ಭಾನುವಾರ, ಏಪ್ರಿಲ್ 21, 2019

ಗುಬ್ಬಿಮಲ್ಲಣಾರ್ಯವಿರಚಿತ ‘ವೀರಶೈವಾಮೃತ ಪುರಾಣದಲ್ಲಿ’ ಪುರಾತನ ಶರಣರು ಮತ್ತು ನೂತನ ಶರಣರು: ಕೆಲವು ಟಿಪ್ಪಣಿಗಳು ಡಾ.ಸಿ.ನಾಗಭೂಷಣ


ಗುಬ್ಬಿಮಲ್ಲಣಾರ್ಯವಿರಚಿತ ‘ವೀರಶೈವಾಮೃತ ಪುರಾಣದಲ್ಲಿಪುರಾತನ ಶರಣರು ಮತ್ತು ನೂತನ ಶರಣರು: ಕೆಲವು ಟಿಪ್ಪಣಿಗಳು
                                     ಡಾ.ಸಿ.ನಾಗಭೂಷಣ
    ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಗಣನೀಯ ಸ್ಥಾನ ಪಡೆದಿರುವ ಕವಿಗಳಲ್ಲಿ ಗುಬ್ಬಿ ಮಲ್ಲಣಾರ್ಯನು ಒಬ್ಬನು. ಬಸವ ಪುರಾಣದಲ್ಲಿ ನಿಷ್ಣಾತನಾಗಿದ್ದರಿಂದ `ಬಸವ ಪುರಾಣದ ಮಲ್ಲಣಾರ್ಯ' ಎಂಬ ಹೆಸರಿನಿಂದಲೇ ಕರೆಯಲ್ಪಟ್ಟಿದ್ದಾನೆ. ಈತನ ಕಾಲ ಕ್ರಿ.ಶ. 1531. ಪ್ರಕಾಂಡ ಪಂಡಿತನೂ, ಬಹುಭಾಷಾ ಸಂಪನ್ನನೂ ಆಗಿದ್ದನು. ಈತನು 1. ಭಾವಚಿಂತಾರತ್ನ, 2.ವೀರಶೈವಾಮೃತಮಹಾಪುರಾಣ,3. ಪುರಾತನರರಗಳೆ ಕೃತಿಗಳನ್ನು ರಚಿಸಿದುದಾಗಿ ತಿಳಿದುಬರುತ್ತದೆ.
   ಕವಿಯು ತನ್ನ ವಂಶಪಾರಂಪರ್ಯವನ್ನು ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ. ಅಮರಗುಂಡದ ಮಲ್ಲೇಶ್ವರಾಚಾರ್ಯ, ಅವರ ಶಿಷ್ಯ ಶೂಲವೇರಿದ ಮಹತ್ವವುಳ್ಳ ಗುರುಭಕ್ತ, ಅವರ ಮಗ ದೇಶಿಕ ಪಟ್ಟವರ್ಧನ ಸೌಂದರ್ಯ ಮಲ್ಲಿಕಾರ್ಜುನ ಪಂಡಿತ, ಅವರ ಮಗ ನಾಗನಾಥಾರ್ಯ,ಅವರ ಮಗ ಅಹಿಯಂ ಲಿಂಗಕೆ ಛತ್ರವಂ ಮಾಡಿದ ಅಮರಗುಂಡಾರ್ಯ, ಇವರ ವಂಶದಲ್ಲಿ ಗುಬ್ಬಿಯ ಮಲ್ಲಣ ಜನಿಸಿ ಅನುಭವ ಯೋಗಷಟ್ಥ್ಸಲ ಖ್ಯಾತಮಂ ಕೃತಿಯನ್ನು ಗಣಭಾಷ್ಯ ರತ್ನಮಾಲೆಯಂ ಮಾಡಿ ವಾತೂಲಕ್ಕೆ ಟಿಪ್ಪಣಿಯನ್ನು ಎಸಗಿದನು. ಗುಬ್ಬಿಯ ಮಲ್ಲಣ್ಣನ ಮಗ ಗುರುಭಕ್ತ, ಈತನಹೆಂಡತಿ ಸಪ್ಪೆಯಮ್ಮ, ಇವರ ಮಗ ಗುಬ್ಬಿಯ ಮಲ್ಲಣಾರ್ಯ ಎಂದು ವಿದ್ವತ್ ಪರಂಪರೆಯ ವಂಶಾವಳಿಯನ್ನು ಹೇಳಿಕೊಂಡಿದ್ದಾನೆ. ಈತನು ತನ್ನ ಗುರು ಪರಂಪರೆಯನ್ನು ಪ್ರಸ್ತಾಪಿಸಿದ್ದಾನೆ.ಸಿದ್ಧಮಲ್ಲೇಶ ಕವಿಯ ದೀಕ್ಷಾ ಗುರುವಾದರೆ, ಗುಮ್ಮಳಾಪುರದ ಶಾಂತೇಶ ವಿದ್ಯಾಗುರು, ಜೊತೆಗೆ ನಾಗವಲ್ಲಿಯ ಶಿವಪೂಜೆಯಾರ್ಯ, ಸಪ್ಪೆಯ ಲಿಂಗಣಾಚಾರ್ಯ,ಶಿವಾನುಭವಿ ಹಲಗೆಯಾರ್ಯ ಮೊದಲಾದವರು ಈತನ ಕಾವ್ಯ ರಚನೆಗಳಿಗೆ ಗುರು ಸ್ಥಾನದಲ್ಲಿದ್ದುಕೊಂಡು ಮಾರ್ಗದರ್ಶನ ಮಾಡಿದ್ದಾರೆ.
 ವೀರಶೈವ ಸಿದ್ಧಾಂತ ನಿರೂಪಣೆಯನ್ನು ಗುರು ಶೀಲವಂತದೇವರು ಹಲಗೆದೇವರ ಪ್ರಾರ್ಥನೆಯ ಮೇರೆಗೆ ಅವರಿಗೆ ಬೋಧಿಸಿದ್ದರು. ಅದನ್ನು ಹಲಗೆ ದೇವರು ಕೆಂಚವೀರಣ್ಣೊಡೆಯರಿಗೆ ಜ್ಯೋತಿಯಮ್ಮನಾಲಯದಲ್ಲಿ, ಮಹಾವೀರ ಶೀಲಸಂಪನ್ನ ಕಲ್ಲೇಶ್ವರ, ಸೈಂಧವದ ಶಾಂತದೇವರು, ಕಲ್ಯಾಣ ಮಲ್ಲೇಶ್ವರರು ನಂಜಯ್ಯ, ಸಪ್ಪೆಯ ಮಲ್ಲಿಕಾರ್ಜುನ, ಸಮಾಧಿ ಸಿದ್ಧಮ್ಮ, ಸಪ್ಪೆಯಮ್ಮ ಮುಂತಾದವರ ಸಮ್ಮುಖದಲ್ಲಿ ವಿವರಿಸಿದರು. ವೀರಶೈವಧರ್ಮ ತತ್ವಸಿದ್ಧಾಂತಗಳನ್ನು ಒಳಗೊಂಡ ಕೃತಿಯನ್ನು ರಚಿಸುವ ಮಹಾನುಭಾವರು ಯಾರು ಎಂದು ಅಂದಿನ ಧಾರ್ಮಿಕ ಮುಖಂಡರೂ ಗುರುವರ್ಗದವರೂ ಸಮಾಲೋಚಿಸಿ ಹಲಗೆಯಾರ್ಯರು ತಮ್ಮ ಶಿಷ್ಯನಾದ ಮಲ್ಲಣಾರ್ಯನೇ ಸಮರ್ಥ ಎಂದು ನಿಶ್ಚಯಿಸಿ ಆ ಮಹತ್ ಕಾರ್ಯವನ್ನು ಮಲ್ಲಣಾರ್ಯನಿಗೆ ವಹಿಸಿದ ವಿವರವು ಕಾವ್ಯದ ಪದ್ಯದಿಂದಲೇ (ಕಾಂ.1-ಸಂ.1-ಪ.48) ತಿಳಿದು ಬರುತ್ತದೆ.
ಈ ವೀರಾಶೈವಾಮೃತಾಖ್ಯ ಸಂಗ್ರಹವನೀ
ಭೂವಳಯದಲ್ಲಿ ಕೃತಿಯಂಮಾಳ್ಪ ಶಿವಕವಿಯ
ದಾವನೆಂದರಿದು ಹಲಗೆಯ ದೇಶಿಕಂ ಮಲ್ಲಣಾರ್ಯನಂ ಕರೆದು ನುಡಿದಂ
ನಾವು ಪೇಳ್ವೀಬೋಧೆಯಂ ಪದನ ಮಾಡುವೊಡೆ
ಪಾವನ ಚರಿತ್ರ ಕೇಳ್ ನೀನೆ ಯೋಗ್ಯಕಣ  ( ಕಾ.1.ಸಂ.1 ಪ.48)ಎಂದು ವಿರಕ್ತಾಧೀಶ್ವರ ಹಲಗೆದೇವರು ವೀರಶೈವಾಮೃತ ಪುರಾಣ ರಚಿಸಲು ಮಲ್ಲಣಾರ್ಯರಿಗೆ ಪ್ರೇರಣೆ ಯಿತ್ತರು. ಗುಬ್ಬಿಯ ಮಲ್ಲಣಾರ್ಯರು ಇದಕ್ಕೆ ಪದನಂ ಮಾಡಿರುವರು. ಅಂದರೆ ಪದ್ಯದಲ್ಲಿ ಕೃತಿ ವಿರಚನೆ ಮಾಡಿರುವರು. ಈ ಪುರಾಣ ಕಾವ್ಯದಲ್ಲಿ ಹಲಗೆದೇವರು ಕೆಂಚವೀರಣ್ಣೊಡೆಯರಿಗೆ ಹೇಳಿದಂತೆ ಹಲವೆಡೆ ಉಲ್ಲೇಖವಿದೆ. ಹಲಗೆದೇವರು ವೀರಶೈವ ಸಿದ್ಧಾಂತವನ್ನು ಅದರ ಹಿನ್ನೆಲೆ ಮುನ್ನೆಲೆಗಳನ್ನು ವಿವರಿಸಿದ್ದು ಅದನ್ನು ಕರಗತ ಮಾಡಿಕೊಂಡು ಸ್ವಾನುಭವದಿಂದ ಮಲ್ಲಣಾರ್ಯನು ಈ ಬೃಹತ್ ಕಾವ್ಯವನ್ನು ರಚಿಸಿದ್ದಾನೆ. ಮಲ್ಲಣಾರ್ಯನು ತನ್ನ ದೀಕ್ಷಾಗುರು, ಶಿಕ್ಷಾಗುರು, ರಕ್ಷಾಗುರುಗಳ ಅಣತಿಯಂತೆ ಈ ಕೃತಿಯನ್ನು ರಚಿಸಿರುವುದಾಗಿ ಈ ಕೆಳಕಂಡ ಪದ್ಯದಲ್ಲಿ ಹೇಳಿಕೊಂಡಿದ್ದಾನೆ.
ಭೂಲೋಕಪಾವನ ಕಕುದ್ಗಿರಿ ಸುದಾಕ್ಷಿಣ್ಯ
ಕೈಲಾಸವದರ ಮೇಗಣಗವಿಯ ಸಿಂಹಾಸ
ನಾಲಂಕೃತದ ಶಾಂತನಂಜೇಶ್ವರಾಂಘ್ರಿ ಪಂಕಜಭೃಂಗ ಮಲ್ಲಣಾರ್ಯಂ
ಶೀಲ ಷಟ್ಸ್ಥಲ ಹಲಗೆಯಾಚಾರ್ಯನ ಶಿಷ್ಯ
ಮೌಲಿಮಣಿ ಕೆಂಚವೀರಾಹ್ವಯಂಗೊರೆದ ಸುವಿ
ಶಾಲ ವರ ವೀರಶೈವಾಮೃತ ಪುರಾಣಮಂ ಕೂರ್ತು ಪದನಂ ಮಾಡಿದಂ ( ಕಾಂ.1.ಸಂ.1.ಪ.65) ಈ ಪದ್ಯವು ವೀರಶೈವಾಮೃತ ಮಹಾಪುರಾಣದ ಪ್ರತಿ ಸಂಧಿಯ ಕಡೆಯಲ್ಲಿಯೂ ಬರುತ್ತದೆ.
   ಶೀಲಸಂಪನ್ನೆ ಮಹಾಶಿವಶರಣೆ ಶಿವಗಂಗೆಯ ಜ್ಯೋತಿಯಮ್ಮಳು ಮಲ್ಲಣಾರ್ಯನಿಗೆ ಗುರುಗಳ ಕೃಪಾಶೀರ್ವಾದ ಪ್ರಾಪ್ತವಾದಂತೆ  ಕಾವ್ಯಗಳನ್ನು ರಚಿಸಲು ನೆರವಿತ್ತವಳು, ಅನುವಿತ್ತವಳು. ಜ್ಯೋತಿಯಮ್ಮನ ಮನೆಯಲ್ಲಿ ಹಲಗೆದೇವರು ಈ ಪ್ರಬಂಧವನ್ನು ಮುಗಿಸಿದರು ಎಂದು ಕವಿಯು ಹೇಳಿದ್ದಾನೆ. ಮಲ್ಲಣಾರ್ಯನು ತಾನು ದಕ್ಷಿಣ ಕೈಲಾಶವೆನಿಸಿದ ಕಕುದ್ಗಿರಿ(ಶಿವಗಂಗೆ)ಯ ಮೇಗಣ ಗವಿಯ ಸಿಂಹಾಸನಾಲಂಕೃತ ಶಾಂತನಂಜೇಶ್ವರನ ಅಂಘ್ರಿ ಪಂಕಜನೆಂದು ಹೇಳಿಕೊಂಡಿದ್ದಾನೆ. ಈ ಶಾಂತನಂಜೇಶನ ಗುರು ಪರಂಪರೆ ಭವ್ಯವಾಗಿದೆ. ಮತೀಯಶಾಂತೇಶ, ಶಂಭುಗುರುವಲ್ಲಭ, ಮತೀಯ ವೀರೇಶ, ಸಿದ್ಧರಾಮೇಶ, ಶಾಂತನಂಜೇಶ, ಚಿಕ್ಕಶಾಂತೇಶ್ವರ, ಶಾಂತನಂಜೇಶ್ವರ ಮುಂತಾದವರು ಮೇಗಣ ಗವಿಯ ಸಿಂಹಾಸನಾಧಿಪತಿಗಳಾಗಿದ್ದರು. ಈ ಶಾಂತನಂಜೇಶ್ವರರ ಪಾದ ಪಂಕಜ ಭೃಂಗಿಯಾಗಿದ್ದವನು ಮಲ್ಲಣಾರ್ಯ.
  ಈ ಕಾವ್ಯದಲ್ಲಿ ಬಂದಿರುವ  ಕಾವ್ಯಮಯ ವರ್ಣನೆಗಳು ಮತ್ತು ಕವಿ ಕಲ್ಪನೆಗಳು ಗುಬ್ಬಿಯ ಮಲ್ಲಣಾರ್ಯನು ಪ್ರತಿಭಾನ್ವಿತ ಕವಿ ಎಂಬುದನ್ನು ಸಾಬೀತು ಪಡಿಸುತ್ತವೆ. ವೇದಾಂತ, ಸಿದ್ಧಾಂತ,ಧರ್ಮ,ತತ್ವ,ಧಾರ್ಮಿಕ ಆಚರಣೆಯ ವಿಧಿವಿಧಾನ, ಶಾಸ್ತ್ರ,ಮಂತ್ರ,ತಂತ್ರ ಮುಂತಾದವುಗಳಲ್ಲಿ  ಪರಿಣಿತಿಯನ್ನು ಪಡೆದಿದ್ದ ಮಲ್ಲಣಾರ್ಯ ತನ್ನ ಸ್ವಾನುಭವ ಮತ್ತು ಸ್ವವಿವೇಚನೆಯಿಂ ಈ ಕೃತಿಯನ್ನು ರಚಿಸಿದ್ದಾನೆ.
ಕವಿಯು ಕೃತಿಯನ್ನು ಪೂರ್ಣಗೊಳಿಸಿದ ಕಾಲದ ಬಗೆಗೆ ಸ್ಪಷ್ಟವಾಗಿ ತಿಳಿಸಿದ್ದಾನೆ.
  ಏನೆನಲು ಶಾಲಿವಾಹನ ಶಕಂ ಸಾವಿರದ
  ನಾನೂರ ಐವತ್ತು ಎರಡು ವರುಷವದಾದ
  ನೂನತೆಯ ವಿಕೃತಿ ವತ್ಸರದೊಳಾಶ್ವಯುಜಮಾಸದ ಶುದ್ಧಪಂಚಮಿಯೊಳು
  ಶ್ರೀನಿಶಾಕರವಾರ ಜ್ಯೇಷ್ಠಾಸು ನಕ್ಷತ್ರ
  ವೈನಿಹಿತ ಸೌಭಾಗ್ಯಯೋಗವಣಿಜಾ ಕರಣ
  ವೀ ನಿರುದ್ಧಕೆ ವೀರಶೈವಾಮೃತಂ ಪೂರ್ಣಾಮಾಯ್ತು ಶಿವಮಸ್ತು ಸತತಂ ( ಕಾ.8-ಸಂ.22-ಪ.55)  ಈ ಪದ್ಯದ ಪ್ರಕಾರ ವೀರಶೈವಾಮೃತಮಹಾಪುರಾಣವು ಕ್ರಿ.ಶ.1530ರಲ್ಲಿ ಪೂರ್ಣಗೊಡಿದೆ.
