ಶನಿವಾರ, ಫೆಬ್ರವರಿ 4, 2023

 

                  ಬಿ.ಎಸ್.ಸಣ್ಣಯ್ಯನವರ ಸಂಶೋಧನೆ: ಸಮೀಕ್ಷೆ

                                         ಡಾ.ಸಿ.ನಾಗಭೂಷಣ

 

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಆದ ಸಾಧನೆ ಸಾಮಾನ್ಯವಾದುದೇನಲ್ಲ. ಆ ಕಾಲದ ಸಂಶೋಧನೆಯನ್ನು ಒಮ್ಮೆ ಅವಲೋಕಿಸಿದರೆ ಬೆರಗುಗೊಳ್ಳುವಷ್ಟು ಕೆಲಸ ನಡೆದಿದೆ. ಆರಂಭದ ಕಾಲಘಟ್ಟದಲ್ಲಿ ವಿದೇಶಿ ವಿದ್ವಾಂಸರಿಂದ ಆರಂಭವಾದ ಈ ಕ್ಷೇತ್ರದಲ್ಲಿ ನಂತರ ಕಾಣಿಸಿಕೊಂಡ ದೇಶೀಯ ವಿದ್ವಾಂಸರ ಸೇವೆ ಅನುಪಮವಾದುದು. ಕನ್ನಡ ಭಾಷೆ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದ ವಿದ್ವಾಂಸರು ಹಿರಿಯರು, ಹೊಸಬರು ಯಾರಾದರಾಗಿರಲಿ ವಿದ್ವತ್ತಿನ ದೃಷ್ಟಿಯಿಂದ ಅವರ ಸಾಧನೆ ಮತ್ತು ಸಿದ್ಧಿಗಳ ವಿಷಯದಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿಯ ಅಧ್ಯಯನಾಸಕ್ತರಾದವರು ಚಿರಋಣಿಯಾಗಿರ ಬೇಕಾಗಿದೆ.

     ಕನ್ನಡದಲ್ಲಿ ಪ್ರಾರಂಭಿಕ ಘಟ್ಟದಲ್ಲಿ ಸಂಶೋಧನೆಯು ಹಸ್ತಪ್ರತಿಗಳ, ಅನ್ವೇಷಣೆ, ಸಂಪಾದನೆ ಮತ್ತು ಸಾಹಿತ್ಯ ಚರಿತ್ರೆ ನಿರ್ಮಾಣದ ಮೂಲಕ ಪ್ರಾರಂಭವಾಯಿತು. ನಂತರದಲ್ಲಿ ಹೊಸ ಹೊಸ ಆಕರಗಳು ಶೋಧನೆಗೊಂಡು ಪರಂಪರೆಯ ನಿರ್ವಚನ, ನಿರ್ಮಾಣ ಮತ್ತು ಸಾಹಿತ್ಯ ಇತಿಹಾಸಗಳ ಕಟ್ಟಿಕೊಳ್ಳುವಿಕೆಗಳು ನಡೆದಿವೆ. ಆಧುನಿಕ ಪೂರ್ವದ ಸಾಹಿತ್ಯ ಸಂಶೋಧನೆಯಲ್ಲಿ ಸಂಪಾದನೆ, ಚರಿತ್ರೆ, ರಚನೆ ಮತ್ತು ಸಂಶೋಧನೆಗಳ ನಡುವೆ ಒಂದು ಅನ್ಯೋನ್ಯ ಸಂಬಂಧ ಇರುವುದನ್ನು ನಾವು ಕಾಣಬಹುದಾಗಿದೆ. ಆಕರ ಶಾಸ್ತ್ರೀಯ ಸಂಶೋಧನೆಯು ಪ್ರಾಚೀನ ಕಾಲದ ಕವಿ, ಕೃತಿಗಳ ಕಾಲ, ಧರ್ಮ, ಸ್ಥಳ ಇತ್ಯಾದಿಗಳ ಕುರಿತ ಅಧ್ಯಯನದ ಚರ್ಚೆಯಾಗಿದ್ದು ಇಂದು ಈ ರೀತಿಯ ಅಧ್ಯಯನಗಳು ಅಪರೂಪವಾಗಿವೆ. ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಇಡಿಯಾದ ಮತ್ತು ಬಿಡಿಯಾದ ಸಂಶೋಧನೆಯಿಂದಾಗಿ ಸಾಹಿತ್ಯ ಚರಿತ್ರೆಯ ಪರಿಧಿ ವಿಸ್ತರಿಸಿತು. ಬೆಳವಣಿಗೆಯ ದೃಷ್ಟಿಯಿಂದ ವಿಕಾಸಹೊಂದಿತು. ಹೆಚ್ಚಿನ ಕವಿಗಳು, ಅವರ ಕೃತಿಗಳು ಬೆಳಕು ಕಂಡವು. ಕೃತಿಗಳ ಪಟ್ಟಿ ಬೆಳೆಯಿತು. ಹಸ್ತಪ್ರತಿಗಳ ರೂಪದಲ್ಲಿದ್ದ ಕೃತಿಗಳು ಸಂಪಾದನೆಗೊಂಡು ಪ್ರಕಟವಾದವು. ಸಾಹಿತ್ಯ ಚರಿತ್ರೆಗೆ ಪೂರಕವಾಗುವ ಕೆಲವು ಶಾಸನಗಳು ಶೋಧಿತವಾದವು. ಈ ಹಿನ್ನಲೆಯಲ್ಲಿ ಸಾಹಿತ್ಯ ಚರಿತ್ರೆಯಲ್ಲಿ ಗಣನೀಯ ಬೆಳವಣಿಗೆಗಳಾದುದನ್ನು ಗುರುತಿಸಬಹುದು.

     ಕನ್ನಡದ ಶಾಸ್ತ್ರ ಸಾಹಿತ್ಯ ಪ್ರಕಾರಗಳಲ್ಲಿ ಗ್ರಂಥ ಸಂಪಾದನೆ ಹಾಗೂ ಹಸ್ತಪ್ರತಿ ಶಾಸ್ತ್ರ ವಿಷಯಗಳು ಮಹತ್ತರವಾದವುಗಳು. ವ್ಯಾಕರಣ, ಛಂದಸ್ಸು, ಅಲಂಕಾರ, ಭಾಷಾ ಚರಿತ್ರೆ, ನಿಘಂಟು, ಸಾಹಿತ್ಯ ವಿಮರ್ಶೆ ಮುಂತಾದ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಳ್ಳುವವರಿಗೆ ಕವಿಕೃತಿಯ ಶುದ್ಧ ಪಾಠದ ಅವಶ್ಯಕತೆ ಇರುತ್ತದೆ. `ನಮ್ಮ ಪ್ರಾಚೀನ ಸಾಹಿತ್ಯ ಬಹುಮಟ್ಟಿಗೆ ಓಲೆಗರಿ ಹಾಗೂ ಕಾಗದದ ಹಸ್ತಲಿಖಿತ ಪ್ರತಿಗಳಲ್ಲಿ ಉಳಿದುಕೊಂಡು ಬಂದಿದೆ. ಹಸ್ತಪ್ರತಿಯಲ್ಲೇ ಉಳಿದಿರುವ ಪ್ರಾಚೀನ ಸಾರಸ್ವತ ಸಂಪತ್ತನ್ನು ಕಾಪಾಡಿಕೊಂಡು ಬರುವ ಹೊಣೆ ಗುರುತರವಾದುದು. “ಹಸ್ತಪ್ರತಿಗಳಲ್ಲಿ ಅನೇಕ ಕಾರಣಗಳಿಂದಾಗಿ ಮೂಲ ಪ್ರತಿಯ ಪಾಠವು ಕೆಟ್ಟು ಹೋಗಿರುವ ಸಂದರ್ಭ ಸರ್ವೇಸಾಮಾನ್ಯ. ಹಸ್ತಪ್ರತಿಗಳನ್ನು ಪರಿಶೋಧಿಸಿ, ಲಭ್ಯವಿರುವ ಇತರೆ ಪ್ರತಿಗಳನ್ನು ದೊರಕಿಸಿಕೊಂಡು, ಪಾಠಕ್ಲೇಶಗಳನ್ನು ಬಗೆಹರಿಸಿ, ಮೂಲಕೃತಿಗೆ ಸನಿಹವಿರುವ ಶುದ್ಧ ಪಾಠವನ್ನು ಒದಗಿಸುವಂಥ ಗ್ರಂಥ ಸಂಪಾದನಾ ಕಾರ್ಯವನ್ನು ಗ್ರಂಥ ಸಂಪಾದಕ ನಿರ್ವಹಿಸ ಬೇಕಾಗುತ್ತದೆ”. ಆಧುನಿಕ ಕಾಲದಲ್ಲಿ ಗ್ರಂಥ ಸಂಪಾದನೆ ಹಾಗೂ ಹಸ್ತಪ್ರತಿ ವಿಷಯ ಈ ಎರಡು ಕ್ಷೇತ್ರಗಳನ್ನು ಪ್ರವೇಶಿಸಲು ಹಿಂಜರಿಯುತ್ತಿರುವುದು ಕಾಣಬರುವ ಸಂಗತಿ. ಕೆಲವರ ದೃಷ್ಟಿಯಲ್ಲಿ ಇವು ಆಸಕ್ತಿದಾಯಕ ಕ್ಷೇತ್ರಗಳಲ್ಲ. ಅಧಿಕಶ್ರಮ, ತ್ಯಾಗವನ್ನು ಬಯಸುತ್ತವೆ. “1950ರಿಂದ 70ರ ದಶಕದಲ್ಲಿ ಅನೇಕ ಹಿರಿಯ ವಿದ್ವಾಂಸರು ಗ್ರಂಥ ಸಂಪಾದನೆಯ ಕೆಲಸಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಈ ಕಾರ್ಯಕ್ಕೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತಳಹದಿಯನ್ನು ತಂದುಕೊಟ್ಟರು. ನಂತರದ ಕಾಲದಲ್ಲಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ ತೀರ ವಿರಳ ಎಂದೇ ಹೇಳಬೇಕಾಗುತ್ತದೆ.” ಇಂತಹದರಲ್ಲಿ ಗ್ರಂಥ ಸಂಪಾದನೆ ಹಾಗೂ ಹಸ್ತಪ್ರತಿಕ್ಷೇತ್ರದಲ್ಲಿಯ ಆಸಕ್ತಿಯಿಂದ ಕೊನೆ ಉಸಿರಿನ ವರೆಗೂ ತಮ್ಮ ಜೀವನವನ್ನು ಮೀಸಲಾಗಿಟ್ಟ  ಬಿ.ಎಸ್.ಸಣ್ಣಯ್ಯನವರ ಹೆಸರು ನಮ್ಮ ನಡುವೆ ಇರುವ ವಿದ್ವಾಂಸರಲ್ಲಿ ಎದ್ದು ಕಾಣುವಂತದ್ದು. ಅವರ ಹಸ್ತಪ್ರತಿಶಾಸ್ತ್ರದ ಬಗೆಗಿನ ನಿಜವಾದ ಕಾಳಜಿ ಮೆಚ್ಚುವಂತಹದ್ದು. 

    ನಮ್ಮ ಪ್ರಾಚೀನರು ನಮಗೆ ಬಿಟ್ಟು ಹೋಗಿರುವ ಹಸ್ತಪ್ರತಿಗಳು ಎಂದೂ ಬತ್ತದ ತವನಿಧಿಯಾಗಿವೆ. ಹಸ್ತಪ್ರತಿಗಳು ಯಾವುದೇ ನಾಡಿನ ಸಾಹಿತ್ಯ, ಧಾರ್ಮಿಕ, ಐತಿಹಾಸ, ರಾಜಕೀಯ ಪರಂಪರೆಯನ್ನು ಸಾರುವ ಭಾಷೆ, ಸಂಗೀತ, ನೃತ್ಯ, ಕಲೆಗಳೇ ಅಲ್ಲದೆ; ವೈದ್ಯ, ಸೂಪ, ಅಶ್ವ, ಗಜ, ಕಾಮಶಾಸ್ತ್ರ ಇವೇ ಮೊದಲಾದ ಶಾಸ್ತ್ರ ಕೃತಿಗಳನ್ನು ಜೀವನದ ಸಾರ ಸರ್ವಸ್ವ ಸಂಗತಿಗಳನ್ನು ನಾಡಿನ ಹಸ್ತಪ್ರತಿಗಳು ಪ್ರತಿನಿಧಿಸುತ್ತಿವೆ.   ಹಸ್ತಪ್ರತಿಗಳನ್ನು ಓದುವುದು ಒಂದು ಕಲೆ. ಹಸ್ತಪ್ರತಿಗಳಲ್ಲಿನ ಲಿಪಿ, ಭಾಷೆ ಇವುಗಳನ್ನು ಓದಲು ಸಾಕಷ್ಟು ಪರಿಶ್ರಮ ಬೇಕಾಗುತ್ತವೆ. ಹಸ್ತಪ್ರತಿಗಳನ್ನು ತಪ್ಪಾಗಿ ಓದಿದರೆ ಆಗುವ ಅಪಾರ್ಥ ಅನರ್ಥಗಳನ್ನು ಊಹಿಸಲೂ ಬರುವಂತಿಲ್ಲ. ಪ್ರತಿಕಾರನು ಅತ್ಯಂತ ಪ್ರಾಮಾಣಿಕನಾಗಿದ್ದರೆ; ಅಕ್ಷರ ಮತ್ತು ಭಾಷಾ ಸ್ಖಾಲಿತ್ಯಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ಹಸ್ತಪ್ರತಿಯನ್ನು  ಪ್ರತಿಮಾಡುವುದರಿಂದ ಹಿಡಿದು ಪಾಠಾಂತರಗಳನ್ನು ಗುರುತಿಸಿಕೊಂಡು ಕವಿಯ ಮೂಲ ಪಾಠವನ್ನು ಕಂಡು ಹಿಡಿಯುವುದು ಅತ್ಯಂತ ದುಸ್ತರವಾದ ಕಾರ್ಯ, ಸಂಪಾದಕನು ಈ ಎಲ್ಲ ಪರೀಷಹಗಳನ್ನು ಗೆದ್ದುಕೊಂಡು ಬಂದಾಗಲೇ ಕವಿಯ ಮೂಲ ಪಾಠವನ್ನು ಕಂಡು ಹಿಡಿಯುವಲ್ಲಿ ಜಯಶೀಲನಾಗಬಲ್ಲನು. ಗ್ರಂಥ ಸಂಪಾದನ ಕಾರ್ಯ ಅತ್ಯಂತ ಕಠಿಣತರವಾದುದ್ದು. ಇಂತಹ ಕಠಿಣತರವಾದ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ಜೀವನದುದ್ದಕ್ಕೂ ತೊಡಗಿಸಿಕೊಂಡು ಯಶಸ್ಸನ್ನು ಪಡೆದವರು  ಬಿ.ಎಸ್.ಸಣ್ಣಯ್ಯನವರು. ಹಸ್ತಪ್ರತಿಗಳ ಅನ್ವೇಷಣೆ, ಸಂಗ್ರಹಣೆ ಸಂಪಾದನೆಯ ಮೂಲಕ ಪ್ರಾಚೀನ ಕನ್ನಡ ಸಾಹಿತ್ಯದ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹಸ್ತಪ್ರತಿಗಳ ಶೋಧ ಮತ್ತು ಗ್ರಂಥ ಸಂಪಾದನೆಯ ಮೂಲಕ ಪ್ರಾಚೀನ ಕನ್ನಡ ಸಾಹಿತ್ಯದ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿರುವ ಇವರ ವಿದ್ವತ್ತನ್ನು ಕುರಿತು  ಸಂಕ್ಷಿಪ್ತವಾಗಿ ಸಮೀಕ್ಷಿಸಲಾಗಿದೆ.

    ಅಲಕ್ಷಿತ ಸಾಹಿತ್ಯದ ಅನ್ವೇಷಣೆ ಹಾಗೂ ಅನುಪಲಬ್ಧ ಕೃತಿಗಳ ಬೆಳಕಿಗೆ ತರುವಂತಹ ಗ್ರಂಥಸಂಪಾದನೆಯನ್ನು ಕಾರ್ಯಕ್ಷೇತ್ರ ವಾಗಿರಿಸಿಕೊಂಡಿದ್ದ ಇವರು ಆ ಮಹತ್ತರ ಕೆಲಸಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು.     ಇವರು, ಟಿ.ಎಸ್. ವೆಂಕಣಯ್ಯ, ತೀ.ನಂ. ಶ್ರೀಕಂಠಯ್ಯ, ಡಿ.ಎಲ್. ನರಸಿಂಹಾಚಾರ್. ಹೆಚ್.ದೇವೀರಪ್ಪ, ಎಲ್.ಬಸವರಾಜು ಮುಂತಾದ ಗ್ರಂಥಸಂಪಾದಕ ತಜ್ಞರ ಗರಡಿಯಲ್ಲಿ ಪಳಗಿದವರು ಮತ್ತುವಿದ್ವಾಂಸರ ವಿದ್ವತ್ ಪರಂಪರೆಯನ್ನು ಮುಂದುವರೆಸಿಕೊಂಡು ಬಂದವರಲ್ಲಿ ಬಹು ಮುಖ್ಯರಾಗಿದ್ದಾರೆ. ಗ್ರಂಥಸಂಪಾದನೆ ಮತ್ತು ಹಸ್ತಪ್ರತಿ ವ್ಯಾಸಂಗವನ್ನೇ ತಮ್ಮ ವೃತ್ತಿ ಮತ್ತು ಬದುಕಿನಲ್ಲಿ ಅಳವಡಿಸಿಕೊಂಡರು.  ಕನ್ನಡ ಸಾಹಿತ್ಯ ಸಂಶೋಧನೆ ಹಾಗೂ ಸಂಪಾದನಾ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಗಮನಾರ್ಹವಾದುದು. ಹಳಗನ್ನಡ ಸಾಹಿತ್ಯ, ವ್ಯಾಕರಣ, ಶಬ್ದಶಾಸ್ತ್ರ ಹಾಗೂ ಸಂಪಾದನಾ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಹಳಗನ್ನಡ ಸಾಹಿತ್ಯದ ಬಗ್ಗೆ ಹಾಗೂ ಶಾಸ್ತ್ರ ಸಾಹಿತ್ಯದ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲರು.  ಇವರ ವಿದ್ವತ್ತಿನ ಈ ಕಾರ್ಯ ಇಂದಿನ ಯುವ ವಿದ್ವಾಂಸರಿಗೆ ಅನುಕರಣೀಯವೂ ಮಾರ್ಗದರ್ಶಿಯೂ ಆಗಿದೆ.

     ಪಾಂಡಿತ್ಯವೆಂದರೆ ಕೇವಲ ವಿಷಯ ರಾಶಿಯನ್ನು ಸಂಗ್ರಹಿಸುವುದು ಮಾತ್ರವಲ್ಲ. ಅದರ ಜೊತೆಗೆ ಆ ವಿವಿಧ ವಿಷಯಗಳಲ್ಲಿ ಮರೆಯಾಗಿರುವ ಸಂಬಂಧಗಳನ್ನು ಊಹಿಸಿ, ಗ್ರಹಿಸಿ, ಎಳೆಗಳ ತೊಡಕುಗಳನ್ನು ಬಿಡಿಸಿ ಕೂಡಿಸಿ ತತ್ವವನ್ನು ಬೆಳಗುವ ಸಂಯೋಜಕ ಪ್ರತಿಭೆಯನ್ನು ಪ್ರಮುಖವಾಗಿ ಉಳ್ಳವರಾಗಿರಬೇಕು. ಕನ್ನಡದ ಪ್ರತಿಮಾತಿನ ಜೀವ ಜೀವಾಳವನ್ನು ಹುಡುಕುವ ಮನೋಧರ್ಮದವರಾಗಿರಬೇಕು. ಒಬ್ಬ ಮನುಷ್ಯ ವಿಮರ್ಶಕನೂ ಶೋಧಕನೂ ಕವಿಚರಿತ್ರೆಕಾರನೂ ವ್ಯಾಕರಣ, ಛಂದಸ್ಸು ಇವುಗಳ ಅಧ್ಯಯನಕಾರನೂ ವೈಜ್ಞಾನಿಕ ಮನೋಭಾವವುಳ್ಳವನೂ ಆಗಬೇಕಾದರೆ ಮೊದಲಿಗೆ ಆತನು ಸಾಹಿತಿಯೂ ರಸಜ್ಞನೂ ಆಗಿರಬೇಕೆಂಬುದಕ್ಕೆ  ಬಿ.ಎಸ್.ಸಣ್ಣಯ್ಯನವರೇ ಒಳ್ಳೆಯ ನಿದರ್ಶನ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಶೋಧನೆಗಳ ಸಂವರ್ಧನೆಗಾಗಿಯೇ ಇಡೀ ಜೀವಮಾನವನ್ನೇ ಮುಡಿಪಾಗಿಟ್ಟು ಶ್ರಮಿಸಿದ ಅವರ ಹೆಸರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿಯುವಂಥದು. ಇವರ ಸಂಶೋಧನೆಯು ಕವಿ ಕಾಲ ವಿಚಾರ ಛಂದಸ್ಸು ಭಾಷೆ. ಸಂಸ್ಕೃತಿಗಳ ಹಿನ್ನಲೆಯಲ್ಲಿ ಹಾಗೂ ಕ್ಲಿಷ್ಟ ಪದಗಳ ಅರ್ಥ ನಿರ್ಣಯ ಹಾಗೂ ನಿಷ್ಪತ್ತಿ ಇತ್ಯಾದಿ ವಿಷಯಗಳನ್ನು ಒಳಗೊಂಡಿರುವುದನ್ನು ಇವರು ಸಂಪಾದಿಸಿರುವ ಕನ್ನಡ ಕಾವ್ಯಗಳ ಪ್ರಸ್ತಾವನೆ ಮತ್ತು ರಚಿಸಿರುವ ಕೆಲವು ಸ್ವತಂತ್ರಕೃತಿಗಳ ಮೂಲಕ ಮನಗಾಣಬಹುದಾಗಿದೆ.

