ಹರಿಹರನ ಗಿರಿಜಾ ಕಲ್ಯಾಣ ಪ್ರಬಂಧಂ: ಕೆಲವು ಟಿಪ್ಪಣಿಗಳು
ಡಾ.ಸಿ.ನಾಗಭೂಷಣ
ಹರಿಹರನು ಕನ್ನಡ ಸಾಹಿತ್ಯದಲ್ಲಿ ವಚನಕಾರರ ನಂತರ ಬಂದ
ಅತ್ಯಂತ ಮಹತ್ವದ ಹಾಗೂ ಕ್ರಾಂತಿ ಕಾರಕ ಕವಿ. ವಚನಕಾರರ ಹೊಸ ಮೌಲ್ಯಗಳಿಂದ ಪ್ರಭಾವಿತನಾಗಿ
ಸ್ವಂತಿಕೆಯನ್ನು ಮೈಗೂಡಿಸಿಕೊಂಡು ಕಾವ್ಯಗಳಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಹೊಸ
ಸಾಹಿತ್ಯ ಪ್ರಕಾರ ವೊಂದನ್ನು ಹುಟ್ಟು ಹಾಕಿದವನು. ಭಾಷೆಯ ದೃಷ್ಟಿಯಿಂದ ಕ್ರಾಂತಿಕಾರಕ
ಬದಲಾವಣೆಯನ್ನು ಮೊದಲಿಗೆ ತಂದವನು. ರಳ , ಕುಳ, ಕ್ಷಳ
ಗಳ ಬಳಕೆಯ ವ್ಯಾಕರಣ ನಿಯಮವನ್ನು ಅನುಸರಿಸದ ಸ್ವಾತಂತ್ರ್ಯವನ್ನು
ಮೊದಲಿಗೆ ಪ್ರಾರಂಭಿಸಿದವನು. ರಗಳೆ ಎಂಬ ನೂತನ ಛಂದೋ ಸಾಹಿತ್ಯ ಪ್ರಕಾರವನ್ನು ಮೊದಲಿಗೆ ಕನ್ನಡ
ಸಾಹಿತ್ಯದಲ್ಲಿ ಹುಟ್ಟುಹಾಕಿದವನು. ದೀರ್ಘವಾದ ಕತೆಗಳ ಬದಲು ಶಿವಭಕ್ತರ ಕತೆಗಳನ್ನು ಚಿಕ್ಕದಾಗಿ
ಬರೆದು ಕಾವ್ಯದ ಗಾತ್ರ ಮತ್ತು ವಸ್ತುಗಳಲ್ಲಿ ಆವರೆವಿಗೆ ಇಲ್ಲದ ನೂತನ ಮಾರ್ಗವನ್ನು ರಚಿಸಿದ. ತನ್ನಕಾವ್ಯಗಳಲ್ಲಿ ಜನಸಾಮಾನ್ಯರ ಭಾಷೆಗೆ ಹತ್ತಿವಿದ್ದ
ಭಾಷೆಯನ್ನು ಬಳಸಿದ. ಸ್ವತಂತ್ರಮನೋಭಾವದ ಕವಿಯು
ಮನುಜರ ಮೆಲೆ ಸಾವವರ ಮೇಲೆ
ಕನಿಷ್ಟರ ಮೇಲೆಯಕ್ಕಟಾ
ತನತನಗಿಂದ್ರ ಚಂದ್ರ ರವಿ
ಕರ್ಣ ದಧೀಚಿ ಬಲೀಂದ್ರನೆಂದು ಮೇಣ್
ಅನವರತಂ ಪೊಗಳ್ದು
ಕೆಡಬೇಡಲೆ ಮಾನವ ನೀನಹರ್ನಿಶಂ
ನೆನೆ ಪೊಗಲರ್ಚಿಸೆಮ್ಮ ಕಡುಸೊಂಪಿನ ಪೆಂಪಿನ ಹಂಪೆಯಾಳ್ದನಂ ಎಂದು
ಹೇಳುವುದರ ಮೂಲಕ ಸಾಯುವ ಮನುಷ್ಯರ ಮೇಲೆ ಅವರು ಎಷ್ಟೇ ಹಿರಿಯ
ಪದವಿಯಲ್ಲಿದ್ದರೂ ಕಾವ್ಯವನ್ನು ಬರೆಯದೇ ಶಾಶ್ವತನಾದ ಶಿವನ ಮತ್ತು ಶಿವಭಕ್ತರನ್ನು ಕುರಿತು ಮಾತ್ರ
ಕಾವ್ಯವನ್ನು ಬರೆಯುತ್ತೇನೆಂದು ಪ್ರತಿಜ್ಞೆಯನ್ನು ಕೈಗೊಂಡು ಅದರಂತೆ ಕಾವ್ಯಗಳನ್ನು
ರಚಿಸಿದವನು. ಆತನ ವೈಯಕ್ತಿಕ ವಿವರಗಳ ಬಗೆಗೆ
ಹೆಚ್ಚಿಗೆ ತಿಳಿದು ಬಂದಿಲ್ಲ. ಆತನ ಕಾವ್ಯಗಳಲ್ಲಿಯ ಆಂತರಿಕ ಸಾಕ್ಷ್ಯಗಳಿಂದ
ಆತನು ಮೊದಲು ಸಂಸಾರಿಯಾಗಿದ್ದುಕೊಂಡು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಅನಂತರ
ವಿರಕ್ತನಾಗಿ ಏಕಾಂತ ಜೀವನವನ್ನು ನಡೆಸಿದನೆಂದು ಹೇಳಬಹುದು. ಆತನ ಕಾವ್ಯಗಳ ಪ್ರಕಾರ ಆತನ ಗುರು
ಪರಂಪರೆಯವರು ಹಂಪೆಯ ಶಂಕರ ದೇವ,ಅವನ
ಶಿಷ್ಯ ಮಾದಿರಾಜ,ಅವನ ಶಿಷ್ಯ ಮಾಯಿದೇವ ಇವನ ಶಿಷ್ಯನೇ ಹಂಪೆಯ ಹರಿಹರ
ದೇವ.ಮೊದಲಿಗೆ ಈತನು ಹೊಯ್ಸಳದೊರೆ ವೀರನರಸಿಂಹ ಬಲ್ಲಾಳನ ಆಸ್ಥಾನದಲ್ಲಿ ಕರಣಿಕ ವೃತ್ತಿಯಲ್ಲಿದ್ದು
ನಂತರ ನಡೆದ ಪವಾಡಮಯ ಘಟನೆಯಿಂದ ಅರಸನಿಂದ ಬೀಳ್ಕೊಟ್ಟು ಹಂಪೆಗೆ ಹೋಗಿ ನೆಲೆಸುತ್ತಾನೆ. ಹಿರಿಯ ಸಂಶೋಧಕರಾದ ಎಂ.ಚಿದಾನಂದಮೂರ್ತಿಯವರು
ಹಂಪೆಯಲ್ಲಿ ಕ್ಷೇತ್ರಕಾರ್ಯ ಮಾಡಿ ಹರಿಹರನ ವಾಸಸ್ಥಳ
ಹಾಗೂ ಅವನು ಪ್ರತಿನಿತ್ಯವು ಹೂವುಗಳನ್ನು ಕಿತ್ತು ವಿರೂಪಾಕ್ಷನನ್ನು ಅರ್ಚಿಸುತ್ತಿದ್ದ
ಹೂದೋಟವನ್ನು ಗುರುತಿಸಿದ್ದಾರೆ. ಹಂಪೆಯ ವಿರೂಪಾಕ್ಷನನ್ನು ತನ್ನ ಆರಾಧ್ಯ ದೈವವನ್ನಾಗಿ ಮಾಡಿಕೊಂಡು
ಕಾವ್ಯಗಳುದ್ದಕ್ಕೂ ಸ್ತುತಿಸುತ್ತಾನೆ. ಈತನು 106 ರಗಳೆಗಳನ್ನು , ಗಿರಿಜಾ ಕಲ್ಯಾಣವೆಂಬ ಚಂಪೂ ಕೃತಿಯನ್ನು, ಪಂಪಾಶತಕ ಹಾಗೂ ರಕ್ಷಾ ಶತಕಗಳೆಂಬ ಶತಕಗಳನ್ನು ಹಾಗೂ
ಮುಡಿಗೆಯ ಅಷ್ಟಕ ಕೃತಿಗಳನ್ನು ರಚಿಸಿದ್ದಾನೆ.
ಈತ ಹೊಯ್ಸಳ ಎರಡನೆಯ ವೀರಬಲ್ಲಾಳನ (1173-1220)
ಆಳಿಕೆಯಲ್ಲಿದ್ದ ಬಗೆಗಿನ ಒಂದು ಆಧಾರದಿಂದ ಈತನ ಕಾಲವನ್ನು ಸು. 1216 ಎಂದಿಟ್ಟುಕೊಳ್ಳ ಲಾಗಿದೆ.
ದ್ವಾರಸಮುದ್ರದ ಬಲ್ಲಾಳರಾಜನ ಆಸ್ಥಾನದಲ್ಲಿ ಈತ ಕೆಲಕಾಲ ಸೇವೆ ಕೈಕೊಂಡಿದ್ದ. ಬಲ್ಲಾಳನ ಮಂತ್ರಿ
ಕೆರೆಯ ಪದ್ಮರಸನ ಸಂಪರ್ಕ ಈತನಿಗಿತ್ತು. ಹರಿಹರ
ಆತ್ಮಾಭಿಮಾನಿಯೂ ನಿಸ್ಪೃಹಿಯೂ ಆದ ಕವಿ. ‘ಪೋಗೆನೆ ಪೋಪ ಬಾರೆಲವೊ ಬಾರೆನೆ ಜೀಯ ಹಸಾದವೆಂದು
ಬೆಳ್ಳಾಗುತೆ ಬರ್ಪ ಮಾಣೆಲವೊ ಸುಮ್ಮನಿರೆಂದೊಡೆ ಸುಮ್ಮನಿರ್ಪ ಮತ್ತಾಗಳೆ ಝಂಕಿಸಲ್ ನಡುಗಿ ಬೀಳುವ
ಸೇವೆಯ ಕಷ್ಟವೃತ್ತಿಯಂ ನೀಗಿದೆನೆಂದು ನಿಮ್ಮ ದೆಸೆಯಿಂ ಕರುಣಾಕರ ಹಂಪೆಯಾಳ್ದನೆ’ ಎಂಬ ಮಾತುಗಳಿಂದ
ಈತ ರಾಜಸೇವೆಯನ್ನು ಧಿಕ್ಕರಿಸಿದನೆಂದು ತಿಳಿದುಬರುತ್ತದೆ. ಹೀಗೆ ರಾಜಾಶ್ರಯ ವನ್ನು ತ್ಯಜಿಸಿದ
ಅನಂತರ ಈತ ಹಂಪೆಗೆ ಮರಳಿ ಅಲ್ಲಿಯೇ ನೆಲಸಿದ.
ಈ ಕೃತಿಯ ಕೊನೆಯಲ್ಲಿ “ ಗಿರಿಜಾಕಲ್ಯಾಣ ಕಥಾಕಾವ್ಯಮಂ ಹಂಪೆಯ ಮಾದರಸ ಕಾರುಣ್ಯದ ಶಿಶುವಪ್ಪ
ಹಂಪೆಯ ಹರಿಹರಂ ಬಿನ್ನಪಂಗೆಯ್ದ ನೀ ಪ್ರಬಂಧಮಂ” ಎಂದು ಹೇಳಿರುವನು. ಈ ಕೃತಿಯ ಪ್ರತೀ ಆಶ್ವಾಸದ ಪ್ರಾರಂಭದಲ್ಲಿಯೂ
ಮತ್ತು ಕೊನೆಯಲ್ಲಿಯೂ ಹರಿಹರನ ಇಷ್ಟದೈವವಾದ ಹಂಪೆಯ ವಿರೂಪಾಕ್ಷನ ಸ್ತೋತ್ರದ ಪದ್ಯವಿದೆ, ಪದ್ಮಣಾಂಕ, ವಿರೂಪಾಕ್ಷ ಪಂಡಿತ, ನಂಜುಂಡ,ಶಾಂತಲಿಂಗದೇಶಿಕ(ಹರೀಶ್ವರರು ಗಿರಿಜೆಯ ಕಲ್ಯಾಣವಂ ಪೇಳಿ), ಸಿದ್ಧನಂಜೇಶ (ವರ್ಣಕ ಕವಿತಾವಿಧಾರ ವಸ್ತುಕವಿ ವಕ್ತಾರ) ಶಂಕರ ದಾಸಿಮಯ್ಯನ ಕಾವ್ಯದ ಕರ್ತೃ ಮಲ್ಲಿಕಾರ್ಜುನ
( ಗಿರಿಸುತೆಯ ಕಲ್ಯಾಣದೇಳ್ಗೆಯ ನೊರೆವ) ಮೊದಲಾದವರು
ತಮ್ಮ ಕಾವ್ಯಗಳಲ್ಲಿ ಹರಿಹರನಿಗೆ ಸಂಬಂಧಿಸಿದ ಕೆಲವು ಸಂಗತಿಗಳನ್ನು ಮತ್ತು ಜೊತೆಗೆ ಗಿರಿಜಾಕಲ್ಯಾಣವು ಹಂಪೆಯ ಹರಿಹರನದ್ದೆಂಬ ವಿವರಗಳನ್ನು ನಿರೂಪಿಸಿದ್ದಾರೆ. ರಾಘವಾಂಕನು ಹರಿಹರಮಹತ್ವ
ಎಂಬ ಕೃತಿಯನ್ನು ಬರೆದಿದ್ದು, ಇದು
ಹರಿಹರನ ಜೀವನ ಸಾಧನೆಗಳಿಗೆ ಸಂಬಂಧಿಸಿದ ಮಹತ್ವದ ಕೃತಿಯಾಗಿದ್ದಿರಬೇಕು.
