ಸೋಮವಾರ, ಏಪ್ರಿಲ್ 23, 2018

ಸಾಹಿತ್ಯ ಸಂಶೋಧನೆ ಮತ್ತು ಎಸ್.ಶಿವಣ್ಣ ಡಾ.ಸಿ.ನಾಗಭೂಷಣ


ಸಾಹಿತ್ಯ ಸಂಶೋಧನೆ ಮತ್ತು ಎಸ್.ಶಿವಣ್ಣ
                                           ಡಾ.ಸಿ.ನಾಗಭೂಷಣ


        ಆಧುನಿಕ ಪೂರ್ವದ ಸಾಹಿತ್ಯ ಸಂಶೋಧನೆಯಲ್ಲಿ ಸಂಪಾದನೆ, ಚರಿತ್ರೆ, ರಚನೆ ಮತ್ತು ಸಂಶೋಧನೆಗಳ ನಡುವೆ ಒಂದು ಅನ್ಯೋನ್ಯ ಸಂಬಂಧ ಇರುವುದನ್ನು ನಾವು ಕಾಣಬಹುದಾಗಿದೆ. ಆಕರ ಶಾಸ್ತ್ರೀಯ ಸಂಶೋಧನೆಯು ಪ್ರಾಚೀನ ಕಾಲದ ಕವಿ, ಕೃತಿಗಳ ಕಾಲ, ಧರ್ಮ, ಸ್ಥಳ ಇತ್ಯಾದಿಗಳ ಕುರಿತ ಅಧ್ಯಯನದ ಚರ್ಚೆಯಾಗಿದ್ದು ಇಂದು ಈ ರೀತಿಯ ಅಧ್ಯಯನಗಳು ಅಪರೂಪವಾಗಿವೆ. ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಇಡಿಯಾದ ಮತ್ತು ಬಿಡಿಯಾದ ಸಂಶೋಧನೆಯಿಂದಾಗಿ ಸಾಹಿತ್ಯ ಚರಿತ್ರೆಯ ಪರಿಧಿ ವಿಸ್ತರಿಸಿತು. ಬೆಳವಣಿಗೆಯ ದೃಷ್ಟಿಯಿಂದ ವಿಕಾಸಹೊಂದಿತು. ಹೆಚ್ಚಿನ ಕವಿಗಳು, ಅವರ ಕೃತಿಗಳು ಬೆಳಕು ಕಂಡವು. ಕೃತಿಗಳ ಪಟ್ಟಿ ಬೆಳೆಯಿತು. ಹಸ್ತಪ್ರತಿಗಳ ರೂಪದಲ್ಲಿದ್ದ ಕೃತಿಗಳು ಸಂಪಾದನೆಗೊಂಡು ಪ್ರಕಟವಾದವು. ಸಾಹಿತ್ಯ ಚರಿತ್ರೆಗೆ ಪೂರಕವಾಗುವ ಕೆಲವು ಶಾಸನಗಳು ಶೋಧಿತವಾದವು. ಈ ಹಿನ್ನಲೆಯಲ್ಲಿ ಸಾಹಿತ್ಯ ಚರಿತ್ರೆಯಲ್ಲಿ ಗಣನೀಯ ಬೆಳವಣಿಗೆ ಗಳಾದುದನ್ನು ಗುರುತಿಸಬಹುದು.
       ಇತ್ತೀಚಿನ ಅಧ್ಯಯನಕಾರರು ಹಿಂದಿನ ವಿದ್ವಾಂಸರು ಕೊಡ ಮಾಡಿದ ಹಳಗನ್ನಡ, ನಡುಗನ್ನಡ ಕಾಲದ ಸಾಹಿತ್ಯದ ಪ್ರಜ್ಞಾಪೂರ್ಣ ಕೊಡುಗೆಯನ್ನು ಇಂದಿನ ಬರವಣಿಗೆಯಲ್ಲಿ ಪರಾಮರ್ಶನ ಮತ್ತು ಪೂರಕ ಆಕರವಾಗಿ ಅವೆಲ್ಲವುಗಳನ್ನು ಬಳಸಿಕೊಂಡು ಸಂಶೋಧನಾ ವ್ಯಾಸಂಗದ ತಳಹದಿಯಲ್ಲಿ ಸತ್ಯದ ಸಮೀಪಕ್ಕೆ ಬರುವಂತಾಗಿದೆ. ಹೀಗಾಗಿ ಕವಿಚರಿತೆಕಾರರನ್ನು ಒಳಗೊಂಡಂತೆ ಸಾಹಿತ್ಯ-ಸಂಸ್ಕೃತಿಯ ಶೋಧದಲ್ಲಿ ಗಮನೀಯವಾದ ಕಾರ್ಯದಲ್ಲಿ ತೊಡಗಿದ್ದ ಮತ್ತು ಪ್ರಸ್ತುತ ಅದರಲ್ಲಿ ತಮ್ಮ ಜೀವನವನ್ನು ಸವೆಸುತ್ತಿರುವ ವಿದ್ವಾಂಸರು ಹಳಗನ್ನಡ ನಡುಗನ್ನಡ ಮತ್ತು ಆಧುನಿಕ ಕನ್ನಡ ಸಾಹಿತ್ಯ ಕೃತಿಗಳನ್ನು ಕವಿ-ಕಾಲ ವಿಚಾರವನ್ನು ಗುಣಾತ್ಮಕವಾಗಿ ಶೋಧಿಸುವುದರೊಂದಿಗೆ ಇಂದು ನಾವೆಲ್ಲಾ ಪಂಪ, ಹರಿಹರ, ರಾಘವಾಂಕ, ಕುಮಾರವ್ಯಾಸ, ಸರ್ವಜ್ಞ ಪುರಂದರ, ಕನಕದಾಸ, ರತ್ನಾಕರವರ್ಣಿರಾದಿಯಾಗಿ ಹಳಗನ್ನಡ- ನಡುಗನ್ನಡ ಕಾಲದ ಕವಿ-ಕೃತಿಗಳನ್ನು ಸುಲಭವಾಗಿ ಓದಲು ಅನುಕೂಲವಾಗುವಂತೆ ವ್ಯವಸ್ಥಿತವಾದ ಪುಸ್ತಿಕೆಗಳನ್ನು ಒದಗಿಸಿಕೊಟ್ಟಿದ್ದಾರೆ.
     ಆಧುನಿಕ ಪೂರ್ವದ ಕನ್ನಡ ಸಾಹಿತ್ಯ ಚರಿತ್ರೆಯನ್ನು ತಮ್ಮ ಹೊಸ ಶೋಧಗಳ ಮೂಲಕ ಶ್ರೀಮಂತಗೊಳಿಸಿದವರಲ್ಲಿ ಎಸ್. ಶಿವಣ್ಣನವರೂ ಒಬ್ಬರು. ಕನ್ನಡ ಸಾಹಿತ್ಯ ಸಂಶೋಧನೆ ಹಾಗೂ ಸಂಪಾದನಾ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಗಮನಾರ್ಹವಾದುದು. ಕನ್ನಡದ ಗಣ್ಯರಲ್ಲಿ ಒಬ್ಬರಾದ ಇವರು ಹಳಗನ್ನಡ ಸಾಹಿತ್ಯ, ವೀರಶೈವ ಸಾಹಿತ್ಯ ಹಾಗೂ ಸಂಪಾದನಾ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಸಂಶೋಧಕರೂ, ಪಂಡಿತರೂ, ಅಧ್ಯಯನಶೀಲರೂ ಆದ ಎಸ್. ಶಿವಣ್ಣನವರ ಸಾಹಿತ್ಯ ಸಾಧನೆ ಇಂದಿನ ಯುವ ವಿದ್ವಾಂಸರಿಗೆ ಅನುಕರಣೀಯವೂ ಮಾರ್ಗದರ್ಶಿಯೂ ಆಗಿದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಪುನರ್ ರಚಿಸಲು ಶಿವಣ್ಣನವರು ಶೋಧಿಸಿರುವ ಹೊಸ ಶೋಧಗಳು ಸಂಶೋಧನಾ ಆಕರಗಳ ರೂಪವನ್ನು ಪಡೆದು ಕೊಂಡಿವೆ.    
      ಶ್ರೀ ಎಸ್. ಶಿವಣ್ಣನವರು ಕನ್ನಡ ಸಾರಸ್ವತ ಲೋಕದ ಅಜಾತ ಶತ್ರು. ತಮ್ಮ ಜೀವನದ ಕೊನೆಯ ಉಸಿರು ಇರುವವರೆವಿಗೂ ನಿರಂತರವಾಗಿ ಗ್ರಂಥಸಂಪಾದನೆ, ಸೂಚಿಸಾಹಿತ್ಯ, ಸಂಶೋಧನಾ ಸಾಹಿತ್ಯ, ಮುಂತಾದ ಸಾಹಿತ್ಯ ಸಂವರ್ಧನೆಯ ಕಾರ್ಯದಲ್ಲಿ ನಿರತರಾಗಿ ನಿಜವಾದ ಕರ್ಮಯೋಗಿ ಎನಿಸಿಕೊಂಡು ಬಾಳಿದವರು. ಕನ್ನಡ ಗ್ರಂಥಸೂಚಿ, ಹಸ್ತಪ್ರತಿಸೂಚಿ, ಹಸ್ತಪ್ರತಿ ಪುಷ್ಪಿಕೆಗಳ ಸೂಚಿ, ಲೇಖನಸೂಚಿ, ಗ್ರಂಥ ಸಂಖ್ಯಾ ವಿವರ ಸೂಚಿ, ಹೀಗೆಯೆ ವಿವಿಧ ಸೂಚಿಗಳನ್ನು ಸಿದ್ಧಪಡಿಸುವ ಮೂಲಕ ‘ಎಸ್. ಶಿವಣ್ಣ’ ಎಂಬ ಹೆಸರಿಗೆ ಪರ್ಯಾಯವೆನ್ನುವಂತೆ ‘ ಆಕರ ವಿಜ್ಞಾನಿ ಶಿವಣ್ಣ ಎಂದೇ ವಿದ್ವತ್‍ವಲಯದಿಂದ   ಕರೆಯಿಸಿಕೊಂಡವರು. ಹಸ್ತಪ್ರತಿಯ ವಿಷಯಕ್ಕೆ ಸಂಬಂಧಿಸಿದಂತೆ ‘ನಡೆದಾಡುವ ಹಸ್ತಪ್ರತಿ ಕೋಶ’ ಎಸ್.ಶಿವಣ್ಣ ಖ್ಯಾತಿಯನ್ನು ಪಡೆದವರು. ಇವರು ಕನ್ನಡ ಸಾಹಿತ್ಯ ಸಂಶೋಧನೆ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆಯು ಮನನೀಯವಾದುದು. ಕವಿಗಳ ಕಾಲನಿರ್ಣಯ, ಅಪ್ರಕಟಿತ ವಚನಗಳ ಶೋಧ,  ಅನುಪಲಬ್ಧ ಸ್ವರವಚನಗಳ ಸಂಪಾದನೆ, ವಿವಿಧ ಕಾಲಮಾನದ ಕವಿಕೃತಿಗಳಿಗೆ ಸಂಬಂಧಿಸಿದ ಸಂಪ್ರಬಂಧಗಳು, ಮುಂತಾದವುಗಳಿಗೆ ಸಂಬಂಧಿಸಿದಂತೆ ಇವರ ಸಂಶೋಧನಾ ಕೊಡುಗೆಯನ್ನು ಕನ್ನಡಿಗರು ಎಂದೂ ಮರೆಯುವಂತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ‘ಬಿಡು ಮುತ್ತು’ ಎಂಬ ಹೊಸ ಶೋಧದ ಲೇಖನಗಳ ಸಂಗ್ರಹವು ಕನ್ನಡ ಸಾಹಿತ್ಯ ಚರಿತ್ರೆಯನ್ನು ಅದರಲ್ಲಿಯೂ 14 ನೇ ಶತಮಾನದಿಂದ 18 ನೆಯ ಶತಮಾನದ ಕನ್ನಡ ಸಾಹಿತ್ಯಚರಿತ್ರೆಯನ್ನು ಪುನರ್ ರಚಿಸುವ ಹಲವಾರು ವಿಷಯ ವಸ್ತುಗಳನ್ನು ತನ್ನ ಅಂತರಂಗದಲ್ಲಿ ಹುದುಗಿಸಿಕೊಂಡಿದೆ.
     ಎಂ. ಚಿದಾನಂದ ಮೂರ್ತಿ, ಶ್ರೀ ಎನ್. ಬಸವಾರಾಧ್ಯ,  ಎಂ. ಎಂ. ಕಲಬುರ್ಗಿ, ಎಸ್. ವಿದ್ಯಾಶಂಕರ, ಹಂಪ ನಾಗರಾಜಯ್ಯ, ಎಸ್. ಉಮಾಪತಿ, ಬಿ. ಆರ್. ಹಿರೇಮಠ. ವೀರಣ್ಣ ರಾಜೂರ, ಜಿ. ಜಿ. ಮಂಜುನಾಥನ್, ವಿದ್ವಾನ್ ಎಂ.ಎಸ್. ಬಸವರಾಜಯ್ಯ ಬಿ. ನಂಜುಂಡ ಸ್ವಾಮಿ, ಎಸ್.ಉಮಾಪತಿ, ಜಿ..ಶಿವಲಿಂಗಯ್ಯ, ಸಿ. ನಾಗಭೂಷಣ,ಡಿ.ವಿ.ಪರಮಶಿವಮೂರ್ತಿ ಮುಂತಾದ ಬಹಳಷ್ಟು ಜನ ವಿದ್ವಾಂಸರು ಹಾಗೂ ಸಂಶೋಧನೆಯನ್ನು ಕೈಗೊಂಡಿರುವವರು ಶಿವಣ್ಣ ಅವರ ಕೊಡಮಾಡಿರುವ  ಸಾಮಗ್ರಿಗಳನ್ನು ತಮ್ಮ ಅಧ್ಯಯನದ ಪರಿಪೂರ್ಣತೆಗಾಗಿ ಬಳಸಿಕೊಂಡಿದ್ದಾರೆ. ನಾಡಿನಾದ್ಯಂತ ಸಂಶೋಧನೆಯಲ್ಲಿ ನಿರತರಾದವರಿಗೆ ಹಲವು ರೀತಿಯಲ್ಲಿ ಮಹತ್ವಪೂರ್ಣ ಯಾವುದೇ  ಪ್ರತಿಫಲಾಪೇಕ್ಷೆಯಿಲ್ಲದೆ  ಪ್ರಾಥಮಿಕ  ಆಕರಗಳನ್ನು  ಒದಗಿಸಿರುವುದು.        ಅದರಲ್ಲೂ ಹಳಗನ್ನಡ ಹಾಗೂ ನಡುಗನ್ನಡ ಸಾಹಿತ್ಯ, ಗ್ರಂಥಸಂಪಾದನೆ. ವ್ಯಾಕರಣ, ಹಸ್ತಪ್ರತಿ ಶಾಸ್ತ್ರ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಸಂಶೋಧನೆ ಕೈಗೊಳ್ಳುವ ಸಂಶೋಧಕರು ಇವರನ್ನು ಸಂಪರ್ಕಿಸದಿದ್ದರೆ ಅವರ ಸಂಶೋಧನೆ ಪೂರ್ಣಗೊಳ್ಳುವುದಿಲ್ಲ, ಎಂದೇಳಬಹುದು. ನಾಡಿನ ಹೆಸರಾಂತ ಸಂಶೋಧಕರು ತಮ್ಮ ಸಂಶೋಧನಾ ಕೃತಿಗಳು ಹಾಗೂ ಲೇಖನಗಳ ಕೊನೆಯಲ್ಲಿ ಆಕರಗಳನ್ನು ಪೂರೈಸಿದ ಶಿವಣ್ಣನವರ ಹೆಸರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದಾರೆ.
       ಸಮಕಾಲಿನ ಸಾಹಿತ್ಯವನ್ನು ಅರಿತುಕೊಂಡರೆ ಮಾತ್ರ ಸಾಲದು ಅದರ ಚರಿತ್ರೆಯನ್ನು ಅರಿಯುವ ಪ್ರಯತ್ನ ಮಾಡಬೇಕು, ಅದನ್ನರಿಯಲು ಸೂಕ್ತ ಆಧಾರಗಳು ಇರಬೇಕು. ಕೆಲವೊಮ್ಮೆ ಸೂಕ್ತ ಆಧಾರಗಳು ಸಿಗದೇ ಇರಬಹುದು, ಇಂಥ ಸಂದರ್ಭದಲ್ಲಿ ಸಾಹಿತ್ಯ ಚರಿತ್ರೆಯನ್ನು ಕ್ರಮವಾಗಿ ನಿರೂಪಿಸುವುದು ಕಷ್ಟಸಾಧ್ಯವಾಗುತ್ತದೆ. ಈ ಕಾರಣದಿಂದಲೆ ಸಾಹಿತ್ಯ ಚರಿತ್ರೆಯ ಅಧ್ಯಯನದಲ್ಲಿ ಮತ್ತು ಸಂಶೋಧನೆಯಲ್ಲಿ ಕವಿಗಳ ಮತ್ತು ಲಿಪಿಕಾರರ ಹಸ್ತಪ್ರತಿಗಳು ಪ್ರಮುಖ ಆಧಾರಗಳೆನ್ನಿಸುತ್ತವೆ. ಅತ್ಯಂತ ಪ್ರಾಚೀನ ಕವಿಗಳ ಕಾಲ ವಿಚಾರ, ಅಪ್ರಕಟಿತ ಕವಿಗಳ ಸಂಪಾದನಾಕಾರ್ಯ, ಹಾಗು ವಿವಿಧ ಕವಿಗಳ ಕಾಲ, ಕೃತಿಗಳಿಗೆ ಸಂಬಂಧಿಸಿದಂತೆ ಸಂಶೋಧಿಸಿದ ಚಿಕ್ಕಚಿಕ್ಕ ಲೇಖನಗಳನ್ನು ಬರೆದು ಎಸ್ ಶಿವಣ್ಣನವರು ನಾಡಿನಾದ್ಯಂತ ಹಲವಾರು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಕ್ರಿ.ಶ. 1963 ರಿಂದ ಕ್ರಿ.ಶ. 2008ದ ವರೆಗೆ ಸಾಹಿತ್ಯ ಪತ್ರಿಕೆಗಳು ಮತ್ತು ಸಂಶೋಧನಾ ಪತ್ರಿಕೆಗಳಾದ ‘ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ’, ‘ಪ್ರಬುದ್ಧ ಕರ್ನಾಟಕ’, ‘ಕರ್ನಾಟಕ ಭಾರತಿ’, ‘ಕರ್ನಾಟಕ ಲೋಚನ’, ‘ಕನ್ನಡನುಡಿ’, ‘ಶಿವಾನುಭವ’, ‘ಸದ್ಧರ್ಮದೀಪಿಕೆ’, ‘ಹೇಮಕೂಟ’, ‘ಸಾಧನೆ’, ‘ಬಸವ ಪಥ’, ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿಸಿದ ಲೇಖನಗಳು, ಕಿರು ಬರಹಗಳು ಕನ್ನಡ ಸಾಹಿತ್ಯ ಚರಿತ್ರೆಯ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತವೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಈ ಲೇಖನಗಳ ಸಂಗ್ರಹ ಕನ್ನಡ ಸಾಹಿತ್ಯ ಚರಿತ್ರೆಯನ್ನು ಪುನರ್ ರಚಿಸುವ ಹೊಸ ಸಾಧ್ಯತೆಗಳನ್ನು ತನ್ನ ಅಂತರಂಗದಲ್ಲಿ ಹುದುಗಿಸಿಕೊಂಡಿದೆ. 
    ನಡುಗನ್ನಡ ಸಾಹಿತ್ಯ ಸಂದರ್ಭದಲ್ಲಿ ಇದರ ವ್ಯಾಪ್ತಿಯನ್ನು ಅರಿತಾಗ ಇದಕ್ಕೆ ನಾಲ್ಕೈದು ಶತಮಾನದ ಇತಿಹಾಸವಿದೆ. ನಡುಗನ್ನಡ ಸಾಹಿತ್ಯದ ಆದಿಯೆಂದರೆ ವಚನಸಾಹಿತ್ಯ. ವಚನ ಸಾಹಿತ್ಯದ ಆಳ ಅಂತರವೆಂದರೆ ವಚನಕಾರರು ಮತ್ತು ಅವರು ರಚಿಸಿದ ವಚನಗಳು, 12ನೇ ಶತಮಾನಕ್ಕಿಂತ ಪೂರ್ವದಲ್ಲಿ ಮತ್ತು 12ನೆಯ ಶತಮಾನದ ನಂತರದ ಕಾಲದಲ್ಲಿ ಹಲವಾರು ವಚನಕಾರರು, ವಚನಕಾರ್ತಿಯರು ಆಗಿಹೋಗಿದ್ದಾರೆ. ವಚನಗಳ ಸಂಗ್ರಹ-ಸಂಪಾದನೆಯಂತಹ ಕೆಲಸವು ಬಹಳ ಮಹತ್ವವಾದುದು. ಅದರಂತೆ ವಚನಕಾರರ ಕಾಲ ಅವರ ವಚನಗಳು, ಮುಂತಾದವುಗಳನ್ನು ಅಚ್ಚುಕಟ್ಟಾಗಿ ಗ್ರಹಿಸುವುದು ಮುಖ್ಯವಾಗಿರುತ್ತದೆ. ಈಗೆಲ್ಲಾ ವಚನಕಾರರು ಅವರ ಕಾಲ ಅಂಕಿತನಾಮಗಳನ್ನು ಮತ್ತು ವಚನಗಳು ಒಳಗೊಂಡಿರುವ ಸಾರಸಂಗ್ರಹವು ನಮ್ಮ ಮುಂದಿದೆ. ಈ ರೀತಿಯಾಗಿ ಸಿಗುವಿಕೆಯಲ್ಲಿ ಅನೇಕ ವಿದ್ವಾಂಸರ ಶ್ರಮವಿದೆ. ಈ ವಿದ್ವತ್ ಕಾರ್ಯಗಳ ಪ್ರಮುಖ ಕಾರಣರಾದಂತಹವರಲ್ಲಿ ಎಸ್.ಶಿವಣ್ಣನವರು ಒಬ್ಬರಾಗಿದ್ದಾರೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಮನಗಂಡಂತೆ ಹಳಗನ್ನಡ ನಡುಗನ್ನಡ ಕಾಲದ ಕವಿ-ಕೃತಿಗಳ ಶೋಧನೆಯೊಂದಿಗೆ ಆಧುನಿಕ ಪೂರ್ವದ ಕವಿ-ಕೃತಿಗಳ ಹೊಸಶೋಧ, ಅಲಭ್ಯ ಕೃತಿಗಳ ಗುರುತಿಸುವಿಕೆ ಇತ್ಯಾದಿ ಅಭೂತಪೂರ್ವ ಶೋಧನೆಯ ಮೂಲಕ ಈಗಿರುವ ಕನ್ನಡ ಸಾಹಿತ್ಯ ಚರಿತ್ರೆಯನ್ನು ಪನರ್ ರಚಿಸಲು ಅವಕಾಶವಾಗುವಂಥ ನಿರ್ಮಾಣವನ್ನು ಸೃಷ್ಟಿ ಮಾಡಿದ್ದಾರೆ. ಇವರ ಶೋಧನೆಯ ಫಲವಾಗಿ ಹನ್ನೆರಡನೇ ಶತಮಾನದ ನಂತರದ ವಚನಕಾರರು, ಕವಿಗಳ ಕಾಲ ನಿರ್ಣಯದಲ್ಲಿ ಹಿಂದು ಮುಂದಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯ ಪುನರ್ ರಚನೆಗೆ ಕಾರಣವಾದ  ಇವರ ಸಾಹಿತ್ಯ ಚರಿತ್ರೆಯ ಸಂಶೋಧನಾ ಅಧ್ಯಯನ ಸ್ವರೂಪವನ್ನು ಈ  ಕೆಳಕಂಡಂತೆ ಗುರುತಿಸ ಬಹುದಾಗಿದೆ.
1. ವಚನಕಾರರ ನೂತನ ಹಾಗೂ ಹೆಚ್ಚಿನ ವಚನಗಳ ಶೋಧ ಹಾಗೂ
ಅಪ್ರಕಟಿತ ಸ್ವರ ವಚನಗಳ ಅಭಿಜ್ಞತೆ.
2. ಹಳಗನ್ನಡ, ನಡುಗನ್ನಡ ಹಾಗೂ ಆಧುನಿಕ ಪೂರ್ವದ ಬೆಳಕಿಗೆ ಬಾರದ ಅಜ್ಞಾತ ಕನ್ನಡ ಕವಿಗಳು ಮತ್ತು ಅವರ ಕೃತಿಗಳ ಶೋಧನೆ, ಕವಿಗಳ ಕಾಲನಿರ್ಣಯ.
3. ಎಸ್. ಶಿವಣ್ಣನವರಿಂದ ಶೋಧಗೊಂಡ ಇತ್ತೀಚಿನ ವೀರಶೈವ ಕೃತಿಗಳು ಮತ್ತು ಇತರ ಶೋಧಗಳು
1. ವಚನಕಾರರ ನೂತನ ಹಾಗೂ ಹೆಚ್ಚಿನವಚನಗಳ ಶೋಧ ಹಾಗೂ
ಅಪ್ರಕಟಿತ ಸ್ವರವಚನಗಳ ಅಭಿಜ್ಞತೆ.
     ವಚನ ಸಾಹಿತ್ಯದ ಬಗೆಗಿನ ಆಕರಗಳ ಶೋಧದ ಹಿನ್ನೆಲೆಯಲ್ಲಿ ಹಲವೆಡೆ ಅಡಗಿ ಚದುರಿಹೋಗಿದ್ದ ವಚನಗಳನ್ನು ಹುಡುಕಿ, ಸಂಗ್ರಹಿಸಿ ಒಂದೆಡೆ ಕಲೆಹಾಕಿ ನಾಮಾನುಗುಣ ಹಾಗು ವಿಷಯಾನುಗುಣವಾಗಿ ಹೊಂದಿಸುವಲ್ಲಿ ಎಸ್. ಶಿವಣ್ಣನವರ ವಚನಸಾಹಿತ್ಯ ಕುರಿತ ಹೊಸ ಶೋಧಗಳು, ಸಂಶೋಧನೆಗಳು ಗಮನಾರ್ಹವಾಗಿವೆ. ವಚನ ಸಾಹಿತ್ಯವನ್ನು ಕುರಿತ ಸಂಶೋಧನೆಯು ಧಾರ್ಮಿಕ ನೆಲೆ, ತಾತ್ವಿಕ ನೆಲೆ, ಸಾಹಿತ್ಯಕ ನೆಲೆ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ನಡೆದಿರುವುದನ್ನು ಗುರುತಿಸಬಹುದು. ವಚನ ಸಾಹಿತ್ಯವನ್ನು ಸಂಶೋಧನಾ ದೃಷ್ಟಿಯಿಂದ ಪ್ರತ್ಯೇಕವಾಗಿ ಒಬ್ಬೊಬ್ಬ ವಚನಕಾರರ ಮತ್ತು ವಚನಕಾರ್ತಿಯರನ್ನು ಕುರಿತು ಸಂಶೋಧನಾ ಅಧ್ಯಯನಗಳು ಮತ್ತು ವಿಭಿನ್ನ ನೆಲೆಗಳಲ್ಲಿ ವಚನಸಾಹಿತ್ಯವನ್ನು ಸಮಗ್ರವಾಗಿ ಸಂಶೋಧನಾ ಅಧ್ಯಯನಕ್ಕೆ ಒಳಪಡಿಸಿದ ಸುಮಾರು ಐವತ್ತಕ್ಕೂ ಹೆಚ್ಚು ಪಿಎಚ್.ಡಿ. ಸಂಪ್ರಬಂಧಗಳು ರಚಿತವಾಗಿವೆ. ಅವುಗಳಲ್ಲಿ ಕೆಲವು ಪ್ರಕಟವಾಗಿವೆ. ಆದರೆ ಎಸ್.ಶಿವಣ್ಣನವರ ವಚನ ಸಾಹಿತ್ಯ ಕುರಿತ ಶೋಧನೆಯು ಹೊಸ ವಚನಗಳ ಶೋಧ, ವಚನಕಾರರ ಅಂಕಿತಗಳಲ್ಲಿಯ ಗೊಂದಲಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿವೆ ಮತ್ತು ವಚನ ಸಾಹಿತ್ಯವನ್ನು ಕ್ರಮ ಬದ್ಧವಾಗಿ ಅಧ್ಯಯನ ಮಾಡಲು ಸಹಕಾರಿಯಾಗಿವೆ.
ಎಸ್. ಶಿವಣ್ಣನವರ ಅಪ್ರಕಟಿತ ವಚನಗಳ ಶೋಧಕಾರ್ಯ :
ವಚನಗಳ ಪರಿಷ್ಕರಣೆ, ಸಂಶೋಧನೆಯ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಅತ್ಯಂತ ತೀವ್ರಗತಿಯಲ್ಲಿ ಸಾಗಿವೆ, ವೈಯಕ್ತಿಕ ನೆಲೆಯಲ್ಲಿ ಎಸ್. ಶಿವಣ್ಣನವರು, ವೀರಣ್ಣ ರಾಜೂರ, ಎಸ್. ಉಮಾಪತಿಶಾಸ್ತ್ರಿ, ಬಿ.ಆರ್.ಹಿರೇಮಠ  ಬಿ.ನಂಜುಂಡಸ್ವಾಮಿ ಮುಂತಾದ ವಿದ್ವಾಂಸರು ವೀರಶೈವ ಮಠಗಳ ಹಸ್ತಪ್ರತಿ ಸಂಗ್ರಹಾಲಯಗಳು ಹಾಗೂ ವಿಶ್ವವಿದ್ಯಾಲಯಗಳ ಹಸ್ತಪ್ರತಿ ಭಂಡಾರಗಳಲ್ಲಿ ಇರುವ ಹಸ್ತಪ್ರತಿಗಳನ್ನು ಶೋಧಿಸಿ ಅವುಗಳಲ್ಲಿರುವ ಅಪ್ರಕಟಿತ ವಚನಗಳು ಮತ್ತು ಅಜ್ಞಾತ ವಚನಕಾರರನ್ನು ಗುರುತಿಸಿ, ಶಾಸ್ತ್ರಶುದ್ಧವಾಗಿ ಪರಿಷ್ಕರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ನಿಟ್ಟಿನಲ್ಲಿ ಶಿವಣ್ಣನವರ ಕಾರ್ಯ ಶ್ಲಾಘನಿಯವಾದುದು.
   ಸಮಗ್ರ ವಚನ ವಾಙ್ಮಯದ ಪ್ರಕಟನೆ, ಪರಿಷ್ಕರಣೆಯ ಹಿನ್ನೆಲೆಯಲ್ಲಿ ಮೊದಲು ಸಮರ್ಥವಾಗಿ ದುಡಿದವರು ಶ್ರೀಯುತ ಫ.ಗು. ಹಳಕಟ್ಟಿಯವರು, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನೆರವಿನಿಂದ ‘ಸಮಗ್ರ ವಚನ ವಾಙ್ಮಯ’ವನ್ನು ಫ.ಗು. ಹಳಕಟ್ಟಿಯವರು ಪ್ರಕಟಿಸಿದರು, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನಿಂದ 15 ಸಂಪುಟಗಳಲ್ಲಿ ‘ಸಮಗ್ರ ವಚನ ಸಾಹಿತ್ಯ’ದ ಜನಪ್ರಿಯ ಆವೃತ್ತಿಯನ್ನು ಎಂ.ಎಂ.ಕಲಬುರ್ಗಿಯವರು ಉಚಿತ ಪ್ರಸ್ತಾವನೆ, ಪದಕೋಶ, ಆಕರಸೂಚಿ, ವಚನಗಳ ಅಕಾರಾದಿಗಳೊಂದಿಗೆ ಶುದ್ಧ ರೂಪದಲ್ಲಿ ಸಂಪಾದಿಸಿ 1993 ರಲ್ಲಿ ಪ್ರಕಟಿಸಿದರು, ಇದರ ಪರಿಷ್ಕೃತ ಆವೃತ್ತಿಯು 2001 ರಲ್ಲಿ ಪ್ರಕಟಗೊಂಡಿತು, “ಆ ಕಾಲದಲ್ಲಿಯೇ ಸುಮಾರು 1400ಕ್ಕೂ ಹೆಚ್ಚಿನ ವಚನಗಳು ಶೋಧನೆಯ ಮೂಲಕ ಶೋಧಿಸಲ್ಪಟ್ಟು, ಅಂಕಿತಗಳು ತಿಳಿದು ಬರದ 53 ವಚನಕಾರರು ಬೆಳಕಿಗೆ ಬಂದಿದ್ದಾರೆ. ಅಲ್ಲದೆ 7 ಅಜ್ಞಾತ ವಚನಕಾರರು ಮತ್ತು ಅವರ ಅಂಕಿತಗಳನ್ನು ಶೋಧಿಸಿದ್ದಾರೆ.”
     ಇದೇ ಪರಿಷ್ಕೃತ ಮುದ್ರಣದಲ್ಲಿ ಅಕ್ಕಮಹಾದೇವಿಯ 434 ವಚನಗಳು ಪ್ರಕಟಗೊಂಡಿದ್ದವು. ಇತ್ತೀಚೆಗೆ ಎಸ್. ಶಿವಣ್ಣನವರು ‘ಜಲತ್ಕಂಠ ಗುರುಲಿಂಗ ದೇಶಿಕರ ಭೈರವೇಶ್ವರಕಾವ್ಯ’ದ ನಾಲ್ಕನೆಯ ಕಾಂಡ ಸಂಧಿ 1 ರಲ್ಲಿ ಅಕ್ಕನ ನೂತನ ಏಳು ವಚನಗಳನ್ನು ಗುರುತಿಸಿದ್ದಾರೆ. ಅಲ್ಲದೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ಸಂಗ್ರಹಾಲಯದಲ್ಲಿಯ ‘ಪ್ರಭುದೇಶಿಕ ಸಂಕಲಿತ ಮೋಕ್ಷದರ್ಶನ ಮಹಾ ಸಂಗ್ರಹ’ದಲ್ಲಿ ಅಕ್ಕನ ಎರಡು ನೂತನ ವಚನಗಳನ್ನು ಗುರುತಿಸಿ ಒಟ್ಟು ಒಂಬತ್ತು ವಚನಗಳನ್ನು  ಬೆಳಕಿಗೆ ತಂದಿದ್ದಾರೆ. ಈಗ ಲಭ್ಯವಿರುವ ಅಕ್ಕಮಹಾದೇವಿಯ ಒಟ್ಟು ವಚನಗಳ ಸಂಖೆ 443 ಕ್ಕೆ ಏರಿದೆ. ಸೋಲೂರು ರುದ್ರಮುನಿ ಸ್ವಾಮಿ ಹೆಸರಿನ ವಚನಕಾರ ಇತ್ತೀಚಿನ ಸಂಶೋಧನೆಯ ಮೂಲಕ ಬೆಳಕಿಗೆ ಬಂದ ವಚನಕಾರ. ಚಿತ್ರದುರ್ಗದ ಬೃಹನ್ಮಠ ಸಂಗ್ರಹದಲ್ಲಿ ದೊರೆತ ಕಾಗದದ ಹಸ್ತಪ್ರತಿಯಲ್ಲಿ ರುದ್ರೇಷ್ಟದ ಚನ್ನಬಸವೇಶ್ವರ ಅಂಕಿತದಲ್ಲಿ 27 ವಚನಗಳು ದೊರೆತಿದ್ದು ಅವುಗಳನ್ನು ಎಸ್. ಶಿವಣ್ಣನವರು ಪರಿಷ್ಕರಿಸಿ ‘ಸ್ವಪ್ನಲೋಕ’ ಪತ್ರಿಕೆಯ ಡಿಸೆಂಬರ್ 2002 ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ. “ಬೆ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಹಸ್ತಪ್ರತಿ ಸಂಖ್ಯೆ ಕೆ.1022ರಲ್ಲಿ ಭಕ್ತಿ ಭಂಡಾರಿ ಬಸವಣ್ಣನವರ ಪತ್ನಿ ನೀಲಮ್ಮಳ ಹೊಸ ವಚನವನ್ನು ಶೋಧಿಸಿ ಪ್ರಕಟಿಸಿದ್ದಾರೆ.”
    ಅದೇ ರೀತಿ ದುಗ್ಗಳೆಯ ಒಂದು ವಚನವನ್ನು ಶೋಧಿಸಿ ಪ್ರಕಟಿಸಿದ್ದಾರೆ, “ಅನಾಮಧೇಯ ವಚನಕಾರನ ನಂದಿನಾಥ ಪ್ರಭುವೇ ಅಂಕಿತದ ಹದಿನೈದು ವಚನಗಳು ದೊರೆತಿವೆ.” ತಮ್ಮ ಬಸವಣ್ಣ ಅಂಕಿತದ ಅನಾಮಧೇಯ ವಚನಕಾರನ ಹನ್ನೆರಡು ಹೊಸ ವಚನಗಳು ದೊರೆತಿವೆ. ದಾಸಪ್ರಿಯ ರಾಮನಾಥ ಪ್ರಭುವೇ ಅಂಕಿತದಲ್ಲಿ ಅನಾಮಧೇಯ ವಚನಕಾರರ ಎಂಟು ವಚನಗಳು ಪ್ರಕಟ ಗೊಂಡಿವೆ. ನಿಕಳಂಕ ಚನ್ನಮಲ್ಲಿಕಾರ್ಜುನ ಅಂಕಿತದ ಅಜ್ಞಾತ ವಚನಕಾರನ ಒಂಬತ್ತು ವಚನಗಳು ಲಭಿಸಿವೆ. ಮಹತ್ತರ ಸಂಗತಿ ಎಂದರೆ “ಅಜ್ಞಾತ ಕರ್ತೃ ಕೃತ ಟೀಕಾಸಹಿತ ವಚನಸಂಕಲನದಲ್ಲಿ ಇದುವರೆಗೂ ಪ್ರಕಟವಾಗದೇ ಇರುವ ಅಲ್ಲಮಪ್ರಭುವಿನ ಇಪ್ಪತೈದು ಹೊಸ ವಚನಗಳನ್ನು ಶೋಧಿಸಲಾಗಿದ್ದು ಅವುಗಳನ್ನು ಎಸ್. ಶಿವಣ್ಣನವರು ಪರಿಷ್ಕರಿಸಿ ಮೇ ಮತ್ತು ಜೂನ್ 2002 ರ ಸ್ವಪ್ನಲೋಕ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ”. ಅದೇರೀತಿ ಅಪ್ರಮಾಣ ಕೂಡಲ ಸಂಗಮದೇವ ಅಂಕಿತದಲ್ಲಿ ಅಪ್ರಕಟಿತ ಹನ್ನೆರಡು ವಚನಗಳು ದೊರೆತಿವೆ.