   ಗುಬ್ಬಿಯ ಮಲ್ಲಣಾರ್ಯನ ಮೇರುಕೃತಿಯಾದ ವೀರಶೈವಾಮೃತಮಹಾಪುರಾಣವು ವಾರ್ಧಕ ಷಟ್ಪದಿಯಲ್ಲಿ ರಚನೆಗೊಂಡಿದ್ದು, ಎಂಟು ಕಾಂಡಗಳು, ಒಂದುನೂರಾ ಮೂವತ್ತಾರು ಸಂಧಿಗಳು, ಏಳು ಸಾವಿರದ ತೊಂಭತ್ತೊಂಬತ್ತು ಪದ್ಯಗಳು ಎಂಟುನೂರಾ ಹದಿನೇಳು ಸಂಸ್ಕೃತ ಶ್ಲೋಕಗಳನ್ನು ಒಳಗೊಂಡ ಸುದೀರ್ಘ ಕಾವ್ಯವಾಗಿದೆ. ಈ ಬೃಹತ್ ಗ್ರಂಥವನ್ನು ಎನ್.ಶಿವಪ್ಪ ಶಾಸ್ತ್ರಿಗಳು ಮೊದಲಿಗೆ 1907 ರಲ್ಲಿ ಸಂಪಾದಿಸಿ ಪ್ರಕಟಿಸಿದರು. ಈ ಬೃಹತ್ ಸ್ವರೂಪವನ್ನು ಕಂಡು ಇದರ ಸಂಪಾದಕರುಗಳಾದ ಬೆಂಗಳೂರು ಶಿವಪ್ಪಶಾಸ್ತ್ರಿಗಳು ಮತ್ತು ಎಸ್. ವೀರಪ್ಪ ಶಾಸ್ತ್ರಿಗಳು ಇದನ್ನು ‘ವೀರಶೈವಾಮೃತ ಮಹಾಪುರಾಣ’ ಎಂದೇ ಹೆಸರಿಸಿದ್ದಾರೆ. ಆದರೆ ಕವಿಯು ಮಾತ್ರ ಉದ್ದಕ್ಕೂ ತನ್ನ ಗ್ರಂಥವನ್ನು ‘ವೀರಶೈವಾಮೃತ ಪುರಾಣ’ ಎಂದೇ ಕರೆದಿದ್ದಾನೆ. (ಕಾ.08-ಸಂ22-ಪ.86) ಈ ಕೃತಿಯ ಎರಡನೆಯ ಮುದ್ರಣವು ಆರ್.ಸಿ.ಹಿರೇಮಠ ಅವರ ಸಂಪಾದಕತ್ವದಲ್ಲಿ  1999 ರಲ್ಲಿ ಬೆಂಗಳೂರಿನ ಎನ್.ಎಸ್.ಎಸ್. ಕೇಂದ್ರದಿಂದ ಪ್ರಕಟಗೊಂಡಿದೆ. ಈ ಎರಡು ಮುದ್ರಣಗಳಲ್ಲಿ ಕೆಲವು ದೋಷಗಳು, ಸ್ಖಾಲಿತ್ಯಗಳು ಉಳಿದು ಕೊಂಡಿದ್ದನ್ನು ಮನಗಂಡ ಎನ್.ಬಸವಾರಾಧ್ಯರು ಸುದೀರ್ಘಕಾಲ ಶ್ರಮವಹಿಸಿ ಹಲವಾರು ಹಸ್ತಪ್ರತಿಗಳನ್ನು ಬಳಸಿಕೊಂಡು ಪಾಠಾಂತರಗಳನ್ನು ಗುರುತು ಹಾಕಿಕೊಂಡು ಪರಿಷ್ಕಾರಗೊಳಿಸಿ ಪ್ರಕಟನೆಗೆ ಸಿದ್ಧಪಡಿಸಿದ್ದರು. ಈ ಕೃತಿಯನ್ನು ಶಾಸ್ತ್ರೀಯವಾಗಿ ಪ್ರಕಟಿಸ ಬೇಕೆಂಬ ಅವರ ಆಸೆ ಕೈಗೂಡಲಿಲ್ಲ. ಇತ್ತೀಚಿಗೆ ಅವರ ಶಿವೈಕ್ಯರಾದರು.  ಆಸಕ್ತ ವಿದ್ವಾಂಸರು ಅವರ ಆಸೆಯನ್ನು  ನೆರವೇರಿಸ ಬೇಕಾಗಿದೆ.
  ಹದಿನೈದು,ಹದಿನಾರು ಮತ್ತು ಹದಿನೇಳನೆಯ ಶತಮಾನಗಳಲ್ಲಿ ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ, ಗುಬ್ಬಿಯ ಮಲ್ಲಣಾರ್ಯನ  ವೀರಶೈವಾಮೃತ ಮಹಾಪುರಾಣ,  ಶಾಂತಲಿಂಗದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ,  ಉತ್ತರ ದೇಶದ ಬಸವಲಿಂಗನ ಬಸವೇಶ್ವರ ಪುರಾಣದ ಕಥಾಸಾಗರ ಮುಂತಾದ ಕಥಾ ಸಂಕಲನಗಳು ನಿರ್ಮಿತವಾಗಿವೆ. ಇಂತಹ ಸಂಕಲನ ಗ್ರಂಥಗಳಲ್ಲಿ  ವೀರಶೈವಾಮೃತ ಮಹಾಪುರಾಣವು ಗಮನಾರ್ಹ ವಾದುದಾಗಿದೆ. ಆವೇಳೆಗಾಗಲೇ ಪುರಾಣ, ಕಾವ್ಯದ ರೂಪದಲ್ಲಿ ಅಸ್ತಿತ್ವದಲ್ಲಿದ್ದ , ಜನರ ಬಾಯಲ್ಲಿನಲಿದಾಡುತ್ತಿರುವಂತಹ ಕತೆಗಳನ್ನೆಲ್ಲ ತನ್ನದೇ ಆದಭಾಷೆಯಲ್ಲಿ ನಿರೂಪಿಸುತ್ತ ಒಂದೆಡೆ ಕಲೆ ಹಾಕಿರುವುದೇ ಕವಿಯಸಾಧನೆಯಾಗಿದೆ. ಆತ ಓದಿರುವ ಸಂಸ್ಕೃತ-ಕನ್ನಡವಲ್ಲದೆ ಅನ್ಯಭಾಷಾ ಪ್ರಾಚೀನ ಕೃತಿಗಳನ್ನೆಲ್ಲ ಮನದಂದು, ಆದಿಶೈವ, ಶೈವ ಮತ್ತು  ವೀರಶೈವಕ್ಕೆ ಪೂರಕವಾದ ಕತೆಗಳನ್ನೆಲ್ಲ ಪಟ್ಟಿಮಾಡಿಕೊಂಡು ಶರಣರ ಕಥೆಗಳನ್ನು ಅಲ್ಲಲ್ಲಿಯೇ ಹೇಳುತ್ತಾ ಸಾಗುತ್ತಾನೆ.  
    ಈ ಪುರಾಣ ಕಾವ್ಯವು ಏಕವ್ಯಕ್ತಿ ಪ್ರಧಾನವಾದ ಅಥವಾ ಬಹುವ್ಯಕ್ತಿ ಪ್ರಧಾನವಾದ ಪುರಾಣವಾಗಿರದೆ ವೀರಶೈವಧರ್ಮ ಪ್ರಧಾನವಾದ ಕೃತಿಯಾಗಿದೆ. 1. ವೀರಮಾಹೇಶ್ವರ ಸಿದ್ಧಾಂತ 2. ವೀರಮಾಹೇಶ್ವರ ತಂತ್ರ 3. ವೀರಮಹೇಶ್ವರ ಅಚಾರ ಸಂಗ್ರಹ4. ಸೋಮನಾಥ ಭಾಷ್ಯ 5  ವೀರಶೈವ ಸುಧಾರ್ಣವ 6. ಗಣಭಾಷ್ಯರತ್ನಮಾಲೆ 7. ಬಸವೇಶ್ವರ ಪುರಾಣ8. ಗಿರಿಜಾ ಕಲ್ಯಾಣ 9. ಆರಾಧ್ಯಚಾರಿತ್ರ್ಯ10. ನನ್ನಯ್ಯನ ಕಾವ್ಯ 11. ಬಸವ ಚಾರಿತ್ರ್ಯ12. ಸಿಂಗಿರಾಜ ಪುರಾಣ ಇತ್ಯಾದಿಪೂರ್ವದ ಕಾವ್ಯ ಪುರಾಣಗಳಿಂದ ಸಂಗ್ರಹಿಸಿದ್ದಾನೆ.
     ಈ ಕಥಾ ಸಂಗ್ರಹಕ್ಕಾಗಿ ಮಲ್ಲಣಾರ್ಯನು ಸಂಸ್ಕೃತ, ಕನ್ನಡ , ಅರೆಭಾಷೆ, ಆಂಧ್ರಭಾಷೆ, ದ್ರಾವಿಡಭಾಷೆ ಮತ್ತು ಪ್ರಾಕೃತಭಾಷಾ ಸಾಹಿತ್ಯವನ್ನು ಅವಲೋಕಿಸಿದ್ದಾನೆ. ಒಟ್ಟಿನಲ್ಲಿ ನಾಲ್ಕಾರು ಭಾಷೆಯ ನೂರಾರು ಮುಖ್ಯಾತಿಮುಖ್ಯ ಮತ್ತು ಸಾಧಾರಣ ಗ್ರಂಥಗಳೆಲ್ಲವನ್ನು ಆಳವಾದ ಅಧ್ಯಯನದಿಂದ ನೋಡಿ ಶಿವಭಕ್ತಿ-ಶಿವಪವಾಡ-ಶರಣಪವಾಡದ ಕಥೆಗಳನ್ನು ಸಂಗ್ರಹಿಸಿ, ವೀರಶೈವಾಚಾರದ ಪ್ರಭಾವ ಬೀರುವ ಯತ್ನ ಇಲ್ಲಿದೆ.  ಸ್ಥೂಲವಾದ ಮಾತುಗಳಲ್ಲಿ ಸಂಕ್ಷಿಪ್ತಗೊಳಿಸಿ ಹೇಳುವುದಾದರೆ ಈ ಕೃತಿಯ ವಸ್ತು ವ್ಯಾಪಕ ಗ್ರಂಥಗಳಿಂದ ಶೋಧಿಸಲ್ಪಟ್ಟದ್ದೂ ಸಂಗ್ರಹಿಸಲ್ಪಟ್ಟದ್ದೂ ಅಗಿರುತ್ತದೆ. ವಿವಿಧ ಭಾಷಾ ಸಾಹಿತ್ಯವನ್ನೆಲ್ಲ ಆಳವಾಗಿ ಅಧ್ಯಯನ ಮಾಡಿ ಆಲ್ಲಿ ಉತ್ತಮವಾಗಿರುವ ಶಿವಮಹಿಮೆ, ಶಿವಶರಣರ, ಭಕ್ತರ, ಶಿವಭಕ್ತಿ, ಶಿವನು ಮಾಡಿದಲೀಲೆಗಳು, ಶರಣರು ಮಾಡಿದ ಪವಾಡಗಳು ಹೀಗೆ ಸಮೃದ್ಧ ಆಕರಗಳಿಂದ ಪಡೆದ ವಸ್ತುವಾಗಿದೆ.
 ವೀರಶೈವಾಮೃತ ಪುರಾಣವು ಒಂದು ವಿಶಿಷ್ಟ ತೆರನಾದ ಪುರಾಣ. ಬಸವ ಪುರಾಣ, ಚೆನ್ನಬಸವ ಪುರಾಣ, ಸಿಂಗಿರಾಜ ಪುರಾಣಗಳಂತೆ ಅಲ್ಲಿ ಒಬ್ಬ ಮಹಿಮಾನ್ವಿತ ಶರಣನ ಚರಿತ್ರೆ ಕಥಾವಸ್ತುವಾಗಿಲ್ಲ. ಶಿವತತ್ವ ಚಿಂತಾಮಣಿಯಂತೆ ಧರ್ಮ ತತ್ವಶಾಸ್ತ್ರ ನಿರೂಪಣೆಯೆ ವೀರಶೈವಾಮೃತ ಪುರಾಣದ ಮುಖ್ಯ ವಿಷಯ. ತತ್ವ ಪ್ರಧಾನವಾಗಿರುವ ವೀರಶೈವಾಮೃತ ಪುರಾಣದಲ್ಲಿ
1. ಪ್ರವೃತ್ತಿ ತತ್ವ ವಿವರಣೆ
2. ಶಿವನ ಪಂಚವಿಂಶತಿ ಲೇಲೆಗಳು
3. ನಿವೃತ್ತಿ ತತ್ವ ನಿರೂಪಣೆ
4. ಬಸವಾದಿ ಶರಣರ ಚರಿತ್ರ ನಿರೂಪಣೆ
5. ಷಟಸ್ಥಲ ನಿರೂಪಣೆ
ಹೀಗೆ ಅದರಲ್ಲಿರುವ ವಿಷಯವನ್ನು ಶಾಸ್ತ್ರೀಯವಾಗಿ ವ್ಯವಸ್ಥಿತವಾಗಿ ವಿವೇಚಿಸಿದ್ದಾರೆ.
   ಧರ್ಮ,ತತ್ವಶಾಸ್ತ್ರ ನಿರೂಪಣೆಯೆ ಈ ಪುರಾಣಕಾವ್ಯದ ಮುಖ್ಯ ವಿಷಯವಾಗಿದೆ. ವೀರಶೈವಾಮೃತ ಮಹಾಪುರಾಣವು ವೀರಶೈವ ತತ್ವಪ್ರಧಾನವಾದ ಕೃತಿಯಾಗಿದೆ. ಮಲ್ಲಣಾರ್ಯನು ತನಗೆ ಬೇಕಾದ ವಸ್ತುವನ್ನು ಸಂಸ್ಕೃತದ ವಿಭಿನ್ನ ಮೂಲಗಳಿಂದ ಆಯ್ಕೆ ಮಾಡಿಕೊಂಡಿದ್ದಾನೆ. ಸ್ಕ್ಕಾಂದಪುರಾಣ, ‘ಕೂರ್ಮಪುರಾಣ’ ‘ಆದಿತ್ಯಪುರಾಣ’ ‘ಬ್ರಹ್ಮಾಂಡ ಪುರಾಣ, ‘ಲಿಂಗ ಪುರಾಣ, ವರಾಹ ಪುರಾಣ’ ಮುಂತಾದ ಗ್ರಂಥಗಳಿಂದ ಶಿವನ  ವಿಭಿನ್ನ ಲೀಲಾಪ್ರಸಂಗಗಳನ್ನು ಸಂಗ್ರಹಿಸಿಕೊಂಡಿದ್ದಾನೆ. ವೇದಾಂತ, ಯೋಗ ಷಟ್ ಸ್ಥಲ ಸಿದ್ಧಾಂತ ಮುಂತಾದ ವಿಚಾರಗಳನ್ನು ಮೇಲಿನ ಪುರಾಣಗಳಿಂದಲ್ಲದೆ. ‘ಸ್ವಚ್ಛಂದ ಲಲಿತ ಭೈರವಿ’  ಕ್ರಿಯಾಸಾರ’, ವೀರತಂತ್ರ, ವಾತೂಲತಂತ್ರ.’ ‘ವಾತೂಲಾಗಮ.’ ಉತ್ತಮ ವಾತೂಲ’. ತತ್ವ ದೀಪಿಕೆ’, ವೀರಾಗಮ’, ಜಾಬಲೋಪನಿಷತ್ತು.; ಮಾನವೀಯ ಸಂಹಿತೆ’, ಶಿವಾಗಮ, ಶಿವರಹಸ್ಯ, ಕ್ರಿಯಾಸಾರ, ಮಾರ್ಕಂಡೇಯ ಸ್ತೋತ್ರ, ಶತರತ್ನ ಯೋಗಶಾಸ್ತ್ರ, ಸ್ವಾತ್ಮಯೋಗ ಪ್ರದೀಪಿಕೆ, ಲೈಂಗ್ಯ ಪುರಾಣ  ಇವೇ ಮೊದಲಾದ  ಅನೇಕ ಗ್ರಂಥಗಳಿಂದ ವಿಷಯಗಳನ್ನು ಸಂಗ್ರಹಿಸಿ ವೀರಶೈವ ಸಿದ್ಧಾಂತವನ್ನು ಸಮರ್ಥವಾಗಿ ನಿರೂಪಿಸಲಾಗಿದೆ. ನಡುನಡುವೆ ವಿಷಯ ಪುಷ್ಠಿಗಾಗಿ ಮೂಲಗ್ರಂಥದ ಶ್ಲೋಕಗಳನ್ನು ಅಲ್ಲಲ್ಲಿ ಉದ್ಧರಿಸಿದ್ದಾನೆ. ಒಂದೇ ಕಥೆಗೆ ಅಥವಾ ಒಂದೇ ಸಂಗತಿಗೆ ಸಂಬಂಧಿಸಿದಂತೆ, ಅಂತರಗಳು ಇದ್ದಾಗ ಕೆಲವೊಮ್ಮೆ ವಿಭಿನ್ನ ಮೂಲಗಳನ್ನು ಬಳಸಿಕೊಂಡು ಅವನ್ನೆಲ್ಲಾ ಸಂಗ್ರಹಿಸಿಕೊಟ್ಟಿರುವುದು ಇಲ್ಲಿಯ ವಿಶೇಷ. ಆದರೆ ಇದು  ಕೆಲವೆಡೆ ನಿರೂಪಣೆಯ ಏಕಮುಖತೆಗೆ ಭಂಗವನ್ನೊಡ್ಡಿದೆ. ಒಟ್ಟಿನಲ್ಲಿ ಮಲ್ಲಣಾರ್ಯನು ಅವಲೋಕಿಸಿರುವ ಗ್ರಂಥ ಸಮುದಾಯ ತುಂಬಾ ದೊಡ್ಡದು. ಇದರಿಂದಾಗಿ ಈತನ ಗ್ರಂಥಕ್ಕೆ ವೀರಶೈವ ವಿಶ್ವಕೋಶದ ಸ್ವರೂಪ ಬಂದಿದೆ. ಇದು ಮಹಾಪುರಾಣವಾಗಿದೆ.
ಏಳನೆಯ ಕಾಂಡದಲ್ಲಿ  ಉಚಿತವರಿತು ಸಂಸ್ಕೃತ ಶ್ಲೋಕಗಳನ್ನು ಬಳಸಲಾಗಿದೆ. ಇವುಗಳ ಜೊತೆಗೆ ಪಾಲ್ಕುರಿಕೆ ಸೋಮನಾಥ, ರಾಘವಾಂಕರು, ಮಾಯಿದೇವ, ಅಜಗಣ್ಣ ಸಮಾಧಿ ಹೊಂದಿದ ರೀತಿಯನ್ನು ತಿಳಿಸಿದ್ದು ಕೊನೆಯಲ್ಲಿ ಅಂತ್ಯ ಕ್ರಿಯೆಯ ಆಚರಣೆಯ ವಿಷಯವು ವಿವರವಾಗಿ ಬಂದಿದೆ.
