ಪ್ರಭುಲಿಂಗಲೀಲೆ,
ಶೂನ್ಯಸಂಪಾದನೆಗಳು, ಶಿವತತ್ವಚಿಂತಾಮಣಿ, ವೃಷಭೇಂದ್ರ ವಿಜಯ ಕೃತಿಗಳಲ್ಲಿ
ಚಿತ್ರಿತವಾಗಿರುವ ಬಸವಣ್ಣನವರ ಜೀವನ ವ್ಯಕ್ತಿತ್ವ
ಭಾರತೀಯ
ಸಮಾಜದ ಎಲ್ಲಾ ವರ್ಗಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿ ಅದರಲ್ಲಿ
ಒಂದುಒಳಎಚ್ಚರವನ್ನು ಮೂಡಿಸಿದ
ಮೊತ್ತಮೊದಲ ನಿಜವಾದ ಅರ್ಥದ ಸಾಮಾಜಿಕ ಚಳುವಳಿಯು ಬಸವಣ್ಣನವರ ನೇತೃತ್ವದಲ್ಲಿ ನಡೆದಿರುವುದು ಗಮನಾರ್ಹವಾಗಿದೆ. ಮತದ ಉದಾತ್ತ ಚಿಂತನೆ, ಸಮಾಜದ ತೀರ
ಕೆಳಗಿನ ಪದರಗಳನ್ನು ಮುಟ್ಟಿದ್ದು ಇಲ್ಲಿಯೇ ಎಂಬಲ್ಲಿ
ಉತ್ಪ್ರೇಕ್ಷೆ ಇಲ್ಲ. ಬಸವಣ್ಣನವರ
ಸಮಾಜೋಧಾರ್ಮಿಕ ಆಂದೋಲನದ ಫಲ ಸಾಮಾನ್ಯರೂ
ಮಾತನಾಡುವ ಮನಸ್ಸು ಮಾಡಿದ್ದು. ತಾನು ಕೈಗೊಂಡಿದ್ದ ಧಾರ್ಮಿಕ ಆಂದೋಲನದ ಎಲ್ಲಾ ಪ್ರಗತಿಪರ ಬೀಜಗಳನ್ನು
ತನ್ನಲ್ಲಿ ಹುದುಗಿಸಿಕೊಂಡಿದ್ದ ವೀರಶೈವ ಧರ್ಮವು ಬಸವಣ್ಣನವರ ನೇತೃತ್ವದಲ್ಲಿ ವ್ಯಾಪಕತ್ವವನ್ನು
ಪಡೆಯಿತು. ಮಹಿಮಾಪುರುಷನಾದ ವ್ಯಕ್ತಿಯು ತನ್ನ
ಬದುಕು ಮಣಿಹಗಳಿಂದ ಸಮಕಾಲೀನ ಸಾಮಾಜಿಕ ಜೀವನದ ಮೇಲೆ ಗಮನಾರ್ಹ ಪ್ರಭಾವವನ್ನು ಬೀರಿದಾಗ ಆತನ
ಸ್ಥಾನಮಾನಗಳು ಸಹಜವಾಗಿ ದೈವತ್ವಕ್ಕೇರುತ್ತವೆ. ಅಂತಹ ವ್ಯಕ್ತಿಯ ಬದುಕನ್ನು ಕಾವ್ಯರೂಪದಲ್ಲಿ
ತರುವ ಕವಿಯ ಮನಸ್ಸು ಸಹಜವಾಗಿ ಆ ವ್ಯಕ್ತಿಯ ಬದುಕನ್ನು ವೈಭವೀಕರಿಸಲು ಪುರಾಣದ ಚೌಕಟ್ಟಿಗೆ
ಹೊಂದಿಸುವ ಹಾಗೂ ಅಲೌಕಿಕವಾಗಿ ಚಿತ್ರಿಸುವತ್ತ ಹೊರಳುತ್ತದೆ. ಹೀಗಾಗಿ ಅಂತಹ ವ್ಯಕ್ತಿಯ ಬದುಕು
ಕಾವ್ಯರೂಪದಲ್ಲಿ ಕಾರಣಿಕವಾಗಿ, ಉದಾತ್ತೀಕರಣವಾಗಿ ವೈಭವೀಕರಿಸುವ ಭಾವನಾತ್ಮಕ ಸಂಬಂಧವಾಗಿ ಹೊರಮೂಡುತ್ತದೆ. ಕವಿಯು ತನ್ನ ಕಲ್ಪಿತ ಆದರ್ಶ ವ್ಯಕ್ತಿಗೆ ಜೀವತುಂಬಲು ಯತ್ನಿಸುತ್ತಾನೆ. ತನ್ನ ಕಾಲದ ಆಶಯಗಳಿಗೆ
ಅವಕಾಶ ಕಲ್ಪಿಸಿಕೊಡಲು ಪ್ರಯತ್ನಿಸುತ್ತಾನೆ. ಬಸವಣ್ಣನ ವಚನಗಳಲ್ಲಿ ಕಾಣಬರುವ ಸಾಂಸ್ಕೃತಿಕ
ಮೌಲ್ಯಗಳು ಅವನ ನಂತರದ ಕಾವ್ಯ-ಪುರಾಣಗಳಲ್ಲಿ ಕಂಡು ಬರುವುದಿಲ್ಲ. ಕಾರಣ ನಂತರದ ಕಾಲದಲ್ಲಿ
ಕವಿಗಳು ಬಸವಣ್ಣನನ್ನು ನೋಡುವ ಅರ್ಥೈಸುವ ವಿಷಯದಲ್ಲಿ ಬದಲಾವಣೆಗೊಂಡಿರುವುದನ್ನು ಕಾಣಬಹುದು.
ಶೂನ್ಯ ಸಂಪಾದನೆಗಳು,ಪ್ರಭುಲಿಂಗಲೀಲೆ,
ಶಿವತತ್ವಚಿಂತಾಮಣಿ, ಹಾಗೂ ವೃಷಭೇಂದ್ರ ವಿಜಯಗಳಲ್ಲಿ ಬಸವಣ್ಣನು ಒಬ್ಬ ವ್ಯಕ್ತಿಯಂತೆ ಚಿತ್ರಿಸಿರುವುದಕ್ಕಿಂತ
ಮಹಾಪರಂಪರೆಯ ಅಂಗವಾಗಿ ಕಾಣಬಯಸುತ್ತಾನೆ. ಹದಿಮೂರು, ಹದಿನಾಲ್ಕನೇ ಶತಮಾನಗಳಲ್ಲಿ ವಚನ ಸಾಹಿತ್ಯ ಸೃಷ್ಟಿಯಾಗದಿದ್ದರೂ
ಬಸವಾದಿ ಪ್ರಮಥರ ವಚನಗಳ ಬಗೆಗೆ ಜನತೆಯಲ್ಲಿ ಆಸಕ್ತಿ ಜೀವಂತವಾಗಿದ್ದಿತು ಎಂಬುದಕ್ಕೆ ಹರಿಹರ
ಮತ್ತು ಚಾಮರಸರ ಕಾವ್ಯಗಳು ಮತ್ತು ಶೂನ್ಯಸಂಪಾದನೆಗಳು ನಿದರ್ಶನವಾಗಿವೆ. ಈ ಕವಿಗಳ ಕಾವ್ಯಗಳ ಮೂಲಕ
ವಚನಕಾರರು ಜೀವಂತವಾಗಿದ್ದರು ಎಂಬುದು ಗಮನಾರ್ಹ. ಪಾಲ್ಕುರಿಕೆ ಸೋಮನಾಥನ ಪರಂಪರೆಯಲ್ಲಿ ಬರುವ
ಷಡಕ್ಷರ ಕವಿಯು ಬಸವಣ್ಣನನ್ನು ಒಂದು ಮಹಾಪರಂಪರೆಯ ಅಂಗವಾಗಿ ನೋಡುತ್ತಾನೆ.
ಚಾಮರಸನ
ಪ್ರಭುಲಿಂಗಲೀಲೆಯಲ್ಲಿ ಬಸವಣ್ಣನ ಚಿತ್ರಣ:
ಚಾಮರಸ ವಿರಚಿತ ಪ್ರಭುಲಿಂಗಲೀಲೆ ಮಧ್ಯಕಾಲೀನ ಕನ್ನಡ ಸಾಹಿತ್ಯದ
ಶ್ರೇಷ್ಠಕೃತಿಯಾಗಿದೆ.ವೀರಶೈವ ಧರ್ಮದ ಮೇರುವ್ಯಕ್ತಿ. ಅಲ್ಲಮ ಪ್ರಭುವಿನ ಉತ್ಕೃಷ್ಟ ಜೀವನ
ವಿವರವನ್ನು ಅದು ದಾಖಲಿಸಿದೆ. ಪ್ರಭುಲಿಂಗಲೀಲೆ ಕೃತಿಯು ತಾನು ರಚಿತಗೊಂಡ ಕಾಲದಿಂದ ಇಂದಿನವರೆಗೂ
ಕುಗ್ಗದ ಮನ್ನಣೆಯನ್ನು ಉಳಿಸಿಕೊಂಡು ಬಂದಿದೆ.ವೀರಶೈವ ಪುರಾಣ ಕವಿಗಳಲ್ಲಿಯೇ ಯೋಗಿಶ್ರೇಷ್ಠನಾದ
ಅವತಾರ ಪುರುಷನ ಜೀವನ ಚರಿತ್ರೆಯನ್ನು,ಆತನ ಬೋಧನೆಗಳನ್ನು ಸುಲಲಿತವಾಗಿ ಕಾವ್ಯರೂಪದಲ್ಲಿ ಹೇಗಿಡ ಬೇಕು ಎಂಬುದನ್ನು ಚಾಮರಸನು
ತೋರಿಸಿರುವ ಹಾಗೆ ಇತರೆ ವೀರಶೈವ ಪುರಾಣಕವಿಗಳು ತೋರಿಸಿಲ್ಲವೆಂದೇ ಹೇಳಬೇಕು. ಹೀಗಾಗಿ ಪ್ರಭುಲಿಂಗಲೀಲೆಯ
ಕರ್ತೃ ಚಾಮರಸನಿಗೆ ವೀರಶೈವಸಾಹಿತ್ಯ ಪರಂಪರೆಯಲ್ಲಿ ಮಹತ್ತರವಾದ ಸ್ಥಾನ ಲಭಿಸಿದೆ.
ಚಾಮರಸನ ಕಾಲ ವೀರಶೈವಧರ್ಮ-ಸಂಸ್ಕೃತಿ-ಸಾಹಿತ್ಯ ಪುನರುಜ್ಜೀವನಗೊಂಡ
ಕಾಲವಾಗಿದೆ. ವೀರಶೈವ ಸಾಹಿತ್ಯ ಹಾಗೂ ವಚನ ಸಾಹಿತ್ಯಗಳ ಸಂಗ್ರಹಣ, ಸಂಕಲನ, ವ್ಯವಸ್ಥಾಪನ,
ವ್ಯಾಖ್ಯಾನ, ನಿರೂಪಣೆ,
ಶೂನ್ಯಸಂಪಾದನೆ, ಶೂನ್ಯಸಿಂಹಾಸನಗಳ ಕಲ್ಪನೆ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣ ಕಾಲಘಟ್ಟವಾಗಿದೆ. ವೀರಶೈವ
ಧರ್ಮಕ್ಕೆ ರಾಜಮಾನ್ಯತೆ ಹಾಗೂ ಸಾಮಾಜಿಕ ಗೌರವ ಮತ್ತೆ ಮರಳಿ ಪ್ರಾಪ್ತವಾಗಿದ್ದ ಕಾಲ. ಹನ್ನೆರಡನೇ
ಶತಮಾನದ ಸಾಮಾಜಿಕ ಜೀವನವನ್ನು ಬಸವಣ್ಣನವರು ಆಳಿದರೆ ಧಾರ್ಮಿಕ ಜೀವನವನ್ನು ನಿಯಂತ್ರಿಸಿದವರು
ಅಲ್ಲಮಪ್ರಭುಗಳಾಗಿದ್ದಾರೆ. ಈಗಾಗಲೇ ಲಕ್ಕಣ್ಣ ದಂಡೇಶ, ಸಿಂಗಿರಾಜರು ಹಾಗೂ ಶಿವಗಣ ಪ್ರಸಾದಿ ಮಹಾದೇವಯ್ಯರುಗಳು ವಚನಕಾರರ
ವಚನಗಳ ಆಧಾರದಿಂದ ಬಸವಾದಿ ಶರಣರ
ವ್ಯಕ್ತಿತ್ವವನ್ನು ಸಾಕಾರಗೊಳಿಸಿದ್ದರು. ಇವೆಲ್ಲವು ಚಾಮರಸನ ಮನಸ್ಸನ್ನು ಆಕರ್ಷಿಸಿದ್ದಿರಬೇಕು.
ಹೀಗಾಗಿ ಪುನರುಜ್ಜೀವನ ಯುಗದಲ್ಲಿ ಜೀವಿಸಿದ್ದ ಕವಿಗೆ ಪ್ರಭುಲಿಂಗಲೀಲೆಯಲ್ಲಿ ಜೀವನದರ್ಶನ ಹಾಗೂ ಕಾವ್ಯದರ್ಶನಗಳನ್ನು
ತನ್ನ ಕಾವ್ಯದಲ್ಲಿ ಮೂಡಿಸಿದ್ದು ಸಹಜವಾಗಿದೆ. ಪ್ರಭುವಿನ ಕಥೆಯನ್ನು ನಿರೂಪಿಸುವಾಗ ಪರಂಪರೆಯನ್ನು
ಪರಿಷ್ಕರಿಸಿ ನೂತನ ಪರಂಪರೆಯನ್ನು ನಿರ್ಮಿಸುವಂತಾಯಿತು. ಕವಿಯು ಆ ಯುಗದ ಧಾರ್ಮಿಕ ಆವೇಶ,
ಪರಮತಾಕರ್ಷಣೆ ದೂಷಣೆಗಳ ಸಮಕಾಲೀನ ಪ್ರಭಾವಗಳಿಂದ ದೂರ ಉಳಿದು
ಮತೀಯತೆಗಿಂತ ಧರ್ಮ ದಾರ್ಶನಿಕತೆಗೊಲಿದು ಧರ್ಮ ಹಾಗೂ ಕಾವ್ಯಧರ್ಮಗಳನ್ನು ಮೇಳೈಸಿದುದು ನೂತನ ಸೃಷ್ಟಿಯಾಗಿದೆ.
ಪ್ರಭುಲಿಂಗಲೀಲೆಯು ಹನ್ನೆರಡನೇ ಶತಮಾನದ ಶರಣರುಗಳ
ಜೀವನ ಕಥಾಗುಚ್ಛವಾಗಿದೆ. ಈ ಕಥಾಗುಚ್ಛಕ್ಕೆ ಪ್ರಭುವಿನ ಜೀವನ ಮಣಿಸೂತ್ರದಂತಿದೆ. ಈ ಸೂತ್ರದೊಳಗೆ
ಸಿದ್ಧರಾಮ,
ಬಸವಣ್ಣ, ಮುಕ್ತಾಯಕ್ಕ,
ಅಕ್ಕಮಹಾದೇವಿ, ಮರುಳ ಶಂಕರದೇವ, ಗೋಗ್ಗಯ್ಯ,
ಗೋರಕ್ಷಕ ಜೀವನ ಕಥೆಗಳು ಎಣೆದು ಕೊಂಡಿವೆ. ಪ್ರಭುಲಿಂಗ ಲೀಲೆಯಲ್ಲಿ ಬಸವಣ್ಣನವರ
ಪಾತ್ರವೂ ಮಹತ್ತರವಾದ ಸ್ಥಾನವನ್ನು ಪಡೆದಿದೆ. ಬಸವಣ್ಣನನ್ನು ಕುರಿತು ಚಾಮರಸನು ತನ್ನ
ಕಾವ್ಯದಲ್ಲಿ `ಬಸವನಂಗಣ ವಾರಣಾಸಿ ವಿಮುಖ್ಯ ತೀರ್ಥಕ್ಷೇತ್ರದಿಂದಧಿಕ’ (15-22), `ಬಸವರಾಜನ
ಭಕ್ತಿಯನು ಬಣ್ಣಿಸುವೊಡಾತನ ಭಕ್ತಿಯನು ಲೆಕ್ಕಿಸುವೊಡರಿದಗಣಿತ’ (15-24), `ಸಾರಭಕ್ತಿಯ
ಶರಧಿ’(23-10),
`ಆದಿಪುರುಷನು ಬಸವರಾಜ’(18-12), `ಬಸವ ಮಾಡಿದೊಡಾಯ್ತು ಗುರುನೆಲೆ ಬಸವ ಮಾಡಿದೊಡಾಯ್ತು ಲಿಂಗವು’
ಇತ್ಯಾದಿಯಾಗಿ ವರ್ಣಿಸಿರುವ ಗೌರವಸೂಚಿತ ಸಂಬೋಧನೆಗಳನ್ನು ಗಮನಿಸಿದಾಗ ಬಸವಣ್ಣನ ಬಗೆಗೆ ಚಾಮರಸನು
ಇಟ್ಟುಕೊಂಡಿದ್ದ ಪರಮಭಕ್ತಿಯ ಪರಿಚಯ ಓದುಗರಿಗಾಗುತ್ತದೆ. ಬಸವಣ್ಣನಂತಹ ಶ್ರೇಷ್ಠ
ವ್ಯಕ್ತಿಯಲ್ಲಿಯೂ ಇದ್ದ ಕೊರತೆಯನ್ನು ನಿವಾರಿಸಲು ಬಂದ ವಾತ್ಸಲ್ಯಮೂರ್ತಿ ಅಲ್ಲಮ. ಸಿದ್ಧರಾಮ,
ಬಸವಣ್ಣ ಮೊದಲಾದ ಶರಣರು ತಮ್ಮ ತಮ್ಮ ನೆಲೆಯಲ್ಲಿ ಶಿಖರ ಪ್ರಾಯರಾದರೂ
ಅಲ್ಲಮ ಪ್ರಭುವಿನಂತಹ ಆಕಾಶದೆತ್ತರದ ಮುಂದೆ ಅವರು ವಿನಮ್ರರಾಗುತ್ತಾರೆ. ಅಲ್ಲಮನ ಅವತಾರ
ಭಕ್ತೋದ್ದಾರ ಹಾಗೂ ಧರ್ಮೋದ್ಧಾರಕ್ಕಾಗಿ ಆಗಿದೆ. ಈ ಕೃತಿಯಲ್ಲಿ ಅಲ್ಲಮಪ್ರಭುವಿನ ಕಥೆಯ ಜೊತೆಗೆ
ಹಾಸುಹೊಕ್ಕಾಗಿ ಬಂದಿರುವ ಇತರೆ ಶರಣ-ಶರಣೆಯರ ಕಥೆಗಳು ಪ್ರಭುವಿನ ವ್ಯಕ್ತಿತ್ವಕ್ಕೆ ತೊಡಕಾಗಿ
ಬರದೆ ಅವು ಆತನ ಪಾತ್ರ ಪೋಷಣೆಗೆ, ಆತನ ದಿವ್ಯ ಶ್ರೇಷ್ಠತೆಯ ನಿರೂಪಣೆಗೆ ಪೂರಕಗಳಾಗಿ ಕಂಡುಬಂದಿವೆ.
ಒಂದೊಂದು ಪಾತ್ರಕ್ಕೆ ಒಂದು ಗತಿಯನ್ನು ಮೀಸಲಿರಿಸಿದ
ಕವಿ ಒಮ್ಮೊಮ್ಮೆ ಒಂದು ಪಾತ್ರದ ಕ್ಷೇತ್ರವನ್ನು ಎರಡು ಮೂರು ಗತಿಗಳಿಗೂ ವಿಸ್ತರಿಸಿರುವನು. ಬಸವಣ್ಣನ ವ್ಯಕ್ತಿ ಚಿತ್ರಣವೂ ಹೀಗೆ ಹೆಚ್ಚು
ವಿಸ್ತಾರವಾಗಿ ಮೂಡಿರುವುದು. ಇವನ ಜನ್ಮವು ವ್ಯಷ್ಟಿಹಿತ ಮತ್ತು ಸಮಷ್ಟಿ ಹಿತಗಳೆರಡನ್ನೂ
ಸಾಧಿಸಲೆಂದಾದುದು. ಅಲ್ಲಮನ ಜೊತೆಯಲ್ಲಿದ್ದು ಸುಖಿಯಾಗಲೆಂದೂ, ಇವನ ಭಕ್ತಿಕಾರಣದಿಂದ ಸರ್ವರೂ ಸ್ವಾನುಭವ ಸುಖ ಸ್ವರೂಪ ನಿಧಾನವ
ಸಾಧಿಸಲೆಂದೂ ಉದಿಸಿದ ಕಾರಣ ಪುರುಷನು. ಈ ಎರಡು ಉದ್ದೇಶಗಳು ನೆರವೇರಲು ಸಹಕಾರಿಯಾಗುವಂತೆ ಬಸವನ
ವ್ಯಕ್ತಿತ್ವ ಈ ಕೃತಿಯಲ್ಲಿ ಒಡಮೂಡಿದೆ. ಏಕಾಂಗಿಯಾದ ಸಾಧಕ ಜನಸಮೂಹದೊಡನೆ ಬಾಳುವ ಸಾಧಕನಿಗಿಂತ
ಹೆಚ್ಚು ಸ್ವತಂತ್ರನು. ಬಸವನು ಪರಹಿತ ಸಾಧನೆಯಲ್ಲಿಯೂ ತೊಡಗಿರುವಾಗ ಅವನು ತಾಳ್ಮೆಯ
ಮೂರ್ತಿಯಾಗಿರಬೇಕಾದುದು ಸಹಜವೇ. ಈ ಗುಣ ಕೈಲಾಸದಲ್ಲಿ ಸ್ಫಟಿಕವಾಗಿ ತೋರಿದೆ. ಭೂಲೋಕದಲ್ಲಿ
ಹುಟ್ಟಿದಲ್ಲದೆ ಅಲ್ಲಮನು ಸಿಕ್ಕನೆಂದು, ಅಲ್ಲಿ ಹುಟ್ಟಿಲು ಆದೇಶ ದೊರೆತಾಗ ಇತರರು ಇವನೇ ಮಹಾತಿಶಯ ಭಕ್ತಿಯನ್ನು ಮಾಡಿ ಮರೆಯುವನೆಂದು
ಮದ ಮತಿಯಿಂದ ನುಡಿಯಲು
ದೂಷಕರ ನುಡಿಗೇಳಿ ಮನದಲಿ
ರೋಷವನು ತಾಳಿದನೆ ಮದದಲಿ
ವಾಸಿಯನು ಮಾಡಿದನೆ
ಮಾರುತ್ತರವನುಸುರಿದನೇ
ಈಸು ಶಮೆ ದಮೆ ಸಮತೆಯುಳ್ಳ ಸ
ದಾ ಶುಚಿಗಳಾರೆನುತೆ ವೃಷಭನ
ನಾ ಸದಾಶಿವ ಪೊಗಳುರ್ತಿದನು
ಪಂಚವದನದಲ್ಲಿ(ಪ್ರ.ಲೀ. ಪು.110 ಪ.28)
ಈ ಗುಣೋನ್ನತಿಯನ್ನು
ಪಂಚಮುಖದಿಂದ ಹೊಗಳಿದರೂ ಕಡಿಮೆ. ಇವೇ ಗುಣಗಳು ಮುಂದೆ ಭೂಲೋಕದಲ್ಲಿ ಜನಿಸಿದಾಗಲೂ
ಕಾಣಿಸಿಕೊಳ್ಳುವುವು.
ಪ್ರಭುಲಿಂಗಲೀಲೆ ಕಾವ್ಯದಲ್ಲಿಯೂ ಕೂಡ ಬಸವ ಕಾರಣಿಕ
ಶಿಶುವೆಂಬುದು ಜನಿಸಿದಾಗ ತಿಳಿಯುವುದು. ಸದಾಶಿವನೆ ಬಂದು ವಿಭೂತಿ ಧರಿಸಿ ಹಸ್ತಮಸ್ತಕ ಸಂಧಾನದಿಂದ
ಮಂತ್ರೋಪದೇಶ ಮಾಡುವವರೆಗೆ ಆ ಶಿಶು ಚೇತರಿಸಲಿಲ್ಲ, ಕಣ್ದೆರೆಯಲಿಲ್ಲ. ಅವನಿಗೆ ವೇದಶಾಸ್ತ್ರ ಪುರಾಣಗಳು. ಓದು. ಮರೆತ ಮಾತು
ಜ್ಞಾಪಿಸುವಷ್ಟು ಸಹಜವಾಗಿ ಕರಗತವಾದುವು. ಬಿಜ್ಜಳನಲ್ಲಿರುವಾಗಲೂ ಯಾರಿಂದಲೂ ಓದಲಾಗದ
ಲಿಖಿತವನ್ನೋದಿದನು. ಮುಂದೆ ತನ್ನ ಮೂದಲಿಸಿದವರ
ಮನನಾಚುವಂತೆ ಪವಾಡಗಳನ್ನು ಮೆರೆದ ವಿವರಗಳು ಇತ್ಯಾದಿಯಾಗಿ ಜೀವನಕ್ಕೆ ಸಂಬಂಧಿಸಿದಂತೆ
ಸಂಕ್ಷಿಪ್ತವಾಗಿಯಾದರೂ ಬಿಂಬಿತವಾಗಿವೆ. ಬಸವನ ಮನ
ಬಹು ವಿಶಾಲವಾದುದು. ಎಲ್ಲರಲ್ಲೂ ದಯೆಯುಳ್ಳವನು.
ಎಲ್ಲರಿಗೂ ನೀಡುವ ಕೈ ಅವನದು. ಪವಾಡಗಳನ್ನು ಮೆರಯುತ್ತಾ ಲಿಂಗ ಜಂಗಮಕೆ ನಿರಂತರವಾಗಿ
ನೀಡುತ್ತಿದ್ದನು. ಬೇಡಿದವರಿಗೆ ಬೇಡಿದುದನ್ನು ನಿಷ್ಠೆಯಿಂದ ಕೊಡುತ್ತಿದ್ದನು. ಸ್ವಾರ್ಥರಹಿತ
ಸೇವೆ ಮಾಡಿದೆನೆಂದು ಮನದಲ್ಲಿ ಹೊಳೆಯದ ದಾಸೋಹ ಭಾವ, ಮೃದು ಮಾತು. ನಯದ ನಡೆಗಳುಳ್ಳವನು. ಈ ವಿವರಗಳನ್ನು
ಎಲ್ಲಾ ಇತರ ವೀರಶೈವ ಕವಿಗಳ ಹಾಗೆ ಚಾಮರಸನು ಬಹುಚಮತ್ಕಾರೋಕ್ತಿಯಿಂದ ವರ್ಣಿಸಿದ್ದಾನೆ.
ಸುರತರುವೆ ಕೈಯಾಗಿ ಚಿಂತಾಮಣಿಯೆ
ಮನವಾಗಿ
ಸುರರ ಧೇನುವೆ ಶಬ್ದವಾಗಿಯೆ
ನೆರೆದು ನೆಲಸಿದುವೆನಲು ಬಸವನ
ಕರ ಮನೋವಚನಂಗಳಿತ್ತುವು
ಸುಖವನಖಿಳರಿಗೆ ( ಪ್ರ.ಲಿಂ19. ಪ.28)
ಪರುಷದ ಕೈಯಾಗಿ ಲಿಂಗ ಜಂಗಮಕ್ಕೆ
ಮನದಣಿಯೆ ನೀಡಿ,
ಭಕ್ತಿಯಿಂದ ಲೋಕಪಾವನಗೈದ ಪರುಷದ ಮೈಮನವುಳ್ಳವನು. ಇಂತಹ ಅಗಾಧ
ಮಹಿಮಾಸಾಧನೆಗೆ ಅವನ ಅಚಲ ನಿಷ್ಠೆಯೆ ಕಾರಣ.
