ವಚನ
ಸಾಹಿತ್ಯ ಶೋಧ *
ಜಾಗತಿಕ
ಸಾಹಿತ್ಯಕ್ಕೆ ಹಾಗೂ ಮುಕ್ತ ಚಿಂತನೆಗೆ ಅಮೂಲ್ಯವಾದ ಕಾಣಿಕೆ ನೀಡಿದ ವಚನಸಾಹಿತ್ಯವು ಕನ್ನಡ
ಸಾಹಿತ್ಯ ಚರಿತ್ರೆಯಲ್ಲಿಯೇ ವೈಶಿಷ್ಟ್ಯ ಪೂರ್ಣಎನಿಸಿದ್ದು. ಎಂಟು ನೂರು ವರ್ಷಗಳ
ಇತಿಹಾಸವನ್ನೊಳಗೊಂಡಿದೆ. 12ನೇ ಶತಮಾನದಲ್ಲಿ ಪ್ರಾರಂಭವಾಗಿ ಪ್ರವಾಹದೋಪಾದಿಯಲ್ಲಿ ಹರಿದು
ಬಂದು ನಂತರದ ಕಾಲದಲ್ಲಿ ಅನೇಕ ಆಪತ್ತು ವಿಪತ್ತುಗಳಿಗೆ ತುತ್ತಾಗಿ ಮತ್ತೆ ಮರುಹುಟ್ಟು ಪಡೆದು
ಅನೇಕ ಏರಿಳಿತಗಳಲ್ಲಿ ಸಾಗಿ ಇಂದಿನವರೆಗೂ ಅವ್ಯಾಹತವಾಗಿ ಸಾಗಿಬಂದಿದೆ. ವಚನ ಸಾಹಿತ್ಯವು ಸತ್ಯ ಶುದ್ಧ
ನಡೆ ನುಡಿ ಸಾಮರಸ್ಯ ಸಾಧಿಸಿದ ಸಾತ್ವಿಕ ಜೀವಿಗಳ ಆತ್ಮ ಸಾಕ್ಷಿಯ ಅನುಪಮ ಅಭಿವ್ಯಕ್ತಿಯಾಗಿದೆ.
ವಚನಗಳನ್ನು ಶಾಸ್ತ್ರೀಯವಾಗಿ ಸಂಕಲಿಸುವ, ಸಂಪಾದಿಸುವ ಪ್ರಯತ್ನವು ವಿಜಯನಗರ ಸಾಮ್ರಾಜ್ಯದ ಸಂಗಮವಂಶದ
ದೊರೆ ಇಮ್ಮಡಿ ಪ್ರೌಢದೇವರಾಯನ ಕಾಲದಲ್ಲಿ ಜಕ್ಕಣಾರ್ಯ ಹಾಗೂ ಲಕ್ಕಣ್ಣದಂಡೇಶರ ನೇತೃತ್ವದಲ್ಲಿ 15ನೇ
ಶತಮಾನದಲ್ಲಿಯೇ ಆರಂಭವಾಗಿದ್ದಿತು. ತೋಂಟದ ಸಿದ್ಧಲಿಂಗ ಯತಿಗಳ ಶಿಷ್ಯರು ಹಾಗೂ ಪ್ರಶಿಷ್ಯರೂ, ಹಾಗೂ
ನೂರೊಂದು ವಿರಕ್ತರು ಚದುರಿಹೋಗಿದ್ದ 12ನೇ ಶತಮಾನದ ವಚನ ಸಾಹಿತ್ಯವನ್ನು ಶೋಧಿಸುವ, ಒಂದೆಡೆ
ಕಲೆ ಹಾಕುವ, ವಿವಿಧ ಸ್ಥಲಕಟ್ಟಿಗನುಗುಣವಾಗಿ ಜೋಡಿಸುವ, ಸಂಪಾದಿಸುವ, ವ್ಯಾಖ್ಯಾನಿಸುವ
ಮಹತ್ತರವಾದ ಕಾರ್ಯವನ್ನು ಕೈಗೊಂಡರು. ಅಲ್ಲಲ್ಲಿ ಅಡಗಿದ್ದ ವಚನಗಳನ್ನು ಶೋಧಿಸುವಲ್ಲಿ, ನಾಮಾನುಗುಣವಾಗಿ, ವಿಷಯಾನುಗುಣವಾಗಿ
ಜೋಡಿಸುವಲ್ಲಿ, ತಾತ್ವಿಕ ದೃಷ್ಟಿಯಿಂದ ಸಂಕಲಿಸುವಲ್ಲಿ, ಸಂವಾದರೂಪದಲ್ಲಿ
ಸಂಯೋಜಿಸಿ ಸಂಪಾದಿಸುವಲ್ಲಿ ಅಂತರಾರ್ಥ ಅರಿತು ಟೀಕೆ, ಟಿಪ್ಪಣಿ, ವ್ಯಾಖ್ಯಾನ
ಮಾಡುವಲ್ಲಿ ವಚನಸಾಹಿತ್ಯವನ್ನು ಕುರಿತು ಮೊದಲ ಆಕರ ಶೋಧನಿಷ್ಠ ಸಂಶೋಧನೆಯನ್ನು
ಗುರುತಿಸಬಹುದಾಗಿದೆ. ಆದಾಗ್ಯೂ ಅದು ಶುದ್ಧ ಶಾಸ್ತ್ರಿಯ ಶಿಸ್ತಿನ ಚೌಕಟ್ಟು ಪಡೆದುಕೊಳ್ಳಲು 20ನೇ
ಶತಮಾನದವರೆಗೂ ಕಾಯಬೇಕಾಗಿತ್ತು. ಆಧುನಿಕ ಕಾಲದಲ್ಲಿ ವಚನಸಾಹಿತ್ಯ ಕುರಿತ ಸಂಶೋಧನೆ ಆಕರಶೋಧ ಹಾಗೂ
ಆಶಯ ಶೋಧಗಳೆಂಬ ನೆಲೆಗಟ್ಟನಲ್ಲಿ ನೆಡೆದಿದೆ.
ಇತ್ತೀಚೆಗೆ
ವಚನಸಾಹಿತ್ಯವನ್ನು ಕುರಿತು ನಡೆದಿರುವ ಸಂಶೋಧನೆಯನ್ನು ಮೂರು ರೀತಿಯಲ್ಲಿ ಗುರುತಿಸಲಾಗಿದೆ. 1.ಅಪ್ರಕಟಿತ
ವಚನಗಳ ಶೋಧನಾಕಾರ್ಯ
2.ವಚನಕಾರರ ಜೀವಿತದ ಕಾಲ, ಜನ್ಮಸ್ಥಳ, ವೈಯಕ್ತಿಕ
ವಿವರ ಇತ್ಯಾದಿಗಳನ್ನು ಕುರಿತ ನೂತನ ಸಂಶೋಧನೆಗಳು.
೩.ವಿಭಿನ್ನ
ದೃಷ್ಟಿಕೋನಗಳಲ್ಲಿ ವಚನಗಳ ವಿಶ್ಲೇಷಣೆ
1.ಅಪ್ರಕಟಿತ ವಚನಗಳ ಶೋಧನಾಕಾರ್ಯ
ಇತ್ತಿಚಿನ
ಕಾಲದಲ್ಲಿ ವಚನಸಾಹಿತ್ಯದ ಪರಿಷ್ಕರಣೆ, ಸಂಶೋಧನಾ ಚಟುವಟಿಕೆಗಳು ತೀವ್ರ ಗತಿಯಲ್ಲಿ ಮುಂದುವರೆದಿವೆ.
ವಿಶ್ವವಿದ್ಯಾಲಯಗಳು ಹಾಗೂ ನಾಡಿನಾದ್ಯಂತ ಇರುವ ವೀರಶೈವ ಮಠಮಾನ್ಯಗಳು, ಸರ್ಕಾರದ
ಅಧೀನ ಸಂಸ್ಥೆಗಳು ಸಾಂಘಿಕ ಪ್ರಯತ್ನದ ಮೂಲಕ ಅಪ್ರಕಟಿತ ವಚನ ಸಾಹಿತ್ಯವನ್ನು ಹೊರತರಬೇಕೆನ್ನುವ
ಆಕಾಂಕ್ಷೆಯಿಂದ ಕಾರ್ಯೋನ್ಮುಖಗೊಂಡಿದೆ. ವೈಯಕ್ತಿಕ ನೆಲೆಗಟ್ಟಿನಲ್ಲಿ ಎಸ್.ಶಿವಣ್ಣ, ವೀರಣ್ಣ
ರಾಜೂರ, ಎಸ್.ಉಮಾಪತಿ, ಬಿ.ಆರ್.ಹಿರೇಮಠ, ಡಾ.ಬಿ.ನಂಜುಂಡಸ್ವಾಮಿ
ಮುಂತಾದ ವಿದ್ವಾಂಸರು ವೀರಶೈವ ಮಠಗಳ ಹಸ್ತಪ್ರತಿ ಸಂಗ್ರಹಾಲಯಗಳು ಹಾಗೂ ವಿಶ್ವವಿದ್ಯಾಲಯಗಳ
ಹಸ್ತಪ್ರತಿ ಭಂಡಾರಗಳಲ್ಲಿ ಇರುವ ಹಸ್ತಪ್ರತಿಗಳನ್ನು ಪರಿಶೋಧಿಸಿ ಅವುಗಳಲ್ಲಿರುವ ಅಪ್ರಕಟಿತ
ವಚನಕಾರರು ಹಾಗೂ ಅವರ ವಚನಗಳನ್ನು ಶಾಸ್ತ್ರಶುದ್ಧವಾಗಿ ಪರಿಷ್ಕರಿಸುವ ಕಾರ್ಯದಲ್ಲಿ
ನಿರತರಾಗಿದ್ದಾರೆ. ಈ ನಿಟ್ಟಿನಲ್ಲಿ ಎಸ್.ಶಿವಣ್ಣನವರ
ಕಾರ್ಯ ಶ್ಲಾಘನೀಯವಾದುದು. ಫ.ಗು.ಹಳಕಟ್ಟಿಯವರು, ಶಿ.ಶಿ. ಬಸವನಾಳ,ಎಲ್.ಬಸವರಾಜು, ಅವರ
ವಚನಗಳ ಸಂಪಾದನೆ, ಆರ್.ಸಿ.ಹಿರೇಮಠರ ನೇತೃತ್ವದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ
ಅಧ್ಯಯನ ಪೀಠದ ಸಮಗ್ರ ವಚನ ವಾಙ್ಮಯದ ಪರಿಷ್ಕರಣೆ, ಪ್ರಕಟನೆ
ಯೋಜನೆಯ ನಂತರ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು
ಎಂ.ಎಂ.ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಸಮಗ್ರ ವಚನ ಸಾಹಿತ್ಯದ ಜನಪ್ರಿಯ ಆವೃತ್ತಿ
ಯೋಜನೆಯಡಿಯಲ್ಲಿ ಇಲ್ಲಿಯವರೆವಿಗೂ ಲಭ್ಯವಿದ್ದು ಚದುರಿ ಹೋಗಿದ್ದ ಎಲ್ಲಾ ಶರಣರ ವಚನಗಳನ್ನು
ಶುದ್ಧರೂಪದಲ್ಲಿ, ಉಚಿತ ಪ್ರಸ್ತಾವನೆ, ಪದಕೋಶ, ಆಕರಸೂಚಿ, ವಚನಗಳ
ಅಕಾರಾದಿಯೊಂದಿಗೆ 15 ಸಂಪುಟಗಳಲ್ಲಿ 1993ರಲ್ಲಿ
ಹೊರತಂದಿದೆ. 2001ರಲ್ಲಿ ಅದರ ಪರಿಷ್ಕೃತ ಪ್ರಕಟನೆಯು ಪ್ರಕಟಗೊಂಡಿದ್ದು, ಒಟ್ಟು
22510 ವಚನಗಳು ಕಂಡುಬರುತ್ತವೆ. 246
ವಚನಕಾರರು ಹಾಗೂ ವಚನಕಾರ್ತಿಯರು ಕಂಡು ಬರುತ್ತಾರೆ.
ವಾಸ್ತವವಾಗಿ 12ನೇ
ಶತಮಾನದ ಸರಿಸುಮಾರಿನಲ್ಲಿ ಇದ್ದವರು 121 ಮಂದಿ ವಚನಕಾರರು ಹಾಗೂ 30
ಮಂದಿ ವಚನಕಾರ್ತಿಯರೆಂದು ಸದ್ಯಕ್ಕೆ ಗುರುತಿಸಲಾಗಿದೆ. ಅವರು ಬರೆದ ವಚನಗಳ ಸಂಖ್ಯೆ 14
ಸಾವಿರ ದಾಟಿದೆ. ಆ ಕಾಲದ ಇತರ ವಚನಕಾರರ ಸಂಖ್ಯೆ 58
ಇವರಲ್ಲಿ 12ನೇ ಶತಮಾನದಲ್ಲಿ ಇಲ್ಲದೇ ಇದ್ದವರು ಎಂಬುದು ಖಚಿತವಾಗಿ ತಿಳಿದು
ಬಂದಿಲ್ಲ. ಇವರ ವಚನಗಳು ಸು.245 ದೊರೆಯುತ್ತವೆ.
ಅಚ್ಚರಿಯ ಸಂಗತಿ ಎಂದರೆ ಸಮಗ್ರ ವಚನಸಾಹಿತ್ಯದ ಜನಪ್ರಿಯ
ಆವೃತ್ತಿಯ ಪರಿಷ್ಕೃತ ಮುದ್ರಣವು 2001ರಲ್ಲಿ ಹೊರಬಂದ ಕಾಲದಲ್ಲಿಯೇ 1400ಕ್ಕೂ
ಹೆಚ್ಚಿನ ವಚನಗಳು ಸಂಶೋಧನೆಯ ಮೂಲಕ ಶೋಧಿತವಾಗಿವೆ. ಆ ಕಾಲದಲ್ಲಿಯೇ ಸುಮಾರು 1400ಕ್ಕೂ
ಹೆಚ್ಚಿನ ವಚನಗಳು ಶೋಧನೆಯ ಮೂಲಕ ಶೋಧಿಸಲ್ಪಟ್ಟು, ಅಂಕಿತಗಳು
ತಿಳಿದು ಬರದ 53 ವಚನಕಾರರು ಬೆಳಕಿಗೆ ಬಂದಿದ್ದಾರೆ. ಅಲ್ಲದೆ 7
ಅಜ್ಞಾತ ವಚನಕಾರರು ಮತ್ತು ಅವರ ಅಂಕಿತಗಳನ್ನು ಶೋಧಿಸಿದ್ದಾರೆ.”
“ಇದೇ ಪರಿಷ್ಕೃತ ಮುದ್ರಣದಲ್ಲಿ ಅಕ್ಕಮಹಾದೇವಿಯ 434
ವಚನಗಳು ಪ್ರಕಟಗೊಂಡಿದ್ದವು. ಇತ್ತೀಚೆಗೆ ಎಸ್. ಶಿವಣ್ಣನವರು ‘ಜಲತ್ಕಂಠ ಗುರುಲಿಂಗ ದೇಶಿಕರ
ಭೈರವೇಶ್ವರಕಾವ್ಯ’ದ ನಾಲ್ಕನೆಯ ಕಾಂಡ ಸಂಧಿ 1 ರಲ್ಲಿ ಅಕ್ಕನ ನೂತನ ಏಳು
ವಚನಗಳನ್ನು ಗುರುತಿಸಿದ್ದಾರೆ. ಅಲ್ಲದೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ
ಹಸ್ತಪ್ರತಿ ಸಂಗ್ರಹಾಲಯದಲ್ಲಿಯ ‘ಪ್ರಭುದೇಶಿಕ ಸಂಕಲಿತ ಮೋಕ್ಷದರ್ಶನ ಮಹಾ ಸಂಗ್ರಹ’ದಲ್ಲಿ ಅಕ್ಕನ
ಎರಡು ನೂತನ ವಚನಗಳನ್ನು ಗುರುತಿಸಿ ಒಟ್ಟು ಒಂಬತ್ತು ವಚನಗಳನ್ನು ಸೆಪ್ಟೆಂಬರ್ 15, 2002ರ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಈಗ ಲಭ್ಯವಿರುವ ಅಕ್ಕಮಹಾದೇವಿಯ ಒಟ್ಟು
ವಚನಗಳ ಸಂಖೆ 443 ಕ್ಕೆ ಏರಿದೆ. ಸೋಲೂರು ರುದ್ರಮುನಿ ಸ್ವಾಮಿ ಹೆಸರಿನ ವಚನಕಾರ
ಇತ್ತೀಚಿನ ಸಂಶೋಧನೆಯ ಮೂಲಕ ಬೆಳಕಿಗೆ ಬಂದ ವಚನಕಾರ. ಚಿತ್ರದುರ್ಗದ ಬೃಹನ್ಮಠ ಸಂಗ್ರಹದಲ್ಲಿ
ದೊರೆತ ಕಾಗದದ ಹಸ್ತಪ್ರತಿಯಲ್ಲಿ ರುದ್ರೇಷ್ಟದ ಚನ್ನಬಸವೇಶ್ವರ ಅಂಕಿತದಲ್ಲಿ 27
ವಚನಗಳು ದೊರೆತಿದ್ದು ಅವುಗಳನ್ನು ಎಸ್. ಶಿವಣ್ಣನವರು ಪರಿಷ್ಕರಿಸಿ ‘ಸ್ವಪ್ನಲೋಕ’ ಪತ್ರಿಕೆಯ
ಡಿಸೆಂಬರ್ 2002 ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ. “ಬೆ.ವಿ.ವಿ.ಯ ಕನ್ನಡ ಅಧ್ಯಯನ
ಕೇಂದ್ರದ ಹಸ್ತಪ್ರತಿ ವಿಭಾಗದ ಹಸ್ತಪ್ರತಿ ಸಂಖ್ಯೆ ಕೆ.1022ರಲ್ಲಿ
ಭಕ್ತಿ ಭಂಡಾರಿ ಬಸವಣ್ಣನವರ ಪತ್ನಿ ನೀಲಮ್ಮಳ ಹೊಸ ವಚನವನ್ನು ಶೋಧಿಸಿ ಪ್ರಕಟಿಸಿದ್ದಾರೆ.”
