ಕನ್ನಡ ಸಾಹಿತ್ಯ ಸಂಶೋಧನೆಗೆ ಎಸ್ ವಿದ್ಯಾಶಂಕರ್
ಅವರ ಕೊಡುಗೆ
ಡಾ.ಸಿ.ನಾಗಭೂಷಣ
ಆಧುನಿಕ ಕನ್ನಡ
ಸಾಹಿತ್ಯದ ಸಂದರ್ಭದಲ್ಲಿ ಸಂಶೋಧನಾ
ಕ್ಷೇತ್ರದಲ್ಲಿ ಆದ ಸಾಧನೆ ಸಾಮಾನ್ಯವಾದುದೇನಲ್ಲ. ಆ ಕಾಲದ ಸಂಶೋಧನೆಯನ್ನು ಒಮ್ಮೆ ಅವಲೋಕಿಸಿದರೆ
ಬೆರಗುಗೊಳ್ಳುವಷ್ಟು ಕೆಲಸ ನಡೆದಿದೆ. ಆರಂಭದ ಕಾಲಘಟ್ಟದಲ್ಲಿ ವಿದೇಶಿ ವಿದ್ವಾಂಸರಿಂದ ಆರಂಭವಾದ ಈ
ಕ್ಷೇತ್ರದಲ್ಲಿ ನಂತರ ಕಾಣಿಸಿಕೊಂಡ ದೇಶೀಯ ವಿದ್ವಾಂಸರ ಸೇವೆ ಅನುಪಮವಾದುದು. ಕನ್ನಡ ಭಾಷೆ
ಸಾಹಿತ್ಯಕ್ಕೆ ಸೇವೆ ಸಲ್ಲಿಸಿದ ವಿದ್ವಾಂಸರು ಹಿರಿಯರು, ಹೊಸಬರು
ಯಾರಾದರಾಗಿರಲಿ ವಿದ್ವತ್ತಿನ ದೃಷ್ಟಿಯಿಂದ ಅವರ ಸಾಧನೆ ಮತ್ತು ಸಿದ್ಧಿಗಳ ವಿಷಯದಲ್ಲಿ ಕನ್ನಡ
ಸಾಹಿತ್ಯ-ಸಂಸ್ಕೃತಿಯ ಅಧ್ಯಯನಾಸಕ್ತರಾದವರು ಚಿರಋಣಿಯಾಗಿರ ಬೇಕಾಗಿದೆ.
ಸಂಶೋಧನಾ
ಪದದ ವ್ಯಾಪ್ತಿಯನ್ನು ಸಮಕಾಲೀನ ಸಾಹಿತ್ಯಕ ಸಂದರ್ಭದಲ್ಲಿ ಮರು ಪರಿಶೀಲನೆಗೆ ಒಳಪಡಿಸುವ ಅವಶ್ಯಕತೆ
ಇದೆ. ಈ
ಕಾಲದಲ್ಲಿ ಕನ್ನಡ ಸಂಶೋಧನೆಯು, ಕೃತಿ ಸಂಶೋಧನೆಯಿಂದ
ಗ್ರಂಥಸಂಪಾದನೆಗೆ,
ಕವಿಚರಿತ್ರೆಯಿಂದ ಸಾಹಿತ್ಯ ಚರಿತ್ರೆಗೆ, ಛಂದ: ಸೂತ್ರಗಳಿಂದ
ಛಂದ:ಶಾಸ್ತ್ರದ
ಸ್ವರೂಪ ಭೇದನಕ್ಕೆ, ವ್ಯಾಕರಣದಿಂದ ಭಾಷಾಚರಿತ್ರೆಗೆ, ಅಲಂಕಾರ
ಶಾಸ್ತ್ರದಿಂದ ಕಾವ್ಯ ಮೀಮಾಂಸೆಗೆ, ತೊಡಗಿಸಿಕೊಂಡಿತು. ಸಾಮಗ್ರಿ
ಸಂಗ್ರಹ ಪ್ರಕಟನೆಯ ಜೊತೆಗೆ ಕನ್ನಡ ಸಂಶೋಧನೆ ತೀವ್ರವಾಗಿ ಸಾಮಗ್ರಿ ವಿಶ್ಲೇಷಣೆಯತ್ತ ಮುಖಮಾಡಿತು. ಸಾಂಸ್ಕೃತಿಕ
ಶೋಧನೆಗೆ ಸಂಬಂಧಿಸಿದ ಅಧ್ಯಯನಗಳು ಸಾಂಸ್ಕೃತಿಕ ಚರಿತ್ರೆಯಲ್ಲಿ ಹೊಸ ನೋಟವನ್ನು ಬೀರಿವೆ. ಈ
ರೀತಿಯ ಸಂಶೋಧನೆಯಲ್ಲಿ ಮಾಹಿತಿ ಸಂಗ್ರಹ, ಅದರ ಸಂಯೋಜನೆ, ಅದರ
ವಿಶ್ಲೇಷಣೆ ಇವೆಲ್ಲವೂ ಅತ್ಯಂತ ವ್ಯವಸ್ಥಿತವಾಗಿ ನಡೆದಿವೆ. ಲಭ್ಯವಾದ
ದಾಖಲೆಗಳನ್ನು ಬೇರೆ ಬೇರೆ ಸಿದ್ಧಾಂತಗಳ ಹಿನ್ನಲೆ ದೃಷ್ಟಿಕೋನಗಳಿಂದ ನೋಡುವುದು ಪ್ರಮುಖವಾಗಿದೆ. ಕನ್ನಡದಲ್ಲಿ ಪ್ರಾರಂಭಿಕ ಘಟ್ಟದಲ್ಲಿ ಸಂಶೋಧನೆಯು ಹಸ್ತಪ್ರತಿಗಳ, ಅನ್ವೇಷಣೆ, ಸಂಪಾದನೆ
ಮತ್ತು ಸಾಹಿತ್ಯ ಚರಿತ್ರೆ ನಿರ್ಮಾಣದ ಮೂಲಕ ಪ್ರಾರಂಭವಾಯಿತು. ನಂತರದಲ್ಲಿ ಹೊಸ ಹೊಸ ಆಕರಗಳು ಶೋಧನೆಗೊಂಡು
ಪರಂಪರೆಯ ನಿರ್ವಚನ, ನಿರ್ಮಾಣ ಮತ್ತು ಸಾಹಿತ್ಯ ಇತಿಹಾಸಗಳ ಕಟ್ಟಿಕೊಳ್ಳುವಿಕೆಗಳು
ನಡೆದಿವೆ. ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಇಡಿಯಾದ ಮತ್ತು ಬಿಡಿಯಾದ ಸಂಶೋಧನೆಯಿಂದಾಗಿ
ಸಾಹಿತ್ಯ ಚರಿತ್ರೆಯ ಪರಿಧಿ ವಿಸ್ತರಿಸಿತು. ಬೆಳವಣಿಗೆಯ ದೃಷ್ಟಿಯಿಂದ ವಿಕಾಸಹೊಂದಿತು. ಹೆಚ್ಚಿನ
ಕವಿಗಳು,
ಅವರ ಕೃತಿಗಳು ಬೆಳಕು ಕಂಡವು. ಕೃತಿಗಳ ಪಟ್ಟಿ ಬೆಳೆಯಿತು. ಹಸ್ತಪ್ರತಿಗಳ ರೂಪದಲ್ಲಿದ್ದ
ಕೃತಿಗಳು ಸಂಪಾದನೆಗೊಂಡು ಪ್ರಕಟವಾದವು. ಸಾಹಿತ್ಯ ಚರಿತ್ರೆಗೆ ಪೂರಕವಾಗುವ ಕೆಲವು ಶಾಸನಗಳು
ಶೋಧಿತವಾದವು. ಈ ಹಿನ್ನಲೆಯಲ್ಲಿ ಸಾಹಿತ್ಯ ಚರಿತ್ರೆಯಲ್ಲಿ ಗಣನೀಯ ಬೆಳವಣಿಗೆಗಳಾದುದನ್ನು
ಗುರುತಿಸಬಹುದು. ಇಂತಹ ಸಂಶೋಧನಾ ಕೆಲಸದಲ್ಲಿ ಎಸ್.ವಿದ್ಯಾಶಂಕರ ಅವರ ಹೆಸರು ಗಮನಾರ್ಹವಾದುದು.
ಎಸ್.ವಿದ್ಯಾಶಂಕರ ಅವರು ಮಧ್ಯಕಾಲೀನ
ಕನ್ನಡ ಸಾಹಿತ್ಯ ಅದರಲ್ಲಿಯೂ ಶರಣ ಸಾಹಿತ್ಯ-ಸಂಸ್ಕೃತಿ ಕುರಿತ ಕ್ರಿಯಾತ್ಮಕ
ಸಂಶೋಧಕರಲ್ಲಿ ಅಗ್ರಗಣ್ಯರು. ಆಧುನಿಕ ಪೂರ್ವದ ಕನ್ನಡ ಸಾಹಿತ್ಯ
ಚರಿತ್ರೆಯನ್ನು ತಮ್ಮ ಹೊಸ ಶೋಧಗಳ ಮೂಲಕ ಶ್ರೀಮಂತಗೊಳಿಸಿದವರು. ಇದರ ಜೊತೆಗೆ ಗ್ರಂಥಸಂಪಾದನೆ, ಗದ್ಯಾನುವಾದ, ವಿಮರ್ಶೆ, ಸಂಶೋಧನೆಗಳು,
ಅಂಕಣ ಬರೆಹ, ಪ್ರವಾಸ ಸಾಹಿತ್ಯ, ಸ್ಮರಣ-ಅಭಿನಂದನಾ ಗ್ರಂಥಗಳ ಸಿದ್ಧತೆಯಲ್ಲಿ ತಮ್ಮ ಅವಿರತ ದುಡಿಮೆಯನ್ನು
ಮೀಸಲಾಗಿಸಿದ್ದವರು. ಕನ್ನಡ ಸಾಹಿತ್ಯ ಸಂಶೋಧನೆ ಹಾಗೂ ಸಂಪಾದನಾ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಗಮನಾರ್ಹವಾದುದು.
ಉತ್ತಮ ಸಂಶೋಧಕರಲ್ಲಿ ಇರಬಹುದಾದ ಕುತೂಹಲ, ಪ್ರಾಮಾಣಿಕತೆ, ಕ್ರಿಯಾ ಶೀಲತೆ, ತಾಳ್ಮೆ-ಸಂಯಮ, ವೈಜ್ಞಾನಿಕ ಮನೋಭಾವ, ಚಿಕಿತ್ಸಕ ಬುದ್ಧಿ, ನಿರ್ಭಿಡತ್ವ, ಬಿಚ್ಚು ಮನಸ್ಸಿನಿಂದ
ಹೇಳುವಿಕೆ ಈ ಗುಣಗಳ ಪ್ರತೀಕವಾಗಿದ್ದವರು. ವಿದ್ಯಾಶಂಕರ ಅವರ ಬರವಣಿಗೆಯಲ್ಲಿ ಸಂಶೋಧನಾತ್ಮಕ ಗುಣವೇ ಜೀವಾಳ. ವಿದ್ವತ್ತಿಗೆ ಬೇಕಾದ ಆಳವಾದ ಅಧ್ಯಯನ, ಅಧ್ಯಯನದಿಂದ ಪ್ರಾಪ್ತವಾದ ವಿಷಯಗಳನ್ನು ವಿಶ್ಲೇಷಿಸುವ
ವಸ್ತುನಿಷ್ಠ ದೃಷ್ಠಿಕೋನವನ್ನು ಇವರು ಹೊಂದಿದ್ದರಿಂದ ಇವರ ಲೇಖನಗಳಲ್ಲಿ ಒಳನೋಟಗಳು ಪ್ರಾಪ್ತವಾಗಿವೆ.
ಶರಣ ಸಾಹಿತ್ಯ- ಸಂಸ್ಕೃತಿಯ ಕುರಿತ ಇವರ ಬರೆಹಗಳಲ್ಲಿ ಗಮನಿಸ ಬೇಕಾದ ಒಂದು ಅಂಶವೆಂದರೆ, ಕನ್ನಡ ಸಾಹಿತ್ಯದ
ನಡುಗಾಲದ ಇತಿಹಾಸ- ಸಂಸ್ಕೃತಿಯನ್ನು ಕುರಿತ ಅಧ್ಯಯನದಲ್ಲಿ, ಇವರು ಸಂಪ್ರದಾಯದಲ್ಲಿ ಗೌರವವನ್ನು ಇಟ್ಟುಕೊಂಡೇ ಉದಾರವಾದದ ದೃಷ್ಟಿಕೋನದ ನಿಲವು-ನಿರ್ಣಯಗಳ ಸಮತೋಲನದ ಚೌಕಟ್ಟಿನ
ನೆಲೆಗಟ್ಟನ್ನು ಪ್ರತಿಪಾದಿಸಿರುವುದು. ಸಂಶೋಧಕರೂ, ಪಂಡಿತರೂ,
ಅಧ್ಯಯನಶೀಲರೂ ಆದ ಇವರ ಸಾಹಿತ್ಯ ದುಡಿಮೆ -ಸಾಧನೆ ಇಂದಿನ ಯುವ ವಿದ್ವಾಂಸರಿಗೆ ಅನುಕರಣೀಯವೂ ಮಾರ್ಗದರ್ಶಿಯೂ
ಆಗಿದೆ. ಕವಿಗಳ ಕಾಲನಿರ್ಣಯ, ಅಪ್ರಕಟಿತ ವಚನಗಳ ಶೋಧ,
ಅನುಪಲಬ್ಧ ಸ್ವರವಚನಗಳ ಸಂಪಾದನೆ, ವಿವಿಧ ಕಾಲಮಾನದ ಕವಿಕೃತಿಗಳಿಗೆ ಸಂಬಂಧಿಸಿದ ಸಂಪ್ರಬಂಧಗಳು,
ಮುಂತಾದವುಗಳಿಗೆ ಸಂಬಂಧಿಸಿದಂತೆ ಇವರ ಸಂಶೋಧನಾ ಕೊಡುಗೆಯನ್ನು ಕನ್ನಡಿಗರು ಎಂದೂ ಮರೆಯುವಂತಿಲ್ಲ.
ನಡುಗನ್ನಡ ಸಾಹಿತ್ಯದ ಆದಿಯೆಂದರೆ ವಚನಸಾಹಿತ್ಯ. ವಚನ ಸಾಹಿತ್ಯದ ಆಳ ಅಂತರವೆಂದರೆ ವಚನಕಾರರು ಮತ್ತು
ಅವರು ರಚಿಸಿದ ವಚನಗಳು. 12ನೇ ಶತಮಾನಕ್ಕಿಂತ ಪೂರ್ವದಲ್ಲಿ ಮತ್ತು 12ನೆಯ ಶತಮಾನದ ನಂತರದ ಕಾಲದಲ್ಲಿ
ಹಲವಾರು ವಚನಕಾರರು, ವಚನಕಾರ್ತಿಯರು ಆಗಿಹೋಗಿದ್ದಾರೆ. ವಚನಗಳ ಸಂಗ್ರಹ-ಸಂಪಾದನೆಯಂತಹ ಕೆಲಸವು ಬಹಳ
ಮಹತ್ವವಾದುದು. ಅದರಂತೆ ವಚನಕಾರರ ಕಾಲ ಅವರ ವಚನಗಳು, ಮುಂತಾದವುಗಳನ್ನು ಅಚ್ಚುಕಟ್ಟಾಗಿ ಗ್ರಹಿಸುವುದು,
ವಿಶ್ಲೇಷಿಸುವುದೂ ಮುಖ್ಯವಾಗಿರುತ್ತದೆ. ಈಗೆಲ್ಲಾ
ವಚನಕಾರರು ಅವರ ಕಾಲ ಅಂಕಿತನಾಮಗಳನ್ನು ಮತ್ತು ವಚನಗಳು ಒಳಗೊಂಡಿರುವ ಸಾರಸಂಗ್ರಹವು ನಮ್ಮ ಮುಂದಿದೆ.
ಈ ರೀತಿಯಾಗಿ ಸಿಗುವಿಕೆಯಲ್ಲಿ ಅನೇಕ ವಿದ್ವಾಂಸರ ಶ್ರಮವಿದೆ. ಈ ವಿದ್ವತ್ ಕಾರ್ಯಗಳ ಪ್ರಮುಖ ಕಾರಣರಾದಂತಹವರಲ್ಲಿ
ಇವರೂ ಒಬ್ಬರಾಗಿದ್ದಾರೆ. ಇವರ ಶೋಧನೆ ಮತ್ತು ಅಧ್ಯಯನದ ಫಲವಾಗಿ ಹನ್ನೆರಡನೇ ಶತಮಾನದ ನಂತರದ ವಚನಕಾರರು,
ಕವಿಗಳ ಕಾಲ ನಿರ್ಣಯದಲ್ಲಿ ಹಿಂದು ಮುಂದಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯ ಪುನರ್ ರಚನೆಗೆ ಕಾರಣವಾದ ಇವರ ಸಾಹಿತ್ಯ ಚರಿತ್ರೆಯ ಸಂಶೋಧನಾ ಅಧ್ಯಯನ ಸ್ವರೂಪವನ್ನು
ಈ ಕೆಳಕಂಡಂತೆ ಗುರುತಿಸ ಬಹುದಾಗಿದೆ.
1.
ವಚನಕಾರರ ವಚನಗಳ ಮತ್ತು ಅಪ್ರಕಟಿತ ಸ್ವರ ವಚನಗಳ ಶೋಧ,
ಅಧ್ಯಯನ ಮತ್ತು ವ್ಯಾಖ್ಯಾನ
2.
ಹಳಗನ್ನಡ, ನಡುಗನ್ನಡ ಹಾಗೂ ಆಧುನಿಕ ಪೂರ್ವದ ಬೆಳಕಿಗೆ ಬಾರದ ಕೆಲವು ಅಜ್ಞಾತ ಕನ್ನಡ ಕವಿಗಳು ಮತ್ತು
ಅವರ ಕೃತಿಗಳ ಸಂಪಾದನೆ, ಕವಿಗಳ ಕಾಲನಿರ್ಣಯ, ಕೃತಿಗಳ ವಿಶ್ಲೇಷಣೆ.
