ವಚನ ಚಳುವಳಿ : ಪ್ರಮುಖ
ಧೋರಣೆಗಳ ಚರ್ಚೆ
ಡಾ.ಸಿ.ನಾಗಭೂಷಣ
ಹನ್ನೆರಡನೇ ಶತಮಾನದಲ್ಲಿ
ನಡೆದ ಸಮಾಜೋ ಧಾರ್ಮಿಕ ಚಳುವಳಿಯ ಸಂದರ್ಭದಲ್ಲಿ ವಚನ ರೂಪ ಕನ್ನಡ ಸಾಹಿತ್ಯದಲ್ಲಿ ಆವಿರ್ಭವಿಸಿತು.
ಪ್ರಥಮ ಬಾರಿಗೆ ಸಮಾಜದ ವಿವಿಧ ಸ್ತರಗಳಿಂದ ಬಂದ ಸಾಮಾನ್ಯ ಜನತೆಗೆ ಲಿಂಗಭೇದವಿಲ್ಲದೆ ಸಾಹಿತ್ಯಾಭಿವ್ಯಕ್ತಿಯಲ್ಲಿ
ಪಾಲ್ಗೊಳ್ಳುವಂತೆ ಮಾಡಿದ್ದು ವಚನ ಚಳುವಳಿಯ ಪ್ರಮುಖ ಸಾಧನೆ. ಸಾಹಿತಿ ಅಥವಾ ಕವಿಯಾಗಬೇಕಾದರೆ ವಿದ್ವಾಂಸನಾಗಿರಬೇಕಾಗಿಲ್ಲ.
ಅರ್ಥವಾಗದ ಆಡಂಬರ ಭಾಷೆಯಲ್ಲಿ ಬರೆಯ ಬೇಕಾಗಿಲ್ಲ. ಅಂತರಂಗದ ಅನುಭವಗಳನ್ನು ತುಮುಲಗಳನ್ನು ನೇರವಾಗಿ
ಪ್ರಾಮಾಣಿಕವಾಗಿ ತಿಳಿದ ಭಾಷೆಯಲ್ಲಿ ತಿಳಿಯುವಂತೆ ಹೇಳಿದರೂ ಸಾಹಿತ್ಯವಾಗಬಲ್ಲುದು ಎಂಬುದನ್ನು ತೋರಿಸಿ
ಕೊಟ್ಟರು. ಜನಸಾಮಾನ್ಯರ ಆಡುಮಾತನ್ನೇ ಅಂತರಂಗದ ಸೂಕ್ಷ್ಮವಾದ,ನವುರಾದ ಗಾಢವಾದ ಭಾವನೆಗಳ ಅಭಿವ್ಯಕ್ತಿಗೆ
ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಲ್ಲದೆ, ಗಹನವಾದ ಶಾಸ್ತ್ರವಿಚಾರಗಳಿಗೂ ನಿಗೂಢವಾದ ಆಧ್ಯಾತ್ಮಿಕ ಅನುಭವಗಳಿಗೂ
ಮಾಧ್ಯಮವಾಗಿಸಿದರು. ಸ್ತ್ರೀ-ಪುರುಷರ ನಡುವಿನ ಅಂತರವನ್ನು ನಿರಾಕರಿಸಿ ವರ್ಣಭೇದ, ವರ್ಗ ಭೇದಗಳನ್ನು
ಪ್ರತಿಭಟಿಸಿ ವಿಪ್ರ ಹಾಗೂ ಅಂತ್ಯಜರನ್ನು ಒಂದೇ ಎನ್ನುವ ಸಮಾನತೆಯ ಚೌಕಟ್ಟಿನಲ್ಲಿರಿಸಿ ಅಭಿವ್ಯಕ್ತಿ
ಸ್ವಾತಂತ್ರ್ಯವನ್ನು ವಚನ ಚಳುವಳಿಯು ಒದಗಿಸಿ ಕೊಟ್ಟಿತು. ಕನ್ನಡನಾಡಿನ ಹನ್ನೆರಡನೇ ಶತಮಾನದ ವಚನ ಚಳುವಳಿಯು
ಸಮಾಜೋಧಾರ್ಮಿಕ ಚಳುವಳಿಯು ಹೌದು. ಈ ಚಳುವಳಿಯು ತನಗೆ ತಾನೇ ಸ್ವಯಂಸ್ಫೂರ್ತವಾಗಿ ಕೂಡಲೇ ಕಾಣಿಸಿಕೊಂಡಿದ್ದಲ್ಲ.
ಮಧ್ಯಕಾಲೀನ ರಾಜಕೀಯ ಹಿನ್ನೆಲೆಯಲ್ಲಿ ಕನ್ನಡ ನಾಡಿನಾದ್ಯಂತ ವ್ಯಾಪಿಸಿತು. ಶಿವಶರಣರ ಆಂದೋಲನದ ನಿಮಿತ್ತವಾಗಿ
ರೂಪುಗೊಂಡ ವಚನ ಸಾಹಿತ್ಯವು ಭಕ್ತಿಸಾಹಿತ್ಯದ ಪ್ರತೀಕವಾಗಿರುವುದರ ಜೊತೆಗೆ ಸಾಮಾಜಿಕ ಚಿಂತನೆಯ ಪ್ರತಿಪಾದನೆಯೂ
ಆಗಿದೆ. ಕನ್ನಡ ನಾಡಿನ ಭಕ್ತಿಪಂಥವು ಕೇವಲ ಸಿದ್ಧಾಂತವಾಗಿರದೆ ಚಳುವಳಿಯ ರೂಪದಲ್ಲಿ ಪ್ರಕಟಗೊಂಡಿದೆ.
ಸಾಮಾನ್ಯ ಜನಸ್ತರವನ್ನು ಧಾರ್ಮಿಕ ಪ್ರಜ್ಞೆಯ ಪರಿಧಿಯೊಳಗೆ ಒಳಪಡಿಸಿಕೊಳ್ಳ ಬೇಕು ಎಂಬುದು ಭಕ್ತಿಪಂಥದ
ಆಶಯವಾಗಿದ್ದಿತು. ಭಕ್ತಿ ಚಳುವಳಿಯು ತನ್ನ ಸ್ವರೂಪವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ರೂಪಿಸಲು ಪ್ರಯತ್ನಿಸಿತು.
ವಚನ ಚಳುವಳಿಯು ಧಾರ್ಮಿಕ ವ್ಯಕ್ತಿಗಳ ನೂತನ ಪರಂಪರೆಯನ್ನು ಹುಟ್ಟು ಹಾಕಿದ್ದಲ್ಲದೆ ಧಾರ್ಮಿಕ ವ್ಯಕ್ತಿ
ಹೇಳುವ ಬದುಕುವ ಮಾರ್ಗವು ವೈಯಕ್ತಿಕವಾಗಿರುವುದರ ಜೊತೆಗೆ ಭಕ್ತಿ ಚಳುವಳಿಯ ಅನುಭಾವಿಕ ಮನಃಸ್ಥಿತಿಯ
ಆಶಯದ ಪ್ರಾತಿನಿಧಿಕವೂ ಆಗಿದೆ. ರಾಜತ್ವಕ್ಕೆ ಹಾಗೂ ಅದಕ್ಕೆ ಅಂಟಿಕೊಂಡಿದ್ದ ಪುರೋಹಿತ ಶಾಹಿಯ ಭೌತಿಕ
ಸವಲತ್ತುಗಳಿಗೆ ಜೋತುಬಿದ್ದ ವರ್ಗಪರಂಪರೆಯ ಜೀವನವನ್ನು ಮೀರುವ ಅದಕ್ಕಿಂತ ಮಿಗಿಲಾಗಿ ತಿರಸ್ಕರಿಸುವ
ಹಂತವನ್ನು ತಲುಪಿದ್ದನ್ನು ಗುರುತಿಸ ಬಹುದಾಗಿದೆ. ಬದುಕಿನ ಬಗೆಗಿನ ವಚನ ಚಳುವಳಿಯ ಧೋರಣೆಗಳು ಬಾಹ್ಯವಾಗಿರದೆ
ಅಲ್ಲಿಯ ವ್ಯಕ್ತಿಗಳ ಬದುಕಿನ ಅಂಗವಾಗಿಯೇ ಹೊರ ಹೊಮ್ಮಿದವುಗಳಾಗಿವೆ. ಸಾಹಿತ್ಯ ರಚನೆಗೆ ಸಂಬಂಧಿಸಿದ
ಪೂರ್ವದ ಸಿದ್ಧಮಾನದಂಡಗಳೆಲ್ಲಾ ವಚನಕಾರರ ಕಾಲಘಟ್ಟದಲ್ಲಿ ಬದಲಾವಣೆಯನ್ನು ಪಡೆದವು. ಕನ್ನಡದಲ್ಲಿ ಪ್ರಥಮ
ಬಾರಿಗೆ ದೇಸೀ ಛಂದೋರೂಪವೊಂದು ಕನ್ನಡ ಸಾಹಿತ್ಯದ ಅಧಿಕೃತ ಪ್ರಕಾರವಾಗಿ ಹೊರ ಹೊಮ್ಮಿತು. ವಸ್ತುರೂಪ-ವಿನ್ಯಾಸ-ಭಾಷೆ-ಶೈಲಿ-ಆಶಯ-ಅಭಿವ್ಯಕ್ತಿ
ಎಲ್ಲ ರೀತಿಯಿಂದಲೂ ವಚನ ತನ್ನ ಹಿಂದಿದ್ದ ಮಾರ್ಗ ಸಾಹಿತ್ಯ ಪ್ರಕಾರಕ್ಕಿಂತ ವಿಭಿನ್ನವಾಗಿ ಕಂಡಿತು.
ಪಂಡಿತರ ಸೊತ್ತಾಗಿದ್ದ ಸಾಹಿತ್ಯ ಪಾಮರರ ನಡುವೆ ಬೆಳೆಯತೊಡಗಿತು. ರಾಜಾಶ್ರಯದೊಳಗಿದ್ದ ಕವಿಗಳಿಗಿಂತ,
ಜನಸಾಮಾನ್ಯರ ನಡುವೆ ಬೆಳೆದುಬಂದ ವಚನಕಾರರುಸಾಹಿತ್ಯದ ದಿಕ್ಕನ್ನು ಬದಲಿಸಿದರು .ವಚನ ಚಳುವಳಿಯು ಪಟ್ಟಭದ್ರ
ಹಿತಾಸಕ್ತಿಯ ಮೂಲ ಅಂಶಗಳನ್ನು ಪ್ರಶ್ನಿಸುವ, ಪ್ರತಿಭಟಿಸುವ ಸೂಚನೆಯೊಂದಿಗೆ ಭಾಷೆಯ ಬಳಕೆಯಲ್ಲಿ ದೇಸಿ
ನುಡಿಗೆ ಪ್ರಾದೇಶಿಕತೆಗೆ ಹೆಚ್ಚಿನ ಒತ್ತನ್ನು ನೀಡಿದೆ. ವಚನ ಚಳುವಳಿಯ ಮುಖ್ಯ ಲಕ್ಷಣ ಎಂದರೆ ಅದರ
ಮುಕ್ತ ವಾತಾವರಣ, ಜಾತಿ ಭೇದವಿಲ್ಲದೆ ಎಲ್ಲರನ್ನೂ ತಟ್ಟಿದ್ದು. ವಚನಕಾರರು ವೈದಿಕ ವ್ಯವಸ್ಥೆಯ ಸಾಂಸ್ಕೃತಿಕ
ಮೌಲ್ಯಗಳನ್ನು ನಿರಂತರವಾಗಿ ಪ್ರಶ್ನಿಸುತ್ತಾ ನಡೆದು ತನ್ನದೇ ಆದ ಸಾರ್ವಕಾಲಿಕ ಸಾಂಸ್ಕೃತಿಕ ಮೌಲ್ಯಗಳನ್ನು
ಎತ್ತಿಹಿಡಿಯಲು ಪ್ರಯತ್ನಿಸಿದರು.
ಭಾರತೀಯ ಸಮಾಜದ
ಎಲ್ಲಾ ವರ್ಗಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿ ಅದರಲ್ಲಿ ಒಂದು ಒಳ ಎಚ್ಚರವನ್ನು ಮೂಡಿಸಿದ ಮೊತ್ತಮೊದಲ
ನಿಜವಾದ ಅರ್ಥದ ಸಾಮಾಜಿಕ ಚಳುವಳಿಯು ಬಸವಾದಿ ಪ್ರಮಥರ ಮೂಲಕ ನಡೆದಿರುವುದು ಗಮನಾರ್ಹವಾಗಿದೆ. ಮತದ
ಉದಾತ್ತ ಚಿಂತನೆ, ಸಮಾಜದ ತೀರ ಕೆಳಗಿನ ಪದರಗಳನ್ನು ಮುಟ್ಟಿದ್ದು ಇಲ್ಲಿಯೇ ಎಂಬಲ್ಲಿ ಯಾವುದೇ ಉತ್ಪ್ರೇಕ್ಷೆ
ಇಲ್ಲ. ಬಸವಾದಿ ಪ್ರಮಥರ ವಚನಗಳ ರಚನೆಯು ಅವರಲ್ಲಿ ಮೂಡಿದ ಸಾಮಾಜಿಕ ಅರಿವಿನ ಸಂಕೇತ ಎನ್ನುವ ಕಾರಣದಿಂದ
ಮಹತ್ವವನ್ನು ಪಡೆಯುತ್ತವೆ. ಬಹಳಷ್ಟು ವಚನಕಾರರ ವಚನಗಳು ಇಂದು ಸಾಹಿತ್ಯಕ ಮಾನದಂಡದಿಂದ ಅಳೆದರೆ ತೀರ
ಸಾಮಾನ್ಯ ಎನಿಸಬಹುದಾದರೂ ಸಮಾಜಶಾಸ್ತ್ರದ ದೃಷ್ಟಿಯಿಂದ ಪ್ರಮುಖ ಎನಿಸುತ್ತವೆ. ಬಸವಣ್ಣನ ನೇತೃತ್ವದಲ್ಲಿ
ಎಲ್ಲಾ ಶರಣರೂ ತಮ್ಮನ್ನು ತಾವು ಬಹಿರಂಗವಾಗಿ ವ್ಯಕ್ತಪಡಿಸಿಕೊಂಡು ತಮ್ಮ ಸಾಮಾನ್ಯ ಚಿಂತನೆಗಳನ್ನು
ಅಭಿವ್ಯಕ್ತ ಪಡಿಸುವ ಧೈರ್ಯ ತೋರಿದ್ದು ಮುಖ್ಯ ಎನಿಸುತ್ತದೆ. ಸಮಾಜೋಧಾರ್ಮಿಕ ಆಂದೋಲನದ ಫಲ ಸಾಮಾನ್ಯರೂ
ಮಾತನಾಡುವ ಮನಸ್ಸು ಮಾಡಿದ್ದು.
ಸಾಮಾಜಿಕ ಪ್ರಜ್ಞೆಯು ಸಮಾಜದ ವಸ್ತುಸ್ಥಿತಿಯನ್ನು ತಿಳಿಸಿ
ಕುಂದು ಕೊರತೆಗಳನ್ನು ಟೀಕಿಸುವುದಷ್ಟೇ ಅಲ್ಲ ಅದನ್ನು ಸುಧಾರಿಸುವ, ಬದಲಿಸುವ ಮಾರ್ಗದರ್ಶಕ ಕಾರ್ಯವನ್ನು
ನಿರ್ವಹಿಸುವಂತೆಯೂ ಮಾಡುತ್ತದೆ. ಶಿವಾನುಭವಿಗಳು, ಲೋಕಾನುಭವಿಗಳು ಆಗಿದ್ದ ವಚನಕಾರರ ಸಾಮಾಜಿಕ ಪ್ರಜ್ಞೆ
ಅತ್ಯುನ್ನತ ಮಟ್ಟದ್ದಾಗಿತ್ತು. ಬಸವಾದಿ ಪ್ರಮಥರ ಸಾಮಾಜಿಕ ಪ್ರಜ್ಞೆಯಲ್ಲಿ ತಮ್ಮ ಸಮಕಾಲೀನ ಹದಗೆಟ್ಟ
ಸಮಾಜವನ್ನು ಯೋಗ್ಯರೀತಿಯಲ್ಲಿ ನಡೆಯಿಸುವ ಧರ್ಮದ ಡಾಂಭಿಕತೆಯನ್ನು ಹೊಡೆದೋಡಿಸಿ ಮಾನವತೆಯನ್ನು ಎಚ್ಚರಗೊಳಿಸುವ,
ಪರಂಪರಾಗತ ಶುಷ್ಕ, ಅರ್ಥಹೀನ, ಸವಕಳಿ ನಡೆ ನುಡಿಗಳನ್ನು ತಿದ್ದಿ ಸಜೀವಗೊಳಿಸುವ, ಅಂಧಾನುಕರಣೆಯಲ್ಲಿ
ಮುಳುಗಿ ಹೋಗಿದ್ದ ಜನತೆಗೆ ತಮ್ಮ ತಮ್ಮ ವ್ಯಕ್ತಿ ವೈಶಿಷ್ಟ್ಯದ ಬಗೆಗೆ ಅರಿವು ಮೂಡಿಸುವ ಹಲವಾರು ಅಂಶಗಳನ್ನು
ಗುರುತಿಸಬಹುದಾಗಿದೆ. ಸಂಪ್ರದಾಯ ನಿಷ್ಠೆಯ ವಿರುದ್ಧ, ಸ್ವಾಯತ್ತತೆಯ ವಿರುದ್ಧ ಪ್ರತಿಭಟನೆಯ ಅಂಶಗಳನ್ನು
ಕಾಣಬಹುದಾಗಿದೆ. ಸಾಮಾಜಿಕ ಪ್ರಜ್ಞೆಯಲ್ಲಿ ವಿಡಂಬನೆಯು ಒಳಗೊಂಡಿದೆ. ವಚನಕಾರರಿಂದ ಪ್ರವರ್ತನಗೊಂಡ
ವೀರಶೈವ ಧರ್ಮವು ಕೇವಲ ಧಾರ್ಮಿಕ ಅವಶ್ಯಕತೆಯಿಂದ ರೂಪುಗೊಂಡಿದ್ದಲ್ಲ. ಅದು ಸಮಾಜೋಧಾರ್ಮಿಕ ಚಳುವಳಿಯ
ಫಲಿತ. ಯಾವ ಧರ್ಮಕ್ಕೆ ಸಾಮಾಜಿಕ ಹೊಣೆಗಾರಿಕೆ ಎಂಬುದು ಇಲ್ಲವೋ ಅದು ಧರ್ಮವೇ ಅಲ್ಲ. ಒಂದು ಧರ್ಮಕ್ಕೆ
ಸಾಮಾಜಿಕ ಜವಾಬ್ದಾರಿ ಇರಬೇಕು. ಒಂದು ಸಮಾಜವು ಸುಭದ್ರವಾಗಿ ನೆಮ್ಮದಿಯಿಂದ ಬದುಕಬೇಕಾದರೆ ಅದು ಯಾವ
ಯಾವ ಲೌಕಿಕ, ಆಧ್ಯಾತ್ಮಿಕ ಹಾಗೂ ನೈತಿಕ ನಿಲುವುಗಳು ಅಗತ್ಯವೋ ಅವುಗಳನ್ನು ರೂಪಿಸುವ ಸಾಮರ್ಥ್ಯವನ್ನು
ಧರ್ಮವು ಹೊಂದಿರಬೇಕು. ಧರ್ಮವು ಸಮಾಜದ ಸರ್ವತೋಮುಖವಾದ ಶ್ರೇಯಸ್ಸನ್ನು ಸಾಧಿಸಬೇಕಾದರೆ ಅದು ಸಮಾಜದ
ಎಲ್ಲಾ ಸ್ತರಗಳ ಹಿತವನ್ನು ತನ್ನ ಕಕ್ಷೆಗೆ ತೆಗೆದುಕೊಳ್ಳುವಂತಿರಬೇಕು. ವಚನಕಾರರಿಂದ ಪ್ರವರ್ತನಗೊಂಡ
ಧಾರ್ಮಿಕ ನಿಲುವುಗಳು ಹಿಂದೂ ಧರ್ಮದ ಸಾಮಾಜಿಕ ಕಲ್ಪನೆಗೆ ಹಾಗೂ ವಾಸ್ತವತೆಗಳಿಗೆ ತೋರಿದ ಪ್ರತಿಕ್ರಿಯೆ
ಮತ್ತು ಪ್ರತಿಭಟನೆಯ ಅಂಶಗಳಾಗಿವೆ. ವಚನಗಳು ಜೀವನದ ಸಾರ್ಥಕತೆಯನ್ನು
ಕಂಡುಕೊಳ್ಳುವ ಮಾರ್ಗವನ್ನು ಜೀವಂತವಾಗಿ ಸಾಧಿಸಿತೋರಿಸಿವೆ.
ವಚನ ಸಾಹಿತ್ಯದಲ್ಲಿ ನಿರೂಪಿತಗೊಂಡಿರುವ ಎಲ್ಲ ವಿಚಾರಗಳು ಧರ್ಮವನ್ನು ಅನುಸರಿಸಿಯೇ ಮೂಡಿಬಂದಿರುವುದನ್ನು
ಒಪ್ಪಲೇಬೇಕಾಗುತ್ತದೆ ಇವರ ಎಲ್ಲ ವಿಚಾರಗಳು ಮಾನವನ ಪರಿಶುದ್ಧವಾದ ಜೀವನದತ್ತ ಮುಖಮಾಡಿ ನಿಲ್ಲುತ್ತವೆ.
ಅವುಗಳ ಗುರಿಯು ಮಾನವನಲ್ಲಿ ಇರುವ ಪರಮಾತ್ಮನನ್ನು ಶೋಧಿಸಿ ಕೊಳ್ಳುವುದಾಗಿದೆ. ಮಾನವತೆಯ ಮಹಾಸಿದ್ಧಿಯ
ಸಾಧನೆಯು ವಚನ ಸಾಹಿತ್ಯದ ಮುಖ್ಯ ಗುರಿಯಾಗಿದ್ದಿತು. ಜೊತೆಗೆ ಶರಣ ಧರ್ಮದ ವಿಚಾರಗಳನ್ನು ಸರ್ವಸಮಾನತೆಗಾಗಿ
ಬಳಸಿಕೊಂಡುದುದೆ ಶರಣರ ಧಾರ್ಮಿಕ ಚಿಂತನೆಗಳ ವೈಶಿಷ್ಟ್ಯವಾಗಿದೆ. ವಚನಕಾರರು ಮಾನವನ ಒಳ್ಳೆಯ ಜೀವನಕ್ಕಾಗಿ
ತಮ್ಮನ್ನು ತೊಡಗಿಸಿಕೊಂಡಿದ್ದರು ಅವರು ರೂಪಿಸಿದ ಸರ್ವಸಮಾನತೆಯ
ತತ್ವ ಇಂದಿಗೂ ಆದರ್ಶವಾಗಿಯೆ ನಿಂತಿದೆ.
ಶಿವಶರಣರ ಚಳುವಳಿಯು
ಸಮಾಜೋಧಾರ್ಮಿಕ ಚಳುವಳಿಯೇ ಹೊರತು ರಾಜಕೀಯ, ಆರ್ಥಿಕ ಚಳುವಳಿಯಲ್ಲ. ಧಾರ್ಮಿಕ, ಸಾಮಾಜಿಕ ಅಸಮಾನತೆಯನ್ನು
ಮತ್ತು ಧಾರ್ಮಿಕವಾಗಿ ಎಲ್ಲಾ ಸವಲತ್ತುಗಳನ್ನು ಪಡೆದವರನ್ನು ಶರಣರು ವಿರೋಧಿಸಿದರು. ಶಿವಶರಣರ ಚಳುವಳಿಗೆ
ತುತ್ತಾದವರು ಬ್ರಾಹ್ಮಣರೇ ಹೊರತು ರಾಜರಲ್ಲ. ಸಮಾಜವನ್ನು ವರ್ಣಾಶ್ರಮ ಪದ್ಧತಿಗೆ ಅನುಸಾರವಾಗಿ ಒಡೆದು
ಆಳುವ ಧಾರ್ಮಿಕ, ಸಾಮಾಜಿಕ ಪರಿಸರದಲ್ಲಿ ರಾಜತ್ವವನ್ನು ವಿರೋಧಿಸುವ ರಾಜಕೀಯಕ್ಕೆ ಕೈಹಾಕದೆ ರಾಜನನ್ನು
ಹಾಗೂ ಅವನ ಬೆಂಬಲಕ್ಕೆ ನಿಂತ ವರ್ಗಗಳನ್ನು ನಿಯಂತ್ರಿಸುವ ಧರ್ಮವನ್ನು ತೀವ್ರವಾದ ಚಿಕಿತ್ಸೆಗೆ ಒಳಪಡಿಸುವ
ವೈಚಾರಿಕತೆಯ ಮೂಲಕ ವಚನಕಾರರು ತಾವು ಒಂದು ಸಮಾಜವನ್ನು ತತ್ಪರಿಣಾಮವಾಗಿ ಧರ್ಮವನ್ನು ನೆಲೆಗೊಳಿಸಿದ್ದು
ಮಹತ್ತರ ಸಂಗತಿಯಾಗಿದೆ. ಎಲ್ಲಿ ಲಿಂಗಭೇದ, ವರ್ಗಭೇದ, ವರ್ಣಭೇದಗಳು ಇರುವುದಿಲ್ಲವೋ; ಎಲ್ಲಿ ವ್ಯಕ್ತಿಯ
ಬದುಕಿನಲ್ಲಿ ಅವನು ಕೈಗೊಳ್ಳುವ ವೃತ್ತಿಯಿಂದ ಪರಿಗಣಿತವಾಗುವ ತರ-ತಮಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೋ,
ಎಲ್ಲಿ ಏಕದೇವತಾರಾಧನೆಯ ನೆಲೆಯಲ್ಲಿ ಎಲ್ಲರನ್ನು ಸಮಾನರೆಂದು ಕಾಣಬಹುದೋ, ವ್ಯಕ್ತಿಯ ಸದಾಚಾರಗಳಿಂದ
ಪರಸ್ಪರ ಶ್ರೇಯಸ್ಸು ಸಾಧಿತವಾಗುವುದೋ ಅಂತಹ ಒಂದು ಧಾರ್ಮಿಕ ನೆಲೆಯನ್ನು ನಿರ್ಮಿಸುವ ಹೊಣೆಗಾರಿಕೆಯನ್ನು
ಬಸವಾದಿ ಪ್ರಮಥರು ವಹಿಸಿಕೊಂಡರು. ಈ ಒಂದು ಮಹತ್ತರವಾದ ಜವಾಬ್ದಾರಿ ಅಂದಿನ ವಚನಕಾರರೆಲ್ಲರ ಚಿಂತನೆಯ
ಮೂಸೆಯಲ್ಲಿ ಹೊರಹೊಮ್ಮಿದ ಕಾರಣ ಈ ಸಾಮಾಜಿಕ ಹೊಣೆಗಾರಿಕೆಯಲ್ಲಿ ಎಲ್ಲರೂ ಸಾಮೂಹಿಕವಾಗಿ ಪಾಲುದಾರರು.
ಅದರ ಮುಖ್ಯ ಉದ್ದೇಶ ಮಾತ್ರ ಬಹುಜನರ ಹಿತವನ್ನು ಸಾಧಿಸುವ ಒಂದು ಸಾಮಾಜಿಕ ಧರ್ಮವನ್ನು ರೂಪಿಸುವುದಾಗಿತ್ತು.
ಈ ದೃಷ್ಟಿಕೋನಗಳ ಹಿನ್ನೆಲೆಯಲ್ಲಿ ವಚನ ಚಳುವಳಿಯ ಸಾಮಾಜಿಕ ಆಯಾಮಗಳ ನೆಲೆಗಟ್ಟನ್ನು ಗುರುತಿಸಬಹುದಾಗಿದೆ.
1. ಸಾಮಾಜಿಕ ಆಯಾಮ: ಅ.ಸಮಾನತೆ, ಶ್ರೇಣೀಕರಣ, ಆ.ಶ್ರೀಮಂತಿಕೆ ಮತ್ತು
ಬಡತನ
2.ರಾಜಕೀಯ ಆಯಾಮ: ಅ.ರಾಜಸತ್ತೆಯ ವಿರೋಧ, ಆ.ಪುರುಷ ಪ್ರಾಬಲ್ಯ
3.ಧಾರ್ಮಿಕ ಆಯಾಮ ಅ.ಆತ್ಮಕ್ಕೆ ಕೊಟ್ಟ ಪ್ರಾಮುಖ್ಯ, ಆ.ಪರ್ಯಾಯ ಆಚರಣೆಗಳು
ವೈದಿಕರಿಗೆ ವಿರುದ್ಧವಾದ
ಆಚರಣೆಗಳು ಇ. ಅಂತರಂಗ-ಬಹಿರಂಗ ಸಮನ್ವಯ
ಈ. ಸ್ಥಾವರ-ಜಂಗಮ ಕಲ್ಪನೆಯ
ಕುರಿತ ನಿಲುವುಗಳು
1. ಸಾಮಾಜಿಕ ಆಯಾಮ: ಅ.ಸಮಾನತೆ, ಶ್ರೇಣೀಕರಣ
ಆ.ಶ್ರೀಮಂತಿಕೆ ಮತ್ತು ಬಡತನ
ಅ.ಸಮಾನತೆ, ಶ್ರೇಣೀಕರಣ:
ಶಿವನ ಬಗೆಗಿನ ಭಕ್ತಿ
ಜನರ ನಡುವಿನ ಅಡ್ಡಗೋಡೆಗಳನ್ನು ಒಡೆದು ಹಾಕುವಂತಹ ಸಮಾನತೆಯ ಮಾರ್ಗದ ಚಿಂತನೆಯನ್ನು ವಚನಗಳಲ್ಲಿ ಕಾಣಬಹುದಾಗಿದೆ.ವಚನ
ಚಳುವಳಿಯು ಸಾಮಾಜಿಕ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ಬಯಸಿತು. ಮಾನವೀಯ ನೆಲೆಗಟ್ಟಿನ ಮೇಲೆ ಸಮಾಜವನ್ನು
ನಿರ್ಮಿಸುವ ಉದ್ದೇಶ್ಯವನ್ನು ಹೊಂದಿತ್ತು. ಪುರುಷಾರ್ಥಗಳನ್ನು ವಚನಕಾರರು ವರ್ಣವ್ಯವಸ್ಥೆಯ ಹಿನ್ನೆಲೆಯಲ್ಲಿ
ಆರ್ಥೈಸದೆ ಸಮಾನತೆಯ ಹಿನ್ನೆಲೆಯಲ್ಲಿ ಅರ್ಥೈಸಿದರು. ಆ ಮೌಲ್ಯಗಳ ಮಹತ್ವವನ್ನು ಸಾರ್ವತ್ರಿಕಗೊಳಿಸಿದರು.
ಲಿಂಗ-ವರ್ಣ-ವರ್ಗಗಳ ಭೇದವನ್ನಳಿಸಿ, ಸ್ವಾತಂತ್ರತೆ-ಸಮಾನತೆ-ಮಾನವೀಯತೆಯನ್ನು ಅರಳಿಸುವಲ್ಲಿ, ವ್ಯಕ್ತಿಯ
ವ್ಯಕ್ತಿತ್ವವನ್ನು ಬೆಳಸುವಲ್ಲಿ ವಚನ ಚಳುವಳಿ ಗಮನೀಯ ಪಾತ್ರ ವಹಿಸಿದೆ. ಅಂದಿನ ಸಮಾಜದಲ್ಲಿ ಅರ್ಥವನ್ನು
ಕಳೆದುಕೊಂಡು ಪುರುಷಾರ್ಥಗಳಿಗೆ ಹೊಸ ಆಯಾಮವನ್ನು ನೀಡಿತು. ವಚನಕಾರರು ತಮ್ಮ ವಚನಗಳಲ್ಲಿಯ ಲಿಂಗಧಾರಿತ
ಜಾತೀಯ ಪರಿಕಲ್ಪನೆಯ ಮೂಲಕ ವೈದಿಕ ಧರ್ಮದ ವರ್ಣವ್ಯವಸ್ಥೆಗೆ ಉತ್ತರವನ್ನು ಕಂಡುಕೊಂಡರು. ವೃತ್ತಿಸಂಬಂಧಿ
ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯುವ ಪ್ರಯತ್ನವನ್ನು ಮಾಡಿದರು.ಕೆಳವರ್ಗದವರಿಗೆ ನೈತಿಕ ಬೆಂಬಲವನ್ನು
ನೀಡುವುದರ ಮೂಲಕ ಮೇಲ್ಮುಖ ಚಲನೆಗೆ ಅವಕಾಶವನ್ನು ಕಲ್ಪಿಸಿ ಕೊಟ್ಟರು.
`ಎಡದ ಕೈಯಲ್ಲಿ ಕತ್ತಿ
ಬಲದ ಕೈಯಲ್ಲಿ ಮಾಂಸ
ಬಾಯಲ್ಲಿ ಸೂರೆಯಗಡಿಗೆ,ಕೊರಳಲ್ಲಿ
ದೇವರಿರಲಿ
ಅವರ ಲಿಂಗವೆಂಬೆ, ಸಂಗವೆಂಬೆ
ಕೂಡಲ ಸಂಗಮದೇವಾ
ಅವರ ಮುಖಲಿಂಗಿಗಳೆಂಬೆನು’ ( ಬ.ವ.ಸಂ.720)
`ಆವನಾದಡೇನು ಶ್ರೀ
ಮಹಾದೇವನ ನೆನೆವನ
ಶಿವಲಿಂಗ ದೇವರ ಅಂಗದ
ಮೇ ಉಳ್ಳವರ
ಬಾಯ ತಂಬುಲವ ಮೆಲುವೆನು
ಬೀಳುಡೆಯ ಹೊದೆವೆ
ಪಾದರಕ್ಷೆಯ ಕಾದು ಬದುಕುವೆ
ಕೂಡಲ ಸಂಗಮದೇವಾ’
(ಬ.ವ.ಸಂ.464) ಬಸವಣ್ಣನವರ ಈ ವಚನಗಳಲ್ಲಿ ಕೆಳವರ್ಗದ ಜನತೆ ಯಾವ ಸಂಸ್ಕೃತಿಯಿಂದ ಬಂದರೂ ಲಿಂಗಧಾರಿಗಳಾಗಿದ್ದರೆ
ಶ್ರೇಷ್ಠ ಎನ್ನುವ ಧೋರಣೆಯನ್ನು ಕಾಣಬಹುದಾಗಿದೆ. ಕೆಳವರ್ಗದವರ ಸಂಸ್ಕೃತಿಯನ್ನು ಶಿವಧರ್ಮದ ಚೌಕಟ್ಟಿನಲ್ಲಿ
ವಚನಕಾರರು ಸ್ವೀಕರಿಸಿದ್ದರು.
ವಚನಕಾರರ ಸಾಮಾಜಿಕ
ಹಾಗೂ ಧಾರ್ಮಿಕ ಆಲೋಚನೆಗಳು ವೈದಿಕ ಧರ್ಮದಲ್ಲಿಯಂತೆ ಕಗ್ಗಂಟಾಗಿರದೆ ಸಹಜ ಹಾಗೂ ಸರಳವಾಗಿದ್ದು ಜಗತ್ತಿನ
ಸಂಬಂಧವನ್ನು ಜಟಿಲಗೊಳಿಸದವುಗಳಾಗಿದ್ದವು. ವಚನಕಾರರು, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕೀಳಾಗಿ
ಕಾಣದೆ ಅವನು ತನ್ನಂತೆಯೇ ಇರುವ ಒಂದು ಜೀವ ಎಂದು ಭಾವಿಸಿ ಆ ಜೀವದೊಂದಿಗೆ ಯಾವ ತಾರತಮ್ಯವನ್ನು ಮಾಡದೆ
ಪ್ರೀತಿ ವಿಶ್ವಾಸ ಗೌರವದೊಂದಿಗೆ ವ್ಯವಹರಿಸುವುದೇ ನಿಜವಾದ ಧರ್ಮ ಎಂದು ಭಾವಿಸಿದ್ದರು. ಅದಕ್ಕಾಗಿಯೇ
ಅವರು ` ಇವನಾರವ ಇವನಾರವ ಎಂದೆನಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ’ ಎಂದು ನುಡಿದಿದ್ದು.
ಜಾತಿವ್ಯವಸ್ಥೆ, ಶ್ರೇಣೀಕರಣ ಇತ್ಯಾದಿ ವಿಷಯಗಳಲ್ಲಿ ಹಿಂದಿನವರಿಗಿಂತ ವಿಭಿನ್ನವಾದ ನಿಲುವುಗಳನ್ನು
ವ್ಯಕ್ತ ಪಡಿಸಿದರು. ಅರಸನಾಗಲೀ-ಸೇವಕನಾಗಲೀ ಮೇಲ್ಜಾತಿಯವನಾಗಿರಲಿ-ಅಂತ್ಯಜನಾಗಿರಲಿ,ಅಕ್ಷರಸ್ಥನಾಗಿರಲಿ-ನಿರಕ್ಷರಸ್ಥನಾಗಿರಲಿ
ಎಲ್ಲರ ಹುಟ್ಟು ಒಂದೆ ಬಗೆಯೆಂಬ ನಿಲುವನ್ನು ತಾಳಿದವರು.
ಸಮಯೋನಿ ಸಮುದ್ಭವನಾಗಿಯೂ ತಾನು ಮೇಲು ಎಂಬ ಪೊಳ್ಳು ಪ್ರತಿಷ್ಠೆ ಏಕೆ? ಎಂಬ ಪ್ರಶ್ನೆಯನ್ನು ಸಮಾಜದ
ಮುಂದಿಟ್ಟರು. ಪಾರಂಪರಿಕ ಚಾತುವರ್ಣ ವ್ಯವಸ್ಥೆಯ ಫಲವಾಗಿ ಧರ್ಮ ಎಂಬುದು ಕೀಳು ವ್ಯವಹಾರವಾಗಿ ಭಕ್ತಿಯೆಂಬುದು
ತೋರುಂಬ ಲಾಭವಾಗಿ ಮಾರ್ಪಟ್ಟಿತ್ತು. ವಚನ ಚಳುವಳಿಯು, ಸಾಂಪ್ರದಾಯಿಕ ವಿಧಿ-ವಿಧಾನಗಳನ್ನು ಧರ್ಮ ಎಂದು
ಅರ್ಥೈಸದೇ ದಯವೇ ಧರ್ಮದ ಮೂಲವಯ್ಯಾ ಎಂದು ಸಾರಿದರು. ಮನುಷಧರ್ಮಕ್ಕೆ ಪ್ರಾಮುಖ್ಯತೆ ನೀಡಿದರು. ಮನುಷ್ಯ-ಮನುಷ್ಯರ
ನಡುವೆ ತಾರತಮ್ಯ ಕಲ್ಪಿಸಿ ಆ ಮೂಲಕ ಎಲ್ಲಾ ಬಗೆಯ ಭೋಗಭಾಗ್ಯಗಳನ್ನು ಹೊಡೆದು ಕೊಳ್ಳಬೇಕೆಂಬ ಹುನ್ನಾರಗಳಿಂದ
ಸೃಷ್ಟಿಗೊಂಡ ಚಾತುವರ್ಣದ ವಿರುದ್ಧ ಮೊದಲ ಬಾರಿಗೆ ದನಿ ಎತ್ತಿದರು. ತಮಗೆ ಅನುಕೂಲವಾಗುವಂತಹ ಶಾಸ್ತ್ರಗಳನ್ನು
ಸೃಷ್ಟಿಸಿ ಅನಾದಿಕಾಲದಿಂದಲೂ ಮಾನವೀಯತೆಯನ್ನು ಮರೆತ ಕೆಟ್ಟವರ್ಣಾಶ್ರಮ ವ್ಯವಸ್ಥೆಯಿಂದ ಉದ್ಭವಿಸಿದ್ದ
ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಕೊಳ್ಳುವ ಪ್ರಯತ್ನವನ್ನು ಮಾಡಿದರು. ಕುಲ ಗೋತ್ರದ ಪಾರಮ್ಯತೆಯನ್ನು,
`ಕೊಲುವನೇ ಮಾದಿಗ,
ಹೊಲಸು ತಿಂಬುವನೇ ಹೊಲೆಯ
ಕುಲವೇನೋ ಆವಂದಿರ ಕುಲವೇನೋ?
ಸಕಲ ಜೀವಾತ್ಮರಿಗೆ
ಲೇಸನೇ ಬಯಸುವ
ನಮ್ಮ ಕೂಡಲಸಂಗನ ಶರಣರೇ
ಕುಲಜರು’ (ಬ.ವ.ಸಂ.591)
ವಿಪ್ರ ಮೊದಲು ಅಂತ್ಯಜ
ಕಡೆಯಾಗಿ
ಶಿವಭಕ್ತರಾದವರನೆಲ್ಲರನೊಂದೆ
ಎಂಬೆ:
ಹಾರುವ ಮೊದಲು ಶ್ವಪಚ
ಕಡೆಯಾಗಿ
ಭವಿಯಾದವರನೆಲ್ಲರನೊಂದೆ
ಎಂಬೆ
ದಾಸೀಪುತ್ರನಾಗಲಿ ವೇಶ್ಯಾಪುತ್ರನಾಗಲಿ
ಶಿವದೀಕ್ಷೆಯಾದ ಬಳಿಕ
ಸಾಕ್ಷಾತ್ ಶಿವನೆಂದು
ವಂದಿಸಿ ಪೂಜಿಸಿ ಪಾದೋದಕ
ಪ್ರಸಾದವ ಕೊಂಬುದೆ ಯೋಗ್ಯ’ ಎಂಬ ನುಡಿಗಳ ಮೂಲಕ ಸರ್ವಸಮಾನತೆಯ ಶರಣ ಧರ್ಮವನ್ನು ಜಾಗೃತಿಗೊಳಿಸಿದರು.
ಈ ವಚನದಲ್ಲಿ ಬಸವಣ್ಣರು ಭಕ್ತಿಭಾವನೆಗೆ ಸಂಬಂಧಿಸಿದ ನಿಜವಾದ ವ್ಯತ್ಯಾಸಗಳ ಮುಂದೆ ರೂಢಿಗತವಾದ ವಿಭಜನೆಯು
ಅರ್ಥಹೀನ ಎಂದು ವಿವರಿಸಿದ್ದಾರೆ. ಒಬ್ಬನೇ ದೇವರನ್ನು ಪೂಜಿಸುವ ಜನರ ನಡುವೆ ಯಾವುದೇ ಬಗೆಯ ವ್ಯತ್ಯಾಸಗಳಿಲ್ಲ.
ಶಿವಭಕ್ತರೆಲ್ಲರನ್ನು ಸಮಾನವಾಗಿ ನೋಡಬೇಕು. ಇಲ್ಲಿ ಬಸವಣ್ಣನು ಭಕ್ತರ ವಿವಿಧ ಸ್ಥಾನಮಾನಗಳ ಬಗೆಗೆ
ಮಾತನಾಡುವಾಗ ಅವನು ಜಾತಿ ಜಾತಿಗಳ ನಡುವಿನ ವಿಭಜನೆಯ ಬಗೆಗೆ ಹೇಳುತ್ತಿದ್ದಾನೆ. ಪಾವಿತ್ರತೆ ಆಧಾರಿತ
ಸಾಂಪ್ರದಾಯಿಕ ಏಣಿ-ಶ್ರೇಣಿ ವ್ಯವಸ್ಥೆಯಲ್ಲಿ ಬ್ರಾಹ್ಮಣನು ಅತ್ಯುನ್ನತ ಸ್ಥಾನದಲ್ಲಿರುವುದು ಮತ್ತು
ಕೀಳುಜಾತಿಗಳು ಅಂತ್ಯದಲ್ಲಿರುವುದು ಇಲ್ಲಿ ಗಮನಿಸಬಹುದು. ವಚನಕಾರರ ದೃಷ್ಟಿಯಲ್ಲಿ ಈ ಬಗೆಯ ವ್ಯವಸ್ಥೆಗೆ
ಯಾವುದೇ ಅರ್ಥವಿಲ್ಲ. ಭಕ್ತಿಯ ಕಾರಣದಿಂದಾಗಿ ಶಿವಶರಣರೆಲ್ಲರೂ ಸಮಾನರು. ಜಾತಿ ತಾರತಮ್ಯ ಅನುಸರಿಸಬಾರದು
ಎಂಬ ಬಸವಣ್ಣನ ಭರವಸೆ ಹಾಗೂ ವಿನಮ್ರತೆಗಳು ಈ ವಚನದಲ್ಲಿ ಅಡಕವಾಗಿವೆ.
ರೂಢಿಗತವಾದ ಜಾತಿ ಆಧಾರಿತ
ತಾರತಮ್ಯವನ್ನು ಮೀರಿ ಮಾನವ ಸಮಾನತೆಯನ್ನು ವಚನ ಚಳುವಳಿ ಸಾರಿತು.
` ನೆಲವೊಂದೆ ಹೊಲಗೇರಿ
ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನತಾನರಿದವಂಗೆ
ಫಲವೊಂದೆ ಷಡುದರುಷನ
ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ
ನಿಮ್ಮನರಿದವಂಗೆ’(ಬ.ವ.ಸಂ.879)
ಒಂದೇ ಎಂಬ ಪದವನ್ನು ಒತ್ತಿ ಒತ್ತಿ ಹೇಳುವ ಮೂಲಕ ಈ ವಚನದಲ್ಲಿ ಮಾನವ
ನಿರ್ಮಿತ ಭೇದಭಾವಗಳಿಗೆ ಪ್ರತಿಯಾಗಿ ವಚನವು ತನ್ನ ಪರಿಭಾಷೆಯಲ್ಲಿ ಏಕತೆಯ ಅಗತ್ಯವನ್ನು ಒತ್ತಿಹೇಳುತ್ತದೆ.
ದೇವಾಲಯ ಊರಮಧ್ಯದಲ್ಲಿ ನೆಲೆಗೊಂಡಿದ್ದರೆ ಅಸ್ಪೃಶ್ಯರ ವಸತಿ ತಾಣ ಊರಿನ ಹೊರವಲಯದಲ್ಲಿರುತ್ತದೆ. ಆದರೆ
ದೇವಾಲಯ ಮತ್ತು ಅಸ್ಪೃಶ್ಯರ ವಸತಿ ಹೊಲಗೇರಿಗಳೆರಡನ್ನೂ ಮಣ್ಣಿನ ಮೇಲೆ ಕಟ್ಟಲಾಗಿದೆ. ಈ ವಚನದಲ್ಲಿ
ಶ್ರೇಣಿ ರಚನೆಯ ಪವಿತ್ರತೆ ಮತ್ತು ಅಪವಿತ್ರತೆ ಎಂಬ ಎರಡು ಅಂತ್ಯಗಳನ್ನು ಕೂಡಿಸುವ ಕೆಲಸವನ್ನು ಮಾಡಲಾಗಿದೆ.
ಎರಡಕ್ಕೂ ಸಮಾನವಾದ ನೆಲೆಯು ಧಾರ್ಮಿಕ ಪಾವಿತ್ರ್ಯತೆಯನ್ನು ಆಧರಿಸಿದ ಕೃತಕ ತಾರತಮ್ಯಕ್ಕಿಂತ ಮಹತ್ವತೆಯನ್ನು
ಪಡೆದಿದೆ.
ವಚನ ಚಳುವಳಿಯಲ್ಲಿ,
ಅಷ್ಟಾವರಣಗಳಲ್ಲಿ ಒಂದಾದ ಲಿಂಗವು ಸಹ ಸಮಾನತೆಯ ಸಾಧನವಾಗಿ ಪರಿಣಮಿಸಿದೆ. ವಚನ ಚಳುವಳಿಯು ಭಕ್ತರ ಸಮುದಾಯದಲ್ಲಿ
ಸಮಾನತೆಯನ್ನು ಅನುಭವಿಸ ಬಹುದು ಎಂಬುದನ್ನು ಸಾರಿ ಸಾರಿ ಹೇಳಿದೆ. ಶಿವನ ಸಂಕೇತವಾದ ಲಿಂಗವನ್ನು ಆರಾಧನೆಯ
ಕೇಂದ್ರವನ್ನಾಗಿ ಮಾಡಿಕೊಂಡಿದೆ. ಈ ಚಳುವಳಿಯ ಅತ್ಯಂತ ಪ್ರಮುಖವಾದ ಪ್ರತಿಮೆಯೆಂದರೆ ಇಷ್ಟಲಿಂಗ. ಅದನ್ನು
ಪ್ರತಿಯೊಬ್ಬ ಭಕ್ತನೂ ದೇಹದ ಮೇಲೆ ಧರಿಸುತ್ತಿದ್ದನು ಮತ್ತು ಆರಾಧಿಸುತ್ತಿದ್ದನು. ಇಷ್ಟಲಿಂಗಾರಾಧನೆಯ
ನಿಮಿತ್ತ ಸಮಾಜದಲ್ಲಿ ಆಮೂಲಾಗ್ರ ಬದಲಾವಣೆಯಾಗುವುದರ ಸುಳುಹನ್ನು ಕೆಲವು ವಚನಗಳಲ್ಲಿ ಕಾಣಬಹುದಾಗಿದೆ.
`ಬಂದು ಬಲ್ಲಹ ಬಿಡಲು
ಹೊಲಗೇರಿ ಎಂಬ ಹೆಸರೊಳವೆ ಅಯ್ಯಾ?
ಲಿಂಗವಿದ್ದವರ ಮನೆ
ಕೈಲಾಸವೆಂದು ನಂಬಬೇಕು.
