ಭಾನುವಾರ, ಏಪ್ರಿಲ್ 21, 2019

ಕಲ್ಯಾಣ ಕರ್ನಾಟಕ ಪರಿಸರದ ಜೈನ ಸಾಂಸ್ಕೃತಿಕ ನೆಲೆಗಳು : ಸಮೀಕ್ಷೆ (ಜೈನ ಶಾಸನಗಳು-ಸಾಹಿತ್ಯ-ಶಾಸ್ತ್ರ ಕೃತಿಗಳು - ವಾಸ್ತುಶಿಲ್ಪದ ಹಿನ್ನೆಲೆಯಲ್ಲಿ) ಡಾ.ಸಿ.ನಾಗಭೂಷಣ


        ಕಲ್ಯಾಣ ಕರ್ನಾಟಕ ಪರಿಸರದ ಜೈನ ಸಾಂಸ್ಕೃತಿಕ ನೆಲೆಗಳು : ಸಮೀಕ್ಷೆ
        (ಜೈನ ಶಾಸನಗಳು-ಸಾಹಿತ್ಯ-ಶಾಸ್ತ್ರ ಕೃತಿಗಳು - ವಾಸ್ತುಶಿಲ್ಪದ ಹಿನ್ನೆಲೆಯಲ್ಲಿ)
                                               ಡಾ.ಸಿ.ನಾಗಭೂಷಣ
    ಯಾವುದೇ ನಾಡಿನ ಭಾಷೆ ಧರ್ಮ, ಜನಾಂಗಗಳು ತಮ್ಮದೇ ಆದ ಜೀವನ ವಿಧಾನ, ನಡೆವಳಿಕೆ, ಚಿಂತನಾ ಕ್ರಮಗಳನ್ನು ಸಂಸ್ಕೃತಿ ಎಂಬ ಹೆಸರಿನಲ್ಲಿ  ಅಳವಡಿಸಿಕೊಂಡಿವೆ. ಸ್ಥಳವೊಂದು  ಸಾಂಸ್ಕೃತಿಕ ಕೇಂದ್ರವೆಂದು  ಕರೆಸಿಕೊಳ್ಳುವಲ್ಲಿ  ಅದಕ್ಕೆ ನಮ್ಮ ಮನಸ್ಸಿನಲ್ಲಿ ನಿದಿರ್ಷ್ಟ ಭಾವನೆಯಿರುತ್ತದೆ. ದೂರದ ಬೇರೆ ಬೇರೆ ಸಂಸ್ಕೃತಿಗಳ, ವಿದ್ಯೆಗಳ ಸಂಗಮಸ್ಥಾನವಾಗಿ ಅವೆಲ್ಲವನ್ನೂ ತನ್ನ ಮೂಲ ದ್ರವ್ಯದೊಡನೆ ಅರಗಿಸಿಕೊಂಡು ತನ್ನದೇ ಸಂಸ್ಕೃತಿಯನ್ನು ತನ್ನ ಸುತ್ತ ಮುತ್ತಣ ಪ್ರದೇಶಗಳಿಗೆ ಪಸರಿಸುವ ಕರ‍್ಯವನ್ನು ಒಂದು  ಸಾಂಸ್ಕೃತಿಕ ಕೇಂದ್ರ ಮಾಡುತ್ತದೆ.
     ಭಾರತದಲ್ಲಿ ಜೈನ ಪರಂಪರೆಯೂ ಅತಿ ಪ್ರಾಚೀನವಾದುದು.  ಕನ್ನಡ ನಾಡು ಪ್ರಾಚೀನ ಕಾಲದಿಂದ ಜೈನದರ್ಶನದ ವಾಸಸ್ಥಾನ ಮತ್ತು ಅಭಿವೃದ್ಧಿ ಹೊಂದಿದ ಸ್ಥಾನ. ಕರ್ನಾಟಕದಲ್ಲಿ ಜೈನಧರ್ಮವು ಯಾವ ಕಾಲದಿಂದ ಇತ್ತೆಂದು ಆಧಾರ ಸಹಿತ ಹೇಳುವುದು ಕಷ್ಟ. ‘ವೈದಿಕ ಧರ್ಮದಿಂದ ಪ್ರತ್ಯೇಕವಾಗಿ ಸ್ವತಂತ್ರ ತಳಹದಿಯ ಮೇಲೆ ಭಾರತದಲ್ಲಿ ತಲೆಯೆತ್ತಿದ ಮೊದಲ ಧರ್ಮವೆಂದರೆ ಜೈನ ಧರ್ಮ. ಇದು ಉತ್ತರ ಭಾರತದಲ್ಲಿ  ತಲೆಯೆತ್ತಿದರೂ ದಕ್ಷಿಣ ಭಾರತಕ್ಕೆ ಬಂದು ಕರ್ನಾಟಕದಲ್ಲಿ ಭದ್ರವಾಗಿ ನೆಲೆಯೂರಿತು. ಕ್ರಿ.ಶ.ಪ್ರಾರಂಭದಿಂದ ಹತ್ತು ಹನ್ನೆರಡನೇ ಶತಮಾನಗಳವರೆಗೆ ಕನ್ನಡ ನಾಡಿನ ಸಾಮಾಜಿಕ, ಆರ್ಥಿಕ, ಸಾಹಿತ್ಯಕ ಮತ್ತು ರಾಜಕೀಯ ಜೀವನದ ಮೇಲೆ ಜೈನಧರ್ಮ ಅಚ್ಚಳಿಯದ ಪ್ರಭಾವ ಬೀರಿದೆ. ಕರ್ನಾಟಕದ ಪ್ರಾಚೀನ ಮತ್ತು ಮಹತ್ವಪೂರ್ಣವಾದ ಧರ್ಮ ಜೈನಧರ್ಮ. ಇದರ ಪರಂಪರೆಯು ಉನ್ನತವಾಗಿದ್ದು ರಾಜಕೀಯ, ಧಾರ್ಮಿಕ, ನೈತಿಕ, ಸಾಹಿತ್ಯಕ ಮತ್ತು ಕಲಾ ಕ್ಷೇತ್ರಗಳಲ್ಲಿ ಸದಾ ಸ್ಮರಣೀಯ ಪರಿಣಾಮವನ್ನು ಬೀರಿದೆ. ಕರ್ನಾಟಕದ ಜೈನಧರ್ಮದ ಇತಿಹಾಸದಲ್ಲಿ ಗಂಗರ ಕಾಲವು ಸ್ಮರಣೀಯವಾದುದು. ನಂತರ ಮಾನ್ಯಖೇಟದ ರಾಷ್ಟ್ರಕೂಟರೂ ಜೈನ ಧರ್ಮಕ್ಕೆ ಉದಾರ ರಾಜಾಶ್ರಯ ನೀಡಿದರು. ಭಾಂಡಾರಕರ್ ಅವರ ಅಭಿಪ್ರಾಯದಂತೆ ಬಾದಾಮಿ ಚಾಲುಕ್ಯರ ಕಾಲದಲ್ಲಿಯೂ ಜೈನ ಧರ್ಮವು ಪ್ರಬಲವಾಗಿತ್ತೆಂದು ತಿಳಿದು ಬರುತ್ತದೆ. ಕಲ್ಯಾಣದ ಚಾಳುಕ್ಯರ ಹಾಗೂ ಹಳೇಬೀಡಿನ ಹೊಯ್ಸಳರು ಜೈನ ಧರ್ಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಸ್ಫೂರ್ತಿಯಿಂದಲೇ ಜಿನ ಧರ್ಮದ ಪ್ರಸಾರ ಮಾಡಿದರು. ಮುಂದೆ ೧೪ನೇ ಶತಮಾನದಲ್ಲಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯದ ಅರಸರು ಪರಮತ ಸಹಿಷ್ಣುತೆಯನ್ನು ತೋರಿ ಜೈನ ಧರ್ಮಕ್ಕೆ ಆಶ್ರಯ ನೀಡಿದರು.
    ಪ್ರಾಚೀನ ಕಾಲದಿಂದಲೂ ಕಲ್ಯಾಣ ಕರ್ನಾಟಕ ಪರಿಸರದಲ್ಲಿ ಅಸ್ತಿತ್ವದಲ್ಲಿದ್ದ ಜೈನ, ಮತದ ಬಗ್ಗೆ ಶಾಸನಗಳು ಬೆಳಕು ಚೆಲುತ್ತವೆ. ಪೂರ್ವ ಕಾಲದಿಂದಲೂ ಜೈನಧರ್ಮವು ಈ ಪ್ರದೇಶದಲ್ಲಿ ನೆಲೆಗೊಂಡಿದ್ದುದ್ದಕ್ಕೆ ಆಧಾರಗಳಿವೆ. ಕಲ್ಯಾಣ ಪರಿಸರದ ಮಾರ್ಕಲ್, ಮೊರಖಂಡಿ, ಗೋರ್ಟಾ, ಹುಲಸೂರು, ಗುಡೂರು, ಕಮಠಾಣ ಭಾಲ್ಕಿ ಮುಂತಾದ ಗ್ರಾಮಗಳು ಜೈನ ಕೇಂದ್ರಗಳಾಗಿದ್ದವು ಎಂಬುದು ಅಲ್ಲಿ ದೊರೆತ ಶಾಸನಗಳು ಮತ್ತು ಶಿಲ್ಪಗಳಿಂದ ತಿಳಿದುಬರುತ್ತವೆ. ಬಸದಿಗಳ ನಿರ್ಮಾಣ, ಯಕ್ಷ-ಯಕ್ಷಿಣಿಯರ ಆರಾಧನೆ ಈ ಭಾಗದಲ್ಲಿತ್ತು ಎಂಬುದಾಗಿ ತಿಳಿದುಬರುತ್ತದೆ. ಜೈನಧರ್ಮಕ್ಕೆ ಸಂಬಂಧಪಟ್ಟಂತೆ ಇಲ್ಲಿ ದೊರೆಯುವ ಶಾಸನಗಳು ಹಾಗೂ ಶಿಲ್ಪಗಳು ಕ್ರಿ.ಶ. ೧೦ನೇ ಶತಮಾನದಿಂದ ೧೨ನೇ ಶತಮಾನಕ್ಕೆ ಸೀಮಿತವಾಗಿವೆ. ಗೋರ್ಟಾವು ಹನ್ನೊಂದನೆಯ ಶತಮಾನಕ್ಕಿಂತ ಪೂರ್ವದಲ್ಲಿ ಜೈನ ಕೇಂದ್ರವಾಗಿತ್ತು ಎಂಬುದನ್ನು ಅಲ್ಲಿಯ ಶಾಸನಗಳು ಸ್ಥಿರಪಡಿಸುತ್ತವೆ. ಕ್ರಿ.ಶ.೧೧೩೦ರ ಶಾಸನವು ಅಭಿನವ ಗಣಧರರೆಂದು ಖ್ಯಾತಿ ಪಡೆದ ತ್ರಿಭುವನ ಸೇನರೆಂಬ ಜೈನಮುನಿ ನಿರ್ವಾಣ ಪಡೆದ ವಿಷಯವನ್ನು ಕೀರ್ತಿಸಿದೆ. ಗೋರ್ಟಾದಲ್ಲಿರುವ ಈಗಿನ ಮಹಾದೇವ ದೇವಾಲಯವು ಹಿಂದೆ ಜೈನ ಬಸದಿಯಾಗಿತ್ತು ಎಂಬುದಕ್ಕೆ ಆ ದೇಗುಲದ ಗರ್ಭಗೃಹದ ಇಕ್ಕೆಲಗಳ ಮಾಡಿನ ಮೇಲೆ ಖಂಡರಿಸಿದ ೩ ಸಾಲುಗಳ ಜೈನಶಾಸನಗಳೇ ಸಾಕ್ಷಿಯಾಗಿವೆ. ಹನ್ನೆರಡನೇ ಶತಮಾನದ ತರುವಾಯ ಜಿನಬಸದಿ ಶೈವಾಲಯವಾಗಿ ಪರಿವರ್ತಿತವಾಗಿರಬೇಕು.  ಕಮಠಾಣವು  ಜೈನ ಮುನಿಗಳ ನಿಸದಿ ಕೇಂದ್ರವಾಗಿದ್ದಿತು ಎಂಬುದನ್ನು ಮತ್ತು ಜೈನಮುನಿಗಳು ಮತ್ತು ಶ್ರಾವಕರು ಸಲ್ಲೇಖನ ವ್ರತಧರಿಸಿ ಇಲ್ಲಿ  ಸಮಾಧಿ ಮರಣ ಹೊಂದಿದ್ದರ ಬಗೆಗೆ  ಈ ಗ್ರಾಮದ ಪರಿಸರದಲ್ಲಿರುವ ಪ್ರಾಚೀನ ಪಾದಚಿನ್ಹೆಗಳ ನಿಸಿದಿ ಕುರುಹುಗಳ ಮೂಲಕ ತಿಳಿಯ ಬಹುದಾಗಿದೆ. ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಕಾಲಾವಧಿಯಲ್ಲಿ ಇಲ್ಲಿ ಜಿನಾಲಯವು ನಿರ್ಮಿತವಾಗಿದ್ದು ಕಮಠ ಪಾರ್ಶ್ವನಾಥ ಜಿನಾಲಯ ಹೆಸರಿನಿಂದ ಕರೆಯಲ್ಪಡುತ್ತಿತ್ತು ಎಂಬುದರ ಬಗೆಗೆ ಶಾಸನಗಳಲ್ಲಿ ಉಲ್ಲೇಖ ಇದೆ. ಈಗಲೂ ಇಲ್ಲಿಯ ಜಿನಾಲಯದ ಗರ್ಭಗೃಹದಲ್ಲಿ  ಪ್ರತಿಷ್ಠಾಪಿತವಾಗಿರುವ ಪಾರ್ಶ್ವನಾಥ ತೀರ್ಥಂಕರನ ವಿಗ್ರಹವು ಇಂದಿಗೂ ಮೂಲಸ್ವರೂಪದಲ್ಲಿಯೇ ಇದೆ. ಈ ಶಿಲ್ಪದ ಪಾದಪೀಠದ ಮೇಲಿನ ಶಾಸನದ ಬರೆಹದಿಂದ, ಈ ಶಿಲ್ಪವನ್ನು ಶ್ರೀ ಮೂಲಸಂಘ ಪರಂಪರೆಯ ರೇಚಿಶೆಟ್ಟಿ ಎಂಬಾತನು ಪ್ರತಿಷ್ಠಾಪಿಸಿದ ಎಂಬುದಾಗಿ ತಿಳಿದು ಬರುತ್ತದೆ.  ಸೇಡಂನಲ್ಲಿ ದೊರೆತ ಶಾಸನದಿಂದ ಜೈನ ಯಾಪನೀಯ ಸಂಘದ ಗುಣಭದ್ರಾಚಾರ್ಯರು ಸಲ್ಲೇಖನ ವ್ರತ ಕೈಗೊಂಡರು ಎಂಬುದಾಗಿ ತಿಳಿದುಬರುತ್ತದೆ. ಕಲಬುರ್ಗಿ ಜಿಲ್ಲೆಯ ಬಂಕೂರು, ಹುಣಿಸಿ, ಹಡಗಿಲೆಗಳು ಪ್ರಮುಖ ಜೈನ ಕೇಂದ್ರಗಳಾಗಿದ್ದವು ಎಂಬುದನ್ನು ಅಲ್ಲಿ ದೊರೆತ ಶಾಸನಗಳಿಂದ ತಿಳಿಯಬಹುದಾಗಿದೆ. ಕೆಂಬಾವಿಯ ಕ್ರಿ.ಶ. ೧೩೪೦ರ ಶಾಸನವೊಂದು ಶ್ರೀಮೂಲ ಸಂಘ ಸರಸ್ವತೀ ಗಚ್ಫ ಬಲಾತ್ಕಾರಗಣ ಕೊಂಡಕುಂದಾನ್ವಯ ರಾಜಗುರು ಮಂಡಲಾಚಾರ್ಯ ಅಮರಕೀರ್ತಿ ಭಟ್ಟಾರಕ ದೇವರನ್ನು ಅವರ ಶಿಷ್ಯ ಸಕಲ ವಿದ್ವಜ್ಜನ ಚಕ್ರವರ್ತಿ ಎನಿಸಿದ ಮಾಘಣನಂದಿಯ ಶಿಷ್ಯ ಚಂದ್ರದೇವನು ನಿಷಧಿಕಾ ಸ್ತಂಭ ನಿಲ್ಲಿಸಿದ ವಿಷಯವನ್ನು ತಿಳಿಸುತ್ತದೆ. ಆರನೆಯ ವಿಕ್ರಮಾದಿತ್ಯನ ರಾಣಿಯರಾದ ಧಾರಲದೇವಿ ಮತ್ತು ಜಕ್ಕಲದೇವಿಯರು ಜೈನಮತೀಯರಾಗಿದ್ದು ಜೈನಬಸದಿಯ ನರ‍್ಮಾಣ ಮತ್ತು ಜಿನಾಲಯಕ್ಕೆ ಬಿಟ್ಟ ದತ್ತಿಯ ವಿವರದ ಬಗೆಗೆ ಕ್ರಿ.ಶ. ೧೧೦೬ರ ಬೊಮ್ಮನಹಳ್ಳಿ ಶಾಸನ ಮತ್ತು ಕ್ರಿ.ಶ. ೧೦೯೪ರ ಇಂಗಳಿಗೆ ಶಾಸನಗಳು ತಿಳಿಸುತ್ತವೆ. ಶಾಸನಗಳಲ್ಲಿಯ ಉಲ್ಲೇಖದ ಪ್ರಕಾರ ಈ ಭಾಗದಲ್ಲಿ ಯಾಪನೀಯ ಪಂಥವು ಅಸ್ತಿತ್ವದಲ್ಲಿತ್ತು ಎಂಬುದಾಗಿ ತಿಳಿದುಬರುತ್ತದೆ.
