
ಅನಾವರಣಗೊಳ್ಳುತ್ತವೆ.
ಆಡಳಿತದ ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಪರಗಣಿ, ಮಾಗಣಿ, ಸಂಸ್ಥಾನ ಮುಂತಾದ ಪ್ರಾದೇಶಿಕ ವಿಭಾಗಗಳು ಮತ್ತು
ದಳವಾಯಿ, ಬೊಕ್ಕಸದವರು, ಕರಣಿಕರು, ಶಾನಭೋಗರು, ಉಗ್ರಾಣದವರಂತಹ ಅಧಿಕಾರ ವರ್ಗದ
ಕಾರ್ಯವ್ಯಾಪ್ತಿಯನ್ನು ಇವು ದಾಖಲಿಸುತ್ತವೆ.
ಮೈಸೂರು ಒಡೆಯರ ಆಡಳಿತ ಮತ್ತು
ಸಾಂಸ್ಕೃತಿಕ ಪರಂಪರೆ
ವಿಜಯನಗರೋತ್ತರ ಕರ್ನಾಟಕದಲ್ಲಿ ಮೈಸೂರು ಒಡೆಯರ
ಕಾಲಘಟ್ಟವು ಸಾಹಿತ್ಯ, ಕಲೆ ಮತ್ತು ಗ್ರಂಥರಚನೆಯ
ಸುವರ್ಣಯುಗವಾಗಿತ್ತು. ಬೆಟ್ಟದ ಚಾಮರಸ ಒಡೆಯರು, ಕಂಠೀರವ ನರಸರಾಜ
ಒಡೆಯರು, ಚಿಕ್ಕದೇವರಾಜ ಒಡೆಯರು ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರ
ಕಾಲದ ಪುಷ್ಪಿಕೆಗಳು ಮಹತ್ವದ ರಾಜಕೀಯ ಮತ್ತು ವಂಶಾವಳಿ ವಿವರಗಳನ್ನು ನೀಡುತ್ತವೆ.
ಬ್ರಹ್ಮೋತ್ತರಖಂಡದ ಹಸ್ತಪ್ರತಿ ಪುಷ್ಪಿಕೆಯು (ಸಂ. ೧೧೮)
ಮೈಸೂರು ಅರಸರ ಪೀಳಿಗೆಯನ್ನು ಸ್ಪಷ್ಟವಾಗಿ ದಾಖಲಿಸುತ್ತದೆ:
ಇಲ್ಲಿ ಮಹಾಮಾತೋಶ್ರೀ ಕಾಂತಾಂಬಾ ಅವರನ್ನು ಕೇವಲ
ರಾಣಿಯನ್ನಾಗಿ ಮಾತ್ರ ಚಿತ್ರಿಸದೆ, “ಭೂಸುರ ಪೋಷಣ
ಚಿಂತಾಮಣಿ, ಜನೇಷ್ಟಾರ್ಥಕಾಮಧೇನು, ರೂಪಿನೊಳ್
ಲಕ್ಷ್ಮಿಯಂತೆ, ಐಶ್ವರ್ಯದೊಳ್ ಶಚಿದೇವಿಯಂತೆ, ವಿದ್ಯಾವಾಕ್ಕಿನೊಳ್ ಸರಸ್ವತಿಯಂತೆ, ಜನಪೋಷಣೆಯಲ್ಲಿ
ಪಾರ್ವತಿಗೆ ಮಿಗಿಲಾಗಿ...” ಎಂದು ಬಣ್ಣಿಸಲಾಗಿದೆ. ಇದು ಅಂದಿನ ರಾಜಮನೆತನದ ಸ್ತ್ರೀಯರು ಕೇವಲ
ಅಂತಃಪುರದ ಭೋಗದ ವಸ್ತುಗಳಾಗಿರದೆ ವಿದ್ಯಾಭಿಮಾನಿಗಳಾಗಿ, ಪ್ರಜಾರಕ್ಷಣೆಯ
ದೀಕ್ಷೆ ಹೊತ್ತ ಪ್ರಜ್ಞಾವಂತರಾಗಿದ್ದರು ಎಂಬುದನ್ನು ಸಾಬೀತುಪಡಿಸುತ್ತದೆ.
ಅಲ್ಲದೆ, “ಶಂಖಚಕ್ರಮಕರಮತ್ಸ್ಯ
ಶರಭಸಾಳ್ವ ಗಂಡಭೇರುಂಡ ಧರಣಿವರಾಹ ಹನುಮದ್ಗರುಡ ಅಂಕುಶ ಕುಠಾರಸಿಂಹ...” ಮೊದಲಾದ ಬಿರುದಾವಳಿಗಳು
ಮೈಸೂರು ಒಡೆಯರ ರಾಜಚಿಹ್ನೆಗಳ ವೈವಿಧ್ಯವನ್ನು ಮತ್ತು ಧಾರ್ಮಿಕ ಸಮನ್ವಯತೆಯನ್ನು ತೋರಿಸುತ್ತವೆ.
ಬಿಜ್ಜಾವರದ ಮಹಾನಾಡ ಪ್ರಭುಗಳು
ಮತ್ತು 'ಶಾರದಾ ಭಂಡಾರ'
ಮಧುಗಿರಿ ಮತ್ತು
ಚೆನ್ನರಾಯನದುರ್ಗ ಪ್ರದೇಶಗಳಲ್ಲಿ ಆಳ್ವಿಕೆ ನಡೆಸಿದ ಬಿಜ್ಜಾವರದ ಮಹಾನಾಡ ಪ್ರಭುಗಳ
ಚರಿತ್ರೆಯನ್ನು ಪುನರ್ನಿರ್ಮಿಸಲು ಹಸ್ತಪ್ರತಿ ಪುಷ್ಪಿಕೆಗಳೇ ಮುಖ್ಯ ಆಧಾರ. ಇವರಲ್ಲಿ
ಪ್ರಸಿದ್ಧನಾದ ಇಮ್ಮಡಿ ಚಿಕ್ಕಭೂಪಾಲನು (ಕ್ರಿ.ಶ. ೧೫೬೧-೧೬೦೩) ತೋಂಟದ ಸಿದ್ಧಲಿಂಗೇಶ್ವರರ
ಪರಮಭಕ್ತನಾಗಿದ್ದನು.
ಇಮ್ಮಡಿ ಚಿಕ್ಕಭೂಪಾಲನ ಅರಮನೆಯಲ್ಲಿದ್ದ ‘ಶಾರದಾ ಭಂಡಾರ’
(ಅರಮನೆ ಗ್ರಂಥಾಲಯ) ಅಪರೂಪದ ಗ್ರಂಥಗಳ ಸಂಗ್ರಹಾಲಯವಾಗಿತ್ತು. ಈ ಸಂಸ್ಥಾನದ ಇತಿಹಾಸವನ್ನು
ಮಲ್ಲಿಕಾರ್ಜುನ ಕವಿಯು ತನ್ನ ‘ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ’ ಕೃತಿಯಲ್ಲಿ ದಾಖಲಿಸಿದ್ದಾನೆ.
ಹಾವಳಿ ರಣಭೈರೇಗೌಡನು ಪೆನುಗೊಂಡೆಯನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ನಡೆದ ಕದನ, ತೋಂಟದರಾಯನ ವೀರಮರಣ, ಚೆನ್ನಬಸವಮ್ಮನ ಸಹಗಮನ ಮುಂತಾದ ನೈಜ
ಚಾರಿತ್ರಿಕ ಸಂಗತಿಗಳು ಈ ಕಾವ್ಯ ಮತ್ತು ಪುಷ್ಪಿಕೆಗಳಿಂದ ದೃಢಪಡುತ್ತವೆ.
ಕುಮಾರ ರಾಮನ ಸಾಂಗತ್ಯ ಅಪ್ರಕಟಿತ ಹಸ್ತಪ್ರತಿ : ಈ ಹಸ್ತಪ್ರತಿಯು ಕಾಗದದ ಪ್ರತಿಯಾಗಿದ್ದು, ೩೬೦ ಪುಟಗಳನ್ನು ಒಳಗೊಂಡಿದೆ. ಎಂ.ಎಂ.ಕಲಬುರ್ಗಿ ಮತ್ತು ವೀರಣ್ಣ ರಾಜೂರ ಅವರು ಸಂಪಾದಿಸಿರುವ ಕಂಪಲಿಯ ದೊಡ್ಡನಗೌಡರ ಮನೆಯಲ್ಲಿ ದೊರೆತ ಹೊಸ ಕುಮಾರ ರಾಮನ ಸಾಂಗತ್ಯ ಹಸ್ತಪ್ರತಿಯಲ್ಲಿಯ ವಿವರಗಳು ಕೊಪ್ಪಳ ಶಾಸನದಲ್ಲಿ ಪ್ರಸ್ತಾಪಿಸಿದ್ದ, ಕುಮಾರರಾಮನು ಕಮ್ಮಟ ದುರ್ಗದ ಜೈನರನ್ನು ಹೊರಹಾಕಲು ನಿಜವಾದ ಕಾರಣ ಸಂಗತಿಗಳನ್ನು ತಿಳಿಸುತ್ತದೆ. ಅಂದರೆ ಈ ಹಸ್ತಪ್ರತಿಯು ಕುಮ್ಮಟ ದುರ್ಗವನ್ನು ಆಳಿದ ಕುಮಾರರಾಮ ಮತ್ತು ಅಲ್ಲಿಯ ಜೈನಮನೆತನದ ವ್ಯಕ್ತಿಗಳ ಮನಸ್ತಾಪಕ್ಕೆ ಕಾರಣವಾದ ಜಾತಿಸೂತಕ ಸಂದರ್ಭದ ಬಗೆಗೆ ವಿವರಗಳಿವೆ. ಅಂದರೆ ಕುಮಾರರಾಮನನ್ನು ಪ್ರೀತಿ ಗೌರವಾದರಗಳಿಂದ ಬರಮಾಡಿಕೊಂಡ ಕುಮ್ಮಟ ದುರ್ಗದ ಜೈನಮನೆತನದ ವ್ಯಕ್ತಿಗಳು ಸತ್ಕರಿಸಿ ಕಳುಹಿಸಿ, ನಂತರ ಕುಮಾರ ರಾಮ ಕುಳಿತ ಸ್ಥಳ ಮಲಿನವಾಯಿತೆಂಬ ಭಾವನೆಯಿಂದ ಅದನ್ನು ಶುದ್ಧಗೊಳಿಸಿದರೆಂಬ ವದಂತಿಯನ್ನು ಕೇಳಿ ತಿಳಿದ ಕುಮಾರರಾಮ ಜೈನರನ್ನು ಕುಮ್ಮಟ ದುರ್ಗದಿಂದ ಹೊರ ಹಾಕಿದ್ದಲ್ಲದೆ, ಜೈನ ಬಸದಿಯಲ್ಲಿ ಕುರಿಕೋಣಗಳನ್ನು ವಧಿಸಿದ ಪ್ರಸಂಗಗಳನ್ನು ಈ ಹಸ್ತಪ್ರತಿಯು ಉಲ್ಲೇಖಿಸುತ್ತದೆ.
ಬಿ.ವಿ.ಶಿರೂರ ಅವರು ಸಂಪಾದಿಸಿರುವ ಧೂಪದ ನಂಜೇಶ ಕವಿ
ಬರೆದಿರುವ( ಕ್ರಿ..ಶ.೧೬೫೦) ಮೊಲ್ಲೆ ಬೊಮ್ಮಯ್ಯರ ಕಾವ್ಯದ ಹಸ್ತಪ್ರತಿಯು ಯಲಬುರ್ಗಾದ
ಹಿರೇಮಠದಲ್ಲಿ ದೊರೆತಿದ್ದು, ಜಗದೇವನೊಂದಿಗೆ ಸೇರಿ ಬಿಜ್ಜಳನನ್ನು ಕೊಂದ ಮಲ್ಲೆಬೊಮ್ಮಯ್ಯನ ಇತಿವೃತ್ತವನ್ನು
ಒಳಗೊಂಡಿದ್ದು ಯಲಬುರ್ಗಾ ಪರಿಸರದ ಕ್ರಿ.ಶ.೧೧೫೪ ಮತ್ತು ಕ್ರಿ.ಶ.೧೧೮೬ ರ ಕಲ್ಲೂರು ಶಾಸನಗಳಲ್ಲಿಯ
ಮೊಲ್ಲೆ ಬೊಮ್ಮಯ್ಯನ ವಿವರಗಳನ್ನು
ಸಮರ್ಥಿಸುತ್ತದೆ. ಹೀಗಾಗಿ ಈ ಹಸ್ತಪ್ರತಿಗೆ ಚಾರಿತ್ರಿಕ ಮಹತ್ವ ಸಲ್ಲುತ್ತದೆ.
ಹಾಗಲವಾಡಿ, ಕಳಲೆ ಮತ್ತು ಕಿತ್ತೂರು ಸಂಸ್ಥಾನಗಳು
- ಹಾಗಲವಾಡಿ: ಕ್ರಿ.ಶ.
೧೬೭೧-೧೭೦೧ರವರೆಗೆ ಆಳಿದ ಸಿದ್ಧರಾಮಪ್ಪ ನಾಯಕನು ಸ್ವತಃ ಗದ್ಯರೂಪದ ‘ಮಹಾನುಭಾವ
ಪ್ರಕಾಶಿಕೆ’ ಎಂಬ ಕೃತಿಯನ್ನು ರಚಿಸಿದ ಉಲ್ಲೇಖವಿದೆ. ಆತನ ಮಗಳು ‘ಚೆನ್ನಸಂಗಮೇಶ್ವರ
ಲಿಂಗವೇ’ ಅಂಕಿತದಲ್ಲಿ ಸ್ವರವಚನಗಳನ್ನು ರಚಿಸಿರುವುದು ಹಸ್ತಪ್ರತಿಗಳಿಂದಲೇ
ತಿಳಿದುಬಂದಿದೆ.
- ಕಳಲೆ ಮನೆತನ: ಮೈಸೂರು
ಒಡೆಯರ ದಳವಾಯಿಗಳಾಗಿದ್ದ ಕಳಲೆ ನಂಜರಾಜನು ರಚಿಸಿದ ‘ಭಕ್ತವಿಲಾಸ ದರ್ಪಣ’ ಮತ್ತು
‘ಸಂಜರಾಜವಾಣಿ ವಿಲಾಸ’ (ಹರಿವಂಶ ಟೀಕು) ಕೃತಿಗಳ ಪುಷ್ಪಿಕೆಗಳಿಂದ ಭಾರದ್ವಾಜ ಗೋತ್ರದ, ಅಶ್ವಲಾಯನ ಸೂತ್ರದ ದಳವಾಯಿ ದೊಡ್ಡರಾಜ, ವೀರರಾಜ ಮತ್ತು ನಂಜರಾಜರ ವಂಶಾವಳಿ ಖಚಿತಪಟ್ಟಿದೆ.
- ಕಿತ್ತೂರು ಸಂಸ್ಥಾನ: ನೀಲಕಂಠಾರ್ಯ
ರಚಿತ ‘ಮಲ್ಲೇಂದ್ರ ವಿಜಯ’ ಕಾವ್ಯವು (೪೫ ವಾರ್ಧಕ ಷಟ್ಪದಿಗಳು) ಟಿಪ್ಪು ಸುಲ್ತಾನನು
ಮಲ್ಲಸರ್ಜನನ್ನು ಬಂಧಿಸಿ ಶ್ರೀರಂಗಪಟ್ಟಣದ ಸೆರೆಯಲ್ಲಿಟ್ಟದ್ದು ಮತ್ತು ಆತ ತಪ್ಪಿಸಿಕೊಂಡು
ಬಂದ ರೋಚಕ ಇತಿಹಾಸವನ್ನು ದಾಖಲಿಸಿದೆ. ಕಿತ್ತೂರು ಸಂಸ್ಥಾನವು ೧ ಕಸಬಾ ಮತ್ತು ೧೪
ಕರ್ಯಾತುಗಳನ್ನು (ಬೆಳವಡಿ, ಸಂಪಗಾಂವ,
ಹಲಸಿ, ನಂದಗಡ ಇತ್ಯಾದಿ), ೨,೮೨೪ ಮೌಜೆಗಳನ್ನು (ಹಳ್ಳಿಗಳು) ಹಾಗೂ ೨೮೫ ಕಂದಾಯ
ಮಹಾಲುಗಳನ್ನು ಒಳಗೊಂಡಿತ್ತೆಂಬ ನಿಖರ ಭೂ-ಆಡಳಿತ ವಿವರಗಳು ಈ ಹಸ್ತಪ್ರತಿಯಲ್ಲಿವೆ.
