ಪಠ್ಯಕೇಂದ್ರಿತ ತಾತ್ವಿಕ
ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು
ಡಾ.ಸಿ.ನಾಗಭೂಷಣ
ಪ್ರಾಚೀನಸಾಹಿತ್ಯವನ್ನು
ಅಭ್ಯಾಸ ಮಾಡುವವರ ಸಂಖ್ಯೆ ಕ್ಷೀಣಿಸುತ್ತ ಬಂದಿತ್ತು. ಪರಿಸ್ಥಿತಿಯನ್ನು ಅರಿತ ಕನ್ನಡಸಾಹಿತ್ಯವನ್ನು
ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಪ್ರಾಚೀನ ಕನ್ನಡ ಕಾವ್ಯಗಳ ಸಂಗ್ರಹ ಆವೃತ್ತಿಗಳನ್ನು ಹೊರತರುವ ಅಂಶವನ್ನು
ಸೇರಿಸಿದರು. ಹಳಗನ್ನಡ ಸಾಹಿತ್ಯ ಕೃತಿಗಳಲ್ಲಿ ಉತ್ತಮವಾದಂತಹ ಕಾವ್ಯವನ್ನು ಆರಿಸಿ ಅದರ ರಸಕಟ್ಟಿಯಾದ
ಭಾಗವನ್ನು ಸಹೃದಯರಿಗೆ ಒದಗಿಸುವ, ವಿದ್ಯಾರ್ಥಿಗಳಿಗೆ ಪಠ್ಯವಾಗಿ ನೀಡುವ ಒಂದು ಕ್ರಮ ಇಪ್ಪತ್ತನೇ ಶತಮಾನದ
3ನೇ ದಶಕದಲ್ಲಿ ಮೈಸೂರು ವಿಶ್ವವಿದ್ಯಾಲಯದ ಮೂಲಕ ರೂಢಿಗೆ
ಬಂದಿತು. ಸಂಗ್ರಹ ಆವೃತ್ತಿಗಳು ಪಠ್ಯಕೇಂದ್ರಿತ ಸಂಪಾದನೆಯ ಪ್ರಕ್ರಿಯೆಗಳಾಗಿದ್ದು ಶುದ್ಧಪಠ್ಯ ಎನ್ನುವ
ಪರಿಕಲ್ಪನೆಯಲ್ಲಿ ಸಾಗಿ ಬಂದಿವೆ. ಕಾವ್ಯಗಳಲ್ಲಿಯ ಸಾಹಿತ್ಯಾತ್ಮಕ ಅಂಶಗಳನ್ನಷ್ಟೇ ಆಸಕ್ತರಿಗೆ ನೀಡುವ
ಉದ್ದೇಶ್ಯದಿಂದಾಗಿ ಸಂಗ್ರಹ ಆವೃತ್ತಿಗಳು ರೂಪುಗೊಳ್ಳಲಿಕ್ಕೆ ಕಾರಣವಾಗಿವೆ.
ಸಂಗ್ರಹ ಕಾರ್ಯದಲ್ಲಿ
ಮೂಲ ಮುಖ್ಯ ಕಥೆಗೆ ಯಾವ ಊನವೂ ಉಂಟಾಗದಂತೆ ಆಯ್ದುಕೊಂಡ ಭಾಗಗಳಲ್ಲಿ ಬರುವ ವಿವಿಧ ಪಾಠಾಂತರಗಳಲ್ಲಿ
ಉತ್ತಮ ಪಾಠವನ್ನು ಸ್ವೀಕರಿಸುವುದು ಮುಖ್ಯವಾಗಿದೆ. ಸಂಗ್ರಹ ಆವೃತ್ತಿಗಳಲ್ಲಿ ಗ್ರಂಥಪಾಠ ಪರಿಷ್ಕರಣದ
ಜೊತೆಗೆ ಕವಿಯ ಕಾಲ, ದೇಶ, ಇತ್ಯಾದಿ ವೈಯಕ್ತಿಕ ವಿಚಾರಗಳು,ಕೃತಿಯ ಆಕರಗಳು, ಕೃತಿ ಹಾಗೂ ಕೃತಿಕಾರನ
ಚಾರಿತ್ರಿಕ ಹಿನ್ನೆಲೆ, ಕೃತಿಕಾರನ ಮೇಲೆ ಬಿದ್ದಿರುವ ಪ್ರಭಾವಗಳು
ಮುಂದಿನ ಕೃತಿಕಾರರ ಮೇಲೆ ಬಿದ್ದಿರುವ ಪ್ರಭಾವ, ಕೃತಿಯ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಅಧ್ಯಯನ, ಇತ್ಯಾದಿ
ಉನ್ನತ ವಿಮರ್ಶೆಯ ಸಂಗತಿಗಳು ಸಂಗ್ರಹ ಆವೃತ್ತಿಗಳ ಮಹತ್ವವನ್ನು ಹೆಚ್ಚಿಸಲು ಮತು ಅವು ಉತ್ಕೃಷ್ಟಮಾದರಿಗಳು ಎನಿಸಿಕೊಳ್ಳಲು ಕಾರಣವಾಗಿವೆ.
ತೀ.ನಂ.ಶ್ರೀಕಂಠಯ್ಯನವರು
ವಾಸ್ತವವಾಗಿ ಬರೆದದ್ದು ಕಡಿಮೆಯೇ ಎನ್ನುವ ಅನಿಸಿಕೆ ಕೆಲವು ವಿದ್ವಾಂಸರಿಂದ ವ್ಯಕ್ತವಾಗಿದೆ. ತೀ.ನಂ.ಶ್ರೀ.
ಅವರು ಗ್ರಂಥಸಂಪಾದನೆ ಕಾರ್ಯವನ್ನು
ಪ್ರಾರಂಭಿಸುವ ಹೊತ್ತಿಗೆ ಗ್ರಂಥಸಂಪಾದನೆಯು ಪಾಶ್ಚಾತ್ಯರಲ್ಲಿ ಒಂದು ನಿಶ್ಚಿತ
ರೂಪವನ್ನು ತಾಳಿದ್ದಿತು. ತೀ.ನಂ.ಶ್ರೀ.ಯವರಲ್ಲಿ ಗ್ರಂಥ ಸಂಪಾದನೆಯ ವಿಧಿವಿಧಾನಗಳಿಗೆ ಸಂಬಂಧಿಸಿದ
ಎಲ್ಲ ಅರ್ಹತೆಗಳೂ ಅಗತ್ಯಕ್ಕೆ ತಕ್ಕಷ್ಟು ಇದ್ದುವು.
ಟಿ.ಎಸ್. ವೆಂಕಣ್ಣಯ್ಯನವರ ಸಂಪಾದನಾ ಕಾರ್ಯಗಳಲ್ಲಿ ಸಹಕರಿಸುತ್ತಿದ್ದಾಗ ಸಾಗಿದ ಅವರ
"ಅಭ್ಯಾಸಪ್ರಯತ್ನ' ಇನ್ನೊಂದು ರೂಪದಲ್ಲಿ ನಡೆಯುತ್ತಿತ್ತು. ಹೀಗಾಗಿ
ಇವರು ಆ ಕಾಲಘಟ್ಟದಲ್ಲಿಯೇ ಗ್ರಂಥಸಂಪಾದನೆಯ ತಾತ್ವಿಕ
ಮತ್ತು ಅನ್ವಯಿಕ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಎಲ್ಲಾ ಸಾಧ್ಯತೆಗಳನ್ನು ಸಾಧ್ಯವಾಗಿಸಿಕೊಂಡು ನಂಬಿಯಣ್ಣನ
ರಗಳೆ ಮತ್ತು ಗದಾಯುದ್ಧ
ಸಂಗ್ರಹ ಗಳನ್ನು ಪರಿಷ್ಕರಿಸುವುದರ
ಮೂಲಕ ಆಧುನಿಕ ಪೂರ್ವ ಸಾಹಿತ್ಯ ಸಂವರ್ಧನೆಗೆ ಕಾರಣೀಭೂತರಾಗಿದ್ದಾರೆ. ಅವರು ಸಂಪಾದಿಸಿರುವ ಹರಿಹರನ ನಂಬಿಯಣ್ಣನ ರಗಳೆಯು ಕ್ರಿ.ಶ. ೧೯೪೬ ರಲ್ಲಿ ಮತ್ತು ರನ್ನನ ಗದಾಯುದ್ಧ ಸಂಗ್ರಹ ಕೃತಿಯು ೧೯೪೯ರಲ್ಲಿ ಪ್ರಕಟಗೊಂಡಿವೆ. ನಂಬಿಯಣ್ಣನ ರಗಳೆಯ
ಪ್ರಕಟಣೆಯ ಕಾಲಕ್ಕೂ (೧೯೪೬) ಗದಾಯುದ್ಧ
ಸಂಗ್ರಹದ ಪ್ರಕಟಣೆಯ ಕಾಲಕ್ಕೂ (೧೯೪೯) ಕೇವಲ ಮೂರು ವರ್ಷಗಳ ಅಂತರವಿದೆ. ಈ ಮೊದಲೆ ಸೂಚಿಸಿರುವಂತೆ
ನಂಬಿಯಣ್ಣನ ರಗಳೆಯ ಸಂಪಾದನ ಕಾರ್ಯಾರಂಭ ೧೯೩೯ರಲ್ಲಿ, ಎಂದ ಮೇಲೆ, ಗದಾಯುದ್ಧ ಸಂಗ್ರಹದ ಸಂಪಾದನ ಕಾರ್ಯಕ್ಕೆ
ಹಿಡಿದ ಕಾಲದ ಇಮ್ಮಡಿಗೂ ಮಿಕ್ಕ ಕಾಲ ನಂಬಿಯಣ್ಣನ ರಗಳೆಯ ಸಂಪಾದನಕಾರ್ಯ ತೆಗೆದುಕೊಂಡಿರುವುದನ್ನು ಕಾಣಬಹುದಾಗಿದೆ.
ನಂಬಿಯಣ್ಣನ ರಗಳೆ ಮೊದಲ ಬಾರಿಗೆ ಪ್ರಕಟವಾಗಬೇಕಾಗಿದ್ದುದರಿಂದ ಹಸ್ತಪ್ರತಿಗಳ ಸಂಗ್ರಹದಿಂದಲೇ ಕಾರ್ಯಾರಂಭ
ಮಾಡಬೇಕಾಗಿತ್ತು. ಗದಾಯುದ್ಧಕ್ಕೆ ಪರಿಷ್ಕೃತ ಮುದ್ರಣಗಳ ನೆರವೂ ಇದ್ದು, ಹಿನ್ನೆಲೆಯಾಗಿ ಗ್ರಂಥಸಂಪಾದನ
ಕಾರ್ಯದ ಪಕ್ವವಾದ ಅನುಭವೂ ಇದ್ದುದ್ದರಿಂದ ಅದರ ಸಂಪಾದನಾ ಕಾರ್ಯಕ್ಕೆ ಅಷ್ಟು ದೀರ್ಘಾವಧಿಯ ಕಾಲ ಬೇಕಾಗಲಿಲ್ಲ.
ತೀ.ನಂ.ಶ್ರೀ ಯವರು ಸಿದ್ಧಪಡಿಸಿದ್ದ ನಂಬಿಯಣ್ಣನ ರಗಳೆಯ ಅಚ್ಚಿಗಾಗಿ ಸಿದ್ಧಪಡಿಸಿದ ಪ್ರತಿ ಹಾಗೂ ಓಲೆಯಪ್ರತಿಗಳಿಂದ
ಪಾಠಾಂತರಗಳನ್ನು ಸಂಕಲನ ಮಾಡಿದ್ದ ಆಧಾರ ಹಸ್ತಪ್ರತಿ, ಇವೆರಡರಿಂದ ಈ ಕೆಲಸಕ್ಕೆ ಪಟ್ಟ ಶ್ರದ್ಧೆ ಮತ್ತು
ಪರಿಶ್ರಮದ ಒಂದು ಸ್ಥೂಲಚಿತ್ರಣವನ್ನು ನಾವು ಅವರ ಈ ಸಂಪಾದಿತ ಕೃತಿಯಲ್ಲಿ
ಗುರುತಿಸಬಹುದಾಗಿದೆ.
ತೀನಂಶ್ರೀ ಅವರು
ನಂಬಿಯಣ್ಣನ ರಗಳೆಯನ್ನು ಸಂಪಾದಿಸಲು ಅಸಕ್ತಿಯನ್ನು ತಾಳಿದ ಬಗೆಗೆ ಈ ರೀತಿಯಾಗಿ ಅವರೇ ಹೇಳಿಕೊಂಡಿದ್ದಾರೆ.
ʻನಂಬಿಯಣ್ಣನ
ರಗಳೆʼಯ ಹತ್ತಿರದ
ಪರಿಚಯವನ್ನು ನಾನು ಮಾಡಿಕೊಂಡದ್ದು ಸುಮಾರು ಏಳು ವರ್ಷಗಳ ಕೆಳಗೆ. ಮೈಸೂರಿನ ಓರಿಯೆಂಟಲ್ ಲೈಬ್ರರಿಯ
ಕೈಬರಹದ ಪ್ರತಿಯೊಂದರಲ್ಲಿ ಅದನ್ನು ಓದತೊಡಗಿ, ಮುಂದುವರಿದ ಹಾಗೆಲ್ಲ ಅದರ ಸೌಂದರ್ಯಕ್ಕೆ ಮನಸೋತೆನು.
ಹರಿಹರ ಕವಿಯ ಅತ್ಯುತ್ಕೃಷ್ಟ ಕೃತಿಗಳಲ್ಲಿ ಇದು ಒಂದೆಂಬುದು ನನಗೆ ಚೆನ್ನಾಗಿ ಮನವರಿಕೆಯಾಯಿತು. ಕೈಬರೆಹದ
ಪ್ರತಿಗಳಲ್ಲೇ ಅಡಗಿರಲು ಇನ್ನು ಬಿಡದೆ, ಇದನ್ನು ಪರಿಷ್ಕರಿಸಿ ಅಚ್ಚುಮಾಡಿಸಬೇಕೆಂಬ ಆಸೆಯೂ ತಲೆದೋರಿ
ಆ ವ್ಯವಸಾಯಕ್ಕೆ ತೊಡಗಿದೆನು. ಅದರ ಫಲವೇ ಈ ಪುಸ್ತಕ.ʼ ಎಂಬುದಾಗಿ ಅವರೇ ಹೇಳಿಕೊಂಡಿದ್ದಾರೆ. (ನಂಬಿಯಣ್ಣನ ರಗಳೆ, ಅರಿಕೆ)
ಈ ಗ್ರಂಥವನ್ನು ಶೋಧಿಸಿ ಸಂಪಾದಿಸಲು ಕ, ಖ, ಗ, ಚ, ಜ ಐದು ಮಾತೃಕೆಗಳನ್ನು
ಆಧಾರವಾಗಿ ಉಪಯೋಗಿಸಿಕೊಂಡಿದ್ದಾರೆ. ಅವರೇ ಹೇಳಿರುವ ಹಾಗೆ ಅವುಗಳ ವಿವರಗಳು ಈ ಕೆಳಕಂಡ ರೀತಿಯಲ್ಲಿವೆ.