   ನಾಗಾವಿ: ನಾಗಾವಿಯನ್ನು ವ್ಯವಸ್ಥಿತವಾದ ಘಟಿಕಾಲಯದ ಕೇಂದ್ರವಾಗಿದ್ದುದು ಎಲ್ಲರೂ ತಿಳಿದಿರತಕ್ಕದ್ದೇ. ಆದರೆ ನಾಗಾವಿಗೆ ಕೈಗೊಂಡ ಕ್ಷೇತ್ರಕಾರ್ಯದ ಅವಧಿಯಲ್ಲಿ ದೊರೆತ ಜೈನಧರ್ಮಕ್ಕೆ ಸಂಬಂಧಿಸಿದ ಕೆಲವೊಂದು ಅವಶೇಷಗಳಿಂದ ಅಗ್ರಹಾರ, ಘಟಿಕಾಲಯವಾಗುವುದಕ್ಕಿಂತ ಮೊದಲು ಜೈನಮತದ ತಾಣವೂ ಆಗಿತ್ತು ಎಂಬುದಾಗಿ ತಿಳಿದುಬಂದಿದೆ. ನಾಗಾವಿಯ ಈಗಿನ ಮಧುಸೂದನ ದೇವಾಲಯದ ಹಿಂಬದಿಯ ಅರ್ಧ ಕಿ.ಮೀ. ಅಂತರದಲ್ಲಿ ಪಾಳು ಬಿದ್ದ ಕಟ್ಟಡಗಳ ಅವಶೇಷಗಳು ಎಲ್ಲಾ ಕಡೆ ಹರಡಿದ್ದು, ಅವಶೇಷಗಳನ್ನು ಕೆದಕಿ ಪರಿಶೀಲಿಸಿದಾಗ ಜೈನತೀರ್ಥಂಕರ ವಿಗ್ರಹ ಹಾಗೂ ಇನ್ನಿತರ ಕುರುಹುಗಳು ಕಂಡುಬಂದಿವೆ. ಈ ಪಾಳುಬಿದ್ದ ಜಿನಾಲಯದಲ್ಲಿ  ತೀರ್ಥಂಕರ ಶಿಲ್ಪಗಳ ಕಿರುಗಾತ್ರದ ಕಂಬವಿದೆ.  ಈ ಜೈನ ದೇಗುಲದಲ್ಲಿ ಐದು ಹೆಡೆಗಳುಳ್ಳ ನಾಗದೇವತೆಯ ಶಿಲ್ಪವಿದೆ. ಈ ಜಿನಾಲಯವನ್ನು  ಬಂಗಾರದ ಗುಡಿಯೆಂದೂ ಕರೆಯುತ್ತಾರೆ. ಈ ಅವಶೇಷಗಳಿರುವ ಸ್ಥಳವನ್ನು ಉತ್ಖನನ ಮಾಡಿದರೆ ಜೈನಧರ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಅವಶೇಷಗಳು ದೊರೆಯುವ ಸಾಧ್ಯತೆ ಇದೆ. ಹೀಗಾಗಿ ನಾಗಾವಿಯು, ಅಗ್ರಹಾರ ಘಟಿಕಾಲಯವಾಗುವುದಕ್ಕಿಂತ ಮೊದಲು ಜೈನಕೇಂದ್ರವೂ ಆಗಿದ್ದಿತು ಎಂಬಲ್ಲಿ ಸಂದೇಹವೇ ಇಲ್ಲ. ೮,,೧೦ನೇ ಶತಮಾನದ ಅವಧಿಯಲ್ಲಿ ಮಾನ್ಯಖೇಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಷ್ಟ್ರಕೂಟರು ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ಜೈನಧರ್ಮವು ಪ್ರಮುಖಸ್ಥಾನ ಗಳಿಸಿಕೊಂಡಿದ್ದನ್ನು ಆ ಕಾಲದ ಶಾಸನಗಳು ಸಮರ್ಥಿಸಿವೆ. ಮಾನ್ಯಖೇಟದ ಪರಿಸರದಲ್ಲಿಯೇ ನಾಗಾವಿಯು ಇದ್ದುದರಿಂದ ಜೈನಕೇಂದ್ರವೂ ಆಗಿದ್ದಿತು ಎಂದು ಹೇಳಬಹುದು. ದೊರೆತಿರುವ ಹಾಗೂ ಉತ್ಖನನ ಮಾಡಿದರೆ ದೊರೆಯುವ ಅವಶೇಷಗಳನ್ನು ಪರಿಶೀಲಿಸಿದರೆ ಜೈನಧರ್ಮದ ಯಾವ ಶಾಖೆ ಇಲ್ಲಿ ಅಸ್ತಿತ್ವದಲ್ಲಿ ಇದ್ದಿತು ಎಂಬುದು ತಿಳಿದುಬರುತ್ತದೆ. ಸುತ್ತಮುತ್ತಲ ಪರಿಸರದಲ್ಲಿ ಯಾಪನೀಯ ಪಂಥ ಇದ್ದುದರ ಬಗೆಗೆ ಉಲ್ಲೇಖ ಇರುವುದರಿಂದ ಇಲ್ಲಿಯೂ ಯಾಪನೀಯ ಪಂಥ ಇದ್ದಿರಬಹುದೆಂದು ಊಹಿಸಲು ಅವಕಾಶ ಇದೆ.
ಮಳಖೇಡ:
ಕರ್ನಾಟಕ ರಾಜ್ಯದ ಗುಲಬರ್ಗಾ ಜಿಲ್ಲೆಯ ಸೇಡಮ್ ತಾಲ್ಲೂಕಿನಲ್ಲಿ ಕಾಗಿಣಾ ನದಿ ದಡದಲ್ಲಿರುವ ಒಂದು ಪ್ರಸಿದ್ಧ  ಜೈನ ಐತಿಹಾಸಿಕ ಸ್ಥಳ. ಮಾನ್ಯಖೇಟ ಎಂಬುದು ಐತಿಹಾಸಿಕ ಹೆಸರು. ಮೊದಲಿಗೆ ರಾಷ್ಟ್ರಕೂಟ ಸಾಮ್ರಾಜ್ಯದ, ಅನಂತರ ಕೆಲಕಾಲ ಕಲ್ಯಾಣದ ಚಾಳುಕ್ಯರ ರಾಜಧಾನಿಯಾಗಿತ್ತು. ಮಳಖೇಡದ ಮೊದಲ ಉಲ್ಲೇಖ ಮಳಕೇಟಕ ಎಂದು ಪೂಗವರ್ಮನ ಮೂಧೋಳ ತಾಮ್ರಶಾಸನದಲ್ಲಿ ಬಂದಿದೆ.
  ಅರ್ವಾಚೀನ ಕೃತಿ ಹರಿಭದ್ರಸೂರಿಯ ಸಮ್ಯಕ್ತ್ವ ಸ್ತಪತಿ ಕೃತಿಯು  ಮಳಖೇಡ ಕ್ರಿ.ಶ.ಸು. ೧ನೆಯ ಶತಮಾನದಿಂದಲೇ ಜೈನಧರ್ಮದ ಕೇಂದ್ರವಾಗಿತ್ತೆಂದು ತಿಳಿಸುತ್ತದೆ.  ಈ ಕೃತಿಯ ಉಲ್ಲೇಖದ ಪ್ರಕಾರ ಉತ್ತರ ಭಾರತದಿಂದ ಪ್ರಸಿದ್ಧ ಜೈನಗುರು ಪಾದಲಿಪ್ತಾಚಾರ್ಯರು ಕ್ರಿ.ಶ. ೧ ನೇಶತಮಾನದಲ್ಲಿ ದಕ್ಷಿಣಕ್ಕೆ ಬಂದಾಗ ಮಾನ್ಯಖೇಟದಲ್ಲಿ ಜೈನಾಚಾರ್ಯರಿದ್ದುದ್ದನ್ನು ದಾಖಲಿಸಿದ್ದಾನೆ.  ಕಥಾಕೋಶ ಹಾಗೂ ಚರಿತಗ್ರಂಥಗಳು ಅಕಲಂಕ ಜೈನಮುನಿ ಈ ಸ್ಥಳದವನೆಂದು ಉಲ್ಲೇಖಿಸಿವೆ. ಕನ್ನಡದ ಮೊದಲ ಕವಿಚಕ್ರವರ್ತಿ ಪೊನ್ನ ಕವಿಯು ೩ನೆಯ ಕೃಷ್ಣನ ಅಸ್ಥಾನದಲ್ಲಿದ್ದವನು. ಜ್ವಾಲಾಮಾಲಿನಿ ಕಲ್ಪ, ಶ್ರುತಾವತಾರ ಮೊದಲಾದವನ್ನು ರಚಿಸಿದ ಇಂದ್ರನಂದಿ ಮತ್ತು ಪ್ರಾಕೃತದ (ಅಪಭ್ರಂಶ) ಪ್ರಸಿದ್ಧ ಮಹಾಕವಿ  ಪುಷ್ಪದಂತ ರಾಷ್ಟ್ರಕೂಟ ಚಕ್ರವರ್ತಿಯ ಅಸ್ಥಾನದಲ್ಲಿದ್ದರು.
