ಶನಿವಾರ, ಫೆಬ್ರವರಿ 4, 2023

 

ವಚನ ಪರಂಪರೆಯಲ್ಲಿ ಶಿವಯೋಗಿ ಸೊನ್ನಲಿಗೆ ಸಿದ್ಧರಾಮೇಶ್ವರರ ವಚನಗಳು

                     ಡಾ.ಸಿ.ನಾಗಭೂಷಣ

     ಕನ್ನಡ ನಾಡಿನ ಹನ್ನೆರಡನೇ ಶತಮಾನದ ಬಸವಾದಿ ಪ್ರಮಥರ ಆಂದೋಲನವು ಸಮಾಜೋಧಾರ್ಮಿಕ ಚಳುವಳಿಯು ಹೌದು. ಈ ಆಂದೋಲನವು ತನಗೆ ತಾನೆ ಸ್ವಯಂ ಸ್ಫೂರ್ತವಾಗಿ ಕೂಡಲೇ ಕಾಣಿಸಿಕೊಂಡಿದ್ದಲ್ಲ, ಮಧ್ಯಕಾಲೀನ ರಾಜಕೀಯ ಹಿನ್ನೆಲೆಯಲ್ಲಿ ಕನ್ನಡ ನಾಡಿನಾದ್ಯಂತ ವ್ಯಾಪಿಸಿತ್ತು. ಶಿವಶರಣರ ಆಂದೋಲನದ ನಿಮಿತ್ತ ರೂಪುಗೊಂಡ ವಚನಸಾಹಿತ್ಯ ಭಕ್ತಿಸಾಹಿತ್ಯದ ಪ್ರತೀಕವಾಗಿರುವುದರ ಜೊತೆಗೆ ಸಾಮಾಜಿಕ ಪ್ರತಿಪಾದನೆಯೂ ಆಗಿದೆ. ಹೀಗಾಗಿ ಶಿವಶರಣರು ಭಕ್ತರೂ ಹೌದು ಸಮಾಜ ಚಿಂತಕರೂ ಹೌದು. ಏಕೆಂದರೆ ಶರಣರ ವೈಯಕ್ತಿಕ ಜೀವನದಲ್ಲಿ ಕಂಡುಬರುವ ಕೆಲವು ಘಟನೆಗಳು ಆ ಕಾಲದ ಸಾಮಾಜಿಕ ದಾಖಲೆಗಳಾಗಿ ಕಂಡುಬರುತ್ತವೆ. ಒಂದರ್ಥದಲ್ಲಿ ಭಕ್ತಿಯ ಜೊತೆಗೆ ಸಾಮಾಜಿಕ ಚಿಂತನೆಯು ಕಾಣಿಸಿಕೊಂಡಿದ್ದು ಭಾರತೀಯ ಭಕ್ತಿಪಂಥದ ಒಂದಂಗವಾದ ವಚನ ಚಳುವಳಿಯಲ್ಲೇ ಎಂಬುದು ಮಹತ್ತರವಾದ ಸಂಗತಿ. ಕನ್ನಡ ನಾಡಿನ ಭಕ್ತಿಪಂಥವು ಕೇವಲ ಸಿದ್ಧಾಂತವಾಗಿರದೆ ಚಳುವಳಿಯ ರೂಪದಲ್ಲಿ ಪ್ರಕಟವಾಗಿರುವುದನ್ನು ನೋಡಬಹುದು. ಭಕ್ತಿ ಚಳುವಳಿಯು ಭಾಷೆಯ ಬಳಕೆಯಲ್ಲಿ ದೇಸಿನುಡಿಗೆ, ಪ್ರಾದೇಶಿಕತೆಗೆ ಹೆಚ್ಚಿನ ಒತ್ತು ನೀಡಿರುವುದನ್ನು ಗುರುತಿಸಬಹುದು. ವಚನ ಚಳುವಳಿಯ ಮುಖ್ಯ ಲಕ್ಷಣ ಎಂದರೆ ಅದರ ಮುಕ್ತ ವಾತಾವರಣ ಜಾತಿಭೇದವಿಲ್ಲದೆ ಎಲ್ಲರನ್ನು ತಟ್ಟಿದ್ದು.'

     ಭಾರತೀಯ ಸಮಾಜದ ಎಲ್ಲಾ ವರ್ಗಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿ ಅದರಲ್ಲಿ ಒಂದು ಒಳ ಎಚ್ಚರವನ್ನು ಮೂಡಿಸಿದ ಮೊತ್ತಮೊದಲ ನಿಜವಾದ ಅರ್ಥದ ಸಾಮಾಜಿಕ ಚಳುವಳಿಯು ಬಸವಾದಿ ಪ್ರಮಥರ ಮೂಲಕ ನಡೆದಿರುವುದು ಗಮನಾರ್ಹವಾಗಿದೆ. ಮತದ ಉದಾತ್ತ ಚಿಂತನೆ, ಸಮಾಜದ ತೀರ ಕೆಳಗಿನ ಪದರಗಳನ್ನು ಮುಟ್ಟಿದ್ದು ಇಲ್ಲಿಯೇ ಎಂಬಲ್ಲಿ ಉತ್ಪ್ರೇಕ್ಷೆ ಇಲ್ಲ. ಬಸವಣ್ಣ, ಸಿದ್ಧರಾಮ ಮುಂತಾದ  ಪ್ರಮಥರ ವಚನಗಳ ರಚನೆಯು ಅವರಲ್ಲಿ ಮೂಡಿದ ಸಾಮಾಜಿಕ ಅರಿವಿನ ಸಂಕೇತ ಎನ್ನುವ ಕಾರಣದಿಂದ ಮಹತ್ವವನ್ನು ಪಡೆಯುತ್ತವೆ. ಬಹಳಷ್ಟು ವಚನಕಾರರ ವಚನಗಳು ಇಂದು ಸಾಹಿತ್ಯಕ ಮಾನದಂಡದಿಂದ ಅಳೆದರೆ ತೀರ ಸಾಮಾನ್ಯ ಎನಿಸಬಹುದಾದರೂ ಸಮಾಜಶಾಸ್ತ್ರದ ದೃಷ್ಟಿಯಿಂದ ಪ್ರಮುಖ ಎನಿಸುತ್ತವೆ. ಬಸವಣ್ಣನ ನೇತೃತ್ವದಲ್ಲಿ ಎಲ್ಲಾ ಶರಣರೂ ತಮ್ಮನ್ನು ತಾವು ಬಹಿರಂಗವಾಗಿ ವ್ಯಕ್ತಪಡಿಸಿಕೊಂಡು ತಮ್ಮ ಸಾಮಾನ್ಯ ಚಿಂತನೆಗಳನ್ನು ಅಭಿವ್ಯಕ್ತ ಪಡಿಸುವ ಧೈರ್ಯ ತೋರಿದ್ದು ಮುಖ್ಯ ಎನಿಸುತ್ತದೆ. ಸಮಾಜೋಧಾರ್ಮಿಕ ಆಂದೋಲನದ ಫಲ ಸಾಮಾನ್ಯರೂ ಮಾತನಾಡುವ ಮನಸ್ಸು ಮಾಡಿದ್ದು. ವಚನಕಾರರ ವಚನಗಳು ಬೇರೆ ಯಾವ ಕವಿ ಕೃತಿಗಳ ಅನುವಾದಗಳೂ ಅಲ್ಲ.      ವಚನಸಾಹಿತ್ಯದ ಸ್ವರೂಪದ ವಿಷಯದಲ್ಲಿಯೂ ಗಮನಿಸಬೇಕಾದ ಅಂಶಗಳಿವೆ.  ವಚನವೆಂದರೆ ಸಹಜವಾಗಿ ಆಡಿದ ಮಾತು.  ಅನುಭಾವದ ನೆಲೆಯಲ್ಲಿ ನಿಂತಿರುವ ವಚನಕಾರರ ಬಾಯಿಂದ ಹೊರಬಿದ್ದ ಇಂಥ ಮಾತು ಬರೀ ಗದ್ಯವಾಗಲಿಲ್ಲ, ಪದ್ಯವೂ ಆಗಲಿಲ್ಲ, ವಿವಿಧಲಯಬದ್ಧವಾದ ಅನುಭವ ಗದ್ಯವಾಯಿತು.  ಪ್ರತಿಯೊಂದು ವಚನವು ಸಾಮಾನ್ಯವಾಗಿ ತನ್ನದೊಂದು ಸ್ಥಾಯಿ, ಪ್ರತಿಮೆ ಮತ್ತು ಲಯದಿಂದ ಕೂಡಿರುತ್ತದೆ.  ಅಂತೇ ವಚನವೆಂದರೆ ಅನುಭಾವ ಗದ್ಯದಲ್ಲಿ ಉಸುರಿದ ಆಧ್ಯಾತ್ಮಿಕ ಭಾವಗೀತೆಯೆನ್ನಬಹುದು.  ಅದರಲ್ಲಿ ಯಾವೊಂದು ಭಾವವು ಸಹಜ ಸ್ಫೂರ್ತವಾದ ರೂಪತಾಳಿ ತನ್ನಷ್ಟಕ್ಕೆ ಪೂರ್ತಿಗೊಳ್ಳುತ್ತದೆ.  ಅದರ ಕೊನೆಗೆ ಆಯಾ ವಚನಕಾರನ ವಿಶಿಷ್ಟ ಅಂಕಿತವಿರುತ್ತದೆ.  ಕೆಲವು ವಚನಗಳಲ್ಲಿ ತತ್ವವಿವರಣೆ, ನೀತಿಬೋಧೆ, ಸಮಾಜ ವಿಮರ್ಶೆಯಿರುತ್ತದೆ.  ಭಾವಗೀತಾತ್ಮಕ ವಚನಗಳಲ್ಲಿ ಮಾತ್ರ ವಚನದ ಸಾಹಿತ್ಯ ಸ್ವರೂಪವು ಹೆಚ್ಚು ಸ್ಪುಟವಾಗುತ್ತದೆ.

        ವಚನಕಾರರಿಂದ ಪ್ರವರ್ತನಗೊಂಡ ವೀರಶೈವ ಧರ್ಮವು ಕೇವಲ ಧಾರ್ಮಿಕ ಅವಶ್ಯಕತೆಯಿಂದ ರೂಪುಗೊಂಡಿದ್ದಲ್ಲ. ಅದು ಸಮಾಜೋಧಾರ್ಮಿಕ ಚಳುವಳಿಯ ಫಲಿತ. ಯಾವ ಧರ್ಮಕ್ಕೆ ಸಾಮಾಜಿಕ ಹೊಣೆಗಾರಿಕೆ ಎಂಬುದು ಇಲ್ಲವೋ ಅದು ಧರ್ಮವೇ ಅಲ್ಲ. ಒಂದು ಧರ್ಮಕ್ಕೆ ಸಾಮಾಜಿಕ ಜವಾಬ್ದಾರಿ ಇರಬೇಕು. ಒಂದು ಸಮಾಜವು ಸುಭದ್ರವಾಗಿ ನೆಮ್ಮದಿಯಿಂದ ಬದುಕಬೇಕಾದರೆ ಅದು ಯಾವ ಯಾವ ಲೌಕಿಕ, ಆಧ್ಯಾತ್ಮಿಕ ಹಾಗೂ ನೈತಿಕ ನಿಲುವುಗಳು ಅಗತ್ಯವೋ ಅವುಗಳನ್ನು ರೂಪಿಸುವ ಸಾಮರ್ಥ್ಯವನ್ನು ಧರ್ಮವು ಹೊಂದಿರಬೇಕು. ಧರ್ಮವು ಸಮಾಜದ ಸರ್ವತೋಮುಖವಾದ ಶ್ರೇಯಸ್ಸನ್ನು ಸಾಧಿಸಬೇಕಾದರೆ ಅದು ಸಮಾಜದ ಎಲ್ಲಾ ಸ್ತರಗಳ ಹಿತವನ್ನು ತನ್ನ ಕಕ್ಷೆಗೆ ತೆಗೆದುಕೊಳ್ಳುವಂತಿರಬೇಕು.

         ಶಿವಶರಣರ ಚಳುವಳಿಯು ಸಮಾಜೋಧಾರ್ಮಿಕ ಚಳುವಳಿಯೇ ಹೊರತು ರಾಜಕೀಯ, ಆರ್ಥಿಕ ಚಳುವಳಿಯಲ್ಲ. ಎಲ್ಲಿ ಲಿಂಗಭೇದ, ವರ್ಗಭೇದ, ವರ್ಣಭೇದಗಳು ಇರುವುದಿಲ್ಲವೋ, ಎಲ್ಲಿ ವ್ಯಕ್ತಿಯ ಬದುಕಿನಲ್ಲಿ ಅವನು ಕೈಗೊಳ್ಳುವ ವೃತ್ತಿಯಿಂದ ಪರಿಗಣಿತವಾಗುವ ತರ-ತಮಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೋ, ಎಲ್ಲಿ ಏಕದೇವತಾರಾಧನೆಯ ನೆಲೆಯಲ್ಲಿ ಎಲ್ಲರನ್ನು ಸಮಾನರೆಂದು ಕಾಣಬಹುದೋ, ವ್ಯಕ್ತಿಯ ಸದಾಚಾರಗಳಿಂದ ಪರಸ್ಪರ ಶ್ರೇಯಸ್ಸು ಸಾಧಿತವಾಗುವುದೋ ಅಂತಹ ಒಂದು ಧಾರ್ಮಿಕ ನೆಲೆಯನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ಬಸವ, ಅಲ್ಲಮ ಪ್ರಭು, ಸಿದ್ಧರಾಮ ಮುಂತಾದ ವಚನಕಾರ ಪ್ರಮಥರು ವಹಿಸಿಕೊಂಡರು. ಈ ಒಂದು ಮಹತ್ತರವಾದ ಜವಾಬ್ದಾರಿ ಅಂದಿನ ವಚನಕಾರರೆಲ್ಲರ ಚಿಂತನೆಯ ಮೂಸೆಯಲ್ಲಿ ಹೊರಹೊಮ್ಮಿದ ಕಾರಣ ಈ ಸಾಮಾಜಿಕ ಹೊಣೆಗಾರಿಕೆಯಲ್ಲಿ ಎಲ್ಲರೂ ಸಾಮೂಹಿಕವಾಗಿ ಪಾಲುದಾರರು. ಅದರ ಮುಖ್ಯ ಉದ್ದೇಶ ಮಾತ್ರ ಬಹುಜನರ ಹಿತವನ್ನು ಸಾಧಿಸುವ ಒಂದು ಸಾಮಾಜಿಕ ಧರ್ಮವನ್ನು ರೂಪಿಸುವುದಾಗಿತ್ತು.

      ಶಿವಯೋಗಿ ಸಿದ್ಧರಾಮರು ಕನ್ನಡ ನಾಡಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ ಮಹತ್ತರವಾದ ಕಾಲದಲ್ಲಿ ಜೀವಿಸಿದ್ದರು. ಶಿವಶರಣರ ಸಾಮಾಜಿಕ, ಧಾರ್ಮಿಕ, ವೈಚಾರಿಕ ಕ್ರಾಂತಿಯಲ್ಲಿ ಮಹತ್ತರ ಪಾತ್ರವಹಿಸಿದ ಸಿದ್ಧರಾಮರು ಮಾನವರಾಗಿ ಜನಿಸಿ ದೈವತ್ವಕ್ಕೇರಿದ ವಿಭೂತಿ ಪುರುಷರು.  ಸಮಾಜೋ-ಧಾರ್ಮಿಕ ಆಂದೋಲನದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಇವರು ಸಾಮಾಜಿಕ ಹಾಗೂ ಪರಿಪೂರ್ಣ ದೃಷ್ಟಿಯ ವಿಚಾರಧಾರೆಯಿಂದ ಅಪಾರವಾದ ಮಾನವೀಯತೆಯ ಅನುಕಂಪೆಯತ್ತ ಮಾನವರನ್ನು ಕೊಂಡೊಯ್ದಿದ್ದಾರೆ. ಬಸವಣ್ಣನವರ ಹಾಗೆ ಇವರೂ ಸಹ ಶಿವಶರಣರ ಆಂದೋಲನದಲ್ಲಿ ಪಾಲ್ಗೊಂಡು ದಯೆ, ಸ್ವಾತಂತ್ರ್ಯ, ಸಾಮಾಜಿಕ ಕಾರ್ಯ, ಕಾಯಕ ನಿಷ್ಠೆ, ಶ್ರಮ ಸಂಸ್ಕೃತಿ, ವೀರಶೈವ ತತ್ವಗಳ ಆಚರಣೆ ಮುಂತಾದವುಗಳ ತಳಹದಿಯ ಮೇಲೆ ನೂತನ ಸಮಾಜವನ್ನು ಶರಣ ಸಮುದಾಯದಲ್ಲಿ  ನಿರ್ಮಿಸಲು ಪ್ರಯತ್ನಿಸಿದವರು.  ‘ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳ ಸಿದ್ದರಾಮನೊಬ್ಬನೆ ಯೋಗಿ’ ಎಂದು ಸೊಡ್ಡಳ ಬಾಚರಸನಿಂದ ಸ್ತುತಿಸಲ್ಪಟ್ಟ ಸಿದ್ಧರಾಮರು ಬಸವಾದಿ ಪ್ರಮಥರ ಸಾಲಿನಲ್ಲಿ ಗುರುತಿಸಲ್ಪಟ್ಟಿದ್ದಾರೆ. ಹೆಚ್ಚಿನ ಸಂಖ್ಯೆಯ ವಚನಗಳನ್ನು (1992) ರಚಿಸುವುದರ ಜೊತೆಗೆ ಬಸವ ಸ್ತೋತ್ರ ತ್ರಿವಿಧಿ, ಮಿಶ್ರ ಸ್ತೋತ್ರ ತ್ರಿವಿಧಿ, ಅಷ್ಟಾವರಣ  ಸ್ತೋತ್ರದ ತ್ರಿವಿಧಿ ಮುಂತಾದವುಗಳ ಕರ್ತೃವೂ ಆಗಿದ್ದಾರೆ. ಇವರು ರಚಿಸಿರುವ ವಚನಗಳು ಮಹತ್ತರವಾದ ಸ್ಥಾನವನ್ನು ಪಡೆದಿದ್ದವು ಎಂಬುವುದಕ್ಕೆ ನಂತರದ ಕಾಲದ ಸುಮಾರು ಐವತ್ತೊಂಬತ್ತಕ್ಕೂ ಅಧಿಕ ವಚನ ಸಂಕಲನ, ವ್ಯಾಖ್ಯಾನ ಕೃತಿಗಳಲ್ಲಿ ಉದ್ಧೃತವಾಗಿರುವುದೇ ನಿರ್ದಶನ. ಸಿದ್ಧರಾಮರು ವಚನಕಾರರಾಗಿ, ಕವಿಯಾಗಿ ಮಾತ್ರವಲ್ಲದೆ ಲೋಕ ಕಲ್ಯಾಣಾರ್ಥವಾಗಿ ಕೈಗೊಂಡ ಧರ್ಮ ಕಾರ್ಯಗಳಿಂದಾಗಿ ಕರ್ಮಯೋಗಿಯೂ ಆಗಿದ್ದಾರೆ. ಕಲ್ಯಾಣದ ಶರಣರ ಪ್ರಭಾವದಿಂದ ಸಿದ್ಧರಾಮರು ಕರ್ಮಯೋಗದಿಂದ ಶಿವಯೋಗ ಮಾರ್ಗದತ್ತ ಹೊರಳಿ ಮಹಾಯೋಗಿ ಎನಿಸಿಕೊಂಡವರು. 12ನೇ ಶತಮಾನದಿಂದ ಆಧುನಿಕ ಕಾಲದವರೆವಿಗೆ ಸಿದ್ಧರಾಮರನ್ನು ಕುರಿತು ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಕಾವ್ಯಗಳನ್ನು ರಚಿಸಿದ್ದಾರೆ. ಜನಪದ ಸಾಹಿತ್ಯದಲ್ಲಿಯೂ ಈತನನ್ನು ಕುರಿತ ವಿವರಣೆ ಇದೆ.

