ಸೋಮವಾರ, ಆಗಸ್ಟ್ 22, 2022

 

   ಮಧ್ಯಕಾಲೀನ ಕನ್ನಡ ಸಾಹಿತ್ಯ: ದೇಸಿಯತೆಯ ಹುಡುಕಾಟದ ಅನುಸಂಧಾನ

                                           ಡಾ.ಸಿ.ನಾಗಭೂಷಣ

ದೇಸಿ ಪದವು ಸಾಹಿತ್ಯ ಪರಿಕಲ್ಪನೆಯಲ್ಲಿ ಪರಿಚಿತವಾದ ಪದ. ದೇಶಿವಾದ ಎನ್ನುವ ಪಾರಿಭಾಷಿಕ ಪದಕ್ಕೆ ಖಚಿತವಾದ ವ್ಯಾಖ್ಯೆ ದೊರೆತಿಲ್ಲವಾದರೂ ಹೆಸರನ್ನು ಹೊಂದಿರುವ ಸಾಹಿತ್ಯಕ ಚಳುವಳಿಯೊಂದು ಕನ್ನಡ ಸಾಹಿತ್ಯದಲ್ಲಿ ಮಹತ್ವ ಪಡೆದಿದ್ದು ಹಲವಾರು ಶ್ರೇಷ್ಠ ಕೃತಿಗಳ ಹುಟ್ಟಿಗೆ ಕಾರಣವಾಗಿರುವ ಮತ್ತು ಕಾಲ ಕಾಲಕ್ಕೆ ವಿಮರ್ಶೆಯ ಒಲವನ್ನು ಪ್ರಭಾವಿಸಿರುವ ಪ್ರವೃತ್ತಿಯೊಂದರ ದ್ಯೋತಕವಾಗಿದೆ.

ದೇಸಿಯತೆ ಎಂದರೆ ಒಂದು ಪ್ರದೇಶಕ್ಕೆ ಸಂಬಂಧಪಟ್ಟ ಅಂದರೆ ಆಯಾ ಪ್ರದೇಶದ ಜನಸಮುದಾಯದ ಚಿಂತನೆ ಭಾವನೆ, ಸಂಸ್ಕೃತಿ ಆಚರಣೆಗಳು, ಅದೇ ರೀತಿ ಇತರರಿಗಿಂತ ಭಿನ್ನವಾದುದು, ವೈದೃಶ್ಯವಾದುದು ಸರಳೀಕೃತಗೊಳಿಸಿ ಹೇಳುವುದಾದರೆ ನಮ್ಮಗೆ ಮಾತ್ರ ಸೇರಿದ ವಿಷಯವಾಗಿದೆ.

ದೇಸಿ, ದೇಸಿಯತೆಗಳು ಕೇವಲ ಸಾಹಿತ್ಯಕ್ಕೆ ಸಂಬಂಧಿಸಿದುದು ಆಗಿರದೆ ಮನೋಧರ್ಮಕ್ಕೆ, ಬದುಕನ್ನು ಅರಿಯುವ ರೀತಿಗೆ ಸಂಬಂಧಪಟ್ಟ ಸಂಗತಿಯೂ ಹೌದು. ದೇಸಿತನವನ್ನು ಕುರಿತ ಹುಡುಕಾಟಗಳು ನಮ್ಮ ತನದ ಹುಡುಕಾಟದ ಒಂದು ಭಾಗವೇ ಆಗಿದೆ. ದೇಸಿತನದ ಬಗೆಗಳು ಕೇವಲ ಸಾಹಿತ್ಯದಲ್ಲಿ ಮಾತ್ರವಲ್ಲದೆ ಬದುಕಿನಲ್ಲೂ ಗುರುತಿಸಿ ಉಳಿಸಿಕೊಳ್ಳಬೇಕಾಗಿದೆ. ದೇಸಿ ಎಂಬುದು ಸಿದ್ಧವಾಗಿ ಬಳಕೆಗೆ ಲಭ್ಯವಿರುವ ವಸ್ತುವಲ್ಲಎಂಬುದನ್ನು ಗಮನಿಸ ಬೇಕು.

    ದೇಸಿವಾದ ಎಂಬುದು ಇಂಗ್ಲೀಷ್ ನೆಟಿವಿಸಂ ಗೆ ಸಂವಾದಿಯಾಗಿರುವ ಪದ. ದೇಸಿ ಮತ್ತು ದೇಶೀ ಇವೆರಡೂ ದೇಶ್ಯ ಎನ್ನುವ ಪದದಿಂದಲೇ ಹುಟ್ಟಿದೆ. ದೇಸಿ ಎನ್ನುವುದು ಮೂಲತಃ ಅಭಿವ್ಯಕ್ತಿಗೆ ಭಾಷೆಯ ಬಳಕೆಗೆ ಸಂಬಂಧಪಟ್ಟುದಾಗಿದೆ. ದೇಸಿಯ ಬಳಕೆಯ ಹಿಂದೆ ದೇಶಿವಾದದ ಒಲವು ಕಂಡುಬರುತ್ತದೆ. ದೇಸಿವಾದದ ಹರವು ಭಾಷೆಯ ಬಳಕೆಯನ್ನಲ್ಲದೆ, ಸಾಹಿತ್ಯ, ವಸ್ತು, ನಿರೂಪಣೆ, ಬರಹಗಾರರ ಮೂಲ ಕಲ್ಪನೆ ಮತ್ತು ಕೃತಿಯ ಒಟ್ಟು ಸಾಂಸ್ಕೃತಿಕ ಸಂದರ್ಭವನ್ನು, ಮೀಮಾಂಸೆಯ ಧೋರಣೆಗಳನ್ನು ಪ್ರಭಾವಿಸುವ ಒಂದು ಪ್ರವೃತ್ತಿಯಾಗಿಯೂ ಕಾಣಬಹುದಾಗಿದೆ. ದೇಶ್ಯಎಂಬ ಪದದಿಂದ ನಿಷ್ಪನ್ನವಾಗಿರುವದೇಸೀಪದ, ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ವಿಭಿನ್ನ ಅರ್ಥವಲಯಗಳಲ್ಲಿ ಬಳಕೆಗೊಂಡಿದೆ. ಪ್ರಧಾನವಾಗಿ ಕನ್ನಡದ ಪ್ರಾದೇಶಿಕ ಉಪಭಾಷೆಗಳನ್ನು, ಅವುಗಳ ವೈಲಕ್ಷಣದಿಂದಾಗಿ ತನ್ನ ಅನನ್ಯತೆ ಕಾಪಾಡಿಕೊಂಡಿರುವ ಶೈಲಿಯಾಗಿ ಬಳಕೆಗೊಂಡಿದೆ. ತತ್ಸಮ-ತದ್ಭವವಾಗಿ ಸಮಸಂಸ್ಕೃತವಾಗಿ, ಮಾರ್ಗಸಂಸ್ಕೃತಿ-ದ್ರಾವಿಡಸಂಸ್ಕೃತಿಯ ಸಮ್ಮಿಲನದ ಉತ್ಪನ್ನವಾಗಿ, ಕನ್ನಡದಲ್ಲಿ ಕಾವ್ಯಸಂಪ್ರದಾಯವೊಂದರ ಹುಟ್ಟಿಗೆ ದೇಸಿಯು ಕಾರಣವಾಗಿರುವುದನ್ನು ಕನ್ನಡ ಕವಿಗಳು ದಾಖಲಿಸಿದ್ದಾರೆ. ಸಂಸ್ಕೃತ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿಯೂ ತನ್ನ ವಿಶಿಷ್ಟತೆಯ ಸೊಬಗನ್ನು, ಚಲುವನ್ನುಳಿಸಿ ಬೆಳೆಸಿಕೊಂಡು ಬಂದಿದೆ. ಕನ್ನಡ ಕಾವ್ಯಪರಂಪರೆ, ಸ್ಥಳಿಯವಾದ, ಪ್ರಾದೇಶಿಕವಾದುದನ್ನು ಅಂತಸ್ತಗೊಳಿಸಿಕೊಂಡು, ಒಂದು ವಿಶಿಷ್ಟ ಕಾವ್ಯಸಂಪ್ರದಾಯದ ಚಾಲನೆಗೆ ಕಾರಣವಾಗುವುದರೊಂದಿಗೆದೇಸೀಎನ್ನುವುದು ಕನ್ನಡತನದ ಮುದ್ರೆಯಾಗಿ ನಿರ್ವಚಿಸಿಕೊಂಡು ಬಂದಿದೆ. ದೇಸೀ ಎಂಬುದನ್ನು ಕುರಿತಾಗಿಅದು ಮೂಲತಃ ದೇಶ್ಯ ಅಥವಾದೇಶಿಪದವೇದೇಸೀ ಎಂಬ ನಿಲುವು ವ್ಯಕ್ತವಾಗಿದೆ. ಯಾವ ಲಕ್ಷಣಕ್ಕೂ ಒಳಗಾಗದೆ ದೇಸಿಗಬ್ಬಿಗರ ಪ್ರತಿಭಾ ಬಲದಿಂದ ಪದ-ಹಾಡುಗಳ ರೂಪದಲ್ಲಿ ಉದಯಿಸಿದುದು ಎಂದು ಅದರ ತಾತ್ಪರ್ಯವಿರಬೇಕು. ದೇಸೀ ಎನ್ನುವುದು ಬರೀ ಸಾಹಿತ್ಯಕ್ಕೆ ಸಂಬಂಧಿಸಿದ್ದಲ್ಲ. ಅದು ಬದುಕನ್ನು, ಮನುಷ್ಯನ ಜೀವನ ಶೈಲಿಯನ್ನು ಅವಲಂಭಿಸಿರುವುದು, ಸಹಜ ಜೀವನವೇ ಆಗಿರುವಂತಹದು. ದೇಸೀಗೆ ದೇಶಸಂಬಂಧಿ ಎಂಬುದು ವಾಚ್ಯಾರ್ಥ, ಲಕ್ಷಣಮುಕ್ತವಾದ ರಚನೆ ಎಂಬುದು ವಿಶೇಷಾರ್ಥ. ಪ್ರಾಚೀನ ಸಾಹಿತ್ಯ ಸಂದರ್ಭದಲ್ಲಿ ದೇಸೀ ಎಂಬುದು ಶೈಲಿಯಾಗಿ ಬಳಕೆಯಾಗಿದೆ.’ ದೇಸೀ ಎಂಬುದು ಕೇವಲ ಭಾಷಿಕವಾಗಿ ಮಾತ್ರ ಪರಿಗಣಿಸದೇ ಸಾಂಸ್ಕೃತಿಕ ಒಳ ಒತ್ತಡದಿಂದ ಬಂದುದು ಮತ್ತು ಇದು ಜನಪದ ಸಮುದಾಯವನ್ನೇ ಪ್ರತಿನಿಧಿಸುವಂತಹದು ಆಗಿದೆ ಎನ್ನ ಬಹುದು. ‘ಪರಂಪರಾಗತವಾದ ಸಂಸ್ಕೃತಿಯ ಎಲ್ಲಾ ನೆಲೆಗಳು ಮೂಲ ಸ್ವರೂಪದಲ್ಲಿ ಅಭಿವ್ಯಕ್ತಿಗೊಳ್ಳುವುದನ್ನು ದೇಸೀಯತೆ ಎನ್ನುತ್ತೇವೆ. ‘ಸ್ಥಳೀಯವಾದ, ಒಂದು ಪ್ರದೇಶದ ಪರಂಪರಾಗತವಾದ, ಸಾಂಸ್ಕೃತಿಕ ಅಕೃತ್ರಿಮವಾದ ಬದುಕಿನ ಅನುಭವದ ನೆಲೆಗಳನ್ನು ಮೂಲ ಸ್ವರೂಪದಲ್ಲಿಯೇ ಕಟ್ಟಿಕೊಡುವ ಒಂದು ಬಗೆಯ ತಿಳುವಳಿಕೆಯೇ ದೇಸೀಯತೆಯಾಗಿದೆ. ‘ದೇಸೀಯತೆಎನ್ನುವುದು ಅದುಒಂದು ಪ್ರದೇಶಕ್ಕೆ ಸಂಬಂಧಪಟ್ಟ ಅಂದರೆ ಆಯಾ ಪ್ರದೇಶದ ಜನಸಮುದಾಯದ ಚಿಂತನೆ, ಭಾವನೆ, ಸಂಸ್ಕೃತಿ, ಮತ್ತು ಆಚರಣೆಗಳು ಇದೇ ರೀತಿ ಇತರರಿಗಿಂತ ಭಿನ್ನವಾದುದು, ವೈದೃಶ್ಯವಾದುದು ಅಂತಹದು ಯಾವುದಿದ್ದರೂ ಅದು ಅಲ್ಲಿಯ ದೇಸೀಯತೆ ಎಂದು ಪರಿಗಣಿಸಬೇಕು. ಸರಳವಾಗಿ ಹೇಳುವುದಾದರೆ ಅದು ತಮ್ಮತನ ತಮಗೆ ಮಾತ್ರ ಸೇರಿದ ವಿಷಯ.’ ಒಂದು ರೀತಿಯಲ್ಲಿ ಅದು ಸ್ವಂತಿಕೆಯಂದೇ ಹೇಳಬಹುದು.

ದೇಸಿವಾದ ಎಂದರೆ, ಒಂದು ಸಾಹಿತ್ಯದ ಸತ್ವವನ್ನು ಸಾಹಿತ್ಯವು ಹುಟ್ಟಿಕೊಳ್ಳುವ ಭಾಷಾ ಸಮುದಾಯದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಪ್ರದಾಯದ ವಿಶಿಷ್ಟ ಒಲವುಗಳನ್ನು, ಸಮುದಾಯದ ಸಾಂಸ್ಕೃತಿಕ ಅನನ್ಯತೆಯನ್ನು, ಸಾಹಿತ್ಯಕ್ಕಿರುವ ತನ್ನದೇ ಆದ ಸ್ವಾಯತ್ತತೆಯನ್ನು ಗುಣಾತ್ಮಕವೆಂದು ಒಪ್ಪಿಕೊಳ್ಳುವ ಧೋರಣೇ ಅಥವಾ ಸಿದ್ಧಾಂತ ಎಂಬ ವಿದ್ವಾಂಸರ ಅನಿಸಿಕೆಯು ಸ್ವೀಕಾರಾರ್ಹವಾಗಿದೆ. ದೇಸಿವಾದವು ನಿರ್ದಿಷ್ಟವಾದ ಭೌಗೋಳಿಕ ಪ್ರದೇಶದಲ್ಲಿ ಬದುಕುವ ಭಾಷಾ ಸಮುದಾಯವೊಂದರ ಇರುವಿಕೆಯನ್ನು ಸೂಚಿಸುತ್ತದೆ. ಪ್ರಾದೇಶಿಕವಾದದ ಪ್ರತೀಕವಾದ ದೇಸಿಯ ಚೌಕಟ್ಟು ವಿಶಿಷ್ಟವಾದ ಸಂಸ್ಕೃತಿಯನ್ನು ಹೊಂದಿರುವ ಭಾಷಾ ಸಮುದಾಯವೊಂದರ ವಾಸ್ತವಿಕ ಜೀವನದ ಹೊರ ಆವರಣವಾಗಿರುತ್ತದೆ.

ದೇಸಿವಾದದ ಹಿಂದಿರುವ ಸಂಸ್ಕೃತಿ-ಸಾಹಿತ್ಯದ ಪರಿಕಲ್ಪನೆಯ ಪ್ರಕಾರ ಪ್ರತಿಯೊಂದು ಸಂಸ್ಕೃತಿಯೂ ತನ್ನದೇ ಆದ ಕೆಲವು ಲಕ್ಷಣ ಚರ್ಯೆಗಳನ್ನು ಹೊಂದಿರುತ್ತದೆ. ಲಕ್ಷಣಗಳು ಸಂಸ್ಕೃತಿಯ ಒಡಲಾಳದಲ್ಲಿರುವ ಸತ್ವಶೀಲತೆಯೊಂದರ ದ್ಯೋತಕಗಳಾಗಿರುತ್ತವೆ. ಸತ್ವಶೀಲತೆ ಕೆಲವು ನಿರ್ದಿಷ್ಟವಾದ ಕಾಲಮಾನದಲ್ಲಿ ಪ್ರಕಟವಾಗಿಬಿಡುವಂತಹದ್ದಲ್ಲ. ದೇಸಿಯು ಚರಿತ್ರೆಯು ತರಬಹುದಾದ ಎಲ್ಲಾ ಬೆಳವಣಿಗೆ ಮತ್ತು ಬದಲಾವಣೆಗಳ ಮಧ್ಯೆಯೂ ನಿರಂತವಾಗಿ ಉಳಿದುಕೊಂಡು ಬರುವಂತ ಸತ್ವಶೀಲತೆಯುಳ್ಳದ್ದು. ಸತ್ವ ಶೀಲತೆಯ ಬಹುಮುಖ್ಯ ಅಭಿವ್ಯಕ್ತಿ ಎಂದರೆ ಆಯಾ ಸಂಸ್ಕೃತಿಯ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪರಂಪರೆ.

ದೇಸಿವಾದದ ಕೆಲವು ವಿಶಿಷ್ಟ ಲಕ್ಷಣಗಳು.

ಸಾಮಾನ್ಯವಾಗಿ ದೇಶಿಯವೆನ್ನಲಾಗುವ ಪರಿಕಲ್ಪನೆಯ ಬಗ್ಗೆ ನಿರ್ದಿಷ್ಟತೆ ಇಲ್ಲದಿದ್ದರೂ ದೇಶಿಯವಲ್ಲದ ಪರಿಕರಗಳನ್ನು ಹೆಚ್ಚು ಸ್ಪಷ್ಟವಾಗಿ ವಿವೇಚಿಸುತ್ತದೆ. ಮಾರ್ಗ ದೇಸಿ, ವಸ್ತುಕ-ವರ್ಣಕ, ಆಗಮಿಕ-ಲೌಕಿಕ, ಸ್ಥಾವರ-ಜಂಗಮ ರೀತಿಯ ಪ್ರಕಾರಗಳ ವಿಂಗಡಣೆ ಕೂಡ ದ್ವಂದ್ವಾತ್ಮಕತೆಯುಳ್ಳದ್ದು. ಪರಿಕಲ್ಪನೆಗಳ ಹಿಂದೆ ಸ್ಥೂಲವಾದ ದೇಶಿವಾದದ ಹಿನ್ನೆಲೆಯನ್ನು ಕಾಣಬಹುದಾಗಿದೆ.

   ಭಾಷೆ ಅಸ್ತಿತ್ವಕ್ಕೆ ಬಂದಾಗ, ಆ ಭಾಷೆಗೆ ಲಿಪಿ ಪ್ರಾಪ್ತವಾದಾಗ, ಸಾಹಿತ್ಯ ಚಟುವಟಿಕೆಗಳು ಆರಂಭವಾದಾಗ, ನಮ್ಮತನ ಎಂಬುದು ಜಾಗೃತಗೊಳ್ಳುತ್ತದೆ. ಕನ್ನಡದಲ್ಲಿ ದೊರೆತ ಮೊದಲ ಶಾಸ್ತ್ರ ಗ್ರಂಥ ಕವಿರಾಜಮಾರ್ಗವು ಕನ್ನಡ ಭಾಷೆ ಸಾಹಿತ್ಯ ಸಂಸ್ಕರಣಗೊಂಡ ಪ್ರಬುದ್ಧ ಭಾಷೆಯಾಗಬೇಕೆಂಬ ಕಳಕಳಿಯಿಂದ ರಚಿತಗೊಂಡುದು. ಕನ್ನಡ ನಾಡಿನ ವಿಸ್ತಾರವನ್ನು ಕನ್ನಡ ಜನಪದದ ಹಿರಿಮೆಯನ್ನು, ಕನ್ನಡಿಗರ ರೂಪ ಗುಣ ಶೌರ್ಯಗಳನ್ನು ಎದೆತುಂಬಿ ವರ್ಣಿಸುವ ಕೃತಿ ಕರ್ತೃವಿನ ಹೃದಯದಲ್ಲಿ ದೇಸಿಯತೆಯ ಹಿರಿಮೆ ಅಡಗಿರುವುದನ್ನು ನೋಡಬಹುದಾಗಿದೆ. ಕನ್ನಡ ಕಾವ್ಯಪರಂಪರೆಯ ಪರಿಭಾಷೆಯ ನೆಲೆಯಲ್ಲಿ ಹೇಳುವುದಾದರೆ ಕಾವ್ಯ ಎನ್ನುವುದು, ಭಾಷೆ ಎಲ್ಲೆಲ್ಲಿ ತನ್ನ ಸಮಾಜದೊಂದಿಗೆ ಸಂಪರ್ಕವನ್ನೇ ಕಳೆದುಕೊಳ್ಳುವಷ್ಟರಮಟ್ಟಿಗೆ ಪ್ರೌಢಾವಸ್ಥೆಯನ್ನು ತಾಳಿದೆಯೋ ಅಲ್ಲೆಲ್ಲ ಅದುಮಾರ್ಗ ಕಾವ್ಯಪದ್ಧತಿಯಾಗಿ ಮತ್ತು ಎಲ್ಲೆಲ್ಲಿ ಒಂದು ಸ್ಥಿತಿಯಿಂದ ಕೆಳಗಿಳಿದು ಅದು ಕಳೆದುಕೊಂಡ ಸಾಮಾಜಿಕ ಸಂಪರ್ಕವನ್ನು ಮತ್ತೆ ಸ್ಥಾಪಿಸಿಕೊಳ್ಳುವ ಹೋರಾಟದ ಸಂದರ್ಭಗಳಲ್ಲಿದೇಸೀಕಾವ್ಯಪದ್ಧತಿಯಾಗಿ ಕಾಣಿಸಿಕೊಳ್ಳುತ್ತಾ ಬಂದಿದೆ.  

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದೇಸಿಯ ಕಲ್ಪನೆ ಪ್ರಾಚೀನ ಕಾಲದಿಂದಲೇ ಬಂದಿದೆ. ದೇಸಿಯ ಮೊತ್ತಮೊದಲ ಉಲ್ಲೇಖ ದೊರೆಯುವುದು ಕವಿರಾಜಮಾರ್ಗದಲ್ಲಿ . ಕನ್ನಡಂಗಳ್ ಎಂದು ಬಹುವಚನ ಬಳಸಿ ಅದರ ವೈವಿಧ್ಯವನ್ನು ಹೇಳಿರುವುದಲ್ಲದೆ ಅವುಗಳು ಪರಸ್ಪರ ಅರಿಯಲಾರದಷ್ಟು, ವಾಸುಗಿಯೂ ತಿಳಿಯಲಾರದಷ್ಟು ಭಿನ್ನವಾಗಿದೆ ಎಂಬ ವಿವರಣೆ ಕಂಡು ಬರುತ್ತದೆ. ದೇಸಿ ಎನ್ನುವಲ್ಲಿ ಶ್ರೀವಿಜಯ ಕನ್ನಡದ ಪ್ರಾದೇಶಿಕ ಪ್ರಭೇಧಗಳನ್ನು ಗಮನಿಸಿದ್ದಾನೆ. ಕನ್ನಡ ಸಾವಿರಾರು ವರ್ಷಗಳಿಂದ ಸಾಗಿಬಂದಿರುವ ಅಚ್ಚಗನ್ನಡ ದೇಶಿಯ ಭಾಷೆಯಾದರೂ ಮತ್ತೇ ಅದರಲ್ಲೂ ದೇಶಿಯತೆ ಎನ್ನುವುದು ಏನನ್ನೂ ಎಂಬುದಕ್ಕೆ ಅದರ ಪ್ರಾದೇಶಿಕತೆ ಎಂಬುದಕ್ಕೆ ಕವಿರಾಜ ಮಾರ್ಗದ ಪದ್ಯದಿಂದಲೇ ತಿಳಿದುಬರುತ್ತದೆ. ಸಾಂಸ್ಕೃತಿಕ ರಾಜಕೀಯ ಒತ್ತಡದ ಪರಿಣಾಮದಿಂದ ಕನ್ನಡದಲ್ಲಿ ದೊರೆತ ಮೊದಲ ಶಾಸ್ತ್ರ ಗ್ರಂಥ ಕವಿರಾಜಮಾರ್ಗ. ಹಿನ್ನೆಲೆಯಲ್ಲಿ ಕನ್ನಡದಲ್ಲಿ ಸುಲಲಿತವಾದ ಸಂಸ್ಕೃತ ಶಬ್ದಗಳನ್ನು ಬೆರೆಸಬಹುದು. ಆದರೆ ದೇಶ್ಯ ಮತ್ತು ಸಂಸ್ಕೃತ ಬೆರೆತ ಅರಿಸಮಾಸವನ್ನು ಮಾಡಬಾರದು ಎಂಬ ಹಿತೋಕ್ತಿ ಕನ್ನಡತನವನ್ನು ಬಿಂಬಿಸುವ ನುಡಿ. ಅಂತಹ ತಮ್ಮತನದ ಆಯಾಮಗಳನ್ನು ನಾವು ಮೊಟ್ಟಮೊದಲು ಕಾಣುವುದು ಕನ್ನಡದ ಅಲಂಕಾರಿಕ ಕಾವ್ಯವಾದ ಕವಿರಾಜಮಾರ್ಗದಲ್ಲಿಯೇ. ಕವಿರಾಜಮಾರ್ಗವು ದೈನಂದಿನಲ್ಲಿ ಚಲಾವಣೆಯಲ್ಲಿರುವ ಕನ್ನಡ ಭಾಷೆಯ ವೈವಿಧ್ಯತೆಯನ್ನು ಒಂದು ದೋಷವೆಂದು ಪರಿಭಾವಿಸದೇ ಅವುಗಳ ವೈವಿಧ್ಯತೆಯಲ್ಲಿಯೂ ವಿವಿಧ ಅರ್ಥಗಳು ಇರುವುದನ್ನು ಲಕ್ಷಿಸಿ ಭಿನ್ನಭಿನ್ನ ಪ್ರದೇಶದಲ್ಲಿ ಬೇರೆಬೇರೆ ಅರ್ಥಪ್ರತೀತಿ ಇರುವುದನ್ನು ಗುರುತಿಸಿದೆ. ಕನ್ನಡದ ಉಪಭಾಷೆಗಳು ಇರುವುದನ್ನು ಲಕ್ಷಿಸಿ, ಅವುಗಳಲ್ಲಿ ಅನೇಕ ದೇಸೀತನ ಇರುವುದನ್ನು ಮಾರ್ಗಕಾರ ಗಮನಿಸಿದ್ದಾನೆ. ಒಂದು ಶಿಷ್ಟದೇಶೀಯನ್ನು ಮಂಡಿಸುತ್ತಲೇ ಹಲವು ಕನ್ನಡದ ಬದಲಾಗಿ ಸಾಮಾನ್ಯವಾಗಿ ಎಲ್ಲರ ಗ್ರಹಿಕೆಗೆ ಪಕ್ಕಾಗುವ ಕನ್ನಡವೊಂದನ್ನು ಪ್ರತಿಪಾದಿಸುತ್ತಾನೆ. ಕವಿರಾಜಮಾರ್ಗ ಎಂಬುದು ಕವಿಗಳು ತಮ್ಮ ಕಾವ್ಯಾಭಿವ್ಯಕ್ತಿಗೆ ಕಂಡುಕೊಂಡ ಒಂದು ರಾಜಮಾರ್ಗ. ಪಂಡಿತ ಕವಿಗಳು ಅನುಸರಿಸಬಹುದಾದ ಮಾರ್ಗ ಇದಾದರೂ ಮಾರ್ಗಕಾರನು ಅಲ್ಲಲ್ಲಿ ದೇಸೀಕವಿಗಳ ಅಥವಾ ಜನಪದರ ಕಾವ್ಯ ವಿಚಾರಗಳನ್ನೆ. ಕನ್ನಡ ನಾಡು-ನುಡಿಗಳ ವಿಷಯದಲ್ಲಿ ಕವಿಗೆ ಸಾಕಷ್ಟು ಹೆಮ್ಮೆಯಿದೆ. ಅಭಿಮಾನವಿದೆ. ಆದ್ದರಿಂದಲೇ ಆತ ಕನ್ನಡಿಗರು ಸುಭಟರೆಂದು, ಕವಿಗಳೆಂದು, ಗುಣಿಗಳೆಂದು, ಅಭಿಮಾನಿಗಳೆಂದು ಹೊಗಳುವುದರ ಜೊತೆಯಲ್ಲಿಯೇ ನಾಡಿನ ಜನಪದರೂ ಶಿಷ್ಟ ಪಂಡಿತರಲ್ಲವೆಂದರೂ, ಕಾವ್ಯಕಟ್ಟಿ ಹಾಡಬಲ್ಲರೆಂದು ನಾಡವರನ್ನು ಹೊಗಳುವಲ್ಲಿಯೂ ಗಮನ ಸೆಳೆದಿದ್ದಾನೆ. ಜನಪದರು ಹಾಡಿಕೊಂಡ ಕಾವ್ಯ ಕವಿಯ ಮನಸ್ಸನ್ನು ಸೂರೆಗೊಂಡಂತಿದೆ. ಆದ್ದರಿಂದಲೇ ಮಾರ್ಗೀಯ ಸಾಹಿತ್ಯ ಪ್ರಕಾರಗಳನ್ನು ಹೇಳುವುದರ ಜೊತೆಗೆ ದೇಸೀ ಸಾಹಿತ್ಯದ ವಿವಿಧ ಪ್ರಕಾರಗಳಾದ ಬೆದಂಡೆ, ಚತ್ತಾಣ, ಹಾಡುಗಬ್ಬಗಳನ್ನು ಪ್ರಸ್ತಾಪಿಸುವುದರರ ಜೊತೆಗೆ ಬಯಲಾಟ, ನಾಳ್ಪಗರಣಗಳನ್ನು ಉಲ್ಲೇಖಿಸಿದ್ದಾನೆ.

      ನಮ್ಮ ಕವಿಗಳು ದೇಸಿ ಪದವನ್ನು ಬಳಸಿರುವ ಸಂದರ್ಭಗಳನ್ನು ಪರಿಶೀಲಿಸಿದರೆ ಅದರಲ್ಲಿ ದೇಸಿಯ ಬಗೆಗೆ ಕೆಲವೊಂದು ಅಂಶಗಳು ಗಮನಕ್ಕೆ ಬರುತ್ತವೆ. ನಾಡಿನ ನುಡಿಯ ನಾಡಿ ಮಿಡಿತ ಅಥವಾ ಜೀವಭಾವದ ಉಸಿರಾಗಿ ಹೊಮ್ಮುವ ನುಡಿಯ ಬೆಡಗು ಎಂಬ ಅರ್ಥವನ್ನು ಭಾಷೆಯ ದೃಷ್ಟಿಯಿಂದ ದೇಸಿ ಸೂಸುತ್ತದೆಜಾತಿ-ಜಾಣ್ಎಂದು ಕವಿರಾಜ ಮಾರ್ಗಕಾರನು ಪದ ಪ್ರಯೋಗ ಮಾಡಿದುದು ದೇಸಿಯ ಹಿನ್ನೆಲೆಯಲ್ಲಿಯೇ ಆಗಿದೆ. ದೇಸಿ ಎಂಬುದು ಮಾತಿನ ಸಹಜತೆಯನ್ನು ಸೂಚಿಸುತ್ತದೆ. ದೇಸಿಯ ನಿಲುವು ನಿರಾಡಂಭರವಾದುದು. ದೇಸಿ, ದೇಶೀಯ ಎಂದರೆ ಒಂದು ಪ್ರದೇಶಕ್ಕೆ ವಿಶಿಷ್ಟವಾದ ರೀತಿಯನ್ನು ನಡೆಯ          ಬಗೆಯನ್ನು ಸೂಚಿಸುತ್ತದೆ. ನಾಡಿನ ಅಥವಾ ದೇಸೀ ಸಂಸ್ಕೃತಿ ಪ್ರಸಾರಮಾಡಿ ಜನಮನದಲ್ಲಿ ಅದು ಅಚ್ಚೊತ್ತಿ ನಿಲ್ಲುವಂತೆ ಮಾಡುವಲ್ಲಿ ಪಂಡಿತ ಕವಿಗಳಿಗಿಂತಲೂ ಜನಪದ ಕವಿಗಳೇ ಮೇಲು ಎನ್ನುವ ನಿಲುವು ಮಾರ್ಗಕಾರನದಾಗಿದೆ ಎಂದರೂ ತಪ್ಪಾಗಲಾರದು. ಅಂತೆಯೇ ಆತ

ಪದನಱಿದು ನುಡಿಯಲುಂ ನುಡಿ

ದುದನಱಿದಾರಯಲುಮಾರ್ಪರಾ ನಾಡವರ್ಗಳ್

ಚದುರರ್ ನಿಜದಿಂ ಕುಱಿತೋ

ದದೆಯುಂ ಕಾವ್ಯ ಪ್ರಯೋಗ ಪಱಿಣತಮತಿಗಳ್ ಎನ್ನುತ್ತಾನೆ.  

