ಪಾಲ್ಕುರಿಕೆಸೋಮನಾಥ- ಭೀಮಕವಿಗಳ ಬಸವ ಪುರಾಣದ
ಹಿನ್ನೆಲೆಯಲ್ಲಿ ಗರುಣಿಯ ಬಸವಲಿಂಗನ ಬಸವೇಶ್ವರರ ಕಾವ್ಯ ಕೆಲವು ಟಿಪ್ಪಣಿಗಳು:
ಡಾ.ಸಿ.ನಾಗಭೂಷಣ
ಭಾರತೀಯ ಸಮಾಜದ ಎಲ್ಲಾವರ್ಗಗಳ ಮೇಲೆ ಪ್ರಭಾವವನ್ನು ಬೀರಿ ಅದರಲ್ಲಿ ಒಂದು ಒಳ ಎಚ್ಚರವನ್ನು
ಮೂಡಿಸಿದ ನಿಜವಾದ ಅರ್ಥದ ಸಮಾಜೋ-ಧಾರ್ಮಿಕ ಆಂದೋಲನದ
ನೇತೃತ್ವವನ್ನು ವಹಿಸಿದ ಬಸವಣ್ಣನವರು ಯಾವ ನೆಲೆಗಟ್ಟಿನಿಂದ ನೋಡಿದರೂ ಘನವ್ಯಕ್ತಿತ್ವವನ್ನು ಹೊಂದಿದವರಾಗಿದ್ದಾರೆ. ಶ್ರೇಷ್ಠ ವಚನಗಳನ್ನು
ರಚಿಸಿರುವುದರಿಂದ ಕವಿಗಳು,ನೂತನ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿದ್ದರಿಂದ ಸಮಾಜ ಸುಧಾರಕರು,
ಭಗವಂತನ ಸಾಕ್ಷಾತ್ಕಾರಕ್ಕಾಗಿ ಜೀವನದುದ್ದಕ್ಕೂ ಹಂಬಲಿಸಿದ್ದರಿಂದ
ಸಾಧಕರು,ಪ್ರಮುಖ ಅರಸು ಮನೆತನದಲ್ಲಿ ಕೆಲಸ ಮಾಡಿದ ರಾಜನೀತಿ ವಿಶಾರದರು, ವೀರಶೈವಧರ್ಮದ ಪ್ರಮುಖ ನಾಯಕರು.ಇಂತಹ
ಹಲವು ವೈವಿದ್ಯಮಯ ವ್ಯಕ್ತಿತ್ವವನ್ನುಳ್ಳ ಬಸವಣ್ಣನವವರ ಚರಿತ್ರಯನ್ನು ತಿಳಿಯಲು ಕನ್ನಡ ಸಾಹಿತ್ಯದಲ್ಲಿ
ವಿಪುಲವಾದ ಸಾಮಗ್ರಿ ಇದೆ. ಇಂದು ಕನ್ನಡ ಸಾಹಿತ್ಯದಲ್ಲಿ ಬಸವಣ್ಣನವರನ್ನು ಕುರಿತು ರಚಿತವಾಗಿರುವಷ್ಟು
ಕಾವ್ಯ-ಪುರಾಣಗಳು,ಕಾದಂಬರಿಗಳು, ನಾಟಕಗಳು ಹಾಗೂ ಇತರೆ ಲೇಖನಗಳು ಮತ್ತಾರನ್ನು ಕುರಿತು ರಚಿತವಾಗಿಲ್ಲಎಂಬುದನ್ನು
ಮನಗಾಣ ಬಹುದು. ಶ್ರೇಷ್ಠ ಅನುಭಾವಿಯೂ, ಭಕ್ತಿಭಂಡಾರಿಯೂ, ಉತ್ತಮ ವಚನ ಕಾರನೂ ಆದ ಬಸವಣ್ಣನವರು ನಡೆದು-ನುಡಿದ
ತತ್ವಗಳು ಎಲ್ಲಾ ಕಾಲಕ್ಕೂ ಆದರ್ಶಪ್ರಾಯವೂ, ಅನುಸರಣೀಯವೂ ಆಗಿದೆಯೆಂದರೆ ತಪ್ಪಾಗಲಾರದು. ಬಸವೇಶ್ವರನ
ಚರಿತ್ರೆಯನ್ನು ಕುರಿತು ಸಾಹಿತ್ಯದ ವಿವಿಧ ಪ್ರಕಾರಗಳಾದ ಚಂಪು, ರಗಳೆ, ತ್ರಿಪದಿ, ಸಾಂಗತ್ಯಗಳಲ್ಲಿ
ಹಲವಾರು ಕಾವ್ಯಗಳು ಮೈದಾಳಿವೆ. ಬಸವೇಶ್ವರನನ್ನು ಕುರಿತು ಹುಟ್ಟಿಕೊಂಡ ಸ್ವತಂತ್ರಕಾವ್ಯಗಳು ಕೆಲವಾದರೆ.
ಅದರ ಕಥೆಯನ್ನು ಬಿಡಿ ಬಿಡಿಯಾಗಿ ಬಿತ್ತರಿಸಿದ ಕಾವ್ಯಗಳು ಹಲವು. ಬಸವಣ್ಣನ ಕುರಿತಾದ ಕನ್ನಡದ ಬಹುಮುಖ್ಯ
ಕೃತಿಗಳು ಪುರಾಣ ಸ್ವರೂಪಕ್ಕೆ ಸಂಬಂಧಿಸಿದವುಗಳಾಗಿವೆ. ಸುಮಾರು ಕ್ರಿ.ಶ.1230ರಲ್ಲಿ ಹರಿಹರನ ʻಬಸವರಾಜ ದೇವರ ರಗಳೆ ಬಸವಣ್ಣನನ್ನು ಕುರಿತ ಮೊದಲ ಕೃತಿಯಾದರೂ ಅಪೂರ್ಣವಾದ ಕಾರಣ
ಅದೇ ಶತಮಾನದಲ್ಲಿದ್ದ ಪಾಲ್ಕುರಿಕೆ ಸೋಮನಾಥನು ತೆಲುಗಿನಲ್ಲಿ ರಚಿಸಿರುವʻಬಸವಪುರಾಣಮು’ ಎಂಬ ಕೃತಿಯನ್ನು ನಂತರದ ಕಾಲದಲ್ಲಿ ಬಸವಣ್ಣನನ್ನು ಕುರಿತು ಕಾವ್ಯ-ಪುರಾಣ
ಬರೆದ ಭೀಮಕವಿ, ವಿರೂಪಾಕ್ಷ ಪಂಡಿತ, ಷಡಕ್ಷರದೇವ ಮುಂತಾದವರೆಲ್ಲಾ ಅನುಸರಿಸಿದ್ದಾರೆ. ಬಹುಶಃ ಪಾಲ್ಕುರಿಕೆ
ಸೋಮನಾಥನ ಬಸವಪುರಾಣವನ್ನು ಅನುಸರಿಸಲು ಈ ಪುರಾಣದಲ್ಲಿ ನಿರೂಪಿತವಾದ ಬಸವಣ್ಣನ ಕಾಲದ ಶಿವಶರಣರುಗಳ
ಜೀವನ ಕಥನದ ವಿವರವೂ ಕಾರಣವಾಗಿರಬೇಕು. ಪಾಲ್ಕುರಿಕೆ ಸೋಮನಾಥನ ತೆಲುಗು ಬಸವ ಪುರಾಣವನ್ನು ಭೀಮಕವಿಯು ಕನ್ನಡಕ್ಕೆ ರೂಪಾಂತರಿಸುವುದರ ಮೂಲಕ ನಂತರದ ವೀರಶೈವ ಕವಿಗಳಿಗೆ ಪುರಾಣ ರಚನಾ ಪದ್ಧತಿಗೆ ಅಡಿಪಾಯವನ್ನು ಹಾಕಿಕೊಟ್ಟನು. ಭೀಮಕವಿಯ ಬಸವ ಪುರಾಣ ಕಾವ್ಯದಲ್ಲಿ ಬಸವಣ್ಣನವರ ಜೀವಿತ ವೃತ್ತಾಂತವೇ ಮುಖ್ಯವಲ್ಲ. ಬಸವ ಪೂರ್ವದ,
ಬಸವ ಸಮಕಾಲೀನ ಶಿವಶರಣರ, ಶಿವನ ಭಕ್ತರ, ತಮಿಳುನಾಡಿನ ನಾಯನ್ಮಾರರ ಕಥೆಯೂ
ಇಲ್ಲಿ ಪ್ರಧಾನ. ಮೂಲಕಥೆಗೆ ಪೋಷಕವಾಗಿ ನೂರಾರು ಉಪಕಥೆಗಳು
ಬರುತ್ತವೆ. ಅವುಗಳ ಅರ್ಥಪೂರ್ಣವಾದ ಜೋಡಣೆಯೇ ಈ ಬಸವ ಪುರಾಣದ ರಚನಾ ವಿನ್ಯಾಸದ ವಿಶೇಷ. ಈ ವಿಷಯದಲ್ಲಿ ಗರುಣಿಯ ಬಸವಲಿಂಗನು ಹೊರತಾಗಿಲ್ಲ. ಈತನು
ಬಸವಣ್ಣನನ್ನು ಕುರಿತು ಸಾಂಗತ್ಯ ಪ್ರಕಾರದಲ್ಲಿ ಕಾವ್ಯ ರಚಿಸಲು ಪಾಲ್ಕುರಿಕೆ ಸೋಮನಾಥ ಹಾಗೂ ಭೀಮಕವಿಗಳ
ಬಸವಪುರಾಣಗಳಿಗೆ ಋಣಿಯಾಗಿರುವುದಾಗಿ ಕೆಳಕಂಡ ಪದ್ಯದಲ್ಲಿ ಹೇಳಿಕೊಂಡಿದ್ದಾನೆ.
ಸೋಮೇಶ ತೆಲುಗಿನೊಳ್ ಪ್ರೇಮದಿ ರಚಿಸಿದು
ದ್ದಾಮ ಬಸವ ಪುರಾಣವನು
ಕೋಮಲ ಕರ್ನಾಟಕ ಭಾಮಿನಿಯಿಂ ಪೇಳ್ದ
ಭೀಮಕವೀಶಗೆರಗುವೆ ( ಸಂ.1. ಪ.ಸಂ.19)
ಗರುಣಿಯ ಬಸವಲಿಂಗನು ಹರಿಹರನನ್ನು ಅತ್ಯಂತ ಭಕ್ತಿಯಿಂದ ಸ್ಮರಿಸಿದ್ದರೂ,
ಹರಿಹರನು ರಚಿಸಿರುವ ಬಸವೇಶ್ವರನ ಜೀವನ ಚರಿತ್ರೆಯನ್ನು ಅನುಸರಿಸದೆ ಇತರೆ ಕವಿಗಳ ಹಾಗೆ ಪಾಲ್ಕುರಿಕೆಯ
ಸೋಮನಾಥ ಹಾಗೂ ಭೀಮಕವಿಯ ಬಸವ ಪುರಾಣದ ಕಥಾ ವಿಧಾನವನ್ನೇ ಅನುಸರಿಸಿದ್ದಾನೆ. ಬಸವಣ್ಣನ
ಬಗೆಗಿನ ಕೆಲವು ಸಂಗತಿಗಳನ್ನು ಪಾಲ್ಕುರಿಕೆ ಸೋಮನಾಥನು ಮೂರು ಸಾಲಿನಲ್ಲಿ ಹೇಳಿದ್ದರೆ, ಅದನ್ನು
ಭೀಮಕವಿಯು ಆರು ಸಾಲಿನಲ್ಲಿಯೂ ಗರುಣಿಯ ಬಸವಲಿಂಗನು ನಾಲ್ಕು ಸಾಲಿನಲ್ಲಿ ಹೇಳಿದ್ದಾನೆ. ಮೂಲಕ್ಕೆ ಭಂಗ
ಬರದ ರೀತಿಯಲ್ಲಿ ಭೀಮಕವಿ ಮತ್ತು ಗರುಣಿಯ ಬಸವಲಿಂಗರು ಸಂದರ್ಭೋಚಿತವಾಗಿ ವಿಷಯವನ್ನು ಹಿಗ್ಗಿಸಿ ಹೇಳುವ
ಮೂಲಕ ಪಾಲ್ಕುರಿಕೆ ಸೋಮನಾಥ ಹೇಳದೆ ಬಿಟ್ಟ ವಿವರಗಳನ್ನು ತಮ್ಮ ಕಾವ್ಯ-ಪುರಾಣಗಳಲ್ಲಿ ಪ್ರಸ್ತಾಪಿಸಿದ್ದಾರೆ.
ಭೀಮಕವಿಯು ಕನ್ನಡದಲ್ಲಿ ಬಸವಪುರಾಣವನ್ನು ಹದಿನಾಲ್ಕನೇ
ಶತಮಾನದಲ್ಲಿ ರಚಿಸಿದ್ದ ಈತನನ್ನು ಅನುಸರಿಸಿಕೊಂಡು ಹದಿನೇಳನೇ ಶತಮಾನದಲ್ಲಿ ಗರುಣಿಯ ಬಸವಲಿಂಗನು ಬಸವೇಶ್ವರನ
ಕಾವ್ಯವನ್ನು ಸಾಂಗತ್ಯ ಪ್ರಕಾರದಲ್ಲಿ ರಚಿಸಿದನು. ಆಮೇಲೆ ಈ ಗ್ರಂಥವೇ ಜನಪ್ರಿಯವಾಗಿ ಪರಿಣಮಿಸಿದೆ.
