ಕನ್ನಡ ಸಾಹಿತ್ಯದ ಪ್ರಾಚೀನತೆ ಮತ್ತು ಶಾಸನಗಳು:ಇತ್ತೀಚಿನ ಸಂಶೋಧನಾ ನಿಲುವುಗಳು ಡಾ.ಸಿ.ನಾಗಭೂಷಣ
ಕನ್ನಡವು ಯಾವಾಗ ಒಂದು ಸ್ವತಂತ್ರ ಭಾಷೆಯೆನಿಸಿತು, ಯಾವಾಗ ಸಂಸ್ಕೃತದ ಸಂಪರ್ಕಕ್ಕೆ ಬಂದಿತು, ಯಾವಾಗ ಲಿಪೀಕರಣಗೊಂಡಿತು ಎನ್ನುವ ಬಗ್ಗೆ ಖಚಿತ ಮಾಹಿತಿಯಿಲ್ಲ. ಆದರೆ ಪ್ರಾಕೃತ, ಕನ್ನಡ, ಸಂಸ್ಕೃತವೂ ಸೇರಿದಂತೆ ಭಾರತದ ಅನೇಕ ಭಾಷೆಗಳ ಲಿಪಿಮೂಲ ಬ್ರಾಹ್ಮಿಯೇ ಎಂದು ಹೇಳಲಾಗುತ್ತಿದೆ. ಅಶೋಕನ ಶಿಲಾಶಾಸನಗಳಿರುವುದೂ ಇದೇ ಲಿಪಿಯಲ್ಲಿ. ಪ್ರಾಕೃತದಂತೆ ಕನ್ನಡವೂ ಸಂಸ್ಕೃತದಿಂದ ಕೆಲವನ್ನು ತತ್ಸಮವಾಗಿ, ಹಲವನ್ನು ತದ್ಭವವಾಗಿ ತೆಗೆದುಕೊಂಡಿತು. ಕಾಲನಿರ್ಣಯದ ದೃಷ್ಟಿಯಿಂದ ಶಾಸನಗಳು ಅತ್ಯಂತ ವಿಶ್ವಾಸಾರ್ಹ ದಾಖಲೆಗಳು. ಆಧುನಿಕ ಕಾಲಘಟ್ಟದಲ್ಲಿ ನಾವು, ಪ್ರಾಚೀನ ಶಾಸನಸಾಹಿತ್ಯವನ್ನು ಒಳಗೊಂಡ ಹಾಗೆ ಆಧುನಿಕ ಪೂರ್ವಕಾಲದ ಕನ್ನಡ ಸಾಹಿತ್ಯವನ್ನು ಪ್ರಾಚೀನ ಸಾಹಿತ್ಯ ಎಂಬುದಾಗಿ ಗಮನಿಸಿದ್ದು, ಇತ್ತೀಚಿನ ಸಂಶೋಧನೆಯಲ್ಲಿ ಕನ್ನಡ ಭಾಷೆ-ಸಾಹಿತ್ಯದ ಪ್ರಾಚೀನತೆಯನ್ನು ಕುರಿತು ನಡೆದ ಅಧ್ಯಯನದಲ್ಲಿ ಶಾಸನಗಳನ್ನು ಆಧರಿಸಿದ ಸಂಶೋಧನೆಯಲ್ಲಿ ಇಲ್ಲಿಯವರೆಗೂ ತಾಳಿದ ನಿಲುವುಗಳನ್ನು ಪುನರ್ ಪರಿಶೀಲನೆ ಮಾಡುವಂತಾಗಿದೆ.
ಶಾಸನಗಳು ಕಾವ್ಯವಾಗಿ ಉದ್ದಿಷ್ಟವಾಗದ ವ್ಯವಹಾರಿಕ ದಾಖಲೆಗಳು ಆಗಿರುವುದರಿಂದ ಸಹಜವಾಗಿ ಒಂದು ಭಾಷೆಯ ಆರಂಭಕಾಲದಲ್ಲಿಯೇ ಅವು ಕಾಣಿಸಿಕೊಂಡಿವೆ. ಹೀಗಾಗಿ ಯಾವುದೇ ಭಾಷೆಯ ಮತ್ತು ಸಾಹಿತ್ಯದ ಉಗಮದ ವಿಷಯವಾಗಿ ಶಾಸನಗಳ ನೆರವು ಅಪೇಕ್ಷಣೀಯ. ಈ ಅನಿಸಿಕೆ ಕನ್ನಡ ಭಾಷೆ ಮತ್ತು ಸಾಹಿತ್ಯದ ವಿಷಯದಲ್ಲಿಯೂ ಹೊರತಲ್ಲ. ಆರಂಭಕಾಲದ ಶಾಸನಗಳಲ್ಲಿ ಭಾಷೆ ಸಂಸ್ಕೃತವಾದರೂ ಕೆಲವೆಡೆ ದತ್ತಿ ನೀಡಿದ ಭೂಮಿಯ ವಿವರಗಳು, ಮೇರೆಗಳ ವಿವರಗಳನ್ನು ಕೊಡುವಾಗ ಕನ್ನಡ ಭಾಷೆಯನ್ನು ಉಪಯೋಗಿಸಿವೆ. ಬಾದಾಮಿ ಚಾಲುಕ್ಯರ, ಗಂಗರ ಹಾಗೂ ರಾಷ್ಟ್ರಕೂಟ ಅರಸುಮನೆತನಗಳ ಕಾಲದ ಶಾಸನಗಳು ಕನ್ನಡ ಭಾಷೆಯನ್ನು ಅದರಲ್ಲಿಯೂ ವ್ಯವಹಾರಿಕ ಭಾಷೆಯನ್ನು ಅಲ್ಲಲ್ಲಿ ಬಳಸಲ್ಪಟ್ಟಿವೆ. ಶಾಸನಗಳು ಸಮಾಜದ ಅನೇಕ ವಿಷಯಗಳ ದಾಖಲೆಗಳನ್ನು ಒದಗಿಸಿದರೂ ಅದು ಭಾಷೆಯಲ್ಲಿಯೇ ಅಂತಸ್ಥಗೊಂಡಿರುತ್ತದೆ ಎಂಬುದು ಗಮನಿಸ ತಕ್ಕ ಸಂಗತಿಯಾಗಿದೆ. 9 ನೇ ಶತಮಾನಕ್ಕಿಂತ ಮುಂಚೆಯೇ ಕನ್ನಡ ಭಾಷೆಯ ಒಂದು ಸ್ಥಿತಿ (ಪೂರ್ವದ ಹಳೆಗನ್ನಡ) ಆಗಿ ಹೋಗಿರುವ ಬಗೆಗೆ ಮತ್ತು ಕ್ರಿ.ಶ.5 ನೇ ಶತಮಾನಕ್ಕಿಂತ ಪೂರ್ವದಲ್ಲಿಯೂ ಕನ್ನಡ ಇದ್ದಿದ್ದು ಅದು ಮೂಲಕನ್ನಡ ಎಂಬುದಾಗಿ ಗುರುತಿಸಲ್ಪಟಿದೆ. ಮೂಲ ಕನ್ನಡದ ಚಹರೆಗಳನ್ನು ಆ ಕಾಲ ಘಟ್ಟದ ಶಾಸನಗಳಲ್ಲಿ ಗುರುತಿಸ ಬಹುದಾಗಿದೆ. ಶಾಸನಾಧಾರವನ್ನು ಪರಿಶೀಲಿಸಿದರೆ, ಪಂಪ ಪೂರ್ವಯುಗಕ್ಕೆ ಸೇರಿದ ಸಾವಿರದ ಸಂಖ್ಯೆಯನ್ನು ಮೀರಿದ ಶಾಸನಗಳು ಪ್ರಕಟವಾಗಿವೆ. ಇವುಗಳಲ್ಲಿ ಕಾಲದ ದೃಷ್ಟಿಯಿಂದ ಕ್ರಿ.ಪೂ. ಮೂರನೆಯ ಶತಮಾನಕ್ಕೆ ಸೇರಿದ ಅಶೋಕನ ಶಾಸನಗಳು ಪ್ರಾಕೃತ ಭಾಷೆಯಲ್ಲಿ ಬ್ರಾಹ್ಮೀ ಲಿಪಿಯಲ್ಲಿ ಇವೆ. ಇವುಗಳಲ್ಲಿ ಬ್ರಹ್ಮಗಿರಿ ಶಾಸನವೂ ಒಂದು. ಇದರಲ್ಲಿ ಇರುವ ‘ಇಸಿಲ’ ಎಂಬ ಶಬ್ದ ಕನ್ನಡವೆಂದು ಪ್ರೊ. ಡಿ.ಎಲ್. ನರಸಿಂಹಾಚಾರ್ಯರು ಬೇರೆ ಬೇರೆ ಆಧಾರಗಳನ್ನು ನೀಡಿ ನಿರ್ಣಯಿಸಿದ್ದಾರೆ. ಆದ್ದರಿಂದ ಕನ್ನಡ ನುಡಿ ಕ್ರಿ.ಶಕದ ಹಿಂದಿನಿಂದಲೂ ಇದ್ದು, ಕ್ರಿ.ಶ. ಎರಡು ಅಥವಾ ಮೂರನೆಯ ಶತಮಾನಗಳಲ್ಲಿ ಅದಕ್ಕೆ ಲಿಪಿ ಪ್ರಾಪ್ತವಾಗಿರಬೇಕೆಂಬ ಅಭಿಪ್ರಾಯವನ್ನು ಕೆಲವು ವಿದ್ವಾಂಸರು ವ್ಯಕ್ತಪಡಿಸಿದ್ದಾರೆ. ತಮಿಳು ನಾಡಿನ ಸಿತ್ತಿನವಾಸಲ್ ಎಂಬಲ್ಲಿ ದೊರೆಕಿದ ಶಾಸನದಲ್ಲಿ ಕೆಲವು ಕನ್ನಡ ಪದಗಳು ಕಂಡು ಬಂದಿರುವುದನ್ನು ವಿದ್ವಾಂಸರು ಉಲ್ಲೇಖ ಮಾಡಿದ್ದಾರೆ. ಈ ಶಾಸನೋಕ್ತ ಉದಾಹರಣೆಗಳು ಕ್ರಿ.ಸ್ತಪೂರ್ವ 2ನೇ ಶತಮಾನದಿಂದ ಒಂದನೆಯ ಶತಮಾನದ ಅವಧಿಗೆ ಸೇರಿದ ದಾಖಲೆಗಳು. ಇದನ್ನು ಹೊರತು ಪಡಿಸಿದರೆ ಕ್ರಿ.ಶ. 450ರ ದೆಂದು ಬಹಳ ಮಂದಿ ವಿದ್ವಾಂಸರು ತೀರ್ಮಾನಿಸಿರುವ ಹಲ್ಮಿಡಿ ಶಾಸನವೇ ಕನ್ನಡ ನುಡಿಯ ಅತ್ಯಂತ ಪ್ರಾಚೀನತಮ ದಾಖಲೆ. ಹಲ್ಮಿಡಿ ಶಾಸನದ ಹಿಂದು ಮುಂದಿನ ಒಂದು ಶತಮಾನದ ಅವಧಿಯಲ್ಲಿ, ದೀರ್ಘತೆ ಮತ್ತು ಪ್ರೌಢಿಮೆಯಲ್ಲಿ ಅದನ್ನು ಸರಿಗಟ್ಟುವ ಬೇರೆ ಶಾಸನಗಳಿಲ್ಲ. ಇಲ್ಲಿಯ ಪ್ರೌಢ ಭಾಷಾ ಸ್ವರೂಪವನ್ನು ಗಮನಿಸಿದರೆ, ಈ ಶಾಸನಕ್ಕಿಂತ ಕೊನೆಯಪಕ್ಷ ಎರಡು ಶತಮಾನಗಳ ಹಿಂದೆ ಕನ್ನಡ ಭಾಷೆಯ ಬರವಣಿಗೆ ಪ್ರಾರಂಭವಾಗಿರಬೇಕೆಂದೂ ಅದಕ್ಕಿಂತ ಒಂದು ಶತಮಾನದ ಹಿಂದೆಯಾದರೂ ಈ ಭಾಷೆ ಅಸ್ತಿತ್ವಕ್ಕೆ ಬಂದಿರಬೇಕೆಂದೂ ಭಾವಿಸಲು ಅಡ್ಡಿಯಿಲ್ಲ ಎಂಬ ಅನಿಸಿಕೆಯು ಕೆಲವು ವಿದ್ವಾಂಸರಿಂದ ವ್ಯಕ್ತವಾಗಿದೆ. ಇದಾದ ಮೇಲೆ ತಮಟಕಲ್ಲು ಪದ್ಯ ಶಾಸನ ದೊರೆತಿದ್ದು ಹಲ್ಮಿಡಿ ಶಾಸನದಂತೆ ಇದೂ ಸಂಸ್ಕೃತ ಭೂಯಿಷ್ಠವಾಗಿದೆ. ಗುಣ ಮಧುರನೆಂಬ ವ್ಯಕ್ತಿಯ ಪ್ರಶಸ್ತಿಯ ವಿವರಣೆ ಇದರಲ್ಲಿದೆ.
ಲಭ್ಯವಾಗಿರುವ ಅತ್ಯಂತ ಹಳೆಯ ಕನ್ನಡ ಶಾಸನಗಳು ಮತ್ತು ಸಾಹಿತ್ಯಕ್ಕೆ ಮೊದಲಿನಿಂದಲೇ ಸುಮಾರು ಕ್ರಿ.ಪೂ.2ನೇ ಶತಮಾನದಿಂದ ಕ್ರಿ.ಶ. 4ನೇಶತಮಾನದ ಅವಧಿಯಲ್ಲಿ ತಮಿಳು-ಬ್ರಾಹ್ಮಿ ಲಿಪಿಗಳ ಮೇಲೆ ಹಳಗನ್ನಡದ ಪ್ರಭಾವ ಆಗಿರುವುದು ಅಧ್ಯಯನದಿಂದ ತಿಳಿದು ಬಂದಿದೆ ಎನ್ನುವ ಡಾ.ಐರಾವತಮ್ ಮಹದೇವನ್ ಅವರು ತಮ್ಮ Early Tamil Epigraphy ಪುಸ್ತಕದಲ್ಲಿಯ ಮಾತುಗಳು ಕನ್ನಡ ಲಿಪಿಯು ಕ್ರಿ.ಪೂ.2 ನೇಶತಮಾನದ ವೇಳೆಗಾಗಲೇ ಅಸ್ತಿತ್ವದಲ್ಲಿದ್ದಿತು ಎನ್ನುವುದನ್ನು ಸಾಬೀತು ಪಡಿಸುತ್ತದೆ. ಜೊತೆಗೆ ಹಳಗನ್ನಡ ಪ್ರಭಾವ ತಮಿಳು ಭಾಷೆಯ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂಬುದನ್ನು ಯಾರೂ ಸಂದೇಹವನ್ನು ವ್ಯಕ್ತಪಡಿಸದ ರೀತಿಯಲ್ಲಿ ಆಧಾರಪೂರ್ವಕವಾಗಿ ಮಂಡಿಸಿದ್ದಾರೆ. ತಮಿಳುನಾಡಿನಲ್ಲಿ ಕ್ರಿ.ಪೂ. ಕಾಲಘಟ್ಟಕ್ಕೆ ಸೇರಿದ ಶಾಸನಗಳನ್ನು ಅಧ್ಯಯನ ಮಾಡಿರುವ ಅವರು ಅಲ್ಲಿನ ಕೆಲವು ಶಾಸನಗಳಲ್ಲಿ ಸಿಗುವ ಪದಗಳು ತಮಿಳು ಭಾಷೆಗೆ ಸೇರಿದವುಗಳಲ್ಲ ಅವು ಕನ್ನಡದ ಪದಗಳಾಗಿ ಬೇಕು ಎಂಬುದಾಗಿ ವಾದಿಸುತ್ತಾರೆ. ಸಿತ್ತಿನಿವಾಸಿಲ್ ಎಂಬಲ್ಲಿ ದೊರತ ಶಿಲಾಶಾಸನದಲ್ಲಿ ಇಂತಹ ಪದಗಳನ್ನು ಅವರು ಗುರುತಿಸಿ ತೋರಿಸಿದ್ದಾರೆ. ಕ್ರಿ.ಪೂ. ಕೊನೆಯ ಎರಡು ಮೂರು ಶತಮಾನಗಳಲ್ಲಿ ಕನ್ನಡ ಪದಕೋಶ, ವ್ಯಾಕರಣ ಪ್ರಯೋಗ, ಸಂಬೋಧಕ ಪ್ರಕ್ರಿಯೆಗಳು ಎಷ್ಟರ ಮಟ್ಟಿಗೆ ಬೆಳೆದಿದ್ದವು ಎಂಬುದನ್ನು ಮತ್ತು ಜೈನ ವಲಸಿಗರ ಮೂಲಕ ಸಮಕಾಲೀನ ತಮಿಳು ಬ್ರಾಹ್ಮಿ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಿದ್ದವು ಎಂಬುದನ್ನು ಸಾಧಾರಪೂರ್ವಕವಾಗಿ ವಿವರಿಸಿದ್ದಾರೆ.