ಇತ್ತೀಚಿನ ಅಧ್ಯಯನಕಾರರು ಹಿಂದಿನ ವಿದ್ವಾಂಸರು ಕೊಡ
ಮಾಡಿದ ಹಳಗನ್ನಡ, ನಡುಗನ್ನಡ ಕಾಲದ ಸಾಹಿತ್ಯದ ಪ್ರಜ್ಞಾಪೂರ್ಣ ಕೊಡುಗೆಯನ್ನು ಇಂದಿನ ಬರವಣಿಗೆಯಲ್ಲಿ
ಪರಾಮರ್ಶನ ಮತ್ತು ಪೂರಕ ಆಕರವಾಗಿ ಅವೆಲ್ಲವುಗಳನ್ನು ಬಳಸಿಕೊಂಡು ಸಂಶೋಧನಾ ವ್ಯಾಸಂಗದ ತಳಹದಿಯಲ್ಲಿ
ಸತ್ಯದ ಸಮೀಪಕ್ಕೆ ಬರುವಂತಾಗಿದೆ. ಹೀಗಾಗಿ ಕವಿಚರಿತೆಕಾರರನ್ನು ಒಳಗೊಂಡಂತೆ ಸಾಹಿತ್ಯ-ಸಂಸ್ಕೃತಿಯ
ಶೋಧದಲ್ಲಿ ಗಮನೀಯವಾದ ಕಾರ್ಯದಲ್ಲಿ ತೊಡಗಿದ್ದ ಮತ್ತು ಪ್ರಸ್ತುತ ಅದರಲ್ಲಿ ತಮ್ಮ ಜೀವನವನ್ನು ಸವೆಸುತ್ತಿರುವ
ವಿದ್ವಾಂಸರು ಹಳಗನ್ನಡ ನಡುಗನ್ನಡ ಮತ್ತು ಆಧುನಿಕ ಕನ್ನಡ ಸಾಹಿತ್ಯ ಕೃತಿಗಳನ್ನು ಕವಿ-ಕಾಲ ವಿಚಾರವನ್ನು
ಗುಣಾತ್ಮಕವಾಗಿ ಶೋಧಿಸಿ ವ್ಯವಸ್ಥಿತವಾದ ಪುಸ್ತಿಕೆಗಳನ್ನು ಒದಗಿಸಿಕೊಟ್ಟಿದ್ದರಿಂದಾಗಿ, ಇಂದು ನಾವೆಲ್ಲಾ
ಪಂಪ, ಬಸವಾದಿ ವಚನಕಾರರು.ಹರಿಹರ, ರಾಘವಾಂಕ, ಕುಮಾರವ್ಯಾಸ, ಸರ್ವಜ್ಞ ಶೂನ್ಯ ಸಂಪಾದನಾಕಾರರು, ಪುರಂದರ,
ಕನಕದಾಸ, ರತ್ನಾಕರವರ್ಣಿರಾದಿಯಾಗಿ ಹಳಗನ್ನಡ- ನಡುಗನ್ನಡ ಕಾಲದ ಕವಿ-ಕೃತಿಗಳನ್ನು ಸುಲಭವಾಗಿ ಓದಲು
ಅನುಕೂಲವಾದ ವಾತಾವರಣ ನಿರ್ಮಿತವಾಗಿದೆ.
ಇವರ ಸಾಹಿತ್ಯ ಸೃಷ್ಟಿ, ಸಂಶೋಧನೆ, ಸಂಪಾದನೆ, ವಿಮರ್ಶೆ ಸೃಜನಶೀಲ ಅನುವಾದ
ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಕೃತಿಗಳಲ್ಲಿ ಹಾಗೂ 373ಕ್ಕೂ ಅಧಿಕ
ಲೇಖನ ರೂಪಗಳಲ್ಲಿ ವ್ಯಕ್ತವಾಗಿದೆ. ಡಾ. ಎಸ್.ವಿದ್ಯಾಶಂಕರ ಸಾಹಿತ್ಯ ಕೃಷಿಯನ್ನು ಸಂಶೋಧನಾತ್ಮಕನೆಲೆಯಲ್ಲಿ ಈ ಕೆಳಕಂಡಂತೆ ವರ್ಗೀಕರಿಸ ಬಹುದು. ನನ್ನ ಗಮನಕ್ಕೆ ಬಂದಹಾಗೆ ಇವರು ಸಂಪಾದಿಸಿರುವ ಆಧುನಿಕ ಪೂರ್ವಕಾಲದ ಒಟ್ಟು ಕೃತಿಗಳ ಸಂಖ್ಯೆ ಸುಮಾರು ೩೦. ಅವುಗಳಲ್ಲಿ
ಶರಣ ಸಾಹಿತ್ಯಕ್ಕೆ
ಸಂಬಂಧಿಸಿದವುಗಳು ೨೮. ಜೈನ
ಕೃತಿಗಳು-೨, ಇವರಸ್ವತಂತ್ರ ಸಂಶೋಧನಾ ಕೃತಿಗಳು ಒಟ್ಟು ೧೮, ವೀರಶೈವ ಸಾಹಿತ್ಯ ಚರಿತ್ರೆ ೪ ಬೃಹತ್ ಸಂಪುಟಗಳು.
ಆಧುನಿಕ ಸಂಪಾದಿತ ಕೃತಿಗಳು೧೨, ಅನುವಾದ ೨, ಪ್ರವಾಸ ಸಾಹಿತ್ಯ ೩, ಜೀವನ ಚರಿತ್ರೆ ೩ ಒಟ್ಟು ಸಾಹಿತ್ಯ
ಕೃಷಿಗೆ ಸಂಬಂಧಿಸಿದಂತೆ ೧೦೦ ಕೃತಿಗಳನ್ನು ರಚಿಸಿದ್ದಾರೆ. ಎಸ್. ವಿದ್ಯಾಶಂಕರ ಅವರ ಕನ್ನಡಸಾಹಿತ್ಯ- ಸಂಸ್ಕೃತಿ ಯನ್ನು ಕುರಿತು
ಸಂಶೋಧನೆಗೆ ನನ್ನ ಲೇಖನವನ್ನು ಮೀಸಲಾಗಿರುವುದರಿಂದ ಕನ್ನಡ ಸಾಹಿತ್ಯ ಸಂಸ್ಕೃತಿ, ಶರಣಧರ್ಮ ಸಾಹಿತ್ಯವನ್ನು
ಕುರಿತು ಕೃತಿಗಳನ್ನು ಹಾಗೂ ಲೇಖನಗಳನ್ನು ಮಾತ್ರ ಅವಲೋಕನಕ್ಕೆ ಪರಿಗಣಿಸಲಾಗಿದೆ.
ಆಧುನಿಕ
ಕಾಲದಲ್ಲಿ ವಚನಸಾಹಿತ್ಯ ಕುರಿತ ಸಂಶೋಧನೆ ಆಕರಶೋಧ ಹಾಗೂ ಆಶಯ ಶೋಧಗಳೆಂಬ ನೆಲೆಗಟ್ಟನಲ್ಲಿ
ನೆಡೆದಿದೆ.
ಇತ್ತೀಚೆಗೆ ವಚನಸಾಹಿತ್ಯವನ್ನು ಕುರಿತು ನಡೆದಿರುವ
ಸಂಶೋಧನೆಯನ್ನು ಮೂರು ರೀತಿಯಲ್ಲಿ ಗುರುತಿಸಲಾಗಿದೆ. 1.ಅಪ್ರಕಟಿತ
ವಚನಗಳ ಶೋಧನಾಕಾರ್ಯ
2.ವಚನಕಾರರ ಜೀವಿತದ ಕಾಲ,ಜನ್ಮಸ್ಥಳ,ವೈಯಕ್ತಿಕ
ವಿವರ ಇತ್ಯಾದಿಗಳನ್ನು ಕುರಿತ ನೂತನ ಸಂಶೋಧನೆಗಳು.
೩. ವಿಭಿನ್ನ
ದೃಷ್ಟಿಕೋನಗಳಲ್ಲಿ ವಚನಗಳ ವಿಶ್ಲೇಷಣೆ ಈ ಮೂರು
ತೆರನಾದ ಸಂಶೋಧನೆಯಲ್ಲಿ ಕೊನೆಯ ಎರಡು ರೀತಿಯ ಸಂಶೋಧನೆಗಳಲ್ಲಿ ಎಸ್.ವಿದ್ಯಾಶಂಕರ ಅವರು ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದರು. ಇವರ ಸಂಶೋಧನೆಯು ಬಹುಮಟ್ಟಿಗೆ
ಆಕರ ಶೋಧದ ಜೊತೆಗೆ ಆಶಯ ಶೋಧದ ನೆಲೆಗಟ್ಟಿನಲ್ಲಿ ಸಾಗಿರುವುದು. ವೀರಶೈವ
ಸಾಹಿತ್ಯದಲ್ಲಿ ಅದರಲ್ಲಿಯೂ
ವಚನಗಳನ್ನು ಕುರಿತ ಹಾಗೆ ವಿಷಯಾನುಗುಣವಾಗಿ ವಿಂಗಡಿಸಿ, ಅವುಗಳನ್ನು
ವ್ಯಾಖ್ಯಾನಿಸುವುದರ ಮೂಲಕ ಆಶಯ ಶೋಧದ ಗ್ರಹಿಕೆಯನ್ನು ಕಾಣಬಹುದಾಗಿದೆ. ಇವರ
ವೀರಶೈವ ಸಾಹಿತ್ಯ-ಸಂಸ್ಕೃತಿ ಕುರಿತ ಸಂಶೋಧನೆಯು ಧಾರ್ಮಿಕ ಮತ್ತು ತಾತ್ವಿಕ ನೆಲೆ, ಸಾಮಾಜಿಕ
ನೆಲೆ. ಧಾರ್ಮಿಕ ನೆಲೆ ಮತ್ತು ಸಾಂಸ್ಕೃತಿಕ ನೆಲೆಗಟ್ಟುಗಳಲ್ಲಿ ನಡೆದಿರುವುದನ್ನು
ಕಾಣಬಹುದಾಗಿದೆ. ವಚನ
ಸಾಹಿತ್ಯದ ಧಾರ್ಮಿಕ ಅಧ್ಯಯನದಲ್ಲಿ ವೀರಶೈವದ
ಮುಖ್ಯ ತತ್ವಗಳಾದ ಷಟ್ಸ್ಥಲ, ಅಷ್ಟಾವರಣ, ಪಂಚಾಚಾರ, ಶಿವಯೋಗ,ಕಾಯಕ-ದಾಸೋಹ
ಮೊದಲಾದವುಗಳ ಸ್ವರೂಪ-ಲಕ್ಷಣ- ವೈಶಿಷ್ಟ್ಯಗಳನ್ನು ಗುರುತಿಸಿರುವುದನ್ನು
ಕಾಣಬಹುದಾಗಿದೆ. ಅದೇರೀತಿ ವಚನಕಾರರು ಪ್ರಾರಂಭಿಸಿದ್ದ ಸಮಾಜೋಧಾರ್ಮಿಕ ಚಳುವಳಿಯ ನಿಮಿತ್ತವಾಗಿ
ಸಾರಿದ ಸರ್ವ ಸಮಾನತೆಯ ಹಿನ್ನೆಲೆಯಲ್ಲಿ
ವಚನಕಾರರ ವಚನಗಳಲ್ಲಿ ವ್ಯಕ್ತಿಯ ಸಾಮಾಜಿಕ ಬದುಕಿಗೆ ಸಂಬಂಧಿಸಿದ ಸಂಗತಿಗಳ ಹುಡುಕಾಟ, ಜೊತೆಗೆ
ಶರಣರ ಸಾಮಾಜಿಕ ಚಿಂತನೆಗಳನ್ನು ಇತರ ಜಾಗತಿಕ ಚಿಂತಕರ ಜೊತೆಗೆ ಹೋಲಿಸಿ ನೋಡುವ, ಅವರ
ವಿಚಾರ ಧಾರೆಯ ಮಹತ್ತರತೆಯನ್ನು ಮನದಟ್ಟು ಮಾಡಿಸುವ ಆಶಯವನ್ನು ಕಾಣಬಹುದಾಗಿದೆ. ವಚನಕಾರರ
ಸಾಮಾಜಿಕ ಚಿಂತನೆಗಳನ್ನು ವಚನಗಳ ಹಿನ್ನೆಲೆಯಲ್ಲಿ ಗಂಭೀರವಾಗಿ ವಿವೇಚಿಸಿರುವುದನ್ನು ಕಾಣಬಹುದಾಗಿದೆ.
ಆಧುನಿಕ
ಪೂರ್ವದ ಕನ್ನಡ ಸಾಹಿತ್ಯ ಕುರಿತ ಸಂಶೋಧನೆಯಲ್ಲಿ ಇವರದ್ದು ಸಿಂಹಪಾಲು. ಇವರ ಆಕರನಿಷ್ಠ ಮತ್ತು ವ್ಯಾಖ್ಯಾನ ನಿಷ್ಠ ಸಂಶೋಧನೆಯ ಸ್ವರೂಪವನ್ನು
ಬಹುಮಟ್ಟಿಗೆ ಕೆಳಕಂಡ ರೀತಿಯಲ್ಲಿ ಕಂಡುಕೊಳ್ಳಬಹುದಾಗಿದೆ.
1.
ಕವಿಗಳ ಜನ್ಮಸ್ಥಳಗಳಿಗೆ ಸಂಬಂಧಿಸಿದ ಹಾಗೆ ನೂತನ ಸಂಗತಿಗಳನ್ನು ಶೋಧಿಸಿರುವುದು.
2.
ಕವಿಗಳ ತಂದೆ ತಾಯಿಗಳ, ಗುರುಗಳ ಆಶ್ರಯದಾತರ ಬಗ್ಗೆ ಹೆಚ್ಚಿನ ವಿವರಗಳನ್ನು ಒದಗಿಸಿರುವುದು.
೩.
ವಚನಕಾರರು ವಚನಗಳ ರಚನೆಯ ಜೊತೆಯಲ್ಲಿಯೇ ಸ್ವರವಚನಗಳನ್ನು ಬರೆದಿದ್ದಾರೆಂಬ ಅಂಶ ಬೆಳಕಿಗೆ ಬಂದ ಪರಿಣಾಮ
ಅಸಂಖ್ಯಾತ ಸ್ವರವಚನಗಳು ಹಾಗೂ ತತ್ವ ಪದಗಳು ಶೋಧಿತವಾಗಿ ಇವರ ಮೂಲಕವೂ ಸಂಪಾದನೆಗೊಂಡು ಬೆಳಕು ಕಂಡಿರುವುದು.
೪.
ಕನ್ನಡ ಸಾಹಿತ್ಯ ಚರಿತ್ರೆಗೆ ಮೊದಲ ಬಾರಿಗೆ ಉಪೇಕ್ಷಿತಕವಿಗಳ ಕಾವ್ಯಗಳು ಸೇರ್ಪಡೆಗೊಂಡಿರುವುದು.
೫.
ಒಂದೇ ಹೆಸರಿನ ವಚನಕಾರ ವ್ಯಕ್ತಿ ಎಂದು
ತಿಳಿದುಕೊಂಡಿದ್ದು ದೂರವಾಗಿ ಭಿನ್ನ ವ್ಯಕ್ತಿಗಳು ಎಂದು ನಿರ್ಧರಿತವಾಗಿರುವುದು.( ಮಾದಾರ
ಚೆನ್ನಯ್ಯ ಒಬ್ಬನೇ ಅಥವಾ ಇಬ್ಬರೇ ಎಂಬ ಸಂಶೋಧನಾಲೇಖನ)
೬.
ಕರ್ತೃ ಯಾರೆಂದು ತಿಳಿಯದಿದ್ದ ಕೃತಿಯೊಂದರ ಶೋಧ ಮತ್ತು ಕರ್ತೃಗಳ ಹೆಸರು ಗುರುತಿಸಿರುವುದು.
೭.
ಎಷ್ಟೋ ಅನಾಮಧೇಯ ಕವಿಗಳು ಹಾಗೂ ಅವರ ಕೃತಿಗಳು ಬೆಳಕಿಗೆ ಬಂದವು.
೯. ಈಗಾಗಲೇ ಪ್ರಕಟವಾಗಿದ್ದ ವಚನಗಳ ಶುದ್ಧಪಾಠವನ್ನು ನಿರ್ಣಯಿಸುವುದರ
ಜೊತೆಗೆ ಅವರ ಅಪ್ರಕಟಿತ ವಚನಗಳನ್ನು ಶೋಧಿಸಿ ಪ್ರಕಟಿಸಿದ್ದು, (ಅಂಬಿಗರ ಚೌಡಯ್ಯ, ಸಿದ್ಧರಾಮರ
ವಚನಗಳ ಶಾಸ್ತ್ರೀಯ ಸಂಪಾದನೆ)
೮.
ಕವಿಚರಿತೆಯಲ್ಲಿ ಉಲ್ಲೇಖವಾಗದೆ ಇರುವ ಅಸಂಖ್ಯಾತ ಕವಿಗಳ ಕೃತಿಗಳು ಇವರ ಸಂಶೋಧನೆಯ ಮೂಲಕ
ಬೆಳಕು ಕಂಡವು. ಮುಖ್ಯವಾಗಿ ಕವಿಚರಿತೆಯ ಮೂರು ಸಂಪುಟಗಳಿಗೆ ಹಲವೆಡೆ ಸೂಕ್ತ ತಿದ್ದುಪಡಿ
ಮಾಡಬೇಕೆನ್ನುವ ಅಂಶ ಇವರ ಸಂಶೋಧನಾ ಬರೆಹಗಳ ಮೂಲಕ ವ್ಯಕ್ತವಾಗಿದೆ.
