ಗುರುವಾರ, ಡಿಸೆಂಬರ್ 28, 2017

ಗುಣಮಧುರನ ತಮಟಕಲ್ಲುಶಾಸನ

ಗುಣಮಧುರನ ತಮಟಕಲ್ಲು ಶಾಸನ  ಕಾಲ: ಕ್ರಿ..ಸು.೫೦೦
ತಾಲೋಕ್ ಮತ್ತು ಜಿಲ್ಲೆ : ಚಿತ್ರದುರ್ಗ
ಸ್ಥಳ: ತಮಟಕಲ್ಲು ಗ್ರಾಮದ ಪೂರ್ವಕ್ಕಿರುವ ಹೊಲದಲ್ಲಿ

 ಕನ್ನಡ ಸಾಹಿತ್ಯ ಪ್ರಥಮ ಘಟ್ಟದ ಅವಶೇಷಗಳೆಂದರೆ ಶಾಸನಗಳು. ಪಂಪಪೂರ್ವ ಯಗದಲ್ಲಿ ಶ್ರೀಮಂತ ಸಾಹಿತ್ಯ ಕಂಡುಬರುವುದು ಅಥವ ಕಾವ್ಯಗುಣಗಳುಳ್ಳ ಬಿಡಿಮುಕ್ತಕಗಳು ಕಂಡುಬರುವುದು ಚಿತ್ರದುರ್ಗದ ತಮಟ ಕಲ್ಲಿನ ಶಾಸನಗಳಲ್ಲಿ. ನಿಷಿಧಿ ಶಾಸನಗಳನ್ನು ನಾಡಿನ ಪ್ರಥಮ ಸಾಹಿತ್ಯ ಪಾಠಗಳೆಂದು ವಿದ್ವಾಂಸರು ಗುರುತಿಸಿರುವುದು.ಪರಿಶೀಲನಾರ್ಹವಾಗಿದೆ.  ಪೂರ್ವ ಹಳಗನ್ನಡದ ಭಾಷೆಯನ್ನು ಒಳಗೊಂಡು ಸಾಹಿತ್ಯ ದೃಷ್ಟಿಯಿಂದ ಗಮನಾರ್ಹವಾದ ಶಾಸನವೆಂದರೆ ಚಿತ್ರದುರ್ಗ ಜಿಲ್ಲೆಯ ತಮಟಕಲ್ಲಿನ ಶಿಲಾಲೇಖನ (E.C.V11. ಚಿತ್ರದುರ್ಗ 43)  ಇದರ ಕಾಲ ನಿರ್ದಿಷ್ಟವಾಗಿ ಗೊತ್ತಿಲ್ಲವಾದರೂ ಸುಮಾರು ಐದನೆಯ ಶತಮಾನದ್ದಿರ ಬೇಕೆಂಬ ಊಹೆ ಸ್ವೀಕಾರಾರ್ಹವಾಗಿದೆ. ಕ್ರಿ.ಶ. 500 ರ ಚಿತ್ರದುರ್ಗದ ತಮಟಕಲ್ಲು ಶಾಸನದಲ್ಲಿ  ಬರುವ ಬಿಣಮಣಿ ಅಂತು ಭೋಗಿ ಎಂಬ ಶಾಸನದ ಸಾಲುಗಳು ಬದಾಮಿ ಚಾಲುಕ್ಯರ ಕಾಲದಲ್ಲಿಯೇ ಕನ್ನಡವು ಸಾಹಿತ್ಯದ ಅಥವಾ ಕಾವ್ಯಭಾಷೆಯಾಗಿ ವಿಕಸನ ಹೊಂದಿದ್ದತಿತು ಎಂಬುದನ್ನು ಸೂಚಿಸುತ್ತದೆ.    
ಶಾಸನದ ಪಾಠ:

ಬಿಣಿಮಣಿ (ಫಣಿಮಣಿಅನ್ತುಭೋಗಿ ಬಿಣಿ (ಫಣದುಳ್ಮಣಿ ಚಿಲ್ಮನದೋಳ್

ರಣಮುಖದುಳ್ಳ ಕೋಲಂ ನೆರೆಯರ್ಕುಮನಿದ್ದ್ಯ ಗುಣನ್

ಪ್ರಣಯಿ ಜನಕ್ಕೆ ಕಾಮನಸಿತೋದ್ಘಲ ವರ್ಣನವಣ್

ಗುಣಮಧುರಾಂಕ್ಕ ದಿವ್ಯಪುರುಷನ್ ಪುರುಷ ಪ್ರವರನ್


  ವೃತ್ತವು  ಛಂದೋಂಬುಧಿಯಲ್ಲಿ ಉಕ್ತವಾಗಿರುವ ೧೭ ಅಕ್ಷರಗಳ ಪಾದ ಅತ್ಯಷ್ಠಿ ಎಂಬ ಛಂದಸ್ಸಿನಲ್ಲಿ ಬರುವ ಕನಕಾಬ್ಜಿನಿ ವೃತ್ತವಾಗಿದೆ. ಕನ್ನಡ ಕೈಪಿಡಿಯಲ್ಲಿ ಇದೇ ವೃತ್ತವನ್ನು ಸುಮಂಗಲಿ  ಎಂದೂ ನತ್ಕುಟಕ ವೃತ್ತವೆಂದು ಕರೆದಿದ್ದಾರೆ. ಗೋವಿಂದ ಪೈ ಅವರು ಇದಕ್ಕೆ ಕನಕಾಬ್ಜನೀಯ, ನರ್ಕುಟ ಎಂದು ಕರೆದಿದ್ದಾರೆಅಲ್ಲದೆ ಶಾಸನದ ಮೊದಲನೆ ಪಾದದಲ್ಲಿ ಬರುವ ಬಿಣಮಣಿ ಅನ್ತು ಭೋಗಿ ಬಿಣದುಳ್ಮಣಿ ವಿಲ್ಮನದೋನ್ ಎಂಬುದನ್ನು ಫಣಮಣಿ ಅನ್ತು ಭೋಗಿ ಫಣದುಳ್ಮಣಿ ವಿಲ್ ಮನದೋನ್ ಎಂಬುದಾಗಿ ತಿದ್ದಿದ್ದಾರೆ. ಇದು ಸಂಸ್ಕೃತ ವೃತ್ತವೇ ಆದರೂ ಸಂಸ್ಕೃತ ಸಾಹಿತ್ಯದಲ್ಲಿ ಎಲ್ಲಿಯೂ ಕಾಣಸಿಗದು. ಕನ್ನಡದಲ್ಲಿ ಸಂಸ್ಕೃತ ವೃತ್ತವನ್ನು ಬಳಸುವಾಗ ಹೊಸತನವಿರ ಬೇಕೆಂಬ ಹಿನ್ನೆಲೆಯಲ್ಲಿ ಶಾಸನಕವಿಯು ಇದನ್ನು ಬಳಸಿರ ಬೇಕೆಂದು ವಿದ್ವಾಂಸರು ಊಹಿಸಿದ್ದಾರೆ.       