ಕೆಲವು ನಿದರ್ಶನಗಳು: ‘’ಎರುಮಿನಾಟು’’ ಎಂಬ ಕನ್ನಡ ಪದದ ತಮಿಳು ರೂಪಾಂತರ ‘’ಎರುಮೈನಾಟು’’
ಕವುಟಿ ಎಂಬುದು ಒಬ್ಬ ವ್ಯಕ್ತಿಯ ಇಲ್ಲವೇ ಮನೆತನದ ಹೆಸರು
ಗವುಡಿ ಗೌಡಿಗೆ ಸಮಾನವಾಗಿದೆ.( ಗವುಂಡಿ ಉಚ್ಚಾರಣೆಯ ರೂಪ, ಬರೆಹ ರೂಪವಲ್ಲ)
ಪೊಶಿಲ್(ಪೊಸ್ತಿಲ್) ಎಂದರೆ ದ್ವಾರ ಅಥವಾ ಬಾಗಿಲು- ಇದು ಕನ್ನಡದ ಹೊಸಿಲುವಿನಿಂದ ಪಡೆದು ಕೊಳ್ಳಲಾಗಿದೆ. ತಾಯಿಯರ್ ಎಂಬ ಗೌರವ ಸೂಚಕ ಪದವು ಕನ್ನಡ ಮೂಲದ್ದು. ವ್ಯಕ್ತಿನಾಮ ಮತ್ತು ಗೌರವ ಸೂಚಕ ತಮಿಳು ಪದಗಳ ಮೇಲೆ ಕನ್ನಡದ ಪ್ರಭಾವ ಇದೆ. ಈ ವಿವರಗಳು ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅಭಿಜ್ಞೆಗೆ ಅಧಿಕೃತ ಆಕರಗಳು ಎಂದು ತಕ್ಕ ಮಟ್ಟಿಗೆ ಭಾವಿಸ ಬಹುದಾಗಿದೆ. ಐರಾವತಮ್ ಮಹದೇವನ್ ಅವರು ಉಲ್ಲೇಖಿಸಿದ ಶಾಸನಗಳನ್ನೇ ಆಧರಿಸಿ ದಿನಾಂಕ:೨೩-೧೧-೨೦೦೮ ರಂದು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರೆದ ಲೇಖನವೊಂದರಲ್ಲಿ ಕೆ.ವಿ.ನಾರಾಯಣ ಅವರೂ ಸಹ ಈ ಶಾಸನಗಳು ರಚನೆಯಾಗುವ ಕಾಲಕ್ಕೆ ಕನ್ನಡ ಭಾಷೆ ಜನರ ಆಡುಮಾತಾಗಿದ್ದಿತು ಎಂಬುದು ಶಾಸನಗಳಿಂದಲೇ ಸೂಚಿತವಾಗುತ್ತದೆಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಅಶೋಕನ ನಂತರ ಕಾಲದಲ್ಲಿ ಕಂಡು ಬರುವ ಕೆಲವು ಪ್ರಾಚೀನ ಶಾಸನಗಳಲ್ಲಿ ಕನ್ನಡ ಶಬ್ದಗಳಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ. ಕ್ರಿ.ಪೂ. ಒಂದನೆಯ ಶತಮಾನದ ವಡಗಾವ್ ಮಾಧವಪುರ ಶಾಸನದಲ್ಲಿ ಕಂಡು ಬರುವ ʻಣಾಠಪತಿʼ ಪ್ರಯೋಗದಲ್ಲಿಯ ಣಾಠಪತಿ ಎಂಬುದು ನಾಟಪತಿ ಆಗಿರ ಬಹುದು ಎನ್ನುವ ಅಭಿಪ್ರಾಯವನ್ನು ಎಂ.ಬಿ.ನೇಗಿನಾಳ ಅವರು ವ್ಯಕ್ತಪಡಿಸುತ್ತಾರೆ. ಅವರ ಪ್ರಕಾರ ಪ್ರಾಕೃತ ಶಾಸನಗಳಲ್ಲಿ ನಕಾರಕ್ಕೆ ಬದಲು ಣ ಕಾರ ವಿರುವುದು ಅಪರೂಪವೇನಲ್ಲ. ಆದ್ದರಿಂದ ನಾಟ ಎಂಬ ಪೂರ್ವ ಪದವು ಇಂದು ಪ್ರಚುರವಾಗಿರುವ ನಾಡು ಎಂಬುದರ ಪ್ರಾಚೀನ ರೂಪ.( ಪುನ್ನಾಟ, ಕರ್ನಾಟ ಇತ್ಯಾದಿ ಪದಗಳು) ಅದೇರೀತಿ ತಮಿಳಿನಲ್ಲಿಯೂ ನಾಟ್ಟು, ನಾಟ್ಟಾನ್ ಮುಂತಾದ ಪ್ರಯೋಗಗಳಿರುವುದನ್ನು ಉಲ್ಲೇಖಿಸುತ್ತಾ ವಡಗಾವ್ ಶಾಸನದಲ್ಲಿಯ ನಾ(ಣಾ)ಡಪತಿ ಪದವು ಕನ್ನಡಭಾಷೆಯ ಅಸ್ತಿತ್ವನ್ನು ಸಾಬೀತು ಪಡಿಸುವಲ್ಲಿ ಆಧಾರವಾಗಿ ಪರಿಣಮಿಸ ಬಹುದು ಎನ್ನುವ ನಿಲುವನು ವ್ಯಕ್ತಪಡಿಸಿದ್ದಾರೆ. ಇವರ ಅನಿಸಿಕೆಯೂ ಯೋಚಿಸತಕ್ಕದ್ದಾಗಿದೆ. ಪ್ರಾಕೃತ ಶಾಸನಗಳಲ್ಲಿ ಕನ್ನಡದ ಪ್ರಾಚೀನ ಶಬ್ದರೂಪಗಳು ದೊರೆಯುತ್ತವೆ ಎಂಬುದಕ್ಕೆ ವಡಗಾಂ ಮಾಧವಪುರದ ಶಾಸನದ ಜೊತೆಗೆ ಮಳವಳ್ಳಿಯ ಪ್ರಾಕೃತ ಶಾಸನವನ್ನು ಪರಿಶೀಲಿಸ ಬಹುದಾಗಿದೆ.ಈ ಶಾಸನದಲ್ಲಿ ಮಳವಳ್ಳಿಯನ್ನು ಮಟ್ಟಪಟ್ಟಿ ಎಂದು ಕರೆಯಲಾಗಿದ್ದು, ಇಲ್ಲಿಯ ಉತ್ತರಪದ ಮಟ್ಟಿ ಎಂಬುದು ಗ್ರಾಮ ಎನ್ನುವ ಅರ್ಥವನ್ನು ಕೊಡುತ್ತದೆ ಎಂಬುದಾಗಿ ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಹಾಗೆಯೇ ಶಾತವಾಹನರ ಕೆಲವು ಪ್ರಾಕೃತ ಶಾಸನಗಳಲ್ಲಿ ಉಲ್ಲೇಖಿಸಲ್ಪಟ್ಟ ಪುಲುಮಾಯಿ ಮತ್ತು ವಿಲಿಯವಾಕುರ ಶಬ್ದಗಳು ಕನ್ನಡದವೇ ಅಥವಾ ಅನ್ಯಮೂಲದವೇ ಎಂಬುದರ ಬಗೆಗೆ ಗೋವಿಂದ ಪೈ, ಡಿ.ಎಲ್.ಎನ್. ಎಂ.ಎಚ್. ಕೃಷ್ಣ ಮುಂತಾದ ವಿದ್ವಾಂಸರೂ ಚರ್ಚಿಸಿದ್ದರೂ ಸರ್ವಸಮ್ಮತವಾದ ನಿಲುವಿಗೆ ಬರಲು ಸಾಧ್ಯವಿಲ್ಲವಾಗಿದೆ.
ಕನ್ನಡನಾಡಿನಲ್ಲಿ ಶಾಸನಸಾಹಿತ್ಯದಲ್ಲಿ, ಈಗ ತಿಳಿದ ಮಟ್ಟಿಗೆ ಮೊದಲಿಗೆ ಕಾಣಿಸಿ ಕೊಂಡಿರುವವುಗಳೆಂದರೆ, ಕ್ರಿ.ಪೂ.3ನೇ ಶತಮಾನದ ಮೌರ್ಯದೊರೆ ಅಶೋಕನ ಪ್ರಾಕೃತಭಾಷೆಯ ದಮ್ಮ ಲಿಪಿಗಳಿಂದ ಕೂಡಿದ ಪ್ರಾಕೃತಶಾಸನಗಳು. ರಾಯಚೂರು ಮತ್ತು ಚಿತ್ರದುರ್ಗದ ಕೆಲವು ಪ್ರದೇಶಗಳಲ್ಲಿ ಕಂಡುಬಂದಿರುವ ಈ ಶಿಲಾಲೇಖಗಳು ಸರಳ ಸಹಜ ಗದ್ಯದಲ್ಲಿದ್ದು ಇವು ಆಡು ಭಾಷೆಯ ಸಹಜ ಗತಿಗೆ ಹತ್ತಿರವಾಗಿವೆ. ಗದ್ಯದಲ್ಲಿಯ ಈ ಮಾಧ್ಯಮ ಸಹಜೋಕ್ತಿ ಕ್ರಮದಲ್ಲಿ ವಸ್ತುನಿಷ್ಠೆಯ ಗುರಿಯನ್ನು ಸಮರ್ಥವಾಗಿ ಸಾಧಿಸಬಲ್ಲದು ಎಂಬ ವಿಚಾರ ಅಶೋಕನ ಈ ಆರಂಭಕಾಲೀನ ಶಾಸನಗಳಿಂದಲೇ ನಮಗೆ ಮನವರಿಕೆ ಯಾಗುತ್ತದೆ.