   ನಮ್ಮ ಪರಂಪರೆ ಹಾಗೂ ಸಂಸ್ಕೃತಿಯ ಬಗ್ಗೆ ಅಪಾರವಾದ ಹೆಮ್ಮೆಯನ್ನು ಹೊಂದಿರುವ ಇವರು, ವೈಚಾರಿಕವಾಗಿಯೂ ಚಿಂತಿಸುವ ಮನೋಭಾವದವರು. ಇವರು ಸಂಶೋಧನೆ, ಹಸ್ತಪ್ರತಿ ಸಂಗ್ರಹಣೆ ಮತ್ತು ಸಂಪಾದನಾ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯಿದ್ದುದರಿಂದ ಶ್ರದ್ಧಾಪೂರ್ವಕವಾಗಿ ದುಡಿದಿದ್ದಾರೆ. ನಿವೃತ್ತರಾದ ಮೇಲೂ  ಮೈಸೂರುವಿಶ್ವವಿದ್ಯಾಲಯ ಮತ್ತು ಶ್ರವಣ ಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ  ಸಂಸ್ಥೆಯ  ಹಸ್ತಪ್ರತಿ ವಿಭಾಗದೊಂದಿಗೆ ಭಾವನಾತ್ಮಕ ಸಂಬಂಧ ಮತ್ತು ಸಂಪರ್ಕಗಳನ್ನು ಉಳಿಸಿಕೊಂಡು ನಿಸ್ವಾರ್ಥವಾಗಿ ದುಡಿಯುತ್ತಿದ್ದಾರೆ. ಇವೆಲ್ಲವುಗಳಿಂದ ಕನ್ನಡ ವಿದ್ವತ್ ಪರಂಪರೆಯಲ್ಲಿ ಅಚ್ಚಳಿಯದೆ ಹೆಸರುಗಳಿಸಿದವರು. ಕನ್ನಡದ ಅನೇಕ ವಿದ್ವಾಂಸರು ಇವರಿಂದ ಪ್ರೇರಣೆ ಪಡೆದಿದ್ದಾರೆ. ಇಂದಿಗೂ ಸಂಶೋಧನಾಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವವರು ಅದರಲ್ಲೂ  ಗ್ರಂಥಸಂಪಾದನೆ ಮತ್ತು ಹಸ್ತಪ್ರತಿ ಕ್ಷೇತ್ರದಲ್ಲಿ ಕಾರ್ಯ  ನಿರ್ವಹಿಸುತ್ತಿರುವವರು ಬಿ.ಎಸ್.ಸಣ್ಣಯ್ಯನವರ ಹೆಸರನ್ನು ಉಲ್ಲೇಖಿಸದೆಯೇ ಮುಂದುವರೆದರೆ ಅದು ಅವರ ಬರವಣಿಗೆಯು ಅಪೂರ್ಣವೆಂದೇ ಭಾವಿಸ ಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಸಂಶೋಧನಾ ಕ್ಷೇತ್ರದಲ್ಲಿ ದುಡಿದಿದ್ದಾರೆ. ದುಡಿಯುತ್ತಿದ್ದಾರೆ.

     ಮೂಲತಃ ಸಂಶೋಧಕರಾದ  ಬಿ.ಎಸ್.ಸಣ್ಣಯ್ಯನವರು ಮೂಲ ಆಕರಗಳು ಸರಿಯಾಗಿ ಲಭ್ಯವಿಲ್ಲದ ಕಾಲದಲ್ಲಿ ಕವಿಕಾವ್ಯಗಳು ಓಲೆಗರಿಗಳಲ್ಲಿಯೇ ಅಡಗಿ ಕುಳಿತಿದ್ದಂತಹ ಸಂದರ್ಭದಲ್ಲಿಯೇಅವುಗಳ ಬಗೆಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಹಿರಿಯ ಹಾಗೂ ಸಮಕಾಲೀನ ವಿದ್ವಾಂಸರ ಗರಡಿಯಲ್ಲಿ ಇವರು ಪಳಗಿದ್ದುದರಿಂದ ಕನ್ನಡ ವಿದ್ವತ್ ಕಾಯಕದಲ್ಲಿ ತೊಡಗಿಕೊಳ್ಳುವಂತಾಯಿತು. ಕಾಲಗರ್ಭದಲ್ಲಿ ಅಡಗಿ ಕುಳಿತಿದ್ದ ಕಾವ್ಯ ಕೃತಿಗಳು ಬೆಳಕು ಕಾಣುವಂತಾಯಿತು.

    ಗ್ರಂಥಸಂಪಾದನೆಯ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದ ಮುಖ್ಯ ಕಾರಣವನ್ನು ಅವರೇ ಹೇಳಿಕೊಂಡಿರುವಂತೆ ನಮ್ಮ ಪ್ರಾಚೀನರು ನಮಗಾಗಿ ಬಿಟ್ಟು ಹೋಗಿದ್ದ ಸಾಹಿತ್ಯವನ್ನು ಹೆಕ್ಕಿ ನೋಡಲು ಅವರಿಗೆ ತುಂಬ ಆಸೆಯಿತ್ತು. ಅಪಾರವಾದ ಅಪ್ರಕಟಿತ ಸಾಹಿತ್ಯ ಹಾಗೇ ಉಳಿಯಬಾರದು ಎಂಬ ಉತ್ಕಟೇಚ್ಛೆ ಅವರಲ್ಲಿ ಪ್ರಬಲವಾಗಿತ್ತು. ಹೀಗಾಗಿ ಅವರ ಗುರುಗಳಾದ ಡಿ.ಎಲ್. ನರಸಿಂಹಾಚಾರ್ಯರು, ರವರು ಕೂಡ ಗ್ರಂಥಸಂಪಾದನೆಗೆ ಒಲವು ತೋರಿದವರೇ ಆಗಿದ್ದರಿಂದ, ಅದೇ ಕ್ಷೇತ್ರಗಳಲ್ಲಿ ಹೆಚ್ಚು ಆಸಕ್ತಿ, ನಿಷ್ಠೆ ವಹಿಸುವಂತಾಯಿತು. ಅಪ್ರಕಟಿತ ಕೃತಿಗಳು ಬೆಳಕು ಕಾಣಬೇಕೆಂಬ ಉದ್ದೇಶದಿಂದ  ಅವರು  ಸಂಪಾದನಾ ಕಾರ್ಯದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದಲ್ಲದೆ ಅಲಭ್ಯವಿರುವ  ಹಸ್ತಪ್ರತಿಗಳನ್ನು  ಶೋಧಿಸಿ, ಸಂಬಂಧಪಟ್ಟವರ ಮನವೊಲಿಸಿ ಪಡೆದು, ಸಂಪಾದಿಸಿ ಗ್ರಂಥಸಂಪಾದನಾ ಕ್ಷೇತ್ರದ ಹರವನ್ನು ವ್ಯಾಪಕಗೊಳಿಸಿದರು.  ಪ್ರಾಚೀನ ಸಾಹಿತ್ಯದ ಪಾಠಪರಿಷ್ಕರಣದಲ್ಲಿ ಹಲವಾರು ಸಂಪಾದಕರು ತಮ್ಮ ಪಾಂಡಿತ್ಯವನ್ನು ಮೆರೆದಿದ್ದಾರೆ.  ಶಾಸ್ತ್ರ ಗ್ರಂಥಗಳನ್ನು ಸಂಪಾದಿಸುವಲ್ಲಿ ಪ್ರಾಚೀನ ಸಂಸ್ಕೃತ, ಕನ್ನಡ ಲಾಕ್ಷಣಿಕ ಗ್ರಂಥಗಳನ್ನು ಅವಲೋಕಿಸುವುದು, ಅಭ್ಯಸಿಸುವುದು, ಅರ್ಥೈಸುವುದರ ಅವಶ್ಯಕತೆಯಿದೆ, ಈ ತೆರನಾದ ಕಾರ್ಯ ಇಂದಿನ ದಿನಗಳಲ್ಲಿ ಅನಿವಾರ್ಯವೂ ಹೌದು. ಈ ವಿಷಯದಲ್ಲಿ ಇವರು ಅತ್ಯಂತ ಪರಿಣಿತರು.

        ಕನ್ನಡ ಸಾಹಿತ್ಯದ ಅಧ್ಯಯನದಲ್ಲಿ ಮೂಲ ಪಾಠದ ಪುನಾರಚನೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ. ಅಕ್ಷರದ ಪಾವಿತ್ರ್ಯ ಹಾಗೂ ಅಧಿಕತೆಯನ್ನು ಒಪ್ಪುವ ಸಂಸ್ಕೃತಿ ಚಿಂತನೆಗಳು ಈ ಮೂಲ ಪಾಠಕ್ಕೆ ಮಾನ್ಯತೆ ಕೊಟ್ಟಿವೆ. ಮೌಕಿಕ ಪರಂಪರೆಯನ್ನು ಅಧೀನಗೊಳಿಸಿ ಸೀಮಿತ ವ್ಯಾಪ್ತಿಯ ಅಕ್ಷರಕ್ಕೆ ಪ್ರಾಧಾನ್ಯತೆ ಕಲ್ಪಿಸಿರುವ ಅಧ್ಯಯನಕಾರರು ಕೃತಿಗಳ ಅಧಿಕೃತ ಪಾಠಗಳ ಸಿದ್ಧತೆಗೆ ಸನ್ನದ್ಧರಾದರು. ಹಸ್ತಪ್ರತಿಗಳು, ಶುದ್ಧಪ್ರತಿಗಳು, ನಕಲುಗಳು, ಪಾಠಗ್ರಂಥಿಗಳು, ಪಾಠಾಂತರಗಳ ಮಾತೃಕೆ ಹತ್ತಾರು ಪರಿಕಲ್ಪನೆಗಳು ಹುಟ್ಟಿಕೊಂಡವು. ಆದರೆ ಇತ್ತೀಚಿನ ದಿನಮಾನಗಳಲ್ಲಿ  ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಪಾಠ ಭಿನ್ನತೆಗಳ ನಿರಾಕರಣೆ ಮುಖ್ಯವಾಯಿತೇ ಹೊರತು ಅವುಗಳ ಹಿಂದಿನ ಕಾರಣಗಳ ಅನ್ವೇಷಣೆಯಲ್ಲ ಎಂಬ ನಿಲುವು ಕಂಡು ಬಂದಿದೆ.

    ಒಬ್ಬ ಮನುಷ್ಯ ವಿಮರ್ಶಕನೂ ಶೋಧಕನೂ ಕವಿಚರಿತ್ರೆಕಾರನೂ ವ್ಯಾಕರಣ, ಛಂದಸ್ಸು ಇವುಗಳ ಅಧ್ಯಯನಕಾರನೂ ವೈಜ್ಞಾನಿಕ ಮನೋಭಾವವುಳ್ಳವನೂ ಆಗಬೇಕಾದರೆ ಮೊದಲಿಗೆ ಆತನು ಸಾಹಿತಿಯೂ ರಸಜ್ಞನೂ ಆಗಿರಬೇಕೆಂಬುದಕ್ಕೆ ಬಿ.ಎಸ್. ಸಣ್ಣಯ್ಯನವರು ಮಾದರಿಯಾಗಿದ್ದಾರೆ. ಹಸ್ತಪ್ರತಿ ಹಾಗೂ ಗ್ರಂಥಸಂಪಾದನೆಯ ಮೂಲತತ್ವಗಳನ್ನು ಚೆನ್ನಾಗಿ ಅರಿತಿರುವ ಇವರ ಸಂಪಾದನೆಗಳು ಆಕರ ಸಂಪತ್ತಿನ ಪ್ರಕಟನೆಗೆ ಮೌಲಿಕತೆಯನ್ನು ತಂದುಕೊಟ್ಟಿವೆ. `ಪ್ರಾಚೀನ ಕಾವ್ಯಗಳ ಸಂಪಾದನಾ ಕಾರ್ಯದಲ್ಲಿ ಹೆಜ್ಜೆ ಹೆಜ್ಜೆಗೆ ಎದುರಾಗುವುದು ಪಾಠಾಂತರಸಮಸ್ಯೆ. ನೂರಾರು ವರ್ಷಗಳಿಂದ ಹಿಂದೆ ಕವಿಗಳಿಂದ ರಚಿಸಲ್ಪಟ್ಟ ಕಾಲದಿಂದ ಕಾಲಕ್ಕೆ ಪ್ರತಿಯಿಂದ ಪ್ರತಿಯಾಗಿ ರೂಪುತಳೆಯುತ್ತ ಇರುವಾಗ ಪ್ರತಿಮಾಡುವ ಪ್ರತಿಕಾರರು ಕವಿಪಾಠವನ್ನು ತಮ್ಮ ಅಭಿರುಚಿ ಮತ್ತು ಗ್ರಹಿಕೆಗೆ ತಕ್ಕಂತೆ ತಿದ್ದ ಬಹುದು. ಶಬ್ದದ ಅರ್ಥದ ಬಗೆಗೆ ಗೊಂದಲಗೊಂಡು ತನಗೆ ಪರಿಚಯವಿರುವ ತನ್ನ ಕಾಲದ ಶಬ್ದವನ್ನು ಹಾಕಬಹುದು. ಪ್ರತಿಕಾರನಿಗೆ ಅಕ್ಷರಗಳು ಕೈತಪ್ಪಿ ಸ್ಖಾಲಿತ್ಯಗಳು ಉಂಟಾಗ ಬಹುದು. ಅನೇಕಾನೇಕ ದೋಷಪೂರಿತ ಶಬ್ದಗಳಲ್ಲಿ ಕವಿ ಪಾಠ ಯಾವುದೆಂದು ನಿರ್ಧರಿಸುವುದು ಸಾಮಾನ್ಯ ಕೆಲಸವಲ್ಲ.  ಈ ವಿಷಯದಲ್ಲಿ ಇವರು  ನುರಿತವರಾಗಿದ್ದರು. ಪ್ರತಿ ಮಾಡುವವರು ನಾನಾ ಕಾರಣಕ್ಕೆ ಮಾಡಿದ ತಪ್ಪುಗಳಲ್ಲಿ ಸರಿಯಾದ ಪಾಠ ಯಾವುದು ಎಂಬುದನ್ನು  ಗ್ರಹಿಸುವುದು ಕಾವ್ಯರಚನೆಯಷ್ಟು ಸುಲಭವಲ್ಲ. ಸಂಶೋಧನೆಯ ತೀವ್ರ ಸಂಧಾನಕ್ಕೆ, ಮಾಡುವ ತರ್ಕಕ್ಕೆ ಮಿತಿಯಿಲ್ಲ. ಇದಕ್ಕೆ ನಿದರ್ಶನವಾಗಿ  ಇವರು ರಾಗೌ ಅವರೊಡನೆ ಸೇರಿ ಸಂಪಾದಿಸಿದ ರನ್ನನ ಅಜಿತನಾಥ ಪುರಾಣ ಕಾವ್ಯದ ಸಂಪಾದನೆಯ ಸಂದರ್ಭದಲ್ಲಿ ಪಾಠಾಂತರ ವಿಷಯದಲ್ಲಿ ತೆಗೆದುಕೊಂಡಿರುವ ನಿರ್ಣಯವು ಅವರ ವಿದ್ವತ್ತಿನ ಹಿರಿಮೆಯಾಗಿದೆ.

    ಇವರು ಕನ್ನಡ ಸಾಹಿತ್ಯದ ಪ್ರಾಚೀನ ಪರಂಪರೆಯೊಂದಿಗೆ ನಡೆಸುವ ನಿರಂತರ ಸಂವಾದ ಮತ್ತು ಅನುಸಂಧಾನಗಳು  ವಿಶೇಷತೆಯನ್ನು ಪಡೆದುಕೊಂಡಿವೆ. ನಿಜವಾದ ಭಾಷಾ ಮತ್ತು ಸಾಹಿತ್ಯ ಸಂಶೋಧಕ ಮತ್ತೆ ಮತ್ತೆ ಪ್ರಾಚೀನತೆಯ ಕಡೆಗೆ ಹೊರಳುವುದು ಅತ್ಯಂತ ಅಗತ್ಯವಾಗಿದೆ. ಅವರ ಸಮಕಾಲೀನರಾದ ಎಷ್ಟೋ ವಿದ್ವಾಂಸರು ಸಂಶೋಧನೆಯಂತಹ ಚಟುವಟಿಕೆ ನೀರಸ ಎಂದು ಭಾವಿಸಿ ಆಸಕ್ತಿ ಕಳೆದುಕೊಂಡಂತಹ ಸಂದರ್ಭದಲ್ಲಿಯೂ ಇವರು ನಾವು ಯಾವ ಭಾಷಾ ಸಾಹಿತ್ಯ ಸಂದರ್ಭದಲ್ಲಿ ಬರೆಯುತ್ತಿದ್ದೇವೆಯೋ ಆ ಭಾಷಾ ಸಾಹಿತ್ಯ ಪರಂಪರೆಯ ಪ್ರಜ್ಞೆ ಇದ್ದಾಗ ಮಾತ್ರ ನಮ್ಮ ಬರೆಹಕ್ಕೆ ನಿಜವಾದ ಮೌಲ್ಯ ಬರುತ್ತದೆ ಎಂದು ನಂಬಿದವರು. ತಮ್ಮ ಸಮಕಾಲೀನತೆಯನ್ನು ಮೀರಿ ಮತ್ತೆ ಮತ್ತೆ ಪ್ರಾಚೀನತೆಯ ಕಡೆಗೆ ಹೊರಳಿ ಮಹತ್ವದ ಮನಸ್ಸುಗಳೊಂದಿಗೆ ಭಾಷೆಯೊಂದಿಗೆ ಸಂವಹನ ನಡೆಸುತ್ತಾ ಬಂದಿದ್ದಾರೆ. ಕನ್ನಡ ಭಾಷಾ ಸಂಪತ್ತಿಗೆ ಅಗತ್ಯವಾದುದ್ದನ್ನು ತಮ್ಮೊಳಗೆ ಅರಗಿಸುಕೊಳ್ಳುತ್ತಲೇ ಪರಂಪರೆಯ ಮತ್ತು ಸಮಕಾಲೀನ ಸಾಹಿತ್ಯ,ಸಂಸ್ಕೃತಿಯನ್ನು ಕುರಿತು ವಿವೇಚನೆಯಿಂದ ಬಳಸುತ್ತಾ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ.

         ಆಧುನಿಕ ಗ್ರಂಥಸಂಪಾದನೆಯ ದ್ವಿತೀಯ ಘಟ್ಟದ ಸಂದರ್ಭದಲ್ಲಿ; ಶಾಸ್ತ್ರೀಯ ಹಿನ್ನಲೆಯಲ್ಲಿ ನಡೆದಂತೆ ಸಂಪಾದನೆಯ ಸಕ್ರಿಯ ಚಟುವಟಿಕೆಗಳು ಇಂದು ಇಲ್ಲವೇ ಇಲ್ಲ ಎನ್ನಬಹುದು. ಇಂತಹ ಸಂದರ್ಭದಲ್ಲಿ  ಬಿ.ಎಸ್.ಸಣ್ಣಯ್ಯನವರು ಸಂಪಾದಿಸಿರುವ ಕೃತಿಗಳು ಬಹುಮಟ್ಟಿಗೆ ಅನುಪಲಬ್ಧ ಕೃತಿಗಳಾಗಿದ್ದು ಗ್ರಂಥ ಸಂಪಾದನೆಯ ಆದರ್ಶಗಳನ್ನು ಒಳಗೊಂಡಿವೆ. ಇವರ  ಸಂಶೋಧನಾಕಾರ್ಯವನ್ನು ನಾಲ್ಕು ರೀತಿಯಲ್ಲಿ ಗುರುತಿಸಬಹುದು.

 1. ಹಸ್ತಪ್ರತಿಗಳ ಸೂಚಿ ಹಾಗೂ ವರ್ಣನಾತ್ಮಕ ಸೂಚಿಯನ್ನು ವೈಜ್ಞಾನಿಕ ರೀತಿಯಲ್ಲಿ ಸಿದ್ಧಪಡಿಸಿ ಸಂಪಾದಿಸಿರುವುದು.