ಆದರೆ ದುರದೃಷ್ಟ ವಶಾತ್ ಈ ಗ್ರಂಥ ಉಪಲಬ್ಧವಿಲ್ಲ. ಆದರೆ ಆ ಗ್ರಂಥದ ಕೆಲವಂಶಗಳನ್ನು ಸಿದ್ಧನಂಜೇಶ
ತನ್ನ ರಾಘವಾಂಕಚಾರಿತ್ರದಲ್ಲಿ ಕೆಲಮಟ್ಟಿಗೆ ನಿರೂಪಿಸಿದ್ದಾನೆ. ಈ ಎಲ್ಲ ಕೃತಿಗಳಿಂದ ಹರಿಹರನ
ಜೀವನದ ಪೂರ್ವಾರ್ಧದ ಕೆಲವು ಘಟನೆಗಳು ತಿಳಿಯುತ್ತವೆಯಾದರೂ ಆತನ ಜೀವನದ ಉತ್ತರಾರ್ಧ ಹಾಗೂ ಅವನು
ತನ್ನ ಕೊನೆಯ ದಿನಗಳನ್ನು ಹೇಗೆ ಕಳೆದ ಈ ಮೊದಲಾದ ಸಂಗತಿಗಳು ಸ್ಪಷ್ಟವಿಲ್ಲ.
ಕನ್ನಡದಲ್ಲಿ ಮೊಟ್ಟಮೊದಲಿಗೆ ಪೂರ್ಣ ಪ್ರಮಾಣದಲ್ಲಿ ಗಿರಿಜಾ ಕಲ್ಯಾಣದ ಕಥೆ ದೊರೆಯುವುದು ಹರಿಹರನಲ್ಲಿ ಮಾತ್ರ.
ಗಿರಿಜಾಕಲ್ಯಾಣ ಪ್ರೌಢಚಂಪೂ ಪರಂಪರೆಯಲ್ಲಿ ರಚಿತವಾದ
ಕಾವ್ಯ. ಇದರಲ್ಲಿ ಹತ್ತು ಆಶ್ವಾಸಗಳಿವೆ. ಕಾಳಿದಾಸ ಕವಿಯ ಕುಮಾರಸಂಭವ ಈ ಕಾವ್ಯಕ್ಕೆ ಮೂಲ
ಸಾಮಗ್ರಿ. ಆ ಕಥಾವಸ್ತುವಿನಲ್ಲಿ ಹರಿಹರ ಹೊಸ ಅರ್ಥ ಹೊರ ಹೊಮ್ಮುವಂತೆ ನವೀನ ದೃಷ್ಟಿಯ
ಕಾವ್ಯವನ್ನು ರಚಿಸಿದ್ದಾನೆ. ಹಿಮವಂತನ ಪತ್ನಿ ಮೇನೆಯ ತಪಸ್ಸಿಗೆ ಮೆಚ್ಚಿದ ಆದಿಶಕ್ತಿಯು
ಅವಳಿಗೆ ಮಗಳಾಗಿ ಜನಿಸಿ ತಪಶ್ಯಕ್ತಿಯಿಂದ ತಪೋನಿರತನಾದ ಶಿವನನ್ನು ಒಲಿಸಿಕೊಂಡು ಮದುವೆಯಾದ ಕಥೆಯೇ
ಗಿರಿಜಾಕಲ್ಯಾಣ ಕಾವ್ಯದ ವಸ್ತು. ಕಾವ್ಯದ
ಹೆಸರೇ ಸೂಚಿಸುವಂತೆ, ಇದರಲ್ಲಿ ಗಿರಿಜೆಯ ವಿವಾಹ
ಪ್ರಧಾನ ಅಂಶವಾಗಿದೆ. ಹರನು ಪುರುಷ; ಗಿರಿಜೆ
ಪ್ರಕೃತಿ. ಪ್ರಕೃತಿ-ಪುರುಷರ ಮಿಲನದಿಂದ ಲೋಕಕಲ್ಯಾಣ ಎಂಬ ಉದಾತ್ತದೃಷ್ಟಿ ಈ ಕಾವ್ಯದಲ್ಲಿ
ಮೂಡಿಬಂದಿದೆ. ಈ ಕಾವ್ಯ ಪಾಂಡಿತ್ಯ
ಪೂರ್ಣವಾಗಿದೆ;
ರಸವತ್ತಾಗಿದೆ. ಸಂಭಾಷಣೆಯ ಶೈಲಿ ಕಾವ್ಯಕ್ಕೆ ನಾಟಕೀಯ
ಕಳೆ ತಂದಿದೆ. ಗದ್ಯವನ್ನು ಹೊಸ ಧಾಟಿಯಲ್ಲಿ ಬಳಸಲಾಗಿದೆ. ಕಂದಗಳು ಅರ್ಥವತ್ತಾಗಿ ಸ್ವಚ್ಛಂದವಾಗಿ
ಹರಿದು ಬಂದಿವೆ. ಪಾರ್ವತಿಯ ಬಾಲ್ಯ, ಶಿವಭಕ್ತಿ, ಸೌಂದರ್ಯಗಳು, ಕಾಮದಹನ, ರತಿವಿಲಾಪ, ಋತುಗಳು, ಉಗ್ರತಪಸ್ಸು, ವಟುವೇಷದ
ಶಿವ,
ಹರಗಿರಿಜೆ ಯರ ವಿವಾಹ-ಈ ವರ್ಣನೆಗಳು ಸುಂದರವೂ
ಪರಿಣಾಮಕಾರಿಯೂ ಆಗಿವೆ. ಶೃಂಗಾರ, ಕರುಣ, ಭಕ್ತಿಭಾವಗಳು ಮನೋಹರವಾಗಿ ಚಿತ್ರಿತ ವಾಗಿವೆ. ರಗಳೆಗಳ
ಕವಿ ಎಂದು ಪ್ರಸಿದ್ಧನಾದ ಭಕ್ತಕವಿ ಹರಿಹರನ "ಗಿರಿಜಾ ಕಲ್ಯಾಣ"ಒಂದು ಚಂಪೂಕಾವ್ಯ. ರಗಳೆಗಳಲ್ಲಿ
ಪ್ರಕಾಶಗೊಂಡ ಈ ಮಹಾಕವಿಯ ಪ್ರತಿಭೆಯನ್ನು, ಪಾಂಡಿತ್ಯವನ್ನು, ಶ್ರೇಷ್ಠತೆಯನ್ನು, ಔನ್ನತ್ಯವನ್ನು ಸಹಿಸದೆಯೋ
ಕುಚೋದ್ಯಕ್ಕಾಗಿಯೊ "ರಗಳೆಯಕವಿ" ಎಂದು Drಕೊಂಡವರಿಗೆ ಮುಖಭಂಗ ವಾಗುವಂತಹ, ಪಾಂಡಿತ್ಯಪೂರ್ಣವಾದ, ಮಹಾಕಾವ್ಯದ ಸಕಲ ಲಕ್ಷಣಗಳನ್ನೂ ಗಮನದಲ್ಲಿ ಇರಿಸಿಕೊಂಡು
ಚಂಪೂವಿನಲ್ಲಿ ಈ ಉತ್ತಮ ಕಾವ್ಯವನ್ನರ್ಪಿಸಿ ಕನ್ನಡ ಕಾವ್ಯನಿಧಿಗೆ, ಶೈವಸಾಹಿತ್ಯಪ್ರಭೆಗೆ ಅಪೂರ್ವ ತೇಜವನ್ನು, ಕೀರ್ತಿಯನ್ನು ತಂದಿತ್ತಿದ್ದಾನೆ. ಹರಿಹರನು ಗಿರಿಜಾಕಲ್ಯಾಣವನ್ನು ಮೊತ್ತಮೊದಲಿಗೆ ರಚಿಸಿದ್ದರಿಂದಾಗಿಯೇ
ಗಿರಿಜೆಯ ಶೈಶವದ ವರ್ಣನೆ , ಗಿರಿಜೆಯ ಮದುವೆಯ ಮಂಟಪ ಮುಂತಾದ ಪ್ರಸಂಗಗಳಲ್ಲಿ ವಿಸ್ತಾರವಾದ ವರ್ಣನೆಗಳನ್ನು
ತರಲು ಸಾಧ್ಯವಾಗಿರುವುದು. ಗಿರಿಜಾಕಲ್ಯಾಣದ ಕಥಾಕ್ಷೇತ್ರ ವಿಸ್ತಾರವಾಗಿರುವುದರಿಂದ ರಗಳೆಯ ಕಾವ್ಯದ ಕಟ್ಟು ನಿಟ್ಟುಗಳ ಭಯವೂ ಇಲ್ಲದಿರುವುದರಿಂದ
ವಿಸ್ತಾರವಾದ ವರ್ಣಣೆಗಳನ್ನು ಬಳಸಲು ಸಾಧ್ಯವಾಗಿದೆ. ಹರಿಹರನ ಕಾವ್ಯೋನ್ನತಿಯನ್ನು ಅವನ
ರಗಳೆಗಳಿಂದಲೇ ಮಾತ್ರವೇ ಅಳೆಯಲಾಗದು ಎಂಬ ಎಚ್ಚರಿಕೆಯನ್ನು ನೀಡಬಲ್ಲ ಸಾಮರ್ಥ್ಯವುಳ್ಳ ಕೃತಿಯಾಗಿ
ಗಿರಿಜಾ ಕಲ್ಯಾಣ ಕೃತಿಯು ಕಂಡು ಬಂದಿದೆ.
ಗಿರಿಜಾ ಕಲ್ಯಾಣವನ್ನು ಗುರುಕರುಣದಿಂದ,ಪಂಪಾಪುರದರಸ ವಿರೂಪಾಕ್ಷನಾಜ್ಞೆಯಿಂದ ಭಕ್ತಿಯಿಂದ ಮಹೋತ್ಸಾಹದಿಂದ
ವಿಸ್ತಾರವಾಗಿ ಹೇಳುತ್ತಿರುವುದಾಗಿ ಕವಿಯೇ ಹೇಳಿಕೊಂಡಿದ್ದಾನೆ. ಅಂದರೆ ಈ ಕೃತಿಯ ರಚನೆಗೆ ಯಾವ
ರಾಜಾಸ್ಥಾನ,
ಪಾರಿತೋಷಕಗಳ ಒತ್ತಡಗಳಿಲ್ಲ. ಆಜ್ಞೆ ಈಶ್ವರನದು, ಕರುಣೆ ಗುರುವಿನದು, ಉತ್ಸಾಹ
ಕವಿಯದ್ದಾಗಿದೆ.
ಇಲ್ಲೊಂದು ಗಮನಿಸಬೇಕಾದ ಅಂಶವೆಂದರೆ ಚಂಪೂವಿನಲ್ಲೂ
ಹರಿಹರನು ಬಳಸಿರುವ ಪದಗಳ ಸರಳತೆ ಸುಲಲಿತವಾಗಿ,ಸರಾಗವಾಗಿ, ಹೆಚ್ಚು ಎಡರಿಲ್ಲದೆ,ರಗಳೆಗಳಲ್ಲಿ ಯಾವೊಂದು ಉತ್ಸಾಹದಿಂದ ಸಹೃದಯಿಯ ಮನವನ್ನು
ಸಂಪೂರ್ಣವಾಗಿ ಸೆಳೆದು ನಿರರ್ಗಳವಾಗಿ ಓದಿಸಿಕೊಂಡು ಹೋಗುವುದು.
ಒಂದು ಸರಳ ಶೈಲಿಯ ದರ್ಶನ, ಅನುಭವಾನಂದ ಓದುಗನಲ್ಲಿ
ಉಂಟಾಗುವುದು.
ಮೊದಲು ನಮ್ಮ ಪುರಾಣಗಳಲ್ಲೂ ಪಾರ್ವತೀಪರಮೇಶ್ವರರ ವಿವಾಹದ
ಕಥೆ ನಿರೂಪಿತವಾಗಿದ್ದು, ಜನಸಾಮಾನ್ಯರಿಗೂ
ಜನಜನಿತವಾದುದಾಗಿದೆ. ಗಿರಿಜಾ ಕಲ್ಯಾಣದ ಕಥೆಯು ಸಂಸ್ಕೃತ ಸಾಹಿತ್ಯದಲ್ಲಿ ಮೊದಲಿಗೆ ಕಾಳಿದಾಸನ
ಕುಮಾರ ಸಂಭವದಲ್ಲಿ ಕಾಣಸಿಗುತ್ತದೆ. ಶಿವಪುರಾಣಗಳಾದ ಪದ್ಮಪುರಾಣ, ಲಿಂಗಪುರಾಣ,ಸ್ಕಾಂದಪುರಾಣ,ಸೌರಪುರಾಣಗಳಲ್ಲಿ
ಕಂಡು ಬರುತ್ತದೆ. ಹರಿಹರನ ಗಿರಿಜಾ ಕಲ್ಯಾಣ ಕೃತಿಗೆ ಕಾಳಿದಾಸನ ಕುಮಾರಸಂಭವವೇ ಮೂಲ ಆಕರ. ಕವಿಯು ಸುಮ್ಮನೇ
ಅನುವಾದಿಸಿಲ್ಲ. ಕತೆಗೆ ಸಂಬಂಧಿಸಿದಂತೆ ಮೂಲದಲ್ಲಿಲ್ಲದ ಕೆಲವು ಸನ್ನಿವೇಶಗಳನ್ನು ಅಳವಡಿಸಿದ್ದಾನೆ.
