ಶೂನ್ಯ ಸಂಪಾದನೆಗಳ ರಚನೆಗೆ ತುಮಕೂರು ಪರಿಸರದ
ಕೊಡುಗೆ
`ಶೂನ್ಯ
ಸಂಪಾದನೆಯ ಮೂಲಸಾಮಗ್ರಿ ಬಿಡಿವಚನಗಳು. ಬಿಡಿವಚನಗಳಿಂದ ವಾಸ್ತವವಾಗಿ ನಡೆದಿರಬಹುದಾದ ಘಟನೆಗಳನ್ನು
ನಾಟಕೀಯವಾಗಿ ಚಿತ್ರಿಸುವುದು ಶೂನ್ಯ ಸಂಪಾದನೆಯ ಪ್ರಮುಖ ಗುರಿ. ವಚನ ಕರ್ತೃಗಳು ರಚಿಸಿರುವ
ಬಹುಪಾಲು ವಚನಗಳು. ಅವು ಯಾವ ಸಂದರ್ಭದಲ್ಲಿ ಹೊರಬಂದವು ಎಂಬುದಕ್ಕೆ ಸೂಚನೆಗಳು ಇಲ್ಲವೇ ಇಲ್ಲ.
ಇದ್ದರೂ ಅತ್ಯಪೂರ್ವ. ಆ ಮುಕ್ತಕಗಳಂತಹ ವಚನಗಳನ್ನು ಆರಿಸಿಕೊಂಡು ಅವುಗಳನ್ನು ಒಂದು
ಸಂದರ್ಭದಲ್ಲಿಟ್ಟು, ಉತ್ತರ ಪ್ರತ್ಯುತ್ತರವಾಗಿ ಜೋಡಿಸಿ ಮಧ್ಯೆ ಮಧ್ಯೆ ಸಂಕಲನಕಾರ ವಿಷಯ ಸ್ಪೃಷ್ಟತೆಗಾಗಿ
ತನ್ನ ಮಾತುಗಳನ್ನು ಸೇರಿಸಿ ನಾಟಕೀಯ ಸನ್ನಿವೇಶಗಳನ್ನು ಚಿತ್ರಿಸಿರುವುದು ಶೂನ್ಯಸಂಪಾದನೆಗೆ ಒಂದು
ಸ್ವತಂತ್ರ ಗ್ರಂಥದ ಸ್ಥಾನವನ್ನು ತಂದಿದೆ. ಎಂದರೆ ವಚನಕಾರರನ್ನು ಅವರು ಎದುರಿಸಿದ ಸನ್ನಿವೇಶ
ಮತ್ತು ಅಲ್ಲಿ ವ್ಯಕ್ತವಾಗುವ ಅವರ ಗುಣ ಸ್ವಭಾವಗಳನ್ನು
ಅವರು ಪಡೆದ ಶೂನ್ಯದ ಲಾಭವನ್ನು ಅವರವರ ಮಾತುಗಳ ಮೂಲಕವಾಗಿಯೇ ಹೊಮ್ಮಿಸಿರುವ ಒಂದು
ಅಪೂರ್ವಗ್ರಂಥ.' ಶೂನ್ಯಸಂಪಾದನೆ ವಚನಗಳನ್ನು
ಸಂಕಲನ ಮಾಡಿರುವ ಕೃತಿ. ವಚನಗಳ ಸಂಕಲನವೆನಿಸಿದ ಶೂನ್ಯ ಸಂಪಾದನೆಗಳು ಮರು ಓದಿನಿಂದ
ಸೃಷ್ಟಿಯಾಗಿವೆ. ವಚನಗಳನ್ನು ಸಂಭಾಷಣೆಯ
ರೀತಿಯಲ್ಲಿ ಜೋಡಿಸಿರುವುದು ಶೂನ್ಯ ಸಂಪಾದನೆಯ ವೈಶಿಷ್ಟ್ಯ. ಹನ್ನೆರಡನೇ ಶತಮಾನದಲ್ಲಿ ಅನುಭವ
ಮಂಟಪದಲ್ಲಿ ನಡೆದ ಧಾರ್ಮಿಕ ಚಿಂತನೆಯಲ್ಲಿ ನಿರ್ಮಾಣವಾದ ವಚನಗಳ ವಾಸ್ತವಿಕತೆಯನ್ನು ಹದಿನಾರನೆಯ
ಶತಮಾನದಲ್ಲಿ ಪೂರಕ ಸಾಮಗ್ರಿಗಳಿಂದ ಕಟ್ಟಿಕೊಡುವ ಪ್ರಯತ್ನ ನಡೆಯಿತು. ಉಪಲಬ್ಧ ವಚನಗಳನ್ನು ಆಯಾ
ಸಾಂದರ್ಭಿಕ ಹಿನ್ನಲೆಯಲ್ಲಿ ಆಡಿರಬೇಕೆಂದು ಆ ವಚನಗಳನ್ನು ವ್ಯವಸ್ಥಿತವಾಗಿ ಸಂಕಲಿಸಿದ ಪ್ರಯತ್ನವೇ
ಶೂನ್ಯ ಸಂಪಾದನೆಯ ಉಗಮಕ್ಕೆ ಕಾರಣ. ಶರಣರ ಧಾರ್ಮಿಕ ಚರ್ಚೆಗಳ ಫಲವಾಗಿ ಹೊರಬಂದ ವಚನಗಳ ಸನ್ನಿವೇಶಗಳ
ವಿವರಣೆಯನ್ನು ಗುರುತಿಸಬಹುದಾಗಿದೆ. ಹೆಚ್ಚಿನ ಶರಣರ ವಚನಗಳನ್ನು ಬಹುಮಟ್ಟಿಗೆ ಶೂನ್ಯಸಂಪಾದನಕಾರ
ಅಳವಡಿಸಿಕೊಂಡಿದ್ದಾನೆ. ಶೂನ್ಯಸಂಪಾದನೆಗಳ ಸೃಷ್ಟಿಗೆ ಶರಣರು, ಅವರ
ವಚನಗಳೇ ಆಕರ. ಹೀಗಾಗಿ ಶೂನ್ಯಸಂಪಾದನೆಗಳು ಸಿದ್ಧವಚನಗಳನ್ನು ಬಳಸಿಕೊಂಡು ಸಂವಾದರೂಪದಲ್ಲಿ ಹೆಣೆದ
ಹೊಸರೀತಿಯ ಪಠ್ಯಗಳು ಎಂದು ವಿದ್ವಾಂಸರಿಂದ ಕರೆಯಿಸಿಕೊಂಡಿವೆ.
ಶೂನ್ಯಸಂಪಾದನೆ
ಆಧುನಿಕ ಮೌಲ್ಯಗಳ ಅರ್ಥದಲ್ಲಿ ಸಂವಾದವನ್ನು ಒಳಗೊಂಡಿರುವ ಪಠ್ಯವಲ್ಲ. 500
ವರ್ಷಗಳ ಹಿಂದೆ ಸಂವಾದರೂಪದ ರಚನೆಯನ್ನು ಕಲ್ಪಿಸಿಕೊಂಡ ಶೂನ್ಯಸಂಪಾದನಾಕಾರರು ಇಂದು ಘನ
ವ್ಯಕ್ತಿತ್ವದವರಾಗಿ ಕಂಡು ಬರುತ್ತಾರೆ. ಶೂನ್ಯಸಂಪಾದನೆಯು ಅಪೂರ್ವ ಸಾಂಸ್ಕೃತಿಕ ಪಠ್ಯವೆಂದು
ಆಧುನಿಕ ವಿದ್ವಾಂಸರಿಂದ ಗುರುತಿಸಲ್ಪಟ್ಟಿದೆ. ವಚನಕಾರರ ಜೀವನ ಹಾಗೂ ವಚನಗಳ ಮೂಲಕ ಸಾಂಸ್ಕೃತಿಕ
ವಿದ್ಯಮಾನವಾಗಿ ಪರಿಣಮಿಸಿರುವ ಶೂನ್ಯ ಸಂಪಾದನೆಯು ಇಂದಿಗೂ ತನ್ನ ಮಹತ್ತರತೆಯನ್ನು
ಕಾಯ್ದುಕೊಂಡಿದೆ. ಮುಕ್ತರ ಮಾರ್ಗ ವಚನಗಳನ್ನು ಉತ್ತರ-ಪ್ರತ್ಯುತ್ತರ ಸಂಬಂಧವಾಗಿ ಸೇರಿಸಿ, ಮರ್ತ್ಯಲೋಕದ
ಮಹಾಗಣಂಗಳಿಗೆ ಮಹಾಪ್ರಸಂಗಮಂ ಮಾಡಿಕೊಡುವಂತಹ ಈ ಕೆಲಸವು ನಿಜವಾಗಿಯೂ ಒಂದು ಸೃಜನಶೀಲ
ಸಾಹಿತ್ಯದಷ್ಟೇ ಸವಾಲಿನದಾಗಿತ್ತು. ಇದಕ್ಕೆ ಇದ್ದ ಅನುಕೂಲವೆಂದರೆ ವಚನಗಳ ಮುಕ್ತಕ ಸ್ವರೂಪ. ಒಂದು
ಅರ್ಥದಲ್ಲಿ ಬಂಧನಕ್ಕೆ ಸಿಗದೆ ಬಹುಮುಖಿಯಾಗಿಯೂ ಸ್ವತಂತ್ರವಾಗಿ ಉಳಿಯುವ ವಚನಗಳ ಸ್ವಾಯತ್ತ
ಸ್ವರೂಪದ ಅನುಕೂಲವೆ ಶೂನ್ಯಸಂಪಾದನೆಯ ಸೃಷ್ಟಿಗೆ ಅನುಕೂಲವಾಗಿದೆ.
ಶೂನ್ಯಸಂಪಾದನೆಯು
ಅಪೂರ್ವ ಸಾಂಸ್ಕೃತಿಕ ಪಠ್ಯವೆನಿಸಲು ಎರಡನೇ ಕಾರಣ ಅದರಲ್ಲಿರುವ ಜಾನಪದ ಪರಂಪರೆಯ ಗುಣ. ಅಂದರೆ
ಹಠಮಾರಿಯಾಗದೆ ಸಹಿಸುವ, ಸರಿ ಅನ್ನಿಸಿದ್ದೆಲ್ಲವನ್ನು ಒಳಗೊಳ್ಳುವ
ಗುಣ. ಒಳಗೊಂಡದ್ದನ್ನು ಅರಗಿಸಿಕೊಂಡು ಮೂರನೆಯದೊಂದನ್ನು ಹುಟ್ಟು ಹಾಕಲು ಯತ್ನಿಸುವ ಸಮನ್ವಯ ಗುಣ.
ಈ ಗುಣದಿಂದ ಕೃತಿಯಲ್ಲಿ ಅಂತಿಮವಾಗಿ ವೈರುಧ್ಯಗಳು ಉಳಿದುಬಿಡಬಹುದು. ಆದರೆ ಈ ವೈರುಧ್ಯಗಳನ್ನು
ಚಾರಿತ್ರಿಕ ಒತ್ತಡಗಳ ಫಲವೆಂದು ಭಾವಿಸಿದರೆ, ಅವುಗಳ ಅರ್ಥವಂತಿಕೆಯನ್ನು ಅರಿಯುವ ಕಿಡಕಿ
ತೆರೆಯುತ್ತದೆ. ಇಷ್ಟಾಗಿಯೂ ಶೂನ್ಯಸಂಪಾದನೆಯು ಆಧುನಿಕ ಮೌಲ್ಯಗಳ ಅರ್ಥದಲ್ಲಿ ಸಂವಾದವನ್ನು
ಒಳಗೊಂಡಿರುವ ಪಠ್ಯವೇನಲ್ಲ. ಆದರೆ ಕನ್ನಡದಲ್ಲಿ ಕಳೆದ 500 ವರುಷಗಳ
ಹಿಂದೆ ಇಂತಹದೊಂದು ಸಂವಾದ ರೂಢಿ ರಚನೆಯನ್ನು ಕಲ್ಪಿಸಿಕೊಂಡ ಮನಸ್ಸು ಮಾತ್ರ ಈಗಲೂ ತುಂಬ
ದೊಡ್ಡದಾಗಿ ಕಾಣುತ್ತದೆ. ಗತಕಾಲದ ಸಾಧನೆಯನ್ನು ಅದರ ಗ್ರಹಿಕೆಯೊಂದಿಗೆಯೂ ವರ್ತಮಾನದ ಸಾಧನೆಯನ್ನು
ಅದರ ಮಿತಿಗಳೊಂದಿಗೂ ಸಂವಾದಮಾಡುವವರಿಗೆ ಶೂನ್ಯಸಂಪಾದನೆ ಖಂಡಿತವಾಗಿಯೂ ಪ್ರೇರಿಸುತ್ತದೆ.