ಬಸವಣ್ಣ ಚರಿತ್ರೆ ರಗಳೆ ಸಾಂಗತ್ಯ ಕೃತಿಗಳಲ್ಲಿ ನಿರೂಪಿತವಾಗಿರುವಷ್ಟೂ ಉದಾತ್ತವಾಗಿ ಪುರಾಣ ರೂಪದ
ಕಾವ್ಯಗಳಲ್ಲಿ ನಿರೂಪಿತವಾಗಿಲ್ಲವೆಂಬುವ ಅಂಶ ಗಮನಿಸತಕ್ಕದ್ದು. ಬಸವೇಶ್ವರನ ಕಾವ್ಯ ಕನ್ನಡದಲ್ಲಿ ಹೊಸ
ಪ್ರಸ್ಥಾನವೊಂದಕ್ಕೆ ನಾಂದಿ ಹಾಡಿದ ಕಾವ್ಯವೆಂಬುದನ್ನು ಮರೆಯಬಾರದು. ಒಟ್ಟಾರೆ ಹರಿಹರ ಹಾಗೂ ಪಾಲ್ಕುರಿಕೆ ಸೋಮನಾಥರ ಕಾವ್ಯ-ಪುರಾಣಗಳಿಂದ
ಹಿಡಿದು ಇಂದಿನವರೆಗೂ ಬಸವಣ್ಣನವರ ಕಥೆ ಜನಮನದಲ್ಲಿ ಜಾಗೃತಾವಸ್ಥೆಯಲ್ಲಿದೆ. ಬಸವಣ್ಣನವರನ್ನು ಕುರಿತು
ಸ್ವತಂತ್ರ ಕಾವ್ಯವನ್ನು ರಚಿಸಿದವರಲ್ಲಿ ಭೀಮಕವಿಯ
ಹಾಗೆ ಗರುಣಿಯ ಬಸವಲಿಂಗನೂ ಒಬ್ಬನು. ಸಾಂಗತ್ಯ ಪದ್ಯ ಪ್ರಕಾರದಲ್ಲಿ ಬಸವಣ್ಣನವರ ಜೀವನದ ಪರಿಪೂರ್ಣ
ಚಿತ್ರಣವನ್ನು ಈ ಕಾವ್ಯದಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾನೆ.
ಜೀವಿತದ ಕಾಲಾವಧಿಯು ಕ್ರಿ.ಶ.ಸುಮಾರು ಹದಿನೇಳನೆಯ
ಶತಮಾನದ ಉತ್ತರಾರ್ಧವಾಗಿರುತ್ತದೆ. ಇದೇ ಪರಂಪರೆಯಲ್ಲಿ
ಬಂದ ಕವಿ ಗರುಣಿಯ ಬಸವಲಿಂಗನ ಕಾಲಾವಧಿಯು ಕ್ರಿ.ಶ.ಸುಮಾರು ಹದಿನೇಳನೆಯ ಶತಮಾನದ ಪೂರ್ವಾರ್ಧವೆಂದು
ಸುಲಭವಾಗಿ ಊಹಿಸಬಹುದು.
ಸಾಂಗತ್ಯ ಪ್ರಕಾರದ ಪ್ರಸ್ತುತ ಕೃತಿಯಲ್ಲಿ ಒಟ್ಟು
19 ಸಂಧಿಗಳು, ಮೂರು ಸಾವಿರದ ನೂರಾ ಎಂಟು ಪದ್ಯಗಳಿವೆ. ಈ ಕೃತಿಯ ಕಾವ್ಯದ ಮುಖ್ಯ ಕಥಾವಸ್ತು ಬಸವೇಶ್ವರನ
ಜೀವನ ಹಾಗೂ ಆತನ ಪವಾಡಗಳನ್ನು ಕುರಿತಾದದ್ದಾಗಿದೆ. ಕವಿಯು ತನ್ನ ಕಾವ್ಯಕೃತಿಯಲ್ಲಿ ನಿರೂಪಿಸಿರುವ
ಕಥಾಪ್ರಸಂಗ ಹಾಗೂ ಪಾತ್ರಸೃಷ್ಟಿಯು ಭಿನ್ನವಾದದ್ದು. ಮುಖ್ಯವಾಗಿ ಬಸವೇಶ್ವರನನ್ನೇ ಕಥಾನಾಯಕನನ್ನಾಗಿ
ಮಾಡಿಕೊಂಡು ಆತನನ್ನು ಭಕ್ತಿ ಗೌರವದಿಂದ ನೆನೆದಿದ್ದಾನೆ. ಶರಣರ ಜೀವನವನ್ನು ಕುರಿತಂತೆ ಅನೇಕ ಕಥೆ
ಉಪಕಥೆಗಳನ್ನು ಹೇಳುವುದರ ಮೂಲಕ ವೀರಶೈವ ಧರ್ಮ ಸಿದ್ಧಾಂತಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಈ ಕಥೆಯ
ಪಾತ್ರ ಪ್ರಮುಖವಾಗಿದೆ. ಪಂಡಿತರಿಗಷ್ಠೆ ಅಲ್ಲದೆ ಜನಸಾಮಾನ್ಯರಿಗೂ ತಿಳಿಯುವ ಹಾಗೆ ಚಿತ್ರಿಸುವುದರಲ್ಲಿ
ಗರುಣಿಯ ಬಸವಲಿಂಗ ಪ್ರಮುಖಪಾತ್ರ ವಹಿಸಿದ್ದಾನೆ. ಅಲ್ಲದೇ ಪ್ರತಿಯೊಂದು ಸಂಧಿಯ ಮುಕ್ತಾಯದ ಹಂತದಲ್ಲಿಯೂ
ಬಸವೇಶ್ವರನನ್ನು ಕುರಿತಾಗಿ,
ಇದುವೀರಶೈವ ಚಿನ್ನಿಧಿ ಬಸವೇಶನ ಪದಪದ್ಮ ಭೃಂಗ ಸದ್ವಿಮಳ
ಹೃದಯ ಬಸವಲಿಂಗ
ಮುದದಿ ಪೇಳಿದ ಕಾವ್ಯ ಎಂದು ನೆನೆದಿದ್ದಾನೆ. ಬಸವಲಿಂಗನು
ಬಸವಣ್ಣನವರನ್ನು ಒಬ್ಬ ವ್ಯಕ್ತಿಯಂತೆ ಚಿತ್ರಿಸುವುದಕ್ಕಿಂತ ಒಂದು ಮಹಾ ಪರಂಪರೆಯ ಅಂಗವಾಗಿ ನೋಡಲು
ಬಯಸುತ್ತಾನೆ. ಬಸವೇಶನ ಚೆಲ್ವೆಸೆವ ಪುರಾಣದ ಅಸಮ ಶರಣರ ಕಥೆಗಳ ವೃಷಭನ ಕಾವ್ಯದೊಳುಸಿರ್ದೆನು ಶಿವಗಣವಿಸರದ
ಕಾರುಣ್ಯದಿಂ ಎಂದು ಹೇಳಿಕೊಂಡಿದ್ದು ಈ ಕಾವ್ಯದಲ್ಲಿ ಶಿವಭಕ್ತರ ಕತೆಗಳ ಜೊತೆ ಸೇರಿಸಿಕೊಂಡಂತೆ ಬಸವನ
ಕತೆಯನ್ನು ಹೇಳುತ್ತೇನೆ ಎಂಬ ಮಾತು ಗಮನಾರ್ಹವಾಗಿದೆ. ಈತ ತನ್ನ ಕೃತಿಯಲ್ಲಿ ತೋಂಟದ ಸಿದ್ಧಲಿಂಗಯತಿಗಳನ್ನು, ರೇವಣ್ಣಸಿದ್ಧ ಹಾಗೂ ಮರುಳಸಿದ್ದರನ್ನು,
ಸಿದ್ಧರಾಮಯ್ಯ, ಹರಿಹರ, ರಾಘವಾಂಕ, ಪಾಲ್ಕುರಿಕೆ ಸೋಮನಾಥರನ್ನು ಸ್ಮರಿಸಿದ್ದಾನೆ. ಹರಿಹರನ ಕಾವ್ಯ
ಪರಂಪರೆಗಿಂತ ವಿಭಿನ್ನವಾದ ವಿಶಾಲವಾದ ಚರಿತೆಯೊಂದನ್ನು ಬರೆಯ ಬೇಕೆಂಬ ಉದ್ದೇಶವನ್ನು ಇಟ್ಟುಕೊಂಡವನಾಗಿದ್ದಾನೆ.
ಬಸವೇಶ್ವರನ ಕಾವ್ಯದಲ್ಲಿ ಬಸವಣ್ಣನ ಕತೆ ಆದಿ ಮತ್ತು ಅಂತ್ಯದಲ್ಲಿ ಬಂದಿದ್ದು ನಡುವೆ ಶಿವನ ಭಕ್ತರ,
ತಮಿಳುನಾಡಿನ ಶೈವ ಪುರಾತನರ ಹಾಗೂ ಕನ್ನಡ ನಾಡಿನ ಶರಣರ ಕತೆಗಳು ಸೇರ್ಪಡೆಯಾಗಿವೆ. ಗರುಣಿಯ ಬಸವಲಿಂಗನು
ಬಸವಣ್ಣನ ಜೀವನ ವೃತ್ತಾಂತವನ್ನು ಈ ಕಾವ್ಯದಲ್ಲಿ ಹೇಳಹೊರಟಿದ್ದರೂ ಅದಷ್ಟೇ ಅವನ ಉದ್ದೇಶವಲ್ಲ. ಬಸವಣ್ಣನ
ಜೀವನ ವೃತ್ತಾಂತ ನಿರೂಪಣೆ ಒಂದು ನೆಪವಾಗಿದ್ದು ಕೃತಿಯ ಉದ್ದಗಲಕ್ಕೂ ಶಿವಭಕ್ತರ ಕತೆಗಳು ಹಾಸು ಹೊಕ್ಕಾಗಿವೆ. ಬಸವಣ್ಣನ ಕತೆ ಇಲ್ಲಿ ಏಕಮುಖವಾಗಿಲ್ಲ.
ಚದುರಿ ಹೋಗಿದೆ. ಆದಾಗ್ಯೂ ಬಸವಣ್ಣನ ವ್ಯಕ್ತಿತ್ವ
ಪವಾಡಗಳಲ್ಲಿ ಮುಚ್ಚಿಹೋಗದಂತೆ ಸ್ವಲ್ಪ ಮಟ್ಟಿಗೆ ಕವಿಯು ಗಮನಹರಿಸಿದ್ದಾನೆ. ಬಸವ ಸಮಕಾಲೀನ ಶರಣ-ಶರಣೆಯರ
ಜೀವನವನ್ನು ಅವರ ಜೀವನ ಮೌಲ್ಯವಾದ ಭಕ್ತಿಯು ವಹಿಸಿದ ಪಾತ್ರವನ್ನು ಚಿತ್ರಿಸುವತ್ತ ಗಮನ ಹರಿಸಿದ್ದಾನೆ.
ಕವಿಯು ಬಸವಣ್ಣನ ಭಕ್ತಿಮಯ ಜೀವನಕ್ಕೆ, ಪವಾಡಗಳಿಗೆ ಸ್ಥಾನವನ್ನು ಕೊಟ್ಟಿದ್ದಾನೆ.
ಬಸವಣ್ಣನ ಜೀವನದ ಚರಿತ್ರೆಯೊಂದಿಗೆ ಆ ಕಾಲದ ಸಕಲ
ಶರಣರ ಕಥೆಗಳನ್ನು ವಿಲೀನಗೊಳಿಸಲಾಗಿದೆ. ಹಾಗೆಯೇ ಅನೇಕ ಪವಾಡಗಳನ್ನು ಮೆರೆಯಲಾಗಿದೆ. ಬಸವಣ್ಣನು ಬಿಜ್ಜಳನ
ಮಂತ್ರಿಯಾಗುವವರೆಗೆ ನೇರವಾಗಿ ಕಥೆ ಸಾಗುತ್ತದೆ. ಅಲ್ಲಿಂದ ಮುಂದೆ ಆ ಕಾಲದ ಶಿವಶರಣರ ಕಥೆಗಳನ್ನು ಹೇಳಿ
ಅವುಗಳನ್ನು ಬಸವಣ್ಣನ ಜೀವನದೊಂದಿಗೆ ಸಮೀಕರಿಸಲಾಗಿದೆ. ಇದರಿಂದಾಗಿ ಅನೇಕ ವೇಳೆ ಮೂಲ ಕಥೆಯ ಕೊಂಡಿ
ಕತ್ತರಿಸಿದಂತೆಯೂ ಆಗುತ್ತದೆ. ಆದರೆ ಭಕ್ತರನ್ನು ದೃಷ್ಟಿಯಲ್ಲಿಕೊಂಡ ಕವಿಗೆ ಸಕಲ ಶರಣರನ್ನು ಸಮೀಕರಿಸುವುದು
ಅಗತ್ಯವಾಗಿತ್ತು. ಆ ಕೆಲಸದಲ್ಲಿ ಬಸವಲಿಂಗ ಕವಿಯು ಯಶಸ್ವಿಯಾಗಿದ್ದಾನೆ. ಈತನ ಬಗ್ಗೆ ಗಮನಿಸಬೇಕಾದ
ಮತ್ತೊಂದು ಅಂಶವೆಂದರೆ ಜನಸಾಮಾನ್ಯರಿಗಾಗಿ ವೀರಶೈವ ಧರ್ಮ ಪ್ರಚಾರದಲ್ಲಿ ಈತ ನಿರತನಾಗಿದ್ದುದ್ದು.