ಎಸ್. ವಿದ್ಯಾಶಂಕರ ಸಾಹಿತ್ಯ ಕೃಷಿ
ಗ್ರಂಥಸಂಪಾದನೆ, ವೀರಶೈವ ಸಾಹಿತ್ಯ ಹಾಗೂ ಅಲಕ್ಷಿತ ಅಪ್ರಕಟಿತ ಆಕರ ಸಾಹಿತ್ಯ ಇತ್ಯಾದಿ ವೈವಿಧ್ಯ ಕ್ಷೇತ್ರವನ್ನು
ಪ್ರತಿನಿಧಿಸಿವೆ. ಈ ಕ್ಷೇತ್ರಗಳಲ್ಲಿ ಅವರು ವ್ಯಕ್ತಪಡಿಸಿದ
ನೂತನ ನಿಲುವುಗಳು, ಹೊಚ್ಚ ಹೊಸ ನೋಟಗಳು ಕನ್ನಡ ಸಾಹಿತ್ಯ ಸಂಸ್ಕತಿಗೆ
ನೀಡಿದ ಮಹತ್ತರ ಕೊಡುಗೆಗಳು. “ಸಂಶೋಧನೆಗಾಗಿ
ಸಂಶೋಧನೆಯಾಗಿರಬಾರದು ಸಾಮಾಜಿಕ ಪರಿವರ್ತನೆಗಾಗಿ ಸಂಶೋಧನೆ” ಎಂಬ
ನಿಲುವಿನಿಂದ ಈ ಕ್ಷೇತ್ರವನ್ನು ಸತ್ವಶಾಲಿಯಾಗುವಂತೆ ನೋಡಿಕೊಂಡಿದ್ದವರು. ಇವರ ವಿಮರ್ಶಾ ಬರೆಹಗಳಲ್ಲಿಯೂ ಬಹುಶಿಸ್ತೀಯತೆಯನ್ನು ಗುರುತಿಸ ಬಹುದಾಗಿದೆ. ಗತಕಾಲದಲ್ಲಿ ಘಟಿಸಿದುದರ ಶೋಧ ಸಂಶೋಧನೆ, ಅದರ
ಗುಣಾವಗುಣಗಳ ಶೋಧ ವಿಮರ್ಶೆ ಎನ್ನುವ ನಿಲುವು ಹೊಂದಿದ್ದರು. ಎಂ.ಎಂ.ಕಲಬುರ್ಗಿಯವರು ತಮ್ಮ ಕನ್ನಡ ಸಂಶೋಧನಾ
ಶಾಸ್ತ್ರ ಪುಸ್ತಕದಲ್ಲಿ ` ಘಟನೆ ಹಿಡಿದು ಹೊರಟಿದ್ದು ಸಂಶೋಧನೆ, ಗುಣವನ್ನು
ಹಿಡಿದು ಹೊರಟಿದ್ದು ವಿಮರ್ಶೆ. ಒಂದು ರೂಪ ನಿಷ್ಠ, ಇನ್ನೊಂದು ಗುಣ ನಿಷ್ಠ. ಒಂದು
ವಿಶ್ಲೇಷಣಾ ಮುಖಿ, ಇನ್ನೊಂದು ವ್ಯಾಖ್ಯಾನ ಮುಖಿ ಎಂದು ಕನ್ನಡ
ಸಂಶೋಧನಾ ಮತ್ತು ವಿಮರ್ಶಾ ಅಧ್ಯಯನಗಳ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಿ ಹೇಳಿರುವ ವಿವರಗಳು ಸ್ವಲ್ಪಮಟ್ಟಿಗೆ ಎಸ್. ವಿದ್ಯಾಶಂಕರ ಅವರ
ಸಂಶೋಧನಾ ಬರೆಹಗಳಿಗೂ ಅನ್ವಯವಾಗುತ್ತದೆ.
ಇವರ
ವಚನಾನುಶೀಲನ ಸಂಶೋಧನಾ ಕೃತಿಯಲ್ಲಿಯ
ಬಸವಪೂರ್ವಯುಗದ ವೀರಶೈವದ ಅಧ್ಯಯನಕ್ಕೊಂದು ಆಕರ ಎಂಬ ವಿದ್ವತ್ಪೂರ್ಣ ಲೇಖನದಲ್ಲಿ,
ಕೊಂಡಗುಳಿ ಕೇಶಿರಾಜನ ರಚಿಸಿರುವ ೬ ಲಘುಕೃತಿಗಳ ಅಧ್ಯಯನ ಮಾಡಿ ಅವುಗಳು ಒದಗಿಸುವ ಸಂಗತಿಗಳ ಹಿನ್ನೆಲೆಯಲ್ಲಿ ಬಸವಪೂರ್ವಯುಗದ ವೀರಶೈವ ಧರ್ಮದ ಸ್ವರೂಪವನ್ನು
ಗುರುತಿಸಲು ಪ್ರಯತ್ನಿಸಿದ್ದಾರೆ. ಕೊಂಡಗುಳಿ ಕೇಶಿರಾಜನನ್ನು ಕುರಿತ ಇವರ
ಸಂಶೋಧನಾ ಬರಹಕ್ಕೆ
ವ್ಯಾಪಕವಾದ
ನೆಲೆಯಿದೆ.
ಈ ಸಂಶೋಧನೆಯ ಹಿಂದೆ ವಿಷಯವನ್ನು ಕುರಿತಾದ ಇವರ ಆಳವಾದ ಅಧ್ಯಯನ, ಇಲ್ಲಿಯವರೆಗೂ ನಡೆದಿರುವ ಅಧ್ಯಯನಗಳ ವ್ಯುತ್ಪತ್ತಿಜ್ಞಾನ, ನಿಷ್ಠೆ ಹಾಗೂ ಚಿಂತನೆ ಮತ್ತು ಅದಕ್ಕೆ ಪೂರಕವಾಗುವ ಕ್ಷೇತ್ರಕಾರ್ಯ ಸಮೀಕ್ಷೆ ಎದ್ದು ಕಾಣುತ್ತದೆ. ವೀರಶೈವಧರ್ಮದ
ಅನೇಕ ವಿವರಗಳನ್ನು ತಿಳಿಸುವ ಆರಂಭದ ಕೃತಿಗಳಲ್ಲಿ ಕೇಶಿರಾಜನ ಲಘು ಕೃತಿಗಳಿಗೆ ಮಹತ್ತರವಾದ
ಸ್ಥಾನವಿದೆ. ಕೊಂಡಗುಳಿ ಕೇಶಿರಾಜನು ಬಸವ ಪೂರ್ವಯುಗದ ಶರಣನಾಗಿದ್ದು, ಅವನ ಕೃತಿಗಳ
ಮೂಲಕ ಅವನ ಕಾಲದ ವೀರಶೈವ ಧರ್ಮದ ಸ್ಥಿತಿಗತಿಗಳನ್ನು ತಿಳಿಯಬಹುದಾಗಿದೆ. ಪ್ರಧಾನವಾಗಿ ಕೇಶಿರಾಜನು
ಭಕ್ತ ಕವಿ. ಧಾರ್ಮಿಕ ವಲಯದಲ್ಲೇ ಸದಾ ವಿಹರಿಸುವ ಅವನ ಮನಸ್ಸು ತನ್ನ ಧರ್ಮದ ಪ್ರಚಲಿತ ತತ್ತ್ವಗಳ
ಬಗೆಗೆ ವಿಚಾರ ಮಾಡಿದೆ. ಶೈವ ಧರ್ಮದಿಂದ ಭಿನ್ನವಾಗಿ ನಿಂತು ತನ್ನ ತಾತ್ವ್ತಿಕ ನಿಲವುಗಳನ್ನು
ಭದ್ರ ನೆಲೆಯಲ್ಲಿ ರೂಪಿಸ ಹೊರಟಿದ್ದ, ಸಾಮಾಜಿಕ ಪರಿಸರದಲ್ಲಿ ತನ್ನ ಆಚಾರ
ಸಂಹಿತೆಯನ್ನು ಒಂದು ಸ್ಪಷ್ಟ ಆಕಾರಕ್ಕೆ ಹೊಂದಿಸುತ್ತಿದ್ದ ವೀರಶೈವ ಧರ್ಮವನ್ನು ವ್ಯಾಪಕವಾಗಿ
ಹರಡಲು, ಜನ
ಸಾಮಾನ್ಯರ ಬಳಿಗೆ ಅದನ್ನು ಕೊಂಡೊಯ್ಯಲು ತನ್ನ ಕೃತಿಗಳನ್ನು ಕೇಶಿರಾಜ ಮಾಧ್ಯಮವನ್ನಾಗಿ
ಬಳಸಿದ್ದಾನೆಂದೆನಿಸುತ್ತದೆ ಎನ್ನುವ ಮಾತುಗಳು
ಸ್ವೀಕಾರಾರ್ಹವಾಗಿವೆ. ಬಸವ ಪೂರ್ವಯುಗದ
ವೀರಶೈವಧರ್ಮದ ಇತಿಹಾಸವನ್ನು, ಸ್ಥಿತಿಗತಿಯನ್ನು ತಿಳಿಯುವಲ್ಲಿ ಸಂಸ್ಕೃತ
ಭಾಷೆಯಲ್ಲಿಯ ಸಿದ್ಧಾಂತ ಕೃತಿಗಳ ಜೊತೆಗೆ ಕನ್ನಡದಲ್ಲಿಯ ಕೃತಿಗಳು ಸಹಾಯಕವಾಗಿವೆ. ಕೊಂಡಗುಳಿ ಕೇಶಿರಾಜ ಬಸವ ಪೂರ್ವಯುಗದ ಶರಣನಾಗಿದ್ದು
ಈತನನ್ನು ಕುರಿತು ಹರಿಹರ ರಚಿಸಿರುವ ‘ಕೇಶಿರಾಜ ದಣ್ಣಾಯಕರ ರಗಳೆಯಲ್ಲಿ’ ಅಂದರೆ ಕೇಶಿರಾಜ
ವೈಯಕ್ತಿಕ ಚರಿತ್ರೆಯ ಮೂಲಕ ಹಾಗೂ ಸ್ವತಃ ಕೇಶಿರಾಜನೇ ರಚಿಸಿರುವ ಮಂತ್ರ ಮಹತ್ವದ ಕಂದ, ಲಿಂಗಸ್ತೋತ್ರದ
ಕಂದ ಭಾಗ 1
ಮತ್ತು 2,
ಶೀಲಮಹತ್ವದ ಕಂದ ಕೃತಿಗಳಲ್ಲಿ ಬಸವಪೂರ್ವಯುಗದ ಅವನ ಕಾಲದ ವೀರಶೈವಧರ್ಮದ ಸ್ಥಿತಿಗತಿಯನ್ನು
ಅರಿಯಲು ಅಗತ್ಯವಾದ ವಿಷಯ ಸಾಮಗ್ರಿಯು ವ್ಯಕ್ತಗೊಂಡಿದೆ.
ಇತ್ತೀಚಿಗೆ ಲಭ್ಯವಾದ ಮಂತ್ರಮಹತ್ವದಕಂದ ಲಘು ಕೃತಿಯು 110 ಕಂದಪದ್ಯ ಗಳನ್ನೊಳಗೊಂಡಿದ್ದು
ಷಡಕ್ಷರ ಮಂತ್ರದ ಮಹಿಮೆಯನ್ನು ಭಕ್ತರಿಗೆ ತಿಳಿಸುವ ಬಯಕೆಯಲ್ಲಿದೆ. ಗಮನಿಸತಕ್ಕ ಸಂಗತಿ ಎಂದರೆ ಈ ಕಂದಪದ್ಯಗಳನ್ನು
ಓದುತ್ತಿರುವಾಗ ನಂತರಕಾಲದ ವಚನಕಾರರಿಗೆ ಅದರಲ್ಲೂ ಬಸವಯುಗದ ಶಿವಶರಣರಿಗೆ ವಚನ ರಚನೆಗೆ ಪ್ರೇರಣೆ ನೀಡಿರಬಹುದೇ
ಎಂದೆನಿಸುತ್ತದೆ. ಈ ಕಂದಪದ್ಯಗಳಲ್ಲಿಯ ಓಂ ನಮಃ ಶಿವಾಯ ಎಂಬುದು ಮುಂದೆ ಅಂಕಿತದಿಂದ ಕೂಡಿದ ವಚನ ಶಿಲ್ಪಕ್ಕೆ
ಪ್ರಚೋದನೆ ನೀಡಿರಬಹುದೆ ಎಂದೆನಿಸುತ್ತದೆ. ಕೊಂಡಗುಳಿ ಕೇಶಿರಾಜನ ಈ ಕೃತಿಯ ಪದ್ಯಗಳನ್ನು ಬಸವಾದಿ ಪ್ರಮಥರ
ವಚನಗಳೊಂದಿಗೆ ಹೋಲಿಸಬಹುದಾಗಿದೆ. ನಿದರ್ಶನಕ್ಕೆ:
ಕೇಶಿರಾಜರ ಕಂದಪದ್ಯ
ಕರಿಯಂಕುಶಕಂಜುಗುವದು
ಗಿರಿಯಂಜಗು ಕುಲಿಶಕಂ
ತಮಂಧ ಪರಿಗುಂ
ಖರಕರ ಕಿರಣಕ್ಕಾಗಂ
ಪರಯವೆ ಪಾಪೋಂ
ನಮಶ್ಯಿವಾಯೆಂಬ ಪದಂ (ಮಂತ್ರಮಹತ್ವದ ಕಂದ.ವ.ಸಂ.94)
ಈ ಪದ್ಯದ ಜೊತೆ ಬಸವಣ್ಣನವರ
ಕೆಳಕಂಡ ವಚನವನ್ನು ಹೋಲಿಸಿ,
ಕರಿಯಂಜುವುದು
ಅಂಕುಶಕ್ಕಯ್ಯಾ
ಗಿರಿಯಂಜುವುದು
ಕುಲಿಶಕ್ಕಯ್ಯಾ
ತಮಂಧವಂಜುವುದು
ಜ್ಯೋತಿಗಯ್ಯಾ
ಪಂಚಮಹಾ ಪಾತಕವಂಜುವುದು
ಕೂಡಲಸಂಗನ ನಾಮಕ್ಕಯ್ಯ ( ಸಮಗ್ರ ವಚನ ಸಂಪುಟ 1. ವ.ಸಂ.75)
ಕೇಶಿರಾಜರ ಕಂದಪದ್ಯ:
ಮೊಗದ ತೆರೆ
ನೆಗೆದ ಸೆರೆಗಳು
ಬಿಗಿದು ಶಿರಂ
ನಡುಗಿ ನಡವದಿಡುಗದೆ ನಗೆಯದು
ಡುಗದೆವ್ವನಮದು
ಜಗುಳದೆ
ಮಿಗೆ ನೆನವಡಿದೋಂ
ನಮಶ್ಯಿವಾಯೆಂಬ ಪದಂ (ಮಂತ್ರಮಹತ್ವದ ಕಂದ.ವ.ಸಂ.66)
ಈ ಪದ್ಯದ ಜೊತೆ ಬಸವಣ್ಣನವರ ಕೆಳಕಂಡ ವಚನವನ್ನು ಹೋಲಿಸಿ,
ನರೆ ಕೆನ್ನೆಗೆ,ತೆರೆಗಲ್ಲಕೆ,ಶರೀರ
ಗೂಡುಹೋಗದ ಮುನ್ನ
ಹಲ್ಲು ಹೋಗಿ
ಬೆನ್ನು ಬಾಗಿ,ಅನ್ಯರಿಗೆ ಹಂಗಾಗದ ಮುನ್ನ
ಕಾಲಮೇಲೆ
ಕೈಯನೂರಿ ಕೋಲಹಿಡಿಯದ ಮುನ್ನ
ಮುಪ್ಪಿದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ
ಪೂಜಿಸು
ಕೂಡಲ ಸಂಗಮ ದೇವನ (ಸಮಗ್ರ ವಚನ ಸಂಪುಟ 1. ವ.ಸಂ.161)
ಕೇಶಿರಾಜರ ಕಂದಪದ್ಯ,
ನೆರೆದಿರ್ದಮುಗಿಲ ಮಂಜಿನ
ತೆರಳಿಕೆ ಕುಡಿಮಿಂಚು
ಗಾಳಿಗೊಡ್ಡಿದ ಸೊಡರೀ
ಸರಿರವಿದ ನೆಚ್ಚಿ ಕೆಡೆದಿರು
ಹರಜಪಮೆಮಗೋಂ ನಮಃಶಿವಾಯೆಂಬ
ಪದವು ( ಮಂತ್ರಮಹತ್ವದ ಕಂದ,ಪದ್ಯ 76)
ಈ ಪದ್ಯದ ಜೊತೆ ಬಸವಣ್ಣನ
ಈ ಕೆಳಕಂಡ ವಚನವನ್ನು ಹೋಲಿಸಿ,
ಸಂಸಾರವೆಂಬುದೊಂದು ಗಾಳಿಯ
ಸೊಡರು
ಸಿರಿಯೆಂಬುದೊಂದು ಸಂತೆಯಮಂದಿ
ಕಂಡಯ್ಯ
ಇದನೆಚ್ಚಿಕೆಡಬೇಡ ಸಿರಿಯೆಂಬುದ
ಮಱೆಯದೆ ಪೂಜಿಸು ನಮ್ಮ
ಕೂಡಲಸಂಗಮದೇವನ (ಸಮಗ್ರ ವಚನ ಸಂಪುಟ 1. ವ.ಸಂ.161)
ಕೇಶಿರಾಜನ ಪದ್ಯಗಳ ಭಾವ
ವಿಸ್ತರಣೆಯನ್ನು ಬಸವಣ್ಣನವರ ವಚನಗಳಲ್ಲಿ ಕಾಣಬಹುದು. ಹನ್ನೆರಡನೆ ಶತಮಾನದ ವಚನ ಸಾಹಿತ್ಯಕ್ಕೆ ಕೊಂಡುಗುಳಿ
ಕೇಶಿರಾಜನ ಪ್ರಭಾವ ಇರುವುದು ಇತ್ತೀಚಿಗೆ ಲಭ್ಯವಾದ ಮಂತ್ರ ಮಹತ್ವದ ಕಂದ ಕೃತಿಯಿಂದ ತಿಳಿದು ಬರುತ್ತದೆ.
ಕೊಂಡುಗುಳಿ
ಕೇಶಿರಾಜ ಹಾಗೂ ಬಸವಣ್ಣನವರಲ್ಲಿ ಹಲವು ವಿಷಯಗಳಲ್ಲಿ ಸಾಮ್ಯ ಇರುವುದನ್ನು ಗುರುತಿಸ ಬಹುದು.
ಇಬ್ಬರೂ ತರ್ದವಾಡಿ ನಾಡಿನವರು
ಕೇಶಿರಾಜನು ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ದಂಡನಾಯಕನಾಗಿದ್ದರೆ, ಬಸವಣ್ಣನವರು
ಕಲಚೂರಿ ದೊರೆ ಬಿಜ್ಜಳನಲ್ಲಿ ಮಂತ್ರಿಯಾಗಿದ್ದವರು.
ಇವರೀರ್ವರೂ ಅಧಿಕಾರದಲ್ಲಿದ್ದುಕೊಂಡೇ ರಾಜತ್ವವನ್ನು ವಿರೋಧಿಸಿದವರು.
ವೀರಶೈವ ಮತಪ್ರಸಾರ ಕಾರ್ಯದಲ್ಲಿ ತಮ್ಮ ಕಾಲಕ್ಕನುಗುಣವಾಗಿ ತೀವ್ರ ಚಟುವಟಿಕೆಗಳಲ್ಲಿ
ತೊಡಗಿಕೊಂಡವರು.