ತುಮಕೂರು
ಜಿಲ್ಲೆಯು ವೀರಶೈವ ಸಾಹಿತ್ಯ-ಸಂಸ್ಕೃತಿಯ ಪುನರುಜ್ಜೀವನ ಕಾಲದಲ್ಲಿ ಮಹತ್ತರವಾದ ಪಾತ್ರವನ್ನು
ವಹಿಸಿದೆ. ವಚನ ರಚನೆಯ ಪರಂಪರೆಯಲ್ಲಿಯೂ ತನ್ನದೇ
ಆದ ಕೊಡುಗೆಯನ್ನು ನೀಡಿದೆ. ಕಲ್ಯಾಣ ಕ್ರಾಂತಿಯ ವಿಪ್ಲವದ ನಂತರ ತುಮಕೂರು ಪರಿಸರದ ಎಡೆಯೂರು, ಗುಬ್ಬಿ, ಗೂಳೂರು, ಅದರಂಗಿ
ಸುತ್ತಮುತ್ತಲ ಪರಿಸರವು ಸಂಘಟನೆಯ ಪ್ರಧಾನ ಕೇಂದ್ರಗಳಾಗಿದ್ದು ವೀರಶೈವ ಧರ್ಮದ ಅಧ್ಯಯನ ಹಾಗೂ ಸಾಹಿತ್ಯ
ಚಟುವಟಿಕೆಗಳಿಗೆ ಸೂಕ್ತವಾದ ಪರಿಸರವನ್ನು ಕಲ್ಪಿಸಿಕೊಟ್ಟವು. ಪರಿಣಾಮ ವೀರಶೈವ ಸಾಹಿತ್ಯ
ಹುಲುಸಾಗಿ ಸೃಷ್ಟಿಯಾಯಿತು. ಜಿಲ್ಲೆಯ ಶರಣರು ವಚನ
ಸಾಹಿತ್ಯ ಪರಂಪರೆಯ ದ್ವಿತೀಯ ಘಟ್ಟದಲ್ಲಿ ವಚನಗಳನ್ನು ರಚಿಸುವುದರ ಮೂಲಕ ದ್ವಿತೀಯ ಘಟ್ಟದ
ಪರಂಪರೆಯ ಪ್ರವರ್ತಕರಾಗಿದ್ದಾರೆ. ಹಸ್ತಪ್ರತಿಗಳ ಸಂಕಲನ, ಪರಿಷ್ಕರಣ, ಸಂಪಾದನಾ
ಚಟುವಟಿಕೆಗೆ ತುಮಕೂರು ಜಿಲ್ಲೆಯ ಪರಿಸರ ಅದ್ವಿತೀಯವಾದ ಕೊಡುಗೆಯನ್ನು ನೀಡಿದೆ. ಅಭಿನವ
ಅಲ್ಲಮರೆಂದು ಖ್ಯಾತರಾದ ತೋಂಟದ ಸಿದ್ಧಲಿಂಗಯತಿಗಳು ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ
ಗ್ರಂಥಸಂಪಾದನೆಯ ವಿಧಿವಿಧಾನಗಳನ್ನು ಅನ್ವಯಿಸಿ ವಚನಗಳನ್ನು ಸಂಕಲಿಸುವ ವ್ಯಾಖ್ಯಾನಿಸುವಂತಹ
ಸಾಹಿತ್ಯಕ ಚಟುವಟಿಕೆಗಳನ್ನು ಕೈಗೊಂಡಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ
ವಿಶಿಷ್ಟವಾದುದಾಗಿದೆ. ವಚನ ರಚನೆ ಹಾಗೂ ವಚನ
ರಕ್ಷಣೆ,ವ್ಯಾಖ್ಯಾನ ಎರಡರಲ್ಲಿಯೂ ಸ್ಥಾನ
ಪಡೆದಿದ್ದಾರೆ. ವಚನಗಳನ್ನು ಸಂಕಲಿಸುವ, ವ್ಯಾಖ್ಯಾನಿಸುವಂತಹ ಸಾಹಿತ್ಯಕ
ಚಟುವಟಿಕೆಗಳನ್ನು ತಮ್ಮ ಶಿಷ್ಯಪ್ರಶಿಷ್ಯ ಪರಂಪರೆಯ ಮೂಲಕ ಅನುಷ್ಠಾನಗೊಳಿಸಿದರು. ಕಲ್ಯಾಣ
ಕ್ರಾಂತಿಯ ವಿಪ್ಲವದನಂತರ ಅಳಿದುಳಿದ ವಚನಸಾಹಿತ್ಯವನ್ನು ಸಂರಕ್ಷಿಸುವ ಶೋಧಿಸುವ, ಸಂಕಲಿಸುವ, ವ್ಯಾಖ್ಯಾನಿಸುವ
ಮೂಲಕ ಕಾಪಾಡಿಕೊಂಡು ಬರಲು ಜಿಲ್ಲೆಯ ವಚನಕಾರರು, ಸಂಕಲನಕಾರರು ಕಾರಣರಾಗಿದ್ದಾರೆ. ಈ ಕಾರ್ಯ ವಿಧಾನದಲ್ಲಿ ಆಧುನಿಕ ಸಂಶೋಧನೆ
ವಿಧಿವಿಧಾನಗಳಾದ ಆಕರ ಸಂಗ್ರಹ, ಸಂಯೋಜನೆ, ವಿಶ್ಲೇಷಣೆ
ಎಂಬ ಮೂರು ಹಂತಗಳನ್ನು ಗುರುತಿಸಬಹುದಾಗಿದೆ. ಅಲ್ಲಲ್ಲಿ ಅಡಗಿದ್ದ ವಚನಗಳನ್ನು
ಶೋಧಿಸುವಲ್ಲಿ, ಸಂಗ್ರಹಿಸುವಲ್ಲಿ, ನಾಮಾನುಗುಣವಾಗಿ, ವಿಷಯಾನುಗುಣವಾಗಿ
ಜೋಡಿಸುವಲ್ಲಿ,ತಾತ್ವಿಕ
ದೃಷ್ಟಿಯಿಂದ ಸಂಕಲಿಸುವಲ್ಲಿ, ಸಂವಾದ ರೂಪದಲ್ಲಿ ಸಂಯೋಜಿಸಿ
ಸಂಪಾದಿಸುವಲ್ಲಿ,ವಚನಗಳ
ಅಂತರಾರ್ಥ ಅರಿತು ವ್ಯಾಖ್ಯಾನಿಸುವಲ್ಲಿ ಆಧುನಿಕ ಗ್ರಂಥ ಸಂಪಾದನೆಯ ಸರ್ವ ಸಾಮಾನ್ಯ ತತ್ವಗಳನ್ನೇ
ಅನುಸರಿಸಿದ್ದಾರೆ. ಪಾಶ್ಚಾತ್ಯರ ಮೂಲಕ ಆಧುನಿಕ
ಗ್ರಂಥ ಸಂಪಾದನೆಯ ತತ್ವಗಳು ನಮ್ಮಲ್ಲಿಗೆ
ಪ್ರವೇಶಿಸುವ ಪೂರ್ವದಲ್ಲಿಯೇ ಆ ತತ್ವಗಳು ಜಿಲ್ಲೆಯ ಸಂಕಲನಕಾರರಿಗೆ ತಿಳಿದಿದ್ದವು ಎಂಬುದು
ದಾಖಲಾರ್ಹ ಸಂಗತಿಗಳಾಗಿವೆ. ಈ ವಿಧಿ ವಿಧಾನವು ಸಂಶೋಧನೆಯಲ್ಲಿಯ ಆಕರ ಶೋಧನಿಷ್ಠ ಸಂಶೋಧನಾ
ಪರಿಕಲ್ಪನೆಯ ಪ್ರತೀಕವಾಗಿದೆ.
ಆಕರ
ವಸ್ತು ವಿನ್ಯಾಸ,
ನಿರೂಪಣ ಕ್ರಮ, ನಾಟಕೀಯತೆಗಳಲ್ಲಿ ತನ್ನದೇ
ಆದ ವೈಶಿಷ್ಠ್ಯವನ್ನು ಪಡೆದು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟಸ್ಥಾನ ಗಳಿಸಿರುವ ಶೂನ್ಯ
ಸಂಪಾದನೆಗಳು ವಚನ ಸಂಕಲನ ಗ್ರಂಥಗಳಲ್ಲಿಯೇ ಮಹತ್ತರವಾಗಿದ್ದು ತುಮಕೂರು
ಜಿಲ್ಲೆಯ ತೋಂಟದಸಿದ್ಧಲಿಂಗಯತಿಗಳ ಶಿಷ್ಯರ ಮೂಲಕ ಸಂಪಾದನೆಗೊಂಡವುಗಳಾಗಿವೆ.
ಅಚ್ಚರಿಯ ಸಂಗತಿ ಎಂದರೆ ನಾಲ್ಕು ಶೂನ್ಯಸಂಪಾದನೆಗಳು ಜಿಲ್ಲೆಯ
ಪರಿಸರದಲ್ಲಿಯೇ ರಚಿತವಾದವುಗಳಾಗಿವೆ ಎಂಬುದು. ಮೊದಲನೆ ಶೂನ್ಯ ಸಂಪಾದನಾಕಾರ ಶಿವಗಣ
ಪ್ರಸಾದಿಮಹದೇವಯ್ಯನನ್ನು ಹೊರತು ಪಡಿಸಿ ಉಳಿದ ನಾಲ್ವರು ಶೂನ್ಯಸಂಪಾದನಾಕಾರರು ಜಿಲ್ಲೆಯ
ಪರಿಸರಕ್ಕೆ ನೇರವಾಗಿ ಸಂಬಂಧಪಟ್ಟವರಾಗಿದ್ದಾರೆ. ಶೂನ್ಯಸಂಪಾದನೆಯ ಮೂಲ ಮತ್ತು ಪರಿಷ್ಕರಣಗಳು
ಗೂಳೂರು,
ಗುಬ್ಬಿ,
ಅದರಂಗಿ ಮತ್ತು ಗುಮ್ಮಳಾಪುರ ಇವುಗಳ ಸುತ್ತಲೇ ಅಂದರೆ ತುಮಕೂರು ಜಿಲ್ಲೆಯ ಪರಿಸರದಲ್ಲಿ
ಸೃಷ್ಟಿಯಾದವುಗಳಾಗಿರುವುದು. ಇತ್ತೀಚಿನ
ಸಂಶೋಧನೆಗಳು ಕೆಂಚವೀರಣ್ಣೊಡೆಯನು ಶೂನ್ಯಸಂಪಾದನೆಯನ್ನು ರಚಿಸಿದ್ದಾನೆನ್ನುವ ಎಂ.ಆರ್.ಶ್ರೀನಿವಾಸ
ಮೂರ್ತಿ ಅವರ ವಾದವನ್ನು ಮತ್ತೇ ಜೀವಂತಗೊಳಿಸಿವೆ. ಶೂನ್ಯಸಂಪಾದನೆಯಂತಹ ಮಹಾಪ್ರಸಂಗವೊಂದು ರೂಪುಗೊಂಡಿದ್ದು, ಅನಂತರ
ಅದು ಅಂದಿನ ಧಾರ್ಮಿಕ ಅಗತ್ಯಗಳನ್ನು ಪೂರೈಸಲೆಂಬಂತೆ ಹೆಚ್ಚು ಮತೀಯವಾಗಿ ಪರಿಷ್ಕರಣಗೊಂಡಿದ್ದು, ಅದು
ಮತ್ತೆ ಮಹಾದೇವಯ್ಯನ ದರ್ಶನದ ಜಾಡನ್ನೇ ಹಿಡಿದು ಕಲಾತ್ಮಕತೆಯನ್ನು ಒಳಗೊಳ್ಳುತ್ತಲೇ ತನ್ನ
ಪರಿಧಿಯೊಳಕ್ಕೆ ಶರಣರ ಮಹಾದರ್ಶನದ ಎಳೆಗಳನ್ನು ಒಳಗೊಂಡಿದ್ದು ತುಮಕೂರು ಪರಿಸರದ ಪ್ರದೇಶದ ಸಾಂಸ್ಕೃತಿಕ
ಮಹತ್ವವನ್ನು ತಿಳಿಯಲು ಸಾಧ್ಯವಾಗುತ್ತದೆ.