  ಬಸವ ಸಮಿತಿಯ ಹಸ್ತಪ್ರತಿ ಸಂಗ್ರಹದದ ಓಲೆಪ್ರತಿ, ಮೈಸೂರಿನ ಜಿ.ಎ.ಶಿವಲಿಂಗಯ್ಯನವರ ಸಂಗ್ರಹದ ಓಲೆಪ್ರತಿ, ಕನ್ನಡ ಸಾಹಿತ್ಯ ಪರಿಷತ್ತಿನ ಹಸ್ತಪ್ರತಿ ಸಂಖ್ಯೆ ಬಿ.421, ಬೆ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಓಲೆಗರಿ ಸಂಖ್ಯೆ 49 ಹಾಗೂ ಓಲೆಪ್ರತಿ ಸಂಖ್ಯೆ 1378 (ಗರಿ.72-3) ಗಳನ್ನು ಆಧರಿಸಿ ಅಂಬಿಗರ ಚೌಡಯ್ಯನ ಹನ್ನೆರಡು ಅಪ್ರಕಟಿತ ವಚನಗಳನ್ನು ಶೋಧಿಸಿ ಪ್ರಕಟಿಸಿದ್ದಾರೆ.” ಇಂದು ಎಸ್. ಶಿವಣ್ಣನವರ ಈ ವಚನಗಳ ಶೋಧನೆಯಿಂದಾಗಿ ಲಭ್ಯವಿರುವ ಅಂಬಿಗರ ಚೌಡಯ್ಯನ ವಚನಗಳ ಸಂಖ್ಯೆ 278 ಕ್ಕೆ ಹೆಚ್ಚಿದೆ. ಇದರಿಂದಾಗಿ ಈತನ ಸ್ಥಾನವನ್ನು ವಚನಕಾರರ ಪರಂಪರೆಯಲ್ಲಿ ಅಧ್ಯಯನ ಮಾಡಲು ಸಹಕಾರಿಯಾಗಿದೆ.    
ಬೆಂ.ವಿ.ವಿ.ಯ ಕನ್ನಡ ಅಧಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಹಸ್ತಪ್ರತಿ ಸಂಖ್ಯೆ ಕೆ.227 ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ವಚನ ವಾಜ್ಞಯ ಭಂಡಾರದ ಹಸ್ತಪ್ರತಿ ಸಂಖ್ಯೆ: 11511ನೇ ಗರಿ ಹಾಗೂ ಬೆಂ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಹಸ್ತಪ್ರತಿಯಲ್ಲಿಯ ಶಾಂತದೇವರ ಷಟ್ಪ್ರಕಾರ ಸಂಗ್ರಹ ಬಿ.1458 ಹಸ್ತಪ್ರತಿಯಲ್ಲಿಯ ಇಲ್ಲಿಯವರೆಗೂ ಬೆಳಕು ಕಾಣದ ಜೇಡರ ದಾಸಿಮಯ್ಯನ ಒಟ್ಟು 11ಅಪ್ರಕಟಿತ ವಚನಗಳನ್ನು ಶೋಧಿಸಿ ಬೆಳಕಿಗೆ ತಂದಿದ್ದಾರೆ. ಇವರ ಶೋಧನೆಯಿಂದಾಗಿ ಆದ್ಯವಚನಕಾರ ಜೇಡರ ದಾಸಿಮಯ್ಯನ ಒಟ್ಟು ವಚನಗಳ ಸಂಖ್ಯೆ ಇಂದು 230 ಕ್ಕೆ ತಲುಪಿದೆ.” ಎಸ್.ಶಿವಣ್ಣನವರ ಈ ಹೊಸ ಶೋಧ ಜೇಡರದಾಸಿಮಯ್ಯನನ್ನು ಅರ್ಥೈಸಲು ಸಹಕಾರಿಯಾಗಿದೆ.
  ಚಿತ್ರದುರ್ಗದ ಬೃಹನ್ಮಠದ ಹಸ್ತಪ್ರತಿ ಸಂಗ್ರಹದಲ್ಲಿದ್ದ ಹಸ್ತಪ್ರತಿ ಓಲೆಗರಿ ಸಂಖ್ಯೆ 714 ರಲ್ಲಿ ಬಸವಣ್ಣನವರ ಒಂದು ಅಪ್ರಕಟಿತ ವಚನವಿರುವುದನ್ನು ಎಸ್. ಶಿವಣ್ಣನವರು ಶೋಧಿಸಿ ಬೆಳಕಿಗೆ ತಂದಿದ್ದಾರೆ.
    ಹೀಗೆ ಎಸ್. ಶಿವಣ್ಣನವರ ಸಂಶೋಧನಾಸಕ್ತಿಯ ಅವಿರತ ಪ್ರಯತ್ನದ ಮೂಲಕ ಪ್ರಸಿದ್ಧ ವಚನಕಾರರ ಅಪ್ರಕಟಿತ ವಚನಗಳು, ಮತ್ತು ಅಜ್ಞಾತ ವಚನಕಾರರ ಹೆಚ್ಚಿನ ಸಂಖ್ಯೆಯ ವಚನಗಳು ಬೆಳಕು ಕಂಡಿವೆ. ಸರಕಾರ, ಸಂಘ ಸಂಸ್ಥೆಗಳು ಮಾಡಬೇಕಾದ ಮಹತ್ತರ ಕೆಲಸವನ್ನು ವೈಯಕ್ತಿಕವಾಗಿ ಪ್ರತಿಫಲಾಪೇಕ್ಷೆ ಬಯಸದೇ ಎಸ್. ಶಿವಣ್ಣನವರು ಶೋಧಿಸಿ ಪ್ರಕಟಿಸಿದ ವಚನಗಳ ಸಂಶೋಧನಾ ಕಾರ್ಯ ತಕ್ಕಮಟ್ಟಿಗೆ ಪ್ರಶಂಸಿಸುವಂಥದ್ದೇ. ಇದಲ್ಲದೇ ಹಸ್ತಪ್ರತಿಗಳಲ್ಲಿ ಅಡಗಿಕುಳಿತಿದ್ದ ಕೆಲವು ವಚನಕಾರರ ಅಪ್ರಕಟಿತ ವಚನಗಳನ್ನು ಶೋಧಿಸಿ ಬೆಳಕಿಗೆ ತಂದಿದ್ದಾರೆ. ಎಸ್.ಶಿವಣ್ಣನವರು ವಚನಕಾರರ ಇತಿವೃತ್ತಾಂತವನ್ನು ಯಾವ ರೀತಿಯಾಗಿ ಸಂಗ್ರಹಿಸಿದ್ದಾರೆಂಬುದು ಅವರ ಸಂಶೋಧನೆಯ ಒಳನೋಟದಿಂದ ವ್ಯಕ್ತವಾಗುತ್ತದೆ. ಆದರೂ ಅಜ್ಞಾತ ವಚನಕಾರರ ಬಗೆಗೆ ಆಗಬೇಕಾದ ಸಂಶೋಧನೆಗಳು ಬಹಳಷ್ಟಿದೆ.
 ಸ್ವರವಚನಕಾರರು ಹಾಗೂ ಅವರ ಸ್ವರವಚನಗಳ ಶೋಧ:
  ಎಸ್. ಶಿವಣ್ಣನವರು ಇಲ್ಲಿಯವರೆಗೂ ಬೆಳಕಿಗೆ ಬಾರದ ಹಸ್ತಪ್ರತಿಗಳಲ್ಲಿ ಅಡಗಿ ಕುಳಿತಿದ್ದ ಅನಾಮಧೇಯ ಸ್ವರ ವಚನಕಾರರ ಹಾಡುಗಳನ್ನು ಶೋಧಿಸಿ ಬೆಳಕಿಗೆ ತಂದಿದ್ದಾರೆ. ಇವರ ಶೋಧನೆಯಿಂದಾಗಿ ಸ್ವರವಚನ ಸಾಹಿತ್ಯ ಪರಂಪರೆಯನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಗುರುತಿಸಲು ಮತ್ತು ಅಧ್ಯಯನಮಾಡಲು ಸಹಕಾರಿಯಾಗಿದೆ. ಅವರು ಬೆಳಕಿಗೆ ತಂದಿರುವ ಸ್ವರವಚನ ಕಾರರಲ್ಲಿ ಕೆಲವರನ್ನು ಹಾಗೂ ಸ್ವರ ವಚನ ಸಂಕಲನಗಳ ಮಹತ್ವವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.  ಇಲ್ಲಿಯವರೆವಿಗೂ ಲಭ್ಯವಾಗದ  ಏಕ ಕರ್ತೃಕ ಸ್ವರ ವಚನಕಾರರಾರರಾದ ಐನೂಲಿ  ಬಕ್ಕಪ್ಪಯ್ಯ( ಕ್ರಿ..1745-1840), ಚೀಲಾಳೇಶ್ವರ ಅಂಕಿತದ ಅಜ್ಞಾತ ಕರ್ತೃ ಇತ್ಯಾದಿ ಸ್ವರವಚನಕಾರರ ಜೊತೆಗೆ ನಲವತ್ತಕ್ಕೂ ಮೇಲ್ಪಟ್ಟು ಬಿಡಿಸ್ವರವಚನಕಾರರನ್ನು ಗುರುತಿಸಿ ಅವರ ಪ್ರಕಟಿತ ಹಾಗೂ ಅಪ್ರಕಟಿತ ಸ್ವರವಚಗಳ ಯಾದಿಯನ್ನು  ಮೊದಲ ಬಾರಿಗೆ ಸಿದ್ಧಪಡಿಸಿ ಕೊಟ್ಟಿದ್ದಾರೆ. ಇದು ಸ್ವರವಚನ ಸಾಹಿತ್ಯ ಪರಂಪರೆಯನ್ನು ಗುರುತಿಸಿ ಅಧ್ಯಯನಮಾಡಲು ಸಹಕಾರಿಯಾಗಿದೆ. ಅದೇ ರೀತಿ ಲಭ್ಯವಿರುವ ಪ್ರಾಚೀನ ಮೂರು ಸ್ವರ ವಚನ ಸಂಕಲನಗಳಾದ ಜಕ್ಕಣಾರ್ಯನ ಏಕೋತ್ತರ ಶತಸ್ಥಲ, ಚೆನ್ನವೀರಾಚಾರ್ಯನ ಹಠಯೋಗ ಪ್ರದೀಪಿಕೆ,  ಕಂಬಾಳ ಶಾಂತ ಮಲ್ಲೇಶನ ಗಣವಚನ ರತ್ನಾವಳಿಗಳ ಸ್ವರೂಪ, ಈ ಸ್ವರ ವಚನ ಸಂಕಲಗಳಲ್ಲಿ ಲಭ್ಯವಿರುವ ಹಾಗೂ ಹೆಸರುಗಳು ತಿಳಿದು ಬಂದಿರುವ  ಸ್ವರ ವಚನ ಕರ್ತೃಗಳ ಅಂಕಿತ, ಹೆಸರು, ಕಾಲ, ಮತ್ತು ಉಲ್ಲೇಖಿತ ಸ್ವರವಚನಗಳ ಸಂಖ್ಯೆ ಹಾಗೂ ಹೆಸರುಗಳು ತಿಳಿದು ಬರದಿರುವ ಸ್ವರ ವಚನಕಾರರ ಅಂಕಿತಗಳನ್ನು ಅಕಾರಾದಿಯಾಗಿ ಕೊಟ್ಟು ಅವುಗಳೊಡನೆ ಸ್ವರ ವಚನಗಳ ಸಂಖ್ಯೆಯನ್ನು ಪ್ರಥಮ ಬಾರಿಗೆ ಶೋಧಿಸಿ ಕೊಟ್ಟಿರುವುದು ಅವರ ಸಂಶೋಧನಾ ವ್ಯತ್ಪತ್ತಿ ಜ್ಞಾನಕ್ಕೆ ನಿದರ್ಶನವಾಗಿದೆ.  ಜಕ್ಕಣ್ಣನ ಏಕೋತ್ತರ ಶತಸ್ಥಲದ ಓಲೆಪ್ರತಿ ಕನ್ನಡ ಅಧ್ಯಯನ ಸಂಸ್ಥೆ ಸಂಗ್ರಹ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂರಕ್ಷಿಸಲಾಗಿದೆ, ಓಲೆಪ್ರತಿ ಕ್ರಮಾಂಕ 188 ಆಗಿದೆ. ಜಕ್ಕಣ್ಣನ ಏಕೋತ್ತರ ಶತಸ್ಥಲದಲ್ಲಿ 17 ಜನ ಶಿವಶರಣ/ಶರಣೆಯರ 101 ಸ್ವರವಚನಗಳಿರುವುದನ್ನು ಹಾಗೂ ಪ್ರತಿ ಸ್ವರವಚನಕ್ಕೆ ರಾಗಗಳು ನಿರ್ದೇಶಿಸಿರುವುದನ್ನು ಎಸ್.ಶಿವಣ್ಣನವರು ಶೋಧಿಸಿ ಬೆಳಕಿಗೆ ತಂದಿದ್ದಾರೆ. ಇವುಗಳಲ್ಲಿ ಇಬ್ಬರು ಶಿವಶರಣೆಯರಿದ್ದಾರೆ. 2 ಅಂಕಿತಗಳ ಕರ್ತೃಗಳು ತಿಳಿದುಬಂದಿಲ್ಲ. 3 ಅಂಕಿತಗಳಲ್ಲಿನ ಕತೃಗಳ ಕಾಲವನ್ನು ಖಚಿತವಾಗಿ ಹೇಳಲಾಗುವುದಿಲ್ಲ ಎಂದು ಅನಾಮಧೇಯರ ಬಗೆಗೆ ತಿಳಿಸಿದ್ದಾರೆ.  ಜೊತೆಗೆ ಜಕ್ಕಣಾರ್ಯನು ಏಕೋತ್ತರ ಶತಸ್ಥಲಕ್ಕೆ ಕನ್ನಡದಲ್ಲಿ ಹಲವಾರು ಟೀಕೆಗಳು ಉಪಲಬ್ಧವಿದ್ದು ಯಾವುದೂ ಪ್ರಕಟವಾಗಿಲ್ಲ ಎಂದು ತಿಳಿಸಿದ್ದಾರೆ.
ಚೆನ್ನವೀರಾಚಾರ್ಯನ ಶಿವಯೋಗ ಪ್ರದೀಪಿಕೆ ಸ್ವರವಚನ ಸಂಕಲನ:
ಚೆನ್ನವೀರಾಚಾರ್ಯ ಶಿವಯೋಗ ಪ್ರದೀಪಿಕೆ ಎಂಬ ಸ್ವರವಚನ ಸಂಕಲನದೊಡನೆ ವಿಶೇಷಾನುಭವ ಷಟ್‍ಸ್ಥಲ ಎಂಬ 742 ವಚನಗಳ ಸಂಕಲನವನ್ನು ಸಂಕಲಿಸಿದ್ದು, ಅದಕ್ಕೆ ಸ್ವತಃ ಟೀಕೆ ರಚಿಸಿದ್ದಾನೆ.” ಈ ಸಂಕಲನವನ್ನು ವೀರಣ್ಣ ರಾಜೂರ ಅವರು ಸಂಪಾದಿಸಿದ್ದಾರೆ. ಈ ಸ್ವರ ವಚನ ಸಂಕಲನದ ಸ್ವರೂಪ , ಅಲ್ಲಿ ಕಂಡು ಬರುವ 21 ಸ್ಥಲಗಳ ಸ್ವರೂಪ ಹಾಗೂ ಸ್ವರವಚನಗಳ ರಾಗ ಸಮೇತವಾದ ಉಲ್ಲೇಖದ ಅಭಿಜ್ಞತೆಯ ಬಗೆಗಿನ ಎಸ್. ಶಿವಣ್ಣನವರ ಲೇಖನ ಮಹತ್ತರತೆಯನ್ನು ಪಡೆದಿದೆ.
   ವಿಶೇಷಾನುಭವ ಷಟ್‍ಸ್ಥಲದ ಆದಿಯಲ್ಲಿನ ಪೀಠಿಕಾ ಭಾಗ ಹಾಗೂ ಅಂತ್ಯದ ಗದ್ಯದಲ್ಲಿ ಚೆನ್ನವೀರಾಚಾರ್ಯ ತನ್ನ ಪರಂಪರೆಯ ಬಗೆಗೆ ಉಲ್ಲೇಖಿಸಿರುವುದನ್ನು ಶಿವಣ್ಣನವರು ಗುರುತಿಸಿದ್ದಾರೆ. ವೀರಶಿವಾಗಮಕೋವಿದರುಂ, ಸರ್ವಾಚಾರ ಪ್ರತಿಪಾದಕರುಮಪ್ಪ ತೋಂಟದ ಸಿದ್ದಲಿಂಗೇಶ್ವರದೇವರು ಮುಖ್ಯವಾದ ಮಹಾನುಭಾವರ ಬೋಧನಾಮೃತ ಸಂತುಷ್ಟ, ಸಕಲ, ಕರಣ ನಿರ್ಮುಕ್ತ ವಿಷಯ ವಿರಕ್ತ, ವೀರಮಾಹೇಶ್ವರಾಚಾರ್ಯ ಸಂಪನ್ನನಪ್ಪ ಚೆನ್ನವೀರಾಚಾರ್ಯನು” ಎಂದಿದ್ದಾನೆ. ಇದರಿಂದ ಚೆನ್ನವೀರಾಚಾರ್ಯನು ತೋಂಟದ ಸಿದ್ಧಲಿಂಗನ ಪರಂಪರೆಗೆ ಸೇರಿದವನೆಂಬುದನ್ನು ಇವರು ಗುರುತಿಸಿದ್ದಾರೆ.
 ಶಿವಯೋಗ ಪ್ರದೀಪಿಕೆ’ಯಲ್ಲಿ 24 ಶಿವಶರಣ/ಶಿವಶರಣೆಯರ 73 ಸ್ವರವಚನಗಳು ರಾಗಸಮೇತ ಉಲ್ಲೇಖವಾಗಿರುವುದನ್ನು ಇವರು ಗುರುತಿಸಿದ್ದಾರೆ. “ಇವುಗಳಲ್ಲಿ ಇಬ್ಬರು ಶಿವಶರಣೆಯರಿದ್ದಾರೆ. 4 ಅಂಕಿತಗಳ ಕೃತಿಕಾರರ ಕಾಲ ತಿಳಿಯದಾಗಿದೆ.”
ಕಾಲಾನುಕ್ರಮವಾಗಿ ‘ಶಿವಯೋಗ ಪ್ರದೀಪಿಕೆ’ಯಲ್ಲಿ ಉಲ್ಲೇಖವಾಗಿರುವ ಸ್ವರವಚನಕಾರರ ಹೆಸರು ಕಾಲ ಹಾಗೂ ಉಲ್ಲೇಖಿತ ಸ್ವರವಚನ ಸಂಖ್ಯೆಗಳ ವಿವರವನ್ನು ಶಿವಣ್ಣನವರು ದಾಖಲಿಸಿದ್ದಾರೆ.
ಸಕಲೇಶ ಮಾದರಸ, ಅಕ್ಕಮಹಾದೇವಿ, ಅಮುಗಿದೇವ, ಚೆನ್ನಬಸವ, ನಿಜಗುಣ, ನಿಜಲಿಂಗ ಚಿಕ್ಕಯ್ಯ, ನೀಲಮ್ಮ, ಪ್ರಭುದೇವ, ಬಸವಣ್ಣ, ಬಹುರೂಪಿ ಚೌಡಯ್ಯ. ಸಿದ್ಧರಾಮ, ಆದಯ್ಯ, ಕರಸ್ಥಲದ ನಾಗಿದೇವ, ಬತ್ತಲೇಶ  ಇತ್ಯಾದಿ ವಚನಕಾರರ ಸ್ವರವಚನಗಳು ಇರುವುದನ್ನು ಗುರುತಿಸಿ ಒಂದೆಡೆ ಸಂಗ್ರಹಿಸಿ ಕೊಟ್ಟಿದ್ದಾರೆ.  
    ಶಿವಯೋಗ ಪ್ರದೀಪಿಕೆಯಲ್ಲಿ ಉಲ್ಲೇಖವಾಗಿರುವ ಹಲವು ಸ್ವರವಚನಗಳು ಶಾಂತಮಲ್ಲೇಶನ ಗಣವಚನ ರತ್ನಾವಳಿ ಯಲ್ಲಿ ಕಾಣಸಿಗುತ್ತವೆ” ಎನ್ನುವುದನ್ನು ಇವರು ಗುರುತಿಸಿದ್ದಾರೆ. ಈ ಪಟ್ಟಿಯಲ್ಲಿ ಅಂಕಿತಗಳಿರಬಹುದು, ಎಂಬ ಅನುಮಾನಗಳಿರುವ ಕಡೆಗಳಲ್ಲಿ ಹೆಸರಿನ ಹಿಂದೆ ಪ್ರಶ್ನಾರ್ಥಕ ಚಿನ್ನೆಗಳನ್ನು ಕೊಟ್ಟಿದ್ದಾರೆ. ಚೆನ್ನವೀರಾಚಾರ್ಯನ ‘ಶಿವಯೋಗ ಪ್ರದೀಪಿಕೆ’ ಸ್ವರವಚನ ಸಂಕಲನದ ಮೂಲಕ ಬಸವಯುಗದ ವಚನಕಾರರು ವಚನಗಳ ಜೊತೆಗೆ ಹಾಡುಗಳನ್ನು ಬರೆದಿದ್ದಾರೆ, ಎಂಬುದನ್ನು ಎಸ್. ಶಿವಣ್ಣನವರ ಶೋಧನೆಯ ಮೂಲಕ ತಿಳಿದು ಬಂದಿದ್ದು ಅವರನ್ನು ಬೇರೊಂದು ನೆಲೆಗಟ್ಟಿನಲ್ಲಿಯೂ ಅಧ್ಯಯನ ಮಾಡಲು ಸಹಕಾರಿಯಾಗಿದೆ.
ಕಂಬಾಳ ಶಾಂತಮಲ್ಲೇಶನ ‘ಗಣವಚನ ರತ್ನಾವಳಿ’
ಪುರಾತನ, ನೂತನ ಸ್ವರವಚನಕಾರರ 216 ಸ್ವರವಚನಗಳ ಬೃಹತ್ ಸ್ವರವಚನಗಳ ಸಂಕಲನ ಕೃತಿ ‘ಗಣವಚನ ರತ್ನಾವಳಿ’ಯನ್ನು ಕಂಬಾಳದ ಶಾಂತಮಲ್ಲೇಶನು ಸಂಗ್ರಹಿಸಿದ್ದಾನೆ. ಈ ಸಂಕಲನವನ್ನು ಎಸ್.ಉಮಾಪತಿಯವರು ಸಂಪಾದಿಸಿದ್ದಾರೆ. “ಕವಿಚರಿತೆ ಕಾರರು ಈತನಿಗೆ ಕಂಬಾಳದೇವ ಎಂಬ ಇನ್ನೊಂದು ಹೆಸರಿರುವ ಹಾಗೂ ಷಟ್‍ಸ್ಥಲಚಾರ್ಯವರ್ಯ ಎಂಬ ವಿಶೇಷಣವಿರುವ ಬಗೆಗೆ ಉಲ್ಲೇಖಿಸಿದ್ದಾರೆ.” ಈತನ ಕಾಲ ಸು.1600. ಈ ಸ್ವರವಚನ ಸಂಕಲನದ ವೂಶಿಷ್ಟ್ಯ ಮತ್ತು ಸ್ವರೂಪವನ್ನು  ಎಸ್. ಶಿವಣ್ಣನವರು ಲೇಖನವೊಂದರಲ್ಲಿ ಪರಿಚಯಿಸಿದ್ದಾರೆ.ಈ ಸಂಕಲಿತ ಕೃತಿಯ ಆದಿಯಲ್ಲಿ ಪೀಠಿಕಾ ರೂಪದ ಭಾಗವೊಂದಿದ್ದು ವೃತ್ತ, ಕಂದ, ಷಟ್ಪದಿಗಳಲ್ಲಿದೆ. ಸಂಕಲನದ ಸ್ವರೂಪದ ಬಗೆಗೆ, ಆದಿಯ ಬಸವೇಶ್ವರ ಸ್ತುತಿ ಶಾರ್ದೂಲವಿಕ್ರೀಡಿತ ವೃತ್ತದಲ್ಲಿದೆ. 2-3-4ನೆಯ ಪದ್ಯಗಳು ಕಂದದಲ್ಲಿದ್ದು ಕೃತಿಯ ಸ್ಥಲವಿಂಗಡಣೆ, ಹೆಸರು ಹಾಗೂ ವಿಶೇಷತೆಗಳನ್ನು ನಿರೂಪಿಸಿದೆ ಎಂದೂ, 5ನೆಯ ವೃತ್ತ ಮತ್ತೇಭವಿಕ್ರೀಡಿತದಲ್ಲಿದ್ದು ಲಿಂಗಾಂಗ ಸಂಯೋಗದ ಬಗೆಗೆ ಉಲ್ಲೇಖಿಸಿರುವುದನ್ನು ತಿಳಿಸಿದ್ದಾರೆ. ಕೃತಿಯಲ್ಲಿ 216 ಸ್ಥಲಗಳನ್ನು ಹೆಸರಿಸಿರುವುದನ್ನು ಪ್ರಸ್ತಾಪಿಸಿದ್ದಾರೆ.
    ಕೃತಿನಿರಂಜನ ಜಂಗಮ ಸ್ಥಲದಿಂದ ಸರ್ವಶೂನ್ಯ ನಿರವಯ ಸ್ಥಲದವರೆಗಿನ 216 ಸ್ಥಲಗಳಲ್ಲಿ 216 ಸ್ವರವಚನಗಳಿವೆ, ಪ್ರತಿ ಸ್ವರವಚನಕ್ಕೂ ರಾಗಗಳನ್ನು ಸೂಚಿಸಿರುವುದನ್ನು ತೋರಿಸಿ ಕೊಟ್ಟಿದ್ದಾರೆ.
216 ಸ್ವರವಚನಗಳ ಆರಂಭದಲ್ಲಿ ಆಯಾ ಸ್ಥಲಗಳಿಗೆ ಸಂಬಂಧಿಸಿದಂತೆ ಗದ್ಯರೂಪದ ಸೂತ್ರಗಳಿವೆ. 216 ಸ್ಥಲಗಳ ನಿರೂಪಣಾ ನಂತರ ವಾರ್ಧಕ ಷಟ್ಪದಿಯೊಂದಿದ್ದು ಅದರಲ್ಲಿ ಕೃತಿಯಲ್ಲಿ ಉಪಯೋಗಿಸಿಕೊಳ್ಳಲಾದ ಸ್ವರವಚನಗಳ ಕರ್ತೃಗಳನ್ನು ಹೆಸರಿಸಿದೆ. ಅನಂತರ ರಗಳೆ ರೂಪದಲ್ಲಿನ ‘ಆದ್ಯ ಜಯಗದ್ಯ’ ಎಂಬ ಭಾಗದಲ್ಲಿ ಶಿವಶರಣರನ್ನು ಹೆಸರಿಸಲಾಗಿದೆ. ಇಲ್ಲಿರುವ ಸಿದ್ಧಲಿಂಗರ ಉಲ್ಲೇಖ ಗಮನಾರ್ಹವಾಗಿದ್ದು. ಈ ಸಂಕಲನ ಕಾರನ ಕಾಲನಿರ್ಣಯಕ್ಕೆ ಒಂದು ಪ್ರಮುಖ ನಿರ್ಧಾರಕ ಆಧಾರವಾಗಿರುವುದನ್ನು ಶಿವಣ್ಣನವರು ಗಮನಿಸಿದ್ದಾರೆ. ಗಣವಚನ ರತ್ನಾವಳಿ’ ಯಲ್ಲಿ ಶಿವಶರಣ/ಶರಣೆಯರ 216 ಸ್ವರವಚನಗಳಿವೆ. ಇದರಲ್ಲಿ 28 ಶಿವಶರಣ/ಶರಣೆಯರನ್ನು ಎಸ್. ಶಿವಣ್ಣನವರು ಗುರುತಿಸಿದ್ದಾರೆ. ಉಳಿದ 36 ಅಂಕಿತಗಳ ಕೃತಿಕಾರರ ಹೆಸರಾಗಲಿ, ಕಾಲವಾಗಲಿ ಅಥವಾ ಅವರಿಗೆ ಸಂಬಂಧಿಸಿದ ಯಾವುದೇ ವಿಚಾರಗಳಾಗಲಿ ಬೆಳಕಿಗೆ ಕಂಡುಬಂದಿಲ್ಲದಿರುವುದನ್ನು ಗಮನಿಸಿದ್ದಾರೆ.
   ಗಣವಚನ ರತ್ನಾವಳಿ’ಯಲ್ಲಿ ಕಾಲ ಹಾಗೂ ಹೆಸರುಗಳು ತಿಳಿದಿರುವ ಸ್ವರ ವಚನಾಕಾರರು/ಕಾರ್ತಿಯರನ್ನು ಅನುಕ್ರಮಣಿಕೆಯನ್ನು ಕಾಲಾನುಕ್ರಮದಲ್ಲಿ-ಅದರ ಉಲ್ಲೇಖಿತ ಸ್ವರವಚನ ಸಂಖ್ಯೆಗಳೊಡನೆ ಎಸ್. ಶಿವಣ್ಣನವರು ಒದಗಿಸಿದ್ದಾರೆ.ಈ ಸಂಕಲನದಲ್ಲಿ ಪ್ರಸಿದ್ಧ ಹಾಗೂ ಅಪ್ರಸಿದ್ಧ ವಚನಕಾರರ ಸ್ವರವಚನಗಳನ್ನು ಸಂಕಲಿಸಿರುವುದನ್ನು ಶಿವಣ್ಣನವರು ಗುರುತಿಸಿರುವುದು ಅವರ ಶೋಧನೆಯ ಮಹತ್ವದ ಪ್ರತೀಕವಾಗಿದೆ.
ಹೆಸರುಗಳು ತಿಳಿದು ಬರದಿರುವ ಸ್ವರವಚನಕಾರರ ಅಂಕಿತಗಳನ್ನು ಅಕಾರಾದಿಯಾಗಿ ಕೊಟ್ಟು ಅವುಗಳೊಡಣೆ ಅವರ ಸ್ವರವಚನ ಸಂಖ್ಯೆಗಳನ್ನು ಕೊಡಲಾಗಿದೆ.
ಅಲ್ಲಮ್ಮನಿರ್ವಾಣಿ ಪ್ರಿಯಲಿಂಗ   1
ಕರಸ್ಥಲದ ಶ್ರೀಶಾಂತಮಲ್ಲೇಶ    1
ಕೂಡಲ ಚೆನ್ನಸಂಗನಲ್ಲಿ ಬಸವಣ್ಣ 1
ಕೂಡಲ ಚನ್ನಸಂಗಮೇಶ್ವರಲಿಂಗ 1
ಗುರು ಗೊಹೇಶ್ವರ     2
ಗುರುಚೆನ್ನಮಲ್ಲ 3
ಗುರುಪ್ರಿಯ ಕೂಡಲಚೆನ್ನಸಂಗಯ್ಯ     1
ಗುರುಪ್ರಿಯ ಚೆನ್ನವೀರಸೊಡ್ಡಳ   1
ಗುರುಪ್ರಿಯ ಚೆನ್ನಸೋಮೇಶ್ವರಲಿಂಗ     1
ಗುರುಶಾಂತಮಲ್ಲೇಶ    7
ಗುರುಶಾಂತ ಶಂಕರಲಿಂಗ      1
ಚನ್ನಶ್ರೀ ಗುರುಸಿದ್ಧ ಪ್ರಭುಲಿಂಗ  1
ಚೆನ್ನಶಾಂತೇಶ್ವರ 1
ನಾಗಪ್ರಿಯ ಶಾಂತಲಿಂಗ 1
ನಿಜಗುರು ಮುಗ್ಧಶಾಂತಮಲ್ಲ   1
ನಿಜಗುರು ಶಂಕರೇಶ   1
ನಿಜಗುರುಶಾಂತ 12
ನಿಜಗುರುಶಾಂತಮಲ್ಲ   8
ನಿಜಗುರು ಸಿದ್ಧರಾಮ   1
ನಿಜಗುರು ಸಂಗಯ್ಯ    1
ಪಂಪಾಪತಿ ವಿರೂಪಾಕ್ಷಲಿಂಗ   1
ಪಂಪಾಂಬಿಕೆ ರಮಣ   1
ಪ್ರಭುಕಾಂತ ಕರಸ್ಥಲದಧಿಕ     1
ಪ್ರಸನ್ನ ಮಲ್ಲೇಶ 1
ಪುಲಿಗೆರೆಯಸೋಮನಾಥ     1
ಬಸವಪ್ರಿಯಸಂಗ      1
ಭೋಗಮಲ್ಲೇಶ 1
ಮಹಾಗುರುಸಂಗ      1
ಮಹಾಪ್ರಭು ಮಲ್ಲಿಕಾರ್ಜುನ    1
ವಿದ್ಯಾಶಂಕರ   1
ವಿಶ್ವನಾಥ/ವಿಶ್ವೇಶ      2
ಶಾಂತ 1
ಶಾಂತಲಿಂಗ   1
ಸದ್ಗುರುಸೋಮನಾಥ   1
ಸೋಮೇಶ/ಚೆನ್ನಸೋಮೇಶ    1
ಸ್ವತಂತ್ರವೀರ ಸೊಡ್ಡಳಲಿಂಗ     1
  ಕಂಬಾಳ ಶಾಂತಮಲ್ಲೇಶನ ಗಣವಚನ ರತ್ನಾವಳಿ ಸ್ವರ ವಚನ ಸಂಕಲನವು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸ್ವರವಚನಗಳ ಪರಂಪರೆಯನ್ನು ಗುರುತಿಸಲು ಯಾವ ರೀತಿ ಸಹಕಾರಿಯಾಗಿದೆ ಎಂಬುದು ಎಸ್.ಶಿವಣ್ಣನವರ ಸ್ವರವಚನಗಳ ಶೋಧನೆಯ ಮೂಲಕ ತಿಳಿದು ಬರುತ್ತದೆ. ಇದರ ಜೊತೆಗೆ ಇನ್ನು ಬೆಳಕಿಗೆ ಬಾರದ, ಹೆಸರೇ ಕೇಳಿರದ ಹಲವಾರು ಸ್ವರವಚನಕಾರರು ಮತ್ತು ಅವರ ಸ್ವರವಚನಗಳನ್ನು ಶೋಧಿಸಿ ಬೆಳಕಿಗೆ ತಂದಿದ್ದಾರೆ. ಬೆರಟೂರ ಕರಿಬಸವನ ಶಿವನಾಮ ಸ್ತೋತ್ರ, ಐನೂಲಿಯ ಕರಿಬಸವಾರ್ಯನ ಸ್ವರವಚನ, ಗವಿಯ ಸಿದ್ಧೇಶಾಂಕಿತದ ಸ್ವರವಚನ ಹಾಗೂ ಅಜ್ಞಾತ ಕರ್ತೃಗಳ 20ಕ್ಕೂ ಮೇಲ್ಪಟ್ಟು ಸ್ವರವಚನಗಳನ್ನು ಗುರುತಿಸಿದ್ದಾರೆ.
2. ಹಳಗನ್ನಡ, ನಡುಗನ್ನಡ ಹಾಗೂ ಆಧುನಿಕ ಪೂರ್ವದ ಬೆಳಕಿಗೆ ಬಾರದ ಅಜ್ಞಾತ ಕನ್ನಡ ಕವಿಗಳು ಮತ್ತು ಅವರ ಕೃತಿಗಳ ಶೋಧನೆ, ಕವಿಗಳ ಕಾಲನಿರ್ಣಯ :
  ಕನ್ನಡ ಕವಿಗಳ ಕಾಲ ನಿರ್ಣಯಕ್ಕೆ ಸಂಬಂಧಿಸಿದಂತೆ ಅಧುನಿಕ ಯುಗದ ಪ್ರಥಮ ತಲೆಮಾರಿನ ಸಂಶೋಧಕರಲ್ಲಿ ಅಗ್ರಗಣ್ಯರೆಂದರೆ ಶ್ರೀ ಆರ್. ನರಸಿಂಹಾಚಾರ್ಯರು, ಶ್ರೀಯುತರ ‘ಕರ್ಣಾಟಕ ಕವಿಚರಿತೆ’ಯ ಮೂರು ಸಂಪುಟಗಳಲ್ಲಿ ಸೂಚಿಸಿದ ಅನೇಕ ಕವಿಗಳ ಕಾಲನಿರ್ಣಯವು ಎಸ್. ಶಿವಣ್ಣನವರ ಇತ್ತೀಚಿನ ಸಂಶೋಧನೆಗಳಿಂದ ಹೊಸರೂಪಗಳನ್ನು ಪಡೆದುಕೊಂಡಿವೆ. ಶಿವಣ್ಣನವರು ಕಾಲ ನಿರ್ಣಯದ ಸಂದರ್ಭದಲ್ಲಿ ಅನುಸರಿಸಿರುವ ಮಾರ್ಗಗಳು ತುಂಬ ಗಮನಾರ್ಹವಾದವು ಮತ್ತು ವಿಶ್ವಾಸಾರ್ಹವಾದವುಗಳಾಗಿವೆ. ಹಳಗನ್ನಡ, ನಡುಗನ್ನಡ ಕವಿಗಳ ಕಾಲ ನಿರ್ಣಯ ಹಾಗೂ ಮತ್ತಿತರ ವಿಷಯಗಳ ಕುರಿತ ಎಸ್. ಶಿವಣ್ಣನವರ ಶೋಧನೆಯು ಈಗಿನ ಸಾಹಿತ್ಯ ಚರಿತ್ರೆಯ ವಿವರವನ್ನು ಪುನರ್ ರಚಿಸಲು ಸಹಾಯಕವಾಗಿದೆ. ಕನ್ನಡ ಸಾಹಿತ್ಯ ಸಂಶೋಧನೆ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆ, ಪೂರ್ವ ಕವಿಗಳ ಕಾಲನಿರ್ಣಯ, ಅಪ್ರಕಟಿತ ವಚನಗಳ ಶೋಧ, ಸ್ವರವಚನಗಳ ಸಂಪಾದನೆ, ವಿವಿಧ ಕಾಲಮಾನದ ಕವಿಕೃತಿಗಳಿಗೆ ಸಂಬಂಧಿಸಿದ ಸಂಪ್ರಬಂಧಗಳು ಮುಂತಾದವುಗಳಿಗೆ ಸಂಬಂಧಿಸಿದಂತೆ ಶ್ರೀಯುತರು ಸಂಶೋಧನಾ ಲೇಖನಗಳನ್ನು ಸಂಕಲಿಸಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ‘ಬಿಡು ಮುತ್ತು’ ಎಂಬ  ಬಿಡಿಲೇಖನಗಳ  ಸಂಕಲನವನ್ನು ಆಸಕ್ತರು ಗಮನಿಸ ಬಹುದಾಗಿದೆ.
ಆಧುನಿಕ ಪೂರ್ವ ಕವಿಗಳ ಕಾಲನಿರ್ಣಯದ ಸಂದರ್ಭಗಳಲ್ಲಿ  ಇವರು ಅನುಸರಿಸಿರುವ  ಸಂಶೋಧನಾ ವೈಜ್ಞಾನಿಕ ಮಾನದಂಡಗಳನ್ನು ಈ ಕೆಳ ಕಂಡಂತೆ ಗುರುತಿಸ ಬಹುದಾಗಿದೆ.
* ಲಿಪಿಕಾರರು ಕೃತಿಯನ್ನು ಪ್ರತಿಮಾಡಿಕೊಳ್ಳುವಾಗ ಪ್ರತಿಮಾಡಿಕೊಂಡ ಕಾಲವನ್ನು  ಅಧರಿಸಿರುವುದು.
