ಬುಧವಾರ, ಏಪ್ರಿಲ್ 3, 2019

ಮಧ್ಯಕಾಲೀನ ಕನ್ನಡ ಕಾವ್ಯಗಳಲ್ಲಿ ಅಕ್ಕಮಹಾದೇವಿಯ ಜೀವನ ಚಿತ್ರಣ * (ಹರಿಹರ,ಚನ್ನಬಸವಾಂಕ ಹಾಗೂ ಚಿಕ್ಕರಾಚ, ಅನಾಮಧೇಯ ಕವಿಗಳ ಕಾವ್ಯಗಳನ್ನು ಅನುಲಕ್ಷಿಸಿ) ಡಾ.ಸಿ.ನಾಗಭೂಷಣ


ಮಧ್ಯಕಾಲೀನ ಕನ್ನಡ ಕಾವ್ಯಗಳಲ್ಲಿ ಅಕ್ಕಮಹಾದೇವಿಯ ಜೀವನ ಚಿತ್ರಣ *
  (ಹರಿಹರ,ಚನ್ನಬಸವಾಂಕ ಹಾಗೂ ಚಿಕ್ಕರಾಚ, ಅನಾಮಧೇಯ ಕವಿಗಳ ಕಾವ್ಯಗಳನ್ನು ಅನುಲಕ್ಷಿಸಿ)
     ಮಹಾದೇವಿಯಕ್ಕ ಕರ್ನಾಟಕದ  ಶಿವಶರಣೆಯರ  ಶಿರೋಮಣಿ. ವೀರ ವೈರಾಗ್ಯವೇ ಮೂರ್ತಿವೆತ್ತಂತಿದ್ದ ಅಕ್ಕಳು ಮನೆಯನ್ನು ತೊರೆದು ಉಟ್ಟ ಉಡುಗೆಯನ್ನೇ ಕಳೆದು ಮಲ್ಲಿಕಾರ್ಜುನನನ್ನೇ ನಂಬಿದ ಕ್ರಾಂತಿಕಾರಿ. ಭಕ್ತಿಯ ನಿಧಿ ಹಾಗೂ ಮುಕ್ತಿಯ ತವರಾಗಿದ್ದಾಳೆ.  ಹಿರಿದಾದ ಆಕೆಯ ವ್ಯಕ್ತಿತ್ವವನ್ನು  ನಾವು ಅವಳ ವಚನಗಳಲ್ಲಿ ಕಾಣಬಹುದಾಗಿದೆ. ಸಾಹಿತ್ಯಾಂಶ ಅವಳ ವಚನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದಲೇ ಅವಳಿಗೆ ವಚನ ವಾಙ್ಮಯದಲ್ಲಿ  ಗೌರವಯುತವಾದ ಸ್ಥಾನ-ಮಾನವನ್ನು ಕೊಡಲಾಗಿದೆ. ಕನ್ನಡ ಕಬ್ಬಿಗಿತಿಯರಲ್ಲಿ  ಆದ್ಯತೆ ಮತ್ತು ಯೋಗ್ಯತೆ ದೃಷ್ಟಿಯಿಂದ ಮೊದಲಿಗಳಾಗಿದ್ದಾಳೆ. ಆಕೆಯ ವಚನಗಳು ಅವಳ ಮನೋಸ್ಥಿತಿಯ ಒಂದು ಕ್ಷಣದ ಅನಿಸಿಕೆಯ ವಿವರಗಳಷ್ಟೇ. ಆ ವಚನಗಳು ಮೂಡಿದಾಗಿನ ಮನೋಸ್ಥಿತಿಯ ಹಾಗೂ ಅವಕ್ಕೆ ಹಿನ್ನೆಲೆಯಾಗಿ ಬರುವ ಸಂದರ್ಭದ ಸ್ಪೃಷ್ಟ ತಿಳುವಳಿಕೆ ನಮಗಿಂದು ಕಲ್ಪಿಸಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಕ್ಕನ ಭವ್ಯ ವ್ಯಕ್ತಿತ್ವವನ್ನು ಚಿತ್ರಿಸಲು ಅಕ್ಕನ ವಚನಗಳೊಂದರಿಂದಲೇ ಸಾಧ್ಯವಿಲ್ಲ. ಈ ದಿಶೆಯಲ್ಲಿ ಮಹಾದೇವಿಯಕ್ಕಳಿಗೆ ತುಸು ಸಮೀಪದವನಾದ ಹರಿಹರನನ್ನು ಒಳಗೊಂಡಂತೆ ನಂತರ ಬಂದ ಚನ್ನ ಬಸವಾಂಕ, ಚಿಕ್ಕರಾಚ ಮುಂತಾದ ಕವಿಗಳು ಅಕ್ಕಳನ್ನು ಕುರಿತು ಸ್ವತಂತ್ರವಾಗಿ ರಚಿಸಿರುವ ಕಾವ್ಯಗಳ ಮೂಲಕ  ಅಕ್ಕಳು‘ವೈರಾಗ್ಯ ನಿಧಿ’ಯಾಗಿ ಬಾಳಿ, ಮಣಿಹ ಪೂರೈಸಿ ಹೋದ ಮಹತ್ ವ್ಯಕ್ತಿತ್ವದ ಬಗೆಗೆ ತಿಳಿಯಲು ಸಾಮಗ್ರಿ ಲಭ್ಯವಾಗುತ್ತದೆ.
      ಮಹಾದೇವಿಯಕ್ಕನನ್ನು ಕುರಿತು ಅನೇಕ ಪ್ರಾಚೀನ ಕವಿಗಳು ಕಾವ್ಯಗಳನ್ನು ರಚಿಸಿದ್ದಾರೆ. ಇದ್ದ ಸಾಮಗ್ರಿಯನ್ನು ಆಧಾರವಾಗಿಟ್ಟುಕೊಂಡು ಅವಳ ತುಂಬು ಜೀವನದ ಚಿತ್ರವನ್ನೇ ಕಾವ್ಯಗಳಲ್ಲಿ ಚಿತ್ರಿಸಿದ್ದಾರೆ. ಒಂದರಂತೆ ಇನ್ನೊಂದು ಕಾವ್ಯ-ಪುರಾಣಗಳಲ್ಲಿ ಆಕೆಯ ಜೀವನದ ಘಟನೆಗಳು ಬಾರದೆ ಇರುವುದರಿಂದ ಕೆಲಸಂಗತಿಗಳು ಚರ್ಚಾಸ್ಪೃದ ವಿಷಯಗಳಾಗುತ್ತ ಬಂದಿವೆ. ಅಕ್ಕಮಹಾದೇವಿಯು ಕೌಶಿಕನೆಂಬ ರಾಜನ ಬಲಾತ್ಕಾರಕ್ಕೊಳಗಾಗಿ ಮದುವೆ ಮಾಡಿಕೊಂಡು ಕೆಲಕಾಲದ ಬಳಿಕ ಅವನ ಅರಮನೆಯ ಭೋಗ ಜೀವನವನ್ನು ತಿರಸ್ಕರಿಸಿ ತನ್ನ ಆರಾಧ್ಯ ದೈವದ ಆವಾಸವಾದ ಶ್ರೀಶೈಲದತ್ತ ತೆರಳಿದಳೆಂಬುದು ಎಲ್ಲರೂ ತಿಳಿದಿರತಕ್ಕ
  ವಿಷಯವಾಗಿದೆ.  ವಚನಸಾಹಿತ್ಯದ ಆಶಯ ಹಾಗೂ ಶರಣರ ಜೀವನ ಇವುಗಳಿಂದ ಸ್ಫೂರ್ತಿಹೊಂದಿ ಸಾಹಿತ್ಯ ನಿರ್ಮಾಣ ಮಾಡಿದ  ಕವಿಗಳಲ್ಲಿ ಹರಿಹರನು ಪ್ರಮುಖನಾಗಿ ಕಂಡು ಬರುತ್ತಾನೆ. ವಚನಸಾಹಿತ್ಯದಿಂದ ಪ್ರಭಾವಿತನಾಗಿ ಭಾಷೆ ಮತ್ತು ಧೋರಣೆಗಳ ದೃಷ್ಟಿಯಿಂದ ಪೂರ್ವದ ಪರಂಪರೆಯ ಕವಿಗಳಿಗಿಂತ ಭಿನ್ನವಾದ ನಿಲುವನ್ನು ಹೊಂದಿದವನು. ವಚನಕಾರರ ಚರಿತ್ರೆಯನ್ನು ಹರಿಹರ  ಕಥನಕಾವ್ಯವನ್ನಾಗಿಸಿದ. ಮನುಜರ ಮೇಲೇ ಸ್ಥಾವರ ಮೇಲೆ ಕಾವ್ಯವನ್ನು ಬರೆಯ ಬಾರದೆಂಬ ಪ್ರತಿಜ್ಞೆಯನ್ನು ಹರಿಹರ ಕೈಗೊಳ್ಳಲು ಹಾಗೂ ಪೌರಾಣಿಕ ವಸ್ತುಗಳನ್ನು ಬಿಟ್ಟು ತಮ್ಮಂತೆಯೇ ನಿನ್ನೆ ಮೊನ್ನೆ ಇದೇ ಮಣ್ಣಿನ ಮೇಲೆ ಬದುಕಿದವರ ಕತೆಗಳನ್ನು ಆರಿಸಿ ಕೊಳ್ಳಲು ವಚನಕಾರರೇ ಕಾರಣರಾಗಿದ್ದಾರೆ. ಕನ್ನಡ ಕಾವ್ಯಕ್ಷೇತ್ರಕ್ಕೆ ವ್ಯಕ್ತಿಯ ಅಂತರಂಗ ಮತ್ತು ಅವನ ಸುತ್ತಣ ಸಮಾಜ ಪ್ರವೇಶ ಪಡೆದಿದ್ದು ವಚನಕಾರರ ಮೂಲಕ. ಹರಿಹರನ ಕಾವ್ಯದ ವಸ್ತು ಮಾತ್ರವಲ್ಲದೇ ಧೋರಣೆಯಲ್ಲಿಯೂ  ವಚನಕಾರರ ಪ್ರಭಾವವನ್ನು ಕಾಣಬಹುದು. ಹರಿಹರನು ಶಿವಶರಣರ ಕಥೆಯನ್ನು ವಿವರಿಸುವ ರಗಳೆಗಳಲ್ಲಿ ಶಿವನ ಕೈಲಾಸದ ಒಡ್ಡೋಲಗದ ಚಿತ್ರಣವು ಕಥೆಗೊಂಡು ಪೌರಾಣಿಕ ಚೌಕಟ್ಟನ್ನು ಒದಗಿಸುತ್ತದೆ. ವಚನಕಾರರ ಜೀವನ ಚರಿತ್ರೆಗಳನ್ನು ಹಾಗೂ ಸಾಮಾನ್ಯ ಜೀವನ ಸ್ತರದಿಂದ ಬಂದ ಶರಣರನ್ನು ತನ್ನ ರಗಳೆಗಳಿಗೆ ವಸ್ತುವಾಗಿಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಸ್ತುವಿನ ಬದಲಾವಣೆಗೆ ಕಾರಣಕರ್ತನಾಗಿದ್ದಾನೆ.  ಹರಿಹರನು ಶಿವಭಕ್ತರನ್ನು ಚಿತ್ರಿಸಿದಂತೆ ಅವರಲ್ಲಿಯ ವಚನಕಾರರನ್ನು  ಚಿತ್ರಿಸಿದ್ದಾನೆ. ಅವನ ರಗಳೆಗಳಲ್ಲಿಯ ಪದ್ಯ ಹಾಗೂ ಗದ್ಯಗಳಲ್ಲಿ ಅನೇಕ ವಚನಗಳು ಹುದುಗಿರುವುದನ್ನು  ಗುರುತಿಸ ಬಹುದಾಗಿದೆ. ಅಕ್ಕಮಹಾದೇವಿಯ ವಚನಗಳ ಪ್ರಭಾವವನ್ನು ಹರಿಹರನ ರಗಳೆಗಳಲ್ಲಿ ಕಾಣಬಹುದಾಗಿದೆ.  ಅಕ್ಕಳ ವಚನ ಸಾಹಿತ್ಯ ಹರಿಹರನ ಕಾವ್ಯ ರಚನೆಗೆ ಮಾದರಿಯನ್ನೊದಗಿಸಿದೆ ಎಂಬ ಅಭಿಪ್ರಾಯವು ವಿದ್ವಾಂಸರಿಂದ ವ್ಯಕ್ತವಾಗಿದೆ. ವಚನಕಾರರ ವಚನಗಳಿಂದ ಪ್ರೇರಿತನಾಗಿಯೇ ಅವರ ಜೀವನ ಚರಿತ್ರೆಯನ್ನು ರಗಳೆಗಳ ಮೂಲಕ ಕಟ್ಟಿಕೊಟ್ಟಿದ್ದಾನೆ.    ಹರಿಹರನ ಜೀವನದೃಷ್ಟಿ ಪ್ರಧಾನವಾಗಿ ವಚನಕಾರರದ್ದಾಗಿದೆ. ಅವನು ಬದುಕನ್ನು ಕಂಡ ರೀತಿ, ಅನುಭವಿಸಿದ ರೀತಿ ಇವು ಎಲ್ಲಾ ಕಡೆಯಲ್ಲೂ ಕಾಣುವ ಅವನ ತಾತ್ವಿಕ ಚೌಕಟ್ಟು ವಚನಕಾರರಿಂದ ರೂಪಿತವಾದದ್ದೆಂಬುದನ್ನು ದೃಢಪಡಿಸುತ್ತವೆ.
ಮಹಾದೇವಿಯಕ್ಕನ ವಚನಗಳ ನಂತರ ಅವಳ ವ್ಯಕ್ತಿತ್ವದ ಕಾರಣಿಕತ್ವವನ್ನು ವೈಭವೀಕರಿಸುವ ಕೃತಿಗಳೆಂದರೆ, ಹರಿಹರನ ‘ಮಹಾದೇವಿಯಕ್ಕನ ರಗಳೆ’, ಚನ್ನಬಸವಾಂಕನ ‘ಮಹಾದೇವಿಯಕ್ಕನ ಪುರಾಣ’, ಚಿಕ್ಕರಾಚನ ಮಹಾದೇವಿಯಕ್ಕನ ಸಾಂಗತ್ಯ ಹಾಗೂ ಅನಾಮಧೇಯ ಕವಿ ವಿರಚಿತ ಮಹಾದೇವಿಯಕ್ಕನ ಚರಿತೆ. ಹರಿಹರನ ‘ಮಹಾದೇವಿಯಕ್ಕನ ರಗಳೆ’ಯು ಉತ್ಸಾಹ ಹಾಗೂ ಭಕ್ತಿಯ ಉತ್ಕರ್ಷಗಳೇ ಪ್ರಧಾನವಾಗಿ, ಚಾರಿತ್ರಿಕಾಂಶಗಳು ಸ್ವಲ್ಪಮಟ್ಟಿಗೆ ಗೌಣವಾಗಿರುವ ಕೃತಿಯಾಗಿದೆ. ಹರಿಹರ ಕವಿಯ ಉಡುತಡಿಯ ಮಹಾದೇವಿಯಕ್ಕನ ರಗಳೆ, ಏಳು ಸ್ಥಲಗಳ ಕಿರುಕೃತಿ. ಒಂದು ಸ್ಥಲ ಪೂರ್ತಿ ರಗಳೆಯಾದರೆ, ಅನಂತರ ಒಂದು ಸ್ಥಲ ಪೂರ ವಚನಗದ್ಯ-ಈ ಕ್ರಮಾನುಸಾರಿಯಾದ ಏಳು ಸ್ಥಲಗಳಲ್ಲಿ ಮಹಾದೇವಿಯಕ್ಕನ ಚರಿತ್ರೆ ಹಬ್ಬಿ ಹರಡಿದೆ. ಹರಿಹರ, ಜನತೆಯ ಬಾಯಲ್ಲಿ ಅನುರಣಿತವಾಗಿದ್ದ ಮಹಾದೇವಿಯಕ್ಕನ ಬಗೆಗಿನ ಸಂಗತಿಗಳನ್ನು ಹಾಗೂ ಜನತೆಯ ನಾಲಗೆಯ ಮೇಲೆ ನಲಿದಾಡುತ್ತಿದ್ದ ಆಕೆಯ ವಚನಗಳನ್ನು ಕೇಳಿ  ಪ್ರಥಮ ಬಾರಿಗೆ ಆಕೆಯ ಜೀವನ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾನೆ. ಅವನ ಪ್ರಕಾರ ಮಹಾದೇವಿಯಕ್ಕನ ಬದುಕಿನ ಕಥೆ ಇಂತಿದೆ.
    ಕೈಲಾಸದಲ್ಲಿ ರುದ್ರಕನ್ನಿಕೆಯಾಗಿದ್ದ ಮಹಾದೇವಿಯು ಗಣೇಶ್ವರನನ್ನು  ಗುಪ್ತಭಕ್ತನೆಂದರಿಯದೆ  ಭವಿಯೆಂದು ನಿಂದಿಸಿದ ತಪ್ಪಿನ ಪರಿಮಾರ್ಜನೆಗಾಗಿ ಭುವಿಯಲ್ಲಿ ಶಿವಭಕ್ತರ ಮಗಳಾಗಿ ಹುಟ್ಟಿ, ಭಕ್ತನನ್ನು ಭವಿಯೆಂದು ನುಡಿದ ತಪ್ಪಿಗೆ ಭವಿಗೆ ಹೆಂಡತಿಯಾಗಿ, ಭಕ್ತರಿಗೆ ಶರಣೆಂದು ತನ್ನ ಶಿವಭಕ್ತಿಯ ಮೂಲಕ ಭವವಾರಿಧಿಯನ್ನು ದಾಟಿ ಶ್ರೀಗಿರಿಗೆ ಬಂದು ಅಲ್ಲಿಂದ ಕೈಲಾಸಕ್ಕೆ ಪುಷ್ಟಕವೇರಿ ಬರುವಂತೆ ಆಜ್ಞೆ ಮಾಡುವಳು. ಕೈಲಾಸದ ಮಹಾದೇವಿ ಕೌಶಿಕನಾಳುವ ಉಡುತಡಿಯ ಶಿವಭಕ್ತ- ಶಿವಭಕ್ತೆ ಎಂಬ ದಂಪತಿಗಳ ಮಗಳಾಗಿ ಜನಿಸುವಳು.  ಭವಿಯಾದ  ಅರಸ ಕೌಶಿಕ  ತಾರುಣ್ಯಕ್ಕೆ  ಬಂದಾಗ ಆಕಸ್ಮಾತ್ತಾಗಿ ಕಂಡು  ಅವಳ ರೂಪತಿಶಯಕ್ಕೆ ಮರುಳಾಗಿ ಮನ್ಮಥನ ಶರಾಘಾತಕ್ಕೆ ಒಳಗಾಗಿ ಮೂರ್ಛೆ ಹೋಗುವನು. ಅವನನ್ನು ಸೇವಕರು ಕೇಳೀವನಕ್ಕೆ ಕರೆದೊಯ್ದು ಶೈತ್ಯೋಪಚಾರ ಮಾಡುವರು. ವಿರಹದಿಂದ ಬಸವಳಿದ ಕೌಶಿಕ “ಮಹಾದೇವಿಯಂ ಕಂಡೊಡುಳಿವೆನಲ್ಲದೊಡಳಿವೆ ಬಾಹೆನ್ನ ಬರಸತ್ತು ಹುಟ್ಟುತಿರ್ದಡೆ ಕಳಿಯೆ ಸುಮ್ಮನೇಕಿರ್ದಪಿರಿ ಮರುಳರಿರ ಪೋಗಿರೇ ನಿಮ್ಮೆಲ್ಲರೆನ್ನ ಕಾರಣಕೆ ನೆರರಾಗಿರೇ” ಎಂದು ಬಡಬಡಿಸುವನು. ರಗಳೆಯಲ್ಲಿ ಅಕ್ಕನನ್ನು ಕಂಡು ಮೇಲೆ ಕೌಶಿಕನ ಮನದಲ್ಲಾದ ವಿರಹದ ವಿಕಳಾವಸ್ಥೆಯ ವರ್ಣನೆಯನ್ನು ಮಾಡುವಲ್ಲಿ ಹರಿಹರನ ಕವಿತ್ವ ಸಿದ್ಧಿಯನ್ನು ಮುಟ್ಟಿದೆ. ಅಲ್ಲಿ ತನ್ನ ಸಹಜ ಚಿತ್ರಣಶಕ್ತಿಯಿಂದ ಕೌಶಿಕನ ದೀನಾವಸ್ಥೆಯ ಪರಿಚಯವನ್ನು ಹರಿಹರ ಪರಿಣಾಮಕಾರಿಯಾಗಿ ಮಾಡಿಕೊಟ್ಟಿರುವನು.  ಮಂತ್ರಿಗಳು ವಸಂತಕನೆನ್ನುವನನ್ನು ಕರೆಯಿಸಿ ಮಹಾದೇವಿಯನ್ನು ರಾಜನಿಗಾಗಿ ಬೇಡಲು ಅವಳ ತಂದೆ-ತಾಯಿಯರಲ್ಲಿಗೆ ಅಟ್ಟುವರು. ವಸಂತಕ ಮಹಾದೇವಿಯ ತಂದೆ-ತಾಯಿಯರಲ್ಲಿಗೆ ಬಂದು ಕೌಶಿಕನ ದೈನ್ಯಾವಸ್ಥೆಯನ್ನು ವಿವರಿಸಿ “ ಮಹಾದೇವಿಯ ಕರುಣವೇ ಹರಣವಿನ್ನೆಂದು ಮಹಾದೇವಿಯರ ದಯಾ ವಾಕ್ಯವೇ ಶರಣೆಂದು” ಜೀವಹಿಡಿದಿರುವ ಅವನ ಸ್ಥಿತಿ ತಿಳಿಸಿ ಅರಸನುಳಿವಿಗೆ ಮಹಾದೇವಿಯನ್ನು ಅವರಿಂದ ಬೇಡುವನು.   ಮಹಾದೇವಿಯನ್ನು ಕರೆದು “ ಅರಸ ಕೌಶಿಕನೊಡನೆ ಸಮಸುಖದೊಳಿರು  ಮಗಳೆ ಪಿರಿದಪ್ಪ ಸಂಪದವ ನಿನಗೀವನೆಲೆ ಮಗಳೆ” ಎನ್ನಲು, ದಿಗಿಲು ಭುಗಿಲೆಂದು ಕೋಪಿಸುತ್ತ “ ನಾಗಭೂಷಣನ ಭಕ್ತರಿಗೆ ಭವಿಯು ಸರಿಯಲ್ಲ, ಬೆಳಗಿಂಗೆ ಕತ್ತಲೆಯ ಕೂಟಮುಂಟೇ ಮರುಳೆ ತಿಳಿವಿಗಜ್ಞಾನದೊಳು ಸಂಗಮುಂಟೇ ಮರುಳೇ” ಎಂದು ವಸಂತಕನಿಗೆ ಹೇಳುವಳು ವಸಂತಕ ಮಂತ್ರಿಗಳಲ್ಲಿಗೆ ಬಂದು ಆಕೆಯಾಡಿದ ಮಾತನ್ನು ತಿಳಿಸುವನು. ಮಹಾದೇವಿಯ ಮನದ ನಿಲುವನ್ನು ಕೇಳಿದ ಕೌಶಿಕ ಮೂರ್ಛೆ ಹೋಗಿ ಮರಳಿ ಎಚ್ಚೆತ್ತು ಮಂತ್ರಿಗಳೊಡನೆ  “ಇನ್ನೂ ನೋಡುತಿರ್ಪರೇ? ತಡವೇಕೆ ಮಹಾದೇವಿಯೊಳ್ ನರೆಪದಿರ್ಪರೇ? ಬಲ್ಪಿಂದಮೆಂತಾದೊಡಂ ಪೋಗಿ ಕಲ್ಪಕುಜಪಲ್ಲವಾಧರೆಯನೆನಗನುವಾಗಿ ತನ್ನಿರೇ?’ ಎಂದು ಹೇಳುವನು. ಮಂತ್ರಿಗಳು ಶಿವಭಕ್ತನ ಮನೆಗೆ ಬಂದು ಅರಸನಾಜ್ಞೆಯನು ತಿಳಿಸುವರು. ಮಹಾದೇವಿಯ ತಂದೆ ತಾಯಿಯರು “ ಎಲೆ ಮಗಳೆ ನಿನ್ನಯ ಭಕ್ತಿ ತಾನೆಮಗೆ ಸಂಕಟ ವಸುಧೆಯೊಳಗೆ ಭವಿಯೊಳಗೆ ಬಾಳರೇ” ಎಂದು ಹೇಳಿ ಭವಿಯೊಡನೆ ಸಂಸಾರ ನಡೆಸಿದ ಕಾರಿಕಾಲಮ್ಮೆ, ಹೇರೂರ ಹೆಂಗಸು, ವೈಜಕ್ಕವ್ಚೆ. ಮಾಂಗಾಯಕ್ಕ, ಮೊದಲಾದವರು ನಿದರ್ಶನ ಕೊಟ್ಟು ‘ಲೌಕಿಕದಿ ಕೌಶಿಕನ ಸಂಗ ಮಾಡವ್ವ’ ಎನ್ನುವರು. ಹೆತ್ತವರ ನುಡಿ ಕೇಳಿ ತನ್ನನ್ನು ತಾನೇ ಸಮಾಧಾನಿಸಿ, ಮಂತ್ರಿಗಳಿಗೆ ನೀವೆಂದುದಂ ಮಾಳ್ವೆನಂತದಕ್ಕೆರಡಿಲ್ಲ ನೀವೆನ್ನ ಮನದೊಳಿದ್ದಂತೆ ಮಾಡುವುದೆಲ್ಲ, ಎನ್ನಿಚ್ಛೆಯೊಳು ಶಿವನ ಪೂಜೆಯೊಳು ನಲಿದಿಪ್ಪೆ, ಎನ್ನಿಚ್ಛೆಯೊಳು ಮಹೇಶ್ವರರ ಗೋಪ್ಠಿಯೊಳಿಪ್ಪೆ, ಎನ್ನಿಚ್ಛೆಯೊಳು ಗುರುವಿನಂಘ್ರಿ ಸೇವೆಯೊಳಿರ್ಪ, ಎನ್ನಿಚ್ಛೆಯೊಳು ನಿಮ್ಮನೃಪನ ಸಂಗದೊಳೊಪ್ಪೆ. ಇಲ್ಲಿ ಮೂರು ತಪ್ಪನೇ ಸೈರಿಸುವೆನರಿದು ಅಲ್ಲಿಂದ ಬಳಿಕ್ಕೊಲಿದಂತಿಪ್ಪೆ ನಾನುಳಿದು ಇದು ಭಾಷೆ....” ಎನಲು ಮಂತ್ರಿಗಳು ಆ ಷರತ್ತಿಗೆ ಒಪ್ಪಿದರು, ಓಲೆಯೊಂದನ್ನು ಬರೆಯಿಸಿದರು. ಮಹಾದೇವಿಯಗೂ ಕೌಶಿಕನಿಗೂ ಮದುವೆಯಾಯಿತು.
ನಿತ್ಯವೂ ಮಹಾದೇವಿ ಪೂಜೆಯಾದ ಮೇಲೆ ಶಿವಾನುಭವಗೋಷ್ಠಿಯಲ್ಲಿ   ಭಾಗವಹಿಸುತ್ತಿದ್ದಳು. ರಗಳೆಯಲ್ಲಿ ವಿವಾಹದ ನಂತರ ಮಹಾದೇವಿಯ ಶಿವಪೂಜಾ ವೈಭವದ ವರ್ಣನೆ  ಬಂದಿದ್ದು ಐದನೆಯ ಸ್ಥಲವನ್ನೆಲ್ಲಾ  ಶಿವಭಕ್ತಿಯ ವರ್ಣನೆ ಆವರಿಸಿದೆ. ಹರಿಹರನ ಭಕ್ತಿಯ ಆವೇಶ, ಅದಕ್ಕೆ ತಕ್ಕ ಶಬ್ದಜಾಲ, ನಿರರ್ಗಳವಾಗಿ ಹರಿಯುವ ಶಿವಸ್ತುತಿ- ಇವೆಲ್ಲಾ ಭಕ್ತಿಯ ಪರಿವೇಷದಲ್ಲಿ ನಮ್ಮನ್ನು ಮುಳುಗುವಂತೆ ಮಾಡುತ್ತದೆ.
