ಶುಕ್ರವಾರ, ಅಕ್ಟೋಬರ್ 18, 2024

 

ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಹಸ್ತಪ್ರತಿ ಆಕರ ಸಂಪತ್ತು                                                                             ಡಾ.ಸಿ.ನಾಗಭೂಷಣ

  ಹಸ್ತಪ್ರತಿಗಳು ನಾಡಿನ ಸಂಸ್ಕೃತಿಯ ಭಂಡಾರಗಳಾಗಿದ್ದು  ಅವುಗಳ ಅಧ್ಯಯನದ ಮೂಲಕ ಪ್ರಾಚೀನ ಕನ್ನಡಿಗರ ಬದುಕಿನ ಒಲವುಗಳನ್ನು, ವಿದ್ಯಾಭಿಮಾನ ಮತ್ತು ಧರ್ಮಾಭಿಮಾನಗಳನ್ನು ಅರಿತು ಕೊಳ್ಳಬಹುದು. ಕನ್ನಡ ಹಸ್ತಪ್ರತಿಗಳನ್ನು ಕನ್ನಡ ನಾಡಿನ ಸಮಾಜ ಹಾಗೂ ಸಂಸ್ಕೃತಿಗಳ ಕ್ರಿಯಾಶೀಲ ನಡೆವಳಿಕೆಗಳು ಎಂದು ಅರಿವಿನ ವಿಸ್ತಾರಗಳ ಪರಿಧಿಯಲ್ಲಿ ಗುರುತಿಸ ಬೇಕಾಗಿದೆ. ಹಸ್ತಪ್ರತಿಗಳಲ್ಲಿ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವೈವಿಧ್ಯಪೂರ್ಣ ವಿವರಗಳು ಕಂಡು ಬರುತ್ತವೆ. ಹಸ್ತಪ್ರತಿಗಳಲ್ಲಿ ಸಾಹಿತ್ಯ, ಸಂಸ್ಕೃತಿ, ಸಮಾಜ, ರಾಜಕೀಯ, ಆರ್ಥಿಕ, ವಿಜ್ಞಾನ, ತಂತ್ರಜ್ಞಾನ, ವಾಸ್ತುಶಿಲ್ಪ, ವೈದ್ಯ, ಸಂಗೀತ ಚಿತ್ರಕಲೆ, ನಾಟ್ಯಶಾಸ್ತ್ರ, ಶಿಕ್ಷಣ, ಧಾರ್ಮಿಕ, ಜ್ಯೋತಿಷ್ಯ, ಖಗೋಳ, ಗಣಿತ ಎಲ್ಲಾ ಜ್ಞಾನಶಾಖೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಒಳಗೊಂಡಿರುವುದನ್ನು ಕಾಣಬಹುದಾಗಿದೆ.

   ಕರ್ನಾಟಕ ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಾದ ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ  ವಿಶ್ವವಿದ್ಯಾಲಯಗಳು ತಮ್ಮದೇ ಆದ ಹಸ್ತಪ್ರತಿ ವಿಭಾಗಗಳನ್ನು ಸ್ಥಾಪಿಸಿಕೊಂಡು ಬಂದಿವೆ. ಹೈದರಾಬಾದ್‍ನ ಉಸ್ಮಾನಿಯ ವಿಶ್ವವಿದ್ಯಾಲಯ ಮತ್ತು ಮದ್ರಾಸ್  ವಿಶ್ವವಿದ್ಯಾಲಯಗಳಲ್ಲಿಯೂ ಕನ್ನಡ ಹಸ್ತಪ್ರತಿ ವಿಭಾಗಗಳಿವೆ. ಈ ಎಲ್ಲ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಬೆಂಗಳೂರು ವಿಶ್ವವಿದ್ಯಾಲಯ ಕಾಲಮಾನದಲ್ಲಿ ಕಿರಿಯದು.  ಬೆಂಗಳೂರು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದದ್ದೆ 1964ರಲ್ಲಿ.  ಮೊದಲಿನಿಂದಲ್ಲೂ ಇದ್ದ ಕನ್ನಡ ವಿಭಾಗವು, 1971 ರಲ್ಲಿ ಕನ್ನಡ ಅಧ್ಯಯನ ಕೇಂದ್ರವಾಗಿ ಪರಿವರ್ತಿತವಾಯಿತು. ಪ್ರಾಚೀನ ಹಸ್ತಪ್ರತಿಗಳ ವಿಭಾಗವೂ ಕೂಡ ಅದೇ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿತು. ದಿವಂಗತ. ಪಂಡಿತರತ್ನ ಆಸ್ಥಾನವಿದ್ವಾನ್ ಡಾ.ಬಿ. ಶಿವಮೂರ್ತಿ ಶಾಸ್ತ್ರಿಯವರು, 1971 ಸೆಪ್ಟಂಬರ್ ರಂದು ತಮ್ಮಲ್ಲಿದ್ದ 1.ಜೈಮಿನಿ ಭಾರತ, 2. ಚೆನ್ನಬಸವಣ್ಣನವರ  ಅನುಭಾವದ ವಚನಗಳು,3. ಬಸವ ಪುರಾಣ, 4.ದೀಪದ ಕಲಿಯರ ಕಾವ್ಯ (ಸಾಂಗತ್ಯ),5. ಷಟ್ಥ್ಸಲಜ್ಞಾನ ಸಾರಾಮೃತ 6. ಶಿವಯೋಗ ಪ್ರದೀಪಿಕೆ ( ಸಂಸ್ಕೃತ), 7. ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆ 8. ವೈದ್ಯ ವಗೈರೆ 9. ಶಿವಾನಂದ ಲಹರಿ ( ಕರ್ನಾಟಕ ಟೀಕಾ ಸಮೇತ) 1ಂ. ಸಿದ್ಧಾಂತ ಶಿಖಾಮಣಿ (ಕರ್ನಾಟಕ ಟೀಕಾಯುಕ್ತ) ಇತ್ಯಾದಿ ಹಲವು ಹಸ್ತಪ್ರತಿಗಳನ್ನು ಅಧ್ಯಯನ ಕೇಂದ್ರಕ್ಕೆ ಉದಾರವಾದ ಕೊಡುಗೆಯಾಗಿ ನೀಡಿದ ಹಿನ್ನೆಲೆಯಲ್ಲಿ ಹಸ್ತಪ್ರತಿ ವಿಭಾಗವು ಕನ್ನಡ ಅಧ್ಯಯನ ಕೇಂದ್ರದಲ್ಲಿ  ರೂಪುಗೊಳ್ಳಲು ಮೊದಲ ಕಾರಣವಾಯಿತು. ಅಂದಿನಿಂದ ಇದುವರೆಗೆ, ಸುಮಾರು  ವರ್ಷಗಳ ಅವಧಿಯಲ್ಲಿ,  ಇಲ್ಲಿಯ ಹಸ್ತಪ್ರತಿ ವಿಭಾಗ, ಸುಮಾರು ಐದು ಸಾವಿರ  ಕವಿಕೃತಿಗಳನ್ನು ಒಳಗೊಂಡಿರುವ, ಒಂದು ಸಾವಿರದ ಐದುನೂರು ಹಸ್ತಪ್ರತಿಕಟ್ಟುಗಳನ್ನು ಕೂಡಿಸಿಕೊಂಡಿದೆ.  ಇಲ್ಲಿರುವ ಹಸ್ತಪ್ರತಿ ವಿಭಾಗದ ಬೆಳವಣಿಗೆಗೆ ಕಳೆದ ಮೂರುದಶಕದಲ್ಲಿ,  ಕನ್ನಡ ಅಧ್ಯಯನ ಕೇಂದ್ರದ ಅಧ್ಯಾಪಕರೂ, ವಿಧ್ಯಾರ್ಥಿಗಳೂ ಮತ್ತಿತರ ಹಲವಾರು ಮಹನೀಯರೂ ಕಾರಣಕರ್ತರಾಗಿದ್ದಾರೆ. ಈ ಹಸ್ತಪ್ರತಿ ವಿಭಾಗದ ತ್ವರಿತ ಬೆಳವಣಿಗೆ ಹಾಗೂ ಅಭ್ಯುದಯಕ್ಕೆ ಹಸ್ತಪ್ರತಿ ತಜ್ಞರಾದ  ಶ್ರೀ.ಎಸ್. ಶಿವಣ್ಣನವರು ಕಾರಣ ಕರ್ತರು ಎಂಬುದರಲ್ಲಿ ಎರಡು ಮಾತಿಲ್ಲ.ಮುದ್ದಣ್ಣನ ರಾಮಾಶ್ವಮೇಧ, ಬಸವಪ್ಪ ಶಾಸ್ತ್ರೀಗಳ ಶಂಕರ ಶತಕಗಳಂತಹ ಅಪರೂಪದ ಕವಿಗಳ ಸ್ವಹಸ್ತಾಕ್ಷರ ಹಸ್ತಪ್ರತಿಗಳಿದ್ದರೂ, ಮೌಲಿಕವಾದ ಪ್ರಾಚೀನ ಹಸ್ತಪ್ರತಿಗಳು ಏಕೈಕ ಮತ್ತು ಅಪ್ರಕಟಿತ ಹಸ್ತಪ್ರತಿಗಳು ಅನೇಕವಿದ್ದರೂ ಈ ವಿಭಾಗ  ಸಂಪಾದನೆ ಮತ್ತು ಪ್ರಕಟನೆಯನ್ನು ಕರ್ನಾಟಕದ ಉಳಿದ ವಿಶ್ವವಿದ್ಯಾಲಯಗಳ ಹಸ್ತಪ್ರತಿ ವಿಭಾಗಗಳ ಹಾಗೆ ತನ್ನ ಕಕ್ಷೆಗೆ ಸೇರಿಸಿಕೊಳ್ಳದೆ ಹೋದುದು ಒಂದು ಕೊರತೆಯೆನಿಸಿದೆ, ಆದಾಗ್ಯೂ ಕನ್ನಡ ಅಧ್ಯಯನ  ಕೇಂದ್ರದ ಹಸ್ತಪ್ರತಿ ವಿಭಾಗದ ಮಹತ್ವಕ್ಕೆ ಧಕ್ಕೆಯಾಗಿಲ್ಲದಿರುವುದು ವಿಶೇಷ ಸಂಗತಿ. ಈ ಹಸ್ತಪ್ರತಿ ವಿಭಾಗವು ಈಗಲೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ.