ದೇವನೊಲಿದವನೆ ಕೃತಾರ್ಥ, ಅವನಾಡಿಸುವ ಸೂತ್ರದ ಗೊಂಬೆಗಳಾದ ನಮಗೆಲ್ಲಿಯ ಸ್ವತಂತ್ರಗುಣವೆಂದು ಬಸವಣ್ಣನು ನಂಬಿದ್ದವನು.ಲೋಹ ಹೊನ್ನಾಗಿಸುವ ಪುರುಷದಂತೆ
ಕಂಡವರನ್ನೂ ಸೋಂಕಿವರನ್ನೂ ಭಕ್ತರನ್ನಾಗಿ ಮಾಡಿದ ಪವಿತ್ರಾತ್ಮನು. ಇವನಿಂದ ಇವನ ಕಾಲಕ್ಕೆ ಭಕ್ತಿಯು ಲೋಕೋತ್ತರ ನೆಗಳ್ತೆಯನ್ನು ಪಡೆದು
ಅತ್ಯುನ್ನತ ಮಾನ್ಯತೆಯನ್ನು ಗಳಿಸಿತು. ಸ್ವತಃ ಶ್ರೇಷ್ಠ ಭಕ್ತನಾಗಿರುವನಲ್ಲದೆ,
ತನ್ನ ಮಹೋನ್ನತಿಯಿಂದ ಎಲ್ಲರನ್ನು ಭಕ್ತನಾಗಿಸಿದನು. ‘ಮಲಯಜದ ಮರಗಾಳಿ
ಸೋಂಕಿನಲುಳಿದ ಮರಗಳು ಪರಿಮಳಿಸುವಂತೆ’ (ಪ್ರ. ಲೀ. ಪು. 120 ಪ 31)ಬಸವನ ಪಾದರಜದ ಸೋಂಕಿನಿಂದ ಸರ್ವರೂ ಭಕ್ತರಾದರು. ಭಕ್ತಿಯುಗವಾಗಿರ್ದುದಿಳೆ’.
ನಿನ್ನ ಹೆಸರನ್ನು ಕೇಳಿದೊಡೆ
ಮೇಣ್
ನಿನ್ನ ಮೂರ್ತಿಯ ನೋಡಿ ಕಂಡಡೆ
ನಿನ್ನ ನೆನೆದೊಡೆ ನಿನ್ನ ನೆರೆದೊಡೆ ನಿನ್ನ ಹೊಗಳಿದೊಡೆ
(ಪ್ರ. ಲೀ. ಪು. 198,ಪ.56)
ಭಕ್ತಿ ಬಿನ್ನಣವರಿದು
ನಿಜೈಕ್ಯರಾಗುವರೆಂಬುದು ಬಸವ ಭಕ್ತಿಯ ಉನ್ನತಿಕೆಯನ್ನು ಸಾರುವ ನುಡಿಯಾಗಿದೆ.
ಭೃತ್ಯಾಚಾರಿಯಾದ ಬಸವಣ್ಣನು ಎಂದೂ ಹೆಮ್ಮೆಯಿಂದ ಬೀಗಿ ನುಡಿದುದಿಲ್ಲ,
ತಾನು ಕಿರಿಯನು, ತನ್ನದು ಅಲ್ಪ ಸಾಧನೆಯೆಂಬುದಾಗಿ ತಿಳಿದುಕೊಂಡವನು. ಪ್ರಭುವಿಗೆ ಭಕ್ತಿಯ ಪರಿಯನ್ನು
ವಿವರಿಸಲು ಕೇಳಿಕೊಳ್ಳುತ್ತಾನೆ. ಅಲ್ಲಮನು ‘ಭಾಸ್ಕರನ ಬಟ್ಟೆಗೆ ದೀವಿಗೆಯ ಹಂಗೇಕೆ ನಿನಗಿನ್ನಾವ
ಬೋಧೆಗಳ ಪ್ರಯೋಜನ ದೈವ ಪುರುಷನು ನೀಕಣಾ’ (ಪ್ರ.ಲೀ. ಪು. 185 ಪ.6) ಎಂದು ವ್ಯಕ್ತಿತ್ವಕ್ಕೆ ಸಂಬಂಧಿಸಿದಂತೆ
ಮೆಚ್ಚಿಕೆಯ ಮಾತಾಡಿ ಅದನ್ನು ವಿವರಿಸುತ್ತಾನೆ.
ಆಗ ಬಸವನು
ಹರ ಹರಾ ನಾನಾರು ನಿನ್ನಯೆ
ಚರಣ ಶರಣ ಶರಣರೊಳು ಕಿಂ
ಕರರ ಕಿಂಕರ ನಾನೆಲೈ.....
ಗುರುವೆ ಭವಭಾರವನು(ಪ್ರ.ಲೀ. ಪು. 185 ಪ.7)
ಹೊರಿಸಲು ಕರುಣವಿಲ್ಲವೆ’.
ಬಿತ್ತಿ ಬೆಳೆವ ಮುನ್ನ ಮೊಳಕೆಯ ಕಿತ್ತು ನೋಡುವರೆ ಎಂದು ಬಹು ವಿನೀತನಾಗಿ ನುಡಿವನು. ಮನದ
ಕತ್ತಲೆಯ ಕಳೆವ ಬೆಳಕು ಉದಯಿಸುವಂತೆ ಮಾಡೆಂದು ಮನಮುಟ್ಟಿ ಕೇಳುವನು.
ಈ ತೆರನಾದ
ಸದ್ವಿನಯ ಸದಾಚಾರ ಸದ್ಭಕ್ತಿಗಳನ್ನು ಪ್ರಭು ಬಹುವಾಗಿ ಮೆಚ್ಚಿಕೊಂಡು ಆಗಾಗ ಬಸವನಲ್ಲಿ
ಕೊಂಡಾಡಿದುದು ಉಂಟು. ಇಂತಹ ಸದ್ಧರ್ಮಿ ಬಸವನಲ್ಲಿ ದೋಷಗಳಿಲ್ಲವೆನ್ನಬಹುದು. ಯಾರು ಹೇಳಿದರೂ ತನ್ನ
ತಪ್ಪೆಂದೊಪ್ಪಿ ನಡೆವವನಿಗೆ ಗರ್ವವೆಲ್ಲಿಯದು, ಕೋಪಾಟೋಪವೆಲ್ಲಿಯದು ? ಪ್ರಭುವು ಸಿದ್ಧರಾಮನೊಡನೆ ಮೊದಲ ಸಲ
ಕಲ್ಯಾಣಕ್ಕೆ ಬಂದಾಗ ಬಸವ ಲಿಂಗಪೂಜಾ ನಿರತನಾಗಿದ್ದ.
ತಾನು ಇದಿರಗೊಳ್ಳಲುಬಾರದೆ ಬೇರೆಯವರನ್ನು ಕಳುಹಿಸಲು ಪ್ರಭು ಮುನಿದು ತಿರುಗಿ ಹೋದನು’
ನಮಗೇಕೆರಸು ಮನೆಗಳಲ್ಲಿ ಸಂಚಾರವೆನುತ (ಪ್ರ. ಲೀ. ಪು. 17) ಯಾರು ಹೇಳಿದರೂ ಅವನ ಹುಸಿ ಮುನಿಸು ತಿಳಿಯಾಗಲಿಲ್ಲ. ಈ ಭಕ್ತರು
ಆಡುವುದೊಂದು ಮಾಡುವುದು ಮತ್ತೊಂದು, ಜಂಗಮವೊಲಿದು ಬರಲು ಪ್ರೌಢಿಮೆ ಮೆರೆವ ಭಕ್ತಿರಿವರೆನಲು ಬಸವನು ತಾನೇ ಹೋಗಿ ಅಡಿಗೆರಗಿ,
ಶರಣನಾಳಾಗಿ ಮುನಿಸು ಕಳೆದನು. ಅಂತೆಯೆ ಇನ್ನೊಮ್ಮೆ ಪ್ರಭು ಬಸವಣ್ಣನನ್ನು
ಪರೀಕ್ಷಿಸಿದನು. ಭಕ್ತಿಯ ಉಪದೇಶವನ್ನು ಕೇಳಿ ಬಸವ
ಸ್ವಾರ್ಥತ್ಯಾಗದ ಪ್ರತಿಜ್ಞೆ ಕೈಗೊಂಡ.
‘ಹೊನ್ನಿನೊಳಗೊಂದೊರೆಯ’ (ಪ್ರ.ಲೀ. ಪು.195 ಪ.46) ವಸ್ತ್ರದ ಒಂದೆಳೆ ಧಾನ್ಯದ ಒಂದು ಕಣ ಜಂಗಮರಿಗೀಯದೆ ಎನಗಿರಲೆಂದರೆ ತಾನವನ ಪಾದದಿಂದ
ದೂರವಾಗುವೆನೆಂದು. ಯಾವ ಮುಖದಲಿ ಬಂದು ಬೇಡಿದರೂ ನೀ ದಣಿವಂತೆ ತನುಮನ ಧನವೀಯುವೆನೆಂಬ ನಿಲುವನ್ನು ಹೊಂದಿದ
ದಾಸೋಹಿಯೆನಿಸಿಕೊಂಡವನು ಬಸವಣ್ಣ. ಹೀಗೆ ನೀಡುವೆನೆಂಬಲ್ಲಿ ನಾನು ಕೊಡುವವನೆಂಬ ಹೆಮ್ಮೆ , ಸಂಪತ್ತಿನ
ಮದವಿರದೆ, ನಿಜವಾಗಿಯೂ ಬೇಡುವವನ ಮನ
ತಣಿಸುವ ನಿಃಸ್ವಾರ್ಥ ಭಾವವಿದೆ. ಪ್ರಭುವಿನ ಹಿರಿದಾರೋಗಣೆಗೆ ಮಹಾಮನೆಯ,
ಕೇರಿಯ ಊರಿನ ಅಡಿಗೆ ಸಾಲದೆ ಹಸಿವ ಹಿಂಗದೆ ಇರಲು ತನ್ನ ತನುವ ನೀಡಲು
ಬಸವನು ನಿಶ್ಚಯಿಸಿದನು. ಆಗ ಗುರು ಸಂತೃಪ್ತನಾದ. ‘ ನಿನ್ನ ಮನದಲ್ಲಿ ಮಾಡುವೆ ನೀಡುವೆನೆಂಬ
ಬುದ್ದಿ ಮಮಕರಿಸಿದುದರಿಂದ ನನ್ನ ಹಸಿವು
ಹೆಚ್ಚಿತಲ್ಲದೆ ಬೇರೆಯಿಲ್ಲ’ವೆಂದು ಅವನಿತ್ತ ಮಾತಿಗೆ ತಪ್ಪದಿದ್ದುದನ್ನು ಕಂಡು
ಸಂತೋಷಿಸಿದನು. ‘ಮಾಡುವೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಖಾಡಿತ್ತು ಶಿವನ ಡಂಗುರ’ ಕ್ಷಣ
ಮಾತ್ರ ಹೊಳೆದ ಈ ಭಾವವೂ ನಿರ್ಭಾವದ ಸ್ಥಿತಿಗೆ ಸಹಿಸದು.
ಯಾವ ಕಾರಣದಿಂದಲೂ ಚಿತ್ತ ವಿಚಲಿತಗೊಳ್ಳದ ಬಸವನನ್ನು ‘ಘನಮಹಿಮೆ
ನೀನಹುದು ಸಮತೆಯ ನೆನಹ ನೆಲಸಿದೆ’ಯೆಂದುದು
ಬಸವಣ್ಣನ ವ್ಯಕ್ತಿತ್ವವನ್ನು ಅರ್ಥೈಸಲು ಸಹಕಾರಿಯಾಗಿದೆ. ಇವನಿಗೆ ಯಾರ ಮೇಲೂ ಮುನಿಸು ತೋರಿಲ್ಲ, ತೆಗೆಳಿಕೆಯಿಂದ ಮನನೊಂದುದಿಲ್ಲ. ಇಂತಹ ತಾಳ್ಮೆಯ
ಮೂರ್ತಿಯಾಗಿರುವನು. ಹುಸಿವುದೇ ಕೈ ನೆಲನ
ಹೊಯ್ದರೆ ಹುಸಿವುದೇ ಕಣೆ ಗಿರಿಯನೆಚ್ಚೊಡೆ (ಪ್ರ.ಲೀ.ಪು.198 ಪ.57) ಹಿರಿಯ ವಸ್ತವನ್ನು ವಿಷಯವಾಗುಳ್ಳವನ ಗುರಿ ಹುಸಿ ಹೋಗದು. ಬಸವನು ಅಲ್ಲಮನ ಕಾರಣ ವಸುಮತಿಗೆ
ಬಂದವನಾದ್ದರಿಂದ ‘ಹುಸಿಯ ಮಾಯೆಯ ಹುಸಿಸಿ ತೋರುವೆ’ ಯೆಂಬೀ ನುಡಿ, ಹರಿಹರನ ಅಭಿಪ್ರಾಯಕ್ಕೆ ವಿರೋಧಿಸಿದಂತಿದೆ. ಹರಿಹರ ಕವಿಯು ಬಸವನ
ಭೂಲೋಕಕ್ಕವತರಿಸಿದ ಕಾರಣವನ್ನು ಬೇರೆ ಹೇಳುವನು. ವೃಷಭಮುಖ ಗಣೇಶ್ವರನು ಶಿವ ಪ್ರಸಾದ ಹಂಚುವೆಡೆಯಲ್ಲಿ
ಷಣ್ಮುಖನಿಗೂ ಕೊಟ್ಟೆನೆಂದು ಹುಸಿದುದರಿಂದ ಆಯಿತೆನ್ನುವನು. ಬಸವನಷ್ಟೆ ಅಲ್ಲ,
ಮಹಾದೇವಿ ಮೊದಲಾದವರೂ ತಪ್ಪಿದುದರಿಂದಲೇ ಇಲ್ಲಿ ಜನಿಸಿದುದು. ಚಾಮರಸನ ದೃಷ್ಟಿಯಲ್ಲಿ ಈ ಶರಣರು ದೋಷಾತೀತರು,
ಅವರ ಜನನಕ್ಕೆ ಕಾರಣವೂ ಬೇರೆಯಾಗಿದೆ. ಅನುಪಮ ಸಿದ್ಧಿ ಪಡೆಯುವುದಕ್ಕೆ
ಅವರು ಇಲ್ಲಿ ಬಂದದ್ದು. ಹೀಗೆ ಇವರಲ್ಲಿ ಭಿನ್ನಾಭಿಪ್ರಾಯವಿದೆ.
ಬಸವನು ಪ್ರಭುವನ್ನು ವಿಕೃತ ವೇಷದಲ್ಲಿಯೂ ಗುರುತಿಸಲು ಸಾಧ್ಯವಾದುದು ಅವನ
ಚಿತ್ತನಿರ್ಮಳತೆಯಿಂದಾಯಿಂತೆಂಬುದು ಕವಿಯ
ಅನಿಸಿಕೆ. ಮಹಾ ಮಹಿಮನಾಗಿ ಭಕ್ತಿಯನು ಬಿತ್ತಿ ಬೆಳೆದ ಪವಾಡಪುರುಷನಾಗಿ ಬಸವನು
ಪ್ರಭುಲಿಂಗಲೀಲೆಯಲ್ಲಿ ಕಾಣಿಸಿ ಕೊಂಡಿದ್ದಾನೆ.
ಚಾಮರಸನ ಬಸವಣ್ಣ ಲೋಕಮೋಹವನ್ನು ತ್ಯಜಿಸಿದವನಾಗಿ ಚಿತ್ರಿತರಾಗಿರುವನು.
ಸಕಲ ಜೀವರುಗಳಲ್ಲಿ ದಯೆ ಪ್ರೀತಿ ಉಳ್ಳವರಾಗಿ ಚಿತ್ರಿತರಾಗಿರುವನು. ಸಂಕುಚಿತವಾದ ಸ್ವಾರ್ಥ ಭಾವಗಳು ಅವನಲ್ಲಿಲ್ಲ. ವೀರಶೈವ ತತ್ತ್ವ ಮತ್ತು ಆಚರಣೆಯನ್ನು ಬಸವನ ಪಾತ್ರಗಳ
ಮುಖಾಂತರ ತೋರುವುದು ಕವಿಯ ಘನ ಉದ್ದೇಶವಾಗಿರುವುದಾಗಿ ಕಾಣುವುದು. ಈ ಶರಣರು ಆಚಾರದ ಒಂದೊಂದು
ವಿಧಾನ ತತ್ತ್ವದ ಒಂದೊಂದು ಮುಖವಾಗಿರುವರು: ಕವಿಯ ಮಾತಿನಲ್ಲಿಯೇ ಬಸವಣ್ಣನ ವ್ಯಕ್ತಿತ್ವವನ್ನು
ಗುರುತಿಸುವುದಾದರೆ,
ಮೀಹವಿಲ್ಲದೆ ಸಕಲ ಜೀವ
ಸ್ನೇಹವುಳ್ಳ ವೀರಶೈವದ
ಗಾಹುಕಾರರು ಪರಮಸುಖಿಗಳು
ಎಂಬಂತಿದ್ದಾನೆ. (ಪ್ರ.ಲೀ.ಪು.296 ಪ.13)
ಶೂನ್ಯ ಸಂಪಾದನೆಗಳಲ್ಲಿ ಬಸವಣ್ಣನ ವ್ಯಕ್ತಿ ಚಿತ್ರಣ
ಶೂನ್ಯಸಂಪಾದನೆ ವಚನಗಳನ್ನು ಸಂಕಲನ ಮಾಡಿರುವ ಕೃತಿ.
ವಚನಗಳನ್ನು ಸಂಭಾಷಣೆಯ ರೀತಿಯಲ್ಲಿ ಜೋಡಿಸಿರುವುದು ಶೂನ್ಯ ಸಂಪಾದನೆಯ ವೈಶಿಷ್ಟ್ಯ. ಹನ್ನೆರಡನೇ
ಶತಮಾನದಲ್ಲಿ ಅನುಭವ ಮಂಟಪದಲ್ಲಿ ನಡೆದ ಧಾರ್ಮಿಕ ಚಿಂತನೆಯಲ್ಲಿ ನಿರ್ಮಾಣವಾದ ವಚನಗಳ
ವಾಸ್ತವಿಕತೆಯನ್ನು ಹದಿನಾರನೆಯ ಶತಮಾನದಲ್ಲಿ ಪೂರಕ ಸಾಮಗ್ರಿಗಳಿಂದ ಕಟ್ಟಿಕೊಡುವ ಪ್ರಯತ್ನ
ನಡೆಯಿತು. ಉಪಲಬ್ಧ ವಚನಗಳನ್ನು ಆಯಾ ಸಾಂದರ್ಭಿಕ ಹಿನ್ನಲೆಯಲ್ಲಿ ಆಡಿರಬೇಕೆಂದು ಆ ವಚನಗಳನ್ನು
ವ್ಯವಸ್ಥಿತವಾಗಿ ಸಂಕಲಿಸಿದ ಪ್ರಯತ್ನವೇ ಶೂನ್ಯ ಸಂಪಾದನೆಯ ಉಗಮಕ್ಕೆ ಕಾರಣ. ಶರಣರ ಧಾರ್ಮಿಕ
ಚರ್ಚೆಗಳ ಫಲವಾಗಿ ಹೊರಬಂದ ವಚನಗಳ ಸನ್ನಿವೇಶಗಳ ವಿವರಣೆಯನ್ನು ಗುರುತಿಸಬಹುದಾಗಿದೆ. ಹೆಚ್ಚಿನ
ಶರಣರ ವಚನಗಳನ್ನು ಬಹುಮಟ್ಟಿಗೆ ಶೂನ್ಯಸಂಪಾದನಕಾರ ಅಳವಡಿಸಿಕೊಂಡಿದ್ದಾನೆ. ವೀರಶೈವ ಧರ್ಮದ
ಮೂಲಭೂತ ತತ್ವಗಳ ಚಿಂತನೆಯನ್ನು ಇಲ್ಲಿ ಗ್ರಹಿಸಬಹುದಾಗಿದೆ. ಇದು ಧರ್ಮ ಜಿಜ್ಞಾಸುಗಳನ್ನು
ವಿಶೇಷವಾಗಿ ಆಕರ್ಷಿಸಿದೆ.
`ಶೂನ್ಯ ಸಂಪಾದನೆಯ ಮೂಲಸಾಮಗ್ರಿ ಬಿಡಿವಚನಗಳು. ಬಿಡಿವಚನಗಳಿಂದ ವಾಸ್ತವವಾಗಿ
ನಡೆದಿರಬಹುದಾದ ಘಟನೆಗಳನ್ನು ನಾಟಕೀಯವಾಗಿ ಚಿತ್ರಿಸುವುದು ಶೂನ್ಯ ಸಂಪಾದನೆಯ ಪ್ರಮುಖ ಗುರಿ. ವಚನ
ಕರ್ತೃಗಳು ರಚಿಸಿರುವ ಬಹುಪಾಲು ವಚನಗಳು. ಅವು ಯಾವ ಸಂದರ್ಭದಲ್ಲಿ ಹೊರಬಂದವು ಎಂಬುದಕ್ಕೆ
ಸೂಚನೆಗಳು ಇಲ್ಲವೇ ಇಲ್ಲ. ಇದ್ದರೂ ಅತ್ಯಪೂರ್ವ. ಆ ಮುಕ್ತಕಗಳಂತಹ ವಚನಗಳನ್ನು ಆರಿಸಿಕೊಂಡು
ಅವುಗಳನ್ನು ಒಂದು ಸಂದರ್ಭದಲ್ಲಿಟ್ಟು, ಉತ್ತರ ಪ್ರತ್ಯುತ್ತರವಾಗಿ ಜೋಡಿಸಿ ಮಧ್ಯೆ ಮಧ್ಯೆ ಸಂಕಲನಕಾರ ವಿಷಯ ಸ್ಪೃಷ್ಟತೆಗಾಗಿ ತನ್ನ
ಮಾತುಗಳನ್ನು ಸೇರಿಸಿ ನಾಟಕೀಯ ಸನ್ನಿವೇಶಗಳನ್ನು ಚಿತ್ರಿಸಿರುವುದು ಶೂನ್ಯಸಂಪಾದನೆಗೆ ಒಂದು
ಸ್ವತಂತ್ರ ಗ್ರಂಥದ ಸ್ಥಾನವನ್ನು ತಂದಿದೆ. ಎಂದರೆ ವಚನಕಾರರನ್ನು ಅವರು ಎದುರಿಸಿದ ಸನ್ನಿವೇಶ
ಮತ್ತು ಅಲ್ಲಿ ವ್ಯಕ್ತವಾಗುವ ಅವರ ಗುಣ ಸ್ವಭಾವಗಳನ್ನು
ಅವರು ಪಡೆದ ಶೂನ್ಯದ ಲಾಭವನ್ನು ಅವರವರ ಮಾತುಗಳ ಮೂಲಕವಾಗಿಯೇ ಹೊಮ್ಮಿಸಿರುವ ಒಂದು
ಅಪೂರ್ವಗ್ರಂಥ.
ಶೂನ್ಯ ಸಂಪಾದನಾ ಸಂಕಲನ ಕೃತಿಗಳಲ್ಲಿ ಕೊನೆಯದಾದ ಗೂಳೂರು
ಸಿದ್ಧವೀರಣ್ಣೊಡೆಯರು ಸಂಗ್ರಹಿಸಿದ ಪ್ರಭುದೇವರ ಶೂನ್ಯಸಂಪಾದನೆಯಲ್ಲಿ `ಶೂನ್ಯಸಂಪಾದನೆ' ಪದವನ್ನು ವೀರಶೈವ ಧರ್ಮದ ತಾತ್ವಿಕ ಚೌಕಟ್ಟಿನಲ್ಲಿಯೇ ಪ್ರತಿಪಾದಿಸಲಾಗಿದೆ. ಶೂನ್ಯ
ಸಂಪಾದನೆಗೆ ತಳಹದಿಯಾದ ಮೂಲಭೂತ ಷಟ್‍ಸ್ಥಲ ಸಿದ್ಧಾಂತವನ್ನು ಶರಣರ ವಚನಗಳ ಆಧಾರದಿಂದ ಮೊದಲು
ನಿರೂಪಿಸಲಾಗಿದ್ದು ಅಂಗ-ಲಿಂಗ ಇವುಗಳ ಸಂಬಂಧದ ವಿಚಾರವನ್ನು ನಂತರ ವಿವರಿಸಲಾಗಿದೆ.
ಶಿವಗಣ ಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯ ಕೃತಿಯ
ಆರಂಭದಲ್ಲಿ ಬರುವ ಶ್ರೀ ಮತ್ಸಕಲಜಗದಾಚಾರ್ಯರುಮಪ್ಪ ಅಲ್ಲಮ ಪ್ರಭುದೇವರು ಬಸವರಾಜ ದೇವರು
ಚೆನ್ನಬಸವರಾಜ ದೇವರು ಮುಖ್ಯವಾದ ಅಸಂಖ್ಯಾತ ಮಹಾಗಣಗಳನೊಡನೆ ಮಹಾನುಭಾವ ಪ್ರಸಂಗಮಂ ಮಾಡಿದ
ಸರ್ವಕರಣ ಶೂನ್ಯಸಂಪಾದನೆಯ ಸದ್ಗೋಷ್ಠಿ ಕಥಾ ಪ್ರಸಂಗಮಂ ಮುಕ್ತಕಮಾಗಿರ್ದ ಶಿವಾದ್ವೈತ ವಚನಗಳಿಂ
ಉತ್ತರ ಪ್ರತ್ಯುತ್ತರ ಸಂಬಂಧವಾಗಿ ಸೇರಿಸಿ ಶಿವಗಣ ಪ್ರಸಾದಿ ಮಹಾದೇವಗಳು ಮರ್ತ್ಯಲೋಕದ
ಮಹಾಗಣಂಗಳಿಗೆ ಆ ಮಹಾಪ್ರಸಂಗಮಂ ಸಮರ್ಪಿಸಿದ ಭೇದವೆಂತಿರ್ದುದೆಂದಡೆ ಎಂಬ ವಿವರಣೆಯಲ್ಲಿ ಶೂನ್ಯ
ಸಂಪಾದನಾ ಸಂಕಲನ ಗ್ರಂಥ ಹೊರಬಂದ ಆಶಯ ವ್ಯಕ್ತವಾಗಿದೆ. ಶಿವಗಣ ಪ್ರಸಾದಿ ಮಹಾದೇವಯ್ಯನ ಕೃತಿಯ
ನಂತರ ನಿರ್ಮಾಣವಾದ ಕೃತಿಗಳು ಏನಿದ್ದರೂ ಆ ಮೂಲವನ್ನೇ ಆಧರಿಸಿ ಅಲ್ಪ ಸ್ವಲ್ಪ ಬದಲಾವಣೆ ಹಾಗೂ
ಕೆಲವು ಹೊಸ ಪ್ರಸಂಗಗಳು ಅಳವಡಿಸಲ್ಪಟ್ಟ ಪರಿಷ್ಕರಣಗಳಾಗಿವೆ. ಮಹಾದೇವಯ್ಯನ ಮೂಲಕೃತಿ ನಂತರ
ಮೂವರಿಂದ ಪರಿಷ್ಕರಣಗೊಳ್ಳಲು ಬಹುಮುಖ್ಯ ಕಾರಣ `ಸಿದ್ಧರಾಮಯ್ಯ ದೀಕ್ಷಾ ಪ್ರಸಂಗ' ಇದರ ಜೊತೆಗೆ ಅಲ್ಲಮ ಕಾಮಲತೆಯರ ಪ್ರಸಂಗ, ಅಕ್ಕ ಕೌಶಿಕರ ಸಂಬಂಧ, ಕಿನ್ನರಯ್ಯನ ಪ್ರಸಂಗ, ಕಾಲ ಕಾಲಕ್ಕೆ ಸಂಕಲನಗೊಂಡ ನಂತರದ ಮೂರು ಶೂನ್ಯ ಸಂಪಾದನೆಗಳಲ್ಲಿ ಕೆಲವು ಸನ್ನಿವೇಶಗಳು
ಹೊಸದಾಗಿ ಸೇರ್ಪಡೆಯಾಗಿವೆ. ಹಲಗೆಯಾರ್ಯನ ಶೂನ್ಯ ಸಂಪಾದನೆಯಲ್ಲಿ ಆಯ್ದಕ್ಕಿ ಮಾರಯ್ಯ ಮತ್ತು
ಲಕ್ಕಮ್ಮನ ಪ್ರಸಂಗ ಸೇರ್ಪಡೆಯಾಗಿರುವುದರ ಜೊತೆಗೆ ಗೋರಕ್ಷನ ಪ್ರಸಂಗ ಮೊದಲ ಬಾರಿಗೆ ಪ್ರತ್ಯೇಕ
ಸ್ಥಾನ ಪಡೆದಿದೆ. ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯ ಸಂಪಾದನೆಯಲ್ಲಿ ಮೋಳಿಗೆ ಮಾರಯ್ಯನ ಪ್ರಸಂಗ
ಮತ್ತು ಘಟ್ಟಿವಾಳಯ್ಯನ ಪ್ರಸಂಗ ಸೇರ್ಪಡೆಯಾಗಿದೆ. ಶಿವಗಣಪ್ರಸಾದಿ ಮಹಾದೇವಯ್ಯನು ಮೊದಲು ರೂಪಿಸಿದ
ಶೂನ್ಯಸಂಪಾದನೆಯ ತಳಹದಿ ಹಾಗೂ ಆ ಚೌಕಟ್ಟಿನಲ್ಲಿಯೇ ನಂತರದ ಮೂರು ಶೂನ್ಯ ಸಂಪಾದನೆಗಳ ಪರಿಷ್ಕರಣೆ
ಹಾಗೂ ಕೆಲವು ನೂತನ ಪ್ರಸಂಗಗಳ ಸೇರ್ಪಡೆಯೊಂದಿಗೆ ರೂಪಿಸಲ್ಪಟ್ಟಿವೆ. ಶೂನ್ಯ ಸಂಪಾದನಾ ಸಂಕಲನ
ಕೃತಿಗಳಲ್ಲಿ ಹೆಚ್ಚಿನ ಶರಣರ ವಚನಗಳು ಸಂದರ್ಭಕ್ಕನುಸಾರವಾಗಿ ಸೇರಲ್ಪಟ್ಟಿವೆ. ಹಲಗೆಯಾರ್ಯರ
ಶೂನ್ಯ ಸಂಪಾದನೆಯಲ್ಲಿ ಹೆಚ್ಚಿನ ಅಂದರೆ ಸುಮಾರು 1599 ಶರಣರ ವಚನಗಳು ಕಂಡು ಬರುತ್ತವೆ.