 2. ಸ್ವತಂತ್ರವಾಗಿ ಪ್ರಾಚೀನ ಹಾಗೂ ನಡುಗನ್ನಡ ಕೃತಿಗಳನ್ನು ಸಂಪಾದಿಸಿರುವುದು.

 3. ಇತರರೊಡನೆ ಸೇರಿ ಕೃತಿಗಳನ್ನು ಸಂಪಾದಿಸಿರುವುದು.

 4. ಸ್ವತಂತ್ರ ಕೃತಿಗಳನ್ನು ರಚಿಸಿರುವುದು

ಬಿ.ಎಸ್. ಸಣ್ಣಯ್ಯನವರ ಸಾಹಿತ್ಯ ಕೃಷಿಯನ್ನು ಸಂಶೋಧನಾತ್ಮಕನೆಲೆಯಲ್ಲಿ ಕೆಳಕಂಡಂತೆ ವರ್ಗೀಕರಿಸ ಬಹುದು.  ನನ್ನ ಗಮನಕ್ಕೆ ಬಂದಹಾಗೆ ಇವರು ಸಂಪಾದಿಸಿರುವ ಒಟ್ಟು ಕೃತಿಗಳ ಸಂಖ್ಯೆ  ಸುಮಾರು ೪೫. ಅವುಗಳಲ್ಲಿಜೈನ ಸಾಹಿತ್ಯಕ್ಕೆ ಸಂಬಂಧಿಸಿದ ಚಂಪೂಕೃತಿಗಳು ೧೧.  ಷಟ್ಪದಿ ಕಾವ್ಯಗಳು-೦೩, ಸಾಂಗತ್ಯ ಕೃತಿಗಳು ೧೩.  ವಚನಕಾರರ ವಚನಗಳು-೦೭,  ಶಾಸ್ತ್ರ ಕೃತಿಗಳು೦೪, ತತ್ವಗ್ರಂಥಗಳು-೦೩, ಗದ್ಯಕೃತಿ:೦೧, ಸಂಕೀರ್ಣ ಸಾಹಿತ್ಯ ೦೧. ಇವರಸ್ವತಂತ್ರ ಸಂಶೋಧನಾ ಕೃತಿಗಳು ಒಟ್ಟು ೦೯. ಸಂಸ್ಕೃತ, ಪ್ರಾಕೃತ ಮತ್ತು ಕನ್ನಡ ಭಾಷೆಯ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ ಸಂಪುಟಗಳು ೦೭.

  ಆಧುನಿಕ ಪೂರ್ವದ ಕನ್ನಡ ಸಾಹಿತ್ಯ ಕುರಿತ ಸಂಶೋಧನೆಯಲ್ಲಿ ಇವರದ್ದು ಸಿಂಹಪಾಲು. ಇವರ  ಆಕರ ಶೋಧ ಸಂಶೋಧನೆಯ ಸ್ವರೂಪವನ್ನು ಬಹುಮಟ್ಟಿಗೆ ಕೆಳಕಂಡ ರೀತಿಯಲ್ಲಿ ಕಂಡುಕೊಳ್ಳಬಹುದಾಗಿದೆ.

1. ಕನ್ನಡ ಸಾಹಿತ್ಯ ಚರಿತ್ರೆಗೆ ಮೊದಲ ಬಾರಿಗೆ  ಉಪೇಕ್ಷಿತಕವಿಗಳ ಕಾವ್ಯಗಳು ಸೇರ್ಪಡೆಗೊಂಡಿದ್ದು.

2. ಒಂದೇ ಹೆಸರಿನ ಎರಡು ಕಾವ್ಯಗಳು ಒಬ್ಬನವೇ ಎಂದು ತಿಳಿದುಕೊಂಡಿದ್ದು ದೂರವಾಗಿ ಬೇರೆ ಬೇರೆ ಎಂದು ನಿರ್ಧರಿತವಾಯಿತು.

3 ಒಬ್ಬ ಕವಿಯು  ಬರೆದ ಕೃತಿಗಳನ್ನು ಇನ್ನಾರೋ ಕವಿಯ ಹೆಸರಿನಲ್ಲಿ ಹಸ್ತಪ್ರತಿಯಲ್ಲಿ ಕಾಣಿಸಿಕೊಂಡಿದ್ದನ್ನು ಗುರುತಿಸಿ ಪ್ರತ್ಯೇಕಿಸಿದ್ದು.

4. ಕರ್ತೃ ಯಾರೆಂದು ತಿಳಿಯದಿದ್ದ ಕೃತಿಯೊಂದರ ಶೋಧ ಮತ್ತು ಕರ್ತೃಗಳ ಹೆಸರು  ಗುರುತಿಸಿದ್ದು.

5. ಎಷ್ಟೋ ಅನಾಮಧೇಯ ಕವಿಗಳು ಹಾಗೂ ಅವರ ಕೃತಿಗಳು ಬೆಳಕಿಗೆ ಬಂದವು.

6. ಕವಿಚರಿತೆಯಲ್ಲಿ ಉಲ್ಲೇಖವಾಗದೆ ಇರುವ ಅಸಂಖ್ಯಾತ ಕವಿಗಳ ಕೃತಿಗಳು ಸಂಶೋಧನೆಯ ಮೂಲಕ ಬೆಳಕು ಕಂಡವು. ಮುಖ್ಯವಾಗಿ ಕವಿಚರಿತೆಯ ಮೂರು ಸಂಪುಟಗಳಿಗೆ ಹಲವೆಡೆ ಸೂಕ್ತ ತಿದ್ದುಪಡಿ ಮಾಡಬೇಕೆನ್ನುವ ಅಂಶ ಇವರ ಸಂಶೋಧನೆಯ ಮೂಲಕ ವ್ಯಕ್ತವಾಯಿತು.

    ಗ್ರಂಥ ಭಂಡಾರಗಳಲ್ಲಿರುವ, ಉಪಲಬ್ದ ವಿರುವ ಹಸ್ತಪ್ರತಿಗಳನ್ನು ಪರಿಶೀಲಿಸಿ ಅಕಾರಾದಿ ಕ್ರಮದಲ್ಲಿ ಜೋಡಿಸಿ ಅವುಗಳ ಕರ್ತೃ, ಕಾಲ, ನಮೂದಿಸಿ, ಅವು ಕಾಗದದ್ದೇ, ತಾಳೆಯೋಲೆಯೋ, ಕಡತವೇ ಎಂಬುದನ್ನು ಉಲ್ಲೇಖಿಸಿ ಅವುಗಳ ವಸ್ತು, ಪತ್ರಸಂಖ್ಯೆ, ಸಾಲಲ್ಲಿರುವ ಅಕ್ಷರಸಂಖ್ಯೆ, ಲಿಪಿ ಸ್ವರೂಪಗಳನ್ನು ವಿವರಿಸಿ ಹಸ್ತಪ್ರತಿಗಳ ಸ್ವರೂಪವನ್ನು, ಅದರ ಆದಿ ಮತ್ತು ಅಂತ್ಯಗಳನ್ನು ವಿವರಿಸುವ ವರ್ಣನಾತ್ಮಕ ಸೂಚಿಗಳು ಸಿದ್ಧವಾಗಿ ಉಪಯುಕ್ತ ಮಾಹಿತಿಯನ್ನು ಒಳಗೊಂಡಿವೆ. ಈ ದಿಸೆಯಲ್ಲಿ ಎಚ್.ದೇವೀರಪ್ಪ, ಬಿ.ಎಸ್.ಕುಲಕರ್ಣಿಯವರು ಉಲ್ಲೇಖಾರ್ಹರಾಗಿದ್ದಾರೆ. ನಂತರದ ಕಾಲದಲ್ಲಿಯೂ ಎಸ್.ಶಿವಣ್ಣ, ಬಿ.ಆರ್.ಹಿರೇಮಠ, ಬಿ.ಎಸ್.ಸಣ್ಣಯ್ಯ, ವೀರಣ್ಣರಾಜೂರ ಮುಂತಾದ ಹಸ್ತಪ್ರತಿ ತಜ್ಞರು ಹಾಗೂ ಕನ್ನಡ ವಿ.ವಿ. ಹಸ್ತಪ್ರತಿ ಶಾಸ್ತ್ರವಿಭಾಗದ ಪ್ರಾಧ್ಯಾಪಕರುಗಳು ಈ ಮಾದರಿಯ ವರ್ಣನಾತ್ಮಕ ಹಸ್ತಪ್ರತಿ ಸೂಚಿಯನ್ನು ಸಿದ್ಧಪಡಿಸಿದ್ದಾರೆ. ಇವು ಇಂದಿಗೂ ಮಾದರಿಯಾಗಿವೆ. ಇಂದು ಈ ಸೂಚಿಗಳು ಹಸ್ತಪ್ರತಿಗಳ ಅಧ್ಯಯನವನ್ನು ಬೇರೊಂದು ನೆಲೆಗಟ್ಟಿನಿಂದ ನೋಡಲು ಅವಕಾಶ ಕಲ್ಪಿಸಿವೆ. ಇವರು ಸಂಪಾದಿಸಿರುವ ಸೂಚಿಯ ಸ್ವರೂಪವು ಅವರೇ ಹೇಳಿರುವ ಹಾಗೇ ಈ ರೀತಿ ಇದೆ. “ಇದರಲ್ಲಿ ಕೃತಿಗಳನ್ನು ನಿರ್ದೇಶಿಸಿರುವ ಕ್ರಮವು ಏಳು ವಿಭಾಗಗಳನ್ನು ಹೊಂದಿದೆ. (1) ಕ್ರಮ ಸಂಖ್ಯೆ, (2) ಕೃತಿಯ ಹೆಸರು, (3) ಕೃತಿ ಕರ್ತೃ, (4) ಕಾಲ, (5) ಛಂದಸ್ಸು, (6) ಗ್ರಂಥ ಗಾತ್ರ, (7) ಕೃತಿಯ ಬಗೆಗಿನ ವಿಶೇಷ ವಿಷಯ.” ಕೃತಿಯ ಕರ್ತೃ, ಕಾಲ ಮತ್ತು ಛಂದಸ್ಸುಗಳು ತಿಳಿಯದಿರುವ ಕಡೆ ಪ್ರಶ್ನಾರ್ಥಕ ಚಿನ್ಹೆಯನ್ನು ಬಳಸಿದ್ದಾರೆ. ಕಾಲವನ್ನು ಸೂಚಿಸುವಲ್ಲಿ ‘ಸುಮಾರು’ ಎಂಬ ಪದವನ್ನು ಎಲ್ಲಿಯೂ ಬಳಸದಿದ್ದರೂ ಕಾಲದ ಜೊತೆಯಲ್ಲಿ ಸೇರಿಸಿಕೊಂಡು ಓದಲು ಸೂಚಿಸಿದ್ದಾರೆ. ಕೃತಿಯ ಛಂದಸ್ಸಿನ ಬಗೆಗೆ ಸೂಚಿಸುವಲ್ಲಿ ಉಪಯೋಗವಾಗಿರುವ ಎಲ್ಲಾ ಸಂಕೇತಗಳ ವಿವರಣೆಯನ್ನು ಸಂಕೇತ ಸೂಚಿಯಲ್ಲಿ ಕೊಟ್ಟಿದ್ದಾರೆ. ಅಂದರೆ ಗದ್ಯ, ಚಂಪೂ, ಷಟ್ಪದಿ, ಸಾಂಗತ್ಯ, ರಗಳೆ ಇತ್ಯಾದಿ ಛಂದೋ ಪ್ರಕಾರಗಳನ್ನು ಸಂಕೇತಗಳ ರೂಪದಲ್ಲಿ ಕೊಟ್ಟಿದ್ದಾರೆ. ಕೃತಿಗಳ ಪರಿಮಿತಿಯನ್ನು ತಿಳಿಸುವಲ್ಲಿ ಕೃತಿಗಳಿಗನುಗುಣವಾಗಿ ಅಧ್ಯಾಯ, ಆಶ್ವಾಸ ಅಥವಾ ಸಂಧಿ ಸಂಖ್ಯೆಗಳನ್ನು ತಿಳಿಸಿ ಅನಂತರ ಪದ್ಯ ಸಂಖ್ಯೆಯನ್ನು ಕೊಟ್ಟಿದ್ದಾರೆ. ಪದ್ಯ ಸಂಖ್ಯೆ ಇಲ್ಲದ ಕಡೆ ಕೇವಲ ಅಧ್ಯಾಯ ಅಥವಾ ಆಶ್ವಾಸ ಸಂಖ್ಯೆಗಳನ್ನು ಮಾತ್ರ ಕೊಟ್ಟಿದ್ದಾರೆ.  ಇವರು ಸಂಪಾದಿಸಿರುವ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ ಸಂಪುಟಗಳಲ್ಲಿ  ಹಸ್ತಪ್ರತಿಗಳಲ್ಲಿಯ ಮಾಹಿತಿ ಸಂಪತ್ತನ್ನು ಸಮಕಾಲೀನ ಮೌಲ್ಯಗಳೊಂದಿಗೆ ಸಮೀಕರಿಸುವುದು, ಪ್ರಾಚೀನ ನಂಬಿಕೆ, ವಿಚಾರ, ಮೌಲ್ಯಗಳನ್ನು ಸಂವಾದಕ್ಕೆ ಪ್ರೇರೇಪಿಸುವುದು, ಆಯಾ ಜ್ಞಾನಶಾಸ್ತ್ರಗಳ ಪಾರಂಪರಿಕ ಹಾಗೂ ಸಮಕಾಲೀನ ಕ್ಷೇತ್ರಗಳ ಮೌಲ್ಯ ವಿವೇಚನೆ ಮಾಡುವುದು, ಹಸ್ತಪ್ರತಿ ಸಂಪತ್ತನ್ನು ಇಂದಿನ ಬದುಕಿಗೆ ಉಪಯೋಗವಾಗುವ ರೀತಿಯಲ್ಲಿ ಅನ್ವಯಿಸುವುದು. ಆಧುನಿಕ ವೈಜ್ಞಾನಿಕ-ವೈಚಾರಿಕ ಚಿಂತನೆಗಳ ನೆಲೆಯಲ್ಲಿ ಪಾರಂಪರಿಕ ಮೌಲ್ಯಗಳನ್ನು ಅದ್ದಿ ತೆಗೆದು ಅವುಗಳ ಸಾರ್ವತ್ರಿಕ ಮಹತ್ವಗಳನ್ನು ದಾಖಲಿಸುವುದರ ಮೂಲಕ ಅವುಗಳ ಪರಿಚಯವಿಲ್ಲದ ಆಧುನಿಕ ಸಮಾಜಕ್ಕೆ ಹಸ್ತಪ್ರತಿಗಳ ಮಹತ್ವದ ಬಗೆಗೆ ಅರಿವು ಮೂಡಿಸುವಂತಹ ಕೆಲಸವನ್ನು ಮಾಡಲು ಸಹಕಾರಿಯಾಗಿರುವುದನ್ನು ಕಾಣಬಹುದಾಗಿದೆ. ಹಸ್ತಪ್ರತಿಗಳಲ್ಲಿ ಅಡಗಿರುವ ಮಾಹಿತಿ ಕಣಜವನ್ನು ಹಾಗೂ ಸಾಂಸ್ಕೃತಿಕ ಸಂಪತ್ತನ್ನು ವಿವಿಧ ಮಗ್ಗುಲಗಳಿಂದ ಅಧ್ಯಯನ ಮಾಡಿ ಆಧುನಿಕ ಜಗತ್ತಿಗೆ ಅವುಗಳ ಶಾಸ್ತ್ರೀಯ ಜ್ಞಾನಕ್ಷೇತ್ರದ ಮಹತ್ವವನ್ನು ಪರಿಚಯಿಸಿರುವ ನೆಲೆಯನ್ನು ಇವರ ಹಸ್ತಪ್ರತಿಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಕಾಣಬಹುದಾಗಿದೆ.” ಆಧುನಿಕ ಪೂರ್ವದ ಸಾಹಿತ್ಯದ ಅಧ್ಯಯನದ ಪ್ರಾಚೀನ ನಡೆಗಳನ್ನು ವಿವರಿಸುತ್ತಲೇ ವಿಸ್ತರಿಸುವ ಹಾಗೂ ಆಧುನಿಕ ಪೂರ್ವದ ಸಾಹಿತ್ಯವನ್ನು ಅಧ್ಯಯನ ಮಾಡಲು ಬೇಕಾದ ಆಕರಗಳನ್ನು ಶೋಧಿಸಿ ಒದಗಿಸಿರುವ ಕೆಲಸವನ್ನು ಬಿ.ಎಸ್.ಸಣ್ಣಯ್ಯನವರ ಸಂಶೋಧನೆಯಲ್ಲಿ ಕಾಣಬಹುದು.

    ಕನ್ನಡ ಸಾರಸ್ವತ ಲೋಕದ ಅಜಾತ ಶತ್ರು. ತಮ್ಮ ಜೀವನದ ಕೊನೆಯ ಉಸಿರು ಇರುವವರೆವಿಗೂ ನಿರಂತರವಾಗಿ ಗ್ರಂಥಸಂಪಾದನೆ, ಸೂಚಿಸಾಹಿತ್ಯ, ಸಂಶೋಧನಾ ಸಾಹಿತ್ಯ, ಮುಂತಾದ ಸಾಹಿತ್ಯ ಸಂವರ್ಧನೆಯ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡವರು. ಕನ್ನಡ ಗ್ರಂಥಸಂಪಾದನಾ ಕ್ಷೇತ್ರಕ್ಕೆ ಇವರು ಸಲ್ಲಿಸಿರುವ ಸೇವೆಯು ಬಹುಮುಖ್ಯವಾದುದು. ಬಹುಕಾಲ ನಿಲ್ಲುವಂಥದು. ಶ್ರೀಯುತರನ್ನು ಬಿ.ಎಸ್. ಸಣ್ಣಯ್ಯ ಹೆಸರಿಗೆ ಪರ್ಯಾಯವೆನ್ನುವಂತೆ ‘ ಆಕರ ವಿಜ್ಞಾನಿ ಸಣ್ಣಯ್ಯ ಎಂದು ಕರೆಯಬಹುದಾಗಿದೆ. ಹಸ್ತಪ್ರತಿಯ ವಿಷಯಕ್ಕೆ ಸಂಬಂಧಿಸಿದಂತೆ ‘ನಡೆದಾಡುವ ಹಸ್ತಪ್ರತಿ ಕೋಶ’ ಎಂದು ಕರೆದರೂ ತಪ್ಪಾಗಲಾರದು. ಕವಿಗಳ ಕಾಲನಿರ್ಣಯ, ಅಪ್ರಕಟಿತ ಹಸ್ತಪ್ರತಿಗಳ ಶೋಧ, ವಿವಿಧ ಕಾಲಮಾನದ ಕವಿಕೃತಿಗಳಿಗೆ ಸಂಬಂಧಿಸಿದ ವೈವಿಧ್ಯಮಯ ಕೃತಿಗಳ ಸಂಪಾದನೆ, ಸಂಪಾದನಾ ಸಾಹಿತ್ಯದ ಚರಿತ್ರೆ   ಮುಂತಾದವುಗಳಿಗೆ ಸಂಬಂಧಿಸಿದಂತೆ ಇವರ ಸಂಶೋಧನಾ ಕೊಡುಗೆಯನ್ನು ಕನ್ನಡಿಗರು ಎಂದೂ ಮರೆಯುವಂತಿಲ್ಲ..