    ಮೂರು ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗಗಳು 9೦ರ ದಶಕದವರೆಗೆ ನಡೆಸಿದ ಸಾಹಿತ್ಯಕ ಚಟುವಟಿಕೆಗಳು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮುಖ್ಯವಾಗಿ ಪರಿಗಣಿತವಾದವುಗಳು. ಒಂದೊಂದೂ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಮೈಸೂರು ಮತ್ತು ಧಾರವಾಡ ವಿಶ್ವವಿದ್ಯಾನಿಲಯಗಳು ಪ್ರಾಚೀನ ಹಾಗೂ ಆಕರ ಸಾಹಿತ್ಯ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಬೆಂಗಳೂರು ವಿಶ್ವವಿದ್ಯಾನಿಲಯವು ಸಾಹಿತ್ಯದ ವಿಭಿನ್ನ ವಾಗ್ವಾದಗಳು ಬೆಳೆಯಲು ಉತ್ತಮ ಸಾಹಿತ್ಯ ನಿರ್ಮಾಣವಾಗಲು ಪಣತೊಟ್ಟುದರ ಫಲವಾಗಿ ಪ್ರಾಚೀನ ಸಾಹಿತ್ಯ ಸಂಪಾದನೆಗೆ  ಅಷ್ಟಾಗಿ ತೊಡಗಿಕೊಳ್ಳಲಿಲ್ಲ ಎನ್ನಬಹುದು.

   ಶ್ರೀಎಸ್.ಶಿವಣ್ಣನವರು ಬೆಂಗಳೂರು ವಿಶ್ವವಿದ್ಯಾನಿಲಯದ ಸಂಪಾದನ ವಿಭಾಗಕ್ಕೆ ಸ್ವತಃ ಒಂದು ಆಸ್ತಿಯಾಗಿದ್ದ ತಜ್ಞರು. ಹಸ್ತಪ್ರತಿ ವಿಚಾರದಲ್ಲಿ ಅವರನ್ನು ನಡೆದಾಡುವ ನಿಘಂಟು ಎಂದರೂ ತಪ್ಪಲ್ಲ. ಇವರು ಬೆಂಗಳೂರು ವಿಶ್ವವಿದ್ಯಾಲಯದ ಹಸ್ತಪ್ರತಿವಿಭಾಗದಲ್ಲಿ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಸಂಗ್ರಹಿಸಿದ ಹಸ್ತ ಪ್ರತಿ ಕಟ್ಟುಗಳ ಸಂಖ್ಯೆ 1753 ನ್ನು ದಾಟಿದೆ. ಈ ಕಟ್ಟುಗಳಲ್ಲಿ ಅಡಕವಾಗಿರುವ ವಿಷಯಾಧಾರಿತ ಕೃತಿಗಳ ಸಂಖ್ಯೆ 5864 ಆಗುತ್ತದೆ. ಇವರ ಕಾಲದಲ್ಲಿ ಸಂಗ್ರಹಿಸಲ್ಪಟ್ಟ ಹಸ್ತಪ್ರತಿಗಳಲ್ಲಿ ಅಮೂಲ್ಯವಾದ ಹಸ್ತಪ್ರತಿಗಳು ಸೇರಿವೆ. ಮುದ್ದಣ್ಣನ ಕೈ ಬರೆಹದ ರಾಮಾಶ್ವಮೇಧ, ಬಸವಪ್ಪ ಶಾಸ್ತ್ರಿಗಳ ಕೈ ಬರೆಹದ ಶಂಕರ ಶತಕಗಳಂತಹ ಅಮೂಲ್ಯವಾದ ಸ್ವಹಸ್ತ ಪ್ರತಿಗಳು ಇವರ ಕಾಲದಲ್ಲಿ ಸಂಗ್ರಹಿಸಲ್ಪಟ್ಟಿರುವುದು ವಿಶೇಷ. ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿ ಅನುಭವ ಮುಕುರ ( ಕೆ.153/9) ಅಮರಕೋಶ ಸಟೀಕು (ಕೆ.136), ಕುಮಾರವ್ಯಾಸನ ಅರಣ್ಯ ಪರ್ವ (ಕೆ.11/3) ನಿಜಗುಣ ಶಿವಯೋಗಿಯ ಅರವತ್ತು ಮೂವರ ತ್ರಿವಿಧಿ ( ಕೆ.129/1) ಉದಯಾದಿತ್ಯಾಲಂಕಾರ  (ಕೆ.217/4) ಸಿಂಗಳ ಸಿದ್ದ ಬಸವನ ಎಲ್ಲಾ ಪುರಾತರ ಬೆಡಗಿನ ವಚನ ( ಕೆ.226/3), ಮಹಾಲಿಂಗದೇವನ ಏಕೋತ್ತರ ಶತಸ್ಥಲ (ಕೆ.213/2), ಜಕ್ಕಣಾರ್ಯನ ಏಕೋತ್ತರ ಶತಸ್ಥಲ (ಕೆ.49), ಇಮ್ಮಡಿ ನಾಗವರ್ಮನ ಕರ್ಣಾಟಕ ಭಾಷಾಭೂಷಣ(ಸಟೀಕು) (ಕೆ.51), ಕರ್ನಾಟಕ ಶಬ್ದಮಂಜರಿ (ಕೆ. 8/2), ಈಶ್ವರ ಕವಿಯ ಕವಿ ಜಿಹ್ವಾಬಂಧನ(ಕೆ.8/1ಂ), ಕುಮುದೇಂದು ರಾಮಾಯಣ (ಕೆ.144),  ಕೈವಲ್ಯ ಪದ್ಧತಿ (ಕೆ.38), ಗುಬ್ಬಿಯ ಮಲ್ಲಣಾರ್ಯನ ಗಣಭಾಷ್ಯ ರತ್ನಮಾಲೆ ( ಕೆ.30),ಗಣಸಹಸ್ರನಾಮ (ಕೆ.2ಂ1/23), ಹರಿಹರನ ಗಿರಿಜಾ ಕಲ್ಯಾಣ ( ಕೆ.113/2) ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣ (ಕೆ.8ಂ), ನಾಗವರ್ಮನ ಛಂದೋಂಬುಧಿ (ಕೆ.117), ನೇಮಿಜಿನೇಶ ಸಂಗತಿ (ಕೆ.93), ಶಂಕರ ಕವಿಯ ಪಂಚತಂತ್ರ ( ಕೆ.221), ಅದೃಶ್ಯ ಕವಿಯ ಪ್ರೌಢದೇವರಾಯನಕಾವ್ಯ (ಕೆ.12), ಭಿಮಕವಿಯ ಬಸವ ಪುರಾಣ (ಕೆ.22), ಭಕ್ತಿರಸದ ಸೋನೆ ( ಕೆ.2೦4), ಭರತೇಶ ವೈಭವ (ಕೆ.103), ಭಾವ ಚಿಂತಾರತ್ನ (ಕೆ.152/2), ಶಬರಶಂಕರ ವಿಳಾಸ (ಕೆ.2೦5/1), ಶಬ್ದಮಣಿ ದರ್ಪಣ (ಕೆ.208/2), ಶರಣ ಲೀಲಾಮೃತ ( ಕೆ.124), ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯ ಸಂಪಾದನೆ (ಕೆ.213/1), ಶಿವಗಣಪ್ರಸಾದಿ ಮಹದೇವಯ್ಯನ ಶೂನ್ಯ ಸಂಪಾದನೆ (ಕೆ.7/1), ತೋಂಟದ ಸಿದ್ಧೇಶ್ವರರ ಷಟ್ಸ್ಥಲಜ್ಞಾನ ಸಾರಾಮೃತ (ಕೆ.191/2), ಸರ್ವಜ್ಞನ ತ್ರಿವಿಧಿ (ಕೆ.28) ರಾಘವಾಂಕನ ಸಿದ್ಧರಾಮ ಪುರಾಣ (ಕೆ.2೦7), ಸೊಗಿನ ಸೋನೆ (ಕೆ.95/2), ರಾಘವಾಂಕನ ಹರಿಶ್ಚಂದ್ರ ಕಾವ್ಯ (ಕೆ61/1) ಇತ್ಯಾದಿ ಸುಮಾರು ಐದುಶತಮಾನಗಳ ಅವಧಿಯಲ್ಲಿ ಸಂಗ್ರಹಗೊಂಡ ಹಸ್ತಪ್ರತಿಗಳಿವೆ.  ಇನ್ನು ಕೆಲವು ವಿಶಿಷ್ಟವಾದ ಹಸ್ತಪ್ರತಿಗಳು ಇಲ್ಲಿಯ ಸಂಗ್ರಹದಲ್ಲಿವೆ. ಚಂದ್ರಮ ಕವಿಯ ಗಣಿತ ಸಾರ ಕೃತಿಯ ಹಸ್ತಪ್ರತಿಯನ್ನು ಹೆಸರಿಸ ಬಹುದು. ಕನ್ನಡ ಸಾಹಿತ್ಯದಲ್ಲಿ ಕಾಲದಿಂದ ಕಾಲಕ್ಕೆ  ಬದಲಾವಣೆಗೊಂಡ  ಚಂಪೂ, ವಚನ, ರಗಳೆ, ಷಟ್ಪದಿ, ಸಾಂಗತ್ಯ, ಶತಕ, ಅಷ್ಟಕ ಇತ್ಯಾದಿ ಸಾಹಿತ್ಯರೂಪಗಳಿಗನುಗುಣವಾಗಿ ರಚನೆಗೊಂಡ ಕೃತಿಗಳ ಹಸ್ತಪ್ರತಿಗಳು ದೊರೆಯುತ್ತವೆ. ಶಾಸ್ತ್ರ ವಿಷಯಗಳಿಗೆ ಸೇರಿದ ಅಲಂಕಾರಶಾಸ್ತ್ರ, ನಿಘಂಟು ಶಾಸ್ತ್ರ, ಛಂದಃಶಾಸ್ತ್ರ,  ವ್ಯಾಕರಣ ಶಾಸ್ತ್ರಗಳಿಗೆ ಸಂಬಂಧಿಸಿದ ಹಸ್ತಪ್ರತಿಗಳು ಇಲ್ಲಿ ಲಭ್ಯವಿವೆ. ಇಲ್ಲಿಯ ವಿಭಾಗದಲ್ಲಿ ಓಲೆಗರಿ ಮತ್ತು ಬಟ್ಟೆಯಲ್ಲಿರುವ ಉದ್ಧರಣ ಪಟ್ಟಿಕೆಗಳು, 1563ರ  ಬಿಜ್ಜಾವರ ಮಠದಲ್ಲಿದ್ದ ಸಂರಕ್ಷಿತ ಏಕೈಕ ಹಸ್ತಪ್ರತಿಯಾದ ‘ಮಲ್ಲಿಕಾರ್ಜುನ ರಾಮಾಯಣಸಾರ ಟೀಕೆ’ಯಂತಹ ಅಪರೂಪದ ಹಸ್ತಪ್ರತಿಗಳು ಇಲ್ಲಿವೆ. 28 ಇಂಚು ಉದ್ದದ ತೆಲಗು ಹಸ್ತಪ್ರತಿ ಓತನ ಭಾಗವತ (ಕೆ.1424) ಈ ಸಂಸ್ಥೆಯಲ್ಲಿರುವ ಅತಿದೊಡ್ಡ ಹಸ್ತಪ್ರತಿಯಾದರೆ ಎಂ.ವಿ.ಸೀತಾರಾಮಯ್ಯನವರಿಂದ ದಾನವಾಗಿ ಬಂದಿರುವ 3 ಇಂಚು ಉದ್ದದ ರಾಮಚಂದ್ರ ಪ್ರಶ್ನಿ ಎಂಬ ಪ್ರಶ್ನಶಾಸ್ತ್ರ (ಕೆ.2ಂ8) ಹಸ್ತಪ್ರತಿಯು ಅತಿ ಚಿಕ್ಕದಾದುದಾಗಿದೆ. ಚಿಕ್ಕ ಬರೆಹದ ನಿಜಲಿಂಗಯ್ಯ ಬರೆದಂತಾ ಕೈವಲ್ಯ ಪದ್ಧತಿ ಅತಿ ಸಣ್ಣ ಬರೆಹದ ಪ್ರತಿಯಾಗಿದೆ.

