ಶನಿವಾರ, ಫೆಬ್ರವರಿ 4, 2023

 

ಕವಿ ಮಲ್ಲಿಕಾರ್ಜುನಕೃತ ಮಹಾನಾಡ ಪ್ರಭು ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯದಲ್ಲಿ ಐತಿಹಾಸಿಕ ಸಂಗತಿಗಳು

                     ಡಾ.ಸಿ.ನಾಗಭೂಷಣ

   ಸಾಹಿತ್ಯವು ಸಾಮಾಜಿಕ ಪರಿಸರದಲ್ಲಿ ಘಟಿಸುವ ಒಂದು ಕ್ರಿಯೆ. ಕವಿಯು ಕಾಲದ ಸಮಾಜವು ಕವಿಯು ದೃಷ್ಟಿಯನ್ನು ಅವನ ವಸ್ತುವಿನ ಆಯ್ಕೆಯನ್ನು ನಿರ್ಧರಿಸಬಹುದು. ಒಂದು ಸಮಾಜದ ಅತ್ಯುನ್ನತವಾದ ಆಲೋಚನೆಗಳು ಮತ್ತು ಅತ್ಯಂತ ಗಹನವಾದ ಅನುಭವಗಳು ಆಯಾ ಸಾಹಿತ್ಯದಲ್ಲಿ ವ್ಯಕ್ತವಾಗುತ್ತದೆ. ದೃಷ್ಟಿಯಿಂದ ಸಾಹಿತ್ಯವುಸಮಸ್ತ ಚರಿತ್ರೆಯ ಸಾರವೂ ಸಂಗ್ರಹವೂ ಆಗಿರುತ್ತದೆ. ಯಾವುದೇ ಸಾಹಿತ್ಯ ತನ್ನ ಸುತ್ತಮುತ್ತಣ ಪರಿಸರಣ ಪ್ರಭಾವದ ಮುದ್ರೆಯನ್ನು ಹೊತ್ತೇ ಬರುತ್ತದೆ. ನಿಜವಾದ ಗತಕಾಲದ ಇತಿಹಾಸ ಅಂದರೆ ಕಾಲದಿಂದ ಕಾಲಕ್ಕೆ ಆಳಿದ ರಾಜರ ಪಟ್ಟಿಯಲ್ಲ. ನಿಜವಾದ ಇತಿಹಾಸ ಒಂದು ಸಮಗ್ರ ಜನತೆಯ ಜೀವನದ ಸಂಸ್ಕೃತಿಯ ಚರಿತ್ರೆ ಆಗಿರುತ್ತದೆ. ದೇಶ ಇತಿಹಾಸ ಅಲ್ಲಿಯ ಜನತೆಯ ಇತಿಹಾಸ. ಸಾಹಿತ್ಯ ಸಮಾಜದ ಅವಶ್ಯಕತೆಯ ಪೂರೈಕೆಗಾಗಿ ರೂಪುಗೊಂಡಿದೆ. ಸಾಹಿತ್ಯವನ್ನು ಸೃಷ್ಟಿಸುವ ವ್ಯಕ್ತಿ ಕಾಲದ ಜನಪ್ರತಿನಿಧಿಯಾಗಿರುತ್ತಾನೆ. ಸಾಹಿತ್ಯದ ಬಗೆಗೆ ಅಧ್ಯಯನ ಮಾಡುವವರು ಕಾಲದ ಸಾಮಾಜಿಕ ಚೌಕಟ್ಟನ್ನು ಅಲಕ್ಷಿಸುವಂತಿಲ್ಲ. ಇತಿಹಾಸ ಎಂದರೆ ಜನ ನಂಬಿದ್ದು. ಆಚರಿಸಿದ್ದು ಸಾಧಿಸಿದ್ದು ಜನರ  ಇತಿಹಾಸವಿಲ್ಲದ ಇತಿಹಾಸ ಪರಿಪೂರ್ಣವಾದುದಲ್ಲ. ಜನತೆಯ ಇತಿಹಾಸಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷ ಆಕರ ಸಾಹಿತ್ಯ . ಒಂದು ಸಾಹಿತ್ಯ ಕೃತಿ ತನ್ನ ಕಾಲಕ್ಕೆ   ಸ್ಪಂದಿಸಿದ ರೀತಿಯನ್ನು ಹೇಳುತ್ತದೆ. ಸಾಹಿತ್ಯ  ಮತ್ತು ಚರಿತ್ರೆಗಳಿಗೆ ಆಕರವಾಗುವ ಕೃತಿ ಸಾಂಸ್ಕೃತಿಕ ಪ್ರತಿನಿಧಿಯಾಗಿರುತ್ತದೆ. ರಾಜನ ವೈಭವ ಬದುಕಿನ ಪ್ರಮುಖ ಘಟನೆಯು ಇತಿಹಾಸವಾಗುವ ಹಾಗೆ ಕೋಟೆ ಕಟ್ಟಿದ ಶ್ರಮಿಕ, ಯುದ್ದದಲ್ಲಿ ಹೋರಾಡಿ ಮಡಿದ ಸೈನಿಕರ ಅನುಭವವೂ ಇತಿಹಾಸವಾಗಬಹುದು.  ಸಾಹಿತ್ಯವು   ಪರಂಪರೆಯನ್ನು ಮೂಲಕ ಸಮಾಜದ ವಿವಿಧ ನೆಲೆಗಳನ್ನು ಕಾಯ್ದಿರಿಸುವ ಗುಣವನ್ನು ಹೊಂದಿದೆ. ಸಾಹಿತ್ಯವು ತನ್ನ ಕಾಲದ ಚಟುವಟಿಕೆಯನ್ನು ಪ್ರಾಸಂಗಿಕವಾಗಿಯೇ ಅನುಷಂಗಿಕವಾಗಿಯೇ ಒಳಗೊಂಡು ಇತಿಹಾಸವನ್ನು ಜೀವಂತವಾಗಿಡುವ ಪ್ರಕ್ರಿಯೆಯಾಗಿದೆ.

   ರಾಜರುಗಳ ಕಾಲದ ಸೂಕ್ಷ್ಮ ಒಳನೋಟದ ಬಗೆಗೆ ಮಾಹಿತಿ ದೊರೆಯುವುದು ಸಾಹಿತ್ಯ ಕೃತಿಗಳಲ್ಲಿ ಮಾತ್ರ. ಯಾವುದೇ ಒಂದು ಉತ್ತಮ ಕೃತಿ ನಿರ್ದಿಷ್ಟ ಕಾಲದ ರಾಜಕೀಯ ಸಾಮಾಜಿಕ ಪರಿಸರದಿಂದಮೂಡಿಬರುವಂಥದ್ದು. ಕಾಲದ ಜನಜೀವನದ ಸ್ಪಂದನ ಮಿಡಿತ ಇರುತ್ತದೆ. ಅಂತಹ ಕೃತಿಯನ್ನು ಸಾಮಾಜಿಕ ಚೌಕಟ್ಟಿನ ಪರಿಧಿಯಲ್ಲಿ ಪರಿಭಾವಿಸಿಕೊಂಡಾಗ ಹೆಚ್ಚು ಅರ್ಥಪೂರ್ಣವಾಗುತ್ತದೆ.  ಹಿಂದಿನ ಹಾಗೂ  ಇಂದಿನ ಚರಿತ್ರೆಗಳಿಗಿರುವ ಸಂಬಂಧ ಸ್ವರೂಪಗಳು ಬೇರೆ ಬೇರೆಯಾಗಿದ್ದಂತೆ ವಿಶ್ಲೇಷಣಾ ವಿಧಾನ ಕೂಡಾ ಬೇರೆಯ ಸ್ವರೂಪದ್ದಾಗಿದೆ. ಆಧುನಿಕ ಕಾಲದ ಬಗೆಗೆ ದೊರೆಯುವಷ್ಟು ಸಾಮಗ್ರಿ ಪ್ರಾಚೀನ ಕಾಲದ ಬಗೆಗೆ ಅಷ್ಟಾಗಿ ದೊರೆಯುವುದಿಲ್ಲ. ಪ್ರಾಚೀನ ರಾಜತ್ವದಲ್ಲಿಯ ಅತ್ಯಂತ ಸಾಮಾನ್ಯವೆನಿಸುವ ಸಂಗತಿಗಳನ್ನು ಇಂದು ತಿಳಿಯಲು ಸಾಧ್ಯವಿಲ್ಲದಾಗಿದೆ. ಸಾಕ್ಷ್ಯಾಧಾರಗಳು ಯಾವ ವಿವರಣೆಯನ್ನು ಕೊಡುತ್ತವೆ ಎಂಬ ದೃಷ್ಟಿಯಿಂದ ನೋಡಿದರೆ ಮಾತ್ರ ನಾವು ಯಾವುದನ್ನು ನೋಡ ಬಯಸುತ್ತಿದ್ದೇವೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ. ಪ್ರಾಚೀನ ಕಾಲದ ಕಾವ್ಯಗಳಲ್ಲಿ ಕಾಲದ ವರ್ತಮಾನದ ಅಂಶಗಳ ಸುಳುಹು  ವ್ಯಕ್ತವಾಗಿದೆ. ಪ್ರಾಚೀನ ಕಾಲದ ಶಾಸನಗಳು ಬಖೈರುಗಳು. ಅರ್ಥಶಾಸ್ತ್ರ ನ್ಯಾಯಸಿದ್ದಾಂತ ನೀತಿ,ಟೀಕೆ ವ್ಯಾಖ್ಯಾನಗಳು ವಂಶಾವಳಿಗಳು ನಿರ್ದಿಷ್ಟ ಉದ್ದೇಶವನ್ನು ಹೊಂದಿರುವ ದಾಖಲೆಗಳು. ಇಲ್ಲೆಲ್ಲಾ ರಾಜನ ಅಥವಾ ಶ್ರೀಮಂತರು ಅನುಗ್ರಹ ಮತ್ತು ದಯಪಾಲಿಸುವಿಕೆಯ ಚಿತ್ರವನ್ನು  ಕಾಣುತ್ತಿದ್ದೇವೆಯೇ ಹೊರತು ಸಹಜವಾಗಿ ಜನ ಏನು ಮಾಡಿದರು ಎಂಬ ಚಿತ್ರಣ ಅಲ್ಲಿ ದೊರೆಯುವುದಿಲ್ಲ. ಚಾರಿತ್ರಿಕ ವಿಶ್ಲೇಷಣೆಯಲ್ಲಿ ಕಂಡು ಬರುವ ದೊಡ್ಡ ಅಂತರ ಎಂದರೆ ಸಮಕಾಲೀನ ರಾಜಕೀಯ ಧೋರಣೆಗಳನ್ನು ಒಳಗೊಂಡಿರುವ ಹೊತ್ತಿನ ಸಾಹಿತ್ಯಕ ಕೃತಿಗಳಿಗಿಂತ ನಮ್ಮ ಪ್ರಾಚೀನ ಸಾಹಿತ್ಯದ ಧೋರಣೆ  ವಿಭಿನ್ನವಾಗಿರುವುದು. ಹಿಂದಿನ ಕಾಲದ ಆಡಳಿತ ಯಂತ್ರ ಮತ್ತು ರಾಜರ ನಡೆವೆ ಪರಸ್ಪರ ವಿರುದ್ದವಾದ ವಿಚಾರಗಳ ಮಟ್ಟ ಧೋರಣೆ ಮತ್ತು ಗ್ರಹಿಕೆಗಳ  ಸ್ವರೂಪ ಮೂಲಭೂತವಾಗಿ ಬೇರೆಯೇ ಆಗಿವೆ. ಆಡಳಿತಗಾರರ ಆಯ್ಕೆ ಜಾತಿಯ ಬಲದ ಮೇಲೆ ಸಂಘಟಿತವಾಗುತ್ತಿತ್ತೊ ಅಥವಾ ರಾಜರ ಬಗೆಗೆ ನಮ್ರತೆಯನ್ನು ತೋರುವುದರಲ್ಲಿ ವ್ಯಕ್ತವಾಗುತ್ತಿತ್ತೊ. ಎಂಬುದನ್ನು ಕಂಡುಕೊಳ್ಳಲು ಸಾಹಿತ್ಯದ ದಾಖಲೆಗಳಿಗೆ ಚಾರಿತ್ರಿಕ ದೃಷ್ಟಿಯ ಮೂಲಕ ಪ್ರವೇಶಿಸಬೇಕಾಗಿದೆ.

   ಕವಿಯು ಗುರುತಿಸುವ ಬದುಕಿನ ಅಯಾಮಗಳಲ್ಲಿ ಸಮಕಾಲೀನ ರಾಜಕೀಯ ಪ್ರಜ್ಞೆ ಹಾಗೂ ರಾಜಕೀಯ ವ್ಯವಸ್ಥೆಗಳು ಪ್ರಮುಖವಾಗಿರುತ್ತವೆ. ಕವಿಯು ಒಂದು ರಾಜಕೀಯ ವ್ಯವಸ್ಥೆಯೊಳಗೆ ಬದುಕುವುದರಿಂದ ಸಮಕಾಲೀನ ರಾಜಕೀಯ ವ್ಯವಸ್ಥೆಗಳು ಆತನ ದೃಷ್ಟಿಕೋನಗಳಲ್ಲಿ ಪ್ರಭಾವವನ್ನುಂಟುಮಾಡುತ್ತವೆ. ಹಿನ್ನಲೆಯಲ್ಲಿ ಬದುಕಿನ ರಾಜಕೀಯ ವಾಸ್ತವತೆಗೆ ಆತ ಪ್ರತಿಸ್ಪಂದಿಸಲೇ ಬೇಕಾಗುತ್ತದೆ. ರಾಜಕೀಯ ಆಧುನಿಕ ಕಾಲದಲ್ಲಿ ಮಾತ್ರವಲ್ಲ. ಆಧುನಿಕಪೂರ್ವದಲ್ಲಿಯೂ ಸಾಮಾಜಿಕವಾಗಿ ಪ್ರಧಾನ ಪಾತ್ರ ವಹಿಸಿದೆ. ರಾಜಕೀಯ ಘಟನೆಗಳು ನಾಡಿನ ಸಾಮಾಜಿಕ ರಚನೆಗೆ ಆರ್ಥಿಕ ವ್ಯವಸ್ಥೆಗಳ ಮೇಲೆ ಮಾತ್ರವಲ್ಲದೆ, ಕಲೆ, ಸಾಹಿತ್ಯ ಸೃಷ್ಟಿಯ ಮೇಲೂ ನೇರ ಪರಿಣಾಮ ಬೀರುತ್ತದೆ. ರಾಜಕೀಯ ಘಟನೆಗಳು ಪ್ರಾಚೀನ ಕಾಲದಲ್ಲಿಯೂ ಬದಲಾವಣೆಗೆ  ಎಡೆಮಾಡಿಕೊಟ್ಟಿವೆ.

   ಕನ್ನಡ ಸಾಹಿತ್ಯ ಚರಿತ್ರೆಯ ಪರಂಪರೆಯನ್ನು ಅವಲೋಕಿಸಿದರೆ ಕನ್ನಡದಲ್ಲಿ ಐತಿಹಾಸಿಕ ಸಂಗತಿಗಳನ್ನು ಒಳಗೊಂಡ ಕಾವ್ಯಗಳನ್ನು ಎರಡು ನೆಲೆಗಳಲ್ಲಿ ಗುರುತಿಸ ಬಹುದಾಗಿದೆ, . ಚಾರಿತ್ರಿಕ ಧ್ವನಿ ಕಾವ್ಯಗಳು . ಐತಿಹಾಸಿಕ ಕಾವ್ಯಗಳು. ಚಾರಿತ್ರಿಕ ಧ್ವನಿ ಕಾವ್ಯಗಳಲ್ಲಿ ಸಮಕಾಲೀನ ಇತಿಹಾಸವನ್ನು ಪುರಾಣಕಾಲೀನ ಕಥಾವಸ್ತುವೊಂದಿಗೆ  ಸೇರಿಸಿ ಕಾವ್ಯ ರಚಿಸಿರುವುದು.ಅಂದರೆ ಕವಿಗಳು ತಮ್ಮ ಆಶ್ರಯದಾತರನ್ನು ತಮ್ಮ ಕಾವ್ಯದ ಪುರಾಣ ಕಥಾನಾಯಕನ ಜೊತೆಗೆ ಸಮೀಕರಿಸಿ ಕಾವ್ಯ ರಚಿಸುವುದರ ಮೂಲಕ ತಮ್ಮ ಆಶ್ರಯದಾತ ದೊರೆಗಳ ವಿಜಯ ಪ್ರಶಸ್ತಿಗಳನ್ನು ನಿರ್ಮಿಸಿರುವುದು. ತೆರನಾದ ಕೃತಿಗಳನ್ನು ೧ನೆಯ ಗುಣವರ್ಮ, ಪಂಪ, ರನ್ನ, ಪೊನ್ನರು ರಚಿಸಿದ್ದಾರೆ. ತೆರನಾದ ಕೃತಿಗಳು ಚರಿತ್ರೆಯನ್ನೇ ಮೂಲ ಆಕರವಾಗುಳ್ಳ ಕಾವ್ಯಗಳಲ್ಲ., ಪುರಾಣ ಕಥಾವಸ್ತುವೇ ಪ್ರಧಾನ ಸ್ಥಾನದಲ್ಲಿದ್ದು ನಿಜವಾದ ಅರ್ಥದ ಐತಿಹಾಸಿಕ ಕಾವ್ಯಗಳಾಗುವುದಿಲ್ಲ. ಇವುಗಳನ್ನು ಚಾರಿತ್ರಿಕ ಧ್ವನಿ ಕಾವ್ಯಗಳು ಎಂದು ಮಾತ್ರ ಕರೆಯ ಬಹುದು.ಕನ್ನಡ ಸಾಹಿತ್ಯದಲ್ಲಿ ಇನ್ನೊಂದು ತೆರನಾದ ಕಾವ್ಯಗಳು ವಿಷಯಕ್ಕೆ ಸಂಬಂಧಿಸಿದಂತೆ ನಿರ್ಮಾಣಗೊಂಡಿವೆ. ಅಂದರೆ ಇತಿಹಾಸದ ವಸ್ತುವನ್ನು ಒಳಗೊಂಡಿರುವ ಕಾವ್ಯಗಳು. ಕಾವ್ಯಗಳಲ್ಲಿ ಇತಿಹಾಸದ ಜೊತೆಗೆ ಪುರಾಣದ ಅಂಶಗಳನ್ನು ಸೇರಿಸಲಾಗಿದೆ. ತೆರನಾದ ಐತಿಹಾಸಿಕ ಕಾವ್ಯಗಳಲ್ಲಿ ಐತಿಹಾಸಿಕ ವೀರರ ಸುತ್ತ ಕಾವ್ಯವನ್ನು ಕಟ್ಟಿಕೊಡಲಾಗಿರುವುದನ್ನು ಕಾಣಬಹುದಾಗಿದೆ. ಕನ್ನಡ ಕಾವ್ಯ ಪರಂಪರೆಯಲ್ಲಿ ಪುರಾಣ ಪುಣ್ಯಕಥೆಯ ಜಾಡನ್ನು ತೊರೆದು ಇತಿಹಾಸದ ಎಳೆಗಳಿರುವ ಕಾವ್ಯಗಳನ್ನು ರಚಿಸುವುದರ ಮೂಲಕ ಕನ್ನಡದಲ್ಲಿ ಚಾರಿತ್ರಿಕ ಕಾವ್ಯಗಳ ಪರಂಪರೆಯನ್ನು ಹುಟ್ಟು ಹಾಕಿರುವುದು ಮಹತ್ತರವಾದ ಸಂಗತಿಯಾಗಿದೆ. ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಐತಿಹಾಸಿಕ ಪ್ರಜ್ಞೆಯು ಇಂತಹ ಕೃತಿಗಳ ಮೂಲಕ ಪ್ರೌಢಿಮೆಯನ್ನು ತಾಳಿದೆ. ಲಿಂಗಣ್ಣ, ಮಲ್ಲಿಕಾರ್ಜುನ, ಗೋವಿಂದ ವೈದ್ಯ, ನಂಜುಂಡ,ಮದ್ದಗಿರಿ ನಂಜಪ್ಪ, ತಿರುಮಲಾರ್ಯ ಮುಂತಾದ ಕವಿಗಳು ರಚಿಸಿರುವ ಐತಿಹಾಸಿಕ ವಸ್ತುಗಳನ್ನೊಳಗೊಂಡ ಕಾವ್ಯಗಳು ಕನ್ನಡ ನಾಡಿನ ಸ್ಥಳೀಯ ಪಾಳೆಯಪಟ್ಟುಗಳ ಮೇಲೆ ಹೊಸ ಬೆಳಕನ್ನು ಚೆಲ್ಲಿವೆ. ಸ್ಥಳೀಯ ಅರಸರ ನಡುವಿನ ರಾಜಕೀಯ ಸಂಘರ್ಷಗಳು, ಅವುಗಳ ಕಾರಣಗಳು ಮತ್ತು ಪರಿಣಾಮಗಳನ್ನು ಕುರಿತ ಮಹತ್ವದ ಮಾಹಿತಿಗಳನ್ನು ಪ್ರಸ್ತಾಪಿಸಿವೆ.ಅದಕ್ಕಿಂತ ಮುಖ್ಯವಾಗಿ ಶಾಸನಗಳಲ್ಲಿ ದೊರೆಯದ ಅನೇಕ ನೂತನ ಮಾಹಿತಿಗಳನ್ನು ಚಾರಿತ್ರಿಕ ಎಳೆಯ ಕೃತಿಗಳು  ಹೊಂದಿದ್ದು ನಾಡಿನ ಇತಿಹಾಸ ಮತ್ತು ಸಂಸ್ಕೃತಿಯ ಪುನರ್ರಚನೆಗೆ ನೆರವಾಗಿವೆ.

  ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ ಕೃತಿಯು ಅರ್ಧ ಚಾರಿತ್ರಿಕ ಲಕ್ಷಣದ ಸಾಹಿತ್ಯ ಕೃತಿಯಾಗಿದೆ. ಪುರಾಣ ಮತ್ತು ಐತಿಹ್ಯವನ್ನು ಕುರಿತ ಸಾಹಿತ್ಯ ಕೃತಿಗಳಿಗಿಂತ ಕೃತಿಯು ಸ್ವಲ್ಪ ಮಟ್ಟಿಗೆ ಚಾರಿತ್ರಿಕ ಸಂಗತಿಗಳಿಗೆ ಹತ್ತಿರವಾಗಿದೆ. ಆದಾಗ್ಯೂ ಇಂತಹ ಕೃತಿಗಳಲ್ಲಿಯೂ ಇತಿಹಾಸಕಾರನು ಕವಿಯ ಆಲೋಚನೆಯನ್ನು ರೂಪಿಸಿರುವ ಸಾಹಿತ್ಯಕ ಸಂಪ್ರದಾಯದ ಪ್ರಭಾವದಿಂದ ತಪ್ಪಿಸಿಕೊಳ್ಳುವ ಜೊತೆಗೆ ಕೃತಿಯಲ್ಲಿ ಒಡಮೂಡಿರುವ ಸಾಂಪ್ರದಾಯಿಕ ಹೇಳಿಕೆಗಳನ್ನೇ ನಿಜವಾದ ಸಂಗತಿಗಳೆಂದು  ಸ್ಥಿರೀಕರಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಮಲ್ಲಿಕಾರ್ಜುನ ಕವಿಯು ತನ್ನ ಆಶ್ರಯದಾತರಾದ ಮಹಾನಾಡ ಪ್ರಭುಗಳ ಕುರಿತು ಕಾವ್ಯ ಬರೆದಿದ್ದು ಕೆಲವೆಡೆ ವಾಸ್ತವವಲ್ಲದ ವಿವರಗಳನ್ನು ಒಳಗೊಂಡಿದ್ದರೂ ಬೇರೆಡೆ ದೊರೆಯದ ಮಹತ್ವದ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ದಾಖಲಿಸುವ ಪ್ರಯತ್ನ ಮಾಡಿದ್ದಾನೆ. ರಾಜನ ದಿಗ್ವಿಜಯದ ವಿವರಗಳನ್ನು ಕೆಲವೆಡೆ ಅತಿರಂಜಿತವಾಗಿ ನಿರೂಪಿಸಲ್ಪಟ್ಟಿದ್ದರೂ ರಾಜನ ಜೀವನ ಮತ್ತು ಅವನ ಕಾಲದ ನಿಜವಾದ ಚಿತ್ರಣಗಳನ್ನು ಕೆಲವೆಡೆ ಚಿತ್ರಿಸಿದ್ದಾನೆ. ತೆರನಾದ ಚಾರಿತ್ರಿಕ ಭಿತ್ತಿಯ ಮೇಲೆ ನಿರ್ಮಿತಗೊಂಡಿರುವ ಸಾಹಿತ್ಯ ಕೃತಿಗಳು ಇತಿಹಾಸ-ಸಂಸ್ಕೃತಿಯ ಪುನರ್ರಚನೆಗೆ ಆಕರಗಳಾಗಿದ್ದು ಇವುಗಳನ್ನು ಬರಿಯ ಕಟ್ಟು ಕಥೆ, ಕಾಲ್ಪನಿಕ ಎಂದು ನಿರಾಕರಿಸುವುದು ತಪ್ಪಾಗುತ್ತದೆ. ಕೃತಿಯಲ್ಲಿ ಕವಿಯು ಚರಿತ್ರೆ-ಸಂಸ್ಕೃತಿಗೆ ಸಂಬಂಧಿಸಿದ ಸಂಗತಿಗಳನ್ನು ತನ್ನದೇ ರೀತಿಯಲ್ಲಿ ಕವಿಸಹಜವಾದ ಕವಿವಾಣಿಯಲ್ಲಿ ಹೇಳಲು ಪ್ರಯತ್ನಿಸಿರುತ್ತಾನೆ. ಕವಿಕೃತಿಯಲ್ಲಿಯ ಕವಿಸಮಯ, ಸಂಪ್ರದಾಯಗಳನ್ನು ನಿಜವಾಗಿ ಅರ್ಥಮಾಡಿಕೊಂಡಾಗ ಕೃತಿಗಳಲ್ಲಿಯ ಚಾರಿತ್ರಿಕ ಸಂಗತಿಗಳನ್ನು ಶೋಧಿಸಲು ಸಾಧ್ಯವಾಗುತ್ತದೆ. ಇಮ್ಮಡಿ ಚಿಕ್ಕಭೂಪಾಲ ಸಾಂಗತ್ಯದಂತಹ ಕೃತಿಗಳಲ್ಲಿ ಕವಿಯು ಹಿಂದಿನದಕ್ಕಿಂತ ಹೆಚ್ಚು ಇತಿಹಾಸಕಾರನಾಗಿ ಕಾಣಿಸಿ ಕೊಂಡಿರುವುದು ಗಮನಿಸ ಬೇಕಾದ ಸಂಗತಿ. ಚಾರಿತ್ರಿಕ ಸಂಗತಿಗಳ ಸಾಮಗ್ರಿಗಳ ದೊಡ್ಡ ಹರವು ಕೃತಿಯಲ್ಲಿದೆ.

   ಚಕ್ರವರ್ತಿಗಳ ವಿಷಯವನ್ನು ಹೇಳಲು ಅಧಿಕೃತ ಶಾಸನಗಳಿರುತ್ತವೆ. ಆದರೆ ಅನೇಕ ಸಾರಿ ಸಾಮಂತರ ಮಾಂಡಳೀಕರ ವಿಷಯಗಳನ್ನು ತಿಳಿಯಲು ಶಾಸನಗಳು ಅಧಿಕ ಸಂಖ್ಯೆಯಲ್ಲಿ ಸಿಗದೆ, ಸಾಹಿತ್ಯ ಕೃತಿಗಳಂತಹ ಆಕರಗಳನ್ನು  ಅವಲಂಬಿಸಬೇಕಾಗುತ್ತದೆ.  ಐತಿಹಾಸಿಕ ಸಂಗತಿಗಳನ್ನು ಸ್ವಲ್ಪ ಮಟ್ಟಿಗೆ ಉಳ್ಳ ಕೆಲವು ಲಭ್ಯ ಕೃತಿಗಳಿಂದಾಗಿ ಮರೆತುಹೋಗಬಹುದಾಗಿದ್ದ, ಚರಿತ್ರೆಯಲ್ಲಿ ದಾಖಲಾಗದ ಸ್ಥಳೀಯ ಅರಸುಮನೆತನಗಳ  ಚರಿತ್ರೆಯ  ಕೆಲವು ವಿವರಗಳು   ಉಳಿದು ಬರಲು ಸಹಾಯಕವಾಗಿವೆ.  ಈ ತೆರನಾದ ಕೃತಿಗಳು ಸ್ಥಳೀಯ ಚರಿತ್ರೆಯ ಅಪೂರ್ವ ದಾಖಲೆಗಳೆಂಬಂತೆ ಕಾಣಿಸಿಕೊಂಡಿವೆ. ಕಾರಣಕ್ಕಾಗಿಯೆ ಇಲ್ಲಿಯ ಐತಿಹಾಸಿಕ ಅಂಶಗಳ ಸತ್ಯತೆಯನ್ನು ಅನ್ಯಮೂಲದಿಂದ ಸಮರ್ಥಿಸಲು ಕಷ್ಟವಾಗಿಬಿಡುತ್ತದೆ. ಐತಿಹಾಸಿಕ ಕಾವ್ಯಗಳಲ್ಲಿ ಸ್ಥಳೀಯ ಚರಿತ್ರೆಯನ್ನು ಅವಲಂಬಿಸಿ ರಚಿತವಾಗಿರುವ ಕೃತಿಗಳಲ್ಲಿ ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ ಕೃತಿಯು ಪ್ರಮುಖ ಸ್ಥಾನವನ್ನು ಪಡೆಯುತ್ತದೆ.

   ಕನ್ನಡದಲ್ಲಿ ರಾಜರನ್ನು ವಸ್ತುವಾಗಿಟ್ಟುಕೊಂಡು ಅನೇಕ ಕೃತಿಗಳು ಹುಟ್ಟಿವೆ. ಅರಿಕೇಸರಿಯನ್ನು ಕುರಿತು ಪಂಪ, ಇರಿವ ಬೆಡಂಗನನ್ನು ಕುರಿತು ರನ್ನ, ಬರೆದ ಕೃತಿಗಳಲ್ಲಿ ಮಹಾಭಾರತದ ಪಾತ್ರಗಳೇ ಪ್ರಧಾನವಾಗಿ ಅರಸರ ಚಿತ್ರ ಸ್ಛುಟವಾಗಿ ಮೂಡಿಬರಲಿಲ್ಲ ಲಿಂಗಣ್ಣ ಕವಿಯುಕೆಳದಿನೃಪ ವಿಜಯಗೋವಿಂದ ವೈದ್ಯನಕಂಠೀರವ ನರಸರಾಜ ವಿಜಯಮೊದಲಾದವು ರಾಜಕೀಯ ಸಂಘರ್ಷಗಳನ್ನು ಮಾತ್ರ ಚಿತ್ರಿಸುವುದರಿಂದ ಅಲ್ಲಿ ರಾಜನ ಚಿತ್ರ ಕೈಗೆ ಸಿಗುವುದೇ ಇಲ್ಲ. ನಂಜುಂಡ ಕವಿಯ  ಕುಮಾರರಾಮನ ಸಾಂಗತ್ಯ ಕೃತಿಯು ಒಂದು ಆದರ್ಶಚಿತ್ರವನ್ನು ಕೊಡುತ್ತಿದ್ದರೂ ಅಲೌಕಿಕ ನೆಲೆಯಲ್ಲಿಯೇ ನಿಲ್ಲುತ್ತದೆ. ಇವುಗಳಿಗೆ ಭಿನ್ನವೆಂಬಂತೆ ಲೌಕಿಕ ನೆಲೆಯಲ್ಲಿ ನಿಂತರೂ ಪಾರಲೌಕಿಕ ನೆಲೆಗೆ ತಲುಪಿದ ಉನ್ನತ ವ್ಯಕ್ತಿತ್ವ ಸಂಗತಿಗಳನ್ನು ಮಲ್ಲಿಕಾರ್ಜುನ ಕವಿಯ  ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯದಲ್ಲಿ  ಕಾಣಬಹುದಾಗಿದೆ.

   ಕಥೆಯ ದೃಷ್ಟಿಯಿಂದ ಈ ಸಾಂಗತ್ಯ ಕೃತಿಯು  ರಾಮನಾಥ ಚರಿತೆಯನ್ನು ಹೋಲುವುದಾದರೂ ವೀರ ಮತ್ತು ಧರ್ಮಗಳ ಸಮಾವೇಶದಿಂದ ನಿಂಬಸಾಮಂತ ಚರಿತೆಯ ದೃಷ್ಟಿ ಮತ್ತು ಉದ್ದೇಶಗಳನ್ನು  ಮುಂದುವರಿಕೆಯಾಗಿದೆ ಎಂಬುದು ವಿದ್ವಾಂಸರ ಅಭಿಮತವಾಗಿದೆ. ನಿಂಬ ಸಾಮಂತ ಚರಿತೆಯಲ್ಲಿ ಜೈನ ಆವರಣವಿದ್ದರೆ ಈ ಕೃತಿಯಲ್ಲಿ ವೀರಶೈವ ಪರಿಸರವಿದೆ. ಚಾರಿತ್ರಿಕ ಕಾವ್ಯಗಳು ಸಾಮಾನ್ಯವಾಗಿ ರಾಜಮಹಾರಾಜರ ವಿಷಯವನ್ನೇ ಹೇಳುತ್ತಿದ್ದರೂ. ಸಾಮಂತ ಮಾಂಡಳಿಕ ಪಾಳೆಯಗಾರ ಮೊದಲಾದವರ ಚರಿತ್ರೆಯನ್ನೂ ವಸ್ತುವಾಗಿಸಿಕೊಂಡಿರುವುದು ಒಂದು ಮುಖ್ಯ ಸಂಗತಿ. ಇಂಥ ಪರಂಪರೆಗೆ ಇಮ್ಮಡಿ ಚಿಕ್ಕಭೂಪಾಲ ಸಾಂಗತ್ಯ ಕೃತಿಯು ಸೇರುತ್ತದೆ. ವಿಜಯನಗರ ಅರಸರ ಸಾಮಂತರಾಗಿ ಮಹಾನಾಡ ಪ್ರಭುಗಳು ಎಂಬ ಹೆಸರಿನಲ್ಲಿ ಆಳ್ವಿಕೆ ನಡೆಸಿದ್ದ ಬಿಜ್ಜಾವರದ ಇಮ್ಮಡಿ ಚಿಕ್ಕಭೂಪಾಲ ಮತ್ತು ಅವನ ಮಗ ತೋಂಟದರಾಯನ ಹೋರಾಟದ ವಿವರಗಳು ಮತ್ತು ವೀರ ಮರಣಗಳನ್ನು ಚಿತ್ರಿಸಿದೆ. ಕೃತಿಯ ಮುಖ್ಯ ಐತಿಹಾಸಿಕ ವಿಷಯವು, ಇಮ್ಮಡಿ ವೆಂಕಟಪತಿರಾಯನ ಪೆನುಗೊಂಡೆಯನ್ನು ಹಾವಳಿ ರಣಭೈರೇಗೌಡ ವಶಪಡಿಸಿ ಕೊಂಡುದು ಮತ್ತು ಕಾರಣ ಇಮ್ಮಡಿ ಚಿಕ್ಕ ಭೂಪಾಲ ಅವನೊಡನೆ ಯುದ್ಧಕ್ಕಿಳಿದುದು. ಅಂತಿಮವಾಗಿ ಪೆನಗೊಂಡೆಯನ್ನು ಹಿಂದಕ್ಕೆ ಪಡೆಯಲಾಗದೇ ಹರವೇ ಕಾಳಗದಲ್ಲಿ ಅದು ಮುಕ್ತಾಯ ಪಡೆಯಿತು. ಹರವೆಕೋಟೆಯ ಕಾಳಗವೇ ಕೃತಿಯ ಮುಖ್ಯ ಚಾರಿತ್ರಿಕ ವಿಷಯವಾಗಿದೆ. ಇಬ್ಬರು ಸ್ಥಳೀಯ ಅರಸರ ನಡುವೆ ನಡೆದ ಕದನದಲ್ಲಿ ಚಿಕ್ಕಭೂಪಾಲ ಮತ್ತು ಅವನ ಮಗ ತೋಟೆಂದ್ರ ಮಡಿದು ಚಿಕ್ಕಭೂಪಾಲನ ಇನ್ನೊಬ್ಬ ಮಗ ಸಪ್ಪೇಂದ್ರನು ಆಳ್ವಿಕೆ ನಡೆಸಿದುದೇ ಕೃತಿಯ ನಿರ್ಣಾಯಕ ಹಾಗೂ ಐತಿಹಾಸಿಕ ದಾಖಲಾತಿಯ ವಿಚಾರವಾಗಿದೆ.

    ಈ ಕೃತಿಯು ಕ್ರಿ.. ೧೫೮೯ ಇಲ್ಲವೆ ೧೬೦೭ ರಲ್ಲಿ ಹುಟ್ಟಿರಬೇಕೆಂಬ ನಿಲುವು ಈ ಕೃತಿಯನ್ನು ಸಂಪಾದಿಸಿದ ಸಂಪಾದಕರ ನಿಲುವಾಗಿದೆ. ಹೆಚ್ಚು ಕಡಿಮೆ ಇದು ಚಿಕ್ಕಭೂಪಾಲನ ಆಳ್ವಿಕೆಯ ಕಾಲವೇ ಆಗುತ್ತದೆ. ಕವಿ ರಾಜನ ಸಮಕಾಲೀನ ಆಗಿರುವುದರಿಂದ ಇದು ಸಹಜವೇ. ಇವನು ಸಪ್ಪೇಂದ್ರನ ಆಸ್ಥಾನದಲ್ಲಿಯೂ ಇದ್ದುದರಿಂದ ಇವನು ಸಪ್ಪೇಂದ್ರನ ಅಸ್ಥಾನದಲ್ಲಿಯೂ ಸಮಕಾಲೀನ ಆಗಿರುವುದರಿಂದ, ಕೃತಿಯ ಕಡೆಯಲ್ಲಿ ಸಪ್ಪೇಂದ್ರನ ಆಳ್ವಿಕೆಯ ವಿಚಾರ ಗಳಿರುವುದು ಒಂದು ಗುಣಾತ್ಮಕ ಅಂಶ. ಆದ್ದರಿಂದ ಕವಿ ಮಹಾನಾಡ ಪ್ರಭುಗಳ ರಾಜಧಾನಿಯಾದ ಬಿಜ್ಜಾವರ ಮತ್ತು ಮದ್ದಗಿರಿಗಳೆರಡನ್ನೂ ಕಂಡವನು. ಕವಿ ಮಲ್ಲಿಕಾರ್ಜುನ ತನ್ನ ಕಾವ್ಯವನ್ನು ನವ್ಯಕೃತಿ  (ಸಂ.- .ಸಂ.೫೫) ಎಂದು ಹೇಳಿಕೊಂಡಿರುವುದರಲ್ಲಿ ವಿಶೇಷವೇನೂ ಇಲ್ಲ. ಇತಿಹಾಸವನ್ನು ವಸ್ತುವಾಗಿಸಿಕೊಂಡಿದ್ದರಿಂದ ಹಿಂದಿನ ಕವಿಗಳಂತೆಯೇ ಇವನೂ ಹೇಳಿಕೊಂಡಿದ್ದಾನೆ.  ತನ್ನ ಕಾವ್ಯದ ವಸ್ತು ಏನೆಂಬುದನ್ನು,

ಗುರುಲಿಂಗಜಂಗಮ ಭಕ್ತಯುಕ್ತನು ಬಿಜ್ಜ

ವರದಿರ್ಮಡಿ ಚಿಕ್ಕೇಂದ್ರ

ಪರಬಲದೊಳು ಕಾದಿ ಮೆರೆದಾತ್ಮಜ ಸಹ

ಹರನೊಳೊಂದಿದುದ ನಾನುಸುರ್ವೆಂ (ಸಂ.- .ಸಂ.೫೭)

 ಚಿಕ್ಕಭೂಪಾಲನ ಸದಮಳ ಚಾರುಚರಿತ್ರೆ (ಸಂ.- .ಸಂ.೯೧)

 ಇದು ಬಿಜ್ಜವರದಿರ್ಮಡಿ ಚಿಕ್ಕಭೂಪನ ಸದಮಳ ಚಾರು ಚರಿತ್ರ (ಸಂ.೧೭-.ಸಂ.೯೬) ಎಂದು ಹೇಳಿಕೊಂಡಿರುವುದರಿಂದ ಕೃತಿಯ ಹಸ್ತಪ್ರತಿಯ ಮೇಲೆ ಕಾಳಗದ ವೀರವರ ತೋಂಟದರಾಯನ ಸಾಂಗತ್ಯ ಎಂದು(ಸಂ.-.ಸಂ.೫೬) ಇದ್ದರೂ ಇಮ್ಮಡಿಚಿಕ್ಕಭೂಪಾಲನ ಸಾಂಗತ್ಯ ಎಂಬ ಹೆಸರನ್ನು ಸಂಪಾದಕರು ಇಟ್ಟಿರುವುದು ಸೂಕ್ತವಾಗಿದೆ.