--------------------------
ಲೋಕದ ಡಂಬಕರ ಮಾತು
ಬೇಡ
ಕೂಡಲಸಂಗನಿದ್ದುದೇ
ಕೈಲಾಸ’ (ಬ.ವ.ಸಂ.82) ಈ ವಚನದಲ್ಲಿ ಅರಿವನ್ನು ಸಾಧಿಸಿಕೊಂಡ ಭಕ್ತ ಕೆಳವರ್ಗದವರ ಬೀದಿಗೆ ಬಂದು ನಿಂತಾಗ
ಆ ಸ್ಥಳದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಭಕ್ತನು ತನ್ನ ಜೊತೆಯಲ್ಲಿ ಇಷ್ಟಲಿಂಗವನ್ನು ಅಲ್ಲಿಗೆ
ತಂದಿರುವುದರಿಂದ, ಲಿಂಗವು ಪರಮಾತ್ಮನ ಪ್ರತಿನಿಧಿಯಾಗಿರುವುದರಿಂದ ಕೆಳವರ್ಗದವರ ಬೀದಿಯಲ್ಲಿಯೂ ಪರಮಾತ್ಮನಿದ್ದನೆಂಬ
ಆಶಯ ವ್ಯಕ್ತವಾಗುತ್ತದೆ. ಹೊಲಗೇರಿಯ ಬೀದಿಯಲ್ಲಿಯೂ ಪರಮಾತ್ಮನಿದ್ದಾನೆ. ಹೀಗಾಗಿ ಇಲ್ಲಿ ಅಸ್ಪೃಶ್ಯತೆಯ
ಪರಿಕಲ್ಪನೆಯೇ ತನ್ನ ಅರ್ಥವನ್ನು ಕಳೆದುಕೊಂಡು ಬಿಡುತ್ತದೆ. ಶಿವನ ಆವಾಸ ಕೈಲಾಸವಾದುದರಿಂದ ಆಸ್ಪೃಶ್ಯರ
ಬೀದಿಯನ್ನು ಆ ಪವಿತ್ರ ಕೈಲಾಸದ ಹೆಸರಿನಲ್ಲಿಯೇ ಕರೆಯ ಬೇಕೆಂಬ ನಿಲುವು ಇಲ್ಲಿ ಕಂಡು ಬರುತ್ತಿದ್ದು
ಸಂಪ್ರದಾಯ ವಿರೋಧಿ ನಿಲುವಾಗಿದೆ. ಲಿಂಗದ ರೂಪದಲ್ಲಿ ಪರಮಾತ್ಮನು ನೆಲೆಸಿರುವುದರಿಂದ ಅಸ್ಪೃಶ್ಯರ ಸಮುದಾಯ
ಕೂಡ ಉನ್ನತ ಮಟ್ಟಕ್ಕೇರ ಬಹುದು ಎಂಬ ಸಂದೇಶವನ್ನು ವಚನ ಚಳುವಳಿ ಸಾರಿದೆ. ಕೆಳವರ್ಗದವರಲ್ಲಿ ಜನಿಸಿದವರನ್ನು
ಲಿಂಗವು ಉತ್ತಮರನ್ನಾಗಿಸಿ ಬಿಡುವುದೆಂಬ ಆಶಯವನ್ನು ಹೊಂದಿದ್ದಿತು. ಜೊತೆಗೆ ಇಷ್ಟಲಿಂಗವೇ ಮಾನದಂಡವಾದಾಗ
ಸಾಂಪ್ರದಾಯಿಕ ಉನ್ನತ ಸ್ಥಾನಮಾನಗಳೇ ತಮ್ಮ ಪ್ರಭಾವ ಕಳೆದುಕೊಂಡು ಬಿಡುತ್ತದೆ.
`ಎಂತಹವನಾದಡೇನು, ಲಿಂಗವ
ಮುಟ್ಟದವನೇ ಕೀಳುಜಾತಿ
ಕುಲವಹುದು ತಪ್ಪದು
ಲಿಂಗವ ಮುಟ್ಟಲೊಡನೆ
ಹೊನ್ನಹುದು ತಪ್ಪದು
ಪರುಷ ಮುಟ್ಟಲೊಡನೆ
ಕೂಡಲ ಸಂಗಮದೇವನೊಲ್ಲ
ಸರ್ವಸಂದೇಹಿಗಳ’ (ಬ.ವ.ಸಂ.142) ಈ ವಚನದಲ್ಲಿ ಇಷ್ಟಲಿಂಗ ಸ್ಪರ್ಶ ಮಾತ್ರದಿಂದ ಜನತೆಯ ಸ್ಥಾನಮಾನಗಳಲ್ಲಿ
ಆಮೂಲಾಗ್ರ ಬದಲಾವಣೆಗಳಾಗಬಹುದು. ಜೊತೆಗೆ ಇಷ್ಟಲಿಂಗದ ಸಂಪರ್ಕವಿಲ್ಲದವನಿಗೆ ಯಾವ ಸ್ಥಾನಮಾನವೂ ಇಲ್ಲ.
ಯಾರು ಲಿಂಗವನ್ನು ಧರಿಸುವುದಿಲ್ಲವೋ ಅವರು ಕೀಳುಜಾತಿಯವರಾಗಿ ಪರಿಗಣಿಸಲ್ಪಡುತ್ತಾರೆ. ಅಂದರೆ ವಚನ
ಚಳುವಳಿಯು ಲಿಂಗದಿಂದ ಮಾತ್ರ ಸಮಾಜದಲ್ಲಿ ಸ್ಥಾನಮಾನ ಪ್ರಾಪ್ತಿಯಾಗುತ್ತದೆ. ಹೆಣ್ಣಾಗಲೀ ಗಂಡಾಗಲೀ
ಇಷ್ಟಲಿಂಗದ ಆಧಾರದ ಮೇಲೆ ಅವರ ಸ್ಥಾನಮಾನಗಳು ನಿರ್ಧರಿತವಾಗುತ್ತವೆ. ಲಿಂಗಪ್ರತಿಮೆಯನ್ನು ಸ್ವೀಕರಿಸಿದ
ಮೇಲೆ ಜನರಿಗೆ ಶ್ರೇಷ್ಠಕುಲ ಲಭ್ಯವಾಗುತ್ತದೆ. ಲಿಂಗ ಧರಿಸಿದವರೆಲ್ಲಾ ಉನ್ನತ ಜಾತಿಯವರಾಗಿ ಬಿಡುತ್ತಾರೆ.
ಲಿಂಗಾರಾಧನೆಯು ಜಾತಿ ಮದಗಳನ್ನು ಮೀರಲು ಇರುವ ಸಾಧನ ಎಂದೂ, ಲಿಂಗವಿದ್ದಡೆ ಜಾತಿ ಇರಲು ಸಾಧ್ಯವಿಲ್ಲ
ಎಂಬ ನಿಲುವನ್ನು ವಚನ ಚಳುವಳಿಯು ತಾಳಿತ್ತು. ವಚನ ಚಳುವಳಿಯು ಜಾತಿಗೆ ಸಹವರ್ತಿಯಾಗಿರುವ ಮೈಲಿಗೆಯ
ಕುರಿತು ,
`ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ
ಕುಲವುಂಟೆ ಜಂಗಮವಿದ್ದೆಡೆಯಲ್ಲಿ
ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ?
ಅಪವಿತ್ರದ ನುಡಿಯ ನುಡಿವ
ಸೂತಕವೆ ಪಾತಕ’ (ಬ.ವ.ಸಂ.770) ಎಂಬ ವಿಚಾರವನ್ನು ಮಂಡಿಸಿದೆ. ಲಿಂಗವಿದ್ದೆಡೆಯಲ್ಲಿ ಅಪವಿತ್ರತೆ ಇರಲು
ಸಾಧ್ಯವಿಲ್ಲ. ಲಿಂಗವು ಎಲ್ಲ ವಿಧದ ಅಪವಿತ್ರತೆಯನ್ನು ಹೋಗಲಾಡಿಸುತ್ತದೆ. ಅದೇ ರೀತಿ ಪ್ರಸಾದವೂ ಅಷ್ಟೇ.
ಪವಿತ್ರತೆಯ ಮೂಲವಾದ ಲಿಂಗವನ್ನು ಯಾರು ಧರಿಸಿದ್ದಾರೆಯೋ ಅವರು ಎಲ್ಲಾ ವಿಧದ ಮೈಲಿಗೆಯಿಂದಲೂ ಮುಕ್ತರು.
ವಚನ ಚಳುವಳಿಯು ಪರಮಾತ್ಮನಿಂದಲೂ ಬೇರ್ಪಡಿಸಲಾಗದ ಲಿಂಗಧರಿಸಿದವರ ಜೊತೆಗೆ ತಾನು ಸಾಧಿಸಿಕೊಳ್ಳಬೇಕಾದ
ಸಂಬಂಧಕ್ಕೆ ಎಲ್ಲವನ್ನೂ ಅವರ ಅಧೀನಕ್ಕೆ ಒಪ್ಪಿಸುತ್ತೇನೆಂಬ ನಿಲುವನ್ನು
`ಆವನಾದಡೇನು
ಶಿವಲಿಂಗದೇವರ ಅಂಗದ
ಮೇಲೆಉಳ್ಳವರ
ಪಾದರಕ್ಷೆಯ ಕಾದು ಬದುಕುವೆ
ಎಂದು’ (ಬ.ವ.ಸಂ.464) ತಾಳಿದೆ.
ಬಸವಾದಿ ಪ್ರಮಥರ ಸಾಮಾಜಿಕ
ಪ್ರಜ್ಞೆಯು ಸಮಾಜ ಸುಧಾರಕ ಮನಸ್ಸಿನಂತಹದ್ದು. ತಾನು ನಂಬಿದ ಧರ್ಮಶ್ರದ್ಧೆಯನ್ನು ಸಾರ್ವತ್ರಿಕಗೊಳಿಸುವಂತಹದ್ದು.
ಅನುಷ್ಠಾನ ಮಾರ್ಗದಲ್ಲೂ, ಸುತ್ತಲಿನ ಸಮಾಜವನ್ನು ಸುಧಾರಿಸುವಾಗ ಓರೆ-ಕೋರೆಗಳನ್ನು ಕಾಣುವಾಗ ಇತರರಿಗೆ
ತಿದ್ದಲು ಹೇಳುವುದರ ಜೊತೆಗೆ ತಾನು ತಿದ್ದಿಕೊಳ್ಳುವ ಭಕ್ತ ಹೃದಯದ ಕಳಕಳಿ ಆತ್ಮತೆಯನ್ನು ಸಾಮಾಜಿಕ
ವಿಡಂಬನೆಯಲ್ಲಿ ಗುರುತಿಸಬಹುದಾಗಿದೆ. ಜಾತಿಪದ್ಧತಿಯ ಮೂಲವನ್ನು ವಸ್ತುನಿಷ್ಠವಾಗಿ ಗ್ರಹಿಸಿದ ಬಸವಣ್ಣ
ಅದರ ಪೊಳ್ಳುತನವನ್ನು ಬಯಲಿಗೆಳೆದಿದ್ದಾರೆ. ಜಾತಿ ಮತ್ತು ವ್ಯಕ್ತಿಗಳ ಸಂಬಂಧವನ್ನು ಖಚಿತವಾಗಿ ಗುರುತಿಸಿದ್ದಾರೆ.
`ಕಾಸಿ ಕಮ್ಮಾರನಾದ
ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ
ವೇದವನೋದಿ ಹಾರುವನಾದ ‘ (ಬ.ವ.ಸಂ.354)
ಎನ್ನುವ ಬಸವಣ್ಣನವರ ಮಾತುಗಳಲ್ಲಿ ಜಾತಿಪದ್ಧತಿಯನ್ನು ವಿಶ್ಲೇಷಿಸಿರುವ
ಪರಿಯನ್ನು ಕಾಣಬಹುದು. ಸಾಮಾಜಿಕ ವ್ಯವಸ್ಥೆಯಲ್ಲಿ ಮತ-ವ್ಯಕ್ತಿ-ಲಿಂಗ ಭೇದಗಳೆಲ್ಲಾ ಅಳಿದು ಶಿವಭಕ್ತಿ
ಸಾಧನೆಯೊಂದೇ ತಳಹದಿಯೆಂದು ಪ್ರತಿಪಾದಿಸಿದ ಬಸವಣ್ಣ ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರನ್ನೆಲ್ಲ
ಒಂದೇ ಎಂದು ನಿರ್ಣಯಿಸಿದರು. ಧರ್ಮ, ಕುಲ, ಜಾತಿ ಮೊದಲಾದ ಪರಂಪರೆಗಳಿಗೆ ಮಹತ್ವ ಕೊಡದ ಬಸವಣ್ಣನವರು
ಹೊಲೆತನ ಎಂಬುದು ಜಾತಿಯಲ್ಲ. ಸಮಾಜದ ಎಲ್ಲಾ ವರ್ಗದಲ್ಲಿಯೂ ಇದ್ದಾರೆಂಬುದನ್ನು
ಕೊಲುವನೇ ಮಾದಿಗ ಹೊಲಸ ತಿಂಬುವನೇ ಹೊಲೆಯ
ಕುಲವೇನೋ ಅವಂದಿರ ಕುಲವೇನೋ
ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲ ಸಂಗನ ಶರಣರೇ ಕುಲಜರು (ಬ.ವ.ಸಂ.591) ಎಂದು ಹೇಳಿದ್ದು
ಚಿಂತನಾರ್ಹವಾಗಿದೆ..
ಈ ಹೇಳಿಕೆಯಲ್ಲಿ ಸಕಲ
ಜೀವಿಗಳಿಗೂ ಒಳ್ಳೆಯದನ್ನು ಬಯಸುವವನೇ ಶ್ರೇಷ್ಠ ಕುಲಜ ಎಂಬ ಪ್ರತಿಪಾದನೆಯನ್ನು ಕಾಣಬಹುದಾಗಿದೆ. ಜಾತಿಯ
ಉಚ್ಛ-ನೀಚ ಭ್ರಮೆಗೆ ಈಡಾಗಿದ್ದವರನ್ನು ದಾರಿಗೆ ತರಲು ಪ್ರಯತ್ನಿಸಿದರು. ಅಂಧ ಸಂಪ್ರದಾಯ, ಕಂದಾಚಾರ,
ಮೂಢ ನಂಬಿಕೆಗಳು, ಅಮಾನವೀಯ ಆಚರಣೆಗಳನ್ನು ಬಸವಣ್ಣನವರು ಸಾರಸಗಟಾಗಿ ತಿರಸ್ಕರಿಸಿ ಅಲ್ಲಗಳೆದಿದ್ದಾರೆ.
ಶರಣರು ಮಾನವನಿಂದ
ಮಾನವನ ಶೋಷಣೆಯಿಲ್ಲದ ಮುಕ್ತ ಸಮಾಜವನ್ನು ಕಟ್ಟ ಬಯಸಿದರು. ಚತುರ್ವಣ್ಣಗಳು ಹುಟ್ಟಿನಿಂದಲೇ ಯೋಗ್ಯತೆಯನ್ನು
ನಿರ್ಧರಿಸುವ ಚತುರ್ ಸಾಧನವಾಗಿ ಪರಿಣಮಿಸಿ ಸಮಾಜದ ಚೌಕಟ್ಟಿನಲ್ಲಿ ನಾಲ್ಕು ವರ್ಣಗಳಲ್ಲದೆ ಅದರ ಹೊರಗೆ
ಪಂಚಮರಿದ್ದರು. ಆಗಿನ ಕಾಲದಲ್ಲಿ ಇವರ ಸ್ಥಿತಿಯು ಚಿಂತಾಜನಕವಾಗಿದ್ದಿತು. ಅವರು ಊರೊಳಗೆ ಬರಬೇಕಾದರೆ
`ಸಂಬೋಳಿ-ಸಂಬೋಳಿ’ ಎಂದು ಕೂಗುತ್ತ ಬರಬೇಕಾಗಿತ್ತು. ಅಂತ್ಯಜರು ಅಂದು ವೇದಶಾಸ್ತ್ರಗಳನ್ನು ಓದುವುದಿರಲಿ,
ಕಿವಿಯಿಂದ ಕೇಳಿಸಿಕೊಂಡರೂ ಕಿವಿಗೆ ಸೀಸ ಕಾಯಿಸಿ ಬಿಡುವಷ್ಟು ಕರ್ಮದ ಆಚರಣೆ ಕ್ರೂರವಾಗಿತ್ತು. ಬಸವಾದಿ
ಪ್ರಮಥರು ಶೋಷಣೆಗೆ ಒಳಗಾಗಿದ್ದ ಇಂತಹವರ ಜೊತೆಗೆ ಮೊದಲಿಗೆ ಸಖ್ಯವನ್ನು ಬೆಳಸಿ, ಅದುವರೆವಿಗೂ ಇದ್ದ
ನಿರ್ಬಂಧಗಳಿಂದ ಧರ್ಮವನ್ನು ವಿಮುಕ್ತಗೊಳಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ಸರಳಗೊಳಿಸಿದರು. ಹೊಸ
ಸಮಾಜದ ನಿರ್ಮಾಣಕ್ಕಾಗಿ ಬಸವಣ್ಣ ಮಾಡಿದ ಮೊದಲನೆ ಕೆಲಸವೆಂದರೆ, ತಮ್ಮ ಧರ್ಮ ಮಂದಿರದ ಎಲ್ಲಾ ಬಾಗಿಲುಗಳನ್ನು
ಕೂಡಾ ತೆರೆದಿದ್ದು. ಅಲ್ಲಿ ಉತ್ತಮ-ಹೀನ ಎಂಬ ಭೇದವಿಲ್ಲ. ಶ್ರೀಮಂತ-ದರಿದ್ರರೆಂಬ ತಾರತಮ್ಯವಿಲ್ಲ.
ಅವರು ಬೋಧಿಸಿದ ಧರ್ಮವೂ ಅತ್ಯಂತ ಸರಳವಾದುದು. ವಚನಕಾರರು ಜನರಿಗೆ ತಿಳಿಸಿದ ಸೂತ್ರಗಳು ಅತ್ಯಂತ ಸರಳ.
ಕಳಬೇಡ ಕೊಲಬೇಡ ಹುಸಿಯ ನುಡಿಯ ಬೇಡ, ದಯವಿಲ್ಲದ ಧರ್ಮವಾವುದಯ್ಯ ದಯವೇ ಬೇಕು ಸಕಲ ಪ್ರಾಣಿಗಳೆಲ್ಲದರಲ್ಲಿ,
ದೇವಲೋಕ ಮರ್ತ್ಯಲೋಕ ಬೇರಿಲ್ಲ ಕಾಣಿರೋ, ಆಚಾರವೇ ಸ್ವರ್ಗ ಅನಾಚಾರವೇ ನರಕ ಇತ್ಯಾದಿ ಸರಳ ನುಡಿಗಳಿಗೆ
ಮನಸೋತ ಹತಾಶರಾಗಿದ್ದ ಕೆಳವರ್ಗದ ಜನತೆ ಬಸವಣ್ಣನ ವಿನೂತನ ಧರ್ಮಕ್ಕೆ ತಂಡೋಪತಂಡವಾಗಿ ಪಾಲ್ಗೊಂಡರು.
ವೈದಿಕರಿಂದ ಬರುತ್ತಿದ್ದ ಅಡೆತಡೆಗಳಿಗೆ `ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ. ವೇದ ಘನವೆಂಬೆನೆ
ಪ್ರಾಣಿವಧೆಯ ಹೇಳುತ್ತಿದೆ’ ಎಂದು ವೈದಿಕರ ದೋಷಗಳಿಂದಲೇ ಪಡೆದ ಅಸ್ತ್ರಗಳನ್ನುಪಯೋಗಿಸಿಕೊಂಡು ಅವರ
ಎಲ್ಲಾ ಡಾಂಭಿಕತೆ, ಕುಟಿಲ ತಂತ್ರಗಳನ್ನೆಲ್ಲ ಮುಲಾಜಿಲ್ಲದೇ ಖಂಡಿಸಿದರು.ಬಸವಣ್ಣನವರು ತನ್ನನ್ನು ತಾನೇ
ವಿಮರ್ಶಿಸಿಕೊಳ್ಳುತ್ತಾ ತನ್ನ ಹುಟ್ಟಿನಿಂದ ಹಿಡಿದು ಸರ್ವಸ್ವವನ್ನು ದಲಿತರ ಜೊತೆ ಸಮೀಕರಿಸಿ ಕೊಂಡರು.
`ಕೀಳಾಗಲಲ್ಲದೆ ಮೇಲಾಗಲೊಲ್ಲೆನು, ನಾನು ಹಾರುವನೆಂದರೆ ಕೂಡಲಸಂಗಮದೇವ ನಗುವನಯ್ಯಾ’ ಎನ್ನುತ್ತ ತನ್ನ
ಹುಟ್ಟಿನ ನಿಜದ ತಂದೆ ತಾಯಿಗಳ ಬದಲಿಗೆ ಅಂದಿನ ಸಮಾಜದ ಅತ್ಯಂತ ಕೆಳ ಮಟ್ಟದಲ್ಲಿದ್ದ ಜನರನ್ನೇ ತನ್ನ
ತಂದೆ ತಾಯಿಗಳೆಂದು ಸ್ವೀಕರಿಸಿದರು. ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ ಎಂದು ಅದುವರೆವಿಗೂ ಪ್ರಚಲಿತವಿದ್ದ
ಅಥವಾ ನಂಬಿದ್ದ ಮೌಲ್ಯಗಳನ್ನು ಧಿಕ್ಕರಿಸುತ್ತ ದಲಿತರ ಮನೋಸ್ಥೈರ್ಯಗಳನ್ನು ಹೆಚ್ಚಿಸುವ ಅಂಶಗಳನ್ನು
ಬಳಸಿಕೊಂಡು ಸಮಾಜದ ಬದಲಾವಣೆಗಳನ್ನು ಮಾಡ ಹೊರಟರು. ಈ ಚಳುವಳಿಯ ಪ್ರಕಾರ ವೀರಶೈವರಾಗುವುದು ಎಂದರೆ
ಕೆಳಜಾತಿ ಜನರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿ ಕೊಳ್ಳುವುದಾಗಿತ್ತು. ಬಸವಾದಿ ಪ್ರಮಥರು ತಮ್ಮ
ವಚನಗಳ ಮೂಲಕ ಸಾಂಪ್ರದಾಯಿಕ ಮೌಲ್ಯ-ನಿಯಮಗಳಿಗೆ ಪ್ರತಿಯಾಗಿ ಆಧ್ಯಾತ್ಮಿಕ ಸಾಧನೆಯನ್ನು ಮಾನದಂಡವಾಗಿ
ಬಳಸುವ ಪದ್ಧತಿಯನ್ನು ಅನುಸರಿಸಿದರು.
ಬಸವಣ್ಣ ಮಧ್ಯಕಾಲೀನ
ಯುಗಕ್ಕೆ ಸೇರಿದವರಾದರೂ ಆಧುನಿಕರಾಗಿ ಕಾಣಬರುತ್ತಾರೆ. ಸರಳ ಭಕ್ತರೆನಿಸಿದ್ದ ಬಸವಣ್ಣ ಇಡೀ ಪ್ರಪಂಚದಲ್ಲಿ
ತಾನೊಬ್ಬನೇ ಭಕ್ತನೆಂದೂ, ಉಳಿದ ಶರಣರೆಲ್ಲಾ ತನಗೆ ಭಗವಂತನ ಸ್ವರೂಪಿಗಳೆಂದು ವಿನಯದಿಂದ ಸಾರಿದರು.
ಸಂಪ್ರದಾಯ ಜಡತೆಯಿಂದ ನಿಶ್ಚೇಷ್ಟಿತವಾಗಿದ್ದ ಒಂದು ಇಡೀ ಯುಗಕ್ಕೆ ಉತ್ಸಾಹ ರೂಪದಲ್ಲಿ ಕಾಣಿಸಿಕೊಂಡವರಾಗಿದ್ದಾರೆ.
ಸಾಂಪ್ರದಾಯಿಕ ವೈದಿಕ ಶಿಕ್ಷಣ ಕೇಂದ್ರವಾಗಿದ್ದ ಅಗ್ರಹಾರವೊಂದರ ಬ್ರಾಹ್ಮಣನೊಬ್ಬನ ಮಗನಾಗಿ ಜನಿಸಿದ
ಅವರು ಬ್ರಾಹ್ಮಣ್ಯವು ಭಕ್ತಿಗಿಂತ ಕರ್ಮಕ್ಕೆ ಪ್ರಾಮುಖ್ಯ ನೀಡುವುದೆಂದು ಚಿಕ್ಕವಯಸ್ಸಿನಲ್ಲಿ ಉಪನಯನವನ್ನು
ತಿರಸ್ಕರಿಸಿದವರು. ತಾನು ಕೈಗೊಂಡಿದ್ದ ಧಾರ್ಮಿಕ ಆಂದೋಲನದ ಎಲ್ಲಾ ಪ್ರಗತಿಪರ ಬೀಜಗಳನ್ನು ತನ್ನಲ್ಲಿ
ಹುದುಗಿಸಿಕೊಂಡಿದ್ದ ವೀರಶೈವ ಧರ್ಮವು ಬಸವಣ್ಣನವರ ನೇತೃತ್ವದಲ್ಲಿ ವ್ಯಾಪಕತ್ವವನ್ನು ಪಡೆಯಿತು. ವೀರಶೈವ
ಧರ್ಮದ ಪ್ರಕಾರ ಭಕ್ತಿಯೇ ನಿಜವಾದ ಲಿಂಗಪೂಜೆಯಾಗಿತ್ತು. ಅದು ಜಾತಿಭೇದವನ್ನು ಸಂಪೂರ್ಣವಾಗಿ ನಿರಾಕರಿಸಿತ್ತು.
ಶಿವಭಕ್ತರಲ್ಲಿ ಜಾತಿಭೇದವನ್ನು ಎಣಿಸಬಾರದೆಂಬುದು ವೀರಶೈವ ಧರ್ಮದ ಪ್ರಮುಖ ತತ್ವವಾಗಿತ್ತು.
ತನ್ನ ಬದುಕಿನುದ್ದಕ್ಕೂ
ಬಡವರ ಜೊತೆ ಅಬ್ರಾಹ್ಮಣರ ಜೊತೆ ತನ್ನನ್ನು ತಾನು ಸಮೀಕರಿಸಿಕೊಳ್ಳಲು ಯತ್ನಿಸಿದ ಬಸವಣ್ಣ ಅಂದಿನ ಆಂದೋಲನದ
ಕೇಂದ್ರ ವ್ಯಕ್ತಿಯಾಗಿದ್ದವನು. ಅಸ್ಪೃಶ್ಯ ಜಾತಿಯಿಂದ ಬಂದಿದ್ದ ದಲಿತರನ್ನು ಬಸವಣ್ಣನ ನೇತೃತ್ವದ ಚಳುವಳಿಯು
ಹಿರಿಯಮಾಹೇಶ್ವರರೆಂದು, ಹಿರಿಯ ಕುಲದವರೆಂದು ಕರೆಯುತ್ತಿದ್ದುದು ಅತ್ಯಂತ ಗಮನಾರ್ಹ ಸಂಗತಿ. ಮಾಹೇಶ್ವರ
ಎಂದರೆ ಶಿವನ ಅನುಯಾಯಿಗಳು ಮೇಲ್ವರ್ಗದ ವೀರಶೈವರು ಮಾಹೇಶ್ವರರಾದರೆ, ಕೆಳವರ್ಗದಿಂದ ಬಂದ ವೀರಶೈವರು
ಹಿರಿಯ ಮಾಹೇಶ್ವರರು. ಬಹುಶಃ ಕೆಳವರ್ಗದ ವೀರಶೈವರನ್ನು ಉಳಿದವರಿಗಿಂತ ಕಡಿಮೆಯಾಗಿ ಕಾಣುವ ಕೆಲವು ವೀರಶೈವರು
ಆ ಕಾಲದಲ್ಲಿದ್ದಿರಬೇಕು. ಅಂತಹ ಮನೋಭಾವವನ್ನು ತೊಲಗಿಸಬೇಕಾದರೆ ಕೆಳವರ್ಗದ ವೀರಶೈವರು ಉಳಿದವರ ಸಮಾನರು
ಮಾತ್ರವಲ್ಲ ಉಳಿದವರಿಗಿಂತ ಶ್ರೇಷ್ಠರು ಎಂದು ಹೇಳುವುದು ಅಗತ್ಯವಾಗಿತ್ತು. ಕ್ರಾಂತಿಕಾರಿ ಧೋರಣೆಯುಳ್ಳ
ಬಸವಣ್ಣ ಮೊದಲಿಗೆ ಕೊಳೆತು ನಾರುತ್ತಿದ್ದ ಸಮಾಜ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದವರು. ಹೊಸತನದ
ಹುಟ್ಟಿಗಾಗಿ ಪ್ರಾರಂಭಿಸಿದ ಸಮಾಜೋ ಧಾರ್ಮಿಕ ಆಂದೋಲನದ ನೇತಾರರಾಗಿ ವ್ಯವಸ್ಥಾಬದ್ಧ ಸಮಾಜದ ವಿರುದ್ಧ
ಕ್ರಾಂತಿಯನ್ನೇ ಸಾರಿದ ಬಸವಣ್ಣನವರ ವಚನಗಳಲ್ಲಿಯ ಸಾಮಾಜಿಕ ಪ್ರಜ್ಞೆಯನ್ನು ಕುರಿತಾದ ವಚನಗಳು ಸಮಾಜದಲ್ಲಿಯ
ಅಂಕು ಡೊಂಕುಗಳ ಬಗೆಗೆ ಅರಿವು ಮೂಡಿಸುವ ರೀತಿಯಲ್ಲಿವೆ.
ಇವರ ಕಾಲಕ್ಕೆ ಧರ್ಮವು
ಸತ್ವರಹಿತ ಸಂಪ್ರದಾಯಗಳ ಹೆಣಭಾರವೂ ಸಮಯ ಸಾಧಕರ ಮೂಲಕ ಶೋಷಣೆಯ ಮಾಧ್ಯಮವಾಗಿದ್ದು ಜನಸಾಮಾನ್ಯರ ಜೀವನವನ್ನು
ನಲುಗಿಸಿದ್ದಿತು. ಧರ್ಮವೇ ಜೀವನದ ಉಸಿರು ಎಂದು ನಂಬಿದ್ದ ಆ ಕಾಲದ ಜನತೆಗೆ ಧರ್ಮದ ತಿರುಳನ್ನು ತಿಳಿಸುವುದು
ಇವರಿಗೆ ಮುಖ್ಯವಾಗಿದ್ದಿತು. ಅಂದಿನ ಪುರೋಹಿತ ಸಂಸ್ಕೃತಿಯ ಬೇರನ್ನೇ ಅಲ್ಲಾಡಿಸಿ ವೇದಾಗಮಗಳ ಹೊರ ತೊಗಟೆಯನ್ನು
ಬಿಚ್ಚಿ ಒಳ ತಿರುಳನ್ನೆ ಜನತೆಗೆ ತೋರಿಸಿಕೊಟ್ಟರು. ಯಜ್ಞಯಾಗಾದಿಗಳನ್ನು ಖಂಡಿಸಿ ಬಹುದೇವತಾರಾಧನೆಯನ್ನು
ಹೊಡೆದು ಹಾಕಿ ಅದು ಧರ್ಮದಲ್ಲಿ ಕೇವಲ ಕರ್ಮಠನ ಎಂಬುದನ್ನು ವಚನಗಳ ಮೂಲಕ ಜನತೆಯಲ್ಲಿ ಬಿಂಬಿಸಿದರು.
ನೇಮ, ಹೋಮಗಳನ್ನು ಧಿಕ್ಕರಿಸಿದ್ದಲ್ಲದೆ ಅನರ್ಥ ಹೋಮ ಮಾಡುವ ವಿಪ್ರರಿಗೆ ಅವರ ಅಗ್ನಿ ಹೋಮಗಳನ್ನು,
ದ್ವಂದ್ವ ನೀತಿಯನ್ನು,
`ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು
ಕಿಚ್ಚೆದ್ದು ಸುಡುವಾಗ ಬಚ್ಚಲ ನೀರ ಬೀದಿಯ ಧೂಳ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯಾ ಕೂಡಲ ಸಂಗಮದೇವಾ
ವಂದನೆಯ ಮರೆದು ನಿಂದಿಸುತ್ತಿರ್ದರಯ್ಯಾ’ (ಬ.ವ.ಸಂ.584)ಎಂದು ಮೂದಲಿಸಿದರು.
ತಮ್ಮ ಹೊಸಧರ್ಮದ ಅಸ್ತಿತ್ವಕ್ಕೆ ಅಡೆ ತಡೆಯೊಡ್ಡಿದ ವೈದಿಕರಿಗೆ ಉತ್ತರವಾಗಿ
ವೇದಕ್ಕೆ ಒರೆಯಕಟ್ಟುವೆ
ಶಾಸ್ತ್ರಕ್ಕೆ ನಿಗಳವನ್ನಿಕ್ಕುವೆ
ತರ್ಕದ ಬೆನ್ನ ಬಾರೆತ್ತುವೆ
ಆಗಮದ ಮೂಲ ಕೊಯ್ಯುವೆ ನೋಡಯ್ಯಾ (ಬ.ವ.ಸಂ.717)
ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ
ವೇದ ಘನವೆಂಬೆನೆ? ಪ್ರಾಣಿ ವಧೆಯ ಹೇಳುತ್ತಿದೆ
ಶ್ರುತಿ ಘನವೆಂಬೆನೆ? ಮುರದಿಟ್ಟರಸುತ್ತಿದೆ (ಬ.ವ.ಸಂ.208)
ದ್ವೈತಾದ್ವೈತವನೋದಿ ಏನು ಮಾಡುವಿರಯ್ಯಾ
ಎಂದು ವಚನಗಳ ಮೂಲಕ ಅವರ ಡಾಂಭಿಕತೆ, ಕುಟಿಲ ತಂತ್ರಗಳನ್ನೊಳಗೊಂಡ ಶೋಷಣೆಯ
ಮಾರ್ಗವನ್ನು ಖಂಡಿಸಿದ್ದಾರೆ.
ʻಸ್ವಾನುಭವದ ನೆಲೆಗಟ್ಟಲ್ಲದೆ ಗಿಳಿಪಾಠದಂತೆ
ಪಡೆದ ಪಾಂಡಿತ್ಯ ವ್ಯರ್ಥವೆಂಬುದನ್ನು
ವೇದ ಭೇದಿಸಲರಿಯದೆ ಕೆಟ್ಟವು
ವೇದ ಘನವೆಂಬೆನೆ ಪ್ರಾಣಿವಧೆಯ ಹೇಳುತ್ತಿದೆʼ ಎಂದು ಪಾಂಡಿತ್ಯ ಜ್ಞಾನದ ಬಗೆಗೆ ತಿರಸ್ಕಾರ
ವ್ಯಕ್ತ ಪಡಿಸಿದ್ದಾರೆ. ಅರ್ಥವಿಲ್ಲದ ಕಾಲಕಾಲಕ್ಕೆ ಹೊಂದದ ಸಂಪ್ರದಾಯಗಳನ್ನು ಅವರು ಮೆಚ್ಚಿಲ್ಲ. ವರ್ಣಾಶ್ರಮದ
ಹೆಸರಿನಲ್ಲಿ ಸಮಾಜವನ್ನು ಒಡೆದು ಬಾಳುವ ನೇತಾರರನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದ್ದಾರೆ. ಕುಲ
ಜಾತಿಗಳ ತಾರತಮ್ಯದ ಬಗೆಗೆ ತಿರಸ್ಕಾರವನ್ನು ವ್ಯಕ್ತ ಪಡಿಸಿದ್ದಾರೆ. ಸ್ವತಃ ವಿಪ್ರ ಕುಲದಲ್ಲಿ ಹುಟ್ಟಿದ
ಬಸವಣ್ಣನವರೇ ಬ್ರಾಹ್ಮಣರನ್ನು ಅವರ ಕೊಂಕು ಸ್ವಾರ್ಥಗಳನ್ನು ಬಯಲಿಗೆಳೆದಿರುವುದು ಗಮನಾರ್ಹ ಸಂಗತಿ.
ವ್ಯಕ್ತಿ ಸ್ವಾತಂತ್ರ್ಯವನ್ನು ಮನ್ನಿಸಿದ್ದ ಬಸವಣ್ಣ ವ್ಯಕ್ತಿ ಪೂಜೆಯನ್ನು ಅಲಕ್ಷಿಸಿದ್ದಾರೆ.
ಬ್ರಾಹ್ಮಣ ದೈವವೆಂದು ನಂಬಿದ ಕಾರಣ
ಗೌತಮಮುನಿಗೆ ಗೋವಧೆಯಾಯಿತ್ತು
ಬಲಿಗೆ ಬಂಧನವಾಯಿತ್ತು
ಕರ್ಣನ ಕವಚ ಹೋಯಿತ್ತು (ಬ.ವ.ಸಂ.570)
ದಕ್ಷನಿಗೆ ಕುಂದಲೆಯಾಯಿತು.
ಅವರು ದೇವರಾಗಿದ್ದರೆ
ಹೀಗೇಕೆ ಆಯಿತು ಎಂಬುದಾಗಿ ಅಣಕವಾಡಿದ್ದಾರೆ. ವೈದಿಕ ವ್ಯಕ್ತಿ ತಾನು ಅತ್ಯಂತ ಚತುರನೆಂದು ತಿಳಿದಿದ್ದರೂ
ಅವನಲ್ಲಿಯೂ ಮೌಢ್ಯ ಸಾಕಷ್ಟಿದೆ ಎಂಬುದನ್ನು ಬಸವಣ್ಣ ತಮ್ಮ ಹಲವಾರು ವಚನಗಳಲ್ಲಿ ಗುರುತಿಸಿದ್ದಾರೆ.
ಜಾಣರ ದಡ್ಡತನದ ವಿಡಂಬನೆ ಮಾಡಿದ್ದಾರೆ.
`ನೀರಕಂಡಲ್ಲಿ ಮುಳುಗುವರಯ್ಯಾ
ಮರವ ಕಂಡಲ್ಲಿ ಸುತ್ತುವರಯ್ಯಾ
ಬತ್ತುವ ಜಲವ ಒಣಗುವ ಮರನ ಮೆಚ್ಚಿದವರು ನಿಮ್ಮನ್ನೆತ್ತ ಬಲ್ಲರು’(ಬ.ವ.ಸಂ.580)
`ಹಾರುವರ ಭಕ್ತಿ ಓಡಿನೊಳಗೆ ಅಗೆಯ ಹೊಯ್ದಂತೆ
ಕೆಳಯಂತೆ ಬೇರೂರದು ಮೇಲೆ ಫಲವಾಗದು
ಮೀಂಬುಲಿಗನ ಹಕ್ಕಿಯಂತೆ ನೀಡತಡಿಯಲಿದ್ದು
ಮೂಗ ಹಿಡಿದು ಧ್ಯಾನ ಮಾಡುವರಯ್ಯ
ಬಿಟ್ಟ ಮಂಡೆವೆರಸಿ ಬಾಯ ಮಿಡುಕಿಸುತ ಕಣ್ಣಮುಚ್ಚಿ ಬೆರಳೆಣಿಸುವರಯ್ಯಾ
ನಿಮ್ಮ ಕೈಯಲ್ಲಿ ಕಟ್ಟಿದ ದರ್ಭೆಯ ಹುಲ್ಲು
ಕೂಡಲ ಸಂಗನ ಅರಿಯದೆ ಮೊರೆಯಿಡುವಂತೆ’ (ಬ.ವ.ಸಂ.578)
ಬಸವಣ್ಣನವರು ತನ್ನ ಸ್ವ ಸಮಾಜವನ್ನು ಹೃದಯ ಬಿಚ್ಚಿ ಮನಸ್ಸು ತೆರೆದು
ವಿಡಂಬಿಸಿರುವುದನ್ನು ಮೇಲಿನ ವಚನಗಳು ಸೂಚಿಸುತ್ತವೆ.
ಬಸವಣ್ಣನವರು ಸಮಾಜದಿಂದ
ತಿರಸ್ಕಾರಕ್ಕೆ ಗುರಿಯಾಗಿದ್ದ ದಲಿತರ ಸಖ್ಯ ಬೆಳೆಸಿದರು. ನಿರ್ಬಂಧಗಳಿಂದ ಧರ್ಮವನ್ನು ಮುಕ್ತಗೊಳಿಸಿ
ಧಾರ್ಮಿಕ ವಿಧಿ ವಿಧಾನಗಳನ್ನು ಸರಳಗೊಳಿಸಿದರು. ನೂತನ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಧರ್ಮ ಮಂದಿರದ
ಎಲ್ಲಾ ಬಾಗಿಲುಗಳನ್ನು ತೆರೆದು ಕೆಳಸ್ತರದ ಎಲ್ಲಾ ವ್ಯಕ್ತಿಗಳಿಗೂ ಅವಕಾಶ ಕಲ್ಪಿಸಿಕೊಟ್ಟರು. ತನ್ನ
ಬದುಕಿನುದ್ದಕ್ಕೂ ಬಡವರ ಜೊತೆ, ಅಬ್ರಾಹ್ಮಣರ ಜೊತೆ ತನ್ನನ್ನು ತಾನು ಸಮೀಕರಿಸಿಕೊಳ್ಳಲು ಯತ್ನಿಸಿದ
ಬಸವಣ್ಣ ಅಂದಿನ ಆಂದೋಲನದ ಕೇಂದ್ರವ್ಯಕ್ತಿಯಾಗಿದ್ದವರು. ಒಬ್ಬ ಬ್ರಾಹ್ಮಣ ಮತ್ತು ಅಸ್ಪೃಶ್ಯನನ್ನು
ಅವರ ಹುಟ್ಟಿನಿಂದ ಗುರುತಿಸಬಾರದು. ಯಾವನೇ ಸದ್ ವ್ಯಕ್ತಿಯನ್ನು ಬ್ರಾಹ್ಮಣನೆಂದೂ, ಯಾವನೇ ಕೆಟ್ಟ ವ್ಯಕ್ತಿಯನ್ನು
ಅಸ್ಪೃಶ್ಯನೆಂದು ಕರೆಯಬಹುದು. ಎಲ್ಲರಿಗೂ ಒಳಿತನ್ನೇ ಬಯಸುವವನೇ ಶ್ರೇಷ್ಠ ಕುಲಜ ಎಂದು ಪ್ರತಿಪಾದಿಸಿದರು.
ಬಸವಣ್ಣ ತನ್ನನ್ನು ತಾನೇ ಸ್ವವಿಮರ್ಶೆ ಮಾಡಿಕೊಳ್ಳುತ್ತಾ ತನ್ನ ಹುಟ್ಟಿನಿಂದ ಹಿಡಿದು ಸರ್ವಸ್ವವನ್ನು
ದಲಿತರ ಜೊತೆ ಸಮೀಕರಿಸಿಕೊಂಡಿರುವುದನ್ನು ಈ ಕೆಳಕಂಡ ವಚನಗಳು ಸ್ಥಿರೀಕರಿಸುತ್ತವೆ.
`ಕೀಳಾಗಲಲ್ಲದೆ ಮೇಲಾಗಲೊಲ್ಲೆನು
ನಾನು ಹಾರುವನೆಂದರೆ ಕೂಡಲಸಂಗಮದೇವ ನಗುವೆನಯ್ಯಾ
ಚೆನ್ನಯ್ಯನ ಮನೆಯ ದಾಸಿಯ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ ಸಂಗವ ಮಾಡಿದರು
ಇವರಿಗೆ ಹುಟ್ಟಿದ ಮಗ ನಾನು
ಚೆನ್ನಯ್ಯ ನಮ್ಮಯ್ಯ ಚೆನ್ನಯ್ಯನ ಮಗ ನಾನು(ಬ.ವ.ಸಂ.346)
ತಾನು ಹುಟ್ಟಿನಿಂದ ಬ್ರಾಹ್ಮಣ. ಆದರೆ ಬ್ರಾಹ್ಮಣ ತಂದೆ ತಾಯಿಗಳಿಗೆ
ಹುಟ್ಟಿದವನಲ್ಲವೆಂದೂ ತಾನು ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯರ ದಾಸ-ದಾಸಿಯರ ಅಕ್ರಮ ಸಂಬಂಧದಿಂದ
ಜನಿಸಿದವನೆಂದು ಹೇಳಿಕೊಂಡು ಸಮಾಜದ ತೀರ ಕೆಳಸ್ತರದ ಜೊತೆ ತನ್ನನ್ನು ತಾನು ಸಮೀಕರಿಸಿಕೊಂಡು ಆ ಮೂಲಕ
ತನ್ನನ್ನು ಅಬ್ರಾಹ್ಮಣೀಕರಿಸಿಕೊಳ್ಳಲು ಪ್ರಯತ್ನಿಸಿದರು.
ಮಧುವಯ್ಯನು ಬ್ರಾಹ್ಮಣನಾಗಿದ್ದರೂ
ಹರಳಯ್ಯನು ಚಂಡಾಲನಾಗಿದ್ದರೂ ಅವರ ಸ್ನೇಹ ಬಾಂಧವ್ಯಗಳಿಗೆ ಊನ ಬರಲಿಲ್ಲ. ಹೀಗಿರುವಾಗ ಕುಲದಿಂದಧಿಕವೆಂದು
ಹೋರಾಡುವುದು ವ್ಯರ್ಥವೆಂಬ ಅಭಿಪ್ರಾಯ ವಚನಕಾರರದ್ದಾಗಿದೆ. ಸಾಮಾಜಿಕ ಸೇವಾಕಾರ್ಯಗಳಲ್ಲಿ ತನ್ನನ್ನು
ತೊಡಗಿಸಿಕೊಂಡಿದ್ದ ಸಿದ್ಧರಾಮನು ಕಲ್ಯಾಣದ ಸಂಪರ್ಕದಿಂದ ಮೇಲು-ಕೀಳುಗಳಂತಹ ಸಾಮಾಜಿಕ ಸಮಸ್ಯೆಗಳತ್ತ
ಕೂಡಾ ತನ್ನ ಗಮನವನ್ನು ಹರಿಸುವಂತಾದುದು ಅವನಲ್ಲಿ ಕಾಣುವ ಮಹತ್ವದ ಬೆಳವಣಿಗೆ. `ಸಿದ್ಧರಾಮನು ಲಿಂಗಧಾರಣೆಯಿಂದ
ಹೆಚ್ಚು ಅರ್ಥಪೂರ್ಣ ಸಮಾಜ ಕಾರ್ಯಕರ್ತನಾದನು. ಅದಕ್ಕೆ ಕಾರಣ ಅವನು ಧರಿಸಿದ ಲಿಂಗ ಅಲ್ಲ, ಅವನು ಸಂಪರ್ಕ
ಬೆಳೆಸಿಕೊಂಡ ವ್ಯಕ್ತಿಗಳು ಮತ್ತು ಅವರ ಸಾಮಾಜಿಕ ಚಿಂತನೆ.' ಸಿದ್ಧರಾಮರ ವಚನಗಳಲ್ಲಿ ಅನೇಕ ವೈಯಕ್ತಿಕ
ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಗುರುತಿಸಬಹುದಾಗಿದೆ. ಮಲ್ಲಿಕಾರ್ಜುನ ಲಿಂಗ ಪ್ರತಿಷ್ಠೆ
ಮಾಡೆಂದು ನಿರೂಪಿಸಿದುದು, ತನಗೆ ಬೇರೆ ಸ್ವಾತಂತ್ರ್ಯವಿಲ್ಲದ ಕಾರಣ ಲಿಂಗ ಪ್ರತಿಷ್ಠೆ ಮಾಡಿದುದು,
ಯೋಗಿಯ ಶರೀರ ವೃಥಾಯ ಹೋಗಲಾಗದು ಪುಣ್ಯವ ಮಾಡುವುದು ಲೋಕಕ್ಕೆ ಎಂಬ ಆದರ್ಶವನ್ನು ಮುಂದಿಟ್ಟುಕೊಂಡು
ಪುಣ್ಯ ಕಾರ್ಯಗಳನ್ನು ನೆರವೇರಿಸಿದ್ದು.
ಬಸವಣ್ಣನ ವಚನಗಳಲ್ಲಿ
ಹಿಂದೂ ಧಾರ್ಮಿಕ ಸಾಮಾಜಿಕ ವ್ಯವಸ್ಥೆಯು ರೂಪಿಸಿದ್ದ ಶುದ್ಧ ಅಶುದ್ಧತೆಯ ಕಲ್ಪನೆಗಳನ್ನು ನಿರಾಕರಿಸುತ್ತದೆ.
ಶಾಶ್ವತ ಅಶುದ್ಧತೆಯ ಒತ್ತಾಯಗಳಿಂದ ಸಾಮಾಜಿಕವಾಗಿ ಜಡಗೊಂಡಿದ್ದ ಕೆಳವರ್ಗದವರ ಬಗ್ಗೆ ಹೊಸ ಕಾಳಜಿಗಳನ್ನು
ಇವರ ವಚನಗಳಲ್ಲಿ ಕಾಣಬಹುದು. ಹುಟ್ಟೇ ಕಾರಣವಾಗಿ ಜಾತಿ ಮತ್ತು ಅಸ್ಪೃಶ್ಯತೆಯ ಮಿತಿಗಳಿಗೆ ಒಳಗಾಗುತ್ತಿದ್ದ
ಸ್ಥಾವರ ಹಾಗೂ ಕಠೋರ ನಿಯಮಗಳು ವಚನಗಳಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ. ಕೊಲುವವನೆ ಮಾದಿಗ,
ಹೊಲಸ ತಿಂಬುವವನೇ ಹೊಲೆಯ, ಕುಲವೇನೋ ಆವಂದಿರ ಕುಲವೇನೋ? ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ನಮ್ಮ
ಕೂಡಲಸಂಗಮ ಶರಣರೇ ಕುಲಜರು ಎಂಬ ನಿಲುವಿನ ಮೂಲಕ ಹಿಂಸೆ ಹಾಗೂ ಅಶುದ್ಧ ಕ್ರಿಯೆಗಳು ಜಾತಿಯ ನೆಲೆಯಲ್ಲಿ
ಪರಿಗಣಿತವಾಗದೇ ವ್ಯಕ್ತಿಯ ನೆಲೆಯಲ್ಲಿ ರೂಪುಗೊಳ್ಳುವ ರೀತಿಯಲ್ಲಿ ಗ್ರಹಿಸಲಾಗಿದೆ. ಜೊತೆಗೆ ಇನ್ನೊಂದು
ಪರಿಕಲ್ಪನೆಯನ್ನು ವಚನಕಾರರಲ್ಲಿ ಕಾಣಬಹುದಾಗಿದೆ. ಶಿವಭಕ್ತನಾದರೆ ಅಶುದ್ಧತೆಯ ಎಲ್ಲಾ ಅಂಶಗಳು ನಿವಾರಣೆಗೊಳ್ಳುತ್ತವೆ.
ಈ ಕಲ್ಪನೆಯು ಆ ಕಾಲಕ್ಕೆ ಅನಿವಾರ್ಯವಾದ ಐತಿಹಾಸಿಕ ಅವಶ್ಯಕತೆಯೂ ಆಗಿತ್ತು. ಕೆಲವರ್ಗದ ಜನ ವಚನಕಾರರ
ಈ ಧಾರ್ಮಿಕ ಕರೆಗೆ ಓಗೊಟ್ಟೇ ಶರಣ ಚಳುವಳಿಯಲ್ಲಿ ಪಾಲ್ಗೊಂಡವರಾಗಿದ್ದಾರೆ. ಶರಣರ ಕಲ್ಪನೆಯು ಹಾರುವವನಿಗೆ
ಅಧಿಕ ಎನ್ನುವ ವಚನಕಾರರ ಮಾತುಗಳು ಶುದ್ಧತೆಯ ಅಂಶವನ್ನು ಬ್ರಾಹ್ಮಣ ವರ್ಗದ ಶುದ್ಧತೆಯ ತಾತ್ವಿಕ ನೆಲೆಗಳ
ಜೊತೆಗೆ ಹೋಲಿಸಿ ಹೇಳಿದಂತವುಗಳೇ ಆಗಿವೆ. ವಚನಗಳು ಸೂಚಿಸಿದ್ದ ಭಕ್ತ(ಕೆಳವರ್ಗ) ವರ್ಗದ ಅಂತರಂಗ ಬಹಿರಂಗದ
ಶುದ್ಧತೆಯಾಗಲಿ, ನಡತೆಯಲ್ಲಿನ ಶುದ್ಧತೆಯಾಗಲಿ ಇವೆಲ್ಲವೂ ಬ್ರಾಹ್ಮಣ ವರ್ಗದ ಶುದ್ಧತೆಯ ಕಲ್ಪನೆಗಳಿಗೆ
ಸಮನಾಂತರವಾದ ಬೆಳವಣಿಗೆಯಾಗಿದ್ದು, ಪರಂಪರಾಗತ ಸಾಮಾಜಿಕ ವ್ಯವಸ್ಥೆಗೆ ಕೊಟ್ಟ ದೊಡ್ಡ ಕೊಡಲಿ ಪೆಟ್ಟೇ
ಆಗಿದೆ.