ಕ್ರಿ.ಪೂ.3ನೇ ಶತಮಾನದ ಅಶೋಕನ ಬ್ರಹ್ಮಗಿರಿ ಶಾಸನದಲ್ಲಿಯ ಸುವಣ್ಣ ಗಿರೀತೆ ಅಯಪುತಸ ಮಹಾಮಾತಾನಂ ಚ ವಚನೇನ ಇಸಿಲಸಿ ಮಹಾಮಾತಾ...’ ಎಂಬ ಪ್ರಾಕೃತ ವಾಕ್ಯದಲ್ಲಿ ಬರುವ ‘ಇಸಿಲ’ ಎಂಬ ಸ್ಥಳವಾಚಿ ಪದವು ಅಚ್ಚಗನ್ನಡವೆಂದೂ, ತೇದಿಯುಳ್ಳ ಅತ್ಯಂತ ಪ್ರಾಚೀನವಾದ ಕನ್ನಡ ಪದವೆಂದು ಮೊದಲಿಗೆ ಆಚಾರ್ಯ ಡಿ.ಎಲ್.ಎನ್. ಅವರು ವ್ಯಕ್ತಪಡಿಸಿದ್ದರು. ಅವರ ಅಭಿಪ್ರಾಯದಲ್ಲಿ ಕನ್ನಡದ ಇಸು, ತಮಿಳಿನಲ್ಲಿ ‘ಎಸೆ’ ಆಗುವುದು; ತಮಿಳಿನ ‘ಎಯಿಲ್’ ಪದ ‘ಕೋಟೆ’ಯನ್ನು ಸೂಚಿಸುವುದು; ಕೋಟೆಯೊಡನೆ ಎಸೆ ಸೇರಿದರೆ, ಕೋಟೆಯಿಂದೆಸೆ, ಅಂದರೆ ‘ಕೋಟೆಯಿಂದ ಬಾಣಬಿಡು’ ಎಂಬ ವಿವರಗಳನ್ನು ಹೇಳುತ್ತಾ ಇಸಿಲ ಎಂಬುದು ಕೋಟೆಯನ್ನು ಹೊಂದಿದ್ದ ಊರು ಎಂದು ಅರ್ಥೈಸಿರುವುದನ್ನು ಕಾಣಬಹುದಾಗಿದೆ. ತೀನಂಶ್ರೀ ಅವರು ಕರ್ನಾಟಕ ಪರಂಪರೆ ಪುಸ್ತಕದಲ್ಲಿ ಇಸಿಲ ಎನ್ನುವ ಸ್ಥಳನಾಮವು ಕನ್ನಡ ಭಾಷೆ ಕ್ರಿ.ಪೂ.3ನೇ ಶತಮಾನದಲ್ಲಿ ಅಸ್ತಿತ್ವದಲ್ಲಿದ್ದಿತು ಎಂಬುದಕ್ಕೆ ಪುರಾವೆಯಾಗಿದೆ ಎಂದಿದ್ದಾರೆ. ತೀನಂಶ್ರೀ.ಅವರು ಡಿ.ಎಲ್.ಎನ್. ಅವರಿಗಿಂತ ಹೆಚ್ಚು ಎಚ್ಚರಿಕೆ ಮತ್ತು ಆತಂಕದಿಂದ ಮಾಡಿದ ಚರ್ಚೆಯ ಮುಖ್ಯ ಅಂಶಗಳೆಂದರೆ: ‘ಇಸಿಲ’ ಪದದ ವ್ಯುತ್ಪತ್ತಿಯನ್ನು ಶೋಧಿಸುವುದು ಕಷ್ಟಕರ; ಇದು ‘ಇಸಿ’ ಶಬ್ದದಿಂದ ನಿಷ್ಪನ್ನವಾಗುವುದೆಂಬುದನ್ನು ಒಪ್ಪಲೂ ತೊಂದರೆಗಳಿವೆ; ಇಸಿಲಕ್ಕೂ ಎಸುವಿಗೂ ಸಂಬಂಧ ಕಲ್ಪಿಸುವುದೂ ಅಷ್ಟೇ ಕಷ್ಟಸಾಧ್ಯ; ಆದರೆ ಪ್ರೊ. ಡಿಎಲ್‍ಎನ್‍ರ ವಿದ್ವತ್ಪೂರ್ಣ ಕಲ್ಪನೆ ಸರಿಯಾಗಿದ್ದ ಪಕ್ಷದಲ್ಲಿ ‘ಇಸಿಲ’ವು ಮೊದಲ ವಿಶ್ವಾಸಾರ್ಹ ಕನ್ನಡ ಪದವಾಗುವ ಸಾಧ್ಯತೆ ಇದೆ ಎಂಬ ನಿಲುವನ್ನು ವ್ಯಕ್ತಪಡಿಸಿದ್ದರು. ಚಿದಾನಂದಮೂರ್ತಿಯವರು ಇವರೀರ್ವರ ಅಭಿಪ್ರಾಯಗಳನ್ನು ‘ಸಂಗ್ರಹಿಸಿ’ 1972ರ ‘ಸಾಧನೆ’ ಸಂಚಿಕೆಯಲ್ಲಿ ಬರೆದ ಲೇಖನದಲ್ಲಿ, ‘ಇಸಿಲ’ ದಾಖಲೆಗೆ ದೊರಕುವ ಮೊದಲ ಕನ್ನಡ ಪದವೆಂದು, ಕ್ರಿ.ಪೂ. ಮೂರನೆಯ ಶತಮಾನಕ್ಕಿಂತ ಮುಂಚೆಯೇ ಕನ್ನಡ ಪದಗಳು ಬಳಕೆಯಲ್ಲಿದ್ದವೆಂಬುದನ್ನು ಇದು ತೋರಿಸಿಕೊಡುವುದೆಂದು ಪ್ರತಿಪಾದಿಸಿ, ಈ ಹೆಸರಿನ ಊರು ಈಗಿರದಿದ್ದರೂ ಶಿವಮೊಗ್ಗ ಜಿಲ್ಲೆಯ 13ನೆಯ ಶತಮಾನದ ಶಾಸನವೊಂದರಲ್ಲಿ ಬರುವ ‘ಇಸಿಲಾಪುರ’ದ ಬಗ್ಗೆ ಹಾಗೂ ಎಸಲಾಪುರ, ಯೆಸೂರು, ಎಸಲೋರು ಎಂದು ಈಗಲೂ ಚಾಲ್ತಿಯಲ್ಲಿರುವ ಗ್ರಾಮನಾಮಗಳ ಬಗ್ಗೆ ಗಮನ ಸೆಳೆದು, ತಮ್ಮ ವಾದ ಗಟ್ಟಿಗೊಳಿಸಿದ್ದರು. ಈ ಎಲ್ಲಾ ವಿವರಗಳನ್ನು ಸೂಕ್ಷ್ಮವಾಗಿ ಗಮನಿಸಿಯೋ ಅಥವಾ ಇವಾವನ್ನೂ ಪ್ರಶ್ನಿಸದೆ ಸಾರಾಸಗಟಾಗಿ ಒಪ್ಪಿಕೊಂಡೋ, ಇಸಿಲವೇ ದಾಖಲೆಗೆ ಸಿಗುವ ಅತಿ ಪುರಾತನ ಕನ್ನಡ ಪದವೆಂಬ ಅಭಿಪ್ರಾಯವು ಬಹುಮಟ್ಟಿಗೆ ಎಲ್ಲಾ ವಿದ್ವಾಂಸರೂ ಅಂಗೀಕರಿಸಿದ್ದರು. ಬ್ರಹ್ಮಗಿರಿ ಮತ್ತು ಸಿದ್ಧಾಪುರ ಶಾಸನಗಳಲ್ಲಿ ಇದು ಸ್ಥಳನಾಮವಾಗಿ ಬಂದಿರುವುದರಿಂದ, ತಮಿಳಿನ ಎಯಿಲ್ ಪದವನ್ನು ಆಧರಿಸಿ, ಇದು ಕೋಟೆಯಿಂದ ಸುತ್ತುವರಿದ ನಗರವನ್ನು ಸೂಚಿಸುವುದೆಂಬ ನಿಲುವನ್ನು ಸ್ವೀಕರಿಸಲಾಯಿತು.
ಜೊತೆಗೆ ಇಸಿಲವು ಈಗ ಆಡುನುಡಿಯಾಗಿರುವ ಪ್ರದೇಶದೊಳಗೆ ಇದ್ದ ಒಂದು ಸ್ಥಳದ ಹೆಸರಾಗಿದೆ. ಕ್ರಿ.ಪೂ. 3 ನೇ ಶತಮಾದ ವೇಳೆಗೆ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯಲ್ಲಿ ಕೋಟೆಯನ್ನು ಕಟ್ಟಿಕೊಂಡು ಆಳುತ್ತಿದ್ದ ಕನ್ನಡ ಅರಸ ಇದ್ದನೆಂಬುದರ ಬಗೆಗೆ ಹಾಗೂ ಕನ್ನಡದ ಪ್ರಾಚೀನತೆಯನ್ನು ಮೌರ್ಯರ ಕಾಲಕ್ಕೆ ಕೊಡೊಯ್ಯುತ್ತದೆ ಎಂಬುದನ್ನು ಸಾಕೇತಿಕವಾಗಿ ಸೂಚಿಸುತ್ತದೆ ಎಂಬುದಾಗಿ ನಾವು ಹೇಳುತ್ತಾ ಬಂದಿದ್ದೇವೆ.
ಆದರೆ ಇತ್ತೀಚೆಗೆ ಡಾ.ಷ.ಶೆಟ್ಟರ್ ಅವರು, ಇಸಿಲ ಮತ್ತು ಸುವಣ್ಣಗಿರಿ ಅಶೋಕನ ಸಾಮ್ರಾಜ್ಯದ ದಕ್ಷಿಣ ಗಡಿಯ ಎರಡು ಮುಖ್ಯ ಆಡಳಿತ ಕೇಂದ್ರಗಳಾಗಿದ್ದವು. ಆಗ ಪ್ರಚಲಿತವಿದ್ದ ಪ್ರಾಕೃತ ಭಾಷೆಯಲ್ಲಿ ಇವನ್ನು ಅಶೋಕ ಹೆಸರಿಸಿದ್ದನು. ಆದರೆ ಇವು ಆತನೇ ಸೃಷ್ಟಿಸಿದ ಸ್ಥಳನಾಮಗಳೆಂಬುದರ ಪರವಾಗಲೀ ವಿರೋಧವಾಗಲೀ ಸಾಕ್ಷ್ಯಾಧಾರಗಳಿಲ್ಲ. ಈ ಶಾಸನಗಳಲ್ಲಿ ಪ್ರಸ್ತಾಪವಾಗಿರುವ ಇಸಿಲ ಪದವನ್ನು ಚರ್ಚಿಸಿದ ಕನ್ನಡ ವಿದ್ವಾಂಸರಾರೂ ಅಶೋಕಾನಂತರ ಬರೆಸಿದ ಕೆಲವು ಪ್ರಾಕೃತ ಶಾಸನಗಳಲ್ಲಿ ಈ ಪದ ಮರುಕಳಿಸಿರುವುದನ್ನು ಗಮನಿಸಿಲ್ಲ ಎಂದು ಹೇಳುತ್ತಾ (ಎಂ.ಬಿ.ನೇಗಿನಾಳ ಅವರು ತಮ್ಮ ಪೂರ್ವದ ಹಳಗನ್ನಡದ ಶಾಸನಗಳ ಸಾಹಿತ್ಯಕ ಅಧ್ಯಯನ ಪುಸ್ತಕದಲ್ಲಿ ಇಸಿಲ ಎಂಬ ಪದ ಕನ್ನಡ ಭಾಷೆಯ ಯಾವ ಹಂತದಲ್ಲೂ ಪ್ರಯೋಗದಲ್ಲಿ ಇರಲಿಲ್ಲ ಎಂಬುದನ್ನು ಸಾಧಾರವಾಗಿ ತೋರಿಸುತ್ತಾ ಇದೇ ಅಭಿಪ್ರಾಯನ್ನು ವ್ಯಕ್ತಪಡಿಸಿದ್ದಾರೆ) ಸಾತವಾಹನ ಅರಸ ವಾಸಿಷ್ಠೀಪುತ್ರ ಪುಳುಮಾವಿ ಆಳುತ್ತಿದ್ದಾಗ ಧಾನ್ಯಕಟಕದ ಚೈತ್ಯಿಕ ಶಾಖೆಗೆ ಸೇರಿದ ಕಹುತರ ಮತ್ತು ಇಸಿಲ ಎಂಬ ದಾನಿಗಳು, ಮಹಾಚೈತ್ಯದ ಪಶ್ಚಿಮ ದಿಕ್ಕಿನಲ್ಲಿ ಧರ್ಮಚಕ್ರವೊಂದನ್ನು ಸ್ಥಾಪಿಸಿದ್ದನ್ನು ಒಂದು ಪ್ರಾಕೃತ ಶಾಸನ ತಿಳಿಸುವುದು. ಈ ‘ಇಸಿಲ’ನು ಗಹಪತಿ ಪುರಿಯ ಪುತ್ರನೆಂಬ, ನಾಗನಿಕಾಳ ಪತಿ ಎಂಬುದಾಗಿ, ಈ ಧರ್ಮಕಾರ್ಯದಲ್ಲಿ ತಮ್ಮಿಬ್ಬರ ಮಕ್ಕಳನ್ನು ಇಸಿಲನ ಸೋದರ ಸೋದರಿಯರನ್ನೂ ಒಳಗೊಳಿಸಿಕೊಂಡಿದ್ದನೆಂಬ, ವಿವರಗಳು ಬಂದಿವೆ. ಈ ಶಾಸನದ ಮುಖ್ಯ ಪಾಠ ‘ಕಹುತತ ಗಹಪತಿಸ ಪುರಿಗಹಪತಿಸ ಚ ಪುತಸ ಇಸಿಲಿಸ ಸಭಾತುಕಸ...’ ಎಂದಿದೆ. ಇಲ್ಲಿ ಪುರುಷನಾಮವಾಗಿ ಇಸಿಲ ಪದ ಬಂದಿದೆ, ಆದರೆ ಈ ವ್ಯಕ್ತಿಯು ಇಸಿಲ ಗ್ರಾಮದಿಂದ ಗುರುತಿಸಿಕೊಂಡ ಸಾಧ್ಯತೆ ಇಲ್ಲದಿಲ್ಲ ಎಂಬುದಾಗಿ ಚರ್ಚಿಸುತ್ತಾ ಇತ್ತೀಚಿನ ದಶಕದಲ್ಲಿ ವಿಶೇಷ ಗಮನ ಸೆಳೆದಿರುವ ಕಲಬುರ್ಗಿ ಜಿಲ್ಲೆಯ ಚಿತಾಪುರ ತಾಲೋಕಿನ ಕನಗನಹಳ್ಳಿಯ ಪ್ರಾಕೃತ ಶಾಸನಗಳಲ್ಲೂ ಈ ಪದ ಬಳಕೆಯಾಗಿರುವುದನ್ನು ಗಮನಿಸಿ ಆ ಹಿನ್ನೆಲೆಯಲ್ಲಿ ಮೇಲಿನ ವಿದ್ವಾಂಸರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ತಮ್ಮ ನಿಲುವನ್ನು ಇಸಿಲದ ಬಗೆಗೆ ವ್ಯಕ್ತಪಡಿಸಿದ್ದಾರೆ.