 ಒಮ್ಮೆ ಶರಣರು ಅರಮನೆಗೆ ಬರಲು ಸೈರಿಸದೆ ಕೌಶಿಕ ಸಮಯವಿಲ್ಲೆಂದುದು ಮೊದಲನೆಯ ತಪ್ಪು; ಶಿವಲಿಂಗಾರ್ಚನೆಗೆ ಸಿಂಗರಿಸುವಲ್ಲಿ ಮಹಾದೇವಿಯನ್ನು ಕಳವಳದಿಂದ ನೋಡಿ ನಿಲಲಾರದ  ಕೌಶಿಕ ಅವಳನ್ನು ಆಲಿಂಗಿಸಿದುದು ಎರಡನೆಯ ತಪ್ಪು: ಮಹಾದೇವಿಯ ಆರಾಧ್ಯದೇವರು  ಅಂತಹಪುರಕ್ಕೆ ಬರಲು ರತಿಸುಖದಲ್ಲಿದ್ದಂತೆಯೇ ಮೇಲೆದ್ದು ನಮಸ್ಕರಿಸಲು, ಗುರುವು ಅವಳು ಮೈ ಮುಚ್ಚಿ ಕೊಳ್ಳಲು ವಸ್ತ್ರವಿತ್ತಾಗ ನಿನಗಿನ್ನು ವಸ್ತ್ರದ ಹಂಗೇಕೆ ಎಂದುದು ಮೂರನೆಯ ತಪ್ಪು; ಮೊದಲೆರಡು ತಪ್ಪುಗಳು  ಘಟಿಸಿದಾಗ ಅತ್ಯಂತ ಕನಿಷ್ಟವಾಗಿ ನಿಂದಿಸುವಳು. ಮೊದಲ ತಪ್ಪಿನ ವೇಳೆಯಲ್ಲಿ ಕೌಶಿಕ ಮಹಾದೇವಿಯ ಪಾದಗಳ ಮೇಲೆ ಬಿದ್ದು ಆದ ಒಂದು ಅಪರಾಧವನ್ನು ಸೈರಿಸುವುದೆಂದು ದೈನ್ಯದಿಂದ ಬೇಡುವನು. ಇಲ್ಲೆಲ್ಲಾ ಹರಿಹರ ಕೌಶಿಕನ ಪಾತ್ರವನ್ನು ತುಂಬಾ ಲಘುವಾಗಿ ಚಿತ್ರಿಸಿದ್ದಾನೆ. ಆರನೆಯ ಸ್ಥಲದಲ್ಲಿ ಮಹಾದೇವಿ-ಕೌಶಿಕರ ವಿರಸ ದಾಂಪತ್ಯ ಜೀವನದ ಸೊಗಸಾದ ಚಿತ್ರವನ್ನು ಹರಿಹರ ಕಲ್ಪಿಸಿರುವನು.  ಮಹಾದೇವಿಯ ಭವ್ಯ ಮೂರ್ತಿಯ ನಡುವೆ ಕೌಶಿಕ ತೀರಾ ಸಣ್ಣವನಾಗಿ ಕಾಣುತ್ತಾನೆ. ಹೀಗೆ ಈ ಮೂರು ತಪ್ಪುಗಳಾದ ಮೇಲೆ  ಮಹಾದೇವಿ ಅರಮನೆಯನ್ನು ತ್ಯಜಿಸಿ ಶ್ರೀಪರ್ವತಕ್ಕೆ ಬರುತ್ತಾಳೆ. ಮಹಾದೇವಿಯು ಅಲ್ಲಿಯೇ ಉಳಿದು ಚೆನ್ನಮಲ್ಲಿಕಾರ್ಜುನನನ್ನು ಅನನ್ಯವಾದ ಭಕ್ತಿಯಿಂದ ಅರ್ಚಿಸಿ ಕೆಲವು ಕಾಲದ ನಂತರ ಭವಿಯ ಸಂಗದಿಂದ ಮಲೀನವಾದ ಶರೀರದಿಂದ ಮುಕ್ತಿಯನ್ನು ಪಡೆದು ಪುಷ್ಪಕವೇರಿ ಶಿವಲೋಕದಲ್ಲಿ ಶರ್ವಾಣಿಯ ಪಾದವನ್ನು ಕಂಡು ಮುನ್ನಿನಂತೆ ಮಹಾದೇವಿಯೆಂಬ ನಾಮವನ್ನು ಹೊಂದಿ ರುದ್ರಕನ್ನಿಕೆಯರೊಳಗೆ ನಿತ್ಯಸುಖದಿಂದ ಇದ್ದಳು. ಇಲ್ಲಿಗೆ ಮಹಾದೇವಿಯಕ್ಕನ ಪ್ರಾಪಂಚಿಕ ಜೀವನ ಕೊನೆಗೊಳ್ಳುತ್ತದೆ.
   ಹರಿಹರ ಕವಿಯು ಮಹಾದೇವಿಯಕ್ಕನನ್ನು ಕುರಿತು ರಗಳೆ ಕಾವ್ಯ ಬರೆಯುವ ಮೊದಲು ಪ್ರಚಲಿತವಿದ್ದ ಆಕೆಯ ಕೆಲ ವಚನಗಳನ್ನು ಆಲಿಸಿ ಪ್ರಭಾವಿತನಾಗಿ ಅವುಗಳನ್ನು  ಸಂದರ್ಭೋಚಿತವಾಗಿ ತನ್ನ ಕಾವ್ಯ ರಚನೆಯಲ್ಲಿ ಬಳಸಿಕೊಂಡಿದ್ದಾನೆ
ನಿದರ್ಶನಕ್ಕೆ,
 ಆಗಳಾಗಳಿನ ಶಿವಾನುಭವಕ್ಕೆ ನವಗೀತಮಂ ಪಾಡೊ ( 6.38)
 ಆಶನದಾಸೆಯಂ ತೃಷೆಯ ತೃಷ್ಣೆಯಂ ಬೆಸನದ ಬೇಗೆಯಂ
 ವಿಷಯದ ವಿಹ್ವಳತೆಯಂ ತಾಪತ್ರಯದ ಕಲ್ಪನೆಗಳಂ ಗೆಲಿದೆನಿನ್ನೇ
 ನಿನ್ನೇನ್ನಿಚ್ಚೆಯಾದುದು ಚೆನ್ನಮಲ್ಲಿಕಾರ್ಜುನ ನಿನಗಂಜೆನಂಜೆನೆಂದು
 ಗೀತಮಂ ಪಾಡಿ   (6.167-190)
 ಅಯ್ಯೋ ಶಿವನೆ ಉಳಿವ ಕರೆವ ನೇಹವುಂಟೇ? ಸಂಸಾರಕ್ಕಂ
 ನಿಮ್ಮಲ್ಲಿಗೆಡೆಯಾಡುವ ಭಕ್ತಿಯುಂಟೇ? ಏನಯ್ಯಾ ಶಿವನೆ ಏನಂ ಪೇಳ್ವೆ
 ಲಜ್ಜೆಯ ಮಾತನೆಂದು ಚೆನ್ನಮಲ್ಲಿಕಾರ್ಜುನಂಗೆ ಮೊರೆಯಿಟ್ಟು
 ಮುಳಿದು ಗೀತಮಂ ಪಾಡುತ್ತ  ( 6.117)
 ಎಲೆಲೆ ಕೌಶಿಕ ಹೋಗು ನೀನೇಕೆ ನಾನೇಕೆ,
 ತಮವೆತ್ತ ಬೆಳಗತ್ತ ಶಿಖಿಯೆತ್ತ ತಂಪೆತ್ತ
 ಭ್ರಮೆಯೆತ್ತ ತಿಳಿವೆತ್ತ ಬಿಸಿಲೆತ್ತ ಶಶಿಯೆತ್ತ
 ನೀನೆತ್ತ ನಾನೆತ್ತ ಪೋಗು ಪೋಗೆಲೆ ಮರುಳೆ... ಹರಿಹರನ ರಗಳೆಯ ಈ ಉಲ್ಲೇಖಗಳನ್ನು ಗಮನಿಸಿದಾಗ ಸ್ವತಃ ಅಕ್ಕಮಹಾದೇವಿಯೇ ತನ್ನ ಮನದ ತುಡಿತ ಮಿಡಿತ ಕಳವಳಗಳನ್ನು ವಚನಗಳಲ್ಲಿ ಹೇಳಿಕೊಂಡಿರುವಂತೆ ಭಾಸವಾಗುತ್ತದೆ. ಆಕೆಯ ಮನಸ್ಸಿನ ದುಮ್ಮಾನಗಳನ್ನು ಹರಿಹರ ಅರ್ಥಮಾಡಿಕೊಂಡು ಚಿತ್ರಿಸಿರುವಂತಿದೆ.
ಅಕ್ಕಮಹಾದೇವಿಯ ರಗಳೆಯಲ್ಲಿ  ಆಕೆಯನ್ನು ವ್ಯಕ್ತಿಯಾಗಿಯೂ  ಮತ್ತು ವಚನಕಾರ್ತಿಯನ್ನಾಗಿಯೂ  ಕವಿ ಚಿತ್ರಿಸುತ್ತಾ ಹೋಗುತ್ತಾನೆ. ಮಹಾದೇವಿಯಕ್ಕನ ವಚನಗಳನ್ನು ಓದಿದರೆ  ಆಕೆಯು ಭಾವುಕಳೆಂದೂ ಸಮಾನ ಕಲ್ಪಕ ಶಕ್ತಿಯವಳೆಂದೂ ಅನ್ನಿಸುತ್ತದೆ. ಮಹಾದೇವಿಯಕ್ಕನಿಗೆ ಒದಗಿ ಬಂದ ಸಮಸ್ಯೆ ವೈಯಕ್ತಿಕವಾದುದು ಮತ್ತು ಅದನ್ನು ಹರಿಹರ ಅನನ್ಯವಾಗಿ ಚಿತ್ರಿಸಿದ್ದಾನೆ. ತನ್ನ ಮೆಚ್ಚುಗೆಯ ಗಂಡ ಬೇರೆ, ಆದರೆ ಕೈಹಿಡಿಯಬೇಕಾದ ವ್ಯಕ್ತಿ ಬೇರೆ. ಇಂತಹ ಇತ್ತಂಡದಲ್ಲಿ, ವಿಷಮ ಸಂಸಾರದಲ್ಲಿ ತೊಳಲಾಡಿದ ಮಹಾದೇವಿ ತಾನು ಒಲ್ಲದ ವ್ಯಕ್ತಿಯಿಂದ ಬಿಡಿಸಿಕೊಂಡು ಹೊರಟರೂ, ತನ್ನ ಚಟುವಟಿಕೆಯಿಂದಾಗಿ ಲೋಕವನ್ನು ಎದುರು ಹಾಕಿಕೊಳ್ಳಬೇಕಾದ ಪ್ರಸಂಗಕ್ಕೆ ಒಳಗಾಗ ಬೇಕಾಯಿತು. ಈ ಚಿತ್ರವನ್ನೂ ಹರಿಹರ ತನ್ನ ಅಕ್ಕ ಮಹಾದೇವಿಯನ್ನು ಕುರಿತ ರಗಳೆಗಳಲ್ಲಿ ಕೊಡುತ್ತಾನೆ.
    ಹರಿಹರನು ಹೀಗೆಯೇ ಮಹಾದೇವಿಯಕ್ಕನ ರಗಳೆಯಲ್ಲಿ  ಅಕ್ಕಮಹಾದೇವಿ ಕೌಶಿಕನನ್ನು ತ್ಯಜಿಸಿ ಹೊರಟರೂ ಆಕೆಯ ಮೇಲಿನ ವ್ಯಾಮೋಹವನು ಬಿಡಲಾರದೆ  ಭಕ್ತನಂತೆ ವೇಷಧರಿಸಿ ಅವಳನ್ನು ಶ್ರೀಶೈಲಕ್ಕೂ ಅನುಸರಿಸಿ ಬಂದು, ನಾನು ಶಿವಭಕ್ತನಾಗಿದ್ದೇನೆ. ಕೋಪವನ್ನು ಬಿಟ್ಟು ಹಿಂದಕ್ಕೆ ಬಾ, ನನ್ನನ್ನು ಒಲಿ ಎಂದು ಯಾಚಿಸಿದಾಗ ಅಕ್ಕಮಹಾದೇವಿಯು ವೈರಾಗ್ಯದಿಂದ ಗೀತವನ್ನು ಹಾಡಿದ್ದನ್ನು ಹರಿಹರ  ಈ ರೀತಿ ವರ್ಣಿಸುತ್ತಾನೆ.
ಬಿಟ್ಟಪ್ಪೆನೆಂದಡಂ ಬಿಡದು ನಿನ್ನಯ ಮಾಯೆ”
ಒಟ್ಟಯಿಸಿ ಬಂದದೊಡವಂದಪ್ಪುದೀ ಮಾಯೆ
ಬಿಡದು ನಿನ್ನಯ ಮಾಯೆ ಒಟ್ಟಯಿಸಿ ನಿಂದೊಡಂ
ಜೋಗಿಗಂ ಜೋಗಿಣಿಯದಾಯ್ತು ನಿನ್ನಯ ಮಾಯೆ
ರಾಗದಿಂ ಸವಣಂಗೆ ಕಂತಿಯಾಯಿತು ಮಾಯೆ
ಗಿರಿಯನೇರಿದೊಡಿರದೆ ಗಿರಿಯನೇರಿತು ಮಾಯೆ
ಪಿರಿದಡವಿಯಂ ಪೊಕ್ಕೊಡೊಡನೆ ಪೊಕ್ಕುದು ಮಾಯೆ.
ಬೆನ್ನ ಕೈಯಂ ಬಿಡದು ಭಾಪು ( ಬಾಹ) ಸಂಸಾರವೇ
ಎನ್ನ ನಂಬಿಸಿತು ಮಝ ಭಾಪು ಸಂಸಾರವೇ
ಕರುಣಾಕರ ನಿನ್ನಮಾಯೆಗಂಜುವನೇನಯ್ಯಾ
 ಎಂದು ಮುಂತಾಗಿ ಅವಳು ನುಡಿದಳೆಂದು ಹರಿಹರ ವರ್ಣಿಸುತ್ತಾನೆ. (ಮಹಾದೇವಿಯಕ್ಕನ ರಗಳೆ, ಸ್ಥಲ 7, ಸಾಲು 91 ರಿಂದ 96) ಇಲ್ಲಿ ಮಹಾದೇವಿಯಕ್ಕನ ಎರಡು ವಚನಗಳನ್ನು ಸ್ಪೃಷ್ಟವಾಗಿ ಗುರುತಿಸ ಬಹುದಾಗಿದೆ.
  ಬಿಟ್ಟನೆಂದಡೆ ಬಿಡದೀ ಮಾಯೆ.....
  ಬಿಡದಿದ್ದರೆ ಬೆಂಬತ್ತಿತ್ತು ಮಾಯೆ
  ಯೋಗಿಗೆ ಯೋಗಿಣಿಯಾಯಿತ್ತು ಮಾಯೆ
  ಸವಣಂಗೆ ಪರಾಕಿಯಾಯಿತ್ತು ಮಾಯೆ
  ಯತಿಗೆ ಪರಾಕಿಯಾಯಿತ್ತು ಮಾಯೆ
  ನಿನ್ನ ಮಾಯೆಗೆ ನಾನಂಜುವಳಲ್ಲ
   ಯೋಗಿಗೆ ಯೋಗಿಣಿಯಾಗಿಹಳು ಮಾಯೆ
   ಜೋಗಿಗೆ ಜೋಗಿಣಿಯಾಗಿಹಳು ಮಾಯೆ
   ಶ್ರವಣಂಗೆ ಕಂತಿಯಾದಳು ಮಾಯೆ.
      ಇಲ್ಲಿ ಕವಿ ಕೆಲವು ಮಾತುಗಳನ್ನು ಹಾಗೇ ಬಳಸಿಕೊಂಡಿದ್ದಾನೆ. “ಯೋಗಿಗೆ ಯೋಗಿಣಿಯಾಯಿತ್ತು ಮಾಯೆ” ಎಂಬುದು ರಗಳೆಯಲ್ಲಿ “ಜೋಗಿಗಂ ಜೋಗಿಣಿಯದಾಯ್ತು ನಿನ್ನಯ ಮಾಯೆ” ಎಂದಾಗುತ್ತದೆ. “ಭಾಪು ಸಂಸಾರವೇ ಬೆನ್ನಿಂದ ಬೆನ್ನು ಹತ್ತಿ ಬಂದೆ” ಎಂಬುದು “ಬೆನ್ನ ಕೈಯಂ ಬಿಡದು ಭಾಪು ಸಂಸಾರವೇ” ಎಂದಾಗುತ್ತದೆ. ಮೂಲ ವಚನದ “ಯತಿಗೆ ಪರಾಕಿಯಾಯಿತ್ತು ಮಾಯೆ” ಎಂಬ ಸೊಗಸಾದ ವಿಡಂಬನೆಯ ಮಾತು ಹರಿಹರನಲ್ಲಿ ಬಿಟ್ಟು ಹೋಗಿದೆ. ಅದರ ಬದಲು, “ಭಗವಂಗೆ ಮಾರಿಕಬ್ಬೆಯ ಜೋಹವಾಯ್ತಯ್ಯ” ಎಂಬ ಆ ಕಾಲದ ಮತೀಯ ಚರಿತ್ರೆ ಬರೆಯುವವರಿಗೆ ಬೇಕಾದ ಒಂದು ಹೊಸ ಸಂಗತಿಯನ್ನು ತರುತ್ತಾನೆ. ಅಕ್ಕಳ ವಚನಗಳನ್ನು ಬಳಸಿಕೊಳ್ಳುವುದರ ಮೂಲಕ ಹರಿಹರ, ವಚನಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದ್ದಾನೆ. ಹರಿಹರನು ಹೇಳುವ ಗೀತಗಳು ಈ ಹಿನ್ನೆಲೆಯಲ್ಲಿ ವಚನಗಳಿಗೆ ಸಮನಾರ್ಥಕ ಪದವಾಗಿರ ಬೇಕು ಎಂದೆನಿಸುತ್ತದೆ. ಕವಿಯು ತಾನು ಕೇಳಿದ ಅಕ್ಕ ಮಹಾದೇವಿಯ ವಚನಗಳನ್ನು ಅಲ್ಪ ಸ್ವಲ್ಪ ಮಾರ್ಪಡಿಸಿ ಗೀತಗಳೆಂದು ಭಾವಿಸಿದಂತೆ ಕಾಣುತ್ತದೆ.
   ಅಕ್ಕಮಹಾದೇವಿಯು ತನ್ನ ಜೀವನವನ್ನು ಕಲಕಿದ, ಮನಸ್ಸನ್ನು ತಳಮಳಗೊಳಿಸಿದ ಸಂದರ್ಭಗಳಲ್ಲಿ ಆಯಾ ಗೀತಗಳನ್ನು ಹಾಡಿದಂತೆ ಕವಿ ವರ್ಣಿಸುತ್ತಾನೆ.  ಅವು ಅಂದಂದಿನ ಉಚಿತಕ್ಕೆ ಹಾಡಿದ ಗೀತಗಳು ಎಂದು ಕವಿ ಹೇಳುವಾಗ, ವಚನಗಳ ಭಾವಗೀತತ್ವವನ್ನು ಸರಿಯಾಗಿ ಗುರುತಿಸಿದ್ದಾನೆ ಎಂದು ಅನ್ನಿಸುತ್ತದೆ. ವಚನಗಳನ್ನು ರಗಳೆಗಳ ಮಧ್ಯೆ ತರುವುದರ ಮೂಲಕ ತನ್ನ ನಿರೂಪಣೆಗೆ ಒಂದು ಅಧಿಕೃತತೆಯನ್ನು ತರಲು ಯತ್ನಿಸುತ್ತಾನೆ. ಬೇರೆ ಬೇರೆ ವಚನಗಳಿಗೆ ಸಂದರ್ಭಗಳನ್ನು ಒದಗಿಸಿ ಅವುಗಳ ಚಾರಿತ್ರಿಕತೆಯನ್ನು ತಿಳಿಯಲು ಸಹಾಯ ಮಾಡಿದ್ದಾನೆ. ವಚನಗಳನ್ನು ಹರಿಹರನು ತನ್ನ ರಗಳೆಗಳಲ್ಲಿ ಅತ್ಯಲ್ಪ ವ್ಯತ್ಯಾಸಗಳೊಂದಿಗೋ, ಹೆಚ್ಚಿನ ವ್ಯತ್ಯಾಸಗಳೊಂದಿಗೋ ಅಥವಾ ಭಾವಾನುವಾದ ಮಾಡಿಯೋ ತಮ್ಮ ಗದ್ಯ ಮತ್ತು ಪದ್ಯಗಳಲ್ಲಿ ಅಳವಡಿಸಿ ಕೃತಿಗಳಿಗೆ ನೈಜತ್ವದ ಛಾಯೆಯನ್ನು ಕೊಡಲು ಪ್ರಯತ್ನಿಸಿದ್ದಾನೆ. ಆದಾಗ್ಯೂ ಹರಿಹರನಿಗೆ ಅಕ್ಕಳ ಸಮಗ್ರ ವಚನಗಳ ವಿವರವಾದ ಪರಿಚಯ ವಿದ್ದಿರಲಾರದು ಎಂದೆನಿಸುತ್ತದೆ. ಒಂದು ವೇಳೆ ಅವನಿಗೆ ಎಲ್ಲಾ ವಚನಗಳು ಲಭ್ಯವಾಗಿದ್ದರೆ ಆಕೆಯ ವೈರಾಗ್ಯದ ಚಿತ್ರಣವು ಇನ್ನೂ ಪರಿಣಾಮಕಾರಿಯಾಗಿರುತ್ತಿದ್ದಿತು. ವಚನಕಾರರು ಬೇರೆ ಬೇರೆ ಸಂದರ್ಭಗಳಲ್ಲಿ ಮನಸ್ಸು ಆವೇಶವಾದಾಗ, ಆನಂದ ಉಕ್ಕಿ ಉಕ್ಕಿ ಹರಿದಾಗ, ಧರ್ಮಸಂಕಟಕ್ಕೆ ಸಿಕ್ಕಾಗ, ಕೋಪ ತಾಪ ಹಿಗ್ಗು ಛಲ ಮುಂತಾದ ಭಾವ ತರಂಗಳಿಗೆ ಸಿಕ್ಕಾಗ ಭಗವಂತನೊಡನೆ ಪ್ರೇಮ ಹುರುಡು ಸಮರ್ಪಣೆ ಸವಾಲು ಇತ್ಯಾದಿಯಾದ ಸಂಬಂಧಗಳನ್ನು ಹೊಂದಿದಾಗ ಅವರ ಬಾಯಿಂದ ವಚನಗಳು ಹೊರಟ್ಟಿದ್ದಂತೆ ಚಿತ್ರಿಸಿದ್ದಾನೆ. ಹೀಗೆ ಐತಿಹಾಸಿಕ ಹಿನ್ನೆಲೆಯ ಚೌಕಟ್ಟನ್ನು ನಿರ್ಮಿಸುವುದರ ಮೂಲಕ ವಚನಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕನಾಗಿದ್ದಾನೆ.
   ಅಕ್ಕಮಹಾದೇವಿಯ ಜೀವನದಲ್ಲಿಯೇ ಅತ್ಯಂತ ಮಹತ್ವದ್ದಾಗಿರುವ  ಆಕೆಯು ಕಲ್ಯಾಣ ಪಟ್ಟಣವನ್ನು ಪ್ರವೇಶಿಸುವುದಾಗಲೀ, ಅಸಂಖ್ಯಾತ ಶರಣರೊಡಗೂಡಿ ಕೆಲಕಾಲ ಕಳೆಯುವುದಾನ್ನಾಗಲೀ,ಪ್ರಭುದೇವರ ಪರೀಕ್ಷೆಗೆ ಗುರಿಯಾದ ವಿವರಗಳನ್ನಾಗಲೀ ಹರಿಹರ ತನ್ನ ರಗಳೆಗಳಲ್ಲಿ  ನೀಡಿರುವುದಿಲ್ಲ. ಈ ವಿಷಯದಲ್ಲಿ ಮೌನವಾಗಿದ್ದಾನೆ. ಅಕ್ಕಳ ಜೀವನಕ್ಕೆ ಕಳಶಪ್ರಾಯವಾದ ಈ ಘಟನೆಯನ್ನು ಹರಿಹರ ಏಕೆ ಕೈ ಬಿಟ್ಟನೋ ತಿಳಿಯುವುದಿಲ್ಲ. ಆದರೆ ಮಹಾದೇವಿಯಕ್ಕನ ಪುರಾಣದಲ್ಲಿ ಅಕ್ಕಳು  ಉಡುತಡಿಯಿಂದ ಶ್ರೀಶೈಲಕ್ಕೆ ನಡೆಯದೆ ಕಲ್ಯಾಣಕ್ಕೆ ನಡೆಯುತ್ತಾಳೆಂಬ ವಿವರವಿದೆ.  ಇದಕ್ಕೆ ಪೂರಕವಾಗಿ ಅಕ್ಕನ ವಚನಗಳಲ್ಲಿಯೇ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಪರಮ ವೈರಾಗ್ಯನಿಧಿಯಾದ ಅಕ್ಕಮಹಾದೇವಿಯ ಬದುಕು-ಮಣಿಹಗಳನ್ನು ರಗಳೆ ಕಾವ್ಯದ ಮೂಲಕ ಪರಿಚಯಿಸಿರುವ ಹರಿಹರನ ಕೃತಿ ಕನ್ನಡದ ಆದಿ ಕೃತಿ. ಹರಿಹರ ತನಗೆ ತಿಳಿದಿರುವಷ್ಟು ಮಾಹಿತಿಗಳನ್ನು ತನ್ನ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ವ್ಯಕ್ತಿನಿಷ್ಟವಾಗಿ ಹೇಳಿದ್ದಾನೆ.
   ಚನ್ನಬಸವಾಂಕನ (ಸು 1550) ‘ಮಹಾದೇವಿಯಕ್ಕನ ಪುರಾಣ’ವು ಮಹಾದೇವಿಯಕ್ಕನ ಬದುಕನ್ನು ಹಾಗೂ ಅವಳ ವ್ಯಕ್ತಿತ್ವದ ಕಾರಣಿಕತ್ವವನ್ನು  ವೈಭವೀಕರಿಸುವ ಹರಿಹರನ ನಂತರದ ಎರಡನೆಯ ಕೃತಿ. ’ ಚನ್ನಬಸವಾಂಕ ಕವಿಯು ಹರಿಹರನಿಂದ ಪ್ರೇರಣೆ ಪಡೆದು ‘ಮಹಾದೇವಿಯಕ್ಕನ ಪುರಾಣ’ವನ್ನು ರಚಿಸಿರುವನು (ಸ್ಥಲ1ಪ.19). ಚನ್ನಬಸವಾಂಕನ ‘ಮಹಾದೇವಿಯಕ್ಕನ ಪುರಾಣ’. ಉತ್ಸಾಹ ಹಾಗೂ ಭಕ್ತಿಯ ಉತ್ಕರ್ಷಗಳೇ ಪ್ರಧಾನವಾಗಿ, ಚಾರಿತ್ರಿಕಾಂಶಗಳೇ ಗೌಣವಾಗಿರುವ ಕೃತಿ’ ಮಹಾದೇವಿಯಕ್ಕನ ಪುರಾಣ’ ವನ್ನು ರಚಿಸಿರುವನು (ಸ್ಥಲ 1 ಪ. 19).   ನಾನಾ ಬಗೆಯ ಷಟ್ಪದಿಗಳನ್ನು ಒಳಗೊಂಡಿರುವ (ಕೆಲವು ಸಾಂಗತ್ಯಗಳೂ ಇವೆ)     ಈ ಕೃತಿ 33 ಸ್ಥಲ 1604  ಪದ್ಯಗಳನ್ನು ಹೊಂದಿದೆ. ಮಹಾದೇವಿಯಕ್ಕನ ಜನನ ವೃತ್ತಾಂತವು ಅವಳು ಅಮರ್ತ್ಯಮಾನವಿ ಯೆಂಬುದನ್ನು ದೃಢೀಕರಿಸಲಿಕ್ಕಾಗಿ ಕಲ್ಪನೆಗೊಂಡಿದೆ.  ಹರಿಹರನ ರಗಳೆಯಲ್ಲಿ ಗಿರಿಜೆಯ ಶಾಪದಿಂದ ಮಹಾದೇವಿಯು ಮರ್ತ್ಯದಲ್ಲಿ ಅವತರಿಸಿರುವಳು. ಚನ್ನಬಸವಾಂಕನ ಪುರಾಣದಲ್ಲಿ ಶಿವನು ನಂದಿಯನ್ನು ಕರೆದು ನನ್ನ ಸಭೆಗೆ ಪ್ರೀತಿಯಿಂದ ಬರುವರಾರು?  ಬರದೇ ನಿಂದವರಾರು? ಎಂದು ಕೇಳುವನು. ನಂದಿಯು ಸಭೆಯನ್ನು ನಿಟ್ಟಿಸಿ ನೋಡಿ, ‘ಎಲ್ಲರೂ ಬಂದಿರುವರು, ಆದರೆ ಹಿಮಗಿರಿನಂದನೆ ಮಾತ್ರ ಇನ್ನೂ ಬಂದಿಲ್ಲ’ವೆನ್ನುವನು (1.42). ಗಿರಿತನುಜೆಯನ್ನು ಸಭೆಗೆ ಕರೆಸಲು ಶಿವನು ನಂದಿಗೆ ಆಜ್ಞೆ ಮಾಡುವನು. ನಂದಿಯು ತನ್ನ ಮುಂದಿದ್ದ ಗುಪ್ತ ಗಣನಾಥನನ್ನು ಕರೆದು ಭವಾನಿ ತಡಮಾಡಿದ್ದೇಕೆಂಬುದನ್ನು ನೋಡಿ ಬಂದು ಹೇಳು-ಎನ್ನುವನು. ಗುಪ್ತ ಗಣನಾಥನು ಕಾತ್ಯಾಯಿನಿಯ ಮನೋಹರ ಸಭೆಗೆ ಬಂದು ಅವಳಿಗೆ ನಮಸ್ಕರಿಸುವನು. ಗಿರಿಜೆ ತನ್ನ ಬಳಿಗೆ ಶಿವನು ಗುಪ್ತ ಗಣನಾಥನನ್ನು ಕಳುಹಿಸಿರುವ ಕಾರಣವನ್ನು ಮನದಲ್ಲಿ ನೆನೆಯುವಳು. ಹಿಂದೆ ತನ್ನ ತಾಮಸಕಳೆಯಾದ ಮಾಯೆಯನ್ನು ಭೂಲೋಕಕ್ಕೆ ಕಳುಹಿಸಿ ನಿರ್ಮಾಯನಾದ ಅಲ್ಲಮನನ್ನು ಗೆಲ್ಲಲಾಗದೆ ಇರಲು ಶಿವನ ಸಲಹೆಯಂತೆ ತನ್ನ ಸಾತ್ವಿಕಾಂಶವಾದ ಮಹಾದೇವಿಯನ್ನು  ಭೂಲೋಕಕ್ಕೆ ಕಳುಹಿಸಿ ಶಿವನ್ನು ತನ್ನ ಸಾತ್ವಿಕ ಕಳೆಯಿಂದ ಓಲೈಸಿದುದನ್ನು ನೆನೆಯುವಳು. ಮಹಾದೇವಿಯಕ್ಕನು ಗಿರಿಜೆಯ ಸಾತ್ವಿಕಾಂಶವೆಂಬ ಸಂಗತಿಯನ್ನು ಮೊದಲಿಗೆ ಹೇಳಿದವನು ಚಾಮರಸ. ಇಲ್ಲಿ ಅವನ ‘ಪ್ರಭುಲಿಂಗ ಲೀಲೆ’ಯ ಪ್ರಭಾವ ನೇರವಾಗಿ ಆಗಿದೆ.