ಸಣ್ಣಯ್ಯನವರು ಅನೇಕ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಹಿಂದಿನ ಸಂಶೋಧಕರುಗಳು ಆರ್.ನರಸಿಂಹಾಚಾರ್, ಎಸ್.ಜಿ.ನರಸಿಂಹಾಚಾರ್, .ವೆಂಕಟಸುಬ್ಬಯ್ಯ ಮುಂತಾದವರು ಗುರುತಿಸದಿದ್ದ ಅನೇಕ ಕೃತಿಗಳನ್ನು ಸಣ್ಣಯ್ಯನವರು ಮೊಟ್ಟಮೊದಲಿಗೆ ಗುರುತಿಸಿ ಅವುಗಳನ್ನು ಸಂಪಾದಿಸಿ ಕವಿ ಕಾಲದ ವಿಚಾರವಾಗಿ ವಿದ್ವತ್ಪೂರ್ಣ ಪೀಠಿಕೆಯೊಂದಿಗೆ ಪ್ರಕಟಿಸಿದ್ದಾರೆ. ಜೈನ ಸಾಹಿತ್ಯಕ್ಕೆ ಸಣ್ಣಯ್ಯನವರ ಕೊಡುಗೆ ಅಪಾರವಾದುದ್ದು ಮತ್ತು ಮಹತ್ವವಾದುದ್ದು. ಅವರ ಸಂಪಾದಿತ ಕೃತಿಗಳ ಪಟ್ಟಿಯನ್ನು ಗಮನಿಸಿದ ಯಾರಿಗಾದರೂ ಒಬ್ಬ ಮನುಷ್ಯ ತನ್ನ ಜೀವಿತ ಅವಧಿಯಲ್ಲಿ ಇಷ್ಟೊಂದು ಕೆಲಸ ಮಾಡಲು ಸಾಧ್ಯವೇ ಎಂದೆನಿಸುತ್ತದೆ. ಹಸ್ತಪ್ರತಿಗಳನ್ನು ಪ್ರತಿಮಾಡುವುದು, ಮರು ಪರಿಶೀಲನೆ ಮಾಡುವುದು, ಪಾಠಾಂತರಗಳನ್ನು ಗುರುತಿಸುವುದು ಇವೆಲ್ಲಾ ಅತ್ಯಂತ ಕ್ಲಿಷ್ಟಕರವಾದಂತಹ ಸಂಗತಿಗಳು. ಅವಧಿಯಲ್ಲಿ ಸಣ್ಣಯ್ಯನವರು 45ಕ್ಕಿಂತಲೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಆಗಲೇ ಪ್ರಕಟಿತವಾಗಿದ್ದ ಕೃತಿಗಳ ಹೊಸ ಪರಿಷ್ಕರಣಗಳಿವೆ. ಮೊದಲ ಬಾರಿಗೆ ಪ್ರಕಟಿತವಾದ ಕೃತಿಗಳಿವೆ, ಹೊಸದಾಗಿ ಹಸ್ತಪ್ರತಿಗಳನ್ನು ಅನ್ವೇಷಿಸಿ ಪ್ರಕಟಿಸಿದ ಕೃತಿಗಳಿವೆ.  ಎಲ್ಲಾ ಸಂದರ್ಭಗಳಲ್ಲೂ ಸಣ್ಣಯ್ಯನವರು ಗ್ರಂಥಸಂಪಾದನೆಯ ಶಿಸ್ತನ್ನೂ ಶಾಸ್ತ್ರೀಯತೆಯನ್ನೂ ತಪ್ಪದೇ ಕಾಪಾಡಿಕೊಂಡಿದ್ದಾರೆ. ಕವಿಕಾವ್ಯ ವಿಚಾರದಲ್ಲಿ ತಕ್ಕ ಮಟ್ಟಿನ ಬೆಳಕನ್ನು ಚೆಲ್ಲುವ ಕೆಲಸವನ್ನು ಮಾಡಿದ್ದಾರೆ. ಗ್ರಂಥಸಂಪಾದನಾ ಚರಿತ್ರೆಯನ್ನು ಬರೆಯುವವರು ಸಣ್ಣಯ್ಯನವರನ್ನು ಬಿಟ್ಟು ಬರೆಯಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡದಲ್ಲಿ ಪ್ರಸಿದ್ಧವಾದ ಕಾವ್ಯಗಳನ್ನು ಪ್ರಕಟಿಸಿರುವಂತೆಯೇ ಸಹೃದಯ ಓದುಗ ಲೋಕಕ್ಕೆ ಗೊತ್ತಿಲ್ಲದ  ಪ್ರಮುಖ ಕೃತಿಗಳನ್ನು ಪ್ರಕಟಿಸಿ ವಿಶೇಷ ಕೀರ್ತಿಗೆ ಪಾತ್ರರಾಗಿದ್ದಾರೆ.  ಕನ್ನಡ ಗ್ರಂಥ ಸಂಪಾದನಾ ಕ್ಷೇತ್ರಕ್ಕೆ ಸಣ್ಣಯ್ಯನವರ ಕೊಡುಗೆ ಪ್ರಮಾಣದಲ್ಲಿ ಮತ್ತು ಗುಣದಲ್ಲಿ ಹಿರಿದು. ಒಂದೇ ಒಂದು ಹಸ್ತಪ್ರತಿಯಿದ್ದಾಗ ಸಮಸ್ಯೆ ಹೆಚ್ಚು.  ಅಂತಹ ಸಂದರ್ಭದಲ್ಲಿ ಹಾತ್ಮಕ ಪರಿಷ್ಕರಣಕ್ಕೆ ಅವಕಾಶವಿರುತ್ತದೆ. ಅದನ್ನು ಸಣ್ಣಯ್ಯನವರು ಎಚ್ಚರಿಕೆಯಿಂದ ಬಳಸಿಕೊಂಡಿದ್ದಾರೆ. ಸಮಸ್ಯೆಗಳಿದ್ದು ಯಾರೂ ಮುಟ್ಟದಿದ್ದ ಹಸ್ತಪ್ರತಿಗಳನ್ನು ಕೈಗೆತ್ತಿಕೊಂಡು ಸಂಪಾದಿಸಿದ ಶ್ಲಾಘನೆಗೆ ಪಾತ್ರರಾಗಿದ್ದಾರೆ, ಗ್ರಂಥ ಸಂಪಾದನೆಯ ಸವಾಲುಗಳನ್ನೆಲ್ಲಾ ಎದುರಿಸಿ , ಪರಿಹಾರ ಕಂಡುಕೊಳ್ಳುವಲ್ಲಿ ವಿದ್ವತ್ತಿನ ಮಾರ್ಗವನ್ನು ಕಡ್ಡಾಯವಾಗಿ ಅನುಸರಿಸಿದ್ದಾರೆ. ಸಣ್ಣಯ್ಯನವರು ಪ್ರಾಚೀನ ಬಹುತೇಕ ಛಂದೋ ಪ್ರಕಾರಗಳ ಕೃತಿಗಳನ್ನು ಗ್ರಂಥ ಸಂಪಾದನೆಗೆ ತೆಗೆದುಕೊಂಡಿದ್ದಾರೆ. ಚಂಪೂ, ವಚನ, ಷಟ್ಪದಿ, ಕಂದ, ಸಾಂಗತ್ಯ ಕೃತಿಗಳನ್ನು ಮುಖ್ಯವಾಗಿ ಪರಿಷ್ಕರಿಸಿ ಕೊಟ್ಟಿದ್ದಾರೆ. ತಮ್ಮ ಗ್ರಂಥಸಂಪಾದನೆಗೆ ಗದ್ಯ ಕೃತಿಗಳನ್ನೂ ಅವರು ಆರಿಸಿಕೊಂಡಿದ್ದಾರೆ. ಕಾವ್ಯಗಳಲ್ಲದೆ ಶಾಸ್ತ್ರ ಕೃತಿಗಳೂ ಇದರಲ್ಲಿ ಸೇರಿವೆ. ಕೆಲವು ಸಂಗ್ರಹಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ಹಾಗೆಯೇ ಜನರಿಗೆ ಮುಟ್ಟಬೇಕೆಂಬ ಉದ್ದೇಶದಿಂದ ಕೆಲವು ಸಂಪಾದಿತ ಕೃತಿಗಳಿಗೆ ಗದ್ಯಾನುವಾದವನ್ನು ಒದಗಿಸಿದ್ದಾರೆ. ಹೀಗೆ ಪ್ರೌಢ ಹಾಗೂ ಜನಪ್ರಿಯ ಎನ್ನಬಹುದಾದ ಎರಡೂ ತೆರನಾದ ರೀತಿಯಲ್ಲಿ ಅವರು ತಮ್ಮ ಗ್ರಂಥಸಂಪಾದನೆಯ ಸಂದರ್ಭದಲ್ಲಿ ತೊಡಗಿಸಿಕೊಂಡಿದ್ದಾರೆ.

    ಗ್ರಂಥಸಂಪಾದನೆಯ ಕುರಿತ ಸಂಶೋಧನೆಯ ತಾತ್ವಿಕ ಚೌಕಟ್ಟಿನ ಬಗೆಗಿನ ನಿಲುವನ್ನು  ಅವರೇ ತಿಳಿಸಿರುವ ಹಾಗೆ ರೀತಿಯಾಗಿ ಗುರುತಿಸ ಬಹುದು. ಅವರ ಮಾತುಗಳನ್ನು ಉಲ್ಲೇಖಿಸಿ ಹೇಳುವುದಾದರೆ, ಗ್ರಂಥಸಂಪಾದನೆ ಎಂದರೇನು? ಹೇಗಿರಬೇಕು? ಯಾವುದು ಮೂಲಕೃತಿಗೆ ಹೆಚ್ಚು ಸಮೀಪವಾಗುವ ಸಂಪಾದನೆ, ಸಂಪಾದನೆ ಜೊತೆಗೆ ಗ್ರಂಥದ ಪೀಠಿಕೆಯಲ್ಲಿ ಏನಿರಬೇಕು? ಎಷ್ಟಿರಬೇಕು? ಎಂಬ ಬಗ್ಗೆ,  ಒಂದು ಕೃತಿ ಪ್ರಕಟವಾಗುವ ವೇಳೆಗೆ ಯಾವ ಯಾವ ಸಂಸ್ಕಾರಕ್ಕೆ ಒಳಗಾಗಿ ಸಂಸ್ಕೃತಿಯಾಗಿ ಮೂಡಬೇಕು ಎಂಬ ಬಗೆಗೆ ಪ್ರಮಾಣ ಬದ್ಧವಾದ ವಿಚಾರಗಳಿರ ಬೇಕು ಎಂಬ ವೈಜ್ಞಾನಿಕ ಗ್ರಂಥಸಂಪಾದನೆಯ ಅಂಶಗಳನ್ನು ಪ್ರಸ್ತಾಪಿಸುತ್ತಾರೆ. ಜೊತೆಗೆ ಪ್ರಾಚೀನ ಕಾವ್ಯವೊಂದರ ಪೀಠಿಕೆ ಅನಗತ್ಯ ವಿವರಗಳಿಂದ ಕೂಡಿರಬಾರದು, ಅಂತೆಯೆ ಅಗತ್ಯ ವಿಷಯಗಳಿಂದ ವಂಚಿತಗೊಂಡು ಸಂಕುಚಿತವೂ ಆಗಬಾರದು. ಪೀಠಿಕೆ ಆಕರ್ಷಕವಾಗಿರಬೇಕು. ಶುಷ್ಕವಾಗಿರ ಬಾರದು. ಕೃತಿಯಲ್ಲಿನ ವಸ್ತು ವಿಷಯವನ್ನು, ರಸ ಸನ್ನಿವೇಶಗಳನ್ನು, ಭಾವತರಂಗಗಳನ್ನು ಹೃದಯಂಗಮವಾಗಿ ನಿರೂಪಿಸಿ ಓದುಗರ ಕುತೂಹಲವನ್ನು ಕೆರಳಿಸುವಂತಿರ ಬೇಕು. ಹೆಬ್ಬಾಗಿಲನ್ನು ನೋಡಿ ಪುರಪ್ರವೇಶಮಾಡಬೇಕೆಂಬ  ಹೆಬ್ಬಯಕೆ ಹುಟ್ಟುವಂತಿರಬೇಕು ಎಂಬ ಹೇಳಿಕೆಯಲ್ಲಿ ಅವರ ನಿಲುವನ್ನು ಕಾಣಬಹುದಾಗಿದೆ. ಈ ಅಂಶಗಳನ್ನು ಅವರು ತಾವು ಸಂಪಾದಿಸಿದ ಕೃತಿಗಳಲ್ಲಿ ಅನುಸರಿಸಿದ್ದಾರೆ.

ಕನ್ನಡದಲ್ಲಿ ಹಲವಾರು ನೇಮಿನಾಥ ಪುರಾಣಗಳು ರಚಿತವಾಗಿವೆ. ಇವುಗಳಲ್ಲಿ ಅತ್ಯಂತ ಪ್ರಸಿದ್ದವೂ ಪ್ರೌಢವೂ ಆದ ಕೃತಿ ಮಹಾಬಲನದು.  ನೇಮಿಚಂದ್ರ, ಮಹಾಬಲ ಮತ್ತು ಬಂಧುವರ್ಮನ ನೇಮಿನಾಥ ಪುರಾಣಗಳನ್ನು ಸಣ್ಣಯ್ಯನವರೇ ಸಂಪಾದಿಸಿಕೊಟ್ಟಿರುವುದು ಗಮನಾರ್ಹ. ಇವರ ಈ ಸಂಪಾದಿತ  ಕೃತಿಗಳು ಕನ್ನಡದಲ್ಲಿ ನೇಮಿನಾಥ ಪುರಾಣಗಳ ತೌಲನಿಕ ಅಧ್ಯಯನಕ್ಕೆ  ಸಹಜವಾಗಿಯೇ ಸಹಕಾರಿಯಾಗಿವೆ.