ಶೂನ್ಯ ಸಂಪಾದನೆಯಲ್ಲಿ ಪ್ರಭುವಿನ ಪಾತ್ರವಾದ ಮೇಲೆ ಇಡೀ
ಶೂನ್ಯಸಂಪಾದನೆಯನ್ನು ವ್ಯಾಪಿಸಿಕೊಳ್ಳುವುದು ಬಸವಣ್ಣನ ಪಾತ್ರವಾಗಿದೆ. ನಾಲ್ಕು ಶೂನ್ಯ
ಸಂಪಾದನೆಗಳಲ್ಲಿ ಒಟ್ಟು ಬಸವಣ್ಣನವರ ಮುನ್ನೂರುವಚನಗಳನ್ನು ಬಳಸಿಕೊಂಡಿರುವುದನ್ನು ಈಗಾಗಲೇ
ವಿದ್ವಾಂಸರು ಗುರುತಿಸಿದ್ದಾರೆ. ಆದರೆ ಇವುಗಳಲ್ಲಿ ಒಂದುನೂರು ವಚನಗಳು ಮಾತ್ರ ಬಸವಣ್ಣನ
ವಚನಸಂಪುಟದಲ್ಲಿ ದೊರೆಯುತ್ತಿದ್ದು ಉಳಿದ ಇನ್ನೂರು ವಚನಗಳು ಸಂಪಾದನಾಕಾರರ ಸೃಷ್ಟಿಯಾಗಿವೆ. ಪ್ರಭು ಮೂಲದಿಂದ ಹೊರಟ ಶೂನ್ಯ ಸಂಪಾದನೆ
ಪ್ರಭುಮಯವಾಗಿಯೇ ಬೆಳೆಯುತ್ತಲೇ ಕೊನೆಗೆ ಬಸವಕೇಂದ್ರದತ್ತ ಒಲಿದಿರುವುದು ಶೂನ್ಯಸಂಪಾದನೆಯ ಒಂದು
ವೈಶಿಷ್ಟ್ಯವಾಗಿದೆ. ಇದಕ್ಕೆ ಪೂರಕವಾಗಿ ಶರಣರ
ಸಂಗತಿಗಳು ಇನ್ನಷ್ಟು ಮೈತುಂಬಿಕೊಂಡು ಕಲ್ಯಾಣವನ್ನು ಒಂದು ಸಂಸ್ಕೃತಿಯ ಕೇಂದ್ರವಾಗಿ ಮಾಡಿವೆ.
ಇಷ್ಟಾದರೂ `ಬಸವಣ್ಣನ ಪಾತ್ರದ ಗ್ರಹಿಕೆಯಲ್ಲಿ ಶೂನ್ಯ ಸಂಪಾದನಕಾರರು ಪ್ರಸಂಗ
ಮುಖಿಗಳಾಗಿರುವುದರಿಂದ ಪ್ರಸಂಗ ನಿರೂಪಣೆಯ ಭರದಲ್ಲಿ ಅಪಚಾರವಾಗುವಂತೆ ಆಗುವುದೂ ಉಂಟು’ ಎಂಬ
ಅಭಿಪ್ರಾಯವೂ ವಿದ್ವಾಂಸರಿಂದ ಉಂಟಾಗಿದೆ. ಉದಾಹರಣೆಗೆ ಪ್ರಭು ಕಲ್ಯಾಣದ ಬಸವಣ್ಣನ ಮನೆಯ ಬಾಗಿಲಲ್ಲ
ಬಂದು ನಿಂತ ಸಂದರ್ಭದಲ್ಲಿ ಚಿತ್ರಿಸುವ ಬಸವಣ್ಣನ ಪಾತ್ರ ಮಾತ್ರ ಘನತೆಗೆ ತಕ್ಕುದಾಗಿದೆ
ಎನ್ನಲಾಗದು ಎಂಬ ಜಿ.ಎಸ್.ಸಿದ್ಧಲಿಂಗಯ್ಯನವರ ಅನಿಸಿಕೆ ಯೋಚಿಸತಕ್ಕದ್ದಾಗಿದೆ. ಶೂನ್ಯ
ಸಂಪಾದನೆಯಲ್ಲಿ ಬಸವಣ್ಣನವರ ವೈಯಕ್ತಿಕ
ಚರಿತ್ರೆಗಿಂತ ಕಲ್ಯಾಣದಲ್ಲಿಯ ಇತರ ಶರಣರ ನಡುವಿನ
ಒಡನಾಟ ಹಾಗೂ ಅವರ ವ್ಯಕ್ತಿತ್ವದ ಹಲವು ಮುಖಗಳನ್ನು ಮಾತ್ರ ಕಾಣಬಹುದಾಗಿದೆ. ಬಸವಣ್ಣನವರ ವ್ಯಕ್ತಿತ್ವವನ್ನು ಪರೀಕ್ಷಿಸುವ ಹಲವು
ಸಂದರ್ಭಗಳನ್ನು ಶೂನ್ಯಸಂಪಾದನೆಗಳಲ್ಲಿ
ಕಾಣಬಹುದು.
ಶೂನ್ಯಸಂಪಾದನೆಗಳಲ್ಲಿ ಬರುವ ಬಸವಣ್ಣನು ಜಂಗಮಪ್ರೇಮಿ ಎಂಬುದನ್ನು
ನಿರೂಪಿಸುವ ಪ್ರಸಂಗದಲ್ಲಿ, ಬಸವಣ್ಣನು ತಾನು ಜಂಗಮವೇ ಲಿಂಗವೆಂದು ತಿಳಿವುದು ಹೇಗೆ?ಎಂದು ಚನ್ನಬಸವಣ್ಣನನ್ನು ಕೇಳಿದಾಗ ಅಲ್ಲಮಪ್ರಭುದೇವರು ನಿಮ್ಮನರಸಿಕೊಂಡು ಬಪ್ಪುದ ಈಗಳೇ ತೋರಿದಪೆನೆಂದು ಚಿಕ್ಕದಣ್ಣಾಯಕರು ಬಿನ್ನೈಸಿದರು. ಅದರಂತೆಯೇ ಪ್ರಭು ಬಸವಣ್ಣನ ಮನೆಯ
ದ್ವಾರದ ಮುಂದೆ ನಿಂತಿದ್ದಾರೆ. ಬಸವಣ್ಣ ಲಿಂಗಾರ್ಚನೆ ಮಾಡುತ್ತಿದ್ದು,
ಆ ಶಿವಲಿಂಗದೊಳಗೆ ಆ ಪ್ರಭುದೇವರು ನಿಜಮೂರ್ತಿಯನ್ನು ಕಂಡು ಅತ್ಯಂತ
ಭೀತರಾಗಿ ಬಿಜಯಂಗೈಸಿ ತನ್ನಿ ಎಂದು ಪರಿಚಾರಕರನ್ನು
ಕಳುಹಿಸುತ್ತಾನೆ. ಇಷ್ಟೇ ಆಗಿದ್ದರೆ ಸಾಕಾಗಿತ್ತು. ಅಪ್ಪಣ್ಣ ಹೋಗಿ ಕರೆದಾಗ ಪ್ರಭು ಬಾರೆನೆಂದಾಗ
ಆ ಶಿರವನರಿದು ಹಿಡಿದು ತನ್ನಿ ಎಂದು ಆಜ್ಞಾಪಿಸುತ್ತಾನೆ. ಅಪ್ಪಣ್ಣ ಹಿಂದಿರುಗಿ ಬಂದು ಶಸ್ತ್ರಕ್ಕೆ ಅವರು ನಿಲುಕರು ಎಂದಾಗ
ಭಾವಶಸ್ತ್ರದಿಂದ ಗೆದ್ದು ತನ್ನಿ ಎನ್ನುತ್ತಾನೆ. ಆಗಲೂ ಸಾಧ್ಯವಾಗದಿದ್ದಾಗ ಲಿಂಗಾರ್ಚನೆಯ ಪರಮ
ಸುಖದೊಳೋಲಾಡುವ ಪರವಶನಾಗಿ ಸುಜ್ಞಾನ ಮುಖದಿಂ ವಿವೇಚಿಸಿ ನೋಡಿ ಲಿಂಗಾರ್ಚನೆಯಂ ಬಿಟ್ಟು
ಏಳುಲೊಲ್ಲದೆ ಆ ಜಂಗಮವನೊಡಗೊಂಡು ಬನ್ನಿ ಎಂದು ಮತ್ತೆ ಅಪ್ಪಣ್ಣನನ್ನು ಕಳುಹಿಸುತ್ತಾನೆ. ಮತ್ತೆಯೂ
ಹಿಂದಕ್ಕೆ ಬಂದ ಅಪ್ಪಣ್ಣನನ್ನು ಮತ್ತೆ ನಾನು ಪೂಜೆ ಮಾಡುತ್ತಿದ್ದೇನೆ. ಅವರನ್ನಿಲ್ಲಿ ಕರೆದು ತಾ
ಎನ್ನುತ್ತಾನೆ. ಅಪ್ಪಣ್ಣ ಬಂದು ಬಸವಣ್ಣನ ಮಹಿಮೆಯನ್ನೆಲ್ಲ ಪ್ರಭುವಿನ ಮುಂದೆ ಎಳೆ ಎಳೆಯಾಗಿ
ಬಿಡಿಸುತ್ತಾನೆ. ಆಗಲೂ ಪ್ರಭು ಬಾರೆನೆಂದಾಗ ಅಪ್ಪಣ್ಣ ‘ನಿನ್ನಳವಲ್ಲ, ಎನ್ನಳವಲ್ಲ, ಇದಾರಳವಲ್ಲದ ಘನವು ನೋಡಯ್ಯ, ಕಾಬರ ಕಣ್ಣಳಿಗಾಸಾಧ್ಯ, ಮುಟ್ಟಿದರೆ ಸೋಂಕಿಂಗಸಾಧ್ಯ, ನಿಂದರೆ ನೆಳಲಿಲ್ಲ, ಸುಳಿದರೆ ಹೆಜ್ಜೆಯಿಲ್ಲ,
ಪ್ರಭುದೇವರೆಂಬ ಭಾವ ತೋರುತ್ತಿದೆ’ ಎಂದು ಬಿನ್ನೈಸಿದಾಗಲೇ ಬಸವಣ್ಣನಿಗೆ
ವಾಸ್ತವದ ಅರಿವಾಗತೊಡಗಿದ್ದು. ಚನ್ನಬಸವಣ್ಣನೂ ಬಂದು ಕಣ್ಣರಿಯದಿದ್ದರೂ ಕರುಳರಿಯಬೇಡ ಎಂದು
ಗದರಿಸಿ ಅಲ್ಲಮ ಪ್ರಭುದೇವರು, ಸಿದ್ಧರಾಮಯ್ಯದೇವರು ಬಂದು ಬಾಗಿಲೊಳಗಿರಲು, ಅಟ್ಟಾಟ್ಟಿಕೆಯಲಿಂತು ತೆರಹು ಮರಹಾಗಿಪ್ಪದು
ನಿಮಗುಚಿತವಲ್ಲ ಎಂದಾಗ ಬಸವಣ್ಣ ಪ್ರಭುವನ್ನು ತಾನೆ ಕರೆಯಲು ಎದ್ದು ನಿಲ್ಲುತ್ತಾನೆ. ಈ ಅಟ್ಟಾಟಿಕೆಯ
ಪ್ರಸಂಗ ಓದುವುದಕ್ಕೆ ಸ್ವಾರಸ್ಯಮಯವಾಗಿ ಕಾಣಬಹುದು. ಅಷ್ಟೇ ಅಲ್ಲ ಮುಂದೆ ಪ್ರಭುವನ್ನು ಕಂಡ
ಬಸವಣ್ಣ ಆಡುವ ಆತ್ಮ ನಿರೀಕ್ಷೆಯ ಭಾವ ಪೂರ್ಣ ವಚನಗಳ ಚೆಲುವು ಸಹಜವಾದಪ್ರಸಂಗ ಎಂದು ಭಾವ ಪರವಶಗೊಳಿಸಬಹುದು. ಆದರೆ
ಜಂಗಮ ಪ್ರಾಣಿ ಎಂದು ಜನಜನಿತತನಾದ ಬಸವಣ್ಣ ಮನೆಯ ಬಾಗಿಲಲ್ಲಿ ಪ್ರಭು ನಿಂತಿದ್ದಾಗ ಶಸ್ತ್ರದಿಂದ ಶಿರವನರಿದು
ತನ್ನಿ ಎನ್ನುವ ಅಸಂಬದ್ದವಾದ ಮಾತು ಬಸವಣ್ಣನ ವ್ಯಕ್ತಿತ್ವ ಎಂದೂ ತಕ್ಕದ್ದಲ್ಲ ಎಂದೆನಿಸುತ್ತದೆ.ಇಷ್ಟಕ್ಕೇ ನಿಲ್ಲದೆ
ಅಸ್ತ್ರಕ್ಕೆ ಅಸಾಧ್ಯವಾದವನನ್ನು ಭಾವಾಸ್ತ್ರದಿಂದ ಗೆದ್ದು ತರಬೇಕೆನ್ನುವುದು ಇನ್ನೂ ಹಾಸ್ಯಾಸ್ಪದವಾದದ್ದು.
ಇಂತಹ ಕಡೆ ಬಸವಣ್ಣನ ವ್ಯಕ್ತಿತ್ವ ಶೂನ್ಯಸಂಪಾದನೆಯಲ್ಲಿ ಮಸುಕಾಗಿದೆ ಎಂದೆನಿಸುತ್ತದೆ.
ಚನ್ನಬಸವಣ್ಣ ಈಗಾಗಲೇ ಜಂಗಮ ಮುಖವಾಗಿ ಪ್ರಭು
ಬರುವುದನ್ನು ಸೂಚಿಸಿದ್ದಾನೆ. ಈಗ ತಾನು ಪೂಜಿಸುವ ಲಿಂಗದೊಳಗೆ ಆ ಪ್ರಭುವು ಕಾಣಿಸಿದ್ದಾನೆ.
ಇಷ್ಟಾದ ಮೇಲೆಯೂ ಬಸವಣ್ಣ ಅಟ್ಟಾಟಿಕೆಯ ವ್ಯವಹಾರ ಮಾಡಬಾರದಾಗಿತ್ತು. ಚನ್ನಬಸವಣ್ಣ ಬಂದು ಎಚ್ಚರಿಸುವವರೆಗೆ
ಅಪ್ಪಣ ಪ್ರಭುವಿನ ಹಿರಿಮೆಯನ್ನು
ಮನಗಾಣಿಸುವವರೆಗೆ ಬಸವಣ್ಣ ಕಾಯಬಾರದಾಗಿತ್ತು
ಎಂದು ಸಹಜವಾಗಿ ಓದುಗರಿಗೆ ಅನಿಸುತ್ತದೆ. ಇಷ್ಟಲಿಂಗದೊಳಗೆ ಪ್ರಭು ಕಾಣಿಸಿದಾಗ ಪ್ರಭು ಬೇರೆಯಲ್ಲ,
ಇಷ್ಟಲಿಂಗ ಬೇರೆಯಲ್ಲ ಎಂಬ ಅಭಿನ್ನ ಭಾವ ಮೂಡಿ ಹಾಗೆಯೇ ಎದ್ದು ಓಡಿ
ಪ್ರಭುವಿನ ಪಾದಗಳ ಮೇಲೆ ಬೀಳಬೇಕಾಗಿತ್ತು. ಚೆನ್ನಬಸವಣ್ಣ ಹೇಳಿದಂತೆ ಕಣ್ಣರಿಯದಿದ್ದರೂ
ಕರುಳರಿಯಬೇಕಾಗಿತ್ತು. ಅಲ್ಲವೆ? ಬಸವಣ್ಣನ ಈ ಚಿತ್ರದಿಂದ ಬಸವನ ಪಾತ್ರ ಕುಸಿಯುತ್ತದೆ ಎಂಬ ಶೂನ್ಯ ಸಂಪಾದನೆಯಲ್ಲಿಯ ಬಸವಣ್ಣನವರ ವ್ಯಕ್ತಿತ್ವದದ
ಬಗೆಗಿನ ಜಿ.ಎಸ್. ಸಿದ್ಧಲಿಂಗಯ್ಯನವರ ಅಭಿಪ್ರಾಯ ಯೋಚಿಸತಕ್ಕದ್ದಾಗಿದೆ. ಬಹುಶಃ ಈ ಸಂದರ್ಭದಲ್ಲಿಯ
ಕುಂದನ್ನು ಸರಿಪಡಿಸುವ ಸಲುವಾಗಿ ಮುಂದೆ ಪ್ರಭು ದೇಶಾಂತರ ಹೋಗಿ ಹಿಂತಿರುಗಿದಾಗ ಅವನು ಯಾವುದೇ
ವೇಷದಲ್ಲಿದ್ದರೂ ಬಸವಣ್ಣ ಗುರುತಿಸಿದ ಚಿತ್ರವನ್ನು ತಂದು ಶೂನ್ಯಸಂಪಾದನಕಾರರು ಬಸವಣ್ಣನ
ವ್ಯಕ್ತಿತ್ವಕ್ಕೆ ನ್ಯಾಯ ಒದಗಿಸಿದ್ದಾರೆ.
ಶೂನ್ಯ ಸಂಪಾದನಾಕಾರರು ಈ ಪ್ರಸಂಗವನ್ನು ಹೀಗೆ
ರೂಪಿಸಿದ್ದರಿಂದಲೇ ಬಸವಣ್ಣವನರ ಆತ್ಮಶೋಧನೆಯ ಸೊಗಸಾದ ವಚನಗಳನ್ನು ಸೇರಿಸಲು ಶೂನ್ಯ
ಸಂಪಾದನಾಕಾರರಿಗೆ ಅವಕಾಶ ದೊರೆತಿದೆ ಎಂದೆನಿಸುತ್ತದೆ. ಏಕೆಂದರೆ ಪ್ರಭುವಿನಂಥ ಮಹಾನುಭಾವ ತನ್ನನ್ನು ಹುಡುಕಿಕೊಂಡು ಸೊನ್ನಲಿಗೆಯಿಂದ
ಸಿದ್ಧರಾಮನನ್ನು ಕರೆದುಕೊಂಡು ಮನೆ ಬಾಗಿಲಿಗೆ ಬಂದಾಗ ಆ ಸುದ್ದಿ ಜಂಗಮ ಪ್ರೇಮಿಯಾದ ಬಸವನಿಗೆ
ತಿಳಿಯದಿದ್ದೀತೇ?
ಬಸವಣ್ಣ ಅಕ್ಕನನ್ನು ಕಂಡಾಗ ಅವಳನ್ನು ಪರಿಚಯಮಾಡಿಕೊಟ್ಟ. ಇಲ್ಲಿ
ಬಸವನಿಗೆ ಪ್ರಭುವಿನ ಮಹಿಮೆ ಅರ್ಥವಾಗಲಿಲ್ಲವೇ? ಇದಕ್ಕೆ ಉತ್ತರ ಪ್ರಸಂಗ ನಿರೂಪಣೆಯಲ್ಲಿ ಪಾತ್ರಧಾರಿಗಳ ಮೇಲಾಟ ಕಾರಣವಾದಂತೆ ತೋರುತ್ತದೆ.
ಅಂದರೆ ಒಂದು ಪಾತ್ರದ ಮಹಿಮೆಯನ್ನು ರೂಪಿಸುವುದಕ್ಕೆ ಹೊರಟಾಗ ಪ್ರತಿಭೆ ಏಕಮುಖವಾಗಿ ಸಂಚರಿಸಿ ಆ
ಪಾತ್ರದಲ್ಲೇ ತಲ್ಲೀನವಾಗಿ ಹೊಗಿಬಿಡುತ್ತದೆ. ಈ ರೀತಿಯ ತಲ್ಲೀನತೆ ಆ ಘನತೆಯನ್ನು ವಸ್ತು
ನಿಷ್ಟವಾಗಿ ಹಿಡಿಯುವಲ್ಲಿ ಸೋಲುತ್ತದೆ. ಶೂನ್ಯಸಂಪಾದನಕಾರರು ಪ್ರಭು ಪರವಾಗಿ ನಿಂತವರು,
ಹೀಗಾಗಿ ಬೇರೆ ಪಾತ್ರಗಳಿಗೆ ಅಲ್ಲಲ್ಲಿ ಆಗಾಗ ಧಕ್ಕೆ ಉಂಟಾಗಿದೆ ಎಂದೆನಿಸುತ್ತದೆ. ಮುಂದೆ
ಮೋಳಿಗೆ ಮಾರಯ್ಯನ ಪ್ರಸಂಗದಲ್ಲು ಬಸವಣ್ಣನ ಪಾತ್ರದಲ್ಲಿ ಇಂಥ ಧಕ್ಕೆ ಉಂಟಾಗಿರುವುದನ್ನು
ನೋಡುತ್ತೇವೆ. ಮೋಳಿಗೆ ಮಾರಯ್ಯನಂಥ ಭಕ್ತನ ಕಾಯಕದ ಯಶಸ್ಸಿಗಾಗಿ ಅವರ ಮನೆಯಲ್ಲಿ ಪ್ರಸಾದ
ಸ್ವೀಕರಿಸಿ ಹಿಂತಿರುಗುವಾಗ ಮಾರಯ್ಯನ ಮನೆಯಲ್ಲಿ ಎರಡು ಹೊನ್ನ ಜಾಳಿಗೆಗಳನ್ನಿಟ್ಟು ಬಂದದ್ದು
ಅಂತಹದರಲ್ಲಿ ಒಂದು. ಬಸವಣ್ಣ ಭಕ್ತರಿಗೆ ತೊಂದರೆಯಾಗಬಾರದೆಂದು ಹೀಗೆ ಮಾಡಿದ ಎಂದು ಅನಿಸಬಹುದು.
ಆದರೆ ಮಾರಯ್ಯ ಪ್ರಭುವಾಗಿದ್ದವನು, ಸ್ವಯಿಚ್ಛೆಯಿಂದ ರಾಜ್ಯ ಭೋಗಗಳನ್ನೆಲ್ಲ ಬಿಟ್ಟು ಹೆಂಡತಿಯೊಂದಿಗೆ ಬಂದವನು,
ಬಸವಣ್ಣನವರ ದರ್ಶನಕ್ಕೆ ಮಾರು ಹೋಗಿ ಸರಳ ಜೀವನವನ್ನೊಲಿದು ಮೋಳಿಗೆಯ
ಕಾಯಕವನ್ನು ಕೈಗೊಂಡವನು. ಅಂಥವನ ಮಹಿಮೆಯನ್ನು ಬಸವಣ್ಣ ಅರಿಯಲಾಗದೇ ಹೋದದ್ದು ಹೇಗೆ ಎಂಬ ಅನಿಸಿಕೆ
ವಿದ್ವಾಂಸರಲ್ಲಿ ಉಂಟಾಗದೇ ಇರದು.