    ರಾಷ್ಟ್ರಕೂಟ ದೊರೆ ಮುಮ್ಮಡಿ ಗೋವಿಂದ ( ಕ್ರಿ.ಶ.೭೯೩-೮೧೪)ನ ಆಳ್ವಿಕೆಯ ಕಾಲದಲ್ಲಿ ತನ್ನ ಸಾಮ್ರಾಜ್ಯವನ್ನು  ದಕ್ಷಿಣದಲ್ಲಿ ವಿಸ್ತರಿಸಿದ ಹಿನ್ನೆಲೆಯಲ್ಲಿ ಆಡಳಿತದ ಅನುಕೂಲಕ್ಕಾಗಿ ಗುಲಬರ್ಗಾ ಜಿಲ್ಲೆಯ ಸೇಡಂ ತಾಲೋಕಿನ ಮಾನ್ಯಖೇಟ ಅಂದರೆ ಈಗಿನ ಮಳಖೇಡದಲ್ಲಿ ರಾಜಧಾನಿಯನ್ನು ಸ್ಥಾಪಿಸಲು ಆರಿಸಿ ಕೊಂಡನು. ಈತನ ಉತ್ತರಾಧಿಕಾರಿಯಾಗಿದ್ದ  ಅಮೋಘವರ್ಷನು ಕ್ರಿ.ಶ.೮೧೪ ರಲ್ಲಿ ಮಾನ್ಯಖೇಟವನ್ನು ರಾಜಧಾನಿ ನಗರವನ್ನಾಗಿ ಮಾರ್ಪಡಿಸಿ ಕೊಂಡನು. ಈ ಮಳಖೇಡವು ರಾಷ್ಟ್ರಕೂಟರ ರಾಜಧಾನಿ ಆಗಿರಲಿಲ್ಲವೆಂಬ ಅನಿಸಿಕೆಯನ್ನು  ಕೆಲವು ವಿದ್ವಾಂಸರು  ವ್ಯಕ್ತಪಡಿಸಿದ್ದರೂ ಲಭ್ಯವಿರುವ ಐತಿಹಾಸಿಕ, ವಾಸ್ತುಶಿಲ್ಪ ಹಾಗೂ ಸಾಹಿತ್ಯಕ ಆಕರಗಳು ರಾಷ್ಟ್ರಕೂಟರ ರಾಜಧಾನಿ ಎಂಬುದನ್ನು ಪುಷ್ಠೀಕರಿಸಿವೆ. ಮಳಖೇಡದ ಕೋಟೆಯ ರಾಜದ್ವಾರದ ಲಲಾಟದಲ್ಲಿ ಪರ್ಯಾಂಕಸದಲ್ಲಿ ಕುಳಿತಿರುವ ಪಾರ್ಶ್ವನಾಥರ ವಿಗ್ರಹ ಇರುವುದನ್ನು ಕಾಣಬಹುದಾಗಿದೆ.ರಾಜದ್ವಾರದ ದ್ವಾರಶಾಖೆಗಳು ಕಲಾತ್ಮಕತೆಯಿಂದ ಕೂಡಿವೆ. ಅಮೋಘವರ್ಷನ ಆಳ್ವಿಕೆಯ ಕಾಲದಲ್ಲಿ ಮಳಖೇಡವು ಪ್ರಮುಖ ಜೈನ ಸಾಂಸ್ಕೃತಿಕ ನಗರವಾಗಿ ಹೊರಹೊಮ್ಮಿದ್ದಿತು. ಮಳಖೇಡವು ನೃಪತುಂಗನ ಕಾಲಾವಧಿಯಲ್ಲಿ  ಜೈನ ಕಲೆ ಮತ್ತು ಸಾಹಿತ್ಯಗಳ ನೆಲೆವೀಡಾಗಿದ್ದಿತು. ಉತ್ಕೃಷ್ಟ ಕಾವ್ಯಗಳನ್ನು ರಚಿಸಿದ್ದ ಕವಿ ಪಡೆಯು ಅಲ್ಲಿದ್ದಿತು. ಜಿಲ್ಲೆಯ ಮಳಖೇಡದ ರಾಷ್ಟ್ರಕೂಟರ ಆಳ್ವಿಕೆಯ ಕಾಲದಲ್ಲಿ ಅವರ ಆಶ್ರಯದಲ್ಲಿದ್ದ ಜೈನಾಚಾರ್ಯರಿಂದ ಸಂಸ್ಕೃತದಲ್ಲಿ ಸ್ವತಂತ್ರ ಕೃತಿಗಳ ರಚನೆಯ ಜೊತೆಗೆ ಟೀಕಾ-ವ್ಯಾಖ್ಯಾನ ಸಾಹಿತ್ಯ ಸೃಷ್ಟಿಯಾಗಿದೆ. ದಂತಿದುರ್ಗನ ಕಾಲದಲ್ಲಿದ್ದ ಅಕಲಂಕರು ತತ್ವಾರ್ಥ ರಾಜವಾರ್ತಿಕೆ ಎಂಬ ಟೀಕಾಗ್ರಂಥವನ್ನು, ಅಷ್ಟಶತೀ, ನ್ಯಾಯ ವಿನಿಶ್ಚಯ ಪ್ರಮಾಣ ಸಂಗ್ರಹ. ಸಿದ್ಧಿ ವಿನಿಶ್ಚಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಈ ಕೃತಿಗಳಲ್ಲಿ ಜೈನಸಿದ್ಧಾಂತದ ಸಾರ ವ್ಯಕ್ತವಾಗಿದೆ. ವೀರಸೇನಾಚಾರ್ಯರು (ಕ್ರಿ.ಶ.೮೧೪) ೭೨೦೦೦ ಶ್ಲೋಕಗಳುಳ್ಳ ಧವಲ ಎಂಬ ಪ್ರಸಿದ್ಧ ಕೃತಿಯನ್ನು ಪ್ರಾಕೃತದಲ್ಲಿ ರಚಿಸಿದ್ದಾರೆ.  ಅಮೋಘವರ್ಷನ ಕಾಲದಲ್ಲಿದ್ದ ಜಿನಸೇನಾಚಾರ್ಯರು(ಕ್ರಿ.ಶ.೮೩೭) ಸಂಸ್ಕೃತದ ಆದಿಪುರಾಣ (ಮಹಾ ಪುರಾಣದ ಪೂರ್ವಾರ್ಧ). ಜಿನೇಂದ್ರ ಗುಣ ಸಂಸ್ತುತಿ ವರ್ಧಮಾನ ಪುರಾಣ, ಜಯಧವಲಾ ಟೀಕೆ, ಪಾರ್ಶ್ವಾಭ್ಯುದಯ ಮುಂತಾದ ಕಾವ್ಯಗಳನ್ನು ರಚಿಸಿದ್ದಾರೆ. ಮಹಾವೀರಾಚಾರ್ಯ ನೆಂಬ(ಕ್ರಿ.ಶ.೮೭೦) ಗಣಿತ ಶಾಸ್ತ್ರಜ್ಞನು ಗಣಿತಸಾರ ಸಂಗ್ರಹ ಎಂಬ ಶಾಸ್ತ್ರ ಕೃತಿಯನ್ನು ರಚಿಸಿದ್ದಾನೆ. ಈ ಸಂಸ್ಕೃತ ಗ್ರಂಥದಲ್ಲಿ ೧೧೦೦ ಸಂಸ್ಕೃತ ಶ್ಲೋಕಗಳಿವೆ. ಈ ಕೃತಿಯು ಆಗಿನ ಕಾಲದ ಅನೇಕ ವಿದ್ಯಾ ಕೇಂದ್ರಗಳಲ್ಲಿ ಪಠ್ಯವಾಗಿದ್ದುದಾಗಿ ತಿಳಿದು ಬರುತ್ತದೆ.  ಈ ಕೃತಿಯ ಜೊತೆಗೆ ಷಟ್ ತ್ರಿಂಶಿಕ, ಕ್ಷೇತ್ರಗಣಿತ, ಚತ್ತೀಸಪೂರ್ವ, ಉತ್ತರ ಪತಿಸಹ ಎಂಬ ಶಾಸ್ತ್ರಗ್ರಂಥಗಳನ್ನು ಬರೆದಿರುವುದಾಗಿ ತಿಳಿದು ಬರುತ್ತದೆ. ಮೂರನೆಯ ಅಮೋಘವರ್ಷ ಮತ್ತು ಮೂರನೆಯ ಕೃಷ್ಣನ ಕಾಲದಲ್ಲಿದ್ದ ಇಂದ್ರನಂದಿಯು (ಕ್ರಿ.ಶ.೯೩೦) ಮಳಖೇಡದಲ್ಲಿದ್ದು, ಸಮಯಭೂಷಣ, ಶ್ರುತಾವತಾರ,ನೀತಿಸಾರ,ಶ್ರುತಪಂಚಮಿ ಹಾಗೂ ಜ್ವಾಲಮಾಲಿನಿಕಲ್ಪ ಕೃತಿಗಳನ್ನು ರಚಿಸಿದ್ದಾರೆ. ಈತ ತಾನು ಬರೆದ ಸಂಸ್ಕೃತ ಕೃತಿಗೆ ತಾನೇ ಕನ್ನಡದಲ್ಲಿ  ಟೀಕೆಯನ್ನು ಬರೆದಿರುವ ಬಗೆಗೆ ವಿದ್ವಾಂಸರು ಅಭಿಪ್ರಾಯವನ್ನು ತಾಳಿದ್ದಾರೆ. ಇಂದ್ರನಂದಿ ಪಂಪಪೂರ್ವಯುಗದ ಕನ್ನಡದ ಟೀಕಾಕಾರ ಎಂಬ ಅಭಿಪ್ರಾಯವನ್ನು ಎಂ.ಎಂ.ಕಲಬುರ್ಗಿಯವರು ತಾಳಿದ್ದಾರೆ. ಕ್ರಿ.ಶ.೯೭೫ರಲ್ಲಿ ಸಾಧುಸೇನಪಂಡಿತನು ಕೆಲವು ಕಾಲ ಕುಪಣದಲ್ಲಿದ್ದು, ರಾಜಪೂಜಿತನಾಗಿ ತನ್ನ ಅವಸಾನ ಕಾಲದಲ್ಲಿ ಮಾನ್ಯಖೇಟದ ಏಕಚಟ್ಟುಗದ ಬಸದಿಯಲ್ಲಿ ಸನ್ಯಾಸ ಸ್ವೀಕರಿಸಿ ಮೋಕ್ಷ ಹೊಂದ್ದಿದ್ದರ ಬಗೆಗೆ ಕೊಪ್ಪಳದ ಶಾಸನದಿಂದ ತಿಳಿದು ಬರುತ್ತದೆ.   ಉಗ್ರಾದಿತ್ಯನು ಕಲ್ಯಾಣಕಾರಕ ಎಂಬ ವೈದ್ಯಗ್ರಂಥವನ್ನು ಬರೆದಿರುವುದಾಗಿ ತಿಳಿದು ಬರುತ್ತದೆ. ನೃಪತುಂಗನ ಆಸ್ಥಾನ ಕವಿಯಾಗಿದ್ದ ಪಾಲ್ಯಕೀರ್ತಿ ಅಥವಾ ಶಾಕಟಾಯನನು ಶಬ್ದಾನುಶಾಸನ ಎಂಬ ವ್ಯಾಕರಣ ಗ್ರಂಥವನ್ನು ರಚಿಸಿದ್ದಾನೆ. ಇವನ ವ್ಯಾಕರಣ ಜ್ಞಾನವನ್ನು ಮನಗಂಡ ಜನತೆ ಇವನನ್ನು ಪುರಾತನ ಶಾಕಟಾಯನ ಹೆಸರಿನಿಂದ ಗುರುತಿಸುತ್ತಾ ಬಂದಿದ್ದಾರೆ. ಮಾನ್ಯಖೇಟದ ನೃಪತುಂಗನ ಆಸ್ಥಾನದಲ್ಲಿದ್ದ  ಶ್ರೀವಿಜಯನು ಕವಿರಾಜಮಾರ್ಗ ಎಂಬ ಅಲಂಕಾರ ಕೃತಿಯನ್ನು ರಚಿಸಿದ್ದಾನೆ. ಜೈನ ಕವಿಯಾದ ಈತನೇ ಕನ್ನಡದಲ್ಲಿ ಸಾಹಿತ್ಯ ಕೃತಿ ರಚನೆ ಶ್ರೀಕಾರ ಹಾಕಿದವನು.
      ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೋಕಿನ ಕೇಶವಾರ ಗ್ರಾಮವು ಪ್ರಾಚೀನ ಕಾಲದಿಂದಲೂ ಅದರಲ್ಲಿಯೂ ಬದಾಮಿ ಚಾಲುಕ್ಯರ ಕಾಲದಲ್ಲಿಯೇ ಜೈನಧರ್ಮದ ಕೇಂದ್ರವಾಗಿ ಬೆಳೆದಿದ್ದನ್ನು ಹಂಪನಾ ರವರು ತಮ್ಮ ಸಂಶೋಧನೆಯ ಮೂಲಕ ಗುರುತಿಸಿದ್ದಾರೆ. ಇಲ್ಲಿ ಎರಡು ಜಿನಾಲಗಳು ಇದ್ದು ವಿಶಾಲವಾದ ಪ್ರಾಕಾರದಿಂದ ಕೂಡಿದ್ದಿತು.ಇನ್ನೊಂದು ಹಿರಿಯ ಬಸದಿಯು ಈ ಬಸದಿಯ ಸಮೀಪದಲ್ಲಿಯೇ ಕಂಡುಬರುತ್ತಿದ್ದು ಅದು ಹಾಳಾಗಿರುವುದಾಗಿ ಇವರು ಉಲ್ಲೇಖಿಸಿದ್ದಾರೆ. ಈಗಲೂ ಈ ಭಾಗದಲ್ಲಿ ಜೈನ ವಾಸ್ತು ಶಿಲ್ಪದ ಕುರುಹುಗಳ ಅವಶೇಷಗಳು ಕಂಡು ಬರುತ್ತವೆ. ಕೇಶವಾರದಲ್ಲಿ ದೊರೆತಿರುವ ಅಪೂರ್ವವಾದ ಜೈನಯಕ್ಷ ಶಿಲ್ಪವು  ಬದಾಮಿ ಚಾಲುಕ್ಯರ ಕಾಲದ್ದು ಎಂಬುದಾಗಿ ಹಂಪನಾ ಅವರು ಗುರುತಿಸಿದ್ದಾರೆ.
