ಗುರುವಾರ, ಅಕ್ಟೋಬರ್ 17, 2024

 

ಪುರಾತನ ಶರಣ ಕುಂಬಾರ ಗುಂಡಯ್ಯ

                    ಡಾ.ಸಿ.ನಾಗಭೂಷಣ

     ಕುಂಬಾರ ಗುಂಡಯ್ಯ ಸಾಮಾನ್ಯ ಶಿವಭಕ್ತ. ಮಡಕೆ ಮಾಡುವುದೇ ಅವನ ಕಾಯಕ ವೃತ್ತಿ. ನಿಷ್ಠೆಯಿಂದ ಕಾಯಕ ಮಾಡುವುದು, ಅದರ ಮೂಲಕ ಶಿವಾರ್ಚನೆ ಸಲ್ಲಿಸುವುದು ಅವನ ದಿನಚರಿ, ಆ ಕಾಯಕ ವೃತ್ತಿಯನ್ನೇ ತನ್ನ ಅಧ್ಯಾತ್ಮಕ್ಕೂ ಅಳವಡಿಸಿಕೊಂಡಿದ್ದವನು. ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣವೇ  ಶಿವಭಕ್ತ ಕುಂಬಾರ ಗುಂಡಯ್ಯನ ಜನ್ಮಸ್ಥಳ ಎಂಬುದು ವಿದ್ವಾಂಸರ ಅಭಿಮತ. ಹರಿಹರ ರಗಳೆಯಲ್ಲಿ ಬಲ್ಲುಪುರ ಎಂದಿದೆ. ಶಾಸನಗಳ ಪ್ರಕಾರ ಈ ಪಟ್ಟಣವು  ಭಲ್ಲೂ ನಗರ, ಭಲ್ಲುಂಕ, ಭಾಲಿಕ, ಭಾಲಕ ಎಂದು ಕರೆಯಲ್ಪಟ್ಟಿದೆ. ಕುಂಬಾರ ಗುಂಡಯ್ಯನ ಬಗೆಗೆ ಶಾಸನಗಳು, ವಚನಕಾರರ ವಚನಗಳು, ವೀರಶೈವ ಕೃತಿಗಳು ಜನಪದ ಸಾಹಿತ್ಯದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉಲ್ಲೇಖಗಳು ದೊರೆಯುತ್ತವೆ.

       ಕುಂಬಾರ ಗುಂಡಯ್ಯನ ಬಗೆಗೆ ಐತಿಹಾಸಿಕ ಸಂಗತಿಗಳು ಅಷ್ಟಾಗಿ ಲಭ್ಯವಿಲ್ಲ. ಬಸವ ಯುಗದವನೋ ಬಸವಪೂರ್ವ ಕಾಲದವನೋ ಎಂಬುದರ ಬಗೆಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿಗಳಿಲ್ಲ. ಈತನು ಆದ್ಯವಚನಕಾರನಾಗಿದ್ದು, ವಚನಗಳನ್ನು ರಚಿಸಿರುವುದರ ಬಗೆಗೆ ಯಾವುದೇ ಆಕರಗಳು ಉಪಲಬ್ಧವಿಲ್ಲ.  ಮಂಡ್ಯ ತಾಲೋಕಿನ ಕ್ರಿ.ಶ.೧೩೦೫ರ ಮರಡಿಪುರ ಶಾಸನದಲ್ಲಿಯ ಮರ್ತಲೋಕದ ಗಣಂಗಳ ಸಿರಿಯಾಳುವ ದಾಸ ದಸವರಂ ಓಹಿಲ, ನಂಬಿ, ಕುಂಬಾರಗುಂಡ, ಕರಿಕಾಲ ಚೋಳ, ಬಾಣ ಮಯೂರ ಕಾಳಿದಾಸ ಕೇಶಿರಾಜ, ಸುರಿಗೆಯ ಚಲ್ವಡರಾಯ ಸಂಗನಬಸವಯ್ಯ..ಏಕಾನ್ತದ ರಾಮಯ್ಯ ನೆಲುವಿಗೆಯ ಸಾಂತಯ್ಯ ಸಕಲಗಣಪರಿವೇಷ್ಠಿತ ಶ್ರೀಕಲದೇವ ಪ್ರಸಸ್ತಿ ಮಂಗಳಂ. ವೀರಮ್ಮಯ್ಯನ ಮಗ ಭಕ್ತರ ಕರುಣದ ಕಾರುಣ್ಯದ ಮಗ ಶರಣರ ದಾಸಶೋವನಶಿಂಗನ ಮಾರೆಯನಾಯಕ ಇತ್ಯಾದಿ ಹೆಸರುಹೇಳಿ ಕೇತನಹಟ್ಟಿಯನ್ನು ಶಿವಪುರವನ್ನಾಗಿ ಮಾಡಿ ಭಕ್ತರಿಗೆ ಕೊಟ್ಟ ಧರ್ಮದ ವಿವರಗಳನ್ನು ಒಳಗೊಂಡಿದೆ.( ಸಿ.ನಾಗಭೂಷಣ: ಶರಣ ಸಾಹಿತ್ಯ-ಸಂಸ್ಕೃತಿ ಕವಳಿಗೆ, ಪು.೫೧-೫೨) ಈ ಶಾಸನದಲ್ಲಿ ನೂತನ ಮತ್ತು ಪುರಾತನ ಶರಣರ ಉಲ್ಲೇಖದಲ್ಲಿ ಕುಂಬಾರ ಗುಂಡಯ್ಯನ ಬಗ್ಗೆ ಉಲ್ಲೇಖವಿದೆ. ಅಬ್ಬಲೂರಿನ  ಸೋಮೇಶ್ವರ ದೇವಾಲಯದ ಗೋಡೆಗಳಲ್ಲಿ ಜೇಡರ ದಾಸಿಮಯ್ಯ, ಸಿರಿಯಾಳ ಶೆಟ್ಟಿ ಮುಂತಾದ ಶರಣರ ಜೊತೆಗೆ  ಕುಂಬಾರ ಗುಂಡಯ್ಯನ  ಕುರಿತ ಚಿಕ್ಕ ಬರೆಹ ಮತ್ತು ಶಿಲ್ಪದ ಉಲ್ಲೇಖ ಇದೆ. ಇದರ ಕಾಲ ೧೨ ನೇ ಶತಮಾನ.  ಶಿಲ್ಪವು  ಶಿವನು ಕುಂಬಾರ ಗುಂಡಯ್ಯನ ಮುಂದೆ ನಾಟ್ಯ ಮಾಡಿದ ಚಿತ್ರವನ್ನು ಒಳಗೊಂಡಿದೆ. ನನಗೆ ತಿಳಿದ ಮಟ್ಟಿಗೆ ಈ ಶಿಲ್ಪವು ಗುಂಡಯ್ಯನಿಗೆ ಸಂಬಂಧಿಸಿದ ಪ್ರಾಚೀನ ಶಿಲ್ಪವಾಗಿದೆ. ಶಿಲ್ಪದ ಕೆಳಗೆ ʻಕುಂಬಾರ ಗುಂಡನ ಮುಂದೆ ಬಂದಾಡಿದ ನಮ್ಮ ಶಿವನುʼ ಎಂಬ ಬರೆಹವಿದೆ.

   ಕುಂಬಾರ ಗುಂಡಯ್ಯನು  ಬಸವಪೂರ್ವ ಯುಗದ ಶರಣ. ಇದಕ್ಕೆ ಆಧಾರ ಆದ್ಯ ವಚನಕಾರನಾದ ಜೇಡರ ದಾಸಿಮಯ್ಯನು ಗುಂಡಯ್ಯನನ್ನು ತನ್ನ ವಚನವೊಂದರಲ್ಲಿ ಪ್ರಸ್ತಾಪಿಸಿರುವುದು. ಈತನ ಬಗೆಗೆ ಜೇಡರ ದಾಸಿಮಯ್ಯ, ಶಿವಯೋಗಿ ಸಿದ್ಧರಾಮ ಮತ್ತು ಅಂಬಿಗರ ಚೌಡಯ್ಯರ ವಚನಗಳಲ್ಲಿ ಉಲ್ಲೇಖ ಇದೆ. ಜೇಡರ ದಾಸಿಮಯ್ಯನವರು ತಮ್ಮ ಒಂದು ವಚನದಲ್ಲಿ ಕುಂಬಾರ ಗುಂಡಯ್ಯನನ್ನು ನೆನೆಸಿಕೊಂಡಿದ್ದಾರೆ.

ನಂಬಿದ ಚೆನ್ನನ | ಅಂಬಲಿಯನುಂಡ ||

ಕೆಂಬಾವಿ ಭೋಗಯ್ಯನ ಹಿಂದಾಡಿ ಹೋದ ||

ಕುಂಭದ ಗತಿಗೆ | ಕುಕಿಲಿರಿದು ಕುಣಿದ ||(ಸಂಕೀರ್ಣ ವಚನ ಸಂಪುಟ ೨ ಸಂ:ಎಸ್.ವಿದ್ಯಾಶಂಕರ,ವಚನ ಸಂ.೧೦೧)

ನಂಬದೇ ಕರೆದವರ | ಹಂಬಲನೊಲನವು ರಾಮನಾಥ ||

ಶಿವಯೋಗಿ ಸಿದ್ಧರಾಮರು, ಕುಂಬಾರ ಗುಂಡಯ್ಯನ ಘನ ವ್ಯಕ್ತಿತ್ವದ ಬಗೆಗೆ ಇತರೆ ಶರಣರ ಉಲ್ಲೇಖದೊಂದಿಗೆ ಈ ಕೆಳ ಕಂಡಂತೆ ಪ್ರಸ್ತಾಪಿಸಿದ್ದಾರೆ.