ಆದಾಗ್ಯೂ ಶೂನ್ಯ ಸಂಪಾದನಕಾರರು ಬಸವಣ್ಣನ ಪಾತ್ರವನ್ನು
ಅತ್ಯಂತ ಮಹತ್ವದ ಪಾತ್ರ ಎಂದು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಭುವಿನ ಬಾಯಲ್ಲಿ,
ಚನ್ನಬಸವಣ್ಣನ ಬಾಯಲ್ಲಿ ಹಾಗೆಯೇ ಅನ್ಯ ಶರಣರ ಮಾತುಗಳಲ್ಲಿ ಬಸವಣ್ಣನ ಪಾತ್ರದೌನ್ನತ್ಯ ಮತ್ತೆ ಮತ್ತೆ ಆನುರಣನಗೊಳ್ಳುತ್ತದೆ. ಶೂನ್ಯಸಂಪಾದನಕಾರರು ಬಸವಣ್ಣನ
ವಿನಯವನ್ನಂತು ಮನಪೂರ್ವಕವಾಗಿ
ಮೆಚ್ಚಿಕೊಂಡಿದ್ದಾರೆ. ಚನ್ನಬಸವಣ್ಣ ತನಗೆ ಉಪದೇಶ ಮಾಡಬೇಕೆಂದು ಬೇಡಿಕೊಂಡಾಗ ಬಸವಣ್ಣ ಹೇಳುವ
ಮಾತನ್ನು ಗಮನಿಸಿ. ‘ಹೋಹೋ, ನಾನೊಬ್ಬರಿಗೆಯು ಉಪದೇಶವ ಮಾಡಲಮ್ಮೆನು. ಮುನ್ನಲಾದವರು, ತಮ್ಮಿಂದ ತಾವಾದರು, ಅವರೆಲ್ಲರೂ ನಿಜಲಿಂಗೈಕ್ಯರು. ನಾನೇನುವ ಮಾಡಿದ್ದಿಲ್ಲ, ತತ್ವವ ಹಿಡಿದವರಿಗೆ ತೊತ್ತಾಗಿ ನಡೆಯುವೆನು’- ಈ ಮಾತು ಇಡೀ
ಶೂನ್ಯಸಂಪಾದನೆಯ ತುಂಬ ಅಲ್ಲಲ್ಲಿ ನಿನದಿಸುತ್ತದೆ. ಬಸವಣ್ಣನ ವಿನಯವಂತಿಕೆಯನ್ನು ಎತ್ತಿ
ತೋರಿಸುತ್ತದೆ. ನುಲಿಯು ಚಂದಯ್ಯನ ಪ್ರಸಂಗದಲ್ಲಿ ಕಾಯಕದಲ್ಲಿ ನುಲಿಯಚಂದಯ್ಯನನ್ನು ಕಾಯಕ ಮಾಡಿ
ಬದುಕಲು ಒಪ್ಪಿಕೊಂಡು ಲಿಂಗದೇವರಾಗಿ ಬಂದು ಹಗ್ಗವನ್ನು ಮಾರಿಕೊಂಡು ಬರುವ ಕಾಯಕವನ್ನು
ಮಾಡತೊಡಗಿತ್ತು. ಒಂದು ದಿನ ಅದು ಹಗ್ಗವನ್ನು
ಬಸವಣ್ಣನಿಗೆ ಕೊಡಲು ಬಸವಣ್ಣದಕ್ಕೆ ಕೂಲಿಯಾಗಿ ಸಾವಿರ ಹೊನ್ನುಗಳನ್ನು ಕೊಟ್ಟುಬಿಟ್ಟನು. ಹಾಗೆ
ಕೊಟ್ಟು ಸಾವಿರ ಹೊನ್ನನ್ನು ಹಿಂದಿರುಗಿಸಿದ ಚಂದಯ್ಯ , ಕಾಯಕದಿಂದ ಮಾಡಿದ್ದಕ್ಕೆ ಯೋಗ್ಯವಾದಷ್ಟನ್ನೇ ಸ್ವೀಕರಿಸುವುದು
ಯೋಗ್ಯವಾದದ್ದು ಎಂಬ ದೃಷ್ಟಿಯಿಂದ. ಲಿಂಗದೇವರನ್ನು ದೂರಮಾಡಲು ನಿಶ್ಚಯಿಸಿದ,
ಕಾಯಕದಿಂದ ಮಾಡಿದ್ದಕ್ಕೆ ಯೋಗ್ಯವಾದಷ್ಟನ್ನೇ ಸ್ವೀಕರಿಸುವುದು
ಯೋಗ್ಯವಾದದ್ದು ಎಂಬ ದೃಷ್ಟಿಯಿಂದ. ಆಗ ಮತ್ತೆ ಮಡಿವಾಳಯ್ಯ ಚಂದಯ್ಯ ಮತ್ತು ಲಿಂಗದೇವರಲ್ಲಿ
ಮಧ್ಯಸ್ಥಿಕೆ ವಹಿಸಲು ಬಂದ. ಚಂದಯ್ಯನ ಹಳೆಮಗ ನಾನಾಗಿ ಆತನ ಶ್ರೀಚರಣಕ್ಕೆ ಶರಣೆಂದು ಶುದ್ಧನು. ಆ
ಮಹಾಮಹಿಮನ ಘನವ ನಾನೆತ್ತ ಬಲ್ಲೆನಯ್ಯ ಪ್ರಭುವೇ ಎಂದುಬಿಟ್ಟ. ಮತ್ತೆಯೂ ಪ್ರಭುವು ಪೂರ್ವಾಚಾರಿ
ನೀನೇ ಆದ ಕಾರಣ ಗುಹೇಶ್ವರ ಲಿಂಗದಲ್ಲಿ ಚಂದಯ್ಯಂಗೆ ಲಿಂಗದ ನಿಜವ ತಿಳುಹ ಸಂಗನ ಬಸವ ಎಂದು ಒತ್ತಾಯ
ಮಾಡಿದರೆ,
ಬಸವಣ್ಣ ನಾನರಿಯೇ ಚೆನ್ನಬಸವಣ್ಣನ ಕೇಳಿ ಎಂದು ಬಿನೈಸಿದನು. ಇದರ ಅರ್ಥ ,ಬಸವಣ್ಣ ತಾನೆಂದೂ ಹಿರಿಯನೆಂದಾಗಲಿ, ತಿಳಿದವನೆಂದಾಗಲಿ, ಅಂದುಕೊಂಡವನೇ ಅಲ್ಲ. ಆನುಭಾವಿಕವಾದ ಯಾವುದೇ ಜಿಜ್ಞಾಸೆಗಳಲ್ಲಿ ಅದಕ್ಕೆ ಉತ್ತರಿಸುವವನು
ಚೆನ್ನಬಸವಣ್ಣ ಅಥವಾ ಅಲ್ಲಮನೇ ಹೊರತು ಬಸವಣ್ಣ ಅಲ್ಲ. ಬಸವಣ್ಣನ ಪಾತ್ರವನ್ನು ನಿರೂಪಿಸುವಾಗ ಶೂನ್ಯ
ಸಂಪಾದನಕಾರರು ಎಲ್ಲೋ ಒಂದೆಡೆ ಅತಿ ಎನಿಸುವಷ್ಟು
ಅತಿರೇಕಕ್ಕೆ ಒಳಗಾಗಿದ್ದಾರೆಯೋ ಎಂಬ ಅನಿಸಿಕೆ ಓದುಗನಿಗೆ ಅನಿಸುತ್ತದೆ.
ಶೂನ್ಯ ಸಂಪಾದನೆಯಲ್ಲಿಯ ಆಯ್ದಕ್ಕಿ ಮಾರಯ್ಯಗಳ ಸಂಪಾದನೆಯ ಪ್ರಸಂಗದಲ್ಲಿ
ಬಸವಣ್ಣನವರ ಮೂಲಕ ಆಯ್ದಕ್ಕಿ ಮಾರಯ್ಯ ದಂಪತಿಗಳು
ಕಾಯಕ ತತ್ವವನ್ನು ಆಚರಣೆಯಲ್ಲಿ ಅನುಸರಿಸಿ ಸಾಧಿಸಿ ತೋರಿಸಿರುವುದು ವ್ಯಕ್ತವಾಗಿದೆ. ಮಾರಯ್ಯನ
ಕಾಯಕ ಮಹಾಮನೆಯ ಮುಂದೆ ಅಲ್ಲಲ್ಲಿ ಚೆಲ್ಲಿದ ಅಕ್ಕಿಯನ್ನು ಆಯ್ದು ತರುವುದಾಗಿತ್ತು. ಆತನ ಕಾಯಕದ
ಹಿಂದೆ ಉದಾತ್ತವಾದ ಮನೋಧರ್ಮವನ್ನು ಹುಡುಕಬಹುದು. ಅಕ್ಕಿಯನ್ನು ಆಯುವ ಕಾಯಕವನ್ನು
ಕೈಗೊಂಡಿದ್ದವನು ಮಾರಯ್ಯ. ಬಸವಣ್ಣ ಆಯ್ದಕ್ಕಿ ಮಾರಯ್ಯ ಹಾಗೂ ಧರ್ಮಪತ್ನಿ ಲಕ್ಕಮ್ಮರ ಬಡತನವನ್ನು
ನೋಡಲಾರದೆ ಒಂದು ದಿನ ಹೆಚ್ಚು ಅಕ್ಕಿಯನ್ನು ಸುರಿಯುತ್ತಾರೆ. ಲಕ್ಕಮ್ಮ ಆ ಹೆಚ್ಚಿನ ಅಕ್ಕಿಯನ್ನು
ಮರಳಿ ಸುರಿದು ದಿನನಿತ್ಯ ಎಷ್ಟು ಅಕ್ಕಿ ಬರುತ್ತಿತ್ತೊ ಅಷ್ಟನ್ನೇ ಇಟ್ಟುಕೊಳ್ಳಲು ಮಾರಯ್ಯನಿಗೆ
ಹೇಳಿ ಹಾಗೆಯೇ ಮಾಡಿಸುತ್ತಾಳೆ. ಲಕ್ಷದ ಮೇಲೆ ತೊಂಭತ್ತಾರು ಸಾವಿರ ಗಣಂಗಳನ್ನು ಪ್ರಸಾದಕ್ಕೆ
ಆಹ್ವಾನಿಸಿ ಪ್ರಸಾದ ಮಾಡಿಸಿ ತಾನು ಕಾಯಕದವಳು ಬಡವಿಯಲ್ಲ ಎಂಬುದನ್ನು ಅಲ್ಲಿ ಬಸವಾದಿ ಶರಣರಿಗೆ
ತೋರಿಸಿ ಕೊಡುತ್ತಾಳೆ. ಮನಶುದ್ಧವಿಲ್ಲದವರಿಗೆ ದ್ರವ್ಯದ ಬಡತನವಲ್ಲದೆ ಚಿತ್ತ ಶುದ್ಧದಿ ಕಾಯಕ
ಮಾಡುವಲ್ಲಿ ಸದ್ಭಕ್ತರಿಗೆ ಎತ್ತನೋಡಿದರತ್ತ ಲಕ್ಷ್ಮಿತಾನಾಗಿಪ್ಪಳು ಎಂದು ನುಡಿದು ಅದನ್ನು
ಸಾಧಿಸಿ ತೋರಿಸಿದ ಪ್ರಸಂಗ ಶೂನ್ಯ ಸಂಪಾದನೆಯಲ್ಲಿ ವ್ಯಕ್ತವಾಗಿದೆ.ಅಗತ್ಯವಾದುದನ್ನು ಮಾತ್ರ ತಂದು
ಅದನ್ನು ಒಂದೇ ಮನಸ್ಸಿನಿಂದ ದಾಸೋಹದಲ್ಲಿ ವಿನಿಯೋಗಿಸಬೇಕು ಎಂಬ ಅಕ್ಕಮ್ಮನ ಮಾತಿನಲ್ಲಿ ಬಸವಣ್ಣ ಪ್ರತಿಪಾದಿಸಿದ ಕಾಯಕತತ್ವದ ಪ್ರತಿಪಾದನೆ ಹಾಗೂ
ಕಾಯಕವೇ ಕೈಲಾಸ ಎಂಬ ಉದಾತ್ತ ನಿಲುವಿನ ಆಚರಣೆಯು ಕಾರ್ಯರೂಪಕ್ಕೆ ಬಂದಿರುವುದನ್ನು
ಗುರುತಿಸಬಹುದಾಗಿದೆ.
ಬಸವಣ್ಣ ಜಗದೇವ,
ಮೊಲ್ಲೆಯ ಬೊಮ್ಮಯ್ಯಗಳನ್ನು ಬಿಜ್ಜಳನನ್ನು ಕೊಲ್ಲಲು ಆದೇಶಿಸಿದ
ಸಂದರ್ಭ.ಜೊತೆಗೆ ಬಿಜ್ಜಳನ ಕೊಲೆಯಾದುದನ್ನು ಕೇಳಿ ಸಂತೋಷಗೊಂಡು ಕೂಡಲ ಸಂಗಮಕ್ಕೆ ಹೋದನೆಂದು
ಸಂತೋಷಿಸುವ ವಿಚಾರ ಶರಣ ಧರ್ಮದ ಗಣಾಚಾರ ವರ್ತನೆಯನ್ನು ಪ್ರತಿನಿಧಿಸುತ್ತದೆ. ಎಂಬ ಅನಿಸಿಕೆ
ವ್ಯಕ್ತವಾದರೂ ಬಸವಣ್ಣನಂಥವರು ಅದರಲ್ಲಿಯೂ ಶೂನ್ಯ ಸಂಪಾದನೆಯಗಳಲ್ಲಿಯೇ,
ಚಿತ್ರಿತವಾಗಿರುವ ಕೂಡಲಸಂಗಮ ದೇವಯ್ಯನೆಂಬ ಮಹಾ ಬೆಳಗಿನೊಳಗೆ
ಬೆಳಗಾಗಿದ್ದೆನೆಂಬ ಶಬ್ದ ಮುಗ್ಧವಾದುದನೇನೆಂಬೆನಯ್ಯ, ಎಂದು ಚಿತ್ರಿತವಾಗಿರುವವನಿಗೆ, ಜೊತೆಗೆ ಕರ್ತನಟ್ಟಿದಡೆ ಮರ್ತ್ಯದಲ್ಲಿ ಮಹಾ ಮನೆಯ ಕಟ್ಟಿ
ಸತ್ಯಶರಣರಿಗೆ ತೊತ್ತು ಭೃತ್ಯನಾಗಿ ಸವೆದು ಬದುಕಿದೆನು.
ಕರ್ತನ ಬೆಸನು ಮತ್ತೆ ಬರಲೆಂದು ಅಟ್ಟಿದೊಡೆ ಕೂಡಲಸಂಗಮದೇವರ ನಿರೂಪಕ್ಕೆ ಮಹಾ
ಪ್ರಸಾದವೆಂದೆನು,
ಎಂದು
ಶಿವನಿರ್ದೇಶಿತವಾದ ಬಸವಣ್ಣನ ನಿಲುವಿಗೆ ಸಮರ್ಥನೀಯ ವಾದುದಲ್ಲ ಎಂದೆನಿಸುತ್ತದೆ. ಯುಗದ
ಉತ್ಸಾಹವಾಗಿದ್ದ ಬಸವಣ್ಣನಂಥ ವ್ಯಕ್ತಿ ಕಲ್ಯಾಣವನ್ನು ಬಿಡಬೇಕಾಗಿ ಬಂದುದ್ದನ್ನು ಕಂಡ ಶರಣರ
ಪ್ರತಿಭಟನೆಯನ್ನು ವಿವರಿಸುವ ಹಿನ್ನೆಲೆಯಲ್ಲಿ ಈ ತೆರನಾದ ಆಶಯ ಶೂನ್ಯ ಸಂಪಾದನಾಕಾರರಲ್ಲಿ ವ್ಯಕ್ತವಾಗಿದೆ
ಎಂದೆನಿಸುತ್ತದೆ. ಶೂನ್ಯಸಂಪಾದನೆಗಳಲ್ಲಿ ಬಸವಣ್ಣನ ಜೀವನ ಚಿತ್ರಣವನ್ನು ಕ್ರಮಬದ್ಧವಾಗಿ ತಿಳಿದು
ಕೊಳ್ಳಲು ಸಾಧ್ಯವಿಲ್ಲ. ಬಸವಣ್ಣನ ವ್ಯಕ್ತಿತ್ವ ಹಾಗೂ ಇತರ ಶರಣರ ನಡುವಿನ ಒಡನಾಟವನ್ನು ಮಾತ್ರ
ಗ್ರಹಿಸ ಬಹುದಾಗಿದೆ. ಆದಾಗ್ಯೂ ಬಸವಣ್ಣನ ಜೀವನದ ಕೊನೆಯ ಚಿತ್ರಗಳನ್ನು ಶೂನ್ಯ ಸಂಪಾದನೆಗಳಲ್ಲಿ
ಸ್ವಲ್ಪ ಮಟ್ಟಿಗೆ ಕಂಡು ಕೊಳ್ಳ ಬಹುದಾಗಿದೆ.
ಶಿವಗಣಾದಿ ಮಹದೇವಯ್ಯನ ಶೂನ್ಯಸಂಪಾದನೆಯಲ್ಲಿ ಬರುವ,
ಅರಸು ವಿಚಾರವೂ, ಸಿರಿಯ ಶೃಂಗಾರವೂ ಸ್ಥಿರವಲ್ಲ ಕೇಳಿರೇ! ಮರ್ತ್ಯಲೋಕದೊಳಗೆ ಕೆಟ್ಟಿಹುದು ಕಲ್ಯಾಣ. ಹಾಳಾದುದು
ಕಲ್ಯಾಣ. ಲೋಕವರಿಯಲು ಶಿವಾಚಾರದಭಿಮಾನದಲ್ಲಿ ಜಗದೇವ- ಮೊಲ್ಲೆಯ ಬೊಮ್ಮಣ್ಣಗಳ ಕೈಯಲ್ಲಿ ಮಡಿದಹನು
ಬಿಜ್ಜಳನು. ಕೂಡಲಸಂಗಮದೇವರು ತಮ್ಮ ಕವಳಿಗೆಯ ತೊಡೆದಿಹರು. ಎಂದು ನಿರೂಪಿಸಿದ್ದು ಪ್ರಜ್ಞಾಪೂರ್ವಕವಾಗಿ ಶೂನ್ಯಸಂಪಾದನಕಾರ ಬಿಜ್ಜಳನ
ಸಾವನ್ನು ಸೂಚಿಸಲು ಬಸವಣ್ಣನ ವಚನವನ್ನೂ ಬಳಸಿಕೊಂಡಿದ್ದಾನೆ. ಜಗದೇವ ಮೊಲ್ಲೆಯ ಬೊಮ್ಮಣ್ಣಗಳ ಕೈಲಿ
ಮಡಿದಿಹನು ಬಿಜ್ಜಳನು ಕೂಡಲಸಂಗಮದೇವರು ತಮ್ಮ ಕವಳಿಗೆಯ ತೊಡೆದಿಹರು ಎಂದು ಬಸವಣ್ಣನ ಬಾಯಲ್ಲಿ
ಶೂನ್ಯಸಂಪಾದನಾಕಾರ ಈ ಮಾತನ್ನು ಹೇಳಿಸುತ್ತಾನೆ.
ಬಿಜ್ಜಳನು ಶಿವದ್ರೋಹದ ಕಾರಣವಾಗಿ ಬಸವಣ್ಣನವರ
ಆದೇಶದಿಂದಲೇ ಜಗದೇವ, ಮಲ್ಲೆಬೊಮ್ಮರಿಂದ ಕೊಲೆಯಾದನೆಂದು ರೂಪಿತವಾಗಿದೆ. ಇಲ್ಲಿ ಶೂನ್ಯಸಂಪಾದನಾ ಸಂಕಲನಕಾರ
ಬಸವಣ್ಣನ ವಚನದ ಮೂಲಕವೇ ತಾನು ರೂಪಿಸ ಬೇಕೆಂದಿರುವ ಇತಿಹಾಸವನ್ನು ದಾಖಲು ಮಾಡಿದ್ದಾನೆ.
ಬಸವಣ್ಣ
ಬಯಲಾದುದನ್ನು ತಿಳಿದ ನಾಗಮ್ಮ, ಚನ್ನಬಸವಣ್ಣ,
ಮಡಿವಾಳ ಮಾಚಯ್ಯ ಮೊದಲಾದವರ ಪ್ರಲಾಪ ಬಸವಣ್ಣ ಶರಣ ಸಂತತಿಗೆ ಅದರಲ್ಲಿಯೂ
12ನೇ ಶತಮಾನದ ಶರಣ ಚಳುವಳಿಗೆ ಎಂಥ ಮಹತ್ವದ ನೇತಾರನಾಗಿದ್ದ ಎಂಬುದನ್ನು
ಧ್ವನಿಸುತ್ತದೆ. ಬಹುಶಃ ಹರಳಯ್ಯ ಮಧುವರಸರ ಕುಟುಂಬಗಳಲ್ಲಿ ವೈವಾಹಿಕ ಸಂಬಂಧವನ್ನೇರ್ಪಡಿಸಿ
ಕ್ರಾಂತಿಕಾರಿ ನಿಲುವಿಗೆ ಕಾರಣನಾದ ಬಸವಣ್ಣ ಕ್ರಾಂತಿದರ್ಶಿಯಾಗಿದ್ದ ಎಂಬುದನ್ನು ನಿರೂಪಿಸುವಲ್ಲಿ
ಬಸವಣ್ಣನ ಕುರಿತ ಕಾವ್ಯ-ಪುರಾಣಗಳಲ್ಲಿ ಚಿತ್ರಿತವಾಗಿರುವ ಹಾಗೆ ಶೂನ್ಯಸಂಪಾದನಕಾರರು
ಚಿತ್ರಿತವಾಗಿಲ್ಲ. ಶೂನ್ಯ ಸಂಪಾದನೆಯಲ್ಲಿ
ಬಿಜ್ಜಳನ ಕೊಲೆಗೆ ಬಸವಣ್ಣ ಕಾರಣನಾದ ಎಂದು ಸೂಚಿಸಿ ಕೈತೊಳೆದುಕೊಂಡು ಬಿಟ್ಟರೆ ಎಂಬ ಪ್ರಶ್ನೆ
ಏಳುವುದು ಸಹಜ. ಏಕೆಂದರೆ ಕರ್ನಾಟಕದ ಇತಿಹಾಸದಲ್ಲಿ ಬಿಜ್ಜಳನ ಸಾವಿನ ಬಗ್ಗೆ ಏಕಾಭಿಪ್ರಾಯವಿಲ್ಲ.
ಬಸವಣ್ಣ ಅದಕ್ಕೆ ಕಾರಣ ಎಂಬ ಬಗೆಗೂ ಆಧಾರಗಳಿಲ್ಲ.
ಆದಾಗ್ಯೂ
ಶೂನ್ಯಸಂಪಾದನಕಾರರು ಬಸವಣ್ಣನ ಪಾತ್ರವನ್ನು ಗ್ರಹಿಸುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದ್ದಾರೆ
ಎಂದೆನಿಸುತ್ತದೆ. ಮೊದಲ ಶೂನ್ಯ ಸಂಪಾದನಾಕಾರನಾದ
ಶಿವಗಣಪ್ರಸಾದಿ ಮಹಾದೇವಯ್ಯನಲ್ಲೇ ಪ್ರಭುವಿನ ವೃತ್ತಾಂತವಾದ ಮೇಲೆ ಬರುವ ಮತ್ತೊಂದು
ವೃತ್ತಾಂತವೆಂದರೆ ಬಸವಣ್ಣನವರದೆ ಆಗಿದೆ. ಹಲಗೆಯಾರ್ಯನಂತು ಅದನ್ನು ಇನ್ನೂ ಸ್ವಲ್ಪ
ವಿಸ್ತರಿಸಿದ್ದಾನೆ. ಗುಮ್ಮಳಾಪುರದ ಸಿದ್ಧಲಿಂಗಯತಿ ಬಸವನ ಜೀವನ ವೃತ್ತಾಂತವನ್ನು ಭೀಮಕವಿಯ ಬಸವ
ಪುರಾಣದ ಜಾಡಿನಲ್ಲೇ ಇನ್ನಷ್ಟು ವಿಸ್ತರಿಸುತ್ತಾನೆ. ಮೊದಲ ಎರಡು ಭಾಗಗಳನ್ನುಳಿದರೆ
ಶೂನ್ಯಸಂಪಾದನೆಯ ತುಂಬ ವ್ಯಾಪಿಸಿಕೊಂಡ ವ್ಯಕ್ತಿತ್ವ ಬಸವಣ್ಣನದು. ಮೋಳಿಗೆ ಮಾರಯ್ಯನ
ಪ್ರಸಂಗದಲ್ಲೂ ಬಸವಣ್ಣ ವೃತ್ತಾಂತವೇ ಅಧಿಕವಾಗಿದೆ.
ಶೂನ್ಯಸಂಪಾದನೆಯ ಕೊನೆಯಂತೂ ಕಲ್ಯಾಣವನ್ನು ತೊರೆದ ಬಸವಣ್ಣನನ್ನು ಕುರಿತು ಶೋಕಗೀತೆಯ ಸರಮಾಲೆಯನ್ನೇ
ಮೂಡಿಸಿದೆ ಎಂದರೆ ತಪ್ಪಾಗಲಾರದು. ಎಲ್. ಬಸವರಾಜುರವರು
‘ಶೂನ್ಯ ಸಂಪಾದನೆಗಳಲ್ಲಿ
ವೀರಶೈವದ ಎರಡು ಶ್ವಾಸಕೋಶಗಳಂತಿರುವ ಪ್ರಭುದೇವನ ಮತ್ತು ಬಸವಣ್ಣನ ಹೋರಾಟದ ಬದುಕಿನ ಬಳ್ಳಿಗಳು
ಸಮನ್ವಯದ ಹಂದರದ ಮೇಲೆ ಹಭ್ಬಿವೆಯೆನ್ನಬಹುದು ಎಂದು ಹೇಳಿರುವುದು’ ಗಮನಾರ್ಹವಾಗಿದೆ.
ಶೂನ್ಯ ಸಂಪಾದನೆಯಲ್ಲಿ ಬಸವಣ್ಣ
ಹುಟ್ಟಿದ್ದು ಲೋಕೋದ್ಧಾರಕ್ಕಾಗಿ ಎನ್ನುವ ಎಳೆಯಿಂದ ಹೊರಟು ಈ ಕಾರ್ಯ ಮುಗಿದನಂತರ ಬಸವಣ್ಣನ
ಐಕ್ಯಕ್ರಿಯೆಯನ್ನು ಸಾಂಕೇತಿಕವಾಗಿ ಸೂಚಿಸಿರುವುದನ್ನು ಕಾಣಬಹುದು.
ಶೂನ್ಯಸಂಪಾದನಕಾರರು
ಬಸವಣ್ಣ,
ಚೆನ್ನಬಸವಣ್ಣ ಮತ್ತು ಅಲ್ಲಮರನ್ನು ಗುರು-ಲಿಂಗ- ಜಂಗಮಕ್ಕೆ
ಸಮೀಕರಿಸಿಯೇ ಹೇಳಿದ್ದಾರೆ. ಆ ನಿಃಕಲ ಪರಶಿವಲಿಂಗದ ಸತ್ಯವೆನಿಸಿದ ಬಸವೇಶ್ವರನೆ ಜಗಹಿತಾರ್ಥವಾಗಿ
ಗುರು ಸ್ವರೂಪನಾಗಿ ಮರ್ತ್ಯಕ್ಕೆ ಅವತರಿಸಿದ; ಆ ನಿಃಕಲ ಪರಶಿವಲಿಂಗದ ಚಿತ್ತುವೆನಿಸಿದ
ಚನ್ನಬಸವೇಶ್ವರನೆ ಜಗತ್ಪಾವನವಾಗಿ ಲಿಂಗಸ್ವರೂನಾಗಿ ಮರ್ತ್ಯಕ್ಕೆ ಅವತರಿಸಿದ;
ಆ ನಿಃಕಲ ಪರಶಿವಲಿಂಗದ ಆನಂದ ಸ್ವರೂಪವೆನಿಸಿದ ಜಂಗಮವೇ ಪ್ರಭುದೇವರಾಗಿ
ಸಕಲ ಭಕ್ತಗಣ ಹಿತಾರ್ಥವಾಗಿ ಮರ್ತ್ಯಕ್ಕೆ ಅವತರಿಸಿದರು. ತಾತ್ವಿಕವಾಗಿ ಈ ಮೂರು ಪಾತ್ರಗಳು
ಪ್ರಧಾನವಾದರೂ ಶೂನ್ಯ ಸಂಪಾದನೆಯನ್ನು ಘಟನಾಮಯವಾಗಿಸುವ ಹಾಗೂ ಕಾವ್ಯಮಯವಾಗಿಸುವ ದೃಷ್ಟಿಯಿಂದ
ಅಲ್ಲಮ ಪ್ರಭುವಿನ ಪಾತ್ರ ಮೇಲುಗೈ ಪಡೆದಿದ್ದು ಬಸವಣ್ಣನ ಪಾತ್ರ ಅದಕ್ಕೆ ಹೊಯ್ ಕೈಯಾಗಿ
ನಿಲ್ಲುವುದಿಲ್ಲ ಎಂಬುದು ಎಲ್ಲರೂ ತಿಳಿದಿರ ತಕ್ಕಸಂಗತಿಯಾಗಿದೆ.
ಬಸವಣ್ಣ ಒಬ್ಬ
ಪ್ರವಾದಿ. ನಾಲ್ವರು ಶೂನ್ಯಸಂಪಾದನಕಾರರೂ ಗುರುತಿಸುವಂತೆ ‘ಯುಗದ ಉತ್ಸಾಹ’ನಾಗಿದ್ದವನು.