    ಕರ್ನಾಟಕಕ್ಕೆ ಬಹಳ ಪ್ರಾಚೀನ ಕಾಲದಲ್ಲಿಯೇ ಪ್ರವೇಶಿಸಿದ ಜೈನಧರ್ಮ ರಾಯಚೂರು ಜಿಲ್ಲೆಯಲ್ಲಿಯೂ  ಅಸ್ತಿತ್ವದಲ್ಲಿದ್ದು ಸಾಂಸ್ಕೃತಿಕ ಸ್ಥಳಗಳು ರೂಪುಗೊಳ್ಳಲು ಕಾರಣೀ ಭೂತವಾಗಿದೆ. ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ (ಕ್ರಿ.ಶ.೧೧೦೯) ಜಿನಬಸದಿಯನ್ನು ಕಟ್ಟಿಸಿದ ಮತ್ತು ಜಿನ ಪ್ರತಿಮೆಯನ್ನು ಮಾಡಿಸಿದ ಉಲ್ಲೇಖಗಳು ಸಿಗುವುದರಿಂದ ಆ ಜನರ ಜಿನಭಕ್ತಿ, ನಿಷ್ಠೆ, ಶ್ರದ್ಧೆ ತಿಳಿಯುತ್ತದೆ. ಈ ಗ್ರಾಮದಲ್ಲಿಯ ಬ್ರಹ್ಮ ಜಿನಾಲಯಕ್ಕೆ ಕಮ್ಮಟದ ಅಧಿಕಾರಿಗಳು, ಕಮ್ಮಟಕಾರರು ತಾವು ಮಾರಿದ ವಸ್ತುಗಳ ಮೇಲಿನ ತೆರಿಗೆಯನ್ನು ಬಿಡುತ್ತಾರೆ. ಇವು ಅಂದಿನ ಜೈನ ಸಮಾಜವನ್ನು ಅರಿಯಲು ಸಹಾಯಕವಾಗಿವೆ. ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಲಿಂಗಸೂಗೂರಿನ ಮಸ್ಕಿ ಗ್ರಾಮದಲ್ಲಿ ಕೆಲವರು ಜೈನ ಬಸದಿಗಳಿಗೆ ದಾನ ನೀಡಿರುವುದು ಶಾಸನಗಳಿಂದ ತಿಳಿದು ಬರುತ್ತದೆ. ಕಲ್ಯಾಣ ಅರಸ ಜಗದೇಕಮಲ್ಲನು (ಕ್ರಿ.ಶ.೧೦೩೨) ಜಿನಾಲಯದ ಭೋಗಕ್ಕಾಗಿ ನೂರು ಮತ್ತರು ಕರಿಯ ನೆಲ, ಎರಡು ಮತ್ತರು ಗದ್ದೆ, ಹೂವಿನ ತೋಟ, ದೀಪಕ್ಕಾಗಿ ಒಂದು ಗಾಣವನ್ನು ದತ್ತಿ ಬಿಡುತ್ತಾನೆ. ಲಿಂಗಸೂಗೂರಿನ ಮತ್ತೊಂದು ಶಾಸನವಾದ ಮಸ್ಕಿ ಗ್ರಾಮದಲ್ಲಿ ಜಿನಬಸದಿಯ ಉಲ್ಲೇಖ ದೊರೆಯುತ್ತದೆ. ಕಲ್ಯಾಣ ಚಾಳುಕ್ಯ ಅರಸ ಜಗದೇಕಮಲ್ಲನ ಕಾಲದಲ್ಲಿ ಬೆಸವೊಜ ಎಂಬುವವನು ಜಿನ ಬಸದಿಯನ್ನು ಕಟ್ಟಿಸಿದ್ದು ತಿಳಿದುಬರುತ್ತದೆ. ಈ ಬಸದಿಗೆ ಚಾಳುಕ್ಯ ಅರಸ ಜಗದೇಕಮಲ್ಲನ ರಾಣಿ ಸೋಮಲದೇವಿಯು ಪುಲಿಪೊದರ ನೆಲೆವೀಡಿನಲ್ಲಿದ್ದಾಗ ಈ ಬಸದಿಯ  ಭೋಗಕ್ಕೆಂದು ೫೦ ಮತ್ತರು ಭೂಮಿ ಅಕಡಿ ಮತ್ತರು ೫೦ನ್ನು ಕೊಡಿಸಿದ್ದನ್ನು ಉಲ್ಲೇಖಿಸುತ್ತದೆ. ಇದರೊಂದಿಗೆ ದೀಪಕ್ಕಾಗಿ ಒಂದು ಗಾಣ, ಹೂವಿನ ತೋಟವೊಂದನ್ನು ದಾನ ಬಿಡಲಾಗಿದೆ. ಈ ಬಸದಿಯನ್ನು ಸೋದೊರೆ ವಡಿಯರ ರೇವಣಯ್ಯನ ಆಜ್ಞೆಯ ಮೇರೆಗೆ ಕಟ್ಟಿಸಿದ್ದಂತೆ ಈ ಶಾಸನವು ಮಾಹಿತಿಯನ್ನು ಒದಗಿಸಿದೆ. ಮಾನ್ವಿ ತಾಲೂಕಿನ ಬಲ್ಲಟಗಿಯ ಶಾಸನವು ಬಸದಿಗೆ ದಾನ ನೀಡಿದ ಕುರಿತು ಈ ರೀತಿ ಉಲ್ಲೇಖಿಸುತ್ತದೆ. ಜಗದೇಕಮಲ್ಲನ ರಾಣಿ ಸೋಮಲದೇವಿಯು ಭತ್ತಗ್ರಾಮವಾದ ಬಳ್ಳನಿಟ್ಟಗೆಯ ಬಸದಿಗೆ ಪಿರಿಯ ಕೋಲಲ್ಲಿ ೩೪ ಮತ್ತರು ಕರಿಯ ನೆಲ, ಒಂದು ಮತ್ತರು ತೋಟ, ಐದು ಮನೆ, ಒಂದು ಗಾಣವನ್ನು ದಾನವಾಗಿ ಕೊಟ್ಟಿದ್ದು ತಿಳಿದು ಬರುತ್ತದೆ. ಮಾನ್ವಿಯ ಮತ್ತೊಂದು ಶಾಸನ ದದ್ದಲವು ಮಾಕಿಸೆಟ್ಟಿ ಎಂಬುವವನು ಪೊನ್ನಪಾಳಿನಲ್ಲಿ  ಗಿರಿಗೋಟೆಮಲ್ಲ ಎಂಬ ಹೆಸರಿನ ಜಿನಾಲಯವನ್ನು ಕಟ್ಟಿಸಿದ್ದನ್ನು ವಿವರಿಸುತ್ತದೆ. ದೇವದುರ್ಗದ ಗಬ್ಬೂರು ಶಾಸನವು ಧರ್ಮ ಕಾರ್ಯದ ಉದ್ದೇಶದಿಂದ ಜಿನದೇವರ ಅರ್ಚನೆಗಾಗಿ ಗೊಬ್ಬೂರು ಮೂಲಿಗರೂ ಹಾಗೂ ಮಹಾಜನರು ಮುದುಗುಂದೂರಿನ ಮೂಲಿಗದೆರೆ ಮತ್ತು ಬೆಳೆದೆರೆಯನ್ನು ದಾನ ಬಿಟ್ಟಂತೆ ತಿಳಿಸುತ್ತದೆ.
ಚಂದನಕೆರೆಯ ಸರಕಾರಿ ಶಾಲಾ ಕಟ್ಟಡದ ಎದುರುಗಡೆ ಸಿಕ್ಕ ಜೈನ ಭಗ್ನ ಶಿಲ್ಪಗಳು ಇಲ್ಲಿ ಪ್ರಾಚೀನ ಕಾಲದಲ್ಲಿ ಜೈನಧರ್ಮ ಪ್ರಚಾರದಲ್ಲಿತ್ತೆಂದು ಹೇಳಲಿಕ್ಕೆ ಸಾಕ್ಷಿಯಂತಿದೆ. ‘ಸುಮಾರು ೫ ಅಡಿಯಷ್ಟು ವ್ಯಾಸವುಳ್ಳ ಒಂದು ವರ್ತುಳವನ್ನು ಕೆತ್ತಲಾಗಿದೆ. ಈ ವರ್ತುಳವನ್ನು ಒಂದು ಚೌಕದ ಮಧ್ಯ ಕೆತ್ತಲಾಗಿದೆ. ಸುಮಾರು ೬ ಇಂಚು ದಪ್ಪ ಇರುವ ಹಾಸು ಬಂಡೆಯ ಅಂಚಿನಲ್ಲಿ ಪದ್ಮಗಳನ್ನು ಕೆತ್ತಲಾಗಿರುವುದನ್ನು ಸೂಕ್ಷ್ಮವಾಗಿ ನೋಡಿದರೆ ಕಾಣಬಹುದು. ಮೇಲ್ನೋಟಕ್ಕೆ ಚಾಳುಕ್ಯ ಶೈಲಿಯ ರಂಗಮಂಟಪದ ಹಾಸುಗಲ್ಲು ಎಂದು ಕಾಣುವ ಈ ಹಾಸುಬಂಡೆಯು ಪಾರ್ಶ್ವನಾಥ ಶಿಲ್ಪದ ಪೀಠದ ಮೇಲೆ ವಿವರಿಸಲಾದ ಕಂಬಗಳು, ಜಿನಶಿಲ್ಪ, ಶಾರ್ದೂಲಸ್ತಂಭ ಮತ್ತು ಈ ಪೀಠ ಇವುಗಳೆಲ್ಲವೂ ಚಂದನಕೆರೆಯಲ್ಲಿ ಕ್ರಿ.ಶ.೧೦-೧೨ನೇ ಶತಮಾನದ ಅವಧಿಯಲ್ಲಿ ಒಂದು ಜೈನ ಬಸ್ತಿ ಇತ್ತು ಎಂಬುದನ್ನು ಸೂಚಿಸುತ್ತದೆ.’
     ಕ್ರಿ.ಶ.೧೨೦೯ರ ನವಿಲೆಯ ಹಾಲ್ಕಾವಟ್ಗಿಯಲ್ಲಿ ದೊರೆತ ತಾಮ್ರ ಶಾಸನವು ಜೈನ ಧರ್ಮದ ಕುರಿತು ಮಾಹಿತಿ ನೀಡಿದೆ. ಪ್ರಾರಂಭದಲ್ಲಿ ಜಿನನನ್ನು ಹೊಗಳುವ ಪದ್ಯವಿದೆ. ಹರುಹೆನಾಡು ಪ್ರದೇಶದ ಹೊಸಊರ ಪಟ್ಟಣದಲ್ಲಿದ್ದ ಪಾರ್ಶ್ವನಾಥ ದೇವರ ಪೂಜೆಗಾಗಿ ಕೆರೆಯಕಲ್ಲ ತೂಬಿನ ಬಳಿ ನೀರಾವರಿ ಸ್ಥಳವನ್ನು ಹಳೆಯ ಹೊಸೂರಿನ ಕೋಟೆಯ ಸಮೀಪ ಕೋಣನ ಬಾವಿಯ ಸಮೀಪದ ಭೂಮಿ ಮೂವತ್ತು ಹೊನ್ನು ಬೆಲೆಬಾಳುವ ಗದ್ದೆಯನ್ನು ಸೂರ್ಯ ಚಂದ್ರರಿರುವವರೆಗೂ ಅನುಭವಿಸಲಿ ಎಂದು ನಯಕೀರ್ತಿ ಸೈದ್ಧಾಂತಿಕರ ಶಿಷ್ಯ ನಾಗಚಂದ್ರ ದೇವರ ಶಿಷ್ಯ, ಬಾಳಚಂದ್ರ ದೇವರ ಶಿಷ್ಯರಾದ ಹಾಗೂ ಆ ಬಸದಿಯ ಆಚಾರ್ಯ ಚಂದ್ರಕೀರ್ತಿ ದೇವರಿಗೆ ತಾಮ್ರ ಶಾಸನ ಸಹಿತ ಹೊಯ್ಸಳ ಅರಸ ಬಲ್ಲಾಳ ಮತ್ತು ಆತನ ಪತ್ನಿ ಪದುಮಲದೇವಿಯು ದಾನವಾಗಿ ಬಿಟ್ಟಂತೆ ತಿಳಿದು ಬರುತ್ತದೆ. ಈ ಹರುಹೆನಾಡು ಇಂದಿನ ಆಂಧ್ರಪ್ರದೇಶದ ಹಿಂದೂಪುರ ತಾಲೂಕಿನ ಪರಗಿಯಾಗಿದೆ ಎಂಬುದನ್ನು ಡಿ.ವಿ.ಪರಮಶಿವಮೂರ್ತಿ ಅವರು ಪತ್ತೆ ಹಚ್ಚಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ದೊರೆತ ಈ ಶಾಸನವು ಜೈನಧರ್ಮದ ಬಗೆಗೆ ನೀಡಿರುವ ಮಾಹಿತಿಯು ಜಿಲ್ಲೆಗೆ ಸಂಬಂಧಿಸಿರದೆ ದೂರದ ಆಂಧ್ರಪ್ರದೇಶದ ಹರುಹೆ ನಾಡಿಗೆ ಸಂಬಂಧಪಟ್ಟುದ್ದಾಗಿದೆ.
       ಯಲಬುರ್ಗಾ ತಾಲೂಕಿನಲ್ಲಿ ದೊರೆತ ಶಾಸನವು ಮೂಲ ಸಂಘದ ಮಾದಣದಂಡನಾಯಕ ಕಟ್ಟಿಸಿದ ಬಸದಿಗೆ ರಾಯರಾಜಗುರು ಮಂಡಳಾಚಾರ್ಯ ಶ್ರೀಮತ್ ಮಾಘನಂದಿಸಿದ್ಧಾನ್ತ ಚಕ್ರವರ್ತಿಯ ಪ್ರಿಯಶಿಷ್ಯ ಕೊಪಣತೀರ್ಥರ ಎಮ್ಮೆಯರ ಪ್ರಿಥಿಗೌಡ ಮತ್ತು ಅವನ ಹೆಂಡತಿ ಮಾತಾವೆಯ ಮಗ ಬೋಪಣ್ಣನು ತಮ್ಮ ನೋಂಪಿ ನಿಮಿತ್ತ ಚೌವೀಸ ತೀರ್ಥಂಕರ ಬಿಂಬಮೂಡಿಸಿದ ಉಲ್ಲೇಖವನ್ನು ನೀಡಿದೆ. ಯಲಬುರ್ಗಾದಲ್ಲಿ ದೊರೆತ ಶಾಸನದಲ್ಲಿ ಮೂಲಸಂಘ ದೇಸೀಯಗಣದ ಪುಸ್ತಕಗಚ್ಛದ ಯಿಂಗಳೇಶ್ವರ ಬಳಿಯ ಮಾಧವಚಂದ್ರ ಭಟ್ಟಾರಕನ ಶಿಷ್ಯ ರಾಜಧಾನಿ ಎರಂಬರಗೆಯ ಕುಳಾಗ್ರಿ ಸೇವಭೋವ ಆಚಣ್ಣನ ಮಗ ದೇವಣನು ಸಿದ್ಧಚಕ್ರದ ನೋಂಪಿ ಕ್ರುತಪಂಚಮಿ ನೋಂಪಿಗಾಗಿ ಪಂಚಪರಮೇಷ್ಟಿಗಳ ಪ್ರತಿಮೆ ಮಾಡಿಸಿದಂತೆ ತಿಳಿದುಬರುತ್ತದೆ. ಕ್ರಿ.ಶ.೧೩ನೆಯ ಶತಮಾನದಲ್ಲಿ ದೊರೆತ ಶಾಸನವೊಂದರಲ್ಲಿ ಮೂಲಸಂಗದ ದೇಸೀಯಗಣದ ಪುಸ್ತಕಗಚ್ಛದ ಕುಂದಕುಂದಾನ್ವಯದ ರೋಣಸಂಬಂಧದ ಎರಂಬರಿಗೆಯ ನಗರ ಜಿನಾಲಯಕ್ಕೆ ಮೀಡಗುದಲಿಯ ಕೀರ್ತಿಸೆಟ್ಟಿಯ ಮಗ ಮಲ್ಲಿಸೆಟ್ಟಿಯು ಪಾಶ್ವನಾಥದೇವರ ವಿಗ್ರಹವನ್ನು ಮಾಡಿಸಿದಂತೆ ಮಾಹಿತಿ ನೀಡಿದೆ.  ಇದರಿಂದಾಗಿ ಯಲಬುರ್ಗಾವು ಪರಿಸರವು ಜೈನ ನೆಲೆಯಾಗಿದ್ದಿತು ಎಂಬುದಾಗಿ ತಿಳಿದು ಬರುತ್ತದೆ.ಅಲ್ಲಲ್ಲಿ ದೊರೆಯುವ ಶಾಸನಗಳ ವಿವರದಿಂದ (ಕ್ರಿ.ಶ. ೧)೫೪ರ ನಂದಿಬೇವೂರ, ಕ್ರಿ.ಶ. ೧೨೯೭ರ ಮನ್ನೆರ ಮಸಲವಾಡ, ಕ್ರಿ.ಶ. ೧೫೪೫ರ ಕುರುಗೋಡು ಶಾಸನ) ಈ ಭಾಗದಲ್ಲಿ ಜೈನಧರ್ಮದ ಇರುವಿಕೆಯನ್ನು ಗುರುತಿಸಬಹುದಾಗಿದೆ. 