      ಇದು ಪುರಾಣಕಥೆಯಲ್ಲವೆಂಬ ಕಾರಣದಿಂದ ಜನತೆ ನಿರಾಕರಿಸ ಬಹುದು ಎಂಬ ಅನುಮಾನದಿಂದಲೋ ಕವಿಯು ತನ್ನ ಕೃತಿಯು  ಇತಿಹಾಸದ ಕತೆಯೇ ಆದರೂ ಇದೊಂದು ಸದಮಳ ಚಾರು ಚರಿತ್ರೆ ಎಂದು ಒತ್ತುಕೊಟ್ಟು ಹೇಳಿದ್ದಾನೆ. ಅಂದರೆ  ಇದುಚರಿತ್ರವೇ ಆದರೂಚಾರಿತ್ರವೂ ಆಗಿದೆ ಎಂಬುದು ಗಮನಿಸ ಬೇಕಾದ ಸಂಗತಿ.  ಈ ಸಾಂಗತ್ಯ ಕೃತಿಯ ವಸ್ತು ಇಮ್ಮಡಿ ಚಿಕ್ಕಭೂಪಾಲ ಮತ್ತು ಅವನ ಮಗ ತೋಂಟದ ರಾಯರ ಪರಬಲದ ವಿರುದ್ಧ ಹೋರಾಟ ಹಾಗೂ ವೀರಮರಣಗಳನ್ನು ಹೇಳುತ್ತದೆ. ಇವರು ಬಿಜ್ಜಾವರದಿಂದ ಆಳಿದವರು. ಗುರುಲಿಂಗಜಂಗಮ ಭಕ್ತರು. ವೀರಶೈವ ಪ್ರಭುಗಳೆಂದೇ ಖ್ಯಾತರು. ನೊಳಂಬವಂಶಸ್ಥರಾದ ಇವರು ಆಮೇಲೆ ಮಹಾನಾಡ ಪ್ರಭುಗಳೆಂದು ಕೀರ್ತಿತರಾದರು. ನೊಳಂಬ ಸಾಮ್ರಾಜ್ಯ ಒಡೆದು ಒಂದು ಗುಂಪು ಮಾರೇಗೌಡ ಮತ್ತು ಆರುಮಂದಿ ಸೋದರರು ಸೊನ್ನಲಿಗೆಯಲ್ಲಿ ನೆಲೆಸಿದರಂತೆ, ಅಲ್ಲಿ ಸಿದ್ಧರಾಮೇಶ್ವರ ಸ್ವಾಮಿಗಳ ಶಿಷ್ಯರಾದ ಇವರು. ಅವರ ಆದೇಶದಂತೆ ದಕ್ಷಿಣಕ್ಕೆ ಬಂದರೆಂದು ಹೇಳಲಾಗಿದೆ. ವಿಜಯನಗರದ ಸಂಗಮವಂಶದ ಅರಸ ಹರಿಹರ ಇವರಿಗೆ ಕೆಲಸಕೊಟ್ಟನೆಂಬ ಹೇಳಿಕೆ ಬೇರೆ ಮೂಲಗಳಿಂದ ತಿಳಿದು ಬರುತ್ತದೆ. ಮಹಮ್ಮದೀಯ ಸೈನ್ಯವೊಂದನ್ನು ಸೋಲಿಸಿದ್ದಕ್ಕಾಗಿ ಹರಿಹರ ಮುಂದೆ ಊರುಕಟ್ಟಿ ರಾಜ್ಯ ಸ್ಥಾಪಿಸುವ ಇವರಿಗೆ ಮಹಾನಾಡಪ್ರಭು ಎಂಬುದನು ಕೊಡಮಾಡುವುದಾಗಿ ಆಶ್ವಾಸನೆಯಿತ್ತನಂತೆ. ಕ್ರಿ. ೧೩೪೬ ರಲ್ಲಿ ಪ್ರಥಮ ಕೋಟೆಯನ್ನು ಕಟ್ಟಿದ್ದರಿಂದ ಅಲ್ಲಿಂದ ಅವರ ಆಳ್ವಿಕೆ ಆರಂಭವಾಯಿತೆನ್ನಬಹುದು.   ಸಹೋದರರು ಸ್ವತಂತ್ರವಾಗಿ ಆಳಬೇಕೆಂದು ಒಂದೊಂದು ಊರಲ್ಲಿ ನಿಂತರಂತೆ. ಚನ್ನಪ್ಪಗೌಡ ಸಂಗಪ್ಪಗೌಡ ಕಾಳಚನ್ನಪ್ಪಗೌಡ ರಾಮಪ್ಪಗೌಡ ಚಿಕ್ಕಪ್ಪಗೌಡ ಕಾಳಣ್ಣಗೌಡ ಮತ್ತು ಮಾರೇಗೌಡರು ಕ್ರಮವಾಗಿ ತೆರಿಯೂರು ಚೇಳೂರು ಗುಬ್ಬಿ ಹೊಸಳ್ಳಿ ಎಣ್ಣೆಗೆರೆ ಬಿದರೆ (ಗುಬ್ಬಿ ತಾಲ್ಲೂಕು) ಕೋರ ಮತ್ತು ಮುಮ್ಮಡಿ ಪಟ್ಟಣ ಗಳನ್ನು ಕೇಂದ್ರ ಮಾಡಿಕೊಂಡು ಆಳಲು ತೊಡಗಿದರೆಂದು ಹೇಳಲಾಗಿದೆ. ಪ್ರದೇಶಗಳಿಗೆ ಮಹಾನಾಡು ಎಂಬಂದಾಗಿಯೂ ಇಲ್ಲಿ ಅಳಿದವರಿಗೆ ಮಹಾನಾಡ ಪ್ರಭು ಎಂಬುದಾಗಿಯೂ ಹೆಸರಾಯಿತು. ಇವರು ವಿಜಯನಗರದ ರಾಜರಿಗೆ ಅಧೀನರಾಗಿದ್ದರು. ಪರಂಪರೆಯಲ್ಲಿ ಇಮ್ಮಡಿ ಚಿಕ್ಕಭೂಪಾಲ ಮತ್ತು ಅವನ ಮಗ ತೋಂಟದರಾಯರು ಮುಖ್ಯರು. ಇವರ ಜೀವನಕಥೆಯೇ ಇಲ್ಲಿನ ಕೇಂದ್ರ ಬಿಂದು. ಆದಾಗ್ಯೂ ಕೃತಿಪತಿ ಚಿಕ್ಕಭೂವರನು (ಸಂ.- .ಸಂ೮೮) ಇಮ್ಮಡಿ ಚಿಕ್ಕಭೂಪಾಲನ ಚಾರುಚರಿತೆ (ಸಂ.- .ಸಂ.೯೧) ಶಿವಭಕ್ತನ ಚಿಕ್ಕೆಂದ್ರನ ಸದಮಲ ಸತ್ಪುಣ್ಯ ಕಥೆ  (ಸಂ.- .ಸಂ೯೮)) ಎಂಬುದಾಗಿ ಕವಿ ಹೇಳಿಕೊಂಡಿರುವುದರಿಂದ ಮಗನಿಗಿಂತ ತಂದೆಯ ಚರಿತೆಯೇ ಮುಖ್ಯ ವಸ್ತುವಾಗಿರುವಂತೆ ಕಂಡು ಬರುತ್ತದೆ.

   ಇಂಥದೊಂದು ಕಾವ್ಯವನ್ನು ಗುರುಸಿದ್ದ ಮಲ್ಲಿಕಾರ್ಜುನ ಆದೇಶದ ಮೇರೆಗೆ ಹೇಳಿದೆನೆಂದು ಕವಿ ಹೇಳಿಕೊಂಡಿದ್ದಾನೆ. ಇಲ್ಲಿ ಉಲ್ಲೇಖಿತವಾಗಿರುವ ಸಿದ್ಧಮಲ್ಲಿಕಾರ್ಜುನನು  ಚಿಕ್ಕಭೂಪಾಲ ಮತ್ತು ಅವನ ಮಗ ತೋಂಟದರಾಯನ ಗುರುವೆಂದು  ಇತಿಹಾಸದಲ್ಲಿ ಗುರುತಿಸಲಾಗಿದೆ.

    ಮಲ್ಲಿಕಾರ್ಜುನಕವಿಯು ಇಮ್ಮಡಿಚಿಕ್ಕಭೂಪಾಲ ಮತ್ತು ಸಪ್ಪೇಂದ್ರರ ಸಮಕಾಲೀನನೆಂದೂ  ರಾಜಾಶ್ರಿತನೆಂದೂ ಕೃತಿಯ ಆಂತರಿಕ ಸಾಕ್ಷ್ಯದಿಂದ ತಿಳಿದು ಬಂದಿರುವುದರಿಂದ ಈ ಕೃತಿಯಲ್ಲಿ ಚಿತ್ರಿತವಾಗಿರುವ ಘಟನೆಗಳ ಹೆಚ್ಚು ವಾಸ್ತವಿಕತೆಯಿಂದ ಕೂಡಿರಲು ಸಾಧ್ಯವಿದೆ. ಇತಿಹಾಸಕಾವ್ಯ ಬರೆಯಹೊರಟ ಕವಿ ಗಳಿಗೂ ಇತಿಹಾಸದ ಕಾಲಕ್ಕೂ ಬಹಳ ಅಂತರವಿರುವುದನ್ನೇ ನಾವು ಹೆಚ್ಚಿನ ಸಂದರ್ಭದಲ್ಲಿ ಕಾಣುವುದು. ದೃಷ್ಟಿಯಿಂದ ಸಮಕಾಲೀನ ಇತಿಹಾಸಕ್ಕೆ ಕಾವ್ಯದ ಸ್ವರೂಪ ಕೊಡಮಾಡಿರುವ ಮಲ್ಲಿಕಾರ್ಜುನ ಕವಿಯ ಪ್ರಯತ್ನ ಗಣನೀಯವಾದುದ್ದಾಗಿದೆ.  ಈ ಕೃತಿಯನ್ನು ಬರೆಯುವ ಹೊತ್ತಿಗೆ ಕವಿಗೆ ನಂಜುಂಡಕವಿಯ ಕುಮಾರ ರಾಮ ಸಾಂಗತ್ಯದ ಕಂಪಿಲ ಮತ್ತು ಅವನ ಮಗ ಕುಮಾರರಾಮನ ಕಥೆ ಆದರ್ಶವಾಗಿದ್ದಂತೆ ತೋರುತ್ತದೆ. ೧೨ನೆಯ ಸಂಧಿಯ ಆರಂಭದಲ್ಲಿ ಪಾಠಕನೊಬ್ಬ ತೋಟೇಂದ್ರನಿಗೆ ಹೀಗೆ ಹೇಳುತ್ತಾನೆ. “ಪರನಾರಿಯರ ಸೋದರ ರಾಮನಾಥನ ಚರಿತೆಯನಾಲಿಸು (ಸಂ.೧೨- .ಸಂ೩) ಪರಮೆಂಗಳ ಸೋದರ ರಾಮನ ಚರಿತೆ ವೇದ ಸಮಾನ” (ಸಂ.- .ಸಂ೪) ಮಾತುಗಳಿಂದ ಕವಿ ರಾಮನಾಥನ ಚರಿತೆ ಮಾದರಿಯಲ್ಲಿ ತನ್ನ ಕೃತಿಯನ್ನು ರಚಿಸಿರುವಂತೆ ಕಂಡು ಬರುತ್ತದೆ. ಜೊತೆಗೆ ಕುಮಾರರಾಮನ ಹಾಗೆ ಇಲ್ಲಿ ತೋಟೆಂದ್ರನನ್ನು ಕವಿಯು ಕಲ್ಪಿಸಿ ಕೊಂಡಿದ್ದಾನೆ. ಕುಮಾರ ರಾಮ ಪರನಾರಿಸೋದರನಾದರೆ, ತೋಟೆಂದ್ರ ಪರವನಿತಾರತಿಗೆಳೆಸುವ ಧರಣೀಶ್ವರರಿಗೆ ಗಂಡ, ಹೀಗೆ ಕವಿ ರಾಮನಾಥನಲ್ಲಿ ತೋಟೇಂದ್ರನನ್ನು, ಕಂಪಿಲನಲ್ಲಿ ಚಿಕ್ಕಭೂಪಾಲನ ಸಾಮ್ಯ ಕಂಡಿರುವಂತಿದೆ. ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನಕವಿಯ ಈ ಕೃತಿ ರಚನೆಯಲ್ಲಿ ನಂಜುಂಡ ಕವಿಯ ರಾಮನಾಥ ಚರಿತದ ಪ್ರಭಾವನ್ನು ಸ್ವಲ್ಪ ಮಟ್ಟಿಗೆ ಗುರುತಿಸ ಬಹುದಾಗಿದೆ.

ಮುಂದೆ ಬಿಜ್ಜಾವರ ಪಟ್ಟಣಕ್ಕೆ ಅಧಿಪತಿಯಾದ ಚಿಕ್ಕಭೂಪ ಮತ್ತು  ಆತನ ಸತಿ ಸೋಮಾಂಬೆಯ ಪ್ರಸ್ತಾಪವಿದೆ. ಕರಿತಿಮ್ಮ ಚಿಕ್ಕಪ್ಪಗೌಡನೇ ಇಲ್ಲಿನ ಚಿಕ್ಕಭೂಪ ಈತನ ಸಾಹಸವನ್ನು ಇದೇ ಕೃತಿಯ ಹನ್ನೆರಡನೆಯ ಸಂಧಿಯಲ್ಲಿ (ಸಂ.2-.ಸಂ.100,೧೦೧,) ಕೊಡಲಾಗಿದೆ. ಯುದ್ಧಕ್ಕೆ ತಾನೇ ಹೊರಡಬೇಕೆಂದು ಹಟವಿಡಿದ ತೋಟೇಂದ್ರನ ಮಾತುಗಳಲ್ಲಿ ಇದರ ವಿವರಗಳಿವೆ.

 ಮುತ್ತಯ್ಯ ಮುಮ್ಮಡಿ ಕರಿತಿಮ್ಮ ಚಿಕ್ಕಭೂ

ಪೋತ್ತಮರಾದಿಯಾದವರು

ಚಿತ್ತವ ಪಡೆದು ರಾಯರುಗಳ ಮನ್ನಣೆ

ವೆತ್ತರಿಬಿರುದ ತಾಳಿದರು

ಕರಿತಿಮ್ಮ ಚಿಕ್ಕೇಂದ್ರ ಸಾಹಸದೆಸಕದೊ

ಳಿರದೆಮ್ಮ ರಾಯರೊಲ್ಮೆಯನು

ಭರದಿಂದ ಪಡೆದು ಸಂತಸವೆತ್ತುದನೀ

ಧರೆ ಬಣ್ಣಿಸುತಿದೆ ಬಿಡದೆ

    ಕರಿತಿಮ್ಮ ಚಿಕ್ಕಭೂಪಾಲ ತನ್ನ ಸಾಹಸಕಾರ್ಯಗಳಿಂದ ರಾಯರ ಪ್ರೀತಿ ಪಡೆದ ವಿಚಾರ ಪದ್ಯಗಳಲ್ಲಿದೆ. ಇಲ್ಲಿಯರಾಯರುವಿಜಯನಗರದ ಅರಸರಾದ  ತಿರುಮಲರಾಯ ಮತ್ತು ಶ್ರೀರಂಗರಾಯರೇ ಆಗಿದ್ದಾರೆ. ಕರಿತಿಮ್ಮ ಚಿಕ್ಕಭೂಪಮುಮ್ಮಡಿ ಪಟ್ಟಣವನ್ನು ರಾಜಧಾನಿ ಮಾಡಿಕೊಂಡು ಆಳಿದವರಲ್ಲಿ ಐದನೇ ತಲೆಯವನು. ಇವನ ಹಿಂದೆ ಮಾರೇಗೌಡ ವೀರೇಗೌಡ ದೊಡ್ಡಗೌಡ ಮತ್ತು ಹಿರೇಚಿಕ್ಕಪ್ಪಗೌಡ ಇದ್ದಾರೆ. ದೊಡ್ಡಗೌಡರ ಕಾಲದಲ್ಲಿ ಬಿಜಾಪುರದ ನವಾಬರಿಂದ ಮುಮ್ಮಡಿ ಪಟ್ಟಣ ನಾಶವಾಯಿತು. ಹಿರೇಚಿಕ್ಕಪ್ಪಗೌಡ ಕಳೆದುಳಿದ ಪಟ್ಟಣವನ್ನು ಸರಿಪಡಿಸಿದ್ದಲ್ಲದೆ, ಬಿಜ್ಜಾಮಹಾದೇವಿಯ ಆದೇಶದಂತೆ ರಾಜ್ಯ ನಿರ್ಮಿಸಲು ಉದ್ಯುಕ್ತನಾಗಿ ಬಿಜ್ಜಾವರ ಕೋಟೆ ಕೊತ್ತಳಗಳನ್ನು ಕಟ್ಟಿಸಿದನಂತೆ. ಇದು ವಿಜಯನಗರದ ಅರಸು ಕೃಷ್ಣರಾಯನ ಕಾಲಕ್ಕೆ (೧೫೦೮-೧೫೨೯) ಸಂಬಂಧಿಸಿದ್ದೆಂದು ಹೇಳಲಾಗಿದೆ. ಮುಂದೆ ಬಿಜ್ಜಾವರವೇ  ರಾಜಧಾನಿಯಾಗಿ ಪರಿಣಮಿಸಿದ್ದನ್ನು ಕಾಣುತ್ತೇವೆ. ಇದಲ್ಲದೆ ಇವನ ನಂತರ ಮುಂದಿನ ವಂಶಸ್ಥರಿಗೆಲ್ಲ ಚಿಕ್ಕಪ್ಪಗೌಡ ಎಂದೇ ಹೆಸರಾಯಿತಂತೆ ಹಿರೇಚಿಕ್ಕಪ್ಪಗೌಡರ  ನಂತರ ಅವನ ಮಗನಾದ ಕರಿತಿಮ್ಮ ಚಿಕ್ಕಪ್ಪಗೌಡ ರಾಜನಾದನು. ಕರಿತಿಮ್ಮ ಚಿಕ್ಕಭೂಪಾಲನ ಸಾಹಸಕಾರ್ಯಗಳಲ್ಲಿ ವಿಜಯನಗರದ ಅರಸರನ್ನು ಮೆಚ್ಚಿಸಿದ ಎರಡು ಕಾರ್ಯಗಳು ಮುಖ್ಯವಾಗಿದೆ. ತಿರುಮಲರಾಯನ ಆದೇಶದಂತೆ  ಸ್ವತಂತ್ರರಾಗುತ್ತಿದ್ದ ಅನೇಕ ಪಾಳೆಯಗಾರರನ್ನು ಗೆದ್ದದ್ದು ಒಂದು : ಶ್ರೀರಂಗರಾಯರು ಪೆನುಗೊಂಡೆಯಲ್ಲಿ ಆಳುತ್ತಿದ್ದಾಗ (ಕ್ರಿ. ೧೫೭೭) ಮುತ್ತಿಗೆ ಹಾಕಿದ ಮುಸಲ್ಮಾನ ಸೈನ್ಯವನ್ನು ಜಗದೇಕರಾಯರು ಜೊತೆಗೂಡಿ ಹಿಮ್ಮೆಟ್ಟುವಂತೆ ಮಾಡಿದ್ದು ಎರಡನೆಯದು.( ಕೆ.ನಾರಾಯಣಾಚಾರ್ಯ, ಮಧುಗಿರಿ ಚರಿತ್ರೆ, ಪು.೧೩-೧೪)  ಇಂತಹ ಮನ್ನಣೆ ಪಡದು  ಕೀರ್ತಿಶಾಲಿಯಾದ ವಿಜಯನಗರದ ರಾಜರಿಗೆ ನೆರವಾಗಿ ನಡೆದುಕೊಳ್ಳುವ ಪರಂಪರೆಯಲ್ಲಿಯೇ ಬಂದವನು ಪ್ರಸ್ತುತ ಕೃತಿಯ ಕಥಾನಾಯಕ ಇಮ್ಮಡಿ ಚಿಕ್ಕಭೂಪಾಲ.

   ಕರಿತಿಮ್ಮ ಚಿಕ್ಕಪ್ಪಗೌಡ ಮತ್ತು ಸೋಮಾಂಬೆಯರ ಪುತ್ರನಾದ ಇಮ್ಮಡಿ ಚಿಕ್ಕಪ್ಪಗೌಡನು ತೋಂಟದ ಸಿದ್ದೇಶನ ವರಪ್ರಸಾದದಿಂದ ಜನಸಿದವನೆಂದು ಕವಿ ಹೇಳುತ್ತಾನೆ.  ಈತನು ಧರ್ಮವೀರನೂ ಯುದ್ದ  ವೀರನೂ ಆಗಿದ್ದನೆಂದು ಕವಿಯ ವರ್ಣನೆ. ಚಿಕ್ಕ ಭೂಪಾಲನ ಅಣತಿಯಿಲ್ಲದೆ ಯಾವುದೂ ನಡೆಯುತ್ತಿರಲಿಲ್ಲವೆಂದು ಕವಿಯ ಅಭಿಪ್ರಾಯ ಅಷ್ಟರಮಟ್ಟಿಗೆ ದೊರೆಯ ವ್ಯಕ್ತಿತ್ವ ಆವರಿಸಿಕೊಂಡಿತ್ತೆಂದು ಅರ್ಥ. ಇಂಥ ಚಿಕ್ಕಭೂಪಾಲ ಕೈಗೊಂಡ ಮೂರು ಯುದ್ಧ ಪ್ರಸಂಗಗಳನ್ನು ಕವಿ ಕೊಟ್ಟಿದ್ದಾನೆ. (ಸಂ.- .ಸಂ.೩೭,೩೮,೩೯)

 ಶಂಕೆಯಿಲ್ಲದೆ ಜಗದೇಕರಾಯರ ಕೂಡೆ

ತಾ ಕೈಕೊಂಡು ಕಾಳಗದ

ವೆಂಕಟಪತಿರಾಯರ ಮೆಚ್ಚಿಸಿದ ನಿ

ಶ್ಯಂಕ ನಿರ್ಮಡಿ ಚಿಕ್ಕೇಂದ್ರ

ಅಳಿಯ ಎಲ್ಲೇಂದ್ರನ ದಳವನೆಲ್ಲವ ಕೊಳು

ಗುಳದೊಳಗೊಂದೆ ತೇಜಿಯೊಳು

ಹಳದಿಯ ಬಿರುದಾಂಕನಿರ್ಮಡಿಚಿಕ್ಕನು

ತುಳಿಸಿದನಿಳೆ ಮೆಚ್ಚುವಂತೆ

ಕಡುಗಲಿ ಹಾವಳಿ ಭೈರಭೂಪಾಲನ

ಗಡಿದುರ್ಗವಾಗಿ ಮೋಹಿಸುವ

ಮಿಡಿಗೇಶಿಯ ಲೀಲಾಮಾತ್ರದಿ ಕೊಂಡ

ಒಡೆಗೆರೆಮಲ್ಲನೃಪನು

 ಮೊದಲನೆಯದರಲ್ಲಿ ಜಗದೇಕರಾಯರು ಕೂಡ ಕೈಕೊಂಡ ಕಾಳಗ ಮತ್ತು ವೆಂಕಟಪತಿ ರಾಯರನ್ನು ಮೆಚ್ಚಿಸಿದ ವಿಷಯ-ಹೀಗೆ ಎರಡು ಘಟನೆಗಳಿವೆ. ಜಗದೇಕರಾಯ ಚನ್ನಪಟ್ಟಣದಲ್ಲಿ ಆಳುತ್ತಿದ್ದ ವಿಜಯನಗರದ ಪ್ರತಿನಿಧಿ. ವಿಜಯನಗರದ ಅರಸು ಶ್ರೀರಂಗರಾಯರ ಅಳಿಯ. ಇಲ್ಲಿ ಉಲ್ಲೇಖಿತನಾಗಿರುವ ವೆಂಕಟಪತಿರಾಯ ವೀರವೆಂಕಟಪತಿರಾಯ ಅಥವಾ ಇಮ್ಮಡಿ ವೆಂಕಟಪತಿರಾಯನೆಂದು ಹೆಸರಾದವನು. ತಿರುಮಲರಾಯರು ಮೂರನೆಯ ಮಗ ಶ್ರೀರಂಗರಾಯನ ಕಿರಿಯ ಸೋದರ :  ಪೆನುಗೊಂಡೆಯನ್ನು ರಾಜಧಾನಿ ಮಾಡಿಕೊಂಡು ಆಳಿದ ವಿಜಯನಗರದ ಪ್ರಸಿದ್ದ ದೊರೆ ಇವನು ಕ್ರಿ.. ೧೫೮೬ ರಿಂದ ೧೯೧೪ ರವಗೆಗೆ ರಾಜ್ಯವಾಳಿದನೆಂದು ಇತಿಹಾಸದಿಂದ ತಿಳಿದು ಬರುತ್ತದೆ.