ಮಹತ್ತರವಾದ ಸಾಂಸ್ಕೃತಿಕ ಕ್ರಾಂತಿಯೊಂದಕ್ಕೆ ನೇತಾರನಾಗಿದ್ದವನು. ಅಷ್ಟೆಲ್ಲಕಿಂತ ಮುಖ್ಯವಾಗಿ
ತುಳಿತಕ್ಕೊಳಗಾಗಿದ್ದ ಜನಸಮುದಾಯಕ್ಕೆ ಸಮಾನತೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ಮಾನವ ಘನತೆಯ
ಬದುಕು ಪ್ರಾಪ್ತವಾಗುವುದಕ್ಕೆ ಕಾರಣನಾದವನು. ತನ್ನಸುತ್ತಲೂ ಸೃಜನಾತ್ಮಕ ವಾತಾವರಣವೊಂದನ್ನು
ನಿರ್ಮಾಣಮಾಡಿದ್ದ ಮಹಾನುಭಾವ. ಹನ್ನೆರಡನೆಯ ಶತಮಾನದ
ತಲೆಯಾಳು ಎಂದರೂ ನಡೆದೀತು. ಆದಾಗ್ಯೂ
ಶೂನ್ಯಸಂಪಾದನೆಯಲ್ಲಿ ಪ್ರಭುಪರವಾದ ಅವರ ದೃಷ್ಟಿ ಬಸವನ ಪಾತ್ರದ ಬೆಳವಣಿಗೆಗೆ ಅಡ್ಡಿಯಾಗಿದೆ.
ಅಷ್ಟೆ ಅಲ್ಲ ಪ್ರಭುಕಾಂತಿ ಹೆಚ್ಚಿದಂತೆ ಈ ಪಾತ್ರದ ವೈವಿಧ್ಯ ಸೊರಗುತ್ತ ಹೋಗಿದೆ. ಕಲಾತ್ಮಕವಾಗಿ
ಪ್ರಭುಪಾತ್ರಕ್ಕೆ ದೊರೆಕಿದ ಘಟನಾತ್ಮಕತೆ ಮಾತ್ರ ಬಸವನ ಪಾತ್ರಕ್ಕೆ ದೊರಕದೆ ಹೋಗಿದೆ ಎಂದು
ಯಾರಿಗಾದರೂ ಅನಿಸದೇ ಇರದು. ಶೂನ್ಯಸಂಪಾದನೆಗಳಲ್ಲಿ ಬಸವಣ್ಣನವರ ಬೆಳೆದು ನಿಂತ ದಿವ್ಯ
ವ್ಯಕ್ತಿತ್ವವನ್ನು ಗುರುತಿಸಬಹುದೇ ಹೊರತು ಜೀವನ ಚಿತ್ರದ ಎಳೆಗಳನ್ನು ಗುರುತಿಸಲು
ಸಾಧ್ಯವಿಲ್ಲ.
ಲಕ್ಕಣ್ಣದಂಡೇಶನ
ಶಿವತತ್ವಚಿಂತಾಮಣಿಯಲ್ಲಿ ಬಸವಣ್ಣನ ಪಾತ್ರ
ಲಕ್ಕಣ್ಣ ದಂಡೇಶನ ಶಿವತತ್ವಚಿಂತಾಮಣಿಯಲ್ಲಿಯ ಸಂಧಿ
28 ರಿಂದ 34ರವರೆಗಿನ ಪದ್ಯಗಳಲ್ಲಿ ಶಿವಭಕ್ತರ ಚರಿತ್ರೆ
ನಿರೂಪಿತವಾಗಿದ್ದು ಅದರಲ್ಲಿ ಬಸವಣ್ಣನವರ ಚರಿತ್ರೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾನೆ.
ಕೃತಿಯ ಎರಡನೆಯ ಭಾಗ ಶಿವಶರಣರಕಥಾರತ್ನ ಕೋಶವೇ ಆಗಿದೆ. ಪರಾತ್ಪರ ವಸ್ತುವನ್ನೂ ಅದರ ಒಂದು ಅಂಶದಿಂದ
ರೂಪುಗೊಂಡ ಶಿವನ ಲೀಲೆಗಳು, ಶಿವಮಹಿಮೆ ಮೊದಲಾದುವನ್ನು ವರ್ಣಿಸಿದ ಮೇಲೆ ಶಿವಶರಣರ ಚಾರಿತ್ರಗಳನ್ನು ಕಟ್ಟುವುದು
ಕ್ರಮಪ್ರಾಪ್ತವೇ ಆಗಿರುತ್ತದೆ. ಈ ಕಥಾ ಕೋಶದಲ್ಲಿ ಮೊದಲ ಏಳು ಸಂಧಿಗಳಲ್ಲಿ ಸಂಧಿ 28 ರಿಂದ 34 ರ ವರೆಗೆ, ಬಸವಣ್ಣನವರ
ವೃತ್ತಾಂತ,
ಅನಂತರ, ಪ್ರಮಥಾದಿಗಳ ಹೆಸರುಗಳು ಮತ್ತು ಅರುವತ್ತು ಮೂರು ಪುರಾತರನ ಕಥನ, ಗುಡ್ಡಮ್ಮೆ ಮೊದಲಾದ ಷೋಡಶರ ಮಹಿಮೆ, ಅಸಂಖ್ಯಾತರ ಕಥೆಗಳಿಗೂ ನೂತನರ ಚಾರಿತ್ರಗಳಿಗೂ,
ಒಂದೊಂದು ಸಂಧಿ ಮೀಸಲು. ಇವುಗಳಲ್ಲೆಲ್ಲ ನೂತನರನ್ನು ಹೊಗಳುವ ಮೂವತ್ತೆಂಟನೆಯ
ಸಂಧಿಯಲ್ಲಿ 256 ಪದ್ಯಗಳಿದ್ದು ಈ ಗ್ರಂಥದಲ್ಲಿಯೇ ಬಹು ದೊಡ್ಡ ಸಂಧಿ. ಇಲ್ಲಿ ನಾವು
ಗಮನಿಸಬೇಕಾದ ಮುಖ್ಯ ಅಂಶ- ಪ್ರಮಥಗಣಗಳಿಗಿಂತ ಮೊದಲ ಸ್ಥಾನ ಬಸವಣ್ಣನವರಿಗೆ ನೀಡಿದ್ದು ನಂತರದ ಸ್ಥಾನವನ್ನು ಪ್ರಮಥ
ಗಣಗಳಿಗೆ ನೀಡಿದ್ದಾನೆ.
ಶಿವತತ್ತ್ವ ಚಿಂತಾಮಣಿಯಲ್ಲಿರುವ ಬಸವರಾಜಚಾರಿತ್ರದ
ಆರಂಭ ಭಾಗ ಭೀಮ ಕವಿಯ ಬಸವಪುರಾಣವನ್ನೆ ಹೋಲುತ್ತದೆ. ಹದಿನಾಲ್ಕು ಭುವನಮಂ ತಿರುಗುತಿಹ ನಾರದನು
ಒಂದು ಸಲ ಶಿವನ ಒಡ್ಡೋಲಗವನ್ನು ಪ್ರವೇಶಿಸಿ, ಭೂಲೋಕದಲ್ಲಿ ಶಿವ ಧರ್ಮವು ನಾಶಹೊಂದುತ್ತಿದೆಯೆಂದು ನಿವೇದಿಸಿಕೊಳ್ಳುತ್ತಾನೆ. ಆಗ ಶಿವನು
ನಂದೀಶನನು ನೋಡಿ “ಪಾಲಿಸೈ ಧರ್ಮಮಂ ಧರಯೊಳವತರಿಸು” ಎಂದು ಆಜ್ಞಾಪಿಸುತ್ತಾನೆ. ನಂದೀಶನಿಗೆ
ಶಿವನಿಂದ ಅಗಲುವ ಇಷ್ಟವಿಲ್ಲದಿದ್ದರೂ ಅವನ ಆಜ್ಞೆಯನ್ನು ಮೀರಲಾರದೆ ಧರೆಗೆ ಬರುತ್ತಾನೆ. ಅವನ
ಚರಲಿಂಗರೂಪಿನಿಂದ ಗಣಗಳೂ, ತಾನು
ಅಧಿಕಜಂಗಮನಾಗಿಯೂ ಬರುವರೆಂಬ ಭರವಸೆಯನ್ನು ಪಡೆದು, ಆ ಸಮಯದಲ್ಲಿ ಶಿವನು ನಂದೀಶ್ವರನ ಪೂರ್ವಜನ್ಮ ವೃತ್ತಾಂತವನ್ನು ವಿವರಿಸಬೇಕಾಗುತ್ತದೆ.
ಈ ರೀತಿ ನಡೆಯುವುದು ಇದೇ ಮೊದಲಲ್ಲ, ಹಿಂದೆ ಅನೇಕ ಬಾರಿ ನಡೆದಿದೆ ಎಂಬುದನು ತೋರಿಸಲು ಹರಿಹರನು ಹೇಳುವಂತೆ,
ವೃಷಭಮುಖನೆಂಬ ಗಣೇಶನು ಅನೃತವನ್ನಾಡಿದುದರಿಂದ ಶಿವನಿಂದ ಶಪಿಸಲ್ಪಟ್ಟು
ಧರೆಗಿಳಿದು ಬಸವಣ್ಣನಾಗಿ ಹುಟ್ಟುತ್ತಾನೆ.
ಶಿವನಪ್ಪಣೆಯಂತೆ ನಂದೀಶ್ವರನು ಭೂಮಿಗಿಳಿದು ಬರಬೇಕಾಗುತ್ತದೆ. ಬಾಗೆವಾಡಿಯ
ಭೂಸುರನಾದ ಮಂಡಗೆಯ ಮಾದಿರಾಜ ಮಾದಲಾಂಬೆಯರಿಗೆ ಮುಂದೆ ಬಸವಣ್ಣನಾಗಲಿರುವ ಶಿಶವು ಬೆಳೆಯುತ್ತಲಿರುತ್ತದೆ. ‘ಶಿಶು ಕಂದೆರೆಯದಿರಲು’ ಗಿರಿಜಾತೆ ಸಹಿತ ಚಂದ್ರಶೇಖರಂ
ಬಂದು “ಎಸೆವ ಶಿವಲಿಂಗವಂ ಗಳದಲವಧರಿಸಿ ಪಂಚಾಕ್ಷರಿಯ ವರಮಂತ್ರಂ ಲಸಿತ ಕರ್ಣದೊಳು ಪೂರೈಸಿ”
ಹೋಗುತ್ತಾನೆ. ಭೀಮಕವಿ ಹೇಳುವಂತೆ ಬಸವ ಶಿಶುವಿಗೆ
ಕಪ್ಪಡಿ ಸಂಗಮೇಶ್ವರರು ಲಿಂಗಧಾರಣೆ ಮಾಡಿದ್ದು. ಸಿಂಗಿರಾಜನ ‘ ಬಸವರಾಜ ಚಾರಿತ್ರ’ ದಲ್ಲಿ ಲಿಂಗಧಾರಣೆ
ಮಾಡಿದವರು ಕಪ್ಪಡಿಯ ಜಾತವೇದಯ್ಯಗಳೆಂದು ಹೇಳಿದೆ. ಹರಿಹರನ ಪ್ರಕಾರ ಬಸವ ಶಿಶುವು ಹುಟ್ಟಿದ ಕೂಡಲೆ
ಅದಕ್ಕೆ ಲಿಂಗಧಾರಣೆ ಮಾಡಲಿಲ್ಲ. ಬಸವಣ್ಣನಿಗೆ ಉಪನಯನವಾದ ಕೆಲವು ದಿನಗಳ ಮೇಲೆ ಆತನ ತಾಯಿತಂದೆಗಳು
ಶಿವೈಕ್ಯರಾದರು. ಅನಂತರ ಶಿವಭಕ್ತಿ ಮುತ್ತಂತಿರ್ದ ಮುತ್ತಬ್ಬೆಯೇ ಆತನ ತಾಯಿ ತಂದೆ ಇಬ್ಬರೂ
ಆದರೆಂದು ಹೇಳುತ್ತಾನೆ.
ಬಸವಶಿಶುವಿನ
ಬಾಲಲೀಲೆಯ ಸುರುಚಿರ ವರ್ಣನೆಯ ತರುವಾಯ ಅದರ ವಿದ್ಯಾಭ್ಯಾಸದ ವಿಷಯ ಬರುತ್ತದೆ. ಮುಂದೆ ಬಸವನಿಗೆ
ಆಗ ಉಪನಯನದ ವಯಸ್ಸು ಉಪನಯನದ ಎಲ್ಲ ಸಿದ್ಧತೆಗಳೂ ನಡೆದಿರುತ್ತವೆ. ಆ ಸಂದರ್ಭದಲ್ಲಿ ಬಸವ ಬಾಲಕ
ನಿತ್ಯತೃಪ್ತಂಗೆ ಆರೋಗಣೆಯ
ಹಂಗೇಕೆ
ಸತ್ಯ ಸನ್ನಿಹಿತಂಗೆ ತಪದ
ಬಳಲಿಕೆಯೇಕೆ
ಮತ್ತೆ ಕೇಳಮೃತಮಂಸೇವಿಸುವ
ದೇಹಿಗಂ ವ್ಯಾಧಿ ಪೀಡಿಸಲರಿವವೆ
ಉತ್ತಮ ಶಿವಾಚಾರಸಂಪನ್ನನೆನಿಪ
ಗುರು
ವಿತ್ತ ಸಂಗಯ್ಯನುಪದೇಶಮಂ
ಬಾಲ್ಯದಲ್ಲಿ
ಯುಕ್ತವಲ್ಲೆನಗೆ
ಉಪನಯನವೆಂದೆಂಬವನ ಚರಣಾಂಬುಜಕ್ಕೆ ಶರಣು (ಸಂ.30, ಪ.46)
ಉಪನಯನ ಕಾರ್ಯ ಅಷ್ಟಕ್ಕೇ
ನಿಂತುಹೋಯಿತು. ಉಪನಯನವನ್ನು ತಿರಸ್ಕರಿಸಿದ ಬಸವಣ್ಣ ಶಿವತತ್ತ್ವ
ಚಿಂತಾಮಣಿಯಲ್ಲಿ ಹೇಳಿರುವಂತೆ, ತಂದೆ ತಾಯಿಗಳನ್ನಗಲಿ ಮನೆಬಿಟ್ಟು ಹೊರಡುವುದಿಲ್ಲ. ಆತನಿಗೆ ಯಾವಾಗಲೂ,
“
ದೇವದೇವನ ಪೂಜೆಯೇ ಬಾಲ ಕೇಳಿಗಳು
ಸಾವಧಾನಂ ಸದಾಚಾರಲಿಂಗದ
ಸೇವೆ” (ಸಂ.30,
ಪ.50)
ಹೀಗಿರಲು,
ಒಂದು ಅನಿರೀಕ್ಷಿತವಾದ ಘಟನೆ ನಡೆದು ಬಾಲಬಸವಣ್ಣನು ಬಾಗೆವಾಡಿಯನ್ನು
ಬಿಟ್ಟು ಹೊರಡಬೇಕಾಯಿತು. ಬಸವಣ್ಣನೂ ಆತನ ಓರಗೆಯ ಹುಡುಗರೂ ಒಂದು ಬಾವಿಯ ಬಳಿಯ ಆಟವಾಡುತ್ತಿದ್ದಾಗ
ಯಾವನೋ ಒಬ್ಬ ಬಾಲಕ ಬ್ರಾಹ್ಮಣರ ಹುಡುಗನೊಬ್ಬನನ್ನು ಬಾವಿಗೆ ನೂಕಿ ಕೊಂದವನು ಎಂದು ಭಾವಿಸಿದರು.
ಬಂಧುಬಳಗದೊಂದಿಗೆ ಗೋಳಿಡುತ್ತ ಮಾದರಸನ ಮನೆಗೆ ಬಂದರು. ಬಸವನನ್ನು ಹಿಡಿದು ಅದೇನು
ಮಾಡುತ್ತಿದ್ದರೋ ಏನೋ ಅವನು ಇವರ ಕೈಗೆ ಸಿಗಬಾರದೆಂದು ಕಪ್ಪಡಿ ಸಂಗಮದ ಕಡೆಗೆ ಧಾವಿಸಿದ.
ಕೃಷ್ಟವೇಣೀ ನದಿ ತುಂಬಿ ಹರಿಯುತ್ತಿತ್ತು ಆದರೆ ಇವನು ಬಂದ ಕೂಡಲೇ ತೆರಹುಗೊಟ್ಟು ಮುಂದುವರಿಯಿತು.
ಬೆನ್ನುಹತ್ತಿ ಬರುತ್ತಿದ್ದ ಹಾರವಯ್ಯಗಳ ಹಿಂಡು ನೆರೆ ಇಳಿಯುವ ವರೆಗೆ ಕಾದಿದ್ದು ನದಿಯನ್ನುದಾಟಿ
ಸಂಗಮೇಶ್ವರ ದೇವಾಲಯಕ್ಕೆ ಬಂದರು. ಹುಡುಗನನ್ನು ಬಾವಿಗೆ ನೂಕಿ ಕೊಂದವರು ಯಾರು ಎಂದು ಅವರು ಕೇಳಲು, ಬಸವಣ್ಣನು“
ಶಿವನೇ ಹೇಳುವನು’ ಎನ್ನುವನು. “ಒದೆದು ಕೆಡಹಿದ ಜನಾರ್ದನನ ಮಗ ಕೃಷ್ಣ” ಎಂದು
ಅಶರೀರವಾಣಿಯಾಗುತ್ತದೆ. ಬಂದ ವಿಪ್ರರು ಮೆತ್ತಗಾಗಿ ಮನೆಗೆ ಮರಳಿದರು. ಮಾದರಸ ಮಾದಲಾಂಬಿಕೆಯರು
ಬಸವಣ್ಣನನ್ನು ನಾಗಲಾಂಬಿಕೆಯ ವಶಕ್ಕೆ ಒಪ್ಪಿಸಿ ಬಾಗೆವಾಡಿಗೆ ಹಿಂತಿರುಗುತ್ತಾರೆ. ಬ್ರಾಹ್ಮಣ ಬಾಲಕರು ಬಾವಿಗೆ
ಬಿದ್ದು ಮಡಿದುದೇ ನೆಪವಾಗಿ ಬಸವಣ್ಣನು ಬಾಗೆವಾಡಿಯನ್ನು ಬಿಡಬೇಕಾಯಿತೆಂಬ ಸಂಗತಿ ಹರಿಹರನ
‘ಬಸವರಾಜದೇವರ ರಗಳೆ’ಯಲ್ಲಿಲ್ಲ; ಬಸವಪುರಾಣಗಳಲ್ಲಿಯೂ ಇಲ್ಲ. ಲಕ್ಕಣ್ಣ ದಂಡೇಶನಲ್ಲಿ ಮಾತ್ರ ಕಂಡು ಬರುತ್ತದೆ.
ಆತ ಅಲ್ಲಿಂದ ಕಲ್ಯಾಣಕ್ಕೆ ಹೋದುದು ಒಂದು ದೈವೀ
ಘಟನೆಯು. ಬಾಲಬಸವಣ್ಣನು ಚರಲಿಂಗ (ಜಂಗಮ) ಸೇವಾ ನಿಷ್ಠನಾಗಿ ಸಂಗಮ ಕ್ಷೇತ್ರದಲ್ಲಿದ್ದಾಗ ನಡೆದ
ಮತ್ತೊಂದು ದೈವೀಘಟನೆ. ಆತನು ಅಲ್ಲಿಂದ ಕಲ್ಯಾಣಕ್ಕೆ
ಹೋಗುವಂತೆ ಮಾಡಿದ್ದು, ಕಪಿಲ ಷಷ್ಠಿ ಎಂಬ ಮುಹೂರ್ತ. ಬ್ರಾಹ್ಮಣರು ಸಂಗಮೇಶ್ವರ ಲಿಂಗವನ್ನು “ಹಲವು ಪರುಟವದಿ ಮಹಾಪೂಜೆ”
ಮಾಡಿದ್ದರು. ಬಹುದೊಡ್ಡ ಜನಜಾತ್ರೆ. ಬಸವಣ್ಣ, ತಾನೂ ಹೂ ಪತ್ರೆಗಳನ್ನು ತಂದು ಮೊದಲು ಮಾಡಿದ್ದ ಪೂಜೆಯನ್ನು ಇಳುಹಿ ತನ್ನದೇ ಆದ ರೀತಿಯಲ್ಲಿ
ಕೂಡಲ ಸಂಗಮನನ್ನು ಪೂಜಿಸಿದ. ಬ್ರಾಹ್ಮಣರು ಬಂದು ನೋಡಿ, ‘ನಾವು ವಿದ್ಯುಕ್ತವಾಗಿ ಮಾಡಿದ ಪೂಜೆಯನ್ನು ಅಳಿಯ ಬಹುದೇ ಈ ದುಷ್ಟ’
ಎಂದು ಆಕ್ಷೇಪಿಸಿದರು. ಆತನನ್ನು ಶೈವರ ಸಭೆಯ ಮುಂದೆ ನಿಲ್ಲಿಸಿದರು. ಆಗ ಮತ್ತೆ ಮೊದಲಿನಂತೆ ಕೂಡಲ
ಸಂಗಮನೇ ಸಾಕ್ಷಿ ನುಡಿಯ ಬೇಕಾಯಿತು.` ಬಸವನ ಪೂಜೆಯೇ ನನಗೆ ಇಷ್ಟ’ ಎಂದು ಅಶರೀರವಾಣಿಯಾಯಿತು. ಅದನ್ನು ಕೇಳಿದ ಸಭೆಯು ಆಶ್ಚರ್ಯದಿಂದ
ಈತನು ಸಾಕ್ಷಾತ್ ಪುರಹರನೇ ಎಂದು ಉದ್ಗಾರ ಮಾಡಿತು.ಈ ಸಂಗತಿಗಳು ಬೇರೆಲ್ಲಿಯೂ ಕಂಡು ಬರೆದೆ ನೂತನವಾದುದಾಗಿದೆ. ಈ ಕೃತಿಯಲ್ಲಿ ಬಸವಣ್ಣನವರ ನೂರಾರು ಪವಾಡಗಳ ವರ್ಣನೆ ಬಂದಿದೆ.
ಬಸವಣ್ಣನ ಸರ್ವಜೀವ ದಯಾಪರತ್ವ, ಶಿವಭಕ್ತ ಪ್ರೇಮ, ಸತ್ಯ ನಿಷ್ಠೆ,
ಸರ್ವಸಮಾನತಭಾವ ಮುಂತಾದ ಆತನ ಗುಣಗಾನ ಮಾಡಿದ್ದಾನೆ.
ಈ ಸಮಾಚಾರ ಕಲ್ಯಾಣದಲ್ಲಿ, ಬಿಜ್ಜಳನ ಕೆಳಗೆ ಮಂತ್ರಿಯಾಗಿದ್ದ ಬಲದೇವ ದಂಡೇಶನಿಗೆ ಗೊತ್ತಾಯಿತು.
ಆತನಿಗೂ ತನಗೂ ಪೂರ್ವ ಸಂಬಂಧವುಂಟೆಂಬುದೂ ತಿಳಿಯಿತು. ಕೂಡಲೇ ಓಲೆಯನ್ನಟ್ಟಿ ಕಲ್ಯಾಣಕ್ಕೆ
ಬರಮಾಡಿಕೊಂಡು ಸೊಡ್ಡಳ ಬಾಚಿರಾಜನ ಮನೆಯಲ್ಲಿ ಇಳಿಸಿದ. ಒಂದು ಮುಹೂರ್ತದಲ್ಲಿ ತನ್ನಮಗಳು
ಗಂಗಾಬಿಕೆಯನ್ನು ಕೊಟ್ಟು ಬಹು ವೈಭವದಿಂದ ಮದುವೆ ಮಾಡಿದ . ಮದುವೆಯ ಮಂಟಪ ಸರ್ವಶರಣರ ಸಮ್ಮೇಳನದ
ಮಹಾಮಂಟಪದಂತೆ ವಿರಾಜಿಸುತ್ತಿದ್ದಿತು. ಗಂಗಾಬಿಕೆ ಬಸವಣ್ಣನ ‘ಚಿತ್ತದನುಗುಣದ
ಸತಿ’ಯಾದಳು.ಬಸವಣ್ಣನವರು ಅಕ್ಕನಾಗಲಾಂಬಿಕೆಯೊಂದಿಗೆ ಮಾವನ ಮನೆಯಲ್ಲಿಯೇ ಇದ್ದುಕೊಂಡು ಸೊಡ್ಡಳ
ಬಾಚರಸರ ಕರಣ ಶಾಲೆಗೆ ಹೋಗುತ್ತ ಇದ್ದರು. ಒಂದು ಸಲ ಬಾಚರಸರು ಅವರನ್ನು ಕರೆಸಿಕೊಂಡು
‘ಬರೆವುದೆಮ್ಮಯ ಹೊರೆಯೊಳ್’ ಎಂದು ಹೇಳುವರು. ಆ ಕಾಲದಲ್ಲಿಯೂ ಮಂತ್ರಿಯ ಅಥವಾ ದಂಡನಾಯಕರ
ಕಾರ್ಯಾಲಯದಲ್ಲಿ ಕೆಲಸಮಾಡುವವನಿಗೆ ಹಲವು ತೆರನಾದ ಯೋಗ್ಯತೆಗಳಿರಬೇಕಾಗಿದ್ದಿತು. ಲಕ್ಕಣ್ಣ
ದಂಡೇಶನು ಬಸವಣ್ಣನವರ ಅರ್ಹತೆಗಳನ್ನು ಕುರಿತು, “ ಗಣಿತಜ್ಞರಧಿದೇವನು”, “ಸಲೆ
ನಿಪುಣನೆನಿಸಿ ಬರೆವ”, “ ಓಲೆ ವಾಚಕಗಳಿಂ ಹಲವು ಲಿಪಿಗಳರಿವ” “ಜಾಣುಮೆಯ ಸಂಜ್ಞೆಯಂ” ತಿಳಿವವನು
ಎಂದು ಹೇಳಿದ್ದಾನೆ.
ಬಸವಣ್ಣನವರು ಕಲ್ಯಾಣ ಪಟ್ಟಣಕ್ಕೆ ಬಂದು ನೆಲಸಿದ ಕೂಡಲೇ ಆ ಪಟ್ಟಣದ
ಐಶ್ವರ್ಯ ಬೆಳೆಯಲಾರಂಭಿಸಿತ್ತು. ಸತ್ಯ ಸುಖ, ಸೊಬಗು ಸೌಂದರ್ಯಗಳಿಂದ
ಕಂಗೊಳಿಸುತ್ತಿದ್ದಿತು. ಹೀಗಿರುವಲ್ಲಿ, ಒಂದು ದಿನ ಬಿಜ್ಜಳನ ಒಡ್ಡೋಲಗ ನಡೆದಿತ್ತು. ಪರಿಜನರು, ಮಂತ್ರಿಗಳು ಮಾಂಡಲಿಕರು ಸಾಮಂತರು, ಪಸಾಯತರು ಬಾಹತ್ತರ ನಿಯೋಗದವರು, ರಣಧಿರರು ದಳವಾಯಿಗಳು ನೆರೆದಿದ್ದರು. ಮುತ್ಸದ್ದಿಗಳು,
‘ಕವಿ ಗಮಕಿವಾದಿ ವಾಗ್ಮಿಕ ಮಗತೇಯರು’ ಅರ್ಥಮಂತ್ರಿಗಳು,
ಭಂಡಾರಿಗಳು, ಕೈವಾರಿಗಳು ಜೋಯಿಸರು, ಯೋಗಿಗಳು,
ಗಾಯಕರು ಮಹಾ ಸಾಮ್ರಾಟನ ಆಸ್ಥಾನದಲ್ಲಿ ಯಾರಿರಬೇಕೋ ಅವರೆಲ್ಲ
ಉಪಸ್ಥಿತಿರಾಗಿದ್ದರು. ಆ ಸಮಯದಲ್ಲಿ ಒಂದು ಲಿಖಿತವು ಅಂತರಿಕ್ಷ ಮಾರ್ಗದಿಂದ ಬಂದು ಬಿದ್ದಿತು.