ಕನಗನಹಳ್ಳಿಯ ಪ್ರಾಕೃತ ಶಾಸನಗಳ ಆ ಪಾಠಗಳು ಹೀಗಿವೆ:
ಅ) ‘ಥೇರಸ ಆಯ ಇಸಿರಖಿತಸ ಅತೇವಾಸಿನೀಯ ಭಿಖುನಿಯ ನಗುಯಾಯ ದೇಯ ಧಮ’ ಆ) ಸೇತಿವಯಿಕಾಯ ಇಸಲಿನಿಕಾಯ ದಾನಮ್’ ಇ) ಮಾತಾಯ ಇಸಿಲಾಯ ದಾನಮ್ ಸತೋ’,
ಇಲ್ಲಿ ಇಸಿಲಪದ ವ್ಯಕ್ತಿನಾಮವಾಗಿ ಬಂದಿದೆ, ಸ್ಥಳನಾಮವಾಗಿ ಅಲ್ಲ. ‘ಇಸಿರಕ್ಷಿತಾ’ ಎಂಬುದು ಒಬ್ಬ ಥೇರನನ್ನು, ಮತ್ತು ‘ಇಸಿಪಾಲಿತಾ’ ಎಂಬುದು ಸೇಟಿವಾಯಿಕ (ಶ್ರೀವಾಟಿಕಾ) ನಿವಾಸಿಯನ್ನು ಹೆಸರಿಸಿರುವವು. ಇಸಿಲ ಕೋಟೆಯ ರಕ್ಷಕನನ್ನಾಗಲೀ ಆಡಳಿತಗಾರನನ್ನಾಗಲೀ ಸೂಚಿಸಿಲ್ಲ. ಕೊನೆಯ ಶಾಸನವು ಇಸಿಲಮಾತೆಯನ್ನು ಉಲ್ಲೇಖಿಸುವುದು. ‘ಇಸಿರಖಿತ’ ಎಂಬ ಥೇರನ ಹೆಸರುಗಳು ಈ ಕಾಲದ ಬೌದ್ಧ ಶಾಸನಗಳಲ್ಲಿ ಸಾಕಷ್ಟು ಕಡೆ ಬಂದಿವೆ. ಸಾಂಚಿಯ ಶಾಸನಗಳಲ್ಲಿಯೇ ಇದು ಸುಮಾರು ಆರಕ್ಕೂ ಹೆಚ್ಚು ಬಾರಿ ಬಳಕೆಯಾಗಿರುವುದನ್ನು ಗಮನಿಸಬಹುದು. ಕನಗನಹಳ್ಳಿಯ ಶಾಸನಗಳಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳೆಲ್ಲರೂ ಬೌದ್ಧಮತದ ದಾನಿಗಳಾಗಿರುವರು ಎಂದು ಹೇಳುತ್ತಾ, ಡಿಎಲ್‍ಎನ್ ಮತ್ತು ತೀನಂಶ್ರೀ ಅವರು ಸ್ವಲ್ಪ ಆತಂಕದಿಂದಲೇ ‘ಇಸಿಲ’ವು ಕನ್ನಡ ಪದವಾಗಿರಬಹುದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು, ಆದರೆ ಇದು ‘ರಿಷಿಲ’ವಾಗಲಾರದು ಎಂದು ಒತ್ತಿ ಹೇಳಿದ್ದರು, ಆದರೆ ಇದನ್ನು ಅವರಾಗಲೀ, ಅವರ ಅಭಿಪ್ರಾಯವನ್ನು ಒಪ್ಪಿದವರಾಗಲೀ, ಸಾಧಾರವಾಗಿ ಸ್ಪಷ್ಟೀಕರಿಸಲಿಲ್ಲ, ಅಲ್ಲದೆ ಆವರೆಗೂ ಬೌದ್ಧ ಶಾಸನಗಳನ್ನು ಸಂಪಾದಿಸಿದ ಪಾಶ್ಚಾತ್ಯ ಮತ್ತು ಪೌರಾತ್ಯ ಪಂಡಿತರಾರೂ ಇವರ ನಿರ್ಣಯವನ್ನು ಎರಡನೆಯ ಗಹನವಾಗಿ ಪರಿಗಣಿಸಲಿಲ್ಲ. ‘ಇಸ’, ‘ಇಸಿ’ಯಿಂದ ಪ್ರಾರಂಭವಾಗುವ ಪದಗಳೆಲ್ಲವನ್ನೂ ಪ್ರಾಕೃತ, ಭಾಷಾ ಪಂಡಿತರಾದ ಜೆ. ಬರ್ಜೆಸ್, ಜೆ. ಬೂಹ್ಲರ್, ಮತ್ತು ಲೂಡರ್ಸ್, ‘ರಿಸ’, ‘ರಿಸಿ’ ಎಂದೇ ಸಂಸ್ಕೃತೀಕರಿಸಿದ್ದರು. ಇವನ್ನು ಡಿಎಲ್‍ಎನ್ ಮತ್ತು ತೀನಂಶ್ರೀ ಏಕೆ ಪರಿಗಣಿಸಲಿಲ್ಲವೋ ಅರ್ಥಮಾಡಿಕೊಳ್ಳಲಾಗುತ್ತಿಲ್ಲ. ಇವು ಅವರ ಗಮನಕ್ಕೆ ಬಂದಿರಲಿಕ್ಕಿಲ್ಲವೆಂದರೂ ಸಮಕಾಲೀನ ಶಾಸನತಜ್ಞರಲ್ಲಿ ಯಾರಾದರೂ ಈ ಹಿನ್ನೆಲೆಯಲ್ಲಿ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಾಗಿದ್ದಾದರೂ ಆಗಲಿಲ್ಲ. ನಮ್ಮ ಮಧ್ಯದಲ್ಲಿದ್ದ ಗೌರವಯುತ ಪ್ರಾಕೃತ ಪಂಡಿತರೂ ಈ ಬಗ್ಗೆ ಮೌನ ತಾಳಿದ್ದರಿಂದ ಪ್ರಾಕೃತ ಉಲ್ಲೇಖಗಳೆಲ್ಲವೂ ಈ ಚರ್ಚೆಯ ಹೊರಗುಳಿದವು ಎಂದು ಹೇಳಿದ್ದಾರೆ. ಹಾಗೆಯೇ ಮುಂದುವರಿದು‘ ‘ಇಸ’, ‘ಇಸಿ’ಯಿಂದ ಪ್ರಾರಂಭವಾಗುವ ಪದಗಳು ರಿಸ’, ‘ರಿಸಿ’ ಎಂದೇ ಸಂಸ್ಕೃತೀಕರಣ ಗೊಂಡಿರುವುದಕ್ಕೆ,
ಕೆಲವು ನಿದರ್ಶನಗಳನ್ನು ಎಸ್.ಷಟ್ಟರ್ ಅವರು ಕೊಡ ಮಾಡಿದ್ದಾರೆ. ಇಸದಾತ>ರಿಷಿದತ್ತ; ಇಸಿಮಿತ>ರಿಷಿಮಿತ್ರ; ಇಸಿಕ>ರುಷಿಕ; ಇಸಿದಿನಾ>ರಿಷಿದತ್ತ; ಇಸಿಗುತ>ರಿಷಿಗುಪ್ತ; ಇಸಿಕ-ರಿಷಿಕ; ಇಸಿದಸೀ-ರಿಷಿದಾಸಿ; ಇಸಿನದನ>ರಿಷಿನಂದನ; ಇಸಿನಿಕಾ>ರಿಷಿನಿಕಾ, ಎಂಬವು ಮುಂತಾದವು. ಹೀಗೆ ಕನ್ನಡ ಭಾಷೆಯ ಪ್ರಾಚೀನತೆಗೆ ಸಂಬಂಧಿಸಿದ ‘ಇಸಿಲ’ ಪದದ ಮರುಚಿಂತನೆಗೆ ಶೆಟ್ಟರ್ ನಮ್ಮನ್ನು ಆಹ್ವಾನಿಸಿದ್ದಾರೆ. ಈಗ ಆರೇಳು ದಶಕಗಳಿಂದ ಕನ್ನಡದ್ದೆಂದು ನಂಬುತ್ತಾ ಬಂದಿರುವ ಈ ಪದವು ಪ್ರಾಕೃತದ್ದೆಂದು, ಈ ಪದವನ್ನು ಅಶೋಕನು ಮೊದಲು ಇಲ್ಲಿ ಬಳಸಿದ್ದರೂ ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾದ ಪದವಲ್ಲ ಎಂಬುದನ್ನು ಸಾಧಾರವಾಗಿ ತೋರಿಸಿ ಕೊಟ್ಟಿದ್ದಾರೆ. ಈ ಇಸಿಲ ಬಗೆಗಿನ ಇವರ ಒಳನೋಟಗಳ ಬಗೆಗೆ ವಿದ್ವಾಂಸರು ಗಮನ ಹರಿಸ ಬೇಕಾಗಿದೆ.
ಇಸಿಲ ಪದವನ್ನಾಧರಿಸಿ, ಕನ್ನಡ ಭಾಷೆಯ ಪುರಾತನತೆಯ ಬಗ್ಗೆ ಹಲವು ದಶಕಗಳ ಕಾಲದಿಂದಲೂ ನಾವುಗಳು ತಾಳಿದ್ದ ನಿಲುವುಗಳನ್ನು ಶೆಟ್ಟರ್ ಅವರು ಮಂಡಿಸಿರುವ ವಾದದ ಹಿನ್ನೆಲೆಯಲ್ಲಿ ಪುನರ್ ಪರಿಶೀಲಿಸ ಬೇಕಾಗಿದೆ. ಆದರೆ ಇಸಿಲ ಪದವನ್ನು ಕಳೆದುಕೊಂಡರೂ ಕನ್ನಡ ಭಾಷಾ ಚರಿತ್ರೆಯ ಪುರಾತನತೆ ಹೆಚ್ಚು ಬಾಧಕವಾಗಲಾರದು. ಕಾರಣ ಇಸಿಲದಷ್ಟೇ ಪೂರ್ವಕಾಲದ ಸ್ಥಳನಾಮಗಳು ಕರ್ನಾಟಕದ ಪ್ರಾಕೃತ ಶಾಸನಗಳಲ್ಲಿ ದೊರಕುವುದು. ಇವುಗಳಲ್ಲಿ ಮುಖ್ಯವಾದ ಎರಡು ಸ್ಥಳನಾಮಗಳೆಂದರೆ: ಕೂಪಣ (ಕೊಪ್ಪಳ) ಮತ್ತು ವನವಾಸಿಕ (ಬನವಾಸಿ). ಈ ಪದಗಳ ವಿಶೇಷತೆ ಎಂದರೆ, ಇಸಿಲದಂತೆ ಪ್ರಾಕೃತ ಭಾಷೆಯೊಡನೆ ಮಾತ್ರ ಸಂಬಂಧ ಜೋಡಿಸಿಕೊಳ್ಳದಿರುವುದು; ಮತ್ತು ಇಸಿಲದಷ್ಟೇ ಚಾರಿತ್ರಿಕ ಮಹತ್ವವನ್ನು ಹೊಂದಿರುವುದು ಹಾಗೂ ಇಂದಿಗೂ ಬಳಕೆಯಲ್ಲಿರುವುದನ್ನು ಎಸ್.ಶೆಟ್ಟರ್ ಅವರು ಇಸಿಲ ಪದದ ಪ್ರಾಚೀನತೆಯ ನಿರಾಕರಣೆಗೆ ಪರಿಹಾರವಾಗಿ ಪ್ರಸ್ತಾಪಿಸಿರುವುದು ಗಮನ ಸೆಳೆದಿದೆ. ದಕ್ಷಿಣದಾದ್ಯಂತ ಅನುಸರಿಸಿದ ಆಡಳಿತ ಸಂಹಿತೆಯಂತೆ ಅಶೋಕನು ತನ್ನ ಕಿರುಶಾಸನಗಳನ್ನು ಕೊಪ್ಪಳದಲ್ಲಿ ಕೊರೆಸುವಾಗ, ಸ್ಥಳದ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಆದರೆ ಕ್ರಿಸ್ತಶಕದ ಆರಂಭದಲ್ಲಾಗಲೇ ಅದು ‘ಕೂಪಣ’ ಹೆಸರಿನಿಂದ ಗುರುತಿಸಿಕೊಂಡಿತ್ತು ಎನ್ನಲು ಕನಗನಹಳ್ಳಿಯ ನಾಲ್ಕು ಶಾಸನಗಳು ನಿದರ್ಶನವಾಗಿವೆ. ಸಾತವಾಹನರು ಬರೆಸಿದ ಈ ಶಾಸನಗಳ ಆಧಾರದ ಮೇಲೆ ‘ಕೂಪಣ’ವು ಅಶೋಕನ ಕಾಲದಲ್ಲಿಯೇ ಒಂದು ಪ್ರಮುಖ ಆಡಳಿತ ಕೇಂದ್ರವಾಗಿ, ಬೌದ್ಧ ಕೇಂದ್ರವಾಗಿ, ಹೊರಹೊಮ್ಮಿತ್ತೆನ್ನುವುದನ್ನು ಸಾಬೀತು ಪಡಿಸ ಬಹುದಾಗಿದೆ.
ಕನಗನಹಳ್ಳಿಯ ನಾಲ್ಕು ಶಾಸನಗಳಲ್ಲಿ ಎರಡು ‘ಖಜನಾಕಾರಸ ಮಹಿಸೇಸಕಸ ಕೂಪಣಸ ದಾನಮ್’ ಎಂಬ ಪಾಠವನ್ನು, ಮೂರನೆಯದು ‘ಕೂಪನ ರಥಿಕಸ ದಾನ’, ನಾಲ್ಕನೆಯದು ‘ಕೂಪಣ ರಥಿಕಸ ದೇಯ ಧ(ಮ)’ ಪಾಠಗಳನ್ನು ಹೊಂದಿವೆ. ಈ ಹೆಸರನ್ನು ಒಮ್ಮೆ ‘ಕೂಪನ’ವೆಂದು, ಮೂರು ಬಾರಿ ‘ಕೂಪಣ’ವೆಂದು, ಉಚ್ಚರಿಸಲಾಗಿದೆ ವನವಾಸಿಕವು ಅಶೋಕನ ಕಾಲದಲ್ಲಿ ಬೌದ್ಧ ಕೇಂದ್ರವಾಗಿತ್ತೆನ್ನಲು ಸಾಕಷ್ಟು ಪುರಾವೆಗಳಿವೆ. ಮೊಗ್ಗಲಿಪುತ್ತ ತಿಸ್ಸನು ಧರ್ಮಪ್ರಸಾರಕ್ಕಾಗಿ ಇಲ್ಲಿಗೆ ಕಳುಹಿಸಿದ ರಖಿತನ ಉಲ್ಲೇಖವು ಕ್ರಿ.ಶ. ನಾಲ್ಕನೆಯ ಶತಮಾನದ ‘ಮಹಾವಂಸ’ದಲ್ಲಿ ಬಂದಿರುವುದನ್ನು ಬದಿಗಿರಿಸಿದರೂ ಅದಕ್ಕೂ ಮುಂದಿನ ಶಾಸನಗಳಲ್ಲಿ ಆಧಾರಗಳಿವೆ, ಈ ಕೇಂದ್ರವನ್ನು ಇವು ‘ವೈಜಯಂತಿಯೆ’ ಎಂದು (ಗೌತಮೀಪುತ್ರ ಶಾತಕರ್ಣಿಯ ನಾಸಿಕ ಶಾಸನ) ಮತ್ತು ‘ವನವಾಸಿಕ’ (ಇಕ್ಷ್ವಾಕು ಮನೆತನದ ಕೊಡಬಾಲ ಸಿರಿಯ ಶಾಸನ) ಎಂದು ಹೆಸರಿಸಿರುವವು. ಇವಲ್ಲದೆ ಶಿವಸ್ಕಂಧ ನಾಗಸಿರಿಯು ವನವಾಸಿಕದಲ್ಲಿ ತಟಾಕವನ್ನೂ ವಿಹಾರವನ್ನೂ ನಿರ್ಮಿಸಿದ ಶಾಸನವೊಂದಿದೆ. ಇತ್ತೀಚೆಗೆ ಬೆಳಕಿಗೆ ಬಂದಿರುವ ಕನಗನಹಳ್ಳಿಯ ಶಾಸನಗಳು, ಅಶೋಕನ ಕಾಲಾನಂತರವೂ ಇದು ಬೌದ್ಧಕೇಂದ್ರವಾಗಿ ಮುಂದುವರಿದಿದ್ದುದನ್ನು ದೃಢಪಡಿಸುವುವು. ಈ ಅಪೂರ್ವ ಉಲ್ಲೇಖಗಳು, ಈ ಎರಡು ಸ್ಥಳಗಳ ಇತಿಹಾಸವನ್ನು ಖಂಡಿತವಾಗಿಯೂ ಕ್ರಿಸ್ತ ಪೂರ್ವಕ್ಕೆ ಕೊಂಡೊಯ್ಯುವವು. ‘ಕೂಪನ’, ‘ಕೂಪಣ’, ‘ವನವಾಸಿಕ’ ಮತ್ತು ‘ವೈಜಯಂತಿಯಾ’ ಎಂಬ ಹೆಸರುಗಳು ಹೇಗೆ ಹುಟ್ಟಿಕೊಂಡವು ಮತ್ತು ಅವು ಪ್ರಾಕೃತ, ಸಂಸ್ಕೃತದ ಪ್ರಭಾವಕ್ಕೊಳಗಾಗಿ, ಕನ್ನಡ ಜನಪದದಲ್ಲಿ ಹೇಗೆ ಬೆರೆತುಕೊಂಡವು, ಎಂಬ ಹೆಚ್ಚು ಕುತೂಹಲ ಕೆದಕುವ ಪ್ರಶ್ನೆಗಳನ್ನು ಹಾಕಿಕೊಂಡು ಅವುಗಳಿಗೆ ಉತ್ತರಗಳನ್ನು ಕಂಡುಕೊಳ್ಳ ಬೇಕಾಗಿದೆ ಎಂಬ ಷ.ಶೆಟ್ಟರ್ ಅವರ ಅನಿಸಿಕೆಯು ಗಮನಾರ್ಹವಾದುದಾಗಿದೆ. ಇಸಿಲ ಪದದ ಶೋಧಕ್ಕಿಂತ ಹೆಚ್ಚು ಸುಲಭವಾಗಿ ಹಾಗೂ ಧೃಢವಾಗಿ ಈ ಎರಡು ಸ್ಥಳವಾಚಕ ಗಳನ್ನು ನಿರ್ಧರಿಸಬಹುದಾಗಿದ್ದು, ಶಾಸ್ತ್ರೀಯ ಸ್ಥಾನಮಾನದ ಸಾಬೀತಿಗೆ ಪೂರಕವಾಗಿ ಮತ್ತು ಕನ್ನಡದ ಪ್ರಾಚೀನತೆಯನ್ನು ಗುರುತಿಸಲು ಕೂಪನ(ಕೊಪ್ಪಳ) ಮತ್ತು ವನವಾಸಿಕ(ಬನವಾಸಿ) ಸ್ಥಳವಾಚಕಗಳನ್ನು ವಿದ್ವತ್ಪೂರ್ಣ ಚರ್ಚೆ ನಡೆಸಿ ಮಾನ್ಯ ಮಾಡುವುದರ ಮೂಲಕ ಅಧಿಕೃತ ಮಾನದಂಡವಾಗಿ ಬಳಸಿಕೊಳ್ಳ ಬಹುದು ಎಂದೆನಿಸುತ್ತದೆ.