ಹದಿನಾಡ ಪ್ರಭುಗಳು
ಮೈಸೂರು ಜಿಲ್ಲೆಯ ಯಳಂದೂರು ಪರಿಸರವನ್ನು ಆಳಿದ ಹದಿನಾಡ
ಪ್ರಭುಗಳ ವಂಶಾವಳಿಯು ಶಾಸನಗಳಿಗಿಂತ ಹೆಚ್ಚಾಗಿ ಹಸ್ತಪ್ರತಿಗಳಿಂದ ಸ್ಪಷ್ಟಗೊಳ್ಳುತ್ತದೆ:
• ಕ್ರಿ.ಶ. ೧೫೮೦ರ (ಶಕ ೧೫೦೨) ಶೂನ್ಯಸಂಪಾದನೆಯ ಪ್ರತಿಯ
ಪ್ರಕಾರ ಚೆನ್ನೊಡೆಯನು ಗುಮ್ಮಳಾಪುರದ ಸಿದ್ಧಲಿಂಗದೇವರಿಗೆ ಗ್ರಂಥ ಸಮರ್ಪಣೆ ಮಾಡಿದ ವಿವರ
ಸಿಗುತ್ತದೆ.
• ಕ್ರಿ.ಶ. ೧೬೭೨ರ (ಶಕ ೧೫೯೪) ಬಸವಪುರಾಣದ ಪ್ರತಿಯಿಂದ
ಲಿಂಗರಾಜೇಂದ್ರನಿಗೆ ‘ಲಿಂಗರಾಜಯ್ಯ’ ಎಂಬ ಮಗನಿದ್ದನೆಂಬ ಹೊಸ ಚಾರಿತ್ರಿಕ ಅಂಶ ಬೆಳಕಿಗೆ ಬಂದಿದೆ:
ಸ್ಥಳೀಯ ಆಡಳಿತಾತ್ಮಕ ಪದಕೋಶ
ಹಸ್ತಪ್ರತಿ ಪುಷ್ಪಿಕೆಗಳಲ್ಲಿ ದಾಖಲಾಗಿರುವ ಅಧಿಕಾರಿಗಳ
ಮತ್ತು ಆಡಳಿತ ವಿಭಾಗಗಳ ಹೆಸರುಗಳು ಮಧ್ಯಕಾಲೀನ ಕರ್ನಾಟಕದ ವಿಕೇಂದ್ರೀಕೃತ ಆಡಳಿತ ಸ್ವರೂಪವನ್ನು
ತೆರೆದಿಡುತ್ತವೆ:
• ಆಡಳಿತ ವಿಭಾಗಗಳು: ಕಸಬಾ, ಪರಗಣಿ /
ಪ್ರಗಣೆ, ಮಾಗಣಿ, ಸಂಸ್ಥಾನ, ಹೋಬಳಿ, ನಾಡು, ಸೀಮೆ.
• ಅಧಿಕಾರಿ ವರ್ಗ: ದಳವಾಯಿ, ಸುಬೇದಾರ,
ಭಂಡಾರಿ, ಬೊಕ್ಕಸದವರು, ಟಂಕಸಾಲೆಯವರು,
ಕರಣಿಕರು, ಹೆಗ್ಗಡೆ, ಉಗ್ರಾಣದವರು,
ಶಾನಭೋಗರು, ಪಾರುಪತ್ಯಗಾರರು, ಸುಂಕದ ಅಧಿಕಾರಿಗಳು, ರಾಯಸದವರು (ಕಾರ್ಯದರ್ಶಿಗಳು),
ಗುರಿಕಾರರು, ಸೇರುವೆಗಾರರು, ಕೊತ್ವಾಲರು, ಠಾಣೇದಾರರು, ಪೊತ್ತದಾರರು.
ಹಸ್ತಪ್ರತಿ ಪುಷ್ಪಿಕೆಗಳು: ಶ್ರಮ
ಸಂಸ್ಕೃತಿ ಮತ್ತು ಸಾಮಾಜಿಕ ಸ್ತರಗಳು:
ಕುಶಲಕರ್ಮಿಗಳ ಸಮಷ್ಟಿ ಶ್ರಮ:
ಹಸ್ತಪ್ರತಿ ರಚನೆಯು ಓಲೆಕಾರ, ಲೋಹಕಾರ, ಬಡಿಗಾರ,
ಚಿತ್ರಗಾರ ಮತ್ತು ಮಸಿಕಾಯಕದ ಜನವರ್ಗದ ಭೌತಿಕ ಶ್ರಮ ಹಾಗೂ ಲಿಪಿಕಾರರ ಬೌದ್ಧಿಕ
ಶ್ರಮದ ಸಂಯೋಜಿತ ಫಲ.
ಲೌಕಿಕ
ಆರ್ಥಿಕತೆ: ಲಿಪಿಕಾರರ ದಿನಗೂಲಿ, ಸಂಭಾವನೆ, ವಸ್ತ್ರ-ಉಂಬಳಿಗಳ
ವಿವರಗಳು ಹಾಗೂ ಬರಗಾಲದಲ್ಲಿ ಹಸ್ತಪ್ರತಿಗಳನ್ನು ಅಡವಿಟ್ಟು ಅಥವಾ ಮಾರಿ ಬದುಕು ಸಾಗಿಸಿದ
ದಾಖಲೆಗಳು ಪ್ರಾಚೀನ ಕನ್ನಡಿಗರ ಆರ್ಥಿಕ ಒತ್ತಡಗಳನ್ನು ಬಿಂಬಿಸುತ್ತವೆ. ಹಸ್ತಪ್ರತಿಗಳ ವಿಕ್ರಯ,
ಅಡಮಾನ ಮತ್ತು ಆರ್ಥಿಕ ವಹಿವಾಟುಆಧುನಿಕ ಪೂರ್ವ ಕರ್ನಾಟಕದಲ್ಲಿ ಹಸ್ತಪ್ರತಿಗಳು
ಕೇವಲ ಪೂಜಾವಸ್ತುವಾಗಿರದೆ, ಆಸ್ತಿಯ ಮೌಲ್ಯವನ್ನು ಹೊಂದಿದ್ದವು. ಬರಗಾಲ
ಮತ್ತು ಕೌಟುಂಬಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಹಸ್ತಪ್ರತಿಗಳನ್ನು ಅಡವಿಡುವುದು ಅಥವಾ ಮಾರಿ
ಜೀವನ ಸಾಗಿಸುವುದು ವಾಡಿಕೆಯಾಗಿತ್ತು:
• ಅಡಮಾನದ ನಿದರ್ಶನ: “ಪ್ರಭವ ಸಂವತ್ಸರದ ಚೈತ್ರ ಶುದ್ಧ ೨ಲ್ಲು ದೇವಾಮೈಯನ
ಕೈಯಲ್ಲು ಚೆನ್ನ ಸೀನಪ್ಪ ತೆಗೆದುಕೊಂಡದ್ದು ಕುಂಪಣಿದ್ದು ೧ ವಂದುವರೆ ರೂಪಾಯಿ ಇದಕ್ಕೆ ಬಡ್ಡಿ
ದಿನ ೮ಕ್ಕೆ ರೂಪಾಯಿ ೧ ವಂದು ದುಡ್ಡಿನ ಪ್ರಕಾರ ಯೆಂಟು ದಿನಕ್ಕೆ ಕೊಟ್ಟು ನಾನು ಇಟ್ಟು ಇರುವ
ಯಿದೆ ಪಂಚತಂತ್ರದ ಪುಸ್ತಕ ತೆಗೆದುಕೊಳ್ಳುತ್ತೇನೆ.” ಎನ್ನುವಲ್ಲಿ ತೆಗೆದುಕೊಂಡ ಹಣ ತಿರುಗಿಸಿ ಹಸ್ತಪ್ರತಿಗಳನ್ನು
ಬಿಡಿಸಿಕೊಂಡ ನಿದರ್ಶನಗಳಿಗೆ ಕೊರತೆಯಿಲ್ಲ. ಇದು ಕುಟುಂಬ ನಿರ್ವಹಣೆಗೆ ತನ್ನಲ್ಲಿರುವ
ಹಸ್ತಪ್ರತಿಗಳನ್ನು ಅಡವು ಇಟ್ಟು ಬದುಕು ನಡೆಸಿದವರ ಸಂಗತಿಯನ್ನು ಉಸುರುತ್ತವೆ.
• ಹಸ್ತಪ್ರತಿಯನ್ನು ಮಾರಿಕೊಂಡು ಬದುಕು ಸವೆಸಿದ ಪ್ರತಿಕಾರರು ಇದ್ದುದ್ದನ್ನು
ಪುಷ್ಪಿಕೆಗಳ ವಿವರಗಳು ತಿಳಿಸುತ್ತವೆ. ನಿದರ್ಶನಕ್ಕೆ: ಯೀ ವುದ್ಧರಣೆ ಪುಸ್ತಕ ಯರನಾಳ
ಮುರಿಗೆಪ್ಪ ಬರೆಸಿದ್ದು ಇದು ತೋಟಪ್ಪ ಬಿಂನ ಮುರಿಗೆಪ್ಪ ಯರನಾಳ ಈತನು ೧೭೯೮ನೆಯ ಧಾತು
ಸಂವತ್ಸರದಲ್ಲಿ ಬರಗಾಲ ಗ್ರಾಸ ನಡೀ ರೂ. ೨ಕ್ಕೆ ಹನ್ನೆರಡು ಮಠದ ಸ್ವಾಮಿಗಳಿಗೆ
ವಿಕ್ರಯಿಸಿದ್ದಾನೆ. ಯಿದರ ಮೇಲೆ ಅವನ ಸ್ವತ್ತುಯಿಲ್ಲಾ” ಎನ್ನುವಲ್ಲಿ ಕ್ರಿ.ಶ. ೧೮೭೬ರಲ್ಲಿ ೨
ರೂಪಾಯಿ ಮೌಲ್ಯ ಮತ್ತು ಒಂದು ಕುಟುಂಬ ನಿರ್ವಹಣೆಗೆ ಸಹಾಯವಾದ ಚಿತ್ರ ಸಂಪುಟ; ಅದನ್ನು
ಹಣಕೊಟ್ಟುಕೊಂಡು ಸಂರಕ್ಷಣೆಗೆ ಮುಂದಾದ ಹನ್ನೆರಡು ಮಠದ ಇತಿಹಾಸ ಇವು ಕನ್ನಡ ನಾಡಿನಲ್ಲಿ
ಹಸ್ತಪ್ರತಿ ಪ್ರಸರಣ ಮತ್ತು ರಕ್ಷಣೆಯ ಕಾರಣಗಳು ಮತ್ತು ಉದ್ದೇಶಗಳ ಚರಿತ್ರೆಯನ್ನು
ದಾಖಲಿಸುವಂತಹವುಗಳಾಗಿವೆ. ಬರಗಾಲದ ವಿಕ್ರಯ:
• ನಾಣ್ಯಗಳ ಚಲಾವಣೆ: ಪುಷ್ಪಿಕೆಗಳಲ್ಲಿ ವರಹ, ಗದ್ಯಾಣ, ಆಣೆ,
ಪೈಸೆ, ಕಾಸು ಮತ್ತು ಕಂಪನಿ ರೂಪಾಯಿಗಳ ಪ್ರಸ್ತಾಪ
ಬರುತ್ತದೆ. ಉದಾಹರಣೆಗೆ, “ಕರೆ ವೃಷಭಪ್ಪನ ಪುಸ್ತಕಉ ಯಿದರ ಕ್ರಯ ೬ ಆ ೮
ಪೈ” ಎಂಬಲ್ಲಿ ೬ ಆಣೆ ೮ ಪೈಸೆ ಬೆಲೆ ನಿಗದಿಯಾಗಿರುವುದು ಸ್ಪಷ್ಟವಾಗುತ್ತದೆ. ಆರ್ಥಿಕ ವಾಸ್ತವ: ಬರಗಾಲದ
ಸಂದರ್ಭದಲ್ಲಿ ಹಸ್ತಪ್ರತಿಗಳನ್ನು ಅಡವಿಟ್ಟು ಅಥವಾ ವಿಕ್ರಯಿಸಿ ಬದುಕು ಸಾಗಿಸಿದ ವಿವರಗಳು ಅಂದಿನ
ಆರ್ಥಿಕ ಸ್ಥಿತಿಗತಿಯನ್ನು ಬಿಂಬಿಸುತ್ತವೆ.
ಆಧುನಿಕ ಶಿಕ್ಷಣವು
ಹಸ್ತಪ್ರತಿಗಳೆಂದರೆ ಕೇವಲ ಕಾವ್ಯ, ಪುರಾಣ ಅಥವಾ ಧಾರ್ಮಿಕ
ಮಂತ್ರಗಳೆಂದು ತಳ್ಳಿಹಾಕಿದೆ. ಆದರೆ ಕನ್ನಡ ಹಸ್ತಪ್ರತಿಗಳಲ್ಲಿ ಅಪಾರ ಪ್ರಮಾಣದ ಲೌಕಿಕ, ವೈಜ್ಞಾನಿಕ ಮತ್ತು ಜನೋಪಯೋಗಿ ಶಾಸ್ತ್ರಗ್ರಂಥಗಳಿವೆ. ಇವುಗಳನ್ನು ‘ಉಪೇಕ್ಷಿತ
ಹಸ್ತಪ್ರತಿಗಳು’ ಎಂದು ಕಡೆಗಣಿಸದೆ ಇಂದಿನ ಸಂಶೋಧನೆಗೆ ಒಳಪಡಿಸಬೇಕಿದೆ.
ಹಸ್ತಪ್ರತಿಗಳು
ಉಪೇಕ್ಷಿತ ದೇಸಿ ಶಾಸ್ತ್ರಜ್ಞಾನ ಮತ್ತು ಜನೋಪಯೋಗಿ ನೆಲೆ: ಉಪೇಕ್ಷಿತ
ದೇಸಿ ಜ್ಞಾನ ಮತ್ತು ಲೌಕಿಕ ವಿಜ್ಞಾನ ಕಾವ್ಯಗಳ ಹೊರತಾಗಿ ಲೌಕಿಕ ಬದುಕಿಗೆ ಅಗತ್ಯವಾದ ದೇಸಿ
ವಿಜ್ಞಾನವು ಹಸ್ತಪ್ರತಿಗಳಲ್ಲಿ ಗರ್ಭೀಕೃತವಾಗಿದೆ. ಸೂಪಶಾಸ್ತ್ರದ ಪಾಕಪದ್ಧತಿ, ಪಶುವೈದ್ಯ, ಗಜ-ಅಶ್ವಶಾಸ್ತ್ರಗಳು ಜನಸಾಮಾನ್ಯರ ದೈನಂದಿನ ಬದುಕಿನ ಅಗತ್ಯಗಳಿಗಾಗಿ ಹುಟ್ಟಿಕೊಂಡ
ದೇಸಿ ಜ್ಞಾನಶಾಖೆಗಳಾಗಿವೆ. ‘ರಟ್ಟಮತ’ ಮತ್ತು
‘ಶಿವತತ್ವರತ್ನಾಕರ’ಗಳಲ್ಲಿನ ಅಂತರ್ಜಲ ಶೋಧನೆ (ಜಲಶಾಸ್ತ್ರ), ಮಳೆ
ಮುನ್ಸೂಚನೆ, ಮಣ್ಣಿನ ಪರೀಕ್ಷೆ ಹಾಗೂ ‘ಅಡಿಕೆ ಬೆಳೆ ಕೈಫಿಯತ್ತು’ವಿನ
ಕೃಷಿ ತಂತ್ರಜ್ಞಾನಗಳು ಪ್ರಾಚೀನರ ಪ್ರಾಯೋಗಿಕ ಜ್ಞಾನಕ್ಕೆ ಸಾಕ್ಷಿ.