ಅದು ಅಲ್ಲಿಗೆ ಹೇಗೆ ಬಂದು ಬಿದ್ದಿತೆಂದು ಸಭಿಕರೆಲ್ಲರಿಗೂ ಆಶ್ಚರ್ಯ. ಬಿಜ್ಜಳನು ಆ ಓಲೆಯನ್ನು ರಾಯಸದ ಕಡು ನಿಪುಣರಿಗೆ ಕೊಡುತ್ತಾನೆ. ಅವರೆಲ್ಲರೂ “
ಅಕ್ಷರಂ ಸಂಜ್ಞೆವಶವಲ್ಲ” ಎಂದು ತಮ್ಮ ಅಶಕ್ತತೆಯನ್ನು ವ್ಯಕ್ತ ಪಡಿಸಿದರು. ಅದು “ ನರರ ಪರುಟವದ
ಭಾಷಾಂಕಿತ ಬರಹವಲ್ಲ. ಕರ ಹೊಸತು” ಎಂಬುದು ರಾಜನಿಗೂ ಅರಿಕೆಯಾಯ್ತು
“
ಅರಾದೊಡೀ ಲಿಖಿತ ವಕ್ಕಣೆಯನೋದಿದಗೆ
ಮೀರದಾಂ ಕೊಡುವೆನೀ ಮುದ್ರೆಯುಂಗುರವ ಭೂ
ನಾರಿ ಮೊದಲಾದ ಸಕಲೈಶ್ವರ್ಯವಾತನದು ಚನ್ನಪ್ಪ ಭಾಷಾಯರಿವ
ಧೀರರೀಗಳೆ ನೋಡಿ”
-ಎಂದು ಡಂಗುರ ಸಾರಿಸಿದ, ಬಹು ಮಂತ್ರ ಕೋವಿದರು. ಬಹುವಿದ್ಯಾ ಪಂಡಿತರು, ಬಹು ಕಳಾ ವಿದರು, ಬಹು ಶಾಸ್ತ್ರದೊಳ್ ಪ್ರಾಜ್ಞರು’ ಯಾರಾರೋ ಎಂತೆಂವರೋ
ಬಂದರು;
ಲಿಪಿ ನೋಡಿದರು; ಹೋದರು. ಬಿಜ್ಜಳನ ಪರಿವಾರದಲ್ಲಿದ್ದವನೊಬ್ಬನು, ಬಲದೇವನ ಅಳಿಯನಾದ ಬಸವನೇ ಆ ಲಿಪಿಯನ್ನೋದಲು ಸಮರ್ಥ ಎಂದು ದೊರೆಯಲ್ಲಿ
ಅರಿಕೆ ಮಾಡಿಕೊಂಡರು. ಬಸವಣ್ಣವನರು ಬಂದು ಆ ಲಿಖಿತವನ್ನು ನೋಡಿ,
‘ಸ್ವಸ್ತಿ, ಬಿಜ್ಜಳ ನೃಪಂಗಟ್ಟಿದುತ್ತಮ ಕಾರ್ಯ
ವಸ್ತರ ದೊಳರುವತ್ತು ಕೋಟಿಯ ಧನಂ
ಯುಕ್ತದಿಂದಿಪ್ಪುದೀ ಸಿಂಹಾಸನದಕೆಳಗೆ ನಿಶ್ಚಯಂ
ತಪ್ಪದು’
ಎಂದು ಅರಸನಿಗೆ ಓದಿಹೇಳಿದರು.
ಬಿಜ್ಜಳನಿಗಾದ ಆನಂದ ವರ್ಣಿಸಲಸದಳವಾಗಿತ್ತು. “
ಬಸವನಂ ಬಿಗಿದಪ್ಪಿ ಸಹೃದಯ ನೀ ಪೇಳ್ದ ಧನವ ತೋರಿಸುವುದೆ”ನ್ನಲು,
ನಿರ್ದಿಷ್ಟ ಸ್ಥಳದಲ್ಲಿ ಆಗೆಸಿ ಧನವನ್ನು ತೆಗೆಸಿ ತೋರಿಸಿದುದಾಯ್ತು.
ಬಿಜ್ಜಳ ಮೊದಲಾಗಿ ಸರ್ವರಿಗೂ ಬಸವಣ್ಣನವರ ವಿಷಯದಲ್ಲಿ ಭಕ್ತಿ ಗೌರವಗಳು ಮೂಡಿದವು.
ಬಸವಣ್ಣನವರು
ರಾಜ್ಯದ ಹಿತೈಷಿಗಳಲ್ಲಿ ಮೊದಲಿಗರೆಂದು “ ಭೂತಳಾಧಿಪಗತಿ ಹಿತನು’ ಎಂದು ನಗರ ಕೊಂಡಾಡಿತ್ತು.
ಬಿಜ್ಜಳನು ‘ಬಸವಗಂ ಮುದ್ರೆಯುಂಗುರವಿತ್ತು ‘ ಮೆರೆಸಬೇಕೆಂದು ಯೋಚಿಸುತ್ತಿದ್ದಂತೆಯೆ ಕಲ್ಯಾಣ
ಪಟ್ಟಣದ ಸಡಗರ ಬಣ್ಣಿಸತೀರದು: ಅರಮನೆಯ ಹೆಬ್ಬಾಗಿಲು, ಅಂಗಡಿಯ ಬಾಗಿಲು, ಗಣಿಕಾಭವನ,
ದೊರೆಗಳ ಸದನ, ಶಿವಧಾರ್ಮಿಕರ ಮನೆ, ಎಲ್ಲೆಲ್ಲಿಯೂ
ಗುಡಿ ತೋರಣ,
ಚಿತ್ರಗೆಲಸ, ಕಳಸಕನ್ನಡಿಯ ವಿಳಸ; ಪನ್ನೀರ ಚಳೆಯ,
ಪರಿಮಳದ ಕುಸುಮ,
ಮುತ್ತಿನ ರಂಗವಾಲಿ, ಕಸ್ತೂರಿಯ ಪರಿವಿಡಿಯ ಕುಂಕುಮದ ಕಾರಣೆ, ಬಾಲೆಯರ ನೃತ್ಯ ಸಂಗೀತದಾಳಾಪ, ತಾಳ,
ಮದ್ದಳೆ, ಕಹಳೆ,
ಮಂಗಳ ವಾದ್ಯಗಳು; ಹಿಂದೆಂದೂ ಕಲ್ಯಾಣ ಪಟ್ಟಣದಲ್ಲಿ ನಡೆದಿರದ ಸಂಭ್ರಮದ ಸಮಾರಂಭ ಏರ್ಪಟ್ಟಿದ್ದಿತು. ಬಿಜ್ಜಳನು
ಜೋಯಿಸರಿಂದ ಶುಭಮುಹೂರ್ತವನ್ನು ತಿಳಿದು ಸಚಿವರನ್ನು ಕರೆಸಿ ಮಂಗಳ ದ್ರವ್ಯಗಳನ್ನು ತರಿಸಿ ಬಸವಣ್ಣನವರನ್ನು
ಮರ್ಯಾದೆಯಿಂದ ಬರಮಾಡಿಕೊಂಡನು. ಉಚಿತಾಸನದಲ್ಲಿ ಕುಳ್ಳಿರಿಸಿ ಅಭಿಷೇಕಮಾಡಿ ಮುದ್ರೆಯುಂಗುರವನ್ನು
ಅವರ ಬೆರಳಿಗಿಟ್ಟನು. ಸಾಲಂಕೃತವಾದ ಆನೆಯನ್ನೆರಿಸಿ ಕಲ್ಯಾಣಪಟ್ಟಣದಲ್ಲೆಲ್ಲ ಮೆರೆಸಿದನು. ಅಂದು ಕಲ್ಯಾಣ ಪಟ್ಟಣವೆ ಬಸವಣ್ಣನವರ ದರ್ಶನ ಪಡೆದು
ಧನ್ಯವಾಯಿತು.
ಬಸವಣ್ಣನವರು ತಮ್ಮ ವಾಸಕ್ಕಂದು ಅಣಿಗೊಳಿಸಪಟ್ಟಿದ್ದ
ಅರಮನೆಗೆ ಬಿಜಯಗೆಯ್ದರು. ಕೆಲವುದಿನಗಳ ಮೇಲೆ
ಬಿಜ್ಜಳನಿಗೆ ‘ಮಂತ್ರಿಗಂ ತಮ್ಮೊಳಗೆ ಹೊರೆಹುಟ್ಟಿದಂತೆ ಮಾಳ್ವ ತೆರದಿ,
ತನ್ನನುಜ ಕನ್ನುವಿನಿಂದ ಕಿರಿಯಳಾದ, ತರುಣಿ ನೀಲಾಂಬಿಕೆಯನ್ನಿತ್ತು ಅತಿಶಯವಾದ ವೈಭವದಿಂದ ಮದುವೆ
ಮಾಡಿದನು. ಬಸವಣ್ಣನವರ ಚರಲಿಂಗ ಸೇವೆ ಅತ್ಯಧಿಕ
ಪ್ರಮಾಣದಲ್ಲಿ ಪ್ರತಿದಿನವೂ ನಡೆಯಲಾರಂಭಿಸಿತು. ಅವರ ಮನೆಗೆ ಬರುತ್ತಿದ್ದ ಭಕ್ತರ ಸಂಖ್ಯೆ ಒಂದು
ಲಕ್ಷದ ಮೇಲೆ ತೊಂಬತ್ತಾರು ಸಾವಿರ!
ಕೆಲಕಾಲದ ಮೇಲೆ ಬಸವಣ್ಣನವರ ಅಕ್ಕ ನಾಗಾಂಬಿಕೆಯ ಗರ್ಭದಲ್ಲಿ ಒಂದು ಗಂಡು
ಮಗು ಜನಿಸಿತು. ಆಕೆಯು ಶಿವಪ್ರಸಾದವನ್ನು
ಸೇವಿಸಿದುದರಿಂದ ಗರ್ಭಿಣಿಯಾಗಿ ಒಂದು
ಗಂಡು ಮಗುವನ್ನು ಹೆತ್ತಳು. ಆ ಮಗುವೇ ಬೆಳೆದು
ದೊಡ್ಡದಾಗಿ ಷಟ್‍ಸ್ಥಲಚಕ್ರವರ್ತಿ ಚನ್ನಬಸವಣ್ಣ ಎಂದು ಪ್ರಸಿದ್ಧಿಗೆ ಬಂದುದು. ಬಸವದಂಡೇಶನಿಗೂ ನೀಲಾಂಬಿಕೆಯಲ್ಲಿ ಒಂದು ಗಂಡು
ಮಗುವಾಯಿತು. ಆ ಮಗುವಿಗೆ ಸಂಗಯ್ಯನೆಂದು
ನಾಮಕರಣವಾಯಿತು.
ಅನಂತರ ಬಸವಣ್ಣನವರು ತೋರಿದ
ನೂರಾರು ಪವಾಡಗಳ ವರ್ಣನೆ. ಅವುಗಳನ್ನು ನಿರೂಪಿಸುವುದರ ಮೂಲಕ ಕವಿಯು ಬಸವಣ್ಣನವರ ಸರ್ವಜೀವ
ದಯಾಪಾರಿತ್ವ ಶಿವಭಕ್ತ ಪ್ರೇಮ ಸತ್ಯನಿಷ್ಠೆ ಸರ್ವಸಮಾನತಾಭಾವ –ಮುಂತಾದುವನ್ನು ತಿಳಿಯಪಡಿಸಿದ್ದಾನೆ.
ಸುರರ ಲೋಕದ ಮರುಗ ಕರಿಯ
ಮಲ್ಲಿಗೆ ಕಮಲ
ಸುರುಚಿರದ ಪಚ್ಚೆಕರ್ಪುರ
ಹೇಮದಕ್ಷತೆಯು
ಉರಗನ ಫಣಾಮಣಿಯು ಗಜಮಸ್ತಕದ
ಮುತ್ತು ಜಲಚರಂ ಮುಟ್ಟದುದಕ
ವರಭಸಿತ ಕಾಮದಹನದ ರನ್ನ
ದಿಂಡೆಗಳು
ಕರವೀರವೇಕಮುಖ
ರುದ್ರಾಕ್ಷಿಯಿಂತಿವಂ
ತ್ವರಿತವೆಮಗೀವುದೆನಲಿತ್ತ
ಬಸವೇಶ್ವರನ ಚರಣಾಂಬುಜಕ್ಕೆ ಶರಣು ( ಸ.38. ಪ.3)
ಇನ್ನೊಂದು ಪಂಗಡದ ಪವಾಡಗಳಿವೆ. ಅವುಗಳಲ್ಲಿ ಬಿಜ್ಜಳನು,
ಬಸವಣ್ಣನವರ ಮಾಹಾತ್ಮ್ಯವನ್ನು ಬೆಳಗಲೆಂದೇ ಅಂತಹ ಪ್ರಸಂಗಗಳನ್ನು ತಂದೊಡ್ಡುತ್ತಿದ್ದನೇನೋ ಎನ್ನಿಸುವಷ್ಟು ಪ್ರಧಾನ
ಪಾತ್ರವಹಿಸುತ್ತಾನೆ. ಮೀಮಾಂಸಕ ನೆಂಬ
ಪರವಾದಿಯನ್ನು ಸೋಲಿಸಿದ ಸಂಗತಿಗಾಗಿ ಇಡೀ ಒಂದು ಸಂಧಿಯೇ ಮೀಸಲಾಗಿದೆ. ಮುಖ್ಯವಾಗಿ ಶಿವಪಾರಮ್ಯವನ್ನು
ಘೋಷಿಸಲೆಂದೆ ಈ ಕೃತಿಯನ್ನು ರಚಿಸಿರುವುದರಿಂದ ಆ ಪ್ರಸಂಗಕ್ಕೆ ಅಷ್ಟು ಪ್ರಾಧಾನ್ಯ ನೀಡಿದ್ದಾನೆ
ಎಂದೆನಿಸುತ್ತದೆ. ಬಸವ ಪುರಾಣ. ಬಸವರಾಜ ದೇವರ ರಗಳೆಗಳಲ್ಲಿ ಈ ಪವಾಡದ ನಿರೂಪಣೆಯಿಲ್ಲ. ಇಲ್ಲಿಗೆ
ಬಸವಣ್ಣನವರ ಚರಿತ್ರೆ ಮುಗಿದಂತೆಯೆ. ಭೀಮಕವಿಯ
ಬಸವ ಪುರಾಣದಲ್ಲಿ ಬರುವ ಹರಳಯ್ಯ ಮಧುವಯ್ಯಗಳ ವೃತ್ತಾಂತವಿಲ್ಲ. ಹರಿಹರನ ಕೃತಿಯಲ್ಲಿಯೂ ಈ ಪ್ರಸ್ತಾಪವಿಲ್ಲ. ಬಸವಣ್ಣನವರ ಮದುವೆ, ಚನ್ನಬಸವಣ್ಣನವರ ಜನನ- ಮುಂತಾದ ವಿಷಯಗಳಲ್ಲಿ ಬಸವಪುರಾಣ,
ಬಸವರಾಜದೇವರ ರಗಳೆ, ಸಿಂಗಿರಾಜ ವಿರಚಿತ ಅಮಲಬಸವ ಚಾರಿತ್ರಕ್ಕೂ ಹೋಲಿಕೆಯುಂಟು, ಲಕ್ಕಣ್ಣನಿಗಿಂತ ಪೂರ್ವದಲ್ಲಿದ್ದ ಭೀಮಕವಿ ಹರಿಹರರ ಕೃತಿಗಳಿಗೂ ಈ ಭಾಗಕ್ಕೂ ಕೆಲವೆಡೆ
ವ್ಯತ್ಯಾಸಗಳಿವೆ.
ಬಸವಣ್ಣನವರ ಪವಾಡಗಳ ವರ್ಣನೆಯ ನಡುವೆಯೂ ಬರುವ ಕೆಳಕಂಡ,
ಶಂಬರಾರಿಯ ಶರವ ಮುರಿದು
ದೇಹೇಂದ್ರಿಯ ಕ
ದಂಬಕದ ಮಮತೆಯಂ ಜರಿದು ಲಿಂಗದ ನಿರಾ
ಲಂಬತನುವಾಗಿ ಬಸವನ ಮನೆಗೆ ಬರಲು
ಮುಳಿದೆದ್ದು ಜಂಗಮವೆಲ್ಲವು
ಉಂಬಬಾಯ್ ತಾನಾಗಿ ಉಂಡೆಲ್ಲರಂ
ತಣಿಪಿ
ತುಂಬುಂಡು ಪಲವು ಕದಳಿಗಳೆಲ್ಲ
ದಣಿದುದೆಂ
ದೆಂಬುದಂ ಮಾಡಿ ತೋರಿದ
ಮಹಾಪ್ರಭುವರನ ಚರಣಾಂಬುಜಕ್ಕೆ ಶರಣು(ಸಂ28,ಪ.3)
ಎಂಬ ಪದ್ಯದಲ್ಲಿ ಅಲ್ಲಮನು ಕಲ್ಯಾಣಕ್ಕೆ ಬಂದು ಬಸವಣ್ಣವರೊಂದಿಗೆ
ಅನುಭಾವ ಗೋಷ್ಠಿಯಲ್ಲಿದ್ದರೆಂಬುದನ್ನು ಸೂಚ್ಯವಾಗಿ ಸೂಚಿಸುತ್ತದೆ. ಶೂನ್ಯಸಂಪಾದನೆ ಮತ್ತು
ಪ್ರಭುಲಿಂಗಲೀಲೆಗಳ ಮೂಲ ಬೇರನ್ನು ಇಲ್ಲಿ ಹುಡುಕಬಹುದಾಗಿದೆ. ಲಕ್ಕಣ್ಣ ದಂಡೇಶನ ಈ ಕೃತಿಯಲ್ಲಿ ಹರಿಹರ,
ಭೀಮಕವಿಗಳಲ್ಲಿ ಇಲ್ಲದ ಕೆಲವು ಹೊಸ ಕಥಾನಕಗಳೂ ಕೆಲವು ಹೊಸ
ಪ್ರಸಂಗಗಳು ಕಂಡುಬರುತ್ತಿದ್ದು ಬಸವಣ್ಣನವರ
ವ್ಯಕ್ತಿತ್ವಕ್ಕೆ ಮೆರುಗು ನೀಡಿದೆ. ಬಸವಣ್ಣನವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡುವವರು ಈ
ಕೃತಿಯನ್ನು ಕಡೆಗಣಿಸುವಂತಿಲ್ಲದಷ್ಟು ಮಹತ್ತರತೆಯನ್ನು ಪಡೆದುಕೊಂಡಿದೆ.
ಬಸವರಾಜ
ವಿಜಯದಲ್ಲಿಯ ಬಸವಣ್ಣನ ಪಾತ್ರದೌನ್ನತ್ಯ
12 ನೆಯ ಶತಮಾನದ ಕನ್ನಡನಾಡಿನ
ವಿಚಾರ ಕ್ರಾಂತಿ ಆಂಧ್ರಸಾಹಿತ್ಯದ ಮೇಲೂ ವಿಶೇಷ ಪರಿಣಾಮಬೀರಿತು. ವೀರಶೈವ ಮತ
ಮತ್ತು ಮತಾಚಾರ್ಯರು, ಶಿವ ಹಾಗೂ ಶಿವಭಕ್ತರು ಅವರು ಬರೆದ
ಕಾವ್ಯಗಳಿಗೆ ವಸ್ತುವಾದರು. ಕರ್ನಾಟಕದಲ್ಲಿ ಬಸವೇಶ್ವರನು ಕ್ರಾಂತಿಯನ್ನೆಸಗಿದಂತೆ ಆಂಧ್ರದ
ನೆಲದಲ್ಲಿ ಪಂಡಿತಾರಾಧ್ಯನು ಕ್ರಾಂತಿಪುರುಷನೆನಿಸಿದನು. ಈ ಕಾರಣದಿಂದ ಪಂಡಿತಾರಾಧ್ಯ ಮತ್ತು
ಬಸವೇಶ್ವರರು ಮುಂದಿನ ಕವಿ ಪ್ರಪಂಚಕ್ಕೆ ಅತ್ಯಂತ ಪೂಜ್ಯರೆನಿಸಿದರು. ಅವರು ಎಸಗಿದ ಧಾರ್ಮಿಕ
ಕ್ರಾಂತಿಯ ಇತಿವೃತ್ತವನ್ನೆಲ್ಲ ಸಂಗ್ರಹಿಸಿ, ನೂತನ ಮಾರ್ಗದಲ್ಲಿ ಅವರ ಮೇಲೆ
ಪುರಾಣಗಳನ್ನು ರಚಿಸುವ ಕಾರ್ಯವನ್ನು ಪ್ರಥಮತ: ಪ್ರಾರಂಭಮಾಡಿ ಹೊಸ ಸಂಪ್ರದಾಯವೊಂದನ್ನು
ಹಾಕಿಕೊಟ್ಟವನೇ ಪಾಲ್ಕುರಿಕೆಯ ಸೋಮನಾಥ.
ಬಸವಣ್ಣನವರ ಬಗೆಗೆ ಹಿರಿಯರ ಬಾಯಿಂದ ಬಂದ ಅನೇಕ ವಿಷಯಗಳನ್ನು ಕಲೆಹಾಕಿ, ಸಿಕ್ಕಷ್ಟು ಅವರ
ವಚನ ಸಾಹಿತ್ಯವನ್ನು ಸಂಗ್ರಹಿಸಿ,
ಅವಕ್ಕೊಂದು ವ್ಯವಸ್ಥಿತರೂಪ ಕೊಡಲು ಪ್ರಯತ್ನಿಸಿದನು. ತಾನು ಸಂಗ್ರಹಿಸಿದ ಬಸವಣ್ಣನವರ ಕಥೆಯ ಜೊತೆಗೆ ಶಿವನ
ವಿಷಯದಲ್ಲಿ ಶ್ರದ್ಧಾಭಕ್ತಿ ವಿಶ್ವಾಸಗಳಿಂದ ಜೀವನ ನಡೆಸಿ ಅಘಟಿತಾ ಘಟನಾಪುರುಷರೆಂದು
ಪ್ರಸಿದ್ಧರಾಗಿದ್ದ 63 ಜನ ಪುರಾತನರು
ಮತ್ತು ನೂತನರಾದ ಅನೇಕ ಜನ ಶಿವಶರಣರ ಕಥೆಗಳನ್ನು
ಬಸವ ಪುರಾಣಮು ಪುರಾಣ ಕಾವ್ಯದಲ್ಲಿ ಕಟ್ಟಿಕೊಟ್ಟನು. ಬಸವಣ್ಣನವರ ಚರಿತ್ರೆಯೊಡನೆ ಅನೇಕ
ಶಿವಭಕ್ತರ ಕಥೆಗಳೂ ಅವರು ಸಲ್ಲಿಸಿದ ಲೋಕೋತ್ತರ ವೀರಶೈವ ಪುರಾಣಗಳ ಶೈಲಿಯ ವಿಷಯದಲ್ಲಿ ಈ ಪುರಾಣವೇ
ಮುಂದಿನವರಿಗೆಲ್ಲ ತೋರುಗಂಬವಾಯಿತು. ವೀರಶೈವ
ಪುರಾಣ ಸಂಪ್ರದಾಯ ಕನ್ನಡ ಭಾಷೆಯಲ್ಲಿಯೂ ನಿರ್ಮಾಣವಾಗುವುದಕ್ಕೆ ಕಾರಣಕರ್ತನಾಗಿದ್ದಾನೆ. ಸಂಸ್ಕೃತ,
ಕನ್ನಡ ತಮಿಳು ಭಾಷಾ ಕವಿಗಳಿಗೆ ಪಾಲ್ಕುರಿಕೆ ಸೋಮನಾಥರ ಈ ಮಾರ್ಗ
ರಾಜಮಾರ್ಗವಾಯಿತು. ಈ ಪುರಾಣ ಸಂಪ್ರದಾಯವನ್ನನುಸರಿಸಿಯೇ ಕನ್ನಡದಲ್ಲಿ ಮೊದಲಿಗೆ ಭೀಮಕವಿ (ಕ್ರಿ.ಶ. 1396)
ವರ್ಣಕ ರೂಪದಲ್ಲಿ ಬಸವಪುರಾಣ ರಚಿಸಿದನು. ಸಂಸ್ಕೃತ ಭಾಷೆಯಲ್ಲಿ ಕಂಚಿಯ ಶಂಕರಾರಾಧ್ಯನು (ಕ್ರಿ.ಶ.
1320)
ವೃಷಭೇಂದ್ರ ಪುರಾಣವೆಂದು ಹೆಸರಿಸಿ ರಚಿಸಿದನು. ಈ ಮೂರು ಪುರಾಣ ಪರಂಪರೆಯಲ್ಲಿ ನಡೆದುಬಂದ ಷಡಕ್ಷರ ಮಹಾಕವಿಯು
ಬಸವಣ್ಣನವರನ್ನು ಕುರಿತು ಪುರಾಣರೂಪದಲ್ಲಿ
ಚಂಪೂರೂಪದಲ್ಲಿ ಕಾವ್ಯವನ್ನು ರಚಿಸಿದನು.