   ಇದರ ಲಿಪಿ ಮತ್ತು ಭಾಷೆಗಳೆರಡೂ ಇದು ಬಹುಪ್ರಾಚೀನ ಎಂಬುದಕ್ಕೆ ಸಾಕ್ಷಿಯಾಗಿರುವುದು ಮಾತ್ರವಲ್ಲದೆ. ವೃತ್ತದ ಛಂದಸ್ಸು ಅತ್ಯಂತ ಅಪೂರ್ವ ವಾದುದು ಇದರಲ್ಲಿನ ಸಂಸ್ಕೃತ ಶಬ್ದ ಬಾಹುಳ್ಯವು ಗಮನಾರ್ಹವಾಗಿರುವಂತೆ ಇದರ ಕಾವ್ಯ ಗುಣವು ಮನೋಜ್ಞವಾಗಿದೆ. ಇಂತಹ ಕಾವ್ಯಮಯವಾದ ಶಿಲಾಶಾಸನ ಹುಟ್ಟಬೇಕಾದರೆ ಅದಕ್ಕೂ ಹಿಂದೆ ಸಾಕಷ್ಟು ಸೃಷ್ಠಿ ನಡೆದಿರಬಹುದು ಎಂದು ಊಹಿಸಲು ಅವಕಾಶವಿದೆ. ಕನ್ನಡ ನಾಡಿನ ಯಾವುದೇ ಪ್ರಮುಖ ರಾಜ ಮನೆತನಕ್ಕೆ ಸೇರಿರದ ವ್ಯಕ್ತಿಯ ಗುಣ ವಿಶೇಷಗಳನ್ನು ಕುರಿತ ಕಾವ್ಯಸ್ವರೂಪದ ದಾಖಲೆಯ ಲಿಪಿಯೂ ಕನ್ನಡವೇ ಆಗಿದೆ. ಒಬ್ಬನೇ ವ್ಯಕ್ತಿಗೆ ಸಂಬಂಧಿಸಿದಂತೆ ಇರುವ ಎರಡು ಪ್ರತ್ಯೇಕ ವೀರ ಅಥವಾ ಪ್ರಶಸ್ತಿ ಶಾಸನಗಳ ಪೈಕಿ ಒಂದು ಕನ್ನಡ ಭಾಷೆ ಮತ್ತು ಲಿಪಿಯಲ್ಲೂ, ಮತ್ತೊಂದು ಸಂಸ್ಕೃತ ಭಾಷೆ ಮತ್ತು ಕನ್ನಡ ಲಿಪಿಯಲ್ಲೂ ಇವೆ. ಒಬ್ಬನೇ ವೀರನ ಎರಡು ಪ್ರಶಸ್ತಿ ಶಾಸನಗಳು ಒಂದೆಡೆಯೇ ಇರುವುದು ಒಂದು ಅಪರೂಪ ಎಂದೇ ಹೇಳಬೇಕು. ಶಾಸನದಲ್ಲಿ ದಾನ ಅಥವಾ ವೀರನ ಸಾವಿನ ಪ್ರಸ್ತಾಪ ಇಲ್ಲ. ಅಪ್ಪಟ ಗುಣ ವರ್ಣನೆ ಇದೆ.  ಶಾನವು ಸಂಸ್ಕೃತ ಮತ್ತು ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿದೆ.

    ಸಂಸ್ಕೃತ ಶಾಸನದ ಪಾಠ ಇಂತಿದೆ. ಮಾಸಿಕ್ಕಾಪುರಾಧಿಪತಿಯಾದ ಭಾರದ್ವಾಜ ವಂಶದ ಧನಾಗಮನ ಮಗ ಗುಣಮಧುರನು ತ್ಯಾಗವಂತನೆಂದು ಹೆಸರಾದವನು ಎಂಬ ವಿಶೇಷ ಗುಣವನ್ನು ಪ್ರಸ್ತಾಪಿಸುವ ಶಾಸನದ ಭಾಷೆ ಸಂಸ್ಕೃತ ಮತ್ತು ಲಿಪಿ ಕನ್ನಡ. ಶಾಸನದ ಪಕ್ಕದಲ್ಲೇ ಇರುವ ಗುಣಮಧುರನನ್ನೇ ಕುರಿತ ಕನ್ನಡ ಶಾಸನವೂ ಕಾವ್ಯಾತ್ಮಕವಾಗಿದೆ. 