ಏನಯ್ಯಾ ವಿಪ್ರರು ನುಡಿದಂತೆ
ನಡೆಯರು, ಇಂದೆತಯ್ಯಾ?
ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು
ಬಟ್ಟೆ;
ಕೂಡಲಸಂಗಮದೇವಾ, ಹೊಲೆಯರ
ಬಸುರಲ್ಲಿ
ವಿಪ್ರರು ಹುಟ್ಟಿ ಗೋಮಾಂಸವ
ತಿಂಬುವರೆಂಬುದಕ್ಕೆ ಇದೇ ದೃಷ್ಟ (ಬ.ವ.ಸಂ.575)
ನಡೆನುಡಿಗಳ ಸಂಬಂಧದಲ್ಲಿ
ಹೊಲೆತನವನ್ನು ಗುರುತಿಸುವ ಬಸವಣ್ಣನ ಈ ವಚನವು ವಿಪ್ರವರ್ಗವನ್ನೇ ಸಂಪೂರ್ಣ ನಿರಾಕರಿಸುವುದು, ಉದ್ದೇಶಪೂರ್ವಕವಾಗಿಯೇ
ಆಗಿದೆ. ಬ್ರಾಹ್ಮಣ ಹಾಗೂ ಅಸ್ಪೃಶ್ಯತೆಯ ಗುಣಗಳು ಭಿನ್ನವಾದ ನೆಲೆಯಲ್ಲಿ ವಿವರಿಸಲ್ಪಡುವುದರ ಮೂಲಕ
ವರ್ಣವ್ಯವಸ್ಥೆಗೆ ಸಂಪೂರ್ಣ ವಿರೋಧವಾದ ಸಾಮಾಜಿಕ ಚಿತ್ರವನ್ನು ಈ ವಚನಗಳು ಇಡಲು ಪ್ರಯತ್ನಿಸುತ್ತವೆ.
ಇಲ್ಲಿ ಬ್ರಾಹ್ಮಣ ವರ್ಗ ಅತ್ಯಂತ ಕೆಳಗಿನ ಸ್ತರದಲ್ಲಿಯೂ; ಭಕ್ತನಾದ ಉಳಿದ ವರ್ಗವು ಮೇಲುಸ್ತರದಲ್ಲಿಯೂ
ಇಡಲ್ಪಡುತ್ತದೆ. ಸ್ಪಷ್ಟವಾದ ತಿರುವು-ಮುರುವು ಈ ವಚನಗಳ ಆಶಯವಾಗಿದೆ. ಹುಟ್ಟಿನಿಂದ ಶುದ್ಧತೆ-ಅಶುದ್ಧತೆಯನ್ನು
ತೀರ್ಮಾನಿಸುವ ಸ್ವರೂಪವನ್ನು ನಿರಾಕರಿಸುವ ಬಸವಣ್ಣನ ವಚನಗಳಲ್ಲಿ ಇನ್ನೊಂದು ಮುಖ್ಯವಾದ ಅಂಶವನ್ನು
ಗಮನಿಸಬಹುದು.
ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ ವೇದವನೋದಿ ಹಾರುವನಾದ
ಈ ವಚನವು ವೃತ್ತಿಯ ವಿಶಿಷ್ಟತೆಯನ್ನು ವಿವರಿಸುತ್ತಿದ್ದು, ಹುಟ್ಟಿಗೂ
ವೃತ್ತಿಗೂ ಜಾತಿಯ ಸಂಬಂಧವಿರಬಾರದೆಂದು ತಿಳಿಸುತ್ತದೆ. ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ? ಎನ್ನುವ
ಮಾತು ಹುಟ್ಟಿನಿಂದ ಮನುಷ್ಯರ ಸಮಾನತೆಯನ್ನು ಹೇಳುವಂತಹದ್ದು.
ವೈಯಕ್ತಿಕ ನೆಲೆಯಲ್ಲಿ
ಬಸವಣ್ಣನು ತನ್ನನ್ನು ತಾನು ಅಪವರ್ಗೀಕರಣಗೊಳಿಸಿಕೊಳ್ಳುವುದರ ಮೂಲಕ ಬ್ರಾಹ್ಮಣ ವರ್ಗದ ಶುದ್ಧತೆಯ ತಾತ್ವಿಕ
ನೆಲೆಗಳನ್ನು ದೃಢವಾಗಿ ನಿರಾಕರಿಸುವ ಮಟ್ಟವನ್ನು ಹೊಂದಿದ್ದಾನೆ.
ಶುದ್ಧತೆ-ಅಶುದ್ಧತೆಯ
ನೆಲೆಗಳ ಬಗ್ಗೆ ಚರ್ಚೆ ಮಾಡುವ ಸಂದರ್ಭದಲ್ಲಿ ಒಂದು ಮುಖ್ಯವಾದ ವಿಷಯವನ್ನು ಪ್ರಸ್ತಾಪಿಸಿದ್ದುದು ಉಂಟು.
ಅದು ಅಶುದ್ಧತೆಯ ನೆಲೆಗಳನ್ನು ಹೋಗಲಾಡಿಸುವ ಬಸವಣ್ಣನ ಆಲೋಚನಾ ಸ್ವರೂಪವನ್ನು ಕುರಿತದ್ದೇ ಆಗಿದೆ.
ಸ್ಪಷ್ಟವಾಗಿ ಬಸವಣ್ಣನ ವಚನಗಳು; ಶುದ್ಧತೆಯ ಸ್ವರೂಪವನ್ನು ವ್ಯಕ್ತಿಯು ಭಕ್ತನಾಗುವ ಕ್ರಿಯೆಯಲ್ಲಿ
ಸಮೀಕರಿಸುತ್ತವೆ. ಈ ಕ್ರಿಯೆ ವಾಸ್ತವವಾಗಿ ವ್ಯಕ್ತಿಗೆ ಹೊಸ ಧಾರ್ಮಿಕ ನೆಲೆಯೊಂದನ್ನು ಒದಗಿಸುವುದೇ
ಆಗಿದೆ. ಸಂಗ್ರಹವಾಗಿ ಹೇಳುವುದಾದರೆ ಸಾಂಸ್ಕೃತಿಕವಾಗಿ ಹೊಸ ವ್ಯಕ್ತಿತ್ವವನ್ನು ಹುಟ್ಟುಹಾಕಬೇಕೆನ್ನುವ
ನಿಲುವುಗಳನ್ನು ಅಲ್ಲಿ ಕಾಣುತ್ತೇವೆ. ಈ ನಿಲುವುಗಳು ವ್ಯವಸ್ಥೆಗೆ ಸೇರಿಹೋಗಿದ್ದ ಎಲ್ಲ ಅಂಶಗಳನ್ನು
ನಿರಾಕರಿಸುವ ಹಂತದಿಂದಲೇ ಪ್ರಾರಂಭವಾಗ ಬೇಕಾಗುತ್ತದೆ.
ವಚನ ಚಳುವಳಿಯಂತಹ
ಭಕ್ತಿ ಪಂಥವು ವ್ಯಕ್ತಿಯ ಧಾರ್ಮಿಕ ನಂಬಿಕೆ ಹಾಗೂ ಗ್ರಹಿಕೆಗಳನ್ನು ವೈಯಕ್ತಿಕವೆಂದು ಪ್ರತಿಪಾದಿಸಿತು.
ದೇವರನ್ನು ಕುರಿತ ಹಾಗೆ ಕಠಿಣ ನಿಯಮ ಆಚರಣೆಗಳಿಗೆ ಬದಲಾಗಿ ಮಾನವೀಯ ಸಂಬಂಧಗಳು ಏರ್ಪಡುವಂತೆ ಮಾಡಿರುವುದು
ವಚನಗಳ ಆಶಯಗಳಲ್ಲಿ ಪ್ರಮುಖವಾಗಿದೆ. ಭಾರತದ ಎಲ್ಲ ಭಕ್ತಿ ಚಳುವಳಿಗಳೂ ಮನುಷ್ಯರ ಸಮಾನತೆಯನ್ನು ಎತ್ತಿ
ಹಿಡಿಯುತ್ತವೆ.ಆಧ್ಯಾತ್ಮಿಕವಾಗಿ ಎಲ್ಲರೂ ಸಮಾನರು ಎಂಬುದನ್ನು ಎಲ್ಲವೂ ಒಪ್ಪಿಕೊಳ್ಳುತ್ತವೆ. ಇದು
ತಾತ್ತ್ವಿಕ ಮಟ್ಟದ ಸಮಾನತೆ. ಸಾಮಾಜಿಕ ಸಮಾನತೆಯು ಕೇವಲ ತಾತ್ವಿಕವಾದುದಲ್ಲ. ಅದು ಊಟ ವ್ಯವಹಾರಗಳಲ್ಲಿ
ಮಾತ್ರವಲ್ಲದೆ ಮದುವೆ ಸಂಬಂಧಗಳಲ್ಲಿಯೂ ವ್ಯಕ್ತವಾಗಬೇಕು. ಭಾರತೀಯ ಭಕ್ತಿ ಚಳುವಳಿಗಳು ಮನುಷ್ಯರ ಆಧ್ಯಾತ್ಮಿಕ
ಸಮಾನತೆಯನ್ನು ಮಾತ್ರ ಪ್ರತಿಪಾದಿಸಿದುವು, ಆದರೆ ಸಾಮಾಜಿಕ ಸಮಾನತೆಯ ಬಗ್ಗೆ ಮೌನ ವಹಿಸಿದವು. ಶರಣ
ಚಳುವಳಿಯೊಂದೇ, ಆಧ್ಯಾತ್ಮಿಕ ಸಮಾನತೆಗೆ ಬೆಲೆ ಬರುವುದು ಸಾಮಾಜಿಕ ಸಮಾನತೆಯಿಂದ ಮಾತ್ರ ಎಂಬುದನ್ನು
ಪ್ರತಿಪಾದಿಸಿದ್ದು ಮತ್ತು ಆಚರಣೆಗೆ ತಂದದ್ದು. ಭಾರತದ ಭಕ್ತಿ ಚಳುವಳಿಗಳಲ್ಲೆಲ್ಲ ಬ್ರಾಹ್ಮಣ ಮತ್ತು
ಅಸ್ಪೃಶ್ಯರ ಮಧ್ಯೆ ವಿವಾಹಕ್ಕೆ ಅವಕಾಶ ಮಾಡಿಕೊಟ್ಟದ್ದು ಶರಣ ಚಳುವಳಿಯೊಂದೇ ಎಂಬುದನ್ನು ನೆನೆದಾಗ
ಅದರ ವೈಶಿಷ್ಟ್ಯ ಎದ್ದು ಕಾಣುತ್ತದೆ. ಸಂಸಾರವೊಂದಿರುವಂತೆ, ಆ ಸಂಸಾರದ ಸುತ್ತ ಮುತ್ತ ದೊಡ್ಡ ಪ್ರಪಂಚವೂ
ಇದೆ ಎಂಬುದನ್ನು ಮರೆಯಬಾರದು. ಆ ದೊಡ್ಡ ಪ್ರಪಂಚವನ್ನೇ ವೀರಶೈವರು ಗುರು, ಲಿಂಗ, ಜಂಗಮ, ಭಕ್ತ ಎಂದು
ಕರೆದರು. ಎಂದರೆ, ವ್ಯಕ್ತಿ ತನ್ನ ಸಂಸಾರದ ಬಗ್ಗೆ ಜವಾಬ್ದಾರನಾಗಿರುವಂತೆಯೇ ಗುರು, ಲಿಂಗ, ಜಂಗಮ,
ಭಕ್ತರ ಬಗ್ಗೆಯೂ ಅವನಿಗೆ ಒಂದು ಹೊಣೆಯಿದೆ. ವ್ಯಕ್ತಿಗೆ ದೀಕ್ಷೆಯನ್ನು ಕೊಟ್ಟು ಸನ್ಮಾರ್ಗಕ್ಕೆ ದಾರಿದೀಪವಾದ
ವ್ಯಕ್ತಿಯೇ ‘ಗುರು’. ಇಡೀ ಜಗತ್ತನ್ನು ಸೃಷ್ಠಿಸಿ ಅದರ ಪಾಲಕ ಶಕ್ತಿಯಾಗಿರುವ ಭಗವಂತನೇ ಲಿಂಗ. ವಚನಗಳಲ್ಲಿ
ಜಂಗಮ ಎನ್ನುವುದು ಸಾಮಾನ್ಯವಾಗಿ ನಪುಂಸಕ ಲಿಂಗದಲ್ಲಿ ಬಳಕೆಯಾಗುತ್ತದೆ. ಆಧ್ಯಾತ್ಮಿಕ ಸಾಧನೆಗೆ ಒಪ್ಪಿಸಿಕೊಂಡು
ಸದಾ ಸಂಚಾರಿಯಾಗಿರುವ ವ್ಯಕ್ತಿಯೇ ಜಂಗಮ. ನಮ್ಮ ಸುತ್ತಮುತ್ತಣ ಸಮಾಜವನ್ನು ಭಕ್ತವರ್ಗ ಪ್ರತಿನಿಧಿಸುತ್ತದೆ
ಎಂದು ಬೇಕಾದರೆ ಭಾವಿಸಬಹುದು. ವಚನಕಾರರು ಗುರುವಿಗೆ ತನುವನ್ನೂ ಲಿಂಗಕ್ಕೆ ಮನವನ್ನೂ ಜಂಗಮಕ್ಕೆ ಧನವನ್ನೂ
ಸಲ್ಲಿಸಲೇಬೇಕು ಎಂದು ವಿಧಿಸಿದ್ದಾರೆ. ಎಂದರೆ, ವ್ಯಕ್ತಿ ತನ್ನ ವೃತ್ತಿಯ ಫಲವಾಗಿ ಬರುವ ಆದಾಯದ ಒಂದು
ಭಾಗವನ್ನು ತನ್ನ ಸುತ್ತಮುತ್ತಣ ಸಮಾಜದೊಡನೆ ಹಂಚಿಕೊಳ್ಳಲು ಸಿದ್ಧನಾಗಿರಬೇಕು. ತ್ಯಾಗಮನೋಭಾವದಿಂದ,
ಅರ್ಪಣ ಬುದ್ಧಿಯಿಂದ ಅನುಸರಿಸುವ ವೃತ್ತಿ ಕಾಯಕವೆನ್ನಿಸಿಕೊಳ್ಳುತ್ತದೆ. ತಾನು ಊಟ ಮಾಡುವ ಮೊದಲು ಯಥಾಶಕ್ತಿ
ಜಂಗಮರನ್ನು ಕರೆದು, ಅವರನ್ನು ತೃಪ್ತಿಪಡಿಸಿ ಬಳಿಕ ಉಣ್ಣಬೇಕೆಂದು ಕಾಯಕ ತತ್ವ ಹೇಳುತ್ತದೆ. ಜಂಗಮವು
ತೃಪ್ತಿ ಪಡೆದರೆ ಪರಮಾತ್ಮನಿಗೆ ತೃಪ್ತಿಯಾಗುತ್ತೆ ಎಂದು ವೀರಶೈವರು ನಂಬಿದ್ದರು. ಕೆಳಕ್ಕೆ ನೀರೆರೆದರೆ
ಮರದಲ್ಲಿ ಮೇಲೆ ಹೇಗೆ ಫಲ ಕಾಣಿಸುವುದೋ ಹಾಗೆ. ವ್ಯಕ್ತಿ ಕಾಯಕ ಮಾಡುವಾಗ ಒಮ್ಮೊಮ್ಮೆ ಪರಮಾತ್ಮನ ಧ್ಯಾನ
ಮರೆತರೂ ಅಂತಹ ತಪ್ಪೇನೂ ಆಗುವುದಿಲ್ಲ ಎಂದು ಭಾವಿಸಿದ್ದರು. ಶ್ರದ್ಧೆಯಿಂದ, ತ್ಯಾಗದಿಂದ ಮಾಡುವ ವೃತ್ತಿಗಿಂತ
ದೊಡ್ಡ ಧ್ಯಾನ ಸಾಧನೆ ಯಾವುದಿದೆ? “ಮಾಡುವ ಮಾಟದಿಂದಲೇ ಬೇರೊಂದನರಿಯಬೇಕು” ಎಂದು ವಚನಕಾರ ನುಡಿದಿದ್ದಾರೆ.
ತಾನು ಹಿಡಿದಿರುವ ವೃತ್ತಿಯೇ ವ್ಯಕ್ತಿಯನ್ನು ಪರಮಾತ್ಮನತ್ತ ಕೊಂಡೊಯ್ಯುವ ದಾರಿಯಾಗಬಲ್ಲದು.
ವಚನಕಾರರು ಅಂದು ಮಾಡಿದ
ದಲಿತೋದ್ಧಾರದ ಕಾರ್ಯದ ರೀತಿ ಮತ್ತು ಪ್ರಗತಿಗಳು ಸಾರ್ವಕಾಲಿಕವಾದ ಶ್ರೇಷ್ಠ ಧೈರ್ಯಗಳಿಂದ ಕೂಡಿದ್ದು
ಮಾನವೀಯ ಮೌಲ್ಯಗಳ ಉನ್ನತ ದಾಖಲೆಯಾಗಿ ಇಂದಿಗೂ ನಮ್ಮ ಮುಂದಿವೆ.
ಲಿಂಗಸಮಾನತೆ: ಪರಂಪರಾಗತವಾಗಿ ಮುಕ್ತಸ್ವಾತಂತ್ರ್ಯದಿಂದ
ವಂಚಿತವಾಗಿದ್ದ ನಾರಿಸಮುದಾಯವನ್ನು ಅಧಃಪಾತಾಳದಿಂದ ಮೇಲೆತ್ತಲು ವಚನಕಾರರು ಬಯಸಿದರು. ಶರಣ ಸಂಸ್ಕೃತಿಯಲ್ಲಿ
ಸ್ತ್ರೀ-ಪುರುಷ ಎಂಬ ತಾರತಮ್ಯ ಸಲ್ಲದು ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.ಲೋಕದ ನಾರಿಯರಿಗೆಲ್ಲ
ಮಾತೃ ಸ್ವರೂಪವನ್ನು ಕೊಟ್ಟರು. ಪರಪೂರ್ಣ ಜೀವನದ ಸಿದ್ದಿಗೆ ಸತಿಪತಿಯರಿಬ್ಬರೂ ಬೇಕು. ಒಬ್ಬರಿಲ್ಲದಿದ್ದರೆ
ಮತ್ತೊಬ್ಬರ ಬದುಕು ಅಪೂರ್ಣ. ಆಧ್ಯಾತ್ಮ ಸಿದ್ದಿಗೆ, ಸಾಧನೆಗೆ ಸ್ತ್ರೀ ಸಹಾಯಕಳೆಂದು ಭಾವಿಸಿ ಉನ್ನತ
ಸ್ಥಾನವನ್ನು ಕಲ್ಪಿಸಿಕೊಟ್ಟರು. ಸಂಪ್ರದಾಯದ ಸಂಕೋಲೆಗಳಿಂದ ಸ್ತ್ರೀ ಸಮುದಾಯವನ್ನು ಮುಕ್ತಗೊಳಿಸಲು
ಪ್ರಯತ್ನಿಸಿದರು. ಅನುಭವ ಮಂಟಪದಲ್ಲಿ ಶರಣೆಯರಿಗೂ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಿ ಕೊಟ್ಟರು. ಮಹಿಳೆಗೆ
ಜಗತ್ತಿನ ಯಾವ ಧರ್ಮದಲ್ಲಿಯೂ ಪಡೆಯದಿರುವ ಸಮಾನ ಅವಕಾಶಗಳು ವಚನ ಚಳುವಳಿಯಲ್ಲಿ ಲಭ್ಯವಾಯಿತು. ವಚನ
ಚಳುವಳಿ ಕಲ್ಪಿಸಿಕೊಟ್ಟ ವ್ಯಕ್ತಿಸ್ವಾತಂತ್ರ್ಯ- ವೈಚಾರಿಕ ಸ್ವಾತಂತ್ರ್ಯಗಳು ಪುರುಷರಿಗಷ್ಟೇ ಅಲ್ಲದೇ
ಸ್ತ್ರೀಯರಿಗೂ ಲಭಿಸಿತು.ವಚನ ಚಳುವಳಿಯು ಸ್ತ್ರೀಯರ ಸ್ಥಾನವನ್ನು ಉನ್ನತೀಕರಿಸುವಲ್ಲಿ ಶಿಕ್ಷಣದ ಪಾತ್ರ
ಪ್ರಮುಖ ಎಂಬುದರ ಬಗೆಗೆ ವಚನಕಾರರಲ್ಲಿ ಅರಿವಿತ್ತು. ತನ್ನನ್ನು ತಾನು ಕುರಿತು ತಿಳಿದುಕೊಳ್ಳುವಂತಹ
ಆತ್ಮ ಜ್ಞಾನದ ಬಗೆಗೆ ಪ್ರಾಮುಖ್ಯತೆ ಕೊಟ್ಟರು. ವಚನ ಚಳುವಳಿಯು ಸ್ತ್ರೀ-ಪುರುಷರಿಬ್ಬರೂ ತಮ್ಮನ್ನು
ತಾವು ತಿಳಿದುಕೊಳ್ಳಲು ಸಹಕಾರಿಯಾದ ಆತ್ಮಜ್ಞಾನ ಪಡೆಯುವ ಅವಕಾಶಗಳನ್ನು ಕಲ್ಪಿಸಿ ಕೊಟ್ಟಿತು. ವಚನಕಾರರಲ್ಲಿ
ಕೆಲವು ವಚನಕಾರ್ತಿಯರು ತಮ್ಮ ಅನುಭವಗಳಿಗೆ ವಚನದ ರೂಪ ನೀಡಿ ಅನುಭವ ಮಂಟಪದಲ್ಲಿ ಮುಕ್ತವಾಗಿ ವ್ಯಕ್ತಪಡಿಸಿ
ಆ ಕಾಲದ ಪುರುಷರಿಗೆ ಸರಿಸಮಾನವಾದ ಸಾಹಿತ್ಯವನ್ನು ಸೃಷ್ಟಿಸಿದ್ದ ವಚನ ಚಳುವಳಿಯ ವೈಶಿಷ್ಟ್ಯವು ಹೌದು.
ವಚನ ಚಳುವಳಿಯ ಕಾಲದಲ್ಲಿ ಸ್ತ್ರೀಯರು ತಮಗೆ ಬೇಕಾದ ಕಾಯಕದಲ್ಲಿ ನಿರತರಾಗುವ ಸ್ವಾತಂತ್ರ್ಯ ಮತ್ತು
ಅವಕಾಶಗಳನ್ನು ಹೊಂದಿದ್ದರು. ವಚನಕಾರ್ತಿಯರು ತಮ್ಮ ತಮ್ಮ ಗಂಡಂದಿರ ಜೊತೆಯಲ್ಲಿದ್ದುಕೊಂಡು ಅವರಿಗೆ
ವೈಚಾರಿಕ ಪತ್ನಿಯರಾಗಿದ್ದುಕೊಂಡು ವ್ಯವಸ್ಥೆಯ ಬಗೆಗೆ ವಸ್ತುನಿಷ್ಠವಾಗಿ ಅಭಿವ್ಯಕ್ತಿಸಿದ್ದಾರೆ. ಅಸಮಾನತೆ
ಅನೈತಿಕ ಸಂಗತಿಗಳ ಕುರಿತು ಪ್ರಶ್ನಿಸಿದ್ದಾರೆ. ವ್ರತಹೀನ ಆಚರಣೆಗಳನ್ನು ಖಂಡಿಸಿದ್ದಾರೆ. ವಚನ ಚಳುವಳಿಯು
ಸ್ತ್ರೀ ವಿಮೋಚನೆಗೆಂದು ಸ್ಥಾನ-ಮಾನಗಳನ್ನು ಎತ್ತರಿಸಲೆಂದು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿರಲಿಲ್ಲ.
ಸ್ತ್ರೀಯ ಉದ್ಧಾರವು ಈ ಚಳುವಳಿಯ ಒಂದು ಭಾಗವಾಗಿತ್ತು. ಅಲ್ಲಿಯವರೆಗೂ ಅನರ್ಹಗೊಳಿಸಿದ್ದ ಆಧ್ಯಾತ್ಮಿಕ
ಸಾಧನೆಯನ್ನು ಮಾಡುವ ಅವಕಾಶವನ್ನು ಸ್ತ್ರೀಯರಿಗೆ ಇದು ಒದಗಿಸಿ ಕೊಟ್ಟಿತು. ಇವರ ಕಾಲದಲ್ಲಿ ಸ್ತ್ರೀ
ವಿಮೋಚನೆಯು ಅವರ ಸಮಗ್ರ ಕ್ರಾಂತಿಯ ಒಂದು ಭಾಗವಾಗಿದ್ದರೂ ಅದು ಸಮಾಜದ ಅರ್ಧದಷ್ಟಿದ್ದ ಸ್ತ್ರೀ ಸಮುದಾಯಕ್ಕೆ
ಉತ್ಸಾಹವನ್ನು ನೀಡಿ ಅವರ ಆತ್ಮಸ್ಥೈರ್ಯವನ್ನು ನೀಡಿತು. ಶತಮಾನಗಳಿಂದ ಮಾತು ಕಳೆದುಕೊಂಡು ಮೂಕಳಾಗಿ
ಮೂಲೆಗುಂಪಾಗಿದ್ದ ಸ್ತ್ರೀಯು ಮಾತನಾಡುವುದರ ಮೂಲಕ, ಬರೆಯುವುದರ ಮೂಲಕ ಸಮಾನತೆಯನ್ನು ಪಡೆದಿದ್ದು ವಚನ
ಚಳುವಳಿಯ ಪ್ರಮುಖ ಧೋರಣೆಯಾಗಿದೆ.
ದೈಹಿಕ ಭಿನ್ನತೆಯೇ
ಲಿಂಗ ತಾರತಮ್ಯತೆಗೆ ಕಾರಣವಾಗಿದ್ದಂತಹ ಸಂದರ್ಭದಲ್ಲಿ ವಚನ ಚಳುವಳಿಯು, ಹೆಣ್ಣಾಗಲೀ ಗಂಡಾಗಲಿ ಸತ್ವ
ಚೈತನ್ಯಗಳೆಲ್ಲಾ ಒಂದೇ ಎಂದು ಭಾವಿಸಿ,
` ಮೊಲೆ ಮುಡಿ ಬಂದಡೆ
ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ
ಗಂಡೆಂಬರು
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡೂ
ಅಲ್ಲ ’(ಜೇ.ದಾ.ವ.ಸಂ.845) ಎಂಬ ಮೂಲಭೂತ ಸ್ತ್ರೀ ಪುರುಷ ಕಲ್ಪನೆಯನ್ನು ಹುಟ್ಟು ಹಾಕಿತು. ವಚನ ಚಳುವಳಿಯು
ತನ್ನ ಅತ್ಯಂತ ಕ್ರಾಂತಿಕಾರಕ ವಿಚಾರಗಳ ಮೂಲಕವಾಗಿ ತಂದ ಸಾಮಾಜಿಕ ಬದಲಾವಣೆಗಳಲ್ಲಿ ಸ್ತ್ರೀಗೆ ಆಧ್ಯಾತ್ಮಿಕ
ನೆಲೆಯಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸಿ ಕೊಡುವುದರ ಮೂಲಕ ಸಮಾಜದಲ್ಲಿ ಒಂದು ಸ್ಥಾನ ಮತ್ತು ಭದ್ರತೆಯನ್ನು
ಕಲ್ಪಿಸಿ ಕೊಟ್ಟಿತು. ಸಮಾನತೆಯ ನೆಲೆಯಲ್ಲಿ ನವ ಸಮಾಜ ನಿರ್ಮಾಣವಾಗಬೇಕೆಂಬ ವಚನ ಚಳುವಳಿಯ ಆಶಯದ ಭಾಗವಾಗಿ
ಲಿಂಗಸಮಾನತೆಯ ಹೋರಾಟ ಕಾಣಿಸಿ ಕೊಂಡಿತು. ಆಧ್ಯಾತ್ಮಿಕ ಸಾಧನೆಯಲ್ಲಿ ಅನುಭಾವಕ್ಕೆ ಏರುವಲ್ಲಿ ಸತಿ
ಪತಿ ಸಹಯೋಗ ಅತಿ ಮುಖ್ಯ ಎಂಬ ನಂಬಿಕೆಯೊಂದಿಗೆ ಹೊರಟ ವಚನ ಚಳುವಳಿಯು ಸ್ತ್ರೀಪರವಾದ ಉದಾತ್ತ ನಿಲುವುಗಳನ್ನು
ಪ್ರಮಾಣೀಕರಿಸಲು ಹೊರಟಿತು. ಇದರ ನಿಮಿತ್ತ ಅಧಿಕ ಸಂಖ್ಯೆಯಲ್ಲಿ ಸ್ತ್ರೀ-ಪುರುಷರು ಲಿಂಗದೀಕ್ಷೆ ಪಡೆದು
ಶರಣ-ಶರಣೆಯರೆನಿಸಿಕೊಂಡು ಜಾತಿ-ಲಿಂಗ ತಾರತಮ್ಯಗಳಿಂದ ಮುಕ್ತರಾದರು. ಬಸವಾದಿ ಪ್ರಮಥರು ಕೂಡಾ ಲಿಂಗ
ಸಮಾನತೆಯನ್ನು ಒಪ್ಪಿಕೊಂಡು ತಮ್ಮ ವಚನಗಳಲ್ಲಿ ಅಭಿವ್ಯಕ್ತಿಸಿದರು. ಆಧ್ಯಾತ್ಮ-ಅನುಭಾವಗಳಲ್ಲಿ ಮಹಿಳೆಯರು
ಪುರುಷರಿಗಿಂತ ಯಾವ ರೀತಿಯಲ್ಲಿಯು ಕಡಿಮೆಯಿಲ್ಲವೆಂದು ಶರಣೆಯರು ತಮ್ಮ ಭಕ್ತಿ ಸಾಧನೆಗಳ ಮೂಲಕ ತೋರಿಸಿ
ಕೊಟ್ಟರು. ಧಾರ್ಮಿಕ ಚಳುವಳಿಯ ಒಡಲೊಳಗಿಂದ ಹುಟ್ಟಿಕೊಂಡ ಸತಿ-ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ
ಎನ್ನುವ ನುಡಿಯು ಆಗಿನ ಕಾಲಕ್ಕೆ ಅತ್ಯಂತ ಪ್ರಗತಿದಾಯಕವಾಗಿ ಕಾಣುತ್ತದೆ. ಇಂತಹ ಸ್ತ್ರೀ ಪರವಾದ ವಿಚಾರಗಳು
ಆ ಕಾಲದ ಮಹಿಳೆಯರಲ್ಲಿ ಉತ್ಸಾಹ, ಆತ್ಮವಿಶ್ವಾಸ, ಆಧ್ಯಾತ್ಮಿಕ ಹಕ್ಕು, ಮೋಕ್ಷ ಸಾಧನೆಗೆ ಅವಕಾಶಗಳನ್ನು
ಕಲ್ಪಿಸಿ ಕೊಟ್ಟಿದ್ದರಿಂದ ಅಧಿಕವಾಗಿ ಕೆಳ ವರ್ಗದ ಮಹಿಳೆಯರು ತಂಡೋಪ ತಂಡವಾಗಿ ವಚನ ಚಳುವಳಿಯಲ್ಲಿ
ಪಾಲ್ಗೊಂಡರು. ತಾತ್ವಿಕ, ಆಧ್ಯಾತ್ಮಿಕ ಚರ್ಚೆ, ಅನುಭಾವ ಗೋಷ್ಠಿ, ವಚನ ರಚನೆ ಮುಂತಾದವುಗಳಲ್ಲಿ ತೊಡಗಿಸಿಕೊಂಡರು.
ಅಕ್ಕಮಹಾದೇವಿ, ಮುಕ್ತಾಯಕ್ಕ, ನೀಲಾಂಬಿಕೆ, ಅಕ್ಕನಾಗಮ್ಮ, ಗಂಗಾಂಬಿಕೆ ಮೊದಲಾದ ಮೇಲ್ವರ್ಗದ ಸ್ತ್ರೀಯರುಗಳ
ಜೊತೆಗೆ ಕೆಳ ವರ್ಗದಿಂದ ಬಂದ ಅಕ್ಕಮ್ಮ, ಕಾಳವ್ವೆ, ಸೂಳೆ ಸಂಕವ್ವೆ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ,
ಉರಿಲಿಂಗ ಪೆದ್ದಿಗಳ ಪುಣ್ಯ ಸ್ತ್ರೀ ಕಾಳವ್ವೆಯರಂತಹ ಹೆಚ್ಚಿನ ಸಂಖ್ಯೆಯ ಸ್ತ್ರೀಯರು ತಮ್ಮ ತಮ್ಮ ಸೀಮಿತ
ತಿಳಿವಳಿಕೆ ಜ್ಞಾನಗಳಿಗೆ ಅನುಗುಣವಾಗಿ ವಚನಗಳನ್ನು ರಚಿಸಿದರು. ಆಚಾರ, ಲಿಂಗನಿಷ್ಠೆ, ಷಟ್‌ಸ್ಥಲ ಇತ್ಯಾದಿಗಳನ್ನು
ಪ್ರಸ್ತಾಪಿಸುತ್ತಲೇ ಆಧ್ಯಾತ್ಮ ಮತ್ತು ಹೆಂಗಸರ ನಡುವೆ ಯಾವುದೇ ಅಂತರವಿಲ್ಲ ಎಂಬ ವಿಚಾರವನ್ನು ಪ್ರಸ್ತಾಪಿಸಿದರು.ಈ
ಅನಿಸಿಕೆಗಳು ಬಸವಾದಿ ಪ್ರಮಥರ ವಚನಗಳ ಮಾರ್ದನಿಯಂತೆ ಕಂಡು ಬಂದರೂ ಪ್ರತಿಕ್ರಿಯಿಸಿದ ರೀತಿ ಮಾತ್ರ
ಸೋಜಿಗವನ್ನು ಉಂಟು ಮಾಡತಕ್ಕದ್ದು.
ವಚನ ಚಳುವಳಿಯು ಮಹಿಳೆಯರಿಗೆ
ಸಾಮಾಜಿಕ ಭದ್ರತೆ, ಆಧ್ಯಾತ್ಮಿಕ ಸ್ವಾತಂತ್ರ್ಯಗಳನ್ನು ದಕ್ಕಿಸಿ ಕೊಡುವುದರ ಜೊತೆಗೆ ಕಾಯಕ ತತ್ವದ
ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಕಲ್ಪಿಸಿ ಕೊಟ್ಟಿತು. ಸ್ತ್ರೀಯರಿಗೆ ನೈತಿಕ ಬಲ, ಮನೋಬಲ, ಆತ್ಮ
ವಿಶ್ವಾಸಗಳನ್ನು ಕಲ್ಪಿಸಿ ಕೊಟ್ಟಿದ್ದಲ್ಲದೆ ಅರಿವು ಅನುಭವಗಳಿಗೆ ನಿರ್ಭಿಡೆಯ ಅಭಿವ್ಯಕ್ತಿ ನೀಡುವ
ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟಿತು.ಗುರು,ಲಿಂಗ, ಜಂಗಮದ ವಿಷಯವಾಗಿ ತಪ್ಪಿ ನಡೆದಲ್ಲಿ ಆಚಾರ ಲೋಪವಾದಲ್ಲಿ
ಮುಲಾಜಿಲ್ಲದೆ ಹೇಳುವಷ್ಟು ಧೈರ್ಯವನ್ನು ಪಡೆದರು. ಕಾಯಕ ನಿರ್ವಹಣೆಯಲ್ಲಿ ಆಯ್ದಕ್ಕಿ ಮಾರಯ್ಯ ಹೆಚ್ಚು
ಕಡಿಮೆ ಮಾಡಿದಾಗ, ಮತ್ತೊಮ್ಮೆ ಅಗತ್ಯಕ್ಕಿಂತ ಹೆಚ್ಚಿನ ಅಕ್ಕಿಯನ್ನು ತಂದಾಗ ಮಾರಯ್ಯನ ಮಡದಿ ಲಕ್ಕಮ್ಮ
ಪ್ರಭುದೇವರೊಂದಿಗೆ ವಾದಕ್ಕೆ ಪತಿ ಇಳಿದಿರುವುದನ್ನು ಲೆಕ್ಕಿಸದೇ ಕಾಯಕ ನಿಂದಿತ್ತು ಹೋಗಯ್ಯಾ ಎಂದು
ಎಚ್ಚರಿಸುತ್ತಾಳೆ. ಹೆಚ್ಚಿನ ಅಕ್ಕಿಯನ್ನು ತಂದಾಗ ` ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ, ಇದು ನಿಮಗಮ
ಮನವೋ? ಬಸವಣ್ಣನ ಅನುಮಾನ ಚಿತ್ತವೋ? ಈ ಮಾತು ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ ಸಲ್ಲದ ಬೋನ, ಅಲ್ಲಿಯೇ
ಸುರಿದು ಬನ್ನಿ ಮಾರಯ್ಯಾ’ ಎಂದು ದಿಟ್ಟತನದಿಂದ ಬುದ್ದಿವಾದ ಹೇಳುವ ಧೈರ್ಯವನ್ನು ಲಕ್ಕಮ್ಮ ತೋರಿದ್ದು
ವಚನ ಚಳುವಳಿಯ ಯಶಸ್ಸು. ಸ್ತ್ರೀಯರಿಗೆ ಹೆಚ್ಚಿನ ಗೌರವ ಸ್ಥಾನವನ್ನು ಕೊಟ್ಟುದು ಭಕ್ತಿ ಚಳುವಳಿಗಳ
ಹೆಗ್ಗಳಿಕೆಗಳಲ್ಲೊಂದು. ಅವು ಸ್ತ್ರೀಯರಿಗೆ ದೀಕ್ಷೆ ನೀಡುವುದಕ್ಕೆ ಒಪ್ಪಿಗೆ ನೀಡಿವೆ. ಬಸವ ಚಳುವಳಿಯ
ಸ್ತ್ರೀಯರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ ಫಲವಾಗಿ ಸ್ತ್ರೀಯರು ವಿದ್ಯಾವತಿಯರಾದರು; ಚಿಂತನಕಾರರು,
ಲೇಖಕಿಯರು ಆದರು; ಆಧ್ಯಾತ್ಮಿಕವಾಗಿ ಎತ್ತರಕ್ಕೆ ಏರಿದರು. ಆ ಚಳುವಳಿಯಲ್ಲಿ ಮುಕ್ತಾಯಕ್ಕನಂತಹ ಬೌದ್ಧಿಕಳು,
ಮಹಾದೇವಿಯಕ್ಕನಂತಹ ಪ್ರತಿಭಟನಕಾರಳು ಕಾಣಿಸಿಕೊಂಡಿದ್ದಾರಲ್ಲದೆ, ಸೂಳೆ ಸಂಕವ್ವೆಯಂತಹ ವೇಶ್ಯೆ ಕೂಡ
ಇದ್ದಾಳೆ. ಅಸ್ಪೃಶ್ಯ ಜಾತಿಗೆ ಸೇರಿದ್ದ ಕಾಳವ್ವೆಯೂ ಒಬ್ಬ ವಚನಕಾರ್ತಿಯಾಗಿದ್ದಾಳೆ.
ಆ.ಶ್ರೀಮಂತಿಕೆ-ಬಡತನ:
ವಚನ ಚಳುವಳಿಯ ಪ್ರಮುಖ
ಧೋರಣೆಯಲ್ಲಿ ಆರ್ಥಿಕ ವಿಚಾರಗಳು ಪ್ರಮುಖವಾಗಿವೆ. ಇಡೀ ಜಗತ್ತಿನಲ್ಲಿಯೇ ಧಾರ್ಮಿಕ ವಿಧಿ ವಿಧಾನ ಆಚರಣೆಯಲ್ಲಿ
ದುಡಿದು ತಿನ್ನುವುದು, ಕಾಯಕವನ್ನು ಮಾಡುವ ಪರಂಪರೆಯನ್ನು ಕಡ್ಡಾಯವನ್ನಾಗಿ ಮಾಡಿದ್ದು ವಚನ ಚಳುವಳಿಯ
ಪ್ರಮುಖ ಅಂಶವಾಗಿದೆ. ಕಾಯಕ ವೃತ್ತಿಯನ್ನು ಕೇಂದ್ರೀಕೃತಗೊಳಿಸಿಗೊಂಡು ನಿಷ್ಠೆ, ಪರಿಶ್ರಮ, ಶ್ರದ್ಧೆಯೊಂದಿಗೆ
ತಮ್ಮ ಶರೀರವನ್ನು ಮನಸ್ಸನ್ನು ಶುದ್ಧೀಕರಿಸಿ ಆಧ್ಯಾತ್ಮಿಕ ಚಿಂತನೆಗೆ ಅವಕಾಶ ಮಾಡಿಕೊಡುವ ನೂತನ ವಿಧಾನವನ್ನು
ಕಾಯಕದ ಪರಿಕಲ್ಪನೆಯೊಂದಿಗೆ ಹುಟ್ಟು ಹಾಕಿದರು. ದುಡಿಮೆಯೇ ದೇವರು ಕಾಯಕವೇ ಕೈಲಾಸವಾಯಿತು. ಶರಣರ ಕಾಯಕದ
ಪರಿಕಲ್ಪನೆಯಲ್ಲಿ ಆದಿ-ಅಂತ್ಯಜ,ಹೆಣ್ಣು-ಗಂಡೆಂಬ ಭೇದವಿಲ್ಲ. ವೃತ್ತಿ ಗೌರವಕ್ಕೆ ವಚನಕಾರರು ಪ್ರಾಮುಖ್ಯತೆ
ಕಲ್ಪಿಸಿ ಕೊಟ್ಟರು. ಕಾಯಕದಿಂದ ಬಂದ ಕಾರೆಯ ಸೊಪ್ಪಾದರೂ ಲಿಂಗಕ್ಕೂ ಅರ್ಪಿತವೆಂದು ಕಾಯಕಕ್ಕೆ ಮಹತ್ವವನ್ನು
ಕಲ್ಪಿಸಿ ಕೊಟ್ಟರು.
ವಚನಕಾರರ ಆರ್ಥಿಕ ಚಿಂತನೆಗಳಲ್ಲಿ ಕಾಯಕ ಮತ್ತು ದಾಸೋಹಗಳಿಗೆ ವಿಶೇಷ
ಮಹತ್ವವಿದೆ. ಪ್ರತಿಯೊಬ್ಬನು ಯಾವುದಾದರೊಂದು ಕಾಯಕ ಮಾಡಲೇಬೇಕು. ಕಾಯಕ ಮಾಡದ ವ್ಯಕ್ತಿಗೆ ಶರಣ
ಸಮಾಜದಲ್ಲಿ ಸ್ಥಾನವಿಲ್ಲ. ಎಲ್ಲ ಕಾಯಕಗಳು ಸಮಾನವಾದ ಬೆಲೆಯನ್ನು ಹೊಂದಿವೆ. ಯಾವ ಕಾಯಕವೂ ಮೇಲಲ್ಲ, ಯಾವ ಕಾಯಕವೂ ಕೀಳಲ್ಲ. ಎಲ್ಲ ಕಾಯಕಗಳೂ ಪವಿತ್ರವಾದವುಗಳು.
ಎಲ್ಲಕಾಯಕಗಳು ಸರಿಸಮವೆಂದಾಗ ಈ ಕಾಯಕಗಳನ್ನು ಮಾಡುವ ವ್ಯಕ್ತಿಗಳೂ ಸರಿಸಮಾನರಾದರು. ಅಂತೆಯೇ
ಚಪ್ಪಲಿ ಹೊಲಿಯುವ ಮಾದರ ಚನ್ನಯ್ಯ, ಹರಳಯ್ಯ, ಧಾರ್ಮಿಕ
ಕಾರ್ಯಗಳನ್ನು ಮಾಡುವ ಬ್ರಾಹ್ಮಣ ಮಧುವಯ್ಯ ಸರಿಸಮಾನರು. ಅಂದರೆ ಕಾಯಕ ಪರಿಕಲ್ಪನೆಯಿಂದ ಸಾಮಾಜಿಕ
ಸಮಾನತೆಯನ್ನು ತರುವಲ್ಲಿ ಪ್ರಮುಖ ಪಾತ್ರವಹಿಸಿತು ಎಂಬುದನ್ನು ಇಲ್ಲಿ ನಾವು ಗಮನಿಸಬಹುದಾಗಿದೆ. ವಚನ ಚಳುವಳಿಯಲ್ಲಿ
ವಿವಿಧ ಕಾಯಕವನ್ನು ಕೈಗೊಂಡಿದ್ದ ಶರಣರು ಕಂಡು ಬರುತ್ತಾರೆ. ನಗೆಯ ಮಾರಿತಂದೆ ಶರಣರನ್ನು ನಗಿಸಿ ಸಂಪಾದಿಸುತ್ತಿದ್ದರೆ,
ಮೋಳಿಗೆ ಮಾರಯ್ಯ ಕಟ್ಟಿಗೆ ಹೊರೆ ಹೊತ್ತು ಜೀವನ ಸಾಗಿಸುತ್ತಿದ್ದ. ಅಂಬಿಗರ ಚೌಡಯ್ಯ ನಾವೆಯನ್ನು ನಡೆಸುತ್ತಿದ್ದ.
ಮಡಿವಾಳ ಮಾಚಯ್ಯ ಶರಣರ ಬಟ್ಟೆಯನ್ನು ಮಡಿ ಮಾಡುತ್ತಿದ್ದ, ಕಕ್ಕಯ್ಯ ಚರ್ಮವನ್ನು ಹದ ಮಾಡುತ್ತಿದ್ದ.
ಶರಣರಿಗೆ ಕಾಯಕ ಅತ್ಯವಶ್ಯಕವಾದ ಅರ್ಹತೆ ಮತ್ತು ಸಾಧನ ವಾಯಿತು.ಕಾಯಕದ ಜೊತೆಗೆ ದಾಸೋಹವನ್ನು ಜೊತೆ
ಜೊತೆಗೆ ಹುಟ್ಟು ಹಾಕಿದರು. ಪುರುಷಾರ್ಥಗಳಲ್ಲಿ ಒಂದಾದ ಅರ್ಥ ಮೌಲ್ಯವು ವಚನಕಾರರಲ್ಲಿ ವೈಚಾರಿಕ ನೆಲೆಯನ್ನು
ಪಡೆಯಿತು. ಆರ್ಥಿಕ ವ್ಯವಸ್ಥೆಗೆ ಬೆನ್ನೆಲುಬಾದ ಕೆಳವರ್ಗದವರ ವೃತ್ತಿಗಳಿಗೆ ಗೌರವ ನೀಡಿತು. ಕಾಯಕ
ತತ್ವದ ಮೂಲಕ ವೃತ್ತಿ ಪಾವಿತ್ರಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟರು. ಕಾಯಕದಲ್ಲಿ ಮೇಲು ಕೀಳೆಂಬ ಭಾವ
ಸಲ್ಲದೆ ತಾನು ಮಾಡುವ ಕಾಯಕ ಧರ್ಮ ವಿರೋಧಿಯಾಗದೇ ಸತ್ಯಶುದ್ಧಕಾಯಕವಾಗಬೇಕೆಂಬ ಆಶಯವನ್ನು ವಚನಕಾರರು
ಬಯಸಿದರು. ಬದುಕಿಗಾಗಿ ಮಾಡುವ ಎಲ್ಲಾ ಕಾಯಕಗಳು ಬಹಳ ಪವಿತ್ರವಾದವುಗಳು. ವಚನಕಾರರು ಕಾಯಕ ಮತ್ತು ದಾಸೋಹ
ತತ್ವದ ಮೂಲಕ ಸಮಾಜದಲ್ಲಿ ಆರ್ಥಿಕ ಸಮಾನತೆಯನ್ನು ತಂದುಕೊಟ್ಟರು.
ವಚನಕಾರರ ವಚನಗಳಲ್ಲಿ
ಬಡತನ ಹಾಗೂ ಸಿರಿತನಗಳ ವೈರುಧ್ಯವು ಪ್ರಮುಖವಾಗಿ ಚರ್ಚಿತವಾಗಿದೆ. ಮಾನವೀಯ ಸಂಬಂಧಗಳ ಅರ್ಥಪೂರ್ಣ ನೆಲೆಗಳನ್ನು
ಬಡತನ-ಸಿರಿತನದ ಲಕ್ಷಣಗಳು ಕಳೆದು ಬಿಡುತ್ತವೆ ಎನ್ನುವುದು ವಚನಕಾರರ ಆತಂಕವಾಗಿದೆ. `ಸಿರಿಗರ ಹೊಡೆದವರ
ನುಡಿಸಲು ಬಾರದು........ ನೋಡಯ್ಯ; ಬಡತನವೆಂಬ ಮಂತ್ರವಾದಿ ಹೋಗಲು ಒಡನೆ ನುಡಿವರು’ ಎನ್ನುವ ವಚನದಲ್ಲಿ
ಶ್ರೀಮಂತ ವರ್ಗದ ಸಂಪರ್ಕವೇ ಸಾಧ್ಯವಲ್ಲದಂತಹ ದಂತ ಗೋಪುರಗಳ ನೆಲೆಗಳನ್ನು ಕುರಿತ ವಿವರವಿದೆ. ಬಡತನ
ಅದಕ್ಕೆ ವಿರುದ್ಧವಾದ ಗುಣಗಳನ್ನು ಹೊಂದಿರುವಂತಹದ್ದು. ವಚನಕಾರರು ಬಡತನದ ಪರವಾಗಿ ವಾದ ಮಾಡಿದ್ದಾರೆ.
ಸಿರಿಯೆಂಬುದು ಸಂತೆಯ ಮಂದಿ ಎನ್ನುವಲ್ಲಿ ಸಿರಿಯು ವ್ಯಕ್ತಿತ್ವವನ್ನೇ ಮರೆಮಾಡಿಬಿಡುವ ಅಂಶವನ್ನು ಕುರಿತ
ಪ್ರಸ್ತಾಪವು ಮೂಡಿ ಬಂದಿದೆ. `ನೆಲನಾಳ್ದನ ಹೆಣನೆಂದರೆ ಒಂದಡಕೆಗೆ ಕೊಂಬುವವರಿಲ್ಲ’ ಎನ್ನುವ ನುಡಿಯು
ಸಿರಿತನದ ಕ್ಷಣಿಕತೆ ಹಾಗೂ ನಿಷ್ಪ್ರಯೋಜಕತೆಯನ್ನು ಕುರಿತು ಹೇಳಿದ್ದಾಗಿದೆ.