ಇತ್ತೀಚೆಗೆ ಮೊದಲನೆ ಶೂನ್ಯಸಂಪಾದನಕಾರ ಶಿವಗಣ ಪ್ರಸಾದಿ ಮಹಾದೇವಯ್ಯನು ಜಿಲ್ಲೆಯ
ಪರಿಸರದವನೇ ಆಗಿರಬೇಕು ಎಂಬುದರ ಬಗೆಗೆ ಹೆಚ್ಚಿನ ಸಂಶೋಧಕರ ನಿಲುವು ವ್ಯಕ್ತವಾಗಿದೆ. ಏಕೆಂದರೆ
ನಂತರದ ಕಾಲದಲ್ಲಿ ಈತನ ಶೂನ್ಯಸಂಪಾದನೆಯನ್ನು ಪರಿಷ್ಕರಿಸಿದ ಮೂವರು ಶೂನ್ಯಸಂಪಾದನಕಾರರು ಜಿಲ್ಲೆಯ
ಪರಿಸರಕ್ಕೆ ನೇರವಾಗಿ ಸಂಬಂಧಪಟ್ಟವರು ಆಗಿರುವುದು. ಎರಡನೇ ಶೂನ್ಯಸಂಪಾದನಕಾರನಾದ ಹಲಗೆಯಾರ್ಯನು
ತುಮಕೂರು ಜಿಲ್ಲೆಯ ಪರಿಸರದ ಅದರಂಗಿಯವನು ಎಂಬುದು ಇತ್ತೀಚಿನ ಸಂಶೋಧನೆಯಿಂದ ದೃಢಪಟ್ಟಿದೆ. ಬಿ.ನಂಜುಂಡ ಸ್ವಾಮಿಯವರು ಎರಡನೇ ಶೂನ್ಯಸಂಪಾದನಾಕಾರನಾದ ಹಲಗೆಯಾರ್ಯನೂ
ಶಿವಗಂಗೆ ಬೆಟ್ಟದ ಮೇಲಣ ಗವಿಮಠಕ್ಕೆ ಅಧ್ಯಕ್ಷನಾಗಿದ್ದನೆಂದೂ ಆತನಿಂದ ಅದರಂಗಿ ಗ್ರಾಮ ನಿರ್ಮಾಣವಾಯಿತೆಂದೂ, ಅಲ್ಲಿಯ ಮಠದ ಸೋಪಾನ ದ್ವಾರದ ಎಡಭಾಗದಲ್ಲಿಯ ಶಿಲಾಶಾಸನದಲ್ಲಿ ಹಲಗೆಯಾಚಾರ್ಯರ
ಪುರವರ್ಗ ಎಂಬುದಾಗಿ ಉಲ್ಲೇಖ ವಿರುವುದಾಗಿ ತಮ್ಮ ` ಹಲಗೆಯಾರ್ಯನ
ಬಗೆಗಿನ ಇತ್ತೀಚಿನ ಸಂಶೋಧನೆಗಳು’ ಲೇಖನದಲ್ಲಿ ತಿಳಿಸಿದ್ದಾರೆ. ಹಲಗೆಯಾರ್ಯನು ಗುಬ್ಬಿಯ ಮಲ್ಲಣಾರ್ಯನ ಗುರುವೂ ಆಗಿದ್ದರ ಜೊತೆಗೆ
ಆತನಿಂದ ವೀರಶೈವಾಮೃತ ಮಹಾಪುರಾಣವನ್ನು ಬರೆಯಿಸಿದುದಾಗಿ ತಿಳಿದು ಬರುತ್ತದೆ. ವೀರಶೈವ ಸಿದ್ಧಾಂತ
ನಿರೂಪಣೆಯನ್ನು ಗುರು ಶೀಲವಂತದೇವರು ಹಲಗೆದೇವರ ಪ್ರಾರ್ಥನೆಯ ಮೇರೆಗೆ ಅವರಿಗೆ ಬೋಧಿಸಿದ್ದರು.
ಅದನ್ನು ಹಲಗೆ ದೇವರು ಕೆಂಚವೀರಣ್ಣೊಡೆಯರಿಗೆ ಜ್ಯೋತಿಯಮ್ಮನಾಲಯದಲ್ಲಿ, ಮಹಾವೀರ
ಶೀಲಸಂಪನ್ನ ಕಲ್ಲೇಶ್ವರ, ಸೈಂಧವದ ಶಾಂತದೇವರು, ಕಲ್ಯಾಣ ಮಲ್ಲೇಶ್ವರರು ನಂಜಯ್ಯ, ಸಪ್ಪೆಯ
ಮಲ್ಲಿಕಾರ್ಜುನ,
ಸಮಾಧಿ ಸಿದ್ಧಮ್ಮ, ಸಪ್ಪೆಯಮ್ಮ ಮುಂತಾದವರ ಸಮ್ಮುಖದಲ್ಲಿ ವಿವರಿಸಿದರು. ವೀರಶೈವಧರ್ಮ
ತತ್ವಸಿದ್ಧಾಂತಗಳನ್ನು ಒಳಗೊಂಡ ಕೃತಿಯನ್ನು ರಚಿಸುವ ಮಹಾನುಭಾವರು ಯಾರು ಎಂದು ಅಂದಿನ ಧಾರ್ಮಿಕ
ಮುಖಂಡರೂ ಗುರುವರ್ಗದವರೂ ಸಮಾಲೋಚಿಸಿ ಹಲಗೆಯಾರ್ಯರು ತಮ್ಮ ಶಿಷ್ಯನಾದ ಮಲ್ಲಣಾರ್ಯನೇ ಸಮರ್ಥ ಎಂದು
ನಿಶ್ಚಯಿಸಿ ಆ ಮಹತ್ ಕಾರ್ಯವನ್ನು ಮಲ್ಲಣಾರ್ಯನಿಗೆ ವಹಿಸಿದ ವಿವರವು ಕಾವ್ಯದ ಪದ್ಯದಿಂದಲೇ
(ಕಾಂ.1-ಸಂ.1-ಪ.48) ತಿಳಿದು ಬರುತ್ತದೆ.
ಈ ವೀರಾಶೈವಾಮೃತಾಖ್ಯ ಸಂಗ್ರಹವನೀ
ಭೂವಳಯದಲ್ಲಿ ಕೃತಿಯಂಮಾಳ್ಪ ಶಿವಕವಿಯ
ದಾವನೆಂದರಿದು ಹಲಗೆಯ ದೇಶಿಕಂ ಮಲ್ಲಣಾರ್ಯನಂ ಕರೆದು
ನುಡಿದಂ
ನಾವು ಪೇಳ್ವೀಬೋಧೆಯಂ ಪದನ ಮಾಡುವೊಡೆ
ಪಾವನ ಚರಿತ್ರ ಕೇಳ್ ನೀನೆ ಯೋಗ್ಯಕಣ ( ಕಾ.1.ಸಂ.1 ಪ.48)ಎಂದು ವಿರಕ್ತಾಧೀಶ್ವರ ಹಲಗೆದೇವರು
ವೀರಶೈವಾಮೃತ ಪುರಾಣ ರಚಿಸಲು ಮಲ್ಲಣಾರ್ಯರಿಗೆ ಪ್ರೇರಣೆ ಯಿತ್ತರು. ಗುಬ್ಬಿಯ ಮಲ್ಲಣಾರ್ಯರು
ಇದಕ್ಕೆ ಪದನಂ ಮಾಡಿರುವರು. ಅಂದರೆ ಪದ್ಯದಲ್ಲಿ ಕೃತಿ ವಿರಚನೆ ಮಾಡಿರುವರು. ಈ ಪುರಾಣ
ಕಾವ್ಯದಲ್ಲಿ ಹಲಗೆದೇವರು ಕೆಂಚವೀರಣ್ಣೊಡೆಯರಿಗೆ ಹೇಳಿದಂತೆ ಹಲವೆಡೆ ಉಲ್ಲೇಖವಿದೆ. ಹಲಗೆದೇವರು
ವೀರಶೈವ ಸಿದ್ಧಾಂತವನ್ನು ಅದರ ಹಿನ್ನೆಲೆ ಮುನ್ನೆಲೆಗಳನ್ನು ವಿವರಿಸಿದ್ದು ಅದನ್ನು ಕರಗತ
ಮಾಡಿಕೊಂಡು ಸ್ವಾನುಭವದಿಂದ ಮಲ್ಲಣಾರ್ಯನು ಈ ಬೃಹತ್ ಕಾವ್ಯವನ್ನು ರಚಿಸಿದ್ದಾನೆ. ಈ ವಿವರಗಳು ಹಲಗೆಯಾರ್ಯರೂ
ಜಿಲ್ಲೆಯ ಪರಿಸರಕ್ಕೆ ಸಂಬಂದಪಟ್ಟವರು
ಎಂಬುದಕ್ಕೆ ಪುರಾವೆ ದೊರೆತಂತಾಗಿದೆ.