ಎಂ ಗೋವಿಂದ ಪೈರವರು ಕ್ರಿ.ಶ 2ನೇ ಶತಮಾನದಷ್ಟು ಹಿಂದಿನಿಂದಲೂ ಕನ್ನಡ ಶಾಸನಗಳು ದೊರೆಯುತ್ತದೆಂದು ಹೇಳಿ ಅಂತಹ ಶಾಸನಗಳಲ್ಲಿ ಹಲವನ್ನು ನಮ್ಮ ಕನ್ನಡ ಸಾಹಿತ್ಯದಲ್ಲಿ ಹಳಮೆ ಲೇಖನದಲ್ಲಿ ಎತ್ತಿಕೊಟ್ಟಿದ್ದಾರೆ.ಸಾಹಿತ್ಯವಿಲ್ಲದೆ ಶಾಸನಗಳು ಹುಟ್ಟಲಾರವು ಎಂಬುದು ಖಂಡಿತವಿರುವುದರಿಂದ ಕ್ರಿ.ಶ. 1ನೇ ಶತಮಾನಕ್ಕೆ ಹಿಂದೆಯೇ ಕನ್ನಡದಲ್ಲಿ ಪ್ರಗಲ್ಭವಾದ ಸಾಹಿತ್ಯವಲ್ಲದಿದ್ದರೂ ಸಾಮಾನ್ಯವಾದ ಸಾಹಿತ್ಯವಾದರೂ ಹುಟ್ಟಿರಬೇಕು. ಎಂದು ಸಹಜವಾಗಿಯೇ ಅನುಮಾನಿಸಲಾಗುತ್ತದೆ ಎಂದು ಹೇಳುತ್ತಾರೆ.
ಗೋವಿಂದಪೈ ಅವರು ಕ್ರಿ.ಶ. ೧೭೨-೯೩ ರ ಕಾಲಾವಧಿಯ ಗಟ್ಟಿವಾಡು ಶಾಸನ, ಕ್ರಿ.ಶ.೨೬೭ರ ನಂಜನಗೂಡು ಶಾಸನ, ಕ್ರಿ.ಶ. ೩೪೯ ರ ಮುಮ್ಮಡಿ ಮಾಧವನ ತಾಗರ್ತಿಯ ಶಾಸನಗಳನ್ನು ಕನ್ನಡ ಶಾಸನಗಳೆಂದು ಆ ಶಾಸನಗಳಲ್ಲಿ ಕನ್ನಡದ ಹಳಮೆಯನ್ನು ಗುರುತಿಸ ಬಹುದೆಂದು ಹೇಳಿದ್ದರೂ ಇವರು ಪ್ರಸ್ತಾಪಿಸಿರುವ ಶಾಸನಗಳು ಹಲ್ಮಿಡಿ ಶಾಸನದ ನಂತರದ ಕಾಲದವುಗಳು ಎಂಬುದಾಗಿ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಆದಾಗ್ಯೂ ಇವರ ಅನಿಸಿಕೆಯಲ್ಲಿ ಸ್ವಲ್ಪ ಮಟಿಗೆ ಹುರುಳಿರುವುದನ್ನು ಮುಂದಿನ ವಿವರಗಳಲ್ಲಿ ಕಂಡುಕೊಳ್ಳ ಬಹುದಾಗಿದೆ.
ಕವಿರಾಜಮಾರ್ಗದಂತಹ ಲಕ್ಷಣ ಕೃತಿಗಳನ್ನು ಪರಿಶೀಲಿಸುವವರಿಗೆ ಅದಕ್ಕೂ ಹಿಂದೆ ಕನ್ನಡದಲ್ಲಿ ರಚನೆಯನ್ನು ಮಾಡಿದ ಗದ್ಯ-ಪದ್ಯ ಕವಿಗಳ ಉಲ್ಲೇಖ ಮಾತ್ರ ವಿದಿತವಾಗುವುದಲ್ಲದೆ, ಅಂತಹ ಕವಿಗಳ ಕಾವ್ಯದ ಸ್ವರೂಪ ಯಾವ ವಿಧವಾಗಿದ್ದಿತು ಎಂಬುದನ್ನು ತಿಳಿಯುವಲ್ಲಿ ಆ ಕಾಲದ ಶಾಸನ ಸಾಹಿತ್ಯದತ್ತ ಹೊರಳಿ ನೋಡಬೇಕಾಗುತ್ತದೆ. ಕನ್ನಡ ಸಾಹಿತ್ಯ ಮತ್ತು ಭಾಷೆಯ ಪ್ರಾಚೀನತೆಯನ್ನು ಗುರುತಿಸುವಲ್ಲಿ ಶಾಸನಗಳನ್ನೇ ಅವಲಂಬಿಸಬೇಕಾಗಿದೆ. ಕವಿರಾಜಮಾರ್ಗ ಮತ್ತು ಇನ್ನಿತರ ಆಧಾರಗಳು ಕ್ರಿ.ಶ.850ಕ್ಕಿಂತ ಹಿಂದೆ ಕನ್ನಡ ಭಾಷೆ ಮತ್ತು ಸಾಹಿತ್ಯವಿದ್ದಿತು ಎಂಬುದಕ್ಕೆ ಆಧಾರಗಳೇ ಹೊರತು ಎಷ್ಟು ಹಿಂದೆ ಎಂಬುದಕ್ಕಲ್ಲ. ಕನ್ನಡದಲ್ಲಿ ಕ್ರಿ.ಶ.450 ಮತ್ತು ನಂತರದ ಕಾಲದ ಅರಸುಮನೆತನಗಳ ಶಾಸನಗಳು ಲಭ್ಯವಾಗಿವೆ. ಕದಂಬರು, ಗಂಗರು, ಬದಾಮಿ ಚಾಲುಕ್ಯರು ಮತ್ತು ಶ್ರವಣ ಬೆಳಗೊಳದ ನಿಸದಿ ಶಾಸನಗಳು ಕ್ರಿ.ಶ.8 ನೇ ಶತಮಾನದ ಅವಧಿಯಲ್ಲಿಯೇ ಲಭ್ಯವಿವೆ. ಬಾದಾಮಿ ಚಾಲುಕ್ಯರ ಮತ್ತು ಅದಕ್ಕೂ ಪೂರ್ವದ ಕಾಲದ ಹಲವಾರು ಕನ್ನಡ ಶಾಸನಗಳು ನಮಗೆ ಲಭ್ಯ ಇವೆ. ಇವುಗಳಿಂದ ಈ ಶಾಸನಗಳಲ್ಲಿ ಮಾತ್ರವಲ್ಲದೆ ಹೊರಗಡೆಯಲ್ಲಿಯೂ ಆ ಕಾಲದ ಕನ್ನಡ ಸಾಹಿತ್ಯದ ಸ್ವರೂಪ ಯಾವ ರೀತಿಯಲ್ಲಿ ಇದ್ದಿತು ಎಂಬುದು ಕೆಲಮಟ್ಟಿಗೆ ತಿಳುವಳಿಕೆಯಾಗುತ್ತದೆ. 7-8 ನೇ ಶತಮಾನಗಳ ಕಾಲದಿಂದ ಕನ್ನಡ ಸಾಹಿತ್ಯ ಸ್ವತಂತ್ರವಾಗಿ ಮತ್ತು ಸುಪುಷ್ಟವಾಗಿ ಬೆಳೆದು ಬಂದಿದ್ದಿತು ಎಂಬುದಕ್ಕೆ ಶಾಸ್ತ್ರ ಕೃತಿಗಳಾದ ಕವಿರಾಜಮಾರ್ಗ, ಸೂಕ್ತಿ ಸುಧಾರ್ಣವ,ಕಾವ್ಯಸಾರ, ಶಬ್ದಮಣಿದರ್ಪಣ ಮುಂತಾದ ಕೃತಿಗಳಲ್ಲಿ ಉಲ್ಲೇಖಿತರಾಗಿರುವ ಮಾರ್ಗಕವಿಗಳ ಕೃತಿಗಳು ಇಂದು ಲಭ್ಯವಿಲ್ಲ. ಕವಿರಾಜ ಮಾರ್ಗಕ್ಕಿಂತ ಪೂರ್ವದಲ್ಲಿ ದೊರೆಯುವ ಶಾಸನಗಳ ಪದ್ಯದ ಭಾಷೆಗೂ ಕವಿರಾಜಮಾರ್ಗದ ಭಾಷೆಗೂ ಸಾಕಷ್ಟು ವ್ಯತ್ಯಾಸ ಇರುವುದು ಎದ್ದು ಕಾಣುತ್ತದೆ. ಕವಿರಾಜಮಾರ್ಗದಲ್ಲಿ ಪೂರ್ವದ ಹಳಗನ್ನಡದ ಗ್ರಹಿಕೆಯನ್ನು ಕಾಣುವುದು ದುಸ್ತರವಾಗಿದೆ. ಶಾಸನ ಪದ್ಯಗಳಲ್ಲಿಯಾದರೂ ಪೂರ್ವದ ಹಳಗನ್ನಡ ಸ್ವರೂಪವನ್ನು ಗುರುತಿಸಬಹುದಾಗಿದೆ. ಈ ಶಾಸನಗಳ ಪದ್ಯಗಳಲ್ಲಿ ಸಂಸ್ಕೃತ-ಪ್ರಾಕೃತಗಳಿಂದ ಎರವಲು ಪಡೆದ ಪದಗಳೇ ಅಧಿಕೃತವಾಗಿರುವುದು ಕಂಡುಬರುತ್ತವೆಯಾದರೂ ಅಚ್ಚಗನ್ನಡ ಪ್ರಯೋಗಗಳು ಬಳಕೆಯಾಗಿವೆ. ಬಾದಾಮಿಯ ಕಪ್ಪೆ ಅರಭಟನ ಶಾಸನ, ಶ್ರವಣ ಬೆಳಗೊಳದ 22, 76, 88ನೇ ಸಂಖ್ಯೆಯ ಶಾಸನಗಳು ಮತ್ತು ವಳ್ಳಿಮಲೆ ಶಾಸನಗಳಲ್ಲಿ ಸಂಸ್ಕೃತ ಮತ್ತು ಕನ್ನಡಗಳು ಹದವಾಗಿ ಬೆರೆತುಕೊಂಡಿರುವುದು ಕಂಡುಬರುತ್ತದೆ. ಈ ಶಾಸನ ಪದ್ಯಗಳು ಕರ್ನಾಟಕದಾದ್ಯಂತ ದೊರೆತಿರುವುದು ಅಂದಿನ ಕನ್ನಡ ಸಾಹಿತ್ಯದ ಪ್ರಮಾಣ(Standard) ಭಾಷೆಯನ್ನು ಪ್ರತಿನಿಧಿಸುತ್ತದೆ. ಅಂದಿನ ಕಾಲದ ಸಾಹಿತ್ಯಾಚಾರ್ಯರಿಂದ ಮನ್ನಣೆ ಪಡೆದ ಭಾಷೆಯ ಸ್ವರೂಪ ಬಹುಶಃ ಈ ಶಾಸನಗಳ ಪದ್ಯಗಳ ಭಾಷೆ ಯಂತಿದ್ದಿರಬಹುದು ಎಂದು ಭಾವಿಸಿದರೆ ಆರಂಭ ಕಾಲದ ಕನ್ನಡ ಸಾಹಿತ್ಯ ಕೃತಿಗಳು ಭಾಷಿಕವಾಗಿ ಹೇಗಿದ್ದವು ಎಂಬುದನ್ನು ಊಹೆ ಮಾಡಿಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಚಾರಿತ್ರಿಕವಾಗಿ ಗುರುತಿಸಬಹುದಾದರೆ ಅದಕ್ಕೆ ನಿಶ್ಚಿತವಾದ ಮಾನದಂಡವನ್ನು ಶಾಸನಗಳಲ್ಲಿ ಹುಡುಕಬಹುದು.
ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಅರ್ಥಾತ್ ಪಂಪಪೂರ್ವಯುಗದ ಸಾಹಿತ್ಯದ ಸ್ವರೂಪವನ್ನು ಗುರುತಿಸುವಲ್ಲಿ ಶಾಸನಗಳನ್ನೇ ಅವಲಂಬಿಸಬೇಕಾಗಿದೆ. ಕವಿರಾಜಮಾರ್ಗ ಮತ್ತು ಇನ್ನಿತರ ಆಧಾರಗಳು ಕ್ರಿ.ಶ. 850 ಕ್ಕಿಂತ ಹಿಂದೆ ಕನ್ನಡ ಸಾಹಿತ್ಯವಿದ್ದಿತು ಎಂಬುದಕ್ಕೆ ಆಧಾರಗಳೇ ಹೊರತು ಎಷ್ಟು ಹಿಂದೆ ಎಂಬುದಕ್ಕಲ್ಲ. ನಮ್ಮ ಪ್ರಥಮ ಶಾಸನವಾದ, ಸು.450 ರ ಹಲ್ಮಿಡಿ ಶಾಸನ ಒಂದು ಗದ್ಯ ಶಾಸವೇ ಆಗಿದೆ. ಹಲ್ಮಿಡಿ ಶಾಸನದ ಭಾಷೆ ಪೂರ್ವದ ಹಳಗನ್ನಡ ಗದ್ಯವಾಗಿದ್ದು ಆಗಲೇ ಸಂಸ್ಕೃತ ಭಾಷೆಯ ಪೂರ್ಣಪ್ರಭಾವಕ್ಕೆ ಒಳಗಾಗಿರುವುದನ್ನು ಗುರುತಿಸಬಹುದಾಗಿದೆ. ಸಂಸ್ಕೃತ ಭಾಷೆಯ ಬೆಂಬಲದಿಂದ ವಚನ ರೂಪವಾಗಿ ಪ್ರಕಟವಾದ ಹಲ್ಮಿಡಿ ಶಾಸನವು ಕನ್ನಡ ಸಾಹಿತ್ಯದ ಉಗಮದ ಕುರುಹುಗಳ ಪ್ರತೀಕವಾಗಿ ಪರಿಣಮಿಸಿದೆ. ಇದು ಕನ್ನಡ ಭಾಷೆ ಸಾಹಿತ್ಯಗಳ ಪ್ರಾಚೀನತೆಯನ್ನು ತಿಳಿಯಲು ಪ್ರಮುಖ ಆಕರವಾಗಿರುವುದರ ಜೊತೆಗೆ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ದಾಖಲಿಸುತ್ತದೆ. ಹಲ್ಮಿಡಿ ಶಾಸನದ ಭಾಷೆ ಪೂರ್ವದ ಹಳಗನ್ನಡದ ಗದ್ಯವಾಗಿದ್ದು ಸಂಸ್ಕೃತ ಭಾಷೆಯ ಪೂರ್ಣ ಪ್ರಭಾವಕ್ಕೆ ಒಳಗಾಗಿರುವುದನ್ನು ಗುರುತಿಸ ಬಹುದಾಗಿದೆ. ಹಲ್ಮಿಡಿ ಶಾಸನದ ಈ ಗದ್ಯ ಭಾಷೆಯನ್ನು ಆಧಾರವಾಗಿಟ್ಟುಕೊಂಡು ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಕ್ರಿ.ಶ.5ನೇ ಶತಮಾನಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ.