ಕುಂಬಾರರೆಲ್ಲರು | ಗುಂಡಯ್ಯನಾಗಬಲ್ಲರೆ ||

ಮಡಿವಾಳರೆಲ್ಲರು | ಮಾಚಯ್ಯನಾಗಬಲ್ಲರೆ ||

ಜೇಡರೆಲ್ಲರು | ದಾಸಿಮಯ್ಯನಾಗಬಲ್ಲರೆ ||

ಎನ್ನ ಗುರು | ಕಪಿಲಸಿದ್ಧಮಲ್ಲೇಶ್ವರಯ್ಯಾ ||

ಪ್ರಾಣಿಗಳ ಕೊಂದು | ಪರಿಹರಿಸಬಲ್ಲಡೆ ||

ತೆಲುಗ | ಜೊಮ್ಮಯ್ಯನಾಗಬಲ್ಲರೆ (ಸಿದ್ಧರಾಮೇಶ್ವರ ವಚನ ಸಂಪುಟ ಸಂ: ಎಸ್. ವಿದ್ಯಾಶಂಕರ, ವ.ಸಂ.೧೪೫೫)

ಅಂಬಿಗರ ಚೌಡಯ್ಯನವರ ವಚನದಲ್ಲಿ ಕುಂಬಾರ ಗುಂಡಯ್ಯನ ವರ್ಣನೆಯಿದೆ :

[ನಂಬಿಯಣ್ಣ] ಮಾಡುವ ಭಕ್ತಿ | ನಾಡೆಲ್ಲ ಮಾಡಬಹುದಯ್ಯಾ ||

ಕುಂಬಾರ ಗುಂಡಯ್ಯ ಮಾಡುವ ಭಕ್ತಿ | ಊರೆಲ್ಲಾ ಮಾಡಬಹುದಯ್ಯಾ ||

ಬಸವಣ್ಣ ಮಾಡುವ ಭಕ್ತಿ | ಶಿಶುವೆಲ್ಲ ಮಾಡಬಹುದಯ್ಯಾ ||

ಈ ವಸುಧೆಯೊಳಗೆ | ಶುದ್ಧಭಕ್ತಿಯನರಿತು ||

ನಡೆದುದು ಬಟ್ಟೆಯಾಗದೆ? | ನುಡಿದುದು ಸಿದ್ದಿಯಾಗದೆ ?

ದೊಡ್ಡ ಭಕ್ತನೆಂದಾತ ನಮ್ಮ | ಅಂಬಿಗರ ಚೌಡಯ್ಯ ||(ಸಂಕೀರ್ಣ ವಚನ ಸಂಪುಟ ೧ ಸಂ:ವೀರಣ್ಣರಾಜೂರ, ವಚನ ಸಂ.೧೬೬)

    ಕಾಯಕನಿಷ್ಠ ಕುಂಬಾರ ಗುಂಡಯ್ಯ, ಕನ್ನಡ ನಾಡಿನ  ಗ್ರಾಮೀಣ ಭಾಗದಲ್ಲಿ ಇಂದಿಗೂ ಜನಪದರ ಭಾಗವಾಗಿರುವುದು ಕಂಡು ಬರುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿಯ  ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳ ರಕ್ಷಣೆಗಾಗಿ ಒಂದು ಕೋಲಿಗೆ ಗಡಿಗೆ ಮಗುಚಿ ಹಾಕಿ, ಸುಣ್ಣ ಬಳಿದು, 'ಬೆದರು ಬೊಂಬೆ'ಯನ್ನು ಮಾಡಿ ನಿಲ್ಲಿಸುತ್ತಾರೆ. ಆ ಗಡಿಗೆಯನ್ನು ಅವರು “ಗುಂಡನೆಂದು ಕರೆದು, ಕುಂಬಾರ ಗುಂಡಯ್ಯನು ತಮ್ಮ ಹೊಲದ ಬೆಳೆಗಳನ್ನು ರಕ್ಷಣೆ ಮಾಡುತ್ತಾನೆಂಬ ನಂಬಿಗೆಯನ್ನು ಇಟ್ಟುಕೊಂಡಿದ್ದಾರೆ. ಜನಪದ ಹಾಡುಗಳಲ್ಲಿಯೂ ಗುಂಡಯ್ಯನ ಕಾಯಕದ ಬಗೆಗೆ ಪ್ರಸ್ತಾಪ ಇದೆ. ಶರಣ ಕುಂಬಾರ ಗುಂಡಯ್ಯನ ಕುರಿತು ಜನಪದರಲ್ಲಿ,

ಮೂರುಲಿಂಗದ ಕಳೆಯ, ಬೀರುತಲಿ ಗುಂಡಯ್ಯ

ತೋರಿ ಆ ಕಳೆಯು ತನ್ನೊಳಗೆ | ಒಡಮೂಡಿ

ಸೂರಿ ಕಾಯಕವೆ ಜನಕಾಯ್ತು

ಕಾಯಕವೆ ಶಿವಭಕ್ತಿ, ಕಾಯಕವ ಶಿವಭಜನೆ

ಕಾಯಕವೆ ಲಿಂಗ ಶಿವಪೂಜೆ | ಶಿವಯೋಗ

ಕಾಯಕವೆ ಕಾಯ್ತ ಕೈಲಾಸ

ಬೇಡೆನಗೆ ಕೈಲಾಸ, ಬಾಡುವುದು ಕಾಯಕವು

ನೀಡೆನಗೆ ಕಾಯಕವ ಕುಣಿದಾಡಿ

ನಾಡ ಹಂದರಕೆ ಹಬ್ಬಿಸುವೆ! ಎಂಬ ವಿವರವಿದ್ದು, (ಬಿ.ಎಸ್.ಗದ್ದಗಿಮಠ, ಕನ್ನಡ ಜಾನಪದ ಗೀತೆಗಳು,ಪು.೧೦೫)  ಶರಣ ಕುಂಬಾರ ಗುಂಡಯ್ಯ ಕೈಲಾಸವನ್ನೂ ನಿರಾಕರಿಸಿ ನನಗೆ ಕಾಯಕವೇ ಇರಲಿ ಎಂದು ಬೇಡುತ್ತಾನೆ. ಕೈಲಾಸಕ್ಕಿಂತಲೂ ಕಾಯಕಕ್ಕೆ ಹೆಚ್ಚಿನ ಮನ್ನಣೆ ನೀಡಿದ್ದನ್ನು ಜನಪದ ಹಾಡುಗಳಲ್ಲಿ ಕಾಣಬಹುದಾಗಿದೆ.

 ಅದೇ ರೀತಿ,

 ಬೆಚ್ಚುಹಾಕಿದ ಗಡಿಗಿ ಮುಚ್ಚಿಟ್ಟ ಹೊಲ ಹುಲುಸು

 ಬಚ್ಚಾದ ಬೆಳೆಯ ಕಣವುಕ್ಕಿ ಗುಂಡಯ್ಯ

 ಹೆಚ್ಚಾಯ್ತು ನಿನ್ನ ಶಿವಭಕ್ತಿ

  ಎಂದು ಹಾಡುವ ಜನಪದರು, “ಗುಂಡಯ್ಯನ ಗಡಿಗೆ ಹೊಲವನ್ನು ಕಾಯುವುದು ಮಾತ್ರವಲ್ಲ, ಚಳಿಗಾಲದಲ್ಲಿ ಬೆಳೆಗಳಿಗೆ ಬೆಚ್ಚನೆಯ ಹಿತಕರವಾದ ಗಾಳಿಯನ್ನು ಬೀಸಿ ತರುತ್ತಾನೆ ಎಂದೂ ನಂಬುತ್ತಾರೆ. ಆ ಚಳಿಗಾಲದ ಗಾಳಿಯನ್ನು “ಕುಂಬಾರನ ಗಾಳಿಯೆಂದೇ ಕರೆಯುತ್ತಾರೆ. ಇಂತಹ ಶರಣ ಕುಂಬಾರ ಗುಂಡಯ್ಯ ನಮ್ಮ ಜನಪದದ ಬೇರುಗಳಲ್ಲಿ ಭದ್ರವಾಗಿ ನೆಲೆಯೂರಿದ್ದಾನೆ.

    ಈತನ ವೈಯಕ್ತಿಕ ವಿವರದ ಬಗೆಗೆ ಕಾವ್ಯ-ಪುರಾಣಗಳಲ್ಲಿ ಅಷ್ಟಾಗಿ ಕಂಡು ಬರುವುದಿಲ್ಲ. ಒಂದು ಹೇಳಿಕೆಯ ಪ್ರಕಾರ, ಗುಂಡಯ್ಯನ ತಂದೆ ಸತ್ಯಣ್ಣ, ತಾಯಿ ಸಂಗಮ್ಮ, ಆತನಿಗೊಬ್ಬಳು ಸಹೋದರಿ ಇದ್ದಳು. ಆಕೆಯೇ ನೀಲಲೋಚನೆ, ಕುಂಬಾರ ಗುಂಡಯ್ಯನ ಮಡದಿ ಶರಣೆ ಕೇತಲದೇವಿ. ಏಕ ಬ್ರಹ್ಮಯ್ಯನ ತಂಗಿ, ಬ್ರಹ್ಮಯ್ಯ ಗುಂಡಯ್ಯ ನೆಂಟರು, ಬ್ರಹ್ಮಯ್ಯನ ತಂಗಿಯನ್ನು ಗುಂಡಯ್ಯ ಹಾಗು ಗುಂಡಯ್ಯನ ತಂಗಿಯನ್ನು ಬ್ರಹ್ಮಯ್ಯನು ಮದುವೆಯಾಗಿದ್ದನು ಎಂಬ ಐತಿಹ್ಯಗಳಿದ್ದರೂ ಆತನ ಪತ್ನಿ ಕೇತಲದೇವಿಯ ವಿವರವನ್ನು ಹೊರತು ಪಡಿಸಿ ಉಳಿದ ವಿವರಗಳ ಬಗೆಗೆ ಕಾವ್ಯ ಮತ್ತು ಪುರಾಣಗಳಲ್ಲಿ ಯಾವುದೇ ಉಲ್ಲೇಖಗಳು ಇಲ್ಲ. 