ಆ ವಚನ ಇಂತಿದೆ.
ಮುಟ್ಟದ ಮುನ್ನ ಗುರುವುಂಟು
ಲಿಂಗವುಂಟು, ಜಂಗಮವುಂಟು
ಪಾದೋದಕವುಂಟು, ಪ್ರಸಾದವುಂಟು
ಮುಟ್ಟಿದ ಬಳಿಕ ಗುರುವಿಲ್ಲ
ಲಿಂಗವಿಲ್ಲ, ಜಂಗಮವಿಲ್ಲ
ಪಾದೋದಕವಿಲ್ಲ, ಪ್ರಸಾದವಿಲ್ಲ
ಸಂಗಯ್ಯನಲ್ಲಿ ಸ್ವಯವಿಲ್ಲ, ಪರವಿಲ್ಲ.
ಅದೇ
ರೀತಿ ದುಗ್ಗಳೆಯ ಒಂದು ವಚನವನ್ನು ಶೋಧಿಸಿ ಪ್ರಕಟಿಸಿದ್ದಾರೆ, “ಅನಾಮಧೇಯ
ವಚನಕಾರನ ನಂದಿನಾಥ ಪ್ರಭುವೇ ಅಂಕಿತದ ಹದಿನೈದು ವಚನಗಳು ದೊರೆತಿವೆ.” ತಮ್ಮ ಬಸವಣ್ಣ ಅಂಕಿತದ
ಅನಾಮಧೇಯ ವಚನಕಾರನ ಹನ್ನೆರಡು ಹೊಸ ವಚನಗಳು ದೊರೆತಿವೆ. ದಾಸಪ್ರಿಯ ರಾಮನಾಥ ಪ್ರಭುವೇ
ಅಂಕಿತದಲ್ಲಿ ಅನಾಮಧೇಯ ವಚನಕಾರರ ಎಂಟು ವಚನಗಳು ಪ್ರಕಟ ಗೊಂಡಿವೆ. ನಿಕಳಂಕ ಚನ್ನಮಲ್ಲಿಕಾರ್ಜುನ
ಅಂಕಿತದ ಅಜ್ಞಾತ ವಚನಕಾರನ ಒಂಬತ್ತು ವಚನಗಳು ಲಭಿಸಿವೆ. ಮಹತ್ತರ ಸಂಗತಿ ಎಂದರೆ “ಅಜ್ಞಾತ ಕರ್ತೃ
ಕೃತ ಟೀಕಾಸಹಿತ ವಚನಸಂಕಲನದಲ್ಲಿ ಇದುವರೆಗೂ ಪ್ರಕಟವಾಗದೇ ಇರುವ ಅಲ್ಲಮಪ್ರಭುವಿನ ಇಪ್ಪತೈದು ಹೊಸ
ವಚನಗಳನ್ನು ಶೋಧಿಸಲಾಗಿದ್ದು ಅವುಗಳನ್ನು ಎಸ್. ಶಿವಣ್ಣನವರು ಪರಿಷ್ಕರಿಸಿ ಮೇ ಮತ್ತು ಜೂನ್ 2002 ರ
ಸ್ವಪ್ನಲೋಕ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ”. ಅದೇರೀತಿ ಅಪ್ರಮಾಣ ಕೂಡಲ ಸಂಗಮದೇವ ಅಂಕಿತದಲ್ಲಿ
ಅಪ್ರಕಟಿತ ಹನ್ನೆರಡು ವಚನಗಳು ದೊರೆತಿವೆ.
“ಬಸವ
ಸಮಿತಿಯ ಹಸ್ತಪ್ರತಿ ಸಂಗ್ರಹದದ ಓಲೆಪ್ರತಿ, ಮೈಸೂರಿನ
ಜಿ.ಎ.ಶಿವಲಿಂಗಯ್ಯನವರ ಸಂಗ್ರಹದ ಓಲೆಪ್ರತಿ, ಕನ್ನಡ ಸಾಹಿತ್ಯ ಪರಿಷತ್ತಿನ
ಹಸ್ತಪ್ರತಿ ಸಂಖ್ಯೆ ಬಿ.421, ಬೆ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ
ಓಲೆಗರಿ ಸಂಖ್ಯೆ 49 ಹಾಗೂ ಓಲೆಪ್ರತಿ ಸಂಖ್ಯೆ 1378 (ಗರಿ.72-3) ಗಳನ್ನು
ಆಧರಿಸಿ ಅಂಬಿಗರ ಚೌಡಯ್ಯನ 8
ಅಪ್ರಕಟಿತ ವಚನಗಳನ್ನು ಶೋಧಿಸಿ ಪ್ರಕಟಿಸಿದ್ದಾರೆ.” ಅದೇ ರೀತಿ
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಹಸ್ತಪ್ರತಿ ಭಂಡಾರದ ಕ್ರ.ಸಂ.ಬಿ.೪೨೧
ರ ಹಸ್ತಪ್ರತಿಯಲ್ಲಿ ಅಂಬಿಗರ ಚೌಡಯ್ಯನ ನಾಲ್ಕು ಅಪ್ರಕಟಿತ ೦೪ ವಚನಗಳನ್ನು ಶೋಧಿಸಿ ಪ್ರಕಟಿಸಿದ್ದಾರೆ.
ಇಂದು ಎಸ್.
ಶಿವಣ್ಣನವರ ಈ ವಚನಗಳ ಶೋಧನೆಯಿಂದಾಗಿ ಲಭ್ಯವಿರುವ ಅಂಬಿಗರ ಚೌಡಯ್ಯನ ವಚನಗಳ ಸಂಖ್ಯೆ 2೮೨
ಕ್ಕೆ ಹೆಚ್ಚಿದೆ. ಇದರಿಂದಾಗಿ ಈತನ ಸ್ಥಾನವನ್ನು ವಚನಕಾರರ ಪರಂಪರೆಯಲ್ಲಿ ಅಧ್ಯಯನ ಮಾಡಲು
ಸಹಕಾರಿಯಾಗಿದೆ.
ಎಳಂದೂರು
ಪರ್ವತೇಶನ ಶಾಂತವೀರೇಶ್ವರನ ಅಂಕಿತದಲ್ಲಿರುವ ಸುಮಾರು 1052
ವಚನಗಳು ‘ಸಮಗ್ರ ವಚನ ಸಾಹಿತ್ಯ’ದ ಪರಿಷ್ಕೃತ ಜನಪ್ರಿಯ ಆವೃತ್ತಿ ಕ್ರಿ.ಶ. 2001
ರಲ್ಲಿ ಪ್ರಕಟಗೊಂಡಿವೆ. ಅವುಗಳಲ್ಲಿ ಸೇರಿರದ- ವಚನವನ್ನು ಎಸ್. ಶಿವಣ್ಣನವರು ಬೆ.ವಿ.ವಿ.ಯ ಕನ್ನಡ
ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಕ್ರಮಾಂಕ.ಕೆ.೨೨೭
ನೆಯ ಓಲೆಗರಿಯಲ್ಲಿ ಇದ್ದುದನ್ನು ಹೊಸದಾಗಿ ಶೋಧಿಸಿದ್ದಾರೆ.
“ಬೆಂ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದ
ಹಸ್ತಪ್ರತಿ ಸಂಖ್ಯೆ ಕೆ.227 ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ವಚನ ವಾಜ್ಞಯ ಭಂಡಾರದ
ಹಸ್ತಪ್ರತಿ ಸಂಖ್ಯೆ: 115 ರ 11ನೇ ಗರಿ ಹಾಗೂ ಬೆಂ.ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ
ಹಸ್ತಪ್ರತಿ ವಿಭಾಗದ ಹಸ್ತಪ್ರತಿಯಲ್ಲಿಯ ಶಾಂತದೇವರ ಷಟ್ಪ್ರಕಾರ ಸಂಗ್ರಹ ಬಿ.1458
ಹಸ್ತಪ್ರತಿಯಲ್ಲಿಯ ಇಲ್ಲಿಯವರೆಗೂ ಬೆಳಕು ಕಾಣದ ಜೇಡರ ದಾಸಿಮಯ್ಯನ ಒಟ್ಟು 1೩ ಅಪ್ರಕಟಿತ
ವಚನಗಳನ್ನು ಶೋಧಿಸಿ ಬೆಳಕಿಗೆ ತಂದಿದ್ದಾರೆ. ಇವರ ಶೋಧನೆಯಿಂದಾಗಿ ಆದ್ಯವಚನಕಾರ ಜೇಡರ ದಾಸಿಮಯ್ಯನ
ಒಟ್ಟು ವಚನಗಳ ಸಂಖ್ಯೆ ಇಂದು 23೫ ಕ್ಕೆ ತಲುಪಿದೆ.” ಎಸ್.ಶಿವಣ್ಣನವರ ಈ ಹೊಸ ಶೋಧ
ಜೇಡರದಾಸಿಮಯ್ಯನನ್ನು ಅರ್ಥೈಸಲು ಸಹಕಾರಿಯಾಗಿದೆ.
ಚಿತ್ರದುರ್ಗದ
ಬೃಹನ್ಮಠದ ಹಸ್ತಪ್ರತಿ ಸಂಗ್ರಹದಲ್ಲಿದ್ದ ಹಸ್ತಪ್ರತಿ ಓಲೆಗರಿ ಸಂಖ್ಯೆ 714
ರಲ್ಲಿ ಬಸವಣ್ಣನವರ ಒಂದು ಅಪ್ರಕಟಿತ ವಚನವಿರುವುದನ್ನು ಎಸ್. ಶಿವಣ್ಣನವರು ಶೋಧಿಸಿ ಬೆಳಕಿಗೆ
ತಂದಿದ್ದಾರೆ.
‘ನೇಹದ ಸುಖವ ನೋಟನುಂಗಿತ್ತು.
ನೋಟದ ಸುಖವ ಕೂಟ
ನುಂಗಿತ್ತು
ಕೂಟದ ಸುಖವ
ಆಲಿಂಗನ ನುಂಗಿತ್ತು
ಆಲಿಂಗನದ ಸುಖವ
ಸಂಗ ನುಂಗಿತ್ತು.
ಸಂಗದ ಸುಖವ ಪರವಸ
ನುಂಗಿತ್ತಯ್ಯ
ಪರವಸದ ಸುಖವ
ಕೂಡಲ ಸಂಗಯ್ಯ ತಾನೇ ಬಲ್ಲ.’
‘ಭೈರವೇಶ್ವರ
ಕಾವ್ಯ’ದ ‘ಕಥಾಮಣಿ ಸೂತ್ರರತ್ನಾಕರ’ವನ್ನು ಗದ್ಯದಲ್ಲಿ ರಚಿಸಿದ ಶಾಂತಲಿಂಗದೇಶಿಕನು (1672) ಜಕ್ಕಣ್ಣನ
ಕೃತಿಯ ಬಗೆಗೆ ಕುಮಾರ ಬಂಕನಾಥ ದೇವರ ಶಿಷ್ಯರಾದ ಜಕ್ಕಣ್ಣಾಚಾರ್ಯ ಪಂಡಿತರು ತಮ್ಮ ಗುರು ನಿರೂಪದಿಂದ
ಸಕಲ ಪುರಾತನ ವಚನಗಳಿಂದ ಏಕೋತ್ತರ ಶತಸ್ಥಲವಂ ಸೂತ್ರವ ಕಲ್ಪಿಸಿ ಸ್ಥಲವಿಟ್ಟು ವಸ್ತುಕ ವರ್ಣಕದಿಂದ
ಸಂಗ್ರಹಿಸಿದಂತೆ ತಿಳಿಸಿದ್ದಾನೆ.ಜಕ್ಕಣ್ಣನ ಏಕೋತ್ತರ ಶತಸ್ಥಲದಲ್ಲಿ 17
ಜನ ಶಿವಶರಣ/ಶರಣೆಯರ 101 ಸ್ವರವಚನಗಳಿರುವುದನ್ನು ಹಾಗೂ ಪ್ರತಿ ಸ್ವರವಚನಕ್ಕೆ
ರಾಗಗಳು ನಿರ್ದೇಶಿಸಿರುವುದನ್ನು ಎಸ್.ಶಿವಣ್ಣನವರು ಶೋಧಿಸಿ ಬೆಳಕಿಗೆ ತಂದಿದ್ದಾರೆ. ಇವುಗಳಲ್ಲಿ
ಇಬ್ಬರು ಶಿವಶರಣೆಯರಿದ್ದಾರೆ. 2 ಅಂಕಿತಗಳ ಕರ್ತೃಗಳು ತಿಳಿದುಬಂದಿಲ್ಲ. 3
ಅಂಕಿತಗಳಲ್ಲಿನ ಕತೃಗಳ ಕಾಲವನ್ನು ಖಚಿತವಾಗಿ ಹೇಳಲಾಗುವುದಿಲ್ಲ ಎಂದು ಅನಾಮಧೇಯರ ಬಗೆಗೆ
ತಿಳಿಸಿದ್ದಾರೆ.
ಕಾಲಾನುಕ್ರಮವಾಗಿ
‘ಏಕೋತ್ತರಶತಸ್ಥಲ’ದಲ್ಲಿ ನಮೂದಿತವಾಗಿರುವ ಸ್ವರವಚನ ಕತೃಗಳ ಅಂಕಿತ, ಹೆಸರು, ಕಾಲ
ಹಾಗೂ ಉಲ್ಲೇಖಿತ ಸ್ವರವಚನಗಳ ಸಂಖ್ಯೆಗಳು ಇರುವುದನ್ನು ಎಸ್.ಶಿವಣ್ಣನವರು ಈ ಕೆಳಕಂಡ ರೀತಿ
ಒದಗಿಸಿದ್ದಾರೆ.
