ಸಮಕಾಲೀನ ಕನ್ನಡ ಸಾಹಿತ್ಯದ
ಸಮಸ್ಯೆ: ಸವಾಲು ಮತ್ತು ಸಾಧ್ಯತೆಗಳು *
ಡಾ.ಸಿ.ನಾಗಭೂಷಣ
ಕನ್ನಡ ಸಾಹಿತ್ಯಕ್ಕೆ
ಒಂದು ಸಾವಿರ ವರ್ಷಗಳ ಲಿಖಿತ ಪರಂಪರೆಯ ಇತಿಹಾಸ ಇದೆ.ಇವೊತ್ತಿನ ಭಾರತದ ಸಾಹಿತ್ಯದಲ್ಲಿ ಕನ್ನಡಕ್ಕೆ
ಮೇಲ್ಪಂಕ್ತಿಯ ಸ್ಥಾನವಿದೆ. ಭಾರತೀಯ ಭಾಷೆಯಗಳಲ್ಲಿಯೇ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡ ಹಿರಿಮೆ ಕನ್ನಡಕ್ಕಿದೆ.
ಇದು ಕನ್ನಡ ಸಾಹಿತ್ಯ ತನ್ನಲ್ಲಿರುವಅಂತಃಸತ್ವದಿಂದ ಗಿಟ್ಟಿಸಿಕೊಂಡ ಸ್ಥಾನ, ಅದನ್ನು ಯಾರೂ ಕಸಿದುಕೊಳ್ಳಲಾರರು.
ಆಧುನಿಕ ಜಗತ್ತಿನಲ್ಲಿ ಸಾಹಿತ್ಯದ ಬದಲಾವಣೆಗೆ ಹಿಂದಿನ
ಹಾಗೆ ಸಾವಿರಾರು ವರ್ಷ ಕಾಯಬೇಕಾಗಿಲ್ಲ. ದಿನದಿಂದ ದಿನಕ್ಕೆ ಬದುಕು ತೀವ್ರಗತಿಯಿಂದ ಬದಲಾಗುತ್ತಿದೆ.
ಪರಿಸರ ಬದಲಾದ ಹಾಗೆ ಸಾಹಿತ್ಯಾಭಿವ್ಯಕ್ತಿಯಲ್ಲೂ ಬದಲಾವಣೆಗಳಾಗಿವೆ. ಆಧುನಿಕ ಪೂರ್ವದ ಕನ್ನಡಸಾಹಿತ್ಯ
ಶತಮಾನಗಳಿಗೊಮ್ಮೆ ಸ್ವರೂಪದಲ್ಲಿ ಬದಲಾವಣೆಗೊಂಡರೆ ಹೊಸಗನ್ನಡ ಸಾಹಿತ್ಯ ಒಂದು ಶತಮಾನದಲ್ಲಿಯೇ ನವೋದಯ,
ಪ್ರಗತಿಶೀಲ, ನವ್ಯ, ದಲಿತ ಬಂಡಾಯಗಳೆಂಬ ನಾಲ್ಕು ತಿರುವುಗಳನ್ನುಕಂಡಿದೆ. ಇಂದಿನ ಸಾಹಿತಿಗಳಿಗೆ ನೇರವಾಗಿ
ಜನತೆಯೊಂದಿಗೆ ಬೆಸೆದುಕೊಳ್ಳುವ ಕಾಲ ಒದಗಿದೆ. ಸಾಹಿತಿಗಳು ಯಾವ ಜನತೆಯ ಆಶೋತ್ತರಗಳನ್ನು ಪ್ರತಿನಿಧಿಸುತ್ತಾರೋ
ಆ ಜನತೆಯ ಬದುಕನ್ನು ಒಳಹೊಕ್ಕು ನೋಡಬೇಕಾಗಿದೆ.
ಸಮಕಾಲೀನ ಸಂದರ್ಭದಲ್ಲಿ ಕನ್ನಡ ಸಾಹಿತ್ಯವನ್ನು ಈ ಕೆಳಕಂಡ ಮೂರು ಅಂಶಗಳ ಹಿನ್ನೆಲೆಯಲ್ಲಿಯೂ ಪರಾಮರ್ಶನ ಮಾಡಬೇಕಾಗಿದೆ.
೧. ಸಾಮಾಜಿಕ ಅಭಿವ್ಯಕ್ತಿಗೆ ಸಾಹಿತ್ಯದ ಕೊಡುಗೆ
೨. ಸಾಂಸ್ಕೃತಿಕ ವಿಭಿನ್ನತೆಯಲ್ಲಿ
ಸಾಹಿತ್ಯದ ಹೊಣೆಗಾರಿಕೆ
೩. ಸಾಹಿತ್ಯದಲ್ಲಿ ಸಮಕಾಲೀನ
ಬದುಕಿನ ಚಿತ್ರಣ
ಭವಿಷ್ಯದ ಸಾಹಿತ್ಯ ಸುತ್ತಣ ಬದುಕಿನ ತನ್ಮಯತೆಯಿಂದಾಗಿ
ತನ್ನ ಸ್ಪೂರ್ತಿಗೆ, ಪ್ರೇರಣೆಗೆ ಪಾಶ್ಚಾತ್ಯ ಪ್ರಭಾವ, ಮಾದರಿಗಳನ್ನು ಅವಲಂಬಿಸಿದ ಒಳ್ಳೆಯ ಪರಿಸ್ಥಿತಿ
ಒದಗಬಹುದು. ನಿಜವಾದ ಮಣ್ಣಿನವಾಸನೆ ಭವಿಷ್ಯದಲ್ಲಿ ಹೊಡೆಯಬಹುದು. ನಾಳಿನ ಸಾಹಿತ್ಯಕ್ಕೆ ತನ್ನ ಕಾಲ
ಕೆಳಗಿನ ನೆಲೆಯನ್ನು, ಅದರಮೇಲೆ ಬದುಕುವ ಜನವನ್ನು ಅವರ ರಕ್ತದಲ್ಲಿರುವ ಸಾಂಸ್ಕೃತಿಕ ಪರಂಪರೆಗಳನ್ನು
ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿಕೊಳ್ಳುವ ಅವಕಾಶ ಜಾಸ್ತಿ ಒದಗಬಹುದು.
ಹಾಗೆಯೇ ತಾವು ಯಾವ ಸಮುದಾಯದಿಂದ ಎದ್ದು ಬಂದು ಬರೆಯುತ್ತಿದ್ದೇವೆ
ಎಂಬ ಅನಿಸಿಕೆಯಿಂದ ಸಾಹಿತಿಗಳು ಹೊರಟಿದ್ದಾರೋ ಅದೇ ರೀತಿ ಆ ಜನಕ್ಕೆ ತಾವು ಬರೆದದ್ದು ತಲುಪಬೇಕೆಂಬ
ಕಳಕಳಿಯನ್ನು ಪ್ರಧಾನವಾಗಿ ಹೊಂದಿರಬೇಕು. ಭವಿಷ್ಯದಲ್ಲಿಯ ಸಾಹಿತ್ಯ ತಮ್ಮ ಸುತ್ತಣ ಜನವನ್ನು ಅರ್ಥಮಾಡಿಕೊಳ್ಳುವ
ಹಾಗೂ ನಮ್ಮ ಸಂಸ್ಕೃತಿಯನ್ನು ಹೊಸದಾಗಿ ಸಮೀಕ್ಷಿಸುವ ಸ್ಥಿತಿಯನ್ನು ಒಳಗೊಳ್ಳಬೇಕಾಗಿದೆ. ಇತ್ತೀಚಿನ
ದಿನಮಾನಗಳಲ್ಲಿ ಈ ನಿಟ್ಟಿನಲ್ಲಿ ಸಾಹಿತ್ಯ ಹೆಜ್ಜೆ ಇಡುತ್ತಿರುವುದನ್ನು ಕಾಣಬಹುದಾಗಿದೆ.
ಸಾಹಿತಿಯಾದವನಿಗೆ ತನ್ನ ಪರಿಸರದಲ್ಲಿ ಪರಂಪರಾಗತವಾದ
ಸಾಹಿತ್ಯದ ಸತ್ವದಿಂದ ಪುಷ್ಟನಾಗದ ಹೊರತು ಅವನಿಂದ ನಿಜವಾದ ಸಾಹಿತ್ಯ ಸೃಷ್ಟಿ ಅಸಾಧ್ಯ ಎನಿಸುತ್ತದೆ.
ಸಾಹಿತಿಯು ತನ್ನ ವರ್ತಮಾನದ ಕೇಂದ್ರ ಬಿಂದುವಿನಲ್ಲಿ ನಿಂತಿದ್ದರೂ ಆತ ತಾನು ನಿಂತ ನೆಲೆಗೆ ಹಿನ್ನೆಲೆಯಾದ
ಸಾಹಿತ್ಯ ಪರಂಪರೆಯನ್ನು ತನ್ನದಾಗಿಸಿಕೊಳ್ಳುವ ಜವಾಬ್ದಾರಿ ಪ್ರಮುಖವಾದುದು. ತಮಗೆ ಹಿಂದಿನ ಸಾಹಿತ್ಯ
ಪರಂಪರೆಯ ಅರಿವಿಲ್ಲದಿರುವುದು ಅಷ್ಟೇನೂ ಮಹತ್ವದ ಸಂಗತಿಯಲ್ಲವೆಂದು ಕಡೆಗಣಿಸುವ ಹಾಗೂ ಕನ್ನಡದ ಸಾಹಿತ್ಯಕ
ಪರಂಪರೆಯಿಂದ ತಾವು ಕಲಿಯಬೇಕಾದುದೇನೂ ಇಲ್ಲವೆಂಬ ಧೋರಣೆ ಉಂಟಾದರೆ ಭವಿಷ್ಯದಲ್ಲಿಯ ನೂತನ ಸಾಹಿತ್ಯಕ್ಕೆ ಆಂತರಿಕ ಸತ್ವದ ಆಳ-ಅಗಲಗಳ ಕೊರತೆಯಾಗಬಹುದು.