ಕ- ಮೈಸೂರು ಗೌರ್ನಮೆಂಟ್ ಓರಿಯಂಟಲ್ ಲೈಬ್ರರಿಯು K 358 ಸಂಖ್ಯೆಯ
ʻಶರಣರಗಳೆʼ ಎಂಬ ಹೆಸರುಳ್ಳ ಓಲೆಯಗರಿಯ
ಪುಸ್ತಕದಲ್ಲಿ ದೊರೆಯುವ ಪಾಠ ಈ ಪುಸ್ತಕದಲ್ಲಿ ಹರಿಹರನ ರಚಿತವಾದ ರಗಳೆಗಳು ನೂರಕ್ಕೆ ಹೆಚ್ಚಾಗಿ ಉಂಟು.
ಎಂಬುದಾಗಿ ತಿಳಿಸಿದ್ದಾರೆ.
ಖ-ಮೈಸೂರು ಗೌ.ಓ, ಲೈಬ್ರರಿಯ K.A 62 ಸಂಖ್ಯೆಯ
ಫೂಲ್ಸ್ ಕ್ಯಾಪ್ ಆಕಾರದ ಕಾಗದದ ಪುಸ್ತಕದಲ್ಲಿ ದೊರೆಯುವ ಪಾಠ. ಈ ಗ್ರಂಥವೂ ರಗಳೆಗಳ ಒಂದು ಸಂಕಲನ:
ಇದಕ್ಕೆ ʼಅರವತ್ತು
ಮೂರು ಪುರಾತನ ಶರಣರ ಚರಿತ್ರೆ ಶೈವಪುರಾಣʼ ಎಂದು ಮುಖ ಪಾತ್ರದಲ್ಲಿ ಹೆಸರು ಕೊಟ್ಟಿದ್ದಾರೆ.
ಚ-ಮದರಾಸಿನ ಗೌರ್ನಮೆಂಟ್ ಓರಿಯೆಂಟಲ್ ಮ್ಯಾನ್ಯುಸ್ಕ್ರಿಫ್ಟ್ಸ್
ಲೈಬ್ರರಿಯಲ್ಲಿ 18-5-20 ಎಂಬ ಸಂಖ್ಯೆ ಕೊಟ್ಟಿರುವ ಓಲೆಯಗರಿಯ ಪುಸ್ತಕದಲ್ಲಿ ದೊರೆಯುವ ಪಾಠ. ಈ ಪುಸ್ತಕದಲ್ಲಿ
ಸೌಂದರಪುರಾಣವೂ ಏಳು ರಗಳೆಗಳೂ ಉಂಟು. ಇದರಲ್ಲಿ ಹಲವು ಓಲೆಗಳು ಒಡೆದಿವೆ, ಮುಕ್ಕಾಗಿವೆ: ಹುಳು ತಿನ್ನದ
ಓಲೆಯೇ ಇಲ್ಲವೆನ್ನಬಹುದು ಎಂಬುದಾಗಿ ತಿಳಿಸಿದ್ದಾರೆ.
ಜ-ಮೈಸೂರಿನ ಓರಿಯೆಂಟಲ್ ಲೈಬ್ರರಿಯಲ್ಲಿ (ಆಗ) ಇದ್ದ ಶ್ರೀಮಾನ್ ಎಂ.ಡಿ.ಬಸಪ್ಪನವರು
ವಿಶ್ವಾಸಪೂರ್ವಕವಾಗಿ ನನಗೆ ಕೊಟ್ಟ ಓಲೆಯ ಗರಿಯ ಪುಸ್ತಕದಲ್ಲಿ ದೊರೆಯುವ ಪಾಠ. ಇದರಲ್ಲಿ ನಂಬಿಯಣ್ಣನ
ರಗಳೆ ಮಾತ್ರವಲ್ಲದೆ, ಶೂನ್ಯ ಸಂಪಾದನೆ, ಚೆನ್ನಬಸವೇಶ್ವರ ವಚನ ಮೊದಲಾದವೂ ಇವೆ. ನಂಬಿಯಣ್ಣನ ರಗಳೆಯ
ಕೊನೆಯಲ್ಲಿ “ವಿಳಂಬಿ ಸಂವತ್ಸರದ ಆಷಾಡ ಬಹುಳ ಪಂಚಮೆಯಲ್ಲು ನಂಬಿಯಣ್ಣನ ರಗಳೆ ಸಮಾಮ್ತಂ ಸಂತೆಯ ಸೋವನ
ಹಳಿಯ ಸಿದ್ಧಮಲ್ಲಿಕಾರ್ಜುನ ದೇವರು ಬರದ ನಂಬ್ಯಣನ ರಗಳೆಗೆ ಶರಣಾರ್ತ್ತಿ ಶರಣಾರ್ತ್ತಿ ಶರಣಾರ್ತ್ತಿ”
ಎಂದಿದೆ, ಎಂಬುದಾಗಿ ಸೂಚಿಸಿದ್ದಾರೆ.
ಮೇಲಿನ ಮಾತೃಕೆಗಳಲ್ಲಿ “ಕ, ಚ, ಜ” – ಈ ಮೂರರಲ್ಲೂ ಕಾರವು
ಸಾಮಾನ್ಯವಾಗಿ ತಪ್ಪಿಲ್ಲದೆ ಪ್ರಯೋಗವಾಗಿದೆ. “ಖ” ದಲ್ಲಿ ಕಾರವುಂಟು. ಇದು ಕೆಲವು ವೇಳೆ ತಪ್ಪಾಗಿರುವುದೂ
ಉಂಟು. “ಗ”ದಲ್ಲಿ ಕಾರವೂ ಬಳಸಿಲ್ಲ. ಎಂಬುದಾಗಿ ಮಾತೃಕೆಗಳಲ್ಲಿಯ ಶುದ್ಧತೆಯ ಬಗೆಗೆ ತಿಳಿಸಿದ್ದಾರೆ.
ಇವುಗಳಲ್ಲಿ “ಕ, ಜ” ಗಳ ಪಾಠಸಂಪ್ರದಾಯವೂ “ಖ, ಗ, ಚ”ಗಳ ಪಾಠ ಸಂಪ್ರದಾಯವೂ ಕೆಲಮಟ್ಟಿಗೆ ಭಿನ್ನವಾಗಿದೆ.
“ಕ, ಜ”ಗಳ ಸಂಪ್ರದಾಯವೇ ಮೂಲಕ್ಕೆ ಹೆಚ್ಚು ಹತ್ತಿರವೆಂದು ಪರಿಶೀಲನೆಯಿಂದ ವ್ಯಕ್ತವಾಗುತ್ತದೆ. “ಖ,
ಗ, ಚ” ಗುಂಪಿನಲ್ಲಿ “ಖ, ಗ”ಗಳು ಒಂದಕ್ಕೊಂದು ಬಲುಮಟ್ಟಿಗೆ ಹೊಂದಿಕೊಳ್ಳುತ್ತವೆ; “ಚ” ವೇ ಬೇರೆ ನಿಲ್ಲುತ್ತದೆ.
“ಖ, ಗ”ಗಳಲ್ಲಿ ಅನೇಕ ಪ್ರಕ್ಷಿಪ್ತ ಭಾಗಗಳುಂಟು; ತಿದ್ದುಪಾಡುಗಳೂ ಉಂಟು. “ಚ” ದಲ್ಲಂತೂ ಇವು ಮಿತಿಮೀರಿಹೋಗಿವೆ.
ಎಂಬುದಾಗಿ ತಿಳಿಸಿದ್ದಾರೆ. ಈ ಐದು ಮಾತೃಕೆಗಳಲ್ಲಿ ಯಾವುದೂ ಒಂದು ಇನ್ನೊಂದರ ನಕಲಾಗಿಲ್ಲದಿರುವುದನ್ನು
ತೀನಂಶ್ರೀ ಅವರು ಗುರುತಿಸಿದ್ದಾರೆ.
ಪಾಶ್ಚಾತ್ಯ ವಿದ್ವಾಂಸರು ಗ್ರಂಥಸಂಪಾದನೆಯಲ್ಲಿ ಬಳಸುತ್ತಿದ್ದ
ಪಾಠಾಂತರ ಸ್ವರೂಪ ನಿರ್ದೇಶಕ ಚಿಹ್ನೆಗಳ ಪರಿಚಯವನ್ನು ಡಿ.ಎಲ್. ನರಸಿಂಹಾಚಾರ್ಯರು ತಮ್ಮ
"ಗ್ರಂಥಸಂಪಾದನೆ'ಯಲ್ಲಿ ಮಾಡಿಕೊಟ್ಟಿದ್ಹಾರೆ. ಕನ್ನಡದಲ್ಲಿ ರೈಸ್, ಕಿಟ್ಟೆಲ್, ಆರ್.
ನರಸಿಂಹಾಚಾರ್, ಮುಂತಾದ.ಪೂರ್ವವಿದ್ವಾಂಸರೂ
ಕೆಲವು ಚಿಹ್ನೆಗಳನ್ನು ಬಳಕೆಗೆ ತಂದಿದ್ದರು. ಅವರು ಅನುಸರಿಸುತ್ತಿದ್ದ ವಿಧಾನಕ್ಕೆ ಆ ಚಿಹ್ನೆಗಳು
ಸಾಕಾಗಿದ್ದುವು. ಶಾಸ್ತ್ರೀಯಮಟ್ಟದಲ್ಲಿ ನಡೆವ ಗ್ರಂಥಸಂಪಾದನೆಗೆ ನಿರ್ದಿಷ್ಟವಾದ ಚಿಹ್ನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗುತ್ತವೆ. ಪಾಶ್ಚಾತ್ಯ ವಿದ್ವಾಂಸರು, ಡಾ|| ಸುಕ್ತಂಕರ್, ಎಸ್.ಎಂ.ಕತ್ರೆ ಇವರುಗಳು
ಸೂಚಿಸಿದ್ದ ಚಿಹ್ನೆಗಳನ್ನು ಪರಿಶೀಲಿಸಿ, ಅವುಗಳ ಆಧಾರದ ಮೇಲೆ ಕನ್ನಡ ಗ್ರಂಥಸಂಪಾದನೆಗೆ ಹೊಂದಿಬರುವ
ಚಿಹ್ನೆಗಳನ್ನು ಬಹುಶಃ ಮೊತ್ತಮೊದಲಿಗೆ ಸಂಯೋಜಿಸಿ, ನಂಬಿಯಣ್ಣನ ರಗಳೆಯಲ್ಲಿಯೂ ಗದಾಯುದ್ಧ ಸಂಗ್ರಹದಲ್ಲಿಯೂ
ತೀ.ನಂ.ಶ್ರೀ. ಯವರು ಬಳಸಿದರು. ಗ್ರಂಥಸಂಪಾದಕನು ಪಾಠನಿರ್ಣಯ ಮಾಡುವುದಕ್ಕೆ ಸಂಬಂಧಪಟ್ಟಂತೆ ಬಹುಮುಖವಾದ
ಅಧ್ಯಯನವನ್ನು ನಡೆಸಬೇಕಾಗುತ್ತದೆ. ಬಸವರಾಜ ದೇವರ ರಗಳೆಯನ್ನು ಸಂಪಾದಿಸುವ ಕಾರ್ಯದಲ್ಲಿ ಸಹಕರಿಸಿದ್ದ
ತೀ.ನಂ.ಶ್ರೀ ಯವರಿಗೆ ಹರಿಹರನ ಭಾಷೆ ಶೈಲಿಗಳ ಸ್ವರೂಪ ತಕ್ಕಮಟ್ಟಿಗೆ ಪರಿಚಯವಾಗಿತ್ತು. ನಂಬಿಯಣ್ಣನ
ರಗಳೆಯನ್ನು ಹಸ್ತಪ್ರತಿಯಲ್ಲಿ ಓದಿ ಅದಕ್ಕೆ ಮಾರುಹೋದ ಅವರು ಅದನ್ನು ಸಂಪಾದನೆ ಮಾಡುವ ಸಂಕಲ್ಪವನ್ನು
ಕೈಕೊಂಡು, ಬಹಳ ಸಮಯ ಕಾಯ ಬೇಕಾಯಿತು.
ಇದಕ್ಕಾಗಿ ಅವರು ಪಟ್ಟ ಶ್ರಮದ ಒಂದು ಇಣುಕುನೋಟ ಅವರ ಟಿಪ್ಪಣಿ ಹಾಳೆಗಳಲ್ಲಿ ದೊರಕುತ್ತದೆ. ʻಹರಿಹರನ ಮತದ ನಿರ್ಣಯಕ್ಕೆ
ಸಂಬಂಧಪಟ್ಟಂತೆ ಕೆಲವು ಗ್ರಂಥಗಳನ್ನು ಓದಿದ್ದಾರೆ; ಹರಿಹರನ ಕೆಲವು ಅಪೂರ್ವಪದ ಪ್ರಯೋಗಗಳಿಗೆ ಸಂವಾದಿ
ಪ್ರಯೋಗಗಳ ಸಮರ್ಥನೆಗಾಗಿ ಅನ್ವೇಷಣೆ ನಡೆಸಿದ್ದಾರೆ; ಕವಿ ಕಾವ್ಯವಿಮರ್ಶೆಗೆ ಸಂಬಂಧಪಟ್ಟಂತೆ ಒಂದು
ಸ್ಥೂಲವಾದ ಟಿಪ್ಪಣಿಯನ್ನು ಸಿದ್ಧಮಾಡಿಕೊಂಡಿದ್ದಾರೆ. ಇದೆಲ್ಲದರ ಪರಿಣಾಮ ಫಲ ನಂಬಿಯಣ್ಣನ ರಗಳೆಯ ಈಗಿನ
ಪರಿಷ್ಕೃತ ರೂಪ.ʼ( ಎಂ.ವಿ.