ಬಸವಲಿಂಗ ಕವಿಯು ಅತ್ಯಂತ ಸರಳವಾದ ಭಾಷೆಯಲ್ಲಿ ತನ್ನ ಕಾವ್ಯವನ್ನು ಬೆಳೆಸಿಕೊಂಡು ಹೋಗಿದ್ದಾನೆ.ಕಿನ್ನರಿಯ
ಬ್ರಹ್ಮಯ್ಯ, ಕಲಕೇತದೇವ, ಮೋಳಿಗೆಯ ಮಾರಯ್ಯ, ಮುಸುಟಿಯ ಚೌಡಯ್ಯ ತಮ್ಮ ತಮ್ಮ ಮಹಿಮೆಗಳನ್ನು ಮೆರೆದ
ಪ್ರಸಂಗ. ಸುರಗಿಯ ಚೌಡಯ್ಯ, ತೆಲುಗು ಜೊಮ್ಮಯ್ಯ ಬಸವೇಶ್ವರನ ನಿದ್ರಾಮುದ್ರೆ, ಕಿನ್ನರಿ ಬೊಮ್ಮಯ್ಯರ
ಮಹಿಮೆಗಳ ವಿವರಣೆ, ಮೇದರ ಕೇತಯ್ಯ, ದಸರಿದೇವರುಗಳು ಪವಾಡಗಳನ್ನು ಮೆರೆದದ್ದು, ಗುರು ಭಕ್ತಾಂಡಾರಿ
ಪ್ರೌಢವತಿಯ ಮೇಲೆ ಆಸೆಪಟ್ಟ ಕಥೆ, ವೇಮನ್ನಾರಾಧ್ಯರು, ಚಿಕ್ಕಮಾದಣ್ಣ, ಕದಿರೆಮ್ಮಯ್ಯರ ಕಥೆಗಳು ಏಕಾಂತ
ರಾಮಯ್ಯನ ಕಥೆ, ಶಿವರಾತ್ರಿಗೆ ಹೋಗುತ್ತಿದ್ದ ಬಾಚರಸನನ್ನು ತಡೆಯಲು ಅವನು ಬಿಜ್ಜಳನನ್ನು ವಾದದಲ್ಲಿ
ಸೋಲಿಸಿದ ಕಥೆ.ಇವೆಲ್ಲವೂ ಬಸವೇಶ್ವರನ ಜೀವನದೊಂದಿಗೆ ಸೇರ್ಪಡೆಯಾಗಿರುವ ಕಥೆಗಳು ಮತ್ತು ಪವಾಡಗಳು.
ಹಾಗೆಯೇ ಬಸವಣ್ಣನವರ ಜೊತೆಗೆ ಇತರೆ ಶರಣರನ್ನು ಕುರಿತಾಗಿ ಗರುಣಿಯ ಬಸವಲಿಂಗ ಕವಿಯು ಉಲ್ಲೇಖಿಸಿದ್ದಾನೆ.
ಪಾಲ್ಕುರಿಕೆಸೋಮನಾಥ- ಭೀಮಕವಿ - ಗರುಣಿಯ ಬಸವಲಿಂಗ :
ಬಸವಣ್ಣನು ಒಬ್ಬ ಐತಿಹಾಸಿಕ ಪುರುಷನಾಗಿದ್ದರೂ ಆತನನ್ನು
ಪುರಾಣ ಪುರುಷನನ್ನಾಗಿಯೇ ಕನ್ನಡ ಕಾವ್ಯ-ಪುರಾಣಗಳಲ್ಲಿ ವರ್ಣಿಸಿರುವುದು ಕಂಡು ಬರುತ್ತದೆ. ಆತನ ಚರಿತ್ರೆ
ಕಾಲಾನುಕ್ರಮದಲ್ಲಿ ಆಯಾ ಭೌಗೋಳಿಕ ಪ್ರದೇಶಕ್ಕನುಗುಣವಾಗಿ ಹಾಗೂ ಕವಿಯ ಪ್ರತಿಭೆಗೆ ತಕ್ಕಂತೆ ಹಲವಾರು
ಮಾರ್ಪಾಡುಗಳನ್ನು ಹೊಂದಿವೆ. ಪಾಲ್ಕುರಿಕೆ ಸೋಮನಾಥನ ತೆಲುಗು ಬಸವಪುರಾಣಮು ಹಾಗೂ ಭೀಮಕವಿಯ ಕನ್ನಡ
ಬಸವ ಪುರಾಣ ಹಾಗೂ ಗರುಣಿಯ ಬಸವಲಿಂಗನ ಕಾವ್ಯಗಳ ಪ್ರಮುಖ ವ್ಯಕ್ತಿ ಬಸವಣ್ಣನೇ ಆಗಿದ್ದರೂ ಕವಿಗಳು ಪುರಾಣ ದೃಷ್ಟಿಯುಳ್ಳವರಾಗಿದ್ದಾರೆ. ಹೀಗಾಗಿ ಬಸವಣ್ಣನನ್ನು
ಒಂದು ಮಹಾ ಪರಂಪರೆಯ ಅಂಗವಾಗಿ ನೋಡಲು ಬಯಸಿದ್ದಾರೆ. ಈ ಪುರಾಣಗಳಲ್ಲಿ ಬಸವಣ್ಣನ ಜೀವಿತಾವಧಿಯಲ್ಲಿ
ನಡೆದಿರುವ ಸಂಗತಿಗಳು ಹಾಗೂ ಕಲ್ಪಿತವಾದವುಗಳು ಕಲಬೆರಕೆಯಾಗಿ ಹೋಗಿರುವುದು ಸ್ವಾಭಾವಿಕವಾಗಿದೆ.ಬಸವಣ್ಣನ
ಜೀವನಕ್ಕೆ ಸಂಬಂಧಿಸಿದ ಸಂಗತಿಗಳಿಗಿಂತ ಪವಾಡಗಳಿಗೆ ಹೆಚ್ಚಿನ ಆದ್ಯತೆ ದೊರೆತಿದೆ. ಬಸವಾದಿ ಪ್ರಮಥರು
ಇಟ್ಟ ಕ್ರಾಂತಿಕಾರಕ ಹೆಜ್ಜೆಯ ಗುರುತುಗಳು,ಅವರ ಕಾಯಕತತ್ವ, ಜಾತೀಯತೆಯ ಮನೋಭಾವ, ಸ್ತ್ರೀಪುರುಷರ ಸಮಾನತೆ
ಮುಂತಾದ ಪ್ರಗತಿಪರ ಧೋರಣೆಗಳನ್ನು ಅನುಷ್ಠಾನದಲ್ಲಿ ತರುವುದನ್ನು ಬಿಟ್ಟು ಸಪ್ಪೆಯಾಗಿ ಅವರ ಮಹಿಮೆಗಳನ್ನು
ಪವಾಡ ಕಥೆಗಳ ಮೂಲಕ ನಿರೂಪಿಸುವತ್ತ ಆಸಕ್ತಿ ವಹಿಸಿದ್ದಾರೆ. ಈಗಾಗಿ ಕಾಲಾಂತರದಲ್ಲಿ ಬಸವ ಚರಿತ್ರೆಯನ್ನು
ನಿರೂಪಿಸುವ ಕಾವ್ಯಪುರಾಣಗಳಲ್ಲಿ ನೈಜವಾದ ಘಟನೆಗಳು ಮರೆಯಾಗಿ ಪವಾಡ ಕಥೆಗಳ ಕೈ ಮೇಲಾಗಿವೆ. ಬಸವಣ್ಣನನ್ನು
ಕುರಿತ ಕಾವ್ಯ-ಪುರಾಣ ಪರಂಪರೆಗಳಲ್ಲಿ ಹರಿಹರ ಕವಿಯದ್ದು ಮೊದಲನೆ ಸಂಪ್ರದಾಯವಾದರೆ, ಪಾಲ್ಕುರಿಕೆ ಸೋಮನಾಥನದ್ದು
ಎರಡನೆ ಸಂಪ್ರದಾಯ. ಈ ಸಂಪ್ರದಾಯವನ್ನೇ ಹದಿನಾಲ್ಕನೇ
ಶತಮಾನದಲ್ಲಿದ್ದ ಭೀಮಕವಿ ಹಾಗೂ ಹದಿನೇಳನೆಯ ಶತಮಾನದಲ್ಲಿದ್ದ ಗರುಣಿಯ ಬಸವಲಿಂಗರು ಅನುಸರಿಸಿದ್ದಾರೆ.
ಪಾಲ್ಕುರಿಕೆ ಸೋಮನಾಥ, ಭೀಮಕವಿ, ಗರುಣಿಯ ಬಸವಲಿಂಗರು ಸಮಾನ ಕವಿ ಹೃದಯವುಳ್ಳವರು. ಅವರ ದೃಷ್ಟಿಯಲ್ಲಿ
ಬಸವಣ್ಣ ದೈವೀ ಪುರುಷ. ವೀರಶೈವ ಧರ್ಮ ಹಾಗೂ ಭಕ್ತರ ಉದ್ಧಾರಕ್ಕಾಗಿ ಧರೆಗುದಿಸಿ ಬಂದವನು. ಶಿವನ ಅಂಶವಾದ
ಬಸವಣ್ಣನ ಚರಿತ್ರೆಯನ್ನು ದೇಸಿ ಸಾಹಿತ್ಯ ಪ್ರಕಾರಗಳಾದ ದ್ವಿಪದ(ತೆಲುಗು ಬಸವ ಪುರಾಣ), ಭಾಮಿನಿ ಷಟ್ಪದಿ,
ಹಾಗೂ ಸಾಂಗತ್ಯಗಳಲ್ಲಿ ಇವರು ರಚಿಸಿದ್ದಾರೆ. ಈ ಮೂರು
ಕವಿಗಳು ದೇಸಿ ಛಂದಸ್ಸನ್ನು ಬಳಸುವುದರ ಮೂಲಕ ಅಪಾರ ಸಂಖ್ಯೆಯ ಓದುಗರನ್ನು ಪಡೆದವರು. ಈ ಮೂರು ಕೃತಿಗಳು
ಬಸವಣ್ಣ ನಂತಹ ವ್ಯಕ್ತಿಯೊಬ್ಬನ ಬದುಕನ್ನು ಪರಿಚಯಿಸದೇ ಸಾಂಸ್ಕೃತಿಕವಾಗಿ ಒಂದು ನಿರ್ದಿಷ್ಟಕಾಲದ ಇತಿಹಾಸವನ್ನು
ದಾಖಲುಮಾಡುವ ಸ್ವರೂಪದವುಗಳಾಗಿವೆ. ಪಾಲ್ಕುರಿಕೆ ಸೋಮನಾಥನ ಬಸವಪುರಾಣಮು ಏಳು ಆಶ್ವಾಸಗಳಲ್ಲಿ ಒಟ್ಟು
ಹನ್ನೆರಡು ಸಾವಿರದ ಆರುನೂರ ಹತ್ತು ಸಾಲುಗಳಲ್ಲಿ ರಚಿತವಾಗಿದ್ದರೆ, ಭೀಮಕವಿಯ ಬಸವ ಪುರಾಣವು ಎಂಟು
ಕಾಂಡಗಳಾಗಿ ವಿಭಾಗಿಸಲ್ಪಟ್ಟಿದ್ದು, ಒಟ್ಟು 63 ಸಂಧಿಗಳಲ್ಲಿ ಮೂರು ಸಾವಿರದ ಆರುನೂರ ಇಪ್ಪತ್ತೆಂಟು
ಪದ್ಯಗಳಲ್ಲಿ ರಚಿತವಾಗಿದೆ. ಗರುಣಿಯ ಬಸವಲಿಂಗನ ಬಸವೇಶ್ವರನ ಕಾವ್ಯವು ಹತ್ತೊಂಭತ್ತು ಸಂಧಿಗಳಲ್ಲಿ
ಮೂರುಸಾವಿರದ ನೂರೆಂಟು ಪದ್ಯಗಳನ್ನು ಒಳಗೊಂಡಿವೆ.ತೆಲುಗು ಬಸವಪುರಾಣಮು ಕೃತಿಯಲ್ಲಿ ಒಂದು ಆಶ್ವಾಸವು
ಎಲ್ಲಿಗೆ ಮುಗಿಯುತ್ತದೆಯೋ ಅಲ್ಲಿಗೆ ಕನ್ನಡ ಪುರಾಣಗಳಲ್ಲಿ ಒಂದು ಕಾಂಡ ಅಥವಾ ಸಂಧಿ ಮುಗಿಯುತ್ತವೆ. ಬಸವಣ್ಣನವರಿಗೆ ಸಂಬಂಧಿಸಿದ ಮತ್ತು ಅವರು ಮಾಡಿದ್ದರೆನ್ನಲಾದ
ಪವಾಡಗಳ ಬಗೆಗೆ ಪಾಲ್ಕುರಿಕೆ ಸೋಮನಾಥ, ಭೀಮಕವಿಗಳ ಕಾವ್ಯಪುರಾಣಗಳ ಜಾಡಿನಲ್ಲಿಯೇ ಹೊರಟ ಗರುಣಿಯ ಬಸವಲಿಂಗನ
ಕೃತಿಯು ಕೆಲವೆಡೆ ವಿಶಿಷ್ಟತೆಯನ್ನು ಪಡೆದಿದೆ. ಬಸವಣ್ಣನವರಿಗೆ ಸಂಬಂಧಿಸಿದ ಪವಾಡಗಳಲ್ಲಿ ಕೆಲವು ಅತ್ಯಂತ
ಸಹಜವಾಗಿ ನಡೆದ ರೀತಿಯಲ್ಲಿ ಚಿತ್ರಿತವಾಗಿದೆ.ಬಸವಣ್ಣನವರು ತಾವು ಆರಂಭಿಸಿದ ಸಮಾಜೋ-ಧಾರ್ಮಿಕ ಚಳುವಳಿಯ
ಹಿನ್ನೆಲೆಯಲ್ಲಿ ಕೆಲವು ಕಾರ್ಯಗಳನ್ನು ಎಸಗಿದ್ದು, ಅವು ಈ ಕವಿಗಳಿಗೆ ಪವಾಡಗಳೋಪಾದಿಯಾಗಿ ತೋರಿರಬಹುದು.