     ಇಮ್ಮಡಿ ಚಿಕ್ಕಪ್ಪಗೌಡರು ಜಗದೇಕರಾಯನೊಡನೆ ಕಾಳಗ ಮಾಡಿದ ವಿವರ ಈ ಕೃತಿಯಲ್ಲಿದ್ದು ವೆಂಕಟಪತಿರಾಯರಿಗೆ  ನೇರವಾಗಿ ಸಂಬಂಧಿಸಿರುವುದು ಮಹತ್ವದ ಅಂಶವಾಗಿದೆ. ಇಮ್ಮಡಿ ಚಿಕ್ಕಪ್ಪಗೌಡರು ವೆಂಕಟಪತಿರಾಯರ ಎಪ್ಪತ್ತೇಳು ಮಂದಿ ಪಾಳೆಯಗಾರರಲ್ಲಿ ಒಬ್ಬರು. ಚಿಕ್ಕಪ್ಪಗೌಡ ವಿಜಯನಗರದ ಅರಸರ ಅಧೀನ ರಾಗಿದ್ದರೂ ರಾಜ್ಯಾಡಳಿತದಲ್ಲಿ ಸ್ವತಂತ್ರರಾಗಿದ್ದರು. ತಮ್ಮ ಅನುಮತಿಯಿಲ್ಲದೆ ಕೋಟೆಕೊತ್ತಲಗಳನ್ನು ಕಟ್ಟಿಸುತ್ತ ಗಡಿದುರ್ಗಗಳನ್ನು ಭದ್ರಪಡಿಸುತ್ತಿದ್ದ ಚಿಕ್ಕಪ್ಪಗೌಡರನ್ನು ಅಸ್ಥಾನಕ್ಕೆ ಬರುವಂತೆ ವೆಂಕಟಪತಿರಾಯರು ತಿಳಿಸಿದರು. ಮಧ್ಯೆ ಚಿಕ್ಕಪ್ಪಗೌಡರಿಗೆ ಆಗದವರು ದೊರೆಯಲ್ಲಿ ದೂರುಕೊಟ್ಟಿದ್ದರು. ಹಿನ್ನಲೆಯಲ್ಲಿ ತಾವು ಹೋದರೆ ಏನು ಮಾಡುತ್ತಾರೊ ಎಂಬ ಭಾವನೆಯಿಂದ ಚಿಕ್ಕಭೂಪಾಲ ಅಸ್ಥಾನಕ್ಕೆ ಹೋಗಲಿಲ್ಲ. ನಿಜಾಂಶವನ್ನು ತಿಳಿಯದ ವೆಂಕಟಪತಿರಾಯರು ಚಿಕ್ಕಪ್ಪಗೌಡರ  ಮೇಲೆ ಏರಿಹೋಗುವಂತೆ ಜಗದೇಕರಾಯರನ್ನು ಕಳುಹಿಸಿದರು. ಇದನ್ನು ತಿಳಿದ ಚಿಕ್ಕಪ್ಪಗೌಡರು ಶರಣಾಗತ ಭಾವನೆಯನ್ನು ತೊರೆದು ಜಗದೇಕರಾಯರನ್ನು ಯುದ್ದದಲ್ಲಿ ಎದುರಿಸಿದರು. ಯುದ್ದದಲ್ಲಿ ಜಗದೇಕರಾಯ ಸೋತು ಹಿಮ್ಮೆಟ್ಟಬೇಕಾಯಿತು. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಚಿಕ್ಕಪ್ಪಗೌಡ ಜಗದೇಕರಾಯನೊಡನೆ ಸೆಣಸಬೇಕಾಯಿತು. ವಾಸ್ತವವಾಗಿ ಇದು ಜಗದೇಕರಾಯ ಅಥವಾ ವೆಂಕಟಪತಿರಾಯರೊಡನೆ ಇದ್ದ ವೈರದಿಂದ ಸಂಭವಿಸಿದ್ದಲ್ಲ. ಪರಿಸ್ಥಿತಿಯನ್ನು ವಿಧಿಯಿಲ್ಲದೆ ಎದುರಿಸಬೇಕಾಗಿ ಬಂದುದರಿಂದ ಅದದ್ದು ಇದರಿಂದ ಚಿಕ್ಕಪ್ಪಗೌಡರ ವ್ಯಕ್ತಿತ್ವ ಮತ್ತಷ್ಟು ಉಜ್ವಲವಾಯಿತು.

   ಇನ್ನು ವೆಂಕಟಪತಿರಾಯನನ್ನು ಮೆಚ್ಚಿಸಿದ ವಿಷಯ ಮೇಲಿನ ಘಟನೆಯ ಮುಂದುವರಿಕೆ ಅಷ್ಟೇ ಜಗದೇಕರಾಯ ಸೋತು ಬಂದುದನ್ನು ನೋಡಿ ವೆಂಕಟರಾಯರೇ ಚಿಕ್ಕಪ್ಪಗೌಡರ ಮೇಲೆ ದಂಡೆತ್ತಿ ಬಂದರು. ಈಗ ಚಿಕ್ಕಪ್ಪಗೌಡರು ಯುದ್ದಕ್ಕೆ ಇಳಿಯದೆ ಸ್ವಾಮಿಯನ್ನು ಮೆಚ್ಚಿಸಲು ಹೊಸ ಯೋಜನೆಯನ್ನು  ಹೂಡಿದರು. ಗಾಢನಿದ್ದೆಯಲ್ಲಿದ್ದ ವೆಂಕಟಪತಿರಾಯರನ್ನು ಕೆಲವು ಭಂಟರ ಸಹಾಯದಿಂದ ಮಂಚ ಸಹಿತವಾಗಿ ಮದ್ದಗಿರಿಯ ಗೋಪಾಲಕೃಷ್ಣ ದೇವಾಲಯದ ಈಗಾಗಲೇ ಸಿದ್ಧಪಡಿಸಿದ ಸ್ಥಳಕ್ಕೆ ತರಲಾಯಿತು. ಬೆಳಗಾಗುತ್ತಲೂ ರಾಜೋಚಿತ ಮುರ್ಯಾದೆಗಳೊಡನೆ ಚಿಕ್ಕಪ್ಪಗೌಡರು ಭೇಟಿಯಾದರು. ವೆಂಕಟಪತಿರಾಯರು ಕರೆದಾಗ ದರಬಾರಿಗೆ ಬರದಿದ್ದುದಕ್ಕೆ ಕಾರಣವನ್ನು ವಿವರಿಸಿ. ತಾನು ಸ್ವಾಮಿದ್ರೋಹಿಯಲ್ಲವೆಂಬುದನ್ನು ವಿವರಿಸಿದರು. ವಿವರಗಳನ್ನೆಲ್ಲ ತಿಳಿದ ವೆಂಕಟಪತಿರಾಯರು ಚಿಕ್ಕಪ್ಪಗೌಡರ ಶೌರ್ಯ ಸಾಹಸ ಸ್ವಾಮಿಭಕ್ತಿಗೆ ಮೆಚ್ಚಿರಾಜಾಎಂಬ ಬಿರುದನಿತ್ತನೆಂದು ಹೇಳಲಾಗಿದೆ. ( ಕೆ.ನಾರಾಯಣಾಚಾರ್ಯ, ಮಧುಗಿರಿ ಚರಿತ್ರೆ, ಪು.೨೫-೨೮) ಆದ್ದರಿಂದ ತಮ್ಮ ವಂಶಸ್ಥರ ಹಾಗೆ ಚಿಕ್ಕಪ್ಪಗೌಡರೂ ವಿಜಯನಗರದ ಅರಸರಿಗೆ ತುಂಬ ನಿಷ್ಠೆಯಿಂದ ನಡೆದುಕೊಂಡಿದ್ದರೆಂಬ ವಿಷಯ ಪ್ರಕರಣದಿಂದ ವೇದ್ಯವಾಗುತ್ತದೆ.

 ಎರಡನೆಯ ಪದ್ಯದಲ್ಲಿನ ಅಳಿಯ ಎಲ್ಲೇಂದ್ರ ಯಾರೊ ತಿಳಿಯದು ಹೆಸರು ಅಳಿಯ ರಾಮರಾಯ ಇದ್ದ ಹಾಗೆ ಇದೆ. ಅಳಿಯ ಎಲ್ಲೇಂದ್ರನ ಸೈನ್ಯವನ್ನು  ಯುದ್ಧದಲ್ಲಿ ಗೆದ್ದ ಚಿಕ್ಕಪ್ಪ ಗೌಡರ ದಿಗ್ವಿಜಯದ ವಿವರಗಳನ್ನು ಇತಿಹಾಸದಲ್ಲಿ ಗುರುತಿಸಲು ಸಾಧ್ಯವಾಗುತ್ತಿಲ್ಲ.

  ಹಾವಳಿ ಭೈರಭೂಪಾಲನ ಗಡಿದುರ್ಗವಾದ ಮಿಡಿಗೇಶಿಯನ್ನು ಚಿಕ್ಕಪ್ಪಗೌಡ ಕೈಕೊಂಡು ಘಟನೆಯನ್ನು ಹೇಳುವ ಮೂರನೆಯ ಪದ್ಯ ಸಂಧಿಗ್ಧವಾಗಿದೆ. ಮುಂದೆ ಹರವೆ ಕೋಟೆಯ ಕಾಳಗದ ಸಂದರ್ಭದಲ್ಲಿ ಹಾವಳಿ ಭೈರಭೂಪಾಲ ಸಂಧಾನಕ್ಕಾಗಿ ತನ್ನ ಜನರನ್ನು  ಕಳುಹಿಸಿದಾಗ ಚಿಕ್ಕಪ್ಪಗೌಡರು ಕಟ್ಟಿಕೊಂಡಾಳುತಿರ್ದಾ ಮಿಡಿಗೇಶಿಯರ ಕೊಟ್ಟನೆ ಭೈರೇಂದ್ರನೆನಗೆ” (ಸಂ.೧೪-.ಸಂ.೨೨) ಎಂದು ವಿವರವಿದೆ. ಇದರ ಪ್ರಕಾರ ಹಾವಳಿ ಭೈರಭೂಪಾಲನೇ ಮಿಡಿಗೇಶಿಯನ್ನು ವಶಪಡಿಕೊಂಡಿದ್ದನೆಂದೂ ಅದನ್ನು ಮರಳಿ ಪಡೆಯಲು ಚಿಕ್ಕಪ್ಪಗೌಡರು ಉತ್ಸುಕರಾಗಿದ್ದರೆಂದೂ  ತಿಳಿದು ಬರುತ್ತದೆ. ಆದರೂ ಇದರ ಹಿನ್ನಲೆಯನ್ನು ವಿವರಿಸುವುದು ಸೂಕ್ತ. ಚಿಕ್ಕಪ್ಪಗೌಡರ ಕಾಲದಲ್ಲಿ ಮಿಡಿಗೇಶಿಯನ್ನು ನಾಗರೆಡ್ಡಿ ಎಂಬ ಪಾಳೆಯಗಾರರು ಆಳುತ್ತಿದ್ದು, ಒಮ್ಮೆ ಇಬ್ಬರು ಗಡಿಯಲ್ಲಿ ಭೇಟಿಯಾದರು. ಸ್ನೇಹದ ಸಂಕೇತವಾಗಿ ತಮ್ಮ ಆಳುಗಳನ್ನು ವಿನಿಮಯ ಮಾಡಿ ಕೊಳ್ಳುತ್ತಾರೆ.  ನಾಗಿರೆಡ್ಡಿ ಅರಮನೆಗೆ ಹಿಂದಿರುಗಿದ ಮೇಲೆನೊಣಬ ಕೈ ಮುಟ್ಟಿದ್ದಾನೆ.-ಕೈ ತೊಳೆಯಬೇಕು-ನೀರು ತಾ: ಎಂದು ಹೆಂಡತಿಗೆ ಹೇಳಿದನಂತೆ, ತನ್ನ ಆಳುಗಳ ಮೂಲಕ ಮಾತುಗಳನ್ನು ತಿಳಿದ ಚಿಕ್ಕಪ್ಪಗೌಡರು ಮಿಡಿಗೇಶಿಯನ್ನು  ಮುತ್ತಿದರು. ಸೆರೆಯಾದ ನಾಗಿರೆಡ್ಡಿಯನ್ನು ಕುದಿಯುವ ನೀರನ್ನು ತಲೆಯ ಮೇಲೆ ಸುರಿದು ಕೊಲ್ಲಲಾಯಿತು. ( ಕೆ.ನಾರಾಯಣಾಚಾರ್ಯ, ಮಧುಗಿರಿ ಚರಿತ್ರೆ, ಪು.೨೩-೨೪)  ಮಿಡಿಗೇಶಿಯನ್ನು ಚಿಕ್ಕಪ್ಪಗೌಡ ವಶಪಡಿಸಿಕೊಂಡುದಕ್ಕೆ ಇರುವ ಕಾರಣ ಇದು. ಮುಂದೆ ಹೊಳವನಹಳ್ಳಿಯ ರಣಭೈರೇಗೌಡನಿಗೂ ಚಿಕ್ಕಪ್ಪಗೌಡನಿಗೂ ಯುದ್ದ ಸಂಭವಿಸಿದಾಗ ಸಮಯ ಕಾಯುತ್ತಿದ್ದ ಚಿಕ್ಕಬಳ್ಳಾಪುರದ ನಾಡ ಪ್ರಭುಗಳಲ್ಲಿ ಅಣ್ಣೇಗೌಡನ ಮಗ ಹಾವಳಿ ಭೈರೆಗೌಡನು ಮಿಡಿಗೇಶಿಯನ್ನು ಹಿಡಿದನು. ಚಿಕ್ಕಪ್ಪಗೌಡನಿಂದ ಹಾವಳಿಭೈರಭೂಪಾಲ ಮಿಡಿಗೇಶಿಯನ್ನು ಹೇಗೆ ಸೆಳೆದುಕೊಂಡ ಎಂಬ ವಿಚಾರವನ್ನು ಇದು  ಹೇಳುತ್ತದೆ. ಹರವೆಕೋಟೆ ಕಾಳಗದ ಸಂದರ್ಭದಲ್ಲಿ ಉಕ್ತವಾಗಿರುವ ಕೃತಿಯ  ಹೇಳಿಕೆ ಇದನ್ನು ಸಮರ್ಥಿಸುತ್ತದೆ. ಚಿಕ್ಕಪ್ಪಗೌಡ ಇದನ್ನು ಮತ್ತೆ ಪಡೆದ ಬಗೆಗೆ ಯಾವುದೇ ವಿವರಗಳು ಲಭ್ಯವಿಲ್ಲ.

       ಸಿದ್ಧಮಲ್ಲಿಕಾರ್ಜುನರು ಬಿಜ್ಜಾವರ-ಮಧುಗಿರಿ ಮಹಾನಾಡ ಪ್ರಭುಗಳಿಂದ ಇಮ್ಮಡಿ ಚಿಕ್ಕಭೂಪಾಲ ಮತ್ತು ಅದೇ ವಂಶದ ಉತ್ತರಾಧಿಕಾರಿಯಾಗಿ ಸಿಂಹಾಸನವೇರದೆ ಹರವೆ ಕಾಳಗದಲ್ಲಿ ಹೋರಾಡಿ ವೀರಸ್ವರ್ಗವೇರಿದ  ಯುವರಾಜ ತೋಂಟದ ರಾಯರೀರ್ವರಿಗೂ ರಾಜಗುರುಗಳು ಆಗಿದ್ದರು ಎಂಬುದು ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ ಕೃತಿಯಲ್ಲಿ ತಿಳಿದು ಬರುತ್ತದೆ. ಆತನು ಗುರುರಾಯನು, ಜಿತಮಾಯನು, ಭೂತೇಶ ಭಕ್ತಿ ಸಹಾಯ ನೀತಿ ಸಮೇತ ವಿಧೇಯನು, ಚರಲಿಂಗ ಚರಣ ಸರೋರುಹ ಭೃಂಗನು……. ಚರಲಿಂಗ ಭಕ್ತಿ ಕಳತ್ರ ಶೀಲಾನ್ವಿತ ಗುರುಪವಾಡದೇವ ಪಾತ್ರ (?) (ಪೌತ್ರ) ಸತ್ಯನು,ಹರಮಂತ್ರ ಶೋಭಿ ಜಿಹ್ವನಿರುತ ನಿರ್ಮಲ ಕೀರ್ತಿ ಪೂರಿತ ತ್ರಿಭುವನ ಸಿದ್ಧಮಲ್ಲಿಕಾರ್ಜುನನು ಎಂಬ ಉಲ್ಲೇಖವಿದೆ. ಪರಮ ಲಿಂಗಾಂಗ ಸಂಗ ಅನುಭಾವ ಶಿವಶರಣರೊಳನುಭಾವಿಸುತೆ ಗುರುಸಿದ್ಧಮಲ್ಲಿಕಾರ್ಜುನನೊಪ್ಪಿ ತಾನಿರುತಿರೆ ಬಂದು ಕಂಡನಾ ಕುವರನು, ಸಿದ್ಧ ಮಲ್ಲಿಕಾರ್ಜುನ ದೇವ ನಿನ್ನ ಶ್ರೀ ಚರಣದೊಳಿಂಬುಗೊಡು ಎಂದು ಭಿನ್ನವಿಸಿಕೊಳ್ಳುವ ಉಲ್ಲೇಖಗಳಿಂದ ತಿಳಿದು ಬರುತ್ತದೆ.  ಸಿದ್ಧಮಲ್ಲಿಕಾರ್ಜುನರು ಯುವರಾಜ ತೋಂಟದರಾಯನಿಗೆ ನೀತಿ ಬೋಧೆ ಮತ್ತು ರಾಜನೀತಿಯನ್ನು ಬೋಧಿಸುವ ಪ್ರಸಂಗವು ಕೃತಿಯು ಏಳನೆಯ ಸಂಧಿಯಲ್ಲಿ ಸವಿವರವಾಗಿ ನಿರೂಪಿತವಾಗಿದೆ. ಗುರುವನ್ನು ಕುರಿತು ಯುವರಾಜನು ಬಿಡಬೇಕಾದುದಾವುದನದ ಬಿಡಿಸುತೆ, ಪಿಡಿಯ ಬೇಕಾದ್ದು ಪಿಡಿಸಿ, ನಡೆಯಬೇಕಾದ ಧರ್ಮದೊಳೆನ್ನನು ಮುನ್ನಡೆಸಿ ರಕ್ಷಿಸಬೇಕೆಂದು ಪ್ರಾರ್ಥಿಸಿದಾಗ ರಾಜಗುರುಗಳ ನಿನ್ನ ಪರಿವರ್ತನೆ ವಿಕರಿಸಿತು. ಜೂಜು ಬೇಂಟೆಗಳಾದಿಯಾದ  ದುರ್ವ್ಯಸನಗಳು, ಶಿವಪಥದಲ್ಲಿ ನಡೆಯುವವರಿಗೆ ಉಚಿತವಿಲ್ಲ ಎಂದು ದುರ್ವ್ಯಸನಗಳು ವರ್ಜಿತನದ  ಬಗೆಗೆ, ನೋವು ಸಮಾನವಖಿಲ ಜೀವಜಾಲಕೆ, ನಾವು ಸಮಾನವೆಂಬುದನು ಭಾವಿಸಿಯವನು ತನ್ನಂತೆ ಕಾಣೆದೆ ಕೊಲ್ಲಬಹುದೇ ಎಂಬ ಬೇಂಟೆಯ ವರ್ಜಿತ ಮತ್ತು ಪ್ರಾಣಿದಯೆಯ ಬಗೆಗೆ,ಕೊಲ್ಲದಿರ್ಪುದೆ ಧರ್ಮಎಂಬುದು ಶಿವಧರ್ಮದ ಸೂತ್ರವಾಗಿದೆ ಎಂಬ ಹಿಂಸಾ ನಿರಸನದ ಬುದ್ದಿಯ ಬಗೆಗೆ ಬಸವಾದಿ ಪ್ರಮಥರು ಬಾಳಿ ಅನುಸರಿಸಿದ ಶಿವಭಕ್ತಿ ಮಾರ್ಗದಲ್ಲಿ ನಡೆಯುವ ಪರಿಯನ್ನು, ಹುಸಿಯ ನಾಡುವವನೆ ಹೊಲೆಯನು, ದಯವೇ ಧರ್ಮದ ಮೊತ್ತಮೊದಲ್ ಇಂದ್ರಿಯಂಗಳ ಜಯವೇ ಪರಮ ನಿಜ ಸುಖವು  ಇತ್ಯಾದಿ ಶಿವಧರ್ಮದ ಮಹತ್ವದ ಬಗೆಗೆ ಅರುಹುತ್ತಾರೆ. ಜೊತೆಗೆ ಅರಸರಾದವರು ಅಗತ್ಯವಾಗಿ  ಅನುಸರಿಸ ಬೇಕಾದ ಅವಶ್ಯಕ ರಾಜನೀತಿಗಳ ಬಗೆಗೆ ಸುದೀರ್ಘವಾಗಿ ತಿಳಿಸುತ್ತಾರೆ. 1.ಸಂಧಿ ವಿಗ್ರಹಯಾನಾಸನದ್ವೈದಾಶ್ರಯವೆಂಬ ವಿನುತ ಷಡ್ಗುಣಯುತವಾಗಿವರ್ತಿಪುದಿದು ಜನಪತಿಗೆ ಜೀವಾಳ. . ನೃಪನು ನಿಯತೋಪಾಯ ಚತುಷ್ಟಯ ಶಕ್ತಿತ್ರಯ ತಂತ್ರ, ಪಂಚಕವೆಂಬ ಜಯವೊದವಿದ   ವರ್ಗತ್ರಯದಿಂದ ನಿರ್ಭಯನಾಗಿರಬೇಕು () ಚತುರಂಗ ಬಲ ಸಪ್ತಾಂಗ ಸಂಭಾವಿ ಶ್ರುತರಾಜ್ಯ ಸಪ್ತಾಂಗವೆರಸಿ ಕ್ಷಿತಿಯನಾಳುತೆ ಪೂರ್ಣ ಕೀರ್ತಿಯ ಪಡೆವ ನೃಪತಿ ನೃಪ ಚೂಡರತ್ನ () ರಾಜನೆನಿಸುವವನು ಧರ್ಮಶಾಸ್ತ್ರ ಪುರಾಣ ವಿದ್ಯಾಗಮ ಸರಸ  ಸತ್ಕಾವ್ಯ ಮುಂತಾದ ಉರುತರಮಪ್ಪ ವಿದ್ಯಾಕಲೆಗಳನರಿದಿರಬೇಕು () ಸುತ್ತಣದೊರೆಗಳು ಜನ್ಮವೈರಿಗಳ ವರೊತ್ತಿನ ನೃಪರಾಪ್ತರೆಂದು ಚಿತ್ತದೊಳಿಟ್ಟು ಅವರವರಿಗುಚಿತವಾಗಿ ವರ್ತಿಪುದಿದು ರಾಜಧರ್ಮ () ಅರಸರೆಂಬ ತರಸಿಗೆ ರಾಜ್ಯ ಬಲಂಗಳೆಂದೆರಡು ಬಟ್ಟಲು ಸಮನಾಗಿಯಿರದೆ ಅವರೊಳಗೊಂದು ಹೆಚ್ಚು ಕುಂದಾದೊಡೆ ದೊರೆತನ ನೆಲೆದಪ್ಪುವುದು () ಕುಲದೊಳುತ್ತಮನ ಪೌರುಷದೊಳಧಿಕನ, ನಿಶ್ಚಲಚಿತ್ತನ, ನೀತಿಯುತನ, ಕಲೆಯ ಬಲ್ಲ, ಪತಿಕಾರ್ಯನಿಷ್ಠನ ಮನವೊಲಿದು ಮಂತ್ರಿಯ ಮಾಳ್ಪುದು ಎಂಬ ಮಂತ್ರಿಯನ್ನು ಆಯ್ಕೆ ಮಾಡುವ ಬಗೆಗೆ ಇತ್ಯಾದಿಯಾಗಿ ರಾಜಧರ್ಮಕ್ಕೆ ಸಂಬಂಧಿಸಿದ ರಾಜನೀತಿಗಳನ್ನು ಉಪದೇಶಿಸಿ  ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಬೋಧಿಸುತ್ತಾರೆ. ರಾಜನೀತಿಗೆ ಸಂಬಂಧಿಸಿದ ಭಾಗವು ಗಂಭೀರತೆಯನ್ನು ಪಡೆದುಕೊಂಡಿದೆ.  ವಿವರಗಳು ಆಗಿನ ಕಾಲದ ಅರಮನೆ-ಗುರುಮನೆ ಗಳ ನಡುವಿನ ಸಂಬಂಧವನ್ನು ಸೂಚಿಸುತ್ತವೆ.

  ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ ಕೃತಿಯಲ್ಲಿ,  ಐತಿಹಾಸಿಕ ಸಾಮಗ್ರಿ ಇರುವುದು ಕೊನೆಯ ಆರು ಸಂಧಿಗಳಲ್ಲಿ ಮಾತ್ರ. ಕೃತಿಯ ಮುಖ್ಯ ಚಾರಿತ್ರಿಕ ವಿಷಯವೆಂದರೆ ಹಾವಳಿ ರಣಭೈರೇಗೌಡನು ಪೆನುಗೊಂಡೆಯನ್ನು ವಶಪಡಿಕೊಂಡಿದ್ದು ಅದರ ಪರಿಣಾಮವಾಗಿ ಹಾವಳೀಂದ್ರನಿಗೂ ಇಮ್ಮಡಿ ಚಿಕ್ಕಭೂಪಾಲನಿಗೂ ಯುದ್ದ ಸಂಭವಿಸಿದ್ದು. ಘಟನೆಯ ಮೇಲೆ ಇಡೀ ಕೃತಿಯ ಐತಿಹಾಸಿಕ ಸಾಮಗ್ರಿ  ಅಡಗಿದೆ. ಪೆನುಗೊಂಡೆಯನ್ನು ಗೆಲ್ಲಬೇಕೆಂಬ ಮನಸ್ಸು ಬಂದುಕೂಡಲೆ ಹಾವಳೀಂದ್ರ ಕೆಲಸ ಕೈಗೊಂಡನೆಂದು ಕವಿಯ ಹೇಳಿಕೆ (ಸಂ.೧೨, .ಸಂ.೨೩)

ತಡೆಯದೆ ಪೆನುಗೊಂಡೆಯ ತೆಗೆದುಕೊಂ

ಡೊದನೆ ರಾಯರ ಮನುಜರನು

ಪಿಡಿತಂದು ಬಾಧಿಸಿ ಬಂದಿಖಾನಕೆ ಹಾಕಿ

ಕಡುಗಲಿ ಭೈರೇಂದ್ರನಿರಲು

 ಇಲ್ಲಿಯರಾಯ ಇಮ್ಮಡಿ ವೆಂಕಟಪತಿರಾಯನೇ ಆಗಿದ್ದಾನೆ.  ಭೈರೇಂದ್ರನು ವೆಂಕಟಪತಿರಾಯನ ಪೆನುಗೊಂಡೆಯನ್ನು ವಶಪಡಿಕೊಂಡುದಲ್ಲದೆ ಅವನ ಕಡೆಯ ಅನೇಕ ಜನರನ್ನು ಹಿಡಿದು ತೊಂದರೆಕೊಟ್ಟು ಬಂದಿಖಾನೆಗೆ  ಹಾಕಿದ ವಿಷಯವನ್ನು ಪದ್ಯ ಹೇಳುತ್ತದೆ.  ಹರಿಕಾರರ ಮೂಲಕ ವಿಷಯ ಇಮ್ಮಡಿ ಚಿಕ್ಕಭೂಪಾಲನಿಗೆ ಮುಟ್ಟುವುದು. ಹಾವಳೀಂದ್ರ ಕೋಟೆಯನ್ನು ಲೂಟಿಮಾಡಿದ ವಿವರಗಳನ್ನು ಹರಿಕಾರರ ಮೂಲಕ ಕವಿಯು ೧೬ ಪದ್ಯಗಳಲ್ಲಿ ಕೊಟ್ಟಿದ್ದಾನೆ. ವಾಸ್ತವಕ್ಕೆ ಹೆಚ್ಚು ಹತ್ತಿವಿರುವ ಚಿತ್ರವಿದು. ಮೊಸದಿಂದ ಪೆನುಗೊಂಡೆಯ ಒಳಹೊಕ್ಕು ಅಪಾರ ಸಂಪತ್ತುನ್ನು ಲೂಟಿಮಾಡಿದನೆಂದು ಒಟ್ಟಿನ ಅರ್ಥ.

ಮನೆ ಮನೆಯೊಳು ತಪ್ಪದೆ ಹೊಕ್ಕು ಧನಧಾನ್ಯ

 ವಿನುತರತ್ನಾಭರಣಗಳ

 ಘನ ಸುಖಿಗಳ ಬಾಧಿಸಿ ಕೊಳ್ಳೆಗೊಂಡರು

 ಜನಪ ಭೈರೇಂದ್ರನ ಭಟರು ( ಸಂ.೧೨. .ಸಂ.೫೧)

 ಮನೆಮನೆಯನ್ನು ತಪ್ಪದೆ ಹೊಕ್ಕು ಧನಧಾನ್ಯ ರತ್ನಾಭರಣಗಳನ್ನು ಜನರಿಗೆ  ಹಿಂಸೆಕೊಟ್ಟು ಕೊಳ್ಳೆ ಹೊಡೆದರಂತೆ.  ಸಾಲು ಮಳಿಗೆಯ ಸಂಪತ್ತೆಲ್ಲ ಕಾಲಾಳ  ಕಾಲಾಟದಲ್ಲಿ ಹೇಳಹೆಸರಿಲ್ಲದಾಯಿತಂತೆ. ಅಷ್ಟೇ ಅಲ್ಲ. ರಾಯರ ಭಂಡಾರವ ತೆಗೆಸಿ ರಾಯಭೂಷಣ ಮೊದಲಾದ ವಸ್ತುಗಳನ್ನು ಅವಿಸಿದನೆಂದು ಕವಿ ಹೇಳುತ್ತಾನೆ. ಒಟ್ಟು ಹದಿನೆಂಟು ಲಕ್ಷ ವಿತ್ತವನ್ನು ಹಾವಳಿಭೈರನೃಪತಿ ಹೇರಿಕೊಂಡು ಹೋದ ಎಂಬುದಾಗಿ ಕವಿಯು ವಿವರಿಸಿದ್ದಾನೆ. ಕವಿ ಚಿಕ್ಕಭೂಪಾಲನ ಸಮಕಾಲೀನನಾಗಿರುವುದರಿಂದ ಅವನು ನಿರೂಪಿಸಿರುವ ಈ ವಿಷಯಗಳಲ್ಲಿ ಸ್ವಲ್ಪ ಮಟ್ಟಿಗೆ ಐತಿಹಾಸಿಕತೆ ಇದೆ ಎಂದೆನಿಸುತ್ತದೆ.  ಹಾವಳಿಭೈರನೃಪತಿ ಹೀಗೆ ಪೆನುಗೊಂಡೆಯನ್ನು ವಶಪಡಿಸಿಕೊಂಡಾಗ ವೆಂಕಟಪತಿರಾಯನ ಉಪಸ್ಥಿತಿಯ ಬಗೆಗೆ ಅಥವಾ ಎಲ್ಲಿಗಾದರೂ ಪಯಣಿಸಿದ್ದ ವಿವರಗಳ  ಕವಿ  ಕೃತಿಯಲ್ಲಿ ಯಾವುದೇ ರೀತಿ ಪ್ರಸ್ತಾಪಿಸಿಲ್ಲ. ಏನಾದರೂ ಯುದ್ದ ಪ್ರಸಂಗದಲ್ಲಿ  ತೊಡಗಿದ್ದನೆ ಎಂಬುದರ ಬಗ್ಗೆ ಮಾಹಿತಿಗಳಿಲ್ಲ. ಆದರೆ ಎರಡು ರಾಜಧಾನಿಗಳ ವಿಚಾರ ಇತಿಹಾಸದಲ್ಲಿದ್ದ ವೆಂಕಟಪತಿರಾಯನು ಪೆನುಗೊಂಡೆ ಮತ್ತು ಚಂದ್ರಗಿರಿಯಿಂದ ಎರಡರಿಂದಲೂ ಆಳುತ್ತಿದ್ದ ಎಂಬುದಾಗಿ ವಿಜಯ ನಗರದ ಇತಿಹಾಸಕಾರರು ಒಂದೆಡೆ ಉಲ್ಲೇಖಿಸಿದ್ದಾರೆ. ವೆಂಕಟಪತಿರಾಯ ಚಂದ್ರಗಿರಿಯನ್ನು ಹೆಚ್ಚು ಇಷ್ಟಪಡುತ್ತಿದ್ದನು ಎಂಬುದಕ್ಕೆ  ವೆಂಕಟನು ಚಂದ್ರಗಿರಿಯಲ್ಲಿರಲು ಇಷ್ಟಪಡುತ್ತಿದ್ದರೂ ಪೆನುಗೊಂಡೆಯಿಂದ ರಾಜ್ಯವಾಳಿದರು ಎಂಬ ಹೇಳಿಕೆ ಸಾಕ್ಷಿಯಾಗಿವೆ. ಇದರ ಆಧಾರದ ಮೇಲೆ ಘಟನೆ ಸಂಭವಿಸಿದಾಗ ವೆಂಕಟಪತಿರಾಯ ಚಂದ್ರಗಿರಿಯಲ್ಲಿ ಇದ್ದಿರಬಹುದೆ ಎಂಬ  ಊಹೆಯನ್ನು ಮಾಡ ಬಹುದಾಗಿದೆ. ‘ವೆಂಕಟಪತಿರಾಯ ಇರದಿದ್ದ ಸಮಯದಲ್ಲಿ ಹಾವಳಿಭೈರೇಂದ್ರ ಪೆನುಗೊಂಡೆಯನ್ನು ಹಿಡಿದ ವಿಧಾನದಲ್ಲಿ ಸಂಚಿರುವ ರೀತಿ ಕಂಡುಬರುತ್ತದೆ. ಕವಿಯು `ಆದಕಾರಣವೇಕಳ್ಳತನದೆ ಪೆನುಗೊಂಡೆಯ ಕಾರೆಯಹಳ್ಳಿಯ ಗೌಡನಾಳುವನೆ” (ಸಂ.೧೨-.ಸಂ.೭೧) ಎಂಬ ಮಾತು ಬಂದಿದೆ. ಕಾರೆಯಹಳ್ಳಿಯ ಗೌಡ ಹಾವಳಿಭೈರೇಂದ್ರನೇ. ಆದರೆ ಕೊನೆಗೆ ಹಾವಳಿಂದ್ರ ಪೆನುಗೊಂಡೆಯನ್ನು  ಆಳಿದರೆ ಇಲ್ಲವೇ ಬಿಟ್ಟನೆ ಎಂಬುದರ ಬಗ್ಗೆ ಈ ಕೃತಿಯಲ್ಲಿ ಯಾವುದೇ ಮಾಹಿತಿಗಳಿಲ್ಲ. ಕವಿ ಚಿಕ್ಕಭೂಪಾಲ ಮತ್ತು  ತೋಟೇಂದ್ರರ ವ್ಯಕ್ತಿತ್ವ ಚಿತ್ರಣದ ಮೇಲೆ ಮಲ್ಲಿಕಾರ್ಜುನ ಕವಿಯು ಹೆಚ್ಚಿನ ಆಸಕ್ತಿ ವಹಿಸಿದ್ದರಿಂದ ಅವನೆ ಕಾವ್ಯದಲ್ಲಿ ಎತ್ತಿದ ಮೂಲಪ್ರಶ್ನೆಯನ್ನು ಮರೆತಂತೆ ಕಾಣುತ್ತದೆ. ಕವಿಯೇನೊ ಸಂದರ್ಭದಲ್ಲಿ ಭೈರಭೂಪ ಮುಂದುಗಾಣದೆ ರಾಯಸಿಂಹಾಸನ ತನ್ನದೆಂದು ಬಗೆದನು. (ಸಂ೧೨-.ಸಂ.೭೬) ಎಂದು ಹೇಳುತ್ತಾನೆ. ಆದರೆ  ನಂತರದ ಪರಿಣಾಮವನ್ನೇನೂ ಕಾವ್ಯದಲ್ಲಿ ದಾಖಲಿಸಿಲ್ಲ. ಅಲ್ಲದೆ, ಭೈರೇಂದ್ರ-ವೆಂಕಟಪತಿರಾಯರ ಸಂಬಂಧದ ಮೇಲೆ ಬೆಳಕು ಚೆಲ್ಲುವ ಕೆಲವು ಮಾತುಗಳಿವೆ. ಬೈರೇಂದ್ರ ವೆಂಕಟಪತಿರಾಯರ ಅಧೀನ ಪಾಳೆಯಗಾರರಲ್ಲಿ ಒಬ್ಬನೆಂಬುದು ಸ್ವಷ್ಟ. ಇದಕ್ಕಾಗಿಯೇರಾಯಸಿಂಹಾಸನಕೆರಡೆಣಿಪುದು ಹೆತ್ತ ತಾಯ ತಬ್ಬಿದ  ತೆರನಂತೆ, ನ್ಯಾಯವನಳಿದ ಹಾವಳಿ ಭೈರ ರೂಪಗಪಾಯಮೊದವಿ ಬಾರದಿಹುದೆ” (ಸಂ.೧೨-.ಸಂ.೭೨) ಎಂಬ ಮಾತು ಬಂದಿದೆ. ಭೈರೇಂದ್ರ ಪೆನುಗೊಂಡೆಯನ್ನು ವಶಪಡಿಸಿಕೊಳ್ಳಲು ಒಂದು ಸೂಕ್ಷ್ಮ ಕಾರಣವಿದೆ. ಭೈರೇಂದ್ರನ ತಂದೆರಾಯನಿಂದ ಸಹಾಯ ಪಡೆದಿದ್ದರೂ ದೊರೆಗೆ ಎರಡು ಬಗೆದಾಗ ಅನುಭವಿಸಿದ ಪರಿಣಾಮವನ್ನು ಪದ್ಯ (ಸಂ.೧೨-.ಸಂ೭೪) ವಿವರಿಸಿದೆ.

 ಮರೆದನೆ ತನ್ನ ಜನಕ ಹೆರೆ ಹಿಂಗದ

ಕರೆಯೊಂದಿ ಕಟ್ಟಿಸಿಕೊಂಡು

ಯೆರೆಯಗೆರಡು ಬಗೆದುದರಿಂದ ಹಬ್ಬದ

ಕುರಿಯಂತೆ ಹೊಯಿಸಿಕೊಂಡುದನು

ಇಲ್ಲಿ ಭೈರೇಂದ್ರನ ತಂದೆಯ ಕಾಲದ ಘಟನೆಯೊಂದರ ಸ್ಮರಣೆಯೊಂದಿದೆ. ಆದರೆ ಭೈರೇಂದ್ರನ ತಂದೆ ಯಾರು? ವೆಂಕಟಪತಿರಾಯನಿಗೂ ಅವನಿಗೂ ಇದ್ದ ಸಂಬಂಧ ಎಂಥದು- ಎಂಬುದರ ಬಗೆಗೆ ಈ ಕೃತಿಯಲ್ಲಿ ಯಾವುದೇ ರೀತಿಯ ಮಾಹಿತಿ  ಲಭ್ಯವಿಲ್ಲ. ಒಂದು ವಿಚಾರ ಮಾತ್ರ ಸತ್ಯ. ಭೈರೇಂದ್ರನ ತಂದೆ ದೊರೆಯ ಎದುರು ನಡೆದಾಗ ಹತನಾದ ಎಂಬುದರ ವಿಷಯ ಮಾತ್ರ ಪದ್ಯದಲ್ಲಿದೆ.   ಪ್ರಕಣದಿಂದ ಭೈರೇಂದ್ರ ಬುದ್ದಿ ಕಲಿಯಲಿಲ್ಲವೆಂಬ ಅಭಿಪ್ರಾಯ ವ್ಯಕ್ತವಾಗಿದೆ. ವಾಸ್ತವವಾಗಿ ಬೈರೇಂದ್ರ ಪೆನುಗೊಂಡೆಯನ್ನು ವಶಪಡಿಸಿಕೊಳ್ಳುವುದಕ್ಕೆ ತಂದೆಯ ಕಾಲದಿಂದಲೂ ಇದ್ದ ವೈರವೇ ಕಾರಣವಾಗಿರುವಂತೆ ತೋರುವುದು. ಜೊತೆಗೆ ವಿಜಯನಗರ  ಸಾಮ್ರಾಜ್ಯ ಅವನತಿ ಸ್ಥಿತಿಯಲ್ಲಿದ್ದು. ಅಧೀನ ಪಾಳೆಯಗಾರರು ಸ್ವತಂತ್ರರಾಗಲು ಬಯಸುತ್ತಿದ್ದುದೂ ಒಂದು ಕಾರಣವಿರಬೇಕೆನಿಸುತ್ತದೆ. ಸಹಜವಾಗಿಯೇ ಘಟನೆಯಿಂದ ಇಮ್ಮಡಿ ಚಿಕ್ಕಭೂಪಾಲನು ನೊಂದುಕೊಂಡ ನಲ್ಲದೆ. ಕೋಪಗೊಂಡ ಕೂಡ. ಕೂಡಲೇ ಕೆಂಪೇಂದ್ರ ತಿಮ್ಮನಾಯಕ ಮತ್ತು ಹರತೀಶ್ವರ ದೊರೆಗಳಿಗೆ ಪತ್ರ ಕಳಿಸಿ ರಾಯಕಾರ್ಯದಲ್ಲಿ ನೆರವು ಕೋರಿದ. ಇಲ್ಲಿ ಉಲ್ಲೇಖಿತವಾಗಿರುವ ದೊರೆಗಳಾರೆಂಬುದು ಸ್ಪಷ್ಟವಾಗುವುದಿಲ್ಲ. ‘ಹರತೀಶ್ವರ ಬೈರೇಂದ್ರದಿಂದ ಪದಚ್ಯುತನಾದ ಹರತಿಯ ದೊರೆ ಇರಬಹುದೆ? ಸಂದರ್ಭದಲ್ಲಿ ಕೆಲವು ವಿವರಗಳು ನಿರ್ಧಾರಗಳು ಕಾವ್ಯದಲ್ಲಿ ಬರುತ್ತವೆ. ಇದು ಸ್ವಾಮಿಕಾರ್ಯವಾದ್ದರಿಂದ ಪ್ರಾಣವನ್ನಾದರೂ ತೆತ್ತು  ಪೆನಗೊಂಡೆಯನ್ನು ಉಳಿಸಿಕೊಳ್ಳ ಬೇಕೆಂಬ ಅಭಿಪ್ರಾಯಬಿಡಿಸಬೇಕಾ ಪೆನುಗೊಂಡೆಯನಿಲ್ಲವೆ ಬಿಡಬೇಕೊಡಲನಾಜಿಯೊಳು” ( ಸಂ.೧೨- .ಸಂ ೮೨) ಎಂಬ ತೋಟೇಂದ್ರನ ಹೇಳಿಕೆಯಲ್ಲಿ ವ್ಯಕ್ತಗೊಂಡಿದೆ. ಸಂದರ್ಭದ ಒಟ್ಟು ತೀರ್ಮಾನ ಪದ್ಯ (ಸಂ.೧೨- .ಸಂ.೮೯) ರಲ್ಲಿದೆ:

ಪೆನುಗೊಂಡೆಯ ಕೊಂಡು ರಾಯರಿಗೀವುದೆ

ಘನಕಾರ್ಯವೆಮಗಂತದಕೆ

ಅನುಕೂಲ ಹರಿವೆಯ ಮುಂದಿಳಕೊಳಬೇ

ಕೆನುತೆ ಕಾರ್ಯವನೂಹಿಸಿದ

ಇದರಲ್ಲಿ ಎರಡು ನಿರ್ಧಾರಗಳಿವೆ : . ಪೆನುಗೊಂಡೆಯನ್ನು ಭೈರೇಂದ್ರನಿಂದ ಗೆದ್ದು ವೆಂಕಟಪತಿರಾಯನಿಗೆ ಒಪ್ಪಿಸುವುದು : . ಇದಕ್ಕೆ ಅನುಕೂಲವೆಂಬಂತೆ ಹರಿವೆಯ ಮುಂದೆ ಬೀಡು ಬಿಡುವುದು ಇದರಲ್ಲಿ ಹರವೆಕೋಟೆಯ ಕಾಳಗವೇ ಕೃತಿಯ ಮುಖ್ಯ ವಸ್ತು. ಇದರಲ್ಲಿಯೇ ಕಾವ್ಯ ಸಮಾಪ್ತಿಯಾಗುವುದು ನೋಡ ಬಹುದಾಗಿದೆ. ವಾಸ್ತವವಾಗಿ ಪೆನುಗೊಂಡೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹರವೆಕೋಟೆಯ ಕಾಳಗದಲ್ಲಿ ಇಮ್ಮಡಿ ಚಿಕ್ಕಭೂಪಾಲನ ಮತ್ತು ತೋಟೇಂದ್ರ ಇಬ್ಬರು ಮಡಿಯುವುದರಿಂದ ಕವಿ ನಂತರ ಕಥೆಯನ್ನು ಮುಂದುವರಿಸಲು ಹೋಗುವುದಿಲ್ಲ. ಇದರಿಂದ ಭೈರೇಂದ್ರನು ಪೆನುಗೊಂಡೆಯನ್ನು ವೆಂಕಟಪತಿರಾಮನಿಗೆ ಹಿಂದಿರುಗಿಸಿದನೆ ಇಲ್ಲವೆ ಎಂಬುದು ಹಾಗೆಯೇ ಉಳಿಯುತ್ತದೆ. ಆದರೆ ಒಂದು ಮುಖ್ಯ ವಿಷಯವೆಂದರೆ ಭೈರೇಂದ್ರ ಪೆನುಗೊಂಡೆಯನ್ನು ವಶಪಡಿಸಿಕೊಂಡುದಕ್ಕೆ ಪ್ರತಿಯಾಗಿ ಚಿಕ್ಕಭೂಪಾಲ ಹರವೆಕೋಟೆಯನ್ನು ವಶಪಡಿಸಿಕೊಳ್ಳುಲು ಮೊದಲು ಉಪಕ್ರಮಿಸಿದ್ದು.