ಹಸ್ತಪ್ರತಿಗಳು: ದೇಸಿ ಜ್ಞಾನಶಾಖೆಗಳ ವರ್ಗೀಕರಣದ ಪ್ರತೀಕ
├── ನೈಸರ್ಗಿಕ ಮತ್ತು ಪರಿಸರ ವಿಜ್ಞಾನ
│ ├── ಜಲಶಾಸ್ತ್ರ (ಅಂತರ್ಜಲ ಶೋಧನೆ, ಶುದ್ಧೀಕರಣ -
ರಟ್ಟಮತ, ಜಲಶಿಲ್ಪ)
│ ├── ಹವಾಮಾನ ಶಾಸ್ತ್ರ (ಮೋಡಗಳ ಲಕ್ಷಣ, ಮಳೆ ಮುನ್ಸೂಚನೆ -
ಶಿವತತ್ವರತ್ನಾಕರ)
│ └── ಕೃಷಿ ವಿಜ್ಞಾನ (ಅಡಿಕೆ ಬೆಳೆ ಕೈಫಿಯತ್ತು, ಬೀಜ-ಭೂಮಿ
ಪರೀಕ್ಷೆ)
├── ಜೀವವಿಜ್ಞಾನ ಮತ್ತು ವೈದ್ಯಕೀಯ
│ ├── ಸಸ್ಯ ಮತ್ತು ಮಾನವ ವೈದ್ಯ (ವಿಷವೈದ್ಯ, ಮೂಲಿಕಾ
ಚಿಕಿತ್ಸೆ)
│ ├── ಪಶುವೈದ್ಯ (ಗಜಶಾಸ್ತ್ರ, ಅಶ್ವಶಾಸ್ತ್ರ,
ಗೋವೈದ್ಯ)
│ └── ಸಾರ್ವಜನಿಕ ಆರೋಗ್ಯ (ಗೃಹನಿರ್ಮಾಣದಲ್ಲಿ ಪ್ರಾಣವಾಯು - ಸಾಂಘಿಕ
ಶಾಸ್ತ್ರ)
└── ಸಮಾಜ ಮತ್ತು ಲೌಕಿಕ ಕಲೆಗಳು
├── ಪಾಕಶಾಸ್ತ್ರ (ಸೂಪಶಾಸ್ತ್ರ, ಆಹಾರ ಸಂಸ್ಕರಣೆ)
├── ವಾಸ್ತು ಮತ್ತು ಗೃಹವಿಜ್ಞಾನ
└── ಮನೋರಂಜನೆ (ಮಹಾಚದುರಂಗ
ಲಕ್ಷಣ)
ಜಲಶಾಸ್ತ್ರ
ಮತ್ತು ಅಂತರ್ಜಲ ಶೋಧನೆ
'ರಟ್ಟಮತ'
ಮತ್ತು 'ಶಿವತತ್ವರತ್ನಾಕರ' ಕೃತಿಗಳು
ಅಂತರ್ಜಲದ ಶೋಧನೆ, ಮಣ್ಣಿನ ಗುಣಲಕ್ಷಣ, ಮಳೆ
ಮುನ್ಸೂಚನೆ, ನೀರು ಶುದ್ಧೀಕರಣ ಹಾಗೂ ಕೃಷಿ ವಿಧಾನಗಳನ್ನು
ವೈಜ್ಞಾನಿಕವಾಗಿ ನಿರೂಪಿಸುತ್ತವೆ. ೧೧ನೆಯ ಶತಮಾನದ ರಟ್ಟಕವಿಯ ‘ರಟ್ಟಮತ’ ಮತ್ತು ಕೆಳದಿಯ ಇಮ್ಮಡಿ
ಬಸವಪ್ಪನಾಯಕನ ‘ಶಿವತತ್ವರತ್ನಾಕರ’ಗಳಲ್ಲಿ ಅತ್ಯಂತ ವೈಜ್ಞಾನಿಕವಾದ ಜಲವಿಜ್ಞಾನವಿದೆ:
• ನೀರಿನ ಮೂರು ರೂಪಗಳು: ೧. ವಾತಾವರಣದ ನೀರು, ೨. ನೆಲದ ಮೇಲೆ ಹರಿಯುವ ನೀರು, ೩. ಅಂತರ್ಜಲ.
• ಮಣ್ಣು ಮತ್ತು ಶಿಲೆಗಳ ಪರೀಕ್ಷೆ (‘ಜಲಶಿಲ್ಪ’ ಹಸ್ತಪ್ರತಿ):
ಕೆಂಪು, ಕಪ್ಪು, ಹಸಿರು, ಬಿಳಿ ಮಣ್ಣು ಹಾಗೂ ಕಲ್ಲುಬಂಡೆಗಳ ಪದರಗಳನ್ನು ನೋಡಿ ನೀರಿನ ಆಳ ಮತ್ತು ರುಚಿಯನ್ನು
ಗುರುತಿಸುವ ಪದ್ಧತಿ:
o ಕೆಂಪು ಜರಿ ಇದ್ದರೆ: ದಿವ್ಯವಾದ
ಸಿಹಿನೀರು.
o ಹಸಿರು ಶಿಲೆಯೊಳಗೆ ಎಣ್ಣೆ ಛಾಯೆ
ಇದ್ದರೆ: ಸಾಧಾರಣ ನೀರು.
o ಬಿಳಿ ಗರಸು ಇದ್ದರೆ: ಉತ್ತಮ ನೀರು.
o ಕರಿ ಜರಿಯೊಳಗೆ: ಖಾರವಾದ ನೀರು
ಅಥವಾ ಗಂಧಕಯುಕ್ತ ವಾಸನೆ.
• ನೈಸರ್ಗಿಕ ಜಲಶುದ್ಧೀಕರಣ: ಮಾವು, ಇಪ್ಪೆ
(ಹಿಪ್ಪೆ), ನೆಲ್ಲಿ ಮುಂತಾದ ಮರಗಳ ತೊಗಟೆ ಮತ್ತು ಬೀಜಗಳನ್ನು ಬಳಸಿ
ನೀರಿನ ಗಡಸುತನ ಮತ್ತು ಕ್ಷಾರೀಯತೆಯನ್ನು ನಿವಾರಿಸುವ ಜಲಚಿಕಿತ್ಸೆ.
• ಬಾವಿ ತೋಡುವ ತಂತ್ರಜ್ಞಾನ: ಕಲ್ಲುಬಂಡೆಗಳನ್ನು ಮೃದುಗೊಳಿಸಿ
ಒಡೆಯುವ ರಾಸಾಯನಿಕ/ವನಸ್ಪತಿ ಲೇಪನಗಳು, ಉಳಿಗಳನ್ನು ವಜ್ರದಂತೆ
ಗಟ್ಟಿಗೊಳಿಸಲು ನೀರುಣಿಸುವ ತಾಂತ್ರಿಕತೆ.
ಕೃಷಿ
ಪದ್ಧತಿ ಮತ್ತು ಅಡಿಕೆ ಬೆಳೆ ಕೈಫಿಯತ್ತು
'ಅಡಿಕೆ ಬೆಳೆ ಕೈಫಿಯತ್ತು' ತೋಟಗಾರಿಕೆಯ
ಕೃಷಿ-ಆರ್ಥಿಕ ಒಪ್ಪಂದಗಳನ್ನು ವಿವರಿಸುತ್ತದೆ. ‘ಅಡಿಕೆ ಬೆಳೆ
ಕೈಫಿಯತ್ತು’ವಿನಲ್ಲಿ ಸಸಿ ನಾಟಿಯಿಂದ ಹಿಡಿದು ಫಸಲು ಬರುವವರೆಗಿನ ೧೨ ವರ್ಷಗಳ ನಿರ್ವಹಣೆ,
ಮಣ್ಣಿನ ಸಾರ ಮತ್ತು ‘ದಶವಿಧ ಕಳಿವ ಮರ/ಅಡಕೆ’ಗಳ ವಿಂಗಡಣೆ ರೈತಾಪಿ ಜ್ಞಾನದ
ಪರಾಕಾಷ್ಠೆಯನ್ನು ಕಾಣಬಹುದು.‘ಅಡಿಕೆ ಬೆಳೆ ಕೈಫಿಯತ್ತು’ ಹಸ್ತಪ್ರತಿಯು ಅಡಿಕೆ ಕೃಷಿಯ
ಸಂಪೂರ್ಣ ವೈಜ್ಞಾನಿಕ ಕ್ರಮವನ್ನು ವಿವರಿಸುತ್ತದೆ:
“ಅಡಿಕೆಯನ್ನು
ಮೊಳಕೆ ಬರಿಸಿ, ಅದು ೨ ಮೊಳದಷ್ಟು ಉದ್ದ ಬೆಳೆದಾಗ ೧೦ ಹೆಜ್ಜೆಗೊಂದರಂತೆ
ನೆಡಬೇಕು. ವರ್ಷಕ್ಕೊಮ್ಮೆ ಗೌಡಗಳಿಗೆ ಸೊಪ್ಪು ಗೊಬ್ಬರ ಹಾಕಿಕೊಂಡು ಬರಬೇಕು. ಹೀಗೆ ೧೨ ವರ್ಷಗಳ
ಕಾಲ ಜೋಪಾನ ಮಾಡಿದರೆ ಹದಿಮೂರು, ಹದಿನಾಲ್ಕು ವರ್ಷಕ್ಕೆ ಹಿಂಗಾರಿ
ಬಿಡುತ್ತದೆ. ಐದುಗದ್ದನ ಭೂಮಿಗೆ ಸುಮಾರು ೧೦೦ ಮರ ನಿಲ್ಲುತ್ತವೆ. ನೂರು ಮರಕ್ಕೆ ೪೮ ಸೇರಿದ
ಮಣದಲ್ಲಿ ೪ ಮಣ ಸೇರು ಅಡಿಕೆಯಾಗುತ್ತದೆ...”
‘ಸಾತ್ರೆಯ
ಪಟ್ಟಿಯ ವಿವರ’ ಹಸ್ತಪ್ರತಿಯಲ್ಲಿ ತೋಟದ ಗುತ್ತಿಗೆ ಕರಾರುಗಳು ಹಾಗೂ ಕಳಿವ (ತಿರಸ್ಕರಿಸುವ)
‘ದಶವಿಧ ಮರ’ ಮತ್ತು ‘ದಶವಿಧ ಅಡಕೆ’ಗಳ (ಕಾಟಿ, ಪೋಟಿ, ಗೋಟು, ಗಂಟಿಕೆ, ಚಿಲ್ಲು, ಹೊಡೆ, ಹುಣುಬು ಇತ್ಯಾದಿ) ನಿಖರ ವರ್ಗೀಕರಣವಿದೆ. ಅಡಿಕೆ
ಬೆಳೆ ಕೈಫಿಯತ್ತು’ವಿನ ಕೃಷಿ ತಂತ್ರಜ್ಞಾನಗಳು ಪ್ರಾಚೀನರ ಪ್ರಾಯೋಗಿಕ ಜ್ಞಾನಕ್ಕೆ ಸಾಕ್ಷಿ.
ಸಾಂಘಿಕ
ಶಾಸ್ತ್ರ — ಪ್ರಾಚೀನ ನೈರ್ಮಲ್ಯ ಮತ್ತು
ಗೃಹವಿಜ್ಞಾನದ ಸಂಗತಿಗಳನ್ನು
ಒಳಗೊಂಡಿದೆ.
ಹೂವಿನ
ಹಡಗಲಿಯ ಪಶ್ಚಿಮ ಕಾಲ್ವಿಯಲ್ಲಿ ದೊರೆತ ‘ಸಾಂಘಿಕ ಶಾಸ್ತ್ರ’ ಹಸ್ತಪ್ರತಿಯು ಸಮುದಾಯದ ಕ್ಷೇಮ
ಮತ್ತು ಮನೆಯಲ್ಲಿ ಗಾಳಿ-ಬೆಳಕಿನ ಸಂಚಾರದ ಬಗ್ಗೆ ಆಧುನಿಕ ವಿಜ್ಞಾನವೂ ಬೆರಗಾಗುವಂತೆ
ವಿವರಿಸುತ್ತದೆ:
• ಮನೆಯಲ್ಲಿ ಗವಾಕ್ಷಿ (ವೆಂಟಿಲೇಟರ್), ಗಾಳಿಯ ಜಗಿಲು ಹಾಗೂ ಬಾಗಿಲುಗಳು ಎದುರುಬದುರಾಗಿ ಇರಬೇಕು.
• ದಕ್ಷಿಣ ದಿಕ್ಕಿನಲ್ಲಿ ವರಾಂಡ ಮತ್ತು ಕಿಟಕಿಗಳಿದ್ದರೆ
ಯಥೇಚ್ಛವಾಗಿ ಪ್ರಾಣವಾಯು (ಆಮ್ಲಜನಕ) ಲಭಿಸುತ್ತದೆ.
• ಮನೆಯೊಳಗೆ ಗಾಳಿಯ ಕೊರತೆಯಾದರೆ ಕೆಮ್ಮು, ಉಬ್ಬಸ, ತಲೆನೋವು, ರಕ್ತಹೀನತೆ,
ನಿದ್ರಾಭಂಗ ಮತ್ತು ಅಜೀರ್ಣ ರೋಗಗಳು ಬರುತ್ತವೆ.
• ವಾಸ್ತು ಮತ್ತು ಸಾರ್ವಜನಿಕ ಆರೋಗ್ಯ: ‘ಸಾಂಘಿಕ ಶಾಸ್ತ್ರ’ದಲ್ಲಿ ಗಾಳಿ-ಬೆಳಕಿನ ಸಂಚಾರಕ್ಕೆ ಕಿಟಕಿ-ಬಾಗಿಲುಗಳ ಎದುರುಬದುರು
ನಿರ್ಮಾಣ ಹಾಗೂ ಪ್ರಾಣವಾಯುವಿನ ಕೊರತೆಯಿಂದ ಬರುವ ರೋಗಗಳ ವೈಜ್ಞಾನಿಕ ವಿಶ್ಲೇಷಣೆಯಾಗಿದೆ.
ಪಾಕಶಾಸ್ತ್ರ
(ಸೂಪಶಾಸ್ತ್ರ)
ಮಂಗರಸನ
‘ಸೂಪಶಾಸ್ತ್ರ’, ಚಾವುಂಡರಾಯನ ‘ಲೋಕೋಪಕಾರ’ ಹಾಗೂ ಭೀಮಸೇನನ ಸಂಸ್ಕೃತ ಸೂಪಶಾಸ್ತ್ರದ ಹಳಗನ್ನಡ-ನಡುಗನ್ನಡ
ಟೀಕುಗಳು ಕಳೆದುಹೋದ ದೇಸಿ ಆಹಾರ ಸಂಸ್ಕೃತಿಯನ್ನು ಪರಿಚಯಿಸುತ್ತವೆ:
• ಹಲಸಿನಕಾಯಿಯಿಂದ ಮಾಡುತ್ತಿದ್ದ ತಿಂಡಿ:
“ವುಕ್ಕರಸಿ
ಫಲಶಿನಕಾಯ ಮುಳ್ಳಿರಿದು ವುಪ್ಪು ಹುಳಿ ಯೀರುಳ್ಳಿ ಕರಿಬೇವು ಕೊತ್ತಂಬರಿಯ ರಸದಿಂ ಹೊರಳಿಸಿ
ಕವೆಗೋಲಲಿಕಟ್ಟಿ ಕೆಂಡದ ಮೇಲೆ ಯೀದ್ರುವ ಹಿಂಗುವ ಕವೆಗೋಲ ಕೆಂಡದ ಮೇಲೆ ಕಾಶಿ ಮೆಣಸಿನ ಚೂರ್ನವ
ತಳವುದೂ, ಇದು ವೃಂತಾಕ ಪನಸ ಶಲಾಕವೆಂಬರು.”
• ಸಸ್ಯಮೂಲಗಳಿಂದ ಕೃತಿಕ ತುಪ್ಪ, ಹಾಲು,
ಮೊಸರು ಮಾಡುವ ವಿಧಾನಗಳು; ಹಲಸಿನ ಹಣ್ಣು, ಬೇಲದ ಹಣ್ಣು, ಎಕ್ಕೆಯ ಮೊಗ್ಗು, ತಾವರೆಗಡ್ಡೆ,
ಉಮ್ಮತ್ತದ ದಂಟುಗಳಿಂದ ಪಲ್ಯ ಮಾಡುವ ಅಪರೂಪದ ಪಾಕವಿಧಾನಗಳು. ಹಲಸಿನಕಾಯಿಯಿಂದ ಮಾಡುತ್ತಿರುವ
ತಿಂಡಿಯನ್ನು ಹೇಳುತ್ತಿರುವ ಇಂಥ ಎಷ್ಟೋ ಬಳಕೆ ತಪ್ಪಿದ ಹೊಸರುಚಿಗಳನ್ನು ಇವುಗಳ ಅಧ್ಯಯನದಿಂದ
ಮತ್ತೆ ಪಡೆಯಬಹುದು. ಸಾಹಿತ್ಯ ಕೃತಿಗಳಲ್ಲಿ ಅಲ್ಲಲ್ಲಿ ಬರುವ ಇಂಥ ರುಚಿಗಳಿಗೆ ನಾವು ಈ ಶಾಸ್ತ್ರ
ವಿಷಯಕ್ಕೆ ಸಂಬಂಧಿಸಿದ ಹಸ್ತಪ್ರತಿಗಳ ವಿವರಗಳನ್ನು ಪಡೆಯಬಹುದು. ಆಯಾ ಕಾಲದಲ್ಲಿ ಯಾವ ಯಾವ
ರುಚಿಗಳನ್ನು ಬಳಸುತ್ತಿದ್ದರು. ನಮ್ಮ ಸಮಾಜದ ಮೂಲ ರುಚಿಗಳಾವುವು, ಹೊಸದಾಗಿ
ಬಂದವುಗಳಾವುವು ಇತ್ಯಾದಿಗಳನ್ನೂ ನಾವು ತಿಳಿಯಬಹುದಾಗಿದೆ. ವೈದ್ಯ, ಜ್ಯೋತಿಷ್ಯ,
ವಾಸ್ತುಶಿಲ್ಪ, ಅಶ್ವಶಾಸ್ತ್ರ, ಗಜಶಾಸ್ತ್ರ, ಪಶುವೈದ್ಯ, ಕೃಷಿ,
ಮಾಟ–ಮಂತ್ರ, ಮೋಡಿ ಮುಂತಾದ ಕ್ಷೇತ್ರಗಳ ಹಸ್ತಪ್ರತಿಗಳ
ಮಹತ್ವವನ್ನು ಒತ್ತಿಹೇಳುತ್ತದೆ.