ಸಾಹಿತಿಗಳು ನಿಜವಾದ ಅರ್ಥದಲ್ಲಿ ಮೊದಲು ಕನ್ನಡಿಗರಾಗದ
ಹೊರತು _ಸಮಸ್ತ ಕನ್ನಡಿಗರ ಆಸೆ-ಆಕಾಂಕ್ಷೆಗಳನ್ನು ಭಾವನೆಗಳನ್ನು ಮತ್ತು ಜೀವನವನ್ನು ಅಭಿವ್ಯಕ್ತಿಸಲು
ಖಂಡಿತ ಸಾಧ್ಯವಿಲ್ಲ. ಕನ್ನಡನಾಡಿನ ಲೇಖಕ ತನ್ನ ಪರಿಸರ, ತನ್ನ ಸುತ್ತಣ ಜನರ ಬದುಕು, ತನ್ನ ಸಾಹಿತ್ಯ
ಪರಂಪರೆಯೆಂಬ ವಿಶಾಲಾರ್ಥವುಳ್ಳವನಾಗಿ ಕನ್ನಡ ನಾಡಿನ ಮಣ್ಣಿನಲ್ಲಿ ಬೇರೂರಿದರೆ ಮಾತ್ರ ಅವನ ಸಾಹಿತ್ಯದಲ್ಲಿ
ಸಹಜವಾಗಿ ಮಣ್ಣಿನ ವಾಸನೆ ಉಂಟಾಗುತ್ತದೆ. ಸಾಹಿತ್ಯ ಸೃಷ್ಟಿ ಇಂದು ಸಂದುದ್ದು, ಭವಿಷ್ಯದಲ್ಲಿ ಸಲ್ಲುವಂತಾಗುವ
ಗುಣವನ್ನು ಪಡೆದುಕೊಂಡಿದೆಯೆ ಎಂಬುದರ ಕಡೆಗೆ ಗಮನ ಹರಿಸಬೇಕಾಗಿದೆ. ಭವಿಷ್ಯದಲ್ಲಿ ಕನ್ನಡ ಸಾಹಿತ್ಯಪರಂಪರೆಯ
ಅರಿವಿಲ್ಲದವರ ಸಾಹಿತ್ಯ ಸೃಷ್ಟಿ ಅಸಮರ್ಪಕವಾದೀತು. ಆಧುನಿಕ ಜಗತ್ತಿನಲ್ಲಿ ಜನತೆಯ ಅನುಭವ, ಸಂಸ್ಕಾರ,
ಅಭಿಪ್ರಾಯ, ಅಧ್ಯಯನಕ್ಕನುಗುಣವಾಗಿ ಸಾಹಿತ್ಯ ತಲುಪುತ್ತದೆ. ಓದುಗರಲ್ಲಿ ಜ್ಞಾನಿಗಳು, ಪಂಡಿತರು, ವೈಚಾರಿಕರು,
ಶ್ರೀಸಾಮಾನ್ಯರು, ಪಾಮರರು,ಅಲ್ಪರು ಎಂದು ಗುರುತಿಸಬಹುದು. ಅವರವರ ನೆಲೆ-ಬೆಲೆಗಳನ್ನು ಅರಿತು ಸಾಹಿತ್ಯ
ತಲುಪಬೇಕಾಗುತ್ತದೆ. ಸಾಹಿತ್ಯ ಕೃತಿಗಳನ್ನು ಹೆಚ್ಚು ಜನರಿಗೆ ತಲುಪುವ ವ್ಯವಸ್ಥೆ ಮಾಡಬೇಕಾಗಿದೆ. ಉತ್ತಮ
ಕೃತಿಗಳನ್ನು ಬೇರೆ ಬೇರೆ ಮಾಹಿತಿ ತಂತ್ರಜ್ಞಾನ ಮತ್ತು ಸಮೂಹ ಮಾಧ್ಯಮಗಳ ಮೂಲಕ ಜನತೆಗೆ ಮುಟ್ಟಿಸುವ
ಸ್ಥಿತಿಯನ್ನು ಅನುಸರಿಸಬೇಕಾಗಿದೆ. ಸಾಹಿತಿಯ ಮನೋಭಾವವೇ ಆತನ ಕೃತಿಯನ್ನು ಓದುಗನಲ್ಲಿ ತಲುಪಿಸುವ ವಿಸ್ತಾರ-ವ್ಯಾಪ್ತಿಯನ್ನು
ಪಡೆಯಬೇಕಾಗಿದೆ.
ಸಾಹಿತಿ ಮೊದಲು ತನ್ನ ಅನುಭವದ ತೀವ್ರತೆ ವ್ಯಾಪ್ತಿಗಳಿಗೆ
ಖಚಿತ ವ್ಯಾಖ್ಯಾನ ನೀಡಲು ಪ್ರಯತ್ನಿಸುತ್ತಾನೆ. ಒಂದು ನಿರ್ದಿಷ್ಟ ಸಂರಚನೆಯ ನೆರಳಿನಲ್ಲೆ ನಿಂತು ಹೊಸ
ರೀತಿಯ ಭಾಷಾ ಶೋಧನೆ, ಪಾತ್ರಶೋಧನೆ, ಸನ್ನಿವೇಶ ಶೋಧನೆ ಇತ್ಯಾದಿ ಪ್ರಯೋಗಶೀಲತೆಯ ಸೂಕ್ಷ್ಮ ಜಾಡನ್ನು
ಅರಿತುಕೊಳ್ಳಲು ಓದುಗನು ಸಮರ್ಥನಾಗಿದ್ದಾನೆಯೇ, ಸಿದ್ಧನಾಗಿದ್ದಾನೆಯೇ ಎಂಬ ಪ್ರಶ್ನೆಯನ್ನು ಸ್ವತಃ
ತಾನೇ ಹಾಕಿಕೊಳ್ಳಬೇಕಾಗುತ್ತದೆ. ತನ್ನ ಕಾಲಕ್ಕೆ ಮಾತ್ರ ಸ್ಪಂದಿಸುತ್ತ ಸರಳೀಕೃತ ಅನುಭವಗಳನ್ನು ಮುಂದಿಡುತ್ತ
ಹೋಗುವ ಸಾಹಿತಿ ಬಹುಬೇಗ ಜನಪ್ರಿಯತೆಯನ್ನು ಹೊಂದಿ ಅಷ್ಟೇ ಬೇಗ ಮೂಲೆಗೆ ಸರಿಯುತ್ತಾನೆ.ಇನ್ನೊಂದೆಡೆ
ತನ್ನ ಕಾಲಕ್ಕೆ ಸ್ಪಂದಿಸುವುದರ ಜೊತೆಗೆ ಬದುಕಿನ ಸಾರ್ವತ್ರಿಕ ಸಮಸ್ಯೆಗಳನ್ನು ಶೋಧಿಸಲು ಹೊರಟ ಸಾಹಿತಿ
ಅಷ್ಟಾಗಿ ಜನರನ್ನು ತಲುಪಲಾಗದ ಸಮಸ್ಯೆಯನ್ನು ಎದುರಿಸಬೇಕಾದ ಸ್ಥಿತಿ ಉಂಟಾಗಿದೆ. ಈ ನಿಟ್ಟಿನಲ್ಲಿ
ಸಮಕಾಲೀನ ಮತ್ತು ಮುಂದಿನ ಭವಿಷ್ಯದಲ್ಲಿ ಸಾಹಿತ್ಯ ಓದುಗನ ಸರಳ ಬಯಕೆಗಳನ್ನು ಹಿಂಗಿಸಿ ಆತನಲ್ಲಿ ಒಳನೋಟ
ಬಲಿಯುವಂತೆ ಮಾಡಿ ಅವನನ್ನು ಬೆಳೆಸಬೇಕಾಗಿದೆ. ಓದುಗನು ಬಯಸುವ ಮಟ್ಟದಲ್ಲೆ ಬರೆದು ಓದುಗರ ಅಭಿರುಚಿಯನ್ನು
ತಣಿಸಿ ತೃಪ್ತಿ ತಂದುಕೊಂಡು ಇದ್ದಲ್ಲೇ ಉಳಿಯುವುದಕ್ಕಿಂತ ಓದುಗನನ್ನು ಹೊಸ ಹೊಸ ಸೃಷ್ಟಿ ಕೌಶಲ್ಯಗಳ
ಲೋಕಕ್ಕೆ, ಅನುಭವ ಶೋಧನೆಯ ಸಂಕೀರ್ಣ ಲೋಕಕ್ಕೆ ಎಳೆದುಕೊಂಡು ಹೋಗಬೇಕಾದ ಸವಾಲನ್ನು ಸ್ವೀಕರಿಸಬೇಕಾಗಿದೆ.
ಓದುಗನಲ್ಲಿ ವಾಚನಶೀಲತೆಯನ್ನು ಬೆಳೆಸಬೇಕಾಗಿದೆ.
ಸಮಗ್ರವಾಗಿ ಮನುಷ್ಯನನ್ನು ಅರ್ಥೈಸಿಕೊಳ್ಳುವ ಸವಾಲು ಸಾಹಿತ್ಯಕ್ಕೆ
ಹಿಂದೆ ಇರುವ ಹಾಗೆ ಮುಂದೆಯೂ ಇರಬೇಕಾಗಿದೆ. ಹೀಗಾಗಿ ಯಾವ ಕಾಲದ ಸಾಹಿತಿಯೇ ಆದರೂ ಈ ಹೊತ್ತಿಗೂ ಅವನು
ನಮಗೆ ಶ್ರೇಷ್ಠನೆನಿಸಿದಾಗ ಮಾತ್ರ ಅರ್ಥಪೂರ್ಣವಾಗುತ್ತಾನೆ. ಕೇವಲ ವರ್ತಮಾನಕ್ಕೆ ಒತ್ತುಕೊಟ್ಟು ಭೂತಕಾಲವನ್ನು
ಉಪೇಕ್ಷಿಸುವ ಅಥವಾ ಭವಿಷ್ಯದ ಕನಸುಗಾರಿಕೆಯಲ್ಲಿ ಮಾತ್ರ ವಿಹರಿಸುವಂಥದಾದರೆ ಅಂತಹ ಸಾಹಿತ್ಯ ಶ್ರೇಷ್ಠವಾಗುವುದಿಲ್ಲ.
ವರ್ತಮಾನ ಸಾಧ್ಯತೆಗಳಿಗೆಲ್ಲಾ ಅದು ನೀಡಬಹುದಾದ ಅನುಭವ ಸಮಸ್ತಗಳಿಗೆಲ್ಲಾ ಮನಸ್ಸನ್ನು ಮುಕ್ತವಾಗಿ
ತೆರೆಯುವುದರ ಜೊತೆಗೆ,ಪರಂಪರೆಯಿಂದ ಪಡೆದಿದ್ದನ್ನ ಅರ್ಥಪೂರ್ಣವಾಗಿ ಅರ್ಥೈಸಿಕೊಳ್ಳುವ ಸಂವೇದನಾ ಶೀಲವಾದ
ವ್ಯಕ್ತಿಯ ಸಂದರ್ಭದಲ್ಲಿ ಪ್ರಕಟವಾದರೆ ಮಾತ್ರ ಭವಿಷ್ಯದ ಜನತೆಗೆ ಅರ್ಥಪೂರ್ಣವಾದ ರೀತಿಯಲ್ಲಿ ಫಲಿಸುತ್ತದೆ. ಕನ್ನಡಿಗರಲ್ಲಿ ತಮ್ಮ ಭಾಷೆಯ ಸಾಹಿತ್ಯದ ಸಂಸ್ಕೃತಿಯನ್ನು
ಅರಿವನ್ನು ತಂದವರೆಲ್ಲ ಬಹುತೇಕ ಕನ್ನಡ ಭಾಷೆಯ ಸಾಹಿತ್ಯ ಕ್ಷೇತ್ರಗಳಲ್ಲಿ ದುಡಿದವರೇ ಆಗಿದ್ದಾರೆ.ಯಾವುದೇ
ಒಂದು ಭಾಷೆಯ ಉಳಿಯುವುದು ಬೆಳೆಯುವುದು ಆಯಾ ಭಾಷೆಯನ್ನಾಡುವ ಜನರಿಂದ.ಆಯಾ ಭಾಷೆಯಲ್ಲಿ ವಿಚಾರ ಮಾಡುವುದರಿಂದ,
ಆಯಾ ಭಾಷೆಯ ಅರ್ಥವಂತಿಕೆಯ ಸಾಧ್ಯತೆಗಳನ್ನು ಅನ್ವೇಷಿಸುವುದರಿಂದ, ಅದರ ಆಯಾಮಗಳನ್ನು ವಿಸ್ತರಿಸುವ
ಪ್ರಯೋಗ ಪರಿಣತ ಮತಿಗಳಿಂದ. ಭವಿಷ್ಯದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಯಾವ ಕ್ರಮಗಳನ್ನು ಅನುಸರಿಸಬೇಕು
ಅನುಷ್ಠಾನಗೊಳಿಸಬೇಕು ಎಂಬುವುದು ನಮ್ಮೆಲ್ಲರ ಮುಂದಿರುವ ಪ್ರಶ್ನೆಯಾಗಿದೆ. ಜೀವನದ ಸಮಸ್ತ ರಂಗಗಳಲ್ಲಿ
ಕನ್ನಡವನ್ನು ಬಳಸುವ ಮೂಲಕ ಕನ್ನಡಿಗರ ದುರ್ಬಲತೆಯಿಂದ ಆಘಾತಕ್ಕೆ ಒಳಗಾಗಿರುವ ಕನ್ನಡ ತನವನ್ನು ಉಳಿಸಿಕೊಳ್ಳಬೇಕಾಗಿದೆ.