    ಬೇರೆಲ್ಲೂ ದೊರೆಯದ  ಗುಂಡಯ್ಯನ ಕಾಯಕವೃತ್ತಿ, ಶಿವಭಕ್ತಿಯ ಪರಾಕಾಷ್ಠೆಯ ವಿವರಗಳು ಹರಿಹರನ ಕುಂಬಾರ ಗುಂಡಯ್ಯನ ರಗಳೆಯಲ್ಲಿ ಲಭ್ಯವಿವೆ. ಹರಿಹರ ಕವಿಯು ತನ್ನ ಕುಂಬಾರ ಗುಂಡಯ್ಯನ ರಗಳೆಯಲ್ಲಿ ಒಂದು ಸ್ಥಲದಲ್ಲಿಯೇ ವಿವರಿಸಿದ್ದಾನೆ. ಕುಂಬಾರ ಗುಂಡಯ್ಯನ ರಗಳೆಯು ಹಂಪೆಯ ವಿರೂಪಾಕ್ಷನ ಸ್ತುತಿಯೊಂದಿಗೆ ಪ್ರಾರಂಭವಾಗುತ್ತದೆ, ಉತ್ತರ ಭಾಗದಲ್ಲಿ ಹೆಸರಾದ ಬಲ್ಲುಕೆ ಪುರದಲ್ಲಿ ಒಬ್ಬ ಶಿವ ಶರಣನಿದ್ದ ಕುಂಬಾರ ವೃತ್ತಿ (ಘಟಕಾಯಕ) ಅವನ ಕಾಯಕ, ಅವನು ಅತ್ಯಂತ ನೇಮಸ್ಕ, ಅವನ ಚಕ್ರದ ಆಧಾರವೇ ಆಧಾರವಾಗಿ, ಚಕ್ರವೇ ಷಟ್ಚಕ್ರವಾಗಿ ದೇಹವೇ ಮಣ್ಣಾಗಿ, ನಿಷ್ಠೆಯೇ ದಂಡವಾಗಿ, ಭಕ್ತಿಯೇ ಮಡಕೆಯಾಗಿ ಕಾಯಕವನ್ನು ಮಾಡುತ್ತಿದ್ದ.

ವೇಧೆಯೆ ಚಕ್ರದ ಮೊಳೆ ತಾನಾಗಿರೆ

ಮಿಗೆ ಪಟ್ಟಕ್ರಮೆ ಚಕ್ರಮದಾಗಿರೆ

ಸೊಗಯಿಪ ನಾಭಿಯೇ ನಾಭಿಯದಾಗಿರೆ

ಕನಸಿನ ಕಾಯಂ ಮೃತ್ತಿಕೆಯಾಗಿರೆ

ನೆನಹಂ ಚಟೆದಾರಂಗಳವಾಗಿರೆ

ನಿಷ್ಠೆಯೇ ಪಿಡಿವುರು ದಂಡಮದಾಗಿರೆ

ಮುಟ್ಟಿ ತಿರುಗುವುದು  ಜೀವನಮಾಗಿರೆ

ಮಾಡುವ ಭಕ್ತಿ ಕಟಾಹಮದಾಗಲು

ಕೂಡಿದ ಕರಣದೆ ಮರ್ದಿಸುತಾಗಲು

ಮಿಗೆ ಶೋಷಣದಾತಪದಿಂದಾರಿಸಿ

ಬಗೆ ಮಿಗಲುದರಾಗ್ನಿಗಳಿಂದಹಿಸಿ

ಇಂತೊಳಗಣ ಘಟಕಾಕಮೊಪ್ಪಲು

ಸಂತತ ಹೊರಗಣ ಮಾಟಮದೊಪ್ಪಲು ಕುಂಬರ ನೆನಿಸಿರ್ಪಂ ಗುಂಡಯ್ಯಂ(ಗುಂಡಯ್ಯನ ರಗಳೆ, ಹರಿಹರನ ರಗಳೆಗಳು:ಸಂ: ಎಂ.ಎಂ.ಕಲಬುರಗಿ, ಪು.ಸಂ.೨೬೯) ಅವನ ವೃತ್ತಿ ಆಧ್ಯಾತ್ಮಮಯವಾಗಿತ್ತು. ಬಾಹ್ಯದಲ್ಲಿ ಮಡಕೆ ಸಿದ್ಧಗೊಳಿಸುವ ಕಾಯಕ ಕೈಗೊಂಡು, ಅದನ್ನು ಅಂತರಂಗದ ವಿಕಾಸಕ್ಕಾಗಿ ಅಳವಡಿಸಿಕೊಂಡಿದ್ದ. ಹೊರಗೆ ಚಕ್ರಕ್ಕೆ ಆಧಾರವಾಗಿ ಹುಗಿದ ಮರದ ತುಂಡೇ ಅವನಿಗೆ ಆಧಾರ ಚಕ್ರ; ಅದರ ಮೇಲಿನ ತಿಗರಿಯೇ ಅವನ ಷಟ್ಚಕ್ರ; ತಿಗರಿಯಲ್ಲಿಯ ಮೂಳೆ ನೆಡುವ ರಂಧ್ರವೇ ಅವನ ನಾಭಿ (ಮಣಿಪೂರಕ ಚಕ್ರ); ಶರೀರವೇ ಮಡಕೆ ಮಾಡುವ ಮಣ್ಣು; ನಿಷ್ಠೆಯೇ ದಂಡ; ಅದರಿಂದ ತಿರುಗಿಸಿ ಮಾಡಿದ ಮಡಕೆಗಳನ್ನು ನೆನಹೆಂಬ ಚಟಿದಾರಗಳಿಂದ ಕೊಯ್ದು, ಕರಣಗಳಿಂದ ತಿದ್ದಿ ಬಡಿದು, ಆರಿಸಿ, ಭಕ್ತಿಯೆಂಬ ಆವಿಗೆಯಲ್ಲಿ ಹಾಕಿ, ಉದರಾಗ್ನಿಗಳಿಂದ ಸುಟ್ಟು ಗಟ್ಟಿ ಮಾಡಿಡುತ್ತಿದ್ದ. ಇಂತಹ ಅಂತರಂಗದ ಶುದ್ಧಿ ವಿಕಾಸಗಳಿಂದಲೇ ದೈವ ಕೃಪೆ ಉಂಟಾಗುತ್ತದೆ ಎಂಬುದು  ಗುಂಡಯ್ಯನ ನಂಬುಗೆಯಾಗಿದ್ದಿತು.   ಈ ತೆರನಾಗಿ ಒಳಗಣ ಕಾಯಕ ಮತ್ತು ಹೊರಗಣ ಕಾಯಕಗಳೆರಡರನ್ನೂ ಸಮನಾಗಿ, ಜೊತೆಜೊತೆಯಾಗಿ ನಿರ್ವಹಿಸುತ್ತಿದ್ದ ಬಗೆಯನ್ನು ಹರಿಹರ ಅರ್ಥಪೂರ್ಣವಾಗಿ ವಿವರಿಸಿದ್ದಾನೆ. ಶಿವಪೂಜೆಯಲ್ಲಿ ನಿರತನಾದರೆ ಕಣ್ಣುರಪ್ಪೆ ಬಡಿಯುವುದನ್ನೇ ಮರೆಯುತ್ತಿದ್ದ. ಮನದತುಂಬ ಪೂಜಾಭಾವ ತುಂಬಿಕೊಂಡು, ಊಟ-ನಿದ್ರೆಯನ್ನು ಮರೆಯುತ್ತಿದ್ದ. ಶಿವನಲ್ಲದೆ ಅನ್ಯವಸ್ತುಗಳನ್ನು ನೋಡುತ್ತಲೂ ಇರಲಿಲ್ಲ. ಅದರ ಬಗೆಗೆ ಮಾತನಾಡುತ್ತಿರಲಿಲ್ಲ. ಆತನ ಮನವೆಲ್ಲಾ ದೇವರಲ್ಲಿ ತಲ್ಲೀನವಾಗುತ್ತಿತ್ತು. ಆತನ ಶಿವಪೂಜಾ ವೈಖರಿಯನ್ನು ಹರಿಹರನು 'ಶಿವಪೂಜೆಯ ಕರಡಿಗೆಯಂತಿರ್ದಂ ಶಿವಪೂಜೆಯ ಗವಸಣಿಗೆಯೊಳಿರ್ದಂ" (ಅದೇ, ಪು.ಸಂ.೨೭೦)ಎಂದು ವರ್ಣಿಸುತ್ತಾನೆ. ಇಷ್ಟಾದರೂ ಆತ ತೃಪ್ತನಾಗುತ್ತಿರಲಿಲ್ಲ. ಮತ್ತೆ ಮನೆಯಲ್ಲಿಯೂ ಅವನ ಮಾನಸ ಪೂಜೆ ಮುಂದುವರೆಯುತ್ತಿತ್ತು. ಆತ ಮಡಕೆಗಳನ್ನೇ ಬಾರಿಸುತ್ತ ಕುಣಿದಾಡುತ್ತಿದ್ದ. ಅಂದರೆ