   ವಚನಕಾರ ಸಿದ್ಧರಾಮರು ಸಮಾಜೋಧಾರ್ಮಿಕ ಚಳುವಳಿಯಲ್ಲಿ ಎಲ್ಲಾ ವಚನಕಾರರ ನಿಲುವುಗಳೊಂದಿಗೆ ಸಾಮೂಹಿಕವಾಗಿ ಬದ್ಧರಾಗಿರುವುದನ್ನು ಕಾಣಬಹುದು. ವ್ಯಕ್ತಿಯಾಗಿ ಜನಿಸಿ ದಿವ್ಯತ್ವದ ಸಾಧನೆಯಿಂದ ಲೋಕೋದ್ಧಾರರ ಮಾಡಿದ ಮಹಾಚೇತನ. ಸಮಾಜೋಧಾರ್ಮಿಕ ಆಂದೋಲನದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಇವರು ಸಾಮಾಜಿಕ ಹಾಗೂ ಪರಿಪೂರ್ಣ ದೃಷ್ಟಿಯ ವಿಚಾರ ಧಾರೆಯಿಂದ ಅಪಾರವಾದ ಮಾನವೀಯತೆಯ ಅನುಕಂಪೆಯತ್ತ ಮಾನವನನ್ನು ಕೊಂಡೊಯ್ದದ್ದಲ್ಲದೆ ಕೆಲವು ರಚನಾತ್ಮಕ ಆಚರಣೆಗಳನ್ನು ಸ್ವತಃ ಪ್ರಾಯೋಗಿಕವಾಗಿ ಆಚರಣೆಗೆ ತಂದವರಾಗಿದ್ದಾರೆ. ಇವರನ್ನು ಕುರಿತು ೧೨ನೇ ಶತಮಾನದ ಸಮಕಾಲೀನ ವಚನಕಾರರೇ ಮುಕ್ತಕಂಠದಿಂದ ಸ್ತುತಿಸಿದ್ದಾರೆ.

ಸಮಕಾಲೀನ ವಚನಗಳಲ್ಲಿ ಸಿದ್ಧರಾಮರ ಉಲ್ಲೇಖ :

      ಸಿದ್ಧರಾಮರ ಸಮಕಾಲೀನರಾದ ಅಲ್ಲಮಪ್ರಭು, ದೀಕ್ಷಾಗುರುವಾದ ಚನ್ನಬಸವಣ್ಣ, ಮಹಾದೇವಿಯಕ್ಕ ಆದಯ್ಯ ಹಾಗೂ ಇವರ ಶಿಷ್ಯ ಹಾವಿನಹಾಳ ಕಲ್ಲಯ್ಯರು ತಮ್ಮ ವಚನಗಳಲ್ಲಿ ಸಿದ್ಧರಾಮರನ್ನು ಕುರಿತು ಉಲ್ಲೇಖಿಸಿರುವುದುಂಟು.

      ಏಕೋ ಭಾವ ನಿಷ್ಠೆ ಸಿದ್ಧರಾಮ ದೇವರಿಂದ ಎನಗಾಯಿತ್ತು

      ಹಸಿವ ಮರೆದಲ್ಲಿ ವ್ಯಸನವರಿತಲ್ಲಿ ಗೋಹೇಶ್ವರ ಲಿಂಗವು

      ಸಿದ್ಧರಾಮಯ್ಯ ದೇವರು ತಾವೇ, (ಅಲ್ಲಮ ವಚನ ಚಂದ್ರಿಕೆ, ವ.ಸಂ.916) 

      ನಮ್ಮ ಕೂಡಲ ಚನ್ನಸಂಗಯ್ಯನಲ್ಲಿ ನಿಸ್ಸೀಮ ಸಿದ್ಧರಾಮಯ್ಯನ ಶ್ರೀ ಪಾದಕ್ಕೆ

      ಶರಣೆಂದು ಬದುಕಿದನು.

      ನಮ್ಮ ಕೂಡಲ ಚನ್ನಸಂಗಯ್ಯನಲ್ಲಿ ಮಾಯಾ ಕೋಲಾಹಳ ಸಿದ್ಧರಾಮಯ್ಯ

      ದೇವರಿಗೆ ಆಹೋರಾತ್ರಿಯಲ್ಲಿ ನಮೋ ನಮೋ ಎಂದು ಬದುಕಿದೆನು

                  (ಚನ್ನಬಸವಣ್ಣನವರ ವಚನಗಳು, ವ.ಸಂ.955, 375)

      ಸಿದ್ಧರಾಮಯ್ಯ ಪ್ರಸಾದವ ಕೊಂಡು ಎನ್ನ ಕರಣಂಗಳು ಶುದ್ಧವಾಯಿತ್ತಯ್ಯ

      ಸಿದ್ಧರಾಮಯ್ಯನೇ ಜಂಗಮ

      ಸಿದ್ಧರಾಮಯ್ಯನ ಶಿಶುಮಗಳಾ ಕಾರಣ ಪ್ರಾಣ ಪ್ರಸಾದವ ಸಿದ್ಧಿಸಿ ಕೊಟ್ಟನು

                  (ಮಹಾದೇವಿ ಅಕ್ಕನ ವಚನಗಳು, ವ.ಸಂ.199, 225, 223)

       ಸಿದ್ಧರಾಮ ತಂದೆಗಳೆನ್ನ ನೇತ್ರದ ದೃಕ್‌ ಎಂದು ವಚನಕಾರ ಆದಯ್ಯ ಸ್ಮರಿಸಿದ್ದಾನೆ.

      ಸಿದ್ಧರಾಮರ ಶಿಷ್ಯರಾದ ಹಾವಿನಹಾಳ ಕಲ್ಲಯ್ಯ ತಮ್ಮ ವಚನಗಳಲ್ಲಿ ಸಿದ್ಧರಾಮರ ಜೀವನದ ಸಾರ್ಥಕತೆಯ ಎಳೆಗಳನ್ನು ಗುರುತಿಸಿದ್ದಾರೆ.

      ಅತ್ಯಾಶೆಯೆಂಬುದು ಪಾಪ ಬೇರೆ ಪಾಪಂಬುದಿಲ್ಲ

      ಇಹಪರದಾಶೆಯಲ್ಲಿದಿಹುದೆ

      ಶಿವಯೋಗ ಮಹಾಲಿಂಗ ಕಲ್ಲೇಶನ ಬಲ್ಲ ಸಿದ್ಧರಾಮನ ಪರಿಯ

   ಸಿದ್ಧರಾಮರಿಗೆ ಶಿವಯೋಗವೂ ಸಿದ್ಧಿಸಿತ್ತು. ಹನ್ನೆರಡನೆಯ ಶತಮಾನದ ವೀರಶೈವ ಯೋಗಿಗಳಲ್ಲಿ ಸಿದ್ಧರಾಮದು ಪ್ರಮುಖ ಹೆಸರು. ಬಸವಣ್ಣ, ಅಕ್ಕಮಹಾದೇವಿ,ಅಲ್ಲಮಪ್ರಭು, ಚೆನ್ನಬಸವಣ್ಣ ಮೊದಲಾದ ಶಿವಶರಣರು ಸಿದ್ಧರಾಮನ್ನು `ಶಿವಯೋಗಿ’ಎಂದು ಕರೆದು ಕೊಂಡಾಡಿದ್ದಾರೆ. ಸ್ವತಃ ಸಿದ್ಧರಾಮರೇ

           `ಭಕ್ತನಾದರೆ ಬಸವಣ್ಣನಂತಾಗಬೇಕು

            ಜಂಗಮನಾದರೆ ಪ್ರಭುವಿನಂತಾಗಬೇಕು

            ಭೋಗಿಯಾದರೆ ನಮ್ಮಗುರು ಚೆನ್ನಬಸವಣ್ಣನಂತಾಗಬೇಕು

            ಯೋಗಿಯಾದರೆ ನನ್ನಂತಾಗಬೇಕು ನೋಡಿರಯ್ಯಾ

            ಕಪಿಲಸಿದ್ಧ ಮಲ್ಲಿಕಾರ್ಜು   (ಸಿ.ವ.77)

            `ಯೋಗವ ಸಾಧಿಸಿದವನೊಬ್ಬ ನಿಜಗುಣ

             ಯೋಗವ ಸಾಧಿಸಿದವನೊಬ್ಬ ವೃಷಭಯೋಗೀಶ್ವರ

            ಯೋಗವ ಸಾಧಿಸಿದವನೊಬ್ಬ ಕಪಿಲಸಿದ್ಧ ಮಲ್ಲಿಕಾರ್ಜುನನಲ್ಲಿ

            ಕೂಡುವ ಯೋಗ    (ಸಿ.ವ.729)

      ಹೀಗೆ ಸಿದ್ಧರಾಮರ ಮಹಿಮಾತಿಶಯಗಳನ್ನು ಸಮಕಾಲೀನ ವಚನಕಾರರೆ ಚಿತ್ರಿಸಿರುವುದುಂಟು.

ಬಸವಾದಿ ಪ್ರಮಥರಲ್ಲಿಯೇ ಅತಿ ಹೆಚ್ಚು ಶಾಸನಗಳಲ್ಲಿ ಉಲ್ಲೇಖಿತರಾದವರು:

ಸಿದ್ಧರಾಮರ ವಚನಗಳನ್ನು ಹಾಗೂ ಅವುಗಳ ಸಂಸ್ಕೃತ ಅನುವಾದಗಳನ್ನು ಶಾಸನಗಳು ಪ್ರಸ್ತಾಪಿಸಿವೆ.  ವಚನಕಾರರ ಸಾಲಿನಲ್ಲಿ ಅಪಾರ ಸಂಖ್ಯೆಯ ಶಾಸನಗಳಲಿ ಉದ್ಧೃತಗೊಂಡವರಲ್ಲಿ ಸಿದ್ಧರಾಮರೇ ಮೊದಲಿಗರು. ಸಿದ್ಧರಾಮರು ಸೊನ್ನಲಿಗೆಯಲ್ಲಿ ನಿರ್ಮಿಸಿದ ಕಪಿಲಸಿದ್ಧ ಮಲ್ಲಿಕಾರ್ಜುನ ದೇವಾಲಯದ ಹೆಸರಿನಲ್ಲಿ ಕನ್ನಡ ನಾಡಿನ ಒಳಗೆ ಮತ್ತು ಹೊರಗೆ ಸುಮಾರು 27 ಶಾಸನಗಳು ಲಭ್ಯವಿವೆ. ಹಳೇ ಮೈಸೂರು ಪರಿಸರದ ಶಿವಮೊಗ್ಗ, ಚಿತ್ರದುರ್ಗ, ತುಮಕೂರು ಈ ಭಾಗಗಳವರೆಗೂ ಈ ದೇವಾಲಯ ಹಾಗೂ ಸಿದ್ಧರಾಮರಿಗೆ ಸಂಬಂಧಿಸಿದ ಉಲ್ಲೇಖಗಳನ್ನೊಳಗೊಂಡ ಶಾಸನಗಳು ದೊರೆತಿರುವುದನ್ನು ನೋಡಿದರೆ ಅವರ ವ್ಯಕ್ತಿತ್ವದ ಅರಿವಾಗುತ್ತದೆ. ಈ ಶಾಸನಗಳು ಕಾಲದ ದೃಷ್ಟಿಯಿಂದ  ಕ್ರಿ.ಶ.1190 ರಿಂದ 1316ರವರೆಗೆ ಕಂಡುಬರುತ್ತವೆ. ಈ ಶಾಸನಗಳ ವಿವರದಿಂದಾಗಿ ಸಿದ್ಧರಾಮರು ಜಗದ್ಗುರುತ್ವವನ್ನು ಪಡೆದಿದ್ದುದರ ಜೊತೆಗೆ ಕಳಚೂರಿ ದೊರೆ ಕನ್ನರ ಹಾಗೂ ಸೇವುಣ ದೊರೆ ದನೆಯ ಭಿಲ್ಲಮರಿಂದ ಗೌರವಕ್ಕೆ ಪಾತ್ರರಾಗಿದ್ದರು ಎಂಬುದಾಗಿ ತಿಳಿದುಬರುತ್ತದೆ. ತನ್ನ ಕಾಲದಲ್ಲಿ ಮಹಿಮಾನ್ವಿತ ವ್ಯಕ್ತಿಯಾಗಿ, ಜನರ ಗೌರವಕ್ಕೆ, ಭಕ್ತಿಗೆ ಪಾತ್ರರಾಗಿದ್ದರು. ಇವರಿಂದಾಗಿಯೇ ಸೊನ್ನಲಿಗೆಯು ಅಭಿನವ ಕೈಲಾಸ, ದಕ್ಷಿಣ ವಾರಣಾಸಿ ಎಂಬ ಖ್ಯಾತಿಗೂ ಒಳಗಾಯಿತು. ಈ ಶಾಸನಗಳ ಮೂಲಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಬದುಕನ್ನು ಮೀಸಲಿಟ್ಟ ಸಿದ್ಧರಾಮರ ಕರ್ಮಯೋಗತ್ವವನ್ನು ಅರ್ಥೈಸಬಹುದಾಗಿದೆ. ಶಾಸನಕ್ಕಾಗಿಯೇನೋ ಎಂಬಂತೆ ಸಿದ್ಧರಾಮರ ಎರಡು ವಚನಗಳನ್ನು ಉಲ್ಲೇಖಿಸಿ ಅವರ ಇಷ್ಟದೈವ ಕಪಿಲಸಿದ್ದ ಮಲ್ಲಿಕಾರ್ಜುನ ಲಿಂಗಕ್ಕೆ ದತ್ತಿಗಳನ್ನು ನೀಡಿರುವ ಕ್ರಮವು ಶಾಸನಗಳ ಇತಿಹಾಸದಲ್ಲಿಯೇ ವೈಶಿಷ್ಟ್ಯಪೂರ್ಣವಾಗಿದೆ.ಕೆಲವು ಶಾಸನಗಳಲ್ಲಿ ಸಿದ್ಧರಾಮ ಹೆಸರು ನೇರವಾಗಿಯೂ, ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ಅಂಕಿತದೊಡನೆಯೂ ಕಾಣಿಸಿಕೊಂಡಿದೆ. ವಚನಕಾರರಲ್ಲಿ ಅಪಾರ ಸಂಖೈಯ ಶಾಸನಗಳಲ್ಲಿ ಉದ್ಧೃತಗೊಂಡವರಲ್ಲಿ ಸಿದ್ಧರಾಮನ್ನು ಬಿಟ್ಟರೆ ಮತ್ತೊಬ್ಬ ವಚನಕಾರರಿಲ್ಲ. ಸಿದ್ಧರಾಮರು ಶಿವಶರಣರ ಪ್ರಭಾವಕ್ಕೆ ಒಳಗಾಗುವ ಮುನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ತನ್ನ ಬದುಕನ್ನು ಮೀಸಲಿಟ್ಟ ಹೇಗೆ ಕರ್ಮಯೋಗಿ ಎನಿಸಿದ್ದರು ಎಂಬುದಕ್ಕೆ ಶಾಸನಗಳು ಒಳ್ಳೆಯ ದಾಖಲೆಗಳಾಗಿವೆ. ಸಿದ್ಧರಾಮ ಹೆಸರಿನಲ್ಲಿ ದೊರಕುವ ಶಾಸನಗಳ ಅಧ್ಯಯನದ ಮೂಲಕ ಇವರ ಧಾರ್ಮಿಕ ಕಾರ್ಯಕ್ಷೇತ್ರದ ವಿಸ್ತಾರ ವ್ಯಾಪ್ತಿಗಳನ್ನು ತಿಳಿಯಬಹುದೇ ಹೊರತು ಅವ ಜೀವನ ವಿವರಗಳು ಅಲ್ಲಿ ಹೆಚ್ಚಾಗಿ ದೊರೆಯುವುದಿಲ್ಲ.

ಕನ್ನಡ ಸಾಹಿತ್ಯದಲ್ಲಿ ಶಿವಯೋಗಿ ಸಿದ್ಧರಾಮರ ವ್ಯಕ್ತಿತ್ವ ವನ್ನು ಬೆಳಕು ಚೆಲ್ಲುವ ಕೃತಿಗಳು:

      ಸಿದ್ಧರಾಮರನ್ನು ಕುರಿತ ಚರಿತ್ರೆಯು ಹನ್ನೆರಡನೇ ಶತಮಾನದಿಂದ 20ನೆಯ ಶತಮಾನದವರೆಗಿನ ವೀರಶೈವ ಸಾಹಿತ್ಯದಲ್ಲಿ ಕೆಲವೊಂದು ಮಾರ್ಪಾಡುಗಳೊಡನೆ ಮೈದಾಳಿದೆ. ಸಿದ್ಧರಾಮರರನ್ನು ಕುರಿತು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪೂರ್ಣ ಪ್ರಮಾಣದಲ್ಲಿ ಹಾಗೂ ಸಂಕ್ಷಿಪ್ತವಾಗಿ ಕಾವ್ಯರಚಿಸಿರುವ ಕವಿಗಳು ಕನ್ನಡ ಸಾಹಿತ್ಯದಲ್ಲಿ ಪ್ರಚಲಿತವಿರುವ ಷಟ್ಪದಿ, ರಗಳೆ, ಸಾಂಗತ್ಯ, ತ್ರಿಪದಿ ಇತ್ಯಾದಿ ಕಾವ್ಯ ಪ್ರಕಾರಗಳನ್ನು ಮಾಧ್ಯಮವಾಗಿ ಬಳಸಿಕೊಂಡಿದ್ದಾರೆ. ಸಿದ್ಧರಾಮರನ್ನು ಕುರಿತು ಕಾವ್ಯ ಪುರಾಣಗಳನ್ನು ರಚಿಸಲು ಸಿದ್ಧರಾಮರಿಗೆ ವಿಲಕ್ಷವಾದ ವ್ಯಕ್ತಿತ್ವ, ಸಾಧಿಸಿದ ಮಹತ್ಕಾರ್ಯ ಇತ್ಯಾದಿಗಳನ್ನು ಕುರಿತ ಸಮಕಾಲೀನ ಜನವದಂತಿ ಹಾಗೂ ಐತಿಹ್ಯಗಳು ಪ್ರೇರಕಗಳಾಗಿವೆ. ಸಿದ್ಧರಾಮರನ್ನು ಕುರಿತ ಕಾವ್ಯ ಪುರಾಣಗಳಲ್ಲಿ ವೈಯಕ್ತಿಕ ಚರಿತ್ರೆ, ಮತೀಯ ನಿಷ್ಠೆ, ಸಾಮಾಜಿಕ ಕಳಕಳಿ, ವೀರಶೈವ ಮತತ್ವಗಳ ವಿವರ ಕಂಡು ಬರುತ್ತದೆ. ಕನ್ನಡ ಸಾಹಿತ್ಯದಲ್ಲಿ ಸಿದ್ಧರಾಮರ ಚರಿತ್ರೆಯ ಎರಡು ಹಂತದಲ್ಲಿ ವ್ಯಕ್ತವಾಗಿದೆ. ಕ್ರಿ.ಶ.1400 ವರೆಗಿನ ಕೃತಿಗಳಲ್ಲಿ ಸಿದ್ಧರಾಮರ ಶೈವ ಮಾರ್ಗ ಪ್ರಭಾವಕ್ಕೊಳಗಾದ ಪೂರ್ವ ಚರಿತ್ರೆಯನ್ನು ಗುರುತಿಸಿದರೆ, ನಂತರ ಕಾಲದ ಕೃತಿಗಳು-ಪುರಾಣಗಳಲ್ಲಿ ಸಿದ್ಧರಾಮರು ಇಷ್ಟಲಿಂಗ ದೀಕ್ಷೆಯನ್ನು ಪಡೆದು ವೀರಶೈವ ಮಾರ್ಗಾವಲಂಬಿಯಾಗಿ ಶಿವಯೋಗಿಯಾದ ಉತ್ತರ ಚರಿತ್ರೆಯನ್ನು ಗುರುತಿಸಬಹುದಾಗಿದೆ.