ಮೂಲದ ಕೆಲವು ಸನ್ನಿವೇಶಗಳನ್ನು ಮಾರ್ಪಡಿಸಿದ್ದಾನೆ. ಕೃತಿಯು ಕುಮಾರ ಸಂಭವಕ್ಕೆ ಋಣಿಯಾಗಿದ್ದರೂ
ಅದು ತನ್ನತನವನ್ನು ಉಳಿಸಿಕೊಂಡಿದೆ. ಕುಮಾರಸಂಭವದ ಕಥೆ ಹಿಮಾಲಯ ಪರ್ವತದಲ್ಲಿ ನಡೆದರೇ, ಹರಿಹರನಲ್ಲಿ ಗಿರಿಜಾ ಕಲ್ಯಾಣವು ಹಂಪೆಯ
ಪಂಪಾಕ್ಷೇತ್ರದಲ್ಲಿ ನಡೆದಿದೆ. ಇದು ಕವಿಯ ನಾಡಿನ ಪ್ರೇಮವನ್ನು
ಸೂಚಿಸುತ್ತದೆ. ಹರಿಹರನಲ್ಲಿ ಕತೆ ಶಿವಪಾರ್ವತಿಯರ ಮದುವೆಗೆ ಮುಕ್ತಾಯಗೊಂಡರೆ, ಕಾಳಿದಾಸನಲ್ಲಿ ಕುಮಾರನ ಜನನ ಹಾಗೂ ತಾರಕಾಸುರನ
ಸಂಹಾರದವರೆಗೂ ಮುಂದುವರೆದಿದೆ. ಡಿ.ಎಲ್ ನರಸಿಂಹಾಚಾರ್ಯರು
ಹೇಳಿರುವ ವಾಕ್ಯಗಳು ಸ್ಮರಣೆಗೆ ಬಾರದಿರವು. `ಹರಿಹರನು
ಹಳೆಯ ಕಥೆಯನ್ನೇ ತೆಗೆದುಕೊಂಡಿದ್ದರೂ ತನ್ನದೇ ಆದ ಕೆಲವು ಮಾರ್ಪಾಡುಗಳನ್ನು
ಅಲ್ಲಲ್ಲಿ ಮಾಡಿದ್ದಾನೆ. ಕೆಲವಡೆ ಕಾಳಿದಾಸನ ಪ್ರಭಾವ ಇರುವಂತೆ ಕಾಣುತ್ತದೆ. ಆದರೂ ಅವನ ಕಾವ್ಯ
ನವ್ಯ ವಾಗಿದೆ. ಇದಕ್ಕೆ ಕಾರಣ ಹೊಸ ಸಂದರ್ಭಗಳ ಸೃಷ್ಟಿ ಮತ್ತು ಕಥೆ ಹೇಳುವ ಹೊಸ ರೀತಿ. ಹರಿಹರನು ಶಿವಪಾರಮ್ಯವನ್ನು ಸಾರುವ ಪುರಾಣಗಳಲ್ಲಿನ ವಸ್ತು,
ವಿವರಗಳನ್ನು ಆಯ್ಕೆ ಮಾಡಿಕೊಂಡಿದ್ದರೂ ಕಾಳಿದಾಸನ ಕುಮಾರಸಂಭವವನ್ನೇ ಮೇಲ್ಪಂಕ್ತಿಯಾಗಿಟ್ಟು ಕೊಂಡು
ಅನುಕರಣೆಯಾಗದಂತೆ ಎಚ್ಚರವಹಿಸಿ, ಅಗತ್ಯವೆನಿಸಿದ ಕಡೆ ಕುಮಾರಸಂಭವಕ್ಕಿಂತ ಭಿನ್ನವಾಗಿ ಅಥವಾ ಕಥಾನುಕ್ರಮವನ್ನು
ಬದಲಾಯಿಸಿ, ಕೆಲವೆಡೆ ತನ್ನ ಸೋಪಜ್ಞತೆಯ ಮೂಲಕ ಗಿರಿಜಾಕಲ್ಯಾಣವನ್ನು ಸಾಧ್ಯವಾದಷ್ಟು
ಮಟ್ಟಿಗೆ ಸ್ವತಂತ್ರ ಮಹಾಕಾವ್ಯವಾಗಿಸುವ ಪ್ರಯತ್ನವನ್ನು
ಮಾಡಿದ್ದಾನೆ. ಹರಿಹರನು ಕುಮಾರ ಸಂಭವ ಮತ್ತು ಶಿವಪುರಾಣಗಳ ಆಧಾರದ ಮೇಲೆ ಈ ಕೃತಿಯನ್ನು ರಚಿಸಿದ್ದರೂ
ಅವುಗಳ ಪಡಿನೆಳಲಾಗದೆ ತನ್ನದೇ ಆದ ಸ್ವಂತ ದೃಷ್ಟಿಕೋನದ ಮೂಲಕ ಗಿರಿಜೆಯ ಸಂಕಲ್ಪ, ಸಿದ್ಧಿ, ಸಾಧನೆಯನ್ನು
ನಿರೂಪಿಸಿ ಆಕೆಯ ಮಹೋನ್ನತಿಯನ್ನು ತನ್ನ ಕಥನ ಕಲೆಯ ಮೂಲಕ
ಸಾರುವುದೇ ಆಗಿದೆ. ʻಗಿರಿಜ ಕಲ್ಯಾಣ'ವು ಗಿರಿಜೆಯ ಜನನ, ಬಾಲ್ಯ, ಯೌವನಗಳಿಂದ
ಮೆರೆದು ಆಕೆಯ ಹಾಗೂ ಶಿವನ ಕಲ್ಯಾಣದಲ್ಲಿ ಮಂಗಳಗೊಳ್ಳುವುದು ಎಂಬುದಂತೂ ಸುಸ್ಪಷ್ಟ. ಇದರಲ್ಲಿ
ಮುಖ್ಯವಾಗಿ ಗಮನವನ್ನು ಸೆಳೆಯುವಂತಹ ಸಂಗತಿ ಎಂದರೆ ಗಿರಿಜೆ ದೈವಸಂಭೂತೆಯಾಗಿದ್ದರೂ ಮಾನವ ಸಹಜವಾದ
ಅನೇಕ ಗುಣಗಳನ್ನು ಹೊಂದಿದ್ದುದು. ಇದು ಪ್ರೌಢಕಾವ್ಯಗಳ ಸಾಲಲ್ಲಿ ಸೇರಿ ಬೆಳಗುತ್ತಿದ್ದಾಗ್ಯೂ ಕೂಡ
ಹರಿಹರನ ಕಥನಶೈಲಿಯ ಪರಿಚಯ, ದರ್ಶನ
ಉಂಟಾಗದಿರದು. ಕಥಾವಸ್ತು ಪುರಾಣಗಳಲ್ಲಿ ಕಂಡು ಬರುತಿದ್ದರೂ, ಇತರೆ ಕವಿಗಳೂ ಅದನ್ನು ಸ್ವೀಕರಿಸಿ
ಆಯ್ದು ಒಡಂಬಡಿಸಿ ತಮ್ಮದೇ ಆದ ಶೈಲಿಗಳಲ್ಲಿ ರೀತಿಯಲ್ಲಿ ಶ್ರೇಷ್ಠ
ಕೃತಿಗಳನ್ನು ರಚಿಸಿ ಕೀರ್ತಿಪತಾಕೆಯನ್ನು ಹಾರಿಸಿದ್ದರೂ ಹರಿಹರನು ಅಲ್ಲಲ್ಲಿ ಅಲ್ಪ
ವ್ಯತ್ಯಾಸಗಳನ್ನು ಸೇರ್ಪಡೆಯನ್ನು ಸ್ವಂತಿಕೆಯನ್ನು ಜಾಣ್ಮೆಯನ್ನು ಸಂದರ್ಭೋಚಿತವಾಗಿ ಅಳವಡಿಸಿ, ಹೊಸ ತಿರುವು ನೀಡಿ, ಕಾವ್ಯವು ನವ್ಯವಾಗಿ ಪರಿಣಮಿಸುವಂತೆ ನಿರೂಪಿಸಿದ್ದಾನೆ.
`ಗಿರಿಜಕಲ್ಯಾಣ'ವು ಹರಿಹರನ
ರಗಳೆಗಳಿಗಿಂತಲೂ ಮೊದಲಲ್ಲಿಯೇ ರಚಿತವಾದ ಕೃತಿ ಎಂಬುದು ಕೆಲವರ ವಾದ, ಅಲ್ಲವೆಂಬುವವರೂ ಇಲ್ಲದಿಲ್ಲ. ಕೆಳಗಿನ ಲೇಖನಗಳನ್ನು
ಅವಲೋಕಿಸಬಹುದು,
1.ಇವನ ದೊರೆತ
ಗ್ರಂಥಗಳೆಂದರೆ ಪಂಪಾಶತಕ, ರಕ್ಷಾಶತಕ, ಮುಡಿಗೆಯ ಅಷ್ಟಕ, ಗಿರಿಜಾಕಲ್ಯಾಣ ಮತ್ತು ಶಿವಗಣ ರಗಳೆಗಳು. ಇವುಗಳ ರಚನೆಯ ಕ್ರಮದ
ಬಗ್ಗೆ ಚರ್ಚೆ ನಡೆದಿದೆ. ಬಹುಶಃ ಇಂದಿನ ಎಲ್ಲಾ ಅಭ್ಯಾಸಿಗಳೂ ಒಪ್ಪುವಂತೆ ಮೊದಲಿನ ನಾಲ್ಕು
ಗ್ರಂಥಗಳು ಅದರಲ್ಲಿಯೂ `ಗಿರಿಜಾಕಲ್ಯಾಣ'ವೂ ಹರಿಹರನ ಕಾವ್ಯ ನಿರ್ಮಾಣದ ಮೊದಲ ಹಂತದಲ್ಲಿ ಹುಟ್ಟಿದ್ದವೆಂದೂ
ಶಿವಶರಣರ ರಗಳೆಗಳು ಎರಡನೆಯ ಹಂತದಲ್ಲಿ ಹುಟ್ಟಿದುವೆಂದೂ ಸ್ಥೂಲವಾಗಿ ಹೇಳಬಹುದು. ಎಂದು ರಂಶ್ರೀ. ಮುಗುಳಿಯವರ ಅಭಿಪ್ರಾಯ.
2.ಈ ಕಾವ್ಯವನ್ನು ಕವಿ
ಏತಕ್ಕೆ ಬರೆದನೆಂಬುದನ್ನು ಹೇಳುವ ಒಂದು ಕಥೆ ಎಲ್ಲರಿಗೂ ಗೊತ್ತು. ರಗಳೆಯ ಮಟ್ಟಿನಲ್ಲಿ ಹರಿಹರ ಕಾವ್ಯ ಬರೆದದ್ದರಿಂದ ಅವನನ್ನು
ಪಂಡಿತ ಕವಿಗಳು "ರಗಳೆಯ ಕವಿ" ಎಂದು ಹೀಯಾಳಿಸಿದರಂತೆ. ಅಪಹಾಸ್ಯಕ್ಕೆ ಗುರಿಯಾದನಲ್ಲ
ಎಂದು ಮರುಗಿ ಕೆರಳಿ ಗಿರಿಜಾ ಕಲ್ಯಾಣವನ್ನು ಚಂಪೂ ಶೈಲಿಯಲ್ಲಿ ಬರೆದು ತನ್ನ ಸಾಮರ್ಥ್ಯವನ್ನು
ಅವನು ಪ್ರಕಟಿಸಿದನಂತೆ. ಈ ಕಥೆಯನ್ನು ನಿಜವೆಂದು ಭಾವಿಸಿದರೆ ರಗಳೆಗಳನ್ನು ಬರೆದ ಮೇಲೆಯೇ ಕವಿ
ಗಿರಿಜಾಕಲ್ಯಾಣವನ್ನು ಬರೆದನೆಂದು ಹೇಳಬೇಕಾಗುತ್ತದೆ. ಆದರೆ ಇದಕ್ಕೆ ಬೇರೆ ಯಾವ ಆಧಾರವೂ ಸಿಕ್ಕುವುದಿಲ್ಲ.