    ಇಲ್ಲಿಯ ಹಸ್ತಪ್ರತಿಗಳನ್ನು ವಿವಿಧ ಸಂಸ್ಕೃತಿಯ, ಧರ್ಮದ ಅಕ್ಷರಸ್ಥರು ಪ್ರತಿ ಮಾಡಿದ್ದಾರೆ. ಹಸ್ತಪ್ರತಿಗಳ ಸೃಷ್ಟಿಯಲ್ಲಿ ಹವ್ಯಾಸಿ, ವೃತ್ತಿನಿರತ ಲಿಪಿಕಾರರು ಹಾಗೂ ನಿಯುಕ್ತ ಲಿಪಿಕಾರರು  ಪ್ರಮುಖರಾಗಿದ್ದಾರೆ. ಲಿಪಿಕಾರರಲ್ಲಿ ಸುಂದರ ಲೇಖನ, ಸಣ್ಣಲಿಪಿ ಲೇಖನ, ಅಲಂಕಾರ ಲೇಖನ, ಶೀಘ್ರ ಲೇಖನ, ಬಹುಲಿಪಿ ಲೇಖನ ಇತ್ಯಾದಿ ಬಹು ಅಭಿರುಚಿಯುಳ್ಳ ಲಿಪಿಕಾರರಿದ್ದುದು ಕಂಡು ಬರುತ್ತದೆ. ಬರೆಹದ ವಿಶೇಷಣ ಹೊಂದಿದ ಲಿಪಿಕಾರರ ಉಲ್ಲೇಖ ಇಲ್ಲಿ ಹಸ್ತಪ್ರತಿಯ ಪುಷ್ಪಿಕೆಯ ಉಲ್ಲೇಖದಲ್ಲಿಯ `ಬರೆಹದ ಗುರು ನಂಜೇದೇವರು ಸೇರಿಸಿದ ಶತಕತ್ರಯ ' ( ಕೆ.237/1.2.3) ವಿವರದಿಂದ ತಿಳಿದು ಬರುತ್ತದೆ. ಲಿಪಿಕಾರರಿಗೆ ಧಾರ್ಮಿಕಮನೋಭಾವದ ಜನತೆಯೆ ಜೀವನಾಧಾರವಾಗಿದ್ದರು. ಲಿಪಿಕಾರರು ಸ್ವ ಪ್ರಯೋಜನ, ಪರ ಪ್ರಯೋಜನಗಳಿಗಾಗಿ ಲಿಪೀಕರಣ ಕಾರ್ಯ ಮಾಡಿದ್ದಾರೆ. ಲಿಪಿಕಾರರು ಸಮಯ ನಿಷ್ಠೆಗೆ, ತಮಗೆ ಪೂಜ್ಯರಾದವರ ಬಗೆಗಿನ ಗೌರವಕ್ಕೆ, ತಮ್ಮ ವಾತ್ಸಲ್ಯ- ಸಂಪ್ರೀತಿಗೆ ಭಾಜನರಾದ ಭಕ್ತ, ಶಿಷ್ಯಕೋಟಿಗೆ, ಇಷ್ಟರಾದವರ ಸ್ನೇಹ, ಪ್ರೀತಿ ದ್ಯೋತಕವಾಗಿ, ಸ್ವಂತದ ಜ್ಞಾನಾಭಿವೃದ್ಧಿ ವಿಕಾಸಗಳಿಗಾಗಿ ಪ್ರತೀಕರಣ ಕಾರ್ಯ ಮಾಡಿದ್ದಾರೆ. ನಿದರ್ಶನಕ್ಕೆ ಇಲ್ಲಿಯ ಹಸ್ತಪ್ರತಿ ಪುಷ್ಪಿಕೆಗಳಲ್ಲಿಯ ``ಭಕ್ತಗಣಂಗಳಿಗೆ ಕೃಪೆಯಾಗಿ ಲೀಲಾವಿನೋದದಿಂದ ಬಂದಂತಾ ದೇವಾಪೃತ್ವಿ ಮಹಾಮಹತ್ತಿನೊಳಗಾದ ಷಟ್ಸ್ಥಲ ಲಿಂಗಾಂಗಭರಿತರಾದ ಮಳೆಯ ಮಹಾಸ್ವಾಮಿಯ ಕರಸರೋಜದಲ್ಲಿ ಜನಿಸಿದಂತಾ ಸುತ್ತೂರ ಕೊಟ್ಟಪ್ಪ ದೇವರು ಅವರ ಸುಗರ್ಭದುದ್ಭವರಾದ ಗುರುದೇವರು ನಮ್ಮ ಕಾರುಣ್ಯದ ಭಕ್ತರಾದ ಱಟ್ಟೆಹಳ್ಳಿಯ ಆನೆಯ ಬಸಟ್ಟಿಯರಿಗೆ ಆಯುರಾರೋಗ್ಯ ಅಯಿಶ್ವರ್ಯಾಭಿವೃದ್ದಿ ಪುತ್ರೋತ್ಸವವಾಗಬೇಕೆಂದು ತ್ರಿಸಂದ್ಯ ಕಾಲದಲ್ಲು ಹರಸುವ ಅನೇಕ ಆಶಿರ್ವಾವುದಿಂದಲ್ಲು ಶೂಂನ್ಯ ಸಂಪಾದನೆಯ ಪುಸ್ತಕವ ಬರೆದು ಕೊಟ್ಟಂತಾ ಪ್ರತಿಗೆ ಶುಭಮಸ್ತು ಶೋಭನಮಸ್ತು..''(ಬೆ.ವಿ.ವಿ.ಹ.ವ.ಸೂ.ಸಂ.1 ಸಂ.371,ಕೆ.22೦) ಚಂನಬಸೈನವರು ಗಂದಿಗೆ ನಂಜುಂಡಪ್ಪನವರ ಕೊಮಾರ ನಂಜಪ್ಪನಿಗೆ ಧನಕನಕ ವಸ್ತು ವಾಹನಾಂದೋಳಿಕಾಭೀಷ್ಟ ಪುತ್ರ ಪೌತ್ರಾಭಿವೃದ್ಧಿಯಾಗಲೆಂದು ಹರಸಿ ಬರಕೊಟ್ಟ ಶರಣಲೀಲಾಮೃತ ಪುಸ್ತಕದ ಬರವಣಿಗ್ಗೆ ಸಂಪೂರ್ನ ಮಂಗಳಮಹಾ (ಬೆ.ವಿ.ವಿ.ಹ.ವ.ಸೂ.ಸಂ.1. ಸಂ.342,ಕೆ.129/3) ಎಂಬ ಉಲ್ಲೇಖಗಳನ್ನು ಗಮನಿಸ ಬಹುದಾಗಿದೆ.

  ಲಿಪಿಕಾರರು ತಮ್ಮ ನಕಲು ಕಾರ್ಯದಲ್ಲಿ ಹಲವು ಕಾರಣಗಳಿಂದಾಗಿ ತಮ್ಮಿಂದಾಗಿರ ಬಹುದಾದ ತಪ್ಪು ತಡೆಗಳನ್ನು, ವಿಕಲ್ಪಗಳನ್ನು ತಿದ್ದಿಕೊಂಡು ಓದ ಬೇಕೆಂದು, ಹಲವೆಡೆ ಮನ್ನಿಸ ಬೇಕೆಂದು ಮನವಿ ಮಾಡಿಕೊಂಡಿರುವುದನ್ನು ಇಲ್ಲಿಯ ಹಸ್ತಪ್ರತಿಗಳ ಪುಷ್ಪಿಕೆಗಳಿಂದ ತಿಳಿಯ ಬಹುದು. ನಿದರ್ಶನಕ್ಕೆ ಇಲ್ಲಿಯ ಹಸ್ತಪ್ರತಿಗಳಲ್ಲಿಯ ` ಮೂಲ  ಪ್ರತಿಯಲ್ಲಿದ್ದ ಮೇಲೆ ಬರದು ಯಿದೇನೆ ವೋದು ಪುಂಣ್ಯಾತ್ಮರು ಕೈತಪ್ಪು

ದರೆ ತಿದ್ದಿಟ್ಟು ಕೊಂಬುದು ( ಕೆ.13೦),  ಅರಿತು ತಪ್ಪುವನಲ್ಲ ಮಿಕ್ಕಿನ ಗುರು ಹಿರಿಯರಾದವರು ತಿದ್ದುಉದರಿವಿಡಿದು ನಡೆಸುಉದು ಮರದನು ತರಳನಿವನೆನುತಾ ( ಕೆ.4೦5) ಎಂಬ ಉಲ್ಲೇಖಗಳನ್ನು