 ಎಂಟನೆಯ ಕಾಂಡದಲ್ಲಿ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣವನ್ನು, ಪಂಡಿತಾರಾಧ್ಯ ಚರಿತೆಯನ್ನು ಅನುಸರಿಸಿ ಬಸವಣ್ಣನ ಚರಿತ್ರೆ, ಆತನ ಪವಾಡಗಳು, ಇನ್ನಿತರ ಶರಣರ ಚರಿತೆಯನ್ನು ಹೇಳುವನು.ಅನಂತರ ಬಸವ ಪವಾಡ ಕಥೆಗಳು, 63 ಶೈವ ಪುರಾತನರ ಕಥೆಗಳನ್ನು ಸಂಕ್ಷಿಪ್ತವಾಗಿ ಹೇಳಿದ್ದಾನೆ.ಈ ವಿವರಗಳನ್ನು ಸಂಕ್ಷಿಪ್ತವಾಗಿ ಮಲ್ಲಣಾರ್ಯನು,
` ಬಸವೇಶನ ಪುರಾಣ ಪ್ರಸಂಗವತ್ಯುತ್ತಮದ ಬಸವ ಚಾರಿತ್ರದ ಪವಾಡವರುವತ್ತು ಮೂವರು ಸಂಖ್ಯಾತರ ಕಥಾವಳಿಗಳು, ಆರಾಧ್ಯ ಚಾರಿತ್ರದಾ ತತ್ತತ್ಪ್ರಕರಣ , ಪಂಚಕದ ಮಹಿಮಾಧಿಕ ನೃಪೋತ್ತಮರ, ಲಕ್ಕಣ್ಣ ದಣ್ಣಾಯಕಂ ಪೇಳ್ದ  ಚಿತ್ತ ಶುದ್ಧದ ನೂತನರ ಬಳಿಕ್ಕೀ ವರ್ತಮಾನ ಗಣಕಥೆಯನ್ನು ಹೇಳಿರುವುದಾಗಿ 8 ನೇ ಕಾಂಡದ 22ನೇ ಸಂಧಿಯ 35 ನೇ ಪದ್ಯದಲ್ಲಿ ತಿಳಿಸಿದ್ದಾನೆ.                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                               ಪಂಡಿತಾರಾಧ್ಯ ಚರಿತೆಯಲ್ಲಿ,  ಪಂಡಿತಾರಾಧ್ಯರು ಬಸವಣ್ಣನ ದರುಶನಕ್ಕಾಗಿ ಕೂಡಲಸಂಗಮಕ್ಕೆ ಹೊರಟಾಗ ಬಸವಣ್ಣನು ಸಂಗಮನಾಥನಲ್ಲಿ ಐಕ್ಯನಾದ ವಿಷಯ ತಿಳಿದು ಪರಿಪರಿಯಾಗಿ ತಪಿಸುವುದು, ಬಸವಣ್ಣನ ನಾಮ ಸ್ಮರಣೆಯಿಂದ ಪಂಡಿತಾರಾಧ್ಯರಿಗೆ ಕನ್ನಡ ಭಾಷೆ ಪ್ರಾಪ್ತವಾಗುವುದು ಇತ್ಯಾದಿ ವಿವರಗಳನ್ನು ಕೊಡಮಾಡಿದ್ದಾನೆ.ಈ ವಿವರಗಳು ಬಸವಣ್ಣನವರ ಬದುಕಿನ ಜೀವಿತದ ಪರಮಾವಧಿಯ ಕಾಲವನ್ನು ತಿಳಿಯಲು ಸಾಧ್ಯವಾಗಿದೆ.  ಈ ಕಾಂಡದಲ್ಲಿ ನೂತನ ಮತ್ತು ಪುರಾತನ ಶರಣರ ಸಂಕ್ಷಿಪ್ತ ವಿವರಗಳನ್ನು  ನೀಡಿದ್ದಾನೆ. ವೀರಶೈವ ಪುರಾಣಗಳಲ್ಲಿ ವಾದಪ್ರಕರಣ ಒಂದು ವಿಶಿಷ್ಟ ಲಕ್ಷಣವಾಗಿ ಪರಿಣಮಿಸಿದೆ. ಈ ಕೃತಿಯಲ್ಲಿ ವಾದ ಪ್ರಕರಣ, ಮಹಿಮಾ ಪ್ರಕರಣಗಳು ವಿವರವಾಗಿ ಬಂದಿವೆ. ಜೊತೆಗೆ ತಂತಮ್ಮ ಸಮಕಾಲೀನ ಭಕ್ತರ ಚರಿತ್ರೆಯನ್ನು ಸಂಗ್ರಹಿಸಿ ಒಮ್ಮೊಮ್ಮೆ ಹೆಸರಿಸಿ, ಮತ್ತೊಮ್ಮೆ ಹಲವರ ವೈಶಿಷ್ಟ್ಯಗಳನ್ನು ಒದಗಿಸಿ ಸಾವಿರಾರು ಶರಣರ ಚರಿತ್ರೆಗಳನ್ನು ಕೊಡ ಮಾಡಿದ್ದಾನೆ. ವೀರಶೈವ ಶರಣರ ಚರಿತ್ರೆಯ ದೃಷ್ಟಿಯಿಂದ ಈ ಭಾಗ ಮಹತ್ತರವಾಗಿದೆ. ಈ ಕಾಂಡವು ಪೌರಾಣಿಕ, ಧಾರ್ಮಿಕ ಹಾಗೂ ಚಾರಿತ್ರಿಕ ದೃಷ್ಟಿಯಿಂದ ಮಹತ್ತರತೆಯನ್ನು ಪಡೆದು ಕೊಂಡಿದೆ. ಎಂಟನೆಯ ಕಾಂಡದಲ್ಲಿಯ ಬಸವಣ್ಣನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ನಿರೂಪಿಸುವಲ್ಲಿ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣವನ್ನು ಅನುಸರಿಸಿದ್ದಾನೆ. ಕೊನೆಯ ಕಾಂಡದಲ್ಲಿ ಮಲ್ಲಣಾರ್ಯನು ‘ಬಸವ ಪುರಾಣ ಮತ್ತು ಆರಾಧ್ಯ ಚಾರಿತ್ರ ‘ಎಂಬ ಗ್ರಂಥಗಳ ಸಾರವನ್ನು ಮೊದಲು ಏಳು ಸಂಧಿಗಳಲ್ಲಿ ಸಂಗ್ರಹಿಸಿ ಹೇಳಿದ್ದಾನೆ. ಬಸವ ಪುರಾಣದಲ್ಲಿ ಉಲ್ಲೇಖಿಸದ ಹಲವರ ಪುರಾತನರ ವಿವರಗಳು ಇಲ್ಲಿ ಕಂಡು ಬರುತ್ತವೆ. ಈ ಮೂಲಕ ಈ ಗ್ರಂಥಕ್ಕೆ ಬಸವಣ್ಣ ಮತ್ತು ಪಂಡಿತಾರಾಧ್ಯರ ಜೀವನ ಚರಿತ್ರೆಯೂ ಕೂಡಿಕೊಂಡಂತಾಗಿದೆ. ಇದಾದ ನಂತರ ಎರಡು ಸಂಧಿಗಳಲ್ಲಿ ಲಕ್ಕಣ ದಂಡೇಶನ ‘ಶಿವತತ್ವ ಚಿಂತಾಮಣಿ’ಯನ್ನು ಅನುಸರಿಸಿ ನೂತನ ಶರಣರ ಕಥೆಗಳನ್ನೂ ತನ್ನ ಕಾಲದ ಇನ್ನಿತರ ಶರಣರ ಸಂಗತಿಗಳನ್ನೂ ಬಹು ಸಂಕ್ಷಿಪ್ತವಾಗಿ ತಿಳಿಸಿದ್ದಾನೆ. ಒಂಬತ್ತನೆಯ ಸಂಧಿಯಿಂದ ಮುಂದಕ್ಕೆ ಒಟ್ಟು ಹನ್ನೆರಡು ಸಂಧಿಗಳನ್ನು ಷಟ್‍ಸ್ಥಲ ಸಿದ್ಧಾಂತವನ್ನು ಬಹು ವಿಸ್ತಾರವಾಗಿ ವಿವೇಚಿಸಿದ್ದಾನೆ. ಇಪ್ಪತ್ತೊಂದನೆಯ ಸಂಧಿಯಲ್ಲಿ ಹದಿನೆಂಟು ಯುಗಗಳಲ್ಲಿ ಗಣಗಳಲ್ಲಿ ಮೇರುವೇರಿದ ಕಥೆಯಿದೆ. ಗ್ರಂಥದ  ಎಂಟನೆಯ ಕಾಂಡದ 136 ನೆಯ ಕೊನೆಯ ಸಂಧಿಯ 56 ಪದ್ಯಗಳಲ್ಲಿ   ಒಟ್ಟು ಗ್ರಂಥದಲ್ಲಿ ಏನೇನು ನಿರೂಪಿತವಾಗಿದೆಯೆಂಬುದನ್ನೂ  ಸಾರಾಂಶ  ರೂಪದಲ್ಲಿ ಕ್ರೋಢೀಕರಿಸಿರುವುದು ತುಂಬಾ ಉಪಯುಕ್ತವಾಗಿದೆ.
ಕೂಡಿಕೊಂಡಲ್ಲಿ ಪೂರ್ವಾಚಾರಿ ಬಸವಣ್ಣ
ನಾಡಂಬರ ಪ್ರಮಥ ಗುರುನಾಮಮಂ ತಾಳಿ
ನಾಡೆ ಸುಖವಿರುತ ತಾನೇ ಪೀಠ ಪರಶಿವಂ ಲಿಂಗವಾಗುತ್ತಲವರ
ಕೂಡೆ ನಿರವಿಸಲಾ ಗಣಂಗಳೀಶ್ವರ ಪೂಜೆ
ಮಾಡುತೋಲೈಸಲಾನಂದದಿಂದಿರ್ಪನೈ
ಕೋಡಿಯಿಲ್ಲದೆ ಬಸವ ಪರಶಿವಾದ್ವಯದೇಕಗಣ ಮಹಿಮೆಯಂ ಕೇಳಿದ (ಕಾ.8-ಸಂ.17-ಪ.61)
ಈ ಷಟ್ಸ್ಥಲ ಬ್ರಹ್ಮಿಗಳ ಮಾಡಿಯವರ ಸಂ
ತೋಷದರ್ಚನೆಯ ಕೈಗೊಂಡು ಗುರುವಾಗಿ ಮ
ತ್ತಾ  ಷಡುಸ್ಥಲ ಜ್ಞಾನಿಗಳು ಮುಖ್ಯ ಶರಣರ್ಗೆ ಬಸವನೇ ಭೃತ್ಯನಾಗಿ
 ಪೋಷಿಸುತ್ತವರ್ಗಳಂ ಸದ್ಬಕ್ತಿಯಿಂ ನುಡಿದ
 ಭಾಷೆಯಂ ಪರಿವರ್ತಿಸುತ್ತೀಗಳಖಿಳರ್ಗೆ
 ಯಾ ಷಟ್ಸ್ಥಲದ ನಿರ್ಣಯವನಿಟ್ಟವಂ ಬಸವನಲ್ಲದಿನ್ನಾರು ಮಗನೇ  (ಕಾ.8-ಸಂ18- 4) ಎಂಬುದಾಗಿ  ಷಟ್ಸ್ಥಲ ಜ್ಞಾನಿಗಳಾದ ಶರಣರಿಗೆ ಬಸವಣ್ಣನೇ ಭಕ್ತನಾಗಿ ಅವರನ್ನು ಪೋಷಿಸಿದನು. ನುಡಿದಂತೆ ನಡೆದನು. ಷಟ್ಸ್ಥಲ ನಿರ್ಣಯವನ್ನು ಮಾಡಿದವರು ಬಸವಣ್ಣನಲ್ಲದೆ ಮತ್ತಾರು ಅಲ್ಲ ಎಂದು ಹೇಳುತ್ತಾನೆ.
ಬಸವಣ್ಣನಿಗೆ ಸಂಬಂಧಿಸಿದ ಪವಾಡ ಕಥೆಗಳು, ಅರವತ್ತ ಮೂರು ಮಂದಿ ಶೈವ ಪುರಾತನರ ಕಥೆಗಳನ್ನು ನಿರೂಪಿಸಲಾಗಿದೆ. ಆರಾಧ್ಯ ಚರಿತ್ರೆಯ ಐದು ಪ್ರಕರಣಗಳೂ,ನೂತನ ಶರಣರ ಹಾಗೂ ವರ್ತಮಾನಕಾಲದ ಗಣರ ಕಥೆಗಳನ್ನು ಹೇಳಲಾಗಿದೆ. ಇದರ ಜೊತೆಗೆ ಅಂಗಸ್ಥಲ-ಲಿಂಗಸ್ಥಲ ವಿವರಗಳು, ವಿಷ್ಣು ಬ್ರಹ್ಮರ ಉತ್ಪತ್ತಿ, ಹದಿನೆಂಟು ಯುಗಗಳಲ್ಲಿ ಶಿವಗಣಂಗಳು ಮೇರುವೇರಿದ ಕಥೆಗಳು ನಿರೂಪಿತಗೊಂಡಿದ್ದು ಕೊನೆಯಲ್ಲಿ ಫಲಶ್ರುತಿಯಿಂ ಪುರಾಣವು ಸಮಾಪ್ತಗೊಳ್ಳುತ್ತದೆ.
     ಶಿವಭಕ್ತಿಯ ಪಾರಮ್ಯವನ್ನು ಪ್ರಕಟಿಸುವುದು, ಶಿವನ ಭಕ್ತವತ್ಸಲತೆಯನ್ನು ತೀರಿಸಿಕೊಡುವುದು ಇಲ್ಲಿ ಕವಿಯ  ಉದ್ದೇಶ. ಇದು ಒಟ್ಟು ಗ್ರಂಥದ ಉದ್ದೇಶವೂ ಹೌದು. ಅದರಲ್ಲಿ ಕವಿಯು ಸಫಲನಾಗಿದ್ದಾನೆ. ಅದಕ್ಕೆಂದೇ ಅವನು ಸುಕುಮಾರನ ಪಾಪಕೃತ್ಯಗಳನ್ನು ದೊಡ್ಡದು ಮಾಡಿ ವರ್ಣಿಸಿದ್ದಾನೆ. ಅಂತಹ ಪಾಪಿಷ್ಟನಿಗೂ ಗಣಪದವಿಯೇ ಎಂದು ನಾವು ಅಚ್ಚರಿಗೊಂಡರೆ, ಅದಕ್ಕೆ ಉತ್ತರ ಶಿವಭಕ್ತಿಯ ಹಿರಿಮೆಯಲ್ಲಿ ಅಡಗಿದೆ.
  ಮಲ್ಲಣಾರ್ಯನು ಸಂಸ್ಕೃತ ಮತ್ತು ಕನ್ನಡ ಉಭಯ ಭಾಷೆಗಳೆರಡರಲ್ಲಿಯೂ ಪಾಂಡಿತ್ಯವನ್ನು ಪಡೆದಿದ್ದನೆಂಬ ಅಂಶ ಈ ಕೃತಿಯಿಂದ ತಿಳಿದು ಬರುತ್ತದೆ.  ವೀರಶೈವಾಮೃತ ಮಹಾಪುರಾಣದಲ್ಲಿ ಹೇಳಿರುವ ವಿಷಯ,ಅವುಗಳಿಗೆ ನೀಡುವ ಆಧಾರ ಶಾಸ್ತ್ರಗ್ರಂಥಗಳು ಇತ್ಯಾದಿಗಳಿಂದ ಪ್ರಕಾಂಡ ಪಂಡಿತನಾಗಿದ್ದನು ಎಂಬುದು ಸಾಬೀತಾಗುತ್ತದೆ. ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿಯನ್ನು ಅನುಸರಿಸಿ ಈ ಕೃತಿಯನ್ನು ರಚಿಸಿದ್ದಾನೆ. ಲಕ್ಕಣ್ಣ ದಂಡೇಶನನ್ನು ಕೃತಿಯಲ್ಲಿ ಹಲವೆಡೆ ಸ್ಮರಿಸಿದ್ದಾನೆ. ಲಕ್ಕಣ್ಣ ದಂಡೇಶನು ಹೇಳದ ಕೆಲವು ನೂತನ ಶರಣರ ವಿಷಯ ಮತ್ತು ಹದಿನೆಂಟು ಯುಗಗಳ ರಾಜರ ಚರಿತ್ರೆಯನ್ನು ಹೇಳಿದ್ದಾನೆ. ವೀರಶೈವಾಮೃತ ಪುರಾಣವು ವೀರಶೈವದ ವಿಶ್ವಕೋಶವಲ್ಲದೇ ವೇದಾಂತ,ಶೈವ ಸಿದ್ಧಾಂತಗಳ ಕೋಶವೂ ಆಗಿದೆ. ಶೈವ-ವೀರಶೈವಕ್ಕೆ ಸಂಬಂಧಪಟ್ಟ ಸಹಸ್ರಾರು ಕಥೆಗಳೂ ಅನೇಕ ಚರಿತ್ರೆಗಳು ಇದರಲ್ಲಿ ವ್ಯಕ್ತವಾಗಿವೆ.
ಒಟ್ಟಿನಲ್ಲಿ  ಇಲ್ಲಿ ಬಂದಿರುವ ಕಥೆಗಳನ್ನು
1. ಕನ್ನಡ ಪುರಾಣ.ಚಾರಿತ್ರ್ಯ ಮೂಲಕ ಕಥೆಗಳು
2. ಕನ್ನಡ ಶಿವ ಕವಿಗಳ ಕಥೆಗಳು
3. ಬಸವ ಪೂರ್ವಯುಗದ ಶರಣರ ಕಥೆಗಳು
4. ಬಸವಯುಗದ ಶರಣರ ಕಥೆಗಳು
5. ಬಸವಯುಗದ ತರುವಾಯದ ಶರಣರ ಕಥೆಗಳು
      ಎಂಬುದಾಗಿ ವರ್ಗೀಕರಿಸಬಹುದು. ಇಲ್ಲಿ ಬಂದಿರುವ ಕತೆಗಳು ಯಾವು ಯಾವ ಮೂಲಕದಿಂದ ಪಡೆದುಕೊಂಡಿದ್ದಾನೆ. ಎಂಬುದನ್ನು ಮಾತ್ರ ಕಂಡುಕೊಳ್ಳ ಬಹುದಾಗಿದೆ. ಈ ಎಲ್ಲಾ ಕಥೆಗಳ ಕಥೆಗಳನ್ನು ಕವಿಯು ತಾನೇ ಹೇಳಿಕೊಂಡಿರುವಂತೆ ಪೂರ್ವದ ವೀರಶೈವ ಕವಿಗಳ ಕೃತಿಗಳಿಂದ ಆಯ್ದಕೊಂಡಿದ್ದಾನೆ. ವಿಶೇಷವಾಗಿ ಹರಿಹರ ರಾಘವಾಂಕ, ಸಿದ್ದನಂಜೇಶ, ಲಕ್ಕಣ ದಂಡೇಶ, ಶೂನ್ಯ ಸಂಪಾದನಾಕಾರರು, ಸಿಂಗಿರಾಜ, ಮೊದಲಾದ ಪೂರ್ವದ ಹಿರಿಯಕವಿಗಳ ಕಾವ್ಯಗಳಲ್ಲಿಯ ಸಂಗತಿಗಳನ್ನು  ವಾರ್ಧಕ ಷಟ್ಪದಿಗೆ ಅಳವಡಿಸಿ ಆಸಕ್ತ ಜನತೆಗೆ ಮಹದುಪಕಾರ ಮಾಡಿದ್ದಾನೆ. ಶಿವಶರಣರ ಚರಿತ್ರೆಯನ್ನು ಷಟ್ಪದಿಯಲ್ಲಿ ಬರೆಯುವುದರ ಮೂಲಕ ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾನೆ. ಹೀಗಾಗಿ ಉಳಿದ ಕನ್ನಡದ ವೀರಶೈವ ಪ್ರಾಚೀನ ಸಂಕಲನ ಕೃತಿಗಳೊಂದಿಗೆ  ಹೋಲಿಸಿ ಅದರ ವೈಶಿಷ್ಯ್ಟವನ್ನು ಗುರುತಿಸಬಹುದಾಗಿದೆ. ಗುಬ್ಬಿಯ ಮಲ್ಲಣಾರ್ಯನು  ಈ ಕೃತಿಯಲ್ಲಿ  ಪುರಾತನ ಮತ್ತು ನೂತನ ಶರಣರಿಗೆ ಸಂಬಂಧಿಸಿದ ಶರಣರ ಕಥೆಗಳು ಶಿವನ ಮಹಿಮೆ, ಶಿವನಭಕ್ತರ ಅಗ್ಗಳಿಕೆ ಅವರು ಪಡೆದುಕೊಂಡ ಮುಕ್ತಿ, ಪಡೆದ ಶಕ್ತಿಗಳ ಪ್ರದರ್ಶನ ಪ್ರತೀಕವಾಗಿವೆ.