ಶೂನ್ಯಸಂಪಾದನೆಯ ಮೂರು ಪರಿಷ್ಕರಣಗಳು ನಡೆಯುವ
ಸಂದರ್ಭದಲ್ಲಿ ಮತ್ತು ಆ ಕಾಲದಲ್ಲಿ ಸಾಂಸ್ಕೃತಿಕ ಮಹತ್ವವನ್ನು ಮತ್ತು ಪ್ರಭಾವವನ್ನು ಪಡೆದಿದ್ದ
ಎಡೆಯೂರು ಸಿದ್ಧಲಿಂಗೇಶ್ವರರು ಮತ್ತು ಬೋಳಬಸವೇಶ್ವರರು ಕನ್ನಡನಾಡಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ
ಜೀವನದ ಮೇಲೆ ವ್ಯಾಪಕವಾದ ಪ್ರಭಾವವನ್ನು ಬೀರಿದವರಾಗಿ ಕಂಡು ಬರುತ್ತಾರೆ. ಮೂರನೇ ಮತ್ತು ನಾಲ್ಕನೇ
ಶೂನ್ಯಸಂಪಾದನಕಾರರಾದ ಗುಮ್ಮಳಾಪುರದ ಸಿದ್ಧಲಿಂಗಯತಿ ಹಾಗೂ ಗೂಳೂರು ಸಿದ್ಧವೀರಣ್ಣೊಡೆಯರು
ನೇರವಾಗಿ ತೋಂಟದ ಸಿದ್ಧಲಿಂಗಯತಿಗಳ ಶಿಷ್ಯ ಮತ್ತು ಪ್ರಶಿಷ್ಯರಾಗಿದ್ದು ಜಿಲ್ಲೆಗೆ ಸಂಬಂಧಪಟ್ಟವರಾಗಿದ್ದಾರೆ. ಜೊತೆಗೆ
ಗುಮ್ಮಳಾಪುರದ ಸಿದ್ಧಲಿಂಗಯತಿಯು ಶೂನ್ಯಸಂಪಾದನೆಯಲ್ಲಿ ತನ್ನ ಬಗೆಗೆ ` ಅನಾದಿ
ಪರಶಿವ ತಾನೆ ಲೀಲಾ ಕ್ರೀಡೆಗೋಸ್ಕರ ಮರ್ತ್ಯಕ್ಕೆ ಬಿಜಯಂಗೈದ ಕರಚರಣ ಅವಯವಮಂ ಧರಿಸಿದ ತೋಂಟದ
ಸಿದ್ಧೇಶ್ವರನ ವರಪುತ್ರನಾಗಿ ಜಗಹಿತಾರ್ಥವಾಗಿ
ಗುಮ್ಮಳಾಪುರದ ಸಿದ್ಧಲಿಂಗದೇವರೆಂಬ ನಾಮವಿಡಿದು ಮತ್ತು ಶ್ರೀಮದ್ದೇಶಿಕ ಚಕ್ರವರ್ತಿಯೆನಿಪಾ
ಸತ್ನೀರ್ತಿಕಾಂತಂ ಬುಧಸ್ತೋಮಾಂಬೋನಿಧಿ ಪೂರ್ಣಚಂದ್ರನನಿಶಂ ಶ್ರೀ ತೋಂಟದಾರ್ಯಂಗೆ
ಸತ್ಕ್ರೀಯಂಬೆತ್ತಗದೂರ ಬೋಳಬಸವೇಶಾಚಾರ್ಯ ಕಾರುಣ್ಯದಿಂ ಭೌಮಂ ಸಿದ್ಧಸುಲಿಂಗ ಪೇಳ್ದನೊಲವಿಂದೀ
ಶೂನ್ಯಸಂಪಾದನೆಯಂ’ ಎಂದು ಹಾಗೂ ಕೃತಿಯ ಕೊನೆಯಲ್ಲಿ ಅನಾದಿ ಪರಶಿವ ತಾನೆ ತೋಂಟದ ಸಿದ್ಧೇಶ್ವರದೇವರ
ದಿವ್ಯಶ್ರೀಪಾದಕ್ಕೆ ಸಮರ್ಪಿಸಿದ ಶೂನ್ಯ ಸಂಪಾದನೆ ಎಂದು ಹೇಳಿಕೊಂಡಿದ್ದಾನೆ. ಜೊತೆಗೆ ಸಮಾಪ್ತಿ ಕಂದ ಪದ್ಯ 4 ರಲ್ಲಿ, ತೋಂಟದ ಸಿದ್ಧೇಶ್ವರನ
ಪಾದಮೂಲದ ಬಳಿ ಕುಳಿತ ಗುಮ್ಮಳಾಪರಾಧೀಶನಾದ ತಾನು ಮೀಟೆನಿಸುವ ವಚನಾಮೃತದೂಟವ(ಶೂನ್ಯ ಸಂಪಾದನೆಯನ್ನು) ಶರಣಜನರ
ಕರ್ಣಕ್ಕಿತ್ತುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಕ್ರಿ.ಶ. 1580 ರ ಎಡೆಯೂರು ಶಿಲಾಶಾಸನದಲ್ಲಿ
ತೋಂಟದ ಸಿದ್ಧಲಿಂಗ ಯತಿಗಳ
ಜೊತೆಗೆ ಇದ್ದ ಇತರ ವಿರತರುಗಳ ಜೊತೆ ಗುಮ್ಮಳಾಪುರದ ಸಿದ್ಧಲಿಂಗರೂ ಇದ್ದರು
ಎಂಬ ವಿವರ ಹಾಗೂ ಸಿದ್ಧನಂಜೇಶನ ರಾಘವಾಂಕ ಚರಿತದಲ್ಲಿಯ, ತುಮಕೂರಿನಲ್ಲಿ ನಡೆದ ತೋಂಟದ ಸಿದ್ಧಲಿಂಗರ
ಮೆರವಣಿಗೆಯಲ್ಲಿ ಗುಮ್ಲಾಪುರದ ಸಿದ್ಧಲಿಂಗನೂ ಭಾಗವಹಿಸಿದ್ದನೆಂಬ ಹೇಳಿಕೆಯು ತೋಂಟದ ಸಿದ್ಧಲಿಂಗ ಯತಿಗಳ
ಪರಂಪರೆಯವನು ಎಂಬುದನ್ನು ಸ್ಥಿರೀಕರಿಸುತ್ತದೆ. ಜೊತೆಗೆ ತುಮಕೂರು ಜಿಲ್ಲೆಯಲ್ಲಿ ದೊರೆತ ಜಕ್ಕಣಾರ್ಯ ಸಂಕಲಿತ
ಏಕೋತ್ತರ ಶತಸ್ಥಲ ಹಸ್ತಪ್ರತಿಗೆ ಸಂಬಂಧಿಸಿದ ಪುಷ್ಪಿಕೆಯ ಆದಿಯಲ್ಲಿ
ಶ್ರೀ
ಗುಮಳಾಪುರ ಸಿದ್ಧಲಿಂಗಾಯ ನಮಃ| ಯೆಕೋತ್ತರ ಸ್ವರವಚನ|
ಪಿಂಡಸ್ಥಲ ರಾಗಮಧುಮಾಧವಿ
ಬಿಂದು-ವಿನ್ನಾಣದೊಳಗಂದವಿಟ್ಟಿಹ..........ಎಂದು
ಅಂತ್ಯದಲ್ಲಿ......ಹೆಬ್ಬೂರ ದೇವರು ಬರದ್ದು
ಗುರುಲಿಂಗವೇ ಗತಿ,
ಮತಿ,
ಶುಭಮಸ್ತು,
ನಿರ್ವಿಘ್ನಮಸ್ತು ಗುಮ್ಮಳಾಪುರದ ಸಿದ್ಧಲಿಂಗದೇವರ ಪಾದವೆ ಗತಿ ಮತಿ
ಅಯ್ಯ.......ಗುಂಮಳಾಪುರಾಧಿಪ ಸಿದ್ಧಲಿಂಗಾಯ ನಮಃ
ಎಂದಿದೆ. ಹಾಗೆಯೇ ಅದೇ ಕಟ್ಟಿನಲ್ಲಿಯ ಕೊನೆಯ ನಾಲ್ಕುಗರಿಗಳಲ್ಲಿ ವಾರ್ತೆ ಸೋಮಣ್ಣನ `ಪಂಚೀಕರಣ
ಪದಗಳು' ಪರಿವರ್ಧಿನಿಷಟ್ಪದಿಯ
ಕೃತಿಯ ಆದಿಯಲ್ಲಿ ಶ್ರೀಗುರುಗುಮ್ಮಳಾಪುರ ಸಿದ್ಧಲಿಂಗಾಯ ನಮಃ ಎಂದಿದೆ. ತುಮಕೂರು ಜಿಲ್ಲೆಯ ಈ ಹಸ್ತಪ್ರತಿ ಪುಷ್ಟಿಕೆಗಳಲ್ಲಿಯ
ಉಲ್ಲೇಖಗಳು ಶೂನ್ಯ ಸಂಪಾದನಾಕಾರ ಗುಮ್ಮಳಾಪುರ ಸಿದ್ಧಲಿಂಗಯತಿಗೂ ತುಮಕೂರು ಜಿಲ್ಲೆಯ ಪರಿಸರಕ್ಕೂ
ಇದ್ದ ನಿಕಟ ಸಂಪರ್ಕದ ಬಗೆಗೆ ಹಾಗೂ ತೋಂಟದಸಿದ್ಧಲಿಂಗಯತಿಗಳ
ಶಿಷ್ಯ ಪರಂಪರೆಯವನು ಎಂಬುವುದಕ್ಕೆ ಪುರಾವೆಯನ್ನು ಒದಗಿಸುತ್ತದೆ.