    ಕೈಲಾಸದ ಮಹಾದೇವಿ ಮರ್ತ್ಯದಲ್ಲಿ ನಿರ್ಮಲ ಸುಮತಿಯರ ಮಗಳಾಗಿ ಜನಿಸುವ ಕಥೆ ಸ್ವಾರಸ್ಯಕರವಾಗಿದೆ. ಮಕ್ಕಳಿಲ್ಲದ ನಿರ್ಮಲ-ಸುಮತಿಯರು ತಮ್ಮಲ್ಲಿಗೆ ಬಂದು ಮಲ್ಲಿನಾಥಾಚಾರ್ಯರನ್ನು ‘ಬಿಡೌಜ ವಿಷ್ಣು ವಿಧಾತ್ರ ಮನುಮುನಿ ಸಿದ್ಧಸಾಧ್ಯಾದ್ಯರ್ಗೆ ಭುಜಮುಖ ಸುತ್ರಸಾಧ್ಯನೊ’ ಎಂದು ಕೇಳುವರು. ಗುರುಗಳು ಆ ದಂಪತಿಗಳಿಗೆ ಬಾಣ, ಧ್ರುವ, ಮಾನಕಂಜರ ಮೊದಲಾದವರ ಕಥೆ ಹೇಳುವರು (3.7) ದಂಪತಿಗಳು ‘ಪೆಣ್ಣು ಕೂಸುವೆತ್ತು ಭವಕುಲದಾಸೆಗಳನಳಿದಭವ ವಾಸಮಂ ಪತ್ತರಾರ್’ ಎಂದು ಕೇಳುವರು  (3.72) ಗುರುಗಳು ಅವರಿಗೆ ಮಲುಹಣ ಮಂಗಳಾಂಗಿ  ದಂಪತಿಗಳ ಮಗಳಾಗಿ ಚಂದ್ರಿನಿಯ  ಕಥೆಯನ್ನು ಹೇಳುವರು (8.18). ಈ ಕಥೆ  ಕೇಳಿದ ಮೇಲೆ ಅಂತಹ ಕುವರಿಯನ್ನು ಪಡೆದ ಸಂಪದವು ತಮಗೆ ಯಾವಾಗ ಆಗುವುದೆಂದು ಅವರು ಗುರುಗಳನ್ನು ಕೇಳುವರು. ಗುರುಗಳು ಅವರನ್ನು ಹರಿಸಿ ಭಸಿತವನಿತ್ತು ‘ ಶಿವಭಕ್ತವಲ್ಲರಿಯ ಕಾಣುವುದು, ಗಿರಿಜೆಯ ನಿರೂಪದಿಂದ ಕೈಲಾಸದ  ಮಹಾದೇವಿಯು ನಿರ್ಮಲ -ಸುಮತಿಯರ ಮಗಳಾಗಿ ಜನಿಸಲು ಮರ್ತ್ಯಕ್ಕೆ ಬರುವುದು (ಸಂ.15),  ಸುಮತಿ ಗರ್ಭಧರಿಸುವುದು (ಸಂ. 16), ಅಕ್ಕನ ಜನನ ಯೌವನಗಳ ವರ್ಣನೆ (ಸಂ.1). ಅಕ್ಕನ ಶೃಂಗಾರ ವರ್ಣನೆ (ಸಂ.18) ಹೀಗೆ ಈ ಎಲ್ಲ ವಿವರಗಳು ಒಂದೊಂದು ಸ್ಥಲದಲ್ಲಿ ವಿಸ್ತರಗೊಂಡಿದೆ. ಅರಸ ಕೌಶಿಕ ವೈಹಾಳಿಯಲ್ಲಿ ಮಹಾದೇವಿಯಕ್ಕನನ್ನು ಕಾಣುವುದು, ಅವಳಲ್ಲಿ ಮೋಹಗೊಳ್ಳುವುದು-ಈ ಭಾಗಗಳಲ್ಲಿ ಹರಿಹರನ ಪ್ರಭಾವ ಚನ್ನಬಸವಾಂಕನ ಮೇಲೆ ಆಗಿದ್ದರೂ ಅವನು ವರ್ಣನೆಗೆ ಹೆಚ್ಚಿನ ಪ್ರಾಧ್ಯಾನ್ಯ ನೀಡಿರುವನು. ಆದರೆ ಒಂದು ಮಾತಂತೂ ನಿಜ ಹರಿಹರನ ಕೌಶಿಕನನ್ನು ಓದಿದ ಮೇಲೆ ಚನ್ನಬಸವಾಂಕನ ಕೌಶಿಕ ತೀರಾ ಸಪ್ಪೆ ಎನ್ನಿಸುವನು. ಮನ್ಮಥ ವಿಕಾರಕ್ಕೆ ಒಳಗಾದ ಕೌಶಿಕನು ತನ್ನ ಮನದಳಲನ್ನು ವಸಂತಕನಲ್ಲಿ ತೋಡಿಕೊಂಡಂತೆಯೂ ಮಂತ್ರಿ ವಸಂತಕನು ಹತ್ತೆಂಟು ಮಂತ್ರಿಗಳ ಜೊತೆಯಲ್ಲಿ ನಿರ್ಮಲೆ-ಸುಮತಿಯರ ಮನೆಗೆ ಬಂದಂತೆಯೂ ಮಗಳನ್ನು ಕೌಶಿಕನಿಗಾಗಿ ಬೇಡಿದ ಮಂತ್ರಿಗಳಿಗೆ ದಂಪತಿಗಳು ದೊರೆಗಳೊಡನೆ ನಂಟಬೆರೆಸಲಾರೆವೆಂದು ಹೇಳಿದರೆಂದೂ ಚೆನ್ನಬಸವಾಂಕನು ನಿರೂಪಿಸುವನು (ಸಂ.22-100). ಕೌಶಿಕನಂತಹ ಕುಲ ಛಲ ಅದಟು ಸಂಪತ್ತುಗಳಲ್ಲಿ ಕುಂದಿಲ್ಲದವನಿಗೆ ಮಗಳನ್ನು ಕೊಟ್ಟರೆ ನಿಮ್ಮ ಸ್ಥಾನ ಹೆಚ್ಚುತ್ತದೆಂದು ವಸಂತಕ ಹೇಳುವನು. ಅದಕ್ಕೆ ನಿರ್ಮಲನು ಶಿವನಲ್ಲಿ ಭಕ್ತಿಯುಳ್ಳ ಶ್ವಪಚನೇ ಕುಲಜನು: ಅವನಲ್ಲಿರುವುದು, ಅವನಲ್ಲಿ ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ಮಾಡುವುದು, ಅವನಲ್ಲಿ ಊಟ ಮಾಡುವುದು, ಅವನೊಡನೆ ಬಿಡದೆ ನಂಟುತನ ಮಾಡುವುದು ಕ್ರಮ. ಶಿವಭಕ್ತನಲ್ಲದವನಿಗೆ ಮಗಳನ್ನು ಕೊಡುವುದು ಹೇಗೆ? ಎನ್ನುವನು (ಸಂ.22.16). ಮಂತ್ರಿ ವಸಂತಕನು ಆ ಮಾತನ್ನು ಒಪ್ಪದೆ ಕಾರಿಕಾಲಮ್ಮೆ, ಹೇರೂರ ಹೆಣ್ಣು, ವೈಜಕ್ಕವ್ವೆ, ವೀರತಿಲಕಿ, ಮಂಗೈಯಕ್ಕರಸಿ, ಗೊಲ್ಲಕಚ್ಚಿ- ಇವರೆಲ್ಲರೂ ಶಿವನ ಭಕ್ತೆಯರಲ್ಲವೆ? ಎಂದು ಕೇಳುವನು (ಸಂ.22.12). ಮಂತ್ರಿವಸಂತಕನು ಎಷ್ಟು ಬಗೆಯಲ್ಲಿ ಹೇಳಿದರೂ ಒಪ್ಪದೆ ನಿರ್ಮಲೆ, ಎಲ್ಲ ಹೆಣ್ಣುಗಳಂತಲ್ಲ, ಚೆನ್ನಮಲ್ಲಿಕಾರ್ಜುನನಿಗೆ ಮನಸೋತ ಅವಳು ನರರ ಮದುವೆಯ ಒಲ್ಲಳು, ಇದು ಸತ್ಯ. ನಂಬದಿದ್ದರೆ ಅವಳ ಬಳಿಗೇ ಹೋಗಿ ಕೇಳಿ ಎನ್ನುವನು ( ಸಂ.22.21) ಮಂತ್ರಿಗಳು ಮಹಾದೇವಿಯಲ್ಲಿಗೆ ಬಂದು ನಯವಿನಯಗಳಿಂದ ಪ್ರಾರ್ಥಿಸುವರು. ಅವರ ಮಾತನು ಕೇಳಿನೊಂದು ಬೆಂದು ತನ್ನ ಮನದಳಲನ್ನು ಶಿವನಲ್ಲಿ, ಗಂಡನುಳ್ಳ ಪೆಣ್ಣವಾವ ಗಂಡು ಬಯಸಿ ಕೇಳ್ಡೊಡವನ ತುಂಡು ಗಡಿಯದಿಹನೆಯವಳ ಗಂಡನ್ ಎನ್ನಯ ಗಂಡ ನೀನಿಲ್ಕೆ ಕೇಳ್ದೊಡಂಡುಗೊಂಡು ಸುಮ್ಮನಿಹೆ ಶಿಖಂಡಿಯೆಂಬ ನಾಮ ಸಾಮ್ಯವಾದುದಿಂದಿಲ್ಲಿ ‘ (22.29) ತನ್ನ ಮನದಳಲನ್ನು  ತೋಡಿಕೊಳ್ಳುವಳು. ಕೊನೆಗೆ ಕೋಪದಿಂದ ಶಿಖಂಡಿ ಎಂದು ಶಿವನಲ್ಲಿ ಜರಿಯುವಳು (ಸಂ. 22.24-29). ಮಂತ್ರಿಗಳು ಮಹಾದೇವಿಯ ಮನವೊಲಿಸುವಂತೆ ಅವಳೊಡನೆ ಸಲುಗೆಯಿರುವ ಕಮ್ಮಗಂಧಿಯರಲ್ಲಿ ಪ್ರಾರ್ಥಿಸುವರು (ಸಂ.22.32). ಮಹಾದೇವಿ ಅವರುಗಳ ಮಾತಿಗೂ ಮಣಿಯದಿರುವಳು (ನಂ.22.36).ತನ್ನ ತಂದೆ-ತಾಯಿಯರಿಗೆ ಕೇಡಾಗದಿರಲೆಂದು ಮಹಾದೇವಿಯು ಮಂತ್ರಿಗಳ ಬೆದರಿಕೆಗೆ ಮಣಿದು ಕೌಶಿಕನ ಕೈಹಿಡಿಯಲು ಸಮ್ಮತಿಸುವಳು. ಆದರೆ ಆಕೆ ಕೌಶಿಕನಿಗೆ ಮೂರು ಷರತ್ತುಗಳನ್ನು ಒಡ್ಡುವಳು, ಕೌಶಿಕ ಅವನ್ನು ಒಪ್ಪುವನು. ಮಹಾದೇವಿಯ ವಿವಾಹ ವರ್ಣನೆ ಚೆನ್ನಬಸವಾಂಕನಲ್ಲಿ ದೀರ್ಘವಾಗಿ ಬರದೆ 10-12 ಪದ್ಯಗಳಲ್ಲಿ ಮುಗಿದಿದೆ (ಸಂಧಿ-23). ಮಹಾದೇವಿಯ ವಿವಾಹಾನಂತರ ಚೆನ್ನಬಸವಾಂಕ ತನ್ನ ಕಾವ್ಯದ ಗತಿಯನ್ನು  ಚುರುಕುಗೊಳಿಸಿರುವನು. ಮಹಾದೇವಿ ಕೌಶಿಕರ ದಾಂಪತ್ಯ ಜೀವನ ಹೇಗಿತ್ತೆಂಬುದರ ಕಡೆಗೆ ಅವನ ಗಮನ ಹರಿದಂತಿಲ್ಲ.
   ಮಹಾದೇವಿಯು ಕೌಶಿಕನನ್ನು ತೊರೆದು ಹೋಗಲು ಕಾರಣವಾದ ಪ್ರಸಂಗಗಳು ಹರಿಹರ ಚೆನ್ನಬಸವಾಂಕರಲ್ಲಿ ಸಮಾನವಾಗಿದೆ. ಆದರೆ ತಪ್ಪಗಳ ಅನುಕ್ರಮಣಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆಯಷ್ಟೆ. ಕೌಶಿಕನಿಂದ ಮೂರು ತಪ್ಪಗಳಾದ ಮೇಲೂ ಮಹಾದೇವಿ ಸ್ವಲ್ಪಕಾಲ ಕೌಶಿಕನೊಡನೆ ಬಾಳುವೆ ನಡೆಸುವಳು. ಜೈನ ಗುರುವಿನಿಂದ ಜಂಗಮ ಭಕ್ತರಿಗೂ ಮಹಾದೇವಿಗೂ ಸಂಬಂಧವಿರುವ ಬಗೆಗೆ ಚಾಡಿಯ ಮಾತುಗಳನ್ನು ಕೇಳಿದ ಕೌಶಿಕ ‘ಸೀಗೆಯೊಳು ಸಿಲ್ಕಿದ ಎಳೆಯ ಬಾಳೆಯಂತೆ’ ಅಳಲುಗಿಚ್ಚಿನ ಸುಳಿಯೊಳಗೆ ಸುಳಿವುತ್ತಲಿದ್ದನು. ಒಮ್ಮೆ ಮಡದಿಯ ಶೀಲದ ಬಗೆಗೆ ಸಂದೇಹಗೊಂಡ ಕೌಶಿಕ ಮಹಾದೇವಿ ಜಂಗಮದಾಸೋಹ ನಡೆಸುತ್ತಿರುವಲ್ಲಿಗೆ ಕೋಪೋದ್ರಿಕ್ತನಾಗಿ ಬರುವನು. “ ಮಿಂಡೇರಿದ ಜಂಗಮದೊಳ್ನೀಂ ದೊರೆವೆಂಡತಿಯೆಂಬಭಿಮಾನಂ ತಾಳಿಗೆಗೊಂಡು ಪವಿತ್ರದ ಪರಿದಾಡುವ ಭಕ್ತಿಯ ಬಿಡು” ಎಂದು ಕೌಶಿಕ ಕೋಪದಿಂದ ನುಡಿಯುವನು. ಅದಕ್ಕೆ ಮಹಾದೇವಿ “ಪಿಂಡಕ್ಕೆನ್ನಸುವಿಂಗಾಸ್ಪೃದವದು ಮಂಡಲಪತಿ” ಎನ್ನುವಳು. ಕೌಶಿಕಕೆರಳಿ “ಉಡಿಗಚ್ಚೆಯನಂಜಿಸು ನೀನ್” ಎಂದು ಆಜ್ಞಾಪಿಸುವನು (ಸಂ.27.14). ಮಹಾದೇವಿ ಜಂಗಮರನ್ನು ಕಳುಹಿಸಿ ಬಂದು ಉಟ್ಟ ಉಡುಗೆಯನ್ನು ತೊಟ್ಟ ಆಭರಣಗಳನ್ನು ತಕ್ಷಣ ಕಳಚಿ ಇಟ್ಟು ಅಂತಃಪುರದಿಂದ ಹೊರಬರುವಳು. ತಂದೆ-ತಾಯಿ, ಬಂದು-ಬಳಗ ಎಲ್ಲರನ್ನೂ ಬಿಟ್ಟು ಕಲ್ಯಾಣಕ್ಕೆ ಮಹಾದೇವಿ ಬರುವಳು. ಅವಳನ್ನು ಬಸವದಂಡನಾಯಕನರಸಿ ನೀಲಮ್ಮ ಸಂಭ್ರಮದಿಂದ ಎದುರುಗೊಂಡು ಮನೆಗೆ ಕರೆದುಕೊಂಡು ಹೋಗುವಳು. ಮಹಾದೇವಿಯು ಕಿನ್ನರಿಬೊಮ್ಮಯ್ಯನ ಪರೀಕ್ಷೆಯಲ್ಲಿ ಜಯಗಳಿಸಿ ಅನುಭವ  ಮಂಟಪಕ್ಕೆ ಬರುವಾಗ ದಾರಿಯಲ್ಲಿದ್ದ ಶರಣರ ಮನೆಗಳ ಪರಿಚಯವನ್ನು ಕಿನ್ನರಿ ಬೊಮ್ಮಯ್ಯ ಮಾಡಿಕೊಡುವನು. ಇಲ್ಲಿ ಕವಿಯು ಒಬ್ಬ ಇಲ್ಲವೆ ಇಬ್ಬರು ಶರಣರ ಪವಾಡಯುಕ್ತ ವ್ಯಕ್ತಿತ್ವದ ದರ್ಶನವನ್ನು ಮಾಡಿಸಿರುವನು (ಸಂಧಿ 26 ಪದ್ಯ 16-20). ಅನುಭವ ಮಂಟಪಕ್ಕೆ ಬಂದ ಮಹಾದೇವಿಯು ಬಸವನೇ ಮೊದಲಾದ ಶರಣರ ಕೃಪೆಗೆ ಪಾತ್ರಳಾಗುವಳು. ಅಲ್ಲಿ ಅಲ್ಲಮನ ಸೂಕ್ಷ್ಮ  ಪರೀಕ್ಷೆಗೆ ಒಳಗಾದ ಮಹಾದೇವಿ ತನ್ನ ಹಾಗೂ ಚೆನ್ನಮಲ್ಲಿಕಾರ್ಜುನನ ಭಕ್ತಿಯ ನಿಲುವನ್ನು ತಿಳಿಯಪಡಿಸಿ ಅಲ್ಲಮನಿಂದ ಹೊಗಳಿಸಿಕೊಂಡು ಅವನ ಸೂಚನೆಯಂತೆ ಶ್ರೀಶೈಲಕ್ಕೆ ಬಂದು ಮಲ್ಲಿಕಾರ್ಜುನನಲ್ಲಿ ಐಕ್ಯಳಾಗುವಳು (ಶಂ. 33.15-37). ಕೌಶಿಕನಿಂದ ಮೂರು ತಪ್ಪುಗಳಾದ  ಮೇಲಿನ  ಕಥಾಭಾಗವು ಚೆನ್ನಬಸವಾಂಕನಲ್ಲಿ ಹರಿಹರನಿಗಿಂತ ಭಿನ್ನವಾಗಿ ಬರುತ್ತದೆ. ಈ ಭಾಗದಲ್ಲಿ ಪ್ರಭುಲಿಂಗಲೀಲೆ ಹಾಗೂ ಶೂನ್ಯ ಸಂಪಾದನೆಗಳ ಪ್ರಭಾವ ಚೆನ್ನಬಸವಾಂಕನ ಮೇಲೆ ವಿಶೇಷವಾಗಿ ಆಗಿದೆ.
    ಚೆನ್ನಬಸವಾಂಕನು ಹರಿಹರನ ಕಾವ್ಯವನ್ನು ಅನುಸರಿಸಿ ಕತೆಯನ್ನು ವಿಸ್ತರಿಸಿರುವುದಾಗಿ ಹೇಳಿಕೊಂಡಿದ್ದರೂ ತನ್ನ ಕಾವ್ಯದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ಮಹಾದೇವಿಯ  ಜನನಕ್ಕಾಗಿ ಶಾಪದ ಪ್ರಸಂಗ ಬರುವುದಿಲ್ಲ. ಮಹಾದೇವಿಯ ಜನನ ಬಾಲ್ಯ ಮತ್ತು ಯೌವ್ವನಾವಸ್ಥೆಗಳನ್ನು ಕತೆಯ ಉದ್ದೇಶಕ್ಕೆ ಭಂಗ ಬಾರದ ರೀತಿಯಲ್ಲಿ ಭಕ್ತಿ ಜ್ಞಾನ ವೈರಾಗ್ಯಕ್ಕನುಗುಣವಾಗಿ ಚಿತ್ರಿಸಿ ಮಹಾದೇವಿಯ ಜೀವನದುದ್ದೇಶದಲ್ಲಿ ಎಲ್ಲಿಯೂ ಕೃತಕತೆಯಾಗಲೀ ಅಸಮಂಜತೆಯಾಗಲೀ ಕಾಣದಂತೆ ಚಿತ್ರಿಸಿದ್ದಾನೆ. ಮದುವೆಯ ಪ್ರಸಂಗದಲ್ಲಿಯಂತೂ ಬಹಳ ಎಚ್ಚರಿಕೆಯಿಂದ ವಿವರಿಸಿದ್ದಾನೆ. ಹರಿಹರನಂತೆ ಅತಿರಂಜನೆ ಮಾಡದೆ ಮಹಾದೇವಿಯು ಪಡೆದಿದ್ದ ಸಿದ್ಧಿಯ ನಿಲುವಿಗೆ ಧಕ್ಕೆ ತಾರದೆ ಆ ಪ್ರಸಂಗವನ್ನು ನಿರೂಪಿಸಿದ್ದಾನೆ. ಮಹಾದೇವಿಯಕ್ಕಳ ಅಷ್ಟವಿಧ ಪೂಜೆ, ಜಂಗಮ ದಾಸೋಹ ಮತ್ತು ಶರಣ ಗೋಷ್ಠಿಗಳನ್ನು ವರ್ಣನೆಯನ್ನು ಹದವರಿತು ಮಾಡಿದ್ದಾನೆ. ಚನ್ನಬಸವಾಂಕನು ಮೋಹಕ್ಕಿಂತ ತ್ಯಾಗಕ್ಕೆ, ರಾಗಕ್ಕಿಂತ ವಿರಾಗಕ್ಕೆ, ಅಹಂಕಾರಕ್ಕಿಂತ ವಿನಯಕ್ಕೆ, ತಾಮಸಕ್ಕಿಂತ ಸಾತ್ವಿಕತೆಗೆ ಗೆಲವಾಗುತ್ತದೆಂಬ ನಿಲುವನ್ನು ತಾಳಿದಂತೆ ಕಂಡುಬರುತ್ತದೆ. ಹರಿಹರನ ರಗಳೆ ಕಾವ್ಯದ ನಂತರ ಮಹಾದೇವಿಯಕ್ಕನ ಜೀವನದ ಬಗೆಗೆ ಸಿಗುವ ಪೂರ್ಣಪ್ರಮಾಣದ ಕಾವ್ಯ ಇದಾಗಿದೆ. ಕವಿಗೆ ಮಹಾದೇವಿಯು ಲೌಕಿಕರಂತೆ ಸಾಂಸಾರಿಕ ಜೀವನ ನಡೆಸಿದಳೆಂದು ಹೇಳಲು ಮನಸ್ಸು ಒಪ್ಪಿಲ್ಲವೊ ಏನೋ! ಎಂದೆನಿಸುತ್ತದೆ.