ಇವುಗಳನ್ನು
“ಅಶಾಸ್ತ್ರೀಯ” ಅಥವಾ “ಗೌಣ” ಎಂದು ಬದಿಗಿಡುವುದು ಸರಿಯಲ್ಲ.ಅವುಗಳಲ್ಲಿ ಜನರ ಪ್ರಾಯೋಗಿಕ ಜ್ಞಾನ, ಪರಿಸರಜ್ಞಾನ, ಕೃಷಿ ಅನುಭವ, ಆರೋಗ್ಯಪದ್ಧತಿ, ಪ್ರಾಣಿ ಪಾಲನೆ, ಸ್ಥಳೀಯ ತಂತ್ರಜ್ಞಾನ ಇವೆಲ್ಲವೂ
ಇರಬಹುದು. ಕೃಷಿ, ಮಳೆ, ಔಷಧಿ, ಪಶುವೈದ್ಯ, ಭೂಮಿ, ನೀರು, ಕೋಟೆ, ಗ್ರಾಮ, ಅರಣ್ಯ ಮುಂತಾದ
ಉಲ್ಲೇಖಗಳು ಹಸ್ತಪ್ರತಿಗಳಲ್ಲಿದ್ದು ಪರಿಸರ ಇತಿಹಾಸವನ್ನು
ಮರುನಿರ್ಮಿಸಲು ಸಾಧ್ಯವಾಗುತ್ತದೆ. ಆಗ
ಹಸ್ತಪ್ರತಿಗಳು ಕೇವಲ ಮಾನವ ಇತಿಹಾಸವಲ್ಲ; ಮಾನವ–ಪ್ರಕೃತಿ ಸಂಬಂಧದ ಇತಿಹಾಸವೂ
ಆಗಬಹುದು.
ಪ್ರಾಕೃತಿಕ
ವಿಜ್ಞಾನದ ಪ್ರತೀಕವಾದ ‘ರಟ್ಟಮತ’ ಮತ್ತು ‘ಶಿವತತ್ವರತ್ನಾಕರ’ಗಳಲ್ಲಿನ ಅಂತರ್ಜಲ ಶೋಧನೆ (ಜಲಶಾಸ್ತ್ರ),
ಮಳೆ ಮುನ್ಸೂಚನೆ, ಮಣ್ಣಿನ ಪರೀಕ್ಷೆ ಹಾಗೂ ‘ದೈನಂದಿನ
ಜೀವನೋಪಯೋಗಿ ಶಾಸ್ತ್ರದ ಪ್ರತೀಕವಾದ ಸಾಂಘಿಕ ಶಾಸ್ತ್ರದಲ್ಲಿನ
ವೈಜ್ಞಾನಿಕ ಗೃಹನಿರ್ಮಾಣ (ಗಾಳಿ-ಬೆಳಕಿನ ಮಹತ್ವ), ಸೂಪಶಾಸ್ತ್ರದ
ಪಾಕಪದ್ಧತಿ, ಪಶುವೈದ್ಯ, ಗಜ-ಅಶ್ವಶಾಸ್ತ್ರಗಳು
ಜನಸಾಮಾನ್ಯರ ದೈನಂದಿನ ಬದುಕಿನ ಅಗತ್ಯಗಳಿಗಾಗಿ ಹುಟ್ಟಿಕೊಂಡ ದೇಸಿ ಜ್ಞಾನಶಾಖೆಗಳಾಗಿವೆ.
ಕನ್ನಡ
ಸಾಹಿತ್ಯ ಚರಿತ್ರೆ ಮತ್ತು ಕವಿ-ಕಾಲ-ಕೃತಿ ಪುನರ್ ನಿರ್ಣಯ:
ಕನ್ನಡ
ಸಾಹಿತ್ಯ ಚರಿತ್ರೆಯಲ್ಲಿ ಅನೇಕ ಕವಿಗಳ ಕಾಲ, ಜನ್ಮಸ್ಥಳ ಮತ್ತು ಕೃತಿಗಳ ಕರ್ತೃತ್ವದ ಬಗ್ಗೆ
ದಶಕಗಳಿಂದ ಇದ್ದ ಗೊಂದಲಗಳನ್ನು ಪರಿಹರಿಸುವಲ್ಲಿ ಹಸ್ತಪ್ರತಿ ಪುಷ್ಪಿಕೆಗಳು ನಿರ್ಣಾಯಕ ಪಾತ್ರ
ವಹಿಸಿವೆ.
ಸರ್ವಜ್ಞನ
ಕಾಲನಿರ್ಣಯಕ್ಕೆ ಹೊಸ ತಿರುವು
ಸರ್ವಜ್ಞನ
ಕಾಲವನ್ನು ನಿರ್ಧರಿಸಲು ಹಸ್ತಪ್ರತಿ ಆಧಾರಗಳು ಹೇಗೆ ಮೈಲುಗಲ್ಲಾಗಿವೆ ಎಂಬುದನ್ನು ಮೂರು ಪ್ರಮುಖ
ಪುಷ್ಪಿಕೆಗಳಿಂದ ಗುರುತಿಸಬಹುದು:
1. ಕ್ರಿ.ಶ. ೧೫೫೪: ಪ್ರಭುದೇಶಿಕನ
‘ಮೋಕ್ಷದರ್ಶನ ಮಹಾಸಂಗ್ರಹ’ದಲ್ಲಿ ಸರ್ವಜ್ಞನ “ಬೆರಳ ಕೊನೆಯಾಲಿ ವಿರಳವಾಜಿಯ ಸಂಚ...” ಎಂಬ
ತ್ರಿಪದಿಯು ‘ಪರಮಾರ್ಥ’ ಎಂಬ ಅಂಕಿತದಲ್ಲಿ ಉಲ್ಲೇಖವಾಗಿದೆ.
2. ಕ್ರಿ.ಶ. ೧೬೦೭: ಚಿಗನಾಯಕನಹಳ್ಳಿ
ಲಿಂಗಪ್ಪನು ಪ್ರತಿಮಾಡಿದ ‘ಪಾರಮಾರ್ಥಿಕದ ಪುಸ್ತಕ’ದಲ್ಲಿ ೭೭ ಪದ್ಧತಿಗಳಿದ್ದು, ೯೩೭ ತ್ರಿಪದಿಗಳಿವೆ. ಇದು ಕಾಲೋಲ್ಲೇಖವಿರುವ ಸರ್ವಜ್ಞನ ಅತ್ಯಂತ ಪ್ರಾಚೀನ
ಪ್ರತಿಯಾಗಿದೆ (ಎಸ್. ಶಿವಣ್ಣನವರ ಶೋಧ).
3. ಕ್ರಿ.ಶ. ೧೬೧೬: ವಿರಕ್ತ
ತೋಂಟದಾರ್ಯನ ‘ಅನಾದಿ ವೀರಶೈವ ಸಂಗ್ರಹ’ ಗದ್ಯಕೃತಿಯಲ್ಲಿ ಸರ್ವಜ್ಞನ ೫ ತ್ರಿಪದಿಗಳು
ಉದ್ಧೃತವಾಗಿವೆ (ಮೂರ್ಖಂಗೆ ಬುದ್ಧಿಯನು, ಜಾತಿ ಜಾತಿಗೆ ವೈರಿ,
ಆನೆ ನೀರಾಟದಲಿ ಇತ್ಯಾದಿ).
4. ಕ್ರಿ.ಶ. ೧೬೩೬: ವೆಂಕನೆಂಬ
ಲಿಪಿಕಾರನು ಪ್ರತಿಮಾಡಿದ ಕೃತಿಯಲ್ಲೂ ‘ಪರಮಾರ್ಥ’ ಅಂಕಿತದ ತ್ರಿಪದಿಗಳಿವೆ (ಎಲ್. ಬಸವರಾಜು
ಸಂಪಾದಿತ).
ಈ ಎಲ್ಲಾ
ಆಂತರಿಕ ಪುಷ್ಪಿಕೆ ಸಾಕ್ಷ್ಯಗಳಿಂದ ಸರ್ವಜ್ಞನ ಕಾಲವು ಕ್ರಿ.ಶ. ೧೭ನೆಯ ಶತಮಾನವಲ್ಲ, ಆತ ಕ್ರಿ.ಶ.
೧೫೫೦ಕ್ಕಿಂತಲೂ ಪೂರ್ವದಲ್ಲಿದ್ದನೆಂಬುದು ನಿರ್ವಿವಾದವಾಗಿ ಸಾಬೀತಾಗುತ್ತದೆ.
ಕವಿ, ಕೃತಿ ಮತ್ತು ಕಾಲ
ನಿರ್ಣಯದ ಪ್ರಮುಖ ನಿದರ್ಶನಗಳು
• ಪ್ರಭುಲಿಂಗಲೀಲೆ ಮತ್ತು ಚಾಮರಸ: ಬೇಡತ್ತೂರಿನ ರಾಮಾಂಜನೇಯರ
ಸಂಗ್ರಹದಲ್ಲಿದ್ದ ಪ್ರತಿಯ ಪುಷ್ಪಿಕೆಯಲ್ಲಿ, “ಶ್ರೀಗುರು ಬಸವಲಿಂಗಾಯ
ನಮಃ ಹಂಪೆ ಚಾಮರಸೈಯ್ಯನವರು ನಿರೂಪಿಸಿದ ಪ್ರಭುಲಿಂಗಲೀಲೆ...” ಎಂದಿದೆ. ಚಾಮರಸನು ಹಂಪೆಯವನು
ಎಂಬುದನ್ನು ಖಚಿತಪಡಿಸುವ ಏಕೈಕ ಪ್ರಾಥಮಿಕ ದಾಖಲೆ ಇದಾಗಿದೆ.
• ಹರಿಹರನ ರಗಳೆಗಳ ಸಂಖ್ಯೆ: ಮುದಿಯಪ್ಪ ನಾಯಕರ ಬಂಟ ಪಾಪಯ್ಯನ
ಮಗ ಕೃಷ್ಣಯ್ಯ ಬರೆದ ಪ್ರತಿಯಲ್ಲಿ, “ಹಂಪೆಯ ಹರೀಶ್ವರ ದೇವರು ವಿರಚಿಸಿದ
ನೂರಿಪ್ಪತ್ತು ಪುಣ್ಯರಗಳೆಯು ಸಂಪೂರ್ಣಂ” ಎಂದಿದೆ. ಇದರಿಂದ ಹರಿಹರನು ರಚಿಸಿದ ರಗಳೆಗಳ ನಿಖರ
ಸಂಖ್ಯೆ ೧೨೦ ಎಂಬುದು ಸ್ಪಷ್ಟವಾಗುತ್ತದೆ.
• ಪಾಯಣ್ಣವ್ರತಿಯ ಕಾಲ: ಕವಿಚರಿತೆಕಾರರು ಈತನ ಕಾಲವನ್ನು
ಕ್ರಿ.ಶ. ೧೬೦೦ ಎಂದಿದ್ದರು. ಆದರೆ ಈತನೇ ಸ್ವಹಸ್ತಾಕ್ಷರದಲ್ಲಿ ಬರೆದ ನಾಗವರ್ಮನ ವೀರವರ್ಧಮಾನ
ಪುರಾಣ (ಶಕ ೧೪೮೯ / ಕ್ರಿ.ಶ. ೧೫೬೭), ವರ್ಧಮಾನ ಪುರಾಣ (ಕ್ರಿ.ಶ.
೧೫೬೯) ಮತ್ತು ಅಗ್ಗಳನ ಚಂದ್ರಪ್ರಭ ಪುರಾಣ (ಕ್ರಿ.ಶ. ೧೫೭೨) ಪ್ರತಿಗಳು ಲಭ್ಯವಾಗಿರುವುದರಿಂದ
ಈತನ ಕಾಲ ಕ್ರಿ.ಶ. ೧೫೫೦ ಎಂದು ೫೦ ವರ್ಷ ಹಿಂದಕ್ಕೆ ನಿಗದಿಯಾಯಿತು.
• ಸಿದ್ಧನಂಜೇಶ (ಚಿಕ್ಕನಂಜೇಶ): ತೋಂಟದಾರ್ಯ ಮಠದ
ಹಸ್ತಪ್ರತಿಯಲ್ಲಿ ದೊರೆತ ‘ಭಾವರತ್ನಾಭರಣ ಸ್ತೋತ್ರ’ದ ಪ್ರತಿಯು ಶಕ ೧೫೬೩ (ಕ್ರಿ.ಶ. ೧೬೪೧)ರಲ್ಲಿ
ಲಿಖಿತವಾದ ಉಲ್ಲೇಖವಿರುವುದರಿಂದ ಈತನ ಕಾಲ ಕ್ರಿ.ಶ. ೧೬೪೧ಕ್ಕಿಂತ ಹಿಂದಿನದೆಂದು ದೃಢಪಟ್ಟಿದೆ.
• ಅಮಲ ಬಸವ ಚಾರಿತ್ರ (ಪಾಠಶುದ್ಧಿ): ಕವಿಚರಿತೆಯಲ್ಲಿ
ಸಿಂಗಿರಾಜನು ‘ಮಲಬಸವ ಚಾರಿತ್ರ’ ಬರೆದನೆಂದು ತಪ್ಪಾಗಿ ದಾಖಲಾಗಿತ್ತು.
“ದ್ವಿಜರಾಜನೆನಿಪಮಲ-ಬಸವಚಾರಿತ್ರದೊಳು” ಎಂಬಲ್ಲಿ ಪದವಿಭಾಗ ಮಾಡುವಾಗ ಆದ ತಪ್ಪಿನಿಂದ
(ದ್ವಿಜರಾಜನೆನಿಪ + ಅಮಲ) ‘ಅ’ಕಾರ ಲೋಪವಾಗಿ ‘ಮಲ’ ಎಂದು ಅಪಾರ್ಥ ಕಲ್ಪಿಸಲಾಗಿತ್ತು. ಹಸ್ತಪ್ರತಿ
ಪರಿಶೀಲನೆಯಿಂದ ಅದು ‘ಅಮಲ ಬಸವ ಚಾರಿತ್ರ’ವೆಂದು ಸರಿಪಡಿಸಲಾಯಿತು.
• ಗಮಕಿ ಪರಂಪರೆ: ಗೋವಿಂದ ವೈದ್ಯನ ‘ಕಂಠೀರವ ನರಸರಾಜ ವಿಜಯ’ದ
ಪುಷ್ಪಿಕೆಯಲ್ಲಿ ಕೃತಿಯನ್ನು “ಭಾರತಿನಂಜನ ಮುಖದಿಂದ ವಾಚಿಸಿ ರಾಜಾಸ್ಥಾನದಲ್ಲಿ ವಿಸ್ತಾರ
ಪಡಿಸಿದುದು” ಎಂಬ ಉಲ್ಲೇಖವಿದೆ. ಇದು ಅರಮನೆಯಲ್ಲಿ ಕಾವ್ಯವನ್ನು ರಾಗವಾಗಿ ಹಾಡಿ ವಾಚಿಸುತ್ತಿದ್ದ
‘ಗಮಕಿ’ ಕಲೆಯ ಐತಿಹಾಸಿಕ ಅಸ್ತಿತ್ವಕ್ಕೆ ಸಾಕ್ಷಿಯಾಗಿದೆ.