ಬಸವಣ್ಣನವರಿಗೆ ಜೀವನ ಚರಿತ್ರೆಗೆ ಸಂಬಂಧಿಸಿದ ಕೆಲವು ಪ್ರಸಂಗಗಳು ಈ ಮೂರು ಕಾವ್ಯಗಳಲ್ಲಿ ಒಡಮೂಡಿರುವ ರೀತಿಯನ್ನು ಗುರುತಿಸುವುದರೊಂದಿಗೆ ಬಸವಣ್ಣನವರನ್ನು ಕುರಿತ ಈ ಮೂರುಕಾವ್ಯಗಳಲ್ಲಿ ಗರುಣಿಯ ಬಸವಲಿಂಗ ಬಸವೇಶ್ವರನ ಕಾವ್ಯದಲ್ಲಿ
ಕಂಡು ಬಂದಿರುವ ಬಸವಣ್ಣನವರ ಸಂಗತಿಗಳ ವಿಶಿಷ್ಟತೆಯನ್ನು ಗುರುತಿಸಬಹುದಾಗಿದೆ.
ಜನನ
ಪ್ರಸಂಗ:
ನಂದೀಶ್ವರನು
ಶಿವನ ಆಜ್ಞೆಗನುಗುಣವಾಗಿ ಮಾದಾಂಬಿಕೆಯ ಮಗನಾಗಿ ಹುಟ್ಟುವ ಸನ್ನಿವೇಶ ಸೋಮನಾಥನಲ್ಲಿ ಹೀಗಿದೆ.
ಪ್ರೀತಿಯ ಮಗನು ಮುಗಿದಕೈಗಳೊಡನೆ
ಆ ತಾಯಗರ್ಭದಿನಂದುದಯಿಸಿದ
ನರ್ಧೋದಯದೊಳಗೆ ಆತನಲಿದ್ದ
ಅರ್ಧೇಂದುಮೌಳಿ ಗುಪ್ತಾಕೃತಿತಳೆದು
ಅಂಗದಮೇಲೆಲ್ಲ ಕಡುಸಾಂಗವಾಗಿ
ಲಿಂಗಸಾಹಿತ್ಯದ ಲೀಲೆಯಿಂಗೈದ(ತೆ.ಬ.ಪು.1-750,
60)
ಭೀಮಕವಿಯು
ಈ ಭಾಗವನ್ನು ಈ ರೀತಿಯಲ್ಲಿ ಅನುವಾದಿಸಿದ್ದಾನೆ.
ಪ್ರೀತಿಯಲಿ ಪುತ್ರನು ಕರಾಂಭೋ
ಜಾತಮುಕುಳಿತನಾಗಿ ಮೆಲ್ಲನೆ
ಮಾತೆಯುದರದೊಳುದಯಿಸಿಲು ಅರ್ಧೋದಯದೊಳಾಗ
ಆ ತನಯನೊಳಗಿಹ ಶಿವಂ ವಿ
ಖ್ಯಾತಗುರುವಾಕಾರಮಂ ತಾ
ಳ್ದಾತನಂಗದ ಮೇಲೆ ಲಿಂಗಾಸಮಂ ಮಾಡಿ(ಕ.ಬ.ಪು.3-24)
ಗರುಣಿಯ
ಬಸವಲಿಂಗ ಕವಿಯು ತನ್ನ ಬಸವೇಶ್ವರನ ಕಾವ್ಯದಲ್ಲಿ ಇದೇ ಪ್ರಸಂಗವನ್ನು ಈ ರೀತಿಯಲ್ಲಿ ಚಿತ್ರಿತವಾಗಿದೆ.
ಸುದತಿ ಚಿಂತಿಸಬೇಡ ಪದುಳದಿಂದಿರುನಿಲ್ಲ
ದುದಯಿಪಮತ್ತ ಮಸುಕಮ
ಚದುರೆ ಪೆಸರನಿಡು ಸದಮಲಪುತ್ರಗೆ
ಮುದದಿಂದೆ ಬಸವೇಶನೆಂದು(ಸಂಧಿ-2, ಪದ್ಯ-60)
ಕೃಪೆಯಿಂದ ವೃಷಭೇಶ ಸ್ವಪನಕೆ ಬಂದನು
ಸಫಲವಾದುದು ಯೆನ್ನಜನ್ಮ
ಕಪಟಗರ್ಭವಿದಲ್ಲ ಸುಪವಿತ್ರತರವೆಂದು(ಸಂಧಿ-2,
ಪದ್ಯ-62)
ಚಪಲಾಕ್ಷಿ ನಿಶ್ಚೈಸಿದಳು
ಮಾತೆಯ ಗರ್ಭದೊಳೀತೆರದಿಂದಿರ್ದ
ಪೂತಪತ್ರನು ಹೃದಯದೊಳು
ಸಾತಿಶಯದೊಳಿರ್ದ ಜ್ಯೋತಿಯಾಕಾರನು
ಪ್ರೀತಿಯಿಂದ ಬೋಧಿಸುತ್ತಿರ್ದ (ಸಂಧಿ-2, ಪದ್ಯ-64)
ಲಿಂಗಾಧಾರಣೆ
ಪ್ರಸಂಗ:
ಭೀಮಕವಿಯ ಬಸವಪುರಾಣದ ಪ್ರಕಾರ ಒಂದು ದಿನ ಮಾದಲಾಂಬೆ
ನಂದಿನಾಥನ ನಿಲಯವನ್ನು ಪ್ರವೇಶಿಸಿ ಪ್ರಾರ್ಥಿಸಿದಳೆಂದು, ಅವಳ ಮೊರೆಗೆ ಓಗೊಟ್ಟು ನಂದಿನಾಥನು ಅವಳ
ಕನಸಿನಲ್ಲಿ ಕಾಣಿಸಿಕೊಂಡು ಅನುಗ್ರಹಿಸಿ ಹುಟ್ಟಲಿರುವ ಮಗುವಿಗೆ ಬಸವೇಶನೆನ್ನುವ ಹೆಸರಿಡುವಂತೆಯೂ ತಿಳಿಸುವನು.
ನಂದಿಯು ಅದೃಶನಾಗುತ್ತಿದ್ದಂತೆಯೇ ಮಾದಲಾಂಬಿಕೆ ಗರ್ಭದಲ್ಲಿದ್ದ ಶಿಶುವು ಮಾತೆಯ ಉದರದಿಂದ ಹೊರಬಂದಿತು.
``ಆಗ ಶಿವನು ಗುರುವಿನ ರೂಪ ಧರಿಸಿ ಬಂದು ಮಗುವಿನ ಶರೀರದ ಮೇಲೆ ಲಿಂಗಧಾರಣೆ ಮಾಡಿ ಯಾರಿಗೂ ಗೊತ್ತಾಗದ
ರೀತಿಯಲ್ಲಿ ಮರೆಯಾದನು''ಎಂದು ಕವಿಯು ಬಸವಪುರಾಣದಲ್ಲಿ ಹೇಳಿದ್ದಾನೆ.
ಗರುಣಿಯ
ಬಸವಲಿಂಗ ಕವಿಯು ತನ್ನ ಬಸವೇಶ್ವರನ ಕಾವ್ಯದಲ್ಲಿ ಮಾದಲಾಂಬಿಕೆಗೆ ಒಂಭತ್ತು ತಿಂಗಳು ಕಳೆದವು ಆದರೆ
ಮಾದಲಾಂಬಿಕೆಗೆ ಹೆರಿಗೆ ಆಗಲಿಲ್ಲ. ಒಂದು ದಿನ ವೃಷಭ ಆಕೆಯ ಕನಸಿನಲ್ಲಿ ಕಾಣಿಸಿಕೊಂಡು ತಾನು ಯಾವ ತೊಂದರೆಯನ್ನು
ಕೊಡದೆ ಅವತರಿಸುವುದಾಗಿ ಆಶ್ವಾಸನೆ ನೀಡಿದನು. ಅದರಂತೆ ಆತನು ಮಾದಲಾಂಬಿಕೆಯ ಗರ್ಭದಿಂದ ಭೂಲೋಕದಲ್ಲಿ
ಅವತರಿಸಿದನು. ``ಮಗುವು ಹುಟ್ಟುವಾಗಲೇ ಕೊರಳಲ್ಲಿ ಆತ್ಮಲಿಂಗವನ್ನು, ರುದ್ರಾಕ್ಷಿಯನ್ನು, ಸರ್ವಾಂಗದಲ್ಲಿ
ವಿಭೂತಿಯನ್ನು ಹೊಂದಿತ್ತು
ಉರದೊಳೊಪ್ಪುವ ಸೆಜ್ಜೆ ಕೊರಲ ರುದ್ರಾಕ್ಷಿಯು
ಸರುವಂಗದಲ್ಲಿ ಲೇಪಿಸಿದ
ವರಭಸ್ಮವ್ಪೊಪುವ ದರಹಸನವುಮಿಗೆ
ಮಿರುಗುವ
ಸುಲಿಪಲ್ಬವರಿಯ(ಸಂಧಿ-2, ಪದ್ಯ-68 )
ಆದರೆ ಮಗುವು ಕಣ್ಣು ತೆರೆಯಲಿಲ್ಲ, ಅಳಲಿಲ್ಲ. ಆಗ ತಾಮ್ರಕುಂಡಲಿ,
ರತ್ನಗಂಬಳಿ, ನೊಸಲ ತ್ರಿಪುಂಡ್ರ, ಜಡೆಯಿಂದ ಶೋಭಿಸುತ್ತಿದ್ದ ಮುನಿಯೊಬ್ಬ ಅಲ್ಲಿಗೆ ಬಂದು ಅವನ ಹೆಸರು
ಸಂಗಮೇಶ್ವರನೆಂದು ಆ ಮಗುವು ಧರ್ಮೋದ್ಧಾರಕ್ಕಾಗಿ ಅವತರಿಸಿದವನೆಂದು ಅಸಮಾನ್ಯನೆಂದು ಆತನಿಗೆ ಬಸವನೆಂದು
ಹೆಸರಿಡಬೇಕೆಂದು ಸೂಚಿಸಿದನು. ಮಗುವಿನ ಕಿವಿಯಲ್ಲಿ ``ಓಂ ನಮಃ ಶಿವಾಯ'' ಎಂಬ ಷಡಕ್ಷರ ಮಂತ್ರವ ಊದಿದನು.
ಆಗ ಮಗುವು ಕಣ್ಣು ತೆರೆಯಿತು. ಮಾದರಸ ಮಾದಲಾಂಬಿಕೆಯರು ಸಂಗಮೇಶ್ವರನ ಅಪ್ಪಣೆಯಂತೆ ಆ ಮಗುವಿಗೆ ಬಸವಣ್ಣನೆಂದು
ನಾಮಕರಣ ಮಾಡಿದರು. ಆದರೆ ಬಸವಪುರಾಣದಲ್ಲಿ ಅವಳ ಕನಸಿನಲ್ಲಿ ಕಾಣಿಸಿಕೊಂಡು ಹುಟ್ಟಲಿರುವ ಮಗುವಿಗೆ
ಬಸವೇಶನೆನ್ನು ಹೆಸರಿಡುವಂತೆ ತಿಳಿಸಿದ ವಿವರವಿದ್ದರೆ, ಗರುಣಿಯ ಬಸವಲಿಂಗನ ಕೃತಿಯಲ್ಲಿ ಈ ಘಟನೆ ಅತ್ಯಂತ
ಸಹಜವಾಗಿ ಹಾಗೂ ವಿಸ್ತೃತವಾಗಿ ಮೂಡಿ ಬಂದಿದೆ.
ಉಪನಯನ
ತಿರಸ್ಕಾರ ಪ್ರಸಂಗ: ಬಸವಣ್ಣನ
ಉಪನಯನದ ಮಾತು ಬಂದಾಗ ತನ್ನ ತಂದೆಯೊಡನೆ ವಾದಿಸುತ್ತ ಶಿವಶಕ್ತಿ ಮಾರ್ಗದ ಸ್ವರೂಪವನ್ನು ವಿವರಿಸುವ
ಮಾತುಗಳು ಸೋಮನಾಥನಲ್ಲಿ,
ಅಲ್ಲದೆ ಷಡ್ದರ್ಶನಾತೀತವಾದ
ಮದನಾರಿಸದ್ಭಕ್ತಿಮಾರ್ಗವ ಕೇಳು
ಶ್ರುತಿ `ವಿಶ್ವತಶ್ಚಕ್ಷುಋತ’ವೆಂದು ಹೊಗಳೆ
ಸ್ತುತಿಯ ಮೀರಿದ ಅತಿಸೂಕ್ಷ್ಮದರೂಪ
ಆದಿಗೆ ಆದಿ ನಿತ್ಯಾನಂದನೂರ್ತಿ
ಶ್ರೀದಿವ್ಯಮೂರ್ತಿಯು ತಾನೆ ಸುದೈವ
ಇಂತಹೀಶ್ವರನನಾತ್ಮದಿಹೊಂದಿ ಕರದಿ
ಹಿಡಿದಿರುವಂತಹ ಪೃಥುದಯಾಮೂರ್ತಿ
ಪ್ರಕಟಿಸೆ `ನಗುರೋರಧಿಕ'ವೆನೆ ಮೆರೆವ
ಸಕಲಸ್ವರೂಪ ಮತ್‍ಸಮಯಸದ್ಗುರುವು
ಮಂತ್ರಕೆಲ್ಲಕು ರಾಜಮಂತ್ರವಾಗಿರುವ
ಮಂತ್ರವು ತಾನದಕಾ ಷಡಕ್ಷರಿಯು
ಭವದೂರವಹ ಜಟಾಭಸಿತರುದ್ರಾಕ್ಷ
ಸವಿಶೇಷಮೋಕ್ಷಾನುಸಾರಿ ವೇಷವದು (ತೆ.ಬ.ಪು.1-949,
962)ಎಂದು ನಿರೂಪಿಸಿದ್ದರೆ, ಇದನ್ನು ತನ್ನ ಭಾಮಿನಿಷಟ್ಪದಿಗಳಲ್ಲಿ
ಭೀಮಕವಿಯು ಈ ರೀತಿಯಾಗಿ ಚಿತ್ರಿಸಿದ್ದಾನೆ.