ಸೀತಾರಾಮಯ್ಯ: ತೀ.ನಂ.ಶ್ರೀಕಂಠಯ್ಯ ಸಿರಿಸಂಪದ,ಸಂ: ಎಫ್.ಟಿ.ಹಳ್ಳಿಕೇರಿ, ಪು.೨೪೫)
ಗ್ರಂಥಸಂಪಾದನ
ಕಾರ್ಯವು ಈಗ ಒಂದು ಖಚಿತವಾದ ಶಾಸ್ತ್ರವಾಗಿ ಪರಿಣಮಿಸಿದೆ. ಅದರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದಲ್ಲಿ,
ಮೂಲಪಾಠವನ್ನು ಬಲುಮಟ್ಟಿಗೆ ಶುದ್ಧವಾಗಿ ನಿರ್ಣಯಿಸುವುದು ಸಾಧ್ಯ. ʼನಂಬಿಯಣ್ಣನ ರಗಳೆʼಯಂತೂ ಈ ಶಾಸ್ತ್ರಪದ್ಧತಿಯ
ಅನೇಕ ಸೂಕ್ಷ್ಮಾಂಶಗಳಿಗೆ ಒಳ್ಳೆಯ ನಿದರ್ಶನಗಳನ್ನು ಒದಗಿಸಿಕೊಡುತ್ತದೆ. ಈ ಕಾರ್ಯದಲ್ಲಿ ಅಜ್ಞಾನದಿಂದಲೂ
ಅನವಧಾನದಿಂದಲೂ ಪ್ರಮಾದಗಳು ಉಂಟಾಗುವುದು ಸುಲಭವಾಗಿದ್ದು ನನ್ನ ಸಂಪಾದನೆಯಲ್ಲಿ ಇಂಥ ಕೆಲವು ಸಂಘಟಿಸಿವೆಯೆಂದು
ಈಗ ನನಗೇ ಅರಿವಾಗಿದೆ. ಆದರೂ ತಿಳಿದಮಟ್ಟಿಗೆ ನೇರವಾದ ದಾರಿಯಲ್ಲಿ ನಡೆದು ಹರಿಹರನ ಮೂಲಪಾಠಕ್ಕೆ ಆದಷ್ಟು
ಹತ್ತಿರ ಸೇರಲು ಇಲ್ಲಿ ಪ್ರಯತ್ನಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ವಿಷಯ, ಭಾಷೆ ಮೊದಲಾದವುಗಳ
ದೃಷ್ಟಿಯಿಂದ ಗಮನಾರ್ಹವಾದ ಪಾಠಾಂತರಗಳನ್ನು ಆದಷ್ಟು ಸಮಗ್ರವಾಗಿ ಕೊಟ್ಟಿದ್ದಾರೆ. ಇದರಿಂದ ಪುಸ್ತಕಕ್ಕೆ
ಹೊರೆಯಾದರೂ ಚಿಂತೆಯಿಲ್ಲ; ಗ್ರಂಥ ವ್ಯಾಸಂಗಮಾಡುವವರಿಗೆ ಪ್ರಯೋಜನ ಹೆಚ್ಚಾಗಲಿದೆ ಎಂದು ಅವರು ಹೇಳಿರುವುದರಲ್ಲಿ
ಗ್ರಂಥಸಂಪಾದನೆಯ ವೈಜ್ಞಾನಿಕ ನಿಲುವು ಎಂತಹದ್ದೆಂಬುದನ್ನು ಗುರುತಿಸಬಹುದಾಗಿದೆ.
ನಂಬಿಯಣ್ಣನ
ರಗಳೆ ಕೃತಿಯನ್ನು ಸಂಪಾದಿಸುವಲ್ಲಿ ಉಪಯೋಗಿಸಿಕೊಂಡಿರುವ ಮಾತೃಕೆಗಳ ಹೆಚ್ಚಿನ ಪರಿಚಯ, ಪಾಠನಿರ್ಣಯದಲ್ಲಿ
ಅನುಸರಿಸಿರುವ ನಿಯಮಗಳು, ಅಲ್ಲಿಯ ಸಮಸ್ಯೆಗಳು, ಕಾವ್ಯ ವಿಮರ್ಶೆ, ತಮಿಳು ತೆಲುಗು ಸಂಸ್ಕೃತ ಗ್ರಂಥಗಳಲ್ಲಿ
ದೊರೆಯುವ ಸುಂದರಮೂರ್ತಿಯ ವೃತ್ತಾಂತಗಳಿಗೂ ಹರಿಹರನ ನಿರೂಪಣೆಗೂ ಇರುವ ಸಾಮ್ಯ ವೈಷಮ್ಯಗಳು, ಕನ್ನಡದಲ್ಲಿ
ಸೌಂದರಪುರಾಣಗಳನ್ನು ರಚಿಸಿರುವ ಕವಿಗಳ ಮೇಲೆ ಹರಿಹರನ ಪ್ರಭಾವ – ನಂಬಿಯಣ್ಣನ ರಗಳೆಯ
ಮೂಲ, ಕವಿಯ ಕಾಲ, ದೇಶ, ಕೃತಿಯ ಸೊಗಸು, ಕಥೆಯ ವ್ಯಾಪ್ತಿ ಈ ಮೊದಲಾದ ವಿಷಯಗಳನ್ನೊಳಗೊಂಡ ಸವಿಸ್ತರವಾದ
ಪೀಠಿಕೆಯನ್ನೂ ಟಿಪ್ಪಣಿ ಶಬ್ದ ಕೋಶಗಳನ್ನೂ ಮೂಲ ಪಾಠದೊಡನೆ ಒಂದೇ ಸಂಪುಟದಲ್ಲಿ ಕೊಡಬೇಕೆಂಬ ಉದ್ದೇಶ
ಮೊದಲಿಗೆ ಅವರಿಗೆ ಇದ್ದಿತಂತೆ. ಮೂಲ ಪಾಠವುʼಪ್ರಬುದ್ಧ ಕರ್ಣಾಟಕʼದ 24ನೆಯ ಸಂಪುಟದಲ್ಲಿ
ಪ್ರಕಟವಾಗಿದ್ದರೂ, ಅದನ್ನು ಪುಸ್ತಕರೂಪದಲ್ಲಿ ಹೊರಡಿಸದೆ ತಡೆದಿದ್ದು ಈ ಕಾರಣದಿಂದಲೇ, ಆದಷ್ಟು ಬೇಗ ಎರಡನೆಯ ಸಂಪುಟವನ್ನೂ ಹೊರಕ್ಕೆ ತರುವ ಉದ್ದೇಶವಿದೆ.' ಎಂದು ಹೇಳಿದ್ದರು. ಪೀಠಿಕೆಗಾಗಿ ಕಾಯುತ್ತ ಮೂಲ ಗ್ರಂಥವೇ ಮೂಲೆಯಲ್ಲಿ
ಎಷ್ಟು ದಿನವಾದರೂ ಅಡಗಿರುವುದು ಉಚಿತವಲ್ಲವೆಂದು ಮನಗಂಡು, ಈಗ ಗ್ರಂಥದ ಮೊದಲನೆಯ ಸಂಪುಟವನ್ನು ಪ್ರಕಟಿಸಲಾಗಿದೆ
ಎಂಬುದಾಗಿ ಅರಿಕೆಯಲ್ಲಿ ಅವರು ಹೇಳಿಕೊಂಡಿದ್ದಾರೆ. 'ನಂಬಿಯಣ್ಣನ
ರಗಳೆ'ಗೆ
ವಿಸ್ತಾರ ವಿಮರ್ಶೆ ಇದ್ದಿದ್ದರೆ ಹರಿಹರನ ಬಗೆಗಿನ ತೀನಂಶ್ರೀ
ಯವರ ಒಳನೋಟ ನಮಗೆ ಪರಿಚಯವಾಗುತ್ತಿತ್ತು. ಆದಾಗ್ಯೂ ಟಿಪ್ಪಣಿಗಳಲ್ಲಿನ
ವಿವರ, ಅವು
ತಮಗೆ ತಾವೇ ವಿಮರ್ಶೆಯೂ ಆಗಿವೆ. ಇವರ ಸಂಪಾದನೆಯಲ್ಲಿಯ
ಆಯಾ ಪದ್ಯಗಳು ಪಡೆಯುವ ಅರ್ಥವ್ಯಾಪ್ತಿ, ಹಲವು ಆಯಾಮ ಗಳು ಇಣುಕುವ ಹೊಸನೋಟಗಳು ಓದುಗರನ್ನು ಬೆರಗುಗೊಳಿಸುತ್ತವೆ.
ಈ ಉದ್ದೇಶ ನೆರವೇರಿದ್ದರೆ, ಗ್ರಂಥಸಂಪಾದನಾಕಾರ್ಯಕ್ಕೆ
ಸಂಬಂಧಪಟ್ಟಂತೆ ಈಗಿಗಿಂತ ಉತ್ತಮವಾದ ಮಾದರಿ ನಮ್ಮ ಮುಂದೆ ಇರುತ್ತಿದ್ದಿತು. ಹಾಗೆ ಆಗದಿದ್ದುದು ಈ ಕ್ಷೇತ್ರಕ್ಕೆ ಒದಗಿದ ದೊಡ್ಡ
ನಷ್ಟ. ಒಂದಲ್ಲ ಒಂದು ಕಾರಣದಿಂದ ಅವರ ಉದ್ದೇಶ ಕೈಗೊಡಲಿಲ್ಲ. ಪ್ರತ್ಯೇಕವಾಗಿ
ಬರೆಯ ಬೇಕೆಂಬ ಆಸೆಯನ್ನು ತೀನಂಶ್ರೀಯವರು ಹೊತ್ತಿದ್ದರು. ಆದರೆ ಅದು ಈಡೇರದೇ ಹೋದುದು ಅತ್ಯಂತ ವ್ಯಸನದ
ಸಂಗತಿ ಎಂದು ಎಂ.ಚಿದಾನಂದ ಮೂರ್ತಿಯವರು ತಮ್ಮ ಲೇಖನದಲ್ಲಿ ಈ ವಿಷಯದ ಬಗೆಗೆ ದಾಖಲಿಸಿದ್ದಾರೆ.
ತೀ.ನಂ.ಶ್ರೀ.' ಅವರು ಹರಿಹರನ “ನಂಬಿಯಣ್ಣನ. ರಗಳೆ”ಯನ್ನು ಸಂಪಾದನೆ
ಮಾಡುವವರೆಗೂ ಪ್ರಕಟವಾಗಿರಲೇ ಇಲ್ಲ. ಅದರ ಸಂಪಾದನೆಗೆ
ಅವರು ಒಟ್ಟು ಐದು ಹಸ್ತಪ್ರತಿಗಳನ್ನು ಬಳಸಿಕೊಂಡಿದ್ದಾರೆ. ಮತ್ತು ಅವುಗಳ ಪರಸ್ಪರ ಸಂಬಂಧದ ಪೀಳಿಗೆಯನ್ನು ರಚನೆಯನ್ನುಮಾಡಿದ್ದಾರೆ. “ಕ ಜ ಗಳ ಪಾಠ
ಸಂಪ ಪ್ರದಾಯವೂ ಖ..ಗ, ಚ ಗಳ
ಸಂಪ್ರದಾಯವೂ ಕೆಲಮಟ್ಟಿಗೆ ಭಿನ್ನವಾಗಿರುವುದನ್ನು ತೋರಿಸಿ ಕೊಟ್ಟಿದ್ದಾರೆ. ಕ, ಜ ಗಳ ಸಂಪ್ರದಾಯದ ಹಸ್ತಪ್ರತಿಗಳು ಮೂಲಕ್ಕೆ ಹೆಚ್ಚು ಹತ್ತಿರವಾಗಿರುವುದನ್ನು ಗಮನಿಸಿದ್ದಾರೆ. ಕೃತಿಯಲ್ಲಿ ಪ್ರಸ್ತಾಪಿಸಿರುವ ತೀನಂಶ್ರೀ ಅವರ ಮಾತುಗಳು-ಸಂಪಾದನೆಯ ಸಂದರ್ಭದಲ್ಲಿ
`ಹಸ್ತಪ್ರತಿಗಳನ್ನು ಅವರು ಯಾವ ರೀತಿ ಎಚ್ಚರಿಕೆಯಿಂದ
ಪರಿಶೀಲಿಸಿದ್ದಾರೆ ಎಂಬುದನ್ನು ಸೂಚಿಸುತ್ತವೆ. ಈ
ಹಸ್ತಪ್ರತಿಗಳಲ್ಲಿ ಪ್ರತಿಕಾರರು ಮರೆವು ಅಲಸ್ಯ, ಕಣ್
ತಪ್ಪು, ಕೈತಪ್ಪಿನಿಂದ ಮಾಡಿರುವ ಸ್ಖಾಲಿತ್ಯ
ದೋಷಗಳನ್ನು ಹೊರತು ಪಡಿಸಿ ಉಳಿದ ಪಾಠಗಳನ್ನು`` ಊಹಾತ್ಮಕವಾಗಿ ಗುರುತು
ಹಾಕಿದ್ದಾರೆ. ಇವರ ಈ ಊಹಾತ್ಮಕ ಪಾಠಾಂತರಗಳು ಮೂಲಪಾಠದ ಸನಿಹಕ್ಕೆ ಇರುವುದನ್ನು ನಾವು ಮನಗಾಣಬಹುದಾಗಿದೆ.
ಪಾಠಾಂತರಗಳನ್ನು ಕೊಡುವಲ್ಲಿ ಮೊದಲ ಬಾರಿಗೆ ನಿರುಕಾಗಿ ಅಡಕವಾಗಿ ನಿರ್ದೇಶಿಸಲು ಬಗೆ ಬಗೆಯ ಚಿನ್ಹೆಗಳನ್ನೂ
ಮೇಲ್ಪಂಕ್ತಿಗಳನ್ನು ಅಧಿಕವಾಗಿ ಬಳಸಿದ್ದಾರೆ. ಮೇಲ್ನೋಟಕ್ಕೆ
ಈ ಪದ್ದತಿಯಿಂದ ಗ್ರಂಥದ ತುಂಬಾ ಪಾಠದ ಜೊತೆಗೆ ಅಂಕಿ ಅಂಶಗಳು ಮತ್ತು ಚಿನ್ಹೆಗಳೇ ತುಂಬಿದ್ದರೂ ಕನ್ನಡ
ಗ್ರಂಥ ಸಂಪಾದನೆಯಲ್ಲಿ ಒಂದು ವ್ಯವಸ್ಥಿತ ರೀತಿಯಲ್ಲಿ ಪಾಠಾಂತರ ಚಿನ್ಹೆಗಳನ್ನು ಬಳಸುವ ಪದ್ಧತಿಗೆ
ತೀನಂಶ್ರೀ ಯವರೇ ಮೊದಲಿಗರು ಎಂಬುದನ್ನು ಎಂ.ವಿ.ಸೀತಾರಾಮಯ್ಯನವರು ಹೇಳಿರುವುದು ಗಮನೀಯವಾಗಿದೆ.
ಗ್ರಂಥ ಬರೆಯುವಾಗಲೋ ಲೇಖನ ರಚನಾವಸರದಲ್ಲೋ ತಾವು ವಿವರಿಸುತ್ತಿರುವ
ಸಂದರ್ಭಕ್ಕೆ ಕೊಡುವ ಉದಾಹರಣ ಪದ್ಯದಲ್ಲಿ ಪಾಠದೋಷವಿದ್ದು ಕಂಡುಬಂದಲ್ಲಿ, ಅಗತ್ಯವಿರಲಿ ಇಲ್ಲದಿರಲಿ, ಅದಕ್ಕೆ ತಮ್ಮ ತಿದ್ದು ಪಾಟನ್ನು ಸೂಚಿಸುವುದು ತೀ.ನಂ.ಶ್ರೀ.ಯವರ
ಪದ್ಧತಿಯಾಗಿದ್ದಿತು. ಅವರ
ಪಾಠಪರಿಷ್ಕರಣ
ಪ್ರಜ್ಞೆ ಹೇಗೆ ಸದಾ ಜಾಗೃತವಾಗಿತ್ತು ಎಂಬುದಕ್ಕೆ ಇದು ಸಾಕ್ಷಿ. ಅಗತ್ಯವಾದ ಕಡೆ ಮಾತ್ರ ಅವರ
ಪರಿಷ್ಕರಣದ ಬಗೆಗೆ ತಮ್ಮ ಅಭಿಪ್ರಾಯವನ್ನು
ತಿಳಿಸಿದ್ದಾರೆ.