   16 ನೇ ಶತಮಾನದ ಚಿಕ್ಕರಾಚನು ಮಹಾದೇವಿಯಕ್ಕನ ಚರಿತ್ರೆಯನ್ನು ಸಾಂಗತ್ಯ ಪ್ರಕಾರದಲ್ಲಿ  ಆರು ಸಂಧಿಗಳಲ್ಲಿ ನಿರೂಪಿಸಿದ್ದಾನೆ.   ಕೃತಿಯಲ್ಲಿ ಅಕ್ಕಳು ವೈರಾಗ್ಯದ ಕಡೆಗೆ ಹೆಚ್ಚಾಗಿ ವಾಲಿರುವುದರತ್ತ ಪ್ರಾಧಾನ್ಯತೆಯನ್ನು ನೀಡಿದ್ದಾನೆ. ಅಕ್ಕಮಹಾದೇವಿಯು ಕವಿಯ ಪಾಲಿಗೆ ಸಾಮಾನ್ಯ ಸ್ತ್ರೀಯಂತೆ ಕಂಡು ಬರದೆ ಪಾರ್ವತಿಯ ಆತ್ಮವಾಗಿ ಕಂಡು ಬಂದಿರುತ್ತಾಳೆ. ಕೃತಿಯ ಆರಂಭದಲ್ಲಿ ಮಹಾದೇವಿಯ ಜನನದ ಅಲೌಕಿಕ ಕಾರಣವನ್ನು ಹೇಳುವಾಗ ಪ್ರಭುವನ್ನು ಗೆಲ್ಲಲು ಪಾರ್ವತಿಯು ತನ್ನ ಸಾತ್ವಿಕ ರೂಪವನ್ನು ಮಹಾದೇವಿಯಾಗಿ ಸೃಷ್ಟಿಸಿ ಮರ್ತ್ಯಕ್ಕೆ ಕಳುಹಿಸಿದಳೆನ್ನುವನು. ಶಾಂಭವಿಯ ನೈಷ್ಠೆ ಪರಪ್ರಸನ್ನವೇ ಮಾನಸ ರೂಪಾದ ಮಹಾದೇವಿಯು ಓಂಕಾರ ಸೆಟ್ಟಿ ಮತ್ತು ಲಿಂಗಮ್ಮ ದಂಪತಿಗಳ ಮಗಳಾಗಿ ಮರ್ತ್ಯದಲ್ಲಿ ಜನಿಸುವಳು. ಆಗಮದೀಕ್ಷಾಚಾರ್ಯರಾದ ಮರುಳ ಸಿದ್ಧೇಶ್ವರರು ಈಕೆಗೆ ದೀಕ್ಷಾ ಗುರುಗಳಾದರು. ಮಹಾದೇವಿಯ ತಂದೆ-ತಾಯಿಯರು ಹರಿಹರನ ಪ್ರಕಾರ ಶಿವಭಕ್ತ-ಶಿವಭಕ್ತೆಯರು: ಚಾಮರಸ, ಎಳಂದೂರ ಹರೀಶ್ವರ, ಚನ್ನ ಬಸವಾಂಕರ ಪ್ರಕಾರ ನಿರ್ಮಲ ಸುಮತಿಯರು.  ಚಿಕ್ಕರಾಚನು ಇವರೆಲ್ಲರಿಗಿಂತ ಭಿನ್ನವಾಗಿ ಓಂಕಾರಸೆಟ್ಟಿ-ಲಿಂಗಮ್ಮ ಎಂದು ಹೇಳಿರುವನು.  ಹರಿಹರ ಮಹಾದೇವಿಯಕ್ಕನ ರಗಳೆಯಲ್ಲಿ ಮಹಾದೇವಿಗೆ ಎಂಟನೆಯ ವಯಸ್ಸಿಯಲ್ಲಿ ಶೈವಾಚಾರ್ಯರಿಂದ ಶಿವದೀಕ್ಷೆ ನಡೆಯಿತೆಂದಿರುವನು (ಸ್ಥಲ 2 ಸಾಲು 76-87). ಹರಿಹರ ಆ ಶೈವಾರ್ಚಾರ ಹೆಸರನ್ನು  ಹೇಳಿಲ್ಲ; ಇತರರೂ ಇದರ ಬಗೆಗೆ ಹೆಚ್ಚಿಗೆ ಏನನ್ನೂ ಕೇಳಿಲ್ಲ. ಚಿಕ್ಕರಾಚನು ಮಹಾದೇವಿಯು ತಾಯಿಯ ಗರ್ಭದಲ್ಲಿದ್ದಾಗಲೇ ಮರುಳಸಿದ್ಧೇಶ್ವರ ಯೋಗಿಗಳು ಬಂದು ಗರ್ಭದೀಕ್ಷೆಯನ್ನು ಮಾಡಿ ಪ್ರಸಾದವನ್ನಿತ್ತರೆಂದೂ ಮುಂದೆ ಮಹಾದೇವಿಗೆಗೆ ಅವರೇ ದೀಕ್ಷಾಗುರುಗಳಾದರೆಂದು ಹೇಳಿದ್ದಾನೆ. ಮೊದಲನೆಯ ಸಂಧಿಯ ಕೊನೆಯಲ್ಲಿ ಮರುಳ ಸಿದ್ಧೇಶ್ವರರ ಬಗೆಗೆ ಹೆಚ್ಚಿನ ವಿವರಗಳನ್ನು ಗದ್ಯದಲ್ಲಿ ನೀಡಿದ್ದಾನೆ. ವೀರಶೈವ ಪಂಚಾಚಾರ್ಯರ ಪಂಚಪೀಠಗಳಲ್ಲಿ ಒಂದಾದ ಕೊಲ್ಲಿಪಾಕದ ಸೋಮಶೇಖರ ಪೀಠದಲ್ಲಿ ಉದ್ಭವಿಸಿದ ರೇವಣಸಿದ್ಧರ ಶಿಷ್ಯರೇ ಮಹಾದೇವಿಯ  ದೀಕ್ಷಾಗುರುಗಳಾದ ಮರುಳ ಸಿದ್ಧೇಶ್ವರರು. ಮರುಳ ಸಿದ್ಧೇಶ್ವರರು ಕೈಲಾಸದಲ್ಲಿ ಗುಪ್ತಗಣನಾಥನಾಗಿದ್ದಾಗ ಪಾರ್ವತಿಯ ಸೆರಗು ಸೋಕಿದ ಕಾರಣ ಉಜ್ಜನಿಯಲ್ಲಿ ಕರುಗಳನ್ನು ಕಾಯ್ದುಕೊಂಡಿದ್ದ ಮರುಳಸಿದ್ಧೇಶ್ವರರು ಉಜ್ಜನಿ ಮಲ್ಲಿಕಾರ್ಜುನರ ಕೃಪೆಗೆ ಪಾತ್ರರಾಗಿ ರೇವಣಸಿದ್ಧೇಶ್ವರರ ಶಿಷ್ಯರಾಗಿ ಪ್ರಸಿದ್ಧರಾದರೆಂದು ಕವಿಯು ವಿವರಿಸಿದ್ದಾನೆ. ಮಹಾದೇವಿಯ ವೈವಾಹಿಕ ಜೀವನ ವಿಚಾರ ಸಮಸ್ಯೆಯಾಗಿದೆ. ಅಕ್ಕಳ ವಚನಗಳಲ್ಲಿ ಆಕೆಯ ವೈರಾಗ್ಯವು ಶರಣಸತಿ ಲಿಂಗಪತಿ ಭಾವದಲ್ಲಿ ವ್ಯಕ್ತಗೊಂಡಿದೆ. ಅಕ್ಕಳಿಗೆ ವಿವಾಹವಾಗಿದ್ದಿತೆಂದು ಹರಿಹರ, ಚೆನ್ನಬಸವಾಂಕರು ಹೇಳಿದರೇ ಆಕೆಗೆ ವಿವಾಹವಾಗಿರಲಿಲ್ಲವೆಂದು ಚಾಮರಸ, ವಿರೂಪಾಕ್ಷಪಂಡಿತ, ಎಳಂದೂರ ಹರೀಶ್ವರ, ಹಲಗೆಯದೇವ, ಗೂಳೂರು ಸಿದ್ಧವೀರಣ್ಣೊಡೆಯ ಮೊದಲಾದವರು ಹೇಳುವರು.  ಅದೇ ರೀತಿ ಚಿಕ್ಕರಾಚ ಕವಿಯೂ ಸಹ ಅಕ್ಕಮಹಾದೇವಿಗೆ ವಿವಾಹ ವಾಗಿರಲಿಲ್ಲವೆಂದೂ ಹೇಳಿದ್ದಾನೆ. ಚಿಕ್ಕರಾಚನು, ಮಹಾದೇವಿಯು ಕೌಶಿಕನೊಡನೆ ವಿವಾಹವಾಗಿತ್ತೆಂಬುದನ್ನೂ ಒಪ್ಪುವುದಿಲ್ಲ. ಅಕ್ಕಳು ಶ್ರೀಗಿರಿ ಮಲ್ಲಿಕಾರ್ಜುನನ್ನೇ ತನ್ನ ಪತಿಯೆಂದು ನಂಬಿದವಳು. ಅವನಿಗಾಗಿ ಬಾಳಿದವಳು. ಕೊನೆಯಲ್ಲಿ ಅವನನ್ನು ಕೂಡಿದವಳು. ಆಕೆಯ ತಂದೆ ತಾಯಿಯರೇ ಮಗಳ ದಿವ್ಯ ವೈರಾಗ್ಯವನ್ನು ಮನಗಂಡು ತಮ್ಮ ಗುರುವಾಗುವಂತೆ ಅವಳನ್ನು ಬೇಡುವರು. ಪರಬ್ರಹ್ಮಸ್ವರೂಪಿಯಾದ  ಅಕ್ಕಮಹಾದೇವಿಯು ಅವರಿಗೆ ತತ್ವಬೋಧನೆ ಮಾಡುವಳು. ಮಹಾದೇವಿಯ ರೂಪಲಾವಣ್ಯಗಳಿಗೆ ಮರುಳಾಗಿ ಕೌಶಿಕನು ಅವಳನ್ನು ಬೇಡಿ ತನ್ನ ಮಂತ್ರಿಗಳನ್ನು ಓಂಕಾರಸೆಟ್ಟಿಯಲ್ಲಿಗೆ ಕಳುಹಿಸುವನು. ಮಂತ್ರಿಗಳು ಎಷ್ಟೇ ಪ್ರಯತ್ನಿಸಿದರೂ ಮಹಾದೇವಿಯು ವಿವಾಹಕ್ಕೆ ಸಮ್ಮತಿಸುವುದಿಲ್ಲ. ಕೊನೆಗೆ ಕೌಶಿಕನೇ ಬಂದು ಅಕ್ಕಳನ್ನು ಅಂಗಲಾಚಿ ಬೇಡುವನು. ಅವಳು ಒಪ್ಪದಿರಲು ಕಾಮಾಂಧನಾದ ಕೌಶಿಕ ಅವಳ ಸೀರೆಯ ಸೆರಗನ್ನು ಹಿಡಿದು ನಿನ್ನನ್ನು ಬಿಡಲಾರೆ ಎನ್ನುವನು. ಆಗಲೂ ಧೃತಿಗೆಡದೆ ಮಹಾದೇವಿಯು ವಸ್ತ್ರದ ಮೇಲಣ ಮೋಹ ತೊರೆಯುವಳು. ಮುಡಿಯ ಕೇಶವನ್ನು ಕೀಳುವಳು. ಮೂಗುತಿ ಓಲೆಗಳನ್ನು ಕಳೆದು ಬಿಸುಡುವಳು. ಹೆಣ್ಣಾದ ಅವಳು ಲಜ್ಜೆಯನ್ನು ತೊರೆದು ರುದ್ರಕಾಳಿಯಂತೆ ಮುಂದೆ ನಿಂತಾಗ ಕೌಶಿಕನು ಹೆದರುವನು. ತನ್ನರಮನೆಗೆ ಜೀವಭಯದಿಂದ ಓಡಿ ಹೋಗುವನು. ಹೀಗೆ ತನ್ನ ಕಥನ ನಿರೂಪಣೆಯಲ್ಲಿ ಅಕ್ಕಮಹಾದೇವಿಯ ವಿವಾಹ ಪ್ರಸಂಗವನ್ನು ಕುಶಲತೆಯಿಂದ ಪರಿಹರಿಸಿದ್ದಾನೆ.
    ಚಿಕ್ಕರಾಚನು ನಿರೂಪಿಸಿರುವಂತೆ, ಮಹಾದೇವಿಯು ಮನೆಯನ್ನು ತೊರೆದು ಶ್ರೀಗಿರಿಗೆ ಬರುವಳು. ಅಲ್ಲಿ ಇವಳ ವಿರಕ್ತಿಯನ್ನು  ಪರೀಕ್ಷಿಸಿ ನೋಡಬೇಕೆಂದು ಶಿವನು ಹದಿನಾರರ ಹರೆಯದ ಜಂಗಮವೇಷವನ್ನು ತೊಟ್ಟು ಬರುವನು. ` ಹೆಣ್ಣಿಗೇತಕ್ಕೆ ಪುಣ್ಯ ವೈರಾಗ್ಯ, ಲಾವಣ್ಯವ ಕಂಡರಡವಿಯಲಿ ಅಣ್ಣಗಳಾಳದೆ ಬಿಡರು’ ಎಂದು ವ್ಯಾಮೋಹಗೊಂಡು ಅವಳನ್ನು ಕೈ ಹಿಡಿಯಲು ಹೋಗುತ್ತಾನೆ. ಜಂಗಮವಾದಡೆ ನಿನ್ನಂಗ ಚೇಷ್ಟೆಗಳೇಕೆ? ಕಂಗಳಲ್ಲಿ ಕಾಮವೇತಕೆ? ನಮ್ಮ ಸಂಗಡ ಮಾತೇಕೆ? ಲಿಂಗವಿಕಾರಿ ಹೋಗೆಲವೋ ಎಂದು ಅಕ್ಕ ಮಹಾದೇವಿಯು ಬಿರು ನುಡಿಯುತ್ತಾಳೆ. ಕೆಲಹೊತ್ತಿನ ನಂತರ ತನ್ನನ್ನು ಕಾಡುತ್ತಿರುವ ಹುಸಿವೇಶದ ಜಂಗಮನು ಶಿವನಲ್ಲದೆ ಬೇರೆ ಯಾರೂ ಅಲ್ಲವೆಂಬುದು ಅಂತದೃಷ್ಟಿಗೆ ಬರುತ್ತದೆ. ಪರೀಕ್ಷೆಯಲ್ಲಿ ಸೋಲು ಶಿವನದಾಗುತ್ತದೆ. ಶಿವ ಹಾಗೂ ಮಹಾದೇವಿಯರ ನಡುವೆ ನಡೆಯುವ ಸಂಭಾಷಣೆ ಚೇತೋಹಾರಿಯಾಗಿದೆ; ಶಿವನು ನಿಜರೂಪವನ್ನು ತೋರಿ `ನೀರೆ ಮೆಚ್ಚಿದೆ ನಡೆ ಕೈಲಾಸಕ್ಕೆ ಎಂದು ಮಹಾದೇವಿಯನ್ನು ಕೈಲಾಸಕ್ಕೆ ಬರಲು ಆಹ್ವಾನಿಸುವನು. ಅದನ್ನು ಒಪ್ಪದ ಮಹಾದೇವಿಯು` ನನಗಿನ್ನೆಲ್ಲಿಯ ಕೈಲಾಸ. ಇದನ್ನೊಪ್ಪೆ ಪ್ರಭುವನ್ನು ಕಂಡು ಬರುವುದಾಗಿ ಹೇಳುವಳು.  ಶಿವನು ನಸುನಕ್ಕು `ನೀನು ನಿಜವಾಗಿಯೂ ಅಕ್ಕನೇ ಆಗಿರುವೆ ಭಕ್ತಿಕಲ್ಯಾಣವನ್ನು ಹೊಕ್ಕು ಅಲ್ಲಿಂದ ಶ್ರೀಗಿರಿಗೆ ಬರುವಂತೆ ಹೇಳುವನು. ಈ ಪ್ರಸಂಗ ಕಾವ್ಯದ ಮುಖ್ಯ ಭಾಗವಾಗಿದೆ. ಬೇರಾವ ಕೃತಿಗಳಲ್ಲೂ ಇದು ಬಂದಿಲ್ಲದಿರುವುದು ಗಮನಾರ್ಹ ಸಂಗತಿ. ಆದರೆ ಹರನೇ ಗಂಡನಾಗ ಬೇಕೆಂದು ಅನಂತಕಾಲ ತಪಿಸಿದ್ದೆ ನೋಡಾ’ ಎಂದು ಅನುದಿನವೂ ಶಿವನಿಗಾಗಿ ಹಂಬಲಿಸಿದ್ದ ಅಕ್ಕಮಹಾದೇವಿಯು ಶಿವನ ದರ್ಶನವಾದ ಮೇಲೆಯೂ ಕೈಲಾಸಕ್ಕೆ  ಕರೆದರೂ ಒಪ್ಪದೆ ಕಲ್ಯಾಣದ ಶಿವಶರಣರನ್ನು ನೋಡಿ ಬರುವನೆಂದು ಕವಿಯು ನಿರೂಪಿಸಿರುವುದು ಬಹುಶಃ ಶಿವನಿಗಿಂತ ಶಿವನ ಭಕ್ತರೇ ಅಧಿಕರು ಎಂಬ  ಶರಣರ ಸಂಗತಿಯನ್ನು ನಿರೂಪಿಸಿರುವುದಾಗಿದೆ. ಚಿಕ್ಕರಾಚನು ಮಹಾದೇವಿಯಕ್ಕನನ್ನು ಕಿನ್ನರಿಬ್ರಹ್ಮಯ್ಯನು ಪರೀಕ್ಷಿಸ ಹೊರಟ ದೃಶ್ಯವನ್ನು ತನ್ನ ಕಾವ್ಯದಲ್ಲಿ ತಂದಿರುವನು. ಹಲಗೆಯಾರ್ಯನ ಶೂನ್ಯ ಸಂಪಾದನೆಯಲ್ಲಿ ಈ ದೃಶ್ಯ ಅತ್ಯಂತ ನಾಟಕೀಯವಾಗಿ ಬಂದಿದೆ. ಗುಮ್ಮಳಾಪುರದ ಸಿದ್ಧಲಿಂಗ ಹಾಗೂ ಗೂಳೂರು ಸಿದ್ಧವೀರಣಾರ್ಯರ ಶೂನ್ಯ ಸಂಪಾದನೆಗಳಲ್ಲೂ ಈ ದೃಶ್ಯ ಬಂದಿದ್ದು,  ಹಲಗೆಯಾರ್ಯನಷ್ಟು ಪರಿಣಾಮಕಾರಿಯಾಗಿಲ್ಲ. ಚಿಕ್ಕರಾಚನು ಬಯಸಿದ್ದರೆ ಈ ಸನ್ನಿವೇಶವನ್ನು ಬೆಳೆಸಬಹುದಿತ್ತು.  ಆದರೆ ಅವನಲ್ಲಿ ಇದು ಕೇವಲ ನಾಲ್ಕು ಪದ್ಯಗಳಲ್ಲಿ ಮುಗಿದುಹೋಗಿದೆ.  ಚಿಕ್ಕರಾಚನ ಪ್ರಕಾರ, ಕಿನ್ನರಿಬ್ರಹ್ಮಯ್ಯನು ಕಾಮದೃಷ್ಟಿಯಿಂದ ಮಹಾದೇವಿಯನ್ನು ನೋಡಿ ಮಾತನಾಡಲು ಅವಳು ಕೆರಳಿ ಕೆಂಗಣ್ಣು ಬಿಡುವಳು.  ಆಗ ಇದ್ದಕ್ಕಿದ್ದಂತೆ ಬ್ರಹ್ಮಯ್ಯನ ಮೇಲೆ ಮೆಟ್ಟುಗಳು ಉರುಳುವವು. ಕೈಬೆರಳುಗಳಾದದೆ ನಿಲ್ಲುವವು, ಕಿನ್ನರಿಯ ತಂತಿ ಹರಿಯುವುದು. ಕಿನ್ನರಿಯ ಬುರುಡೆ ನುಚ್ಚೂನೂರಾಗುವುದು.  ಕಿನ್ನರಿಬ್ರಹ್ಮಯ್ಯ ಅವಳ ಮಹಿಮೆಗೆ ತಲೆಬಾಗುವನು, ತನ್ನನ್ನು ಕ್ಷಮಿಸುವಂತೆ ಬೇಡುವನು.  ಶೂನ್ಯಸಂಪಾದನೆಕಾರರ ಪ್ರಭಾವ ಈ ಸಂದರ್ಭದಲ್ಲಿ ಚಿಕ್ಕರಾಚನ ಮೇಲೆ ಆಗಿದ್ದರೂ ಅದನ್ನು ತನ್ನದೇ ಆದ ರೀತಿಯ ನಿರೂಪಣೆಗೆ ಬಳಸಿಕೊಂಡು ತೀರಾ ಸಂಕ್ಷಿಪ್ತವಾಗಿ ಮತ್ತು ಗಂಭೀರವಾಗಿ ಈ ಪ್ರಸಂಗವನ್ನು ನಿರೂಪಿಸಿರುವುದು  ಮಹತ್ತರ ಸಂಗತಿಯಾಗಿದೆ. ಅನುಭವ ಮಂಟಪಕ್ಕೆ ಮಹಾದೇವಿಯು ಬರುವಳು.  ಶಿವಶರಣರ ಜೊತೆ ಚರ್ಚೆಯಲ್ಲಿ ಪಾಲ್ಗೊಳ್ಳುವಳು.  ಆ ಚರ್ಚೆಯಿಂದಲೇ ಮಹಾದೇವಿಯ ಹಿರಿದಾದ ವೈರಾಗ್ಯ ಶರಣರಿಗೆ ವೇದ್ಯವಾಯಿತೆಂದು ಚುಟುಕಾಗಿ  ಕವಿಯು ಹೇಳಿಬಿಡುವನು (5.26).  ಪ್ರಭುವಿನ ಪ್ರಸ್ತಾಪವೇ ಇಲ್ಲಿ ಬರುವುದಿಲ್ಲ.
   ಚಿಕ್ಕರಾಚನ ನಿರೂಪಣೆಯಂತೆ, ಕಲ್ಯಾಣದಿಂದ ಮಹಾದೇವಿ ಶ್ರೀಗಿರಿಯ ಮಲ್ಲಿಕಾರ್ಜುನನಲ್ಲಿಗೆ ಬರುವಳು.  ಮಲ್ಲಿಕಾರ್ಜುನಲಿಂಗವನ್ನು ಕಂಡು ಆಕೆ ‘ಕಲ್ಲಾದೆ ನನ್ನ ಕಾಣುತಲಿ’ ನೀನು ಮಲ್ಲಯ್ಯನಲ್ಲಾ ಎಂದು ಮುಖದಿರುಹಿ ಶ್ರೀಗಿರಿಯನ್ನು ಇಳಿದು ಬರುವಳು.  ಮಹಾದೇವಿಯು ಶಿವಯೋಗದಲ್ಲಿ ತನ್ನ ಮನಸ್ಸನ್ನು ಲೀನಗೊಳಿಸಿ,  ಪ್ರಭುವನ್ನು ಅಲ್ಲಿ ಅರಸಿದಳು.  ಮಹಾದೇವಿಯಗೆ ಕರುಣೆದೋರಬೇಕೆಂದು ಪ್ರಭುವು ಕಾಣಿಸಿಕೊಂಡು ಮಾಯವಾದನು. ಆಗ ಮಹಾದೇವಿಯು ನಾನು ಮಾರಿಯಲ್ಲ, ನಿನ್ನೊಡನೆ ಮಾತನಾಡೋಣವೆಂದರೆ ದೂರಶ್ರವಣವಾಗುವೆ, ನಾನು ವಿಕಾರಿಯಲ್ಲ, ನಿನ್ನ ನಿಜರೂಪದೋರು ಎಂದು ಕೇಳುವಳು.  ಪ್ರಭುವು ಪ್ರತ್ಯಕ್ಷನಾಗಿ ಮಹಾದೇವಿಯ ವೈರಾಗ್ಯದ ನಿಲುವನ್ನು ಒರೆಹಚ್ಚಿ ನೋಡುವನು.  ಕೊನೆಗೆ ಮಹಾದೇವಿಯು ತನ್ನನ್ನು ಐಕ್ಯಮಾಡಿಕೊಳ್ಳುವಂತೆ  ಪ್ರಭುವನ್ನು ಬೇಡುವಳು.  ಪ್ರಭುವು ಅದಕ್ಕೆ ಒಪ್ಪಿ ತನ್ನಲ್ಲಿ ಐಕ್ಯಮಾಡಿಕೊಳ್ಳುವನು.  ಕೃತಿಯ ಈ ಅಂತ್ಯಭಾಗವು ಚಿಕ್ಕರಾಚನ ಸ್ವಂತ ಕಲ್ಪನೆಯಾಗಿದೆ.
  ಚಿಕ್ಕರಾಚನದು ಸ್ವತಂತ್ರ ಮನೋಧರ್ಮವಾಗಿದ್ದು, ಬೇರೆಯವರು ನಡೆದ ಜಾಡಿನಲ್ಲಿ ಕಣ್ಣು ಮುಚ್ಚಿ ನಡೆಯುವ ಪ್ರವೃತ್ತಿ ಅವನದಲ್ಲ.  ಒಳ್ಳೆಯ ಸಂಗ್ರಹಕಾರನಾಗಿರುವ ಅವನು ತನ್ನ ಇತಿಮಿತಿಯಲ್ಲಿಯೇ ತನ್ನ ಸ್ವಂತಿಕೆಯನ್ನು ಪ್ರಕಟಪಡಿಸಿದ್ದಾನೆ. ವೀರಶೈವ ತತ್ವದ ತಿಳುವಳಿಕೆ ಶಿವಭಕ್ತಿ, ಶಿವಾನುಭಾವ ಇವುಗಳ ವಿಷಯದಲ್ಲಿ  ತಿಳಿವಳಿಕೆಯುಳ್ಳವನಾದ ಕವಿ ರಾಚಯ್ಯನು  ಅದನ್ನು ಅಕ್ಕಳನ್ನು ಕುರಿತ ತನ್ನ ಸಾಂಗತ್ಯ ಕೃತಿಯಲ್ಲಿ ಹದವರಿತು ಪ್ರಕಟಿಸಿದ್ದಾನೆ.
   ಹದಿನೆಂಟನೆಯ ಶತಮಾನದ ಕೊನೆಯಲ್ಲಿದ್ದಂತಹ ಅನಾಮಧೇಯ ಕವಿಯು ರಚಿಸಿರುವ ಮಹಾದೇವಿಯಕ್ಕನ ಚರಿತೆ ಎಂಬ ಸಾಂಗತ್ಯ ಪ್ರಕಾರದ ಕಾವ್ಯವನ್ನು ಎಸ್.ಉಮಾಪತಿಯವರು  ಸಂಪಾದಿಸಿ ಬಸವ ಪಥಸಂ.30, ಸಂ.6 ರಲ್ಲಿ ಪ್ರಕಟಿಸಿದ್ದಾರೆ. ಈತನು ಮಹಾದೇವಿಯಕ್ಕನ ಚರಿತೆಯನ್ನು ನಿರೂಪಿಸುವಲ್ಲಿ ಹರಿಹರನ ರಗಳೆಯನ್ನು ಮೂಲ ಆಕರ ಗ್ರಂಥವನ್ನಾಗಿ ಸ್ವೀಕರಿಸಿದ್ದಾನೆ. ಹಿಂದಿನ ಕವಿಗಳ ಹಾಗೆ ಅಕ್ಕ ಮಹಾದೇವಿಯ ಕೆಲವು ವಚನಗಳನ್ನು ತನ್ನ ಕಾವ್ಯದಲ್ಲಿ ಸಂದರ್ಭಕ್ಕೆ ತಕ್ಕ ಹಾಗೆ ಬಳಸಿಕೊಂಡಿದ್ದಾನೆ. ಅಕ್ಕಳ ಕಥೆಯನ್ನು ಕೈಲಾಸದಿಂದ ಪ್ರಾರಂಭಿಸಿ ಕೈಲಾಸದಿಂದಲೇ  ಮುಕ್ತಾಯಗೊಳಿಸಿದ್ದಾನೆ. ಯಾವ  ಹೆಚ್ಚಿನ ವಿವರ ಮತ್ತು ವರ್ಣನೆಗಳಿಗೆ ಹೋಗದೆ ಹಿತಮಿತವಾಗಿ ಕತೆಯನ್ನು  ಸರಳ ಶೈಲಿಯಲ್ಲಿ  ಸಂಕ್ಷಿಪ್ತವಾಗಿ ವಿವರಿಸಿದ್ದಾನೆ. ಅಕ್ಕಳ ಚರಿತೆಯನ್ನು`ಪಿತಮಾತೆ ಬಂದು ಸಜ್ಜನರೆಲ್ಲರ ತೊರೆದು ಭೂಪತಿಯ ಸೌಭಾಗ್ಯವ ಜರೆದು ಅತಿಶಯ ಮಹಾದೇವಿ ನಡೆದ ವಿರಕ್ತಿಯ ಕತೆಯ ಸಜ್ಜನರು ಲಾಲಿಪುದು’ ಎಂದು ಕಾವ್ಯದ ಕತೆಯನ್ನು ಒಂದೇ ಸಾಂಗತ್ಯ ಪದ್ಯದಲ್ಲಿ ಸಂಗ್ರಹಿಸಿ ಕೊಟ್ಟಿದ್ದಾನೆ ( 1-7). ಈ ಲಘುಕಾವ್ಯದಲ್ಲಿ ಕವಿಯ ಪ್ರತಿಭಾ ಶಕ್ತಿಯನ್ನು ಕಾಣಬಹುದಾಗಿದೆ. ಕೌಶಿಕನಿಗೆ ಪಟ್ಟದ ರಾಣಿಯಾಗು ಎಂಬ ಶಬ್ದ  ಅಕ್ಕಳ ಕಿವಿಗೆ ತಾಕಿದಾಗ ` ಉರಿ ಸೋಂಕಿದ ತಳಿರಂದದಿ ಕಳೆಗುಂದಿ, ಸರಳು ತಾಕಿದ ಮೃಗದಂತೆ, ಮರುಗುತ ಮಲ್ಲಿಕಾರ್ಜುನನಲ್ಲದೆನಗನ್ಯ ಪುರುಷರು ಬೇಕುಂಟೆ ಮರುಳೆ’(1-89) ಎಂಬ ಮನಸ್ಥಿತಿ ಉಂಟಾದುದನ್ನು ಉಪಮಾನಗಳ ಮೂಲಕ ಕವಿಯು ವಿವರಿಸಿರುವುದು  ವಿಶೇಷವಾಗಿದೆ.  ಮಹಾದೇವಿಯಕ್ಕನಿಂದ ತಿರಸ್ಕೃತನಾದ ನಂತರ ಕೌಶಿಕನ ಮನಸ್ಥಿತಿಯು ` ಶಶಿಯನಗಲಿದ ನೈದಲಿನಂತೆ, ಕುಸುಮಕ್ಕೆ ಬಿಸಿಲ ದಳ್ಳುರಿ ಹೊಯ್ದಂತೆ, ಅಸುವ ನಗಲಿದ ಕಾಯದಂತೆ ಬಳಲಿ ಕವುಸಿಕ ಹೋದ ತನ್ನರಮನೆಗೆ (2-82) ಎಂದು  ವರ್ಣಿಸಿದ್ದಾನೆ.