ಉ(ಹು)ಳಿಯುಮೇಶ್ವರಲಿಂಗಚಿಕ್ಕಯ್ಯ
1160 1
ಕೂಡಲ ಸಂಗಯ್ಯಚೆನ್ನಬಸವ 1160 37
ಕೂಡಲ ಸಂಗ ಬಸವ 1160 18
ಗೊಹೇಶ್ವರ ಪ್ರಭುದೇವ 1160 13
ಚನ್ನಮಲ್ಲಿಕಾರ್ಜುನ ಮಹದೇವಿಯಕ್ಕ 1160 2
ನಿಜಲಿಂಗಸಂಗ ನಿಜಲಿಂಗ ಚಿಕ್ಕಯ್ಯ 1160 1
ರೇಕನಾಥ(ಯ್ಯ) ಬಹುರೂಪಿ ಚೌಡಯ್ಯ 1160 2
ಸಂಗ ಸಂಗಪ್ರಭು ನೀಲಮ್ಮ 1160 5
ಸದ್ದಸೋಮೇಶ ಅಮುಗಿದೇವ 1160 1
ಸೊಡ್ಡಳ ಸೊಡ್ಡಳ ಬಾಚರಸ 1169 3
ಹುಲಿಗೆರೆಯ ವರದ
ಸೋಮೇಶ ಅಗ್ಗಣಿ ಹೊನ್ನಮ್ಮ 1200 2
ಹಂಪೆಯ ವಿರೂಪಯ್ಯ ಅಗ್ಗಣಿ ಹಂಪಯ್ಯ 1300 1
ಗುರುಪುರದ ಮಲ್ಲ ಗು.ಮಲ್ಲಿಕಾರ್ಜುನ 1400 1
ಕಲ್ಲೇಶ್ವರ ? ? 1
ಗುರುಪ್ರಿಯ
ಸೋಮೇಶ್ವರ ? ? 1
ಸದ್ಗರು ಶಂಭು
ಸೋಮೇಶ ಪುಷ್ಪದ ಸೋಮಯ್ಯ ? 1
“ಜಕ್ಕಣಾರ್ಯ ಸಂಸ್ಕೃತದಲ್ಲಿ ‘ಏಕೋತ್ತರ ಶತಸ್ಥಲ’
ರಚಿಸಿದ್ದಾರೆ. ಅದಕ್ಕೆ ಶ್ರೀಗಿರೀಂದ್ರ (1430) ಕನ್ನಡದಲ್ಲಿ ವ್ಯಾಖ್ಯಾನ
ಬರೆದಿರುವನು”14 ಎಂಬುದನ್ನು ಇವರು ಗಮನಕ್ಕೆ ತಂದಿದ್ದಾರೆ. “ಜಕ್ಕಣಾರ್ಯನ ‘ಏಕೋತ್ತರ
ಶತಸ್ಥಲಕ್ಕೆ’ ಕನ್ನಡದಲ್ಲಿ ಹಲವಾರು ಟೀಕೆಗಳು ಉಪಲಬ್ದವಿದ್ದು ಯಾವುದೂ ಪ್ರಕಟವಾಗಿಲ್ಲ.” ಅದೇ ರೀತಿ
ಉಳಿಯುಮೇಶ್ವರದ ಚಿಕ್ಕಣ್ಣನ ಕೆಲವು ಅಪ್ರಕಟಿತ ವಚನಗಳನ್ನು, ಮೆರಮಿಂಡಯ್ಯನ
ಒಂದು ವಚನವನ್ನು, ಮೊಳಿಗೆ
ಮಾರಯ್ಯನ ಎರಡು ಅಪ್ರಕಟಿತ ವಚನಗಳನ್ನು ಹಾಗೂ
ಮಹಾಘನ ಸೋಮೇಶ್ವರ ಎಂಬ ಅಂಕಿತದಲ್ಲಿರುವ ವಚನಗಳು ಅಜಗಣ್ಣನವು ಎಂಬುದನ್ನುವಿವಿಧ ಮೂಲಗಳಿಂದ ಶೋಧಿಸಿ
ಪ್ರಕಟಿಸಿದ್ದಾರೆ.
ಹೀಗೆ ದಿ.ಎಸ್. ಶಿವಣ್ಣನವರ
ಸಂಶೋಧನಾಸಕ್ತಿಯ ಅವಿರತ ಪ್ರಯತ್ನದ ಮೂಲಕ ಪ್ರಸಿದ್ಧ ವಚನಕಾರರ ಅಪ್ರಕಟಿತ ವಚನಗಳು, ಮತ್ತು
ಅಜ್ಞಾತ ವಚನಕಾರರ ಹೆಚ್ಚಿನ ಸಂಖ್ಯೆಯ ವಚನಗಳು ಬೆಳಕು ಕಂಡಿವೆ. ಸರಕಾರ, ಸಂಘ
ಸಂಸ್ಥೆಗಳು ಮಾಡಬೇಕಾದ ಮಹತ್ತರ ಕೆಲಸವನ್ನು ವೈಯಕ್ತಿಕವಾಗಿ ಪ್ರತಿಫಲಾಪೇಕ್ಷೆ ಬಯಸದೇ ಎಸ್.
ಶಿವಣ್ಣನವರು ಶೋಧಿಸಿ ಪ್ರಕಟಿಸಿದ ವಚನಗಳ ಸಂಶೋಧನಾ ಕಾರ್ಯ ತಕ್ಕಮಟ್ಟಿಗೆ ಪ್ರಶಂಸಿಸುವಂಥದ್ದೇ.
ಇದಲ್ಲದೇ ಹಸ್ತಪ್ರತಿಗಳಲ್ಲಿ ಅಡಗಿಕುಳಿತಿದ್ದ ಕೆಲವು ವಚನಕಾರರ ಅಪ್ರಕಟಿತ ವಚನಗಳನ್ನು ಶೋಧಿಸಿ
ಬೆಳಕಿಗೆ ತಂದಿದ್ದಾರೆ. ಎಸ್.ಶಿವಣ್ಣನವರು ವಚನಕಾರರ ಇತಿವೃತ್ತಾಂತವನ್ನು ಯಾವ ರೀತಿಯಾಗಿ
ಸಂಗ್ರಹಿಸಿದ್ದಾರೆಂಬುದು ಅವರ ಸಂಶೋಧನೆಯ ಒಳನೋಟದಿಂದ ವ್ಯಕ್ತವಾಗುತ್ತದೆ. ಆದರೂ ಅಜ್ಞಾತ
ವಚನಕಾರರ ಬಗೆಗೆ ಆಗಬೇಕಾದ ಸಂಶೋಧನೆಗಳು ಬಹಳಷ್ಟಿದೆ.
ಇಲ್ಲಿಯವರೆಗಿನ
ಸಂಶೋಧನೆಯನ್ನು ಆಧರಿಸಿ ಹೇಳುವುದಾದರೆ ಒಟ್ಟು ಪ್ರಕಟಿತ ವಚನಗಳ ಸಂಖ್ಯೆ 22510
ಆಗಿವೆ. ಬೆಳಕಿಗೆ ಬಂದ ಪ್ರಕಟಣೆಗೊಳ್ಳಬೇಕಾಗಿರುವ ವಚನಗಳು 1400
ಆಗಿವೆ. ಒಟ್ಟು ವಚನಕಾರರ ಸಂಖ್ಯೆ 246+6=252 ಮಂದಿ ಸದ್ಯಕ್ಕೆ ಗುರುತಿಸಲ್ಪಟ್ಟಿದ್ದಾರೆ.
ಹೀಗೆ
ಆಸಕ್ತ ಸಂಶೋಧಕರ ಅವಿರತ ಪ್ರಯತ್ನದ ಮೂಲಕ ಪ್ರಸಿದ್ಧ ವಚನಕಾರರ ಅಪ್ರಕಟಿತ ವಚನಗಳು ಇತರ ವಚನಕಾರರ
ಹೆಚ್ಚಿನ ಸಂಖ್ಯೆಯ ವಚನಗಳು ಬೆಳಕು ಕಾಣುತ್ತಿವೆ. ಅಪ್ರಕಟಿತ ವಚನಗಳು ಸಂಶೋಧನಾ ಕಾರ್ಯ
ತಕ್ಕಮಟ್ಟಿಗೆ ನಡೆದಿದ್ದರೂ ಆಗಬೇಕಾದುದು ಸಾಕಷ್ಟಿದೆ. ಅವುಗಳೆಂದರೆ
1.
ಇತರ ವಚನಗಳ ಅಂಕಿತಗಳ ಇತರ ಕರ್ತೃಗಳನ್ನು ಶೋಧಿಸಬೇಕಾಗಿದೆ.
2.
ಲಭ್ಯವಿರುವ ಸ್ಥಲಕಟ್ಟಿನ ಕೃತಿ ಹಾಗೂ ವಚನಗಳನ್ನು ಪತ್ತೆ
ಹಚ್ಚಬೇಕಾಗಿದೆ.
3.
ಕೂಟವಚನಗಳನ್ನು ಕಳೆದು ಅಸಲಿ ವಚನಗಳನ್ನು
ನಿರ್ಧರಿಸಬೇಕಾಗಿದೆ..
4.
ವಚನಗಳು ಶುದ್ಧಪಾಠವನ್ನು ನಿರ್ಣಯಿಸಬೇಕಾಗಿದೆ.
5.
ಅಂಕಿತಗಳ ಗೊಂದಲವನ್ನು ನಿವಾರಿಸಬೇಕಾಗಿದೆ.
2.ವಚನಕಾರರ ಜೀವಿತದ ಕಾಲ,ಜನ್ಮಸ್ಥಳ,ವೈಯಕ್ತಿಕ ವಿವರ ಇತ್ಯಾದಿಗಳನ್ನು ಕುರಿತ ನೂತನ ಸಂಶೋಧನೆಗಳು.
ವೀರಶೈವಕಾವ್ಯ, ಪುರಾಣಗಳು, ಪೂರಕಶಾಸನಗಳು
ಕ್ಷೇತ್ರಕಾರ್ಯದ ಮೂಲಕ ಒದಗಿದ ಖಚಿತ ಆಕರಗಳ ಮೂಲಕ ವಚನಕಾರರ ಜೀವಿತದ ಕಾಲ, ಜನ್ಮಸ್ಥಳ, ವೈಯಕ್ತಿಕ
ವಿವರಗಳಿಗೆ ಸಂಬಂಧಿಸಿದ ಅಧಿಕೃತ ಸಂಗತಿಗಳನ್ನು ಪುನರ್ರಚಿಸುವಲ್ಲಿ ಇತ್ತೀಚಿನ ಸಂಶೋಧನೆಯು
ಸಹಕಾರಿಯಾಗಿದೆ. ಅಧಿಕೃತ ಮೂಲ ಆಕರಗಳ ಹಿನ್ನೆಲೆಯಲ್ಲಿ ನಡೆದ ಇತ್ತೀಚಿನ ಸಂಶೋಧನೆಯು
1.ವಚನಕಾರರ ಜೀವಿತದ ಕಾಲವನ್ನು ಅರ್ಥೈಸಲು
2.ವಚನಕಾರರ ವೈಯಕ್ತಿಕ ಚರಿತ್ರೆಯನ್ನು ಅವರ ವಂಶಾವಳಿ, ಜನ್ಮಸ್ಥಳ
ಇತ್ಯಾದಿಗಳನ್ನು ಗುರುತಿಸಲು ಹಾಗೂ ಪುನರ್ರಚಿಸಲು
3.ವಚನಕಾರರ ಹೆಸರಿನ ಗೊಂದಲನಿವಾರಿಸುವಲ್ಲಿ
4.ವಚನಕಾರರನ್ನು ಕುರಿತ ಕಾವ್ಯ-ಪುರಾಣಗಳಲ್ಲಿಯ ವಿವರಗಳಲ್ಲಿ
ಒಡಮೂಡಿದ ಸಂದೇಹಗಳನ್ನು ಪರಿಹರಿಸುವಲ್ಲಿ
5.ವಚನಗಳು ಅಂಕಿತದ ಶುದ್ಧಪಾಠವನ್ನು ಗುರುತಿಸುವಲ್ಲಿ
6.ವಚನಕಾರರು ಬದುಕಿದ್ದ ಕಾಲದ ಧಾರ್ಮಿಕ ಸ್ವರೂಪವನ್ನು
ಗುರುತಿಕೊಳ್ಳಲು ನೆರವಾಗಿರುವುದನ್ನು ಗುರುತಿಸಬಹುದಾಗಿದೆ.
ಏಕಾಂತದ
ರಾಮಯ್ಯನಿಗೆ ಸಂಬಂಧಿಸಿದ ಕ್ರಿ.ಶ.1185 ಅಬ್ಬೂರಿನ ಶಾಸನ, ಬಸವಣ್ಣನವರಿಗೆ
ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ಪ್ರಸ್ತಾಪಿಸುವ ಕ್ರಿ.ಶ.1260
ಅರ್ಜುನವಾಡ ಶಾಸನ, ಕ್ರಿ.ಶ.1190ರ ಚೂರ್ಗಿ ಶಾಸನದಿಂದ ಹಿಡಿದು ಯಾದವ ಅರಸರುಗಳು ಆಳ್ವಿಕೆಯ
ಕಟನೂರು ಶಾಸನ ಹಾಗೂ ಮರಡಿಪುರ ಶಾಸನದ ವರೆಗಿನ ಸಿದ್ಧರಾಮರಿಗೆ ಸಂಬಂಧಿಸಿದ 21
ಶಾಸನಗಳು ಹರಿಹರ, ಪಾಲ್ಕುರಿಕೆ ಸೋಮನಾಥರ ಕಾವ್ಯ ಪುರಾಣಗಳ ರಚನೆಗಿಂತ ಪೂರ್ವದಲ್ಲಿ
ದೊರೆತವುಗಳಾಗಿವೆ.
1.ವಚನಕಾರರ ಜೀವಿತ ಕಾಲವನ್ನು ನಿರ್ದಿಷ್ಟವಾಗಿ ಗುರುತಿಸುವ
ಪ್ರಯತ್ನವನ್ನು ಇತ್ತೀಚಿನ ಸಂಶೋಧನೆಯಲ್ಲಿ ಗುರುತಿಸಲಾಗಿದೆ.
1.ಇತ್ತೀಚಿನ ಸಂಶೋಧನೆ ಪ್ರಕಾರ ಬಸವಣ್ಣನವರ ಜೀವಿತದ
ಕಾಲಾವಧಿಯು ಕ್ರಿ.ಶ.1167 ಕ್ಕೆ ಬದಲಾಗಿ 1185-86
ಎಂದು ಸುಮಾರು 19 ವರ್ಷಗಳಷ್ಟು ಮುಂದಕ್ಕೆ ಹಾಕಲಾಗಿದೆ. ಬಸವಣ್ಣನವರ ಸಮಕಾಲೀನರೂ
ಅನುಯಾಯಿಗಳೂ ಸಮವಯಸ್ಕರರೂ ಆದ ಮಲ್ಲಿಕಾರ್ಜುನ ಪಂಡಿತರಾಧ್ಯರ ಕೊನೆಯ ಶಾಸನ ಕ್ರಿ.ಶ.1187ರಲ್ಲಿ
ದೊರೆತಿದೆ. ಪಂಡಿತಾರಾಧ್ಯರ ಚಾರಿತ್ರ್ಯದ ಪ್ರಕಾರ ಬಸವಣ್ಣನ ಅಭಿಮಾನಿ ಮತ್ತು ಅನುಯಾಯಿಯಾದ
ಮಲ್ಲಿಕಾರ್ಜುನಪಂಡಿತಾರಾಧ್ಯರು ಐಕ್ಯರಾಗುವುದಕ್ಕೆ ಒಂದು ವರ್ಷ ಮುಂಚೆ ಬಸವಣ್ಣನವರು
ಐಕ್ಯರಾದರೆಂದು ತಿಳಿದುಬರುತ್ತದೆ. ತೆಲಂಗಾಣ ಶಾಸನದಲ್ಲಿಯ ಉಲ್ಲೇಖದಿಂದ ಕ್ರಿ.ಶ.1187ರಲ್ಲಿ
ಪಂಡಿತರಾಧ್ಯರು ಐಕ್ಯರಾದರೆಂದು ತಿಳಿದುಬರುವುದರಿಂದ ಅವರ ಸಮಕಾಲೀನರಾದ ಬಸವಣ್ಣನವರು ಕ್ರಿ.ಶ.1185-86ರವರೆಗೂ ಬದುಕಿದ್ದರು ಎಂಬುದಾಗಿ ನಿರ್ಧರಿಸಬಹುದಾಗಿದೆ. ಹೀಗಾಗಿ ಬಸವಣ್ಣನವರು ಜೀವಿತದ
ಪರಮಾವಧಿಯ ಕಾಲ ಕ್ರಿ.ಶ. 1167ಕ್ಕೆ ಬದಲಾಗಿ ಕ್ರಿ.ಶ. 1185-86
ಎಂದು ಇಟ್ಟುಕೊಳ್ಳಬಹುದಾಗಿದೆ.