ಜನಪದ ಕವಿಗಳ ಕಾವ್ಯ ಸಾಮರ್ಥ್ಯವನ್ನು ಕುರಿತು ಹೇಳಿ ಬೆದಂಡೆ, ಚತ್ತಾಣ, ಬಾಜನೆಗಬ್ಬ, ಗದ್ಯಕಥಾ ಇತ್ಯಾದಿಯಾಗಿ ಹೆಸರಿಸಿ, ಪ್ರಕಾರಗಳು ಕನ್ನಡದ್ದೇ ಆದ ದೇಸೀಛಂದಸ್ಸಿನ ದೇಸೀಕಾವ್ಯ ಪ್ರಕಾರಗಳು. ಇವು ಜನಮಾನಸದಲ್ಲಿ ನಿತ್ಯವಾಗಿ ಬಳಕೆಗೊಂಡಿದ್ದು, ಮೌಖಿಕ ಪರಂಪರೆಯಲ್ಲಿ ಜನಪದರು ಒಂದು ಮಹಾಕಾವ್ಯವಾಗಿದ್ದರು ಎಂದಿದ್ದಾನೆ. ಅದುವರೆಗೆ ಕನ್ನಡದಲ್ಲಿ ಲಕ್ಷಣಗ್ರಂಥವಿರಲಿಲ್ಲವೆಂದು ಅಭಿಪ್ರಾಯಿಸಿ, ಕನ್ನಡದ ದೇಸೀ ಮತ್ತು ಮಾರ್ಗಸಮನ್ವಯವನ್ನು ಅವನು ಪ್ರತಿಪಾದಿಸಿದ್ದಲ್ಲದೇ ತನ್ನ ಕೃತಿಯಲ್ಲಿ ಅದನ್ನು ತೋರಿಸಿದ್ದಾನೆ. ಪ್ರಾದೇಶಿಕವಾದ ಸ್ಥಳಿಯ ಭಾಷೆಯೊಂದನ್ನು ಶಿಷ್ಟಭಾಷೆಯೆಂದು ಮಂಡಿಸುವ ಕವಿರಾಜಮಾರ್ಗಕಾರ, ಸಂಸ್ಕೃತ ಸಾಹಿತ್ಯದ ಪ್ರತಿಯಾಗಿ ಇದನ್ನು ರೂಪಿಸುತ್ತಾನೆ. ಇದು ಒಂದು ಸಂಘರ್ಷದ ಬದಲಾಗಿ ಸಮನ್ವಯದ ನೆಲೆಯಲ್ಲಿ ಮಂಡಿತವಾಗಿದೆ. ಭಿನ್ನತೆಯ ಮಧ್ಯದಲ್ಲಿಯೂ ಅನುಸಂಧಾನದ, ಸಮನ್ವಯದ ಅಗತ್ಯತೆಯನ್ನು ನಿರೂಪಿಸಿದ್ದಾನೆ. ಸಂದರ್ಭದಲ್ಲಿ ಅವನು ಬಳಸಿದ ನುಡಿಗಟ್ಟುಗಳು, ಹೋಲಿಕೆಗಳು, ನಾಣ್ಣುಡಿಗಳು ಇವೆಲ್ಲವೂ ದೇಸೀಯತೆಯನ್ನು ಪ್ರಕಟಿಸುವ ಪರಿಕರಗಳಾಗಿವೆ. ಸಂಸ್ಕೃತ ಪದಗಳನ್ನೂ, ಕನ್ನಡ ಪದಗಳನ್ನೂ ಸಮಾಸೋಕ್ತಿಗಳಲ್ಲಿ ಬೆರೆಸಬಾರದೆಂದು, ಬೆರೆಸಿದರೆ ದೋಷವಾಗುತ್ತದೆ. ಅದು ಕುದಿಯುವ ಹಾಲಿಗೆ ಮಜ್ಜಿಗೆ ಹನಿಗಳನ್ನು ಹಾಕಿದಂತೆ. ಅಂಥ ಸ್ವಲ್ಪವೇ ದೋಷದಿಂದಲೂ ಕೃತಿ ಕೆಡುತ್ತದೆ ಎಂದು ಹೇಳುವಲ್ಲಿ ಮತ್ತು ಕವಿ ಹಂತಹಂತವಾಗಿ ಕೊಡುವ ಗಾದೆಮಾತುಗಳಲ್ಲಿಯೂ ದೇಸೀ ವ್ಯಕ್ತವಾಗುತ್ತದೆ. ಹಿನ್ನೆಲೆಯಲ್ಲಿ ಕವಿರಾಜಮಾರ್ಗ ಆಯಾ ಪ್ರಾದೇಶಿಕ ಜನರ ಮತ್ತು ಅವರ ಬದುಕಿನ ತುಡಿತ ಮಿಡಿತಗಳಿಗೆ ಪ್ರತಿಸ್ಪಂದಿಸುತ್ತಿರುವುದರ ಹಿನ್ನೆಲೆಯಲ್ಲಿ, ಮಾರ್ಗಕಾವ್ಯದಲ್ಲಿಯ ದೇಸೀಯತೆ ಪ್ರಮುಖವಾಗಿ ನಿಲ್ಲುತ್ತದೆ. ಹೀಗೆ ದೇಸೀಯತೆ ಎನ್ನುವುದು ನಮ್ಮ ಬದುಕಿನ ಮೂಲ ಗ್ರಹಿಕೆಗಳನ್ನು ಕಟ್ಟಿಕೊಡುವಂಥದ್ದಾಗಿದೆ. ಅಂದಂದಿನ ನಮ್ಮ ಸಾಮಾನ್ಯರ ಬದುಕಿನ ಚಹರೆಗಳನ್ನು ಕಟ್ಟಿಕೊಡುವಲ್ಲಿ ಕವಿರಾಜಮಾರ್ಗಕಾರನು ಬಳಸಿದ ನಾಣ್ಣುಡಿ, ಒಗಟು, ಗಾದೆ, ಪದಪ್ರಯೋಗ ಪದ ಕೋಶದ ಬಗೆಗಿರುವ ಅವನ ಎಚ್ಚರ ರುಚಿಶುದ್ಧಿ ದೇಸೀಯತೆಯ ವಿವಿಧ ಆಯಾಮಗಳನ್ನು ದಾಖಲಿಸುತ್ತಾನೆ.  

ಕನ್ನಡಿಗರ ಭಾಷೆ ‘’ಕನ್ನಡವೆಂದುಕರೆಸಿಕೊಂಡಾಗಲೇ ಕನ್ನಡದಲ್ಲಿ ದೇಸಿಯತೆ ತಲೆಯೆತ್ತಿತ್ತು. ಅದಿಲ್ಲದಿದ್ದರೆ ಅದು ಕನ್ನಡವಾಗುತ್ತಿರಲಿಲ್ಲ. ಸಂಸ್ಕೃತದಲ್ಲಿದ್ದ ರಾಮಾಯಣ ಮಹಾಭಾರತಗಳು ಕನ್ನಡದಲ್ಲೂ ತಲೆಯೆತ್ತಬೇಕೆಂದು ಕನ್ನಡ ಜನಪದ ಆಶಿಸಿದಾಗಲೇ ದೇಸಿಯತೆ ಕಾಣಿಸಿಕೊಂಡಿತು ಮೂಲಕಥೆಯ ಅಸ್ಥಿಪಂಜರಕ್ಕೆ ಕನ್ನಡದ್ದೇ ಆದ ರಕ್ತ ಮಾಂಸಗಳು ತುಂಬಿ ಕಳೆಯೇರಿಸಿದವು. ಕನ್ನಡದಲ್ಲಿ ಅಪೂರ್ವವಾದ ಭಾರತ ಕಥೆಯನ್ನು ಹೇಳಿದವರು ಮುನ್ನ ಯಾರೂ ಇಲ್ಲ. ಕಥೆಯ ಮೈಗೆಡದಂತೆ ಹೇಳಲು ಪಂಪನೊಬ್ಬನೇ ಸಮರ್ಥ ಎಂದು ಪಂಡಿತಲೋಕ ಉಗ್ಗಡಿಸಿದಾಗ ಪಂಪ ಅದಕ್ಕೆ ಸಿದ್ಧನಾಗಿ ಮಹಾಭಾರತದ ಗಣಿಯ ಚಿನ್ನವನ್ನು ಕಾಸಿ ತನ್ನ ಪ್ರತಿಭೆಯ ಅಚ್ಚಿನಲ್ಲಿ ಎರಕಹೊಯ್ದ. ಕನ್ನಡಿಗರಲ್ಲಿ ನೆಲೆಗೊಂಡಿದ್ದ ಮತ ಮೇರೆಗಳನ್ನು ನಿರಾಕರಿಸಿ ಮಾನವ ಮೌಲ್ಯವೊಂದನ್ನೇ ಗಮನಿಸುವ ಗುಣಕ್ಕೆ ವಿಕ್ರಮಾರ್ಜುನ ವಿಜಯವೇ ನಿದರ್ಶನ ಇದುವೇ ನಿಜವಾದ ದೇಸಿಯತೆ ಕನ್ನಡದ ನಮ್ಮತನ.

     ಹೊಸಗನ್ನಡ ಸಾಹಿತ್ಯವನ್ನು ಹೊರತುಪಡಿಸಿ ನೋಡಿದರೆ, ಪ್ರಾಚೀನ ಸಾಹಿತ್ಯದ ಮಟ್ಟಿಗೆಮಾರ್ಗ’, ‘ದೇಸೀಎಂಬುವು ಸಾಹಿತ್ಯದ ಭಾಷೆಯ ಎರಡು ಮುಖ್ಯ ರೂಪಲಕ್ಷಣಗಳನ್ನು ಸೂಚಿಸುತ್ತವೆ. ಎರಡೂ, ಕನ್ನಡ ಸಾಹಿತ್ಯದಲ್ಲಿ ಒಂದರ ಹಿಂದೊಂದು ಅಥವಾ ಒಂದರ ಜೊತೆಗೊಂದು ಎನ್ನುವಂತೆ ಬಂದಿವೆ. ಕನ್ನಡ ಸಾಹಿತ್ಯಾರಂಭದ ಮೊದಲೆರಡು ಶತಮಾನಗಳಲ್ಲಿ ಅದು ನೂರಕ್ಕೆ ಎಂಭತ್ತರಷ್ಟುಮಾರ್ಗವಾದದ್ದು ಅನಂತರದ ಕಾಲದಲ್ಲಿ ಅಂದರೆ ಹನ್ನೆರಡನೆಯ ಶತಮಾನದ ನಯಸೇನನಿಂದ ಹಿಡಿದು ಕುಮಾರವ್ಯಾಸನವರೆಗೆಮಾರ್ಗದೇಸೀಗಳೆರಡೂ ಜೊತೆಜೊತೆಯಾಗಿ ಕಾಣಿಸಿ ಕೊಂಡರೂ ದೇಸಿಯೇ ಮೇಲುಗೈ ಪಡೆದಿದೆ.ದೇಸೀಎಂದರೆ, ಯಾವ ಬರವಣಿಗೆ ಸರಳವೂ, ಜನರ ಆಡುಮಾತಿಗೆ ಸಮೀಪವೂ ಆಗಿದ್ದಾಗಿದೆಯೋ ಅದು ದೇಸೀ. ದೇಸೀಯದು ಸರಳವಾಗಿರಲು ಕಾರಣ ಸಂಸ್ಕೃತದ ಪ್ರಭಾವದಿಂದ ತಪ್ಪಿಸಿಕೊಂಡು ದೈನಂದಿನ ಸರಳ ಭಾಷೆಯಲ್ಲಿ ಜನಕ್ಕೆ ಪರಿಚಿತವಾದ ಜನಪದ ಛಂದಸ್ಸಿನಲ್ಲಿ ರಚಿತವಾದದ್ದು. ಕಾವ್ಯಪರಂಪರೆಯ ಹಿನ್ನೆಲೆಯಿಂದ ಕನ್ನಡಕಾವ್ಯ ರೂಪುತಾಳುತ್ತಿದ್ದ ಸಂದರ್ಭದಲ್ಲಿ ತನ್ನ ಸಾಮಾಜಿಕ ಪರಿಸರದಲ್ಲಿನಾಳ್ನುಡಿ - ನಾಡನುಡಿಅಥವಾ ಜನರಾಡುವ ಭಾಷೆಯೊಂದು ಇದೆ. ಅದರಲ್ಲಿ ಒಂದುಬೆಡಂಗುಅಥವಾ ಸೊಗಸು ಇದೆ. ಕವಿ ಬರೆಯುವ ಕಾವ್ಯಭಾಷೆಯಲ್ಲಿ ನಾಳ್ನುಡಿಯ ಬೆಡಂಗುಬಂದು ಸೇರಬೇಕು. ಎನ್ನುವ ಎಚ್ಚರ ಇದ್ದುದು ತುಂಬಾ ಮಹತ್ವದ ಸಂಗತಿಯಾಗಿದೆ. ಕವಿರಾಜಮಾರ್ಗಕಾರನು ಹೇಳಿದನಾಡು-ನುಡಿಯ ಬೆಡಂಗುಅವನಿಗೆ ತನ್ನ ಪರಿಸರದ ಪುಲಿಗೆರೆಯು ಕನ್ನಡದಲ್ಲಿ ಕಾಣಿಸಿತು. ಕವಿರಾಜಮಾರ್ಗಕಾರನ ಪೂರ್ವದಲ್ಲಿ ಉಪಯೋಗಿಸಲ್ಪಡುತ್ತಿದ್ದ ಕನ್ನಡ ದೇಸೀಪದಗಳ ವಿಶಿಷ್ಟ ರೀತಿ ಪಳಗನ್ನಡ. ಅಥವಾ ಹಳೆಯ ರೀತಿಯಾದರೆ ಅಲ್ಲಿಂದ ಮುಂದೆ ಬಂದ ಸಂಸ್ಕೃತ ಮಿಶ್ರಿತ ಪದಪದ್ಧತಿಯು ಬರಬರುತ್ತ ಅತಿರೇಕಕ್ಕೆ ಹೋಗಿ ನಯಸೇನನ ಕಾಲಕ್ಕೆ ಬರುವ ಹೊತ್ತಿಗೆ ಕನ್ನಡಕ್ಕಾಗಿ ಚಿಂತಿಸುವ ಗತಿ ಕವಿಗಳಿಗೆ ಬಂದಿತು.

ಕಾವ್ಯಲಕ್ಷಣಗಳಲ್ಲಿ ಹೇಳಿದ ದೇಸಿ ಮಾರ್ಗ ಪ್ರಭೇಧಗಳಲ್ಲಿ ದೇಸಿಯತೆಯ ಒಳಹುಗಳನ್ನು ಕಾಣಬಹುದಾಗಿದೆ. ಭಾಷಿಕವಾಗಿ ಪಂಪನ ಮಾತಿನ ಮೋಡಿಯಲ್ಲಿ ವಿಶಿಷ್ಟ ಪದಗಳಲ್ಲಿ ನುಡಿಗಟ್ಟುಗಳಲ್ಲಿ ದೇಸಿಯತೆಯ ಸುಳುಹುಗಳು ಇದ್ದುದರಿಂದಲೇ ಪಂಪನ ದೇಸಿಯತೆಯ ಮಾದರಿ ನಂತರದ ಕವಿಗಳಿಗೆ ನಿದರ್ಶನವಾಯಿತು.  ನಿದರ್ಶನಕ್ಕೆ ರನ್ನನು ತನ್ನ ಗದಾಯುದ್ಧ ಕಾವ್ಯದಲ್ಲಿ ಪ್ರಸ್ತಾಪಿಸಿರುವ ತುರುಗೋಳ್. ಪೆಣ್ಬುಯಲ್, ಊರಳಿವು ಪ್ರಸ್ತಾಪಗಳಲ್ಲಿಯ, ಗಂಡಸಾದವನು ತನ್ನ ಪ್ರಾಣದ ಹಂಗುತೊರೆದು ಹೋರಾಡಬೇಕೆಂಬುದು ಕನ್ನಡ ನಾಡಿನ ವೀರ ಯುಗದ ಆದರ್ಶ, ಆ ರೀತಿ ಹೋರಾಡಿ ಮಡಿದವರ ಸ್ಮಾರಕಕ್ಕೆ ನಿಲ್ಲಿಸಿದ ವೀರಗಲ್ಲುಗಳು ಕನ್ನಡ ನಾಡಿನಲ್ಲಿ ಅಸಂಖ್ಯಾತವಾಗಿ ದೊರೆತಿವೆ. ಇದು ಒಂದು ರೀತಿಯಲ್ಲಿ ದೇಸಿಯೆ ಅಗಿದೆ ಎನ್ನ ಬಹುದು.

ಕನ್ನಡದಲ್ಲಿ ಸುಲಲಿತವಾದ ಸಂಸ್ಕೃತ ಶಬ್ದಗಳನ್ನು ಬೆರೆಸಬಹುದು ಆದರೆ ದೇಶ್ಯ ಮತ್ತು ಸಂಸ್ಕೃತ ಬೆರೆತ ಅರಿಸಮಾಸವನ್ನೂ ಮಾಡಬಾರದು, ಎಂಬ ಹಿತೋಕ್ತಿ ಕನ್ನಡತನವನ್ನು ದೇಸಿಯನ್ನುಬಿಂಬಿಸುವ ನುಡಿಯಾಗಿದೆ. ಶಾಸ್ತ್ರಗ್ರಂಥಗಳನ್ನು ರಚಿಸಿದ ನಾಗವರ್ಮ ಕೇಶಿರಾಜ, ಭಟ್ಟಾಕಳಂಕರು ಕನ್ನಡ ಭಾಷೆಯ ವ್ಯಾಕರಣಕ್ಕೆ ಸಂಸ್ಕೃತದ ಚೌಕಟ್ಟನ್ನು ಬಳಸಿದರೂ ಕನ್ನಡದ ನಿಜಸ್ವರೂಪವೇನೆಂದು ವಿವರಿಸಲು ಹೊರಟಿದ್ದು ಕನ್ನಡಕ್ಕಿರುವ ವೈಶಿಷ್ಟ್ಯವಾಗಿದೆ.ಕನ್ನಡದ ದೇಸಿಯತೆ ಕಣ್ಮರೆಯಾಗಿ ಸಂಸ್ಕೃತವೇ ವಿಜೃಂಭಿಸಿದಾಗ ಮುತ್ತನ್ನು ಮೆಣಸನ್ನು ಕೋದಂತೆ ತುಪ್ಪವನ್ನು ಎಣ್ಣೆಯನ್ನು ಬೆರೆಸಿದಂತೆ ಎಂಬ ಅಭಿಪ್ರಾಯವು ದೇಸಿ ಕವಿಗಳಿಂದ ವ್ಯಕ್ತವಾಗಿರುವುದನ್ನು ಇಲ್ಲಿ ಪ್ರಸ್ತಾಪಿಸ ಬಹುದಾಗಿದೆ. ಕನ್ನಡದಲ್ಲಿ ದೇಸೀಯಾದ ಅನೇಕ ಭಾಷಾ ಪ್ರಬೇಧಗಳಿಗೆ ಪ್ರಾದೇಶಿಕ ವೈಲಕ್ಷಣವಿರುವುದನ್ನು ಲಕ್ಷಿಸಿದ್ದಾನೆ. ಪ್ರಬೇಧಗಳಲ್ಲಿನ ಇತರ ಪ್ರದೇಶಗಳಲ್ಲಿನ ಭಾಷಾ ಬಳಕೆ ದೋಷವಾಗಿ ಕಂಡಿರಬೇಕು. ಸಾವಿರ ನಾಲಗೆಯುಳ್ಳ ವಾಸುಕಿಯೂ ಸಹ ದೇಸೀ ಪ್ರಬೇಧಗಳನ್ನು ಕಂಡು ಬೇಸರಿಸಿಕೊಂಡಿದುದಾಗಿ ಹೇಳುತ್ತ ದೇಸೀಯತೆಯ ಪ್ರಬೇಧಗಳನ್ನು ಗುರುತಿಸುತ್ತಾನೆ. ಕವಿರಾಜಮಾರ್ಗಕಾರ ದೇಸೀಯನ್ನು ದೋಷವೆಂದು ಭಾವಿಸದೆಕನ್ನಡಂಗಳುಎಂದು ಗುರುತಿಸಿ ಕನ್ನಡದ ಅನೇಕ ಉಪಭಾಷೆಗಳು ಇರುವುದನ್ನು ಗಮನಿಸಿ ಕನ್ನಡದ ವಿವಿಧ ದೇಸೀಗಳನ್ನು ಸ್ವೀಕರಿಸಿಯೇ ಒಂದು ರೂಢಿಗತವಾಗಬಹುದಾದ ದೇಸಿಯನ್ನು ಅಪೇಕ್ಷಿಸುತ್ತಾನೆ. ಮಾರ್ಗಸಾಹಿತ್ಯದ ಬದಲಾಗಿ ಪ್ರತಿರೋಧದ ನೆಲೆಯಲ್ಲಿ ದೇಸೀಭಾಷೆಯನ್ನು ಸ್ಥಾಪಿಸುತ್ತಾನೆ. ಒಟ್ಟಿನಲ್ಲಿ ಪ್ರಾದೇಶಿಕವಾದ ಭಿನ್ನತೆಯೇ ದೇಸೀಯಾಗಿರುವುದು ಇಲ್ಲಿ ಗಮನಾರ್ಹ.

ನಡುಗನ್ನಡ ಸಾಹಿತ್ಯದ ಕಾಲ ಕನ್ನಡ ಸಾಹಿತ್ಯವು ಮಾರ್ಗದಿಂದ ದೇಸಿಗೆ ಸಂಕ್ರಮಣ ಹೊಂದಿದ ಯುಗವಾಗಿದೆ. ಮಾರ್ಗ ಕಾವ್ಯದ ಪ್ರಭಾವ ಯುಗದ ಮೇಲೆ ಆಗಿದ್ದರೂ ದೇಸಿಗೆ ವಿಶಿಷ್ಟವಾದ ಸ್ವಾತಂತ್ರ್ಯ ವಿಷಯ, ಧೋರಣೆ, ಛಂದಸ್ಸು ಭಾಷೆಗಳಲ್ಲಿ ತಲೆದೋರಿದೆ. ಕನ್ನಡದ ಮಹತ್ತರವಾದ ಕಾವ್ಯಗಳು ಈ ಯುಗದಲ್ಲಿ ರಚನೆಯಾಗಿ ಕನ್ನಡ ಅಂತಸತ್ವವನ್ನು ಪರಿಚಯಿಸಿವೆ. ಯುಗದ ವೈಶಿಷ್ಟ್ಯ. ವಚನ ಎಂಬುದು ಭಾವಗೀತೆಯ ಲಕ್ಷಣದಿಂದ ಕೂಡಿದ ಅನುಭಾವ ಗದ್ಯ. ಶಿವಶರಣರ ಅಂತರಂಗ ಆಳವಾದ ಅನುಭವ ಅಭಿವ್ಯಕ್ತಿಗೊಂಡಿದೆ. ಆತ್ಮನಿರೀಕ್ಷಣೆ, ಸಮಾಜದ ವಿಮರ್ಶೆ ಅಭಿವ್ಯಕ್ತಿಗೊಂಡಿದೆ. ರಗಳೆ, ಷಟ್ಟದಿ, ತ್ರಿಪದಿ, ಸಾಂಗತ್ಯ   ಅಚ್ಚಗನ್ನಡ ರೂಪಗಳಲ್ಲಿ ಗ್ರಂಥರಚನೆ ನಡೆಯಿತು. ಸಾಹಿತ್ಯ ಪ್ರಕಾರಗಳನ್ನು ವಿರಳವಾಗಿ ಚಂಪೂ ಕಾವ್ಯಗಳಲ್ಲಿ ಬಳಸುತ್ತಿದ್ದರು. ಇವುಗಳನ್ನೇ ಸಾಹಿತ್ಯ ಪ್ರಕಾರವನ್ನಾಗಿಸಿ ಒಂದೊಂದು ಸಾಹಿತ್ಯ ಪ್ರಕಾರದಲ್ಲಿಯೂ ಕಾವ್ಯ ರಚನೆ ಮಾಡತೊಡಗಿದ್ದು ಯುಗದ ಮಹತ್ತರ ಸಾಧನೆ. ವಚನಕಾರರು  ವಚನಗಳಿಗೆ, ಹರಿಹರ ರಾಘವಾಂಕರು ರಗಳೆ,ಷಟ್ಟದಿಗೆ ಮೊದಲಿಗರಾದರು. ಮಧ್ಯಕಾಲೀನ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಭಾಷೆ ರೂಪ, ಅಭಿವ್ಯಕ್ತಿ ಸೌಲಭ್ಯ ದರ್ಶನ ದೃಷ್ಟಿ ಇವುಗಳಿಂದ ಅಪಾರ ಮನ್ನಣೆ ಪಡೆದಿದ್ದು ವಚನ ಸಾಹಿತ್ಯ ಪ್ರಕಾರ. ಕಾಲದ ಸಾಹಿತ್ಯ ಜನಾಶ್ರಯದ ನೆರವಿನಿಂದ ರಚಿತವಾಯಿತು.

ಹೊಸಬಗೆಯ ಸಾಹಿತ್ಯಕ್ಕೆ ನಾಂದಿ ಹಾಡಿದವರೇ ವಚನಕಾರರು. ಅದುವರೆಗೂ ಮಾರ್ಗ ಮತ್ತು ದೇಸೀಗಳ ಸಮನ್ವಯ ರೂಪದಲ್ಲಿ ಪ್ರವಹಿಸುತ್ತಿದ್ದ, ರಾಜಾಶ್ರಯ ಪ್ರೇರಿತ ಕನ್ನಡ ಸಾಹಿತ್ಯಕ್ಕೆ ತೀವ್ರ ತಿರುವು ಕೊಟ್ಟು ಕನ್ನಡಪರವಾಗಿಸಿ ಜನಮುಖಿಗೊಳಿಸಿದರು. ಸಾಹಿತ್ಯಮೀಮಾಂಸೆಯ ಪರಿವೆ ಇಲ್ಲದೆ ಜನಪರ ಸಾಹಿತ್ಯ ಕೃಷಿ ಮಾಡಿದರು. ಹಿಂದಿನ ಅನುಭಾವ ಸಾಹಿತ್ಯದಲ್ಲಿನ, ಹಿಂದಿನ ದೀರ್ಘ ಕತೆಗಳಾಗಲೀ, ಅಷ್ಟಾದಶ ವರ್ಣನೆಗಳಾಗಲಿ ಇಲ್ಲವಾಗಿ, ಒಂದು ಅನುಭವ ತಕ್ಷಣದ ಅನಿಸಿಕೆಯನ್ನು ಸೆರೆಹಿಡಿಯುವ ಸಂಕ್ಷಿಪ್ತವೂ ಸ್ವಯಂಪೂರ್ಣವೂ ಆದ ಮುಕ್ತಕಗಳಾಗಿ ಮೈಪಡೆದವು. ಇವೆಲ್ಲವೂ ಸಾಂದರ್ಭಿಕವಾಗಿ ರಚಿತವಾದಂತವುಗಳಾಗಿವೆ. ತೀವ್ರ ಸಾಮಾಜಿಕ ಪ್ರಜ್ಞೆಯನ್ನೊಳಗೊಂಡ ಇವು ಅದುವರೆಗಿನ ಸ್ಥಗಿತ ಸಾಮಾಜಿಕ ಕಟ್ಟಳೆಗಳಿಂದ ಹೊರಬಂದವುಗಳು. ಮತ, ಸಂಪ್ರದಾಯ, ಕವಿಸಮಯ, ರಾಜ್ಯತ್ವದ ನಿಲುವು, ಮತ್ತು ಸಂಸ್ಕೃತ ಭೂಯಿಷ್ಟತೆ ಮುಂತಾದ ಸಂಕೋಲೆಗಳಿಂದ ಬಿಡುಗಡೆ ಪಡೆದ ವಚನಗಳು ಹಲವು ಉಪಸಂಸ್ಕೃತಿಗಳನ್ನು ಕರಗಿಸಿಕೊಂಡು ಭವಿ ಮತ್ತು ಭಕ್ತ ಎಂಬ ವಿಂಗಡಣೆಯ ಶಿವ ಸಂಸ್ಕೃತಿಯಾಗಿ ರೂಪುಗೊಂಡವು. ಹೀಗೆ ಚಲನಶೀಲತೆಯನ್ನು ಪಡೆದು ಶಿವ ಸಂಸ್ಕೃತಿಯಲ್ಲಿ ರೂಪುಗೊಂಡ ವಚನ ಸಂಕುಲವು ಸಾಮಾಜಿಕ ಆಂದೋಲನಕ್ಕೆ ಪ್ರಚೋದನೆ ನೀಡಿತು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡವನ್ನು ಅದರ ಎಲ್ಲಾ ಆಯಾಮಗಳಲ್ಲೂ ಬಳಸಿ, ಅದಕ್ಕೆ ಸಾಹಿತ್ಯದಲ್ಲಿ ಉನ್ನತ ಪೀಠವನ್ನು ಕಲ್ಪಿಸಿಕೊಟ್ಟದ್ದು ಪ್ರಮುಖ ಸಂಗತಿ. ಅಷ್ಟೇ ಅಲ್ಲದೆ ಜಾಗತಿಕ ಸಾಹಿತ್ಯಕ್ಕೆ ವಚನಕಾರರು ನೀಡಿದ ಅಪೂರ್ವವೆನಿಸಿದ ವಿಶಿಷ್ಟ ಕೊಡುಗೆ ಎಂದೇ ಗುರುತಿಸಲ್ಪಟ್ಟಿತು. ಎಲ್ಲವುಗಳಿಗೆ ಮುಖ್ಯ ಕಾರಣ ವಚನಕಾರರ ವಚನಗಳಲ್ಲಿ ಸುಪ್ತವಾಗಿ ಅಡಗಿರುವ, ತನ್ನತನದ ಅಥವಾ ದೇಸೀಯತೆಯ ತುಡಿತ. ಇಂತಹ ಸಾಂಸ್ಕೃತಿಕ ದೈನಂದಿನ ಬದುಕಿನ ತುಡಿತದ ತಳಮಳಗಳನ್ನು, ಆಯ್ದ ವಚನಕಾರ್ತಿಯರ ವಚನಗಳನ್ನು ಲಕ್ಷಿಸಿ ದೇಸೀಯತೆಯ ಸ್ವರೂಪವನ್ನು ಸ್ವಷ್ಟಪಡಿಸಿಕೊಳ್ಳಲಾಗಿದೆ. ವಚನ ಸಂಸ್ಕೃತಿಗೂ, ದೇಸೀ ಸಂಸ್ಕೃತಿಗೂ ತುಂಬಾ ಸಾಮ್ಯತೆಯಿರುವಂತೆ ಅಷ್ಟೇ ಭಿನ್ನತೆಯೂ ಕಂಡುಬರುತ್ತದೆ. ವಚನಕಾರ್ತಿಯರೂ ಕೂಡಾ ಮೂಲತಃ ಜನಪದ ಮಹಿಳೆಯರೆ. ಅನುಭವ ಮಂಟಪದ ಚರ್ಚೆಯ ಮೂಲಕ ಅವರು ವೈಚಾರಿಕವಾಗಿ ಬೆಳೆದು ನಿಂತವರು. ಅಂತಹ ವಚನಕಾರ್ತಿಯರು ತಮ್ಮ ವಚನಗಳುದ್ದಕ್ಕೂ ಬಳಸಿದ ಗಾದೆ, ನೇರನುಡಿ, ನಿಷ್ಟುರತೆ, ಮತ್ತು ವ್ರತಾಚರಣೆ ಕುರಿತಾದ ಅಭಿವ್ಯಕ್ತಿಸುವಲ್ಲಿ ದೇಸೀ ಸಂಸ್ಕೃತಿಯ ಬಿಂಬ ಎದ್ದು ತೋರುತ್ತದೆ.ಅನುಭವ ಸಾಧನೆಯಲ್ಲಿ, ವೈಚಾರಿಕತೆಯಲ್ಲಿ ದೇಸೀಯತೆ ಎಂಬುದು ಅವರಲ್ಲಿ ತಾಯಿಬೇರಿನ ಮೂಲ ಸೆಲೆಯಾಗಿ ಕಾಣಿಸಿಕೊಳ್ಳುತ್ತದೆ. ನಮ್ಮ ನಾಡಿನ ಜನಪದ ಸಾಹಿತ್ಯದಲ್ಲಿ ಕಾಣಿಸಿಕೊಳ್ಳುವ ಪುಣ್ಯಕೋಟಿಯ ಕತೆ ಕೇವಲ ಸಾಹಿತ್ಯ ಮಾತ್ರವಾಗಿರದೆ ನಮ್ಮ ಸಂಸ್ಕೃತಿಯ ಮೂಲ ನೆಲೆಯಾಗಿದೆ. ಪುಣ್ಯಕೋಟಿ ಎಂಬುದು ಒಂದು ಗೋವು ಮಾತ್ರವಲ್ಲ, ಅದು ಸತ್ಯ-ನಿಷ್ಟುರತೆಯ, ಪ್ರಾಮಾಣಿಕತೆಯ, ಅಂತಃಕರಣದ ಸಂಕೇತವಾಗಿದೆ. ಅಹಿಂಸೆಯ ಪ್ರತೀಕವಾದ ಪುಣ್ಯಕೋಟಿ, ಹಿಂಸಾಮೂಲದ ಹುಲಿಯ ಮನಸ್ಸನ್ನೇ ಬದಲಿಸಿಬಿಟ್ಟಿದ್ದು ಒಂದು ಕತೆಯಾದರೂ ದೇಸೀ ಸಂಸ್ಕೃತಿಯಲ್ಲಿ ಬೆಳೆದು ನಿಂತಿರುವ ಇಂತಹ ಅನೇಕ ಜೀವನ ಮೌಲ್ಯಗಳು ವಚನಕಾರ್ತಿಯರ ಬದುಕು ಮತ್ತು ಬರಹದಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ ದೇಸೀ ಎಂಬುದು ವಚನಕಾರ್ತಿಯರಲ್ಲಿ ತಳಸಂಸ್ಕೃತಿಯಾಗಿ ಬೇರುಬಿಟ್ಟಿದೆ ಎಂದೇಳಬಹುದಾಗಿದೆ.

    ಕನ್ನಡದ ದೇಸಿಯತೆಯ ಸತ್ಯವನ್ನು ಮೇಲೆತ್ತಬೇಕೆಂಬ ಆಕಾಂಕ್ಷೆಯಿಂದಲೇ ಅಚ್ಚಗನ್ನಡದಲ್ಲೇ ಕಾವ್ಯ ರಚನೆ ಮಾಡಬೇಕೆಂದು ಹೊರಟ ಆಂಡಯ್ಯನ ಪ್ರಯತ್ನ ಕನ್ನಡದ ದೇಶೀಯತೆಯ ಸ್ವಾಭಿಮಾನದ ಹೆಗ್ಗುರುತು. ಭಾಷಾ ಮಾಧ್ಯಮದಲ್ಲಿ ಮಾತ್ರವಲ್ಲದೇ ಕಾವ್ಯ ವಸ್ತುವಿನಲ್ಲಿಯೂ ದೇಶೀಯತೆಯ ದೃಷ್ಠಿ ತಲೆಯೆತ್ತಿತ್ತು. ಹೊಸ ಕಾವ್ಯ ಸಂಪ್ರದಾಯವನ್ನು  ನಿರ್ಮಿಸಿ, ಅನೇಕ ಕೃತಿಗಳನ್ನು ರಚಿಸಿ, ಭಕ್ತಿಕವಿ ಎಂಬ ಖ್ಯಾತಿಗೆ ಪಾತ್ರನಾದ ಹರಿಹರ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾನೆ.

     ವಚನಸಾಹಿತ್ಯದ ಆಶಯ ಹಾಗೂ ಶರಣರ ಜೀವನ ಇವುಗಳಿಂದ ಸ್ಫೂರ್ತಿಹೊಂದಿ ಸಾಹಿತ್ಯ ನಿರ್ಮಾಣ ಮಾಡಿದ  ಕವಿಗಳಲ್ಲಿ ಹರಿಹರನು ಪ್ರಮುಖನಾಗಿ ಕಂಡು ಬರುತ್ತಾನೆ.  ಹರಿಹರನ ಕಾವ್ಯದ ವಸ್ತು ಮಾತ್ರವಲ್ಲದೇ ಧೋರಣೆಯಲ್ಲಿಯೂ  ವಚನಕಾರರ ಪ್ರಭಾವವನ್ನು ಕಾಣಬಹುದು. ಸ್ವಂತಿಕೆಯ ಪ್ರಜ್ಞೆಯಿದ್ದ ಆ ಕವಿ ತನ್ನ ಕಾವ್ಯ ಪ್ರಕಾರಕ್ಕೆ ರಗಳೆಯನ್ನು ಆರಿಸಿಕೊಂಡು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನಕಾರರು ಹೊಸ ಮಾರ್ಗವೊಂದನ್ನು ತೆರೆದು ತೋರಿಸಿದಂತೆ ತಾನೂ ಹೊಸ ಮಾರ್ಗವೊಂದರ ಪ್ರವರ್ತಕನಾದ. ವಚನಕಾರರನ್ನೂ ಅವರ ಚಿಂತನೆಗಳನ್ನೂ ಕಥನ ರೂಪವಾಗಿ ವ್ಯಾಖ್ಯಾನಿಸಿ ಜನಕ್ಕೆ ಕೊಡುವ ಅಗತ್ಯವಿದ್ದಿತು. ಹರಿಹರನನ್ನು ವಚನಕಾರರ ಕಥನರೂಪದ ವ್ಯಾಖ್ಯಾನಕಾರನೆಂಬ ಎಂ.ಚಿದಾನಂದಮೂರ್ತಿಯವರ ಅನಿಸಿಕೆ ಒಂದು ದೃಷ್ಟಿಯಲ್ಲಿ ಸ್ವೀಕಾರಾರ್ಹವಾಗಿದೆ. ಇದು ಅವನ ಸ್ವಂತಿಕೆಯನ್ನು ಇಲ್ಲವಾಗಿಸುವುದಿಲ್ಲವಾದರೂ ಅವನು ಮಾಡಿದ ಕೆಲಸದ ಸ್ವರೂಪವನ್ನು ಸಂಕೇತಿಸುತ್ತದೆ. ಹರಿಹರನ ರಗಳೆಗಳಲ್ಲಿ ಶಿವಭಕ್ತರ ಚರಿತ್ರೆಯೇ ಪ್ರಮುಖವಾಗಿದ್ದು, ಇವರು ಸಾಮಾನ್ಯ ನೆಲೆಯಿಂದ ಅಸಾಮಾನ್ಯ ನೆಲೆಗೆ ಏರಿದವರಾಗಿದ್ದಾರೆ. ಹರಿಹರನು ಶಿವಶರಣರ ಕಥೆಯನ್ನು ವಿವರಿಸುವ ರಗಳೆಗಳಲ್ಲಿ ಶಿವನ ಕೈಲಾಸದ ಒಡ್ಡೋಲಗದ ಚಿತ್ರಣವು ಕಥೆಗೊಂಡು ಪೌರಾಣಿಕ ಚೌಕಟ್ಟನ್ನು ಒದಗಿಸುತ್ತದೆ. ರಗಳೆಯ ಕಥಾನಾಯಕರು ಭೂಲೋಕಕ್ಕೆ ಬಂದು ಮಾಡುವ ಕೆಲಸಗಳೆಲ್ಲವೂ ವಚನಕಾರರು ಕಟ್ಟಿಗೊಂಡಿದ್ದ ಸಾಮಾಜಿಕ ಆದರ್ಶಗಳ ಸಾಂಕೇತಿಕ ಅಭಿವ್ಯಕ್ತಿಗಳೇ ಆಗಿವೆ. ಹರಿಹರನ ರಗಳೆಗಳಲ್ಲಿ ಶಿವಭಕ್ತರ ಕಾರ್ಯಚಟುವಟಿಕೆಗಳು ಕೇವಲ ಕಟ್ಟುಕತೆಯ ಪವಾಡಗಳಲ್ಲ. ಅವುಗಳಿಗೆ ಸಾಮಾಜಿಕ ಆಯಾಮವಿದೆ. ಹರಿಹರನು ಶಿವಭಕ್ತರನ್ನು ಚಿತ್ರಿಸಿದಂತೆ ಅವರಲ್ಲಿಯ ವಚನಕಾರರನ್ನು  ಚಿತ್ರಿಸಿದ್ದಾನೆ. ಅವನ ರಗಳೆಗಳಲ್ಲಿಯ ಪದ್ಯ ಹಾಗೂ ಗದ್ಯಗಳಲ್ಲಿ ಅನೇಕ ವಚನಗಳು ಹುದುಗಿರುವುದನ್ನು  ಗುರುತಿಸ ಬಹುದಾಗಿದೆ.