ಭಕ್ತಿಯ ಸಂದರ್ಭದಲ್ಲಿ
ಸಿರಿತನ ಹಾಗೂ ಬಡತನಗಳ ಲಕ್ಷಣಗಳು ರೂಪುತಳೆಯುವ ವಿನ್ಯಾಸಗಳನ್ನು ಕುರಿತು ವಿವರಣೆಯಿದೆ. `ಹತ್ತು ಮತ್ತರದ
ಭೂಮಿ, ಬತ್ತುವ ಹಯನು ನಂದಾದೀವಿಗೆಯ ನಡೆಸಿಯೆವೆಂಬರ ಮುಖವ ನೋಡಲಾಗದು; ಅವರ ನುಡಿಯ ಕೇಳಲಾಗದು. ಎನ್ನಿಂದಲೇ
ಆಯಿತ್ತು; ಎನ್ನಿಂದಲೇ ಹೋಯಿತ್ತು ಎಂಬುವವನ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಣ್ಬನೇ ಕೂಡಲ ಸಂಗಮದೇವ?’
ಎನ್ನುವ ವಚನವು ಕೇವಲ ಆಚರಣೆ, ಪ್ರತಿಷ್ಠೆಗೆ ಕಾರಣವಾಗಿರುವ ಸಿರಿವಂತರ ಭಕ್ತಿಯನ್ನು ಟೀಕಿಸುತ್ತದೆ.
ಮನಸ್ಸಿನ ಶುದ್ಧತೆ, ಪ್ರಾಮಾಣಿಕತೆಗಳು ಬಡವನಲ್ಲಿ ಮಾತ್ರ ಸಾಧ್ಯವೆನ್ನುವ ವಾದವನ್ನು ವಚನಗಳು ವ್ಯಕ್ತಪಡಿಸುತ್ತವೆ.
ವಚನಕಾರರು ಸ್ವಹಿತ
ಪ್ರೇರಿತ ಸಂಪತ್ತಿನ ಸಂಗ್ರಹವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದರು. ಸಂಪತ್ತಿನ ವ್ಯಾಮೋಹದ ವಿರುದ್ಧ
ಎಚ್ಚರಿಕೆ ನೀಡುವ ಹಲವಾರು ವಚನಗಳನ್ನು ಕಾಣಬಹುದಾಗಿದೆ. ವಚನಗಳಲ್ಲಿ ಸಂಪತ್ತನ್ನು ಜನರನ್ನು ಕಾಡುವ
ಅತಿಮಾನುಷ ಶಕ್ತಿಗಳಿಗೆ ಹೋಲಿಸಲಾಗಿದೆ. ಹುತ್ತದೊಳಗಿನಿಂದ ಬಂದ ಹಾವು ಜನರನ್ನು ಕಚ್ಚಿ ವಿಷವನ್ನು
ಬಿತ್ತಬಹುದು. ದುಷ್ಟ ಗ್ರಹಗಳು ಮನುಷ್ಯನಿಗೆ ಕೇಡುಂಟು ಮಾಡಬಹುದು, ದುಷ್ಟ ಗ್ರಹ ಹಿಡಿದವರಿಗೆ ತಾವು
ಎದುರಿಸುತ್ತಿರುವ ಅಪಾಯದ ಅರಿವು ಇರುತ್ತದೆ. ಅಂತವರ ಜೊತೆ ಮಾತನಾಡಬಹುದು. ಉಂಟಾಗಿರುವ ಅಪಾಯವನ್ನು
ಅವನು ಹೇಳಿಕೊಳ್ಳುತ್ತಾನೆ. ಆದರೆ ಸಿರಿತನವೆಂಬ ಪಿಶಾಚಿ ಹಿಡಿದವನಿಗೆ ತಾನು ಬದುಕುತ್ತಿರುವ ಅಪಾಯಕಾರಿ
ರೀತಿಯ ಕಲ್ಪನೆ ಇರುವುದಿಲ್ಲ. ಅವನು ಯಾರ ಬಳಿಯಲ್ಲಿಯೂ ಏನನ್ನೂ ಹೇಳಿಕೊಳ್ಳಲಾರ. ಈ ಬಗ್ಗೆ ವಿಚಾರ
ಮಾಡಿದರೆ ಮೇಲೆ ಬಿದ್ದವರಂತೆ ಎಲ್ಲವನ್ನೂ ಅಲ್ಲಗಳೆಯುತ್ತಾನೆ. ಸಮಯ ಸಂದರ್ಭ ವ್ಯತಿರಿಕ್ತವಾದಾಗ ಮತ್ತು
ಆಶ್ರಯವು ಅನಿವಾರ್ಯವಾದಾಗ ಮಾತ್ರ ಅವರು ತಮಗಾಗಿರುವ ಪರಿಯನ್ನು ಬಹಿರಂಗಗೊಳಿಸುತ್ತಾರೆ. ಇಂತಹ ಸಿರಿತನವೆಂಬ
ಗರಹೊಡೆದವರನು ಸರಿಪಡಿಸಲು ಬಡತನವೆಂಬ ಮಂತ್ರವಾದಿ ಬೇಕು ಎಂದು ಹೇಳುತ್ತಾನೆ. ಬಸವಾದಿ ಪ್ರಮಥರು ತಾವು
ಗಳಿಸಿದ ಸಂಪತ್ತನ್ನು ದಾಸೋಹಕ್ಕಾಗಿ, ಭಕ್ತ ಸಮೂಹಕ್ಕಾಗಿ ವ್ಯಯ ಮಾಡಿದ್ದಾರೆ. ಯಾವುದೇ ಬಗೆಯ ಸಂಗ್ರಹವು
ವಚನಕಾರರ ಪ್ರಕಾರ ಅಪವಿತ್ರ. ಸಂಪತ್ತಿನ ದುರಾಸೆಯು ಅಪಾಯಕಾರಿ ವ್ಯಾಮೋಹವಾಗಿದೆ. ವಚನಗಳಲ್ಲಿ ಸಂಪತ್ತಿನ
ಸಂಗ್ರಹದ ಅಪಾಯವು ಸಾಮಾನ್ಯ ವಿಷಯವಾಗಿದೆ. ಸಿರಿತನ ಮೋಹದ ಟೀಕೆಯ ಜೊತೆಗೆ ಇತರೆ ಇಂದ್ರಿಯಾಸಕ್ತಿಗಳ
ಬಗ್ಗೆಯೂ ಟೀಕೆಗಳಿವೆ. ವಚನಕಾರರು ಮೂರು ಬಗೆಯ ವ್ಯಾಮೋಹಗಳು ಮತ್ತು ಅವುಗಳ ವಿರುದ್ಧ ಭಕ್ತರಿಗೆ ಎಚ್ಚರಿಕೆ
ನೀಡಲು ಪ್ರಯತ್ನಿಸಿದ್ದಾರೆ. ಮೂರು ಮೋಹಗಳಾದ ಸಂಪತ್ತಿನ ಮೋಹ, ಭೂಮಿಯ ಮೋಹ ಮತ್ತು ಹೆಣ್ಣಿನ ಮೋಹ ಇವು
ಭಕ್ತರನ್ನು ಅವನತಿಯತ್ತ ಕೊಂಡೊಯ್ಯುವ ಪಾಶಗಳಾಗಿವೆ ಎಂದು ಇವುಗಳ ವಿರುದ್ಧ ಭಕ್ತರಿಗೆ ಎಚ್ಚರಿಕೆಯನ್ನು
ನೀಡಿದ್ದಾರೆ.
ದೈಹಿಕ ದುಡಿಮೆಗೆ
ದೊರೆತ ಆಧ್ಯಾತ್ಮಿಕ ಮಹತ್ವವನ್ನು ವಚನಕಾರರ ಕಾಯಕ ಸಿದ್ಧಾಂತದಲ್ಲಿ ಕಾಣಬಹುದಾಗಿದೆ. ಕಾಯಕವನ್ನು ನಿಷ್ಠೆಯಿಂದ
ಕೈಗೊಳ್ಳುವುದರಿಂದ ದೇವರನ್ನು ಕಾಣಬಹುದು. ಪಾರಂಪರಿಕ ಹಿಂದೂ ವೃತ್ತಿ ಏಣಿ-ಶ್ರೇಣಿಗಳನ್ನು ಕಾಯಕ ಪರಿಕಲ್ಪನೆ
ನಿಷೇಧಿಸಿತ್ತು. ಹಾಗೆಯೇ ಕಾಯಕದ ಜೊತೆಯಲ್ಲಿ ಬಂದಂತಹ ದಾಸೋಹ ಪರಿಕಲ್ಪನೆಯು ದುಡಿಮೆಯಿಂದ ಗಳಿಸಿದ್ದನ್ನು
ಮುಖ್ಯವಾಗಿ ಜಂಗಮರ ಸೇವೆಗೆ ಮತ್ತು ಸಮುದಾಯದಲ್ಲಿನ ಬಡವರಿಗೆ ಮತ್ತು ದುರ್ಬಲರಿಗೆ ವ್ಯಯಮಾಡಬೇಕು ಎಂದು
ವಚನಕಾರರು ಪ್ರತಿಪಾದಿಸಿದರು. ಸಮುದಾಯದ ಕಲ್ಯಾಣಕ್ಕೆ ಗಳಿಸಿದ ಸಂಪತ್ತನ್ನು ವ್ಯಯಿಸಿದಾಗ ಮಾತ್ರ ಅದು
ಕಾಯಕವಾಗುತ್ತದೆ. ಇದರಿಂದಾಗಿ ಸಮುದಾಯದಲ್ಲಿ ವರಮಾನದಲ್ಲಿ ಸಮಾನತೆಯನ್ನು ಸಾಧಿಸಲು ಸಾಧ್ಯವಾಯಿತು.
ಆಧುನಿಕ ಕಾಲದಲ್ಲಿ
ಸಂಘಟಿತ ಜಗತ್ತಿನಲ್ಲಿ ಆಧುನಿಕ ಮಾನವನ ಒಟ್ಟು ಮನಸ್ಸು ವ್ಯಾಪಾರೀಕರಣವಾಗಿ ತನ್ನ ಸಹಜ ಮಾನವೀಯ ಮೌಲ್ಯಗಳನ್ನು
ನಾಶಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ಬಸವಾದಿ ಪ್ರಮಥರ ನುಡಿ ಮುತ್ತುಗಳು ಸಾಂತ್ವಾನವನ್ನು ನೀಡುವಂತಾಗಿವೆ.
ಸರಳ ಜೀವನವನ್ನು ಸಾಗಿಸುತ್ತಲೇ ಸಮಾಜ, ಸಮಗ್ರತೆಯನ್ನು ಭಕ್ತಿ ಮಾಧ್ಯಮದ ಮೂಲಕ ಆರ್ಥಿಕ ಮೂಲವನ್ನು
ಸುಧಾರಿಸುವತ್ತ ನಡೆದ ಸೂಕ್ಷ್ಮ ಹೆಜ್ಜೆಗಳು ಗಮನಾರ್ಹವಾಗಿವೆ.
`ಸಂಸಾರವೆಂಬುದೊಂದು ಗಾಳಿಯ ಸೊಡರು
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯ
ಇದನೆಚ್ಚಿ ಕೆಡಬೇಡ
ಸಿರಿಯೆಂಬುದ ಮರೆದು ಪೂಜಿಸು ನಮ್ಮ ಕೂಡಲ ಸಂಗಮದೇವನ’ (ಬ.ವ.ಸಂ.164)
`ಎಲೆ ಎಲೆ ಮಾನವಾ ಅಳಿಯಾಸೆ
ಬೇಡವೋ
ಕಾಳ, ಬೆಳದಿಂಗಳು,
ಸಿರಿ ಸ್ಥಿರವಲ್ಲ
ಕೇಡಿಲ್ಲದ ಪದವಿ
ಕೂಡಲ ಸಂಗಮದೇವಯ್ಯನ
ಮರೆಯದೇ ಪೂಜಿಸು’ (ಬ.ವ.ಸಂ.165)
ಎಂದು ನುಡಿಯುವಲ್ಲಿ
ಬದುಕು ಕ್ಷಣಿಕ ಎಂದು ಹೇಳುವುದರ ಜೊತೆಗೆ ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ ಎಂದು ಹೇಳುತ್ತಾ
ಸಿರಿಯ ಮಾಯಾಮುಖಗಳನ್ನು ಬಯಲುಮಾಡಿ ಅರ್ಥಪೂರ್ಣ ರೂಪಕವನ್ನು ಸಂತೆಯ ಮಂದಿಯನ್ನಾಗಿಸಿ ನೀಡುವ ಪರಿಣಾಮ
ಅರ್ಥಸ್ಫುರಣೆಯ ನೀತಿಯನ್ನು ಪರಿಣಾಮಗೊಳಿಸಿದೆ. ಮಾನವನ ಅಳಿಯಾಸೆಗಳನ್ನು ಕಾಳಬೆಳದಿಂಗಳುಗಳಂತೆ ಸಿರಿಯೂ
ಸ್ಥಿರವಲ್ಲವೆಂದೂ ಭಾವಿಸುವ ಬಗೆ- ಮನುಷ್ಯನ ಆಸೆ ಮತ್ತು ಭ್ರಷ್ಟತೆಯ ಮುಖಗಳನ್ನು ನಿರಾಕರಿಸುತ್ತದೆ.
ಸಮಾಜವನ್ನು ಮಾನವೀಯವಾಗಿ ರಚಿಸಿಕೊಡುವುದರ ಮೂಲಕ ಆರ್ಥಿಕ ಮೂಲವನ್ನು ಶೋಧಸಿಕೊಳ್ಳುತ್ತ ಬದುಕನ್ನು
ಅರ್ಥದೊಂದಿಗೆ ಸಾರ್ಥಕಗೊಳಿಸಿಕೊಳ್ಳಬೇಕು ಎಂಬುದು ವಚನಕಾರರ ನಿಲುವಾಗಿದೆ.
2. ರಾಜಕೀಯ
ಆಯಾಮ
ಅ.ರಾಜಸತ್ತೆಯ ವಿರೋಧ
ಆ.ಪುರುಷ ಪ್ರಾಬಲ್ಯ
ಅ.ರಾಜಸತ್ತೆಯ ವಿರೋಧ:
ಭಕ್ತಿ ಚಳುವಳಿಗಳ ಇನ್ನೊಂದು
ಮುಖ್ಯ ಲಕ್ಷಣವೆಂದರೆ, ಅವುಗಳಲ್ಲಿ ಹಲವು ರಾಜಪ್ರಭುತ್ವದ ವಿರುದ್ಧವಾಗಿ ನಿಂತುದು. ತಮ್ಮ ಯಜಮಾನನು
ದೇವರೇ ಹೊರತು ರಾಜ ಅಲ್ಲವೆಂದು ಅನೇಕ ಭಕ್ತರು ಬಹಿರಂಗವಾಗಿ ಹೇಳಿದರು. ಮಾಣಿಕ್ಯ ವಾಚಕರು ಬರೆದ ಪ್ರಸಿದ್ಧ
ಪದ್ಯವೊಂದರ ಸಾರಾಂಶ ಇದು- “ನಾವು ಯಾರಿಗೂ ಆಳಲ್ಲ; (ದೇವರನ್ನು ಬಿಟ್ಟರೆ) ಯಾರಿಗೂ ಹೆದರಬೇಕಿಲ್ಲ”.
ಬಸವಣ್ಣನು ಬಿಜ್ಜಳನ ಹತ್ತಿರ ಮಂತ್ರಿಯಾಗಿದ್ದರೂ ಕೇವಲ ಹೊಟ್ಟೆ ಪಾಡಿಗೆ ಮಾತ್ರ ತಾನು ಅವನ ಮಂತ್ರಿಯೇ
ಹೊರತು ತನ್ನ ನಿಜವಾದ ಒಡೆಯ ಶಿವ ಎಂದೇ ಅರಿಕೆ ಮಾಡಿಕೊಂಡಿದ್ದಾನೆ. ಹರಿಹರ ಕವಿಯು ದೇವರನ್ನು ಬಿಟ್ಟು
ಮನುಜರ ಮೇಲೆ ಕಾವ್ಯ ಬರೆಯುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದ. ರಾಜಾಸ್ಥಾನವೆಂಬುದು ಮೇಲುಕೀಳು
ಎಂಬ ಅಧಿಕಾರಿಗಳ ಒಂದು ಪ್ರದೇಶ; ಭಗವಂತನ ಸಾಮ್ರಾಜ್ಯದಲ್ಲಿ ಮಾತ್ರ ಅವನ ಮಕ್ಕಳೆಲ್ಲರೂ ಸಮಾನರು. ವಚನ
ಚಳುವಳಿಯು ರಾಜತ್ವ, ಅದರ ದರ್ಪ-ಭೋಗ-ವೈಭವಗಳು ಇತ್ಯಾದಿಗಳ ಬಗೆಗೆ ಅದನ್ನು ತೀರಾ ನಿಕೃಷ್ಟವಾಗಿ ಕಾಣುವಂತಹ
ಆಧ್ಯಾತ್ಮಿಕ ದೃಷ್ಟಿಕೋನವನ್ನು ಕಲ್ಪಿಸಿಕೊಟ್ಟಿತು. ಬಸವಣ್ಣನವರನ್ನು ಒಳಗೊಂಡಂತೆ ವಚನಕಾರರು ಬಹುಮಟ್ಟಿಗೆ
ಅನುಭಾವಿಕ ನಿಲುವನ್ನು ಹೊಂದಿದವರಾದ್ದರಿಂದ ಐಶ್ವರ್ಯ-ಅಧಿಕಾರ ಇವುಗಳ ಬಗೆಗೆ ಭ್ರಮೆಯನ್ನು ಹೊಂದಿದವರಾಗಿರಲಿಲ್ಲ.
ಲೋಕದ ವೈಭವಗಳಿಗಿಂತ ಸತ್ಯದ ನಿಲುವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದ್ದಿತು.
`ಆನೆಯನೇಱಿಕೊಂಡು ಹೋದಿರೆ
ನೀವು
ಕುದುರೆಯನೇಱಿಕೊಂಡು
ಹೋದಿರೆ ನೀವು
ಕುಂಕುಮ ಕಸ್ತೂರಿಯ
ಪೂಸಿಕೊಂಡು ಹೋದಿರೆ ಅಣ್ಣಾ’ (ಬ.ವ.ಸಂ.638)
ಸತ್ಯದ ನಿಲವನಱಿಯದೆ
ಹೋದಿರಲ್ಲಾ’ ಎಂಬ ವಚನದಲ್ಲಿ ಲೋಕದ ಭೋಗ ಭಾಗ್ಯಗಳ ಬೆನ್ನು ಹತ್ತಿ ಸತ್ಯದ ನಿಲವನ್ನರಿಯದೆ ವ್ಯರ್ಥವಾಗಿ
ಹೋದ ಪದವಿಗಳ ಹಾಗೂ ಅಧಿಕಾರಗಳ ಬಗೆಗೆ ಕನಿಕರವನ್ನು ತಾಳಿರುವುದು ವ್ಯಕ್ತವಾಗಿದೆ. `ಅರಸು ಮುನಿದೆಡೆ
ನಾಡೊಳಗಿರಬಾರಯ್ಯಾ’ ಎಂಬಲ್ಲಿ ಅರಸನ ಕೋಪಕ್ಕೆ ತುತ್ತಾದರೇ ಅಂಥವನಿಗೆ ಉಳಿಗಾಲವೇ ಇಲ್ಲಾ ಎಂಬ ಸತ್ಯದ
ನಿಲುವು ವ್ಯಕ್ತವಾಗಿದೆ. ವಚನಕಾರರಲ್ಲಿ ರಾಜತ್ವ ಹಾಗೂ ರಾಜನ ಕುರಿತು ತಿರಸ್ಕಾರವೇ ವ್ಯಕ್ತವಾಗಿದೆ.
ಬಸವಣ್ಣನು ಬಿಜ್ಜಳನಲ್ಲಿ ದಂಡಾಧಿಕಾರಿಯಾಗಿ ಉದ್ಯೋಗದಲ್ಲಿದ್ದರೂ ಅವರಿಗೆ ಅವರ ಪದವಿಯು ನಿಕೃಷ್ಟವಾಗಿದ್ದಿತು.
ಬಹಿರಂಗದಲ್ಲಿ ಯಾವನೋ ಒಬ್ಬ ಒಡೆಯನ ಸೇವೆಗೆ ನಿಂತಂತೆ ಕಾಣಿಸಿದರೂ ಅಂತರಂಗದಲ್ಲಿ ಅವರ ಒಡೆಯರು ಬೇರೆಯೇ
ಆಗಿದ್ದಾರೆ. `ಎನಗೆ ಒಡೆಯರುಂಟು ಕೂಡಲಸಂಗನ ಶರಣರು’ ಎಂದು ಹೇಳುವುದರ ಮೂಲಕ ಮಾನಸಿಕವಾಗಿ ತಮ್ಮ ನಿಷ್ಠೆ
ಯಾರಿಗೆ ಎಂಬುದನ್ನು ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಜೊತೆಗೆ, ಅರಸನ ಮನೆಯಲ್ಲಿ ಅರಸಿಯಾಗಿಪ್ಪುದಕ್ಕಿಂತ
ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು ಕರಲೇಸಯ್ಯಾ ಎಂಬ ನಿಲುವನ್ನು ಹೊಂದಿದವರಾಗಿದ್ದಾರೆ.
ಬಸವಣ್ಣನವರು ಬಿಜ್ಜಳನ
ಆಸ್ಥಾನದಲ್ಲಿ ಉದ್ಯೋಗದಲ್ಲಿದ್ದಾಗ ಬಿಜ್ಜಳನ ಭಂಡಾರದ ಹಣವನ್ನು ಬಳಸಿಕೊಂಡಿರ ಬಹುದು. ದಿನವೂ ಅವರು
ನಡೆಸುತ್ತಿದ್ದ ಲಿಂಗಾರ್ಚನೆ, ಜಂಗಮ ದಾಸೋಹ ಇತ್ಯಾದಿಗಳನ್ನು ಕಂಡು ಬೇರೆಯವರು ಆರೋಪ ಮಾಡಿದ ಸಂದರ್ಭದಲ್ಲಿ,
` ಊರ ಮುಂದ ಹಾಲ ಹಳ್ಳ
ಹರಿವುತ್ತಿರಲು
ಓಱೆಯಾವಿನ ಬೆನ್ನಲಿ
ಹರಿಯಲದೇಕಯ್ಯಾ?
ಲಜ್ಜೆಗೆಡಲೇಕೆ? ನಾಣುಗೆಡಲೇಕೆ?
ಕೂಡಲಸಂಗಮದೇವರುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ?’
(ಬ.ವ.ಸಂ.755) ಎಂದು ಹೇಳುವಲ್ಲಿ ತಾನೇ ತಾನಾಗಿ ಸಮೃದ್ಧವಾದ ನೆರವು ಲಭಿಸುತ್ತಿರುವಾಗ, ಬಿಜ್ಜಳನ
ಹಣದ ಮೇಲೆ ಅವಲಂಬಿಸುವ ಅಗತ್ಯ ತಮಗಿಲ್ಲ ಎಂಬುದನ್ನು ಸೂಚಿಸುತ್ತದೆ. ವಚನಕಾರರು ಅರಸನ ಕೈಕೆಳಗೆ ಉದ್ಯೋಗವನ್ನು
ಒಪ್ಪಿಕೊಳ್ಳ ಬೇಕಾಗಿದ್ದ ಸಂದರ್ಭದಲ್ಲಿ ಕೆಲವೊಮ್ಮೆ ಅಪವಾದ ಮತ್ತು ಸಂಘರ್ಷಗಳನ್ನು ಎದುರಿಸಬೇಕಾಗಿದ್ದುದು
ಸಹಜವೇ. ಅಂತಹ ಸಂದರ್ಭದಲ್ಲಿ ಲೌಕಿಕ ವ್ಯವಹಾರ ಮತ್ತು ಆಧ್ಯಾತ್ಮಗಳನ್ನು ಬೆರಸದೆ ತಮ್ಮ ವ್ಯಕ್ತಿತ್ವವನ್ನು
ಎಲ್ಲಾ ಬಗೆಯ ಹೋರಾಟಗಳಿಗೂ ಒಡ್ಡಿಕೊಂಡು ದಿಟ್ಟತನದಿಂದ ನಿಂತವರಾಗಿದ್ದಾರೆ. ಬಸವಣ್ಣನವರು ರಾಜಾಸ್ಥಾನದಲ್ಲಿ
ಊಳಿಗದಲ್ಲಿದ್ದರೂ ತಮ್ಮನ್ನು ಮಾರಿಕೊಂಡವರಲ್ಲ. ತಮ್ಮನ್ನು ಕುರಿತು
`ನ್ಯಾಯನಿಷ್ಟುರಿ ದಾಕ್ಷಿಣ್ಯಪರ
ನಾನಲ್ಲ.
ಲೋಕ ವಿರೋಧಿ ಶರಣನಾರಿಗಂಜುವನಲ್ಲ
ಕೂಡಲಸಂಗಮದೇವರರಾಜತೇಜದಲ್ಲಿಪ್ಪನಾಗಿ’
(ಬ.ವ.ಸಂ.754)
ಎಂದು ಹೇಳಿಕೊಳ್ಳುವುದರ
ಮೂಲಕ ತಮ್ಮ ಸಮಸ್ತ ವ್ಯಕ್ತಿತ್ವವೂ ಕೂಡಲಸಂಗಮದೇವರ ರಾಜತೇಜ ದಲ್ಲಿರುವುದರಿಂದ ತಾವು ಯಾರಿಗೂ ಹೆದರಬೇಕಾಗಿಲ್ಲವೆಂಬುದನ್ನು
ಸ್ಪಷ್ಟಪಡಿಸಿಕೊಂಡರು. ವಚನಕಾರರು ತಮ್ಮ ಜನಪರವಾದ ಮತ್ತು ಅನುಭಾವಿಕವಾದ ನಿಲುವುಗಳಿಂದಾಗಿ ಕೆಲವೆಡೆ
ರಾಜವಿರೋಧಿ ಧೋರಣೆಯನ್ನು ತಾಳಿದವರಾಗಿ ಕಂಡು ಬರುತ್ತಾರೆ. ವಚನಚಳುವಳಿಯು ವ್ಯಕ್ತಿಯಾದವನು ತನ್ನ ವಿಧೇಯತೆ
ಹಾಗೂ ನಿಷ್ಠೆಯನ್ನು ರಾಜನ ಬದಲು ದೇವರ ಕಡೆ ಕೇಂದ್ರೀಕರಿಸುವಲ್ಲಿ ಮನಸ್ಸನ್ನು ಸ್ಥಿರೀಕರಿಸಿ ರಾಜತ್ವವನ್ನು
ಪ್ರತಿಭಟಿಸುವ ರಾಜಕೀಯ ನಿಲುವುಗಳು ಮಹತ್ವವನ್ನು ಪಡೆದು ಕೊಂಡಿವೆ. ವಚನಕಾರರು ರಾಜ, ರಾಜತ್ವ ಇತ್ಯಾದಿಗಳನ್ನು
ಮೀರಿದ ಆಧ್ಯಾತ್ಮಿಕ ಮನಸ್ಥಿತಿಯನ್ನು ತಾಳಿದವರಾಗಿ ಕಂಡುಬರುತ್ತಾರೆ.
ಶೂದ್ರವರ್ಗದಿಂದ
ಬಂದಂಥ ವಚನಕಾರರು ಮತ್ತು ವಚನಕಾರ್ತಿಯರು ಪುರುಷ ಪ್ರಧಾನ ವ್ಯವಸ್ಥೆಯಿಂದ ತಮಗಾದ ಅನ್ಯಾಯದ ಬಗೆಗೆ
ಹೇಳಿಕೊಳ್ಳದೆ ವ್ಯವಸ್ಥೆಯಲ್ಲಿಯ ದೋಷಗಳ ಕುರಿತು ನಿಷ್ಠುರವಾಗಿ ಮಾತನಾಡಿದ್ದಾರೆ. ಕೊಂಡಗುಳಿ ಕೇಶಿರಾಜ
ಆರನೆಯ ವಿಕ್ರಮಾದಿತ್ಯನ ದೊಡ್ಡ ಹುದ್ದೆಯೊಂದರಲ್ಲಿ ಅಧಿಕಾರಿಯಾಗಿದ್ದ. ತಾನು ನರನೊಬ್ಬನ ಅಧೀನದಲ್ಲಿರುವುದು
ಅವನಿಗೆ ದುಃಖದ ಸಂಗತಿಯಾಗಿತ್ತು. ಆಸ್ಥಾನದಲ್ಲಿ ಅವನು ವಾಸ್ತವವಾಗಿ ರಾಜನನ್ನು ವಂದಿಸುವುದಿಲ್ಲವೆಂದೂ,
ತನ್ನ ಬೆರಳಲ್ಲಿರುವು ಉಂಗುರದ ಶೈವಮುದ್ರಿಕೆಯ ಲಾಂಛನಕ್ಕೆ ವಂದಿಸುವನೆಂದೂ ವೈಷ್ಣವರು ದೊರೆಗೆ ಹೇಳಿದಾಗ
ಅವನು ಸರಸವಾಡಿದಂತೆ ಮಾಡಿ ಕೇಶಿರಾಜನ ಕೈಲಿದ್ದ ಉಂಗುರವನ್ನು ತೆಗೆದುಕೊಳ್ಳುತ್ತಾನೆ. ಕೇಶಿರಾಜ ಅಲ್ಲಿಂದ
ಹೊರಡುವಾಗ ರಾಜನಿಗೆ ನಮಸ್ಕರಿಸಲಿಲ್ಲ. ʻರಾಜನ ಕೋಪ ಭುಗಿಲೆದ್ದಾಗ
ಕೇಶಿರಾಜ ಅವನ ಅಧಿಕಾರ, ಐಶ್ವರ್ಯಗಳೆಲ್ಲವನ್ನೂ ತ್ಯಜಿಸಿ, ಸೇವಕನ ವೃತ್ತಿಯಂ ಮನದ ಕಾಲಿಂದೊದೆದು ಹೊರಟುಬಿಡುತ್ತಾನೆ.
ಅವನ ಹೆಂಡತಿ ಗಂಗಾಂಬಿಕೆಯೂ ಗಂಡನ ಜೊತೆ ಹೊರಟು ಬಿಡುತ್ತಾಳೆ. ಇಬ್ಬರೂ ಕಲ್ಯಾಣದ ಸಮೀಪದ ಶಿವಪುರದ
ವಂಶವರ್ಧನನೆಂಬ ಮೇದರ ಜಾತಿಯವನ ಬಡ ಗುಡಿಸಲಲ್ಲಿ ಉಳಿಯುತ್ತಾರೆ. ಮುಂದೆ ವಿಕ್ರಮಾದಿತ್ಯನಿಗೆ ಪಶ್ಚಾತ್ತಾಪವಾಯಿತೆಮದೂ
ಕ್ಷಮಾಪಣೆ ಕೇಳಿದನೆಂದೂ ಕತೆ ಮುಂದುವರೆಯುತ್ತದೆ. ಆ ಮೇದರ ಜಾತಿಯವನು ಪರೋಕ್ಷವಾಗಿ ರಾಜನ ವಿರುದ್ಧ
ಸೆಣಸಿದ ಕೆಳವರ್ಗದ ಮೊದಲ ವೀರಶೈವ.ʼ (ಎಂ.ಚಿದಾನಂದ ಮೂರ್ತಿ:
ಸ್ಥಾವರ-ಜಂಗಮ,ಪು೩೮)
ಬಸವಣ್ಣನ ನೇತೃತ್ವದ
ಭಕ್ತಿ ಚಳುವಳಿಯು ಸಮಾಜದ ಎಲ್ಲ ಜಾತಿ, ವರ್ಗಗಳ ಜನರನ್ನೂ ಒಳಗೊಂಡಿದ್ದಿತು. ಬ್ರಾಹ್ಮಣ, ಅಂಬಿಗ, ಕಟ್ಟಿಗೆ
ಮಾರುವಾತ, ಚಪ್ಪಲಿ ಹೊಲೆಯುವಾತ, ಬುಟ್ಟಿ ಮಾಡುವಾತ, ಬೇಟೆಗಾರ, ಮಡಿವಾಳ, ಹೆಂಡ ಮಾರುವಾತ, ಮೀನುಗಾರ,
ಬಡಗಿ, ರೈತ ಹೀಗೆ ಹಲವು ಬಗೆಯ ವೃತ್ತಿ- ಜಾತಿಯವರು ಅದರಲ್ಲಿ ಭಾಗವಹಿಸಿದ್ದರು. ಸಮಾನತೆ ಈ ಚಳುವಳಿಯ
ಬೀಜ ಮಂತ್ರವಾಗಿತ್ತು. ಬಸವಣ್ಣನ ಮನೆಯಲ್ಲಿ ಬ್ರಾಹ್ಮಣರ ಜೊತೆ ಸರಿಸಮಾನತೆಯಿಂದ ಅವರೆಲ್ಲ ಕುಳಿತು
ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಅಷ್ಟೇ ಅಲ್ಲ, ಆ ಚಳುವಳಿಯು ಅಂತರಜಾತೀಯ ವಿವಾಹಕ್ಕೂ ಪ್ರೋತ್ಸಾಹವನ್ನು
ನೀಡಿತು. ಬ್ರಾಹ್ಮಣ ಅಸ್ಪೃಶ್ಯರ ಮಧ್ಯೆ ಮದುವೆಯ ವ್ಯವಸ್ಥೆಯೂ ಆಗಿದ್ದು, ಮೇಲ್ಜಾತಿಯವರ ಪ್ರತಿಭಟನೆಯಿಂದ
ಅದು ನಿಂತು ಹೋದುದು ಒಂದು ಚರಿತ್ರಾರ್ಹ ಘಟನೆ. ಚನ್ನಬಸವಣ್ಣನು ತನ್ನ ಒಂದು ವಚನದಲ್ಲಿ ಹುಟ್ಟಿನಿಂದ
ಯಾವುದೇ ಜಾತಿಯವನಾಗಿರಲಿ, ಅವನು ಲಿಂಗವಂತನಾದ ಮೇಲೆ ಅವನು ಇತರ ಎಲ್ಲ ಲಿಂಗವಂತರಿಗೂ ಸಮಾನವೆಂದೂ,
ಬ್ರಾಹ್ಮಣರಾಗಿರಲಿ ಅಸ್ಪೃಶ್ಯರಾಗಿರಲಿ ಅವರು ಲಿಂಗವಂತರಾದ ಮೇಲೆ ಪರಸ್ಪರ ಹೆಣ್ಣು ಕೊಟ್ಟು ಹೆಣ್ಣು
ತರಬೇಕೆಂದೂ ಘೋಷಿಸಿದ್ದಾನೆ.
ಆ.ಪುರುಷ ಪ್ರಾಬಲ್ಯ:
ಹನ್ನೆರಡನೆಯ ಶತಮಾನದ
ವಚನಗಳಲ್ಲಿಯ ಕಾಯಕದ ಬಗ್ಗೆ ಅಡಿರುವ ಮಾತುಗಳು ನೋಡಲಿಕ್ಕೆ ಚಂದವೆಂದೂ ಅನುಸರಣೆಗೆ ಅಸಾಧ್ಯವೆಂದೂ ಅನ್ನಿಸಬಹುದು.
ಯಾವುದೇ ಬೋಧನೆ ಅರ್ಧ ಮಾತ್ರ (ಅಥವಾ ಅದಕ್ಕಿಂತ ಕಡಿಮೆ) ಆಚರಣೆ ಇನ್ನರ್ಧ. ವಚನಕಾರರನ್ನು ವಚನಕಾರರನ್ನು
ನಾವು ಗೌರವಿಸುವುದು ಅದರು ದೊಡ್ಡ ಮಾತುಗಳನ್ನು ಆಡಿದರೆಂದಲ್ಲ, ಆಡುವ ಮುನ್ನ ಅವುಗಳನ್ನು ಆಚರಣೆಗೆ
ತಂದಿದ್ದರೆಂಬುದು ಗಮನಿಸಬೇಕಾದ ಸಂಗತಿಯಾಗಿದೆ. “ನಡೆದು ನುಡಿದ ವಚನಗಳು” ಎಂದು ಹೇಳಿದ್ದ ಹಿಂದಿನ
ವ್ಯಾಖ್ಯಾನಕಾರನೊಬ್ಬರ ಮಾತು ಇಲ್ಲಿ ಗಮನಾರ್ಹವಾಗುತ್ತದೆ. ಅಂತೆಯೇ, ವಚನಗಳಲ್ಲಿ ನಿರೂಪಿತವಾಗಿರುವ
ಕಾಯಕತತ್ವ ಕೇವಲ ತತ್ವದ ಮಟ್ಟದಲ್ಲಿರದೆ ಆಚರಣೆಯ ವಸ್ತುವೂ ಆಗಿದ್ದಿತ್ತೆಂಬುದನ್ನು ತೋರಿಸಿಕೊಡುವುದು
ಅಗತ್ಯ. ಬಸವ ಮೊದಲಾದ ಧಾರ್ಮಿಕ ನಾಯಕರಲ್ಲಿ, ಅವರ ನೂರಾರು ಅನುಯಾಯಿಗಳಲ್ಲಿ ಭಿನ್ನ ಭಿನ್ನ ವೃತ್ತಿಗಳನ್ನವಲಂಬಿಸಿದ್ದ
ಜನರಿದ್ದರು. ಬಸವಣ್ಣ ಬಿಜ್ಜಳನ ಬಳಿ ಭಂಡಾರದ ಅಧಿಕಾರಿಗಳಾಗಿದ್ದರು. ಅವರು ಭವಿಯ (ಭವಿ_ವೀರಶೈವೇತರ)
ಸೇವೆಯನ್ನು ಮಾಡುತ್ತಿದ್ದಾರೆ ಎಂಬ ಆರೋಪಣೆ ಬಂದಾಗ ತಾವು ತಮಗಾಗಿ ಅಲ್ಲವೇ ಅಲ್ಲ. ಇತರರಿಗಾಗಿ ಆ ವೃತ್ತಿಯನ್ನು
ಅವಲಿಂಬಿಸಿರುವುದಾಗಿ ಸಮರ್ಥಿಸಿಕೊಂಡಿದ್ದರು. ಅಲ್ಲಮ ಒಬ್ಬ ಜಂಗಮ; ನಾಡಿನ ತುಂಬಾ ಓಡಾಡಿ ಜನರಿಗೆ
ಧರ್ಮ ಬೋಧನೆ ಮಾಡುವ ಕಾಯಕವುಳ್ಳವರಾಗಿದ್ದರು.. ಅಗಸರ ಕಾಯಕದ ಮಡಿವಾಳ ಮಾಚಯ್ಯ, ಅಂಬಿಗನಾಗಿದ್ದ ಚೌಡಯ್ಯ,
ದನಗಳನ್ನು ಕಾಯುತ್ತಿದ್ದ ತುರುಗಾಯಿ ರಾಮಣ್ಣ, ಹೀಗೆಯೇ ಬೇಸಾಯದ, ಕ್ಷೌರದ, ದೋಸೆ ಮಾಡುವ, ಹಾಡುವ,
ಕುಣಿಯುವ, ನಗಿಸುವ, ನೇಯ್ಗೆಯ, ಬಟ್ಟೆ ಹೊಲಿಯುವ, ಬಡಗಿಯ, ಚಪ್ಪಲಿ ಹೊಲಿಯುವ, ಮರ ಕಡಿದು ಮಾರುವ ಇತ್ಯಾದಿ
ಬೇರೆ ಬೇರೆ ವೃತ್ತಿಯ ಜನಗಳನ್ನು ಕಾಣಬಹುದು. ಬಸವಣ್ಣನವರ ಮನೆಯಲ್ಲಿ ಪಡಿ ಅಳೆದು ಕೊಡುವವ, ಬಿದ್ದ
ಕಾಳನ್ನು ಆರಿಸುವುದನ್ನೇ ಕಾಯಕವಾಗಿ ಉಳ್ಳ ಆಯ್ದಕ್ಕಿ ಮಾರಯ್ಯ ಇತ್ಯಾದಿ ಶಿವಶರಣರು ಇದ್ದರು. ಇವರೆಲ್ಲರೂ
ಬರೆದಿರುವ ವಚನಗಳಲ್ಲಿ ತಮ್ಮ ವೃತ್ತಿಗಳ ಬಗ್ಗೆ ಇರುವ ಆದರ, ಶ್ರದ್ಧೆಗಳು ವ್ಯಕ್ತವಾಗಿವೆ. ಜೊತೆಗೆ
ತಮ್ಮ ಆಧ್ಯಾತ್ಮಿಕ ಅನುಭವಗಳನ್ನು, ತಾವು ನಂಬಿದ ತತ್ವಗಳನ್ನು ತಮ್ಮ ತಮ್ಮ ವೃತ್ತಿಗೆ ಸಂಬಂಧಿಸಿದ
ಪಾರಿಭಾಷಿಕ ಪದಗಳ ಮೂಲಕ ವ್ಯಕ್ತ ಮಾಡಿದ್ದಾರೆ. ಇವರು ಗೋಷ್ಠಿಯಲ್ಲಿ ಒಂದೆಡೆ ಸೇರಿದಾಗ ಮೇಲು ಕೀಳೆಂಬ
ಭಾವನೆ ಪೂರ್ತಿಯಾಗಿ ಅಳಿಸಿ ಹೋಗುತ್ತಿದ್ದಿತು. ಮಡಿವಾಳ ಮಾಚಯ್ಯ ಭಂಡಾರಿಯಾಗಿದ್ದ ಬಸವಣ್ಣನವರನ್ನು
ವಿಮರ್ಶಿಸಿ, ಅನೇಕ ಸಾರಿ ಖಂಡಿಸಿ ಮಾತನಾಡಿರುವುದನ್ನು ಗಮನಿಸಿದರೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ
ದೊರಕಿದ್ದ ಬೆಲೆಯ ಮಹತ್ವ ಅರಿವಾಗುತ್ತದೆ. ಓದುವುದರಿಂದ ಒಬ್ಬ ಬ್ರಾಹ್ಮಣನೆನ್ನಿಸಿಕೊಳ್ಳುವವನೆಂದೂ,
ಬೀಸಿ ಮಡಿವಾಳನಾಗುವನೆಂದೂ, ಲೋಹವನ್ನು ಕಾಸಿ ಕಮ್ಮಾರನಾಗುವನೆಂದೂ, ಯಾರೂ ಕಿವಿಯಿಂದ ಹುಟ್ಟಿಲ್ಲವೆಂದೂ
ವಚನಕಾರರು ಮಾರ್ಮಿಕವಾಗಿ ನುಡಿದಿದ್ದಾರೆ. ವೃತ್ತಿ ಭೇದದಿಂದ ವ್ಯಕ್ತಿಯನ್ನು ಅಳೆಯುವ ಪದ್ಧತಿ ತಪ್ಪಿ
ಹೋಯಿತೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕಾಯಕ ತತ್ವವು ಜಾತಿ ಭೇದಕ್ಕೆ ಕೊಡಲಿಯ ಏಟಾಗಿ ಪರಿಣಮಿಸಿದ್ದು
ಕರ್ನಾಟಕದ ಸಾಮಾಜಿಕ ಇತಿಹಾಸದಲ್ಲಿ ಪ್ರಮುಖವಾಗಿ ಉಲ್ಲೇಖಿಸಬೇಕಾದ ಸಂಗತಿಯಾಗಿದೆ. ಮೋಳಿಗೆಯ ಮಾರಯ್ಯನಂತಹ
ಶರಣನ ಬಡತನವನ್ನು ನೋಡಿ ಬಸವಣ್ಣನವರು ಅವನ ಮನೆಯಲ್ಲಿ ಯಾರಿಗೂ ತಿಳಿಯದಂತೆ ಐಶ್ವರ್ಯವನ್ನು ಬಿಟ್ಟು
ಬಂದಾಗ ಮಾರಯ್ಯ ದಂಪತಿಗಳು ಆ ಐಶ್ವರ್ಯವನ್ನು ತಿರಸ್ಕರಿಸಿಬಿಟ್ಟರು. ಏಕೆಂದರೆ ಅದು ತಾವು ಕಷ್ಟಪಟ್ಟು
ಸಂಪಾದಿಸಿದ್ದಲ್ಲವಾಗಿದ್ದಿತು. ಬಡತನ ಮತ್ತು ಅಭಿಮಾನಗಳು ಒಂದೆಡೆ ಇರಲು ಸಾಧ್ಯವೆಂಬುದಕ್ಕೆ ಇಂತಹ
ಸಂಗತಿಗಳು ನಿದರ್ಶನ. ಆಯ್ದಕ್ಕಿ ಮಾರಯ್ಯ ಒಮ್ಮೆ ಕಾಯಕದ ವಿಷಯದಲ್ಲಿ ನಿರಾಸಕ್ತನಾದಾಗ, ಅವನ ಹೆಂಡತಿ
ಬಂದು ಅವನನ್ನು ಎಚ್ಚರಿಸಿ ಕಾಯಕಕ್ಕೆ ನಿಯೋಗಿಸಬೇಕಾಯ್ತು. ಆಯ್ದಕ್ಕಿ ಮಾರಯ್ಯ ಅತಿಯಾಸೆಪಟ್ಟು ಹೆಚ್ಚು
ಕಾಳನ್ನು ಆರಿಸಿ ತಂದಾಗ, ಅವನ ಹೆಂಡತಿ ಆಸೆಯೆಂಬುದು ಅರಸನಿಗಲ್ಲದೆ ಭಕ್ತನಿಗಲ್ಲ ಎಂದು ಹಿಂದಕ್ಕೆ
ಕಳುಹಿಸಿದ ಘಟನೆಯೂ ಗಮನಾರ್ಹ. ಹರಿಹರ ಕವಿ ತನ್ನ ಅನೇಕ ರಗಳೆಗಳಲ್ಲಿ ಬೇರೆ ಬೇರೆ ವೃತ್ತಿಗಳನ್ನವಲಂಬಿಸಿದ್ದ
ಭಕ್ತರ ಕಾಯಕವೂ ಭಕ್ತಿ ಸಾಧನೆಯೂ ಹೇಗೆ ಅಭಿನ್ನವಾಗಿದ್ದುವೆಂಬುದನ್ನು ಸೊಗಸಾದ ರೂಪಕಗಳಲ್ಲಿ ನಿರೂಪಿಸಿದ್ದಾನೆ.
ವಚನ ಚಳುವಳಿ ವೈಚಾರಿಕ ಸ್ವಾತಂತ್ರ್ಯ ಮತ್ತು ವೈಶಿಷ್ಟ್ಯದ
ಅರಿವು ರೂಪಿಸಿಕೊಂಡ ಪುರುಷ ಸ್ತ್ರೀಯರ ಬಗೆಗಿನ ಸಿದ್ಧಾಂತಗಳನ್ನು ಭಾರತೀಯ ಸಂಪ್ರದಾಯಕ್ಕೆ ಹೋಲಿಸಿ
ನೋಡಿದಾಗ ವೈಶಿಷ್ಟ್ಯತೆಯನ್ನು ಪಡೆದಿರುವುದು ವ್ಯಕ್ತವಾಗುತ್ತದೆ. ವಚನ ಚಳುವಳಿ ಪುರುಷ ಮತ್ತು ಮಹಿಳೆ
ಇಬ್ಬರೂ ಸಮಾನ ಸತ್ವವುಳ್ಳವರೆಂದು ಅದರ ಗುರುತೇ ಸಮತಾಭಾವದಿಂದೊಡಗೂಡಿದ ಆಧ್ಯಾತ್ಮಿಕ ಕಲ್ಪನೆಯಾಗಿರುವ
ಶಿವತ್ವವಾಗಿದೆ. ವಚನ ಚಳುವಳಿಯ ದೃಷ್ಟಿಯಲ್ಲಿ ಸ್ತ್ರೀ ಪುರುಷರಿಬ್ಬರೂ ಶಿವತ್ವವನ್ನು ಸಂಪಾದಿಸಲು
ಅರ್ಹತೆಯನ್ನು ಹೊಂದಿದವರಾಗಿದ್ದಾರೆ. ಹಿಂದಿನ ವೈದಿಕ ಧರ್ಮವು ಸಮರ್ಥಿಸಿಕೊಂಡು ಬಂದಿದ್ದ ಮಹಿಳೆಯ
ವಿಧೇಯತೆ ಹಾಗೂ ಬಂಧನಗಳನ್ನು ನಿರಾಕರಿಸಿ ಸ್ತ್ರೀಗೆ ಪುರುಷನ ಜೊತೆಗೆ ಸಮಾನವಾಗಿ ಬಾಳುವ ಎಲ್ಲಾ ಬಗೆಯ
ಸ್ವಾತಂತ್ರ್ಯವನ್ನು ಒದಗಿಸುವುದು ಈ ಚಳುವಳಿಯ ಮುಖ್ಯ ಧ್ಯೇಯವಾಗಿದ್ದಿತು.
ದಾಸಿಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ
ಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ, ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ. ವಚನಕಾರರ ವಚನಗಳಲ್ಲಿ
ಮಹಿಳೆಯ ಸ್ವಾತಂತ್ರ್ಯದ ವಿಚಾರ ಅಲ್ಲಲ್ಲಿ ಕಾಣಿಸಿಕೊಂಡಿದ್ದು ಆಧ್ಯಾತ್ಮಿಕ ನಿಲುವಿನಲ್ಲಿ ವ್ಯಕ್ತಗೊಂಡಿದೆ.
ವಚನ ಚಳುವಳಿಯಲ್ಲಿ ಲಿಂಗ ಭೇದ ಕಾಣಿಸಿಕೊಂಡಿಲ್ಲ. ಸ್ತ್ರೀಯರು ಆಧ್ಯಾತ್ಮಿಕ ಸಿದ್ಧಾಂತವನ್ನು ರಚಿಸುವಲ್ಲಿ
ವಚನ ಸಾಹಿತ್ಯವನ್ನು ನಿರ್ಮಿಸುವಲ್ಲಿ ಸಮಾನತೆಯನ್ನು ಪಡೆದವರಾಗಿದ್ದಾರೆ. ಪುರುಷ ಪ್ರಧಾನವಾದ ಹಿಂದೂ
ಬ್ರಾಹ್ಮಣ ಪದ್ಧತಿಯಲ್ಲಿಯ ಮಹಿಳೆಯರ ಸ್ವರೂಪ ಮತ್ತು ಕಲ್ಪನೆಗಳ ವಿಚಾರಗಳಿಗಿಂತ ವ್ಯತಿರಿಕ್ತವಾಗಿ
ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಉತ್ಸವ ಪೂಜೆಗಳಲ್ಲಿ ಭಾಗವಹಿಸುವಲ್ಲಿ ಪುರುಷನಿಗಿಂತ ಅಧಿಕಾರವನ್ನು
ಮಹಿಳೆಗೂ ವಚನ ಚಳುವಳಿ ಕಲ್ಪಿಸಿಕೊಟ್ಟಿದೆ. ಜ್ಞಾನವನ್ನು ಸಂಪಾದಿಸುವ ಸ್ವಾತಂತ್ರ್ಯದ ಜೊತೆಗೆ ಪುರುಷನನ್ನು
ಎದುರಿಗಿಟ್ಟುಕೊಂಡು ಧರ್ಮಜ್ಞಾನ ಮತ್ತು ತಿಳುವಳಿಕೆಯ ಬಗೆಗೆ ಅವನನ್ನು ಚರ್ಚೆಗೆ ಆಹ್ವಾನಿಸುವಷ್ಟು
ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟಿದೆ. ಅಂತಹ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು ಆಧ್ಯಾತ್ಮಿಕ
ವಿಷಯದಲ್ಲಿಯೂ ಅದ್ವೈತ ತತ್ವದಲ್ಲಿಯೂ ಉತ್ತುಂಗ ನಿಲುವನ್ನು ಪಡೆದಿದ್ದ ಅಲ್ಲಮಪ್ರಭುವನ್ನು ನೇರವಾಗಿ
ಆಹ್ವಾನಿಸಿ ಅವನೊಂದಿಗೆ ಚರ್ಚೆಗೆ ನಿಂತ ಮುಕ್ತಾಯಕ್ಕಳನ್ನು ಉದಾಹರಿಸಬಹುದಾಗಿದೆ.