ವಚನಕಾರ
ಆದಯ್ಯ ಮತ್ತು ಏಕಾಂತರಾಮಯ್ಯರ ಕಾಲವನ್ನು ಬಸವಯುಗದ ಕೊನೆಯ ಹಂತದಲ್ಲಿ ಅಂದರೆ 12ನೇ
ಶತಮಾನದ ಅಂತ್ಯಭಾಗ ಹಾಗೂ 13ನೇ ಶತಮಾನದ ಆದಿಭಾಗವೆಂದು ಗುರುತಿಸಲಾಗಿತ್ತು. ವೀರಶೈವ
ಧರ್ಮವು ಬಸವಾದಿಗಳ ಕಾಲದಲ್ಲಿ ಉನ್ನತ ಸ್ಥಾನವನ್ನು ಗಳಿಸಿತ್ತಾದರೂ ಕೊನೆಯ ದಿನಗಳಲ್ಲಿ ನಡೆದ
ಶೋಭೆಯ ಅಂತ್ಯದಲ್ಲಿ ಬಿಜ್ಜಳನ ಕೊಲೆಯೊಂದಿಗೆ ಪರ್ಯಾವಸಾನವಾಗಿ ಬಸವ, ಚನ್ನಬಸವಾದಿ
ಶರಣರು ಕಲ್ಯಾಣದಿಂದ ಚದುರು ಹೋಗಿ ಬೇರೆ ಕಡೆ ಐಕ್ಯವಾದಂತೆ ಕಂಡುಬಂದರೆಂದು ಕಾಣಿಸುತ್ತದೆ. ಬಸವ
ಮುಂತಾದ ಧಾರ್ಮಿಕ ನಾಯಕರು ಐಕ್ಯರಾದ ನಂತರ ನಿಧಾನವಾಗಿ ಹಬ್ಬುತ್ತಿದ್ದ ವೀರಶೈವ ಧರ್ಮದ
ನಾಯಕತ್ವವನ್ನು ಏಕಾಂತರಾಮಯ್ಯ ಮತ್ತು ಆದಯ್ಯರು ವಹಿಸಿಕೊಂಡರು ಎಂಬ ಅಭಿಪ್ರಾಯ ಇದ್ದಿತು. ಆದರೆ
ಇತ್ತೀಚಿನ ಸಂಶೋಧನೆ ಪ್ರಕಾರ ಆದಯ್ಯ ಮತ್ತು ಏಕಾಂತರಾಮಯ್ಯರುಗಳು ಬಸವಪೂರ್ವದ ಕೊನೆಯ ಭಾಗದಿಂದಲೂ
ಜೀವಿಸಿದ್ದು ಬಸವಾದಿ ಪ್ರಮಥರ ಹಿರಿಯ ಸಮಕಾಲೀನರಾಗಿ ಶಿವಮತ ಪ್ರಸಾರ ಕಾರ್ಯ ಕೈಕೊಂಡರು
ಎಂಬುದನ್ನು ಶಾಸನಗಳಲ್ಲಿಯ ಪ್ರತ್ಯಕ್ಷ ಹಾಗೂ ಪೂರಕ ಮಾಹಿತಿಗಳು ಸಾಬೀತುಪಡಿಸುತ್ತವೆ. ಕ್ರಿ.ಶ.1096 ರ
ಶಾಸನದಲ್ಲಿ ಪುಲಿಗೆರೆಯ ಸೋಮೇಶ್ವರ ದೇವಾಲಯದ ಉಲ್ಲೇಖ ಇದ್ದು ಪುಲಿಗೆರೆಯಲ್ಲಿ ಆದಯ್ಯನಿಂದ
ಸೋಮನಾಥನ ಪ್ರತಿಷ್ಠಾಪನೆಗೊಂಡ ಕಾಲ 11ನೇ ಶತಮಾನ ಎಂದು ವಿದಿತವಾಗುತ್ತದೆ. ಅದೇ ರೀತಿ ಶಾಸನಗಳು
ಹಾಗೂ ಕಾವ್ಯಗಳಲ್ಲಿ ವ್ಯಕ್ತವಾಗಿರುವ ಹೇಳಿಕೆಗಳಿಂದ ಕ್ರಿ.ಶ.1070
ರಿಂದ ಕ್ರಿ.ಶ 1165 ರ ವರೆವಿಗೂ ಜೀವಿಸಿದ್ದನು ಎಂಬುದಾಗಿ ಸದ್ಯಕ್ಕೆ ನಿರ್ಣಯಿಸಲಾಗಿದೆ.
ಏಕಾಂತದ ರಾಮಯ್ಯನು ಕ್ರಿ.ಶ.1120ರಿಂದ 1180ರ ವರೆಗೆ ಜೀವಿಸಿದದದ್ದನು
ಎಂಬುದಾಗಿ ಶಾಸನಗಳಲ್ಲಿಯ ಮಾಹಿತಿಯಿಂದ ನಿರ್ಣಯಿಸಬಹುದಾಗಿದೆ. ಹೀಗಾಗಿ ಇವರೀರ್ವರನ್ನೂ ಕುರಿತು
ಇತ್ತೀಚಿನ ಸಂಶೋಧನೆಯ ವಿವರಗಳು ಕಾಲವನ್ನು ಹಿಂದಕ್ಕೆ ಕೊಂಡೊಯ್ದಿವೆ.
ಅಭಿನವ
ಅಲ್ಲಮರೆಂದು ಖ್ಯಾತರಾದ ತೋಂಟದ ಸಿದ್ಧಲಿಂಗಯತಿಗಳ ಕಾಲವನ್ನು ಎಚ್.ದೇವೀರಪ್ಪ, ಆರ್.ಸಿ.ಹಿರೇಮಠ, ಸಿ.ಮಹದೇವಪ್ಪ
ಮುಂತಾದ ಸಂಶೋಧಕರು 15ನೇ ಶತಮಾನ (ಕ್ರಿ.ಶ.1400-1470) ಎಂದು
ನಿರ್ಧರಿಸಿದ್ದರು. ಆದರೆ ಹಸ್ತಪ್ರತಿ ತಜ್ಞರಾದ ಎಸ್.ಶಿವಣ್ಣನವರು ಸಾಕ್ಷಾಧಾರಗಳ ಬೆಳಕಿನಲ್ಲಿ
ತೋಂಟದ ಸಿದ್ಧಲಿಂಗರ ಕಾಲ ಕ್ರಿ.ಶ.1561 ಎಂದು ಅಧಿಕೃತವಾಗಿ ನಿರ್ಧರಿಸಿದ್ದಾರೆ. ನೂರು ವರ್ಷಗಳಷ್ಟು
ಮುಂದಕ್ಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ತೋಂಟದ ಸಿದ್ಧಲಿಂಗರ ಶಿಷ್ಯ ಪ್ರಶಿಷ್ಯರಾದ
ಶೂನ್ಯಸಂಪಾದನಕಾರರಾದ ಹಲಗೆಯದೇವ, ಗುಮ್ಮಳಾಪುರದ ಸಿದ್ಧಲಿಂಗಯತಿ, ಗೂಳೂರು
ಸಿದ್ಧವೀರಣ್ಣೊಡೆಯ, ಸಂಪಾದನೆಯ ಚೆನ್ನಂಜೆದೇವ, ಬೋಳಬಸವಾರ್ಯ, ಸಂಪಾದನೆಯ
ಮರಿಸಂಗಯ್ಯ, ವೀರಸಂಗಯ್ಯ, ಸಂಪಾದನೆಯ ಪರ್ವತೇಶ ಇತ್ಯಾದಿ ವಚನಸಂಕಲನಕಾರರ ಕಾಲವನ್ನು
ಪುನರ್ ಮೌಲ್ಯೀಕರಿಸಬೇಕಾಗಿದೆ. 15 ಹಾಗೂ 16ನೇ ಶತಮಾನದ ಕನ್ನಡ ಸಾಹಿತ್ಯ
ಚರಿತ್ರೆಯನ್ನು ಇಂದು ನಾವು ತಿದ್ದುಪಡಿಮಾಡಬೇಕಾಗಿದೆ.
2.
ವಚನಕಾರರ ವೈಯಕ್ತಿಕ ಚರಿತ್ರೆ ವಂಶಾವಳಿ, ಜನ್ಮಸ್ಥಳ
ಇತ್ಯಾದಿಗಳನ್ನು ಕುರಿತ ಹಾಗೆ: ಕ್ರಿ.ಶ.1260ರ ಅರ್ಜುನವಾಡ ಶಾಸನವು ಬಸವಣ್ಣನವರ ವೈಯಕ್ತಿಕ ಚರಿತ್ರೆ, ಜನ್ಮಸ್ಥಳದ
ಮೇಲೆ ಬೆಳಕು ಚೆಲ್ಲಿದೆ. ಹರಿಹರ ಕವಿಯ ಬಸವರಾಜದೇವರ ರಗಳೆಯಲ್ಲಿಯ ಬಸವಣ್ಣನವರ ತಂದೆ, ಊರುಗಳ
ಬಗೆಗೆ ಇದ್ದ ಸಂದೇಹಗಳನ್ನು ಹೋಗಲಾಡಿಸುವಲ್ಲಿ ಮಹತ್ತರ ಪಾತ್ರವಹಿಸಿದೆ. ಈ ಶಾಸನದಲ್ಲಿ
ನಿರೂಪಿತವಾಗಿರುವ ಬಸವಣ್ಣನವರಿಗೆ ಸಂಬಂಧಿಸಿದ ಸಂಗತಿಗಳು ಕಾವ್ಯಗಳಿಗಿಂತ ಪ್ರಾಚೀನವಾಗಿದ್ದು
ವಿಶ್ವಾಸನೀಯವಾಗಿವೆ. ಈ ಶಾಸನದಲ್ಲಿ ಬರುವ `ಮತ್ತಂ ತರ್ದವಾಡಿ ಮಧ್ಯಗ್ರಾಮ
ಭಾಗವಾಡಿ ಪುರವರಾಧೀಶ್ವರ ಮಾದಿರಾಜನ ತನೂಜಂ ಬಸವರಾಜನ ಮಹಿಮೆಯೆಂತಂದಡೆ’ ಎಂಬ ಸಂಗತಿಗಳು
ಬಸವಣ್ಣನವರ ತಂದೆಯ ಹೆಸರು ಹಾಗೂ ಜನ್ಮಸ್ಥಳದ ಬಗೆಗೆ ಸಂಶೋಧಕರು ಎತ್ತಿದ್ದ ಪ್ರಶ್ನೆಗಳನ್ನು
ಹೋಗಲಾಡಿಸಿವೆ. ಬಸವಣ್ಣನವರ ವೈಯಕ್ತಿಕ ಸಂಗತಿಗಳ ಬಗೆಗೆ, ವಂಶಾವಳಿಯ
ಬಗೆಗೆ ಸಂಬಂಧಪಟ್ಟ ಕೆಲವು ಹೊಸ ವಿಷಯಗಳು ವ್ಯಕ್ತವಾಗಿವೆ.
ಸಂಗನಬಸವನ ಅಗ್ರಜ
ಲಿಂಗೈಕ್ಯಂ
ದೇವರಾಜ ಮುನಿಪನ ತನಯಂ
ಜಂಗಮ ಪರುಸಂ
ಕಾವರ
ಸಂಗಂ
ಪ್ರಿಯಸುತನೆನಿಪ್ಪ ಕಲಿದೇವರಸಂ
ಶಾಸನದ ಈ
ಪದ್ಯದಲ್ಲಿ ಬಸವಣ್ಣನವರ ಅಣ್ಣನವರ ಹೆಸರು ದೇವರಾಜ, ಆತನ
ಮಗ ಕಲಿದೇವ, ಹಾಗೂ ಆತನ ಮಗ ಹಾಲಬಸವೀದೇವರ ಉಲ್ಲೇಖ ಮೊಟ್ಟ ಮೊದಲ ಬಾರಿಗೆ ಬೆಳಕಿಗೆ
ಬಂದಿದೆ. ಬಸವಣ್ಣನವರ ಮನೆತನದ ವಂಶಾವಳಿಯ ಒಳನೋಟವನ್ನು ಕಾಣಬಹುದು. ಈ ವಿವರ ಬಸವಣ್ಣನವರನ್ನು
ಕುರಿತು ಅಪಾರ ಸಂಖ್ಯೆಯಲ್ಲಿ ರಚಿತವಾಗಿರುವ ವೀರಶೈವ ಕಾವ್ಯ ಪುರಾಣಗಳಲ್ಲಿ ಎಲ್ಲಿಯೂ
ವ್ಯಕ್ತಗೊಂಡಿಲ್ಲ.
ಕಲ್ಯಾಣ
ಪರಿಸರದ ಅಲಂದೆಯದಲ್ಲಿ ಜನಿಸಿದ ಏಕಾಂತದ ರಾಮಯ್ಯನು ಶೈವಕ್ಷೇತ್ರಗಳನ್ನು ಸಂದರ್ಶಿಸುವ ಸಲುವಾಗಿ
ತುಂಗಭದ್ರಾನದಿಯ ದಕ್ಷಿಣಭಾಗದಲ್ಲಿ ಸಂಚಾರ ಕೈಗೊಂಡು ಅಬ್ಬಲೂರಿನಲ್ಲಿ ವೀರಶೈವಮತ ಪ್ರಸಾರ
ಕಾರ್ಯದಲ್ಲಿ ಮಹತ್ತರ ಪಾತ್ರವಹಿಸಿದ ನಂತರ ಅವನು ಎಲ್ಲಿ ಹೋದ? ಎಲ್ಲಿ
ಐಕ್ಯನಾದ? ಇತ್ಯಾದಿ ಅಂಶಗಳ ಬಗೆಗೆ ಅಂದರೆ ಆತನ ಜೀವಿತದ ಕೊನೆಯ ಘಟ್ಟದ ಬಗೆಗೆ
ಶಾಸನ ಕಾವ್ಯಗಳಲ್ಲಿ ಎಲ್ಲಿಯೂ ಉಲ್ಲೇಖ ಇಲ್ಲ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೋಕಿನಲ್ಲಿ
ಕ್ಷೇತ್ರಕಾರ್ಯ ಕೈಗೊಂಡಾಗ ದೊರೆತ ಮಾಹಿತಿಗಳಿಂದ ಜೀವಿತದ ಕೊನೆಯ ಘಟ್ಟದ ಬಗೆಗೆ ಕೆಲವು
ಮಾಹಿತಿಗಳು ವ್ಯಕ್ತಗೊಂಡಿವೆ. ಶಿರಾಳ ಕೊಪ್ಪ ಸಮೀಪದ ಮಾಳಗನಕೊಪ್ಪ ಎಂಬ ಊರಿನ ದಿಕ್ಕಿನಲ್ಲಿ
ಏಕಾಂತರಾಮಯ್ಯನದೆನ್ನುವ ಗದ್ದುಗೆ ಕಂಡು ಬಂದಿದೆ. ಈ ಸ್ಥಳವು ಕಾಡಿನ ಮಧ್ಯದಲ್ಲಿದ್ದು ದುರ್ಗಮವಾದ
ಪ್ರದೇಶದಲ್ಲಿದೆ. ಸ್ಥಳೀಯ ಜನತೆ ಈಗಲೂ ಇದನ್ನು ಏಕಾಂತರಾಮಯ್ಯನ ಗುಡ್ಡ ಅಥವಾ ಮರಡಿ ಎಂದೇ
ಕರೆಯುತ್ತಾರೆ. ಅಲ್ಲಿ ಅವನು ಐಕ್ಯನಾದನೆಂದು ಹೇಳಲಾಗುವ ಒಂದು ಗದ್ದುಗೆ, ಒಂದು
ವಿಗ್ರಹ ಇದೆ. ಜನತೆ ಆ ವಿಗ್ರಹವನ್ನು ಏಕಾಂತರಾಮಯ್ಯನ ವಿಗ್ರಹ ಎಂದೇ ಕರೆಯುತ್ತಾರೆ. ಆ
ಗದ್ದುಗೆಗೆ ಸುತ್ತಮುತ್ತಲ ವೀರಶೈವರು ನಡೆದುಕೊಳ್ಳುತ್ತಾರೆ. ತಮ್ಮ ಮಕ್ಕಳಿಗೆ ಬಹಳಷ್ಟು ಮಂದಿ
ಏಕಾಂತರಾಮಯ್ಯನ ಹೆಸರು ಇಟ್ಟಿರುವುದು ಕಂಡು ಬಂದಿದೆ. ಏಕಾಂತರಾಮಯ್ಯನ ಗದ್ದುಗೆ ಇರುವ ಸ್ಥಳವು
ಶಿವಪಾರಮ್ಯವನ್ನು ಘೋಷಿಸಿದ ಸ್ಥಳದಿಂದ ಇಪ್ಪತ್ತು ಮೈಲು ದೂರದಲ್ಲಿದೆ. ಅಲ್ಲಮಪ್ರಭು, ಅನಿಮಿಷಯ್ಯ, ಗೊಗ್ಗಯ್ಯ, ಬಂಕಯ್ಯ, ಅಕ್ಕಮಹಾದೇವಿ, ಮುಕ್ತಾಯಕ್ಕ, ಅಜಗಣ್ಣ
ಮುಂತಾದ ವಚನಕಾರರು, ಕಾರ್ತಿಯರು ನೆಲೆಸಿದ್ದ ಪ್ರದೇಶವಾದ ಬಳ್ಳಿಗಾವೆ
ಪರಿಸರದಲ್ಲಿದೆ. ಬಳ್ಳಿಗಾವೆಯ ಪರಿಸರದಲ್ಲಿ ಜನಿಸಿದ ಅಲ್ಲಮಪ್ರಭು, ಅಕ್ಕಮಹಾದೇವಿ
ಮುಂತಾದವರು ಉತ್ತರ ಕರ್ನಾಟಕದ ಕಲ್ಯಾಣದಲ್ಲಿಯ ಅನುಭವ ಮಂಟಪಕ್ಕೆ ಪಯಣ ಕೈಗೊಂಡಿದ್ದಾರೆ. ಕಲ್ಯಾಣ
ಸಮೀಪದ ಅಲಂದೆಯಲ್ಲಿ ಜನಿಸಿದ್ದ ಏಕಾಂತದ ರಾಮಯ್ಯನು ತುಂಗಭದ್ರಾನದಿಯ ದಕ್ಷಿಣ ಭಾಗದಲ್ಲಿ
ಬಳ್ಳಿಗಾವೆಯ ಪರಿಸರದಲ್ಲಿ ವೀರಶೈವಮತ ಪ್ರಸಾರ ಚಟುವಟಿಕೆಗಳಲ್ಲಿ ಕಾರ್ಯೋನ್ಮುಖನಾಗಿದ್ದುದು
ಗಮನಿಸತಕ್ಕ ಸಂಗತಿಯಾಗಿದೆ.