  ಕ್ರಿ.ಶ. 5ನೇ ಶತಮಾನದಿಂದ 9ನೇ ಶತಮಾಣದವರೆಗೆ ತಮಿಳುನಾಡಿನಲ್ಲಿ ಬಾಳಿ ಒಮ್ಮುಖವಾದ ತಮ್ಮ ನಡೆನುಡಿಗಳಿಂದ ಬಿಳಿಯಾದ ಚಾರಿತ್ರ್ಯದಿಂದ ಜನಮನವನ್ನು ಪುರಾತನ ಶರಣರು ಆಕರ್ಷಿಸಿದರು. ಇವರಲ್ಲಿ ನಾನಾ ಮತ ಕುಲಗೋತ್ರದವರಿದ್ದರುಎಂಬುದಾಗಿ ತಿಳಿದು ಬರುತ್ತದೆ. ಅರವತ್ತು ಮೂವರು ಪುರಾತನರಲ್ಲಿ ಶೈವರು -4, ಬ್ರಾಹ್ಮಣರು 13, ದೊರೆಗಳು 6, ಮಾಂಡಲೀಕರು 5, ಬಣಜಿಗರು 5, ಒಕ್ಕಲಿಗರು-13, ಕುರುಬರು-2, ಕುಂಬಾರರು-1, ಮಂತ್ರಿ-1, ಮೀನುಗಾರ 1, ಬೇಡ-1, ನಾಡರ್ -1, ಜೇಡರ್ -1, ಗಾಣಿಗ-1, ಅಗಸ-1, ಪುಲಯ-1, ಜಾತಿಗೊತ್ತಿಲ್ಲದೆ ಉಳಿದವರು 6 ಮಂದಿ ಎಂಬುದಾಗಿ  ತಿಳಿದು ಬರುತ್ತದೆ.  ಈ ಅರವತ್ತು ಮೂವರ ಹೆಸರು ಮತ್ತು ವಾಸಸ್ಥಳ ಇತ್ಯಾದಿ ವಿವರಗಳಲ್ಲಿ ಪೆರಿಯ ಪುರಾಣ ಮತ್ತು ಇತರ ಕೃತಿಗಳಲ್ಲಿ  ಕೆಲವೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಶಿರಿಯಾಳನು 63 ಪುರಾತನರಲ್ಲಿ ಒಬ್ಬನಾಗಿದ್ದಾನೆ. ಶರಣೆ ನಿಂಬೆಕ್ಕ ಅವನ ಸಮಕಾಲೀನಳಾಗಿದ್ದಾಳೆ. ಬಸವಣ್ಣನು ತನ್ನ ವಚನಗಳಲ್ಲಿ ನೆನೆಯುವ ನಂಬಿಯೂ 63 ಪುರಾತನರಲ್ಲಿ ಒಬ್ಬನಾಗಿದ್ದಾನೆ. ಶಿವನಿಂದ ಸೇವೆ ಮಾಡಿಸಿಕೊಂಡಿದ್ದ ಈ ನಂಬಿಯಣ್ಣ ಶಿವಭಕ್ತರಿಗೆ ವಂದಿಸದ ಕೆರಹುಗಾಲಿನಲ್ಲಿಯೇ ತಿರವಾಲೂರು ಮಂದಿರವನ್ನು ಪ್ರವೇಶಿಸಿದಾಗ, ಮೆರೆಮಿಂಡ ದೇವನು ಅವನನ್ನು ಅವನ ಬಲವನ್ನೂ ಎದುರಿಸುತ್ತಾನೆ. ಈ ಮೆರೆಮಿಂಡದೇವನು ಕಲ್ಯಾಣದ ಶರಣರಲ್ಲಿ ಒಬ್ಬನಾಗಿದ್ದಾನೆ.      ಈ ರೀತಿಯ ಚಾರಿತ್ರ್ಯಕ ವಿವೇಚನೆಗಳಿಗೆ ಅಹಾರ ವೊದಗಿಸುವ ನಿದರ್ಶನಗಳನ್ನು  ಇಲ್ಲಿ ಶರಣರ ಚರಿತ್ರೆಯ ಭಾಗದ ಕಥೆಗಳಲ್ಲಿ ಕಾಣಬಹುದಾಗಿದೆ.    ಈ ಕಥೆಗಳು ಬಸವಪೂರ್ವಯುಗ ಶಿವಶರಣರಿಗೆ ಸಂಬಂಧಿಸಿದವುಗಳಾಗಿದ್ದು ಕೆಲವೊಂದು ಬಸವಾದಿ ಪ್ರಮಥರ ಸಂಪರ್ಕದಲ್ಲಿದ್ದ ಹಿರಿಯ ಶರಣರಾಗಿದ್ದರೆಂಬುದನ್ನು ಕಥೆಗಳು ಸೂಚಿಸುತ್ತವೆ.
  ಸೌಂದರನಂಬಿಯಣ್ಣ ಚೇರಮರಾಯ ಇಬ್ಬರೂ ಪರಮ  ಸ್ನೇಹಿತರು ಒಂದು ದಿನ ಇದ್ದಕ್ಕಿದ್ದಂತೆ ಸೌಂದರನಂಬಿ  ಕೈಲಾಸಕ್ಕೆ ಹೋದನು. ತಮಗೆ ಹೇಳದೆ   ಕೈಲಾಸಕ್ಕೆ ಹೋದನೆಂದು ಚೇರಮರಾಯನು ಎಂಬತ್ತು ಸಹಸ್ರ ಭಸಿತಮಯ ದೇಹದ ರಾವುತರೊಡನೆ ಆಕಾಶ ಮಾರ್ಗದಿಂದ ಬಂದು ಕೈಲಾಸ ಪಟ್ಟಣವನ್ನು ತುಂಬಿದರು.
 ಇಳೆಹಾಳ ಬೊಮ್ಮಯ್ಯನೆಂಬ ಶರಣನು ಹೊಲಕ್ಕೆ ಬೀಜ ಬಿತ್ತಲು ಹೊರಟಿದ್ದನು. ಆಗ ಮಹೇಶ್ವರರು ಬಂದು ಬೇಡಲು ಬೀಜವನ್ನು ಕೊಟ್ಟುಬಿಟ್ಟನು. ಭೂಮಿಯ ಮಳಲನ್ನು ಸಕ್ಕರೆಯನ್ನಾಗಿ ಮಾಡಿ ಅವರಿಗೆ ಉಣಬಡಿಸಿದರು. ಕೊನೆಗೆ ಬೀಜ ಬಿತ್ತದೆ,  ಬೀಜ ಬಿತ್ತಿ ಬೆಳೆವವರಂತೆ ಅಧಿಕ ಬೆಳೆಯನ್ನು ಬೆಳೆದರು.  ದೇವರಾಯನೆಂಬ ರಾಜನಿಗೆ ಶಿವನು  ಹದಿನಾರು ವರ್ಷ ಅಯುಃ ಪ್ರಮಾಣವುಳ್ಳ ಮಗನನ್ನು ಕರುಣಿಸಿದ್ದನು. ಆತನೇ ಮಳೆಯರಾಜ ಮಳೆಯ ರಾಜನು ಭಕ್ತಿಯಿಂದ  ಶಿವನನ್ನು ಭಜಿಸಿ ಶತಾಯುಷಿಯಾದರು. ಆತನು ಆನೆ ಕುದುರೆ ಕಾಲಾಳು ಸಮೇತ ಒಂಬತ್ತು ಲಕ್ಷ ದೇಶ ಜನದೊಡನೆ  ಕೈಲಾಸಕ್ಕೆ ಹೋದನು. ಅದೇರೀತಿ  ಚೊಕ್ಕ ನಾಯನಾರರು,ಮಾನಕಂಜರ, ರುದ್ರಪಶುಪತಿ,,ನಕ್ಕನಾಯ್ನಾರ,ಕರಿಕಾಲ ಚೋಳ, ಮೆರೆಮಿಂಡಯ್ಯ ಕುಂಬಾರ ಗುಂಡಯ್ಯ, ಕಲಿಯಾರು,ನಾಟ್ಯ ನಮಿತ್ತಂಡಿ,ಸಿರಿಯಾಳ, ನಂಬಿಯಣ್ಣ, ಇತ್ಯಾದಿ ಸುಮಾರು 51 ಮಂದಿಗೆ ಸಂಬಂಧಿಸಿದ ತಮಿಳು ಪುರಾತನರು ಕಥೆಗಳು  ವೀರಶೈವಾಮೃತ ಮಹಾಪುರಾಣದಲ್ಲಿವೆ. ಇವುಗಳಲ್ಲಿ ನಂಬಿಯಣ್ಣ ಶಿರಿಯಾಳ, ವಾಗೀಶಯ್ಯ ಇವರಿಗೆ ಸಂಬಂಧಪಟ್ಟ ಕಥೆಗಳು ಪುನರಾವರ್ತನೆಯಾಗಿವೆ. ಒಂದೇ ಪ್ರಸಂಗವು ಪುನರಾವರ್ತನೆಯಾಗಿರುವುದುಂಟು.
      ಈ ಎಲ್ಲಾ ಪುರಾತನರ ಕಥೆಗಳನ್ನು ಗುಬ್ಬಿಮಲ್ಲಣಾರ್ಯನು ಮೂಲ ಪೆರಿಯ ಪುರಾಣದಿಂದಲೂ, ಹರಿಹರನ ರಗಳೆಗಳಿಂದಲೂ ಇತರೆ ವೀರಶೈವ ಪುರಾಣ ಕೃತಿಗಳಿಂದಲೂ ತಿಳಿದುಕೊಂಡು ಅತ್ಯಂತ ಸುಲಲಿತ, ಅಂದಿಗೆ ಪ್ರಚಲಿತ ಆಗಿರುವಂಥ ಷಟ್ಪದಿ ಪ್ರಕಾರದಲ್ಲಿ ಕಥೆಗಳನ್ನಾಗಿ ನಿರೂಪಿಸಿದ್ದಾನೆ.
  ಈ ಕಾವ್ಯಪುರಾಣದಲ್ಲಿ ಬಸವ ಪೂರ್ವಯುಗದ ಶರಣರನ್ನು ಕುರಿತ ಕಥೆಗಳ ಬಗೆಗೂ ಪ್ರಸ್ತಾಪಿಸ ಬೇಕಾಗುತ್ತದೆ.      ಹನ್ನೆರಡನೇ ಶತಮಾನದ ಪೂರ್ವದಲ್ಲಿಯೇ ಶೈವ - ವೀರಶೈವ ಶರಣರ ಪೂಜೆ, ಕಾಯಕ, ದಾಸೋಹ, ಮತ್ತು ಶಿವಭಕ್ತಿಯಡಿಯಲ್ಲಿ ಎಲ್ಲರೂ ಒಂದೆ ಎಂಬ ಸಮತಾ ತತ್ವಕ್ಕೆ ಬದ್ಧರಾಗಿ ಬದುಕುತ್ತಿದ್ದರೆಂದು ತಿಳಿದು ಬರುತ್ತದೆ. ಶಿವಭಕ್ತರು - ಅವರ ಕುಲ-ಛಲ ನೋಡದೆ ಒಬ್ಬರ ಮನೆಗೊಬ್ಬರು ಹೋಗಿ  ಪೂಜೆ  ಮಾಡಿಕೊಳ್ಳುವುದು, ಪ್ರಸಾದಕೊಳ್ಳುವುದು ಮತ್ತು ಅನುಭಾವ ಅರ್ಪಣಗಳನ್ನು ಮಾಡುತ್ತಿದ್ದರೆಂಬುದನ್ನು-ಕೆಂಬಾವಿ ಭೋಗಣ್ಣ, , ದೇವರದಾಸಯ್ಯ, ತೆಲುಗು ಜೊಮ್ಮಯ್ಯರಂಥ ಬಸವಪೂರ್ವ ಶಿವಶರಣರ ಇತಿವೃತ್ತಗಳಿಂದ ತಿಳಿದುಬರುತ್ತದೆ. ಶರಣರೊಂದೆಡೆ ಸೇರುವಲ್ಲಿಯೇ ಅನುಭವ ಮಂಟಪ ಏರ್ಪಡುತ್ತಿದ್ದಂತೆ ಭಾವಿಸಬಹುದಾಗಿದೆ. ಆದರೆ ಇಂಥ ಅನುಭಾವ, ಅರ್ಪಣ , ಕಾಯಕ, ದಾಸೋಹ ಮೌಲ್ಯಗಳು ಸಾಂಘಿಕ ಸಾಮೂಹಿಕವಾಗದೆ ವೈಯಕ್ತಿಕ ನೆಲೆಯಲ್ಲಿಯೇ ಆಚರಿಸಲ್ಪಡುತ್ತಿದ್ದಂತೆ ತೋರುತ್ತದೆ. ದೇವರದಾಸಿಮಾರ್ಯರ ಸಮಕಾಲೀನರಾಗಿದ್ದ ಶಿವಶರಣರಲ್ಲಿ ಶಂಕರದಾಸಿಮಯ್ಯಾ, ಕೊಂಡುಗುಳಿ ಕೇಶಿರಾಜ, ವೀರಶಂಕರದೇವ, ಶಿವದಾಸಿಮಯ್ಯ, ಕೆಂಬಾವಿ ಭೋಗಣ್ಣ, ಸಿರಿಯಾಳ, ಸಿಂಧು ಬಲ್ಲಾರ, ಡೋಹರ ಕಕ್ಕಯ ಮಾರಯ್ಯ, ಮಾದಾರ ಚನ್ನಯ್ಯ , ಮಲ್ಲರಸ ಮುಂತಾದವರು ಮುಖ್ಯರು.  ಕೇಶಿರಾಜ ದಣ್ಣಾಯಕರು ಪೆರ್ಮಾಡಿ ರಾಯನ ಐಶ್ವರ್ಯವನ್ನು ಧಿಕ್ಕರಿಸಿ ಶಿವರಣ ಪ್ರಸಂಗದೊಡನೆ ಸುಖದಿಂದಿದ್ದರು. ಒಂದು ದಿನ ನದಿಯಲ್ಲಿ ದಣ್ಣಾಯಕರ ಲಿಂಗವು ಕಳಚಿ ಬೀಳಲು ಎಂಟು ಸ್ತೋತ್ರವನ್ನು ಹೇಳಿ ಲಿಂಗವನ್ನು ಕರೆಸ್ಥಲಕ್ಕೆ ಬರಿಸಿಕೊಂಡರು ಕೇಶಿರಾಜ ದಣ್ಣಾಯಕರು ಇಂತಹ ಮಹಿಮಾಶಾಲಿಗಳು ಎಂದು ಇವರ ಬಗೆಗೆ ಪ್ರಸ್ತಾಪಿಸಿದ್ದಾನೆ.      ಇವರೆಲ್ಲ ಬಸವ ಪೂರ್ವಯುಗದ ಶರಣರು, ಬಸವಣ್ಣನವರ ಹಿರಿಯ ಸಮಕಾಲೀನರಾಗಿರಬಹುದಾದ ಢಕ್ಕೆಯಮಾರಯ್ಯ, ಡೋಹರಕಕ್ಕಯ್ಯ, ಮಾದಾರ ಚೆನ್ನಯ್ಯರಂಥ ಶಿವಶರಣರು ಈ ಗುಂಪಿನಲ್ಲಿರುವುದನ್ನು ಕಾಣಬಹುದಾಗಿದೆ.
       ಕೆಲವು ವ್ಯಕ್ತಿಗಳು ತಮಗೆ ಗೊತ್ತಿಲ್ಲದೆಯೇ ಶಿವನನ್ನು ಆರಾಧಿಸಿ ಕೈಲಾಸ ಸೇರಿದ  ವಿವರಗಳು ಈ ಕೃತಿಯಲ್ಲಿ ಕಂಡು ಬರುತ್ತವೆ. ನಿದರ್ಶನಕ್ಕೆ, ಶಿವರಾತ್ರಿಯ ದಿವಸದಂದು  ಸಂಕಣ್ಣನೆಂಬವನನ್ನು  ಹುಲಿಯು ಬೆನ್ನಟ್ಟಿ ಬಂದಿತು. ಆತನು ತನ್ನ ಪ್ರಾಣ ಉಳಿಸಿಕೊಳ್ಳಲು ಬಿಲ್ವ ವೃಕ್ಷವನ್ನೇರಿದನು. ವೃಕ್ಷದಡಿಯಲ್ಲಿ ಶಿವಲಿಂಗ ವಿದ್ದಿತು. ದಿನ ಶಿವರಾತ್ರಿಯ ಮಹಾದಿನವಾಗಿದ್ದಿತು. ಆತನ ತಿದಿಯೊಳಗಿನ ನೀರು ಆಕಸ್ಮಾತ್ತಾಗಿ ಲಿಂಗದ ಮೇಲೆ ಬಿದ್ದಿತು. ಅದು ಅಭಿಷೇಕವಾಯಿತು. ತನ್ನ ನೋಟಕ್ಕೆ ಅಡೆತಡೆಯನ್ನುಂಟುಮಾಡಿದ ಬಿಲ್ವದ ಟೊಂಗಿಯನ್ನು ಮುರಿಯಲು ಅದು ಕೆಳಗೆ ಲಿಂಗದ ಮೇಲೆ ಬಿದ್ದಿತು. ಭಯದಿಂದ ನಿದರೆ ಬಾರದೆ ಹಾಗೇ ಕುಳಿತಿರಲು ಅದು ಜಾಗರಣೆಯಾಯಿತು. ಹೀಗೆ ಮಾಡಿದ ಕ್ರಿಯೆಗಳಲ್ಲಿ ಶಿವರಾತ್ರಿ ವ್ರತವೆಂದು ಭಾವಿಸಿ ಶಿವನು ಸಂಕಣ್ಣ ನನ್ನು  ಕೈಲಾಸಕ್ಕೆ ಕರೆದೊಯ್ದನು. ಕಲಿಕಂಬನೆಂಬ ಶರಣನು ಶಿವಭಕ್ತರನ್ನು ನಗಿಸುವ ಕಾರ್ಯಕದಲ್ಲಿದ್ದನು. ಪರಮೇಶ್ವರನು ಆತನ ಪರೀಕ್ಷೆಗೆಂದು ಪಾರ್ವತಿಯೊಡನೆ ವೃದ್ಧ ವೇಷದಿಂದ ಬಂದನು. ಕಲಿಕಂಬನು ಎಷ್ಟು ಪ್ರಯತ್ನ ಮಾಡಿದರೂ ವೃದ್ಧನು ನಗಲಿಲ್ಲ. ಆಗ ಕಲಿಕಂಬರು ನೀವು ಎತ್ತನ್ನು ಏರಿರಿ, ನಾವು ಈಯಮ್ಮೆಯನ್ನೇರುವೆವೆಂದು ನುಡಿಯಲು ಶಿವನು ಗಹಗಹಿಸಿ ನಕ್ಕನು.