ಗೂಳೂರು
ಸಿದ್ಧವೀರೇಶ್ವರದೇವರು ತೋಂಟದ ಸಿದ್ಧಲಿಂಗಯತಿಗಳ ಶಿಷ್ಯರಾದ ನಾಗವಲ್ಲಿಯ ಬೋಳಬಸವರ ಶಿಷ್ಯರಾಗಿದ್ದು, ಐದನೆಯ
ಶೂನ್ಯಸಂಪಾದನೆಯ ಸಂಕಲನಕಾರರಾಗಿದ್ದಾರೆ. ಗುಮ್ಮಳಾಪುರದ
ಸಿದ್ಧಲಿಂಗರ ಪ್ರಭಾವ ತನ್ನ ಮೇಲೆ ಆಗಿರುವ ಬಗೆಗೆ ಸ್ವತಹ ಗೂಳೂರುಸಿದ್ಧವೀರಣ್ಣೊಡೆಯನೇ
ಕೃತಿಯ ಕೊನೆಯಲ್ಲಿ ಉಲ್ಲೇಖಿಸಿದ್ದಾನೆ. ಗೂಳೂರುಸಿದ್ಧವೀರಣ್ಣೊಡೆಯನು ತನ್ನ ಕೃತಿಯ ಸಮಾಪ್ತಿ
ವಾಕ್ಯದಲ್ಲಿ ಬರುವ ಗದ್ಯಭಾಗ ಮತ್ತು ಅನಂತರ ಬರುವ
ಮೂರು ವೃತ್ತ ಮತ್ತು ಕಂದಪದ್ಯಗಳಲ್ಲಿ ತನ್ನ ಕೃತಿ ಬಗ್ಗೆ ಮತ್ತು ಗುರುಪರಂಪರೆಯ ಬಗೆಗೆ
ವಿಸ್ತಾರವಾಗಿ ಹೇಳಿಕೊಂಡಿದ್ದಾನೆ. ಇವರು
ಬೋಳಬಸವೇಶ್ವರರಾದ ಮೇಲೆ ಅನುಕ್ರಮವಾಗಿ ಶೂನ್ಯಪೀಠದ ಗಾದಿಗೇರಿದವರು. ಇವರು ಶೂನ್ಯಸಂಪಾದನೆಯ
ಪರಿಷ್ಕರಣವನ್ನು ಕೈಗೆತ್ತಿಕೊಂಡಿದ್ದು ಗಮನಾರ್ಹವಾದುದಾಗಿದೆ. ಶಿವಗಣಪ್ರಸಾದಿ ಮಹಾದೇವಯ್ಯನ
ಶೂನ್ಯಸಂಪಾದನೆಯನ್ನು ಆಧಾರವಾಗಿಟ್ಟುಕೊಂಡು ` ಇಲ್ಲಿ ವಚನಕ್ರಮ ತಪ್ಪಿದಡೆ ನಿಮ್ಮ
ಪರಿಜ್ಞಾನದಿಂದ ತಿದ್ದಿಕೊಂಬುದೆಂದು ಎನಲಾಗಿ ಆ ವಾಕ್ಯವಿಡಿದು ಗುಮ್ಮಳಾಪುರದ ಸಿದ್ಧಲಿಂಗದೇವರು, ಅಲ್ಲಿ
ಸಿದ್ಧರಾಮಯ್ಯದೇವರಿಗೆ ದೀಕ್ಷಾಕ್ರಮವಿಲ್ಲದಿರಲು, ಬಸವಾದಿ
ಪ್ರಮಥರ ವಚನ ಪ್ರಸಿದ್ಧವಾಗಿ ಸೇರಿಸಿದರು. ಆ ಪರಿಯಲೆ ಅನಿರ್ವಾಚ್ಯ ಪರಂಜ್ಯೋತಿಸ್ವರೂಪ ಷಟ್‍ಸ್ಥಲ
ಸಂಪನ್ನ ಷಡುಲಿಂಗಾಂಗಭರಿತ,ಶರಣ ಜನಬಾಂಧವ, ಶರಣಜಲಹೃತ್ಕಮಲ
ಕರ್ಣಿಕಾವಾಸ ಅನಾದಿ ಪರಶಿವನೆನಿಸುವ ಸಿದ್ಧಲಿಂಗೇಶ್ವರನ ಕೃಪಾಕಟಾಕ್ಷ ಪಾತ್ರರಾದ ಬೋಳಬಸವೇಶ್ವರನು, ಆ
ಬೋಳಬಸವೇಶ್ವರನ ಮಹಾಜ್ಞಾನಾನುಭಾವ ಪ್ರಸನ್ನತಿಕೆಯಿಂದ ಗೂಳೂರು ಸಿದ್ಧವೀರಣ್ಣೊಡೆಯರು ಈ
ಶೂನ್ಯಸಂಪಾದನೆಯಂ ರಚಿಸಿರುವುದಾಗಿ ಹೇಳಿಕೊಂಡಿದ್ದಾನೆ. ತೋಂಟದ ಸಿದ್ಧಲಿಂಗನ ಶಿಷ್ಯನಾದ
ಬೋಳಬಸವೇಶಾರ್ಯನ ಕರುಣೆಯಿಂದ ಈ ಕೃತಿಯನ್ನು ರಚಿಸಿದ್ದಾಗಿ ಹೇಳಿದರೂ ಕೊನೆಯ ಕಂದ ಪದ್ಯದಲ್ಲಿ ಈತ
ತನ್ನನ್ನು `
ಗುರುತೋಂಟದ ಸಿದ್ಧೇಶನ ಚರಣಾಂಬೋಜಾತಮಂ ಸ್ಥರೀಕೃತ ಚಿತ್ತೋತ್ಕರ ಸಿದ್ಧವೀರಯೋಗೀಶ್ವರ ಎಂದು
ಕರೆದುಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಸಿದ್ಧವೀರಣಾರ್ಯನು ತೋಂಟದ ಸಿದ್ಧಲಿಂಗ ಶಿವಯೋಗಿಗಳ
ಶಿಷ್ಯಪರಂಪರೆಯಲ್ಲಿಯೇ ಬಂದು ಅವರ ಪ್ರಶಿಷ್ಯರಾಗಿ ಗುಮ್ಮಳಾಪುರ ಸಿದ್ಧಲಿಂಗಯತಿಗಳ ತರುವಾಯ
ಶೂನ್ಯಪೀಠದ ಅಧ್ಯಕ್ಷರಾಗಿದ್ದಾರೆ. ಈತನು ತನ್ನ ಗುರುವಿನ ಹೆಸರನ್ನು ಹೇಳುವಾಗ ತೋಟದ
ಸಿದ್ಧಲಿಂಗರನ್ನು ಮತ್ತು ಬೋಳಬಸವರಿಬ್ಬರನ್ನು ಪ್ರಸ್ತಾಪ ಮಾಡುತ್ತಾನೆ. ಹೀಗಾಗಿ ತೋಂಟದ
ಸಿದ್ಧಲಿಂಗ ಯತಿಗಳೂ ಗುರುಗಳು ಮತ್ತು ಬೋಳಬಸವೇಶರೂ ಗುರುಗಳಾಗಿದ್ದಾರೆ. ತೋಂಟದ ಸಿದ್ಧಲಿಂಗಯತಿಗಳು ವೀರಶೈವ
ಸಾಹಿತ್ಯ-ಸಂಸ್ಕೃತಿಯ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರವಹಿಸಿದವರು. ಇವರು ವಚನರಚನೆ ಮತ್ತು
ವಚನಸಾಹಿತ್ಯ ಸಂರಕ್ಷಣೆಯ ಜೊತೆಗೆ ಶೂನ್ಯಸಂಪಾದನೆಯ ಪರಿಷ್ಕರಣ ಹೊಸದಿಕ್ಕನ್ನು ಹಿಡಿಯಲು
ಕಾರಣಕರ್ತರಾದವರು.
ಕ್ರಿ.ಶ.1603ರಲ್ಲಿ
`ಪಂಚಪ್ರಕಾರ
ಗದ್ಯವನ್ನು ಶ್ರೀಮದ್ವೀರಶೈವಾಚಾರ ವಿಸ್ತಾರ ವೀರಮಾಹೇಶ್ವರಾಗ್ರಣಿ ವಿರಕ್ತ ಶಿಖಾಮಣಿ ಗೂಳೂರು
ಸಿದ್ಧವೀರೇಶ್ವರದೇವರ ಶ್ರೀಪಾದಪದ್ಮಕ್ಕೆ ಬಿಜ್ಜಾವರಪುರವರ ಗುರುಲಿಂಗ ಜಂಗಮಾಚಾರಾದಿವಾಚರಣ
ಚಿಕ್ಕಭೂಪಾಲ ಭಕ್ತಿಯಿಂದೆ ಬರೆಯಿಸಿ ಸಮರ್ಪಿಸಿದರು' ಎಂಬ
ಹಸ್ತಪ್ರತಿ ಪುಷ್ಪಿಕೆಯಿಂದ ಪಂಚಪ್ರಕಾರ ಗದ್ಯಗಳನ್ನು ಇಮ್ಮಡಿ ಚಿಕ್ಕಭೂಪಾಲ ಭಕ್ತಿಯಿಂದ ಬರೆಯಿಸಿ
ಗೂಳೂರು ಸಿದ್ಧವೀರೇಶ್ವರದೇವರ ಶ್ರೀಪಾದ ಪದ್ಮಕ್ಕೆ ಅರ್ಪಿಸಿರುವುದು ತಿಳಿದುಬರುತ್ತದೆ. ಈ
ಪ್ರತಿಯ ಕಾಲೋಲ್ಲೇಖದ ಪ್ರಕಾರ ಕ್ರಿ.ಶ. 1603ರಲ್ಲಿ ಗೂಳೂರು ಸಿದ್ಧವೀರೇಶ್ವರ ದೇವರು ಜೀವಿಸಿದ್ದರು
ಎಂಬುದು ತಿಳಿದುಬರುತ್ತವೆ. ಇವರ
ಶೂನ್ಯಸಂಪಾದನೆಯನ್ನು ವಿರಕ್ತ ತೊಂಟದಾರ್ಯ ಕ್ರಿ.ಶ,1616ರಲ್ಲಿ
ಪ್ರತಿಮಾಡಿದ್ದಾರೆ. ಈ ಹಸ್ತಪ್ರತಿಯ ಪುಷ್ಟಿಕೆಯ ಕಾಲದ ಉಲ್ಲೇಖವು ತೋಂಟದ ಸಿದ್ಧಲಿಂಗಯತಿಗಳ ಕಾಲ
ನಿರ್ಣಯಕ್ಕೆ ಆಕರವಾಗಿದೆ.
ಶೂನ್ಯಸಂಪಾನೆಯು ಪರಿಷ್ಕರಣಗಳಲ್ಲಿ ಹೊಸ ಹೊಸ ಪ್ರಸಂಗಗಳು ಕೂಡಿಕೊಂಡು
ಜೊತೆಜೊತೆಯಲ್ಲಿಯೇ ಮೂಲದಲ್ಲಿದ್ದ ಪ್ರಸಂಗಗಳು ಅರ್ಥಪೂರ್ಣವಾಗಿ ಮೂಡಿಬರಲು ತುಮಕೂರು ಜಿಲ್ಲೆಯ ತೋಂಟದಸಿದ್ಧಲಿಂಗಯತಿಗಳು ಮತ್ತು
ಅವರ ಶಿಷ್ಯ-ಪ್ರಶಿಷ್ಯ ಪರಂಪರೆಯೇ ಪ್ರಮುಖ ಕಾರಣವಾಗಿದೆ.
ಇನ್ನೊಂದು
ಅಂಶ ಎಂದರೆ ಪಾಶ್ಚಾತ್ಯರಿಂದ ಭಾರತಕ್ಕೆ ಆಗಮಿಸಿತೆಂದು ಹೇಳಲಾಗುವ ಗ್ರಂಥ ಸಂಪಾದನೆಯ
ವಿಧಿವಿಧಾನಗಳಾದ ಆಕರ ಸಂಗ್ರಹ, ಸಂಯೋಜನೆ ಹಾಗೂ ವಿಶ್ಲೇಷಣೆ ಎಂಬ ಮೂರು
ಹಂತಗಳ ಪರಿಚಯ 16ನೇ
ಶತಮಾನದಲ್ಲಿಯ ತುಮಕೂರು ಜಿಲ್ಲೆಯ ಸಂಕಲನಕಾರರಿಗಿತ್ತು ಎಂಬುದು. ಅಳಿದುಳಿದ ವಚನರಾಶಿಯನ್ನು
ಸಂಗ್ರಹಿಸುವಲ್ಲಿ,
ನಾಮಾನುಗುಣವಾಗಿ, ವಿಷಯಾನುಗುಣವಾಗಿ ಜೋಡಿಸುವಲ್ಲಿ, ತಾತ್ವಿಕ
ದೃಷ್ಟಿಯಿಂದ ಸಂಕಲಿಸುವಲ್ಲಿ, ಸಂವಾದ ರೂಪದಲ್ಲಿ ಸಂಯೋಜಿಸಿ
ಸಂಪಾದಿಸುವಲ್ಲಿ,
ವಚನಗಳ ಅಂತರಾರ್ಥ ಅರಿತು ವ್ಯಾಖ್ಯಾನಿಸುವಲ್ಲಿ ಆಧುನಿಕ ಗ್ರಂಥಸಂಪಾದನೆಯ ಸರ್ವ ಸಾಮಾನ್ಯ
ತತ್ವಗಳನ್ನೇ ಅನುಸರಿಸಿದ್ದಾರೆ. ಇದರಿಂದಾಗಿ ಪಾಶ್ಚಾತ್ಯರ ಮೂಲಕ ಈ ತತ್ವಗಳು ನಮ್ಮಲ್ಲಿಗೆ
ಪ್ರವೇಶಿಸುವುದಕ್ಕಿಂತ ಪೂರ್ವದಲ್ಲಿಯೇ ಜಿಲ್ಲೆಯ ನಮ್ಮ ಸಂಕಲನಕಾರರಿಗೆ ತಿಳಿದಿದ್ದವು ಎಂಬುದು
ದಾಖಲಾರ್ಹವಾಗಿದೆ.
ತುಮಕೂರು ಜಿಲ್ಲೆಯ ಹಸ್ತಪ್ರತಿ ಸಂಪತ್ತು ವೈವಿಧ್ಯತೆಯಿಂದ ಕೂಡಿದೆ.