    ವಚನಸಾಹಿತ್ಯದಿಂದ ಪ್ರಭಾವಿತನಾಗಿ ಭಾಷೆ ಮತ್ತು ಧೋರಣೆಗಳ ದೃಷ್ಟಿಯಿಂದ ಪೂರ್ವದ ಪರಂಪರೆಯ ಕವಿಗಳಿಗಿಂತ ಭಿನ್ನವಾದ ನಿಲುವನ್ನು ಹೊಂದಿದವನು. ವಚನಕಾರರ ಚರಿತ್ರೆಯನ್ನು ಹರಿಹರ  ಕಥನಕಾವ್ಯವನ್ನಾಗಿಸಿದ. ಇತಿಹಾಸ ಪುರಾಣಗಳನ್ನು ಕುರಿತು ಕಾವ್ಯ ಬರೆಯಬೇಕೆನ್ನುವ ಪರಂಪರೆಯಲ್ಲಿ ಪ್ರಥಮ ಬಾರಿಗೆ ಹರಿಹರನು ಬರೆಯಲು ಆರಿಸಿಕೊಂಡ ಶಿವಶರಣರು ಸಾಮಾನ್ಯವಾಗಿ ಜನ ಸಾಮಾನ್ಯ ಸ್ತರದಿಂದ ಬಂದವರಾಗಿದ್ದಾರೆ. ಶರಣರ ಬದುಕನ್ನು ಕಾವ್ಯವನ್ನಾಗಿಸುವುದರ ಮೂಲಕ ಹರಿಹರ   ಮೊದಲಿಗನಾಗಿ ಕಂಡು ಬರುತ್ತಾನೆ. ಹರಿಹರನ ರಗಳೆಗಳಲ್ಲಿ ಶಿವಭಕ್ತರ ಚರಿತ್ರೆಯೇ ಪ್ರಮುಖವಾಗಿದ್ದು, ಇವರು ಸಾಮಾನ್ಯ ನೆಲೆಯಿಂದ ಅಸಾಮಾನ್ಯ ನೆಲೆಗೆ ಏರಿದವರಾಗಿದ್ದಾರೆ. ಹರಿಹರನ ರಗಳೆಗಳಲ್ಲಿ ಶಿವಭಕ್ತರ ಕಾರ್ಯಚಟುವಟಿಕೆಗಳು ಕೇವಲ ಕಟ್ಟುಕತೆಯ ಪವಾಡಗಳಲ್ಲ. ಅವುಗಳಿಗೆ ಸಾಮಾಜಿಕ ಆಯಾಮವಿದೆ. ವಚನಕಾರರ ಸಾಂಸ್ಕೃತಿಕ ಕಾಳಜಿಯನ್ನು ಹರಿಹರನು ರಗಳೆಗಳ ಕಥನಕ್ರಮದಲ್ಲಿ ಪುನರ್ ಸೃಷ್ಟಿಸಿದ್ದಾನೆ. ಹರಿಹರನು ಶಿವಭಕ್ತರನ್ನು ಚಿತ್ರಿಸಿದಂತೆ ಅವರಲ್ಲಿಯ ವಚನಕಾರರನ್ನು  ಚಿತ್ರಿಸಿದ್ದಾನೆ. ಅವನ ರಗಳೆಗಳಲ್ಲಿಯ ಪದ್ಯ ಹಾಗೂ ಗದ್ಯಗಳಲ್ಲಿ ಅನೇಕ ವಚನಗಳು ಹುದುಗಿರುವುದನ್ನು  ಗುರುತಿಸ ಬಹುದಾಗಿದೆ. ವಚನಕಾರರರ ವಚನಗಳಿಂದ ಪ್ರೇರಿತನಾಗಿಯೇ ಅವರ ಜೀವನ ಚರಿತ್ರೆಯನ್ನು ರಗಳೆಗಳ ಮೂಲಕ ಕಟ್ಟಿಕೊಟ್ಟಿದ್ದಾನೆ. ವಚನಕಾರರ ಸಾಂಸ್ಕೃತಿಕ ಕಾಳಜಿಗಳು ಹರಿಹರನ ರಗಳೆಗಳಲ್ಲಿ ಮತ್ತೊಮ್ಮೆ ಅಭಿವ್ಯಕ್ತಗೊಂಡಿವೆ.

    ಮನುಷ್ಯರ ಮೇಲೆ, ಸಾವವರ ಮೇಲೆ ಕಾವ್ಯ ಕಟ್ಟಿ ಅವರನ್ನು ಇಂದ್ರ ಚಂದ್ರರೆಂದು ಹೊಗಳುವುದನ್ನು ಹರಿಹರ ಧಿಕ್ಕರಿಸಿದ. ತಮಿಳುನಾಡಿನ ಶಿವಭಕ್ತರನ್ನು ಶಿವಶರಣರನ್ನು ಕುರಿತು ಕಾವ್ಯ ರಚಿಸಿದ. ಹರಿಹರನ ಜೀವನದೃಷ್ಟಿ ಪ್ರಧಾನವಾಗಿ ವಚನಕಾರರದ್ದಾಗಿದೆ. ಅವನು ಬದುಕನ್ನು ಕಂಡ ರೀತಿ, ಅನುಭವಿಸಿದ ರೀತಿ ಇವು ಎಲ್ಲಾ ಕಡೆಯಲ್ಲೂ ಕಾಣುವ ಅವನ ತಾತ್ವಿಕ ಚೌಕಟ್ಟು ವಚನಕಾರರಿಂದ ರೂಪಿತವಾದದ್ದೆಂಬುದನ್ನು ದೃಢಪಡಿಸುತ್ತವೆ. ಹರಿಹರನ ಹೆಸರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ತ್ವದ ಸ್ಥಾನಗಳಿಸಿರುವುದು ಈತ ರಚಿಸಿರುವ ರಗಳೆ ಕಾವ್ಯಗಳ ಮೂಲಕ.  ಶಿವನನ್ನು, ಶಿವಶರಣರನ್ನು ಸ್ತುತಿಸಲು ಮಾತ್ರ ಕಾವ್ಯಶಕ್ತಿಯನ್ನು ಬಳಸಬೇಕಲ್ಲದೆ ಮಾನವರನ್ನು ಹೊಗಳಲು ಅಲ್ಲವೆಂಬ ಸಂಪ್ರದಾಯ ವನ್ನು ಕನ್ನಡ ಸಾಹಿತ್ಯದಲ್ಲಿ ರೂಢಿಗೆ ತಂದ. ಹಳಗನ್ನಡ ಭಾಷೆಯಲ್ಲಿ ಪ್ರಾಸದ ಬಗೆಗಿದ್ದ ಮೂರು ಬಗೆಯ ‘ಳ’ಕಾರಗಳಿಗೆ ಪ್ರತಿಯಾಗಿ ಒಂದನ್ನೇ ರೂಢಿಸುವ ದಿಟ್ಟತನವನ್ನೂ ಈತ ತೋರಿದ. ಅದುವರೆಗೆ ಕನ್ನಡ ಸಾಹಿತ್ಯದಲ್ಲಿ ಪ್ರಧಾನವಾಗಿದ್ದ ಚಂಪೂ ಕಾವ್ಯಪರಂಪರೆಯನ್ನು ಹಿಂದೆ ಸರಿಸಿ ರಗಳೆಗಳಲ್ಲಿ ಕಾವ್ಯ ರಚಿಸುವ ಹೊಸ ಸಂಪ್ರದಾಯಕ್ಕೆ ಅಸ್ತಿಭಾರ ಹಾಕಿದ. ತಮಿಳು ದೇಶದ ಅರವತ್ತು ಮೂವರು ಪುರಾತನರ,ಕೊಂಡಗುಳಿ ಕೇಶಿರಾಜ, ಬಸವಣ್ಣ, ದೇವರದಾಸಿಮಯ್ಯ, ಪ್ರಭುದೇವ ಮುಂತಾದ ಶಿವಶರಣರ, ಅಲ್ಲದೆ ಸ್ತೋತ್ರ, ಆತ್ಮನಿವೇದನ ರೂಪವಾದ ನೂರಾರು ರಗಳೆಗಳನ್ನು ರಚಿಸುವುದರ ಮೂಲಕ ದೇಸಿಗೆ ದೃಢತೆಯನ್ನು ತಂದು ಕೊಟ್ಟನು.  ಕನ್ನಡ ಸಾಹಿತ್ಯದಲ್ಲಿ ರಾಘವಾಂಕ ಪ್ರಧಾನವಾಗಿ ಪ್ರಯೋಗಶೀಲನಾದ ಸ್ವತಂತ್ರ ಮನೋಧರ್ಮದ ಕವಿ. `ಜನಬದುಕಬೇಕೆಂದು ಕಾವ್ಯಮುಖದಿಂ ಪೇಳ್ದನನಪೇಕ್ಷೆಯಿಂದ' ಎಂಬುದು ಇವನ ಕಾವ್ಯೋದ್ದೇಶವಾಗಿತ್ತು. ಮಹಾಕವಿ ಹರಿಹರನ ಸಮಕಾಲೀನನೂ `ವರಸುತ'ನೂ ಆದ ಈತ ಹರಿಹರನ ಪ್ರಭಾವದ ಸೆಳೆತಕ್ಕೆ ಪ್ರತಿಯಾಗಿ ನಿಂತು. ತನ್ನದೇ ಅದೊಂದು ಪರಂಪರೆಯನ್ನು ನಿರ್ಮಿಸಿಕೊಂಡವ. ತನಗೆ ಹಿನ್ನಲೆಯಲ್ಲಿದ್ದ ಹರಿಹರನ ರಗಳೆಯ ರೀತಿಯನ್ನು ಅನುಸರಿಸದೆ, ಮೊತ್ತಮೊದಲಿಗೆ ಷಟ್ಪದಿ ರೂಪವನ್ನು ಪಳಗಿಸಿ ದೀರ್ಘ ಕಥಾನಿರೂಪಣೆಗೆ ಸೊಗಸಾಗಿ ಅಳವಡಿಸಿಕೊಂಡದ್ದು ಇವನ ಮಹತ್ತ್ವದ ಸಾಧನೆ. ಕನ್ನಡ ಸಾಹಿತ್ಯದಲ್ಲಿ ಕವಿ ರನ್ನನನ್ನು ಬಿಟ್ಟರೆ, ಅಷ್ಟೇ ನಾಟ್ಯ ಪ್ರತಿಭೆಯನ್ನು ಪ್ರಕಟಿಸಿದ ಮತ್ತೊಬ್ಬ ಕವಿ ರಾಘವಾಂಕ. ಹರಿಹರ ರಗಳೆಯ ಛಂದಸ್ಸಿನಲ್ಲಿ ಇಡೀ ಕಾವ್ಯವನ್ನೇ ಬರೆಯಲು ಮೊದಲಿಗನಾದರೆ ಅವನ ಸೋದರಳಿಯನೂ ಶಿಷ್ಯನೂ ಆದ ರಾಘವಾಂಕ ಷಟ್ಪದಿಯಲ್ಲಿ ಕಾವ್ಯ ರಚನೆ ಮಾಡಿರುವವರಲ್ಲಿ ಮೊದಲನೆಯವನಾಗಿದ್ದಾನೆ. ಹರಿಶ್ಚಂದ್ರ ಪರಮ ಶಿವಭಕ್ತನೆಂದೂ ಸತ್ಯವೆಂಬುದೆ ಹರನು, ಹರನೆಂಬುದೇ ಸತ್ಯ ಎಂಬ ತತ್ತ್ವವನ್ನು ಲೋಕಕ್ಕೆ ಬೆಳಗಿದವನು. ಹನ್ನೆರಡನೆಯ ಶತಮಾನದಲ್ಲಿ ಮಾನವಕುಲದ ಉದ್ಧಾರಕ್ಕಾಗಿ ನಡೆದ ಶಿವಶರಣರ ಕ್ರಾಂತಿಯಲ್ಲಿ ಅಲ್ಲಮ ಪ್ರಭುವಿನ ಚರಿತ್ರೆಯನ್ನು ಮೊಟ್ಟಮೊದಲು ಬರೆದ ಹರಿಹರ ತನ್ನ ಪ್ರಭುದೇವರ ರಗಳೆಯಲ್ಲಿ ಅಲ್ಲಮ ಕಾಮಲತೆಗೆ ಮರುಳಾಗಿ ವಿರಹದಿಂದ ಬೆಂದು ವೈರಾಗ್ಯ ಪಡೆದಂತೆ ಚಿತ್ರಿಸಿದ್ದರೆ, ಈತನು ತನ್ನ ಕಾವ್ಯ `ಸತ್ತವರ ಕಥೆಯಲ್ಲ ಜನನದ ಕುತ್ತದಲ್ಲಿ ಕುದಿ ಕುದಿದು ಕರ್ಮದ ಕತ್ತಲೆಗೆ ಸಿಲುಕುವರ ಸೀಮೆಯ ಮಾತು ತಾನಲ್ಲ’ ಎಂದು ಘೋಷಿಸಿ `ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು’ ಎಂದಿದ್ದಾನೆ. ಭಾವ ಭಾಷೆಗಳಲ್ಲಿನ ಅಪೂರ್ವವಾದ ಹೊಂದಾಣಿಕೆಯಿಂದಲೂ ಉಜ್ಜ್ವಲವಾದ ಉಪಮೆ ರೂಪಕ ದೃಷ್ಟಾಂತಗಳಿಂದಲೂ ಸಮಯೋಚಿತವಾದ ವರ್ಣನೆ ಮತ್ತು ದೇಶೀಯ ಬೆಡಗಿನ ಪರಿಣಾಮದ ಉತ್ಕಟತೆಯಿಂದಲೂ ಇವನ ಶೈಲಿ ಇವನ ಸ್ವತಂತ್ರ ಕವಿತಾಮಾರ್ಗದ ಮುಖಬಿಂಬದಂತಿದೆ.

    ಹರಿಹರ ರಾಘವಾಂಕರಂತಹ ಕವಿಗಳು ಹಾಕಿಕೊಟ್ಟ ಪರಂಪರೆಯನ್ನು ಸ್ವತಂತ್ರ ಮನೋಧರ್ಮವನ್ನು ಅನುಸರಿಸಿ ಹೊಸ ಕಾವ್ಯ ಪ್ರಕಾರಗಳಲ್ಲಿ ನಡುಗನ್ನಡ ಕವಿಗಳು ಕಾವ್ಯ ರಚನೆ ಮಾಡಿದ್ದು ಮಹತ್ತರ ಸಾಧನೆ. ವಚನ ರಗಳೆ ಷಟ್ಪದಿ ತ್ರಿಪದಿ ಸಾಂಗತ್ಯ ಇತ್ಯಾದಿ ಪ್ರಕಾರಗಳು ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರದ ರೂಪುಗೊಂಡಿದ್ದು ನಡುಗನ್ನಡ ಕವಿಗಳ ಮೂಲಕ 10 ರಿಂದ 12ನೇ ಶತಮಾನದ ವರೆಗೆ ಚಂಪೂ ಕಾವ್ಯಪ್ರಕಾರ ಇದ್ದರೆ 12 ರಿಂದ 14ನೇ ಶತಮಾನದಲ್ಲಿ ಸುಮಾರು 200 ವರ್ಷಗಳ ಅವಧಿಯಲ್ಲಿ ವಚನ ರಗಳೆ ಸಾಂಗತ್ಯ ಷಟ್ಪದಿ, ಸಾಹಿತ್ಯ ಪ್ರಕಾರಗಳು ರೂಪುಗೊಂಡಿದ್ದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕ್ರಾಂತಿಕಾರಕ ಘಟನೆಯಾಗಿದೆ. ಹದಿನೈದನೆಯ ಶತಮಾನ ಮತ್ತು ನಂತರದ ಕಾಲದಲ್ಲಿ ಷಟ್ಪದಿ, ಸಾಂಗತ್ಯದಂತಹ ಸಾಹಿತ್ಯ ರೂಪಗಳಲ್ಲಿ ಕಾವ್ಯ ನಿರ್ಮಿತಿ ಅಧಿಕ ಗೊಂಡಿತು. ವೈವಿಧ್ಯಮಯ ಕಥಾ ಪಾತ್ರಗಳು ಮತ್ತು ಸಹಜ ದೇಸಿಶೈಲಿಯಲ್ಲಿ ಕುಮಾರವ್ಯಾಸ, ಚಾಮರಸ, ನಂಜುಂಡ, ಲಕ್ಷ್ಮೀಶ, ರತ್ನಾಕರವರ್ಣಿಯಂತಹ ಕವಿಗಳು ಕಾವ್ಯಗಳನ್ನು ರಚಿಸುವುದರ ಮೂಲಕ ಕಾವ್ಯದ ಎತ್ತರವನ್ನು ಹೆಚ್ಚಿಸಿದರು. ಕನ್ನಡ ಸಾಹಿತ್ಯ ಪರಂಪರೆಯ ನಿರ್ಮಾತೃಗಳು ಎಂಬ ಹೆಗ್ಗಳಿಕೆಗೂ ಪಾತ್ರರಾದರು.    

   ಕನ್ನಡದ ದೇಸೀಯತೆ ಕಣ್ಮರೆಯಾಗಿ ಸಂಸ್ಕೃತವೇ ವಿಜೃಂಭಿಸಿದಾಗಮುತ್ತನ್ನು ಮೆಣಸನ್ನು ಕೋದಂತೆ ತುಪ್ಪವನ್ನು ಎಣ್ಣೆಯನ್ನು ಬೆರೆಸಿದಂತೆಎಂಬ ಕಟುವಿಮರ್ಶೆ ಕವಿ ನಯಸೇನನಿಂದ ಬಂದುದು ದೇಸೀತನದಿಂದಲೇ. ಸಂಸ್ಕೃತವನ್ನು ಬೆರೆಸಿದಲ್ಲದೇ ಕನ್ನಡದಲ್ಲಿ ಕಾವ್ಯರಚನೆ ಸಾಧ್ಯವಾಗದು ಎಂಬುದರ ಮಾತಿಗೆ ಸವಾಲಾಗಿ, ಅಚ್ಚಗನ್ನಡದಲ್ಲೇ ಕಾವ್ಯ ರಚನೆ ಮಾಡುತ್ತೇನೆಂದು ಹೊರಟ ಕವಿ ಆಂಡಯ್ಯನ ಪ್ರಯತ್ನ ಕನ್ನಡದ ದೇಸೀಯತೆಯ ಸ್ವಾಭಿಮಾನದ ಹೆಗ್ಗುರುತಾಗಿದೆ. ಇದರ ಪರಿಣಾಮದಿಂದಾಗಿ ಭಾಷಾ ಮಾಧ್ಯಮದಲ್ಲಿ ಮಾತ್ರವಲ್ಲದೇ ಸಾಹಿತ್ಯ ವಸ್ತುವಿನಲ್ಲಿಯೂ ದೇಸೀಯತೆಯ ದೃಷ್ಟಿ ತಲೆಯೆತ್ತಿತು. ಅರಸೊತ್ತಿಗೆಯ ಅವಿವೇಕಾದಿಗಳನ್ನು ತಾವು ಅರಸನ ಆಶ್ರಯದಲ್ಲೇ ಇದ್ದರೂ ಹಂಗಿಲ್ಲದೇ ಹಳಿದು, ಆತನು ಕೊಟ್ಟ ಜೋಳದ ಹಂಗನ್ನು ಎಲ್ಲಾ ರೀತಿಯಿಂದಲೂ ತೀರಿಸಿದೆನೆಂಬ ಸಂತೃಪ್ತಿಯ ಕ್ರಾಂತಿಯ ಕಿಡಿ ಪಂಪನಿಂದಲೇ ವ್ಯಕ್ತವಾದದು ಕವಿ ಪಂಪನ ದೇಸೀತನದ ಹೆಗ್ಗುರುತು. ಮುಂದೆ ಹರಿಹರ ಬಸವಣ್ಣಾದಿಗಳಿಂದ ಉಚ್ಚ-ನೀಚ, ಬೇಧವನ್ನು ತೊಡೆದುಹಾಕುವ ಮಹಾಯತ್ನ ವೀರಶೈವ ಆಂದೋಲನವಾಗಿ ರೂಪಗೊಂಡಿತು. ವಚನಸಾಹಿತ್ಯದ ಧೋರಣೆಗಳೆಲ್ಲ ದೇಸೀಯ ನೆಲೆಯಿಂದಲೇ ರೂಪುಪಡೆದುಕೊಂಡಿವೆ. ಕನ್ನಡ ಭಾಷೆಯ ಮೇಲಿರುವ ಸಂಸ್ಕೃತದ ಅವಲಂಬನೆಯನ್ನು ದೂರುಸರಿಸಿ ಸರಳ, ನೇರ ನುಡಿಗೆ ಇಂಬಾಯಿತು. ಜನರ ಎದೆಯಲ್ಲಿ ಮಿಡಿಯುವ ಭಾವನೆಗಳಿಗೆ ನುಡಿ ಪಡೆನುಡಿಯಾಯಿತು. ವಿಶೇಷವಾಗಿ ಹರಿದಾಸರಲ್ಲಿ ಪ್ರಮುಖರಾದ ಪುರಂದರ, ಕನಕದಾಸರು ಹರಿಭಕ್ತಿಯನ್ನು ಸಾರಲು ಸಂಗೀತ ಮಾಧ್ಯಮವನ್ನು ಬಳಸಿಕೊಂಡರೂ ಜನಸಾಮಾನ್ಯರ ಜೀವನ ವಿಧಾನ ಸಾಮಾಜಿಕ ಸುಧಾರಣೆ, ಅಂಧಾನುಕರಣೆಯ ವಿಮರ್ಶೆ, ಟೀಕೆ, ಮುಂತಾದ ವಿಚಾರ ಹೇಳುವಲ್ಲಿ ಹರಿದಾಸರು ದೇಸೀಯತೆಯನ್ನು ಮೆರೆದಿದ್ದಾರೆ. ಅದರಲ್ಲೂ ಕನಕದಾಸರ ರಾಮಧಾನ್ಯ ಚರಿತೆಯು ಭತ್ತ ಮತ್ತು ರಾಗಿಯ ನಡುವಣ ಅಂತರವನ್ನು ಕಾವ್ಯಾತ್ಮಕವಾಗಿ ವಿಶ್ಲೇಷಿಸಿ ಬಡವರ, ದೀನರ, ಆಹಾರ ಧಾನ್ಯವನ್ನು ಹೆಗ್ಗಳಿಕೆಯ ಸ್ಥಾನಕ್ಕೇರಿಸುವಲ್ಲಿ ದಾಸರ ಸ್ವಂತಿಕೆ, ಎದ್ದು ತೋರುತ್ತದೆ. ಅಷ್ಟೇ ಅಲ್ಲದೇ ಕಾಲಮಾನದ ದೃಷ್ಟಿಯಿಂದ ಇಂತಹ ಶತಮಾನದ್ದೆಂದು, ಇಂತಹ ವರ್ಷದ್ದೆಂದು ಹೇಳಲು ಸಾಧ್ಯವಾಗದ ಜನಪದ ಸಾಹಿತ್ಯರಾಶಿಯು ನಮ್ಮಲ್ಲಿ ಸಾಕಷ್ಟಿದೆ. ನಮ್ಮ ಜನಗಳ ನೋವು-ನಲಿವುಗಳನ್ನು, ಸಾಹಸ-ಶೌರ್ಯಗಳನ್ನು ನಮ್ಮ ನೆಲ-ಜಲದ ಸೊಬಗನ್ನು ಹಾಡಿ ಹೊಗಳುವ ಜೀವನ ಪ್ರೀತಿಯಲ್ಲಿ ದೇಸೀಯತೆಯು ಸದಾ ಜಾಗೃತವಾಗಿ, ಜನಮಾನಸದ ದೈನಂದಿನ ಬದುಕಿನಲ್ಲಿ ಬಿಂಬಿತವಾಗಿದೆ.