ಸೋಮನಾಥ, ಭೀಮಕವಿ ಮತ್ತು ಕಂಚಿಯ ಶಂಕರಾರಾಧ್ಯರ ಮೂರು ಕೃತಿಗಳಿಂದ ವಿಷಯವನ್ನು
ಸಂಗ್ರಹಿಸಿ,
ತನ್ನ ಕವಿತಾ ಪ್ರೌಢಿಮೆಯನ್ನು ಅಪಾರ ಉಭಯ ಭಾಷಾ ಪಾಂಡಿತ್ಯ ಪೂರ್ಣವಾಗ್ವಿಸ್ತಾರವನ್ನೂ
ಬಳಸಿ ಬಸವರಾಜ ವಿಜಯ ಮಹಾಕಾವ್ಯವನ್ನು ವಸ್ತುಕ
ರೂಪದಲ್ಲಿ ರಚಿಸಿದ್ದಾನೆ. ಇವನ ಈ ಕೃತಿ ಮೇಲೆ ಹೇಳಿದ ಮೂರು ಪುರಾಣಗಳಲ್ಲಿ ಯಾವುದೊಂದರ ಅನುವಾದ
ಮಾತ್ರ ಅಲ್ಲವೆಂಬುದು ಗಮನಿಸ ಬೇಕಾದ ಸಂಗತಿ. ಕವಿ
ತನಗಿರುವ ಅದ್ಭುತ ಪ್ರತಿಭೆಯನ್ನೂ ಕವಿಗಿರಬೇಕಾದ ಇನ್ನಿತರ ನೈಪುಣ್ಯಗಳ ವ್ಯಯಿಸಿ ಕಥೆಯನ್ನು
ಹಿಗ್ಗಿಸಿ,
ಬೇಡವಾದುದನ್ನು ಬಿಟ್ಟು, ಬೇಕಾದುದನ್ನು ಹೆಚ್ಚಿಗೆ ಸೇರಿಸುವ ಸ್ವಾತಂತ್ರ್ಯವನ್ನು ತನ್ನ
ಕಾವ್ಯದಲ್ಲಿ ಬೇಕಾದಷ್ಟು ಮಾಡಿಕೊಂಡಿದ್ದಾನೆ. ಷಡಕ್ಷರ ಕವಿಯ ಗುರುವಿನೋಪಾದಿಯಲ್ಲಿದ್ದ,
ವೀರಶೈವ ಪುರಾಣ ಪರಂಪರೆಯ ಆದ್ಯ ಪ್ರವರ್ತಕನಾದ ಪಾಲ್ಕುರಿಕೆ ಸೋಮನಾಥನು ಬರೆದ ಬಸವಪುರಾಣ,
ಅದನ್ನನುಸರಿಸಿ
ಕನ್ನಡದಲ್ಲಿ ಭಾಮಿನಿಷಟ್ಪದಿ ರೂಪದಲ್ಲಿ ಬರೆದ ಭೀಮಕವಿಯ ಬಸವ ಪುರಾಣಗಳೇ ಇವನಿಗೆ ಮೂಲ
ಸಾಮಗ್ರಿಗಳಾಗಿದ್ದುವು. ಅವುಗಳ ಆಧಾರದ ಮೇಲೆ
ವಸ್ತುಕದ ರೂಪ ಧರಿಸಿದ ಬಸವರಾಜ ವಿಜಯವು ಕನ್ನಡ ಸಾಹಿತ್ಯ
ಕ್ಷೇತ್ರದಲ್ಲಿ ಉತ್ತಮ ಕೃತಿಯಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ‘ಗುಬ್ಬಿ ಮಲ್ಲಣ್ಣನ ಭಾವ
ಚಿಂತಾರತ್ನವು ರಾಜಶೇಖರ ವಿಳಾಸವಾದಂತೆ ಭೀಮಕವಿಯ ವರ್ಣಕ ಬಸವಪುರಾಣವು ಇಲ್ಲಿ ವಸ್ತುಕ ಬಸವರಾಜ
ವಿಜಯವಾಗಿದೆ. ಷಡಕ್ಷರಿ ತನ್ನ ಅಖಂಡೋಪಮ ಉಭಯಭಾಷಾ ಶಬ್ದಸಂಪತ್ತನ್ನು ಸುರಿದು ಬಸವಣ್ಣನ ಮತ್ತು
ಶಿವಶರಣರ ವ್ಯಕ್ತಿಚಿತ್ರಗಳನ್ನು ಪ್ರೌಢಗೊಳಿಸಿದ್ದಾನೆ. ತನ್ನ ಕಥನಕಲೆಯ ಸಿದ್ಧಹಸ್ತದ ಸ್ವರೂಪ
ದರ್ಶನಮಾಡಿಸಿದ್ದಾನೆ’ ಎಂಬ ಪಂಡಿತ ಚೆನ್ನಪ್ಪ ಎರಸೀಮೆಯವರ ಮಾತುಗಳು ಕವಿಯನ್ನು ಅರ್ಥೈಸಲಿಕ್ಕೆ ಸಹಕಾರಿಯಾಗಿವೆ
ಷಡಕ್ಷರಿಗಿಂತ ಪೂರ್ವದಲ್ಲಿ ಬಸವಣ್ಣನವರ ಚರಿತ್ರೆ
ಸಿಂಗಿರಾಜನ ಅಮಲಬಸವ ಚಾರಿತ್ರ,
ಚಾಮರಸನ ಪ್ರಭುಲಿಂಗಲೀಲೆ. ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ,
ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ. ಹರಿಹರನ ಬಸವರಾಜ ದೇವರ ರಗಳೆ ಮೊದಲಾದ ಗ್ರಂಥಗಳಲ್ಲಿ
ಸಂಗ್ರಹವಾಗಿ ಅಥವಾ ವಿಸ್ತಾರವಾಗಿ ಬಂದಿದೆಯಾದರೂ ಬಸವರಾಜ ವಿಜಯದಲ್ಲಿ ಬಸವಣ್ಣನ ವೃತ್ತಾಂತ
ಸಂಪೂರ್ಣವಾಗಿ ಪಾಲ್ಕುರಿಕೆ ಸೋಮನಾಥ,
ಭೀಮಕವಿಯ ಬಸವ ಪುರಾಣಗಳ ಅನುಸರಣೆಯಾಗಿ ಕಂಡುಬಂದಿದೆ. ಬಸವಣ್ಣನವರ ಜನನ ಕಾರಣ, ಜನನ ಬಾಲ್ಯ, ಉಪನಯನ ಪ್ರಸಂಗ, ಕಪ್ಪಡಿ
ಸಂಗಮದಲ್ಲಿನ ಜೀವನ, ವಿವಾಹ ವಿಧಿ,
ಕಲ್ಯಾಣದಲ್ಲಿ ಮಂತ್ರಿಪದವಿ, ಶರಣ ಸಮಾಗಮ, ಬಿಜ್ಜಳನೊಡನೆ ವಿರಸ, ಲಿಂಗೈಕ್ಯ- ಈ
ಪ್ರಸಂಗಗಳಲ್ಲಿ ಕವಿಗಳ ಕಥೆ ಒಟ್ಟಿನಲ್ಲಿ ಒಂದೇ ಎನಿಸಿದ್ದರೂ ಪಾಲ್ಕುರಿಕೆ ಸೋಮನಾಥ ಮತ್ತು ಭೀಮಕವಿಗಳಿಗಿಂತ
ಸ್ವಲ್ಪಮಟ್ಟಿಗೆ ಭಿನ್ನವಾಗಿ ಬಸವ ಚರಿತ್ರೆಯನ್ನು ಹೇಳಿದ ಉಳಿದ ಕವಿಗಳು ತಮ್ಮ ತಮ್ಮದೇ ಆದ ಅನೇಕ
ಅಲ್ಪಸ್ವಲ್ಪವ್ಯತ್ಯಾಸಗಳಿಂದ ಕೂಡಿದ ಮಾರ್ಗಗಳನ್ನನುಸರಿಸಿದ್ದಾರೆ. ಷಡಕ್ಷರಿ ಮಾತ್ರ ಈ
ಪ್ರಸಂಗದಲ್ಲಿ ಸಂಪೂರ್ಣವಾಗಿ ಸೋಮನಾಥ ಮತ್ತು ಭೀಮ ಕವಿಗಳ
ಮಾರ್ಗದಲ್ಲಿಯೇ ಮುಂದುವರೆದಿರುವುದನ್ನು ಕಾಣಬಹುದಾಗಿದೆ. ಆದುದರಿಂದ ಷಡಕ್ಷರದೇವನನ್ನು
ನಾವು ಪಾಲ್ಕುರಿಕೆ ಸೋಮನಾಥನ ಸಂಪ್ರದಾಯದ ಕವಿಯೆಂದು ಸ್ಪಷ್ಟವಾಗಿ ಹೇಳಬಹುದು. ಕವಿಯು
ಬಸವಣ್ಣನನ್ನು ಸರ್ವಸ್ವವೆಂದು ತಿಳಿದು ಆರಾಧನಾಭಾವದಿಂದ ಅಂತರಂಗದಲ್ಲಿ ಬಸವಣ್ಣನ ಮೂರ್ತಿಯನ್ನು
ತುಂಬಿಕೊಂಡು ಆತನ ಚರಿತೆಯನ್ನು ಮಹಾದಾನಂದದಿಂದ ವರ್ಣಿಸಿದ್ದಾನೆ. ಷಡಕ್ಷರ ಕವಿಗೆ ಬಸವಣ್ಣನು
ಶಿವನ ಭಕ್ತರಾದವರುಗಳ ಮುಖವೆಂಬ ಕಮಲಗಳಿಗೆ ಸೂರ್ಯನೋಪಾದಿಯಲ್ಲಿರುವವನಾಗಿದ್ದಾನೆ. ಬಸವರಾಜನು
ಸಮಸ್ತ ಪ್ರಮಥರಿಗೆಲ್ಲಾ ಪ್ರಮುಖ ಆಚಾರ್ಯ ಪುರುಷನು, ಶಿವಶರಣರ ಕೈಯ ಕನ್ನಡಿಯು, ಅನಾದಿ ಜಂಗಮತತ್ವಮೂರ್ತಿಗಳಾದ ಜಂಗಮರುಗಳ ಭಕ್ತನೂ,
ಶಿವಭಕ್ತರುಗಳ ಕಾಮಧೇನುವು ಎನಿಸಿದ್ದಾನೆ.
ಬಸವರಾಜ ವಿಜಯದಲ್ಲಿ ಬಸವಣ್ಣನವರ ವಿಷಯವೇ ಪ್ರಧಾನ
ಎನಿಸಿದರೂ ನೇರವಾಗಿ ಬಸವಣ್ಣನ ಕಥೆ ಬರುವುದು ತೀರ ಸ್ವಲ್ಪವೇ. ಬಸವಣ್ಣನವರ ಜೀವನಕ್ಕೆ
ಸಂಬಂಧಿಸಿದುದರಲ್ಲಿ ಬಸವಣ್ಣನವರ ಅವತಾರದ ಉದ್ದೇಶ, ಹಿನ್ನೆಲೆ, ಜನನ,
ವಿದ್ಯಾಭ್ಯಾಸ, ಉಪನಯನ ತಿರಸ್ಕಾರ, ವಿವಾಹ,
ಮಂತ್ರಪಟ್ಟ, ಬಸವ ಭಾಷೆಗಳು, ಭಕ್ತಿಜೀವನ,
ಪ್ರಭುವಿನ ಆಗಮನ, ಅವನ ಆರೋಗಣೆ, ಶರಣ ಸಂಘಟನೆ,
ಜಂಗಮ ಪ್ರಾಣತ್ವ, ಕಾರ್ಯ ಸದ್ಭಾವ, ಬಸವ ಪವಾಡ,
ಕಲ್ಯಾಣ ಕ್ರಾಂತಿ, ಕಪ್ಪಡಿ ಸಂಗಮಕ್ಕೆ ಆಗಮನ , ಲಿಂಗೈಕ್ಯ ಸ್ಥಿತಿಗಳು ಮೊದಲ ಐದು
ಅಧ್ಯಾಯಗಳಲ್ಲಿ ಮತ್ತು ಕೊನೆಯ 42 ನೇ ಅಧ್ಯಾಯದಲ್ಲಿ ಮಾತ್ರ ಬಂದಿವೆ. ಉಳಿದ
ಮೂವತ್ತಾರು ಅಧ್ಯಾಯಗಳಲ್ಲಿ ನೂರಾರು ಶರಣರ ವೈವಿಧ್ಯಮಯ ಕಥೆಗಳ ಗುಚ್ಛ ಒಡಮೂಡಿದೆ.
ಷಡಕ್ಷರ ದೇವನ ಪಾತ್ರ ಚಿತ್ರಣದ ಕಲೆಗಾರಿಕೆಯನ್ನು
ನೋಡಬೇಕೆನ್ನುವವರು ಬಸವರಾಜ ವಿಜಯವನ್ನು ತಾಳ್ಮೆಯಿಂದ ನೋಡಬೇಕು. ಅಲ್ಲಿ ಕವಿ ಜೀವನರಂಗದ ನೂರಾರು ಮುಖಗಳನ್ನು ಕಡೆದು
ನಿಲ್ಲಿಸಿದ್ದಾನೆ. ಆ ನೂರು ಮುಖಗಳ ಸೌಂದರ್ಯವೆಲ್ಲದರ ಸಾಕಾರ ಮೂರ್ತಿಯಾಗಿ ಬಸವಣ್ಣನ ದಿವ್ಯ ಮುಖ
ಗೋಚರಿಸಿದೆ. ಕೆಲವರು ಮುಗ್ಧಭಕ್ತರು, ಕೆಲವರು
ಉಗ್ರಭಕ್ತರು, ಕೆಲವರು ಲಿಂಗನಿಷ್ಠಾಗರಿಷ್ಠರು,
ಕೆಲವರು ಕಾಯಕ ಸದ್ಭಾವ ಸಂಪನ್ನರು, ಕೆಲವರು ಸರ್ವಾರ್ಪಣ ಭಾವದವರು , ಕೆಲವರು ಕಾಮದಿಂದ ಅಕಾಮಕ್ಕೇರಿದವರು, ಕೆಲವರು ಧರ್ಮರಕ್ಷಕರು, ಕೆಲವರು ಅಹಿಂಸಾವಾದಿಗಳು. ಕೆಲವರು ವೀತ ರಾಗಭಯಕ್ರೋಧರು. ಈ ಎಲ್ಲ ವ್ಯಕ್ತಿ ರತ್ನಗಳ ಮಧ್ಯದಲ್ಲಿ ಬಸವಣ್ಣ ಶಿರೋಭೂಷಣವಾಗಿ ಕಾಣಿಸಿ ಕೊಂಡಿದ್ದಾರೆ.
ಬಸವಣ್ಣ ಶಿವನ ವಾಹನವಾದ ನಂದೀಶ್ವರನ ಅವತಾರ. ಬಸವಣ್ಣನನ್ನು ಧರ್ಮ
ಸ್ವರೂಪನಾದ ನಂದಿಯೊಡನೆ ಅಭೇದವಾಗಿಯೇ ಪ್ರಸಂಗದಲ್ಲೆಲ್ಲ ಹೇಳುತ್ತಾನೆ. ತಾಯಿ ಗರ್ಭದಲ್ಲಿ
ಮೂಡಿದಂದಿನಿಂದಲೇ ಬಸವನ ಪಾತ್ರದ ಘನತೆಯನ್ನು
ಕಾಪಾಡಿಕೊಂಡು ಬರುವಲ್ಲಿ ಕವಿ ಬಹಳ ಎಚ್ಚರಿಕೆಯನ್ನು ತೋರಿಸುತ್ತ ಬಂದಿದ್ದಾನೆ. ‘ಪರಮ ಯೋಗಿ ವೃಷಭೇಶ್ವರನ್ ಆ ಮಾದಾಂಬೆಯ ಅಮಲ ಗರ್ಭಾಶ್ರಯದೊಳ್ ಪೆರೆ ನೊಸಲೊಳ್ ಮಿಗಿದ ಕೈಗಳಿರೆ ಹರಚರಣ ಧ್ಯಾನಮಂ ಆಂತು ಇರುತ್ತಿದ್ದನಂತೆ.’
(3-10)
ಶರತ್ಕಾಲದ ಮೋಡದ ಮರೆಯಲ್ಲಿ ಶೀತ ಮಯೂಖನ ಹಾಗೆ ಶೋಭಿಸುವ ಆ ಭ್ರೂಣ
ರೂಪದ ಬಸವಣ್ಣನ ಬಗೆಗೆ,
ಲಸದಾಜ್ಞಾ ಚಕ್ರದುದ್ಯತ್
ದ್ವಿದಳ ಸಲಿಲ ರುಟ್ ಕರ್ಣಿಕಾ ಮಧ್ಯದೊಳ್ ತೋ|
ರ್ಪ ಸಹಸ್ರಾರ್ಕ ಪ್ರಭಾಭಾಸುರ
ವಿಮಳ ಸದೋಂಕಾರ ಪೀಠಸ್ಥ ಚಿದ್ರೂ|
ಪ ಸಮುದ್ಯತ್ ಲಿಂಗಮಂ ಜಾನಿಸುತೆ
ನಿಜ ಮನಂ ಪ್ರಾಣಂ ಒಂದಾಗೆ ಸೌಖ್ಯ|
ಪ್ರಸರಂ ಬೆತ್ತು ಒಪ್ಪುತಿರ್ದಂ
ಸಮಧಿಗತ ಶೈವಾದ್ವೈತ ವಿದ್ಯಾಬ್ಧಿ ಚಂದ್ರಂ|| (3-12)
ಹೀಗೆ ಹೇಳುತ್ತ, ಶಿವಾದ್ವೈತ ಸಿದ್ಧಾಂತ ದೃಷ್ಟಿಯ ಸುಳಹು ಹೊಳಹನ್ನು ಬೀಜ ರೂಪವಾಗಿ
ಪ್ರಕಟಿಸುತ್ತಾನೆ. ಈ ಬೀಜವೇ ಕಾವ್ಯದುದ್ದಕ್ಕೂ
ಮಹಾ ವೃಕ್ಷವಾಗುತ್ತದೆ. ಇಲ್ಲಿ ಭ್ರೂಣಭಾವ ಲಿಂಗ ಸಮರಸ ಶಿವಯೋಗಿಯ ಅಭೇದದಲ್ಲಿ
ವರ್ಣಿತವಾಗಿರುವುದೊಂದು ವೈಶಿಷ್ಯ. ಈ ವೈಶಿಷ್ಯವನ್ನು ಬಸವಣ್ಣನವರ ಲಿಂಗೈಕ್ಯ ನಿರ್ಬರ
ಸ್ಥಿತಿಯವರೆಗೆ ರಕ್ಷಿಸಿಕೊಂಡು ಬರುವಲ್ಲಿ ಕವಿ
ಯಶಸ್ವಿಯಾಗಿದ್ದಾನೆ. ಷಡಕ್ಷರ ಕವಿಯ ಈ
ಪುರಾಣ ಕಾವ್ಯದಲ್ಲಿ ಕಾವ್ಯ ಧರ್ಮ, ವೀರಶೈವ ಧರ್ಮಗಳೆರಡನ್ನೂ
ಕಾಣಬಹುದಾಗಿದೆ. ಪ್ರಸೂತ ಸಮಯದ
ಸನ್ನಿವೇಶವನ್ನು ಕವಿ ಮರೆ ಮಾಡಿರುವುದು ಪುರಾಣ ಶೈಲಿಯ ಒಂದು ವಿಶೇಷ. ತಾಯಿ ತನ್ನ ಮಗ್ಗುಲಲ್ಲಿ ಒಮ್ಮೆಲೆ ‘ಬಾಲೇಂದುವಂತೆಸೆವ ಲಲಾಟನಂ,
ರುದ್ರಾಕ್ಷ ಮಾಲಾಲಂಕೃತ ನಿಜಗ್ರೀವನಂ ಶಿವಲಿಂಗ ಸಂಗತೋರಂ ಸ್ಥಳನಂ,
ಮಂದಸ್ಮಿತ ಮುಖಾಂಬುಜನಂ, ನಳಿನದಳನೇತ್ರನಂ
ಚಿತ್ರಚರಿತ್ರನಂ, ಪವಿತ್ರ ಗಾತ್ರನಂ……………..
(3-21)
ಕಂಡು ಗಂಡನಿಗೆ ನಿವೇದಿಸುತ್ತಾಳೆ. ಶಿವಧರ್ಮವೇ ಶಿಶುರೂಪನಾಳ್ದುದೊ, ಶಿವಾಚಾರವೇ
ಧರಭಾಗದೊಳ್ ಕುವರಂ ತಾನಿಸಿತ್ತೊ………. (3-22) ಎಂಬಂತಿರುವ ಶಿಶುವಿಗೆ 12ನೆಯ ದಿನದಲ್ಲಿ ಮುತ್ತೈದೆಯರು ನಾಮಕರಣ ಶಾಸ್ತ್ರ ಮುಗಿಸುವರು. ಮಗುವು-
ಮಲಯೋರ್ವಿಭೃತ್ ಪಟೀರ ಪ್ರಬಳವನದೊಳ್ ಉದ್ಯದ್ವಿಪೇಂದ್ರಾರ್ಭಕಂ,
ಪ್ರೋಜ್ವಳ ಪೂರ್ವಾದ್ರೀಂದ್ರದೊಳ್ ಭಾಸುರ ತರುಣ ದಿನಾಧೀಶಬಿಂಬಂ ,
ಸುಧಾಬ್ದೀ ಸ್ಥಳದೊಳ್ ಬಾಲಂ ಮರಾಳಂ ಬಳೆವವೊಲ್
ಅವನೀ ನಿರ್ಜರಾಗಾರದೊಳ್
ತಾಂ ಬಳೆದಂ ಭದ್ರಂ, ಪ್ರಕಾಶಂ , ಶುಚಿತೆ ಬಳೆವಿನಂ ಬೆಳೆದನಂತೆ. (3.31)ಇಂಥ ಪ್ರಸಂಗಗಳನ್ನು ಹೇಳಿ,
ಬಸವಣ್ಣನ ಜನನದ ಬಗೆಗೆ ಭವ್ಯವಾದ ಒಂದು ಚಿತ್ರವನ್ನು ಲೋಕದ
ಕಣ್ಣಿನೆದುರಿಗೆ ಚಿತ್ರಿಸಿದ್ದಾನೆ.
ಹೀಗೆ ಬೆಳೆದ ಬಸವಣ್ಣನಿಗೆ ಗರ್ಭಾಷ್ಟಮಾಬ್ದ ಸಂಪ್ರಾಪ್ತವಾಯಿತು. ಉಪನಯನ ಸಂಭ್ರಮ ಮನೆಯಲ್ಲಾದುದನ್ನು ಕಂಡ ಬಾಲಕ ಬಸವನು,
ಹರದೀಕ್ಷೆಯಾಂತ ಮಹಿಮಂ ಪರದೀಕ್ಷೆಯ ನಾಶೆಗೈವನೇ? (3-34) ಎಂದು ಆ
ವಿಧಿಯನ್ನು ತಿರಸ್ಕರಿಸುವಲ್ಲಿ ವರ್ಣಾಶ್ರಮ ಧರ್ಮದ ಹಂಗಿನಿಂದ ದೂರವಾಗುವ ಮುಂದಿನ ಬಸವಣ್ಣ
ಧಾರ್ಮಿಕ ಕ್ರಾಂತಿಯ ಬೀಜರೂಪವಾದ ಸನ್ನಿವೇಶವನ್ನು ಕವಿ ಒದಗಿಸುತ್ತಾನೆ. ತನ್ನ ದರ್ಶನ
ದೃಷ್ಟಿಯನ್ನು ವಾದ-ವಿವಾದದ ಮೂಲಕ ಬಿತ್ತರಿಸಿದ್ದಾನೆ. ಕೊನೆಗೆ ಬಸವಣ್ಣನು ತನ್ನ ಅಭಿಪ್ರಾಯವನ್ನು
ಕ್ರೋಢೀಕರಿಸಿ--
ಶಿವ ಪಂಚವರ್ಣಮಿರೆ ಬೇ—
ರೆವರ್ಣಮೇಕೆಮಗೆ
ಶಂಭುಪದಾಶ್ರಯ ಮೊಂ|
ದವಿರತಮಿರೆ ಮಿಕ್ಕಾಶ್ರಮ-
ನಿವಹಂ ತಾನೇಕೆ ಲಿಂಗ ಪೂಜಾಯಜ್ಞಂ||
( 3-54)
ಎಂದು ಹೇಳಿ ತಂದೆಯ ವಾದವನ್ನು ನಿಷ್ಠುರವಾಗಿ ಖಂಡಿಸುತ್ತ
ಬಹುಕೋಟಿ ಜನ್ಮಾಂತರಾರ್ಜಿತ ಸುಕೃತರಾಶಿ ಫಲಿಸುವ ಪದದೊಳ್ ದೊರೆ ಕೊಳ್ವುದಲ್ತೆ ಘನಶಾಂಕರ ಭಕ್ತಿ?
(3-60) ಅದು ಇಷ್ಟಾರ್ಥಪ್ರದ ಚಿಂತಾರತ್ನ. ಆದ್ದರಿಂದ
‘ಎನಗೆ ಪಿತಂ ಮಹೇಶಂ, ಅಗಜಾತೆಯೇ ಮಾತೆ. ಶಿವಕ್ಯಭಕ್ತಿ ಸಂಜನಿತ
ಮಹಾ ಸುಖಾಭರ್ ಎನ್ನಯ ಬಾಂಧವರ್,
ಇಂದು ಮೌಳಿ ಲಾಂಛನಧರರ್
ಎನ್ನಾಳ್ವೆಸಕೆ ನೇಮಿಸುವ ಅಣ್ಮರ್, ಉಮೇಶ್ವರಾಂಘ್ರಿ ಸೇವನಂ ಅಸಮಾನಭಾಗ್ಯಂ.
ಅಮರ್ದೀಶ್ವರ ಭಕ್ತಿಯೆ ಮುಕ್ತಿ ಸಂಪದಂ (3-36_ ಎಂದು ಹೇಳುವ ಬಸವಣ್ಣನಲ್ಲಿ
ಭಕಿ ಭಂಡಾರಿಯ ನಿಲುವನ್ನು ಕಾಣ ಬಹುದಲ್ಲದೆ ಧರ್ಮಸಂತಾನಿ ಜಿಜ್ಞಾಸುವಾಗಿಯೂ
ಕಾಣುತ್ತಾನೆ. ಅನಂತರ ತನ್ನಕ್ಕ ನಾಗಲಾಂಬಿಕೆಯೊಡನೆ ಬಸವಣ್ಣ ಕಪ್ಪಡಿ ಸಂಗಮಕ್ಕೆ ಬರುವನು. ಇಲ್ಲಿನ ಬಸವಣ್ಣನ ಮಾತುಗಳೂ ಕವಿ ಅವನಿಗೆ ಜೋಡಿಸಿರುವ
ವಿಶೇಷಣಗಳೂ ಗಮನಾರ್ಹವಾದುವು. ಮುಂದೆ ಬಸವಣ್ಣ 770 ಜನ ಭಾರತದ ವಿವಿಧ ಭಾಗಗಳಿಂದ ಕಲ್ಯಾಣಕ್ಕೆ ಆಗಮಿಸಿದ ಮಹಾಮಹಂತರ
ನೆರವಿನಿಂದ ಪ್ರತಿಷ್ಠಾಪಿಸುವ ವೀರಶೈವ ಮತತತ್ತ್ವಗಳ ಸೂತ್ರಗಳಂತೆ ಅವು ಭಾಸವಾಗುತ್ತವೆ.
ಕಪ್ಪಡಿ ಸಂಗಮೇಶ್ವರದಲ್ಲಿ ಪ್ರಸನ್ನವದನನೂ,
ಭಸ್ಮ- ತ್ರಿಪುಂಡ್ರಧರನೂ, ಭಸ್ಮೋದ್ಧೂಳಿತಾಂಗನೂ
ಆಗಿ ತಾಪಸ ವೇಷದ ಶಿವನ ಗುರುರೂಪನಾಗಿ ಕಂಡಾಗ, ಬಸವಣ್ಣನ
ಅಂತಃಕರಣಗಳು ಕಳೆಯೇರುತ್ತವೆ. ಕೌತುಕರಸ ಪೆಂಪೇರುತ್ತದೆ. ಶಿವನು-
ಮಗನೆ ಮನೋರಥಂ
ನಿನಗದಾವುದು ಪೇಳ್ ಎನೆ,
ಬೇರೇ ಬೇಳ್ಪುದೇಂ?
ಜಗದಧಿನಾಥ, ನಿನ್ನಪದ ಭಕ್ತಿಯೆ ಮನ್ಮನದಿಷ್ಟ
ಅಂತದಂ ನೆಗಳ್ವ ಇರವು ಎಂತು ?
ಬೋಧಿಪುದು ಸತ್ಕೃಪೆಯಿಂದ ..... (3-68)
ಇದೇ ಶಿವಾದ್ವೈತ ಸಿದ್ಧಾಂತದ
ಹೊಲಬು. ಭಕ್ತಿ ಶಿವ ಪ್ರಸಾದ ಜನನೀಭವ;
ಶಿವನ ಪ್ರಸಾದವು ಆ ಭಕ್ತಿಗೆ ಜನ್ಮಭೂಮಿ. ಎರಡಕ್ಕೂ ಅಂಕುರಬೀಜ ನ್ಯಾಯ.
ಶಿವನು ಪ್ರತ್ಯಕ್ಷನಾಗಿ ಏನು ಬೇಕೆಂದು ಕೇಳುವಾಗ ಭಕ್ತಿ ಭಿಕ್ಷೆಯನ್ನು ಬೇಡಿ,
ಅದನ್ನಾಚರಿಸುವ ಕ್ರಮದ ಬಗೆಗೆ ಬಿನ್ನವಿಸಿಕೊಳ್ಳುವುದೇನು ಸುಲಭವಲ್ಲ. ಏನೆಲ್ಲವನ್ನು ಕೊಡುವ ದೇವನೇ ಎದುರಿಗಿರುವಾಗ ಕೇಳುವ
ಭಕ್ತನಲ್ಲಿ ಕಾಮನೆಯಿದ್ದರೆ ಕೇಳುವುದೇನು? ಶಿವನು ದೇಹಿಯಾದಾಗ ಭಕ್ತನ ವ್ಯಾಪಾರ ಪ್ರಾರಂಭವಾಗುವುದು ಸಹಜ. ಒಂದು ಕೊಡುವುದು;
ಒಂದು ಕೊಳ್ಳುವುದು.