ಕುತೂಹಲಕರ ಸಂಗತಿ ಎಂದರೆ ಕೊಂಡಗುಳಿ ಕೇಶಿರಾಜರ ಮಂತ್ರಮಹತ್ವದ ಕಂದದಂತಹ
ಕೃತಿಯ ಪ್ರಭಾವಕ್ಕೊಳಗಾಗಿರುವ ಬಸವಣ್ಣನವರು ಅಪ್ಪಿತಪ್ಪಿಯೂ ತಮ್ಮ ವಚನಗಳಲ್ಲಿ ಕೊಂಡಗುಳಿ ಕೇಶಿರಾಜರನ್ನು
ಸ್ಮರಿಸದೇ ಇರುವುದು ಆಶ್ಚರ್ಯಕರವಾಗಿದೆಹಾಗೂಯೋಚಿಸತಕ್ಕದ್ದು ಆಗಿದೆ.
ಕೊಂಡಗುಳಿ ಕೇಶಿರಾಜ
ಬಸವ ಪೂರ್ವ ಯುಗದ ವೀರಶೈವ ಧರ್ಮವನ್ನು ತನ್ನ ಕೃತಿಗಳ ಮೂಲಕ ಪ್ರತಿನಿಧಿಸಿದಂತಿದೆ. ತನ್ನ ಮುಂದಣ ವಚನಕಾರರ-ಕವಿಗಳ
ಮೇಲೆ ತನ್ನ ಪ್ರಭಾವ ಮುದ್ರೆಯನ್ನು ಸ್ಪಷ್ಟವಾಗಿ ಒತ್ತಿರುವನು. ಬಸವಾದಿ ಶರಣರು ನಡೆಸಿದ ಸಾಮಾಜಿಕ
ಹಾಗೂ ಧಾರ್ಮಿಕ ಕ್ರಾಂತಿಯ ಪೂರ್ವ ಚಿಹ್ನೆಯನ್ನು ಕೊಂಡಗುಳಿ ಕೇಶಿರಾಜನ ಕೃತಿಗಳಲ್ಲಿ ಸ್ಪಷ್ಟವಾಗಿ
ನಾವು ಕಾಣುತ್ತೇವೆ. ಇವರ ಈ ವಿಚಾರಗಳೇ ಮುಂದಿನ ಶರಣರ ಪೀಳಿಗೆಯಲ್ಲಿ ವ್ಯಾಪಕವಾಗಿ ಹೊರಹೊಮ್ಮಿರುವುದು
ಕಂಡು ಬರುತ್ತದೆ. ಬಸವಪೂರ್ವಯುಗದ ಅಧ್ಯಯನದ ಅವಶ್ಯಕತೆಗೆ ಇವರ ಈ ಲೇಖನವು ತುಂಬ ಸಹಕಾರಿಯಾಗಿದೆ.
ವಚನಗಳು ಬಹುಮಟ್ಟಿಗೆ
ತಮ್ಮ ಶಬ್ದ-ಅರ್ಥಗಳಿಂದಲೇ ತಮ್ಮ ಅಂತರಂಗವನ್ನು ಬಿಟ್ಟು ಕೊಡುವುದಿಲ್ಲ. ಅವುಗಳಿಗೆ ಹಿನ್ನೆಲೆಯಾಗಿರುವ ತಾತ್ವಿಕ ಭೂಮಿಕೆಗೆ ಪೂರಕವಾಗಿರುವ ಪರಿಭಾಷೆಗಳನ್ನು
ಅರ್ಥ ಮಾಡಿಕೊಳ್ಳುವುದರ ಮೂಲಕ ವಚನಗಳನ್ನು ಅರ್ಥೈಸಬೇಕಾಗುತ್ತದೆ. ಹೀಗಾಗಿ
ಕೆಲವೊಮ್ಮೆ ವಚನಗಳಿಗೆ ವ್ಯಾಖ್ಯಾನದ ಅಗತ್ಯತೆಯು ಜನಸಾಮಾನ್ಯರ ದೃಷ್ಟಿಯಿಂದ ಅನಿವಾರ್ಯವಾಗಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಸ್.ವಿದ್ಯಾಶಂಕರ
ಅವರು ಬಸವಣ್ಣನವರ ವಚನಗಳಿಗೆ ಎನ್ನ ನಾ
ಹಾಡಿಕೊಂಡೆ ಎಂಬಂತೆ ವಚನಗಳಿಗೆ ನಿರ್ವಚಿಸಿದ್ದಾರೆ. ವಚನಗಳನ್ನು
ಅವು ಹುಟ್ಟಿದ ಸಂದರ್ಭ, ಉದ್ದೇಶಗಳ ಹಿನ್ನೆಲೆಯಲ್ಲಿ ನಿರ್ವಚಿಸಿದ್ದಾರೆ. ಬಸವಣ್ಣನವರ ವಚನಗಳ ಸ್ಪಷ್ಟೀಕರಣಕ್ಕಾಗಿ ಹಲವು ಪೌರಾಣಿಕ, ಐತಿಹಾಸಿಕ, ಆಧ್ಯಾತ್ಮಿಕ
ದೃಷ್ಟಾಂತಗಳನ್ನು ಕೊಡುವುದರ ಮೂಲಕ ಸಹೃದಯರಿಗೆ ಚೇತೋಹಾರಿಯಾಗಿದ್ದಾರೆ. ಅವರೇ ಹೇಳಿರುವಂತೆ ʻ ನಾನು ಬಸವಣ್ಣನವರ ೯೫೭ ವಚನಗಳನ್ನು ನನ್ನದೇ ಆದ ರೀತಿಯಲ್ಲಿ ಅರ್ಥೈಸುವ ಪ್ರಯತ್ನ ಮಾಡಿರುವೆನು. ಇದೊಂದು ವಿಶ್ಲೇಷಣಾತ್ಮಕ
ಹಾಗೂ ವಿಮರ್ಶಾತ್ಮಕ ಅಧ್ಯಯನ. ೧೨ ನೇ ಶತಮಾನದ ಸಮಾಜೋಧಾರ್ಮಿಕ ತಿಳಿವಳಿಕೆಯ ಹಿನ್ನೆಲೆಯಲ್ಲಿ ಬಸವಣ್ಣನನವರ ವಚನಗಳು ಆ ಕಾಲಮಾನ
ಹಾಗೂ ಅವರ ಸ್ಫಟಿಕ ಸದೃಶ ವ್ಯಕ್ತಿತ್ವವನ್ನು ಗ್ರಹಿಸಲು ಬೆಳಕಿನ ಕೊಂಡಿಗಳುʼ ಎಂಬ ಹೇಳಿಕೆಯಲ್ಲಿ ವಚನಗಳ ನಿರ್ವಚನದ ನೆಲೆಗಟ್ಟು
ಏನು ಎಂಬುದು ವ್ಯಕ್ತವಾಗಿದೆ. ವಚನಗಳನ್ನು
ವ್ಯಾಖ್ಯಾನ ಮುಖಿಯ ಜೊತೆಗೆ ವಿಶ್ಲೇಷಣ ಮುಖಿಯೂ ಆಗಿಸಿದ್ದಾರೆ. ವಚನಕಾರರ
ವ್ಯಕ್ತಿತ್ವ ರೂಪುಗೊಂಡ ಸಂದರ್ಭ-ಸನ್ನಿವೇಶಗಳನ್ನು
ಗಮನಕ್ಕೆ ತೆಗೆದುಕೊಂಡು ನಿರ್ವಚಿಸಿದ್ದಾರೆ. ವಚನಗಳನ್ನು ವ್ಯಾಖ್ಯಾನಿಸುವಾಗ
ವಚನಗಳಲ್ಲಿಯ ತಾತ್ವಿಕ ಅಂಶಗಳ ಜೊತೆಗೆ ಧಾರ್ಮಿಕ, ಸಾಮಾಜಿಕ
ಸಾಂಸ್ಕೃತಿಕ ಅಂಶಗಳ ಜೊತೆಗೂ ಒತ್ತು ಕೊಟ್ಟಿದ್ದಾರೆ. ಬಸವಣ್ಣನವರ
ಭಾವನೆಗಳಿಗೆ, ವಿಚಾರಗಳಿಗೆ ಒಂದು ವ್ಯವಸ್ಥಿತ ರೂಪವನ್ನು
ಇಲ್ಲಿ ಕೊಡಮಾಡಿದ್ದಾರೆ. ಇವರ ವಚನಗಳ ತಾತ್ವಿಕ ಆಲೋಚನೆಗಳನ್ನು ಗ್ರಹಿಸುವಲ್ಲಿ
ಉಂಟಾದ ಎಡರು-ತೊಡರುಗಳನ್ನು ನಿವಾರಿಸಿ ಕೊಳ್ಳಲು ಇಲ್ಲಿಯವರೆಗೂ ನಡೆದಿರುವ
ಅಧ್ಯಯನಗಳ ನೆರವನ್ನು ಪಡೆಕೊಂಡಿದ್ದಾರೆ. ಅವರ ವಚನಗಳನ್ನು
ನಿರ್ವಚಿಸುವ ಸಂದರ್ಭದಲ್ಲಿ ವಚನಕಾರರ ಕವಿಹೃದಯದ ಅನುಭವಗಳಲ್ಲಿ ಗುಪ್ತವಾಗಿ ಅಡಗಿರುವ ಅರ್ಥ ಮತ್ತು
ಧ್ವನಿ ವಿಶೇಷಗಳನ್ನು, ಗಾದೆ, ನುಡಿಗಟ್ಟು
ಇತ್ಯಾದಿಗಳನ್ನು ಪ್ರಸ್ತಾಪಿಸುವುದರ ಮೂಲಕ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಅಂಶಗಳತ್ತ
ಒತ್ತು ಕೊಟ್ಟಿದ್ದಾರೆ. ವಚನಗಳು ಮೇಲ್ನೋಟಕ್ಕೆ ಸರಳವಾಗಿದ್ದರೂ ಅವುಗಳಲ್ಲಿ
ಅಂತರಾರ್ಥಗಳು ಹುದುಗಿರುವುದನ್ನು ಗಮನಿಸಿ ಅವುಗಳಿಗೆ ಒಳಾರ್ಥವನ್ನು ಕೆಲವೆಡೆ ನೀಡಿದ್ದಾರೆ. ವಚನಗಳ ಅಂತರಂಗದ ಪದರುಗಳನ್ನು ಸರಿಯಾಗಿ ಬಿಡಿಸಿರುವುದಲ್ಲದೆ ಅಲ್ಲಿನ
ಯಾವುದೇ ಸಂಧಿಗ್ಧ, ಶಬ್ದ – ಅರ್ಥ
ವಿಷಯಗಳಿಗೂ ಸರಿಯಾದ ವಿವರಣೆಯನ್ನು ಒದಗಿಸುವುದರ ಮೂಲಕ ಓದುಗರ ಮುಂದೆ ಇರಿಸಿದ್ದಾರೆ.
ವೀರಶೈವ ಸಾಹಿತ್ಯ – ಸಂಸ್ಕೃತಿಯ ಬಗೆಗಿನ ಇವರ ಸೂಕ್ಷ್ಮಸ್ತರವಾದ ಅಧ್ಯಯನದಿಂದಾಗಿ ಮಧ್ಯಕಾಲೀನ
ಕನ್ನಡ ಸಾಹಿತ್ಯವು ಅನೇಕ ಹೊಸ ನೋಟಗಳು ಮತ್ತು ಮಾರ್ಪಾಟುಗಳಿಗೆ ಕಾರಣವಾಗಿದೆ. ವೀರಶೈವ ಸಾಹಿತ್ಯ-ಸಂಸ್ಕೃತಿಗೆ
ಸಂಬಂಧಿಸಿದ ಇವರ ಸಾಹಿತ್ಯ ಕೃಷಿಯಲ್ಲಿ ಇಲ್ಲಿಯವರೆಗೂ ಸಂಶೋಧನೆ ಮತ್ತು ಅಧ್ಯಯನದ ಮೂಲಕ ಬೆಳಕಿಗೆ ಬಂದ
ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಅವುಗಳ ಸತ್ಯಾಸತ್ಯತೆಯನ್ನು ಓರೆಗೆ ಹಚ್ಚಿ ಸಂಶೋಧನಾತ್ಮಕವಾಗಿ
ಮತ್ತು ವಿಮರ್ಶಾತ್ಮಕವಾಗಿ ನೀಡಿದ್ದಾರೆ
ಅದರಲ್ಲಿ ನಂಬಿಯಣ್ಣನ ಕುರಿತ ಅಧ್ಯಯನದಲ್ಲಿ ವಿವರಗಳು
ವಿಸ್ತೃತವಾಗಿ ದಾಖಲಾಗಿವೆ. ಇವರ ಸಂಶೋಧನೆಯಲ್ಲಿ ಯಾವುದೇ ರೀತಿಯ ಪೂರ್ವಾಗ್ರಹಕ್ಕೆ
ಒಳಗಾಗದೆ ಸಮಾನ ಮನಸ್ಥಿತಿ ಹಾಗೂ ವಸ್ತುನಿಷ್ಠತೆಯ ಬದ್ಧತೆಯನ್ನು ಕಾಣಬಹುದಾಗಿದೆ. ಹರಿಹರ ಕೆರೆಯ ಪದ್ಮರಸ, ಪಾಲ್ಕುರಿಕೆ ಸೋಮನಾಥ, ಭೀಮಕವಿಯ ಕಾವ್ಯಗಳ ಬಗೆಗೆ ವಿಸ್ತೃತವಾದದ ಅಧ್ಯಯನವನ್ನು
ಇವರ ಬರೆಹಗಳಲ್ಲಿ ಕಾಣಬಹುದಾಗಿದೆ. ಇವರು ತಮ್ಮ ವಚನಾನುಶೀಲನ, ನೆಲದ ಮರೆಯ ನಿಧಾನ, ವೀರಶೈವ ಪುರಾಣಗಳು
ಮತ್ತು ನಂಬಿಯಣ್ಣ ಒಂದು ಅಧ್ಯಯನ ಕೃತಿಗಳಲ್ಲಿ ಈ ಕವಿಗಳ
ಬಗೆಗೆ ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿದ್ದರು.
ಕನ್ನಡ ಸಾಹಿತ್ಯದ ಮಹಾನ್ ಕವಿಗಳಲ್ಲಿ
ಒಬ್ಬನಾದ ಹರಿಹರನನ್ನು ಕಂಡರೆ ಇವರಿಗೆ ಅತೀವವಾದ ಪ್ರೀತಿ. ಏಕೆಂದರೆ ವಚನ ಸಾಹಿತ್ಯದಿಂದ ಪ್ರೇರಣೆ ಪಡೆದೂ
ತನ್ನದೇ ಹಾದಿಯನ್ನು ಕಂಡುಕೊಂಡು ಈ ಯುಗಮಾನದ ಕಣ್ಣು ತೆರೆಯಿಸಿದ ಕವಿ ಹರಿಹರ. ವಚನ ಸಾಹಿತ್ಯ ಪರಂಪರೆಯ ಮಹಾನ್ ಪ್ರತಿಭಾ ಪ್ರವಾಹವನ್ನು ತನ್ನಲ್ಲಿ ಮೈಗೂಡಿಸಿ
ಕೊಂಡು ಸಾಹಿತ್ಯದ ದಿಕ್ಕನ್ನು ಬದಲಿಸಿದವನು. ಹರಿಹರನ ಗಿರಿಜಾಕಲ್ಯಾಣ
ಮತ್ತು ನೂತನ-ಪುರಾತನ ರಗಳೆಗಳು ವಸ್ತುಕ ಮತ್ತು ವರ್ಣಕದ ಪ್ರಕಾರಗಳ ಪ್ರತಿನಿಧಿಗಳಾದರೂ
ಕನ್ನಡಕ್ಕೆ ಒಂದು
ತೆರನಾದ ಹೊಸ ವಸ್ತು ಪ್ರಪಂಚವನ್ನು ನೀಡುವುದರ ಮೂಲಕ ನೂತನ ಕಥನ ಪರಂಪರೆಯನ್ನು ಹುಟ್ಟು ಹಾಕಿದವನು. ವಸ್ತು, ನಿರೂಪಣಾ ವಿಧಾನ, ಛಂದೋ ಬಳಕೆಯಲ್ಲಿ ಹರಿಹರ ಯಾವ ರೀತ
ನೂತನ ಮಾರ್ಗ ಪ್ರವರ್ತಕನಾದನು ಎಂಬುದನ್ನು ಹರಿಹರನನ್ನು ವಿಸ್ತೃತವಾಗಿ ಅಧ್ಯಯನ ಮಾಡುವುದರ ಮೂಲಕ ಗುರುತಿಸಿದ್ದಾರೆ. ಅವನು ಪರಂಪರೆಯ ನಿರ್ಮಾಣಕಾರನೂ ಹೌದು. ತನ್ನ
ಮುಂದಿನವರಿಗೆ ಪ್ರೇರಕನೂ ಹೌದು. ಹಿಂದೆಯೇ ಹೇಳಿದಂತೆ
ಅವನು ಕನ್ನಡದ ಶ್ರೇಷ್ಠ ಕಥನಕಾರ. ಶರಣ ಕಥಾಪರಂಪರೆಯ
ರೂವಾರಿ. ವಸ್ತುಕ ವರ್ಣಕ ಕಾವ್ಯಪರಂಪರೆಯಲ್ಲಿ ವಿಶಿಷ್ಟ
ದಾಖಲೆ ನಿರ್ಮಿಸಿದವನೂ ಅವನೇ. ಹರಿಹರನ ಬಗೆಗೆ ಬೇರೆ ವಿದ್ವಾಂಸರು, ಸಾಹಿತ್ಯ ಚರಿತ್ರೆಕಾರರು ಸಂಕ್ಷಿಪ್ತವಾಗಿ ಹಾಗೂ ಕೆಲವೆಡೆ ವಿಸ್ತೃತವಾಗಿ ಅಧ್ಯಯನ ಮಾಡಿದ್ದರೂ
ಹರಿಹರನ ಬಗೆಗೆ ಇತ್ತೀಚಿನ
ಸಂಶೋಧನೆಯ ಬೆಳಕಿನಲ್ಲಿ ಪರಿಪೂರ್ಣವಾದ ಮಾಹಿತಿ ಒಂದೆಡೆ ಲಭ್ಯವಾಗಿರಲಿಲ್ಲ. ವಿದ್ಯಾಶಂಕರ ಅವರು ಹರಿಹರ ಕವಿಯ ಕಾವ್ಯಗಳನ್ನು ಕುರಿತು ತಮ್ಮ ಸಮಗ್ರ ಸಂಶೋಧನಾ
ಬರೆಹಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಇಲ್ಲಿಯವರೆಗೂ ನಡೆದಿರುವ ಸಂಶೋಧನೆಯ ಫಲಿತಗಳನ್ನು ಅಳವಡಿಸಿಕೊಂಡು
ಅಧ್ಯಯನ ಮಾಡುವುದರ ಮೂಲಕ ಅತ್ಯಂತ ವ್ಯವಸ್ಥಿತವಾಗಿ
ಹರಿಹರನ ಬಗೆಗೆ ಮಾಹಿತಿಗಳನ್ನು ಒಂದೆಡೆ ಕಟ್ಟಿಕೊಟ್ಟಿದ್ದಾರೆ. ಹರಿಹರ ಕವಿಯ
ಇತಿವೃತ್ತ, ಈಗಾಗಲೇ
ಹರಿಹರನು ರಚಿಸಿರುವ ರಗಳೆಗಳು,ಚಂಪೂಕೃತಿಯ ಜೊತೆಗೆ
ಎಸ್.ಶಿವಣ್ಣನವರು ಮತ್ತು ಜಿ.ಎ.ಶಿವಲಿಂಗಯ್ಯನವರು
ಶೋಧಿಸಿದ್ದ ಅಕ್ಷರ ಮಾಲಿಕಾ ಗದ್ಯ, ನತ ಭೂಜನಂ ಅಷ್ಟಕ, ಮಹಿಮಾಷ್ಟಕ, ಮುಡಿಗೆಯ ಅಷ್ಟಕ, ವಿರೂಪಾಕ್ಷ ಪ್ರೇಮಾಷ್ಟಕ, ಹರೀಶ್ವರ
ದೇವರ ಕಂದ, ಅಪ್ರಕಟಿತ ನಾಲ್ಕು ವೃತ್ತಗಳ ಬಗೆಗೂ ಸಂಕ್ಷಿಪ್ತವಾದ
ಪರಿಚಯವನ್ನುತಮ್ಮ ಲೇಖನಗಳಲ್ಲಿ ಮೊದಲಬಾರಿಗೆ
ಪರಿಚಯಿಸಿ ಕೊಟ್ಟಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ
ಸಮಗ್ರ ಸಾಹಿತ್ಯ ಚರಿತ್ರೆ ಸಂಪುಟ
3 ರಲ್ಲಿ ಹರಿಹರ ಕವಿಯ ಕಾವ್ಯಗಳನ್ನು ಕುರಿತು 10 ಜನ ವಿದ್ವಾಂಸರು ವಿವಿಧ ನೆಲೆಗಟ್ಟುಗಳಲ್ಲಿ ಒಟ್ಟು118 ಪುಟಗಳಲ್ಲಿ ವಿವೇಚನೆ ಮಾಡಿದ್ದಾರೆ. ವಿದ್ಯಾಶಂಕರ
ಅವರು ಹರಿಹರ ಕವಿಯ ಕಾವ್ಯಗಳನ್ನು ಕುರಿತು ೧೦ ಸಂಶೋಧನಾ ಲೇಖನಗಳನ್ನು ಒಟ್ಟು 342 ಪುಟಗಳಲ್ಲಿ ವಿಸ್ತೃತವಾಗಿ ಇಲ್ಲಿಯವರೆಗೂ ನಡೆದಿರುವ ಸಂಶೋಧನೆಯ ಫಲಿತಗಳನ್ನು
ಅಳವಡಿಸಿಕೊಂಡು ಅಧ್ಯಯನ ಮಾಡುವುದರ ಮೂಲಕ ಅತ್ಯಂತ ವ್ಯವಸ್ಥಿತವಾಗಿ ಒಂದೆಡೆ ಕೊಟ್ಟಿದ್ದಾರೆ. ಹರಿಹರನನ್ನು ಅಧ್ಯಯನ ಮಾಡಲು ಇವರ ಬರೆಹಗಳು ಒಂದು ರೀತಿಯಲ್ಲಿ ಕೈದೀವಿಗೆಯಂತಿವೆ.