ಸಿದ್ಧರಾಮರ ಮೊದಲ ಘಟ್ಟದ ಚರಿತ್ರೆಯನ್ನು ಚಿತ್ರಿಸಿರುವ ಕಾವ್ಯಗಳು :

(ರಾಘವಾಂಕನ ಕಾವ್ಯದಿಂದ ಪ್ರೇರಿತವಾಗಿ ಪರೋಕ್ಷವಾಗಿ ಉಲ್ಲೇಖಿಸಲ್ಪಟ್ಟ ಕಾವ್ಯಗಳು)

1. ಹರಿಹರನ ರೇವಣಸಿದ್ಧೇಶ್ವರ ರಗಳೆ 2. ಪ್ರಭುದೇವರ ರಗಳೆ 3. ಏಕಾಂತರಾಮಿ ತಂದೆಗಳ ರಗಳೆ 4. ಲಿಂಗಾರ್ಚನೆಯ ರಗಳೆ 5. ಹಾವಿನಾಳ ಕಲ್ಲಯ್ಯನ ರಗಳೆ 6. ರಾಘವಾಂಕನ ಸಿದ್ಧರಾಮ ಚಾರಿತ್ರ (ಪೂರ್ಣ ಪ್ರಮಾಣದ ಕೃತಿ) 7. ಕುಮಾರ ಪದ್ಮರಸಾನಂದ ಚರಿತೆ 8. ಭೀಮ ಕವಿಯ ಬಸವಪುರಾಣ 9. ಚತುರ್ಮುಖ ಬೊಮ್ಮರಸನ ರೇವಣ ಸಿದ್ಧೇಶ್ವರ ಪುರಾಣ 10.ಶಾಂತೇಶನ ಸಿದ್ಧೇಶ್ವರ ಪುರಾಣ 11. ಉತ್ತರ ದೇಶದ ಬಸವಲಿಂಗನ ಬಸವೇಶ್ವರ ಪುರಾಣ ಕಥಾಸಾಗರ 12. ಶಾಂತಲಿಂಗ ದೇಶಿಕನ ಭೈರವೇಶ್ವರ ಕಾವ್ಯ ಕಥಾಮಣಿ ಸೂತ್ರ ರತ್ನಾಕರ 13. ಷಡಕ್ಷರ ಕವಿಯ ಬಸವರಾಜ ವಿಜಯಂ ಈ ಕೃತಿಗಳಲ್ಲಿ ಸಿದ್ಧರಾಮರಿಗೆ ಸಂಬಂಧಿಸಿದ ವಿವರ ಪರೋಕ್ಷವಾಗಿ ಹಾಗೂ ಸಂಕ್ಷಿಪ್ತವಾಗಿ ಚಿತ್ರಿತವಾಗಿದೆ. `ಸಿದ್ಧರಾಮ ಚಾರಿತ್ರ’ 9 ಸಂಧಿಗಳಲ್ಲಿ ಹರಡಿಕೊಂಡಿರುವ ರಾಘವಾಂಕನ ಎರಡನೆಯ ದೊಡ್ಡ ಕೃತಿ. 12ನೆಯ ಶತಮಾನದ ಪ್ರಥಮರೇಣ್ಯರಾದ ಬಸವಣ್ಣ ಅಲ್ಲಮರ ಸಮಕಾಲೀನನೂ ಪ್ರಸಿದ್ಧ ವಚನಕಾರನೂ ಕರ್ಮಯೋಗಿಯೂ ಆದ ಸಿದ್ಧರಾಮನ ಜೀವನ ಕಥಯೇ ಇಲ್ಲಿಯ ವಸ್ತು. ಸಿದ್ಧರಾಮನ ಇತಿಹಾಸ ವೃತ್ತಾಂತದ ಜೊತೆಗೆ ಪವಾಡ ಪ್ರಸಂಗಗಳೂ ಅತಿಮಾನುಷ ವಿಷಯಗಳೂ ಸೇರಿ ಕಾವ್ಯ ಕಥೆಯನ್ನು ಬೆಳೆಸಿರುವುದರಿಂದ ಇದು `ಪುರಾಣ’ವೆಂದೂ ಹೆಸರಾಗಿದೆ. ಕೆಲವನ್ನು ಕವಿಯೇ ಸೃಷ್ಟಿಸಿಕೊಂಡಿರಬಹುದುದಾದ ಸಾಧ್ಯತೆಯೂ ಇದೆ. ರಾಘವಾಂಕನ ಅನಂತರದ ಕೆಲವು ಕೃತಿಕಾರರು  ಸಿದ್ಧರಾಮನನ್ನು ಕುರಿತ ಕಥೆಗಳನ್ನು ಪ್ರಾಸಂಗಿಕವಾಗಿ ಹೇಳಿದ್ದಾರೆ. ಆದರೆ ಸಿದ್ಧರಾಮನ ಇಡೀ ಕಥೆ ಯನ್ನು ರಾಘವಾಂಕನ ನಂತರ ಯಾರೂ ಬರೆದಂತಿಲ್ಲ ಮುಂದಿನ ಕೃತಿಗಳಲ್ಲಿ `ಸಿದ್ಧರಾಚಾರಿತ್ರ’ದ ಕಥೆಗಳೇ ರೂಪಾಂತರಹೊಂದಿ ಬೆಳೆದಿವೆ. ಹಾಗೆಯೇ ಹೊಸ ಕಥೆಗಳೂ ಜನ್ಮ ತಾಳಿವೆ. ಮುದ್ದುಗೌಡ, ಸುಗ್ಗವ್ವೆ ಎಂಬ ದಂಪತಿಗಳಿಗೆ ಮಗನಾಗಿ ಹುಟ್ಟಿದ ಈತ ಬಾಲ್ಯದಿಂದಲೂ ಲೋಕಕ್ಕೆ ವಿಚಿತ್ರವೆನಿಸುವ ರೀತಿಯಲ್ಲಿ ಬೆಳೆದು ಕೊನೆಗೆ ಶ್ರೀಶೈಲದಲ್ಲಿ ಮಲ್ಲಿಕಾರ್ಜುನನ ಸಾಕ್ಷಾತ್ಕಾರ ಪಡೆದುದನ್ನೂ ಅನಂತರ ಸೊನ್ನಲಿಗೆಗೆ ಹಿಂದಿರುಗಿ ಈತನು ಕೈಗೊಂಡ ಕಾರ್ಯಸಾಧನೆಯನ್ನೂ ರಾಘವಾಂಕ ತನ್ನ ಸಿದ್ಧರಾಮಚಾರಿತ್ರದಲ್ಲಿ ಬಹಳ ಅರ್ಥವತ್ತಾಗಿ ನಿರೂಪಿಸಿದ್ದಾನೆ.

   ರಾಘವಾಂಕನಿಗೆ ಸಿದ್ಧರಾಮನ ವಚನಗಳ ಪರಿಚಯವಿದ್ದಿರಬೇಕೆಂಬುದಕ್ಕೆ ಕೃತಿಯಲ್ಲಿಯೇ ಆಧಾರಗಳು ಸಿಗುತ್ತವೆ. ವಚನಗಳಲ್ಲಿಯೂ `ಸಿದ್ಧರಾಮನಚಾರಿತ್ರ’ದಲ್ಲಿಯೂ  ಕೆಲವು ಸಮಾನ ಅಂಶಗಳಿವೆ. 1.ಕೆರೆಬಾವಿ ಹೂದೋಟ ಛತ್ರಗಳನ್ನು ಮಾಡಿಸಿದುದು:2.ಸಿದ್ಧರಾಮನ ಅಣ್ಣ ಬೊಮ್ಮಯ್ಯನೆಂಬುದು ಮತ್ತು ಅವನಿಗೆ ಉಪದೇಶಮಾಡಿದುದು:3.ಲಿಂಗ ಪ್ರತಿಷ್ಠಾಪನೆಯ ವಿಚಾರ:4. ಶ್ರೀಶೈಲ ಸಂಬಂಧ ಮತ್ತು ಅದರ ಮಹಿಮೆಯಿಂದ ಪ್ರಭಾವಿತವಾದುದು. ಸೊನ್ನಲಿಗೆಯನ್ನು ಎರಡನೆಯ ಶ್ರೀಶೈಲವಾಗಿ ಮಾಡಬೇಕೆಂದು ಉದ್ದೇಶಿಸಿದುದು: 5.ಅಲ್ಲಮ-ಸಿದ್ಧರಾಮರ ಸಂದರ್ಶನ (ವಿವರದಲ್ಲಿ ವ್ಯತ್ಯಾಸವಾಗುತ್ತದೆ.) :6. ಹಾವಿನಹಾಳ ಕಲ್ಲಯ್ಯ ಶಿಷ್ಯನಾಗಿ ಉಪದೇಶ ಹೊಂದಿದುದು.

     ಸಿದ್ಧರಾಮರ ಚರಿತ್ರೆಯನ್ನು ಸಮಗ್ರವಾಗಿ ನಿರೂಪಿಸಿದವರಲ್ಲಿ ರಾಘವಾಂಕನೇ ಮೊದಲಿಗನಾಗಿದ್ದಾನೆ. ಸಿದ್ಧರಾಮ ಸಾಧನೆಯನ್ನು ಮೊದಲಿಗೆ ಗುರುತಿಸಿ ಅವರ ಮಹತ್ತರ ಸಂದೇಶವನ್ನು ಸಾರಿದವನು ರಾಘವಾಂಕ ಕವಿ. ತನ್ನೊಬ್ಬನ ಉದ್ಧಾರದ ಪರಿಣಾಮದಲ್ಲಿ ಆತನ ಸಾಧನೆ ಪರ್ಯಾವಸಾನಗೊಳ್ಳದೆ ತಾನು ಪಡೆದುದನ್ನು ಜಗತ್ತಿಗೆ ನೀಡುವ ಮಾನವೀಯ ಅನುಕಂಪೆಯಿಂದ ಆತನ ಹೃದಯ ಮಿಡಿದುದನ್ನು ಗುರುತಿಸಿದ್ದಾನೆ. ಸಮಾಜ ಸೇವೆಯಲ್ಲಿ ಬಾಳನ್ನು ಸವೆಸಿದ ಮಹಾನ್ ವ್ಯಕ್ತಿಯಾದ ಸಿದ್ಧರಾಮರ ಜೀವನದ ಮೊದಲ ಘಟ್ಟದಲ್ಲಿ ಕರ್ಮಯೋಗಿಯಾಗಿ ದೇವಾಲಯ ನಿರ್ಮಾಣ, ಸುಕ್ಷೇತ್ರ ಪರಿಕಲ್ಪನೆ, ಸ್ಥಾವರ ಲಿಂಗ ಪ್ರತಿಷ್ಠಾಪನೆ, ಲೋಕೋಪಯೋಗಿ ಕಾಯಕ, ಯೋಗಸಾಧನೆ ಮೊದಲಾದ ಕಾರ್ಯಗಳಲ್ಲಿ ತೊಡಗಿದ್ದರೂ, ಯೋಗಿಗಳ ಮನದ ಕೊನೆಯ ಜ್ಯೋತೀಶ್ವರನು ಆಚಾರ್ಯನು ತಾನೆಯಾಗಿ ಯೋಗಾದಿಸಂಪನ್ನ ಕಳೆಯಂಗಳೆಲ್ಲವೂ ಸಂಪಾದಿಸಿದ ಅಭಿನವ ಶ್ರೀಶೈಲವನ್ನಾಗಿಸಿ ನಾಡಿನ ವಿವಿಧ ಭಾಗಗಳಿಂದ ಅನೇಕ ಭಕ್ತರನ್ನು ಆಕರ್ಷಿಸಿದ ಮಹಿಮಾನ್ವಿತನ ವಿವರ ವ್ಯಕ್ತವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ ಸಿದ್ಧರಾಮರಿಗೆ ಲಿಂಗದೀಕ್ಷೆಯಾದ ವಿವರ, ಅಲ್ಲಮ ಪ್ರಭುವು ಅವರನ್ನು ಕಲ್ಯಾಣಕ್ಕೆ ಕರೆತಂದ ವಿಷಯಗಳನ್ನು ಈ ಘಟ್ಟದ ಕೃತಿಗಳಲ್ಲಿ ಪ್ರಸ್ತಾಪಿಸದೆ ಇರುವುದು. ಇದರಿಂದಾಗಿ ಸಿದ್ಧರಾಮರ ಲಿಂಗದೀಕ್ಷೆಯ ಬಗೆಗೆ ಸಂಶೋಧಕರಲ್ಲಿ ಚರ್ಚೆ ನಡೆದಿದ್ದು ನಂತರ ಲಿಂಗದೀಕ್ಷೆಯಾಯಿತೆಂಬ ವಿಷಯ ಸರ್ವವಿದಿತವಾದುದ್ದು ಎಂಬುದು ಎಲ್ಲರಿಗೂ ತಿಳಿದಿರತಕ್ಕ ಸಂಗತಿಯಾಗಿದೆ. ಪ್ರಾರಂಭದಲ್ಲಿ ಶೈವರಾಗಿದ್ದು ಕೊನೆ ಕೊನೆ ವೀರಶೈವದ ಪ್ರಭಾವಕ್ಕೊಳಗಾದವರೆಂಬ ವಿವರ ಸಾಹಿತ್ಯ ಕೃತಿಗಳಲ್ಲಿ ವ್ಯಕ್ತವಾಗಿದೆ.

   ಸಿದ್ಧರಾಮರ ಲಿಂಗದೀಕ್ಷೆಗೆ ಸಂಬಂಧಿಸಿದ ಉತ್ತರ ಚರಿತ್ರೆಯ ಹದಿನೈದನೆಯ ಶತಮಾನದ ನಂತರದ ಸಾಹಿತ್ಯದಲ್ಲಿ ಕಂಡು ಬರುತ್ತದೆ. ಅವುಗಳೆಂದರೆ 1. ಶಿವಗಣ ಪ್ರಸಾದಿ ಮಹಾದೇವಯ್ಯನ ಶೂನ್ಯ ಸಂಪಾದನೆ. 2. ಚಾಮರಸರ ಪ್ರಭುಲಿಂಗ ಲೀಲೆ, 3. ಕಲ್ಲಮಠದ ಪ್ರಭುದೇವನ ಲಿಂಗ ಲೀಲಾವಿಲಾಸ ಚಾರಿತ್ರ 4. ಹಲಗೆಯ ದೇವರ ಶೂನ್ಯ ಸಂಪಾದನೆ 5. ಗುಮ್ಮಳಾಪುರದ ಸಿದ್ಧಲಿಂಗ ಯತಿಗಳ ಶೂನ್ಯ ಸಂಪಾದನೆ 6. ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆ 7.ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ 8. ಯಳಂದೂರು ಹರೀಶ್ವರರ ಪ್ರಭುದೇವರ ಪುರಾಣ 9. ಸಿದ್ಧನಂಜೇಶನ ರಾಘವಾಂಕ ಚರಿತೆ 11. ಗುಬ್ಬಿ ಮಲ್ಲಣಾರ್ಯನ ವೀರಶೈವಾಮೃತ ಮಹಾಪುರಾಣ 12. ಬಸವ ಕವಿಯ ಮಹಲಿಂಗ ಲೀಲೆ.

      ಈ ಕೃತಿಗಳಲ್ಲಿ ಸಿದ್ಧರಾಮರ ಕಲ್ಯಾಣಾಗಮನ ಹಾಗೂ ಲಿಂಗಧಾರಣೆಯ ವೃತ್ತಾಂತಗಳನ್ನು ಸುದೀರ್ಘವಾಗಿ ಹಾಗೂ ಕೆಲವೆಡೆ ಸಂಕ್ಷಿಪ್ತವಾಗಿ ನಿರೂಪಿಸಿರುವುದನ್ನು ಕಾಣಬಹುದು. ಸಿದ್ಧರಾಮರ ವಚನಗಳು, ಜೀವನ ಚರಿತ್ರೆ ಇತ್ಯಾದಿ ಅಂಶಗಳನ್ನು ನಂತರದ ವೀರಶೈವಕವಿಗಳು ತಮ್ಮ ಕಾವ್ಯ-ಪುರಾಣಗಳಲ್ಲಿ ಪ್ರಸ್ತಾಪಿಸಿರುವುದನ್ನು ನೋಡಿದರೆ  ಸಿದ್ಧರಾಮರ ಮಹತ್ವ ಎಂತಹದ್ದು ಎಂಬುದು ಮನದಟ್ಟಾಗುತ್ತದೆ.  

      ಸಿದ್ಧರಾಮರು ವಚನಕಾರರಾಗಿ, ಕವಿಯಾಗಿ ಮಾತ್ರವಲ್ಲದೆ ಲೋಕ ಕಲ್ಯಾಣಾರ್ಥವಾಗಿ ಕೈಗೊಂಡ ಧರ್ಮ ಕಾರ್ಯಗಳಿಂದಾಗಿ ಕರ್ಮಯೋಗಿಯೂ ಆಗಿದ್ದಾರೆ. ಕಲ್ಯಾಣದ ಶರಣರ ಪ್ರಭಾವದಿಂದ ಸಿದ್ಧರಾಮರು ಕರ್ಮಯೋಗದಿಂದ ಶಿವಯೋಗ ಮಾರ್ಗದತ್ತ ಹೊರಳಿ ಮಹಾಯೋಗಿ ಎನಿಸಿಕೊಂಡವರು. ವಚನಕಾರ ಸಿದ್ಧರಾಮರು ಸಮಾಜೋಧಾರ್ಮಿಕ ಚಳುವಳಿಯಲ್ಲಿ ಎಲ್ಲಾ ವಚನಕಾರರ ನಿಲುವುಗಳೊಂದಿಗೆ ಸಾಮೂಹಿಕವಾಗಿ ಬದ್ಧರಾಗಿರುವುದನ್ನು ಕಾಣಬಹುದು. ವ್ಯಕ್ತಿಯಾಗಿ ಜನಿಸಿ ದಿವ್ಯತ್ವದ ಸಾಧನೆಯಿಂದ ಲೋಕೋದ್ಧಾರ ಮಾಡಿದ ಮಹಾಚೇತನ. ಧೂಳಿಮಾಕಾಳ ಎನ್ನುವ ಹೆಸರಿನ ದನಕಾಯುವ ಮುಗ್ಧ ಹುಡುಗನೋರ್ವ ಆದರ್ಶ ಶಿವಯೋಗಿಯಾದುದ್ದು, ಕುಗ್ರಾಮವಾಗಿದ್ದ ಸೊನ್ನಲಿಗೆ ಪ್ರಸಿದ್ಧ  ಕ್ಷೇತ್ರವಾಗಿ ಇವರ ಮೂಲಕ ಬೆಳೆದಿದ್ದು ನಂಬಲಸಾಧ್ಯವಾದ ಪವಾಡವೇ ಸರಿ. ಸಮಾಜೋಧಾರ್ಮಿಕ ಆಂದೋಲನದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಇವರು ಸಾಮಾಜಿಕ ಹಾಗೂ ಪರಿಪೂರ್ಣ ದೃಷ್ಟಿಯ ವಿಚಾರ ಧಾರೆಯಿಂದ ಅಪಾರವಾದ ಮಾನವೀಯತೆಯ ಅನುಕಂಪೆಯತ್ತ ಮಾನವನ್ನು ಕೊಂಡೊಯ್ದದ್ದಲ್ಲದೆ ಕೆಲವು ರಚನಾತ್ಮಕ ಆಚರಣೆಗಳನ್ನು ಸ್ವತಃ ಪ್ರಾಯೋಗಿಕವಾಗಿ ಆಚರಣೆಗೆ ತಂದವರಾಗಿದ್ದಾರೆ.     