ಕೊಪ್ಪಳ:
      ಕೊಪ್ಪಳ ಹೆಸರಿನ ವಿವಿಧ ಪರ್ಯಾಯ ನಾಮಗಳು ಶಾಸನಗಳು,ಸಾಹಿತ್ಯ ಕೃತಿಗಳಲ್ಲಿ ಕಂಡು ಬಂದಿರುವುದನ್ನು ಈಗಾಗಲೇ ವಿದ್ವಾಂಸರು ಗುರುತಿಸಿದ್ದಾರೆ. ಕನ್ನಡದ ಮೊದಲ ಉಪಲಬ್ದ ಗ್ರಂಥವಾದ ಕವಿರಾಜಮಾರ್ಗದಲ್ಲಿ ಕೊಪ್ಪಳದ ಉಲ್ಲೇಖವಿದೆ. ಈ ಪ್ರದೇಶವನ್ನು ‘ತಿರುಳ್ಗನ್ನಡನಾಡು’ ಎಂದು ಕವಿರಾಜಮಾರ್ಗಕಾರ ಕರೆದಿದ್ದಾನೆ. ಇಲ್ಲಿ ಕೊಪ್ಪಳವನ್ನು ‘ವಿದಿತಮಹಾಕೊಪಣ’ ಎಂದಿರುವುದನ್ನು ನೋಡಿದರೆ ಆ ಕಾಲಕ್ಕಾಗಲೇ ಕೊಪ್ಪಳವು ಪ್ರಸಿದ್ಧಿಯನ್ನು ಪಡೆದಿತ್ತೆಂದು ಹೇಳಬಹುದಾಗಿದೆ. ಈ ತಿರುಳ್ಗನ್ನಡ ಪ್ರದೇಶವನ್ನು ಕನ್ನಡದ ಆದಿಕವಿ ಪಂಪ ತನ್ನ ‘ವಿಕ್ರಮಾರ್ಜುನ ವಿಜಯ’ದಲ್ಲಿ ‘ಸಾಜದ ಪುಲಿಗೆರೆಯ ತಿರುಳ್ಗನ್ನಡದೊಳ್’ ಎಂದು, ರನ್ನನು ತನ್ನ ಸಾಹಸಭೀಮ ವಿಜಯದಲ್ಲಿ ‘ಕನ್ನಡ ಮೆರಡರುನೂರರ ಕನ್ನಡವೂ ತಿರುಳ್ಗನ್ನಡಂ’ ಎಂದು ಉಲ್ಲೇಖಿಸಿದ್ದಾನೆ. ಚಾವುಂಡರಾಯ ತನ್ನ ಚಾವುಂಡರಾಯ ಪುರಾಣದಲ್ಲಿ ಕೊಪ್ಪಳವನ್ನು ‘ಕೊಪಣಾದ್ರಿ’ ಎಂದು ಹೆಸರಿಸಿದ್ದಾನೆ. ರನ್ನ ತನ್ನ ಅಜಿತನಾಥ ಪುರಾಣದಲ್ಲಿ ‘ನೆಗಳ್ದ ಕೊಪಣಾಚಳದಂತೆ ಪವಿತ್ರಮತ್ತಿಮಬ್ಬೆಯ ಚರಿತಂ’ ಎಂದು ಕೊಪ್ಪಳವನ್ನು ಉಲ್ಲೇಖಿಸಿದ್ದಾನೆ. ಹಳಗನ್ನಡ ಕವಿಗಳು ಕೊಪ್ಪಳವನ್ನು ಉಲ್ಲೇಖಿಸಿರುವುದನ್ನು ನೋಡಿದರೆ ಕೊಪ್ಪಳವು ಆ ಕಾಲಕ್ಕಾಗಲೇ ಪ್ರಸಿದ್ಧ ನಗರವಾಗಿರುವುದರ ಜೊತೆಗೆ ಜೈನಧರ್ಮದ ನೆಲೆಗೆ ಭದ್ರವಾದ ಸ್ಥಳವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಕೊಪ್ಪಳಕ್ಕೆ ಹಿಂದಿನಿಂದಲೂ ಬೇರೆ ಬೇರೆ ಹೆಸರಿನಿಂದ ಕರೆಯಲಾಗಿದೆ.
     ಶಾಸನಗಳಲ್ಲಿ ಕುಪಣ, ಕೊಪಣ, ತೀರ್ಥಕೊಪಣಪುರ, ಕೊಪಣಪುರವರ, ಆದಿತೀರ್ಥ, ಕೊಪ್ಪಳ, ಕೊಪಣತೀರ್ಥ,ಕೊಪಣಾಧಿ ತೀರ್ತ್ಥ, ಕೊಪಣಮಹಾತೀರ್ಥ, ಕೊಪಬಾಲ, ಮತ್ತು ಕುಪ್ಪಲ್ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಪ್ರಪ್ರಥಮವಾಗಿ ಚಿತ್ರದುರ್ಗದ ಚಂದ್ರವಳ್ಳಿಯ ಶಾಸನದಲ್ಲಿ ‘ಕುಪಣಚ[ಮೊ]’ ಎಂದು ಉಲ್ಲೇಖಿಸಲ್ಪಟ್ಟಿದೆ. ಆ ‘ಕುಪಣ’ ವೇ ಈಗಿನ ಕೊಪ್ಪಳವಾಗಿದೆ. ಕೊಪಣ ಮಹಾತೀರ್ಥವೆಂದು  ಶಾಸನಗಳಲ್ಲಿ ಕರೆಸಿ ಕೊಂಡಿರುವ ಕೊಪ್ಪಳವು ಚಾರಿತ್ರಿಕ ಮಹತ್ವವನ್ನು ಪಡೆದಿದೆ.
    ಕರ್ನಾಟಕದ ಪ್ರಾಚೀನ ಮತ್ತು ಮಹತ್ವ ಪೂರ್ಣವಾದ ಧರ್ಮವಾದ ಜೈನಧರ್ಮ ಧಾರ್ಮಿಕ ಕ್ಷೇತ್ರದಲ್ಲಷ್ಟೇ ಅಲ್ಲದೆ ಸಾಹಿತ್ಯಿಕ, ರಾಜಕೀಯ, ನೈತಿಕ ಮತ್ತು ಕಲಾಕ್ಷೇತ್ರಗಳಲ್ಲಿ ಸದಾ ಸ್ಮರಣೀಯ ಪರಿಣಾಮವನ್ನು ಬೀರಿದೆ. ಕರ್ನಾಟಕದಲ್ಲಿ ಜೈನಧರ್ಮದ ನೆಲೆವೀಡಾಗಿ ಶ್ರವಣಬೆಳಗೊಳವು  ಎಷ್ಟು ಪ್ರಸಿದ್ಧಿಯನ್ನು ಪಡೆದಿದೆಯೋ ಅಷ್ಟೇ ಪ್ರಸಿದ್ಧಿಯನ್ನು ಪಡೆದ ಮತ್ತೊಂದು ಕೇಂದ್ರವೆಂದರೆ ಕೊಪ್ಪಳವೆಂದು ಹೇಳಬಹುದು. ಜೈನ ಧರ್ಮವು ಕೊಪ್ಪಳದಲ್ಲಿ ಪಡೆದಿದ್ದ ಭದ್ರವಾದ ಸ್ಥಾನವನ್ನು ಇಲ್ಲಿಯ ಶಾಸನಗಳ ಮೂಲಕ ತಿಳಿಯಬಹುದಾಗಿದೆ. ಅತ್ಯಂತ ಪ್ರಾಚೀನ ಕಾಲದಿಂದಲೇ ಜೈದಧರ್ಮದ ಬೀಡಾಗಿದ್ದ ಕೊಪ್ಪಳವು ವಿವಿಧ ಅರಸು ಮನೆತನಗಳ ಪ್ರಭಾವಕ್ಕೊಳಪಟ್ಟಿತ್ತು. ಪ್ರಮುಖ ಅರಸುಮನೆತನಗಳ ಪ್ರೋತ್ಸಾಹದಿಂದ ಇಲ್ಲಿ ಜೈನಧರ್ಮ ಬಹು ಕಾಲದವರೆಗೆ ಪ್ರಚಲಿತದಲ್ಲಿತ್ತೆಂದು ಹೇಳಬಹುದಾಗಿದೆ.
    ಕೊಪ್ಪಳ ಜಿಲ್ಲೆಯಲ್ಲಿ ಜೈನಧರ್ಮದ ಕುರಿತು ಅಸಂಖ್ಯಾತ ಶಾಸನಗಳು ದೊರೆತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಈ ಶಾಸನಗಳು ಜೈನಧರ್ಮದ ಕುರಿತು ವಿಶೇಷವಾದ ಮಾಹಿತಿಯನ್ನು ಒದಗಿಸಿವೆ.    ಕೊಪ್ಪಳ ಪರಿಸರದಲ್ಲಿ ಕಂಡು ಬರುವ ಶಾಸನಗಳು ಜೈನಧರ್ಮದ ಬಗೆಗೆ  ಅನೇಕ ಮಾಹಿತಿಗಳನ್ನು ನೀಡಿವೆ. ಈ ಪರಿಸರದಲ್ಲಿ ಜೈನಧರ್ಮವನ್ನು ಉಳಿಸಿ ಬೆಳಸಿದ ಪರಿಯನ್ನು, ಜಿನಾಲಯ, ಜಿನ ಶಿಲ್ಪಗಳನ್ನು ನಿರ್ಮಿಸಿದವರ ಬಗೆಗೆ,  ನಂತರದ ಕಾಲದಲ್ಲಿ ಅವುಗಳನ್ನು ದಾನ ದತ್ತಿ ನೀಡುವುದರ ಮೂಲಕ ಜೀರ್ಣೋದ್ಧಾರ ಮಾಡಿದವರ ಬಗೆಗೆ  ಜೈನ ಬಸದಿಯ ನಿರ್ಮಾಣ ಹಾಗೂ ನೆಟ್ಟ ನಿಷಧಿಗಲ್ಲುಗಳು, ಪುರುಷರು ಹಾಗೂ ಸ್ತ್ರೀಯರು ಸ್ವೀಕರಿಸಿದ ಸಲ್ಲೇಖನ ವ್ರತಗಳ ಕುರಿತು ಹಾಗೂ ಬಸದಿ ನಿರ್ಮಾಣ ಕಾರ್ಯದಲ್ಲಿ ಸ್ತ್ರೀಯರು ಪಾಲ್ಗೊಂಡ ರೀತಿ, ಮತ್ತು ಆ ಕಾಲಘಟ್ಟದ ಜೈನರ ಸಮಾಜ ಜೀವನದ ಚಿತ್ರಣದ ಬಗೆಗೆ ವಿಶೇಷವಾದ ಮಾಹಿತಿಯನ್ನು ಇಲ್ಲಿನ ಶಾಸನಗಳಿಂದ ತಿಳಿಯಬಹುದಾಗಿದೆ. ಕೊಪ್ಪಳವು ಬಹು ಪ್ರಾಚೀನ ಕಾಲದಿಂದಲೂ ಪ್ರಸಿದ್ಧ ಜೈನ ತಾಣವಾಗಿದೆ. ‘ಕೊಪ್ಪಳವು ತೀರ್ಥಕ್ಷೇತ್ರ, ಆದಿತೀರ್ಥ, ಮಹಾತೀರ್ಥ ಎಂದೆನಿಸಿದಂತೆಯೇ ಬಸದಿಗಳ ಬೀಡು ಎಂದೂ ಹೆಸರುವಾಸಿಯಾಗಿದೆ. ಸ್ಥಳೀಯ ಐತಿಹ್ಯಗಳೂ ಲಭ್ಯಪೂರಕ ಐತಿಹಾಸಿಕ ಆಕರಗಳೂ ಈ ಸಂಗತಿಯ ಸತ್ಯಕ್ಕೆ ಕನ್ನಡಿ ಹಿಡಿದಿವೆ. ಕೊಪ್ಪಳ ಜಿಲ್ಲೆಯಲ್ಲಿ ಜೈನಧರ್ಮದ ಉಲ್ಲೇಖ ದೊರೆಯುವುದು ಒಂದನೆಯ  ಶತಮಾನದಿಂದಲೇ. ಮೊದಲನೆಯದಾಗಿ ಕವಿರಾಜಮಾರ್ಗದಲ್ಲಿ ಕೊಪ್ಪಳದ ಉಲ್ಲೇಖ ಬಂದರೆ ಎರಡನೆಯದಾಗಿ ಅಜಿತಪುರಾಣವು ಅತ್ತಿಮಬ್ಬೆಯ ಧವಲಕೀರ್ತಿ ಕೊಪ್ಪಳದ ಬೆಟ್ಟದಂತೆ ಬೆಳ್ಳಗೆ ಎಂದು ಹೋಲಿಸುವಲ್ಲಿ ಕಂಡು ಬರುತ್ತದೆ. ನಂತರ ರನ್ನ ಕವಿಯ ಸಮಕಾಲೀನನಾದ ಚಾವುಂಡರಾಯನು ತನ್ನ ‘ಚಾವುಂಡರಾಯ ಪುರಾಣ’ ಗ್ರಂಥದಲ್ಲಿ ಕೊಪ್ಪಳದ ಬೆಟ್ಟದ ಕುರಿತಂತೆ ಉಲ್ಲೇಖ ನೀಡಿದ್ದಾನೆ. ಕೊಪ್ಪಳ ಜಿಲ್ಲೆಯ ಶಾಸನಗಳನ್ನು ಗಮನಿಸಿದಾಗ ಅಲ್ಲಿ ಕಂಡು ಬರುವ ವಿಶೇಷತೆಯೇನೆಂದರೆ ಈ ಪ್ರದೇಶ ಕ್ರಿ.ಶ.೧೪ನೇ ಶತಮಾನದವರೆಗೆ ರಾಜಕೀಯ ಕೇಂದ್ರವಾಗಲಿ, ವ್ಯಾಪಾರಿಕೇಂದ್ರವಾಗಲಿ ಆಗಿರದೆ ಅದೊಂದು ಶುದ್ಧವಾದ ತೀರ್ಥಸ್ಥಾನವಾಗಿ ಮಾತ್ರ ಪ್ರಸಿದ್ಧಿಯನ್ನು ಪಡೆದುಕೊಂಡಿತು. ಕೊಪ್ಪಳದ ಜೈನಧರ್ಮದ ಬಗ್ಗೆ ಹೇಳುವುದಾದರೆ ಇದು ಜೈನಧರ್ಮದ ಕೇಂದ್ರಸ್ಥಾನವೆಂಬಂತೆ ಶಾಸನಗಳಲ್ಲಿ, ಕಾವ್ಯಗಳಲ್ಲಿ ಚಿತ್ರಿತವಾಗಿದೆ. ಕ್ರಿ.ಶ.೧೦ನೇ ಶತಮಾನದ ಉತ್ತರಾರ್ಧದಿಂದ ೧೧ನೇ ಶತಮಾನದ ಪೂರ್ವಾರ್ಧದವರೆಗಿನ ಶಾಸನಗಳಲ್ಲಿ ಇಲ್ಲಿ ಮುಡಿಪಿ ಪ್ರಾಣವನ್ನು ತೊರೆದ ಸ್ತ್ರೀಯರ ಹಾಗೂ ಮುನಿಗಳ ಕುರಿತು ಮಾಹಿತಿ ದೊರೆಯುತ್ತದೆ. ಹೀಗೆ ಸಾಮಾನ್ಯ ಸ್ತ್ರೀಯರೊಂದಿಗೆ ರಾಜಶ್ರೀ ಪರಿವಾರ, ರಾಜಪೂಜಿತ ಗುರುಗಳು ಸಲ್ಲೇಖನವನ್ನು ಸ್ವೀಕರಿಸಿದುದರಿಂದ ಈ ಸ್ಥಳದ ಹೆಗ್ಗಳಿಕೆ ಹೆಚ್ಚಾಯಿತು.