ಏಕಾಂತರಾಮಯ್ಯನ ಕಾಲಾನಂತರದ ಆತನ ವಂಶಜರ ಬಗೆಗೆ ಕ್ರಿ.ಶ.1207ರ
ಬಂದಳಿಕೆ ಶಾಸನ ಹಾಗೂ ಕ್ರಿ.ಶ.15ನೇ ಶತಮಾನದ ಕೆಂಪನಪುರದ ಶಾಸನಗಳಿಂದ ತಿಳಿದುಬರುತ್ತದೆ.
ಏಕಾಂತ ರಾಮಯ್ಯನ ವಂಶವು ಮೂರುನೂರು ವರ್ಷಗಳ ನಂತರವೂ ಅದೇ ನಿಷ್ಠೆ ಘನತೆ ಎತ್ತರದಿಂದ ಬದುಕಿತ್ತು
ಎಂಬುದು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ. ಏಕಾಂತ ಎಂಬ ಹೆಸರು ರಾಮಯ್ಯನ ನಂತರದ
ಕಾಲದಲ್ಲಿ ಮನೆತನದ ಹೆಸರಾಗಿದ್ದಿತು ಎಂಬುದು ತಿಳಿದು ಬಂದಿದೆ.
ಪುಲಿಗೆರೆಯಲ್ಲಿ ಸೋಮನಾಥನ ಪ್ರತಿಷ್ಠಾಪನೆ ಮಾಡಿದ ಆದಯ್ಯನ
ಹೆಸರು ವೀರಶೈವ ಧಾರ್ಮಿಕ ಚರಿತ್ರೆಯಲ್ಲಿ ಹಾಗೂ ವಚನಕಾರರ ಸಾಲಿನಲ್ಲಿ ಎದ್ದು ಕಾಣುವಂತಹದ್ದು.
ಆದಯ್ಯನು 405 ವಚನಗಳನ್ನು ರಚಿಸಿದ್ದಾನೆ. ಆದಯ್ಯನನ್ನು ಕುರಿತ ಕಾವ್ಯ
ಪುರಾಣಗಳಲ್ಲಿ `ಸೌರಾಷ್ಟ್ರವು' ಆದಯ್ಯನ ಜನ್ಮಗ್ರಾಮ ಎಂಬುದಾಗಿ ತಿಳಿದುಬಂದಿದೆ. ಹಲವಾರು ಸೌರಾಷ್ಟ್ರಗಳು
ಕಂಡುಬರುವ ಹಿನ್ನಲೆಯಲ್ಲಿ ಕೆಲವು ವಿದ್ವಾಂಸರು ಆದಯ್ಯನ ಜನ್ಮಗ್ರಾಮ ಸೌರಾಷ್ಟ್ರವು ಗುಜರಾತ್
ರಾಜ್ಯದಲ್ಲಿದ್ದು ಆದಯ್ಯನು ಕರ್ನಾಟಕದವನಾಗಿರದೆ ಹೊರನಾಡಿನವನು ಆಗಿದ್ದಾನೆ ಎಂದು ಊಹಿಸಿದ್ದಾರೆ.
ಇತ್ತೀಚಿನ ಸಂಶೋಧನೆಯು ಆದಯ್ಯನು ಸೌರಾಷ್ಟ್ರದಿಂದ ಬಂದಿರುವನಾಗಿರದೆ ಕನ್ನಡ ನಾಡಿನವನೇ
ಆಗಿದ್ದಾನೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸಿವೆ.
ಆದಯ್ಯನ
ಜನ್ಮಗ್ರಾಮ ಹೊರನಾಡಿನ ಸೌರಾಷ್ಟ್ರವಾಗಿದ್ದರೆ ಚಿಕ್ಕ ಸಂದೇಹ ನಮ್ಮಲ್ಲಿ ಉದ್ಭವಿಸುತ್ತದೆ.
ಆದಯ್ಯನನ್ನು ಕುರಿತ ಕಾವ್ಯಗಳಲ್ಲಿ ಆದಯ್ಯ ಪದ್ಮಾವತಿಯರ ವಿವಾಹ ಪ್ರಸಂಗದ ನಂತರ ಬೋನದ ವಿಷಯದಲ್ಲಿ
ಆದಯ್ಯ ಮತ್ತು ಮಾವ ಪಾರಿಸ ಪಂಡಿತನ ಜೊತೆಯಲ್ಲಿ ಉಂಟಾದ ವಾದ ವಿವಾದದಲ್ಲಿ ಸೌರಾಷ್ಟ್ರದ
ಸೋಮೇಶನನ್ನು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ತಂದು ಪ್ರತಿಷ್ಠಾಪಿಸದ ಹೊರತು ಉಣ್ಣಲಾರ ಎಂಬ
ಮಾವನ ಕಟಕಿ ನುಡಿಯನ್ನೇ ಪ್ರತಿಜ್ಞೆಯಾಗಿ ಸ್ವೀಕರಿಸಿ ಆದಯ್ಯನು ಕಾರ್ಯತತ್ಫರನಾಗುತ್ತಾನೆ.
ಆದಯ್ಯನು ಪುಲಿಗೆರೆಯ ಸುರಹೊನ್ನೆ ಬಸದಿಗೆ ಸೋಮೇಶನನ್ನು ಕರೆತರಲು ಸೌರಾಷ್ಟ್ರಕ್ಕೆ ಹೋದ ಎಂಬುದು
ಇಲ್ಲಿ ವಿದಿತವಾಗಿರುವ ಸಂಗತಿ. ಆದಯ್ಯನ ಜನ್ಮ ಗ್ರಾಮ ಸೌರಾಷ್ಟ್ರ ಎಂಬುದನ್ನು
ಲಕ್ಷದಲ್ಲಿಟ್ಟುಕೊಂಡರೆ ಸೋಮೇಶನನ್ನು ಕರೆತರಲು ತನ್ನ ಹುಟ್ಟೂರಾದ ಸೌರಾಷ್ಟ್ರಕ್ಕೆ ಪ್ರಯಾಣ
ಬೆಳಸಿದನೆ ಎಂಬುದು. ಈ ಸೌರಾಷ್ಟ್ರವು ಒಂದು ವೇಳೆ ಆದಯ್ಯನ ಗ್ರಾಮವಾಗಿದ್ದರೆ ಪಯಣಮಾರ್ಗದಲ್ಲಿ
ಅನೇಕ ಕಷ್ಟಗಳನ್ನು ಎದುರಿಸದೆ ಸುಗಮವಾಗಿ ತಲುಪಬಹುದಾಗಿತ್ತು ಆದರೆ ಆದಯ್ಯನು ಸೌರಾಷ್ಟ್ರದ
ಸೋಮಯ್ಯನ್ನು ಕರೆತರಲು ಹೊರಟ ಪಯಣದ ವಿವರ ತ್ರಾಸದಾಯಕವಾಗಿತ್ತು ಎಂಬುದು ಕಾವ್ಯಗಳಿಂದ
ವಿದಿತವಾಗುತ್ತದೆ. ಏಕಾಂಗಿಯಾಗಿ ಹೊರಟ ಆದಯ್ಯ ಭಯಂಕರವಾದ ಕಾಡಿನಲ್ಲಿ ಹಸಿವು ನೀರಡಿಕೆಯಿಂದ
ಹಾದಿಗೆಟ್ಟ ಹೊಲಬನಂತೆ ಪರಿತಪಿಸುವ ಪ್ರಸಂಗವು ಸೋಮನಾಥ ಚಾರಿರ್ತ್ಯದಲ್ಲಿ ನಿರೂಪಿತವಾಗಿದೆ.
ಸೌರಾಷ್ಟ್ರವು ಈತನ ಜನ್ಮಸ್ಥಳ ವಾಗಿದ್ದರೆ ಪಯಣಮಾರ್ಗದ ಪರಿಚಯ ಇದ್ದೇ ಇರುತ್ತಿತ್ತು
ಎಂದೆನಿಸುತ್ತದೆ ಸೌರಾಷ್ಟ್ರವು ಆದಯ್ಯನ ಮನೆದೇವರು ಇರುವ ಸ್ಥಳವೆಂಬುದು ಭೈರವೇಶ್ವರ ಕಾವ್ಯ
ಮತ್ತು ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ ಕೃತಿಗಳಿಂದ ತಿಳಿದುಬರುತ್ತದೆ. ಈ
ಹಿನ್ನೆಲೆಯಲ್ಲಿ ಆದಯ್ಯನ ಜನ್ಮಸ್ಥಳವು ಕರ್ನಾಟಕದ ಒಂದು ಊರು ಆಗಿದೆ. ಅಚ್ಚಗನ್ನಡದವನೆ
ಆಗಿದ್ದಾನೆ ಎಂಬುದನ್ನು ಆತನ ವಚನಗಳ ಭಾಷೆ ಶೈಲಿ, ಪಾಂಡಿತ್ಯ
ಇತ್ಯಾದಿಗಳ ಪರಿಶೀಲನೆಯಿಂದ ತಿಳಿದುಬರುತ್ತದೆ.
ಕನ್ನಡ ನಾಡಿನ `ಸಾಸಲು' ಆದಯ್ಯನ
ಜನ್ಮಗ್ರಾಮ ಎಂಬುದು ಮಿತವಾದ ಆಧಾರಗಳಿಂದ ತಿಳಿದು ಬಂದಿದೆ. ಸಾಸಲು ಗ್ರಾಮ ಮಂಡ್ಯ ಜಿಲ್ಲೆಯ
ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಗೆ ಸಮಿಪದಲ್ಲಿದೆ. ಇಲ್ಲಿ ಸೋಮನಾಥ ದೇವಾಲಯ ಇದ್ದು ಆ ದೇವಾಲಯದ
ನವರಂಗದಲ್ಲಿ ಆದಿಸೆಟ್ಟಿಯ ವಿಗ್ರಹವಿದೆ. ಈ ವಿವರ 1914ರ
ಎಮ್.ಎ.ಆರ್.ವರದಿಯಲ್ಲಿ ಹಾಗೂ ಭೈರವೇಶ್ವರ ಕಾವ್ಯದ ಪ್ರಸ್ತಾವನೆಯಲ್ಲಿ ದಾಖಲಾಗಿದೆ.
ಕ್ಷೇತ್ರಕಾರ್ಯ ಕೈಗೊಂಡು ಈ ದೇವಾಲಯವನ್ನು ನಾನೇ ಖುದ್ದಾಗಿ ವೀಕ್ಷಿಸಿದ್ದೇನೆ. ನವರಂಗದ ಈ
ವಿಗ್ರಹಗಳ ಬಗ್ಗೆ ಆ ಊರಿನ ಸ್ಥಳೀಯರನ್ನು ನಾನು ಪ್ರಸ್ತಾಪಿಸಿದಾಗ ಹರಿಹರನ ಆದಯ್ಯನ ರಗಳೆ ಮತ್ತು
ಸೋಮನಾಥಚಾರಿರ್ತ್ಯದ ಆದಯ್ಯನ ಕಥೆಯನ್ನು ಹೊಲುವ ಆದಿಸೆಟ್ಟಿಯ ಕತೆಯನ್ನು ಹೇಳುತ್ತಾರೆ. ಕುತೂಹಲಕರ
ಸಂಗತಿ ಎಂದರೆ ಈ ಗ್ರಾಮದಲ್ಲಿ ಮೊದಲು ಜೈನರಿದ್ದು, ಜೈನರಿಗೂ
ಮತ್ತು ಶೈವರಿಗೂ ಕಲಹವಾಗಿ ಜೈನರೆಲ್ಲರು ಸಾಸಲನ್ನು ಬಿಟ್ಟು ಸಮೀಪದ ಶ್ರವಣಬೆಳಗೊಳದಲ್ಲಿ
ನೆಲೆನಿಂತರು ಎಂದು ಸಾಸಲುವಿನ ವೃದ್ಧರು ನಮಗೆ ತಿಳಿಸಿದ್ದಾರೆ.
ಆದಯ್ಯನಿಗೆ
ಆದಿಸೆಟ್ಟಿ ಎಂಬ ಹೆಸರು ಪರ್ಯಾಯ ಹೆಸರಾಗಿತ್ತು ಎಂಬುದನ್ನು ಕಾವ್ಯಪುರಾಣಗಳು ಸಮರ್ಥಿಸುತ್ತವೆ.
ಸೋಮನಾಥಚಾರಿತ್ರವನ್ನು ಒಂದೆಡೆ ಆದಿಸೆಟ್ಟಿ ಪುರಾಣವೆಂದೇ ಕರೆದಿದ್ದಾರೆ. ಈ ಮೇಲಿನ ಹೇಳಿಕೆಯನ್ನು
ಬೆಂಬಲಿಸುವಂತೆ ಭೈರವೇಶ್ವರ ಕಾವ್ಯ ಹಾಗೂ ಭೈರವೇಶ್ವರ ಕಾವ್ಯ ಕಥಾಮಣಿ ಸೂತ್ರರತ್ನಾಕರ
ಕೃತಿಗಳಲ್ಲಿ ಆದಯ್ಯನ ವಂಶಜರು ಸಾಸಲುವಿನಲ್ಲಿ ಇದ್ದ ಬಗೆಗೆ ಉಲ್ಲೇಖವಿದೆ. ಆದಯ್ಯನ ಮೇಲಿನ
ಅಭಿಮಾನದಿಂದ ಹುಲಿಗೆರೆಯಲ್ಲಿರ್ದ ಆದಯ್ಯನ ಗುರುಸಂಪ್ರದಾಯಕ್ಕೆ ಮುಖ್ಯರಾದ ಜಕ್ಕಾಣಾರ್ಯ
ಮೊದಲಾದವರು ಆದಯ್ಯನ ಜನ್ಮಸ್ಥಳವಾದ ಸಾಸಲಿಗೆ ಅಲ್ಲಿಯ ಸೋಮೇಶ್ವರ ದೇವರ ನೋಡಬೇಕೆಂದು ಬಂದಾಗ `ಆದಯ್ಯನ
ವಂಶೋಜನಾದ ಚಿಕ್ಕೊಡೆಯರು ಸ್ವಾಗತಿಸಿದರು’ ಎಂಬ ವಿವರ ಕಂಡುಬರುತ್ತದೆ.