    ಸಿದ್ಧರಾಮನ ಒಟ್ಟು 1992ವಚನಗಳು ಕಪಿಲಸಿದ್ಧ ಮಲ್ಲಿಕಾರ್ಜುನ, ಕಪಿಲಸಿದ್ಧ ಮಲ್ಲೇಶ್ವರ, ಕಪಿಲಸಿದ್ಧ ಮಲ್ಲೇಶ್ವರ ದೇವರು, ಕಪಿಲಸಿದ್ಧ ಮಲ್ಲೇಶ, ಕಪಿಲಸಿದ್ಧ ಮಲ್ಲಿಕಾರ್ಜುನ ಲಿಂಗ, ಕಪಿಲಸಿದ್ಧ ಮಲ್ಲಿನಾಥ, ಯೋಗಿನಾಥ ಹೆಸರಿನ ಅಂಕಿತಗಳಲ್ಲಿ ದೊರಕುತ್ತವೆ. ಕಪಿಲಸಿದ್ಧ ಮಲ್ಲಿಕಾರ್ಜುನ ಅಂಕಿತದೊಂದಿಗೆ ತಿಪಟೂರು ತಾಲೋಕು ಹೊನ್ನವಳ್ಳಿ ಗ್ರಾಮದ ಶ್ರೀ ಕರಿಸಿದ್ದೇಶ್ವರ ಮಠದಲ್ಲಿ ಎಂ.ಎಂ.ಕಲಬುರ್ಗಿ ಮತ್ತು ಸಾ.ಶಿ. ಮರುಳಯ್ಯನವರಿಗೆ ದೊರೆತ ಅಪರೂಪದ  ಆರು ಸಾವಿರ ವಚನಗಳ ಕಟ್ಟಿನಲ್ಲಿ ಯೋಗಿನಾಥ ಅಂಕಿತದ ಅನೇಕ ವಚನಗಳು ಕಾಣಬರುತ್ತವೆ.  ಅದೇ ರೀತಿ ಎಸ್.ಶಿವಣ್ಣನವರು ಸಂಪಾದಿಸಿರುವ  ಮುತ್ತಿನ ಪೆಂಡೆಯ ಓದುವ ಅನ್ನದಾನಿದೇವರು ಸಂಕಲಿಸಿದ ಸಿದ್ಧರಾಮಯ್ಯನ ಶಿವಯೋಗ ಷಟ್ಸ್ಥಲಾನುಭವದ ವಚನ ಕೃತಿಯಲ್ಲಿಯೂ  ಯೋಗಿನಾಥ ಅಂಕಿತದ ವಚನಗಳು ದೊರೆಯುತ್ತವೆ. ಯೋಗಿನಾಥ ಅಂಕಿತವನ್ನು ಬಳಸಿರುವ ಬಗೆಗೆ ವಿದ್ವಾಂಸರು ಸಿದ್ಧರಾಮನು ಆಧ್ಯಾತ್ಮಿಕವಾಗಿ ಬೆಳೆದಂತೆ, ಕಲ್ಯಾಣದಲ್ಲಿ ಪ್ರಭು, ಬಸವ, ಚನ್ನಬಸವ ಮೊದಲಾದ ಶರಣರ ಸಂಪರ್ಕ ಒದಗಿದ ಮೇಲೆ ಯೋಗಿನಾಥ ಅಂಕಿವನ್ನು ಬಳಸಿರಬೇಕು ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಅವ ಸಂಕೀರ್ಣ ತ್ರಿವಿಧಿ, ಅಷ್ಟಾವರಣ  ಸ್ತೋತ್ರದ ತ್ರಿವಿಧಿಗಳಲ್ಲಿ ಯೋಗಿನಾಥ ಅಂಕಿತವನ್ನು ಕಾಣಬಹುದು. ಸಿದ್ಧರಾಮರು ತನ್ನ ವಚನವೊಂದರಲ್ಲಿ ಅರವತ್ತೆಂಟು ಸಾವಿರ ವಚನಂಗಳ ಹಾಡಿ ಹಾಡಿ ಸೋತಿತ್ತೆನ್ನ ಮನ ಎಂದು ಸ್ವತಹ ತಾವೇ  ಹೇಳಿಕೊಂಡಿದ್ದಾರೆ. ಆದರೆ ಇಷ್ಟು  ಅಧಿಕ ಪ್ರಮಾಣದಲ್ಲಿ ವಚನಗಳನ್ನು ಬರೆದಿರುವುದರ ಬಗೆಗೆ ಸಂದೇಹವಿದೆ. ಸಿದ್ಧರಾಮರ ವಚನಗಳಲ್ಲಿ ಅವರ ವ್ಯಕ್ತಿತ್ವ ಸ್ಫುಟವಾಗಿ ಅಭಿವ್ಯಕ್ತಗೊಂಡಿದೆ. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಪ್ರಭುತ್ವವನ್ನು ಅವನ ವಚನಗಳಲ್ಲಿ ಕಾಣಬಹುದು. ಸಿದ್ಧರಾಮರು ವಚನ ಪರಂಪರೆಯ ಕವಿಗಳು. ಅವರ ವಚನಗಳು ವೀರಶೈವ ಪರಂಪರೆಯ ದರ್ಶನವನ್ನು  ಸ್ವಲ್ಪಮಟ್ಟಿಗೆ ನಿರೂಪಿಸುತ್ತವೆ.

     ಬಸವ ಅಲ್ಲಮರಂತಹ ವೀರಶೈವ ಸಾಧಕರ ನೇರ ಸಂಪರ್ಕಕ್ಕೆ ಒಳಗಾಗದ ಸಂದರ್ಭದಲ್ಲಿಯೂ ಸಿದ್ಧರಾಮರು ವಚನಗಳನ್ನು ರಚಿಸಿದ್ದಾರೆ. ಶ್ರೀಶೈಲದಿಂದ ಹಿಂದಿರುಗಿದ ಬಳಿಕ ಕ್ರಮೇಣ ಸೊನ್ನಲಿಗೆಯಲ್ಲಿ ದೇವಾಲಯವನ್ನು ಕಟ್ಟಿ, ಮಠವನ್ನು ಸ್ಥಾಪಿಸಿ ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿ ಭಕ್ತಿ ಸಾಧಕನಾಗಿಯೂ ವಿಕಾಸಗೊಂಡಂತಹ ಸಂದರ್ಭದಲ್ಲಿಯೂ ವಚನಗಳನ್ನು ರಚಿಸಿದ್ದಾರೆ. ಸಿದ್ಧರಾಮರು ಶೈವರಾಗಿದ್ದಾಗಲೇ ತನ್ನ ನಡೆ-ನುಡಿಗಳಿಂದ ನಿಜವಾದ ವೀರಶೈವನಾಗಿದ್ದವರು. ಅವರೇ ತನ್ನ ಒಂದು ವಚನದಲ್ಲಿ ಲಿಂಗವಿಲ್ಲದವರನ್ನು ಆ ಒಂದು ಕಾರಣಕ್ಕಾಗಿಯೇ ಭವಿಯೆಂದು ಕರೆಯಬೇಕಾಗಿಲ್ಲವೆಂದು, ಭಕ್ತರು ಬಹಿರಂಗದಲ್ಲಿ ಲಿಂಗವಿರಹಿತ ಅಂತರಂಗದಲ್ಲಿ ಲಿಂಗಲೋಲುಪ್ತರಾಗಿರಲು ಸಾಧ್ಯವೆಂಬುದನ್ನು ಹೇಳಿದ್ದಾರೆ. ಸಿದ್ಧರಾಮರು ಶೈವರಾಗಿದ್ದ ಸಂದರ್ಭದಲ್ಲಿಯೂ ಸಾಧಕನಾಗಿ ತನ್ನ ಅನುಭವಗಳನ್ನು ವಚನ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ.

      ಅಲ್ಲಮರು ಸಿದ್ಧರಾಮರನ್ನು ಸೊನ್ನಲಿಗೆಯಲ್ಲಿ ಕಾಣುವ ಹೊತ್ತಿಗಾಗಲೇ ಅವರ ಹೆಸರು ದೆಸೆದೆಸೆಗೆ ಹಬ್ಬಿದ್ದಿತು. ಇವರು ದೀನದಲಿತರಿಗಾಗಿ ಕೈಗೊಂಡಿದ್ದ ಸಮಾಜ ಕಲ್ಯಾಣ ಕಾರ್ಯಗಳು ಎಲ್ಲರ ಗಮನಸೆಳೆದಿದ್ದವು. ಆ ಕಾಲದಲ್ಲಿ ಒಬ್ಬ ಪ್ರಭಾವಶಾಲಿ ಭಕ್ತವರೇಣ್ಯನಾಗಿದ್ದುದರಿಂದ ಅಲ್ಲಮನ ಗಮನಕ್ಕೆ ಬಂದಿರಬೇಕು. ಅಲ್ಲಮನು ತನ್ನ ದೇಶ ಪರ್ಯಟನೆಯಲ್ಲಿ ಸಾಧಕರನ್ನು ಕಂಡು ಅವರನ್ನು ಅವರ ಮಾರ್ಗದಲ್ಲಿ ಮುಂದುವರೆಸಲು ಸಹಾಯ ಮಾಡುವುದು ಅವನ ಉದ್ದೇಶವಾಗಿದ್ದಿತು. ಅಂದಿನ ವೀರಶೈವ ಸಮಾಜೋಧಾರ್ಮಿಕ ಚಳುವಳಿಗೆ ಸಿದ್ಧರಾಮರಂತಹವರನ್ನು ತೊಡಗಿಸಿಕೊಂಡು ಆ ಚಳುವಳಿಗೆ ಅಪಾರ ಶಕ್ತಿಸಂಚಯನ ಮಾಡಿಕೊಡುವ ಉದ್ದೇಶದಿಂದ ಸಿದ್ಧರಾಮನ್ನು ಭೇಟಿ ಮಾಡಲು ಸೊನ್ನಲಿಗೆಗೆ ಬಂದಿದ್ದ ಎಂದೆನಿಸುತ್ತದೆ. ಅಲ್ಲಮರು ಸಿದ್ಧರಾಮರನ್ನು ಭೇಟಿಯಾದುದ್ದು ಒಂದು ರೀತಿಯಲ್ಲಿ ಸಾಗರವನ್ನು ಸಾಗರ ಸಂಧಿಸಿದಂತಾಯಿತು. ಅಲ್ಲಮರು ಸಿದ್ಧರಾಮನ್ನು ಬಂದು ಕಾಣುವ ಹೊತ್ತಿಗಾಗಲೇ ಈತನ ಭಕ್ತಿ ಸಾಧನೆ ಒಂದು ಹಂತಕ್ಕೆ ಮುಟ್ಟಿದ್ದಿತು. ಸಿದ್ಧರಾಮರು ಅಂದು ನಂಬಿದ್ದ ಮೌಲ್ಯಗಳು ವ್ಯಾಪಕವಾಗಿದ್ದವು. ಅನುಭಾವ ಜೀವನ ಒಂದು ನೆಲೆಗೆ ತಲುಪಿದ್ದಿತು. ಬಹಿರಂಗ ಕ್ರಿಯೆಯಲ್ಲಿ ನಿರತನಾಗಿದ್ದ ಸಿದ್ಧರಾಮನ್ನು ಅಲ್ಲಮ ಕಲ್ಯಾಣಕ್ಕೆ ಕರೆದೊಯ್ದನೆಂದೂ, ಮೈಮೇಲೆ ಇಷ್ಟಲಿಂಗವಿಲ್ಲದಿರಲು ಸಿದ್ಧರಾಮ ಬಗೆಗೆ ಕೆಲವರು ಆಕ್ಷೇಪಣೆವೆತ್ತಿದರೆಂದೂ, ಶಿವನನ್ನು ಕಂಡಿರುವ ಸಿದ್ಧರಾಮನಂತಹ ಯೋಗಿಗಳಿಗೆ ಲಿಂಗದೀಕ್ಷೆಯ ಅಗತ್ಯವಿಲ್ಲೆಂದು ಅಲ್ಲಮ ವಾದಿಸಿದಾಗ ಉಳಿದವರೆಲ್ಲಾ ಅದನ್ನು ಒಪ್ಪಿಕೊಂಡರೆಂಬ ವಿಷಯ ಮೊದಲನೆ ಶೂನ್ಯ ಸಂಪಾದನೆಯಲ್ಲಿ ವ್ಯಕ್ತಗೊಂಡಿದೆ.

   ಆದರೆ ಅಂತಹ ವ್ಯಕ್ತಿಗೂ ಲಿಂಗಧಾರಣೆಯ ಅಗತ್ಯವಿಲ್ಲೆಂದು ಅಲ್ಲಮ ವಾದಿಸಿದಾಗ ಉಳಿದವರೆಲ್ಲಾ ಹಠ ಹಿಡಿದಿದ್ದುದರಿಂದ ಸಿದ್ಧರಾಮರಿಗೆ ಚನ್ನಬಸವಣ್ಣನಿಂದ  ದೀಕ್ಷೋಪದೇಶವಾಯಿತೆಂದು ಕೊನೆಯ ಮೂರು ಶೂನ್ಯಸಂಪಾದನೆಗಳು ಹೇಳುತ್ತವೆ. ಸಿದ್ಧರಾಮರಿಗೆ ದೀಕ್ಷೋಪದೇಶವಾದದ್ದು ವಾಸ್ತವ ಸಂಗತಿ ಎಂಬುದು ವಿದ್ವಾಂಸರಿಂದಲೂ ಒಪ್ಪಿಗೆಯಾಗಿದೆ. `ಲಿಂಗದೀಕ್ಷೆಯು  ಸಿದ್ಧರಾಮ ಆಧ್ಯಾತ್ಮಿಕ ಸಾಧನೆಗೆ ಸಹಾಯಕವಾಗಲೀ ಎಂಬ ಉದ್ದೇಶ್ಯಕ್ಕಿಂತ ಆ ವ್ಯಕ್ತಿಯನ್ನು ವೀರಶೈವ ಮತದೊಳಕ್ಕೆ ಸೇರಿಸಿಕೊಳ್ಳುವುದೇ ಮುಖ್ಯವಾಗಿದ್ದಂತೆ ತೋರುತ್ತದೆ. ಸ್ಥಾವರ ಲಿಂಗಾರಾಧಕರಾಗಿಯೇ ಸಾಧನೆ ಮಾಡಿ ಅನುಭಾವಿ ಸ್ಥಿತಿಯನ್ನು ಮುಟ್ಟಿದ್ದ ಅವರಿಗೆ ಆಧ್ಯಾತ್ಮಿಕವಾಗಿ ಲಿಂಗಧಾರಣ ಸಂಸ್ಕಾರದ ಅಗತ್ಯ ಇರಲಿಲ್ಲ. ಧಾರ್ಮಿಕ ಸಂಸ್ಕಾರಗಳನ್ನು ಮೀರಿನಿಂತಿದ್ದ ಅಲ್ಲಮ ಅದನ್ನು ಗುರುತಿಸಿದ್ದು ತೀರ ಸಹಜ. ಮಠವನ್ನು ಕಟ್ಟಿ ಶಿಷ್ಯ ಕೋಟಿಯನ್ನು ಸಂಪಾದಿಸಿ ಸಮಾಜದ ಮೇಲೆ ನಿಯಂತ್ರಣವನ್ನು ಪಡೆದಿದ್ದ ಸಿದ್ಧರಾಮನ್ನು ತಮ್ಮ ಮತಕ್ಕೆ ಸೇರಿಸಿಕೊಳ್ಳಲು ಅಂದಿನ ನಾಯಕರು ಆತುರರಾಗಿದ್ದುದನ್ನು ಅರ್ಥಮಾಡಿಕೊಳ್ಳಬಹುದು. ಅವರೊಬ್ಬರ ಪ್ರವೇಶದಿಂದ ವೀರಶೈವ ಆಂದೋಲನಕ್ಕೆ ಹೆಚ್ಚಿನ ಪ್ರತಿಷ್ಠೆ ವ್ಯಾಪ್ತಿಯು ಲಭಿಸಿದವು.'

    ಸಿದ್ಧರಾಮರೂ ಬಸವಣ್ಣನವರಂತೆ ಒಬ್ಬ ಉತ್ಕಟಾವೇಶದ ಭಕ್ತ. ಬಗೆಬಗೆಯ ಮಾನಸಿಕ ತೋಳಲಾಟದಲ್ಲಿ ಸಿಕ್ಕು ನೊಂದವನು ಎಂಬ ಅಂಶದ ಬಗೆಗೂ ಸೂಕ್ಷ್ಮವಾಗಿ ವಚನಗಳನ್ನು ಗ್ರಹಿಸಿದರೆ ತಿಳಿದುಬರುತ್ತದೆ. ಇವರು ಸಮಾಜ ಕಾರ್ಯಕರ್ತ, ಕರ್ಮಯೋಗಿ, ಅದೇ ರೀತಿ ಶ್ರೇಷ್ಠ ವಚನಕಾರನೂ ಹೌದು. ಇವರ ಬದುಕು ಹಾಗೂ ವ್ಯಕ್ತಿತ್ವಗಳನ್ನು ಗ್ರಹಿಸಲು ಅಪಾರ ಸಂಖ್ಯೆಯಲ್ಲಿ ಅವರೇ ರಚಿಸಿರುವ ವಚನಗಳೂ ಸಹಾಯಕವಾಗಿವೆ. ಅಂದಂದಿನ ಅನುಭವ, ಅನುಭಾವಗಳಿಗೆ ಸಿದ್ಧರಾಮನ ಮನಸ್ಸು ಹೇಗೆ ಸ್ಪಂದಿಸಿತು ಎಂಬುದನ್ನು ತಿಳಿಯಬಹುದಾಗಿದೆ. ಸಿದ್ಧರಾಮರ ವಚನಗಳಲ್ಲಿ ಅನೇಕ ವೈಯಕ್ತಿಕ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಗುರುತಿಸಬಹುದಾಗಿದೆ. ಮಲ್ಲಿಕಾರ್ಜುನ ಲಿಂಗ ಪ್ರತಿಷ್ಠೆ ಮಾಡೆಂದು ನಿರೂಪಿಸಿದುದು, ತನಗೆ ಬೇರೆ ಸ್ವಾತಂತ್ರ್ಯವಿಲ್ಲದ ಕಾರಣ ಲಿಂಗ ಪ್ರತಿಷ್ಠೆ ಮಾಡಿದುದು, ಯೋಗಿಯ ಶರೀರ ವೃಥಾಯ ಹೋಗಲಾಗದು ಪುಣ್ಯವ ಮಾಡುವುದು ಲೋಕಕ್ಕೆ ಎಂಬ ಆದರ್ಶವನ್ನು ಮುಂದಿಟ್ಟುಕೊಂಡು ಪುಣ್ಯ ಕಾರ್ಯಗಳನ್ನು ನೆರವೇರಿಸಿದ್ದು;

   ಸಿದ್ಧರಾಮರೇ ರಚಿಸಿರುವ ವಚನಗಳಲ್ಲಿ ಕಂಡುಬರುವ ವಸ್ತುಸ್ಥಿತಿಯ ಗ್ರಹಿಕೆಯ ಮೂಲಕ ಮಾನವೀಯ ಮುಖದ ದರ್ಶನತ್ವವನ್ನು ಕಂಡುಕೊಂಡಾಗ ಮಾತ್ರ ಇವರ ಸಾಮಾಜಿಕ ಕಳಕಳಿ ಮತ್ತಿತರ ಅಂಶಗಳು ವ್ಯಕ್ತವಾಗುತ್ತವೆ. ಇವರ ವಚನಗಳನ್ನು ಸಮಗ್ರವಾಗಿ ನೋಡಿದಾಗ, ವಚನಗಳಲ್ಲಿ ಕಾಯಕದ ನಿಷ್ಠೆ, ಭಕ್ತಿಯ ಪರಾಕಾಷ್ಠತೆ, ಸಮಾಜದ ಏಳಿಗೆಗೆ ಬೇಕಾಗುವ ಅಂಶಗಳು, ಸಮಗ್ರ ಜೀವರಾಶಿಗಳ ಕ್ಷೇಮಚಿಂತನೆ ಮುಂತಾದ ಅಂಶಗಳನ್ನು ಕಾಣಬಹುದು.