ಇವರ ಮಹತ್ವಾಂಕ್ಷೆಯ ಸಂಶೋಧನಾ ಕೃತಿ ನಂಬಿಯಣ್ಣ ಒಂದು ಅಧ್ಯಯನ ದಲ್ಲಿ, ನಂಬಿಯಣ್ಣ ನನ್ನು ಕುರಿತು ಸಂಶೋಧನಾತ್ಮಕ ಮತ್ತು
ತೌಲನಿಕ ಅಧ್ಯಯನ ಕೈಗೊಳ್ಳಲು ಮೂಲ ಹಿನ್ನೆಲೆ ಮತ್ತು ಪ್ರೇರಣೆಗಳೇನು ಎಂಬುದರ ಬಗೆಗಿನ ಹೇಳಿಕೆಯಲ್ಲಿ
ಅವರ ಸಂಶೋಧನಾ ಪದ್ಧತಿಯ ಮಾರ್ಗವನ್ನು ಗುರುತಿಸ ಬಹುದಾಗಿದೆ. ಹರಿಹರ ತಮಿಳು ನಾಡಿನ ಅರವತ್ತು ಮೂವರ ಪುರಾತನರ ಬಗೆಗೆ ರಗಳೆಗಳನ್ನು ಬರೆಯಲು ಮೂಲ ಆಕರ ಯಾವುದು? ಈ ಪ್ರಶ್ನೆಗೆ ಖಚಿತವಾದ ಹಾಗೂ ಸಮಾನವಾದ ಅಭಿಮತವನ್ನು ನಮ್ಮ ವಿದ್ವಾಂಸರು ನೀಡಿಲ್ಲ. ಪ್ರೊ.ಡಿ.ಎಲ್.ನರಸಿಂಹಾಚಾರ್ಯ ರವರು ಹೇಳುವಂತೆ ಕನ್ನಡ ಬಲ್ಲ ತಮಿಳು ವಿದ್ವಾಂಸ ಹರಿಹರನ ಕೃತಿಗಳನ್ನು ಓದಿದಾಗ ಅವನಿಗೆ ಪರಿಚಿತವಾಗಿರುವ ಕಥೆಗಳಿಗೂ ಈ ಕಥೆಗಳಿಗೂ ಇರುವ ವ್ಯತ್ಯಾಸಗಳನ್ನು ನೋಡಿ ಚಕಿತನಾಗುತ್ತಾನೆ. ಹರಿಹರನ ಕಥೆಗಳಿಗೆ ತಮಿಳಿನಲ್ಲಿ ಮೂಲವಿಲ್ಲವಲ್ಲ ಎಂದು ಬೆರಗಾಗುತ್ತಾನೆ, ತಮಿಳನ್ನು ಬಲ್ಲ ಕನ್ನಡ ವಿದ್ವಾಂಸರಿಗೂ ಹೀಗೆಯೇ ಆಗುತ್ತದೆ. ಹಾಗೆಯೇ ತೀ.ನಂ.ಶ್ರೀಕಂಠಯ್ಯನವರು ಅಭಿಪ್ರಾಯ ಪಡುವಂತೆ ಹರಿಹರನು ನೇರವಾಗಿ ತಮಿಳು ಕೃತಿಗಳ ಪರಿಚಯ ಹೊಂದಿದವನು ಎಂಬಂತೆ ತೋರುವುದಿಲ್ಲ. ಅವನ ರಗಳೆಗಳಲ್ಲಿ ಸ್ವತಂತ್ರವಾದ
ಹಾಗೂ ಅರವತ್ತು ಮೂವರು ಪುರಾತನರ ಬದುಕನ್ನು ಕುರಿತ ಪರಂಪರಾಗತ ಸಂಗತಿಗಳಿಗೆ ಅನೇಕ ವೇಳೆ ಭಿನ್ನವಾದ ರೀತಿಯಲ್ಲಿ ಬೆಳಕು ಚೆಲ್ಲುವ ಹೆಚ್ಚಿನ ಸಾಮಗ್ರಿಗಳಿವೆ. ಇದೊಂದು ಭ್ರಮಾತ್ಮಕ ಸಮಸ್ಯೆಯಾಗಿದೆ. ತಮಿಳು ಭಾಷೆ ಸಾಹಿತ್ಯಗಳ ಪರಿಚಯ ಚೆನ್ನಾಗಿ ಇರುವ ಕನ್ನಡದ ಈ ವಿದ್ವಾಂಸರೀರ್ವರ ತೀರ್ಮಾನವು ನನ್ನ ಈ ಕೃತಿಯ ತೌಲನಿಕ ಅಧ್ಯಯನಕ್ಕೆ ಪ್ರೇರಣೆ ಎಂದರೆ ತಪ್ಪಾಗಲಾರದು
ಎಂದು ಕೃತಿ ರಚನೆಯ ಹಿಂದಿನ ಆಶಯದಲ್ಲಿ ಈ ಕೃತಿಯ ಸಂಶೋಧನಾಧ್ಯಯನದ ರೂಪುರೇಷೆಗಳನ್ನು ಕಾಣಬಹುದಾಗಿದೆ.
ಈ ಸಂಶೋಧನಾ
ಕೃತಿ ಹೊರ ಬರುವುದಕ್ಕಿಂತ ಪೂರ್ವದಲ್ಲಿ ಹರಿಹರನು ತಮಿಳುನಾಡಿನ ಶೈವ ಪುರಾತನರ ಬಗೆಗೆ ಕೃತಿರಚಿಸಲು
ಪ್ರೇರಣೆ ಶೇಕ್ಕಿಳಾರನ ಪೆರಿಯ ಪುರಾಣದಿಂದ ಎಂಬ ನಿಲುವು ಸಾರ್ವತ್ರಿಕವಾಗಿದ್ದಿತು. ಆದರೆ ಇದು ಸತ್ಯಕ್ಕೆ ದೂರವಾದದ್ದು ಎಂಬುದನ್ನು ಇವರು ಈ ಕೃತಿಯ ಮೂಲಕ ಸಾಬೀತು
ಪಡಿಸಿದ್ದಾರೆ. ಹರಿಹರನ ತಮಿಳುನಾಡಿನ ಶೈವ ಪುರಾತರನನ್ನು ಕುರಿತು
ರಚಿಸಿರುವ ರಗಳೆಗಳಿಗೆ ಇವರಿಗಿಂತ ಪೂರ್ವದ ವಿದ್ವಾಂಸರಲ್ಲಿ ಕೆಲವರು ತಮಿಳುನಾಡಿನ ಶೇಕ್ಕಿಳಾರನ ಪೆರಿಯಪುರಾಣವು
ಪ್ರಮುಖ ಆಕರವೆಂಬ ಅಭಿಪ್ರಾಯ ವನ್ನು ವ್ಯಕ್ತಪಡಿಸಿದ್ದರು. ಆದರೆ
ತೀನಂಶ್ರೀ, ಡಿ.ಎಲ್. ನರಸಿಂಹಾಚಾರ, ಎಚ್.ದೇವೀರಪ್ಪ, ಆರ್.ಸಿ. ಹಿರೇಮಠ ಮೊದಲಾದ ವಿದ್ವಾಂಸರು
ತಮ್ಮ ಪುಸ್ತಕಗಳಲ್ಲಿ ಪೆರಿಯಪುರಾಣವು ಹರಿಹರನ ತಮಿಳುನಾಡು ಶೈವಪುರಾತನರನ್ನು ಕುರಿತ ರಗಳೆಗಳಿಗೆ ಪ್ರಮುಖ
ಆಕರವಾಗಿಲ್ಲ ಎಂಬ ಭಾಗಶಃ ನಿಲುವನ್ನು ವ್ಯಕ್ತಪಡಿಸಿದ್ದರು. ಆ ಶೋಧಗಳನ್ನು
ಮುಂದುವರೆಸಿರುವ ಇವರ ಈ ಸಂಶೋಧನಾ ಪುಸ್ತಕದಲ್ಲಿ ಹರಿಹರನಿಗೆ ಪೆರಿಯಪುರಾಣವು ಪ್ರಮುಖ ಆಕರ ಕೃತಿಯಲ್ಲ
ಎಂಬುದನ್ನು ತಮ್ಮ ಖಚಿತ ಮತ್ತು ಗಂಭೀರ ಶೋಧನೆಗಳ ಮೂಲಕ ದೃಢಪಡಿಸಿದ್ದಾರೆ. ವಿದ್ಯಾಶಂಕರ ರವರು ಪೆರಿಯ ಪುರಾಣ ಮತ್ತು ಹರಿಹರನ ಪುರಾತನರ ರಗಳೆಗಳ ಬಗ್ಗೆ ವಿಸ್ತೃತವಾದ ತೌಲನಿಕ ಅಧ್ಯಯನವನ್ನು ಕೈಗೊಳ್ಳುವುದರ ಮೂಲಕ ಈ ಅಭಿಪ್ರಾಯವನ್ನು ಪರಿಷ್ಕರಿಸಿದ್ದಾರೆ. ಇವರು ಶೇಕ್ಕಿಳಾರನನ್ನು ಹರಿಹರ ಅನುಸರಿಸಿಲ್ಲ ಎನ್ನುವ ನಿಲುವನ್ನು ಮದ್ರಾಸ್ ವಿಶ್ವವಿದ್ಯಾಲಯದ ತಮಿಳು ವಿಭಾಗದ ಮುಖ್ಯಸ್ತರಾದ ಡಾ.ಸಂಜೀವಿ ರವರ ಬಳಿ ಚರ್ಚೆ ಮಾಡುವ ಸಂದರ್ಭದಲ್ಲಿ ವಿದ್ಯಾಶಂಕರ ರವರ ನಿಲುವಿಗೆ ಘಟ್ಟಿಯಾದ ಆಧಾರವಿದೆಯೇ ಎಂದು ತಮಿಳು ವಿದ್ವಾಂಸರು ಕೇಳಿದಾಗ ವಿದ್ಯಾಶಂಕರ ರವರು ಶೇಕ್ಕಿಳಾರ್ ಹಾಗೂ ಹರಿಹರ ಇವರ ತೌಲನಿಕ ಅಧ್ಯಯನ ನಡೆಸಿರುವುದನ್ನು ತಿಳಿಸಿ ಎಲ್ಲಿಯೂ ಶೇಕ್ಕಿಳಾರನ ಪ್ರಭಾವ ಹರಿಹರನ ರಗಳೆಗಳ ಮೇಲೆ ಆಗಿರುವುದು ಕಂಡುಬರುವುದಿಲ್ಲ ಎಂಬುದನ್ನು ಹಲವು ನಿದರ್ಶನಗಳೊಡನೆ ವಿವರಿಸಿದ್ದರು. ಆಗ ತಮಿಳು ವಿದ್ವಾಂಸರು ಇವರ ನಿಲುವನ್ನು ಭಾಗಶಃ ಒಪ್ಪುತ್ತಾ, ಶೇಕ್ಕಿಳಾರ್ ಅನಪಾಯ ಚೋಳರ ಕಾಲದಲ್ಲಿ (ಕ್ರಿ.ಶ. 1070-1104)) ಇದ್ದವನು. ಹರಿಹರನ ಕಾಲಕ್ಕೆ ಬಹುಶಃ ಅವನು ಪೆರಿಯ ಪುರಾಣವನ್ನು ರಚಿಸುತ್ತಿದ್ದಿರ ಬಹುದು ಇಲ್ಲವೇ ಕೃತಿ ರಚನೆಯನ್ನು ಆ ವೇಳೆಗೆ ಮಾಡಿ ಮುಗಿಸಿರಬಹುದು. ಅದು ಇನ್ನು ವ್ಯಾಪಕವಾದ ಪ್ರಚಾರವನ್ನು ಜನಮನ್ನಣೆಯನ್ನು ಪಡೆಯದೇ ಇದ್ದ ಕಾಲಮಾನದಲ್ಲಿ ಹರಿಹರ ನಾಯನ್ಮಾರರನ್ನು ಕುರಿತು ಕೃತಿ ರಚನೆ ಮಾಡಿರಬಹುದು ಎನ್ನುವ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು. ಈ ತಮಿಳು ವಿದ್ವಾಂಸರ ನಿಲುವು ವಿದ್ಯಾಶಂಕರ ರವರ ಹರಿಹರನ ಮೇಲೆ ಶೇಕ್ಕಿಳಾರನ ಪ್ರಭಾವ ಆಗಿಲ್ಲ ಎನ್ನುವ ನಿಲುವನ್ನು ಸದೃಢಗೊಳಿಸಿದೆ. ಹರಿಹರನು
ಶೆಕ್ಕಿಳಾರನ ಕಾಲಕ್ಕೆ ಹತ್ತಿರದವನು,
ಹರಿಹರನು ಕೃತಿ ರಚನೆ ಮಾಡ ಹೊರಟಾಗ ಶೆಕ್ಕಿಳಾರ್ ಅದಾಗ ತಾನೆ ಪೆರಿಯ ಪುರಾಣವನ್ನು
ಬರೆದು ಮುಗಿಸಿರ ಬೇಕು. ಹರಿಹರನ ಕೃತಿಗಳಿಗೂ ಪೆರಿಯಪುರಾಣದ ಕೃತಿಗಳಿಗೂ
ನಿರೂಪಣೆಯ ದೃಷ್ಟಿಯಲ್ಲಿ ಗಮನಾರ್ಹವಾದ ವ್ಯತ್ಯಾಸಗಳಿವೆ ಎಂಬುದನ್ನು ಇವರೇ ತೌಲನಿಕ ಅಧ್ಯಯನದ ಮೂಲಕ ಈ ಕೃತಿಯಲ್ಲಿ
ನಿರೂಪಿಸಿದ್ದಾರೆ. ಹೀಗೆ ಹರಿಹರನಿಗೆ ಪೆರಿಯ ಪುರಾಣವು ಆಕರವಲ್ಲ ಎಂದು ಹೇಳುವುದರ ಮೂಲಕ
ಈ ವಿಷಯವನ್ನು ಕುರಿತ ಪೂರ್ವದ ಸಂಶೋಧಕರ ನಿಲುವುಗಳಿಗೆ ಅಧಿಕೃತ ಸಮರ್ಥನೆಯನ್ನು ಒದಗಿಸಿದ್ದಾರೆ ಎಂಬ
ಚಿದಾನಂದ ಮೂರ್ತಿಗಳ ಅನಿಸಿಕೆಯು ಈ ಕೃತಿಯ ಸಂಶೋಧನಾ ಮೌಲ್ಯವನ್ನು ಇಮ್ಮಡಿಗೊಳಿಸಿದೆ. ಪೆರಿಯ ಪುರಾಣದ ಸಂಪೂರ್ಣ ಪ್ರಭಾವಕ್ಕೆ ಹರಿಹರನು ಒಳಗಾಗಿದ್ದಾನೆ ಎಂಬ ವಿದ್ವಾಂಸರ
ನಿಲುವು ಇಂದು ವಿದ್ಯಾಶಂಕರ ಅವರ ಸಂಶೋಧನೆಯ ಮೂಲಕ ಇಂದು ಪುನರ್ ಪರಿಶೀಲನೆಗೊಂಡು ಖಚಿತವಾದ ನಿಲುವನ್ನು
ಪಡೆದಿದೆ.