     ಅಕ್ಕಮಹಾದೇವಿ ಅಥವಾ ಮಹಾದೇವಿಯಕ್ಕ ಎಂದು ಪ್ರಸಿದ್ಧಳಾದ ಮಹಾ ಅನುಭಾವಿಯ ಜೀವಿತದ ಬಗ್ಗೆ ಅಪಾರ ಸಂಖ್ಯೆಯ ವೀರಶೈವ ಕಾವ್ಯ-ಪುರಾಣಗಳಲ್ಲಿ ಪೂರ್ಣ ಪ್ರಮಾಣವಾಗಿ ಮತ್ತು  ಸಂಕ್ಷಿಪ್ತವಾಗಿ ರಚಿತವಾಗಿದ್ದರೂ ಅನೇಕ ತೊಡಕುಗಳು ಉಳಿದುಕೊಂಡಿವೆ. ಅವಳಿಗೆ ವಾಸ್ತವವಾಗಿ ಮದುವೆಯಾಗಿತ್ತೇ ಇಲ್ಲವೇ? ಮದುವೆಯಾಗಿ ಗೃಹಸ್ಥ ಜೀವನವನ್ನು ಅಥವಾ ಆ ಜೀವನದ ಹಿಂಸೆಯನ್ನು ಕೆಲಕಾಲವಾದರೂ ಅನುಭವಿಸಿದಳೇ ಇಲ್ಲವೇ? ಇಂತಹ ಅಕ್ಕಮಹಾದೇವಿಯ ಸಮಸ್ಯೆಗಳ ಬಗೆಗೆ ಪರಿಪೂರ್ಣವಾದ ಉತ್ತರವನ್ನು ವಿದ್ವಾಂಸರು ಇನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈ ವಿವರಗಳ ಬಗೆಗೆ ವಿದ್ವಾಂಸರಲ್ಲಿ ಬಹಳಷ್ಟು ಚರ್ಚೆ ನಡೆದಿರುವುದಂತೂ ನಿಜ. ಅವಳು ತನ್ನ ಇಷ್ಟಕ್ಕೆ ವಿರುದ್ಧವಾಗಿ ಕೌಶಿಕನೆಂಬ ದೊರೆಯನ್ನು ಮದುವೆಯಾಗಿದ್ದಳೆಂದೂ ಅವನ ಅರಮನೆಯಲ್ಲಿ ಬಲವಂತದಿಂದ ಕೆಲಕಾಲ ಇದ್ದಳೆಂದೂ ಈಗ ಬಹುಮಟ್ಟಿಗೆ ವಿದ್ವಾಂಸರು ಒಪ್ಪಿತವಾಗಿರುವ ಸಂಗತಿಯಾಗಿದೆ. ಅಕ್ಕಮಹಾದೇವಿಯ ವಚನಗಳ ಮೂಲಕವಾಗಿಯೇ ಅಕ್ಕಳ ಜೀವನ ಚರಿತ್ರೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದರಾದರೂ ಕೆಲವೊಂದು ವಿಷಯಗಳಲ್ಲಿ  ಅಕ್ಕಳ ಕಾಲಕ್ಕೆ ಸಮೀಪದವನಾದ ಹರಿಹರನು ರಚಿಸಿರುವ ರಗಳೆಯನ್ನು ಆಧರಿಸ ಬೇಕಾಗುತ್ತದೆ.
   ಆದರೆ ``ಕೌಶಿಕ'' ಯಾರು? ಅವನು ವಾಸ್ತವವಾಗಿ ದೊರೆಯೇ? ಅವನನ್ನು ಇತಿಹಾಸದಲ್ಲಿ ಗುರುತಿಸಲು ಸಾಧ್ಯವೇ? ಈ ಸಮಸ್ಯೆಗಳು ಇನ್ನೂ ಸಂಶೋಧಕರಲ್ಲಿ ಬಿಡಿಸದೆ ಉಳಿದುಕೊಂಡಿವೆ. ಇವನ್ನು ಬಿಡಿಸಲು ಅಂತಹ ಗಂಭೀರ ಪ್ರಯತ್ನಗಳೂ ವಿಶೇಷವಾಗಿ ನಡೆದಂತಿಲ್ಲ. ಕೌಶಿಕನ ಬಗ್ಗೆ ಐತಿಹಾಸಿಕವಾಗಿ ಏನೂ ತಿಳಿಯದೆಂದೇ ಬಹುತೇಕ ಜನರ ನಂಬಿಕೆಯಾಗಿದೆ. ಆದಾಗ್ಯೂ ಈ ನಿಟ್ಟಿನಲ್ಲಿ ಸಂಶೋಧಕರಾದ ಎಂ.ಚಿದಾನಂದ ಮೂರ್ತಿಯವರು ಲಭ್ಯ ಆಕರಗಳ ಹಿನ್ನೆಲೆಯಲ್ಲಿ ಕೌಶಿಕನನ್ನು ಇತಿಹಾಸದಲ್ಲಿ ಗುರುತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅಕ್ಕಮಹಾದೇವಿಯ ಜನ್ಮಸ್ಥಳ ಯಾವುದು ಎಂಬುದರ ಬಗೆಗೆ ವಿದ್ವಾಂಸರಲ್ಲಿ ಗೊಂದಲವಿತ್ತು. ಮಹಾದೇವಿಯಕ್ಕನ ಜನನ ಕನ್ನಡ ನಾಡಿನ ಉಡುತಡಿ ಎಂಬ ಗ್ರಾಮದಲ್ಲಿ ಆದುದೆಂದು ಎಲ್ಲಾ ಕವಿಗಳ ಅನಿಸಿಕೆಯಾಗಿದೆ. ಆದರೆ ಈ ಉಡುತಡಿ ಯಾವುದೆಂಬುದರ ಬಗೆಗೆ ಸಂಶೋಧಕರಲ್ಲಿ ಭಿನ್ನಾಭಿಪ್ರಾಯಗಳಿವೆ. ಹರಿಹರನ ಮಹಾದೇವಿಯಕ್ಕನ ರಗಳೆಗಳಲ್ಲಿ ಬರುವ `ಉಡುತಡಿ'ಯು ಗುಲ್ಬರ್ಗಾ ಜಿಲ್ಲೆಯ ಮಹಾಗಾವ್ ಆಗಿರಬಹುದೆಂಬ ಹಾಗೂ ಅಲ್ಲಿ ಕೌಶಿಕನ ಅರಮನೆಯ ಅವಶೇಷಗಳೂ, ಮಹಾದೇವಿಯಕ್ಕನ ಮೂರ್ತಿ ಇರುವುದೆಂದೂ ಅಲ್ಲಿಯೇ ಮಹಾದೇವಿಯಕ್ಕನ ಜಾತ್ರೆ ನಡೆಯುವುದೆಂದು ಹೇಳುತ್ತಾರೆಯಾದರೂ ಅದು ಸಂಶೋಧಕರಿಂದ ಮಾನ್ಯತೆ ಪಡೆದಿಲ್ಲ. ಏಕೆಂದರೆ ಇಲ್ಲಿ ಅಕ್ಕಮಹಾದೇವಿಗೆ ಸಂಬಂಧಿಸಿದ ಕುರುಗಳುಗಳಾಗಲೀ ಸ್ಮಾರಕಗಳಾಗಲೀ ದೊರೆಯುತ್ತಿಲ್ಲ. ಉಡುತಡಿಯು ವಾಸ್ತವವಾಗಿ ಶಿಕಾರಿಪುರ ತಾಲೂಕಿನ  ಶಿರಾಳಕೊಪ್ಪ ಸಮೀಪದ ಉಡುಗಣಿ-ತಡುಗಣಿ ಎಂಬ ಅಕ್ಕಪಕ್ಕದ ಗ್ರಾಮಗಳು ಎಂಬ ಸಾರ್ವತ್ರಿಕ ನಂಬಿಕೆಯನ್ನೇ  ವಿದ್ವಾಂಸರು ಮಾನ್ಯ ಮಾಡಿದ್ದಾರೆ. ಇದು ಹಿಂದೆ ಬನವಾಸೆ ಹನ್ನೆರಡು ಸಾವಿರ ಪ್ರಾಂತಕ್ಕೆ ರಾಜಧಾನಿಯಾಗಿದ್ದ ಬಳ್ಳಿಗಾವಿಗೆ ಸಮೀಪದಲ್ಲಿದೆ.     
     ಅಕ್ಕಮಹಾದೇವಿಯ ಜೀವಿತಕ್ಕೆ ಸಂಬಂಧಿಸಿದಂತೆ ನಮಗೆ ದೊರಕುವ ಅತ್ಯಂತ ಪ್ರಾಚೀನ ಆಕರವೆಂದರೆ ಹರಿಹರನ (ಸು.1200-20) ಕೃತಿಯೇ. ಉಡುತಡಿ ಎಂಬ ಪಟ್ಟಣದ ದೇಶವನ್ನು ಆಳುತ್ತಿದ್ದವನು `ಕೌಶಿಕ' ಎಂಬ ಹೆಸರಿನ `ಮನ್ನೆಯ' ಎಂದು ಅಲ್ಲಿ ಹೇಳಿದೆ. ಅಲ್ಲಿ ಬರುವ `ಮನ್ನೆಯ' (=ಮಾನ್ಯ, a local chieftain or a governor) ಎಂಬುದು ಆ ಕೌಶಿಕ ಸ್ವತಂತ್ರ ದೊರೆಯಾಗಿರಲಿಲ್ಲವೆಂದೂ ಚಕ್ರವರ್ತಿಯ ಕೈಕೆಳಗೆ ಸಾಮಂತರಾಜನೋ ಮಂಡಲೇಶ್ವರನೋ ಆಗಿದ್ದ ವ್ಯಕ್ತಿಯಾಗಿದ್ದನೆಂಬುದನ್ನೂ ಸ್ಪೃಷ್ಟಪಡಿಸುತ್ತದೆ. ಅವನ ಕೈಕೆಳಗೆ ಮಂತ್ರಿಗಳಿದ್ದರೆಂದೂ ಅವನಿಗೆ ವಾಸಕ್ಕೆ `ಅರಮನೆ' ಇದ್ದಿತೆಂದೂ ವರ್ಣನೆಗಳು ಅಲ್ಲಿ ಬರುತ್ತವೆ.   ಉಡುತಡಿ ಆ ರಾಜನ ರಾಜಧಾನಿಯೋ ಅಥವಾ ರಾಜಧಾನಿಯ ಭಾಗವೋ ಅಥವಾ ರಾಜಧಾನಿಗೆ ಸಮೀಪದ ಊರೋ ಆಗಿದ್ದರೆ, ಆಗಿನ ಉಡುತಡಿಯೇ ಈಗಿನ ಉಡುಗಣಿ-ತಡುಗಣಿ ಗ್ರಾಮಗಳಾಗಿದ್ದರೆ, ಮಹಾದೇವಿಯಕ್ಕನ ಕಾಲ ಸು.ಕ್ರಿ.ಶ.1160-65 ಎಂದು ನಂಬುವುದಾದರೆ ಆಗ `ಕೌಶಿಕ' ಎಂಬ ದೊರೆ ಈಗಿನ ಉಡುಗಣಿ-ತಡುಗಣಿ ಗ್ರಾಮಗಳ ಪ್ರದೇಶದಲ್ಲಿ ಆಳುತ್ತಿದ್ದ ಯಾವನೋ ಸಾಮಂತ ದೊರೆಯೋ ಒಬ್ಬ ರಾಜನ ಮಟ್ಟದ ಪ್ರಧಾನ ಅಧಿಕಾರಿಯೋ ಆಗಿರಬೇಕು.   
  ಅಕ್ಕಮಹಾದೇವಿ ತನ್ನ ಗಂಡ ಕೌಶಿಕನನ್ನು ತ್ಯಜಿಸಿ ಶ್ರೀಶೈಲಕ್ಕೆ ಹೊರಟುಬಂದಾಗ, ಅವಳನ್ನು ಅನುಸರಿಸಿಕೊಂಡು ಬಂದ ಅವನು ಶ್ರೀಶೈಲದ ಕಲ್ಲುಮಠ ಮತ್ತು ಹುಲುಮಠಗಳ ಗುರುಗಳಿಗೆ ಲಂಚವನ್ನಿತ್ತು ಅಕ್ಕಮಹಾದೇವಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದಂತೆ ಹರಿಹರ ವರ್ಣಿಸಿದ್ದಾನೆ. (ಚೆನ್ನಬಸವಾಂಕ ತನ್ನ ಮಹಾದೇವಿಯಕ್ಕನ ಪುರಾಣದಲ್ಲಿ-ನೋಡಿ 32.1-ಪಂಚಮಠ ಮತ್ತು ಪಂಚಗೃಹದಾರಾಧ್ಯರನ್ನು ಕಂಡಂತೆ ಹೇಳಿದ್ದಾನೆ). ಪುಲುಮಠ ಅಥವಾ ಹುಲುಮಠದ ಹೆಸರು ಶಾಸನವೊಂದರಲ್ಲಿ ಬರುತ್ತದೆ. ಹಿರೇಕೆರೂರು ತಾಲೂಕು ಪರ್ವತ ಸಿದ್ಧಗೇರಿಯ (ಊರಿನ ಹೆಸರು ಗಮನಾರ್ಹ) ಕ್ರಿ.ಶ.1265ರ ಶಾಸನದಲ್ಲಿ ಹೀಗಿದೆ-
ಶ್ರೀ ಶ್ರೀ ಪರ್ವತಶ್ರೀ ಸ್ವಯಂಭುಲಿಂಗಚಕ್ರವರ್ತಿ ಶ್ರೀಮನ್ಮಲ್ಲಿಕಾರ್ಜುನದೇವರ್ಗೆ ದಂಣಾಯಕರು ಸೋಮಯಾಜಿಗಳು.....ದಲಿ ದೇವದರ್ಶನವಾಗಿ ಶ್ರೀಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ಶಕ ವರ್ಷ 1187ನೆಯಕ್ರೋಧನ ಸಂವತ್ಸರದ ವೈಶಾಖದ ಪೌರ್ನಮಿ ಭೃಗುವಾರ ವಿಶಾಖಾ ನಕ್ಷತ್ರ ಶಿವಯೋಗಯುಕ್ತವಪ್ಪಪುಣ್ಯತಿಥಿಯಲ್ಲಿ ಶ್ರೀಪರ್ವತ.ದ ಪುಲುಮಠದ ಆಚಾರ್ಯರಪ್ಪ ಪರಿಪೂರ್ನ ಶಿವಾಚಾರ್ಯರ ಸಮಕ್ಷದಲು ಮಲ್ಲಿಕಾರ್ಜುನದೇವರ್ಗೆ......'' .ಅಕ್ಕಮಹಾದೇವಿ ಶ್ರೀಶೈಲದಲ್ಲಿ ಹುಲುಮಠದ ಗುರುಗಳನ್ನು ಕಂಡ ಸಂಗತಿಯ ಐತಿಹಾಸಿಕತೆಯನ್ನು, ಕೊನೆಯ ಪಕ್ಷ ಹರಿಹರನ ಕಾಲಕ್ಕೆ ಶ್ರೀಶೈಲದಲ್ಲಿ ಹುಲುಮಠವಿದ್ದ ಸಂಗತಿಯ ಐತಿಹಾಸಿಕತೆಯನ್ನು ಈ ಶಾಸನವು ಸಮರ್ಥಿಸುತ್ತದೆ. ಹರಿಹರನ ನಿರೂಪಣೆಯಲ್ಲಿ ವಾಸ್ತವಾಂಶದ ಹಲವು ಎಳೆಗಳಿವೆಯೆಂಬುದನ್ನು ಈ ಶಾಸನ ದೃಢಪಡಿಸುತ್ತದೆ. ಆ ಕಾಲದಲ್ಲಿ ಬಹು ಪ್ರಭಾವಶಾಲಿಯಾಗಿದ್ದ ಕೌಶಿಕ ದೊರೆ (ಅರ್ಥಾತ್ ಕಸಪಯ್ಯನಾಯಕ) ಅಕ್ಕಮಹಾದೇವಿಯನ್ನು ಶ್ರೀಶೈಲದವರೆಗೆ ಅನುಸರಿಸಿಕೊಂಡು ಹೋಗಿ ಅಲ್ಲಿನ ಧರ್ಮ ಗುರುಗಳ ಪ್ರಭಾವವನ್ನುಪಯೋಗಿಸಿಕೊಂಡು ಮತ್ತೆ ಅವಳನ್ನು ತನ್ನತ್ತ ತಿರುಗಿಸಿಕೊಳ್ಳುವ ಪ್ರಯತ್ನವನ್ನು ಮಾಡಿರಬಹುದು. ಆ ಪ್ರಯತ್ನ ವಿಫಲವಾದದ್ದರಿಂದ ಅಲ್ಲಿಗೆ ಅವನು ಅಕ್ಕಮಹಾದೇವಿಯನ್ನು ಪಡೆಯುವ ಆಶೆಯನ್ನು ಕೈಬಿಡುತ್ತಾನೆ. ಹರಿಹರನ ರಗಳೆಯ ಪ್ರಕಾರ ಅಕ್ಕಮಹಾದೇವಿಯು ಉಡುತಡಿಯನ್ನು ಬಿಟ್ಟು ಶ್ರೀಶೈಲ ಪರ್ವತಕ್ಕೆ ಹೋದಳೆಂದು ವರ್ಣಿತವಾಗಿದೆ. ಕೊಟ್ಟಭಾಷೆಗೆ ಕೌಶಿಕ ತಪ್ಪಿದ್ದಕ್ಕಾಗಿ ಮಹಾದೇವಿಯಕ್ಕ ಶ್ರೀಗಿರಿಯತ್ತ ಹೊರಡುತ್ತಾಳೆಂದೂ ಕಾಮಾತುರನಾದ ಕೌಶಿಕನು ಅವಳು ಮರಳಿ ಪಡೆಯುವುದಕ್ಕೆ ಸಾಧುವಿನ ವೇಷ ಧರಿಸಿ ಅವಳನ್ನು ಹಿಂಬಾಲಿಸಿ ಶ್ರೀಶೈಲ ಪರ್ವತಕ್ಕೆ ಹೋಗುತ್ತಾನೆಂಬ ವಿವರ ಇದೆ.  ಭಕ್ತರ ಸೋಗು ಹಾಕಿದ ಕೌಶಿಕ ಶ್ರೀಗಿರಿಯಲ್ಲಿ ಮಹಾದೇವಿಯಕ್ಕನನ್ನು ಕಂಡು ಕಾಲಿಗೆ ಬಿದ್ದು ಕರುಣಿಸು ಎಂದು ಬೇಡಿಕೊಳ್ಳುತ್ತಾನೆ. ಕಾಮುಕನ ಇಂಗಿತವನ್ನರಿತ ಮಹಾದೇವಿಯಕ್ಕ ಅವನನ್ನು ತಿರಸ್ಕರಿಸಿ ಚೆನ್ನಮಲ್ಲಿಕಾರ್ಜುನನ ಧ್ಯಾನದಲ್ಲಿ ಮಗ್ನಳಾಗುತ್ತಾಳೆ. ಕದಳಿ ವನದ ಅಕ್ಕನ ಗವಿಯಲ್ಲಿ ಬತ್ತಲೆಯಾದ ಪುರುಷ ವಿಗ್ರಹವೊಂದು ಇದ್ದು, ಈ ಪುರುಷ ವಿಗ್ರಹದ ತಲೆಯಲ್ಲಿ ಜೈನ ಸಂಪ್ರದಾಯದಂತೆ ಗುಂಗುರುಗೂದಲು ಎಡಹಸ್ತದಲ್ಲಿ ವೀರಶೈವ ಸಂಪ್ರದಾಯದಂತೆ ಲಿಂಗವು ಇದೆ. ಈ ವಿಗ್ರಹವನ್ನು ತಾನು ಶಿವಭಕ್ತನಾಗಿ ಅಕ್ಕನನ್ನು ಅರಸುತ್ತಾ  ಶ್ರೀಶೈಲಕ್ಕೆ ಬಂದ ಕೌಶಿಕನ ವಿಗ್ರಹವಿದೆಂದು ಜನಪ್ರತೀತಿ ಇದೆ. ಅಕ್ಕಮಹಾದೇವಿಯಂತೂ ಶ್ರೀಶೈಲದ ಮಲ್ಲಿಕಾರ್ಜುನ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದು ಮಲ್ಲಿಕಾರ್ಜುನನ ಹೆಸರಿನಲ್ಲಿಯೇ ಅಂಕಿತವನ್ನಿಟ್ಟು ಕೊಂಡಿದ್ದು ವಚನಗಳನ್ನು ರಚಿಸಿದ್ದಾರೆ. ಅಕ್ಕಳು ತನ್ನ ಜೀವಿತದ ಕೊನೆಯ ಕಾಲವನ್ನು ಶ್ರೀಶೈಲದ ಕದಳಿವನದಲ್ಲಿ ಕಳೆದು ಅಲ್ಲಿಯೇ ಐಕ್ಯಳಾಗಿದ್ದಾಳೆ. ಅಕ್ಕಳ ಐಕ್ಯಸ್ಥಳವಾದ ಶ್ರೀಶೈಲದ ವರ್ಣನೆಬಗ್ಗೆ ವೀರಶೈವ ಕಾವ್ಯ ಪುರಾಣಗಳಲ್ಲಿ ವಿವರವಾಗಿ ನಮೂದಿತವಾಗಿದೆ.
    15,16 ನೇ ಶತಮಾನದ ಅಕ್ಕಳನ್ನು ಕುರಿತ ಕಾವ್ಯ ಪುರಾಣಗಳಲ್ಲಿ ಮಹಾದೇವಿಯಕ್ಕನ ಈ ದಾಂಪತ್ಯ ನಿರಾಕರಣೆ  ಕೇವಲ ಮತೀಯ ಮಡಿವಂತಿಕೆಯ ದ್ಯೋತಕವೆನ್ನಬೇಕೆ? ಅಥವಾ  ಹರಿಹರನ ನಿರೂಪಣೆ ಮಾತ್ರ ಚಾರಿತ್ರಿಕ ಸತ್ಯವೆನ್ನಬೇಕೆ? ಎಂಬ ಪ್ರಶ್ನೆ ಇನ್ನೂ ನಮಗೆ ಸಮರ್ಪಕವಾದ ಉತ್ತರ ದೊರೆತಿಲ್ಲವೆಂದೇ ಹೇಳ ಬೇಕಾಗುತ್ತದೆ. ಒಟ್ಟಾರೆ ಶರಣಸತಿ-ಲಿಂಗಪತಿ ಭಾವವನ್ನು ಬಾಲ್ಯದಲ್ಲಿ ಮೊಳೆಯಿಸಿ ಕೊಂಡು ಯೌವ್ವನದಲ್ಲಿ ಪಲ್ಲವಿಸಿ ಕೌಶಿಕನ ಕಠೋರ ವರ್ತನೆಯಿಂದ ಬಲಿತು ತನ್ನ ತೀವ್ರ ವೈರಾಗ್ಯದಿಂದಾಗಿ ವಿರಾಗಿಣಿಯಾಗಿ ಲೋಕದ ಜನರನ್ನೆಲ್ಲಾ ದಂಗು ಬಡಿಸಿ, ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಅಲೌಕಿಕ ಚೆಲುವ ಮಲ್ಲಿಕಾರ್ಜುನನ್ನು ಬಯಸಿದ ಅಕ್ಕಮಹಾದೇವಿಯ ಅಸಾಧಾರಣ ವ್ಯಕ್ತಿತ್ವವನ್ನು  ತಿಳಿಯುವಲ್ಲಿ ಕೃತಿಗಳು ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿವೆ.
 ಆಕರಗ್ರಂಥಗಳು
1.     ಉಡುತಡಿಯ ಮಹದೇವಿಯಕ್ಕನ ರಗಳೆ
    ಹರಿಹರನ ಸಮಗ್ರ ರಗಳೆಗಳು (ಸಂ: ಎಂ.ಎಂ.ಕಲಬುರ್ಗಿ)
    ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1999
2.    ಚನ್ನಬಸವಾಂಕನ ಮಹಾದೇವಿಯಕ್ಕನ ಪುರಾಣ
    ಸಂ: ಬಿ.ನಂ. ಚಂದ್ರಯ್ಯ,
    ಶರತ್ ಪ್ರಕಾಶನ, ಮೈಸೂರು 1968
3.     ಚಿಕ್ಕರಾಚನ ಮಹಾದೇವಿಯಕ್ಕನ ಸಾಂಗತ್ಯ
    ಸಂ. ಎಸ್.ವಿದ್ಯಾಶಂಕರ್
    ತರಳಬಾಳು ಪ್ರಕಾಶನ, ಸಿರಿಗೆರೆ, 1985
4.    ಎಸ್.ವಿದ್ಯಾಶಂಕರ: ನೆಲದಮರೆಯ ನಿಧಾನ
    ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು,1997
5.     ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂ.3
    ಸಂ. ಜಿ.ಎಸ್.ಶಿವರುದ್ರಪ್ಪ
    ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು,1976
 6.   ಸಿ.ನಾಗಭೂಷಣ. ಶಿವಶರಣರ ಕಾರ್ಯಕ್ಷೇತ್ರಗಳು : ಸಮೀಕ್ಷೆ
         (ಬಸವ ಪೂರ್ವ,ಬಸವಯುಗ ಹಾಗೂ ಬಸವೋತ್ತರ ಯುಗದ ಶರಣರು)
      ಡಾ.ಶ್ರೀ.ಶಿವಕುಮಾರ ಸ್ವಾಮಿಗಳ ಶತಮಾನೋತ್ಸವ ಅಭಿನಂದನಾ ಸಮಿತಿ
               ಶ್ರೀ ಸಿದ್ಧಗಂಗಾ ಮಠ, ತುಮಕೂರು.  2008
7.     ಅನಾಮಧೇಯ ಕವಿಯ ಮಹಾದೇವಿಯಕ್ಕನ ಚರಿತೆ    ಸಂ. ಎಸ್. ಉಮಾಪತಿ
    ಬಸವಪಥ, ಸಂ.30, ಸಂ.6, ಬಸವ ಸಮಿತಿ, ಬೆಂಗಳೂರು. 2008.

ಶೂನ್ಯ ಸಂಪಾದನೆಗಳ ರಚನೆಗೆ ತುಮಕೂರು ಪರಿಸರದ ಕೊಡುಗೆ


ಶೂನ್ಯ ಸಂಪಾದನೆಗಳ ರಚನೆಗೆ  ತುಮಕೂರು ಪರಿಸರದ ಕೊಡುಗೆ

   `ಶೂನ್ಯ ಸಂಪಾದನೆಯ ಮೂಲಸಾಮಗ್ರಿ ಬಿಡಿವಚನಗಳು. ಬಿಡಿವಚನಗಳಿಂದ ವಾಸ್ತವವಾಗಿ ನಡೆದಿರಬಹುದಾದ ಘಟನೆಗಳನ್ನು ನಾಟಕೀಯವಾಗಿ ಚಿತ್ರಿಸುವುದು ಶೂನ್ಯ ಸಂಪಾದನೆಯ ಪ್ರಮುಖ ಗುರಿ. ವಚನ ಕರ್ತೃಗಳು ರಚಿಸಿರುವ ಬಹುಪಾಲು ವಚನಗಳು. ಅವು ಯಾವ ಸಂದರ್ಭದಲ್ಲಿ ಹೊರಬಂದವು ಎಂಬುದಕ್ಕೆ ಸೂಚನೆಗಳು ಇಲ್ಲವೇ ಇಲ್ಲ. ಇದ್ದರೂ ಅತ್ಯಪೂರ್ವ. ಆ ಮುಕ್ತಕಗಳಂತಹ ವಚನಗಳನ್ನು ಆರಿಸಿಕೊಂಡು ಅವುಗಳನ್ನು ಒಂದು ಸಂದರ್ಭದಲ್ಲಿಟ್ಟು, ಉತ್ತರ ಪ್ರತ್ಯುತ್ತರವಾಗಿ ಜೋಡಿಸಿ ಮಧ್ಯೆ ಮಧ್ಯೆ ಸಂಕಲನಕಾರ ವಿಷಯ ಸ್ಪೃಷ್ಟತೆಗಾಗಿ ತನ್ನ ಮಾತುಗಳನ್ನು ಸೇರಿಸಿ ನಾಟಕೀಯ ಸನ್ನಿವೇಶಗಳನ್ನು ಚಿತ್ರಿಸಿರುವುದು ಶೂನ್ಯಸಂಪಾದನೆಗೆ ಒಂದು ಸ್ವತಂತ್ರ ಗ್ರಂಥದ ಸ್ಥಾನವನ್ನು ತಂದಿದೆ. ಎಂದರೆ ವಚನಕಾರರನ್ನು ಅವರು ಎದುರಿಸಿದ ಸನ್ನಿವೇಶ ಮತ್ತು ಅಲ್ಲಿ ವ್ಯಕ್ತವಾಗುವ ಅವರ ಗುಣ ಸ್ವಭಾವಗಳನ್ನು  ಅವರು ಪಡೆದ ಶೂನ್ಯದ ಲಾಭವನ್ನು ಅವರವರ ಮಾತುಗಳ ಮೂಲಕವಾಗಿಯೇ ಹೊಮ್ಮಿಸಿರುವ ಒಂದು ಅಪೂರ್ವಗ್ರಂಥ.'      ಶೂನ್ಯಸಂಪಾದನೆ ವಚನಗಳನ್ನು ಸಂಕಲನ ಮಾಡಿರುವ ಕೃತಿ. ವಚನಗಳ ಸಂಕಲನವೆನಿಸಿದ ಶೂನ್ಯ ಸಂಪಾದನೆಗಳು ಮರು ಓದಿನಿಂದ ಸೃಷ್ಟಿಯಾಗಿವೆ.  ವಚನಗಳನ್ನು ಸಂಭಾಷಣೆಯ ರೀತಿಯಲ್ಲಿ ಜೋಡಿಸಿರುವುದು ಶೂನ್ಯ ಸಂಪಾದನೆಯ ವೈಶಿಷ್ಟ್ಯ. ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ನಡೆದ ಧಾರ್ಮಿಕ ಚಿಂತನೆಯಲ್ಲಿ ನಿರ್ಮಾಣವಾದ ವಚನಗಳ ವಾಸ್ತವಿಕತೆಯನ್ನು ಹದಿನಾರನೆಯ ಶತಮಾನದಲ್ಲಿ ಪೂರಕ ಸಾಮಗ್ರಿಗಳಿಂದ ಕಟ್ಟಿಕೊಡುವ ಪ್ರಯತ್ನ ನಡೆಯಿತು. ಉಪಲಬ್ಧ ವಚನಗಳನ್ನು ಆಯಾ ಸಾಂದರ್ಭಿಕ ಹಿನ್ನಲೆಯಲ್ಲಿ ಆಡಿರಬೇಕೆಂದು ಆ ವಚನಗಳನ್ನು ವ್ಯವಸ್ಥಿತವಾಗಿ ಸಂಕಲಿಸಿದ ಪ್ರಯತ್ನವೇ ಶೂನ್ಯ ಸಂಪಾದನೆಯ ಉಗಮಕ್ಕೆ ಕಾರಣ. ಶರಣರ ಧಾರ್ಮಿಕ ಚರ್ಚೆಗಳ ಫಲವಾಗಿ ಹೊರಬಂದ ವಚನಗಳ ಸನ್ನಿವೇಶಗಳ ವಿವರಣೆಯನ್ನು ಗುರುತಿಸಬಹುದಾಗಿದೆ. ಹೆಚ್ಚಿನ ಶರಣರ ವಚನಗಳನ್ನು ಬಹುಮಟ್ಟಿಗೆ ಶೂನ್ಯಸಂಪಾದನಕಾರ ಅಳವಡಿಸಿಕೊಂಡಿದ್ದಾನೆ. ಶೂನ್ಯಸಂಪಾದನೆಗಳ ಸೃಷ್ಟಿಗೆ ಶರಣರು, ಅವರ ವಚನಗಳೇ ಆಕರ. ಹೀಗಾಗಿ ಶೂನ್ಯಸಂಪಾದನೆಗಳು ಸಿದ್ಧವಚನಗಳನ್ನು ಬಳಸಿಕೊಂಡು ಸಂವಾದರೂಪದಲ್ಲಿ ಹೆಣೆದ ಹೊಸರೀತಿಯ ಪಠ್ಯಗಳು ಎಂದು ವಿದ್ವಾಂಸರಿಂದ ಕರೆಯಿಸಿಕೊಂಡಿವೆ.