ಹಸ್ತಪ್ರತಿಗಳು ಮತ್ತು ಸ್ತ್ರೀ
ಶಿಕ್ಷಣ —
ಲಿಪಿಕಾರ್ತಿಯರು ಮತ್ತು ದೇಸಿ ಸಂವೇದನೆ:
ಮಧ್ಯಕಾಲೀನ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ
ಶಿಕ್ಷಣವಿರಲಿಲ್ಲ, ಅವರು ಕೇವಲ ಅಡುಗೆಮನೆಗೆ
ಸೀಮಿತವಾಗಿದ್ದರು ಎಂಬ ಸಾರ್ವತ್ರಿಕ ವಾದವನ್ನು ಕನ್ನಡ ಹಸ್ತಪ್ರತಿ ಪುಷ್ಪಿಕೆಗಳು ಸಂಪೂರ್ಣವಾಗಿ
ತಳ್ಳಿಹಾಕುತ್ತವೆ. ಪುಷ್ಪಿಕೆಗಳ ಆಧಾರದ ಮೇಲೆ ಸುಮಾರು ೨೮ ಜನ ಮಹಿಳೆಯರು ಹಸ್ತಪ್ರತಿ
ಸಂಸ್ಕೃತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ದಾಖಲಾಗಿದೆ. ಇವರಲ್ಲಿ ೧೯ ಜನ ಸ್ವತಃ
ಲಿಪಿಕಾರ್ತಿಯರಾಗಿದ್ದರೆ, ೯ ಜನ ಇತರರಿಂದ ಪ್ರತಿಮಾಡಿಸಿ ಜ್ಞಾನದಾನ
(ಶಾಸ್ತ್ರದಾನ) ಮಾಡಿದವರಾಗಿದ್ದಾರೆ. ಸ್ತ್ರೀ ಶಿಕ್ಷಣದ ವಿಸ್ತರಣೆ: ಜೈನ ಮತ್ತು ವೀರಶೈವ ಮಹಿಳೆಯರಲ್ಲದೆ, ಗಣಿಕೆ ಕುಲದ ನಂಜಿಯಂತಹ ತಳವರ್ಗದ ಸ್ತ್ರೀಯರೂ ಲೌಕಿಕ-ಧಾರ್ಮಿಕ ಕೃತಿಗಳನ್ನು
ಓದಲು-ಬರೆಯಲು ಮುಂದಾದದ್ದು ಅಂದಿನ ಶೈಕ್ಷಣಿಕ ವಿಸ್ತಾರದ ದ್ಯೋತಕವಾಗಿದೆ.
ಹಸ್ತಪ್ರತಿ ಸಂಸ್ಕೃತಿಯಲ್ಲಿ ಮಹಿಳೆಯರ ಸಹಭಾಗಿತ್ವ (೨೮ ನಿದರ್ಶನಗಳು)
├── ಧಾರ್ಮಿಕ ಮತ್ತು ಸಾಮಾಜಿಕ ವರ್ಗೀಕರಣ
│ ├── ಜೈನ ಮಹಿಳೆಯರು: ೧೬ (ಶಾಸ್ತ್ರದಾನ ಮತ್ತು ಕೇವಲಜ್ಞಾನ ಪ್ರಾಪ್ತಿ)
│ ├── ವೀರಶೈವ ಮಹಿಳೆಯರು: ೧೦ (ಶರಣ ಕಾವ್ಯ, ವಚನ ಲಿಪೀಕರಣ)
│ └── ವೈಷ್ಣವ ಮತ್ತು ಇತರ ಕೆಳವರ್ಗ: ೨ (ಲೌಕಿಕ ಮತ್ತು ಷಟ್ಪದಿ ಕಾವ್ಯಗಳು)
└── ಕಾರ್ಯಾತ್ಮಕ ವರ್ಗೀಕರಣ
├── ಸ್ವತಃ ಪ್ರತಿಮಾಡಿದ ಲಿಪಿಕಾರ್ತಿಯರು (೧೯ ಮಹಿಳೆಯರು)
└── ಪ್ರತಿಮಾಡಿಸಿ ಶಾಸ್ತ್ರದಾನ ಮಾಡಿದ ಪೋಷಕಿಯರು (೯ ಮಹಿಳೆಯರು)
ಜೈನ ಮಹಿಳಾ ಲಿಪಿಕಾರ್ತಿಯರು
ಜೈನಧರ್ಮದಲ್ಲಿ ‘ಶಾಸ್ತ್ರದಾನ’ವು ಪರಮ ಪುಣ್ಯದಾಯಕ
ಕಾರ್ಯವಾಗಿದ್ದರಿಂದ ಮಹಿಳೆಯರು ಲೇಖನ ವಿದ್ಯೆಯನ್ನು ಕಲಿತು ಗ್ರಂಥಗಳನ್ನು
ಪ್ರತಿಮಾಡುತ್ತಿದ್ದರು:
- ಶಾಂತಿಮತಿ ಕಂತಿ: ಕರವೀರ
ಕ್ಷೇತ್ರದ ಜಿನಸೇನ ಭಟ್ಟಾರಕರ ಶಿಷ್ಯೆಯಾದ ಈಕೆ ಅಷ್ಟಿಗೆಪುರದ ಅಜಿತನಾಥ ಚೈತ್ಯಾಲಯದಲ್ಲಿ
ಪಾರ್ಶ್ವಕವಿಯ ಸಾಂಗತ್ಯ ಕೃತಿ ‘ನಿಂಬಸಾಮಂತ ಚರಿತೆ’ಯನ್ನು ಪ್ರತಿಮಾಡಿದಳು.
- ಶಾಂತಿಮತಿ ಅವ್ವಗಳ ಜೀಯನವರು: ಪೆನುಗೊಂಡೆಯ
ಬಸದಿಯಲ್ಲಿ “ತಮಗೆ ಕೇವಲ ಜ್ಞಾನಪ್ರಾಪ್ತಿ
ನಿಮಿತ್ತವಾಗಿ” ಹಿರೀ
ಪಂಚಪರಮೇಷ್ಠಿಗಳ ವ್ಯಾಖ್ಯಾನವನ್ನು ಸ್ವಹಸ್ತದಿಂದ ಬರೆದುಕೊಂಡಳು (ಶಕ ೧೫೪೨).
- ವರ್ಧಮಾನಕ್ಕಗಳು: ಲಲಿತಕೀರ್ತಿ
ಭಟ್ಟಾರಕರ ಶಿಷ್ಯೆಯಾದ ಈಕೆ ಸೇನಗಣದ ನೇಮಕ್ಕಗಳಿಗೆ ಆದಿಯಪ್ಪ ಕವಿಯ ‘ಧನ್ಯಕುಮಾರ
ಚರಿತೆ’ಯನ್ನು ಶಾಸ್ತ್ರದಾನವಾಗಿ ಬರೆದುಕೊಟ್ಟಳು.
- ಚಂದ್ರಮತಿ ಅಕ್ಕಳಜೀಯನವರು: ಹನಡಿಗೆರೆಯ
ಪಾರ್ಶ್ವನಾಥ ಬಸದಿಯಲ್ಲಿ ಪದ್ಮಪ್ರಭ ತ್ರೈವಿದ್ಯದೇವನ ‘ವಿಂಶತಿ ಪ್ರರೂಪಣೆ ಸಟೀಕು’
ಗ್ರಂಥವನ್ನು ಶಕ ೧೬೯೧ರಲ್ಲಿ ಸ್ವಹಸ್ತದಿಂದ ಬರೆದು ಮುಗಿಸಿದಳು.
- ಇತರರು: ಯಲ್ಲಣ್ಣನ ಪುತ್ರಿ
ಕಾಳವ್ವೆ (‘ಪದ್ಮಾವತಿ ಚರಿತೆ’), ಪಾರಿಶ್ವ
ಅಜ್ಜಿಗಳು (‘ಜೈನಾಚಾರ’), ಪಾಶ್ವಮತಿ ಬಾಯೀಜಿ (‘ರತ್ನಕರಂಡಕ
ಶ್ರಾವಕಾಚಾರ’).
ವೀರಶೈವ ಮಹಿಳಾ ಲಿಪಿಕಾರ್ತಿಯರು
- ಬೈರಾಜಿ: ಶಿಗ್ಗಾವಿಯ ಚನ್ನಗೌಡರ
ಸೊಸೆಯಾದ ಬೈರಾಜಿಯು ಕಲ್ಲಮಠದ ಪ್ರಭುದೇವರ ‘ಲಿಂಗಲೀಲಾವಿಲಾಸ ಚಾರಿತ್ರ’ (ವಚನ ಟೀಕು)
ಗ್ರಂಥವನ್ನು ಪ್ರತಿಮಾಡಿ, “ಮಹಾಗಣಂಗಳು ಕೇಳಿ ಓದಿ
ನಂಮ ಕೃತಾರ್ಥ ಮಾಡಿರಿ... ತಪ್ಪುಡೆ ತಿದ್ದಬಲ್ಲ ವೀರಮಾಹೇಶ್ವರರು ಓದಿಕೊಳ್ಳುವುದು” ಎಂದು ಸಮರ್ಪಿಸಿದಳು.
- ಪುಟ್ಟನಂಜಮ್ಮ: ಬಾಳಪ್ಪ
ಸ್ವಾಮಿಗಳ ಶಿಷ್ಯೆಯಾದ ಈಕೆ ಅದೃಶ್ಯ ಕವಿಯ ಪ್ರೌಢದೇವರಾಯನ ಕಾವ್ಯವನ್ನು ಪ್ರತಿಮಾಡಿದಳು.
- ಸಿಂಗಮ್ಮ: ಓದಿಸುವ
ಗುರುಬಸವಪ್ಪ ದೇವರ ಮಗಳಾದ ಸಿಂಗಮ್ಮ ‘ರಾಮನ ಸಾಂಗತ್ಯ’ವನ್ನು ಸ್ವತಃ ಬರೆದಳು.
- ಕೆಂಚನಗುಡ್ಡದ ವೀರಮ್ಮ: ಹೈದರಾಬಾದ್
ನಿಜಾಮ್ ಸಂಸ್ಥಾನದ ಸಿದ್ಧರಾಂಪುರದಲ್ಲಿ ಕಾಡಸಿದ್ಧೇಶ್ವರ ವಚನಗಳನ್ನು ಪ್ರತಿಮಾಡಿದಳು.
- ಖನಿವಂಶೆವ್ವ ಗುಜಮಾಗಡಿ: ರುದ್ರಾಕ್ಷಿ
ಮಠದಲ್ಲಿ ಬಸವಣ್ಣನವರ ಷಟ್ಸ್ಥಲ ವಚನಗಳನ್ನು ಪ್ರತಿಮಾಡುತ್ತಿದ್ದಾಗ ೮೮೨ ವಚನಗಳನ್ನು
ಬರೆದು ನಿಧನಳಾದಳು; ಉಳಿದ ೭೫ ವಚನಗಳನ್ನು ಆಕೆಯ ಮಗ
ಹುಚ್ಚಯ್ಯ ಪೂರ್ಣಗೊಳಿಸಿದನು (ಶಕ ೧೮೮೨).
ಶಿಕ್ಷಣದ ಪ್ರಜಾಪ್ರಭುತ್ವೀಕರಣ — ನಂಜಿಯ ಅಪೂರ್ವ ನಿದರ್ಶನ
ಹಸ್ತಪ್ರತಿ ಪುಷ್ಪಿಕೆಯೊಂದು ದಾಖಲಿಸಿರುವ ಅತ್ಯಂತ
ಕ್ರಾಂತಿಕಾರಕ ಸಂಗತಿಯೆಂದರೆ:
“ಕೆಸ್ತೂರ ಉಪಾಧ್ಯರ ಮಗ ರಂಗಪ್ಪ ಬರೆದುಕೊಟ್ಟದು ತಳಕಾಡು ನಾಯಿಕ
ಶ್ಯಾನಿ ಕೆಂಪಿ ಮಗಳು ನಂಜಿಗೆ...”
ವಿದ್ಯೆಯು ಕೇವಲ ಮೇಲ್ವರ್ಗಕ್ಕೆ ಸೀಮಿತವಾಗಿದ್ದ
ಕಾಲದಲ್ಲಿ, ಸಮಾಜದ ಕಟ್ಟಕಡೆಯ ಸ್ತರದಲ್ಲಿದ್ದ ಗಣಿಕೆ ಕುಲದ (ದೇವದಾಸಿ ಸಮುದಾಯದ)
ತಾಯಿಯೊಬ್ಬಳು ತನ್ನ ಮಗಳಾದ ನಂಜಿಗೆ ಭಾಮಿನಿ ಷಟ್ಪದಿ ರೂಪದ ‘ಐರಾವತ’ ಗ್ರಂಥವನ್ನು ಬ್ರಾಹ್ಮಣ
ಉಪಾಧ್ಯಾಯನಿಂದ ಪ್ರತಿಮಾಡಿಸಿಕೊಟ್ಟಿದ್ದು ಶಿಕ್ಷಣದ ಹಂಬಲವು ಎಲ್ಲ ಸಾಮಾಜಿಕ ಸ್ತರಗಳಲ್ಲೂ
ಜಾಗೃತವಾಗಿತ್ತು ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಅಂಚಿನ ವರ್ಗಗಳ ಪ್ರವೇಶ: ಅಕ್ಷರ ಸಂಸ್ಕೃತಿ ಕೇವಲ
ಮೇಲ್ವರ್ಗಕ್ಕೆ ಸೀಮಿತವಾಗಿರಲಿಲ್ಲ. ಹನುಮಂತಪ್ಪನಂತಹ ಸಾಮಾನ್ಯ ಲಿಪಿಕಾರರ ವಿನಯಶೀಲ ಮಾತುಗಳು
ಹಾಗೂ ಗಣಿಕೆ ಕುಲದ ನಂಜಿಗೆ 'ಐರಾವತ' ಕಾವ್ಯವನ್ನು
ಬರೆಸಿಕೊಟ್ಟಂತಹ ನಿದರ್ಶನಗಳು ತಳಸಮುದಾಯಗಳ ವಿದ್ಯಾಭಿಮಾನವನ್ನು ಸಾಬೀತುಪಡಿಸುತ್ತವೆ.
ಸಚಿತ್ರ ಹಸ್ತಪ್ರತಿಗಳು — ದೃಶ್ಯ ಸಂವಹನ ಮತ್ತು ವರ್ಣಚಿತ್ರ ಕಲೆ : ಕರ್ನಾಟಕದ ಚಿತ್ರಕಲಾ ಇತಿಹಾಸವನ್ನು ಬರೆಯುವಾಗ ಹಸ್ತಪ್ರತಿಗಳಲ್ಲಿರುವ
ವರ್ಣಚಿತ್ರಗಳನ್ನು ಹೆಚ್ಚಾಗಿ ಕಡೆಗಣಿಸಲಾಗಿದೆ. ಹಸ್ತಪ್ರತಿಗಳಲ್ಲಿ ಕೇವಲ ಅಕ್ಷರಗಳಲ್ಲದೆ, ಕಾವ್ಯದ ಸನ್ನಿವೇಶಗಳನ್ನು ಚಾಕ್ಷುಷಗೊಳಿಸುವ ಅದ್ಭುತ ರೇಖಾಚಿತ್ರ ಮತ್ತು ಜಲವರ್ಣ
ಚಿತ್ರಗಳಿವೆ. ವರ್ಣಚಿತ್ರ ಕಲೆಯ ಹೊಸ ಆಯಾಮ
ಕರ್ನಾಟಕದ ಚಿತ್ರಕಲಾ ಇತಿಹಾಸದಲ್ಲಿ ಹಸ್ತಪ್ರತಿಗಳ
ವರ್ಣಚಿತ್ರಗಳನ್ನು ಪ್ರತ್ಯೇಕವಾಗಿ ನೋಡದೆ ನಿರ್ಲಕ್ಷಿಸಲಾಗಿತ್ತು:
- ಕಾವ್ಯದ ಚಾಕ್ಷುಷೀಕರಣ: ‘ವೃಷಭೇಂದ್ರ ವಿಲಾಸ’ದ ೫೭೫ ಚಿತ್ರಗಳು ಮತ್ತು ಜೀಜಾಬಾಯಿ ಜಹಗೀರದಾರ ಅವರ
‘ಶ್ರೀಕೃಷ್ಣ ಪಾರಿಜಾತ’ದ ೧೬೦ ಜಲವರ್ಣ ಚಿತ್ರಗಳು ಕಾವ್ಯವನ್ನು ದೃಶ್ಯಮಾಧ್ಯಮವನ್ನಾಗಿ
ಪರಿವರ್ತಿಸಿದ ಬಗೆಯನ್ನು ಅನಾವರಣಗೊಳಿಸುತ್ತವೆ.