   ಇಮ್ಮಡಿ ಚಿಕ್ಕಭೂಪಾಲ ಮತ್ತು ತೋಟೇಂದ್ರ  ಸಮಸ್ತ ಸೈನ್ಯದೊಡನೆ ಭೈರೇಂದ್ರನ ವಿರುದ್ದ ಯುದ್ದಕ್ಕೆ ಹೊರಟ ವಿವರಗಳು ಕಾವ್ಯದಲ್ಲಿವೆ. ಇವರೊಡನೆ ತಿಮ್ಮಿನಾಯಕ, ಕೆಂಪೇಂದ್ರ, ರಂಗಭೂತಿ ಬಸವೇಂದ್ರ, ಅಳಿಯ ಸೋವೇಂದ್ರ, ಬೋಳವೀರೇಂದ್ರ, ಅಳಿಯ ಲಕ್ಕಣ್ಣ, ಲಿಂಗೇಂದ್ರ, ಮಿಡಿಗೇಶಿಯ ಚನ್ನಪ್ಪನಾಯಕ, ಕಡುಗಲಿ ಕನ್ನೋಜಿರಾವುತರು,ಬುಕ್ಕಪಟ್ಟಣದ ಕೆಂಪಣಗೌಡ,ತೆರೆಯೂರ ನಂಜ, ಗರುಣಿಯ ತೋಟಿ ಮಣೂರ, ಬೇಲೇದ ಹೊನ್ನಗಿರಿಯ ಬಂದರುತಮ್ಮೋಲೆಕಾರ, ಸೂರೆಹಳ್ಳಿಯ ಪಟುಭಟನೆನಿಪ ಕೊಟ್ಟೂರ, ತೋವಿನ ಕೆರೆಯ ತೋಟದಳವಾಯಿ, ಉಗ್ಗಡದ ದಿವ್ಯಲಿಂಗ ,ಕೊಡಗಿಯಳ್ಳಿಯ ಬಸವ, ದೊಡ್ಡೇರಿಯ ಕೆಂಪ,ತೆರೆಯೂರ ನಂಜ ಮೊದಲಾದವರು ಸೇರಿಕೊಂಡರೆಂದು ತಿಳಿದು ಬರುತ್ತದೆ. ಈ ಹೆಸರುಗಳಲ್ಲಿ ಕೆಲವರು ಸ್ಥಳೀಯ ವೀರರಿರಬೇಕು.  ಇನ್ನು ಕೆಲವರು ನೆರವಾದ ಪಾಳೆಯಗಾರರ ಹೆಸರಿರ ಬೇಕು.  ಈ ಸ್ಥಳೀಯ ಪಾಳೆಯ ಗಾರರು ಮತ್ತು ವೀರರನ್ನು ಇತಿಹಾಸದ ಮೂಲದಿಂದ ಸಮರ್ಥಿಸಲು ಆಧಾರಗಳನ್ನು ಶೋಧಿಸ ಬೇಕಾಗಿದೆ.

    ಚಿಕ್ಕಭೂಪಾಲನ ಸೈನ್ಯ ಭೈರೇಂದ್ರನ ಗಡಿಯ ಕೋಟೆಯನ್ನು ಲಗ್ಗೆಮಾಡಿ,ಅವನ ನಾಡಿನ ಮೇಲೆ ದಾಳಿಮಾಡಿದ ವಿವರಗಳನ್ನು ಕವಿ ಚಿತ್ರಿಸಿರುವನು. ಮುಖ್ಯವಾಗಿ ಹರವೆ  ಕೋಟೆಯ ಕಾಳಗ ಒಂದು ಐತಿಹಾಸಿಕ ವಿಷಯ. ಎರಡೂ ಕಡೆಯ ಸೈನಿಕರಿಗೆ ನಡೆದ ಈ ಯುದ್ದದಲ್ಲಿ ಅಪಾರ ಸಾವು ನೋವು ಆಗಿರುವಂತೆ ವರ್ಣಿಸಲಾಗಿದೆ. ಇಂಥ ಎಲ್ಲ ವರ್ಣನೆಯಲ್ಲಿ ಉತ್ಪ್ರೇಕ್ಷೆಯ ಅಂಶ ಇದ್ದೇ ಇರುತ್ತದೆ. ತೋಟೇಂದ್ರ ಹರವೆ ಕೋಟೆಗೆ ಲಗ್ಗೆ ಮಾಡಿದಂತೆ ಚಿತ್ರಣವಿದೆ. ಕೋಟೆಯನ್ನು ಬಳಸಿ,ಮುತ್ತಿ ಪ್ರತಿಭಟನೆಗಳನ್ನೆಲ್ಲ ನಿವಾರಿಸಿ ಹೆಬ್ಬಾಗಿಲ ತೆಗೆಸುವುದರ ಮೂಲಕ ಹೊರಕೋಟೆಯನ್ನು ಮೊದಲು ಆಕ್ರಮಿಸಿದ ಈ ಸುದ್ದಿಯನ್ನು ತಿಳಿದ ಚಿಕ್ಕಭೂಪಾಲ ಸಂತೋಷಪಟ್ಟು ಒಳಕೋಟೆಯನ್ನು ವಶಪಡಿಸಿಕೊಳ್ಳಲು ಸೂಚಿಸಿ ಹೊರವಲಯದಲ್ಲಿ  ಬೀಡು ಬಿಡುತ್ತಾನೆ.  ಮುಂದೆ ಘಟನೆಗೆ ಒಂದು ನಾಟಕೀಯ ತಿರುವು ಉಂಟಾಗುತ್ತದೆ.

   ಯುದ್ಧವು ತೀವ್ರಗೊಳ್ಳುವ ಸಂದರ್ಭದಲ್ಲಿ ಸಂಧಾನಮಾಡಿಕೊಳ್ಳಲು ಭೈರೇಂದ್ರನ ಮಂತ್ರಿ  ಇಮ್ಮಡಿ ಚಿಕ್ಕಭೂಪಾಲನಲ್ಲಿಗೆ ಬರುವುದು ಇನ್ನೊಂದು ಚಾರಿತ್ರಿಕ ಸಂಗತಿ. ಮೊದಮೊದಲು ಉಪಾಯದಿಂದಲೆ ಚಿಕ್ಕಭೂಪಾಲನನ್ನು ಒಲಿಸಿಕೊಳ್ಳಲು ಮಂತ್ರಿ ಯತ್ನಿಸುವುದನ್ನು ಕವಿಯು ವರ್ಣಿಸಿದ್ದಾನೆ. ಇದರ ಭಾಗವಾಗಿಯೇನಿನ್ನೊಡಹುಟ್ಟಿದ ಹಾವಳೀಂದ್ರನ ನೀನು ಭಿನ್ನವಿಲ್ಲದೆ ಕೈವಿಡಿದು (ಸಂ.೧೪-.ಸಂ.೧೪) ನಡೆಸಬೇಕೆಂಬ ಮಾತು ಬಂದಿದೆ. ಇಲ್ಲಿ ಒಡಹುಟ್ಟಿದ ಎಂಬುವರ ಅರ್ಥವೇನು? ಭೈರೇಂದ್ರನೂ ಚಿಕ್ಕ ಭೂಪಾಲನೂ ಒಡಹುಟ್ಟಿದವರು ಹೇಗಾಗುತ್ತಾರೆ?ಚಿಕ್ಕಬಳ್ಳಾಪುರ ನಾಡಪ್ರಭುಗಳಲ್ಲಿ ಅಣ್ಣೇಗೌಡರ ಮಗ ಹಾವಳೀಂದ್ರ ಎಂದಿರುವುದರಂದ ಒಡಹುಟ್ಟಿದ ಅರ್ಥವನ್ನು ಈ ದೃಷ್ಟಿಯಲ್ಲಿ ಕಲ್ಪಿಸಬಹುದೇ ? ಅಥವಾ ಇದೊಂದು ಬಿನ್ನಾಣದ ಮಾತೆ ? ಇದು ಸಾಧ್ಯವಾಗದಿದ್ದಾಗ ಎರಬೊಮ್ಮನಹಳ್ಳಿ, ಹರಿಯಸಮುದ್ರ, ಹರುವೆಯಗ್ರಹಾರ, ಹಿರಿಯ  ಪಿರಂಗಿ, ಎರಡಾನೆ ಈರೈದು ಸಾವಿರಹೊನ್ನು-ಇವನ್ನು ಕೊಡುವೆನೆಂದು ಭೈರೇಂದ್ರನ ನಿರೂಪವನ್ನು ಮಂತ್ರಿ ಭಿನ್ನವಿಸಿಕೊಳ್ಳುವನು. ಆದರೆ ಪೆನುಗೊಂಡೆಯನ್ನು ಮಾತ್ರ ಕೊಡುವುದಿಲ್ಲವೆಂಬ ಮಾತಿನ ಧಾಟಿಯನ್ನುಆ ಪೆನುಗೊಂಡೆಯನೆನ್ನನಾಳಿಸಿದೊಡೆ ತಾ ಪೇಳಿದಂತೆ ನಡೆವೆನು” (ಸಂ.೧೪- .ಸಂ.೧೯) ಎಂಬುದರಲ್ಲಿ ಕಾಣಬಹುದು. ಸಂಧಾನವನ್ನು ಒಪ್ಪದ ಚಿಕ್ಕಭೂಪಾಲ, ಅದಕ್ಕೆ ಕಾರಣಗಳನ್ನು ಸ್ವಷ್ಪವಾಗಿ ವಿವರಿಸುವನು. ಮಿಡಿಗೇಶಿಯನ್ನು ಕೊಡಲಿಲ್ಲ ಎಂಬುದು ಒಂದು. ಇದೊಂದು ಸಂಧಾನದ ಕೊರತೆ ಎನ್ನುವಂತೆ ಹೇಳುತ್ತಾನೆ, ಭೈರನೃಪತಿ ಪೆನುಗೊಂಡೆಯಲ್ಲಿ ಆಳಲು ಅವಕಾಶ ಮಾಡಿಕೊಡುವುದಿಲ್ಲ ಎಂಬುದು ಇನ್ನೊಂದು. ಇದರಿಂದ ಭೈರೇಂದ್ರನಿಗೆ ಅನುಕೂಲವಾಗಿ ವರ್ತಿಸಬೇಕೆಂಬ ಬೇಡಿಕೆಯ ನಿರಾಕರಣೆ, ವೆಂಕಟಪತಿರಾಯನಿಗೂ ಭೈರೇಂದ್ರನಿಗೂ ಇರ ಬೇಕಾಗಿದ್ದ ಸಂಬಂಧವನ್ನು ಒತ್ತಿಹೇಳುವುದು ಮತ್ತೊಂದು. ಅದಕ್ಕಾಗಿಯೆತಾಯಲ್ಲವೆ ಭಾವಿಸಿ  ನೋಡು  ಚೆನ್ನಾಗಿ ರಾಯಸಿಂಹಾಸನ ತನಗೆ” (ಸಂ.೧೪-.ಸಂ.೨೭) ಎಂಬ ಎಚ್ಚರಿಕೆಯ ಮಾತು.ಅದ್ದರಿಂದ ಪೆನುಗೊಂಡೆಯನ್ನು ವಶಪಡಿಸಿಕೊಂಡಿರುವುದು ಅನ್ಯಾಯದ ಆಕ್ರಮಣವೆಂದೂ ಚಿಕ್ಕಭೂಪಾಲನ ಅನಿಸಿಕೆ. ಈಗ ಉಳಿದಿರುವುದೊಂದೆ ಪೆನಗೊಂಡೆ, ಅಲ್ಲಿನ ಆನೆ ಕುದುರೆ ರಾಯರಭಂಡಾರ ಪರಿವಾರ ಇವನ್ನು ಹಿಂದಿರುಗಿಸುವುದು. ಮಂತ್ರಿ ಮುಂದೆ ಒದಗಬಹುದಾದ ಅನಾಹುತದ ಕಡೆ ಸೂಚನೆ ಕೊಟ್ಟರೂ ಚಿಕ್ಕಭೂಪಾಲನೂ ಯಾತರ ಮಾತು? ತಾನೇತರ ಕಾರ್ಯ,ವಿದೇತರ ಸಂಧಾನ(ಸಂ.೧೪..ಸಂ.೩೯) ಎಂದು ನಿರಾಕರಿಸುವನು  ಈ ವಿವರದಲ್ಲಿ ವೈರಿಯ ಪಿತೂರಿಗೆ ಒಳಗಾಗದೆ ಚಿಕ್ಕಭೂಪಾಲ ತನ್ನ ವ್ಯಕ್ತಿತ್ವವನ್ನು ಮೆರೆದಿರುವ ಅಂಶ ನಿರೂಪಿತವಾಗಿದೆ. ರಾಜಕೀಯದಲ್ಲಿ ಚಿಕ್ಕಭೂಪಾಲ ತೋರುವ ಒಡೆಯನಿಷ್ಟೆ ಅಸದೃಶವಾದುದು. ಇದನ್ನು ಕವಿ ತನ್ನ ಕಾವ್ಯದ ಮುಖ್ಯ ಪ್ರತಿಪಾದನೆಯನ್ನಾಗಿಸಿ ಕೊಂಡಿದ್ದಾನೆ. ಹೀಗೆ ಭೈರವಭೂಪಾಲ ರಾಯಸಿಂಹಾಸನಕ್ಕೆ ಅನ್ಯಾಯ ಮಾಡುವುದನ್ನು ನೋಡಿಯೂ ಸುತ್ತಣದೊರೆಗಳು ಹೇಡಿಗಳಾಗಿ ಸುಮ್ಮನೆ ಕುಳಿತ ಸಂದರ್ಭದಲ್ಲಿ ಚಿಕ್ಕಭೂಪಾಲ ಸ್ವಾಮಿನಿಷ್ಠೆಯಿಂದ ಹರವೆಕೋಟೆಯಲ್ಲಿ  ಭೈರೇಂದ್ರನನ್ನು ಎದುರಿಸುತ್ತಾನೆ. ಭೈರವೇಂದ್ರತನ್ನಯ ಸೇನೆಯನೆಲ್ಲ ಕೂಡಿ ಸಂಗರಕಟ್ಟುತ್ತಾನೆಯೇ (ಇಚಿಭೂಸಾಂ 14-46) ಹೊರತು ತಾನು  ಯುದ್ದಕ್ಕೆ ಬರುವುದಿಲ್ಲ. ಈತನ ಸೈನ್ಯ ಇಮ್ಮಡಿ ಚಿಕ್ಕಭೂಪಾಲನ ಸೈನ್ಯಕ್ಕಿಂತ ಅಪಾರವಿತ್ತೆಂದೇ ತೋರುತ್ತದೆ. ಈ ಕಾಳಗದಲ್ಲಿ ಎರಡೂ ಕಡೆಯ ಸೈನ್ಯಕ್ಕಿಂತ ಅಪಾರ ಸಾವು ನೋವು ಸಂಭವಿಸುತ್ತದೆ. ಕಾಳಗ ನಡೆದ ಸ್ಥಳ ಹರವೆ ಗ್ರಾಮವೆಂಬುದು ಇಂದಿನ ಆಂಧ್ರದ ಆನಂತಪುರ ಜಿಲ್ಲೆಯಪರಗಿ ಆಗಿದೆ.

   ಸಂಧಾನ ಮುರಿದುಬಿದ್ದುದರಿಂದ ಯುದ್ದ ಅನಿವಾರ್ಯವಾಯಿತು ದಳಪತಿ ಅಳಿಯ ಭೈಚೇಂದ್ರ ಭೈರೇಂದ್ರನ ಕಡೆ ನೇತೃತ್ವವಹಿಸುವನು. ಮುಂದೆಲ್ಲ ಕವಿ ವಿವರವಾಗಿ ಯುದ್ದ ವರ್ಣನೆಯನ್ನು  ಕೊಡುತ್ತಾನೆ. ಇದರಲ್ಲಿ ಸಹಜವಾಗಿಯೇ ವೀರರಸದ ಪ್ರತಿಪಾದನೆಯಿದೆ. ಯುದ್ದದಲ್ಲಿ ತೋಟೇಂದ್ರ  ಮಡಿಯುವನು. ಅನಂತರ ಅವನ ತಲೆಯನ್ನು ಶತ್ರುಗಳು ತುಂಡರಿಸಿದ ಹಾಗೆ ಕಾವ್ಯ ಹೇಳುತ್ತದೆ. ತೋಟೇಂದ್ರ ಮಡಿದ ತರುವಾಯ ಘಟನೆಗಳು ಬೇಗ ಬೇಗ ನಡೆದುಹೋಗುತ್ತದೆ. ತೋಟೇಂದ್ರನ ಸತಿ ಚನ್ನಬಸವಮ್ಮಸತಿ ಹೋಗುವಳು. ಮಗನ ಮರಣದಿಂದ ಜರ್ಜರಿತನಾದ ಇಮ್ಮಡಿ ಚಿಕ್ಕಭೂಪಾಲ ಇಷ್ಟಲಿಂಗವನ್ನು ನೋಡುತ್ತ ಪ್ರಾಣತ್ಯಾಗ ಮಾಡುವನು. ರಾಣಿಯರಾದ ಚೆನ್ನಮ್ಮ ಲಿಂಗಮ್ಮ ಇದೇ ರೀತಿ ಪ್ರಾಣ ತ್ಯಜಿಸುವರು.