ಇತ್ತಕೇಳ್ ಷಡುದರ್ಶನಾತೀ
ತ್ತೋತ್ತಮದ ಶಿವಭಕ್ತಿಮಾರ್ಗಾ
ಯತ್ತವಂ ಶ್ರುತಿವಿಶ್ವತಃ ಚಕ್ಷುರುತವೆಂದೆನುತ
ಒತ್ತಿಪೊಗಳುವ ನಿಗಮತತಿಗರು
ಮೀತ್ತತ್ತವ ಸೂಕ್ಷ್ಮರೂಪಮ
ಹತ್ತರಂ ತಾನಾದಿಗಾದಿಯೆನಿಪ ಪರಂಜ್ಯೋತಿ
ಇಂತೆಸೆವ ಶಿವನೆಮಗೆ ದೈವನ
ನಂತಮಹಿಮನನೆಮ್ಮ ಚಿತ್ತಾ
ಭ್ಯಂತರದೊಳೊಂದಿಸಿ ಕರಸ್ಥಲದಿಂ ಪಿಡಿಸಲಾಪ
ಸಂತತಾಮಳ ಕೀರ್ತಿಕರುಣಾ
ವಂತಮೂರ್ತಿ ಪ್ರಕಟಿಸುವಡ
ತ್ಯಂತ ತೇಜೋವರ್ತಿ ಮತ್ ಸಮಯಸದ್ಗುರುವು
ಮೂಜಗಕ್ಕೆ ರುದ್ರಾಕ್ಷಿ ಸಿತರ
ಕ್ಷಾಜಟಾವಳಿ ನಿತ್ಯಮುಕ್ತಿಗೆ
ನೈಜವಪ್ಪನುಸಾರಿವೇಷವು ಭವನಿವಾರಣವು ಯೋಜಿಸಲು ಮಾತ್ರಂಗಳಿಗೆ ಮಿಗೆ
ರಾಜ ಮಂತ್ರಿವಿದೆಂದೆನಿಸಿ ವಿ
ಭ್ರಾಜಿಸುವವೀ ಮಂತ್ರವಿದಕೆ ಷಡಂಗವೆನಲಿಹುದು
(ಕ.ಬ.ಪು ಸಂಧಿ-3, ಪದ್ಯ-66ರಿಂದ
68)
ಗರುಣಿಯ ಬಸವಲಿಂಗ ಕವಿಯು ತನ್ನ ಸಾಂಗತ್ಯ ಕೃತಿ ಬಸವೇಶ್ವರನ
ಕಾವ್ಯದಲ್ಲಿ ಇದನ್ನು ಅಲ್ಪ-ಸ್ವಲ್ಪ ವ್ಯತ್ಯಾಸಗಳನ್ನು ಮಾಡಿಕೊಂಡು ವಿಸ್ತೃತವಾಗಿ ಈ ಮುಂದಿನ ಪದ್ಯಗಳಲ್ಲಿ
ಹೀಗೆ ಹೇಳಿದ್ದಾನೆ.
ಧರ್ಮಸ್ವರೂಪನಿಃಕರ್ಮಿನಂದಿಗೆ ಮುಂಜಿ
ಕರ್ಮವ ಮಾಡಬೇಕೆನುತ
ಪೆರ್ಮಯಿಂ ಮಾದರಸರ್ಮಾದಲಾಂಬಿಕೆಯ
ರ್ವರ್ಮನವಾಗಿ ಪೇಳಿದರು
ಕೇಳಿ ಮುಗಳ್ನಗೆದಾಳಿ ಶಿವನಭಕ್ತ
ಜಾಳಾದಾರ ಪದ್ಧತಿಯ
ಏಳಿಗೆಯರಿಯದೆ ಪೇಳುತಿರ್ದಪನೆಂ
ದಾಳೋಚಿಸಿದನು ಚಿತ್ತದೊಳು
ಜಗದಾರಾಧ್ಯನೆನಗೆ ಗುರುರೂಪಾಗಿ
ಮಿಗೆ ದೀಕ್ಷೆಯಿತ್ತು ಶಿರದೊಳು
ಬಗೆಗೆ ಕಾಣಿಸದೆ ಮಿನುಗುವ ಚಿತ್ಕಳೆಯನು
ತೆಗೆದಿತ್ತನು ಕರತಳಕೆ
ಬಸವಣ್ಣನೆಂದೆನ್ನ ಪೆಸರಿಟ್ಟ ನಿಮಗೆಸೂ
ಚಿಸಿ ಪೋದುದ ಮರೆದಿರೆ
ಅಸಮಾಕ್ಷ ದೀಕ್ಷೆಯ ಪುಸಿಮಾಡಿ ಮುಂಜಿಯ
ನೆಸಗುವದುಚಿತವಲ್ಲೆಂದ
ಅಟ್ಟುದನಡುವರೆ ಸುಟ್ಟುದ ಸುಡುವರೆ
ಇಷ್ಟು ಪ್ರಾಣವು ಭವ ಮೂರೇ
ಶ್ರೇಷ್ಠದೀಕ್ಷಾತ್ರಯದಿಷ್ಟದಿಂ ಪಡೆದಂಗೆ
ಕಷ್ಟೋಪನಯನ ವೇಕೆಂದ(ಸಂಧಿ-2, ಪದ್ಯ-92ರಿಂದ
97)
ಸಾರುತ ಶ್ರುತಪೇಳಿ ತೋರುತಿಹವು ಕೇಳು
ಬೇರೆ ದೈವವು ಬೇರೆಮಂತ್ರ
ಬೇರೆಗುರೂಪದೇಶ ಬೇರೆ ಕ್ರಿಯಾಚಾರ
ಬೇರೆಂದು
ವಿಪ್ರ ಸಂಕುಳಕೆ
ಶ್ರುತಿವಿಶ್ವತಶ್ಚಕ್ಷುರುತವೆಂದೆನುತ
ತಮ್ಮ
ಮತಿಗೆಟ್ಟದಿರದೈದಂಗುಲವು
ಮಿತವಾಗಿ ಮೇಲಿರ್ಪುದತಿಶಯವಾಗೆಂದು
ನುತಿಸುತಿರ್ಪವು ಪರಶಿವನ
ಈ ತೆಱದಿಂದರ್ಪ ಭೂತೇಶಭಕ್ತರು
ಸಾತಿಶಯಾರ್ಥವಱಿಯದೆ
ಹೋತನಕುಂದುಂಬ ಪಾತಕ ವಿಪ್ರರ
ನೀತಿಯ ಪೇಳದಿರೆನಗೆ (ಸಂಧಿ-2, ಪದ್ಯ-113ರಿಂದ 116) ಎಂಬ ಮಾತಿಗೆ ಬಸವಣ್ಣನ
ತಂದೆತಾಯಿಗಳು, ಹಾರುವ ಕುಲವನು ತೂಱಿ ಕಳೆದೆಯಲ್ಲ
ಹಾರುವರಿನ್ನು ಕೇಳಿದೊಡೆ
ಸಾಗಲೀಸರು ನಿನ್ನ ಹಾರುವ ಕುಲದೊಳಿ
ದಾರಿಗೊಪ್ಪಿಗೆ ಬಸವರಸ ಎಂದು ಬುದ್ಧಿವಾದ ಹೇಳುತ್ತಾರೆ. ಅದಕ್ಕೆ ಬಸವಣ್ಣನು,
ಕುಲವಂತ ಮಾದಯ್ಯ ಕೆಲಸಾರು ಹಿಂದಕೆ
ಕುಲರಹಿತನು ನಾನು ಬಸವ
ಕುಲವಂತ ಚನ್ನಯ್ಯನೊಲುಮೆಯ ಮಗ ನಾನು
ತೆಲುಗ ಜೊಮ್ಮಯ್ಯನೆಮ್ಮಯ್ಯ
ಅಯ್ಯ ನನಗೆ ವೇಮಯ್ಯ ಚೇರಮ ಕಕ್ಕಯ್ಯ
ಕ್ಕಯ್ಯ ದೊಡ್ಡಯ್ಯನೆಮ್ಮಯ್ಯ
ಅಯ್ಯನೆನಗೆ ಗೊಲ್ಲಾಳಯ್ಯನು ಮೊದಲಾ
ದಯ್ಯಗಳುಂಟು ಕೇಳಿನ್ನು
ಎಮ್ಮವರಿವರು ಕೇಳೆಮ್ಮಾಚಾರಕೆ
ನಿಮ್ಮಾಚಾರಂಗಳಿಗೆ?
ಒಮ್ಮೆಯುಕೂಡದು ಸುಮ್ಮನಿರೆಂದನು(ಸಂಧಿ-2,ಪದ್ಯ-124ರಿಂದ
127)
ಇಲ್ಲಿ ಮೂಲದ ಭಾವವನ್ನು ಹಿಡಿದು ಕ್ರಮವನ್ನು ಆದಷ್ಟು
ಅನುಸರಿಸಿದೆ. ಮುಖ್ಯ ವಿಷಯಗಳನ್ನು ಬಿಡದೆ ಅತ್ಯಂತ ಮುಖ್ಯ ಪದಸಮುಚ್ಛಾಯವನ್ನು ಯಥಾಃರೀತಿ ಇರಿಸಿಕೊಂಡು
ಭೀಮಕವಿಯು ದ್ವಿಪದವನ್ನು ಭಾಮಿನಿ ಷಟ್ಪದಿಯಾಗಿಸಿದ್ದರೆ, ಅದೇ ರೀತಿಯಲ್ಲಿಯೇ ಗರುಣಿಯ ಬಸಲಿಂಗನು ಮುಂದುವರೆದಿದ್ದರೂ
ಉಪನಯನದ ಸಂದರ್ಭವನ್ನು, ತಂದೆ-ತಾಯಿಗಳು ನಡೆದುಕೊಂಡ ರೀತಿಯನ್ನು ಅದಕ್ಕೆ ಬಸವಣ್ಣನು ತರ್ಕಬದ್ಧವಾಗಿ
ವ್ಯಕ್ತಪಡಿಸಿದ ರೀತಿಯನ್ನು ವಿವರಿಸುವುದರೊಂದಿಗೆ
ಸಹಜತೆಯನ್ನು ತೋರಿದ್ದಾನೆ. ಗರುಣಿಯ ಬಸವಲಿಂಗನ ಈ ಪ್ರಸಂಗದಲ್ಲಿ ಬಸವಣ್ಣನ ವಚನಗಳ ಪ್ರಭಾವದ
ಛಾಯೆಯನ್ನು ಗುರುತಿಸಬಹುದು.
ಗರುಣಿಯ ಬಸವಲಿಂಗನು ಪಾಲ್ಕುರಿಕೆ ಮತ್ತು ಸೋಮನಾಥರ ಪುರಾಣಗಳಲ್ಲಿ ನಿರೂಪಿತವಾಗಿರುವ ಪವಾಡಗಳ ಉಲ್ಲೇಖದ ಜೊತೆಗೆ ಸಾಂಗತ್ಯ ರೂಪದ
ತನ್ನ ಬಸವೇಶ್ವರ ಕಾವ್ಯದಲ್ಲಿ ಇನ್ನೂ ಅನೇಕ ಪವಾಡಗಳನ್ನು ಹೇಳಿದ್ದಾನೆ. ಅವುಗಳು ಹೀಗಿವೆ.
1.ಮತ್ತೊಬ್ಬ ಹೆಂಗಸಿನ ದ್ರವ್ಯವನ್ನು ದಾನ ಮಾಡಿದ ಪವಾಡ
2.ಅಪಾರ ದ್ರವ್ಯ ಲಭಿಸುವಂತೆ ಮಾಡಿದ ಪವಾಡ.
3.ಚೋರರನ್ನು ಭಕ್ತರನ್ನಾಗಿ ಮಾಡಿದ ಪವಾಡ.
4.ಹಣೆಯಲ್ಲಿ ಉರಿಗಣ್ಣನ್ನು ತೋರಿಸಿದ ಪವಾಡ.
ಗರುಣಿಯ
ಬಸವಲಿಂಗನ ಕಾಲಕ್ಕೆ ಬಸವಣ್ಣನ ಪವಾಡ ಕಥೆಗಳಲ್ಲಿ ಬೆಳವಣಿಗೆಯಾಗಿರುವುದನ್ನು ಕಾಣಬಹುದು. ಹರಿಹರ, ಪಾಲ್ಕುರಿಕೆ,
ಭೀಮಕವಿಯರ ಕಾವ್ಯ-ಪುರಾಣಗಳಲ್ಲಿ ಕಂಡುಬರದೇ ಇರುವ ನಾಲ್ಕು ಪವಾಡಗಳನ್ನು ಗರುಣಿಯ ಬಸವಲಿಂಗನು ಪ್ರಸ್ತಾಪ
ಮಾಡಿದ್ದಾನೆ. ಬಹುಶಃ ಬಸವಣ್ಣನ ಪವಾಡಗಳ ಬಗೆಗೆ ಜನವದಂತಿಯಲ್ಲಿದ್ದ ವಿವರವನ್ನು ಕೇಳಿರಬೇಕೆಂದೆನಿಸುತ್ತದೆ.
ಬಸವಣ್ಣನ ಜೀವಿತದ ಕೊನೆಯ ಘಟ್ಟದ ಪ್ರಸಂಗದ ವಿಷಯದಲ್ಲಿ
ಪಾಲ್ಕುರಿಕೆ ಸೋಮನಾಥ, ಭೀಮಕವಿ ಹಾಗೂ ಗರುಣಿಯ ಬಸವಲಿಂಗರ ಕಾವ್ಯಗಳಲ್ಲಿ ಸಾಮ್ಯತೆ ಇರುವುದನ್ನು ಮನಗಾಣಬಹುದಾಗಿದೆ.