ಬಿಣಿಮಣಿ (ಫಣಿಮಣಿ) ಅನ್ತುಭೋಗಿ ಬಿಣಿ (ಫಣ) ದುಳ್ಮಣಿ ಚಿಲ್ಮನದೋಳ್

ರಣಮುಖದುಳ್ಳ ಕೋಲಂ ನೆರೆಯರ್ಕುಮನಿದ್ದ್ಯ ಗುಣನ್

ಪ್ರಣಯಿ ಜನಕ್ಕೆ ಕಾಮನಸಿತೋದ್ಘಲ ವರ್ಣನವಣ್

ಗುಣಮಧುರಾಂಕ್ಕ ದಿವ್ಯಪುರುಷನ್ ಪುರುಷ ಪ್ರವರನ್

  ಗುಣಮಧುರನು  ಹಣೆ(ಹೆಡೆ)ಯಲ್ಲಿ ರತ್ನವುಳ್ಳ ನಾಗನಂತೆ ಭೋಗಿ(ಸುಖಿ: ಹೆಡೆಯುಳ್ಳುದು). ಹಣೆಯಲ್ಲಿ ಭಾಗುವಿಕೆಯಿಲ್ಲದ ಮನಸ್ಸಿನವನು.(ಬಿಣದುಳ್-ಮಣಿವು-ಇಲ್-ಮನದೋನ್ಅರ್ಥಾತ್ ಶತ್ರುಗಳಿಗೆ ಎಂದಿಗೂ ತಲೆಬಾಗದ ಧೀರನು. ಯುದ್ಧದಲ್ಲಿ ತನ್ನಲ್ಲಿರುವ ಬಾಣಗಳಿಂದ ತಿವಿಯುವವನು. ನಿಂದ್ಯವಲ್ಲದ ಗುಣವುಳ್ಳವನು. ಪ್ರಣಯಿಗಳಿಗೆ ಮನ್ಮಥನು. ನೀಲೋತ್ಫಲದ ಬಣ್ಣವುಳ್ಳವನು. ದಿವ್ಯ ಪುರುಷನು. ಪೌರುಷವುಳ್ಳವರಲ್ಲಿ ಶ್ರೇಷ್ಠನು.

  ಶಾಸನದ ಮೂಲಕ ಕನ್ನಡದಲ್ಲಿ ಆರನೆಯ ಶತಮಾನದ  ಹೊತ್ತಿಗಾಗಲೇ  ಕಾವ್ಯ ಮೌಲ್ಯವುಳ್ಳ ಪದ್ಯರಚನೆ ಪ್ರಾರಂಭವಾಗಿದ್ದರ ಜೊತೆಗೆ ಸಂಸ್ಕೃತ ವರ್ಣ ವೃತ್ತಗಳನ್ನು ಬಳಸುತ್ತಿದ್ದರು ಎಂಬುದು ತಿಳಿದು ಬರುತ್ತದೆ.

 ಸಂಸ್ಕೃತ ಶಾಸನದಲ್ಲಿ ಪರಿಚಯಗೊಂಡ ಗುಣಮಧುರನ ಗುಣಸ್ವಭಾವಗಳನ್ನು ಕನ್ನಡ ವೃತ್ತದಲ್ಲಿ ವಿವರಿಸಲಾಗಿದೆ. ಗುಣಮಧುರ ಯಾವುದೇ ಪ್ರಸಿದ್ಧ ರಾಜಮನೆತನಕ್ಕೆ ಸೇರಿದ ವ್ಯಕ್ತಿಯಲ್ಲ. ಒಂದು ಪಟ್ಟಣದ ವ್ಯಾಪ್ತಿಗೆ ಸೇರಿದ್ದ ಪ್ರದೇಶದ ಅಧಿಪತಿ ಅಷ್ಟೇ. ಇಂತಹ ವ್ಯಕ್ತಿಯ ಪ್ರಶಸ್ತಿಗೆ  ಸಂಸ್ಕೃತ ಮತ್ತು ಕನ್ನಡ ಭಾಷೆಗಳೆರಡರ  ಬಳಕೆ ಆಗಿರುವುದು ಗಮನಿಸ ಬಹುದು. ಇನ್ನೊಂದು ಸಂಗತಿ ಎಂದರೆ ಸಂಸ್ಕೃತ ಭಾಷೆಯಲ್ಲಿ ಕೇವಲ ಪರಿಚಯವಿದೆ. ಗುಣ ವಿಶೇಷಣಗಳು ಕನ್ನಡದಲ್ಲಿವೆ. ವಿಷಯವನ್ನು ಗಮನಿಸಿದಾಗ ಪ್ರಬಲವಾಗುತ್ತಿದ್ದ ಕನ್ನಡ ಮತ್ತು ಸಾಂಪ್ರದಾಯಿಕವಾಗಿ ಮಾತ್ರ ಬಳಕೆಯಾಗುತ್ತಿದ್ದ ಸಂಸ್ಕೃತದ ಸ್ಥಿತಿಯನ್ನು ಗಮನಿಸಬಹುದು. ಸಂಸ್ಕೃತ ಮತ್ತು ಕನ್ನಡ ಎರಡು ಭಾಷೆಗಳನ್ನು ಶಾಸನಗಳಲ್ಲಿ ಬಳಸುವ ಕ್ರಮವು ಕ್ರಿ.. ಐದನೆಯ ಶತಮಾನದ ಕೊನೆಯ ಭಾಗದಲ್ಲಿ ಕಾಣಿಸಿ ಕೊಂಡಿದೆ.

 

  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...