ಹಸ್ತಪ್ರತಿಗಳ ಸಂಕಲನ, ಪರಿಷ್ಕರಣ, ಸಂಪಾದನಾ ಚಟುವಟಿಕೆಗೆ ತುಮಕೂರು ಜಿಲ್ಲೆಯ
ಪರಿಸರ ಅದ್ವಿತೀಯವಾದ ಕೊಡುಗೆಯನ್ನು ನೀಡಿದೆ.ಅಭಿನವ ಅಲ್ಲಮರೆಂದು ಖ್ಯಾತರಾದ ತೋಂಟದ
ಸಿದ್ಧಲಿಂಗಯತಿಗಳು ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ ಗ್ರಂಥಸಂಪಾದನೆಯ ವಿಧಿವಿಧಾನಗಳನ್ನು ಅನ್ವಯಿಸಿ
ವಚನಗಳನ್ನು ಸಂಕಲಿಸುವ ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ಕೈಗೊಂಡಿರುವುದು ಕನ್ನಡ
ಸಾಹಿತ್ಯ ಚರಿತ್ರೆಯಲ್ಲಿಯೇ ವಿಶಿಷ್ಟವಾದುದಾಗಿದೆ. ಈ ವಿಧಿ ವಿಧಾನವು ಸಂಶೋಧನೆಯಲ್ಲಿಯ ಆಕರ
ಶೋಧನಿಷ್ಠ ಸಂಶೋಧನಾ ಪರಿಕಲ್ಪನೆಯ ಪ್ರತೀಕವಾಗಿದೆ.
ಇತ್ತೀಚಿನ ಎಂ.ಎಂ ಕಲುಬುರ್ಗಿಯವರ ಸಂಶೋಧನೆಯನ್ನು
ಆಧರಿಸಿ ಹೇಳುವುದಾದರೆ (ದೊಡ್ಡ ಹಾಗೂ ಸಣ್ಣ ಅಥವಾ ಉಪ ಶೂನ್ಯ ಸಂಪಾದನೆಗಳನ್ನು ಸೇರಿಸಿ )
ಶೂನ್ಯಸಂಪಾದನೆಗಳ ಸಂಖ್ಯೆ ಒಟ್ಟು ಏಳು ಆಗುತ್ತದೆ.
ಅವುಗಳನ್ನು ಕಾಲಾನುಕ್ರಮವಾಗಿ.
1.ಶಿವಗಣ ಪ್ರಸಾದಿ ಮಹಾದೇವಯ್ಯನ ಶೂನ್ಯ
ಸಂಪಾದನೆ.(ಕ್ರಿ.ಶ.1430)(ಪ್ರಕಟ)
2.ಸುಖ ಸಂಪಾದನೆಯ
ವಚನಗಳು(ಉಪಶೂನ್ಯಸಂಪಾದನೆ) (ಇದು ಮುಂದೆ ಕೋಲ ಶಾಂತಯ್ಯನಿಂದ ಆರಂಭವಾಗುವ ಸಕಲ ಪುರಾತನರ ವಚನಗಳು
ಕಟ್ಟಿನಲ್ಲಿ ಸೇರಿಕೊಂಡಿವೆ.)
3.ಹಲಗೆಯಾರ್ಯನ ಶೂನ್ಯಸಂಪಾದನೆ (ಕ್ರಿ.ಶ 1530)(ಪ್ರಕಟ)
4.ಕೆಂಚ ವೀರಣ್ಣೊಡೆಯರ ಶೂನ್ಯಸಂಪಾದನೆ
(ಅಲಭ್ಯ) (ಇತ್ತೀಚಿನ ಸಂಶೋಧನೆಗಳು ಕೆಂಚವೀರಣ್ಣೊಡೆಯನು ಶೂನ್ಯಸಂಪಾದನೆಯನ್ನು
ರಚಿಸಿದ್ದಾನೆನ್ನುವ ಎಂ.ಆರ್.ಶ್ರೀನಿವಾಸ ಮೂರ್ತಿ ಅವರ ವಾದವನ್ನು ಮತ್ತೇ ಜೀವಂತಗೊಳಿಸಿವೆ.)
5.ಗುಮ್ಮಳಾಪುರದ ಸಿದ್ಧಲಿಂಗರ ಶೂನ್ಯ
ಸಂಪಾದನೆ (ಕ್ರಿ.ಶ 1580 ಕ್ಕೆ ಮೊದಲು)(ಪ್ರಕಟ)
6.ಗೂಳೂರು ಸಿದ್ಧವೀರಣ್ಣೊಡೆಯರ ಸಂಪಾದನೆ
(ಕ್ರಿ.ಶ 1600)(ಪ್ರಕಟ)
7.ಕಟ್ಟಿಗೆ ಹಳ್ಳಿ ಸಿದ್ಧಲಿಂಗನ ಸಂಪಾದನೆ
ಸಾರಾಮೃತ ( ಉಪ ಶೂನ್ಯಸಂಪಾದನೆ)
ಒಟ್ಟಾರೆ ಶೂನ್ಯಸಂಪಾದನೆಗಳು ನಾಲ್ಕು ಅಲ್ಲ ಐದು. ಸಣ್ಣ ಅಥವಾ ಉಪ ಸಂಪಾದನೆಗಳನ್ನು
ಸೇರಿಸಿದರೆ ಏಳು ಆಗುತ್ತವೆ. ಲಭ್ಯವಿರುವ ಶೂನ್ಯ
ಸಂಪಾದನೆಯು ಆದಿ ಮತ್ತು ಅಂತ್ಯದಲ್ಲಿರುವ ಪುಷ್ಪಿಕೆಗಳ ಮಾಹಿತಿಗಳಿಂದ ಪ್ರಥಮ ಶೂನ್ಯ ಸಂಪಾದನಾಕಾರ ಶಿವಗಣ ಪ್ರಸಾದಿ
ಮಹಾದೇವಯ್ಯನ ಶೂನ್ಯ ಸಂಪಾದನೆ ಪ್ರಪ್ರಥಮಸಾರಿ
ಪರಿಷ್ಕರಣಕ್ಕೆ ಒಳಪಟ್ಟಿದ್ದು ಹಲಗೆಯಾರ್ಯನಿಂದ. ಅನಂತರ ಹಲಗೆಯಾರ್ಯನ ಶೂನ್ಯಸಂಪಾದನೆ ಮತ್ತೆ
ಪರಿಷ್ಕರಣಕ್ಕೆ ಒಳಪಟ್ಟಿದ್ದು ಕೆಂಚವೀರಣ್ಣೊಡೆಯನಿಂದ. ಈ
ಪ್ರತಿ ಲಭ್ಯವಿಲ್ಲ. ಅನಂತರ ಕೆಂಚ ವೀರಣ್ಣೊಡೆಯನ ಶೂನ್ಯ ಸಂಪಾದನೆಯನ್ನು ಗುಮ್ಮಳಾಪುರದ ಗೂಳೂರು ಸಿದ್ಧವೀರಣ್ಣೊಡೆಯ
ಪರಿಷ್ಕರಿಸಿದವನಾಗಿದ್ದಾನೆಂಬುದು ಸ್ಪೃಷ್ಟವಾಗಿ ತಿಳಿದು ಬರುತ್ತದೆ.
ಶೂನ್ಯ ಸಂಪಾದನೆಗಳ ಸಂಖ್ಯೆಯ ಬಗ್ಗೆ ಸಂಶೋಧಕರಲ್ಲಿ ಚರ್ಚೆ
ನಡೆದಿದ್ದರೂ ಲಭ್ಯವಿರುವ ಶೂನ್ಯ ಸಂಪಾದನೆಗಳ ಸಂಖ್ಯೆ 4. ಮೂರು
ಗ್ರಂಥಗಳು ಈಗಾಗಲೇ ಹಲವಾರು ಆವೃತ್ತಿಗಳಲ್ಲಿ ಪ್ರಕಟವಾಗಿದ್ದವು. ಕ್ರಿ.ಶ. 1930
ರಲ್ಲಿ ಫ.ಗು.ಹಳಕಟ್ಟಿಯವರು ತಮ್ಮ ಶಿವಾನುಭವ ಗ್ರಂಥಮಾಲಿಕೆಯ ಮೂಲಕ ಗೂಳೂರು ಸಿದ್ದವೀರಣ್ಣೊಡೆಯರ
ಶೂನ್ಯಸಂಪಾದನೆಯನ್ನು ಸಂಪಾದಿಸಿ ಪ್ರಕಟಿಸಿದರು.
ಈ ಶೂನ್ಯಸಂಪಾದನೆಯನ್ನು 1958 ರಲ್ಲಿ ಶಿ.ಶಿ.ಭೂಸನೂರಮಠ ಅವರು
ಸಂಪಾದಿಸಿ ಗುಲಬರ್ಗಾ ಜಿಲ್ಲೆಯ ರಾವೂರ ಶ್ರೀ.ಸಿದ್ಧಲಿಂಗೇಶ್ವರ ಮಠದ ಮೂಲಕ ಪ್ರಕಟಿಸಿದರು.
ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯನ್ನು ಎಲ್.ಬಸವರಾಜುರವರು ಸಂಪಾದಿಸಿ ಚಿತ್ರದುರ್ಗದ ಬೃಹನ್ಮಠದ ಮೂಲಕ 1969
ರಲ್ಲಿ ಪ್ರಕಟಿಸಿದರು. ಈ ಶೂನ್ಯ ಸಂಪಾದನೆಯನ್ನು ಆರ್.ಸಿ.ಹಿರೇಮಠ ಅವರು ಸಂಪಾದಿಸಿ ಕರ್ನಾಟಕ
ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ 1970 ರಲ್ಲಿ ಪ್ರಕಟಿಸಿದರು. ಗುಮ್ಮಳಾಪುರದ ಸಿದ್ಧಲಿಂಗಯತಿಗಳ ಶೂನ್ಯಸಂಪಾದನೆಯನ್ನು
ಆರ್.ಸಿ.ಹಿರೇಮಠ ಅವರು ಸಂಪಾದಿಸಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ 1972
ರಲ್ಲಿ ಪ್ರಕಟಿಸಿದರು. ಇತ್ತೀಚೆಗೆ
ಎಸ್.ವಿದ್ಯಾಶಂಕರ ಹಾಗೂ ಜಿ.ಎಸ್.ಸಿದ್ಧಲಿಂಗಯ್ಯನವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ
ಸಂಸ್ಥೆಯಲ್ಲಿದ್ದ ಕಾಗದದ ಏಕೈಕ ಹಸ್ತಪ್ರತಿ ಹಾಗೂ ಸಿ.ಮಹದೇವಪ್ಪನವರ ಬಳಿಯಿದ್ದ ತಾಡವೋಲೆ
ಪ್ರತಿಯನ್ನು ಆಧರಿಸಿ ಸಂಪಾದಿಸಿ `ಹಲಗೆಯಾರ್ಯನ ಶೂನ್ಯ ಸಂಪಾದನೆ' ಹೆಸರಿನಲ್ಲಿ
ಪ್ರಕಟಿಸಿದ್ದಾರೆ. ಲಭ್ಯವಿರುವ ನಾಲ್ಕು ಶೂನ್ಯ ಸಂಪಾದನೆಗಳು ಪ್ರಕಟವಾದಂತಾಗಿದೆ. ಪ್ರಕಟವಾಗಿರುವ ನಾಲ್ಕು ಶೂನ್ಯಸಂಪಾದನೆಗಳಲ್ಲಿ
ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆ ಮತ್ತು ಹಲಗೆಯಾರ್ಯನ ಶೂನ್ಯ ಸಂಪಾದನೆಗಳು ಹರಿಹರ
ಕವಿಯ ಪರಂಪರೆಗೆ ಸೇರಿದರೆ,
ಗುಮ್ಮಳಾಪುರದ ಸಿದ್ಧಲಿಂಗಯತಿಗಳ ಶೂನ್ಯಸಂಪಾದನೆ ಮತ್ತು ಗೂಳೂರು ಸಿದ್ಧವೀರಣ್ಣೊಡೆಯರ
ಶೂನ್ಯಸಂಪಾದನೆಗಳು ಚಾಮರಸಕವಿಯ ಪರಂಪರೆಗೆ ಸಲ್ಲುತ್ತವೆ.