* ಕಾಲಕಾಲಕ್ಕೆ ರಚಿತವಾದ ಕವಿಕೃತಿಗಳಲ್ಲಿನ ಪೂರ್ವ ಕವಿಗಳ ಸ್ಮರಣೆ, ಸ್ಮರಿಸುವಾಗ ಉದಾಹರಿಸಿದ ಪದ್ಯಗಳ ಮೂಲ, ಮತ್ತು ಅಂತರ್‍ಸಾಕ್ಷಿಯಾಗಬಲ್ಲ ಹೇಳಿಕೆಗಳನ್ನು ಪರಿಶೀಲಿಸಿರುವುದು.
* ಕಾಲೋಲ್ಲೇಖ ನಿಖರವಾಗಿ ತಿಳಿಯದ ಕವಿಯ ಸಮಕಾಲಿನ ಇತರ ಕವಿಗಳ ಕಾಲೋಲ್ಲೇಖಿತ ಕೃತಿಗಳಿಂದ ಅರ್ಥೈಸಲು ಪ್ರಯತ್ನಿಸಿರುವುದು.
* ಸ್ವಂತ ಕವಿಯ ಓಲೆಗರಿಯು ಲಭ್ಯವಾದಾಗ ಅದನ್ನು ಪ್ರತಿಮಾಡಿದ ಕಾಲೋಲ್ಲೇಖದ ವಿವರಗಳನ್ನು ಬಳಸಿಕೊಂಡಿರುವುದು.
* ಕೃತಿರಚನೆಯ ಸಮಕಾಲಿನ ಸಂದರ್ಭದಲ್ಲಿ ಸಂಭವಿಸಿದ, ಘಟಿಸಿದ ಐತಿಹಾಸಿಕ ಘಟನೆಗಳ ಕಾಲಮಾನಗಳನ್ನುಪ್ರಾಸಂಗಿಕವಾಗಿ ಬಳಸಿ ಕೊಂಡಿರುವುದು. ಉದಾಹರಣೆಯಾಗಿ ಗೊಮ್ಮಟನ ಮಹಾಮಸ್ತಕಾಭಿಶೇಕ, ನಂಜನಗೂಡಿನ ಜಾತ್ರೆ, ಅಕ್ಬರ್ ಬಾದಷಹಾನು ಸನ್ಮಾನಿಸಿದ್ದ ಕಾಲವನ್ನು ಕಲ್ಪಿಸಿದ್ದು, ಇತ್ಯಾದಿಗಳು.
* ಕವಿಯ ಅಥವಾ ಕೃತಿಯ ಸಮಕಾಲಿನ ಸಂದರ್ಭದಲ್ಲಿ ರಚಿತವಾದ, ಕಾಲೋಲ್ಲೇಖಿತವಾದ ಶಾಸನಗಳನ್ನು ಆಧರಿಸಿರುವುದು.
* ಗುರು ಮತ್ತು ಶಿಷ್ಯ ಪರಂಪರೆಯ ದಾಖಲೆಗಳನ್ನು ಆಶ್ರಯಿಸಿರುವುದು.
ಕವಿಗಳ ಕಾಲ ನಿರ್ಣಯಕ್ಕೆ ಸಂಬಂಧಿಸಿದ ಹಾಗೆ ಕೆಲವು ನಿದರ್ಶನಗಳು:
1.ನೇಮರಸನ ಕಾಲವಿಚಾರ
ಬಿ.ಎಸ್. ಕುಲಕರ್ಣಿ ಅವರಿಂದ ಸಂಪಾದನೆಗೊಂಡು ಪ್ರಕಟಿತವಾಗಿರುವ ನೇಮರಸನ ಲೋಭದತ್ತ ಚರಿತೆಯು ಕವಿಚರಿತೆಕಾರರ ಗಮನಕ್ಕೆ ಬಾರದ ಕೃತಿಗಳಲ್ಲೊಂದು. ಈ ಕೃತಿ ಸಾಂಗತ್ಯ ಹಾಗೂ ರಗಳೆಗಳಲ್ಲಿದ್ದು ಇದರ ವಸ್ತು ಅನ್ನದಾನದ ಮಹಿಮೆಯ ಪ್ರತಿಪಾದನೆಯಾಗಿದೆ. ನೇಮರಸ ತನ್ನ ಕಾಲದ ಬಗ್ಗೆ ಕೃತಿಯಲ್ಲಿ ಏನೂ ಸೂಚಿಸಿಲ್ಲ. ಅಲ್ಲದೇ ಮುಂದಿನ ಕವಿಗಳು ನೇಮರಸನನ್ನು ಹೆಸರಿಸಿದಂತಿಲ್ಲ. ಈತನ ಕಾಲದ ಬಗೆಗೆ “ನಮಗೆ ದೊರೆತ ತಾಳೇಗ್ರಂಥದ ಹಿನ್ನೆಲೆಯಲ್ಲಿ ಸುಮಾರು 200 ವರ್ಷಗಳ ಹಿಂದೆ ಈ ಕವಿ ಬದುಕಿರಬಹುದೆಂದು ತರ್ಕಿಸಬಹುದಾಗಿದೆ” ಎಂದು ಕೃತಿಯ ಮುನ್ನುಡಿಯಲ್ಲಿ ಕೃತಿಯ ಸಂಪಾದಕರು ಹೇಳಿದ್ದಾರೆ.
 ನೇಮರಸ ‘ಲೋಭದತ್ತ ಚರಿತೆ’ಯ ಪ್ರಥಮ ಸಂಧಿ ಪದ್ಯ 26 ರಲ್ಲಿ ತಾನು ಮೊದಲು ‘ಸುದರುಸನ ಚರಿತೆ’ಯನ್ನು ರಚಿಸಿರುವುದಾಗಿ ಹೇಳಿದ್ದಾನೆ. ಈ ಕೃತಿಯ ಓಲೆ ಪ್ರತಿಯೊಂದು ಉಪಲಬ್ಧವಿದ್ದು ‘ಮೂಡಬಿದಿರೆಯ ಚೌಟರ ಧರ್ಮ ಸಾಮ್ರಾಜ್ಯ’ದಲ್ಲಿದೆ.” ಅದರಲ್ಲಿ ನೇಮರಸನು ತಾನು ‘ಸುದರುಸನ ಚರಿತೆ’ಯನ್ನು ಶಾಲೀವಾಹನ ಶಕೆ 1406 (ಕ್ರಿ.ಶ. 1584 - 1585) ರಲ್ಲಿ ವಿರಚಿಸಿರುವಂತೆ ತಿಳಿಸಿರುವುದನ್ನು ಶಿವಣ್ಣನವರು ಗಮನಿಸಿದ್ದಾರೆ. ಈ ಕಾರಣದಿಂದಾಗಿ ನೇಮರಸನು 15ನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿ ತನ್ನ ಕೃತಿಗಳನ್ನು ರಚಿಸಿದನೆಂಬುದಾಗಿ ಇವರು  ಶೋಧಿಸಿ ನಿರೂಪಿಸಿರುವ ವಿವರಗಳನ್ನು  ಸದ್ಯಕ್ಕೆ ಇಟ್ಟುಕೊಳ್ಳ ಬಹುದಾಗಿದೆ.
2.ಪಾಯಣ್ಣವ್ರತಿಯ ಕಾಲವಿಚಾರ
ಸಾಂಗತ್ಯ ಪ್ರಕಾರದಲ್ಲಿ ರಚಿತವಾಗಿರುವ ‘ಸಂಯುಕ್ತ್ವಕೌಮುದಿ’ಯ ಕರ್ತೃ ಪಾಯಣ್ಣವೃತಿ. ಈತ ಸೇನಗಣದ ಲಕ್ಷೀಸೇನ ಮುನಿಯಿಂದ ದೀಕ್ಷೆ ಹೊಂದಿದ್ದು, ಈತನ ಕಾಲವನ್ನು ಆರ್.ನರಸಿಂಹಾಚಾರ್ಯರು ಸುಮಾರು 1600 ಆಗಿರಬಹುದು ಎಂದು ಸೂಚಿಸಿದ್ದರು. ಆದರೆ ಇತ್ತೀಚೆಗೆ ಪಾಯಣ್ಣವ್ರತಿ ಪ್ರತಿ ಮಾಡಿದ ನಾಗವರ್ಮನ ‘ವೀರವರ್ಧಮಾನ ಪುರಾಣ’ಮತ್ತು ಅಗ್ಗಳನ ‘ಚಂದ್ರಪ್ರಭ ಪುರಾಣ’ ಗಳ ಪ್ರತಿಗಳು ಲಭಿಸಿದ್ದು, ಇವುಗಳ ಅಂತ್ಯದಲ್ಲಿ ಪಾಯಣ್ಣವ್ರತಿ ತಾನು ಅವುಗಳನ್ನು ಪ್ರತಿಮಾಡಿದ ಕಾಲಗಳನ್ನು  ಉಲ್ಲೇಖಿಸಿರುವುದನ್ನು ಎಸ್.ಶಿವಣ್ಣನವರು  ಗುರುತಿಸಿದ್ದಾರೆ. ಅವು ಅನುಕ್ರಮವಾಗಿ ಹೀಗಿವೆ:
1. ವೀರವರ್ಧಮಾನ ಪುರಾಣ - ಶಾ.ಶ. 1489
2. ವರ್ಧಮಾನ ಪುರಾಣ(ಅಚಣ್ಣ) - ಶಾ.ಶ. 1491
3. ಅಗ್ಗಳನ ಚಂದ್ರಪ್ರಭ ಪುರಾಣ - ಶಾ.ಶ. 1494
ಈ ಕೃತಿಗಳು ಕ್ರಿ.ಶ. 1567, 1569, 1572 ರಲ್ಲಿ ಪ್ರತಿಯಾಗಿವೆ. ಹೀಗಾಗಿ ಪಾಯಣ್ಣವ್ರತಿಯ ಕಾಲವನ್ನು ಕವಿಚರಿತೆಕಾರರು ಸೂಚಿಸಿದ ಕಾಲ ಕ್ರಿ.ಶ. 1600 ಕ್ಕಿಂತ ಸುಮಾರು 50 ವರ್ಷ ಹಿಂದಕ್ಕೆ ಹಾಕಿ ಅವನ ಕಾಲವನ್ನು 1550 ಎಂದು ಪರಿಗಣಿಸ ಬಹುದು” ಎಂದು ಎಸ್.ಶಿವಣ್ಣನವರು ದಾಖಲೆಗಳ ಆಧಾರದಿಂದ ಸೂಚಿಸಿದ್ದಾರೆ. ಅಲ್ಲದೆ ಈ ಪ್ರತಿಗಳ ಮೂಲಕ ಪಾಯಣ್ಣವ್ರತಿಯ ಸ್ವಹಸ್ತಾಕ್ಷರ ಪ್ರತಿಗಳನ್ನು ಗುರುತಿಸುವಂತಾಗಿದೆ.
ಅಜ್ಞಾತ ಕರ್ತೃವಿನ ಪುಷ್ಪದಂತ ಪುರಾಣದ ಅಭಿಜ್ಞೆ:
3.ಅಭಿನವವಾದಿ ವಿದ್ಯಾನಂದನು ಕಾವ್ಯಸಾರವನ್ನು ಕ್ರ್ರಿ.ಶ.1533 ರಲ್ಲಿ ಸಂಕಲಿಸಿ ಕೊಟ್ಟಿದ್ದಾನೆ. ಈ ಸಂಕಲನದಲ್ಲಿ 45 ಅಧ್ಯಾಯಗಳಿದ್ದು 1117 ಮತ್ತು 6 ಪದ್ಯಗಳಿವೆ. ಈತನು ತನ್ನ ಕೃತಿಯಲ್ಲಿಯ ಉದ್ಧೃತ ಪದ್ಯಗಳಿಗೆ ಆಕರಗಳನ್ನು ಕೊಟ್ಟಿರುವುದರಿಂದ ಕನ್ನಡ ಸಾಹಿತ್ಯ ಚರಿತ್ರೆಯ ಅಭ್ಯಾಸಿಗಳಿಗೆ ಈ ಸಂಕಲನ ಕೃತಿಯಿಂದ ಹೆಚ್ಚಿನ ಅನುಕೂಲವಾಗಿದೆ. ಅಭಿನವವಾದಿ ವಿದ್ಯಾನಂದನು ಪುಷ್ಪದಂತಪುರಾಣ ಎಂಬ ಕೃತಿಗೆ ಸಂಬಂಧಿಸಿದಂತೆ ನಾಲ್ಕು ಕಂದ ಪದ್ಯಗಳು ಮತ್ತು ಮೂರು ವೃತ್ತಗಳನ್ನು ಉಲ್ಲೇಖಿಸಿದ್ದಾನೆ. ಈ ಉಲ್ಲೇಖಗಳು ನಂತರದಲ್ಲಿ ಅವನೇ ಉಲ್ಲೇಖಿಸಿರುವ ಎರಡನೆಯ ಗುಣವರ್ಮನ ಪುಷ್ಪದಂತ ಪುರಾಣದಲ್ಲಿ ಇಲ್ಲದಿರುವುದನ್ನು ಎಸ್.ಶಿವಣ್ಣನವರು ಖಚಿತ ಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕಂದ ವೃತ್ತಗಳನ್ನುಳ್ಳ ಪುಷ್ಪದಂತ ಪುರಾಣವು ಎರಡನೆಯ ಗುಣವರ್ಮನ ಕೃತಿಗಿಂತ ಭಿನ್ನವಾದುದೆಂದು ಮತ್ತು ಕನ್ನಡದಲ್ಲಿ ಮತ್ತೊಂದು ಪುಷ್ಪದಂತಪುರಾಣವು ರಚಿತವಾಗಿರುವುದು ಕಾವ್ಯಸಾರ ಸಂಕಲನದಿಂದ ಬೆಳಕಿಗೆ ಬಂದಿದ್ದನ್ನು ಶಿವಣ್ಣನವರು ಗಮನಿಸಿದ್ದಾರೆ. ಈ ಅಜ್ಞಾತ ಕರ್ತೃವಿನ ಪುಷ್ಪದಂತ ಪುರಾಣವು ಕ್ರ.ಶ. 1040 ಕ್ಕಿಂತ ಪೂರ್ವದಲ್ಲಿಯೇ ರಚನೆಯಾಗಿದ್ದು ಇದರ ಕರ್ತೃ ಯಾರೆಂಬುದಾಗಿ ತಿಳಿದು ಬಂದಿಲ್ಲ. ಇವರ ಶೋಧನೆಯ ಮೂಲಕ ಎರಡನೆ ಗುಣವರ್ಮನಿಗಿಂತ ಪೂರ್ವದಲ್ಲಿಯೇ ಮತ್ತೊಂದು ಪುಷ್ಪದಂತಪುರಾಣ ರಚನೆಯಾಗಿರುವುದು ಬೆಳಕಿಗೆ ಬಂದಿದೆ.
4.ಚಂದ್ರಮನ ಕಾಲವಿಚಾರ ಮತ್ತು ಗಣಿತಸಾರ ಪರಿಚಯ:
ಕವಿ ಚರಿತೆಕಾರರು ಚಂದ್ರಮ ಕವಿಯ ಬಗೆಗೆ, ಈತನು ಜೈನಕವಿ, ಚಂದ್ರಕೀರ್ತಿ ಯೋಗೀಶ್ವರನ ಶಿಷ್ಯನು, ತುಳು ಮಧುರೆಯ ಅಳಿಯರಪುರದವ, ಇವನು ಗಣಿತ ಸಾರ ಕೃತಿಯನ್ನು ಬರೆದಿರುವದಾಗಿಯೂ ಈಕೃತಿಯು ಲಭ್ಯವಿಲ್ಲ ಎಂದು ತಮ್ಮ ಕವಿ ಚರಿತೆಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಗಣಿತಸಾರ ಕೃತಿಯ ಹಸ್ತಪ್ರತಿಯು ಬೆ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ ಹಸ್ತಪ್ರತಿ ಸಂಖ್ಯೆ ಕೆ.1220/4, ಗರಿ ಸಂಖ್ಯೆ: (1-26)ಯಲ್ಲಿ ಇರುವುದನ್ನು ಎಸ್. ಶಿವಣ್ಣನವರು ಶೋಧಿಸಿದ್ದಾರೆ. ಈ ಕೃತಿಯ ಅಂತ್ಯದಲ್ಲಿ ಕವಿಯು ತನ್ನ ಕಾಲವನ್ನು ತಿಳಿಸಿದ್ದಾನೆ. `ಸಂದ ಶಕವರ್ಷ ಸಾಸಿರದಿಂದತ್ತೈನೂರು ಮೇಲೆ ನಾಲ್ವತ್ತೈದು ದುಂದುಭಿ ವತ್ಸರ ಜೇಷ್ಠದಿ ಚಂದ್ರನು ಕಂದಗಳ ಪೇಳ್ದ ಗಣಿತ ವಿಲಾಸಾ’ ಎಂಬ ಕೃತಿಯ ಆಂತರಿಕ ಉಲ್ಲೇಖದಿಂದ ಈ ಕೃತಿಯನ್ನು ಕ್ರ.ಶ. 1623 ರಲ್ಲಿರಚಿಸಿದುದಾಗಿ ತಿಳಿದು ಬರುತ್ತದೆ. ಈ ಹಿನ್ನೆಲೆಯಲ್ಲಿ ಚಂದ್ರಮನ ಕಾಲವನ್ನು ಕವಿಚರಿತೆಕಾರರು ಸೂಚಿಸಿದ್ದ ಸುಮಾರು 1650 ಎಂಬುದಕ್ಕೆ ಬದಲಾಗಿ ಕ್ರಿ.ಶ. 1623 ಎಂಬುದಾಗಿ ಎಸ್. ಶಿವಣ್ಣನವರು ಸೂಚಿಸಿರುವುದನ್ನು ಸಧ್ಯದ ಸಂದರ್ಭದಲ್ಲಿ ಪರಿಗಣಿಸ ಬಹುದಾಗಿದೆ.
  5. ಕಸ್ತೂರಿ ಸಿದ್ಧನ ಕಾಲ ವಿಚಾರ:
ಚೋರಕಥೆ’ ಅಥವಾ ‘ಚಿತ್ರಶೇಖರ ಸೋಮಶೇಖರನ ಕಥೆ’ (ಯಕ್ಷಗಾನ) ಹಾಗೂ ‘ಗುರುಭಕ್ತನ ಕಥೆ’ (ಸಾಂಗತ್ಯ)ಗಳನ್ನು ರಚಿಸಿದ ಕಸ್ತೂರಿಸಿದ್ಧನ ಕಾಲದ ಬಗೆಗೆ ರಾವ್ ಬಹದ್ದೂರ್ ಆರ್. ನರಸಿಂಹಾಚಾರ್ಯರು ‘ಇವನ ಕಾಲವು ಸುಮಾರು 1800 ಆಗಿರಬಹುದು’ ಎಂದಿದ್ದಾರೆ.
ಕಸ್ತೂರಿಸಿದ್ಧನ ಉಪಲಬ್ಧ ಚೋರಕಥೆಯ ಓಲೆಪ್ರತಿಯೊಂದು ದೊರೆತಿದ್ದು ಅದರಲ್ಲಿ ಶಾಲೀವಾಹನ ಶಕ ವರ್ಷಂಗಳು 1699 ಖರನಾಮ ಸಂವತ್ಸರ ಮಾಘ ಶು. 3 ಗುರುವಾರದಲ್ಲೂ ಪ್ರತಿಯಾಗಿರುವುದನ್ನು ಎಸ್. ಶಿವಣ್ಣನವರು ಗುರುತಿಸಿದ್ದು ಅದರ ಆಧಾರದ ಮೇಲೆ      ಅಂದರೆಚೋರಕಥೆಯ ಉಪಲಬ್ಧ ಪ್ರತಿಯ ಕಾಲವಾದ ಕ್ರಿ.ಶ 1777ಕ್ಕಿಂತ ಹಿಂದೆ ಕಸ್ತೂರಿಸಿದ್ಧ ಜೀವಿಸಿದ್ದನೆಂಬುದರಲ್ಲಿ ಸಂಶಯವಿಲ್ಲ ಕ್ರಿ.ಶ 1750 ನ್ನು ಕಸ್ತೂರಿಸಿದ್ಧನ ಕಾಲವೆಂದು ತತ್ಪೂರ್ವಿಕವಾಗಿ ನಿರ್ಧರಿಸಬಹುದಾಗಿದೆ” ಎಂದು ಇವರು ಸೂಚಿಸಿದ್ದಾರೆ.
6.ಅಂಬುಲಿಗೆ ಚೆನ್ನಮಲ್ಲೇಶ ಮತ್ತು ಶಿವಸಿದ್ದರಾಮನ ಕಾಲವಿಚಾರ:
 ಆರ್. ನರಸಿಂಹಾಚಾರ್ಯರು ‘ಕರ್ಣಾಟಕ ಕವಿಚರಿತೆ’ ದ್ವಿತಿಯ ಸಂಪುಟ, ಪುಟ 543 ರಲ್ಲಿ ಚೆನ್ನಮಲ್ಲೇಶನ ಕಾಲವನ್ನು ಕುರಿತು ಪೂರ್ವಕವಿಗಳಲ್ಲಿ ಚಾಮರಸನನ್ನು (ಸು.1430) ಸ್ತುತಿಸುವುದರಿಂದ ಕವಿ ಅವನ ಕಾಲಕ್ಕಿಂತ ಈಚೆಯವನು ಎಂಬುದು ವ್ಯಕ್ತವಾಗಿದೆ. ಸು.1700ರಲ್ಲಿ ಇದ್ದಿರಬಹುದು ಎಂದಿದ್ದಾರೆ.
 ಚೆನ್ನಮಲ್ಲೇಶ ಚಾಮರಸನನ್ನು ‘ದೀಪದ ಕಲಿಯರ ಕಾವ್ಯ’ದಲ್ಲಿ (1-8) ಸ್ಮರಿಸಿದ್ದಾನೆ. ಈ ದೀಪದ ಕಲಿಯರ ಹಸ್ತಪ್ರತಿಯೊಂದನ್ನು ‘ತೇರದಾಳದ ಪ್ರಭುವಿನ ವಾಲೈಸುವ ಚನ್ನಪ್ಪನ ಉದರದಿ ಜನಿಸಿದಂತ ಮಗಿಯ್ಯಯನು’ ಶಾಲಿವಾಹನ ಶಕೆ 1617 (ಕ್ರಿ.ಶ 1695) ರಲ್ಲಿ ಪ್ರತಿ ಪ್ರತಿಮಾಡಿದ್ದಾನೆ. ಈ ಪ್ರತಿಯ ಕಾಲವನ್ನು ಆಧರಿಸಿ ಅಂಬಲಿಗೆ ಚೆನ್ನಮಲ್ಲೇಶನ ಕಾಲವನ್ನು ಕವಿಚರಿತೆಕಾರರು ಸೂಚಿಸಿರುವುದಕ್ಕಿಂತ ಸುಮಾರು 25-30 ವರ್ಷ ಹಿಂದಕ್ಕೆ ಎಸ್.ಶಿವಣ್ಣನವರು ಕೊಂಡೊಯ್ದಿದ್ದಾರೆ. ಆದರಿಂದ ಕವಿಯ ಕಾಲ ಸು.1670 ಆಗುತ್ತದೆ.
ಡಿ.ಎಲ್. ನರಸಿಂಹಾಚಾರ್ಯರು ‘ವೀರಶೈವ ಶಿಖಾರತ್ನ’ದ ಕರ್ತೃ ಶಿವಸಿದ್ಧರಾಮನ ಕಾಲವನ್ನು ಚರ್ಚಿಸುತ್ತ “ಇವನ ಗುರು ಚೆನ್ನಮಲ್ಲೇಶನು ಸು.1700ರಲ್ಲಿದ್ದ ‘ದೀಪದ ಕಲಿಯರ ಕಾವ್ಯ’, ‘ವೀರಸಂಗಯ್ಯನ ಚೌಪದ’ ಎಂಬ ಗ್ರಂಥಗಳ ಕರ್ತೃವಾದ ಚೆನ್ನಮಲ್ಲೇಶನಾಗಿದ್ದಲ್ಲಿ ಅವನ ಶಿಷ್ಯ ಶಿವಸಿದ್ಧರಾಮನ ಕಾಲವು ಸುಮಾರು 1700 ಆಗುತ್ತದೆ.” ಎಂದಿದ್ದಾರೆ. “ಈ ಮೊದಲು ತಿಳಿಸಿದಂತೆ ಅಂಬುಲಿಗೆ ಚೆನ್ನಮಲ್ಲೇಶನ ಕಾಲ ಸು. 1670 ಆಗಿದ್ದು, ಅವನ ಶಿಷ್ಯನಾಗಿರಬಹುದಾದ ಶಿವಸಿದ್ಧರಾಮನ ಕಾಲವು ಸಹ ಸು. 1670 ಆಗುತ್ತದೆ” ಎಂದು ಶಿವಸಿದ್ಧರಾಮನ ಕಾಲವನ್ನು ಗುರುತಿಸುವ ಪ್ರಯತ್ನವನ್ನು ಶಿವಣ್ಣನವರು ಮಾಡಿದ್ದಾರೆ.
ಉತ್ತರದೇಶದ ಬಸವಲಿಂಗನ ಕಾಲವಿಚಾರ:
ಬಸವೇಶ್ವರ ಪುರಾಣದ ಕಥಾಸಾಗರ, ಭೈರವೇಶ್ವರ ಪುರಾಣದ ಕಥಾಸಾಗರ, ಉಚಿತ ಕಥೆಗಳು ಮತ್ತು ತಾತ್ಪರ್ಯ ಸಂಗ್ರಹ(ಸಂಸ್ಕೃತದಲ್ಲಿ)ಗಳ ಸಂಕಲನಕಾರ ಉತ್ತರ ದೇಶದ ಬಸವಲಿಂಗನ ಕಾಲದ ಬಗೆಗೆ ಆರ್. ನರಸಿಂಹಾಚಾರ್ಯರು “ಇವನ ಕಾಲವು ಭೈರವೇಶ್ವರ ಕಾವ್ಯವನ್ನು ಬರೆದ ಕಿಕೇರಿಯಾರಾಧ್ಯ ನಂಜುಂಡನ (ಸು.1550) ಕಾಲಕ್ಕಿಂತ ಈಚೆ ಎಂಬುದು ವ್ಯಕ್ತವಾಗಿಯೇ ಇದೆ. ಸು.1600 ರಲ್ಲಿ ಇವನು ಇದ್ದಿರಬಹುದು” ಎಂದಿದ್ದಾರೆ. ಆದರೆ ಉತ್ತರದೇಶದ ಬಸವಲಿಂಗನೇ ಸ್ವಂತ ಪ್ರತಿಮಾಡಿದ ಓಲೆ ಕಟ್ಟೊಂದು ಮೈಸೂರಿನಲ್ಲಿರುವ ಶ್ರೀ ಡಿ. ಸಿದ್ಧಗಂಗಯ್ಯ ಅವರಿಗೆ ಲಭಿಸಿದೆ. ಅದರಲ್ಲಿನ ಕೆಲವು ಕೃತಿಗಳ ಅಂತ್ಯದಲ್ಲಿ ಉತ್ತರದೇಶದ ಬಸವಲಿಂಗನು ತಾನು ಪ್ರತಿಮಾಡಿದ ಕಾಲವನ್ನು ತಿಳಿಸಿರುವುದನ್ನು ಗಮನಿಸಿದ ಎಸ್. ಶಿವಣ್ಣನವರು ಅದರ ಮೂಲಕ ಉತ್ತರ ದೇಶದ ಬಸವಲಿಂಗನ ಕಾಲವನ್ನು ಪುನರ್ ರಚಿಸುವ ಪ್ರಯತ್ನವನ್ನು ಮಾಡಿದ್ದಾರೆ.
1. ಭೈರವೇಶ್ವರ ಕಾವ್ಯದ ಅಂತ್ಯ- “ರಾಮಗಿರಿಯ ಕರಿಯ ಸಿದ್ಧೇಶ್ವರದೇವರ ಕರಕಮಲದಲುದಯವಾದ ಬಸವಲಿಂಗದೇವರು ಬಸವೇಶ್ವರನ ಪುರಾಣ ಭೈರವೇಶ್ವರನ ಕಾವ್ಯವನ್ನು ಬರೆದು ಸಮಾಪ್ತವಾಯಿತು ಶ್ರೀ ಶ್ರೀ ಶ್ರೀ.”
2. ಭಾವಚಿಂತಾರತ್ನದ ಅಂತ್ಯ- “ಕರಪುಸ್ತಕಕ್ಕೆ ಸೇರಿಸಿದ ಗ್ರಂಥಯಿದು ಸಹವಾಗಿ ರಾಮಗಿರಿಯ ಕರಿಯ ಸಿದ್ಧೇಶ್ವರ ದೇವರ ಕರಕಮಲದಲುದಯವಾದ ಉತ್ತರ ದೇಶದ ಬಸವಲಿಂಗ ದೇವರು ಬರೆದು ಸಮಾಪ್ತವಾಯಿತು. ಶ್ರೀ ಶ್ರೀ ಶ್ರೀ.”
ಕಲಿವರುಷ 3179 ನೈದಿದ ಶಾಲೀವಾಹನ ಸಖ 1601 ನೆಯ್ದಿದಭಯ ಕಲಿವರುಷ 4780 ನೆಯ್ದಿದ ಸಿದ್ಧಾರ್ಥಿ ಸಂವತ್ಸರ ಜ್ಯೇಷ್ಠ ಬಹಳ ದಶಮಿಯಲ್ಲೂ ಭಾವ ಚಿಂತಾರತ್ನ, ಭೈರವೇಶ್ವರನ ಕಾವ್ಯ ಬಸವೇಶ್ವರನ ಪೌರಾಣಿಕ ಲಿಂಗಾಷ್ಟದಿ ಕಥಾಸಾಗರ ಪುರಾಣದ ಗ್ರಂಥ ಪರಮರಹಸ್ಯ ಅಷ್ಟಾವರಣದ ಗ್ರಂಥ ಇತಿ ಸಮಾಪ್ತ ಮಂಗಳ ಮಹಾ ಶ್ರೀ ಶ್ರೀ ಶ್ರೀ.”
3. ಸಪ್ತಕಾವ್ಯದ ಅಂತ್ಯ- “ಅಂತೂ ಸಪ್ತಕಾವ್ಯಕ್ಕಂ ಪದನು 1947 ಕ್ಕಂ ಬರದವರು ರಾಮಗಿರಿಯ ಕರಿಯ ಸಿದ್ಧೇಶ್ವರ ದೇವರ ಕರಕಮಲದಲುದಯವಾದ ಬಸವಲಿಂಗದೇವರು ಬರದು ಸಮಾಪ್ತವಾಯಿತ್ತೂ ಯಿ ದಿನಕ್ಕೆ ಸಂದ ಕಲಿವರುಷ ದೂಷಿಕಾಲ 3179 ನೆಯ್ದಿದ ಶಾಲಿವಾಹನ ಸಕ 1602 ನೆಯ ರೌದ್ರೀ ಸಂವತ್ಸರದ ಜ್ಯೇಷ್ಟ ಶುದ್ಧ 3 ಶುಕ್ರವಾರದಲ್ಲೂ ಬರದು ಸಮಾಪ್ತವಾಯಿತು ಮಂಗಳ ಮಹಾ ಶ್ರೀ ಶ್ರೀ ಶ್ರೀ.”
ಈ ಮೇಲಿನ ಮೂರು ಕೃತಿಗಳ ಅಂತ್ಯೋಲ್ಲೇಖಗಳ ಪರಿಶೀಲನೆಯಿಂದ “ಉತ್ತರದೇಶ ಬಸವಲಿಂಗನು ರಾಮಗಿರಿಯ ಕರಿಯ ಸಿದ್ಧೇಶ್ವರನ ಶಿಷ್ಯ ಹಾಗೂ ಕ್ರಿ.ಶ 1679-1680 ರಲ್ಲಿ ಜೀವಂತವಾಗಿದ್ದನೆಂಬ ಅಂಶಗಳು ತಿಳಿಯುತ್ತವೆ. ಹೀಗಾಗಿ ಉತ್ತರ ದೇಶ ಬಸವಲಿಂಗನ ಕಾಲವನ್ನು ಕವಿಚರಿತೆಕಾರರು ಸೂಚಿಸಿದ ಸುಮಾರು 1600ಕ್ಕೆ ಬದಲಾಗಿ ಕ್ರಿ.ಶ. 1680” ಎಂದು ಪರಿಷ್ಕರಿಸಿ ಕೊಟ್ಟಿದ್ದಾರೆ.
   ಕನ್ನಡ ಸಾಹಿತ್ಯ ಚರಿತ್ರೆಯ ಇತಿಹಾಸದಲ್ಲಿ ಕವಿಗಳ ಕಾಲನಿರ್ಣಯಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿದ್ವತ್ ಚರ್ಚೆಗಳು ನಡೆದು ದಶಕಗಳವರೆಗೆ ಪರಿಹಾರ ಕಾಣದೇ ಇದ್ದ ಸಮಸ್ಯೆಗಳು ಹಲವಾರು ದಶಕಗಳವರೆಗೆ ಸುದೀರ್ಘವಾಗಿ ಚರ್ಚೆ ನಡೆದದ್ದಕ್ಕೆ ಉದಾಹರಣೆಯಾಗಿ ತೋಂಟದ ಸಿದ್ಧಲಿಂಗರ ಕಾಲ ನಿರ್ಣಯ, ಮತ್ತು ಸರ್ವಜ್ಞನ ಜೀವನ-ದೇಶ-ಕಾಲ ವಿಚಾರಗಳ ಚರ್ಚೆಗಳನ್ನು ಹೆಸರಿಸ ಬಹುದಾಗಿದೆ. ಇವುಗಳಿಗೆ ಸಮರ್ಥನೀಯ ಪರಿಹಾರಗಳನ್ನು ಕಾಣಿಸುವಲ್ಲಿ ಶಿವಣ್ಣನವರ ಸಂಶೋಧನೆಯ ಪರಿಶ್ರಮ ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಗುರುತರವಾದುದಾಗಿದೆ.
    ತೋಂಟದ ಸಿದ್ಧಲಿಂಗಯತಿಗಳು:
ತೋಂಟದ ಸಿದ್ಧಲಿಂಗ ಯತಿಗಳು ‘ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೆ’ ಎಂಬ ಅಂಕಿತದ ಏಳುನೂರೊಂದು ವಚನಗಳನ್ನು ಒಳಗೊಂಡ ‘ಷಟ್‍ಸ್ಥಲ ಜ್ಞಾನ ಸಾರಾಂಮೃತ’ ಎಂಬ ವಚನದ ಕೃತಿಯೊಂದನ್ನು ರಚಿಸಿದ್ದಾರೆ. ಇವರ ಶಿಷ್ಯರ, ಪ್ರಶಿಷ್ಯರ ಪರಂಪರೆಯು ಸುಮಾರು 200 ರಿಂದ 250 ವರ್ಷಗಳಕಾಲ ಅವಿಚ್ಛನ್ನವಾಗಿ ಮುಂದುವರಿದು ಅವರೆಲ್ಲ ವಚನ ವಾಙ್ಮಯದ ಸಂಕಲನ, ವ್ಯಾಖ್ಯಾನ ಮತ್ತು ವ್ಯವಸ್ಥಾಪನೆಗಳಿಗೆ ಅತಿಶಯವಾದ ಸೇವೆಯನ್ನು ಸಲ್ಲಿಸಿದ್ದಾರೆ.
    ಧಾರ್ಮಿಕ ಹಾಗು ಸಾಹಿತ್ಯದ ದೃಷ್ಟಿಯಿಂದ ಗಣ್ಯರಾದ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಕಾಲವಿಚಾರದಲ್ಲಿ ವಿದ್ವಾಂಸರಲ್ಲಿ ಅನೇಕ ಭಿನ್ನಾಭಿಪ್ರಾಯಗಳಿದ್ದವು. ಎಸ್.ಶಿವಣ್ಣನವರು ಆ ಎಲ್ಲ ವಿದ್ವಾಂಸರ ಅಭಿಪ್ರಾಯಗಳನ್ನು ಒಟ್ಟಾಗಿ ಸಂಗ್ರಹಿಸಿ ಇತ್ತೀಚೆಗೆ ಬೆಳಕು ಕಂಡ ಹಲವು ಹಸ್ತಪ್ರತಿ ಸಾಮಗ್ರಿಗಳನ್ನು ಪರಿಶೀಲಿಸಿ, ಅವುಗಳ ಆಧಾರಗಳಿಂದ ಪಡೆದ ಮಾಹಿತಿಯನ್ನು ಆಧರಿಸಿ ತೋಂಟದ ಸಿದ್ಧಲಿಂಗ ಯತಿಗಳ ಕಾಲವನ್ನು ನಿಖರವಾಗಿ ಕಟ್ಟಿಕೊಡಲು ಪ್ರಯತ್ನಿಸುತ್ತಾರೆ,
ಶಿವಣ್ಣನವರು ವಿದ್ವಾಂಸರ ಅಭಿಪ್ರಾಯಗಳೆಲ್ಲವನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ಉಲ್ಲೇಖಿತ ಹೇಳಿಕೆಗಳ ಕ್ರೂಢಿಕೃತ ಅಭಿಪ್ರಾಯದಂತೆ ತೋಂಟದ ಸಿದ್ಧಲಿಂಗ ಯತಿಗಳ ಜೀವಿತಾವಧಿಯ ಕಾಲಮಾನವು ಕ್ರಿ.ಶ. 13ನೆಯ ಶತಮಾನದಿಂದ 16ನೆಯ ಶತಮಾನದ ವರೆಗೆ ವ್ಯಾಪಿಸಿದೆ. ಈ ಎಲ್ಲ ಚರ್ಚೆಗಳು ವಿದ್ವತ್ ವಲಯದಲ್ಲಿ ನಡೆಯುತ್ತಿದ್ದ ಕಾಲಕ್ಕೆ ಈ ಮುಂಚೆ ಕೇವಲ ನಾಮೋಲ್ಲೇಖವಾಗಿದ್ದು, ಅನುಪಲಬ್ಧವಾಗಿದ್ದ ಸಿದ್ಧನಂಜೇಶನ ‘ತೋಂಟದ ಸಿದ್ಧೇಶ್ವರನ ಭಾವರತ್ನಾಭರಣ’ವು ಉಪಲಬ್ಧವಾಗಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಅದನ್ನು ಕೂಲಂಕಶವಾಗಿ ಪರಿಶೀಲಿಸಿದ ಎಸ್. ಶಿವಣ್ಣನವರು “ಅದರ ಕ್ರಮಾಂಕ 79ನೆಯ ಷಟ್ಪದಿಯಲ್ಲಿನ ‘ಮಲ್ಲಣಾರ್ಯಜ ತತ್ಪ್ರಬಂಧಮಂ ರಚಿಸಿಯಿರಲೊಲ್ಲೆ ನಿರ್ವಂಶಮಂ ಮಾಡೆನಲ್ಕಿತ್ತೆ’ ಎಂಬ ಉಲ್ಲೇಖದಿಂದ ತೋಂಟದಾರ್ಯನನ್ನು ಕುರಿತು ಪುರಾಣ ಬರೆದ ಶಾಂತೇಶನು ಅವರ ಕಣ್ಣಮುಂದೆಯೇ ಐಕ್ಯನಾದನೆಂಬ ಘಟನೆಯನ್ನು ವ್ಯಕ್ತಪಡಿಸುತ್ತ ಶಾಂತೇಶ ಕೃತ ಸಿದ್ಧೇಶ್ವರ ಪುರಾಣದ ಕಾಲವಾದ ಕ್ರಿ.ಶ. 1561ರಲ್ಲಿ ತೋಂಟದಾರ್ಯ ಜೀವಂತವಾಗಿದ್ದನೆಂಬ ಹೊಸ ಅಂಶವನ್ನು ಹೊರಗೆಡಹುತ್ತ, ತೋಂಟದಾರ್ಯರ ಕಾಲ 16ನೆಯ ಶತಮಾನದ ಉತ್ತರಾರ್ಧವೆಂದು ಎಲ್. ಬಸವರಾಜು ಮುಂತಾದ ವಿದ್ವಾಂಸರು  ವ್ಯಕ್ತಪಡಿಸಿದ್ದ  ಅನಿಸಿಕೆಯನ್ನು ಖಚಿತ ಪಡಿಸಿರುವ ಹೊಸ ಆಧಾರವಾಗಿ ಪರಿಣಮಿಸಿದೆ.”