ಕರ್ನಾಟಕದ ಆ ಹನ್ನೆರಡನೆಯ
ಶತಮಾನದ ಸಮಾಜೋ ಧಾರ್ಮಿಕ ಚಳುವಳಿಯನ್ನು ವಚನ ಚಳುವಳಿ ಎಂಬ ಸೀಮಿತ ಅರ್ಥದ ಪದಕ್ಕಿಂತ ಶರಣ ಚಳುವಳಿ
ಎಂದು ನಿರ್ದೇಶಿಸುವುದು ಸೂಕ್ತ ಎಂಬುದು ಬಹುತೇಕ ವಿದ್ವಾಂಸರ ಅನಿಸಿಕೆಯಾಗಿದೆ. ಶರಣರು ತಮ್ಮ ಚಳುವಳಿಯನ್ನು
ಸಫಲಗೊಳಿಸಲು ವಚನ ರಚನೆಗೆ ಕೈ ಹಾಕಿದರು. ಶರಣ ಹಾಗೂ ಶರಣೆ ಎಂಬ ಸ್ತ್ರೀ ವಾಚಕವನ್ನೂ ಒಳಗೊಳ್ಳುವ ಶರಣ
ಮಾತು ಆ ಸಮಾಜದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಹೆಂಡದ ಮಾರಯ್ಯರಿಂದ ಹಿಡಿದು ಬಸವ, ಚನ್ನಬಸವ,
ಅಲ್ಲಮ, ಸಿದ್ಧರಾಮ, ಅಕ್ಕಮಹಾದೇವಿ, ಲಕ್ಕವ್ವ ಎಲ್ಲರನ್ನೂ ಒಳಗೊಳ್ಳುತ್ತದೆ. ಅವರು ಹುಟ್ಟಿದ ಬೇರೆ
ಬೇರೆ ಜಾತಿಗಳು ಬೇರೆ ಬೇರೆ ಅಂತಸ್ತನ್ನು ಅಂದಿನ ಪರಿಸರದಲ್ಲಿ ಹೊಂದಿರುವುದಾಗಿದ್ದರೂ ಅವರೆಲ್ಲರೂ
ಶರಣರಾಗಿ ಮತೀಯವಾಗಿ ಸಾಮಾಜಿಕವಾಗಿ ಸಂಪೂರ್ಣ ಸಮಾನರಾಗಿದ್ದರು. ಶರಣ ಮಾತು ಸಮಾನತೆಯ ಸಂಕೇತ. ಅದು
ಅಂದಿನ ಸಮಾಜೋ ಧಾರ್ಮಿಕ ಚಳುವಳಿಯ ವ್ಯಾಪ್ತಿಗೆ ಬಂದ ಎಲ್ಲರನ್ನೂ ಹೇಳುತ್ತದೆಯಾದ್ದರಿಂದ ಶರಣ ಚಳುವಳಿ
ಎಂಬ ಮಾತು ಬಸವ ಚಳುವಳಿ, ವೀರಶೈವ ಚಳುವಳಿ, ಲಿಂಗಾಯತ ಚಳುವಳಿ, ವಚನ ಚಳುವಳಿ ಈ ಮಾತುಗಳಿಗಿಂತ ಹೆಚ್ಚು
ಅರ್ಥಪೂರ್ಣ, ಧ್ವನಿಪೂರ್ಣ ಮಾತಾಗಿದೆ.
3. ಧಾರ್ಮಿಕ ಆಯಾಮ
ಅ.ಆತ್ಮಕ್ಕೆ ಕೊಟ್ಟ ಪ್ರಾಮುಖ್ಯ
ಆ.ಪರ್ಯಾಯ ಆಚರಣೆಗಳು
ವೈದಿಕರಿಗೆ ವಿರುದ್ಧವಾದ
ಆಚರಣೆಗಳು
ಇ. ಅಂತರಂಗ-ಬಹಿರಂಗ ಸಮನ್ವಯ
ಈ. ಸ್ಥಾವರ ಕಲ್ಪನೆಯ ವಿರೋಧ
ಅ. ಆತ್ಮಕ್ಕೆ ಕೊಟ್ಟ ಪ್ರಾಮುಖ್ಯ: ವ್ಯಕ್ತಿತ್ವ
ವಿಕಸನದಲ್ಲಿ ಆತ್ಮಶೋಧನೆಯು ಅಗತ್ಯ ಎಂಬುದನ್ನು ವಚನಕಾರರು ಗ್ರಹಿಸಿರುವುದು ಪ್ರಮುಖವಾದ ಅಂಶ.ವಚನಕಾರರಲ್ಲಿ
ಆತ್ಮಶೋಧನೆ ಕ್ರಿಯೆಯು, ವ್ಯಕ್ತಿಗತವಾಗಿ ತನ್ನ ಮನಸ್ಸನ್ನು ತಾನು ತಿದ್ದಿಕೊಳ್ಳುವುದರ ಜೊತೆಗೆ ತನ್ನ
ಮೂಲಕ ಸಮುದಾಯದ ಮನಸ್ಸನ್ನು ತಿದ್ದುವುದಾಗಿದೆ. ಆತ್ಮಶೋಧನೆಯು ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತ
ಪರೀಕ್ಷೆಗೊಳಪಡಿಸಿಕೊಳ್ಳುತ್ತ ಅರಿವಿನ ಸಾಧ್ಯತೆಗಳನ್ನು ಕಂಡುಕೊಳ್ಳುತ್ತದೆ. ವಚನಗಳಲ್ಲಿ ಆತ್ಮಪ್ರಶಂಸೆಯ
ನಿರಾಕರಣೆಯ ಜೊತೆಗೆ ಆತ್ಮಶೋಧನೆ ಪ್ರಮುಖವಾಗಿದೆ. ವಚನಕಾರರಲ್ಲಿ ಬಸವಣ್ಣನವರ ವಚನಗಳಲ್ಲಿ ಮಾತ್ರ ಹೆಚ್ಚಾಗಿ
ಆತ್ಮಶೋಧನೆಯ ವಚನಗಳು ಹೆಚ್ಚಾಗಿ ಕಂಡು ಬರುತ್ತವೆ. ಇವರ ವಚನಗಳಲ್ಲಿಯ ಆತ್ಮಶೋಧನೆಯ ಕ್ರಿಯೆಯು ವ್ಯಕ್ತಿಮುಖಿಯಾಗಿರದೇ
ಸಮಾಜಮುಖಿಯಾಗಿದೆ. ಬಸವಣ್ಣ ಒಬ್ಬ ವ್ಯಕ್ತಿಯಾಗಿ ಸಮಾಜದ ಹೊರಗಡೆ ನಿಂತು ಆತ್ಮ ಶೋಧನೆ ಮಾಡಿಕೊಳ್ಳದೆ
ಸಮಾಜದ ಪ್ರತಿನಿಧಿಯಾಗಿದ್ದು ಸಮಾಜದೊಳಗಿದ್ದುಕೊಂಡೆ ಆತ್ಮ ಶೋಧನೆಗೆ ತೊಡಗಿದ್ದಾನೆ.
ʻಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾಯಿತ್ತೆನ್ನ
ಭಕ್ತಿ’ ಎಂಬ ವಚನದಲ್ಲಿ ಭಕ್ತಿಯ ಬಗೆಗಿನ ವಿವರಣೆಯಿದ್ದು ಭಕ್ತಿ ಅರ್ಥವಂತಿಕೆಯನ್ನು ಪಡೆದುಕೊಳ್ಳ
ಬೇಕಾದರೆ ಅದನ್ನು ಅರಿದು ಆಚರಿಸಬೇಕಾಗುತ್ತದೆ. ಅರಿಯದೇ ಆಚರಿಸುವ ಭಕ್ತಿ ಎಳ್ಳಿಲ್ಲದ ಗಾಣವನಾಡಿದ
ರೀತಿ ವ್ಯರ್ಥವಾಗುತ್ತದೆ. ಇಲ್ಲಿ ಆತ್ಮಶೋಧನೆಯ ಜೊತೆಗೆ ಆತ್ಮ ವಿಮರ್ಶೆಯು ನಡೆದಿರುವುದನ್ನು ಗುರುತಿಸಬಹುದಾಗಿದೆ.
ವಚನಕಾರರು ಆತ್ಮಸ್ತುತಿಗೆ ಬದಲಾಗಿ ಆತ್ಮವಿಮರ್ಶೆಗೆ ಪ್ರಾಮುಖ್ಯತೆಯನ್ನು ಕಲ್ಪಿಸಿಕೊಟ್ಟರು. ಆತ್ಮ
ಪ್ರಶಂಸೆಯನ್ನು ಅಲ್ಲಗಳೆದು, ಹೊಗಳಿಕೆಯನ್ನು, ಸ್ತೋತ್ರ ಸಂಸ್ಕೃತಿಯನ್ನು ವಿರೋಧಿಸಿದರು. ಹೊಗಳಿ ಹೊಗಳಿ
ಎನ್ನವರು ಹೊನ್ನಶೂಲದಲ್ಲಿಕ್ಕಿದರಯ್ಯಾ ಎನ್ನುವ ಮಾತು ಇದಕ್ಕೆ ನಿದರ್ಶನ. ವಚನಕಾರರು ಹೊಗಳಿಕೆಗೆ ತೆಗಳಿಕೆಗೆ
ಬೆಲೆ ಕೊಡದೆ ಆತ್ಮನಿವೇದನೆಗೆ ಪ್ರಾಮುಖ್ಯತೆಯನ್ನು ಕೊಟ್ಟರು.
ಹೊಸತಿಲ ಪೂಜಿಸಿ ಹೊಡವಂಟು
ಹೋದ
ಒಕ್ಕಲಿತಿಯಂತಾಯಿತ್ತೆನ್ನ
ಭಕ್ತಿ, (ಬ.ವಚನ:423)
ಒಂದುವನರಿಯದ ಸಂದೇಹಿ
ನಾನಯ್ಯಾ
ನಂಬುಗೆಯಿಲ್ಲದ ಡಂಬಕ
ನಾನಯ್ಯಾ (ಬ.ವಚನ:495) ಈ ವಚನದಲ್ಲಿಯ ಒಕ್ಕಲಿತಿಗೆ ನಿಜವಾದ ಭಕ್ತಿಯಿಲ್ಲ. ಕೇವಲ ಹೊಸತಿಲು ಪೂಜಿಸಿ
ಹೊರ ಹೋಗುವುದಷ್ಟೇ ಅವಳಿಗೆ ಗೊತ್ತು. ಆ ಪೂಜೆಯ ಕ್ರಿಯೆಯಲ್ಲಿ ನಿಷ್ಠೆಯಿಲ್ಲ,ಭಕ್ತಿಯಿಲ್ಲ. ಶ್ರದ್ಧೆಯಿಲ್ಲ.
ತನ್ನ ಸ್ಥಿತಿಯೂ ಒಕ್ಕಲಿಯಂತೆಯೇ ಆಯಿತೆಂದು ಹೇಳುವಲ್ಲಿ ಆತ್ಮವಿಮರ್ಶೆಯ ಪ್ರಖರತೆಯಿದೆ.
ಆ.ಪರ್ಯಾಯ ಆಚರಣೆಗಳು
ವೈದಿಕರಿಗೆ ವಿರುದ್ಧವಾದ
ಆಚರಣೆಗಳು:
ವಚನಕಾರರಲ್ಲಿ ಏಕದೇವೋಪಾಸನೆಯು
ಪ್ರಮುಖ ಧೋರಣೆಯಾಗಿದ್ದು, ಶಿವನು ಒಪ್ಪಿತವಾದ ಒಬ್ಬನೇ ಒಬ್ಬ ದೇವರಾಗಿದ್ದಾನೆ. ಬಸವಣ್ಣನವರ ವಚನಗಳ
ಅಂಕಿತದಲ್ಲಿಯ ಕೂಡಲಸಂಗಮದೇವನು, ಹರ, ಶಿವ, ಮಹೇಶ್ವರ, ರುದ್ರ ಮೊದಲಾದ ಪರ್ಯಾಯ ಹೆಸರುಗಳಿಂದ ಪ್ರಯೋಗಿಸಲ್ಪಟ್ಟಿದ್ದಾನೆ.
ವಚನಗಳಲ್ಲಿ ಶಿವಪಾರಮ್ಯವನ್ನು ಪ್ರತಿಪಾದಿಸುವ ಅನೇಕ ವಚನಗಳು ಸಿಗುತ್ತವೆ. ಪ್ರತಿಯೊಬ್ಬ ವಚನಕಾರನಿಗೂ
ತನ್ನದೇ ಆದ ಭಾವನೆಗಳ ಅಂಕಿತನಾಮವಾಗಿ ಶಿವನು ರೂಪುಗೊಂಡಿದ್ದಾನೆ.
ಏಕದೇವೋಪಾಸನೆಗೆ ಮಹತ್ವ
ನೀಡಿದ ಬಸವಣ್ಣನವರು ಈ ಕೆಳಕಂಡ ವಚನದಲ್ಲಿ
`ಗಂಡಶಿವಲಿಂಗ ದೇವರ ಭಕ್ತ
ಹೆಂಡತಿ ಮಾರಿಮಸಣಿಯ ಭಕ್ತೆ
ಗಂಡ ಕೊಂಬುದು ಪಾದೋದಕ ಪ್ರಸಾದ
ಹೆಂಡತಿಕೊಂಬುದು ಸುರೆ ಮಾಂಸ
ಬಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ (ಬ.ವ.ಸಂ.104)
ಹೆಂಡದ ಮಡಕೆಯ ಹೊರಗೆ ತೊಳೆದಂತೆ’
ಎಂದು ವಿಡಂಬಿಸಿದ್ದಾರೆ.
ಈ ವಚನದಲ್ಲಿ ಸತಿ-ಪತಿಗಳ ವಿರಸದಿಂದ ಇಡೀ ಕೌಟುಂಬಿಕ ಪರಿಸರವು ಅಜ್ಞಾನದಲ್ಲಿ ಮುಳುಗಿ ತೇಲಿ ಹೋಗುತ್ತಿದ್ದು
ಅದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಈ ರೀತಿಯಾಗಿ ನುಡಿದಿದ್ದಾರೆ. ಸತಿಪತಿಗಳಲ್ಲಿರುವ ಧರ್ಮ ಸಂಬಂಧದ
ಆಚರಣೆ ನಂಬಿಕೆಗಳನ್ನು ಮೂದಲಿಸುವುದರ ಜೊತೆಗೆ ಪರಸ್ಪರ ಐಕ್ಯಮತ್ಯವಿಲ್ಲದಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು
ನುಡಿದಿದ್ದಾರೆ. ಜನರ ಮೂಢನಂಬಿಕೆಗಳನ್ನೇ ಅವಲಂಬಿಸಿದ್ದ ಹಲವಾರು ಕ್ಷುದ್ರದೈವಗಳ ಆರಾಧನೆಯನ್ನು ಅವರು
ತಪ್ಪಿಸಿ ಏಕದೇವೋಪಾಸನೆಯನ್ನು ಪ್ರೋತ್ಸಾಹಿಸಿದರು. ಕೆಳಕಂಡ ವಚನದಲ್ಲಿ ಕ್ಷುದ್ರ ದೈವಗಳ ಆರಾಧನೆಯ
ಪರಿಯನ್ನು, ಅದರ ಸಾಧಕ-ಬಾದಕಗಳನ್ನು
`ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಉರಿಯಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯ
ಅಂಜಿಕೆಯಾದರೆ ಹೂಳುವ ದೈವವನೆಂತುಸರಿಯೆಂಬೆನಯ್ಯಾ (ಬ.ವ.ಸಂ.557)
ಸಹಜಭಾವ ನಿಜೈಕ್ಯ ಕೂಡಲ ಸಂಗಮದೇವನೊಬ್ಬನೇ’
ಎಂದು ವಿಡಂಬಿಸುವುದರ ಮೂಲಕ ವ್ಯಕ್ತಪಡಿಸಿದ್ದಾರೆ.
ದಯವೇ ಧರ್ಮದ ಮೂಲವಯ್ಯಾ
ಎಂಬ ನೂತನ ತತ್ವವನ್ನೇ ವೀರಶೈವ ಧರ್ಮದ ಮೂಲ ತತ್ವವನ್ನಾಗಿ ಮಾಡಿಕೊಂಡ ಬಸವಣ್ಣ ಪಶುಬಲಿ, ಪ್ರಾಣಿಹಿಂಸೆ
ತೀರಾ ಅಸಹ್ಯ, ಅಮಾನುಷ ಎಂಬುದಾಗಿ ಭಾವಿಸಿ ಅಂತೆಯೇ ದುಃಖತಪ್ತರಾಗಿ,
`ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು ಎಲೆ ಹೋತಾ ಅಳುಕಂಡಾ
ವೇದವನ್ನು ಓದಿದವರ ಮುಂದೆ ಅಳುಕಂಡಾ
ಶಾಸ್ತ್ರವನ್ನು ಕೇಳಿದವರ ಮುಂದೆ ಅಳುಕಂಡಾ’ (ಬ.ವ.ಸಂ.573)
ನೀನು ಅತ್ತುದಕ್ಕೆ ತಕ್ಕದು ಮಾಡುವ ಕೂಡಲಸಂಗಮದೇವಾ’
ಎಂದು ನುಡಿದಿದ್ದಾರೆ.
ಬಸವಣ್ಣನವರು ದಯೆಯನ್ನು ಮಾನವರಿಗೆ ಮಾತ್ರ ಸೀಮಿತಗೊಳಿಸದೆ ಯಜ್ಞಯಾಗಗಳ
ಹೆಸರಿನಲ್ಲಿ ಪ್ರಾಣಿವಧೆ ಮಾಡುವ ಪದ್ಧತಿಯನ್ನು ಟೀಕಿಸುವುದರ ಮೂಲಕ ಪ್ರಾಣಿಗಳಿಗೂ ವಿಸ್ತರಿಸಿದ್ದಾರೆ.
ಸಮಾಜ ಸುಧಾರಣೆಯ ಕಾರ್ಯದಲ್ಲಿ
ಮನುಷ್ಯ ಮೊದಲು ತನ್ನನ್ನು ತಾನು ತಿದ್ದಿಕೊಳ್ಳಬೇಕು ತನ್ನ ಲೋಪದೋಷಗಳನ್ನು ನಿವಾರಿಸಿಕೊಂಡು ಆತ್ಮಶ್ರೀಯನ್ನು
ಬೆಳೆಸಿಕೊಳ್ಳಬೇಕು ಎಂಬುದನ್ನು
`ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಖಃಕ್ಕೆ ಅಳುವವರ ಮೆಚ್ಚ ನಮ್ಮ
ಕೂಡಲಸಂಗಮದೇವಾ’ (ಬ.ವ.ಸಂ.124)
ಎಂದು ಹೇಳುವುದರ ಮೂಲಕ ಮನವರಿಕೆ ಮಾಡಿಕೊಟ್ಟರು. ಅನಕ್ಷರಸ್ತರೂ ಆದ
ಕೆಳವರ್ಗದವರಿಗೆ ಧಾರ್ಮಿಕ ಆಚರಣೆಗಳಲ್ಲಿಯೂ ಅವಕಾಶ ಕಲ್ಪಿಸುವ ಸಲುವಾಗಿ
`ಹಾಲನೇಮ ಹಾಲಕೆನೆಯ ನೇಮ
ಕೆನೆತಪ್ಪಿದಬಳಿಕ ಕಿಚ್ಚಡಿಯನೇಮ
ಬೆಣ್ಣೆಯ ನೇಮ ಬೆಲ್ಲದನೇಮ
ಅಂಬಲಿಯ ನೆನೆದವರಾರನೂ ಕಾಣೆ
ಕೂಡಲಸಂಗನ ಶರಣರಲ್ಲಿ
ಅಂಬಲಿಯ ನೇಮದಾತ ಮಾದಾರ ಚೆನ್ನಯ್ಯ’ (ಬ.ವ.ಸಂ.232)
ಎಂದು ದೈವೋಪಾಸನೆಯಲ್ಲಿದ್ದ ಡಾಂಭಿಕತೆಗೆ ಬದಲು ಕೆಳವರ್ಗದ ದಲಿತ ಜನರಿಗೆ
ಸುಲಭವಾಗಿ ಎಟಕುತ್ತಿದ್ದ ಅಂಬಲಿಗೆ ಮಹತ್ವ ಕಲ್ಪಿಸಿ ಆ ಜನರಿಗೆ ಧಾರ್ಮಿಕ ನೆಲೆಯನ್ನು ಕಲ್ಪಿಸಿಕೊಟ್ಟರು.
ದಲಿತೋದ್ಧಾರದ ಕಾರ್ಯದಲ್ಲಿ ಧರ್ಮವು ಚೇತನದಾಯಕ ಅಂಶವಾಗಿ ಮಾರ್ಪಟ್ಟಿತು. ತಮ್ಮ ಅಜ್ಞಾನದಲ್ಲಿಯೇ ಮುಳುಗಿದ್ದ
ಕೆಳವರ್ಗದ ಜನತೆಗೆ ವೇದದ ನಿಜಸಂದೇಶವನ್ನು ಮರೆಮಾಚಿ ಜ್ಞಾನಜ್ಯೋತಿಯನ್ನು ಅವರಿಗೀಯದೆ ಅಳಿಯುತ್ತಿದ್ದ
ಅಂದಿನ ಪುರೋಹಿತ ಸಂಸ್ಕೃತಿಯನ್ನು ವಿರೋಧಿಸಿ ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರಾದವರೆಲ್ಲರೂ
ಒಂದೇ ಎಂದು ನಂಬುವುದೆನ್ನ ಮನವು ಎಂದು ಸಾರಿದ ಬಸವಣ್ಣ ಒಂದು ರೀತಿಯಲ್ಲಿ ʻಸ್ಥಗಿತ ಸಮಾಜದ ವ್ಯವಸ್ಥೆಗೆ ಪ್ರಗತಿಪರ ಸಸಿಯನ್ನು
ಕಸಿಯಾಗಿ ಬೆಳೆಸಲು' ಪ್ರಯತ್ನಿಸಿದವರಾಗಿದ್ದಾರೆ. ಬಸವಾದಿ ಪ್ರಮಥರ ಸಾಮಾಜಿಕ ಪ್ರಜ್ಞೆಯುಳ್ಳ ವಚನಗಳ
ಮೂಲಕ ಗ್ರಹಿತವಾಗುವ ಸಂಗತಿ ಎಂದರೆ, ಇವರ ಸಮಾಜ ವಿಮರ್ಶೆ ಮತ್ತು ವಿಡಂಬಣೆಯಲ್ಲಿ ಉತ್ಕಟವಾದ ಸಮಾಜಪ್ರಜ್ಞೆ
ಜಾಗೃತವಾಗಿರುವುದನ್ನು ಅರಿಯಬಹುದು. ಸಮಾಜಸುಧಾರಣೆಯ ಕಳಕಳಿ ಪ್ರವೃತ್ತಗೊಂಡಿರುವ ಹಿನ್ನೆಲೆಯಲ್ಲಿ
ವ್ಯಕ್ತಿ-ವ್ಯಕ್ತಿಗಳ ಅಂತರಂಗದ ಪರಿಶೋಧನೆಗೆ ಪ್ರೇರಣೆ ದೊರೆತಿದೆ. ಇದರಿಂದಾಗಿ ಸಮಾಜ ಸುಧಾರಣೆಯತ್ತ
ಎಲ್ಲರ ಗಮನ ಕೇಂದ್ರಿಕೃತವಾಯಿತು. ಇವರ ಈ ವಚನಗಳಲ್ಲಿ ಮಾನವತೆಗೆ ಹತ್ತಿರವಾಗುವ ಆಚಾರ-ವಿಚಾರಗಳು ಹುಟ್ಟಿಕೊಂಡಿರುವುದನ್ನು
ಗುರುತಿಸಬಹುದು. ಜನತೆಯಲ್ಲಿ ದೇವರು, ಧರ್ಮ, ಪೂಜೆ, ಮುಕ್ತಿ, ಲೌಕಿಕ, ಪಾರಮಾರ್ಥಿಕ ಇವುಗಳ ಬಗೆಗೆ
ಹೊಸ ಅರ್ಥವಂತಿಕೆ ಮೂಡಿತು. ಬಾಹ್ಯಾಡಂಬರ, ಬಾಹ್ಯಲಾಂಛನ, ನೇಮನಿತ್ಯ ಇವೇ ದೇವರು ಧರ್ಮ ಸಾಧನೆಗಳು
ಎಂದು ಭಾವಿಸಿದ್ದ ಮೂಢ ಸಮಾಜಕ್ಕೆ ತನ್ನ ತಾನರಿದಡೆ ತನ್ನರಿದೇ ಗುರು ಎಂಬ ಅಂತರಾತ್ಮ ಜಾಗೃತಗೊಂಡಿತು.
ಸಮಾಜದಲ್ಲಿ ಸೌಹಾರ್ದ್ರತೆ, ಸಮಾನತೆಗಳು, ಅಗತ್ಯವೆನಿಸಿದವು. ಸಮಾಜ ಹೊಸ ಅಧ್ಯಾಯದಲ್ಲಿ ಕಾಲಿಟ್ಟು
ಹೊಸ ಜೀವನದಲ್ಲಿ ಪ್ರವೇಶವನ್ನು ಪಡೆಯಿತು.
ಶಿವಶರಣರ ಈ ಸಮಾಜೋಧಾರ್ಮಿಕ
ಚಳುವಳಿಯಲ್ಲಿ ಸಾಮಾಜಿಕ ಅನಿಷ್ಟಗಳನ್ನು ನಿವಾರಿಸುವುದರ ಜೊತೆಗೆ ವಿಕಾಸಶೀಲವಾದ ಬದಲಿ ಮೌಲ್ಯವೊಂದನ್ನು
ಸೃಷ್ಟಿಸುವ ಜವಾಬ್ದಾರಿಯನ್ನು ಗುರುತಿಸಬಹುದು. ಸಿದ್ಧರಾಮನೂ ತನ್ನ ವಚನಗಳಲ್ಲಿ ಕರ್ಮಯೋಗದ ಪ್ರಧಾನತೆಯನ್ನು
ಒತ್ತಿ ಹೇಳಿದ್ದಾನೆ. ಅವನ ಕಾರ್ಯಚಟುವಟಿಕೆಯಿಂದಾಗಿಯೇ ಸೊನ್ನಲಿಗೆಯು ಧಾರ್ಮಿಕ ಹಾಗೂ ಕರ್ಮ ಚಟುವಟಿಕೆಗಳ
ಕೇಂದ್ರವಾಗಿತ್ತು. ಅವನ ಕಾರ್ಯಫಲಗಳಾದ ಕೆರೆ, ಅರವಟ್ಟಿಗೆಗಳು ಇಂದಿಗೂ ಸೊಲ್ಲಾಪುರದಲ್ಲಿದ್ದು ಆತನ
ವೀರನಿಷ್ಠೆ ಹಾಗೂ ಜನಹಿತ ಸಾಧನೆಯ ತೀವ್ರ ಹಂಬಲದ ಸ್ವರೂಪವನ್ನು ತೋರಿಸಿಕೊಡುತ್ತವೆ. ಈತನು ತನ್ನ ಕಾರ್ಯಕ್ಷೇತ್ರದಲ್ಲಿ
ಕಾಯಕ ನಿಷ್ಠೆ ಮತ್ತು ಕರ್ಮಶುದ್ಧತೆಯ ಮೂಲಕ ಮುಕ್ತಿಯನ್ನು ಪಡೆಯಲು ಕಾರ್ಯಪ್ರವೃತ್ತನಾಗಿದ್ದನು. ತನ್ನ
ಕಾರ್ಯಾಚರಣೆಯಲ್ಲಿ ಪರಿಶುದ್ಧ ಪ್ರಜ್ಞೆ ಇರಬೇಕೆಂಬ ಸಾಮಾಜಿಕ ಸಂದರ್ಭದಲ್ಲಿಯ ವಿಚಾರಧಾರೆ ಮಹತ್ತರ
ಎನಿಸಿದೆ. ಸಿದ್ಧರಾಮನಂತಹ ಅಪಾರ ಮಾನವೀಯತೆಯುಳ್ಳ ವಚನಕಾರರು ಅಂತರಂಗ ಶುದ್ಧತೆಯ ಮೂಲಕ ಹೊಸ ಸಮಾಜದ
ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾದುದು ಶ್ರೇಷ್ಠವೆನಿಸುತ್ತದೆ. ಜ್ಞಾನ, ಅರಿವು, ಬೋಧನೆ ಎಂಬುದು ವ್ಯಕ್ತಿತ್ವ
ಪರಿಪೂರ್ಣತೆಯ ಅಂಶಗಳು, ಜ್ಞಾನವೆಂಬುದು ಸದ್ಗುಣ ಸೂಚಕ.
`ಅರಿದಾಚರಿಸುವವನಾಚರಣೆ ಬ್ರಹ್ಮಮಯ
ಅರಿಯದವನಾಚರಣೆ ಮಾಯಾಮಯ’ (ಬ.ವ.ಸಂ.1955)
ಅಂತರಂಗ ಶುದ್ಧತ್ವವನ್ನು
ಬಿಂಬಿಸುವ ಈ ಜ್ಞಾನವು ಇಹ ಮತ್ತು ಪರಗಳೊಂದಿಗೆ ವ್ಯಕ್ತಿ ಮತ್ತು ಸಮಾಜಗಳನ್ನು ಮಾನವೀಯ ಸಂಬಂಧದಲ್ಲಿ
ಬೆಸೆಯುತ್ತದೆ. ಜ್ಞಾನವೆಂಬುದು ಕೇವಲ ಸಿದ್ಧಾಂತಿಯ ಸಾಧನೆಯಾಗದೆ, ವೇದಾಂತಿಯ ವಾದವಾಗದೆ ಜ್ಞಾನಿಯು
ಕೇವಲ ಕ್ರಿಯಾ ನುಡಿಯಾಗದೆ ಇರಬೇಕು. ವ್ಯವಹಾರಿಕ ದ್ರವ್ಯಾರ್ಜನೆ ಸಾಧನವಾಗಿ ಮಾತ್ರ ಪರ್ಯಾಪ್ತವಾಗುಳಿಯಬಾರದು.
`ಭವರಹಿತ’ ಮಾರ್ಗ ಶೋಧನೆಯಲ್ಲಿ ಚಲಿಸಬೇಕು ಎಂಬ ಸಿದ್ಧರಾಮರ ಹಿತನುಡಿಯು ಸಾಮಾಜಿಕ ಸಂಬಂಧದ ಸ್ವರೂಪವನ್ನು
ಕುರಿತ ಅಂತರಂಗಿಕ ವಿಶ್ಲೇಷಣೆಯಾಗಿದೆ.
`ಅವನ ಪ್ರಕಾರ ಎಲ್ಲಕ್ಕಿಂತ ವಚನವೇ ಶ್ರೇಷ್ಠ ವಾಙ್ಮಯ.
ಎಮ್ಮ ವಚನದೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮಬಾರದಯ್ಯಾ
ಎಮ್ಮ ವಚನದ ನೂರೆಂಟರಧ್ಯಯನಕ್ಕೆ
ಶತರುದ್ರೀಯ ಯಾಗ ಸಮಬಾರದಯ್ಯ
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರಿ ಲಕ್ಷ ಜಪ ಸಮಬಾರದಯ್ಯಾ’ (ಬ.ವ.ಸಂ.1613)
ದೇವರು-ಧರ್ಮದ ಬಗೆಗೆ
ವಚನಕಾರರು ತಳೆದಿರುವ ನಿಲುವುಗಳು ಸಾಂಪ್ರದಾಯಿಕ ನಿಲುವುಗಳಿಗಿಂತ ಬೇರೆಯಾಗಿದ್ದು ಪ್ರಗತಿ ಪರವಾಗಿವೆ.
ಸಾಮಾನ್ಯ ಜನತೆಯಲ್ಲಿ ವೈಚಾರಿಕಶಕ್ತಿಯನ್ನು ಮೂಡಿಸುವಂತಹವುಗಳಾಗಿವೆ.
ದೇವರ ಸ್ವರೂಪವನ್ನು ಕುರಿತ ಬಸವಣ್ಣನವರ ಈ ವಚನದಲ್ಲಿಯ
`ಕಲ್ಲದೇವರು ದೇವರಲ್ಲ ಮಣ್ಣುದೇವರು ದೇವರಲ್ಲ
ಪಂಚಲೋಹದಲ್ಲಿ ಮಾಡುವ ದೇವರು ದೇವರಲ್ಲ
ಸೇತುಬಂಧ ರಾಮೇಶ್ವರ ಗೋಕರ್ಣ ಕಾಶಿ
ಕೇದಾರ ಮೊದಲಾದ ಅಷ್ಟಾಷಷ್ಠಿ ಪುಣ್ಯತೀರ್ಥಗಳು
ಪುಣ್ಯಕ್ಷೇತ್ರಗಳಲ್ಲಿಹ ದೇವರು ದೇವರಲ್ಲ
ತನ್ನ ತಾನರಿದು ತಾನಾರೆಂಬುದ ತಿಳಿದಡೆ
ತಾನೇ ದೇವ ನೋಡಾ’
ಎಂಬ ವಿವರಣೆಯಲ್ಲಿ ದೇವರು ತನ್ನಲ್ಲೇ ಇರುವನೆಂದು ಸೂಚಿಸಿದ್ದಾರೆ.
ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರಾದವರನ್ನೆಲ್ಲರನು ಒಂದೇ ಎಂಬೆ ಎನ್ನುವ ವರ್ಗೀಕರಣವು ಏಕ
ದೇವೋಪಾಸನೆಯ ತತ್ವವನ್ನು ಹಿನ್ನೆಲೆಯಾಗಿಟ್ಟುಕೊಂಡೇ ರೂಪುಗೊಂಡಿದೆ. ಕುಲಜ-ಕುಲಜನಲ್ಲದವ ಧಾರ್ಮಿಕ-ಅಧಾರ್ಮಿಕ
ಎರಡು ಸ್ಪಷ್ಟ ವೈರುಧ್ಯಗಳನ್ನು ಬೆಳೆಸುವ ಆಶಯವನ್ನು ಒಳಗೊಂಡಿದೆ.
ಬಸವಾದಿ ಪ್ರಮಥರ ವಚನಗಳು
ಕೆಳವರ್ಗ-ಮೇಲುವರ್ಗದ ಆಚರಣೆ ಹಾಗೂ ಧಾರ್ಮಿಕ ನಂಬಿಕೆಗಳ ವಿರುದ್ಧ ಸ್ಪಷ್ಟವಾದ ಪ್ರತಿಕ್ರಿಯೆಯನ್ನು
ವ್ಯಕ್ತಪಡಿಸುತ್ತವೆ. ವಚನಗಳಲ್ಲಿ ಈ ವಿರೋಧವು ಹೊಸದೊಂದು ರಚನೆಯನ್ನು ಒಪ್ಪಿಕೊಳ್ಳುವಂತೆ ಮಾಡುವುದರ
ಕಡೆಗೆ ಒತ್ತನ್ನು ಕೊಡುತ್ತದೆ. ಒಂದು ವಚನವನ್ನು ಗಮನಿಸಿ;
`ಅರಗು ತಿಂದು ಕರಗುವ
ದೈವವ
ಉರಿವ ಕಂಡರೆ ಮುರುಟುವ
ದೈವವನೆಂತು ಸರಿಯೆಂಬೆನಯ್ಯಾ?
ಅವಸರ ಬಂದರೆ ಮಾರುವ
ದೈವವನೆಂತು ಸರಿಯೆಂಬೆನಯ್ಯಾ?
ಅಂಜಿಕೆಯದರೆ ಹೂಳುವ
ದೈವವನೆಂತು ಸರಿಯೆಂಬೆನಯ್ಯಾ?
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೇ
ದೇವ’ (ಬ.ವ.ಸಂ.557)
ದೈವಗಳ ನಾನಾ ಸ್ವರೂಪಗಳನ್ನು
ತೋರುವ ಅನೇಕ ರಚನೆಗಳನ್ನು ನಾವು ಬಸವಣ್ಣನ ವಚನಗಳಲ್ಲಿ ಕಾಣಬಹುದು. ಕೆಳವರ್ಗದ ದೇವಿ ನಂಬಿಕೆಗಳು ಹಾಗೂ
ಆಚರಣೆಗಳನ್ನು ವಿರೋಧಿಸುವ ಇಲ್ಲಿಯ ನೆಲೆಯನ್ನು ಬಸವಣ್ಣ “ಲೌಕಿಕ ಪ್ರಯೋಜನ”ದ ದೃಷ್ಟಿಯಿಂದಲೇ ಪ್ರಾರಂಭಿಸುತ್ತಾನೆ.
ಮನುಷ್ಯನ ಮೇಲೆ ಅವಲಂಬಿತವಾಗಿರುವ ದೈವಗಳು, (ಲೋಗರ ಬೇಡಿಕೊಂಡುಂಬ ದೈವಗಳು); ಮನುಷ್ಯನಿಗೆ ಯಾವ ರೀತಿಯ
ಪ್ರಯೋಜನಗಳಾಗಲಾರವು ಎನ್ನುವುದನ್ನು ವಚನಗಳು ಹೇಳುತ್ತವೆ. ಈ ದೈವಗಳಿಗೆ ಇದ್ದಿತೆಂದು ನಂಬಲಾದ ಮಾಟ,
ಮಂತ್ರದ ಶಕ್ತಿಗಳ ನಿರಾಕರಣೆಯು ಇಲ್ಲಿ ನಡೆಯುತ್ತದೆ. ವಚನಕಾರರು ಮೂಲತಃ ಮಾಟಕ್ಕೆ ತಂತ್ರ ಸಾಧ್ಯತೆಗಳಿಗೆ
ರೂಪಿತವಾದ ಕೆಳವರ್ಗದ ದೈವಗಳನ್ನು ಕುರಿತು ಟೀಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಟೀಕೆಗಳ ಮುಖ್ಯ ಲಕ್ಷಣ
ಅವುಗಳ ದೌರ್ಬಲ್ಯವನ್ನು ಕುರಿತದ್ದೇ ಆಗಿದೆ. ವಚನಗಳಲ್ಲಿ ಬ್ರಾಹ್ಮಣ ವರ್ಗದ ಧಾರ್ಮಿಕ ನೆಲೆಗಳು ಹಾಗೂ
ಆಚರಣೆಗಳ ಟೀಕೆಯೂ ತೀಕ್ಷ್ಣವಾಗಿ ವ್ಯಕ್ತವಾಗಿದೆ. ವೇದ ಶಾಸ್ತ್ರ ಪುರಾಣಗಳ ಟೀಕೆಯಿಂದ ಹಿಡಿದು ಆ ವರ್ಗದ
ನಡಾವಳಿಯ ಟೀಕೆಗಳವರೆಗೂ ವಚನಗಳ ವಿಮರ್ಶೆಯಿದೆ.
ಪುರಾಣಗಳ ಕುರಿತ ಟೀಕೆಯಲ್ಲಿ ಬ್ರಾಹ್ಮಣ ಮತ್ತು ಶೂದ್ರ ವರ್ಗದ
ನಡುವೆ ಸಾಂಸ್ಕೃತಿಕ ಸಂಬಂಧಗಳನ್ನು ನೆಲೆಯೂರುವಂತೆ ಮಾಡುವ ಧೋರಣೆಯನ್ನು ಕಾಣಬಹುದಾಗಿದೆ. ಪುರಾಣಗಳನ್ನು
ನಿರಾಕರಿಸಬೇಕೆನ್ನುವ ವಚನಕಾರರ ಧೋರಣೆಯು ಶ್ರೇಣೀಕೃತ ಮೌಲ್ಯಗಳನ್ನು ಹೊಂದಿಯೇ, ಹಿಂದೂ ಧಾರ್ಮಿಕ ವ್ಯವಸ್ಥೆಯ
ಒಂದೇ ತಳಹದಿಯ ಮೇಲೆ ಇದ್ದಂತಹ ವರ್ಗಗಳಿಗೆ ಒಟ್ಟು ವ್ಯವಸ್ಥೆಯ ಕೆಟ್ಟ ಅಂಶಗಳನ್ನು ಎತ್ತಿ ತೋರಿಸಬೇಕೆನ್ನುವುದೇ
ಆಗಿದೆ. ಹೀಗಾಗಿ ಅಧಿಕ ಸಂಖ್ಯೆಯಲ್ಲಿ ವೈದಿಕ ಆಚರಣೆಗಳ ಟೀಕೆ ವಚನಗಳಲ್ಲಿ ವ್ಯಕ್ತಗೊಂಡಿದೆ.
ಆ.ಅಂತರಂಗ-ಬಹಿರಂಗ ಸಮನ್ವಯ:
ಬಸವಾದಿ ಪ್ರಮಥರ ವಚನಗಳಲ್ಲಿ ಅಂತರಂಗ-ಬಹಿರಂಗ ಶುದ್ಧಿ ಇದ್ದವನು ಭಕ್ತನಾಗಬಲ್ಲನೆಂದೂ,
ಭಕ್ತನಾಗಬೇಕಾದರೆ ಮನಸ್ಸು ಕ್ರಿಯೆಗಳ ಪ್ರಾಮಾಣಿಕತೆ ಅಗತ್ಯವೆಂಬ ಧೋರಣೆ ವ್ಯಕ್ತವಾಗಿದೆ. ಬಸವಣ್ಣನವರ
ವಚನಗಳಲ್ಲಿ ವ್ಯಕ್ತಿತ್ವದ ಅಂತರಂಗ ಹಾಗೂ ಬಹಿರಂಗದ ಸಮನ್ವಯವನ್ನು ಕುರಿತ ಕಾಳಜಿಯನ್ನು ಗುರುತಿಸ ಬಹುದಾಗಿದೆ.
` ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು
ಹುಟ್ಟಿ ಮನೆಯೊಳಗೆ ರಜತುಂಬಿ
ಮನೆಯೊಳಗೆ ಮನೆಯೊಡೆಯನಿದ್ದಾನೋ
ಇಲ್ಲವೋ?
ತನುವಿನೊಳಗೆ ಹುಸಿ
ತುಂಬಿ ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲಾ
ಕೂಡಲಸಂಗಮದೇವಾ’ ಈ
ವಚನದಲ್ಲಿ ಬಸವಣ್ಣನು ವ್ಯಕ್ತಿಯ ವ್ಯಕ್ತಿತ್ವದ ಆಂತರಂಗಿಕ ಬೆಳವಣಿಗೆ ಹಾಗೂ ಶುದ್ಧತೆಯನ್ನು ಕೇಂದ್ರೀಕರಿಸಿದೆ.
ಸಂಶಯ ಮತ್ತು ಶೋಧನೆಯ ಧಾಟಿಯಲ್ಲಿ ಸಾಗುವ ಈ ವಚನದಲ್ಲಿ ಹಾಳುಬಿದ್ದ ಮನೆಯ ರೂಪಕಕ್ಕೂ ಮತ್ತು ವ್ಯಕ್ತಿತ್ವವನ್ನು
ರೂಪಿಸಿಕೊಳ್ಳದ ಮನುಷ್ಯನಿಗೂ ಹೋಲಿಕೆಯನ್ನು ಕೊಡುತ್ತದೆ. ದೇಹ ಮತ್ತುವ್ಯಕ್ತಿತ್ವವನ್ನು ರೂಪಿಸಿಕೊಳ್ಳದ
ಮನುಷ್ಯನಿಗೂ ಹೋಲಿಕೆಯನ್ನು ಕೊಡುತ್ತದೆ. ದೇಹ ಮತ್ತು ಮನಸ್ಸನ್ನು ಆವರಿಸಿರುವ ಹುಸಿ ಹಾಗೂ ವಿಷಯಗಳು
ವ್ಯಕ್ತಿತ್ವದ ಹಾಳು ಬಿದ್ದ ಸ್ಥಿತಿಯನ್ನು ವಿವರಿಸುತ್ತವೆ. ಈ ವಚನದಲ್ಲಿ ವ್ಯಕ್ತಿಯು ತನ್ನನ್ನು ತಾನೇ
ಶೋಧಿಸಿಕೊಳ್ಳುವ ಬಗೆಯ ಪ್ರತಿಪಾದನೆಯನ್ನು ಗುರುತಿಸಬಹುದಾಗಿದೆ. ವಚನಗಳಲ್ಲಿ ನೀತಿ ಹಾಗೂ ವಿಡಂಬನೆಯನ್ನು
ಪ್ರತಿಪಾದಿಸುವ ಸಂದರ್ಭದಲ್ಲಿ ವ್ಯಕ್ತಿಯು ಬಹಿರಂಗದಲ್ಲಿ ಅಪ್ರಾಮಾಣಿಕನಾಗಿ ವರ್ತಿಸುವುದನ್ನು ವಿಡಂಬಿಸುವ
ರೀತಿಯನ್ನು ಕಾಣಬಹುದಾಗಿದೆ.
ಲೋಕದ ಡೊಂಕ ನೀವೇಕೆ
ತಿದ್ದುವಿರಿ?
ನಿಮ್ಮನಿಮ್ಮ ತನುವ
ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ
ಸಂತೈಸಿಕೊಳ್ಳಿ
ನೆರಮನೆಯವರ ದುಃಖಕ್ಕೆ
ಅಳುವವರ ಮೆಚ್ಚ
ಕೂಡಲಸಂಗಮದೇವಾ (ಬ.ವ.ಸಂ.124)
ಈ ವಿಡಂಬನಾ ವಚನವು ಮನುಷ್ಯನ ಅಂತರಂಗಕ್ಕೆ ಸಂಬಂಧಿಸಿದ್ದಾಗಿದೆ.
ವಚನಕಾರರು ಅಂತರಂಗ
ಶುದ್ಧಿಯ ಕಡೆಗೆ ತಮ್ಮ ಗಮನವನ್ನು ನೀಡಿ ಮೈಲಿಗೆ ಹೊಲೆತನದ ಕಲ್ಪನೆಯನ್ನು ಎಲ್ಲೆಲ್ಲಿ ಅಂಟಿಸಲಾಗಿದ್ದಿತ್ತೋ
ಅದೆಲ್ಲವನ್ನೂ ಅವಹೇಳನ ಮಾಡುತ್ತಾ ಅಂತಹ ವಿಚಾರಗಳಿಂದ ವಚನಕಾರರು ದೂರವಾಗಿರಬೇಕೆಂದು ಅವರು ವಿನಯಶಾಲಿಗಳು,
ನೀತಿವಂತರು, ಶುದ್ಧಾತ್ಮರೂ ಆಗಿ ತಮ್ಮ ಧರ್ಮಕ್ಕೂ ಸಮಾಜಕ್ಕೂ ಆದರ್ಶವಾಗಿ ಜೀವಿಸಬೇಕೆಂಬ ನಿಲುವನ್ನು
ವ್ಯಕ್ತಪಡಿಸಿದ್ದಾರೆ. ಜಗಕ್ಕೆಲ್ಲ ದೇವರು ಒಬ್ಬನೇ ಇದ್ದಾನೆಂದು ಹೇಳಿದ್ದಲ್ಲದೆ ಜನತೆಗೂ ತಿಳಿಯಲಿ
ಎಂದು ಜನತೆಯ ಭಾಷೆಯಲ್ಲಿಯೇ
‘ನಂಬಿದ ಹೆಂಡತಿಗೆ
ಗಂಡನೊಬ್ಬನೇ ಕಾಣಿರೋ
ನಂಬ ಬಲ್ಲ ಭಕ್ತರಿಗೆ
ದೇವನೊಬ್ಬನೇ ಕಾಣಿರೋ
ಬೇಡ ಬೇಡ, ಅನ್ಯದೈವದ
ಸಂಗ ಹೊಲ್ಲ.
ಬೇಡ ಬೇಡ, ಪರದೈವದ
ಸಂಗ ಹೊಲ್ಲ.
ಬೇಡ ಬೇಡ, ಅನ್ಯದೈವವೆಂಬುದು
ಹಾದರ, ಕಾಣಿರೋ.
ಕೂಡಲಸಂಗಮದೇವ ಕಂಡಡೆ,
ಮೂಗ ಕೊಯ್ಯುವ ಕಾಣಿರೋ.’ (ಬ.ವ.ಸಂ.617)
ಏಕದೈವದಲ್ಲಿರಬೇಕಾದ
ನಂಬುಗೆ ಎಷ್ಟು ನೇರವೂ, ಪ್ರಾಮಾಣಿಕವೂ ಆಗಿರಬೇಕೊ ಅಷ್ಟೇ ನೇರವಾದ, ಪ್ರಾಮಾಣಿಕ ದೃಷ್ಟಿ ಆ ದೇವನನ್ನು
ಪೂಜಿಸುವಲ್ಲಿಯೂ ಇರುವುದು ಅತ್ಯಗತ್ಯ. ಆದರೆ ಹಿಂದೂ ಬ್ರಾಹ್ಮಣ ಹಾಗೂ ಭಕ್ತಿಧರ್ಮಗಳು ಬೆಳೆಸಿಕೊಂಡು
ಬಂದಿದ್ದ ಉತ್ಸವ, ವಿಗ್ರಹಪೂಜೆ, ಆಡಂಬರದ ಪ್ರಕ್ರಿಯೆಗಳನ್ನು ಬಸವಣ್ಣ ಒಪ್ಪಲಿಲ್ಲ. ಬಹುದೈವತಾವಾದವು
ಅವನಿಗೆ ಎಷ್ಟು ಖಂಡನೀಯವಾಗಿತ್ತೋ ಆಡಂಬರದ ಹಾಗೂ ಡಾಂಭಿಕ ಧಾರ್ಮಿಕ ಪೂಜೆಗಳು ಅಷ್ಟೇ ಖಂಡನೀಯವಾಗಿದ್ದವು.
ಅಂತರಂಗಶುದ್ಧಿಯಿಂದ ದೇವರು ಸಂಪ್ರೀತಿಗೊಳ್ಳುವನು. ನಂಬುಗೆಯಿಂದ ತನ್ನನ್ನು ಕರೆದವರಿಗೆ ‘ಓ’ಯೆಂಬನು.