ಈಗಿನ ಮಟ್ಟಿಗೆ ಗಿರಿಜಾಕಲ್ಯಾಣವನ್ನು ಮೊದಲನೆಯ ಕೃತಿಯೆಂದು ಭಾವಿಸಬಹುದು ಎಂದು
ಡಿಎಲ್.ನರಸಿಂಹಾಚಾರ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
3. ಆಧಾರಗಳಿಂದ ಹರಿಹರನು
ಒಂದನೆಯ ಆಳಿಕೆಯಲ್ಲಿಯೋ ಅವನ ಮಗನಾದ ಎರಡನೆಯ ವೀರಬಲ್ಲಾಳ ನಲ್ಲಿಯೋ (1173-1220)ಕೆಲವು ವರ್ಷ
ಕರಣಿಕನಾಗಿದ್ದು ಹಂಪೆಗೆ ಬಂದು ಅಲ್ಲಿ ನೆಲೆಸಿ 1200ರ ಸುಮಾರಿಗೆ ಪಂಪಾಶತಕ, ಗಿರಿಜಾಕಲ್ಯಾಣಗಳನ್ನು ರಚಿಸಿ ಆಮೇಲೆ ರಗಳೆಗಳನ್ನು
ಬರೆದು ಎರಡನೆಯ ನರಸಿಂಹನ ಆಳಿಕೆಯ ಪ್ರಾರಂಭದಲ್ಲಿ ವಿರೂಪಾಕ್ಷನಲ್ಲಿ ಐಕ್ಯವಾದಂತೆ ಊಹಿಸಬಹುದು.
ಈ ಹಿನ್ನೆಲೆಯಲ್ಲಿ ಗಿರಿಜಾ ಕಲ್ಯಾಣವು ಹರಿಹರನ ಕಾವ್ಯ ನಿರ್ಮಾಣದ
ಮೊದಲ ಹಂತದಲ್ಲಿ ಹುಟ್ಟಿದುದು ಹಾಗೂ ಶಿವಶರಣರ ರಗಳೆಗಳು ಎರಡನೇ ಹಂತದಲ್ಲಿ ಹುಟ್ಟಿದುದವು ಎಂದು
ನಿರ್ಣಯಿಸ ಬಹುದಾಗಿದೆ. ಇದಕ್ಕೆ ಕಾರಣವನ್ನು ನಾವು ಈ ರೀತಿ ಕಂಡುಕೊಳ್ಳಬಹುದಾಗಿದೆ. ಕವಿ
ಹರಿಹರನು ವಚನಕಾರರಿಗಿಂತ ಹಿಂದಿನ ಕನ್ನಡ ಸಾಹಿತ್ಯ ಪರಂಪರೆಯೊಂದಿಗೆ ಸಂಬಂಧಿಸಿಕೊಳ್ಳುವುದು, ಆ ಪರಂಪರೆಯ ಅರಿವನ್ನಿರಿಸಿಕೊಳ್ಳುವುದು ಮತ್ತು ತನ್ನ
ಪ್ರತಿಕ್ರಿಯೆಗಳನ್ನು ದಾಖಲೆ ಮಾಡುವುದಾಗಿತ್ತು. ಈ ಕಾರಣದಿಂದ ಗಿರಿಜಾ ಕಲ್ಯಾಣವನ್ನು ಬರೆಯುವುದರ
ಮೂಲಕ ತನಗಿಂತ ಹಿಂದಿನ ಚಂಪೂ ಪರಂಪರೆಯಲ್ಲಿ ಬರೆಯಬಲ್ಲೆನೆಂಬುದನ್ನು ಸವಾಲಾಗಿ ತೋರಿಸಿದ್ದಾನೆ.
ಇನ್ನು ಮುಂದೆ ಈರೀತಿ ಬರೆಯುವುದಿಲ್ಲವೆಂದು ರಗಳೆಗಳ ಮೂಲಕ ಸೂಚಿಸಿ ತನ್ನ ಸ್ವಂತಿಕೆಯನ್ನು
ಪ್ರಕಟಿಸಿದ್ದಾನೆ. ಅದೇ ರೀತಿ ಗಿರಿಜಾ ಕಲ್ಯಾಣ ಕೃತಿಯು ಚೌಕಟ್ಟಿನಲ್ಲಿ ಮಾತ್ರ ಚಂಪುವನ್ನು
ಹೋಲುತ್ತದೆಯೇ ಹೊರತು ಚಂಪೂಯುಗದ ಕವಿಗಳ ದೃಷ್ಟಿ, ಧ್ಯೇಯ-ಧೋರಣೆಗಳನ್ನು
ಹೋಲುವುದಿಲ್ಲ. ಈತನ ಈ ಕೃತಿಯು ವಚನಕಾರರ ವಿಚಾರ ಕ್ರಾಂತಿಯ ನಂತರದ ಸ್ವತಂತ್ರಯುಗವೊಂದರ
ಮನೋಧರ್ಮವನ್ನು ತಕ್ಕಮಟ್ಟಿಗೆ ಪ್ರತಿನಿಧಿಸುತ್ತದೆ. ಹರಿಹರ ಸಾಂಪ್ರದಾಯಿಕವಾಗಿ ಅಕ್ಷರ ಛಂದಸ್ಸಿನ ವೃತ್ತಗಳಿಂದ ಕೂಡಿದ ಶತಕಗಳನ್ನು
ಬರೆದ ನಂತರವೇ ‘ಗಿರಿಜಾ ಕಲ್ಯಾಣಮಹಾಪ್ರಬಂಧ’ದ ರಚನೆಗೆ ಕೈಹಾಕಿದುದು ಅವನ ಸೀಮೋಲ್ಲಂಘನೆಯ ಮುಂದಿನ
ಹೆಜ್ಜೆಯಾಯಿತು. ಇದರಲ್ಲಿ ಹಳೆಯ ಮಾದರಿ ಇದೆ, ಆದರೆ ಅದನ್ನು ತುಸು ಬದಲಾವಣೆಗೊಳಗಾಗಿದೆ. ಕಾಳಿದಾಸನ
‘ಕುಮಾರಸಂಭವ’ ಇವನ ಕೈಯಲ್ಲಿ ‘ಗಿರಿಜಾಕಲ್ಯಾಣ’ವಾಗಿದೆ.
ಎಂ.ಜಿ. ನಂಜುಂಡಾರಾಧ್ಯರು ಗಿರಿಜಾ ಕಲ್ಯಾಣ ಕೃತಿಯಲ್ಲಿ
ಕಂಡು ಬರುವ ಸ್ವಂತಿಕೆಯ ಅಂಶಗಳನ್ನು ಈ ಕೆಳಕಂಡಂತೆ ಗುರುತಿಸಿದ್ದಾರೆ. “ಕಾಳಿದಾಸನ ಕುಮಾರಸಂಭವದ ಹೋಲಿಕೆ
ಅಲ್ಲಲ್ಲಿ ಕಂಡುಬಂದರೂ ಗಿರಿಜಾಕಲ್ಯಾಣದ ಕಥೆ ಅದಕ್ಕೂ ಭಿನ್ನವಾಗಿದೆ. ಪುತ್ರಿಯನ್ನು ಪಡೆಯಲು ಮೇನೆಯ
ತಪಸ್ಸು, ಪಾರ್ವತಿಯ ಜನನ, ಶಿವಲಿಂಗ ದರ್ಶನ, ಬಾಲಲೀಲೆಗಳು, ನಾರದನು ಕುವರಿಯಾದ ಅಗಜೆಗೆ ಪೊಡಮಟ್ಟು,
ಸತಿದೇವಿಯೇ ಪಾರ್ವತಿಯಾಗಿ ಹುಟ್ಟಿಬಂದಿರುವಳೆಂದು ಎಚ್ಚರಿಸಿ ಅವಳನ್ನು ಹೇಮಕೂಟಕ್ಕೆ ಕಳುಹಿಸಲು ಸಲಹೆ
ನೀಡುವುದು, ಪರಶಿವ ರಜತಾದ್ರಿ ಬಿಟ್ಟು ಕನ್ನಡನಾಡಿನ ಹೇಮಕೂಟಕ್ಕೆ ಆಗಮಿಸುವುದು, ಹಿಮವಂತ ಸಖಿಯರೊಂದಿಗೆ
ಮಗಳನ್ನು ವಿಮಾನದಲ್ಲಿ ಕರೆತರುವುದು ಮುಂತಾದ ಘಟನೆಗಳು ಹರಿಹರನ ನವ್ಯದೃಷ್ಟಿ. ಇದು ಕುಮಾರಸಂಭವದಲ್ಲಿಲ್ಲ.
ಮನ್ಮಥ ದಹನ, ಪಾರ್ವತಿಯ ಉಗ್ರ ತಪಸ್ಸು, ಶಿವ ವಟುವೇಷದಿಂದ ಬಂದು ಅವಳನ್ನು ರೇಗಿಸುವುದು, ಶಿವನಿಂದೆ
ತಾಳಲಾರದೆ ಪಾರ್ವತಿ ವಿಭೂತಿ ಉಂಡೆ ಎಸೆದಾಗ ಅವನ ಕಪಟವೇಷ ತೊಲಗಿ ನಿಜರೂಪು ಬಯಲಾಗುವುದು ಮುಂತಾದುವು
ಹಂಪೆಯಲ್ಲಿ ನಡೆದ ನೂತನ ವಿಷಯಗಳು. (ಗಿರಿಜೆ ಶಿವನಿಂದೆಯನ್ನು ಕೇಳಲಾಗದೆ ತನ್ನ ಕಡವಸದ ಬೂದಿಯಿಂದ
ಹೊಡೆಯುವ ಪ್ರಸಂಗದ ಪರಿಕಲ್ಪನೆ ಶಿವಪುರಾಣಗಳಲ್ಲಿ ಬರುವ ಉಪಮನ್ಯು ಮುನಿಯ ಕಥೆಯಲ್ಲಿ ಬಂದಿದ್ದು, ಬಹುಶಃ
ಅದರಿಂದ ಹರಿಹರ ಪ್ರಭಾವಿತನಾಗಿರುವಂತೆ ತೋರುತ್ತದೆ.) ಕುಮಾರಸಂಭವದ ಏಳುಸರ್ಗಗಳಲ್ಲಿ ಕಾಳಿದಾಸ ವರ್ಣಿಸಿರುವ
ಕಥಾಭಾಗ ಗಿರಿಜಾಕಲ್ಯಾಣದ ಹತ್ತು ಆಶ್ವಾಸಗಳಲ್ಲಿ ವರ್ಣಿತವಾಗಿದೆ. ಹರಿಹರನಿಗೆ (ತಾರಕವಧೆಯ) ಮುಂದಿನ
ಕಥೆಯ ಅಗತ್ಯ ಕಾಣಲಿಲ್ಲ. (ಆ ಕಾರಣಕ್ಕಾಗಿಯೇ ಗಿರಿಜಾಕಲ್ಯಾಣವಷ್ಟೇ ಕಥಾವಸ್ತು ನಿಲುಗಡೆ ಕಂಡುಕೊಳ್ಳುತ್ತದೆ.)
ಹರಿಹರನಿಗೆ ತಾರಕನ ವಧೆಗಾಗಿ ಕುಮಾರಸಂಭವ ಆಗಬೇಕಾಗಿತ್ತು. ಹರಿಹರನ ದೃಷ್ಟಿಯಲ್ಲಿ ಅದು ತಾನಾಗಿಯೇ
ಆಗುವುದೆಂಬ ಭರವಸೆ. ಮೇಲಾಗಿ ಹರಿಹರ ಕಾಳಿದಾಸನ ಕುಮಾರಸಂಭವದ ಎಂಟನೆಯ ಸರ್ಗದಲ್ಲಿ ವರ್ಣಿಸಿರುವ ಜಗತ್ತಿನ
ತಾಯಿತಂದೆಗಳೆನಿಸಿದ ಶಿವ-ಪಾರ್ವತಿಯರ ಕಾಮಕೇಳಿಯನ್ನು ವರ್ಣಿಸಿ ಲಾಕ್ಷಣಿಕರ ಆಕ್ಷೇಪಕ್ಕೆ ಒಳಗಾಗುವ
ಅನೌಚಿತ್ಯವನ್ನು ಕೈಬಿಟ್ಟಿದ್ದೂ ಆತನ ಪ್ರತ್ಯುತ್ಪನ್ನ ಮತಿಗೆ ನಿದರ್ಶನ, ಮೇಲಾಗಿ ಜಗದಂಬೆ ಪಾರ್ವತಿಯ
ಅಂಗಾಂಗಗಳನ್ನು ವರ್ಣಿಸಿರುವ ಕಾಳಿದಾಸನ ಔಚಿತ್ಯಪ್ರಜ್ಞೆ ಹರಿಹರನಿಗೆ ಹಿಡಿಸಿದಂತಿಲ್ಲ. ಅದಕ್ಕಾಗಿಯೇ
ಆತ ಅದನ್ನು ವಾತ್ಸಲ್ಯವುಳ್ಳ ತಂದೆ ಹಿಮವಂತನಿಂದ ಮಾಡಿಸಿ ಪಾರಾಗಿದ್ದಾನೆ. ಕಾಳಿದಾಸ ತನ್ನ ಕಾವ್ಯದ
ಮೊದಲನೆಯ ಸರ್ಗದಲ್ಲಿ ಸಂಗ್ರಹಿಸಿದ ಹಿಮಾಲಯ ವರ್ಣನೆ, ಹಿಮವಂತ-ಮೇನೆಯವರ ಮದುವೆ, ಮೈನಾಕನ ಜನನ, ಶಿವನ
ಉಗ್ರ ತಪಸ್ಸು, ಪಾರ್ವತಿಯು ಪ್ರತಿದಿನ ಮಾಡುವ ಶಿವಪೂಜೆ – ಇವೆಲ್ಲವುಗಳನ್ನೂ ಹರಿಹರ ನಾಲ್ಕು
ಆಶ್ವಾಸಗಳಲ್ಲಿ ಸಂಗ್ರಹಿಸಿದ್ದಾನೆ.