    ಸಿದ್ಧಲಿಂಗರನ್ನು ಜಿಗುನಿ ಮರುಳಾರ್ಯನು ತನ್ನ ಸ್ವರಚಿತ ಕೃತಿ ‘ಮರುಳ ದೇವರ ಸ್ವರವಚನ’ದಲ್ಲಿನ ಉಲ್ಲೇಖದಿಂದ ಇವರಿಬ್ಬರೂ ಸಮಕಾಲೀನರು ಎಂಬ ಅಂಶ ಸ್ಪಷ್ಟವಾಗುತ್ತದೆ. ಜಿಗುನಿ ಮರುಳಾರ್ಯರ ಇನ್ನೊಬ್ಬ ಸಮಕಾಲೀನನಾದ ಗುಮ್ಮಳಾಪುರದ ಸಿದ್ದಲಿಂಗನ ‘ಶೂನ್ಯ ಸಂಪಾದನೆಯ’ ಓಲೆಪ್ರತಿ ಒಂದರ ಅಂತ್ಯೋಲ್ಲೇಖವು ತೋಂಟದ ಸಿದ್ಧಲಿಂಗಯತಿಗಳು, ಸಿದ್ಧನಂಜೇಶ ಮತ್ತು ಜಿಗುನಿ ಮರುಳಾರ್ಯ, ಈ ಮೂವರ ಕಾಲದ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತದೆ.
ಸ್ವಸ್ತಿ ವಿಜಯಾಭ್ಯುದಯ ಶಾಲಿವಾಹನ ಶಕವರುಶ 1502ನೆಯ ವಿಕ್ರಮ ಸಂವತ್ಸರದ ಕಾರ್ತಿಕ ಬಹುಳ 3 ಮಂಗಳವಾರದಲ್ಲು ... ... ... ಸರ್ವಾಚಾರ ಸಂಪನ್ನ ಏಕಲಿಂಗ ನಿಷ್ಟಾಪರ ವೀರಶೈವ ಸಂಪನ್ನ ಗುಮ್ಮಳಾಪುರದ ಸಿಂಹಾಸನಕ್ಕೆ ಕರ್ತರಾದ ವಿರಕ್ತ ಸಿದ್ದಲಿಂಗ ದೇವರಿಗೆ ಅದಿನಾಡ ಎಳಂದೂರು ಅರಸ ಚೆಂನೋಡಿಯರು ಈ ಶೂನ್ಯ ಸಂಪಾದನೆಯ ವಚನ ಸಂಗ್ರಹವನ್ನು ಬರಿಸಿ ಶಿವಾರ್ಪಿತವಾಗಿ ನಮಸ್ಕರಿಸಿದರು” ಈ ವಿವರದಿಂದಾಗಿ ವಿರಕ್ತ ಸಿದ್ಧಲಿಂಗ ದೇವರೆಂದು ಹೆಸರಿರುವ ಸಿದ್ಧಲಿಂಗ ಯತಿಗಳು ಮತ್ತು ಅವರನ್ನು ತನ್ನ ಸ್ವರವಚನಗಳಲ್ಲಿ ಉಲ್ಲೇಖಿಸಿದ ಜಿಗುನಿ ಮರುಳಾರ್ಯ ಕ್ರಿ.ಶ. 1580ರಲ್ಲಿ ಜೀವಿಸಿದ್ದ ಸಂಗತಿ ತಿಳಿದುಬರುತ್ತದೆ. ಶಾಂತೇಶನು ಮಾಡಿದ ಲಿಂಗೈಕ್ಯದ ಉಲ್ಲೇಖ, ಜಿಗುನಿ ಮರುಳಾರ್ಯನ ಸಮಕಾಲೀನನಾದ ವಿರಕ್ತ ಸಿದ್ಧಲಿಂಗೇಶನ ಕಾಲೋಲ್ಲೇಖ, ಮತ್ತು ಯಡೆಯೂರು ದೇವಾಲಯದಲ್ಲಿ ಉಪಲಬ್ಧವಿರುವ ಕುಣಿಗಲ್ ಶಾಸನದಲ್ಲಿ ಉಲ್ಲೇಖಿಸಿದ ದಾನಿ ಚನ್ನವೀರಪ್ಪನ ‘ಶೂನ್ಯ ಸಂಪಾದನೆ’ಯ ಕೃತಿಯ ಲಿಖಿತ ಕಾಲೋಲ್ಲೇಖಗಳಿಂದ ಸಿದ್ಧಲಿಂಗರ ಕಾಲವನ್ನು ಕ್ರಿ.ಶ. 1470 ರಿಂದ ಕ್ರಿ.ಶ. 1561 ಎಂದು ಸೂಚಿಸಿದ್ದಾರೆ.
ವಿಸ್ತೃತ ದಾಖಲೆಗಳನ್ನು, ಅವುಗಳ ಅಂತಃಸತ್ವವನ್ನು ಒಟ್ಟೊಟ್ಟಿಗೆ ಸಂಗ್ರಹಿಸಿ ಅವುಗಳನ್ನು ಕೂಲಂಕಶವಾಗಿ ಪರಿಶೀಲಿಸಿ ಕ್ರಿ.ಶ. 1919 ರಿಂದ ಸುದೀರ್ಘ ಚರ್ಚೆಯ ವಿಷಯವಾಗಿದ್ದ ತೋಂಟದ ಸಿದ್ಧಲಿಂಗಯತಿಗಳ ಕಾಲವು ಕ್ರಿ.ಶ. 1561 ಎಂದು ಗುರುತಿಸಿ, ಯತಿಗಳ ಕಾಲನಿರ್ಣಯದ ವಿಷಯಕ್ಕೆ ಎಸ್.ಶಿವಣ್ಣನವರು ತಾತ್ಕಾಲಿಕವಾಗಿ ತೆರೆ ಎಳೆದಿದ್ದಾರೆ.
ನಿಜಗುಣ ಶಿವಯೋಗಿಗಳ ಕಾಲ ವಿಚಾರ:
ವಿರಕ್ತ ಪರಂಪರೆಗೆ ಸೇರಿದ ನಿಜಗುಣರು ಕಾವೇರಿ ನದಿತೀರದ ಚಿಲಕವಾಡಿಯ ಬಳಿಯ ಶಂಭುಲಿಂಗನ ಬೆಟ್ಟದಲ್ಲಿ ತಮ್ಮ ಜೀವಿತದ ಬಹುಭಾಗವನ್ನು ಕಳೆದರು. ಅಸಾಧಾರಣ ಮೇಧಾವಿ, ಅಪ್ರತಿಮ ದಾರ್ಶನಿಕರಾಗಿದ್ದು; ಕನ್ನಡ ಮತು ಸಂಸ್ಕೃತಗಳಲ್ಲಿ ಕೃತಿರಚನೆ ಮಾಡಿದ್ದಾರೆ.
ಕನ್ನಡದಲ್ಲಿ ಅನುಭವಸಾರ, ಅರವತ್ತು ಮೂವರ ತ್ರಿಪದಿ, ಕೈವಲ್ಯ ಪದ್ಧತಿ, ಪರಮಾರ್ಥಗೀತೆ, ಪರಮಾನುಭವಭೋಧೆ, ಪರಮಾರ್ಥಪ್ರಕಾಶಿಕೆ, ವಿವೇಕಚಿಂತಾಮಣಿ, ಸ್ವರೂಪಸಿದ್ಧಿ ಮತ್ತು ಸಂಸ್ಕೃತದಲ್ಲಿ ಆತ್ಮತರ್ಕ ಚಿಂತಾಮಣಿ, ತಾರಾವಳಿ, ದರ್ಶನಸಾರ ಎಂಬ ಕೃತಿಗಳನ್ನು ರಚಿಸಿದ್ದು ಈ ಯಾವ ಕೃತಿಗಳಲ್ಲು ಕಾಲದ ಬಗೆಗೆ ಯಾವುದೇ ಸುಳಿವುಗಳಿಲ್ಲ. ಹೀಗಾಗಿ ಶಿವಯೋಗಿಗಳ ಕಾಲ ನಿರ್ಣಯದ ವಿಷಯದ ಸಂಶೋಧನೆಯಲ್ಲಿ ಬಾಹ್ಯ ಸಾಕ್ಷಿಗಳನ್ನೇ ಪ್ರಮುಖ ಆಧಾರವಾಗಿ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾದಾಗ ನಿಜಗುಣಶಿವಯೋಗಿಗಳ ಕಾಲ ನಿರ್ಣಯವು ವಿದ್ವಾಂಸರಿಗೆ ಜಟಿಲ ಸಮಸ್ಯೆಯಾಗಿ ಕಾಡಿತ್ತು, ಹತ್ತೊಂಬತ್ತನೆಯ ಶತಮಾನದ ಪ್ರಾರಂಭದಿಂದಲೂ ವಿದ್ವತ್ ವಲಯದಲ್ಲಿ ಈ ಕುರಿತು ಹಲವು ನಿರ್ಣಯಗಳು ವಿಭಿನ್ನವಾಗಿ ಮೂಡಿಬಂದಿವೆ. ಎಸ್. ಶಿವಣ್ಣನವರು ಚರ್ಚಿತವಾದ ಎಲ್ಲ ವಿದ್ವಾಂಸರ ಪೂರ್ವೋಕ್ತ ಕಾಲ ನಿರ್ಣಯ ವಿಚಾರಗಳನ್ನು ಕಾಲಾನುಕ್ರಮದಲ್ಲಿ ಕ್ರೂಢೀಕರಿಸಿದೆ. ಶಿವಣ್ಣನವರು ಇತ್ತೀಚೆಗೆ ತಮಗೆ ದೊರೆತ ನಿಜಗುಣಶಿವಯೋಗಿಗಳ ‘ಕೈವಲ್ಯ ಪದ್ಧತಿ’ಯ ಕಾಗದದ ಹಸ್ತಪ್ರತಿಯ ಅಂತ್ಯದಲ್ಲಿ ಪುಷ್ಪಿಕೆಯಲ್ಲಿನ ದಾಖಲೆಯಲ್ಲಿಯ  “ನಿಜಗುಣ ಶಿವಯೋಗಿಗಳು ಜಿಗುನಿಯ ಮರುಳ ದೇವಾಚಾರ್ಯರಿಂದ ಸರ್ವಾಚಾರ ಸಂಪತ್ತೆಂಬ ಶಿವಜ್ಞಾನ ಸಂಪತ್ತೆಂಬ ಶಿವಜ್ಞಾನ ಪ್ರಸಿದ್ಧವಹ ತನ್ನ ಇಷ್ಟಸ್ವರೂಪವಪ್ಪ ಶಂಭುಲಿಂಗವೆಂಬ ಪರಬ್ರಹ್ಮದೊಳೈಕ್ಯವಾಸವನರಿದು ನೀರುಕ್ಷೀರ ಮರುತಾಂಬರ; ಶಬ್ಧ-ನಿಶಬ್ಧದಲ್ಲಿ ಅಡಗಿದಂತೆ ನಿಜಲಿಂಗೈಕ್ಯವನೈದಿದ”ವರು ಎಂಬ ಉಲ್ಲೇಖವಿದೆ. ಈ ಅಂಶವು ನಿಜಗುಣ ಶಿವಯೋಗಿಗಳ ಕಾಲ ನಿರ್ಣಯದ ಪ್ರಯತ್ನಕ್ಕೆ ಸಂಬಂಧಿಸಿದಂತೆ ಲಭಿಸಿರುವ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿದ್ದಾರೆ. ಜಿಗುನಿಯ ಮರುಳಾರ್ಯರು ತೊಂಟದ ಸಿದ್ಧಲಿಂಗ ಯತಿಗಳ ಪ್ರಮುಖ ಶಿಷ್ಯರು.
* ಜಿಗುನಿಯ ಮರುಳಾರ್ಯರ ಕಾಲ ಕ್ರಿ.ಶ. 1580.
* ನಿಜಗುಣ ಶಿವಯೋಗಿಗಳ ‘ಅನುಭವಸಾರ’, ‘ಪರಮಾನುಭವ ಭೋಧೆ’, ‘ಪರಮಾರ್ಥಗೀತೆ’ ಮತ್ತು ‘ವಿವೇಕಚಿಂತಾಮಣಿ’ ಗಳಲ್ಲಿನ ಕವಿಕೃತಗದ್ಯ, ಗದ್ಯಭಾಗದಲ್ಲಿನ ಉಲ್ಲೇಖಗೊಂಡ ಒಕ್ಕಣಿಕೆಗಳಂತೆ ನಿಜಗುಣರು ತೋಂಟದ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯ ಪರಂಪರೆಯವರಾಗಿದ್ದಾರೆ.
* ನಿಜಗುಣ ಶಿವಯೋಗಿಗಳ ‘ವಿವೇಕ ಚಿಂತಾಮಣಿ’ಯು ಕ್ರಿ.ಶ. 1604ರಲ್ಲಿ ಶಾಂತೇಶ್ವರನಿಂದ ಮರಾಠಿಗೆ ಅನುವಾದಗೊಂಡಿದೆ. ಮತ್ತು ಕ್ರಿ.ಶ. 1652ರಲ್ಲಿ ತಿರುವಣ್ಣಾಮಲೆಯ ಶಿವಪ್ರಕಾಶ ಸ್ವಾಮಿಗಳಿಂದ ತಮಿಳಿಗೆ ಅನುವಾದಗೊಂಡಿದೆ. ಕ್ರಿ.ಶ. 1672ರಲ್ಲಿದ್ದ ಶಾಂತಲಿಂಗ ದೇಶಿಕನು ತನ್ನ ಗದ್ಯಕೃತಿ ‘ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ’ದಲ್ಲಿ ನಿಜಗುಣ ಶಿವಯೋಗಿಗಳ ‘ವಿವೇಕ ಚಿಂತಾಮಣಿ’ಯನ್ನು; ತಮ್ಮ ಕೃತಿಗಳ ಆಧಾರ ಕೃತಿಯೆಂದು ಸೂಚಿಸಿದ್ದಾರೆ.
* ಕ್ರಿ.ಶ 1698ರಲ್ಲಿದ್ದ ಸಂಪಾದನೆಯ ಪರ್ವತೇಶ್ವರರು ತನ್ನ ‘ಚತುರಾಚಾರ್ಯ ಪುರಾಣ’ದಲ್ಲಿಯೂ ನಿಜಗುಣ ಶಿವಯೋಗಿಗಳ ‘ವಿವೇಕಚಿಂತಾಮಣಿ’ಯನ್ನು; ತಮ್ಮ ಕೃತಿಗಳ ಆಧಾರ ಕೃತಿಯೆಂದು ಸೂಚಿಸಿದ್ದಾರೆ.
* ಯಳಂದೂರು ಷಡಕ್ಷರಿಗಳು ಕ್ರಿ.ಶ. 11-1-1654ನೆಯ ಬುಧವಾರ ರಚಿಸಿದ ‘ರಾಜಶೇಖರ ವಿಳಾಸ’ದಲ್ಲಿ ನಿಜಗುಣರನ್ನು ಸ್ಮರಿಸಿದ್ದಾರೆ.
ಈ ಎಲ್ಲ ಬಾಹ್ಯ ಮತ್ತು ಆಂತರಿಕ ಸಾಕ್ಷಗಳ ಕಾರಣಗಳನ್ನು ಆಧರಿಸಿ, ನಿಜಗುಣರ ಕಾಲವು ಈಗಾಗಲೆ ಊಹಿಸಿದ ಕ್ರಿ.ಶ. 1744 ಆಗಿರಲು ಸಾಧ್ಯವಿಲ್ಲ, ನಿಜಗುಣ ಶಿವಯೋಗಿಗಳು ಜಿಗುನಿ ಮರುಳಾರ್ಯರ ಸಮಕಾಲೀನರಾಗುವುದರಿಂದ ಇವರ ಕಾಲವು ಕ್ರಿ.ಶ. 1600ರ ಆಚೀಚೆಗಿರಬಹುದು” ಎಂಬ ನಿಲುವನ್ನು ವ್ಯಕ್ತ ಪಡಿಸಿದ್ದು ಪರಿಶೀಲಿಸ ಬಹುದಾದ ಸಂಗತಿಯಾಗಿದೆ. ಎಸ್. ಶಿವಣ್ಣನವರು ನಿಜಗುಣ ಶಿವಯೋಗಿಗಳ ಕಾಲನಿರ್ಣಯದ ಸಂದರ್ಭದಲ್ಲಿ ಅನುಸರಿಸಿದ ಈ ಮಾನದಂಡಗಳು ಅತ್ಯಂತ ವೈಜ್ಞಾನಿಕ ಮತ್ತು ಶಾಸ್ತ್ರಬದ್ಧವಾಗಿವೆ.
ಸರ್ವಜ್ಞ ತನ್ನ ತ್ರಿಪದಿಗಳನ್ನು ರಚಿಸಿದ ಕಾಲದ ಬಗೆಗೆ ಏನನ್ನು ತಿಳಿಸಿಲ್ಲ. ಅಲ್ಲದೇ ಕೃತಿಯ ಮೊದಲಲ್ಲಿ ತನಗೆ ಪೂರ್ವಭಾವಿಯಾಗಿ ಕೃತಿ ರಚನೆ ಮಾಡಿದ ಕವಿಗಳಾರನ್ನು ಹೆಸರಿಸಿಲ್ಲ. ಹೀಗಾಗಿ ಸರ್ವಜ್ಞನ ಕಾಲ ನಿರ್ಣಯ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ಸಮಸ್ಯೆಯಾಗಿದೆ. ಸರ್ವಜ್ಞನ ಕಾಲವನ್ನು ನಿರ್ಧರಿಸಲು ಪ್ರಯತ್ನಿಸಿರುವ ಕನ್ನಡದ ವಿದ್ವಾಂಸರು ಸರ್ವಜ್ಞನ ಕಾಲದ ಬಗೆಗೆ ವಿಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದನ್ನು ಪ್ರಸ್ತಾಪಿಸುತ್ತಾ ತಮ್ಮ ನಿಲುವನ್ನು ತಿಳಿಸಿದ್ದಾರೆ.
ಸರ್ವಜ್ಞನ ತ್ರಿಪದಿಗಳು ದೊರೆಯುವ ಹಸ್ತಪ್ರತಿಗಳಲ್ಲಿ ಏಕರೂಪತೆ ಇಲ್ಲ. ಪ್ರತಿಯಿಂದ ಪ್ರತಿಗೆ ‘ಪದ್ಧತಿ’ಗಳ ವಿಭಾಗದಲ್ಲಿ ಮತ್ತು ಪದ್ಯ ಸಂಖ್ಯೆಗಳಲ್ಲಿ ವ್ಯತ್ಯಾಸಗಳಿವೆ. ಅಲ್ಲದೆ ‘ಸರ್ವಜ್ಞ’ ಎಂಬ ಅಂಕಿತದಲ್ಲಿ ಬೇರೆ ಬೇರೆಯವರಿಂದ ರಚಿತವಾದ ಅನೇಕಾನೇಕ ಪ್ರಕ್ಷೇಪ ತ್ರಿವಿಧಿಗಳು ಕಾಲದಿಂದ ಕಾಲಕ್ಕೆ ಹಸ್ತಪ್ರತಿಗಳಲ್ಲಿ ಹಾಗೂ ಅಚ್ಚಿನ ಪ್ರತಿಗಳಲ್ಲಿ ಸೇರಿಹೋಗಿವೆ. ಆದುದರಿಂದ ಸರ್ವಜ್ಞನ ಕಾಲ ನಿರ್ಣಯಕ್ಕೆ ಪ್ರಾಚೀನವಾದ ಹಾಗೂ ಕಾಲನಿರ್ದೇಶನವುಳ್ಳ ಪ್ರತಿಗಳ ಅನ್ವೇಷಣೆ ಉಪಯುಕ್ತ ಕಾರ್ಯವೆಂಬುದರಲ್ಲಿ ಸಂಶಯವಿಲ್ಲ. ಎಲ್. ಬಸವರಾಜು ಅವರು ದಿನಾಂಕ 7-3-1636 ರಲ್ಲಿ ವೆಂಕನಿಂದ ಪ್ರತಿಮಾಡಲ್ಪಟ್ಟ ಸರ್ವಜ್ಞನ ಹಸ್ತಪ್ರತಿಯೊಂದನ್ನು ವಿದ್ವಾಂಸರ ಗಮನಕ್ಕೆ ತಂದಿರುವರು ಅಲ್ಲದೆ ಅದನ್ನು ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ 19 ಪದ್ದತಿಗಳಿದ್ದು 937 ತ್ರಿಪದಿಗಳಿವೆ. ಇಲ್ಲಿನ ತ್ರಿಪದಿಗಳ ಅಂಕಿತ ‘ಸರ್ವಜ್ಞ’ ಎನ್ನುವುದಕ್ಕೆ ಬದಲಾಗಿ ‘ಪರಮಾರ್ಥ’ ಎಂದಿದೆ. ಈ ಪ್ರತಿಯ ಆಧಾರದಿಂದ ಸರ್ವಜ್ಞ ಕವಿ ಕ್ರಿ.ಶ. 1636 ರ ಪೂರ್ವದಲ್ಲಿ ಇದ್ದನೆಂಬುದು ಸ್ಪಷ್ಟವಾಗಿದೆ.
ವಿರಕ್ತ ತೋಂಟದಾರ್ಯ (ಸು.1616) ‘ಅನಾದಿ ವೀರಶೈವ ಸಂಗ್ರಹ’ವೆಂಬ ಕೃತಿಯನ್ನು ಗದ್ಯದಲ್ಲಿ ರಚಿಸಿದ್ದಾನೆ. ಈತ ತನ್ನ ಕೃತಿಯ ನಡುವೆ ಅಲ್ಲಲ್ಲಿ ಸಂಸ್ಕೃತ ತೆಲಗು, ಕನ್ನಡ, ಭಾಷೆಗಳ ಕೃತಿಗಳಿಂದ ಉಲ್ಲೇಖಿಸಿದ್ದಾನೆ. ಕನ್ನಡದಲ್ಲಿ ಮಗ್ಗೆ ಮಾಯಿದೇವನ (ಕ್ರಿ.ಶ. 1430) ‘ಶಿವಾಧವಾ’, ‘ಶಿವಾವಲ್ಲಭ’ ಶತಕಗಳಿಂದ, ಸರ್ವಜ್ಞನ ತ್ರಿಪದಿಗಳಿಂದ ಉದ್ಧರಿಸಿರುವುದನ್ನು ಶಿವಣ್ಣನವರು ಗುರುತಿಸಿದ್ದಾರೆ. ಇಲ್ಲಿ ಉಲ್ಲೇಖವಾಗಿರುವ  ಸರ್ವಜ್ಞ ತ್ರಿಪದಿಗಳಲ್ಲಿ
ಮೂರ್ಖಂಗೆ ಬುದ್ಧಿಯನು,’
ಜಾತಿ ಜಾತಿಗೆ ವೈರಿ,’
ಆನೆ ನೀರಾಟದಲಿ,’
ಎಂಬ 3 ತ್ರಿಪದಿಗಳು ವೆಂಕನ ಪ್ರತಿಯಲ್ಲಿ ಕ್ರಮವಾಗಿ 887, 203, 199, ನೆಯ ಕ್ರಮಾಂಕದಲ್ಲಿನವೇ ಆಗಿವೆ ಎಂಬುದು ಗಮನಾರ್ಹ ಸಂಗತಿ. ಇದರಿಂದ ಸರ್ವಜ್ಞನ ಕಾಲವನ್ನು ವೆಂಕನ ಪ್ರತಿಯ ಕಾಲವಾದ ಕ್ರಿ.ಶ. 1636 ರಿಂದ ವಿರಕ್ತ ತೋಟದಾರ್ಯನ ಕಾಲವಾದ ಕ್ರಿ.ಶ. 1616ರ ಹಿಂದಕ್ಕೆ ಹಾಕಬೇಕಾಗುತ್ತದೆ. ಎಂಬ ಇವರ ನಿಲುವು ಸ್ವೀಕಾರಾರ್ಹವಾಗಿದೆ.  ವಿರತಮಹಲಿಂಗನ ‘ಗುರುಬೋಧಾಮೃತ’ದ ರಚನೆಯಲ್ಲಿ ಸರ್ವಜ್ಞನ ತ್ರಿಪದಿಗ ಳಿಂದಾಗಿರುವ ಪ್ರಭಾವವನ್ನು ಹಲವಾರು ವಿದ್ವಾಂಸರು ಗುರುತಿಸಿದ್ದಾರೆ. ವಿರತ ಮಹಲಿಂಗ ಸರ್ವಜ್ಞನ ಶಿಷ್ಯನೆಂಬ ಸಂಗತಿಯನ್ನು ಎಲ್. ಬಸವರಾಜು ಅವರು ತಮ್ಮ ಲೇಖನದಲ್ಲಿ ವ್ಯಕ್ತಪಡಿಸಿದ್ದಾರೆ ಎಸ್.ಶಿವಣ್ಣನವರು ವಿರತ ಮಹಲಿಂಗನ ಗುರು ಮತ್ತು ಹಿರಿಯ ಸಮಕಾಲೀನನಾದ ಸರ್ವಜ್ಞ ಕ್ರಿ.ಶ. 1500 ರ ವೇಳೆಯಲ್ಲಿ ಜೀವಿಸಿದ್ದನೆಂದು ಈತನ ಕಾಲವನ್ನು ಈಗಿರುವುದಕ್ಕಿಂತ 100 ವರ್ಷ ಹಿಂದಕ್ಕೆ ನಿರ್ಣಯಿಸಿದ್ದಾರೆ. ಶಿವಣ್ಣನವರು ಈ ಆಧಾರವನ್ನು ಬೆಂಬಲಿಸುವ ಮತ್ತೊಂದು ಸಾಕ್ಷಾಧಾರವನ್ನು ಶೋಧಿಸಿದ್ದಾರೆ.
ಸರ್ವಜ್ಞ ಕ್ರಿ.ಶ. 1500ರ ವೇಳೆಯಲ್ಲಿ ಜೀವಿಸಿದ್ದನೆಂದು ಭಾವಿಸಬಹುದು’ ಎಂದು ಸೂಚಿಸಿದ್ದ ಅಭಿಪ್ರಾಯವನ್ನು ಬೆಂಬಲಿಸುವ ಆಧಾರದ ಹಿನ್ನೆಲೆಯಲ್ಲಿ, ಕ್ರಿ.ಶ. 1554ರ ವೇಳೆಗೆ ಸಂಕಲಿತ ವಾಗಿದ್ದ ‘ಮೋಕ್ಷದರ್ಶನ ಮಹಾಸಂಗ್ರಹ’ದಲ್ಲಿ ಪ್ರಭುದೇಶಿಕ ‘ಪರಮಾರ್ಥ’ ಅಂಕಿತದ ಸರ್ವಜ್ಞನ ತ್ರಿಪದಿಯೊಂದನ್ನು ಉಲ್ಲೇಖಿಸಿದ್ದು ಈ ರೀತಿ ಇದೆ.
      ಬೆರಳ ಕೊನೆಯಾರಲಿ ವಿರಳವಾರರ ಸಂಚ
      ಕೊರಳ ನಾಳದಲ್ಲಿ ಶಿವನಿಪ್ಪ ಯೋಗದ
      ತಿರುಳು ಕಂಡಯ್ಯ ಪರಮಾರ್ಥ.
ಈ ತ್ರಿಪದಿ ಕ್ರಿ.ಶ. 1636 ರಲ್ಲಿ ವೆಂಕನಿಂದ ಪ್ರತಿಯಾದ ಕೃತಿಯಲ್ಲಿ ಕ್ರಮಾಂಕ 317 ನೆಯದಾಗಿದೆ. ಇದರಲ್ಲಿ ಒಂದೆರಡು ಪಾಠ ಭೇದಗಳಿವೆ. ಹೀಗಾಗಿ ಸರ್ವಜ್ಞನ ತ್ರಿಪದಿಗೆ ‘ಪರಮಾರ್ಥ’ ಅಂಕಿತದ ಪ್ರಯೋಗ ಕ್ರಿ.ಶ. 1554 ಕ್ಕಿಂತ ಮೊದಲಿನಿಂದಲೂ ರೂಢಿಯಲ್ಲಿದ್ದ ಸಂಗತಿ ಬೆಳಕಿಗೆ ಬಂದಂತಾಗಿದೆ. ಅಲ್ಲದೆ ಸರ್ವಜ್ಞನ ಕಾಲನಿರ್ಣಯದಲ್ಲಿ ಪ್ರಭುದೇಶಿಕನ ಉಲ್ಲೇಖ ಒಂದು ಗಮನಾರ್ಹ ದಾಖಲೆಯಾಗಿದೆ. ಎಂದು ಶಿವಣ್ಣನವರು ಅಭಿಪ್ರಾಯ ಪಟ್ಟಿದ್ದಾರೆ. ಈ ಸಾಕ್ಷಾಧಾರಗಳಿಂದ ಸರ್ವಜ್ಞನ ಕಾಲವನ್ನು ಇವರು ಖಚಿತವಾಗಿ ಗುರುತಿಸಿದ್ದು ಈ ಹಿನ್ನೆಲೆಯಲ್ಲಿ ಹದಿನೈದು ಮತ್ತು ಹದಿನಾರನೆಯ ಶತಮಾನದ ಸಾಹಿತ್ಯ ಚರಿತ್ರೆಯನ್ನು ಪುನರ್ ರಚಿಸುವ ಅನಿವಾರ್ಯತೆ ಉಂಟಾಗಿದೆ.
ಶಿವಣ್ಣನವರು ಶೋಧಿಸಿರುವ ಅನುಪಲಬ್ಧ ಕೃತಿಗಳು:
ಧಾರಾಪುರದ ತಿಮ್ಮಪ್ಪದಾಸನ ‘ಲಾಕ್ಷಾಗೃಹ ದಹನ’ ಮತ್ತು ‘ಬಕಾಸುರ ವಧೆ’ ಗಳು ಬೇರೆ ಬೇರೆ ಕೃತಿಗಳೆ?: ಶ್ರೀ. ಆರ್. ನರಸಿಂಹಾಚಾರ್ಯರು ಧಾರಾಪುರದ ತಿಮ್ಮಪ್ಪದಾಸನ ಕೃತಿಗಳನ್ನು ಹೆಸರಿಸುವಲ್ಲಿ ಆತ ‘ಲಾಕ್ಷಾಗೃಹ ದಹನ’, ‘ಬಕಾಸುರ ವಧೆ’ ಮತ್ತು ‘ಗಾಲವ ಚರಿತ್ರೆ’ಗಳೆಂಬ ಯಕ್ಷಗಾನಗಳನ್ನು ರಚಿಸಿರುವುದಾಗಿ ತಿಳಿಸಿದ್ದಾರೆ. “ಬೆಂಗಳೂರಿನ ವಾಗೀಶ್ವರಿ ಮುದ್ರಾಕ್ಷರ ಶಾಲೆಯಲ್ಲಿ ಕ್ರಿ.ಶ. 1894ರಲ್ಲಿ ಹಿರಿಯ ಧಾರಾಪುರದ ತಿಮ್ಮಪ್ಪದಾಸನ ‘ಲಾಕ್ಷಾಗೃಹ ದಹನ’, ಬಕಾಸುರನ ವಧೆಯೆಂಬೀ ಯಕ್ಷಗಾನ ಪ್ರಬಂದವು’ ಎಂಬ ಕೃತಿ ಅಚ್ಚಾಗಿದೆ.” ಈ ಕೃತಿಯನ್ನು  ಎಸ್.ಶಿವಣ್ಣನವರು ಪರಿಶೀಲಿಸಿ,  ಕವಿಚರಿತೆಕಾರರು ತಿಳಿಸುವ ‘ಲಾಕ್ಷಾಗೃಹ ದಹನ’ ಮತ್ತು ‘ಬಕಾಸುರ ವಧೆ’ಗಳು ಅವರು ಭಾವಿಸಿರುವಂತೆ ಪ್ರತ್ಯೇಕ ಕೃತಿಗಳಾಗಿರದೆ, ಅದು ಏಕೈಕ ಕೃತಿ, ಎಂಬ ಅಂಶವು ವ್ಯಕ್ತಗೊಂಡಿರುವುದನ್ನು ಶಿವಣ್ಣನವರು ತೋರಿಸಿ ಕೊಟ್ಟಿದ್ದಾರೆ. ಈವರ ಈ ಶೋಧನೆಯಿಂದ ‘ಲಾಕ್ಷಾಗೃಹ ದಹನ’ ಮತ್ತು ‘ಬಕಾಸುರ ವಧೆ’ಗಳು ಒಂದೇ ಕೃತಿ ಎನ್ನುವ ನಿಲುವು ವ್ಯಕ್ತವಾಗಿದೆ.
ಸೋಮೇಕಟ್ಟೆ ಚನ್ನವೀರಸ್ವಾಮಿಗಳ ಕೃತಿಗಳು:
ಗುರು ಚನ್ನಬಸವೇಶ’ ಅಂಕಿತದ ಸೋಮೇಕಟ್ಟೆ ಚೆನ್ನವೀರಸ್ವಾಮಿ (ಸು.1700) ತುಮಕೂರಿನ ಸೋಮೇಕಟ್ಟೆ ಮಠದ ಪರಂಪರೆಗೆ ಸೇರಿದ ಮಠಾಧೀಶ. ಈತ ತನ್ನ ಸ್ವರವಚನವೊಂದರಲ್ಲಿ ತುಮಕೂರನ್ನು ಹೆಸರಿಸಿದ್ದು, ಆ ಸ್ವರವಚನದ ಪಲ್ಲವಿ ಹಾಗೂ ಉಲ್ಲೇಖದಭಾಗ ಇಂತಿವೆ.
5ನೆಯ ನುಡಿಯ ಕೊನೆಯ ಸಾಲು.
ತುಮಕೂರ ಬಸವನ ವರ
ಭೂಮಿಯಲ್ಲಿ ನೆಲಸಿಹ ಶುಭಕರನ’
ಸೋಮೇಕಟ್ಟೆ ಚೆನ್ನವೀರಸ್ವಾಮಿಗಳು ರಚಿಸಿರುವ ಅನುಪಲಬ್ಧ ಕೃತಿಗಳಿಗೆ ಸಂಬಂಧಿಸಿದ ಹಸ್ತಪ್ರತಿ ಕಟ್ಟೊಂದನ್ನು ಹೊನ್ನವಳ್ಳಿ ಕರಿಸಿದ್ಧೇಶ್ವರ ಮಠದ ಹಸ್ತಪ್ರತಿ ಸಂಗ್ರಹದಲ್ಲಿ ಇರುವುದನ್ನು ಡಾ. ಬಿ. ನಂಜುಂಡಸ್ವಾಮಿ ಅವರೊಂದಿಗೆ ಜೊತೆಗೂಡಿ ಶೋಧಿಸಿ ಆ ಹಸ್ತಪ್ರತಿ ಕಟ್ಟಿನಲ್ಲಿ ಇವರು ರಚಿಸಿರುವ 18 ಲಘುಕೃತಿಗಳನ್ನು ಬೆಳಕಿಗೆ ತಂದಿದ್ದಾರೆ. ಅಲ್ಲದೆ ಆ ಮಠದ ಸಂಗ್ರಹದಲ್ಲಿಯೇ ಇವರು ರಚಿಸಿರುವ 80 ಸ್ವರವಚನಗಳುಳ್ಳ ಓಲೆ ಕಟ್ಟೊಂದು ಲಭ್ಯವಿರುವುದನ್ನು ಗುರುತಿಸಿದ್ದಾರೆ. ಇವಲ್ಲದೆ ಇನ್ನೂ ಹೆಚ್ಚಿನ ಕೃತಿಗಳು ಧಾರವಾಡ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಸೂಚಿ, ಕೊಟ್ಟೂರು ಮಠದ ಹಸ್ತಪ್ರತಿ ಭಂಡಾರ ಇತ್ಯಾದಿ ಕಡೆಗಳಲ್ಲಿ ಕಂಡುಬಂದಿರುವುದನ್ನು ಶೋಧಿಸಿ ಅಲ್ಲಲ್ಲಿಯ, ಅನುಪಲಬ್ಧ ಕೃತಿಗಳನ್ನು ಶೋಧಿಸಿ ಕೊಡಮಾಡಿದ್ದಾರೆ.
ವಿರೂಪಾಕ್ಷಸ್ತುತಿ ಕರ್ತೃತ್ವ ವಿಚಾರ :
ಆರ್. ನರಸಿಹಾಚಾರ್ಯರು ಕರ್ಣಾಟಕ ಕವಿಚರಿತೆಯ ‘ವಿರೂಪಾಕ್ಷಸ್ತುತಿ’ (ಪದ್ಯ 20) ಸು.1600 ಎಂದು ಉಲ್ಲೇಖಿಸಿ ಆ ಕೃತಿಯ ‘ಅಂಗಭವನತುಳಸರ್ವಾಂಗವಹ....’ ಎಂಬ ವಾರ್ಧಕ ಷಟ್ಪದಿಯನ್ನು ಉದ್ಧರಿಸಿದ್ದಾರೆ. ಈ ಉದಾಹರಿಸಿದ ಷಟ್ಪದಿ ವಿರೂಪಾಕ್ಷ ಪಂಡಿತನ (1584) ‘ಚೆನ್ನಬಸವ ಪುರಾಣ’ದಲ್ಲಿದೆ. (ಕಾಂಡ 3 ಸಂಧಿ 35 ಪದ್ಯ 1) ‘ಚೆನ್ನಬಸವ ಪುರಾಣದ’ ಪ್ರತಿಸಂಧಿಯ ಮೊದಲ ಪ್ರಾರ್ಥನಾ ಪದ್ಯಗಳು ಬಹುತೇಕ ವಿರೂಪಾಕ್ಷನ ಸ್ತುತಿಪರವಾಗಿವೆ. ಅಲ್ಲದೆ ಇತರ ಪುರಾಣಗಳ (ಉದಾ. ‘ಬಸವೇಶ್ವರ ಪುರಾಣದ ನಾಂದ್ಯ’, ‘ಚೇರಮಾಂಕನ ಕಾವ್ಯದ ನಾಂದ್ಯ’ ಇತ್ಯಾದಿ) ನಾಂದ್ಯಗಳಂತೆ ಚೆನ್ನಬಸವ ಪುರಾಣದಿಂದಾದ ನಾಂದ್ಯ ಸಂಗ್ರಹಗಳು ಉಪಲಬ್ಧವಿದೆ. ಹೀಗಾಗಿ “ಕವಿಚರಿತಾಕಾರರಿಗೆ ಲಭಿಸಿದ ‘ವಿರೂಪಾಕ್ಷಸ್ತುತಿ’ ಅವರು ಭಾವಿಸಿದಂತೆ-ಪ್ರತ್ಯೇಕ ಕೃತಿಯಾಗಿರದೆ, ‘ಚೆನ್ನಬಸವ ಪುರಾಣದ ನಾಂದ್ಯ’ ಪದ್ಯಗಳ ಸಂಕಲನ ರೂಪವಾದ ಕೃತಿಯಾಗಿದೆ ಎಂದು ಶಿವಣ್ಣನವರು ತೋರಿಸಿ ಕೊಟ್ಟಿದ್ದಾರೆ.