ಕನ್ನಡತನ ಉಳಿಸಿಕೊಳ್ಳಲು ಸಂವಹನ ಮಾಧ್ಯಮ ಬಳಕೆ ಸಮರ್ಥವಾಗಬೇಕು. ಕನ್ನಡವಲ್ಲದೆ ಬೇರೆ ಭಾಷೆಯ ಕಲಿತರೆ
ಕನ್ನಡತನ ಹಾಳಾದೀತೆಂಬ ಭಾವನೆಗಿಂತ ಕಲಿತ ಭಾಷೆಯನ್ನು ಕನ್ನಡದ ಹಿತಕ್ಕಾಗಿ ಬಳಸಿಕೊಳ್ಳುವುದು ಮುಖ್ಯ.
ಆಗ ಕನ್ನಡ ವಿಸ್ತಾರವನ್ನು ಪಡೆಯುತ್ತದೆ. ಕನ್ನಡತನ ಭಾವುಕವಾಗಿರದೆ ವೈಜ್ಞಾನಿಕ ನಿಲುವಾಗಿರಬೇಕು.
ಸಹ ಭಾಷೆಯ ಸಹಿಷ್ಣುವು ಆಗಿರಬೇಕು. ಕನ್ನಡ ಕೇವಲ ಭಾಷೆಗೆ ಸೀಮಿತವಾದುದ್ದಲ್ಲ. ಅದು ಪರಿವರ್ತನಾಶೀಲವಾದ
ಜೀವನ ಕ್ರಮಕ್ಕೆ ಸಾಕ್ಷಾತ್ಕಾರವಾಗಬೇಕು. ಭಾಷೆ-ಸಂಸ್ಕೃತಿ ಜನಜೀವನ ಈ ಮೂರನ್ನು ಕನ್ನಡತನ ಒಳಗೊಂಡಿರಬೇಕು.
ಕನ್ನಡತನ ಉಳಿಯಬೇಕಾದರೆ ಆರ್ಥಿಕವಾಗಿ, ರಾಜಕೀಯವಾಗಿ ಬೌದ್ಧಿಕವಾಗಿ ಕ್ರಿಯಾಶೀಲರಾಗಿ ನಮ್ಮಶಕ್ತಿಗಳನ್ನು
ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ಹಾಗೂ ಸಂಸ್ಕೃತಿಗಳು ಉಳಿಯುವುದು ಬೆಳೆಯುವುದು ಅವುಗಳಲ್ಲಿರುವ ಧಾತುಗಳನ್ನು
ಅವಲಂಬಿಸಿರುತ್ತದೆಯೇ ಹೊರತು ಅವುಗಳ ಬಗೆಗೆ ಜನಕ್ಕಿರುವ ಕುರುಡು ಅಭಿಮಾನದಿಂದಲ್ಲ.
ಮತ್ತೊಂದೆಡೆ
ಆಧುನಿಕ ಮಾಹಿತಿ ತಂತ್ರಜ್ಞಾನದ ಡಿಜಿಟಲ್ ಯುಗದಲ್ಲಿ
ಕನ್ನಡ ಸಾಹಿತ್ಯ ಗಂಭೀರವಾದ ಸವಾಲನ್ನುಎದುರಿಸಬೇಕಾದ ಸ್ಥಿತಿಗೆ ತಲುಪಿದೆ. ಸಂವಹನ ಕ್ಷೇತ್ರದಲ್ಲಾಗಿರುವ
ಕ್ರಾಂತಿ, ವಿವಿಧ ರಾಜಕೀಯ ಪ್ರಣಾಲಿಗಳ ಒತ್ತಡ, ತೀವ್ರಗತಿಯಲ್ಲಿ ನಡೆದಿರುವ ರಾಷ್ಟ್ರದಲ್ಲಿಯ ನಗರೀಕರಣ,
ಔದ್ಯೋಗೀಕರಣ, ಜಾಗತೀಕರಣ,ಗಣಕೀಕರಣ, ಶಿಕ್ಷಣದ ವಿಸ್ತಾರ, ಹೊರಜಗತ್ತಿನಿಂದ ಬರುವ ವೈಚಾರಿಕ ಹಾಗೂ ಸಾಹಿತ್ಯಕ
ಆಂದೋಲನಗಳ ಪ್ರಭಾವ ಇತ್ಯಾದಿಗಳಿಂದಾಗಿ ಇಲ್ಲಿಯ ಜೀವನ ದೃಷ್ಟಿ ಹಾಗೂ ಸಾಹಿತ್ಯಕ ಚಟುವಟಿಕೆಗಳು ತ್ವರಿತವಾಗಿ
ಬದಲಾಗ ಬೇಕಾದ ಸಾಧ್ಯತೆ ಇದೆ.
ಆಧುನಿಕ ಜಗತ್ತಿನಲ್ಲಿ ಸಾಹಿತ್ಯದ ಓದಿನ ಬಗೆಗಿನ ಸಹಜ
ಕಳಕಳಿ, ಇನ್ನಿತರ ಆಕರ್ಷಣೆಗಳ ದೆಸೆಯಿಂದ ಕಳೆಗುಂದಿದೆ ಎನ್ನಬಹುದು. ಬದಲಾಗುತ್ತಿರುವ ಜೀವನಶೈಲಿಯ
ಇಂದಿನ ಜನತೆಗೆ ಸಾಹಿತ್ಯದ ಅವಶ್ಯಕತೆ ಹಿಂದಿನಷ್ಟೇ ಇದೆಯೇ? ಒಂದು ವೇಳೆ ಇದ್ದ ಪಕ್ಷದಲ್ಲಿ ಇಂದಿನ
ಅಗತ್ಯಗಳಿಗೆ ಅನುಸಾರವಾಗಿ ಅದನ್ನು ಪೂರೈಸುವ ಬಗೆ ಹೇಗೆ?
ಸಮಕಾಲೀನ ಮತ್ತು ಮುಂದಿನ ಭವಿಷ್ಯದಲ್ಲಿ ಮುದ್ರಿತ ಪುಸ್ತಕಗಳಿಗೆ ಮುಂಚೆ ಇದ್ದ ಸ್ಥಾನಮಾನ
ಸಾಧ್ಯವೇ ? ಡಿಜಿಟಲ್ ಯುಗದ ಶ್ರೀಸಾಮಾನ್ಯನಿಗೆ ಬೇಕಾಗುವ ಸಾಹಿತ್ಯದ ಸ್ವರೂಪ ಎಂತಹದ್ದು? ಈ ಪ್ರಶ್ನೆಗಳು
ಇಂದು ನಮ್ಮೆದುರಿಗೆ ಸವಾಲಾಗಿ ನಿಂತಿವೆ. ಚಿಂತನೆಗೆ ಒಳಗುಮಾಡಿವೆ.ವೈಜ್ಞಾನಿಕ ಕ್ಷೇತ್ರಗಳಲ್ಲಿ ಉನ್ನತ
ಶಿಕ್ಷಣ ಹೊಂದಿ ವಿಶಿಷ್ಟ ಕಾರ್ಯಕ್ಷೇತ್ರಕ್ಕೆ ಅಂಟಿಕೊಂಡ ವ್ಯಕ್ತಿಗಳು ಸಾಹಿತ್ಯ ಕಲೆಗಳ ವಿಷಯದಲ್ಲಿ
ಅಜ್ಞರಲ್ಲದಿದ್ದರೂ ಅನಭಿಜ್ಞರು. ಇವರಿಗೆ ಸಾಹಿತ್ಯ ಎಂದರೆ ಜೀವನದ ಪ್ರಖರ ವಾಸ್ತವ್ಯಕ್ಕೆ ಪ್ರತಿಯಾಗಿ
ನಿಂತು ಕಂಗೆಡಿಸುವ ವ್ಯರ್ಥ ಕಲ್ಪನಾವಿಲಾಪ. ಸಾಹಿತ್ಯದ ಬಗೆಗೆ ತಲೆಕೆಡಿಸಿಕೊಳ್ಳುವುದು ಸಮಯದ ಅಪವ್ಯಯದಂತೆ
ಅನಿಸಿದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಕಲೆಗಳು ಜನರ ಬದುಕಿಗೆ ವಿಜ್ಞಾನ, ತಂತ್ರಜ್ಞಾನಗಳಷ್ಟೆ ಅತಿ ಅನಿವಾರ್ಯವೇ? ಒಂದು
ನಿರ್ದಿಷ್ಟ ಕಾಲಮಾನದ ನಾಗರಿಕತೆಗೆ ಐಹಿಕ ಬಾಳ್ವೆಯ ಸೌಕರ್ಯ ಸಮೃದ್ಧಿಗಳಿಗೆ ಸಾಹಿತ್ಯ ಸಂಗೀತಾದಿ ಕಲೆಗಳ
ಕೊಡುಗೆ ಎಷ್ಟು ಮಹತ್ವದ್ದು ಎನ್ನುವುದರ ಜಿಜ್ಞಾಸೆ ಕುತೂಹಲಕಾರಿಯಾಗಿದೆ. ಇಂದು ಮಾಹಿತಿ ತಂತ್ರಜ್ಞಾನದ
ಯುಗದಲ್ಲಿ ಕನ್ನಡದ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಕಾರ್ಯತತ್ಫರರಾಗಬೇಕಾಗಿದೆ.
ಅದರಲ್ಲಿಯೂ ಇಂದು ಕನ್ನಡವನ್ನು ಒಳಗೊಂಡಂತೆ ಸ್ಥಳೀಯ ಭಾಷೆಗಳನ್ನು ಈ ಕೆಳಕಂಡ ಅಂಶಗಳ ಹಿನ್ನೆಲೆಯಲ್ಲಿ
ಅಳವಡಿಸಿಕೊಳ್ಳುವತ್ತ ಗಮನ ಹರಿಸ ಬೇಕಾಗಿದೆ.
೧. ತಂತ್ರಜ್ಞಾನದಲ್ಲಿ ಭಾರತೀಯ
ಭಾಷೆಗಳ ಬಳಕೆ
೨. ವಾಣಿಜ್ಯ-ವ್ಯವಹಾರದಲ್ಲಿ
ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯತೆ
ಮಾಹಿತಿ
ತಂತ್ರಜ್ಞಾನದ ಯುಗದಲ್ಲಿ ಆಧುನಿಕ ಜಗತ್ತಿನ ಸ್ಥಾನವನ್ನು
ಇಂದು ಮೂರು ಅಂಶಗಳು ಅತಿಕ್ರಮಿಸಿವೆ. ಸರಳವಾಗಿ ಅದನ್ನು I.C.E. ಎಂದು ಗುರುತಿಸಲಾಗಿದೆ,
Information. Communication , Entertainment ಮಾಹಿತಿ ತಂತ್ರಜ್ಞಾನ, ಸಂವಹನ ಹಾಗೂ ಮನೋರಂಜನೆ,
ಮನೋರಂಜನೆಯ ವಿವಿಧ ಸಾಧನಗಳಾದ ಆಡಿಯೋ,ವಿಡಿಯೋ, ಕೇಬಲ್ ಟಿ.ವಿ.ಗಳು, ಡಿ.ಟಿ.ಎಚ್. ಇತ್ಯಾದಿಗಳು ಸಾಹಿತ್ಯದ ಸ್ಥಾನವನ್ನು ಕಬಳಿಸಿವೆ ಎಂದರೆ ತಪ್ಪಾಗಲಾರದು.