ಕುಮಾರಸಂಭವದಲ್ಲಿ ಇಂದ್ರನೇ ಮೊದಲಾದ ದೇವತೆಗಳ ಪರವಾಗಿ
ಬೃಹಸ್ಪತಿಯು ತಾರಕನ ಪೀಡೆಯಿಂದ ದೇವತೆಗಳಿಗೆ ಆದ ಕಷ್ಟನಷ್ಟಗಳನ್ನು ಬ್ರಹ್ಮನಲ್ಲಿ ವಿವರಿಸಿ ಅದನ್ನು
ತಪ್ಪಿಸಬೇಕೆಂದು ಪ್ರಾರ್ಥಿಸಿದನು. “ತನ್ನ ವರ ಪ್ರಭಾವದಿಂದ ತಾರಕ ಇನ್ನು ಬಲಿಷ್ಟನಾಗಿದ್ದಾನೆ. ಅವನ
ಸಂಹಾರ ಶಿವಕುಮಾರನಿಂದಲೇ ಸಾಧ್ಯ, ಆದ್ದರಿಂದ ಶಿವ-ಪಾರ್ವತಿಯರ ವಿವಾಹವಾಗುವಂತೆ ಪ್ರಯತ್ನಿಸಿರಿ” ಎಂದು
ಬ್ರಹ್ಮನು ದೇವತೆಗಳಿಗೆ ಉಪದೇಶಿಸುತ್ತಾನೆ. ಈ ವಿಷಯ ಗಿರಿಜಾಲ್ಯಾಣದಲ್ಲಿ ಬಂದಿಲ್ಲ. ಗಿರಿಜಾಕಲ್ಯಾಣದ
ಆರನೆಯ ಆಶ್ವಾಸದಲ್ಲಿ ದೇವತೆಗಳು ತಾರಕನೊಡನೆ ಯುದ್ಧಮಾಡಿ ಸೋತು, ಬ್ರಹ್ಮ-ವಿಷ್ಣು ಇಂದ್ರ ಮೊದಲಾದವರು
ಸೇರಿ ಉಪಾಯವನ್ನು ಹುಡುಕಿ, ಶಿವನೆಡೆಗೆ ಮನ್ಮಥನನ್ನು ಕಳುಹಿಸುವರು. ದೇವತೆಗಳ ಪರವಾಗಿ ಬೃಹಸ್ಪತಿ
ರಾಯಭಾರ ವಹಿಸಿ ತಾರಕನೆಡೆಗೆ ಹೋಗಿ ನಿಷ್ಫಲನಾಗಿ ಬರುವನು. ಹೀಗೆ ಅನೇಕ ವಿಷಯಗಳಲ್ಲಿ ವ್ಯತ್ಯಾಸಗಳಿದ್ದರೂ
ಹರಿಹರನ ಮೇಲೆ ಕಾಳಿದಾಸನ ಪ್ರಭಾವ ಬೀಳದೆ ಇಲ್ಲ…..” ಎಂಬ ಇವರ
ಅನಿಸಿಕೆಗಳು ಯೋಚಿಸತಕ್ಕದ್ದಾಗಿವೆ. (ಹರಿಹರಕವಿಯ ಗಿರಿಜಾಕಲ್ಯಾಣ ಮಹಾಪ್ರಬಂಧಂ, ಗದ್ಯಾನುವಾದ: ವಿದ್ವಾನ್
ಎಂ.ಜಿ. ನಂಜುಂಡಾರಾಧ್ಯ, ಉಪೋದ್ಘಾತ, ಪುಟ ೫-೬, ಪ್ರ ; ಕ.ಸಾ.ಪ., ಬೆಂಗಳೂರು, ೧೯೭೬).
ಇನ್ನೂ ಗಿರಿಜಾಕಲ್ಯಾಣದ ಹೆಸರು ಮುಂಚಿತವಾಗಿ
ತಿಳಿದಿರುವಂತೆ ಇದು ಗಿರಿಜೆ ಹಾಗೂ ಪರಮೇಶ್ವರರ ಕಲ್ಯಾಣಕ್ಕೆ ಸೀಮಿತವಾದದ್ದು. ಗಿರಿಜೆಯ
ಹುಟ್ಟಿನಿಂದ ಆರಂಭವನ್ನು ಕಾಣುವೆವು. ಬಾಲ್ಯದೊಂದಿಗೆ ಶಿವಭಕ್ತಿಯನ್ನು, ಆರಾಧನೆಯನ್ನು, ಪೂಜೆಯನ್ನು ನೋಡುವೆವು. ಗಿರಿರಾಜನ ಈ ಕುವರಿಯು ಶಿವನಿಗೆ
ಮೀಸಲಾದವಳೆಂಬುದನ್ನು ಖಚಿತವಾಗಿ ಅರಿಯುವೆವು. ಆದರೆ ಕುಮಾರ ಸಂಭವವು, ಹೆಸರೇ ಸೂಚಿಸುವಂತೆ, ಪಾರ್ವತೀ, ಪರಮೇಶ್ವರರ
ಕಲ್ಯಾಣದ ಘಟ್ಟಕ್ಕೆ ನಿಲ್ಲದೆ ಮುಂದುವರೆದು ಕುಮಾರ ಸ್ವಾಮಿಯ ಜನನವನ್ನು ಬೆಳಗಿಸುವುದು. ಕಥಾ
ನಾಯಕಿಯು ಗಿರಿಜೆಯಾಗಿದ್ದು, ಹರಿಹರನು
ಆಕೆಯ ಜೀವನ ಗತಿಯನ್ನು, ಪ್ರಗತಿಯನ್ನು, ಬೆಳೆಯುವ ಕಾಲ ರೀತಿಯನ್ನು ಓದುಗನ ಮುಂದೆ ಚಿತ್ರದಂತೆ
ಬಿಡಿಬಿಡಿಸಿ,
ರಸದೌತಣವನ್ನು ಬಡಿಸುವಂತೆ ಬಡಿಸಿ, ಮನಸ್ಸಿನ ತುಂಬ ಆ ತಾಯಿಯ ಮಹತ್ತ ಸಾಧನೆ ಛಲಗಳನ್ನು
ಒಡಮೂಡಿಸುವುದಷ್ಟೇ ಅಲ್ಲ, ಹೆಸರಿನ ಸಾರ್ಥಕತೆಯನ್ನು ಸಿದ್ಧ ಪಡಿಸಿದಂತಾಗಿದೆ. ಇಲ್ಲಿ
ಕಾಳಿದಾಸ ವಿರಚಿತ ಕುಮಾರ ಸಂಭವವು ಪ್ರಸ್ತಾಪಿತವಾಗಿರುವದರಿಂದ ಹರಿಹರನ ಕಾವ್ಯದಲ್ಲಿ ಕಾಣುವ
ಮಾರ್ಪಾಟನ್ನು ಗಣನೆಗೆ ತೆಗೆದುಕೊಳ್ಳುವುದು ಅಗತ್ಯವೆನ್ನಿಸುತ್ತದೆ. ʻಮೂಲದಲ್ಲಿ ಹರಿಹರನು ಮಾಡಿಕೊಂಡ ಮಾರ್ಪಾಡುಗಳಲ್ಲಿ
ಬೃಹಸ್ಪತಿಯ ದೌತ್ಯ, ವಿಷ್ಣುವಿನಿಂದ ಕಾಮನ ಮನ
ಒಲಿಸುವಿಕೆ,
ವಟು ವೇಷದ ಶಿವನನ್ನು ಕುಪಿತಳಾದ ಗಿರಿಜೆ ವಿಭೂತಿಯಿಂದ
ಹೊಡೆಯುವುದುʼ ಇದು ಬಹಳಷ್ಟು ಸಮಂಜಸವಾಗಿದೆ.
ಗಮನಿಸಿದೆ ಬಿಡಲಾಗದ ಮತ್ತೊಂದು ಸಂಗತಿ ಎಂದರೆ ಕಥಾ
ವಿಷಯ. ಹರಿಹರನವರೆಗಿನ ಕಾಲದ ಕನ್ನಡ ಕಾವ್ಯ ವಾಹಿನಿಯ ಚಂಪೂವಿನಲ್ಲಿ ಅನೇಕ ಮಹತ್ ಕೃತಿಗಳು
ಪ್ರಕಟಗೊಂಡಿದ್ದು,
ಪ್ರಖ್ಯಾತಗೊಂಡಿದ್ದರೂ ಈ ಒಂದು ಕಥಾವಸ್ತು ಚಂಪೂವಿಗೆ
ಹೊಸ ಪ್ರಥಮ ಕೊಡುಗೆಯಾಗಿದೆ. ಇದೆಲ್ಲವನ್ನೂ ವೀಕ್ಷಿಸಿದಾಗ, ತೂಗಿ ನೋಡಿದಾಗ ಹರಿಹರನ ವೈಶಿಷ್ಟ್ಯತೆಯನ್ನೂ
ಮೆಚ್ಚದಿರಲು ಸಾಧ್ಯವಿಲ್ಲ. ಗಿರಿಜಾ ಕಲ್ಯಾಣವು ಹರಿಹರನ ವೈಶಿಷ್ಟ್ಯವಾದ
ಚಂಪೂಗ್ರಂಥ. ಪ್ರೌಢಕಾವ್ಯ ಪರಂಪರೆಗೆ ಹೊಸದಾದ ಕಾಣಿಕೆಯನ್ನು ನೀಡಿದ್ದಾನೆ. ಕಥಾವಿಷಯ, ವಸ್ತು ರಚನೆ,ವರ್ಣನೆ,ಶೈಲಿ
ಇವುಗಳಲ್ಲಿ ಪೂರ್ವಪರಂಪರೆಯ ಅಂಶಗಳನ್ನು ಸ್ವೀಕರಿಸಿ ಸ್ವತಂತ್ರವಾದ ಕೆಲವನ್ನು ಸೇರಿಸಿ ವ್ಯಕ್ತಿತ್ವದ
ಪ್ರಕ್ರಿಯೆಯಿಂದ ಹೊಸತನವನ್ನು ಕಲ್ಪಿಸಿ ಕೊಟ್ಟಿದ್ದಾನೆ. ಈ ವರೆಗಿನ ಚಂಪೂಕಾವ್ಯಗಳಲ್ಲಿ ಕಾಣದ
ಕಥಾವಿಷಯವು ಇದರಲ್ಲಿದೆ. ಶೈವಕಾವ್ಯ ಪುರಾಣಗಳಲ್ಲಿ ವರ್ಣಿತವಾದ ಶಿವ ಪಾರ್ವತಿಯರ ಮದುವೆಯು
ಕಾವ್ಯದ ವಿಷಯವಾಗಿದೆ. ಈ ಕೃತಿಯಲ್ಲಿ ಪಾರ್ವತಿಯ ಜನನದಿಂದ ವಿವಾಹದವರೆಗೂ ನಡೆದ ಸಂಗತಿಯನ್ನು
ನಿರೂಪಿಸುತ್ತ ಗಿರಿಜೆಯ ಪಾತ್ರವನ್ನು ತಾನು ಕಂಡಂತೆ ಬಿಡಿಸಿ ಚಿತ್ರಿಸುವುದರಲ್ಲಿ ಕವಿಯು ಆಸಕ್ತಿ
ವಹಿಸಿದ್ದಾನೆ. ಕಥಾನಾಯಕಿಯ ಮೇಲೆ ತನ್ನ ಗಮನವನ್ನೆಲ್ಲಾ ಕೇಂದ್ರೀಕರಿಸಿದ್ದರಿಂದ
ಗಿರಿಜಾ ಕಲ್ಯಾಣ ಎಂಬ ಹೆಸರು ಸಾರ್ಥಕವಾಗಿದೆ.