. ಹಲ್ಮಿಡಿ ಶಾಸನವು ಸಂಸ್ಕೃತ ಪ್ರಾಚುರ್ಯ ಪಡೆದಿದ್ದ ಕಾಲಘಟ್ಟದಲ್ಲಿ ರಚಿತವಾದ ಶಾಸನವಾಗಿದ್ದರೂ ಕನ್ನಡ ಭಾಷೆ ಸಂಸ್ಕೃತದ ಪೊರೆಯನ್ನು ಕಳಚಿ ಹೊರ ಬರುತ್ತಿದ್ದ ಸಂಕ್ರಮಣಾವಸ್ಥೆಯ ಶಾಸನವಾಗಿದೆ. ಹೀಗಾಗಿ ಈ ಶಾಸನವು ಕನ್ನಡ ಭಾಷೆ, ವ್ಯಾಕರಣ, ಸಾಹಿತ್ಯ ಮತ್ತು ಪದಪ್ರಯೋಗಗಳ ದೃಷ್ಟಿಯಿಂದ ಬಹಳಷ್ಟು ವಿದ್ವಾಂಸರ ಚರ್ಚೆಗೆ ಒಳಗಾಗಿ ಕನ್ನಡದ ಪ್ರಾಚೀನತೆಯನ್ನು ದಾಖಲಿಸುವ ಪ್ರಮುಖ ದಾಖಲೆಯಾಗಿ ಹೊರಹೊಮ್ಮಿದೆ. ಪೆತ್ತ ಜಯನ್ ಎನ್ನುವ ಪದವಂತೂ ಸಂಸ್ಕೃತ ಕನ್ನಡ ಪದಗಳ ವೈಶಿಷ್ಟ್ಯಯುತವಾದ ಸಮಾಸಪದವಾಗಿದ್ದು ಕನ್ನಡದ ಸಮನ್ವಯ ಪ್ರವೃತ್ತಿಗೆ ಪ್ರತ್ಯಕ್ಷ ನಿದರ್ಶನವಾಗಿದೆ. ಈ ಪ್ರವೃತ್ತಿ 7 ನೇ ಶತಮಾನದ ಬಾದಾಮಿ ಶಾಸನದಲ್ಲಿಯೂ ಮುಂದುವರೆದಿದೆ. ಆ ಶಾಸನದಲ್ಲಿಯ ಒಳ್ಳಿತ್ತು, ಪೊಲ್ಲದ, ಬಲ್ಲಿತ್ತು, ಕಟ್ಟೋದೇನ್, ಎಮಗೆಂದು ಎನ್ನುವ ಪದಗಳು ಕನ್ನಡತನಕ್ಕೆ ಸಾಕ್ಷಿಯಾಗಿವೆ. ಗದ್ಯ ಬರಹದ ಶಾಸನಗಳಲ್ಲಿ ಸಾಹಿತ್ಯದ ಸೊಗಸಿಗೆ ಹಲ್ಮಿಡಿ ಶಾಸನವೇ ಆದಿ. ಆದರೆ ಇಲ್ಲಿ ಗಮನಿಸ ಬಹುದಾದ ಮತ್ತೊಂದು ಸಂಗತಿ ಎಂದರೆ ಈಗಾಗಲೇ ೧೮೯೮ ರಲ್ಲಿಯೇ ಬಿ.ಎಲ್. ರೈಸ್ ಅವರು ತಮ್ಮ ಎಪಿಗ್ರಫಿಯಾ ಕರ್ನಾಟಿಕಾದ ೨ ನೇ ಸಂಪುಟದಲ್ಲಿ ಶೋಧಿಸಿ ಪ್ರಕಟಿಸಿದ್ದ, ನಂತರದಲ್ಲಿ ಆರ್. ನರಸಿಂಹಾಚಾರ್ಯರು ಹೊರ ತಂದ ಶ್ರವಣ ಬೆಳಗೊಳದ ಪರಿಷ್ಕೃತ ಮುದ್ರಣದಲ್ಲಿ ಮತ್ತು ಬಾ.ರಾ.ಗೋಪಾಲ್ ಅವರು ಪ್ರಕಟಿಸಿದ ಎಪಿಗ್ರಫಿಯಾ ಕರ್ನಾಟಿಕಾದ ಪರಿಷ್ಕೃತ ಮುದ್ರಣದಲ್ಲಿ ಪ್ರಕಟಿಸಿದ್ದ ಶ್ರವಣಬೆಳಗೊಳದ ಗುಣಭೂಷಿತ ಮುನಿಯ ಶಾಸನದ ಕಾಲವನ್ನು ಸುಮಾರು ಕ್ರಿ.ಶ, ೭೦೦ ಎಂದು ಭಾವಿಸಿದ್ದರು. ಆದರೇ ಈ ಶಾಸನವನ್ನು ಪುನರ್ ಪರಿಶೀಲಿಸಿದ ಎಂ.ಜಿ.ಮಂಜುನಾಥ ಅವರು ಅದರ ಕಾಲವನ್ನು ಶಾಸನದ ಲಿಪಿಯ ಆಧಾರದ ಮೇಲೆ ಕ್ರಿ.ಶ.೪೦೦ ಎಂದು ನಿರ್ಣಯಿಸಿ ಹಲ್ಮಿಡಿ ಶಾಸನಕ್ಕಿಂತ ಪೂರ್ವದ್ದು ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಈ ಶಾಸನವು ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿದ್ದು ಕನ್ನಡ ನಾಡಿನಲ್ಲಿ ದೊರೆತ ಪ್ರಥಮ ನಿಸದಿ ಶಾಸನ ಎಂದು ಕರೆಯಲ್ಪಟ್ಟಿದೆ. ಶಾಸನದ ಪಾಠವು ಈ ಕೆಳ ಕಂಡಂತಿದೆ.
ಸ್ವಸ್ತಿಶ್ರೀ ಗುಣಭೂಷಿತಮಾದಿ ಉಳಾಡಗ್ದೇರಿಸಿದಾ ನಿಸಿದಿಗೆ
ಸದ್ಧಮ್ಮ ಗುರು ಸಂತನಾನ್ ಸಂದ್ವಿಗ ಗಣ ತಾನಯಾನ್
ಗಿರಿತಲದಾ ಮೇಲತಿ… ಸ್ಥಲಮಾನ್ ತೀರದಾಣಮಾ ಕೆಳಗೆ ನೆಲದಿ ಮಾನದಾನ್
ಸದ್ಧಮ್ಮದಾ ಗೇೞಿ ಸಸನಾದಿ ಪತಾನ್( ವೈಶಿಷ್ಟ್ಯ ಪೂರ್ಣ ಕನ್ನಡ ಶಾಸನಗಳು, ೨೦೦೪) ಶ್ರವಣಬೆಳಗೊಳದ ತಪ್ಪಲಿನ ಪ್ರದೇಶದ ಅಧಿಪತಿಯಾಗಿದ್ದ ಉಳಾಡನು ಒಳ್ಳೆಯ ಧಾರ್ಮಿಕನೂ ಗುರುವಿನ ಶಿಷ್ಯನೂ ಸಂದ್ವಿಗ ಗಣಕ್ಕೆ ಸೇರಿದವನಾಗಿದ್ದನು. ಅವನು ಬೆಟ್ಟದ ಮೇಲೆ ಗುಣಭೂಷಿತನ ನಿಸಿದಿಯನ್ನು ನಿರ್ಮಿಸಿದನು. ಈ ಶಾಸನದಲ್ಲಿ ಸಂಸ್ಕೃತ, ಪ್ರಾಕೃತ ಮತ್ತು ಪೂರ್ವದ ಹಳಗನ್ನಡದ ಭಾಷೆಯ ಪದಗಳಿವೆ. ಈಗಾಗಲೇ ವಿದ್ವಾಂಸರು ಗುರುತಿಸಿರುವ ಪದಗಳಲ್ಲಿ ಏರಿಸಿದಾ, ತಾನು, ಮೇಲೆ, ಕೆಳಗೆ, ಕೇಳಿ, ನೆಲ ಎಂಬ ಆರು ಕನ್ನಡ ಶಬ್ದಗಳೂ, ದಮ್ಮ, ದಾಣ, ಸಸಾನು, ನಿಸದಿಗೆ ಎಂಬ ಪ್ರಾಕೃತ ಶಬ್ದಗಳೂ ಸ್ವಸ್ತಿಶ್ರೀ ಎಂಬ ಸಂಸ್ಕೃತ ಪದಗಳು ಬಳಕೆಯಾಗಿವೆ. ಈ ಶಾಸನವು ಲಿಪಿಯ ದೃಷ್ಟಿಯಿಂದ ಶಾತವಾಹನರ ಅಂತಿಮ ಕಾಲಘಟ್ಟಕ್ಕೆ ಮತ್ತು ಗಂಗರ ಪ್ರಾರಂಭಿಕ ಕಾಲಘಟ್ಟಕ್ಕೆ ಸೇರಿದ್ದೆಂದು ಎಂ.ಜಿ. ಮಂಜುನಾಥ ಅವರು ನಿರ್ಣಯಿಸಿ ಕ್ರಿ.ಶ.೪೦೦ ಎಂದು ಅದರ ಕಾಲವನ್ನು ನಿರ್ಣಯಿಸಿದ್ದಾರೆ. ಈ ಶಾಸನದಲ್ಲಿ ಉಲ್ಲೇಖಿತವಾಗಿರುವ ನಿಸದಿ ಶಬ್ದವೇ ಕನ್ನಡ ನಾಡಿನ ಶಾಸನಗಳಲ್ಲಿ ಇದುವರೆವಿಗೂ ಲಭ್ಯವಾಗಿರುವ ಪ್ರಾಚೀನ ಶಾಸನೋಕ್ತ ನಿಸದಿಯ ಉಲ್ಲೇಖವಾಗಿದೆ. ಈ ಶಾಸನದ ಕಾಲವನ್ನು ಇತರೇ ವಿದ್ವಾಂಸರುಗಳಾದ ಎಂ ಚಿದಾನಂದ ಮೂರ್ತಿ, ಎಂ.ಎಚ್. ಕೃಷ್ಣಯ್ಯ, ಕಮಲಾ ಹಂಪನಾ, ಕೆ.ವಿ. ನಾರಾಯಣ ಅವರುಗಳೂ ಸಹ ಈ ಶಾಸನದ ಕಾಲವನ್ನು ಹಲ್ಮಿಡಿ ಶಾಸನದ ಕಾಲಕ್ಕಿಂತ ಹಿಂದಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಎಂ.ಚಿದಾನಂದ ಮೂರ್ತಿಯವರು , ʻ ಡಾ. ಮಂಜುನಾಥ್ ಅವರು ಓದಿದ ಈ ಹಳಗನ್ನಡದ ಶಾಸನ ಸು.೫೦ ರಿಂದ ೧೦೦ ವರ್ಷ ಹಲ್ಮಿಡಿಯ ಶಾಸನಕ್ಕಿಂತ ಹಳೆಯದಿರುವ ಸಂಭವವಿದೆ. ಈ ಶಾಸನದಸಮಗ್ರ ಪಾಠವು ನನಗೆ ದೊರೆತರೆ ತಾನೂ ಕೂಡ ಇದನ್ನುಅಧ್ಯಯನಿಸಲು ಉತ್ಸುಕನಾಗಿದ್ದೇನೆ.ʼ ಎಂದು ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇದರ ಬಗೆಗೆ ಹೆಚ್ಚಿನ ಚರ್ಚೆ ನಡೆದು ಮಾನ್ಯ ಮಾಡಿದರೆ ಈ ಶ್ರವಣಬೆಳಗೊಳದ ಗುಣಭೂಷಿತ ಮುನಿಯ ಕ್ರಿ.ಶ. ೪೦೦ ರ ಶಾಸನವು ಕನ್ನಡದ ಪ್ರಾಚೀನ ಶಾಸನ, ಪ್ರಾಚೀನ ಉಪಲಬ್ಧ ಜೈನ ಶಾಸನ ಮತ್ತು ಪ್ರಾಚೀನ ಉಪಲಬ್ಧ ನಿಸದಿ ಶಾಸನ ವೆಂದು ನಿರ್ಣಯಿಸಬಹುದಾಗಿದೆ. ಆದರೆ ಇತ್ತೀಚೆಗೆ ಈ ನಿಸದಿ ಶಾಸನವನ್ನು ಪುನರ್ ಪರಿಶೀಲಿಸಿದ ಶಾಸನ ತಜ್ಞರಾದ ಬಿ.ರಾಜಶೇಖರಪ್ಪನವರು ಈ ಶಾಸನದ ಕಾಲದ ಬಗೆಗೆ ಹಾಗೂ ಪಾಠದ ಬಗೆಗೆ ವ್ಯತಿರಿಕ್ತವಾದ ಅಭಿಪ್ರಾಯವನ್ನು ಕೊಡಮಾಡಿದ್ದಾರೆ.( ಹೆಚ್ಚಿನ ವಿವರಗಳಿಗೆ, ಬಿ.ರಾಜಶೇಖರಪ್ಪ, ಶ್ರವಣಬೆಳಗೊಳದ ಒಂದು ನಿಸದಿ ಶಾಸನದ ಪುನರ್ ಪರಿಶೀಲನೆ, ವಜ್ರ ಪದ್ಮ-ಡಾ.ಎಸ್.