ಡಿಜಿಟಲ್‍ತಂತ್ರಜ್ಞಾನ, ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನ, ಗಣಕ ಯಂತ್ರ, ಟ್ಯಾಬ್ಲೆಟ , ಮೊಬೈಲ್
ಗಳಂತೂ ಸಾಂಪ್ರದಾಯಿಕ ಜೀವನ ಶೈಲಿಯಲ್ಲಿ ದೊಡ್ಡ ಬಿರುಗಾಳಿಯನ್ನೆಬಿಸಿವೆ. ವಿದ್ಯುನ್ಮಾನದ ಕಣ್ಣು ಕುಕ್ಕುವ
ಉನ್ಮಾದದ ಪ್ರಖರತೆಯಲ್ಲಿ ಸಾಹಿತ್ಯದ ಬಡಹಣತೆ ಮೂಲೆ ಗುಂಪಾಗಿದೆ. ಮೈಕ್ರೋ ಫಿಲ್ಮ, ವಿದ್ಯುನ್ಮಾನ ಪುಸ್ತಕಗಳು,
ಡಿಜಿಟಲೈಷನ್ ಮುಂತಾದ ಆಧುನಿಕ
ತಂತ್ರಜ್ಞಾನ ಸೌಲಭ್ಯ ಗಳು ಇಂದು ಕಾಗದ ಅಚ್ಚಿನ ಮನೆಸ್ಥಳದ ಸಮಸ್ಯೆಗಳನ್ನು ಬಗೆಹರಿಸಲು ಉತ್ಸಾಹದಿಂದ
ಮುನ್ನುಗ್ಗುತ್ತಿವೆ. ಪುಸ್ತಕಗಳ ವಾಚನಕ್ಕಿಂತ ಕಡಿಮೆ ಸಮಯದಲ್ಲಿ ಹೆಚ್ಚು ಏಕಾಗ್ರತೆ ಕುತೂಹಲವನ್ನು
ಆಗಗೊಳಿಸಿ ಸಾಹಿತ್ಯ ಕಲೆ ಜ್ಞಾನವನ್ನು ದಶದಿಕ್ಕಿಗೆ ಹರಡಲು ಪಣ ತೊಟ್ಟಿರುವ ಈ ವೈಜ್ಞಾನಿಕ ಸಾಧನಗಳ
ಎದುರು ಅಕ್ಷರ ಜಗತ್ತಿನ ಭವಿಷ್ಯ ನಡುಕ ಹುಟ್ಟಿಸುತ್ತದೆ. ಸಾಹಿತ್ಯದ ಅಳಿವು ಉಳಿವಿನ ಪ್ರಶ್ನೆ ಇನ್ನು
ಮುಂದೆ ವೈಜ್ಞಾನಿಕ ಸಾಧನ ಸಲಕರಣೆಗಳ ಮರ್ಜಿಗೆ ಒಳಪಡಬೇಕಾದ ಸ್ಥಿತಿ ಉಂಟಾಗಿದೆ. ಸಾಹಿತ್ಯದ ಓದಿಗಿಂತ
ದೃಶ್ಯ ಶ್ರವಣಗಳ ಮೋಡಿ ಮನುಷ್ಯನ ಮನಸ್ಸನ್ನು ಸೆರೆಯಾಳಾಗಿಸಿ ಅಧಿಕಾರ ಚಲಾಯಿಸುತ್ತಿದೆ. ಸಂವಹನಗಳ
ಸಾಧನಗಳಾದ ದೂರದರ್ಶನ,ಚಲನಚಿತ್ರ, ಸಂಗೀತ ಇತ್ಯಾದಿಗಳ ಮೂಲಕ ನೋಟಕ ಮತ್ತು ಕೇಳುಗರಲ್ಲಿ ಲೇಖಕರ ಕೃತಿಗಳ
ಬಗೆಗೆ ಆಸಕ್ತಿ ಉಂಟುಮಾಡುವಂತಹ ಅನಿವಾರ್ಯ ಸ್ಥಿತಿಯನ್ನು ಇಂದು ಹೆಚ್ಚು, ಹೆಚ್ಚು ತೀವ್ರಗೊಳಿಸ ಬೇಕಾಗಿದೆ.
ವಿಜ್ಞಾನದ ಸಾಧನೋಪಾಯಗಳಿಂದ ವಿದ್ಯಾಬುದ್ಧಿ ಸಂಪನ್ನನಿಗೂ,
ಸಾಮಾನ್ಯನಿಗೂ ಅಪರಿಮಿತಲಾಭವಾಗುವ ಹಾಗೆ ಸಾಹಿತ್ಯದಿಂದ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.ಆಧುನಿಕ
ಜನತೆಗೆ ಸಾಹಿತ್ಯ ಸ್ವರೂಪವು ಯಾವ ರೀತಿ ಇರಬೇಕು ಎಂಬಲ್ಲಿ, ಆತ ಸುಲಿದ ಬಾಳೆಯಹಣ್ಣಿನಂಥ, ಕ್ಯಾಪ್ಸೂಲ್
ಬಗೆಯ ಸಾಹಿತ್ಯವನ್ನು ನಿರೀಕ್ಷಿಸುತ್ತಾನೆ. ಈಗಿನ ಜನ ಸಾಮಾನ್ಯನು ಸಹಜವಾಗಿ ತನ್ನನ್ನು ಗುರುತಿಸಿಕೊಳ್ಳುವ
ಸಾಹಿತ್ಯವನ್ನು ಬಯಸುವುದು ಸಹಜವಾಗಿದೆ. ದೈನಂದಿನ ಕೋಟಲೆಗಳನ್ನು ಮರೆಯುವ ಮನೋರಂಜನೆ ಸಹ ಅನಿವಾರ್ಯ.
ಭವಿಷ್ಯದಲ್ಲಿ ಜನಜೀವನ ಮಟ್ಟದ ಸಾಂಸ್ಕೃತಿಕ ಕಾಳಜಿಗಳ ಸಾಮೀಪ್ಯ ನಿಕಟತೆಗಳನ್ನು ಸಮಾಜದ ಸ್ವಾಸ್ಥ್ಯ
ಸಾಮರಸ್ಯಗಳನ್ನು ಕಾಪಾಡುವಲ್ಲಿ ಸಾಹಿತ್ಯದ ಅಗತ್ಯ ಎಂದಿಗಿಂತ ಹೆಚ್ಚಾಗಿದೆ.
ವೈಜ್ಞಾನಿಕ ಸಾಧನಗಳು ಸಾಹಿತ್ಯ ಕೃತಿಗಳ ಹಿರಿಮೆ ಗರಿಮೆಗಳನ್ನು
ಮಣ್ಣು ಮುಕ್ಕಿಸಲು,ಸಾರ್ವಭೌಮತ್ವವನ್ನು ಆಕ್ರಮಿಸಲು ನಾಗಾಲೋಟದಿಂದ ಮುನ್ನುಗ್ಗುತ್ತಿವೆ. ಇಂದಿನ ಆಧುನಿಕ
ಮಾನವನಿಗೆ ಪುಸ್ತಕಗಳನ್ನು ಓದಲು ಬೇಕಾಗಿರುವ ಬಿಡುವು, ಏಕಾಗ್ರತೆ ಎಲ್ಲಿದೆ? ಬದುಕಿನ ನಿಷ್ಠುರ ವಾಸ್ತವತೆಯ
ಎದುರಿಗೆ ವಿಶ್ರಾಂತಿಗೆ ಅವಕಾಶವೇ ಇಲ್ಲ. ಎಲ್ಲದರಲ್ಲೂ ತ್ವರಿತ, ಆತುರ, ಸ್ಪರ್ಧೆ, ಸಕಲವು ಸುಲಭದಲ್ಲಿ
ಸಲ್ಲಬೇಕು ಎನ್ನುವ ಅಭಿಲಾಷೆಯ. ಆಧುನಿಕ ಮನುಷ್ಯನ ತ್ವರಿತ ಆಕಾಂಕ್ಷೆಗಳನ್ನು ಪೂರೈಸಲು ಟಿ.ವಿ.,ವಿಡಿಯೋ,
ಆಡಿಯೋ ಕಂಪ್ಯೂಟರ್‍ಗಳು ಮತ್ತಿತರ ವಿದ್ಯುನ್ಮಾನ ಮಾಧ್ಯಮಗಳು ಟೊಂಕಕಟ್ಟಿ ನಿಂತಿವೆ. ಮುದ್ರಿತ ಗ್ರಂಥಗಳ ಭವಿಷ್ಯ
ಡೋಲಾಯಮಾನ ಸ್ಥಿತಿಯನ್ನು ತಲುಪಿವೆ.
ಆದಾಗ್ಯೂ ಇಂದಿಗೂ ಸಾಹಿತ್ಯ ಕೈಗೊಂಡಿರುವ ಕೆಲವು ವಿಷಯಗಳು
ಅತ್ಯಾಧುನಿಕ ಯಂತ್ರಸಾಧನಗಳಿಂದ ನೆರವೇರಲು ಸಾಧ್ಯವಿಲ್ಲ.
ಜನತೆ ಎಲ್ಲಿದ್ದರೂ, ಯಾವ ಹೊತ್ತಿನಲ್ಲಾದರೂ ಎಂಥ ಬಗೆಯ ಪ್ರಯಾಣ ಕೈಗೊಂಡಿದ್ದರೂ ಪುಸ್ತಕವನ್ನು ಕೊಂಡೊಯ್ಯಬಹುದು,
ಇಷ್ಟವಾದುದನ್ನು ಓದಿ ಆನಂದಿಸಬಹುದು. ಯಾರದೇ ಮರ್ಜಿ ಮುಲಾಜಿಗಳಿಗೆ ಒಳಗಾಗುವಂತಿಲ್ಲ. ಸಾಹಿತ್ಯ ಕೃತಿಗಳು
ಯಾವಾಗ ಬೇಕಾದರೂ ಆಜ್ಞೆಯನ್ನು ಪೂರೈಸುವ ಸುರಲೋಕದ ಕಾಮದೇನುವಿನಂತೆ ಎಂದು ಹೇಳಬಹುದು.
ಇಂದು `ಕಂಪ್ಯೂಟರ್‌ನಲ್ಲಿ ಕನ್ನಡದ
ಅಳವಡಿಕೆ ಮತ್ತು ಬಳಕೆ ಎಂದರೆ ಅದು ಯುನಿಕೋಡ್ ಕನ್ನಡದ ಬಳಕೆಯೇ ಆಗಿರಲೇಬೇಕು. ಹಾಗಾದರೆ ಮಾತ್ರ
ಕನ್ನಡ ತಂತ್ರಾಂಶ ಇಲ್ಲದ ಜಾಗತಿಕ ಕಂಪ್ಯೂಟರ್‌ಗಳಲ್ಲೂ ಕನ್ನಡ ಕಾಣಿಸಿಕೊಳ್ಳುತ್ತದೆ. ಅಲ್ಲದೆ
ಯಾವುದೇ ವಿಷಯದ ಕನ್ನಡದಭಾಷೆಯ ಕಡತವನ್ನು
ಅಂತರ್ಜಾಲದಲ್ಲಿ ಹುಡುಕುವವರಿಗೆ ಸುಲಭದಲ್ಲಿ ಯುನಿಕೋಡ್ ಫೈಲುಗಳು ಕನ್ನಡದಲ್ಲಿಯೇ ದೊರೆಯುತ್ತವೆ.