ಕನ್ನಡ ಕವಿಗಳಲ್ಲಿ ಸ್ವಲ್ಪ ಮಟ್ಟಿಗೆ ನಿರ್ಲಕ್ಷಕ್ಕೆ ಒಳಗಾದ ಕವಿ ಬಂಧುವರ್ಮ. ಕ್ರಿ.. ಸುಮಾರು  1200ರಲ್ಲಿ ಇದ್ದ ಬಂಧುವರ್ಮಹರಿವಂಶಾಭ್ಯುದಯಂ”, “ಜೀವ ಸಂಬೋಧನಂಮತ್ತುಸತಿಧರ್ಮ  ಸಾರಎಂಬ ಕೃತಿಗಳನ್ನು ರಚಿಸಿದ್ದಾನೆ. ಮೂರೂ ಕಾವ್ಯಗಳನ್ನು ರಿಷ್ಕರಿಸಿ ಪ್ರಕಟಿಸಿದ ಕೀರ್ತಿ ಸಣ್ಣಯ್ಯನವರದ್ದು. ನೇಮಿನಾಥನ ಚರಿತ್ರೆಯನ್ನೇ ವಸ್ತುವನ್ನಾಗಿ ತೆಗೆದುಕೊಂಡಿದ್ದರೂ ಬಂಧುವರ್ಮ ಹರಿವಂಶಾಭ್ಯುದಯಂ ಎಂಬ ಹೆಸರಿಟ್ಟಿರುವುದು ವಿಶೇಷ. ನೇಮಿನಾಥನು ಹರಿವಂಶೋದ್ಬವನಾದುದರಿಂದ ಕಾವ್ಯಕ್ಕೆ ಹೆಸರಿದೆ ಎಂದು ಸಣ್ಣಯ್ಯನವರು ಇದಕ್ಕೆ ಸಂಶೋಧನಾತ್ಮಕವಾಗಿ ಸಮರ್ಥನೆ ಒದಗಿಸಿದ್ದಾರೆ. ಕನ್ನಡದ ವಿವಿಧ ನೇಮಿನಾಥ ಪುರಾಣಗಳಿಗೆ ಗುಣಭದ್ರನ ಉತ್ತರ ಪುರಾಣದ ಕಥೆ ವಸ್ತುವಾಗಿರುವಂತೆ ಇದಕ್ಕೂ ಆಕರವಾಗಿದೆ ಎಂದು ಗುರುತಿಸಿದ್ದಲ್ಲದೆ  ಈ ಕಾವ್ಯದಲ್ಲಿ ಕಂಡು ಬಂದಿರುವ ಕೆಲವು ವ್ಯತ್ಯಾಸಗಳನ್ನು ಗುರುತಿಸಿದ್ದಾರೆ. ಕನ್ನಡ ಅಧ್ಯಯನ ಸಂಸ್ಥೆಗೆ ಇದರ ಹಸ್ತಪ್ರತಿ 1900ಷ್ಟು ಹಿಂದೆಯೇ ಬಂದುದಾದರೂ ಅದನ್ನು ಸಂಪಾದಿಸಿ ಪ್ರಕಟಿಸಲಿಲ್ಲವೇಕೆ ಎಂದು ಪ್ರಶ್ನಿಸಿಕೊಂಡ ಸಣ್ಣಯ್ಯನವರು ಅದಕ್ಕೆ ಕಾರಣವನ್ನೂ ಅವರೇ ನೀಡಿದ್ದಾರೆ. ಅವರ ವಿವರಣೆ ಹೀಗಿದೆ ಹಸ್ತಪ್ರತಿಯು ಸಂಸ್ಥೆಗೆ ಸಂಗ್ರಹಿಸಿದ ಪ್ರತಿಗಳಲ್ಲಿ ನಾಲ್ಕನೆಯದಾದರೂ ಇದುವರೆಗೂ ಇದು ಪ್ರಕಟವಾಗದಿರುವುದಕ್ಕೆ ಕಾರಣ ಬಹುಶ ಇದರಲ್ಲಿರುವ ಅಕ್ಷರ ಸ್ಖಾಲಿತ್ಯಗಳೇ ಇರಬಹುದೆಂದು ತೋರುತ್ತದೆ. ಮತ್ತು ಇದರ ಮತ್ತೊಂದು ಪ್ರತಿ ದೊರೆತರೆ ಸಂಪಾದನಾ ಕಾರ್ಯ ಸುಲಭವಾಗುತ್ತದೆ ಎಂದು ವಿದ್ವಾಂಸರು ಕಾದಿರಲೂ ಬಹುದು. ಅವರ ಮತ್ತೊಂದು ಪ್ರತಿಯ ಆಸೆ ಇದುವರೆಗೂ ಈಡೇರದಾಯಿತು. ಪರಿಸ್ಥಿತಿ ಹೀಗಿದ್ದರೂ ಗ್ರಂಥವನ್ನು ಪ್ರಕಟಿಸಲೇಬೇಕೆಂಬ ಸದುದ್ದೇಶದಿಂದ ಹೊರಟು ಇದ್ದುದರಲ್ಲೇ ಪರಿಷ್ಕರಿಸಿದ ಪ್ರಕಟಿಸಿದ ಕೀರ್ತಿ ಸಣ್ಣಯ್ಯನವರಿಗೆ ಸಲ್ಲುತ್ತದೆ. ದೊರೆತದ್ದು ಒಂದೇ ಹಸ್ತಪ್ರತಿಯಾದರೂ ಅದು ಅಶುದ್ಧವಾಗಿದ್ದರೂ ಆದಷ್ಟು ಮಟ್ಟಿಗೆ ಅದನೆಲ್ಲಾ ನಿವಾರಿಸಿ ಬಿಟ್ಟ ಭಾಗಗಳನ್ನು ಪೂರ್ಣ ಗೊಳಿಸಿ ಸಂಪಾದಿಸಿಕೊಟ್ಟಿರುವುದು ಅವರ ವಿದ್ವತ್ ಹಿರಿಮೆಗೆ ಸಾಕ್ಷಿಯಾಗಿದೆ. ಕನ್ನಡ ಗ್ರಂಥ ಸಂಪಾದನಾ ಚರಿತ್ರೆಯಲ್ಲಿ ಎರಡನೆಯ ನಾಗವರ್ಮನ ವರ್ಧಮಾನಪುರಾಣದ ಪ್ರಕಟಣೆ ಒಂದು ದಾಖಲೆ. ಆವರೆಗೆ ಅಗೋಚರವಾಗಿದ್ದ ಇದರ ಹಸ್ತಪ್ರತಿಯನ್ನು ಪತ್ತೆಹಚ್ಚಿ ಪರಿಷ್ಕರಿಸಿ ಪ್ರಕಟಿಸಿದ ಕೀರ್ತಿ ಸಣ್ಣಯ್ಯನವರಿಗೆ ಸಲ್ಲಬೇಕು. ಎರಡನೆಯ ನಾಗವರ್ಮ ಜೈನಪುರಾಣವನ್ನು ಬರೆದಿದ್ದಾನೆ ಎಂದು ತಿಳಿದಿದ್ದಿತು. ಅದು ವರ್ಧಮಾನ ಪುರಾಣವೆಂದು ಗೊತ್ತಾದುದ್ದು ಇವರ ಹಸ್ತಪ್ರತಿಯ ಶೋಧನೆಯ ಕಾಲದಲ್ಲಿ . ಇದು ದೊರೆತಿದ್ದರ ವಿವರವನ್ನು ಅವರು ಹೀಗೆ ಕೊಟ್ಟಿದ್ದಾರೆ. “1973 ಏಪ್ರಿಲ್ ತಿಂಗಳಲ್ಲಿ ಮೂಡಬಿದರೆಯ ಶ್ರೀದಿಗಂಬರ ಜೈನಧರ್ಮ ಶಾಲೆಯಲ್ಲಿರುವ ಹಸ್ತಪ್ರತಿ ಪರಿಶೀಲನೆ ಮತ್ತು ಮುಖ್ಯವಾದುವನ್ನು ಮೈಕ್ರೋಫಿಲಂ ಮಾಡಲು ಹೊಗಿದ್ದೆವು. ಒಂದು ಕಡೆಯಿಂದ ಕಟ್ಟುಗಳನ್ನು ಬಿಚ್ಚಿನೋಡುತ್ತಾ ಹೋದಾಗ ಹಲವಾರು ಅಪೂರ್ವ ಹಸ್ತಪ್ರತಿಗಳನ್ನು ನೋಡುವ ಅವಕಾಶ ದೊರೆಯಿತು. ಜೈನಬಸದಿಯಲ್ಲಿಯ ಕೊಠಡಿಯಲ್ಲಿಯ ಅಟ್ಟದ ಮೇಲೆ ಇದ್ದ ಹಸ್ತಪ್ರತಿಗಳನ್ನು ಪರಿಶೀಲಿಸುವ ಸಲುವಾಗಿ ಅಲ್ಲಿದ್ದವರನ್ನು ಮನವೊಲಿಸಿ  ಅಲ್ಲಿದ್ದ ಹಸ್ತಪ್ರತಿಗಳ ಕಟ್ಟನ್ನು ಬಿಚ್ಚಿ ಒಂದೊಂದಾಗಿ ಪರಿಶೀಲಿಸಿ ಮುಂದುವರೆಯುತ್ತಿರುವಲ್ಲಿ ಅಗ್ಗಳನ ಚಂದ್ರಪ್ರಭಪುರಾಣ ಎಂಬ ತಲೆಬರೆಹವನ್ನು ಹೊತ್ತ ಬಟ್ಟೆಯಲ್ಲಿ ಕಟ್ಟಿಟ್ಟಿದ್ದ ಕಾಗದದ ಹಸ್ತಪ್ರತಿಯೊಂದು ದೊರೆಯಿತು. ಒಂದು ಕಟ್ಟಿನಲ್ಲಿ ಅಗ್ಗಳನ ಚಂದ್ರಪ್ರಭ ಪುರಾಣದ ಪತ್ರಗಳು ಕಣ್ಣಿಗೆ ಬಿದ್ದವು. ತೆಗೆದು ನೋಡುತ್ತಾ ಹೋದಂತೆ ರನ್ನನ ಅಜಿತನಾಥ ಪುರಾಣ, ಆಚಣ್ಣನ ವರ್ಧಮಾನ ಪುರಾಣ ಮತ್ತು ನಾಗವರ್ಮನ ವರ್ಧಮಾನ ಪುರಾಣದ ಪತ್ರಗಳು ಗೋಚರಿಸಿದವು. ಎಂದೂ ತಲೆ ಬರೆಹವನ್ನಷ್ಟೇ ನೋಡಿ ಮುಂದುವರಿಯದ ಇವರು ಒಳಗೆ ಪರಿಶೀಲಿಸುವಲ್ಲಿಯೂ ಅದೇ ಹೆಸರು.  ಆದರೆ ಹಸ್ತಪ್ರತಿ ಹಾಳೆಗಳನ್ನು ಮಗುಚುತ್ತಾ ಆಶ್ವಾಸಾಂತ್ಯ ಗದ್ಯಗಳನ್ನು ನೋಡುತ್ತಾ ಮುಂದುವರೆಯುವಲ್ಲಿ ಒಂದೆಡೆ ನಾಗವರ್ಮ ವಿರಚಿತ ವರ್ಧಮಾನಪುರಾಣಂ ಹೆಸರನ್ನು ನೋಡುತ್ತಿದ್ದಂತೆಯೇ ರೋಮಾಂಚನ ಗೊಂಡರಂತೆ. ಸಮಾಧಾನ ಚಿತ್ತರಾಗಿ ಎಲ್ಲಾ ಹಾಳೆಗಳನ್ನೂ ಪರಿಶೀಲಿಸಿ ಹೊರತೆಗೆದು ಜೋಡಿಸಿದಾಗ ಅದು ಪೂರ್ಣ ಕೃತಿಯ ರೂಪದಲ್ಲಿ ದೊರೆಯಿತಂತೆ. ಇವರಿಂದಲೇ 1974 ರಲ್ಲಿ ಅದು ಬೆಳಕು ಕಾಣುವಂತಾಯಿತು. ಸಣ್ಣಯ್ಯನವರ ಶ್ರದ್ಧೆ, ಪರಿಶ್ರಮ, ಮತ್ತು ಗ್ರಂಥಸಂಪಾದನಾ ಪರಿಣತಿಗಳಿಗೆ ನಿಶ್ಚಯವಾಗಿಯೂ ವರ್ಧಮಾನಪುರಾಣದ ಅನ್ವೇಷಣೆ ಸಾಕ್ಷಿಯಾಗುತ್ತದೆ. ಇದರ ಪ್ರಕಟಣೆಯೊಡನೆ ಹಲವಾರು ಹೊಸ ವಿಷಯಗಳು ಗೊತ್ತಾದವು.  ವಿದ್ವತ್ ಲೋಕದಲ್ಲಿ  ಚರ್ಚೆಗೆ ಗ್ರಾಸವಾಗಿದ್ದ 2ನೆಯ ನಾಗವರ್ಮನ ಕಾಲ ಖಚಿತವಾಯಿತು. ಶ್ರೀವಿಜಯ, ನಾಗವರ್ಮ(ಮತ್ತೊಬ್ಬ) ಮತ್ತು ನಾಗದೇವರು ಕ್ರಮವಾಗಿ ರಘುವಂಶ ಪುರಾಣ, ವತ್ಸರಾಜ ಚರಿತೆ ಮತ್ತು ಸುಲೋಚನಾ ಚರಿತೆಗಳನ್ನು ರಚಿಸಿರುವರೆಂಬ ಹೊಸ ವಿಷಯ ಸಾಹಿತ್ಯ ಲೋಕಕ್ಕೆ ಪರಿಚಯವಾಯಿತು. ದೊರೆತ ಒಂದೇ ಒಂದು ಕಾಗದದ ಹಸ್ತಪ್ರತಿಯಿಂದ ಇದನ್ನು ಸಂಪಾದಿಸಿ ಕೊಟ್ಟಿದ್ದಾರೆ. ಹಸ್ತಪ್ರತಿ ಶುದ್ಧವಾಗಿದ್ದರಿಂದ ಹೆಚ್ಚಿನ ಸಮಸ್ಯೆಗಳು ತಲೆದೊರಲಿಲ್ಲ. ತೃಟಿತ ಭಾಗಗಳು ಮತ್ತು ಲಿಪಿಕಾರರ ದೋಷದಿಂದಾದ ಭಾಗಗಳನ್ನು ಸರಿಪಡಿಸಿ ಪರಿಷ್ಕರಣಾ ಕಾರ್ಯವನ್ನು ಉತ್ತಮ ರೀತಿಯಲ್ಲಿ ನಡೆಸಿದ್ದಾರೆ. ಕನ್ನಡ ವರ್ಧಮಾನ ಚರಿತೆಗಳ ತೌಲನಿಕ ಅಧ್ಯಯನಕ್ಕೆ ಇದು ನೆರವಾಗಿದೆ. ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಕೃತಿಗೆ ಮುನ್ನುಡಿ ಬರೆಯುತ್ತಾ ಹಾ.ಮಾ.ನಾಯಕರು ಹೀಗೆಂದಿದ್ದಾರೆ. ‘ಎರಡನೇ ನಾಗರ್ಮನ ವರ್ಧಮಾನ ಪುರಾಣ ಎಂಬ ಅಪ್ರಕಟಿತ ಕಾವ್ಯವನ್ನು ಮೊದಲ ಬಾರಿಗೆ ಕಂಡುಹಿಡಿದು ಶ್ರದ್ಧೆಯಿಂದ ಸಂಪಾದಿಸಿ ಕೊಟ್ಟ ಸಂಪಾದನಾ ವಿಭಾಗದ ಸಹಾಯಕ ನಿರ್ದೇಶಕರಾದ ಶ್ರೀ.ಬಿ.ಎಸ್.ಸಣ್ಣಯ್ಯನವರಿಗೆ ನಮ್ಮ ವಂದನೆಗಳು. ಇದುವರೆಗೂ ವಿದ್ವಾಂಸರಿಗೆ ಹೆಸರು ಮಾತ್ರ ತಿಳಿದಿದ್ದ ಕೃತಿಯ ಪ್ರಕಟಣೆ ಪ್ರಾಚ್ಯ ಕಾವ್ಯ ಮಾಲೆಯ ಒಂದು ಹೆಮ್ಮೆ ಎಂದು ಭಾವಿಸಿದ್ದೇನೆ.’  ಈ ಹೇಳಿಕೆಯಿಂದ ಸಣ್ಣಯ್ಯನವರ ಸಂಶೋಧನೆಯದೊಡ್ಡ ಸಾಧನೆ ಇದಾಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಅಸಂಬದ್ಧವಾಗಿದ್ದ ಎರಡನೆಯ ನಾಗವರ್ಮನ ವರ್ಧಮಾನಪುರಾಣವನ್ನು ಶೋಧಿಸಿ ಹೊರತಂದದ್ದು ಕನ್ನಡ ಸಾಹಿತ್ಯ ಚರಿತ್ರೆಗೆ ಸಲ್ಲಿಸಿದ ಮಹತ್ತರ ಕೊಡುಗೆಯಾಗಿದೆ. ಕೃತಿಯ ಶೋಧನೆಯಿಂದ ಕನ್ನಡ ಸಾಹಿತ್ಯ ಚರಿತ್ರೆಯ ಕೆಲವು ವಿವರಗಳು ಸ್ವಷ್ಟ ಪಟ್ಟಿವೆ. ಸಣ್ಣಯ್ಯನವರ ಕ್ಷೇತ್ರಕಾರ್ಯ ಮತ್ತು ವಿದ್ವದಾಸಕ್ತಿಗಳಿಗೆ ಇದೊಂದು ಮಾದರಿಯಾಗಿದೆ.  ಈ ತೆರನಾಗಿ ತಮ್ಮ ಗ್ರಂಥ ಸಂಪಾದನಾ ಅವಧಿಯಲ್ಲಿ ಹಲವು ಪ್ರಥಮಗಳಿಗೆ ಅವರು ಕಾರಣರಾಗಿದ್ದಾರೆ. ಅದೇ ರೀತಿ ಬಂಧುವರ್ಮನ ಮತ್ತೊಂದು ಕೃತಿ  ಸತಿಧರ್ಮವನ್ನು ಶೋಧಿಸಿದ್ದು ತೆರನಾಗಿಯೇ. ಅವರು ಪರಿಶೀಲಿಸುತ್ತಿದ್ದ ಹಸ್ತಪ್ರತಿಯ ಮೇಲೆ ಜೀವ ಸಂಬೋಧನಂ ಎಂಬ ಹೆಸರಿದ್ದಿತು. ಪ್ರಕಟಿತವಾದ ಹಸ್ತಪ್ರತಿ ಸೂಚಿಯಲ್ಲಿಯೂ ಅದೇ ರೀತಿ ಪ್ರಕಟಿತವಾಗಿದ್ದಿತು. ಆದರೆ ಇವರು ಹಸ್ತಪ್ರತಿಯ ಕಟ್ಟನ್ನು ಬಿಚ್ಚಿ ಓದುತ್ತಿದ್ದಂತೆಯೇ ಜೀವ ಸಂಬೋಧನೆಯ ಪರಿಚಯವಿದ್ದ ಇವರಿಗೆ ಇದು ಬೇರೆ ಕೃತಿ ಎಂಬುದರ ಅರಿವಾಗಿ ಅದನ್ನು ಸತಿಧರ್ಮಸಾರ ಎಂಬುದಾಗಿ ಗುರುತಿಸಿದರು. ಜೊತೆಗೆ ಅದನ್ನು ಸಂಪಾದಿಸಿ ಗದ್ಯಾನುವಾದದೊಡನೆ 1976 ರಲ್ಲಿ ಪ್ರಕಟಿಸಿದರು. ಮತ್ತೊಂದು ಕೃತಿ ಜಿನಸೇನ ದೇಶವ್ರತಿಯ ವರ್ಧಮಾನಪುರಾಣವನ್ನು ಶೋಧಿಸಿ ಪ್ರಕಟಿಸಿದ್ದು ಹೀಗೆಯೇ. ಇವರು ಮೂರು ಕನ್ನಡ ಕಾವ್ಯಗಳ ಹಸ್ತಪ್ರತಿಗಳನ್ನು ಶೋಧಿಸಿದ್ದಲ್ಲದೇ ಅವುಗಳನ್ನು ಸಂಪಾದಿಸಿ ಪ್ರಕಟಿಸುವುದರ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಗೆ ಮಹತ್ತರ ಕೊಡುಗೆಯನ್ನು ಸಲ್ಲಿಸಿದ್ದಾರೆ. ಸಣ್ಣಯ್ಯನವರು ಸಂಪಾದಿಸಿದ ಗ್ರಂಥಗಳಲ್ಲಿ  ಕಾವ್ಯಗಳಿವೆ, ಶಾಸ್ತ್ರ ಗ್ರಂಥಗಳಿವೆ. ಪ್ರಾಚೀನವಾದ ಪ್ರೌಢ ಚಂಪೂಕೃತಿಗಳಿವೆ. ಗದ್ಯ ಕೃತಿ ಇದೆ. ಷಟ್ಪದಿ, ಸಾಂಗತ್ಯ ಪ್ರಕಾರಗಳ ದೇಸಿ ಕಾವ್ಯಗಳಿವೆ. ಇವರ ಸಂಶೋಧನಾ ಚಟುವಟಿಕೆಯಲ್ಲಿ ಮತ್ತೊಂದು ಗಮನಿಸ ಬೇಕಾದ ಅಂಶವೆಂದರೆ. ಭಾರತೀಯ ವೈದ್ಯಗ್ರಂಥವಾದ ಸಕಲ ವೈದ್ಯಸಂಹಿತಾಸಾರಾರ್ಣವ ಕೃತಿಯ ಎರಡನೇ ಸಂಪುಟವು ಪ್ರಕಟವಾಗಿಲ್ಲದಿರುವುದನ್ನು ಕಂಡುಕೊಂಡ ಇವರು ಆಶುದ್ಧ ಮತ್ತು ಓದಲು ಕಷ್ಟಸಾಧ್ಯವಾದ ಹಸ್ತಪ್ರತಿಯನ್ನು ಪರಿಷ್ಕರಿಸಿದುದು. ವೈದ್ಯಗ್ರಂಥವಾದ ಇದನ್ನು ಪರಿಷ್ಕರಿಸಲು ಭಾರತೀಯ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಎಲ್.ಎನ್. ಶಾಸ್ತ್ರೀಯವರ ಸಹಾಯವನ್ನು ಪಡೆಯಲು ಅವರು ಹೇಳಿದ ವೇಳೆಗೆ ಹೋಗಿ ಹೊರಗೆ ಕಾದಿದ್ದು ಅವರು ಕೊಟ್ಟ ಸಮಯದಲ್ಲಿ ಅವರೊಂದಿಗೆ ಕುಳಿತು ಆದಷ್ಟೂ ಹೆಚ್ಚು ತಪ್ಪು ಉಳಿಯ ಬಾರದೆಂದೂ ಶ್ರಮಿಸಿ ಸಂಪಾದಿಸಿ ಕೊಟ್ಟಿದ್ದಾರೆ. ಇದು ತಮ್ಮದಲ್ಲದ ಕ್ಷೇತ್ರದ ಕೃತಿಗಳನ್ನು ಸಂಪಾದಿಸುವಲ್ಲಿಯ ಅವರ ಶ್ರದ್ಧೆ ಮತ್ತು ಆಸಕ್ತಿ ಮತ್ತು ಅವುಗಳಲ್ಲಿರುವ ಮಾಹಿತಿ ಸಂಪತ್ತು ಜನತೆಯ ಕಲ್ಯಾಣಕ್ಕೆ ಬಳಕೆಯಾಗಲಿ ಎನ್ನುವ ಅವರ ಸದುದ್ದೇಶ  ಮೆಚ್ಚುವಂತಹದ್ದು.

ಸಣ್ಣಯ್ಯನವರು ವಚನಗಳ ಸಂಪಾದನೆಯಲ್ಲೂ ತಮ್ಮ ಆಸಕ್ತಿಯನ್ನೂ ಶ್ರದ್ಧೆಯನ್ನು ಮೆರೆದಿದ್ದಾರೆ. ಚಂಪೂ ಕೃತಿಗಳಿಗೆ ಹೋಲಿಸಿಕೊಂಡರೆ ವಚನಗಳ ಸಂಪಾದನೆ ಸುಲಭವೆಂದೂ ತೋರುತ್ತದೆ. ಹಸ್ತಪ್ರತಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುವುದು ಇದಕ್ಕೆ ಕಾರಣ, ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಹಸ್ತಪ್ರತಿಗಳು ದೊರೆತಾಗ ಪಾಠಗಳು ಅಧಿಕವಾಗುವ ಸಂಭವವಿರುತ್ತವೆ. ಭಾಷೆಯಲ್ಲೂ ವಸ್ತು ವಿಷಯದಲ್ಲೂ ಜನಸಾಮಾನ್ಯರಿಗೆ ಹತ್ತಿರವಿರುವುದು ಅಧಿಕ ಪಾಠಗಳಿಗೆ ಒಂದು ನಿಶ್ಚಿತ ಕಾರಣ. 1969-71 ಅವಧಿಯಲ್ಲಿ ಮೋಳಿಗೆ ಮಾರಯ್ಯನ ವಚನಗಳು ಕೋಲ ಶಾಂತಯ್ಯ ಮತ್ತು ಮಧುವಯ್ಯಗಳ ವಚನಗಳು ಹಾಗೂ ಅರಿವಿನ ಮಾರಿತಂದೆಗಳ ವಚನಗಳು ಎಂಬ ಸಂಕಲನಗಳನ್ನು ಸಣ್ಣಯ್ಯನವರು ಪ್ರಕಟಿಸಿದ್ದಾರೆ. ಮೋಳಿಗೆ ಮಾರಯ್ಯನ ವಚನಗಳ ಪರಿಷ್ಕರಣಕ್ಕೆ ಹತ್ತು ಹಸ್ತಪ್ರತಿಗಳನ್ನು ಬಳಸಿಕೊಳ್ಳಲಾಗಿದೆ. ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿಗಳ ಭಂಡಾರದಲ್ಲಿರುವ ಕೆ 648 ನೇ ಓಲೆಪ್ರತಿ ಚೆನ್ನಾಗಿದ್ದು ಇದನ್ನು ಮೂಲಪ್ರತಿಯನ್ನಾಗಿ ಬಳಸಿಕೊಳ್ಳಲಾಗಿದೆ ಎಂದು ಅವರು ಹೇಳುತ್ತಾರೆ. ಕೆಲವು ವಚನಗಳ ಪಾಠನಿಷ್ಕರ್ಶೆಯಲ್ಲಿ ಚನ್ನಪ್ಪ ಉತ್ತಂಗಿ ಮತ್ತು ಭೂಸನೂರು ಮಠರ ಅಚ್ಚಾದ ಪ್ರತಿಗಳನ್ನು ಉಪಯೋಗಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಣ್ಣಯ್ಯನವರು ಬಗ್ಗೆ ಮತ್ತೂ ಬರೆಯುತ್ತಾರೆ ‘’ ಕೃತಿಯಲ್ಲಿ ಬರುವ ವಚನಗಳನ್ನು ಅಧಿಕವಾಗಿ ಮೂರುಸಾವಿರ ವಚನಗಳ ಸಂಗ್ರಹದ ಕಟ್ಟಿನಿಂದ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಮೋಳಿಗೆಯ ಮಾರಯ್ಯನ ವಚನಗಳು ಪೂರ್ಣವಾಗಿಲ್ಲದಿದ್ದರೂ ಷಟ್ಸ್ಥಲ ಮತ್ತು ಅಷ್ಟಾವರ್ಣಗಳ ವಚನಗಳನಿಲ್ಲಿ ಆದಷ್ಟೂ ಪೂರ್ಣವಾಗಿ ಕೊಡಲು ಪ್ರಯತ್ನಿಸಲಾಗಿದೆ. ಆರಂಭದಲ್ಲಿ ಕೃತಿ ಮತ್ತು ಕೃತಿಕಾರನ ವಿವರವಾದ ಪರಿಶೀಲನೆಯಿದೆ. ‘ಕೋಲಶಾಂತಯ್ಯ ಮತ್ತು ಮಧುವಯ್ಯಗಳ ವಚನಗಳುಕೃತಿಯಲ್ಲಿಪುಣ್ಯಾರಣ್ಯ ದಹನ, ಭೀಮೇಶ್ವರಲಿಂಗ ನಿರಂಗ ಸಂಗಾಅಂಕಿತದ ಕೋಲಶಾಂತಯ್ಯನ 64 ಸಾಮಾನ್ಯ ವಚನಗಳು ಮತ್ತು ಟೀಕಾ ಸಹಿತವಾದ ಮುವತ್ತಾರು ಬೆಡಗಿನ ವಚನಗಳು ಸೇರಿವೆ. ಅರ್ಕೇಶ್ವರ ಲಿಂಗಅಂಕಿತದ ಮಧುವಯ್ಯಗಳ 68 ಸಾಮಾನ್ಯ ವಚನಗಳು ಟೀಕಾ ಸಹಿತವಾಗಿ 33 ಬೆಡಗಿನ ವಚನಗಳು ಒಳಪಟ್ಟಿವೆ. ಪರಿಷ್ಕರಣಕ್ಕೆ 9 ಹಸ್ತಪ್ರತಿಗಳನ್ನು ಬಳಸಿಕೊಳ್ಳಲಾಗಿದೆ. ‘ಅರಿವಿನ ಮಾರಿತಂದೆಗಳ ವಚನಗಳುಕೃತಿಯಲ್ಲಿ ಸದಾಶಿವಮೂರ್ತಿ ಲಿಂಗಅಂಕಿತದ 301 ವಚನಗಳನ್ನು ಸಂಗ್ರಹಿಸಲಾಗಿದೆ. ಇದನ್ನು 13 ಹಸ್ತಪ್ರತಿಗಳನ್ನು ಆಧರಿಸಿ ಮತ್ತು .ಗು.ಹಳಕಟ್ಟಿಯವರ ಪ್ರಕಟಿತ 114 ವಚನಗಳನ್ನು ಸೇರಿಸಿ ಪರಿಷ್ಕರಿಸಲಾಗಿದೆ. ಎರಡೂ ಸಂಸ್ಕರಣಗಳಿಗೂ ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ಕೆ 9048ನೇ ಓಲೆಪ್ರತಿಯೇ ಮೂಲ ಪ್ರತಿಯಾಗಿದೆ. ಎಲ್ಲಾ ಕೃತಿಗಳ ಸಂಪಾದನೆಗೆ .ಗು.ಹಳಕಟ್ಟಿಯವರ ವಚನಗಳನ್ನು ಬಳಸಿಕೊಳ್ಳುವುದರ ಜೊತೆಗೆ ಬೇರೆ ಹಸ್ತಪ್ರತಿಗಳೂ ಮತ್ತಿತರ ಆಧಾರಗಳಿಂದಲೂ ಅಪಾರವಾದ ನೆರವು ಪಡೆಯಲಾಗಿದೆ’. ಸಣ್ಣಯ್ಯನವರ ಪರಿಷ್ಕರಣ ಕಾರ್ಯ  ಉತ್ತಮವಾದುದೆಂದು ಮಹತ್ವದೆಂದು ನಿಸ್ಸಂಶಯವಾಗಿ ಹೇಳಬಹುದು. ಇದೇ ಅವಧಿಯಲ್ಲಿ ಬಿಬ್ಬಿ ಬಾಚಯ್ಯ ಮತ್ತು ಮೆರೆ ಮಿಂಡಯ್ಯಗಳ ವಚನಗಳನ್ನು ಸಣ್ಣಯ್ಯನವರು ಪರಿಷ್ಕರಿಸಿದ್ದು ತೃಪ್ತಿಕರವೆನಿಸಿದೆ.