ಆದಯ್ಯನ
ವಂಶಜರಿಗೆ ಸೌರಾಷ್ಟ್ರ ಸೋಮೇಶನು ಮನೆದೇವರು ಆಗಿದ್ದ ಎಂಬುದು `ಶಿವರಾತ್ರಿಯೊಳು
ಪೋಗಿ ಸೌರಾಷ್ಟ್ರಪತಿಯ ಪಾದವಕಂಡು ವರುಷಕ್ಕೊಮ್ಮೊಮ್ಮೆ ಅವರು ಬರಲು' ಎಂಬ
ಹೇಳಿಕೆಯಿಂದ ವಿದಿತವಾಗುತ್ತದೆ. ಹಾಗೆಯೆ ಆದಯ್ಯನು ಪುಲಿಗೆರೆಯಲ್ಲಿ ಪ್ರತಿಷ್ಠಾಪಿಸಿದ್ದ
ಸೊಮೇಶ್ವರ ದೇವಾಲಯದ ದಕ್ಷಿಣಬಾಗಿಲ ಎಡಬದಿಯ ಶಿಲ್ಪ ಹಾಗು 14ನೇ
ಶತಮಾನದ ಶಾಸನದಿಂದ ಆ ವ್ಯಕ್ತಿಗಳ ಹೆಸರು ಶಿವರಾಮ ಒಡೆಯ ಹಾಗು ಪೂಜಾರಿ ಚಿಕ್ಕಣ್ಣ ಎಂಬುದಾಗಿ
ತಿಳಿದುಬಂದಿದ್ದು ಈ ವ್ಯಕ್ತಿಗಳು ಆದಯ್ಯನ ವಂಶಜರೆ ಆಗಿದ್ದಾರೆ ಎಂದೆನಿಸುತ್ತದೆ. ಈ
ಹಿನ್ನೆಲೆಯಲ್ಲಿ ಆದಯ್ಯನ ಜನ್ಮಸ್ಥಳ ಕನ್ನಡನಾಡಿನ ಸಾಸಲು ಆಗಿದ್ದು ಪರನಾಡಿನವನು ಆಗಿರದೆ
ಅಚ್ಚಕನ್ನಡಿಗನೆ ಆಗಿದ್ದಾನೆ ಎಂಬುದನ್ನು ಇತ್ತೀಚಿನ ಸಂಶೋಧನೆಯು ಸ್ಥಿರೀಕರಿಸಿದೆ.
ವಚನಕಾರರ
ಹೆಸರಿನ ಗೊಂದಲವನ್ನು ನಿವಾರಿಸುವಲ್ಲಿ :
ದೇವರದಾಸಿಮಯ್ಯ-ಜೇಡರದಾಸಿಮಯ್ಯ : ಇಂದಿಗೂ ಹಲವಾರು ವಿದ್ವಾಂಸರು ದೇವರದಾಸಿಮಯ್ಯ ಮತ್ತು
ಜೇಡರದಾಸಿಮಯ್ಯ ಇಬ್ಬರು ಒಬ್ಬರೇ ಎಂಬ ಹೇಳಿಕೆಯನ್ನೆ ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. `ರಾಮನಾಥ' ಅಂಕಿತದಲ್ಲಿ
ವಚನಗಳನ್ನು ರಚಿಸಿರುವ ಜೇಡರದಾಸಿಮಯ್ಯನು ಆದ್ಯ ವಚನಕಾರನಾಗಿದ್ದು ಅವನೂ ದೇವರದಾಸಿಮಯ್ಯನು ಒಂದೆ
ಎಂದೂ, ಕಲ್ಯಾಣ ಚಾಲುಕ್ಯ ದೊರೆ ಇಮ್ಮಡಿ ಜಯಸಿಂಹನ ಕಾಲದಲ್ಲಿ ಇದ್ದನೆಂದು
ಹೇಳುತ್ತಾ ಬಂದಿದ್ದಾರೆ. ಇವರೀರ್ವರೂ ಅಭಿನ್ನರು ಎಂದು ಹೇಳಲು ಪಾಲ್ಕುರಿಕೆ ಸೊಮನಾಥನ ತೆಲುಗು
ಬಸವ ಪುರಾಣ ಮತ್ತು ಅದನ್ನು ಅನುಸರಿಸಿ ಕನ್ನಡದಲ್ಲಿ ರಚಿತವಾದ ಪುರಾಣಗಳಲ್ಲಿಯ ಉಲ್ಲೇಖವೇ
ಕಾರಣವಾಗಿದೆ. ಆಕರಗಳ ಹಿನ್ನಲೆಯಲ್ಲಿ
ಹೇಳುವುದಾದರೆ ದೇವರದಾಸಿಮಯ್ಯನು ಕಲ್ಯಾಣ ಚಾಲುಕ್ಯದೊರೆ ಇಮ್ಮಡಿ ಜಯಸಿಂಹನ ರಾಜಗುರುವೂ, ಪವಾಡಪುರುಷನೂ, ಅನ್ಯಮತಗಳ
ವಿರುದ್ಧ ಹೋರಾಡಿ ಶೈವ ಮತವನ್ನು ರಕ್ಷಿಸಿದವನೂ ಆಗಿದ್ದಾನೆ. ಜೇಡರದಾಸಿಮಯ್ಯ ನೇಯ್ಗೆ ಕಾಯಕವನ್ನು
ಕೈಕೊಂಡು `ರಾಮನಾಥ' ಅಂಕಿತದಲ್ಲಿ ವಚನಗಳನ್ನು ರಚಿಸಿದವನಾಗಿದ್ದಾನೆ. ಇವರೀರ್ವರ
ಜೀವಿತಾವಧಿಯ ನಡುವೆ ನೂರು ವರ್ಷಗಳ ಅಂತರ ಇದೆ. ಕ್ರಿ.ಶ.1040ರಲ್ಲಿದ್ದ
ದೇವರ ದಾಸಿಮಯ್ಯನೇ ಜೇಡರದಾಸಿಮಯ್ಯನೆಂದು ಒಪ್ಪಿಕೊಂಡರೆ ಬಸವಪೂರ್ವ ಯುಗದ ಚರಿತ್ರೆ
ಅಸ್ತವ್ಯಸ್ತವಾಗುತ್ತದೆ. ಇವರೀರ್ವರೂ ಒಬ್ಬರೇ ಎಂದು ಒಪ್ಪಿಕೊಂಡರೆ ಕೆಲವೊಂದು ತೊಡಕುಗಳು
ಉದ್ಭವಿಸುತ್ತವೆ.
ನಿದರ್ಶನಕ್ಕೆ :
ಜೇಡರದಾಸಿಮಯ್ಯನು ತನ್ನ ವಚನವೊಂದರಲ್ಲಿ ಕೊಂಡಗುಳಿ ಕೇಶಿರಾಜನ ಜೀವನದಲ್ಲಿ ನಡೆದ ಕತೆಯ ಬಗೆಗೆ ಸ್ಪೃಷ್ಟವಾಗಿ
ಉಲ್ಲೇಖಿಸಿದ್ದಾನೆ.
`ಜಗವೆಲ್ಲ ಅರಿಯಲು ತೊರೆಯೊಳಗೆ ಬಿದ್ದ ಲಿಂಗ ಕರೆದರೆ ಬಂದುದು
ಕರಸ್ಥಲಕ್ಕೆ
ನಂಬದೇ ಕರೆದವರ
ಹಂಬಲನೊಲ್ಲನೆಮ್ಮ ರಾಮನಾಥ'
ಕೊಂಡಗುಳಿ
ಕೇಶಿರಾಜನನ್ನು ಕುರಿತ ಶಾಸನಗಳ ಉಲ್ಲೇಖದ ಪ್ರಕಾರ ಆತನು ಕ್ರಿ.ಶ.1107
ರಿಂದ 1132ರ ವರೆಗೆ ಜೀವಿಸಿದ್ದನೆಂಬುದು ತಿಳಿದುಬರುತ್ತದೆ. ಕ್ರಿ.ಶ.1040ರಲ್ಲಿದ್ದ
ಜೇಡರದಾಸಿಮಯ್ಯನು ಕ್ರಿ.ಶ.1107 ರಿಂದ 1132ರ ವರೆಗೆ ಜೀವಿಸಿದ್ದ
ಕೊಂಡಗುಳಿ ಕೇಶಿರಾಜನ ಜೀವನದಲ್ಲಿ ನಡೆದ ಘಟನೆಯನ್ನು ತನ್ನ ವಚನದಲ್ಲಿ ಉಲ್ಲೇಖಿಸುವುದು ಹೇಗೆ
ಸಾಧ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ದಾಸಿಮಯ್ಯನಿಗೆ
ಸಂಬಂಧಿಸಿದ ಹಾಗೆ ಕ್ರಿ.ಶ.1148ರ ಗೊಬ್ಬೂರು ಶಾಸನ, ಕ್ರಿ.ಶ.1167ರ
ಚಿಕ್ಕಮುದೆನೂರುಶಾಸನ, ಕ್ರಿ.ಶ.1197ರ ಕಿರಿಯಿಂಡಿ ಶಾಸನ, ಕ್ರಿ.ಶ.1201
ಗೀಜಗನಹಳ್ಳಿ ಶಾಸನ. ಅಬ್ಬಲೂರು ಸಚಿತ್ರ ಶಾಸನಗಳಲ್ಲಿ ಜೇಡರ ವಿಶೇಷಣ ಇದೆಯೇ ಹೊರತು `ದೇವರ' ಎಂಬ
ವಿಶೇಷಣ ಇಲ್ಲ. ದಾಸಿಮಯ್ಯನ ವಚನಗಳನ್ನೊಳಗೊಂಡ ಹಸ್ತಪ್ರತಿ ಕಟ್ಟುಗಳಲ್ಲಿ ಜೇಡರ ವಿಶೇಷಣ
ದೊರಕುತ್ತದೆಯೇ ಹೊರತು `ದೇವರ' ಎಂಬ ವಿಶೇಷಣ ದೊರಕುವುದಿಲ್ಲ.
ಹರಿಹರನ ರಗಳೆಗಳಲ್ಲಿ ದಾಸಿಮಯ್ಯನಿಗೆ `ದೇವರ' ಎಂಬ ವಿಶೇಷಣ ಬಳಕೆಯಾಗಿಲ್ಲ.
ಜೇಡರ ಎಂಬ ವಿಶೇಷಣ ಬಳಕೆಯಾಗಿದೆ. ಈ ಎಲ್ಲಾ ಅಂಶಗಳಿಂದ ದೇವರದಾಸಿಮಯ್ಯ ಬೇರೆ, ಜೇಡರದಾಸಿಮಯ್ಯ
ಬೇರೆ ಎಂಬ ಅಂಶ ವ್ಯಕ್ತವಾಗುತ್ತದೆ. ದೇವರದಾಸಿಮಯ್ಯನು ಇಮ್ಮಡಿ ಜಯಸಿಂಹನ ರಾಜಗುರುವಾಗಿದ್ದು, ಬಸವ
ಪೂರ್ವಯುಗದ ಪ್ರಾರಂಭದ ಪ್ರಥಮ ಶರಣನಾಗಿದ್ದು ವೀರಮಾಹೇಶ್ವರ ನಿಷ್ಠೆಯ ಮೂಲಕ ಶಿವಮತ ಮತ್ತು
ಶಿವಸಂಸ್ಕೃತಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ತೊಡಗಿದ್ದ ಎಂಬುದು ತಿಳಿದು ಬರುತ್ತದೆ.
ದೇವರದಾಸಿಮಯ್ಯನ
ಊರು ಪೊಟ್ಟಲಕೆರೆ ಎಂಬುದು ಕಾವ್ಯ-ಪುರಾಣಗಳಿಂದ ತಿಳಿದು ಬಂದಿದೆ. ಈ ಪೊಟ್ಟಲಕೆರೆಯು ಈಗಿನ ನಿಜಾಂ
ನಾಡಿನ ಹೈದರಾಬಾದ್-ಜೈರಾಬಾದ್ ದಾರಿಯಲ್ಲಿರುವ ಪೊಟ್ಲಚೆರುವೇ ಆಗಿದೆ.
ವಚನ ಸಾಹಿತ್ಯ
ಪರಂಪರೆಯಲ್ಲಿ ಬಸವಣ್ಣನವರ ಹಿರಿಯ ಸಮಕಾಲೀನನಾಗಿ ಕಾಣಿಸಿಕೊಂಡಿರುವ ಸಕಲೇಶ ಮಾದರಸನ ಮತ್ತು ಅವರ
ವಂಶದವರ ಕುರಿತ ವಿವರವನ್ನು ಮೊಟ್ಟ ಮೊದಲ ಬಾರಿಗೆ ರಾಯಚೂರು ಜಿಲ್ಲೆಯ ಶಾಸನಗಳಲ್ಲಿ
ಗುರುತಿಸಲಾಗಿದೆ. ಮಾನ್ವಿ ತಾಲೂಕಿನ ಮಲ್ಲಟದಲ್ಲಿ ದೊರೆತಿರುವ ಕ್ರಿ.ಶ.1196ರ
ಶಾಸನ ದಲ್ಲಿ ಮೊರಟದ ‘ಶ್ರೀಸಪ್ತನಾಥ ದೇವರ ತೊತ್ತು ಮಹಾಮಹೇಶ್ವರ ಆವುಜದ ಮಾಳಯ್ಯ ಸಕಲೇಶ್ವರ ದೇವರ
ಮಾದಿರಾಜಯ್ಯಂಗಳ ಹೆಸರಲು ಪ್ರತಿಷ್ಠೆಯ ಮಾಡಲು ಆ ಮಾಳಯ್ಯನ ಮಗಳು ಮಲ್ಲರಸನ ಅರಸಿ ಬೆಸವಲದೇವಿಯರು
ಮಾಡಿದ ಧರ್ಮ’ ಎಂದೂ ಮಸ್ಕಿಯ 12ನೇ ಶತಮಾನಕ್ಕೆ ಸೇರಿದ ಶಾಸನದಲ್ಲಿ
`ವನರುಹ ನಾಭನಂಬುಜಭವಂ ದಿವಿಜೇಂದ್ರ ಮುನೀಂದ್ರರೆಯ್ದರೀ
ತನ ನಿಜ
ತತ್ವದೊಳ್ಪು ಸಕಲೇಶ್ವರ ದೇವರ ಭಕ್ತ ಮಾದಿರಾ
ಜನ ಮಗ
ವೀರನಿಲ್ಲಿ ನೆಲೆಗೊಂಡುದು’ ಎಂದೂ ಉಲ್ಲೇಖ ಇದೆ. ಈ ಶಾಸನಗಳಲ್ಲಿಯ ವಿವರಗಳು ಸಕಲೇಶ ಮಾದರಸ ವಂಶಜರ
ಹಾಗೂ ಜನ್ಮ ಸ್ಥಳದ ಮೇಲೆ ಬೆಳಕು ಚೆಲ್ಲುತ್ತದೆ. “ಆವುಜದ ಮಾಳಯ್ಯ ಸಕಲೇಶ್ವರ ದೇವರ
ಮಾದಿರಾಜಯ್ಯಗಳ ಹೆಸರಲು ಪ್ರತಿಷ್ಠೆಯ ಮಾಡಲು” ಎಂಬ ಉಲ್ಲೇಖವು ಸಕಲೇಶ ಮಾದರಸನು ಈಗಿನ
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಐಜ್ ಪ್ರದೇಶದವನು ಎಂಬುದಾಗಿ ಊಹಿಸಲು ಸಾಧ್ಯವಿದೆ. ಈ ವಿವರ
ಸಕಲೇಶ ಮಾದರಸನನ್ನು ಕುರಿತ ಕಾವ್ಯ-ಪುರಾಣಗಳಲ್ಲಿ ಎಲ್ಲಿಯೂ ವ್ಯಕ್ತಗೊಂಡಿಲ್ಲ.
ಬಿಜ್ಜಳನನ್ನು
ಕೊಂದ ಮೊಲ್ಲೆ ಬೊಮ್ಮಯ್ಯನು ಕೊಪ್ಪಳನಾಡಿನ ಯಲಬುರ್ಗಾ ತಾಲ್ಲೋಕಿನ ಕಲ್ಲೂರಿಗೆ ಸಮೀಪದ ದಾವಣಕಿ
ಗ್ರಾಮದವನಾಗಿದ್ದು ಕಲ್ಲಿನಾಥದೇವರ ಭಕ್ತನಾಗಿದ್ದವನು. ಅವನನ್ನು ಕುರಿತು ಶಾಸನ ಹಾಗೂ
ಕಾವ್ಯಗಳಲ್ಲಿ ಇತ್ತೀಚೆಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ. ಕಲ್ಯಾಣ ಕ್ರಾಂತಿಯಲ್ಲಿ ಮಹತ್ತರ
ಪಾತ್ರವಹಿಸಿ ಬಿಜ್ಜಳನನ್ನು ಕೊಂದ ಮೊಲ್ಲೆ ಬೊಮ್ಮಯ್ಯನು ಕಲ್ಲೂರ ಶಾಸನೋಕ್ತ (ಕ್ರಿ.ಶ.1154-1186) ಮೊಲ್ಲೆ ಬೊಮ್ಮಯ್ಯನೇ ಆಗಿದ್ದಾನೆ.