ಯಾವುದೇ ತಂತ್ರಾಂಶವನ್ನು ಬೇಡದ ಯಾವುದೇ
ಕಂಪ್ಯೂಟರಿನಲ್ಲೂ ಪ್ರತ್ಯಕ್ಷವಾಗಿ ಬಿಡುವ ವಿಶ್ವ ಸಂಕೇತವಾಗಿರುವ ಯುನಿಕೋಡ್ ಕನ್ನಡದ
ಬೆಳವಣಿಗೆಗೆ ಇಂದಿನ ಅವಶ್ಯಕತೆಯಾಗಿದೆ. ಯುನಿಕೋಡ್ ಒಂದು
ಜಾಗತಿಕ ಶಿಷ್ಟತೆ. ಜಗತ್ತಿನ ಎಲ್ಲ ಭಾಷೆಗಳ ಸಂಕೇತೀಕರಣಕ್ಕೆ ಇರುವ ಶಿಷ್ಟತೆ . ಯುನಿಕೋಡ್ ಅಂದರೆ, ಇಂಟರ್ನೆಟ್ಟಿನಲ್ಲಿ ಬಳಸುವ ಅಕ್ಷರಗಳ ಒಂದು ಶಿಷ್ಟಪದ್ಧತಿ. ಜಗತ್ತಿನ ನೂರಾರು ಭಾಷೆಯ ಅಕ್ಷರಗಳನ್ನು ಇದೊಂದೇ ನಮೂನಿಯಲ್ಲಿ ಬರೆಯಬಹುದು ಹಾಗೂ ಓದಬಹುದು.
ಇದರಿಂದಾಗಿ, ಬೇರೆ ಬೇರೆ ಭಾಷೆಯವರು ಬೇರೆ ಬೇರೆ ಭಾಷೆಯ ಫಾಂಟುಗಳನ್ನು ಸಿಕ್ಕ ಸಿಕ್ಕ ಕಂಪ್ಯೂಟರಿನಲ್ಲೆಲ್ಲಾ Install ಮಾಡಿಕೊಳ್ಳಬೇಕೆಂಬ ತಾಪತ್ರಯವಿಲ್ಲ. ಇದರ ವೈಶಿಷ್ಟ್ಯವೆಂದರೆ
ಜಗತ್ತಿನ ಎಲ್ಲ ಭಾಷೆಗಳಿಗೂ ಇದರಲ್ಲಿ ಪ್ರತ್ಯೇಕ ಸಂಕೇತವನ್ನು ನೀಡಲಾಗಿದೆ. ಅಂದರೆ ಇಂಗ್ಲೀಶ್‌ನ
ಜಾಗದಲ್ಲಿ ನಮ್ಮ ಭಾಷೆಯನ್ನು ಕೂರಿಸಬೇಕಾಗಿಲ್ಲ. ಯೂನಿಕೋಡ್ ವಿಧಾನದಿಂದ ಮಾಹಿತಿಯನ್ನು ಶೇಖರಿಸುವುದರಿಂದ ಪ್ರಪಂಚದ ಎಲ್ಲ ಭಾಷೆಗಳನ್ನು
ಒಂದೇ ಕಡತದಲ್ಲಿ ಸಂಗ್ರಹಿಸಲು ಸಾಧ್ಯ. ಯುನಿಕೋಡ್ ಆಧಾರಿತ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ನೇರವಾಗಿ ಮಾಹಿತಿ ಶೇಖರಣೆಯ ಸಂಕೇತವಾದ ಯುನಿಕೋಡ್‌ನಲ್ಲೇ ಸಂಗ್ರಹಿಸಿಡಲಾಗುತ್ತದೆ.
ಯುನಿಕೋಡ್‌ನಲ್ಲಿ ತಯಾರಿಸಿದ ಕಡತವನ್ನು ಬೇರೊಬ್ಬರಿಗೆ ಕಳುಹಿಸುವಾಗ ಕಡತದ ಜೊತೆ ನಮ್ಮ ಅಕ್ಷರಶೈಲಿಯನ್ನೂ ಕಳುಹಿಸುವ ಅಗತ್ಯವಿಲ್ಲ. ಸರ್ಕಾರದ ವೆಬ್‌ನಿಂದ ಹಿಡಿದು ಎಲ್ಲವೂ ಯುನಿಕೋಡ್‌ನಲ್ಲಿದ್ದರೆ
ಆಸಕ್ತರಿಗೆ ಅನುಕೂಲವಾಗುತ್ತದೆ. ಈಗ ಚಾಲ್ತಿಯಲ್ಲಿರುವ ಕನ್ನಡದ ತಂತ್ರಾಶಗಳಾದ `ಬರಹ`, `ನುಡಿ`, `ಪ್ರಕಾಶಕ್`, `ಶ್ರೀ` ಹೀಗೆ
ಯಾವುದೇ ಕನ್ನಡ ಸಾಫ್ಟ್‌ವೇರ್ ಆದರೂ ಪ್ರತಿಯೊಂದಕ್ಕೂ ಅದರದೇ ಎನ್‌ಕೋಡಿಂಗ್ ಇರುತ್ತದೆ. ಟೈಪಿಂಗ್
ಕ್ರಮವೂ ಬೇರೆಯೇ ಇರುತ್ತದೆ. ಯಾವುದೇ ತಂತ್ರಾಂಶದಲ್ಲಿ ಟೈಪ್ ಮಾಡಿದರೂ ಬೇರೊಂದು
ಕಂಪ್ಯೂಟರಿನಲ್ಲಿ ಓದಲು ಅದೇ ತಂತ್ರಾಂಶ ಬೇಕಾಗುತ್ತದೆ. ಇತ್ತೀಚಿಗೆ ಕನ್ನಡ ಗಣಕ ಪರಿಷತ್ತಿನವರು
ಹೊರ ತಂದಿರುವ ನುಡಿ ತಂತ್ರಾಂಶದ ೬ ನೇ ಆವೃತ್ತಿಯು ಸಂಪೂರ್ಣವಾಗಿ ಯೂನಿಕೋಡ್ ಆಧಾರಿತ ಕನ್ನಡ
ತಂತ್ರಾಂಶವಾಗಿದೆ.
ಯುನಿಕೋಡ್ ಮಾಹಿತಿಯನ್ನು
ಕಾರ್ಯಾಚರಣೆ ವ್ಯವಸ್ಥೆಗಳು ಅರ್ಥಮಾಡಿಕೊಳ್ಳುವುದರಿಂದ ಕಡತಗಳಲ್ಲಿ ಸಂಗ್ರಹವಾದ ಮಾಹಿತಿಯನ್ನು
ಹುಡುಕಬಹುದು. ಪತ್ರಿಕೆಗಳು ಯುನಿಕೋಡ್ ಬಳಸಿ ಕಡತ ತಯಾರಿ ಮಾಡಿದರೆ ಒಂದು ವಿಷಯದ ಬಗ್ಗೆ ಮಾಹಿತಿ
ಯಾವ ಕಡತದಲ್ಲಿದೆ ಎಂದು ಸುಲಭವಾಗಿ ಹುಡುಕಿ ತೆಗೆಯಬಹುದು. ಅಂತರಜಾಲದಲ್ಲಿ ಮಾಹಿತಿಯನ್ನು
ಹುಡುಕುವ ತಾಣವಾದ ಗೂಗ್ಲ್ ಕೂಡ ಯುನಿಕೋಡ್ ಮೂಲಕವೇ ಕನ್ನಡದ ಮಾಹಿತಿಯನ್ನು ಹುಡುಕುತ್ತದೆ. ಕನ್ನಡ
ಭಾಷೆಯನ್ನು ಯುನಿಕೋಡ್ ವಿಧಾನದಲ್ಲಿ ಬಳಸಲು ಈಗ ಇಚ್ಛಾಶಕ್ತಿಯ ಹೊರತಾಗಿ ಬೇರೆ ಯಾವ ತೊಡಕೂ ಇಲ್ಲ.
ಇತ್ತೀಚೆಗೆ ಅಂತರಜಾಲದಲ್ಲಿ ತುಂಬ ಜನಪ್ರಿಯವಾಗುತ್ತಿರುವ
ಬ್ಲಾಗಿಂಗ್‌ಗೆ ಎಲ್ಲರೂ ಬಳಸುತ್ತಿರುವುದು ಕನ್ನಡ ಯುನಿಕೋಡ್‌ನ್ನೇ. ಈಗಾಗಲೇ ಆರು ಸಾವಿರಕ್ಕೂ ಹೆಚ್ಚು ಮಂದಿ ಕನ್ನಡಿಗರು ಯುನಿಕೋಡ್ ಬಳಸಿ ಬ್ಲಾಗಿಂಗ್
ನಡೆಸುತ್ತಿದ್ದಾರೆ. ಕನ್ನಡ ಬ್ಲಾಗಿಗರ ಒಕ್ಕೂಟವೂ ಅಸ್ತಿತ್ವಕ್ಕೆ ಬಂದಿದೆ. ಈಗ ಇಂಟರ್ನೆಟ್ಟಿನಲ್ಲಿ, ಕನ್ನಡ ಸೇರಿದಂತೆ ಬಹುತೇಕ ಭಾಷೆಗಳ ಬ್ಲಾಗುಗಳು ಹಾಗೂ ವೆಬ್ ಸೈಟುಗಳು ಬಳಸುವುದು ಯೂನಿಕೋಡ್ ಮಾದರಿಯ ಅಕ್ಷರಗಳನ್ನೇ.
ಇತ್ತೀಚೆಗೆ ಬ್ಲಾಗಿಸುವಿಕೆ ತುಂಬ ಜನಪ್ರಿಯವಾಗುತ್ತಿದೆ. ಕನ್ನಡ ಬ್ಲಾಗಿಗರ ಒಕ್ಕೂಟಕ್ಕೆ ನಾಲ್ಕು
ಸಾವಿರಕ್ಕೆ ಮೇಲ್ಪಟ್ಟು ಸದಸ್ಯರಿದ್ದಾರೆ. ಈ ಬ್ಲಾಗಿಸುವಿಕೆ ಸಾಧ್ಯವಾಗಿರುವುದು ಯುನಿಕೋಡ್‌ನಿಂದಾಗಿ.
ಅಂತರಜಾಲದ ಮೂಲಕ ಒಬ್ಬರಿಗೊಬ್ಬರು ಸಂಪರ್ಕ ಕಲ್ಪಿಸಿ ತಮಗಿಷ್ಟವಾದ ವಿಷಯಗಳ ಬಗ್ಗೆ ಗುಂಪುಗಳನ್ನು
ಕಟ್ಟಿಕೊಳ್ಳಲು ಇರುವ ಸವಲತ್ತು ಜಾಲತಾಣಗಳಾದ ಆರ್ಕುಟ್, ಫೇಸ್‌ಬುಕ್, ವಾಟ್ಸ್ ಆಫ್ ,ಚುಟುಕು ಬ್ಲಾಗಿಂಗ್‌ನ ಟ್ವಿಟ್ಟರ್ ಎಲ್ಲವೂ ಕನ್ನಡ ಯೂನಿಕೋಡ್ ಬೆಂಬಲಿಸುವುದರ
ಜೊತೆಗೆ ಯೂನಿಕೋಡ್ ಮೂಲಕವೇ ಕಾರ್ಯ
ನಿರ್ವಹಿಸುತ್ತಿವೆ. ಯುನಿಕೋಡ್ ಮೂಲಕವೇ. ಕನ್ನಡದಲ್ಲಿ ಸಂದೇಶ ಕಳುಹಿಸಲು ಬಳಸುವ ಇಮೈಲ್ ಮತ್ತು
ಮಾತುಕತೆ ನಡೆಸುವ ಸವಲತ್ತುಗಳು ಕೂಡ ಯುನಿಕೋಡ್ ಮೂಲಕವೇ ಕೆಲಸ ಮಾಡುತ್ತವೆ. ಯುನಿಕೋಡ್ ಬಳಸುವ
ಮೂಲಕ ಕನ್ನಡ ಮಾತ್ರವಲ್ಲದೆ ಹಿಂದಿ,
ತಮಿಳು, ತೆಲುಗು, ಫ್ರೆಂಚ್, ಇತ್ಯಾದಿ
ಪ್ರಪಂಚದ ಎಲ್ಲ ಭಾಷೆಗಳಲ್ಲಿ ಏಕಕಾಲದಲ್ಲಿ ವ್ಯವಹಾರ ಮಾಡಬಹುದು.