ನೋಡಬಹುದಾಗಿದೆ. ಕೆಲವು ಲಿಪಿಕಾರರು ಜನತೆಯಲ್ಲಿದ್ದ ನಂಬಿಕೆ ಶ್ರದ್ಧೆಗಳ ಹಿನ್ನೆಲೆಯಲ್ಲಿ ತಮ್ಮ ಮೇಲೆ ಬರಬಹುದಾದ ದೋಷದ ಆರೋಪಗಳನ್ನು ನಿವಾರಿಸಿಕೊಳ್ಳಲು ಯತ್ನಿಸಿರುವುದು ಕಂಡು ಬರುತ್ತದೆ.ಇಲ್ಲಿಯ ಹಸ್ತಪ್ರತಿ ಸಂಗ್ರಹಾಲಯದಲ್ಲಿರುವ ಹಸ್ತಪ್ರತಿಗಳು ಮುದ್ದಾದ ಅಕ್ಷರಗಳ, ಸೂಕ್ಷ್ಮಾತಿಸೂಕ್ಷ್ಮ ಅಕ್ಷರಗಳ ಹಸ್ತಪ್ರತಿಗಳಲ್ಲದೆ, ಕಾವ್ಯದಲ್ಲಿ ನಿರೂಪಿತವಾದ ಘಟನೆಗಳನ್ನು ಚಾಕ್ಷುಷಗೊಳಿಸುವ ಬಣ್ಣ ಬಣ್ಣದ ಚಿತ್ರವನ್ನೊಳಗೊಂಡ ಹಸ್ತಪ್ರತಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತವೆ. ಹಸ್ತಪ್ರತಿಗಳ ರಕ್ಷಾಫಲಕ, ಒಳಗಿನ ಪುಟ ಮತ್ತು ಮುಖಪುಟಗಳ ಮೇಲೆ ಬರೆದ ಚಿತ್ರಗಳು, ಉದ್ಧರಣೆಯ ಬರವಣಿಗೆಗಳ ಪಟಲಗಳು  ಇಲ್ಲಿಯ ಹಸ್ತಪ್ರತಿ ಭಂಡಾರದ ಆಕರ್ಷಣೆಯನ್ನು ಹೆಚ್ಚಿಸಿವೆ. ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿಯ ಹಸ್ತಪ್ರತಿಯೊಂದರ ಎರಡು ಗರಿಗಳಲ್ಲಿ ಕೊರೆದಿರುವ ಗಣೇಶನ ಮೂರ್ತಿಯು ಅಪರೂಪವಾಗಿದೆ. ವೃತ್ತಾಕಾರದಲ್ಲಿ ಬಿಡಿಸಿರುವ ಚಿತ್ತಾರಗಳು ಅಪೂರ್ವವಾಗಿವೆ. ವೀರಶೈವ ಧರ್ಮಕ್ಕೆ ಸಂಬಂಧಿಸಿದ ಉದ್ಧರಣ ಪಟಲವೊಂದಿದ್ದು ಅದು ಸುಮಾರು ಒಂದು ಅಡಿ ಅಗಲ ಮತ್ತು ಮೂವತ್ತು ಅಡಿ ಉದ್ದವಿದೆ. ಸಕ ಶಾಲಿವಾಹನ 1789 ನೇ ಪ್ರವರ್ಧಮಾನ ನಕ್ಷತ್ರದಲ್ಲು ಬರದ್ದು ಎಂಬ ಕಾಲದ ಉಲ್ಲೇಖವೂ ಈ ಪಟಲದ ಮೇಲೆ ಇದೆ. ಇವುಗಳ ಜೊತೆಗೆ ಚಿತ್ರಕಾವಕ್ಕೆ ಸಂಬಂಧಪಟ್ಟಂತೆ ಒಂದು ಚಿತ್ರ ಪಟಲವಿದೆ. ಹಸ್ತಪ್ರತಿಯ ಕೆಲವು ಗರಿಗಳಲ್ಲಿ ದೇವಾಲಯದ ಚಿತ್ರವನ್ನು ಬಿಡಿಸಲಾಗಿದೆ. ಗರಿಗಳಲ್ಲಿ ಗರ್ಭಗುಡಿ ವಿನ್ಯಾಸ, ಗರುಡಗಂಬ ಮೊದಲಾದವುಗಳನ್ನು ಅಂಗುಲದ ಲೆಕ್ಕಾಚಾರದಲ್ಲಿ ಬಿಡಿಸಿರುವುದನ್ನು ಕಾಣಬಹುದಾಗಿದೆ. ಜೊತೆಗೆ  ಪದಬಂಧ, ಕಲ್ಲಚ್ಚಿನ ಹಾಗೂ ಕಾಗದದ ಪ್ರತಿಗಳಿವೆ. ಇಲ್ಲಿಯ ಹಸ್ತಪ್ರತಿ ಭಂಡಾರವೂ ವಿಶ್ವವಿದ್ಯಾಲಯಕ್ಕೆ ಆಗಮಿಸುವ ಸಂದರ್ಶಕರಿಗೆ ಪ್ರಮುಖ ಆಕರ್ಷಕ ಕೇಂದ್ರವೆನಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಕೆ.ಸಿದ್ದಪ್ಪನವರು ಇಲ್ಲಿಯ ಹಸ್ತಪ್ರತಿ ಸಂಗ್ರಹಾಲಯದ ಆಧುನೀಕರಣದ ಬಗೆಗೆ ಆಸಕ್ತಿ ವಹಿಸಿ ಸುಸಜ್ಜಿತವಾದ ಸಂಗ್ರಹಾಲಯವನ್ನಾಗಿಸಿದರು. ಇಲ್ಲಿಯ ಹಸ್ತಪ್ರತಿ ವಿಭಾಗವು ತಕ್ಕ ಮಟ್ಟಿಗೆ ಸುಸಜ್ಜಿತವಾಗಿದೆ. ಇಲ್ಲಿಯ ಹಸ್ತಪ್ರತಿಗಳನ್ನು ವಿಶೇಷ ತಂತ್ರಜ್ಞಾನದಿಂದ ತಯಾರಿಸಲಾದ ಸುಸಜ್ಜಿತವಾದ ಪಾರದರ್ಶಕವಾದ ಗಾಜು ಮತ್ತು ಮರದ ಕಪಾಟಿನಲ್ಲಿ  ಸಂಗ್ರಹಿಸಲಾಗಿದೆ.ಹಸ್ತಪ್ರತಿಗಳಿಗೆ ರಾಸಾಯನಿಕ ಚಿಕಿತ್ಸೆ ನೀಡುವ ವೈಜ್ಞಾನಿಕ ಸಾಧನವಾದ ಫ್ಯೂಮಿಗೇಷನ್ ಛೇಂಬರ್ (ಪ್ರದೂಮನ ಕಪಾಟು) ಇದೆ. ಜೊತೆಗೆ ಹಸ್ತಪ್ರತಿಗಳನ್ನು ಸಂರಕ್ಷಿಸಲು ಪಾರಂಪರಿಕ ಸಲಕರಣೆಗಳಾದ ಮಸಿ,ದಾರ, ಕೆಂಪು ಬಟ್ಟೆ, ಅರಿಸಿ ಕೊಂಬು ಇವುಗಳ ಜೊತೆಗೆ  ಆಧುನಿಕವಾದ ಸಿಟ್ರೆನೆಲ್ ಆಯಿಲ್, ಥೈಮೋಲ್, ಸಿಲಿಕಾನ್ ಜೆಲ್ ಗಳನ್ನು ಉಪಯೋಗಿಸಲಾಗಿದೆ.

  ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿ ವೈವಿಧ್ಯಮಯ  ಬರವಣಿಗೆಯ ಸಾಧನಗಳಾದ ಕಂಠಗಳು, ಮುಳ್ಳುಹಂದಿಯ  ಮುಳ್ಳುಗಳಿವೆ. ಕನ್ನಡ ಭಾಷೆಯಲ್ಲದೆ ಗ್ರಂಥ, ಅರವ, ತಿಗಳಾರಿ, ಮೋಡಿ, ನಾಗರಿ, ತಮಿಳು, ತೆಲುಗು ಇತ್ಯಾದಿ ಲಿಪಿಗಳ ಹಸ್ತಪ್ರತಿಗಳಿವೆ.  ಇತಿಹಾಸದ ಪುನರ್ರಚನೆಯ ಅಗತ್ಯ ಆಕರಗಳಾದ ದಾಖಲು ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದ ಕೆಲವು ದಾಖಲೆಗಳ ಸಂಗ್ರಹವನ್ನೂ ಕಾಣಬಹುದು. ಕವಲೇ ದುರ್ಗದ ವೀರಶೈವ ಮಠವು ತನ್ನಲ್ಲಿದ್ದ ಸುಮಾರು 7೦ ತಾಮ್ರ ಪಟಗಳು ಇಲ್ಲಿಯ ವಿಭಾಗಕ್ಕೆ ಕೊಡುಗೆಯಾಗಿ ನೀಡಿದ್ದು ಅವುಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ತಾಮ್ರ ಪಟದ ಗೊಂಚಲುಗಳು ಕೆಳದಿ ಅರಸರ ಕಾಲಕ್ಕೆ ಸೇರಿದುದಾಗಿವೆ.ಲೇಖನ ಸಾಮಗ್ರಿಗೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೋಕಿನ ಸಂತೆಕಲ್ಲಹಳ್ಳಿಯಲ್ಲಿ ದೊರೆತ ಸುಟ್ಟ ಮಣ್ಣಿನ ಮಡಕೆಯ ಚೂರುಗಳ ಮೇಲಿನಕ್ರಿ.ಶ. 8ನೇ ಶತಮಾನಕ್ಕೆ ಸೇರಿದ ಬರೆಹದ  ವಸ್ತುವೂ ಇದೆ. ವಿಜಯ ನಗರ ಅರಸರ ಕಾಲದ ಎರಡು ರಾಜಮುದ್ರೆಗಳು, ಮೈಸೂರು ಒಡೆಯರ  ಹಾಗೂ ಬ್ರಿಟೀಷರ ಮತ್ತು ಪೋರ್ಚ್‍ಗೀಸರ ಕಾಲದ ನಾಣ್ಯಗಳ ಸಂಗ್ರಹವೂ ಇದೆ. ಬೆಳಗುತ್ತಿ ಸಂಸ್ಥಾನದ ಮೂರು ಶ್ರೀಮುಖ ಪತ್ರಗಳನ್ನು ಹಾಗೂ ಹೊಸಹಳ್ಳಿ ಹೊಸಕೆರೆಯ ದುರಸ್ತಿಯ ಬಗೆಗೆ ಹೊರಡಿಸಿದ ಸನ್ನದು ಇದೆ. ಆನೆಗೊಂದಿ ಸಂಸ್ಥಾನಕ್ಕೆ ಸಂಬಂಧಿಸಿದ ಮೋಡಿಯಕ್ಷರಗಳ ಎರಡುಪತ್ರಗಳಿವೆ. ಕ್ರಿ.ಶ.1849ರ ಆಂಗ್ಲ ಪತ್ರಗಳಿವೆ. ಕೃಷ್ಣರಾಜ ಒಡೆಯರ ಕಾಲದ ನಿರೂಪವಿದೆ. ಜೊತೆಗೆ  ಕಡತಗಳು,  ನಾಮೆಗಳು ಹಾಗೂ ಕೈಫಿಯತ್ತುಗಳು ಇತ್ಯಾದಿ ದಾಖಲೆ ಸಾಹಿತ್ಯಕ್ಕೆ ಸಂಬಂಧಿಸಿದವುಗಳನ್ನು ಕಾಣಬಹುದು. ಇಲ್ಲಿಯ ಹಸ್ತಪ್ರತಿಗಳ  ಸಮಗ್ರ ವಿವರಗಳನ್ನೊಳಗೊಂಡ ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ ಸಂಪುಟ 1 ಅನ್ನು ಎಸ್.ಶಿವಣ್ಣನವರು ಸಂಪಾದಿಸಿದ್ದು ಸೂಚಿ ಸಾಹಿತ್ಯದಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಿದ್ಧಪಡಿಸಿದ ಸಂಪುಟವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗವು ಒಳಗೊಂಡಿರುವ ಹಸ್ತಪ್ರತಿಗಳ ವರ್ಣನಾತ್ಮಕ  ಸೂಚಿಯ ಮೊದಲ ಸಂಪುಟ ಇದು. ಇದರಲ್ಲಿ ಒಟ್ಟು 449 ಕೃತಿಗಳನ್ನು ಕುರಿತ ವಿವರವಾದ ಮಾಹಿತಿ ಇದೆ. ಈ ಸೂಚಿಯು ಕೃತಿಯ ಬಗೆಗೆ, ಹಸ್ತಪ್ರತಿಯ ಬಗೆಗೆ ಎಲ್ಲಾ ವಿವರಗಳನ್ನು ತಿಳಿಸಿಕೊಡುತ್ತದೆ. ಸೂಚಿಗಿಂತ ವಿವರಣಾತ್ಮಕ ಸೂಚಿ ಹೆಚ್ಚು ಪ್ರಯೋಜನಕಾರಿ. ವರ್ಣನಾತ್ಮಕ ಸೂಚಿಯು ಕರ್ತೃ, ಕೃತಿ, ಕಾಲ ಭಾಷೆ, ಲಿಪಿ, ಪತ್ರಸಂಖ್ಯೆ, ಪತ್ರದ ಒಂದು ಮಗ್ಗುಲಲ್ಲಿ ಇರುವ ಪಂಕ್ತಿಗಳು, ಪ್ರತಿ ಪಂಕ್ತಿಯಲ್ಲಿರುವ ಸರಾಸರಿ ಅಕ್ಷರಗಳು. ಸಮಗ್ರ ಅಥವಾ ಅಸಮಗ್ರ, ಪ್ರತಿಯ ಕಾಲ, ಲುಪ್ತ ಅಥವಾ ಹರಿದ ಹಾಳೆಗಳ ವಿವರ. ಹಸ್ತಪ್ರತಿಯ ವಸ್ತುವಿಷಯ, ಶುದ್ಧಾ ಶುದ್ಧ, ಪ್ರತಿಮಾಡಿದವರ ಹೆಸರು, ಹಸ್ತ ಪ್ರತಿ ದೊರೆತ ಸ್ಥಳ, ಕೃತಿಯ ಆದಿ ಅಂತ್ಯ ಭಾಗಗಳಲ್ಲಿಯ ಕವಿಯ ಹೆಸರು ಕಾಲ, ಪ್ರತಿಕಾರರ ಹೆಸರು ಬರುವ ಭಾಗಗಳು ಹಾಗೂ ಕೃತಿಯ ವಿಶೇಷ ಇತ್ಯಾದಿ ಹಸ್ತಪ್ರತಿಗೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಒಳಗೊಂಡಿದೆ. ಬೆ.ವಿ.ವಿ. ಪ್ರಸಾರಾಂಗದ ಮೂಲಕ  ಪ್ರಕಟಗೊಂಡಿರುವ ಈ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿಯೊಂದು ಇದುವರೆಗೂ ಈ ಕ್ಷೇತ್ರದಲ್ಲಿ ಪ್ರಕಟವಾಗಿರುವ ವರ್ಣನಾತ್ಮಕ ಸೂಚಿಗಳ ಶಾಸ್ತ್ರೀಯ ಕ್ರಮವನ್ನು ಅನುಸರಿಸಿದೆ. ಇದರ ಪ್ರಕಟಣೆಯಿಂದ,  ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿರುವ ಕೃತಿಗಳ ಸ್ವರೂಪ ಹಾಗೂ ವಿವರಗಳು, ಈ ಬಗೆಯ ಸಂಪಾದನಾ ಕಾರ್ಯವನ್ನು ಕೈಗೊಳ್ಳವವರ ಪಾಲಿಗೆ ಉಪಯುಕ್ತವಾದ ಮಾಹಿತಿಗಳನ್ನು ಒದಗಿಸಿದಂತಾಗುತ್ತದೆ. ಹಾಗೆಯೇ ಹಸ್ತಪ್ರತಿಗಳನ್ನು ಸರಾಗವಾಗಿ ಓದಿ ಸೂಚಿಮಾಡುವಲ್ಲಿ ಕವಿಕಾಲ ಕೃತಿ ವಿಚಾರವಾಗಿ ಹಸ್ತಪ್ರತಿಗಳಲ್ಲಿರುವ ನಿಖರಮಾಹಿತಿ ಒದಗಿಸುವಲ್ಲಿ ಪರಿಣತಿಯನ್ನು ಪಡೆದಿದ್ದ ಎಸ್.ಶಿವಣ್ಣನವರೇ ಬೆಂಗಳೂರು ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಹಸ್ತಪ್ರತಿಗಳ ವಿವರಗಳನ್ನೊಳಗೊಂಡ ಎರಡನೇ ವರ್ಣನಾತ್ಮಕ ಸೂಚಿ ಸಂಪುಟವನ್ನು  ಸಂಪಾದಿಸಿದ್ದರೂ  ಬೆಂ.ವಿ.ವಿ. ಪ್ರಸಾರಾಂಗದ ಅಜಾಗರೂಕತೆಯಿಂದಾಗಿ  ಕಳೆದು ಹೋಗಿದ್ದು ಪ್ರಕಟಗೊಳ್ಳದಂತಾಯಿತು.  ಈ ಎರಡನೆಯ ವರ್ಣನಾತ್ಮಕ ಸೂಚಿ ಸಂಪುಟವು ಪ್ರಕಟಗೊಂಡಿದ್ದರೇ ಇಲ್ಲಿಯ ಹಸ್ತಪ್ರತಿಗಳ ವೈವಿಧ್ಯತೆಯ ಪೂರ್ಣ ಮಾಹಿತಿಯು  ಆಸಕ್ತ ವಿದ್ವಾಂಸರಿಗೆ ಲಭ್ಯವಾಗುತ್ತಿತ್ತು.

ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿಯ ಹಸ್ತಪ್ರತಿಗಳನ್ನುಪಯೋಗಿಸಿಕೊಂಡು ಸಂಪಾದನೆಗೊಂಡ ಕೃತಿಗಳು:

   ಪ್ರಾಚೀನ ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಸಂಪಾದನೆ ಮತ್ತು ಪ್ರಕಟಣೆ ಇವುಗಳು ವಿಶ್ವವಿದ್ಯಾಲಯದಂಥ ಸಂಸ್ಥೆಗಳ ಬಹುಮುಖ್ಯವಾದ ಸಾಂಸ್ಕೃತಿಕ ಜವಾಬ್ದಾರಿಗಳಲ್ಲಿ ಒಂದು. ಈಗಾಗಲೇ ಇಂಥ ಹಸ್ತಪ್ರತಿಗಳ ನೆರೆವಿನಿಂದ ಎಷ್ಟೋ ಕೃತಿಗಳು ಪ್ರಕಟವಾಗಿದ್ದರೂ,  ಅಪ್ರಕಟಿತವಾಗಿರುವ ಕೃತಿಗಳು ಇನ್ನೂ ಎಷ್ಟೋ ಇರಬಹುದು. ಮತ್ತು ಈಗಾಗಲೇ ಪ್ರಕಟವಾಗಿರುವ ಕೃತಿಗಳು ಮರು ಸಂಪಾದನೆಯ ಕಾರ‍್ಯವೂ ಹೀಗೆ ದೊರೆಯಬಹುದಾದ ಹಸ್ತಪ್ರತಿಗಳನ್ನು ಅವಲಂಬಿಸಿದೆ. ಕನ್ನಡ ಅಧ್ಯಯನ ಕೇಂದ್ರದ ಅಧ್ಯಾಪಕರಿಂದಲೇ ನಡೆದ ಸಂಪಾದನಾ ಕಾರ್ಯದ ಪರಿಣಾಮವಾಗಿ ಪ್ರಕಟವಾಗಿರುವ ಕೃತಿಗಳ ಸಂಖ್ಯೆ  ಸುಮಾರು ಹತ್ತನ್ನು ದಾಟುತ್ತದೆ.  ಎಸ್.ಶಿವಣ್ಣನವರೇ ಇಲ್ಲಿಯ ಹಸ್ತಪ್ರತಿಗಳನ್ನುಪಯೋಗಿಸಿಕೊಂಡು ಹೆಚ್ಚಿನ ಕೃತಿಗಳನ್ನು ಸಂಪಾದಿಸಿದ್ದಾರೆ.

    ಬೆ.ವಿ.ವಿ. ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಕ್ರಮಾಂಕ 1308ನೇ ಓಲೆ ಪ್ರತಿಯನ್ನು ಆಧರಿಸಿ ಚನ್ನ ಬಸವಣ್ಣನವರ ವಚನಗಳು ಕೃತಿಯು ಸಂಪಾದಿಸಲ್ಪಟ್ಟಿದೆ. ಚನ್ನಬಸವಣ್ಣನವರ ಹೊಸದಾಗಿ ದೊರೆತ 46 ವಚನಗಳನ್ನು ಒಳಗೊಂಡಿರುವುದು ಈ ಸಂಪಾದನ ಕೃತಿಯ ವಿಶೇಷವಾಗಿದೆ.  ಬೆ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಕ್ರಮಾಂಕ ಕೆ. 1032/3 ಹಾಗೂ ವಿವಿಧ ಆಕರಗಳನ್ನು ಬಳಸಿ ಶಂಕರದೇವರ ಸ್ವರವಚನಗಳು ಕೃತಿಯನ್ನು  ಪರಿಷ್ಕರಿಸಿ ಸಂಪಾದಿಸಲಾಗಿದೆ. 124 ಸ್ವರವಚನಗಳಿವೆ. ಶಂಕರದೇವರು ನಿರೂಪಿಸಿದ ಕಂದ ಈ ಅಪ್ರಕಟಿತ ಕೃತಿಯನ್ನು ಮೊದಲಬಾರಿಗೆ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಕ್ರಮಾಂಕ ಕೆ 1388 ಹಸ್ತಪ್ರತಿಯನ್ನು ಆಧರಿಸಿ ಸಂಪಾದಿಸಲಾಗಿದೆ.122 ಕಂದಪದ್ಯಗಳು ಹಾಗೂ ಅದರ ಟೀಕೆಯನ್ನು ಒಳಗೊಂಡಿದೆ. ಇಲ್ಲಿಯ ಹಸ್ತಪ್ರತಿ ಸಂಗ್ರಹಾಲಯದಲ್ಲಿಯ ‘ಪ್ರಭುದೇಶಿಕ ಸಂಕಲಿತ ಮೋಕ್ಷದರ್ಶನ ಮಹಾ ಸಂಗ್ರಹ’ ಹಸ್ತಪ್ರತಿಯಲ್ಲಿಯ ಅಕ್ಕನ ಎರಡು ನೂತನ ವಚನಗಳನ್ನು ಗುರುತಿಸಿ ಒಟ್ಟು ಒಂಬತ್ತು ವಚನಗಳನ್ನು ಸೆಪ್ಟೆಂಬರ್ 15, 2002ರ ಉದಯವಾಣಿ ಪತ್ರಿಕೆಯಲ್ಲಿ ಎಸ್.ಶಿವಣ್ಣನವರು ಪ್ರಕಟಿಸಿದ್ದಾರೆ. ಇದರಿಂದಾಗಿ ಈಗ ಲಭ್ಯವಿರುವ ಅಕ್ಕಮಹಾದೇವಿಯ ಒಟ್ಟು ವಚನಗಳ ಸಂಖೆ 443 ಕ್ಕೆ ಏರಿದೆ. ಅದೇ ರೀತಿ ಬೆಂ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಹಸ್ತಪ್ರತಿ ಸಂಖ್ಯೆ ಕೆ.1022ರಲ್ಲಿ ಭಕ್ತಿ ಭಂಡಾರಿ ಬಸವಣ್ಣನವರ ಪತ್ನಿ ನೀಲಮ್ಮಳ ಹೊಸ ವಚನವನ್ನು ಶೋಧಗೊಂಡು ಪ್ರಕಟನೆಗೊಂಡಿದೆ. ಬೆ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಓಲೆಗರಿ ಸಂಖ್ಯೆ 49 ಹಾಗೂ ಓಲೆಪ್ರತಿ ಸಂಖ್ಯೆ 1378 (ಗರಿ.72-3) ಗಳನ್ನು ಆಧರಿಸಿ ಅಂಬಿಗರ ಚೌಡಯ್ಯನ 8 ಅಪ್ರಕಟಿತ ವಚನಗಳು ಶಿವಣ್ನನವರಿಂದ  ಶೋಧಗೊಂಡು  ಬೆಳಕಿಗೆ ಬಂದಿವೆ. ಬೆಂ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಹಸ್ತಪ್ರತಿ ಸಂಖ್ಯೆ ಕೆ.227 ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ವಚನ ವಾಜ್ಞಯ ಭಂಡಾರದ ಹಸ್ತಪ್ರತಿ ಸಂಖ್ಯೆ: 11511ನೇ ಗರಿ ಹಾಗೂ ಬೆಂ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಹಸ್ತಪ್ರತಿಯಲ್ಲಿಯ ಶಾಂತದೇವರ ಷಟ್ಪ್ರಕಾರ ಸಂಗ್ರಹ ಬಿ.1458 ಹಸ್ತಪ್ರತಿಯಲ್ಲಿಯ ಇಲ್ಲಿಯವರೆಗೂ ಬೆಳಕು ಕಾಣದ ಜೇಡರ ದಾಸಿಮಯ್ಯನ ಒಟ್ಟು 1೩ ಅಪ್ರಕಟಿತ ವಚನಗಳು ಶಿವಣ್ಣನವರ ಮೂಲಕ  ಪತ್ತೆಗೊಂಡು ಪ್ರಕಟವಾಗಿವೆ. ಈ ಮಹತ್ತರ ಶೋಧನೆಯಿಂದಾಗಿ ಆದ್ಯವಚನಕಾರ ಜೇಡರ ದಾಸಿಮಯ್ಯನ ಒಟ್ಟು ವಚನಗಳ ಸಂಖ್ಯೆ ಇಂದು 23೫ ಕ್ಕೆ ತಲುಪಿದೆ.

   ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಿಂದ ಪ್ರಕಟವಾಗಿರುವ ಸಮಗ್ರ ವಚನ ಸಂಪುಟ 10 (ಸಂಕೀರ್ಣ ವಚನ ಸಂಪುಟ 6) ಕೃತಿಯನ್ನು ದಿವಂಗತ ಎಸ್.ಶಿವಣ್ಣನವರು  ಸಂಪಾದಿಸಿದ್ದು ಈ ಸಂಪುಟದಲ್ಲಿ ಬಸವೋತ್ತರ ಯುಗದ ಐದು ಜನರ ವಚನಗಳನ್ನು ಈಗಾಗಲೇ ಮೊದಲು ಪ್ರಕಟವಾಗಿದ್ದರೂ ಹೊಸ ಓಲೆ ಪ್ರತಿಗಳನ್ನು ಆಧರಿಸಿ ಪರಿಶೀಲಿಸಿ ಪರಿಷ್ಕರಿಸಿರುವುದು ಗಮನೀಯವಾದುದು.  ಇಲ್ಲಿಯ ಹಸ್ತಪ್ರತಿ ವಿಭಾಗದ 3 ಓಲೆಯ ಪ್ರತಿಗಳನ್ನುಪಯೋಗಿಸಿಕೊಂಡು ತೋಂಟದ ಸಿದ್ಧಲಿಂಗಯತಿಗಳ 701 ವಚನಗಳನ್ನು, ಮೂರು ಓಲೆ ಮತ್ತು ಕಾಗದದ ಪ್ರತಿಗಳನ್ನು ಉಪಯೋಗಿಸಿಕೊಂಡು ಘನಲಿಂಗಿ ದೇವರ 66 ವಚನಗಳನ್ನು ಸಂಪಾದಿಸಿದ್ದಾರೆ. ಘನಲಿಂಗಿ ದೇವರ 19 ವಚನಗಳ ಪಾಠವನ್ನು ಪರಿಷ್ಕರಿಸಿ  ಕೊಡಲಾಗಿದೆ. ಮೂರು ಓಲೆ ಪ್ರತಿಗಳನ್ನುಪಯೋಗಿಸಿ ಸ್ವತಂತ್ರ ಸಿದ್ಧಲಿಂಗರ 43೦ ವಚನಗಳನ್ನು ಪರಿಷ್ಕರಿಸಿದ್ದಾರೆ. ಇಮ್ಮಡಿ ಗುರುಸಿದ್ದ ಸ್ವಾಮಿಗಳ 2೦9 ವಚನಗಳನ್ನು ಇಲ್ಲಿಯ ಓಲೆಪ್ರತಿಯನ್ನುಪಯೋಗಿಸಿ ಪರಿಷ್ಕರಿಸಲಾಗಿದೆ. ಒಟ್ಟು 1424 ವಚನಗಳನ್ನು ಹಿಂದೆ ಪ್ರಕಟವಾಗಿದ್ದರೂ ಮತ್ತೊಮ್ಮೆ ಇಲ್ಲಿಯ ಹಸ್ತಪ್ರತಿಗಳನ್ನುಪಯೋಗಿಸಿ ಹಲವೆಡೆ ವಚನಗಳ ಪಾಠವನ್ನು ಪರಿಷ್ಕರಿಸಿ ಪುನರ್ರಚಿಸಿರುವುದು ಗಮನಿಸ ಬೇಕಾದ ಸಂಗತಿಯಾಗಿದೆ. ವಚನ ಸಾಹಿತ್ಯವನ್ನು ಅಧ್ಯಯನ ಮಾಡುವವರು ಅವಶ್ಯಕವಾಗಿ ಗುರುತಿಸಬೇಕಾದ ಪುಸ್ತಕವಾಗಿದೆ.

   ಕರ್ನಾಟಕ ಕವಿ ಚರಿತೆಯಲ್ಲಿ ಉಕ್ತವಾಗದೆ ಇರುವ ಐದುಸಂಧಿಗಳ ಕೆಂಬಾವಿ ಭೋಗಣ್ಣನ ಸಾಂಗತ್ಯ ಕೃತಿಯು ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಕ್ರಮಾಂಕ ಕೆ.222 ಗರಿ-1-24 ಏಕೈಕ ತಾಳೆಯೋಲೆಯನ್ನು  ಉಪಯೋಗಿಸಿಕೊಂಡು ಎಸ್. ಶಿವಣ್ಣ ಮತ್ತು ಎಸ್. ವಿದ್ಯಾಶಂಕರವರು ಸಂಪಾದಿಸಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ  ಪ್ರಕಟಗೊಂಡಿದೆ. ವಿದ್ವತ್ಪೂರ್ಣ ಮುನ್ನುಡಿ ಹಾಗೂ ಉಪಯುಕ್ತವಾದ ಅನುಬಂಧ ಈ ಸಂಪಾದನಾ ಕೃತಿಯಲ್ಲಿದೆ.

    ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿಯ ಹಸ್ತಪ್ರತಿಗಳನ್ನುಪಯೋಗಿಸಿ ಚಂದ್ರಸಾಗರ ವರ್ಣಿಯ ಅಪ್ರಕಟಿತ ಹದಿನೆಂಟು ಕೃತಿಗಳನ್ನು  ಎಸ್.ಶಿವಣ್ಣ ಮತ್ತು ಹಂಪನಾ ಅವರು ಶಾಸ್ತ್ರೀಯವಾಗಿ ಸಂಪಾದಿಸಿದ್ದಾರೆ. ಹಸ್ತ ಪ್ರತಿವಿಭಾಗದ ಕೆ 1344-1 ಹಸ್ತಪ್ರತಿಯನ್ನುಪಯೋಗಿಸಿ ಕಾಮನ ಪದ್ಯ ಕೃತಿ, ಬಿ. 1೦85-2 ಹಸ್ತಪ್ರತಿಯನ್ನುಪಯೋಗಿಸಿ ಚಾವುಂಡರಾಯನ ಯಾಗಕೃತಿ, ಕೆ. 1271-1 ಹಸ್ತಪ್ರತಿಯನ್ನುಪಯೋಗಿಸಿ ಜೀವದಯಾಷ್ಟಮಿ ನೋಂಪಿಕೃತಿ, ಬಿ.548-2 ಹಸ್ತಪ್ರತಿಯನ್ನುಪಯೋಗಿಸಿ ಕೃಷ್ಣನಪ್ರತಿಷ್ಠೆಚರಿತೆವರ್ಣನೆಕೃತಿ, ಕೆ. 121೯-1 ಹಸ್ತಪ್ರತಿಯನ್ನುಪಯೋಗಿಸಿ ಬೆಳಗುಳದ ಮಸ್ತಾಭಿಷೇಕ ಕೃತಿ,ಬಿ. 1೦853 ಹಸ್ತ ಪ್ರತಿಯನ್ನುಪಯೋಗಿಸಿ ಕರ್ತರು ಪೂಜೆ ಮಾಡಿಸಿದ್ದು ಕೃತಿ, ಬಿ. 1೦85-4 ಹಸ್ತಪ್ರತಿಯನ್ನುಪಯೋಗಿಸಿ ಜಿನ ಸೇನಾಚಾರ್ಯರು ಪೂಜೆ ಮಾಡಿಸಿದ್ದು ಕೃತಿ, ಬಿ. 1೦85-5 ಹಸ್ತ ಪ್ರತಿಯನ್ನುಪಯೋಗಿಸಿ ಡಿಳಿಸುರಿ ತಾಳನ ಗೆದ್ದದ್ದು ಕೃತಿ, ಕೆ. 12ಂಂ-4 ಹಸ್ತಪ್ರತಿಯನ್ನುಪಯೋಗಿಸಿ ಬೆಟ್ಟವರ್ಧನರಾಯ ಚರಿತೆ, ಬಿ. 1ಂ85-6 ಹಸ್ತಪ್ರತಿಯನ್ನುಪಯೋಗಿಸಿ ವಸಂತತಿಲಕ ಚರಿತೆ ಕೃತಿ, ಕೆ. 12ಂಂ-4 ಹಸ್ತಪ್ರತಿಯನ್ನು ಉಪಯೋಗಿಸಿ ಹಿಮಶೀತಳರಾಯನ ಕಥೆ ಕೃತಿ, ಬಿ.548-4 ಹಸ್ತ ಪ್ರತಿಯನ್ನುಪಯೋಗಿಸಿ ಶಾಲಿವಾಹನ ಶ್ರವಣಪೈಕ ಚರಿತೆ ವರ್ಣನೆ ಕೃತಿ, ಬಿ. 548-3 ಹಸ್ತ ಪ್ರತಿಯನ್ನುಪಯೋಗಿಸಿ ವಸಿಷ್ಠ ಬ್ರಾಹ್ಮಣರಿಗೆ ಪಂಚಾಂಗ ಉಪದೇಶ ಮಾಡಿದ್ದು ಕೃತಿ, ಬಿ. 548-7 ಹಸ್ತಪ್ರತಿಯನ್ನುಪಯೋಗಿಸಿ ಆಗಮ ದೋಗಟೆ ಪದ್ಯ ಕೃತಿ, ಕೆ. 121ಂ-4 ಹಸ್ತ ಪ್ರತಿಯನ್ನುಪಯೋಗಿಸಿ ತ್ರಿಪನ್ನ ಕ್ರಿಯೆ ಕರ್ಮಕೃತಿ, ಬಿ. 492-13 ಹಸ್ತಪ್ರತಿಯನ್ನುಪಯೋಗಿಸಿ ಪಾರ್ಶ್ವನಾಥನ ಪಂಚ ಕಲ್ಯಾಣ ಕೃತಿ. ಕೆ. 1373 ಹಸ್ತಪ್ರತಿಯನ್ನುಪಯೋಗಿಸಿ ಸಂಸಾರದ ಸುಖ ಕಷ್ಟ, ಕೆ. 1375.5 ಹಸ್ತಪ್ರತಿಯನ್ನುಪಯೋಗಿಸಿ ಚಂದ್ರಸಾಗರರ ಸ್ವಪ್ನ ಇತ್ಯಾದಿಕೃತಿಗಳನ್ನು ಏಕೈಕ ಹಸ್ತಪ್ರತಿಗಳನ್ನುಪಯೋಗಿಸಿ ಸಂಪಾದಿಸಿದ್ದಾರೆ. ಸುದೀರ್ಘ ಪ್ರಸ್ತಾವನೆ ಈ ಕೃತಿಯ ವೈಶಿಷ್ಟ್ಯವಾಗಿದೆ.