 4.. ಎಸ್. ಶಿವಣ್ಣನವರಿಂದ ಶೋಧಗೊಂಡ ಇತ್ತೀಚಿನ ವೀರಶೈವ ಅನುಪಲಬ್ಧಕೃತಿಗಳು ಮತ್ತು ಇತರ ಶೋಧಗಳು
ಕನ್ನಡ ವಾಙ್ಮಯದಲ್ಲಿ ಪ್ರಮುಖ ಸ್ಥಾನ ಆಕ್ರಮಿಸಿದ ವೀರಶೈವ ಸಾಹಿತ್ಯದ ಶೋಧ, ಬತ್ತದ ತವನಿಧಿ. ಪ್ರತಿವರ್ಷವೂ ಹಲವಾರು ಹೊಸ ಕೃತಿಗಳೊಡನೆ ಹಲವಾರು ಅಪ್ರಕಟಿತ ಕೃತಿಗಳು ಆಗಿಂದಾಗ ಪ್ರಕಟಗೊಳ್ಳುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಕಾವ್ಯಗಳ ಶೋಧದಲ್ಲಿದ್ದ ಆಸಕ್ತಿ ಪಲ್ಲಟಗೊಂಡು ಲಘು ಕೃತಿಗಳ ಪ್ರಕಾರದ ಕಡೆ ಮನ ಹರಿದಿದ್ದು ಸ್ವರವಚನಗಳು, ತಾರಾವಳಿ, ದಂಡಕ, ಅಷ್ಟಕ, ಕಂದ, ತ್ರಿವಿಧಿ ಪ್ರಕಾರಗಳ ಕೃತಿಗಳು ಪ್ರಕಟವಾಗುತ್ತಿವೆ. ಎಸ್. ಶಿವಣ್ಣನವರು ಇಲ್ಲಿಯವರೆಗೂ “ಹನ್ನೆರಡನೆ ಶತಮಾನ ಹಾಗೂ ನಂತರದ ಯುಗದಲ್ಲಿ ಪ್ರಚಲಿತವಿದ್ದ ವಿವಿಧ ಸಾಹಿತ್ಯ ಪ್ರಕಾರಗಳಾದ ವಚನಗಳು, ಸ್ವರವಚನಗಳು ತಾರಾವಳಿ, ದಂಡಕ, ಅಷ್ಟಕ, ಕಂದ ತ್ರಿವಿಧಿ ಇತ್ಯಾದಿ ಪ್ರಕಾರಗಳಲ್ಲಿ ರಚಿತವಾಗಿರುವ ಅನುಪಲಬ್ಧ ವೀರಶೈವ ಸಾಹಿತ್ಯವನ್ನು ವಿವಿಧ ವಿದ್ವಾಂಸರು ಶೋಧಿಸಿ”ರುವುದನ್ನು ಗಮನಿಸಿ ಅವುಗಳನ್ನು ವರ್ಗೀಕೃತವಾಗಿ ಕೊಡ ಮಾಡಿದ್ದಾರೆ. ಇದರಿಂದಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವೀರಶೈವ ಸಾಹಿತ್ಯದ ವ್ಯಾಪ್ತಿಯನ್ನು ಗುರುತಿಸಲು ಸಹಕಾರಿಯಾಗಿದೆ. ಅನುಪಲಬ್ಧ ವೀರಶೈವ ಸಾಹಿತ್ಯ ಕೃತಿಗಳು ಶೋಧಗೊಂಡು ಇಡಿಯಾಗಿ ಹಾಗೂ ಕೆಲವೆಡೆ ಬಿಡಿಯಾಗಿ ನಿಯತ ಕಾಲಿಕೆಗಳಲ್ಲಿ ಪ್ರಕಟಗೊಂಡಿರುವುದನ್ನು ಎಸ್. ಶಿವಣ್ಣನರು ಗಮನಿಸಿ, ಸಂಪಾದಿಸಿ ಒಂದೆಡೆ ಕಲೆಹಾಕಿ ಮುಂದಿನ ಅಧ್ಯಯನಕಾರರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ. ಜೊತೆಗೆ ಇವರ ಈ ಮಹತ್ತರ ಕೆಲಸದಿಂದಾಗಿ ವೀರಶೈವ ಸಾಹಿತ್ಯದ ಪರಿಧಿಯನ್ನು ವಿಸ್ತರಿಸುವಂತಾಗಿದೆ. ಚಿತ್ರದುರ್ಗ ‘ಬೃಹನ್ಮಠ’ ಸಂಗ್ರಹದಲ್ಲಿನ ಕೆಲವು ಕೃತಿಗಳು:
ಚಿತ್ರದುರ್ಗದಲ್ಲಿನ ಮಠದಲ್ಲಿ ಕಾಲದಿಂದ ಕಾಲಕ್ಕೆ ಸಂಗ್ರಹಗೊಂಡ ಸುಮಾರು ಏಳುನೂರಕ್ಕೂ ಮೀರಿ ಓಲೆ ಕಟ್ಟುಗಳ ಸಂಗ್ರಹವಿದ್ದು ಇದರೊಳಗಿನ ಕೃತಿಗಳ ಸಂಖ್ಯೆ ನಾಲ್ಕು ಸಾವಿರದ ಆರುನೂರರಷ್ಟಿದೆ. ಇವುಗಳಲ್ಲಿ ಹಲವು ಕೃತಿಗಳು ಕವಿಚರಿತೆಕಾರ ರಾವ್‍ಬಹದ್ದೂರ್, ಆರ್. ನರಸಿಂಹಾಚಾರ್ಯರಿಗೂ ಸಿಗದಂತಹವುಗಳಾಗಿದ್ದು ಅವುಗಳಲ್ಲಿ ಹರೀಶ್ವರ ದೇವರ ಕಂದ, ವಿರಕ್ತ ತೋಂಟದಾರ್ಯನ ನೂತನಪುರಾತನರ ರಗಳೆ,ಶಿವಸಹಸ್ರನಾಮ, ಸಂಪಾದನೆಯ ಸಿದ್ಧವೀರೇಶ್ವರನ ಬಸವ ಸ್ತೋತ್ರದ ಕಂದ,ಇತ್ಯಾದಿ ಅಜ್ಞಾತ ಕೃತಿಗಳನ್ನು ಎಸ್.ಶಿವಣ್ಣನವರು ಶೋಧಿಸಿ ಸಂಕ್ಷಿಪ್ತವಾಗಿ ಪರಿಚಯಿಸಿ ಕೊಟ್ಟಿದ್ದಾರೆ.
  ಸಾಹಿತ್ಯ ಚರಿತ್ರೆಯ ಅಧ್ಯಯನದಲ್ಲಿ ಮತ್ತು ಸಂಶೋಧನೆಯಲ್ಲಿ ಕವಿಗಳ ಮತ್ತು ಲಿಪಿಕಾರರ ಹಸ್ತಪ್ರತಿಗಳು ಪ್ರಮುಖ ಆಧಾರಗಳೆನ್ನಿಸುತ್ತವೆ. ಅತ್ಯಂತ ಪ್ರಾಚೀನ ಕವಿಗಳ ಕಾಲ ವಿಚಾರ, ಅಪ್ರಕಟಿತ ಕವಿಗಳ ಸಂಪಾದನಾಕಾರ್ಯ, ಹಾಗು ವಿವಿಧ ಕವಿಗಳ ಕಾಲ ಕೃತಿಗಳಿಗೆ ಸಂಬಂಧಿಸಿದಂತೆ ಸಂಶೋಧಿಸಿದ ಚಿಕ್ಕ ಚಿಕ್ಕ ಲೇಖನಗಳನ್ನು ಬರೆದು ಎಸ್ ಶಿವಣ್ಣನವರು ನಾಡಿನಾದ್ಯಂತ ಹಲವಾರು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಕ್ರಿ.ಶ. 1963 ರಿಂದ ಕ್ರಿ.ಶ. 2004 ವರೆಗೆ ಸಾಹಿತ್ಯ ಪತ್ರಿಕೆಗಳು ಮತ್ತು ಸಂಶೋಧನಾ ಪತ್ರಿಕೆಗಳಾದ ಪ್ರಬುದ್ಧ ಕರ್ನಾಟಕ, ಕರ್ನಾಟಕ ಲೋಚನ, ಕನ್ನಡನುಡಿ, ಸಾಧನೆ, ಬಸವ ಪಥ, ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿಸಿದ ಲೇಖನಗಳು, ಕಿರು ಲೇಖನಗಳು ಕನ್ನಡ ಸಾಹಿತ್ಯ ಚರಿತ್ರೆಯ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತವೆ. ಕನ್ನಡ ಸಾಹಿತ್ಯ ಪರಿಷತ್ತು ಕಿ.ಶ. 2004ರಲ್ಲಿ ಶ್ರೀಯುತರ ಇಂಥ ಲೇಖನಗಳನ್ನು ಸಂಗ್ರಹಿಸಿ ‘ಬಿಡುಮುತ್ತು’ ಎಂಬ ಹೆಸರಿನ ಪುಸ್ತಕ ರೂಪದಲ್ಲಿ ಪ್ರಕಟಿಸಿತು. ‘ಬಿಡು ಮುತ್ತು’ಗಳಲ್ಲಿ ಸಂಗ್ರಹಿಸಲಾದ ಕವಿಗಳ ಕಾಲ ವಿಚಾರ, ಹೊಸ ವಚನಗಳ ಶೋಧ, ಮತ್ತು ಸಾಹಿತ್ಯ ಚರಿತ್ರೆಯಲ್ಲಿ ಈಗಾಗಲೆ ಹೆಸರಿಸಲಾದ ಕವಿಗಳ ಸಾಹಿತಿಗಳ ಬಗೆಗಿನ ಇತ್ತೀಚಿನ ಹೊಸ ಶೋಧಗಳನ್ನು ಕುರಿತಾದ ವಿದ್ವತ್ಪೂರ್ಣ ಕಿರು ಲೇಖನಗಳನ್ನು ಅಧ್ಯಯನಕ್ಕೆ ಅಳವಡಿಸಿದರೆ, ಗೊಂದಲದ ಗೂಡಾಗಿದ್ದ ಹಲವು ಕವಿಗಳ, ಕೃತಿಗಳ ನಿಖರವಾದ ಕಾಲನಿರ್ಣಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಹುತೇಕವಾಗಿ ಪರಿಹಾರವಾಗಿವೆ. ಕನ್ನಡ ಸಾಹಿತ್ಯ ಚರಿತ್ರೆಯ ಇತಿಹಾಸದಲ್ಲಿ ಕಾಲನಿರ್ಣಯಕ್ಕೆ ಸಂಬಂಧಿಸಿದಂತೆ ಸುಧೀರ್ಘವಾದ ವಿದ್ವತ್ ಚರ್ಚೆಗಳು ನಡೆದು ಪರಿಹಾರ ಕಾಣದೇ ಇದ್ದ ಸಮಸ್ಯೆಗಳು ಹಲವಾರು; ದಶಕಗಳವರೆಗೆ ಸುಧೀರ್ಘವಾಗಿ ಚರ್ಚೆ ನಡೆದದ್ದಕ್ಕೆ ಉದಾಹರಣೆ ತೋಂಟದ ಸಿದ್ಧಲಿಂಗರ ಕಾಲ ನಿರ್ಣಯ, ಮತ್ತು ಸರ್ವಜ್ಞನ ಜೀವನ-ದೇಶ-ಕಾಲ ವಿಚಾರಗಳು, ಇವುಗಳಿಗೆ ಸಮರ್ಥನೀಯ ಪರಿಹಾರಗಳನ್ನು ಕಾಣಿಸುವಲ್ಲಿ ಶಿವಣ್ಣನವರ ಪರಿಶ್ರಮ ಅವಿಸ್ಮರಣೀಯವಾಗಿದೆ. ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಇಡಿಯಾದ ಮತ್ತು ಬಿಡಿಯಾದ ಸಂಶೋಧನೆಯಿಂದಾಗಿ ಸಾಹಿತ್ಯ ಚರಿತ್ರೆಯ ಪರಿಧಿ ವಿಸ್ತರಿಸಿತು. ಬೆಳವಣಿಗೆಯ ದೃಷ್ಟಿಯಿಂದ ವಿಕಾಸಹೊಂದಿತು. ಹೆಚ್ಚಿನ ಕವಿಗಳು, ಅವರ ಕೃತಿಗಳು ಬೆಳಕು ಕಂಡವು. ಕೃತಿಗಳ ಪಟ್ಟಿ ಬೆಳೆಯಿತು. ಹಸ್ತಪ್ರತಿಗಳ ರೂಪದಲ್ಲಿದ್ದ ಕೃತಿಗಳು ಸಂಪಾದನೆಗೊಂಡು ಪ್ರಕಟವಾದವು. ಸಾಹಿತ್ಯ ಚರಿತ್ರೆಗೆ ಪೂರಕವಾಗುವ ಕೆಲವು ಶಾಸನಗಳು ಶೋಧಿತವಾದವು. ಈ ಹಿನ್ನಲೆಯಲ್ಲಿ ಸಾಹಿತ್ಯ ಚರಿತ್ರೆಯಲ್ಲಿ ಗಣನೀಯ ಬೆಳವಣಿಗೆಗಳಾದುದನ್ನು ಗುರುತಿಸಬಹುದು. ಆಧುನಿಕ ಪೂರ್ವದ ಕನ್ನಡ ಸಾಹಿತ್ಯ ಕುರಿತ ಸಂಶೋಧನೆಯಲ್ಲಿ ಎಸ್.ಶಿವಣ್ಣನವರದ್ದು ಸಿಂಹಪಾಲು. ಎಸ್. ಶಿವಣ್ಣನವರ ಆಕರ ಸಂಶೋಧನೆಯ ಸ್ವರೂಪವನ್ನು ಬಹುಮಟ್ಟಿಗೆ ಕೆಳಕಂಡ ರೀತಿಯಲ್ಲಿ ಕಂಡುಕೊಳ್ಳಬಹುದಾಗಿದೆ.
1. ಕವಿಗಳ ಜನ್ಮಸ್ಥಳಗಳಿಗೆ ಸಂಬಂಧಿಸಿದ ಹಾಗೆ ನೂತನ ಸಂಗತಿಗಳು ಬೆಳಕಿಗೆ ಬಂದವು.
2. ಕವಿಗಳ ತಂದೆ ತಾಯಿಗಳ, ಗುರುಗಳ ಆಶ್ರಯದಾತರ ಬಗ್ಗೆ ಹೆಚ್ಚಿನ ವಿವರಗಳು ತಿಳಿದು ಬಂದವು.
3. ಒಂದೇ ಹೆಸರಿನ ಇಬ್ಬರು ಕವಿಗಳನ್ನು ಒಬ್ಬನೇ ಎಂದು ತಿಳಿದುಕೊಂಡಿದ್ದು ದೂರವಾಗಿ ಬೇರೆ ಬೇರೆ ಎಂದು ನಿರ್ಧರಿತವಾಯಿತು.
4. ಕವಿಗಳನ್ನು, ಕೃತಿಗಳನ್ನು ಉಲ್ಲೇಖಿಸುವ ಶಾಸನಗಳು ಶೋಧಿಸಲ್ಪಟ್ಟವು.
5. ವಚನಕಾರರ ಹಾಗೂ ಹರಿದಾಸರ ಅಂಕಿತಗಳಲ್ಲಿ ಏರ್ಪಟ್ಟಿದ್ದ ಸಂದಿಗ್ಧತೆ ದೂರವಾಯಿತು.
6. ಒಬ್ಬನೇ ಬರೆದ ಕೃತಿಗಳನ್ನು ಇನ್ನಾರೋ ಕವಿಯ ಹೆಸರಿನಲ್ಲಿ ಗುರುತಿಸಿದ್ದು ನಿವಾರಣೆಯಾಯಿತು.
7. ವಚನಕಾರರು ವಚನಗಳ ರಚನೆಯ ಜೊತೆಯಲ್ಲಿಯೇ ಸ್ವರವಚನಗಳನ್ನು ಬರೆದಿದ್ದಾರೆಂಬ ಅಂಶ ಬೆಳಕಿಗೆ ಬಂದ ಪರಿಣಾಮ ಅಸಂಖ್ಯಾತ ಸ್ವರವಚನಗಳು ಹಾಗೂ ತತ್ವ ಪದಗಳು ಶೋಧಿತವಾಗಿ ಬೆಳಕು ಕಂಡವು.
8. ಕರ್ತೃ ಯಾರೆಂದು ತಿಳಿಯದಿದ್ದ ಕೃತಿಯೊಂದರ ಕರ್ತೃಗಳ ಹೆಸರು ಲಭಿಸಿದವು.  
9. ಮುಖ್ಯವಾಗಿ ಕವಿಚರಿತೆಯ ಮೂರು ಸಂಪುಟಗಳಿಗೆ ಹಲವೆಡೆ ಸೂಕ್ತ ತಿದ್ದುಪಡಿ ಮಾಡಬೇಕೆನ್ನುವ ಅಂಶ ಇವರ ಸಂಶೋಧನೆಯ ಮೂಲಕ ವ್ಯಕ್ತವಾಯಿತು
10. ಎಷ್ಟೋ ಅನಾಮಧೇಯ ಕವಿಗಳು ಹಾಗೂ ಅವರ ಕೃತಿಗಳು ಬೆಳಕಿಗೆ ಬಂದವು.
11. ಕವಿಚರಿತೆಯಲ್ಲಿ ಉಲ್ಲೇಖವಾಗದೆ ಇರುವ ಅಸಂಖ್ಯಾತ ಕವಿಗಳ ಕೃತಿಗಳು ಸಂಶೋಧನೆಯ ಮೂಲಕ ಬೆಳಕು ಕಂಡವು.
ಇಂದಿಗೂ ಎಸ್. ಶಿವಣ್ಣನವರು ಶೋಧಿಸಿ ಕೊಟ್ಟಿರುವ ಸಂಶೋಧನಾ ವಿವರಗಳನ್ನು ಸಾಹಿತ್ಯ ಚರಿತ್ರೆಯಲ್ಲಿ ಅಳವಡಿಸಿ ಕೊಳ್ಳಬೇಕಾಗಿದೆ. ಜೊತೆಗೆ  ಸಾಹಿತ್ಯ ಚರಿತ್ರೆಯನ್ನು ಪುನರ್ ರಚಿಸಬೇಕಾಗಿದೆ.
ಶಾಸ್ತ್ರಸಾಹಿತ್ಯ ಕೃತಿಗಳ ಶೋಧನೆ :
ಶಿವಣ್ಣನವರು  ಪರಿಶೀಲಿಸಿರುವ ಶಾಸ್ತ್ರಗ್ರಂಥಗಳು ಕರ್ಣಾಟಕ ರತ್ನಾಕರ, ಕ್ಷಾರಪಾನೀಯಂ, ಶಬ್ದಮಣಿದರ್ಪಣಂ, ಭೀಮಸೇನನ ಸೂಪಶಾಸ್ತ್ರ, ಮಲ್ಲಿಕಾರ್ಜುನನ ಸೂಕ್ತಿಸುಧಾರ್ಣವ, ಸಿದ್ದಲಿಂಗಾರ್ಯನ ಕದಂಬನೀತಿ, ಸೋದೆಗುರುರಾಯನ ಕರ್ಣಾಟಕ ಶಬ್ದಮಂಜರಿ ಟೀಕುಸುಧಾ, ಮುಂತಾದವುಗಳು ಪ್ರಮುಖವಾದವುಗಳಾಗಿವೆ.
ಶಬ್ದಮಣಿದರ್ಪಣ: ಕೇಶಿರಾಜನ ಶಬ್ದಮಣಿ ದರ್ಪಣದ ಸೂತ್ರ ಸಂಖ್ಯೆ 179 ಮತ್ತು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕ್ರಿ.ಶ. 1160ರ ಬಾಗಳಿ ಶಾಸನದ ಹೋಲಿಕೆಯಲ್ಲಿ ‘ಪುಳಿಲ್’ ಶಬ್ದದ ಬಳಕೆಯ ಅರ್ಥವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಶಿವಣ್ಣನವರು ಮಾಡಿದ್ದಾರೆ. ಕೇಶಿರಾಜ ಪ್ರಯೋಗಿಸಿದ ಗಮಕ ಸಮಾಸಕ್ಕೆ ಸಂಬಂಧಿಸಿದ ಪದ ‘ಕೃತ್ತಿಂಗೆ’ ಎಂಬಲ್ಲಿ ಈ ಕೆಳಕಂಡ ಪ್ರಯೋಗವನ್ನು ಉದಾಹರಿಸಿದ್ದಾನೆ.
ಪಾಡುವ ತುಂಬಿ ಕೋಡುವ ಪುಳಿಲ್... ...’
  ಆದರೆ ಈ ಪದದ ಆಕರದ ಬಗೆಗೆ ಕೇಶಿರಾಜನು ಏನನ್ನೂ ಹೇಳದೇ ಮೌನವಾಗಿದ್ದಾನೆ. ಇದನ್ನು ಸೂಕ್ಷ್ಮಮತಿಯಿಂದ ಗುರುತಿಸಿರುವ ಶಿವಣ್ಣನವರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ‘ಬಾಗಳಿ’ಯಲ್ಲಿ ದೊರೆತ ಕ್ರಿ.ಶ. 1160ರ ಬಾಗಳಿ ಶಾಸನದಲ್ಲಿ ಬಾಗಳಿಯನ್ನು ವರ್ಣಿಸುವ ಸಂದರ್ಭದಲ್ಲಿ ‘ಪುಳಿಲು ಪದ ಪ್ರಯೋಗವಾಗಿದ್ದು ಅದರ ಆಕರವನ್ನು ಗುರುತಿಸಲು ಪ್ರಯತ್ನಿಸಿದ್ದಾರೆ.
ತೀಡುವ ತೆಂಬಲರ್ಬಳಿಸಿ ತದ್ವನ ಲಕ್ಷ್ಮಿಯ ಮುಂದೆ ಮಂಗಳಂಬಾಡುವ ತುಂಬಿ ಕೊಡುವ ಪುಳಿಲು ನಡೆದಾಡುವ ಹಂಸೆ ರಾಗದಿಂದಾಡುವ ಸೋಗೆ... ...’ ಶಬ್ದಮಣಿದರ್ಪಣ ಮತ್ತು ಶಾಸನಗಳಲ್ಲಿ ಪ್ರಯೋಗವಾದ ಒಂದೇ ಪದವನ್ನು ಎರಡು ವಿಭಿನ್ನ ಓದಿನ ಸಂದರ್ಭದಲ್ಲಿ ತಕ್ಷಣಕ್ಕೆ ನೆನಪಿಸಿಕೊಂಡು ಓದಿದ್ದನ್ನು ಹಾಗೇ ಮರೆತುಬಿಡಬಾರದೆಂದು ನೆನಪಿಟ್ಟುಕೊಂಡು, ಟಿಪ್ಪಣಿ ಮಾಡಿಟ್ಟುಕೊಂಡು, ಅಂಥ ಟಿಪ್ಪಣಿಗಳನ್ನು ನಾಡಿನ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟಿಸಲೆಂದು ತಕ್ಷಣಕ್ಕೆ ಬರೆದು ಕಳಿಸುತ್ತಾರೆ. ಹೀಗೆ ಪ್ರಕಟಗೊಂಡ ಮಾಹಿತಿಯು ವಿವಿಧ ಸಂಶೋಧಕರಿಗೆ ತಮ್ಮ ಸಂಶೋಧನಾಧ್ಯಯನದಲ್ಲಿ ಮಾರ್ಗದರ್ಶಕವಾಗುತ್ತದೆ.
ಕರ್ಣಾಟಕ ವೃತ್ತ ರತ್ನಾಕರ: ಕೇದಾರಭಟ್ಟ ಕವಿಕೃತ ‘ಕರ್ಣಾಟಕ ವೃತ್ತ ರತ್ನಾಕರ’ವು ಅನುಪಲಬ್ಧ ಕೃತಿ. ಶಿವಣ್ಣನವರು ಅದರ ಕಾಲ, ಕರ್ತೃ, ದೇಶ ಇತ್ಯಾದಿ ವಿಷಯಗಳ  ಆಸಕ್ತರಾದ ಸಂದರ್ಭದಲ್ಲಿ ಬ್ರಹ್ಮಶ್ರೀ ಸಿದ್ಧಾಂತಿ ಶಿವಶಂಕರ ಶಾಸ್ತ್ರಿಗಳು ಕ್ರಿ.ಶ. 1893ರಲ್ಲಿ ಮದರಾಸನಿಂದ ‘ಶ್ರೀ ಸೋಮೇಶ್ವರ ಶತಕ’ವನ್ನು ಸ್ವರಚಿತ ಟೀಕಾ ತಾತ್ಪರ್ಯ ಸಹಿತ ಪ್ರಕಟಿಸಿರುವುದನ್ನು ಗಮನಿಸಿದರು ಶಿವಶಂಕರ ಶಾಸ್ತ್ರಿಗಳು ಇದರಲ್ಲಿ ಸ್ರಗ್ಧರಾ ಹಾಗೂ ಮತ್ತೇಭವಿಕ್ರೀಡಿತ ವೃತ್ತಗಳ ಛಂದೋಸ್ವರೂಪವನ್ನು ತಿಳಿಸುವಲ್ಲಿ ‘ಕರ್ಣಾಟಕ ವೃತ್ತರತ್ನಾಕರದಲ್ಲಿ’ಯ ಲಕ್ಷಣಗಳನ್ನು ಉದಾಹರಣೆಯಾಗಿ ಕೊಟ್ಟಿದ್ದಾರೆ. ಈಗಾಗಿ ‘ಕರ್ಣಾಟಕ ವೃತ್ತರತ್ನಾಕರ’ ಶಾಸ್ತ್ರ ಕೃತಿ ಲಭ್ಯವಿದ್ದು, ಅದನ್ನು ಶಿವಶಂಕರ ಶಾಸ್ತ್ರಿಗಳು ನೋಡಿದ್ದಿರ ಬಹುದು  ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ.
 ಕ್ಷಾರಪಾನೀಯಂ: ಕ್ಷಾರಪಾಣಿ ಕವಿಯ ‘ಕ್ಷಾರಪಾನೀಯಂ’ ನರವೈದ್ಯಕ್ಕೆ ಸಂಬಂಧಿಸಿದ ಶಾಸ್ತ್ರ ಕೃತಿಯಾಗಿದೆ. ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಶಿವಕೋಟ್ಯಾಚಾರ್ಯ ರಚಿಸಿದ ‘ವಡ್ಡಾರಾಧನೆ’ಯಲ್ಲಿ ‘... ... ... ಕ್ಷಾರಪಾನೀಯಂ ಮೊದಲಾಗೊಡೆಯ ನರವೈದ್ಯಂಗಳು ... ... ...’ ಎಂಬ ಉಲ್ಲೇಖವಿದೆ. ಇದರ ಕತೃ ವಿಷಯ ವಸ್ತುಗಳ ಬಗೆಗೆ ಶ್ರೀ ಕ.ವೆಂ. ರಾಜಗೋಪಾಲ ಅವರು ‘ಪ್ರಬುದ್ಧ ಕರ್ನಾಟಕ’ 53.2, ಕ್ರಿ.ಶ. 1971 ಪುಟ 160ರಲ್ಲಿಯ ತಮ್ಮ ‘ಕ್ಷಾರಪಾನೀಯಂ ಒಂದು ಟಿಪ್ಪಣಿ’ ಎಂಬ ಲೇಖನದಲ್ಲಿ ಗುರುತಿಸಿದ್ದಾರೆ, ಎಸ್.ಶಿವಣ್ಣನವರು ‘ಕ್ಷಾರಪಾನೀಯಂ: ಕೃತಿಯ ಹೆಸರಿನ ಬಗೆಗೆ’ ಎಂಬ ಕಿರು ಟಿಪ್ಪಣಿಯನ್ನು ಬರೆಯುತ್ತ ಮದ್ರಾಸ್ ವಿಶ್ವವಿದ್ಯಾಲಯದಿಂದ ಪ್ರಕಟವಾದ ‘ನ್ಯೂ ಕ್ಯಾಟಲಾಗಸ್ ಕ್ಯಾಟಲಾಗೊರುಮ’ (New Catalogus Catalogorum )ಸಂಪುಟ 5 (1969) ಪುಟ 150 ರಲ್ಲಿಯ ಉಲ್ಲೇಖಗಳಿಂದ  ಶಿವಣ್ಣನವರು ಇಲ್ಲಿಯವರೆವಿಗೂ ಯಾರೂ ಗಮನಿಸದ ಹಲವು ಹೊಸ ವಿಷಯಗಳನ್ನು ಗಮನಿಸಿದ್ದಾರೆ. ಅವುಗಳೆಂದರೆ-
1.     ಕ್ಷಾರಪಾಣಿ ಅತ್ರೇಯ ಪುನರ್ವಸುವಿನ ಶಿಷ್ಯ.
2.    ಕೃತಿಯ ಇನ್ನೊಂದು ಹೆಸರು ಕಾಯಚಿಕಿತ್ಸಾತಂತ್ರ.
3.     ಈತನ ಕೃತಿಯನ್ನು ‘ದ್ರವ್ಯಗುಣ ಸಂಗ್ರಹ’ ಕರ್ತೃ ಚಕ್ರಪಾಣಿದತ್ತಂ ಹೆಸರಿಸಿದ್ದಾನೆ.
ಭೀಮಸೇನನ ಸೂಪಶಾಸ್ತ್ರ: ಪಾಕಶಾಸ್ತ್ರಕ್ಕೆ ಪರ್ಯಾಯ ಪದ ಸೂಪಶಾಸ್ತ್ರ. ಭಕ್ಷ್ಯ, ಭೋಜ್ಯ. ಪೇಯ, ಚೋಷ್ಯ ಹಾಗೂ ಲೇಹ್ಯಗಳೆಂಬ ಐದು ಬಗೆಯ ಅಡಿಗೆಗಳನ್ನು ಸಿದ್ದಪಡಿಸುವ ವಿಧಾನವನ್ನು ಕವಿಯು ಇದರಲ್ಲಿ ನಿರೂಪಿಸಿದ್ದಾನೆ.
ಕನ್ನಡದಲ್ಲಿ ಚಾವುಂಡರಾಯ (ಸು.1150)ನ ‘ಲೋಕೋಪಕಾರ’ದ ಎಂಟನೆಯ ಆಶ್ವಾಸದಲ್ಲಿ ಸೂಪಶಾಸ್ತ್ರಕ್ಕೆ ಸಂಬಂಧಿಸಿದ ವಿವರಗಳಿವೆ. ಅನಂತರ ಮೂರನೆಯ  ಮಂಗರಸನು (ಕ್ರಿ.ಶ.1508) ‘ಸೂಪಶಾಸ್ತ್ರ’ ಕೃತಿಯನ್ನು ವಾರ್ಧಕ ಷಟ್ಪದಿಯಲ್ಲಿ ರಚಿಸಿದ್ದಾನೆ. ಇದೇ ಪ್ರಕಾರಕ್ಕೆ ಸಂಬಂಧಿಸಿದ ಮತ್ತೊಂದು ಕೃತಿ ಭೀಮಸೇನನ ‘ಸೂಪಶಾಸ್ತ್ರ’ ಕೃತಿ ಸಂಸ್ಕೃತ ಭಾಷೆಯಲ್ಲಿದ್ದು 45 ಶ್ಲೋಕಗಳಿವೆ. ಕೃತಿಗೆ ಅಜ್ಞಾತಕಾರನೊಬ್ಬನು ಹಳಗನ್ನಡ ನಡುಗನ್ನಡ ಭಾಷೆಗಳ ಸಮ್ಮಿಶ್ರಣವುಳ್ಳ ಟೀಕೆಯೊಂದನ್ನು ಬರೆದಿರುವುದಾಗಿಯೂ ಅದು ಉಪಲಬ್ದವಿರುವುದಾಗಿಯೂ ಇವರು ತಿಳಿಸಿದ್ದಾರೆ.
   ಸೂಪಶಾಸ್ತ್ರ ಕೃತಿಯ ಮೊದಲ ಶ್ಲೋಕ ಕೃತಿಕಾರನನ್ನು ಕುರಿತು ಈ ರೀತಿ ಉಲ್ಲೇಖಿಸಿದೆ. ‘ನಿವಸತ್ಸು ಪಾಂಡುಸೂನುಷು ವಿರಾಟನಗರೇ ಪುರ ಪವನ(ಪುತ್ರಃ) ಚಕ್ರೇ ಪಿತುಃ ಪ್ರಸಾದಿದಾತ್ತನ್ತ್ರಮಿದಂ ಸೂಪಕರಣಸ್ಯ’
ಇದರಿಂದ “ವಿರಾಟನಗರದಲ್ಲಿದ್ದ ಪಾಂಡುವಿನ ಮಕ್ಕಳಲ್ಲೊಬ್ಬನಾದ ಭೀಮಸೇನನಿಂದ ಈ ಕೃತಿ ರಚಿತವಾದಂತೆ ತಿಳಿದು ಬರುತ್ತದೆ. ಆದಿಯ ಉಲ್ಲೇಖವಲ್ಲದೆ ಕೃತಿಯ ಒಳಭಾಗದಲ್ಲಿರುವ ಈ ಮುಂದಿನ ಶ್ಲೋಕಗಳಲ್ಲೂ ಕೃತಿ ಭೀಮಸೇನನಿಂದ ರಚಿತವಾದ ಸಂಗತಿ ಸೂಚಿತವಾಗಿದೆ.
ಇತ್ಯಾಹ ಪವನಾತ್ಮಜಃ’ (ಶ್ಲೋಕ31)
ಭೀಮಸೇನ ವಚೋಬಲಾತ್’ (ಶ್ಲೋಕ35)
ಇತ್ಯುವಾಚ ವ್ಯಕೋದರಃ’ (ಶ್ಲೋಕ 36)
ಇತೀದಂ ಭೀಮ ಚೋದಿತಂ’ (ಶ್ಲೋಕ 37)
ಇತ್ಥಂ ಸಮೀರಣಾ ಸುತಃ’ (ಶ್ಲೋಕ 45)”19   
   ಈ ಗ್ರಂಥದಲ್ಲಿ ಸುಮಾರು ಮೂವತ್ತೈದು ವಿಷಯಗಳಲ್ಲಿ ಹದಿನೈದು ಸೊಪ್ಪಿನ ಪಲ್ಯಗಳೂ ಇನ್ನು ಕೆಲವು ಅಪರೂಪ ಸಾಧನಗಳೂ ನೀರು ಹಾಲು ಮುಂತಾದ ಪೇಯಗಳ ಪರಿವರ್ತನ ಕ್ರಮಗಳು ಮಾತ್ರ ಇರುವುದಾಗಿ ಶಿವಣ್ಣನವರು ತಿಳಿಸಿದ್ದಾರೆ. ಈ ಲೇಖನದಲ್ಲಿ ವಿದ್ವಾನ್ ಯು. ಸೀತಾರಾಮಾಚಾರ್ಯ ರಿಂದ ಸಂಪಾದಿತರಾಗಿರುವ ‘ಸೂಪಶಾಸ್ತ್ರಂ’ ಕೃತಿಯನ್ನು ಆಧರಿಸಿ ಇಲ್ಲಿಯವರೆಗೂ ಯಾರೂ ಗಮನಿಸದ ಸೂಪ ಶಾಸ್ತ್ರ ಕೃತಿಯಲ್ಲಿಯ ಪಾಕಕ್ಕೆ ಸಂಬಂಧಿಸಿದ ವಿವರಗಳನ್ನು ಕೊಡ ಮಾಡಿದ್ದಾರೆ. ಆದರೆ ಪರಂಪರಾಗತ ಪುರಾಣಗಳ ಬಗೆಗೆ ಶ್ರದ್ದಾಭಕ್ತಿಯುಳ್ಳವರು ಈ ಕೃತಿ ಭೀಮಸೇನ ಕೃತರೆಂಬುದು ನಂಬಬಹುದಾದರು ಆಧುನಿಕ ಸಂಶೋಧಕರಿಗೆ ಈ ಕೃತಿ ಕರ್ತೃ ಭೀಮಸೇನನೆಂಬ ಅಂಶ ಪ್ರಶ್ನಾರ್ಥಕವೆಂಬುದರಲ್ಲಿ ಸಂದೇಹವಿಲ್ಲ ಎಂಬ ಅನುಮಾನವು ಇದೆ.
   ‘ಮಲ್ಲಿಕಾರ್ಜುನ ಕವಿ ಸಂಕಲಿತ ಸೂಕ್ತಿಸುಧಾರ್ಣವ’ ಎಂಬ ಲೇಖನದಲ್ಲಿ ಕನ್ನಡದ ಮೊದಲ ಕಾವ್ಯಸಂಕಲನದಲ್ಲಿ ಶಾಸ್ತ್ರವಿಷಯಕ್ಕೆ ಸಂಬಂಧಿಸಿದ ಅನೇಕ ಮಹತ್ವದ ಸಂಗತಿಗಳನ್ನು ಪ್ರಥಮ ಬಾರಿಗೆ ಇವರು ಬೆಳಕಿಗೆ ತಂದಿದ್ದಾರೆ. ಪ್ರಾಚೀನ ಕನ್ನಡ ಸಾಹಿತ್ಯಾಭ್ಯಾಸಿಗಳಿಗೆ ಚಿರಪರಿಚಿತವಾದ ಕೃತಿಯಾದ ಸೂಕ್ತಿಸುಧಾರ್ಣವದ ಸಂಕಲನಕಾರ ಮಲ್ಲಿಕಾರ್ಜುನನು ವಿದ್ವಾಂಸರ ಕೋರಿಕೆಗನುಸಾರವಾಗಿ ಸಂಕಲಿಸಿರುವುದಾಗಿ  ಕೃತಿಯ ‘ಪೀಠಿಕಾಪ್ರಕರಣ’ ದಲ್ಲಿಯ ಪದ್ಯ75 ರಲ್ಲಿ ಹೇಳಿಕೊಂಡಿದ್ದಾನೆ.