ಅಂತರಜಾಲಕ್ಕೆ ಮಾಹಿತಿ ಹೆದ್ದಾರಿ (ಇನ್‌ಫೊರ್ಮೇಶನ್ ಸೂಪರ್ ಹೈವೇ) ಎಂಬ ಹೆಸರೂ
ಇದೆ. ಈ ಮಾಹಿತಿ ಹೆದ್ದಾರಿಯಲ್ಲಿ ಕನ್ನಡದ ಗಾಡಿಗಳ ಪಯಣದ ಸಂಚಾರವುತೀವ್ರಗೊಳ್ಳ ಬೇಕಾಗಿದೆ. ಇತ್ತೀಚೆಗೆ ಯುನಿಕೋಡ್ ವಿಧಾನದಲ್ಲಿ ಕನ್ನಡದ ಹಲವು ಜಾಲತಾಣಗಳು ಲಭ್ಯವಿವೆ.
ಈಗಾಗಲೇ ವಿವರಿಸಿದಂತೆ ಯುನಿಕೋಡ್ ವಿಧಾನದಲ್ಲಿ ಇರುವ ಜಾಲತಾಣದ ಮಾಹಿತಿಯನ್ನು ಗೂಗ್ಲ್ ಬಳಸಿ
ಹುಡುಕಬಹುದು. ಕನ್ನಡ ಲಿಪಿಯಲ್ಲಿ “ಬೇಂದ್ರೆ” ಎಂದು ಬೆರಳಚ್ಚು
ಮಾಡಿ ಗೂಗ್ಲ್‌ನಲ್ಲಿ ಹುಡುಕಿದರೆ ಕನ್ನಡದ ವರಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ. ರಾ.
ಬೇಂದ್ರೆಯವರ ತಾಣಕ್ಕೆ ಕೊಂಡಿ ಸಿಗುತ್ತದೆ ಅದೇ ಇಂಗ್ಲೀಷಿನಲ್ಲಿ bendre ಎಂದು
ಬೆರಳಚ್ಚಿಸಿ ಹುಡುಕಿದರೆ ಸೊನಾಲಿ ಬೇಂದ್ರೆ ಸಿಗುತ್ತಾಳೆ!
ಜಾಗತೀಕರಣದ ಪ್ರಭಾವದಿಂದ ಗಣಕ ವಲಯ ಇಂಗ್ಲೀಷ್ ಮಯವಾಗುವುದೆಂದು ಮೊದಮೊದಲು ಆತಂಕ ಉಂಟಾದುದು ನಿಜ. ಆದರೆ
ಮಾರುಕಟ್ಟೆಯ ವಿಸ್ತರಣೆಯ ಅಗತ್ಯ ಕಂಡ ಬಹುರಾಷ್ಟ್ರೀಯ ಕಂಪನಿಗಳು ದೇಶೀಯ ಭಾಷೆಗಳನ್ನು
ಸಂಪೂರ್ಣವಾಗಿ ಅವಗಣಿಸುವುದು ಮಾರುಕಟ್ಟೆಯ ವಿಸ್ತರಣೆಗೆ ಮಾರಕವಾಗುವ ಅಂಶವೆಂದು ಬೇಗನೆ
ತಿಳಿದುಕೊಂಡವು. ಆದರೆ ಗಣಕಯಂತ್ರದಲ್ಲಿ ಕನ್ನಡ ಬಳಕೆಗೆ ಇರುವ ಮುಖ್ಯ ಸಮಸ್ಯೆ ಎಂದರೆ ತಾಂತ್ರಿಕ
ಪರಿಣತರು, ಭಾಷಾ ತಜ್ಞರು ಮತ್ತು ಬಳಕೆದಾರರು ಇವರು ಒಂದೇ
ವೇದಿಕೆಯಲ್ಲಿ ಸಂವಾದಕ್ಕೆ ತೊಡಗದಿರುವುದೇ ಆಗಿದೆ. ತಾಂತ್ರಿಕ ಪರಿಣಿತರು ತಾತ್ವಿಕವಾಗಿ
ಕನ್ನಡದ ಸಾಧ್ಯತೆಯನ್ನು ಹೊಂದಿರುವ ತಂತ್ರಜ್ಞಾನವನ್ನು ರೂಪಿಸಿಕೊಡುವಾಗ ಭಾಷಾ ತಜ್ಞರ ನೆರವನ್ನು
ಪಡೆಯಬೇಕಾಗುತ್ತದೆ. ಕನ್ನಡ ಭಾಷಾ ರಚನೆಯ ಲಕ್ಷಣಗಳನ್ನು ಅರಿತು ಅದಕ್ಕನುಗುಣವಾಗಿ
ಕಾರ್ಯವಾಹಿಯನ್ನು ರೂಪಿಸಿದರೆ ಕೆಲಸ ಹೆಚ್ಚು ಪರಿಪೂರ್ಣವಾಗುತ್ತದೆ.
ಜಾಗತಿಕವಾಗಿ ಗಣಕವನ್ನು ಮಾಹಿತಿ ಕಣಜವನ್ನಾಗಿ ಬಳಸಲಾಗುತ್ತಿದೆ. ಕಾಗದದ ಮೇಲೆ
ಮುದ್ರಣಗೊಂಡ ಸೃಜನಾತ್ಮಕ ಕೃತಿಗಳು ಸೇರಿದಂತೆ ಹಲವು ಸಾವಿರ ಕೃತಿಗಳನ್ನು ಗಣಕದ ನೆನಪಿನಲ್ಲಿ
ಇರಿಸುವ ಪ್ರಯತ್ನಗಳು ನಡೆದಿವೆ. ಇಂಗ್ಲೀಷ್ ಮತ್ತಿತರ ಭಾಷೆಗಳಲ್ಲಿ ಈ ಯತ್ನ ಸಾಗಿರುವ ರೀತಿಗೆ
ಹೋಲಿಸಿದರೆ ಕನ್ನಡದಲ್ಲಿ ನಡೆದಿರುವ ಪ್ರಯತ್ನಗಳು ತೀರಾ ಅಲ್ಪ. ಈ ಅಂಕೀಕರಣವು ತರಲಿರುವ ಎರಡು
ಸಮಸ್ಯೆಗಳನ್ನು ನಾವಿಲ್ಲಿ ಗಮನಿಸಬೇಕು. ಒಂದು : ಹೀಗೆ ಗಣಕದಲ್ಲಿ ಅಳವಟ್ಟ ಕನ್ನಡ ಪುಸ್ತಕವನ್ನು
ಓದುವವರು ಯಾರು ಎಂಬುದು? ಬರಹ ಅನಕ್ಷರತೆಯೇ ತುಂಬಿರುವ ಈ ಸಂದರ್ಭದಲ್ಲಿ ಗಣಕ
ಅನಕ್ಷರತೆಯೂ ಇನ್ನೂ ತೀವ್ರರೂಪದಲ್ಲಿದೆ. ಹಾಗಾಗಿ ಗಣಕದಲ್ಲಿ ಮರೆಯಾಗಿ ನಿಂತ ಕನ್ನಡ ಗ್ರಂಥಗಳು
ಸುರಕ್ಷಿತವಾಗಿ ಉಳಿಯಬಹುದೇನೋ ನಿಜ. ಆದರೆ ಅದು ಹೆಚ್ಚು ಜನರ ಓದಿಗೆ ದೊರಕದೇ ಹೋಗಬಹುದು. ಅಲ್ಲದೆ
ಮುದ್ರಿತ ಪುಸ್ತಕದ ಹಾಳೆಯೊಂದನ್ನು ಓದಲು ನಮ್ಮ ದೇಹದ ವಿವಿಧ ಅಂಗಾಂಗಗಳು ತರಬೇತು ಪಡೆದಂತೆ ಗಣಕದ
ತೆರೆಯ ಮೇಲೆ ಓದಲು ಸಿದ್ಧವಾಗಿಲ್ಲ. ಇದು ತುಂಬಾ ಆಯಾಸದ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಈ
ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತು.
ಇಂದು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಕನ್ನಡಕ್ಕೆ
ಸಂಬಂಧಿಸಿದಂತೆ ಆಗಬೇಕಾದ ಮಹತ್ತರ ಕಾರ್ಯವೆಂದರೆ ಕನ್ನಡದಲ್ಲಿ ಅತ್ಯಂತ ವ್ಯವಸ್ಥಿತವಾಗಿ OCR(optical character recognition software) ತಂತ್ರಾಂಶ
ಕೆಲಸ ಮಾಡುವಂತೆ ಸಿದ್ಧಪಡಿಸ ಬೇಕಾಗಿರುವುದು. . ಓ.ಸಿ.ಆರ್.
ಅಂದರೆ ಆಪ್ಟಿಕಲ್ ಕ್ಯಾರೆಕ್ಟರ್ ರೀಡರ್. ಕನ್ನಡದ ಸಂದರ್ಭದಲ್ಲಿ ಇದರ ಅಗತ್ಯ ಜರೂರಿದೆ. ಇಂಗ್ಲೀಷ್ನಲ್ಲಿ ಮಾತ್ರ ಸಾಧ್ಯವಿರುವ ಇದು ಟೈಪಿಂಗ್ ಮತ್ತು ಸ್ಕ್ಯಾನಿಂಗ್ ನ
ಲಕ್ಷಣಗಳಿಗಿಂತ ಭಿನ್ನವಾದುದು.
ಕೈಬರಹದ ದಾಖಲೆಗಳನ್ನು ಗಣಕಕ್ಕೆ ಅಳವಡಿಸುವ ಸರಳ
ವಿಧಾನವೆಂದರೆ ಸ್ಕ್ಯಾನಿಂಗ್. ಹೀಗೆ ಮಾಡಿದಾಗ ಮೂಲ ಕೈಬರಹದ ದಾಖಲೆ ಒಂದು ಚಿತ್ರವಾಗಿ ಗಣಕದಲ್ಲಿ
ಉಳಿಯುತ್ತದೆ. ಈ ಮೊದಲೇ ಹೇಳಿದ ಹಳೆಗಾಲದ ದಾಖಲೆಗಳ ಗಣಕೀಕರಣವು ಇದೇ ಮಾದರಿಯಲ್ಲಿ ನಡೆಯುವುದು.