      ಶರಣ ಶ್ರೇಷ್ಠರಲ್ಲಿ ಒಬ್ಬರಾಇವರು ಕರ್ಮಯೋಗಿಯಾಗಿ, ಜ್ಞಾನದ ಗಣಿಯಾಗಿ, ವೈರಾಗ್ಯನಿಧಿಯಾಗಿ ಸರ್ವರೇಳ್ಗೆಗಾಗಿ ಶ್ರಮಿಸಿದ ಸಾಧಕನಾಗಿ ಮೆರೆದವರು. ಇಹದ ಬದುಕನ್ನು ಕಡೆಗಣಿಸದೆ ಕಾಲಿಟ್ಟು ನಿಂತವರು. ಹುಟ್ಟಿನಿಂದ ಪರಿಪೂರ್ಣನಾಗಿರಲಿಲ್ಲ. ಪ್ರಜ್ಞಾಪೂರ್ವಕ ಪ್ರಯತ್ನದಿಂದಾಗಿ ಪರಿಪೂರ್ಣನಾದವರು. ಇವರು ಮೊದಲಿಗೆ ತಾನು ತಬ್ಬಿಕೊಂಡಿದ್ದೇ ಶ್ರೇಷ್ಠವೆಂದು ನಂಬಿದ್ದವರು. ತಾನು ನಂಬಿದ್ದಕ್ಕಿಂತ ಶ್ರೇಷ್ಠವಾದುದು ಬೇರೊಂದಿದೆ ಎಂದು ತೋರಿಸಿದವರ ಬಗೆಗೆ ಗೌರವ ತಾಳಿ ತನ್ನ ನಿಲುವನ್ನು ಬದಲಿಸಿಕೊಂಡವರು.

ಹಸುಳೆಯಾಗಿಹ ನಾನು ಕೆರೆ ಬಾವಿ ವಿರ

ಚಿಸಿ ಭವಕ್ಕೆ ಬಂದು ಫಲವನುಂಡು

ನರಕಕ್ಕೆ ಬೀಳುವನ ಕರುಣದಿಂದೆತ್ತಿ

ಮರೆಯೊಳಿರಿಸಿದ ಬಸವ ಯೋಗಿನಾಥ

ಎಂದು ಕಣ್ಣು ತೆರೆಯಿಸಿದ ಮಹಾನುಭಾವನನ್ನು ಮರೆಯದೆ ಸ್ಮರಿಸಿ ತನ್ನ ಮಾನವೀಯತೆಯನ್ನು ಮೆರೆದಿದ್ದಾರೆ.  ಜೊತೆಗೆ ಬಸವಣ್ಣ, ಚೆನ್ನಬಸವಣ್ಣ ಮತ್ತು ಅಲ್ಲಮರನ್ನು ಕುರಿತು ಭಕ್ತಿಪೂರ್ವಕವಾಗಿ ಹಸ್ತವದು ಬಸವಣ್ಣ, ಜಿಹ್ವೆಯದು ಚೆನ್ನಬಸವಣ್ಣ, ಉದರ ತೃಪ್ತಿಯದು ಅಲ್ಲಮ ನೋಡಾ ಎಂದು ಮನದುಂಬಿ  ಸ್ತುತಿಸಿದ್ದಾರೆ. ಶರಣರ ಇರವ ನೆನೆ ನೆನೆದು ಶರಣನಾದೆನಯ್ಯಾ ಎಂಬ ಇವರ  ವಿನೀತ ಮಾತು ಶರಣರ ದಿವ್ಯವಾದ ನಿಲುವುಗಳನ್ನು ತನ್ನ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡಿರುವ ಪ್ರತೀಕವಾಗಿದೆ.

      ಸಾಕಾರನಿಷ್ಠೆ, ಭೂತಂಗಳೊಳಗನುಕಂಪೆ ತಾನೇ ಪರಬೊಮ್ಮ ಎಂಬ ಸೂತ್ರದಲ್ಲಿ ಹಾಗೂ ‘ಶಿವಯೋಗಿಯ ಶರೀರಂ ವೃಥಾ ಸವೆಯಲಾಗದನುಗೊಂಬಿನಿತು ಕಾಯಕಂ ನಡೆಯುತಿರಬೇಕು’ ಎನ್ನುವ ಮಹತ್ವಪೂರ್ಣ ನಿಲುವಿನಲ್ಲಿ ಅವರ ನಿಷ್ಠೆ ವ್ಯಕ್ತಗೊಂಡಿದೆ. ಈ ಹೇಳಿಕೆಯ ಪರಿಣಾಮವಾಗಿ ಸೊನ್ನಲಿಗೆಯಲ್ಲಿ ಲಿಂಗಗಳ ಸ್ಥಾಪನೆ, ಕೆರೆಗಳ ನಿರ್ಮಾಣವಾಗುತ್ತಲೆ ಗುಡ್ಡರ ಜೊತೆ ತಾನೇ ಗುದ್ದಲಿ ಹಿಡಿದು ಶರೀರವನ್ನು ವೃಥಾ  ಸವೆಸದೆ ಕಾಯಕದಲ್ಲಿ ತೇಯುತ್ತಾರೆ. ಸೊನ್ನಲಿಗೆಯನ್ನು ಅಭಿನವ ಶ್ರೀಶೈಲವನ್ನಾಗಿಸುತ್ತಾರೆ. ಈ ಸಾಧನೆ ದೊಡ್ಡದಾಗಿದ್ದರೂ ಅದನ್ನು ಇನ್ನೂ ಹೆಚ್ಚು ಅರ್ಥಪೂರ್ಣವಾಗಿಸಲು ಅಂದರೆ  ಲೋಕವನ್ನು ನಿರಾಕರಿಸಿದ  ಅನುಭಾವವನ್ನು ಸಂಪಾದಿಸುವ ಸಲುವಾಗಿ  ಅಲ್ಲಮಪ್ರಭುವಿನೊಂದಿಗೆ ಕಲ್ಯಾಣಕ್ಕೆ ಬರುತ್ತಾರೆ. ಕಲ್ಯಾಣದ ಶರಣರ ಸಂಪರ್ಕದಿಂದ ಆತನ ಸಾಕಾರನಿಷ್ಠ ಭೂತಂಗಳೊಳಗನುಕಂಪೆಯ ಸೂತ್ರ ಪರಿಮಿತಿಯನ್ನು ಕಳೆದುಕೊಂಡು ಹೊಸ ಆಯಾಮವನ್ನು ಪಡೆಯುತ್ತದೆ. ಸ್ಥಾವರ ಲಿಂಗದ ಬಹಿರ್ಮುಖ ಉಪಾಸನೆ ಅಂತರ್ಮುಖಗೊಂಡು ಇಷ್ಟಲಿಂಗದ ಅನುಸಂಧಾನವಾಗುತ್ತದೆ. ತನ್ನ ವೈಯಕ್ತಿಕ ಸಾಧನೆಯಲ್ಲಿ ಅವರು ಅದನ್ನೆಲ್ಲಾ ಮೀರಿ ನಿಲ್ಲುವ ಯೋಗಸಿದ್ಧಿಯ ತುದಿಯನ್ನೇರಿದ್ದರೂ ಸಮಷ್ಟಿ ಹಿತಸಾಧನೆಯ ದೃಷ್ಟಿಯಿಂದ ಹೊಸ ಮಾರ್ಗವನ್ನು ಒಪ್ಪಿಕೊಳ್ಳುತ್ತಾರೆ.

      ವಚನಕಾರರಲ್ಲಿ ಬಸವಣ್ಣನವರ ಹಾಗೆ ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತವರಲ್ಲಿ ಸಿದ್ಧರಾಮರು ಪ್ರಮುಖರು. ಇಹವನ್ನು ಮತ್ತು ಬದುಕನ್ನು ಪ್ರೀತಿಸುವುದು ಸಾಮಾಜಿಕ ಹೊಣೆಗಾರಿಕೆಯಲ್ಲಿ ಪ್ರಮುಖವಾದುದ್ದು.  ಸಾಮಾಜಿಕ  ಹೊಣೆಗಾರಿಕೆಯ  ಅರಿವು ಬರ ಬೇಕಾದರೆ ಜನಸಾಮಾನ್ಯರೊಂದಿಗೆ ಬೆರೆಯುವ, ಅವರ ಸಾಮಾಜಿಕ ಬದುಕನ್ನು ಹಸನುಗೊಳಿಸುವತ್ತ ಗಮನ ಹರಿಸುವ ಮನೋಭಾವನೆ ಇರಬೇಕು.  ಮಾನವೀಯತೆಯು ಸದಾ ಮಿಡಿಯುತ್ತಿರ ಬೇಕು.  ಈ ಅಂಶಗಳು ಸಿದ್ಧರಾಮರಲ್ಲಿ ಅತ್ಯಧಿಕವಾಗಿ ಕಂಡು ಬರುತ್ತವೆ. ಶಿವಶರಣರ ಈ ಸಮಾಜೋಧಾರ್ಮಿಕ ಚಳುವಳಿಯಲ್ಲಿ ಸಾಮಾಜಿಕ ಅನಿಷ್ಟಗಳನ್ನು ನಿವಾರಿಸುವುದರ ಜೊತೆಗೆ ವಿಕಾಸಶೀಲವಾದ ಬದಲಿ ಮೌಲ್ಯವೊಂದನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಗುರುತಿಸಬಹುದು. ಸಿದ್ಧರಾಮರೂ ತನ್ನ ವಚನಗಳಲ್ಲಿ ಕರ್ಮಯೋಗದ ಪ್ರಧಾನತೆಯನ್ನು ಒತ್ತಿ ಹೇಳಿದ್ದಾರೆ. ಅವ ಕಾರ್ಯಚಟುವಟಿಕೆಯಿಂದಾಗಿಯೇ ಸೊನ್ನಲಿಗೆಯು ಧಾರ್ಮಿಕ ಹಾಗೂ ಕರ್ಮಚಟುವಟಿಕೆಗಳ ಕೇಂದ್ರವಾಗಿತ್ತು. ಅವ ಕಾರ್ಯಫಲಗಳಾದ ಕೆರೆ, ಅರವಟ್ಟಿಗೆಗಳು ಇಂದಿಗೂ ಸೊಲ್ಲಾಪುರದಲ್ಲಿದ್ದು ಅವರ ವೀರನಿಷ್ಠೆ ಹಾಗೂ ಜನಹಿತ ಸಾಧನೆಯ ತೀವ್ರ ಹಂಬಲದ ಸ್ವರೂಪವನ್ನು ತೋರಿಸಿಕೊಡುತ್ತವೆ. ಇವರು  ತಮ್ಮ ಜೀವಿತದ  ಆರಂಭಿಕ ಹಂತದಲ್ಲಿ ಕೈಗೊಂಡ ಕೆರೆ ಭಾವಿ ನಿರ್ಮಾಣ ಮುಂತಾದ ಕಾಯಗಳು ಮತ್ತು ಬಿಲ್ಲೇಶ ಬೊಮ್ಮಯ್ಯನ ಪ್ರಸಂಗ, ಏಲೇಶನಿಗೆ ಪ್ರಾಣವಿತ್ತ ಪ್ರಸಂಗಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಮತ್ತು ಮಾನವೀಯತೆಗಳನ್ನು ಗುರುತಿಸ ಬಹುದಾಗಿದೆ.  ಇವರು ತನ್ನ ಕಾರ್ಯಕ್ಷೇತ್ರದಲ್ಲಿ ಕಾಯಕ ನಿಷ್ಠೆ ಮತ್ತು ಕರ್ಮಶುದ್ಧತೆಯ ಮೂಲಕ ಮುಕ್ತಿಯನ್ನು ಪಡೆಯಲು ಕಾರ್ಯಪ್ರವೃತ್ತನಾಗಿದ್ದವರು. ತನ್ನ ಕಾರ್ಯಾಚರಣೆಯಲ್ಲಿ ಪರಿಶುದ್ಧ ಪ್ರಜ್ಞೆ ಇರಬೇಕೆಂಬ ಸಾಮಾಜಿಕ ಸಂದರ್ಭದಲ್ಲಿಯ ವಿಚಾರಧಾರೆ ಮಹತ್ತರ ಎನಿಸಿದೆ. ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು  ಎಂಬುದು ಇವರ ಪ್ರಮುಖ ಆದರ್ಶ ವಾಗಿದ್ದಿತು. ಆದರೆ ಷಟ್ಸ್ಥಲದ ಶರಣಸ್ಥಲದಲ್ಲಿ ನಿಂತವರಿಗೆ ಸಾಕಾರದ ಅಗತ್ಯವಿರುವುದಿಲ್ಲ. ಆದರೆ  ಲೋಕದ ಜನ ಬದುಕಬೇಕು, ಅವರು ಸತ್ಪಥದಲ್ಲಿ ನಡೆದು ಲಿಂಗವ ಪೂಜಿಸಿ ಮಹಾಪದವಿಯನ್ನು ಪಡೆಯ ಬೇಕೆನ್ನುವ  ಸಾಕಾರದ ಆದರ್ಶವನ್ನು ಇಟ್ಟುಕೊಂಡ ಸಿದ್ಧರಾಮರಿಗೆ  ಭೂತಾನುಕಂಪೆ ಅವರ ಬದುಕಿನ ಅವಿಭಾಜ್ಯ ಅಂಗವಾಯಿತು.  ಲೋಕಸಂಸಾರದ ಬಂಧನಕ್ಕೆ ಸಿಲುಕಿ  ಅದರಿಂದ ಪಾರಾಗುವುದು ಹೇಗೆಂದು ತಿಳಿಯದೆ ಪರಿತಪಿಸುತ್ತಿರುವ ಸಂದರ್ಭದಲ್ಲಿ  ಸಿದ್ಧರಾಮರನ್ನು ಎಚ್ಚರಿಸಿ ನೆರವಿಗೆ ಅಲ್ಲಮಪ್ರಭುವು ಬರುವರು.  ಅಲ್ಲಮರು ಇವರಿಗೆ ಇಷ್ಟಲಿಂಗ ಪೂಜೆಯ ಮಹತ್ವವನ್ನು ತಿಳಿಸಿ ಮಾನಸಿಕ ಪರಿವರ್ತನೆಗೆ ಕಾರಣರಾಗುವರು. ಈ ವಿವರವನ್ನು ಸಿದ್ಧರಾಮರು ಕೆರೆ ತೊರೆದೇಗುಲಗಳ ಕಡೆಯಿಂದ ನಿಮ್ಮ ಕಂಡೆ ಎನ್ನುವ ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ. ಲೋಕ ಕಲ್ಯಾಣದ ನೆಲೆಯಲ್ಲಿ ಕೆರೆ, ತೊರೆ ದೇಗುಲಗಳ ನಿರ್ಮಾಣದಲ್ಲಿ ತೊಡಗಿ  ಸಿದ್ಧರಾಮರಂತಹ ಅಪಾರ ಮಾನವೀಯತೆಯುಳ್ಳ ವಚನಕಾರರು ಅಂತರಂಗ ಶುದ್ಧತೆಯ ಮೂಲಕ ಹೊಸ ಸಮಾಜದ ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾದುದು ಶ್ರೇಷ್ಠವೆನಿಸುತ್ತದೆ. ಜ್ಞಾನ, ಅರಿವು, ಬೋಧನೆ ಎಂಬುದು ವ್ಯಕ್ತಿತ್ವ ಪರಿಪೂರ್ಣತೆಯ ಅಂಶಗಳು, ಜ್ಞಾನವೆಂಬುದು ಸದ್ಗುಣ ಸೂಚಕ. ಅಲ್ಲಮರ ಸಂಪರ್ಕದಿಂದಾಗಿ  ಸಿದ್ಧರಾಮರ ಮನಸ್ಸು ಲೌಕಿಕ ಪ್ರಪಂಚದಿಂದ ಅಲೌಕಿಕ ಪ್ರಪಂಚದ ಕಡೆಗೆ ಹೊರಳಿತು. ಅದನ್ನು ಮುಕ್ತವಾಗಿ ತನ್ನ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ.

 ನಿದರ್ಶನಕ್ಕೆ ಈ ಕೆಳಕಂಡ ಎರಡು ವಚನಗಳನ್ನು ನೋಡ ಬಹುದಾಗಿದೆ.

ಹಿಂದೆ ಬಯಸಿದೆ ಕಾಳುತನದಲ್ಲಿ

ಎನ್ನ ಮಂದಮತಿಯ ನೋಡುವಿರಯ್ಯ!

ಕೆರೆ ಬಾವಿ ಹೂದೋಟ ಚೌಕ ಛತ್ರಂಗಳ ಮಾಡಿ

ಜೀವಂಗಳ ಮೇಲೆ ಕೃಪೆಯುಂಟೆಂದು ಎನ್ನದಾನಿಯೆಂಬರು

ಆನು ದಾನಿಯಲ್ಲವಯ್ಯಾ,  ನೀ ಹೇಳಿದಂತೆ ನಾ ಮಾಡಿದೆನು

ನೀ ಬರಹೇಳಿದಲ್ಲಿ ಬಂದೆನು. ನೀ ಇರಿಸಿದಂತೆ ಇದ್ದೆನು

 ನಿನ್ನ ಇಚ್ಛಾಮಾತ್ರವ ಮರೆದೆನಾಯಿತ್ತಾದಡೆ

ಫಲಪದ ಜನನವ ಬಯಸಿದೆನಾದೆಡೆ ನಿಮ್ಮಾಣೆ ( ವ.ಸಂ.೯೬)

 ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ

ಭವಕ್ಕೆ ಬರಿಸಿದಿರಯ್ಯಾ ನಿಮ್ಮಾ ಧರ್ಮ.