ಸಂದೊಪ್ಪುವ ಘಟಕಾಯದಿಂದಿರೆ

ನೇಮದ ಪೂಜೆಗಳೊಳಗಳವಡುತಿರೆ

ಕಾಮಹರಂ ನಲಿ ನಲಿದಾಡುತ್ತಿರ

ತಟಪಟ ತಂದಣ ದಿಂಧಿಮಿಕೆನಿಸುವ

ತಟಕಂ ದಟ ಧಿಕ್ಕಟ ತಟಕೆನಿಸುವ

ಹಲಗೆಯ ಶಬ್ದ ಕರಡೆಯ ಶಬ್ದ

ಹಲಗೆಯ ಶಬ್ದಂ ಮುರಜದ ಶಬ್ದಂ

ಮಡಕೆಯ ದನಿಯಾವುಜದ ಸುನಾದ

ಮಡಕೆಯ ದನಿ ಪೊಸ ಕಹಳೆಯ ನಾದು

ತಾಳಂ ಕೌಸಾಳದ ಹೊಸನಾದಂ

ಶೂಲಿಗೆ ಮೇಳವಣೆಯ ಮೃದುನಾದಂ

ತಾನಾಗಿರೆ ಮಧುರತೆಯಂ ಬೀರುತ

ನಾನಾವಿಧ ನವಗತಿಯಂ ತೋರುತ

ಹೊರಗಲ್ಲಾಡಲು ಶಿವನೊಳಗಾಡಲು

ತೆರಹಿಲ್ಲದ ಪುಳಕಂಗಳೊಡಲು

ಬಂದರನರಿಯದೆ ಹೋದರನರಿಯದೆ

ನಿಂದರನರಿಯದ ನೆರೆದರನರಿಯದೆ

ಊಟವನರಿಯದೆ ನಿದ್ರೆಯನರಿಯದೆ

ತೂಗಾಡುತ ಮಡಕೆಗಳಂ ಬಾರಿಸಿ

ಜೋಗಂಬೋಗುತ್ತಂ ನೆರೆ ಬಾರಿಸಿ

ಅಡ್ಡಂ ತಿಗಟಂಬರಿವುತೆ ಬಾರಿಸಿ

ಅಡ್ಡಂ ಬಿತ್ತರಿಸುತ್ತಂ ಬಾರಿಸಿ

ಕುಣಿವುತೆ ಕೂಗುತೆ ನಲವಿಂ ಬಾರಿಸಿ

ಮಣಿವುತೆ ತಣಿವುತೆ ಮುದದಿಂ ಬಾರಿಸಿ

ಒಳಗಣ ಶಿವನಂ ನೆರೆ ಸಾಗಿಸುತಂ

ಬೆಳಗುವ ಬೆಳಗಂ ನೆರೆ ಜೋಗಿಸುತಂ

ನೃತ್ಯದ ನೆಲೆಯೊಳ್ಮನವೆರಗುತ್ತಂ

ಸತ್ಯದ ಸುಖದೊಳ್ಮುಳುಗಾಡುತ್ತಂ

ಬಾರಿಸಿ ಬಾರಿಸಿ ನಿಲುತಂ ನಿಲುತಂ

ಸೇರಿದ ಸುಖದೊಳ್ಸಲುತಂ ಸಲುತಂ

ಪಲವು ದಿವಸಂ ಸಲೆ ಬಾರಿಸುತ್ತಿರ

ಒಲವಿಂ ಸರ್ವೆಶನನಾಡಿಸುತಿರೆ

ನಂಬಿದ ಭಕ್ತನನರಿಯದುದೆಲ್ಲಂ

ಕುಂಬರನೆಂದಿಪ್ಪುದು ಜಗವೆಲ್ಲಂ

ಇರುತೊಂದೆವಸಂ ಘಟಕಾಯಕದೊಳು

ಪರಮನನಾಡಿಸುತಿರ್ಪವಸರದೊಳು    (ಅದೇ, ಪು.ಸಂ.೨೭೧)

ತನ್ನಂ ಮರೆದೊಲವಿಂ ಬಾರಿಸುತಿರೆ ಇಡೀ ದಿನ ರಾತ್ರಿ ನಿರಂತರವಾಗಿ ಮಡಕೆ ಬಾರಿಸುತ್ತಾ ಹರ್ಷಚಿತ್ತನಾಗಿ ಕುಣಿದಾಡುತ್ತಾ ಬ್ರಹ್ಮಾನಂದದಲ್ಲಿ ಓಲಾಡುತ್ತಾನೆ. ಮಡಕೆ ಬಾರಿಸುವುದನ್ನೇ ತನ್ನ ನೇಮವಾಗಿ ಕೈಗೊಳ್ಳುತ್ತಾನೆ. ಕುಂಬಾರ ಗುಂಡಯ್ಯ ನಿಷ್ಠೆಯಿಂದ ಕಾಯಕ ಮಾಡುತ್ತಾ ಅದರ ಮೂಲಕ ಶಿವಾರ್ಚನೆ ಸಲ್ಲಿಸುವುದು ಅತನ ದಿನಚರಿಯಾಗಿತ್ತು.  ಹೊರಗೆ ಘಟಕಾಯಕ, ಒಳಗೆ ಶಿವ ಸೇವಾ ಕಾಯಕ ಎರಡನ್ನೂ ಏಕಕಾಲಕ್ಕೆ ನಡೆಸಿಕೊಂಡು ಬಂದಿದ್ದ.

   ಒಂದು ದಿನ ಶಿವ ಕೈಲಾಸದಲ್ಲಿ ಪಾರ್ವತಿ ಸಮೇತವಾಗಿ ಕುಳಿತಾಗ ಗುಂಡಯ್ಯ ಶಿವ ಪ್ರೇರಣೆಯಿಂದ ಶಿವಾಲಯಕ್ಕೆ ಬಂದು ಪೂಜಾಲಂಕೃತವಾದ ಶಿವನನ್ನು ಕಂಡು ಮೈಮರೆತು ಪುಳಕ ತುಂಬಿದ ಕೈಗಳಿಂದ ಪಾದೋದಕ ಸ್ವೀಕರಿಸಿ ದೀರ್ಘದಂಡ ಪ್ರಣಾಮಗೈದು, ಮನದಲ್ಲಿ ಶಿವನ ನೆನಹನ್ನು ಕಣ್ಣಲ್ಲಿ ಶಿವನ ಮೂರ್ತಿಯನ್ನು ತುಂಬಿಕೊಂಡು ಮನೆಗೆ ಬಂದು ಶಿವಭಾವದಲ್ಲಿ ಲೀನನಾದ ಅವನಿಗೆ ಊಟ ನಿದ್ರೆಗಳ ಪರಿವೇ ಇರಲಿಲ್ಲ. ಕಾಯಕದಲ್ಲಿ ನಿರತವಾಗಿ ಹೊಸ ಹೊಸ ಪರಿಯ ಗಡಿಗೆಳನ್ನು ಸಿದ್ಧಗೊಳಿಸಿದ ಶಿವನಾಮ ಸ್ತುತಿಸುತ್ತ ಗಡಿಗೆ ಬಾರಿಸುತ್ತ ಕುಣಿಯತೊಡಗಿದ. ಹೊರಗೆ ಆತನ ತನು ಅಲ್ಲಾಡಿದರೆ, ಒಳಗೆ ಶಿವಲಿಂಗ ಅಲ್ಲಾಡುತ್ತಿತ್ತು. ಅಂತರಂಗದಲ್ಲಿ ಶಿವ ನಲಿಯುವುದನ್ನು ಕಂಡು ಅವನ ಸಂತೋಷ ಮೇರೆ ಮೀರಿತು. ಉತ್ಸಾಹ ಹೆಚ್ಚಿತು. ಸುತ್ತುತ್ತ, ತುಳಿಯುತ್ತ, ಉಬ್ಬುತ್ತ ಕೊಬ್ಬುತ್ತ ಪುಳಕಗೊಳ್ಳುತ್ತ ಇಡೀ ರಾತ್ರಿ ಗಡಿಗೆ ಬಾರಿಸ ತೊಡಗಿದ. ಅವನ ಕರುನದೊಳಗೆ ಹರನು ಅಡತೊಡಗಿದೆ. ಮನದಣಿಯೇ ಬಾರಿಸುವ ಒಳಗಣ ಶಿವನಾಟಕ್ಕೆ ಎಡೆ ಮಾಡುತ್ತಾ ಇದೆ ನೇಮವೆಂದು ಗುಂಡಯ್ಯನು ಮುನ್ನಡೆದ.  ಶಿವನು ಅದರ ನಾದಕ್ಕೆ ಮೈಮರೆತು ಬಳಿಯಿದ್ದ ಗಿರಿಜೆಯನ್ನು ಗುಂಡಯ್ಯನೆಂದು ಭಾವಿಸಿ ಓಲಗದಲ್ಲಿದ್ದೇನೆ ಎನ್ನುವುದನ್ನು ಬಿಟ್ಟು ನರ್ತಿಸತೊಡಗಿದ. ಅದನ್ನು ಕಂಡು ಗಿರಿಜೆ  'ಹೀಗೇಕೆ ? ಇಂದಿನ ನಿಮ್ಮ ರೀತಿ ಹೊಸಪರಿಯಾಗಿದೆ?' ಎಂದು ಕೇಳುವಳು. ಭೋಂಕನೆ ಶಿವನೆಚ್ಚತ್ತೆಂದಂ