      ಶೂನ್ಯಸಂಪಾದನೆ ಆಧುನಿಕ ಮೌಲ್ಯಗಳ ಅರ್ಥದಲ್ಲಿ ಸಂವಾದವನ್ನು ಒಳಗೊಂಡಿರುವ ಪಠ್ಯವಲ್ಲ. 500 ವರ್ಷಗಳ ಹಿಂದೆ ಸಂವಾದರೂಪದ ರಚನೆಯನ್ನು ಕಲ್ಪಿಸಿಕೊಂಡ ಶೂನ್ಯಸಂಪಾದನಾಕಾರರು ಇಂದು ಘನ ವ್ಯಕ್ತಿತ್ವದವರಾಗಿ ಕಂಡು ಬರುತ್ತಾರೆ. ಶೂನ್ಯಸಂಪಾದನೆಯು ಅಪೂರ್ವ ಸಾಂಸ್ಕೃತಿಕ ಪಠ್ಯವೆಂದು ಆಧುನಿಕ ವಿದ್ವಾಂಸರಿಂದ ಗುರುತಿಸಲ್ಪಟ್ಟಿದೆ. ವಚನಕಾರರ ಜೀವನ ಹಾಗೂ ವಚನಗಳ ಮೂಲಕ ಸಾಂಸ್ಕೃತಿಕ ವಿದ್ಯಮಾನವಾಗಿ ಪರಿಣಮಿಸಿರುವ ಶೂನ್ಯ ಸಂಪಾದನೆಯು ಇಂದಿಗೂ ತನ್ನ ಮಹತ್ತರತೆಯನ್ನು ಕಾಯ್ದುಕೊಂಡಿದೆ. ಮುಕ್ತರ ಮಾರ್ಗ ವಚನಗಳನ್ನು ಉತ್ತರ-ಪ್ರತ್ಯುತ್ತರ ಸಂಬಂಧವಾಗಿ ಸೇರಿಸಿ, ಮರ್ತ್ಯಲೋಕದ ಮಹಾಗಣಂಗಳಿಗೆ ಮಹಾಪ್ರಸಂಗಮಂ ಮಾಡಿಕೊಡುವಂತಹ ಈ ಕೆಲಸವು ನಿಜವಾಗಿಯೂ ಒಂದು ಸೃಜನಶೀಲ ಸಾಹಿತ್ಯದಷ್ಟೇ ಸವಾಲಿನದಾಗಿತ್ತು. ಇದಕ್ಕೆ ಇದ್ದ ಅನುಕೂಲವೆಂದರೆ ವಚನಗಳ ಮುಕ್ತಕ ಸ್ವರೂಪ. ಒಂದು ಅರ್ಥದಲ್ಲಿ ಬಂಧನಕ್ಕೆ ಸಿಗದೆ ಬಹುಮುಖಿಯಾಗಿಯೂ ಸ್ವತಂತ್ರವಾಗಿ ಉಳಿಯುವ ವಚನಗಳ ಸ್ವಾಯತ್ತ ಸ್ವರೂಪದ ಅನುಕೂಲವೆ ಶೂನ್ಯಸಂಪಾದನೆಯ ಸೃಷ್ಟಿಗೆ ಅನುಕೂಲವಾಗಿದೆ.
      ಶೂನ್ಯಸಂಪಾದನೆಯು ಅಪೂರ್ವ ಸಾಂಸ್ಕೃತಿಕ ಪಠ್ಯವೆನಿಸಲು ಎರಡನೇ ಕಾರಣ ಅದರಲ್ಲಿರುವ ಜಾನಪದ ಪರಂಪರೆಯ ಗುಣ. ಅಂದರೆ ಹಠಮಾರಿಯಾಗದೆ ಸಹಿಸುವ, ಸರಿ ಅನ್ನಿಸಿದ್ದೆಲ್ಲವನ್ನು ಒಳಗೊಳ್ಳುವ ಗುಣ. ಒಳಗೊಂಡದ್ದನ್ನು ಅರಗಿಸಿಕೊಂಡು ಮೂರನೆಯದೊಂದನ್ನು ಹುಟ್ಟು ಹಾಕಲು ಯತ್ನಿಸುವ ಸಮನ್ವಯ ಗುಣ. ಈ ಗುಣದಿಂದ ಕೃತಿಯಲ್ಲಿ ಅಂತಿಮವಾಗಿ ವೈರುಧ್ಯಗಳು ಉಳಿದುಬಿಡಬಹುದು. ಆದರೆ ಈ ವೈರುಧ್ಯಗಳನ್ನು ಚಾರಿತ್ರಿಕ ಒತ್ತಡಗಳ ಫಲವೆಂದು ಭಾವಿಸಿದರೆ, ಅವುಗಳ ಅರ್ಥವಂತಿಕೆಯನ್ನು ಅರಿಯುವ ಕಿಡಕಿ ತೆರೆಯುತ್ತದೆ. ಇಷ್ಟಾಗಿಯೂ ಶೂನ್ಯಸಂಪಾದನೆಯು ಆಧುನಿಕ ಮೌಲ್ಯಗಳ ಅರ್ಥದಲ್ಲಿ ಸಂವಾದವನ್ನು ಒಳಗೊಂಡಿರುವ ಪಠ್ಯವೇನಲ್ಲ. ಆದರೆ ಕನ್ನಡದಲ್ಲಿ ಕಳೆದ 500 ವರುಷಗಳ ಹಿಂದೆ ಇಂತಹದೊಂದು ಸಂವಾದ ರೂಢಿ ರಚನೆಯನ್ನು ಕಲ್ಪಿಸಿಕೊಂಡ ಮನಸ್ಸು ಮಾತ್ರ ಈಗಲೂ ತುಂಬ ದೊಡ್ಡದಾಗಿ ಕಾಣುತ್ತದೆ. ಗತಕಾಲದ ಸಾಧನೆಯನ್ನು ಅದರ ಗ್ರಹಿಕೆಯೊಂದಿಗೆಯೂ ವರ್ತಮಾನದ ಸಾಧನೆಯನ್ನು ಅದರ ಮಿತಿಗಳೊಂದಿಗೂ ಸಂವಾದಮಾಡುವವರಿಗೆ ಶೂನ್ಯಸಂಪಾದನೆ ಖಂಡಿತವಾಗಿಯೂ ಪ್ರೇರಿಸುತ್ತದೆ.   
    ತುಮಕೂರು ಜಿಲ್ಲೆಯು ವೀರಶೈವ ಸಾಹಿತ್ಯ-ಸಂಸ್ಕೃತಿಯ ಪುನರುಜ್ಜೀವನ ಕಾಲದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ. ವಚನ ರಚನೆಯ ಪರಂಪರೆಯಲ್ಲಿಯೂ  ತನ್ನದೇ ಆದ ಕೊಡುಗೆಯನ್ನು ನೀಡಿದೆ. ಕಲ್ಯಾಣ ಕ್ರಾಂತಿಯ ವಿಪ್ಲವದ ನಂತರ ತುಮಕೂರು ಪರಿಸರದ ಎಡೆಯೂರು, ಗುಬ್ಬಿ, ಗೂಳೂರು, ಅದರಂಗಿ ಸುತ್ತಮುತ್ತಲ ಪರಿಸರವು ಸಂಘಟನೆಯ ಪ್ರಧಾನ ಕೇಂದ್ರಗಳಾಗಿದ್ದು ವೀರಶೈವ ಧರ್ಮದ ಅಧ್ಯಯನ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ಸೂಕ್ತವಾದ ಪರಿಸರವನ್ನು ಕಲ್ಪಿಸಿಕೊಟ್ಟವು. ಪರಿಣಾಮ ವೀರಶೈವ ಸಾಹಿತ್ಯ ಹುಲುಸಾಗಿ ಸೃಷ್ಟಿಯಾಯಿತು.  ಜಿಲ್ಲೆಯ ಶರಣರು ವಚನ ಸಾಹಿತ್ಯ ಪರಂಪರೆಯ ದ್ವಿತೀಯ ಘಟ್ಟದಲ್ಲಿ ವಚನಗಳನ್ನು ರಚಿಸುವುದರ ಮೂಲಕ ದ್ವಿತೀಯ ಘಟ್ಟದ ಪರಂಪರೆಯ ಪ್ರವರ್ತಕರಾಗಿದ್ದಾರೆ. ಹಸ್ತಪ್ರತಿಗಳ ಸಂಕಲನ, ಪರಿಷ್ಕರಣ, ಸಂಪಾದನಾ ಚಟುವಟಿಕೆಗೆ ತುಮಕೂರು ಜಿಲ್ಲೆಯ ಪರಿಸರ ಅದ್ವಿತೀಯವಾದ ಕೊಡುಗೆಯನ್ನು ನೀಡಿದೆ. ಅಭಿನವ ಅಲ್ಲಮರೆಂದು ಖ್ಯಾತರಾದ ತೋಂಟದ ಸಿದ್ಧಲಿಂಗಯತಿಗಳು ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ ಗ್ರಂಥಸಂಪಾದನೆಯ ವಿಧಿವಿಧಾನಗಳನ್ನು ಅನ್ವಯಿಸಿ ವಚನಗಳನ್ನು ಸಂಕಲಿಸುವ ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ಕೈಗೊಂಡಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ವಿಶಿಷ್ಟವಾದುದಾಗಿದೆ.     ವಚನ ರಚನೆ ಹಾಗೂ ವಚನ ರಕ್ಷಣೆ,ವ್ಯಾಖ್ಯಾನ ಎರಡರಲ್ಲಿಯೂ ಸ್ಥಾನ ಪಡೆದಿದ್ದಾರೆ. ವಚನಗಳನ್ನು ಸಂಕಲಿಸುವ, ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ತಮ್ಮ ಶಿಷ್ಯಪ್ರಶಿಷ್ಯ ಪರಂಪರೆಯ ಮೂಲಕ ಅನುಷ್ಠಾನಗೊಳಿಸಿದರು. ಕಲ್ಯಾಣ ಕ್ರಾಂತಿಯ ವಿಪ್ಲವದನಂತರ ಅಳಿದುಳಿದ ವಚನಸಾಹಿತ್ಯವನ್ನು ಸಂರಕ್ಷಿಸುವ ಶೋಧಿಸುವ, ಸಂಕಲಿಸುವ, ವ್ಯಾಖ್ಯಾನಿಸುವ ಮೂಲಕ ಕಾಪಾಡಿಕೊಂಡು ಬರಲು ಜಿಲ್ಲೆಯ ವಚನಕಾರರು, ಸಂಕಲನಕಾರರು ಕಾರಣರಾಗಿದ್ದಾರೆ.  ಈ ಕಾರ್ಯ ವಿಧಾನದಲ್ಲಿ ಆಧುನಿಕ ಸಂಶೋಧನೆ ವಿಧಿವಿಧಾನಗಳಾದ ಆಕರ ಸಂಗ್ರಹ, ಸಂಯೋಜನೆ, ವಿಶ್ಲೇಷಣೆ ಎಂಬ ಮೂರು ಹಂತಗಳನ್ನು ಗುರುತಿಸಬಹುದಾಗಿದೆ. ಅಲ್ಲಲ್ಲಿ ಅಡಗಿದ್ದ   ವಚನಗಳನ್ನು   ಶೋಧಿಸುವಲ್ಲಿ,   ಸಂಗ್ರಹಿಸುವಲ್ಲಿ, ನಾಮಾನುಗುಣವಾಗಿ, ವಿಷಯಾನುಗುಣವಾಗಿ ಜೋಡಿಸುವಲ್ಲಿ,ತಾತ್ವಿಕ ದೃಷ್ಟಿಯಿಂದ ಸಂಕಲಿಸುವಲ್ಲಿ, ಸಂವಾದ ರೂಪದಲ್ಲಿ ಸಂಯೋಜಿಸಿ ಸಂಪಾದಿಸುವಲ್ಲಿ,ವಚನಗಳ ಅಂತರಾರ್ಥ ಅರಿತು ವ್ಯಾಖ್ಯಾನಿಸುವಲ್ಲಿ ಆಧುನಿಕ ಗ್ರಂಥ ಸಂಪಾದನೆಯ ಸರ್ವ ಸಾಮಾನ್ಯ ತತ್ವಗಳನ್ನೇ ಅನುಸರಿಸಿದ್ದಾರೆ.  ಪಾಶ್ಚಾತ್ಯರ ಮೂಲಕ ಆಧುನಿಕ ಗ್ರಂಥ ಸಂಪಾದನೆಯ  ತತ್ವಗಳು ನಮ್ಮಲ್ಲಿಗೆ ಪ್ರವೇಶಿಸುವ ಪೂರ್ವದಲ್ಲಿಯೇ ಆ ತತ್ವಗಳು ಜಿಲ್ಲೆಯ ಸಂಕಲನಕಾರರಿಗೆ ತಿಳಿದಿದ್ದವು ಎಂಬುದು ದಾಖಲಾರ್ಹ ಸಂಗತಿಗಳಾಗಿವೆ. ಈ ವಿಧಿ ವಿಧಾನವು ಸಂಶೋಧನೆಯಲ್ಲಿಯ ಆಕರ ಶೋಧನಿಷ್ಠ ಸಂಶೋಧನಾ ಪರಿಕಲ್ಪನೆಯ ಪ್ರತೀಕವಾಗಿದೆ.
   ಆಕರ ವಸ್ತು ವಿನ್ಯಾಸ, ನಿರೂಪಣ ಕ್ರಮ, ನಾಟಕೀಯತೆಗಳಲ್ಲಿ ತನ್ನದೇ  ಆದ ವೈಶಿಷ್ಠ್ಯವನ್ನು ಪಡೆದು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟಸ್ಥಾನ ಗಳಿಸಿರುವ ಶೂನ್ಯ ಸಂಪಾದನೆಗಳು ವಚನ ಸಂಕಲನ ಗ್ರಂಥಗಳಲ್ಲಿಯೇ ಮಹತ್ತರವಾಗಿದ್ದು  ತುಮಕೂರು ಜಿಲ್ಲೆಯ ತೋಂಟದಸಿದ್ಧಲಿಂಗಯತಿಗಳ ಶಿಷ್ಯರ ಮೂಲಕ ಸಂಪಾದನೆಗೊಂಡವುಗಳಾಗಿವೆ.
   ಅಚ್ಚರಿಯ ಸಂಗತಿ ಎಂದರೆ ನಾಲ್ಕು ಶೂನ್ಯಸಂಪಾದನೆಗಳು ಜಿಲ್ಲೆಯ ಪರಿಸರದಲ್ಲಿಯೇ ರಚಿತವಾದವುಗಳಾಗಿವೆ ಎಂಬುದು. ಮೊದಲನೆ ಶೂನ್ಯ ಸಂಪಾದನಾಕಾರ ಶಿವಗಣ ಪ್ರಸಾದಿಮಹದೇವಯ್ಯನನ್ನು ಹೊರತು ಪಡಿಸಿ ಉಳಿದ ನಾಲ್ವರು ಶೂನ್ಯಸಂಪಾದನಾಕಾರರು ಜಿಲ್ಲೆಯ ಪರಿಸರಕ್ಕೆ ನೇರವಾಗಿ ಸಂಬಂಧಪಟ್ಟವರಾಗಿದ್ದಾರೆ. ಶೂನ್ಯಸಂಪಾದನೆಯ ಮೂಲ ಮತ್ತು ಪರಿಷ್ಕರಣಗಳು ಗೂಳೂರು, ಗುಬ್ಬಿ, ಅದರಂಗಿ ಮತ್ತು ಗುಮ್ಮಳಾಪುರ ಇವುಗಳ ಸುತ್ತಲೇ ಅಂದರೆ ತುಮಕೂರು ಜಿಲ್ಲೆಯ ಪರಿಸರದಲ್ಲಿ ಸೃಷ್ಟಿಯಾದವುಗಳಾಗಿರುವುದು.  ಇತ್ತೀಚಿನ ಸಂಶೋಧನೆಗಳು ಕೆಂಚವೀರಣ್ಣೊಡೆಯನು ಶೂನ್ಯಸಂಪಾದನೆಯನ್ನು ರಚಿಸಿದ್ದಾನೆನ್ನುವ ಎಂ.ಆರ್.ಶ್ರೀನಿವಾಸ ಮೂರ್ತಿ ಅವರ ವಾದವನ್ನು ಮತ್ತೇ ಜೀವಂತಗೊಳಿಸಿವೆ.  ಶೂನ್ಯಸಂಪಾದನೆಯಂತಹ ಮಹಾಪ್ರಸಂಗವೊಂದು ರೂಪುಗೊಂಡಿದ್ದು, ಅನಂತರ ಅದು ಅಂದಿನ ಧಾರ್ಮಿಕ ಅಗತ್ಯಗಳನ್ನು ಪೂರೈಸಲೆಂಬಂತೆ ಹೆಚ್ಚು ಮತೀಯವಾಗಿ ಪರಿಷ್ಕರಣಗೊಂಡಿದ್ದು, ಅದು ಮತ್ತೆ ಮಹಾದೇವಯ್ಯನ ದರ್ಶನದ ಜಾಡನ್ನೇ ಹಿಡಿದು ಕಲಾತ್ಮಕತೆಯನ್ನು ಒಳಗೊಳ್ಳುತ್ತಲೇ ತನ್ನ ಪರಿಧಿಯೊಳಕ್ಕೆ ಶರಣರ ಮಹಾದರ್ಶನದ ಎಳೆಗಳನ್ನು ಒಳಗೊಂಡಿದ್ದು ತುಮಕೂರು ಪರಿಸರದ ಪ್ರದೇಶದ ಸಾಂಸ್ಕೃತಿಕ ಮಹತ್ವವನ್ನು ತಿಳಿಯಲು ಸಾಧ್ಯವಾಗುತ್ತದೆ.
    ಇತ್ತೀಚೆಗೆ ಮೊದಲನೆ ಶೂನ್ಯಸಂಪಾದನಕಾರ ಶಿವಗಣ ಪ್ರಸಾದಿ ಮಹಾದೇವಯ್ಯನು ಜಿಲ್ಲೆಯ ಪರಿಸರದವನೇ ಆಗಿರಬೇಕು ಎಂಬುದರ ಬಗೆಗೆ ಹೆಚ್ಚಿನ ಸಂಶೋಧಕರ ನಿಲುವು ವ್ಯಕ್ತವಾಗಿದೆ. ಏಕೆಂದರೆ ನಂತರದ ಕಾಲದಲ್ಲಿ ಈತನ ಶೂನ್ಯಸಂಪಾದನೆಯನ್ನು ಪರಿಷ್ಕರಿಸಿದ ಮೂವರು ಶೂನ್ಯಸಂಪಾದನಕಾರರು ಜಿಲ್ಲೆಯ ಪರಿಸರಕ್ಕೆ ನೇರವಾಗಿ ಸಂಬಂಧಪಟ್ಟವರು ಆಗಿರುವುದು. ಎರಡನೇ ಶೂನ್ಯಸಂಪಾದನಕಾರನಾದ ಹಲಗೆಯಾರ್ಯನು ತುಮಕೂರು ಜಿಲ್ಲೆಯ ಪರಿಸರದ ಅದರಂಗಿಯವನು ಎಂಬುದು ಇತ್ತೀಚಿನ ಸಂಶೋಧನೆಯಿಂದ ದೃಢಪಟ್ಟಿದೆ. ಬಿ.ನಂಜುಂಡ ಸ್ವಾಮಿಯವರು ಎರಡನೇ ಶೂನ್ಯಸಂಪಾದನಾಕಾರನಾದ  ಹಲಗೆಯಾರ್ಯನೂ ಶಿವಗಂಗೆ ಬೆಟ್ಟದ ಮೇಲಣ ಗವಿಮಠಕ್ಕೆ ಅಧ್ಯಕ್ಷನಾಗಿದ್ದನೆಂದೂ ಆತನಿಂದ ಅದರಂಗಿ ಗ್ರಾಮ ನಿರ್ಮಾಣವಾಯಿತೆಂದೂ, ಅಲ್ಲಿಯ ಮಠದ ಸೋಪಾನ ದ್ವಾರದ ಎಡಭಾಗದಲ್ಲಿಯ ಶಿಲಾಶಾಸನದಲ್ಲಿ ಹಲಗೆಯಾಚಾರ್ಯರ ಪುರವರ್ಗ ಎಂಬುದಾಗಿ ಉಲ್ಲೇಖ ವಿರುವುದಾಗಿ ತಮ್ಮ ` ಹಲಗೆಯಾರ್ಯನ ಬಗೆಗಿನ ಇತ್ತೀಚಿನ ಸಂಶೋಧನೆಗಳುಲೇಖನದಲ್ಲಿ ತಿಳಿಸಿದ್ದಾರೆ. ಹಲಗೆಯಾರ್ಯನು ಗುಬ್ಬಿಯ ಮಲ್ಲಣಾರ್ಯನ ಗುರುವೂ ಆಗಿದ್ದರ ಜೊತೆಗೆ ಆತನಿಂದ ವೀರಶೈವಾಮೃತ ಮಹಾಪುರಾಣವನ್ನು ಬರೆಯಿಸಿದುದಾಗಿ ತಿಳಿದು ಬರುತ್ತದೆ. ವೀರಶೈವ ಸಿದ್ಧಾಂತ ನಿರೂಪಣೆಯನ್ನು ಗುರು ಶೀಲವಂತದೇವರು ಹಲಗೆದೇವರ ಪ್ರಾರ್ಥನೆಯ ಮೇರೆಗೆ ಅವರಿಗೆ ಬೋಧಿಸಿದ್ದರು. ಅದನ್ನು ಹಲಗೆ ದೇವರು ಕೆಂಚವೀರಣ್ಣೊಡೆಯರಿಗೆ ಜ್ಯೋತಿಯಮ್ಮನಾಲಯದಲ್ಲಿ, ಮಹಾವೀರ ಶೀಲಸಂಪನ್ನ ಕಲ್ಲೇಶ್ವರ, ಸೈಂಧವದ ಶಾಂತದೇವರು, ಕಲ್ಯಾಣ ಮಲ್ಲೇಶ್ವರರು ನಂಜಯ್ಯ, ಸಪ್ಪೆಯ ಮಲ್ಲಿಕಾರ್ಜುನ, ಸಮಾಧಿ ಸಿದ್ಧಮ್ಮ, ಸಪ್ಪೆಯಮ್ಮ ಮುಂತಾದವರ ಸಮ್ಮುಖದಲ್ಲಿ ವಿವರಿಸಿದರು. ವೀರಶೈವಧರ್ಮ ತತ್ವಸಿದ್ಧಾಂತಗಳನ್ನು ಒಳಗೊಂಡ ಕೃತಿಯನ್ನು ರಚಿಸುವ ಮಹಾನುಭಾವರು ಯಾರು ಎಂದು ಅಂದಿನ ಧಾರ್ಮಿಕ ಮುಖಂಡರೂ ಗುರುವರ್ಗದವರೂ ಸಮಾಲೋಚಿಸಿ ಹಲಗೆಯಾರ್ಯರು ತಮ್ಮ ಶಿಷ್ಯನಾದ ಮಲ್ಲಣಾರ್ಯನೇ ಸಮರ್ಥ ಎಂದು ನಿಶ್ಚಯಿಸಿ ಆ ಮಹತ್ ಕಾರ್ಯವನ್ನು ಮಲ್ಲಣಾರ್ಯನಿಗೆ ವಹಿಸಿದ ವಿವರವು ಕಾವ್ಯದ ಪದ್ಯದಿಂದಲೇ (ಕಾಂ.1-ಸಂ.1-ಪ.48) ತಿಳಿದು ಬರುತ್ತದೆ.
ಈ ವೀರಾಶೈವಾಮೃತಾಖ್ಯ ಸಂಗ್ರಹವನೀ                               
ಭೂವಳಯದಲ್ಲಿ ಕೃತಿಯಂಮಾಳ್ಪ ಶಿವಕವಿಯ
ದಾವನೆಂದರಿದು ಹಲಗೆಯ ದೇಶಿಕಂ ಮಲ್ಲಣಾರ್ಯನಂ ಕರೆದು ನುಡಿದಂ
ನಾವು ಪೇಳ್ವೀಬೋಧೆಯಂ ಪದನ ಮಾಡುವೊಡೆ
ಪಾವನ ಚರಿತ್ರ ಕೇಳ್ ನೀನೆ ಯೋಗ್ಯಕಣ  ( ಕಾ.1.ಸಂ.1 ಪ.48)ಎಂದು ವಿರಕ್ತಾಧೀಶ್ವರ ಹಲಗೆದೇವರು ವೀರಶೈವಾಮೃತ ಪುರಾಣ ರಚಿಸಲು ಮಲ್ಲಣಾರ್ಯರಿಗೆ ಪ್ರೇರಣೆ ಯಿತ್ತರು. ಗುಬ್ಬಿಯ ಮಲ್ಲಣಾರ್ಯರು ಇದಕ್ಕೆ ಪದನಂ ಮಾಡಿರುವರು. ಅಂದರೆ ಪದ್ಯದಲ್ಲಿ ಕೃತಿ ವಿರಚನೆ ಮಾಡಿರುವರು. ಈ ಪುರಾಣ ಕಾವ್ಯದಲ್ಲಿ ಹಲಗೆದೇವರು ಕೆಂಚವೀರಣ್ಣೊಡೆಯರಿಗೆ ಹೇಳಿದಂತೆ ಹಲವೆಡೆ ಉಲ್ಲೇಖವಿದೆ. ಹಲಗೆದೇವರು ವೀರಶೈವ ಸಿದ್ಧಾಂತವನ್ನು ಅದರ ಹಿನ್ನೆಲೆ ಮುನ್ನೆಲೆಗಳನ್ನು ವಿವರಿಸಿದ್ದು ಅದನ್ನು ಕರಗತ ಮಾಡಿಕೊಂಡು ಸ್ವಾನುಭವದಿಂದ ಮಲ್ಲಣಾರ್ಯನು ಈ ಬೃಹತ್ ಕಾವ್ಯವನ್ನು ರಚಿಸಿದ್ದಾನೆ. ಈ ವಿವರಗಳು ಹಲಗೆಯಾರ್ಯರೂ ಜಿಲ್ಲೆಯ ಪರಿಸರಕ್ಕೆ ಸಂಬಂದಪಟ್ಟವರು  ಎಂಬುದಕ್ಕೆ ಪುರಾವೆ ದೊರೆತಂತಾಗಿದೆ.