ಪಿ. ಪದ್ಮಪ್ರಸಾದ್-೭೦ ರ ಗೌರವ ಗ್ರಂಥ, ಪು. ೪೨೫-೪೫೨) ಅವರ ಪ್ರಕಾರ, ಈ ನಿಸದಿ ಶಾಸನದ ಮುನಿಯ ಹೆಸರು ಗುಣಭೂಷಿತ ಅಲ್ಲ. ಬಹುಶಃ ಗೋಪಗೋಪಿತ ಎಂದು. ಈ ಹೆಸರಿನ ಮುನಿಯೊಬ್ಬ ಇದ್ದನೆಂಬುದು ಇದೇ ಮೊತ್ತ ಮೊದಲ ಬಾರಿಗೆ ತಿಳಿದು ಬರುತ್ತದೆ. ಈ ಹಿಂದೆ ಕೆಲವರು ಬರೆದಿರುವಂತೆ ನಿಸದಿಗೆಯನ್ನು ನಿರ್ಮಿಸಿದವನು ಗುಣಭೂಷಿತನೂ ಅಲ್ಲ, ಆದಿ ಉಳಾಡನೂ ಅಲ್ಲ. ನಿಸದಿಯು ನಿರ್ಮಾಣವಾದದ್ದು ಅವನಿಗಾಗಿ. ಗೋಪ ಗೋಪಿತ ಅಥವಾ ಆದಿ ಉಳಾಡನು ಕರಾವಳಿ ತೀರದ ಕೋಳಿಯೂರ್ ಎಂಬ ಊರಿನಿಂದ ಶ್ರವಣಬೆಳಗೊಳದ ಬೆಟ್ಟಕ್ಕೆ ಬಂದು ಅಲ್ಲಿ ತನ್ನ ಕೊನೆಯ ದಿನಗಳನ್ನು ಕಳೆದದ್ದು ಈ ಶಾಸನದಿಂದ ಮೊದಲಬಾರಿಗೆ ವ್ಯಕ್ತವಾಗುತ್ತದೆ. ಈ ನಿಸದಿ ಶಾಸನದ ಮುನಿ ʻಸಂದ್ವಿಗ ಗಣತಾ ನಯಾನ್ʼ ಎಂದು ವಿಶೇಷಿಸಲ್ಪಟ್ಟಿದ್ದಾನೆ. ಅಂದರೆ ಇವನು ಈಗ ಅಜ್ಞಾತವಾಗಿರುವ ಜೈನರ ಸಂದ್ವಿಗ ಎಂಬ ಹೆಸರಿನ ಗಣಕ್ಕೆ ಸೇರಿದವನು. ಅಷ್ಟೇ ಅಲ್ಲ, ಅವನು ಆ ಗಣದ ವಿಶೇಷ ನಯವನ್ನು ಹೊಂದಿದ್ದವನು ಎಂದು ಶಾಸನ ಹೇಳುತ್ತದೆ. ಹಾಗೆಯೇ ಇಲ್ಲಿ ದಮ್ಮ ಎಂಬ ಪದವಿದ್ದುದಾಗಿ ಮತ್ತು ಅದು ಪ್ರಾಕೃತ ಪದ ಎಂಬುದಾಗಿ ಭಾವಿಸಲಾಗಿದ್ದಿತು. ಆದರೆ ಅದು ಸರಿಯಲ್ಲ. ಅಲ್ಲಿರುವ ಪದ ಸದ್ಧಮ್ಮ ಅಲ್ಲ, ಸದ್ಧರ್ಮ. ನಿಸದಿಯ ಮುನಿಯನ್ನು ಕಡೆಯಲ್ಲಿ, ʻಸಸಾನದಿಪತಾನ್ʼ ಎಂದು ಕರೆದಿದೆ. ಈ ಪದ ಪುಂಜದೊಳಗಿರುವ ʻಸಸಾನುʼ ಎಂಬುದು ಪ್ರಾಕೃತ ಪದವಲ್ಲ. ಅದು ಶಾಸನ ಎಂಬ ಸಂಸ್ಕೃತ ಪದದ ಒಂದು ಅಪಲಿಖಿತ ರೂಪ. ಹಾಗಾಗಿ ಇಲ್ಲಿ ಸರಿಯಾಗಿ ಇರಬೇಕಾದ ಪದಪುಂಜ ಎಂದರೆ ʻಶಾಸನಾಧಿಪಂ ತಾನ್ʼ ಅಂದರೆ ʻಶಾಸನದ ಅಧಿಪತಿ ತಾನು; ಎಂದರ್ಥ. ಈ ಶಾಸನದಲ್ಲಿ ನಿಸದಿಗೆ, ದಮ್ಮ, ದಾಣ, ಸಸಾನ್ ಎಂಬವು ಪ್ರಾಕೃತ ಶಬ್ದಗಳೆಂದು ಸಂಶೋಧಕರು ಭಾವಿಸಿರುವುದು ಸರಿಯಲ್ಲ. ಕರ್ನಾಟಕದ ಹಳೆಯ ನಿಸದಿ ಶಾಸನ ಎಂಬ ಸಂಶೋಧಕರ ಹೇಳಿಕೆ ಸ್ವೀಕರಣೀಯವಲ್ಲ. ಈ ಶಾಸನವು ಹಲ್ಮಿಡಿ ಶಾಸನಕ್ಕಿಂತ ೧೦೦-೧೫೦ ವರ್ಷಗಳಷ್ಟು ಈಚಿನದಾಗಿರಬೇಕು. ಈ ಶಾಸನ ಹಲ್ಮಿಡಿಯದಕ್ಕಿಂತ ಪೂರ್ವದ್ದು ಎಂದು ಹೇಳಲು ನೆರವಿಗೆ ಬರುವ ಅಂಶಗಳು ಯಾವುವೂ ಕಾಣ ಸಿಗುವುದಿಲ್ಲ ಎಂಬ ನಿಲುವನ್ನು ವ್ಯಕ್ತ ಪಡಿಸಿದ್ದಾರೆ. ಆದರೆ ಒಂದಂತೂ ನಿಜ. ಇವರ ಪುನರ್ ಪರಿಶೀಲನೆಯ ಫಲಿತಗಳಿಂದಾಗಿ ಪೂರ್ವದ ಹಳೆಗನ್ನಡ ಭಾಷೆಯ ಪಠ್ಯದ ಪೂರ್ಣ ಪಾಠವು ದೊರೆತು ಪೂರ್ವದ ಹಳೆಗನ್ನಡದ ಭಾಷಾಸ್ವರೂಪವನ್ನು ನಿರ್ಧರಿಸಲು ಸಾಧ್ಯವಾಯಿತು. ಹೊಸ ವ್ಯಾಖ್ಯಾನದ ಮೂಲಕ ನೂತನ ಸಂಗತಿಗಳು ಬೆಳಕಿಗೆ ಬಂದಂತಾಯಿತು.
ಕನ್ನಡ ಭಾಷೆಯು ಕ್ರಿ.ಶ. 450 ರಲ್ಲಿಯೇ ಲಿಖಿತ ರೂಪವನ್ನು ಪಡೆಯ ಬೇಕಾದರೆ ಅದಕ್ಕಿಂತ ನೂರಾರು ವರ್ಷಗಳ ಹಿಂದೆಯೇ ಆಡು ಮಾತಿನ ರೂಪದ ಕನ್ನಡ ಭಾಷೆ ಇದ್ದಿತು ಎಂದು ಸಾಧಿಸ ಬಹುದಾಗಿದೆ. ಏಕೆಂದರೆ ಒಂದು ಭಾಷೆಯಲ್ಲಿ ಲಿಖಿತ ರೂಪದ ಭಾಷಾ ನಿರ್ಮಾಣ ಆಗ ಬೇಕಾದರೆ ಅದರಲ್ಲಿ ಅದಕ್ಕಿಂತ ಹಿಂದೆ ಆಡು ಮಾತಿನ ರೂಪ ಬಹಳ ದೀರ್ಘಕಾಲ ಇದ್ದಿರ ಬೇಕು. ಹಲ್ಮಿಡಿ ಶಾಸನದಲ್ಲಿ ಕರ್ಮಣಿ ಪ್ರಯೋಗದ ಬಳಕೆ ಆಗಿರುವುದರಿಂದ ಆ ಕಾಲಕ್ಕೆ ಕನ್ನಡ ಭಾಷೆ ಹಲವು ಪ್ರಯೋಗಗಳಿಗೆ ಆಹ್ವಾನ ನೀಡಿತ್ತು ಎಂದೇಳಬಹುದಾಗಿದೆ. ಕನ್ನಡ ಒಂದು ಸ್ವತಂತ್ರ ಭಾಷೆಯಾಗಿ ಬೆಳೆದ ಮೇಲೆ ಅನೇಕ ಶತಮಾನಗಳ ಕಾಲ ಲಿಖಿತ ರೂಪಕ್ಕಿಳಿಯದೆ ಕೇವಲ ಆಡುನುಡಿಯಾಗಿ ಉಳಿದಿದ್ದಂತೆ ತೋರುತ್ತದೆ.
ಕದಂಬರ ಅನೇಕ ಶಾಸನಗಳು ಕನ್ನಡದಲ್ಲಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ತಾಳಗುಂದ, ಗುಂಡಾನೂರ, ಚಂದ್ರವಲ್ಲಿ, ಹಲಸಿ ಮತ್ತು ಹಲ್ಮಿಡಿ. ಅಂದರೆ ಶಾಸನದಲ್ಲಿ ಕನ್ನಡದ ಬಳಕೆ ಆಗುತ್ತಿತ್ತು ಮತ್ತು ಕನ್ನಡ ಅಷ್ಟರಮಟ್ಟಿಗೆ ಅಭಿವೃದ್ದಿ ಹೊಂದಿದ ಭಾಷೆಯಾಗಿತ್ತು ಎಂದು ತಿಳಿದು ಬರುತ್ತದೆ. ಬಾದಾಮಿಯಲ್ಲಿ ದೊರಕಿದ ಕಪ್ಪೆ ಆರಭಟ್ಟನ ಶಿಲಾಶಾಸನ ಸುಮಾರು ಕ್ರಿ.ಶ. 700ರದ್ದು. ಈ ಶಿಲಾ ಶಾಸನ ಕನ್ನಡ ಮತ್ತು ಸಂಸ್ಕೃತಗಳ ಮಿಶ್ರಣವಾಗಿದೆ. ತ್ರಿಪದಿ ಪ್ರಕಾರದಲ್ಲಿರುವ ಕನ್ನಡದ ಕಾವ್ಯವನ್ನು ಈ ಶಿಲಾಶಾಸನದಲ್ಲಿ ನಾವು ಕಾಣಬಹುದು. ಕವಿರಾಜಮಾರ್ಗ ಕ್ರಿ.ಶ. 850ರ ಸುಮಾರಿನದು. ಕವಿರಾಜಮಾರ್ಗಕಾರ, ತನಗಿಂತ ಹಳೆಯ ಎಂಟು-ಹತ್ತು ಕವಿಗಳನ್ನು ಹೆಸರಿಸುತ್ತಾನೆ. ಅವರಲ್ಲಿ ಮುಖ್ಯರಾದವರು ಕವೀಶ್ವರ, ಶ್ರೀವಿಜಯ, ವಿಮಲ, ಉದಯ, ನಾಗಾರ್ಜುನ, ಜಯಬಂಧು ಮತ್ತು ದುರ್ವಿನಿತ. ಇವರ ಕಾಲ ಮತ್ತು ಊರುಗಳ ಬಗ್ಗೆ ಹೆಚ್ಚು ತಿಳಿದು ಬಂದಿಲ್ಲ ಮತ್ತು ಅವರ ಕೃತಿಗಳು ಈಗ ಲಭ್ಯವಿಲ್ಲ. ದುರ್ವಿನಿತನ ಬಗ್ಗೆ ಸ್ವಲ್ಪ ಮಾಹಿತಿ ದೊರೆತಿದೆ. ಈತ ಕ್ರಿ.ಶ. 450ರ ಆಸುಪಾಸಿನಲ್ಲಿದ್ದ ಕವಿ ಎಂಬುದು ಗುಮ್ಮರೆಡ್ಡಿಪುರದ ಶಾಸನ ಮತ್ತು ನಲ್ಲಾಲ ತಾಮ್ರಪಟದಿಂದ ತಿಳಿದುಬಂದಿದೆ. ಅಂದರೆ ಕನ್ನಡ ಸಾಹಿತ್ಯ ಈ ಸಮಯದಲ್ಲೂ ವರ್ಧಿಸುತ್ತಿತ್ತು ಎಂದು ತಿಳಿದು ಬರುತ್ತದೆ.
ಕನ್ನಡ ಸಾಹಿತ್ಯದ ಪ್ರಥಮ ಘಟ್ಟದ ಅವಶೇಷಗಳೆಂದರೆ ಶಾಸನಗಳು. ಪಂಪಪೂರ್ವ ಯಗದಲ್ಲಿ ಶ್ರೀಮಂತ ಸಾಹಿತ್ಯ ಕಂಡುಬರುವುದು ಅಥವ ಕಾವ್ಯಗುಣಗಳುಳ್ಳ ಬಿಡಿಮುಕ್ತಕಗಳು ಕಂಡುಬರುವುದು ಚಿತ್ರದುರ್ಗದ ತಮಟ ಕಲ್ಲಿನ ಶಾಸನಗಳಲ್ಲಿ. ನಿಷಿಧಿ ಶಾಸನಗಳನ್ನು ನಾಡಿನ ಪ್ರಥಮ ಸಾಹಿತ್ಯ ಪಾಠಗಳೆಂದು ವಿದ್ವಾಂಸರು ಗುರುತಿಸಿರುವುದು ಪರಿಶೀಲನಾರ್ಹವಾಗಿದೆ. ಪೂರ್ವ ಹಳಗನ್ನಡದ ಭಾಷೆಯನ್ನು ಒಳಗೊಂಡು ಸಾಹಿತ್ಯ ದೃಷ್ಟಿಯಿಂದ ಗಮನಾರ್ಹವಾದ ಶಾಸನವೆಂದರೆ ಚಿತ್ರದುರ್ಗ ಜಿಲ್ಲೆಯ ತಮಟಕಲ್ಲಿನ ಶಿಲಾಲೇಖನ (E.C.V 11. ಚಿತ್ರದುರ್ಗ 43) ಇದರ ಕಾಲ ನಿರ್ದಿಷ್ಟವಾಗಿ ಗೊತ್ತಿಲ್ಲವಾದರೂ ಸುಮಾರು ಐದನೆಯ ಶತಮಾನದ್ದಿರ ಬೇಕೆಂಬ ಊಹೆ ಸ್ವೀಕಾರಾರ್ಹವಾಗಿದೆ. ಕ್ರಿ.ಶ. 500 ರ ಚಿತ್ರದುರ್ಗದ ತಮಟಕಲ್ಲು ಶಾಸನದಲ್ಲಿ ಬರುವ ಬಿಣಮಣಿ ಅಂತು ಭೋಗಿ ಎಂಬ ಶಾಸನದ ಸಾಲುಗಳು ಬದಾಮಿ ಚಾಲುಕ್ಯರ ಕಾಲದಲ್ಲಿಯೇ ಕನ್ನಡವು ಸಾಹಿತ್ಯದ ಅಥವಾ ಕಾವ್ಯಭಾಷೆಯಾಗಿ ವಿಕಸನ ಹೊಂದಿದ್ದಿತು ಎಂಬುದನ್ನು ಸೂಚಿಸುತ್ತದೆ.