ವಿದ್ಯಾಶಂಕರ ಅವರು ಹರಿಹರನ ನಂಬಿಯಣ್ಣನ ರಗಳೆಯ ಬಗೆಗೆ ಕುರಿತು ಆಡಿರುವ ಮಾತುಗಳಾದ ‘ ನಂಬಿಯಣ್ಣನ ರಗಳೆ ಹರಿಹರನ ಕಥನಕಾವ್ಯಗಳಲ್ಲಿ ಅತ್ಯಂತ ಶ್ರೇಷ್ಠವಾದ ಕೃತಿ. ಅವನ ಬಸವರಾಜ ದೇವರರಗಳೆ ಯನ್ನೂ ಮೀರಿಸುವ ಭಕ್ತಿಕಾವ್ಯ. ನಂಬಿಯಣ್ಣನ ಜೀವಿತ ಕಥೆಯನ್ನು ಇಡಿಯಾಗಿ ಮೊದಲಿಗೆ ಹೇಳಿದ ಹರಿಹರ ಮುಂದಣ ಕವಿಗಳಿಗೆ ಮಾರ್ಗದರ್ಶಿಯಾಗಿರುವನು. ಶಿವನ ತೊತ್ತಾದ ನಂಬಿಯಣ್ಣ ತನ್ನ ಉಜ್ವಲ ಭಕ್ತಿಯಿಂದ ಜೀವನದುದ್ದಕ್ಕೂ ಭೋಗೋಪಭೋಗಗಳಲ್ಲಿ ರಾಜಕುಮಾರನಂತೆ ಬಾಳಿದ,ತನ್ನ ವಿಲಾಸಿ ಬದುಕಿನ ಬೇಡಿಕೆಗಳ ಪೂರೈಕೆಗಾಗಿ ತನ್ನ ಇಷ್ಟದೈವದ ಸೇವೆಯನ್ನೇ ಬಳಸಿಕೊಂಡ ಅನುಪಮ ಭಕ್ತ. ಸ್ವಾಮಿ-ಭೃತ್ಯರ ಲೀಲಾ ಕಥನವು ಕಾವ್ಯದ ಜೀವ ಜೀವಾಳವಾಗಿದ್ದು, ತನ್ನ ನಾಟ್ಯಗುಣದಿಂದ, ಸರಸ ನಿರೂಪಣೆಯಿಂದ ಸಹೃದಯರ ಮನಸ್ಸನ್ನು ಸೂರೆಗೊಂಡಿದೆ. ಭಕ್ತಿ-ಶೃಂಗಾರಗಳು ಕಾವ್ಯದುದ್ದಕ್ಕೂ ಅವಿನಾಭಾವ ಸಂಬಂಧವನ್ನು ಹೊಂದಿವೆ. ಶಿವ-ಹಾಗೂ ನಂಬಿಯಣ್ಣರು
ಶಿವ-ಜೀವರ ಅನುಪಮ ಸಾಂಗತ್ಯದ ಸಂಕೇತವಾಗಿರುವವರು. ನಂಬಿ ಕರೆದರೆ ಓ ಎನ್ನುವ ದೇವ- ಹೀಗೆ ಭಕ್ತ-ದೇವರ ಸಂಬಂಧದ ಬಿಗುಹನ್ನು, ಕಟ್ಟಕ್ಕರೆಯನ್ನು, ಲೀಲಾ ವಿಲಾಸವನ್ನು ಕಂಡರಿಸಿರುವ ಅಪೂರ್ವ ಕೃತಿ. ಪಾತ್ರ ವೈಭವ, ದೃಶ್ಯ ವೈಭವ, ನಾಟ್ಯ ವೈಭವಗಳ ತ್ರಿಕೂಟ ಸಂಗಮವನ್ನು ನಂಬಿಯಣ್ಣನ ರಗಳೆಯಲ್ಲಿ ಕಾಣುವಷ್ಟು ನಿಚ್ಚಳವಾಗಿ ಹರಿಹರನ ಬೇರಾವ ರಗಳೆಯಲ್ಲಿಯೂ ಕಾಣಲಾಗದು, ಎನ್ನುವ ಇವರ ಮೌಲ್ಯಯುತವಾದ ಮಾತುಗಳು ಹರಿಹರನ ನಂಬಿಯಣ್ಣನ ರಗಳೆಯನ್ನು ಇವರು
ಯಾವ ರೀತಿ ಸಂಶೋಧನಾ ನೆಲೆಯಲ್ಲಿ ಸೂಕ್ಷ್ಮವಾಗಿ ಗ್ರಹಿಸಿದ್ದಾರೆ. ಎಂಬುದನ್ನು ಸೂಚಿಸ ಬಯಸುತ್ತವೆ.
ಇವರು ಈ ವಿದ್ವತ್ ಕೃತಿಯಲ್ಲಿ, ವಿಪುಲವಾದ ಆಕರ ಸಾಮಗ್ರಿಯನ್ನು ಒದಗಿಸುವುದರ ಮೂಲಕ ನಂಬಿಯಣ್ಣನ ಕುರಿತ ಸಂಶೋಧನೆಗೆ ಭದ್ರವಾದ ನೆಲೆಯನ್ನು ಒದಗಿಸಿದ್ದಾರೆ. ಅಲ್ಲದೆ ಸಂಶೋಧಕನಾದವನು ದೊರೆತ ಮಾಹಿತಿಗಳನ್ನು ಹೇಗೆ ಕ್ರೂಢೀಕರಿಸಿ ವಸ್ತು ನಿಷ್ಟವಾಗಿ ಕಥಾ ವ್ಯಕ್ತಿಯ ಜೀವನದ ಸಮಗ್ರ-ಸಮರ್ಥ ಚಿತ್ರಣವನ್ನು ಕಟ್ಟಿಕೊಡಬಹುದು ಎಂಬುದಕ್ಕೆ ಈ ಪುಸ್ತಕ ನಿದರ್ಶನವಾಗಿದೆ. ಇವರಿಗೆ ಮೂಲ ಆಕರಗಳ ಬಗೆಗೆ ಸಂಪೂರ್ಣ ಗ್ರಹಿಕೆ ಇರುವುದರಿಂದ ನೇರವಾಗಿ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದ್ದಾರೆ. ಎಲ್ಲಿಯೂ ಅಸ್ಪಷ್ಟತೆಯಾಗಲೀ ಗೊಂದಲವಾಗಲೀ ಕಂಡು ಬಂದಿಲ್ಲ.
ಕನ್ನಡ ಸಾಹಿತ್ಯದಲ್ಲಿ ನಂಬಿಯಣ್ಣನನ್ನು ಕುರಿತು ಹರಿಹರನಲ್ಲದೆ, ಬೊಮ್ಮರಸನ ಸೌಂದರ ಪುರಾಣ, ಅಣ್ಣಾಜಿಯ ಸೌಂದರ ವಿಳಾಸ, ಚಿಕ್ಕರಾಚನ ಸೌಂದರ್ಯ ನಂಬೆಣ್ಣನ ಪುರಾಣ, ಶಾಂತವೀರದೇಶಿಕನ ಸೌಂದರೇಶ್ವರನ ಯಕ್ಷಗಾನ, ಬಸವಾದಿ ಪ್ರಮಥರ ವಚನಗಳಲ್ಲಿ ನಂಬಿಯಣ್ಣ,(ಜೇಡರ ದಾಸಿಮಯ್ಯ, ಬಸವಣ್ಣ, ಸಿದ್ಧರಾಮ, ಸೊಡ್ಡಳ ಬಾಚರಸ), ಹರಿಹರನ ರಗಳೆಗಳ ಆಧರಿಸಿ ಸಮಕಾಲೀನ ಶೈವಪುರಾತನರುಗಳ ಕಥೆಯಲ್ಲಿ ನಂಬಿಯಣ್ಣ ( ಮೆರೆಮಿಂಡ ದೇವರು, ಸೋಮಾಸಿ ಮಾರರು, ಜಡೆಯ ನಾಯನಾರು-ಯಸ್ಯಜ್ಞಾನಿ ದೇವಿಯರು,ಚೇರಮ,ವಿರುಪರಾಜ, ಚೇರಮಾಂಕ, ಶಂಕರ ದೇವ) ನಂಬಿಯಣ್ಣನ ಕಥೆಯು ಕನ್ನಡದಲ್ಲಿ ಯಾವ ರೀತಿ ಬೆಳೆದುಕೊಂಡು ಬಂದಿದೆ? ಅದರ ಮೇಲೆ ಹರಿಹರನ ಪ್ರಭಾವ ಯಾವ ರೀತಿ ಆಗಿದೆ ಇತ್ಯಾದಿ ಸಂಗತಿಗಳ ಸೂಕ್ಷ್ಮ ಸ್ತರದ ಅಧ್ಯಯನವನ್ನು ಇಲ್ಲಿ ಗಮನಿಸ ಬಹದಾಗಿದೆ.
ದಕ್ಷಿಣಭಾರತದ ಮೂರುಭಾಷೆಗಳಲ್ಲಿ ಪ್ರಕಟವಾಗಿರುವ ನಂಬಿಯಣ್ಣನ ಸಾಹಿತ್ಯವನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಸಂಶೋಧನಾತ್ಮಕವಾಗಿ ವಿಶ್ಲೇಷಣೆಗೊಳಪಡಿಸಿರುವುದು ಇವರ ಸಂಶೋಧನೆಯ ಹೆಗ್ಗುರುತಾಗಿದೆ. ನಂಬಿಯಣ್ಣನ ಕುರಿತ ಸಮೃದ್ಧ ಸಾಹಿತ್ಯ ಸೃಷ್ಟಿ ಕನ್ನಡ, ತಮಿಳು, ತೆಲುಗು ಭಾಷೆಯ
ಸಾಹಿತ್ಯಲ್ಲಿ ಕಂಡು ಬರುತ್ತಿದ್ದು
ಆ ವಿವರಗಳನ್ನೆಲ್ಲಾ ಅತ್ಯಂತ ವ್ಯವಸ್ಥಿತವಾಗಿ ಇವರು ಕಟ್ಟಿಕೊಟ್ಟಿರುವುದನ್ನು
ಕಾಣಬಹುದಾಗಿದೆ. ಎಸ್.ವಿದ್ಯಾಶಂಕರ
ಅವರ ಈ ಸಂಶೋಧನಾ ಕೃತಿಯು ಖಚಿತ ದೃಷ್ಟಿಕೋನಗಳಿಂದ ಕೂಡಿದ್ದು ಮೌಲ್ಯೀಕತೆಯನ್ನು ಪಡೆದಿವೆ. ಈ ರೀತಿಯ ವ್ಯಾಪಕ
ಅಧ್ಯಯನದಿಂದಾಗಿ ನಂಬಿಯಣ್ಣನ ಬಗೆಗೆ ಮತ್ತು ಅವನನ್ನು
ಕುರಿತು ಕಾವ್ಯ ರಚಿಸಿರುವ ಕವಿಗಳ ಬಗೆಗೆ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿದೆ.
ಇವರ ವಚನ
ಚಳುವಳಿಯ ಕುರಿತ ಅಧ್ಯಯನದಲ್ಲಿ, (ಹರಳಯ್ಯ –ಮಧುವರಸ ಪ್ರಸಂಗ : ಒಂದು ಮರುಚಿಂತನೆ ಬಸವಪಥ, ಸಂಪುಟ ೨೧ ಸಂಚಿಕೆ ೧೦ ಜನವರಿ ೨೦೦೦)
“ರಾಜಕೀಯ ಅಥವಾ ಧಾರ್ಮಿಕ ಕಾರಣಗಳಿಗಾಗಿ ಎರಡನೆ ಬಿಜ್ಜಳನ ಕೊಲೆಯಾಯಿತೆ? ನಾವು ನಿಸ್ಸಂದೇಹವಾಗುವ ರೀತಿಯಲ್ಲಿ ಈ ಪ್ರಶ್ನೆಗೆ ಉತ್ತರಿಸದಂತಹ ಸನ್ನಿವೇಶದಲ್ಲಿದ್ದೇವೆ.” ಎಂದು ಖ್ಯಾತ ಇತಿಹಾಸತಜ್ಞ ಪಿ.ಬಿ. ದೇಸಾಯಿ ಅವರು “ಬಸವೇಶ್ವರ ಅಂಡ್ ಹಿಸ್ ಟೈಮ್ಸ್ ‘ ಎಂಬ ಗ್ರಂಥದಲ್ಲಿ ಅಭಿಪ್ರಾಯಪಟ್ಟಿರುವುದನ್ನು ಹಾಗೂ ಡಾ.ಬಿ.ಜಿ.ಎಲ್. ಸ್ವಾಮಿ ಅವರು ಮಂಚಣ್ಣನ (ಸುಕ್ರಿ.ಶ ೧೩೫೦) ತೆಲುಗು ಕೇಯೂರಬಾಹು ಚರಿತಂ ಹಾಗೂ ಒಟ್ಟಕೂತರ್ ನ (ಸುಕ್ರಿ.ಶ ೧೧೬೦) ತಮಿಳು `ತಕ್ಕ-ವಾಕಾಪ-ತರಣಿ’ ಕಾವ್ಯಗಳ ಹಾಗೂ ಎರಡನೇ ರಾಜೇಂದ್ರ ಚೋಳನ ನಂದೂರು ತಾಮ್ರಪತ್ರಗಳ (EI ೨೯ ಪು ೨೨೫-೨೪೭) ಆಧಾರದ ಮೇಲೆ ಬಿಜ್ಜಳನ ಸಾವಿಗೆ ರಾಜಕೀಯ ಘಟನೆಗಳೇ ಕಾರಣವೇ ಹೊರತು ಧಾರ್ಮಿಕ ಮತ ಭೇದಗಳ ಕಾರಣವಲ್ಲ ಎಂದು ದೃಢಪಡಿಸಿರುವುದನ್ನು ಪ್ರಸ್ತಾಪಿಸುತ್ತಾ (ಇಂಗ್ಲೀಷ್ ಮೂಲ ಲೇಖನದ ಕನ್ನಡಾನುವಾದ ಡಾ.ಹೆಚ್ ಚಂದ್ರಶೇಖರ “ದೇಗುಲಸಿರಿ ನೆನಹಿನ ಸಂಚಿಕೆ ಪು ೧೨೫-೧೨೮).ಮುಂದುವರೆದು ತಮ್ಮ ನಿಲುವನ್ನು
ಸಾಹಿತ್ಯಕ ಆಧಾರಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿರುವುದು ಯೋಚಿಸತಕ್ಕ ಸಂಗತಿಯಾಗಿದೆ.
ಹರಳಯ್ಯ –ಮಧುವರಸನು ಬೆಳೆಸಿದ ರಕ್ತಸಂಬಂಧದ ಪ್ರಸ್ತಾಪ ಸಿದ್ದರಾಮನ ಒಂದು ವಚನದಲ್ಲಿ (ವ.೧೬೧೭) ಬಂದಿರುವುದನ್ನು ಇವರು ಗಮನಿಸಿ ಬಿಜ್ಜಳ ಆ ಕಾರಣಕ್ಕಾಗಿಯೇ ಅವರ ಕಣ್ಣು ಕೀಳಿಸಿದ ಪ್ರಸಂಗ ಪಾಲ್ಕುರಿಕೆ ಸೋಮನಾಥನ (೧೨೭೦) “ಬಸವ ಪುರಾಣಮುವಿನಲ್ಲಿ ಬಂದಿದ್ದು ಇದು ಅವನು ವಾಗ್ ಪರಂಪರೆಯನ್ನು ಆಧರಿಸಿ ಮೊದಲಿಗೆ ಹೇಳಿದ್ದರ ಕಾರಣವಾಗಿ ಮುಂದಿನ ಬಹುತೇಕ ವೀರಶೈವ ಕವಿಗಳಿಗೆ ಬಿಜ್ಜಳನ ಸಾವಿಗೆ ಹರಳಯ್ಯ-ಮಧುವರಸರ ಕಣ್ಣು ಕೀಳಿಸಿದ್ದು ಎಳೆಹೊಟೆ ಶಿಕ್ಷೆ ವಿಧಿಸಿದ್ದು ಮೂಲ ಹೇತುವಾಗಿರಬಹುದೆ? ಎಂಬ ಅನುಮಾನವನ್ನು ವ್ಯಕ್ತ ಪಡಿಸಿದ್ದಾರೆ. ಪಾಲ್ಕುರಿಕೆ ಸೋಮನಾಥ ಹಾಗೂ ಭೀಮಕವಿ ಕೊಡುವ ಬಿಜ್ಜಳನ ಸಾವಿಗೆ ಕಾರಣವಾಗಿರುವ ಹಿನ್ನಲೆಯಲ್ಲಿ ಸಾಹಿತ್ಯ ದಾಖಲೆ (Literary evidence ) ಎಂದು ಸ್ವೀಕರಿಸಿದ್ದೇ ಆದರೆ ಸಾಮಾಜಿ/ಧಾರ್ಮಿಕ ಕ್ಷೋಭೆಯೇ ಕಲ್ಯಾಣದ ಕ್ರಾಂತಿಗೆ ಕಾರಣವೆಂದು ಒಪ್ಪಿಕೊಳ್ಳಬೇಕಾಗುತ್ತದೆ. ರೂಢಿಯಲ್ಲಿದ್ದ ಸಾಮಾಜಿಕ/ಧಾರ್ಮಿಕ ಎಲ್ಲೆಕಟ್ಟುಗಳನ್ನು ಮೀರಿ ಒಂದು ಸ್ವತಂತ್ರ ಮಾನವಧರ್ಮವಾಗಿ ಬಸವಾದಿ ಶಿವಶರಣರಿಂದ ರೂಪಿತವಾದ ಚಳವಳಿ ಗಣಾಚಾರದ ಹೆಸರಿನಲ್ಲಿ ತನ್ನ ಮೂಲಭೂತ ಧೋರಣೆಗೇ ವಿರುದ್ಧವಾಗಿ ನಡೆದುಕೊಂಡದಂತಾಗುತ್ತದೆ. ಇತಿಹಾಸವೆನ್ನುವುದು ಸಾಹಿತ್ಯವನ್ನಷ್ಟೆ ಆಧರಿಸಿ ನಿರ್ಮಾಣವಾದಾಗ ಈ ರೀತಿಯ ವೈರುಧ್ಯಗಳಿಗೆ ಕಾರಣವಾಗಬಹುದು ಎಂದು ಹೇಳುತ್ತಾ ಕಲ್ಯಾಣ ಕ್ರಾಂತಿಯ ಬಗೆಗೆ ಇನ್ನೂ ಚರ್ಚಿಸ ಬೇಕಾದ ಸಂಗತಿಗಳು ಇವೆ ಎಂಬ ಸುಳುಹನ್ನು
ನೀಡಿದ್ದಾರೆ.