ಕೃತಿಯ ಪ್ರಾರಂಭದಲ್ಲಿ ಪೀಠಿಕಾ ಪ್ರಕರಣವಿದೆ. ಅನಂತರ ಸಮುದ್ರ ವರ್ಣನಂ ಎಂಬುದರಿಂದ ಯಾತ್ರಾಂಗವರ್ಣನಂವರೆಗಿನ 17 ವರ್ಣನೆಗಳಿಗೆ ಸಂಬಂಧಿಸಿದೆ 2191 ಪದ್ಯಗಳಿವೆ. ಕೃತಿಯಲ್ಲಿ 18 ನೆಯ ವರ್ಣನೆ ‘ವಿರೋಧಿ ಜಯಂ’ ಈ ಭಾಗ ಉಪಲಬ್ದವಿಲ್ಲ. ಹೀಗಾಗಿ ಉಪಲಬ್ದ, ಪ್ರಕಟಿತ ಸೂಕ್ತಿ ಸುಧಾರ್ಣವ ಕೃತಿ ಅಪೂರ್ಣವಾಗಿದೆ. ಮಲ್ಲಿಕಾರ್ಜುನ ಈ ಸಂಕಲನದೊಡನೆ ಬಸರಾಳು ಶಾಸನವನ್ನು ರಚಿಸಿದಂತೆ ತಿಳಿದುಬಂದಿದೆ ಎಂಬ ಹೊಸಸಂಗತಿಗಳನ್ನು ಕೃತಿಯ ಆಂತರಿಕ ಸಾಕ್ಷಗಳನ್ನಾಧರಿಸಿ ಎಸ್. ಶಿವಣ್ಣನವರು ಹುಡುಕಿ ಕೊಟ್ಟಿದ್ದಾರೆ.”
ಕಾವ್ಯ ಸಂಕಲನಕಾರನ ಬಗೆಗೆ ಸ್ವಕೀಯ ವಿವರಗಳನ್ನು ಮೊದಲ ಬಾರಿಗೆ ಕೊಡ ಮಾಡಿದ್ದಾರೆ. ಮಲ್ಲಿಕಾರ್ಜುನನಿಗೆ ಮಲ್ಲ, ಮಲ್ಲಪ್ಪ, ಚಿದಾನಂದ, ಚಿದಾನಂದ ಮಲ್ಲಿಕಾರ್ಜುನ ಎಂಬ ಹೆಸರುಗಳೂ ಇವೆ. ಈತ ಯಾದವ ಕಟಕಾಚಾರ್ಯ ಸುಮನೋಬಾಣನ ಜಾಮಾತೃ. ಶಬ್ಧಮಣಿದರ್ಪಣದ ಕೃತಿಕಾರ ಕೇಶಿರಾಜನ ತಂದೆ, ಜನ್ನನ ಸೋದರಿಯ ಗಂಡ. ಮಲ್ಲಿಕಾರ್ಜುನ ಯಾದವ ಹೊಯ್ಸಳ ಸೋಮೇಶ್ವರನ ಆಶ್ರಿತ ಕವಿಯಾಗಿದ್ದು; ಕೃತಿಸಂಕಲನವನ್ನು ದೋರಸಮುದ್ರದಲ್ಲಿ ರಚಿಸಿರುವುದಾಗಿಯೂ ತಿಳಿಸಿದ್ದಾರೆ.
  ಕನ್ನಡದ ಸಂಕಲನದ ಕೃತಿಗಳಲ್ಲಿ ಸೂಕ್ತಿಸುಧಾರ್ಣವ ಮೊತ್ತ ಮೊದಲನೆಯದು. ಇದರ ಸಂಯೋಜನೆಯಲ್ಲಿ ತನ್ನದೇ ಆದ ವೈಶಿಷ್ಟ್ಯವಿದೆ. ಸಂಸ್ಕೃತದ ಸುಭಾಷಿತ ಸಂಗ್ರಹಗಳ ಸ್ಪರೂಪಕ್ಕೂ, ಸೂಕ್ತಿಸುಧಾರ್ಣವದ ಸ್ಪರೂಪಕ್ಕೂ ವ್ಯತ್ಯಾಸಗಳಿವೆ. “ಸಂಸ್ಕೃತ ಸುಭಾಷಿತಕಾರರು ತಮ್ಮ ಸಂಗ್ರಹಗಳಲ್ಲಿ ಸಾಮಾನ್ಯವಾಗಿ ದೇವತಾಸ್ತುತಿ, ಋತು ವರ್ಣನೆ, ಅನ್ಯೋಕ್ತಿ, ಸಂಕೀರ್ಣ ಮುಂತಾದ ಸಾಮಾನ್ಯ ಭಾಗಗಳು ಮಾಡುತ್ತಾರೆ. ಕೆಲವು ಸಂಕಲನಗಳಲ್ಲಿ ಸಂಕಲನಗೊಂಡಿರುವ ಪದ್ಯಗಳ ಆಕರ ನಿರ್ದೇಶಗಳು ಇರುತ್ತವೆ. ‘ಮಲ್ಲಿಕಾರ್ಜುನನು ಅಷ್ಟಾದಶ ವರ್ಣನೆಗಳನ್ನೂ ಕ್ರಮಬದ್ಧವಾಗಿ ಬೇರೆ ಬೇರೆಯ ಆಶ್ವಾಸಗಳಾಗಿ ವಿಭಾಗಿಕೊಂಡು ಮಹಾಕಾವ್ಯದ ಮಾದರಿಯಲ್ಲಿ’ ಸಂಕಲಿಸಿದ್ದಾನೆ. ಆದುದರಿಂದ ಈ ಯೋಜನೆಯ ಕ್ರಮ, ರೀತಿ ಎಲ್ಲವೂ ಆತನದೇ ಆಗಿದೆ.”
ಈಗ ಉಪಬ್ಧವಿದ್ದು ಅಚ್ಚಾಗಿರುವ ಸೂಕ್ತಿಸುಧಾರ್ಣವದ ಭಾಗದಲ್ಲಿ 2191 ಪದ್ಯಗಳಿವೆ. ಇವೆಲ್ಲ ಕಂದ, ವೃತ್ತಗಳಲ್ಲಿವೆ. ಮಲ್ಲಿಕಾರ್ಜುನನು ತನ್ನ ಕೃತಿಗೆ ಕಾವ್ಯಗಳಿಂದ ಮತ್ತು ಶಾಸನಗಳಿಂದ ಪದ್ಯಗಳನ್ನು ಆರಿಸಿದ್ದಾನೆ. ಆದರೆ ಆರಿಸಿರುವ ಪದ್ಯಗಳ ಆಕರಗಳ ಬಗೆಗೆ ಮೌನ ತಾಳಿರುವನು. ಪೀಠಿಕಾ ಪ್ರಕರಣದ 26ನೆಯ ಪದ್ಯದಲ್ಲಿ ಹೆಸರಿಸಿದ ಜನ್ನ, ಪಂಪ, ಗುಣನಂದಿ, ಪೊನ್ನ, ಗಜಾಂಕುಶರ ಕೃತಿಗಳಿಂದ ಪದ್ಯಗಳನ್ನು ಆರಿಸಿರುವನೆಂಬುದರಲ್ಲಿ ಸಂಶಯವಿಲ್ಲ. ಇವರಲ್ಲಿ ಗುಣನಂದಿ, ಗಜಾಂಕುಶರ ಕೃತಿಗಳ ಬಗೆಗೆ ಏನೂ ತಿಳಿದಿಲ್ಲ.
     ಸೂಕ್ತಿಸುಧಾರ್ಣವದ ಸಂಪಾದಕರಾದ ಎನ್. ಅನಂತರಂಗಾಚಾರ್ಯರು ಶ್ರಮವಹಿಸಿ ಸುಮಾರು 1157 ಪದ್ಯಗಳ ಆಕರಗಳನ್ನು ಗುರುತಿಸಿದ್ದಾರೆ. ಜೊತೆಗೆ ಡಿ.ಎಲ್.ನರಸಿಂಹಾಚಾರ್ಯರು ಮತ್ತು ಹಂ..ನಾ ರವರು ಕೆಲವು ಆಕರಗಳನ್ನು ಗುರುತಿಸಿದ್ದಾರೆ. ಇವನ್ನು ಹೊರತು ಪಡಿಸಿ  ಮಲ್ಲ ಕವಿಯ ಕಾವ್ಯಸಾರ ಸಂಕಲನದ ಸಹಾಯದಿಂದ  ಎಸ್. ಶಿವಣ್ಣನವರು  ಸೂಕ್ತಿ ಸುಧಾರ್ಣವದ ಕೆಲವು ಪದ್ಯಗಳಿಗೆ ಆಕರಗಳನ್ನು ಒದಗಿಸಿಕೊಟ್ಟಿದ್ದಾರೆ. ಆಕರಗಳಿಗೆ ಸಂಬಂಧಿಸಿದ ಮುಂದುವರಿದ ಸಂಶೋಧನೆಯ ಫಲವಾಗಿ ಮಲ್ಲಿಕಾರ್ಜುನನ ‘ಸೂಕ್ತಿಸುಧಾರ್ಣವ’ ದಲ್ಲಿ ಚೌಂಡರಸನ ‘ಅಭಿನವ ದಶಕುಮಾರ ಚರಿತೆ’ ಹಾಗೂ ನಳಚಂಪುಗಳಿಂದಲೂ ಮತ್ತು ಸುರಂಗನ ತ್ರಿಷಷ್ಟಿಪುರಾತನ ಚರಿತಂ ದಿಂದಲೂ ಪದ್ಯಗಳನ್ನು ಆರಿಸಿಕೊಂಡಿರುವ ಸಂಗತಿಯನ್ನು ಎಸ್.ಶಿವಣ್ಣನವರು ಮೊದಲ ಬಾರಿಗೆ ಶೋಧಿಸಿದ್ದಾರೆ.ಅಲ್ಲದೇ ಕೇಶಿರಾಜನ ‘ಶಬ್ದಮಣಿದರ್ಪಣ’ದ ಹಲವು ಪ್ರಯೋಗಗಳಿಗೆ ಮೂಲವಾದ ಇಡಿ ಪದ್ಯಗಳು ಸೂಕ್ತಿಸುಧಾರ್ಣವದಲ್ಲಿ ದೊರೆತಿರುವುದನ್ನು ಇವರು ತೋರಿಸಿ ಕೊಟ್ಟಿದ್ದಾರೆ. ಸೂಕ್ತಿ ಸುಧಾರ್ಣವದ 875 ಪದ್ಯಗಳು ಮಲ್ಲಕವಿ ಸಂಯೋಜಿತ ಕಾವ್ಯಸಾರಂನಲ್ಲಿರುವುದನ್ನು ಪ್ರಸ್ತಾಪಿಸಿದ್ದಾರೆ.
   ಸೂಕ್ತಿಸುಧಾರ್ಣವದಲ್ಲಿ ಸಾಹಿತ್ಯ ಚರಿತ್ರೆಯ ಆದಿಕಾಲದಿಂದ ರಚಿತವಾದ ಎಲ್ಲಾ ಪ್ರಸಿದ್ಧ ಗ್ರಂಥಗಳಿಂದಲೂ ಪದ್ಯಗಳು ಉದ್ಧೃತವಾಗಿವೆ;” ಎಂಬ ವಿವರವು ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಗಂಭೀರತೆಯನ್ನು ಪಡೆದು ಕೊಂಡಿದೆ. ಈ ಸಂಕಲನ ಕೃತಿಯು ಕನ್ನಡ ಸಾಹಿತ್ಯದ ಅಪ್ರಕಟಿತ ಅನುಪಲಬ್ದ ಕನ್ನಡ ಕಾವ್ಯಗಳ ನೂರಾರು ಪದ್ಯಗಳನ್ನು ಪ್ರಸ್ತಾಪಿಸಿ ಉಲ್ಲೇಖಿಸುವುದರ ಮೂಲಕ ಕನ್ನಡದ ಅಪ್ರಕಟಿತ ಕಾವ್ಯ-ಶಾಸ್ತ್ರ ಕೃತಿಗಳ ಬಗೆಗೆ ಬೆಳಕು ಚೆಲ್ಲಲು ಸಹಕಾರಿಯಾಗಿದೆ. ಈ ಕೃತಿಯು ಕೆಲವು ಕನ್ನಡ ಕಾವ್ಯ-ಶಾಸ್ತ್ರ ಕೃತಿಗಳ ಕವಿಗಳ ಕಾಲ ನಿರ್ಣಯದಲ್ಲಿ, ಗ್ರಂಥ ಪಾಠ ನಿರ್ಣಯದಲ್ಲಿ, ಸಮಕಾಲೀನ ಐತಿಹಾಸಿಕ ಅಂಶಗಳ ನಿರೂಪಣೆಯಲ್ಲಿ ಆಕರ ಶಾಸ್ತ್ರಕೃತಿಯಾಗಿ ಕಂಡು ಬಂದಿರುವುದು ಇವರ ಶೋಧನೆಯಿಂದ ಸಾಬೀತಾಗಿದೆ. ಜೊತೆಗೆ ಈ ಕೃತಿಯು ಅನುಪಲಬ್ದ ಪ್ರಾಚೀನ ಕನ್ನಡ ಸಾಹಿತ್ಯದ ಕೃತಿಗಳ ಬಗೆಗೆ ತೋರುಗಂಬವಾಗಿದೆ ಎಂದು ಇವರು ಹೇಳಿರುವುದು ಗಮನಿಸತಕ್ಕ ಸಂಗತಿಯಾಗಿದೆ.
      ಹದಿಮೂರನೆಯ ಶತಮಾನದ ಉತ್ತರಾರ್ಧದಲ್ಲಿ ರಚಿತವಾದ ಕೇಶಿರಾಜನ ‘ಶಬ್ದಮಣಿದರ್ಪಣ’ ವು ಕನ್ನಡ ಶಾಸ್ತ್ರ ಇತಿಹಾಸವನ್ನು ಅಭ್ಯಸಿಸುವವರಿಗೆಲ್ಲ ಪರಿಚಿತವಾದ ವ್ಯಾಕರಣ ಕೃತಿಯಾಗಿದೆ. “ಈ ಕೃತಿಯಲ್ಲಿಯ ಪ್ರತಿಯೊಂದು ಸೂತ್ರವೂ ಪ್ರಾಯಶಃ ಒಂದಲ್ಲ ಒಂದು ಪ್ರಯೋಗದ ಆಧಾರದ ಮೇಲೆ ರಚಿತವಾಗಿರುವುದರಿಂದ ಪ್ರಯೋಗ ಬಾಹುಳ್ಯ ಕೇಶಿರಾಜನ ‘ಶಬ್ದಮಣಿದರ್ಪಣದ ಒಂದು ಮುಖ್ಯ ಲಕ್ಷಣವಾಗಿದೆ. ಪ್ರಯೋಗಗಳನ್ನು ಕವಿ ತನ್ನ ಹಿಂದಿನ ಮತ್ತು ಸಮಕಾಲೀನ ಕೃತಿಕರ್ತರ ಕೃತಿಗಳಿಂದಲೂ ಶಾಸನಗಳಿಂದಲೂ ಉದ್ದರಿಸಿದ್ದಾನೆ. ಅದರೆ ಪ್ರಯೋಗಿಸಲ್ಪಟ್ಟ ಪ್ರಯೋಗಗಳ ಮೂಲಭೂತ ಆಕರಗಳನ್ನು ತಿಳಿಸಿದ್ದರೆ; ಕನ್ನಡ ಸಾಹಿತ್ಯ ಚರಿತ್ರೆಯ ಅಧ್ಯಯನಕ್ಕೆ ಉಪಯುಕ್ತವಾದ ಮಾಹಿತಿ ಸಲ್ಲುತ್ತಿತ್ತು. `ಹೀಗೆ ಕೃತಿಗಳ ಆಕರಗಳನ್ನು ನಿರ್ದೇಶಿಸದಿದ್ದರೂ ತನ್ನ ಕೃತಿಗೆ ಲಕ್ಷ್ಯವಾಗಿ ಸ್ವೀಕರಿಸಿದ್ದ ಗಜಗ, ಗುಣನಂದಿ, ಮನಸಿಜ ಅಗಸ, ಚಂದ್ರಭಟ್ಟ ಗುಣವರ್ಮ, ಶ್ರೀವಿಜಯ, ಪೊನ್ನ, ಪಂಪ, ಸುಜನೋತ್ತಂಸರ ಹೆಸರುಗಳನ್ನು ಉಲ್ಲೇಖಿಸಿದ್ದಾನೆ. ಇವರಲ್ಲದೆ ರನ್ನ, ನಾಗವರ್ಮ, ಶಂಖವರ್ಮ ವ್ಯಾಕರಣದ ನಯಸೇನ ಹರಿಪಾಲ, ಹಂಸರಾಜ, ನಾಗಚಂದ್ರ, ಬ್ರಹ್ಮಶಿವ, ಜನ್ಮ ಹರಿಹರರ ಕೃತಿಗಳಿಂದಲೂ ಪ್ರಯೋಗಗಳನ್ನು ಉದ್ದರಿಸಿದ್ದಾನೆ. ಕೇಶಿರಾಜನ ಪ್ರಯೋಗರಾಶಿಯಲ್ಲಿ ‘ಪಸೆಯಿರ್ದಂ ಗರುಡ ವೇಗನೃಪನಂದನೆಯಳ್’ ಎಂಬ ಪ್ರಯೋಗ ಶಬ್ಧಮಣಿದರ್ಪಣ ದಲ್ಲಿ ಸೂತ್ರ 63 ಮತ್ತು 249 ರಲ್ಲಿ ಎರಡು ಬಾರಿ ಪ್ರಯೋಗಗೊಂಡಿದೆ. ಈ ಪ್ರಯೋಗದಲ್ಲಿ ಉಕ್ತರಾದ ಗರುಡವೇಗ ನೃಪನಂದನೆ ಮತ್ತು ಅವಳೊಡನೆ ‘ಪಸೆ’ಯಿರ್ದ ನೃಪರು ಯಾರೆಂಬುದನ್ನು ಎಸ್. ಶಿವಣ್ಣನವರು ತಿಳಿಸುವ ಪ್ರಯತ್ನವನ್ನು ಮಾಡಿದ್ದಾರೆ.
     ಆಧುನಿಕ ಪೂರ್ವದ ಸಾಹಿತ್ಯದ ಅಧ್ಯಯನದ ಪ್ರಾಚೀನ ನಡೆಗಳನ್ನು ವಿವರಿಸುತ್ತಲೇ ವಿಸ್ತರಿಸುವ ಹಾಗೂ ಆಧುನಿಕ ಪೂರ್ವದ ಸಾಹಿತ್ಯವನ್ನು ಅಧ್ಯಯನ ಮಾಡಲು ಬೇಕಾದ ಆಕರಗಳನ್ನು ಶೋಧಿಸಿ ಒದಗಿಸಿರುವ ಕೆಲಸವನ್ನು ಎಸ್. ಶಿವಣ್ಣನವರ ಸಂಶೋಧನೆಯಲ್ಲಿ ಕಾಣಬಹುದು. ಕನ್ನಡದಲ್ಲಿ ಪ್ರಾರಂಭಿಕ ಘಟ್ಟದಲ್ಲಿ ಸಂಶೋಧನೆಯು ಹಸ್ತಪ್ರತಿಗಳ, ಅನ್ವೇಷಣೆ, ಸಂಪಾದನೆ ಮತ್ತು ಸಾಹಿತ್ಯ ಚರಿತ್ರೆ ನಿರ್ಮಾಣದ ಮೂಲಕ ಪ್ರಾರಂಭವಾಯಿತು. ನಂತರದಲ್ಲಿ ಹೊಸ ಹೊಸ ಆಕರಗಳು ಶೋಧನೆಗೊಂಡು ಪರಂಪರೆಯ ನಿರ್ವಚನ, ನಿರ್ಮಾಣ ಮತ್ತು ಸಾಹಿತ್ಯ ಇತಿಹಾಸಗಳ ಕಟ್ಟಿಕೊಳ್ಳುವಿಕೆಗಳು ನಡೆದಿವೆ. ಆಧುನಿಕ ಪೂರ್ವದ ಸಾಹಿತ್ಯ ಸಂಶೋಧನೆಯಲ್ಲಿ ಸಂಪಾದನೆ, ಚರಿತ್ರೆ ರಚನೆ ಮತ್ತು ಸಂಶೋಧನೆಗಳ ನಡುವೆ ಒಂದು ಅನ್ಯೋನ್ಯ ಸಂಬಂಧ ಇರುವುದನ್ನು ನಾವು ಕಾಣಬಹುದಾಗಿದೆ. ಆಕರ ಶಾಸ್ತ್ರೀಯ ಸಂಶೋಧನೆಯು ಪ್ರಾಚೀನ ಕಾಲದ ಕವಿ, ಕೃತಿಗಳ ಕಾಲ, ಧರ್ಮ, ಸ್ಥಳ ಇತ್ಯಾದಿಗಳ ಕುರಿತ ಅಧ್ಯಯನದ ಚರ್ಚೆಯಾಗಿದ್ದು ಇಂದು ಈ ರೀತಿಯ ಅಧ್ಯಯನಗಳು ಅಪರೂಪವಾಗಿವೆ. ಇಂದು ಆಧುನಿಕ ಪೂರ್ವದ ಸಾಹಿತ್ಯವನ್ನು ನಿರಂತರವಾಗಿ ಮೌಲ್ಯಮಾಪನ ಮಾಡುವುದಕ್ಕಿಂತ ಅರ್ಥ ವ್ಯಾಖ್ಯಾನ ಮಾಡುವ ನೆಲೆಗಟ್ಟಿನಲ್ಲಿ ಸ್ವಲ್ಪ ಮಟ್ಟಿಗೆ ಅಧ್ಯಯನ ನಡೆಯುತ್ತಿದೆ. ಇದರಿಂದಾಗಿ ಪ್ರಾಚೀನ ಸಾಹಿತ್ಯದ ತಿಳಿವಳಿಕೆ ಪೂರ್ಣಪ್ರಮಾಣದಲ್ಲಿ ಓದುಗರಿಗಾಗುತ್ತದೆಯೇ? ಎಂಬ ಅನುಮಾನ ವಿದ್ವತ್ ಮಂಡಳಿಯಲ್ಲಿ ಇಣುಕಿದೆ.
 ಆರ್. ನರಸಿಂಹಾಚಾರ್ಯರ ಕವಿಚರಿತೆಯ ಸಂಪುಟಗಳು ಹಾಗು ಅನಂತರದ ಕವಿಗಳ ದಾಖಲೆಗಳ ಬಗೆಗಿನ ಎಸ್. ಶಿವಣ್ಣನವರ ಸುದೀರ್ಘಕಾಲದ ಅವಿರತ ಸಂಶೋಧನೆಯು ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ಮೈಲುಗಲ್ಲು ಎನಿಸಿದೆ. ಕವಿಚರಿತೆ ಸಂಪುಟಗಳಲ್ಲಿಯ ಎಸ್. ಶಿವಣ್ಣನವರ ತಿದ್ದುಪಡಿ ಹಾಗೂ ವಿಸ್ತರಣೆಯ ಶೋಧನೆಗಳು ತಮ್ಮ ಖಚಿತವಾದ ನಿಲುವಿನಿಂದಾಗಿ ಕನ್ನಡ ಸಂಶೋಧನ ಪರಂಪರೆಯಲ್ಲಿ ಮಹತ್ತರವಾದ ಸ್ಥಾನವನ್ನು ಕಲ್ಪಿಸಿ ಕೊಟ್ಟಿದೆ. ಕವಿಚರಿತೆ ಕುರಿತಾದ ಎಸ್. ಶಿವಣ್ಣನವರ ತಿದ್ದುಪಡಿಯ ನೆಲೆಗಟ್ಟನ್ನು ಈ ಕೆಳಕಂಡ ರೀತಿಯಲ್ಲಿ ಗುರುತಿಸ ಬಹುದು.
  ರಾವ್ ಬಹದ್ದೂರ್ ಆರ್. ನರಸಿಂಹಾಚಾರ್ಯರ ಕರ್ಣಾಟಕ ಕವಿಚರಿತೆಯ ಮೂರು ಸಂಪುಟಗಳ ಪ್ರಕಟಿತ ವರ್ಷಗಳು ಈ ಮುಂದಿನಂತಿವೆ. ಪ್ರಥಮ ಸಂಪುಟ ಜಿ. ಎಸ್. ನರಸಿಂಹಾಚಾರ್ಯರೊಡನೆ 1907 ರಲ್ಲೂ ಅದೇ ಸಂಪುಟದ ಪರಿತ ಆವೃತ್ತಿ ಆರ್. ನರಸಿಂಹಾಚಾರ್ಯರ ಹೆಸರಿನಲ್ಲಿ 1924ರಲ್ಲೂ, ದ್ವಿತೀಯ ಸಂಪುಟ 1919 ರಲ್ಲೂ, ತೃತೀಯ ಸಂಪುಟ 1929ರಲ್ಲೂ ಪ್ರಕಟವಾಗಿವೆ. ಕವಿಚರಿತಕಾರರೇ ಸ್ವತಃ ಪ್ರಥಮ ಸಂಪುಟದ ಪರಿಷ್ಕಾರವನ್ನು 1924 ರಲ್ಲಿ ಮಾಡಿದ್ದಾರೆ. ಈ ಪರಿಷ್ಕರಣಗಳು ಆರ್. ನರಸಿಂಹಾಚಾರ್ಯರ ಸಂಶೋಧನಾ ಖಚಿತತೆಯ ಮನೋಧರ್ಮಕ್ಕೆ ಸಾಕ್ಷಿಯಾಗಿವೆ. ಅವರು ತಮ್ಮ ಸಂಪುಟಗಳಲ್ಲಿ ವಿಷಯ ಸಾಮಗ್ರಿಯ ನಿರ್ದಿಷ್ಟತೆಯನ್ನು ಉಳಿಸಿಕೊಳ್ಳುವ ಬಗೆಗೆ ಶ್ರಮಪಟ್ಟಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.
ಎಸ್. ಶಿವಣ್ಣನವರು ಕವಿಚರಿತೆಯ ಮೂರು ಸಂಪುಟಗಳಲ್ಲಿಯ ಕ್ರಿ.ಶ. 1900 ರ ಕಾಲಾವಧಿಯವರೆಗಿನ ಕವಿಗಳ ಬಗೆಗಿನ ತಿದ್ದುಪಡಿಯ ವಿವರಗಳನ್ನು ಸುದೀರ್ಘವಾಗಿ ಬರೆದಿದ್ದು ಅವುಗಳನ್ನು ಸಾಮಗ್ರಿ ವಿಶ್ಲೇಷಣೆಗೆ ಸರಿಹೊಂದಿದಂತೆ 5 ಶೀರ್ಷಿಕೆಗಳಲ್ಲಿ ಅಳವಡಿಸಿಕೊಂಡಿದ್ದಾರೆ. ತಿದ್ದುಪಡಿಯ ಅಗತ್ಯತೆಯ ಅನಿವಾರ್ಯತೆಯನ್ನು ಆಧಾರ ಸಮೇತ ಅಧ್ಯಯನಕಾರರ ಮುಂದೆ ಇಟ್ಟಿದ್ದಾರೆ. ಅವರು ರೂಪಿಸಿ ಕೊಂಡಿರುವ ಐದು ಶೀರ್ಷಿಕೆಗಳು, ಅವುಗಳ ವಿವರ ಇಂತಿದೆ.
1. ಕೃತಿಕಾರರ ಕಾಲ ಬದಲಾವಣೆಗಳು: ಇದು ಕರ್ತೃ ಸಂಪುಟ/ಪುಟ- ಕವಿಚರಿತೆ/ಕಾಲ-ಬದಲಾದ ಕಾಲ, ಈ ಕ್ರಮದಲ್ಲಿದೆ.ಶಿವಣ್ಣನವರು ಕವಿಚರಿತೆಯಲ್ಲಿಯ ಕೃತಿಕಾರರ ಕಾಲ ಬದಲಾವಣೆಗಳ ಬಗೆಗೆ ವಿವಿಧ ಸಂಶೋಧನಾ ಆಕರಗಳ ನೆಲೆಗಟ್ಟನಲ್ಲಿ ಶೋಧಿಸಿ ಹಾಗೂ ಗುರುತಿಸಿರುವ ವಿವರಗಳು.ಎಸ್. ಶಿವಣ್ಣ ನವರು ಕೊಡ ಮಾಡಿರುವ ಸಂಶೋಧನಾ ಮಾಹಿತಿಯಿಂದ ಕವಿಚರಿತೆಕಾರರು ಸೂಚಿಸಿದ್ದ ಕವಿಗಳ ಕಾಲದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ವಿಶೇಷವಾಗಿ ನಡುಗನ್ನಡ ಹಾಗೂ ನಂತರದ ಕಾಲದಲ್ಲಿಯ ಕವಿಗಳ ಕಾಲನಿರ್ಣಯದಲ್ಲಿ ಸಾಕಷ್ಟು ತಿದ್ದುಪಡಿಯಾಗಿದೆ. ಎಷ್ಟೋ ಕವಿಗಳ ಕಾಲವು ಸುಮಾರು ಇನ್ನೂರು ವರುಷ ಮುಂದೆ ಹಾಕಲಾಗಿದೆ. ಕೆಲವೆಡೆ ಹಿಂದಕ್ಕೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್. ಶಿವಣ್ಣನವರು ವಿವಿಧ ಮೂಲಗಳ ಆಕರಗಳ ಹಿನ್ನೆಲೆಯಲ್ಲಿ ನೀಡಿರುವ ಕವಿಗಳ ಕಾಲದ ಬಗೆಗಿನ ತಿದ್ದುಪಡಿ ವಿವರಗಳು ಇಂದು 19 ನೇ ಶತಮಾನದವರೆಗಿನ ಆಧುನಿಕ ಪೂರ್ವದ ಸಾಹಿತ್ಯ ಚರಿತ್ರೆಯನ್ನು ಆಮೂಲಾಗ್ರ ಬದಲಾವಣೆಯನ್ನು ಮಾಡಬೇಕಾದ ಅನಿವಾರ್ಯತೆಯನ್ನು ವಿದ್ವಾಂಸರ ಮುಂದಿಟ್ಟಿದೆ.
2]  ಕೃತಿಕಾರರ ಕಾಲಾನುಸಾರಿ ಅಕಾರಾದಿ ಹಾಗೂ ಹೆಚ್ಚಿನ ಕೃತಿಗಳು: ಕೃತಿಕಾರರ ಕಾಲಾನುಸಾರಿ ಅಕಾರಾದಿ ಹಾಗೂ ಹೆಚ್ಚಿನ ಕೃತಿಗಳು: ಈ ಶೀರ್ಷಿಕೆಯಡಿಯಲ್ಲಿ ಪ್ರಾಚೀನ ಹಾಗೂ ನಡುಗನ್ನಡ ಕನ್ನಡ ಕವಿಗಳ ಅನುಪಲುಬ್ಧ ಹಾಗೂ ಹೆಚ್ಚಿನ ಕೃತಿಗಳನ್ನು ವಿವಿಧ ಮೂಲಗಳಿಂದ ಶೋಧಿಸಿ ಕೊಟ್ಟಿದ್ದಾರೆ. ಇವರ ಈ ಸಂಶೋಧನಾ ಪ್ರಯತ್ನವು ಕನ್ನಡ ಸಾಹಿತ್ಯ ಪರಂಪರೆಯ ವ್ಯಾಪ್ತಿಯ ಹರವನ್ನು ವಿಸ್ತರಿಸಲು ಸಹಕಾರಿಯಾಗಿದೆ. ಶಿವಣ್ಣನವರು ಶೋಧಿಸಿ ಕ್ರೂಢೀಕರಿಸಿ ಕೊಟ್ಟಿರುವ ಕವಿಗಳ ಹೆಚ್ಚಿನ ಕೃತಿಗಳ ವಿವರ ಇಂತಿದೆ. ಕಂದ, ವೃತ್ತ, ವಚನ, ರಗಳೆ, ಷಟ್ಪದಿ, ಸಾಂಗತ್ಯ, ಶತಕ, ಬೊಲ್ಲ, ತಾರಾವಳಿ, ಟೀಕೆಗಳು ಇತ್ಯಾದಿ ಪ್ರಕಾರದವುಗಳಾಗಿವೆ. ಬಹುಮಟ್ಟಗೆ ಹೆಚ್ಚಿನ ಕೃತಿಗಳ ಹೆಸರುಗಳು ಮೊದಲ ಬಾರಿಗೆ ಇವರ ಸಂಶೋಧನೆಯ ಮೂಲಕ ಬೆಳಕು ಕಂಡಿವೆ.
1. ಅಗಸ (853) : ಕರ್ಣಾಟ ಕುಮಾರ ಸಂಭವ
2. ಎರಡನೆಯ ನಾಗವರ್ಮ (1042) : ಅಭಿದಾನ ರತ್ನಮಾಲಾ ಟೀಕೆ, ವರ್ಧಮಾನ ಪುರಾಣ(ಚಂಪು) ವತ್ಸರಾಜ ಚರಿತೆ
3. ನಾಗಚಂದ್ರ (1100) : ಕಾಮನ ಕಾಳಗ (ಭಾಮಿನಿ ಷಟ್ಪದಿ)
4. ಕೊಂಡಗುಳಿ ಕೇಶೀರಾಜ (1107-1032) : ಅಳಲಾಷ್ಟಕ (ಕಂದ) ಕೇಶಿರಾಜ ಡಣಾಯಕರ ಕಂದ,
5. ನವರತ್ನಮಾಲೆ(ವೃತ್ತ) ಲಿಂಗಸ್ತೋತ್ರದ ಕಂದಗಳು
6. ಚೆನ್ನಬಸವ (1160) : ವಚನೈಕೋತ್ತರ ಶತಸ್ಥಲ
7. ಲಿಂಗಮ್ಮ(1160): ಮಂತ್ರಗೋಪ್ಯ, ಸ್ವರವಚನ
8. ಸಿದ್ಧರಾಮ (1160): ಶಿವಯೋಗ ಷಟ್ಸ್ಥಲಾಭರಣ
9. ಬಾಲಚಂದ್ರ (1170): ಅಮೃತಾಶೀತಿ (ಟೀಕು) ಮೋಕ್ಬಪಾಹುಡ (ಟೀಕು) ಸಮಯಸಾರ(ಟೀಕು)
10. ಬಂಧುವರ್ಮ (1200) : ಸತೀಧರ್ಮಸಾರ(ಕಂದ)
11. ಹಂಪೆಯ ಹರಿಹರ (1200) ಅಕ್ಷರಾಂಕ ಗದ್ಯ, ಆನತ ಕಲ್ಪಭೂಜನಂ ಅಷ್ಟಕ (ವೃತ್ತ) ವಿರೂಪಾಕ್ಷಾಷ್ಟಕ (ವೃತ್ತ) ಶಿವಕೀರ್ತನ ರಗಳೆ, ಹರೀಶ್ವರ ದೇವರ ಕಂದ
12. ತ್ರಿಭುವನತಾತ (1200) ಅಮ್ಮವ್ವೆಯ ರಗಳೆ, ಚೋಳಿಯಕ್ಕನ ರಗಳೆ, ಜೇಡರದಾಸೀಮಯ್ಯನ ರಗಳೆ, ಪಗಲ್ಚೋಳನರಗಳೆ, ಸಿರಿಯಾಳ ಸೆಟ್ಟಿಯ ರಗಳೆ
13. ಬಾಳಚಂದ್ರಕವಿ ಕಂದರ್ಪ (1204) : ಆದ್ಯಾತ್ಮ ಪದಾಷ್ಟಕ(ವೃತ್ತ)
14. ಪಾಲ್ಕುರಿಕೆ ಸೋಮನಾಥ (1205) : ವೀರಶೈವಾಚಾರ ಶಿಖಾಮಣಿ (ಟೀಕು)
15. ಚಕ್ರಪಾಣಿ ರಂಗನಾಥ (1305) : ಪಂಚರತ್ನ
16. ಬಾಹುಬಲಿ ಪಂಡಿತ (1352) : ಗುಮ್ಮಟನಾಥ ಚರಿತೆ
17. ಕಲ್ಯಾಣಕೀರ್ತಿ (1439) : ಚಿನ್ಮಯ ಚಿಂತಾಮಣಿ ಫಣಿಕುಮಾರ ಚರಿತೆ (ಭಾಮಿನಿ ಷಟ್ಪದಿ) ಜಿನಯಜ್ಞಫಲೋದಯ, ಯಶೋಧರ ಚರಿತೆ ( ಸಂಸ್ಕೃತ ಕೃತಿಗಳು)
18. ಕರಸ್ಥಲ ನಾಗಿದೇವ (1430) : ಅಕ್ಷರದ ಚೌಪದ, ಪರಮ ವಿರಕ್ತನ ಐಕ್ಯಸ್ಥಲ, ಲಿಂಗನಿಜಸ್ಥಲದ ತ್ರಿವಿಧಿ, ಲಿಂಗನಿಜಸ್ಥಲದ ವಚನ (ತ್ರಿಪದಿ) ಶಾಂತಶತಕ (ಕಂದ) ಶಿವಜ್ಞಾನಾಂಜನ ರತ್ನಮಾಲೆ (ತ್ರಿಪದಿ)
19. ಜಕ್ಕಣಾರ್ಯ (1430) : ಏಕೋತ್ತರ ಶತಸ್ಥಲ
20. ಕುಮಾರವ್ಯಾಸ (1430): ಭವನ ಭಿಕ್ಷಾಟಣ (ಭಾಮಿನಿ ಷಟ್ಪದಿ) ಸೂತಭಾರತ (ಸ್ವರ್ಗಾರೋಹಣ ಪರ್ವ) (ಭಾಮಿನಿ ಷಟ್ಪದಿ)
21. ವಿಜಯಣ್ಣ (1448) : ಸಮವಸರಣದ ವಿಸ್ತೀರ್ಣ ವರ್ಣನೆ (ಭಾಮಿನಿ ಷಟ್ಪದಿ)
22. ಗುಬ್ಬಿಯ ಮಲ್ಲಣ್ಣ (1450) : ಏಕಾಕ್ಷರ ನಿಘಂಟು (ವರರುಚಿ) ವೃತ್ತಿ ಕಾಲಜ್ಞಾನ ತಂತ್ರ ಟೀಕೆ ದಿವ್ಯಾಗಮಸಾರದಲ್ಲಿ ಪಂಚಮ ಪಟಲದ ಟೀಕೆ, ಯೋಗಷಟ್ಸ್ಥಲ ಟೀಕೆ.
23. ಉಜ್ಜೇನೀಶ (1460) : ಅನುಭವ ಸೂತ್ರದ ಟೀಕೆ.
24. ತೆರಕಣಾಂಬಿ ಬೊಮ್ಮರಸ (1485) ‘ರತ್ನರಂಡಕ’ ಲಿಪಿಕಾರ
25. ಕವಿಲಿಂಗ (1490) : ನಂಜುಂಡೇಶ್ವರನ ಜಾತ್ರೆಯ ತಾರಾವಳಿ, ಲಿಂಗಾಂಗ ಸಮರಸದ ಪಾರಿಜಾತ
26. ಸಾಳ್ವ (1490) ಅಷ್ಟಮಹಾಪ್ರಾತಿಹಾರ್ಯಾಷ್ಟಕ, ಬೆಳ್ಗೊಳೇಶ್ವರಾಷ್ಟಕ.
27. ನಿಜಗುಣ ಶಿವಯೋಗಿ (1500) : ‘ಅನುಭವ ಮುಕುರಕ್ಕೆ’ ಸ್ವರೂಪಸಿದ್ಧಿ ಟೀಕೆ. ತರ್ಕಚಿಂತಾಮಣಿ. ದರ್ಶನಸಾರ (ಸಂಸ್ಕೃತ ಕೃತಿಗಳು)
28. ವರ್ಧಮಾನ (1547) ದಶಭಕ್ತ್ಯಾದಿಶಾಸ್ತ್ರ
29. ಲಿಂಗ (1550) ತ್ರಿಪುರದಹನ ಸಾಂಗತ್ಯ
30. ರತ್ನಾಕರವರ್ಣಿ (1557) : ಗುರುವಚನಸಾರ
31. ಶ್ರುತಕೀರ್ತಿ (1567) ಯಶೋಧರ ಚರಿತೆ (ಸಾಂಗತ್ಯ)
32. ಲಕ್ಷ್ಮೀಶ (1570) ಕೀರ್ತನೆಗಳು, ಪುರುಷಾಮೃಗ ಪ್ರಸಂಗ (ಭಾಮಿನಿ ಷಟ್ಪದಿ)
33. ವಾದಿರಾಜ(1570) : ತತ್ವಸಾರಾಮೃತ
34. ಶಂಕರದೇವ (1570) : ಶಂಕರಗದ್ಯ, ಶಂಕರ ಶತಕ, (ವೃತ್ತ) ಶಂಕರೇಶ ಶತಕ (ವೃತ್ತ) ಸ್ವರವಚನಗಳು ರಗಳೆಗಳು.