ಹರುಷಂ ಮಿಗೆ ಗಿರಿಜೆಗೆ ತಾನೆಂದಂ

ಗುಂಡನ ಹೃದಯದೊಳಾಡುತ್ತಿರ್ದೆಂ (ಅದೇ, ಪು.ಸಂ.೨೭೧) ಎಚ್ಚರಗೊಂಡ ಶಿವನು ತನ್ನ ಭಕ್ತ ಗುಂಡಯ್ಯನು ಘಟವನ್ನು ಧುರವಾಗಿ ನುಡಿಸುತ್ತಿರಲು ಅವನ ಹೃದಯದಲ್ಲಿ ನಾನು ಆಡುತ್ತಿದ್ದೆ. ಆ ಸುಖದಲ್ಲಿ ಮುಳುಗೇಳುತ್ತಿದ್ದ ನನಗೆ ಸ್ಥಾನಭೇದದ ಅರಿವಾಗದೆ, ಲೀಲೆಯಲ್ಲಿ ನನ್ನನ್ನು ನಾನು ಮರೆತಿದ್ದು, ಅಲ್ಲಿಯೂ ಇಲ್ಲಿಯೂ ಆಡುತ್ತಿದ್ದೆ ಎಂದನು. ಅದನ್ನು ಕೇಳಿ ಕೌತುಕಗೊಂಡ ಗಿರಿಜೆಯು

ದೇವಾ ಎನಗಿದು ಕೌತುಕವೆಂದೆನೆ

ದೇವಾ ಮರ್ತ್ಯದೊಳಿಂತಿದು ಪೊಸತೆನೆ

ನಡೆ ತೋರಿದಪೆಂ ಭಕ್ತನ ನಿಲವಂ

ಎಡೆಗೊಂಡೆನ್ನಯ ನಾಟ್ಯದ ಫಲವಂ (ಅದೇ, ಪು.ಸಂ.೨೭೧)

ಎಂದು ಹೇಳುತ್ತಾ ನಿಮ್ಮನ್ನು ಆಡಿಸಿದ ಆ ಶಿವ ಭಕ್ತನನ್ನು ತಾನು ನೋಡಬೇಕೆಂಬ ಬಯಕೆ ವ್ಯಕ್ತಪಡಿಸಿದಳು.  ನನ್ನ ಪ್ರಿಯ ಭಕ್ತನ ನಿಲುವನ್ನು ನಿನಗೆ ಪರಿಚಯ ಮಾಡಿಸಿಕೊಡುತ್ತೇನೆ ನಡೆ ಎಂದು ಶಿವ ಅವಳನ್ನು ಕರೆದುತಂದು ಗಗನಮಧ್ಯದಲ್ಲಿ ಅವಳನ್ನು ಇರಿಸಿ ಗುಂಡಯ್ಯನ ಮನೆಯ ಮುಂದೆ ಇಳಿಯುವನು. ಗುಂಡಯ್ಯನು ಘಟವನ್ನು ಸಂತೋಷದಿಂದ ಬಾರಿಸುತ್ತಿರಲು ಅವನನ್ನು ಎಚ್ಚರಿಸಬಯಸಿದ ಶಿವನು ಒಳಗಾಡುವ ಲಿಂಗವನ್ನು ಆಕರ್ಷಿಸಿ ತನ್ನಲ್ಲಿ ಅಂತರ್ಗತಗೊಳಿಸಲು ಆಗ ಗುಂಡಯ್ಯನನ್ನು ಕರೆದನು. ಶಿವನನ್ನು ಕಂಡು ಕೊಬ್ಬಿ ಉಬ್ಬಿ ಕುಣಿಕುಣಿದಾಡುತ್ತ ಮಡಿಕೆ ಕುಡಿಕೆಗಳನ್ನು ಬಾರಿಸುತ್ತ ಶಿವನನ್ನು ಪ್ರದಕ್ಷಿಣೆ ಮಾಡಿದನು. ಗುಂಡಯ್ಯನು ನರ್ತಿಸಿದ ಪರಿಯನ್ನು ಚಿತ್ರಿಸುವಲ್ಲಿ ಹರಿಹರ ತರುವ ವೇಗ ವಿಶೇಷವಾದದ್ದು. ಇದಕೆ ನಿದರ್ಶನವಾಗಿ ಈ  ಕೆಳಕಂಡ ಪದ್ಯದ ಸಾಲುಗಳನ್ನು  ನೋಡ ಬಹುದಾಗಿದೆ.

 ಕುಣಿದಾಡುತೆ ಮಡಕೆಗಳಂ ಬಾರಿಸಿ

ಕುಣಿದಾಡುತ ಕುಡಿಕೆಗಳಂ ಬಾರಿಸಿ

ಶಿವನಂ ಸುತ್ತಿ ಬರುತ್ತುಂ ಬಾರಿಸಿ

ಕುಣಿವುತ ಕೊರಲೆತ್ತುತ ನೆರೆಕೂಗುತ

ತೊನೆವುತೆ ತೂಗಾಡುತ ಸುಖಿಯಾಗುತ

ಆಡುವ ಗುಂಡಯ್ಯನ ಹೊಸ ನೃತ್ಯಂ

ನೋಡುವ ಶಿವನಂ ಮುಟ್ಟಿತು ಸತ್ಯಂ (ಅದೇ, ಪು.ಸಂ.೨೭೧)