- ಜನಪದ ಶೈಲಿ ಮತ್ತು ವೇಷಭೂಷಣ: ಈ
ಚಿತ್ರಗಳು ಅಂದಿನ ಕಾಲದ ಜನಪದ ಕಲೆ, ವಸ್ತ್ರವಿನ್ಯಾಸ, ಆಭರಣ ಮತ್ತು ರಂಗಭೂಮಿಯ ನೈಜ
ಸ್ವರೂಪವನ್ನು ದಾಖಲಿಸುವ ಐತಿಹಾಸಿಕ ದೃಶ್ಯ ದಾಖಲೆಗಳಾಗಿವೆ.
|
ಸಚಿತ್ರ ಹಸ್ತಪ್ರತಿ |
ಚಿತ್ರಗಳ ಸಂಖ್ಯೆ / ಸ್ವರೂಪ |
ಕಲಾವಿದರು / ಶೈಲಿಯ ವೈಶಿಷ್ಟ್ಯ |
|
ನಂಜುಂಡ ಭಾಗವತನ ವೃಷಭೇಂದ್ರ ವಿಲಾಸ (ಯಕ್ಷಗಾನ) |
೩೪೪ ಪುಟಗಳಲ್ಲಿ ೫೭೫ ವರ್ಣಚಿತ್ರಗಳು |
ಪುಟದ ತುಂಬಾ ವರ್ಣರಂಜಿತ ಚಿತ್ರಗಳು; ಕೆಳಗೆ-ಮೇಲೆ ಪಠ್ಯ. ಯಕ್ಷಗಾನ ವೇಷಭೂಷಣಗಳ ದೃಶ್ಯರೂಪ. |
|
ಶ್ರೀಕೃಷ್ಣ ಪಾರಿಜಾತ |
ಸುಮಾರು ೧೬೦ ಜಲವರ್ಣ ಚಿತ್ರಗಳು |
ಶ್ರೀಮತಿ ಜೀಜಾಬಾಯಿ ಜಹಗೀರದಾರ (ಕ್ರಿ.ಶ. ೧೮೭೦). ಜನಪದ ಶೈಲಿಯ ರೇಖಾಚಿತ್ರಗಳು, ರಾಗ-ತಾಳಗಳ
ವರ್ಣಸಂಕೇತ. |
|
ರಾಘವಾಂಕ ಚರಿತೆ (ಧಾರವಾಡ ಪ್ರತಿ) |
೩೫ಕ್ಕೂ ಹೆಚ್ಚು ವರ್ಣಚಿತ್ರಗಳು |
ಪ್ರಭುದೇವ, ಸಿದ್ಧರಾಮ,
ಹರಿಹರ-ರಾಘವಾಂಕ, ಕೆರೆಯ ಪದ್ಮರಸ ಮುಂತಾದ ಕವಿಗಳ
ಸಮಕಾಲೀನ ಚಿತ್ರಣ. |
|
ಬಸವಪುರಾಣ (ಮೈಸೂರು ಕೆ.ಎ. ೩೧೨) |
ಫಲಕ ಮತ್ತು ಕಾಗದದ ಮೇಲಿನ ಚಿತ್ರಗಳು |
೧೨ನೆಯ ಶತಮಾನದ ಶರಣ ಕ್ರಾಂತಿಯ ಶಾಸ್ತ್ರವಿರೋಧಿ, ಜನಪರ ಆಶಯಗಳ ಕಲಾತ್ಮಕ ಅಭಿವ್ಯಕ್ತಿ. |
|
ಶ್ರೀ ಸಿದ್ಧೇಶ್ವರ ಮಹಾಪುರಾಣ |
೧೯ ರೇಖಾಚಿತ್ರಗಳು |
ಎಡೆಯೂರು ಸಿದ್ಧಲಿಂಗ ಯತಿಗಳ ಪವಾಡಗಳು ಮತ್ತು
ಧಾರ್ಮಿಕ ಸನ್ನಿವೇಶಗಳ ಚಿತ್ರಣ. |
ಜೀಜಾಬಾಯಿ ಜಹಗೀರದಾರ ಎಂಬ ಮಹಿಳಾ
ಕಲಾವಿದೆ ಅಪರಾಳ ತಮ್ಮಣ್ಣನ ‘ಶ್ರೀಕೃಷ್ಣ ಪಾರಿಜಾತ’ ನಾಟಕಕ್ಕೆ ೧೮೭೦ರಲ್ಲಿ ಬಿಡಿಸಿದ ಜಲವರ್ಣ
ಚಿತ್ರಗಳು ಕರ್ನಾಟಕದ ಜಾನಪದ ಚಿತ್ರಕಲೆಗೆ ಅತ್ಯುತ್ಕೃಷ್ಟ ನಿದರ್ಶನ. ನಾಜೂಕಾದ ರೇಖೆಗಳು, ಕೊರವಂಜಿಯ ದೈವಿಕ ಮುಖಮುದ್ರೆ, ಸತ್ಯಭಾಮೆಯ ವಿರಹ, ಕೃಷ್ಣನಿಗೆ ಗಿಳಿಯ ಮೂಲಕ ಪತ್ರ ಕಳಿಸುವ ದೃಶ್ಯಗಳು ಜಾನಪದ ಸಂವೇದನೆಯನ್ನು ಚಾಕ್ಷುಷ
ಕಾವ್ಯವನ್ನಾಗಿಸಿವೆ. ನೀಡಿರುವ ಪಠ್ಯದಲ್ಲಿ ಹಸ್ತಪ್ರತಿಗಳಲ್ಲಿನ ಚಿತ್ರಸಾಹಿತ್ಯಕ್ಕೂ ವಿಶೇಷ
ಮಹತ್ವ ನೀಡಲಾಗಿದೆ. ಹಸ್ತಪ್ರತಿಗಳು ಕೇವಲ ಅಕ್ಷರಮಾಧ್ಯಮವಲ್ಲ; ಅವು
ದೃಶ್ಯಸಂವಹನದ ಸಾಧನಗಳೂ ಆಗಿವೆ.
ಈ ಚಿತ್ರಗಳು ಧಾರ್ಮಿಕ ಸಂಕೇತಗಳನ್ನು, ಕಥಾವಸ್ತುವನ್ನು, ಆಚರಣೆಗಳನ್ನು, ವೇಷಭೂಷಣವನ್ನು,
ರಾಜಸಂಸ್ಕೃತಿಯನ್ನು, ಕಲಾಶೈಲಿಯನ್ನು ದಾಖಲಿಸುತ್ತವೆ.ಹೀಗಾಗಿ
ಹಸ್ತಪ್ರತಿಯನ್ನು ಓದುವಾಗ:ಪಠ್ಯವನ್ನು ಮಾತ್ರವಲ್ಲ, ಅದರ
ದೃಶ್ಯಭಾಷೆಯನ್ನೂ ಓದಬೇಕು. ಪಠ್ಯದಲ್ಲಿಯೂ ಹಸ್ತಪ್ರತಿಗಳ
ಚಿತ್ರಸಾಹಿತ್ಯವನ್ನು ಆ ಕಾಲದ ಸಾಮಾಜಿಕ–ಸಾಂಸ್ಕೃತಿಕ ಪ್ರತೀಕವಾಗಿ ನೋಡಬೇಕೆಂದು ಹೇಳಲಾಗಿದೆ.ಇದರಿಂದ ಹಸ್ತಪ್ರತಿ
ಅಧ್ಯಯನವು:ಸಾಹಿತ್ಯಶಾಸ್ತ್ರ, ಕಲಾಇತಿಹಾಸ, ಮಾನವಶಾಸ್ತ್ರ, ದೃಶ್ಯಸಂಸ್ಕೃತಿ ಅಧ್ಯಯನ ಇವುಗಳೊಂದಿಗೆ
ಸಂಪರ್ಕ ಹೊಂದುತ್ತದೆ. ಚಿತ್ರಗಳಿರುವ ಹಸ್ತಪ್ರತಿಗಳಲ್ಲಿ ಚಿತ್ರಗಳನ್ನು
ಕೇವಲ ಅಲಂಕಾರವೆಂದು ಪರಿಗಣಿಸಬಾರದು. ಚಿತ್ರವು ಕಥೆಯನ್ನು ವಿವರಿಸಬಹುದು; ಧಾರ್ಮಿಕ ಕಲ್ಪನೆ ಯನ್ನು ರೂಪಿಸ ಬಹುದು.
ಸಾಮಾಜಿಕ ಜೀವನವನ್ನು ತೋರಿಸಬಹುದು. ವೇಷಭೂಷಣದ ಮಾಹಿತಿ ನೀಡಬಹುದು. ವಾಸ್ತುಶಿಲ್ಪವನ್ನು
ದಾಖಲಿಸಬಹುದು; ಕಲಾತ್ಮಕ ಅಭಿರುಚಿಯನ್ನು ಸೂಚಿಸಬಹುದು. ಹೀಗಾಗಿ
ಹಸ್ತಪ್ರತಿಯ ಅಧ್ಯಯನದಲ್ಲಿ: ಪಠ್ಯ + ಚಿತ್ರ = ದ್ವಿಭಾಷಿಕ ಸಾಂಸ್ಕೃತಿಕ ಸಂವಹನ ಪ್ರಮುಖವಾಗುತ್ತದೆ.
ಸಮಾಜೋ-ಭಾಷಿಕ ನೆಲೆ, ಆಡುನುಡಿ ಮತ್ತು ಗ್ರಂಥಸಂಪಾದನೆಯ ಪುನರ್ಚಿಂತನೆ:
ಸಾಂಪ್ರದಾಯಿಕ ಗ್ರಂಥಸಂಪಾದನೆಯು ಹಸ್ತಪ್ರತಿಯಲ್ಲಿರುವ
ವ್ಯಾಕರಣ ನಿಯಮಗಳಿಗೆ ಹೊಂದದ ರೂಪಗಳನ್ನು ‘ಲಿಪಿಕಾರನ ಪ್ರಮಾದ’, ‘ಕಣ್ತಪ್ಪು’, ‘ಅಜ್ಞಾನ’ ಅಥವಾ ‘ಸ್ಖಾಲಿತ್ಯ’ ಎಂದು
ತಳ್ಳಿಹಾಕಿ, ಅವುಗಳನ್ನು ಕೃತಕವಾಗಿ ಸಂಸ್ಕೃತೀಕರಿಸಿ ಶಿಷ್ಟರೂಪಕ್ಕೆ
ತರುತ್ತದೆ. ಆದರೆ ಸಮಾಜೋ-ಭಾಷಿಕ ದೃಷ್ಟಿಯಿಂದ ಈ ‘ದೋಷ’ಗಳೇ ಆಯಾ ಕಾಲಘಟ್ಟದ ಜೀವಂತ ಆಡುನುಡಿಯ
ಹೆಜ್ಜೆಗುರುತುಗಳಾಗಿವೆ.
ಆಡುಭಾಷೆ ಮತ್ತು ಗ್ರಂಥಸಂಪಾದನೆಯ
ಮರುಪರಿಶೀಲನೆ ಹಸ್ತಪ್ರತಿಗಳಲ್ಲಿನ ಭಿನ್ನಪಾಠಗಳು ಅಥವಾ ಪಾಠಾಂತರಗಳನ್ನು 'ದೋಷ' ಅಥವಾ 'ಸ್ಖಾಲಿತ್ಯ'ಗಳೆಂದು ಪರಿಗಣಿಸುವ ಗ್ರಂಥಸಂಪಾದನೆಯ ಶಿಷ್ಟ ಮಾದರಿಯನ್ನು ಬದಲಾಯಿಸಬೇಕಿದೆ.
ಲಿಪಿಕಾರರು ತಮ್ಮ ಕಾಲದ ಪ್ರಾದೇಶಿಕ ಉಚ್ಚಾರಣೆ ಮತ್ತು ಆಡುನುಡಿಯ ರೂಪಗಳನ್ನು (ಉದಾ:
ಯಕಾರ-ವಕಾರಗಳ ಬಳಕೆ, ಸಂಯುಕ್ತಾಕ್ಷರಗಳ ಸರಳೀಕರಣ) ಲಿಖಿತ ರೂಪಕ್ಕೆ
ತಂದಿದ್ದಾರೆ. ಇದು ಕನ್ನಡ ಭಾಷೆಯ ನೈಜ ವಿಕಾಸ ಹಾಗೂ ಪ್ರಜಾಪ್ರಭುತ್ವೀಕರಣದ ಸಂಕೇತವಾಗಿದೆ. ಗ್ರಂಥಸಂಪಾದನೆಯಲ್ಲಿ ‘ದೋಷ’ ಅಥವಾ
‘ಸ್ಖಾಲಿತ್ಯ’ವೆಂದು ತಿದ್ದಲಾಗುವ ಭಿನ್ನಪಾಠಗಳು ವಾಸ್ತವವಾಗಿ ಆಯಾ ಕಾಲಘಟ್ಟದ ಜೀವಂತ ಆಡುನುಡಿ,
ಪ್ರಾದೇಶಿಕ ಉಪಭಾಷೆ ಮತ್ತು ಉಚ್ಚಾರಣಾ ಕ್ರಮದ ನೈಜ ಕುರುಹುಗಳು. ಲಿಪಿಕಾರರು
ಶಿಷ್ಟ ಭಾಷೆಯ ನಿಯಮಗಳನ್ನು ಮೀರಿ ಜನಭಾಷೆಯನ್ನು ದಾಖಲಿಸುವ ಮೂಲಕ ಭಾಷಿಕ
ಪ್ರಜಾಪ್ರಭುತ್ವೀಕರಣಕ್ಕೆ ಕಾರಣರಾಗಿದ್ದಾರೆ. ಹಸ್ತಪ್ರತಿಯಲ್ಲಿರುವ
ಚಿತ್ರ ಮತ್ತು ಸಾಹಿತ್ಯಗಳು ಆಯಾ ಕಾಲದ ಸಾಮಾಜಿಕ–ಸಾಂಸ್ಕೃತಿಕ
ಸಂದರ್ಭಗಳ ಪ್ರತೀಕಗಳಾಗಿದ್ದು, ಕಲೆ, ಸಾಹಿತ್ಯ, ಧರ್ಮ, ಸಂಗೀತ ಮತ್ತು ಶಿಕ್ಷಣದ ವಿಷಯಗಳನ್ನು ಪಸರಿಸುವ
ಮಾಧ್ಯಮವಾಗಿಯೂ ಅವು ಕಾರ್ಯನಿರ್ವಹಿಸಿವೆ ಎಂಬ ದೃಷ್ಟಿಕೋನ ಪಠ್ಯದಲ್ಲಿ ವ್ಯಕ್ತವಾಗಿದೆ.
ಭಾಷಾವಿಜ್ಞಾನದ
ನೆಲೆ: ಹಸ್ತಪ್ರತಿಗಳಲ್ಲಿನ 'ಯ/ವ' ಕಾರಾಗಮಗಳು,
ಅಕ್ಷರ ಪಲ್ಲಟಗಳು ಮಧ್ಯಕಾಲೀನ ಕನ್ನಡದ ಧ್ವನಿಮಾತ್ಮಕ ಮತ್ತು ಸಾಮಾಜಿಕ
ಉಪಭಾಷೆಗಳ (Sociolects) ಅಧ್ಯಯನಕ್ಕೆ ವಿಪುಲ ಸಾಮಗ್ರಿ
ಒದಗಿಸುತ್ತವೆ. ಹಸ್ತಪ್ರತಿಗಳಲ್ಲಿನ ಭಾಷೆ ಅತ್ಯಂತ ಮಹತ್ವದ ಸಂಶೋಧನಾ
ಕ್ಷೇತ್ರವಾಗಿದೆ.
ಅವುಗಳಲ್ಲಿ:
• ಪ್ರಾದೇಶಿಕ ಉಪಭಾಷೆಗಳು,
• ಆಡುನುಡಿ,
• ಕಾಲಘಟ್ಟದ ಭಾಷೆ,
• ಲಿಪಿಕಾರನ ವೈಯಕ್ತಿಕ ಭಾಷೆ,
• ಸಂಸ್ಕೃತ–ಕನ್ನಡ
ಮಿಶ್ರರೂಪಗಳು,
• ದೇಸಿ ಪದಗಳು
ಉಳಿದುಕೊಂಡಿರುತ್ತವೆ. ಪುಷ್ಪಿಕೆ
ಲಿಪಿಕಾರರನ್ನು ಆಯಾ ಕಾಲಘಟ್ಟದ ಭಾಷಿಕ ಸಂಕಥನಕಾರರಾಗಿ ನೋಡುವ ಅಗತ್ಯವನ್ನು ಸೂಚಿಸುತ್ತದೆ. ಒಬ್ಬ
ಲಿಪಿಕಾರನ ಬರವಣಿಗೆಯಲ್ಲಿ ಅವನ ಕಾಲ, ಪ್ರದೇಶ, ಶಿಕ್ಷಣ, ವೃತ್ತಿ ಮತ್ತು ಭಾಷಾ ಪರಿಸರದ ಗುರುತುಗಳು
ಕಾಣಿಸಿಕೊಳ್ಳಬಹುದು.ಇದನ್ನು ಲಿಪಿಕಾರನ ಸಾಮಾಜಿಕ ಸಹಿ’ಎಂದು ಪರಿಕಲ್ಪಿಸಬಹುದು. ಈ ಸಾಮಾಜಿಕ
ಸಹಿಯನ್ನು ಕೆಳಗಿನ ಅಂಶಗಳಿಂದ ಗುರುತಿಸಬಹುದು: ಅಕ್ಷರರೂಪ, ಪದರೂಪ,
ಸಂಧಿ, ವಿಭಕ್ತಿ, ಧ್ವನಿರೂಪ,
ಪ್ರಾದೇಶಿಕ ಪದಗಳು, ವ್ಯಾಕರಣಿಕ ರೂಪಾಂತರ, ವಿರಾಮಚಿಹ್ನೆಗಳ ಬಳಕೆ, ಪಾಠವಿಭಜನೆ, ಪುಷ್ಪಿಕೆಯ ಭಾಷೆ ಈ ಮಾದರಿ ಕನ್ನಡ ಲಿಪಿ ಮತ್ತು ಭಾಷೆಯ ಇತಿಹಾಸವನ್ನು ಮರುಪರಿಶೀಲಿಸಲು
ಸಹಾಯಕವಾಗುತ್ತದೆ.