  ಬಿಜ್ಜಳನು ಕಂಬಿಕಾರ ಹೊನ್ನಯ್ಯನನ್ನು ಕೊಂಡೆಯರ ಮಾತುಕೇಳಿ  ತೊನ್ನು ರೋಗಿಯೆಂದು ಕರೆದನು. ಕೂಡಲೇ ಆತನ ಮೈಯಲ್ಲ ತೊನ್ನಾಯಿತು. ತೊನ್ನು ರೋಗವನ್ನು ಕಳೆದವರಿಗೆ ಪಟ್ಟ ಕಟ್ಟುವವೆಂದು ಸಾರಲು ಹೊನ್ನಯ್ಯನು ಮೇಲೆ ಕುಳಿತನು. ಬಿಜ್ಜಳನನ್ನು ಕೆಲಗೆ ಕುಳ್ಳಿರಿಸಿದನು ಹೊನ್ನಯ್ಯ ಮೇಲಿನ ಗಾಳಿ ಬಿಜ್ಜಳನ ಮೃ ಸೋಕಲು ರಾಜನು ಶುದ್ದ ದೇಹಿಯಾದನು.
  ಶಿವಭದ್ರಯ್ಯನೆಂಬವನು ಅಲಗಿನಿಂದ ಶಿವ ಪೂಜೆಯನ್ನು ಕೈಕೊಂಡಿದ್ದನು. ಶಿವನು ಅದನ್ನು ಮೆಚ್ಚೆ ಕೊಂಡಿದ್ದನು. ಮತ್ತೊಬ್ಬ ಬ್ರಾಹ್ಮಣನು ಭಕ್ತಿಯಿಂದ ಪೂಜಿಸುತ್ತಿದ್ದರು. ಶಿವನು ಅವನಿಗೊಲಿದಿರಲಿಲ್ಲ ಹೀಗೇಕೆ ಎಂದು ಗಿರಿಜೆ ಕೇಳಿದರು.  ಮರುದಿನ ದೇವಾಲಯ ಬೀಳುವಂತಾಗಲು ವಿಪ್ರನು ಓಡಿ ಹೋದನು. ಶಿವಭದ್ರಯ್ಯನು ತನ್ನ ಅಲಗನ್ನು ಮಸ್ತಕ ಪ್ರದೇಶದಲ್ಲಿಟ್ಟು ಬೀಳುವ ಕಲ್ಲಿಗೆ ಒತ್ತಿ ಹಿಡಿದನು. ತನ್ನ ಪ್ರಾಣವನ್ನು ಪಣಕ್ಕಿಟ್ಟು ದೇವಾಲಯವನ್ನುಳಿಸಿದ ಶಿವಭದ್ರಯ್ಯನನ್ನು ಗಿರಿಜೆ ಕೊಂಡಾಡಿದಳು. ಈ ತೆರೆನಾದ ಅನಾಮಿಕ ಗುಪ್ತಭಕ್ತರ  ಬಗೆಗೂ ಮಾಹಿತಿಯನ್ನು ಕೊಡ ಮಾಡಿದ್ದಾನೆ.
    ಇವರ ಇಡಿಯಾದ ಬಿಡಿಯಾದ ಚರಿತೆ ಸಂಗತಿಗಳು ವೀರಶೈವ ಕೃತಿಗಳಲ್ಲಿ, ಸಾಹಿತ್ಯದಲ್ಲಿ ಸಿಗುತ್ತವೆ. ಇವರು ತತ್ವನಿಷ್ಠುರಾಗಿದ್ದು, ಅನ್ಯಮತದ ಪ್ರಭಾವದ ಮಧ್ಯ ಕುಸಿದು ಹೋಗಲಿದ್ದ ವೀರಶೈವ ತತ್ವಗಳನ್ನು ಎಂತಹದೇ ಪರಿಸ್ಥಿತಿಯಲ್ಲಿ ಪಾಲಿಸುತ್ತ ಅದರ ಜೀವಂತಿಕೆಯನ್ನು ರಕ್ಷಿಸಿದರೆಂದು ತಿಳಿದು ಬರುತ್ತದೆ. ಇಲ್ಲಿ ಸೂಚಿತವಾಗಿರುವ ಬಸವ ಪೂರ್ವಯುಗೀನ ಶರಣನೇಕರ ಜೀವನದ ಪ್ರಮುಖ-ಘಟನೆ-ಪ್ರಸಂಗಗಳು  ಅವರನ್ನು ಕುರಿತ ಅಧ್ಯಯನಕ್ಕೆ ಆಕರಗಳಾಗಿವೆ.
      ಇನ್ನು ಬಸವಾದಿ ಶರಣ ಕತೆಗಳು ಈ ಕೃತಿಯಲ್ಲಿ ಹೇರಳವಾಗಿ ಬಂದಿವೆ. ಬಸವಣ್ಣನವರಿಗೆ ಸಂಬಂಧಿಸಿದಂತೆ ಪವಾಡ ಕಥೆಗಳು ಈ ಕೃತಿಯಲ್ಲಿವೆ. ಇಲ್ಲಿಯೂ ಒಬ್ಬ ವ್ಯಕ್ತಿಗೆಸಂಬಂಧಿಸಿದ ಒಂದೇ ಪ್ರಸಂಗ/ಕಥೆ ಪುನರುಕ್ತಿಯಾದ ಉದಾಹರಣೆಗಳಿವೆ. ಕೆಲವು ಸಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಬೇರೆ ಬೇರೆ ಕಥೆಗಳೂ ಈ ಕೃತಿಯಲ್ಲಿ ಬಂದಿವೆ. ಈ ಕಥೆಗಳಲ್ಲಿ ಸಾಮಾನ್ಯ ಕಥನ ದೃಷ್ಟಿ ಇರುವುದಾದರೂ ಕೆಲವು ಚಾರಿತ್ರಿಕ ಸಂಗತಿಗಳೂ ಬಸವಾದಿ ಶರಣರ ಕುರಿತು ಸಿಗುತ್ತವೆ. ಶರಣರ ಊರು, ಕಾಲದೇಶ, ಸಂಬಂಧಿಸಿದ /ಸಂಪರ್ಕಕ್ಕೆ ಬಂದ ವ್ಯಕ್ತಿ ಇತ್ಯಾದಿ ವಿವರಗಳು ಸಿಗುತ್ತವೆ. ಇಲ್ಲಿ ದೊರೆಯ ಬಹುದಾದ ಚಾರಿತ್ರ್ಯಕ ಸಂಗತಿಗಳನ್ನು ಹಾಗೂ ಇತರ ವೀರಶೈವ ಕೃತಿಗಳಲ್ಲಿ ದೊರೆಯುವ ಸಂಗತಿಗಳನ್ನೆಲ್ಲ ಒಟ್ಟಾಗಿ ಕಲೆ ಹಾಕಿಕೊಂಡು ಸಂಶೋಧಿಸುವ ಅಧ್ಯಯನವೊಂದರ ಅಗತ್ಯ ಇಂದಿಗೂ ಇದೆ. ಅದೂ ಕೂಡ ಒಬ್ಬ ವ್ಯಕ್ತಿಯ ಪರಿಶ್ರಮಕ್ಕೆ, ಮೀರಿ ನಿಲ್ಲುವ, ಒಂದು ಪ್ರಬಂಧದದ ವ್ಯಾಪ್ತಿಗೆ ನಿಲುಕದ ವಿಷಯವಾದ್ದರಿಂದ ಇದರಲ್ಲಿ ಬಂದಿರುವ ಬಸವಾದಿ ಶರಣರ ಕಥೆಗಳು ಯಾವವು ಎಂಬುದನ್ನು ಮಾತ್ರ  ಇಲ್ಲಿ ಗಮನಿಸಲಾಗಿದೆ.
1. ಬಸವಣ್ಣ
2. ಬಹುರೂಪಿ ಚೌಡಯ್ಯ
3. ಹರಳಯ್ಯ + ಮಧುವಯ್ಯ
4. ಬಿಬ್ಬಿ ಬಾಚಯ್ಯ
5. ಮರಳು ಶಂಕರದೇವ,
6. ಗಾಣದ ಕನ್ನಪ್ಪಯ್ಯ
7. ವೀರಶಂಕರದಾಸ
8. ಢಕ್ಕೆಯ ಮಾರಯ್ಯ
9. ಧವಳೇಶ ನಾಮಯ್ಯ
10. ಕರುಳಕೇತಯ್ಯ
11. ಕಕ್ಕಯ್ಯ -(ಕಂಕರಿ)
12. ಸಗರದ ಬೊಮ್ಮಯ್ಯ
13. ಸಿದ್ಧರಾಮೇಶ್ವರ
14. ಬಳ್ಳೇಶ ಮಲ್ಲಯ
15. ಗೊಲ್ಲಾಳಯ್ಯ
16. ಘಟ್ಟಿವಾಳಯ್ಯ
17. ಪುರಾಣದ ಮಾಯಿ ಭಟ್ಟ
18. ಬಂಕಿದೇವ
19. ಕನ್ನದಬ್ರಹ್ಮಯ್ಯ
20.ರೇವಣ ಸಿದ್ದೇಶ್ವರ
21. ಸಂನ್ಯಾಸಿ ಮಾಚಯ್ಯ
22. ಮಿಂಡ ಸಂಗಯ್ಯ
23. ಪಡಿಹಾರಿ ಬಸವ
24. ಶೂಲಾಯಧಯ್ಯ
25. ಬಡಿಗೇರಿ ಬ್ರಹ್ಮಯ್ಯ
26. ನಾಗಾಯಿ
27. ಮಹಾದೇವಿ
28. ಮುಕ್ತಾಯಕ್ಕ
29. ದುಗ್ಗಳೆ
30. ಅಜಗಣ್ಣ
31. ಧೂಳೇಶ್ವರ
32. ಸತ್ಯಕ್ಕ
33. ನೀಲಾಂಬಿಕೆ
34. ಸೋಮವ್ವೆ
35. ಏಕಾಂತರಾಮಯ್ಯ
36. ಅಮುಗಿದೇವಯ್ಯ
37. ಆದಯ್ಯ
38. ನುಲಿಯಚಂದಯ್ಯ
39. ಸೊಡ್ಡಳ ಬಾಚರಸ
40. ಮಡಿವಾಳ ಮಾಚಯ್ಯ
41. ಶಂಕರ ದಾಸಯ್ಯ
42. ಮೇದರ ಕೇತಯ್ಯ
43.ಮುಸುಡೆ ಚೌಡಯ್ಯ
44. ಅಯ್ದಕ್ಕಿ ಮಾರಯ್ಯ
45. ಒಕ್ಕಲಿಗ ಮುದ್ದಯ್ಯ
46. ವೀರಸಂಗವ್ವೆ
47. ಏಲೇಶ್ವರದ ಕೇಶಯ್ಯ
48. ಇಳಿಗಾಲ ಬೊಮ್ಮಯ್ಯ
49. ಹೆಂಡದ ಮಾರಯ್ಯ
50. ಶಿವಲೆಂಕ ಮಂಚಣ್ಣ
51. ಅಗ್ಗಣಿಯ ಹೊನ್ನಯ್ಯ
52. ಚಾಮಲದೇವಿ
53. ಗುಪ್ತ ಮಂಚಣ್ಣ
54. ಗೊಗ್ಗವ್ವೆ
55. ಸುರಗಿ ಚೌಡಯ್ಯ
56. ಹಡಪದ ಅಪ್ಪಣ್ಣ
57. ಹಡಪದ ರಾಚಯ್ಯ
58. ಅಲ್ಲಮ ಸಿಂಧನಕೇರಿ
59. ಸಕಳೇಶ ಮಾದರಸ
60. ನಿಜಲಿಂಗ ಚಿಕ್ಕಯ್ಯ
61. ಕಿನ್ನರಯ್ಯ
62. ಹಾವಿನಾಳ ಕಲ್ಲಯ್ಯ
63. ಕದಿರೆ ರೆಮಯ್ಯ
64. ಬಾಲ ಸಂಗಯ್ಯ
65. ಜಗದೇವ
66. ಕೋಲ ಶಾಂತಯ್ಯ
67.ಹೇರೂರ ನಾಗಯ್ಯ
68. ಮೊರಟದ ಬಂಕಯ್ಯ
69. ಉರಗ ರಾಯಣ್ಣ
70. ಬಡಿಹಾರಿ ಬೊಮ್ಮಯ್ಯ
71. ಬೊಂತಾದೇವಿ
72. ಮೈದುನ ರಾಮಯ್ಯ
73. ಗೋಣಿ ಮಾರಯ್ಯ
74. ಕಮಲವ್ವೆ
75. ಅಮಾತ್ಯ ಮಲ್ಲಯ್ಯ
76. ಉರಿಲಿಂಗ ಪೆದ್ದಿ
77. ಸೊಡ್ಡಳ ಬಾಚರಸ
78. ಶಿವನಾಗಮಯ್ಯ
79. ಶ್ವಪಚಯ್ಯ
80. ಮೂರುಜಾವುದ ದೇವರು
81. ತಂಗಟೂರ ಮಾರಯ್ಯ
ಈ ಕಥೆ ಪ್ರಸಂಗಗಳಲ್ಲಿ ಒಬ್ಬ ಶರಣನ ಕಥೆಯಲ್ಲಿ ಇನ್ನೊಬ್ಬ ಶರಣನನ್ನು ಕುರಿತ ಸಂಬಂಧ ಮತ್ತು ಪಾತ್ರವೇನೆಂಬುದರ ಬಗ್ಗೆ ಕೆಲವು ಸಂಗತಿಗಳ ಸುಳುಹುಗಳು ಇಣುಕಿ ಹಾಕುತ್ತವೆ.   ಅನಾಮಿಕ ಶರಣರಾದ ಮೊಲೆಯಲ್ಲಿ ಲಿಂಗವನ್ನು ಕಂಡು ಲಿಂಗಸ್ವರೂಪಿಯಾದ ನಂಬೆಣ್ಣ, ಮಳಲಲಿಂಗವ ಪೂಜಿಸಿ ತಂದೆ-ತಾಯಿ ಮತ್ತು ತಾನು ಕಾಯುವ ಗೋವುಗಳು ಸಹಿತ ಕೈಲಾಸಕ್ಕೆ ಹೋದ ಚಂಡೇಶನೆಂಬ ಭಕ್ತನ ಕಥೆ, ಲಿಂಗವೆಂದು  ಭಾವಿಸಿ ಪೂಜಿಸಿದ ಬಳ್ಳವನ್ನೇ ಲಿಂಗವಾಗಿಸಿ ಪರವಾದಿಗಳನ್ನು ಗೆದ್ದ ಬಳ್ಳೇಶ ಮಲ್ಲಯ್ಯ, ಆಡಿನ ಹಿಕ್ಕಿಯನ್ನೇ ಪೂಜಿಸಿ ಅದರಲ್ಲಿ ಲಿಂಗವನ್ನು ಪರಶಿವನನ್ನು ಕಂಡ ಕುರುಬ ಗೊಲ್ಲಾಳಯ್ಯ, ಜಿನ ಬಿಂಬವನ್ನು ಬೇನೆ ಬಂದ ಕಣ್ಣಿನ ದೃಷ್ಟಿ ಮಾತ್ರದಿಂದ ಸೀಳಿ ಅದರಲ್ಲಿ ಶಿವನನ್ನು ಕಂಡ ಪುಲಿಗೇರಿಯ ಸೋಮ, ಹೆಂಡತಿಯ ಜಾರತನ ಕಂಡು ವೈರಾಗ್ಯ ತಾಳಿ ಶಿವಜ್ಞಾನ ಸಂಪನ್ನನಾಗಿ ಪರ್ವತದ ಗುಂಡುಗಲ್ಲನ್ನೇ ಲಿಂಗವನ್ನಾಗಿ ಮಾಡಿಕೊಂಡು ಬಸವಾದಿ ಶರಣರಿಗೆ ನಮಿಸಿ ಲಿಂಗೈಕ್ಯನಾಗುವ ಶರಣ  ಇತ್ಯಾದಿ ವಿವರಗಳನ್ನು ಪ್ರಸ್ತಾಪಿಸಿದ್ದಾನೆ.