ಈ ಮೊದಲೆ ಸೂಚಿಸಿರುವಂತೆ ನಂಬಿಯಣ್ಣನ ರಗಳೆಯ ಸಂಪಾದನಾಕಾರ್ಯಾರಂಭ 1939ರಲ್ಲಿ. ಎಂದಮೇಲೆ, ಗದಾಯುದ್ಧದ
ಸಂಗ್ರಹದ ಸಂಪಾದನಾ ಕಾರ್ಯಕ್ಕೆ ಹಿಡಿದ ಕಾಲದ ಇಮ್ಮಡಿಗೂ ಮಿಕ್ಕ ಕಾಲ, ನಂಬಿಯಣ್ಣನ ರಗಳೆಯ
ಸಂಪಾದನಾ ಕಾರ್ಯ ತೆಗೆದುಕೊಂಡಿದೆ. ಇದು
ಸ್ವಾಭಾವಿಕವಾಗಿಯೇ ಇದೆ. ನಂಬಿಯಣ್ಣನ ರಗಳೆ ಮೊದಲ ಸಾರಿಗೆ ಪ್ರಕಟವಾಗ ಬೇಕಾಗಿದ್ದುದರಿಂದ
ಹಸ್ತಪ್ರತಿಗಳ ಸಂಗ್ರಹದಿಂದಲೇ ಕಾರ್ಯಾರಂಭ ಮಾಡಬೇಕಾಗಿತ್ತು. ಗದಾಯುದ್ಧಕ್ಕೆ ಪರಿಷ್ಕೃತ ಮುದ್ರಣಗಳ ನೆರವೂ ಇದ್ದು, ಹಿನ್ನೆಲೆಯಾಗಿ
ಗ್ರಂಥ ಸಂಪಾದನಾಕಾರ್ಯದ ಪಕ್ವವಾದ ಅನುಭವವೂ ಇದ್ದದ್ದರಿಂದ
ಆದರ ಕಾರ್ಯಕ್ಕೆ ಅಷ್ಟು ದೀರ್ಘಾವಧಿಯ ಕಾಲಬೇಕಾಗಲಿಲ್ಲ.
ಗ್ರಂಥವನ್ನು ವ್ಯಾಸಂಗಮಾಡುವವರಿಗೂ, ಅದನ್ನು ಮುಂದೆ ಮತ್ತೆ ಬೇರೆಯವರು ಸಂಸ್ಕರಣ ಮಾಡಬೇಕೆಂದು ಬಯಸಿದಾಗ
ಅವರಿಗೂ ಹಿಂದಿನ ಸಂಪಾದಕನು ಉಪಯೋಗಿಸಿಕೊಂಡ ಮಾತೃಕೆಗಳ ಸ್ವರೂಪಕ್ಕೆ ಪಾಠಾಂತರಗಳು ಕನ್ನಡಿಯಾಗಿರಬೇಕು. ಮುಂಬರುವ
ಸಂಪಾದಕರು ಅನುಮಾನ ಬಂದಾಗ "ಮಾತ್ರ ಹಸ್ತಪ್ರತಿಯನ್ನು ನೋಡುವ ಅಗತ್ಯವಿರಬೇಕೇ ಹೊರತು
ಹೆಜ್ಜೆಹೆಜ್ಜೆಗೂ ಹಸ್ತಪ್ರತಿಯನ್ನು ಪರಿಶೀಲಿಸುತ್ತ ಹೋಗುವುದೆಂದರೆ, ವ್ಯರ್ಥ ಪ್ರಯಾಸವೆನಿಸುವುದು. ಮುದ್ರಿತ ಗ್ರಂಥಕ್ಕೇ ಮುಂದೆ ಒಂದು
ಹಸ್ತಪ್ರತಿಯ (ಎಂದರೆ ಮಾತೃಕೆಯ) ಬೆಲೆ ಬರುವುದರಿಂದ, ಮುದ್ರಣ ದೋಷಗಳು ಇಲ್ಲದಂತೆ ಸಂಪಾದಕ ಎಚ್ಚರಿಕೆ
ವಹಿಸಬೇಕಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ತೀ.ನಂ.ಶ್ರೀ. ಯವರ ಪಾಠ ಪರಿಷ್ಕರಣ ಕಾರ್ಯ, ನಂಬಿಯಣ್ಣನ ರಗಳೆಯಲ್ಲಿಯೇ ಆಗಲಿ. ಗದಾಯುದ್ಧ ಸಂಗ್ರಹದಲ್ಲಿಯೇ
ಆಗಲೀ, ಸಮರ್ಪಕವಾಗಿದ್ದು ಅತ್ಯಂತ ವೈಜ್ಞಾನಿಕತೆಯಿಂದ ಕೂಡಿದೆ ಎಂದು ಹೇಳಲು ಸ್ವಲ್ಪವೂ ಹಿಂಜರಿಯಬೇಕಾಗಿಲ್ಲ. ಸಂಪಾದಕನ ಪಾಠನಿರ್ಣಯವನ್ನು ಸಂದೇಹಿಸಿ ಭಿನ್ನಪಾಠವನ್ನು ಸ್ವೀಕರಿಸಬಹುದೆನ್ನುವ ಸಂದರ್ಭದಲ್ಲಿ, ಪಾಠಾಂತರಗಳಿಂದ ಹೇಗೆ ಸಹಾಯವಾಗುತ್ತದೆ ಎಂಬುದಕ್ಕೆ ನಂಬಿಯಣ್ಣನ ರಗಳೆಯಲ್ಲಿ ಕೂಡ ಅವರು ನೀಡಿರುವ ಊಹಾತ್ಮಕ
ಪಾಠಗಳು ನಿದರ್ಶನವಾಗಿವೆ. ಪಾಠನಿರ್ಣಯ ಮಾಡುವುದಕ್ಕೆ ಸಂಬಂಧಪಟ್ಟಂತೆ
ಬಹುಮುಖೀಯ ಅಧ್ಯಯನವನ್ನು ನಡೆಸಬೇಕಾಗುತ್ತದೆ. ಬಸವರಾಜ ದೇವರ ರಗಳೆಯನ್ನು ಸಂಪಾದಿಸುವ ಕಾರ್ಯದಲ್ಲಿ
ಸಹಕರಿಸಿದ್ದ ತೀ.ನಂ.ಶ್ರೀ.
ಯವರಿಗೆ ಹರಿಹರನ ಭಾಷೆ ಶೈಲಿಗಳ ಸ್ವರೂಪ ತಕ್ಕಮಟ್ಟಿಗೆ ಪರಿಚಯವಾಗಿತ್ತು. ನಂಬಿಯಣ್ಣನ ರಗಳೆಯನ್ನು ಹಸ್ತಪ್ರತಿಯಲ್ಲಿ ಓದಿ
ಅದಕ್ಕೆ ಮಾರುಹೋದ ಅವರು ಅದನ್ನು ಸಂಪಾದನೆ ಮಾಡುವ ಸಂಕಲ್ಪವನ್ನು ಕೈಕೊಂಡು, ಒಂದು ದೀರ್ಘ
ತಪಶ್ಚರ್ಯೆಯನ್ನು ಮಾಡಬೇಕಾಯಿತು. ಇದಕ್ಕಾಗಿ ಅವರು ಪಟ್ಟಶ್ರಮದ ಒಂದು ಇಣುಕುನೋಟ ಆವರ ಟಿಪ್ಪಣಿ
ಹಾಳೆಗಳಲ್ಲಿ ದೊರಕುತ್ತದೆ. ಕವಿಹೃದಯದ ಪರಿಚಯ ಪಡೆಯಲು ತಮಗೆ ದೊರೆತ ಎಲ್ಲ ಹರಿಹರನ ರಗಳೆಗಳನ್ನೂ
ವ್ಯಾಸಂಗ ಮಾಡಿದ್ದಾರೆ; ಪೆರಿಯಪುರಾಣದ
ಭಾಗಗಳನ್ನು ವ್ಯಾಸಂಗಮಾಡಿದ್ದಾರೆ; ಸುಂದರಮೂರ್ತಿಯ ಸಂಬಂಧವಾಗಿ ಸಂಸ್ಕೃತ, ತಮಿಳು, ತೆಲುಗುಭಾಷೆಗಳ ಗ್ರಂಥಗಳನ್ನು ಓದಿಕೊಂಡಿದ್ದಾರೆ; ಹರಿಹರನ : ಮತದ
ನಿರ್ಣಯಕ್ಕೆ, ಸಂಬಂಧಪಟ್ಟಂತೆ
ಕೆಲವು ಗ್ರಂಥಗಳನ್ನು 'ಓದಿದ್ದಾರೆ; ಹರಿಹರನ ಕೆಲವು
ಅಪೂರ್ವಪದ: ಪ್ರಯೋಗಗಳಿಗೆ: ಸಂವಾದಿ ಪ್ರಯೋಗಗಳ ಸಮರ್ಥನೆಗಾಗಿ ಆನ್ವೇಷಣೆ ನಡೆಸಿದ್ದಾರೆ; ಕವಿಕಾವ್ಯ
ವಿಮರ್ಶೆಗೆ ಸಂಬಂಧಪಟ್ಟಂತೆ ಒಂದುಟಿಪ್ಪಣಿಯನ್ನು ಸಿದ್ದಮಾಡಿಕೊಂಡಿದ್ದಾರೆ. ಇದೆಲ್ಲದರ ಪರಿಣಾಮ ಫಲ
ನಂಬಿಯಣ್ಣನ ರಗಳೆಯ ಈಗಿನ ಪರಿಷ್ಕೃತರೂಪ, ಪಾಠನಿರ್ಣಯದಲ್ಲಿ ತೀ.ನಂ.ಶ್ರೀ. ಯವರ ಪ್ರತಿಭೆ ಯಾವ ರೀತಿ ಕಾರ್ಯಪ್ರವೃತ್ತವಾಗಿದ್ದಿತು ಎನ್ನುವುದನ್ನು
ಅವರ ಟಿಪ್ಪಣಿ ಹಾಳೆಗಳಲ್ಲಿ ನಮೂದಾಗಿರುವ ಒಂದು ಅರ್ಥಪೂರ್ಣ ವಿವರಗಳೇ
ನಿದರ್ಶನವಾಗಿವೆ.
ನಂಬಿಯಣ್ಣನ ರಗಳೆ
ಸಂಸ್ಕರಣಕ್ಕಾಗಿ ಉಪಯೋಗಿಸಿಕೊಂಡಿರುವ ಮಾತೃಕೆಗಳ ಹೆಚ್ಚಿನ ಪರಿಚಯ, ಪಾಠನಿರ್ಣಯದಲ್ಲಿ ಅನುಸರಿಸುವ
ನಿಯಮಗಳು, ಅಲ್ಲಿನ ಸಮಸ್ಯೆಗಳು, ಕಾವ್ಯವಿಮರ್ಶೆ, ತಮಿಳು ತೆಲುಗು ಸಂಸ್ಕೃತ ಗ್ರಂಥಗಳಲ್ಲಿ ದೊರೆಯುವ
ಸುಂದರಮೂರ್ತಿ ವೃತ್ತಾಂತಗಳಿಗೂ ಹರಿಹರನ ನಿರೂಪಣೆಗೂ ಇರುವ ಸಾಮ್ಯ ವೈಷಮ್ಯಗಳು, ಕನ್ನಡದಲ್ಲಿ ಸೌಂದರಪುರಾಣಗಳನ್ನು
ರಚಿಸಿರುವ ಕವಿಗಳ ಮೇಲೆ ಹರಿಹರನ ಪ್ರಭಾವ- ಈ ಮೊದಲಾದ ವಿಷಯಗಳನ್ನೊಳಗೊಂಡ ಸವಿಸ್ತಾರವಾದ ಪೀಠಿಕೆಯನ್ನೂ ಕೊಡಬೇಕೆಂಬ ಇವರ ಆಸೆ ನಂತರದ ವಿದ್ವಾಂಸರಾದ ಎಸ್.ವಿದ್ಯಾಶಂಕರರವರ
ನಂಬಿಯಣ್ಣ ಒಂದು ಅಧ್ಯಯನ ಕೃತಿಯಲ್ಲಿ ಸ್ವಲ್ಪ ಮಟ್ಟಿಗೆ ಈಡೇರಿದೆ.
ತೀ.ನಂ.ಶ್ರೀ ಅವರ 'ಗದಾಯುದ್ಧ ಸಂಗ್ರಹಂ' ಸಂಪಾದಿತ
ಕೃತಿಯು ಒಂದು ಮೂಲಕೃತಿಯನ್ನು ಅತ್ಯಂತ ವೈಜ್ಞಾನಿಕವಾಗಿ
ಸಂಪಾದಿಸಲು ಯಾವ ಮಾನದಂಡಗಳನ್ನು ಅನುಸರಿಸುತ್ತಿದ್ದರೋ ಅದೇ ಮಾನದಂಡಗಳನ್ನು ಅನುಸರಿಸಿ ಸಂಪಾದಿಸಿದ
ಕೃತಿಯಾಗಿದೆ. ರನ್ನ ಕವಿಯ ಸಹಸ್ರಮಾನೋತ್ಸವದ ಸಂದರ್ಭದಲ್ಲಿ ರನ್ನನ
ಗದಾಯುದ್ಧ ಸಂಗ್ರಹಂ ಕೃತಿಯನ್ನು ಸಂಪಾದಿಸಿ, ತಮ್ಮ ಗುರುವರ್ಯ ಬಿ.ಎಂ.ಶ್ರೀ ಅವರಿಗೆ ʻ ಕವಿರನ್ನನು ಜನ್ಮವೆತ್ತಿ
ಒಂದು ಸಾವಿರ ವರ್ಷಗಳು ಸಂದ ಸಮಯದಲ್ಲಿ ಕನ್ನಡದ ರಕ್ಷಾಮಣಿ ಆಚಾರ್ಯ ಬಿಎಂಶ್ರೀ ಕಂಠಯ್ಯನವರ ನೆನಪಿಗೆ
ಶಿಷ್ಯನೊಬ್ಬನ ಭಕ್ತಿಯ ನಿವೇದನʼ ಎಂದು ಸಮರ್ಪಿಸಿದ್ದಾರೆ. ( ಮೈಸೂರಿನ ಕಾವ್ಯಾಲಯ ಪ್ರಕಾಶನ ೨೦೧೫ ೧೭ನೇ
ಆವೃತ್ತಿ) ತೀ.ನಂ.ಶ್ರೀಕಂಠಯ್ಯನವರು
"ಗದಾಯುದ್ಧ ಸಂಗ್ರಹ ' ಎಂಬ ಶೀರ್ಷಿಕೆಯ ಅಡಿಯಲ್ಲಿ ರನ್ನನ ಗದಾಯುದ್ಧ ಕಾವ್ಯವನ್ನು
ಹಸ್ತಪ್ರತಿಗಳು ಹಾಗೂ ಅಚ್ಚಾದ ಪ್ರತಿಗಳ ಪಾಠಗಳನ್ನು ಆಧಾರವಾಗಿಟ್ಟುಕೊಂಡು ಅರ್ಥಕ್ಕನುಸಾರವಾಗಿ
ಸಾಧ್ಯವಾದೆಡೆಗಳಲ್ಲಿ ಊಹಾತ್ಮಕ ಪಾಠಗಳನ್ನು
ನೀಡಿರುವುದು ಅವರ ವ್ಯುತ್ಪತ್ತಿ ಜ್ಞಾನಕ್ಕೆ ನಿದರ್ಶನವಾಗಿದೆ. ಸಂಗ್ರಹ ಆವೃತ್ತಿಗಳಲ್ಲಿ
ಪಾಠಾಂತರಗಳನ್ನು ಕೈಬಿಡುವುದು ಸಾಮಾನ್ಯ. ಆದರೆ ತೀನಂಶ್ರೀ ಅವರು ಪ್ರಾಚೀನ ಕನ್ನಡ ಗ್ರಂಥ
ಸಂಪಾದನಾ ಸಂಪಾದಕರಂತೆ ಮಾಡದೆ ಪಾಠಾಂತರಗಳನ್ನು ಕೃತಿಯ
ಅಡಿಟಿಪ್ಪಣಿಯಲ್ಲಿ ನಮೂದಿಸಿದ್ದಾರೆ; ಆದರೆ ಹಸ್ತಪ್ರತಿಗಳ
ವಿವರವನ್ನೂ ನೀಡಿದ್ದರೆ ಚೆನ್ನಾಗಿರುತ್ತಿತ್ತು. ಇವರ ಗದಾಯುದ್ಧದ ಪರಿಷ್ಕರಣ
ಕಾರ್ಯ ಇಡೀ ಕಾವ್ಯಕ್ಕೆ ಬದಲಾಗಿ ಸಂಗ್ರಹಕ್ಕೆ ಸೀಮಿತವಾಗಿದೆ. ಮೊದಲ ಮುದ್ರಣ ಕಾವ್ಯದ ಮೊದಲಲ್ಲಿಯೇ ಕಾವ್ಯವಿಮರ್ಶೆ ಇವೇ
ಮೊದಲಾದವುಗಳನ್ನು ಒಳಗೊಂಡ ವಿವರಗಳು ಎರಡನೇ ಆವೃತ್ತಿಯಲ್ಲಿ ಕ್ಷಿಪ್ರದಲ್ಲಿಯೇ ಪ್ರಕಟವಾಗುತ್ತದೆ'' ಎಂದಿದ್ದರು. ೧೯೬೩ರ
ಆವೃತ್ತಿಯಲ್ಲಿ ಶಬ್ದಗಳ ಅರ್ಥ ಮತ್ತು ಟಿಪ್ಪಣಿಗಳ ಅನುಬಂಧದೊಡನೆ ತಮ್ಮ ಆಸೆಯನ್ನು
ಸ್ವಲ್ಪಮಟ್ಟಿಗೆ ನೆರವೇರಿಸಿಕೊಂಡಿದ್ದಾರೆ. ಇವರು ಅಂಗೀಕರಿಸಿರುವ ಹಾಗೂ ಊಹಿತ ಪಾಠಗಳು
ಸಮರ್ಥನೀಯವಾಗಿವೆ. ಪ್ರತಿ ಪದ ಪದ್ಯಕ್ಕೂ ಮಾಡಿರುವ ಟೀಕೆ ಟಿಪ್ಪಣಿಗಳು ಮನನೀಯವಾಗಿವೆ.
ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳ ಅಗತ್ಯ ಹಾಗೂ ಬೇಡಿಕೆಯೂ ಈ ಕೃತಿಯನ್ನು
ಜನಪ್ರಿಯಗೊಳಿಸಿದ ಕಾರಣ ಇಲ್ಲಿಯವರೆಗೂ ೧೭ ಮರು ಮುದ್ರಣಗಳನ್ನು
ಕಂಡಿದೆ. ರನ್ನ ಕವಿಯ ಗದಾಯುದ್ಧದ ಮೂಲದ ೫೭೫ ಪದ್ಯಗಳಲ್ಲಿ ಕಥಾ ಸ್ವಾರಸ್ಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ೩೩೬ ರಷ್ಟು-ಹೆಚ್ಚು ಕಡಿಮೆ ಅರ್ಧದಷ್ಟು ಸಂಗ್ರಹಿಸಿ ಕೊಟ್ಟಿರುವುದು
ಅವರ ನೈಪುಣ್ಯತೆಗೆ ನಿದರ್ಶನವಾಗಿದೆ. ಈ ಸಂಗ್ರಹ ಸಂಪಾದಿತ
ಕೃತಿಯಲ್ಲಿ ರಸವತ್ತಾದ ಭಾಗ ಯಾವುದನ್ನೂ ಬಿಡದೆ, ಕಥೆಯ ಓಟಕ್ಕೆ
ಭಂಗಬಾರದಂತೆ ಕೃತಿಯನ್ನು ನಡೆಸಿಕೊಂಡು ಹೋಗಿರುವುದರಿಂದ ಸಹೃದಯ
ಓದುಗರಿಗೆ ಯಾವುದೇ ರೀತಿಯ ಸಂದೇಹ, ಅತೃಪ್ತಿ ಉದ್ಭವಿಸಿರುವುದಿಲ್ಲ. ಟಿಪ್ಪಣಿಗಳ
ಉಪಯುಕ್ತತೆ ಅಲ್ಲಿ ಕಾಣುವ ಸೂಕ್ಷ್ಮಗ್ರಹಿಕೆಗಳು ಮಹತ್ವವನ್ನು ಪಡೆದು
ಕೊಂಡಿದೆ. ಇದು ತೀನಂಶ್ರೀಯವರ ವಿದ್ವತ್ ಪರಿಶ್ರಮ ಎಂತಹದ್ದು ಎಂಬುದರ ಬಗೆಗೆ ಆ ಕ್ಷೇತ್ರದ
ಆಸಕ್ತ ಜನರಿಗೆ ಗೊತ್ತಾಗುತ್ತದೆ. ಪ್ರಸ್ತಾವನೆಯ ಆರಂಭದಲ್ಲಿ
ಕೊಡಮಾಡಿರುವ ಕೆಲವು ಸಂಕೇತಗಳು ಎಂಬ ಪುಟಗಳಲ್ಲಿ ತೀ.ನಂ.ಶ್ರೀ ಈ ಕೃತಿಯ ಸಂಪಾದನೆಗೆ ಬಳಸಿಕೊಂಡಿರುವ ಆಕರ ಸಾಮಗ್ರಿಗಳು
ಅಚ್ಚರಿ ಹುಟ್ಟಿಸುತ್ತವೆ. ಅವರು ಬಳಸಿರುವ ಪ್ರತಿಗಳು ಎಂ.ಎ.ರಾಮಾನುಜ ಅಯ್ಯಂಗಾರ್ ಮತ್ತು ಎಸ್.ಜಿ.ನರಸಿಂಹಾಚಾರ್ ಅವರಿಂದ ಸಂಪಾದನೆಗೊಂಡ ಗದಾಯುದ್ಧ
ಕಾವ್ಯದ ಪ್ರಥಮ ಮುದ್ರಣದ ಮುದ್ರಿತ ಪ್ರತಿ, ಮೈಸೂರಿನ
ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಲ್ಲಿರುವ ಗದಾಯುದ್ಧ ಕಾವ್ಯದ ಕೈ ಬರೆಹದ ಕಾಗದದ ಪ್ರತಿ ( ಸಂಖ್ಯೆ
ಕೆಎ -೫೦) ಚೆನ್ನೈನಲ್ಲಿರುವ ಓರಿಯೆಂಟಲ್ ಮ್ಯಾನುಸ್ಕ್ರಿಪ್ಟ್ ಲೈಬ್ರರಿಯಲ್ಲಿರುವ ಗದಾಯುದ್ಧದ ಅತಿ ತ್ರುಟಿತವಾದ ಓಲೆಗರಿಯ ಪ್ರತಿಯ ನಕಲು ಪ್ರತಿ ಎಲ್ಲವೂ
ಪರಿಶೀಲನೆಗೆ ಒಳಗಾಗಿವೆ. ಗದಾಯುದ್ಧ ಸಂಗ್ರಹ ಕೃತಿಯ ಸಂಪಾದನೆಯಲ್ಲಿ ಶುದ್ಧಪ್ರತಿಯ ಸಂಪಾದನೆಯಲ್ಲಿ ತೀನಂಶ್ರೀ
ಅವರ ವಿದ್ವತ್ ಮತ್ತು ವ್ಯತ್ಪತ್ತಿ ಜ್ಞಾನ ಎರಡೂ ಸ್ಫುಟವಾಗಿ ವ್ಯಕ್ತಗೊಂಡಿವೆ. ತೀನಂ.ಶ್ರೀ ಅವರು
ಬಳಸಿರುವ ಸಂಕೇತಗಳಲ್ಲಿ ʻಮೂಲ ಹೀಗಿರ ಬಹುದೆಂದು
ಈ ಸಂಪಾದಕನು ಯಥಾಮತಿಯಾಗಿ ಊಹಿಸಿದ ಪಾಠವನ್ನು ಕೊಟ್ಟಿರುವುದು, ಕಾವ್ಯ ಸಂಗ್ರಹ ಮಾಡುವಾಗ ವಾಕ್ಯಗಳನ್ನು
ಹೊಂದಿಸಿಕೊಳ್ಳಲು ಅವಶ್ಯಕವಾದ ಮಾರ್ಪಾಡುಗಳನ್ನು ಸೂಚಿಸಿರುವುದು ಇತ್ಯಾದಿ ಗ್ರಂಥಸಂಪಾದನೆಯ ವೈಜ್ಞಾನಿಕ ವಿಧಾನದ ಪದ್ಧತಿಯನ್ನು
ಕಾಣಬಹುದಾಗಿದೆ. ಜೊತೆಗೆ ಪ್ರಶ್ನಾರ್ಥಕ ಸಂಕೇತದಲ್ಲಿ ʻಮೂಲಪಾಠವನ್ನು ತಿದ್ದುವುದು
ಸಾಹಸವೆಂದು ತೋರಿದಾಗ ಸಂಪಾದಕೀಯ ಸೂಚನೆಯನ್ನು ಅಡಿಟಿಪ್ಪಣಿಯಲ್ಲಿ ತೋರಿಸುವಲ್ಲಿ, ಅರ್ಥ ಮುಂತಾದವುಗಳಲ್ಲಿ
ಸಂದೇಹವುಂಟೆಂದು ತೋರಿದಾಗ ಕೊಟ್ಟಿರುವ ಟಿಪ್ಪಣಿಗಳನ್ನು ಕಾಣಬಹುದಾಗಿದೆ.( ಗದಾಯುದ್ಧ ಸಂಗ್ರಹ, ಪು.XII) ಪಾಠಾಂತರಗಳನ್ನು ಅಡಿ ಟಿಪ್ಪಣಿಯಲ್ಲಿಯೇ ನೀಡಿರುವುದು. ಈ ಕೃತಿಗೆ ಪೂರಕವಾಗಿ ಇದೇ ಕಥಾವಸ್ತುವುಳ್ಳ ಅನ್ಯ ಕೃತಿಗಳಾದ ಪುಣೆಯ ಭಂಡಾರ್‌ಕರ್
ಸಂಸ್ಥೆಯ ಪರಿಷ್ಕರಣದ ಸಂಸ್ಕೃತ ಮಹಾ ಭಾರತ, ಭಟ್ಟ
ನಾರಾಯಣನ ವೇಣಿ ಸಂಹಾರ, ಪಂಪನ ವಿಕ್ರಮಾರ್ಜುನ ವಿಜಯ, ಅಜಿತ ತೀರ್ಥಂಕರ ಪುರಾಣ, ನಾಗವರ್ಮನ ಕಾವ್ಯಾವಲೋಕನ, ಕೇಶಿರಾಜನ ಶಬ್ದಮಣಿದರ್ಪಣ, ಭಟ್ಟಾಕಳಂಕನ
ಶಬ್ದಾನುಶಾಸನ ಇತ್ಯಾದಿ ಕೃತಿಗಳನ್ನು ವಿಷಯ ವಿಮರ್ಶೆಗೆ ಪರಿಶೀಲಿಸಿದ್ದಾರೆ. ಇವೆಲ್ಲವನ್ನೂ ನಾವು ಮನಗಂಡರೆ ತೀನಂಶ್ರೀಯವರು ಯಾವ ರೀತಿ ಈ ಕೃತಿಯನ್ನು
ಬಹುಮಟ್ಟಿಗೆ ಪಠ್ಯ ಕೇಂದ್ರಿತ ನೆಲೆಯಲ್ಲಿಯೇ ಸಂಪಾದಿಸಿದ್ದಾರೆಂಬುದು ಮನದಟ್ಟಾಗುತ್ತದೆ. ಇತ್ತೀಚೆಗೆ
೧೭ ನೇ ಮುದ್ರಣ ಪ್ರತಿಯನ್ನು ಅನುಲಕ್ಷಿಸಿ ಹೇಳುವುದಾದರೆ ಇವರ ಗದಾಯುದ್ಧ ಸಂಗ್ರಹದ ಅವತರಣಿಕೆ ಅಧ್ಯಾಯದಿಂದ ಹಿಡಿದು ಕೊನೆಯ ಭೀಮಸೇನಾ ಪಟ್ಟಬಂಧಂ
ವರೆಗಿನ ಅಧ್ಯಾಯಗಳಲ್ಲಿ ಅವರು ಸಂಗ್ರಹಿಸಿರುವ ೩೩೬
ಪದ್ಯಗಳನ್ನೊಳಗೊಂಡ ಪುಟಗಳ ಸಂಖ್ಯೆ ಕೇವಲ ೭೩ ಮಾತ್ರ. ಆದರೆ ಆ ಪದ್ಯಗಳಿಗೆ ಟಿಪ್ಪಣಿ ರೂಪದಲ್ಲಿ ನೀಡಿರುವ
ಅವರ ವಿದ್ವತ್ ವಿವರಣೆಗಳ ಪುಟಗಳು ೮೮. ಟಿಪ್ಪಣಿಗಳಲ್ಲಿ ಅವರು ವ್ಯಕ್ತಪಡಿಸಿರುವ ಸಂಗತಿಗಳು ಅವರ
ವಿದ್ವತ್ ಹಿರಿಮೆಯ ಪ್ರತೀಕವಾಗಿವೆ. ನಿದರ್ಶನಕ್ಕೆ
ಭೀಷ್ಮ ವಚನದ ೧೨ ನೇ ಕಂದ ಪದ್ಯಕ್ಕೆ ಅವರು ಕೊಡ ಮಾಡಿರುವ ಟಿಪ್ಪಣಿ:
ಪುಟ್ಟಿದ ನೂರ್ವರುಮೆನ್ನೊಡ
ಪುಟ್ಟಿದ ನೂರ್ವರುಮಿದಿರ್ಚೆ ಸತ್ತೊಡೆ ಕೋಪಂ
ಪುಟ್ಟಿ ಪೊದಳ್ದುದು ಸತ್ತರ್
ಪುಟ್ಟರೆ ಪಾಂಡವರೊಳಿಱಿದು ಛಲಮನೆ ಮೆಱೆವೆಂ (೬-೧೨) ತೀನಂಶ್ರೀ ಅವರ
ಟಿಪ್ಪಣಿ: ಪುಟ್ಟಿದ ನೂರ್ವರುಂ-(ನನಗೆ) ಜನಿಸಿದ ನೂರು ಮಂದಿಯೂ, ಇದಿರ್ಚಿ-(ಶತ್ರುಗಳನ್ನು) ಎದುರಿಸಿ,
ಪೊದಳ್ದುದು-ಸಮೃದ್ಧಿ ಹೊಂದಿತು, ಸತ್ತರ್ ಪುಟ್ಟರೆ- ಸತ್ತವರು ಹುಟ್ಟುವುದಿಲ್ಲವೆ, ಮನುಷ್ಯನಿಗೆ
ಇರುವುದು ಒಂದೇ ಜನ್ಮವೇ? ಜೀವದ ಮೇಲಿನ ಆಸೆಯಿಂದ ನಾನು ಹೇಡಿಯಾಗಲಾರೆ. ಸತ್ತರ್ ಪುಟ್ಟರೆ ಎಂಬುದಕ್ಕೆ
ಸತ್ತವರು ಹುಟ್ಟುವುದೇ ಇಲ್ಲ,( ಪುಟ್ಟರ್ +ಅವಧಾರಣಾರ್ಥದ ಎಕಾರ), ಎಂದರೆ ತೀರಿ ಹೋದ ನನ್ನ ಮಕ್ಕಳೂ
ತಮ್ಮಂದಿರೂ ಮತ್ತೆ ಹುಟ್ಟುವುದಿಲ್ಲ ಎಂಬ ಅರ್ಥವೂ ಇಲ್ಲಿ ಸಾಧ್ಯ. ಆ ಪಕ್ಷದಲ್ಲಿ, ಅವರನ್ನು ಕಳೆದುಕೊಂಡ ಮೇಲೆ ನನಗೆ ಸಂಧಿ ಏಕೆ: ಯುದ್ಧವನ್ನೇ
ಪಟ್ಟು ಹಿಡಿಯುತ್ತೇನೆ ಎಂದು ಆಶಯ. ಈ ತೆರನಾಗಿ ಕೊಡ
ಮಾಡಿರುವ ಇವರ ಟಿಪ್ಪಣಿಗಳಲ್ಲಿಯ ವಿವರಗಳು ಗದಾಯುದ್ಧ