ಸಂಪಾದನೆಯ
ಸಂದರ್ಭದಲ್ಲಿ ಇವುಗಳನ್ನು “ತಿದ್ದುಪಡಿ” ಮಾಡಿದರೆ ಭಾಷಾ ಇತಿಹಾಸದ ಪ್ರಮುಖ ಸಾಕ್ಷ್ಯಗಳು
ನಾಶವಾಗುವ ಸಾಧ್ಯತೆ ಇದೆ. ಆದ್ದರಿಂದ ಹೊಸ ಸಂಪಾದನಾ ವಿಧಾನವು:ಮೂಲಪಠ್ಯವನ್ನು ಸ್ಥಾಪಿಸುವುದರ
ಜೊತೆಗೆ ಎಲ್ಲಾ ಪ್ರಮುಖ ಭಾಷಿಕ ರೂಪಗಳನ್ನು ದಾಖಲಿಸಬೇಕು. ಪಠ್ಯದಲ್ಲಿಯೂ ಹಸ್ತಪ್ರತಿ
ಪುಷ್ಪಿಕೆಗಳಲ್ಲಿ ಆಡುನುಡಿ ಮತ್ತು ಆ ಕಾಲದ ಪ್ರಮಾಣಭಾಷೆಯ ವಿವರಗಳು ದೊರೆಯುತ್ತವೆ ಎಂಬ
ಅಂಶವನ್ನು ಒತ್ತಿಹೇಳಲಾಗಿದೆ. ಹಸ್ತಪ್ರತಿಗಳ ಸಂಪಾದನೆಯಲ್ಲಿ
ಲಿಪಿಕಾರನ ಭಾಷಿಕ ರೂಪಾಂತರಗಳನ್ನು ಅನೇಕ ಬಾರಿ ‘ದೋಷ’, ‘ಸ್ಖಾಲಿತ್ಯ’
ಅಥವಾ ‘ಅಶುದ್ಧ ರೂಪ’ವೆಂದು ತಿದ್ದಲಾಗುತ್ತದೆ. ಆದರೆ ಸಮಾಜ ಭಾಷಾವೈಜ್ಞಾನಿಕ ದೃಷ್ಟಿಯಿಂದ ಆ
ರೂಪಗಳು ಒಂದು ನಿರ್ದಿಷ್ಟ ಕಾಲದ ಮಾತಿನ ಭಾಷೆ, ಪ್ರಾದೇಶಿಕ ಭಾಷೆ ಅಥವಾ
ಲಿಪಿಕಾರನ ಭಾಷಾ ಅಭ್ಯಾಸದ ಸಾಕ್ಷಿಯಾಗಿರಬಹುದು. ಹೀಗಾಗಿ: ಸಂಪಾದನಾ ದೋಷ → ಭಾಷಿಕ ಸಾಕ್ಷ್ಯಎಂಬ ಮರುಮೌಲ್ಯೀಕರಣ ಅಗತ್ಯ. ಇದು
ಕನ್ನಡದ ಪ್ರಾದೇಶಿಕ ಭಾಷಾವಿಕಾಸ, ಮಾತುಕನ್ನಡದ
ಇತಿಹಾಸ ಮತ್ತು ಲಿಪ್ಯಂತರಣದ ಬದಲಾವಣೆಗಳನ್ನು ಅಧ್ಯಯನ ಮಾಡಲು ಹೊಸ ದಾರಿ ತೆರೆದಿಡುತ್ತದೆ.
ಹಸ್ತಪ್ರತಿಗಳ ಭಾಷೆಯನ್ನು ಕೇವಲ ‘ಸಾಹಿತ್ಯಭಾಷೆ’ಯಾಗಿ
ನೋಡುವುದು ಅಪೂರ್ಣ.
ಅದರಲ್ಲಿರುವ:
• ಸ್ಥಳೀಯ ಪದಗಳು
• ಉಚ್ಚಾರಣಾ ಪ್ರಭಾವಗಳು
• ಪ್ರಾದೇಶಿಕ ರೂಪಗಳು
• ವ್ಯಾಕರಣಿಕ ವ್ಯತ್ಯಾಸಗಳು
• ಧ್ವನಿ ರೂಪಾಂತರಗಳು
• ಸರಳೀಕೃತ ಸಂಯುಕ್ತಾಕ್ಷರಗಳು
• ಮಾತುಕನ್ನಡದ ಲಕ್ಷಣಗಳು
ಇವು ಸಮಾಜಭಾಷಾವೈಜ್ಞಾನಿಕ ಮಾಹಿತಿಯನ್ನು ಒದಗಿಸುತ್ತವೆ.
ಧ್ವನಿಮಾತ್ಮಕ ಮತ್ತು
ವ್ಯಾಕರಣಾತ್ಮಕ ಪಲ್ಲಟಗಳು
ಹಸ್ತಪ್ರತಿ ಪುಷ್ಪಿಕೆಗಳು ಮತ್ತು ಕೈಫಿಯತ್ತುಗಳಲ್ಲಿ
ಅಂದಿನ ಜನರು ವಾಸ್ತವವಾಗಿ ಮಾತನಾಡುತ್ತಿದ್ದ ಭಾಷೆಯ ನಿಯಮಗಳು ದಾಖಲಾಗಿವೆ:
1.
ಆಗಮ ಸಂಧಿ ವೈಚಿತ್ರ್ಯ (ಯ-ಕಾರ, ವ-ಕಾರಾಗಮ):
o ಸ್ವರಾದಿ ಪದಗಳ ಆರಂಭದಲ್ಲಿ ‘ಯ’ ಮತ್ತು ‘ವ’ ಕಾರಗಳು ಸಹಜವಾಗಿ ಬರುತ್ತವೆ:
2.
ಸಂಯುಕ್ತಾಕ್ಷರಗಳ ಸರಳೀಕರಣ
(ಸ್ವರಭಕ್ತಿ / Anaptyxis):
o ಉಚ್ಚಾರಣೆಯ ಸುಲಭಕ್ಕಾಗಿ ಒತ್ತಕ್ಷರಗಳನ್ನು ಒಡೆದು ಸ್ವರ ಸೇರಿಸುವುದು:
3.
ದ್ವಿತ್ವ ‘ಪ’ ಕಾರವು
ಅದ್ವಿತ್ವವಾಗಿ ‘ಹ’ ಕಾರವಾಗುವುದು:
4.
ಶ-ಷ-ಸ ಏಕೀಕರಣ:
o ಮೂರು ಊಷ್ಮವರ್ಣಗಳ ಬದಲಿಗೆ ಜನಸಾಮಾನ್ಯರ ನಾಲಗೆಯಲ್ಲಿ ‘ಸ’ ಕಾರವೇ ಪ್ರಧಾನವಾಗುವುದು:
5.
ಋ-ಕಾರ ಮತ್ತು ರೇಫ ಪಲ್ಲಟ:
ಪ್ರಾದೇಶಿಕ ಉಪಭಾಷಾ ವೈವಿಧ್ಯ
ಹಸ್ತಪ್ರತಿ ಪುಷ್ಪಿಕೆಗಳಲ್ಲಿ ಕರ್ನಾಟಕದ ವಿವಿಧ ಭಾಗಗಳ
ಸೊಗಡು ದಾಖಲಾಗಿದೆ:
·
ಮಧ್ಯ ಕರ್ನಾಟಕ
(ಚನ್ನಪಟ್ಟಣ-ಮದ್ದೂರು): “ಪಚ್ಚೆ ಕಂಥೆ ಚೆನ್ವೀರ ಮರಿದೇವರು
ಬರದು ಇದು ಸುಳ್ಳುಯೆಂದರೆ ಮಂಟೇದಲಿಂಗಾಯ ನಮಾ”
·
ಹೈದರಾಬಾದ್ ಕರ್ನಾಟಕ
(ಕಲಬುರ್ಗಿ): “ಕ್ಷಯನಾಮ ಸಮಕ್ಷರದಲ್ಲು
ಮಾರ್ಗಸಿರದಲ್ಲು ಚೆಟ್ಟಿಹಮಾಸೆ ತದಿಗಿ ಹತ್ತನೇ ತಾಸದಲ್ಲಿ ಸುಕ್ರಹೋರದಲ್ಲಿ ಮುಗಿಯಿತು. ಯಿದು
ತಪ್ಪು ತಡಿ ಬಲ್ಲಂತ ಪ್ರಬುಥರು ತಿದ್ದಿ ಓದುವದು ಇತಿ ಶರಣಾರ್ಥಿ”
·
ಬಳ್ಳಾರಿ-ರಾಯಚೂರು ಭಾಗ: “ಶ್ರೀಗಳ ಸವಾರಿ ವಡ್ಡಿನ ಗ್ರಾಮದ ಮುಕ್ಕಾಂ ಮಾಡಿದ ಸನ್ನಿಧಿಯಲ್ಲೆಯಿದ್ದು ಈ ಪುರಂವನ್ನು
ಲಿಖಿಸುವಂತೆ ಆಜ್ಞೆ ದಯಪಾಲಿಸಿದ ಕಾರಣ ಸಿರಸಾವಹಿಸಿ...” “ಸಿದ್ದರಾಮಯ್ಯನವರ ಪುತ್ರರಾದ ವೀರಯ್ಯನವರು ಶ್ರೀಗಳ ಸವಾರಿವಡ್ಡಿನ ಗ್ರಾಮದ ಮುಕ್ಕಾಂ
ಮಾಡಿದ ಸನ್ನಿಧಿಯಲ್ಲೆಯಿದ್ದು ಈ ಪುರಂವನ್ನು ಲಿಖಿಸುವಂತೆ ಆಜ್ಞೆ ದಯಪಾಲಿಸಿದ ಕಾರಣ ಸಿರಸಾವಹಿಸಿ
ಸದ್ರಿಮುಹೂರ್ತದಲ್ಲಿ.....” (ಬಳ್ಳಾರಿ ಜಿಲ್ಲೆ ಕುಡುತಿನ ಗ್ರಾಮದ ಲಿಪಿಕಾರ)
·
ಸಂಸ್ಕೃತ ವಿದ್ವಾಂಸನ ಕನ್ನಡ
ಬರೆಹ: “ವೋಮಕೇಶನಾಗುತ್ತಂ ವಿದ್ದಂಥಾ
ಪರಮೇಶ್ವರನ.
ಶಿಷ್ಟ ಕಾವ್ಯದಲ್ಲಿ ಆಡುನುಡಿಯ ಪೂರ್ಣ ರೂಪ
ಕಾಣಿಸಿಕೊಳ್ಳದಿರಬಹುದು.
·
ಆದರೆ ಪುಷ್ಪಿಕೆಗಳು ಮತ್ತು
ಕೈಫಿಯತ್ತುಗಳಲ್ಲಿ:
·
ಗ್ರಾಮೀಣ ಪದಗಳು,
·
ಸ್ಥಳೀಯ ಉಚ್ಚಾರಣೆ,
·
ಪ್ರಾದೇಶಿಕ ವ್ಯಾಕರಣ,
·
ಮಾತಿನ ಶೈಲಿ
·
ಸ್ಪಷ್ಟವಾಗಿರಬಹುದು.
·
ಹೀಗಾಗಿ:
·
ಹಸ್ತಪ್ರತಿ ಪುಷ್ಪಿಕೆ =
ಐತಿಹಾಸಿಕ ಸಮಾಜೋಭಾಷಿಕ ಕ್ಷೇತ್ರದ ಧ್ವನಿಮುದ್ರಣ ಎಂಬ ಹೊಸ ರೂಪಕವನ್ನು ಬಳಸಬಹುದು. ಮೂಲಪಠ್ಯವೂ
ಒಂದು ಕಾಲಘಟ್ಟದ ಮತ್ತು ಪ್ರಾದೇಶಿಕ ಭಾಷೆಯ ಸ್ವರೂಪ ತಿಳಿಯಲು ಹಸ್ತಪ್ರತಿ ಪುಷ್ಪಿಕೆಗಳನ್ನು
ಪ್ರಮುಖ ಆಕರಗಳಾಗಿ ಬಳಸಬಹುದು ಎಂದು ಹೇಳುತ್ತದೆ.
ಮೌಖಿಕ ಮತ್ತು ಲಿಖಿತ ಪರಂಪರೆಯ
ವೃತ್ತಾಕಾರ ಚಲನೆ
ದೇಸಿ ಸಾಹಿತ್ಯವು (ವಚನ, ಕೀರ್ತನೆ, ಸಾಂಗತ್ಯ, ಷಟ್ಪದಿ)
ಮೌಖಿಕ ನೆಲೆಯಲ್ಲೇ ಹುಟ್ಟಿ, ಲಿಖಿತ ಹಸ್ತಪ್ರತಿಯಾಗಿ, ಪುನಃ ಗಮಕ-ಪಾರಾಯಣಗಳ ಮೂಲಕ ಜನಸಾಮಾನ್ಯರ ಶ್ರವಣ ಜಗತ್ತಿಗೆ ತಲುಪುತ್ತಿತ್ತು.
ಉದಾಹರಣೆಗೆ, ಕುಮಾರವ್ಯಾಸ ಭಾರತದ ವಿರಾಟಪರ್ವವನ್ನು ಮಳೆ ಬಾರದಿದ್ದಾಗ
ಕೃಷಿಕ ಸಮುದಾಯಗಳು ಮಳೆಗಾಗಿ ಪಾರಾಯಣ ಮಾಡುತ್ತಿದ್ದವು. ಇಲ್ಲಿ ಪಠ್ಯದ ಶುದ್ಧತೆಗಿಂತ ಆ ಕ್ಷಣದ
ಸಮುದಾಯದ ಫಲಪ್ರಾಪ್ತಿ ಮುಖ್ಯವಾಗಿತ್ತು. ಆದ್ದರಿಂದಲೇ ಪಂಪ-ರನ್ನರ ಚಂಪೂ ಕೃತಿಗಳು ಬೆರಳೆಣಿಕೆಯ
ಪ್ರತಿಗಳಲ್ಲಿ ಸಿಕ್ಕರೆ, ಕುಮಾರವ್ಯಾಸ, ಜೈಮಿನಿ
ಭಾರತ, ಬಸವಪುರಾಣ, ವಚನ-ಕೀರ್ತನೆಗಳು ನೂರಾರು
ಪ್ರತಿಗಳಲ್ಲಿ ಲಭ್ಯವಾಗುತ್ತವೆ.
ಹಸ್ತಪ್ರತಿಗಳ ಸಂರಕ್ಷಣೆ, ಡಿಜಿಟಲೀಕರಣ ಮತ್ತು ಸಮಕಾಲೀನ
ಸವಾಲುಗಳು
ಪ್ರಸ್ತುತ ದಿನಮಾನಗಳಲ್ಲಿ ಹಸ್ತಪ್ರತಿಗಳು
ಎದುರಿಸುತ್ತಿರುವ ಅತಿ ದೊಡ್ಡ ಸವಾಲೆಂದರೆ ನಿರ್ಲಕ್ಷ್ಯ ಮತ್ತು ನಾಶ. ಗ್ರಾಮೀಣ ಭಾಗದ ಮಠ, ಮನೆಗಳಲ್ಲಿರುವ ಸಾವಿರಾರು ಹಸ್ತಪ್ರತಿಗಳು ಧೂಳು ತಿನ್ನುತ್ತಾ, ಗೆದ್ದಲು ಮತ್ತು ತೇವಾಂಶಕ್ಕೆ ತುತ್ತಾಗಿ ನಾಶವಾಗುತ್ತಿವೆ. ಇವುಗಳನ್ನು ಉಳಿಸಿಕೊಳ್ಳಲು
ಸಾಂಪ್ರದಾಯಿಕ ಸಂರಕ್ಷಣಾ ವಿಧಾನಗಳ ಜೊತೆಗೆ ಆಧುನಿಕ ಮಾಹಿತಿ ತಂತ್ರಜ್ಞಾನದ ನೆರವು ಅತ್ಯಗತ್ಯ. ಹಸ್ತಪ್ರತಿಗಳ
ಮರುಶೋಧನೆಯು ಕೇವಲ ಶೈಕ್ಷಣಿಕ ವಲಯಕ್ಕೆ ಸೀಮಿತವಾಗದೆ, ಡಿಜಿಟಲ್
ತಂತ್ರಜ್ಞಾನದ ಮೂಲಕ ಸಾರ್ವಜನಿಕ ಜ್ಞಾನನಿಧಿಯಾಗಿ (Digital Humanities) ಮಾರ್ಪಡಬೇಕಾದ ತುರ್ತಿದೆ.