ಒಟ್ಟಿನಲ್ಲಿ
ರಗಳೆಯ ಕವಿಯೆಂದು ಮೂದಲಿಕೆಯ ನುಡಿಗಳನ್ನಾಡಿದ ಮಡಿವಂತರನ್ನು ಬೆಪ್ಪಾಗಿಸಿ ತನ್ನ ಕಾವ್ಯ ಪ್ರತಿಭೆಯ
ಪ್ರಕಾಶದಿಂದ ಇಂತಹ ಒಂದು ಪ್ರತಿಭಾ ಶೀಲ ಕೃತಿಯನ್ನು ಸೃಷ್ಟಿಸಿದ ಹರಿಹರನದು
ಅದೊಂದು ಹೆಗ್ಗಳಿಕೆ, ಹೆಮ್ಮೆ,
ಬೆನ್ನು ತಟ್ಟಿಕೊಳ್ಳುವ ವಿಚಾರ. ನೂರಾರು ರಗಳೆಗಳ ಕತೃವಾದ ಹರಿಹರನು ಗಿರಿಜಾ ಕಲ್ಯಾಣವೆಂಬ ಏಕೈಕ
ಚಂಪೂಗ್ರಂಥವನ್ನು ಹತ್ತು ಆಶ್ವಾಸಗಳಲ್ಲಿ ರಚಿಸಿದ್ದಾನೆ.ರಗಳೆಗಳ ರಚನೆಯ ಮೂಲಕ ಕವಿಯು ಯಶಸ್ಸಿನ
ಹಿರಿಮೆಯನ್ನು ಮುಟ್ಟಿದ್ದರೂ ಆತನ ಗಿರಿಜಾ ಕಲ್ಯಾಣ ಕೃತಿಯು ಆತನು ರಗಳೆಯ ಕವಿಯಲ್ಲ ಎಂಬುದನ್ನು
ಸಾಬೀತು ಪಡಿಸಿದೆ. ವಾಸ್ತವವಾಗಿ ಗಿರಿಜಾ ಕಲ್ಯಾಣ ಕೃತಿಯು ಆತನ ಚೊಚ್ಚಿಲ ಕೃತಿ. ಹರಿಹರನ
ಕಾವ್ಯಕ್ರಾಂತಿಯ ಕೆಲವು ಮುಂಗುರುಹುಗಳು ಈ ಕೃತಿಯಲ್ಲೇ ಗೋಚರಿಸುತ್ತವೆ. ಇತರೆ ಚಂಪೂ ಕಾವ್ಯಗಳಿಗಿಂತ ಸ್ವಲ್ಪಮಟ್ಟಿಗೆ
ಭಿನ್ನವಾಗಿ,
ವಿಶಿಷ್ಟವಾಗಿ ನಿಲ್ಲುತ್ತದೆ. ವೃತ್ತಗಳಿಗಿಂತ ಕಂದ ಅಧಿಕ
ಪ್ರಾಚುರ್ಯ ಕೃತಿಯ ವೈಶಿಷ್ಟ್ಯ. ಕೃತಿಯ ವಸ್ತುಶೈಲಿಗಳು ಅನ್ಯ ಚಂಪೂಕೃತಿಗಳಿಗಿಂತ ತಕ್ಕಮಟ್ಟಿಗೆ ಪ್ರತ್ಯೇಕಿಸುವಂತಿದೆ.
ಗಿರಿಜಾ ಕಲ್ಯಾಣ ಕೃತಿಯು ತನ್ನ ಚೌಕಟ್ಟಿನಲ್ಲಿ ಹಾಗೂ
ಬಹಳಷ್ಟು ವಿವರಗಳಲ್ಲಿ ಪೂರ್ವದ ಚಂಪೂ ಮಾರ್ಗವನ್ನೇ
ಹಿಡಿದಿದ್ದರೂ ಮುಂದುವರೆದು ಹೊಸತೊಂದು ಮಾರ್ಗವನ್ನು
ತೆರೆದು ಕನ್ನಡ ಸಾಹಿತ್ಯಕ್ಕೊಂದು ತಿರುವನ್ನು ಕೊಟ್ಟಿದೆ.
ಗಿರಿಜಾ ಕಲ್ಯಾಣದ ವಸ್ತು ಶಿವಪಾರ್ವತಿಯರ ವಿವಾಹ.
ಗಿರಿಜಾ ಕಲ್ಯಾಣ ಶೀರ್ಷಿಕೆಯಿಂದ ಕವಿಯು ಗಿರಿಜೆಗೆ ಹೆಚ್ಚಿ ಪ್ರಾಧಾನ್ಯತೆಯನ್ನು ಕೊಟ್ಟಂತೆ
ಕಾಣುತ್ತದೆ. ಆದಾಗ್ಯೂ ಪಾರ್ವತಿಯು ಹೇಗೆ ಕಾವ್ಯದ
ನಾಯಕಿಯೋ ಹಾಗೆಯೇ ಶಿವನೂ ನಾಯಕ. ಕಥಾ ಸಂಗತಿ ಗಿರಿಜೋದ್ವಾಹವಾದರೂ ಕಾವ್ಯನಾಥಂ ಗಿರಿಜಾ ನಾಥಂ
ಎಂದೂ ಶಿವನ ವಿವಾಹೋನ್ನತಿಯಿಂ ಈ ಕೃತಿ ಎಂದು ಬಣ್ಣಿಸಿದ್ದಾನೆ.
ಕಥಾಸಾರ: ಹಿಮಾಲಯದ
ಉತ್ತರಭಾಗದಲ್ಲಿ ಗಿರಿರಾಜನ ದೇಶವಿತ್ತು. ಅದರ ರಾಜಧಾನಿ ಓಷಧಿಪ್ರಸ್ಥಪುರ. ಪಿತೃಗಳ ಮನದಲ್ಲಿ
ಹುಟ್ಟಿದ ಮೇನಾದೇವಿ ಗಿರಿರಾಜನ ಪತ್ನಿ. ಅವರ ಮಗ ಮೈನಾಕ. ಒಮ್ಮೆ, ಶಿವನಿಗೆ ವಧುವಾಗಲು ತಕ್ಕ ಮಗಳನ್ನು ಪಡೆಯುವುದಕ್ಕಾಗಿ ತಪಸ್ಸು
ಮಾಡಬೇಕೆಂಬ ಬಯಕೆ ಮೇನೆಗುಂಟಾಯಿತು. ಗಿರಿರಾಜ ಅದಕ್ಕೆ ಸಮ್ಮತಿಸಿದ, ಮೇನೆಯ ತಪವನ್ನು, ದಾಕ್ಷಾಯಿಣಿ ಅದನ್ನು
ಸಹಿಸಲಾರದೆ ಯೋಗಾಗ್ನಿಯಲ್ಲಿ ದೇಹವನ್ನು ತ್ಯಜಿಸಿ, ಮೇನಾದೇವಿಯ ಹೃತ್ಕಮಲದಲ್ಲಿ ನೆಲಸಿದಳು. ಅದನ್ನರಿತ ಮೇನೆ ಹರ್ಷಿಸಿ,
ಮನೆಗೆ ಬಂದು, ತನ್ನ ಇಷ್ಟಾರ್ಥ ಕೈಗೂಡಿದುದನ್ನು ಪತಿಗರುಹಿದಳು.
ಕಾಲಕ್ರಮದಲ್ಲಿ ಮೇನೆಯ ಗರ್ಭದಿಂದ ಗೌರಿ
ಜನಿಸಿದಳು. ಅವಳು ಶಿವನಲ್ಲೆ ತನ್ಮಯಳಾಗಿ ಕಣ್ಣುಬಿಡದಿರಲು, ಶೈವಾಚರ‍್ಯರ ಸಲಹೆಯಂತೆ ಅವಳಿಗೆ ಶಿವಲಿಂಗವನ್ನು ತೋರಿಸಲಾಯಿತು.
ಆಗ ಅವಳು ಕಣ್ತೆರೆದಳು. ಅವಳಿಗೆ ‘ಗಿರಿಜೆ’ ಎಂದು ನಾಮಕರಣವಾಯಿತು. ಬಾಲ್ಯದಲ್ಲಿ ಅವಳು ಶಿವನನ್ನೆ
ಧ್ಯೇಯವಾಗಿಟ್ಟುಕೊಂಡಿದ್ದಳು. ಗಿರಿಜೆಗೆ ಯೌವನೋದಯವಾದಾಗ, ಅವಳು ದಾಕ್ಷಾಯಿಣಿಯೆಂಬುದನ್ನು ಮರೆತ ತಂದೆ ತಾಯಿಗಳು, ಅವಳಿಗೆ ಯಾರು ವರನಾಗುತ್ತಾನೋ ಎಂದು
ಚಿಂತಿಸುತ್ತಿದ್ದರು. ಒಂದು ದಿನ ಅರಮನೆಗೆ ಬಂದ ನಾರದಮಹರ್ಷಿ ಗಿರಿಜೆಗೆರಗಿ, ಅವಳು ಭವಾನಿಯೊಂದೂ ಈಶ್ವರನೇ ಅವಳಿಗೆ ತಕ್ಕ ವರನೆಂದೂ
ಹೇಮಕೂಟದಲ್ಲಿ ತಪೋಮಗ್ನನಾಗಿರುವ ಶಿವನೆಡೆಗೆ ಅವಳನ್ನು ಕಳುಹಬೇಕೆಂದೂ ಗಿರಿರಾಜ ಮೇನೆಯರಿಗೆ ಹೇಳಿಹೋದನು.
ಹೇಮಕೂಟದಲ್ಲಿ ಉಗ್ರ ತಪೋನಿರತನಾಗಿದ್ದ ಶಿವನಲ್ಲಿಗೆ ಗಿರಿರಾಜ ಮಗಳನ್ನು ಕರೆದೊಯ್ದನು.
ತಂದೆಯನ್ನು ಬೀಳ್ಕೊಟ್ಟ ಗಿರಿಜೆ ಭಕ್ತಿಯಿಂದ ಶಿವನನ್ನು ಅನವರತ ಆರಾಧಿಸಿದಳು.
ಅತ್ತ, ಲೋಕಕಂಟಕನಾದ ತಾರಕಾಸುರನ ಕೋಟಲೆಗೆ ಅಂಜಿದ ದೇವತೆಗಳು, ಅವನೊಡನೆ ಸಂಧಿಗಾಗಿ ಬೃಹಸ್ಪತಿಯನ್ನು
ಕಳುಹಿಸಿದರು. ಬೃಹಸ್ಪತಿಯ ರಾಯಭಾರ ವಿಫಲವಾಗಿ, ದೇವತೆಗಳಿಗೂ
ತಾರಕನಿಗೂ ಯುದ್ಧ ನಡೆಯಿತು. ದೇವತೆಗಳು ಪರಾಭವಗೊಂಡು, ತಾರಕನಿಗೆ ಮರೆಯಾಗಿ ಅಡಗಿಕೊಂಡರು. ಅನಂತರ ಅವರು ಬ್ರಹ್ಮ
ಇಂದ್ರರೊಡನೆ,
ವಿಷ್ಣುವಿದ್ದಡೆಗೆ ಮಂತ್ರಾಲೋಚನೆಗಾಗಿ ಹೋದರು. ಹರನಿಗೆ
ಮಗನಾಗಿ ಹುಟ್ಟುವ ಏಳು ದಿನಗಳ ಷಣ್ಮುಖನಿಂದಲ್ಲದೆ ತಾರಕನಿಗೆ ಅಳಿವಿಲ್ಲವೆಂದೂ ಈಶ್ವರನ
ತಪಸ್ಸನ್ನು ಕೆಡಿಸಬೇಕೆಂದೂ ವಿಷ್ಣು ಹೇಳಿದನು. ಆ ಕೆಲಸಕ್ಕೆ ಮನ್ಮಥನೇ ಸಮರ್ಥ ಅವನು ಮಾಡಬೇಕಾದ
ಕಾರ್ಯವನ್ನು ವಿಷ್ಣು ತಿಳಿಸಿದನು. ಮೊದಲು ಹಿಂಜರಿದ ಮನ್ಮಥ ಕಡೆಗೆ
ಒಪ್ಪಿಕೊಂಡು,
ಶಿವನನ್ನು ಗೆಲ್ಲಲು ಹೇಮಕೂಟದತ್ತ ಸಪರಿವಾರನಾಗಿ
ನಡೆದನು.
ಮನ್ಮಥನ ಪ್ರಭಾವದಿಂದ ನಂದಿಯ ಚಿತ್ತ ತುಸು ಕದಡಿತು.
ಅವನು ಕೂಡಲೆ ಎಚ್ಚತ್ತು ಮದನನ ಸೈನ್ಯದತ್ತ ಕಣ್ಣು ಹಾಯಿಸಿದೊಡನೆಯೆ ಅದು ನಾಶಗೊಂಡಿತು. ಮದನ
ಬೆದರಿದನು. ಅಷ್ಟರಲ್ಲಿ ಗಿರಿಜೆ ಅಲ್ಲಿಗೆ ಬಂದಳು. ಮನ್ಮಥನಿಗೆ ಧೈರ‍್ಯ
ಬಂತು. ತನ್ನನ್ನು ಕಾಯುವಂತೆ ಅವನು ಅವಳನ್ನು ಬೇಡಿದನು. ಅವಳಿಂದ ಅಭಯ ಪಡೆದು, ಅವಳ ಪುಷ್ಪಕದ ನೆರಳಿನಲ್ಲಿ ತಪೋವನವನ್ನು ಹೊಕ್ಕು, ಶಿವನ ಮೇಲೆ ಬಾಣಪ್ರಯೋಗ ಮಾಡಿದನು. ಅದು ವಿಫಲವಾಯಿತು.
ಗಿರಿಜೆ ಬಂದು ಶಿವಪೂಜೆಯಲ್ಲಿ ತೊಡಗಿದಾಗ, ಕಾಮ
ಮತ್ತೆ ಧೈರ್ಯಗೊಂಡು ಪಂಚಬಾಣಗಳನ್ನು ಒಟ್ಟಿಗೇ ಶಿವನ ಮೇಲೆ ಹೂಡಿದನು.