      ನಯಸೇನನು ಕತೆಗಳ ಮೂಲಕ ಧರ್ಮಪ್ರಸಾರಕ್ಕೆ ತೊಡಗಿದ ಜಿನಧರ್ಮದ ಹಿರಿಮೆಯನ್ನು ಸಾರುವ ಸಂದರ್ಭದಲ್ಲಿಯೇ ಅದರಲ್ಲಿ ಪರಿಸರದ ಮೂಲಕ ತೂರಿಬಂದ ಅಂಧಶ್ರದ್ಧೆ ಮೂಢನಂಬಿಕೆಗಳನ್ನು ಟೀಕಿಸದೇ ಬಿಟ್ಟಿಲ್ಲ. ಯಾವುದೇ ಪಕ್ಷಪಾತಕ್ಕೊಳಗಾಗದೇ ನಿರ್ದಾಕ್ಷಿಣ್ಯವಾಗಿ ದೋಷಗಳನ್ನು ಎತ್ತಿ ತೋರಿ ತನ್ನ ಪ್ರಾಮಾಣಿಕತನವನ್ನು ಸಮರ್ಥಿಸಿಕೊಂಡಿದ್ದಾನೆ. ನಯಸೇನ ಹೋಲಿಕೆ, ಉಪಮೆ, ಸಾದೃಶ್ಯಗಳನ್ನು ಬಳಸುವಲ್ಲಿ ಧಾರಾಳತನವನ್ನು ಮೆರೆದವನು. ಒಂದು ಕಟ್ಟುವ ಕಡೆ ಹತ್ತಿಪ್ಪತ್ತು ಹೋಲಿಕೆಗಳನ್ನು ತಂದಿಕ್ಕುವ ನಯಸೇನ ಕೆಲ ವಿಮರ್ಶಕರ ಟೀಕೆಗೆ ಗುರಿಯಾಗಿದ್ದುದ್ದೂ ಉಂಟು. ಆದರೆ ಜನ ಬದುಕಲೆಂದು ಕಾವ್ಯ ರಚನೆಗೆ ತೊಡಗಿದ ಕವಿ ನಯಸೇನ ತನ್ನೆಲ್ಲ ಲೋಕಜ್ಞಾನ, ಸಮಾಜದ ಸೂಕ್ಷ್ಮನಿರೀಕ್ಷಣೆ, ಲೋಕಾನುಭವಗಳ ಒತ್ತಡದಿಂದ ದೂರ ಉಳಿಯುವುದಿಲ್ಲ. ಧರ್ಮಾಮೃತ ಕಾವ್ಯವು, ಹದಿನಾಲ್ಕು ಆಶ್ವಾಸಗಳಿಂದ ಕೂಡಿದ ಕಥಾಗುಚ್ಛ. ಪ್ರತಿಯೊಂದೂ ಆಶ್ವಾಸಗಳಲ್ಲಿ ಒಂದು ಪ್ರಮುಖ ಕಥೆ ಮತ್ತು ಉಪಕಥೆಗಳನ್ನೊಳಗೊಂಡಂತೆ ಕವಿ ನಯಸೇನ ಇಲ್ಲಿ ಹೇಳ ಹೊರಟದ್ದು ಜೈನ ಧರ್ಮದ ತತ್ವ ಸಿದ್ಧಾಂತಗಳನ್ನು. ಇದು ಕಾವ್ಯದ ಕಥಾ ವಸ್ತುವಾಗಿದ್ದರೂ ಹಾಗೆ ಹೇಳಹೊರಟ ಕವಿ ತನ್ನ ಕಾವ್ಯದುದ್ದಕ್ಕೂ ಹೆಜ್ಜೆ ಹೆಜ್ಜೆಗೂ ಬಳಸಿಕೊಂಡ್ಡದ್ದು ಜಾನಪದ ಕತೆಗಳನ್ನು. ಸಾಂದರ್ಭಿಕವಾಗಿ ಬಳಸಿಕೊಂಡ ಜಾನಪದ ಕಥೆ ಮತ್ತು ದೇಸೀ ಕಥನತಂತ್ರಗಳಿಂದ ಇಡೀ ಕಾವ್ಯ ದೇಸೀ ಮಗ್ಗುಲನ್ನು ಪಡೆದು ಹೊಸ ಬಗೆಯ ವಿನ್ಯಾಸವನ್ನು ತಳದಿದೆ. ದೇಸೀಯತೆ ಎಂಬುದು ಒಂದು ಗ್ರಹಿಕೆ. ಒಂದು ಆಲೋಚನಾ ಕ್ರಮ. ಸ್ಥಳೀಯವಾದ ಅಥವಾ ಒಂದು ಪ್ರದೇಶದ ಪರಂಪರಾಗತವಾದ, ಅಕೃತ್ರಿಮವಾದ ಸಾಂಸ್ಕೃತಿಕ ಬದುಕಿನ ಅನುಭವದ ನೆಲೆಗಳನ್ನು ಮೂಲ ಸ್ವರೂಪದಲ್ಲಿಯೇಕಟ್ಟಿಕೊಡುವ ಒಂದುಬಗೆಯ ತಿಳುವಳಿಕೆಯೇ ದೇಸೀಯತೆ. ಕವಿ ನಯಸೇನ ತನ್ನ ಕಾಲದ ಅಂಥ ಜನಜೀವನದ ಬದುಕಿನ ಅನುಭವದ ಮೂಲ ಗ್ರಹಿಕೆಗಳನ್ನು ಧರ್ಮಾಮೃತದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾನೆ. ಹೀಗೆ ಚಂಪೂ ಸಂಪ್ರದಾಯದಲ್ಲಿಯೇ ನಯಸೇನ ಜೈನಧರ್ಮದ ತತ್ವಾದರ್ಶಗಳನ್ನು ಬಿತ್ತರಿಸಿ, ಜಿನ ಧರ್ಮದ ಪ್ರಸಾರದೊಂದಿಗೆ ಜಿನನನ್ನೇ ತನ್ನ ಕಥೆಗೆ ವಸ್ತುವನ್ನಾಗಿ ಮಾಡಿಕೊಂಡವನು. ಆದರೂ ಜಿನನ ಕಥೆಯೊಂದಿಗೆ ತಳುಕು ಹಾಕಿಕೊಂಡ ಜಾನಪದ ಕಥೆಗಳಿಂದ ಇಡೀ ಕಾವ್ಯ ದೇಸೀಯತೆಯ ಸ್ಪರ್ಷ್ಯ ಪಡೆದುಕೊಂಡು ದೇಸೀ ಕಾವ್ಯವಾಗಿ ಪರಿಣಮಿಸಿದೆ. ಮಾರ್ಗಪರಂಪರೆಗೆ ಭಿನ್ನವಾದ ದೇಸೀ ಬದುಕೊಂದು ನಯಸೇನನ ಧರ್ಮಾಮೃತದಲ್ಲಿ ಅರಳಿನಿಂತಿದೆ. ನಯಸೇನ ತನ್ನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಹಾಗೂ ತನಗೆ ಪರಿಚಯವಿದ್ದ ಜಾನಪದ ಕಥೆಗಳನ್ನು ಯಾವುದೆ ಹಿಂಜರಿಕೆಯಿಲ್ಲದೆ ಯಥೋಚಿತವಾಗಿ ಬಳಸಿಕೊಂಡು, ತನ್ನ ಕಾವ್ಯದ ಕಥಾ ವಸ್ತುವನ್ನು ವಿನೂತನವಾಗಿ ವಿನ್ಯಾಸಗೊಳಿಸಿದ್ದಾನೆ. ತಾನು ಬಳಸಿಕೊಂಡ ಜಾನಪದ ಕಥೆಗಳೊಂದಿಗೆ ಸಾರ್ವಕಾಲಿಕ ಮೌಲ್ಯಗಳನ್ನು ಜನರಿಗೆ ಬಿತ್ತರಿಸಿ, ಅಲ್ಲಿಯ ಕಥಾನಕಗಳು ಓದುಗರ ಕಣ್ಮುಂದೆ ಅಚ್ಚೊತ್ತಿ ನಿಲ್ಲುವಂತೆ ಮಾಡಿದ್ದಾನೆ. ಸಹಜವಾಗಿ ಕವಿ ನಯಸೇನನ ಧರ್ಮಾಮೃತದಲ್ಲಿ ಬಳಕೆಯಲ್ಲಿರುವ ಆಡುಮಾತಿನ ವಿಶಿಷ್ಟ ಪ್ರಯೋಗ, ನಾಣ್ಣುಡಿ ಮತ್ತು ನುಡಿಗಟ್ಟುಗಳು. ಸಂದರ್ಭಾನುಸಾರವಾದ ಇವುಗಳ ಬಳಕೆ ಕಾವ್ಯಕ್ಕೆ ದೇಸೀಯತೆಯನ್ನು ತಂದುಕೊಟ್ಟಿದೆ. ಅಂತಹ ಗ್ರಾಮ್ಯ ಬದುಕನ್ನು ಹೊತ್ತ ಮಾತುಗಳ ವಿಶಿಷ್ಟ ಪದಪ್ರಯೋಗವನ್ನು ಧರ್ಮಾಮೃತದಲ್ಲಿ ಹೆಚ್ಚಾಗಿ ಕಾಣಬಹುದು. ಹೀಗೆ ಸಂದರ್ಭಾನುಸಾರ ಕವಿ ನಯಸೇನ ನಾಣ್ಣುಡಿಗಳನ್ನು ಕಾವ್ಯದಲ್ಲಿ ಬಳಸುತ್ತ ದೇಸೀಯ ಬೆಡಗನ್ನು ಹೆಚ್ಚಿಸಿದ್ದಾನೆ. ಈತ ಬಳಸಿದ ಉಪಮೆಗಳ ಸಂಖ್ಯೆ ಕಡಿಮೆಯಿದ್ದರೂ, ನಾಣ್ಣುಡಿಗಳಿಗೆ ಕೊರತೆ ಎಂಬುದಿಲ್ಲ. ವಿಶೇಷವಾಗಿ ಕನ್ನಡದ ಯಾವ ಕವಿಯೂ ಇವನಷ್ಟು ನಾಣ್ಣುಡಿಗಳನ್ನು ಬಳಸಿಲ್ಲವೆಂದೇ ಹೇಳಬಹುದು.  ನಯಸೇನ ಕವಿಯು ಆಡುಮಾತಿನ ಅಕ್ಷಯ ಭಂಡಾರಕ್ಕೆ ಲಗ್ಗೆಯಿಟ್ಟು ಅಲ್ಲಿಯ ನಾಣ್ಣುಡಿಗಳನ್ನು ಸೂರೆಗೊಂಡಿದ್ದಾನೆ. ಒಂದು ಅಂದಾಜಿನ ಪ್ರಕಾರ ಸ್ವತಃ ಅವನೇ ಬಾಯಿಬಿಟ್ಟು ನಾಣ್ಣುಡಿಯಂದು ಹೇಳಿರುವ ಮಾತುಗಳು ಮೂವತೈದು ಮಾತ್ರ. ಉಳಿದ ಅನೇಕ ನಾಣ್ಣುಡಿಗಳಂತಹ ಮಾತುಗಳನ್ನು ನಯಸೇನ ಜನವಾಣಿಯಿಂದ ಆಯ್ದುಕೊಂಡಿದ್ದಾನೆ. ಸಂದರ್ಭಾನುಸಾರವಾಗಿ ಇಂಥ ಗಾದೆಮಾತುಗಳು ಧರ್ಮಾಮೃತದಲ್ಲಿ ಅಧಿಕಪ್ರಮಾಣದಲ್ಲಿ ಬಂದು ಓದುಗರ ಗಮನ ಸೆಳೆಯುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಕವಿ ಬಳಸಿದ ನಾಣ್ನುಡಿಗಳ ಅರ್ಥವತ್ತತೆ, ಲೋಕವ್ಯವಹಾರಜ್ಞಾನ ಮತ್ತು ಹಾಸ್ಯಮಯತೆ ಮಿಗಿಲಾಗಿ ಕನ್ನಡ ನುಡಿಯ ಬಲ್ಮೆಯನ್ನು ಪ್ರಕಾಶಪಡಿಸಿ ಮತ್ತು ಪಸರಿಸುವಂತೆ ಮಾಡುವ ಇಂತಹ ಮಾತುಗಳನ್ನು ತನ್ನ ಕೃತಿಯಲ್ಲಿ ಹೆಜ್ಜೆ ಹೆಜ್ಜೆಗೂ ತುಂಬಿ ಅದರ ದೇಸೀ ಪೊಸತೆನಿಸುವಂತೆ ಮಾಡಿದ ನಯಸೇನನ ಕೌಸಲ್ಯ ಮೆಚ್ಚುವಂತಹದು. ಹೀಗೆ ನೂರಾರು ನಾಣ್ಣುಡಿಗಳೊಂದಿಗೆ ಆಡುಮಾತಿನ ಶೈಲಿಯನ್ನು ಕಾವ್ಯದಲ್ಲಿ ತಂದು ಅದು ದೇಸಿವೆತ್ತ ಪೊಸನುಡಿ ಮತ್ತು ಮಾರ್ಗಗಳ ಕುಸುರಿಕೆಲಸವಾಗುವಂತೆ ಮಾಡುವಲ್ಲಿ ನಯಸೇನನ ವೈಶಿಷ್ಟ್ಯ ಗರಿಬಿಚ್ಚಿನಿಂತಿದೆ. ಕನ್ನಡದ ಆಡುಮಾತಿನ ಸೊಗಡು - ಬೆಡಗುಗಳನ್ನು ಸೂಕ್ತಿಯಂತಹ ನುಡಿಮುತ್ತುಗಳಿಂದ ಕೂಡಿದ ಇದೊಂದು ಅಪ್ಪಟ ದೇಸೀಕಾವ್ಯವಾಗಿದೆ. ಹೀಗೆ ಹದಿನಾಲ್ಕು ಆಶ್ವಾಸಗಳಿಂದ ಕೂಡಿದ ಧರ್ಮಾಮೃತ ಕಥೆ ಮತ್ತು ಉಪಕಥೆಗಳಿಂದ ಕೂಡಿ ಅಂದಂದಿನ ಜನಜೀವನದ ಚಿತ್ರವನ್ನು ಕವಿ ಇಲ್ಲಿ ಬಿಡಿಸಿಟ್ಟಿದ್ದಾನೆ. ಕವಿ ನಯಸೇನನಲ್ಲಿರುವ ಸಾಮಾಜಿಕ ಪ್ರಜ್ಞೆ ಬೆರಗುಗೊಳಿಸುವಂತಹದ್ದು. ಸಮಕಾಲೀನ ಜನಜೀವನದೊಡನೆ ಬೆರೆತ ಈತ ಅದರ ಸಂಪರ್ಕವನ್ನು ಗಟ್ಟಿಗೊಳಿಸಿಕೊಂಡುಬಂದ ಕನ್ನಡಕವಿಗಳಲ್ಲಿ ನಯಸೇನನ ಸ್ಥಾನ ಹಿರಿದಾದುದಾಗಿದೆ. ನಯಸೇನನು ಕೊಡ ಮಾಡಿರುವ ಹೋಲಿಕೆಗಳೆಲ್ಲವೂ ಹಳೆಯವಾದರೂ ಅವನು ಸ್ವೀಕರಿಸಿದುದು ಅವುಗಳ ಹಂದರ ಮಾತ್ರ. ಅದಕ್ಕೆ ರಕ್ತ ಮಾಂಸವನ್ನು ತುಂಬಿ, ಜೀವಕಳೆಯನ್ನಿತ್ತು ತನ್ನ ಬೆಡಗು ಬಿನ್ನಾಣಗಳಿಂದ ಲೋಕಾನುಭವವನ್ನು ಚಲ್ಲವರಿದು, ಅವು ಸಹೃದಯರಿಗೆ ಚೇತೋಪಹಾರಿಯಾಗುವಂತೆ ಮಾಡಿದ ನಯಸೇನನ ಕವಿತ್ವಶಕ್ತಿ ವಿಶಿಷ್ಟವಾದುದು. ಕೃತಿ ಜನಜೀವನದ ಚಿಕ್ಕ ಕಥಾಕೋಶವೆಂಬಂತೆ ತೋರುತ್ತದೆ. ಕಾವ್ಯ ವಸ್ತುವಿನುದ್ದಕ್ಕೂ ಪೂರಕವಾಗಿ ಬರುವ ಅಸಂಖ್ಯಾತ ನಾಣ್ಣುಡಿ, ಉಪಮೆ,ಪಡೆನುಡಿ, ಸಂದರ್ಭ ಸನ್ನಿವೇಶಗಳು ದೇಸೀಯ ವಿನ್ಯಾಸವನ್ನು ಪಡೆದಿವೆ. ನಯಸೇನ ಒಂದು ರೀತಿಯಲ್ಲಿ ಹಟಕ್ಕೆ ಬಿದ್ದವನಂತೆ ಕಾವ್ಯದ ತುಂಬಾ ಕನ್ನಡ ನುಡಿಗಟ್ಟುಗಳನ್ನು, ಉಪಮೆಗಳನ್ನು, ನಾಣ್ಣುಡಿಗಳನ್ನು ಸೂರೆಮಾಡಿ ಅನೇಕ ಹೊಸ ನಾಣ್ಣುಡಿ, ಜಾಣ್ಣುಡಿಗಳಂತಹ ಸೂಕ್ತಿಗಳನ್ನು ರಚಿಸಿ ಚಂಪೂರೂಪದಲ್ಲಿಯೇ ಹೊಸ ಶೈಲಿಯೊಂದನ್ನು ಕನ್ನಡಕ್ಕಿತ್ತು ಕೀರ್ತಿಕಾಯನಾದ. ಅರ್ಥದಲ್ಲಿಯೇ ನಯಸೇನಪೊಸಗನ್ನಡಎಂಬ ಪದವನ್ನು ಬಳಸಿದುದು. ಕನ್ನಡ ಆಡುಮಾತಿನ ಶ್ರೀಮಂತಿಕೆಯನ್ನು ಅದರ ವಿಶಿಷ್ಟ ಪದಪದ್ಧತಿಯ ಬೆಡಗು ಬಿನ್ನಾಣಗಳನ್ನು ಗೂಢ ತತ್ವಗಳ ವಿವೇಚನೆಗೆ ಅದು ಉತ್ತಮ ಮಾಧ್ಯಮವಾಗಬಲ್ಲುದೆಂಬುದನ್ನು ಅರಿತವನು. ಒಟ್ಟಿನಲ್ಲಿ ಕನ್ನಡದ ಸತ್ವಸಾಮರ್ಥ್ಯಗಳನ್ನು ಮನವರಿಕೆ ಮಾಡಿಕೊಡಬಲ್ಲ ವಿಶಿಷ್ಟ ಶೈಲಿಯಲ್ಲಿ ರಚನೆಗೊಂಡ ಅವನ ಧರ್ಮಾಮೃತ ನಿಜವಾದ ಅರ್ಥದಲ್ಲಿ ಅಂದಿನ ಕಾಲಕ್ಕೆಪೊಸಗನ್ನಡಕೃತಿಯೇ. ಅದರ ಪ್ರಭಾವ ಅವನ ನಂತರದಲ್ಲಿ ಬಂದ ಜೈನ ಕವಿಗಳಾದ ಜನ್ನ, ನೇಮಿಚಂದ್ರ, ಮತ್ತು ಆಂಡಯ್ಯನ ಕಾವ್ಯಗಳ ಮೇಲಾಗಿದ್ದು, ದೇಸಿ ಹಿನ್ನೆಲೆಯಲ್ಲಿ ಅವರ ಕಾವ್ಯಗಳ ಭಾಷೆ, ಶೈಲಿಯನ್ನು  ಗಮನಿಸಬಹುದಾಗಿದೆ. ಕಾವ್ಯಭಾಷೆಯು ತನ್ನ ಕಾಲದ ಆಡುಮಾತಿನಿಂದ ಬಹುವಾಗಿ ಬೇರೆಯಾಗಿರಬೇಕೆಂಬ ಆಸೆಯಾಗಲಿ, ಅವನಿಗೆ ಇದ್ದಂತೆ ತೋರದು. ಆದರೆ ಅವನ ಕಾವ್ಯ ಭಾಷೆಯು ಚಂಪೂ ಪ್ರಪಂಚದಲ್ಲಿ ಜಾನಪದ ಭಾಷೆಯು ಪಡೆದ ವಿಜಯದ ಸಂಕೇತವಾಗಿದೆ ಎಂಬ ಹಾಗೂ ಎಂ.ಚಿದಾನಂದಮೂರ್ತಿಯವರನಯಸೇನ ಕನ್ನಡದ ಒಬ್ಬ ಜಾನಪದ ಚಂಪೂ ಕವಿ  ಎಂಬ ಮಾತುಗಳು ನಯಸೇನನಿಗೆ ಸಂಪೂರ್ಣವಾಗಿ ಅನ್ವಯಿಸುತ್ತವೆ. ಅವನು ತನ್ನ ಹಿಂದಿನ ಸಂಪ್ರದಾಯವನ್ನು ಸಂಪೂರ್ಣವಾಗಿ ಬಿಟ್ಟುಬಿಡುವ ಧೈರ್ಯಶಾಲಿಯಾಗಿರಲಿಲ್ಲವೇನೋ. ಇಲ್ಲದಿದ್ದರೆ ತನ್ನ ಉದ್ದೇಶಕ್ಕೆ ಅನುಗುಣವಾಗಿ ಜನರನ್ನು ತಲುಪಲು ಇನ್ನೂ ಸರಳವಾದ ಕಾವ್ಯ ಮಾರ್ಗವನ್ನು ಅನುಸರಿಸುತ್ತಿದ್ದ. ಒಟ್ಟಾರೆಯಾಗಿ ಕವಿ ನಯಸೇನನ ಸಂಸ್ಕಾರವನ್ನು, ಮನೋಭಾವವನ್ನು, ಅನುಭವ ವೈವಿಧ್ಯವನ್ನು, ಗಮನಿಸಿದಾಗ ಅವನು ತನ್ನ ಕಾಲಕ್ಕಿಂತ ಐವತ್ತು ಅಥವಾ ನೂರು ವರ್ಷ ಈಚಿನವನಾಗಿದ್ದು ಕಾವ್ಯ ರಚನೆ ಮಾಡಿದ್ದರೆ ಪ್ರಾಯಶಃ ಅವನು ಚಂಪೂಕಾವ್ಯವನ್ನು ಬರೆಯುತ್ತಿದ್ದಿಲ್ಲ. ಏನೇ ಇದ್ದರೂ ನಯಸೇನ ದೇಸೀಯನ್ನು ಬಳಸಿಕೊಂಡ, ಚಂಪೂ ಕಾವ್ಯಕ್ಕೆ ಒಂದು ಹೊಸ ಸ್ವರೂಪವನ್ನೇ ಕೊಟ್ಟನೆಂಬುದು ಗಮನಾರ್ಹ ಸಂಗತಿ. ಕಾವ್ಯವಸ್ತುವಾಗಿ ಪುರಾಣ ಕತೆಯನ್ನೋ, ದೀರ್ಘಕಥಾನಕವನ್ನೋ ಆರಿಸಿಕೊಳ್ಳದೇ ಸಣ್ಣ ಕಥೆಗಳನ್ನು ರಚಿಸಿರುವುದರಲ್ಲಿ, ಪದ್ಯಕ್ಕಿಂತ ಹೆಚ್ಚಾಗಿ ಗದ್ಯವನ್ನೇ ಬರೆಯುವುದರಲ್ಲಿ ಆಡುನುಡಿಯನ್ನೇ ತನ್ನ ಚಂಪೂ ಚೌಕಟ್ಟಿಗೆ ಅಳವಡಿಸಿಕೊಳ್ಳುವುದರಲ್ಲಿ ಹೊಸತನವನ್ನು ಕಾಣಬಹುದಾಗಿದೆ. ‘ಸಾಹಿತ್ಯ ಜನತೆಗಾಗಿ ಎಂಬ ಹೊಸಗನ್ನಡದ ಮೊದಲ ಕೋಳಿ ಕೂಗು ಅವನ(ನಯಸೇನನ) ಕೃತಿಯಲ್ಲಿದೆಎಂಬುದು ಅವನ ಸಾಧನೆಯನ್ನು ಸೂತ್ರೀಕರಿಸುವ ಮಾತಾಗಿದೆ. ‘ಕತೆಗಳ ಮೂಲಕವೇ ದೊಡ್ಡ ಕಾವ್ಯವನ್ನು ನಿರ್ಮಿಸುವ ಕುಶಲತೆಯ ಎರಡನೆಯ ಸ್ಥಾಪಕನಾದದ್ದು ನಯಸೇನನ ಹಿರಿಮೆಯೂ ಹೌದು? ದೇಸಿಯತೆಯ ಹಿರಿಮೆಯು ಹೌದು.

     ನಾಯಕ ಯಾರೆಂದು ನಿರ್ದಿಷ್ಟವಾಗಿ ಗುರುತಿಸಲು ಅಸಾಧ್ಯವಾದ ವ್ಯಾಸಭಾರತದ ಕಥಾವಸ್ತುವನ್ನು `ಕೃಷ್ಣಕೇಂದ್ರಿತ’ ಚೌಕಟ್ಟಿಗೆ ತಂದದ್ದು ಕುಮಾರವ್ಯಾಸನ ವಿಶಿಷ್ಟತೆಯಾಗಿದೆ. ಮಹಾಭಾರತವು  ಕುಮಾರವ್ಯಾಸನಿಗೆ ಪ್ರಧಾನತಃ ಕೃಷ್ಣ ಚರಿತಾಮೃತವೆನಿಸಿದ್ದರೂ ಕೇವಲ ಪಾರಮಾರ್ಥಿಕ ದೃಷ್ಟಿಯಿಂದಷ್ಟೇ ಕಾವ್ಯ ಬರೆಯಲಿಲ್ಲ. ಲೌಕಿಕ ದೃಷ್ಟಿಯನ್ನು ಅದರಲ್ಲಿ ಅಳವಡಿಸಿದ್ದಾನೆ. ತನ್ನ ಕಾವ್ಯವನ್ನು ಓದುವ ಸಹೃದಯರು ಅದರಿಂದ ಏನೇನೂ ಬಯಸುತ್ತಾರೋ ಅದು ಅದರಲ್ಲಿರ ಬೇಕೆಂಬುದು ಅವನ ಆಶಯ. ಆದುದರಿಂದ `ಅರಸುಗಳಿಗಿದು ವೀರ,ದ್ವಿಜರಿಗೆ ಪರಮ ವೇದದ ಸಾರ, ಯೋಗೀಶ್ವರರ ತತ್ವ ವಿಚಾರ, ಮಂತ್ರೀಜನಕೆ ಬುದ್ದಿಗುಣ,ವಿರಹಿಗಳ ಶೃಂಗಾರ, ವಿದ್ಯಾಪರಿಣಿತರಲಂಕಾರ’ ಹೀಗೆ ಬೇರೆ ಬೇರೆ ಅಭಿರುಚಿಯುಳ್ಳ ಜನರಿಗೆ ಆಯಾ ವಿಷಯಗಳನ್ನೊದಗಿಸಬೇಕೆಂಬುದು ಆತನ ಪೂರ್ವ ಯೋಜನೆಯಾಗಿದೆ. ಕುಮಾರವ್ಯಾಸ ಕವಿ ಭಾರತದ ಕಥೆಯನ್ನು ಹೇಳ ಹೊರಟಿದ್ದರಲ್ಲಿಯೇ ಜನತೆಯ ಪ್ರತಿನಿಧಿಯೆನಿಸಿದ್ದಾನೆ.

    ನಂಜುಂಡ ಕವಿಯ ಕುಮಾರ ರಾಮನಸಾಂಗತ್ಯ ಕಾವ್ಯದಲ್ಲಿ ಬರುವ ಕುಮಾರರಾಮನ ಪರದಾರ ಸಹೋದರತ್ವ ಮತ್ತು ಯುದ್ದರಂಗದಲ್ಲಿ ಆತ ತೋರಿದ ಸಾಹಸಗಳ ವರ್ಣನೆಗಳಿಂದಾಗಿ ಕಥೆಗೆ ವಿಶೇಷ ಆಕರ್ಷಣೆ ಒದಗಿದೆ. ಯುದ್ಧ ಚಿತ್ರಣವಂತೂ ಬಹುನೈಜವಾಗಿ ಮೂಡಿನಿಂತಿದೆ. ಕವಿಯು ಕನ್ನಡ ನಾಡನ್ನು ಹರ್ಷಾಭಿಮಾನದಿಂದ ವರ್ಣಿಸಿದ್ದಾನೆ. ಕರ್ಣಾಟ ಮಹೀಮಂಡಲವನ್ನು  ವರ್ಣಿಸುತ್ತಾ, ಕವಿರಾಜ ಮಾರ್ಗದ  ರೀತಿಯಲ್ಲಿಯೇ ಕನ್ನಡ ನಾಡನ್ನು, ಕನ್ನಡಿಗರನ್ನು ` ಕಾವೇರಿಯಿಂದ ಗೋದಾವರಿವರೆಗಮಿರ್ದಾ ವಸುಧಾತಳವಳಯ ಭಾವಿಸೆ ಕರ್ನಾಟಕ ಜನಪದವೆಂದು ಹೇಳಿರುವನು.  

     ಲಕ್ಷ್ಮೀಶನ ಜೈಮಿನಿಭಾರತ ಪ್ರಧಾನವಾಗಿ ವೀರರಸ ಪ್ರತಿಪಾದಕ ಕಾವ್ಯವಾದರೂ ಇತಿಮಿತಿಯಿಂದ ಕೂಡಿದ ಶೃಂಗಾರ ವರ್ಣನೆಗಳನ್ನೂ ಒಳಗೊಂಡಿದೆ, ಉತ್ತಮ ನೀತಿ ಗ್ರಂಥವೂ ಆಗಿದೆ. ಯುದ್ಧವರ್ಣನೆಗಳು ವೀರರಸಯುಕ್ತ ವಾಗಿವೆ. ಪ್ರಕೃತಿವರ್ಣನೆಗಳು ಪರಿಚಿತ ರೂಪಕ ಉಪಮೆಗಳಿಂದ ಕಣ್ಣಿಗೆ ಕಟ್ಟುವಂತಿವೆ. ವಿಸ್ತಾರವಾಗಿರುವ ಮೂಲಕಥೆಯನ್ನು ಸಂಗ್ರಹಿಸುವಲ್ಲಿ ಕವಿಯ ಸ್ವೋಪಜ್ಞತೆ ಕಂಡುಬರುತ್ತದೆ.

  ಮೊದಲಿಗೆ ಪಂಪಕವಿ ಆದಿ ಪುರಾಣದಲ್ಲಿ ಭರತ ಬಾಹುಬಲಿಗಳ ಯುದ್ಧ ಸಂದರ್ಭವನ್ನು ಲೋಕ ಪ್ರಸಿದ್ಧವಾದ ರೀತಿಯಲ್ಲಿ ಚಿತ್ರಿಸಿ ಕೃತಾರ್ಥನಾದನಷ್ಟೆ. ಭರತೇಶ ವೈಭವದಲ್ಲಿ ರತ್ನಾಕರವರ್ಣಿ ಅದೇ ಸಂದರ್ಭವನ್ನೆತ್ತಿಕೊಂಡು ಚಮತ್ಕಾರವಾಗಿ ಅದಕ್ಕೊಂದು ತಿರುವು ಕೊಟ್ಟು ಯುದ್ಧವೇ ನಡೆಯದಂತೆ ಮಾಡಿದ್ದಾನೆ.

ಹದಿಬದೆಯ ಧರ್ಮದಲ್ಲಿ  ನೀತಿ, ಧರ್ಮಗಳ ಪ್ರತಿಪಾದನೆಯಿದೆ. ವಿವಾಹ, ಸಂಸಾರ ನಿರ್ವಹಳೆ ಇವುಗಳೇ ಮುಖ್ಯವಾಗಿದ್ದ ಅಂದಿನ ಸ್ತ್ರೀ ಸಮಾಜಕ್ಕೆ ಅಗತ್ಯವಾದ ನೀತಿ ಧರ್ಮಗಳನ್ನು ಹೊನ್ನಮ್ಮ ಉಪದೇಶಿಸಿದ್ದಾಳೆ. ಇಂದು ಸಾಮಾಜಿಕ ಪರಿಸ್ಥಿತಿ ಬದಲಾಗಿದೆ. ಆಧುನಿಕತೆಗೆ ಅನುಗುಣವಾಗಿ ಧ್ಯೇಯ ಧೋರಣೆಗಳು ಬದಲಾಗಿವೆ. ಆದರೆ ಹದಿಬದೆಯ ಸನ್ನಡತೆ ಸದಾಚಾರಗಳಲ್ಲಿ ಬೇಧವಿಲ್ಲ. ಸಚ್ಚಾರಿತ್ರ್ಯ ಹೊಂದಾಣಿಕೆ, ಕುಟುಂಬದ ಏಳಿಗೆ ಇವುಗಳಲ್ಲಿ ಬೇಧವಿಲ್ಲ. ಸತಿಯರ ಮನೋಭಾವ ವಿಕಾಸಗೊಳ್ಳಲು ಕೆಲವು ಉನ್ನತ ಆದರ್ಶಗಳ, ಮೌಲ್ಯಗಳ ಅಗತ್ಯವಿದೆ. ಹೊನ್ನಮ್ಮ ಅವುಗಳನ್ನು ಹೆಣ್ಣು ಮಕ್ಕಳಿಗೆ ಸರಳವಾಗಿ ಬೇಸರ ಬಾರದಂತೆ ಹೇಳಿದ್ದಾರೆ.

ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ವಿಭಿನ್ನ ಸಂಸ್ಕೃತಿಗಳಿಗೆ ಸೇರಿದ ಕವಿಗಳು ವಿಭಿನ್ನ ಧ್ವನಿಯಿಂದ ಕಾವ್ಯಗಳನ್ನು ರಚಿಸಿದರು. ಕುಮಾರವ್ಯಾಸನದು ಷಟ್ಪದಿಯ ಕಾವ್ಯವಾದರೆ ಕನಕದಾಸರದ್ದು ಕೀರ್ತನೆ, ರತ್ನಾಕರವರ್ಣಿಯ ಭರತೇಶ ವೈಭವದ ಸಾಂಗತ್ಯ, ಮಧ್ಯಕಾಲೀನ ಮುಖ್ಯ ಕವಿಗಳು ಓದಬಹುದಾದ ಕಾವ್ಯಕ್ಕಿಂತ ಹಾಡಲು ಅನುಕೂಲವಾಗಬಹುದಾದ ಕಾವ್ಯವನ್ನು ರಚಿಸಿದರು. ಇವು ಶ್ರಾವಕ ಕಾವ್ಯಗಳು ಅಂಶಗಳು ಕಾವ್ಯದ ಜನ ಸಮ್ಮುಖತೆಯನ್ನು ಸೂಚಿಸುತ್ತದೆ.

ಆದಾಗ್ಯೂ ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಅಭಿವ್ಯಕ್ತಿಯ ಕ್ರಮದಲ್ಲಿ ದೇಸಿ ಇದ್ದರೂ ದೇಸಿ ಸಂಸ್ಕೃತಿಯ ಒಳಸ್ವರೂಪ ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ರೂಪುಗೊಂಡಿರುವುದು ಅಷ್ಟಕ್ಕಷ್ಟೆ. ಮಧ್ಯಕಾಲೀನ ಬಹುತೇಕ ಕವಿಗಳಿಗೆ ದೇಸಿಯ ಕ್ರಮವೆಂದರೆ ಒಂದು ರೀತಿಯಲ್ಲಿ ಶೈಲಿಯ ಕ್ರಮವೇ ಆಗಿದೆ.  ದೇಸಿವಾದದಲ್ಲಿ ಪ್ರಾದೇಶಿಕ ವಿಶಿಷ್ಟತೆಯ ಜೊತೆಗೆ ಭಾಷಾ ಸಮುದಾಯವೊಂದರ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ವಿಶಿಷ್ಟತೆಗಳ ಹಿರಿಮೆಯನ್ನು ಕಾಣಬಹುದಾಗಿದೆ. ಭಾಷಾ ಸಮುದಾಯವೊಂದರೆ ಮೇಲೆ ಪ್ರಭಾವ ಬೀರಿರುವ ಅನ್ಯ ಅಥವಾ ಹೊರಗಣ ಸಂಸ್ಕೃತಿಯ ಅಂಶಗಳಿಗೆ ವಿರುದ್ಧವಾದ ಅಥವಾ ಭಿನ್ನವಾದ ದೇಶಿಯ ಸಂಸ್ಕೃತಿಯ ಅಂಶಗಳ ವಿಶಿಷ್ಟತೆಯನ್ನು ದೇಶಿವಾದವು ಎತ್ತಿಹಿಡಿಯುತ್ತದೆ.

    ಕನ್ನಡದಲ್ಲಿ ಬರೆಯುವ ಕಾವ್ಯಕ್ಕೆ ಕನ್ನಡತನವಿಲ್ಲದೆಹೋದರೆ ಭಾಷೆಯಲ್ಲಿ ಕಾವ್ಯ ಬರೆದೇನು ಪ್ರಯೋಜನ? ಸಂಸ್ಕೃತದ ವ್ಯಾಮೋಹವಿದ್ದರೆ ಭಾಷೆಯಲ್ಲೇ ಇಡೀ ಕಾವ್ಯ ಬರೆಯಬಹುದಲ್ಲ? ‘ಸಕ್ಕದಮಂಪೇಳ್ವೊಡೆ ನೆರೆಸಕ್ಕದಮಂ ಪೇಳ್ಗೆ ಶುದ್ಧಗನ್ನಡದೋಳ್ ತಂದಿಕ್ಕುವುದೆ ಸಕ್ಕದಂಗಳ, ತಕ್ಕುದೆ ಬೆರೆಸಲ್ಕೆ ಘೃತಮುಮಂ ತೈಲಮುಮಂಎಂಬ ನಯಸೇನನ ಮಾತು ಹುಟ್ಟಿಕೊಂಡದ್ದು ಹಿನ್ನೆಲೆಯಲ್ಲಿಯೇ ಎಂಬುದು ಗಮನಾರ್ಹ.

     ಕವಿ ಹರಿಹರ ಕಾವ್ಯವಸ್ತುವಿನ ದೃಷ್ಟಿಯಿಂದ ಮಾರ್ಗಸಾಹಿತ್ಯ ಅನುಸರಿಸುತ್ತ ಬಂದ ದಾರಿಯನ್ನು ಧಿಕ್ಕರಿಸಿ, ವ್ಯಕ್ತಿಸ್ವಾತಂತ್ರತೆಯಿಂದ ದೇಸೀಯತೆಯನ್ನು ಎತ್ತಿ ಹಿಡಿದ. ಅವನ ಶಿಷ್ಯನೂ, ಸೋದರಳಿಯನೂ ಆದ ರಾಘವಾಂಕನು ಕೂಡ ವಸ್ತುಕವನ್ನು ಬಿಟ್ಟುವರ್ಣಕ ಹೊಸ ಸಾಹಿತ್ಯ ಪ್ರಕಾರವನ್ನು ಹುಟ್ಟುಹಾಕಿ ಯುಗಪ್ರವರ್ತಕನೆನಿಸಿಕೊಂಡ. ಹೀಗೆ ಒಬ್ಬರಿಗಿಂತ ಒಬ್ಬರು ಪರಿವರ್ತನಶೀಲ ಗುಣಾಗ್ರಣಿಗಳಾಗಿ, ದೇಸೀಯ ಅಭಿವ್ಯಕ್ತಿ ಕ್ರಮವೊಂದನ್ನು ರೂಪಿಸಿದುದು, ಅವರಲ್ಲಿ ಆಳವಾಗಿ ಬೇರುಬಿಟ್ಟ ತನ್ನತನದ ಅಥವಾ ದೇಸೀಯತೆಯ ಪ್ರಭಾವದಿಂದಲೇ ಎಂಬ ಅಂಶ ಗಮನಾರ್ಹವಾದುದು. ಕವಿ ಹರಿಹರನ ಮಾರ್ಗಮಾನ್ಯವಾದ ಗಿರಿಜಾಕಲ್ಯಾಣವನ್ನು ಹೊರತುಪಡಿಸಿದರೆ ನೂರಾರು ರಗಳೆಗಳು, ಶತಕಗಳು, ರಾಘವಾಂಕನ ಹರಿಶ್ಚಂದ್ರಕಾವ್ಯ, ಸಿದ್ಧರಾಮ ಚಾರಿತ್ರ್ಯ, ಸೋಮನಾಥಚಾರಿತ್ರ್ಯ, ವೀರೇಶಚರಿತೆ ಕಾವ್ಯಗಳಲ್ಲಿ ದೇಸೀ ಸಂವೇದನೆಯ ಭಾಷೆ, ನಿರೂಪಣೆ, ಸಾಂಸ್ಕೃತಿಕ ಬದುಕಿನ ದೃಷ್ಟಿಯಿಂದಲೂ ದೇಸೀಪ್ರಜ್ಞೆ ಹರಳುಗಟ್ಟಿದೆ. ಹಿನ್ನೆಲೆಯಲ್ಲಿ ಮಾರ್ಗಸಾಹಿತ್ಯಪ್ರಕಾರದ ವಿರುದ್ಧ ಬಂಡೆದ್ದ ಹರಿಹರ ಮತ್ತು ರಾಘವಾಂಕರ ಕಾವ್ಯಗಳಲ್ಲಿ ದೇಸೀಯತೆಗೆ ಸಂಬಂಧಿಸಿದ ಹಲವಾರು ಅಂಶಗಳನ್ನು ಗಮನಿಸಬಹುದಾಗಿದೆ. ಕನ್ನಡ ಕಾವ್ಯಪರಂಪರೆ ವಿಶೇಷವಾಗಿ ಜೈನ, ವೀರಶೈವ, ಹಾಗೂ ವೈದಿಕ ಧರ್ಮಗಳ ಸಾಹಿತ್ಯ ಹಾಗೂ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬೆಳೆದುಬಂದಿದೆ. ಪರಂಪರೆಗೆ ಸೇರಿದ ಕಾವ್ಯಗಳು ಕುಮಾರವ್ಯಾಸನಕರ್ನಾಟಭಾರತ ಕಥಾಮಂಜರಿಮತ್ತು ಲಕ್ಷ್ಮೀಶನಜೈಮಿನಿಭಾರತ’. ಹಳಗನ್ನಡ ಸಾಹಿತ್ಯಕ್ಕಿಂತ ನಡುಗನ್ನಡ ಸಾಹಿತ್ಯವು ಹೆಚ್ಚು ಜನಪರವಾಗಿದೆ,ಎಂಬುದನ್ನು ನಿರೂಪಿಸಿ, ಸಾಹಿತ್ಯ ಕೇವಲ ಪಂಡಿತರಿಗಾಗಿ ಮಾತ್ರವಾಗಿರದೇ, ಜನಸಾಮಾನ್ಯರಿಗಾಗಿ ಯೆಂಬುದನ್ನು ಕಾವ್ಯಗಳು ಸಾಬೀತುಪಡಿಸಿದವು. ದೇಸೀ ಛಂದಸ್ಸಾದ ಭಾಮಿನಿ ಮತ್ತು ವಾರ್ಧಕ ಷಟ್ಪದಿಗಳನ್ನು ಕವಿಗಳು ಕಾವ್ಯ ಮಾಧ್ಯಮವನ್ನಾಗಿಸಿಕೊಂಡಿದ್ದರಿಂದ, ಗಮಕಿಗಳು ಕಾವ್ಯಗಳನ್ನು ಗಮಕ ಶೈಲಿಯಲ್ಲಿ ಹಾಡುತ್ತ ಜನಸಾಮಾನ್ಯರಿಗೆ ಕಾವ್ಯಸಂವಹನ ಮಾಡುತ್ತಿದ್ದರು. ಸಮಾಜ ಅವಲಂಬಿಯಾದ ಸಾಹಿತ್ಯ, ಆಯಾ ಕಾಲದ ಯುಗಧರ್ಮವನ್ನು ತನ್ನ ಒಡಲಲ್ಲಿರಿಸಿಕೊಂಡು ಜನಸಾಮಾನ್ಯರ ಧ್ವನಿಯಾಗಿ ಅಭಿವ್ಯಕ್ತಗೊಂಡವು. ಮಹಾಭಾರತದ ಕಥಾವಸ್ತುವನ್ನೊಳಗೊಂಡ ಕಾವ್ಯಗಳಲ್ಲಿ ಕೃಷ್ಣಕಥೆಯೇ ಮುಖ್ಯವಾಗಿದೆ. ಇಲ್ಲಿ ಈರ್ವರೂ ಭಕ್ತಕವಿಗಳು. ಕಾವ್ಯದುದ್ದಕ್ಕೂ ಕೃಷ್ಣ ಮಹಿಮೆಯ ಲೀಲೆ ನೆಲೆಯಲ್ಲಿಯೇ ವ್ಯಕ್ತವಾಗುತ್ತದೆ. ಕಾವ್ಯದಲ್ಲಿ ಕವಿ ಹೇಳುತ್ತಿರುವುದು ಕೃಷ್ಣನ ಲೀಲೆಗಳನ್ನು, ಆದರೆ ಅದರೊಂದಿಗೆ ಆಯಾಕಾಲದ ಜನಸಾಮಾನ್ಯರ ನಂಬಿಕೆ, ಪವಾಡ, ಮಾಟ-ಮಂತ್ರ ವೇಷಭೂಷಣ, ಉಡುಗೆ-ತೊಡುಗೆ, ಆಟಗಳು, ನಾಟಕ, ಬಯಲಾಟ, ಕೃಷಿ, ಸ್ತ್ರೀ-ಸ್ವಾತಂತ್ರ, ದೇಸಿಗರ ಕಥನತಂತ್ರ, ಪಡೆನುಡಿ, ಗಾದೆ, ಒಗಟು, ಮುಂತಾದ ಅಂಶಗಳೊಂದಿಗೆ ಕಾವ್ಯ ಬೆಸೆದುಕೊಂಡು, ದೇಸೀಯತೆಯೇ ಕಾವ್ಯಗಳ ಪ್ರಧಾನ ಭಿತ್ತಿಯಾಗಿದೆ.  