ವಚನಗಳ
ಅಂಕಿತದ ಶುದ್ಧಪಾಠವನ್ನು ಗುರುತಿಸುವಲ್ಲಿ :
ವಚನಕಾರ
ಚಿಕ್ಕಯ್ಯನ ವಚನಗಳ ಅಂಕಿತ ಉಳಿಯುಮೇಶ್ವರ ಎಂಬುದು ತಿಳಿಯಲಾಗಿತ್ತು. ಆದರೆ ರಾಯಚೂರು ಜಿಲ್ಲೆಯ
ದೇವರಗುಡಿ ಗ್ರಾಮದಲ್ಲಿ ದೊರೆತ ಹುಳಿಯುಮೇಶ್ವರ ಚಿಕ್ಕಯ್ಯನನ್ನು ಕುರಿತ ಶಾಸನದಲ್ಲಿಯ
ವಿವರದಿಂದಾಗಿ ವಚನಕಾರ ಚಿಕ್ಕಯ್ಯನ ವಚನಗಳ ಮುದ್ರಿಕೆ ಉಳಿಯುಮೇಶ್ವರ ಅಲ್ಲ ಹುಳಿಯುಮೇಶ್ವರ
ಎಂಬುದಾಗಿ ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ. ವಚನಕಾರ ಗೋಣಿಮಾರಯ್ಯನ ಅಂಕಿತವು ಕೀಟೇಶ್ವರ ಲಿಂಗವಲ್ಲ. ಕೇಟೇಶ್ವರ
ಲಿಂಗ ಎಂಬುದನ್ನು ಎಸ್.ಶಿವಣ್ಣನವರು ಗದುಗಿನ ತೋಂಟದಾರ್ಯ ಮಠದಲ್ಲಿಯ ಹಸ್ತಪ್ರತಿ ಸಂಗ್ರಹದಲ್ಲಿಯ
ಕ್ರಮಾಂಕ ೩೦೪ ನೆಯ ಓಲೆಪ್ರತಿಯ ೩೯-೪೦ ನೆಯ ಗರಿಯಲ್ಲಿಯ ವಚನಗಳನ್ನು ಆಧರಿಸಿ ಗುರುತಿಸಿದ್ದಾರೆ.
12ನೇ ಶತಮಾನದ ವಚನಕಾರರ ವಚನ ರಚನೆಗೆ ಪ್ರೇರಣೆಯ ಅಂಶ :
ಬಸವ ಪೂರ್ವಯುಗದ
ಶಿವಶರಣರ ಆಂದೋಲನಕ್ಕೆ ಹಿನ್ನಲೆಯಾಗಿದ್ದ ರಾಜಕೀಯ ಕಾಲವೆಂದರೆ ಕಲ್ಯಾಣ ಚಾಲುಕ್ಯ ದೊರೆ ಆರನೆಯ
ವಿಕ್ರಮಾದಿತ್ಯನ ಕಾಲ. ಪೆರ್ಮಾಡಿ ರಾಯನ ಆಳ್ವಿಕೆಯ ಕಾಲದಲ್ಲಿ ದಂಡನಾಯಕನಾಗಿ ಕರ್ತವ್ಯ
ನಿರ್ವಹಿಸುತ್ತಿದ್ದ ಕೊಂಡಗುಳಿ ಕೇಶಿರಾಜನು ವೀರಶೈವ ಸಾಹಿತ್ಯದ ಮೊತ್ತಮೊದಲ ಕವಿ. ಅರಸೊತ್ತಿಗೆಯ
ವಿರುದ್ಧ ಪ್ರತಿಭಟಿಸಿದವ. ಜೇಡರದಾಸಿಮಯ್ಯನ ವಚನಗಳಲ್ಲಿ ಸ್ತುತಿಸಲ್ಪಟ್ಟಿದ್ದಾನೆ. ಕೊಂಡಗುಳಿ
ಕೇಶಿರಾಜನು ಬರೆದಿರುವ ಲಘು ಕೃತಿಗಳು ಇತ್ತೀಚೆಗೆ ಲಭ್ಯವಾಗಿವೆ. ಅಳಲಾಷ್ಟಕ ಕೇಶಿರಾಜ ದಣಾಯಕಾರರು
ನಿರೂಪಿಸಿದ ಕಂದ ಲಿಂಗಸ್ತೋತ್ರದ ಕಂದ 1 ಮತ್ತು 2 ನವರತ್ನಮಾಲೆ, ಶೀಲಮಹತ್ವದ
ಕಂದ ಮಂತ್ರ ಮಹತ್ವದ ಕೃತಿಗಳನ್ನು ಬರೆದಿರುವುದಾಗಿ ತಿಳಿದುಬರುತ್ತದೆ. ಈ ಕೃತಿಗಳಲ್ಲಿ
ಪ್ರಪ್ರಥಮಬಾರಿಗೆ ಬಸವಪೂರ್ವಯುಗದ ವೀರಶೈವವನ್ನು ಬಿಂಬಿಸುವ ಗುರುಸೇವೆ, ಲಿಂಗಪೂಜೆ, ಜಂಗಮ, ದಾಸೊಹ, ಪ್ರಸಾದ
ಸಿದ್ಧಿ, ಆರಾಧ್ಯ, ಕಾಯಕ ನಿಷ್ಠೆ ಮೊದಲಾದ ವಿಚಾರಗಳು ಪ್ರತಿಪಾದಿತವಾಗಿವೆ.
ಇತ್ತೀಚಿಗೆ
ಲಭ್ಯವಾದ ಮಂತ್ರಮಹತ್ವದ ಕಂದ ಲಘು ಕೃತಿಯು 110 ಕಂದಪದ್ಯ ಗಳನ್ನೊಳಗೊಂಡಿದ್ದು
ಷಡಕ್ಷರ ಮಂತ್ರದ ಮಹಿಮೆಯನ್ನು ಭಕ್ತರಿಗೆ ತಿಳಿಸುವ ಬಯಕೆಯಲ್ಲಿದೆ. ಗಮನಿಸತಕ್ಕ ಸಂಗತಿ ಎಂದರೆ ಈ
ಕಂದಪದ್ಯಗಳನ್ನು ಓದುತ್ತಿರುವಾಗ ನಂತರಕಾಲದ ವಚನಕಾರರಿಗೆ ಅದರಲ್ಲೂ ಬಸವಯುಗದ ಶಿವಶರಣರಿಗೆ ವಚನ
ರಚನೆಗೆ ಪ್ರೇರಣೆ ನೀಡಿರಬಹುದೇ ಎಂದೆನಿಸುತ್ತದೆ. ಈ ಕಂದಪದ್ಯಗಳಲ್ಲಿಯ ಓಂ ನಮಃ ಶಿವಾಯ ಎಂಬುದು
ಮುಂದೆ ಅಂಕಿತದಿಂದ ಕೂಡಿದ ವಚನ ಶಿಲ್ಪಕ್ಕೆ ಪ್ರಚೋದನೆ ನೀಡಿರಬಹುದೆ ಎಂದೆನಿಸುತ್ತದೆ. ಕೊಂಡಗುಳಿ
ಕೇಶಿರಾಜನ ಈ ಕೃತಿಯ ಪದ್ಯಗಳನ್ನು ಬಸವಾದಿ ಪ್ರಮಥರ ವಚನಗಳೊಂದಿಗೆ ಹೋಲಿಸಬಹುದಾಗಿದೆ. ನಿದರ್ಶನಕ್ಕೆ:
ಕೇಶಿರಾಜರ
ಕಂದಪದ್ಯ
ಕರಿಯಂಕುಶಕಂಜುಗುವದು
ಗಿರಿಯಂಜಗು
ಕುಲಿಶಕಂ ತಮಂಧ ಪರಿಗುಂ
ಖರಕರ
ಕಿರಣಕ್ಕಾಗಂ
ಪರಯವೆ ಪಾಪೋಂ
ನಮಶ್ಯಿವಾಯೆಂಬ ಪದಂ (ಮಂತ್ರಮಹತ್ವದ ಕಂದ.ವ.ಸಂ.94)
ಈ ಪದ್ಯದ ಜೊತೆ
ಬಸವಣ್ಣನವರ ಕೆಳಕಂಡ ವಚನವನ್ನು ಹೋಲಿಸಿ,
ಕರಿಯಂಜುವುದು
ಅಂಕುಶಕ್ಕಯ್ಯಾ
ಗಿರಿಯಂಜುವುದು
ಕುಲಿಶಕ್ಕಯ್ಯಾ
ತಮಂಧವಂಜುವುದು
ಜ್ಯೋತಿಗಯ್ಯಾ
ಪಂಚಮಹಾ
ಪಾತಕವಂಜುವುದು
ಕೂಡಲಸಂಗನ
ನಾಮಕ್ಕಯ್ಯ ( ಸಮಗ್ರ ವಚನ ಸಂಪುಟ 1.
ವ.ಸಂ.75)
ಕೇಶಿರಾಜರ
ಕಂದಪದ್ಯ:
ಮೊಗದ ತೆರೆ
ನೆಗೆದ ಸೆರೆಗಳು
ಬಿಗಿದು ಶಿರಂ
ನಡುಗಿ ನಡವದಿಡುಗದೆ ನಗೆಯದು
ಡುಗದೆವ್ವನಮದು
ಜಗುಳದೆ
ಮಿಗೆ ನೆನವಡಿದೋಂ
ನಮಶ್ಯಿವಾಯೆಂಬ ಪದಂ (ಮಂತ್ರಮಹತ್ವದ ಕಂದ.ವ.ಸಂ.66)
ಈ ಪದ್ಯದ ಜೊತೆ
ಬಸವಣ್ಣನವರ ಕೆಳಕಂಡ ವಚನವನ್ನು ಹೋಲಿಸಿ,
ನರೆ ಕೆನ್ನೆಗೆ,ತೆರೆಗಲ್ಲಕೆ,ಶರೀರ
ಗೂಡುಹೋಗದ ಮುನ್ನ
ಹಲ್ಲು ಹೋಗಿ
ಬೆನ್ನು ಬಾಗಿ,ಅನ್ಯರಿಗೆ ಹಂಗಾಗದ ಮುನ್ನ
ಕಾಲಮೇಲೆ
ಕೈಯನೂರಿ ಕೋಲಹಿಡಿಯದ ಮುನ್ನ
ಮುಪ್ಪಿದೊಪ್ಪವಳಿಯದ
ಮುನ್ನ, ಮೃತ್ಯು ಮುಟ್ಟದ ಮುನ್ನ
ಪೂಜಿಸು ಕೂಡಲ
ಸಂಗಮ ದೇವನ ( ಸಮಗ್ರ ವಚನ ಸಂಪುಟ 1.
ವ.ಸಂ.161)
ಕೇಶಿರಾಜನ
ಪದ್ಯಗಳ ಭಾವ ವಿಸ್ತರಣೆಯನ್ನು ಬಸವಣ್ಣನವರ ವಚನಗಳಲ್ಲಿ ಕಾಣಬಹುದು. ಹನ್ನೆರಡನೆ ಶತಮಾನದ ವಚನ
ಸಾಹಿತ್ಯಕ್ಕೆ ಕೊಂಡುಗುಳಿ ಕೇಶಿರಾಜನ ಪ್ರಭಾವ ಇರುವುದು ಇತ್ತೀಚಿಗೆ ಲಭ್ಯವಾದ ಮಂತ್ರ ಮಹತ್ವದ
ಕಂದ ಕೃತಿಯಿಂದ ತಿಳಿದು ಬರುತ್ತದೆ. ಅಂದರೆ ಕೇಶಿರಾಜನ ವಿಚಾರಗಳು ಬಸವಣ್ಣನವರ ವಚನಗಳಲ್ಲಿ ಪ್ರತಿಫಲಿಸಿವೆ.
ಕೊಂಡುಗುಳಿ
ಕೇಶಿರಾಜ ಹಾಗೂ ಬಸವಣ್ಣನವರಲ್ಲಿ ಹಲವು ವಿಷಯಗಳಲ್ಲಿ ಸಾಮ್ಯ ಇರುವುದನ್ನು ಗುರುತಿಸ ಬಹುದು.
1.
ಇಬ್ಬರೂ ತರ್ದವಾಡಿ ನಾಡಿನವರು
2.
ಕೇಶಿರಾಜನು ಆರನೇ ವಿಕ್ರಮಾದಿತ್ಯನ ಕಾಲದಲ್ಲಿ
ದಂಡನಾಯಕನಾಗಿದ್ದರೆ, ಬಸವಣ್ಣನವರು ಕಲಚೂರಿ ದೊರೆ ಬಿಜ್ಜಳನಲ್ಲಿ
ಮಂತ್ರಿಯಾಗಿದ್ದವರು.
3.
ಇವರೀರ್ವರೂ ಅಧಿಕಾರದಲ್ಲಿದ್ದುಕೊಂಡೇ ರಾಜತ್ವವನ್ನು
ವಿರೋಧಿಸಿದವರು.
4.
ಕಲ್ಯಾಣ ನಾಡಿನಲ್ಲಿ ವೀರಶೈವ ಮತಪ್ರಸಾರ ಕಾರ್ಯದಲ್ಲಿ ತಮ್ಮ
ಕಾಲಕ್ಕನುಗುಣವಾಗಿ ತೀವ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಈ ವಿವರಗಳು ಕೊಂಡಗುಳಿ ಕೇಶಿರಾಜ ಮತ್ತು
ಬಸವಣ್ಣನವರು ಸಮಾನ ಹೃದಯಿಗಳು ಮತ್ತು ಸಮಾನ ಮನಸ್ಕರು
ಎಂಬುದನ್ನು ಸಾಬೀತು ಪಡಿಸಿವೆ.
ಕುತೂಹಲಕರ ಸಂಗತಿ
ಎಂದರೆ ಕೊಂಡಗುಳಿ ಕೇಶಿರಾಜರ ಮಂತ್ರಮಹತ್ವದ ಕಂದದಂತಹ ಕೃತಿಯ ಪ್ರಭಾವಕ್ಕೊಳಗಾಗಿರುವ ಬಸವಣ್ಣನವರು
ಅಪ್ಪಿತಪ್ಪಿಯೂ ತಮ್ಮ ವಚನಗಳಲ್ಲಿ ಕೊಂಡಗುಳಿ ಕೇಶಿರಾಜರನ್ನು ಸ್ಮರಿಸದೇ ಇರುವುದು
ಆಶ್ಚರ್ಯಕರವಾಗಿದೆ ಹಾಗೂ ಯೋಚಿಸತಕ್ಕದ್ದು ಆಗಿದೆ.
ಶೋಧಿಸಿ ಸಂಗ್ರಹಿಸಿ ವಚನಗಳನ್ನು ಬಳಸಿಕೊಂಡು ಅವುಗಳ ಅಂತರಂಗವನ್ನು ವಿಭಿನ್ನ ನೆಲೆಗಳಲ್ಲಿ ಶೋಧಿಸಿ
ವಚನಕಾರರ ಮೂಲ ಆಶಯವನ್ನು ವಿಮರ್ಶಾತ್ಮಕವಾಗಿ ಗುರುತಿಸಿರುವ ಆಶಯನಿಷ್ಠ ಸಂಶೋಧನೆಯು ಆಧುನಿಕ ಕಾಲಘಟ್ಟದಲ್ಲಿ
ಹೆಚ್ಚಾಗಿಯೇ ನಡೆದಿದೆ. ವಚನಗಳನ್ನು
ಹುಡುಕಿ, ಸಂಗ್ರಹಿಸಿ, ಒಂದೆಡೆ ಕಲೆಹಾಕಿ ನಾಮ ಹಾಗೂ ವಿಷಯಾನುಗುಣವಾಗಿ ಹೊಂದಿಸುವಲ್ಲಿ
ನಡೆದ ಹಾಗೂ ಇಂದಿಗೂ ನಡೆಯುತ್ತಿರುವ ಕಾರ್ಯ ಅಂತ್ಯಂತ ಗಮನಾರ್ಹವಾದುದು.