ಇಂತಹ ಪ್ರಯತ್ನಗಳು ಕೈಬರಹದ ದಾಖಲೆಗಳಿಗೂ ಸಾಧ್ಯ. ಆದರೆ ಕೈಬರಹದ ದಾಖಲೆಗಳನ್ನು ಚಿತ್ರಗಳನ್ನಾಗಿ
ಮಾಡದೆ, ಪಠ್ಯಗಳನ್ನಾಗಿ ಬದಲಿಸಲು ಬೇರೆಯೇ
ತಂತ್ರಜ್ಞಾನಬೇಕು. ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಎಂದು ಕರೆಯಲಾಗುವ ಈ ತಂತ್ರಜ್ಞಾನ ಇಂಗ್ಲೀಷಿನಂತಹ
ಭಾಷೆಗಳಿಗೆ ಲಭ್ಯವಿದೆ. ಕನ್ನಡದ ಮಟ್ಟಿಗಂತೂ ತೀರಾ ಪ್ರಾಥಮಿಕ ಹಂತದ ಕೆಲವು ಪ್ರಯತ್ನಗಳನ್ನು
ಹೊರತುಪಡಿಸಿದರೆ ಈ ತಾಂತ್ರಿಕ ಸೌಲಭ್ಯ ಇನ್ನೂ ದುರ್ಲಭವಾಗಿಯೇ ಉಳಿದಿದೆ.
ಸ್ಕ್ಯಾನರ್ ಮೂಲಕ ಯಾವುದೇ ತರಹದ ಕೈ ಬರಹವುಳ್ಳ ಕನ್ನಡದ ಹಸ್ತಪ್ರತಿಯನ್ನು
ಕಂಪ್ಯೂಟರಿಗೆ ಅಳವಡಿಸಿದಾಗ ಅದು ದರ್ಶಕದ ಮೇಲೆ ಮೂಡುವ ಹೊತ್ತಿಗೆ ಶುದ್ಧಪ್ರತಿಯಾಗಿ
ಪ್ರಕಟವಾಗುತ್ತದೆ. ಅಂದರೆ ನಾವು ಬಳಸುವ ಹಲವಾರು ಫಾಂಟುಗಳಲ್ಲಿ ಕೈ ಬರಹವನ್ನು ಟೈಪಿಂಗ್
ಸಹಾಯವಿಲ್ಲದೆಯೇ ನೇರವಾಗಿ ಮುದ್ರಿಸಿಕೊಳ್ಳಬಹುದಾಗಿದೆ. ಹೀಗಾಗಬೇಕಾದರೆ ಕನ್ನಡದಲ್ಲಿ ಬಳಕೆಯಾಗುವ
ಅಕ್ಷರಗಳ, ಅದರ ಎಲ್ಲ ಸಾಧ್ಯತೆಗಳ ಗುಣಲಕ್ಷಣಗಳನ್ನು ಗಣಕಕ್ಕೆ
ಉಣಿಸಬೇಕಾಗುತ್ತದೆ. ಇದಕ್ಕೆ ಭಾಷಾಶಾಸ್ತ್ರಜ್ಞರ, ಕಂಪ್ಯೂಟರ್
ಮತ್ತು ಸಾಫ್ಟ್ ವೇರ್ ತಂತ್ರಜ್ಞರ ಜಂಟಿಪ್ರಯತ್ನ ಅನಿವಾರ್ಯವಾಗುತ್ತದೆ. ಈ ಪ್ರಯತ್ನ ಕನ್ನಡಕ್ಕೆ
ಜರೂರಾಗಿ ಬರಬೇಕಾಗಿದೆ. ಇದರಿಂದ ಮುದ್ರಿತ ಸಂದರ್ಭದ ವೇಳೆ, ಹಣ, ಶ್ರಮ ಎರಡೂ ಉಳಿತಾಯವಾಗುತ್ತದೆ. ಇದುವರೆಗೂ ಸ್ಕ್ಯಾನಿಂಗ್ ನಲ್ಲಿ ಪೋಟೋಗ್ರಫಿಯಂತೆ
ಮೂಲಪ್ರತಿಯ ಯಥಾವತ್ತಾದ ನಕಲನ್ನು ಮಾತ್ರ ನೋಡುವ ಸಾಧ್ಯತೆ ನಮಗಿತ್ತು. ಈ OCRದ ಸಹಾಯದಿಂದ ಹಸ್ತಪ್ರತಿಗಳಲ್ಲಿನ ಬರಹವನ್ನು ನಮಗೆ ಬೇಕಾದಲ್ಲಿ ಬೇಕಾದ ಹಾಗೆ
ಬದಲಾಯಿಸಬಹುದಾಗಿದೆ. ಅಂದರೆ ಗಣಕೀಕೃತ ಪಠ್ಯದಲ್ಲಿನ ಅಕ್ಷರಗಳನ್ನು ಬೋಲ್ಡ್ ಮಾಡುವ, ಪ್ಯಾರಾ ಮಾಡಿಕೊಳ್ಳುವ,
ಬೇಕಾದ ಅಳತೆಗೆ ಹಿಗ್ಗಿಸುವ
ಮತ್ತು ಕುಗ್ಗಿಸಿಕೊಳ್ಳುವ,
ಪಠ್ಯವೊಂದಕ್ಕೆ ಬೇಕಾದ
ತಲೆಬರಹ ಕೊಡುವ ಸೌಲಭ್ಯಾಕಾಂಕ್ಷೆಗಳು ಪ್ರಾಪ್ತವಾಗಿವೆ. ಆಪ್ಟಿಕಲ್
ಕ್ಯಾರೆಕ್ಟರ್ ರೆಕಗ್ನಿಶನ್ (ಓಸಿಆರ್) ತಂತ್ರಜ್ಞಾನದ ಸಹಾಯದಿಂದ ಕನ್ನಡದ ಮುದ್ರಿತ ಪಠ್ಯವನ್ನೂ
ಡಿಜಿಟಲ್ ರೂಪಕ್ಕೆ ಬದಲಿಸಿಕೊಳ್ಳುವುದು, ಬೇಕಾದ ಬದಲಾವಣೆ
ಮಾಡಿಕೊಳ್ಳುವುದು ಸಾಧ್ಯವಾಗಿದೆ. ಅಷ್ಟೇ ಅಲ್ಲ, ಈ ಕೆಲಸ ಮಾಡುವ ಮೊಬೈಲ್
ಆಪ್ಗಳೂ ಬಂದಿವೆ. ಕನ್ನಡ ಪಠ್ಯದ ಗಣಕೀಕರಣದಲ್ಲಿರುವ ಬಹುದೊಡ್ಡ ಅಡ್ಡಿ ಎಂದರೆ ಕನ್ನಡದಲ್ಲಿ OCR(optical character recognition software) ಇಲ್ಲದಿರುವುದು. ಹೆಚ್ಚೂ ಕಮ್ಮಿ ಎಲ್ಲ
ಭಾರತೀಯ ಭಾಷೆಗಳಲ್ಲೂ ಬಳಕೆಗೆ
ಲಭ್ಯವಿರುವ OCR ಕನ್ನಡದಲ್ಲಿ ಇನ್ನೂ
ಲಭ್ಯವಿಲ್ಲ. ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ TDIL (Technology Development for Indian Languages) ಸಂಸ್ಥೆಯು ಕನ್ನಡವನ್ನು
ಹೊರತುಪಡಿಸಿ ಎಲ್ಲಾ ಭಾಷೆಗಳಲ್ಲೂ OCR ಮತ್ತು ಯೂನಿಕೋಡ್ ಫಾಂಟ್‍ನಂತಹ ಆನ್ವಯಿಕ
ತಂತ್ರಾಂಶಗಳನ್ನು ಉಚಿತವಾಗಿ ಬಳಕೆದಾರರ ಮನೆ ಬಾಗಿಲಿಗೆ ತಲುಪಿಸುತ್ತಿದೆ.
ಪತ್ರಿಕೆಯ ಸಂದರ್ಭಕ್ಕೆ ಬಂದಾಗ ವರದಿಗಾರರಿಂದ ದಿನನಿತ್ಯ ಬರುವ ವರದಿಗಳನ್ನು
ಬೆರಳಚ್ಚು ಮಾಡದೆ ನೇರ ಮುದ್ರಿತ ಹಂತಕ್ಕೆ ಬದಲಾಯಿಸಿಕೊಳ್ಳುವುದರಿಂದ ಪತ್ರಿಕೆಯನ್ನು ನಿಗದಿತ
ಸಮಯಕ್ಕೆ ಹೊರತರಬಹುದಾಗಿದೆ. ಅಲ್ಲದೆ ಯಾವುದೇ ಒಬ್ಬ ಕವಿ, ಅಥವಾ
ಕಾದಂಬರಿಕಾರ ಬರೆದುಕೊಡುವ ಕವನ,
ಧಾರಾವಾಹಿಗಳ ಹಸ್ತಪ್ರತಿ
ರೂಪಗಳನ್ನು ಈ OCR ಮೂಲಕ ತಪ್ಪುಗಳಿಲ್ಲದೆ ಲಗುಬಗೆಯಿಂದ
ಮುದ್ರಿಸಬಹುದಾಗಿದೆ. ಇದರಿಂದ ಕರಡು ತಿದ್ದುವ ಕಿರಿಕಿರಿಯೇ ಮಾಯವಾಗುತ್ತದೆ. ಹಾಗೇನಾದರೂ
ದೋಷಗಳಿದ್ದರೆ ಎಡಿಟಿಂಗ್ ಮೂಲಕ ಅದನ್ನು ಸರಿಪಡಿಸಿಕೊಳ್ಳಬಹುದಾಗಿದೆ.
OCR ಕನ್ನಡದಲ್ಲಿ ಬಂದರೆ ಹಸ್ತಪ್ರತಿಶಾಸ್ತ್ರ ಮತ್ತು ಪತ್ರಿಕಾರಂಗಕ್ಕೆ ಉಪಯುಕ್ತ
ಕೊಡುಗೆಯಾಗುವುದರಲ್ಲಿ ಸಂದೇಹವಿಲ್ಲ. ಕನ್ನಡದ ಸಾಫ್ಟ್ ವೇರ್ ತಂತ್ರಜ್ಞರು ಇದನ್ನು
ಸಾಧ್ಯವಾಗಿಸಿದರೆ ಕನ್ನಡಕ್ಕೆ ಮತ್ತೊಂದು ತಾಂತ್ರಿಕ ಸಾಧ್ಯತೆ ದಕ್ಕಿದಂತಾಗುತ್ತದೆ. ಇಂತಹ
ತಾಂತ್ರಿಕತೆ ನೆನಪಿನಲ್ಲಿ ಸಂಗ್ರಹವಾಗುವ ಬಗೆಯನ್ನು ಈಗಿರುವ ಚೌಕಟ್ಟಿಗಿಂತ ಬೇರೆ ರೀತಿಯಲ್ಲಿ
ರೂಪಿಸಬಲ್ಲುದು. ಬರಲಿರುವ ದಶಕಗಳಲ್ಲಿ ಕನ್ನಡ ಬರವಣಿಗೆ ಈ ತಂತ್ರಜ್ಞಾನ ಪ್ರಭಾವಕ್ಕೆ ಒಳಗಾಗಲಿದೆ.