ಕಾವ್ಯವನ್ನು ಪಠ್ಯ ಕೇಂದ್ರಿತ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು
ದೀಪಿಕೆಯ ರೂಪದಲ್ಲಿ ಇವೆ ಎಂದರೆ ತಪ್ಪಾಗಲಾರದು. ಗದಾಯುದ್ಧದಂತಹ ಸಂಪಾದಿತ ಸಂಗ್ರಹ ಆವೃತ್ತಿಯಲ್ಲಿಯೇ
ತೀನಂಶ್ರೀ ಅವರು ನೀಡಿರುವ ಟಿಪ್ಪಣಿಗಳು ವಿವರವಾಗಿ
ಪರಿಪೂರ್ಣತೆಯನ್ನು ಹೊಂದಿರುವುದನ್ನು ನೋಡಿದರೆ, ಒಂದು ವೇಳೆ
ಈ ಕೃತಿಯ ಆರಂಭದಲ್ಲಿ ವಿಸ್ತೃತವಾದ ಪ್ರಸ್ತಾವನೆಯನ್ನು ಬರೆದಿದ್ದರೆ ಎಷ್ಟರಮಟ್ಟಿಗಿದ್ದಿರುತ್ತಿತ್ತು
ಎಂದೆನಿಸದೇ ಇರದು. ಮುದ್ರಿತ ಗ್ರಂಥದ ಪ್ರತಿಯಲ್ಲಿ ಹಸ್ತಪ್ರತಿಗಳ ಪರಸ್ಪರ ಸಂಬಂಧವನ್ನು ಸೂಚಿಸುವ
ಪೀಳಿಗೆಯನ್ನು ಕೊಟ್ಟಿದ್ದಾರೆ. ಅಧಿಕ ಸಂಖ್ಯೆಯಲ್ಲಿ ಮಾತೃಕೆಗಳು ದೊರೆತಾಗ ಈ ಪೀಳಿಗೆಯ ರಚನೆಯಿಂದ
ಪಾಠನಿರ್ಣಯಕ್ಕೆ ವಿಶೇಷ ಸಹಾಯವುಂಟು. ಪ್ರಕೃತ ಸಂಪಾದಕರ ಪಾಠನಿರ್ಣಯದಲ್ಲಿ ಸಂಘಟಿಸಿರಬಹುದಾದ ಸರಿ
ತಪ್ಪುಗಳನ್ನು ಮುಂದೆ ಬರುವ ಸಂಪಾದಕರುಗಳು ಕಂಡುಹಿಡಿಯುವುದಕ್ಕೂ ಇದರಿಂದ ಸಹಾಯವಾಗುತ್ತದೆ. ಪಾಠಾಂತರಗಳನ್ನು ಸಂಕಲನ ಮಾಡುವಾಗ ಒಂದನ್ನೂ ಬಿಡದ ಹಾಗೆ
ಎಲ್ಲವನ್ನು ಗುರುತು ಹಾಕಿಕೊಳ್ಳಬೇಕಾದ ಅಗತ್ಯವಿಲ್ಲವೆಂಬುದು ತೀ.ನಂ.ಶ್ರೀ.ಯವರ ಟಿಪ್ಪಣಿಗಳಿಂದ ಗೊತ್ತಾಗುತ್ತದೆ.
ಇದು ಎಲ್ಲ ಸಂಪಾದಕರ ಅನುಭವದ ವಿಷಯವೂ ಆಗಿದೆ. ಒಂದು ಗ್ರಂಥವನ್ನು ಮೊತ್ತಮೊದಲಿಗೆ ಸಂಪಾದನೆ ಮಾಡುವ
ಸಂಪಾದಕನು ತನ್ನ ಮೂಲಪಾಠನಿರ್ಣಯಕ್ಕೆ ಬಾಧಕವಾಗದಂತಹ
ಲಿಪಿಕಾರರ ಸ್ಖಾಲಿತ್ಯಗಳನ್ನು ಕೈಬಿಡಬಹುದಾದರೂ, ಉಳಿದೆಲ್ಲ ಪಾಠಭೇದಗಳನ್ನೂ ಉಚಿತ ಪಾಠಸ್ವರೂಪ
ಸೂಚಕ ಚಿಹ್ನೆಗಳೊಂದಿಗೆ ಅಡಿಟಿಪ್ಪಣಿಗಳಲ್ಲಿ ಸಮಗ್ರವಾಗಿ ಕಾಣಿಸಬೇಕಾದದ್ದು ಶಾಸ್ತ್ರೀಯವಾದ ಗ್ರಂಥಸಂಪಾದನೆಯ
ಅಗತ್ಯಗಳಲ್ಲಿ ಒಂದು. ಮುದ್ರಿತಗ್ರಂಥಕ್ಕೆ ಮುಂದೆ ಒಂದು ಹಸ್ತಪ್ರತಿಯ (ಎಂದರೆ ಮಾತೃಕೆಯ) ಬೆಲೆ ಬರುವುದರಿಂದ,
ಮುದ್ರಣದೋಷಗಳು ಇಲ್ಲದಂತೆ ಸಂಪಾದಕ ಎಚ್ಚರಿಕೆ ವಹಿಸಬೇಕಾಗುತ್ತದೆ. ಇದನ್ನು ತೀನಂ.ಶ್ರೀ ಅವರು ಗದಾಯುದ್ಧ
ಸಂಗ್ರಹದ ಸಂಪಾದನೆಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಮತ್ತು ವೈಜ್ಞಾನಿಕವಾಗಿ ನಿರ್ವಹಿಸಿದ್ದಾರೆ.
ಜನಪದ ಗೀತೆಗಳು ಅನಕ್ಷರಸ್ಥ ಅನಾಮಧೇಯ ಜನಪದಕವಿಗಳ
ಅಮೃತಕಾವ್ಯಗಳು. ತೀ.ನಂ.ಶ್ರೀ.
ಯವರು ಮೈಸೂರಿನ ಸಾಕ್ಷರ ಪ್ರಚಾರ ಸಮಿತಿಯ "ವಯಸ್ಕರ ಶಿಕ್ಷಣದ ಪುಸ್ತಕ್ತಮಾಲೆ'ಗೆ ʻಹೆಣ್ಣು ಮಕ್ಕಳ ಪದಗಳು' ಎಂಬ ಚಿಕ್ಕ ಪುಸ್ತಕವನ್ನು, ಸಿದ್ಧಪಡಿಸಿಕೊಡಿ ಎಂದು ಕೇಳಿದ್ದದ್ದರ
ಹಿನ್ನೆಲೆಯಲ್ಲಿ ಅವರು ಆಗತಾನೆ ಅಕ್ಷರ ಕಲಿತ ವಯಸ್ಕರ ಓದಿಗೆ ಸಂಪಾದಿಸಿ ಸಿದ್ಧಪಡಿಸಿದ ಹೆಣ್ಣುಮಕ್ಕಳ ಪದಗಳು ಕೃತಿಯ ಹಾಡುಗಳೆಲ್ಲವೂ ತ್ರಿಪದಿಗಳಾಗಿವೆ. ಈ ಕೃತಿಯ
ಸಂಪಾದನೆಯಲ್ಲಿ, ತಮ್ಮ ಕಾಲಕ್ಕಾಗಲೇ ಆಗುತ್ತಿರುವ ಸಾಮಾಜಿಕ ಬದಲಾವಣೆ ಹಾಗೂ ಅದರ ಪರಿಣಾಮದಿಂದ ಜನಪದ ಸಾಹಿತ್ಯ ಜನತೆಯಿಂದ ದೂರವಾಗುತ್ತಿರುವುದರ ಬಗೆಗೆ
ವಿಷಾದವನ್ನು ವ್ಯಕ್ತಪಡಿಸುವುದರ ಬಗೆಗೆ ಮತ್ತು ಅವುಗಳನ್ನು ಬಳಸಿ ಬೆಳೆಸಿ ಉಳಿಸಿ ಕೊಳ್ಳಬೇಕಾದ ಜಾಗೃತಿಯ
ಬಗೆಗೆ ಹೇಳಿರುವುದನ್ನು ಮನಗಂಡರೆ, ಜನಪದ ಸಾಹಿತ್ಯದ ಬಗೆಗೆ ಅವರಿಗಿದ್ದ ದೃಷ್ಟಿಕೋನ ಎದ್ದು ಕಾಣುತ್ತದೆ. ಇವರ ಈ ಸಂಪಾದಿತ ಕೃತಿಯು ಈಗಾಗಲೇ ಹಲಸಂಗಿ
ಗೆಳೆಯರಿಂದ ಸಂಪಾದನೆಗೊಂಡಿದ್ದ ಗರತಿಯ ಹಾಡು ಮತ್ತು ಹಳ್ಳಿಯ ಹಾಡುಗಳು ಸಂಗ್ರಹಗಳನ್ನು ಅವಲಂಬಿಸಿದ್ದರೂ
ಅದುವರೆವಿಗೂ ಮುದ್ರಿತಗೊಂಡಿರದ ಕೆಲವು ನೂತನ ತ್ರಿಪದಿ
ಪದಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಈ ಪುಸ್ತಕದ
"ಮೊದಲಮಾತಿ'ನಲ್ಲಿ, ಹಳ್ಳಿಯ ಹಾಡುಗಳ
ಸ್ವರೂಪ, ವೈವಿಧ್ಯ ಅವುಗಳ ಪ್ರಚಾರಕ್ಕೆ ಇರುವ ಅಗತ್ಯ, ಅವುಗಳ ಕಾವ್ಯ ಗುಣ ಈ ಅಂಶಗಳ ಕುರಿತು ಸಾಮಾನ್ಯ ಜನಕ್ಕೆ
ಅರ್ಥವಾಗುವಂತೆ ಸರಳವಾದ ಭಾಷೆಯಲ್ಲಿ ಪರಿಚಯ ಮಾಡಿಕೊಟ್ಟಿದ್ದಾರೆ. ಕೊನೆಯಲ್ಲಿ, ಯಾವ ಗ್ರಂಥಗಳಿಂದ ಪದ್ಯಗಳನ್ನು ಆರಿಸಿಕೊಂಡಿದೆ ಎಂಬುದನ್ನು
ಸೂಚಿಸಿದ್ದಾರೆ. ಈ ಕೃತಿಯಲ್ಲಿಯ ಈ ಸಂಕಲಿತ ಕೃತಿಯಲ್ಲಿ
ಒಟ್ಟು ೮೮ ತ್ರಿಪದಿಗಳಿದ್ದು ಸ್ತೋತ್ರ, ತೊಟ್ಟಿಲಮಗು, ಅಳುವ ಮಗು, ಮಗುವಿನ ಸೊಗಸು, ಮಮತೆ, ಹೆಣ್ಣು
ಮಕ್ಕಳು,, ಬಂಜೆ, ತೌರು ಬಿಟ್ಟು ಪಯಣ, ಹೆತ್ತ ಕರುಳು, ತೌರಿನ ಹಂಬಲ, ತಮ್ಮ, ತಮ್ಮನ ಹೋರಿ, ತಾಯಿ
ಇಲ್ಲದ ಊರು, ತಂಗಿಯ ದೂರು, ಬಿನ್ನಾಣಗಿತ್ತಿ, ಅತ್ತೆ-ಸೊಸೆ, ಗಂಡ-ಹೆಂಡತಿ, ಹೊಂದಿಕೆಯಿಲ್ಲದ ಮದುವೆ,
ಸಂಗಾತಿ, ಹೆಣ್ಣು-ಗಂಡು,ಬಗೆ ಬಗೆಯ ವಿಷಯ, ಬೀಸುವ ಕಲ್ಲು , ಹಾರೈಕೆ ಎಂಬ ೨೩ ಶೀರ್ಷಿಕೆಗಳಲ್ಲಿ ಆಶಯಕ್ಕನುಗುಣವಾಗಿ
ವರ್ಗೀಕರಿಸಿ ಕೊಟ್ಟಿದ್ದಾರೆ. ಈ ಕೃತಿಯ ಮೂಲಕ ತಾವೊಬ್ಬರು ಜಾನಪದ ವಿದ್ವಾಂಸರು ಎಂಬುದನ್ನು ತೀನಂಶ್ರೀ
ಅವರು ತೋರಿಸಿ ಕೊಟ್ಟಿದ್ದಾರೆ. ಒಂದಲ್ಲ ಎರಡಲ್ಲ
ಹಲವಾರು ಸುಮಧುರ ಶಬ್ದ ಚಿತ್ರಗಳನ್ನು ಕಟ್ಟಿಕೊಡುವ ಸುಂದರ ತ್ರಿಪದಿಗಳು ಈ ಸಂಕಲನದಲ್ಲಿವೆ. ಸಾಮಾನ್ಯ
ಜನಕ್ಕೆ ತ್ರಿಪದಿ ರೂಪದ ಛಂದಸ್ಸನ್ನು ಪರಿಚಯ ಮಾಡಿಕೊಡುವ ಅಗತ್ಯವಿಲ್ಲದಿದ್ದರೂ ಅದನ್ನು ಓದುವ
ಬಗೆ ಹೇಗೆ ಎಂಬುದನ್ನು ತೋರಿಸಿ ಕೊಡುವುದರ ಮೂಲಕ ತ್ರಿಪದಿ ಛಂದಸ್ಸಿನ ಸ್ವರೂಪವನ್ನು ಅದರ
ಧಾಟಿಯನ್ನು ಪರಿಚಯ ಮಾಡಿ ಕೊಟ್ಟಿದ್ದಾರೆ. ಇಲ್ಲಿಯ
ಹಾಡುಗಳ ಪಾಠವು ಕವಿ ಲಿಖಿತ ಪಾಠವಾಗಿಲ್ಲದಿರುವುದರಿಂದ ದೊರೆತ ಪಾಠವನ್ನು ತಿದ್ದುಪಡಿ
ಮಾಡದೆ ಯಥಾವತ್ತಾಗಿ ಉಳಿಸಿಕೊಳ್ಳುವ ನಿಲುವನ್ನು ಅವರು ತಾಳಿದ್ದಾರೆ.