     ದೇಸೀ ಅಥವಾ ದೇಸೀಯತೆ ಕುರಿತಂತೆ ಕನ್ನಡ ಕಾವ್ಯಗಳ ಹಿನ್ನೆಲೆಯಲ್ಲಿ ಕವಿಗಳ ವ್ಯಾಖ್ಯಾನಗಳನ್ನು ಒಟ್ಟಾರೆಯಾಗಿ ಗಮನಿಸಿದಾಗ, ಕವಿರಾಜಮಾರ್ಗಕಾರ, ಪರಭಾಷೆಯ ಅನುಕರಣವಿಲ್ಲದೇ ಅಚ್ಚಗನ್ನಡದ ಶಬ್ದಗಳನ್ನು ಮನೋಹರವಾಗಿ ಬಳಸುವ ಶುದ್ಧಗನ್ನಡದ ಶೈಲಿ, ಒಂದು ಪ್ರದೇಶದಲ್ಲಿ ಮಾತನಾಡುವ ಭಾಷೆ ದೇಶ್ಯಭಾಷೆ. ವಿಶಾಲವಾದ ಕನ್ನಡ ಜಗತ್ತಿನಲ್ಲಿ ಅನೇಕ ಉಪಭಾಷೆಗಳು ಅಂತರ್ಗತವಾಗಿವೆ. ಅವುಗಳಲ್ಲಿ ಅನೇಕ ವೈಲಕ್ಷಣ್ಯಗಳು ಇರುವುದಾಗಿ ಲಕ್ಷಿಸಿ ಅವುಕನ್ನಡಂಗಳ್ಎಂದು ನಿರ್ವಚಿಸಿಕೊಂಡಿದ್ದಾನೆ. ಕವಿಪಂಪದೇಸೀಎನ್ನುವುದು ಒಂದು ಸೊಗಸು, ಸುಭಗತೆ, ಸಹಜತೆ,ಚಲುವು ಎಂದು ನಿರೂಪಿಸುತ್ತಾನೆ. ಮಾರ್ಗ-ದೇಸೀ ಎಂಬ ಕಾವ್ಯಪ್ರಕಾರಗಳೇ ಇರುವುದಾಗಿ ಹೇಳುತ್ತಾನೆ. ಮತ್ತು ನಾಟ್ಯ ಸಂಗೀತ ಲಲಿತಕಲೆಗಳಲ್ಲಿ ಬಗೆಯ ಭಿನ್ನತೆಯಿದ್ದು, ಅದೊಂದು ಬಗೆಯ ನಾಟ್ಯ ದೇಸೀನೃತ್ಯ ಎಂಬುದಾಗಿಯೂ ಅಭಿಪ್ರಾಯ ಪಟ್ಟಿದ್ದಾನೆ.. 12ನೇ ಶತಮಾನದ ಶಿವಶರಣರ ಸಂವೇದನೆ ಬೇರೆಯಾಗಿ, ಅದನ್ನು ಹೊರತರಲು ಬೇರೆ ದಾರಿಯೊಂದನ್ನು ಹುಡುಕಿದ್ದೊಂದು ಈಗ ಇತಿಹಾಸ. ಅದಕ್ಕಿರುವ ಮುಖ್ಯ ಕಾರಣಗಳೆಂದರೆ ಕಾವ್ಯ ತನ್ನ ಕಾಲದ ಜೀವನ ಮತ್ತು ಪರಿಸರಕ್ಕೆ ಪ್ರತಿಸ್ಪಂದಿಸುತ್ತಿದ್ದುದು. ಅದು ತನ್ನ ಹಿಂದಿದ್ದ ಕಾವ್ಯಕ್ಕೆ ಪ್ರತಿಕ್ರಿಯೆಯನ್ನು ತೋರಿಸುತ್ತದೆ. ಶರಣರು ಹೇಳುವ ಹಾಗೆಆನುಒಲಿದಂತೆ ಹಾಡುವೆ’ ‘ನಾಲಿಗೆಯನ್ನು ಶಿವನಿಗೆ ಮಾರಿಕೊಂಡಿದ್ದೇನೆ’. ಇವೆಲ್ಲ ಶರಣರ ಬದಲಾದ ದೇಸೀ ಮನೋಧರ್ಮದ ಭಿತ್ತಿಗಳು. ಇಂತಹ ಚಿತ್ರ ಭಿತ್ತಿಯ ಶರಣರು ಜನಸಾಮಾನ್ಯರ ಮನೆ ಬಾಗಿಲನ್ನು ತಟ್ಟಿ ಒಳಹೊಕ್ಕರು. ಹಾಗೆಯೇ ಸಂಸ್ಕೃತದ ಜಾಗಕ್ಕೆ ಕನ್ನಡದ ಮೂಲಕ ಲಗ್ಗೆ ಇಟ್ಟಿದ್ದು ಐತಿಹಾಸಿಕ ದಾಖಲೆ. ದೇಸೀಯತೆ ನಿರಂಕುಶಮತಿಯಾದುದು ದೇಸೀಯತೆಗೆ ಪ್ರಭುತ್ವ ಪ್ರಜ್ಞೆ ಇರುವುದಿಲ್ಲ. ತನ್ನ ಸಮುದಾಯ ತನಗೆ ಬೇಕಾದದ್ದನ್ನು ಎಲ್ಲಿ, ಯಾರಿಂದಲಾದರೂ ಸ್ವೀಕರಿಸಿದರೆ ಅದಕ್ಕೆ ಯಾವ ತಡೆಯನ್ನೂ ಅದು ಒಡ್ಡುವುದಿಲ್ಲ. ನಮ್ಮ ದೇಸೀಯ ಸಂಸ್ಕೃತಿ ನಿರಂಕುಶಮತಿಯಾಗಿಯೇ ವರ್ತಿಸುತ್ತದೆ. ಅನ್ಯ ಸಂಸ್ಕೃತಿಯಿಂದ ಸ್ವೀಕರಿಸಿದ್ದನ್ನು ತನ್ನ ರೂಪಕ್ಕೆ ತಕ್ಕಂತೆ ಯಾರು ಬೇಕಾದರೂ ಅಳವಡಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಜೊತೆಗೆ ತನ್ನ ಪರಂಪರೆಯ ಯಾವುದೇ ಅಂಶವನ್ನು ಬೇರೊಂದು ಸಂಸ್ಕೃತಿ ಆಯ್ಕೆ ಮಾಡಿಕೊಂಡಾಗಲೂ ಜನಪದ ಸಂಸ್ಕೃತಿ ಅಥವಾ ದೇಸೀಯ ಸಂಸ್ಕೃತಿ ತಕರಾರು ತೆಗೆಯುವುದಿಲ್ಲ. ಆದ್ದರಿಂದಲೇ ನಮ್ಮ ಪುರಾಣ, ಪುಣ್ಯಕಥೆ, ಕಾವ್ಯಗಳಲ್ಲೆಲ್ಲ ಬೇರೆ ಬೇರೆ ಸಂಸ್ಕೃತಿಯ ಅಂಶಗಳು ಅಡಕವಾಗಿರುವುದು. ಕಂಡು ಬರುತ್ತದೆ . ಮುಂದೆ ಶಾಸ್ತ್ರ ಗ್ರಂಥಗಳನ್ನು ರಚಿಸಿದ ಕವಿ ನಾಗವರ್ಮ, ಕೇಶರಾಜ, ಭಟ್ಟಾಕಳಂಕರು ಕನ್ನಡ ಭಾಷೆಯ ವ್ಯಾಕರಣಕ್ಕೆ ಸಂಸ್ಕೃತದ ಚೌಕಟ್ಟನ್ನು ಬಳಸಿದರೂ ಕನ್ನಡದ ನಿಜಸ್ವರೂಪವೇನೆಂದು ವಿವರಿಸಲು ಹೊರಟಿದುದು ಕನ್ನಡಕ್ಕಿರುವ ವೈಶಿಷ್ಟ್ಯವನ್ನು ಎತ್ತಿ ತೋರಿಸುತ್ತದೆ. ‘ದೋಷಮೆನೆ ಗುಣದ ವೋಲುದ್ಭಾವಿಸಿ ಖಂಡ ಪ್ರಾಸಮನಿರಿಸಿ ಪೂರ್ವಾಚಾರ್ಯರು ಯತಿಯನ್ನು ಮಿಕ್ಕರುಎಂಬುದಾಗಿ ಪ್ರಾಚೀನ ಕಾಲದಿಂದಲೇ ಕನ್ನಡಿಗರು ಸ್ವತಂತ್ರ ದೃಷ್ಟಿಯನ್ನು ತೋರಿದ್ದಾರೆ. ಹಳಗನ್ನಡದ , ಕುಳ ಕ್ಷಳಗಳು ಶೃತಿಸಹ್ಯಸಂಧಿ, ವಮಹಪಬೇಧ, ಗಮಕಸಮಾಸ, ಪದೋತ್ತಮ, ಶಿಥಿಲದ್ವಿತ್ವ ಮುಂತಾದ ಕನ್ನಡದ ವಿಶಿಷ್ಟಲಕ್ಷಣಗಳನ್ನು ಗಮನಿಸಿಯೇಅರಿದಲ್ತೆ ಕನ್ನಡಂಎಂದು ಕೇಶಿರಾಜ ಅಭಿಮಾನದಿಂದ ಬೀಗುವುದು ಕನ್ನಡದ ದೇಸೀಯ ನೆಲೆಯಿಂದಲೇ ಎಂಬುದು ಗಮನಾರ್ಹವಾಗಿದೆ. ಕವಿರಾಜಮಾರ್ಗವನ್ನು ಮೊದಲುಮಾಡಿಕೊಂಡು, ದೇಸೀ- ಮಾರ್ಗ ಸಮನ್ವಯಕಾರನಾಗಿ ಗಾಂಭಿರ್ಯದಿಂದ ಕಾವ್ಯ ನಿರ್ವಹಿಸಿದ ಕವಿ ಪಂಪನನ್ನೊಳಗೊಂಡಂತೆ, ಕಾಲಗರ್ಭದ ಹಲವು ಜನ ಕವಿ-ಕಾವ್ಯಗಳ ಹಿನ್ನೆಲೆಯಲ್ಲಿ ದೇಸೀ-ಮಾರ್ಗ ಕುರಿತಂತಹ ವ್ಯಾಖ್ಯಾನಗಳನ್ನೂ, ಮತ್ತು ಆಧುನಿಕ ಸಂದರ್ಭದಲ್ಲಿ ವ್ಯಾಖ್ಯಾತೃ ಮೂಲದಿಂದ ದೇಸೀ-ಮಾರ್ಗ ಕುರಿತಂತೆ ಬಂದಿರುವ ವ್ಯಾಖ್ಯಾನಗಳನ್ನು ನೋಡಬಹುದಾಗಿದೆ. ಕನ್ನಡ ಕಾವ್ಯ ಪರಂಪರೆ ಪ್ರಾಚೀನ ಕಾಲದಿಂದಲೂ ನಮ್ಮ ನಾಡಿನ ಜನಸಮುದಾಯದ ನೈಜ ಬದುಕಿನ ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ಅನಾವರಣಗೊಳಿಸುತ್ತಾ ಬಂದಿದೆ. ಅಂತಹ ಕಾವ್ಯ ಕಟ್ಟಿಕೊಡುವ ನಮ್ಮ ಬದುಕಿನ ಮೂಲ ಚಹರೆಗಳನ್ನೇ ದೇಸೀಯತೆ ಎನ್ನಲಾಗುತ್ತದೆ. ಹಿನ್ನೆಲೆಯಲ್ಲಿ ದೇಸೀಯತೆ ಎನ್ನುವದು ಒಂದು ಪ್ರದೇಶಕ್ಕೆ ಸಂಬಂಧಪಟ್ಟ, ಆಯಾ ಪ್ರದೇಶದ ಭಾಷೆ, ಜನಸಮುದಾಯದ ಚಿಂತನೆ, ಭಾವನೆ, ಸಂಸ್ಕೃತಿ, ಆಚರಣೆಗಳು. ಇತರರಿಗಿಂತ ಭಿನ್ನವಾದುದು, ವೈದೃಶ್ಯವಾದುದು, ಅಂತಹುದು ಯಾವುದಿದ್ದರೂ ಅದು ದೇಸೀಯತೆ ಎನಿಸಿಕೊಳ್ಳುವುದರ ಜೊತೆಗೆ ಜನಸಮುದಾಯದ ತಮ್ಮತನದ ಪ್ರತೀಕವಾಗಿದೆ.     

 ಗ್ರಂಥ ಋಣ

೧. ಕಲಬುರ್ಗಿ ಎಂ.ಎಂ, ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ, ಪ್ರಕಾಶನ, ಪೂರ್ಣಿಪ್ರಿಂರ‍್ಸ, ಬೆಂಗಳೂರು, 2004.

೨.ಪ್ರಸನ್ನ ದೇಸೀ ಜೀವನ ಪದ್ಧತಿ, ಒಂಟಿದನಿ ಪ್ರಕಾಶನ ಹೆಗ್ಗೋಡು, 2005.

೩.ಜೈನ ಕಾವ್ಯಗಳಲ್ಲಿ ದೇಸೀಯತೆ ಹೊಸ ಓದು (ಸಂ)ಬಾಳಾಸಾಹೇಬ ಲೋಕಾಪುರ , ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2011.

೪.ಮುಗಳಿ ರಂ. ಶ್ರೀ. ತವನಿಧಿ, ಉಷಾ ಸಾಹಿತ್ಯಮಾಲೆ, ಮೈಸೂರು, 1957,

ಮೊಗಳ್ಳಿ ಗಣೇಶ, ‘ದೇಶಿ’ ಕನ್ನಡ ವಿಶ್ವವಿದ್ಯಾಲಯ, ಪ್ರಸಾರಾಂಗ, ಹಂಪಿ, 1997,

೬. ರಾಜೇಂದ್ರ ಚನ್ನಿ (ಸಂ), ‘ದೇಸೀವಾದ’, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, 1999.

೭. ಕನ್ನಡ ಕಾವ್ಯಪರಂಪರೆಯಲ್ಲಿ  ಜಾನಪದ ಪ್ರಜ್ಞೆ, ಸಂ: ಶೇಖರ ಎಂ.ಎಸ್., ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2008.

೮. ಕನ್ನಡ ಸಾಹಿತ್ಯದಲ್ಲಿ ದೇಸೀಯತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು. 1994.

೯. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂ:ಜಿ.ಎಸ್.ಶಿವರುದ್ರಪ್ಪ, ಸಂ.೧. ಪ್ರಸಾರಾಂಗ, ಬೆಂ.ವಿ.ವಿ.೧೯೭೭

 

 

 

 

 

 

 

 

 

 

           

 

 

 

       

ಬುಧವಾರ, ಮೇ 19, 2021

 

                                                          

                                    


 

ಡಾ.ಸಿ.ನಾಗಭೂಷಣ

ಪ್ರಾಧ್ಯಾಪಕರು

ಕನ್ನಡ ಅಧ್ಯಯನ ಕೇಂದ್ರ

ಬೆಂಗಳೂರು ವಿಶ್ವವಿದ್ಯಾಲಯ

ಬೆಂಗಳೂರು 560056

ದೂರವಾಣಿ: 080-23157900

ಮೊಬೈಲ್: 94480 07630, 84950 60401

        7022229110,  94828 37500

 

email:nagabhushana.c@gmail.com

                  nagabhushana.c@hotmail.co.in

 

                             Blog:kannadasahityasamscrutiasmite.blogspot.com

 

ವಚನಕಾರರ ಕಾವ್ಯ ಸೌಂದರ್ಯ ದೃಷ್ಟಿ. ಡಾ.ಸಿ.ನಾಗಭೂಷಣ

 

ವಚನಕಾರರ ಕಾವ್ಯ ಸೌಂದರ್ಯ ದೃಷ್ಟಿ

ಡಾ.ಸಿ. ನಾಗಭೂಷಣ

 ವಚನ ಸಾಹಿತ್ಯದ ಸ್ವರೂಪದ ಬಗೆಗೆ ಇಪ್ಪತ್ತನೇ ಶತಮಾನದಲ್ಲಿ ವ್ಯಾಪಕ ಮಟ್ಟದಲ್ಲಿ ಚರ್ಚೆ ನಡೆದಿದೆ. ವಚನಗಳು ಗದ್ಯವೆಂದೂ, ಪದ್ಯದ ಮಾದರಿ ಎಂದೂ, ಗದ್ಯ-ಪದ್ಯ ಮಿಶ್ರಿತವಾದವುಗಳು ಎಂಬು ವಿಭಿನ್ನ ನಿಲುವುಗಳು ವ್ಯಕ್ತಗೊಂಡಿವೆ. ವಚನಗಳಲ್ಲಿ ಕಂಡು ಬರುವ ಲಯ ಬದ್ಧತೆಯಿಂದಾಗಿಯೇ ವಚನಗಳನ್ನು ಹಾಡುಗಳೆಂದು ಕರೆಯಬಹುದು ಎಂಬ ಅನಿಸಿಕೆಯು ವ್ಯಕ್ತಗೊಂಡಿದೆ. ವಚನಕಾರರ ಮನಸ್ಸಿನ ತೀವ್ರಾನುಭವದ ಅಭಿವ್ಯಕ್ತಿಯ ಸೃಷ್ಟಿಯಾದ ವಚನಗಳು ಒಂದು ರೀತಿಯಲ್ಲಿ ಕಾವ್ಯವೇ ಆಗಿವೆ. ಆಧುನಿಕ ಕಾಲದಲ್ಲಿ ಮಿಮರ್ಶಕರು ವಚನಗಳನ್ನು ಕಾವ್ಯದ ಮಾನದಂಡಗಳಿಂದಲೇ ವಿಶ್ಲೇಷಿಸುವ ವಿಮರ್ಶಿಸುವ ದೃಷ್ಟಿಕೋನವನ್ನು ತಾಳಿದವರಾಗಿದ್ದಾರೆ. ವಚನಗಳನ್ನು ಶಿಲ್ಪ ಮತ್ತು ಸೌಂದರ್ಯದ ನೆಲೆಗಟ್ಟಿನಿಂದ ನೋಡ ಬಯಸಿದ್ದಾರೆ. ವಚನಕಾರರು ಕಾವ್ಯ ಸೃಷ್ಟಿಯ ಬಗೆಗೆ ನೇರವಾಗಿ ಹೇಳಿರದಿದ್ದರೂ ಅವರ ವಚನಗಳಲ್ಲಿ ವ್ಯಕ್ತವಾಗಿರುವ ಕಾವ್ಯ ಸೃಷ್ಟಿಗೆ ಸಂಬಂಧಿಸಿದ ವಚನಗಳು ಬಹುಮಟ್ಟಿಗೆ ಸಾಂಸ್ಕೃತಿಕವಾಗ ಅರ್ಥವಿಸ್ತಾರಕ್ಕೆ ಬದ್ಧವಾಗಿದ್ದರೂ ಕೆಲವೆಡೆ ಸಾಹಿತ್ಯಕ ಮೀಮಾಂಸೆಯಿಂದ ಕೂಡಿರುವುದನ್ನು ಗುರುತಿಸಿಬಹುದಾಗಿದೆ.

   ವಚನ ಸಾಹಿತ್ಯದಲ್ಲಿ ಪೂರ್ವದ ಕಾವ್ಯಗಳ ಪುರಾಣ ವಸ್ತುವಾಗಲೀ, ಅಷ್ಟಾದಶ ವರ್ಣನೆಗಳಾಗಲೀ ನಿಸರ್ಗ ಚಿತ್ರಗಳಾಗಲೀ ಕಂಡುಬರದೇ ಇದ್ದರೂ ವಚನಗಳಲ್ಲಿ ಅಲ್ಲಲ್ಲಿ ಶ್ರೇಷ್ಠ ಕಾವ್ಯದ ಗುಣಗಳಿರುವುದನ್ನು ವಿಮರ್ಶಕರು ಹಾಗೂ ಸಂಶೋಧಕರೂ ಒಪ್ಪುತ್ತಾರೆ. ವೀರಶೈವ ಮತಧರ್ಮದ ನೆಲೆಗಟ್ಟಿನಿಂದ ನೋಡುವವರಿಗೆ ಸಿದ್ಧಾಂತ ನೆಲೆಯಲ್ಲಿ ಪರಿಭಾವಿಸುವವರಿಗೆ ವಚನಗಳು ಶಾಸ್ತ್ರದೋಪಾದಿಯಲ್ಲಿ ತೋರಿದರೂ ಸಾಹಿತ್ಯಮೀಮಾಂಸೆಯ ದೃಷ್ಟಿಯಿಂದ ನೋಡುವವರಿಗೂ ವಚನಗಳು ಕಾವ್ಯದ ರೀತಿಯಲ್ಲಿ ಕಂಡುಬರುತ್ತವೆ.

   ಸೌಂದರ್ಯ ಪದವನ್ನು ಲೋಕಸಂಬಂಧಿ ಅರ್ಥ ಹಾಗೂ ಕಲಾ ಸಂಬಂಧಿ ಅರ್ಥಗಳೆರಡರಲ್ಲಿಯೂ ಪ್ರಾಚೀನ ಕಾಲದಿಂದಲೂ ಬಳಸಲಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಸೌಂದರ್ಯ ಈ ಸಾಮಾನ್ಯ ಪದವನ್ನು ಕಾವ್ಯ ಮೀಮಾಂಸೆಯ ಪರಿಭಾಷೆಯಲ್ಲಿ ಅಲಂಕಾರ ಎಂದೇ ಬಳಸಲಾಗಿದೆ.

 ಕಲೆ ಎನ್ನುವುದು ಸೌಂದರ್ಯವನ್ನು ಸೆರೆಗೈಯುವ ಒಂದು ವಿಶೇಷ ಕ್ರಿಯೆ. ಕಲಾವಿದ ತನ್ನ ಪ್ರತಿಭೆಯಿಂದ ಹೊರಜಗತ್ತನ್ನು ಗ್ರಹಿಸಿ ಒಂದು ವಿಶಿಷ್ಟವಾದ ಕಲಾ ಜಗತ್ತನ್ನು ಸೃಜಿಸುತ್ತಾನೆ. ಈ ಹಿನ್ನೆಲೆಯಲ್ಲಿ ಸೌಂದರ್ಯ ಎನ್ನುವುದು ಪ್ರತಿಭಾಸೃಷ್ಟಿ ಎಂದು ಗುರುತಿಸಹುದಾಗಿದೆ. ಜೊತೆಗೆ ಸೌಂದರ್ಯ ಎನ್ನುವುದು ಅಭಿವ್ಯಕ್ತಿಯೂ ಹೌದು. ಸೌಂದರ್ಯಕ್ಕೆ ಸಂಬಂಧಿಸಿದಂತೆ ಕವಿಯ ಮನಸ್ಸಿನ ಪ್ರತಿಭಾ ವ್ಯಾಪಾರವು ಸುಂದರವಾದ ವಸ್ತುವನ್ನು ಕುರಿತ ಕಲಾವಿದನ ಅಂತರಂಗದಲ್ಲಿ ಆಗುವ ಮೂಡಿಕೆಗಳು. ಮನಸ್ಸಿನಲ್ಲಿ ಆಗುವ ರಸವ್ಯಾಪಾರ ಅಥವಾ ಅಭಿವ್ಯಕ್ತಿಯನ್ನು ಒಳಗೊಂಡಿರುತ್ತದೆ. ಕಾವ್ಯದಲ್ಲಿ ಸೌಂದರ್ಯ ಎಂದರೇನು ಎಂಬ ಪ್ರಶ್ನೆಗೆ ಅಲಂಕಾರ ಎಂಬ ಉತ್ತರದಿಂದ ಪ್ರಾರಂಭವಾಗಿ ಅಲಂಕಾರ ಎಂಬ ಉತ್ತರದವರೆಗೂ ಇಂದು ಚರ್ಚೆ ಬೆಳೆದು ತನ್ನ ನಿಲುಗಡೆಯನ್ನು ಕಂಡುಕೊಂಡಿದೆ. ಅಲಂಕಾರ   ಮತ್ತು ರಸ ಈ ಎರಡು ಕಾವ್ಯ ಸೌಂದರ್ಯವನ್ನು ಸೂಚಿಸುವ ಪ್ರಾಚೀನ ಪದಗಳಾಗಿವೆ.

   ಭಾರತೀಯ ಅಲಂಕಾರಿಕರಲ್ಲಿ ರಸವು ಕಾವ್ಯದಲ್ಲಿಯ ನಿಜವಾದ ಸೌಂದರ್ಯವಾಗಿದೆ. ರಸ ಎನ್ನುವುದು ಕಾವ್ಯಕಲೆಗಳಲ್ಲಿ ಸಹೃದಯನಿಗೊದಗುವ ಅಹ್ಲಾದ ರೂಪವಾದ ಒಂದು ಅನುಭವ ವಿಶೇಷ ಈ ರಸವೇ ಕಾವ್ಯದ ಸಾರ ಈ ರಸ ರೂಪವಾದ ಅನುಭವವನ್ನು ಯಾವು ಯಾವುದು ನೀಡುವುದೋ ಅದೆಲ್ಲವೂ ಸುಂದರ (ಸೌಂದರ್ಯ ಸಮೀಕ್ಷೆ ಪು.154) ಕಾವ್ಯದ ಸಾರ ರಸ. ಅದುವೇ ಕಾವ್ಯ ಸೌಂದರ್ಯ ಸೌಂದರ್ಯಾನುಭವವು ರಸಾನುಭವವನ್ನು ತನ್ನೊಂದು ಅಂಗವಾಗಿ ಸ್ವೀಕರಿಸುತ್ತದೆ. ಕಾವ್ಯ ಮೀಮಾಂಸಕರು ಸೌಂದರ್ಯವನ್ನು ಅಲಂಕಾರ ಎಂಬ ಪರಿಭಾಷೆಯಿಂದ ಕರೆದು ರಸಾನುಭವವನ್ನು ಅಲಂಕಾರದ ಒಮದು ಅಂಗವಾಗಿ ಪರಿಗಣಿಸಿದ್ದಾರೆ.

 ವಚನಕಾರರು ತಾವು ಬರೆದದ್ದು ಸಾಹಿತ್ಯ ಹೌದೊ ಅಲ್ಲವೋ ಎಂಬುದರ ಬಗೆಗೆ ಯಾವ ಉತ್ತರ ಅವರಲ್ಲಿ ದೊರೆಯದಿದ್ದರೂ ಆಧುನಿಕ ಕಾಲದಲ್ಲಿ ಅವುಗಳನ್ನು ಸಾಹಿತ್ಯದ ಪರಿಧಿಯಲ್ಲಿಯೇ ಪರಿಗಣಿಸಲಾಗಿದೆ. ಬಸವಣ್ಣನವರ ಆನು ಒಲಿದಂತೆ ಹಾಡುವೆ ಎಂಬ ನುಡಿಯು ವಚನಕಾರರ ಕಾವ್ಯ ತತ್ತ್ವದ ಸಂಕೇತವಾಗಿದೆ. ವಚನಕಾರರು ಬರೆದಿದ್ದು ನಿಜವಾಗಿರುವಾಗ ಅವರು ಗಮನಿಸದಿದ್ದ ಈ ಬರವಣಿಗೆಯ ಹಿನ್ನಲೆಗೆ ಇರಬೇಕಾದ ಕೆಲವು ಸಾಹಿತ್ಯಕ ಧೋರಣೆಗಳನ್ನು ಕಾವ್ಯ ತತ್ವವೆಂದು ಕೆಲವು ವಿಮರ್ಶಕರು ಈಗಾಗಲೇ ಪರಿಭಾವಿಸಿ ಆ ಹಿನ್ನೆಲೆಯಲ್ಲಿ ವಚನಗಳನ್ನು ಸಾಹಿತ್ಯದ ಚೌಕಟ್ಟಿನಲ್ಲಿಯೂ ಪ್ರತಿಪಾದಿಸಿದ್ದಾರೆ. ವಚನಗಳಲ್ಲಿಯ ಕೆಲವು ನಿದರ್ಶನಗಳನ್ನು ಕಾವ್ಯ ತತ್ವದ ಸಮರ್ಥನೆಗಾಗಿ ಅಂಶಿಕವಾಗಿಯೋ ಇಡಿಯಾಗಿಯೋ ಉದಾಹರಿಸಿ ಅರ್ಥವನ್ನು ಹಚ್ಚಿದ್ದಾರೆ.

     ಕಾವ್ಯ ಮೀಮಾಂಸೆಯ ಪ್ರಕಾರ ವ್ಯಕ್ತಿಯ ವಿಶಿಷ್ಟಾಭಿವ್ಯಕ್ತಿಯೇ ಶೈಲಿ. ಈ ಹಿನ್ನಲೆಯಲ್ಲಿ ವಚನಕಾರರ ಅಭಿವ್ಯಕ್ತಿಯು ವಿಶಿಷ್ಟವಾಗಿದೆ. ವಚನಕಾರರು ತಮಗೆ ಹಿನ್ನಲೆಯಾಗಿದ್ದ. ಆಗಲೇ ಸಿದ್ಧವಾಗಿದ್ಧ ಚಂಪೂ ಶೈಲಿಯನ್ನಾಗಲೀ, ಆ ಪರಂಪರೆಯ ಕಥಾವಸ್ತು ಕ್ರಮಗಳನ್ನಾಗಲೀ ಅನುಸರಿಸದೆ ತಮ್ಮದೇ ಆದ ನೂತನ ಅಭಿವ್ಯಕ್ತಿಯನ್ನು ರೂಪಿಸಿಕೊಂಡವರಾಗಿದ್ದಾರೆ. ವಚನಗಳ ಶೈಲಿಯ ಮುಖ್ಯ ಗುಣಗಳು ಸರಳತೆ, ಸ್ಪಷ್ಟತೆ, ಸಂಕ್ಷಿಪ್ತತೆ, ಚಿತ್ರಕತೆಗಳಾಗಿವೆ. ತಾವು ಅಭಿವ್ಯಕ್ತಿಸಿದ ನುಡಿ ಕೇಳುವವರ ಮನಮುಟ್ಟಬೇಕು. ಎಂಬ ಹಂಬಲದಿಂದ ಮೂಡಿದ ವಚನಗಳಲ್ಲಿ ಕ್ಲಿಷ್ಟತೆ, ಅಸ್ಪಷ್ಟತೆಗಳಿಗೆ ಅವಕಾಶವೇ ಇಲ್ಲ. ಸಾಮಾನ್ಯ ಜನತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸುತ್ತಮುತ್ತಣ ಜನರು ಆಡುತ್ತಿದ್ದ ಅಚ್ಚಗನ್ನಡ ಮಾತುಗಳನ್ನೇ ವಚನಗಳಲ್ಲಿ ಬಳಸಿದರು. ಆಡುಮಾತನ್ನು ಬಳಸಿ ಹೇಳಬೇಕಾದುದನ್ನು ಕೇಳುವವರ ಮನಮುಟ್ಟಿಸುವುದರ ಮೂಲಕ ಕಾವ್ಯಾಭಿವ್ಯಕ್ತಿಗೆ ಗದ್ಯದ ಸತ್ವವನ್ನು ಮೈಗೂಡಿಸಿಕೊಂಡು ಆಡುಮಾತಿನ ಮೂಲಕವೆ ಪದ್ಯವನ್ನಾಗಿಸಿ ವಚನಕಾರರ ಮನೋಧರ್ಮವು ಜನಭಾಷೆಯ ಬಗೆಗೆ ಎಷ್ಟರ ಮಟ್ಟಿನ ಎಚ್ಚರವನ್ನು ಹೊಂದಿದ್ದರು ಎಂಬುದನ್ನು ಸೂಚಿಸುತ್ತದೆ. ವಚನಸಾಹಿತ್ಯವನ್ನು ಕುರಿತು ನಡೆದಿರುವ ಸಾಹಿತ್ಯದ ಅಧ್ಯಯನದಲ್ಲಿ ವಚನಗಳನ್ನು ಕಾವ್ಯ ಪ್ರಕಾರದ ಒಂದು ಉಪ ರೂಪವಾಗಿ ಮುಕ್ತಭಾವಗೀತೆಯಾಗಿ ವಿಶ್ಲೇಷಿಸಲಾಗಿದೆ. ಧಾರ್ಮಿಕ ದೃಷ್ಟಿಕೋನದ ಜೊತೆಗೆ ಶುದ್ಧ ಕಾವ್ಯವಾಗಿ ಕಲಾ ರಚನೆಯ ಕೌಶಲ ದೃಷ್ಟಿಯಿಂದ ವಿವರಿಸುವ ಪ್ರಯತ್ನವು ನಡೆದಿದೆ. ಹೋಲಿಕೆ, ಸ್ವಭಾವೋಕ್ತಿ, ವಸ್ತುನಿಷ್ಠವರ್ಣನೆಗಳನ್ನು ಪ್ರಾಚೀನರು ಅಲಂಕಾರದ ವ್ಯಾಪ್ತಿಯಲ್ಲಿ ಗುರುತಿಸಿದ್ದಾರೆ. ಭಾವನೆಗಳನ್ನು ಅನುಭವಗಳನ್ನು ಮನಮುಟ್ಟುವಂತೆ ನಿರೂಪಿಸುವಾಗ ಉಪಮೆ ರೂಪಕಗಳ ಭಾವ ಸ್ಪಷ್ಟತೆಗೆ ಸ್ಫುಟತೆಗೆ ನೆರವಾಗುತ್ತವೆ.

   ವಚನಗಳಲ್ಲಿ ಕೆಲವೆಡೆ ಕಾವ್ಯ ಸೌಂದರ್ಯವನ್ನು ಗ್ರಹಿಸಬಹುದಾಗಿದೆ. ಕವಿಹೃದಯವುಳ್ಲ ವಚನಕಾರರ ಕಾವ್ಯದ ಕಸುವಿನಿಂದ ಕೂಡಿದ್ದು ಕಲಾಕೃತಿಗಳಾಗಿ ನಿಲ್ಲುವ ಶಕ್ತಿಯನ್ನು ಪಡೆದುಕೊಂಡಿವೆ. ಲೋಕದ ಮಾತಿಗಿಂತ ಭಿನ್ನವಾದ ಮನೋಹರವಾದ ಉಕ್ತಿಯಿಂದ ಕೂಡಿರುವುದನ್ನು ಕಾವ್ಯ ಎಂದು ಕಾವ್ಯಮೀಮಾಂಸೆಯ ಪರಿಭಾಷೆಯಲ್ಲಿ ಹೇಳುತ್ತೇವೆ. ಇಂತಹ ಉಕ್ತಿಗಳನ್ನು ವಚನಗಳಲ್ಲಿ ಅಲ್ಲಲ್ಲಿ ಹುಡುಕ ಬಹುದಾಗಿದೆ.