    ಹರವೆಯಕೋಟೆಯ ಕಾಳಗ ಇಬ್ಬರು ಪಾಳೆಯಗಾರರ ನಡುವೆ ನಡೆದ  ಆ ಕಾಲದ ಒಂದು ಐತಿಹಾಸಿಕ ಘಟನೆಯಾಗಿದೆ. ಆದರೆ ಈ ಕಾಳಗದ ಕಾಲದ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಸಿದ್ದಾಪುರ ಮತ್ತು  ಗುರಮ್ಮನ ಮಠದ ಶಾಸನಗಳ ಕಾಲ, ಅಮೃತೇಶ್ವರಭಾಷ್ಯದ ಕಾಲ ಮತ್ತು ಸಪ್ಪೇಂದ್ರನ ಶಾಸನದ ಕಾಲಗಳನ್ನು ಇಟ್ಟುಕೊಂಡು ಈ ಕೃತಿಯ ಸಂಪಾದಕರಾದ ಎಂ.ಎಂ. ಕಲಬುರ್ಗಿಯವರು ಮತ್ತು ಬಿ,ಆರ್. ಹಿರೇಮಠರು ಈ ಕಾಳಗ ಕ್ರಿ.ಶ ೧೫೯೪, ರಿಂದ ೧೬೦೬ ರ ಒಳಗೆ ನಡೆದಿರಬೇಕೆಂದು ಹೇಳುತ್ತಾರೆ. ಸಿದ್ಧಾಪುರದ ಶಾಸನದಲ್ಲಿವೀರವೆಂಕಟ ಪತಿದೇವ ಮಹಾರಾಯರು ಪ್ರಥ್ವೀಸಾಂಬ್ರಾಜ್ಯಂಗೆಯಿ ಉತ್ತಿರಲು ಶ್ರೀಮನ್ಮಹನಾಡ ಪ್ರಭುಉ ಬಿಜವರರ ಚೆಕಪಗುಡಗ ಮಗ ಯಿ[ಮ್ಮಡಿ ಚಿಕ್ಕಪ್ಪಗೌಡರುಎಂದಿರುವುದರಿಂದ ಈ ಕಾಲದ ಹೊತ್ತಿಗೆ ಚಿಕ್ಕಪ್ಪಗೌಡರು ವೆಂಕಟಪತಿರಾಯರು ಸಮಕಾಲೀನರಾಗಿ ರಾಜ್ಯವಾಳುತ್ತಿದ್ದರೆಂಬುದು ಸ್ವಷ್ಟ. ಆದ್ದರಿಂದ ಈ ಶಾಸನದ ಕಾಲ೧೫೯೭ ರ ನಂತೆ ಹರವೆಯ ಕಾಳಗ ಸಂಭವಿಸಿರಬೇಕೆಂದು ತೋರುವುದು ಹಾಗೆಯೇ ಸಪ್ಪೇಂದ್ರನ ಕರಿಕೆರೆ ಗ್ರಾಮದ ಶಾಸನದಲ್ಲಿ ವೀರ [ವೆಂಕಟಪತ]ದೇವ ಮಹಾರಾಯಗೆಯಿಉತ್ತಿರಲು ಶ್ರೀಮನುಮಹಾನಾಡ  ಪ್ರಭು ಬಿಜ್ಜಾವರದ ಮುಂಮಡಿ ಚಿಕ್ಕಪ್ಪಗೌಡ ರೈಯನವರು - ಎಂದಿರುವದರಿಂದ  ಈ ಕಾಲದ  ಹೊತ್ತಿಗೆ ಸಪ್ಪೇಂದ್ರ ಪಟ್ಟಕ್ಕೆ ಬಂದಿದ್ದು. ಚಿಕ್ಕಪ್ಪಗೌಡರು ಮಡಿದಿರಬೇಕೆಂದು ಸ್ಪಷ್ಟವಾಗುವುದು ಇದರಿಂದಾಗಿ ಈ ಶಾಸನದ ಕಾಲ ಕ್ರಿ.ಶ ೧೫೯೮  ಕ್ಕಿಂತ ಹಿಂದೆ  ಈ ಘಟನೆ ಸಂಭವಿಸಿರಬೇಕೆಂದು ಭಾಸವಾಗುವುದು ಎಂದು ಸಂಪಾದಕರು ಅಭಿಪ್ರಾಯ ಪಟ್ಟಿದ್ದಾರೆ.  ಆದರೆ ಈ ಘಟನೆಯು ಈ ಕಾಲದಲ್ಲಿ ಘಟಿಸಿರಲಾರದು ಎಂದೆನಿಸುತ್ತದೆ. ಕಾರಣ, . ಹಾವಳಿ ರಣಭೈರೇಗೌಡನ ಕಾಲ ಕ್ರಿ..೧೫೯೮ ರಿಂದ೧೬೪೫ ಆಗಿದೆ. ಹೀಗಾಗಿ ಪಟ್ಟಕ್ಕೆ ಬಂದ ಆರಂಭದಲ್ಲಿಯೇ ಪೆನಗೊಂಡೆಯನ್ನು ಲೂಟಿ ಮಾಡಿರಲು ಸಾಧ್ಯವಿಲ್ಲ. ಜೊತೆಗೆ ಇಮ್ಮಡಿ ಚಿಕ್ಕಪ್ಪ ಗೌಡನು ಕ್ರಿ.. ೧೬೦೧ ರಲ್ಲಿ ಮಧುಗಿರಿ ಕೋಟೆಯನ್ನು, ಕ್ರಿ..೧೬೧೩ ರಲ್ಲಿ ಚನ್ನರಾಯ ದುರ್ಗವನ್ನು ನಿರ್ಮಿಸಿದನೆಂದು ಇಳಿದು ಬರುತ್ತದೆ.  ಮಳವಳ್ಳಿ ತಾಲೋಕಿನಲ್ಲಿ ದೊರೆತಿರುವ ಶಾಸನದಲ್ಲಿಯ ಉಲ್ಲೇಖದ ಪ್ರಕಾರ ತೋಂಟೇಂದ್ರ ಮತ್ತು ಇಮ್ಮಡಿ ಚಿಕ್ಕಪ್ಪ ಗೌಡರು ಕ್ರಿ.. ೧೬೧೩ ರಲ್ಲಿ ಬದುಕಿದ್ದರು ಎಂಬುದಾಗಿ ತಿಳಿದು ಬರುತ್ತದೆ. ಈ ಶಾಸನದ ಪ್ರಕಾರ ತೋಟೇಂದ್ರನು ಧನಗೂರಿನ ದೊರೆ ನಂಜರಾಜ ಒಡೆಯರಿಂದ ಅನುಮತಿ ಪಡೆದು ಬೆಳಕಿವಾಡಿಯ ಸ್ವಯಂಭೂ ದೇವರ ಗುಡಿಯ ಜೀರ್ಣೋದ್ಧಾರ ಮಾಡಿಸುತ್ತಾನೆ. ಹೀಗಾಗಿ ಕ್ರಿ... ೧೬೧೩ ರಲ್ಲಿ ಇಮ್ಮಡಿ ಚಿಕ್ಕಪ್ಪ ಗೌಡನು ಬದುಕಿದ್ದನೆಂಬುದಕ್ಕೆ ಆಧಾರಗಳಿವೆ. ಅದೇ ರೀತಿ ಹಸ್ತಪ್ರತಿಗಳ ಪುಷ್ಪಿಕೆಗಳಲ್ಲಿ ಇಮ್ಮಡಿ ಚಿಕ್ಕಭೂಪಾಲನ  ಕಾಲದ ಬಗೆಗೆ ಮಾಹಿತಿಗಳು ಸಿಗುತ್ತವೆ. ಮೈಸೂರು ವಿಶ್ವವಿದ್ಯಾಲಯದಲ್ಲಿರುವ ಹಸ್ತಪ್ರತಿ ಭಂಡಾರದ ಹಸ್ತಪ್ರತಿಯಲ್ಲಿ    ಪ್ಲವಂಗ ಸಂವತ್ಸರ ಮಾಘಶುದ್ಧ 15ರಲ್ಲು ಚಿಗನಾಯಕನಹಳ್ಳಿ ಲಿಂಗಪ್ಪನು ಮಹಾರಾಜೇಶ್ರೀ ಚೆನ್ನಾಜಮ್ಮನವರಿಗೆ ಪಾರಮಾರ್ಥಿಕದ ಪುಸ್ತಕ ಬರೆದು ಒಪ್ಪಿಸಿದಂಥಾ ಉಲ್ಲೇಖವು   ಚಿಗನಾಯಕನಹಳ್ಳಿ ಲಿಂಗಪ್ಪನು ಕ್ರಿ.ಶ.1607ರಲ್ಲಿ ಪಾರಮಾರ್ಥಿಕ ಪುಸ್ತಕವನ್ನು ಪ್ರತಿಮಾಡಿ ಮಹಾರಾಜೇ ಶ್ರೀಚೆನ್ನಮ್ಮಾಜಿಯವರಿಗೆ ಒಪ್ಪಿಸಿದ್ದನ್ನು ತಿಳಿಸುತ್ತದೆ. ಇದರ ಕಾಲವು ಕ್ರಿ..೧೬೦೭. ಈಸೂಚಿಯ ಪ್ರಕಾರ ಕ್ರ.. ೧೬೦೭ ರಲ್ಲಿ ಚೆನ್ನಾಜಮ್ಮ ಇನ್ನು ಜೀವಿಸಿದ್ದಳೆಂಬುದು ವ್ಯಕ್ತವಾಗುತ್ತದೆ.ಈ ಕೃತಿಯಲ್ಲಿಯೇ, ಇಮ್ಮಡಿ ಚಿಕ್ಕಭೂಪಾಲ ತೀರಿಕೊಂಡಾಗ ಚೆನ್ನಾಜಮ್ಮಳು ಸತಿಯಾದಳೆಂದು ತಿಳಿದು ಬರುವುದರಿಂದ ಕ್ರಿ.. ೧೬೦೭ ರಲ್ಲಿ ಇಮ್ಮಡಿ ಚಿಕ್ಕಭೂಪಾಲ ಬದುಕಿದ್ದನೆಂಬುದಾಗಿ ತಿಳಿದು ಬರುತ್ತದೆ. ಈ ಕೃತಿಯಲ್ಲಿಯೇ ಸಪ್ಪೇಂದ್ರನ ( ಮುಮ್ಮಡಿ ಚಿಕ್ಕ ಭೂಪಾಲ) ಪಟ್ಟಬಂಧೋತ್ಸವ ಮತ್ತು ವೈಭವಪೂರ್ಣ ಆಳ್ವಿಕೆಯ ವಿವರಗಳು ಇರುವುದರಿಂದ ಈ ಅವಧಿಯಲ್ಲಿಯೂ ಮಲ್ಲಿಕಾರ್ಜುನ ಕವಿ ಬದುಕಿದ್ದನೆಂಬುದು ವ್ಯಕ್ತವಾಗುತ್ತದೆ. ಸಪ್ಪೇಂದ್ರ ಅಥವಾ ಮುಮ್ಮಡಿ ಚಿಕ್ಕಪ್ಪಗೌಡನ ಪ್ರಥಮ ಶಾಸನವು ಕ್ರಿ.. ೧೬೪೬ರ ಭೀಮನ ದೊಣೆಯ ಬಳಿಯಲ್ಲಿಯ ಶಾಸನವಾಗಿರುವುದರಿಂದ ಈ ಅವಧಿಯಲ್ಲಿ ಬದುಕಿದ್ದನೆಂಬುದಾಗಿ ತಿಳಿದು ಬರುತ್ತದೆ. ಈ ಆಂತರೀಕ ಸಾಕ್ಷ್ಯಗಳಿಂದಾಗಿ ಹರವೆಯ ಕೋಟೆಯ ಕಾಳಮತ್ತು ತೋಟೇಂದ್ರನ ಕಾಳಗವು ಕ್ರಿ.ಶ. ೧೬೦೭ ಕ್ಕಿಂತ ನಂತರದಲ್ಲಿ ಬಹುಶಃ ಕ್ರಿ.. ೧೬೩೩ರ ಅವಧಿಯಲ್ಲಿ ಜರುಗಿರಬೇಕು ಎಂದು ಊಹೆಮಾಡಲು ಅವಕಾಶವಿದೆ.

      ಕೃತಿಯಲ್ಲಿಯ ತೋಟೇಂದ್ರನ ಮರಣಾನಂತರ ಶೋಕಾರ್ಥವಾಗಿ ಬರೆದ ಪದ್ಯಗಳಲ್ಲಿ ಅವನ ಸೋದರರ ವಿಷಯ ಕುರಿತ ಉಲ್ಲೇಖಗಳಿವೆ. ತಮ್ಮ ಸಪ್ಪೇಂದ್ರ (ಸಂ.೧೬- .ಸಂ.೪೭) ಎಂಬ ಮಾತಿನಿಂದ ಸಪ್ಪೇಂದ್ರ ಎನ್ನುವನು ತೋಟೇಂದ್ರನ ಒಬ್ಬ ತಮ್ಮನೆಂದು ಗೊತ್ತಾಗುವುದು. ಹಾಗೆಯೇ ಎಡಬಲದೊಳು ಸಿದ್ದಾಜಿ ಸಪ್ಪೆಕ್ಕನೆಂಬೊಡಹುಟ್ಟಿದರು. (ಸಂ.೧೬- .ಸಂ.೬೩) ಎಂಬ ಹೇಳಿಕೆಯಿಂದ ಸಿದ್ದಾಜಿ ಮತ್ತು ಸಪ್ಪೆಕ್ಕ ಇನ್ನಿಬ್ಬರು ಒಡಹುಟ್ಟಿದವರೆಂದು ಭಾವಿಸಿಬಹುದೆ? ಅಥವಾ ಇವರು ಚೆನ್ನಮ್ಮ ಲಿಂಗಮ್ಮ ರಾಣಿಯರ ಒಡಹುಟ್ಟಿದವರೊ ಇಲ್ಲವೆ ಚಿಕ್ಕಭೂಪಾಲನ ಒಡಹುಟ್ಟಿದವರೊ ಸರಿಯಾಗಿ ಗೊತ್ತಾಗುವುದಿಲ್ಲ. ಏಕೆಂದರೆ ಈ ಉಲ್ಲೇಖ ಗೋಳಿನ ಮಧ್ಯೆ ಬರುವುದರಿಂದ ಸಂಬಂಧ ಖಚಿತವಾಗದೆ ಹೋಗುವುದು. ಈ ಸಂದರ್ಭದಲ್ಲಿಯೇ ತಮ್ಮ ಬಸವಯ್ಯ (ಸಂ.೧೬-.ಸಂ.೬೬) ತಮ್ಮ ಶಾಖೇಂದ್ರ (ಸಂ.೧೬-.ಸಂ. ೬೭) ಮತ್ತು ಯಲ್ಲಮೇಂದ್ರ (ಸಂ.೧೬-.ಸಂ೬೮)ರ ಉಲ್ಲೇಖಗಳಿವೆ. ಇವರೆಲ್ಲರೂ ಇಮ್ಮಡಿ ಚಿಕ್ಕಭೂಪಾಲನ ಸೋದರ ಸಿದ್ದೇಂದ್ರನ  ಮಕ್ಕಳಾಗಿರ ಬೇಕು ಎಂದೆನಿಸುತ್ತದೆ. ಈ ಹೆಸರುಗಳು ಬರುವ ಹಿಂದಿನ ಪದ್ಯದಲ್ಲಿ ಇಮ್ಮಡಿ ಚಿಕ್ಕಭೂವರನನುಜ ಸಿದ್ದೇಂದ್ರನಳಲಿದ (೧೬-೬೫) ಎಂಬ ಮಾತಿರುವುದರಿಂದ ಹೀಗೆ ಭಾವಿಸಲಾಗಿದೆ. ಈ ಸಿದ್ದೇಂದ್ರ ಹಿಂದೆ ನೋಡಿದ ಸಿದ್ದಾಜಿ ಬೇರೆ ಬೇರೆ ವ್ಯಕ್ತಿಗಳಿರ ಬೇಕೆನಿಸುತ್ತದೆ.

   ಇಮ್ಮಡಿ ಚಿಕ್ಕಭೂಪಾಲನಿಗೆ ಮೂವರು ಮಕ್ಕಳಿದ್ದರೆಂದು ತಿಳಿದುಬಂದಿದೆ. ತೋಟೇಂದ್ರ, ಸಪ್ಪೇಗೌಡ ಮತ್ತು ಚನ್ನಪ್ಪಗೌಡರೇ ಆ ಮೂವರು. ಹಿರಿಯವನಾದ ತೋಟೇಂದ್ರ ಹರತಿಯ ಕೋಟೆಯ ಯುದ್ಧದಲ್ಲಿ ಮಡಿದ. ಎರಡನೆಯವನಾದ ಸಪ್ಪೇಗೌಡ ದೇಶಸಂಚಾರದಲ್ಲಿದ್ದನು. ಮೂರನೆಯವನಾದ ಚನ್ನಪ್ಪಗೌಡ ಚನ್ನರಾಯ ದುರ್ಗದಲ್ಲಿ ಅಳುತ್ತಿದ್ದನು. ಚನ್ನಪ್ಪಗೌಡರ ವಿಷಯದಲ್ಲಿ ಕಾವ್ಯ ಚಕಾರವೆತ್ತುವುದಿಲ್ಲ. ಯುದ್ದ ನಡೆದಾಗ ಸಪ್ಪೇಂದ್ರ (ಸಪ್ಪೇಗೌಡ) ಇರಲಿಲ್ಲವೆನ್ನುವುದನ್ನು ಕಾವ್ಯದ ಈ ಪದ್ಯ (ಸಂ.೧೭-.ಸಂ. ೬೪) ಸಮರ್ಥಿಸುತ್ತದೆ.

ಒಂದು ನೆವದೆ ಪರದೇಶವನೈದಿದ

ನಂದನಾಗ್ರಣಿ ಸಪ್ಪೇಂದ್ರ

ಬಂದನೀ ವಾರ್ತೆಯ ಕೇಳದ ಮುನ್ನವಾ

ನಂದವ ಜನಕೊದಗಿಸುತ

 ಆದರೆ ಈನೆವಯಾವುದೆಂಬುದು ಉಳಿದಿದೆ ಹಾಗೆಯೇ ಪರದೇಶ ಯಾವುದು ಅಲ್ಲಿಗೆ ಏಕೆ ಹೋಗಿದ್ದ ಎಂಬ ವಿವರಗಳೂ ಲಭ್ಯವಿಲ್ಲ. ಚಿಕ್ಕಭೂಪಾಲ ಮಡಿದ ತರುವಾಯ ಸಪ್ಪೇಂದ್ರನಿಗೆ ಗುರು ಬೋಳೇಶ್ವರರು ಪಟ್ಟಕಟ್ಟಿದ  ವಿಷಯವನ್ನು ಕಾವ್ಯ ಪ್ರಸ್ತಾಪ ಮಾಡುತ್ತದೆ. ಇಲ್ಲಿಯ ಬೋಳ ಬಸವೇಶ್ವರರು  ತೋಂಟದಾರ್ಯರ ಶಿಷ್ಯರಾದ ಬೋಳಬಸವೇಶರಾಗಿರದೆ ಮತ್ತೊಬ್ಬರಾಗಿದ್ದು ಮಹಾನಾಡ ಪ್ರಭುಗಳ ರಾಜಗುರುಗಳಾಗಿದ್ದವರು. ಹರವೆ ಕಾಳಗದಲ್ಲಿ ತೋಂಟದರಾಯ ಮತ್ತು ತಂದೆ ಇಮ್ಮಡಿ ಚಿಕ್ಕ ಭೂಪಾಲರು ವೀರಾವೇಶದಿಂದ ಹೋರಾಡಿ ಮರಣವನ್ನಪ್ಪಿದ ಸಂದರ್ಭದಲ್ಲಿ ಮಹಾನಾಡ ಮನೆತನ ಅಳಿದು ಹೋಗುವುದನ್ನು ತಪ್ಪಿಸಲು ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಭಯಭಕ್ತಿಯೊಳಗೆರಗಿರ್ಪ ಸಪ್ಪೇಂದ್ರಗಭಯ ಹಸ್ತವಿಟ್ಟು ಮಂಡೆಯೊಳು ಜಯಜಯವೆಂದೆತ್ತಿ ಯಪ್ಪಿ ಬೋಲೇಶನು ಸಿರಿನೊಸಲೊಳು ಭಸಿತವನ್ನಿಟ್ಟು ಪಟ್ಟವ ಹರುಷದಿ ಕಟ್ಟಿ ಸ್ಥಿರ ರಾಜ್ಯವನ್ನಾಳೆಂದು ಹರಸುತ್ತಾರೆ. ಹೀಗೆ ಇಮ್ಮಡಿ ಚಿಕ್ಕಭೂಪಾಲನ ನಂತರ ಅವನ ಮಗ ಸಪ್ಪೇಂದ್ರ ಆಳಿದನೆಂದು ಸ್ಪಷ್ಟವಾಗುವುದು. ಇವನು  ಮುಮ್ಮಡಿ ಚಿಕ್ಕಭೂಪಾಲ (ಚಿಕ್ಕಪ್ಪಗೌಡ) ನಾಗಿ ಬಿಜ್ಜಾವರ ರಾಜಧಾನಿಯಿಂದ ಆಳಿ ನಂತರ ಮುಂದೆ ತನ್ನ ರಾಜಧಾನಿಯನ್ನು ಮಧುಗಿರಿಗೆ ವರ್ಗಾಯಿಸಿದನು. ಇವನು ತನ್ನ ತಂದೆ ಇಮ್ಮಡಿ ಚಿಕ್ಕಭೂಪಾಲ ನಡೆಸುವ ರಾಜಕಾರ್ಯವನ್ನು ಬಿಡದೆ ನಿರ್ವಹಿಸಿ (ಸಂ.೧೭-.ಸಂ.೭೧) ದನೆಂಬ ಉಲ್ಲೇಖ ಕಾವ್ಯದಲ್ಲಿದೆ. ಇದು ಸಪ್ಪೇಂದ್ರ ವೆಂಕಟಪತಿರಾಯನಿಗೆ ಅಧೀನನಾಗಿ ನಡೆದುಕೊಂಡನೆಂದು ಅರ್ಥಕೊಡುತ್ತದೆ. ಆದರೆ ಪೆನುಗೊಂಡೆಯನ್ನು ಗೆದ್ದುಕೊಟ್ಟನೆ ಎಂಬುದು ಸ್ಪಷ್ಟವಾಗುವುದಿಲ್ಲ. ಆದರೂ ಈ ಹಿಂದೆ ಉಲ್ಲೇಖಿಸಿದ ಕರಿಕೆರೆ ಶಾಸನದಲ್ಲಿ ಪೆನುಗೊಂಡೆಯಲು ರತ್ಮಸಿಂಹಾಸನಾರೂಢನಾಗಿ. ವೆಂಕಟಪತಿರಾಯನಿದ್ದನೆಂದು ಉಲ್ಲೇಖಿತವಾಗಿರುವುದರ ಕಡೆಗೆ ಗಮನ ಸೆಳೆಯಬಹುದು. ಇದರಿಂದ ಸಪ್ಪೇಂದ್ರನ ಆಳ್ವಿಕೆಯ ಕಾಲಕ್ಕೆ ಪೆನುಗೊಂಡೆ ವೆಂಕಟಪತಿರಾಯನಿಗೆ ಪುನಃ ಪ್ರಾಪ್ತವಾಗಿರುವುದು ಸ್ಪಷ್ಟವಾಗಿರುವುದು. ಇದು ಸಪ್ಪೇಂದ್ರನ ಸಾಹಸದಿಂದ ಆಯಿತೊ ಅಥವಾ ಸ್ವತಃ ವೆಂಕಟಪತಿರಾಯರೇ  ಪಡೆದರೂ  ಈ ವಿಷಯದ ಬಗೆಗೆ ಹೆಚ್ಚಿ ಮಾಹಿತಿಗಳು ಲಭ್ಯವಿರುವುದಿಲ್ಲ.

    ಸಪ್ಪೇಗೌಡರ ಸಂತತಿಯಲ್ಲಿ ಸಂಗಪ್ಪಗೌಡರೂ, ಹಿರೇತೋಂಟಪ್ಪಗೌಡರೂ, ಕಾಳಚಿಕ್ಕಪ್ಪಗೌಡರೂ ಮದ್ದಗಿರಿ ಚನ್ನರಾಯದುರ್ಗ ಮಿಡಿಗೇಶಿಗಳನ್ನು ಆಳುತ್ತಿದ್ದರು ಎಂಬುದಾಗಿ ನಂತರದ ಶಾಸನಗಳಲ್ಲಿ ತಿಳಿದು ಬರುತ್ತದೆ. ಇಲ್ಲಿ ಮಿಡಿಗೇಶಿಯ ಪ್ರಸ್ತಾಪ ಬಂದಿರುವುದರಿಂದ ಸಪ್ಪೇಂದ್ರನ ತರುವಾಯ ಆ ಸಂತತಿಯ ಯಾರಾದರೊಬ್ಬರು ಮಿಡಿಗೇಶಿಯನ್ನು ತಮ್ಮ ಆಳ್ವಿಕೆಗೆ ಪುನಃ ಪಡದಿರಬೇಕೆಂದು ತೋರುವುದು. ಇದರಿಂದ ಇಮ್ಮಡಿ ಚಿಕ್ಕಪ್ಪಗೌಡರ ಆಸೆ  ಈ ಮೂಲಕ ನೆರವೇರಿದಂತಾಯಿತೆಂದು ಹೇಳಬಹುದು.