ಇದರ ಲಿಪಿ ಮತ್ತು ಭಾಷೆಗಳೆರಡೂ ಇದು ಬಹುಪ್ರಾಚೀನ ಎಂಬುದಕ್ಕೆ ಸಾಕ್ಷಿಯಾಗಿರುವುದು ಮಾತ್ರವಲ್ಲದೆ. ಈ ವೃತ್ತದ ಛಂದಸ್ಸು ಅತ್ಯಂತ ಅಪೂರ್ವವಾದುದು. ಇದರಲ್ಲಿನ ಸಂಸ್ಕೃತ ಶಬ್ದ ಬಾಹುಳ್ಯವು ಗಮನಾರ್ಹವಾಗಿರುವಂತೆ ಇದರ ಕಾವ್ಯ ಗುಣವು ಮನೋಜ್ಞವಾಗಿದೆ. ಇಂತಹ ಕಾವ್ಯಮಯವಾದ ಶಿಲಾಶಾಸನ ಹುಟ್ಟಬೇಕಾದರೆ ಅದಕ್ಕೂ ಹಿಂದೆ ಸಾಕಷ್ಟು ಸೃಷ್ಟಿ ನಡೆದಿರಬಹುದು ಎಂದು ಊಹಿಸಲು ಅವಕಾಶವಿದೆ. ಕನ್ನಡ ನಾಡಿನ ಯಾವುದೇ ಪ್ರಮುಖ ರಾಜ ಮನೆತನಕ್ಕೆ ಸೇರಿರದ ವ್ಯಕ್ತಿಯ ಗುಣ ವಿಶೇಷಗಳನ್ನು ಕುರಿತ ಈ ಕಾವ್ಯಸ್ವರೂಪದ ದಾಖಲೆಯ ಲಿಪಿಯೂ ಕನ್ನಡವೇ ಆಗಿದೆ. ಒಬ್ಬನೇ ವ್ಯಕ್ತಿಗೆ ಸಂಬಂಧಿಸಿದಂತೆ ಇರುವ ಎರಡು ಪ್ರತ್ಯೇಕ ವೀರ ಅಥವಾ ಪ್ರಶಸ್ತಿ ಶಾಸನಗಳ ಪೈಕಿ ಒಂದು ಕನ್ನಡ ಭಾಷೆ ಮತ್ತು ಲಿಪಿಯಲ್ಲೂ, ಮತ್ತೊಂದು ಸಂಸ್ಕೃತ ಭಾಷೆ ಮತ್ತು ಕನ್ನಡ ಲಿಪಿಯಲ್ಲೂ ಇವೆ. ಒಬ್ಬನೇ ವೀರನ ಎರಡು ಪ್ರಶಸ್ತಿ ಶಾಸನಗಳು ಒಂದೆಡೆಯೇ ಇರುವುದು ಒಂದು ಅಪರೂಪ ಎಂದೇ ಹೇಳಬೇಕು. ಈ ಶಾಸನದಲ್ಲಿ ದಾನ ಅಥವಾ ವೀರನ ಸಾವಿನ ಪ್ರಸ್ತಾಪ ಇಲ್ಲ. ಅಪ್ಪಟ ಗುಣ ವರ್ಣನೆ ಇದೆ. ಶಾಸನವು ಸಂಸ್ಕೃತ ಮತ್ತು ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿದೆ.
ಸಂಸ್ಕೃತ ಶಾಸನದ ಪಾಠ ಇಂತಿದೆ. ಮಾಸಿಕ್ಕಾಪುರಾಧಿಪತಿಯಾದ ಭಾರದ್ವಾಜ ವಂಶದ ಧನಾಗಮನ ಮಗ ಗುಣಮಧುರನು ತ್ಯಾಗವಂತನೆಂದು ಹೆಸರಾದವನು ಎಂಬ ವಿಶೇಷ ಗುಣವನ್ನು ಪ್ರಸ್ತಾಪಿಸುವ ಶಾಸನದ ಭಾಷೆ ಸಂಸ್ಕೃತ ಮತ್ತು ಲಿಪಿ ಕನ್ನಡ. ಶಾಸನದ ಪಕ್ಕದಲ್ಲೇ ಇರುವ ಗುಣಮಧುರನನ್ನೇ ಕುರಿತ ಕನ್ನಡ ಶಾಸನವೂ ಕಾವ್ಯಾತ್ಮಕವಾಗಿದೆ.
ಬಿಣಿಮಣಿ (ಫಣಿಮಣಿ) ಅನ್ತುಭೋಗಿ ಬಿಣಿ (ಫಣ) ದುಳ್ಮಣಿ ಚಿಲ್ಮನದೋಳ್
ರಣಮುಖದುಳ್ಳ ಕೋಲಂ ನೆರೆಯರ್ಕುಮನಿದ್ದ್ಯ ಗುಣನ್
ಪ್ರಣಯಿ ಜನಕ್ಕೆ ಕಾಮನಸಿತೋದ್ಘಲ ವರ್ಣನವಣ್
ಗುಣಮಧುರಾಂಕ್ಕ ದಿವ್ಯಪುರುಷನ್ ಪುರುಷ ಪ್ರವರನ್
ಗುಣಮಧುರನು ಹಣೆ(ಹೆಡೆ)ಯಲ್ಲಿ ರತ್ನವುಳ್ಳ ನಾಗನಂತೆ ಭೋಗಿ(ಸುಖಿ: ಹೆಡೆಯುಳ್ಳುದು). ಹಣೆಯಲ್ಲಿ ಭಾಗುವಿಕೆಯಿಲ್ಲದ ಮನಸ್ಸಿನವನು.(ಬಿಣದುಳ್-ಮಣಿವು-ಇಲ್-ಮನದೋನ್) ಅರ್ಥಾತ್ ಶತ್ರುಗಳಿಗೆ ಎಂದಿಗೂ ತಲೆಬಾಗದ ಧೀರನು. ಯುದ್ಧದಲ್ಲಿ ತನ್ನಲ್ಲಿರುವ ಬಾಣಗಳಿಂದ ತಿವಿಯುವವನು. ನಿಂದ್ಯವಲ್ಲದ ಗುಣವುಳ್ಳವನು. ಪ್ರಣಯಿಗಳಿಗೆ ಮನ್ಮಥನು. ನೀಲೋತ್ಫಲದ ಬಣ್ಣವುಳ್ಳವನು. ದಿವ್ಯ ಪುರುಷನು. ಪೌರುಷವುಳ್ಳವರಲ್ಲಿ ಶ್ರೇಷ್ಠನು.
ಈ ಶಾಸನದ ಮೂಲಕ ಕನ್ನಡದಲ್ಲಿ ಆರನೆಯ ಶತಮಾನದ ಹೊತ್ತಿಗಾಗಲೇ ಕಾವ್ಯ ಮೌಲ್ಯವುಳ್ಳ ಪದ್ಯರಚನೆ ಪ್ರಾರಂಭವಾಗಿದ್ದರ ಜೊತೆಗೆ ಸಂಸ್ಕೃತ ವರ್ಣ ವೃತ್ತಗಳನ್ನು ಬಳಸುತ್ತಿದ್ದರು ಎಂಬುದು ತಿಳಿದು ಬರುತ್ತದೆ. ಸಂಸ್ಕೃತ ಶಾಸನದಲ್ಲಿ ಪರಿಚಯಗೊಂಡ ಗುಣಮಧುರನ ಗುಣಸ್ವಭಾವಗಳನ್ನು ಕನ್ನಡ ವೃತ್ತದಲ್ಲಿ ವಿವರಿಸಲಾಗಿದೆ. ಈ ಗುಣಮಧುರ ಯಾವುದೇ ಪ್ರಸಿದ್ಧ ರಾಜಮನೆತನಕ್ಕೆ ಸೇರಿದ ವ್ಯಕ್ತಿಯಲ್ಲ. ಒಂದು ಪಟ್ಟಣದ ವ್ಯಾಪ್ತಿಗೆ ಸೇರಿದ್ದ ಪ್ರದೇಶದ ಅಧಿಪತಿ ಅಷ್ಟೇ. ಇಂತಹ ವ್ಯಕ್ತಿಯ ಪ್ರಶಸ್ತಿಗೆ ಸಂಸ್ಕೃತ ಮತ್ತು ಕನ್ನಡ ಭಾಷೆಗಳೆರಡರ ಬಳಕೆ ಆಗಿರುವುದು ಗಮನಿಸಬಹುದು. ಇನ್ನೊಂದು ಸಂಗತಿ ಎಂದರೆ ಸಂಸ್ಕೃತ ಭಾಷೆಯಲ್ಲಿ ಕೇವಲ ಪರಿಚಯವಿದೆ. ಗುಣ ವಿಶೇಷಣಗಳು ಕನ್ನಡದಲ್ಲಿವೆ. ಈ ವಿಷಯವನ್ನು ಗಮನಿಸಿದಾಗ ಪ್ರಬಲವಾಗುತ್ತಿದ್ದ ಕನ್ನಡ ಮತ್ತು ಸಾಂಪ್ರದಾಯಿಕವಾಗಿ ಮಾತ್ರ ಬಳಕೆಯಾಗುತ್ತಿದ್ದ ಸಂಸ್ಕೃತದ ಸ್ಥಿತಿಯನ್ನು ಗಮನಿಸಬಹುದು. ಸಂಸ್ಕೃತ ಮತ್ತು ಕನ್ನಡ ಎರಡು ಭಾಷೆಗಳನ್ನು ಶಾಸನಗಳಲ್ಲಿ ಬಳಸುವ ಕ್ರಮವು ಕ್ರಿ.ಶ. ಐದನೆಯ ಶತಮಾನದ ಕೊನೆಯ ಭಾಗದಲ್ಲಿ ಕಾಣಿಸಿ ಕೊಂಡಿದೆ.
ಒಟ್ಟಾರೆ ಸದ್ಯಕ್ಕೆ ಲಭ್ಯವಿರುವ ಆರಂಭಕಾಲೀನ ಶಾಸನಗಳ ಪುನರ್ ಪರಿಶೀಲನೆ ಮತ್ತು ಅಧ್ಯಯನದ ಮೂಲಕ ಕನ್ನಡ ಭಾಷೆ-ಸಾಹಿತ್ಯದ ಮೊದಲಾದವು ಪ್ರಾಚೀನತೆಯನ್ನು ತಿಳಿಯಲು ನಮಗೆ ಅಧಿಕೃತ ಆಕರಗಳಾಗಿವೆ. ಭಾಷೆ ಸಾಹಿತ್ಯಗಳಿಗೆ ಸಂಬಂಧಿಸಿ ಹೇಳುವುದಾದರೆ ಶಾಸನಗಳ ಅಧ್ಯಯನದ ಮೂಲಕ ನಮ್ಮ ಭಾಷೆ ಬೆಳೆದು ಬಂದಿರುವ ರೀತಿ ಗೊತ್ತಾಗಿದೆ; ಸಾಹಿತ್ಯದ ಪ್ರಾಚೀನತೆ, ಬೆಳವಣಿಗೆ, ಸತ್ವ ಸೌಂದರ್ಯಗಳು ಮನವರಿಕೆಯಾಗಿವೆ; ಗ್ರಂಥಸ್ಥ ಸಾಹಿತ್ಯದ ಸಂಶೋಧನೆಗೆ ಪೂರಕಸಾಮಗ್ರಿ ದೊರೆತಿದೆ; ಹೊಸ ಸಂಗತಿಗಳ ತಿಳುವಳಿಕೆಯು ಹಳೆಯ ಸಮಸ್ಯೆಗಳ ಪರಿಹಾರವೂ ಸಾಧ್ಯವಾಗಿವೆ.
ಪರಾಮರ್ಶನ ಗ್ರಂಥಗಳು
೧. ಎಂ.ಬಿ.ನೇಗಿನಹಾಳ: ಪೂರ್ವದ ಹಳಗನ್ನಡ ಶಾಸನಗಳ ಸಾಹಿತ್ಯಕ ಅಧ್ಯಯನ
ಪ್ರಸಾರಾಂಗ,ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ,1994
೨. ಷ.ಶೆಟ್ಟರ್: ಪ್ರಾಕೃತ ಜಗದ್ವಲಯ,( ಪ್ರಾಕೃತ- ಕನ್ನಡ -ಸಂಸ್ಕೃತ ಭಾಷೆಗಳ ಅನುಸಂಧಾನ) ಅಭಿನವ ಪ್ರಕಾಶನ, ಬೆಂಗಳೂರು,೨೦೧೮
೩. ಟಿ.ವಿ.ವೆಂಕಟಾಚಲ ಶಾಸ್ತ್ರೀ: ಶಾಸ್ತ್ರೀಯ ಸಂ.2, ಸ್ವಪ್ನಬುಕ್ ಹೌಸ್, ಬೆಂಗಳೂರು,1999
೪. ಎಂ.ಚಿದಾನಂದಮೂರ್ತಿ: ಹೊಸತು ಹೊಸತು, ಪ್ರಸಾರಾಂಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ.1993 65.
೫.ಎಂ.ಎಂ.ಕಲಬುರ್ಗಿ: ಶಾಸನ ವ್ಯಾಸಂಗ ,ಸಂ.1. ಪ್ರಸಾರಾಂಗ
ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ,1974
೬. ಸಿ.ನಾಗಭೂಷಣ: ಸಾಹಿತ್ಯ ಸಂಸ್ಕೃತಿ ಅನ್ವೇಷಣೆ
ಸಿ.ವಿ.ಜಿ. ಪಬ್ಲಿಕೇಶನ್ಸ್, ಬೆಂಗಳೂರು ೨೦೦೭
ಶಾಸನಗಳು ಮತ್ತು ಕನ್ನಡ ಸಾಹಿತ್ಯ,ಪ್ರಸಾರಾಂಗ
ಗುಲಬರ್ಗಾ ವಿಶ್ವವಿದ್ಯಾಲಯ,ಗುಲಬರ್ಗಾ 2೦೦5
೭.ಶಾಸನ ಸಾಹಿತ್ಯ ಸಂಚಯ (ಸಂ: ಎ.ಎಂ.ಅಣ್ಣಿಗೇರಿ ಮತ್ತು ಮೇವುಂಡಿ ಮಲ್ಲಾರಿ)
ಕನ್ನಡ ಸಂಶೋಧನಾ ಸಂಸ್ಥೆ, ಧಾರವಾಡ,1961
೮. ಮಂಜುನಾಥ ಎಂ.ಜಿ.: ಶಾಸನ ಪರಿಶೋಧನೆ, ವಿಜಯಲಕ್ಷ್ಮಿ ಪ್ರಕಾಶನ, ಮೈಸೂರು, ೨೦೦೮
೯. ವಜ್ರಪದ್ಮ ಸಂ: ಬಿ.ನಂಜುಂಡಸ್ವಾಮಿ, ಸನ್ನಿಧಿ ಪಬ್ಲಿಕೇಶನ್, ಮಂಡ್ಯ, ೨೦೧೯
ಮಂಗಳವಾರ, ಮೇ 18, 2021
ಕನ್ನಡ ಸಾಹಿತ್ಯದ ಪ್ರಾಚೀನತೆ ಮತ್ತು ಶಾಸನಗಳು: ಇತ್ತೀಚಿನ ಸಂಶೋಧನಾ ನಿಲುವುಗಳು ಡಾ.ಸಿ.ನಾಗಭೂಷಣ
ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು ಡಾ.ಸಿ.ನಾಗಭೂಷಣ ...
-
ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆಗಳ ಗ್ರಹಿಕೆ ಡಾ.ಸಿ.ನಾಗಭೂಷಣ ಭಾರತೀಯ ...
-
ಕನ್ನಡ ಸಾಹಿತ್ಯದ ಪ್ರಾಚೀನತೆ ಮತ್ತು ಶಾಸನಗಳು:ಇತ್ತೀಚಿನ ಸಂಶೋಧನಾ ನಿಲುವುಗಳು ...
-
ಕನ್ನಡ ಹಸ್ತಪ್ರತಿಗಳು: ಬಹುಮುಖಿ ಪ್ರಯೋಜನ ( ಚಾರಿತ್ರಿಕ , ಸಾಂಸ್ಕೃತಿಕ , ಸಾಹಿತ್ಯಕ ಹಾಗೂ ಭಾಷಿಕ ಮಹತ್ವ ) ಡಾ.ಸಿ.ನಾ...