 ದೃಷ್ಟಾಂತಗಳು, ಉಪಮೆ, ರೂಪಕಗಳು, ಶಬ್ದಚಿತ್ರಗಳು, ವಚನಗಳಲ್ಲಿ ಕಾಣಿಸುತ್ತವೆ. ವಚನಕಾರರು ಕವಿಯಾಗಿ ಯಶಸ್ಸು ಪಡೆಯಬೇಕೆಂಬ ಬಯಕೆಯನ್ನು ಹೊಂದಿದವರಲ್ಲ. ವೀರಶೈವ ಧರ್ಮದ ಪ್ರಸಾರ, ಜನತೆಯನ್ನು ಸುಧಾರಿಸಬೇಕೆಂಬ ಕಳಕಳಿ, ಮನದ ಹೊಯ್ದಾಟವನ್ನು ತೋಡಿಕೊಳ್ಳಬೇಕೆಂಬ ಹಂಬಲ ಇವುಗಳ ಜೊತೆಗೆ ಅಂದಂದಿನ ತಮ್ಮ ಅನುಭವದ ತೀವ್ರತೆ, ಒತ್ತಡಗಳಿಂದಾಗಿ ವಚನಗಳು ಹೊರಹೊಮ್ಮಿದವುಗಳು. ವಚನಕಾರರಲ್ಲಿ ಕೆಲವರು ಕವಿ ಹೃದಯವುಳ್ಳವರಾದ್ದರಿಂದ ಅವರಾಡಿದ ಮಾತು ಅವರಿಗರಿವಿಲ್ಲದೆಯೇ ಕಾವ್ಯ ಸ್ವರೂಪ ಪಡೆಯಿತು. ಇಂತಹ ವಚನಗಳಲ್ಲಿ ಭಾವಗೀತೆಯ ಸತ್ಯ ಸೌಂದರ್ಯಗಳನ್ನು ಒಡಗೂಡಿಸಿಕೊಂಡ ಅಂಶಗಳನ್ನು ಕಾಣಬಹುದಾಗಿದೆ. ಬಸವಾದಿ ಪ್ರಮಥರು ತಮ್ಮ ಸುತ್ತ ಮುತ್ತ ಕಂಡ ಬದುಕಿನ ಎಲ್ಲಾ ದೃಶ್ಯಗಳನ್ನೂ ಅನುಭವಗಳನ್ನು ತಮ್ಮ ಅಭಿವ್ಯಕ್ತಿಗೆ ಸಾಧನವನ್ನಾಗಿ ಬಳಸಿಕೊಂಡು ವಚನಗಳ ಮೂಲಕ ಕಾವ್ಯತ್ವವನ್ನು ಪ್ರತಿಪಾದಿಸಿದರು.

    ವಚನಗಳಲ್ಲಿ ಕಾವ್ಯದ ಯಾವ ಸಾಂಪ್ರದಾಯಿಕ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗದಿದ್ದರೂ ಕಾವ್ಯದ ಅಂತರಂಗದ ಲಕ್ಷಣಗಳ ಸುಳುಹುಗಳನ್ನು ಗುರುತಿಸಬಹುದಾಗಿದೆ. ಬಹುಮಟ್ಟಿಗೆ ವಚನಕಾರರು ಆಗಲೇ ಸಿದ್ಧಗೊಂಡಿದ್ದ ವಸ್ತು ಮಾಧ್ಯಮದ ಕೃತಕತೆಯನ್ನು ಅವಲಂಬಿಸದೆ ತಮ್ಮ ವೈಯಕ್ತಿಕವಾದ, ಪ್ರಾಮಾಣಿಕವಾದ ಅನುಭವಗಳನ್ನು ಮುಕ್ತ ಹಾಗೂ ನೇರ ಮನಸ್ಸಿನಿಂದ ತೋಡಿಕೊಂಡಿರುವುದರಿಂದಲೇ ವಚನಗಳ ವಸ್ತು ಸೌಂದರ್ಯದ ವಿಶಿಷ್ಟತೆಗೆ ಕಾರಣವಾಗಿದೆ. ಅಂತರಂಗದ ಅನಿಸಿಕೆಗಳ ಕಥೆಯೇ ವಚನಗಳು ವಸ್ತು. ಒಂದೇ ವ್ಯಕ್ತಿತ್ವ ಅನೇಕ ಸಂದರ್ಭಗಳಲ್ಲಿ ಬದುಕನ್ನು ತೀವ್ರವಾಗಿ ಅನುಭವಿಸಿದ್ದರ ವರ್ಣನೆ ವಚನಗಳ ತುಂಬೆಲ್ಲಾ ವ್ಯಾಪಿಸಿದೆ. ಇಂತಹ ವಚನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಾವ್ಯ ಸೌಂದರ್ಯದ ಸುಳುಹುಗಳನ್ನು ಹುಡುಕ ಬಹುದಾಗಿದೆ. ವಚನಕಾರರಲ್ಲಿ ಬಸವಣ್ಣ ಹಾಗೂ ಅಕ್ಕಮಹಾದೇವಿಯರ ವಚನಗಳಲ್ಲಿ ಹೆಚ್ಚಾಗಿ ಕಾವ್ಯ ಸೌಂದರ್ಯವನ್ನು ಗುರುತಿಸಬಹುದಾಗಿದೆ.

 ಬಸವಣ್ಣನವರು ತಮ್ಮ ವಚನಗಳಲ್ಲಿ ದೃಷ್ಟಾಮತ-ಅಲಂಕಾರಗಳನ್ನು ಬಳಸಿದ್ದಾರೆ.

‘ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ

ಅಂಬುಜಕ್ಕೆ ಭಾನುವಿನ ಉದಯದ ಚಿಂತೆ

ಭ್ರಮರಕ್ಕೆ ಪರಿಮಳದ ಉಂಡುಂಬ ಚಿಂತೆ

ಎನಗೆ ನಮ್ಮ ಕೂಡಲ ಸಂಗಮ ದೇವರ ನೆನೆವುದೆ ಚಿಂತೆ’ (ಸ.ವ.ಸಂ-1.ವ.ಸಂ.265)

ಇಂತಹ ವಚನಗಳಲ್ಲಿ ಜನಜನಿತ ದೃಷ್ಟಾಂತಗಳನ್ನು ಬಳಸಿ ಭಗವಂತನ ಬಗೆಗಿನ ತಮ್ಮ ಹಂಬಲವನ್ನು ಪ್ರಾಮಾಣಿಕವಾಗಿ ನಿವೇದಿಸಿಕೊಂಡಿದ್ದಾರೆ.

 ವಚನಕಾರರು ತಮ್ಮಸುತ್ತಮುತ್ತಲ ಜನಜೀವನದಿಂದ ಉಪಮೆಗಳನ್ನು ಎತ್ತಿಕೊಂಡು ವಚನಗಳಲ್ಲಿ ಬಳಸಿದ್ದಾರೆ. ಕೆಲವೆಡೆ ಇವರ ವಚನಗಳಲ್ಲಿ ಕಂಡುಬರುವ ಉಪಮೆಗಳು ಬರೀ ಹೋಲಿಕೆಯಾಗಿ ಕಂಡುಬರುವುದಿಲ್ಲ. ದಿಢೀರನೆ ಕಣ್ಣೆದುರು ಒಂದು ಚಿತ್ರವನ್ನು ತಂದು ನಿಲ್ಲಿಸುವ, ಆಡಿದ ಮಾತನ್ನು

 ನಿದರ್ಶನಕ್ಕೆ ಬಸವಣ್ಣನವರು ಈ ವಚನವನ್ನು ಪರಿಶೀಲಿಸಬಹುದಾಗಿದೆ.

ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತು

ಸಸಿಯೊಳಗಣ ರಸದ ರುಚಿಯಂತಿದ್ದಿತು

ನನೆಯೊಳಗಣ ಪರಿಮಳದಂತಿದ್ದಿತು

ಕೂಡಲ ಸಂಗಮದೇವಾ ಕನ್ನೆಯ ಸ್ನೇಹದಂತಿದ್ದಿತು’ (ಸ.ವ.ಸಂ-1.ವ.ಸಂ.1)

ಈ ವಚನದಲ್ಲಿ ಮೊದಲ ಸಾಲು ಒಂದರೊಳಗೊಂದು ಅಡಗಿರುವ ಆದರೆ ಪರಸ್ಪರ ವಿರುದ್ಧವಾದ ಎರಡು ವಸ್ತುಗಳನ್ನು ಕುರಿತು ಹೇಳಿದರೆ, ಎರಡನೇ ಸಾಲು ಚಂದ್ರನಲ್ಲಿ ಅಡಗಿರುವ ಬೆಳದಿಂಗಳ ರುಚಿಯ ಇಂದ್ರಿಯಾತೀತವಾದ ಅನುಭವವನ್ನು ಹೇಳುತ್ತದೆ. ಮೂರನೆಯ ಸಾಲು ಒಂದರೊಳಗೊಂದು ಬೆರತು ಹೋದ ಬೇರ್ಪಡಿಸಲಾಗದ ನನೆಯೊಳಗಣ ಪರಿಮಳವನ್ನು ಹೇಳಿದರೆ ಕೊನೆಯ ಸಾಲು ಕನ್ನೆಯಲ್ಲಿ ಮುಗ್ಧವಾಗಿ, ಗುಪ್ತವಾಗಿ, ಅಡಗಿರುವ ಭಾವನಾತ್ಮಕ ಸಂಬಂಧವನ್ನು ಹೇಳುತ್ತದೆ. ಈ ವಚನವನ್ನು ಪ್ರಾಯೋಗಿಕ ವಿಮರ್ಶೆಗೆ ಒಳಪಡಿಸಿದ ಎಂ.ಜಿ.ಕೃಷ್ಣಮೂರ್ತಿವರು ಬಯ್ಕೆಯ ಕಿಚ್ಚಿನ ಅದಮ್ಯತೆಯನ್ನು ಮೊದಲ ಸಾಲು ಸೂಚಿಸಿದರೆ ಉಳಿದ ಮೂರು ವಾಕ್ಯಗಳು ಬೆಳದಿಂಗಳು, ಪರಿಮಳ ಕನ್ನೆಯ ಸ್ನೇಹ, ಇವುಗಳ ಆಹ್ಲಾದತೆ, ಉಲ್ಲಾಸ, ಮಾರ್ದವತೆಯನ್ನು ಸಹಜವಾದ ಭಾಷೆಯಲ್ಲಿ ಹೊರ ಹೊಮ್ಮಿಸಿವೆ ಎಂಬ ಮಾತು ಒಪ್ಪತಕ್ಕದ್ದಾಗಿದೆ. ಇವುಗಳಲ್ಲಿ ಅಡಗಿದ ಯಾವುದೋ ರಹಸ್ಯ ಹಾಗೂ ಶೀತಲ ಗಾಂಭೀರ್ಯಗಳು ಕನ್ನೆಯ ಸ್ನೇಹದ ಅನಿರ್ವಚನೆಯ ಅತೀತವಾದ ಅನುಭಾವದ ಅನುಭವವನ್ನು ಮೂರ್ತಗೊಳಿಸುವಲ್ಲಿ ಯಶಸ್ವಿಯಾಗಿರುವುದನ್ನು ಸೂಚಿಸುತ್ತದೆ.

ಮತ್ತೊಂದು ವಚನದಲ್ಲಿ ಬರುವ

ಕೂಡಲ ಸಂಗನ ಶರಣರೊಡನೆ ಮರೆದು ಸರಸವಾಡಿದರೆ

ಸುಣ್ಣದ ಕಲ್ಲ ಮಡಿಲಲ್ಲಿ ಕಟ್ಟಿಕೊಮಡು ಮಡುವ ಬಿದ್ದಂತೆ’ ಎಂಬಲ್ಲಿ ಕೂಡಲ ಸಂಗನ ಶರಣರೊಡನೆ ಮೈಮರೆತು ಉದ್ಧಟತನದಿಂದ ವರ್ತಿಸಿದರೆ ಸುಣ್ಣದ ಕಲ್ಲನ್ನು ಕಟ್ಟಿಕೊಂಡು ಮಡುವಿಗೆ ಬಿದ್ದಂತೆ ಎಂದು ಹೇಳುವಲ್ಲಿ ಬಳಸಿರುವ ಮಾಲೋಪಮೆ ಮೃತ್ಯು ಭಯಂಕರ ಚಿತ್ರದ ಮಾಲೆಯನ್ನು ಸೃಷ್ಟಿಸಿದೆ.

 ವಚನಕಾರರ ಅಭಿವ್ಯಕ್ತಿ ಉಪಮೆ, ರೂಪಕ, ದೃಷ್ಟಾಂತ, ಪ್ರತಿಮೆ ಇವುಗಳಿಮದ ಇಡಿಕಿರಿದು ಅಂದಂದಿನ ಸಾಮಾಜಿಕ ಪ್ರಜ್ಞೆ, ಧಾರ್ಮಿಕ ಶ್ರದ್ಧೆ, ಸೂಕ್ಷ ನಿರೀಕ್ಷಣ ಶಕ್ತಿ, ಪ್ರಾಮಾಣಿಕವಾದ ಆತ್ಮ ಪರಿಶೋಧನೆ ಈ ಗುಣಗಳಿಂದ ಕೂಡಿದವಾಗಿದ್ದು ಉತ್ತಮ ಕಾವ್ಯ ಲಕ್ಷಣಗಳನ್ನು ಪಡೆದಿವೆ.

 ವಚನಕಾರರ ಜೀವನದ ಅಂತರಂಗ, ಬಹಿರಂಗಗಳೆರಡೂ ಅವರ ಶೈಲಿಯಲ್ಲಿ ಒಡಮೂಡಿವೆ. ವಚನಕಾರರ ವಚನಗಳ ಚಿತ್ರಕಶಕ್ತಿ ಅನನ್ಯವಾದುದು. ಉಪಮೆ, ರೂಪಕ, ಪ್ರತಿಮೆಗಳಲ್ಲಿ ಚಿತ್ರಗಳ ಮಾಲೆಯನ್ನೇ ಪೋಣಿಸುತ್ತಾರೆ. ಒಂದೊಂದು ಸಾಲಿನಲ್ಲಿಯೂ ಒಂದೊಂದು ಜೀವಂತ ಚಿತ್ರವನ್ನು ಕಟ್ಟಿಕೊಡಬಲ್ಲವರಾಗಿದ್ದಾರೆ. ಅಚ್ಚಗನ್ನಡ ನುಡಿಯ ನಾಡಿಮಿಡಿತವನ್ನು ಬಲ್ಲ ವಚನಕಾರರು ಒಂದೇ ಮಾತನ್ನೇ ಮತ್ತೆ ಮತ್ತೆ ಬಳಸುವುದರ ಮೂಲಕ ಅಭಿವ್ಯಕ್ತಿಗೆ ತೀವ್ರವಾದ ಗಾಢತೆಯನ್ನು ತರುತ್ತಾರೆ. ಈ ಅಂಶವು ಬಸವಣ್ಣನವರಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ.

ಎನ್ನ ಕಾಯವ ದಂಡಿಗೆಯ ಮಾಡಯ್ಯಾ

ಎನ್ನ ಶಿರವ ಸೋರೆಯ ಮಾಡಯ್ಯ

ಎನ್ನ ನರವ ತಂತಿಯ ಮಾಡಯ್ಯಾ

ಎನ್ನ ಬೆರಳ ಕಡಿಕಿಯ ಮಾಡಯ್ಯಾ

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ

ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ

ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯ ತಂದೆ

ಅಯ್ಯಾ ಅಯ್ಯಾ ಎಂದು ಕರೆಯುತ್ತಲಿದ್ದೇನೆ

ಅಯ್ಯಾ ಅಯ್ಯಾ ಎಂದೊರಲುತ್ತಿದ್ದೇನೆ

ಓ ಎನ್ನಲಾಗದೆ ಅಯ್ಯಾ (ಸ.ವ.ಸಂ-1.ವ.ಸಂ.499)

ಈ ವಚನಗಳಲ್ಲಿ ಮಾಡಯ್ಯಾ ತಂದೆ, ಅಯ್ಯಾ, ಅಯ್ಯಾ ಎಂಬ ಶಬ್ದಗಳನ್ನು ಮತ್ತೆ ಮತ್ತೆ ಬಳಸುವುದರ ಮೂಲಕ ಈ ಅಭಿವ್ಯಕ್ತಿಗೆ ಅರ್ಥಪೂರ್ಣವಾದ ಆರ್ತತೆ ಮತ್ತು ಗೇಯತೆಗಳು ಬಂದಿರುವುದನ್ನು ಕಾಣಬಹುದು. ಅದೇ ರೀತಿ ಬಸವಣ್ಣನವರ ಈ ಕೆಳಕಂಡ ವಚನವು ಕಾವ್ಯ ಶಿಲ್ಪ ಮತ್ತು ಬಂಧದಿಂದ ಕಾವ್ಯ ಸೌಂದರ್ಯವನ್ನು ಇಮ್ಮಡಿಸಿದೆ.

ಅವಳ ವಚನ ಬೆಲ್ಲದಂತೆ ಹೃದಯದಲ್ಲಿಪ್ಪುದು ನಂಜು ಕಂಡಯ್ಯ

ಕಂಗಳಲ್ಲೊಬ್ಬನ ಕರೆವಳು, ಮನದಲ್ಲೊಬ್ಬನ ನೆರೆವಳು

ಕೂಡಸಂಗಮ ದೇವಯ್ಯ

ಮಾನಿಸಗಳ್ಳಿಯ ನಂಬದಿರಯ್ಯಾ (ಸಮ.ವ.ಸಂ-1.ವ.ಸಂ.110)

ಈ ವಚನದಲ್ಲಿಯ ಬೆಲ್ಲದಂತೆ, ನಂಜು ಕಂಡಯ್ಯ, ಕಂಗಳು-ಮನ, ಕರೆವಳು-ನೆರವಳು ಈ ಪದಗಳ ಬಂಧವು ವಚನಕ್ಕೆ ಕಾವ್ಯದ ಮೆರುಗನ್ನು ತಂದುಕೊಟ್ಟಿದೆ. ಚಂಚಲ ಮನಸ್ಸಿನ ಸ್ತ್ರೀಯ ಪ್ರತಿಮೆಯ ಮೂಲಕ ಮನುಷ್ಯನ ಮನಸ್ಸಿನ ಚಂಚಲತೆಯನ್ನು ನಿರೂಪಿಸ ಹೊರಟಿರುವ ಈ ವಚನ ಸಹಜವಾಗಿ ಮೂಡಿ ಬಂದಿದೆ. ಕಂಗಳಲ್ಲೊಬ್ಬನ ಕರೆವಳು ಮನದಲ್ಲೊಬ್ಬನ ನೆರೆವಳು’ ಎಂಬ ವಚನದ ಸಾಲುಗಳಂತೂ ಶಕ್ತಿಯುತ ಸಾಲುಗಳಾಗಿವೆ.

ಹಬ್ಬಕ್ಕೆ ತಂದ ಹರಕೆಯ ಕುರಿ

ತೋರಣಕ್ಕೆ ತಂದ ತಳಿರ ಮೇಯಿತ್ತು

ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆವುತ್ತಲ್ಲದೆ

ಅಂದಂದೇ ಹುಟ್ಟಿತ್ತು ಅಂದಂದೇ ಹೊಂದಿತ್ತು

ಕೊಂದಹರುಳಿದರೆ ಕೂಡಲ ಸಂಗಮ ದೇವ (ಸ.ವ.ಸಂ-1.ವ.ಸಂ.126)

ಈ ವಚನ ಶಿಲ್ಪವು ಕಾವ್ಯ ಸೌಂದರ್ಯವನ್ನು ಕಟ್ಟಿಕೊಟ್ಟಿದೆ. ಈ ವಚನದಲ್ಲಿ ಒಳಪ್ರಾಸಗಳನ್ನು ಕಾಣಬಹುದು. ಹರಕೆ,ತೋರಣ ತಳಿರು,ಕೊಂದಿಹರು, ಅರಿಯದೆ, ಉಳಿದರೇ?ಮುಂತಾದ ಪ್ರಾಸಾನುಪ್ರಾಸನಗಳು ವಚನದ ಗೇಯಾಂಶದ ಸೂಚಕಗಳಾಗಿದ್ದು ಹಾಡುಗಾರಿಕೆಯನ್ನು ತಂದು ಕೊಟ್ಟಿವೆ. ಜೊತೆಗೆ ವಚನದಲ್ಲಿಯ ಮೇಯಿತ್ತು.ಹುಟ್ಟಿತು.ಹೊಂದಿತ್ತು ಇತ್ಯಾದಿ ಲಯಾನುಸಾರಿಯಾದ ಪದಗಳು ಕಾವ್ಯ ಶರೀರದ ಅವಿಭಾಜ್ಯ ಅಂಗಗಳಂತೆ ರೂಪಗೊಂಡಿದ್ದು ಅನಿರ್ವಚನೀಯವಾದ ಸೌಂದರ್ಯವನ್ನು ವ್ಯಕ್ತಪಡಿಸುತ್ತವೆ.

ಅಕ್ಕಮಹಾದೇವಿಯ ಈ ಕೆಳಕಂಡ

ಬಂಜೆ ಬೇನೆಯನರಿವಳೇ

ಬಲದಾಯಿ ಮುದ್ದಬಲ್ಲಳೇ

ನೊಂದ ನೋವ ನೋಯದವರೆತ್ತ ಬಲ್ಲರು?

ಚೆನ್ನಮಲ್ಲಿಕಾರ್ಜುನನಿರಿದಲಗು ಒಡಲಲ್ಲಿ ಮುರಿದು

ಹೊರಳುವೆನ್ನಳಲನು ನೀವೆತ್ತ ಬಲ್ಲಿರೇ, ಎಲೆ ತಾಯಿಗಳಿರಾ (ಸ.ವ.ಶಂ.5ವ.ಸಂ.237)

ವಚನದಲ್ಲಿ ಅಕ್ಕಳ ಮನಸ್ಸಿನ ಅನುಭವದ ಉತ್ಕಟತೆಯ ನೆನಪಿನ ಭಾವನೆಯ ತೀವ್ರತೆಯನ್ನು ಪರಿಣಾಮಕಾರಿಯಾಗಿ ವ್ಯಕ್ತಗೊಂಡಿದೆ. ಬಹಿರಂಗದ ದೃಶ್ಯಾನುಭವವನ್ನು ತನ್ನ ಅಂತರಂಗದ ಅನುಭವಕ್ಕೆ ವಸ್ತುಪ್ರತಿರೂಪವಾಗಿ ಕೊಟ್ಟಿದ್ದಾಳೆ. ಮತ್ತೆ ಮತ್ತೆ ಕಾಡುವ ಈ ಅನುಭವದ ಯಾತನೆ ಚೆನ್ನಮಲ್ಲಿಕಾರ್ಜುನ ನಿರಿದಲಗು ಒಡಲಲ್ಲಿ ಮುರಿದು ಹೊರಳುವ ಅಳಲಾಗಿ ಅಭಿವ್ಯಕ್ತಿಗೊಂಡಿದೆ.

ವಚನಕಾರರಲ್ಲಿ ಕಲ್ಪನೆ, ಪ್ರತಿಮಾ ನಿರ್ಮಾಣಗಳನ್ನು ಅಲ್ಲಲ್ಲಿ ಕಾಣಬಹುದಾಗಿದೆ. ಅದರಲ್ಲಿಯೂ ಅಲ್ಲಮ ಪ್ರಭುವಿನಲ್ಲಿ ಪ್ರತಿಮಾ ನಿರ್ಮಾಣಶಕ್ತಿ ಹೆಚ್ಚು ಆತನ ಒಂದು ವಚನದಲ್ಲಿ ಭಕ್ತ ಭವಿಯಾದರೆ ಅವನನ್ನು ಏನೆಂದು ಹೇಳುವುದನ್ನು ಯಾವುದಕ್ಕೆ ವರ್ಣಿಸುವುದು?

ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯಾ

ಬಯಲು ಬತ್ತಲೆಯಿದ್ದರೆ ಏನ ನುಡಿಸುವರಯ್ಯಾ.(ಸ.ವ.ಸಂ.2.ವ.ಸಂ.109)

ಇದು ಸುಂದರವಾದ ಬೆರಗುಗೊಳಿಸುವ ಕಲ್ಪನೆಯಾಗಿದೆ. ವಚನಕಾರರು ವ್ಯಕ್ತಿಗತ ಅನುಭವವನ್ನು ಅಭಿವ್ಯಕ್ತಿಗೊಳಿಸುವುದರ ಜೊತೆಗೆ ವೀರಶೈವ ಧರ್ಮದ ಸತ್ವ ತತ್ವಗಳನ್ನು ಸಾಮಾನ್ಯರಿಗೆ ಮುಟ್ಟಿಸಬೇಕಾದ ಉದ್ದೇಶ್ಯವನ್ನು ಹೊಂದಿದ್ದರು. ಹೀಗಾಗಿ ಜನಬಳಕೆಯಲ್ಲಿದ್ದ ಸಂಗತಿಗಲನ್ನು ಅಭಿವ್ಯಕ್ತಿಗೆ ಬಳಸಿಕೊಂಡರು. ವ್ಯಕ್ತಿಯ ಅಂತರಂಗ ಅವನ ಬಹಿರಂಗ ಶುಚಿತ್ವದಲ್ಲೂ. ವರ್ತನೆಯಲ್ಲಿಯೂ ಕಾಣಬರುವುದನ್ನು ಬಸವಣ್ಣನವರ ವಚನದಲ್ಲಿ ಈ ಕೆಳಕಂಡಂತೆ ಧ್ವನಿಸಿದೆ.

ಮನೆಯೊಳಗೆ ಮನೆಯೊಡೆಯ ನಿದ್ದಾನೋ ಇಲ್ಲವೋ?

ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜತುಂಬಿ

ಮನೆಯೊಳಗೆ ಮನೆಯೊಡಯನಿದ್ದಾನೋ ಇಲ್ಲವೋ?

ತನುವಿನೊಳಗೆ ಹುಸಿತುಂಬಿ ಮನದೊಳಗೆ ವಿಷಯ ತುಂಬಿ.(ಸ.ವ.ಸಂ.2.ವ.ಸಂ.೯೭)

 ಸಾಹಿತಿಯಾದವನು ವರ್ತಮಾನ ಕಾಲದ ಸಮಕಾಲೀನ ಸಾಹಿತ್ಯ ಪರಿಸರದಲ್ಲಿ ನಿಂತು ತನಗೆ ಹಿನ್ನಲೆಯಾದ ಒಂದು ಪರಂಪರೆಯಲ್ಲಿ ತನ್ನ ಅಭಿವ್ಯಕ್ತಿಯನ್ನು ಸಾಧಿಸಿಕೊಳ್ಳುತ್ತಾನೆ. ಅಂತಹವನಿಗೆ ಪರಂಪರೆಯ ಅರಿವು ಇದ್ದಿರಬೇಕಾಗುತ್ತದೆ. ಸೂಕ್ಷ್ಮವಾಗಿ ವಚನಕಾರರ ಕೆಲವು ವಚನಗಳನ್ನು ಗಮನಿಸಿದರೆ ಈ ಅಂಶ ಭಾಗಶ: ಕಂಡುಬರುತ್ತದೆ.

ಇದಕ್ಕೆ ನಿದರ್ಶನವಾಗಿ ಅಲ್ಲಮ ಪ್ರಭುವಿನ

ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ

ನಿಂದ ಹೆಜ್ಜೆಯ ನರೆಯಬಾರದು    ಎಂಬ ವಚನದಲ್ಲಿಯ ಹಿಂದಣ ಹೆಜ್ಜೆ ಹಾಗೂ ನಿಂದ ಹೆಜ್ಜೆಗಳು ಒಂದು ರೀತಿಯಲ್ಲಿ ಪರಂಪರೆ ಹಾಗೂ ಸಮಕಾಲೀನತೆಯ ಸಂಕೇತಗಳಾಗಿವೆ. ಕವಿಯಾದವನು ಈ ಹೆಜ್ಜೆ ಗುರುತುಗಳ ನಡುವೆ ನಿಂತಿರುತ್ತಾನೆ.

 ಸಾಹಿತ್ಯದಲ್ಲಿ ಬಯಲರೂಪ ಮಾಡಬಲ್ಲ ಶೈಲಿ ಅಥವಾ ಅನುಭವ ಆಕಾರ ಪಡೆಯುವ ಪದರಚನೆಯು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ವಚನಕಾರರು ಶಬ್ದ ಪದದ ಬದಲು ನುಡಿ ಮಾತುಗಳನ್ನು ಅಭಿವ್ಯಕ್ತಿಯ ಅರ್ಥದಲ್ಲಿ ಬಳಸುತ್ತಾರೆ. ಬಸವಣ್ಣನವರು ಈ ಕೆಳಕಂಡ ವಚನದಲ್ಲಿ ನುಡಿ ಅಥವಾ ಅಭಿವ್ಯಕ್ತಿ ಹೇಗಿರಬೇಕು ಎಂಬುದನ್ನು

ನುಡಿದಡೆ ಮುತ್ತಿನ ಹಾರದಂತಿರಬೇಕು

ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು

ನುಡಿದಡೆ ಲಿಂಗಮೆಚ್ಚಿ ಅಹುದಹುದೆನಬೇಕು

ನುಡಿಯೊಳಗಾಗಿ ನಡೆಯದಿದ್ದಡೆ

ಕೂಡಲಸಂಗಮ ದೇವನೆಂತೊಲಿವನಯ್ಯಾ ಎಂದಿದ್ದಾರೆ (ಸ.ವ.ಸಂ.-1.ವಸಂ.803) ನುಡಿಯ ಲಕ್ಷಣವನ್ನು ಈ ವಚನವು ಅತ್ಯುತ್ತಮವಾಗಿ ಪ್ರತಿಪಾದಿಸಿದೆ. ಶಬ್ದಗಳ ಜೋಡಣೆಯನ್ನು ಕುರಿತ ಮಾತಾಗಿ ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬುದಾಗಿದೆ. ಅನುಭವ ಅಥವಾ ಅಭಿವ್ಯಕ್ತಿಯು ನುಡಿಗಳಲ್ಲಿ (ಶಬ್ದಗಳು) ಪದಗಳಲ್ಲಿ ವಿನ್ಯಾಸಗೊಳ್ಳುವ ಕ್ರಮವಾಗಿದೆ. ಮುತ್ತಿನ ಹಾರದ ಹೋಲಿಕೆಯ ಮೂಲಕ ಶಬ್ದಗಳ ಜೋಡಣೆಯನ್ನು ಬಸವಣ್ಣನವರು ಪ್ರತಿಪಾದಿಸಿದ್ದಾರೆ. ಮುತ್ತಿನ ಹಾರದಲ್ಲಿ ಮುತ್ತುಗಳು ಒಂದೇ ಸಮನಾಗಿ ನಿಬಿಡವಾಗಿ ಏರುಪೇರಿಲ್ಲದೆ ಮನೋಹರವಾಗಿ ಹೇಗೆ ಕೂಡಿಕೊಳ್ಳುತ್ತವೆಯೋ ಹಾಗೆ, ಪದಗಳೆಲ್ಲ ಭಾವದ ಸೂತ್ರದಲ್ಲಿ ಹೊಂದಿಕೊಂಡಿರಬೇಕು ಎಂಬ ನಿಲುವು ಈ ವಚನದಲ್ಲಿ ವ್ಯಕ್ತಗೊಂಡಿದೆ. ಈ ವಚನವು ಕಾವ್ಯದಲ್ಲಿ ಅತ್ಯುತಮವಾದ ಶೈಲಿ ಹೇಗಿರಬೇಕು ಎಂಬುದರ ಬಗೆಗೆ ಸೂತ್ರವಾಗಿರುವುದರ ಜೊತೆಗೆ ವಚನಕಾರರ ಶೈಲಿಯ ವಿವರಣೆಯ ಪ್ರತೀಕವು ಆಗಿದೆ.

 ವಚನಗಳಲ್ಲಿ ಬಾಹ್ಯ ನಿಸರ್ಗದ ವರ್ಣನೆಗಿಂತ ಅಂತರಂಗದ ನಿಸರ್ಗದ ವರ್ಣನೆ. ಮನುಷ್ಯ ಪ್ರಕೃತಿಯ ಚಿತ್ರಣಗಳನ್ನು ಕಾಣಬಹುದು. ಪ್ರಾಚೀನ ಕವಿಗಳ ಸೌಂದರ್ಯ ಪ್ರಜ್ಞೆಯು ಬಾಹ್ಯ ನಿಸರ್ಗದ ಸೌಂದರ್ಯ ದೃಷ್ಟಿಯಿಂದ ಕೂಡಿದ್ದರೆ, ವಚನಕಾರರ ಸೌಂದರ್ಯ ಪ್ರಜ್ಞೆ ಅದರಿಂದ ಹೊರತಾಗಿವೆ. ವಚನಕಾರರಲ್ಲಿ ಉದಯ, ಅಸ್ತಮಾನಗಳು ಪ್ರಸ್ತಾಪಗೊಂಡರೂ ಕೇವಲ ಕಾಲಸೂಚಕವಾಗಿವೆ. ವಚನಕಾರರು ನಿಸರ್ಗ ವ್ಯಾಪಾರಗಳ ರಮ್ಯತೆಯ ಕಡೆಗೆ ಅಷ್ಟಾಗಿ ಗಮನ ಹರಿಸಿಲ್ಲ. ನಿಸರ್ಗದ ವ್ಯಾಪಾರಗಳನ್ನು ತಮ್ಮ ಮನಃ ಸ್ಥಿತಿಯನ್ನು ಸೂಚಿಸುವ ದೇವರ ವಿಚಾರದಲ್ಲಿರುವ ತಮ್ಮ ಸಂಬಂಧದ ಕಾತರತೆಯನ್ನು ವ್ಯಕ್ತಗೊಳಿಸಲು ಮಾತ್ರ ನಿಯುಕ್ತವಾಗಿವೆ ಎಂದೆನಿಸುತ್ತದೆ. ಬಸವಣ್ಣನವರಿಗಂತೂ ಸುತ್ತಣ ನಿಸರ್ಗದ ರಮಣೀಯತೆಯ ಬಗೆಗೆ ಗಮನ ಹರಿಸದೆ ಪೂಜಾ ಸೌಂದರ್ಯದ ಕಡೆಗೆ ಮಾತ್ರ ಕೇಂದ್ರೀಕರಿಸಿದ್ದಾರೆ. ಆದರೆ ಅಕ್ಕಮಹಾದೇವಿ ಹಾಗೂ ಜೇಡರ ದಾಸಿಮಯ್ಯಗಳ ವಚನಗಳಲ್ಲಿ ವಿಸ್ಮಯಮೂಲವಾದ ನಿಸರ್ಗ ಪ್ರಿಯತೆಯನ್ನು ಕಾಣಬಹುದಾಗಿದೆ.