 ಮಾಡಿಸಯ್ಯಾ, ಎನಗೆ ನಿಮ್ಮವರ ಸಂಗ

 ಮಾಡಿಸಯ್ಯಾ, ಎನಗೆ ನಿಮ್ಮವರಾನಂದವ

 ಆಗಿಸಯ್ಯಾ ನಮ್ಮವರಂತೆ

 ನೋಡಿಸಯ್ಯಾ, ನಿಮ್ಮವರ ಕೂಡೆ ಸಂಗವ ಮಾಡಿಸಯ್ಯ

 ಎನಗೆ ಪಾದೋದಕ ಪ್ರಸಾದವನೊಚ್ಚತವ ಸಲಿಸಯ್ಯಾ

 ನಿಮ್ಮವರೆ ಕೂಡೆ ಸಿಕ್ಕಿ ಇರಿಸಯ್ಯಾ

 ನಿಮ್ಮವರ ಪಾದದ ಕೆಳಗೆ ನಿತ್ಯವಾಗಿ ಬರಿಸಯ್ಯಾ ಎನ್ನ ಭವಭವದಲ್ಲಿ

 ಕಪಿಲಸಿದ್ಧ ಮಲ್ಲಿಕಾರ್ಜುನಯ್ಯಾ

 ನೀನಿಂತು ಕೆಡಿಸಯ್ಯಾ, ಎನ್ನ ಭವಭವದ ಹುಟ್ಟ (ವ.ಸಂ.೯೭)

    ಹೀಗೆ ಅಲ್ಲಮ ಪ್ರಭುಗಳೊಂದಿಗೆ ಸಿದ್ಧರಾಮರು ಕಲ್ಯಾಣಕ್ಕೆ ಬಂದು ಬಸವಣ್ಣ, ಚೆನ್ನಬಸವಣ್ಣ ಮೊದಲಾದ ಪ್ರಮಥರ ಜೀವನ ಸಿದ್ಧಾಂತಗಳನ್ನು ಗ್ರಹಿಸಲು ಸಾಧ್ಯವಾಯಿತು. ಚನ್ನಬಸವಣ್ಣನ ಕೃಪೆಯಿಂದ ದೀಕ್ಷೆಯಾಗಿ ತನ್ನೊಳಗೆ ಲಿಂಗವ ಕಂಡು ಲಿಂಗದೊಳಗೆ ತನ್ನ ಕಂಡು ತನ್ನೊಳಗೆ ಸಮಸ್ತ ವಿಸ್ತಾರವನೆಲ್ಲವ ಕಂಡುಕೊಳ್ಳಲು ಸಾಧ್ಯವಾಯಿತು ಚೆನ್ನಬಸವಣ್ಣನವರು ಸಿದ್ಧರಾಮರ ಎಲ್ಲಾ ಸಂಶಯಗಳನ್ನೆಲ್ಲಾ ತನ್ನ ಜ್ನಾನಾಗ್ನಿಯಿಂದ ದಹಿಸಿ ಮುಕ್ತಿಯ ಹಂಗೆಂಬುದನ್ನು ಅರುಹಿನ ಬಂಧನದಲ್ಲಿರಿಸಿದ ಅತ್ಯಪೂರ್ವ ಗುರು ಎಂಬುದನ್ನು ಈ ಕೆಳಕಂಡ ವಚನದಲ್ಲಿ

 ಸಂಶಯಾಳಿಗಳನ್ನೆಲ್ಲಾ ಜ್ನಾನಾಗ್ನಿಯಿಂದ ದಹಿಸಿ

 ಮುಕ್ತಿಯ ಹಂಗೆಂಬುದ ಅರುಹಿನ ಬಂಧನದಲ್ಲಿರಿಸಿದ ಗುರು

 ಚನ್ನಬಸವಣ್ಣನಲ್ಲದೆ ಮತ್ತೋರ್ವನ ಕಾಣೆ ನೋಡಾ ಎಂದು ಹೇಳಿದ್ದಾರೆ.  ಬಸವಾದಿ ಶಿವಶರಣರ ಪ್ರಭಾ ವಲಯದಲ್ಲಿ ಸಿದ್ಧರಾಮರ ವ್ಯಕ್ತಿತ್ವ ಷಟ್ಸ್ಥಲ ಪಥದಲ್ಲಿ ನೆಲೆ ನೆಲೆಯಾಗಿ ಮುಂದುವರಿದು ಐಕ್ಯಸ್ಥಲದ ನಿಲುವಿಗೆ ಬಂದು ನಿಲ್ಲುತ್ತದೆ. ಸೊನ್ನಲಿಗೆಯ ಕರ್ಮಯೋಗಿ ಸಿದ್ಧರಾಮರು ಕಲ್ಯಾಣದಲ್ಲಿ ಶಿವಯೋಗಿ ಸಿದ್ಧರಾಮರಾದುದ್ದು ಅವರ ವ್ಯಕ್ತಿತ್ವ ಬೆಳವಣಿಗೆ ಎಂದೇಳಬಹುದು.

    ಸಾಕಾರ ನಿಷ್ಠೆ ಭೂತಂಗಳೊಳನು ಕಂಪೆಯ ತನ್ನ ಜೀವನ ಸಿದ್ಧಾಂತದಲ್ಲಿ ಮುಳುಗಿ ಹೋಗಿದ್ದ ಸಿದ್ಧರಾಮರಿಗೆ ಸ್ವತಂತ್ರವಾಗಿ ಯೋಚಿಸಲು ವ್ಯವಧಾನವಿರಲಿಲ್ಲ.  ಅಂತಹ ಸಂದರ್ಭದಲ್ಲಿ ಕಲ್ಯಾಣದ ಶರಣರ ಸಂಪರ್ಕವೊದಗಿ ವಿಚಾರ ಮಾಡುವಂತಹ ಗುಣವನ್ನು ಬೆಳಸಿಕೊಂಡು ವಚನಗಳ ರಚನೆಗೆ ಹೆಚ್ಚಾಗಿ ತಮ್ಮನ್ನು ಅರ್ಪಿಸಿಕೊಂಡರು. ಹೀಗಾಗಿ ಪರಂಪರೆಯ ನಂಬುಗೆಯನ್ನು ಅಲ್ಲಗಳೆಯುವ ಮಟ್ಟಕ್ಕೆ ಬಂದು ನಿಲ್ಲುತ್ತಾರೆಂಬುದಕ್ಕೆ ಅವರ ಈ ಕೆಳಕಂಡ ವಚನದಲ್ಲಿ

 ಕೈಲಾಸ ವೆಂಬುದೊಂದು ಭೂಮಿಯೊಳಿರುವ ಹಾಳು ಬೆಟ್ಟ, ಅಲ್ಲಿರುವ ಮುನಿಗಳೆಲ್ಲರೂ ಜೀವಗಳ್ಳರು, ಅಲ್ಲಿರುವ ಚಂದ್ರಶೇಖರನ್ನು ಬಹು ಎಡ್ಡ ಇದರಾಡಂಬರವೇಕಯ್ಯ (ವ.ಸಂ.೧೪೯೨) ಎಂದು ಟೀಕಿಸುವಷ್ಟರ ಮಟ್ಟಿಗೆ ಮಾನಸಿಕವಾಗಿ ಬದಲಾದುದ್ದನ್ನು ಗುರುತಿಸ ಬಹುದಾಗಿದೆ. ಸ್ವರ್ಗ-ನರಕ, ಕೈಲಾಸಗಳಂತಹ ಪಾರಂಪರಿಕ ಕಲ್ಪನೆಗಳನ್ನು ಬದಲಿಸಿ ವಾಸ್ತವ ಜಗತ್ತಿನೆಡೆಗೆ ತಮ್ಮ ಆಲೋಚನೆಯನ್ನು ಹೊರಳಿಸುವಷ್ಟರ ಮಟ್ಟಿಗೆ ಮಹತ್ತರ ಪರಿವರ್ತನೆ ಅವರಲ್ಲಾಗಿದ್ದನ್ನು ಈ ತೆರನಾದ ವಚನಗಳ ಮೂಲಕ ಗುರುತಿಸ ಬಹುದಾಗಿದೆ. ಕಲ್ಯಾಣದ ಶರಣರ ಸಂಪರ್ಕಕ್ಕೆ ಬಂದಮೇಲೆ ಸಿದ್ಧರಾಮರು ಸ್ಥಾವರ ಲಿಂಗ ಪೂಜೆಗಿಂತ  ಮಾನಸಪೂಜೆ ಶ್ರೇಷ್ಠ ಎಂಬುದರತ್ತ  ಗಮನಹರಿಸಿದ್ದರು ಎಂಬುದು ಈ ಕೆಳಕಂಡ ವಚನದಿಂದ ವಿದಿತವಾಗುತ್ತದೆ.

 ಕೆರೆಯನೀರು ಮರದ ಪುಷ್ಪಧರಿಸಿದಡೇನು ಅಯ್ಯಾ

 ಆಗುವುದೇ ಆಗುವುದೇ ಲಿಂಗಾರ್ಚನೆ

 ನೀರನೆರೆಯಲಿಕ್ಕಾತನೇನು ಬಿಸಿಲಿನಿಂದ ಬಳಲಿದನೆ?

 ಪುಷ್ಪದಿಂದ ಧರಿಸಲಿಕ್ಕಾತನೇನು ವಿಟರಾಜನೆ?

 ನಿನ್ನ ಮನವೆಂಬ ನೀರಿಂದ ಜ್ಞಾನವೆಂಬ ಪುಷ್ಪದಿಂದ ಪೂಜಿಸ ಬಲ್ಲಡೆ

 ಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ! (ವ.ಸಂ.೧೪೨೪)

ಅರಿದಾಚರಿಸುವವನಾಚರಣೆ ಬ್ರಹ್ಮಮಯ

ಅರಿಯದವನಾಚರಣೆ ಮಾಯಾಮಯ (ವ.ಸಂ.1955)

      ಅಂತರಂಗ ಶುದ್ಧತ್ವವನ್ನು ಬಿಂಬಿಸುವ ಈ ಜ್ಞಾನವು ಇಹ ಮತ್ತು ಪರಗಳೊಂದಿಗೆ ವ್ಯಕ್ತಿ ಮತ್ತು ಸಮಾಜಗಳನ್ನು ಮಾನವೀಯ ಸಂಬಂಧದಲ್ಲಿ ಬೆಸೆಯುತ್ತದೆ. ಜ್ಞಾನವೆಂಬುದು ಕೇವಲ ಸಿದ್ಧಾಂತಿಯ ಸಾಧನೆಯಾಗದೆ, ವೇದಾಂತಿಯ ವಾದವಾಗದೆ ಜ್ಞಾನಿಯು ಕೇವಲ ಕ್ರಿಯಾ ನುಡಿಯಾಗದೆ ಇರಬೇಕು. ವ್ಯವಹಾರಿಕ ದ್ರವ್ಯಾರ್ಜನೆ ಸಾಧನವಾಗಿ ಮಾತ್ರ ಪರ್ಯಾಪ್ತವಾಗುಳಿಯಬಾರದು. `ಭವರಹಿತ’ ಮಾರ್ಗ ಶೋಧನೆಯಲ್ಲಿ ಚಲಿಸಬೇಕು ಎಂಬ ಸಿದ್ಧರಾಮ ಹಿತನುಡಿಯು ಸಾಮಾಜಿಕ ಸಂಬಂಧದ ಸ್ವರೂಪವನ್ನು ಕುರಿತ ಅಂತರಂಗಿಕ ವಿಶ್ಲೇಷಣೆಯಾಗಿದೆ.

  ವಚಿಸಿ ವಚಿಸಿ ಅನುಭಾವಿಯಾಗದವ ಪಿಶಾಚಿಯಯ್ಯಾ

  ವಚಿಸಿ ಅನುಭಾವಿಯಾದವ  ಪಂಡಿತನಯ್ಯಾ, ವಿದ್ಯೆ ಎಂಬುದು ಅಭ್ಯಾಸಿಕನ ಕೈವಶ  ಎಂದು ಹೇಳುವಲ್ಲಿ ಪಾಂಡಿತ್ಯಕ್ಕಿಂತ ಅನುಭಾವಕ್ಕೆ, ಸರ್ವಜೀವಾನುಕಂಪೆಗೆ ಮಹತ್ವ ನೀಡ ಬೇಕೆಂಬ ಆಶಯವನ್ನು ಸಿದ್ಧರಾಮರು ವ್ಯಕ್ತಪಡಿಸಿದ್ದಾರೆ. ಇದು ಎಲ್ಲಾ ವಚನಕಾರರ ಆಶಯವೂ ಹೌದು.

  ಆತನ ಸುಖದುಃಖವೀತಗೇನು?

  ಈತನ ಸುಖದುಃಖವಾತಗೇನು

  ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

  ನಿಮ್ಮ ನಿಮ್ಮ ಅರಿವ ಸಂತೈಸಿಕೊಳ್ಳಿ

  ರಂಬೆ ಎಂದಡೆ ನಿನ್ನಂಗನೆಯಾಗಲಿಲ್ಲವು

  ಒಂದಿನ ಸ್ವಪ್ನದಲ್ಲಾದಡೂ ರತಿಸಲಿಲ್ಲ ನೋಡಾ

  ಕಪಿಲಸಿದ್ಧ ಮಲ್ಲಿಕಾರ್ಜುನಾ ( ವ.ಸಂ.೧೪೧೦)

ಈ ವಚನದಲ್ಲಿ ಬಸವಣ್ಣನವರ ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ  ಮನವ ಸಂತೈಸಿಕೊಳ್ಳಿ ಎನ್ನುವ ವಿಡಂಬಣಾತ್ಮಕ ವಚನವನ್ನು ನೆನಪಿಸುತ್ತದೆಯಾದರೂ  ಸಿದ್ಧರಾಮರಲ್ಲಿ ಈ ವಿಡಂಬಣಾತ್ಮಕ ವಚನವು ಒಬ್ಬರ ಸುಖ-ದುಃಖ ಇನ್ನೊಬ್ಬರದಾಗಲಿಕ್ಕೆ ಸಾಧ್ಯವಿಲ್ಲ ಎನ್ನುವ ವಾಸ್ತವ ಸತ್ಯದ ಜೊತೆಗೆ ಇನ್ನು ತೀಕ್ಷ್ಣವಾಗಿದೆ.

    ಅದೇರೀತಿ  ನಮ್ಮ ನಡಾವಳಿಗೆ ನಮ್ಮ ಪುರಾತನರ ನುಡಿಯೇ ಇಷ್ಟವಯ್ಯಾ ಎಂದು ಹೇಳುವ ಮೂಲಕ  ಆದ್ಯರ ವಚನಗಳು ನಮ್ಮ ನಡಾವಳಿಗಳನ್ನು ತಿದ್ದಿಕೊಳ್ಳುವ ಓರೆಗಲ್ಲುಗಳು ಎಂಬುದಾಗಿಯೂ ಹೇಳಬಯಸುತ್ತಾರೆ. ಮುಂದುವರೆದು  ಶಿವಶರಣರ ವಚನಗಳನ್ನು ಮೇಲಿಂದ ಮೇಲೆ ಆಸ್ವಾದಿಸುವುದರ ಮೂಲಕ ಅವುಗಳಲ್ಲಿರುವ  ಅಂತರ್ಗತ ದಿವ್ಯ ಜೀವನಾನುಭವಗಳನ್ನು ಪಡೆಯಬಹುದು ಎಂಬುದು  ಅಗಿದಗಿದು ನೋಡುವುದು ಎಂಬ  ಸಿದ್ಧರಾಮರ ಹೇಳಿಕೆಯಿಂದ ಧ್ವನಿತವಾಗುತ್ತದೆ.  ಸಿದ್ಧರಾಮರ ಪ್ರಕಾರ ವಚನ ಸಾಹಿತ್ಯವು ಕೇವಲ ವಾಗ್ರಚನೆಯಲ್ಲ ಆಡಂಬರದ ಮಾತುಗಳಲ್ಲ ಎಂಬುದನ್ನು ವಚನಾನುಭವೊ ವಚನೋನ  ಎಂಬ ವಾಕ್ಯದ ಮೂಲಕ  ವಿಶದ ಪಡಿಸುತ್ತಾರೆ. ಸಿದ್ಧರಾಮರಿಗೆ ವಚನಗಳ ಬಗ್ಗೆ ಅಪಾರವಾದ  ಅಭಿಮಾನ ವುಂಟು ಎಂಬುದು, ಅವ ಪ್ರಕಾರ ಎಲ್ಲಕ್ಕಿಂತ ವಚನವೇ ಶ್ರೇಷ್ಠ ವಾಙ್ಮಯ.

ಎಮ್ಮ ವಚನದೊಂದು ಪಾರಾಯಣಕ್ಕೆ

ವ್ಯಾಸನದೊಂದು ಪುರಾಣ ಸಮವಾರದಯ್ಯಾ

ಎಮ್ಮ ವಚನದ ನೂರೆಂಟರಧ್ಯಯನಕ್ಕೆ

ಶತರುದ್ರೀಯ ಯಾಗ ಸಮಬಾರದಯ್ಯ

ಎಮ್ಮ ವಚನದ ಸಾಸಿರ ಪಾರಾಯಣಕ್ಕೆ

ಗಾಯತ್ರಿ ಲಕ್ಷ ಜಪ ಸಮಬಾರದಯ್ಯಾ  (ವ.ಸಂ.1613)  ಎಂಬುದಾಗಿ  ತಿಳಿಯ ಬಯಸುತ್ತಾರೆ.

      ಕಲ್ಯಾಣದಲ್ಲಿ ಶರಣರ ಸಂಪರ್ಕಕ್ಕೆ ಬಂದ ಮೇಲೂ ಸಿದ್ಧರಾಮನ ಸಾಧನೆಯಲ್ಲಿ ಬಹುಮುಖ್ಯವಾಗಿ ಕಾಣುವುದು ಸರ್ವಜನ ಹಿತಸಾಧಕವಾದ ಕರ್ಮಯೋಗದ ನಿಷ್ಠೆ. ಶರಣರ ಮಾರ್ಗವು ಹಲವಾರು ಶರಣರ ವೈಯಕ್ತಿಕ ವೈಶಿಷ್ಟ್ಯಗಳೆಲ್ಲವನ್ನೂ ಒಳಗೊಳ್ಳುವಷ್ಟು ವ್ಯಾಪಕವಾದ ತಳಹದಿಯ ಮೇಲೆ ರೂಪಿತವಾದದ್ದು. ಸಿದ್ಧರಾಮನಲ್ಲಿ ಕರ್ಮಮಾರ್ಗವೇ ಪ್ರಧಾನ. ಸಾಕಾರನಿಷ್ಠೆ ಭೂತಂಗಳೊಳಗನುಕಂಪೆ ತಾನೆ ಪರಬೊಮ್ಮ ಎಂಬುದು ಇವರು ಕಂಡ ದಿವ್ಯದರ್ಶನ. ಇಲ್ಲಿ ಸಾಕಾರ ನಿಷ್ಠೆ, ಪರಾತ್ಪರ ಸತ್ಯದ ಜ್ಞಾನವು ಅವರ ಅಚಲಶ್ರದ್ಧೆಯ ದ್ಯೋತಕವಾಗಿದೆ.  ಭಕ್ತ ಜ್ಞಾನಗಳು ಭೂತಾನುಕಂಪೆಯ ಉದಾತ್ತ ಧ್ಯೇಯದಿಂದ ಕಾರ್ಯ ಪ್ರವೃತ್ತವಾಗಿವೆ.  ಇದು ಒಂದು ರೀತಿಯಲ್ಲಿ ಅವರ ಭಕ್ತಿ ಜ್ಞಾನ ಕರ್ಮಗಳ ಸಮನ್ವಯದ ನಿಲುವು ಎಂದೆಳಬಹುದು. ಕರ್ಮಯೋಗಿಯಾದ ಸಿದ್ಧರಾಮನಿಗೆ ಕರ್ಮವೇ ಜೀವನದ ಪರಮ ಮೌಲ್ಯ ಎಂಬ ವೈಚಾರಿಕ ನಿಲುವಾಗಿತ್ತು ಎಂಬುದು ಕೆಳಕಂಡ ವಚನದಿಂದ ವ್ಯಕ್ತವಾಗುತ್ತದೆ.