ವಚನ ಸಾಹಿತ್ಯ
ಕುರಿತ ಅವರ ಸಂಶೋಧನಾ ಲೇಖನಗಳ ಸಂಕಲನಗಳಾದ ವಚನ ಪರುಷ, ವಚನಾನುಶೀಲನ, ಸಮಾಹಿತ.ನೆಲದ ಮರೆಯ
ನಿಧಾನ, ವಚನಕಾರರು ಮತ್ತು ವೈಚಾರಿಕತೆ,
ಶಬ್ದದೊಳಗಣ ನಿಶ್ಯಬ್ದ, ಅಲಕ್ಷಿತ ವಚನಕಾರರು, ಎನ್ನ ನಾ ಹಾಡಿಕೊಂಡೆ ಇವುಗಳು ವಚನ
ಸಾಹಿತ್ಯದಲ್ಲಿಯ ಅವರ ವಿದ್ವತ್ತಿನ ಹೆಗ್ಗುರುತುಗಳಾಗಿವೆ.
ಅಂಬಿಗರ ಚೌಡಯ್ಯನ ವಚನಗಳು,ಚಂದಿಮರಸನ ವಚನಗಳು, ಗುಬ್ಬಿ ಮಲ್ಲಣಾರ್ಯನ ಗಣಭಾಷಿತ ರತ್ನಮಾಲೆ, ಕಲ್ಲು
ಮಠದ ಪ್ರಭುದೇವರ ಕೃತಿಗಳು, ಹಲಗೆಯಾರ್ಯನ ಶೂನ್ಯ ಸಂಪಾದನೆ, ವಚನ ಪಾರಿಭಾಷಾಕೋಶ, ಮೊದಲಾದ ವಚನ
ಸಾಹಿತ್ಯಕ್ಕೆ ಸಂಪಾದಿತ ಕೃತಿಗಳು ಇಂದಿಗೂ ಆಸಕ್ತ ಅಧ್ಯಯನಕಾರರಿಗೆ ಅನುರಣೀಯವಾಗಿವೆ. ಶರಣ
ಸಾಹಿತ್ಯ-ಸಂಸ್ಕೃತಿಯ ವಿಶ್ಲೇ಼ಷಣಾತ್ಮಕ ಅಧ್ಯಯನಗಳಲ್ಲಿ
ವಚನಕಾರರ ಸಾಮಾಜಿಕ ನಿಲುವುಗಳನ್ನು, ವಚನ ಸಾಹಿತ್ಯದ ವೈಶಿಷ್ಟ್ಯವನ್ನು
ಅನಾವರಣ ಗೊಳಿಸಿದ್ದಾರೆ. ಪರಂಪರೆ ಮತ್ತು ಆಧುನಿಕತೆಯ
ಹದವಾದ ಸಮನ್ವಯವನ್ನು ಇವರ ಲೇಖನಗಳಲ್ಲಿ ಕಾಣಬಹುದಾಗಿದೆ. ನಡುಗನ್ನಡ ಸಾಹಿತ್ಯವನ್ನು ಕುರಿತ ಇವರ ಬಹಳಷ್ಟು
ಲೇಖನಗಳು ಮಧ್ಯಕಾಲೀನ ಯುಗದ ಭಕ್ತಿ ಸಾಹಿತ್ಯದ ಅನ್ವೇಷಣೆಗೆ ಮೀಸಲಾಗಿವೆ. ವಚನಕಾರರು ಮತ್ತು ಅವರ ನಂತರದ
ಪ್ರಭಾವ ಪ್ರೇರಣೆ ಇವುಗಳ ಬಗೆಗಿನ ತಲಸ್ಪರ್ಶಿ ಅಧ್ಯಯನ ಮೂಲಕ ಅವರ ಸಂಶೋಧಕ ವ್ಯಕ್ತಿತ್ವದ ಪರಿಚಯ ಉಂಟಾಗುತ್ತದೆ.
ಎಂ.ಎಚ್. ಕೃಷ್ಣಯ್ಯನವರು
ಇವರ ಬರಹಗಳನ್ನು ಕುರಿತು ಹೇಳಿರುವ ಮಾತುಗಳಾದ ʻ ಡಾ.ಎಸ್.ವಿದ್ಯಾಶಂಕರ ಅವರ ಬರವಣಿಗೆ ಹಾಗೂ ಪ್ರಕಟನೆಯನ್ನು ಮೊದಲಿನಿಂದಲೂ ನೋಡಿಕೊಂಡು ಬಂದರೆ
ಅವರು ಜನರಿಗೆ ಯಾವುದು ಉಪಯುಕ್ತ, ಯಾವುದನ್ನು ಓದಬೇಕು. ಯಾವುದನ್ನು ಕೊಡಬೇಕು ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಇದಕ್ಕೆ ಪೂರಕವಾಗಿ ತಾವು ಬರೆದು ಪ್ರಕಟಿಸಿ
ಜನರಿಗೆ ತಲುಪುವಂತೆ ಮಾಡಿದರು. ಎಂಬ ಮಾತು ಇವರ ಬರವಣಿಗೆಯ
ವೈವಿಧ್ಯತೆಯನ್ನು ಸೂಚಿಸುತ್ತದೆ.
ಅದೇ ರೀತಿ ಇವರಸಂಪಾದನಾ
ಕೃತಿಗಳಲ್ಲಿ ವಿದ್ವದಾವೃತ್ತಿಗಳಾದ ಚಾಮರಸನ ಪ್ರಭುಲಿಂಗಲೀಲೆ,
ಭೀಮಕವಿಯ ಬಸವ ಪುರಾಣ. ಸಿಂಗಿರಾಜ ಕವಿಯ ಸಿಂಗಿರಾಜಪುರಾಣ, ಚನ್ನಬಸವಾಂಕನ ಮಹಾದೇವಿಯಕ್ಕನ ಸಾಂಗತ್ಯ,
ಮಲ್ಲಿಕಾರ್ಜುನ ಕವಿಯ ಕೆಂಭಾವಿ ಭೋಗಣ್ಣರ ಸಾಂಗತ್ಯ,
ಷಡಕ್ಷರ ಕವಿಯ ರಾಜಶೇಖರ ವಿಳಾಸ, ಶಬರಶಂಕರವಿಳಾಸ,
ರಾಘವಾಂಕನ ಸಮಗ್ರ ಕೃತಿಗಳು, ನಿಜಗುಣರ ಸಮಗ್ರ ಕೃತಿಗಳು, ಸೋಮದೇವ ಕವಿಯ ಉದ್ಭಟ ಕಾವ್ಯ, ಶಂಕರ
ದೇವ ಕವಿಯ ಸಮಗ್ರ ಕೃತಿಗಳು, ಇಮ್ಮಡಿ ಮುರಿಗಾಸಿದ್ಧರ ಕೃತಿಗಳು, ಜಿಗುನಿ ಮರುಳಶಂಕರ ದೇವರ ಕೃತಿಗಳು
ಇತ್ಯಾದಿ ಸಂಪಾದಿತ ಕೃತಿಗಳು ಕನ್ನಡ ಸಾಹಿತ್ಯ ಚರಿತ್ರೆಯ ಪರಿಧಿಯ ವಿಸ್ತರಣೆಯನ್ನು ಮಾಡಿರುವುದರ ಜೊತೆಗೆ
ಅವರ ಗ್ರಂಥಸಂಪಾದನೆಯ ಮೇಲಿನ ಆಸಕ್ತಿಯ ದ್ಯೋತಕಗಳಾಗಿವೆ. ಅದರಲ್ಲೂ ಗುಬ್ಬಿಯ ಮಲ್ಲಣ್ಣನ ಗಣಭಾಷ್ಯ ರತ್ನಮಾಲೆಯ ಸಂಪಾದನೆಯಲ್ಲಿ ಇವರ ಶಾಸ್ತ್ರೀಯ ದೃಷ್ಟಿಕೋನ
ಮತ್ತು ಪ್ರಬುದ್ಧತೆ ಎದ್ದು ಕಾಣುತ್ತದೆ. ಇಲ್ಲಿಯ ೭೦ ಪುಟಗಳ ಸುದೀರ್ಘ ಪ್ರಸ್ತಾವನೆ. ಹಾಗೂ ಅನುಬಂಧದಲ್ಲಿ ಕೊಡ
ಮಾಡಿರುವ ಸಿದ್ಧಾಂತ ಶಿಖಾಮಣಿಯಲ್ಲಿ ಬರುವ ೧೦೧ ಸ್ಥಲಗಳ
ಪರಿಕಲ್ಪನೆಯನ್ನು ಚನ್ನಬಸವಣ್ಣ, ಜಕ್ಕಣಾರ್ಯ, ಮಹಲಿಂಗರ ಪರಿಕಲ್ಪನೆಯೊಂದಿಗೆ ಸಂವಾದಿಯಾಗಿ ಪರಿಶೀಲಿಸಿರುವುದು ಅವರ ಸಮನ್ವಯ ದೃಷ್ಟಿಯ
ದ್ಯೋತಕವಾಗಿದೆ. ಇವರನ್ನು ಒಂದು ರೀತಿಯಲ್ಲಿ ಶರಣ ಸಾಹಿತ್ಯ-ಸಂಸ್ಕೃತಿಯ ಅಧ್ಯಯನದ ಸಾರ್ವಭೌಮ ಎಂದರೂ
ತಪ್ಪಾಗಲಾರದು.
ಅವರ ವೀರಶೈವ ಪುರಾಣಗಳು ಸಂಶೋಧನಾ ಕೃತಿಯು ವೀರಶೈವ ಪುರಾಣಗಳ ಅಸ್ಮಿತೆಯ ಅಭಿಜ್ಞತೆಯ
ಅಧ್ಯಯನದ ಮೂಲಕ ಪ್ರಾರಂಭಗೊಂಡು ವೀರಶೈವ ಅಧ್ಯಯನ
ಕಕ್ಷೆಯಲ್ಲಿ ಬರುವ ಪುರಾತನರು, ನೂತನರು, ಅವರ ಬದುಕು, ಚಿಂತನೆ, ಸಾಹಿತ್ಯ, ತತ್ವ ಆದರ್ಶ ಮುಂತಾದವುಗಳ ಕುರಿತಾದ ಅಧ್ಯಯನವನ್ನು ಒಳಗೊಂಡಿದ್ದು, ಶರಣ ಸಾಹಿತ್ಯ-ಸಂಸ್ಕೃತಿಗೆ ಕೊಟ್ಟ ಅಮೂಲ್ಯವಾದ
ಕಾಣಿಕೆಯಾಗಿದೆ. ವೀರಶೈವ ಪುರಾಣಗಳ ಲಕ್ಷಣಗಳನ್ನು
ಗುರುತಿಸುವಾಗ ಇವರು ಈಗಾಗಲೇ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಎಂ.ಆರ್.ಶ್ರೀನಿವಾಸ ಮೂರ್ತಿ
ಮತ್ತು ಸದಾನಂದ ನಾಯಕರ ಪುಸ್ತಕಗಳನ್ನು
ಪ್ರಸ್ತಾಪಿಸಿ ಅವುಗಳಲ್ಲಿಯ ವಿವರಗಳನ್ನು ವಿಶ್ಲೇಷಿಸಿ, ನಂತರದಲ್ಲಿ ವೀರಶೈವ ಪುರಾಣಗಳ ಲಕ್ಷಣಗಳನ್ನು
ಪ್ರತಿಪಾದಿಸುವ ಪ್ರಾಚೀನ ಕೃತಿಗಳಾದ ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ, , ವಿರೂಪಾಕ್ಷ
ಪಂಡಿತನ ಚೆನ್ನಬಸವಪುರಾಣ, ಗುಬ್ಬಿಯ ಮಲ್ಲಣಾರ್ಯನ ವೀರಶೈವಾಮೃತ ಮಹಾಪುರಾಣ, ಸಿದ್ಧ ನಂಜೇಶನ
ಗುರುರಾಜ ಚಾರಿತ್ರ ಕೃತಿಗಳಲ್ಲಿರುವ ವಿವರಗಳನ್ನು ವಿಶ್ಲೇಷಣೆ ಗೊಳಪಡಿಸಿದ್ದಾರೆ.
ಮುಂದುವರಿದು, ವೀರಶೈವ ಪುರಾಣ ನಾಮಕೃತಿಗಳು
ಎಂದು ಸುಮಾರು ೧೨ ಪುಟಗಳಲ್ಲಿ ೫೨ ಮಂದಿಯ ಕವಿಗಳ
ಕೃತಿಗಳನ್ನು ಅವುಗಳ ಕಾಲ ಮತ್ತು ಬಳಸಲ್ಪಟ್ಟಿರುವ ಛಂದಸ್ಸು ಇವುಗಳ ಬಗೆಗೆ ಮಾಹಿತಿಯನ್ನು
ಕೊಡಮಾಡಿದ್ದಾರೆ. ಇದು ಅವರ ಪಿಎಚ್.ಡಿ. ಸಂಶೋಧನಾ ನಿಬಂಧವಾಗಿದ್ದು ಬೆಂಗಳೂರು ವಿಶ್ವವಿದ್ಯಾಲಯದ
ಕನ್ನಡ ಅಧ್ಯಯನ ಕೇಂದ್ರ ಪ್ರಥಮ ಪಿಎಚ್.ಡಿ.ನಿಬಂಧವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪೊನ್ನ
ಕವಿಯ ಶಾಂತಿಪುರಾಣವು ಬಹಳ ಹಿಂದೆಯೇ ಮುದ್ರಿತಗೊಂಡು ಅದು ಓದುಗರ ಕೈಗೆ ದುರ್ಲಭವಾಗಿದ್ದಂತಹ
ಸಂದರ್ಭದಲ್ಲಿ ಎಸ್. ವಿದ್ಯಾಶಂಕರ ಅವರು ಆ ಕಾವ್ಯದ ಸಂಗ್ರಹ ಭಾಗವನ್ನು ಅಧ್ಯಯನ
ಸಾಮಗ್ರಿಯೊಂದಿಗೆ ಸಂಪಾದಿಸಿ ೧೯೭೪ ರಲ್ಲಿಯೇ ಪ್ರಕಟಿಸಿದ್ದರು. ಇದು ಇವರ ಹಳಗನ್ನಡ ಸಾಹಿತ್ಯದ
ಬಗೆಗಿದ್ದ ಪ್ರೀತಿಯನ್ನು ಸೂಚಿಸುತ್ತದೆ. ಇದು ಸಂಗ್ರಹ ಆವೃತ್ತಿಯಾದರೂ ಅದರಲ್ಲಿ ಮೂಲದ ಪಾಠದ
ಸಮಸ್ಯೆಗಳನ್ನು, ಅರ್ಥ ಸಮಸ್ಯೆಗಳನ್ನು ವಿಭಿನ್ನ
ಆಕರಗಳ ಮೂಲಕ ಪರಾಮರ್ಶಿಸಿ ಪರಿಶ್ರಮದಿಂದ ಸಿದ್ಧಪಡಿಸಿದ್ದಾರೆ. ಈ ಸಂಗ್ರಹದ ಬಗೆಗೆ ಅವರ
ಪಿಎಚ್.ಡಿ. ಗುರುಗಳಾದ ರಂ.ಶ್ರೀ. ಮುಗುಳಿಯವರು ಈ ಕ್ಲಿಷ್ಠವಾದ ಕಾವ್ಯದ ಸಂಪಾದಿತ ಸಂಗ್ರಹ ಆವೃತಿ
ಪ್ರಕಟವಾದುದು ಅದೇ ಮೊದಲು ಎಂಬ ಅಭಿಪ್ರಾಯವನ್ನು ತಾಳಿರುವುದು ಇವರ ಸಂಪಾದನಾ ಸಾಮರ್ಥ್ಯದ ಹೆಗ್ಗುರುತಾಗಿದೆ.