ಈ ಬರವಣಿಗೆಯಲ್ಲಿ ʻಕುಂಬಾರಗುಂಡಯ್ಯನು ಕುಣಿದಾಡಿದ ಕ್ರಿಯೆ ಭಾಷೆಯಲ್ಲಿ ಅಭಿನಯಿತವಾಗಿದೆ; ಪಂಕ್ತಿಯಿಂದ ಪಂಕ್ತಿಗೆ ಕ್ರಿಯೆಯ ಭಾವ-ಭಂಗಿಗಳು ಸಮರ್ಥವಾಗಿ ಮೂಡುತ್ತಾ ಹೋಗುತ್ತವೆ. ಭಕ್ತಿಯ ಆವೇಶದಿಂದ ತುಂಬಿದ ವ್ಯಕ್ತಿತ್ವವೊಂದರ ಚರ್ಯೆಯನ್ನು ಅತ್ಯಂತ ಲವಲವಿಕೆಯಿಂದ ಈ ಬರವಣೆಗೆ ವರ್ಣಿಸುತ್ತದೆ. ಆವೇಶ, ಉತ್ಸಾಹ, ಮತ್ತು ಕ್ರಿಯೆಗಳನ್ನು ಹಿಡಿದಿಡಲು ಈ ರಗಳೆಯ ಶೈಲಿ ಎಷ್ಟೊಂದು ಉಚಿತವಾಗಿದೆ ಎಂಬುದನ್ನು ಹೇಳಬೇಕಾಗಿಲ್ಲ. ಬಳಸಿದ ಭಾಷೆ ಯಾರಿಗೂ ಅರ್ಥವಾಗುವಂಥದು; ಸುಮ್ಮನೆ ಓದಿದರೇ, ಕಿವಿಗೆ ಬೀಳುವ ಅದರನಾದಾಂಶ, ನರ್ತನವೊಂದನ್ನು ಚಿತ್ರಿಸುವ ವರ್ಣನೆ ಇದು ಎನ್ನುವುದನ್ನು ಹೇಳುತ್ತದೆ. ಪದಗಳ ಪುನರುಕ್ತಿಯಿಂದ ಪರಿಣಾಮದ ತೀವ್ರತೆ ಸಾಧಿತ ವಾಗುತ್ತದೆʼ(ಜಿ.ಎಸ್.ಶಿವರುದ್ರಪ್ಪ, ಕನ್ನಡ ಸಾಹಿತ್ಯ ಸಮೀಕ್ಷೆ, ಪು.ಸಂ.೨೩) ಹರಿಹರನ ರಗಳೆಗಳೆಲ್ಲ ಇಂಥ ಭಕ್ತ ಮನೋಧರ್ಮದ ವಿವಿಧ ಭಾವಲಹರಿಗಳಂತಿವೆ. ಘಟವನ್ನು ಬಾರಿಸುತ್ತ, ಕುಣಿವುತ್ತ, ತೂಗುತ್ತ, ಕೊಂಕುತ್ತ ಬಾಗುತ್ತ, ಕುಣಿವುತ, ಕೊರಲೆತ್ತುತ ತೂಗಾಡುತ್ತ ಆಡುತ್ತ ನಾಟ್ಯವಾಡುವ ಗುಂಡಯ್ಯನ ಹೊಸ ನೃತ್ಯವು ನೋಡುತ್ತಿದ್ದ ಶಿವನನ್ನು ಮುಟ್ಟಿತು. ಆ ಸುಖದಾಟವು ತನ್ನನ್ನು ಆವರಿಸಲು, ಮನವನ್ನು ಸುತ್ತಲು ಇಂದಿನವರೆವಿಗೂ ನನ್ನ ಭಕ್ತನ ಮನದ ಒಳಗೆ ಆಡಿದನು. ಇನ್ನು ಲೋಕವೆಲ್ಲವೂ ತಿಳಿಯುವಂತೆ ಹೊರಗೆ ಆಡುವೆನು' ಎಂದು ದಶಭುಜಗಳನ್ನು ದಿಗಂತದಲ್ಲಿ ಹರಡಿ,ಕೈಗಳನ್ನೆತ್ತಿ, ಒಂದು ಪದ ಪಾತಾಳವನ್ನು ಒತ್ತಿ, ಮತ್ತೊಂದು ಪದ ಬ್ರಹ್ಮಾಂಡವನ್ನು ಎತ್ತಿದನು. ಶಿವನ ಈ ವಿರಾಟ್ ರೂಪದ ಕುಣಿತದಲ್ಲಿ ಶಿರದಲ್ಲಿನ ದೇವಗಂಗೆ ತುಳುಕಾಡಿತು. ತಡಿಯೊಳಿದ್ದ ಶಶಿಕಳಡಿತು. ಮನೋಹರವಾದ ಮುಂಗುರುಗಳು ಕುಣಿದಾಡಿದವು. ಕೈಯಲ್ಲಿ ಹಿಡಿದ ಡಮರುಗವು ಢಂ ಢಂ ಢಂಢಣಲೆಂದಿತು. ತ್ರಿಶೂಲಿಯು ತಿರನೆ ತಿರುಗಲು ಶಿವನು ಧರಿಸಿದ ಸರ್ಪಗಳು ಹೆಡೆಯೆತ್ತಿದವು. ಧರಿಸಿದ ಕರಿಯ ಚರ್ಮವು ಆಗಸವನ್ನು ಸ್ವಚ್ಛಮಾಡಿತು. ಬ್ರಹ್ಮನಶಿರವು ಬೊಬ್ಬಿಟ್ಟಿತು. ಸುರರ ಶಿರೋಮಾಲೆಗಳು ಚೀರಾಡುತ್ತಿದ್ದವು. ಕಾಲಿನ ಚಿನ್ನದಗೆಜ್ಜೆಗಳು ಘಲಘಲಕೆಂದೂ, ಕುಚ್ಚಿನ ಗಂಟೆಯು ಢಣಂ ಢಂ ಢಣಲೆಂದೂ ಧ್ವನಿಮಾಡುತ್ತಿರಲು ಗುಂಡಯ್ಯನ ಮುಂದೆ ಶಿವನು ನಾಟ್ಯವಾಡಿದನು.(ಹರಿಹರನ ರಗಳೆಗಳು ಸಂ: ಎಂ.ಎಂ.ಕಲಬುರಗಿ, ಪು.ಸಂ.೨೭೨) ಆಗ ಸುರಲೋಕದವಾದ್ಯಗಳು ಬರಲು, ತ್ವರಿತದಿಂದ ತುಂಬುರರು ಹೊಗಳತೊಡಗಲು ಶಿವನು ಅವಾವೂ ಬೇಡ ಮಡಿಕೆಯ ವಾದ್ಯವೇ ಸಾಕು ಎಂದನು. ಶಿವ ಪರವಶನಾಗಿ,' ಇಷ್ಟು ದಿನ ಗುಂಡಯ್ಯನ ಮನಸ್ಸಿನೊಳಗೆ ನಾಟ್ಯವಾಡಿದ ನಾನು ಇಂದುಜಗತ್ತೆ ಅರಿಯುವಂತೆ ಹೊರಗೆ ನರ್ತಿಸುತ್ತೇನೆ ಎಂದು ಕೊಂಡು ಮೋಹಕವಾಗಿ ನಾಟ್ಯ ಮಾಡತೊಡಗಿದ. ಕುಂಬಾರ ಗುಂಡಯ್ಯನ ರಗಳೆಯಲ್ಲಿ ಗುಂಡಯ್ಯನು ತನ್ನ ಮಡಿಕೆಯಿಂದ ನುಡಿಸಿದ ಆ ನಾದಕ್ಕೆ ಶಿವ ತಾನೇ ಮನಸೋಲುತ್ತಾನೆ. ಅಲ್ಲಿಯವರೆಗೆ ದೇವಲೋಕದ ವಾದ್ಯಗಳು ಅದರಲ್ಲೂ ಪಂಚಮಹಾವಾದ್ಯಗಳನ್ನು ಕೇಳಿ ಆನಂದಿಸಿದ ಶಿವನಿಗೆ ಮಡಿಕೆಯ ನಾದ ಸುನಾದವಾಗಿ ಪರಿಣಮಿಸುತ್ತದೆ. ಅದನ್ನು ಕೇಳುವ ಸಲುವಾಗಿ ದೇವಲೋಕದಿಂದ ಭೂಲೋಕಕ್ಕೆ ಬಂದು ಗುಂಡಯ್ಯನು ಬಾರಿಸುವ ಆ ತಾಳಕ್ಕೆ ಮನಸೋತು ಮೆಚ್ಚಿ ತಾನೂ ಅವನೊಂದಿಗೆ ಕುಣಿಯಲಾರಂಭಿಸುತ್ತಾನೆ. ಕಾಯಕ ಜೀವಿಯಾದ ಕುಂಬಾರ ಗುಂಡಯ್ಯ ತಾ ಮಾಡಿದ ಮಡಿಕೆಗಳನ್ನು ನುಡಿಸಿ ಭಕ್ತಿಯಿಂದ ಕುಣಿಯುತ್ತಿದ್ದ. ಈತನ ಭಕ್ತಿಗೆ ಮತ್ತು ವಾದನಕ್ಕೆ ಶಿವನು ಸಹ ಕುಣಿದ. ಶಿವ ಕುಣಿಯುವುದನ್ನು ಕಂಡು ಸಕಲ ದೇವತೆಗಳೇ ಕುಣಿದರು ಎಂದು ಹರಿಹರನ ರಗಳೆಯಲ್ಲಿ ಹೇಳಲಾಗಿದೆ:

ಶಿವನ ಕಂಡಾ ಭಕ್ತಂ ಕುಣಿಯಲು

ಶಿವಭಕ್ತನ ಕೊಡಭವಂ ಕುಣಿಯಲು

ಈರ್ವರನೀಕ್ಷಿಸಿ ಗಣಪತಿ ಕುಣಿಯಲು

ಸರ್ವ ಸ್ಥಾವರ ಜಂಗಮವಾಡಲು

ಮಡಕೆಯ ಶಬ್ದಕ್ಕಾಡುತ್ತಿರ್ದಂ.̈ (ಅದೇ, ಪು.೨೭೨) ಶಿವನನ್ನು ಕಂಡು ಭಕ್ತ ಕುಣಿದ, ಭಕ್ತನನ್ನು ಕಂಡು ಶಿವ ಕುಣಿದ ಇವರಿಬ್ಬರೂ ಕುಣಿಯುವುದನ್ನು ಕಂಡು ಗಣ ಸಮೂಹ ಕುಣಿಯಿತ್ತು. ಇದನ್ನು ನೋಡಿ ಚೋದ್ಯವೆನ್ನುತ್ತ ಶಿವನ ಈ ತಾಂಡವ ನೃತ್ಯದಿಂದ ನರಲೋಕಕ್ಕೆ ಕೇಡಾಗಬಾರದೆಂದು ಆಲೋಚಿಸಿ, ಶಿವನ ನೃತ್ಯ ಮೇರೆ ಮೀರುವ ಮೊದಲೆ ತಡೆಯಬೇಕೆಂದು ಯೋಚಿಸಿದ ಗಿರಿಜೆ ಶಿವನನ್ನು ಸ್ತುತಿ ಮಾಡಿದಳು, ಗಿರಿಸುತೆ ಶಿವನನ್ನು ಶಾಂತಗೊಳಿಸುವ ಸಲುವಾಗಿ ಅವನನ್ನು ಸ್ತುತಿಸುತ್ತ ಆಗಸದಿಂದ ಇಳಿದುಬರುವ ಗಿರಿಸುತೆಯ ಕರುಣಾರವವನ್ನು ಕೇಳಿದ ಶಿವನು ನಾಟ್ಯವನ್ನು ನಿಲ್ಲಿಸಿ, ಶೈಲಜೆಯ ಇಚ್ಛೆಯಂತೆ ಸಮಸ್ಥಿತಿಗೆ ಬಂದನು, ಶಿವನು ತನ್ನ ವಿರಾಟ ಸ್ವರೂಪವನ್ನು ಶಮನಗೊಳಿಸಿ, ಮುಂದೆ ಕುಣಿಯುತ್ತಾ ನಿಂತ ಕುಣಿದಾಡುವ ಗುಂಡಯ್ಯನನ್ನು ಶಿವನು ಆನಂದದಿಂದ ಆಲಂಗಿಸಿ ಮುಂದಲೆಯನ್ನು ಚುಂಬಿಸಿ ಆನಂದದಿಂದ ಮುದ್ದಾಡಿದ. ಕೈಲಾಸದಿಂದ ಬಂದ ಪುಷ್ಪಕವಿಮಾನಕ್ಕೆ ಅವನನ್ನು ಏರಿಸಲು ಅನುಗ್ರಹಿಸಿದನು. ಹೂಮಳೆ ಕರೆಯಿತು. ಅವನ ಭಕ್ತಿಯನ್ನು ಜಗತ್ತಿಗೆಲ್ಲ ತೋರ್ಪಡಿಸಿ ಕೈಲಾಸಕ್ಕೆ ಕರೆದೊಯ್ದು ಗಣ ಪದವಿಯನ್ನಿತ್ತು ಕಾಪಾಡಿದನು.