   ಕೊಪ್ಪಳದಲ್ಲಿ ಅನೇಕ ಜಿನಮುನಿಗಳು ಇದ್ದು ನಂತರದ ಕಾಲದಲ್ಲಿ ಜೈನಧರ್ಮದ ಸೂತ್ರದಂತೆ ಸಮಾಜದ ವಿವಿಧ ಚಟುವಟಕೆಗಳಲ್ಲಿ ಭಾಗಿಯಾಗುವುದರದ ಮೂಲಕ ಬೇರೆ ಬೇರೆ ಸ್ಥಳಗಳಲ್ಲಿ ನೆಲಸಿ ಜೈನಧರ್ಮದ ತತ್ವಗಳನ್ನು ಬೋದಿಸುತ್ತಿದ್ದ ಬಗೆಗೆ ಇಲ್ಲಿಯ ಶಾಸನಗಳಲ್ಲಿ ಉಲ್ಲೇಖ ಇದೆ.  ಇಲ್ಲಿಯ ಶಾಸನಗಳಲ್ಲಿ ಅನೇಕ ಜೈನಮುನಿಗಳ ಹೆಸರುಗಳು ಬಳಕೆಯಾಗಿವೆ. ಈ ಜೈನ ಮುನಿಗಳಲ್ಲಿ ಗಣ, ಗಚ್ಛ, ಸಂಘ, ಅನ್ವಯಗಳೆಂಬ ಶಾಖೆಗಳು ಕಂಡುಬರುತ್ತವೆ. ಶಾಸನಗಳಲ್ಲಿ ಎಲ್ಲಾ ಶಾಖೆಗಳ ಮುನಿಗಳ ಕುರಿತು ಮಾಹಿತಿ ದೊರೆತರೂ ಕೊಂಡಕುಂದಾನ್ವಯಕ್ಕೆ ಸೇರಿದ ಮುನಿಗಳ ಕುರಿತು ಹೆಚ್ಚಿನ ಶಾಸನಗಳಲ್ಲಿ ಉಲ್ಲೇಖ ಬಂದಿದೆ.
    ಕ್ರಿ.ಶ.೮೮೧ರಲ್ಲಿ ದೊರೆತ ಶಾಸನವು ಕುಣ್ದಕುನ್ದಾನ್ವಯಕ್ಕೆ ಸೇರಿದ್ದ ಏಕಚಟ್ಟುಗದ ಭಟಾರರ ಶಿಷ್ಯ ಸರ್ವನಂದಿ ಭಟಾರನು ಇಲ್ಲಿದ್ದು ಊರಿನ ತೀರ್ಥಕ್ಕೂ ಉಪಕಾರಿಯಾಗಿ, ಕೆಲವು ಕಾಲ ತಪಸ್ಸನ್ನು ಮಾಡಿ ವ್ರತವನ್ನು ಸ್ವೀಕರಿಸಿ ಮುಡಿಪಿದ. ಈತನು ತನ್ನ ಜೀವಿತದ ಅವಧಿಯಲ್ಲಿ ಸನ್ನಡತೆಯಿಂದ ಬಾಳಿ, ಯಾವಾಗಲೂ ಶಾಸ್ತ್ರದಾನವನ್ನು ಮಾಡುತ್ತಾ ಭೂಮಿಯ ಪಾಪಗಳ ತೊಳೆದ ಆ ಸರ್ವನಂದಿಮುನಿಗೆ ಮಂಗಳ ವಾಗಲಿ ಎಂದು ಉಲ್ಲೇಖಿಸಿದೆ. ಕ್ರಿ.ಶ.೯೧೦ರಲ್ಲಿ ಕೊಣ್ದಕುನ್ದಾನ್ವಯದ ಪದ್ಮನಂದಿಸಿದ್ಧಾಂತ ಭಟಾರರ ಶಿಷ್ಯ ನಯನಂದಿಪಂಡಿತ ಭಟಾರನ ನಿಷಧಿಯನ್ನು ಮಾಡಿದಂತೆ ಕಂಡು ಬಂದಿದೆ. ಕ್ರಿ.ಶ.೯೯೭ರಲ್ಲಿ ಕೊಣ್ದಕುನ್ದಾನ್ವಯದ ಪುಸ್ತಕಸನ್ತಲೆಯ ಕೀರ್ತಿಸೂರಿಯ ಶಿಷ್ಯ ಅವರಸ್ತಿವಾಸಿ ಗೊಲ್ಲಾಚಾರ್ಯ. ಈ ಗೊಲ್ಲಾಚಾರ್ಯನ ಶಿಷ್ಯ ತ್ರಿಕಾಲಯೋಗಿಯು ತನ್ನ ಅಂತ್ಯಕಾಲದ ಸಮಯದಲ್ಲಿ ಕೊಪಣದ ಜಿನಪಾದಗಳ ಬಳಿ ಕುಳಿತು ತಪಸ್ಸು ಮಾಡಿ ಮುಕ್ತಿಯನ್ನು ಸಾಧಿಸುತ್ತಾನೆ. ಜೈನಧರ್ಮದ ಬಗೆಗಿನ ಭಕ್ತಿಯ ಕುರಿತು ಈತನು ಸಾಧಿಸಿದ ಮಾಹಿತಿಶಾಸನವೊಂದು ಕೆಳಕಂಡ ರೀತಿಯಲ್ಲಿ ವರ್ಣಿಸಿದೆ. ಈತನಿಗೆ ಗಣಧರರು, ಶ್ರೇಷ್ಠಉಪಾಸಕರಾದ ಮುನಿಗಳ ಗುಂಪು ಸಮನಾಗಬಹುದೇ ಹೊರತು ಬೇರೆಯವರನ್ನು ಹೋಲಿಸಲು ಬರುವುದಿಲ್ಲ. ಇವನು ಆತಪನ, ತರುಮೂಲ ಮತ್ತು ಶಿಖರವಾಸ ಎಂಬ ಮೂರು ಬಗೆಯ ಯೋಗದಲ್ಲಿ ಸಿದ್ಧಿಪಡೆದಿದ್ದ. ಇವನ ತಪಸ್ಸಿನ ಸ್ಥಿರತೆಯನ್ನು ಕದಲಿಸಲು ಮೋಡಗಳು ಆರ್ಭಟಿಸಿದವು, ಮಿಂಚು ಸಿಡಿಲುಗಳು ಹೆದರಿಸಿದವು. ಒಂದೇ ಸಮನೆ ಮಳೆ ಸುರಿಯಿತು, ಆದರೂ ಈ ಮುನಿ ಮರದ ಬುಡವನ್ನು ಬಿಟ್ಟು ಕದಲಲಿಲ್ಲ. ಹೀಗೆ ಮೋಕ್ಷವನ್ನು ಸಾಧಿಸಿದ ಗೊಲ್ಲಾಚಾರ್ಯನ ಶಿಷ್ಯ ತ್ರಿಕಾಲಯೋಗಿಯೂ ವರ್ಣಿತನಾಗಿದ್ದಾನೆ. ಕೊಪ್ಪಳದಲ್ಲಿ ದೊರೆತ ಕ್ರಿ.ಶ.೧೦೦೦ದ ಅವಧಿಯ ಶಾಸನ ತ್ರಿಭುವನಚಂದ್ರ ಮುನೀಂದ್ರನು ಮುಕ್ತಿಯನ್ನು ಸಾಧಿಸಿದಂತೆ ತಿಳಿಸುತ್ತದೆ. ಇದರ ಜೊತೆಗೆ ಕೊಂಡಕುನ್ದಾನ್ವಯದ ರವಿಚಂದ್ರ, ಶ್ರುತಸಾಗರ ಮತ್ತು ಗಂಡವಿಮುಕ್ತದೇವನನ್ನು ಹೆಸರಿಸುತ್ತದೆ. ಕ್ರಿ.ಶ.೧೦೩೧ರಲ್ಲಿ ಕೊಂಡಕುನ್ದಾನ್ವಯಕ್ಕೆ ಸೇರಿದ ಮೇಘಚಂದ್ರಮುನಿಯು ರತ್ನತ್ರಯವನ್ನು ಸಾಧಿಸಿ ಮುಡಿಪಿದಂತೆ ತಿಳಿದುಬರುತ್ತದೆ. ಜೈನ ಮುನಿಗಳ ಅನ್ವಯ ಶಾಖೆಯಲ್ಲಿ ಬರುವ ಕೊಂಡಕುನ್ದಾನ್ವಯದ ಕುರಿತು ಬಹಳಷ್ಟು ಶಾಸನಗಳು ಮಾಹಿತಿ ನೀಡಿದಂತೆ ಗಣ ಶಾಖೆಯಲ್ಲಿ ಬರುವ ಮುನಿಗಳ ಕುರಿತು ಕೆಲವೊಂದು ಶಾಸನಗಳು ಉಲ್ಲೇಖ ನೀಡಿವೆ.
     ಕ್ರಿ.ಶ.೧೦೨೨ರಲ್ಲಿ ದೊರೆತ ಶಾಸನದಲ್ಲಿ ಸೇನಗಣಕ್ಕೆ ಸೇರಿದ ಅಜಿತಸೇನಾಚಾರ್ಯನನ್ನು ಈ ರೀತಿ ವರ್ಣಿಸಿದೆ. ಇವನಿಂದ ಭೂಮಿಯ ಮೇಲೆ ಪೆರ್ಮಳೆಗಳು ಸುರಿದವಂತೆ, ಹಸಿವು, ನೀರಡಿಕೆಗಳಿಲ್ಲವಾದುವೆಂದೂ ತನಗೆ ಗೌರವ ನೀಡಿದವರನ್ನು, ನಿಂದಿಸಿದವರನ್ನು ಸಮಾನವಾಗಿ ಕಾಣುತ್ತಿದ್ದನೆಂದು ಶಾಸನ ವರ್ಣಿಸಿದೆ. ಕ್ರಿ.ಶ.೧೦೧೯ರ ಶಾಸನವು ದೇಸಿಗಣದ ರವಿಚಂದ್ರಸೂರಿ ಇವನ ಶಿಷ್ಯ ತ್ರಿಭುವನಚಂದ್ರಮುನೀಂದ್ರ. ಈತನ ಶಿಷ್ಯ ಮೋನಿಭಟಾರಕನು ನಿಷದಿಗೆಯನ್ನು ನಿಲ್ಲಿಸಿದಂತೆ ತಿಳಿಸುತ್ತದೆ. ಕ್ರಿ.ಶ.೯೭೭ರಲ್ಲಿ ದೇಸಿಗಣದ ದಿವಾಕರಣನ್ದಿಪಂಡಿತರ ಶಿಷ್ಯೆ ಅಣುಗಬ್ಬೆಯು ಸನ್ಯಾಸನವನ್ನು ಸ್ವೀಕರಿಸಿ ಮುಡಿಪಿದಂತೆ ತಿಳಿದುಬರುತ್ತದೆ.