  ಕೃತಿಯ ಹಿನ್ನೆಲೆಯಲ್ಲಿ  ಇಮ್ಮಡಿ ಚಿಕ್ಕಭೂಪಾಲನ ವ್ಯಕ್ತಿತ್ವ: : ಇಮ್ಮಡಿ ಚಿಕ್ಕಭೂಪಾಲನನ್ನು ಕುರಿತಾಗಿ ಒಂದಿಷ್ಟು ಖಚಿತ ಸಂಗತಿಗಳು ಸಿಗುವುದು ಈತನ ಆಶ್ರಯದಲ್ಲಿಯೇ ಇದ್ದ  ಮಲ್ಲಿಕಾರ್ಜುನ ಕವಿಯ ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ ಕೃತಿಯಿಂದ. ಇಮ್ಮಡಿ ಚಿಕ್ಕ ಭೂಪಾಲನನ್ನು ಕುರಿತಾಗಿಯೇ ರಚನೆಗೊಂಡ ಇದುಚಿಕ್ಕಭೂಪಾಲನ ಸದಮಳ ಚಾರುಚರಿತೆಯಾಗಿದ್ದು (ಸಂ. 1- .ಸಂ.91) ಆತನ ಕಾಲದ ರಾಜಕೀಯ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ತಿಳಿದುಕೊಳ್ಳಲು ನೆರವಾಗುತ್ತದೆ.

  ಕರಿತಿಮ್ಮ ಚಿಕ್ಕಭೂಪ ಮತ್ತು ಸೋಮಾಂಬೆಯರಿಗೆ ತೋಂಟದ ಸಿದ್ದಲಿಂಗಶಿವಯೋಗಿಗಳ  ಆರ್ಶಿರ್ವಾದದಿಂದ ಹುಟ್ಟಿದ ಮಗ ಇಮ್ಮಡಿ ಚಿಕ್ಕಭೂಪಾಲ ಈತ ತನ್ನ  ತಂದೆ ಮತ್ತು ಅಜ್ಜರಂತೆ ಪರಾಕ್ರಮದಿಂದ  ಮೆರೆಯುತ್ತಾರೆ.  ಈತನಿಗೆ   ಸಿದ್ದೇಂದ್ರನೆಂಬ ತಮ್ಮ ಇದ್ದನೆಂಬ ಸಂಗತಿ ತಿಳಿದು ಬರುತ್ತದೆ. (ಸಂ. 16- .ಸಂ.65) ಇಮ್ಮಡಿ ಚಿಕ್ಕಭೂಪಾಲನಿಗೆ ಚನ್ನಾಜಮ್ಮ ಎಂಬ ಪಟ್ಟಮಹಿಷಿ ಮತ್ತು ಲಿಂಗಮ್ಮ ಎಂಬ ಇನ್ನೊಬ್ಬ ರಾಣಿ ಇದ್ದಳು.ವೀರಶೈವ ಅರಸನಾದರೂ ಗೋಪಾಲಕೃಷ್ಣ ಮತ್ತು ಕೇಶವ  ಗುಡಿ ಕಟ್ಟಿಸಿ ಬ್ರಾಹ್ಮಣರಿಗೂ ಜಂಗಮರಿಗೂ ಗ್ರಾಮಭೂಮಿಗಳನ್ನು ದಾನವಾಗಿ ಕೊಟ್ಟ ಧರ್ಮಸಹಿಷ್ಣತೆಯನ್ನು ಮೆರೆದವನು. ಇಮ್ಮಡಿಚಿಕ್ಕಭೂಪಾಲನ ತತ್ವ ಮತ್ತು ಆಚರಣೆಯಲ್ಲಿ ಒಮ್ಮತವನ್ನು ಕಾಣುತ್ತೇವೆ. ಅರಮನೆಯಲ್ಲಿ ಬಸವಾದಿ ಸಕಲ ಪುರಾತನ ಕಥೆಯನ್ನು ಹೇಳುವ ಶಾಸ್ತ್ರಪಟಗಳನ್ನು ಹಾಕಿಕೊಂಡು ಅವರ ಮಾರ್ಗದಲ್ಲಿ ನಡೆಯುವವನು. ಕುಲದಲ್ಲಿ ಯಾರೇ ಆಗಲಿ ಶಿವಭಕ್ತಿಯ ನೆಲೆ ತಿಳಿದು ನಡೆಯುವವರನ್ನು ಶಿವನೆಂದೇ ಅವರನ್ನು ಪೂಜಿಸುತ್ತಲಿದ್ದ ಅರಸನೀತ ಗುರುಲಿಂಗ ಜಂಗಮ ಭಕ್ತಯುಕ್ತನು ಬಿಜ್ವವರದಿರ್ಮಡಿ ಚಿಕ್ಕೇಂದ್ರ (ಸಂ.1-.ಸಂ.57). ಈತನ ರಾಜಧಾನಿಯಾದ ಬಿಜ್ಜಾವರದಲ್ಲಿ ನಟರ, ವಂದಿಮಾಗಧರ ಜೋಯಿಸರ ಕವಿಗಮಕಿಗಳ ಸದ್ವಿದ್ಯಾಕೋವಿದರ ಶಿವಭಕ್ತರ ದಂಡನಾಯಕರ ಮಂತ್ರಿಗಳ ಭಂಡಾರಿಗಳ ಕರಣಿಕರ ವ್ಯವಸ್ಥಿತವಾದ ಮನೆಗಳು, ಆನೆ ಕಟ್ಟುವ, ಯುದ್ಧ ಸಾಮಗ್ರಿ ಇಡುವ ಸಂಗ್ರಹಾಲಯಗಳು ಹಾಗೂ  ಹಾದಿಯಲ್ಲಿ ಬಂಗಾರ ಬಟ್ಟೆ, ತಾಂಬೂಲ ಸುಗಂಧ ಹೂವಿನ ಅಂಗಡಿಗಳು ನಿಬಿಡವಾಗಿದ್ದವು. ನಗರದ ಹೊರವಲಯಲ್ಲಿ ಸದಾ ಹಸಿರಾದ ಉದ್ಯಾನ ಇರುವುದು ಇದು ಅಲ್ಲದೆದಾನ ಶೌರ್ಯ ವಿದ್ಯಾದಿ ಸದ್ಗುಣಜಾಲಯುತರಪ್ಪ ಸಜ್ಜನರು ಪತಿಭಕ್ತಿರೂಪಶೀಲಾದಿ ಗುಣಾನ್ವಿತ ಸತಿಯರು (ಅದೆ 2-35) ಅಲ್ಲಿದ್ದರು  ಎಂದು ಕವಿಯು ಇಮ್ಮಡಿ ಚಿಕ್ಕಭೂಪಾಲನ ರಾಜಧಾನಿಯಾದ ಬಿಜ್ಜಾವರದ ಬಗೆಗೆ ವರ್ಣನೆಯನ್ನು ಮಾಡಿದ್ದು ಸ್ವಲ್ಪ ಮಟ್ಟಿಗೆ ಉತ್ಪ್ರೇಕ್ಷೆಯಿಂದ ಕೂಡಿದೆ ಎಂದೆನಿಸುತ್ತದೆ. ವಿದ್ಯಾಪ್ರಿಯನಾಗಿದ್ದ  ಈತ ವಿದ್ಯಾಕೋವಿದರನ್ನು, ಕಲಾಕಾರರನ್ನು ಪ್ರೋತ್ಸಾಹಿಸುತ್ತಿದ್ದನು ಹಾಗೂ ಅರಮನೆಯಲ್ಲಿ ಸ್ವಂತ ಶಾರದಾ ಭಂಡಾರವನ್ನು ಹೊಂದಿದ್ದನೆಂಬ ಎಂಬ ಸಂಗತಿಯು ತಿಳಿಯುತ್ತದೆ. ತನ್ನ ಪಾಳೆಯಪಟ್ಟಿನ ಆಡಳಿತವನ್ನು ನಿಷ್ಠೆಯಿಂದ ನಿರ್ವಹಿಸಿ ಗಡಿಯನ್ನು ವಿಸ್ತರಿಸಿ ಕೋಟೆ ಮತ್ತು ದೇವಾಲಯಗಳನ್ನು ಕಟ್ಟಿಸಿದುದಾಗಿ ತಿಳಿದು ಬರುತ್ತದೆ. ಈತನು ತನ್ನ ಕಾಲಾವಧಿಯಲ್ಲಿ ಮಾಡಿದ ಸಾಂಸ್ಕೃತಿಕ ಕಾರ್ಯಗಳು ಹಾಗೂ ಲೋಕೋಪಯೋಗಿ ಕಾರ್ಯಗಳ ಬಗೆಗೆ ಈ ಕೃತಿಯಲ್ಲಿ ವಿವರಗಳಿವೆ.

     ಬಿಜ್ಜಾವರದ ಪಶ್ವಿಮಕ್ಕೆ 3 ಮೈಲಿ ಅಂತರದಲ್ಲಿ ಕ್ರಿ..ಸು 1593 ರಲ್ಲಿ ಕೋಟೆ ಕೆರೆ ಮತ್ತು ಪಂಚದೇವಾಲಯಗಳನ್ನು ನಿರ್ಮಿಸಿ ಅದಕ್ಕೆ  ಗುರು ತೋಂಟದ   ಸಿದ್ಧೇಶ್ವರರ ಹೆಸರಿನಲ್ಲಿ  ಸಿದ್ಧಾಪುರವೆಂದು ಹೆಸರಿಟ್ಟನು ಪ್ರಸಿದ್ಧವಾದ ಮಧುಗಿರಿ ಕೋಟೆಯ ಜೀರ್ಣೋದ್ಧಾರ ಮಾಡಿಸಿದನು. ಮಧುಗಿರಿಗೆ 5  ಮೈಲು ಅಂತರದಲ್ಲಿ ದಕ್ಷಿಣ ದಿಕ್ಕಿಗಿರುವ ಚನ್ನರಾಯನದುರ್ಗ ಹೆಸರಿನ ಕೋಟೆಯನ್ನು ಅಕಾಲಿಕ ಮರಣ ಹೊಂದಿದ ತನ್ನ ದ್ವಿತೀಯ ಪುತ್ರನಾದ ಚನ್ನರಾಯನ ನೆನಪಿಗೋಸ್ಕರ ಕಟ್ಟಿಸಿ ಅಲ್ಲಿ ಚೆನ್ನಕೇಶವಮೂರ್ತಿ ಪ್ರತಿಷ್ಠಾಪನೆ ಬಸವನಹಳ್ಳಿಯ ಬಳಿಯಲ್ಲಿ ಕಟ್ಟಿಸಿದ ವಿವರಗಳ ಬಗೆಗೆ ಶಾಸನಗಳಲ್ಲಿಯೂ ಉಲ್ಲೇಖವಿದೆ.

   ವಿಜಯನಗರ ಸಾಮ್ರಾಜ್ಯ  ಪ್ರಸಿದ್ಧಿ ಪಡೆಯಲು ಅಲ್ಲಿಯ ಚಕ್ರವರ್ತಿಗಳಷ್ಠೇ ಕಾರಣರಲ್ಲ.  ಚಕ್ರವರ್ತಿಗಳಲ್ಲಿ ಸ್ವಾಮಿನಿಷ್ಠೆಯನ್ನು ಇಟ್ಟುಕೊಂಡಿದ್ದ ಮಹಾನಾಡ ಪ್ರಭುಗಳಂತಹ ಪಾಳೆಯಗಾರರು ಕಾರಣ ಕರ್ತರು ಎಂಬುದನ್ನು ಮರೆಯುವಂತಿಲ್ಲ. ಇತಿಹಾಸಕಾರರಿಂದ ನಿರ್ಲಕ್ಷ್ಯಕ್ಕೊಳಗಾದ, ಇತಿಹಾಸ ಪುಟಗಳಲ್ಲಿ ದಾಖಲಾಗದ   ಅರಸರ ಕುರಿತಾದ   ಹೆಚ್ಚಿನ ಆಳವಾದ ಅಧ್ಯಯನ  ಆಗಬೇಕಾಗಿದೆ.

   ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ ಕೃತಿಯು ಚಾರಿತ್ರಿಕ ಕಾವ್ಯವಾಗಿದ್ದು ಇಮ್ಮಡಿ ಚಿಕ್ಕಭೂಪಾಲನ ತಂದೆ-ತಾಯಿ, ಹೆಂಡತಿ, ಮಕ್ಕಳು, ಹರವೆಯ ಕಾಳಗದ ವಿವರ, ಅರಮನೆ ಮತ್ತು ಗುರುಮನೆ ಸಂಬಂಧಗಳ ವಿವರಗಳನ್ನು ಕಾಣಬಹುದಾಗಿದೆ. ಈ ಕೃತಿಯಲ್ಲಿ ಮಹಾನಾಡ ಪ್ರಭುಗಳ ಪೂರ್ವಜರ ವೃತ್ತಾಂತವಾಗಲೀ, ಇತರೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳ ಬಗೆಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ. ಮಹಾನಾಡ ಪ್ರಭುಗಳ ಮನೆತನದ ಪೂರ್ಣ ಚಾರಿತ್ರಿಕ ಸಂಗತಿಗಳನ್ನು ಈ ಕೃತಿಯಿಂದ ನಿರೀಕ್ಷಿಸಲು ಸಾಧ್ಯವಿಲ್ಲವಾಗಿದೆ. ಈ ಕೃತಿಯಲ್ಲಿ ಚಾರಿತ್ರಿಕ ವಿವರಗಳಿಗಿಂತ ವರ್ಣನೆಗಳಿಗೆ ಅಧಿಕ ಸ್ಥಾನ ಕಲ್ಪಿಸಿ ಕೊಡಲಾಗಿದೆ. ಆದಾಗ್ಯೂ ಕವಿಯು ಸಮಕಾಲೀನನಾಗಿದ್ದು ಇಮ್ಮಡಿ ಚಿಕ್ಕಭೂಪಾಲನ ಕಾಲದ ಅಂದಿನ ಅರಮನೆಯ ವಿದ್ಯಮಾನಗಳನ್ನು, ಯುದ್ಧದ ಪ್ರಸಂಗಗಳನ್ನು ಪ್ರತ್ಯಕ್ಷವಾಗಿ ಕಂಡವನಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಈ ಸಾಂಗತ್ಯ ಕೃತಿಯಲ್ಲಿ ಉಲ್ಲೇಖ ಗೊಂಡ ವಿವರಗಳಲ್ಲಿ ಸ್ವಲ್ಪ ಮಟ್ಟಿಗೆ ಐತಿಹಾಸಿಕತೆ ಇದ್ದು ಚಾರಿತ್ರಿಕ ಕಾವ್ಯವಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟತೆಯನ್ನು ಪಡೆದು ಕೊಂಡಿದೆ. ಆದರೆ ಈ ಕೃತಿಯ ಬಗೆಗೆ ಹೆಚ್ಚಿನ ಅಧ್ಯಯನ ನಡೆಯದ ಕಾರಣ ಮಲ್ಲಿಕಾರ್ಜುನ ಕವಿ ಮತ್ತು ಆತನ ಈ ಕೃತಿಯು ಸಾಹಿತ್ಯಾಭ್ಯಾಸಿಗಳಿಗೆ ಅಪರಿಚಿತವೇ ಆಗಿದೆ.

   ಕೃತಿಯಲ್ಲಿ ಉಲ್ಲೇಖ ಗೊಂಡ ವ್ಯಕ್ತಿನಾಮ, ಗ್ರಂಥನಾಮ, ಸ್ಥಳನಾಮ, ರಾಜಕೀಯ ಸಂಘರ್ಷ, ಧಾರ್ಮಿಕ ವಿವರ, ಜೀವನ ಮೌಲ್ಯ ಹಾಗೂ ಆಚರಣೆಗಳ ಮೂಲಕ ೧೬ ನೆಯ ಶತಮಾನದ ಸ್ಥಳೀಯ ಅರಸುಮನೆತನದ ಪರಿವಾರದ ಮತ್ತು ಪ್ರಜಾಪರಿಸರದ ಪರಿಚಯವನ್ನು ಮಾಡಿಕೊಳ್ಳ ಬಹುದಾಗಿದೆ. ಕೃತಿಯಲ್ಲಿ ರಾಜಧಾನಿಯ ವಿವರ, ರಾಜಗೃಹ, ರಾಜಬೀದಿಗಳ ವರ್ಣನೆ, ಸಿದ್ಧಮಲ್ಲೇಶನು ತೋಂಟದ ರಾಯನಿಗೆ ಭೋಧಿಸಿದ ರಾಜನೀತಿ, ಬೇಟೆಯ ವರ್ಣನೆ, ಪರನಾರಿ ಸೋದರ ರಾಮನಾಥ ಚರಿತೆಯ ಪಠನ, ಸೈನ್ಯ ಸಂಗ್ರಹ, ಕೋಟೆಯ ಕಾಳಗ, ಚಿನನಾಗನ ಮಸ್ತಕಾರ್ಪಣೆ, ಚೆನ್ನಬಸವಮ್ಮನ ಸಹಗಮನ, ಇತ್ಯಾದಿ ವಿವರಗಳು ಆ ಕಾಲದ ಯುಗಧರ್ಮದ ವಿವರಗಳ ದಾಖಲಾತಿಯೇ ಸರಿ. ಕೃತಿಯಲ್ಲಿಯ ಪ್ರಮುಖ ಭಾಗವಾದ ಹರವೆಯ ಕಾಳಗವು ಹದಿನಾರನೆಯ ಶತಮಾನದ ಪಾಳೆಯಗಾರ ಮನೆತನದ ಯುದ್ಧದ ವಿವರಗಳನ್ನು ವಿವರಣಾತ್ಮಕವಾಗಿ ಬಿಡಿಸಿ ಹೇಳುತ್ತದೆ.

      ಒಟ್ಟಾರೆ ಕನ್ನಡ ಕಾವ್ಯಗಳಲ್ಲಿ ಪ್ರಕಟವಾಗುವ ಐತಿಹಾಸಿಕ ಸಂಗತಿಗಳ ಮೂಲಕ ಕನ್ನಡ ನಾಡಿನ ಇತಿಹಾಸವನ್ನು ಪುನರ್ರಚಿಸ ಬಹುದು ಹಾಗೂ ಕಾವ್ಯಗಳನ್ನು ಚಾರಿತ್ರಿಕ ನೆಲೆಯಲ್ಲಿಯೂ ಅರ್ಥಮಾಡಿಕೊಳ್ಳಬಹುದು ಎಂಬುದಕ್ಕೆ ಈ ಸಾಂಗತ್ಯ ಕೃತಿಯು ನಿದರ್ಶನವಾಗಿದೆ. ತೆರನಾದ ಕೃತಿಗಳಲ್ಲಿಯ ಐತಿಹಾಸಿಕ-ಸಾಂಸ್ಕೃತಿಕ ವಿಷಯಗಳನ್ನು ಹೆಕ್ಕಿ ತೆಗೆದು ಸೂಕ್ಷ್ಮಸ್ತರದ ಅಧ್ಯಯನ ಮಾಡುವುದರ ಮೂಲಕ ಕನ್ನಡ ನಾಡು,ನುಡಿ, ಸಂಸ್ಕೃತಿಯ ನೆಲೆಗಟ್ಟಿನ   ಪರಿಧಿಯನ್ನು ವಿಸ್ತರಿಸಲು ಸಹಾಯಕವಾಗುತ್ತದೆ.

ಪರಾಮರ್ಶನ ಗ್ರಂಥಗಳು

    .ಕವಿ ಮಲ್ಲಿಕಾರ್ಜುನಕೃತ ಮಹಾನಾಡಪ್ರಭು ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ( ಸಂ:ಎಂ.ಎಂ   ಕಲಬುರ್ಗಿಮತ್ತು ಬಿ.ಆರ್.ಹಿರೇಮಠ) ಶ್ರೀ ಮುರುಘಾಮಠ, ಧಾರವಾಡ, ೧೯೭೭

 . ಮಹಾನಾಡ ಪ್ರಭುಗಳು ಸಂ: ಕೆ.ಆರ್.ಬಸವರಾಜು, ಎಸ್.ಪರಮಶಿವಮೂರ್ತಿ,

    ನೊಳಂಬ ವೀರಶೈವ ಸಂಘ, ಬೆಂಗಳೂರು, ೧೯೯೫

    . ಕೆ .ನಾರಾಯಣಾಚಾರ್ಯ ಮಧುಗಿರಿ ಚರಿತ್ರೆ ೧೯೪೫

    . ರಾಮೇಗೌಡ, ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು

         ಚಿತ್ರಕೂಟ, ಮೈಸೂರು, ೧೯೯೨

    . ಸಿ.ನಾಗಭೂಷಣ, ಶರಣ ಸಾಹಿತ್ಯ ಸಂಸ್ಕೃತಿ ಕೆಲವು ಅಧ್ಯಯನಗಳು

       ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ೨೦೦೦

    . ಸಿ. ನಾಗಭೂಷಣ,ಸಾಹಿತ್ಯ-ಸಂಸ್ಕೃತಿ ಹುಡುಕಾಟ,ಅಮೃತವರ್ಷಿಣಿ ಪ್ರಕಾಶನ, ರಾಯಚೂರು, ೨೦೦೨

                    ಸಾಹಿತ್ಯ-ಸಂಸ್ಕೃತಿ ಅನ್ವೇಷಣೆ, ಸಿ.ವಿ.ಜಿ. ಪಬ್ಲಿಕೇಶನ್, ಬೆಂಗಳೂರು,2006

 

  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...