 ಯಾವ ಕವಿಯೂ ತಾನು ಎಷ್ಟೋ ಸ್ವತಂತ್ರನೆಂದು ತಿಳಿದುಕೊಂಡರೂ ಅವನ ಅರಿವಿಲ್ಲದೆಯೇ ಪರಂಪರೆಯ ಕೆಲವು ಅಂಶಗಳನ್ನು ತನ್ನಲ್ಲಿ ಅಂತರ್ಗತ ಮಾಡಿಕೊಂಡಿರುತ್ತಾನೆ. ವಚನಕಾರರು ಇದಕ್ಕೆ ಹೊರತಿಲ್ಲ ಎಂದೇಳಬಹುದು. ವಚನಕಾರರಲ್ಲಿ ಪೂರ್ವದ ಚಂಪೂ ಕವಿಗಳಲ್ಲಿ ಕಂಡುಬರುವ ಅಷ್ಟಾದಶ ವರ್ಣನೆಗಳು ಕಂಡು ಬರದಿದ್ದರೂ ಕೆಲವು ಕವಿಸಮಯ ಹಾಗೂ ಪುರಾಣ ಪ್ರಜ್ಞೆಗಳನ್ನು ಉಳಿಸಿಕೊಂಡಿರುವುದನ್ನು ಕಾಣಬಹುದು. ವಚನಗಳಲ್ಲಿ ಅಲ್ಲಲ್ಲಿ ಸಿಗುವ ಸೂರ್ಯ, ತಾವರೆ, ಅಂಬುಧಿ, ಚಂದ್ರೋದಯ, ಚಕೋರ, ಚಂದ್ರ, ರಾಹು ಇತ್ಯಾದಿ ಕವಿಸಮಯ ಸಂಗತಿಗಳು ವಚನಕಾರರ ಅಂದಂದಿನ ಮನಃ ಸ್ಥಿತಿಯ ಪ್ರತಿಮೆಗಳಾಗಿ ವ್ಯಕ್ತಗೊಂಡಿವೆ. ವಚನ ಸಾಹಿತ್ಯ ಪ್ರಕಾರವು ಹಿಂದಿನಿಂದ ಕಾವ್ಯವೆಂದು ಒಪ್ಪಿಕೊಂಡು ಬಂದ ಯಾವ ಲಕ್ಷಣಗಳ ಕಡೆಗೂ ಗಮನ ಕೊಡದೆ ತನಗೆ ತೋರಿದಂತೆ ಅಭಿವ್ಯಕ್ತಿಯನ್ನು ರೂಪಿಸಿಕೊಂಡಿತು. ತಮಗರಿವಿಲ್ಲದೆಯೇ ಮಾಡಿಕೊಂಡ ಅಭಿವ್ಯಕ್ತಿಯನ್ನು ಕುರಿತು ಅದನ್ನು ಸಮರ್ಥಿಸಿಕೊಳ್ಳುವ ತನಗೆ ತಾನೆ ಅರ್ಥವಾಡಿಕೊಳ್ಳುವ ಪ್ರಯತ್ನದಲ್ಲಿ ಬಸವಣ್ಣನಂತಹವರ ಈ ಕೆಳಕಂಡ

 ತಾಳಮಾನ ಸರಿಸವನರೆಯೆ,

 ಓಜೆಬಜಾವಣೆಯಲೆಕ್ಕವನಱಿಯೆ

ಅಮೃತಗಣ ದೇವಗಣವನರಱಿಯೆ

ಕೂಡಲಸಂಗಮದೇವಾ ನಿನಗೆ ಕೇಡಿಲ್ಲವಾಗಿ

ಆನು ಒಲಿದಂತೆ ಹಾಡುವೆ (ಸ.ವ.ಸಂ.-1ವ.ಸಂ.494) ಎಂಬ ನಿರ್ಭಿಡತ್ವದ ಉಕ್ತಿ ಅಂದಿನ ತನಕ ಯಾವ ಕವಿಯೂ ತೋರದ ವ್ಯಕ್ತಿ ಸ್ವಾತಂತ್ರ್ಯದ ಧೈರ್ಯವನ್ನು ವಚನಕಾರರು ತೋರಿದರು ಎಂಬುದನ್ನು ಸೂಚಿಸುತ್ತದೆ. ಇಂತಹ ಹೇಳಿಕೆಯಲ್ಲಿ ತಮ್ಮ ಅಭಿವ್ಯಕ್ತಿಯಲ್ಲಿ ಕಂಡು ತಮಗೆ ಅನ್ನಿಸಿದ ಅಥವಾ ಯಾರೋ ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಧಾಟಿಯಲ್ಲಿ ಮಾಡಿಕೊಂಡ ಕಾವ್ಯ ಸಮರ್ಥನೆಯಂತಿದೆ. (ಸಮಗ್ರಗದ್ಯ-1. ಪುಟ.127) ಈ ವಿವರಣೆಯು ವಚನಗಳು ಯಾವ ಪೂರ್ವ ಸಿದ್ಧತೆಯೂ ಇಲ್ಲದೆ ತಾನು ಒಲಿದಂತೆ ಹಾಡುವೆ ಎಂಬ ವ್ಯಕ್ತಿನಿಷ್ಠತೆಯನ್ನು ಸೂಚಿಸುತ್ತದೆ.

ಬಷವಣ್ಣನವರ ವಚನಗಳ ಕಾವ್ಯ ಸೌಂದರ್ಯವನ್ನು ಕುರಿತು ಜಿ.ಎಸ್.ಶಿವರುದ್ರಪ್ಪವರು ಈ ರೀತಿ ವಿವರಿಸುತ್ತಾರೆ. ಬಸವಣ್ಣನವರ ವಚನಗಳಲ್ಲಿ ಮೂರಸ್ಥಲಗಳನ್ನು ನಾವು ಗುರುತಿಸಬಹುದು.

1.ಬಸವಣ್ಣನವರಿಗೆ ಆದಂಥ ಅನುಭವ. ಅದು ಅವರ ವ್ಯಕ್ತಿತ್ವದ ರಸಮಯತೆಯಿಂದ ಒಂದು ಮಟ್ಟದಲ್ಲಿ ಕಾವ್ಯವಾಗುತ್ತದೆ. ಅನಂತರ ಅದರಲ್ಲಿ ಬರುವ ವಿವರಣಾತ್ಮಕವಾದ ವಾಕ್ಯ, ತಮಗೆ ಏನು ಅನ್ನಿಸಿತೋ ಅದು ಉಳಿದ ಸಾಮಾನ್ಯರಿಗೂ ಅರ್ಥವಾಗಬೇಕು ಎನ್ನುವ ಅನುಕಂಪದಿಂದ ಮಾಡಿದ್ದು ಮೂರನೆಯದ್ದು ಈ ಒಂದು ತತ್ವ್ತವೋ, ನೀತಿಯೋ ಈ ಸಮಾಜ ಸುಧಾರಣೆಗೆ ಉಪಯೋಗವಾಗಬೇಕು ಎನ್ನುವುದು. ಹಾಗಾಗಬೇಕಾದರೆ ಈ ಅನುಭವವನ್ನು ಅಭಿವ್ಯಕ್ತಗೊಳಿಸುವ ಭಾಷಾಮಾಧ್ಯಮ ಹೇಗಿರಬೇಕು ಎಂಬ ವಿಚಾರದಲ್ಲಿ ಅವರು ತಾಳಿದ ವಿಶೇಷ ರೀತಿಯ ಎಚ್ಚರ’ (ಸಮಗ್ರ ಗದ್ಯ-1.ಪು.129). ಈ ವಿವರಣೆಯು ಸಹಜ ಕವಿಗಿರಬೇಕಾದ ಲಕ್ಷಣ ಬಸವಣ್ಣನವರಲ್ಲಿದೆ ಎಂಬುದನ್ನು ಸೂಚಿಸುತ್ತದೆ.

 ವಚನಕಾರರು ಹಿಂದಿನ ಕಾವ್ಯ ಪರಂಪರೆಯೊಂದಿಗೆ ತಮ್ಮ ಸಂಬಂಧವನ್ನು ಕಳಚಿಕೊಂಡಿದ್ದರೂ ಸ್ವತಂತ್ರ ವ್ಯಕ್ತಿತ್ವದ ಮೂಲಕ ವಿಫುಲ ಪ್ರತಿಮಾ ಸಂಪತ್ತನ್ನು ನಿರ್ಮಾಣ ಮಾಡಿದ್ದಾರೆ. ಇವರು ಕಾವ್ಯಾಭಿವ್ಯಕ್ತಿಗೆ ಗದ್ಯದ ಸತ್ವವನ್ನು ಕೂಡಿಸಿಕೊಂಡು ಆಡುಭಾಷೆಯನ್ನು ಆಡುಭಾಷೆಯನ್ನಾಗಿಯೇ ಉಳಿಸಿಕೊಂಡು ಪದ್ಯದ ಸೊಗಸನ್ನು ವಚನಗಳಲ್ಲಿ ಕಾಣಿಸಿರುವುದು ಮಹತ್ವದ ಸಂಗತಿಯಾಗಿದೆ. ಬಸವಣ್ಣ ಅಕ್ಕಮಹಾದೇವಿ ಅಲ್ಲಮಪ್ರಭು ಜೇಡರದಾಸಿಮಯ್ಯ ಮುಂತಾದ ವಚನಕಾರರ ವಚನಗಳಲ್ಲಿ ಸೂಕ್ತಿ ಸದೃಶವಾದ ಉಕ್ತಿಗಳು ಉಪಮಾ ರೂಪಕಗಳು ಪ್ರತಿಮಾ ಪರಂಪರೆಗಳು. ಮಾತಿನ ಹೊಂದಾಣಿಕೆಯಲ್ಲಿ ಕಂಡುಬರುವ ಅನುಪ್ರಾಸ, ಅಂತ್ಯಪ್ರಾಸಗಳ ರಮ್ಯತೆ, ಇವುಗಳಲ್ಲಿ ಅಂತರ್ಗತವಾಗಿರುವ ಅನೇಕ ಛಂದೋವೈವಿದ್ಯಗಳು ಗಓಚರವಾಗುತ್ತವೆ. ಬದುಕಿನ ಅನೇಕ ಮುಖಗಳಿಂದ ಚಿತ್ರಗಲನ್ನೆತ್ತಿಕೊಂಡು ತಮ್ಮ ಅಂತರಂಗದ ಬದುಕನ್ನು ವ್ಯಂಜಿಸುವ ವಿಸ್ಮಯ ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ. ವಚನಗಳ ಕಾವ್ಯ ಸೌಂದರ್ಯವು ಪರಂಪರಾಗತವಾದ ಕಾವ್ಯ ಸೌಂದರ್ಯದಿಂದ ಬೇರೆಯಾಗಿ ಜೀವನವೇ ಕಾವ್ಯವಾದಾಗ ಸಂಭವಿಸುವ ಸೌಂದರ್ಯದ ಪ್ರತೀಕವಾಗಿದೆ.

 ಅಕ್ಕಮಹಾದೇವಿಯ ಜೀವನವೇ ಒಂದು ಕಾವ್ಯದಂತಿರುವಾಗ ಅಕ್ಕಳ ಅಂತ ಸ್ಫುರಣಿಯಿಂದ ಹೊರಹೊಮ್ಮಿದ ವಚನಗಳಲ್ಲಿ ಕಾವ್ಯಸೌಂದರ್ಯ ಒಡಮೂಡಿರುವುದು ಎಲ್ಲರೂ ತಿಳಿದಿರತಕ್ಕ ವಿಷಯವೇ ಆಗಿದೆ. ಆಕೆ ತನ್ನ ಇಷ್ಟ ದೈವನಿಗಾಗಿ ಪಟ್ಟ ಬವಣೆ, ಅನುಭವಿಸಿದ ವಿರಹ, ನೊಂದ ನೋವು, ಪಟ್ಟ ಪಡು ಇವೆಲ್ಲವೂ ಸಹಜವಾಗಿ ಆಕೆಯ ಪ್ರತಿಭಾ ಕೌಶಲ್ಯದ ಮೂಸೆಯಲ್ಲಿ ಸುಂದರ ವಚನಗಳಾಗಿ ಹಾಡುಗಳಾಗಿ ಹೊರಹೊಮ್ಮಿವೆ. ಅಕ್ಕಮಹಾದೇವಿಯ ವಚನಗಳಲ್ಲಿ ಆಧ್ಯಾತ್ಮ ಮತ್ತು ಗದ್ಯ ಕವಿತ್ವದ ಸಮ್ಮಿಲನದಿಂದಾಗಿಯೇ ಮೊದಲ ಕವಿಯತ್ರಿ ಎಂಬ ಖ್ಯಾತಿಗೆ ಒಳಗಾಗಿರುವುದು. ಅಕ್ಕಮಹಾದೇವಿಯ ವಚನಗಳು ಕಾವ್ಯ ಸೌಂದರ್ಯಕ್ಕೆ ಹೇಳಿ ಮಾಡಿಸಿದಂತಿವೆ. ತನ್ನ ಇಷ್ಟದೈವವನ್ನೇ ತನ್ನ ಗಂಡನೆಂದು ಭಾವಿಸಿದ ಅಕ್ಕಳ ದೈವದ ಕಲ್ಪನೆ ಅಂದಿನ ವೀರಶೈವ ಧರ್ಮದ ಕಲ್ಪನೆಗಿಂತ ಭಿನ್ನವಾಗಿದೆ. ಆಕೆಯ ಪತಿ ಮಲ್ಲಿಕಾರ್ಜುನ ಪರಮ ಸಾಕಾರ ಸುಂದರ ಮೂರ್ತಿ ವಚನಗಳಲ್ಲಿ ಆತನನ್ನು ರೂಪಿಸಲ್ಪದ ಚಲುವನೆಂದು ವರ್ಣಿಸಿದ್ದಾಳೆ. ಇಷ್ಟ ದೈವವನ್ನೆ ಗಂಡನೆಂದು ಕಲ್ಪಿಸಿಕೊಂಡ ಅಕ್ಕಳ ಕಣ್ಣಿಗೆ

ಹೊಳೆವ ಕೆಂಜೆಡೆಗಳ ಎಳೆವೆಳುದಿಂಗಳ

ಫಣಿಮಣಿ ಕರ್ಣ ಕುಂಡಲದವನು

ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲಗೊರವನು

ಮಣಿಮುಕುಟದ ಫಣಿ ಕಂಕಣದ ನಗೆಮೊಗದ’ (ಸ.ವ.ಸಂ.5ವ.ಸಂ.352)

ಸುಲಿಪಲ್ಲ ಸೊಬಗ’ ನಾಗಿ ಕಾಣುತ್ತಾನೆ. ತನ್ನ ಇಷ್ಟ ದೈವದ ಗಂಡನೊಂದಿಗೆ ಒಂದಾಗುವ ಸ್ಥಿತಿ ಕೇವಲ ಬಯಲ ಅಥವಾ ಬೆಳಕಿನ ಅಥವಾ ಕೇವಲ ಜ್ಯೋತಿಯ ಸ್ಥಿತಿ ಮಾತ್ರವಾಗದೆ ಅದು ಉತ್ಕಟವಾದ ಪ್ರಣಯಾನುಭವವಾಗಿದ್ದು ಶೃಂಗಾರ ರೂಪಕಗಳ ಮೂಲಕವಾಗಿಯೇ ವರ್ಣಿತವಾಗಿದೆ. ಅಕ್ಕಳ ಅನುಭಾವ ಚೆನ್ನಮಲ್ಲಿಕಾರ್ಜುನನನ್ನು ಕುರಿತ ಕನಸು ಹಂಬಲ ಹಾಗೂ ತಳಮಳಗಳ ರೂಪದ ಅನ್ವೇಷಣೆಯ ಸ್ಥಿತಿಯಾಗಿರುವುದರಿಂದ ಅಂತರ್ಮುಖ ಪ್ರವೃತ್ತಿಯಾಗಿದೆ. ತಾನೊಲಿದ ಗಂಡನೊಂದಿಗೆ ತನಗೆ ಒದಗಿದ ವಿರಹ ಹಾಗೂ ಆತನೊಂದಿಗೆ ತಾನು ಒಂದಾಗುವ ಉತ್ಕಟವಾದ ಹಂಬಲದ ಪ್ರಯಾಣದ ಉದ್ದಕ್ಕೂ ಅವಳು ಆಡುವ ಮಾತೆಲ್ಲ ಭಾರತೀಯ ಪ್ರೇಮ ಕಾವ್ಯದ ವಿರಹಗೀತೆಗಳ ಮಾದರಿಗಳಂತಿವೆ. ಅವಳ ವಚನಗಳಲ್ಲಿ ಉತ್ಕಟವಾದ ಶೃಂಗಾರಭಾವದ ಅನೇಕ ಕ್ಷಣಗಳು ದಾಖಲಾಗಿವೆ.

ಬಸವಣ್ಣನವರ

ಕೆರೆಹಳ್ಳಬಾವಿಗಳು ಮೈದೆಗೆದಡೆ

ಗುಳ್ಳೆಗೊರಚೆ ಚಿಪ್ಪುಗಳು ಕಾಣಬಹುದು

ವಾರುಧಿ ಮೈದೆಗೆದಡೆ ರತ್ನಂಗಳು ಕಾಣಬಹುದು

ಕೂಡಲಸಂಗನ ಶರಣರು ಮನದೆರೆದು ಮಾತನಾಡಿದಡೆ

ಲಿಂಗವ ಕಾಣಬಹುದು (ಸ.ವ.ಸಂ-1.ವ.ಸಂ.365) ಎಂಬ ವಚನದಲ್ಲಿ ದಿವ್ಯವಾದ ಸೌಂದರ್ಯವನ್ನು ಕಾಣಬಹುದಾಗಿದೆ. ಪರೋಕ್ಷವಾಗಿ ಈ ವಚನ ಕವಿ ಕಾವ್ಯದ ಪರವಾಗಿ ವಿಪುಲಾರ್ಥವನ್ನು ಧ್ವನಿಸುತ್ತದೆ. ಈ ವಚನದಲ್ಲಿಯ ಕೆರೆಹಳ್ಳಬಾವಿ-ಸಮುದ್ರ-ಶರಣರು: ಗುಳ್ಳೆಗೊರಚೆ ಚಿಪ್ಪು-ರತ್ನ-ಲಿಂಗ ಹೀಗೆ ಚಿತ್ರವು ಬೆಳೆದುಕೊಂಡು ಹೋಗಿರುವುದನ್ನು ಕಾಣಬಹುದಾಗಿದೆ. ಈ ವಚನ ಹಿನ್ನೆಲೆಯಲ್ಲಿ ಕವಿನಿರ್ಮಿತ ಕಾವ್ಯರಾಶಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಕವಿಗಳಲ್ಲಿ ಕೆಲವರು ದಿನಿತ್ಯದ ಸಾಧಾರಣ ವಾಸ್ತವ ವಿಷಯಗಳಷ್ಟರಲ್ಲೆ ರಮಿಸಿ ವಿರಮಿಸಿ ಅಷ್ಟರಲ್ಲಿಯೇ ತೃಪ್ತಿಯನ್ನು ಹೊಂದುತ್ತಾರೆ. ಅಂಥವರ ಸಾಹಿತ್ಯದ ಸ್ವರೂಪವನ್ನು ಮೇಲ್ಕಂಡ ವಚನದ ಮೊದಲನೆ ರೂಪಕ ಧ್ವನಿಸುತ್ತದೆ. ಅಂತಹ ಕವಿಗಳ ವೈಯಕ್ತಿತ್ವನ್ನು ಕೆರೆ,ಹಳ್ಳ, ಭಾವಿ ಎನ್ನುವ ಪ್ರತಿಮೆಗಳು ಸೂಚಿಸುತ್ತವೆ. ಕವಿಗಳಲ್ಲಿ ಮತ್ತಲವರು ವಾರಿಧಿ ಸದೃಶರಾದ ಮಹಾಕವಿಗಳು. ಅವರ ಕಾವ್ಯಗಳಲ್ಲಿ ಎಲ್ಲಾ ಕಾಲಕ್ಕೂ ಬೆಲೆಯುಳ್ಳ ಚಿರಂತನ ಭಾವರತ್ನಗಳಾಗಿವೆ. ವಚನದ ಎರಡನೇ ರೂಪದ ಅಂತಹ ಮಹಾಕವಿಗಳ ವ್ಯಕ್ತಿತ್ವನ್ನು ವಾರಿಧಿ ರತ್ನ ಮುಂತಾದ ಪ್ರತಿಮೆಗಳ ಮೂಲಕ ಕಾವ್ಯದ ಮಹತ್ವದನ್ನು ಸೂಚಿಸುತ್ತದೆ. ವಚನದ ಮೂರನೆಯ ರೂಪಕವು ಇವೆರಡನ್ನೂ ಮೀರಿದ ಶರಣ ಸಾಹಿತ್ಯದ ಅನುಭಾವಿಗಳ ಅಮೃತವಾಣಿಯ ಮಹಿಮೆಯನ್ನು ವಿವರಿಸುತ್ತದೆ. ಶರಣರು ಮನದೆರೆದು ಮಾತನಾಡಿದರೆ ಲಿಂಗವೇ ದೈವೀ ಪ್ರಕಾಶದ ಹಾಗೆ ಕಾಣುತ್ತದೆ.

   ವಚನಕಾರರು ಲೋಕದ ಚಲುವಿಗೆ ಬೆರಗಾಗಿ ಆಶ್ಚರ್ಯ ಚಕಿತರಾಗಿ ಬಣ್ಣಿಸುವುದಾಗಲಿ ತಮ್ಮ ಕಲ್ಪನೆಯ ಕಣ್ಣಿನಿಂದ ಚೆಲುವಿನ ಅನುಭವವನ್ನು ಸಿಂಗರಿಸಿ ಹಾಡುವುದಾಗಲಿ ಬಲ್ಲರು. ಇವರು ಲೋಕದ ಚೆಲುವನ್ನು ಕಂಡರೂ ಒಲಿದರೂ ಅವರ ಕಣ್ಣು ಅದರಾಚೆಯ ಬೆಳಕಿಗೆ ಕಾತರಿಸಿರುವ ಗುಣವನ್ನು ಹೊಂದಿದವರು. ನಿದರ್ಶನಕ್ಕೆ ಜೇಡರದಾಸಿಮಯ್ಯನ ಈ ವಚನವನ್ನು ಪರಿಶೀಲಿಸಬಹುದು.

ಲೋಕದ ಚೆಲುವನ್ನು ನೋಡಿ ದಾಸಿಮಯ್ಯರು

ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ

ಅಂಬರಕ್ಕೆ ಗದ್ದುಗೆ ಬೋದುಗೆ ಲ್ಲದಂತಿರಿಸಿದೆ’(ಸ.ವ.ಸಂ.7.ವ.ಸಂ.854) ಎಂದು ಉದ್ಗಾರ ಎತ್ತಿದ್ದಾರೆ. ಸುತ್ತಲೂ ಕಡಲಿನ ಅಪಾರ ಜಲರಾಶಿ ನಡುವೆ ಈ ನೆಲ. ಅದು ಹೇಗೆ ಈ ನೆಲದ ಮಣ್ಣು ಕರಗಿ ಹೋಗದೆ ಇದೆ. ಮೇಲಿನ ಆಕಾಶ ನೀಲಿಯ ಗುಮ್ಮಟದಂತೆ ತೋರುತ್ತದೆ. ಆದರೆ ಅದನ್ನು ಹಿಡಿದು ನಿಲ್ಲಿಸಿರುವ ಯಾವ ಗದ್ದುಗೆಯೂ ಬೋದುಗೆಯೂ ಇಲ್ಲವಲ್ಲ ಈ ಉದ್ಗಾರದಲ್ಲಿ ಎಂತಹ ಕವಿ ಸಹಜವಾದ ಬೆರಗು ವ್ಯಕ್ತಗೊಂಡಿದೆ.

ಅದೇ ರೀತಿ ಅಕ್ಕಮಹಾದೇವಿಯು ವಚನವೊಂದರಲ್ಲಿ ಸುತ್ತಮುತ್ತಲಿನ ತರು,ಮರಾದಿಗಳನ್ನು ನೋಡಿ ನೆಲವೊಂದೇ ಜಲವೊಂದೇ ಆದರೂ ಅವುಗಳಲ್ಲಿಯ ತರತಮಗಳನ್ನು ಅಂದರೆ ಮಾವಿನಲ್ಲಿ ಸಿಹಿ, ಈಳೆಯಲ್ಲಿ ಹುಳಿ, ಮರುಗ, ಮಲ್ಲಿಗೆಯಲ್ಲಿ ಪರಿಮಳಗಳನ್ನು ಆಶ್ಚರ್ಯ ಚಕಿತಳಾಗಿ ಈ ರೀತಿ ವ್ಯಕ್ತ ಪಡಿಸುತ್ತಾರೆ.

ಈಳೆ ನಿಂಬೆ ಮಾವು ಮಾದಲಕ್ಕೆ

ಹುಳಿ ನೀರನೆರೆದವರಾರಯ್ಯ

ಕಬ್ಬು ಬಾಳೆ ಹಲಸು ನಾರಿಕೇಳಕ್ಕೆ

ಸಿಹಿನೀರನೆರೆದರರಾರಯ್ಯ

ಕಳವೆಶಾಲಿಗೆ ಓಗರದ ಉದಕವನೆರೆದವರಾರಯ್ಯ

ಮರುಗ ಮಲ್ಲಿಗೆ ಪಚ್ಚೆಗೆ

ಪರಿಮಳದುದಕವ ನೆರೆದವರಾರಯ್ಯ

ಇಂತೀ ಜಲವು ಒಂದೇ ನೆಲವು ಒಂದೇ

ಆಕಾಶವೂ ಒಂದೇ (ಸ.ವ.ಸಂ.5.ವ.ಸಂ.66)

ಈ ಆಶ್ಚರ್ಯವನ್ನು ಕಂಡ ಅಕ್ಕಮಾಹಾದೇವಿಯು ಆಶ್ಚರ್ಯಕರವಾದ ಮಾತಿನಲ್ಲಿ ಕಟ್ಟಿರುವುದು ಆಕೆಯ ಕವಿಹೃದಯವನ್ನು ಸೂಚಿಸುತ್ತದೆ.

   ಅಕ್ಕಮಹಾದೇವಿ. ಜೇಡರದಾಸಿಮಯ್ಯ ಬಸವಣ್ಣ ನಂತಹ ವಚನಕಾರರು ಸೃಷ್ಟಿಯ ಸೊಬಗನ್ನು ಬಣ್ಣಿಸುತ್ತಿಲ್ಲ. ಸೃಷ್ಟಿಯ ರಮ್ಯೋಜ್ವಲವರ್ಣ ವಿಲಾಸವನ್ನು ಚಿತ್ರಿಸ ಹೊರಟವರಲ್ಲ, ಎಲ್ಲರನ್ನೂ ಸೆಳೆಯುವ ಬಹಿರಂಗ ಅವರಿಗೆ ಅಪ್ರಸ್ತುತ. ಬಹಿರಂಗದಾಚೆಯಿರುವ ಶಿವನ ನೆಲೆಯ ಕಡೆಗೆ ಗಮನವನ್ನು ಕೇಂದ್ರೀಕರಿಸುತ್ತಾರೆ. ವಚನಕಾರರಲ್ಲಿ ನಿರಾಕಾರದ ಸೌಂದರ್ಯವೇ ಪ್ರಧಾನವಾಗಿ ಗೋಚರಿಸತಕ್ಕದ್ದು. ಬಹು ಪಾಲು ವಚನಗಳಲ್ಲಿ ಲಿಂಗ ಚೆಲುವನ್ನೇ ವರ್ಣಿಸಿರುವುದು. ವಚನಕಾರರ ವಚನ ಭಾಷೆಯಲ್ಲಿ ಕ್ಲಿಷ್ಟತೆ ಇಲ್ಲ. ನುಡಿಗಳು ಬಹು ಸುಲಭ ಹಾಗೂ ಸರಳತೆಯಿಂದ ಕೂಡಿದ್ದರೂ ಮಾಧುರ್ಯತನವನ್ನು ಕಾಣಬಹುದು. ಬಹುಪಾಲು ವಚನಗಳ ಶಿಲ್ಪದ ವೈಶಿಷ್ಟ್ಯವನ್ನು ಈ ರೀತಿ ಗುರುತಿಸಬಹುದು. ಒಂದು ವಿಚಾರ, ಅದನ್ನು ಮನದಟ್ಟು ಮಾಡಲು ಒಂದು ನಿದರ್ಶನ, ಇವೆಲ್ಲದರ ಅಭಿವ್ಯಕ್ತಿಗೆ ಪುಟ್ಟ ಪುಟ್ಟ ಪದಗಳ ಅಳವಡಿಕೆ. ವಚನಗಳು ಪಾರಮಾರ್ಥಿಕ ನಿರೂಪಣೆಯ ಕಡೆಗೆ ಹೆಚ್ಚಿನ ಒಲವನ್ನು ಪ್ರಕಟಿಸಿದ್ದರೂ ಬಹುಮಟ್ಟಿಗೆ ಅರ್ಥವಾಗುವಂತಿವೆ. ವಚನಕಾರರು ತಾವು ಹೇಳುವ ವಿಷಯಗಳನ್ನು ಸಲೀಸಾಗಿ ನಿರೂಪಿಸಲು ಉಪಮೆ, ದೃಷ್ಟಾಂತ, ಜಾಣ್ಣುಡಿಗಳನ್ನು ಸರಳ ದೇಸಿವಾಕ್ಯಗಳನ್ನು ಬಳಸಿದ್ದಾರೆ, ಇವರ ಶಬ್ದ ಸಂಪತ್ತಿನಲ್ಲಿ ಅಚ್ಚಗನ್ನಡ ಶಬ್ದಗಳೇ ಹೇರಳವಾಗಿವೆ. ವಚನಗಳ ಶೈಲಿಯು ಹಲವೆಡೆ ವಿಸ್ತೃತದಿಂದ ಕೂಡಿದ್ದು ಗದ್ಯಲಯವನ್ನು ಹೊಂದಿದೆ ಎಂದೆನಿಸುತ್ತದೆ. ಯಾವುದೇ ಗಹನವಾದ ತಾತ್ವಿಕ ಹಾಗೂ ಪಾರಮಾರ್ಥಿಕ ವಿಚಾರಗಳನ್ನು ಸರಳ ಭಾಷೆಯಲ್ಲಿ ನಿರೂಪಿಸಬಹುದು ಎಂಬುದನ್ನು ವಚನಗಳು ಸೂಚಿಸಿವೆ. ವಚನಗಳಲ್ಲಿ ಅಲ್ಲಲ್ಲಿ ಕಾವ್ಯಗುಣ ಇಣುಕಿ ಹಾಕಿದೆ. ಇದು ಅವರ ಸಾಹಿತ್ಯ ಗುಣವನ್ನು ಎತ್ತಿತೋರಿಸುತ್ತದೆ. ಜನಜೀವನದ ಸಾಮನ್ಯ ದೃಷ್ಟಾಂತಗಳನ್ನು ಉದಾಹರಣೆಯಾಗಿ ಕೊಟ್ಟು ಗಾದೆ. ನಾಣ್ಣುಡಿಗಳನ್ನು ಸೇರಿಸಕೊಂಡು ಸರಳ ರೀತಿಯಲ್ಲಿ ತತ್ವವನ್ನು ಪ್ರತಿಪಾದಿಸಿದ್ದಾರೆ. ಸಾಹಿತ್ಯಕ ದೃಷ್ಟಿಯಿಂದ ಕೆಲವು ವಚನಗಲು ಮಹತ್ವ ಪಡೆದಿವೆ. ಸಕಲೇಶ ಮಾದರಸರ.

‘ಸರವರದ ಮಂಡೂಕನು

ತಾವರೆಯ ನೆಳಲ ಸಾರಿದಡೆ ಪರಿಮಳವದಕ್ಕೆ ಅಯ್ಯಾ

ಅ ಅ ಅ ಅ ಅರೆಯಬಾರದು ಪರಿಮಳವದಕ್ಕೆ ಅಯ್ಯಾ

ಅ ಅ ಅ ಅ ಅರೆಯಬಾರದು ಮರಾಳಿಗಲ್ಲದೆ ಅಯ್ಯಾ (ವ.ಸಂ.124)

ಸಕಲೇಶ್ವರದೇವಾ ನಿಮ್ಮವೇಧಿಸಿದ ವೇದ್ಯರಿಗಲ್ಲದೆ’

 ಎಂಬ ವಚನದಲ್ಲಿ ಒಂದೇ ಸರೋವರದಲ್ಲಿರುವ ಕಪ್ಪೆ ದುಂಬಿಗಳೆರಡೂ ಕಮಲದ ಬಳಿಯಿದ್ದರೂ ದುಂಬಿಗೆ ಮಾತ್ರ ಒಂದೇ ಸುವಾಸನೆ ತಿಳಿಯುತ್ತದೆ. ಕಪ್ಪೆಗೆ ತಿಳಿಯುವುದಿಲ್ಲ ಎನ್ನುವಾಗ ಅ ಅ .. ಎಂದು ಅಕ್ಷರಗಳನ್ನು ಪುನರಾವರ್ತನೆ ಮಾಡುವುದು, ಅರಿಯದ ಮೂಢರು ತೊದಲುವುದನ್ನು ಧ್ವನಿಸುತ್ತದೆ. ಅಂದರೆ ಅ ಅ ಅ ಅ ಎಂಬುದು ಎನೂ ಅರಿಯದ ಮೂಢ ಎನೋ ಹೇಳಲಿಕ್ಕೆ ಹೋಗಿ ತಡವರಿಸುವುದನ್ನು ಶಕ್ತವಾಗಿ ಧ್ವನಿಸಿದೆ.

 ವಚನಕಾರರ ಅನೇಕ ವಚನಗಳಲ್ಲಿ ಸಾಹಿತ್ಯ ಮನೋಧರ್ಮವುಳ್ಳ ಅನುಭವಿಯ ಸಹಜ ಸುಂದರವಾದ ಅಭಿವ್ಯಕ್ತಿಗಳನ್ನು ಕಾಣಬಹುದಾಗಿದೆ. ಇವರ ಬಹುಪಾಲು ವಚನಗಳಲ್ಲಿ ಉಪಮೆ, ರೂಪಕಗಳು, ದೃಷ್ಟಾಂತಗಳು ತರತರನಾಗಿ ಕಾಣಿಸಿಕೊಂಡಿದ್ದು ಅವರಲ್ಲಿರುವ ಕವಿ ಮನೋಭಾವವನ್ನು ಓದುಗರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿವೆ.

ಬಸವಣ್ಣನವರ ವಚನಗಳಲ್ಲಿ ರಚನಾ ಶಿಲ್ಪ ಎದ್ದು ಕಾಣುವಂತಹದ್ದಾಗಿದೆ.

ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ

ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ

ಇದ್ದರೇನು ಶಿವಾಶಿವಾ ! ಹೋದರೇನು ಶಿವಾ!

ಕೂಡಲಸಂಗಮದೇವಯ್ಯ,

ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ (ಸ.ವ.ಸಂ-ವ.ಸಂ.109)

ಈ ವಚನದಲ್ಲಿ ಗಂಡ-ಸ್ನೇಹ-ಹೆಂಡತಿ: ಲಿಂಗ-ನಿಷ್ಠೆ-ಭಕ್ತ ಇವುಗಳಿಗಿರುವ ಹೋಲಿಕೆಯನ್ನುಅರ್ಥಗರ್ಭಿತವಾಗಿ ಸೂಚಿಸಿದೆ. ವಚನದಲ್ಲಿಯ ಇದ್ದರೇನು ಶಿವಾಶಿವಾ ! ಹೋದರೇನು ಶಿವಾ! ಎಂಬುದು ಆಡು ಮಾತಿನ ಶೈಲಿಯ ಸಾರ್ಥಕ ಬಳಕೆಯನ್ನು ಸೂಚಿಸುತ್ತದೆ. ಕೊನೆಯಲ್ಲಿಯ ಉಪಮೆಯು ಗಾದೆಯ ಮಾತಿನ ರೀತಿಯಲ್ಲಿದ್ದು, ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ತಾತ್ಸಾರ ಭಾವನೆ ವ್ಯಕ್ತವಾಗಿದೆ. ವಚನದ ಕೊನೆಯ ಸಾಲಿನಲ್ಲಿಯ ಹೋಲಿಕೆ ಭಕ್ತನಿಗೆ ದೇವರು ಬೇಕಿಲ್ಲದಿದ್ದರೆ ದೇವರಿಗೂ ಅವನೂ ಬೇಕಿಲ್ಲ ಎಂಬ ಧ್ವನಿಯನ್ನೂ ಸೂಚಿಸುತ್ತದೆ.