ಪಾಲ್ಕುರಿಕೆ ಸೋಮನಾಥನು ಹೇಳಿರುವ ಬಸವಣ್ಣನು ಕೂಡಲಸಂಗಮದಲ್ಲಿ ಐಕ್ಯನಾದ ವಿಷಯವನ್ನೆ ನಂತರದ ಇವರೀರ್ವರು
ಯಾವುದೆ ಬದಲಾವಣೆ ಇಲ್ಲದೆ ಸ್ವೀಕರಿಸಿದ್ದಾರೆ.
ಹೀಗೆ ಶರಣರ ಜೀವನ ಚರಿತ್ರೆಯೊಂದಿಗೆ ಬಸವೇಶ್ವರನು ಹಲವು
ಪವಾಡಗಳನ್ನು ಮೆರೆದಿರುವುದನ್ನು ಕಾಣಬಹುದು. ಈ ಕೃತಿಯಲ್ಲಿ
ಬಸವಣ್ಣನು ಬಿಜ್ಜಳನ ಮಂತ್ರಿಯಾಗುವವರೆಗೂ ಕಥೆಗಳು ನೇರವಾಗಿ ಸಾಗುತ್ತದೆ. ನಂತರ ಆ ಕಾಲದ ಶರಣರ ಕಥೆಯನ್ನು
ಬಸವಣ್ಣನ ಜೀವನದೊಂದಿಗೆ ಸಮೀಕರಿಸುವುದು ಇದರಿಂದ ಹಲವು ಬಾರಿ ಮೂಲ ಕಥೆಯನ್ನು ತುಂಡರಿಸಿದಂತಾಗುತ್ತದೆ.
ಆದರೆ ಭಕ್ತರನ್ನು ಗಮನದಲ್ಲಿಟ್ಟುಕೊಂಡು ಕವಿಗೆ ಸಕಲ ಶರಣರನ್ನು ಸಮೀಕರಿಸುವುದು ಅವಶ್ಯವಾಗಿದೆ. ಅಲ್ಲಮಪ್ರಭುವಿನ
ಕತೆಯನ್ನು ಈ ಕಾವ್ಯದಲ್ಲಿ ಸುಮಾರು ಮೂವತ್ತು ಪದ್ಯಗಳಲ್ಲಿ ಸಂಗ್ರಹಿಸಿ ಕೊಟ್ಟಿದ್ದಾನೆ. ಈ ವಿವರವು
ಸಂಪೂರ್ಣವಾಗಿ ಚಾಮರಸನ ಪ್ರಭುಲಿಂಗಲೀಲೆಯ ಕಥೆಯನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಕವಿಯು ಶರಣರನ್ನು ಕುರಿತ ಪೂರ್ವದ ಕಾವ್ಯ-ಪುರಾಣಗಳನ್ನು
ಗಮನಿಸಿದ್ದಾನೆಂದು ಮನದಟ್ಟಾಗುತ್ತದೆ. ಹೀಗಾಗಿ ಆ ಕಾರ್ಯದಲ್ಲಿ ಬಸವಲಿಂಗ ಕವಿಯು ಪ್ರಮುಖನಾಗಿ ಕಾಣುತ್ತಾನೆ.
ಈತನ ಕಾವ್ಯದಲ್ಲಿ ನೂತನ ಹಾಗೂ ಪುರಾತನ ಶಿವಭಕ್ತರ ಹೆಸರುಗಳಲ್ಲಿ ಕೆಲವು ಅಲ್ಪಸ್ವಲ್ಪ ವ್ಯತ್ಯಾಸಗೊಂಡು
ಬಂದಿವೆ. ಉದಾಹರಣೆಗೆ, ಅನಿಮಿಶ ಕೇಶಿ,ಇಂಡೆಬ್ರಹ್ಮಯ್ಯ,ಗೋಡಲ ಮಲ್ಲಯ್ಯ,ಚಕ್ಕುಲಿಗೆಯ ಮುದ್ದಾಯಿ, ಧವಳೇಶ
ನಾಮಯ್ಯ ಕೋಮಾರ ಬ್ರಹ್ಮಯ್ಯ, ಕೊರಲಕೊಯ್ದಿತ್ತ ಚಾಮಯ್ಯ, ಕನ್ನದ ಬ್ರಹ್ಮಯ್ಯ, ಇತ್ಯಾದಿ.ಈತನು ತನ್ನ
ಸಾಂಗತ್ಯ ಕೃತಿಯಲ್ಲಿ ಬಸವಣ್ಣನ ಕಥಾಸೂತ್ರದೊಂದಿಗೆ ಇತರೆ ಶರಣರ ಕಥೆಗಳನ್ನು ಪೋಣಿಸಿ ಹೇಳುವಾಗ ತನ್ನ
ಕಾಲಕ್ಕೆ ಪ್ರಚಲಿತದಲ್ಲಿದ್ದ ಶರಣರಿಗೆ ಸಂಬಂಧಿಸಿದ ಹೊಸಕಥೆಗಳನ್ನು ಸೇರಿಸಿದ್ದಾನೆ. ಬಹುಶಃ ಶಿವಶರಣರ ಕಥೆಗಳು ವೀರಶೈವ ಧರ್ಮದ ವಿವಿಧ ಆಂಶಗಳನ್ನು
ಹೊರಗೆಡಹಬಲ್ಲವು ಎಂಬ ಕಾರಣ ಹಾಗೂ ವೀರಶೈವ ಧರ್ಮಕ್ಕೆ ಸಂಬಂಧಪಟ್ಟ ಕೆಲವು ಅಂಶಗಳು ಭಕ್ತರಿಗೆ ತಿಳಿಯಲಿ
ಎಂಬ ಸದುದ್ದೇಶದಿಂದ ಸೇರಿಸಿದ್ದಾನೆ ಎಂದೆನಿಸುತ್ತದೆ. ಈತನು ಪಾಲ್ಕುರಿಕೆ ಸೋಮನಾಥ ಹಾಗೂ ಭೀಮಕವಿಯ
ಬಸವ ಪುರಾಣಗಳಲ್ಲಿಯ ಕೆಲವು ಸಂದರ್ಭ ಸನ್ನಿವೇಶಗಳನ್ನು ಅಲ್ಲಲ್ಲಿ ಸ್ವಾತಂತ್ರವಹಿಸಿ ವಿಸ್ತರಿಸುವ
ಹಾಗೂ ಸಂಗ್ರಹಿಸುವ ಗುಣವನ್ನು ಪ್ರದರ್ಶಿಸಿದ್ದಾನೆ. ಮೂಲದ ಭಾವವನ್ನು ಗ್ರಹಿಸಿ ಅದಕ್ಕೆ ವ್ಯತ್ಯಯವಾಗದಂತೆ
ಆಕರ್ಷಕ ಹಾಗೂ ಸುಲಲಿತವಾಗಿ ಹೇಳುವ ಕೌಶಲ್ಯವನ್ನು ಹೊಂದಿದವನಾಗಿದ್ದಾನೆ. ಗರುಣಿಯ ಬಸವಲಿಂಗ ಕವಿಯು
ಚಿತ್ರಿಸುವ ಬಸವಣ್ಣ ಮುಖ್ಯವಾಗಿ ಭಕ್ತ, ಭಕ್ತ ಪಕ್ಷಪಾತಿ. ಅವನು ಪವಾಡ ಪುರುಷನೂ ಹೌದು. ಪೂರ್ವದ ಕವಿಗಳಲ್ಲಿಯ
ಉಲ್ಲೇಖಕ್ಕಿಂತ ಒಂದೆರಡು ಹೆಚ್ಚಿನ ಪವಾಡಗಳು ಕಾಣಿಸಿಕೊಂಡಿವೆ. ದೊಡ್ಡ ಸಮಾಜೋ ಧಾರ್ಮಿಕ ಆಂದೋಲನವೊಂದರ
ನಾಯಕನಾಗಿ ನಿಂತು ಸಾಮಾಜಿಕ ವ್ಯತ್ಯಾಸವನ್ನು ಘಟಿಸಲು ಶ್ರಮಿಸಿದ ಬಸವಣ್ಣನ ವ್ಯಕ್ತಿತ್ವ ಯಾವರೀತಿ
ಮೂಡಿದೆ ಎಂಬುದನ್ನು ಪರಿಶೀಲಿಸಲು ಹೊರಟಾಗ ಸ್ವಲ್ಪಮಟ್ಟಿಗೆ ನಿರಾಸೆಯಾಗುವುದುಂಟು. ಇಲ್ಲಿ ಭಕ್ತ ಬಸವಣ್ಣನ
ಚಿತ್ರಣದ ಅವಸರದಲ್ಲಿ ಕ್ರಾಂತಿಕಾರಿ ಬಸವಣ್ಣನ ಪಾತ್ರ ಚಿತ್ರಣ ಕಳೆಗುಂದಿದೆ. ಸಾಮಾಜಿಕ ನಾಯಕನಾಗಿ
ಬಸವಣ್ಣ ಬದುಕಿದ ಬಗೆಯ ಚಿತ್ರಣ ಗರುಣಿಯ ಬಸವಲಿಂಗಕವಿಯಲ್ಲಿ
ಪರಿಣಾಮಕಾರಿಯಾಗಿ ಬಂದಿಲ್ಲ. ಆ ವಿವರಗಳಿಗೆ ನಾವು ವಚನಗಳನ್ನೇ ಆಶ್ರಯಿಸಬೇಕಾಗುತ್ತದೆ.
ವರ್ಣನಾ ಶೈಲಿ: ಕಥೆಯ ಸಂವಿಧಾನ ಮತ್ತು ನಿರೂಪಣೆಯಲ್ಲಿಯೂ
ಕವಿ ತನ್ನದೆಯಾದ ಹೊಸ ತಂತ್ರವನ್ನು ಅನುಸರಿಸಿದ್ದಾನೆ. ಭೂಲೋಕದಲ್ಲಿ ವೃಷಭನು ಮಾದಿರಾಜನ ಮಡದಿಯ ಬಸಿರಿನಲ್ಲಿಳಿಯುವಾಗಿನ
ವರ್ಣನೆ ಮಾತ್ರ ಸಾಂಪ್ರದಾಯಿಕವಾದ ವರ್ಣನೆಯಾಗಿದೆ. ಆದರೆ ಬಸವನ ಬಾಲ್ಯ ಮತ್ತು ಯೌವ್ವನಗಳ ವರ್ಣನೆಗಳಲ್ಲಿ
ಭಕ್ತ ಕವಿಯಾದ ಗರುಣಿಯ ಬಸವಲಿಂಗನ ಪ್ರತಿಭೆ ಗರಿಗೆದರಿ ನಿಂತಿದೆ. ಭಕ್ತಿಯ ಆವೇಶದಲ್ಲೂ ಬಸವ ಜನಿವಾರವನ್ನು
ಮುಂಜಿಯನ್ನು ಹರಿದು ಬ್ರಾಹ್ಮಣ್ಯವನ್ನು ತ್ಯಜಿಸಿದ ಪ್ರಸಂಗದ ವರ್ಣನೆಯ ಸಂದರ್ಭವನ್ನು ಬಸವಣ್ಣನ ವಚನಗಳ
ಹಿನ್ನೆಲೆಯಲ್ಲಿ ನಿರೂಪಿಸಿರುವುದನ್ನು ಕಾಣಬಹುದು. ಬಸವೇಶ್ವರನ ಕಾವ್ಯದ ಕಥಾವಸ್ತುವನ್ನು ಸಂದರ್ಭಕ್ಕನುಗುಣವಾಗಿ ಕವಿಯು ವರ್ಣನೆ
ಮಾಡಿಕೊಂಡು ಹೋಗಿರುವುದನ್ನು ಕಾಣುತ್ತೇವೆ. ಬಸವೇಶ್ವರನ ಮೇಲೆಯೇ ಭಕ್ತಿಯ ಆವೇಶದಿಂದ ಸಮನೋಕ್ತಿ ಮತ್ತು
ಪುನರೋಕ್ತಿಯೆಂಬ ದೇಸೀಯ ಸಂಪ್ರದಾಯದ ಹಿನ್ನೆಲೆಯಲ್ಲಿ ಕೆಲವು ಕಥೆಗಳನ್ನು ಹಿಗ್ಗಿಸಿ ವರ್ಣಿಸಿ ಹೇಳಿರುವುದನ್ನು
ಕಾಣಬಹುದು. ಗರುಣಿಯ ಬಸವಲಿಂಗ ಕವಿಯು ತನ್ನ ಚಾತುರ್ಯದಿಂದ ಮೈವೆತ್ತಿ ವರ್ಣಿಸಿರುವ ಬಸವೇಶ್ವರನು ಕಲ್ಯಾಣ
ಪಟ್ಟಣಕ್ಕೆ ಬರುವ ಪ್ರಸಂಗ, ಮದುವೆ ಪ್ರಸಂಗ, ಆಟೋಟಗಳ ಪ್ರಸಂಗ, ತಿಂಡಿತಿನಿಸುಗಳು, ಮುಂಜಿ, ಸಂಗೀತ, ನೃತ್ಯ, ವರ್ಣನೆಗಳು ರಂಜಕಗಳಾಗಿವೆ. ಅಲ್ಲಮ ಪ್ರಭುವು
ಸಿದ್ಧರಾಮನೊಡನೊಡಗೂಡಿ ಬಸವೇಶ್ವರನನ್ನು ಕಾಣಲು ಕಲ್ಯಾಣಕ್ಕೆ ಬಂದಾಗ ಅಲ್ಲಮಪ್ರಭು ಪ್ರಮಥರಿಗೆ ದಾಸೋಹ
ಮಾಡಲು ಬಸವಣ್ಣ ನಿಶ್ಚೈಸಿ ವಿವಿಧ ಬಗೆಯ ತಿಂಡಿ ತಿನಿಸುಗಳು, ಭಕ್ಷ್ಯ ಭೋಜ್ಯಗಳನ್ನು ಸಿದ್ಧಪಡಿಸಿ
ಪ್ರಭುವಿಗೆ ಉಣಬಡಿಸಿದ ವಿವರವನ್ನು ಬಸವಲಿಂಗನು ನೀಡಿದ್ದಾನೆ. ಕೆಲವನ್ನು ನಿದರ್ಶನಕ್ಕೆ ಇಲ್ಲಿ ಉಲ್ಲೇಖಿಸಲಾಗಿದೆ.