ಸಣ್ಣಯ್ಯನವರು ಇನ್ನೂ ಕೆಲವರ ವಚನಗಳನ್ನು ಪರಿಷ್ಕರಿಸಿ ಪ್ರಬದ್ಧ ಕರ್ನಾಟಕದ ಸಂಚಿಕೆಯಲ್ಲಿ ಪ್ರಕಟಿಸಿದ್ದಾತೆ. ಜೇ ಮಸಣಯ್ಯನವ ವಚನಗಳನ್ನು 1963 ಪ್ರ. 45-1 ರಲ್ಲಿ ಪ್ರಕಟಿಸಲಾಗಿದೆ. ಇದರ ಪರಿಷ್ಕರಣಕ್ಕೆ ಮೂರು ಓಲೆ ಪ್ರತಿಗಳನ್ನು ಬಳಸಿದ್ದಾರೆ. ಹಾಗೆಯೇ .ಗು.ಹಳಕಟ್ಟಿಯರವರು ಸಂಪಾದಿಸಿರುವ ಶಿವಶರಣರ ಸಂಕೀರ್ಣವಚನಗಳು ಸಂಪುಟದಿಂದ ವಚನಗಳನ್ನು ಪಡೆದಿದ್ದಾರೆ. ಇದರಂತೆಯೇ .ಗು.ಹಳಕಟ್ಟಿರವರು 1940ರಲ್ಲಿ ಸಂಪಾದಿಸಿರುವ ಉರಿಲಿಂಗದೇವನ ವಚನಗಳನ್ನು ಪರಿಷ್ಕರಿಸಿ ಪ್ರ. 45-3ರಲ್ಲಿ 1963ರಲ್ಲಿ ಪ್ರಕಟಿಸಿದ್ದಾರೆ. ಇದನ್ನು ಸಿದ್ಧಪಡಿಸುವಾಗ 4 ಓಲೆ ಪ್ರತಿಗಳನ್ನೂ, ಏಕೋತ್ತರ ಸ್ಥಲ ಮತ್ತು ಶಿವಾನುಭವಗಳಲ್ಲಿ ಪ್ರಕಟವಾಗಿದ್ದ ವಚನಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಹಾಗೆಯೇ ದೇವರ ದಾಸೀಮಯ್ಯನ ವಚನಗಳನ್ನು ಸಣ್ಣಯ್ಯನವರು ಪರಿಷ್ಕರಿಸಿದ್ದಾರೆ. ಇದರ 154 ವಚನಗಳು 1964 ಪ್ರ. 46-2 ರಲ್ಲಿ ಪ್ರಕಟವಾಗಿದೆ. ಅಚ್ಚಾಗಿದ್ದ 2 ಆವೃತ್ತಿಗಳ ಜೊತೆಗೆ 3 ಓಲೆ ಪ್ರತಿಗಳ ಸಹಾಯದಿಂದ ಇದನ್ನು ಅವರು ಸಂಪಾದಿಸಿಕೊಟ್ಟಿದ್ದಾರೆ. ಎಲ್ಲದರಲ್ಲೂ ಉತ್ತಮವಾದುದನ್ನು ಕೊಡಬೇಕೆಂಬ ಕಾರ್ಯಶ್ರದ್ಧೆ ಎದ್ದು ಕಾಣುವುದು.

ಸಾಂಗತ್ಯ ಕೃತಿಗಳ ಸಂಪಾದನೆಯಲ್ಲಿಯೂ ಸಣ್ಣಯ್ಯನವರು ಸ್ಮರಣೀಯ ಕೆಲಸವನ್ನು ಮಾಡಿದ್ದಾರೆ, ಹಲವಾರು ಸಾಂಗತ್ಯ ಕೃತಿಗಳನ್ನು ಮೊದಲಬಾರಿಗೆ ಪ್ರಕಟಿಸಿ ಅವರು ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಇದಕ್ಕೆ ನಿದರ್ಶನಗಳಾಗಿ ಸೊಬಗಿನ ಸೋನೆ, ಮದನ ಮೋಹಿನಿಯ ಕಥೆ, ವರ್ಧಮಾನಚರಿತೆ, ವರ್ಧಮಾನ ಪುರಾಣ, ಬಸವ ಶಿಖಾಮಣಿ, ಭುಜಬಲಿ ಚರಿತೆ ಮೊದಲಾದ ಗ್ರಂಥಗಳಿವೆ. ಇವುಗಳನ್ನು ಕ್ರಮವಾಗಿ 1970, 1972, 1974, 1978, 1985 ಮತ್ತು 1989ರಲ್ಲಿ ಹೊರತರಲಾಗಿದೆ. ಸಣ್ಣಯ್ಯನವರ ವ್ಯಾಪಕ ಕ್ಷೇತ್ರಾನುಭವ, ಪಾಠ ಪರಿಷ್ಕರಣ ನೈಪುಣ್ಯವನ್ನು ಇಲ್ಲಿಯೂ ನೋಡಬಹುದಾಗಿದೆ.

ಮೊದಲ ಸಾಂಗತ್ಯಕಾರನೆಂದು ಹೆಸರಾದ ದೇಪರಾಜನ ವರ್ಣನಾ ಪ್ರಧಾನವಾದ ಕಾವ್ಯಸೊಬಗಿನ ಸೋನೆಇದರಲ್ಲಿ ಪ್ರಯೋಗವಾಗಿರುವ ಛಂದಸ್ಸು ಸಾಂಗತ್ಯವಾದರೂ ವಿಶಿಷ್ಟ ಬಗೆಯದಾಗಿದೆ. ಇದರ ಒಡಲಿನಲ್ಲಿ ಹಾಡುಗಬ್ಬದ ಪ್ರಯೋಗ ಮಾಡಿರುವಂತಿದೆ. ಕಾರಣವಾಗಿಯೇ ಇದರ ನಂತರ ಬಂದ ಕೆಲವು ಕೃತಿಗಳಲ್ಲಿ ಬಳಕೆಯಾಗಿರುವ ಛಂದಸ್ಸನ್ನು ಸೊಬಗಿನಸೋನೆ ವರ್ಣ ಎಂದು ಕರೆದಿರುವುದು. ಕನ್ನಡ ಕಾವ್ಯ ಪರಂಪರೆಯಲ್ಲಿಸೊಬಗಿನ ಸೋನೆಪೂರ್ಣ ಪ್ರಮಾಣದ ಸಾಂಗತ್ಯ ಕಾವ್ಯ ಎನಿಸಿಕೊಳ್ಳದಿದ್ದರೂ ಸಾಂಗತ್ಯದ ಕಾವ್ಯಪರಂಪರೆಯಲ್ಲಿಯೇ ಮೊದಲ ಕಾವ್ಯ. ದೇಪರಾಜ ಸಾಂಗತ್ಯ ಛಂದಸ್ಸಿಗೆ ಆದಿಕವಿಯಾಗಿ ಪ್ರಸಿದ್ದನಾಗಿದ್ದಾನೆ. ಈತನು ಕಾವ್ಯದಲ್ಲಿ, ಸತಿ-ಪತಿ ಸಂಭಾಷಣಾ ಶೈಲಿಯಲ್ಲಿ ಮಹಿಳೆಯರ ಸಂವೇದನೆಗಳನ್ನು ಸಾಂಗತ್ಯರೂಪದಲ್ಲಿ ಕಟ್ಟಿಕೊಟ್ಟಿದ್ದಾನೆ. ಸಾಂಗತ್ಯಕೃತಿಗಳಲ್ಲಿ ಒಂದು ರೀತಿ ಹೆಚ್ಚುಗಾರಿಕೆ ಪಡೆದಿರುವ ಕೃತಿ ಬಹಳ ಕಾಲ ಪೇಕ್ಷಿತವಾಗಿತ್ತು. ಇದನ್ನು ಸಣ್ಣಯ್ಯನವರು ಪರಿಷ್ಕರಿಸಿ ಪ್ರಕಟಿಸಿದ್ದು ಪ್ರಶಂಸನೀಯ. ಸೊಬಗಿನ ಸೋನೆಯ ಛಂದಸ್ಸನ್ನು ಅನುಸರಿಸಿ ಬರೆದ ಕಾವ್ಯ ಮದನಮೋಹಿನಿಯ ಕಥೆಸಾಂಗತ್ಯವು ಹಾಡುಗಬ್ಬವೇ ಆದರೂ ಕೆಲವು ವಿಶೇಷ ಹಾಗೂ ವ್ಯತ್ಯಾಸಗಳನ್ನು ಗುರುತಿಸಿದ್ದಾರೆ. ಈ ಕೃತಿಯ ಕರ್ತೃ ನರಸಿಂಹನೇ ಅಥವಾ ಲಕ್ಷ್ಮಯ್ಯನೇ ಎಂಬುದರ ಬಗೆಗೆ ಚರ್ಚಿಸುತ್ತಾ ಆಕರಗಳ ಹಿನ್ನೆಲೆಯಲ್ಲಿ  ಲಕ್ಷ್ಮಯ್ಯನೇ ಇದರ ರಚನಾಕಾರನೆಂಬ ನಿಲುವನ್ನು ವ್ಯಕ್ತಪಡಿಸಿರುವಲ್ಲಿ ಅವರ ಸಂಶೋಧನಾ ಗ್ರಹಿಕೆ ಎದ್ದು ಕಾಣುತ್ತದೆ. ಸಣ್ಣಯ್ಯನವರಿಂದ ಸಂಪಾದಿತವಾಗಿರುವ ಇನ್ನೊಂದು ಸಾಂಗತ್ಯಕೃತಿ ಪದ್ಮರಸನ ಭುಜಬಲಿಚರಿತೆ ಬಾಹುಬಲಿಯನ್ನು ಕುರಿತು ಕನ್ನಡದಲ್ಲಿ ಸ್ತುತಿರೂಪದ ಪದ್ಯಗಳೂ, ಕಾವ್ಯಗಳೂ  ರಚಿತವಾಗಿವೆ. ಇವುಗಳಲ್ಲಿ ಎಲ್ಲವೂ ಈಗ ಲಭ್ಯವಿಲ್ಲ. ಲಭ್ಯವಿರುವ ಎಲ್ಲಾ ಕೃತಿಗಳೂ ಪ್ರಕಟವಾಗಿಲ್ಲ. ದೃಷ್ಟಿಯಿಂದ ಸಣ್ಣಯ್ಯನವರ ಭುಜಬಲಿ ಚರಿತೆಕೃತಿಯ  ಸಂಪಾದನೆ ಅವರ ಸಾಧನೆಗಳಲ್ಲಿ ಒಂದು. ಕವಿಚರಿತೆಕಾರರಿಗೂ ದೊರೆಯದಿರುವ ಕೃತಿಯನ್ನು ಶೋಧಿಸಿ ಸಂಪಾದಿಸಿ ಪ್ರಕಟಿಸಿರುವುದು ಸಣ್ಣಯ್ಯನವರು ಮಹತ್ತರ ಸಾಧನೆ. ಇದು ಧಾರ್ಮಿಕ ಕೃತಿಯಾಗಿದ್ದರೂ, ಇದರಲ್ಲಿ ಹುದುಗಿರುವ ಚಾರಿತ್ರಿಕ ಸಂಗತಿಗಳನ್ನು ಹೆಕ್ಕಿ ಕೊಟ್ಟಿರುವುದು ಗಮನಿಸಬೇಕಾದ ಅಂಶವಾಗಿದೆ.ಮತ್ತೊಂದು ಸಂಗತಿ ಎಂದರೆ  ಇಲ್ಲಿಯವರೆಗೂ ಕನ್ನಡಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗದ ಅಲಭ್ಯಕೃತಿಯಾದ ದೇವರಸ ಕವಿಯಮದನಚಕ್ರೇಶ್ವರ ಚರಿತೆ ಸಾಂಗತ್ಯ ಕೃತಿಯನ್ನು ಶೋಧಿಸಿ ಏಕೈಕ ಹಸ್ತಪ್ರತಿಯಾಗಿದ್ದರೂ ಸಂಪಾದನಾ ತತ್ವಗಳಿಗನುಗುಣವಾಗಿ ಸಂಪಾದಿಸಿ ಪ್ರಕಟಿಸಿದ್ದು ಮತ್ತೊಂದು ಸಾಧನೆಯಾಗಿದೆ.

  ಬಿ.ಎಸ್.ಸಣ್ಣಯ್ಯನವರು ಹಳಗನ್ನಡ ಕಾವ್ಯಗಳ ಸಂಪಾದನೆಯಲ್ಲಿ ಅಪಾರವಾದ ಪ್ರೌಢಿಮೆಯನ್ನು ಪಡೆದಿದ್ದವರು ಎಂಬುದಕ್ಕೆ  ಅವರು ಸಂಪಾದಿಸಿರುವ  ರನ್ನನ ಅಜಿತ ತೀರ್ಥಂಕರ ಪುರಾಣ, ಸಾಹಸ ಭೀಮ ವಿಜಯ, ನೇಮಿಚಂದ್ರನ ನೇಮಿನಾಥ ಪುರಾಣ, ಬಂಧುವರ್ಮನ  ಜೀವ ಸಂಬೋದನೆ, ಹರಿವಂಶಾಭ್ಯುದಯ, ಸತಿಧರ್ಮಸಾರ, ನಾಗವರ್ಮನ ವರ್ಧಮಾನಪುರಾಣ,  ಮಹಾಬಲನ ನೇಮಿನಾಥ ಪುರಾಣಗಳಂತಹ ಚಂಪೂ ಕಾವ್ಯಗಳೇ ನಿದರ್ಶನ. ಶಕಟರೇಫ ಮತ್ತು ಹಳನ್ನಡ ಮತ್ತು ಗಳಂತಹ ಅಕ್ಷರಗಳ ಇತಿಹಾಸವನ್ನು ಮತ್ತು ಅಕ್ಷರಗಳ ಬಳಕೆಯನ್ನು ನಿಖರವಾಗಿ ಗುರುತಿಸಿರುವುದು ಮತ್ತು ಕವಿ ಕಾಲ ವಿಚಾರಗಳ ನಿರ್ಣಯದಲ್ಲಿ ಕಾವ್ಯದಲ್ಲಿ ಕಂಡು ಬರುವ ಆಂತರಿಕ ಮಾಹಿತಿಗಳನ್ನೇ ಅಧಿಕವಾಗಿ ಅವಲಂಬಿಸಿರುವುದು ಅವರ ಸಂಶೋಧನೆಯ ವೈಖರಿಯಾಗಿದೆ. ಏಕೈಕ ಹಸ್ತಪ್ರತಿ ಇರುವ ಚಂಪೂಕಾವ್ಯಗಳನ್ನು ಅವುಗಳು ಅಳಿದು ಹೋಗುವ ಮುನ್ನವೇ ಶ್ರಮವಹಿಸಿ ಪರಿಷ್ಕರಿಸಿ ಕೊಟ್ಟಿರುವುದು ಬಿ.ಎಸ್. ಸಣ್ಣಯ್ಯನವರ ಮಹತ್ವದ ಸಾಧನೆಯಾಗಿದೆ. ಅದರಲ್ಲಿಯೂ  ಮೈಸೂರು ವಿ.ವಿ. ಪ್ರಾಚ್ಯ ಸಂಶೋಧನಾಲಯವು( ಕ್ರಿ..1900) ಸಂಗ್ರಹಿಸಿದ ಹಸ್ತಪ್ರತಿಗಳಲ್ಲಿ ನಾಲ್ಕನೆಯದಾದ ಬಂಧುವರ್ಮನ ಹರಿವಂಶಾಭ್ಯುದಯ ಕೃತಿಯನ್ನು ಏಕೈಕ ಹಸ್ತಪ್ರತಿಯಿದ್ದರೂ ಡಿ.ಎಲ್.ನರಸಿಂಹಾಚಾರ್ಯರ ಒತ್ತಾಸೆಯ ಮೇರೆಗೆ ಹಿರಿಯ ವಿದ್ವಾಂಸರಾದ ಎನ್.ಬಸವಾರಾಧ್ಯ, ಎಸ್.ಎಸ್. ಕೃಷ್ಣಾಜೋಯಿಸ್, ಮತ್ತು ಟಿ.ವಿ. ವೆಂಕಟಾಚಲಶಾಸ್ತ್ರೀ ಅವರ ಮಾರ್ಗದರ್ಶನದ ಮೂಲಕ ಪಾಠಪರಿಷ್ಕರಣೆಯಲ್ಲಿ ಮೂಡಿದ್ದ ತೊಡಕುಗಳನ್ನು ಬಗೆಹರಿಸಿಕೊಂಡು ತೃಟಿತ ಪಾಠಗಳ ಸಾಲಿನಲ್ಲಿ ಛಂದಸ್ಸು ಮತ್ತು ಅರ್ಥದೃಷ್ಟಿಯಿಂದ ಸರಿಹೊಂದುವ ಅಕ್ಷರಗಳನ್ನು, ಕೆಲವೆಡೆ ಪದಗಳನ್ನು ಅಂದರೆ ಊಹಾತ್ಮಕ ಪಾಠವನ್ನು ಕಂಸಭಾಗದ ಮೂಲಕ ಕೊಟ್ಟು ಮೂಲ ತೃಟಿತ ಪಾಠವನ್ನು ಅಡಿ ಟಿಪ್ಪಣಿಯಲ್ಲಿ ಕೊಟ್ಟು ಸಂಪಾದಿಸಿರುವುದು ಇವರ ಮಹತ್ತರ ಸಂಶೋಧನೆಯಾಗಿದೆ. ಏಕೈಕ ಹಸ್ತಪ್ರತಿ ಇದ್ದರೂ, ಅದು ಅಶುದ್ಧವಾಗಿದ್ದರೂ ಆದಷ್ಟು ಮಟ್ಟಿಗೆ ಸಮಸ್ಯೆಗಳನ್ನು ನಿವಾರಿಸಿ ಲುಪ್ತಭಾಗಗಳನ್ನು ಊಹಾತ್ಮಕವಾಗಿ ಪೂರ್ಣಗೊಳಿಸಿರುವುದು.

     ಜೀವಸಂಬೋಧನೆಯ ಬಗೆಗೆ ಅರಿವಿದ್ದ ಸಣ್ಣಯ್ಯನವರು ಜೀವ ಸಂಬೋದನೆಯ ಹೆಸರಿನಲ್ಲಿದ್ದ ಸತಿಧರ್ಮಸಾರ ಕೃತಿಯನ್ನು  ಬೇರೆ ಕೃತಿ ಎಂದು ಗುರುತಿಸಿದ್ದಲ್ಲದೆ ಇದರ ಕತೃ ಬಂಧುವರ್ಮ ಎಂಬುದು ಕೃತಿಯಲ್ಲಿ ಎಲ್ಲಿಯೂ ದಾಖಲಾಗದಿದ್ದರೂ ಕವಿಯ ಉಳಿದೆರಡು ಕೃತಿಗಳ ಸಹಾಯದಿಂದ ಬಂಧುವರ್ಮನೇ ಎಂದು ಶೋಧಿಸಿ ಸಂಪಾದಿಸಿ ಪ್ರಕಟಿಸಿದ್ದು ಅವರ ಸಂಶೋಧನೆಯ ಮತ್ತೊಂದು ಮಜಲು. ಮೂರು ನೇಮಿನಾಥ ಪುರಾಣಗಳನ್ನು ಶಾಸ್ತ್ರೀಯವಾಗಿ ಸಂಪಾದಿಸಿದ್ದು ಇವರ ಮತ್ತೊಂದು ಹೆಗ್ಗಳಿಕೆ.