   ಇದೇ ದೇಸಿಗಣದ ಶ್ರೀಧರವಿಮುಕ್ತಭಟಾರರ ಶಿಷ್ಯರಾದ ಮಲ್ಲಧಾರಿ ಮುನಿಯು ಜಿನಪದವನ್ನು ನೆನೆಯುತ್ತಾ ಮುಡಿಪನ್ನು ಹೊಂದುತ್ತಾನೆ. ಈತನನ್ನು ಪಾಪವೆಂಬ ಕಂಬವನ್ನು ಮುರಿದು, ಇಂದ್ರಿಯಗಳನ್ನು ಗೆದ್ದು, ಹಗಲು ಇರುಳು ತಪಸ್ಸು ಮಾಡಿ ಸುಚಿತ್ತದಿಂದ ಸುಗತಿಯನ್ನು ಪಡೆದನೆಂದಿದೆ. ಈತನ ತಪಸ್ಸಿನಿಂದ ಮನ್ಮಥ ದೂರವುಳಿದ. ಬಾಯಾರಿಕೆ ಇಂಗಿಹೋಯಿತು. ಕರ್ಮ ನಾಶವಾಯಿತು. ಘೋರ ತಪಸ್ಸನ್ನಾಚರಿಸಿ ಜ್ಞಾನವನ್ನು ಪಡೆದು ಪ್ರಾಣವನ್ನು ದೇಹದಿಂದ ಬೇರೆ ಮಾಡಿ ಸುಗತಿಯನ್ನು ಸಾಧಿಸಿದಂತೆ ಶಾಸನವು ತಿಳಿಸುತ್ತದೆ. ಕ್ರಿ.ಶ.೧೦೩೨ರಲ್ಲಿ ದೇಸಿಗಣದ ನಯನಂದಿಭಟ್ಟಾರಕರ ಶಿಷ್ಯನಾದ ಗುಣದಬೆಡಂಗನೆಂಬುವವನು ತನ್ನ ಗುರುವಿನ ಸನ್ನಿಧಿಯಲ್ಲಿ ಸನ್ಯಸನವಿಧಿಯಿಂದ ಮುಡಿಪನ್ನು ಹೊಂದುತ್ತಾನೆ. ದೇಸಿಗಣದ ಮಲಧಾರಿ ಭಟ್ಟಾರಕನ ಶಿಷ್ಯನಾಗಿ ನಯನಂದಿ ದೇವನಿರುತ್ತಾನೆ. ಕುಪಣತೀರ್ಥದಲ್ಲಿ ಈತನು ಶರೀರವನ್ನು ತೊರೆಯುತ್ತಾನೆ. ಕೀರ್ತಿವಂತ, ಭುವನಶಾಂತಿಕರ, ಕುಸುಮಾಸ್ತಭೀಕರನೆಂದು, ಕಾಷಾಯರಹಿತನೆಂದು ಈತನನ್ನು ಶಾಸನದಲ್ಲಿ ವರ್ಣಿಸಿದೆ.
        ಮುಂದೆ ಗಚ್ಛಶಾಖೆಯ ಮುನಿಗಳ ಕುರಿತು ಶಾಸನಗಳಲ್ಲಿ ಉಲ್ಲೇಖ ದೊರೆತಿದೆ. ಕೊಪ್ಪಳದಲ್ಲಿ ದೊರೆತ ಶಾಸನವೊಂದರಲ್ಲಿ ಪುಸ್ತಕಗಚ್ಛದ ದೇವೇಂದ್ರಮುನೀಂದ್ರನನ್ನು ಹೆಸರಿಸಿದ್ದು ಇನ್ನೊಂದು ಭಾಗದಲ್ಲಿ ದಾಮನಂದಿ, ತ್ರಿಕಾಳಯೋಗಿ, ಅರ್ಹದ್ದೇವ, ಶ್ರೀಧರದೇವ, ಚನ್ದ್ರನಂದಿ ಮೊದಲಾದವರ ಹೆಸರನ್ನು ಉಲ್ಲೇಖಿಸಿದೆ. ಕ್ರಿ.ಶ.೧೦೦೨ರಲ್ಲಿ ದೊರೆತ ಕೊಪ್ಪಳದ ಶಾಸನವು ಪುಸ್ತಕಗಚ್ಛದ ರವಿಚನ್ದ್ರ ಇವನ ಶಿಷ್ಯ ದಾಮನಂದಿ, ಇವನ ಶಿಷ್ಯ ಶ್ರೀಧರದೇವನನ್ನು ಹೊಗಳಿದಂತೆ ತಿಳಿಸುತ್ತದೆ. ಕೊಪ್ಪಳದಲ್ಲಿ ದೊರೆತ ಶಾಸನಗಳಲ್ಲಿ ಅನೇಕ ಜೈನ ಮುನಿಗಳ ವಿವರ ಬಂದಿದ್ದು ಇವರೆಲ್ಲ ಬೇರೆ ಬೇರೆ ಗಣ, ಗಚ್ಛಸಂಘ ಅನ್ವಯಗಳಿಗೆ ಸೇರಿದವರಾದರೂ ಕೊಂಡಕುಂದ ಅನ್ವಯಕ್ಕೆ ಸೇರಿದವರ ಕುರಿತು ಹೆಚ್ಚಿನ ಮಾಹಿತಿ ದೊರೆತಿರುತ್ತದೆ.
     ಜೈನಧರ್ಮಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಾ ಬಂದವರು ಗಂಗರು. ಸುಮಾರು ೧೦ನೆಯ ಶತಮಾನದ ಅವಧಿಯಿಂದಲೇ ಗಂಗರಲ್ಲಿ ಅನೇಕರು ಜೈನ ಧರ್ಮದ ಅನುಯಾಯಿಗಳಾಗುತ್ತಾ  ಬಂದಿದ್ದಾರೆ. ಗಂಗರಾಜ ಬೂತುಗನಿಗೆ ಅನೇಕ ರಾಣಿಯರಿದ್ದರು. ರೇವಕನಿಮ್ಮಡಿ, ಪದ್ಮಬ್ಬರಸಿ, ಬಿಜ್ಜರಸಿ ಹೀಗೆ ಇತ್ಯಾದಿ. ಹೀಗೆ ಗಂಗರಿಗೆ ಕೊಪ್ಪಳವು ರಾಜಕೀಯವಾಗಿ ಸಂಬಂಧಿಸಿದಂತೆ ಧಾರ್ಮಿಕವಾಗಿಯೂ ನಿಕಟವಾಗಿ ಸಂಬಂಧಿಸಿದ್ದಿತು. ರಾಷ್ಟ್ರಕೂಟರ ಮಾಂಡಳಿಕರಾಗಿ ಆಡಳಿತ ನಡೆಸುತ್ತಿದ್ದ ಗಂಗರು ಬೂತುಗನ ಮರಣದ ನಂತರ ಪ್ರಾಬಲ್ಯಕ್ಕೆ ಒಳಪಟ್ಟಿತು. ಬೂತುಗನ ಅವಸಾನದಿಂದ ಗಂಗರ ರಾಣಿವಾಸದ ಸ್ತ್ರೀಯರು ತಮ್ಮ ಅಂತ್ಯಕಾಲವನ್ನು ತಲಕಾಡಿನಲ್ಲಿ ಕಳೆಯುವ ಬದಲು ತೀರ್ಥಕ್ಷೇತ್ರವಾದ ಕೊಪ್ಪಳದಲ್ಲಿ ಬಂದು ಕಳೆಯುತ್ತಾರೆ. ಕ್ರಿ.ಶ.೯೭೩ರಲ್ಲಿ ದೊರೆತ ಕೊಪ್ಪಳ ಶಾಸನವು ಬೂತುಗನ ಪತ್ನಿ ಪದ್ಮಬ್ಬೆಯು ಎಲ್ಲವನ್ನು ತ್ಯಜಿಸಿ ಕುಪಣಕ್ಕೆ ಬಂದು ದೀಕ್ಷೆಯನ್ನು ಪಡೆದಿದ್ದನ್ನು ತಿಳಿಸುತ್ತದೆ. ಕ್ರಿ.ಶ.೯೭೬ರಲ್ಲಿ ಪೊತಿಯಬ್ಬೆಯ ಮಗಳು ಎರೆಯಬ್ಬೆಯು ಸಮಾಧಿಯೋಗದಿಂದ ಸುರಲೋಕಕ್ಕೆ ಸಂದಿರುತ್ತಾಳೆ. ಮಾಂಡಳಿಕ ಮಕುಟ ಚೂಡಾಮಣಿಯ ತಂಗಿಯಾದ ಚಂದಿಬ್ಬರಸಿಯು (ಕ್ರಿ.ಶ.೯೭೫ರಲ್ಲಿ) ಮುಡಿಪನ್ನು ಹೊಂದುತ್ತಾಳೆ. ಕ್ರಿ.ಶ.೧೦೨೩ರಲ್ಲಿ ದೊರೆತ ಶಾಸನವೊಂದು ಗಂಗಮಂಡಳದ ರಾಜಮಲ್ಲನ ಪತ್ನಿಯಾದ ಕಂಚಿಯಬ್ಬರಸಿ ತನ್ನ ಪತಿಯ ಮರಣದ ನಂತರ ಅಜಿತಸೇನಾಚಾರ್ಯರ ಬಳಿ ದೀಕ್ಷೆ ಪಡೆದು ಕುಪಣತೀರ್ಥದಲ್ಲಿ ಸಮಾಧಿವಿಧಿಯಿಂದ ಮುಡಿಪನ್ನು ಹೊಂದಿದಂತೆ ತಿಳಿಸುತ್ತದೆ. ಕ್ರಿ.ಶ.೯೮೭ರ ಅವಧಿಯಲ್ಲಿ ಕುಂದಣಸಾಯಿ ಹಾಗೂ ಚಂಗಲದೇವಿಯರಿಬ್ಬರೂ ಮುಡಿಪನ್ನು ಹೊಂದುತ್ತಾರೆ. ಗೊನಂಜಿಕಂತಿಯು ಕ್ರಿ.ಶ.೯೯೨ರಲ್ಲಿ ಮುಡಿಪುತ್ತಾಳೆ. ಈತನ ತಂದೆ ಗಂಗವಂಶದ ಎರೆಯಂಗ, ಕ್ರಿ.ಶ.೯೯೮ರ ಶಾಸನವು ಬೂತುಗನ ಮಗಳಾದ ಮಾರಸಿಂಗನ ತಂಗಿಯಾದ ಹರಿಗನ ಪತ್ನಿಯಾದ ಜೆಜ್ಜಾಂಬಿಕೆ ಅಥವಾ ಜೆಜ್ಬಬ್ಬರಸಿಯು ಮುಡಿಪನ್ನು ಹೊಂದಿದಂತೆ ತಿಳಿಸುತ್ತದೆ. ಬೂತುಗನ ಪತ್ನಿ ರೇವಕನಿಮ್ಮಡಿ ಸನ್ಯಸನವಿಧಾನದಿಂದ ರತ್ನತ್ರಯಗಳನ್ನು ಸಾಧಿಸಿದ್ದಂತೆ ಕ್ರಿ.ಶ.೧೦ನೇ ಶತಮಾನದ  ಶಾಸನದಿಂದ ತಿಳಿದು ಬರುತ್ತದೆ. ಗಂಗ ವಂಶದ ರಾಣಿಯರು ಕೊಪ್ಪಳದಲ್ಲಿ ಬಂದು ಧಾರ್ಮಿಕ ಮರಣವನ್ನು ಹೊಂದಿದರು.   ಕ್ರಿ.ಶ.೧೩೪೬ರಲ್ಲಿ ದೊರೆತ ಶಾಸನವು ಅನಂತಕೀರ್ತಿಯ ಪ್ರಿಯ ಶಿಷ್ಯನಾದ ಸಿಂಹನಂದ್ಯಾಚಾರ್ಯನ ನಿಸದಿಯನ್ನು ಹರಿಹರ ಮಹಾರಾಜ ಮತ್ತು ಅಲ್ಲಿಯ ಜನರು ಮಾಡಿಸಿದಂತೆ ಮಾಹಿತಿಯನ್ನು ನೀಡಿದೆ. ಕ್ರಿ.ಶ.೮೮೩ರಲ್ಲಿ ರಾಷ್ಟ್ರಕೂಟ ರಾಜ ಇಂದ್ರನು ಆಳುತ್ತಿದ್ದಾಗ ಅವನ ದಂಡನಾಯಕನಾದ ಮಾಮರಸನು ಸಿದ್ಧಕುಪಣಕ್ಕೆ ತೀರ್ಥವಂದನಾರ್ಥವಾಗಿ ಬಂದಿದ್ದ ಸಮಯದಲ್ಲಿ ಕದಂಬರ ಪೆರ್ಮದೇವ ಮತ್ತು ದಡಿಯರಸರು ಬಸದಿಯನ್ನು ಕಟ್ಟಿಸುತ್ತಾರೆ.
        ಇತ್ತೀಚಿನ ಶಾಸನಗಳ ಅಧ್ಯಯನದಿಂದ ಜೈನಧರ್ಮಕ್ಕೆ ಸಂಬಂಧಿಸಿದ ನೂತನ ಅಂಶಗಳು ಬೆಳಕಿಗೆ ಬಂದಿವೆ. ಕ್ರಿ.ಶ.೧೨೦೪ರ ಕೊಪ್ಪಳ ಶಾಸನವು ಕವಡೆಬೊಪ್ಪನ ಬಗೆಗೆ ಪ್ರಸ್ತಾಪಿಸುತ್ತದೆ. ಈತನು ಕೊಪ್ಪಳದಲ್ಲಿ ಹುಟ್ಟಿ ಜಿನಧರ್ಮ ಪ್ರಸಾರಕನಾಗಿ ಕುಪ್ಪಣ, ಲೊಕ್ಕಿಗುಂಡಿ, ಕುಪಣ ಬಂಕಾಪುರ, ಹೂಲಿ, ಮುಳುಗುಂದ, ನವಿಲ್ಗುಂದ, ಬೆಳಗುಳ, ಮುಂತಾದ ಸ್ಥಳಗಳಲ್ಲಿಯ ಚೈತ್ಯಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿದ್ದನ್ನು, ಹೊಯ್ಸಳ ದೊರೆ ಬಲ್ಲಾಳ ರಾಯನಿಗೆ ನಿಷ್ಠೆಯನ್ನು ವ್ಯಕ್ತಪಡಿಸಿ ಅವನ ಪರವಾಗಿ ಅನೇಕ ಯುದ್ಧಗಳನ್ನು ಮಾಡಿದ್ದು,ಕೊನೆಗೆ ಕೊಪ್ಪಳದಲ್ಲಿಯೇ ನಿಸದಿ ಹೊಂದಿದ್ದು ಇತ್ಯಾದಿ ವಿಷಯಗಳನ್ನು ತಿಳಿಸುತ್ತದೆ.