ಆಗ ಶಿವನ ಸಮಾಧಿ ಸಡಿಲಿ, ಅವನು ಕೋಪದಿಂದ ಕಣ್ಣು
ಬಿಟ್ಟು ಕಾಮನನ್ನು ನೋಡಿದಾಗ, ಅವನ
ಹಣೆಗಣ್ಣುರಿ ಮನ್ಮಥನನ್ನು ಬೂದಿಮಾಡಿತು. ಮುಂದೆ ನಿಂತಿದ್ದ ಗಿರಿಜೆಯನ್ನು ನೋಡದೆ ಶಿವ
ಹೊರಟುಹೋದನು.
ಪತಿವಿಹೀನೆಯಾದ ರತಿ ಶೋಕಾರ್ತಳಾದಳು. ಅವಳನ್ನು ಗಿರಿಜೆ
ಸಂತೈಸಿ,
ಅವಳ ಪತಿಯನ್ನು ಮರಳಿ ಬದುಕಿಸಿಕೊಡುವುದಾಗಿ
ಅಭಯವಿತ್ತಳು. ತಾನಿರುವಲ್ಲಿಗೇ ಶಿವ ಬರುವಂತೆ ಮಾಡುವುದಾಗಿ ಪ್ರತಿಜ್ಞೆ ಕೈಕೊಂಡು
ಹೇಮಕೂಟಾಗ್ರದಲ್ಲಿ ಪಂಚಾಗ್ನಿಯ ನಡುವೆ ಘೋರತಪದಲ್ಲಿ ತೊಡಗಿದಳು. ಅವಳ ಉಗ್ರತಪ ಶಿವನ ಬಗೆಯನ್ನು
ಕರಗಿಸಿತು. ಅವನು ಗಿರಿಜೆಯನ್ನು ಪರೀಕ್ಷಿಸಬೇಕೆಂದು ವಟುವೇಷದಿಂದ ಬಂದು, ಏತಕ್ಕಾಗಿ ಅವಳ ತಪವೆಂದು ವಿಚಾರಿಸಿದನು. ಶೂಲಿಯ
ಕರುಣೆಗಾಗಿ ತಪಗೈಯುತ್ತಿರುವುದಾಗಿ ಅವಳು ಉತ್ತರಿಸಿದಾಗ, ಆ ಕಪಟವಟು ಶಿವನನ್ನು ನಿಂದಿಸಿದನು. ಅದರಿಂದ ಗಿರಿಜೆ ಕೆರಳಿ, ವಿಭೂತಿಯಿಂದ ಅವನನ್ನು ಹೊಡೆದಳು. ಆಗ ಶಿವ ವಟುವೇಷವನ್ನು
ತೊರೆದು ಪ್ರತ್ಯಕ್ಷನಾಗಿ, ಗಿರಿಜೆಯ ಕೈಹಿಡಿದು
ಕೈಲಾಸಕ್ಕೆ ತನ್ನೊಡನೆ ಬರುವಂತೆ ಹೇಳಿದನು. ತನ್ನ ತಂದೆಯ ಅನುಮತಿ ಪಡೆದು ತನ್ನನ್ನು
ಮದುವೆಯಾಗುವಂತೆ ಅವಳು ಕೋರಿದಳು. ಶಿವ ಒಪ್ಪಿದನು.
ಅಷ್ಟರಲ್ಲಿ ರತಿ ಅಲ್ಲಿಗೆ ಬಂದಳು. ಅವಳಿಗೆ ತಾನು
ಅಭಯವಿತ್ತಿರುವುದನ್ನು ಗಿರಿಜೆ ಈಶ್ವರನಿಗೆ ತಿಳಿಸಿದಳು. ಮನ್ಮಥ ಅನಂಗನಾಗಿ ರತಿಗೆ
ಸುಖವೀಯುತ್ತಿರಲಿ ಎಂದು ಹರಸಿ, ಶಿವ
ಕೈಲಾಸಕ್ಕೆ ತೆರಳಿದನು. ಗಿರಿಜೆ ತೌರುಮನೆಗೆ ಹೋದಳು.
ಒಂದು ದಿವಸ
ಸಪ್ತರ್ಷಿಗಳು ಗಿರಿರಾಜನಲ್ಲಿಗೆ ಹೋಗಿ, ಗಿರಿಜೆಯನ್ನು
ಶಿವನಿಗೆ ವಿವಾಹ ಮಾಡಿಕೊಡಬೇಕೆಂದು ಕೇಳಿಕೊಂಡರು. ಗಿರಿರಾಜ ಒಪ್ಪಿದನು. ಮದುವೆಗೆ ಎಲ್ಲ
ಸಿದ್ಧತೆಗಳಾದವು. ಪರಮೇಶ್ವರ ತನ್ನ ಉಗ್ರರೂಪವನ್ನು ತೊರೆದು ಸೌಮ್ಯರೂಪಿಯಾದನು. ಪಾರ‍್ವತೀಪರಮೇಶ್ವರರ
ಮದುವೆ ಸಂಭ್ರಮದಿಂದ ನಡೆಯಿತು. ಮುಂದೆ ಅವರಿಗೆ ಮಗನಾಗಿ ಹುಟ್ಟಿದ ಸ್ಕಂದ ತಾರಕಾಸುರನನ್ನು ಸಂಹರಿಸಿ, ಲೋಕವನ್ನು ಕಾಪಾಡಿದನು.ಗಿರಿಜಾಕಲ್ಯಾಣದ ಕೊನೆಯ ಭಾಗ ಲೋಕೋತ್ತರವಾದ
ಒಂದು ಮಂಗಳ ಕಾರ್ಯ – ಲೋಕವನ್ನು ಉಜ್ಜೀವಿಸುವ, ತಾರಕಸಂಹಾರಕ್ಕೆ ಪೂರ್ವಪೀಠಿಕೆಯಾಗುವ ಶಿವ-ಗಿರಿಜೆಯರ
ಕಲ್ಯಾಣದ ಒಂದು ನುಡಿಚಿತ್ರವನ್ನು ಹರಿಹರ ಬಿಡಿಸಿರುವನು. ಅವನಿಗೆ ಗಿರಿಜಾಕಲ್ಯಾಣವಷ್ಟೆ ಮುಖ್ಯ, ಅದರ
ಮುಂದಿನ ಕಥೆ ಅಮುಖ್ಯ. ಆ ಕಾರಣ ಗಿರಿಜಾಕಲ್ಯಾಣವಾಗುವಷ್ಟಕ್ಕೆ ತನ್ನ ಕಾವ್ಯಕ್ಕೆ ಹರಿಹರ ಮಂಗಳ ಹಾಡುವನು.
ಹರಿಹರನ ಗಿರಿಜಾಕಲ್ಯಾಣದಲ್ಲಿರುವುದು ಶಿವಲೀಲೆಯ
ದೇವಾಸುರ ಸಂಘರ್ಷದ ದೈವೀಕಥೆ. ಹರಿಹರನ ಗಿರಿಜೆ ಮಾನವ ಅಂಶಗಳಿಂದ ಕೂಡಿದ ದೈವೀ
ಪಾತ್ರವಾಗಿದ್ದಾಳೆ. ಹರಿಹರನ ಗಿರಿಜೆ ಕಾಳಿದಾಸನ ಗಿರಿಜೆಯ ನಕಲಲ್ಲ. ಕುಮಾರ ಸಂಭವದ
ಗಿರಿಜೆಯಲ್ಲಿರುವುದಕ್ಕಿಂತ ಹೆಚ್ಚಿನ ಸ್ವಾಭಿಮಾನ,ಛಲ.ದಿಟ್ಟತನಗಳು
ಹರಿಹರನ ಗಿರಿಜೆಯಲ್ಲಿ ಎದ್ದು ಕಾಣುತ್ತವೆ. ಗಿರಿಜೆಯು ಪರ್ವತರಾಜನ ಮಗಳಾಗಿ ಹುಟ್ಟಿ
ದೈವೀಸೌಂದರ್ಯ,
ತಪಶ್ಯಕ್ತಿಯುಳ್ಳವರಾದರೂ, ಶಿವಭಕ್ತಿ ತನ್ಮಯಳಾದರೂ ಮಾನವ ಸಹಜವಾದ ಸ್ವಾಭಿಮಾನ,ಕ್ರೋಧ,
ಛಲಗಳನ್ನು ಪ್ರಖರವಾಗಿ ತೋರಿಸುತ್ತಾಳೆ. ಗಿರಿಜೆಯ ಸೇವೆಯನ್ನು ಶಿವನು
ನಿರಾಕರಿಸಿ ತಪೋಭೂಮಿಯಿಂದ ಎದ್ದು ಹೋದಾಗ ಗಿರಿಜೆ ದುಃಖಿಸುವುದಿಲ್ಲ, ರೋಷಭೀಷಣಳಾಗುತ್ತಾಳೆ. ತಾನೊಲಿದು
ಬಂದಾಗ ತಿರಸ್ಕರಿಸಿದವನು ತಾನಾಗಿ ಬರುವಂತೆ ಮಾಡುತ್ತೇನೆಂಬ ಛಲದಲ್ಲಿ ತಪಸ್ಸಿಗೆ ಕುಳಿತುಕೊಳ್ಳುವ
ನಿರ್ಧಾರಮಾಡುತ್ತಾಳೆ (ಆ.೮.ಪ.ಸಂ.೮೫). ಅವಳು ಉಗ್ರತಪೋಭರಾಕೃತಿಯನಾಂತು ಲೋಕವೇ ಬೆರಗುಗೊಳ್ಳುವಂತೆ
“ನಿಶ್ಚಲವ್ಯಗ್ರಮನೋ ಪ್ರಬಲೆಯಾಗಿ ಬಿಸಿಲು, ಮಳೆ, ಶೀತಗಳನ್ನು ಲೆಕ್ಕಿಸದೆ ಪರ್ವತಾಗ್ರಭಾಗದಲ್ಲಿ ವೃಕ್ಷಗಳ
ತಣ್ಣೆಳಲಲ್ಲಿ, ಸರೋವರಗಳ ದಂಡೆಯಲ್ಲಿ ವಿರಾಜಿಸುತ್ತ ಈಶನನ್ನು ವಿಪುಳನಿಶ್ಚಳನನ್ನು ಚಲದಿಂದೆ ತಂದೆಪೆಂ
ಎಂದು ತಪಸ್ಸಿಗೆ ಕುಳಿತುಕೊಳ್ಳುವಳು” (ಆ.೮.ಪ.ಸಂ.೮೬). ಆಕೆ ಶಿವನು ಮಾಡಿದ ಅವಮಾನದಿಂದ ಕುದಿದು ತನ್ನ
ಸಖೀಜನರ ಜೊತೆ ತನ್ನ ಸಾಮರ್ಥ್ಯದೊಂದು ಉನ್ನತಿಯನ್ನೂ ನುಡಿಯುವಳು. ಆ ಸಂದರ್ಭದಲ್ಲಿ ಹರಿಹರ ಅವಳನ್ನು
ಮೃಡಾನಿ, ಮಹಾಮಾಯೆ, ಸಕಳಜಗಜ್ಜನನಿ, ನಿಖಿಳಾರಾಧ್ಯೆ, ಆಕಳಂಕ ಚರಿತ್ರೆ, ದಿವ್ಯಜ್ಞಾನಿ, ಸರ್ವಬ್ರಹ್ಮಾಂಡಭರಣೆ,
ಹರನ ಮನೋಹರೆ, ಸದಾಶಿವನ ಸುಖಮುಖಂ, ಮಹಾದೇವನ ಮನೋರಥ, ಚಲದ ಲಲನೆ, ಬಲ್ಪಿನ ಭಾವಕಿ, ಏಕನಿಷ್ಠಾನಿಧಿ,
ಪಶುಪತಿಯ ಪಟ್ಟದ ಮಹಾದೇವಿ ಎಂದೆಲ್ಲಾ ಹೊಗಳಿ ಇಂತಹ ಪಾರ್ವತಿದೇವಿ ಉಗ್ರತಪಸ್ಸಿಗೆ ಕುಳಿತಳು ಎಂದು
ಅವಳ ಧೀಶಕ್ತಿಯನ್ನು ವರ್ಣಿಸುವನು (ಆ.೮. ಪ.ಸಂ.೮೬ ವ). ಹರಿಹರನಂತೂ ಗಿರಿಜೆಯನ್ನು ಭವಾನಿ ಮಾನಿ ಎಂಬ ವಿಶೇಷಣದಿಂದ ಕರೆದಿದ್ದಾನೆ.
ಶಿವನಿದ್ದಲ್ಲಿಗೆ ತಾನು ಬಂದು ಪೂಜಿಸಿದರೆ ಶಿವನು ಕಣ್ಮರೆಯಾದನು.ಅದರಿಂದಾನಿರ್ದಲ್ಲಿಗೆ ಸಮಂತು
ತನ್ನನೆ ತರ್ಪಂ ಎಂದು ಗಿರಿಜೆ ಛಲದಿಂದ ಹೇಳುತ್ತಾಳೆ. ಶಿವನನ್ನು ನಿಕೃಷ್ಟಾತ್ಮ ಎಂದು
ಹೀಗಳೆಯುತ್ತಾಳೆ. ಮುಂದೆ ಉಗ್ರ ತಪಸ್ಸನ್ನು ಮಾಡಿ ಅವನನ್ನು ಒಲಿಸಲಾಗಿ ವಟುವೇಷದಲ್ಲಿ ಅವನು ಬಂದಾಗ ಕನಲಿದುದು
ಅವಳ ಮಾನವೀಯತೆಗೆ ಸಾಕ್ಷಿಯಾಗಿದೆ.