      “ಜಗವೆಲ್ಲವ ಆಡಿಸುವ ಶಿವನನ್ನ ಗುಂಡಯ್ಯ ಮಡಿಕೆಯ ದನಿಯಿಂದ ಆಡಿಸಿದ'' ಎನ್ನುವ ಹರಿಹರನ ನುಡಿಯು, ಗುಂಡಯ್ಯನಿಗೆ ಕಾಯಕದ ಮೇಲಿದ್ದ ನಿಷ್ಠೆ, ಶಿವನ ಮೇಲಿದ್ದ ಭಕ್ತಿಯನ್ನು ತೋರಿಸುವುದರ ಪ್ರತೀಕವಾಗಿದೆ. ತನ್ನ ಗಡಿಗೆಯ ಸುನಾದದಿಂದ ನಾದಪ್ರಿಯ ಹಾಗೂ ಭಕ್ತಿಪ್ರಿಯನಾದ ಶಿವನನ್ನು ಒಲಿಸಿಕೊಂಡು, ಶಿವನಿಂದ ತಾಂಡವ ನಾಟ್ಯವಾಡಿಸಿದ ಗುಂಡಯ್ಯನ ವ್ಯಕ್ತಿಚಿತ್ರವನ್ನು ನಿರೂಪಿಸುವಲ್ಲಿ ಹರಿಹರ ಕವಿಯು ಸಾರ್ಥಕ್ಯವನ್ನು ಪಡೆದಿದ್ದಾನೆ. ಶಿವನ ನರ್ತನ ವೈಭವವನ್ನು ಹರಿಹರ ವರ್ಣಿಸಿರುವ ರೀತಿ ಚೇತೋಹಾರಿಯಾಗಿದೆ. ಗುಂಡಯ್ಯನ ಜೊತೆಗೆ ಶಿವನೂ ಆಡುವ ನೃತ್ಯ ಅತ್ಯದ್ಭುತವಾಗಿದೆ. ಹರಿಹರನು ವರ್ಣಿಸುವ ಆ ನಾಟ್ಯದ ಸೊಗಸನ್ನು ಸವಿದಾಗಲೇ ಅದರ ಮಹತ್ವ ಓದುಗರಿಗಾಗುವುದು.

     ಹರಿಹರ ಕವಿಯು ತನ್ನ ರಗಳೆಯಲ್ಲಿ ಚಿತ್ರಿಸಿರುವ ಕುಂಬಾರ ಗುಂಡಯ್ಯನ ರಗಳೆಯಲ್ಲಿಯ ವಿವರಗಳನ್ನೇ ಶಾಂತಲಿಂಗದೇಶಿಕನು ತನ್ನ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರದಲ್ಲಿ ಸಂಕ್ಷಿಪ್ತವಾಗಿ ಗದ್ಯರೂಪದಲ್ಲಿ ಕೊಡ ಮಾಡಿದ್ದಾನೆ. ಆ ವಿವರ ಕೆಳಕಂಡಂತಿದೆ. “ಕಾಯಕವ ಮಾಡುವಲ್ಲಿ ಷಟ್‌ಚಕ್ರಂಗಳನೆ ತಿಗುರಿಯಂ ಮಾಡಿ ಜ್ಞಾನವೆಂಬ ಸೂತ್ರವ ಸುತ್ತಿ, ಸ್ವಪ್ನದ ತೋರಿಕೆಯಂಬ ಕೆಸರ ತಿಗುರಿಯ ಮೇಲಿಟ್ಟು ನಿಷ್ಠೆಯೆಂಬ ಕೋಲಿನಲ್ಲಿ ತಿರುಗಿಸಿ, ಭಕ್ತಿಯೆಂಬ ಮಡಕೆಯಂ ಮಾಡಿ, ಸುಜ್ಞಾನವೆಂಬ ಕೊಡತೆಯಿಂದ ತಟ್ಟುವಾಗ ಆ ಧ್ವನಿಯು ಕರಡೆ, ಕೌಸಾಳೆ, ಢಕ್ಕೆ, ಡಮರುಗ, ಮುರಜೆ, ಮೃದಂಗ, ಮುಡುಕು, ಕಹಳೆಯಂತೆ ಕೇಳಿಬರುತ್ತಿತ್ತು. ಗುಂಡಯ್ಯನಾದರೋ ತನ್ನ ಕಾಯಕದಲ್ಲಿ ಸಂಪೂರ್ಣ ಪರವಶವಾಗಿರಲು ಕೈಲಾಸದಲ್ಲಿದ್ದ ಶಿವನು, ಇವನ ತಾಳದ ಲಯಕ್ಕೆ ತಲೆದೂಗಿ ಕುಣಿದು ಸಂತೋಷಿಸುತ್ತಿರಲು, ಗಿರಿಜೆಯು ತಾನು ಗುಂಡಯ್ಯನನ್ನು ನೋಡಬೇಕೆಂದು ಶಿವನಲ್ಲಿ ಪ್ರಾರ್ಥಿಸಿದಳು. ಶಿವನು ಗಿರಿಜೆಗೆ “ನೀನು ಆಕಾಶದಲ್ಲಿಯೇ ಇದ್ದು ನೋಡುತ್ತಿರು' ಎಂದು ಹೇಳಿ ಭೂಲೋಕಕ್ಕೆ ಬಂದು ಕುಂಬಾರ ಗುಂಡಯ್ಯನ ಕುಂಭದ ಧ್ವನಿಗೆ, ತಾಳದ ಗತಿಗೆ ಕುಣಿಯುತ್ತಿರಲು, ಡಮರುಗ ಢಣಢಣವೆನ್ನುತ್ತಿರಲು, ಜಡೆಯೊಳಗಿನ ಗಂಗೆ ತುಳುಕಾಡುತ್ತಿರಲು, ರುಂಡಮಾಲೆಗಳು ಕುಬುಬು ಎಂದು ಸದ್ದು ಮಾಡುತ್ತಿರಲು, ಗೆಜ್ಜೆಗಳು ಝಣಝಣರು - ಫಲಿಘಲಿರು ಎಂದೂ, ಘಂಟೆಯು ಠಣಠಣ ಎಂದೆನ್ನುತಿರಲು ಗಿರಿಜೆಯು ನಾಟ್ಯದ ಸೊಬಗನ್ನು ನೋಡಿ ಹರ್ಷಿಸಿದಳು. ಮುಂದೆ ಗುಂಡಯ್ಯನಿಗೆ ಶಿವ ದರುಶನವಾಯಿತು.

       ಗುಂಡಯ್ಯನ ಕುಂಭದ ಅಥವಾ ಮಡಿಕೆಯ ನುಡಿಸುವಿಕೆಯು ಇಂದಿನ ಕರ್ನಾಟಕ ಸಂಗೀತ ಪದ್ಧತಿಯ ಸಂಗೀತ ಕಛೇರಿಗಳಲ್ಲಿ ಪಕ್ಕವಾದ್ಯವಾಗಿ ಬಳಸುವ ಘಟವಾದ್ಯವನ್ನು ನೆನಪಿಸುತ್ತದೆ. ಕುಂಬಾರ ಗುಂಡಯ್ಯನಿಂದಲೇ ಈ ವಾದ್ಯ ಪ್ರಾರಂಭಗೊಂಡಿರಬಹುದೆಂಬ ಅನಿಸಿಕೆ ವಿದ್ವಾಂಸರಲ್ಲಿ ವ್ಯಕ್ತಗೊಂಡಿದೆ. ಇದು ಅಧಿಕೃತಗೊಂಡರೆ ಹೊಸ ಬಗೆಯ ಒಂದು ವಾದ್ಯವೊಂದು ಗುಂಡಯ್ಯನಿಂದ ಚಾಲನೆಗೊಂಡಿರುವುದು ಮುಖ್ಯ ಸಂಗತಿಯಾಗಿದೆ. ಕನ್ನಡ ನಾಡಿನ ಇಂತಹ ಶಿವಭಕ್ತರಿಂದಲೆ `ಘಟಂ' ಒಂದು ವಾದ್ಯವಾಗಿ ಕರ್ನಾಟಕ ಸಂಗೀತದಲ್ಲಿ ಪರಿಣಮಿಸಿದಂತೆ ಕಂಡುಬರುತ್ತದೆ ಎಂಬ ಸಂಗೀತ ಪಂಡಿತರ ಮಾತು  ಆಲೋಚಿಸತಕ್ಕದ್ದಾಗಿದೆ.