ಎಸ್.ಶಿವಣ್ಣನವರು ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿಯ ಬಿ.1479 ಸಂಖ್ಯೆಯ ಪತ್ರ,ಕೆ.1253 ನೇ ಸಂಖ್ಯೆಯ ಹಾಗೂ ಓ 1714/19 ನೇ ಸಂಖ್ಯೆಯ ಪತ್ರಗಳನ್ನುಪಯೋಗಿಸಿಕೊಂಡು ಮೂರು ಅಪ್ರಕಟಿತ ಸ್ವರ ವಚನಗಳನ್ನು ಸಂಪಾದಿಸಿ ಕರ್ನಾಟಕ ಲೋಚನ ಪತ್ರಿಕೆಯಲ್ಲಿ( ಸಂ.3, ಸಂ.2) ಪ್ರಕಟಿಸಿದ್ದಾರೆ.ಇಲ್ಲಿಯ ಕ್ರಮಾಂಕ ಬಿ.1167 ( ಹಾಳೆ 45-52)ರ ಕಾಗದ ಪ್ರತಿಯನ್ನು ಆಧರಿಸಿ ತ್ರಿಭುವನ ತಾತನ ಪಗಲ್ಚೋಳ ರಗಳೆಯನ್ನು ಎಸ್.ಶಿವಣ್ಣನವರೇ ಸಂಪಾದಿಸಿ ಪ್ರಕಟಿಸಿದ್ದಾರೆ.

 3೦ ಕಂದಗಳಲ್ಲಿನ ಶಬ್ದ ರತ್ನಾಕರ ಈ ಲಘು ಕೃತಿಯ ವಸ್ತು ಪದಗಳಿಗಿರುವ ನಾನಾರ್ಥಗಳನ್ನು ತಿಳಿಸುವುದೇ ಆಗಿದೆ. ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿಯನ್ನುಪಯೋಗಿಸಿ ಸಂಪಾದಿಸಲಾಗಿದೆ. ಶೃಂಗಾರಮ್ಮ ವಿರಚಿತ ಸಾಂಗತ್ಯ ರೂಪದಲ್ಲಿರುವ ಪದ್ಮಿನಿ ಪರಿಣಯ ಅಪ್ರಕಟಿತ ಕೃತಿಯನ್ನು ಬೆ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಬ.ಪ್ರತಿ ಕ್ರಮಾಂಕ ಕೆ. 16೦3/2/ಗರಿ-1-7೦ ಓಲೆ ಪ್ರತಿಯನ್ನು ಆಧರಿಸಿ ಸಂಪಾದಿಸಲಾಗಿದೆ. ಈ ಕೃತಿಯ ವಸ್ತು ವೆಂಕಟೇಶ್ವರ ಪದ್ಮಿನಿಯರ ವಿವಾಹ ವರ್ಣನೆಯಾಗಿದೆ.

  ಸರ್ಪಭೂಷಣ ಶಿವಯೋಗಿಗಳ ಕೈವಲ್ಯ ಕಲ್ಪವಲ್ಲರಿ ಕೃತಿಯನ್ನು ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಕ್ರಮಾಂಕ ಬಿ. 147೦/1 ರ ಕಾಗದದ ಪ್ರತಿಯನ್ನು ಆಧರಿಸಿ ಸಂಪಾದಿಸಿದ್ದಾರೆ. ಈ ಕಾಗದದ ಪ್ರತಿಯ ಅಂತ್ಯದಲ್ಲಿಯ ಪುಷ್ಟಿಕೆಯಲ್ಲಿ ಈ ಕೃತಿ ಲಿಖಿತವಾದ ಕಾಲದ ಉಲ್ಲೇಖ ಇರುವುದು ಗಮನೀಯ. 76 ಹಾಡುಗಳನ್ನು ಒಳಗೊಂಡಿದೆ.

ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿಯ ಏಕೈಕ ಹಸ್ತಪ್ರತಿಯನ್ನು ಆಧರಿಸಿ ಹಂಪನಾ ಅವರು ಸುಮಾರು 15೦೦ ರಲ್ಲಿದ್ದ ಕವಿ ಸಾಳ್ವನಿಂದ ರಚಿತವಾದ 16 ಪರ್ವಗಳನ್ನುಳ್ಳ  ಸಾಳ್ವಭಾರತ ಕೃತಿಯನ್ನು  ಸಂಪಾದಿಸಿದ್ದು ಬೆ.ವಿ.ವಿ.ಯ ಪ್ರಸಾರಾಂಗದಿಂದ 1976 ರಲ್ಲಿ ಪ್ರಕಟಗೊಂಡಿದೆ.

 ಅದೇರೀತಿ ಇಲ್ಲಿಯ ಹಸ್ತಪ್ರತಿ ವಿಭಾಗದಲ್ಲಿಯ ಏಕೈಕ ಹಸ್ತಪ್ರತಿಯನ್ನು ಆಧರಿಸಿ ಹಂಪನಾ ಅವರು ಸುಮಾರು 18೦೦ ರಲ್ಲಿದ್ದ ಕವಿ ಬೊಮ್ಮಣ್ಣನಿಂದ ರಚಿತವಾದ  ನಾಗಕುಮಾರ ಷಟ್ಪದಿಯ ಕೃತಿಯನ್ನು ಸಂಪಾದಿಸಿದ್ದು ಬೆ.ವಿ.ವಿ.ಯ ಪ್ರಸಾರಾಂಗದಿಂದ 1977 ರಲ್ಲಿ ಪ್ರಕಟಗೊಂಡಿದೆ.

  ಸುವರ್ಣಕರ್ನಾಟಕ ಅಂಗವಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಗಾಗಿ ಸರ್ಕಾರ ಒದಗಿಸಿರುವ ಅನುದಾನದಡಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ತನ್ನ ಹಸ್ತಪ್ರತಿ ವಿಭಾಗದಲ್ಲಿಯ  ಉಪೇಕ್ಷಿತ ಹಾಗೂ ಅಪ್ರಕಟಿತ  ಹಸ್ತಪ್ರತಿಗಳನ್ನು ಗುರುತಿಸಿ, ಅವುಗಳನ್ನು ಸಂಪಾದಿಸಿ ಪ್ರಕಟಿಸುವ ಮಹತ್ತರವಾದ ಕಾರ್ಯವನ್ನು ಪ್ರಾರಂಭಿಸಿರುವುದು ಆಶಾದಾಯಕ ಸಂಗತಿಯಾಗಿದೆ.  ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿರುವ ಅಲಕ್ಷಿತ ಅಪ್ರಕಟಿತ ಕೃತಿಗಳ ಹಸ್ತಪ್ರತಿಗಳನ್ನು ಪ್ರತಿಮಾಡಿಸಿ ಪ್ರಕಟಿಸುವ ಸುವರ್ಣ ಅವಕಾಶವೊಂದನ್ನು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವ ಹಿನ್ನೆಲೆಯಲ್ಲಿ ಕನ್ನಡ ಭಾಷಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಕರ್ನಾಟಕ ಸರ್ಕಾರವು ಉದಾರವಾಗಿ ಹಣ ನೀಡಿ ಅವಕಾಶ ಕಲ್ಪಿಸಿಕೊಟ್ಟಿದ್ದಿತು. ಅದರ ಫಲವಾಗಿ ೨೦೧೩-೧೪ ರಲ್ಲಿ  ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರೂ ಈ ಯೋಜನೆಯ ಪ್ರಧಾನ ಸಂಪಾದಕರೂ ಆದ ಸಿ.ಬಿ.ಹೊನ್ನುಸಿದ್ಧಾರ್ಥ ಅವರ ಪ್ರಧಾನ ಸಂಪಾದಕತ್ವದಲ್ಲಿ ಕನ್ನಡ ಅಧ್ಯಯನ ಕೇಂದ್ರದ  ಅಧ್ಯಾಪಕರುಗಳು ಹಸ್ತಪ್ರತಿ ವಿಭಾಗದಲ್ಲಿರುವ ಅಲಕ್ಷಿತ ಅಪ್ರಕಟಿತ ಕೃತಿಗಳ ಸಂಪಾದಿಸಿದ್ದು  ಆ ಕೃತಿಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ಪ್ರಸಾರಾಂಗದ ಮೂಲಕ ೨೦೧೪ ರಲ್ಲಿ ಪ್ರಕಟಿಸಲಾಗಿದೆ. ಅವುಗಳೆಂದರೆ  ಕ್ರಿಸ್ತಶಕ 1500 ರಲ್ಲಿದ್ದ ಗುರು ಶಾಂತರಾಮನ ರಾಮನಾಥ ಶತಕ ಮತ್ತು ಇತರ ಪುಸ್ತಕಗಳು, ಉರಿಲಿಂಗ ಪೆದ್ದಯ್ಯನವರ ಕಥೆ, ಬೊಮ್ಮ ಕವಿಯ ವೈದ್ಯಸಾರ ಸಂಗ್ರಹ ಬಸವಶತಕ, ಶಿವಯೋಗಿ ಸೋಮೇಶ ಕವಿಯ ಅರವತ್ತು ಮೂವರ ಸಾಂಗತ್ಯ, 1600 ರ ಅಣ್ಣಾಜಿ ಕವಿಯ ಸೌಂದರ ವಿಳಾಸ, ತಿಳಕೂರ ಪುರದ ಸೋಮದೇವನ ಚತುರಾಚಾರ್ಯ ಪ್ರಬಂಧ, ಬಸವ ಕವಿಯ ಸಿದ್ದಲಿಂಗ ಕಾವ್ಯ (ಕಾಲ 1887), ಪದ್ಮರಾಜ ಕವಿಯ ಪೂಜ್ಯಪಾದ ಚರಿತೆ (ಕಾಲ 1769), ತಿಮ್ಮರಸ ಕವಿಯ ಕ್ಷೇತ್ರ ಗಣಿತ (ಕಾಲ 1700), ಅನಾಮಿಕ ಕವಿಯ ನಿಷ್ಕಲ ಲಿಂಗ ಚಿದಾನಂದ ಲೀಲೆ, ಅನಾಮಿಕ ಕವಿಯ ಸುಜ್ಞಾನ ಬೋಧೆ, ಅನಾಮಧೇಯ ಕವಿಯ ಷಟ್ಥಲವಲ್ಲಭ, ನನ್ನಯ್ಯ ಚಾರಿತ್ರ, ರಾಮೇಂದ್ರ ಕವಿಯ ಸೌಂದರ್ಯ ಕಥಾ ರತ್ನ, ಗಂಗೋತ್ಸವ ರಗಳೆ, ತತ್ವಾಭಿನಯ ನಿಘಂಟು, ತ್ರಿಭುವನ ಮೋಹಿನಿ ಕಾವ್ಯ, ಪ್ರಹ್ಲಾದ ಚರಿತೆ, ಉದ್ದರಣೆ ಪಟಲ, ನೀಲಕ್ರೀವ ಸ್ಮರಣೆಯ ಶೃಂಗಾರ ನಾಂದ್ಯ, ಆಚರಣೆ ಸಬಂಧ ಷಟ್ಪದಿ, ವಿಕ್ರಮ ವಿಳಾಸ ಸೊಬಗಿನ ಸೋನೆ, ಸುಕುಮಾರ ಚರಿತೆ, ಮೋಕ್ಷ ಚಿಂತಾರತ್ನ ಇತ್ಯಾದಿ ಅಲಕ್ಷಿತ ಕೃತಿಗಳು.