ಕೈಯಲ್ಲಿ ಹಿಡಿದು ಕಾಬುದು ಕರ್ಮ ಪೂಜೆಯಲ್ಲವೆ?

ಮನದಲ್ಲಿ ನೆನೆದು ಮಾಡುವುದೆಲ್ಲವು ಕಾಯದ ಕರ್ಮವಲ್ಲವೆ?

ಭಾವಶುದ್ಧವನರಿವ ಪರಿ ಇನ್ನಾವುದು  (ವ.ಸಂ.1372)

ಎಂಬುದು ಜೀವನವನ್ನು ಕುರಿತ ಅವನ ಮೂಲಭೂತ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಅಪಾರವಾದ ಮಾನವೀಯ ಅನುಕಂಪೆಯ ಪ್ರೇರಣೆಯೇ ಕಾರಣವಾಗಿದೆ.

      ಸಿದ್ಧರಾಮ ಕರ್ಮಮಾರ್ಗ ಒಂದು ಕಡೆಯಲ್ಲಿ ವ್ಯಕ್ತಿಗತವಾದ ಸತ್ಕ್ರೀಯಾಚರಣೆ, ಇನ್ನೊಂದು ಕಡೆಯಲ್ಲಿ ಸಮಾಜನಿಷ್ಠವಾದ ನಿರ್ಲಿಪ್ತ ಸಮಷ್ಟಿ ಕ್ರಿಯೆ ಈ ಎರಡನ್ನು ಒಳಗೊಳ್ಳುತ್ತದೆ. ವ್ಯಕ್ತಿ ದೊಡ್ಡವನಾಗದ ಹೊರತು ಸಮಾಜದ ಹಿತವನ್ನು ಸಾಧಿಸಲಾರ. ಸಮಾಜ ವ್ಯಕ್ತಿಗಿಂತ ದೊಡ್ಡದು, ಅದು ವ್ಯಕ್ತಿಗಳಿಂದಲೇ ನಿರ್ಮಿತವಾದುದು. ವ್ಯಕ್ತಿಯ ಕರ್ಮಗಳು ಸಮಾಜದ ಹಿತಕ್ಕೆ ಪೂರಕವಾಗಿರಬೇಕು. ಸಮಾಜ ವ್ಯಕ್ತಿಯ ಉದ್ಧಾರಕ್ಕೆ ಸಹಾಯಕವಾಗಲೇಬೇಕು. ಹೀಗೆ ವ್ಯಕ್ತಿ ಮತ್ತು ಸಮಾಜಗಳೆರಡರ ಸಂಬಂಧದ ತೊಡಕನ್ನು ಸಿದ್ಧರಾಮರು ಬಿಡಿಸಿದ್ದಾರೆ. ಇವರ ಕರ್ಮಮಾರ್ಗ ಕ್ರಿಯಾ ಪ್ರಧಾನವಾದುದಾದರೂ ಕರ್ಮಠವಲ್ಲ, ಆಡಂಬರ ಶೀಲವಲ್ಲ, ಅರ್ಥರಹಿತವಾದ ಸಂಪ್ರದಾಯ ಜಡವಲ್ಲ. ಕರ್ಮ, ಜ್ಞಾನ, ಭಕ್ತಿಗಳನ್ನು ಒಳಗೊಂಡು ಅದಕ್ಕೆ ಅತೀತವಾಗಿ ನಿಲ್ಲುವಂತಹದ್ದು.

ನೋಡುವುದದು ನೋಡಲೇಬೇಕು

ಮಾಡುವುದದು ಮಾಡಲೇಬೇಕು

ನೋಡಿ ಮಾಡಿ ಮನದಲ್ಲಿ ಲೀನವಾಗಿರಬಾರದು (ವ.ಸಂ.1540)

ಎಂಬ ಹೇಳಿಕೆಯಲ್ಲಿ ಕರ್ಮದ ಅನಿವಾರ್ಯತೆಯನ್ನು, ನಿರ್ಲಿಪ್ತತೆಯನ್ನು, ಅವಶ್ಯಕತೆಯನ್ನು ಕಾಣಬಹುದು. ಸಿದ್ಧರಾಮ ಸಾಧನೆ ಪ್ರಾರಂಭಿಕ ಹಂತದಲ್ಲಿಯೇ ಅನಿರೀಕ್ಷಿತ ತಿರುವನ್ನು ಪಡೆದಿರುವುದನ್ನು ಕಾಣಬಹುದು. ಕರ್ಮಯೋಗವನ್ನು ಕುರಿತು ಇವರು ವ್ಯಕ್ತಪಡಿಸಿರುವ ವಿಚಾರಗಳು ಅತ್ಯಂತ ವೈಶಿಷ್ಟ್ಯಪೂರ್ಣವಾಗಿವೆ. ಇದರಿಂದಾಗಿಯೇ ಇವರಿಗೆ ಕರ್ಮಯೋಗಿ ಎಂಬ ಹೆಸರು ಲಭ್ಯವಾಗಿರುವುದು. ನಿತ್ಯ ಜೀವನದ ಅನಂತ ಕ್ರಿಯೆಗಳೇ ಕರ್ಮಗಳೆಂದೆನ್ನ ಬಹುದು. ಆದರೆ ಕರ್ಮಗಳು ಯೋಗ ಎಂದೆನಿಸಿಕೊಳ್ಳ ಬೇಕಾದರೆ ಅವು ಆತ್ಮ ವಿಶ್ವಾಸಕ್ಕೆ ಆತ್ಮ ಜ್ಞಾನಕ್ಕೆ ಪ್ರೇರಕ ಮತ್ತು ಪೂರಕವಾಗಿರಬೇಕು. ಇವರು ಸುಚಿತ್ತದ ಅರಿವಿಗೆ, ಚಿತ್ತ ನಿರ್ಮಲತೆಗೆ ಕರ್ಮಯೋಗವು ಅತ್ಯವಶ್ಯಕ ಎಂದು ಭಾವಿಸಿದ್ದರು.

 ಕೃಷಿಯ ಮಾಡಿ ಉಣ್ಣದೆ ಹಸಿವು ಹರಿವ ಪರಿ ಇನ್ನೆಂತು?

 ಕರ್ಮಯೋಗವ ಮಾಡದೆ ನಿರ್ಮಲ ಸುಚಿತ್ತವನರಿವ ಪರಿ ಇನ್ನೆಂತು?

 ಕ್ರಿಯೆ ಶುದ್ಧವಾದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವು

 ಭಾವಶುದ್ಧವಾಗಿರ್ಪನು     ವ್ಯಕ್ತಿಯ ವಿಚಾರಗಳ ಔನ್ನತ್ಯ ವು ಅವನು ನಿತ್ಯ ಮಾಡುವಂತಹ ಕಾರ್ಯಗಳಲ್ಲಿ ಅಭಿವ್ಯಕ್ತಿ ಪಡೆಯ ಬೇಕು, ಕ್ರಿಯೆ ಸುಜ್ಞಾನದ ವಿವೇಕದ ಓರೆಗಲ್ಲಾಗಬೇಕು ಎನ್ನುವ ನಿಲುವನ್ನು ಹೊಂದಿದವರು.

ಇತರರು ಕಷ್ಟಪಟ್ಟು ಸಾಧಿಸಬೇಕಾದ ಶಮದಮಾದಿ ಸಾಧನ ಸಂಪತ್ತು ಅಪೂರ್ವ ಸಂಸ್ಕಾರದಿಂದ ಮತ್ತು ದೈವ ಕೃಪೆಯಿಂದ ಅವರಿಗೆ ಸಹಜವಾಗಿಯೇ ಕರಗತವಾಯಿತು. ಸಂಸಾರದ ಯಾವ ಬಂಧನಕ್ಕೂ ಒಳಗಾಗದೆ ಸಹಜ ವೈರಾಗ್ಯದಿಂದ ಅದನ್ನು ಮೀರಿ ನಿಲ್ಲಲು ಸಮರ್ಥರಾರು. ಆದರೆ ಅದು ಜೀವನ ವಿಮುಖವಾದ ಶುಷ್ಕ ವೈರಾಗ್ಯದಿಂದ ಜಡವಾಗಿ ಪರಿಣಮಿಸಲಿಲ್ಲ. `ಚಿಕ್ಕ ಸಂಸಾರವನ್ನು ಬಿಟ್ಟು ಜಗತ್ತಿನ ದೊಡ್ಡ ಸಂಸಾರವನ್ನು ಕಟ್ಟಿಕೊಂಡು ಅದರ ಒಳಿತಿಗಾಗಿ ಟೊಂಕ ಕಟ್ಟಿದ ಆದರ್ಶ ಸನ್ಯಾಸಿಯನ್ನು ಸಿದ್ಧರಾಮರಲ್ಲಿ ಕಾಣುತ್ತೇವೆಂಬ ಎಚ್.ತಿಪ್ಪೇರುದ್ರಸ್ವಾಮಿಗಳ ಮಾತು ಒಪ್ಪತಕ್ಕದ್ದಾಗಿದೆ.'

      ಸಿದ್ಧರಾಮರು ಕಲ್ಯಾಣಕ್ಕೆ ಬಂದು ಬಸವಾದಿ ಪ್ರಮಥರ ಸಂಪರ್ಕಕ್ಕೆ ಒಳಗಾದ ಮೇಲೆ ತನ್ನ ಸರ್ವಜೀವ ದಯಾಪರತ್ವದ ಬದುಕನ್ನು ಸಾಗಿಸುತ್ತ ವೀರಶೈವ ಚಳುವಳಿಯ ಪ್ರಬಲ ಪ್ರಸಾರಕರಾಗಿ ಕಾಣಬರುತ್ತಾರೆ.

ಚತುರ್ವರ್ಣಿಯಾದಡೇನು ಚತುರ್ವರ್ಣಾತೀತನೆ ವೀರಶೈವ ನೋಡಾ

ಕುಲದಲ್ಲಿ ಶೂದ್ರನಾದಡೇನು ಮನದಲ್ಲಿ ಮಹಾದೇವ

ನೆಲೆಗೊಂಡವನೆ ವೀರಶೈವ ನೋಡಾ

ರಸದಂತೆ ಭಕ್ತ ರುಚಿಯಂತೆ ಜಂಗಮ( ವ.ಸಂ.೧೮೧೪)

ಇತ್ಯಾದಿ ಕಡೆಗಳಲ್ಲಿ `ಸಿದ್ಧರಾಮರು ವೀರಶೈವಧರ್ಮ ಮತ್ತು ಆಂದೋಲನಗಳ ಒಬ್ಬ ವಕ್ತಾರನಾಗಿಯೂ ಕಾಣಿಸಿಕೊಳ್ಳುತ್ತಾರೆ.'

   ಇವರ ಕೆಲವು ವಚನಗಳಲ್ಲಿ  ಸಾಮಾಜಿಕ ಕಳಕಳಿ ಮತ್ತು ವಿಡಂಬಣೆಯನ್ನು ಕಾಣಬಹುದಾಗಿದೆ. ಬಸವಾದಿ ವಚನಕಾರರ ಹಾಗೆ ಸಿದ್ಧರಾಮರೂ ಕುಲದ ಬಗೆಗೆ ಸಾಕಷ್ಟು ವಿಚಾರಗಳನ್ನು ತಮ್ಮ ವಚನಗಳ ಮೂಲಕ ಮಾಡಿದ್ದಾರೆ. ಅವರ ಪ್ರಕಾರ, ಕುಲವೆಂದು ಹೋರಾಡುವ ಅಣ್ಣಗಳಿರಾ ಕೇಳಿರೋ ಕುಲವೇ ಡೋಹರನಾ? ಕುಲವೇ ಮಾದಾರನಾ? ಕುಲವೇ ದೂರ್ವಾಸನಾ? ಕುಲವೇ ವಾಲ್ಮೀಕನ? ಕುಲವೇ ಕೌಂಡಿಲ್ಯನ? ಕುಲವ ನೋಳ್ಪಡೆ ಹುರುಳಿಲ್ಲ. ಅವರ ನಡೆಯ ನೋಳ್ಪಡೆ ತ್ರಿಲೋಕದಲ್ಲಿಲ್ಲ ನೋಡಾ( ವ.ಸಂ.೧೫೨೬) ಎಂದು ನುಡಿವಲ್ಲಿ ಸಿದ್ಧರಾಮರ ಕುಲದ ಬಗೆಗಿನ ಪ್ರಗತಿಪರ ವಿಚಾರಧಾರೆಗಳು ಯಾವುವು ಎಂಬುದು ವ್ಯಕ್ತವಾಗುತ್ತದೆ.

    ಮಧುವಯ್ಯನು ಬ್ರಾಹ್ಮಣನಾಗಿದ್ದರೂ ಹರಳಯ್ಯನು ಚಂಡಾಲನಾಗಿದ್ದರೂ ಅವರ ಸ್ನೇಹ ಬಾಂಧವ್ಯಗಳಿಗೆ ಊನ ಬರಲಿಲ್ಲ. ಹೀಗಿರುವಾಗ ಕುಲದಿಂದಧಿಕವೆಂದು ಹೋರಾಡುವುದು ವ್ಯರ್ಥವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಸೇವಾಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಸಿದ್ಧರಾಮರು ಕಲ್ಯಾಣದ ಸಂಪರ್ಕದಿಂದ ಮೇಲು-ಕೀಳುಗಳಂತಹ ಸಾಮಾಜಿಕ ಸಮಸ್ಯೆಗಳತ್ತ ಕೂಡಾ ತನ್ನ ಗಮನವನ್ನು ಹರಿಸುವಂತಾದುದು ಅವಲ್ಲಿ ಕಾಣುವ ಮಹತ್ವದ ಬೆಳವಣಿಗೆ. `ಸಿದ್ಧರಾಮರು ಲಿಂಗಧಾರಣೆಯಿಂದ ಹೆಚ್ಚು ಅರ್ಥಪೂರ್ಣ ಸಮಾಜ ಕಾರ್ಯಕರ್ತರಾದರು. ಅದಕ್ಕೆ ಕಾರಣ ಅವರು ಧರಿಸಿದ ಲಿಂಗ ಅಲ್ಲ, ಅವರು ಸಂಪರ್ಕ ಬೆಳೆಸಿಕೊಂಡ ವ್ಯಕ್ತಿಗಳು ಮತ್ತು ಅವರ ಸಾಮಾಜಿಕ ಚಿಂತನೆ.' ಎಂಬ ಚಿದಾನಂದಮೂರ್ತಿಗಳ ಅನಿಸಿಕೆ ಒಪ್ಪತಕ್ಕದ್ದಾಗಿದೆ.        

  ಸಿದ್ಧರಾಮರ ವಚನಗಳು ಆದ್ಯರ ವಚನಗಳ ಹಾಗೆ ಗಾತ್ರದಲ್ಲಿ ಪುಟ್ಟವು. ಜೇಡರ ದಾಸಿಮಯ್ಯನ ವಚನಗಳ ಹಾಗೆ ತ್ರಿಪದಿಯ ಲಯವನ್ನು ಬಹುಮಟ್ಟಿಗೆ ಒಳಗೊಂಡಿವೆ ಎಂಬುದನ್ನು ವಿದ್ಯಾಶಂಕರರು ಈಗಾಗಲೇ ಗುರುತಿಸಿದ್ದಾರೆ. ಇವರ ವಚನಗಳು ಬಹುಮಟ್ಟಿಗೆ ಕಿರಿದಾದುದರಿಂದ  ಭಾವಪೂರ್ಣತೆಯನ್ನು ಒಳಗೊಂಡಿವೆ. ಇವರ ವಚನಗಳಲ್ಲಿ ಕಾವ್ಯಮಯತೆಯನ್ನು ದೇವರ ಸಾಕ್ಷಾತ್ಕಾರಕ್ಕಾಗಿ ಅವರು ಅನುಭವಿಸಿದ ಯಾತನೆ, ಹಂಬಲಗಳ ವಚನಗಳಲ್ಲಿ ಕಾಣಬಹುದಾಗಿದೆ.

 ಅಯ್ಯಾ ಮಹಾಭಕ್ತರ ಹೃದಯದಲ್ಲಿ ನೀನಿಪ್ಪೆಯಾಗಿ

 ಅವರ ವಚನವೆನ್ನ ಕರ್ಣದೊಳಗೆ ತುಂಬಲೊಡನೆ

 ವಿರಕ್ತಿ ಬೆದೆಯಾಗಿ, ಭಕ್ತಿಮೊಳೆಯಾಗಿ

 ನಿಮ್ಮ ಶ್ರೀಪಾದದೊಳಗೆನ್ನ ಸುತ್ತಿತು.

 ಎನ್ನ ತನು ಕರಗಿ ಎನ್ನ ಮನ ಕರಗಿ ಕೊರಗಿದ ದುಃಖವಿದಾರದಯ್ಯ

 ಅಯ್ಯಾ ಅಯ್ಯಾ ಎಂದಳುವ ಅಕ್ಕೆ ಇದಾರದಯ್ಯಾ

 ಮರಹೆಂಬ ಕೂರಸಿಗೆ ಗುರಿಮಾಡಿದವರಾರಯ್ಯ?