ತೀ.ನಂ.ಶ್ರೀ.
ಯವರು ಎಂ.ಎ. ತರಗತಿಗಳಿಗೆ ಪಾಠ ಮಾಡುತ್ತಿದ್ದಾಗ ಮುದ್ರಿತ ಗ್ರಂಥಗಳಲ್ಲಿ ಪರಿಷ್ಕೃತವಾಗದೆ
ಉಳಿದಿದ್ದ ಪಾಠದೋಷಗಳನ್ನು ವಿದ್ಯಾರ್ಥಿಗಳ ಗಮನಕ್ಕೆ ತಂದು
ಅವುಗಳನ್ನು ತಿದ್ದುಪಡಿಮಾಡಿ, ಬೋಧಿಸುತ್ತಿದ್ದರು.
ಇದರ ಬಗೆಗೆ ಎಂ.ವಿ.ಸೀ.ಯವರು ಲೇಖನವೊಂದರಲ್ಲಿ ದಾಖಲು ಮಾಡಿದ್ದಾರೆ.
ಎಂ.ವಿ.ಸೀತಾರಾಮಯ್ಯನವರು
ತೀ.ನಂ.ಶ್ರೀ ಅವರು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ತರಗತಿಯಲ್ಲಿ ಅವರು ಜನ್ನನ "ಅನಂತನಾಥಪುರಾಣ' ಮತ್ತು ಸಾಳ್ವನ
"ರಸರತ್ನಾಕರ' ಕೃತಿಗಳ ಪಾಠ ಮಾಡುವ ಸಂದರ್ಭದಲ್ಲಿ ಮುದ್ರಿತ
ಕೃತಿಗಳಲ್ಲಿಯ ಸ್ಖಾಲಿತ್ಯಗಳು ಮತ್ತು ಪಾಠಾಂತರಗಳ ಬಗೆಗೆ ಪ್ರಸ್ತಾಪಿಸಿದ್ದನ್ನು ಗುರುತು ಹಾಕಿ ಕೊಂಡು
ಅವುಗಳನ್ನು ಲೇಖನವೊಂದರಲ್ಲಿ ಚರ್ಚಿಸಿದ್ದಾರೆ. ಇದರಲ್ಲಿ ತೀ.ನಂಶ್ರೀ ಅವರ ಗ್ರಂಥಸಂಪಾದನೆಯ ಬಗೆಗಿನ
ವೈಜ್ಞಾನಿಕ ನಿಲುವುಗಳನ್ನು ಕಾಣಬಹುದಾಗಿದೆ
ʻಅನಂತನಾಥಪುರಾಣ 1930ರಲ್ಲಿ
ಪ್ರಕಟವಾಯಿತು. ಪ್ರಕಟವಾದ ಕೂಡಲೆ ನಾನು ಕೊಡಬೇಕಾಗಿದ್ದ 1933ರ ಎಂ.
ಎ. ಪರೀಕ್ಷೆಗೆ ಪಠ್ಯ ಗ್ರಂಥಗಳಲ್ಲಿ ಒಂದಾಗಿ ನಿಯಮಿತವಾಯಿತು. ಅದರಲ್ಲಿ ಅಧ್ಯಯನ
ಮಾಡಬೇಕಾಗಿದ್ದುದು 11-14 ಆಶ್ವಾಸಗಳಲ್ಲಿ ನಿರೂಪಿತವಾದ ಚಂಡಶಾಸನನ
ಕಥಾಭಾಗ. ತೀ:ನಂ.ಶ್ರೀ. ಯವರು 11ನೆಯ ಆಶ್ವಾಸದ
ವರೆಗಿನ ಪುರಾಣ ವಿಷಯವನ್ನು ಸಂಕ್ಷೇಪವಾಗಿ ತಿಳಿಸಿ, ಅಲ್ಲಲ್ಲಿ
ಸ್ವಾರಸ್ಯವಾದ ಕೆಲಕೆಲವು ಪದ್ಯಗಳನ್ನು ಓದಿ ಹೇಳಿ, ಪಠ್ಯ
ಭಾಗವನ್ನು ವಿವರಪೂರ್ಣವಾಗಿ ಪಾಠಮಾಡತೊಡಗಿದರು. ಅವರು ಎಷ್ಟು ಶ್ರದ್ಧೆಯಿಂದ ಗ್ರಂಥವನ್ನು
ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ತರಗತಿಯಲ್ಲಿದ್ದ ನಾವು ಮೂವರು ವಿದ್ಯಾರ್ಥಿಗಳಿಗೆ ಪಾಠ
ಹೇಳುತ್ತಿದ್ದರು ಎನ್ನುವುದಕ್ಕೆ, ಪಾಠದೋಷಗಳನ್ನುತಿದ್ದುತ್ತಾ
ಪದ್ಯಗಳ ಅರ್ಥವಿವರಣೆ ಮಾಡುತ್ತಿದ್ದುದು `ಸ್ಪಷ್ಟ
ನಿದರ್ಶನ. “ಈ ಗ್ರಂಥದಲ್ಲಿ ಅಚ್ಚಿನ ತಪ್ಪುಗಳೂ ಪಾಠದೋಷಗಳೂ ಹೇರಳವಾಗಿವೆ. ಪಾಠಕ್ಷೇಶ ಇದ್ದಂತೆ
ಮುದ್ರಿಸಿರುತ್ತೇವೆ? ಎಂದು ವಿಜ್ಞಾಪಿಸಿಕೊಂಡಿದ್ದಾರೆ.
ಮಾತೃಕೆಯಲ್ಲಿರುವಂತೆ ಮುದ್ರಿಸುವುದಷ್ಟೇ ಗ್ರಂಥಸಂಪಾದಕನ ಕೆಲಸವಾದರೆ, ಆ
ಕೆಲಸವನ್ನು ಮುದ್ರಣಾಲಯದವರೇ ನಿರ್ವಹಿಸಬಹುದಲ್ಲವೇ? ನಾಲ್ಕು
ಹಸ್ತ ಪ್ರತಿಗಳು ಕಣ್ಣಮುಂದಿದ್ದು, ಪಾಠಭೇದಗಳಿರುವಾಗ, ಯಾವುದೊಂದೂ
ಕವಿಯ ಸ್ವಹಸ್ತಾಕ್ಷರ ಪ್ರತಿಯಲ್ಲದಿರುವಾಗ, ಕವಿಪಾಠಕ್ಕೆ ಸಮೀಪವಾದ
ಮೂಲ ಮಾತೃಕೆಯನ್ನು ಪಾಠಾಂತರಗಳ ಸಹಾಯದಿಂದ ಪುನರ್ನಿರ್ಮಾಣ ಮಾಡಬಹುದು; ಪಾಠಾಂತರಗಳೇ
ಇಲ್ಲದೆ, ಪಾಠದೋಷವಿದೆಯೆಂದು
ಮನವರಿಕೆಯಾದಾಗ ಆ ದೋಷ ಲಿಪಿಕಾರರ ಕೈತಪ್ಪುಗಳಿಂದ ವ್ಯಾಕರಣ, ಛಂದಸ್ಸು, ಮುಂತಾದ
ಶಾಸ್ತ್ರಗಳ ಜ್ಞಾನದ ಸಹಾಯದಿಂದ ಸರಿಯಾಗಿರಬಹುದಾದ ಪಾಠವನ್ನು ಊಹೆಯಿಂದ
ಕಂಡುಹಿಡಿಯುವುದು ಗ್ರಂಥಸಂಪಾದಕನ ಧರ್ಮವೇ ಎಂಬುದನ್ನು ಆಧುನಿಕ ಗ್ರಂಥ ಸಂಪಾದನಾಶಾಸ್ತ್ರವು ಒಪ್ಪುತ್ತದೆ.
1931ರ ವೇಳೆಗೆ,
ಇಂಗ್ಲಿಷಿನಲ್ಲಿಯೇ ಆಗಲಿ ಭಾರತೀಯ ಭಾಷೆಗಳಲ್ಲಿಯೇ ಆಗಲಿ ಭಾರತೀಯ ಭಾಷಾಸಾಹಿತ್ಯಗಳಿಗೆ
ಅನ್ವಯಿಸುವಂತೆ ಪಾಠವಿಮರ್ಶಾಶಾಸ್ತ್ರವು ರೂಪಗೊಂಡು ಪ್ರಕಟವಾಗಿರಲಿಲ್ಲ ಎಂಬುದಾಗಿ ದಾಖಲಿಸುವುದರ
ಮೂಲಕ ಅನಂತನಾಥಪುರಾಣದ
ಸಂಪಾದಕರು ಮಾಡಲಾಗದೆ ಬಿಟ್ಟಿದ್ದ ಗ್ರಂಥ ಸಂಪಾದನಾ
ಕೆಲಸವನ್ನು ಪಾಠ ಮಾಡುವ ಸಂದರ್ಭದಲ್ಲಿ ತೀ. ನಂ. ಶ್ರೀ. ಯವರು ನಿರ್ವಹಿಸಿರುವುದನ್ನು
ಎಂ.ವಿ.ಸೀತಾರಾಮಯ್ಯನವರು ಲೇಖನವೊಂದರಲ್ಲಿ ಮೇಲ್ಕಂಡ
ರೀತಿಯಲ್ಲಿ ವಿವರಿಸಿದ್ದಾರೆ.( ಸಿರಿಸಂಪದ ಪು.೨೨೧)
ಅದೇ ರೀತಿ ಕವಿ ಸಾಳ್ವನ
"ರಸರತ್ನಾಕರ'ವನ್ನೂ ಎಂ.ಎ. ವಿದ್ಯಾರ್ಥಿಗಳಿಗೆ
ಪಾಠ ಮಾಡುವ ಸಂದರ್ಭದಲ್ಲಿ ತಮ್ಮ ಅರಿವಿಗೆ ನಿಲುಕಿದ ಕಡೆಗಳಲ್ಲಿ ಎಲ್ಲಾ
ಅದು ಮುದ್ರಣದೋಷವಾಗಿರಲಿ, ಪಾಠ' ದೋಷವಾಗಿರಲಿ
- ತಿದ್ದುಪಾಟು ಸೂಚಿಸದೆ ಅವರು ಮುಂದಕ್ಕೆ ಹೋಗುತ್ತಲೇ ಇರಲಿಲ್ಲ. ಉನ್ನತ ಮಟ್ಟದ ತರಗತಿಗೆ
ಪಾಠಹೇಳಬೇಕಾದ ಅಧ್ಯಾಪಕ ಕರ್ತವ್ಯನಿಷ್ಠೆಯಿಂದ ಎಷ್ಟು ವಿಧಗಳಲ್ಲಿ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ
ಬಗೆಗೆ ಮತ್ತು ಪಾಠಪರಿಷ್ಕರಣದ ಸಂದರ್ಭಗಳು ಇಂದಿನ ತರುಣ ಅಧ್ಯಾಪಕರ
ಪೀಳಿಗೆಗೆ ಮಾರ್ಗದರ್ಶಕವಾಗಬಲ್ಲುವು ಎಂಬ ಅವರ ಮಾತುಗಳಲ್ಲಿ ಪಾಠ ಬೋಧನೆಯ ಸಂದರ್ಭದಲ್ಲಿಯೂ
ಅವರ ಗ್ರಂಥಸಂಪಾದನೆಯ ವಿದ್ವತ್ ಹಿರಿಮೆ ಎದ್ದು ಕಾಣುತ್ತದೆ. ( ಸಿರಿಸಂಪದ ಪು.೨೨೬)
ಶಾಸನ ಪದ್ಯದ ಪಾಠನಿರ್ಣಯದ ಜೊತೆಗೆ, ಪ್ರಾಸಂಗಿಕವಾಗಿಯೇ
ಆದರೂ, ನಾಗವರ್ಮನು ಷಟ್ಟದಿಗೆ ಕೊಟ್ಟಿರುವ ಲಕ್ಷ
ಲಕ್ಷಣ ಪದ್ಯದ ಅಂಶಗಣ ಘಟಿತ ಸ್ವರೂಪವನ್ನು ನಿಷ್ಕರ್ಷಿಸಿರುವುದು ಅವರ ಪಾಠಪರಿಷ್ಕರಣದ ನಿಲುವಿನ ಪ್ರತೀಕವಾಗಿದೆ. 1952ರಲ್ಲಿ ಬರೆದು
ಅಚ್ಚಾದ “ಅಪೂರ್ವ ಷಟ್ಪದಿಯ ಲಕ್ಷಣ” ಎಂಬ ಅವರ ಲೇಖನದಲ್ಲಿ ಅವರ ಪಾಠಪರಿಷ್ಕರಣ ಶಾಸ್ತ್ರಜ್ಞಾನಪ್ರಕಾಶದ
ಮೊದಲ ಕಿರಣಗಳು ಗೋಚರಿಸುತ್ತವೆ. ಈ ಲೇಖನದಲ್ಲಿ ಅವರು ಅಮ್ಮಿನಭಾವಿಯ ಶಾಸನದ (ಕ್ರಿ.ಶ.ಸು. ೧೦೭೧)
ʻಷಟ್ಪದʼ ಪದ್ಯದ
ಪಾಠವನ್ನು ಕುರಿತು ಚರ್ಚಿಸಿ, ಕನ್ನಡ ಛಂದಸ್ಸಿನ ದೃಷ್ಟಿಯಿಂದ ಅದರ ವಿಶ್ಲೇಷಣೆ ಮಾಡಿ, ಅದರ ಛಂದಸ್ಸನ್ನೂ
ಪಾಠವನ್ನೂ ಅತ್ಯಂತ ತೃಪ್ತಿಕರವಾಗಿ ನಿಷ್ಕರ್ಷೆಮಾಡಿದ್ದಾರೆ. ಈ ಪಾಠ ನಿಷ್ಕರ್ಷೆಗೆ ಪೂರಕವಾಗಿ ನಾಗವರ್ಮನ
ಛಂದೋಂಬುಧಿಯಲ್ಲಿ ಹೇಳಿರುವ ಷಟ್ಪದಿಯ ಲಕ್ಷಣವನ್ನೂ, ಅದರ ಪಾಠವನ್ನೂ ಪ್ರಾಸಂಗಿಕವಾಗಿ ಚರ್ಚಿಸಿದ್ದಾರೆ.
ಬಿ.ಎಂ.ಶ್ರೀ.ಯವರು ʻಕನ್ನಡಕೈಪಿಡಿʼಯಲ್ಲಿ ನಾಗವರ್ಮನ ಪದ್ಯ ಮಾತ್ರಾ ಗಣಘಟಿವಾದುದಲ್ಲವೆಂದೂ,
ಅಂಶಗಣಘಟಿತವೆಂದೂ ಸೂಚಿಸಿದ್ದರು; ನಾಗವರ್ಮನ ಕಾಲದಲ್ಲಿ ಇದ್ದದ್ದು ಒಂದೇ ಷಟ್ಪದಿ, ಇದಕ್ಕೆ ಶರಷಟ್ಪದಿ
ಎಂಬ ಹೆಸರನ್ನು ಆಮೇಲೆ ಕೊಟ್ಟರೆಂದು ಕಾಣುತ್ತದೆ ಎಂಬ ಸಕಾರಣವಾದ ಊಹೆಯನ್ನು ಮುಂದಿಟ್ಟಿದ್ದರು. ಅರ್ಥ
ಸಾಮಂಜಸ್ಯವನ್ನು ಆಧಾರವಾಗಿಟ್ಟುಕೊಂಡು ಪದ್ಯದ ನಾಲ್ಕನೆಯ ಪಾದವನ್ನು ತೀ.ನಂ.ಶ್ರೀ ಹೇಗೆ ಪರಿಷ್ಕರಿಸಿದ್ದಾರೆ
ಎಂಬುದನ್ನು ಪರಿಶೀಲಿಸಬಹುದು.