    ಒಟ್ಟಿನಲ್ಲಿ ಬಸವ ಯುಗದ ಸುಮಾರು 80 ಶರಣರ ಕುರಿತು ವಿವರಗಳು ಬಂದಿವೆ. ಅವುಗಳು ಚಾರಿತ್ರ್ಯಕವಾಗಿರುವಂಥ ಹಲವಾರು ಮಹತ್ವದ ಸಂಗತಿಗಳನ್ನು ಒಡಲಲ್ಲಿ ಹುದುಗಿಸಿಕೊಂಡಿವೆ. ಈ ಶರಣರ ಕಥೆಗಳು ಯಾವ ಯಾವ ಕನ್ನಡ ಪುರಾಣ, ಕೃತಿಗಳಲ್ಲಿ ಬಂದಿವೆ ಎಂಬುದರ ಬಗೆಗೆ ವ್ಯಾಪಕವಾದ ಅಧ್ಯಯನವನ್ನು ಮಾಡ ಬಹುದಾಗಿದೆ.  ಮಲ್ಲಣಾರ್ಯನು ಬಸವ ಯುಗದ ನಂತರದ ಅನೇಕ ಕನ್ನಡ ತೆಲುಗು ಶಿವಕವಿಗಳಾದ ಹರಿಹರ, ಪಾಲ್ಕುರಿಕೆ ಸೋಮನಾಥ, ರಾಘವಾಂಕ, ಚಾಮರಸ, ಭೀಮಕವಿ ಈ ಮುಂತಾದ ಕವಿಗಳನ್ನು ಶರಣ ಸಮರ್ಥರೆಂದೇ ಭಾವಿಸಿ. ಅವರ ಸುತ್ತಲೂ ಬೆಳೆದು ಬಂದಿರುವ ಪವಾಡದ ಕಥೆಗಳು, ಅಥವಾ ಅವರು ಕಾವ್ಯ ಸಾಹಿತ್ಯದ ಮುಖಾಂತರ ಪ್ರತಿಪಾದಿಸಿದ ಶಿವನಿಷ್ಠೆಯ ಕುರಿತು ಕಥೆಗಳ ಬಗೆಗೂ ಪ್ರಸ್ತಾಪಿಸಿದ್ದಾನೆ. ಬಸವಾದಿ ಶರಣರನ್ನು ಬಿಟ್ಟು ಇನ್ನುಳಿದ ಇತರ ಶರಣರ ಕಥೆಗಳು ಸಂಗತಿಗಳು, ಸಂಕ್ಷಿಪ್ತ ವಿವರಗಳು ಈ ಕೃತಿಯಲ್ಲಿವೆ. ಇಲ್ಲಿ ಬರುವ ಶರಣರ ಕಥೆಗಳು ಕಥಾ ಪ್ರಸಂಗಗಳು ವೈವಿಧ್ಯತೆಯಿಂದ ಕೂಡಿವೆ. ಅಲ್ಲಿ ಕಾಣುವ  ಭಕ್ತಿಯ ಆಚರಣೆ, ರೀತಿಗಳಲ್ಲಿ ಒಂದನ್ನೊಂದು ಹೋಲುವಂತೆ ಕಂಡರೂ ಕೆಲವೆಡೆ ಅನೇಕ ವ್ಯತ್ಯಾಸಗಳನ್ನು ಒಳಗೊಂಡು ವೈಚಿತ್ರವನ್ನುಂಟು ಮಾಡುವಂತಿವೆ. ಶಿವತತ್ವವನ್ನು ಜೀವಿಸಿ, ಸಾಕ್ಷತ್ ಶಿವ ಸ್ವರೂಪರಾದ ಮಹಾನು ಭಾವರು. ಶಿವಭಕ್ತಿ ಪಾರಾಯಣರು ಶಿವಸಮಯ ಪ್ರತಿಷ್ಠಾಪಕರು, ಶಿವತತ್ವ ಸಾಧಕರು, ಬೋಧಕರು, ತದೀಯ ಶರಣ ವ್ರಜದಲ್ಲಿಯೇ ಬರುತ್ತಾರೆ. ನಿಚ್ಚಳ ವೀರಶೈವ ಪರಿಭಾಷೆಯಲ್ಲಿ ಹೇಳುವುದಾದರೆ ಷಟಸ್ಥಲ, ಅಷ್ಟಾವರಣ, ಪಂಚಾಚಾರಗಳನ್ನೇ ಪರಿಪಾಲಿಸಿದವರು ಶಿವಶರಣರು, ಅವರನ್ನು ಪುರಾತನರು, ಬಸವಾದಿ ಪ್ರಥಮರು, ರೇಣುಕಾಧ್ಯಾಚಾರ್ಯರು, ಪಂಡಿತ್ರಯರು, ವಿರಕ್ತರು - ನೂರೊಂದು ವಿರಕ್ತರು ಏಳುನೂರೊಂದು ವಿರಕ್ತರು - ಎಂದು ಮುಂತಾಗಿ ವಿಭಜಿಸಬಹುದು.  ಆರ್.ಸಿ. ಹಿರೇಮಠರು ಸೂಚಿಸುವಂತೆ ಹರಿಹರಾದಿಯಾಗಿ ವೀರಶೈವಾಮೃತ ಮಹಾಪುರಾಣ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರದವರೆಗಿನ ಕೃತಿಗಳಲ್ಲಿ ಇರುವ ವಸ್ತು ವೆಂದರೆ       ಶೈವಸಿದ್ಧಾಂತ, ಶಿವಪಾರಮ್ಯದ ಕಥೆಗಳು ಇದನ್ನು ಬಿಟ್ಟರೆ ಪುರಾತನರ, ಶರಣರ, ವಿರಕ್ತರ ಮಹಿಮಾ ಸಂಗತಿಗಳೇ ಆಗಿವೆ ಎಂಬುದು ಗಮನಾರ್ಹವಾದ ಸಂಗತಿಯಾಗಿದೆ.
  ಲಕ್ಕಣ್ಣ ದಂಡೇಶನು ಶಿವತತ್ವ ಚಿಂತಾಮಣಿಯಲ್ಲಿ ಹೇಳಿದ ನೂತನ ಶರಣರ  ಬಗೆಗೆಗಿನ ವಿವರಗಳನ್ನು  ಸಂಧಿ ಎಂಟರಲ್ಲಿ ( ಪದ್ಯ ಸಂಖ್ಯೆ:1 ರಿಂದ 25) ಮಲ್ಲಣಾರ್ಯರು ಸಂಕ್ಷಿಪ್ತವಾಗಿ  ಪ್ರಸ್ತಾಪಿಸಿದ್ದಾರೆ. ಜೊತೆಗೆ ಶಿವತತ್ವ ಚಿಂತಾಮಣಿಯಲ್ಲಿರದ ಇತ್ತೀಚಿನ ಶರಣರ ಉಲ್ಲೇಖಗಳನ್ನು ಪದ್ಯ ಸಂಖ್ಯೆ: 26-49 ರಲ್ಲಿ ಕಾಣಬಹುದಾಗಿದೆ. ಮುಕ್ತಿ ಭಿಕ್ಷಾವೃತ್ತಿರಾಯರು, ಸದಾಚಾರದ ವರಧಾನ್ಯದೊಡೆಯರು, ಬ್ರಹ್ಮಚಾರಿದೇವರು, ಗುಂಡಿ ಪ್ರಭೆಯ ವಾರಣಾಸಿ ದೇವರು, ಶಂಕರೊಡೆಯರು ಪೋಲಂಕಯ ದೇವರು, ಶಿವರಾತ್ರಿಮಯ್ಯ, ನಿತ್ಯಶಿವರಾತ್ರೆ ವೀರಯ್ಯ ಧೂಪದ ಗಂಟೆ ವೀರಭದ್ರ ದೇವರು  ಮೊದಲಾದವರ ಕಥೆಯನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾನೆ.
   ಹೊನ್ನ ಕಾಯಕದ ತಿಮ್ಮಯ್ಯ, ಕನ್ನಡ ಕಾಯಕದ ತಿಮ್ಮಣ್ಣ, ಜೇಡರ ಚೌಡಯ್ಯ, ಪಾನುಗಲ್ಲ ಗಣಪರ ಪುಣಾಂಗೊಂಡೇಳ ಯರುವಯ್ಯ ಭಕ್ತ, ಕೂಕಟಪಳ್ಳಿ ರಾಜಾಯಿಯರು, ಕಬ್ಬುನ ಕಾಯಕದ ಪೋತಯ್ಯ ,ಭಕ್ತಿ ಗಣ ಪುರದ ಪೋತಿಸೆಟ್ಟಿ, ದೇವರಕೊಂಡೆಯ ವೀರಾ ಭಕ್ತ ಪೆಂಡಿಲ ಅಣ್ಣಿ ಶೆಟ್ಟಿ, ಬೀಚಲಪುರದ ರಾಮಾಭಕ್ತ ರಾಜಗೊಂಡೆಯ, ಅಣ್ಣಾ ಭಕ್ತ ಮುಂತಾದವರ ಕಥೆಗಳಿವೆ. ಈ ರಾಜಗೊಂಡೆಯ ಅಣ್ಣಾಭಕ್ತ ಉಪ್ಪಲಿಗ ದಾಸನಾಗಿದ್ದ ಈತನು ಹೆಗಲ ಮೇಳಿನ ಮುದ್ರೆ ಮಾಯವಾಗಿದ್ದಿತು. ಶಿವನು ಕನಸಿನಲ್ಲಿ ಹೇಳಿದಂತೆ-ಬೇಸಿಗೆಯಲ್ಲಿ ಮಳೆ ತರಿಸಿದ ಪವಾಡವನ್ನು ಪ್ರಸ್ತಾಪಿಸಿದ್ದಾನೆ. ಪಂಚಾಕ್ಷರೀ ಮಂತ್ರದ ಶ್ರೀ ಭಕ್ತನೆಂಬವನು ಪಾದತೀರ್ಥದ ಬಟ್ಟಲನ್ನು ತಲೆಯಲ್ಲಿಟ್ಟು ತೂಗಿ ಪಾರ್ವರನ್ನು ಲಘುಮಾಡಿದನು. ಪಟ್ಟೇಶ್ವರದ ರಾಮ ಬಸವಣ್ಣನು  ತನ್ನ ಇಬ್ಬರು ಮಕ್ಕಳ ತಲೆಯನ್ನು ವಿಶ್ವೇಶ್ವರನ ಮುಂದೆ ಕಡಿದು ಬೇರೆ ಬೇರೆ ಮಾಡಿ ಪುನಃ ಅವನ್ನು ಹತ್ತಿಸಿ ಪವಾಡವನ್ನು ಮರೆದ ಬಗೆಗೂ ಪ್ರಸ್ತಾಪಿಸಿದ್ದಾನೆ. ಅದೇ ರೀತಿ ಬಟಡ್ಡಿ ದೇಶದ ಮಧುಕೇಶ್ವರನ ಹಕ್ಕಿಲಿನ ಕಾಯಕದ ಕುರಗಾರಮ್ಮ, ಕಸವಿಕೋಟೆಯ ಬಸವಯ್ಯ, ಪೊಟನೂರು  ಪಡುಭಕ್ತ ಕಾಶಿಯ ಕಲ್ಲು ಕೆಲಸದ ಯರ್ರಭಕ್ತ  ರಾಜಮಹೇಂದ್ರಾವರದ ಪೋಲಯ್ಯ ,ವರಧಾನ್ಯದ ಸದಾಶಿವ ಭಕ್ತ, ಬ್ರಾಹ್ಮಣರ ಸೋಮಣ್ಣ ಮುಂತಾದವರ ಹೆಸರನ್ನು ಪ್ರಸ್ತಾಪಿಸಿದ್ದಾನೆ.  ಈ ಸೋಮಣ್ಣನನ್ನು ನಿಂದಿಸಿದ ಬ್ರಾಹ್ಮಣರ ಮನೆಗಳೆಲ್ಲ ಸುಟ್ಟು ಭಸ್ಮವಾದರೂ ಅವುಗಳ ನಡುವಿದ್ದ ಇವನ ಮನೆ ಸುಡದೆ ಹಾಗೆಯೇ ಉಳಿದಿದ್ದಿತು. ಬೆಜವಾಡದ ವರಧಾನ್ಯದ ಬಸವಣ್ಣಯ್ಯ, ಪಿಂಡಕೂರ ಬಡಗಿ ಚೆನ್ನಯ್ಯ, ಕೊಂಡಲದ ಹೊಂಗಾಯಿ ,ಕಂದಳದ ಬೈಯಣ್ಣ ಮುಂತಾದ ಶರಣರ ಬಗೆಗೆ ಉಲ್ಲೇಖವಿದೆ.  ವಿನಕೊಂಡದ ಕಬ್ಬುನಕಾಯಕದ ವೀರಣ್ಣ, ಮಾರಕಾಪುರದ ಕೇತಯ್ಯ ,ಮದ್ದಿ ಪೆಂಟಿಸಿಯೆಂಬ ಊರಿನ ಲಿಂಗಯ್ಯ, ನಲ್ಲೂರ ವೇದಾಂತಿ ಗಾವೂರು ಪೀರಯ್ಯ,ಪುಡಿಯಲ ಹಾಲು ಮೊಸರು ವ್ಯಾಪಾರದ ಓಬಳಕ್ಕ, ಕಾಯಪುರದ  ಮುಮ್ಮಡಿ ಭಕ್ತ ಇತ್ಯಾದಿಯವರ ಹೆಸರನ್ನು ಪ್ರಸ್ತಾಪಿಸಿದ್ದಾನೆ.
  ಉದಯ ಗಿರಿಯಲ್ಲಿ ವರದಾನಿ ರಾಮಯ್ಯ ಓದಿದ ಬಸವಪುರಾಣವನ್ನು ಇತರರು ಎತ್ತಿನ ಪುರಾಣವೆಂದು ಹೀಗಳೆಯಲು ಆ ಪುರಾಣದ ಮಹತಿಗಾಗಿ ಒಂದು ಪ್ರತ್ಯಕ್ಷ ಮಾಡಿ ತೋರಿಸಲಾಯಿತು. ಅಗ್ನಿಯಲ್ಲಿ ಒಂದು ಕಟ್ಟಿಗೆಯನ್ನಿಟ್ಟರು  ಆದರೆ ಅದು ಸುಡಲಿಲ್ಲ ಎಲ್ಲರೂ ಶರಣಾಗತರಾದರು .
   ವರ್ತಮಾನ ಕಾಲದ ನೂತನ ಶರಣರು ಎಂದು ತನ್ನ ಸಮಕಾಲೀನ ಸಂದರ್ಭದಲ್ಲಿ ಕಂಡು ಕೇಳಿದ ನೂತನ ಶರಣರ ಹೆಸರನ್ನು ಪಟ್ಟಿ ಮಾಡಿ ಕೊಟ್ಟಿದ್ದಾನೆ. ಹರತಿಯ ತೀರ್ಥದ ಲಿಂಗೇಶ, ಹುಲುವಳ್ಳಿ ಶಿವರಾತ್ರಿ ದೇವರು, ಸೋಲೂರು ಶೀಲವಂತ ಕೆಂಪಯ್ಯ, ಹಾಲುಕುರಿಕೆ ಉಜ್ಜಪ್ಪಯ್ಯ,ಹುಲುಕೂರು ಪರ್ವತಯ್ಯ, ಹೆಜ್ಜಾಜಿಯ ಗಣನಾಥದೇವರು, ಕೂಲಿಯ ಬಡ ಭಕ್ತಯ್ಯ, ಹುಲವಾಡಿ ವೀರೇಶ, ಕಬ್ಬುಗಲ್ಲ ಸಿದ್ಧವೀರೇಶ್ವರ, ದುರ್ಗದ ಬೊಮ್ಮಿಯಪ್ಪ, ( ಈತ ಯುದ್ದ ಮಾಡುವಾಗ ಕಣ್ಣಲ್ಲಿ ಬಾಣ ನೆಟ್ಟರೂ ತೆಗೆಯದೇ ಇದ್ದವನು) ಪೊತ್ತಪ್ಪೆಯ ಸೇನಾರಕ್ಷಕ  ಚೊಕ್ಕರ ಭಕ್ತ, ಸಂತೆಯ ನಾವಲೂರು ಪೀಚಾ ಪೋಲಯ್ಯ , ಕಂಬಿಕೂರ ಸಿರಿಗಿರಿ ರಡ್ಡಿ, ಪೂಗಿನಾದಿಡುಗುಡಿಲ ಪಾಗನಾಗಾಯಮ್ಮ, ಕೊತ್ತಹಳ್ಳಿಯ ಹೊನ್ನ ಕಾಯಕದ ಚಾಗಿ, ಬಂದ ಶರಣರಿಗೆ  ನೈವೇದ್ಯವೊದಗಿದಿದ್ದರೆ ತಲೆಯನ್ನು ಕತ್ತಿರಿಸಿಕೊಳುವ ವ್ರತಹಿಡಿದ ನೂತಪುರದ ನೂಲಕಾಯಕದ ವೀರಯ್ಯ, ಪೆನುಗೊಂಡೆ ಮುತ್ತಿಲಕಾಯಕದ  ರತ್ನಮ್ಮ, ಬುಕ್ಕರಾಯ ಸಮುದ್ರದ ಕೊಂಡ ಮಲ್ಲಯ್ಯ, ಇರುಬುದೊಲೆಯ ನಾಗಪ್ಪಯ್ಯ , ಜಗತಾಪಿ ಗುತ್ತಿಯ ಚೆನ್ನಬಸವಣ್ಣ ಪಾಮಡಿಯೋಗಿ ಸೆಟ್ಟವೀರಣ್ಣ ಅದಿಶೆಟ್ಟಿ ಏಳಪ್ಪಯ್ಯ ತಿಪಗಪಣ್ಣಯ್ಯ ಹರಿಸಮುದ್ರದ ವಿರುಪಣ್ಣ ನಿಡುಗಲ್ಲು ಉದ್ಯಪ್ಪ, ಗಟ್ಟೆಯ ಗ್ರಾಮದ ಹಾಳಪ್ಪಯ್ಯ ಶಿವನೊಲುಮೆಯ ಹಿಮಗಿರಿದೇವರು, ಸಮಾಧಿಯ ಸೋಮನಾಥ, ಮುದಿಗೆರೆಯ ಚಿಕ್ಕೊರತೆಯ ರಾಮಣ್ಣ ಶೆಟ್ಟಿ, ತಾಳಶಾಸನದ ಲಿಂಗಯ್ಯ, ಸುಗ್ಗನಳ್ಳಿ ಅಜ್ಜಯ ಬಸವಶೆಟ್ಟಿ, ಎಗ್ಗುಂದದ ಕಲ್ಲಿನಾಥ, ಹೆಗ್ಗವೆಯ ದೇವಾಂಗಮ್ಮ,ಹೆಗ್ಗವೆಯ ಕರಸ್ಥಲದ ದೇವರು, ಬಿಳುವರದ ದಂಡಪ್ಪ ರಾಜ ,ಕಂಠ ಪಾವಡ ಶೀಲದ  ಸಪ್ಪೆಯ ದೇವರು, ಸಿದ್ದ ಬಸವಯ್ಯ ,ಶಿವರಾತ್ರಾತಿಥಿಸ್ವಾಮಿ, ಬಳ್ಳೂರೆಲೆಯ ಲಿಂಗಪ್ಪ ಶರಣ, ಬೆಳರ್ವಾಡಿಯ ದೇವರಾಯ, ಮುಳ್ಳು ಸೋಗೆಯ ಭೃಂಗೀಶ, ಗುಡ್ಡವಳಿಲೆಯ ಭಿಕ್ಷದಾರ್ಯ,ಲಕ್ಕೂರಿನ ಶೀಲವಂತ ಮಲ್ಲಯ್ಯ, ನಕ್ಕನಹಳ್ಳಿ ಫಲಹಾರ ದೇವರು, ಬಳ್ಳಗೆರೆಯ ಗಂಗೇಶ, ಚೋಳಯ್ಯರಾವುತ  ,  ಕಪ್ಪಯ್ಯ ಉದಾಸಿಯ ಚನ್ನವೀರೇಶ, ಸೆಜ್ಜಯ ನಾಗಪ್ಪಯ್ಯ ಎಳವಂದೂರು ಅಂಕಪ್ಪ, ಕಾಣಕಾರ ಹಳ್ಳಿಯ  ಶೀಲವಂತೆ ಆವಣಗೆರೆಯ ನಾಗಮ್ಮ, ತೆರಕಣಾಂಭೆಯ  ನಂಜಮ್ಮ , ಗುರುಹಳ್ಳಿಯ ಮುರುಳಮ್ಮ, ಭಿಕ್ಷದ ಪರ್ವತೇಶ, ಕೇತಪ್ಪೊಡೆಯರು ಗುಮ್ಮಳಾಪುರ ಶಿವನ್ನಪ್ಪಯ್ಯ, ಲಿಂಗತೀರ್ಥದ ಸಿದ್ದ ದೇವನಂಜೇಶ, ಶಿವಗಂಗೆಯ ಫಲಹಾರದೇವರು ಮುಗ್ಧರಪುರದ ಸಣ್ಣ ವೀರಣ್ಣ ಗುಮ್ಮಳಾಪುರದ ನಂಜುಂಡ ದೇವರು ಚಿಂದರಹಳ್ಳಿಯ ಮಾಣಿಕ  ಶೆಟ್ಟಿ, ಕುಂದೂರು ಸಿದ್ಧೇಶ, ಹೊನ್ನವಳ್ಲಿಯ ಲಿಂಗಯ್ಯ ನಂದಿಯ ಸಿದ್ದೇಶ ಶಿವ ಸಮುದ್ರದ ಮೋಳಿಗೆ ದೇವರು ಹುಣಿಗೆರೆಯ ಲಿಂಗಪ್ಪ ನವಚಿಂತಯ್ಯ ಕಬ್ಬು ಕಲ್ಲು ಸಿದ್ದಮ್ಮ ಅತಿಥಿ ದೇವರು ಇತ್ಯಾದಿಯಾಗಿ ಉಲ್ಲೇಖಿಸಿರುವ ಶರಣ ಹೆಸರುಗಳು ಬೇರೆಡೆ ಎಲ್ಲಿಯೂ ದಾಖಲಾಗದಿರುವುದು ಗಮನಿಸ ಬೇಕಾದ ಸಂಗತಿಯಾಗಿದೆ.