ಆದರೆ ಆ ದಾರಿಯನ್ನು ಬಿಟ್ಟು, ಸ್ನಾನ, ಮಡಿ, ಮೈಲಿಗೆಗಳನ್ನು ಆಚರಿಸುತ್ತ ಬಂಡಿಗಟ್ಟಲೆ ಹೂವು ಪತ್ರೆಗಳನ್ನು
ಏರಿಸುತ್ತ ಏನೆಷ್ಟು ಆಡಂಬರದ ಆಚಾರವನ್ನು ಮಾಡಿದರೆ ತನ್ನ ದೇವರಿಗೆ ಅದು ಅರ್ಪಿತವಾಗಲಾರದೆಂದು ಬಸವಣ್ಣನ
ಹೇಳಿಕೆ. ಆತ್ಮಗತವಾದ ತನ್ನ ಧರ್ಮವನ್ನು ಅಂತರ್ಗತ ಮಾಡಿಕೊಳ್ಳುವುದಕ್ಕೆ ಅತ್ಯಂತ ಅವಶ್ಯಕವಾದ ಸಾಧನವೆಂದರೆ
ಅಂತಃಕರಣ ಶುದ್ಧಿ. ಅಂತರಂಗ ಶುದ್ಧಿಯಿಲ್ಲದವರನ್ನು ಟೀಕಿಸುತ್ತ ಬಸವಣ್ಣ ಹೀಗೆ ಹೇಳಿದ:
‘ನೀರ ಕಂಡಲ್ಲಿ ಮುಳುಗುವರಯ್ಯಾ
ಮರನ ಕಂಡಲ್ಲಿ ಸುತ್ತುವರಯ್ಯ
ಬತ್ತುವ ಜಲವ, ಒಣಗುವ
ಮರನ ಮೆಚ್ಚಿದವರು
ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವ (ಬ.ವ.ಸಂ. 580)
ದೇವರು ಎಲ್ಲ ಕಡೆಯಲ್ಲಿಯೂ ಇರುವನು ಎನ್ನುವುದನ್ನು ಮರೆತು ಆತನು ಕಲ್ಲಿನಲ್ಲಿದ್ದಾನೆ,
ಮರದಲ್ಲಿದ್ದಾನೆ, ಹರಿವ ಜಲದಲ್ಲಿ ಇದ್ದಾನೆಂದು ತಿಳಿದು ಅವುಗಳನ್ನು ಆರಿಸಿಕೊಂಡು ಹೋಗುವುದು ತ್ಯಾಜ್ಯವೆಂದು
ಬಸವಣ್ಣನ ವಿಧಿಯಾಗಿದೆ. ಶುಭ ಅಶುಭಗಳ ವಿಚಾರವನ್ನು ಆತನು ನಿಷೇಧಿಸಿದನು. ಮಂಗಲ, ಮುಹೂರ್ತ, ಅಮಂಗಲ,
ಅಮುಹೂರ್ತಗಳಂತಹ ದ್ವಂದ್ವ ವಿಚಾರಗಳ ವಿಷಯದಲ್ಲಿ ನಿಷ್ಣಾತರೆಂದೆನ್ನಿಸಿಕೊಂಡ ಆ ಕಾಲದ ವಿಪ್ರವರ್ಗವು
ಅಜ್ಞಾನಿಗಳಾದ ಬಳಕೆದಾರರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದುದನ್ನು ನೋಡಿದ ಬಸವಣ್ಣ ಮಂಗಲ, ಅಮಂಗಲ
ಸಂಕೀರ್ಣವನ್ನೇ ಜರಿದು ನುಡಿಯುತ್ತ ಕೆಳಗಿನಂತೆ ಉಪದೇಶ ನೀಡಿದ್ದಾನೆ:
‘ಎಮ್ಮವರು ಬೆಸಗೊಂಡರೆ
ಶುಭಲಗ್ನವೆನ್ನಿರಯ್ಯ
ರಾಶಿಕೂಟ, ಋಣಸಂಬಂಧ
ಉಂಟೆಂದು ಹೇಳಿರಯ್ಯ
ಚಂದ್ರಬಲ, ತಾರಾಬಲ
ಉಂಟೆಂದು ಹೇಳಿರಯ್ಯ
ನಾಳಿನ ದಿನಕಿಂದಿನ
ದಿನ ಲೇಸೆಂದು ಹೇಳಿರಯ್ಯ (ಬ.ವ.ಸಂ. 83)
ಇಷ್ಟಲಿಂಗದಲ್ಲಿ ನಂಬುಗೆಯುಳ್ಳ
ಶರಣನಿಗೆ ಎಲ್ಲ ದಿನಗಳೂ ಒಂದೇ ಆಗಿರಬೇಕು. ಆ ದಿನ ಒಳ್ಳೆಯದು, ಈ ದಿನ ಕೆಡುಕಾದುದು ಎಂಬ ಭಾವನೆಯನ್ನೇ
ಆತನು ಕಾಣಬಾರದೆಂದು ಎಚ್ಚರಿಕೆಯನ್ನು ಕೊಡುತ್ತ ಮನೋದೌರ್ಬಲ್ಯಗಳಿಗೆ ಈಡಾದ ಜನತೆಗೆ ಅವುಗಳಿಂದ ಪಾರಾಗಬೇಕೆಂದು
ಆಹ್ವಾನಿಸಿದ್ದಾನೆ. ಪಾಪ, ಪುನರ್ಜನ್ಮಗಳ ಭೀತಿಯಿಂದ ಬಳಲಿದ ಜನರು ಅವುಗಳಿಂದ ಪಾರಾಗುವುದಕ್ಕೆ ಪ್ರಾಯಶ್ಚಿತ್ತವನ್ನು
ಸ್ವೀಕರಿಸುವ ರೂಢಿ ಹಿಂದೂ ಬ್ರಾಹ್ಮಣರು ಬೆಳೆಸಿಕೊಂಡು ಬಂದ ಸಂಪ್ರದಾಯವಾಗಿತ್ತು. ಆ ಸಂಪ್ರದಾಯ ಬಸವಣ್ಣನಿಗೆ
ನಿಷಿದ್ಧವಾಗಿದೆ. ಮಡಿ, ಮೈಲಿಗೆಗಳ ಹಾಗೆ, ಪಾಪ ಪುಣ್ಯಗಳ ವಿಚಾರವೂ ಮನಸ್ಸಿನ ದೌರ್ಬಲ್ಯವೇ ಆಗಿದೆ.
ಅವುಗಳ ಪರಿಮಾರ್ಜನೆಗೆ ಪ್ರಾಯಶ್ಚಿತ್ತವನ್ನು ಹುಡುಕಿಕೊಂಡು ಮುದ್ರೆಗಳನ್ನು ಹಾಕಿಸಿಕೊಳ್ಳುವುದಾಗಲಿ,
ಬ್ರಾಹ್ಮಣರಿಗೆ ದಾನ ದತ್ತಿಗಳನ್ನು ಕೊಡುವುದಾಗಲಿ, ತನಗೆ ಸಮ್ಮತವಿಲ್ಲವೆಂದು ಸೂಚಿಸುತ್ತ ಬಸವಣ್ಣನು
ಕೊಟ್ಟ ಸಲಹೆ ಹೀಗಿದೆ:
‘ಎಲವೋ, ಎಲವೋ, ಪಾಪಕರ್ಮವ
ಮಾಡಿದವನೇ
ಎಲವೋ, ಬ್ರಹ್ಮೇತಿತಿಯ
ಮಾಡಿದವನೇ
ಒಮ್ಮೆ ಶರಣೆನ್ನೆಲವೋ.
ಒಮ್ಮೆ ಶರಣೆಂದಡೆ ಪಾಪಕರ್ಮ
ಓಡುವವು.
ಸರ್ವಪ್ರಾಯಶ್ಚಿತ್ತಕ್ಕೆ
ಹೊನ್ನ ಪರ್ವತಂಗಳೈದವು
ಒಬ್ಬಗೆ ಶರಣೆನ್ನು,
ನಮ್ಮ ಕೂಡಲ ಸಂಗಮದೇವಂಗೆ (ಬ.ವ.ಸಂ. 620)
ದ್ವಿಜರಿಗೆ ದಾನವನ್ನು
ಕೊಟ್ಟು, ಪ್ರಾಯಶ್ಚಿತ್ತದ ಮುದ್ರೆಯನ್ನು ಅವರಿಂದ ಹಾಕಿಸಿಕೊಳ್ಳುವುದರಿಂದ ಪಾಪವು ಪರಿಹಾರವಾಗುವುದಿಲ್ಲ.
ಅಂತಹ ಪರಿಹಾರಕ್ಕೆ ಇರುವ ದಾರಿಯು ಒಂದೇ ಒಂದಾಗಿದೆ. ಅದೆಂದರೆ ಮಾಡಿದ ಅಪರಾಧಕ್ಕಾಗಿ ದೇವರಲ್ಲಿ ಕ್ಷಮೆಕೋರಿ
ಅವನಿಗೆ ಶರಣು ಹೋಗುವುದು.
ದೇವರ ಒಲುಮೆಯನ್ನು
ಪ್ರಾಯಶ್ಚಿತ್ತವೆಂಬ ಲಂಚದಿಂದ ಪಡೆಯುವುದಕ್ಕೆ ಹೇಗೆ ಸಾಧ್ಯವಿಲ್ಲವೋ, ಹಾಗೆಯೆ ನಂಬುಗೆಯಿಲ್ಲದ ಧ್ಯಾನ,
ಜಪ ತಪಾದಿಗಳೂ ನಿರರ್ಥಕವಾಗುತ್ತವೆ. ದೇವಾಲಯದಲ್ಲಿ ದೇವರಿದ್ದಾನೆಂಬ ತಪ್ಪು ತಿಳಿವಳಿಕೆಯಿಂದ ಅಲ್ಲಿನ
ಕಲ್ಲುದೇವರ ಮುಂದೆ ಕುಳಿತು ನಮಸ್ಕಾರ ಮಾಡುತ್ತ, ಧ್ಯಾನವನ್ನೆಲ್ಲ ಹೊರಗೆ ಬಿಟ್ಟುಬಂದು ಕೆರಹಿನ ಮೇಲೆ
ಇಟ್ಟವರ ದಾರಿ ಶರಣರ ದಾರಿಯಲ್ಲ, ಅದು ಭವಕ್ಕೆ ಈಡಾದ ಭವಿಗಳ ದಾರಿಯಾಗಿದೆ. ಅಂತಹ ಭವಿಗಳನ್ನು ಕುರಿತು
ಹಾಸ್ಯವಾಗಿ ನುಡಿಯುತ್ತ ಅವರು “ಮೀಂಬುಲಿಗನ ಹಕ್ಕಿಯಂತೆ” ನೀರ ತಡಿಯಲ್ಲಿದ್ದು ಮೂಗ ಹಿಡಿದು ಧ್ಯಾನ
ಮಾಡುವರು ಬಿಟ್ಟ ಮಂಡೆವರಸಿ, ಬಾಯ ಮಿಡಕಿಸುತ್ತ, ಕಣ್ಣಮುಚ್ಚಿ ಬೆರಳನೆಣಿಸುವರು (ಬ.ವ. 577); ಅಂತಹವರ
ಧ್ಯಾನ ಯಾತಕ್ಕೂ ಸಲ್ಲದು ಎಂದು ಹೇಳಿದ ಬಸವಣ್ಣ ತನ್ನ ಜನತೆಗೆ ಚಿತ್ತಶುದ್ಧಿಯನ್ನು ಬೆಳಸಿಕೊಳ್ಳಲು
ಕರೆಯಿತ್ತನು. ಕೋಟಿಕೋಟಿ ಜಪತಪ ಮಾಡಿ ಕೋಟಲೆಗೊಳ್ಳಬೇಡಿರಿ. ಮನಮುಟ್ಟಿ ದೇವರನ್ನು ನೆನೆಯಿರಿ ಎಂದು
ಮನವಿ ಮಾಡಿಕೊಂಡಿದ್ದಾರೆ.
ಈ. ಸ್ಥಾವರ-ಜಂಗಮ ಪರಿಕಲ್ಪನೆಯ
ಕುರಿತ ಧೋರಣೆ:
ಸ್ಥಾವರ ಎಂದರೆ ಜಡವಾದುದು.
ಜಡವಾದ ವ್ಯವಸ್ಥೆ. ಸಮಾಜದ ಸಾಂಪ್ರದಾಯಿಕ ಕಟ್ಟುಪಾಡುಗಳು ಮೇಲು ಕೀಳುಗಳನ್ನು ಇದರಲ್ಲಿ ಸೇರಿಸಬಹುದು.
ಜಂಗಮವೆಂದರೆ ಜಡದಲ್ಲಿ ಚೈತನ್ಯ ಸಂಚಾರವಾಗುವುದು. ಜಂಗಮವು ಸಾಂಪ್ರದಾಯಿಕತೆಯನ್ನು ಮೀರಿದ ಜೀವಂತ ಚಲನಶೀಲತೆಯಾಗಿದೆ.
ಬಸವಣ್ಣನವರ ವಚನ ಚಳುವಳಿ ಜಡ ಸಮಾಜವನ್ನು ಜಂಗಮಗೊಳಿಸಿದ್ದಲ್ಲದೆ ಜಡ ಧರ್ಮವನ್ನು ಜೀವಂತಿಕೆ ಗೊಳಿಸಿತು.
ವಚನಚಳುವಳಿಯಲ್ಲಿ ಜಂಗಮ ಎನ್ನುವುದು ವೃತ್ತಿಗಿಂತ ಹೆಚ್ಚಾಗಿ ಚಲನಶೀಲವಾದ ಸಮಷ್ಠಿ ತತ್ವವಾಗಿ ಪರಿಣಮಿಸಿದೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸ್ಥಾವರ ಒಂದು ಕಡೆ ಇರುವ ಇಷ್ಟಲಿಂಗ. ಜಂಗಮ ಇಷ್ಟಲಿಂಗದ ನಡೆದಾಡುವ
ರೂಪ. ಎರಡು ಸಮಾನವಾಗಿ ಪ್ರಮುಖ. ಎರಡರ ಪೂಜೆ ನಡೆಯುತ್ತದೆ. ಅವೆರಡರಲ್ಲಿ ಜಂಗಮಕ್ಕೆ ಹೆಚ್ಚಿನ ಮಾನ್ಯತೆಯಿದೆ.
ಸ್ಥಾವರವು ಉಣ್ಣದ ಲಿಂಗ, ಜಂಗಮವು ಉಣ್ಣುವ ಲಿಂಗ.
ದೇಹವೇ ದೇಗುಲ, ಕಲ್ಲ ಮನೆಯ ಮಾಡಿ ಕಲ್ಲ ದೇವರ ಆ ಕಲ್ಲು ಕಡೆದರೆ ಆ ದೇವರತ್ತ ಹೋದರೋ? ಇತ್ಯಾದಿ
ವಚನಕಾರರ ಚಿಂತನೆಗಳು ದೇವಾಲಯ ಸಂಸ್ಕೃತಿಗೆ ಶರಣ ಚಿಂತನೆ ಒಡ್ಡಿದ ತಡೆಗೋಡೆ ಎಂಬಿತ್ಯಾದಿ ಅಭಿಪ್ರಾಯ
ಆಧುನಿಕ ವಿಚಾರಧಾರೆಯವರಲ್ಲಿ ವ್ಯಕ್ತಗೊಂಡಿವೆಯಾದರೂ ಆ ಕಾಲದ ಚಾರಿತ್ರಿಕ ಹಿನ್ನೆಲೆಯಲ್ಲಿ ಈ ಅಭಿಪ್ರಾಯ
ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಬಸವಣ್ಣನವರ ಉಳ್ಳವರು ಶಿವಾಲಯವ ಮಾಡಿಹರು
ನಾನೇನ ಮಾಡಲಿ ಬಡವನಯ್ಯ, --------ಸ್ಥಾವರಕ್ಕಳಿವುಂಟು-ಜಂಗಮಕ್ಕಳಿವಿಲ್ಲಾ ಎನ್ನುವ ಮಾತಿನಲ್ಲಿ ನಮ್ಮೊಳಗಿರುವ
ದೇವನನ್ನು ಮರೆತು ಹೊರೆಗೆಲ್ಲೋ ಯಾವುದೇ ಶಿಲೆಯಿಂದ ನಿರ‍್ಮಿತವಾದ ದೇಗುಲದಲ್ಲಿ ಕಾಣುವ ಮೌಢ್ಯದ ಟೀಕೆಯ
ಜೊತೆಗೆ ಒಳಗಿರುವ ಚೈತನ್ಯವೆಂಬ ದೇವನಿಗೆ ಆವಾಸ ಸ್ಥಾನವಾಗಿರುವ ದೇಹವನ್ನೇ ದೇವಾಲಯ ಮಾಡುವ ಪ್ರಕ್ರಿಯೆ
ಇದೆ.ಈ ವಚನವು ಮೇಲ್ನೋಟಕ್ಕೆ ಉಳ್ಳವರು ಮತ್ತು ಬಡವರು ಈ ಎರಡು ವರ್ಗಗಳ ನಡುವಿನ ಅಂತರದ ಪ್ರತೀಕವಾಗಿದೆ.
ಶಿವಾಲಯ ಭಕ್ತರಿಗೆ ಯಾವ ರೀತಿ ಒಂದು ರೀತಿಯ ಸಂಕೇತವೋ ಉಳ್ಳವರಿಗೆ
ಅದರ ಜೊತೆಗೆ ಮತ್ತೊಂದು ಸಂಕೇತವಾಗುತ್ತದೆ. ಈ ವಚನವು ವೀರಶೈವಧರ್ಮದ ಜಂಗಮದ ಕ್ರಿಯಾಶೀಲ ತಾತ್ವಿಕತೆಯನ್ನು
ಪ್ರತಿಪಾದಿಸುತ್ತಲೇ ಅದರ ಮೂಲಕ ಸ್ಥಾವರ ಪರಿಕಲ್ಪನೆಯನ್ನು ನಿರಾಕರಿಸುತ್ತಾ ಬಂದಿದೆ ಎನ್ನುವ ಅಭಿಪ್ರಾಯವು
ಸಮ್ಮತವಾದುದಲ್ಲ. Speaking of
shiva ದಲ್ಲಿಯ ಎ.ಕೆ.ರಾಮಾನುಜನ್
ರವರು ಬಸವಣ್ಣನವರ ಈ ವಚನವನ್ನು ದೇಹ ಮತ್ತು ದೇವಾಲಯ ಎನ್ನುವ ನೆಲೆಯಿಂದಲೇ ಗ್ರಹಿಸುತ್ತಾರೆ. ಮುಂದುವರೆದು
ಅವರು ಈ ವಚನಕ್ಕೆ ಸಂಬಂಧಿಸಿದ ಹಾಗೆ ಈ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಭಾರತೀಯ ದೇವಾಲಯಗಳು
ಮನುಷ್ಯ ಶರೀರದ ವಾಸ್ತು ಪ್ರತಿಮೆಗಳಾಗಿವೆ. ನೆಲದಿಂದ ಮೇಲೇಳುವ ದೇವಾಲಯವು ಮನುಷ್ಯನ ಹುಟ್ಟಿನಂತೆಯೇ
ಕ್ಷೇತ್ರ-ಬೀಜ ಸಂಬಂಧವನ್ನು ಹೋಲುತ್ತದೆ. ಆದ್ದರಿಂದಲೇ ಮನುಷ್ಯನ ಅಂಗಾಂಗಗಳ ಹೆಸರುಗಳನ್ನೇ ದೇವಾಲಯದ
ವಿವಿಧ ಭಾಗಗಳಿಗೆ ಇಡಲಾಗಿದೆ ಎಂದಿದ್ದಾರೆ. ಇಲ್ಲಿ ಹಸ್ತ ಪಾದ ನೆತ್ತಿ(ಕಳಸ) ಅಂಗ ಭೋಗ ಗರ್ಭಗುಡಿ
ಇತ್ಯಾದಿ ಹೆಸರುಗಳನೋ ನಿಜ. ಒಂದು ರೀತಿಯಲ್ಲಿ ಸ್ಥಾವರಗಳಿಗೆಲ್ಲಾ ಜೀವ ತುಂಬುವ ಬಸವಣ್ಣನ ಆದರ್ಶದ
ಕನಸು. ಅದನ್ನು ಜಂಗಮಗೊಳಿಸುವ ಬಸವಣ್ಣನ ಯೋಜನೆ ಏನೇ ಸರಿ ಇರಬಹುದು. ಆದರೆ ಈ ರೀತಿಯ ಆಲೋಚನೆಯನ್ನು
12ನೇ ಶತಮಾನದ ಚಾರಿತ್ರಿಕ ಸಂದರ್ಭದ ಹಿನ್ನೆಲೆಯಲ್ಲಿ ಪರಿಭಾವಿಸಲು ಸಾಧ್ಯವೇ ಎನ್ನುವ ಪ್ರಶ್ನೆಯು
ಉದ್ಭವಿಸುವುದು ಸಹಜ. ಈ ವಚನಗಳನ್ನು ಬರೀ ವಚನಗಳ ನೆಲೆಯಲ್ಲೆ ಗ್ರಹಿಸಿದರೆ ವಚನಗಳ ಸಮಗ್ರ ಅಧ್ಯಯನ
ಆಗಲು ಸಾಧ್ಯವೇ?
ವಚನಕಾರರು ಕೇವಲ ಕೆಲವೇ
ವಚನಗಳಲ್ಲಿ ಸ್ಥಾವರ ಲಿಂಗ ಅಥವಾ ದೇವಾಲಯದ ನಿರಾಕರಣೆಯ ಬಗೆಗೆ ಟೀಕಿಸಿದಾಕ್ಷಣ ಸಂಪೂರ್ಣವಾಗಿ ವಚನಕಾರರು
ಸ್ಥಾವರ ಲಿಂಗ ವಿರೋಧಿಗಳು ಎಂಬ ನಿರ್ಣಯಕ್ಕೆ ಬರುವುದು ಆತುರದ ನಿರ್ಣಯವಾದೀತು. ಸದ್ಯದ ಮಟ್ಟಿಗೆ ಮೂವತ್ತು
ಸಾವಿರಕ್ಕೂ ಮೇಲ್ಪಟ್ಟ ವಚನಗಳಲ್ಲಿ ಸ್ಥಾವರಲಿಂಗದ ವಿರೋಧಿಯ ನೆಲೆಯಲ್ಲಿ ಹೊರಡುವ ವಚನಗಳು ಸಂಖ್ಯೆ
ಎಂಟನ್ನು ದಾಟುವುದಿಲ್ಲ. ಬಸವಣ್ಣನವರ 2 ವಚನಗಳು, ಅಲ್ಲಮಪ್ರಭುವಿನ ವಚನಗಳು 3, ಆದಯ್ಯನದು 1, ಅಂಬಿಗರ
ಚೌಡಯ್ಯನದು 1 ವಚನ ಮಾತ್ರ ಸ್ಥಾವರ ಲಿಂಗದ ವಿರೋಧಿ ಭಾವವನ್ನು ಸೂಚಿಸುವ ಆಶಯವನ್ನು ಹೊಂದಿವೆ. ಒಂದು
ರೀತಿಯಲ್ಲಿ ಇವು ವೀರಶೈವ ಧರ್ಮದ ತಾತ್ವಿಕ ನೆಲೆಯನ್ನು ಪ್ರತಿಪಾದಿಸುತ್ತವೆ. ಆ ಕಾಲದ ಶಾಸನಗಳು ಹಾಗೂ
ಇನ್ನಿತರ ದಾಖಲೆಗಳನ್ನು ಅವಲೋಕಿಸಿದರೆ ಕನ್ನಡನಾಡಿನಲ್ಲಿ 11. 12. 13ನೇ ಶತಮಾನಗಳಲ್ಲಿಯೇ ಅತಿ ಹೆಚ್ಚು
ದೇವಾಲಯಗಳು ಅದರಲ್ಲಿಯೂ ಶಿವಾಲಯಗಳು ನಿರ್ಮಾಣ ಗೊಂಡಿರುವುದು ಜ್ವಲಂತ ಸಾಕ್ಷಿ. ಬಸವಣ್ಣನ ನಂತರದ ಕಾಲದಲ್ಲಿ
ವೀರಶೈವ ಧರ್ಮವನ್ನು ಅವಲಂಬಿಸಿದ ಜನತೆ ದೇವಾಲಯಗಳ ನಿರ್ಮಾಣವನ್ನು ತಿರಸ್ಕಾರ ದೃಷ್ಟಿಯಿಂದ ಕಾಣದೆ
ಉದಾರ ದೃಷ್ಟಿಯಿಂದ ಕಂಡರು. ದೇವಾಲಯಗಳನ್ನು ನಿರ್ಮಿಸಿದರು. ಕೆಲವು ಆಲಯಗಳನ್ನು ಜೀಣೋದ್ಧಾರ ಮಾಡಿಸಿದರು.
ಇವೆಲ್ಲಕ್ಕೂ ಆ ಕಾಲದ ಐತಿಹಾಸಿಕ ದಾಖಲೆಗಳು ಸಾಕ್ಷಾಧಾರಗಳಾಗಿ ನಮ್ಮ ಕಣ್ಮುಂದೆ ನಿಂತಿವೆ. ಈ ಮೂರು
ಶತಮಾನಗಳನ್ನು ದೇವಾಲಯಗಳ ನಿರ್ಮಾಣದ ಉಚ್ಛ್ರಾಯ ಕಾಲವೆಂದು ಕರೆದರೂ ತಪ್ಪಾಗಲಾರದು.
ವಚನ ಚಳುವಳಿಯು ವೈದಿಕ ಸಂಸ್ಕೃತಿಯನ್ನು ಕರ್ಮಸಿದ್ಧಾಂತವನ್ನು
ತಿರಸ್ಕರಿಸಿದ ರೀತಿಯಲ್ಲಿಯೇ ಪ್ರಜ್ಞಾಪೂರ್ವಕವಾಗಿ ಉಗ್ರರೀತಿಯಲ್ಲಿ ದೇವಾಲಯ ನಿರ್ಮಿತಿಯ ನಿರಾಕರಣೆಯನ್ನು
ತಿರಸ್ಕರಿಸಿತು. ವಚನ ಸಂಸ್ಕೃತಿಯ ಪ್ರಾರಬ್ಧ ಹಾಗೂ ಕರ್ಮವನ್ನು ಬೋಧಿಸುತ್ತಿದ್ದ ದೇವಾಲಯ ಸಂಸ್ಕೃತಿಯನ್ನು
ಒಪ್ಪಿ ಕೊಳ್ಳುವುದು ಸಾಧ್ಯವಿರಲಿಲ್ಲ ಎನ್ನುವ ವೈಚಾರಿಕ ಆಲೋಚಕರ ನಿಲುವು ಅವರ ವೈಚಾರಿಕ ವಿಚಾರಧಾರೆಗಷ್ಟೇ
ಸೀಮಿತ ಎನ್ನಬೇಕಾಗಿದೆ.
ವಚನಕಾರರು
ನಿಜವಾಗಿಯೂ ದೇವಾಲಯಗಳ ನಿರ್ಮಾಣವನ್ನು ನಿರಾಕರಿಸಿದರೇ? ಈ ಪ್ರಶ್ನೆಗೆ ಇಂದಿಗೂ ಸರ್ವಸಮ್ಮತ ನಿಲುವನ್ನು
ಕಂಡುಕೊಳ್ಳಲು ಸಾಧ್ಯವಾಗಿಲ್ಲವಾಗಿದೆ. ಬಸವಣ್ಣನೇ ಕೂಡಲ ಸಂಗಮನಾಥ ದೇವಾಲಯದ ಜೊತೆಗೆ ಸಂಬಂಧ ಇಟ್ಟು
ಕೊಂಡಿದ್ದಾನೆ. ಪ್ರತಿಯೊಬ್ಬ ವಚನಕಾರರು ಒಂದಲ್ಲೊಂದು ರೀತಿಯ ಸ್ಥಾವರ ಲಿಂಗದ ಜೊತೆ ಸಂಬಂಧವಿರಿಸಿಕೊಂಡಿರುವುದು
ಗೊತ್ತಾಗುತ್ತದೆ. ಹೀಗಿರುವಾಗ ವಚನ ಸಂಸ್ಕೃತಿಯಲ್ಲಿಯ ಸ್ಥಾವರ ದೇವಾಲಯದ ನಿರಾಕರಣೆಯ ಬಗೆಗಿನ ಗ್ರಹಿಕೆ
ವಾಸ್ತವ ಸತ್ಯಕ್ಕೆ ದೂರವಾದುದು. ವೀರಶೈವಧರ್ಮವು ಸ್ಥಾವರರೂಪಿ ದೇವಾಲಯಗಳ ನಿರ್ಮಾಣಕ್ಕೆ ಪ್ರೇರಣಕರ್ತವಾಗಿದೆ.
ಬಸವಣ್ಣನವರ ಸಮಾಜೋಧಾರ್ಮಿಕ
ಆಂದೋಲನದ ಮೂಲಕ ಪ್ರಕರ್ಷಗೊಂಡ ವೀರಶೈವ ಚಳುವಳಿಯು ದೇವಾಲಯದ ಸ್ಥಾಪನೆಯನ್ನು ನಿರಾಕರಿಸಿತೆ? ಎಂಬ ಪ್ರಶ್ನೆ
ಆಶ್ಚರ್ಯಕರ ಸಂಗತಿಯಾಗಿದೆ. ಪರಂಪರಾಗತವಾಗಿ ಜನರ ಬದುಕಿನೊಂದಿಗೆ ಬೆಸೆದು ಕೊಂಡು ಬಂದ ದೇವಸ್ಥಾನವೆಂಬ
ಸಾಂಸ್ಕೃತಿಕ ಸಂಸ್ಥೆಯನ್ನು ಅಪ್ಪಟ ದೈವಭಕ್ತ ಧಾರ್ಮಿಕ ಶ್ರದ್ಧೆಯುಳ್ಳವರೂ, ಶಿವನಲ್ಲಿ ನಿಷ್ಠೆಯುಳ್ಳವರೂ
ಆದ ವಚನಕಾರರು ದೇವಾಲಯದ ಪರಿಕಲ್ಪನೆಯನ್ನು ವೈಚಾರಿಕ ಚಿಕಿತ್ಸೆಗೆ ಒಳಪಡಿಸಿ ಆಧ್ಯಾತ್ಮಿಕ ನೆಲೆಯಲ್ಲಿ
ಪುನರ್ ವ್ಯಾಖ್ಯಾನಿಸಿರುವುದು ಮಹತ್ತರವಾದ ಅಂಶ. ದೇವರು ಧರ್ಮವನ್ನು ಒಪ್ಪಿಕೊಂಡ ವಚನ ಚಳುವಳಿ ನಿಜವಾಗಿಯೂ
ದೇವಾಲಯದ ಸ್ಥಾಪನೆಯನ್ನು ನಿರಾಕರಿಸಿತೇ? ಅಥವಾ ನಿರಾಕರಿಸುವ ನಿಲುವಿನಂತೆ ತೋರಿದೆಯೇ ಎಂದೆನಿಸುತ್ತದೆ.
ಶರಣರು ದೇವಾಲಯದ ಕಲ್ಪನೆಯನ್ನು
ಸಂಪೂರ್ಣವಾಗಿ ನಿರಾಕರಿಸಿದರು ಎನ್ನುವುದಕ್ಕಿಂತ ತಾನು ಪ್ರಬುದ್ಧಗೊಳಿಸಿದ ಹೊಸ ಧರ್ಮದ ತಾತ್ವಿಕ ನೆಲೆಯಲ್ಲಿ
ದೇವಾಲಯದ ಕಲ್ಪನೆಯನ್ನು ತನ್ನ ಸಾಮಾಜಿಕ ಕ್ರಾಂತಿಯ ಆಶಯಕ್ಕನುಗುಣವಾಗಿ ಪುನಾರಚನೆ ಗೊಳಿಸಿದರು ಎನ್ನುವುದೇ
ಸೂಕ್ತ.
ವಚನ ಚಳುವಳಿಗೆ ಹಿನ್ನೆಲೆಯಾದ
ಶೈವ ಪುರಾತನರ ನಿಲುವು ದೇವಸ್ಥಾನ ಕೇಂದ್ರಿತವಾದದ್ದು. ತಮಿಳುನಾಡಿನ 63ಮಂದಿ ಶೈವ ನಾಯನ್ಮಾರರು ಸ್ಥಾವರ
ಲಿಂಗದ ಆರಾಧಕರು. ಇವರನ್ನು ವಚನಕಾರರು ತಮ್ಮ ವಚನಗಳಲ್ಲಿ ಭಕ್ತಿ ಭಾವದಿಂದ ಸ್ಮರಿಸಿದ್ದಾರೆ. ವಚನಕಾರರ
ಭಕ್ತಜೀವನ ದೇವಸ್ಥಾನಗಳೊಂದಿಗೆ ಅನಿವಾರ್ಯ ಸಂಬಂಧವನ್ನು ಹೊಂದಿದ್ದುದಾಗಿತ್ತು ಎಂದೇಳಬಹುದಾಗಿದೆ.
ವಚನಕಾರರು ದೇವರನ್ನು
ಭಕ್ತಿಯನ್ನು ಒಪ್ಪಿಕೊಂಡು ದೇವಸ್ಥಾನವನ್ನು ನಿರಾಕರಿಸುವ ನಿಲುವನ್ನು ತೆಗೆದು ಕೊಂಡಿದ್ದು ಯಾಕೆ?
ಎಂಬ ಪ್ರಶ್ನೆಗೆ, ಈಗಾಗಲೇ ಎಲ್ಲರೂ ಕಂಡುಕೊಂಡಿರುವ ಕಾರಣ ವೀರಶೈವ ಧರ್ಮವು ದೇವರ ಕಲ್ಪನೆಯನ್ನು ದೇವಸ್ಥಾನದಿಂದ
ಮನುಷ್ಯನ ಶರೀರಕ್ಕೆ ಸ್ಥಾವರಲಿಂಗದಿಂದ ಇಷ್ಟಲಿಂಗಕ್ಕೆ ಸ್ಥಳಾಂತರ ಗೊಳಿಸಿದ್ದೇ ಆಗಿದೆ. ದೇವರು ಎಲ್ಲೆಲ್ಲಿಯೂ
ಇದ್ದಾನೆ. ಆತ ಸರ್ವಾಂತಯಾಮಿ ಎಂಬ ಭಾವನೆಗೆ ದೇವರು ದೇವಸ್ಥಾನದಲ್ಲಿ ಇದ್ದಾನೆ ಎಂದು ತಿಳಿಯುವ ಹಾಗೂ
ನಡೆದುಕೊಳ್ಳುವ ಕ್ರಮ ವಿರೋಧಾಭಾಸದಂತೆ ವಚನಕಾರರಿಗೆ ಕಂಡಿರಬೇಕು. ಹೀಗಾಗಿ ಅವರು ದೇವಾಲಯದ ನಿರಾಕರಣೆಯ
ನಿಲುವನ್ನು ವ್ಯಕ್ತ ಪಡಿಸಿದರು ಎಂಬ ಅಭಿಪ್ರಾಯವನ್ನು ಕೆಲವು ವಿದ್ವಾಂಸರು ವ್ಯಕ್ತ ಪಡಿಸಿದ್ದಾರೆ.
ಆದರೆ ದೇವರು ಎಲ್ಲೆಲ್ಲಿಯೂ
ಇದ್ದಾನೆ ಎನ್ನುವ ವಚನಕಾರರ ನಿಲುವಿನ ಪ್ರಕಾರವೇ ನೋಡಿದರೂ ದೇವಸ್ಥಾನದಲ್ಲಿಯೂ ದೇವರು ಇದ್ದಾನೆ ಎಂಬುದೇ
ಆಗಿದೆ. ಜನಸಾಮಾನ್ಯರಿಗೆ ದೇವಸ್ಥಾನಗಳು ಅವರ ಧರ್ಮಶ್ರದ್ಧೆಗನುಗುಣವಾಗಿ ಅತ್ಯಂತ ಅಗತ್ಯವಾದವುಗಳು.
ಹಾಗೂ ದೇವರನ್ನು ಮೂರ್ತಿ ರೂಪದಲ್ಲಿ ಅನುಭವಿಸಬಲ್ಲರು. ಅನುಭಾವಿಗಳು ದೇವರನ್ನು ಮೂರ್ತಿ ರೂಪದಲ್ಲಿ
ಹಾಗೂ ಅಮೂರ್ತದಲ್ಲಿಯೂ ಅನುಭವಿಸಬಲ್ಲರು. ಇವರಿಗೆ ದೇವರ ಆಕಾರ ಎಷ್ಟು ಸತ್ಯವೋ ಅಷ್ಟೇ ನಿರಾಕಾರವೂ
ಅಷ್ಟೆ. ಆದರೆ ಎಲ್ಲರೂ ಅನುಭಾವಿಗಳಾಗಲೂ ಸಾಧ್ಯವಿರಲಿಲ್ಲ. ಭಕ್ತಿಯ ನೆಲೆಯಲ್ಲಿ ಬದುಕುವ ಬಹುಸಂಖ್ಯಾತ
ಭಕ್ತಜನತೆಗೆ ತಮಗೆ ಇಷ್ಟವಾದ ದೈವದ ಆಕಾರದಲ್ಲಿ ಪೂಜಿಸಲು ದೇವಸ್ಥಾನದ ಅನಿವಾರ್ಯತೆ ಇದ್ದಿತು. ಆದರೆ
ವಚನಕಾರರಲ್ಲಿ ವಿಶೇಷವಾಗಿ ಬಸವಣ್ಣ ಹಾಗೂ ಅಲ್ಲಮಪ್ರಭುಗಳು ಬಹುಸಂಖ್ಯಾತ ಭಕ್ತಜನತೆಯ ಭಕ್ತಿಯ ಅವಲಂಬನ
ನೆಲೆಯಾಗಿದ್ದ ದೇವಸ್ಥಾನವನ್ನು ನಿರಾಕರಿಸಿ ದೇವರ ಹಾಗೂ ದೇವಸ್ಥಾನದ ಕಲ್ಪನೆಯನ್ನು ಪುನರ್ ವ್ಯಾಖ್ಯಾನಿಸಿದ್ದಲ್ಲದೆ
ಅದನ್ನು ಒಪ್ಪಿಕೊಳ್ಳುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಿದರೂ ಅದು ಯಶಸ್ವಿಯಾಗಿ ನಂತರದ ಕಾಲದಲ್ಲಿ
ಮುಂದುವರೆದುಕೊಂಡು ಬರಲಿಲ್ಲ ಎನ್ನುವುದು ಅಷ್ಟೇ ಸತ್ಯದ ಸಂಗತಿಯಾಗಿದೆ.
ವಚನಕಾರರ ದೇವರ ಕಲ್ಪನೆ
ಮೂಲತಃ ಪರಂಪರಾಗತವಾದ ದೇವರ ಕಲ್ಪನೆಗಿಂತ ಭಿನ್ನವಾದುದ್ದು. ಶಿವನ ಮೂರ್ತಿಪೂಜೆ ಹಾಗೂ ಲಿಂಗ (ಸ್ಥಾವರಲಿಂಗ)
ಪೂಜೆ ಪರಂಪರಾಗತವಾಗಿ ರೂಢಿಯಲ್ಲಿದ್ದಿತು.ವಚನಕಾರರು ದೇವಸ್ಥಾನ ಕೇಂದ್ರಿತವಾದ ಈ ಎರಡು ರೂಪಗಳನ್ನು
ದೇವಸ್ಥಾನಸಮೇತ ನಿರಾಕರಿಸಿ ದೈವತ್ವ ಕಲ್ಪನೆಯ ಸಾಂಕೇತಿಕ ರೂಪವನ್ನಾಗಿ ಇಷ್ಟಲಿಂಗವನ್ನು ಸ್ವೀಕರಿಸಿ
ದೇಹದ ಮೇಲೆ ಧರಿಸಿಕೊಂಡರು. ಈ ರೀತಿಯಾಗಿ ದೇವರ ಕಲ್ಪನೆಯನ್ನು ದೇವಾಲಯದಿಂದ ಮತ್ತು ಅದರ ಪೌರಾಣಿಕ
ಹಿನ್ನೆಲೆಗಳಿಂದ ಬಿಡಿಸಿ ಮನುಷ್ಯನ ಶರೀರಕ್ಕೆ ಸ್ಥಳಾಂತರ ಮಾಡುವುದರ ಮೂಲಕ ಮನುಷ್ಯನ ದೇಹವನ್ನೇ ಆಲಯವನ್ನಾಗಿ
ಮಾಡಿದರು. ಇಷ್ಟಲಿಂಗ ನಿಷ್ಠೆಯ ಹಿನ್ನೆಲೆಯಲ್ಲಿ ದೇಹವೇ ದೇವಾಲಯ ಎನ್ನುವ ಕಲ್ಪನೆಯನ್ನು ಗಟ್ಟಿಗೊಳಿಸುವ
ಉದ್ದೇಶ್ಯದಿಂದ ವಚನಕಾರರು ದೇವಸ್ಥಾನಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ ವಿವಿಧ ಆಚರಣೆ-ವಿಧಿಗಳನ್ನು
ನಿರಾಕರಿಸಿದರು.
ಲಿಂಗವು ದೈವದ ಪ್ರತೀಕ.
ದೇವಾಲಯದ ಶಿವಲಿಂಗವು ಶಿವನ ಪ್ರತೀಕವೇ ಆದರೂ ದೇವಾಲಯದ ಶಿವಲಿಂಗಕ್ಕೂ ಇಷ್ಟ ಲಿಂಗಕ್ಕೂ ವ್ಯತ್ಯಾಸವಿದೆ.
ಆಲಯದಲ್ಲಿಯ ಶಿವಲಿಂಗವನ್ನು ಯಾರೇ ಸ್ಥಾಪಿಸಿದ್ದು ಆದರ ದರ್ಶನಕ್ಕೆ ಹೋಗುವ ಭಕ್ತನಿಗೂ ಲಿಂಗಕ್ಕೂ ಇರುವ
ಸಂಬಂಧ ಅವೈಯಕ್ತಿಕವಾದುದು. ಆಲಯದಲ್ಲಿರುವ ಲಿಂಗವನ್ನು ದರ್ಶಿಸಲು ಭಕ್ತನಾದವನಿಗೆ ಕೆಲವು ನಿರ್ಬಧಗಳು
ಉಂಟು, ನಿಗದಿಪಡಿಸಿದ ವೇಳೆಯಲ್ಲಿಯೇ ಭಕ್ತನು ದೇವಾಲಯದ ಶಿವಲಿಂಗದ ದರ್ಶನಕ್ಕೆ ಹೋಗಬೇಕು. ತನ್ನ ಜಾತಿ
ಅಂತಸ್ತಿಗೆ ಅನುಗುಣವಾಗಿ ಶಿವಲಿಂಗದ ಬೇರೆ-ಬೇರೆ ಭೌತಿಕ ಅಂತರದಲ್ಲಿರಬೇಕಾಗುತ್ತದೆ. ದೇವಸ್ಥಾನದಲ್ಲಿ
ಭಕ್ತ ತಾನೇ ಕೈಯಿಟ್ಟು ಪೂಜಿಸುವಂತಿಲ್ಲ. ದೇವರಿಗೂ ಭಕ್ತನಿಗೂ ಮಧ್ಯವರ್ತಿಯಾಗಿ ಅರ್ಚಕ ಇರುತ್ತಾನೆ.
ಭಕ್ತ ಸಿರಿವಂತನಾದಷ್ಟು ದೇವಾಲಯದಲ್ಲಿ ಹೆಚ್ಚಿನ ಗೌರವ ದೊರೆಯುತ್ತದೆ. ವೈಭವ ಹಾಗೂ ಆಡಂಬರದ ಪೂಜೆ
ಏರ್ಪಡಿಸುವಂತಾಗುತ್ತದೆ. ಈ ರೀತಿಯ ಭಕ್ತ ಹಾಗೂ ದೇವಾಲಯದಲ್ಲಿಯ ಶಿವಲಿಂಗದ ದರ್ಶನದ ನಡುವೆ ಇರುವ ತಾರತಮ್ಯವನ್ನು
ನಿವಾರಿಸಲು ವಚನಕಾರರು ಕಂಡುಕೊಂಡಿದ್ದು ಇಷ್ಟಲಿಂಗದ ಪರಿಕಲ್ಪನೆ. ಗುರುವು ತಾನೇ ಕೈಯಾರ ಹರಸಿ ಪೂಜಾ
ವಿಧಾನದ ಮಂತ್ರಗಳೊಡನೆ ಪ್ರೀತಿಯಿಂದ ಕೊಟ್ಟ ಇಷ್ಟಲಿಂಗವು ಭಕ್ತನಾದವನಿಗೆ ಸೇರಿದ್ದುದ್ದಾಗಿರುತ್ತದೆ.
ಭಕ್ತನಿಗೂ ಇಷ್ಟ ಲಿಂಗಕ್ಕೂ ಇರುವ ಸಂಬಂಧ ಗಾಢವಾದದ್ದು ಇಷ್ಟಲಿಂಗದ ಅರ್ಚನೆಯಲ್ಲಿ ಅರ್ಚಕನ ಮಾಧ್ಯಮವಿಲ್ಲ.
ಜಾತಿಯ ಅಂತಸ್ಥಿನ ಪ್ರಶ್ನೆ ಉದ್ಭವಿಸುವುದಿಲ್ಲ. ದೇವಾಲಯದ ಪ್ರವೇಶ ನಿರ್ಬಂಧ ಇರುವುದಿಲ್ಲ. ದೇಹದ
ಮೇಲೆ ಸದಾ ಇಷ್ಟಲಿಂಗದ ಧರಿಸಿರುವುದರಿಂದ ಆ ಭಕ್ತನಿಗೆ ತನ್ನನ್ನು ಕಾಪಾಡುವ ದೈವ ತನ್ನ ಅಂಗದ ಮೇಲೆ
ಇದೆ ಎನ್ನುವ ಆತ್ಮವಿಶ್ವಾಸ ಹಾಗೂ ನಂಬಿಕೆ ಆತನಲ್ಲಿ ಮನೆ ಮಾಡಿರುತ್ತದೆ.
ದೇವಾಲಯಗಳ ನಿರಾಕರಣೆಗೆ
ಮತ್ತೊಂದು ಕಾರಣವು ಇದ್ದಿರಬಹುದು. ಕನ್ನಡನಾಡಿನಲ್ಲಿ ಆಗಿನ ಕಾಲಕ್ಕೆ ಹಲವಾರು ಧಾರ್ಮಿಕ ಆಚರಣೆಗಳು,
ಬಹುದೇವತಾ ಆರಾಧನೆಯ ಪದ್ಧತಿಗಳು ಸಾಮಾಜಿಕ ಸ್ತರವಿನ್ಯಾಸಗಳು ಜನತೆಯ ಬದುಕನ್ನು ವಿಘಟನೆ ಗೊಳಿಸುವಲ್ಲಿ
ಬಹು ಮುಖ್ಯ ಪಾತ್ರವಹಿಸಿದ್ದವು. ಜನತೆಯ ವಿಘಟನೆಗೊಂಡ ಬದುಕನ್ನು ಹಾಗೂ ಮನಸ್ಥಿತಿಯನ್ನು ಸಂಘಟಿಸುವ
ಹಿನ್ನೆಲೆಯಲ್ಲಿ ಬಹುದೇವತಾರಾಧನೆ ಹಾಗೂ ದೇವಸ್ಥಾನಗಳ ನಿರ್ಮಾಣವನ್ನು ನಿರಾಕರಿಸಲು ಸಾಧ್ಯವಾಯಿತು.
ಜನತೆಯ ನಂಬಿಕೆಗನುಗುಣವಾಗಿ
ಜನಮನದಲ್ಲಿ ಮನೆಮಾಡಿಕೊಂಡು ಪೂಜೆಗೊಳ್ಳುತ್ತಿದ್ದ ಬಹು ಸಂಖ್ಯಾತ ಕ್ಷುದ್ರದೇವತೆಗಳನ್ನು ಮಡಕೆ ದೈವ,
ಮೊರದೈವ, ಬೀದಿಯ ಕಲ್ಲು ದೈವ ಎಂದು ಪೂಜಿಸುವ ಪ್ರವೃತ್ತಿಗಳನ್ನು ಹಾಗೂ ಆಗಲೇ ನೆಲೆನಿಂತ ದೇವಾಲಯಗಳಿಗೆ
ದಾನದತ್ತಿ, ಜೀರ್ಣೋದ್ಧಾರ ಮಾಡುವ ಪ್ರವೃತ್ತಿಯನ್ನು ಹೊಸ ಆಲಯಗಳ ನಿರ್ಮಾಣ ಇತ್ಯಾದಿಗಳನ್ನು ಖಂಡಿಸಿ
ಏಕದೇವನಿಷ್ಠೆಗೆ ಒಳಗುಮಾಡಿದ್ದು ವಚನಚಳುವಳಿಯ ಬಹು ಮುಖ್ಯ ಪಾತ್ರವಾಗಿದೆ. ಏಕದೈವವಾದ ಶಿವ, ಇಷ್ಟಲಿಂಗ
ರೂಪದಿಂದ ತನ್ನ ಕರಸ್ಥಲ ಹಾಗೂ ಉರಸ್ಥಲಗಳಲ್ಲಿಯೇ ಇದ್ದಾನೆ ಮತ್ತು ಆ ಮೂಲಕ ತನ್ನ ದೇಹವೇ ದೇಗುಲವಾಗಿದೆ.
ಈ ರೀತಿ ದೇಹವನ್ನು ದೇಗುಲವನ್ನಾಗಿ ಮಾಡಿಕೊಂಡಿದ್ದವರೆಲ್ಲರೂ ವರ್ಣ-ವರ್ಗಗಳ ತಾರತಮ್ಯದಿಂದ ಮುಕ್ತರಾಗಿ
ಆಧ್ಯಾತ್ಮಿಕವಾಗಿ ಸಮಾನರು ಎಂಬ ವಿನೂತನ ಧಾರ್ಮಿಕ ಶ್ರದ್ಧೆಯನ್ನು ಮೂಡಿಸುವ ಸಲುವಾಗಿ ದೇವಾಲಯದ ನಿರಾಕರಣೆ
ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ದೇವಾಲಯ ನಿರಾಕರಣೆಯಿಂದ ಇಷ್ಟಲಿಂಗದ ನಿಷ್ಠೆಯನ್ನು ದೃಢಗೊಳಿಸುವ
ಈ ಪದ್ಧತಿಯು ಭಕ್ತನಿಗೂ ದೇವರಿಗೂ ದೇವಾಲಯದ ಕಾರಣದಿಂದ ನಡುವೆ ಸ್ಥಾಪಿತವಾದ ಪೂಜಾರಿಯ ಮಾಧ್ಯಮವನ್ನು
ನಿರಾಕರಿಸಿ ಭಕ್ತಿ ಎನ್ನುವುದು ಭಕ್ತ ಹಾಗೂ ಭಗವಂತನ ನಡುವಣ ಆತ್ಮೀಯವಾದ ವ್ಯಕ್ತಿನಿಷ್ಠ ಅನುಸಂಧಾನ
ಎನ್ನುವ ನಿಲುವನ್ನು ವ್ಯಕ್ತಪಡಿಸಿದೆ. ವಚನ ಚಳುವಳಿಯ ಕಾಲಕ್ಕೆ ಇದ್ದಂತಹ ದೇವಾಲಯ ಸಂಸ್ಕೃತಿ ಉಳ್ಳವರ
ಹಾಗೂ ಉಚ್ಛವರ್ಗದವರ ಸ್ವತ್ತಾಗಿದ್ದು ಜನರ ಧಾರ್ಮಿಕ ಭಾವನೆಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡ ಅವರನ್ನು
ಶೋಷಣೆಗೆ ಗುರಿಪಡಿಸುವ ಸಾಧನವಾಗಿತ್ತು. ಶೋಷಿತ ವರ್ಗದ ಜನತೆಗೆ ದೇವಾಲಯದ ಪ್ರವೇಶವನ್ನು ನಿರಾಕರಿಸಿತ್ತು.