   ಎಲ್ಲಾ ವಿಧದ ಸಂಶೋಧಕರಿಗೆ ಆಕರ ಗಣಿ ಎನಿಸಿದ್ದ ಸಾಹಿತ್ಯ, ಧರ್ಮ, ಜಾನಪದ, ಇತಿಹಾಸ, ತತ್ವ ನಿರೂಪಣೆಯ ತಾರ್ಕಿಕ ಮಂಡಣೆಗಳನ್ನೊಳಗೊಂಡ ರಾಜಾವಳಿ ಕಥಾಸಾರದಂತಹ  ಗದ್ಯಕೃತಿಯನ್ನು ಸಂಪಾದಿಸಿದ್ದು  ಇವರ ಮತ್ತೊಂದು ಸಾಧನೆ. ಗ್ರಂಥಸಂಪಾದನೆಯ ಹಿನ್ನೆಲೆಯಲ್ಲಿ ಅವರ ಸಂಶೋಧನೆಯನ್ನು ಗುರುತಿಸುವುದಾದರೆ ಬೆಳಕಿಗೆ ಬಾರದ ಅಪ್ರಕಟಿತ ಮತ್ತು ಅಶುದ್ಧ ಪ್ರತಿಗಳೆಂದು ಯಾರೂ ಮುಟ್ಟದಿದ್ದ ಸಂಪಾದಿಸುವುದು ಕಷ್ಟಕರವೆಂದು ಕಡೆಗಣಿಸಿದ್ದ ಕಾವ್ಯಗಳ ಹಸ್ತಪ್ರತಿಗಳನ್ನು ಸಂಪಾದಿಸಿದ್ದು ಮುಖ್ಯ ಅಂಶವಾಗಿದೆ.

ಇವರ ಆಕರಶೋಧ ಸಂಗ್ರಹಣೆಯ ಸಂಶೋಧನೆಯಲ್ಲಿ,  ಹಳಗನ್ನಡ- ನಡುಗನ್ನಡ  ಕೃತಿಗಳ ಅದರಲ್ಲಿಯೂ ಜೈನ ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ ಮಹಾಬಲನ ನೇಮಿನಾಥ ಪುರಾಣ,ಬಂಧುವರ್ಮನ ಹರಿವಂಶಾಭ್ಯುದಯ, ದೇವಚಂದ್ರನ ರಾಜಾವಳಿಕಥಾಸಾರ ಮುಂತಾದ ಕೃತಿಗಳ ಒಂದೊಂದು  ಹಸ್ತಪ್ರತಿಗಳು ಲಭ್ಯವಿದ್ದರೂ ಯಾರೂ ಪರಿಷ್ಕರಿಸಲು, ಸಂಪಾದಿಸಲು ಪ್ರಯತ್ನಿಸದೇ ಇರುವ ಸಂದರ್ಭದಲ್ಲಿ  ಹಲವಾರು ಪಾಠಕ್ಲೇಶಗಳಿದ್ದರೂ ಇವರು ಶ್ರಮವಹಿಸಿ ಸಂಪಾದಿಸಿದ್ದಾರೆ. ಇವರ  ಸಂಶೋಧನೆಯಲ್ಲಿ ಉಪೇಕ್ಷೆಗೊಳಗಾದ ಕೃತಿಗಳು ಹಸ್ತಪ್ರತಿಗಳ ಒಡಲಿನಿಂದ ಈಚೆಗೆ ಬಂದು ಕೃತಿರೂಪದಲ್ಲಿ ಪ್ರಕಟಗೊಳ್ಳ ಬೇಕೆಂಬ ಅಪೇಕ್ಷೆಯನ್ನು ಗುರುತಿಸ ಬಹುದಾಗಿದೆ.

 ಸಣ್ಣಯ್ಯನವರ ಕರ್ತೃತ್ವ ಶಕ್ತಿ ಯಾರನ್ನಾದರೂ ಬೆರಗು ಗೊಳಿಸುವಂತದ್ದು. ಹಸ್ತಪ್ರತಿ ಅಧ್ಯಯನ ಮತ್ತು ಗ್ರಂಥಸಂಪಾದನೆಗಷ್ಟೇ ಅವರು ಸೀಮಿತವಾಗಿಲ್ಲ ಅವರು ಸ್ವತಂತ್ರ ಕೃತಿಗಳನ್ನೂ ರಚಿಸಿದ್ದಾರೆ. ಸಂಪಾದಿತ ಕೃತಿಗಳಿಗೆ ಬರೆದಿರುವ ಕವಿಕಾವ್ಯ ಪರಿಚಯಗಳು ಸಾಹಿತ್ಯ ಚರಿತ್ರೆಗೆ ಮೌಲಿಕ ಸಂಗತಿಗಳನ್ನು ಒದಗಿಸುತ್ತವೆ. ಆ ಕೃತಿಗಳಲ್ಲಿ ಅವರ ಸಂಶೋಧನಾ ಗುಣವನ್ನು ಕಾಣಬಹುದಾಗಿದೆ.

 ಹಸ್ತಪ್ರತಿ ಸಂರಕ್ಷಣೆ ಮತ್ತು ಗ್ರಂಥಸಂಪಾದನಾ ಚರಿತ್ರೆಯಂತಹ ಮಹತ್ವದ ವಿಷಯಗಳನ್ನು ಕುರಿತು ಪ್ರತ್ಯೇಕ ಗ್ರಂಥಗಳನ್ನೇ ಬರೆದಿದ್ದಾರೆ. ಇವರ ಸ್ವತಂತ್ರಕೃತಿಗಳು ಕನ್ನಡ ಗ್ರಂಥಸಂಪಾದನೆ ಮತ್ತು ಹಸ್ತಪ್ರತಿ ಅಧ್ಯಯನದ ಪರಿಧಿಯನ್ನು ವಿಸ್ತರಿಸಲು ಸಹಕಾರಿಯಾಗಿವೆ. ಬಿ.ಎಂ.ಶ್ರೀ ಪ್ರತಿಷ್ಠಾನದ ಮೂಲಕ 1992ರಲ್ಲಿ ಪ್ರಕಟ ಗೊಂಡ ಹಸ್ತಪ್ರತಿ ಶಾಸ್ತ್ರ ಪರಿಚಯ ಕೃತಿಯು ಹಸ್ತಪ್ರತಿ ಶಾಸ್ತ್ರದ ಬಗೆಗಿನ ಅಗತ್ಯವಾದ ತಿಳಿವಳಿಕೆಯನ್ನು ನೀಡುತ್ತಿದ್ದು ಪುಸ್ತಕದಲ್ಲಿಯ ಮಾಹಿತಿಗಳು ಎಷ್ಟೋಜನರಿಗೆ ವಿಷಯದಲ್ಲಿ ತಿಳಿವಳಿಕೆ ಮೂಡಿಸಿ ಹಸ್ತಪ್ರತಿಗಳ ಸಂರಕ್ಷಣೆಯತ್ತ ಗಮನಹರಿಸಲು ದಾರಿದೀಪವಾಗಿದೆ. ಈ ಕೃತಿಯಲ್ಲಿ ಹಸ್ತಪ್ರತಿ ಕ್ಷೇತ್ರದ ಸೈದ್ಧಾಂತಿಕ ವಿಷಯಗಳನ್ನು ತಮ್ಮ ಹಸ್ತಪ್ರತಿಗಳ ಒಡನಾಟ ಮತ್ತು ಅನುಭವದ ಹಿನ್ನೆಲೆಯಲ್ಲಿ ದಾಖಲಿಸಿರುವುದನ್ನು ಕಾಣಬಹುದಾಗಿದೆ.

 ಅದೇ ರೀತಿ 1971 ರಲ್ಲಿ ಇವರು ರಚಿಸಿದ ಗ್ರಂಥ ಸಂರಕ್ಷಣೆ ಕೃತಿಯು ಗ್ರಂಥದ ಸಾಮಾನ್ಯ ರಕ್ಷಣೆ, ಕೀಟಗಳು ಮತ್ತು ಬೂಷ್ಟ್, ನಿವಾರಣೋಪಾಯಗಳು, ಗ್ರಂಥಗಳ ಜೀರ್ಣೋದ್ಧಾರ, ಗ್ರಂಥಪ್ರತಿಗಳನ್ನು ತಯಾರಿಸುವುದು. ಕಟ್ಟು ಕಟ್ಟುವುದು ಇತ್ಯಾದಿ ವಿಷಯಗಳ ಬಗೆಗೆ ಪ್ರಸ್ತಾಪಿಸುವುದರ ಮೂಲಕ ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆಯ ಕಾಳಜಿಯನ್ನು ತಿಳಿಸುತ್ತದೆ. ಅದೇ ರೀತಿ ಬಂಧುವರ್ಮ ಮತ್ತು ಮಹಾಕವಿ ಪಂಪ ಎನ್ನುವ ಲಘುಕೃತಿಗಳು ಪಂಪ ಮತ್ತು ಬಂಧುವರ್ಮನನ್ನು ಪರಿಚಯ ಮಾಡಿಕೊಳ್ಳುವವರಿಗೆ ದಾರಿದೀಪಗಳಾಗಿವೆ.

         ಇವರ ಪ್ರಾಚೀನ ಕನ್ನಡ  ಗ್ರಂಥಸಂಪಾದನೆ ಕೃತಿಯು ತಮ್ಮಸಂಪಾದನಾ ಕಾರ್ಯದ  ಅನುಭವದ ಮೂಲಕ  ಸಂಶೋಧನೆಯ ಮೌಲ್ಯವುಳ್ಳ ಕೃತಿಯಾಗಿದ್ದು ವ್ಯಾಪಕ ಸಾಮಗ್ರಿಯನ್ನು ಕನ್ನಡ ಸಂಶೋಧನೆಗೆ ಒದಗಿಸಿತು.  ಶೋಧನಾ ಪುಸ್ತಕವು ಗ್ರಂಥಸಂಪಾದನೆಯ ಚಾರಿತ್ರಿಕ ನೆಲೆಯನ್ನು ಕನ್ನಡದಲ್ಲಿ ಮೊದಲ ಬಾರಿಗೆ ನಿರೂಪಿಸಿರುವಂತಹದ್ದು.  ಈಗಾಗಲೇ ಕನ್ನಡ ಗ್ರಂಥಸಂಪಾದನೆಯ ಸ್ವರೂಪ, ಬಳಕೆ, ಹಾದಿಯಲ್ಲಿ ಬರುವ ತೊಡಕು-ಸಂಕಷ್ಟಗಳನ್ನು ಹಸ್ತಪ್ರತಿಯ ಸ್ವರೂಪ-ಪೀಳಿಗೆ, ಪಾಠಾಂತರ ಸಂಕಲನ, ಸೂಚಿ ಮುಂತಾದ ವಿಷಯಗಳ ಬಗೆಗೆ ಅನೇಕ ಪುಸ್ತಕಗಳು ಬಂದಿವೆಯಾದರೂ ಗ್ರಂಥಸಂಪಾದನೆಯ  ಚಾರಿತ್ರಿಕ ನೆಲೆಯನ್ನು, ಅದು ಸಾಗಿದ ಸುದೀರ್ಘ ಹಾದಿಯನ್ನು ರೂಪಿಸಿಕೊಳ್ಳ ಬೇಕಾದ ನೂತನ ಅಂಶಗಳನ್ನು ಪ್ರಸ್ತಾಪಿಸಿರುವ ಕೃತಿಗಳು ರಚನೆಯಾಗಿರಲಿಲ್ಲ. ಆ ಕೊರತೆಯನ್ನು ಇವರ ಈ ಕೃತಿ ನಿವಾರಿಸಿದೆ. ಈ ಕೃತಿಯಲ್ಲಿ ಒಂದು ಸಾವಿರ ವರ್ಷಗಳಲ್ಲಿ ರಚಿತವಾಗಿರುವ, ಒಂದುನೂರು ವರ್ಷಗಳಲ್ಲಿ ಪ್ರಕಟಗೊಂಡಿರುವ ಸುಮಾರು ಒಂದು ಸಾವಿರ ಗ್ರಂಥಗಳ ಸಂಪಾದನೆ, ಸಂಗ್ರಹ, ಪ್ರಕಟನೆಯ ಕುರಿತ ವಿವರಗಳನ್ನು ಕಾಣಬಹುದಾಗಿದೆ. 19 ನೇ ಶತಮಾನದ ಕೊನೆ ಮತ್ತು 20ನೇ ಶತಮಾನದಲ್ಲಿ ಪ್ರಕಟಗೊಂಡಿರುವ ಸಾಧ್ಯವಾದಷ್ಟು ಲಭ್ಯವಿರುವ ಸಂಪಾದಿತ ಕೃತಿಗಳ ಪರಿಚಯವನ್ನು ಕಾಣಬಹುದಾಗಿದೆ. ಪ್ರತಿ ಕಾವ್ಯದ ಸಂಪಾದನೆಗೆ ಬಳಸಿರುವ ಮೂಲ ಹಸ್ತಪ್ರತಿ, ಪಾಠಾಂತರ, ಟೀಕೆ, ಟಿಪ್ಪಣಿಗಳು, ಪಾಠಗಳ ಮೂಲ ರೂಪದ ನಿಷ್ಕರ್ಷೆ ಮತ್ತು ಪರಿಶೀಲನೆಗೆ ಬಳಸಿರುವ ಇತರ ಹಸ್ತಪ್ರತಿಗಳ ಪರಿಚಯವನ್ನು ಕೃತಿಯಲ್ಲಿ ಕಾಣಬಹುದಾಗಿದೆ. ಬಹುಮಟ್ಟಿಗೆ ವಿವಿಧ ಸಾಹಿತ್ಯಪ್ರಕಾರಗಳಲ್ಲಿ ಸಂಪಾದನೆಗೊಂಡು ಪ್ರಕಟಗೊಂಡಿರುವ ಒಂದು ಸಾವಿರಕ್ಕೂ ಮೇಲ್ಪಟ್ಟ ಗ್ರಂಥಗಳ ಸಂಪಾದನೆಯ ವೈಖರಿಯನ್ನು ಪ್ರಾಯೋಗಿಕವಾಗಿ ಕೆಲವೆಡೆ ತೌಲನಿಕವಾಗಿ ವಿವೇಚಿಸಿರುವಲ್ಲಿ ಅವರ ಸಂಶೋಧನಾ ಕಾರ್ಯಕ್ಷಮತೆ ಎದ್ದು ಕಾಣುತ್ತದೆ. ಕನ್ನಡದ ಮುಖ್ಯ ಕೃತಿಗಳ ಮರುಸಂಪಾದನೆ ಪ್ರಕಟನೆಯ ವಿವರವನ್ನು ದಾಖಲಿಸಿದೆ.  ಮೊದಲ ಆವೃತ್ತಿಗೆ ಬಳಸಿದ ಹಸ್ತಪ್ರತಿ, ನಂತರದ ಸಂಪಾದನೆಗಳಲ್ಲಿ ಬಳಸಿರುವ ಇತರೆ ಹಸ್ತಪ್ರತಿಗಳ ತೌಲನಿಕ ಪರಿಚಯವನ್ನು ಮಾಡಿಕೊಟ್ಟಿದೆ. ಇವರ ಸಂಶೋಧನಾ ಕೃತಿಯಲ್ಲಿ ಪ್ರತಿಯೊಂದು ಕಾವ್ಯದ ಪ್ರಕಟಣೆಗೆ ಸಂಬಂಧಿಸಿದಂತೆ ಬಿ.ಎಸ್.ಸಣ್ಣಯ್ಯನವರು ಶಿಸ್ತುಬದ್ಧ ಸಂಶೋಧಕರಾಗಿ ಕೃತಿಗಳ ಹಸ್ತಪ್ರತಿಗಳ ಸ್ವರೂಪದ ಬಗೆಗೆ ಪ್ರಸ್ತಾಪಿಸಿದ್ದಾರೆ. ಯಾವುದೇ ಕೃತಿಯ ಸಂಪಾದಕನ ಸಂಪಾದನೆಯ ಬಗೆಗೆ ಇವರು ತಾಳಿರುವ ನಿಲುವಿನಲ್ಲಿ  ಸಂಶೋಧಕ ಗುಣಧರ್ಮದ ಜೊತೆಗೆ ಪ್ರಾಮಾಣಿಕ ವಿಮರ್ಶಕನ ಗುಣವನ್ನು ಕಾಣಬಹುದಾಗಿದೆ. ಕನ್ನಡದ ಬಹುತೇಕ ಸಂಪಾದಿತ ಕೃತಿಗಳ ಹಸ್ತಪ್ರತಿಗಳ ವಿವರಗಳು ಕೃತಿಯಲ್ಲಿ ಪ್ರಸ್ತಾಪಗೊಂಡಿದ್ದು ಸಂಶೋಧಕರಿಗೆ ಆಕರ ಗ್ರಂಥವಾಗಿ ಕೃತಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ೨೦ ನೇ ಶತಮಾನದಲ್ಲಿ ಪ್ರಕಟವಾದ ಆಧುನಿಕ ಪೂರ್ವ ಕನ್ನಡ ಸಾಹಿತ್ಯದ ಕಾವ್ಯ-ಪುರಾಣಗಳ ಪರಿಷ್ಕರಣದ ವಿಧಾನ, ವೈರುದ್ಯತೆಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಣೆಗೊಳ ಪಡಿಸಿರುವ ಸಂಶೋಧನಾ ಕೃತಿಯಾಗಿದೆ. ಕನ್ನಡ ಸಾಹಿತ್ಯದಲ್ಲಿ ೧೫೦ ವರ್ಷಗಳ ಅವಧಿಯಲ್ಲಿ ಸಂಪಾದನೆಗೊಂಡ ಕೃತಿಗಳ ಸಂಪಾದನಾ ಪದ್ಧತಿಯನ್ನು ಸಮಗ್ರವಾಗಿ ಪರಿಶೀಲಿಸಿ ಉತ್ತಮ, ಮಧ್ಯಮ, ಅಧಮ ಇತ್ಯಾದಿ ಮಾನದಂಡಗಳ ಮೂಲಕ ವಿಮರ್ಶಾತ್ಮಕವಾಗಿ ವಿವೇಚಿಸಿರುವುದನ್ನು ಕಾಣಬಹುದಾಗಿದೆ. ಭಿನ್ನ ಕಾಲದಲ್ಲಿ ಭಿನ್ನ ಸಂಪಾದಕರಿಂದ ಸಂಪಾದನೆಗೊಂಡು ಪ್ರಕಟಗೊಂಡಿರುವ ಕೃತಿಗಳನ್ನು ಪರಸ್ಪ ತೌಲನಿಕವಾಗಿ ಪರಿಶೀಲಿಸಿ ಕೊಟ್ಟಿದ್ದಾರೆ. ಸಂಪಾದನಾ ಕಾರ್ಯದಲ್ಲಿ ಲೋಪದೋಶಗಳು ಕಂಡು ಬಂದಲ್ಲಿ ಅವರು ಎಷ್ಟೇ ವಿದ್ವಾಂಸರಾಗಿದ್ದರೂ ಯಾವುದೇ ಮುಲಾಜಿಲ್ಲದೆ ನಿಷ್ಠುರವಾಗಿ ಎತ್ತಿ ತೋರಿಸಿದ್ದಾರೆ.  ನಿದರ್ಶನಕ್ಕೆ ಎಲ್. ಬಸವರಾಜುರವರು ಸಂಪಾದಿಸಿರುವ ಆದಿಪುರಾಣದ ಸಂಪಾದನಾ ಕಾರ್ಯದ  ಸ್ವರೂಪದ ಬಗೆಗೆ ಪ್ರಸ್ತಾಪಿಸುತ್ತಾ, ಕಾವ್ಯದುದ್ದಕ್ಕೂ ಕಥಾಶೀರ್ಷಿಕೆಗಳನ್ನು ನೀಡಿರುವುದು ಉತ್ತಮ ಕಾರ್ಯವಾದರೂ ಮೂಲ ಕಾವ್ಯದಲ್ಲಿದ್ದಂತೆ ಆಶ್ವಾಸಗಳ ಹೆಸರನ್ನು ನೀಡದೆ ಬರಿಯ ಸಂಖ್ಯೆಯಿಂದ ಸೂಚಿಸಿರುವುದು ಸಮಂಜಸವಾಗಿ ತೋರುವುದಿಲ್ಲ. ಅಲ್ಲದೆ ಪದಗಳ ಮಧ್ಯ ಮಧ್ಯ ಪದವಿಂಗಡಣೆ ಮಾಡಿರುವುದು ಅವಶ್ಯಕವೆನ್ನಿಸುವುದಿಲ್ಲ ಎಂದು ಅದರ ಸಾಧಕ-ಬಾಧಕಗಳನ್ನು ಸೂಕ್ಷ್ಮವಾಗಿ ಗಮನಿಸಿ ಪ್ರಸ್ತಾಪಿಸಿರುವುದು ಅವರ ಪ್ರಾಮಾಣಿಕ ಅಭಿಪ್ರಾಯಕ್ಕೆ ನಿದರ್ಶನವಾಗಿದೆ.  ಅದೇ ರೀತಿ  1931 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬೆಳ್ಳಾವೆ ವೆಂಕಟ ನಾರಾಣಪ್ಪನವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿದ್ದ ಪಂಪಭಾರತವನ್ನು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು  1973 ರಲ್ಲಿ ಮರು ಮುದ್ರಣ ಮಾಡಿದೆ. ನಿರ್ದೇಶಕರು ಪ್ರಕೃತ ಮುದ್ರಣದ ಪ್ರಸ್ತಾವನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೊದಲು ಪ್ರಕಟಿಸಿದ್ದ ವಿಕ್ರಮಾರ್ಜುನ ವಿಜಯದ ಪುನರ್ಮುದ್ರಣ  ಇದು ಎಂದಿದ್ದಾರೆ. ಅತ್ಯಂತ ಶ್ರದ್ಧೆಯಿಂದ ವಿದ್ವತ್ಪೂರ್ಣವಾಗಿ ಪರಿಷ್ಕರಿಸಿ ಉಪೋದ್ಘಾತ ಬರೆದ ವೆಂಕಟನಾರಾಣಪ್ಪ ಮತ್ತು ಇತರರ  ಹೆಸರನ್ನು ಮೊದಲ ಮುದ್ರಣದ ಮುಖಪುಟದಲ್ಲಿ ಕೈಬಿಟ್ಟಿರುವುದರಿಂದ ಇದರಲ್ಲಿಯೂ ಹಾಗೆಯೇ ಮಾಡಲಾಗಿದೆ.  ಆದರೆ ಇದು ಪುನರ್ ಮುದ್ರಣ ಎಂದ ನಿರ್ದೇಶಕರು ಹೊಸದಾಗಿ ಪ್ರಧಾನ ಸಂಪಾದಕರ ಹೆಸರನ್ನು ಇದರ ಮುಖಪುಟದಲ್ಲಿ ಅಳವಡಿಸಿರುವುದು ಸರ್ವಥಾ ಸಾಧುವಲ್ಲ. ಹೀಗೆ ಹಾಕಿರುವುದರಿಂದ ಗ್ರಂಥವು ಎಲ್ಲ ಗ್ರಂಥ ಸೂಚಿಗಳಲ್ಲಿಯೂ ಪ್ರಧಾನ ಸಂಪಾದಕರ ಹೆಸರಿನಲ್ಲಿ ನಮೂದಾಗುತ್ತದೆ. ಆದುದರಿಂದಲೇ ನಾನು ಮುಖಪುಟದಲ್ಲಿ ಹೀಗೆ ಸಂಪಾದಕರನ್ನು ಬಿಟ್ಟು ಬೇರೆಯವರ ಹೆಸರನ್ನು  ಹಾಕುವುದಕ್ಕೆ ವಿರೋಧಿಯಾಗಿದ್ದೇನೆ.’ಎಂದು ಶ್ರಮವಹಿಸಿ ವಿದ್ವತ್ಪೂರ್ಣ ಕೆಲಸ ಮಾಡಿದವರ ಹೆಸರನ್ನು ಬಿಟ್ಟು ಹಾಕುವಂತಹ ಪದ್ಧತಿಯನ್ನು  ಕಟುವಾಗಿ ಖಂಡಿಸಿರುವ ಸ್ವಭಾವದವರು ಎಂಬುದು ಈ ವಿವರಣೆಯಿಂದ ಮನದಟ್ಟಾಗುತ್ತದೆ.  ಈ ಕೃತಿಯಲ್ಲಿ  ಗ್ರಂಥಸಂಪಾದನಾ ಶಾಸ್ತ್ರವನ್ನು ಕುರಿತ ತಾತ್ವಿಕ ಚಿಂತನೆಯನ್ನು ಇಲ್ಲಿ ಕಾಣಬಹುದಾಗಿದೆ. ಇದು ಸುಲಭವಾದ ಕೆಲಸವಲ್ಲ. ಕಠಿಣ ಗ್ರಾಹ್ಯವಾದುದು. ಇಲ್ಲಿ ಆಧುನಿಕ ಪೂರ್ವದ ಕೃತಿಗಳನ್ನು ಸಂಪಾದಿಸಿರುವ ಸಂಪಾದಕರನ್ನು ಪರಿಗಣಿಸದೆ ಅವರು ಮಾಡಿರುವ ಕೆಲಸದ ಬಗೆಗೆ ವಿಶೇಷತೆಯ ಬಗೆಗೆ ಮನನಮಾಡಿ ಒಂದು ಎಲ್ಲೆಕಟ್ಟಿನಲ್ಲಿ ರೂಪಿಸಿರುವ ವಿಶಿಷ್ಟತೆಯನ್ನು ಗುರುತಿಸ ಬಹುದಾಗಿದೆ. ಪ್ರಾಚೀನ ಕನ್ನಡ ಗ್ರಂಥಸಂಪಾದನೆ ಕೃತಿಯಲ್ಲಿ ಮೊದಲ ಬಾರಿಗೆ ಪ್ರಾಚೀನ ಸಾಹಿತ್ಯಾಧ್ಯಯನ ಮತ್ತು ಗ್ರಂಥ ಸಂಪಾದನೆಯ ಚಾರಿತ್ರಿಕ ನೆಲೆಗಳನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಕನ್ನಡ ಸಾಹಿತ್ಯದ ವಿವಿಧ ರೂಪಗಳ ವಿವಿಧ ಗ್ರಂಥಗಳ ವಿವಿಧ ಆವೃತ್ತಿಗಳ ಪರಿಷ್ಕರಣದ ಇತಿಮಿತಿಗಳ ಬಗೆಗೆ ತಲಸ್ಪರ್ಶಿಯಾಗಿ ವಿವೇಚಿಸಿದ್ದಾರೆ. ಕೃತಿಯ ರಚನೆಯಲ್ಲಿ ಇವರ ಹಸ್ತಪ್ರತಿಗಳ ಬಗೆಗಿನ ತಮ್ಮ ಜೀವಮಾನದ ಓದಿನ ಮತ್ತು ಚಿಂತನದ ಅನುಭವವನ್ನೆಲ್ಲಾ ಎರಕಹೊಯ್ದಿರುವುದನ್ನು ಕಾಣಬಹುದಾಗಿದೆ. ಕನ್ನಡ ಕೃತಿಗಳು ಸಂಪಾದಿತವಾಗಿ ಪ್ರಕಟವಾದ ರೀತಿಯನ್ನು ಕಾಣಬಹುದಾಗಿದೆ.