      ವಿಷಯದ ದೃಷ್ಟಿಯಿಂದ ಪರಿಶೀಲಿಸಿದಾಗ ಅವರ ವ್ಯಾಪಕ ಮಾಹಿತಿಗಾಗಿ ಬೇರೆ ಆಕರಗಳೂ ಶೋಧನೆಗೆ ತೊಡಗಬೇಕಾಗುತ್ತದೆ. ಅಂದರೆ ಕೆಲವು ಶರಣ ಪವಾಡ ಕಥೆಗಳು ಈ ಕೃತಿಯಲ್ಲಿದ್ದು ಅವುಗಳಲ್ಲಿ ಆಂತರಿಕವಾದ  ಮಾಹಿತಿಗಳು ಅರೆಕೊರೆಯಿಂದ ಕೂಡಿವೆ. ಹೀಗಾಗಿ ಪ್ರಚಲಿತ 63 ಪುರಾತನರು , ಬಸವ ಪೂರ್ವ ಯುಗದ ಶಿವಶರಣರು, ಬಸವಾದಿ ಶರಣರು ಹಾಗೂ ನಂತರದ ನೂತನರು, ಈ ಎರಡೂ ಕಾಲದ ತುದಿ-ಮೊದಲಲ್ಲಿ ಕೊಂಡೆಯಾಗಿರುವಂಥ ಸಂಕ್ರಮಣ ಕಾಲದ ಶರಣರು. ಪ್ರಸಿದ್ದ ಶೈವ ಕವಿಗಳು, ವಿವಿಧ ದೇಶದ ಶಿವರಾಜರುಗಳ ಕುರಿತಾದ ಕಥೆಗಳು ಕೊಂಚ ವಿಸ್ತೃತವಾಗಿ ವರ್ಣಿಸಲ್ಪಟ್ಟಿವೆ. ಆದರೆ ಅನೇಕ ಅವ್ಯಕ್ತ ಶರಣರ ಕುರಿತಾಗಿ ಸಿಗುವ ಕೃತಿಯಾಂತರ್ಗತ ಮಾಹಿತಿ, ವಿವರಗಳು ಅಷ್ಟಕ್ಕಷ್ಟೇ. ಎಷ್ಟೋ ಶರಣರ ಊರು-ಕೇರಿಗಳು-ಅವುಗಳ ಸ್ಥಳನಾಮ-ಸದ್ಯಕ್ಕೆ ಈಗಿನ ಯಾವ ಊರು ಜಿಲ್ಲೆ ತಾಲೋಕು ಮತ್ತು ಊರು ಗಳು ಎಂಬುದನ್ನು? ಅಲ್ಲಿ ಏನಾದರೂ ಕೃತಿಕಾರರು ಆಗಿದ್ದರೆ ಅವರು ಬರೆದಿರುವ ಕೃತಿಗಳ ಹಸ್ತಪ್ರತಿ ಲಭ್ಯವಿದೆಯೋ ? ಅಥವಾ ಈ ಕೃತಿಯಂತೆ ಮತ್ತೆ ಯಾವ ಯಾವ ಪ್ರಕಟಿತ ಕೃತಿಗಳಲ್ಲಿ, ಪ್ರಕಟಿತವಲ್ಲದ ಅವ್ಯಕ್ತ ಬರಹಗಳಲ್ಲಿ ಇವರ ಕುರಿತಾಗಿ ಮಾಹಿತಿ ಸಿಗುತ್ತವೆಯೋ ಎಂದು ವಿಚಾರ ಮಾಡಬೇಕಾದ ನೂರಾರು ನೂತನ ಶರಣರ ಕಥೆಗಳು ಇಲ್ಲಿ ಬರುತ್ತವೆ. ಒಂದು ಮಾತಂತೂ ನಿಜ. ಅವರು ತಮ್ಮ ತಮ್ಮ ಪ್ರಭಾವಲಯದಲ್ಲಿ ಶಿವಮತದ ಜೀವಂತಿಕೆಯನ್ನು ಕಾಪಾಡಿಕೊಂಡು ಬಂದಿದ್ದಾರೆ ಎಂದೆನಿಸುತ್ತದೆ. ಕಾಯಕ, ದಾಸೋಹ ಮತ್ತು ತತ್ವ ನಿಷ್ಠೆಗಾಗಿ ಜೀವಿಸಿದ ಪುಣ್ಯಪುರುಷರು ಅವರ ಕುರಿತ ಜನತೆ ಹೊಂದಿರುವ ಭಕ್ತಿ ಅಭಿಮಾನಗಳು ಅವರ ಸುತ್ತಲೂ ಚರಿತ್ರೆಯನ್ನು ಮೀರಿ ಬೆಳೆದು ನಿಂತಿರುವ ಪವಾಡ ಪ್ರಸಂಗ-ಕಟ್ಟು ಕತೆಗಳಲ್ಲಿ ಪಠ್ಯವಸನವಾಗಿವೆ. ಕನ್ನಡ ನಾಡಿನ ಶೈವ ಪರಂಪರೆಯನ್ನು ಪರಮತದ ಬಿರುಗಾಳಿಯಿಂದ ಹಾರಿ ಹೋಗದಂತೆ ಜೀವ ಪಣಕ್ಕಿಟ್ಟು ಪ್ರಯತ್ನಿಸಿದವರ ಚರಿತ್ರೆಗಳು ಇಲ್ಲಿವೆ. ಇಂದಿನ ಯುಗಕ್ಕೆ ಸಂಗತವಾಗಿ, ಶೈವ-ವೀರಶೈವ ಸಂಸ್ಕೃತಿ ದಟ್ಟವಾಗಿರುವ ಪ್ರತಿ ಊರಿನಲ್ಲೂ ಶಿವಶರಣರು ಇದ್ದಿರಬೇಕು ಎಂಬ ಭಾವನೆಯನ್ನು ಈ ಕೃತಿ ಉಂಟುಮಾಡದೇ ಇರದು. ಇಂತಹ ಶರಣರ, ಪುರಾತನರ ಕಥೆಗಳ ನಿರೂಪಣೆಗೆ ಶಿವಕವಿಗಳ ಕಥಾ ಪ್ರಸಂಗಗಳನ್ನು  ಗುಬ್ಬಿಯ ಮಲ್ಲಣಾರ್ಯನು ತನಗಿಂತಲೂ ಮುಂಚಿನ ಕನ್ನಡ ಕವಿಗಳ ಕಾವ್ಯ-ಪುರಾಣಗಳಲ್ಲಿಯ ಪಂಚವಿಂಶತಿ ಲೀಲೆಗಳು,ಶಿವ ಮತ್ತು ಆತನ ಪರಿವಾರಕ್ಕೆ ಸಂಬಂಧಿಸಿದ ಅನೇಕ ಕಥೆಗಳನ್ನು ಆಯ್ದುಕೊಂಡಿದ್ದಾನೆ.ಜೊತೆಗೆತಾನು ಕೇಳಿದ್ದ ಸಮಕಾಲೀನ ಶಿವಶರಣರ ವಿವರಗಳನ್ನು ದಾಖಲಿಸಿದ್ದಾನೆ. ತಾನು ಈ ಕೃತಿಯ ರಚನೆಗಾಗಿ ಯಾವ್ಯಾವ ಕೃತಿಗಳನ್ನು ಪರಿಶೋಧಿಸಿದ್ದೇನೆ ಎನ್ನುವುದರ ಬಗ್ಗೆ ಸ್ವತಃ ಮಲ್ಲಣಾರ್ಯನೇ ಹೇಳಿಕೊಂಡಿರುವುದನ್ನು ಈಗಾಗಲೇ ಉಲ್ಲೇಖಿಸಲಾಗಿದೆ.
  ಆ ಕಾವ್ಯ-ಪುರಾಣಗಳನ್ನೆಲ್ಲಾ ನೋಡಿ ಓದಿ ಅವುಗಳಲ್ಲಿರುವ ಕಥಾ ಸಾರವನ್ನು ಸಂಗ್ರಹಿಸಿದ್ದಾನೆ. ಈ ಸಂಕಲನದಲ್ಲಿಯ ಕತೆಗಳ ಅನೇಕತೆ ಕಾವ್ಯದ ಏಕಮುಖತೆಗೆ ಭಂಗವನ್ನುಂಟುಮಾಡಿಲ್ಲ. ಈ ಕತೆಗಳಲ್ಲಿಯ  ಬಸವಣ್ಣ ಮತ್ತು ಇತರೆ ಶರಣರ ಬಗೆಗೆ ಕವಿಯು ಕಂಡಂತೆ ಕೇಳಿದಂತೆ ಸ್ವಾನುಭವದಿಂದ ಅನುಭವಿಸಿ ಹೇಳಿದ್ದಾನೆ. ಕವಿಯ ಸರಳ ಕೌಶಲತೆ ಜನಸಾಮಾನ್ಯರೂ ಅರ್ಥಮಾಡಿಕೊಳ್ಳುವ ಧಾಟಿಯಲ್ಲಿದೆ. ಒಟ್ಟಾರೆ  ಬಸವಾದಿ ಪ್ರಮಥರ  ಚರಿತ್ರೆ ಮತ್ತು ಶಿವಕವಿಗಳ ಚರಿತ್ರೆಯನ್ನು ರೂಪಿಸುವುದರ ಮೂಲಕ ಕಥೆಗಳ ತವರಾಗಿ ಪದ್ಯದ ನೆಲೆಯಾದ ಈ ಕೃತಿಯು ಕಥಾಕೋಶ, ಕಥಾಸಾಗರ, ಕಥಾಚಿಂತಾಮಣಿ ಎಂದೆನಿಸಿದೆ. ಬಸವಾದಿ ಪ್ರಮಥರು ಇಟ್ಟ ಕ್ರಾಂತಿಕಾರಕ ಹೆಜ್ಜೆಯ ಗುರುತುಗಳು,ಅವರ ಕಾಯಕತತ್ವ, ಜಾತೀಯತೆಯ ಮನೋಭಾವ,ಸ್ತ್ರೀಪುರುಷರ ಸಮಾನತೆ ಮುಂತಾದ ಪ್ರಗತಿಪರ ಧೋರಣೆಗಳನ್ನು ಸಾಂಕೇತಿಕವಾಗಿ  ಹಾಗೂ ಅವರ ಮಹಿಮೆಗಳನ್ನು ಪವಾಡ ಕಥೆಗಳ ಮೂಲಕ ನಿರೂಪಿಸುವತ್ತ  ಕವಿಯು ಆಸಕ್ತಿ ವಹಿಸಿದ್ದಾನೆ. ಈ ಸಂಕಲನ ಕೃತಿಯಲ್ಲಿ ಬಸವಣ್ಣನ ಜೀವಿತ ಕಥೆಯ ಪ್ರಮಾಣ ಕಡಿಮೆಯಿದ್ದರೂ ವ್ಯಕ್ತಿತ್ವದ ಪ್ರಭೆ ಮಸಕಾಗಿಲ್ಲ. ಇಂದಿಗೂ ಅಪ್ರಸಿದ್ಧ ವಚನಕಾರರ ವೈಯಕ್ತಿಕ  ವಿವರಗಳನ್ನು  ತಿಳಿಯಲು ವಿದ್ವಾಂಸರು ಈ ಸಂಕಲನ ಕೃತಿಯನ್ನು ಆಶ್ರಯಿಸ ಬೇಕಾಗಿರುವುದು ಅದರ ಮಹತ್ತರತೆಯ ಹೆಗ್ಗುರತಾಗಿದೆ.
      ಅನೇಕ ಕಾಯಕಗಳ ಪ್ರಸ್ತಾಪವೂ  ಈ ಕೃತಿಯಲ್ಲಿದೆ.ಮಲ್ಲಣಾರ್ಯನು ಹೇಳುವ    ಹೇಳುವ  63 ತಮಿಳು ಪುರಾತನರ ಕಾಯಕಗಳು,  ಬಸವಕಾಲೀನ  ನೂತನಶರಣರ  ಹಾಗೂ ನಂತರದ ಶರಣರ ಕಾಯಕಗಳು ಮತ್ತು  ಅವುಗಳ  ರೀತಿಯನ್ನು  ಕುರಿತು  ಸಂಗತಿಗಳು  ಈ ಕೃತಿಯಲ್ಲಿ  ವ್ಯಕ್ತವಾಗಿವೆ.
ತಳವಾರಿಕೆ
ಬೇಟೆ ಕಾಯಕ
ಮೀನುಗಾರಿಕೆ ಕಾಯಕ
ಚೋರಕಲವೃತ್ತಿ
ಒಕ್ಕಲಿಗಕಾಯಕ
ಕನ್ನ ಕಾಯಕ,
ಮೆದೆ ಒಟ್ಟುವ ಕಾಯಕ,
ವಾರಾಂಗನ ಕಾಯಕ,
ಪುಷ್ಪದಿಂಡೆ ಕಾಯಕ,
ಕನ್ನಡ ಕಾಯಕ
ವೀಳ್ಯದ ಕಾಯಕ,
ರತ್ನ ಪರೀಕ್ಷಣದ ಕಾಯಕ,
ಮೋಳಿಗೆ ಕಾಯಕ,
ಮೊರನ ಕಾಯಕ,
ಬಿದಿರ ಕಾಯಕ,
ಕರುಣಿಕ ಕಾಯಕ,
ಗೋಣೀ ಕಾಯಕ,
ಕೀರ್ತಿಸು ಕಾಯಕ,
ಸ್ತೋತ್ರಕಾಯಕ,
ಭಸಿರವಿಡುವ ಕಾಯಕ,
ಮಜ್ಜಿಗೆ ಕಾಯಕ,
ಮಡಿವಾಳಕಾಯಕ,
ಸೂಜಿಕಾಯಕ,
ದೋಸೆಕಾಯಕ,
ನಗೆಸುವ ಕಾಯಕ,
ಚಮ್ಮಾರಿಕೆ ಕಾಯಕ,
ಢಕ್ಕೆಯ ಕಾಯಕ,
ಪಡಿಹಾರ ಕಾಯಕ,
ಕುರುಳಮಾರುವ ಕಾಯಕ.
ಹಕ್ಕಿಲಿನ ಕಾಯಕದ ಕುರಗಾರಮ್ಮ
      ಹೀಗೆ ಹಲವಾರು ಶರಣರು ಕೈಗೊಂಡು ಮಾಡುತ್ತಿದ್ದ  ಕಾಯಕಗಳ ಪ್ರಸ್ತಾಪ  ಈ ಕೃತಿಯಾಗಿದೆ. ಅಷ್ಟೇ ಅಲ್ಲ. ಅವುಗಳ ರೀತಿ, ಹಿಂದಿರುವ ತಾತ್ವಿಕನೆಲೆಗಳೂ ಅಲ್ಲಲ್ಲಿ ವ್ಯಕ್ತವಾಗಿರುವುದನ್ನು ಕಾಣಬಹುದಾಗಿದೆ.
ಅಚ್ಚರಿ ಹುಟ್ಟಿಸುವ ಸಂಗತಿ ಎಂದರೆ  ವಾರಾಂಗನಾ ವೃತ್ತಿ, ಕನ್ನಗಳ್ಳತನ, ನಗಿಸುವುದು ಇವೂ ಕೂಡ ಕಾಯಕಗಳು  ಎಂದು ಹೇಳಿರುವುದು. ಇವನ್ನೂ  ಸತ್ಯಶುದ್ಧತೆಯಿಂದ ಮಾಡಿ ಮುಕುತಿ ಪಡೆದವರ ಕಥೆಗಳು ಹೇಳಲ್ಪಟ್ಟಿವೆ.
      ತಳವಾರಿಕೆ, ಬೇಟೆಗಾರಿಕೆ, ಮೀನುಗಾರಿಕೆ, ಒಕ್ಕಲಿಗಕಾಯಕ, ಪುಷ್ಪದಿಂಡೆ ಕಾಯಕ, ಮೋಳಿಗೆ ಕಾಯಕ, ಚಮ್ಮಾವುಗೆ ಕಾಯಕ, ಮಡಿವಾಳ ಕಾಯಕ, ಬಿದರಿರಕಾಯಕ, ಸೂಜಿ ಕಾಯಕ, ಮಡಿವಾಳ ಕಾಯಕ, ತುರಗಾಡ ಕಾರ್ಯ ಪಡಿಹಾರ ಕಾಯಕ, ಇವೇ ಮುಂತಾದವುಗಳು ಸೇವಾವೃತ್ತಿಯ ಕಾಯಕಗಳಾಗಿದ್ದೆವೆಂದು ತೋರುತ್ತದೆ. ಇಂಥ ಅನೇಕ  ಕಾಯಕಗಳನ್ನು ಕೈಗೊಂಡು, ಬಂದ ಆದಾಯವನ್ನು ಜಂಗಮದಾಸೋಹಕ್ಕೆ  ಸವೆಸಿದ ಸಾಕಷ್ಟು ಶರಣರು ಕಲ್ಯಾಣದಲ್ಲಿದ್ದರು. ಇವರಲ್ಲಿ ಕೆಲವರು  ವಚನಕಾರರೂ  ಆಗಿರುವರು ಎಂಬುದನ್ನು ಮರೆಯುವಂತಿಲ್ಲ.