ಸಮಗ್ರ ಸಾಂಸ್ಕೃತಿಕ ಆಕರಗಳನ್ನು ಕೇವಲ ಧಾರ್ಮಿಕ ಪೂಜಾ
ವಸ್ತುಗಳಾಗಿಯೋ ಅಥವಾ ಪಳೆಯುಳಿಕೆಗಳಾಗಿಯೋ ಕಾಣದೆ, ಆಧುನಿಕ
ಮಾಹಿತಿ ತಂತ್ರಜ್ಞಾನ ಹಾಗೂ ಗಣಕೀಕರಣದ (Digitization) ಮೂಲಕ
ಸಂರಕ್ಷಿಸಬೇಕಾಗಿದೆ. ಈ ಮೂಲಕ ಉಪೇಕ್ಷಿತ ಶಾಸ್ತ್ರ ಸಾಹಿತ್ಯದಲ್ಲಿರುವ ಲೋಕೋಪಯೋಗಿ ಜ್ಞಾನವನ್ನು
ವರ್ತಮಾನದ ಜನಕಲ್ಯಾಣಕ್ಕೆ ಅನ್ವಯಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಪಠ್ಯವು
ಆಧುನಿಕ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನದ ನೆರವಿನಿಂದ ಹಸ್ತಪ್ರತಿಗಳಲ್ಲಿರುವ ಮಾಹಿತಿ
ಸಂಪತ್ತನ್ನು ವರ್ತಮಾನದ ಸಮಾಜಕ್ಕೆ ತಲುಪಿಸುವ ಅಗತ್ಯವನ್ನು ಸೂಚಿಸುತ್ತದೆ.
ಹಸ್ತಪ್ರತಿಗಳ ನಿಜವಾದ ಪ್ರಜಾಪ್ರಭುತ್ವೀಕರಣ ಎಂದರೆ:
1. ಹಸ್ತಪ್ರತಿಗಳ
ಸಮಗ್ರ ಸಮೀಕ್ಷೆ
2. ವೈಜ್ಞಾನಿಕ
ಪಟ್ಟೀಕರಣ
3. ಡಿಜಿಟಲ್
ಸಂರಕ್ಷಣೆ
4. ಉನ್ನತ
ಗುಣಮಟ್ಟದ ಚಿತ್ರಪ್ರತಿ
5. ಪಠ್ಯ
ಲಿಪ್ಯಂತರ
6. ಬಹುಭಾಷಾ
ವಿವರಣೆ
7. ವಿಷಯವಾರು
ವರ್ಗೀಕರಣ
8. ಸಂಶೋಧಕರಿಗೆ
ಮುಕ್ತ ಪ್ರವೇಶ
9. ಸಾಹಿತ್ಯೇತರ
ಹಸ್ತಪ್ರತಿಗಳ ಪ್ರಕಟಣೆ
10. ಸ್ಥಳೀಯ
ಸಮುದಾಯದ ಪಾಲ್ಗೊಳ್ಳುವಿಕೆ
ಇವುಗಳನ್ನು ಒಳಗೊಂಡ
ಯೋಜನೆಯೇ ನಿಜವಾದ ಹಸ್ತಪ್ರತಿ ಪುನರುಜ್ಜೀವನ. ಈ ಮೂಲಕ ದೇಸಿ
ಜ್ಞಾನಪರಂಪರೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಪುನಃ ಸ್ಥಾಪಿಸಬಹುದು. ವಿಶೇಷವಾಗಿ
ಕೃಷಿ, ವೈದ್ಯ, ಪ್ರಾಣಿ–ಪಕ್ಷಿ, ವಾಸ್ತು ಮತ್ತು
ಇತರ ಉಪೇಕ್ಷಿತ ಜ್ಞಾನಶಾಖೆಗಳ ಹಸ್ತಪ್ರತಿಗಳ ಅಧ್ಯಯನವು ಕನ್ನಡ ಸಮಾಜದ ಜ್ಞಾನವೈವಿಧ್ಯವನ್ನು
ಮರುಪಡೆಯಲು ಸಹಕಾರಿಯಾಗಬಹುದು. ಹಸ್ತಪ್ರತಿಯನ್ನು ಕೇವಲ ಹಳೆಯ ಪುಸ್ತಕವೆಂದು ನೋಡುವ
ದೃಷ್ಟಿಕೋನದಿಂದ ಹೊರಬಂದು ಅದನ್ನು ಒಂದು ಸಂಪೂರ್ಣ ಸಾಂಸ್ಕೃತಿಕ ಜ್ಞಾನವ್ಯವಸ್ಥೆಯಾಗಿ
ಮರುಪರಿಗಣಿಸುವುದು ಇಂದಿನ ಹಸ್ತಪ್ರತಿ ಅಧ್ಯಯನದ ಪ್ರಮುಖ ಅಗತ್ಯವಾಗಿದೆ.
ಒಂದು ಹಸ್ತಪ್ರತಿಯೊಳಗೆ ಒಂದು ಕೃತಿಯ
ಪಠ್ಯ ಮಾತ್ರ ಇರುವುದಿಲ್ಲ. ಅದರ ಹಿಂದೆ ಒಬ್ಬ ಲೇಖಕನ ಕಲ್ಪನೆ, ಒಬ್ಬ
ಲಿಪಿಕಾರನ ಶ್ರಮ, ಒಬ್ಬ ಆಶ್ರಯದಾತನ ಸಾಂಸ್ಕೃತಿಕ ದೃಷ್ಟಿ, ಒಂದು ಸಮುದಾಯದ ನಂಬಿಕೆ, ಒಂದು ಕಾಲಘಟ್ಟದ ಭಾಷೆ, ಒಂದು ಪ್ರದೇಶದ ಸಾಮಾಜಿಕ ವಾಸ್ತವ, ಒಂದು ಆರ್ಥಿಕ ವ್ಯವಸ್ಥೆಯ
ಚಲನೆ, ಒಂದು ಜ್ಞಾನಪರಂಪರೆಯ ಸ್ಮೃತಿ ಮತ್ತು ಅನೇಕ ತಲೆಮಾರುಗಳ
ಪ್ರಸರಣದ ಗುರುತುಗಳು ಇರುತ್ತವೆ. ಆದ್ದರಿಂದ ಹಸ್ತಪ್ರತಿ ಅಧ್ಯಯನದ ಅಂತಿಮ ಗುರಿ:“ಹಳೆಯ ಪಠ್ಯವನ್ನು ಉಳಿಸುವುದು” ಮಾತ್ರವಲ್ಲ;“ಆ ಪಠ್ಯದೊಳಗೆ
ಉಳಿದಿರುವ ಸಮಾಜವನ್ನು ಮರುಓದುವುದು.”ಈ ದೃಷ್ಟಿಯಿಂದ ಹಸ್ತಪ್ರತಿ ಸಂರಕ್ಷಣೆ ಎಂದರೆ ಕೇವಲ ಭೌತಿಕ
ವಸ್ತುವಿನ ಸಂರಕ್ಷಣೆ ಅಲ್ಲ. ಅದು ಭಾಷೆಯ ಸಂರಕ್ಷಣೆ, ಜನಸ್ಮೃತಿಯ
ಸಂರಕ್ಷಣೆ, ಜ್ಞಾನಪರಂಪರೆಯ ಸಂರಕ್ಷಣೆ, ವೃತ್ತಿ–ಸಂಸ್ಕೃತಿಯ ಸಂರಕ್ಷಣೆ, ಸ್ಥಳೀಯ ಇತಿಹಾಸದ ಸಂರಕ್ಷಣೆ ಮತ್ತು ಭವಿಷ್ಯದ ಸಂಶೋಧನಾ ಸಾಧ್ಯತೆಗಳ ಸಂರಕ್ಷಣೆ.
ಹಸ್ತಪ್ರತಿಗಳಲ್ಲಿರುವ ಅಪಾರ ಮಾಹಿತಿ ಸಂಪತ್ತನ್ನು ಆಧುನಿಕ ವೈಜ್ಞಾನಿಕ
ಚಿಂತನೆಗಳೊಂದಿಗೆ ಸಂವಾದಕ್ಕೆ ಒಳಪಡಿಸಬೇಕಿದೆ. ಶಿಥಿಲಾವಸ್ಥೆಯಲ್ಲಿರುವ ಈ ಜ್ಞಾನಭಂಡಾರವನ್ನು
ಡಿಜಿಟಲೀಕರಣಗೊಳಿಸಿ, ಉಪೇಕ್ಷಿತ ಶಾಸ್ತ್ರ ಸಾಹಿತ್ಯವನ್ನು ಪ್ರಕಟಿಸುವ
ಮೂಲಕ ನಮ್ಮ ಕುಸಿಯುತ್ತಿರುವ ದೇಸಿ ಪರಂಪರೆಯನ್ನು ಸಮಕಾಲೀನ ಸಮಾಜದ ಕಲ್ಯಾಣಕ್ಕೆ
ಅನ್ವಯಿಸಿಕೊಳ್ಳುವುದು ಇಂದಿನ ತುರ್ತು ಕರ್ತವ್ಯವಾಗಿದೆ.
ಗ್ರಂಥಸಂಪಾದನೆಯು ಕೇವಲ ಶುದ್ಧ
ಮೂಲಪಾಠವನ್ನು ಹುಡುಕುವ ಏಕಮುಖ ಸಾಹಸವಾಗದೆ, ಹಸ್ತಪ್ರತಿಯು ಸಮಾಜದ
ನಡುವೆ ಸೃಷ್ಟಿಸಿದ ಬಹುಮುಖಿ ಅರ್ಥಸಾಧ್ಯತೆಗಳನ್ನು ಅನಾವರಣಗೊಳಿಸುವ ಸಾಂಸ್ಕೃತಿಕ ಶೋಧವಾಗಬೇಕು.
ಲಿಪಿಕಾರರ ಶ್ರಮ, ಸ್ತ್ರೀಯರ ವಿದ್ಯಾಕಾಂಕ್ಷೆ, ಸ್ಥಳೀಯ ಪಾಳೆಯಗಾರರ ಇತಿಹಾಸ ಮತ್ತು ಕಣ್ಮರೆಯಾಗುತ್ತಿರುವ ದೇಸಿ ಜ್ಞಾನಪದ್ಧತಿಗಳನ್ನು
ಇಂದಿನ ಆಧುನಿಕ ಸಮಾಜದ ಚಿಂತನೆಯೊಂದಿಗೆ ಮುಖಾಮುಖಿಯಾಗಿಸಿ, ಹಸ್ತಪ್ರತಿ
ಲೋಕವನ್ನು ಪ್ರಜಾಪ್ರಭುತ್ವೀಕರಣಗೊಳಿಸುವುದೇ ಈ ಪರಂಪರೆಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವ. ಮಾಹಿತಿ
ತಂತ್ರಜ್ಞಾನ ಯುಗದಲ್ಲಿ ಈ ಕಾರ್ಯದ ಮುಂದಿನ ಹಂತ ಹಸ್ತಪ್ರತಿಗಳನ್ನು ಕೇವಲ ಸಂಗ್ರಹಿಸುವುದಲ್ಲ;
ಅವುಗಳ ಮಾಹಿತಿಯನ್ನು ಸಂಯೋಜಿಸಿ, ವರ್ಗೀಕರಿಸಿ,
ವ್ಯಾಖ್ಯಾನಿಸಿ, ಡಿಜಿಟಲ್ ರೂಪದಲ್ಲಿ ಸಾರ್ವಜನಿಕ
ಜ್ಞಾನಸಂಪನ್ಮೂಲವನ್ನಾಗಿ ಮಾಡುವುದು. ಮೂಲಪಠ್ಯವೂ ಹಸ್ತಪ್ರತಿ ಅಧ್ಯಯನವು ತನ್ನ ಕಾಲಕ್ಕೆ
ತಕ್ಕಂತೆ ಸಕಾಲಿಕಗೊಳ್ಳಬೇಕು ಮತ್ತು ಸಂಗ್ರಹ–ಸಂರಕ್ಷಣೆಯ ಜೊತೆಗೆ ಮಾಹಿತಿಯ ಪ್ರಸರಣವೂ ಮುಖ್ಯವೆಂದು
ಪ್ರತಿಪಾದಿಸುತ್ತದೆ. ಅವು ಕನ್ನಡಿಗರ ಭಾಷೆ, ಸಂಸ್ಕೃತಿ,
ಆಡಳಿತ, ಶ್ರಮ ಮತ್ತು ವಿಜ್ಞಾನದ ಜೀವಂತ ಚಹರೆಗಳು.
ಇಂದು ಹಸ್ತಪ್ರತಿ ಪುಷ್ಪಿಕೆಗಳ ಅಧ್ಯಯನದ ಸೈದ್ಧಾಂತಿಕ ಪ್ರತಿಪಾದನೆಯನ್ನು ಹೀಗೆ ಸಂಕ್ಷಿಪ್ತಗೊಳಿಸಬಹುದು:
ಹಸ್ತಪ್ರತಿ = ಪಠ್ಯವಲ್ಲ; ಪಠ್ಯದ ಹಿಂದೆ ಇರುವ ಸಮಾಜ. ಪುಷ್ಪಿಕೆ = ಅಂತ್ಯವಲ್ಲ; ಪಠ್ಯದ
ಸಾಮಾಜಿಕ ಆತ್ಮಚರಿತ್ರೆ. ಲಿಪಿಕಾರ = ಪ್ರತಿಗಾರನಲ್ಲ; ಸಾಂಸ್ಕೃತಿಕ
ಮಧ್ಯವರ್ತಿ.ಪಾಠಾಂತರ = ದೋಷವಲ್ಲ; ಪಠ್ಯದ ಚಲನಶೀಲತೆಯ ಸಾಕ್ಷ್ಯ.
ಪರಾಮರ್ಶನ ಗ್ರಂಥಗಳು:
1.ಹಸ್ತಪ್ರತಿ ಅಧ್ಯಯನದ ಹೊಸ ಸಾಧ್ಯತೆಗಳು
ಸಂ: ವೀರೇಶ ಬಡಿಗೇರ
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. 2ಂಂ5
2. ಮಣಿಹ ಸಂ: ಎಂ.ವಿ.ಸೀತಾರಾಮಯ್ಯ
ಬಿ.ಎಂ.ಶ್ರೀ. ಪ್ರತಿಷ್ಠಾನ, ಬೆಂಗಳೂರು. 197೦
3. ವೀರಶೈವ ಹಸ್ತಪ್ರತಿ ಪುಷ್ಪಿಕೆಗಳು
ಸಂ: ಎಸ್.ಶಿವಣ್ನ
ವೀರಶೈವ ಅಧ್ಯಯನ ಸಂಸ್ಥೆ, ಗದಗ 1994
4. ಸಿ.ನಾಗಭೂಷಣ. ಸಾಹಿತ್ಯ-ಸಂಸ್ಕೃತಿ
ಅನ್ವೇಷಣೆ
ಸಿ.ವಿ.ಜಿ.ಪಬ್ಲಿಕೇಷನ್, ಬೆಂಗಳೂರು, 2೦೦7
೫. ಸಿ.ನಾಗಭೂಷಣ. ಕನ್ನಡ ಹಸ್ತಪ್ರತಿಗಳು
ಮತ್ತು ಗ್ರಂಥಸಂಪಾದನೆ
ಸಾಂಸ್ಕೃತಿಕ ಮತ್ತು ಪಠ್ಯಕೇಂದ್ರಿತ ಅಧ್ಯಯನಗಳು
ಸ್ನೇಹಾ ಪಬ್ಲಿಷಿಂಗ್ ಹೌಸ್, ಬೆಂಗಳೂರು೨೦೨೨
೬. ಎಸ್.ಎಸ್.ಅಂಗಡಿ. ಕನ್ನಡ ಹಸ್ತಪ್ರತಿ ರಚನೆ ಭಾಷಿಕ ವಿವೇಚನೆ
ಪ್ರಸಾರಾಂಗ. ಕನ್ನಡ ವಿಶ್ವವಿದ್ಯಾಲಯ ಹಂಪಿ.2೦೦6
೭, ಬಿ.ಕೆ.ಹಿರೇಮಠ, ಕನ್ನಡ ಹಸ್ರಪ್ರತಿಗಳು
ಒಂದು ಅಧ್ಯಯನ
ವೀರಶೈವ ಅಧ್ಯಯನ ವೇದಿಕೆ, ಮುಧೋಳ,1992
೮. ನಾ. ಗೀತಾಚಾರ್ಯ:ಹಸ್ತಪ್ರತಿ ಅಧ್ಯಯನ
ಶಾಸ್ತ್ರ
ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು2೦೦9
೯. ವೀರೇಶ ಬಡಿಗೇರ: ಕನ್ನಡ ಹಸ್ತಪ್ರತಿಗಳ ಬಹುಪಠ್ಯೀಯ ನೆಲೆಗಳು
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. 2೦೦6