 ಅಯ್ಯಾ ನಿಮ್ಮ ವಿಕಳದಲ್ಲಿ ನೆನೆವುತ್ತ ( ವ.ಸಂ.೧೩೫೮)

 ಗಾಳಿಯ ಸರವ ನೀವೆಂದು ಬಗೆದೆ ಕಂಡಯ್ಯಾ

 ಅಯ್ಯ ನಿಮ್ಮ ಹಾಡಿ ಹಾಡಿ ಹಂಬಲಿಸಿದೆನಯ್ಯ

 ನಿಮ್ಮ ಬೇಡಿ ಬೇಡಿ ಬಾಯಿ ಬೋಡಾದೆನಯ್ಯಾ

 ಅಯ್ಯಾ ನೀ ಬಾರಯ್ಯಾ

 ಬಂದು ಎನ್ನಹೃದಯ ಶಾಸನ ಮಾಡಿ ನಿಲ್ಲಯ್ಯಾ   ಈ ವಚನಗಳು ಭಾವತೀವ್ರತೆಯಿಂದಾಗಿ ಓದುಗರ ಮನಸ್ಸನ್ನು ಸೆರೆ ಹಿಡಿಯುತ್ತವೆ. ಪರಮಾತ್ಮನ ಹಂಬಲ ತೀವ್ರವಾದಾಗ ಗಾಲಿಯ ಸರವ ( ಶಬ್ದ) ನೀವೆಂದು ಬಗೆದೆ ಎನ್ನುವಲ್ಲಿ ವಚನದ ವಾಕ್ಯದ ಅಭಿವ್ಯಕ್ತಿಯ ಸೊಗಸು ಎದ್ದು ಕಾಣುತ್ತದೆ. ನಿಮ್ಮನ್ನು ಬೇಡಿ ಬೇಡಿ  ನನ್ನ ಬಾಯಿ ಬೋಡಾಯಿತು ಎನ್ನುವಲ್ಲಿಯ ವಾಸ್ತವತೆಯಾಗಲಿ, ಎನ್ನಹೃದಯ ಮನ ಶಾಸನವ ಮಾಡಿ ನಿಲ್ಲಯ್ಯ ಎನ್ನುವಲ್ಲಿಯ ವಾಕ್ಯದ ವಿಶೇಷತೆಯಾಗಲೀ ಇವೆಲ್ಲಾ ವಚನಕಾರ ಸಿದ್ಧರಾಮರ ಕವಿಹೃದಯವನ್ನು ಸೂಚಿಸ ಬಯಸುತ್ತವೆ. ಸಕ್ಕರೆಯು ಆಕಾರ, ರುಚಿಯು ನಿರಾಕಾರ, ಲಿಂಗವಾಕಾರ, ಜಂಗಮ ನಿರಾಕಾರ, ಆಕಾರ ಬಿಟ್ಟು ನಿರಾಕಾರವಿಲ್ಲ, ನಿರಾಕಾರ ಬಿಟ್ಟು ಆಕಾರವಿಲ್ಲ. ಲಿಂಗ ಜಂಗಮವೆಂಬುಭಯ ಶಬ್ದ ಒಂದೇ ನೋಡಾ ಎಂಬಲ್ಲಿ ಸಿದ್ಧರಾಮರ ನಿಲುವು ಏನೆಂಬುದು ಅರ್ಥವಾಗುತ್ತದೆ. ಸಿದ್ಧರಾಮರು ಕೆಲವೆಡೆ ತನ್ನ ವಚನಗಳ ಅಭಿವ್ಯಕ್ತಿಯ ವಿಶೇಷತೆಯಲ್ಲಿ ಉದ್ಗಾರವಾಚಿಯನ್ನು ಬಳಸಿದ್ದಾರೆ. ನಿದರ್ಶನಕ್ಕೆ: ಈ ರಿತುಕಾಲ ಹುಟ್ಟಿ ಕೆಡುವಡೆ ಒಳಗೆ ಬೆಳೆಯಲೇಕಯ್ಯಾ! ಹೋ! ವಾ!ಹೋ! ಅಯ್ಯಾ! ಸಿದ್ಧರಾಮರ ವಚನಗಳಲ್ಲಿ ಕಿರಿದಾದ ವಾಕ್ಯಗಳಲ್ಲಿ ಹಿರಿದಾದ ಅರ್ಥವನ್ನು ತುಂಬುವ  ಗುಣವನ್ನು ಕಾಣಬಹುದಾಗಿದೆ. ಭಾಷೆಯ ಬಳಕೆಯಲ್ಲಿ ಆಡುನುಡಿಯ ಪದಗಳು ಅಪರಿಮಿತವಾಗಿ ಬಳಕೆಯಾಗಿವೆ.

ಕೆಲವು ನಿದರ್ಶನಗಳು:  ಜಲದೊಳಗೆ ಕಲ್ಲು ನೆನೆದು ಮೃದುವಪ್ಪುದೆ, ಒಳವಿಲ್ಲದವಗೆ ಭಕ್ತಿ ನೆಲೆಗೊಂಬುದೆʼ

 ಬಡವ ನಿಧಾನವ ಕಂಡಂತೆ ಹಾರುವ ಮಾಳವ( ಶ್ರಾದ್ಧ) ಕಂಡಂತೆ, ಶಿಶು ತನ್ನ ತಾಯ ಕಂಡಂತೆ, ವೀರ ತಾನು ಪರಸೇನೆಯ ಕಂಡಂತೆ,  ಚೆನ್ನಬಸವಣ್ಣನ ಪಾದವ ನೋಡಿ ಹರುಷಿತನಾದೆ.

ಬಾಲನ ಮಾತಿಗೆ ಮಾತೆಪಿತರಿಗೆ ಪ್ರೀತಿಯಪ್ಪಂತೆ ಎನ್ನ ಮಾತ ಆಲಿಸುವರು ಶಿವಭಕ್ತರು

 ಸಂಸಾರವೆಂಬ ಸಾಗರಕೆ ಒಡಲೆಂಬುದೊಂದು ಭೈತ್ರ ಕಂಡಯ್ಯಾ

 ಗುಣದಿಂದ ಹಾರುವನಲ್ಲದೆ ಅಗಣಿತ ವಿದ್ಯಾಭ್ಯಾಸದಿಂದ ಹಾರುವನಲ್ಲ

 ತಿಳಿ ನೀರೆಂಬೆ ತಿಳಿನೀರೆಂಬ ತಿಳಿ ನೀ ಎಂದು ಒಂದು ದಿನ ಅಂದಿಲ್ಲೆಲ್ಲೆ ಮಾನವ

 ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತೆ

 ಹಾಲುಳ್ಳಲ್ಲಿ ಹಬ್ಬವ ಮಾಡಿ ಗಾಳಿಯುಳ್ಳಲ್ಲಿ ತೂರಿಕೊಳ್ಳಿ

 ಸಾಕುವವರು ತಾವಾದ ಬಳಿಕ ನೂಕುವವರು ತಾವಾಗಬಾರದು

 ನೀರಲ್ಲಿಯ ಕ್ರೀಡೆ ಕುಂಬಳಕಾಯಿಗಲ್ಲದೆ ದೊಡೆ ಬಂಡೆಗುಂಟೇನಯ್ಯಾ 

 ಓದುವುದದು ಸದ್ಗುಣಕ್ಕಲ್ಲದೆ ಕಿವಿಯನೂದುವುದಕ್ಕೇನೊ

 ಕೃಷಿಯ ಮಾಡಿ ಉಣ್ಣದೆ ಹಸಿವು ಹರಿಯುವ ಪರಿಯಿನ್ನೆಂತೋ

 ಅನುಭವವೆಂಬುದುದು ಅನುಭಾವಿಕಗಲ್ಲದೆ

 ಹೊತ್ತಗೆಯಲ್ಲಿಲ್ಲ ನೋಡಾ ಮಾನವ

 ರತ್ನಗಳು ಸಮುದ್ರದಲ್ಲಲ್ಲದೆ

 ಕೀಳು ಕುಲ್ಯಾದಿಗಳಲ್ಲಿಲ್ಲ ನೋಡಾ ಮಾನವ

 ಕಾಯ್ದ ಕರ್ಬುನ ನೀರನೊಳಕೊಂಬಂತೆ

 ಬಿದ್ದ ಬಿಂದುವ ಭೂಮಿಯೊಳಕೊಂಬಂತೆ

  ಸತ್ಯಕ್ಕೆ ಸಾಕ್ಷಿಯಲ್ಲದೆ ಮಿಥ್ಯಕ್ಕೆ ಸಾಕ್ಷಿಯೆ? ಇತ್ಯಾದಿ ಅರ್ಥಪೂರ್ಣ ಮತ್ತು ಧ್ವನಿಪೂರ್ಣವಾದ, ದೇಸಿ ಭಾಷೆಯಿಂದ ಕಸುವುಗೊಂಡ ಸೂತ್ರ ರೂಪದ ನುಡಿಗಳನ್ನು ತಮ್ಮ ವಚನಗಳಲ್ಲಿ ಸಂದರ್ಭೋಚಿತವಾಗಿ ಬಳಸಿದ್ದಾರೆ.  ಅಂದರೆ ಕನ್ನಡ ಜಾಯಮಾನಕ್ಕೆ ಒಗ್ಗುವ  ವಾಕ್ಯಪ್ರಯೋಗಗಳನ್ನು ಕಾಣಬಹುದಾಗಿದೆ. ಕೆಲವು ಸಂದರ್ಭಗಳಲ್ಲಿ ಸಿದ್ಧರಾಮರು ಬಸವಣ್ಣನವರ ವಚನಗಳಿಂದ ಪ್ರೇರಿತರಾಗಿದ್ದಾರೆ.

 ನಿದರ್ಶನಕ್ಕೆ:  ಚರಿಸುವ ಚರನಿಗೆ ಚರ್ಚೆಯೇ ಭೂಷಣ

            ಕೊಳನಲ್ಲಿಯ ನೀರಿಗೆ ಕಲಹಂಸೆಯೇ ಭೂಷಣ

            ಶರಣರಿಗೆ ನಿರ್ಮಲ ನಿಜಾನಂದವೆ ಭೂಷಣ ಎಂಬ ವಚನವು  ಬಸವಣ್ಣನವರ ನೀರಿಗೆ ನೈದಿಲೆಯೇ ಶೃಂಗಾರ ಎಂಬ ವಚನದ ಸಾಲನ್ನು ನೆನಪಿಸುತ್ತದೆ. ಅದೇ ರೀತಿ  ವೇದಪ್ರಿಯನಲ್ಲಯ್ಯಾ ನೀನು, ಶಾಸ್ತ್ರಪ್ರಿಯನಲ್ಲಯ್ಯಾ ನೀನು, ನಾದಪ್ರಿಯನಲ್ಲಯ್ಯಾ ನೀನು ಎಂಬುದು ಬಸವಣ್ಣನವರ ನಾದಪ್ರಿಯ ಶಿವನೆಂಬರು ನಾದಪ್ರಿಯನಲ್ಲ ಎಂಬ ವಚನವನ್ನು ನೆನಪಿಸುತ್ತದೆ. ಸಿದ್ಧರಾಮರು ಕೆಲವೆಡೆ ಬಸವಾದಿ ವಚನಕಾರರ ಪ್ರಭಾವಕ್ಕೆ ಒಳಗಾಗಿದ್ದರೂ  ಆ ಪ್ರಭಾವವನ್ನು ಜೀರ್ಣಿಸಿಕೊಂಡು ಸ್ವಂತಿಕೆಯನ್ನು ಮೆರೆದಿದ್ದಾರೆ ಎಂಬುದು ಅವರ ವಚನಗಳ ವಿಶ್ಲೇಷಣೆಯ ಮೂಲಕ ತಿಳಿದು ಬರುತ್ತದೆ. ಸಿದ್ಧರಾಮರು ಆದ್ಯರ ಮತ್ತು ಸಮಕಾಲೀನ ವಚನ ವಾಙ್ಮಯವನ್ನು ನಿಷ್ಠಯಿಂದ ಮತ್ತು ಭಕ್ತಿಯಿಂದ ಓದಿ ಅರಗಿಸಿಕೊಂಡವರು. ಹೀಗಾಗಿ ವಚನಸಾಹಿತ್ಯದ ರಾಜ ಮಾರ್ಗದಲ್ಲಿಯೇ ನಡೆದಿದ್ದಾರೆ. ಜೊತೆಗೆ ನಡೆದ ದಾರಿಯಲ್ಲಿ ಹೊಸತನವನ್ನು ಸಾಧಿಸಿದ್ದಾರೆ. ಕೆಲವೆಡೆ ಅವರ ವಚನಗಳಲ್ಲಿ ಮಾಗಿದ ಚಿಂತನೆ ಮತ್ತು ಅನುಭೂತಿ ಮೈದಾಳಿರುವುದನ್ನು ನೋಡ ಬಹುದಾಗಿದೆ. ಇವರು ಸಾಹಿತ್ಯದ ರಚನೆಗಾಗಿ ವಚನಗಳನ್ನು ರಚಿಸದಿದ್ದರೂ  ಇವರ ವ್ಯಕ್ತಿತ್ವದ ಶ್ರೀಮಂತಿಕೆಯಿಂದಾಗಿ ಆ ವಚನಗಳಿಗೆ ಅಪೂರ್ವವಾದ ತೇಜಸ್ಸು ಉಂಟಾಗಿದೆ. ಇವರ ದೃಷ್ಟಿಯಲ್ಲಿ ವಚನಗಳು ಒಂದು ಅನುಭವವೇ ಹೊರತು ವಾಕ್‌ ರಚನೆಯಲ್ಲ. ಇವರ ಪ್ರಕಾರ ವಚನ ಆದ್ಯರಾಜ್ಞೆ, ಅದು ಈಶ್ವರಗೆ ಜ್ಯೋತಿ. ಅಂದರೆ ವಿವೇಚಿಸಿ ನೋಡಿದಷ್ಟು ಅದರ ಆನಂದಪ್ರಭೆ ಹಬ್ಬುತ್ತದೆ. ವಚನಗಳನ್ನು ಓದಿ ಅನುಭವಿಸುವುದು ಇವರ ಪ್ರಕಾರ  ಅಗಿದಗಿದು ನೋಡುವುದದು ಶುಕ ತೆಂಗು ತಿಂದಂತೆ ಎಂದು ಹೇಳುತ್ತಾರೆ. ಅಗಿದಗಿದು ನೋಡ ಬೇಕು ಅದರ ರುಚಿ ಗೊತ್ತಾಗುತ್ತದೆ.  ಇವರ ವಚನ ರಚನೆಗಳಿಗೆ ನೂತನ ಪುರಾತನರ ವಚನಗಳ ಅನುಚಾನವಾದ ಪರಂಪರೆ ಪ್ರೇರಕವಾಗಿದೆ. ಇವರ ವಚನಗಳನ್ನು ಬಿಡಿ ಬಿಡಿಯಾಗಿ ನೋಡದೆ ಇಡಿಯಾಗಿ ನೋಡಬೇಕು. ಇವರ ವಚನಗಳು ಗಾತ್ರದ ಸಂಖ್ಯೆಯಿಂದ ಅಧಿಕವಾಗಿದ್ದು ಏಕಮುಖತೆಯನ್ನು ಕಳೆದುಕೊಳ್ಳದೆ ವೈಶಾಲ್ಯವನ್ನು ಪಡೆದಿವೆ. ಜನಜೀವನದಿಂದೆತ್ತಿಕೊಂಡ  ಜನರ ಹೃದಯವನ್ನು ತಟ್ಟುವ  ಆಡುಮಾತುಗಳ ಮೂಲಕ  ಅನುಭಾವದ ಆಳವನ್ನೂ, ನವಸಮಾಜ ನೀತಿಯನ್ನೂ,ಸಾಮಾಜಿಕ ವಿಡಂಬಣೆಯನ್ನು ನಿರೂಪಿಸುವಂತಹ ವಿಶಿಷ್ಟವಾದ ಗುಣವನ್ನು ಹೊಂದಿವೆ. ಅಪಾರವಾದ ಲೋಕಕಾರುಣ್ಯ, ನಿರಂತರ ಆತ್ಮಜಾಗೃತಿ, ಕರ್ಮಮಾರ್ಗದಲ್ಲಿ ಒಲವು, ಭಕ್ತಿಯ ಅಭಿವ್ಯಕ್ತಿಯ ಉಜ್ವಲತೆ, ಅದರೊಡನೆ ಜ್ಞಾನಭಕ್ತಿಗಳ ಸಮನ್ವಯ ಮತ್ತು ಕೊನೆಯಲ್ಲಿ ಏರಿನಿಂತ ಆಧ್ಯಾತ್ಮಿಕ ನಿಲವು-ಇವರ ವಚನಗಳಲ್ಲಿ ಸುಂದರವಾಗಿ ಪ್ರತಿಬಿಂಬಿತವಾಗಿವೆ.  

      ಶರಣ ಶ್ರೇಷ್ಠರಲ್ಲಿ ಒಬ್ಬರಾಇವರು ಕರ್ಮಯೋಗಿಯಾಗಿ, ಜ್ಞಾನದ ಗಣಿಯಾಗಿ, ವೈರಾಗ್ಯನಿಧಿಯಾಗಿ ಸರ್ವರೇಳ್ಗೆಗಾಗಿ ಶ್ರಮಿಸಿದ ಸಾಧಕರಾಗಿ ಮೆರೆದವರು. ಇಹದ ಬದುಕನ್ನು ಕಡೆಗಣಿಸದೆ ಕಾಲಿಟ್ಟು ನಿಂತವರು. ಹುಟ್ಟಿನಿಂದ ಪರಿಪೂರ್ಣನಾಗಿರಲಿಲ್ಲ. ಪ್ರಜ್ಞಾಪೂರ್ವಕ ಪ್ರಯತ್ನದಿಂದಾಗಿ ಪರಿಪೂರ್ಣನಾದವರು. ಇವರು ಮೊದಲಿಗೆ ತಾನು ತಬ್ಬಿಕೊಂಡಿದ್ದೇ ಶ್ರೇಷ್ಠವೆಂದು ನಂಬಿದ್ದವರು. ತಾನು ನಂಬಿದ್ದಕ್ಕಿಂತ ಶ್ರೇಷ್ಠವಾದುದು ಬೇರೊಂದಿದೆ ಎಂದು ತೋರಿಸಿದವರ ಬಗೆಗೆ ಗೌರವ ತಾಳಿ ತನ್ನ ನಿಲುವನ್ನು ಬದಲಿಸಿಕೊಂಡವರು. ಒಟ್ಟಾರೆ ಶಿವಯೋಗಿ ಸಿದ್ಧರಾಮರಲ್ಲಿ ಬಸವಣ್ಣನವರ ಭಕ್ತಿಯ ಅನನ್ಯತೆ, ಕವಿಹೃದಯವನ್ನು ಸ್ವಲ್ಪ ಮಟ್ಟಿಗೆ ಗುರುತಿಸ ಬಹುದಾಗಿದೆ. ಇಂದು ವಚನ ಸಾಹಿತ್ಯದ ಪ್ರಮುಖ ವಚನಕಾರರಾದ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿಯರ ಸಾಲಿನಲ್ಲಿ ಸಿದ್ಧರಾಮರನ್ನು  ಮೊದಲ ವರ್ಗದ ವಚನಕಾರರಾಗಿ ಗುರುತಿಸಿ ಅಧ್ಯಯನ ಮಾಡುತ್ತಿರುವುದು ವಚನ ಪರಂಪರೆಯಲ್ಲಿ ಅವರು ಪಡೆದ ಸ್ಥಾನದ ದ್ಯೋತಕವಾಗಿದೆ.

      ಗ್ರಂಥಋಣ

1.ಎಂ.ಚಿದಾನಂದ ಮೂರ್ತಿ,  ಸ್ಥಾವರ:ಜಂಗಮ, ಸ್ವಪ್ನಬುಕ್ ಹೌಸ್, ಬೆಂಗಳೂರು,2004

2.ಸಿದ್ಧರಾಮೇಶ್ವರ ವಚನ ಸಂಪುಟ ಸಂ.ಎಸ್.ವಿದ್ಯಾಶಂಕರ

  ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು (ಪ.ಮು)2001

3 ಸಿ.ನಾಗಭೂಷಣ: ವೀರಶೈವ ಸಾಹಿತ್ಯ ಕೆಲವು ಒಳನೋಟಗಳು

   ವಿಜೇತ ಪ್ರಕಾಶನ, ಗದಗ. 2008

4. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂ: ಜಿ.ಎಸ್.ಶಿವರುದ್ರಪ್ಪ

   ಸಂ.3, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, 1976

೫. ಎಸ್.ವಿದ್ಯಾಶಂಕರ: ವೀರಶೈವ ಸಾಹಿತ್ಯ ಚರಿತ್ರೆ, ಸಂ.೩

ಪ್ರಿಯದರ್ಶಿನಿ  ಪ್ರಕಾಶನ, ಬೆಂಗಳೂರು ೨೦೧೩

 

 

  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...