ವಚನಕಾರರು ಈ ಪ್ರವೃತ್ತಿಯನ್ನು ದೇವಾಲಯ ನಿರಾಕರಣೆಯ ಮೂಲಕ ವಚನ ಚಳುವಳಿ ನಿರಾಕರಿಸಿತು. ವಚನ ಚಳುವಳಿಯು
ಸ್ಥಾವರಲಿಂಗ ಪ್ರತೀಕವಾದ ದೇವಾಲಯದ ಕಲ್ಪನೆಯನ್ನು ನಿರಾಕರಣೆ ಮಾಡದೆ ದೇವಾಲಯವನ್ನೇ ಸಂಘಟನೆಯನ್ನಾಗಿ
ಮಾಡಿಕೊಂಡು ಅದರ ಮೂಲಕವೇ ಸಮಾಜೋಧಾರ್ಮಿಕ ಚಳುವಳಿಯನ್ನು ಕೈಗೊಳ್ಳಬಹುದಾಗಿತ್ತಲ್ಲ ಎನ್ನುವ ಪ್ರಶ್ನೆಯೂ
ಉದ್ಭವಿಸಬಹುದು.
ವಚನ ಚಳುವಳಿಯ ಕಾಲದಲ್ಲಿ
ಶೈವ ಮತದ ಮೂಲಕ ಅಸಂಖ್ಯಾತ ಶಿವಾಲಯಗಳು ನಿರ್ಮಾಣಗೊಂಡವು, ನಿರ್ಮಾಣಗೊಳ್ಳುತ್ತಿದ್ದವು. ವಚನ ಚಳುವಳಿಯ
ರಾಜಕೀಯ ಕಾಲವಾದಂತಹ ಕಲ್ಯಾಣ ಚಾಲುಕ್ಯರು ಹಾಗೂ ಕಲಚೂರಿಗಳ ಆಳ್ವಿಕೆಯ ಕಾಲದಲ್ಲಿ 500ಕ್ಕೂ ಮೇಲ್ಪಟ್ಟು
ದೇವಾಲಯಗಳ ನಿರ್ಮಾಣವಾಗಿರುವುದಕ್ಕೆ ಆ ಕಾಲದ ಶಾಸನಗಳ ಉಲ್ಲೇಖಗಳ ನಿದರ್ಶನ, ಇದರಿಂದ ನಮಗೆ ಮನದಟ್ಟಾಗುತ್ತದೆ.
ವಚನ ಚಳುವಳಿಯ ಕಾಲದಲ್ಲಿಯೇ ಅದರ ಕೇಂದ್ರ ಭಾಗವನ್ನು ಹೊರತು ಪಡಿಸಿ ಉಳಿದ ಭಾಗಗಳಲ್ಲಿ ದೇವಾಲಯಗಳು
ನಿರ್ಮಾಣಗೊಂಡಿವೆ. ಇದರಿಂದಾಗಿ ವಚನ ಚಳುವಳಿಯ ಕಾಲಘಟ್ಟ. ಸಂಪೂರ್ಣವಾಗಿ ಸ್ಥಾವರಲಿಂಗಗಳ ಪ್ರತೀಕಗಳಾದ
ದೇವಾಲಯಗಳ ನಿರ್ಮಾಣವನ್ನು ಸಂಪೂರ್ಣವಾಗಿ ವಿರೋಧಿಸಿ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಾಯಿತೇ?
ಎನ್ನುವ ಪ್ರಶ್ನೆಗೆ ಇಲ್ಲ ಎಂದೇ ಹೇಳಬೇಕಾಗುತ್ತದೆ.
ವಚನಕಾರರು ದೇವಾಲಯಗಳ
ವಿರೋಧದ ಕುರಿತು ತಾಳಿರುವ ನಿಲುವು ಮೇಲ್ನೋಟಕ್ಕೆ ಸರಿಯೆಂದು ಕಂಡು ಬಂದರೂ ವಾಸ್ತವವಾಗಿ ದೇವಾಲಯಗಳ
ಸ್ಥಾಪನೆ ಬಗ್ಗೆ ಎಂದಿಗೂ ವಿರೋಧವನ್ನು ತಾಳಿರಲಿಲ್ಲ ಎನ್ನಬಹುದು. ವಚನಕಾರರು ಒಂದಿಲ್ಲೊಂದು ರೀತಿಯಲ್ಲಿ
ದೇವಾಲಯಗಳ ಸಂಪ್ರದಾಯಕ್ಕೆ ಒಳಗಾದವರೇ ಆಗಿದ್ದಾರೆ. ವಚನಕಾರರ ಅಂಕಿತಗಳಂತು ಸ್ಪಷ್ಟವಾಗಿ ಸ್ಥಾವರಲಿಂಗದ
ಪ್ರತೀಕಗಳಾಗಿವೆ. ಬಸವಣ್ಣನವರ ಅಂಕಿತವಾದಂತಹ ಕೂಡಲಸಂಗಮದೇವ, ಇಂದಿಗೂ ಕೂಡಲಸಂಗಮದ ದೇವಸ್ಥಾನವನ್ನು
ನೆನಪಿಸಿದರೆ, ಅಕ್ಕಮಹಾದೇವಿಯ ಚೆನ್ನಮಲ್ಲಿಕಾರ್ಜುನ ಅಂಕಿತವು ಶ್ರೀಶೈಲದ ಚನ್ನಮಲ್ಲಿಕಾರ್ಜುನ ದೇವಸ್ಥಾನವನ್ನು
ಪ್ರತಿನಿಧಿಸುತ್ತದೆ. ಅಲ್ಲಮನ ಗೋಗೇಶ್ವರ ಅಂಕಿತವು ಬಳ್ಳಿಗಾವೆಯ ಗೊಗ್ಗೇಶ್ವರ ಸ್ಥಾವರಲಿಂಗವನ್ನು
ಪ್ರತಿನಿಧಿಸುತ್ತದೆ. ಆದಯ್ಯನ ಸೌರಾಷ್ಟ್ರ ಸೋಮೇಶ್ವರ ಅಂಕಿತವು ಸೌರಾಷ್ಟ್ರ ಸೋಮೇಶ್ವರ ದೇವಾಲಯದ ಪ್ರತೀಕವಾಗಿದೆ.
ಹೀಗೆ ಹಲವಾರು ವಚನಕಾರರ ಅಂಕಿತಗಳು ಅವರವರ ಕಾರ್ಯಕ್ಷೇತ್ರದಲ್ಲಿನ ದೇವಾಲಯಗಳ ಸ್ಥಾವರಲಿಂಗಗಳನ್ನು
ಸಂಕೇತಿಸುತ್ತದೆ. ವಚನಕಾರರಲ್ಲಿ ಸಿದ್ಧರಾಮ, ಏಕಾಂತರಾಮಯ್ಯ, ಮುಂತಾದ ವಚನಕಾರರು ದೇವಾಲಯಗಳನ್ನು ತಾವೇ
ನಿರ್ಮಿಸಿದ್ದಕ್ಕೆ ಶಾಸನ, ಕಾವ್ಯ, ಪುರಾಣಗಳಲ್ಲಿ ಉಲ್ಲೇಖವಿದೆ. ಬಹುಪಾಲು ವಚನಕಾರರ ವಚನಗಳ ಅಂಕಿತಗಳು
ದೇವಾಲಯಗಳ ಸ್ಥಾವರಲಿಂಗದಿಂದ ಪ್ರಚೋದಿತವಾಗಿವೆ.
ಕೆಲವು ವಚನಕಾರರ
ಅಂಕಿತಗಳು ಸ್ಥಳೀಯವಾದ ದೇವಾಲಯಗಳನ್ನೆ ಸೂಚಿಸುತ್ತವೆಯಾದರೂ ವಚನಕಾರರ ಧೋರಣೆ ದೇವಾಲಯವನ್ನು ನಿರಾಕರಿಸುವ
ಹಾಗೂ ಮೀರುವ ನೆಲೆಯನ್ನು ತಲುಪಿದ್ದಲ್ಲದೆ ದೇಹವೇ ದೇವಾಲಯ ಎನ್ನುವ ಕಲ್ಪನೆಯನ್ನು ಹುಟ್ಟುಹಾಕಿದ್ದು
ಎಂಬ ನಿಲುವನ್ನು ಕೆಲವು ಆಧುನಿಕ ಚಿಂತಕರು ಹುಟ್ಟು
ಹಾಕಿದ್ದರು. ಬಸವಣ್ಣನವರ ‘ಉಳ್ಳವರು ಶಿವಾಲಯವ ಮಾಡುವರಯ್ಯ..........’ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಎನ್ನುವ ವಚನವು ದೇವಾಲಯವೇ ಮಾನವ ಶರೀರ, ಮಾನವ ಶರೀರವೇ ದೇವಸ್ಥಾನ ಎನ್ನುವ ಸಮೀಕರಣ ಕ್ರಿಯೆಯಾಗಿದೆ.
ಅಲ್ಲದೆ ವಚನಕಾರರ ದೇವಾಲಯದ ಪರಿಕಲ್ಪನೆಗೆ ಅತ್ಯುತ್ತಮ ವ್ಯಾಖ್ಯಾನದಂತಿದೆ. ಶ್ರೀಮಂತರು ನಿರ್ಮಿಸುವ
ದೇವಾಲಯದೊಂದಿಗೆ ಬಸವಣ್ಣ ತಾನೂ ಮಾಡುವ ದೇವಸ್ಥಾನವನ್ನು ಮುಖಾಮುಖಿಯಾಗಿರಿಸಿ ಒಂದು ಕಾಲಕ್ಕೆ ಸಾಂಸ್ಕೃತಿಕವಾಗಿ
ಅರ್ಥಪೂರ್ಣವಾಗಿದ್ದ ದೇವಾಲಯ ತನ್ನ ಅರ್ಥವನ್ನು ಕಳೆದುಕೊಂಡು ಸ್ಥಾವರವಾಗಿದೆ ಎಂಬುದನ್ನು ಸೂಚಿಸುತ್ತಾ
ಅದಕ್ಕೆ ಪರ್ಯಾಯವಾಗಿ ‘ದೇಹವೇ ದೇಗುಲವೆಂಬ, ಜಂಗಮ’ ಅಥವಾ ಚಲನಶೀಲ ಸ್ಥಿತಿಯನ್ನು ಪ್ರತಿಪಾದಿಸುವ ಕ್ರಮವಾಗಿದೆ.
ಈ ವಚನ ಶಿವಾಲಯವನ್ನು ಮಾಡುವ ಕ್ರಿಯೆಯನ್ನು ಹೊರತು ಪಡಿಸಿ ವ್ಯಕ್ತಿ ತಾನೇ ಶಿವಾಲಯ ಆಗುವ ಪ್ರಕ್ರಿಯೆಯನ್ನು
ಪ್ರತಿಪಾದಿಸುತ್ತದೆ.
ಸ್ಥಾವರ ಲಿಂಗವು
ಒಂದು ವಿಧದಲ್ಲಿ ತನ್ನ ಭಕ್ತರಿಗೆ ಇಷ್ಟಾರ್ಥವನ್ನು ಅನುಗ್ರಹಿಸುವುದರಿಂದ ಅದು ಅವರಿಗೆ ಇಷ್ಟಲಿಂಗ
ಎನ್ನಿಸುತ್ತದೆ. ವಚನಕಾರರ ಚರಿತ್ರೆಯನ್ನು ಅವಲೋಕಿಸಿದರೆ, ಅವರು ತಮಗೆ ಇಷ್ಟವಾಗಿರುವ ಸ್ಥಾವರಲಿಂಗದ
ಕುರುಹಾಗಿ ಇಷ್ಟಲಿಂಗವನ್ನು ಪ್ರವಾಸದ ಸಂದರ್ಭದಲ್ಲಿ ಜೊತೆಗೆ ಕೊಂಡೊಯ್ಯುತ್ತಿದ್ದರು ಎಂಬುದಾಗಿ ತಿಳಿದು
ಬರುತ್ತದೆ.
ಬಾಲಕ ಬಸವಣ್ಣ ಬಾಗೇವಾಡಿಯನ್ನು
ಬಿಟ್ಟು ಕೂಡಲಸಂಗಮಕ್ಕೆ ತೆರಳುವಾಗ ಓಡಿ ಬಂದೊಳಗಂ ಪೊಕ್ಕು ತನ್ನಯ ಲಿಂಗಮಂ ಕೊಂಡು ಹೋದನೆಂದು ಸಿಂಗಿರಾಜ
ಪುರಾಣ (5.94) ಹೇಳುತ್ತದೆ. ಅದರಂತೆ ಬಾಲಕ ಸಿದ್ಧರಾಮನು ತಂದೆ-ತಾಯಿಗಳು ಸೂಚಿಸಿದ ಧೂಳಿಮಾಕಾಳ ದೇವತೆಯ
ಪೂಜೆಯನ್ನು ತಿರಸ್ಕರಿಸಿ ನಿಮ್ಮ ಮನೆಯೊಳು ನಿಲ್ಲುವನಲ್ಲೆಂದು ಲಿಂಗಮಂಧರಿಸಿ ಪಿಡಿದುಕೊಂಡು ಹೊರಟುಹೋದನೆಂದು
ಸಿದ್ಧರಾಮ ಚಾರಿತ್ರ (3.36) ತಿಳಿಸುತ್ತದೆ.
ಶರಣರು ಪ್ರವಾಸ ಸಂದರ್ಭದಲ್ಲಿ
ಲಿಂಗವನ್ನು ಒಂದು ಸಣ್ಣ ಪೆಟ್ಟಿಗೆಯಲ್ಲಿಟ್ಟುಕೊಂಡು ಒಯ್ಯುತ್ತಿದ್ದುದಾಗಿ ತಿಳಿದು ಬರುತ್ತದೆ. ಪೂಜೆಯ
ಪ್ರಸಂಗದಲ್ಲಿ ತಮ್ಮ ಅನುಕೂಲದಂತೆ ನೆಲದ ಮೇಲೆಯೇ ಅಥವಾ ಅಂಗೈ ಮೇಲೆಯೇ ಇಟ್ಟು ಪೂಜಿಸುತ್ತಿರಬಹುದು.
ಹರಿಹರನ ಕೊಂಡುಗುಳಿಕೇಶಿರಾಜ ದಣ್ಣಾಯಕರ ರಗಳೆಯಲ್ಲಿ ಕೊಂಡಗುಳಿ ಕೇಶಿರಾಜನು ಪ್ರವಾಸದ ಸಂದರ್ಭದಲ್ಲಿ
ಲಿಂಗವನ್ನು ಒಯ್ದು ತೆಲುಗು ಜೊಮ್ಮಯ್ಯನ ಮನೆಯಲ್ಲಿ ನೆಲದ ಮೇಲಿಟ್ಟು ಪೂಜಿಸಿದ ಉಲ್ಲೇಖಇದೆ. ಕೊಂಡಗುಳಿ
ಕೇಶಿರಾಜನು ಆತನು ಅಂಗೈಯೊಳಿಟ್ಟು ಪೂಜಿಸುತ್ತಿದ್ದ ಸೂಚನೆಯು ಆತನ ಕಂದ ಪದ್ಯಗಳಿಂದ ವ್ಯಕ್ತವಾಗುತ್ತದೆ.
ಕೊರಳಲ್ಲಿ ಕಟ್ಟಿಕೊಂಡರೂ ಕರದಲ್ಲಿ ಪೂಜಿಸಿದರೂ ಇಷ್ಟಲಿಂಗ ಹೆಸರಿನಿಂದ ಕರೆದರೂ ಈ ಸ್ಥಾವರಲಿಂಗ ಸೂಚೀ
ಇಷ್ಟಲಿಂಗವು ಶರಣರ ಇಷ್ಟಲಿಂಗದಿಂದ ತಾತ್ವಿಕವಾಗಿ ಭಿನ್ನವಾಗಿದೆ. ಸ್ಥಾವರಲಿಂಗವೇ ಇಷ್ಟಲಿಂಗವೆನಿಸಿಕೊಂಡು
ಕೊನೆಗೆ ಶರೀರದ ಮೇಲೆ ನೆಲೆಗೊಂಡಿತು. ಕರಪೀಠದಲ್ಲಿ ಪೂಜೆಗೊಂಡಿತು. ಈಗಾಗಲೇ ನೋಡಿರುವ ಹಾಗೆ ವಚನಕಾರರು
ಸ್ಥಾವರಲಿಂಗದ ಹೆಸರನ್ನು ಮುದ್ರಿಕೆಯಾಗಿಟ್ಟುಕೊಂಡು ವಚನಗಳನ್ನು ರಚಿಸಿದ್ದಾರೆ.
ಬಹುತೇಕ ವಚನಕಾರರ
ಅಂಕಿತದ ಹೆಸರಿನ ಸ್ಥಾವರಲಿಂಗಗಳು ಅವರವರ ಗ್ರಾಮಗಳಲ್ಲಿ ಕಂಡುಬರುತ್ತವೆ. ಪುಲಿಗೆರೆಯ ವರದ ಸೋಮೇಶ್ವರಾ
ಅಂಕಿತದಲ್ಲಿ ಪುಲಿಗೆರೆಯೆಂಬ ಗ್ರಾಮಸೂಚಿ ಕಂಡುಬಂದರೆ, ಏಲೇಶ್ವರಲಿಂಗ ಅಂಕಿತದಲ್ಲಿ ಗ್ರಾಮನಾಮದಿಂದಲೇ
ಸ್ಥಾವರಲಿಂಗವನ್ನು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಚನಗಳ ಅಂಕಿತ ಇಷ್ಟಲಿಂಗವನ್ನೇ ಸೂಚಿಸುತ್ತಿದ್ದರೂ
ಮೂಲತಃ ಅವು ಸ್ಥಾವರಲಿಂಗತತ್ವದ ಇಷ್ಟಲಿಂಗವೇ ಆಗಿವೆ. ಇಷ್ಟಲಿಂಗವು ಇಷ್ಟವಾಗಿರುವ ಸ್ಥಾವರಲಿಂಗದ ಪ್ರತೀಕವಾಗಿದೆ.
ವಚನಕಾರರು ದೇವಾಲಯ
ಸಂಸ್ಕೃತಿಯನ್ನು ತಿರಸ್ಕರಿಸಲಿಲ್ಲ. ದೇವಾಲಯಗಳು ಶೋಷಣೆಯ ಕೇಂದ್ರಗಳಾಗಬಾರದೆಂಬುದೇ ಅವರ ಮುಖ್ಯ ಉದ್ದೇಶವಾಗಿತ್ತು.
ವಚನಕಾರರು ಸ್ಥಾವರಲಿಂಗ ವಿರೋಧಿಗಳು ಎನ್ನುವ ಹೇಳಿಕೆಯನ್ನು ಆಕರಗಳ ಹಿನ್ನೆಲೆಯಲ್ಲಿ ಪುನರ್‌ಪರಿಶೀಲಿಸುವ
ಅಗತ್ಯವಿದೆ. ಬಸವಣ್ಣ ಅಲ್ಲಮರ ಒಂದೆರಡು ವಚನಗಳಲ್ಲಿ ಸ್ಥಾವರ ಲಿಂಗದ ಟೀಕೆ ಕಂಡು ಬಂದರೂ ವಚನಕಾರರು
ಸ್ಥಾವರಲಿಂಗದ ಕಡು ವಿರೋಧಿಗಳಲ್ಲ. ದೇವಾಲಯಗಳಲ್ಲಿನ ಸ್ಥಾವರಲಿಂಗದ ಬಗೆಗೆ ಶರಣರು ಏನಾದರೂ ಟೀಕೆ ಮಾಡಿದ್ದರೆ
ಬಹಿಷ್ಕರಿಸಲೆಂದಲ್ಲ ಪರಿಷ್ಕರಿಸಲೆಂದು ಎನ್ನುವ ಎಲ್.ಬಸವರಾಜುರವರ ಮಾತು ಒಪ್ಪತಕ್ಕದ್ದೇ. ಶರಣರನ್ನು
ಕುರಿತ ಶಾಸನಗಳು ಹಾಗೂ ಕಾವ್ಯ ಪುರಾಣಗಳಲ್ಲಿ ಶರಣರು ಊರಿಂದ ಊರಿಗೆ ಸಂಚರಿಸುತ್ತಿದ್ದಾಗ ತಂಗುತ್ತಿದ್ದುದು
ಶಿವದೇಗುಲಗಳಲ್ಲಿ ಎಂಬ ವಿವರ ತಿಳಿದ ಸಂಗತಿಯಾಗಿದೆ. ಶರಣರು ದೇವಾಲಯಗಳನ್ನು ಕಟ್ಟಿಸಿದ್ದರ ಬಗೆಗೆ
ಶಾಸನಗಳಲ್ಲಿ ಉಲ್ಲೇಖ ಇದೆ. ಏಕಾಂತದ ರಾಮಯ್ಯ ಆದಯ್ಯ ಶಂಕರದಾಸಿಮಯ್ಯ ಮಾರುಡಿಗೆ ನಾಚಿತಂದೆ, ಸಿದ್ಧರಾಮ,
ಹುಳಿಯಮೇಶ್ವರಚಿಕ್ಕಯ್ಯ. ಮುಂತಾದ ಶರಣರು ಊರಿಂದೂರಿಗೆ ಹೊರಟರೆ ತಂಗುತ್ತಿದ್ದುದು ಶಿವಾಲಯಗಳಲ್ಲಿ
ಎಂಬುದು ಅವರನ್ನು ಕುರಿತ ಶಾಸನಗಳು ಮತ್ತು ಕಾವ್ಯ ಪುರಾಣಗಳಲ್ಲಿ ವಿದಿತವಾಗುತ್ತದೆ. ಬಸವಣ್ಣನವರು
ದೇವಾಲಯಗಳು ಮಹತ್ವವನ್ನು ಬಲ್ಲವರಾದ್ದರಿಂದ ಅವು ಜಡತ್ವವನ್ನು ಮಾಡಬಾರದೆಂಬ ಕಾರಣದಿಂದ ಅವುಗಳಿಗೆ
ಹೆಚ್ಚಿನ ಮಹತ್ವ ನೀಡಲಿಲ್ಲ. ಕೊಂಡಗುಳಿ ಕೇಶಿರಾಜ, ಕೆಂಬಾವಿ ಭೋಗಣ್ಣ, ಸಿದ್ಧರಾಮ, ಆದಯ್ಯ, ಏಕಾಂತದ
ರಾಮಯ್ಯರಂತಹ ವಚನಕಾರರು ಕೊಂಡಗುಳಿ ಕೆಂಬಾವಿ, ಸೊನ್ನಲಿಗೆ, ಪುಲಿಗೆರೆ ಅಬ್ಬಲೂರುಗಳಲ್ಲಿ ದೇವಾಲಯಗಳನ್ನು
ಕಟ್ಟಿದರು ಎಂಬುದಕ್ಕೆ ಶಾಸನಗಳಲ್ಲಿ ಉಲ್ಲೇಖ ಇದೆ. ವಚನಗಳ ಅಂಕಿತ ಆಯಾ ಶರಣರ ಇಷ್ಟಲಿಂಗದಿಂದಲೇ ಪ್ರಚೋದಿತವಾಗಿದೆ.
ಆದಯ್ಯ, ಪ್ರಭುದೇವ ಸೊಡ್ಡಳ ಬಾಚರಸ ಮುಂತಾದವರ ಸ್ಥಳಗಳಲ್ಲಿ ಅವರ ವಚನಗಳ ಅಂಕಿತದ ಸೋಮೇಶ್ವರ, ಗೊಗ್ಗೇಶ್ವರ
ಮುಂತಾದ ದೇವಾಲಯಗಳು ಕಂಡು ಬರುತ್ತವೆ.ಅಲ್ಲಮನ ಅಂಕಿತ ಗೊಗ್ಗೇಶ್ವರ ಅಥವಾ ಗುಹೇಶ್ವರವು ದೇವಾಲಯ ಸಂಸ್ಕೃತಿಯ
ಇತಿಹಾಸದಲ್ಲಿ ದೇವಾಲಯಗಳ ರಚನೆಗಳ ಪೂರ್ವಾವಸ್ಥೆಯಾದ ಗುಹೆಯನ್ನು ಅಥವಾ ಗುಹಾಲಯ ಶಿಲ್ಪಗಳ ಪರಂಪರೆಯನ್ನು
ಸೂಚಿಸುತ್ತದೆ ಎಂಬ ಅಭಿಪ್ರಾಯವೂ ವಿದ್ವಾಂಸರಿಂದ ವ್ಯಕ್ತವಾಗಿರುವುದನ್ನು ಗಮನಿಸಬಹುದಾಗಿದೆ. ಜೇಡರ
ದಾಸಿಮಯ್ಯನ ಗ್ರಾಮವಾದ ಮುದೆನೂರಿನಲ್ಲಿ ಆತನ ವಚನ ಮುದ್ರಿಕೆಯಾದ ರಾಮನಾಥ ಹೆಸರಿನ ಸ್ಥಾವರಲಿಂಗ. ಸಿದ್ಧರಾಮರ
ಸೊನ್ನಲಿಗೆಯಲ್ಲಿ ಆತನ ವಚನ ಮುದ್ರಿಕೆಯಾದ ಕಪಿಲಸಿದ್ಧ ಮಲ್ಲಿಕಾರ್ಜುನ ಹೆಸರಿನ ಸ್ಥಾವರ ಲಿಂಗಗಳಿವೆ.
ಬಸವಣ್ಣನವರು ಕಲ್ಯಾಣ ಕ್ರಾಂತಿಯ ವಿಪ್ಲವದ ನಂತರ ತನ್ನ ಇಷ್ಟ ದೈವ ಕ್ಷೇತ್ರವಾದ ಕೂಡಲ ಸಂಗಮಕ್ಕೆ ಬಂದರು
ಎಂಬುದಾಗಿ ಅವರನ್ನು ಕುರಿತ ಕಾವ್ಯ ಪುರಾಣಗಳಿಂದ ತಿಳಿದುಬರುತ್ತದೆ. ಒಂದು ವೇಳೆ ಅವರು ದೇವಾಲಯಗಳ
ಕಡು ವಿರೋಧಿಗಳಾಗಿದ್ದರೆ ಕೂಡಲ ಸಂಗಮಕ್ಕೆ ಎಂದೆಂದಿಗೂ ಬರಲು ಸಾಧ್ಯವೇ ಇರಲಿಲ್ಲ. ಬಸವಣ್ಣನವರ ವಂಶಜರು
ದೇವಾಲಯಗಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದರು ಎಂಬುದಕ್ಕೆ ಅರ್ಜುನವಾಡ ಶಾಸನವೇ ನಿದರ್ಶನವಾಗಿದೆ. ಬಸವಣ್ಣನ
ವಂಶಜನಾದ ಹಾಲಬಸವಿದೇವನು ನಾಗೇಶ್ವರ, ಮಲ್ಲೇಶ್ವರ ದೇವರುಗಳಿಗೆ ಕೊತ್ತಸಿ ಕುರುವನಿಗೆ, ಅಂಕವತ್ತಲ
ಗ್ರಾಮವನ್ನು, ಸಂಗಮೇಶ್ವರ ದೇವರು ಮತ್ತು ಜಂಗಮಾರೋಗಣೆಗೆ ಕೊತ್ತಸಿಗೆ(ಈಗಿನ ಕೋಚರಿ) ಗ್ರಾಮಗಳನ್ನು
ಪುಲಿಗೆರೆಯ ಸೋಮನಾಥ ದೇವರ ಸನ್ನಿಧಿಯಲ್ಲಿ ದತ್ತಿಯಾಗಿ ಪಡೆದ ವಿವರ ಅರ್ಜುನವಾಡ ಶಾಸನದಲ್ಲಿ ವ್ಯಕ್ತಗೊಂಡಿದೆ.
ಈ ವಿವರಗಳು ಬಸವಣ್ಣನವರ ವಂಶಸ್ಥರು ದೇವಾಲಯ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಬಂದಿದ್ದರು ಎಂಬುದನ್ನು
ಸೂಚಿಸುತ್ತದೆ.
12ರಿಂದ15ನೇ ಶತಮಾನದವರೆವಿಗೂ
ಶಿವದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ, ದೇವಾಲಯಗಳಿಗೆ ದತ್ತಿ ದಾನಗಳನ್ನು ಬಿಡುವುದು ಇತ್ಯಾದಿ ಚಟುವಟಿಕೆಗಳನ್ನು
ಆಯಾಕಾಲದ ಅರಸು ಮನೆತನಗಳು ಅಧಿಕಾರಿಗಳು, ಮಾಂಡಳಿಕರು ವರ್ತಕರು ಜನಸಾಮಾನ್ಯರು ಕೈಗೊಂಡಿದ್ದರು ಎಂಬುದಕ್ಕೆ
ಅಪಾರ ಸಂಖ್ಯೆಯ ಶಾಸನಗಳೇ ನಿದರ್ಶನವಾಗಿವೆ. ಒಂದು ವೇಳೆ ವಚನಕಾರರು ಸ್ಥಾವರ ಲಿಂಗದ ಕಡು ವಿರೋಧಿಗಳು
ಎಂಬ ನಿಲುವಿಗೆ ನಾವು ಬದ್ಧರಾದರೆ ಶರಣರ ವೈಚಾರಿಕ ಕ್ರಾಂತಿಯ ಪರಿಣಾಮ ವಚನಕಾರರ ನೆಲೆಯ ಭಾಗವಾದ ಈಗಿನ
ಬಸವಕಲ್ಯಾಣವನ್ನು ಹೊರತು ಪಡಿಸಿ ಉಳಿದ ಭಾಗಗಳ ಮೇಲೆ ಆಗಿರಲಿಲ್ಲ ಎಂದೇ ಹೇಳಬೇಕಾಗುತ್ತದೆ. ದೇವಾಲಯಗಳಿಗೆ
ಸಂಬಂಧಿಸಿದಂತೆ ಇವರ ವೈಚಾರಿಕ ಕ್ರಾಂತಿಯ ಪ್ರಭಾವ ಆಗಿಲ್ಲವೆಂದೇ ಹೇಳಬೇಕಾಗುತ್ತದೆ. ದೇವಾಲಯಗಳೆಂಬ
ಸ್ಥಾವರ ಲಿಂಗಗಳು ಬಸವಣ್ಣನವರ ಕಾಲದಲ್ಲೂ ನಂತರದ ಕಾಲದಲ್ಲೂ ನಿರ್ಮಿತಗೊಂಡಿವೆ. ದೇವಾಲಯಗಳ ನಿರ್ಮಾಣದ
ಕಲ್ಪನೆ ಭಾರತೀಯ ಸಂಸ್ಕೃತಿಯ ಪುರಾತನ ಸಂಸ್ಕೃತಿಯಾಗಿ ಬೇರುಬಿಟ್ಟಿದ್ದರಿಂದ ಅದನ್ನು ಕಿತ್ತುಹಾಕುವಂತಹ
ಮನಸ್ಥಿತಿಗೆ ಜನತೆ ಒಳಗಾಗಿರಲಿಲ್ಲವೆಂದೇ ಹೇಳಬೇಕಾಗುತ್ತದೆ. ವಚನಕಾರರಲ್ಲಿ ಹಲವರ ಗದ್ದುಗೆಗಳು ದೇವಾಲಯಗಳ
ಆವರಣಗಳಲ್ಲಿಯೇ ಕಂಡು ಬರುತ್ತವೆ. ಉದಾಹರಣೆಗೆ, ಆದಯ್ಯ, ಏಕಾಂತರಾಮಯ್ಯ, ಸಿದ್ಧರಾಮರ, ಅಕ್ಕಮಹಾದೇವಿ,
ಬಸವಣ್ಣರ ಗದ್ದುಗೆಗಳು ಪುಲಿಗೆರೆಯ ಸೋಮೇಶ್ವರ ದೇವಾಲಯ, ಅಬ್ಬಲೂರಿನ ವೀರಸೋಮೇಶ್ವರ, ಸೊನ್ನಲಿಗೆಯ
ಕಪಿಲಸಿದ್ದ ಮಲ್ಲಿಕಾರ್ಜುನ ದೇವಾಲಯ, ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯ, ಕೂಡಲಸಂಗಮದ ಸಂಗಮೇಶ್ವರ
ದೇವಾಲಯದ ಆವರಣಗಳಲ್ಲಿ ಕಂಡು ಬರುತ್ತಿವೆ. ಶರಣರು ದೇವಾಲಯಗಳನ್ನು ಕಟ್ಟಿಸಿದ ಹಾಗೂ ಆಲಯಗಳಲ್ಲಿ ಲಿಂಗಗಳನ್ನು
ನಿರ್ಮಿಸಿದ ಬಗೆಗೆ ಶಾಸನಗಳಲ್ಲಿ ಹಾಗೂ ಅವರನ್ನು ಕುರಿತಾದ ಕಾವ್ಯ-ಪುರಾಣಗಳಲ್ಲಿ ನಿದರ್ಶನಗಳು ದೊರೆಯುತ್ತವೆ.
ಕ್ರಿ.ಶ.1184ರ ತಾಳಿಕೋಟೆ ಶಾಸನವು ವರದಾನಿ ಗುಡ್ಡವ್ವೆ ಎಂಬ ಶಿವಶರಣೆ ಆಣಂಪುರದಲ್ಲಿ ಬಾಲಬ್ರಹ್ಮೇಶ್ವರ
ಲಿಂಗವನ್ನು ಹಾಗೂ ಭೋಗಣ್ಣರು ಕೆಂಬಾವಿಯಲ್ಲಿ ಭೋಗೇಶ್ವರ ದೇವಾಲಯವನ್ನು ನಿರ್ಮಿಸಿದ್ದ ಬಗೆಗೆ ಪರೋಕ್ಷವಾಗಿ
ಉಲ್ಲೇಖಿಸಿದೆ. ಪುಲಿಗೆರೆಯಲ್ಲಿ ವಚನಕಾರ ಆದಯ್ಯನು ಸೌರಾಷ್ಟ್ರದ ಸೋಮೇಶ್ವರನನ್ನು ತಂದು ಸುರಹೊನ್ನೆ
ಬಸದಿಯಲ್ಲಿ ಪುನರ್ ಪ್ರತಿಷ್ಠಾಪಿಸಿದ ವಿವರ ವೀರಶೈವ ಕಾವ್ಯ-ಪುರಾಣಗಳಲ್ಲಿ ವ್ಯಕ್ತಗೊಂಡಿದೆ. ಏಕಾಂತರಾಮಯ್ಯನು
ಅಬ್ಬಲೂರಿನಲ್ಲಿ ವೀರಸೋಮೇಶ್ವರ ದೇವಾಲಯವನ್ನು ನಿರ್ಮಿಸಿದ್ದರ ಬಗೆಗೆ ಕ್ರಿ.ಶ,1200ರ ಅಬ್ಬಲೂರಿನ
ಶಾಸನ ಹಾಗೂ ಆತನನ್ನು ಕುರಿತ ಕಾವ್ಯ-ಪುರಾಣಗಳಲ್ಲಿ ವ್ಯಕ್ತಗೊಂಡಿದೆ. ಶಿವಯೋಗಿ ಸಿದ್ಧರಾಮರೂ ಸೊನ್ನಲಿಗೆಯಲ್ಲಿ
ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವನ್ನು ಸ್ಥಾಪಿಸಿದ ವಿಷಯ ಪ್ರಸಿದ್ಧವಾಗಿದೆ.
ವಚನಕಾರರ ದೇವಾಲಯಗಳಲ್ಲಿಯ
ಸ್ಥಾವರಲಿಂಗವನ್ನು ತಮ್ಮ ವಚನಾಂಕಿತದಲ್ಲಿಟ್ಟುಕೊಂಡು ಶಿವನನ್ನು ತಮ್ಮ ಇಷ್ಟಲಿಂಗದಲ್ಲಿಯೇ ಕಂಡುಕೊಂಡರು.
ವಚನಕಾರರ ಬಹುಪಾಲು ಅಂಕಿತಗಳೆಲ್ಲವೂ ದೇವಾಲಯಗಳ ಶಿವನಿಗೆ ಅನ್ವಯಿಸಿವೆ. ವೀರಶೈವರು ದೇವಾಲಯಗಳ ಶಿವನನ್ನು
ತಮ್ಮ ಅಂಕಿತವನ್ನಾಗಿಸಿ ಕೊಂಡುದನ್ನು ಮನಗಂಡರೆ ನಿಜಕ್ಕೂ ಅವರು ದೇವಾಲಯಗಳನ್ನು ಬಹಿಷ್ಕರಿಸಿದರು ಎಂಬ
ಪ್ರಶ್ನೆಯನ್ನು ಪುನರ್ ಆಲೋಚನೆಗೆ ಒಳಪಡಿಸಬೇಕಾಗಿದೆ. ವಚನಕಾರರನ್ನು ಕುರಿತು ನಂತರದ ಹರಿಹರ ರಾಘವಾಂಕ
ಮುಂತಾದ ವೀರಶೈವ ಕವಿಗಳು ಕಾವ್ಯ-ಪುರಾಣಗಳನ್ನು ರಚಿಸಲು, ವಸ್ತುವಾಗಿ ಆಕರ್ಷಿಸಿದ್ದು ವಚನಕಾರರ ವಚನಗಳಿಗಿಂತಲೂ
ಅವರು ವೀರಶೈವ ಮತ ಪ್ರಸಾರಕ್ಕಾಗಿ ಕೈಗೊಂಡ ಕಾರ್ಯಗಳೇ ಆಗಿವೇ ಎಂಬುದನ್ನು ಮನಗಾಣಬಹುದಾಗಿದೆ.
ದೇವಾಲಯ ಸಂಸ್ಕೃತಿಯನ್ನು
ಅಲ್ಲಗಳೆದ ಶಿವಶರಣರ ಸಮಕಾಲೀನ ಸಂದರ್ಭದಲ್ಲೇ ನಿರಾತಂಕವಾಗಿ ನಿರಂತರವಾಗಿ ದೇವಾಲಯಗಳು ನಿರ್ಮಾಣಗೊಂಡಿದ್ದು
ಇಂದಿಗೂ ಅವುಗಳ ಪಳಿಯುಳಿಕೆಗಳು ಕಂಡು ಬರುತ್ತಿರುವುದು ಚಾರಿತ್ರಿಕ ನಿದರ್ಶನವಾಗಿದೆ.
‘ಜಂಗಮ’ ಪದ ವೀರಶೈವಕ್ಕೆ
ವಿಶಿಷ್ಟವಾದುದು. ಷಟ್‌ಸ್ಥಲ ಮಾರ್ಗದ ಮುನ್ನಡೆಯಲ್ಲಿ ಇದರ ಮಹತ್ವ ಇದೆ. ಅಷ್ಟಾವರಣದಲ್ಲಿ ಗುರು, ಲಿಂಗಗಳ
ಜೊತೆಯಲ್ಲಿ ಜಂಗಮವು ಪ್ರಾಮುಖ್ಯತೆಯನ್ನು ಪಡೆದಿದೆ. ಜಂಗಮ ಪದದ ಅರ್ಥ ಕಾಲದಿಂದ ಕಾಲಕ್ಕೆ ಮಾರ್ಪಾಡು
ಆಗಿದ್ದರೂ ವಚನ ಸಾಹಿತ್ಯ ಹುಟ್ಟಿದ ಕಾಲದಲ್ಲಿ ಬಳಕೆಯಲ್ಲಿ ಅರ್ಥದ ಹಿನ್ನೆಲೆಯಲ್ಲಿಯೇ ಈ ಪದವನ್ನು
ಗ್ರಹಿಸಬೇಕಾಗುತ್ತದೆ. ಗುರು ಮತ್ತು ಜಂಗಮ ಪದಗಳು ಮೇಲ್ನೋಟಕ್ಕೆ ಸಮನಾರ್ಥಕ ಪದಗಳೆನಿಸಿದ್ದರೂ ವಚನ
ಸಾಹಿತ್ಯದ ಪ್ರಯೋಗಗಳಲ್ಲಿ ಇವೆರಡು ಪದಗಳು ಭಿನ್ನ- ಭಿನ್ನ ಸ್ವರೂಪದವುಗಳಾಗಿವೆ. ಗುರುವಿನ ಮಹತ್ವ
ಎಲ್ಲಾ ಧರ್ಮಗಳಲ್ಲಿ ಕಂಡುಬಂದಿದೆ. ಜಂಗಮ ಎಂಬುದು ವೀರಶೈವ ಧರ್ಮಕ್ಕೆ ವಿಶಿಷ್ಟವಾದ ಪರಿಕಲ್ಪನೆಯಾಗಿದೆ.
ಗುರು ಸಾಧಕನಿಗೆ ಲಿಂಗವನ್ನು ಅನುಗ್ರಹಿಸುವುದರೊಂದಿಗೆ ಅದರ ರಹಸ್ಯವನ್ನು ಹೇಳಿ ಆತನನ್ನು ಷಟ್‌ಸ್ಥಲ
ಮಾರ್ಗದಲ್ಲಿ ತೊಡಗಿಸುತ್ತಾನೆ. ಷಟ್‌ಸ್ಥಲ ಮಾರ್ಗದಲ್ಲಿ ಮುನ್ನಡೆದ ಸಾಧಕನ ಪ್ರಗತಿಯನ್ನು ಜಂಗಮನು
ಅಳೆಯುತ್ತಾನೆ. ಹೀಗಾಗಿ ಗುರು ಶಿಕ್ಷಕನಾದರೆ ಜಂಗಮ ಪರೀಕ್ಷಕನಾಗಿ ಕಂಡು ಬರುತ್ತಾನೆ. ತ್ರಿವಿಧ ದಾಸೋಹ
ಸೂತ್ರವು ಗುರುವಿಗೆ ತನುವನ್ನು, ಲಿಂಗಕ್ಕೆ ಮನವನ್ನು ಅರ್ಪಿಸಿದಂತೆ, ಜಂಗಮಕ್ಕೆ ಧನವನ್ನು ಅರ್ಪಿಸಬೇಕು
ಎಂಬ ನಿಲುವನ್ನು ತಾಳಿದೆ.
ವಚನ ಸಾಹಿತ್ಯದಲ್ಲಿ ‘ಜಂಗಮ’ ಪರಿಕಲ್ಪನೆಯನ್ನು
ಬೇರೆ ಬೇರೆ ಹಂತಗಳಲ್ಲಿ ವ್ಯಾಪಕಾರ್ಥದಲ್ಲಿ ಬಳಸಿದ್ದಾರೆ.
`ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲಾ’ ಈ
ಮಾತುಗಳಲ್ಲಿ ಜಂಗಮ ಪದವು ಪಡೆದುಕೊಂಡಿರುವ ವಿಶಾಲಾರ್ಥವನ್ನು ಗಮನಿಸಬಹುದಾಗಿದೆ. ಬಸವಣ್ಣನವರ ವಚನದಲ್ಲಿ
ಬಂದಿರುವ ಜಂಗಮ ಪದವು ಶಿವಲಿಂಗದ ಸಂಕ್ಷಿಪ್ತ ಆವೃತ್ತಿಯನ್ನು ಇಷ್ಟಲಿಂಗವನ್ನು ಸೂಚಿಸುತ್ತದೆ. ಈ ಇಷ್ಟಲಿಂಗಕ್ಕೆ
ಚಲನೆ ಉಂಟು. ಅದನ್ನು ಕೈಯಲ್ಲೋ ಮೈಮೇಲೆ ಧರಿಸಿಯೋ ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯಬಹುದಾಗಿದೆ.
‘ಜಂಗಮ ಎಂಬುದು ಚಲನಶೀಲತೆಯ ಚೈತನ್ಯದ ಸಂಕೇತವಾಗಿ ವಚನಗಳಲ್ಲಿ ಕಾಣಿಸಿಕೊಂಡಿದೆ. ಗುರು ಮತ್ತು ಜಂಗಮ
ಪದಗಳು ಮೇಲ್ನೋಟಕ್ಕೆ ಸಮನಾರ್ಥಕ ಪದಗಳೆನಿಸಿದರೂ ವಚನ ಸಾಹಿತ್ಯದ ಪ್ರಯೋಗಗಳಲ್ಲಿ ಇವೆರಡು ಪದಗಳು ಭಿನ್ನ-
ಭಿನ್ನ ಸ್ವರೂಪದವುಗಳಾಗಿವೆ. ಚನ್ನಬಸವಣ್ಣ ಒಂದೆಡೆ ಲಿಂಗ ಪೂಜೆ ಮಾಡಲು ಗುರು ಮತ್ತು ಜಂಗಮದ ಪಾದತೀರ್ಥ
ಬಳಸ ಬೇಕೆನ್ನುತ್ತಾನೆ. ಗುರುವಿನ ಗುರು ಜಂಗಮ. ಗುರು ಮತ್ತು ಜಂಗಮದ ಬಗೆಗೆ ವಚನಗಳಲ್ಲಿಯ ಪ್ರಸ್ತಾಪದಲ್ಲಿ
ವಚನಕಾರರು ಜಂಗಮದಲ್ಲಿ ಜಾತಿಯ ಹುಡುಕಬಾರದು ಎಂದಿರುವುದು ಗಮನಿಸ ತಕ್ಕ ಸಂಗತಿಯಾಗಿದೆ. ವೃತ್ತಿಯ ಜಂಗಮನಾಗಲು
ಜಾತಿಯು ಅಡ್ಡಿಯಾಗುತ್ತಿರಲಿಲ್ಲ. ಒಬ್ಬ ವ್ಯಕ್ತಿ ಯಾವುದೇ ಜಾತಿಯಿಂದ ಬಂದು ಹೊಸದಾಗಿ ವೀರಶೈವನಾಗಿರಲಿ
ಅಥವಾ ಹುಟ್ಟು ವೀರಶೈವನಾಗಿರಲಿ ಅವನು ಜಂಗಮನಾಗಬಹುದಿತ್ತು. ಆದಾಗ್ಯೂ ಜಂಗಮ ವಿಷಯದಲ್ಲಿ ಭೇದಭಾವದ
ಬಗೆಗೆ ಜನಸಾಮಾನ್ಯರ ನಡೆವಳಿಕೆಗಳಲ್ಲಿ ಕಂಡು ಬರುತ್ತಿದ್ದರಿಂದಲೇ ಏನೋ `ಜಂಗಮರಲ್ಲಿ ಜಾತಿಯ ಹುಡುಕಬೇಡಿ’ ಎಂಬ
ಮಾತು ಕಾಣಿಸಿ ಕೊಂಡಿದೆ ಎಂದೆನಿಸುತ್ತದೆ. ಗುರುವನ್ನು ಕುರಿತು ಈ ತೆರನಾದ ಅನಿಸಿಕೆ ವಚನಕಾರರಲ್ಲಿ
ವ್ಯಕ್ತವಾಗಿಲ್ಲ.ವ್ಯಕ್ತಿಯೊಬ್ಬ ಜಂಗಮ ಆಗುವುದರ ಬಗೆಗೆ ಚನ್ನ ಬಸವಣ್ಣನ ವಚನದಲ್ಲಿ ಇಂತಿದೆ.
ಚನ್ನ ಬಸವಣ್ಣನವರ ವಚನದಲ್ಲಿಯ,
ಶ್ರೀಗುರು ಶಿಷ್ಯನ ಭವಿಪೂರ್ವಾಶ್ರಯವ
ಕಳೆದು ಭಕ್ತನ ಮಾಡಿದ ಬಳಿಕ
ಆ ಭಕ್ತ ಹೋಗಿ ಜಂಗಮವಾಗಿ ಗುರುವಿನ
ಮಠಕ್ಕೆ ಬಂದಡೆ
ಆ ಜಂಗಮವೆನ್ನ ಶಿಷ್ಯನೆಂದು ಗುರುವಿನ
ಮನದಲ್ಲಿ ಹೊಳೆದಡೆ
ಪಂಚಮಹಾಪಾತಕ
ಈ ಜಂಗಮಕ್ಕೆ ಎನ್ನ ಗುರುವೆಂದು ಮನದಲ್ಲಿ
ಭಯಭೀತಿ ಹೊಳೆದಡೆ
ರೌರವ ನರಕ
ಇಂತೀ ಭೇದವ ಕೂಡಲ ಚನ್ನಸಂಗಯ್ಯನಲ್ಲಿ
ನಿಮ್ಮ ಶರಣರೆ ಬಲ್ಲರು ಎಂಬ ವಿವರದಲ್ಲಿ
ಈ ವಚನದಲ್ಲಿ ಭವಿಯಾದವನು ಗುರುವಿನಿಂದ ಲಿಂಗ ಪಡೆದು ತನ್ನ ಪೂರ್ವಶ್ರಮವ ಕಳೆದು ಭಕ್ತನಾದ ಮೇಲೆ ಆ
ಭಕ್ತನೇ ಹೋಗಿ ಅಥವಾ ತಿರುಗಾಡಿ ಜಂಗಮವಾಗಿ ಹಿಂದಕ್ಕೆ ತನ್ನ ಗುರುವಿನ ಮನೆಗೆ ಬಂದಾಗ ಜಂಗಮನು ತನ್ನ
ಶಿಷ್ಯನೆಂದು ಗುರುವು ಭಾವಿಸಬಾರದೆಂದೂ ಜಂಗಮನಿಗೆ ಗುರುವೆಂದು ಮನದಲ್ಲಿ ಭಯಭೀತಿ ಬರಬಾರದೆಂದೂ ವಿವರಣೆ
ಇದೆ. ಈ ವಚನದಲ್ಲಿ ಗುರುವಿಗಿಂತ ಜಂಗಮ ಶ್ರೇಷ್ಠ ಎಂಬ ಭಾವನೆ ಇದೆ. ಭವಿಯಾಗಿ ಹುಟ್ಟಿದವನು ಗುರುವಿನ
ದೀಕ್ಷೆಯಿಂದ ವೀರಶೈವನಾಗಿ ಮುಂದೆ ಜಂಗಮನೂ ಆಗಬಹುದೆಂಬ ವಿಷಯವನ್ನು ಚನ್ನ ಬಸವಣ್ಣನವರ ಈ ವಚನ ಧ್ವನಿಸುತ್ತದೆ.