ಅಂತರ್ ಜಾಲದ ಮಾಧ್ಯಮದಲ್ಲಿ ಹೊಸದಾಗಿ ರೂಪಗೊಂಡಿರುವ ಸಂವಹನ ಸಾಧ್ಯತೆಯನ್ನು
ಜಾಗತಿಕವಾಗಿ ಚಾಟಿಂಗ್ ಎನ್ನುತ್ತಾರೆ. ದೇಶಸ್ಥವಾಗಿ ದೂರದಲ್ಲಿರುವ ಅಥವಾ ದೂರದಲ್ಲಿದ್ದೇವೆಂದು
ತಿಳಿದಿರುವ ಇಬ್ಬರು ತಮ್ಮ ತಮ್ಮ ನಡುವೆ ನಡೆಸುವ ಸಂಭಾಷಣೆಯೇ ಚಾಟಿಂಗ್ . ಇದರಲ್ಲಿ ಯಾವ
ವಿಷಯವನ್ನು ಕುರಿತು ಮಾತಾಡಲಾಗುತ್ತದೆ ಎಂಬುದು ನಮಗೆ ಮುಖ್ಯವಲ್ಲ. ಆದರೆ ಇದರ ತಾಂತ್ರಿಕ
ನೆಲೆಗಳು ಭಾಷೆಯ ಮೇಲೆ ಬೀರುತ್ತಿರುವ ಪರಿಣಾಮಗಳು ಮಾತ್ರ ನಮಗಿಲ್ಲಿ ಮುಖ್ಯವಾಗುತ್ತವೆ. ಈ ಬಗೆಯ
ಸಂವಹನವನ್ನು ಗಣಕದ ನೆರವಿನ ಸಂವಹನ (ಕಂಪ್ಯೂಟರ್ ಮೀಡಿಯೇಟೆಡ್ ಕಮ್ಯೂನಿಕೇಷನ್ ) ಎನ್ನುತ್ತಾರೆ. ಕಂಪ್ಯೂಟರ್ ಬಳಸುತ್ತಿರುವವರ ಕನ್ನಡದ ಬಗೆಗಿನ ಸಮಸ್ಯೆಗಳಿಗೆ ಉತ್ತರ ಸಿಗಬಹುದಾದ
ಜಾಲತಾಣವೊಂದು ಅವಶ್ಯವಾಗಿದೆ. ಒಟ್ಟಾರೆಯಾಗಿ ತಂತ್ರಜ್ಞಾನದ ವಲಯದಲ್ಲೂ ಕನ್ನಡಕ್ಕೆ ಪ್ರೋತ್ಸಾಹ ನೀಡುವುದು ಇಂದಿನ ಅಗತ್ಯ ಇದರಿಂದ ಕನ್ನಡದ ಪ್ರಸಾರ ಮತ್ತಷ್ಟು ಹೆಚ್ಚಲಿದೆ.
ಸಮಕಾಲೀನ
ಮಾಹಿತಿ ತಂತ್ರಜ್ಞಾನ ಯುಗದಲ್ಲಿಯ ಸಾಮಾಜಿಕ ಜಾಲಗಳಲ್ಲಿ, ಜಾಲತಾಣಗಳಲ್ಲಿ
ಇದೀಗ ಕನ್ನಡ ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತಿದೆ. ಕನ್ನಡ ಲಿಪಿಯಲ್ಲಿ ಹೆಚ್ಚಿನ ಮಾಹಿತಿ
ಸೃಷ್ಟಿಯಾದಂತೆ ಆ ಮಾಹಿತಿಯನ್ನು ಹೊಸ ಬಗೆಗಳಲ್ಲಿ ಬಳಸಬಲ್ಲ ತಂತ್ರಜ್ಞಾನಗಳೂ ಅಭಿವೃದ್ಧಿಯಾಗುತ್ತಿವೆ. ತಂತ್ರಜ್ಞಾನದಲ್ಲಿ
ಕನ್ನಡವೆಂದರೆ ಪಠ್ಯರೂಪದ ಮಾಹಿತಿ ಮಾತ್ರವೇ ಅಲ್ಲ. ಪಠ್ಯವನ್ನು ಧ್ವನಿಗೆ(ಟೆಕ್ಸ್ಟ್ ಟು ಸ್ಪೀಚ್), ಧ್ವನಿಯನ್ನು
ಪಠ್ಯಕ್ಕೆ (ಸ್ಪೀಚ್ ಟು ಟೆಕ್ಸ್ಟ್) ಬದಲಿಸುವ ತಂತ್ರಜ್ಞಾನಗಳೂ ಇದೀಗ ಕನ್ನಡದಲ್ಲಿವೆ.
ಕಡತದಲ್ಲಿರುವ ಪಠ್ಯವನ್ನು ಧ್ವನಿರೂಪಕ್ಕೆ ಬದಲಿಸಿಕೊಂಡು ಆರಾಮವಾಗಿ ಕೇಳುವುದು, ನಮ್ಮ
ಮಾತುಗಳನ್ನು ಕಂಪ್ಯೂಟರಿಗೋ ಮೊಬೈಲಿಗೋ ಹೇಳಿ ಬರೆಸುವುದು ಇದರಿಂದ ಸಾಧ್ಯವಾಗಿದೆ. ತಂತ್ರಜ್ಞಾನದ
ಪ್ರಯೋಜನ ಹೊಸದಾಗಿ ಸೃಷ್ಟಿಯಾದ ಪಠ್ಯಕ್ಕೆ ಮಾತ್ರವೇ ಸೀಮಿತವಾದರೆ ಏನು ಪ್ರಯೋಜನ?ನಮಗೆ
ಬೇಕಾದ ಮಾಹಿತಿ ಪ್ರಪಂಚದ ಯಾವುದೇ ಭಾಷೆಯಲ್ಲಿರುವುದು ಸಾಧ್ಯ. ಅಂತರ್ಜಾಲದಲ್ಲಿ ಸುಲಭವಾಗಿ
ದೊರಕುವ ಈ ಮಾಹಿತಿಯೆಲ್ಲ ನಮ್ಮ ಭಾಷೆಯ ಇರುವಂತಿದ್ದರೆ? ಇದನ್ನು ಸಾಧ್ಯವಾಗಿಸಲು
ಅನುವಾದ ತಂತ್ರಾಂಶಗಳು ನೆರವಾಗುತ್ತವೆ. ಇತರ ಭಾಷೆಗಳನ್ನು ಕನ್ನಡಕ್ಕೆ, ಕನ್ನಡದ
ಮಾಹಿತಿಯನ್ನು ಇತರ ಭಾಷೆಗಳಿಗೆ ಅನುವಾದಮಾಡಿಕೊಡುವ ತಂತ್ರಾಂಶಗಳನ್ನು ತಯಾರಿಸುವ ನಿಟ್ಟಿನಲ್ಲಿ
ಪ್ರಯತ್ನಗಳು ಸಾಗಿವೆ.
ತಂತ್ರಜ್ಞಾನದ
ಸಹಾಯ ಪಡೆದು ಓದುವ ಹವ್ಯಾಸಕ್ಕೆ ನೀರೆರೆಯುವ ಪ್ರಯತ್ನದಲ್ಲಿ ವಿದ್ಯುನ್ಮಾನ ಪುಸ್ತಕಗಳು
(ಇ-ಬುಕ್) ತೊಡಗಿಕೊಂಡಿವೆ. ವಿದ್ಯುನ್ಮಾನ ಸಾಧನಗಳಲ್ಲಿ ಪುಸ್ತಕಗಳನ್ನು ಓದಲು, ಕೇಳಲು
ನೆರವಾಗುವ ವ್ಯವಸ್ಥೆಗಳು
ಕನ್ನಡದಲ್ಲೂ ನಿಧಾನಕ್ಕೆ ಬೆಳೆಯುತ್ತಿವೆ. ಸರಕಾರವೇ ನಡೆಸುವ ‘ಕಣಜ’ದಂತಹ ತಾಣ, ನ್ಯಾಷನಲ್
ಆರ್ಖೀವ್ಸ ಮುಂತಾದ ತಾಣಗಳು ಹಳೆಯ ಮತ್ತು ನೂತನ ಇ-ಪುಸ್ತಕಗಳನ್ನು ಒದಗಿಸುತ್ತಿವೆ. ತಂತ್ರಜ್ಞಾನ
ಜಗತ್ತಿನಲ್ಲಿ ಕನ್ನಡದ ಪ್ರಾರಂಭಿಕ ಬೆಳವಣಿಗೆ ಸಾಧ್ಯವಾದದ್ದು ಹಲವು ಉತ್ಸಾಹಿಗಳು ವೈಯಕ್ತಿಕ
ಮಟ್ಟದಲ್ಲಿ ಮಾಡಿದ ಕೆಲಸಗಳಿಂದ. ಅಲ್ಲಿಂದ ಶುರುವಾದ ಕನ್ನಡದ ಟೆಕ್ ಯಾತ್ರೆಗೆ ಬೆಂಬಲವಾಗಿ ಇದೀಗ
ಗೂಗಲ್‌ನಂತಹ ವಾಣಿಜ್ಯ ಸಂಸ್ಥೆಗಳೂ ಕೈಜೋಡಿಸಿವೆ.
ತಂತ್ರಜ್ಞಾನ ಜಗತ್ತಿನಲ್ಲಿ ಕನ್ನಡದ ಮಾರುಕಟ್ಟೆ
ಬೆಳೆಯುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ. ಟೆಕ್ ಲೋಕದಲ್ಲಿ ಕನ್ನಡ ಬೆಳೆಯುವ
ನಿಟ್ಟಿನಲ್ಲಿ ಸಮುದಾಯದ ಕೊಡುಗೆಯೂ ದೊಡ್ಡಮಟ್ಟದ್ದಾಗಿದ್ದು ಅವು ಮಾಡಿರುವ ಕೆಲಸವನ್ನು ಕನ್ನಡ
ಜನತೆಗೆ ತಿಳಿ ಹೇಳುವುದರ ಜೊತೆಗೆ ಪ್ರಶಂಸಿಸ ಬೇಕಾಗಿದೆ. ಕನ್ನಡ ವಿಕಿಪೀಡಿಯದಂತಹ ವೇದಿಕೆಯ
ಮಹತ್ವದ ಬಗೆಗೆ ಇಂದು ಜನತೆಯಲ್ಲಿ ಅರಿವು ಮೂಡಿಸ ಬೇಕಾಗಿದೆ. ಉಚಿತವಾಗಿ ಲಭ್ಯವಿರುವ ಮುಕ್ತ ತಂತ್ರಾಂಶಗಳನ್ನು ಕನ್ನಡಕ್ಕೆ ತರುವುದರಲ್ಲಿ, ಆಸಕ್ತ
ಕನ್ನಡಿಗರ ಗುಂಪುಗಳು ಹಲವು ಮಹತ್ವದ ಸಾಧನೆಗಳನ್ನು ಮಾಡಿವೆ ಅವುಗಳ ಸಾಧನೆಯನ್ನು ಗುರುತಿಸ
ಬೇಕಾಗಿದೆ. ಇಂದು ಈ ತೆರನಾದ ತಾಂತ್ರಿಕ ಕೆಲಸ
ಮಾಡುವ ಇಂತಹ ಸಮುದಾಯಗಳೊಡನೆ ಕೈಜೋಡಿಸುವುದು, ಹೊಸ
ಪ್ರಯತ್ನಗಳನ್ನು ಬೆಂಬಲಿಸುವುದು ನಾವೆಲ್ಲರೂ ಮಾಡಬೇಕಾದ ಕೆಲಸವಾಗಬೇಕಾಗಿದೆ. ಅದರ ಮೂಲಕ ಮಾಹಿತಿ
ತಂತ್ರಜ್ಞಾನ ಜಗತಿನಲ್ಲಿ ಕನ್ನಡ ಭಾಷೆಯ ಅಸ್ತಿತ್ವವನ್ನು ಉಳಿಸಿಕೊಳ್ಳುವುದರ ಜೊತೆಗೆ ಸದೃಢವಾಗಿ
ಬೆಳಸಲು ಸಾಧ್ಯವಾಗುತ್ತದೆ.