      ಶೂನ್ಯಸಂಪಾದನೆಯ ಮೂರು ಪರಿಷ್ಕರಣಗಳು ನಡೆಯುವ ಸಂದರ್ಭದಲ್ಲಿ ಮತ್ತು ಆ ಕಾಲದಲ್ಲಿ ಸಾಂಸ್ಕೃತಿಕ ಮಹತ್ವವನ್ನು ಮತ್ತು ಪ್ರಭಾವವನ್ನು ಪಡೆದಿದ್ದ ಎಡೆಯೂರು ಸಿದ್ಧಲಿಂಗೇಶ್ವರರು ಮತ್ತು ಬೋಳಬಸವೇಶ್ವರರು ಕನ್ನಡನಾಡಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಜೀವನದ ಮೇಲೆ ವ್ಯಾಪಕವಾದ ಪ್ರಭಾವವನ್ನು ಬೀರಿದವರಾಗಿ ಕಂಡು ಬರುತ್ತಾರೆ. ಮೂರನೇ ಮತ್ತು ನಾಲ್ಕನೇ ಶೂನ್ಯಸಂಪಾದನಕಾರರಾದ ಗುಮ್ಮಳಾಪುರದ ಸಿದ್ಧಲಿಂಗಯತಿ ಹಾಗೂ ಗೂಳೂರು ಸಿದ್ಧವೀರಣ್ಣೊಡೆಯರು ನೇರವಾಗಿ ತೋಂಟದ ಸಿದ್ಧಲಿಂಗಯತಿಗಳ ಶಿಷ್ಯ ಮತ್ತು ಪ್ರಶಿಷ್ಯರಾಗಿದ್ದು  ಜಿಲ್ಲೆಗೆ ಸಂಬಂಧಪಟ್ಟವರಾಗಿದ್ದಾರೆ. ಜೊತೆಗೆ ಗುಮ್ಮಳಾಪುರದ ಸಿದ್ಧಲಿಂಗಯತಿಯು ಶೂನ್ಯಸಂಪಾದನೆಯಲ್ಲಿ ತನ್ನ ಬಗೆಗೆ ` ಅನಾದಿ ಪರಶಿವ ತಾನೆ ಲೀಲಾ ಕ್ರೀಡೆಗೋಸ್ಕರ ಮರ್ತ್ಯಕ್ಕೆ ಬಿಜಯಂಗೈದ ಕರಚರಣ ಅವಯವಮಂ ಧರಿಸಿದ ತೋಂಟದ ಸಿದ್ಧೇಶ್ವರನ  ವರಪುತ್ರನಾಗಿ ಜಗಹಿತಾರ್ಥವಾಗಿ ಗುಮ್ಮಳಾಪುರದ ಸಿದ್ಧಲಿಂಗದೇವರೆಂಬ ನಾಮವಿಡಿದು ಮತ್ತು ಶ್ರೀಮದ್ದೇಶಿಕ ಚಕ್ರವರ್ತಿಯೆನಿಪಾ ಸತ್ನೀರ್ತಿಕಾಂತಂ ಬುಧಸ್ತೋಮಾಂಬೋನಿಧಿ ಪೂರ್ಣಚಂದ್ರನನಿಶಂ ಶ್ರೀ ತೋಂಟದಾರ್ಯಂಗೆ ಸತ್ಕ್ರೀಯಂಬೆತ್ತಗದೂರ ಬೋಳಬಸವೇಶಾಚಾರ್ಯ ಕಾರುಣ್ಯದಿಂ ಭೌಮಂ ಸಿದ್ಧಸುಲಿಂಗ ಪೇಳ್ದನೊಲವಿಂದೀ ಶೂನ್ಯಸಂಪಾದನೆಯಂ’ ಎಂದು ಹಾಗೂ ಕೃತಿಯ ಕೊನೆಯಲ್ಲಿ  ಅನಾದಿ ಪರಶಿವ ತಾನೆ ತೋಂಟದ ಸಿದ್ಧೇಶ್ವರದೇವರ ದಿವ್ಯಶ್ರೀಪಾದಕ್ಕೆ ಸಮರ್ಪಿಸಿದ ಶೂನ್ಯ ಸಂಪಾದನೆ ಎಂದು  ಹೇಳಿಕೊಂಡಿದ್ದಾನೆ.   ಜೊತೆಗೆ ಸಮಾಪ್ತಿ ಕಂದ ಪದ್ಯ 4 ರಲ್ಲಿ, ತೋಂಟದ ಸಿದ್ಧೇಶ್ವರನ ಪಾದಮೂಲದ ಬಳಿ ಕುಳಿತ ಗುಮ್ಮಳಾಪರಾಧೀಶನಾದ ತಾನು ಮೀಟೆನಿಸುವ ವಚನಾಮೃತದೂಟವ(ಶೂನ್ಯ ಸಂಪಾದನೆಯನ್ನು) ಶರಣಜನರ ಕರ್ಣಕ್ಕಿತ್ತುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಕ್ರಿ.. 1580 ರ ಎಡೆಯೂರು ಶಿಲಾಶಾಸನದಲ್ಲಿ ತೋಂಟದ ಸಿದ್ಧಲಿಂಗ ಯತಿಗಳ  ಜೊತೆಗೆ ಇದ್ದ ಇತರ ವಿರತರುಗಳ ಜೊತೆ ಗುಮ್ಮಳಾಪುರದ ಸಿದ್ಧಲಿಂಗರೂ ಇದ್ದರು ಎಂಬ ವಿವರ ಹಾಗೂ ಸಿದ್ಧನಂಜೇಶನ ರಾಘವಾಂಕ ಚರಿತದಲ್ಲಿಯ,  ತುಮಕೂರಿನಲ್ಲಿ ನಡೆದ  ತೋಂಟದ ಸಿದ್ಧಲಿಂಗರ ಮೆರವಣಿಗೆಯಲ್ಲಿ ಗುಮ್ಲಾಪುರದ ಸಿದ್ಧಲಿಂಗನೂ ಭಾಗವಹಿಸಿದ್ದನೆಂಬ ಹೇಳಿಕೆಯು ತೋಂಟದ ಸಿದ್ಧಲಿಂಗ ಯತಿಗಳ ಪರಂಪರೆಯವನು ಎಂಬುದನ್ನು ಸ್ಥಿರೀಕರಿಸುತ್ತದೆ.  ಜೊತೆಗೆ  ತುಮಕೂರು ಜಿಲ್ಲೆಯಲ್ಲಿ ದೊರೆತ ಜಕ್ಕಣಾರ್ಯ ಸಂಕಲಿತ ಏಕೋತ್ತರ ಶತಸ್ಥಲ ಹಸ್ತಪ್ರತಿಗೆ ಸಂಬಂಧಿಸಿದ ಪುಷ್ಪಿಕೆಯ ಆದಿಯಲ್ಲಿ  
 ಶ್ರೀ ಗುಮಳಾಪುರ ಸಿದ್ಧಲಿಂಗಾಯ ನಮಃ| ಯೆಕೋತ್ತರ ಸ್ವರವಚನ|
 ಪಿಂಡಸ್ಥಲ ರಾಗಮಧುಮಾಧವಿ ಬಿಂದು-ವಿನ್ನಾಣದೊಳಗಂದವಿಟ್ಟಿಹ..........ಎಂದು
ಅಂತ್ಯದಲ್ಲಿ......ಹೆಬ್ಬೂರ ದೇವರು ಬರದ್ದು ಗುರುಲಿಂಗವೇ ಗತಿ, ಮತಿ, ಶುಭಮಸ್ತು, ನಿರ್ವಿಘ್ನಮಸ್ತು ಗುಮ್ಮಳಾಪುರದ ಸಿದ್ಧಲಿಂಗದೇವರ ಪಾದವೆ ಗತಿ ಮತಿ ಅಯ್ಯ.......ಗುಂಮಳಾಪುರಾಧಿಪ ಸಿದ್ಧಲಿಂಗಾಯ ನಮಃ  ಎಂದಿದೆ. ಹಾಗೆಯೇ ಅದೇ ಕಟ್ಟಿನಲ್ಲಿಯ ಕೊನೆಯ ನಾಲ್ಕುಗರಿಗಳಲ್ಲಿ ವಾರ್ತೆ ಸೋಮಣ್ಣನ `ಪಂಚೀಕರಣ ಪದಗಳು' ಪರಿವರ್ಧಿನಿಷಟ್ಪದಿಯ ಕೃತಿಯ ಆದಿಯಲ್ಲಿ ಶ್ರೀಗುರುಗುಮ್ಮಳಾಪುರ ಸಿದ್ಧಲಿಂಗಾಯ ನಮಃ ಎಂದಿದೆ.  ತುಮಕೂರು ಜಿಲ್ಲೆಯ ಈ ಹಸ್ತಪ್ರತಿ ಪುಷ್ಟಿಕೆಗಳಲ್ಲಿಯ ಉಲ್ಲೇಖಗಳು ಶೂನ್ಯ ಸಂಪಾದನಾಕಾರ ಗುಮ್ಮಳಾಪುರ ಸಿದ್ಧಲಿಂಗಯತಿಗೂ ತುಮಕೂರು ಜಿಲ್ಲೆಯ ಪರಿಸರಕ್ಕೂ ಇದ್ದ ನಿಕಟ ಸಂಪರ್ಕದ ಬಗೆಗೆ ಹಾಗೂ  ತೋಂಟದಸಿದ್ಧಲಿಂಗಯತಿಗಳ ಶಿಷ್ಯ ಪರಂಪರೆಯವನು ಎಂಬುವುದಕ್ಕೆ ಪುರಾವೆಯನ್ನು ಒದಗಿಸುತ್ತದೆ.
        ಗೂಳೂರು ಸಿದ್ಧವೀರೇಶ್ವರದೇವರು ತೋಂಟದ ಸಿದ್ಧಲಿಂಗಯತಿಗಳ ಶಿಷ್ಯರಾದ ನಾಗವಲ್ಲಿಯ ಬೋಳಬಸವರ ಶಿಷ್ಯರಾಗಿದ್ದು, ಐದನೆಯ ಶೂನ್ಯಸಂಪಾದನೆಯ ಸಂಕಲನಕಾರರಾಗಿದ್ದಾರೆ.  ಗುಮ್ಮಳಾಪುರದ ಸಿದ್ಧಲಿಂಗರ ಪ್ರಭಾವ ತನ್ನ ಮೇಲೆ ಆಗಿರುವ ಬಗೆಗೆ ಸ್ವತಹ ಗೂಳೂರುಸಿದ್ಧವೀರಣ್ಣೊಡೆಯನೇ ಕೃತಿಯ  ಕೊನೆಯಲ್ಲಿ ಉಲ್ಲೇಖಿಸಿದ್ದಾನೆ.  ಗೂಳೂರುಸಿದ್ಧವೀರಣ್ಣೊಡೆಯನು ತನ್ನ ಕೃತಿಯ ಸಮಾಪ್ತಿ ವಾಕ್ಯದಲ್ಲಿ ಬರುವ ಗದ್ಯಭಾಗ ಮತ್ತು  ಅನಂತರ ಬರುವ ಮೂರು ವೃತ್ತ ಮತ್ತು ಕಂದಪದ್ಯಗಳಲ್ಲಿ ತನ್ನ ಕೃತಿ ಬಗ್ಗೆ ಮತ್ತು ಗುರುಪರಂಪರೆಯ ಬಗೆಗೆ ವಿಸ್ತಾರವಾಗಿ ಹೇಳಿಕೊಂಡಿದ್ದಾನೆ.  ಇವರು ಬೋಳಬಸವೇಶ್ವರರಾದ ಮೇಲೆ ಅನುಕ್ರಮವಾಗಿ ಶೂನ್ಯಪೀಠದ ಗಾದಿಗೇರಿದವರು. ಇವರು ಶೂನ್ಯಸಂಪಾದನೆಯ ಪರಿಷ್ಕರಣವನ್ನು ಕೈಗೆತ್ತಿಕೊಂಡಿದ್ದು ಗಮನಾರ್ಹವಾದುದಾಗಿದೆ.  ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯನ್ನು ಆಧಾರವಾಗಿಟ್ಟುಕೊಂಡು ` ಇಲ್ಲಿ ವಚನಕ್ರಮ ತಪ್ಪಿದಡೆ ನಿಮ್ಮ ಪರಿಜ್ಞಾನದಿಂದ ತಿದ್ದಿಕೊಂಬುದೆಂದು ಎನಲಾಗಿ ಆ ವಾಕ್ಯವಿಡಿದು ಗುಮ್ಮಳಾಪುರದ ಸಿದ್ಧಲಿಂಗದೇವರು, ಅಲ್ಲಿ ಸಿದ್ಧರಾಮಯ್ಯದೇವರಿಗೆ ದೀಕ್ಷಾಕ್ರಮವಿಲ್ಲದಿರಲು, ಬಸವಾದಿ ಪ್ರಮಥರ ವಚನ ಪ್ರಸಿದ್ಧವಾಗಿ ಸೇರಿಸಿದರು. ಆ ಪರಿಯಲೆ ಅನಿರ್ವಾಚ್ಯ ಪರಂಜ್ಯೋತಿಸ್ವರೂಪ ಷಟ್‍ಸ್ಥಲ ಸಂಪನ್ನ ಷಡುಲಿಂಗಾಂಗಭರಿತ,ಶರಣ ಜನಬಾಂಧವ, ಶರಣಜಲಹೃತ್ಕಮಲ ಕರ್ಣಿಕಾವಾಸ ಅನಾದಿ ಪರಶಿವನೆನಿಸುವ ಸಿದ್ಧಲಿಂಗೇಶ್ವರನ ಕೃಪಾಕಟಾಕ್ಷ ಪಾತ್ರರಾದ ಬೋಳಬಸವೇಶ್ವರನು, ಆ ಬೋಳಬಸವೇಶ್ವರನ ಮಹಾಜ್ಞಾನಾನುಭಾವ ಪ್ರಸನ್ನತಿಕೆಯಿಂದ ಗೂಳೂರು ಸಿದ್ಧವೀರಣ್ಣೊಡೆಯರು ಈ ಶೂನ್ಯಸಂಪಾದನೆಯಂ ರಚಿಸಿರುವುದಾಗಿ ಹೇಳಿಕೊಂಡಿದ್ದಾನೆ. ತೋಂಟದ ಸಿದ್ಧಲಿಂಗನ ಶಿಷ್ಯನಾದ ಬೋಳಬಸವೇಶಾರ್ಯನ ಕರುಣೆಯಿಂದ ಈ ಕೃತಿಯನ್ನು ರಚಿಸಿದ್ದಾಗಿ ಹೇಳಿದರೂ ಕೊನೆಯ ಕಂದ ಪದ್ಯದಲ್ಲಿ ಈತ ತನ್ನನ್ನು ` ಗುರುತೋಂಟದ ಸಿದ್ಧೇಶನ ಚರಣಾಂಬೋಜಾತಮಂ ಸ್ಥರೀಕೃತ ಚಿತ್ತೋತ್ಕರ ಸಿದ್ಧವೀರಯೋಗೀಶ್ವರ ಎಂದು ಕರೆದುಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಸಿದ್ಧವೀರಣಾರ್ಯನು ತೋಂಟದ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯಪರಂಪರೆಯಲ್ಲಿಯೇ ಬಂದು ಅವರ ಪ್ರಶಿಷ್ಯರಾಗಿ ಗುಮ್ಮಳಾಪುರ ಸಿದ್ಧಲಿಂಗಯತಿಗಳ ತರುವಾಯ ಶೂನ್ಯಪೀಠದ ಅಧ್ಯಕ್ಷರಾಗಿದ್ದಾರೆ. ಈತನು ತನ್ನ ಗುರುವಿನ ಹೆಸರನ್ನು ಹೇಳುವಾಗ ತೋಟದ ಸಿದ್ಧಲಿಂಗರನ್ನು ಮತ್ತು ಬೋಳಬಸವರಿಬ್ಬರನ್ನು ಪ್ರಸ್ತಾಪ ಮಾಡುತ್ತಾನೆ. ಹೀಗಾಗಿ ತೋಂಟದ ಸಿದ್ಧಲಿಂಗ ಯತಿಗಳೂ ಗುರುಗಳು ಮತ್ತು ಬೋಳಬಸವೇಶರೂ ಗುರುಗಳಾಗಿದ್ದಾರೆ.  ತೋಂಟದ ಸಿದ್ಧಲಿಂಗಯತಿಗಳು ವೀರಶೈವ ಸಾಹಿತ್ಯ-ಸಂಸ್ಕೃತಿಯ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರವಹಿಸಿದವರು. ಇವರು ವಚನರಚನೆ ಮತ್ತು ವಚನಸಾಹಿತ್ಯ ಸಂರಕ್ಷಣೆಯ ಜೊತೆಗೆ ಶೂನ್ಯಸಂಪಾದನೆಯ ಪರಿಷ್ಕರಣ ಹೊಸದಿಕ್ಕನ್ನು ಹಿಡಿಯಲು ಕಾರಣಕರ್ತರಾದವರು.
      ಕ್ರಿ.ಶ.1603ರಲ್ಲಿ `ಪಂಚಪ್ರಕಾರ ಗದ್ಯವನ್ನು ಶ್ರೀಮದ್ವೀರಶೈವಾಚಾರ ವಿಸ್ತಾರ ವೀರಮಾಹೇಶ್ವರಾಗ್ರಣಿ ವಿರಕ್ತ ಶಿಖಾಮಣಿ ಗೂಳೂರು ಸಿದ್ಧವೀರೇಶ್ವರದೇವರ ಶ್ರೀಪಾದಪದ್ಮಕ್ಕೆ ಬಿಜ್ಜಾವರಪುರವರ ಗುರುಲಿಂಗ ಜಂಗಮಾಚಾರಾದಿವಾಚರಣ ಚಿಕ್ಕಭೂಪಾಲ ಭಕ್ತಿಯಿಂದೆ ಬರೆಯಿಸಿ ಸಮರ್ಪಿಸಿದರು' ಎಂಬ ಹಸ್ತಪ್ರತಿ ಪುಷ್ಪಿಕೆಯಿಂದ ಪಂಚಪ್ರಕಾರ ಗದ್ಯಗಳನ್ನು ಇಮ್ಮಡಿ ಚಿಕ್ಕಭೂಪಾಲ ಭಕ್ತಿಯಿಂದ ಬರೆಯಿಸಿ ಗೂಳೂರು ಸಿದ್ಧವೀರೇಶ್ವರದೇವರ ಶ್ರೀಪಾದ ಪದ್ಮಕ್ಕೆ ಅರ್ಪಿಸಿರುವುದು ತಿಳಿದುಬರುತ್ತದೆ. ಈ ಪ್ರತಿಯ ಕಾಲೋಲ್ಲೇಖದ ಪ್ರಕಾರ ಕ್ರಿ.ಶ. 1603ರಲ್ಲಿ ಗೂಳೂರು ಸಿದ್ಧವೀರೇಶ್ವರ ದೇವರು ಜೀವಿಸಿದ್ದರು ಎಂಬುದು ತಿಳಿದುಬರುತ್ತವೆ.  ಇವರ ಶೂನ್ಯಸಂಪಾದನೆಯನ್ನು ವಿರಕ್ತ ತೊಂಟದಾರ್ಯ ಕ್ರಿ.ಶ,1616ರಲ್ಲಿ ಪ್ರತಿಮಾಡಿದ್ದಾರೆ. ಈ ಹಸ್ತಪ್ರತಿಯ ಪುಷ್ಟಿಕೆಯ ಕಾಲದ ಉಲ್ಲೇಖವು ತೋಂಟದ ಸಿದ್ಧಲಿಂಗಯತಿಗಳ ಕಾಲ ನಿರ್ಣಯಕ್ಕೆ ಆಕರವಾಗಿದೆ.
   ಶೂನ್ಯಸಂಪಾನೆಯು ಪರಿಷ್ಕರಣಗಳಲ್ಲಿ ಹೊಸ ಹೊಸ ಪ್ರಸಂಗಗಳು ಕೂಡಿಕೊಂಡು ಜೊತೆಜೊತೆಯಲ್ಲಿಯೇ ಮೂಲದಲ್ಲಿದ್ದ ಪ್ರಸಂಗಗಳು ಅರ್ಥಪೂರ್ಣವಾಗಿ ಮೂಡಿಬರಲು  ತುಮಕೂರು ಜಿಲ್ಲೆಯ ತೋಂಟದಸಿದ್ಧಲಿಂಗಯತಿಗಳು ಮತ್ತು ಅವರ ಶಿಷ್ಯ-ಪ್ರಶಿಷ್ಯ ಪರಂಪರೆಯೇ ಪ್ರಮುಖ ಕಾರಣವಾಗಿದೆ.
    ಇನ್ನೊಂದು ಅಂಶ ಎಂದರೆ ಪಾಶ್ಚಾತ್ಯರಿಂದ ಭಾರತಕ್ಕೆ ಆಗಮಿಸಿತೆಂದು ಹೇಳಲಾಗುವ ಗ್ರಂಥ ಸಂಪಾದನೆಯ ವಿಧಿವಿಧಾನಗಳಾದ ಆಕರ ಸಂಗ್ರಹ, ಸಂಯೋಜನೆ ಹಾಗೂ ವಿಶ್ಲೇಷಣೆ ಎಂಬ ಮೂರು ಹಂತಗಳ ಪರಿಚಯ 16ನೇ ಶತಮಾನದಲ್ಲಿಯ ತುಮಕೂರು ಜಿಲ್ಲೆಯ ಸಂಕಲನಕಾರರಿಗಿತ್ತು ಎಂಬುದು. ಅಳಿದುಳಿದ ವಚನರಾಶಿಯನ್ನು ಸಂಗ್ರಹಿಸುವಲ್ಲಿ, ನಾಮಾನುಗುಣವಾಗಿ, ವಿಷಯಾನುಗುಣವಾಗಿ ಜೋಡಿಸುವಲ್ಲಿ, ತಾತ್ವಿಕ ದೃಷ್ಟಿಯಿಂದ ಸಂಕಲಿಸುವಲ್ಲಿ, ಸಂವಾದ ರೂಪದಲ್ಲಿ ಸಂಯೋಜಿಸಿ ಸಂಪಾದಿಸುವಲ್ಲಿ, ವಚನಗಳ ಅಂತರಾರ್ಥ ಅರಿತು ವ್ಯಾಖ್ಯಾನಿಸುವಲ್ಲಿ ಆಧುನಿಕ ಗ್ರಂಥಸಂಪಾದನೆಯ ಸರ್ವ ಸಾಮಾನ್ಯ ತತ್ವಗಳನ್ನೇ ಅನುಸರಿಸಿದ್ದಾರೆ. ಇದರಿಂದಾಗಿ ಪಾಶ್ಚಾತ್ಯರ ಮೂಲಕ ಈ ತತ್ವಗಳು ನಮ್ಮಲ್ಲಿಗೆ ಪ್ರವೇಶಿಸುವುದಕ್ಕಿಂತ ಪೂರ್ವದಲ್ಲಿಯೇ ಜಿಲ್ಲೆಯ ನಮ್ಮ ಸಂಕಲನಕಾರರಿಗೆ ತಿಳಿದಿದ್ದವು ಎಂಬುದು ದಾಖಲಾರ್ಹವಾಗಿದೆ.
    ತುಮಕೂರು ಜಿಲ್ಲೆಯ ಹಸ್ತಪ್ರತಿ ಸಂಪತ್ತು ವೈವಿಧ್ಯತೆಯಿಂದ ಕೂಡಿದೆ. ಹಸ್ತಪ್ರತಿಗಳ ಸಂಕಲನ, ಪರಿಷ್ಕರಣ, ಸಂಪಾದನಾ ಚಟುವಟಿಕೆಗೆ ತುಮಕೂರು ಜಿಲ್ಲೆಯ ಪರಿಸರ ಅದ್ವಿತೀಯವಾದ ಕೊಡುಗೆಯನ್ನು ನೀಡಿದೆ.ಅಭಿನವ ಅಲ್ಲಮರೆಂದು ಖ್ಯಾತರಾದ ತೋಂಟದ ಸಿದ್ಧಲಿಂಗಯತಿಗಳು ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ ಗ್ರಂಥಸಂಪಾದನೆಯ ವಿಧಿವಿಧಾನಗಳನ್ನು ಅನ್ವಯಿಸಿ ವಚನಗಳನ್ನು ಸಂಕಲಿಸುವ ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ಕೈಗೊಂಡಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ವಿಶಿಷ್ಟವಾದುದಾಗಿದೆ. ಈ ವಿಧಿ ವಿಧಾನವು ಸಂಶೋಧನೆಯಲ್ಲಿಯ ಆಕರ ಶೋಧನಿಷ್ಠ ಸಂಶೋಧನಾ ಪರಿಕಲ್ಪನೆಯ ಪ್ರತೀಕವಾಗಿದೆ.
ಇತ್ತೀಚಿನ ಎಂ.ಎಂ ಕಲುಬುರ್ಗಿಯವರ ಸಂಶೋಧನೆಯನ್ನು ಆಧರಿಸಿ ಹೇಳುವುದಾದರೆ (ದೊಡ್ಡ ಹಾಗೂ ಸಣ್ಣ ಅಥವಾ ಉಪ ಶೂನ್ಯ ಸಂಪಾದನೆಗಳನ್ನು ಸೇರಿಸಿ ) ಶೂನ್ಯಸಂಪಾದನೆಗಳ ಸಂಖ್ಯೆ ಒಟ್ಟು ಏಳು ಆಗುತ್ತದೆ.
  ಅವುಗಳನ್ನು ಕಾಲಾನುಕ್ರಮವಾಗಿ.
1.ಶಿವಗಣ ಪ್ರಸಾದಿ ಮಹಾದೇವಯ್ಯನ ಶೂನ್ಯ ಸಂಪಾದನೆ.(ಕ್ರಿ.ಶ.1430)(ಪ್ರಕಟ)
2.ಸುಖ ಸಂಪಾದನೆಯ ವಚನಗಳು(ಉಪಶೂನ್ಯಸಂಪಾದನೆ) (ಇದು ಮುಂದೆ ಕೋಲ ಶಾಂತಯ್ಯನಿಂದ ಆರಂಭವಾಗುವ ಸಕಲ ಪುರಾತನರ ವಚನಗಳು ಕಟ್ಟಿನಲ್ಲಿ ಸೇರಿಕೊಂಡಿವೆ.)
3.ಹಲಗೆಯಾರ್ಯನ ಶೂನ್ಯಸಂಪಾದನೆ (ಕ್ರಿ.ಶ 1530)(ಪ್ರಕಟ)
4.ಕೆಂಚ ವೀರಣ್ಣೊಡೆಯರ ಶೂನ್ಯಸಂಪಾದನೆ (ಅಲಭ್ಯ) (ಇತ್ತೀಚಿನ ಸಂಶೋಧನೆಗಳು ಕೆಂಚವೀರಣ್ಣೊಡೆಯನು ಶೂನ್ಯಸಂಪಾದನೆಯನ್ನು ರಚಿಸಿದ್ದಾನೆನ್ನುವ ಎಂ.ಆರ್.ಶ್ರೀನಿವಾಸ ಮೂರ್ತಿ ಅವರ ವಾದವನ್ನು ಮತ್ತೇ ಜೀವಂತಗೊಳಿಸಿವೆ.)
5.ಗುಮ್ಮಳಾಪುರದ ಸಿದ್ಧಲಿಂಗರ ಶೂನ್ಯ ಸಂಪಾದನೆ (ಕ್ರಿ.ಶ 1580 ಕ್ಕೆ ಮೊದಲು)(ಪ್ರಕಟ)
6.ಗೂಳೂರು ಸಿದ್ಧವೀರಣ್ಣೊಡೆಯರ ಸಂಪಾದನೆ (ಕ್ರಿ.ಶ 1600)(ಪ್ರಕಟ)
7.ಕಟ್ಟಿಗೆ ಹಳ್ಳಿ ಸಿದ್ಧಲಿಂಗನ ಸಂಪಾದನೆ ಸಾರಾಮೃತ ( ಉಪ ಶೂನ್ಯಸಂಪಾದನೆ)   
    ಒಟ್ಟಾರೆ ಶೂನ್ಯಸಂಪಾದನೆಗಳು ನಾಲ್ಕು ಅಲ್ಲ ಐದು. ಸಣ್ಣ ಅಥವಾ ಉಪ ಸಂಪಾದನೆಗಳನ್ನು ಸೇರಿಸಿದರೆ ಏಳು ಆಗುತ್ತವೆ.  ಲಭ್ಯವಿರುವ ಶೂನ್ಯ ಸಂಪಾದನೆಯು ಆದಿ ಮತ್ತು ಅಂತ್ಯದಲ್ಲಿರುವ ಪುಷ್ಪಿಕೆಗಳ ಮಾಹಿತಿಗಳಿಂದ  ಪ್ರಥಮ ಶೂನ್ಯ ಸಂಪಾದನಾಕಾರ ಶಿವಗಣ ಪ್ರಸಾದಿ ಮಹಾದೇವಯ್ಯನ ಶೂನ್ಯ ಸಂಪಾದನೆ  ಪ್ರಪ್ರಥಮಸಾರಿ ಪರಿಷ್ಕರಣಕ್ಕೆ ಒಳಪಟ್ಟಿದ್ದು ಹಲಗೆಯಾರ್ಯನಿಂದ. ಅನಂತರ ಹಲಗೆಯಾರ್ಯನ ಶೂನ್ಯಸಂಪಾದನೆ ಮತ್ತೆ ಪರಿಷ್ಕರಣಕ್ಕೆ ಒಳಪಟ್ಟಿದ್ದು ಕೆಂಚವೀರಣ್ಣೊಡೆಯನಿಂದ. ಈ ಪ್ರತಿ ಲಭ್ಯವಿಲ್ಲ. ಅನಂತರ ಕೆಂಚ ವೀರಣ್ಣೊಡೆಯನ ಶೂನ್ಯ ಸಂಪಾದನೆಯನ್ನು ಗುಮ್ಮಳಾಪುರದ  ಗೂಳೂರು ಸಿದ್ಧವೀರಣ್ಣೊಡೆಯ ಪರಿಷ್ಕರಿಸಿದವನಾಗಿದ್ದಾನೆಂಬುದು ಸ್ಪೃಷ್ಟವಾಗಿ ತಿಳಿದು ಬರುತ್ತದೆ.