35. ಅದೃಶ್ಯ (1580) ಮಳೆಯ ಮಲ್ಲೇಶನ ಪುರಾಣ (ಅಲಭ್ಯ) ಮುಗ್ಧಸಂಗಾರ್ಯರ ಪುರಾಣ (ಅಲಭ್ಯ)
36. ಇಮ್ಮಡಿ ತೋಂಟದಾರ್ಯ (1580) : ಕನ್ನಡ ವಿಕ್ರಮಾರ್ಕ ಚರಿತೆ (ಭಾಮಿನಿ ಷಟ್ಪದಿ)
37. ಸಂಪಾದನೆ ಚೆನ್ನಂಜೇದೇವ (1580): ಬಸವಸ್ತೋತ್ರದ ಷಟ್ಪದಿ (ಸಂಕ) ಶಂಕರದೇವರ ಕಂದ
38. ಗುಮ್ಮಳಾಪುರದ ಸಿದ್ಧಲಿಂಗ (1580) ಶೂನ್ಯಸಂಪಾದನೆ
39. ನಂಜಣಾರ್ಯ(ಹರದನ ಹಳ್ಳಿ) (1580) : ಏಕೋರಾಮೇಶ್ವರ ಪುರಾಣ (ವಾರ್ಧಕ ಷಟ್ಪದಿ) ನೀತಿರತ್ನಾಭರಣ (ವಾರ್ಧಕ ಷಟ್ಪದಿ) ಶಾಂತಿರತ್ನಾಭರಣ (ವಾರ್ಧಕ ಷಟ್ಪದಿ) ಶ್ರೀಧರಾಂಕನ ವೀರಮಾಹೇಶ್ವರಾಚಾರ ಸಂಗ್ರಹ ಟೀಕಾ ಲಿಪಿಕಾರ.
40. ಮಲ್ಲಿಕಾರ್ಜುನ (1593), ಅಕ್ಷರಾಂಕನ ಗದ್ಯ (ಪಾ. ಸೋಮ) ವ್ಯಾಖ್ಯಾನ, ಅಮೃತೇಶ್ವರ ಭಾಷ್ಯ, (ಸಪ್ಪೆಯಾರ್ಯ) ಟೀಕೆ, ಆದಿತ್ಯಸ್ತೋತ್ರದ ವ್ಯಾಖ್ಯಾನ, ತೋಂಟದ ರಾಯನ ಸಾಂಗತ್ಯ, ಪಂಚಶ್ಲೋಕೀ ವ್ಯಾಖ್ಯಾನ, ಬ್ರಹ್ಮ ತರ್ಕಸ್ಥವ ವ್ಯಾಖ್ಯಾನ, ಭಾರತಸಾರ ವ್ಯಾಖ್ಯಾನ, ರಾಮಾಯಣ ಸಾರ ವ್ಯಾಖ್ಯಾನ. ಶಿವಕರ್ಣಾಮೃತ ವ್ಯಾಖ್ಯಾನ, (ಸಂಸ್ಕೃತ ಕೃತಿಗಳು) ಶಿವತತ್ವವಿವೇಕ,
41. ಮುಖಬೋಳು ಸಿದ್ಧರಾಮ (1596) ಕೊಟ್ಟೂರಯ್ಯನ ಕಂದ.
42. ಪದ್ಮರಸ (1599): ಭವ್ಯಾಬ್ಜಮಿತ್ರಚರಿತೆ (ಸಾಂ) ಪ್ರತಿಷ್ಟಾತಿಲಕ (ಶ 1515) ಲಿಪಿಕಾರ
43. ಸಿದ್ಧನಂಜೇಶ (1600): ಅದ್ಭುತ ಕಾಲಜ್ಞಾನವು (ತ್ರಿಪದಿ), ದೇವಿಯ ಸ್ತೋತ್ರದ ತಾರಾವಳಿ, ನೀಲಾಂಬಿಕೆಯ ತತ್ವಮಾಲಾಸ್ತೋತ್ರ (ವಾರ್ಧಕ ಷಟ್ಪದಿ) ಮುತ್ತಿನ ಕಂತೆ ದೇವರ ವಚನ (ಭಾಮಿನಿ ಷಟ್ಪದಿ) ಶಿವಸಿದ್ಧಾಂತ ಚಂದ್ರಿಕೆ. ಶ್ರೀ ಜಗದ್ಗುರು ವಿಶ್ವಕರ್ಣ ವಿಜಯನಕ್ಷತ್ರ ಮಾಲಿಕಾ. (ಸಂಸ್ಕೃತ ಕೃತಿಗಳು)
44. ಸಂಪಾದನೆ ಸಿದ್ಧವೀರಣ್ಣೊಡೆಯ (1600) : ಅಷ್ಟಾವರ್ಣಸ್ತೋತ್ರದ ತ್ರಿವಿಧಿ (ಸಂಕ), ಜಂಗಮ ಮಹಾತ್ಮಾಸ್ಥಳ (ಟೀಕೆ) ಬಸವಸ್ತೋತ್ರದ ಕಂದ (ಸಂಕ) ಬಸವಸ್ತೋತ್ರದ ತ್ರಿವಿಧಿ (ಸಂ), ಮಿಶ್ರಸ್ತೋತ್ರದ ತ್ರಿವಿಧಿ (ಸಂಕ), ಮಿಶ್ರಸ್ತೋತ್ರದ ಷಟ್ಪದಿ (ಸಂಕ), ಲಿಂಗಸ್ತೋತ್ರದ ಕಂದ (ಸಂಕ) ಶಂಕರದೇವರ ಕಂದ (ಸಂಕ)
45. ವಿರಕ್ತತೊಂಟದಾರ್ಯ (1616) ತೋಂಟದಾರ್ಯರಗಳೆ, ದೇವಿಯರ ಸಹಸ್ರನಾಮ (ಭಾ.ಷಾ) ನೂತನ ಪುರಾತನರ ರಗಳೆ, ನಿರಂಜನ ಲಿಂಗಶತಕ (ಕಂದ) ನಿರಂಜನ ಶತಕಂ (ವೃತ್ತ), ಸಹಸ್ರಗಣನಾಮ ವಾರ್ಧಕ (ವಾರ್ಧಕ ಷಟ್ಪದಿ) , ಸ್ವರವಚನಗಳು, ಕೈವಲ್ಯಸಾರ ಬಸವೇಶ್ವರನ ಸಹಸ್ರನಾಮಾವಳೀ, ಷಟ್ಸ್ಥಲಜ್ಞಾನ ಚಿಂತಾಮಣಿ.
46. ಸೋಸಲೆ ರೇವಣಾರ್ಯ (1623) ಅಕ್ಷರಮಾಲಿಕಾಗದ್ಯಟೀಕೆ, ಅಕ್ಷರಾಂಕಗದ್ಯ ಟೀಕೆ, ಪರಮಮುಕ್ತಿ ಪ್ರದೀಪಿಕೆ, ಸಟಿಕ ಷಟ್ಸ್ಥಲ ಬ್ರಹ್ಮದೀಪಿಕಾ, ಸ್ವರವಚನ.
47. ತಿರುಮಲಾರ್ಯ (1645-1706) : ಭಾಗವಂತಿಕೆ ಪದ, ಲಕ್ಷ್ಮಿಸ್ವಯಂವರ ಶೋಭಾನ
48. ಕಾಶೀಕಾಂಡ ಚೆನ್ನವೀರ (1500) ಕಾಶಕೃತ್ಸ್ಯಶಬ್ದಕಲಾಪ . ಧಾತುಪಾಠ, ಜಂಗಮ ತಾರಾವಳಿ.
49. ರಾಚವಟ್ಟೀಶ (1560) ಅಲ್ಲಮ್ಮ ಪ್ರಭು ಸ್ತೋತ್ರದ ಷಟ್ಪದಿ ಪ್ರಭಿದೇವರ ತ್ರಿವಿಧಿ
50. ಶಾಂತವೀರ ದೇಶಿಕ (1650) ಅಮ್ಮವ್ವೆಚರಿತೆ ಅಂಬಿಕಾಸ್ತೋತ್ರ, ನಂಜುಂಡ ಚರಿತ್ರೆ, ಭಿಲ್ಲಮೇಶ್ವರ ಕಾವ್ಯ, ಮುಗ್ದರ ಚರಿತ್ರೆ, ವಿನಾಶ ಸೂಚನೆ.
51. ಷಡಾಕ್ಷರಿದೇವ (1650-77) ಗುರುರಗಳೆ, ಶಿವಪೂಜಾವಿಧಾನ (35 ವೃತ್ತ)
52. ಅವಧೂತ ಶಿವಯೋಗಿ (1660) ಅಧ್ವೈತ ಸುಧಾರಸ
53. ಅಂಬುಲಿಗೆ ಚೆನ್ನಮಲ್ಲೇಶ (1670) ಗಂಗೆಗೌರಿ ಚೌಪದನ, ಜಂಗಮ ಲಿಂಗಾಶತಕ, ತಿರುನೀಲಕಂಠ ಭಾಮಿನಿ. ಶಿಬಿರಾಯ ಸಾಂಗತ್ಯ, ಶ್ವೇತನವಾರ್ಧಕ, ಸಿರಿಯಾಳ ಸೆಟ್ಟಿ ವಾರ್ಧಕ, ಹರಳಯ್ಯನ ವಾದಖಾಂಡ ಚೌಪದನ.
54. ಚಿದಾನಂದ (1675) ಚಿದಾನಂಧಾನುಭವಸಾರ
55. ಉತ್ತರದೇಶದ ಬಸವಲಿಂಗ (1678-79) ತಾತ್ಪರ್ಯಸಂಗ್ರಹ
56. ಗೋವಿಂದ (1681/82) ಚಿತ್ರಭಾರತ (ವಾರ್ಧಕ ಷಟ್ಪದಿ)
57. ಸಂಪಾದನೆ ಪರ್ವತೇಶ್ವರ (1698) : ಅನುಭವ ಜ್ಞಾನ ಸಾರಾಂಮೃತ ಸಂಪಾದನಾ ಸ್ತೋತ್ರ (ಸಂಕ)
58. ಮುರಿಗೆ ಶಾಂತವೀರ (1703) ಕಟ್ಟಿಗೆಯ ತಾರಾವಳಿ, ಮನುರಾಜೇಂದ್ರನ ತಾರಾವಳಿ, ಷಡ್ಚಕ್ತ್ರಸ್ತೋತ್ರ, ಮಹಾಲಿಂಗರಂಗನ ಅನುಭವಾಮೃತದ ಲಿಪಿಕಾರ,
59. ಕಂಪಿ ನಂಜಯ್ಯ (1700) ಜ್ಯೋತಿ ಮಂಗಳಾಷ್ಟಕ (ವೃತ್ತ)
60. ಪರ್ವತ ಶಿವಯೋಗಿ (1700) ಏಕೋತ್ತರ ಶತಸ್ಥಲ ಟೀಕೆ, ಗುರುಸ್ತೋತ್ರ ತ್ರಿಪದಿ, (ಸಂಗಮೇಶ್ವರ) ಟೀಕೆ, ತ್ರಿವಿಧ ಮೂರರ ಸಾರದ ಟೀಕೆ. ಮರುಳದೇವರ ಕಂದದ ಟೀಕೆ, ವಚನಗಳು.7
ಇಲ್ಲಿಯ ಬಹಳಷ್ಟು ಕವಿಗಳ ಕೃತಿಗಳು ನಡುಗನ್ನಡ ಹಾಗೂ ನಂತರದ ಕಾಲದ ಕವಿಗಳ ನೂತನ ಕೃತಿಗಳಾಗಿವೆ.
3] ಕೃತಿಯ ಹೆಸರಿಗೆ ಸಂಬಂಧಿಸಿದ ತಿದ್ದುಪಡಿ: ಕವಿಚರಿತೆಯಲ್ಲಿ ನಮೂದಿತವಾಗಿದ್ದ ಕನ್ನಡ ಕವಿಗಳ ಕೃತಿಗಳ ಹೆಸರಿಗೆ ಸಂಬಂಧಿಸಿದ ಹಾಗೆ ಲಭ್ಯವಿರುವ ಆಕರಗಳನ್ನು ಬಳಸಿಕೊಂಡು ಖಚಿತವಾಗಿ ಹಾಗೂ ಪರಿಪೂರ್ಣವಾದ ಹೆಸರುಗಳನ್ನು ನೀಡಿದ್ದಾರೆ. ಸರಿಯಾದ ಕೃತಿಗಳ ಹೆಸರುಗಳನ್ನು ಕೊಡಬೇಕೆಂಬ ಶಿವಣ್ಣನವರ ಕಾಳಜಿಯು ಸಂಶೋಧನ ನೆಲೆಗಟ್ಟಿನಲ್ಲಿ ಪ್ರಮುಖವಾದುದ್ದು. ಕೃತಿಗಳ ಪೂರ್ಣ ಪ್ರಮಾಣದ ವಿವರಗಳು ಈ ಕೆಳಕಂಡಂತಿವೆ.
1. ಲಕ್ಷ್ಮಣ ವಿಲಾಸ (3-290) ಶ್ರೀ ಕೃಷ್ಣ ಲಕ್ಷ್ಮಣಾ ವಿಲಾಸ.
2. ಇಂಗ್ಲೀಷ್ ಕನ್ನಡ ನಿಘಂಟು (3-395) ಲಘುಕೋಶ ಇಂಗ್ಲೀಷ್ ಕನ್ನಡವೂ ಎಂಬ ನಿಘಂಟು.
3. ಔರಂಗಜೇಬ (3-231) ಭ್ರಾತ್ಯಘಾತಕನಾದ ಔರಂಗಜೇಬ.
4. ನಾಗಾನಂದ ನಾಟಕ ಕಥೆ (3-221)ಕರ್ನಾಟಕ ನಾಗಾನಂದ ಕಥೆ
5. ಹವ್ಯಪಾಕ ಪದ್ಧತಿ (3-221-468) ಹವ್ಯಪಾಕ ಪದ್ಧತಿ ಎಂಬ ಪಾಕಶಾಸ್ತ್ರವು
6. ಕರ್ಣಾಟಕ ಭಾಷಾಕರ (3-221) ಕರ್ಣಾಟಕ ಭಾಷಾಕರ ಎಂಬ ಅಕಾರಾದಿ ನಿಘಂಟು.
7. ರೇಣುಕಾರ್ಯ ವಿಜಯ (3-218) ರೇಣುಕ ವಿಜಯಂ.
8. ದಿವ್ಯಸುಂದರಿ (3-218) ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ
9. ವ್ಯಾಕರಣ ಬೋಧಿನಿ (3-240) ಕನ್ನಡ ವ್ಯಾಕರಣ.
10. ಸಾನಂದ ಗಣೇಶನ ಕಥೆ (3-464) ಯಕ್ಷಗಾನ ಸಾನಂದ ಗಣೇಶನ ಕಥೆ.
11. ಭೂಗೋಳ ಮಾಲಿಕೆ (3-465) ಭೂಗೋಳಮಾಲಿಕೆ ಎಂಬ ನಿಘಂಟು.
12. ಮಹಾಭಕ್ತ ವಿಜಯ (3-465) ಮಹಭಕ್ತಿ ವಿಜಯ.
13. ವಾಗ್ವಿಧಾಯಿನಿ (3-465) ಕರ್ಣಾಟಕ ವಾಗ್ವಿಧಾಯಿನಿ.
14. ಇಂಗ್ಲಿಷ್ ಕನ್ನಡ ಕೋಶ (3-240) ಇಂಗ್ಲಿಷ್ ಕನ್ನಡ ಶಬ್ದಕೋಶ.
15. ಕನ್ನಡ ವ್ಯಾಕರಣ (3-240) ಎ ಗ್ರಾಮರ್ ಆಪ್ ದೀ ಕನ್ನಡ ಲಾಂಗ್ವೆಜ್
16. ವಿಧವೆಗಳ ಮುಂಡನ ಅನಾಚಾರ (3-227) ವಿಧವಾ ವಪನ ಅನಾಚಾರ ಮಂಡನ.
17. ರಾವಣ ವೇದವತಿ (3-467) ಕೀರ್ತನೆ ರಾವಣ ನೇದವತಿ.
18. ಜೀವಿಗರ ಚಿಂತಾಮಣಿ (3-225) ಬೇನಿಗರ ಲಘು ಚಿಂತಾಮಣೆ.
19. ರಾಜಶೇಖರ ಚರಿತ್ರೆ (3-224) ವಿವೇಕ ಚಂದ್ರಿಕೆ ಎಂಬ ರಾಜಶೇಖರ ಚರಿತ್ರೆ.8
4. ಅಜ್ಞಾತ ಕೃತಿಗಳ ಕರ್ತೃ ನಿರ್ದೇಶ: ಕನ್ನಡ ಸಾಹಿತ್ಯದಲ್ಲಿ ಲಭ್ಯವಿದ್ದ ಕರ್ತೃಗಳು ಯಾರೆಂದು ತಿಳಿಯದ ಅಜ್ಞಾತ ಕವಿ ಚರಿತೆಯಲ್ಲಿ ಉಲ್ಲೇಖಿಸಲ್ಪಟ್ಟಿದ್ದ ಕೃತಿಗಳ ಕರ್ತೃಗಳನ್ನು ವಿವಿಧ ಆಕರಗಳ ಹಿನ್ನೆಲೆಯಲ್ಲಿ ಶೋಧಿಸಿ ಆ ಕೃತಿಗಳ ರಚನಕಾರರು ಯಾರು ಎಂದು ಎಸ್. ಶಿವಣ್ಣನವರು ನೀಡಿದ್ದು ಅವರ ಸಂಶೋಧನಾ ಅನ್ವೇಷಣೆ ಹಾಗೂ ಕುತೂಹಲವನ್ನು ಸೂಚಿಸುತ್ತದೆ. ಅಜ್ಞಾತ ಕೃತಿಗಳ ರಚನಕಾರರ ವಿವರಗಳು ಈ ಕೆಳ ಕಂಡಂತಿವೆ.
1. ಪಂಚಾಶಿಕೆ (3-277) ಇಮ್ಮಡಿ ಗುರುಸಿದ್ಧ.
2. ಘೋರಾಸುರ ಯುದ್ಧ (3-284) ಇಮ್ಮಡಿ ತೋಂಟದಾರ್ಯ.
3. ಮಂತ್ರಮಹಾತ್ಮ್ಯದ ಕಂದ (3-467) ಕೊಂಡಗುಳಿ ಕೇಶಿರಾಜ.
4. ಶಿವಪಾರ್ಥನಾ ಶತಕ (3-268) ಕೊಂಡಗುಳಿ ಕೇಶಿರಾಜ.
5. ಬಸವ ಸ್ತುತಿ (3-295) ಐನೂಲಿ ಕರಿಬಸವಾರ್ಯ.
6. ಮಡಿವಾಳಯ್ಯಗಳ ತಾರಾವಳಿ (3-293) ಕರಸ್ಥಲದ ನಾಗಲಿಂಗ.
7. ಮೂರೇಳು ದೀಕ್ಷೆಯ ಪದ (3-298) ಕರಸ್ಥಲದ ನಾಗಲಿಂಗ.
8. ಅರವತ್ತು ಮೂವರು ಪ್ರಮಥಗಣಾಧೀಶ್ವರರ ತ್ರಿವಿಧಿ (3-316) ಕಳಲೆ ನಂಜರಾಜ.
9. ಅಸಂಖ್ಯಾತ ರಗಳೆ (3-326) ಗುರುಪುರದ ಮಲ್ಲಿಕಾರ್ಜುನ.
10. ಸುಗಂಧ ಪಾರಿಜಾತ (3-207) ಚಾವುಂಡರಾಯ.
11. ಮಾನೇಶ್ವರ ಬಾಲಲೀಲೆ (3-300) ಚಿನ್ನದಗುಡಿ ಬೋಳಪ್ಪಯ್ಯ.
12. ಮೋಹಾನುಭಾವ ಮುಕುರ (3-367) ಜನ್ನ.
13. ಚಿತ್ಕ್ರಿಯಾ ಸಂಗ್ರಹ (3-397) ಜಿಗುನಿ ಮರುಳಾರ್ಯ.
14. ಗಂಗೇ ಗೌರೀ ಸಂವಾದ (3-310) ತರಳ ಚರಪತಿ.
15. ಲಕ್ಷ್ಮೀಸ್ವಯಂವರ ಸೋಬಾನೆ (3-314) ತಿರುಮಲಾರ್ಯ.
16. ಗುರುರಗಳೆ (3-) ಮಹದೇವ ರಗಳೆ(3-) ತಿಭುವನತಾತ.
17. ಪುತ್ರಕಾಮೇಷ್ಠಿ (3-326) ದೇವೀದಾಸ.
18. ಸಿದ್ಧೇಶ್ವರ ತ್ರಿವಿಧಿ (3-290-91) ನಂದಿ.
19. ಪಾರ್ವತೀ ಸ್ತುತಿ (3-295) ನಿಜಗುಣಶಿವಯೋಗಿ
20. ಶಿವತತ್ವಸಾರ (3-275) ಮಲ್ಲಿಕಾರ್ಜುನ ಪಂಡಿತಾರಾಧ್ಯನ ಶಿಷ್ಯ.
21. ಬಸವಲಿಂಗ ನಾಮಾಷ್ಟೋತ್ತರ (3-294) ಪಾಲ್ಕುರಿಕೆ ಸೋಮನಾಥ.
22. ಬಸವೇಶ್ವರ ಸ್ತೋತ್ರ (3-277) ಪಾಲ್ಕುರಿಕೆ ಸೋಮನಾಥ.
23. ಬಸವೇಶ್ವರ ರಗಳೆ (3-286) ಪಾಲ್ಕುರಿಕೆ ಸೋಮನಾಥ.
24. ಗಯಚರಿತ್ರೆ (3-320) ಮಧ್ವದಾಸ.
25. ಬಭ್ರುವಾಹನ ಕಾಳಗ (3-282) ಮಧ್ವದಾಸ.
26. ನೀಲಾಂಬಿಕಾ ಸ್ತುತಿ (3-282) ಮುರಿಗಾ ಶಾಂತವೀರ.
27. ಶಬ್ದಾಗಮ (3-289) ಮುರಿಗಾ ಶಾಂತವೀರ.
28. ಕೆಳದಿನೃಪವಿಜಯ (3-314) ವಾಸುದೇವಯತೀಂದ್ರ.
29. ಕೃಷ್ಣಾರ್ಜುನಕಾಳಗ (3-300) ವಿಮಲಾನಂದ.
30. ವಿರೂಪಾಕ್ಷ ಸ್ತುತಿ (3-287) ವಿರೂಪಾಕ್ಷ ಪಂಡಿತ.
31. ಶುಕಸಪ್ತತಿ (3-299) ಶರಜಾನಾಗ.
32. ಇಷ್ಟಲಿಂಗ ಚಾರಿತ್ರ (3-284) ಶಂಕರದೇವ.
33. ಪುನರ್ದಿಕ್ಷೆ ರಗಳೆ (3-283) ಶಂಕರದೇವ.
34 ಪುಷ್ಪದಷ್ಟಕ (3-284) ಶಂಕರದೇವ.
35. ಮನೋವಿಕಾರ ನಿರಸನ ರಗಳೆ (3-282) ಶಂಕರದೇವ.
36. ಶಿವದರ್ಶನಾಷ್ಟಕ (3-397) ಶಂಕರದೇವ.
37. ಆಚರಣ ಸಂಬಂಧ ಷಟ್ಪದಿ (3-276) ಸಂಪಾದನೆ ಸಿದ್ಧವೀರ. (ಸಂಕ).
38. ಲಿಂಗಸ್ತೋತ್ರ ಷಟ್ಪದಿ (3-276) ಸಂಪಾದನೆ ಸಿದ್ಧವೀರ. (ಸಂಕ)
39. ನಿರಾಳ ಗುರುಸ್ತೋತ್ರ (3-302) ಷಣ್ಮುಖಸ್ವಾಮಿ.
40. ಪುರಾತನ ಶರಣೆಯರ ತ್ರಿವಿಧಿ (3-236) ಸೋಮೇಕಟ್ಟೆ ಚೆನ್ನವೀರಸ್ವಾಮಿ.
41. ಸುಭದ್ರಾ ಕಲ್ಯಾಣ (3-236) ಹಟ್ಟಂಗಡಿ ರಾಮಭಟ್ಟ.
42. ಬಸವ ಪವಾಡದ ರಗಳೆ (3-284) ಹಂಪೆಯ ಹರಿಹರ.
43. ಮಹಿಮಾಷ್ಟಕ (3-284) ಹಂಪೆಯ ಹರಿಹರ.     
44. ಪ್ರೇಮಾಷ್ಟಕ (3-397) ಹಂಪೆಯ ಹರಿಹರ.
45. ಕುಶಲವರ ಕಾಳಗ (3-316) ಹುಚ್ಚಣ್ಣ.
46. ಪಾಂಡವ ಚಾರಿತ್ರ (3-304) ಹುಚ್ಚಣ್ಣ.
47. ಇಮ್ಮಡಿ ತಮ್ಮರಾಯ ಕೆಂಪರಾಯ ಪದ (3-298) ಹೊನ್ನ.
48. ಅಲ್ಲಮಪ್ರಭು ಸಂಗೀತಪದ (3-298) ಹೊನ್ನ.9
5] ಸಂಕೀರ್ಣ
1. ಒಬ್ಬನೇ ಕರ್ತೃವಿನ ಭಿನ್ನ ಭಿನ್ನ ನಾಮಧೇಯ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಬ್ಬನೇ ಕವಿಯ ಭಿನ್ನ ಭಿನ್ನ ನಾಮಧೇಯಗಳು ಕಂಡು ಬರುತ್ತಿದ್ದು ಕವಿಚರಿತೆ ಕಾರರು ಭಿನ್ನ ಭಿನ್ನ ಹೆಸರಿನ ಕವಿಗಳನ್ನು ಪ್ರತ್ಯೇಕವಾಗಿ ಗುರುತಿಸಿದ್ದರು. ಅವೆಲ್ಲವನ್ನು ಎಸ್. ಶಿವಣ್ಣನವರು ವಿವಿಧ ಆಕರಗಳ ಹಿನ್ನೆಲೆಯಲ್ಲಿ ಪರಿಶೀಲಿಸಿ ಭಿನ್ನ ಭಿನ್ನ ನಾಮಧೇಯಗಳು ಒಬ್ಬನವೇ ಎಂದು ಆಧಾರ ಸಮೇತ ಕೊಡ ಮಾಡಿದ್ದಾರೆ. ಅವುಗಳು ಕೆಳ ಕಂಡಂತಿವೆ.
1. ಇಮ್ಮಡಿ ತೋಂಟದಯ್ಯ (3-236) -ಪರಮಭಕ್ತಿ (3-534).
2. ಬ್ರಹ್ಮಣಾಂಕ (3-154) ಚಂದ್ರಸಾಗರವರ್ಣಿ (3-164).
3. ನಂದಿನಾಥ (3-54) - ನಂದಪ್ಪ (3-198).
4. ನೇಮಣ್ಣ (3-232) - ನೇಮಿವ್ರತಿ (3-397).
5. ಮುರಿಗೆ ಶಾಂತವೀರ (3-212) ಮುರಿಗೆದೇಶಿಕ (3-291).
6. ಮೈಲಾರ ಬಸವಲಿಂಗ (3-456) - ಶಿವಯೋಗೀಶ್ವರ (3-161).
7. ಮಗ್ಗೆಯ ಮಾಯಿದೇವ (3-70) - ಬಸವೇಶ (3-34).
8. ಸಂಪಾದನೆ ಸಿದ್ಧವೀರ (3-324). ಮುಪ್ಪಿನಯ್ಯ (3-555).
9. ಮಹಾಲಕ್ಷ್ಮಿ (3-81) - ನಂದಳಿಗೆ ಲಕ್ಷ್ಮೀನಾರಾಯಣಯ್ಯ.
2. ತಪ್ಪಾದ ಲೇಖಕರ ಹೆಸರಿನ ತಿದ್ದುಪಡಿ: ಕವಿ ಚರಿತೆಯಲ್ಲಿ ತಪ್ಪಾಗಿ ನಮೂದಿತವಾಗಿದ್ದ ಕೆಲವು ಕವಿಗಳ ಹೆಸರುಗಳನ್ನು ವಿವಿಧ ಆಕರಗಳ ನೆಲೆಗಟ್ಟಿನಲ್ಲಿ ಸರಿಪಡಿಸಿ ಶಿವಣ್ಣನವರು ಕೆಳಕಂಡಂತೆ ಕೊಟ್ಟಿದ್ದಾರೆ.
1. ಚಿನ್ನಬಸವ ಶಿವಯೋಗಿ (3-94) ಸೋಮೇಕಟ್ಟೆ ಚಿನ್ನವೀರಸ್ವಾಮಿ.
2. ವೇಣುಗೋಪಾಲವರಪ್ರಸಾದ (3-506) ತಿಮ್ಮಕವಿ.
3. ನರಸಿಂಹ (1-181) ಪಾಲ್ಕುರಿಕೆ ಸಂಗಯ್ಯ.
4. ಮರಳದೇವ (2-203) ಮರುಳಶಂಕರದೇವ.
5. ಶೃಂಗಾರ ಕವಿ ಹಂಸರಾಜ (3-274) ರತ್ನಾಕರವರ್ಣಿ.
6. ಅಜಗಣ್ಣ (1-159) ಮುಕ್ತಾಯಕ್ಕ.
7. ಬಸವಲಿಂಗ (3-259) ಪಾ. ಸೋಮನಾಥ.
8. ಬಸವ (1-175) ಬಾಲಸಂಗಯ್ಯ.
9. ಮುರಿಗೆ ಶಾಂತವೀರ (3-57) ಇಮ್ಮಡಿ ಗುರುಸಿದ್ದ.
10. ಪ್ರಭುದೇವ (1-179) ಗೂಳೂರ ಸಿದ್ಧವೀರ.
11. ಸಿಂಹರಾಜ (3-420) ಕಲ್ಯಾಣ ಕೀರ್ತಿ.
12. ಶೀಲವಂತಯ್ಯ (1-202) ಚಿನ್ನಮಲ್ಲ.
13. ಜಯಬಂಧುನಂದನ (1-16) ಚಾವುಂಡರಾಯ.
14. ಪಾಲ್ಕುರಿಕೆ ಸೋಮ (1-341) ಪುಲಿಗೆರೆ ಸೋಮ.”10
3) ಕೆಲವು ಕೃತಿ/ಕರ್ತೃಗಳ ಬಗೆಗೆ ಪೂರಕ ಮಾಹಿತಿ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಒಂದೇ ಕೃತಿಯನ್ನು ಹಲವಾರು ಕವಿಗಳು ಬರೆದಿರುವುದ ಬಗೆಗೆ ಹಾಗೂ ಹೆಚ್ಚಿನ ಪೂರಕ ಮಾಹಿತಿಯನ್ನು ಲಭ್ಯವಿರುವ ಆಕರಗಳನ್ನು ಅನುಲಕ್ಷಿಸಿ ಒಂದೆಡೆ ಕ್ರೂಢೀಕರಿಸಿ ಶಿವಣ್ಣನವರು ನೀಡಿದ್ದಾರೆ. ಜೊತೆಗೆ ಬೇರೆ ಕವಿಯ ಹೆಸರಿನಲ್ಲಿದ್ದ ಕೃತಿಯ ನಿಜವಾದ ಕರ್ತೃ ಯಾರೆಂದು ನಮೂದಿಸಿದ್ದಾರೆ.
1. ಚಾಟುವಿಠಲನಾಥ (3-222) ಭಾಗವತವನ್ನು 5 ಜನ ಬರೆದಿದ್ದಾರೆ.
2. ದುರ್ಗಸಿಂಹ (1-77) ಈತ ಕ್ರಿ.ಶ. 7-5-1037 ರಲ್ಲಿ ‘ನಿಪ್ಪಾಣಿ ಶಾಸನ’ವನ್ನು ರಚಿಸಿದ್ದಾನೆ.
3. ದೇವಕವಿ (1-363) ಈತನ ಹೆಸರಿನಲ್ಲಿನ ‘ಕುಸುಮಾವಳಿ ಕಾವ್ಯ’ ಕಮಲಭವನದು.
4. ನೃಪತುಂಗ (1-17) ಈತನ ಹೆಸರಿನಲ್ಲಿನ ಕವಿರಾಜಮಾರ್ಗದ ಕರ್ತೃ ಶ್ರಿವಿಜಯ.
5. ನಿರಕ್ಷರಕುಕ್ಷಿ (3-110) ಈತನ ಹೆಸರು ಮಾಧವ.
6. ಸಿಂಹರಾಜ (3-420) ಹರದನೀತಿಯ ಕರ್ತೃ (ಕಂ).
7. ಕೇಶಿಯಣ್ಣ (1-368) ಈತನ ಚಂಪೂವಿನ ಸಿಂಹಪ್ರಾಯೋಪಗಮನ ಕೃತಿಯು ಲಭ್ಯವಿದೆ.
8. ಧಾರಾಪುರದ ತಿಮ್ಮಪ್ಪದಾಸ (3-228) ಈತನ ‘ಲಾಕ್ಷಾಗೃಹದಹನ ಮತ್ತು ಬಕಾಸುರ ವಧೆ’ ಗಳು ಭಿನ್ನ ಕೃತಿಗಳಾಗಿರದೆ. ಒಂದೇ ಕೃತಿ.
9. ಮುಮ್ಮಡಿತಮ್ಮ (3-450)ನ ಯಕ್ಷಗಾನ ಕೃತಿಯ ಸಂಪೂರ್ಣ ಹೆಸರು ‘ನಂದಗಿರಿ ಮಹಿಮೆ’
10. ವೃತ್ತ ವಿಲಾಸ (1-476) ನ ಶಾಸ್ತ್ರಸಾರ ಸ್ವತಂತ್ರ ಕೃತಿಯಲ್ಲ.
11. ವಿರಕ್ತ ತೋಂಟದಾರ್ಯ (2-281) ನ ‘ಚಿದಾನಂದಸಿಂಧು’ ಲಭಿಸಿದ್ದು ಚಂಪೂವಿನಲ್ಲಿದೆ.
12. ಪರ್ವತ ಶಿವಯೋಗಿ, ಎಳಂದೂರು (2-397) ಈತನ ‘ಶಾಂತವೀರೇಶ್ವರಾ’ ಅಂಕಿತದಲ್ಲಿನ ಏಕೋತ್ತರಶತಸ್ಥಲ ಪ್ರತಿಪಾದನೆಯ ವಸ್ತುವನ್ನುಳ್ಳ 1052 ವಚನಗಳ ಓಲೆ ಪ್ರತಿ ಲಭ್ಯವಿದೆ.
13. ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದಲ್ಲಿ 6000 ಕ್ಕೂ ಮೀರಿದ ವಚನಗಳನ್ನುಳ್ಳ ಓಲೆ ಕಟ್ಟೊಂದಿದೆ. ಅದರಲ್ಲಿ ಸಿದ್ಧಾರಾಮನ 1434 ವಚನ/ತ್ರಿವಿಧಿಗಳೂ, ನೀಲಮ್ಮನ 284 ವಚನಗಳು, ಅಕ್ಕಮಹಾದೇವಿಯ 212 ವಚನಗಳೂ ಇವೆ. ಇವುಗಳಲ್ಲಿ ಬಹಳಷ್ಟು ನೂತನ ವಚನಗಳಾಗಿವೆ.
14. ಸೋಮೇಕಟ್ಟೆ ಚೆನ್ನವೀರಸ್ವಾಮಿಗಳ ಹಾಗೂ ಸೋದೆ ಸದಾಶಿವರಾಯನ ವಿಪುಲ ಕೃತಿಗಳು ಲಭಿಸಿದ್ಧು ಪ್ರಕಟವಾಗಿವೆ.
     ಈ ಮೇಲ್ಕಂಡ ಸುದೀರ್ಘ ವಿವರದಲ್ಲಿ ಕವಿಚರಿತೆಯ ಸಂಪುಟಗಳಿಗೆ ಮಾಡಬೇಕಾಗಿರುವ ತಿದ್ದುಪಡಿಯ ವಿವರಗಳನ್ನು ಮನಗಂಡರೆ ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ಅವರ ಸ್ಥಾನವೇನೆಂಬುದೇನು ಗೊತ್ತಾಗುತ್ತದೆ. ನಡುಗನ್ನಡ ಹಾಗೂ ನಂತರದ ಕಾಲದ ಕನ್ನಡ ಸಾಹಿತ್ಯ ಚರಿತ್ರೆಯ ಪರಿಧಿಯು ಇವರ ಹೊಸ ಶೋಧದ ಮೂಲಕ ವಿಸ್ತಾರಗೊಂಡಿದೆ. ಜೊತೆಗೆ ಈ ಅವಧಿಯ ಸಾಹಿತ್ಯ ಚರಿತ್ರೆಯನ್ನು ಪುನರ್ರಚಿಸ ಬೇಕಾದ ಅನಿವಾರ್ಯತೆ ಇಂದು ನಮ್ಮ ಮುಂದೆ ತುರ್ತಾಗಿರುವುದನ್ನು ಸೂಚಿಸುತ್ತದೆ. ಶಿವಣ್ಣನವರ ‘ಕರ್ಣಾಟಕ ಕವಿಚರಿತೆಯ ಅನುಕ್ತ ಕೃತಿಸೂಚಿ’, ‘ಹಸ್ತಪ್ರತಿ ಸೂಚಿ’, ‘ವಿವರಣಾತ್ಮಕ ಹಸ್ತಪ್ರತಿ ಸೂಚಿ’, ‘ಹಸ್ತಪ್ರತಿ ಪುಷ್ಪಿಕೆ’ಗಳು ಮತ್ತು ಪ್ರಕಟಿತ ಸಂಶೋಧನಾ ಕಿರುಬರಹಗಳ ಆಧಾರಗಳಿಂದ ಬೆಳಕು ಕಂಡಿರುವ ಹೊಸ ವಿಷಯಗಳನ್ನು ಅಳವಡಿಸಿ, ಆರ್. ನರಸಿಂಹಾಚಾರ್ಯರ ‘ಕರ್ಣಾಟಕ ಕವಿಚರಿತೆ’ಯನ್ನು ಪರಿಷ್ಕರಣೆಗೊಳ ಪಡಿಸುವ, ಪನರ್ರಚಿಸುವ ಅವಶ್ಯಕತೆಯಿದೆ.