     ಕೊಪ್ಪಳದಲ್ಲಿ ೧೨ ಬಸದಿಗಳು ಇದ್ದ ಬಗೆಗೆ ಶಾಸನಗಳಲ್ಲಿ ಉಲ್ಲೇಖವಿದೆ. ಅವುಗಳಲ್ಲಿ ತೀರ್ಥ ಬಸದಿ, ಬಸ್ತಿಕಟ್ಟೆ, ಈಶ್ವರ ಗುಡಿ, ಅಮೃತೇಶ್ವರ ಬಸದಿಗಳು ಮತ್ತು ಸಮೀಪದ ಮಾದಿನೂರಲ್ಲಿರುವ  ಚಂದ್ರನಾಥ ತೀರ್ಥಂಕರ ಬಸದಿ ಪ್ರಮುಖವಾಗಿವೆ.  ಜೈನಧರ್ಮದ ಪ್ರಮುಖ ಶಾಖೆಯಾದ ದಿಗಂಬರ ಜೈನ ಶಾಖೆಯ ಮುಖ್ಯ ಕೇಂದ್ರವಾಗಿ ಕೊಪ್ಪಳ (ಕೊಪಣ) ಇದ್ದಿತು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ. ಕ್ರಿ.ಶ. ೧೦೦೮ರ ಕೊಪ್ಪಳ ಶಾಸನದಲ್ಲಿ ಸಿಂಹನಂದಿಯತಿಯು `ಇಂಗಿಣಿ' ಮರಣವನ್ನಪ್ಪಿದ ವಿವರ ಇದೆ.   ಕೊಪ್ಪಳದಲ್ಲಿ ದೊರೆತ ಇತ್ತೀಚಿನ ಹೆಚ್ಚಿನ  ೬೦ ಜಿನ ನಿಸದಿ ಶಾಸನಗಳು  ಕೊಪ್ಪಣವು ಪ್ರಸಿದ್ಧ ಜೈನ ಸಾಂಸ್ಕೃತಿಕ ಕೇಂದ್ರವಾಗಿತ್ತೆಂಬುದನ್ನು  ಸೂಚಿಸಿವೆ. ಕೊಪ್ಪಳವು ಹೇಗೆ ಪ್ರಮುಖ ಜೈನ ಕೇಂದ್ರ ವಾಗಿತ್ತೆಂಬುದನ್ನು ಸಾಬೀತು ಪಡಿಸಿದ್ದಲ್ಲದೆ ಕೊಪ್ಪಳಕ್ಕೂ ತಲಕಾಡಿನ ಗಂಗ ಅರಸುಮನೆತನದವರಿಗೂ ಇದ್ದ ಸಂಬಂಧದ ಬಗೆಗೆ ಬೆಳಕು ಚೆಲ್ಲಿವೆ. ಸುಮಾರು ಇಲ್ಲಿಯ ೭ ನಿಸದಿ ಶಾಸನಗಳು ಗಂಗರ ಸಂಬಂಧದ ಬಗೆಗೆ ಹೆಚ್ಚಿನ ಮಾಹಿತಿ ಒದಗಿಸಿವೆ. ಕೊಪ್ಪಳದಲ್ಲಿ ಆಗಿಹೋದ ಜೈನಮುನಿಗಳು, ಜೈನಾಚಾರ್ಯರು, ಅವರಗಣ,ಗಚ್ಛಗಳು, ಸಂಘಗಳ ಬಗೆಗೆ ಇನ್ನೂ ವಿಸ್ತೃತ ಅಧ್ಯಯನ ನಡೆಯಬೇಕಾಗಿದೆ.  ಪ್ರಾಚೀನ ಕಾಲದಿಂದಲೂ ಜೈನಧರ್ಮದ ನೆಲೆ ವೀಡಾಗಿದ್ದ ಕೊಪ್ಪಳವು ವಿವಿಧ ಅರಸರ ಮನೆತನಗಳ ಪ್ರೋತ್ಸಾಹದಿಂದ  ಬಹುಕಾಲದ ವರೆವಿಗೂ ಪ್ರಚಲಿತದಲ್ಲಿತ್ತೆಂದು ಹೇಳ ಬಹುದು.  ಕೊಪ್ಪಳ ಹಾಗೂ ಸುತ್ತಮುತ್ತಲ ಪರಿಸರದಲ್ಲಿ  ಕ್ರಿ.ಶ. ೯ ನೇ ಶತಮಾನದಿಂದ ೧೪ ನೇ ಶತಮಾನದ ವರೆವಿಗೆ ವಿವಿಧ ಜೈನ ಗಣ-ಗಚ್ಛಗಳಿಗೆ ಸೇರಿದ  ೮೩ ಜನ  ಜೈನ ಮುನಿಗಳು, ಆಚಾರ್ಯರು ಇದ್ದುದ್ದನ್ನು ಶಾಸನಗಳು ಪ್ರಸ್ತಾಪಿಸಿವೆ. ಜೈನಧರ್ಮದ ವಿವಿಧ ಪಂಗಡಗಳ ಚರಿತ್ರೆಗೆ ವಿಪುಲವಾದ ಆಕರಗಳನ್ನು ಒದಗಿಸಿದೆ. ಕೊಪ್ಪಣವು ಪ್ರಾರಂಭ ಕಾಲದಿಂದಲೂ ಯಾಪನೀಯ ಸಂಘದ ಪ್ರಭಾವವುಳ್ಳ ಕೇಂದ್ರವಾಗಿದ್ದನ್ನು ಹಂಪನಾ ರವರು ಗುರುತಿಸಿದ್ದಾರೆ. ಶ್ರವಣಬೆಳಗೊಳದ ಹಾಗೆ ಕೊಪ್ಪಳವು ಜೈನರಿಗೆ ಧಾರ್ಮಿಕ ಮುಖ್ಯ ಸ್ಥಳವಾಗಿತ್ತೆಂಬ ಸಂಗತಿಗಳನ್ನು ಇಲ್ಲಿಯ  ಶಾಸನಗಳು ಖಚಿತ ಪಡಿಸಿವೆ.
   ಕೋಗಳಿ: ಜೈನಧರ್ಮದ ಅಸ್ತಿತ್ವವು ಸು.೬ನೆಯ ಶತಮಾನದಿಂದಲೇ ಇದ್ದಿತು ಎಂಬುದು ಕೋಗಳಿಯ ಕ್ರಿ.ಶ. ೧೦೫೫ರ ಶಾಸನದಲ್ಲಿಯ ಗಂಗರಸ ದುರ್ವಿನೀತನು ಕೋಗಳಿಯಲ್ಲಿ ಜಿನಬಸದಿಯನ್ನು ನಿರ್ಮಿಸಿದನು ಎಂಬ ಉಲ್ಲೇಖದಿಂದ ತಿಳಿದುಬರುತ್ತದೆ. ಕೋಗಳಿಯು ಪ್ರಸಿದ್ಧ ಜೈನ ಕೇಂದ್ರವಾಗಿತ್ತು. ಕೋಗಳಿಯು ನೊಳಂಬವಾಡಿ ೩೨೦೦೦ ನಾಡಿನ ಉಪವಿಭಾಗವಾಗಿದ್ದು ೫೦೦ ನಾಡಿನ ಪ್ರಮುಖ ಕೇಂದ್ರ ಭಾಗವಾಗಿತ್ತು. ಪ್ರಸಿದ್ಧ ಜೈನ ಕೇಂದ್ರವಾಗಿತ್ತು ಎಂಬುದನ್ನು ಈಗಲೂ ಇಲ್ಲಿ ಲಭ್ಯವಿರುವ ಜೈನಮೂರ್ತಿಗಳು ಹಾಗೂ ಬಸದಿಯ ಅವಶೇಷಗಳು ಸ್ಪಷ್ಟಪಡಿಸುತ್ತವೆ. ಇಲ್ಲಿ ದೊರೆತಿರುವ ಅನೇಕ ಜೈನ ಅವಶೇಷಗಳಲ್ಲಿ ಪಾರ್ಶ್ವನಾಥನ ಭವ್ಯಮೂರ್ತಿ ಉಲ್ಲೇಖನೀಯವಾಗಿದೆ. ಅನೇಕ ಶಾಸನಗಳಲ್ಲಿ ಕೋಗಳಿನಾಡಿನ ಪಟ್ಟಣಗಳ ಸುಂದರವಾದ ವರ್ಣನೆ ಒಡಮೂಡಿದೆ. ಇಲ್ಲಿಯ ಶಾಸನಗಳಲ್ಲಿ ತ್ರಿಪದಿ ಛಂದಸ್ಸಿನಲ್ಲಿ ರಚಿತವಾದ ಪದ್ಯಗಳು ದೊರೆತಿವೆ. ಹಾಗೆಯೇ ಛಂದಸ್ಸಿಗೆ ಸಂಬಂಧಿಸಿದ ಹಾಗೆ ಮಹತ್ತರವಾದ ವಿಷಯವನ್ನು ಶಾಸನವೊಂದು ನಿರೂಪಿಸಿದೆ. ಆ ಶಾಸನದಿಂದ ತೋಮರ ರಗಳೆ ಎಂಬ ರಗಳೆಯ ಪ್ರಭೇದ ತಿಳಿದುಬರುತ್ತದೆ.
    ಒಟ್ಟಾರೆ ಕಲ್ಯಾಣ ಭಾಗದ ಜೈನ ಸಾಂಸ್ಕೃತಿಕ ಕೇಂದ್ರಗಳು  ಜೈನಧರ್ಮದ,ಸಮಾಜದ ಸಂಘಟನೆ, ಸಾಂಘಿಕ-ಸಾಂಸ್ಥಿಕ ಸ್ವರೂಪವನ್ನು ಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿವೆ. ಪ್ರಸಿದ್ಧ ಧಾರ್ಮಿಕ ಆಚಾರ್ಯರು, ಮುನಿಗಳ ನೆಲೆದಾಣಗಳಾಗಿದ್ದು ಚಟುವಟಿಕೆಯಿಂದ ಕೂಡಿದವುಗಳಾಗಿರುತ್ತಿದ್ದವು. ರಾಜರುಗಳು, ಮಾಂಡಳಿಕರು, ವರ್ತಕರು ಇತ್ಯಾದಿ ಧರ್ಮಾನುಸಕ್ತರಿಂದ ಪ್ರಾಮುಖ್ಯತೆ ಪಡೆದಿದ್ದ ಇವುಗಳಲ್ಲಿ ಕೆಲವು ಆಶ್ರಯ ಇಲ್ಲದಾಗ ಸೊರಗಿ  ಪಾಳುಹೊಂದಿ ಅವಶೇಷಗಳ ಪಳೆಯುಳಿಕೆಗಳಾಗಿವೆ. ಈ ಅವಶೇಷಗಳನ್ನು ರಕ್ಷಿಸಿ ಕಾಪಾಡುವ ಹೊಣೆ ಕನ್ನಡಿಗರೆಲ್ಲದ್ದಾಗಿದೆ.
       ಪರಾಮರ್ಶನ ಗ್ರಂಥಗಳು
೧.ಎಂ.ಚಿದಾನಂದಮೂರ್ತಿ: ಹೊಸತು ಹೊಸತು, ಪ್ರಸಾರಾಂಗ, 
  ಕನ್ನಡ ವಿಶ್ವವಿದ್ಯಾಲಯ, ಹಂಪಿ.೧೯೯೩
೨.ಸಿ.ನಾಗಭೂಷಣ: ಕಲ್ಯಾಣ ಕರ್ನಾಟಕ ಸಾಹಿತ್ಯ ಸಂಸ್ಕೃತಿ
  ಅವಿರತ ಪ್ರಕಾಶನ, ಬೆಂಗಳೂರು ೨೦೦೦
  ಶಾಸನಗಳು ಮತ್ತು ಕನ್ನಡ ಸಾಹಿತ್ಯ,ಪ್ರಸಾರಾಂಗ
ಗುಲಬರ್ಗಾ ವಿಶ್ವವಿದ್ಯಾಲಯ,ಗುಲಬರ್ಗಾ ೨೦೦೫
೩.ಧವಳ ( ಡಿ.ಎನ್.ಅಕ್ಕಿಯವರ ಅಭಿನಂದನಾ ಗ್ರಂಥ)
   ಸಂ.ಅರುಣಿ ಎಸ್.ಕೆ,  ಶಹಪೂರ, ೨೦೧೧
೪. ಎಸ್.ಕೆ.ಮೇಲಕಾರ: ಕೊಪ್ಪಳ ಜಿಲ್ಲೆಯ ಶಾಸನಗಳ ಸಾಂಸ್ಕೃತಿಕ ಚರಿತ್ರೆ ಮತ್ತು ಶಿಲಾಯುಗದ ಸಂಸ್ಕೃತಿ, ಭಾರತ ಸಿಂಧುರಶ್ಮಿ ಪ್ರಕಾಶ, ಧಾರವಾಡ ೨೦೧೧
೫.ಚೆನ್ನಬಸವ ಹಿರೇಮಠ: ಎಡೆದೊರೆ ನಾಡು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೦೦
೬.ಜೆ.ಎಂ.ನಾಗಯ್ಯ: ಆರನೆಯ ವಿಕ್ರಮಾದಿತ್ಯನ ಶಾಸನಗಳು: ಒಂದು ಅಧ್ಯಯನ, ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ ೧೯೯೨
೭. ಗವಿದೀಪ್ತಿ ಸಂ: ಎಸ್.ಎಂ.ವೃಷಭೇಂದ್ರ ಸ್ವಾಮಿ, ಗವಿಮಠ, ಕೊಪ್ಪಳ, ೧೯೮೭
೮.  ಬೀದರ ಜಿಲ್ಲಾ ದರ್ಶನ ಸಂ: ಸೋಮನಾಥ ಯಾಳವಾರ ಮತ್ತು ಪ್ರೇಮಾ ಸಿರ್ಶೆ
   ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ೨೦೦೫
 
             



  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...