ಸಂಗ್ರಹಿಸಲ್ಪಟ್ಟ ಆಕರಗಳನ್ನು ಅನುಸರಿಸಿ ಅವುಗಳ ಅಂತರಂಗವನ್ನು ವಿಭಿನ್ನ ನೆಲೆಗಳಲ್ಲಿ
ಶೋಧಿಸಿ ವಚನಕಾರರ ಮೂಲ ಆಶಯವನ್ನು ಗುರುತಿಸುವ ಪ್ರಯತ್ನವನ್ನು ಆಶಯನಿಷ್ಠ ಶೋಧನೆಯಲ್ಲಿ
ಗುರುತಿಸಬಹುದು. ವಚನಸಾಹಿತ್ಯವನ್ನು ಕುರಿತಹಾಗೆ ಈ ರೀತಿಯ ಸಂಶೋಧನೆಯು 1.ಧಾರ್ಮಿಕ
ಹಾಗು ತಾತ್ವಿಕ ನೆಲೆ, 2.ಸಾಮಾಜಿಕನೆಲೆ 3.ಸಾಹಿತ್ಯಕನೆಲೆ
4.ಸಾಂಸ್ಕೃತಿಕ ನೆಲೆ ೫. ವೈಚಾರಿಕ
ನೆಲೆಗಳಲ್ಲಿ ನಡೆದಿರುವುದನ್ನು ಗುರುತಿಸಬಹುದಾಗಿದೆ. ಒಬ್ಬೊಬ್ಬ ವಚನಕಾರ, ವಚನಕಾರ್ತಿಯರ
ವಚನಗಳು ಹಾಗೂ ವಚನಸಾಹಿತ್ಯವನ್ನು ಬೇರೆ ಬೇರೆ ದೃಷ್ಟಿಕೋನಗಳನ್ನು ಇಟ್ಟುಕೊಂಡು ನನ್ನ ಗಮನಕ್ಕೆ
ಬಂದಹಾಗೆ ಸುಮಾರು ೬0 ಪಿಎಚ್.ಡಿ. ನಿಬಂಧಗಳು ರಚಿತವಾಗಿವೆ. ಕೆಲವು
ಪ್ರಕಟವಾಗಿವೆ. ಇನ್ನೂ ಹಲವು ಅಪ್ರಕಟಿತವಾಗಿವೆ. ವಚನ ಸಾಹಿತ್ಯದ ಧಾರ್ಮಿಕ ಅಧ್ಯಯನ, ತಾತ್ವಿಕ
ವಿವೇಚನೆಯ ಮಾದರಿಯ ವೀರಶೈವದ ಮುಖ್ಯ ತತ್ವಗಳಾದ ಷಟ್ಸ್ಥಲ, ಅಷ್ಟಾವರಣ, ಪಂಚಾಚಾರ
ಶಿವಯೋಗ, ಕಾಯಕ ದಾಸೋಹ ಮೋದಲಾದವುಗಳ ಸ್ವರೂಪ,ಲಕ್ಷಣ, ವೈಶಿಷ್ಯ್ಯ
ಗಳ ಅಧ್ಯಯನವನ್ನು ಆರ್.ಸಿ.ಹಿರೇಮಠರ ಷಟ್ಸ್ಥಲ ಪ್ರಭೆ, ಎಚ್.ತಿಪ್ಪೇರುದ್ರ ಸ್ವಾಮಿ, ಸಂ.ಶಿ.ಭೂಸನೂರ ಮಠ, ಎಂ.ಎಂ.ಕಲಬುರ್ಗಿ, ಎಂ ಚಿದಾನಂದ ಮೂರ್ತಿ, ವಿ,ಎಸ್,ಕಂಬಿ,ಷಣ್ಮುಖಯ್ಯ ಅಕ್ಕೂರ ಮಠ, ಎಸ್.ಎಂ.ಹಿರೇಮಠ , ಜಯಶ್ರೀ ದಂಡೆ ಮುಂತಾದವರ ಕೃತಿಗಳಲ್ಲಿ ಕಾಣಬಹುದಾಗಿದೆ. ವಚನಕಾರರ ಸಾಮಾಜಿಕ ಚಿಂತನೆಗಳನ್ನು ಇತರ ಜಾಗತಿಕ ಚಿಂತಕರ ವಿಚಾರಗಳ ಜೊತೆಗೆ ಹೋಲಿಸಿ ಅಧ್ಯಯನ ಸಾಮಾಜಿಕವಾಗಿ ಮತ್ತು ವೈಚಾರಿಕ ವಾಗಿ ಅಧ್ಯಯನ ಮಾಡಿರುವುದನ್ನು ಹರ್ಡೆಕರ್ ಮಂಜಪ್ಪ, ಸಿ.ವೀರಣ್ಣ, ಬಸವರಾಜ ಸಬರದ, ಎಂ.ಚಿದಾನಂದ ಮೂರ್ತಿ, ಬಸವರಾಜ ಕಲ್ಗುಡಿ, ಮ.ನ.ಜವರಯ್ಯ, ಮುಂತಾದವರ ಕೃತಿಗಳಲ್ಲಿ ಕಾಣ ಬಹುದಾಗಿದೆ. ಅದೇ ರೀತಿ ಹೆಚ್ಚಿನ ರೀತಿಯಲ್ಲಿ ವಚನಗಳನ್ನು ಸಾಹಿತ್ಯಕವಾಗಿ ಅಂದರೆ ವಚನ ಸಾಹಿತ್ಯ, ಸ್ವರೂಪ, ಲಕ್ಷಣ, ಇತಿಹಾಸ, ಕಾವ್ಯಾಂಶಗಳು,ವಚನಗಳ
ವಿವೇಚನೆ, ಇತ್ಯಾದಿ ವಿವರಗಳನ್ನು ಇಡಿಯಾಗಿ ಮತ್ತು ಬಿಡಿಯಾಗಿ ಎಂ.ಚಿದಾನಂದಮೂರ್ತಿ, ಜಿ.ಎಸ್.ಶಿವರುದ್ರಪ್ಪ, ವಿ.ಜಿ.ಪೂಜಾರ, ಸಿ.ವಿ.ಪ್ರಭುಸ್ವಾಮಿ, ಪಿ.ವಿ.ನಾರಾಯಣ ಮುಂತಾದವರ ಕೃತಿಗಳಲ್ಲಿ ಕಾಣ ಬಹುದಾಗಿದೆ. ವಚನಗಳನ್ನು
ಭಾಷೆ ಛಂದಸ್ಸು, ಕಾವ್ಯ ಮೀಮಾಂಸೆಯ ಹಿನ್ನೆಲೆಯಲ್ಲಿ ಬಿ.ಬಿ.ರಾಜಪುರೋಹಿತ, ವಿ.ಶಿವಾನಂದ, ಸಂಗಮೇಶ
ಸವದತ್ತಿ ಮಠ, ಕೆ.ಕೃಷ್ಣಮೂರ್ತಿ, ಶ್ರೀಮತಿ
ಉಷಾ, ಎಸ್.ಎಸ್.ಅಂಗಡಿ ಮುಂತಾದವರ ಕೃತಿಗಳಲ್ಲಿ ಕಾಣ ಬಹುದಾಗಿದೆ. ವಚನ
ಸಾಹಿತ್ಯವನ್ನು ಸಂಸ್ಕೃತಿ ಶೋಧದ ಹಿನ್ನೆಲೆಯಲ್ಲಿ, ಪಿ.ವಿ.ನಾರಾಯಣ, ಎಂ.ಎಂ.ಕಲಬುರ್ಗಿ, ವೀರಣ್ಣ
ರಾಜೂರ, ಬಿ.ಆರ್.ಹಿರೇಮಠ, ಎಸ್.ವಿದ್ಯಾಶಂಕರ, ಸಿ.ನಾಗಭೂಷಣ, ಮುಂತಾದವರ
ಕೃತಿಗಳಲ್ಲಿ ಕಾಣಬಹುದಾಗಿದೆ. ವಚನ ಸಾಹಿತ್ಯದಲ್ಲಿ ಜಾನಪದೀಯ ನೆಲೆಗಳಲ್ಲೂ ಸಿ.ಕೆ.ನಾವಲಗಿ, ಡಿ,ಕೆ.ರಾಜೇಂದ್ರ, ವೀರಣ್ಣ
ದಂಡೆ, ಬಿ.ಎಸ್.ಪೋಲೀಸ ಪಾಟೀಲ ಮುಂತಾದವರ ಕೃತಿ ಮತ್ತು ಲೇಖನಗಳಲ್ಲಿ ಗುರುತಿಸ
ಬಹುದಾಗಿದೆ. ಅದೇರೀತಿ ವಚನ ಸಾಹಿತ್ಯ, ವಚನಕಾರರು, ವಚನಕಾರ್ತಿಯರನ್ನು
ಕುರಿತು ಕೆಲವೆಡೆ ತೌಲನಿಕವಾಗಿ ಪಿಎಚ್.ಡಿ. ಸಂಶೋಧನಾ ಪದವಿಯ ನಿಮಿತ್ತ ಸುಮಾರು ಎಪ್ಪತ್ತಕ್ಕೂ ಅಧಿಕ ಸಂಶೋಧನಾ
ಕೃತಿಗಳು ಸಿದ್ಧಗೊಂಡಿದ್ದು ಕೆಲವು ಪ್ರಕಟವಾಗಿವೆ ಮತ್ತು ಕೆಲವು ಅಪ್ರಕಟಿತವಾಗಿವೆ.
ವಚನಸಾಹಿತ್ಯ- ಸಂಸ್ಕೃತಿ
ಕುರಿತ ಹಾಗೆ ಫ.ಗು.ಹಳಕಟ್ಟಿಯವರಿಂದ ಆರಂಭಗೊಂಡ ಅಧ್ಯಯನದ ನೆಲೆಗಳು ನಂತರದ ಕಾಲದ
ಆಧುನಿಕ ಕಾಲಘಟ್ಟದಲ್ಲಿ ಬೌದ್ಧಿಕ, ಶೈಕ್ಷಣಿಕ ಹಾಗೂ ವಿದ್ವತ್ ಗಳ ಹಿನ್ನೆಲೆಯಲ್ಲಿ ನೂತನ ದಿಕ್ಕನ್ನು
ಕಂಡುಕೊಂಡಿದೆ. ಇತ್ತೀಚಿಗೆ ವಚನಕಾರರು ಹಾಗೂ ವಚನಗಳ ಬಗೆಗೆ ಮೂಲ ಆಕರಗಳ ಹಿನ್ನೆಲೆಯಲ್ಲಿ
ಹೆಚ್ಚಿನ ಸಂಶೋಧನೆ ನಡೆಯುತ್ತಿದೆ. ವಸುನಿಷ್ಠ ಮಾಹಿತಿ ಹಾಗೂ ಹೊಸ ಹೊಸ ಅಂಶಗಳು ಬೆಳಕಿಗೆ
ಬರುತಿವೆ. ಆದರೆ ದುರದೃಷ್ಟಕರ ಸಂಗತಿ ಎಂದರೆ ವಚನಕಾರರನ್ನು ಕುರಿತು ಸಮಗ್ರ ಅಧ್ಯಯನ ಮಾಡುವಾಗ, ನೂತನ
ಸಂಶೋಧನೆಯಿಂದ ಬೆಳಕಿಗೆ ಬಂದ ಸಂಗತಿಗಳನ್ನು ಗಮನಿಸದೆ ಹಳೆಯ ವಿಷಯಗಳನ್ನೇ ಮತ್ತೆ ಮತ್ತೆ
ಚರ್ಚಿಸುತ್ತ ಬಂದಿರುವುದು. ಇದಕ್ಕೆ ಅಪವಾದವಾಗಿ ಡಾ.ಎಸ್.ವಿದ್ಯಾಶಂಕರ
ಅವರು ರಚಿಸಿರುವ ವೀರಶೈವ ಸಾಹಿತ್ಯ ಚರಿತ್ರೆಯ ಆರು ಸಂಪುಟಗಳಲ್ಲಿ ಸಂಪುಟ ಒಂದು ಮತ್ತು ಮೂರರಲ್ಲಿ
ವಚನಕಾರರ ಬಗೆಗಿನ ವಿವರಗಳಲ್ಲಿ ಇತ್ತೀಚಿನ ಶೋಧನೆಯ ಫಲಿತಗಳನ್ನು ಅಳವಡಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಇಂದು
ಐತಿಹಾಸಿಕ ಆಲೋಚನೆಗಳ ಪರಿಕಲ್ಪನೆಯನ್ನು ಆಕರವಾಗಿಟ್ಟುಕೊಂಡು ವಚನಗಳಲ್ಲಿ ವ್ಯಕ್ತವಾಗಿರುವ ಚಿಂತನೆಗಳ
ಮೂಲ,ಬೆಳವಣಿಗೆ ಹಾಗೂ ಪರಿವರ್ತನೆಗಳನ್ನು ಕುರಿತು ಊಹಾತ್ಮಕ ನೆಲೆಗಟ್ಟಿಗಿಂತ
ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಬೇಕಾದ ಅನಿವಾರ್ಯತೆ ಇದೆ. ಹಾಗೆಯೇ
ಇಂದು ವಚನ ಸಾಹಿತ್ಯವನ್ನು ಶುದ್ಧ ರೂಪದಲ್ಲಿ ಪ್ರಕಟಿಸುವ ಸಲುವಾಗಿ ಕಾಲದೃಷ್ಟಿಯಿಂದ ಪ್ರಾಚೀನ, ಪಾಠದೃಷ್ಟಿಯಿಂದ
ಪ್ರಾಮಾಣಿಕ, ರೂಪದೃಷ್ಟಿಯಿಂದ ಪರಿಪೂರ್ಣವಾಗಿರುವ ಒಂದು ಪ್ರತಿಯನ್ನು ಆಧಾರವಾಗಿಟ್ಟುಕೊಂಡು
ಭಾಷಾ ದೋಷಗಳನ್ನು ಸ್ವತಂತ್ರವಾಗಿ ಸರಿಪಡಿಸಿ ಅನಿವಾರ್ಯ ವೆನಿಸಿದಲ್ಲಿ ಬೇರೆ ಒಂದೋ ಎರಡೋ ಉತ್ತಮ ಹಸ್ತಪ್ರತಿಗಳ
ನೆರವು ಪಡೆದು ಜನಪ್ರಿಯ ಆವೃತ್ತಿಗೆ ಬದಲು ವಿದ್ವಜ್ಜನಪ್ರಿಯ ಆವೃತ್ತಿಯನ್ನು ಹೊರ ತರುವಂತಹ ಸಾಂಸ್ಥಿಕ
ಸಂಯೋಜನೆಯ ಅವಶ್ಯಕತೆ ಇದೆ ಎಂಬುದು ಎಂ.ಎಂ.ಕಲಬುರ್ಗಿ ಮುಂತಾದವರ ಅನಿಸಿಕೆ ಯಾಗಿತ್ತು. ಇದು
ಯೋಚಿಸತಕ್ಕಂತಹದ್ದೂ ಆಗಿದೆ. ಅದೇ
ರೀತಿ ಅನ್ಯಭಾಷಾ ಸಾಹಿತ್ಯದಿಂದ ಕೆಲವೊಮ್ಮೆ ವಿಚಾರಗಳನ್ನು ತೆಗೆದು ಕೊಂಡರೂ ಯಾವರೀತಿ ತಮ್ಮ ವೈಚಾರಿಕತೆಯನ್ನು
ರೂಪಿಸಿಕೊಂಡು ಜಾಗತಿಕ ಚಿಂತನೆಯ ನೆಲೆಯಲ್ಲಿ ಮಹತ್ವವನ್ನು ಪಡೆದು ಕೊಂಡವು ಎಂಬುದರ ಬಗೆಗೆ ಅಧ್ಯಯನದ
ನೆಲೆಯನ್ನು ತಿರುಗಿಸ ಬೇಕಾಗಿದೆ. ಅದೇ ರೀತಿ ವಚನ ಸಂಸ್ಕೃತಿ ಕ್ಷೇತ್ರದಲ್ಲಿ ದುಡಿದ ಪ್ರಾಚೀನ ಟೀಕಾಕಾರರು, ಸಂಕಲನಕಾರರು
ಹಾಗೂ ಆಧುನಿಕ ವಿದ್ವಾಂಸರ ಕುರಿತ ಅಧ್ಯಯನದತ್ತ ಗಮನ ಹರಿಸ ಬೇಕಾಗಿದೆ. ವಚನ
ಸಾಹಿತ್ಯ ಕ್ಷೇತ್ರದಲ್ಲಿ ದುಡಿದಿರುವ ಆಧುನಿಕ ವಿದ್ವಾಂಸರ ಕುರಿತ ಅಧ್ಯಯನ ಈಗಾಗಲೇ ನಡೆದಿದೆ.
ಆಕರ
ಗ್ರಂಥಗಳು
೧. ಎಸ್.ಶಿವಣ್ಣ: ಬಿಡುಮುತ್ತುಗಳು
ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ೨೦೦೦
೧. ಮಹಾಮಾರ್ಗ
( ಎಂ.ಎಂ.ಕಲಬುರ್ಗಿ ಅವರ ಅಭಿನಂದನಾ ಗ್ರಂಥ)ಸಂ: ಸದಾನಂದ
ಕನವಳ್ಳಿ
ಮತ್ತು ವೀರಣ್ಣರಾಜೂರ ಗದಗ, ೧೯೯೮
೨.ಸಿ.ನಾಗಭೂಷಣ: ಶರಣಸಾಹಿತ್ಯ
ಸಂಸ್ಕೃತಿ ಕೆಲವು ಅಧ್ಯಯನಗಳು
ಕನ್ನಡ
ಸಾಹಿತ್ಯ ಪರಿಷತ್, ಬೆಂಗಳೂರು, ೨೦೦೦