ದೇವಾನ್ನ ದಿವ್ಯಾನ್ನ ಪಾವನ ಶಾಕಪಾಕಾವಳಿ ಭಕ್ಷ್ಯ ಭೋಜ್ಯಗಳ
ಗೋವಿನ ಕ್ಷೀರಾಜ್ಯ ಸೇವಿಗೆಗಳ ಪ್ರಭುದೆವಂಗೆ ತಂದು ನೀಡಿದರು.
ಕಡೆಯಿಲ್ಲದ ವುದ್ದಿನೊಡೆ ಚಕ್ಕುಲಿ ಜೇನಕೊಡ ಕರಜಿಯಕಾಯಿ ಫೇಣಿ
ಕಡುಬು ಮಂಡಗೆ ದೋಸೆ ಪಡಿಬೋನಗಳ ತಂದು ಎಡೆಮಾಡಿದರು
ಕದಳಿ ಫಲಸು ಮಾವು ಮೊದಲಾದ ಫಲಗಳ ಮೆದೆ ಹಾರವಾಗಿ ತಂದಡಕಿ
ನುಚ್ಚು ತೌಡಕ್ಕಿಗಚ್ಚು ಮುಂತಾದವ ಸಚ್ಚಿತ್ತದಿಂದ ಬಸವೇಶ
ಕಿಚ್ಚುಗಣ್ಣಗೆ ನೀಡೆ ( ಸಂಧಿ4. ಪ.ಸಂ. 114 ರಿಂದ 117)
ಅದೇರೀತಿ ಕೈಲಾಸದಲ್ಲಿ ಉಮೆಯು ಗಣಂಗಳಿಗಾಗಿ ಸಿದ್ದಪಡಿಸಿದ
ಭಕ್ಷ್ಯಂಗಳ ವಿವರದಲ್ಲಿಯ
ಕಡಲೆ ಮುಂತಾದ ಪಚ್ಚಡಿ ಕಿಚ್ಚಡಿಗಳ ಮೊರಡಿಗಳಗಣಿತವೆಸೆದವು
ಕಣಿಕ ಕಜ್ಜಾಯದ ಬಣಬೆಗಳೆಸೆದವು ಗಣಿತ ಪರ್ವತಗಳೆಂಬಂತೆ
ಚಣಕಮಾಸೆಯ ದೋಸೆಗೆಣಸಿನನುಣಿಸುಗಳ ತ್ರಿಣಯನರಸಿ ಮಾಡಿಸಿದಳು.
ಕಡುಬು ಸೇವಗೆಯುದ್ದಿನನೊಡೆ ಪರಮಾನ್ನವ ಪಡಲದ ಕಾಯಿ ಮುಂತಾದ
ತಡೆಯಿಲ್ಲದ ಶಾಕ ಷಡುರುಚಿ ಪಾಕವ ಮೃಡನವರಿಗೆ ಮಾಡಿಸಿದಳು.
ಇಲ್ಲಿ ಉಲ್ಲೇಖಿತವಾಗಿರುವ ತಿಂಡಿ,ತಿನಿಸುಗಳು ವಾಸ್ತವವಾಗಿ
ಕವಿಯ ಕಾಲದಲ್ಲಿ ಬಳಕೆಯಲ್ಲಿದ್ದವುಗಳೇ ಆಗಿವೆ. ಈ ಕಾವ್ಯದಲ್ಲಿ ಕವಿಯ ಕಾಲದ ಅನೇಕ ಸಾಮಾಜಿಕ ಸಾಂಸ್ಕೃತಿಕ
ಅಂಶಗಳು ನುಸುಳಿರುವುದನ್ನು ಕಾಣಬಹುದಾಗಿದೆ.ಮುಂಜಿಯ ವಿವರ, ಮದುವೆಯ ವಿವರ, ಅಡುಗೆ ಊಟಗಳ ವಿವರ ಇತ್ಯಾದಿಗಳನ್ನು
ಕವಿಯು ಕಾವ್ಯದುದ್ದಕ್ಕೂ ಕೊಡುತ್ತಾ ಹೋಗಿದ್ದಾನೆ.
ಕಾವ್ಯಶೈಲಿ:
ಸಾಮಾಜಿಕ-ಧಾರ್ಮಿಕ ಆಂದೋಲನ ಹುಟ್ಟಿದ ಸಂದರ್ಭದಲ್ಲಿ
ವಚನಕಾರರ ವಚನಗಳು ಕನ್ನಡ ಸಾಹಿತ್ಯದ ವಸ್ತು-ಭಾಷೆ-ಧೋರಣೆಗಳಲ್ಲಿ ಬದಲಾವಣೆ ತಂದು ದೇಶೀಯ ಸಂಪ್ರದಾಯಕ್ಕೆ
ದಾರಿ ತೋರಿಸುವುದಾಗಿದ್ದು, ಅದೇ ಮಾದರಿಯಲ್ಲಿಯೇ ಬಸವಣ್ಣನವರ ಚರಿತ್ರೆಯನ್ನು ಸಾಂಗತ್ಯ ರೂಪದಲ್ಲಿ
ಕಟ್ಟಿಕೊಟ್ಟಿದ್ದಾನೆ. ಈತನ ಕಾವ್ಯದ ಶೈಲಿಯು ವಿಶಿಷ್ಟತೆ ಮತ್ತು ಸರಳತೆಯಿಂದ ಕೂಡಿದ್ದಾಗಿದೆ. ವಸ್ತುವಿಷಯ,
ಕಥನಕ್ರಮ, ಪಾತ್ರನಿರ್ಮಾಣದ ವರ್ಣನೆ, ಭಾಷಾಶೈಲಿ ಸರಳತೆಯಿಂದ ಕೂಡಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ
ಬಸವಣ್ಣನೊಬ್ಬ ಯುಗ ಪ್ರವರ್ತಕ ಕವಿಯಾಗಿರುವುದರಿಂದ ಅವರ ಕಾವ್ಯ ಒಂದು ಸರಳತೆಯಿಂದ ಕೂಡಿದ ಕೃತಿ. ಗರುಣಿಯ
ಬಸವಲಿಂಗನು ಕೇವಲ ಕಥೆಯನ್ನು ನೇರವಾಗಿ ಹೇಳಲು ಬಿಡದೆ ಅದರ ಜೊತೆಯಲ್ಲಿ ಕಾವ್ಯಕಥೆಯನ್ನು ಬರೆದಿದ್ದಾನೆ.
ಪ್ರತಿಯೊಂದು ಪದ್ಯವೂ ಆದಿಪ್ರಾಸದಿಂದ ಕೂಡಿರುವುದನ್ನು ಕಾಣುತ್ತೇವೆ. ಇಲ್ಲಿ ಕವಿಯು ತನ್ನಲ್ಲಿ ತುಂಬಿದ
ಅನುಭವಕ್ಕೆ ಮಾತಿನಲ್ಲಿ ರೂಪಕೊಟ್ಟು ಅಭಿವ್ಯಕ್ತಪಡಿಸಿರುವುದು. ವಾಚಕನ ಮನಸ್ಸು ಸಂಸ್ಕಾರ ಹೊಂದಿ ಅವರಿಗೆ
ಧರ್ಮಾಧರ್ಮಗಳ ಪರಿಜ್ಞಾನ ತನ್ನಷ್ಟಕ್ಕೆ ತಾನೆ ಒದಗುವಂತೆ ಮಾಡಿದ್ದಾನೆ. ಹಾಗೆಯೇ ಅವರು ಸನ್ಮಾರ್ಗದತ್ತ
ನಡೆಯಲು ಅನುಕೂಲವಾಗುವ ರೀತಿಯಲ್ಲಿ ನಿರೂಪಿಸಿದ್ದಾನೆ. ಧರ್ಮದ ಉದ್ಧಾರಕ್ಕಾಗಿ ಮಾತ್ರವಲ್ಲದೇ ಮಾನವನ
ಕಲ್ಯಾಣಕ್ಕಾಗಿ ಮಾಡಿರುವುದು ಪ್ರಮುಖವಾಗಿದೆ.
ಬಸವೇಶ್ವರನ ಮಹಿಮೆಯನ್ನು ವಿವರವಾಗಿ ಚಿತ್ರಿಸುವ ಕಾವ್ಯ
ಇದಾಗಿದೆಯೆಂದು ಹೇಳಬಹುದು. ಬಸವನು ಮೆರೆದ ಪವಾಡಗಳ ಚಿತ್ರಣವನ್ನು ಕಾವ್ಯದುದ್ದಕ್ಕೂ ಕಾಣಬಹುದು. ಈ
ಪವಾಡಗಳ ವರ್ಣನೆಯಲ್ಲಿ ಅತಿರಂಜನೆ, ಉತ್ಪ್ರೇಕ್ಷೆ ಕಂಡು ಬರಬಹುದು. ಆದರೆ ಕವಿಯ ಉದ್ದೇಶವೆಂದರೆ ಬಸವನ
ಮಹಿಮೆಯನ್ನು ತೋರ್ಪಡಿಸುವುದೇ ಆಗಿದೆ. ಬಸವಲಿಂಗ ಕವಿಯು ಸಂಪ್ರದಾಯಬದ್ಧನಾದ ಕವಿ. ಯಾವ ಪ್ರಸಂಗದಲ್ಲಾಗಲಿ
ಔಚಿತ್ಯದ ಕಟ್ಟುಪಾಡುಗಳನ್ನು ಮೀರಿಲ್ಲ. ಈತನ ವರ್ಣನೆಗಳಲ್ಲಿ ಮನೋಜ್ಞತೆಯಿದೆ, ಸುಗಮತೆಯಿದೆ, ಸುಲಲಿತತೆಯಿದೆ,
ಸುಂದರವಾದ ಶೈಲಿಯೂ ಇದೆ. ಬಸವಣ್ಣನವರ ಜೀವನ ಚರಿತ್ರೆಯನ್ನು, ಶಿವಶರಣರ ಕಥೆಗಳನ್ನು ಜನಸಾಮಾನ್ಯರಿಗೆ
ತಿಳಿಯುವ ರೀತಿಯಲ್ಲಿ ಕಾವ್ಯವನ್ನು ವರ್ಣಿಸಿದ್ದಾನೆ.
ಕವಿಯು ಬಸವಣ್ಣನವರನ್ನು ಮಹಾಪರಂಪರೆಯ ಒಂದು ಅಂಗವಾಗಿ
ಕಂಡಿದ್ದಾನೆ. ಈ ಕೃತಿಯಲ್ಲಿ ಬಸವಣ್ಣನ ಸಮಕಾಲೀನರಾದ ಅಲ್ಲಮಪ್ರಭು, ಕಿನ್ನರಯ್ಯ, ಮಾಚಯ್ಯರು,ಪುರಾತನರಾದ
ಕೋಳೂರು ಕೊಡಗೂಸು, ಬೇಡರ ಕಣ್ಣಪ್ಪರ ಕತೆಗಳು ಬರುತ್ತವೆ. ಕಾಲದ ದೃಷ್ಟಿಯಿಂದ ಅಂತರವಿದ್ದರೂ ಇವರೆಲ್ಲರೂ
ಭಕ್ತರು ಮತ್ತು ಬಸವಣ್ಣ ಅವರ ಪ್ರಪಂಚಕ್ಕೆ ಸೇರಿದವರಾದ್ಧರಿಂದ ಅವರ ಕತೆಗಳು ಪರಸ್ಪರ ಸಮರಸವಾಗಿ ಹೊಂದಿಕೊಳ್ಳುತ್ತವೆ.