ಶಿವಗಣ ಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯ ಕೃತಿಯ
ಆರಂಭದಲ್ಲಿ ಬರುವ ಶ್ರೀ ಮತ್ಸಕಲಜಗದಾಚಾರ್ಯರುಮಪ್ಪ ಅಲ್ಲಮ ಪ್ರಭುದೇವರು ಬಸವರಾಜ ದೇವರು
ಚೆನ್ನಬಸವರಾಜ ದೇವರು ಮುಖ್ಯವಾದ ಅಸಂಖ್ಯಾತ ಮಹಾಗಣಗಳನೊಡನೆ ಮಹಾನುಭಾವ ಪ್ರಸಂಗಮಂ ಮಾಡಿದ
ಸರ್ವಕರಣ ಶೂನ್ಯಸಂಪಾದನೆಯ ಸದ್ಗೋಷ್ಠಿ ಕಥಾ ಪ್ರಸಂಗಮಂ ಮುಕ್ತಕಮಾಗಿರ್ದ ಶಿವಾದ್ವೈತ ವಚನಗಳಿಂ
ಉತ್ತರ ಪ್ರತ್ಯುತ್ತರ ಸಂಬಂಧವಾಗಿ ಸೇರಿಸಿ ಶಿವಗಣ ಪ್ರಸಾದಿ ಮಹಾದೇವಗಳು ಮರ್ತ್ಯಲೋಕದ
ಮಹಾಗಣಂಗಳಿಗೆ ಆ ಮಹಾಪ್ರಸಂಗಮಂ ಸಮರ್ಪಿಸಿದ ಭೇದವೆಂತಿರ್ದುದೆಂದಡೆ ಎಂಬ ವಿವರಣೆಯಲ್ಲಿ ಶೂನ್ಯ
ಸಂಪಾದನಾ ಸಂಕಲನ ಗ್ರಂಥ ಹೊರಬಂದ ಆಶಯ ವ್ಯಕ್ತವಾಗಿದೆ. ಶಿವಗಣ ಪ್ರಸಾದಿ ಮಹಾದೇವಯ್ಯನ ಕೃತಿಯ
ನಂತರ ನಿರ್ಮಾಣವಾದ ಕೃತಿಗಳು ಏನಿದ್ದರೂ ಆ ಮೂಲವನ್ನೇ ಆಧರಿಸಿ ಅಲ್ಪ ಸ್ವಲ್ಪ ಬದಲಾವಣೆ ಹಾಗೂ
ಕೆಲವು ಹೊಸ ಪ್ರಸಂಗಗಳು ಅಳವಡಿಸಲ್ಪಟ್ಟ ಪರಿಷ್ಕರಣಗಳಾಗಿವೆ. ಮಹಾದೇವಯ್ಯನ ಮೂಲಕೃತಿ ನಂತರ
ನಾಲ್ವರು ಸಂಕಲನಕಾರರಿಂದ ಪರಿಷ್ಕರಣಗೊಳ್ಳಲು ಬಹುಮುಖ್ಯ ಕಾರಣ `ಸಿದ್ಧರಾಮಯ್ಯ
ದೀಕ್ಷಾ ಪ್ರಸಂಗ'
ಇದರ ಜೊತೆಗೆ ಅಲ್ಲಮ ಕಾಮಲತೆಯರ ಪ್ರಸಂಗ, ಅಕ್ಕ ಕೌಶಿಕರ ಸಂಬಂಧ, ಕಿನ್ನರಯ್ಯನ
ಪ್ರಸಂಗ,
ಕಾಲ ಕಾಲಕ್ಕೆ ಸಂಕಲನಗೊಂಡ ನಂತರದ ನಾಲ್ಕು ಶೂನ್ಯ ಸಂಪಾದನೆಗಳಲ್ಲಿ ಕೆಲವು ಸನ್ನಿವೇಶಗಳು
ಹೊಸದಾಗಿ ಸೇರ್ಪಡೆಯಾಗಿವೆ. ಹಲಗೆಯಾರ್ಯನ ಶೂನ್ಯ ಸಂಪಾದನೆಯಲ್ಲಿ ಆಯ್ದಕ್ಕಿ ಮಾರಯ್ಯ ಮತ್ತು
ಲಕ್ಕಮ್ಮನ ಪ್ರಸಂಗ ಸೇರ್ಪಡೆಯಾಗಿರುವುದರ ಜೊತೆಗೆ ಗೋರಕ್ಷನ ಪ್ರಸಂಗ ಮೊದಲ ಬಾರಿಗೆ ಪ್ರತ್ಯೇಕ
ಸ್ಥಾನ ಪಡೆದಿದೆ. ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯ ಸಂಪಾದನೆಯಲ್ಲಿ ಮೋಳಿಗೆ ಮಾರಯ್ಯನ ಪ್ರಸಂಗ
ಮತ್ತು ಘಟ್ಟಿವಾಳಯ್ಯನ ಪ್ರಸಂಗ ಸೇರ್ಪಡೆಯಾಗಿದೆ. ಶಿವಗಣ ಪ್ರಸಾದಿ ಮಹಾದೇವಯ್ಯನು ಮೊದಲು
ರೂಪಿಸಿದ ಶೂನ್ಯಸಂಪಾದನೆಯ ತಳಹದಿ ಹಾಗೂ ಆ ಚೌಕಟ್ಟಿನಲ್ಲಿಯೇ ನಂತರದ ನಾಲ್ಕುಶೂನ್ಯ ಸಂಪಾದನೆಗಳ
ಪರಿಷ್ಕರಣೆ ಹಾಗೂ ಕೆಲವು ನೂತನ ಪ್ರಸಂಗಗಳ ಸೇರ್ಪಡೆಯೊಂದಿಗೆ ರೂಪಿಸಲ್ಪಟ್ಟಿವೆ. ಶೂನ್ಯ ಸಂಪಾದನಾ
ಸಂಕಲನ ಕೃತಿಗಳಲ್ಲಿ ಹೆಚ್ಚಿನ ಶರಣರ ವಚನಗಳು ಸಂದರ್ಭಕ್ಕನುಸಾರವಾಗಿ ಸೇರಲ್ಪಟ್ಟಿವೆ.
ಹಲಗೆಯಾರ್ಯರ ಶೂನ್ಯ ಸಂಪಾದನೆಯಲ್ಲಿ ಹೆಚ್ಚಿನ ಅಂದರೆ ಶರಣರ ಸುಮಾರು 1599 ವಚನಗಳು
ಕಂಡು ಬರುತ್ತವೆ. ಹಲಗೆಯಾರ್ಯನ ಶೂನ್ಯ ಸಂಪಾದನೆಯು ಉಳಿದ ಶೂನ್ಯಸಂಪಾದನೆಗಳಿಗಿಂತ ಹೆಚ್ಚು
ವೀರಶೈವೀಕರಣಗೊಂಡಿದೆ.
ಶೂನ್ಯ
ಸಂಪಾದನಾ ಸಂಕಲನ ಕೃತಿಗಳಲ್ಲಿ ಕೊನೆಯದಾದ ಗೂಳೂರು ಸಿದ್ಧವೀರಣ್ಣೊಡೆಯರು ಸಂಗ್ರಹಿಸಿದ ಪ್ರಭುದೇವರ
ಶೂನ್ಯಸಂಪಾದನೆಯಲ್ಲಿ `ಶೂನ್ಯಸಂಪಾದನೆ' ಪದವನ್ನು ವೀರಶೈವ ಧರ್ಮದ ತಾತ್ವಿಕ
ಚೌಕಟ್ಟಿನಲ್ಲಿಯೇ ಪ್ರತಿಪಾದಿಸಲಾಗಿದೆ. ಶೂನ್ಯ ಸಂಪಾದನೆಗೆ ತಳಹದಿಯಾದ ಮೂಲಭೂತ ಷಟ್‍ಸ್ಥಲ
ಸಿದ್ಧಾಂತವನ್ನು ಶರಣರ ವಚನಗಳ ಆಧಾರದಿಂದ ಮೊದಲು ನಿರೂಪಿಸಲಾಗಿದ್ದು ಅಂಗ-ಲಿಂಗ ಇವುಗಳ ಸಂಬಂಧದ
ವಿಚಾರವನ್ನು ನಂತರ ವಿವರಿಸಲಾಗಿದೆ.
ಶೂನ್ಯವನ್ನು
ಸಂಪಾದಿಸಿದ ಹಲವು ಶರಣರ ಚರಿತ್ರೆಗಳು ಶೂನ್ಯ ಸಂಪಾದನೆಯಲ್ಲಿ ಕಾಣಬರುತ್ತವೆ. ಶೂನ್ಯ
ಸಂಪಾದನೆಯಲ್ಲಿ ಅಲ್ಲಮಪ್ರಭುವೇ ಕೇಂದ್ರ ವ್ಯಕ್ತಿಯಾದ್ದರಿಂದ ಶೂನ್ಯ ಸಂಪಾದನೆಗೆ ಪ್ರಭುದೇವರ
ಶೂನ್ಯ ಸಂಪಾದನೆ ಎಂಬ ಪರ್ಯಾಯ ಹೆಸರು ಉಂಟು. ಅಲ್ಲಮಪ್ರಭು ತನ್ನ ಜೀವಿತದುದ್ದಕ್ಕೂ ಹಲವಾರು
ವ್ಯಕ್ತಿಗಳನ್ನು ಸಂದರ್ಶಿಸಿದವನು. ನಿಜವಾಗಿಯೂ ಜ್ಞಾನಿಯಾಗಿದ್ದರೂ ಅಣ್ಣನ ಸಾವಿನಿಂದ
ಜರ್ಝರಿತವಾಗಿ ಶೋಕಿಸುತ್ತಿದ್ದ ಮುಕ್ತಾಯಕ್ಕ, ಕೇವಲ ಲೌಕಿಕ ಕಾಯಕದಲ್ಲಿಯೆ ತಲ್ಲೀನನಾಗಿ
ಅದರಾಚೆಯ ಪರವಸ್ತುವನ್ನು ಅಲಕ್ಷಿಸಿದ್ದ ತೋಟಿಗಗೊಗ್ಗಯ್ಯ, ಕಾಯಕ ಯೋಗಿ
ಸಿದ್ಧರಾಮ,
ಅಧ್ಯಾತ್ಮ ಸಾಧನೆಯಲ್ಲಿ ಉನ್ನತ ಹಂತವನ್ನು ಮುಟ್ಟಿದ್ದ ಆದರೆ ಬಹುಜನರಿಗೆ
ಅಜ್ಞಾತವಾಗಿದ್ದಮರುಳಶಂಕರದೇವ, ಗೋರಕ್ಷ, ಅಕ್ಕಮಹಾದೇವಿ
ಇತ್ಯಾದಿ ಶರಣ ಶರಣೆಯರು ಅಲ್ಲಮನೊಡನೆ ಸಂಭಾಷಿಸಿ ಆತನ ಜ್ಞಾನದ ಬೆಳಕಿನಲ್ಲಿ ತಮ್ಮ ಅರಿವಿನ
ಮಾರ್ಗವನ್ನು ಕೈಗೊಂಡು ಶೂನ್ಯವನ್ನು ಸಂಪಾದಿಸಿಕೊಂಡ ವಿವರವೇ ಶೂನ್ಯ ಸಂಪಾದನೆಯಲ್ಲಿ ಪ್ರಮುಖ
ಭಾಗವಾಗಿದೆ. ಶ್ರೇಷ್ಠವಾದ ಅನುಭವದ ಸ್ಥಿತಿಯನ್ನು ಪಡೆದು ಪೂರ್ಣವಾಗುವುದನ್ನು ಸಂಕೇತಿಸುತ್ತದೆ.
ವೀರಶೈವ ಧರ್ಮದ ಪ್ರಕಾರ ಮನುಷ್ಯನ ಅತ್ಯುಚ್ಛ ಆದರ್ಶವಾದ ಶೂನ್ಯವನ್ನು ಸಂಪಾದಿಸಿದವರ ಕಥೆಗಳ
ಮಾಲಿಕೆಯಾಗಿದೆ.