    ಒಂದು ಸಾಮಾನ್ಯ ಮಡಕೆಯ ಸಣ್ಣ ನಾದ ದೇವಲೋಕದ ಚಿತ್ತವನ್ನು ಕೆಣಕುವಂತೆ ಮಾಡುವ ಹರಿಹರನ ಕಾವ್ಯಶಕ್ತಿಯು ಮಹತ್ತರತೆಯನ್ನು ಪಡೆದಿದೆ. ಇಂಥಹ ಕಥೆಗಳನ್ನು ಚಿತ್ರಿಸುವುದರ ಮೂಲಕ ಶಿವಭಕ್ತಿಯ ಶ್ರೇಷ್ಠತೆಯನ್ನು ಹರಿಹರನು ತನ್ನ ರಗಳೆಗಳಲ್ಲಿ ಪಡಿ ಮೂಡಿಸಿದ್ದಾನೆ.. ಹರಿಹರ ತನ್ನ ರಗಳೆ ಮೂಲಕ ಗುಂಡಯ್ಯನ ಶಿವಭಕ್ತಿಯನ್ನು ಜಗತ್ತಿಗೆ ಸಾರಿದ. ಗುಂಡಯ್ಯನ ರಗಳೆ ಚಿಕ್ಕದಾದರೂ ಅದರಲ್ಲಿಯ ರುದ್ರ ನಾಟ್ಯದ ವರ್ಣನೆ ಭವ್ಯ ಸೌಂದರ್ಯವನ್ನು ತಾಳಿದೆ. ಹರಿಹರ ಭಾವಪೂರ್ಣವಾದ ವರ್ಣನೆಯಿಂದ ಈ ರಗಳೆಯನ್ನು ಸೊಗಸಾದ ಕಾವ್ಯವನ್ನಾಗಿ ಮಾಡಿದ್ದಾನೆ. ಈ ಚಿಕ್ಕ ರಗಳೆ ಭಾವದ ಮಹೋನ್ನತಿ, ನಾಟಕೀಯತೆ, ನಿರೂಪಣೆಯ ಅನನ್ಯತೆಯಿಂದಾಗಿ ಅದ್ಭುತಪರಿಣಾಮವನ್ನುಂಟು ಮಾಡುತ್ತದೆ, ಸಂಗೀತದ ತಾಳಗತಿ, ನೃತ್ಯದ ಪದಗತಿಯನ್ನು ಓದುಗರ ಅನುಭವಕ್ಕೆ ತರುವ ಕವಿಯ ಪದ ಜೋಡಣೆ ವಿಶೇಷವಾಗಿದೆ. 

     ಜೇಡರ ದಾಸಿಮಯ್ಯನ ವಚನವೊಂದರಲ್ಲಿ ಉಕ್ತನಾಗಿರುವ  ಕುಂಬಾರ ಗುಂಡಯ್ಯನು ರಚಿಸಿರುವ ವಚನಗಳು ಸದ್ಯಕ್ಕೆ ಉಪಲಬ್ಧವಿಲ್ಲ. ಒಂದು ವೇಳೆ ಉಪಲಬ್ಧಗೊಂಡರೆ ಈತನೇ ಆದ್ಯ ವಚನಕಾರನಾಗುತ್ತಾನೆ.  ಆದರೆ  ಕುಂಬಾರ ಗುಂಡಯ್ಯನ ಧರ್ಮಪತ್ನಿ ಕೇತಲದೇವಿಯು ವಚನಕಾರ್ತಿಯಾಗಿದ್ದು, ಕುಂಭೇಶ್ವರ ಎಂಬ ಅಂಕಿತದಲ್ಲಿ ಸದ್ಯಕ್ಕೆ ಎರಡು ವಚನಗಳು ಲಭ್ಯವಿವೆ. ಎರಡು ವಚನಗಳೂ ವ್ರತಾಚಾರವನ್ನು ಕುರಿತು ಹೇಳುತ್ತವೆ. ಒಂದು ವಚನದಲ್ಲಿ ತನ್ನ ವೃತ್ತಿಪರಿಭಾಷೆಯನ್ನು ಬಳಸಿ ವ್ರತಭ್ರಷ್ಟರನ್ನು ಬೆರೆಯಬಾರದೆಂದು ತಿಳಿಸಿದರೆ, ಇನ್ನೊಂದರಲ್ಲಿ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ ಲಿಂಗಾರ್ಪಿತ ಮಾಡುವಲ್ಲಿ ಸಂದೇಹವಿಲ್ಲದಿರಬೇಕೆಂದು ತಿಳಿಸುತ್ತಾಳೆ.

ಹದ ಮಣ್ಣಲ್ಲದೆ ಮಡಕೆಯಾಗಲಾರದು

ವ್ರತಹೀನನ ಬೆರೆಯಲಾಗದು

ಬೆರೆದಡೆ ನರಕ ತಪ್ಪದು

ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರಾ! (ಶಿವಶರಣೆಯರ ವಚನ ಸಂಪುಟ(ಸಂ: ವೀರಣ್ಣ ರಾಜೂರ) ವ.ಸಂ.೭೭೨)

ಕಾಯಕದಲ್ಲೇ ದೇವರ ಕಂಡ ಕೇತಲಾದೇವಿ ವ್ರತಾಚಾರವನ್ನು ಕುರಿತು ವೃತ್ತಿ ಪರಿಭಾಷೆಯಲ್ಲಿ ತುಂಬ ಸೊಗಸಾಗಿ ನಿರೂಪಿಸಿದ್ದಾಳೆ. 'ಕಾಣದುದನೆ ಚರಿಸದೆ, ಕಂಡುದನು ನುಡಿಯದೆ ಕಾಣದುದನು, ಕಂಡುದನು ಒಂದೆ ಸಮವೆಂದು ಅರಿಯಬೇಕೆಂದು ಹೇಳುತ್ತಾಳೆ.(ಅದೇ,ವ.ಸಂ.೭೭೩) ಈ ವಚನದಲ್ಲಿ ಸಂಸ್ಕೃತ ಶ್ಲೋಕವನ್ನು ಸಾಕ್ಷಿಯಾಗಿ ಬಳಸಿರುವುದು ಈಕೆ ಸುಶಿಕ್ಷಿತಳಾಗಿದ್ದಳೆಂಬುದನ್ನು ಸೂಚಿಸುತ್ತದೆ. ಕಾಯಕ ದೃಷ್ಟಾಂತದೊಂದಿಗೆ ವ್ರತಾಚರಣೆಯ ಮಹತ್ವವನ್ನು ಸೌಮ್ಯವಾಗಿ ತನ್ನ ಎರಡು ವಚನಗಳಲ್ಲಿ  ಪ್ರತಿಪಾದಿಸಿದ್ದಾಳೆ.  ಕುಂಬಾರ ಗುಂಡಯ್ಯ ಮತ್ತು ಕೇತಲದೇವಿ ದಂಪತಿಗಳಿಬ್ಬರೂ ಕಾಯಕದಲ್ಲೇ ಕೈಲಾಸ ಕಂಡವರು.

    ಒಟ್ಟಾರೆ ಜೀವ ಮತ್ತು ದೇವರ ನಡುವಿನ ಸಂಬಂಧವನ್ನು ಹರಿಹರನು ಕುಂಬಾರ ಗುಂಡಯ್ಯನ ರಗಳೆಯ ಮೂಲಕ ಚಿತ್ರಿಸುತ್ತಾನೆ. ಗುಂಡಯ್ಯನಂತಹ ಶರಣನ ಶಿವಭಕ್ತಿಯ ಮೂಲಕ, ಶಿವನೇ ಕುಣಿಯಲು ತೊಡಗಿದಾಗ ಎಲ್ಲವೂ ಕುಣಿಯತೊಡಗುವುದು ಸಹಜ. ಕುಂಬಾರ ಗುಂಡಯ್ಯನು ತನ್ನ ಗಡಿಗೆಯ ಸುನಾದದಿಂದ ನಾದಪ್ರಿಯ ಹಾಗೂ ಭಕ್ತಿಪ್ರಿಯನಾದ ಶಿವನನ್ನು ಒಲಿಸಿಕೊಂಡು, ಶಿವನಿಂದ ತಾಂಡವ ನಾಟ್ಯವಾಡಿಸಿದವನು. ಜಗವಲ್ಲವ ಆಡಿಸುವ ಶಿವನನ್ನು ಗುಂಡಯ್ಯ ಮಡಿಕೆಯ ದನಿಯಿಂದ ಆಡಿಸಿದವನಾಗಿದ್ದು ಶರಣ ಪರಂಪರೆಯಲ್ಲಿ ಇಂದಿಗೂ ಗಮನ ಸೆಳೆದ ಶಿವಭಕ್ತನೆಂದೆನಿಸಿದ್ದಾನೆ.

 

ಗ್ರಂಥ ಋಣ:

 ೧. ಹರಿಹರನ ರಗಳೆಗಳು ಸಂ. ಎಂ.ಎಂ, ಕಲಬುರ್ಗಿ

  ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

೨. ಎಂ.ಚಿದಾನಂದ ಮೂರ್ತಿ,  ಬಸವಣ್ಣ: ಕರ್ನಾಟಕ : ಭಾರತ

   ಚಿದಾನಂದ ಸಮಗ್ರ ಸಂಪುಟ ೫, ಸ್ವಪ್ನ ಬುಕ್ ಹೌಸ್, ಬೆಂಗಳೂರು, ೨೦೦೩,

೩. ಎಸ್. ವಿದ್ಯಾಶಂಕರ, ವೀರಶೈವ ಸಾಹಿತ್ಯ ಚರಿತ್ರೆ, ಸಂ.೨,  ಹರಿಹರದೇವ ಯುಗ

  ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು ೨೦೧೩

೪. ಬಿ.ಎಸ್. ಗದ್ದಗಿಮಠ: ಕನ್ನಡ ಜಾನಪದ ಗೀತೆಗಳು, ಸರ್ಪನ್ ಪ್ರಕಾಶನ, ಧಾರವಾಡ,೨೦೧೭.

೫. ಸಿ.ನಾಗಭೂಷಣ; ಶರಣ-ಸಾಹಿತ್ಯ ಸಂಸ್ಕೃತಿ ಕವಳಿಗೆ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು,೨೦೧೮

೬. ಶಿವಶರಣೆಯರ ವಚನ ಸಂಪುಟ (ಸಂ) ವೀರಣ್ಣ ರಾಜೂರ

 ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೧೯೯೩

 

  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...