      ಶೂನ್ಯ   ಸಂಪಾದನೆಗಳ ಸಂಖ್ಯೆಯ ಬಗ್ಗೆ ಸಂಶೋಧಕರಲ್ಲಿ ಚರ್ಚೆ ನಡೆದಿದ್ದರೂ ಲಭ್ಯವಿರುವ ಶೂನ್ಯ ಸಂಪಾದನೆಗಳ ಸಂಖ್ಯೆ 4. ಮೂರು ಗ್ರಂಥಗಳು ಈಗಾಗಲೇ ಹಲವಾರು ಆವೃತ್ತಿಗಳಲ್ಲಿ ಪ್ರಕಟವಾಗಿದ್ದವು. ಕ್ರಿ.ಶ. 1930 ರಲ್ಲಿ ಫ.ಗು.ಹಳಕಟ್ಟಿಯವರು ತಮ್ಮ ಶಿವಾನುಭವ ಗ್ರಂಥಮಾಲಿಕೆಯ ಮೂಲಕ ಗೂಳೂರು ಸಿದ್ದವೀರಣ್ಣೊಡೆಯರ ಶೂನ್ಯಸಂಪಾದನೆಯನ್ನು ಸಂಪಾದಿಸಿ ಪ್ರಕಟಿಸಿದರು.  ಈ ಶೂನ್ಯಸಂಪಾದನೆಯನ್ನು 1958 ರಲ್ಲಿ ಶಿ.ಶಿ.ಭೂಸನೂರಮಠ ಅವರು ಸಂಪಾದಿಸಿ ಗುಲಬರ್ಗಾ ಜಿಲ್ಲೆಯ ರಾವೂರ ಶ್ರೀ.ಸಿದ್ಧಲಿಂಗೇಶ್ವರ ಮಠದ ಮೂಲಕ ಪ್ರಕಟಿಸಿದರು. ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯನ್ನು ಎಲ್.ಬಸವರಾಜುರವರು ಸಂಪಾದಿಸಿ  ಚಿತ್ರದುರ್ಗದ ಬೃಹನ್ಮಠದ ಮೂಲಕ 1969 ರಲ್ಲಿ ಪ್ರಕಟಿಸಿದರು. ಈ ಶೂನ್ಯ ಸಂಪಾದನೆಯನ್ನು ಆರ್.ಸಿ.ಹಿರೇಮಠ ಅವರು ಸಂಪಾದಿಸಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ 1970 ರಲ್ಲಿ ಪ್ರಕಟಿಸಿದರು.  ಗುಮ್ಮಳಾಪುರದ ಸಿದ್ಧಲಿಂಗಯತಿಗಳ ಶೂನ್ಯಸಂಪಾದನೆಯನ್ನು ಆರ್.ಸಿ.ಹಿರೇಮಠ ಅವರು ಸಂಪಾದಿಸಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ 1972 ರಲ್ಲಿ ಪ್ರಕಟಿಸಿದರು.   ಇತ್ತೀಚೆಗೆ ಎಸ್.ವಿದ್ಯಾಶಂಕರ ಹಾಗೂ ಜಿ.ಎಸ್.ಸಿದ್ಧಲಿಂಗಯ್ಯನವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿದ್ದ ಕಾಗದದ ಏಕೈಕ ಹಸ್ತಪ್ರತಿ ಹಾಗೂ ಸಿ.ಮಹದೇವಪ್ಪನವರ ಬಳಿಯಿದ್ದ ತಾಡವೋಲೆ ಪ್ರತಿಯನ್ನು ಆಧರಿಸಿ ಸಂಪಾದಿಸಿ `ಹಲಗೆಯಾರ್ಯನ ಶೂನ್ಯ ಸಂಪಾದನೆ' ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಲಭ್ಯವಿರುವ ನಾಲ್ಕು ಶೂನ್ಯ ಸಂಪಾದನೆಗಳು ಪ್ರಕಟವಾದಂತಾಗಿದೆ.  ಪ್ರಕಟವಾಗಿರುವ ನಾಲ್ಕು ಶೂನ್ಯಸಂಪಾದನೆಗಳಲ್ಲಿ ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆ ಮತ್ತು ಹಲಗೆಯಾರ್ಯನ ಶೂನ್ಯ ಸಂಪಾದನೆಗಳು ಹರಿಹರ ಕವಿಯ ಪರಂಪರೆಗೆ ಸೇರಿದರೆ, ಗುಮ್ಮಳಾಪುರದ ಸಿದ್ಧಲಿಂಗಯತಿಗಳ ಶೂನ್ಯಸಂಪಾದನೆ ಮತ್ತು ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಗಳು ಚಾಮರಸಕವಿಯ ಪರಂಪರೆಗೆ ಸಲ್ಲುತ್ತವೆ.   
    ಶಿವಗಣ ಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯ ಕೃತಿಯ ಆರಂಭದಲ್ಲಿ ಬರುವ ಶ್ರೀ ಮತ್ಸಕಲಜಗದಾಚಾರ್ಯರುಮಪ್ಪ ಅಲ್ಲಮ ಪ್ರಭುದೇವರು ಬಸವರಾಜ ದೇವರು ಚೆನ್ನಬಸವರಾಜ ದೇವರು ಮುಖ್ಯವಾದ ಅಸಂಖ್ಯಾತ ಮಹಾಗಣಗಳನೊಡನೆ ಮಹಾನುಭಾವ ಪ್ರಸಂಗಮಂ ಮಾಡಿದ ಸರ್ವಕರಣ ಶೂನ್ಯಸಂಪಾದನೆಯ ಸದ್ಗೋಷ್ಠಿ ಕಥಾ ಪ್ರಸಂಗಮಂ ಮುಕ್ತಕಮಾಗಿರ್ದ ಶಿವಾದ್ವೈತ ವಚನಗಳಿಂ ಉತ್ತರ ಪ್ರತ್ಯುತ್ತರ ಸಂಬಂಧವಾಗಿ ಸೇರಿಸಿ ಶಿವಗಣ ಪ್ರಸಾದಿ ಮಹಾದೇವಗಳು ಮರ್ತ್ಯಲೋಕದ ಮಹಾಗಣಂಗಳಿಗೆ ಆ ಮಹಾಪ್ರಸಂಗಮಂ ಸಮರ್ಪಿಸಿದ ಭೇದವೆಂತಿರ್ದುದೆಂದಡೆ ಎಂಬ ವಿವರಣೆಯಲ್ಲಿ ಶೂನ್ಯ ಸಂಪಾದನಾ ಸಂಕಲನ ಗ್ರಂಥ ಹೊರಬಂದ ಆಶಯ ವ್ಯಕ್ತವಾಗಿದೆ. ಶಿವಗಣ ಪ್ರಸಾದಿ ಮಹಾದೇವಯ್ಯನ ಕೃತಿಯ ನಂತರ ನಿರ್ಮಾಣವಾದ ಕೃತಿಗಳು ಏನಿದ್ದರೂ ಆ ಮೂಲವನ್ನೇ ಆಧರಿಸಿ ಅಲ್ಪ ಸ್ವಲ್ಪ ಬದಲಾವಣೆ ಹಾಗೂ ಕೆಲವು ಹೊಸ ಪ್ರಸಂಗಗಳು ಅಳವಡಿಸಲ್ಪಟ್ಟ ಪರಿಷ್ಕರಣಗಳಾಗಿವೆ. ಮಹಾದೇವಯ್ಯನ ಮೂಲಕೃತಿ ನಂತರ ನಾಲ್ವರು ಸಂಕಲನಕಾರರಿಂದ ಪರಿಷ್ಕರಣಗೊಳ್ಳಲು ಬಹುಮುಖ್ಯ ಕಾರಣ `ಸಿದ್ಧರಾಮಯ್ಯ ದೀಕ್ಷಾ ಪ್ರಸಂಗ' ಇದರ ಜೊತೆಗೆ ಅಲ್ಲಮ ಕಾಮಲತೆಯರ ಪ್ರಸಂಗ, ಅಕ್ಕ ಕೌಶಿಕರ ಸಂಬಂಧ, ಕಿನ್ನರಯ್ಯನ ಪ್ರಸಂಗ, ಕಾಲ ಕಾಲಕ್ಕೆ ಸಂಕಲನಗೊಂಡ ನಂತರದ ನಾಲ್ಕು ಶೂನ್ಯ ಸಂಪಾದನೆಗಳಲ್ಲಿ ಕೆಲವು ಸನ್ನಿವೇಶಗಳು ಹೊಸದಾಗಿ ಸೇರ್ಪಡೆಯಾಗಿವೆ. ಹಲಗೆಯಾರ್ಯನ ಶೂನ್ಯ ಸಂಪಾದನೆಯಲ್ಲಿ ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮನ ಪ್ರಸಂಗ ಸೇರ್ಪಡೆಯಾಗಿರುವುದರ ಜೊತೆಗೆ ಗೋರಕ್ಷನ ಪ್ರಸಂಗ ಮೊದಲ ಬಾರಿಗೆ ಪ್ರತ್ಯೇಕ ಸ್ಥಾನ ಪಡೆದಿದೆ. ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯ ಸಂಪಾದನೆಯಲ್ಲಿ ಮೋಳಿಗೆ ಮಾರಯ್ಯನ ಪ್ರಸಂಗ ಮತ್ತು ಘಟ್ಟಿವಾಳಯ್ಯನ ಪ್ರಸಂಗ ಸೇರ್ಪಡೆಯಾಗಿದೆ. ಶಿವಗಣ ಪ್ರಸಾದಿ ಮಹಾದೇವಯ್ಯನು ಮೊದಲು ರೂಪಿಸಿದ ಶೂನ್ಯಸಂಪಾದನೆಯ ತಳಹದಿ ಹಾಗೂ ಆ ಚೌಕಟ್ಟಿನಲ್ಲಿಯೇ ನಂತರದ ನಾಲ್ಕುಶೂನ್ಯ ಸಂಪಾದನೆಗಳ ಪರಿಷ್ಕರಣೆ ಹಾಗೂ ಕೆಲವು ನೂತನ ಪ್ರಸಂಗಗಳ ಸೇರ್ಪಡೆಯೊಂದಿಗೆ ರೂಪಿಸಲ್ಪಟ್ಟಿವೆ. ಶೂನ್ಯ ಸಂಪಾದನಾ ಸಂಕಲನ ಕೃತಿಗಳಲ್ಲಿ ಹೆಚ್ಚಿನ ಶರಣರ ವಚನಗಳು ಸಂದರ್ಭಕ್ಕನುಸಾರವಾಗಿ ಸೇರಲ್ಪಟ್ಟಿವೆ. ಹಲಗೆಯಾರ್ಯರ ಶೂನ್ಯ ಸಂಪಾದನೆಯಲ್ಲಿ ಹೆಚ್ಚಿನ ಅಂದರೆ ಶರಣರ  ಸುಮಾರು 1599 ವಚನಗಳು ಕಂಡು ಬರುತ್ತವೆ. ಹಲಗೆಯಾರ್ಯನ ಶೂನ್ಯ ಸಂಪಾದನೆಯು ಉಳಿದ ಶೂನ್ಯಸಂಪಾದನೆಗಳಿಗಿಂತ ಹೆಚ್ಚು ವೀರಶೈವೀಕರಣಗೊಂಡಿದೆ.     
      ಶೂನ್ಯ ಸಂಪಾದನಾ ಸಂಕಲನ ಕೃತಿಗಳಲ್ಲಿ ಕೊನೆಯದಾದ ಗೂಳೂರು ಸಿದ್ಧವೀರಣ್ಣೊಡೆಯರು ಸಂಗ್ರಹಿಸಿದ ಪ್ರಭುದೇವರ ಶೂನ್ಯಸಂಪಾದನೆಯಲ್ಲಿ `ಶೂನ್ಯಸಂಪಾದನೆ' ಪದವನ್ನು ವೀರಶೈವ ಧರ್ಮದ ತಾತ್ವಿಕ ಚೌಕಟ್ಟಿನಲ್ಲಿಯೇ ಪ್ರತಿಪಾದಿಸಲಾಗಿದೆ. ಶೂನ್ಯ ಸಂಪಾದನೆಗೆ ತಳಹದಿಯಾದ ಮೂಲಭೂತ ಷಟ್‍ಸ್ಥಲ ಸಿದ್ಧಾಂತವನ್ನು ಶರಣರ ವಚನಗಳ ಆಧಾರದಿಂದ ಮೊದಲು ನಿರೂಪಿಸಲಾಗಿದ್ದು ಅಂಗ-ಲಿಂಗ ಇವುಗಳ ಸಂಬಂಧದ ವಿಚಾರವನ್ನು ನಂತರ ವಿವರಿಸಲಾಗಿದೆ.
      ಶೂನ್ಯವನ್ನು ಸಂಪಾದಿಸಿದ ಹಲವು ಶರಣರ ಚರಿತ್ರೆಗಳು ಶೂನ್ಯ ಸಂಪಾದನೆಯಲ್ಲಿ ಕಾಣಬರುತ್ತವೆ. ಶೂನ್ಯ ಸಂಪಾದನೆಯಲ್ಲಿ ಅಲ್ಲಮಪ್ರಭುವೇ ಕೇಂದ್ರ ವ್ಯಕ್ತಿಯಾದ್ದರಿಂದ ಶೂನ್ಯ ಸಂಪಾದನೆಗೆ ಪ್ರಭುದೇವರ ಶೂನ್ಯ ಸಂಪಾದನೆ ಎಂಬ ಪರ್ಯಾಯ ಹೆಸರು ಉಂಟು. ಅಲ್ಲಮಪ್ರಭು ತನ್ನ ಜೀವಿತದುದ್ದಕ್ಕೂ ಹಲವಾರು ವ್ಯಕ್ತಿಗಳನ್ನು ಸಂದರ್ಶಿಸಿದವನು. ನಿಜವಾಗಿಯೂ ಜ್ಞಾನಿಯಾಗಿದ್ದರೂ ಅಣ್ಣನ ಸಾವಿನಿಂದ ಜರ್ಝರಿತವಾಗಿ ಶೋಕಿಸುತ್ತಿದ್ದ ಮುಕ್ತಾಯಕ್ಕ, ಕೇವಲ ಲೌಕಿಕ ಕಾಯಕದಲ್ಲಿಯೆ ತಲ್ಲೀನನಾಗಿ ಅದರಾಚೆಯ ಪರವಸ್ತುವನ್ನು ಅಲಕ್ಷಿಸಿದ್ದ ತೋಟಿಗಗೊಗ್ಗಯ್ಯ, ಕಾಯಕ ಯೋಗಿ ಸಿದ್ಧರಾಮ, ಅಧ್ಯಾತ್ಮ ಸಾಧನೆಯಲ್ಲಿ ಉನ್ನತ ಹಂತವನ್ನು ಮುಟ್ಟಿದ್ದ ಆದರೆ ಬಹುಜನರಿಗೆ ಅಜ್ಞಾತವಾಗಿದ್ದಮರುಳಶಂಕರದೇವ, ಗೋರಕ್ಷ, ಅಕ್ಕಮಹಾದೇವಿ ಇತ್ಯಾದಿ ಶರಣ ಶರಣೆಯರು ಅಲ್ಲಮನೊಡನೆ ಸಂಭಾಷಿಸಿ ಆತನ ಜ್ಞಾನದ ಬೆಳಕಿನಲ್ಲಿ ತಮ್ಮ ಅರಿವಿನ ಮಾರ್ಗವನ್ನು ಕೈಗೊಂಡು ಶೂನ್ಯವನ್ನು ಸಂಪಾದಿಸಿಕೊಂಡ ವಿವರವೇ ಶೂನ್ಯ ಸಂಪಾದನೆಯಲ್ಲಿ ಪ್ರಮುಖ ಭಾಗವಾಗಿದೆ. ಶ್ರೇಷ್ಠವಾದ ಅನುಭವದ ಸ್ಥಿತಿಯನ್ನು ಪಡೆದು ಪೂರ್ಣವಾಗುವುದನ್ನು ಸಂಕೇತಿಸುತ್ತದೆ. ವೀರಶೈವ ಧರ್ಮದ ಪ್ರಕಾರ ಮನುಷ್ಯನ ಅತ್ಯುಚ್ಛ ಆದರ್ಶವಾದ ಶೂನ್ಯವನ್ನು ಸಂಪಾದಿಸಿದವರ ಕಥೆಗಳ ಮಾಲಿಕೆಯಾಗಿದೆ.  
      ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆಯ ಮೊದಲ ಅಧ್ಯಾಯದಲ್ಲಿ ಷಟ್‍ಸ್ಥಲಗಳ ನಿರೂಪಣೆ ಇದೆ. ಷಟ್‍ಸ್ಥಲಗಳನ್ನು ಸಂಕಲನಕಾರ ಇಂತು ವಿಶ್ವಾಸದಿಂ ಭಕ್ತನಾಗಿ ಆ ವಿಶ್ವಾಸದೊಳಗಣ ನಿಷ್ಠೆಯಿಂ ಮಾಹೇಶ್ವರನಾಗಿ, ಆ ನಿಷ್ಠೆಯೊಳಗಣ ಸಾವಧಾನದಿಂ ಪ್ರಸಾದಿಯಾಗಿ ಆ ಸಾವಧಾನಗೊಳಗಣ ಸ್ವಾನುಭಾವದಿಂ ಪ್ರಾಣಲಿಂಗಿಯಾಗಿ ಆ ಸ್ವಾನುಭಾವದೊಳಗಣ ಅರಿವಿನಿಂ ಶರಣನಾಗಿ ಆ ಅರಿವು ನಿಜದಲ್ಲಿ ಸಮರಸಭಾವವ ನೈದಿದ ನಿರ್ಭಾವ ಪದದೊಳ್ ನಿಂದ ಭೇದವೆಂತಿರ್ದಿತೆಂದೊಡೆ ಮುಂದೆ ಐಕ್ಯಸ್ಥಲವಾದುದು ಎಂಬುದಾಗಿ ವಿವರಿಸಿದ್ದಾನೆ. ಷಟ್‍ಸ್ಥಲ ಸಿದ್ಧಾಂತ ವೀರಶೈವಧರ್ಮದ ತಿರುಳು ಮತ್ತು ವೈಶಿಷ್ಟ್ಯವಾಗಿದೆ.       
      ಶೂನ್ಯಸಂಪಾದನೆಯಲ್ಲಿ ಬರುವ ವಿವಿಧ ಪ್ರಸಂಗಗಳಲ್ಲಿ ಅಂದರೆ, ಮುಕ್ತಾಯಕ್ಕನ ಪ್ರಸಂಗದಲ್ಲಿ ಬರುವ ಗುರುಕರುಣೆಯ ಮಹತ್ವ, ಸಿದ್ಧರಾಮರ ಪ್ರಸಂಗದಲ್ಲಿ ಬರುವ ಇಷ್ಟಲಿಂಗದ ಶ್ರೇಷ್ಠತೆ, ಹಾಗೂ ಆಧ್ಯಾತ್ಮಿಕ ಆನಂದ ಅನುಭಾವ, ಗುಪ್ತಭಕ್ತ ಮರುಳ ಶಂಕರನ ಗುಪ್ತಭಕ್ತಿಯಿಂದ ಗಳಿಸಿದ ಸಂಪಾದನೆಯ ನಿಲುವು, ಮಡಿವಾಳ ಮಾಚಿದೇವ, ಮಾರಯ್ಯ, ಚಂದಯ್ಯಗಳ ಕಾಯಕ ನಿಷ್ಠೆ, ಘಟ್ಟಿವಾಳಯ್ಯನ ನಿಷ್ಟುರವಾದ ಸತ್ಯ ಪ್ರತಿಪಾದನೆ ಇತ್ಯಾದಿಗಳಲ್ಲಿ ಅಂತರಂಗದನುಭವವನ್ನು, ಅನುಭಾವವನ್ನು ಧರ್ಮಸಿದ್ಧಾಂತದ ಹಾಗೂ ಸಾಮಾಜಿಕ ಚಿಂತನೆಯ ಚೌಕಟ್ಟಿನಲ್ಲಿ ಪ್ರತಿಪಾದಿಸಿರುವುದನ್ನು ಗುರುತಿಸಬಹುದು. ಧಾರ್ಮಿಕ ಸಾಧನೆಯ ಮಹತ್ವವು ಶರಣರ ನಿತ್ಯ ಜೀವನದಲ್ಲಿಯೇ ಕಾಣಬರುತ್ತದೆಂಬುದನ್ನು ಶೂನ್ಯಸಂಪಾದನೆಯಲ್ಲಿ ಕಾಣಬಹುದು. ಜೀವನದಲ್ಲಿ ವ್ಯಕ್ತಿ ಸತ್ಯಶುದ್ಧ ಕಾಯಕದಲ್ಲಿ ನಿರತನಾಗಿದ್ದರೆ ಅವನು ಯಾವುದೇ ರಂಗದಲ್ಲಿದ್ದರೂ ಏನೇ ಉದ್ಯೋಗವನ್ನು ಅವಲಂಬಿಸಿದ್ದರೂ ಆತನ ಸಾಧನೆಗೆ ಪ್ರಗತಿಗೆ ಅಡ್ಡಿಯಾಗುವುದಿಲ್ಲ ಎಂಬುದು ವ್ಯಕ್ತವಾಗಿದೆ. ಶೂನ್ಯಸಂಪಾದನೆಯಲ್ಲಿ ಆಧುನಿಕ ಯುಗದ ಮನೋಧರ್ಮಕ್ಕೆ ಹತ್ತಿರವಾದುದ್ದು ಎಂದರೆ ಸ್ವತಂತ್ರ ವಿಚಾರಶೀಲತೆ ಮತ್ತು ಸತ್ಯ ನಿಷ್ಠುರತೆ.
      ವಿಚಾರವಂತರ ಮನಸ್ಸು ಜೀವನದಲ್ಲಿ ಎದುರಿಸಬಹುದಾದ ಮೂಲಭೂತವಾದ ಸಮಸ್ಯೆಗಳನ್ನು ಮತ್ತು ಅವುಗಳ ಮೌಲ್ಯವನ್ನು ನಿರ್ಧರಿಸುವ ಮಾನವೀಯ ದೃಷ್ಟಿಯನ್ನು ಒಳಗೊಂಡಿರುವುದನ್ನು ಕಾಣಬಹುದು. ಶೂನ್ಯ ಸಂಪಾದನೆಯಲ್ಲಿ ಮುಖ್ಯವಾಗಿ, ನಿಲುವಿಗೇರಿರುವ, ನಿಲುವಿನಲ್ಲಿಯೇ ಸದಾ ಸಂಚರಿಸಬಲ್ಲ ಮಹಾ ಅನುಭಾವಿ ಅಲ್ಲಮಪ್ರಭುವೇ ಶೂನ್ಯಸಂಪಾದನೆಯ ಕೇಂದ್ರ ಶಕ್ತಿಯಾದುದರಿಂದ ಇತರ ಶರಣರು ಆ ಮಟ್ಟಕ್ಕೇರಲು ಆತ ಮಾರ್ಗದರ್ಶಕನಾಗಿರುವುದನ್ನು ಕಾಣುತ್ತೇವೆ. ಸಾಧನೆಯ ಆ ನಿಲುವಿನಲ್ಲಿಯೇ ನಿಂತು ಜೀವನ ಮಹತ್ತರವಾದ ಬೆಲೆಯನ್ನು ಹೆಜ್ಜೆ ಹೆಜ್ಜೆಗೂ ಎತ್ತಿ ತೋರಿಸಿರುವುದನ್ನು ಶೂನ್ಯಸಂಪಾದನೆಗಳಲ್ಲಿ ಪ್ರಮುಖವಾಗಿ ಗುರುತಿಸಬಹುದಾಗಿದೆ.      
     ಶೂನ್ಯಸಂಪಾದನೆಗಳು ಕೂಡ ತಮ್ಮ ಚಾರಿತ್ರಿಕ ಸಂದರ್ಭದಲ್ಲಿ ಇಂತಹ ಪ್ರಶ್ನೆಗಳನ್ನು ಕೇಳಿಕೊಂಡು ತಮ್ಮ ವರ್ತಮಾನದ ಆಶೋತ್ತರಗಳಿಗೆ ಸ್ಪಂದಿಸಿರುವ ಕೃತಿಗಳಾಗಿವೆ. ವಚನಕಾರರಿಗೆ ಪ್ರತಿಕ್ರಿಯೆಯಾಗಿ ಮಾಡಿದ ಶೂನ್ಯಸಂಪಾದನೆಗೆ ಪ್ರತಿಕ್ರಿಯೆಯಾಗಿ, ಭಿನ್ನಾಭಿಪ್ರಾಯವಾಗಿ ಮತ್ತು ತಿದ್ದುಪಡಿಯಾಗಿ ಇನ್ನೂ ನಾಲ್ಕು ಸಂಪಾದನೆಗಳು ಮೂಡಿದವು. ಈ ನಾಲ್ಕು ಸಂಪಾದನೆಗಳ ಸ್ವರೂಪವೇನೇ ಇರಲಿ, ಇವು ಭಿನ್ನಾಭಿಪ್ರಾಯವನ್ನು ಹೊಟ್ಟೆಯಲ್ಲಿಟ್ಟುಕೊಂಡು ಚರ್ಚೆ ಬೆಳೆಸುವ ಪ್ರಜಾಸತ್ತಾತ್ಮಕಗುಣದ ಭಾಗವಾಗಿ ಬಂದವು ಎಂಬುದು ಮುಖ್ಯ. ಶೂನ್ಯಸಂಪಾದನೆಯ ಈ ಸರಣಿ ಪ್ರತಿಕ್ರಿಯೆಗಳು ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಬಹುದೊಡ್ಡ ವಿದ್ಯಮಾನವಾಗಿರುವುದನ್ನು ವಿದ್ವಾಂಸರೂ ಗುರುತಿಸಿದ್ದಾರೆ. ಇಂತಹ ಸಾಂಸ್ಕೃತಿಕ ಪಠ್ಯಗಳಾದ ಶೂನ್ಯಸಂಪಾದನೆಗಳ ಸೃಷ್ಟಿಯಲ್ಲಿ ತುಮಕೂರು ಜಿಲ್ಲೆಯ ಕೊಡುಗೆ ಗಮನಾರ್ಹವಾದುದಾಗಿದೆ.
 ಪರಾಮರ್ಶನ ಗ್ರಂಥಗಳು
1. ಎಂ. ಚಿದಾನಂದ ಮೂರ್ತಿ: ಶೂನ್ಯಸಂಪಾದನೆಯನ್ನು ಕುರಿತು
   ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, (ದ್ವಿ.ಮು)1988
2.ಜಿ.ಎಸ್.ಸಿದ್ಧಲಿಂಗಯ್ಯ: ಶೂನ್ಯಸಂಪಾದನೆಗಳು ಒಂದು ಅವಲೋಕನ
  ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು,1996
4. ಎಸ್.ವಿದ್ಯಾಶಂಕರ:  ವೀರಶೈವ ಸಾಹಿತ್ಯ ಚರಿತ್ರೆ, ಪ್ರಾಯೋಗಿಕ ನೆಲೆ, ಸಂ.3, ಭಾಗ 1 ಮತ್ತು 3
         ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.2014
3. ಸಿ.ನಾಗಭೂಷಣ: 1.ವೀರಶೈವ ಸಾಹಿತ್ಯ ಕೆಲವು ಒಳನೋಟಗಳು
                ವಿದ್ಯಾನಿಧಿ ಪ್ರಕಾಶನ, ಗದಗ  2008


  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...