      ಕೀರ್ತಿಸುವ, ಭಸಿತವಿಡುವ, ಸ್ತೋತ್ರ ಕಾಯಕಗಳು, ಧಾರ್ಮಿಕ ವಿಧಿವಿಧಾನಕ್ಕೆ ಸಂಬಂಧಿಸಿದ  ಕಾಯಕಗಳಾಗಿವೆ.ಮಜ್ಜಿಗೆ ಕಾಯಕ, ದೋಸೆಕಾಯಕ, ಇವುಗಳು  ಇಂದಿನ  ಹೊಟೇಲ್ ಸಂಸ್ಕೃತಿಯ  ಮೂಲರೂಪ ಗಳಾಗಿರಬಹುದಲ್ಲವೆ? ಚೋಳದೇಶದ ಅತಿಭಕ್ತ ಒಬ್ಬ ಮೀನುಗಾರ ಶಿವಭಕ್ತನಾಗಿದ್ದನಂತೆ  ಒಕ್ಕಲಿಗ ಮುದ್ದಯ್ಯ (ಮುಗ್ಧಯ್ಯ)ವ್ಯವಸಾಯ ಮಾಡಿ ಲೌಕಕ ಮಾರ್ಗದೊಳಿದ್ದು ಜಂಗಮಾರ್ಚನೆ ಮಾಡುತ್ತಿದ್ದನಂತೆ.ಆಮುಗಿ ದೇವ ಮತ್ತು ಆತನ ಸತಿ ವರದಾನಿಯಮ್ಮ ಸೊನ್ನಲಾಪುರದಲ್ಲಿ  ನೇಯ್ಗೆ ಕಾಯಕವ ಮಾಡುತ್ತಿದ್ದರಂತೆ.ನುಲಿಯ ಚಂದಯ್ಯ `ಮೆದೆಯ ಹುಲ್ಲನ್ನು ತಂದು ನುಲಿಯಂ ಹೊಸೆದು ಮಾರಿ ಜಂಗಮಾರ್ಚನೆಯ'  ಮಾಡುತ್ತಿದ್ದನಂತೆ. ಬಳ್ಳದಲ್ಲಿಯೇ ಲಿಂಗವನ್ನು ಕಂಡು ಬಳ್ಳೇಶ ಮಲ್ಲಯ್ಯನೂ ಒಬ್ಬ ವ್ಯಾಪಾರಿ.      ಗೊಲ್ಹಾಳಯ್ಯ ಕುರಿಯ ಹಿಕ್ಕೆಯಲ್ಲಿ ಲಿಂಗವನ್ನು ಕಂಡುಕೊಂಡ ಅಪ್ರತಿಮ ಮುಗ್ಧ ಶಿವಭಕ್ತ. ಈತ  ಒಬ್ಬ ಕುರಿಗಾಹಿ.  ಕುರಿ ಕಾಯುವುದೇ ಈತನ ಕಾಯಕವಂತೆ. ಚಂಡೇಶನು ಒಬ್ಬ ದನಗಾಹಿ ಕಾಯಕದ  ಶರಣ.  ಆಂಧ್ರದೇಶದ ಪುಲೀಂದ್ರ ಪುರದ ಕಲ್ಯಾಣಶೆಟ್ಟಿ ವ್ಯಾಪಾರಿ ಕಾಯಕದಿಂದ  ಜಂಗಮಭಕ್ತಿ ಮಾಡುತ್ತಿದ್ದನಂತೆ. ಹಿಪ್ಪರಿಗೆ ಪುರದ ಮಡಿವಾಳ ಮಾಚಯ್ಯ ರಜಕ ಕಾಯಕದಿಂದ ಜಂಗಮ ದಾಸೋಹ ಮಾಡುತ್ತಿದ್ದ ಶರಣ ನಾಗಿದ್ದಾನೆ. ಬಸವಾದಿ ಶರಣರ ಪೈಕಿವೀರ ಗಣಾಚಾರದ ಮಡಿವಾಳ ಕಾಯಕಯೋಗಿ ಶರಣನೀತ. ಹೊನ್ನ ಕಾಯಕದ ತಿಮ್ಮಯ್ಯ, ಕನ್ನಡ ಕಾಯಕದ ತಿಮ್ಮಣ್ಣ, ಇತ್ಯಾದಿ ಕಾಯಕ ವಿಶೇಷಣಗಳನ್ನು ಪ್ರಸ್ತಾಪಿಸಿದ್ದಾನೆ.
ಮುತ್ತುರತ್ನ ಪರೀಕ್ಷಿಸಿ ಬೆಲೆಗಟ್ಟುವಕಾಯಕವನ್ನು ಚಂದ್ರಯ್ಯನೂ ಚಂದನವಂ ಮಾರಿ ಜಂಗಮದಾಸೋಹ ಮಾಡುತ್ತಿದ್ದನಂತೆ. ಭಕ್ತರ ಕೀರ್ತಿಸುವ ಕಾಯಕದ ಬಲದೇವ ಸೊಡ್ಡಳ ಬಾಚರಸರ ಕರಣಿಕತ್ವ ಕಾಯಕ  ಗುಡುಚಿ ಕಾಳವ್ವೆಯೆಂಬವಳ ಮಜ್ಜಿಗೆ ಕಾಯಕ,      ಹೀಗೆ  ಬೇರೆ ಬೇರೆ ಕಾಯಕಗಳನ್ನು ಮಾಡುವ  ಶರಣರ ಕಥೆಗಳು ಈ ಕೃತಿಯಲ್ಲಿ  ಸಾಲು ಸಾಲಾಗಿ ಬಂದಿವೆ. 63ಜನ ತಮಿಳು ಪುರಾತನರಾಗಲಿ, ನೂತನ ಬಸವಾದಿ ಕಲ್ಯಾಣದ ಶರಣರಾಗಲಿ, ಇಲ್ಲವೇ  ಆನಂತರದ ಕೆಲ ವೀರಶೈವ ಶರಣರು ಒಂದಿಲ್ಲೊಂದು ಕಾಯಕದೊಂದಿಗೆ  ಭಕ್ತಿಯಿಂದ ಜಂಗಮ ದಾಸೋಹದಾಚರಣೆಯನ್ನು ಒಂದು ವ್ರತದಂತೆ ಮಾಡಿದ್ದಾರೆ. `ಕಾಯಕವೇ ಕೈಲಾಸ'ವೆಂಬ ಬಸವಣ್ಣನ ಮಾತಿಗೆ  ಮುನ್ನವೇ ಕೃತಿರೂಪದ ಸಂದೇಶವನ್ನು ನೀಡಿದ್ದಾರೆಂಬುದನ್ನು  ಗಮನಿಸಬೇಕಾಗಿದೆ. ಶಿವ ಸಾಕ್ಷಿಯಾಗಿ ದಾಸೋಹ ನಿಮಿತ್ಯವೇ ಕಾಯಕವನ್ನು ಮಾಡುವ ಶಿವಶರಣರ ಉಗ್ರಭಕ್ತಿಯನ್ನು ಕಾಣಬಹುದಾಗಿದೆ. ದೇವ ಸಾಕ್ಷಿಯಾಗಿ ದುಡಿಯುವ ಧರ್ಮಕ್ಕಾಗಿ ದೇಹ-ಪ್ರಾಣ ಮುಡಿಪಾಗಿಡುವ ಕಾಯಕ ನಿಷ್ಠೆ ಸಂಸ್ಕೃತಿಯನ್ನು ಅನೇಕ ಕಥೆಗಳು ಬಿಂಬಿಸಿವೆ.    ಈ ಕೃತಿಯ ಕನ್ನಡ ಸಾಹಿತ್ಯದಲ್ಲಿ ಅನೇಕ ದೃಷ್ಟಿಕೋನಗಳಿಂದ ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತದೆ ಅದನ್ನು ನಾವು ಈ ಕೆಳಕಂಡ ಅಂಶಗಳ ದೃಷ್ಟಿಯೊಂದಿಗೆ ಕಂಡುಕೊಳ್ಳಬಹುದಾಗಿದೆ.
* ಕೃತಿಯ ದೀರ್ಘತೆ, ವ್ಯಾಪಕತೆ ದೃಷ್ಟಿಯಿಂದ ಇದೊಂದು ಬಹುಸಂಸ್ಕೃತಿ, ಕಾವ್ಯ -ಕಥೆಗಳ ಸಂಗಮದ
  ಮಹಾಕೃತಿ
* ಅದ್ಭುತವಾದ ವಿಶಿಷ್ಟ ಕಥಾಕೋಶವೆಂಬುದರಿಂದಲೂ ಈ ಕೃತಿಯ ಸ್ಥಾನಮಾನವೂ ವಿಶಿಷ್ಟವಾಗಿದೆ.
  ನೂರಾರು ಕತೆಗಳು ವಿಶಿಷ್ಟ ಶೈಲಿಯಲ್ಲಿ ಅನಾವರಣಗೊಂಡಿವೆ.
* ಈ ಕಥೆಗಳು-ಶರಣರು ಶೈವರಾಜರು, ಶಿವಕವಿಗಳ ಚರಿತ್ರ ಸಂಗತಿಗಳನ್ನು ಒಳಗೊಂಡು ಮಹತ್ವದ ಆಗರ
  ಗ್ರಂಥವೆನಿಸುವುದರಿಂದಲೂ ಇರು ಮಹತ್ವದ ಸ್ಥಾನ ಪಡೆದಿರುವ ಕೃತಿಯಾಗಿದೆ.
* ಕೃತಿಯ ಸ್ವರೂಪದಂತೆ -ಕೃತಿಯ ಆಶಯ ಜನಮಾನಸದಲ್ಲಿ ಶಿವಭಕ್ತಿಯ ಬೀಜಗಳನ್ನು ಬಿತ್ತಿ ಬೆಳೆವುದಾಗಿದೆ.
         ಮಲ್ಲಣಾರ್ಯನು ಸರಳವಾದ ಭಾಷೆಯನ್ನೇ ಬಳಸಿದ್ದಾನೆ. ಕಥೆಗಳನ್ನಲ್ಲದೆ. ತತ್ವಬೋಧೆಯಲ್ಲಿ ಭಾಷೆ ಸಹಜವಾಗಿಯೇ ಸಂಸ್ಕೃತ ಗರ್ಭಿತವಾಗಿ ಬಿಟ್ಟಿದೆ. ಈ ಕೃತಿಯು ಪೌರಾಣಿಕ, ಚಾರಿತ್ರಿಕ,ಸಾಂಸ್ಕೃತಿಕ ಸಾಹಿತ್ಯಕ ಸಂಗತಿಗಳನ್ನು ದಾಖಲಿಸಿರುವ ಅಪೂರ್ವ ಕೃತಿಯಾಗಿದೆ. ನೂತನ-ಪುರಾತನ ಶರಣರ ಬಗೆಗೆ ಮಾಹಿತಿಯನ್ನು ಒಳಗೊಂಡಿರುವುದರ ಮೂಲಕ ಆಕರ ಕೃತಿಯಾಗಿದೆ. ಶಿವತತ್ವ ಚಿಂತಾಮಣಿ.’ ವೀರಶೈವಾಮೃತಪುರಾಣ ಮತ್ತು ಚೆನ್ನ ಬಸವಪುರಾಣ’ ಈ ಮೂರು ಗ್ರಂಥಗಳು ವಸ್ತುವಿನ್ಯಾಸದ ದೃಷ್ಟಿಯಿಂದ ಒಂದೇ ವರ್ಗಕ್ಕೆ ಸೇರುತ್ತವೆ. ರಚನಾ ಕಾಲದ ದೃಷ್ಟಿಯಿಂದಲೂ ಇವು ಒಂದಾದ ಮೇಲೊಂದು ಬರುತ್ತದೆ. ಈ ಮೂರು ಪುರಾಣಗಳಲ್ಲಿಯೂ  ಯಾವುದೂ ನಾಯಕ ಪ್ರಧಾನವಾದುವಲ್ಲ. ಶಿ.ಶಿ.ಚಿಂ ಮತ್ತು ವೀ.ಶೈ.ಪು.ಗಳಲ್ಲಿ ಕೊನೆಯಲ್ಲಿ ಬಸವಣ್ಣನ ಕಥೆ ನಿರೂಪಿತವಾಗಿದೆ. ಒಟ್ಟಿನಲ್ಲಿ ಈ ಮೂರು ಗ್ರಂಥಗಳಲ್ಲಿ ಶಿವ ಲೀಲೆಗಳಿಗೆ ಮತ್ತು ಶರಣರ ಚರಿತ್ರೆಯ ಬಗೆಗೆ ವಿವರಣೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ.ಆದ್ದರಿಂದ ಇದೊಂದು ಭಕ್ತ ಜನತೆಗೆ ಮೆಚ್ಚುಗೆ ಆಗುವ ಕೃತಿಯಾಗಿ ಮಹತ್ವದ ಸ್ಥಾನ ಗಿಟ್ಟಿಸಿಕೊಳ್ಳುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೆ ವೀರಶೈವ ಧರ್ಮತತ್ವ ಸಿದ್ಧಾಂತಗಳನ್ನು ನಿರೂಪಿಸಿರುವ ಏಕೈಕ ಕೃತಿಯಾಗಿದ್ದು ವಿಶ್ವಕೋಶವೆನಿಸಿದೆ. ಈ ಕೃತಿಯು,  ಬಸವೇಶ್ವರಾದಿಗಳ ಚರಿತ್ರೆ,  ಹದಿನೆಂಟು ಯುಗಗಳ ರಾಜರು ಮೇರುವೇರಿದ ಕಥೆ ಇತ್ಯಾದಿಗಳ ಸಂಕಲನವಾಗಿದೆ. ಹಿಂದಿನ ಮತ್ತು ಅಂದಿನ ಶಿವಶರಣರ ಸಮಗ್ರ ಮಾಹಿತಿಯನ್ನು ನೀಡಿರುವ ಆಕರಗಳ ಗ್ರಂಥ. ಸಾಹಿತ್ಯ ಚರಿತ್ರೆ, ಪುರಾಣ ಸಿದ್ಧಾಂತ, ವೇದಾಂತ ಮುಂತಾದ ಶಾಸ್ತ್ರ ವಿಚಾರಗಳನ್ನು ಕಾವ್ಯಮಯವಾಗಿ ವಿವರಿಸಿದ್ದಾನೆ.  ಈ ಕೃತಿಯು ಗಾತ್ರ ಮತ್ತು ಸತ್ವ ದೃಷ್ಟಿಯಿಂದಲೂ ಮಹತ್ತರತೆಯನ್ನು ಪಡೆದಿದೆ. ಬದುಕಿಗೆ ಅವಶ್ಯಕವಾದ ಅನೇಕ ವಿಷಯಗಳನ್ನು ಒಳಗೊಂಡಿದೆ. ಈ ಕೃತಿಯು ಮೂಲತಹ ಧರ್ಮಕಾವ್ಯವಾದರೂ ಕಾವ್ಯಧರ್ಮದಿಂದ ವಂಚಿತವಾಗಿಲ್ಲ. ಧರ್ಮಾನುರಾಗದೊಂದಿಗೆ ಕಾವ್ಯದೃಷ್ಟಿಯೂ ಸೇರಿಕೊಂಡಿದೆ. ಕವಿಯ ಪ್ರತಿಭೆ,ಪಾಂಡಿತ್ಯ,ಭಾಷಾಶಕ್ತಿ-ಶಬ್ದಸಂಪತ್ತು, ತಾತ್ವಿಕ ದೃಷ್ಟಿ, ಧಾರ್ಮಿಕ ವಿವೇಚನೆ,  ಪುರಾತನ ನೂತನಗಳನ್ನು ಸಮನ್ವಯ ಮಾಡುವ ಜಾಣ್ಮೆ ಇವು ಪ್ರಶಂಸನೀಯವಾಗಿವೆ. ಒಟ್ಟಾರೆ `ಬಸವಾದಿ ಶರಣರು ಆಚರಿಸಿ ತೋರಿದ ಮಾರ್ಗವೇ ಈ ಪುರಾಣದ ವೀರಶೈವಾಮೃತವು. ಈ ವೀರಶೈವಾಮೃತವನ್ನು ವಿವರಿಸುವುದೇ ವೀರಶೈವಾಮೃತ ಪುರಾಣ’ ಎಂಬ ಈ ಬೃಹತ್ ಕೃತಿಯ ಸಂಪಾದಕರಾದ ಆರ್.ಸಿ. ಹಿರೇಮಠ ಅವರ ಮಾತುಗಳು ಸ್ವೀಕಾರಾರ್ಹವಾಗಿವೆ.ಭೈರವೇಶ್ವರ ಕಾವ್ಯದಲ್ಲಿ ನಂಜುಂಡಾರಾಧ್ಯರು ಈ ಕಥಾ ಪ್ರಸಂಗಗಳನ್ನು ಸೂಚಿಸುವುದಕ್ಕೂ, ಕಥಾಮಣಿ ಸೂತ್ರರತ್ನಕರದಲ್ಲಿ ಈ ಕಥೆಗಳನ್ನು ಶಾಂತಲಿಂಗದೇಶಿಕರು ವಿಸ್ತರಿಸುವುದಕ್ಕೂ ಮುಖ್ಯ ಆಕರ ವೀರಶೈವಾಮೃತ  ಮಹಾಪುರಾಣವಾಗಿದೆ ಎಂಬುದು ಈ ಕೃತಿಯ ಮಹತ್ತರತೆಯ ಪ್ರತೀಕವಾಗಿದೆ. ಆದಾಗ್ಯೂ ಇಂತಹ ಮಹತ್ತರ ಸಂಕಲಿತ ಕೃತಿಗೆ ಕನ್ನಡ ಸಾಹಿತ್ಯದಲ್ಲಿ ದೊರೆಯಬಹುದಾದ ಸ್ಥಾನ ದೊರೆತಿಲ್ಲ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಗುಬ್ಬಿಯ ಮಲ್ಲಣಾರ್ಯ ಮತ್ತು ಆತನ ಕೃತಿ ಇಂದಿಗೂ ಅಲಕ್ಷಿತವಾಗಿಯೇ ಉಳಿದಿರುವುದು ದುರ್ದೈವದ ಸಂಗತಿಯಾಗಿದೆ.

        ಆಧಾರ ಗ್ರಂಥಗಳು
1.ಗುಬ್ಬಿ ಮಲ್ಲಣಾರ್ಯ ವಿರಚಿತ ವೀರಶೈವಾಮೃತ ಪುರಾಣ
ಭಾಗ 1 ಮತ್ತು 2
ಸಂಪಾದಕರು: ಆರ್.ಸಿ,ಹಿರೇಮಠ.
ಪ್ರಕಾಶಕರು: ಎನ್.ಎಸ್.ಎಸ್. ಕಲ್ಯಾಣ ಕೇಂದ್ರ
ಜಯನಗರ, ಬೆಂಗಳೂರು 1990
 2. ಆರಾಧ್ಯ ಸಂಪದ
        ( ಪ್ರೊ. ಎನ್.ಬಸವಾರಾಧ್ಯ-80. ಸಮಗ್ರ ಸಾಹಿತ್ಯ ಸಂಪುಟ)
          ಸಂ:ಎಸ್.ವಿದ್ಯಾಶಂಕರ
           ಬೆಂಗಳೂರು. 2005
  3.ಸಮಗ್ರ ಕನ್ನಡ ಸಾಹಿತ್ಯ  ಸಂಪುಟ.4, ಭಾಗ-2
           ಪ್ರಧಾನ ಸಂಪಾದಕರು: ಜಿ.ಎಸ್.ಶಿವರುದ್ರಪ್ಪ.
          ಪ್ರಸಾರಾಂಗ. ಬೆಂಗಳೂರು ವಿಶ್ವವಿದ್ಯಾಲಯ,1978
  4. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ
         ಸಂ.5. ಭಾಗ.2
        ಸಂ. ರಾಮೇಗೌಡ, ಪ್ರಸಾರಾಂಗ,  ಮೈಸೂರು ವಿಶ್ವವಿದ್ಯಾಲಯ
         ಮೈಸೂರು 2005,
 5. ಎಸ್.ವಿದ್ಯಾಶಂಕರ: ವೀರಶೈವ ಸಾಹಿತ್ಯ ಚರಿತ್ರೆ, ಸಂ.3, ಭಾಗ 1,
  ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು. 2015
                                     


  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...