ಗೂಳೂರು
ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆಯ ಮೊದಲ ಅಧ್ಯಾಯದಲ್ಲಿ ಷಟ್‍ಸ್ಥಲಗಳ ನಿರೂಪಣೆ ಇದೆ. ಷಟ್‍ಸ್ಥಲಗಳನ್ನು
ಸಂಕಲನಕಾರ ಇಂತು ವಿಶ್ವಾಸದಿಂ ಭಕ್ತನಾಗಿ ಆ ವಿಶ್ವಾಸದೊಳಗಣ ನಿಷ್ಠೆಯಿಂ ಮಾಹೇಶ್ವರನಾಗಿ, ಆ
ನಿಷ್ಠೆಯೊಳಗಣ ಸಾವಧಾನದಿಂ ಪ್ರಸಾದಿಯಾಗಿ ಆ ಸಾವಧಾನಗೊಳಗಣ ಸ್ವಾನುಭಾವದಿಂ ಪ್ರಾಣಲಿಂಗಿಯಾಗಿ ಆ
ಸ್ವಾನುಭಾವದೊಳಗಣ ಅರಿವಿನಿಂ ಶರಣನಾಗಿ ಆ ಅರಿವು ನಿಜದಲ್ಲಿ ಸಮರಸಭಾವವ ನೈದಿದ ನಿರ್ಭಾವ ಪದದೊಳ್
ನಿಂದ ಭೇದವೆಂತಿರ್ದಿತೆಂದೊಡೆ ಮುಂದೆ ಐಕ್ಯಸ್ಥಲವಾದುದು ಎಂಬುದಾಗಿ ವಿವರಿಸಿದ್ದಾನೆ. ಷಟ್‍ಸ್ಥಲ
ಸಿದ್ಧಾಂತ ವೀರಶೈವಧರ್ಮದ ತಿರುಳು ಮತ್ತು ವೈಶಿಷ್ಟ್ಯವಾಗಿದೆ.
ಶೂನ್ಯಸಂಪಾದನೆಯಲ್ಲಿ
ಬರುವ ವಿವಿಧ ಪ್ರಸಂಗಗಳಲ್ಲಿ ಅಂದರೆ, ಮುಕ್ತಾಯಕ್ಕನ ಪ್ರಸಂಗದಲ್ಲಿ ಬರುವ
ಗುರುಕರುಣೆಯ ಮಹತ್ವ, ಸಿದ್ಧರಾಮರ ಪ್ರಸಂಗದಲ್ಲಿ ಬರುವ ಇಷ್ಟಲಿಂಗದ ಶ್ರೇಷ್ಠತೆ, ಹಾಗೂ
ಆಧ್ಯಾತ್ಮಿಕ ಆನಂದ ಅನುಭಾವ, ಗುಪ್ತಭಕ್ತ ಮರುಳ ಶಂಕರನ
ಗುಪ್ತಭಕ್ತಿಯಿಂದ ಗಳಿಸಿದ ಸಂಪಾದನೆಯ ನಿಲುವು, ಮಡಿವಾಳ ಮಾಚಿದೇವ, ಮಾರಯ್ಯ, ಚಂದಯ್ಯಗಳ
ಕಾಯಕ ನಿಷ್ಠೆ,
ಘಟ್ಟಿವಾಳಯ್ಯನ ನಿಷ್ಟುರವಾದ ಸತ್ಯ ಪ್ರತಿಪಾದನೆ ಇತ್ಯಾದಿಗಳಲ್ಲಿ ಅಂತರಂಗದನುಭವವನ್ನು, ಅನುಭಾವವನ್ನು
ಧರ್ಮಸಿದ್ಧಾಂತದ ಹಾಗೂ ಸಾಮಾಜಿಕ ಚಿಂತನೆಯ ಚೌಕಟ್ಟಿನಲ್ಲಿ ಪ್ರತಿಪಾದಿಸಿರುವುದನ್ನು
ಗುರುತಿಸಬಹುದು. ಧಾರ್ಮಿಕ ಸಾಧನೆಯ ಮಹತ್ವವು ಶರಣರ ನಿತ್ಯ ಜೀವನದಲ್ಲಿಯೇ ಕಾಣಬರುತ್ತದೆಂಬುದನ್ನು
ಶೂನ್ಯಸಂಪಾದನೆಯಲ್ಲಿ ಕಾಣಬಹುದು. ಜೀವನದಲ್ಲಿ ವ್ಯಕ್ತಿ ಸತ್ಯಶುದ್ಧ ಕಾಯಕದಲ್ಲಿ ನಿರತನಾಗಿದ್ದರೆ
ಅವನು ಯಾವುದೇ ರಂಗದಲ್ಲಿದ್ದರೂ ಏನೇ ಉದ್ಯೋಗವನ್ನು ಅವಲಂಬಿಸಿದ್ದರೂ ಆತನ ಸಾಧನೆಗೆ ಪ್ರಗತಿಗೆ
ಅಡ್ಡಿಯಾಗುವುದಿಲ್ಲ ಎಂಬುದು ವ್ಯಕ್ತವಾಗಿದೆ. ಶೂನ್ಯಸಂಪಾದನೆಯಲ್ಲಿ ಆಧುನಿಕ ಯುಗದ ಮನೋಧರ್ಮಕ್ಕೆ
ಹತ್ತಿರವಾದುದ್ದು ಎಂದರೆ ಸ್ವತಂತ್ರ ವಿಚಾರಶೀಲತೆ ಮತ್ತು ಸತ್ಯ ನಿಷ್ಠುರತೆ.
ವಿಚಾರವಂತರ
ಮನಸ್ಸು ಜೀವನದಲ್ಲಿ ಎದುರಿಸಬಹುದಾದ ಮೂಲಭೂತವಾದ ಸಮಸ್ಯೆಗಳನ್ನು ಮತ್ತು ಅವುಗಳ ಮೌಲ್ಯವನ್ನು
ನಿರ್ಧರಿಸುವ ಮಾನವೀಯ ದೃಷ್ಟಿಯನ್ನು ಒಳಗೊಂಡಿರುವುದನ್ನು ಕಾಣಬಹುದು. ಶೂನ್ಯ ಸಂಪಾದನೆಯಲ್ಲಿ
ಮುಖ್ಯವಾಗಿ,
ನಿಲುವಿಗೇರಿರುವ, ನಿಲುವಿನಲ್ಲಿಯೇ ಸದಾ ಸಂಚರಿಸಬಲ್ಲ ಮಹಾ ಅನುಭಾವಿ ಅಲ್ಲಮಪ್ರಭುವೇ
ಶೂನ್ಯಸಂಪಾದನೆಯ ಕೇಂದ್ರ ಶಕ್ತಿಯಾದುದರಿಂದ ಇತರ ಶರಣರು ಆ ಮಟ್ಟಕ್ಕೇರಲು ಆತ
ಮಾರ್ಗದರ್ಶಕನಾಗಿರುವುದನ್ನು ಕಾಣುತ್ತೇವೆ. ಸಾಧನೆಯ ಆ ನಿಲುವಿನಲ್ಲಿಯೇ ನಿಂತು ಜೀವನ ಮಹತ್ತರವಾದ
ಬೆಲೆಯನ್ನು ಹೆಜ್ಜೆ ಹೆಜ್ಜೆಗೂ ಎತ್ತಿ ತೋರಿಸಿರುವುದನ್ನು ಶೂನ್ಯಸಂಪಾದನೆಗಳಲ್ಲಿ ಪ್ರಮುಖವಾಗಿ
ಗುರುತಿಸಬಹುದಾಗಿದೆ.
ಶೂನ್ಯಸಂಪಾದನೆಗಳು ಕೂಡ ತಮ್ಮ
ಚಾರಿತ್ರಿಕ ಸಂದರ್ಭದಲ್ಲಿ ಇಂತಹ ಪ್ರಶ್ನೆಗಳನ್ನು ಕೇಳಿಕೊಂಡು ತಮ್ಮ ವರ್ತಮಾನದ ಆಶೋತ್ತರಗಳಿಗೆ
ಸ್ಪಂದಿಸಿರುವ ಕೃತಿಗಳಾಗಿವೆ. ವಚನಕಾರರಿಗೆ ಪ್ರತಿಕ್ರಿಯೆಯಾಗಿ ಮಾಡಿದ ಶೂನ್ಯಸಂಪಾದನೆಗೆ
ಪ್ರತಿಕ್ರಿಯೆಯಾಗಿ, ಭಿನ್ನಾಭಿಪ್ರಾಯವಾಗಿ ಮತ್ತು ತಿದ್ದುಪಡಿಯಾಗಿ ಇನ್ನೂ ನಾಲ್ಕು
ಸಂಪಾದನೆಗಳು ಮೂಡಿದವು. ಈ ನಾಲ್ಕು ಸಂಪಾದನೆಗಳ ಸ್ವರೂಪವೇನೇ ಇರಲಿ, ಇವು
ಭಿನ್ನಾಭಿಪ್ರಾಯವನ್ನು ಹೊಟ್ಟೆಯಲ್ಲಿಟ್ಟುಕೊಂಡು ಚರ್ಚೆ ಬೆಳೆಸುವ ಪ್ರಜಾಸತ್ತಾತ್ಮಕಗುಣದ
ಭಾಗವಾಗಿ ಬಂದವು ಎಂಬುದು ಮುಖ್ಯ. ಶೂನ್ಯಸಂಪಾದನೆಯ ಈ ಸರಣಿ ಪ್ರತಿಕ್ರಿಯೆಗಳು ಕನ್ನಡ ಸಾಹಿತ್ಯ
ಸಂಸ್ಕೃತಿಯಲ್ಲಿ ಬಹುದೊಡ್ಡ ವಿದ್ಯಮಾನವಾಗಿರುವುದನ್ನು ವಿದ್ವಾಂಸರೂ ಗುರುತಿಸಿದ್ದಾರೆ. ಇಂತಹ ಸಾಂಸ್ಕೃತಿಕ
ಪಠ್ಯಗಳಾದ ಶೂನ್ಯಸಂಪಾದನೆಗಳ ಸೃಷ್ಟಿಯಲ್ಲಿ ತುಮಕೂರು ಜಿಲ್ಲೆಯ ಕೊಡುಗೆ ಗಮನಾರ್ಹವಾದುದಾಗಿದೆ.
ಪರಾಮರ್ಶನ ಗ್ರಂಥಗಳು
1. ಎಂ. ಚಿದಾನಂದ ಮೂರ್ತಿ:
ಶೂನ್ಯಸಂಪಾದನೆಯನ್ನು ಕುರಿತು
ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, (ದ್ವಿ.ಮು)1988
2.ಜಿ.ಎಸ್.ಸಿದ್ಧಲಿಂಗಯ್ಯ:
ಶೂನ್ಯಸಂಪಾದನೆಗಳು ಒಂದು ಅವಲೋಕನ
ಕನ್ನಡ
ಸಾಹಿತ್ಯ ಪರಿಷತ್,
ಬೆಂಗಳೂರು,1996
4. ಎಸ್.ವಿದ್ಯಾಶಂಕರ: ವೀರಶೈವ ಸಾಹಿತ್ಯ ಚರಿತ್ರೆ, ಪ್ರಾಯೋಗಿಕ ನೆಲೆ, ಸಂ.3, ಭಾಗ 1 ಮತ್ತು 3
ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.2014
3. ಸಿ.ನಾಗಭೂಷಣ: 1.ವೀರಶೈವ
ಸಾಹಿತ್ಯ ಕೆಲವು ಒಳನೋಟಗಳು
ವಿದ್ಯಾನಿಧಿ
ಪ್ರಕಾಶನ, ಗದಗ 2008