      ಗ್ರಂಥ ಸಂಪಾದನೆಗೆ ಸಂಬಂಧಿಸಿದ  ಈ ವಿಭಾಗದ ಮತ್ತೊಂದು ಮಹತ್ತರವಾದ ಕೊಡುಗೆ ಎಂದರೆ ಗ್ರಂಥ ಸಂಪಾದನ ಕಾರ್ಯ ಕೈಗೊಳ್ಳುವ ಇತರರಿಗೆ ಹಸ್ತಪ್ರತಿಗಳನ್ನು ಒದಗಿಸಿರುವುದು.  ಬೇರೆಡೆಯ ಸಂಪಾದಕರು ಇಲ್ಲಿಯ ಹಸ್ತಪ್ರತಿಗಳನ್ನುಪಯೋಗಿಸಿ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿರುವ ಕೃತಿಗಳ ಪ್ರಸ್ತಾವನೆಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಇಲ್ಲಿಂದ ಹಸ್ತಪ್ರತಿಗಳನ್ನು  ಪಡೆದುಕೊಂಡ ಬಗೆಗೆ ಕೃತಜ್ಞತಾಪೂರ್ವಕವಾಗಿ ಸ್ಮರಿಸಿರುವುದನ್ನು ಬಹುಮಟ್ಟಿಗೆ ಕಾಣಬಹುದಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಹಸ್ತಪ್ರತಿ ಭಂಡಾರದ ನೆರೆವಿನಿಂದ, ಗ್ರಂಥ ಸಂಪಾದನೆಯ ಹಾಗೂ ಕೃತಿ ಪ್ರಕಟಣೆಯ ಕಾರ‍್ಯ ನಡೆದಿದೆ. ಇಲ್ಲಿಂದ ಹಸ್ತಪ್ರತಿಗಳನ್ನು ಎರವಲಾಗಿ ಪಡೆದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಇದುವರೆಗೆ  ಸುಮಾರು ಮೂವತ್ತಕ್ಕೂ ಮೇಲ್ಪಟ್ಟು ಕೃತಿಗಳನ್ನು  ಪ್ರಕಟಿಸಿದೆ.  ಆದರೆ   ಮೈ.ವಿ.ವಿ.ಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿ ವಿಭಾಗಗಳಲ್ಲಿದ್ದ ಹಾಗೆ ಹಸ್ತಪ್ರತಿ  ತಜ್ಞರ ಪರಂಪರೆ ಬೆ.ವಿ.ವಿ.ಯ ಹಸ್ತಪ್ರತಿ ವಿಭಾಗದಲ್ಲಿ ದೊರೆಯದಿದ್ದದ್ದು ಬೆಳವಣಿಗೆಯ ದೃಷ್ಟಿಯಿಂದ ಒಂದು ಕೊರತೆಯೆಂದೇ ಹೇಳ ಬಹುದು. ಇಲ್ಲಿಯ ಹಸ್ತಪ್ರತಿ ವಿಭಾಗವು ಎಸ್. ಶಿವಣ್ಣನವರ  ನಿವೃತ್ತಿಯ ನಂತರ ಹಸ್ತಪ್ರತಿ ವಿಷಯದಲ್ಲಿ ಬಲ್ಲಿದರಾದ ತಜ್ಞರ ಕೊರತೆಯಿಂದಾಗಿ ನಿರೀಕ್ಷಿತ ಬೆಳವಣಿಗೆಯನ್ನು ಸಾಧಿಸಿಲ್ಲ. ಕೆಲವು ವರ್ಷಗಳವರೆಗೆ ಎಸ್.ವಿ.ಸೋಮಶೇಖರ್ ಅವರು ಇಲ್ಲಿಯ ಹಸ್ತಪ್ರತಿ ವಿಭಾಗವನ್ನು ನೋಡಿ ಕೊಳ್ಳುತ್ತಿದ್ದರು. ಸದ್ಯಕ್ಕೆ ಇಲ್ಲಿಯ ಹಸ್ತಪ್ರತಿ ವಿಭಾಗವು ಕಾರ್ಯನಿರ್ವಹಿಸುತ್ತಿದೆಯೆಲ್ಲಾ  ಎಂದು ಆಸಕ್ತರು ಸಮಾಧಾನ ಪಟ್ಟುಕೊಳ್ಳ ಬಹುದಾಗಿದ್ದರೂ ಇತ್ತೀಚೆಗೆ ಅವರು ಬಿಟ್ಟು ಹೋಗಿದ್ದು ಸದ್ಯಕ್ಕೆ ಹಸ್ತಪ್ರತಿ ವಿಭಾಗವನ್ನು ನೋಡಿಕೊಳ್ಳುವವರು ಯಾರೂ ಇಲ್ಲದಿರುವದು ಬೇಸರದ ಸಂಗತಿಯಾಗಿದೆ. ಕನ್ನಡ ಶಾಸ್ತ್ರೀಯ ಸ್ಥಾನಮಾನದ ಹಿನ್ನೆಲೆಯಲ್ಲಿ ನಮ್ಮ ಪರಂಪರೆಯ ಪ್ರತೀಕವಾದ ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆಗೆ ಇನ್ನಿಲ್ಲದ ಹೆಚ್ಚಿನ ಆದ್ಯತೆ ಸಿಗುತ್ತಿರುವಾಗ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗವು  ಮೇಲ್ವಿಚಾರಣೆ, ಸಂರಕ್ಷಣೆ ಮತ್ತು ಪ್ರಕಟಣೆಯ ಕೊರತೆಯಿಂದ  ಅವಸಾನದತ್ತ ಸಾಗುತ್ತಿರುವುದು ಆತಂಕಕಾರಿಯಾಗಿದೆ.

     ಬೆಂ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಹಸ್ತಪ್ರತಿಗಳ ಬಗೆಗಿನ ಸಾಂಸ್ಕೃತಿಕ ತಿಳಿವಳಿಕೆಗಳನ್ನು ಜಾಗೃತಗೊಳಿಸಿ ನಮ್ಮ ಸಂದರ್ಭಕ್ಕೆ ಅಳವಡಿಸಿಕೊಳ್ಳುವ ಕಾರ್ಯ ಆಗಬೇಕಾದರೆ ಇಂದು ಪಾರಂಪರಿಕ ಸಂರಕ್ಷಣಾ ಕ್ರಮಗಳಿಗಿಂತಲೂ ಮಾಹಿತಿತಂತ್ರಜ್ಞಾನದ ಮೂಲಕ ಸಮರ್ಪಕವಾಗಿ ಹಾಗೂ ಬಹುಕಾಲದ ಪ್ರಯೋಜನಕ್ಕಾಗಿ ಡಿಜಿಟಲ್ ರೂಪದಲ್ಲಿ ಹಸ್ತಪ್ರತಿಗಳನ್ನು ಸಂಗ್ರಹಿಸುವ ಕಾರ್ಯ ಕೈಗೊಳ್ಳಬೇಕಾಗಿದೆ. ಇಂದು ಎಲ್ಲಾ ಶೈಕ್ಷಣಿಕ ಶಿಸ್ತುಗಳು ವೈಜ್ಞಾನಿಕ ಸ್ವರೂಪ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಇಲ್ಲಿಯ ಹಸ್ತಪ್ರತಿಗಳಿಗೂ ಆಧುನಿಕ ಕಾಯಕಲ್ಪವನ್ನು ಕೊಡಬೇಕಾಗಿದೆ. ಹಸ್ತಪ್ರತಿಗಳ ಪರಂಪರಾಗತ ತಿಳಿವಳಿಕೆ ಮತ್ತು ಅಧ್ಯಯನಗಳ ಮುಂದುವರಿಕೆಯಾಗಿ ಆಧುನಿಕ ವಿಧಿವಿಧಾನಗಳನ್ನು ಅನ್ವಯಿಸಿಕೊಳ್ಳುವುದರ ಮೂಲಕ ಹೊಸ ದೃಷ್ಟಿಕೋನವನ್ನು ಕಂಡು ಕೊಳ್ಳಬೇಕಾಗಿದೆ.ಇಲ್ಲಿಯ ಹಸ್ತಪ್ರತಿ ವಿಭಾಗವು ಆಸಕ್ತ ವಿದ್ವಾಂಸರ ಮೂಲಕ ಕಾರ್ಯೋನ್ಮುಖಗೊಳ್ಳ ಬೇಕಾಗಿದೆ. ಕನ್ನಡ ನಾಡಿನ ಸರ್ಕಾರಿ ಹಸ್ತಪ್ರತಿ ಭಂಡಾರಗಳ ಸಾಲಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿರುವ ಇಲ್ಲಿಯ ಹಸ್ತಪ್ರತಿ ವಿಭಾಗವು ಆಸಕ್ತ ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಅಧ್ಯಯನಕಾರರಿಗೆ, ಸಂಶೋಧಕರಿಗೆ ಇಂದಿಗೂ ತವನಿಧಿಯಾಗಿದೆ.

 

  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...