ಮಂದರ। ಧರಗಣಂ
ಬಂದಿರ್ಕಾ। ಱಂತ್ಯದೊಳ್!
ಕುಂದದೆ| ನೆಲಸುಗೆ | ಮದನಹರಂ॥
ಇಂದುನಿ। ಭಾನನೆ।
ಮುಂದಣ!। ತೆಱನುಮೀ।
ಯಂದಮಾ| ದಂದು ಷ। ಟ್ಪ [ದ], ಲಕ್ಷಣಂ॥
ಇಲ್ಲಿ ತೀ.ನಂ.ಶ್ರೀ.ಯವರು
ಪಾಠವಿಮರ್ಶಾಶಾಸ್ತ್ರದ ಒಂದು ನಿಯಮವನ್ನು ರೂಪಿಸಬೇಕೆಂಬ ಉದ್ದೇಶವನ್ನು ಹೊಂದಿರದಿದ್ದರೂ, ಕೆಲವು ಸಂದರ್ಭಗಳಲ್ಲಿ-
ಪಾಠಭೇದಗಳ ಒಂದು ʻಸಂತೆʼಯನ್ನು ಎದುರಿಸಬೇಕಾದಂಥ
ಸಂದರ್ಭದಲ್ಲಿ- ಅನಿವಾರ್ಯವಾಗಿ, ಅರ್ಥ ಸಮಂಜಸವನ್ನೇ ಮುಖ್ಯಾಧಾರವಾಗಿ ಇಟ್ಟುಕೊಂಡು ಮೂಲಪಾಠವನ್ನು
ನಿರ್ಣಯಿಸಬೇಕಾಗುತ್ತದೆ ಎಂಬ ನಿಯಮವನ್ನು ರೂಪಿಸಿಕೊಂಡಿದ್ದರು ಎಂದು ಹೇಳಬಹುದು. ಇಲ್ಲಿ ತೀ.ನಂ.ಶ್ರೀ.
ಅವರು ಅಂಶ ಷಟ್ಪದಿಯ ನಿಷ್ಕರ್ಷೆಗೆ ಸಂಬಂಧಿಸಿದ ಅಂಶಲಯ ಸ್ವರೂಪದ ಚರ್ಚೆಯನ್ನು ಮಾಡಿರುವುದು
ಗಮನಿಸತಕ್ಕ ಸಂಗತಿಯಾಗಿದೆ. ಆರನೆಯ ಪಾದವು ಯಂದಮೇ ಯಾಗಲ್ಕೆ ಷಟ್ಪದಿ ಕೇಳ್ ಎಂಬಂತೆ ಇದ್ದಿರುವುದು ಅಸಂಭವವಲ್ಲವೇ, ಆದರೆ ಇವರು ಪದ್ಯದ ಪಾಠವನ್ನು ನಿರ್ಣಯಿಸುವಾಗ ಮೈಸೂರು ಓರಿಯೆಂಟಲ್
ರೀಸರ್ಚ್ ಇನ್ಸ್ಟಿಟ್ಯೂಟ್
ನಲ್ಲಿರುವ ಛಂದೋಂಬುಧಿಯ ಎರಡು ಕೈ ಬರೆಹದ ಮಾತೃಕೆಗಳ ನೆರವಿನಿಂದ, ( KA 283, KA
287) ಮೇಲ್ಕಂಡ ಯಂದಮಾ| ದಂದು
ಷ। ಟ್ಪ [ದ], ಲಕ್ಷಣಂ॥ ಪಾಠವನ್ನು ಸ್ವೀಕರಿಸಿ ಕೊಟ್ಟಿದ್ದಾರೆ. ಮೇಲೆ
ನಿರ್ದೇಶಿಸಿರುವಂತೆ ಪಾಠವು `ತುಸಮಟ್ಟಿಗೆ
ಸಂಧಿಗ್ಧವಾಗಿರುವುದು ನಮ್ಮ ದುರ್ದೈವ. ಕನ್ನಡ
ಛಂದಸ್ಸಿನ ಚರಿತ್ರೆಯ ದೃಷ್ಟಿಯಿಂದ ಈ ಷಟ್ಟದಿ ಮುಖ್ಯವಾಗಿದೆ. ಶಾಸನದಲ್ಲಿ ಈ ಪದ್ಯ ಜಾತಿಯನ್ನು
“ಷಟ್ಟದ” ಎಂದು ಕರೆದಿದೆ.`ಸುಕುಮಾರಚರಿತ'ದಲ್ಲಿ
“ಷಟ್ಟದ” ಎಂಬ ರೂಪವೇ ಉಂಟು. ತೆಲುಗಿನ ಮೂರು ಛಂದೋಗ್ರಂಥಗಳಲ್ಲೂ ಅದೇ “ಷಟ್ಟದ” ಎಂಬುದೇ
ಕಾಣಬರುತ್ತದೆ. ಜಯಕೀರ್ತಿಯ "ಛಂದೋನುಶಾಸನ'ದಲ್ಲಿ
“ಷಟ್ಟದಿಕಾ” ಎಂದು ಬಂದಿದೆ. "ಮದನತಿಲಕ' "ಸಂಗೀತರತ್ನಾಕರ' ಗಳಲ್ಲಿ
“ಷಟ್ಪದಿ” ಎಂಬ ರೂಪ ಗೋಚರವಾಗುತ್ತದೆ. ನಾಗವರ್ಮನ“ಛಂದೋಂಬುಧಿ'ಯ
ಪ್ರಚಲಿತ ಪಾಠದಲ್ಲಿ “ಷಟ್ಟದಿ” ಎಂದು ದೊರೆಯುತ್ತದೆ; ಆದರೆ ಮೊದಲಿಗೆ
“ಷಟ್ಟದ” ಎಂದು ಇದ್ದಿರುವುದು ಅಸಂಭವವಲ್ಲ. ಹಾಗಾದರೆ ಈ ಶಬ್ದದ ಮೂಲರೂಪ ಯಾವುದು? -ಸದ್ಯಕ್ಕೇನೋ, “ಷಟದ”
ಎಂಬ ಅಕಾರಾಂತದ ಕಡೆಗೇ ಸಂಭಾವ್ಯತೆ ಓಲುತ್ತದೆ. ಅಂಶಗಣದ `ನಡೆಯುಳ್ಳ
ಪ್ರಾಚೀನ ಪದ್ಯರೂಪಕ್ಕೆ “ಷಟ್ಟದ”ಎಂಬ ಹೆಸರನ್ನು ಮೀಸಲಾಗಿರಿಸಿ, ಶರ, ಕುಸುಮ
ಮೊದಲಾದ ಮಾತ್ರಾಗಣಬದ್ಧವಾದ ಬಗೆಗಳನ್ನು, ರೂಢಿಗೆ
ಅನುಸಾರವಾಗಿ, “ಷಟ್ಪದಿ” ಎಂದು ಕರೆಯುವ
ವ್ಯವಸ್ಥೆಮಾಡುವುದು ಯುಕ್ತವಲ್ಲವೆ? ಎಂದು ಇವರು
ತಾಳಿರುವ ನಿಲುವು ಪ್ರಮುಖವಾಗಿದ್ದು ಎಲ್ಲರೂ
ಸ್ವೀಕರಿಸುವಂತಹದ್ದಾಗಿದೆ.( ತೀ.ನಂ.ಶ್ರೀ.ಅವರ ಸಮಗ್ರ ಗದ್ಯ, ಪು.೫೮೧)
ಶಾಸನ ಪದ್ಯದ ಜೊತೆಗೆ ನಾಗವರ್ಮನು ತನ್ನ ಛಂದೋಂಬುಧಿಯಲ್ಲಿ ಕೊಟ್ಟಿರುವ
ಷಟ್ಪದಿಯ ಲಕ್ಷ್ಯ- ಲಕ್ಷಣ ಪದ್ಯದ ಅಂಶಗಣಘಟಿತ ಸ್ವರೂಪದ ಹಿನ್ನೆಲೆಯಲ್ಲಿ ಪರಿಷ್ಕೃತ ಪಾಠವಾಗಿ ನೀಡಿದ್ದು
ಈಗ ನಾವು ಬಹು ಮಟ್ಟಿಗೆ ಅಂಶ ಷಟ್ಪದಿಯ ಲಕ್ಷಣವನ್ನು ಹೇಳುವ ಸಂದರ್ಭದಲ್ಲಿ ತೀ.ನಂ.ಶ್ರೀ.ಅವರ ಪಾಠವನ್ನೇ
ಉಲ್ಲೇಖಿಸುತ್ತೇವೆ,
ಒಟ್ಟಾರೆ ಇವರ ಗ್ರಂಥಸಂಪಾದನೆಯ ಒಲವು ಆದಷ್ಟು ಮಟ್ಟಿಗೆ
ಕವಿಯ ಮೂಲಪಾಠದ ಪುನರ್ ರಚನೆಯತ್ತ ಇದ್ದಿತ್ತು. ಪಾಠಪರಿಷ್ಕರಣದಲ್ಲಿ ಇವರ ವ್ಯುತ್ಪತ್ತಿ ಜ್ಞಾನ ಅಪಾರವಾಗಿದ್ದು
ಮಹತ್ವದ ಪಾತ್ರ ವಹಿಸಿದೆ. ಇವರ ಸಂಪಾದನಾ ಆಶಯವು ಕವಿ ಮತ್ತು ಸಹೃದಯರ ನಡುವಿನ ಕೊಂಡಿಯಾಗಿ ಕೃತಿಯ
ಸ್ವರೂಪದ ಸ್ಪಷ್ಟತೆಯನ್ನು ರೂಪಿಸುವಂತಹದ್ದಾಗಿದ್ದಿತು. ಪಾಠ ನಿರ್ಣಯದಲ್ಲಿ ಕವಿಯನ್ನು ಅರ್ಥಮಾಡಿಕೊಳ್ಳಬೇಕಾದ
ಆರ್ದ್ರತೆಯನ್ನು ಇವರ ಸಂಪಾದನೆಯಲ್ಲಿ ಕಾಣಬಹುದಾಗಿದೆ. ಒಂದು ಪ್ರಾಚೀನ ಕೃತಿ ಅಧಿಕೃತ ಮತ್ತು ನಿರ್ದಿಷ್ಟವೆನಿಸಬೇಕಾದರೆ
ಮೂಲ ಮಾತೃಕೆಯ ಶೋಧನೆ ಅತ್ಯಂತ ಮಹತ್ವವೆಂದು ತೀ.ನಂ.ಶ್ರೀರವರು ಭಾವಿಸಿದ್ದರು. ಗ್ರಂಥ ಸಂಪಾದನೆಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅದರಲ್ಲಿಯೂ ಸಂಗ್ರಹ ಆವೃತ್ತಿಗಳನ್ನು
ಸಂಪಾದಿಸುವಲ್ಲಿ ತೀ.ನಂ.ಶ್ರೀ ಅವರ ಗ್ರಂಥಸಂಪಾದನೆಯಲ್ಲಿ
ಅನುಸರಿಸಿರುವ ವಿಧಾನಗಳು ಮೇಲ್ಪಂಕ್ತಿಯಾಗಿವೆ.
ಪರಾಮರ್ಶನ
ಗ್ರಂಥಗಳು
೧. ಹರಿಹರ
ಕವಿಯ ನಂಬಿಯಣ್ಣನರಗಳೆ ಸಂ: ಪ್ರೊ.ತೀ.ನಂ.ಶ್ರೀಕಂಠಯ್ಯ
ಕಾವ್ಯಾಲಯ, ಜೆ.ಪಿ.ನಗರ, ಬೆಂಗಳೂರು, (ಪರಿಷ್ಕೃತ ಮುದ್ರಣ)
೨೦೧೫
೨. ರನ್ನಕವಿ
ಗದಾಯುದ್ಧ ಸಂಗ್ರಹಂ ಸಂ: ಪ್ರೊ.ತೀ.ನಂ.ಶ್ರೀಕಂಠಯ್ಯ
ವಸಂತ ಪ್ರಕಾಶನ, ಬೆಂಗಳೂರು ( ಪರಿಷ್ಕೃತ ೧೭ ನೇ ಮುದ್ರಣ)
೨೦೧೭
೩. ಹೆಣ್ಣುಮಕ್ಕಳ
ಪದಗಳು ಸಂ: ತೀ.ನಂ.ಶ್ರೀ.ಕಂಠಯ್ಯ
ಮೈಸೂರು ಸಂಸ್ಥಾನದ ವಯಸ್ಕರ ಶಿಕ್ಷಣ ಸಮಿತಿ, ಮೈಸೂರು ೧೯೪೧
೪.ಸಿರಿಸಂಪದ
ಸಂ: ಎಫ್.ಟಿ.ಹಳ್ಳಿಕೇರಿ ಮತ್ತು ಕೆ ರವೀಂದ್ರನಾಥ
ಬ್ಹಿ.ವಿ.ಶಿರೂರ ಅಭಿನಂದನಾ ಗ್ರಂಥ, ಯಲಬುರ್ಗಾ ೨೦೦೨
೫. ಮಣಿಹ
ಸಂ: ಎಂ.ವಿ.ಸೀತಾರಾಮಯ್ಯ
ಬಿ.ಎಂ.ಶ್ರೀ. ಪ್ರತಿಷ್ಠಾನ, ಬೆಂಗಳೂರು.
1970
೬.
ಸಿ.ನಾಗಭೂಷಣ. ಸಾಹಿತ್ಯ-ಸಂಸ್ಕೃತಿ ಅನ್ವೇಷಣೆ
ಸಿ.ವಿ.ಜಿ.ಪಬ್ಲಿಕೇಷನ್, ಬೆಂಗಳೂರು, 2007
೭. ಬಿ.ಎಸ್.ಸಣ್ಣಯ್ಯ:
ಪ್ರಾಚೀನ ಕನ್ನಡ ಗ್ರಂಥ ಸಂಪಾದನೆ
ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೨
೮. ಶ್ರೀಕಂಠದರ್ಶನ-
ತೀ.ನಂ.ಶ್ರೀ ಜನ್ಮಶತಮಾನೋತ್ಸವ ಸಂಸ್ಮರಣ ಗ್ರಂಥ
ಸಂ:ಕೆ.ಭೈರವಮೂರ್ತಿ, ತ.ವೆಂ.ಸ್ಮಾರಕ ಗ್ರಂಥಮಾಲೆ, ಮೈಸೂರು,
೨೦೦೬
೯. ತೀ.ನಂ.ಶ್ರೀ.
ಸಮಗ್ರ ಗದ್ಯ
ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ
ಬೆಂಗಳೂರು, ೨೦೦೬