ಮಾನಸಿಕವಾಗಿ ಅವರೆಲ್ಲರೂ ಬಸವಣ್ಣನ ಸಮಕಾಲೀನರೆ. ಸಮಕಾಲೀನವಾದ ಕತೆಯೊಂದು ಅಂತಹ ಹಿಂದಿನ ಅನೇಕ ಕತೆಗಳನ್ನು
ಜ್ಞಾಪಿಸುತ್ತದೆ. ಮೊಳೆಗಳ ರಾಶಿಗೆ ಆಯಸ್ಕಾಂತವನ್ನು ಸಮೀಪಿಸಿದಾಗ ಅದು ಅನೇಕವನ್ನು ಹಿಡಿದು ಎತ್ತಿಕೊಳ್ಳುವಂತೆ. ಈ ಕಾವ್ಯದಲ್ಲಿಯ ಮುಗ್ಧಸಂಗಯ್ಯನ ವೃತ್ತಾಂತವು ಅಂತಹ ಅನೇಕ
ಹಿಂದಿನ ಮುಗ್ಧ ಭಕ್ತರ ಕತೆಗಳನ್ನು ಪ್ರಚೋದಿಸುತ್ತದೆ. ಪುರಾಣ ಕಾವ್ಯವು ಮುಕ್ತವಾದುದು. ಬದ್ಧವಾದುದಲ್ಲ. ಕೃತಿಕಾರನಿಗೆ ಅಗತ್ಯವಾದಲ್ಲಿ
ಅನೇಕ ಕತೆಗಳನ್ನು ಸೇರಿಸಲು ಅವಕಾಶವುಂಟು. ಹೀಗಾಗಿ ಪಾಲ್ಕುರಿಕೆ ಸೋಮನಾಥ ಹಾಗೂ ಭೀಮಕವಿಗಳ ಹಾಗೆ ಹರಿಹರನ ಬಸವರಾಜದೇವರ ರಗಳೆಗಳಲ್ಲಿ ಇಲ್ಲದ ಹಲವು ಕತೆಗಳನ್ನು
ಗರುಣಿಯ ಬಸವಲಿಂಗನು ಸೇರಿಸಿದ್ದಾನೆ. ಹರಿಹರನನ್ನು ಓದಿದರೆ ಬಸವಣ್ಣನ ಪರಿಚಯವಾಗುತ್ತದೆ. ಬಸವಲಿಂಗನ
ಕಾವ್ಯವನ್ನು ಓದಿದರೆ ಒಂದು ಸಮಗ್ರ ಪರಂಪರೆಯ ಪರಿಚಯವಾಗುತ್ತದೆ. ಈ ಕೃತಿಯು ವ್ಯಕ್ತಿಯೊಬ್ಬನ ಬದುಕನ್ನು
ಮಾತ್ರ ಪರಿಚಯಿಸದೆ ನಿರ್ದಿಷ್ಟಕಾಲಮಾನದ ಇತಿಹಾಸವನ್ನು ದಾಖಲು ಮಾಡಿರುವ ವಿಶಿಷ್ಟ ಕೃತಿಯಾಗಿದೆ. ಪಾಲ್ಕುರಿಕೆ
ಸೋಮನಾಥ. ಭೀಮಕವಿಗಳ ಹಾಗೆ ಗರುಣಿಯ ಬಸವಲಿಂಗನು ಸಹ ಬಸವಣ್ಣನನ್ನು ಸರ್ವಸ್ವವೆಂದು ಬಗೆದು, ಆರಾಧನಾಭಾವದಿಂದ
ತನ್ನ ಅಂತರಂಗದಲ್ಲಿ ಪೂರ್ಣವಾಗಿ ಬಸವಣ್ಣನನ್ನು ತುಂಬಿಕೊಂಡು ಅವನ ಘನಚರಿತೆಯನ್ನು ಸಾಂಗತ್ಯ ಪ್ರಕಾರದಲ್ಲಿ
ಮನದುಂಬಿ ವರ್ಣಿಸಿದ್ದಾನೆ. ಈತನ ಪ್ರಕಾರ ಬಸವಣ್ಣ ದೈವೀ ಪರುಷ. ಧರ್ಮ ಹಾಗೂ ಭಕ್ತರ ಉದ್ಧಾರಕ್ಕಾಗಿ
ಧರೆಗುದಿಸಿ ಬಂದವನು. ಬಸವಣ್ಣನ ಕಾವ್ಯವನ್ನು ರಚಿಸುವಲ್ಲಿ ಪೂರ್ವದ ಕವಿಗಳಿಗೆ ಋಣಿಯಾಗಿದ್ದರೂ ಪದಶಃ
ಅನುವಾದ ಮಾಡಿಲ್ಲ. ಪಾಲ್ಕುರಿಕೆ ಸೋಮನಾಥ ಹಾಗೂ ಭೀಮಕವಿಯ ಬಸವಪುರಾಣಗಳನ್ನು ಹಲವಾರು ಬಾರಿ ಓದಿ ಅಲ್ಲಿಯ ಪದ,ಪದಪುಂಜ,ಭಾವ, ಅಲಂಕಾರ ಇತ್ಯಾದಿಗಳನ್ನೆಲ್ಲಾ
ಕರಗತಮಾಡಿಕೊಂಡು ಸಾಂಗತ್ಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾನೆ. ಕೆಲವೆಡೆ ಕಥಾಭಾಗವನ್ನು ಸಂಗ್ರಹಿಸಿದ್ದರೆ ಕೆಲವೆಡೆ ಹಲವು ಸಾಲು, ಭಾಗಗಳನ್ನು ಸ್ವತಂತ್ರವಾಗಿ
ಸೇರಿಸಿದ್ದಾನೆ. ಜೊತೆಗೆ ಮೂಲದಲ್ಲಿ ಇಲ್ಲದ ತನಗೆ ತಿಳಿದು ಬಂದ ಅನೇಕ ಪ್ರಸಂಗಗಳನ್ನು ಹೊಸದಾಗಿ ಸೇರಿಸಿದ್ದಾನೆ.
ಬಸವಣ್ಣನ ಚರಿತೆಯ ಜೊತೆಗೆ ಪುರಾತನ ನೂತನ ಭಕ್ತರ ಕತೆಗಳನ್ನು ಸಂದರ್ಭೋಚಿತವಾಗಿ ಹೇಳಿಕೊಂಡು ಸಾಗುವುದರಲ್ಲಿ
ಬಸವಣ್ಣನ ವ್ಯಕ್ತಿತ್ವಕ್ಕೆ ಪೂರಕವಾಗಿ ಬಂದಿವೆ. ಗರುಣಿಯ ಬಸವಲಿಂಗನು ಒಳ್ಳೆಯ ಕಥೆಗಾರನಾಗಿದ್ದು,
ಜನಸಾಮಾನ್ಯರನ್ನು ತನ್ನ ಗಮನದಲ್ಲಿರಿಸಿಕೊಂಡು ಬಸವಣ್ಣನನ್ನು ಕೇಂದ್ರವಾಗಿರಿಸಿಕೊಂಡು ಭಕ್ತರ ಕಥೆಯನ್ನು ನಿರೂಪಿಸಿದ್ದಾನೆ. ಒಂದಾದ ಮೇಲೆ ಮತ್ತೊಂದು ಕತೆಯು ಭಿತ್ತರಗೊಳ್ಳುತ್ತಾ
ಸಾಗಿದೆ. ತನ್ನ ಕಾಲಕ್ಕೆ ಬಸವಣ್ಣನಿಗೆ ಸಂಬಂಧಿಸಿದಂತೆ ಎಲ್ಲಾ ವಿಷಯಗಳನ್ನು ಕಲೆಹಾಕಿ ತನ್ನ ಕೃತಿಯ ಒಡಲಲ್ಲಿ ಸೇರಿಸಿದ್ದಾನೆ. ಈ ಕೃತಿಯಲ್ಲಿ,
ಬಸವನ ಜೀವನ ಪುರಾಣದ ಚೌಕಟ್ಟಿಗೆ ಹೊಂದಿಕೊಂಡಿದ್ದು, ಐತಿಹಾಸಿಕ ವ್ಯಕ್ತಿಯೊಬ್ಬನ ಆದರ್ಶಪೂರ್ಣವಾದ
ಬದುಕು ಜನಮನದ ಮೇಲೆ ಬೀರಿದ ಪ್ರಭಾವವು ಕಾರಣವಾಗಿ ಹಾಗೂ ಬಸವನ ಬಗೆಗಿನ ಭಕ್ತಿಯ ಕಾರಣವಾಗಿ ಕಥೆಗಳು ಕಾಲದಿಂದ ಕಾಲಕ್ಕೆ ಹೇಗೆ ಹುಟ್ಟಿಕೊಂಡವು ಎಂಬುದನ್ನು
ಅಧ್ಯಯನ ಮಾಡಲು ಬಸವಲಿಂಗನ ಬಸವೇಶ್ವರನ ಕಾವ್ಯ ಅಧ್ಯಯನಕ್ಕೆ ಯೋಗ್ಯವಾಗಿದೆ.
ಕವಿಯ ಈ ಕೃತಿಯಲ್ಲಿ ಬಸವಣ್ಣನ ಕಥೆ ಏಕಮುಖವಾಗಿ ನಿರೂಪಿತವಾಗಿಲ್ಲದಿದ್ದರೂ
ಬಸವಣ್ಣನ ವ್ಯಕ್ತಿತ್ವ ಪವಾಡಗಳಲ್ಲಿ ಮುಚ್ಚಿ ಹೋಗದಂತೆ ಎಚ್ಚರ ವಹಿಸಿರುವುದು ಗಮನಿಸತಕ್ಕ ಸಂಗತಿಯಾಗಿದೆ.
ಬಸವಣ್ಣನ ಚರಿತ್ರೆಯ ಪ್ರಮಾಣ ಕಡಿಮೆಯಿದ್ದರೂ ವ್ಯಕ್ತಿತ್ವದ ಪ್ರಭೆ ಮಸುಕಾಗಿಲ್ಲ. ಕವಿಯು ಪಾಲ್ಕುರಿಕೆ
ಸೋಮನಾಥ ಹಾಗೂ ಭೀಮಕವಿಯ ಹಾಗೆ ಮೌಕಿಕ ಪರಂಪರೆಯಲ್ಲಿ ಬಂದ ಬಸವಣ್ಣನ ಕಥೆಯನ್ನೆ ಕಾವ್ಯಕ್ಕೆ ವಸ್ತುವಾಗಿ
ಸ್ವೀಕರಿಸಿದ್ದು ಬಸವಣ್ಣನ ಜೀವಿತ ವೃತ್ತಾಂತವನ್ನು ತಿಳಿಯುವಲ್ಲಿ ಮಹತ್ತರ ಕೃತಿ ಎನಿಸಿದೆ. ಅಸಂಖ್ಯಾತ
ಶರಣರ ಕಥೆಗಳು ಹಾಗೂ ಪವಾಡಗಳ ನಡುವೆಯೂ ಸಹಜ,ಸರಳ ವರ್ಣನೆಗಳ ಮೂಲಕ ಆ ಕಾಲದ ಅನೇಕ ವಿಷಯಗಳನ್ನು ತಿಳಿಯಲು
ಅಧ್ಯಯನ ಯೋಗ್ಯವಾಗಿದೆ. ಒಟ್ಟಾರೆಯಾಗಿ ಗರುಣಿಯ ಬಸವಲಿಂಗನು ವಿರಚಿತ ಬಸವೇಶ್ವರನ ಕಾವ್ಯವು ಬಸವಣ್ಣನವರ
ವ್ಯಕ್ತಿತ್ವ ಮತ್ತು ಜೀವನಕ್ಕೆ ಸಂಬಂಧಿಸಿದಂತೆ ಅನೇಕ ಮಹತ್ವಪೂರ್ಣವಾದ ಸಂಗತಿಗಳನ್ನು ದಾಖಲಿಸುವಲ್ಲಿ
ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ವೀರಶೈವ ಸಾಹಿತ್ಯದಲ್ಲಿನ ಪ್ರಮುಖ ಕಾವ್ಯಕೃತಿಗಳಲ್ಲಿ
ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆಯೆಂದು ಹೇಳಬಹುದು. ಹಾಗೆಯೇ ಬಸವಣ್ಣನವರ ಲೌಕಿಕ
ಬದುಕಿನ ಚಿತ್ರಣಗಳನ್ನು ಅಲೌಕಿಕ ಛಾಯಯಲ್ಲಿ ಮೂಡಿಸಿ ಮಹತ್ವದ ಮೆರಗನ್ನು ಕಲ್ಪಿಸಿಕೊಟ್ಟ ಕಾವ್ಯವಾಗಿದೆಯೆಂದರೆ
ಅತಿಶಯೋಕ್ತಿಯಾಗಲಾರದು.ಈ ಕೃತಿಯು ಬಸವಣ್ಣನ ನೂತನ ಧರ್ಮವನ್ನು ಹೊಸದಾಗಿ ಸ್ವೀಕರಿಸಿದವರ ಮನಸ್ಸಿಗೆ
ಬಸವಣ್ಣನ ಕತೆ ತಟ್ಟುವಂತೆ ಮನಮುಟ್ಟುವಂತೆ ತಲುಪುವಂತೆ ಸರಳವಾದ ದೇಸಿ ಭಾಷೆಯಲ್ಲಿ ಕಾವ್ಯವನ್ನು ರಚಿಸಿದ್ದಾನೆ.
ಇಂದಿಗೂ ಈ ಕೃತಿಯು ಹಾಡುಗಬ್ಬವಾಗಿದ್ದು ತನ್ನ ಗೇಯತೆಯ ಲಕ್ಷಣದಿಂದ ಓದುಗರನ್ನು ಆಕರ್ಷಿಸುವಂತಿದ್ದರೂ
ಈ ಕೃತಿಯ ಪರಿಚಯ ವೀರಶೈವಾಸಕ್ತರಲ್ಲಿ ಅಷ್ಟಾಗಿ ಆಗದಿರುವುದು
ದುರದೃಷ್ಟಕರ ಸಂಗತಿಯಾಗಿದೆ.
ಗ್ರಂಥಋಣ
1 ಗರುಣಿಯ
ಬಸವಲಿಂಗ ವಿರಚಿತ ಬಸವೇಶ್ವರನ ಕಾವ್ಯ
( ಸಂ: ಹ.ಕ.ರಾಜೇಗೌಡ ) ಮೈಸೂರು ವಿಶ್ವವಿದ್ಯಾಲಯ, ಮೈಸೂರು,
1982
2. ಪಾಲ್ಕುರಿಕೆ
ಸೋಮನಾಥನ ಬಸವ ಪುರಾಣ
ಅನುವಾದ: ಪಿ.ವಿ.ನಾರಾಯಣ,ತರಳಬಾಳ ಪ್ರಕಾಶನ,ಸಿರಿಗೆರೆ,1982
೩. ಭೀಮಕವಿಯ ಬಸವಪುರಾಣ ಸಂ: ಎಸ್.ವಿದ್ಯಾಶಂಕರ
ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು. ೨೦೦೮
3. ಎಸ್.ವಿದ್ಯಾಶಂಕರ.
ನೆಲದ ಮರೆಯ ನಿಧಾನ
ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.1997
4. ಅಮರವಾಣಿ
( ಸಂ: ಎನ್.ಬಸವಾರಾಧ್ಯ )
ಎಂ.ಜಿ.ನಂಜುಂಡಾರಾಧ್ಯ ಸಂಸ್ಮರಣಾ ಸಂಪುಟ
ಬೆಂಗಳೂರು, 1994