     ಹಸ್ತಪ್ರತಿ ರೂಪದಲ್ಲಿಯೇ ಕನ್ನಡ ಕಾವ್ಯಗಳು ಕತ್ತಲೆಯ ಮರೆಯಲ್ಲಿದ್ದಿದ್ದರೆ ನಿಜಕ್ಕೂ ಕನ್ನಡ ಸಾಹಿತ್ಯ ಚರಿತ್ರೆಯ ಅಭ್ಯಾಸವನ್ನು ನಾವು ಮಾಡಲಾಗುತ್ತಿತ್ತೆ ಎಂದೆನಿಸುತ್ತದೆ. ಸಾಮಾನ್ಯರು ಓದಿ ಗ್ರಹಿಸಲು ಅಸಾಧ್ಯವಾದ ಸ್ಥಿತಿಯಲ್ಲಿ ಓಲೆಗರಿಗಳಲ್ಲಿ ಅಡಗಿದ್ದ ಸಾಹಿತ್ಯ ಇಂದು ನಮ್ಮ ಕೈಯಲ್ಲಿನ ಮುದ್ರಿತ ಗ್ರಂಥವಾಗುವವರೆಗಿನ ಪ್ರಕ್ರಿಯೆಗಳಲ್ಲಿ ತಮ್ಮ್ಮ ತಾವು ತೊಡಗಿಸಿಕೊಂಡಿದ್ದ ವಿದ್ವನ್ಮಣಿಗಳ ಸಾಲಿನಲ್ಲಿ ಬಿ.ಎಸ್.ಸಣ್ಣಯ್ಯನವರ ಹೆಸರು ಪ್ರಮುಖವಾದುದಾಗಿದೆ. ಇವರ  ಸಂಶೋಧನಾ ಕೃತಿಯಲ್ಲಿ ಕನ್ನಡ ಗ್ರಂಥ ಸಂಪಾದನಾ ಚರಿತ್ರೆ, ಸಾಹಿತ್ಯ ಚರಿತ್ರೆ, ಹಸ್ತಪ್ರತಿ ಚರಿತ್ರೆ, ಪ್ರಕಟನಾ ವಾಗ್ವಾದಗಳ ಚರಿತ್ರೆ, ಮರು ಸಂಪಾದನೆಯ ವಿವರ ಇತ್ಯಾದಿ ಅಂಶಗಳನ್ನು  ಏಕಕಾಲದಲ್ಲಿ ಅಧ್ಯಯನ ಮಾಡುವಂತಹ ನೆಲೆಗಟ್ಟನ್ನು ಹೊಂದಿರುವುದನ್ನು ಗ್ರಹಿಸಬಹುದಾಗಿದೆ.

ಅಶುದ್ಧ ಹಸ್ತಪ್ರತಿಗಳೆಂದು ಯಾರೂ ಮುಟ್ಟದಿದ್ದ, ಸಂಪಾದಿಸುವುದು ಕಷ್ಟಕರವೆಂದು ಕಡೆಗಣಿಸಿದ್ದ ಕೆಲವು ಕೃತಿಗಳನ್ನು ನಶಿಸಿಹೋಗಲು ಬಿಡದೆ ಅವುಗಳನ್ನು ಶ್ರಮವಹಿಸಿ ಸಂಪಾದಿಸಿ ಕೊಟ್ಟಿರುವುದನ್ನು ಕನ್ನ ಸಾಹಿತ್ಯ ಜನತೆ ಮರೆಯುವಂತಿಲ್ಲ. ಜೈನ ಹಸ್ತಪ್ರತಿಗಳು ಹಂಚಿಹೋಗಿದ್ದ ಬಿಹಾರದ ಅರಾ ಪ್ರದೇಶಕ್ಕೆ ಕ್ಷೇತ್ರಕಾರ್ಯಕೈಗೊಂಡು ಅಲ್ಲಿದ್ದ ಕನ್ನಡ ಹಸ್ತಪ್ರತಿಗಳನ್ನು ಮೈಕ್ರೊಫಿಲಂ ಮಾಡಿ ತಂದಿದ್ದು ಅವರ ಸಂಶೋಧನೆಯ ಮತ್ತೊಂದು ಮಜಲು. ಏಕೆಂದರೆ ನನಗೆ ತಿಳಿದ ಮಟ್ಟಿಗೆ ಮೈಕ್ರೋಫಿಲಂ ಪ್ರತಿಗಳು ಕರ್ನಾಟಕದ ಬೇರಾವ ವಿಶ್ವವಿದ್ಯಾಲಯಗಳ ಹಸ್ತಪ್ರತಿ ಭಂಡಾರಗಳಲ್ಲಿ ಇಲ್ಲ ಎಂಬುದನ್ನು ಮನಗಂಡರೆ ಇವರ ವಿದ್ವತ್ ಶ್ರಮದ ಅರಿವಾಗುತ್ತದೆ. ಕನ್ನಡ ಗ್ರಂಥಸಂಪಾದನಾ ಕ್ಷೇತ್ರದಲ್ಲಿ ಏಕಾಂಗಿಯಾಗಿ ಇವರಷ್ಟು ಅಧಿಕ ಕೃತಿಗಳನ್ನು ಸಂಪಾದಿಸಿದವರು ಸಿಕ್ಕುವುದಿಲ್ಲ. ಒಂದು ರೀತಿಯಲ್ಲಿ ಸೀಮೋಲ್ಲಂಘನ ಮಾಡಿದ್ದಾರೆ. ಹತ್ತಾರು ಜನ ಸಂಶೋಧಕರು ಸೇರಿ ಸಾಂಸ್ಥಿಕವಾಗಿ ಸಂಪಾದಿಸಿ ಪ್ರಕಟಿಸುವಷ್ಟು ಕೃತಿಗಳನ್ನು ಒಬ್ಬರೆ ಏಕಾಂಗಿಯಾಗಿ ಪ್ರಕಟಿಸಿರುವುದನ್ನು ನೋಡಿದರೆ ಇವರ ವಿದ್ವತ್ತಿನ ಅಗಾಧತೆ ಎಂತಹದ್ದು ಎಂಬುದು ಎಲ್ಲರಿಗೂ ಮನವರಿಕೆ ಆಗುವಂತಹದ್ದು. ನಮ್ಮ ಕಾಲದ ಸಾಹಿತ್ಯ ಅಧ್ಯಯನಕಾರರು  ಸಣ್ಣಯ್ಯರಂತಹ ವಿದ್ವಾಂಸರು ಕೊಡ ಮಾಡಿದ ಹಳಗನ್ನಡ, ನಡುಗನ್ನಡ ಕಾಲದ ಸಾಹಿತ್ಯದ ಪ್ರಜ್ಞಾಪೂರ್ಣ ಕೊಡುಗೆಯನ್ನು ಇಂದಿನ ಬರವಣಿಗೆಯಲ್ಲಿ ಆಕರ ಮತ್ತು ಪರಾಮರ್ಶನವಾಗಿ ಅವೆಲ್ಲವುಗಳನ್ನು ಬಳಸಿಕೊಂಡು ಸಂಶೋಧನಾ ವ್ಯಾಸಂಗದ ತಳಹದಿಯಲ್ಲಿ ಸತ್ಯದ ಸಮೀಪಕ್ಕೆ ಬರುವಂತಾಗಲು ಸಹಕಾರಿಯಾಗಿದೆ. ಹೀಗಾಗಿ ಕವಿಚರಿತೆಕಾರರನ್ನು ಒಳಗೊಂಡಂತೆ ಸಾಹಿತ್ಯ-ಸಂಸ್ಕೃತಿಯ ಶೋಧದಲ್ಲಿ ಗಮನೀಯವಾದ ಕಾರ್ಯದಲ್ಲಿ ತೊಡಗಿದ್ದ ಮತ್ತು ಪ್ರಸ್ತುತ ಅದರಲ್ಲಿ ತಮ್ಮ ಜೀವನವನ್ನು ಸವೆಸುತ್ತಿರುವ ವಿದ್ವಾಂಸರಲ್ಲಿ ಸಣ್ಣಯ್ಯನವರ ಪ್ರಮುಖರು. ಹಳಗನ್ನಡ ನಡುಗನ್ನಡ ಸಾಹಿತ್ಯ ಕೃತಿಗಳನ್ನು ಕವಿ-ಕಾಲ ವಿಚಾರವನ್ನು ಗುಣಾತ್ಮಕವಾಗಿ ಶೋಧಿಸುವುದರೊಂದಿಗೆ ಇಂದು ನಾವೆಲ್ಲಾ ಹಳಗನ್ನಡ ಮತ್ತು ನಡುಗನ್ನಡದ ಕಾಲದ ಕವಿ-ಕೃತಿಗಳನ್ನು ಸುಲಭವಾಗಿ ಓದಲು ಅನುಕೂಲವಾಗುವಂತೆ ವ್ಯವಸ್ಥಿತವಾದ ಪುಸ್ತಿಕೆಗಳನ್ನು ಸಂಪಾದಿಸಿ  ಒದಗಿಸಿಕೊಟ್ಟಿದ್ದಾರೆ. ಒಂದು ವೇಳೆ ಪ್ರಾಚೀನಕನ್ನಡ ಕಾವ್ಯಗಳ ಸಂಪಾದನೆ  ಆಗದಿದ್ದಲ್ಲಿ ಕಾವ್ಯಗಳ ಓದು, ವಿಮರ್ಶೆ, ಚರ್ಚೆಯೇ ಆಗುತ್ತಿರಲಿಲ್ಲವೇನೋ ಎಂದೆನಿಸುತ್ತದೆ. ಇವರು ಆಯ್ದುಕೊಂಡ ಸಂಶೋಧನಾ ಕ್ಷೇತ್ರವು ಯಾವುದೇ ರೀತಿಯ ಲಾಭವನ್ನು, ದಿಡೀರ್ ಕೀರ್ತಿಯನ್ನು ತಂದು ಕೊಡುವಂತಹದ್ದಲ್ಲ. ಇವತ್ತು ಬಿ.ಎಸ್.ಸಣ್ಣಯ್ಯನವರಂತಹ ವಿದ್ವಾಂಸರ ಆಸ್ತಿ ಎಂದರೆ ಅವರ ಸುತ್ತ ಕಾಣಿಸಿಕೊಳ್ಳುವ ಹಸ್ತಪ್ರತಿ  ಸಂಪತ್ತು ಮತ್ತು ಈಗಾಗಲೇ ಓದುಗ ವರ್ಗಕ್ಕೆ ನೀಡಿರುವ ಹಳಗನ್ನಡ ಕಾವ್ಯಗಳು.     

     ಒಟ್ಟಾರೆ ಗ್ರಂಥಸಂಪಾದನೆ ಯಾರೂ ಬೇಕಾದರೂ ಕೈಗೊಳ್ಳಬಹುದಾದ ಸುಲಭ ಕಾರ್ಯವೇನು ಅಲ್ಲ. ಅದಕ್ಕೆ ಕಠಿಣ ಪರಿಶ್ರಮ, ಅಪಾರ ಸಾಹಿತ್ಯ ಜ್ಞಾನ, ಛಂದಸ್ಸು, ವ್ಯಾಕರಣ ಮೊದಲಾದ ಶಾಸ್ತ್ರಗಳ ಪರಿಚಯ ಅಗತ್ಯವಿರುತ್ತದೆ. ಗ್ರಂಥಸಂಪಾದನಾ ಕ್ಷೇತ್ರದಲ್ಲಿ ಮಾದರಿಯಾಗುವುದು, ಮಾದರಿಗಳನ್ನು ಸೃಷ್ಟಿಸುವುದು ಕಷ್ಟಸಾಧ್ಯವಾದ ಕೆಲಸ. ದೆಸೆಯಲ್ಲಿ ಸಣ್ಣಯ್ಯನವರು ತಾವೇ ಒಂದು ಮಾದರಿಯಾಗಿದ್ದು, ಹಲವು ಮಾದರಿಗಳನ್ನು ಸೃಷ್ಟಿಸಿರುವ ಕೀರ್ತಿಗೆ  ಭಾಜನರಾಗಿದ್ದಾರೆ. ಇಂದಿಗೂ ಬಿ.ಎಸ್. ಸಣ್ಣಯ್ಯನವರು ಶೋಧಿಸಿ ಕೊಟ್ಟಿರುವ ಸಂಶೋಧನಾ ವಿವರಗಳನ್ನು ಸಾಹಿತ್ಯ ಚರಿತ್ರೆಯಲ್ಲಿ ಅಳವಡಿಸಿ ಕೊಳ್ಳಬೇಕಾಗಿದೆ. ಜೊತೆಗೆ  ಸಾಹಿತ್ಯ ಚರಿತ್ರೆಯನ್ನು ಪುನರ್ ರಚಿಸಬೇಕಾಗಿದೆ.

                       ಪರಾಮರ್ಶನ ಗ್ರಂಥಗಳು

.  ಬಿ.ಎಸ್. ಸಣ್ಣಯ್ಯ :ಪ್ರಾಚೀನ ಕನ್ನಡ ಗ್ರಂಥಸಂಪಾದನೆ

   ಕನ್ನಡ ಪುಸ್ತಕಪ್ರಾಧಿಕಾರ, ಬೆಂಗಳೂರು, ೨೦೦೨

. ಹಸ್ತಪ್ರತಿಶಾಸ್ತ್ರ ಪರಿಚಯ , ಬಿ.ಎಂ.ಶ್ರೀ  ಪ್ರತಿಷ್ಠಾನ, ಬೆಂಗಳೂರು, ೨೦೦೯   

.ಬಂಧುವರ್ಮನ ಸತಿಧರ್ಮಸಾರ, ಮೈಸೂರು ೧೯೭೬

. ದೇಪರಾಜನ ಸೊಬಗಿನ ಸೋನೆ,   ಮೈ.ವಿ.ವಿ. ಮೈಸೂರು,೧೯೭೦

. ಇಮ್ಮಡಿ ನಾಗವರ್ಮನ ವರ್ಧಮಾನಪುರಾಣ, ಪ್ರಸಾರಾಂಗ, ಮೈ.ವಿ.ವಿ.೧೯೭೪

. ಪರಿಣಿತ : ಬಿ.ಎಸ್. ಸಣ್ಣಯ್ಯನವರ ಅಭಿನಂದನ ಗ್ರಂಥ

   ಸಂ: ಬೋರೇಗೌಡ ಚಿಕ್ಕಮರಳಿ, ಮೈಸೂರು, ೨೦೧೩

. ಸಿ.ನಾಗಭೂಷಣ: ನುಡಿಪಸರ, ಧಾತ್ರಿ ಪ್ರಕಾಶನ, ಬೆಂಗಳೂರು 2009

                ಕನ್ನಡ ಸಂಶೋಧನಾ ಸಮೀಕ್ಷೆ: ಶ್ರೀ.ಸಿದ್ಧಲಿಂಗೇಶ್ವರ ಪ್ರಕಾಶನ ಗುಲಬರ್ಗಾ 2006

              

              

 

  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...