ಮುಯ್ಯಿಗೆ ಮುಯ್ಯಿಯಧಂದುಗ . ಇದು ಶುದ್ಧ
ಭಕ್ತಿಯಲ್ಲ. ಭಕ್ತನಂಗಕ್ಕಳವಡ ಬೇಕಾದುದು ಶಿವನ
ಸಕಲವಲ್ಲ;
ನಿಷ್ಕಲತ್ವ. ಆ ತತ್ತ್ವ ಮೈತುಂಬಿ ಬರಬೇಕು ;
ಮನತುಂಬಿ ಬರಬೇಕು. ಈ
ಉದಾತ್ತ ಶಿವಾದ್ವೈತ ತತ್ತ್ವದ ಪುತ್ಥಳಿಯನ್ನಾಗಿ ಬಸವಣ್ಣನನ್ನು ಕವಿಯು ಇಲ್ಲಿ
ಚಿತ್ರಿಸುತ್ತಾನೆ. ಮುಂದೆ ಬಸವಣ್ಣ ಹಾಡಿದ ವಚನ
ಸಿದ್ಧಾಂತ ತತ್ತ್ವದ ಸುಳುಹ ಹೊಳಹುಗಳನ್ನು
ಮನದಲ್ಲಿ ಭಾವಿಸಿ,
ಅವುಗಳ ಸಾರ್ಥಕ್ಯಕ್ಕೆ ಎಚ್ಚರಿಕೆಯಿಂದ ಹೀಗೆ ಹೇಳುತ್ತ,
ಅವನ ಕಾಲಿಗೆ ಮರ್ತ್ಯದ ಮಣ್ಣು ಸ್ವಲ್ಪವೂ ಅಂಟುಗೊಡದ ಜಾಣ್ಮೆಯನ್ನು
ಬಸವರಾಜ ವಿಜಯದುದ್ದಕ್ಕೂ ನಾವು ಕಾಣುತ್ತೇವೆ.
ಕಪ್ಪಡಿ ಸಂಗಮದಲ್ಲಿ ಅನೇಕ ವರ್ಷಗಳ
ಬಸವಣ್ಣನ ಭಕ್ತಿಜೀವನದ ದಿನಗಳುರುಳುತ್ತವೆ.
ಮುಂದೆ ಬಲದೇವ ಮಂತ್ರಿಯ ಮಗಳನ್ನು ಲಗ್ನವಾಗಿ ಕಲ್ಯಾಣಕ್ಕೆ ಬಂದಮೇಲೆ
ಬಸವಣ್ಣನ ಜೀವನದ ಎರಡನೆಯ ಘಟ್ಟ ಪ್ರಾರಂಭವಾಗುವುದು. ಬಿಜ್ಜಳನ ಆಸ್ಥಾನದಲ್ಲಿ ಹರಲಿಪಿಯನ್ನೋದಿ
ಅವನಿಗೆ ಅಧಿಕಮೊತ್ತದ ದ್ರವ್ಯವನ್ನೊದಗಿಸಿದ ಮೇಲೆ ಅಧಿಕ ಸ್ಥಾನಮಾನ ಲಭ್ಯವಾಗುವುದು. ಒಂದು ಕಡೆಯಲ್ಲಿ ರಾಜ್ಯವೊಂದರ ಮಂತ್ರಿಸ್ಥಾನ;
ಮತ್ತೊಂದೆಡೆ ಧರ್ಮಸಾಮ್ರಾಜ್ಯದ ಭಕ್ತಸ್ಥಾನ . ಇಬ್ಬಗೆಯ ದಂದುಗದಲ್ಲಿ ಬಸವಣ್ಣನ ಜೀವನ ಪ್ರಾರಂಭ.
ಅಷ್ಟಾವರಣ,
ಪಂಚಾಚಾರ,
ಷಟ್‍ಸ್ಥಲಸಂಪನ್ನ ಬಸವಣ್ಣನಿಗೆ ವೀರಶೈವ ಸಿದ್ಧಾಂತದ ಸಾಕಾರ ಮೂರ್ತಿಯೇ
ಆಗಿ ಕಂಗೊಳಿಸುತ್ತಾನೆ. (5-40) ಅವನ ಸೂಕ್ಷ್ಮವಾದ ಜ್ಞಾನ ಸ್ಥೂಲವಾದ ಕ್ರಿಯೆಯಾಗಿಯೇ ಪರಿಣಾಮಗೊಳ್ಳುವುದು. ಬಸವಣ್ಣನ ಕೀರ್ತಿ ಎಲ್ಲೆಡೆಗೆ ಹಬ್ಬುವುದು. ಭಾರತದ ಮೂಲೆ ಮೂಲೆಗಳಿಂದ ‘ವೃಷಭೇಂದ್ರ ದರ್ಶನ ತತ್ಪಜನರ್ ವೀರಶೈವ ಸುಮಾರ್ಗದೊಳ್
ಚರಿಸಿ ರಂಜಿಪರ್ ಭಕ್ತಜನರ್’ ಕಲ್ಯಾಣಕ್ಕೆ ಬರುವರು (5-41-42). ಅವರನ್ನು ಬಸವಣ್ಣ
ಸಂಭ್ರಮದಿಂದ ಎದುರ್ಗೊಂಡು ಪೂಜಿಸಿ ‘ದಾಸೋಹಭಾವಂ ಬಡೆದು, ಪಾದೋದಕ ಪ್ರಸಾದಂಬಡೆದು ಸೇವಿಸಿ, ನಿರಂತರ ಸಾತ್ವಿಕ ಭಕ್ತಿವೆರಸಿ ತದೀಯಸುಖಗೋಷ್ಠಿ’ಯಲ್ಲಿ ಕಾಲ
ಕಳೆಯುತ್ತಾನೆ. ಶರಣ ಜನಕಲ್ಪದ್ರುಮನೂ ಆಗುತ್ತಾನೆ.
ಈ ಸಂದರ್ಭದಲ್ಲಿ ಬಸವಣ್ಣನನ್ನು ಗುರುಲಿಂಗ ಜಂಗಮ ಭಕ್ತಿಯ ಪರಾಕಾಷ್ಠ ಭಾವಕ್ಕೇರಿಸಿ,
ಭೃತ್ಯಾಚಾರದ ಸಾಕಾರ ಮೂರ್ತಿಯನ್ನಾಗಿ ಚಿತ್ರಿಸಿದ್ದಾನೆ.
ಬಸವಣ್ಣನನ್ನು ಕುರಿತು ಪುರಾಣ ರೂಪದಲ್ಲಿ ಚಿತ್ರಿಸಿರುವ ಈ
ಕಾವ್ಯದಲ್ಲಿ ಲಿಂಗಮುಖವೇ ಜಂಗಮ; ಮರಕ್ಕೆ ಬಾಯಿ ಬೇರೆಂದು ತಿಳಿದು ನೀರೆರೆದರೆ ಮೇಲೆ ಮರ ಪಲ್ಲವಿಸಿ ನಿಲುತ್ತದೆ. ಅಂತೆಯೇ
ಜಂಗಮಕ್ಕೆರೆದರೆ ಲಿಂಗತೃಪ್ತಿಪಡಿಸಬೇಕೆಂಬುದರ ಮಥಿತಾರ್ಥವನ್ನು ಕಾಣುತ್ತೇವೆ. ಈ ರೀತಿ ಭಕ್ತಿ
ಜೀವನದ ರಂಗದಲ್ಲಿ ಅನೇಕ ಪ್ರಯೋಗಗಳಿಂದ ಅಭ್ಯಾಸ ಮಾಡುತ್ತಿರುವ ಬಸವಣ್ಣನ ಪರೀಕ್ಷೆ ನಡೆದು ಅವನಿಗೆ ಪ್ರಶಸ್ತಿ ಪ್ರದಾನವಾಗಲೇ ಬೇಕಲ್ಲವೆ? ಭಕ್ತಿಜೀವನದ
ನಿಲುಗಡೆ ಸರ್ವಾರ್ಪಣಾ ಭಾವದಲ್ಲಿ ; ಶಿವನೂ ಅದಕ್ಕೆ ತಕ್ಕ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಶಿವನ ಉಂಡಿಗೆಯ ಪಶುವಾಗುವುದಕ್ಕೆ ಸಾಮಾನ್ಯ ಸಾಧನೆ
ಸಾಕಾಗದು. ಬಟ್ಟಬಯಲು ಗಟ್ಟಿಕೊಂಡು ಬಂತು. ಅದು ಮಹಾಜಂಗಮ ಬಸವಣ್ಣನ ಅಂತಃಕರಣ ಪ್ರವೃತ್ತಿ
ಲಿಂಗತಪಸ್ಸಿನ ಫಲವಾಗಿ ಪಕ್ವಗೊಂಡಿತ್ತೆಂಬುದರ ಅನಿಸಿಕೆಯು ಓದುಗರಲ್ಲಿ ಉಂಟು ಮಾಡುತ್ತಾನೆ.
ಒಂದು ದಿನ ಬಸವಣ್ಣ ಈಶ್ವರಾರ್ಚನಾನಂತರ ನಿಮೀಷೇ ಕ್ಷಣದಿಂದ
ಶಿವಲಿಂಗವನ್ನು ನಿರೀಕ್ಷಿಸುವಾಗ ಲಿಂಗದಲ್ಲಿ ಅರ್ಪೂತರ ರೂಪಾಂತರ ಮರ್ಪೊಳೆಯುವುದು (5-62ಗ). ಬಸವಣ್ಣನ ಕಣ್ಣಿಗೆ ಕಾಣದಿದ್ದರು ಕರುಳಿಗೆ ಏನೋ ಅರಿವು. ಈ ಪ್ರಸಂಗದ ಗಂಭೀರ ಸ್ವರೂಪವನ್ನು ಷಡಕ್ಷರದೇವನ
ಮಾತುಗಳಲ್ಲೇ ಕೇಳಬೇಕು. ತಾಂಬೂಲವಾಹಕನೊರ್ವ ಜವದಿಂ ಪತಿತಂದು ಕೈದಾವರೆಗಳಂ ಮುಗಿದು ದೇವಾ.
ಮುಕ್ತಕೇಶನಲಕ್ಷಿತ ತನುಚ್ಛಾಯಂ, ಚೀರಾಂಬರಾವೃತ ಧೂಳಿಧೂಸರ ಕಳೆವರಂ, ಅಜಸ್ರ ಪರಿಸ್ರವಾನಂದಬಾಷ್ಪ ಜಲಕಲಿತ ನಿರ್ನಿಮೇಷಾಕ್ಷಿ ನಿರೀಕ್ಷಿತ ಕರತಳಸ್ಥಿತ ಶಿವಲಿಂಗಂ,
ಅಗಣಿತ ವಾಪೀಕೂಪ ತಟಾಕಾನೋಕಹ ಸರಿತ್ಸಮುದ್ರ ಭೂ ಭೂಧರಾದಿ ಸದೃಶಗಮನಂ,
ಸಮಾಯಾತ ಕರಿತುರಗಾದಿ ದೊರೋತ್ಸೃಷ್ಟಪುರೋ ಭಾಗಂ,
ನಿಜಗಮನಾನುಕೂಲ ಪವನಗಮನಂ ಗಗನಭಾಗ ವಿವೃತ ಪತ್ರಪತತ್ರಿವರಪ್ರಕರಪರಿಸೇವ್ಯಮಾನಂ.
ಜಯಜಯ ರವಮುಖರ ನಿಖಿಲ ದಿಶಾಮುಖನುಂ,
ಪದಪಯೋಜವಿನ್ಯಾಸ ಪವಿತ್ರಿತ ಕ್ಷೇತ್ರತೀರ್ಥಸಮಾಜಂ ಕಟಾಕ್ಷವೀಕ್ಷಣ
ಮಾತ್ರ ವಿನಿರ್ಧೂತ ಭೂತಜಾತತಮಃ ಸಮೂಹನೆನಿಸಿದ ( 5-62 ಗದ್ಯ) ಶಿವಯೋಗಿ
ಸಾರ್ವಭೌಮ ಪ್ರಭುದೇವರು ಆಗಮಿಸಿದ ಸುದ್ದಿಯನ್ನು ಹೇಳುವನು
ಬಸವಣ್ಣನ ಪರೀಕ್ಷೆಗೆ ಬಂದ ಪ್ರಭುದೇವರ
ಮಹತ್ತನ್ನು ಕವಿಯು ಅತ್ಯದ್ಭುತವಾಗಿ
ಚಿತ್ರಿಸಿದ್ದಾನೆ. ಇಂಥ ಪ್ರಭುವನ್ನು ‘ಮಹಾನುಭಾವನಿದಿರೊಳ್ ತನುಭಾವಮೆಲ್ಲಿಯದೆನಿಸಿ’ ಸಾತ್ವಿಕವನ್ನು ಮೆರೆದು ಕರೆತಂದು ಪೂಜಿಸಿ ಆರೋಗಣೆಗೆ
ಕುಳ್ಳಿರಿಸಿದಾಗ ಬಸವನ ನಿಜವಾದ ಸತ್ವ ಪರೀಕ್ಷೆಯ ಪ್ರಸಂಗ ನಡೆಯುವುದು.
ಪ್ರಭುವು ಲಕ್ಷಾತೀತ
ಸಹಸ್ರ ಚರತತಿಗೆ ಸವೆದ ಸಕಲಾನ್ನವನ್ನು ಕುಕ್ಷಿಯ ತೆರಪು ಎಂತುಂಟೋ ಎನ್ನುವಂತೆ ಊಟಮಾಡ
ತೊಡಗಿದನು.
ಗಗನಂ ಬಾಯ್ದೆರೆದಂದದಿಂದೆ ಸಕಲಾನ್ನವ್ರಾತಮಂ ಕೊಂಡ ಚಿ|
ದ್ಗಗನಾಕಾರನ ಪೆರ್ಮೆಗದ್ಭುತ ಭಯಾಕ್ರಾಂತಾತ್ಮನಾಗುತ್ತೆ ಕೈ|
ಮಿಗೆ ತತ್ತೈಪ್ತಿಗುಪಾಯಂ ಬಸವನೊಲ್ದಾಲೋಚಿಸುತ್ತಿರ್ಪವೇ
ಳೆಗೆ ಬಂದಂ ಚಿದಭಿನ್ನ ಚೆನ್ನಬಸವಂ ಕಲ್ಯಾಣಕಲ್ಪದ್ರುಮಂ ( 5-65)
ಅವನು ಬಸವಣ್ಣನ ಪಕ್ಕದಲ್ಲಿ
ನಿಂತುಕೊಂಡು- ಬಡಬಶಿಖಿ ನೆಯ್ಯಸೀರ್ಪನಿಗಡಣದಿಂದ ತಣಿಯುವುದೇ ? ಪದ್ಮಜಾಂಡಾವಳಿಗಳನ್ನೆಲ್ಲ ಕಡೆಗಾಲದಲ್ಲಿ ನುಂಗಲ್ ಬಾಯ್ವಿಡುವ ಈ ಘನ
ಮಹಿಮನನ್ನು ಅನ್ನದಿಂದ ತಣಿಸಲು ಸಾಧ್ಯವಿಲ್ಲ.
ನೀನು ಓಗರ, ಆನು
ಉಪದಂಶಕವಾದುದಾದರೆ ಕೊಂಡು ತಣಿದಪನು, ನಡೆ’ (5-67)
ಎಂದು ಚಿಂತೋದಧಿಯಲ್ಲಿ ಮುಳುಗಿದ್ದ ಬಸವಣ್ಣನಿಗೆ ಹೇಳಲು,
ಅಂತೆಯೇ ಪ್ರಭುವಿನಡಿಯಲ್ಲಿ ಬಸವಣ್ಣನು ಸರ್ವಾರ್ಪಣ ಭಾವದಿಂದ ಪರಿಶುದ್ಧತನುವನ್ನು ಚೆನ್ನಬಸವಣ್ಣ ಸಮೇತ ಅರ್ಪಿಸುವನು.
ಪ್ರಭು ತೃಪ್ತನಾದ. ಈ ಜಂಗಮದ ತೃಪ್ತಿಯಿಂದ
ಚರಜಂಗಮಕ್ಕೆಲ್ಲ ತೃಪ್ತಿಯಾಯಿತು;
ಹೊಟ್ಟೆತುಂಬಿತು. ಬಸವಣ್ಣ ಚೆನ್ನಬಸವಣ್ಣರಿಬ್ಬರನ್ನು ಪ್ರಭುದೇವನು
ಅಲಿಂಗಿಸಿಕೊಂಡನು.
ಷಡಕ್ಷರದೇವನ ಕಥನ ಕಲೆಯ ಸಿದ್ಧಹಸ್ತ ಗುಣಕ್ಕೆ ಮೇಲಿನ ಆರೋಗಣೆಯ
ಪ್ರಸಂಗವನ್ನು ನಿದರ್ಶನವಾಗಿ ಕೊಡಬಹುದು.
ಷಡಕ್ಷರಿಯ ಕಥನ ಕಲೆಯ
ಪರಿಪೂರ್ಣಸಿದ್ಧಿಯನ್ನು ನಾವು ವೃಷಭೇಂದ್ರ ವಿಜಯದಲ್ಲಿ ಕಾಣುತ್ತೇವೆ. ಕಥೆಗಳಲ್ಲಿ ಮಾನವೀಯತೆ ಪರಾಕಾಷ್ಠೆಯನ್ನು ಮುಟ್ಟಿದೆ.
ಒಂದೊಂದು ತತ್ತ್ವಕ್ಕೆ ಒಂದೊಂದು ನೀತಿಗೆ ಒಂದೊಂದು ಕಥೆಯಿದೆ.
ಬಸವಣ್ಣನ ಮಹಾಮಾನವತ್ವವನ್ನು ಮನೋಹರ ರೂಪದಲ್ಲಿ
ಪ್ರಕಾಶಪಡಿಸುವಲ್ಲಿ ನೂತನ ರಸಲಾಭವನ್ನು ವ್ಯಕ್ತಿಚಿತ್ರವನ್ನು ಜಗತ್ತಿಗೆ ಒದಗಿಸುವಲ್ಲಿ ಕುತೂಹಲದವನಾಗಿದ್ದಾನೆ. ಅವನು ಇಳಾತಳ ಪಾವನರುದ್ರಮೂತಿ ಭವಸಾಗರ ಕುಂಭ ಸಂಭವ ಅವನ
ಮತ್ತು ಅವನ ಘನಶರಣಪ್ರತಾನದ ಮಹತ್ವವನ್ನು ಈಶ್ವರನೋರ್ವನ ವಿನಾ ಉಳಿದ ದೇವತೆಗಳೂ
ತಿಳಿಯಲಸಮರ್ಥರಾಗಿರುವಾಗ ತನ್ನದೂ ಅಲ್ಲಿ ಜಡಬುದ್ಧಿಯೇ. ತನ್ನ ವಿದ್ವತ್ತೆಲ್ಲ,
ಭಕ್ತಿಯೆಲ್ಲ, ಕಾವ್ಯ ಮುಖವೆಲ್ಲ ಆ ಬಸವಣ್ಣನ ಮಹಿಮಾಬ್ಧಿಯ ಒಂದು ಸೀರ್ವನಿಯಷ್ಟು ಮಾತ್ರ. (42-59) ಕವಿಯ ಈ ಹೇಳಿಕೆಯ ಹಿನ್ನೆಲೆಯಲ್ಲಿ ಅವನ ಹೃದಯದ ಭಿತ್ತಿಯಲ್ಲಿ ಬಸವಣ್ಣ ಮೂಡಿ ಬಂದ ಅದ್ಭುತ
ಚಿತ್ರದ ಕಲ್ಪನೆಯೆಷ್ಟೆಂಬುದನ್ನು ಗಮನಿಸಬೇಕು. ‘ಷಡಕ್ಷರ ಕವಿಯ ದೈವದತ್ತ ಕವಿತಾ ಪ್ರತಿಭೆಯಲ್ಲಿ ಮೂಡಿಬಂದ ಬಸವಣ್ಣನ
ವ್ಯಕ್ತಿ ಚಿತ್ರ ಸಹೃದಯರ, ಭಕ್ತಿಜೀವನರಂಗ
ಪ್ರವೇಶಿಸುವರ ಅಂತಃಕರಣದ ಬಳಿಗೆ ವಿನೂತನಾಕಾರದಲ್ಲಿ ಬಂದು ವಿನಮ್ರಭಾವದಿಂದ ತಲೆಬಾಗುವಂತೆ
ಮಾಡಿದೆ’ ಎಂಬ ಎರೇಸೀಮೆಯವರ ಮಾತು
ಒಪ್ಪತಕ್ಕದ್ದಾಗಿದೆ. ಷಡಕ್ಷರ ಕವಿ ವೀರಶೈವ ಪುರಾಣ ಸಂಪ್ರದಾಯದಲ್ಲಿ ವಿದ್ವತ್‍ಪೂರ್ಣವಾದ
ಭಾಷೆಯಲ್ಲಿ ತನ್ನ ಕಾವ್ಯವನ್ನು ನಿರ್ಮಿತಿಗೊಳಿಸಿ ಆಕಲ್ಪಾಂತ ಚಿರಸ್ಥಾಯಿಗೊಳಿಸಿದ್ದಾನೆ. ಬಸವಣ್ಣನ ಚರಿತ್ರೆಯನ್ನು ಇಷ್ಟೊಂದು ವಿದ್ವತ್
ಪೂರ್ಣಭಾಷೆಯಲ್ಲಿ ಪ್ರಕಟಿಸಿದ ಕವಿ ಕನ್ನಡದಲ್ಲಿ
ಇನ್ನೊಬ್ಬನಿಲ್ಲ. ಬಸವರಾಜ ವಿಜಯದಲ್ಲಿ ಸುಮಾರು 60 ರಷ್ಟು ಲಲಿತಪದ ವೃತ್ತಗಳನ್ನು ಬಳಸಿ ಕವಿ ಬಸವಣ್ಣನ ಸುತ್ತಿ
ಮಾಡಿದ್ದಾನೆ. ಈ ಕೃತಿಯಲ್ಲಿ ಬಸವಣ್ಣನ ಭವ್ಯ
ವ್ಯಕ್ತಿತ್ವವನ್ನು ಮನದಾಳದಲ್ಲಿ ಮೂಡಿಸಿಕೊಂಡು ಅದಕ್ಕೊಂದು ರೂಪ ಕೊಡಲು ಪ್ರಯತ್ನಿಸಿದ್ದಾನೆ. ಷಡಕ್ಷರ ಕವಿಯ ಬಸವಣ್ಣನು
ಮುಖ್ಯವಾಗಿ ಭಕ್ತ,
ಭಕ್ತಪಕ್ಷಪಾತಿ. ಜೊತೆಗೆ ಪವಾಡ ಪುರುಷನೂ ಹೌದು. ಈ ಕೃತಿಯಲ್ಲಿ ಕ್ರಾಂತಿಕಾರಿ ಬಸವಣ್ಣನಿಗಿಂತ ಭಕ್ತ
ಬಸವಣ್ಣನೇ ಮೇಲುಗೈ ಪಡೆದಿದ್ದಾನೆ. ಕವಿಗೆ ಬಸವಣ್ಣನ ಆಂದೋಲನ ಮತ್ತು ಸಾಮಾಜಿಕ ನಾಯಕತ್ವಕ್ಕಿಂತ
ಭಕ್ತಿಯೇ ಮೇಲುಗೈ ಪಡೆದಿದೆ. ಈ ಪುರಾಣ ಕಾವ್ಯದಲ್ಲಿ ನಿರೂಪಿತವಾಗಿರುವ ಬಸವಣ್ಣನ ಜೀವಿತ ಕಥೆಯ
ಪ್ರಮಾಣ ಕಡಿಮೆಯಿದ್ದರೂ ವ್ಯಕ್ತಿತ್ವಕ್ಕೆ ಕುಂದುಂಟಾಗಿಲ್ಲ. ಬಸವಣ್ಣನ ಕಥೆ ಏಕಮುಖವಾಗಿ ಈ ಕೃತಿಯಲ್ಲಿ
ನಿರೂಪಿತವಾಗಿಲ್ಲದಿದ್ದರೂ ಬಸವಣ್ಣನ ವ್ಯಕ್ತಿತ್ವ ಪವಾಡಗಳಲ್ಲಿ ಮುಚ್ಚಿಹೋಗದಂತೆ ಎಚ್ಚರ ವಹಿಸಿರುವುದು
ಗಮನಾರ್ಹವಾಗಿದೆ.
ಗ್ರಂಥ ಋಣ
1. ಲಕ್ಕಣ್ಣ ದಂಡೇಶನ ಶಿವತತ್ವಚಿಂತಾಮಣಿ (ಸಂ.ಎಸ್.ಬಸಪ್ಪ)
ಪ್ರಾಚ್ಯವಿದ್ಯಾ ಸಂಶೋಧನಾಲಯ
ಮೈಸೂರು ವಿಶ್ವವಿದ್ಯಾಲಯ, ಮೈಸೂರು 1960
2. ಬಸವರಾಜ ವಿಜಯ ಭಾಗ 1 ಮತ್ತು2
ಗದ್ಯಾನುವಾದ ಪಂಡಿತ ಚೆನ್ನಪ್ಪ
ಎರೇಸೀಮೆ
ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು 1982
3. ಜಿ.ಎಸ್. ಸಿದ್ದಲಿಂಗಯ್ಯ:ಶೂನ್ಯ ಸಂಪಾದನೆಗಳು ಒಂದು ಅವಲೋಕನ
ಕನ್ನಡ ಸಾಹಿತ್ಯ ಪರಿಷತ್,
ಬೆಂಗಳೂರು 1996
4. ಸಿ.ನಾಗಭೂಷಣ:
1. ವೀರಶೈವಸಾಹಿತ್ಯ ಕೆಲವು ಒಳನೋಟಗಳು
ವಿಜೇತ ಪ್ರಕಾಶನ, ಗದಗ 2008
2.ನುಡಿಪಸರ, ಧಾತ್ರಿ ಪ್ರಕಾಶನ, ಬೆಂಗಳೂರು 2011
5. ಸಮಗ್ರ ಕನ್ನಡ ಸಾಹಿತ್ಯ ಚರಿತ್ರ ಸಂ.4 ( ಭಾಗ-2) ಮತ್ತು ಸಂ.5
ಸಂ. ಜಿ.ಎಸ್.ಶಿವರುದ್ರಪ್ಪ,
ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು, 1977 ಮತ್ತು 1982
6. ಎಚ್. ದೇವೀರಪ್ಪ: ಲಕ್ಕಣ್ಣ ದಂಡೇಶನ ಶಿವತತ್ವಚಿಂತಾಮಣಿ
ಕರ್ನಾಟಕ ವಿಶ್ವವಿದ್ಯಾಲಯ,
ಧಾರವಾಡ. 1974
7. ಚಾಮರಸನ ಪ್ರಭುಲಿಂಗಲೀಲೆ ಗದ್ಯಾನುವಾದ ಎಸ್.ವಿದ್ಯಾಶಂಕರ
ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು 1982
8. ಎಂ.ಚಿದಾನಂದ ಮೂರ್ತಿ: ಸ್ಥಾವರ - ಜಂಗಮ
ಚಿದಾನಂದ ಸಮಗ್ರ ಸಂಪುಟ-4
ಸ್ವಪ್ನಪುಸ್ತಕಾಲಯ,
ಬೆಂಗಳೂರು, 2004