ಜಂಗಮ ಪದ ವ್ಯಕ್ತಿಸೂಚಿಯಾಗಿ:
ಜಂಗಮದ ಲಕ್ಷಣ ತಿರುಗಾಟ. ನಿಂತ ಜಾಗದಲ್ಲಿ
ನಿಲ್ಲದೆ ನಿರಂತರವಾಗಿ ಚಲಿಸುತ್ತಿದ್ದವನು. `ಜ್ಞಾನಕ್ಕಾಗಿ, ಬೆಳಕಿಗಾಗಿ, ಆತ್ಮೋದ್ಧಾರಕ್ಕೆ ಎಲ್ಲವನ್ನು
ತ್ಯಜಿಸಿ ಬಡತನವನ್ನು ಸ್ವಪೇರಣೆಯಿಂದ ಅರಿಸಿಕೊಂಡು ನಿತ್ಯ ಸಂಚಾರಿಯಾಗಿದ್ದ ವ್ಯಕ್ತಿಯೇ ಜಂಗಮ. ಈತ
ಅನುಭಾವದ ಆತ್ಮಜ್ಞಾನ ಕ್ಷೇತ್ರಧಾರಿ. ಆತ್ಮಜ್ಞಾನಕ್ಕಾಗಿ ಹಂಬಲಿಸುವವನಾದ್ದರಿಂದ ಜಂಗಮನಲ್ಲಿ `ತಿರುಗಾಟ’ ಪ್ರಮುಖ
ಅಂಶವಾಗಿತ್ತು.
ವಚನಕಾರರಲ್ಲಿ ಅಲ್ಲಮ ಪ್ರಭುವು
ಜಂಗಮ ತತ್ವಕ್ಕೆ ಅತ್ಯುತ್ತಮ ನಿದರ್ಶನವಾಗಿ ಕಂಡು ಬರುತ್ತಾನೆ. ಅಲ್ಲಮನು ಹುಟ್ಟಿನಿಂದ ಶೂದ್ರನಾಗಿದ್ದು ಪತ್ನಿ ಕಾಮಲತೆಯನ್ನು
ಕಳೆದುಕೊಂಡು ಅಪಾರ ದುಃಖದ ಸ್ಥಿಯಲ್ಲಿರುವಾಗ ದೊರಕಿದ
ಇಷ್ಟಲಿಂಗವನ್ನು ಸ್ವೀಕರಿಸಿ ದೇಶದಾದ್ಯಂತ ತಿರುಗಾಡಿ ಸಾಧನೆ ಗೈದು ಬೆಳಕನ್ನು ಕಂಡವನು ಅಲ್ಲಮನು
ತನ್ನ ನಿರಂತರ ಅಲೆದಾಟ ಸಮಯದಲ್ಲಿ ಭೇಟಿಯಾದ ಹಲವು
ಸಾಧಕರನ್ನು ಕೈಹಿಡಿದು ಉದ್ಧರಿಸುತ್ತಾನೆ. ಜ್ಞಾನ ಬೆಳಕು ಅನುಭಾವದ ಮಾರ್ಗವನ್ನು ತೋರುತ್ತಾನೆ. ಅಲ್ಲಮನು
ಹುಟ್ಟಿನಿಂದ ಜಂಗಮನಲ್ಲ. ಸಾಧನೆಯಿಂದ ಜಂಗಮ. ವೀರಶೈವ ಪರಂಪರೆಯಲ್ಲಿ ಗುರುವಿನ ಮೇಲ್ಮೆಯನ್ನು ಒಪ್ಪಿ
ಕೊಂಡಿದ್ದರೂ ಗುರುವಿಗಿಂತ `ಜಂಗಮ’ ದೊಡ್ಡವನು ಎನ್ನುತ್ತದೆ.
ಆದರೆ ಭಾರತೀಯ ಪರಂಪರೆಯಲ್ಲಿ ಗುರುವಿಗಿಂತ
ದೊಡ್ಡವರು ಯಾರೂ ಇಲ್ಲ. ಭಾರತೀಯ ಧರ್ಮ ಪರಂಪರೆಯಲ್ಲಿ ಪೌರೋಹಿತ್ಯವು ಪ್ರಮುಖವಾದುದು. ಇಲ್ಲಿ ಪೌರೋಹಿತ್ಯವು
ಒಂದು ನಿರ್ದಿಷ್ಟ ಜಾತಿ ಅಥವಾ ಪಂಗಡಕ್ಕೆ ಮೀಸಲಾಗಿರುತ್ತದೆ. ಅದು ಅನಿವಾರ್ಯವೂ ಹೌದು. ಅಂತಹ ಸಂದರ್ಭದಲ್ಲಿ
ಕೆಳಜಾತಿಯಲ್ಲಿ ಹುಟ್ಟಿದ ವ್ಯಕ್ತಿ ಪುರೋಹಿತ ವರ್ಗದ ವ್ಯಕ್ತಿಗಿಂತ ಶ್ರೇಷ್ಠ ಎನಿಸಿ ಕೊಳ್ಳಲು ಸಾಧ್ಯವೇ
ಇಲ್ಲದಂತಹ ಪರಿಸ್ಥಿತಿ ಉದ್ಭವಿಸುತ್ತದೆ. ಆದರೆ ವಚನಕಾರರ ಕಾಲದಲ್ಲಿ ರೂಪಗೊಂಡ ಜಂಗಮದ ಪರಿಕಲ್ಪನೆಯಲ್ಲಿ
ಕ್ರಾಂತಿಕಾರಕ ಲಕ್ಷಣವನ್ನು ಗುರುತಿಸಬಹುದು.
ಪೌರೋಹಿತ್ಯದ ಗುರುವೇ ದೊಡ್ಡವನಾದರೂ
ಆತನೂ ಸೇರಿದಂತೆ ಉಳಿದ ಯಾವ ವರ್ಗದವರೇ ಆಗಲೀ, ಜಂಗಮನಾದರೆ ಆತ ಗುರುವಿಗಿಂತ ಶ್ರೇಷ್ಠ ಎನ್ನಿಸಿ ಕೊಳ್ಳುತ್ತಾನೆ.
ಸಾಮಾಜಿಕವಾಗಲೀ, ಧಾರ್ಮಿಕವಾಗಿಯಾಗಲೀ ಜಂಗಮ ಗುರುವಿಗಿಂತ ಮೇಲೇರಬಲ್ಲ. ಗುರು ಮತಧರ್ಮವನ್ನು ಬೋಧಿಸುವವನು
ಹಾಗೂ ಧರ್ಮದ ಆಚರಣೆಯ ಭಾಗದ ಸಂರಕ್ಷಕನಾಗಿ ಕಂಡುಬಂದರೆ,
ಜಂಗಮನ ಕ್ಷೇತ್ರವು ಮತ ಧರ್ಮಕ್ಕಿಂತ ಆಧ್ಯಾತ್ಮ ಕ್ಷೇತ್ರ. ಜಗತ್ತಿನಲ್ಲಿ ಸಂಚರಿಸಿ ಜನರ ನೋವನ್ನು
ಹಂಚಿಕೊಳ್ಳುವವನು. ಆ ಮೂಲಕವೇ ಬೆಳೆಯುವನು. ವಚನಕಾರರು ` ಜಂಗಮ’ ಪರಿಕಲ್ಪನೆಯ
ಮೂಲಕ ಮತಾಚಾರಿಗಳಿಗಿಂತ ಆಧ್ಯಾತ್ಮಕ್ಕೆ, ದೊಡ್ಡ ಬದುಕಿಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ.
ವಚನ ಚಳುವಳಿ ವ್ಯಕ್ತಿಯ ಪರಿಮಿತಿಯನ್ನು
ಮೀರಿದ ಸಾಮಾಜಿಕ ಶಕ್ತಿಯಾಗಿ ಜಂಗಮವನ್ನು ಕಂಡಿದ್ದರೂ ಜಂಗಮವನ್ನು ವ್ಯಕ್ತಿಗತವಾಗಿಯೂ ನೋಡಲಾಗಿದೆ.
ಜಂಗಮವನ್ನು ವ್ಯಕ್ತಿಯಾಗಿ ನೋಡುವಾಗ ಸಾಧನೆಯ ತುತ್ತ ತುದಿಯನ್ನೇರಿದ ಅನುಭಾವಿಯ ಹಂತದ ವ್ಯಕ್ತಿಯಾಗಿ
ಜಂಗಮ ಕಂಡು ಬರುತ್ತಾನೆ. ಲಿಂಗಾಂಗ ಸಾಮರಸ್ಯವನ್ನು ಪಡೆದವನಾಗಿದ್ದಾನೆ. ಅಲ್ಲಮಪ್ರಭುವನ್ನು ಈ ನಿಟ್ಟಿನಲ್ಲಿ
ಹೆಸರಿಸಬಹುದು. ಆತನ ನಡೆಯಲ್ಲ ಪಾವನ. ನುಡಿಯೆಲ್ಲ ಲಿಂಗ. ಆತ ನಡೆದು ನಿರ್ಗಮನಿ, ನುಡಿದು ನಿಶ್ಯಬ್ದ,
ಭೌತಿಕ ಸ್ಥಾವರವನ್ನು ಮೀರಿ ಆಂತರಿಕವಾಗಿ ಜಗತ್ತನ್ನೇ ವ್ಯಾಪಿಸಿರುವ ಜಂಗಮನಾತ. ಅಂತಹ ನಿಲುವನ್ನು
ಕುರಿತು ಬಸವಣ್ಣನ ವಚನದಲ್ಲಿ ವ್ಯಕ್ತಗೊಂಡಿರುವ
ʻಸ್ಥಾವರ ಭಕ್ತರಿಗೆ ಸೀಮೆಯಲ್ಲದೆ
ಘನಲಿಂಗ ಜಂಗಮಕ್ಕೆ ಸೀಮೆಯೆಲ್ಲಿಯದುʼ
ಎಂಬ ಮಾತು ಅಲ್ಲಮನಂತಹ ಜಂಗಮನಿಗೆ ಅನ್ವಯಿಸುತ್ತದೆ. ಅಲ್ಲಮನಂತಹ ಜಂಗಮರು ತಾವೂ ಸಾಧಕರಾಗಿದ್ದು,
ಆ ಮಾರ್ಗದಲ್ಲಿ ಮುಂದುವರೆಯುತ್ತಾ ಸಾಮಾಜಿಕ ಹಾಗೂ ಧಾರ್ಮಿಕ ವ್ಯವಸ್ಥೆಯ ಒಂದು ಭಾಗವಾಗಿ ಕರ್ತವ್ಯ
ನಿರ್ವಹಿಸಿದ್ದಾರೆ. ವಚನ ಚಳುವಳಿಯಲ್ಲಿ ಜಂಗಮವು ವ್ಯಕ್ತಿಗತವಾಗಿಯೂ ಗೋಚರವಾಗಿತ್ತು. ಬಸವಣ್ಣನವರು
ವ್ಯಕ್ತಿಸಾಧನೆ ಹಾಗೂ ಸಮಷ್ಟಿ ಜಾಗೃತಿಯಲ್ಲಿ ಜಂಗಮರ ಮಹತ್ವವನ್ನು ಮನಗಂಡಿದ್ದರು. ಜಂಗಮವೇ ಲಿಂಗ,
ಜಂಗಮವೇ ಪ್ರಾಣ, ಧಾರ್ಮಿಕ ಸಾಧನೆಯ ಕೇಂದ್ರ ಶಕ್ತಿ ಜಂಗಮ ಎಂದು ಹೇಳುತ್ತಾ ಜಂಗಮಕ್ಕೆ ಹೆಚ್ಚಿನ ಮಹತ್ವವನ್ನು
ಕೊಟ್ಟರು. ಹೀಗಾಗಿ ಆ ಕಾಲದ ಧಾರ್ಮಿಕ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಜಂಗಮ ಸಾರ್ವಭೌಮನಾದ. ತಾವು
ಅನುಭವಿಸುವುದನ್ನು, ಪಡೆಯುವುದನ್ನು ಮೊದಲು ಜಂಗಮಕ್ಕೆ ಅರ್ಪಿಸಿ ಪ್ರಸಾದ ರೂಪವಾಗಿ ಅದನ್ನು ಪಡೆಯಬೇಕು
ಎಂಬ ಭಾವನೆ ಉಂಟಾಗುವಷ್ಟರ ಮಟ್ಟಿಗೆ ಅದರ ಪ್ರಭಾವವಾದುದನ್ನು ಶರಣರ ಕೆಲವು ವಚನಗಳು ಸ್ಥಿರೀಕರಿಸುತ್ತವೆ.
೧೨ನೇ ಶತಮಾನದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ
ಎರಡು ಸ್ತರಗಳಲ್ಲಿ ಜಂಗಮತತ್ವ ಅತ್ಯಂತ ಮಹತ್ವ ಪಡೆದಿತ್ತು. ಚಲನಶೀಲ ಪ್ರತೀಕವಾದ ಜಂಗಮ ತತ್ವಕ್ಕೆ
ಶರಣರು ವಸ್ತು, ವ್ಯಕ್ತಿ, ತತ್ವ ಇತ್ಯಾದಿ ರೀತಿಯಲ್ಲಿ ವಿವರಿಸಿದ್ದಾರೆ. ತನ್ನನ್ನು ತಾನೂ ಕ್ರಿಯಾತ್ಮಕವಾಗಿ
ತೊಡಗಿಸಿಕೊಂಡ ವ್ಯಕ್ತಿ ಜಂಗಮರ ವ್ಯಕ್ತಿ ರೂಪನಾಗುತ್ತಾನೆ. ಆಚಾರವೇ ಜಂಗಮ, ಕೋಪ ತಾಪವ ಬಿಟ್ಟು, ಭ್ರಾಂತಿ
ಭ್ರಮೆಯಂ ಬಿಟ್ಟು ಜಂಗಮನಾಗಬೇಕು ಇತ್ಯಾದಿ ವಚನೋಕ್ತಿಗಳಲ್ಲಿ ಜಂಗಮದ ವಿಶ್ಲೇಷಣೆ ಸ್ಪಷ್ಟವಾಗಿದೆ.
ಪ್ರಗತಿಪರ ಸಿದ್ಧಾಂತದ ಪ್ರತೀಕವಾದ ಜಂಗಮನಿಗೆ ವಚನಕಾರರು ಸಮಾಜದಲ್ಲಿ ಅತ್ಯಂತ ಮಹತ್ವದ ಸ್ಥಾನಕೊಟ್ಟಿದ್ದರು.
ಜಂಗಮನಿಗೆ ವಿಶಿಷ್ಟವಾದ ಗುಣಲಕ್ಷಣಗಳಿದ್ದವು ಎಂಬುದನ್ನು ವಚನಗಳು ಸಾಬೀತು ಪಡಿಸುತ್ತವೆ.
ʻಜಂಗಮಕ್ಕೆ ಮಾತಾಪಿತರಿಲ್ಲ
ಜಂಗಮಕ್ಕೆ ಜಾತಿ ಬಂಧುಗಳಿಲ್ಲ
ಜಂಗಮಕ್ಕೆ ನಾಮರೂಪಗಳಿಲ್ಲ
ಜಂಗಮಕ್ಕೆ ಸೀಮೆ ಸಂಗಗಳಿಲ್ಲ
ಜಂಗಮಕ್ಕೆ ಕುಲಗೋತ್ರಗಳಿಲ್ಲ ನೋಡಾ ಅಖಂಡೇಶ್ವರಾʼ(ಸಂಕೀರ್ಣ
ವಚನ ಸಂಪುಟ-೯, ವ.ಸಂ.೫೩೪)
ಇಂತಹ ಲಕ್ಷಣಗಳುಳ್ಳ ಜಂಗಮ ಸದಾ ಸಂಚಾರಿಯಾಗಿದ್ದು ಧರ್ಮ ಪ್ರಚಾರಕ, ಧರ್ಮ ಪರೀಕ್ಷನಾಗಿ
ತಪ್ಪಿದವರಿಗೆ ಸರಿ ದಾರಿ ತೋರಿಸುವ ಮಾರ್ಗದರ್ಶಕನಾಗಿ ಕಂಡು ಬರುತ್ತಾನೆ.
ಹನ್ನೆರಡನೇ ಶತಮಾನದ ತರುವಾಯ ಧಾರ್ಮಿಕ
ವ್ಯವಸ್ಥೆಯಲ್ಲಿ ಮಠಗಳ ಪ್ರಾಬಲ್ಯ ಜಾಸ್ತಿಯಾದಾಗ ಮಠಗಳ ಒಡೆತನದಲ್ಲಿ ಜಂಗಮರು ಭಾಗಿಯಾದರು. ಜೊತೆಗೆ
ಗುರುಗಳೂ ಮಠಗಳ ಅಸ್ತಿತ್ವದಲ್ಲಿ ಒಡೆತನವನ್ನು ಪಡೆದುಕೊಂಡರು. ಇವೆರಡು ಮಠಗಳ ನಡುವೆ ಪ್ರತ್ಯೇಕತೆ
ಹಾಗೂ ಸ್ಪರ್ಧೆ ಉಂಟಾದವು. ಜಂಗಮ ಮಠಗಳು ಧಾರ್ಮಿಕ ಚಲನಶೀಲತೆಯ ಒಂದು ಭಾಗವಾಗಿ ತಮ್ಮ ಕರ್ತವ್ಯವನ್ನು
ನಿರ್ವಹಿಸದೆ ತಮ್ಮ ಸುತ್ತ ಪರಿಮಿತಿಯ ಗೋಡೆಯನ್ನು ನಿರ್ಮಿಸಿಕೊಂಡು ಸ್ಥಾವರರೂಪ ಪಡೆದವು. ಈ ರೀತಿಯಾಗಿ
ನಂತರದ ಕಾಲದಲ್ಲಿ ‘ಜಂಗಮ’ ಒಂದು ಜಾತಿ ಸೂಚಕವಾಗಿ ರೂಪುಗೊಳ್ಳಲು ಪ್ರಾರಂಭಿಸಿತು.ಜಂಗಮರು
ಅನುವಂಶೀಯವಾಗಿ ತಮ್ಮ ಹಿರಿಮೆಯನ್ನು ಸ್ಥಾಪಿಸತೊಡಗಿದರು. ‘ಜಂಗಮ’ಎನ್ನುವ ಪರಿಕಲ್ಪನೆ ಬುದ್ಧಿವಂತ
ಜನರ ಕೈಯಲ್ಲಿ ಸಿಕ್ಕು ‘ಜಂಗಮ’ ಹುಟ್ಟಿನಿಂದಲೇ ಬರುವ ಜಾತಿಯಾಗುವುದಕ್ಕೆ ಕಾರಣವಾಯಿತು. ಹೀಗಾಗಿ
‘ಜಂಗಮ’
ಒಂದು ವರ್ಗವಾಯಿತು. ಅದನ್ನೆ ತನ್ನ ಹಕ್ಕಾಗಿ ಸ್ಥಾಪಿಸಿಕೊಂಡು ವೀರಶೈವಧರ್ಮದಲ್ಲಿ ಪುರೋಹಿತಶಾಹಿಗೆ
ಕಾರಣವಾಯಿತು.
ಜಂಗಮ ಶರಣರ ಆಕಾಂಕ್ಷೆಗನುಗುಣವಾಗಿ
ಪ್ರಚಾರಕನಾಗಿ, ಅವರ ಜ್ಞಾನಕಾರ್ಯಗಳಿಗೆ ಕ್ರಿಯೆ ದೀಕ್ಷೆ ಕೊಡುವನಾಗಿ, ಜನರನ್ನು ಜಾಗೃತಗೊಳಿಸುವನಾದ್ದರಿಂದ
ಸಹಜವಾಗಿ ಅಪಾರವಾದ ಗೌರವವನ್ನು ಪಡೆದವನಾಗಿದ್ದ. ಸಮಾಜ ಕೊಡುತ್ತಿದ್ದ ಅಪಾರ ಗೌರವ ಹಾಗೂ ಜಂಗಮತ್ವ
ಆತನಿಗೆ ಪೂರಕವಾಗಿ ಇದ್ದಾಗ ಅನಿವಾರ್ಯವಾಗಿ ಅವನತಿಯತ್ತ ಸಾಗಿತು. ಜಂಗಮರು ಜಂಗಮವನ್ನು ಉಪಜೀವನದ ವೃತ್ತಿಯನ್ನಾಗಿಸಿಕೊಂಡರು.
ವಚನ ಚಳುವಳಿಯು ಇಷ್ಟಲಿಂಗಕ್ಕೆ ಒತ್ತು ಕೊಡುವುದರ ಮೂಲಕ ಪುರೋಹಿತಶಾಹಿಗಳ ಮೂಲಕ ದೇವಾಲಯಗಳೆಂಬ ಸ್ಥಾವರಗಳು
ಜನತೆಯ ಶೋಷಣೆಯ ಕೇಂದ್ರಗಳಾಗಿರುವುದನ್ನು ತಪ್ಪಿಸಲು ಪ್ರಯತ್ನಿಸಿತು. ಪುರೋಹಿತಶಾಹಿಯನ್ನು ಹೊಡೆದು
ಹಾಕುವ ಸಲುವಾಗಿ ಜಂಗಮತ್ವಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕಲ್ಪಿಸಿತು. ಧರ್ಮ ಮತ್ತು ಸಮಾಜ ಎರಡರ ಸ್ವಾಸ್ಥತೆಯನ್ನು
ಕಾಯ್ದುಕೊಳ್ಳಲು, ಸಮಾಜ-ಧರ್ಮಗಳ ರಕ್ಷಣೆಯನ್ನೇ ಪೂರ್ಣಾವಧಿ ಕಾಯಕವನ್ನಾಗಿ ಜಂಗಮರು ಸ್ವೀಕರಿಸಿ ಸಮಾಜದ
ಗೌರವಕ್ಕೆ, ಪ್ರತಿಷ್ಠೆಗೆ ಪಾತ್ರರಾದರೂ ನಂತರದ ಕಾಲದಲ್ಲಿ ಪ್ರಲೋಬನೆಗಳು ಹಾಗೂ ಸ್ವಂತ ಹಿತಾಸಕ್ತಿಗನುಗುಣವಾಗಿ
ತಮ್ಮ ಜವಾಬ್ದಾರಿಯಿಂದ ವಿಮುಖರಾದರು.
ವಚನಕಾರರ ಕಾಲದಲ್ಲಿ ಜಂಗಮರಿಗೆ ಹೆಚ್ಚಿನ
ಪ್ರಾಧಾನ್ಯತೆಯನ್ನು ನೀಡಿದ್ದರೂ ನಂತರದಲ್ಲಿ ಕಾಲ ಬದಲಾದಂತೆ ಜಂಗಮರ ಸ್ಥಿತಿಯೂ ಬದಲಾಯಿತು. ವಂಶಪಾರಂಪರ್ಯವಾಗಿ
ನಡೆಸುತ್ತ ಬಂದ ಧರ್ಮಕಾರ್ಯ ಭಿಕ್ಷಾಟನದಿಂದ ಸಾಧ್ಯವಾಗದೆ ಬದುಕು ದುರ್ಬರವಾಗಿ ಉದ್ಯೋಗ ಕಾಯಕ ಹಿಡಿಯಬೇಕಾಯಿತು.
ಪರಿಣಾಮವಾಗಿ ಸಂಸಾರಿಗಳಾಗಬೇಕಾಯಿತು. ಹೀಗಾಗಿ ನಂತರದ ಕಾಲದಲ್ಲಿ ಜಾತಿ ಇಲ್ಲದೆ ಜಂಗಮರಾಗಿದ್ದ ಅವರು
ಒಂದು ಜಾತಿಯಂತಾಗಿ ವೀರಶೈವ ಸಮಾಜದಲ್ಲಿ ಒಂದು ಅಂಗವಾಗಿ ಪರಿಣಮಿಸಿದರು.
೧೨ನೇ ಶತಮಾನದ ನಂತರದ ಕಾಲದಲ್ಲಿ ಜಂಗಮ
ಜಾತಿಸೂಚಕವಾಗಿಯೇ ಮುಂದುವರೆದುಕೊಂಡು ಬಂದಿದೆ. ಯಾವ ವಚನ ಚಳುವಳಿ ಜಾತಿ ರಹಿತ ಸಮಾನತೆಯ ಸಮಾಜ ನಿರ್ಮಿಸಲು
ಪ್ರಯತ್ನಿಸಿದರೋ ಅವರ ಉದ್ದೇಶಕ್ಕೆ ವಿರುದ್ಧ ಎಂಬಂತೆ ಜಂಗಮರೇ ಒಂದು ಜಾತಿಯಾಗಿ ಪರಿಣಮಿಸಿದ್ದಾರೆ.
ಹೀಗೆ ವ್ಯಕ್ತಿ ರೂಪದ ಜಂಗಮ ನಿರಂತರ ಸ್ಥಾವರ ಗುಣಗಳ ಆಗರವೇ ಆಗುತ್ತಾ ಸಾಗಿದ್ದಾನೆ. ಜಂಗಮವು ತನ್ನ
ನಡತೆ, ಮನೋಧರ್ಮಗಳಿಂದಾಗಿ ಯಾವನೇ ವ್ಯಕ್ತಿ ಪಡೆಯುತ್ತಿದ್ದ ಸ್ಥಿತಿಯನ್ನು ಹೇಳುತ್ತಿದ್ದುದು ಕ್ರಮೇಣ
ಜಾತಿವಾಚಕವಾಯಿತು.ಹನ್ನೆರಡನೆಯ ಶತಮಾನದಲ್ಲಿ ಅರ್ಥವಂತಿಕೆಯನ್ನು ಪಡೆದು ಕೊಂಡಿದ್ದ ಜಂಗಮದ ಪರಿಕಲ್ಪನೆ
ನಂತರದ ವೀರಶೈವ ಧರ್ಮದ ಇತಿಹಾಸದಲ್ಲಿ ಅದರಲ್ಲಿಯೂ ಆಧುನಿಕ ಕಾಲದಲ್ಲಿ ಜಾತಿಸೂಚಕವಾಗಿ ಬಳಕೆಯಾಗುತ್ತಿದೆ.
ಆದರೆ ಇಂದು ನಾವು ವಚನಕಾಲದ ಜಂಗಮರನ್ನೂ ಇಂದಿನ ಕಾಲದ ಜಂಗಮರನ್ನು ಒಂದೇ ಎಂದು ಭಾವಿಸಿ ನೋಡುತ್ತಿರುವುದು
ಜಂಗಮತ್ವದ ಬಗೆಗಿನ ಜಟಿಲತೆಗೆ ಕಾರಣವಾಗಿದೆ. ಆಧುನಿಕ ಕಾಲದ ಜಂಗಮತ್ವ ಹುಟ್ಟಿನಿಂದ ಬರತಕ್ಕದ್ದು ಎಂಬ
ಸಂಕುಚಿತಾರ್ಥಕ್ಕೆ ಸೀಮಿತಗೊಂಡಿದೆ. ವಚನಚಳುವಳಿಯ ಕಾಲದಲ್ಲಿ ಗುರು,ಲಿಂಗ,ಜಂಗಮ ಈ ಮೂರು ಕಲ್ಪನೆಗಳು
ಪ್ರತ್ಯೇಕವಾಗಿ ಬಳಕೆಯಾಗಿರುವುದು ಎಲ್ಲರಿಗೂ ತಿಳಿದಿರ ತಕ್ಕ ಸಂಗತಿಯೇ ಆಗಿದೆ. ಅಂದಿನ ಜಂಗಮರು ಇಂದಿನ
ಜಂಗಮರಿಗಿಂತ ಬೇರೆಯೆಂಬುದು ಸ್ಪಷ್ಟವಾಗಿದೆ. ಆದರೆ
ಹನ್ನೆರಡನೇ ಶತಮಾನದ ಬಳಿಕ ವೀರಶೈವ ಧರ್ಮದ ಇತಿಹಾಸದ ಘಟ್ಟದಲ್ಲಿ ಒಂದೇ ಆಗಿಬಿಟ್ಟವು. ಲಿಂಗದೀಕ್ಷೆಯನ್ನು
ಮಾಡುವ ಗುರುವರ್ಗವು ಇಂದಿನ ಜಂಗಮತ್ವನ್ನು ಪ್ರತಿನಿಧಿಸುತ್ತದೆ. ಬಹುಮಟ್ಟಿಗೆ ವಚನ ಸಾಹಿತ್ಯದಲ್ಲಿ
ಬಳಕೆಯಾಗಿರುವ ಜಂಗಮ ಪದವು ನಪುಂಸಕದಲ್ಲಿದೆ. ಪುರುಷಲಿಂಗದಲ್ಲಿಲ್ಲ. ಹನ್ನೆರಡನೇ ಶತಮಾನದಲ್ಲಿ ಜಂಗಮ
ಪರಿಕಲ್ಪನೆ ಮನುಷ್ಯ ಪ್ರತೀಕವಾಗಿರದೆ ಲಿಂಗದ ನಡೆದಾಡುವ ರೂಪವಾಗಿತ್ತು. ವಚನ ಸಾಹಿತ್ಯದಲ್ಲಿ ಗುರುವಿಗಿಂತ
ಜಂಗಮ ದೊಡ್ಡವನು ಎನ್ನುವ ಜಂಗಮದ ಪರಿಕಲ್ಪನೆಯು ಕ್ರಾಂತಿಕಾರಕ ಲಕ್ಷಣವಾಗಿದೆ. ಲಿಂಗವು ಸ್ಥಾವರ, ಜಂಗಮವೆಂಬ
ಎರಡು ವಿಧಗಳ ಬಗೆಗೆ ವಚನ ಸಾಹಿತ್ಯದಲ್ಲಿ ಅಸಂಖ್ಯಾತ ನಿದರ್ಶನಗಳು ದೊರೆಯುತ್ತವೆ.
ಶರಣ ಚಳುವಳಿಯು
ಭಾರತದ ಸಾಮಾಜಿಕ ಚರಿತ್ರೆಯ ಇತಿಹಾಸದಲ್ಲಿ ಅನೇಕ ಮೊದಲುಗಳನ್ನು ಪಡೆದಿದೆ. ಅವುಗಳನ್ನು ಎಂ.ಚಿದಾನಂದ
ಮೂರ್ತಿ ಅವರು ಈ ಕೆಳಕಂಡ ರೀತಿಯಾಗಿ ಪಟ್ಟಿ ಮಾಡಿದ್ದಾರೆ.(ಎಂ.ಚಿದಾನಂದ ಮೂರ್ತಿ, ಚಿದಾನಂದ ಸಮಗ್ರ
ಸಂಪುಟ-೪, ಪು. ೬೯೪-೬೯೭)
1. ಈ ಪ್ರಮಾಣದ, ಸರಿಯಾಗಿ ಹೇಳುವುದಾದರೆ ನಿಜವಾದ ಅರ್ಥದ ಪೂರ್ಣ ಪ್ರಮಾಣದ
ಸಾಮಾಜಿಕ ಚಳುವಳಿ ನಡೆದುದು ಅದೇ ಮೊದಲು.
2. ಸಂಸ್ಕೃತವೂ ಸೇರಿದಂತೆ ಯಾವುದೇ ಭಾರತೀಯ ಭಾಷೆಯಲ್ಲಿ ಅಷ್ಟು ಸಂಖ್ಯೆಯ
ಕೃತಿಕಾರರು ಒಂದು ಸಮಾನ ವೇದಿಕೆಯಡಿ ಕೃತಿರಚನೆ ಮಾಡಿರುವುದು ಅದೇ ಮೊದಲು.
3. ಬ್ರಾಹ್ಮಣನೇತರ ಮಹಿಳೆಯರು ಕೃತಿ ರಚನೆಗೆ ಕೈ ಹಾಕಿದ್ದು ಅದೇ ಮೊದಲು.
4. ಇಡೀ ಭಾರತದ ಮೊತ್ತ ಮೊದಲ ದಲಿತ ವರ್ಗದ ಅತಿ ಶ್ರೇಷ್ಠ ಸಂಸ್ಕೃತ
ವಿದ್ವಾಂಸನಾದ ಉರಿಲಿಂಗ ಪೆದ್ದಿ ಆ ಚಳುವಳಿಗೆ ಸೇರಿದವನು (ಅವನ ರಚನೆಗಳು ಕನ್ನಡದಲ್ಲಿವೆ. ತನ್ನ ನಿರೂಪಣೆಗೆ
ಪ್ರಮಾಣವಾಗಿ ಅವನು ಯಥೇಚ್ಛವಾಗಿ ಸಂಸ್ಕೃತ ಶ್ಲೋಕಗಳನ್ನು ಅವುಗಳ ಆಕರ ಸಮೇತ ಕನ್ನಡ ವಚನಗಳ ಮಧ್ಯೆ
ಉಲ್ಲೇಖಿಸಿದ್ದಾನೆ)
5. ಇಡೀ ಭಾರತದ ಮೊತ್ತ ಮೊದಲ ದಲಿತ ವರ್ಗದ, ಅಸ್ಪೃಶ್ಯರೆಂದು ಭಾವಿಸಿದ್ದ
ವರ್ಗದ ಮೊತ್ತ ಮೊದಲ ಕೃತಿಕಾರರು ಆ ಕಾಲದವರು ಮಾತ್ರವೇ ಅಲ್ಲ ದಲಿತ ವರ್ಗದ, ವೇಶ್ಯಾ ವೃತ್ತಿಯ ಇಬ್ಬರು
ಕವಯತ್ರಿಗಳೂ ಇದ್ದಾರೆಂಬುದನ್ನೂ ಆಗಲೇ ನೋಡಿದ್ದೇವೆ. ದಲಿತ ಉರಿಲಿಂಗಪೆದ್ದಿಯ ಹೆಂಡತಿ ಕಾಳವ್ವೆಯೂ
ಸಂಸ್ಕೃತವನ್ನು ಚೆನ್ನಾಗಿ ಬಲ್ಲವಳಾಗಿದ್ದಳು.
6. ಎಲ್ಲ ಭಕ್ತಿ ಪಂಥಗಳೂ ಎಲ್ಲ ಮನುಷ್ಯರ ಆಧ್ಯಾತ್ಮಿಕ ಸಮಾನತೆಯನ್ನು
ಪ್ರತಿಪಾದಿಸಿವೆ. ಆದರೆ ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸಿದ್ದು ಮೊತ್ತ ಮೊದಲು ಶರಣ ಚಳುವಳಿಯೇ,
ಬ್ರಾಹ್ಮಣರಿಗೂ ದಲಿತರಿಗೂ ಅವರು ಶಿವಭಕ್ತರಾಗಿದ್ದರೆ ಯಾವುದೇ ಭೇದ ಅವರ ಮಧ್ಯೆ ಇರುವುದಿಲ್ಲವೆಂದು
ಪ್ರತಿಪಾದನೆ ಮಾಡಿದ್ದು ಮಾತ್ರವಲ್ಲದೆ ಆ ಎರಡೂ ಜಾತಿಗಳ ಮಧ್ಯೆ ವಿವಾಹ ಸಂಬಂಧಕ್ಕೆ ಒಪ್ಪಿಗೆ ಕೊಟ್ಟು
ಅಂತಹ ಕಾರ್ಯಕ್ಕೆ ಮುಂದಾದ ಏಕೈಕ ಉದಾಹರಣೆ ಶರಣ ಚಳುವಳಿಯದು.
7. ವ್ಯಕ್ತಿಯ ಹುಟ್ಟು ಏನೇ ಆಗಿರಲಿ, ಆ ವ್ಯಕ್ತಿಯ ವೃತ್ತಿ ಉಳಿದ ಯಾವುದೇ
ವೃತ್ತಿಗೂ ಕಡಮೆಯಲ್ಲ ಎಂಬುದನ್ನು ಪ್ರತಿಪಾದಿಸಿದ ಮೊದಲ ಉದಾಹರಣೆ ಆ ಚಳುವಳಿಯದು.
8. ಇಂದಿನ ಕರ್ನಾಟಕದ ಬಹುತೇಕ ಎಲ್ಲ ಹಿಂದುಳಿದ ವರ್ಗಗಳಿಗೆ ಸಾಂಸ್ಕೃತಿಕ
ವೀರರನ್ನು ಒದಗಿಸಿದ್ದು ಆ ಚಳುವಳಿ; ಮಡಿವಾಳರಿಗೆ ಮಡಿವಾಳ ಮಾಚಯ್ಯ, ನೇಕಾರರಿಗೆ ಜೇಡರ ದಾಸಿಮಯ್ಯ,
ಅಂಬಿಗರ ಚೌಡಯ್ಯ ಅಂಬಿಗರಿಗೆ, ಕುಂಬಾರರಿಗೆ ಕುಂಬಾರ ಗುಂಡಯ್ಯ (ಇವನು ವಚನಕಾರರಗಿಂತ ಸ್ವಲ್ಪ ಹಿಂದಿನವನು.
ಬಹುಶಃ ಐತಿಹಾಸಿಕ ವ್ಯಕ್ತಿ), ಡೋಹರರಿಗೆ ಡೋಹರ ಕಕ್ಕಯ್ಯ, ಒಕ್ಕಲಿಗರಿಗೆ ಒಕ್ಕಲಿಗ ಮುದ್ದಣ್ಣ, ಮಾದರರಿಗೆ
ಮಾದಾರ ಚೆನ್ನಯ್ಯ ಇತ್ಯಾದಿ. ಇಂತಹುದು ಭಾರತದ ಬೇರೆ ಪ್ರಾಂತಗಳಲ್ಲಿ ಬಹುಶಃ ಕಾಣಸಿಗದು.
9. ಇಂದಿಗೂ ಹನ್ನೆರಡನೆಯ ಶತಮಾನದ ಶರಣರು ಕರ್ನಾಟಕದ ಜಾನಪದ ವಾಙ್ಮಯದಲ್ಲಿ
ಸ್ಥಾಯಿಯಾಗಿ ಉಳಿದುಕೊಂಡು ಬಂದಿದ್ದಾರೆ. ಹಳ್ಳಿಗಳ ಎಲ್ಲ ಜಾತಿಗಳ ಜನರ ಬೀಸುವ ಹಾಡುಗಳಲ್ಲಿ, ದಲಿತ
ವರ್ಗದವರ ಅನೇಕ ಜನಪದ ಹಾಡುಗಳಲ್ಲಿ ಅವರ ಹೆಸರುಗಳು ಉಳಿದುಕೊಂಡು ಬಂದಿವೆ. ಇಂದಿಗೂ ಹಳ್ಳಿಯ ಜನ ತಮ್ಮ
ಕಷ್ಟಕಾಲದಲ್ಲಿ ಬಸವ ಯಾರು ಎಂಬುದನ್ನು ತಿಳಿಯದೆ ಅವನನ್ನು ಸ್ಮರಿಸುತ್ತಾರೆ. ಈಚಿನ ಐತಿಹಾಸಿಕ ವ್ಯಕ್ತಿಗಳು
ಕೆಲವು ಲಾವಣಿ, ಗಾದೆಗಳಲ್ಲಿ ಉಳಿದು ಬಂದಿರಬಹುದು. ಆದರೆ ಎಂಟುನೂರ ವರ್ಷಗಳ ಹಿಂದಿನ ಶರಣ ಶರಣೆಯರು
ಒಟ್ಟು ಜಾನಪದದ ಭಾಗವಾಗಿರುವುದು ಆ ಚಳುವಳಿಯ ಪ್ರಭಾವ ಸಮಾಜದ ಮೇಲು ಸ್ತರದಿಂದ ತೀರ ಕೆಳಗಿನ ಸ್ತರದವರೆಗೆ
ವ್ಯಾಪಿಸಿತ್ತೆಂಬುದರ ದ್ಯೋತಕ ಅದು.
10. ಎಲ್ಲ ಚಿಂತಕರೂ ಜಾತಿ, ಲಿಂಗ, ವೃತ್ತಿ, ಭೇದವಿಲ್ಲದೆ ಒಂದೆಡೆ
ಸೇರಿ ವೃತ್ತಿ, ಜಾತಿ, ಕರ್ತವ್ಯ, ನೀತಿ, ಲೋಕ- ಪರಲೋಕ ಇಂತಹ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಯಿಸಿದ್ದು
ಭಾರತೀಯ ಇತಿಹಾಸದಲ್ಲಿ ಅದೇ ಮೊದಲ ಬಾರಿ.
11. ಭಾರತೀಯ ಪರಂಪರೆಯಲ್ಲಿ ಗುರುವಿಗಿಂತ ದೊಡ್ಡವನಾರೂ ಇಲ್ಲ. ಆದರೆ
ಆ ಗುರು ಒಂದು ನಿರ್ದಿಷ್ಟ ಜಾತಿಯಲ್ಲೇ ಹುಟ್ಟಿದವನಾಗಿರಬೇಕೆಂದಿದ್ದರೆ ಆಗ ಕೆಳಜಾತಿಯ ಒಬ್ಬ ವ್ಯಕ್ತಿ
ಎಷ್ಟೇ ದೊಡ್ಡವನಾಗಿ ಬೆಳೆದರೂ ಆ ಮೇಲ್ಜಾತಿಯ ಗುರುವೇ ಕೆಳಜಾತಿಯ ಅರ್ಹ ವ್ಯಕ್ತಿಗಿಂತ ದೊಡ್ಡವನಾಗುತ್ತಾನೆ.
ಬಹುಶಃ ಇದನ್ನು ಮನಗಂಡ ಶರಣ ಚಳುವಳಿಯ ಗುರುವಿಗಿಂತ ಜಂಗಮ ದೊಡ್ಡವನೆಂದು ಭಾವಿಸಿತು (ಗುರುವಿನ ಗುರು
ಜಂಗಮ, ಗುರೂಪದೇಶ ಮಂತ್ರವೈದ್ಯ, ಜಂಗಮೋಪದೇಶ ಶಸ್ತ್ರವೈದ್ಯ) ಒಬ್ಬ ಜಂಗಮನಾಗಲು ಆಧ್ಯಾತ್ಮಿಕ ಶ್ರೇಷ್ಠತೆಯೊಂದೇ
ಮುಖ್ಯ, ಹುಟ್ಟು ಅಲ್ಲ. ಹುಟ್ಟಿನಿಂದ ದಲಿತನಾಗಿದ್ದರೂ ಅವನು ಶಿವೋಪಾಸಕನಾಗಿ, ಉದಾತ್ತ ಧ್ಯೇಯದಿಂದ
ಪ್ರೇರಿತವಾದ ಜೀವನವನ್ನು ನಡೆಸಲು ದೇಶ ಸಂಚಾರವನ್ನು ಕೈಗೊಂಡು (ಆ ಕಾರಣವೇ ಅವನು ಜಂಗಮ ಎಂದರೆ ಸುತ್ತಾಡುವನು)
ಅಂತರ್ನಿರೀಕ್ಷೆಯಿಂದ ಶಿವಭಕ್ತಿಯಿಂದ ತನ್ನನ್ನು ತಾನು ತಿದ್ದಿಕೊಂಡು ಲೋಕವನ್ನು ತಿದ್ದಲು, ಅದರ ಕಷ್ಟ
ಸುಖಗಳಲ್ಲಿ ಭಾಗಿಯಾಗಲು ಮನಸ್ಸು ಮಾಡುವವನೇ ಜಂಗಮ. ಅಸ್ಪೃಶ್ಯ ಜಾತಿಯ ಉರಿಲಿಂಗ ಪೆದ್ದಿಯಾಗಲಿ, ಶೂದ್ರ
ಜಾತಿಯ ಅಲ್ಲಮನಾಗಲಿ- ಜಂಗಮರೇ. (ಇಂದು ಜಂಗಮ ಎಂಬುದು ಕೇವಲ ಜಾತಿಸೂಚಕವಾಗಿರುವುದು ಒಂದು ದುರಂತ,
ಆ ಪ್ರಶ್ನೆ ಬೇರೆ)
12. ದಲಿತ ವರ್ಗದ ಶಿವಭಕ್ತರು ಸ್ಥಾಪಿಸಿದ ಮಠಗಳು ಇಂದಿಗೂ ಎಲ್ಲ ಮಠಗಳಂತೆ
ಪೂಜನೀಯವಾಗಿರುವುದು ಇಡೀ ಭಾರತದಲ್ಲಿ ವಿಶೇಷ. ಉರಿಲಿಂಗ ಪೆದ್ದಿ ಸ್ಥಾಪಿಸಿದ ಮಠಗಳು ಬೀದರ್ ಮೈಸೂರು
ಜಿಲ್ಲೆಗಳಲ್ಲಿದ್ದು ಆ ಮಠಗಳಿಗೆ ಎಲ್ಲ ಲಿಂಗಾಯತರೂ ಭಕ್ತಿಯಿಂದ ನಡೆದುಕೊಳ್ಳುತ್ತಾರೆ.
13. ಅಸ್ಪೃಶ್ಯರ ಮತಾಂತರಕ್ಕೆ ಅವರ ಬದುಕಿನ ಉತ್ತಮಿಕೆಗೆ ಗಮನ ಕೊಟ್ಟುದು
ಶರಣ ಚಳುವಳಿಯೇ ಮೊದಲು. ಅಸ್ಪೃಶ್ಯರನ್ನು ಹಿರಿಯ ಮಾಹೇಶ್ವರರೆಂದು ಕರೆದು ಗೌರವಿಸಿದುದು ಆಧುನಿಕ ಕಾಲದಲ್ಲಿ
ಅವರನ್ನು ಗಾಂಧೀಜಿ ಕಾಲದಲ್ಲಿ ಅವರನ್ನು ಗಾಂಧೀಜಿ ‘ಹರಿಜನ’ರೆಂದು ಕರೆದುದನ್ನು ಜ್ಞಾಪಕಕ್ಕೆ ತರುತ್ತದೆ.
ಮೇಲ್ಜಾತಿಯ ವೀರಶೈವರು ಮಾಹೇಶ್ವರರೆನ್ನಿಸಿಕೊಂಡರೆ ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿ ವೀರಶೈವರಾದವರು
ಅವರಿಗಿಂತ ಹೆಚ್ಚಿನವರು, ಹಿರಿಯ ಮಾಹೇಶ್ವರರು ಎನ್ನಿಸಿಕೊಂಡರು. ಕೆಳಜಾತಿಯ ಜೊತೆ ಸಹಭೋಜನ, ಸಹ ವಿವಾಹ
ಪ್ರತಿಪಾದನೆ ಮಾಡಿ ಆಚರಣೆಗೆ ತಂದುದು ಶರಣ ಚಳುವಳಿ.
ಒಟ್ಟಾರೆ ವಚನ ಚಳುವಳಿಯು
ಸಾಮಾಜಿಕ ಉದ್ದೇಶ್ಯಗಳಿಂದ ಪ್ರೇರಿತವಾಗಿ ವರ್ಣಾಶ್ರಮ ಧರ್ಮ ಹಾಗೂ ಜಾತಿ ಸಂಕೋಲೆಗಳ ಬಂಧನಗಳಿಗೆ ಈಡಾಗಿದ್ದ
ಸಮಾಜ ಮತ್ತು ಜನತೆಯನ್ನು ಪಾರುಮಾಡಿ ಸಮಾನತೆಯ ಚೌಕಟ್ಟಿನಡಿಯಲ್ಲಿ ನವ ಸಮಾಜವನ್ನು ನಿರ್ಮಾಣ ಮಾಡುವುದರ
ಜೊತೆಗೆ ಸಾಂಪ್ರದಾಯಿಕ ದ್ವಂದ್ವತೆಗಳನ್ನು ತಿರಸ್ಕರಿಸಿ ವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಗೌರವಗಳನ್ನು
ಮೇಲ್ಕಂಡ ಆಯಾಮಗಳಲ್ಲಿ ಮೂಡಿಸುವಂತಹ ನೆಲೆಯನ್ನು ತಲುಪಿದ್ದಾಗಿದೆ.
ಪರಾಮರ್ಶನ ಗ್ರಂಥಗಳು
1.ಬಸವಣ್ಣನವರ ವಚನ ಸಂಪುಟ (ಸಂ: ಎಂ.ಎಂ.ಕಲಬುರ್ಗಿ)
ಸ.ವ.ಸಂ.1.ಕರ್ನಾಟಕ
ಪುಸ್ತಕ ಪ್ರಾಧಿಕಾರ, ಬೆಂಗಳೂರು (ದ್ವಿ.ಮು) 2001
2.ಸಂಕೀರ್ಣ ವಚನ ಸಂಪುಟ 2 ( ಸಂ.ಎಸ್.ವಿದ್ಯಾಶಂಕರ)
ಕರ್ನಾಟಕ ಪುಸ್ತಕ ಪ್ರಾಧಿಕಾರ,
ಬೆಂಗಳೂರು (ದ್ವಿ.ಮು) 2001
3.ಎಂ.ಚಿದಾನಂದಮೂರ್ತಿ, ಸ್ಥಾವರ-ಜಂಗಮ
ಚಿದಾನಂದ ಸಮಗ್ರ ಸಂಪುಟ-4
ಸ್ವಪ್ನ ಪುಸ್ತಕಾಲಯ,
ಬೆಂಗಳೂರು, 2004
4. ಬಸವರಾಜು.ಸಿ,ಕಲ್ಗುಡಿ, ಅನುಭಾವ: ಸಾಂಸ್ಕೃತಿಕ ಸಮಸ್ಯೆ ಮತ್ತು
ಹುಡುಕಾಟ
ಕನ್ನಡ ಪುಸ್ತಕ ಪ್ರಾಧಿಕಾರ,ಬೆಂಗಳೂರು,2001
( ಮೂ.ಮು)
5. ಎಂ.ಎಂ.ಕಲಬುರ್ಗಿ ಮಾರ್ಗ ಸಂಪುಟ-3
ಸ್ವಪ್ನ ಪುಸ್ತಕಾಲಯ,
ಬೆಂಗಳೂರು, 1997
6. ಜಾನ್ ಪೀಟರ್ ಶೌಟನ್, ಅನುಭಾವಿಗಳ ಕ್ರಾಂತಿ( ಅನು:ಟಿ.ಆರ್.ಚಂದ್ರಶೇಖರ)
ವೀರಶೈವ ಅಧ್ಯಯನಸಂಸ್ಥೆ,
ಗದಗ, 2000
7.ಸಿ.ನಾಗಭೂಷಣ, ಶರಣ ಸಾಹಿತ್ಯ-ಸಂಸ್ಕೃತಿ ಕೆಲವು ಅಧ್ಯಯನಗಳು
ಕನ್ನಡ ಸಾಹಿತ್ಯ ಪರಿಷತ್,
ಬೆಂಗಳೂರು, 2000
ವೀರಶೈವ ಸಾಹಿತ್ಯ
: ಕೆಲವು ಒಳನೋಟಗಳು
ವಿಜೇತ ಪ್ರಕಾಶನ, ಗದಗ,2008
ಶರಣ ಸಾಹಿತ್ಯ ದೀಪಿಕೆ,ಶ್ರೀ
ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರ್ಗಿ,ಪು.೨೦೧೭
8. ಹಿರೇಮಲ್ಲೂರು ಈಶ್ವರನ್, ಬಸವಣ್ಣ ಹಾಗೂ ಲಿಂಗಾಯತ ಧರ್ಮ
ಪ್ರಿಯದರ್ಶಿನಿ ಪ್ರಕಾಶನ,
ಬೆಂಗಳೂರು,1997
9.ವಚನಕಾರರ ಪ್ರಮುಖ ಪರಿಕಲ್ಪನೆಗಳು (ಸಂ:ಷಣ್ಮುಖಯ್ಯ ಅಕ್ಕೂರ ಮಠ)
ಶ್ರೀ.ಸರ್ಪಭೂಷಣ ಶಿವಯೋಗೀಶ್ವರ
ಮಠ, ಬೆಂಗಳೂರು,1994
10.ಬಸವರಾಜ ಸಬರದ, ವಚನಚಳುವಳಿ
ಪಲ್ಲವಿ ಪ್ರಕಾಶನ,
ಗುಲಬರ್ಗಾ,2007