     ಶಿವಣ್ಣನವರ ಆಕರ ಶೋಧವು ಆಧುನಿಕ ಪೂರ್ವದ ಸಾಹಿತ್ಯ ಚರಿತ್ರೆಯ ಪುನರ್ ಮೌಲ್ಯೀಕರಣಕ್ಕೆ ನಾಂದಿ ಹಾಡಿದೆ.     ಶಿವಣ್ಣನವರ ಸಾಹಿತ್ಯ-ಸಂಸ್ಕೃತಿಯನ್ನು ಕುರಿತಾದ ಸಂಶೋಧನೆಯಲ್ಲಿ ಗುರುತಿಸ ಬಹುದಾದ ಮತ್ತೊಂದು ಮಹತ್ತರವಾದ ಸಂಗತಿಯೆಂದರೆ ಅವರು ಸಂಪಾದಿಸಿ ಕೊಟ್ಟಿರುವ ಹಸ್ತಪ್ರತಿಗಳ ಪುಷ್ಪಿಕೆಗಳು ಹಾಗೂ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ ಸಂಪುಟಗಳು. “ಹಸ್ತಪ್ರತಿಗಳನ್ನು ಗ್ರಂಥಸಂಪಾದನೆಯ ಚೌಕಟ್ಟಿನಿಂದ ಬದಿಗೆ ಸರಿಸಿ ಪ್ರತ್ಯೇಕವಾಗಿ ಬೇರೊಂದು ರೀತಿಯಲ್ಲಿ ಅದರಲ್ಲಿಯೂ ಸಾಂಸ್ಕೃತಿಕ, ಚಾರಿತ್ರಿಕ ಮತ್ತಿತರ ನೆಲೆಗಟ್ಟಿನಲ್ಲಿ ಅಧ್ಯಯನ ಮಾಡಲು ವಿಫುಲವಾದ ಅವಕಾಶಗಳಿವೆ ಎಂಬುದನ್ನು ಹಸ್ತಪ್ರತಿ ಅಧ್ಯಯನಕಾರರಿಗೆ ತೋರಿಸಿ ಕೊಟ್ಟಿದೆ. ಹಸ್ತಪ್ರತಿಗಳಲ್ಲಿ ಕಂಡು ಬರುವ ಭಿನ್ನ ಪಾಠಗಳನ್ನು ಸಾಂಸ್ಕೃತಿಕ ಅಂಶಗಳ ಹಿನ್ನೆಲೆಯಲ್ಲಿ ನೋಡಬೇಕು.” ಒಂದು ಕೃತಿಗೆ ಸಂಬಂಧಿಸಿದ ವಿವಿಧ ಹಸ್ತಪ್ರತಿಗಳಲ್ಲಿ ಕಂಡು ಬರುವ ಭಿನ್ನ ಪಾಠಗಳು ಅಥವಾ ಸ್ಖಾಲಿತ್ಯಗಳನ್ನು ಹಸ್ತಪ್ರತಿ ಅಧ್ಯಯನದ ನೆಲೆಯಲ್ಲಿ ಬೇರೆ ಬೇರೆ ಆಯಾಮಗಳ ಹಿನ್ನೆಲೆಯಲ್ಲಿ ಗುರುತಿಸ ಬಹುದು ಎಂಬುದು ಇವರು ಸಿದ್ಧಪಡಿಸಿದ ಪುಷ್ಪಿಕೆ ಸಂಪುಟದ ಮೂಲಕ ತಿಳಿಯುವಂತಾಯಿತು. ಇದರಿಂದಾಗಿ ಸಾಂಸ್ಕೃತಿಕ ಅಧ್ಯಯನದಲ್ಲಿ ಸಮಾಜದ ಪಠ್ಯಗ್ರಹಿಕೆಯ ಸ್ವರೂಪ ಮತ್ತು ಭಾಷಿಕವಾಗಿ ಪ್ರಾದೇಶಿಕ ಭಾಷೆಯ ಮಾದರಿಯ ಆಯಾಮವನ್ನು ಯಾವರೀತಿ ಪಡೆದುಕೊಂಡಿದೆಂಬುದನ್ನು ಗ್ರಹಿಸಬಹುದು. ಹಸ್ತಪ್ರತಿಗಳ ಅಧ್ಯಯನದ ಮೂಲಕ ಪ್ರಾಚೀನ ಕಾಲದ ಜನತೆಯ ವಿದ್ಯಾಭಿಮಾನ, ಧರ್ಮಾಭಿಮಾನ ಹಾಗೂ ಬದುಕಿನ ಪ್ರಜ್ಞೆಯನ್ನು ತಿಳಿದುಕೊಳ್ಳಲು ಸಾಧ್ಯ ಇರುವುದರಿಂದ ಮಹತ್ತರವಾದ ಸಾಂಸ್ಕೃತಿಕ ದಾಖಲೆಗಳಾಗಿವೆ. “ಹಸ್ತಪ್ರತಿ ಪುಷ್ಪಿಕೆಗಳಲ್ಲಿ ಮತ್ತು ಭಿನ್ನಪಾಠಗಳಲ್ಲಿ ಅಡಗಿರುವ ಹೇರಳವಾದ ಸಾಂಸ್ಕೃತಿಕ- ಸಾಹಿತ್ಯ ವಿವರಗಳು ಸಂಸ್ಕೃತಿಯ ಪುನರ್ರಚನೆಯಲ್ಲಿ ಮಹತ್ತರ ಪಾತ್ರ ವಹಿಸಿವೆ. ಹಸ್ತಪ್ರತಿಗಳ ಸಾಂಸ್ಕೃತಿಕ ಅಧ್ಯಯನದ ನೆಲೆಯಿಂದಾಗಿ ಹಸ್ತಪ್ರತಿಗಳ ಅಧ್ಯಯನದಲ್ಲಿ ಓದುಗನ ಮನೋಭಾವ, ಪಠ್ಯಬದಲಾವಣೆಗಳ, ಸಾಂಸ್ಕೃತಿಕ ಸಂಗತಿಗಳ ಪಲ್ಲಟದ ಆಯಾಮವನ್ನು ಗುರುತಿಸ ಬಹುದಾಗಿದೆ.
     ಹಸ್ತಪ್ರತಿ ತಜ್ಞರಾಗಿದ್ದ ದಿವಂಗತ ಎಸ್. ಶಿವಣ್ಣನವರು ವೈಜ್ಞಾನಿಕ ವಿಧಾನವನ್ನು ಅನುಸರಿಸಿ ಶ್ರಮವಹಿಸಿ ಸಿದ್ಧಪಡಿಸಿರುವ ಗದುಗಿನ ವೀರಶೈವ ಅಧ್ಯಯನ ಸಂಸ್ಥೆಯ ಮೂಲಕ 1994ರಲ್ಲಿ ಪ್ರಕಟಗೊಂಡಿರುವ ‘ವೀರಶೈವ ಹಸ್ತಪ್ರತಿ ಪುಷ್ಪಿಕೆಗಳು’ ಭಾಗ 1 ಕೃತಿಯೇ ಪ್ರಥಮ ಹಸ್ತಪ್ರತಿ ಪುಷ್ಪಿಕೆ ಎನಿಸಿಕೊಂಡಿದೆ. ಈ ಸಂಕಲನ ಕೃತಿಯಲ್ಲಿ ಒಟ್ಟು 2316 ಕೃತಿಗಳು ಉಲ್ಲೇಖ ಇದೆ. ಹನ್ನೊಂದು ಅನುಬಂಧವನ್ನು ಒಳಗೊಂಡಿರುವ ಈ ಕೃತಿ ಹಸ್ತಪ್ರತಿ ಶಾಸ್ತ್ರದಲ್ಲಿಯೇ ವಿನೂತನವಾದದ್ದು. ‘ವೀರಶೈವ ಹಸ್ತಪ್ರತಿ ಪುಷ್ಪಿಕೆ’ ಎನ್ನುವ ಈ ಚಿಕ್ಕ ಸಂಕಲನ ಕೃತಿಯಲ್ಲಿಯೇ ಇಷ್ಟೊಂದು ವೈವಿಧ್ಯಮಯವಾದ ಮಾಹಿತಿ ಇದೆಯಾದರೆ, ಇನ್ನು ಇಡೀ ‘ಸಮಗ್ರ ಹಸ್ತಪ್ರತಿಗಳ ಪುಷ್ಪಿಕೆ’ ಏನಾದರೂ ಸಿದ್ಧಗೊಂಡರೆ ಈಗಿರುವ ನಮ್ಮ ನಾಡಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಚರಿತ್ರೆಯನ್ನು ಪುನರ್ರಚಿಸಬೇಕಾದಂಥ ಸಂದರ್ಭ ಎದುರಾಗುತ್ತಿದೆ. ‘ಸಮಗ್ರ ಹಸ್ತಪ್ರತಿಗಳ ಪುಷ್ಪಿಕೆ’ಯನ್ನು ಸಿದ್ಧಪಡಿಸುವಂಥ ಸಾಂಸ್ಥಿಕ ಯೋಜನೆಗೆ ಎಸ್. ಶಿವಣ್ಣನವರ ವೀರಶೈವ ‘ಹಸ್ತಪ್ರತಿಗಳ ಪುಷ್ಪಿಕೆಗಳು’ ಕೃತಿಯನ್ನು ಮಾದರಿಯಾಗಿ ಇಟ್ಟುಕೊಳ್ಳಬಹುದಾಗಿದೆ. ಹಸ್ತಪ್ರತಿಗಳು ಸಂಸ್ಕೃತಿಯನ್ನು ದಾಖಲಿಸುವ ಪ್ರಮುಖ ಕೋಶಗಳಲ್ಲಿ ಒಂದಾಗಿವೆ. “ಶಾಸನಗಳು, ಕಡತಗಳು, ಬಖೈರುಗಳ ಮಾದರಿಯಲ್ಲಿ ಹಸ್ತಪ್ರತಿ ಪುಷ್ಪಿಕೆಗಳು ಸಹ ಸಂಸ್ಕೃತಿಯನ್ನು ಪುನರ್ರಚಿಸುವ ಆಕರಗಳಾಗಿವೆ. ಹಸ್ತಪ್ರತಿಗಳಲ್ಲಿರುವ ಆದಿ, ಅಂತ್ಯದ ಹೇಳಿಕೆಗಳು ಕೃತಿಯನ್ನು ಬರೆದವರ, ಬರೆಯಿಸಿದವರ ಚರಿತ್ರೆ ಮತ್ತು ಇತರೆ ವಿಷಯಗಳ ಬಗ್ಗೆ ಅಮೂಲ್ಯವಾದ ಮಾಹಿತಿಗಳನ್ನು ಒದಗಿಸುತ್ತವೆ. ಸ್ಥಳೀಯ ಸಂಸ್ಕೃತಿಯನ್ನು ತಿಳಿಯುವಲ್ಲಿ ಪುಷ್ಪಿಕೆಗಳು ಪ್ರಧಾನವಾಗಿರುವುದರಿಂದ ಮೂಲ ಆಕರ ಸಾಮಾಗ್ರಿಗಳಾಗಿ ಪರಿಗಣಿಸಬಹುದಾಗಿದೆ.” ಹಸ್ತಪ್ರತಿಯಲ್ಲಿ ಉಕ್ತವಾದ ಸಾಮಾಜಿಕ ಅಂಶಗಳು ಆಗಿನ ಕಾಲದ ಸಮಾಜದ ಸ್ಥಿತಿಗೆ ಹಿಡಿದ ಕನ್ನಡಿಯೆನ್ನಬಹುದು. ಹಸ್ತಪ್ರತಿಗಳ ಸೃಷ್ಟಿ ಮತ್ತು ಪ್ರತಿಮಾಡುವ ಕಾರ್ಯವು ಬಸದಿ ಹಾಗೂ ಮಠಗಳಲ್ಲಿ ನಿರಂತರವಾಗಿ ನಡೆದು ಬಂದಿರುವ ಬಗ್ಗೆ ಹಸ್ತಪ್ರತಿ ಪುಷ್ಪಿಕೆಗಳಿಂದ ತಿಳಿದು ಬರುತ್ತದೆ. ಬಸದಿ ಮತ್ತು ಮಠಗಳಲ್ಲಿ ಹಸ್ತಪ್ರತಿಗಳ ರಚನಾಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಆಗಿನ ಜನಸಮುದಾಯ ಶ್ರದ್ಧೆಯಿಂದ ಅವುಗಳನ್ನು ಪೋಷಿಸಿ ಪುರಸ್ಕರಿಸುತ್ತಿದ್ದ ನಿದರ್ಶನಗಳು ಪುಷ್ಪಿಕೆಗಳಲ್ಲಿ ದೊರೆಯುತ್ತವೆ. ರಾಜರು, ರಾಜವಂಶಸ್ಥರು, ಅಧಿಕಾರಿಗಳು, ಧರ್ಮಾಧಿಕಾರಿಗಳು, ಗ್ರಾಮ ಮುಖಂಡರುಗಳು ಹಸ್ತಪ್ರತಿಗಳ ಪಾಲನೆ, ಪೋಷಣೆ ಮಾಡಿ ಹಸ್ತಪ್ರತಿಗಳ ನಿರ್ಮಾಣಕ್ಕೆ ಕಾರಣ ಕರ್ತರಾಗಿದ್ದಾರೆ. ಹಸ್ತಪ್ರತಿಗಳ ಪೀಳಿಗೆಯ ಸೃಷ್ಟಿಯ ಹಿಂದೆ ಪೋಷಕ ಸಮುದಾಯ ಮಿಡಿದಿರುವುದನ್ನು ಗುರುತಿಸ ಬಹುದಾಗಿದೆ. ಪೋಷಕರು ಹಸ್ತಪ್ರತಿಗಳನ್ನು, ದೈವಭಕ್ತಿ, ಸಮಯನಿಷ್ಠೆ, ಜ್ಞಾನಾರ್ಜನೆ, ಅನಿಷ್ಟ ನಿವಾರಣೆ, ಆಯುರಾರೋಗ್ಯ ಭಾಗ್ಯ, ಗಂಡು ಸಂತಾನ, ಗುರುಭಕ್ತಿ ಮತ್ತು ಪುಣ್ಯಸಂಪಾದನೆಗಾಗಿಯೂ ಬರೆಸಿದ್ದಾರೆ. ಹಸ್ತಪ್ರತಿಗಳು ಒಂದು ರೀತಿಯಲ್ಲಿ ಆಧುನಿಕ ಪೂರ್ವ ಕರ್ನಾಟಕದ ಜನಜೀವನ, ಬದುಕಿನ ರೀತಿ ನೀತಿಯನ್ನು ಅರಿಯಲು ಕಾರಣೀಭೂತವಾಗಿವೆ. ಹಸ್ತಪ್ರತಿಗಳನ್ನು ಕುರಿತಾದ ಈ ರೀತಿಯ ಹೊಸ ನೆಲೆಗಟ್ಟಿನ ಸಂಶೋಧನಾಧ್ಯಯನಕ್ಕೆ ಕಾರಣೀಭೂತರಾದವರು ಎಸ್. ಶಿವಣ್ಣನವರು ಎಂಬುದು ಈ  ತೆರನಾದ ಅಧ್ಯಯನದಲ್ಲಿ ತೊಡಗಿ ಕೊಂಡಿರುವ ಸಂಶೋಧಕರಿಗೆಲ್ಲ ತಿಳಿದ ಸಂಗತಿಯಾಗಿದೆ.
  ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ವಿವಿಧ ನೆಲೆಗಟ್ಟುಗಳಲ್ಲಿ ಸಾಕಷ್ಟು ಕೆಲಸ ನಡೆದಿದ್ದರೂ ಇನ್ನೂ ಆಗಬೇಕಾದ ಕೆಲಸ ಬಹಳಷ್ಟಿದೆ. ಕನ್ನಡ ನಾಡಿಗೆ ಸಂಬಂಧಿಸಿದ ಆಕರಗಳ ರಕ್ಷಣೆ, ಸಂಗ್ರಹ, ಪರಿಶೀಲನೆ, ಪ್ರಕಟನೆಗಳಿಗೆ ಹೆಚ್ಚಿನ ಆದ್ಯತೆಕೊಡಬೇಕಾಗಿದೆ. ಸಮಗ್ರ ಆಕರಶೋಧ ಹಾಗೂ ಸಂಗ್ರಹಕಾರ್ಯ ನಡೆಯಬೇಕಾಗಿದೆ. ಅಲಕ್ಷಿತ ವಿಷಯಗಳಲ್ಲಿಯೂ ಸಂಶೋಧನೆ ಕೈಗೊಳ್ಳಬೇಕಾಗಿದೆ. ಸಂಶೋಧನೆಯ ಫಲಿತಾಂಶಗಳು ವಿದ್ವತ್ ವಲಯಕ್ಕೆ ಮಾತ್ರ ಸೀಮಿತವಾಗದೆ ಜನಮುಖಿಯಾಗಬೇಕಾಗಿದೆ. ಸಂಶೋಧನೆಯ ಫಲಿತಗಳು ಸಾಹಿತ್ಯಾಸಕ್ತ ಜನತೆಗೆ ತಲುಪದಿದ್ದರೆ ಸಂಶೋಧನೆಗಳಿಗೆ ಮಹತ್ವವೇ ಇಲ್ಲವಾಗುತ್ತದೆ. ಒಟ್ಟಾರೆ ಕನ್ನಡ ಪ್ರಜ್ಞೆ ಜಾಗೃತವಾಗುತ್ತಲಿರುವ ಇಂದಿನ ಸಂದರ್ಭದಲ್ಲಿ ನಮ್ಮ ಪರಂಪರೆಯನ್ನು ಕುರಿತ ಸಂಶೋಧನೆ ಎಲ್ಲಾ ನೆಲೆಗಟ್ಟುಗಳಲ್ಲಿಯೂ ನಡೆಯಬೇಕಾಗಿದೆ. ಈ ತೆರನಾದ ಅಧ್ಯಯನ ತನ್ನ ಪರಿಪೂರ್ಣತೆಯನ್ನು ಪಡೆಯ ಬೇಕಾದರೆ ಎಸ್.ಶಿವಣ್ಣನಂತಹವರು ಶೋಧಿಸಿರುವ ಆಕರ ಸಂಪತ್ತನ್ನು ಹಾಗೂ ಬೆಳಕಿಗೆ ತಂದಿರುವ ಕವಿಗಳ ಅನುಪಲಬ್ಧ ಕೃತಿಗಳನ್ನು ಹಾಗೂ ಸಂಕಲಿಸಿರುವ ಕನ್ನಡ ಹಸ್ತಪ್ರತಿ ಪುಷ್ಪಿಕೆಗಳಂತಹ ಹಸ್ತಪ್ರತಿ ವರ್ಣನಾತ್ಮಕ ಸೂಚಿ ಸಂಪುಟಗಳಲ್ಲಿಯ ವಿವರಗಳನ್ನು ವಿಭಿನ್ನ ಶಿಸ್ತುಗಳಡಿಯಲ್ಲಿ ಅಧ್ಯಯನಕ್ಕೊಳ ಪಡಿಸ ಬೇಕಾಗಿದೆ. ಇಂದು ಹಸ್ತಪ್ರತಿಗಳಲ್ಲಿ ಮಾಹಿತಿ ಸಂಪತ್ತನ್ನು ಎಸ್. ಶಿವಣ್ಣನವರು ಸಿದ್ಧಪಡಿಸಿಕೊಟ್ಟಿರುವ ಹಸ್ತಪ್ರತಿಗಳ ಪುಷ್ಪಿಕೆಗಳ ಮಾದರಿಯಲ್ಲಿ ಸಿದ್ಧಪಡಿಸಿ ಸಾಹಿತ್ಯ ಮತ್ತು ಸಾಹಿತ್ಯೇತರ ನೆಲೆಗಟ್ಟಿನಲ್ಲಿ ಅಧ್ಯಯನ ಮಾಡ ಬೇಕಾಗಿದೆ.
    ಸಾಹಿತ್ಯ ಸಂಶೋಧನಾ  ಕ್ಷೇತ್ರದಲ್ಲಿ ಇನ್ನು ಆಗಬೇಕಾದ ಕಾರ್ಯ ಬಹಳಷ್ಟಿದೆ. ವಚನ ಹಾಗೂ ದಾಸಸಾಹಿತ್ಯ ರಾಶಿರಾಶಿಯಾಗಿ ಬಹಳಷ್ಟು ಹಸ್ತಪ್ರತಿಗಳಲ್ಲಿಯೇ ಅವಿತು ಕುಳಿತಿದೆ. ಆವುಗಳನ್ನು ನಾಡಿಗೆ ಪರಿಚಯಿಸಲು ಇಂದು ನಾವು ಶಿವಣ್ಣನವರ ತರದ ಸಂಶೋಧನೆಯನ್ನು ಮುಂದುವರೆಸ ಬೇಕಾಗಿದೆ.
   ಎಸ್. ಶಿವಣ್ಣನವರು ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ವಚನ ಸಾಹಿತ್ಯಕ್ಕೆ ತಮ್ಮ ಸೇವೆಯನ್ನು ವಿಶೇಷವಾಗಿ ಮೀಸಲಾಗಿಟ್ಟಿದ್ದವರು ಬೆಂಗಳೂರು ವಿಶ್ವವಿದ್ಯಾಲಯ ಹಸ್ತಪ್ರತಿ ವಿಭಾಗವನ್ನು ಕಟ್ಟಿ ಬೆಳೆಸಿದರು. ಕನ್ನಡ ನಾಡಿನ ವಿದ್ವಾಂಸರು ಶರಣ ತತ್ತ್ವಾಭಿಮಾನಿಗಳು ಬಸವಾದಿ ಪ್ರಮಥರ ಅಧ್ಯಯನ ಮಾಡುವಾಗ ಶಿವಣ್ಣವನರ ಸೇವೆಯನ್ನು ಸ್ಮರಿಸಲೇಬೇಕು. ಹಸ್ತಪ್ರತಿ ಸೂಚಿಗಳು, ವಚನ ಸಂಕಲನಗಳು, ಸ್ವರವಚನಗಳು, ಟೀಕಾ ಸಾಹಿತ್ಯ, ಮುಂತಾದ ಸಾಹಿತ್ಯ ಕೃತಿಗಳು ಹೀಗೆ ವೈವಿಧ್ಯಮಯ ವೈಶಿಷ್ಠ್ಯಮಯ 45 ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಮರ್ಪಿಸಿ ಕೃತಕೃತ್ಯರಾಗಿದ್ದಾರೆ. ಇವರು ಹೊರ ತಂದಿರುವ ಬಹಳಷ್ಟು ಕೃತಿಗಳು ಅಲಕ್ಷಿತ ವಲಯದ ಇಲ್ಲಿಯವರೆಗೂ ಬೆಳಕು ಕಂಡಿರದ ಕೃತಿಗಳಾಗಿವೆ.
  ಕನ್ನಡ ನಾಡಿನ ಆಧುನಿಕ ವಿದ್ವಾಂಸರಲ್ಲಿ, ಅತ್ಯಂತ ಭಿನ್ನರಾದ ಎಸ್.ಶಿವಣ್ಣನವರು  ಇಂದು  ಸಾಹಿತ್ಯ ವಿದ್ಯಾರ್ಥಿಯೂ ಆರಿಸಿಕೊಳ್ಳಲು ಹೋಗದ ಹಸ್ತಪ್ರತಿಗಳು ಸಂಶೋಧನೆ ಸಂಗ್ರಹ, ಸಂರಕ್ಷಣೆ ಹಾಗೂ ಸಂಪಾದನೆಯ ಕೆಲಸವನ್ನು ತಮ್ಮ ವಿಶಿಷ್ಟವಾದ ಹುಚ್ಚಿನಿಂದ ಮುಂದುವರಿಸಿಕೊಂಡು ಬಂದವರು. ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮೂಲೆಯೊಂದರಲ್ಲಿ ಹೂತು ಹೋಗಿರುವ ಶಿವಣ್ಣನವರನ್ನು ಹಿಂದೊಮ್ಮೆ ಅವರ ಸಹೋದ್ಯೋಗಿ ಕಿ.ರಂ ನಾಗರಾಜ್ ಕನ್ನಡದ ಆಕರ ವಿಜ್ಞಾನಿ ಎಂದು ಬಣ್ಣಿಸಿದ್ದರು. ಶಿವಣ್ಣನವರು ಕೇವಲ ಹಸ್ತಪ್ರತಿ ಸಂಗ್ರಹಕಾರರು ಎನ್ನುವವರಿಗೆ ಅವರ ಸಂಶೋಧನೆಯ ವ್ಯಾಪ್ತಿ ಹಾಗೂ ಕನ್ನಡ ಪರಂಪರೆಯ ಪಠ್ಯಗಳ ಶೋಧನೆಯ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ಹರವುಗೊಳಿಸಿದ್ದಾರೆಂಬುದು ಬಹಳಷ್ಟು ಮಂದಿಗೆ ಇಂದಿಗೂ ತಿಳಿದಿಲ್ಲದಿರುವುದು ದುರಂತದ ಸಂಗತಿಯಾಗಿದೆ. ಉದಾಹರಣೆಗೆ ರಂ.ಶ್ರೀ. ಮುಗುಳಿ ಅವರ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖವಾಗದ ಚನ್ನಪ್ಪ ಕವಿ ಬಸವಣ್ಣನನ್ನು ಕೇಂದ್ರವಾಗಿಟ್ಟುಕೊಂಡು ಬರೆದ ‘ಶರಣ ಲೀಲಾಮೃತ’ ಎಂಬ ಆಧುನಿಕ ಕಥಾನಕ ಕನ್ನಡದ ಎಲ್ಲ ಮುಖ್ಯ ಛಂದೋರೂಪಗಳನ್ನು ಪ್ರಯೋಗ ಮಾಡಿರುವ ಕೃತಿ. ಈ ಪಠ್ಯ ಎಸ್. ಶಿವಣ್ಣನವರ ಮೂಲಕ ಎಚ್.ಎಸ್. ಶಿವಪ್ರಕಾಶರ ಗಮನಕ್ಕೆ ಬಂದು ‘ಮಹಾಚೈತ್ರ’ ನಾಟಕಕ್ಕೆ ಹೊಸ ಆಯಾಮ ಬಂತು. ಎಂಬ ಲಂಕೇಶ್ ಪತ್ರಿಕೆಯಲ್ಲಿ ‘ಬರೆವ ಬದುಕು’ ಶೀರ್ಷಿಕೆಯ ಅಂಕಣ ಬರಹದಲ್ಲಿ ಬಹಳ ಹಿಂದೆ  ಕಿ.ರಂ. ನಾಗರಾಜು ಅವರು ಶಿವಣ್ಣನವರ ಜೀವನ-ಸಾಧನೆಯ ಕುರಿತ  ಹೇಳಿರುವ ಅಂಶಗಳು ಶಿವಣ್ಣನವರ ಸಂಶೋಧನಾ ಸಾಧನೆಯ ಹೆಗ್ಗುರುತಿನ ಪ್ರತೀಕವಾಗಿವೆ.
     ಶಿವಣ್ಣನವರು  ಶೋಧಿಸಿರುವ ಹಸ್ತಪ್ರತಿಗಳ ಆಧಾರದ ಮೇಲೆ ಮಾಡಲಾಗುವ ಕಾಲ ನಿರ್ಣಯ, ಕವಿ-ಕೃತಿಗಳ ನಿರ್ಣಯಗಳು ಕನ್ನಡ ಸಾಹಿತ್ಯ ಚರಿತ್ರೆ ಕುರಿತಂತೆ ಈವರೆಗಿನ ಪ್ರಮುಖ ನಿರ್ಧಾರಗಳನ್ನು ಪುನರ್ ರಚಿಸುವಷ್ಟರ ಮಟ್ಟಿಗೆ ಪ್ರಾಮುಖ್ಯತೆಯನ್ನು ಪಡೆದಿವೆ.  ಅಧುನಿಕ ಪೂರ್ವದ ಅಸಂಖ್ಯಾತ ಕವಿಗಳ ಕಾಲ ಕೃತಿಗಳ ಕ್ಷಣಾರ್ಧದಲ್ಲಿ ಅಧಿಕೃತ ಮಾಹಿತಿಯನ್ನು ಕೊಡಬಲ್ಲ್ಲಷ್ಟು ತೀಕ್ಷ್ಣಮತಿಯವರಾಗಿದ್ದರು.  ಯಾರಾದರೂ ಆಧುನಿಕ ಪೂರ್ವದಕವಿಗಳ ಬಗೆಗೆ ಸಂಶೋಧನೆ ಕೈಗೊಂಡವರು ಇವರ ಬಳಿಗೆ ಮಾಹಿತಿ ಸಂಗ್ರಹಕ್ಕಾಗಿ ಭೇಟಿ ಕೊಡಲು ತಮ್ಮ ಸಂಶೋಧನಾ ವಿಷಯದ ಮಾಹಿತಿಯ ಬಗೆಗಿನ ಅಲ್ಪಜ್ಞಾನದಿಂದಾಗಿ ಅಳುಕುತ್ತಿದ್ದರು. ಕನ್ನಡ ಕವಿಗಳ ಬಗೆಗಿನ ಶಿವಣ್ಣನವರ ವ್ಯುತ್ಪತ್ತಿಜ್ಞಾನ ಎಂತಹವರನ್ನು ದಿಗ್ಭ್ರಮೆ ಮೂಡಿಸುವಂಥದ್ದಾಗಿದ್ದಿತು.
  ಇವರ ಸಂಶೋಧನಾ ಲೇಖನಗಳು ಹಲವಾರು ವಿದ್ವಾಂಸರಿಗೆ ಉಪಯುಕ್ತವಾಗಿದೆ. “ಕೆಲವೊಮ್ಮೆ ಕೆಲವು ವಿದ್ವಾಂಸರು ತಮ್ಮ ಸಂಶೋಧನೆಯಲ್ಲಿ ಅನುಮಾನ ಬಂದಲ್ಲಿ ಇವರನ್ನು ಕಂಡು ತಮ್ಮ ಸಂಶಯವನ್ನು ನಿವಾರಿಸಿಕೊಳ್ಳುತ್ತಿದ್ದರು. ಇವರ ವಿಪುಲ ಸಂಶೋಧನಾ ಸಾಹಸ ಕಾರ್ಯಕ್ಕೆ ಹಾಗೂ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆಗೆ ಖಂಡಿತವಾಗಿ ಇವರಿಗೆ ಡಿ.ಲಿಟ್. ಪದವಿಯನ್ನು ಕೊಟ್ಟು ಗೌರವಿಸಬೇಕಿತ್ತು. ವಿದ್ವಾಂಸರು ಇವರಿಂದ ಉಪಕೃತರಾದರೇ ಹೊರತು ಇಂತಹ ಗೌರವವನ್ನು ಕೊಡಿಸುವಲ್ಲಿ ಮೌನವನ್ನು ತಾಳಿದುದು ನಿಜಕ್ಕೂ ವ್ಯಥೆಯಾಗುತ್ತದೆ.”
    ಕನ್ನಡ ಸಾಹಿತ್ಯ ಚರಿತ್ರೆ ಕುರಿತಾದ ಸಂಶೋಧನೆಯಲ್ಲಿ ಎಸ್. ಶಿವಣ್ಣನವರ ಸ್ಥಾನ ಉನ್ನತವಾದುದು. ಅವರು ತಮ್ಮ ಆಕರ ಶೋಧನೆಯ ಮೂಲಕ ಹೊರ ತಂದ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಸಂಗತಿಗಳಾಗಲಿ, ಕವಿಗಳ ಕಾಲನಿರ್ಣಯ, ವೈಯಕ್ತಿಕ ಸಂಗತಿಗಳಾಗಲೀ, ಕವಿಗಳ ಅನುಪಲಬ್ಧ ಕೃತಿಗಳ ಬಗೆಗಿನ ಇವರ ನೂತನ ಸಂಗತಿಗಳಾಗಲೀ ಇವೆಲ್ಲವೂ ಇಡಿಯಾಗಿ ಹಾಗೂ ಬಿಡಿಯಾಗಿ ದೊರೆಯುತ್ತಿದ್ದರೂ ಈ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡಿರುವಂತಹವರು ಅವುಗಳನ್ನು ಗಮನಿಸದೇ ಅದೇ ಹಳೆಯ ಸಂಗತಿಗಳನ್ನು ತಮ್ಮ ಅಧ್ಯಯನಗಳಲ್ಲಿ ಬಳಸುತ್ತಿರುವುದು ಹಾಗೂ ಪ್ರಸ್ತಾಪಿಸುತ್ತಿರುವುದು ದುಖಃಕರ ಸಂಗತಿಯಾಗಿದೆ. ನಿಜಕ್ಕೂ ಇಂದು ಶಿವಣ್ಣನವರ ಶೋಧನೆಗಳನ್ನು ಬಳಸಿಕೊಂಡು ಆಧುನಿಕ ಪೂರ್ವದ ಸಾಹಿತ್ಯ ಚರಿತ್ರೆಯನ್ನು ಪುನರ್ ನಿರ್ಮಾಣ ಮಾಡುವಂತಹ ಯೋಜನೆಯನ್ನು ಕೈಗೊಂಡು ಪೂರ್ಣಗೊಳಿಸಿದಾಗ ಮಾತ್ರ ಅವರ ಸ್ಥಾನ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಏನೆಂಬುದು ಸಾಹಿತ್ಯದ ಅಧ್ಯಯನಕಾರರಿಲ್ಲರಿಗೂ ಗೊತ್ತಾಗುತ್ತದೆ. ಜೊತೆಗೆ ಅದು ಆಕರ ವಿಜ್ಞಾನಿ ಎಸ್. ಶಿವಣ್ಣನವರಿಗೆ ನಾವು ಕೊಡುವ ಗೌರವದ ಪ್ರತೀಕವೂ ಆಗಿರುತ್ತದೆ. ಕನ್ನಡ ಸಾಹಿತ್ಯ ಸಂಶೋಧನೆ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆ, ಪೂರ್ವ ಕವಿಗಳ ಕಾಲನಿರ್ಣಯ, ಅಪ್ರಕಟಿತ ವಚನಗಳ ಶೋಧ, ಸ್ವರವಚನಗಳ ಸಂಪಾದನೆ, ವಿವಿಧ ಕಾಲಮಾನದ ಕವಿಕೃತಿಗಳಿಗೆ ಸಂಬಂಧಿಸಿದ ಸಂಪ್ರಬಂಧಗಳು ಮುಂತಾದವುಗಳಿಂದಾಗಿ ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದಿದ್ದಾರೆ. ಆಧುನಿಕ ಪೂರ್ವದ ಸಾಹಿತ್ಯದ ಆಕರಗಳ ಮರುಶೋಧದಲ್ಲಿ ಎಸ್. ಶಿವಣ್ಣನವರ ಆಕರಗಳ ಶೋಧ ಹಾಗೂ ಆಕರಗಳಶೋಧ ಕೇಂದ್ರಿತ ಸಂಶೋಧನೆಗಳು ಗುಣ ಗಂಭೀರತೆಯನ್ನು ಪಡೆದು ಕೊಂಡಿವೆ. ಇಂದಿಗೂ  ಎಸ್.ಶಿವಣ್ನನವರು ಶೋಧಿಸಿ ಕೊಟ್ಟಿರುವ ಸಂಶೋಧನಾ ವಿವರಗಳನ್ನು ಸಾಹಿತ್ಯ ಚರಿತ್ರೆಯಲ್ಲಿ ಅಳವಡಿಸಿ ಕೊಳ್ಳಬೇಕಾಗಿದೆ. ಜೊತೆಗೆ  ಸಾಹಿತ್ಯ ಚರಿತ್ರೆಯನ್ನು ಪುನರ್ ರಚಿಸಬೇಕಾಗಿದೆ.

                  ಪರಾಮರ್ಶನ ಗ್ರಂಥಗಳು:
 1.  ಎಸ್. ಶಿವಣ್ಣ: ಬಿಡುಮುತ್ತು ( ವಿದ್ವತ್ ಪೂರ್ಣ ಸಂಶೋಧನಾ ಲೇಖನಗಳ ಸಂಕಲನ)
     ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, 2004
 2. ವೀರಶೈವ ಹಸ್ತಪ್ರತಿ ಪುಷ್ಪಿಕೆಗಳು,( ಸಂ: ಎಸ್.ಶಿವಣ್ಣ) ಸಂ. 1., ವೀರಶೈವ ಅಧ್ಯಯನ ಸಂಸ್ಥೆ, ಗದಗ, 1994
3. ಎಸ್.ಶಿವಣ್ಣ:ಕರ್ಣಾಟಕ ಕವಿ ಚರಿತೆಯ ಅನುಕ್ತ ಕೃತಿ ಸೂಚಿ  ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, 1967
4.  ವೀರಶೈವ ಅಪ್ರಕಟಿತ ಗ್ರಂಥ ಸೂಚಿ, ಸಂ: ಎಸ್.ಶಿವಣ್ಣ,  ವೀರಶೈವ ಅಧ್ಯಯನ ಸಂಸ್ಥೆ, ಗದಗ, 1982
 5.  ಸಿ.ನಾಗಭೂಷಣ: ಸಾಹಿತ್ಯ-ಸಂಸ್ಕೃತಿ ಹುಡುಕಾಟ, ಅಮೃತವಷರ್ಷಿಣಿ ಪ್ರಕಾಶನ, ಯರಗೇರಾ, ರಾಯಚೂರು, 2002
 6. ಸಿ.ನಾಗಭೂಷಣ : ಕನ್ನಡ ಸಂಶೋಧನಾ ಸಮೀಕ್ಷೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ, 2006
7.ಹಸ್ತಪ್ರತಿ ಅಧ್ಯಯನದ ಹೊಸ ಸಾಧ್ಯತೆಗಳು ಸಂ: ವೀರೇಶ ಬಡಿಗೇರ ಮತ್ತು ಎಸ್.ಆರ್.ಚೆನ್ನವೀರಪ್ಪ.
                                      ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ.2003
8. ಹಸ್ತಪ್ರತಿ ಅಧ್ಯಯನ: ಸಮಕಾಲೀನ ಸವಾಲುಗಳು ಸಂ: ಸಿ.ಬಿ.ಹೊನ್ನುಸಿದ್ಧಾರ್ಥ 
                  ಕನ್ನಡ ಅಧ್ಯಯನ ಕೇಂದ್ರ, ಬೆ.ವಿ.ವಿ. ಬೆಂಗಳೂರು 2013
9. ಹಸ್ತಪ್ರತಿ ವ್ಯಾಸಂಗ-11.  ಸಂ: ಕೆ.ರವೀಂದ್ರನಾಥ. ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ. 2012.
10. ನಾ.ಗೀತಾಚಾರ್ಯ, ಹಸ್ತಪ್ರತಿಶಾಸ್ತ್ರ ವಿವೇಚನೆ, ಸ್ನೇಹನಿಧಿ ಬಳಗ, ಬೆಂಗಳೂರು, 2000
11. ಬಿ,ಕೆ.ಹಿರೇಮಠ, ಕನ್ನಡ ಹಸ್ತಪ್ರತಿಗಳು ಒಂದು ಅಧ್ಯಯನ, ವೀರಶೈವ ಅಧ್ಯಯನ ವೇದಿಕೆ, ಶ್ರೀ.ಹಿರೇಮಠ,
   ಕಸಬಾ ಜಂಬಗಿ, ಮುದೋಳ,1992
12. ವೈ.ಸಿ.ಭಾನುಮತಿ, ಗ್ರಂಥ ಸಂಪಾದನೆ ಕೆಲವು ಅಧ್ಯಯನ, ಮೈಸೂರು, 1997.
13. ಎಫ್.ಟಿ ಹಳ್ಳಿಕೇರಿ,  ಕಂಠ ಪತ್ರ      ವಿಕಾಸ ಪ್ರಕಾಶನ, ಹೊಸಪೇಟೆ, 2003.

                      



  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...