    ವಚನಗಳು ಸರ್ವಕಾಲೀನ ಸಾರ್ವಜನೀನ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳ ಮೂರ್ತ ಸ್ವರೂಪವಾಗಿದ್ದು, ಕವಿಹೃದಯದ ವಚನಕಾರನ ಭಕ್ತಾರ್ದ್ರವೂ ಪ್ರಾಮಾಣಿಕವೂ ಆದ ಹೃದಯವಂತಿಕೆಯ ರಸಲೇಪದಿಂದ ಕೂಡಿದ ಸಾಹಿತ್ಯ ಸುಧೆಯ ಸಾರವಾಗಿವೆ. ಈ ಕಾರಣದಿಂದ ಕೆಲವು ವಚನಗಳನ್ನು ಮತ್ತೆ ಮತ್ತೆ ಓದಿದರೂ ಅವು ಸವಿಯೆನಿಸುತ್ತವೆ. ಅವುಗಳ ಹೊಸತನ ಹೊಳಪು ಮಾಸುವುದಿಲ್ಲ’ ಉಪಮೆ, ರೂಪಕ, ದೃಷ್ಟಾಂತ ಗಳನ್ನೊಳಗೊಂಡ ಬಹುಪಾಲು ವಚನಗಳು ಕವಿಮನೋಭಾವದಿಂದ ಹೊಮ್ಮಿವೆ.

   ವಚನಕಾರರು ಪ್ರಾಣಿ ಪಕ್ಷಿ ಪ್ರಪಂಚದಿಂದಲೂ ಸಾಕಷ್ಟು ರೂಪಕಗಳನ್ನು ರೂಪಿಸಿದ್ದಾರೆ. ವಚನಕಾರರು ತಮ್ಮ ಅಂತರಂಗದ ಅಂದಂದಿನ ತೊಳಲಾಟವನ್ನು ವಚನಗಳ ಮೂಲಕ ತೋಡಿಕೊಳ್ಳುವಂತಹ ಸಂದರ್ಭದಲ್ಲಿ ಪ್ರಾಣಿ ರೂಪಕಗಳನ್ನು ಕೆಲವೆಡೆ ಬಳಸಿದ್ದಾರೆ. ನಾಯಿಯ ಚಿತ್ರ, ಮರ್ಕಟ, ಹಸು, ಕಾಗೆ, ಇತ್ಯಾದಿಗಳನ್ನು ಮನಸ್ಸಿನ ಚಾಂಚಲ್ಯವನ್ನು ಚಿತ್ರಿಸಲು ಬಳಸಿಕೊಂಡಿರುವುದನ್ನು ಕಾಣುಬಹುದು. ಒಂದೇ ಪ್ರಾಣಿ ಅಥವಾ ಪಕ್ಷಿ ರೂಪಕವನ್ನು ವಿವಿಧಾರ್ಥಗಳನ್ನು ದುಡಿಸಿಕೊಳ್ಳಲು ಬಳಸಿರುವುದು ಗಮನಿಸಬೇಕಾದ ಸಂಗತಿ.

 ಗಿಳಿಯೊದಿ ಫಲವೇನು ?

 ಬೆಕ್ಕು ಬಹುದ ಹೇಳಲರಿಯದು

 ಹಂಜರ ಬಲ್ಲಿತೆಂದು ಅಂಜದೆ ಓದುವ ಗಿಳಿಯೇ

 ಎಂದೆಂದೂ ಅಳಿಯನೆಂದು ಗುಡಿಗಟ್ಟಿದೆಯಲ್ಲಾ

 ನರವಿಂಧ್ಯದೊಲಗೆನ್ನ ಹುಲಗಿಳಿಯಮಾಡಿ

 ಸಲಹುತ್ತ ಶಿವಶಿವಾ ಎಂದೋದಿಸಯ್ಯಾ (ಸ.ವ.ಸಂ.-1ವ.ಸಂ.123)

ಈ ವಚನಗಳ ಸಾಲುಗಳಲ್ಲಿ ಗಿಳಿಯ ಚಿತ್ರ ಬಂದರು ಅದು ಮೂರು ಬೇರೆ ಬೇರೆಯ ಅರ್ಥಗಳನ್ನು ಕೊಡಲು ನಿಯೋಜಿತವಾಗಿದೆ. ಮೊದಲನೆಯ ರೂಪಕ ಪಾಂಡಿತ್ಯದ ನಿಷ್ಫಲತೆಯನ್ನು ಮೃತ್ಯು ತತ್ವದ ಹಿನ್ನಲೆಯಲ್ಲಿ ಹೇಳಿದರೆ, ಎರಡನೆಯ ರೂಪಕ ಶರೀರದ ಶಾಶ್ವತತೆಯ ಭ್ರಮೆಯನ್ನು ಹೇಳುತ್ತದೆ. ಮೂರನೆಯ ರೂಪಕ ಸದ್ಗುರುವಿನ ಬಳಿ ನಿಜವಾದ ಶಿಷ್ಟನಾಗಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವ ಹಂಬಲವನ್ನು ಹೇಳುತ್ತದೆ.

 ಬಸವಣ್ಣನವರ ಮತ್ತೊಂದು ಪ್ರಸಿದ್ಧ ವಚನವಾದ,

 ‘ನೆರೆಕೆನ್ನೆಗೆ, ತೆರೆಗಲ್ಲಕೆ ಶರೀರಗೂಡುವೋಗದ ಮುನ್ನ

 ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ

 ಕಾಲಮೇಲೆ ಕೈಯನೂರ ಕೋಲಹಿಡಿಯದ ಮುನ್ನ

 ಮುಪ್ಪಿಂದೊಪ್ಪವಳಿಯದ ಮುನ್ನ ಮೃತ್ಯು ಮುಟ್ಟದ ಮುನ್ನ

 ಪೂಜಿಸು ನಮ್ಮ ಕೂಡಲ ಸಂಗಮದೇವನ’ (ಸ.ವ.ಸಂ.-1.ವ.ಸಂ.161)

 ಈ ವಚನದಲ್ಲಿಯ ಒಂದೊಂದು ಸಾಲು ಹಂತ ಹಂತವಾಗಿ ಮುಪ್ಪಿನ ಚಿತ್ರವನ್ನು ಕಟ್ಟಿಕೊಡುತ್ತದೆ. ಇಲ್ಲಿಯ ವಚನದ ಸಾಲುಗಳಲ್ಲಿ ಮುಪ್ಪಿನ ದೃಶ್ಯವನ್ನು ಭಾವಾಭಿನಯದ ಮೂಲಕ ಮೂಡಿ ತೋರಿಸುವಷ್ಟು ಜೀವಂತ ಮತ್ತು ಸುಂದರವಾಗಿವೆ. ಇಂತಹ ನಿದರ್ಶನಗಳನ್ನು ವಚನ ಸಾಹಿತ್ಯದಲ್ಲಿ ವಿಫುಲವಾಗಿ ಕಾಣಬಹುದಾಗಿದೆ.

   ವಚನಕಾರರ ಅನುಭವ ಅಭಿವ್ಯಕ್ತಿಗಳು ವಿಶಿಷ್ಟವಾದವುಗಳು. ಅವರ ಜೀವನದ ಅಂತರಂಗ ಮತ್ತು ಬಹಿರಂಗಗಳೆರಡೂ ಅವರ ವಚನಗಲ ಶೈಲಿಗಳಲ್ಲಿ ಒಡಮೂಡಿದೆ. ವಚನಗಳಲ್ಲಿಯ ಗಾದೆಮಾತುಗಳು ಹಾಗೂ ಸೂಕ್ತಿ ಸದೃಶವಾದ ನುಡಿಮುತ್ತುಗಳಿಂದಾಗಿ ಕಾವ್ಯದ ಚೆಲುವನ್ನು ಪಡೆದಿವೆ.

 ಅದರಕ್ಕೆ ಕಹಿ ಉದರಕ್ಕೆ ಸಿಹಿ

 ಆನೆಯ ಮೇಲೆ ಹೋಹುನ ಶ್ವಾನ ಕಚ್ಚಬಲ್ಲದೆ

 ಊರ ಸೀರೆಗೆ ಅಸಗ ತಡಿಬಡಿಹಡೆದಂತೆ

 ಬಡವನ ಕೋಪ ಅವುಡಿಗೆ ಮೃತುವಾದಂತೆ

ಇತ್ಯಾದಿ ಜನಸಾಮಾನ್ಯರ ಬಳಕೆಯಲ್ಲಿದ್ದ ಗಾದೆ ಮಾತುಗಳು ವಚನಕಾರರ ಅಭಿವ್ಯಕ್ತಿಗೆ ದೇಸಿಯ ಸೊಗಡು, ರಮ್ಯತೆ ಅರ್ಥವಂತಿಕೆಗಳನ್ನು ತಂದಿದೆ.

 ದಯವಿಲ್ಲದ ಧರ್ಮವಾವುದಯ್ಯಾ

 ಆಚಾರವೇ ಸ್ವರ್ಗ ಅನಾಚಾರವೇ ನರಕ

ಇತ್ಯಾದಿ ಸರಳತೆಯನ್ನು ಹೊಂದಿದ ನಿರಲಂಕಾರವನ್ನು ಹೊಂದಿದ ನುಡಿಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ.

 ವಚನಗಳಲ್ಲಿ ಚಿತ್ರಕ ಶಕ್ತಿಯನ್ನು ಹೇರಳವಾಗಿ ಕಾಣಬಹುದಾಗಿದೆ. ರೂಪಕ, ಉಪಮೆ ಪ್ರತಿಮೆಗಳಲ್ಲಿ ಚಿತ್ರಗಳ ಮಾಲೆ ಮಾಲೆಯನ್ನೇ ಎಣಿದಿದ್ದಾರೆ. ಕೆಲವು ವಚನಗಳಂತೆ ಒಂದೊಂದು ಸಾಲಿನಲ್ಲಿಯೂ ಒಂದೊಂದು ಜೀವಂತ ಚಿತ್ರವನ್ನು ಕಟ್ಟಿಕೊಡುತ್ತವೆ.

ನಿರ್ದಶನಕ್ಕೆ : ಸಾಸಿವೆಯ ಮೇಲೆ ಸಾಗರ ಹರಿದಂತಾದ

ಅದೇ ರೀತಿ ಬಸವಣ್ಣ ಅಕ್ಕಮಹಾದೇವಿ ಮುಂತಾದವರ ವಚನಗಳಲ್ಲಿ ಕಾವ್ಯ ಶೈಲಿಯ ಒಂದು ಗುಣವಾದ ಮಾರ್ದವತೆಯನ್ನು ಗುರುತಿಸಬಹುದಾಗಿದೆ.

 ‘ನೀನೊಲಿದರೆ ಕೊರಡು ಕೊನರುವುದಯ್ಯಾ

 ನೀನೊಲಿದರೆ ಬರಡು ಹಯನಹುದಯ್ಯಾ’ ಎಂದು ಭಗವಂತನ ಭಕ್ತಿಯ ಹಿರಿಮೆಯನ್ನು ಹೊಗಳುವಲ್ಲಿ ಕೆಲವಡೆ ಲಯ, ಒಳ ಪ್ರಾಸ ಅನುಪ್ರಾಸಗಳು ಕಂಡುಬರುತ್ತಿದ್ದು ಅವರ ಅಭಿವ್ಯಕ್ತಿಯ ವಿಶಿಷ್ಟ ಗೇಯತೆಯನ್ನು ಸೂಚಿಸುತ್ತವೆ.

 ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ

 ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ

 ಮಾಡಿದನೆಂಬುದು ಮನದಲ್ಲಿ ಹಳೆದೆಡೆ

 ಏಡಿಸಿ ಕಾಡಿತ್ತು ಶಿವನ ಡಂಗುರ

 ಭಿತ್ತಿ ಇಲ್ಲದೆ ಬರೆಯಬಹುದೆ ಚಿತ್ತಾರವ

 ಭಿತ್ತಿ ಬೆಳೆಯಬಹುದೆ ಧರೆಯಿಲ್ಲದೆ’ (ಸ.ವ.ಸಂ.1.ವ.ಸಂ.233.234)

ಇತ್ಯಾದಿ ವಚನಗಳ ಸಾಲುಗಳಲ್ಲಿಯ ಪ್ರಾಸ.ಪ್ರಕಾರಗಳಿಂದಾಗಿಯೇ ಗೇಯತೆ ಕಂಡುಬರುತ್ತಿದ್ದು ಸರಾಗವಾಗಿ ಹಾಡಲು ಸಹಕಾರಿಯಾಗಿವೆ.

 ಶ್ಲೇಷಾರ್ಥದ ಬಳಕೆಯ ಕೆಲವು ವಚನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಂಡುಬರುತ್ತದೆ. ಇದರಿಂದಾಗಿ ವಚನಗಳಿಗೆ ರಮ್ಯತೆಯು ಸಿದ್ದಿಸುತ್ತದೆ.

 ವಚನದಲ್ಲಿ ನಿಮ್ಮ ನಾಮಮೃತ ತುಂಬಿ

 ನಯನದಲ್ಲಿ ನಿಮ್ಮ ಮೂರುತಿ ತುಂಬಿ

 ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ

 ಮನದಲ್ಲಿ ನಿಮ್ಮ ನೆನಹು ತುಂಬಿ

 ಕೂಡಲ ಸಂಗಮದೇವಾ ನಿಮ್ಮ ಚರಣ ಕಮಲದೊಳಗಾನುತುಂಬಿ (ಸ.ವ.ಸಂ.-1.ವ.ಸಂ.492)

   ಈ ವಚನದಲ್ಲಿ ತುಂಬಿ ಎನ್ನುವ ಪದ ಶ್ಲೇಷಾರ್ಥದಲ್ಲಿ ಬಳಕೆಯಾಗಿರುವುದನ್ನು ಕಾಣಬಹುದಾಗಿದೆ. ಮುಖವಿದೆ. ಜೊತೆಗೆ ಸಮಾಜದ ಕೆಳವರ್ಗದವರ ಕನಸು ಕಾಳಜಿ ಕುರಿತಾದ ಧ್ವನಿಗಳಿವೆ. ಹೀಗಾಗಿಯೆ ವಚನಸಾಹಿತ್ಯ ಚಲನಶೀಲತೆಗೆ ಒಗ್ಗುವಂತಿರುವುದು. ವಚನಕಾರರು ತಮ್ಮ ಕಾಲದ ಆಡುಭಾಷೆಯನ್ನೆ ವಚನಗಳನ್ನು ಕಟ್ಟುವ ಪ್ರಕ್ರಿಯಲ್ಲಿ ಬಳಸಿರುವುದು. ಆಡುಭಾಷೆಯ ಪುನರ್ ಸಂಯೋಜನೆಯಿಂದಾಗಿ ಭಾಷೆಗೆ ಒಂದು ಬಗೆಯ ಅಡಕತನದ ಸಿದ್ಧಿ ಪ್ರಾಪ್ತವಾಗುತ್ತದೆ. ಅನುಭವವನ್ನು ಹರಳುಗಟ್ಟಿಸುವ ಪ್ರಯತ್ನವೇ ವಚನಕಾರರ ಶೈಲಿಯ ಮುಖ್ಯ ಆಶಯವಾಗಿದೆ. ಭಕ್ತಿಯ ಸ್ವರೂಪವನ್ನು ನಿರೂಪಿಸುವಲ್ಲಿ ಉಪಮೆ ರೂಪಕಗಳನ್ನು ವಚನಕಾರರೂ ಬಳಸಿದ್ದಾರೆ.

 ಮುಗಿಲ ಮರೆಯ ಸೂರ್ಯನಂತೆ

 ನೆಲದ ಮರೆಯ ನಿಧಾನದಂತೆ

 ಒರೆಯ ಮರೆಯ ನಿಧಾನದಂತೆ

 ಒರೆಯ ಮರೆಯ ಅಲುಗಿನಂತೆ

 ಹೆಣ್ಣಿನೊಳಗಿನ ರಸದಂತೆ

 ಶರಣ ಶರೀರದ ಮರೆಗೊಂದು ಪರಮಪಾವನ ಮೂರ್ತಿ

 ಪರಾಪರ ತಾನು ತಾನಾಗಿರ್ದುದದೇನೆಂಬೆನಯ್ಯ

 ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ’ (ಸ.ವ.ಸಂ.9.ವ.ಸಂ.456)

ಇಂತಹ ವಚನಗಳಲ್ಲಿ ಶಬ್ದ, ಭಾವ, ಪ್ರತಿಮೆ, ಲಯ, ಪಾದರಚನೆಗಳು ಪುನಾರಾವೃತ್ತಿಯಾಗಿರುವುದನ್ನು ಕಾಣಬಹುದು. ಪುನರಾವೃತ್ತಿಯು ವಚನಗಳ ಶಾಬ್ದಿಕ ವಿನ್ಯಾಸಕ್ಕೆ ಒಮ್ಮೊಮ್ಮೆ ಕಾರಣವಾಗುತ್ತವೆ.

  ವಚನಗಳಲ್ಲಿ ಗದ್ಯದ ಸರಳತೆ ಇದೆ. ಪದ್ಯದ ಲಯವಿದೆ. ಶಿಷ್ಟ ಮತ್ತು ವ್ಯವಾಹಾರಿಕ ಭಾಷೆಯ ಶಬ್ದ ಸಾಮಗ್ರಿಗಳನ್ನು ಒಳಗೊಂಡಿದೆ ಚಿಕ್ಕ ಚಿಕ್ಕ ವಾಕ್ಯಗಳ ರಚನೆಗಳನ್ನು ಒಳಗೊಂಡಿದೆ ವಚನಕಾರರು ತಮ್ಮ ಪರಿಸರದ ರೂಪಕಗಳನ್ನು ಬಳಸಿರುವುದು ವಚನಗಳ ಸೌಂದರ್ಯಕ್ಕೆ ಕಾರಣವಾಗಿದೆ.

 ‘ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ

 ಅಗೆದು ಕಳೆದನಯ್ಯಾ ಭ್ರಾಂತಿನ ಬೇರೆ

 ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ

 ಅಖಂಡಮಂಡಲವೆಂಬ ಭಾವಿ.ಪವನವೆ ರಾಟಾಳ

 ಸುಷುಮ್ನನಾಳದಿಂದ ಉದಕವ ತಿದ್ದಿ

 ಬಸವಗಳೈವರು ಹಸಗೆಡಿಸಿಹವೆಂದು

 ಸಮತೆ ಸೈರಣೆಯೆಂಬ ಬೇಲಿಯ ನಿಕ್ಕಿ’ (ಸ.ವ.ಸಂ.2.ವ.ಸಂ.1229)

ಈ ವಚನದಲ್ಲಿ ಕೃಷಿಕರಿಗೆ ತೋಟದ ಕೃಷಿಯ ಮೂಲಕವೇ ಆಧ್ಯಾತ್ಮದ ರಹಸ್ಯವನ್ನು ಸುಲಭವಾಗಿ ಬೋಧಿಸಬಹುದೆಂಬುದನ್ನು ಅಲ್ಲಮನ ಈ ಮೆಲ್ಕಂಡ ವಚನದಲ್ಲಿಯ ರೂಪಕಗಳು ತಿಳಿಸುತ್ತವೆ. ಜನತೆಯ ಭಾಷೆಯಲ್ಲಿ ನೀಡುವ ಬೋಧನೆ ಪರಿಣಾಮಕಾರಿಯಾದದ್ದು ಎಂಬುದನ್ನು ಧ್ವನಿಸುತ್ತದೆ.

 ವಚನಗಳಲ್ಲಿ ಅನಾಯಾಸವಾಗಿ ಮೂಡುವ ಪ್ರಾಸಗಳ ವಿನ್ಯಾಸ ವಚನಗಳ ಭಾಷೆಗೆ ಅಪೂರ್ವ ಸೌಂದರ್ಯವನ್ನೊದಗಿಸಿವೆ.

 ‘ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ

 ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ

 ಛಲಬೇಕು ಶರಣಂಗೆ ಪರದೈವನೊಲ್ಲೆಂಬೆ

 ಛಲಬೇಕು ಶರಣಂಗೆ ಲಿಂಗ ಜಂಗಮ ಒಂದೆಂಬ

 ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ

 ಛಲವಿಲ್ಲದವರ ಮೆಚ್ಚ ನಮ್ಮ ಕೂಡಲ ಸಂಗಮದೇವ (ಸ.ವ.ಸಂ.-1.ವ.ಸಂ.977)

ಈ ವಚನದಲ್ಲಿಯ ಪುನರುಕ್ತಿ, ವಿವಿಧ ರೀತಿಯಲ್ಲಿ ಸಂಯೋಜನೆಗೊಂಡು ಪ್ರಾಸಗಳು, ಲಯ ಶುಧ್ದತೆ, ಶಬ್ದಗಳ ಸಮತೋಲನ. ನಿಖರತೆ, ಪದಗಳ ಆವೃತ್ತತೆ ಇತ್ಯಾದಿಗುಣಗಳು ಲಯತ್ಮಾಕ ಪದ್ಯದ ಹೃದ್ಯತೆಗೆ ಹತ್ತಿರವಾಗಿದ್ದು ಕಾವ್ಯ ಸೌಂದರ್ಯವನ್ನು ಇಮ್ಮಡಿಸಿವೆ.

   ವಚನಕಾರರು ತಮ್ಮ ಅಭಿವ್ಯಕ್ತಿಯಲ್ಲಿ ಶಿಷ್ಟ ಹಾಗೂ ವ್ಯವಾಹಾರಿಕ ಶೈಲಿಯನ್ನು ಬಳಸಿದ್ದಾರೆ. ಗ್ರಾಂಥಿಕ ಶೈಲಿಯು ಬರಹದ ಭಾಷೆಗೆ ನಿಕಟವಾಗಿದ್ದು ಔಪಾಚಾರಿಕ ಭಾಷಿಕ ಸಂದರ್ಭದಲ್ಲಿ ಬಳಕೆಯಾಗುತ್ತದೆ. ಆದರೆ ವ್ಯವಾಹಾರಿಕ ಶೈಲಿಯ ಮಾತು ಮತ್ತು ಬರವಣಿಗೆಯಲ್ಲಿ ಪರಸ್ಪರ ಆತ್ಮಿಯತೆಯನ್ನು ಉಂಟುಮಾಡುತ್ತದೆ. ಕೆಲವಡೆ ವಚನಕಾರರು ಪ್ರತಿಮೆಯ ಮೂಲಕವೇ ಮಾತಾನಾಡುತ್ತಾರೆ. ಸಸ್ಯ,ಪ್ರಾಣಿ, ಪಕ್ಷಿ, ಸಾಮಾಜಿಕ ವಸ್ತುವನ್ನು ಪ್ರತಿಮೆಯ ಮೂಲಕ ಬಿಂಬಿಸುತ್ತಾರೆ. ಮಾತನ್ನು ಪರಿಣಾಮಕಾರಿಯಾಗಿ ರೂಪಿಸುವಲ್ಲಿ, ಅಮೂರ್ತ ಅನುಭವವನ್ನು ಮೂರ್ತಗೊಳಿಸುವಲ್ಲಿ ಪ್ರತಿಮೆಗಳು ಪ್ರಮುಖ ಪಾತ್ರವಹಿಸುತ್ತವೆ. ವಚನಗಳಲ್ಲಿ ಗಾದೆ, ನುಡಿಗಟ್ಟು, ಪ್ರತಿಮೆಗಳಂತೆ ಅನುಕರಣವಾಚಕಗಳು. ಆಯಾ ಸನ್ನಿವೇಶವನ್ನು ವಿವರಿಸುವಾಗ ಜೀವನಾಡಿಯಂತೆ ಪ್ರವೇಶಿಸಿವೆ. ವಚನಗಳಿಗೆ ಜೀವಂತ ಚೆಲುವನ್ನು ತಂದುಕೊಟ್ಟಿವೆ. ಅಕ್ಕಮಹಾದೇವಿಯ ವಚನಗಳಲ್ಲಿ ಕಾಣಸಿಗುವ

 ಚಿಲಿಪಿಲಿಎಂದೋದುವ ಗಿಳಿಗಳಿರಾ

 ನೀವು ಕಾಣಿರೆ? ನೀವು ಕಾಣಿರೆ? (ಸ.ವ.ಸಂ.5.ವ.ಸಂ.174)

ಎಂಬಂತಹ ಅನುಕರಣ ವಾಚಕ ಶಬ್ದಗಳು ಕ್ರಿಯೆಯನ್ನು ಅಭಿನಯಿಸುವಂತೆ ಭಾಸವಾಗಿ ವಚನದ ಸೌಂದರ್ಯವನ್ನು ಹೆಚ್ಚಿಸಿವೆ. ಇವುಗಳು ವಚನಗಳಲ್ಲಿ ಸಹಜವಾಗಿ, ಕಲಾತ್ಮಕವಾಗಿ ಮೂಡಿಬಂದಿದೆಯೇ ಹೊರತು ಹೊರೆಯಾಗಿ ಬಂದಿಲ್ಲ. ಈ ಕಾರಣದಿಂದಲೇ ಇಂದು ವಚನಗಳನ್ನು ಕಾವ್ಯ ಸೌಂದರ್ಯದ ನೆಲೆಗಟ್ಟಿನಿಂದ ಪರಿಭಾವಿಸಲು ಸಾಧ್ಯವಾಗಿರುವುದು.

   ವಚನಕಾರರ ವಚನಗಳಲ್ಲಿ ಬದುಕಿಗೂ ಬರಹಕ್ಕೂ ನೇರ ಸಂಬಂಧವಿದೆ. ಇವರು ತಮ್ಮ ವೃತ್ತಿಯ ಬಗ್ಗೆ ಅಭಿಮಾನವಿರಿಸಿಕೊಂಡು ವೃತ್ತಿಯ ಪರಿಭಾಷೆಯಲ್ಲಿ ಅನುಭವಗಳಿಗೆ ರೂಪಕಪ್ರತಿಮೆಗಳ ರೂಪನೀಡಿ ಯಾವ ಪದಗಳು ಸಾಹಿತ್ಯದಲ್ಲಿ ಅಸ್ಪಶ್ಯವಾಗಿ ಉಳಿದುಕೊಂಡಿದ್ದವೋ ಅಂತಹ ಪದಗಳಿಗೆ ಸಾಹಿತ್ಯದ ಸಂಸ್ಕಾರ ನೀಡಿ ಜೀವಂತಿಕೆಯನ್ನು ಕಲ್ಪಿಸಿ ಮೌಲ್ಯದ ನುಡಿಗಳನ್ನಾಗಿಸಿದರು. ವಚನಗಳಲ್ಲಿಯ ಕೆಲವು ಭಾಗಗಳು ಗದ್ಯ ಪದ್ಯಗಳ ಉತ್ತಮಾಂಶಗಳನ್ನು ಒಳಗೊಂಡಿರುವುದರಿಂದ ಗೇಯತೆಯ ಗದ್ಯ ಗೀತೆಗಳಾಗಿವೆ. ವಚನಗಳಲ್ಲಿ ಅಲಂಕಾರಗಳು ಅನುಭವವನ್ನು ಅಭಿವ್ಯಕ್ತಗೊಳಿಸುವ ಅಂಗಗಳಾಗಿ ಸಹಜವಾಗಿ ಹೊರಹೊಮ್ಮಿವೆ. ಇವರು ತಮ್ಮ ರಚನೆಗಳಲ್ಲಿ ಕಟ್ಟಿಕೊಡುವ ಉಪಮಾನ. ರೂಪಕ ಸಾದೃಶ ಪ್ರತಿಮೆಗಳು ಅರ್ಥದ ಆಳವನ್ನು ಹೆಚ್ಚಿಸುತ್ತವೆ. ಪ್ರತಿಮಾವಿಧಾನ ಚಿಂತನೆ, ಭಾಷೆ, ವಚನಗಳಲ್ಲಿ ಒಂದಕ್ಕೊಂದು ನೇರ ಸಂಬಂಧ ಹೊಂದಿದ್ದು ಅನುಭವದ ಹಿನ್ನಲೆಯಲ್ಲಿ ಪ್ರತಿಮಾ ಲೋಕವನ್ನು ನಮ್ಮೆದುರಿಗೆ ಹಿಡಿದಿರಿಸಿವೆ.

 ಅಕ್ಕಮಹಾದೇವಿ, ಸತ್ಯಕ್ಕೆ ಮುಂತಾದ ವಚನಕಾರ್ತಿಯರಲ್ಲಿ ಶರಣ ಸತಿ ಲಿಂಗ ಪತಿ ಭಾವ ವ್ಯಕ್ತಗೊಂಡಿದೆ. ಅಲ್ಲಿ ಕೆಲವಡೆ ಶೃಂಗಾರದ ಪ್ರತಿಮೆ ಕಂಡುಬರುವುದನ್ನು ಗುರುತಿಸಬಹುದು.

 ಇನಿಯಂಗೆ ತವಕವಿಲ್ಲ ಎನಗೆ ಸೈರಣೆಯಿಲ್ಲ

 ಮನದಿಚ್ಚೆಯನರಿವ ಸಖಿಯರಿಲ್ಲ ಇನ್ನೇವೆನವ್ವಾ?

 ಮನುಮಥ ವೈರಿಯ ಅನುಭಾವದಲ್ಲಿ ಎನ್ನ ಮನ ಸಿಲುಕಿ ಬಿಡದು

 ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯಿ ?

 ದಿನವೃಥಾ ಹೋತಯಿತ್ತಾಗಿ ಯೌವನ ಬೀಸರವಾಗದ ಮುನ್ನ

 ಪಿನಾಕಿಯ ನೆರಹವ್ವಾ ಶಂಭುಕೇಶ್ವರನ (ಸ.ವ.ಸಂ.5.ವ.ಸಂ.964)

   ಸತಿಯು ತನ್ನ ಪ್ರಿಯತಮನ ಪ್ರೀತಿಗಾಗಿ ಹಂಬಲಿಸಿ ಹಾತೊರೆಯುತ್ತಾಳೆ. ಪ್ರಿಯತಮನು ಕಾಮವೈರಿಯಾಗಿದ್ದು ಪ್ರಿಯತಮೆಯನ್ನು ಕೂಡಿಕೊಳ್ಳಲು ಆತುರವಿಲ್ಲ. ಆತನ ನಿರ್ಮೋಹಿತನದಿಂದ ಸತಿಗೆ ದುಃಖವಾಗಿದೆ. ತನ್ನ ಬೇಗುದಿಯನ್ನು ವಿರಹ ವೇದನೆಯನ್ನು ತೋಡಿಕೊಂಡು ಮನಸು ಹಗುರ ಮಾಡಿಕೊಳ್ಳಲು ಪ್ರಯತ್ನಿಸಿದರೆ ಮನದಿಂಗಿತ ಅರಿತ ಸಖಿಯರಿಲ್ಲವಾಗಿದೆ. ಯೌವನ ವ್ಯರ್ಥವ್ಯಯವಾಗುತ್ತಿದೆ. ಅದು ಹಾಳಾಗುವುದಕ್ಕೆ ಮುನ್ನ ಪ್ರಿಯತಮ ಪಿನಾಕಿಯ ನೆರೆಹವ್ವಾ ಎಂದು ಸತ್ಯಕ್ಕ ಮೇಲಿನ ವಚನದಲ್ಲಿ ಹಂಬಲಿಸಿರುವುದನ್ನು ಕಾಣಬಹುದು. ಈ ವಚನ ವಿರಹದ ಮಧುರ ಭಾವನೆಯನ್ನು ಪ್ರಕಟಿಸುವ ಸುಂದರ ಭಾವಗೀತೆಯಂತಿದೆ. ವಿರಹದ ಹಂಬಲದಿಂದ ಕೂಡಿದ ವಿಪ್ರಲಂಭ ಶೃಂಗಾರದ ಪ್ರತಿಮೆಯಾಗಿ ರೂಪಗೊಂಡಿದ್ದು ಶರಣಸತಿ ಲಿಂಗಪತಿ ಭಾವವನ್ನು ಸುಂದರವಾಗಿ ನಿರೂಪಿಸಿದೆ.

   ಒಟ್ಟಾರೆ ಬಸವಾದಿ ಪ್ರಮಥರ ವಚನಗಳು ಸರಳ ಸ್ವಚ್ಛಂದದ, ಸಾಮಾಜಿಕ ಕಳಕಳಿಯುಳ್ಳವುಗಳಾಗಿದ್ದು ದೇಸಿನೆಲೆಯ ಸಂವೇದನೆಯನ್ನು ಹೊಂದಿವೆ. ಬದುಕಿನ ಬಗೆಗೆ ಬರೆದ ಭಾಷ್ಯದಂತಿರುವ ಅವುಗಳು ಬದುಕಿನ ನಿಜದ ನೆಲೆಯನ್ನು ಕಂಡುಕೊಳ್ಳವುಗಳಾಗಿವೆ. ವಚನ ರಚನೆಗಳಲ್ಲಂತೂ ಕೆಲವೆಡೆ ಸತ್ಯವೇ ಸೌಂದರ್ಯವಾಗುವ ಬಗೆಯ ಬೆರಗುತನವನ್ನು ಹೊಂದಿವೆ. ವಚನಗಳು ಸರಳ ನಿರೂಪಣೆಯಿಂದ ಸಂಕೀರ್ಣತೆಯವರೆಗೂ ವಿಸ್ತರಿಸಿದ್ದು. ಸಾಹಿತ್ಯಕ ವೀಮಾಂಸೆಯ ನೂರಾರು ರಚನೆಗಳನ್ನು ವಚನಗಳಲ್ಲಿ ಕಾಣಬಹುದಾಗಿದೆ.

 ಪರಾಮರ್ಶನ ಗ್ರಂಥಗಳು:

1. ಜಿ.ಎಸ್.ಶಿವರುದ್ರಪ್ಪ

ಅ. ಸಮಗ್ರ ಗದ್ಯ ಸಂಪುಟ 1

 ಪ್ರಿಯದರ್ಶಿನಿ ಪ್ರಕಾಶನ. ಬೆಂಗಳೂರು 2004 (ದ್ವಿ.ಮು)

ಆ. ಸೌಂದರ್ಯ ಸಮೀಕ್ಷೆ

 ಕಾಮಧೇನು ಪ್ರಕಾಶನ

 ಬೆಂಗಳೂರು 1999(ಚ.ಮು0

2. ಎಂ. ಚಿದಾನಂದಮೂರ್ತಿ, ವಚನ ಸಾಹಿತ್ಯ.

ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 2000 (ದ್ವಿ.ಮು)

3. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ (ಸಂ.ಜಿ.ಎಸ್.ಶಿವರುದ್ರಪ್ಪ)ಸಂ.3

ಪ್ರಸಾರಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 1976

4. ಸಿ.ನಾಗಭೂಷಣ

ಅ. ಸಕಲೇಶ ಮಾದರಸ, ಶರಣ ಪರಂಪರೆಯ ಪುಸ್ತಕ ಮಾಲೆ

 ಬಸವ ಸಮಿತಿ, ಬೆಂಗಳೂರು 2006

ಆ. ಶರಣ ಸಾಹಿತ್ಯ - ಸಂಸ್ಕೃತಿ ಕೆಲವು ಅಧ್ಯಯನಗಳು

 ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು 2000

5. ಎಸ್.ಎಂ.ಹಿರೇಮಠ, ವಚನಕಾರರ ಕಾವ್ಯ ಮೀಮಾಂಸೆ

 ಅಶ್ವಿನಿಪ್ರಕಾಶನ, ಕಲಬುರ್ಗಿ, 1999

  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...