ಒಟ್ಟಾರೆ ಕನ್ನಡ ಸಾಹಿತ್ಯ- ಸಂಸ್ಕೃತಿಯ ಕುರಿತು
ಅದರಲ್ಲೂ ಶರಣ ಸಾಹಿತ್ಯ-ಸಂಸ್ಕೃತಿಯನ್ನು ಧಾರ್ಮಿಕವಾಗಿ,ವೈಚಾರಿಕವಾಗಿ, ದಾರ್ಶನಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಮತ್ತು ಸಂಶೋಧನಾತ್ಮಕವಾಗಿ ತೊಡಗಿಕೊಂಡ ವಿದ್ವಾಂಸರಲ್ಲಿ
ಎಸ್.ವಿದ್ಯಾಶಂಕರ ಅವರು ಮುಂಚೂಣಿಯಲ್ಲಿ ಇದ್ದವರು. ಇವರ ವೀರಶೈವ ಸಾಹಿತ್ಯ ಸಂಸ್ಕೃತಿ ಕುರಿತ ಸಂಶೋಧನೆಯು ಕನ್ನಡ
ಸಾಹಿತ್ಯ ವಾಹಿನಿಯಲ್ಲಿ ಒಂದಷ್ಟು ಮುಂದೆ ಸಾಗಿದೆ. ಹಿಂದಿನವರು ಒದಗಿಸಿರುವ ಸಾಧಕ ಬಾಧಕ ಸಾಮಗ್ರಿಗಳ ಜೊತೆಗೆ ತನ್ನದೇ ಆದ ನೂತನ ಆಧಾರಗಳನ್ನು ಬಳಸಿಕೊಂಡು ನೂತನ ದೃಷ್ಟಿಕೋನವನ್ನು ತೋರಿದ್ದಾರೆ. ಆಧುನಿಕ ಪೂರ್ವದ ಸಾಹಿತ್ಯದ ಅಧ್ಯಯನದ ಪ್ರಾಚೀನ ನಡೆಗಳನ್ನು
ವಿವರಿಸುತ್ತಲೇ ವಿಸ್ತರಿಸುವ ಹಾಗೂ ಆಧುನಿಕ ಪೂರ್ವದ ಸಾಹಿತ್ಯವನ್ನು ಅಧ್ಯಯನ ಮಾಡಲು ಬೇಕಾದ ಆಕರಗಳನ್ನು
ಶೋಧಿಸಿ ಒದಗಿಸಿರುವ ಕೆಲಸವನ್ನು ಎಸ್. ವಿದ್ಯಾಶಂಕರ ಅವರ ಸಂಶೋಧನೆಯಲ್ಲಿ ಕಾಣಬಹುದು. ಇಂದು ಆಧುನಿಕ
ಪೂರ್ವದ ಸಾಹಿತ್ಯವನ್ನು ನಿರಂತರವಾಗಿ ಮೌಲ್ಯಮಾಪನ ಮಾಡುವುದಕ್ಕಿಂತ ಅರ್ಥ ವ್ಯಾಖ್ಯಾನ ಮಾಡುವ ನೆಲೆಗಟ್ಟಿನಲ್ಲಿ
ಸ್ವಲ್ಪ ಮಟ್ಟಿಗೆ ಅಧ್ಯಯನ ನಡೆಯುತ್ತಿದೆ. ಇದರಿಂದಾಗಿ ಪ್ರಾಚೀನ ಸಾಹಿತ್ಯದ ತಿಳಿವಳಿಕೆ ಪೂರ್ಣಪ್ರಮಾಣದಲ್ಲಿ
ಓದುಗರಿಗಾಗುತ್ತದೆಯೇ? ಎಂಬ ಅನುಮಾನ ವಿದ್ವತ್ ಮಂಡಳಿಯಲ್ಲಿ ಇಣುಕಿದೆ. ಎಸ್. ಶಿವಣ್ಣ, ಸಿ.ಮಹದೇವಪ್ಪ,
ವೀರಣ್ಣರಾಜೂರ,ಬಿ.ನಂಜುಂಡಸ್ವಾಮಿ ರಂತಹ ಹಸ್ತಪ್ರತಿ ತಜ್ಞರು ತಮ್ಮ ಆಕರ ಶೋಧನೆಯ ಮೂಲಕ ಹೊರ ತಂದ ಸಾಹಿತ್ಯ
ಚರಿತ್ರೆಗೆ ಸಂಬಂಧಿಸಿದ ಸಂಗತಿಗಳಾಗಲಿ, ಕವಿಗಳ ಕಾಲನಿರ್ಣಯ, ವೈಯಕ್ತಿಕ ಸಂಗತಿಗಳಾಗಲೀ, ಕವಿಗಳ ಅನುಪಲಬ್ಧ
ಕೃತಿಗಳ ಬಗೆಗಿನ ಇವರ ನೂತನ ಸಂಗತಿಗಳಾಗಲೀ ಇವೆಲ್ಲವೂ ಇಡಿಯಾಗಿ ಹಾಗೂ ಬಿಡಿಯಾಗಿ ದೊರೆಯುತ್ತಿದ್ದರೂ
ಈ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡಿರುವಂತಹ ಹಲವರು ಅವುಗಳನ್ನು ಗಮನಿಸದೇ ಅದೇ ಹಳೆಯ ಸಂಗತಿಗಳನ್ನು
ತಮ್ಮ ಅಧ್ಯಯನಗಳಲ್ಲಿ ಬಳಸುತ್ತಿರುವುದು ಹಾಗೂ ಪ್ರಸ್ತಾಪಿಸುತ್ತಿರುವುದು ದುಖಃಕರ ಸಂಗತಿಯಾಗಿದೆ.
ಆದರೆ ವಿದ್ಯಾಶಂಕರ ಅವರು ತಮ್ಮ ಸಂಶೋಧನಾ ಬರೆಹಗಳಲ್ಲಿ
ಎಸ್.
ಶಿವಣ್ಣರವಂತಹ
ಆಕರ ವಿಜ್ಞಾನಿಗಳ ಶೋಧನೆಗಳನ್ನು ಬಳಸಿಕೊಂಡು ಆಧುನಿಕ
ಪೂರ್ವದ ಸಾಹಿತ್ಯ ಚರಿತ್ರೆಯನ್ನು ಪುನರ್ ನಿರ್ಮಾಣ ಮಾಡುವಂತಹ ಯೋಜನೆಯನ್ನು ಕೈಗೊಂಡು ಪೂರ್ಣಗೊಳಿಸಿದ್ದಾರೆ.
ಎಸ್. ವಿದ್ಯಾಶಂಕರ ಅವರ ಸಂಶೋಧನಾ ಲೇಖನಗಳಲ್ಲಿ ಇಲ್ಲಿಯವರೆಗೂ ಸಂಶೋಧನೆ ಮತ್ತು ಅಧ್ಯಯನದ ಮೂಲಕ
ಬೆಳಕಿಗೆ ಬಂದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಅವುಗಳ ಸತ್ಯಾಸತ್ಯತೆಯನ್ನು ಓರೆಗೆ ಹಚ್ಚಿ ಸಂಶೋಧನಾತ್ಮಕವಾಗಿ
ಮತ್ತು ವಿಮರ್ಶಾತ್ಮಕವಾಗಿ
ಕೊಡ ಮಾಡಿರುವುದನ್ನು ನಾವು ಕಾಣಬಹುದು. ಸಾಹಿತ್ಯ ಚರಿತ್ರೆಯ
ನಿರ್ಮಾಣದ ಸಂದರ್ಭದಲ್ಲಿ, “ಸಂಶೋಧನ ವಿಮರ್ಶೆ, ರಸ ವಿಮರ್ಶೆ, ದರ್ಶನ ವಿಮರ್ಶೆಗಳ ಸಂಪುಟವಾಗಿ ಸಾಹಿತ್ಯ ಚರಿತ್ರೆ ರೂಪಗೊಳ್ಳಬೇಕಾಗುತ್ತದೆ. ಕೃತಿಸ್ವರೂಪ, ಕವಿಜೀವನ ಮತ್ತು ಯುಗಧರ್ಮಗಳ ಬಗೆಗೆ ಸಂಶೋಧನೆ ನಡೆಸುತ್ತ ಕಾವ್ಯದಲ್ಲಿ ಪ್ರವಹಿಸಿದ ರಸತರಂಗಗಳನ್ನು ಗಮನಿಸುತ್ತ ಕೊನೆಗೆ ಕವಿದರ್ಶನವನ್ನು ಎತ್ತಿಹೇಳುವಲ್ಲಿ ಸಾಹಿತ್ಯ ಚರಿತ್ರೆ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿ ಸಾಹಿತ್ಯ ಚರಿತ್ರೆಯು ಕವಿಚರಿತ್ರೆಯ ಮತ್ತು ರಸವಿಮರ್ಶೆಗಳ ಪಾತಳಿಯ ಮೇಲಷ್ಟೇ ವಿಹಾರಯಾತ್ರೆ ಕೈಗೊಳ್ಳಬಾರದು ಎನ್ನುವ ಎಚ್ಚರಿಕೆಯನ್ನೂ ನೀಡಿರುವರು ಎಂದು
ಆರ್.ಸಿ.ಹಿರೇಮಠರ ಹೇಳಿಕೆಯನ್ನು ಉಲ್ಲೇಖಿಸುತ್ತಾ, ಈ ಎಚ್ಚರಿಕೆಯು ಯಾವ ರೀತಿ ನನ್ನ ಈ ವೀರಶೈವ ಸಾಹಿತ್ಯ ಚರಿತ್ರೆಯ ಬರವಣಿಗೆಯುದ್ದಕ್ಕೂ ನನ್ನನ್ನು ಸರಿದಾರಿಯಲ್ಲಿ ಹೋಗಲು ಪ್ರಚೋದಿಸಿದೆ
ಎಂಬುದನ್ನು ಸ್ವತಹ ಅವರೇ ಹೇಳಿಕೊಂಡಿರುವುದು ಗಮನಿಸ ತಕ್ಕ ಸಂಗತಿಯಾಗಿದೆ. ಅವರ ಹೇಳಿಕೆಯನ್ನು ಉಲ್ಲೇಖಿಸಿ ಹೇಳುವುದಾದರೆ ಸಂಶೋಧನ – ವಿಮರ್ಶನ - ಸಂತುಲನ ಕ್ರಿಯೆಗಳು ಮುಪ್ಪರಿಗೊಂಡು
ಒಂದು ವಿಶಿಷ್ಟ ಪಾಕವಾಗಿ ರೂಪುಗೊಂಡಿರುವ ವಿದ್ಯಾಶಂಕರ ಅವರ ವೀರಶೈವ ಸಾಹಿತ್ಯ ಚರಿತ್ರೆಯನ್ನು ಕುರಿತ
ಬೃಹತ್ ೦೪ ಸಂಪುಟಗಳೇ ಇದಕ್ಕೆ ನಿದರ್ಶನ. ಸಾಂಸ್ಥಿಕ ಅಥವಾ ಸಾಮೂಹಿಕ ಪ್ರಯತ್ನದಲ್ಲಿ ಯೋಜನೆಯ ರೂಪದಲ್ಲಿ
ಹಮ್ಮಿಕೊಳ್ಳ ಬಹುದಾದ ಪ್ರಯತ್ನವಾದ ಬೃಹತ್ ವೀರಶೈವ
ಸಾಹಿತ್ಯ ಚರಿತ್ರೆಯ ಸಂಪುಟಗಳ ನಿರ್ಮಾಣವನ್ನು ಏಕಾಂಗಿಯಾಗಿ ಸಿದ್ಧ ಪಡಿಸಿ ನೀಡಿರುವುದು ಅವರ ಪಾಂಡಿತ್ಯ, ಆಳವೂ ವಿಸ್ತಾರವೂ ಆದ ಅಧ್ಯಯನ, ಶ್ರಮ, ಉತ್ಸಾಹದ ಪ್ರತೀಕವಾಗಿದೆ. ಸಮಗ್ರ
ವೀರಶೈವ ಸಾಹಿತ್ಯ ಚರಿತ್ರೆಯ ಸಂಪುಟಗಳ ರಚನೆಯಲ್ಲಿ ಎಸ್.ವಿದ್ಯಾಶಂಕರ
ಅವರು ವೀರಶೈವ ಸಾಹಿತ್ಯದ ಇತಿಹಾಸವನ್ನು ಕೆಲವು ಕಾಲಘಟ್ಟಗಳಾಗಿ ವಿಭಾಗಿಸಿಕೊಂಡು ಲಭ್ಯವಿರುವ ಎಲ್ಲಾ
ಮಾಹಿತಿಗಳನ್ನು ಅಳವಡಿಸಿ ಕೊಂಡು ಪೂರ್ವಾಗ್ರಹದಿಂದ ದೂರವಾಗಿ ವಸ್ತು ನಿಷ್ಠ ಬದ್ಧತೆಯನ್ನು ಅಳವಡಿಸಿ
ಕೊಂಡಿರುವುದನ್ನು ಕಾಣಬಹುದಾಗಿದೆ. ಈ ಸಂಪುಟಗಳ ಮೂಲಕ
ವೀರಶೈವ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯ ಆಸಕ್ತ ಅಧ್ಯಯನಕಾರರಿಗೆಲ್ಲರಿಗೂ ಸಂಪೂರ್ಣವಾಗಿಯೇ ಆಗುತ್ತದೆ ಎಂಬುದರಲ್ಲಿ
ಯಾವುದೇ ಅತಿಶಯೋಕ್ತಿ ಇಲ್ಲ.
ವಿದ್ಯಾಶಂಕರ ಅವರ ಸಂಶೋಧನಾ ಕೃತಿಗಳು ಮತ್ತು ಲೇಖನಗಳಲ್ಲಿ ಬಹಳಷ್ಟು ಲೇಖನಗಳು ವಿದ್ವತ್ ವಲಯದಲ್ಲಿ ಅಷ್ಟಾಗಿ ಚರ್ಚೆಗೆ ಗ್ರಾಸವಾಗಿಲ್ಲ
ಎಂಬುದು ನನ್ನನ್ನು ಕಾಡುವ ಪ್ರಶ್ನೆಯಾಗಿದೆ. ಇದಕ್ಕೆ ಕಾರಣವೂ ಇದೇ ಎಂದೆನಿಸುತ್ತದೆ. ಇವರ ಸಾಹಿತ್ಯ
ಸಂಶೋಧನೆಯಂತೂ ಬಹುತೇಕ ಕನ್ನಡದ ಉಪೇಕ್ಷಿತ ಸಾಹಿತ್ಯದ
ಕಡೆಗಿರುವುದು. ಶರಣ ಸಾಹಿತ್ಯ-ಸಂಸ್ಕೃತಿ ಚರಿತ್ರೆಯ
ಅಧ್ಯಯನಲ್ಲಿ ಬಸವಾದಿ ಪ್ರಮುಖ ವಚನಕಾರರು, ಹರಿಹರ, ಚಾಮರಸ, ಶೂನ್ಯಸಂಪಾದನಾಕಾರರು ಪ್ರಮುಖ ಸ್ಥಾನವನ್ನು
ಪಡೆದಿದ್ದು ಇಲ್ಲಿಯವರೆಗೂ ಹೆಸರೇ ಕೇಳದಿರುವ ಅಜ್ಞಾತರಾಗಿ
ಹಸ್ತಪ್ರತಿಗಳಲ್ಲಿಯೇ ಉಳಿದಿದ್ದ ಕೊಂಡಗುಳಿ ಕೇಶಿರಾಜ,
ಕೆಂಭಾವಿ ಭೋಗಣ್ಣ, ದೀಪದ ಕಲಿಯಾರರ ಕಾವ್ಯ, ಮುಂತಾದ ಅಪ್ರಕಟಿತ ಕೃತಿಗಳನ್ನು ಸಂಪಾದಿಸಿ ಸುದೀರ್ಘ ಪ್ರಸ್ತಾವನೆಯೊಂದಿಗೆ ಸಂಪಾದಿಸಿ ಪ್ರಕಟಿಸಿರುವುದು
ಹಾಗೂ ಆ ಕೃತಿಗಳಿಗೆ ಸಂಬಂಧಿಸಿದ ಹಾಗೆ ಲೇಖನಗಳನ್ನು ಬರೆದಿರುವುದು. ಅಲಕ್ಷಿತ ವಚನಕಾರರ ಬಗೆಗಿ ಅಧ್ಯಯನಮಾಡಿರುವುದು.
ಛಂದಸ್ಸು ಭಾಷೆಯ ದೃಷ್ಟಿಯಿಂದ ಎಷ್ಟೇ ಮುಖ್ಯವಾಗಿದ್ದರೂ ಸಾಧಾರಣ ಮಟ್ಟದ ಕವಿಗಳು ಎಂಬ ಹಣೇಪಟ್ಟ ಇತಹ
ಕವಿಗಳಿಗೆ ಸಲ್ಲಿದ್ದರಿಂದಲೇನೋ ಇವರ ಶ್ರಮಾಧಾರಿತ ಸಂಶೋಧನೆಯ ಕಾಯಕ ಅನ್ಯ ಸಂಶೋಧಕರ ಗಮನವನ್ನು ಬಹುಬೇಗ
ಪಡೆಯದಾಗಿದೆ ಎಂದೆನಿಸುತ್ತದೆ. ಎಷ್ಟೋಜನರಿಗೆ ಇಂತಹ ಕವಿಗಳ ಹೆಸರೇ ತಿಳಿದಿರಲಿಕ್ಕಿಲ್ಲ. ಅವರ ಕೃತಿಗಳ
ಬಗೆಗೆ ತಿಳಿಯುವುದೆಂತು? ಇತ್ತೀಚಿನ ದಿನಗಳಲ್ಲಿ ವಿದ್ವತ್ ವಲಯದಲ್ಲಿ ಸೃಜನಶೀಲ ಸಾಹಿತ್ಯದ ಬಗ್ಗೆ
ನಡೆಯುವಷ್ಟು ಚರ್ಚೆ ಸಂಶೋಧನಾ ಸಾಹಿತ್ಯದಲ್ಲಿ ನಡೆಯದೇ ಇರುವುದು. ಸಂಶೋಧನೆಯ ಮೂಲಕ ಶೋಧಿಸಲ್ಪಟ್ಟ
ಸಂಗತಿಗಳನ್ನು ಇತರೆಯವರು ಒಪ್ಪಲು ಅಥವಾ ನಿರಾಕರಿಸಲು ಆ ಕ್ಷೇತ್ರದ ಪರಿಯಚಯವಿರಬೇಕು. ಅವರಷ್ಟೇ ಸುಧೀರ್ಘವಾದ
ಅಧ್ಯಯನದಲ್ಲಿ ತೊಡಗಿರಬೇಕು. ಇದು ಈಗಿನ ಕಾಲದಲ್ಲಿ ಕೆಲವು ಮಂದಿಯನ್ನು ಹೊರತು ಪಡಿಸಿ ತಕ್ಕ ಮಟ್ಟಿಗೆ
ಅಸಾಧ್ಯವಾದ್ದರಿಂದ ಅಂತಹ ಕೃತಿಗಳ, ಲೇಖನಗಳ ಸಮೀಪಕ್ಕೆ ಹೋಗದವರೆ ಹೆಚ್ಚಾಗಿ ಇದ್ದಾರೆ. ಅಲ್ಲದೇ ಅವು
ನಮಗೆ ಪ್ರಸ್ತುತವಲ್ಲ ಎಂಬ ಅನಾಧಾರಣೀಯ ದೃಷ್ಟಿಕೋನವನ್ನು ಹೊಂದಿದವರಾಗಿದ್ದಾರೆ.
ಒಟ್ಟಾರೆ ಆಧುನಿಕ
ಪೂರ್ವದ ಸಾಹಿತ್ಯದ ಆಕರಗಳ ಮರುಶೋಧ ಮತ್ತು ಅವುಗಳ ಅಳವಡಿಕೆ ಯಲ್ಲಿ ಎಸ್.ವಿದ್ಯಾಶಂಕರ ಅವರ ಆಕರಗಳಶೋಧ- ವ್ಯಾಖ್ಯಾನ ಕೇಂದ್ರಿತ ಸಂಶೋಧನೆಗಳು ಮೌಲ್ಯಯುತ ಹಾಗೂ ಗಂಭೀರತೆಯನ್ನು
ಪಡೆದು ಕೊಂಡಿವೆ. ಚಿದಾನಂದಮೂರ್ತಿಯವರು ಹೇಳಿರುವಂತೆ ಎಸ್.ವಿದ್ಯಾಶಂಕರ ಅವರು ಸಂಶೋಧನೆಗಾಗಿ ಬದುಕನ್ನೇ ಮೀಸಲಿಟ್ಟವರು ಎಂಬ ಮಾತು ಒಪ್ಪತಕ್ಕದ್ದೇ
ಆಗಿದೆ.