ಗಿರಿಜಾಕಲ್ಯಾಣದಲ್ಲಿ ಹರಿಹರನ ಸ್ವದೇಶಿ ಪ್ರೇಮವನ್ನು ಕಾಣಬಹುದಾಗಿದೆ.
ಪೂರ್ವದ ಕಾವ್ಯ-ಪುರಾಣಗಳ ಪ್ರಕಾರ ಶಿವನು ತಪಸ್ಸಿಗೆ ನಿಂತ ಸ್ಥಳವು ಹಿಮವತ್ ಪರ್ವತದ ಅಡಿಯಲ್ಲಿಯಾದರೂ
ಹರಿಹರನ ಈ ಕಾವ್ಯದಲ್ಲಿ ಆ ಪುಣ್ಯಭೂಮಿಯನ್ನು ತನ್ನ
ನೆಲೆವೀಡಾದ ಹಂಪೆಯ ಪರಿಸರದ ಹೇಮಕೂಟದಲ್ಲಿ ತಂದಿರಿಸಿದ್ದಾನೆ. ಗಿರಿಜೆಗೆ ತಕ್ಕವರನಾದ ಪರಮೇಶ್ವರನು
ಆಕೆ ಬಾಲ್ಯಾವಸ್ಥೆ ಕಳೆದು ಪ್ರೌಢಾವಸ್ಥೆಗೆ ಬರುವವರೆಗೂ ಶಿವನು ಹೇಮಕೂಟದಲ್ಲಿಯೇ ತಪದಿಂದಿರುವನು.
ಗಿರಿಸುತೆ ಅಲ್ಲಿಗೆ ಹೋಗಿ ಪರಿಪೂರ್ಣ ಪರಂಜ್ಯೋತಿಯ ಮನವೊಲಿಸಿ ಮದುವೆಯಾಗಲಿ ಎಂದು ಎಂದು ನಾರದರು ಸೂಚಿಸಿದ
ತರುವಾಯ ಗಿರಿರಾಜನು ಮಗಳನ್ನು ಜಯೆ-ವಿಜಯ ರೊಂದಿಗೆ ಹೇಮಕೂಟಕ್ಕೆ ತಂದು ಬಿಟ್ಟು ಹೋಗುವನು. ಹೀಗಾಗಿ
ಹರಿಹರನು ತನ್ನ ಸ್ವದೇಶ ಪ್ರೇಮವನ್ನು ವ್ಯಕ್ತಪಡಿಸಲು ಈ ಪ್ರಸಂಗವನ್ನು ಉಪಯೋಗಿಸಿಕೊಂಡಿದ್ದಾನೆ. ತುಂಗಾಭದ್ರೆಯ
ವರ್ಣನೆ, ಹೇಮಕೂಟದ ವರ್ಣನೆಗಳನ್ನು ವಿಸ್ತಾರವಾಗಿ
ತಂದಿದ್ದಾನೆ. ಇದುವರೆಗಿನ ಕಾವ್ಯ-ಪುರಾಣಗಳಲ್ಲಿಯ
ಉತ್ತರ ದೇಶದಲ್ಲಿ ನಡೆದಿದ್ದ ಕಥಾದೃಶ್ಯವು ಒಮ್ಮಿಂದೊಮ್ಮೆಲೆ ದಕ್ಷಿಣಾ ಪಥದಲ್ಲಿ ಅಂದರೆ ಕವಿಯ ಮೆಚ್ಚಿನ
ಹೇಮಕೂಟದಲ್ಲಿ ನಡೆಯುತ್ತದೆ. ಗಿರಿಜೆಯು ವಿರೂಪಾಕ್ಷನನ್ನು ಒಲಿಸಲು ಇಲ್ಲಿಯೇ ನೆಲೆನಿಂತಳು. ಗಿರಿಜಾಕಲ್ಯಾಣದ
ಎಂಟನೆಯ ಆಶ್ವಾಸದಲ್ಲಿ ಮತಂಗಪರ್ವತದ ವರ್ಣನೆಯು ಬರುತ್ತದೆ. ಗಿರಿಜೆಯ ಮನದಿಚ್ಚೆಯನ್ನು ಸಲ್ಲಿಸಲು
ಮನ್ಮಥನು ಮತಂಗಪರ್ವತವನ್ನೇರಿ ತಪೋನಿರತ ಶಿವನೆಡೆಗೆ ಪುಷ್ಪ ಬಾಣವನ್ನೆಸೆದ ಸಂದರ್ಭವು ವರ್ಣಿತವಾಗಿದೆ.
ಪ್ರಾಚೀನ ಶೈವಪುರಾಣಗಳಲ್ಲಿಯ ಇದೇ ಕಥೆಯನ್ನು ಓದಿಕೊಂಡು ಬಂದಿದ್ದ ಓದುಗರಿಗೆ ಹರಿಹರನ ಗಿರಿಜಾಕಲ್ಯಾಣದ
ಕಥೆಯನ್ನು ಗಮನಿಸಿದಾಗ ಬದಲಾದ ದೃಶ್ಯವನ್ನು ಕಾಣಬಹುದಾಗಿದೆ.
ಇದು ಹರಿಹರನ ಸ್ವಾತಂತ್ರ್ಯ ಮನೋಭಾವನೆಯನ್ನು ಸೂಚಿಸುತ್ತದೆ. ಜೊತೆಗೆ ಆತನ ದೇಶಪ್ರೇಮವನ್ನು, ಕಾವ್ಯದ
ವಿಶಿಷ್ಟತೆಯನ್ನು ಸೂಚಿಸುವ ಗುರುತೂ ಆಗಿದೆ.
ಹರಿಹರನು ತನ್ನ ಕೃತಿಯಲ್ಲಿ ವಿಭೂತಿಯ ಮಹಿಮೆಯನ್ನು ನೂತನವಾಗಿ
ಸೃಷ್ಟಿಸಿದ್ದಾನೆ. ಗಿರಿಜೆಯು ಶಿವನನ್ನು ಒಲಿಸುವುದಕ್ಕೆ ಉಗ್ರವಾದ ತಪಸ್ಸನ್ನು ಕೈಗೊಂಡಳು. ಆಗ ಶಿವನು
ಗಿರಿಜೆಯನ್ನು ಪರೀಕ್ಷಿಸುವುದಕ್ಕಾಗಿ ವಿಪ್ರ ವಟುವೇಶದಲ್ಲಿ ಆಕೆಯ ಬಳಿಗೆ ಬಂದು, ಗಿರಿಜೆಯು ಪೂಜಿಸುತ್ತಿದ್ದ
ಶಿವನನ್ನು ವ್ಯಂಗ್ಯವಾಗಿ ಟೀಕಿಸಿ ನುಡಿದಾಗ ಆ ನಿಂದನೆಯನ್ನು ಕೇಳಲಾರದೆ ಆಕೆಯು ಕೋಪಗೊಂಡು ಭಸ್ಮದಿಂದ
ಶಿವನಿಗೆ ಹೊಡೆಯುವಳು.
ಆದ ನಿರೋಧದ ನಿಂದೆಯ
ನಾದರಿಸದೆ ಭಸಿತದಿಂದೆ ವಿಪ್ರನನಿಡೆ ಪೋ
ಪೋದುದು ವಟು ವೇಷಂ ಶಿವ
ನಾದೊಡದೇಂ ಪುಸಿ ದಿಟಕ್ಕೆ ನಿಲ್ವುದೆ ಜಗದೊಳ್. ಈ ಪ್ರಸಂಗದಲ್ಲಿ ಹರಿಹರನು ಭಸಿತದ ಮಹಿಮೆಯನ್ನು ನಿರೂಪಿಸಲು
ಈ ಪ್ರಸಂಗವನ್ನು ತಂದಿರುವನಾದರೂ ಈ ಸನ್ನಿವೇಶದಲ್ಲಿ ನಾಟಕೀಯತೆ ಮತ್ತು ರಮಣೀಯತೆಯನ್ನು ಕಾಣಬಹುದಾಗಿದೆ. ದೇವರಿದ್ದಲ್ಲಿ ಹೋಗಿ ಮಾಡುವ
ಪೂಜೆ ಇಲ್ಲಿ ತಾನಿದ್ದ ಕಡೆ ವೇಷಮರೆಸಿಕೊಂಡು ಬಂದು ಶಿವ ಗಿರಿಜೆಯಿಂದ ವಿಭೂತಿಗಟ್ಟಿಯ ಹೊಡೆತಕ್ಕೆ
ತುತ್ತಾಗಿ ನಿಜತ್ವವನ್ನು ತೋರಿಸುವ ಪ್ರಸಂಗವಾಗಿದೆ. ಶಿವ ಪುಸಿಯಾಗಿದ್ದ; ಗಿರಿಜೆಯ ಭಕ್ತಿ ದಿಟವಾಗಿತ್ತು;
ಹಾಗಾಗಿ ಈ ಪ್ರಸಂಗ ‘ಪುಸಿ ದಿಟಕ್ಕೆ ನಿಲ್ವುದೆ ಜಗದೊಳ್’ ಎಂಬ ಉದ್ಗಾರವಾಗಿದೆ. ಈ ಮಾತು ಹರಿಹರನಿಗೆ
ಅಚ್ಚುಮೆಚ್ಚಿನದಾಗಿದೆ.
ಹರಿಹರ ಕವಿಯು ಗಿರಿಜೆಯ ವ್ಯಕ್ತಿತ್ವದಲ್ಲಿನ ಮುಖ್ಯಗುಣವಾದ ʼಛಲʼವನ್ನು ಸರಿಯಾಗಿಯೇ ಗುರುತಿಸಿರುವನು.
ಅವಳ ಛಲದ ರೂಪದ ತಪಸ್ಸು ಎಷ್ಟು ಕಠಿಣವಾಗಿತ್ತೆಂದರೆ, ಹಿಮವಂತ ಋತುವಿನಲ್ಲಿ ಅಗ್ನಿದೇವನು ಆ ಶೀತಕ್ಕೆ
ಹೆದರಿ ನಡುಗುತ್ತಾ ನಿಲ್ಲಲಾರದೆ ಕೃಶವಾಗಿ ಕಡೆಗೆ ಸೌದೆಯನ್ನು ಹೊಕ್ಕನಂತೆ (ಆ.೯.ಪ.ಸಂ.೭೯). ಹಿಮವಂತ
ಋತುವಿನ ಸಹಿಸಲಸಾಧ್ಯವಾದ ಚಳಿಯನ್ನು ಹರಿಹರ ವರ್ಣಿಸುತ್ತ ಹುಟ್ಟಿದ್ದು ಬೆಳೆದದ್ದು, ಕೊಟ್ಟದ್ದು ಕೊಂಡದ್ದು,
ಉಟ್ಟದ್ದು, ತೊಟ್ಟಿದ್ದು, ಮೆಟ್ಟಿದ್ದು ಹಾಗೂ ಮುಟ್ಟಿದ್ದು ಎಲ್ಲ ಚಳಿಯೇ ಆಗಿತ್ತು ಎಂದು ಹೇಳುವನು
(ಆ.೯.ಪ.ಸಂ೮೨).
ಹರಿಹರನಲ್ಲಿ ಬೇಸಿಗೆ, ಮಳೆಗಾಲ,ಹಾಗೂ
ಚಳಿಗಾಲದ ವರ್ಣನೆಗಳು ಕೃತಿಯಲ್ಲಿ ಸಾರ್ಥಕವಾಗಿ ಬಂದಿವೆ. ಇತರೆ ಚಂಪೂಕಾವ್ಯಗಳಲ್ಲಿರುವಂತೆ
ಬಿಡಿಯಾಗಿ,
ಎಡಬಿಡಂಗಿಯಾಗಿ ನಿಲ್ಲದೆ ಕಥೆಯೊಡನೆ
ಅವು ಸಾವಯವ ಸಂಬಂಧವನ್ನು ಹೊಂದಿವೆ. ಗಿರಿಜೆಯ ತಪಸ್ಸಿಗೆ ಪೂರಕವಾಗಿ ಬಂದಿವೆ. ಗಿರಿಜೆಯ ತಪಸ್ಸನ್ನು ಬೇಸಿಗೆ ಕಾಲ.ಮಳೆಗಾಲ ಹಾಗೂ
ಚಳಿಗಾಲಗಳೊಂದಿಗೆ ಕಳೆದಳು ಎಂದು ತಪಸ್ಸಿನೊಂದಿಗೆ
ಮೂರುಕಾಲಗಳನ್ನು ವರ್ಣಿಸಿದ್ದಾನೆ. ಕೆಲವು ಪದ್ಯಗಳನ್ನು ನಿದರ್ಶನಕ್ಕೆ ಪರಾಂಬರಿಸ ಬಹುದಾಗಿದೆ.
ಬಿಸಿಲಿನ ಧಗೆಯನ್ನು ಕುರಿತು ಈ
ಕಂದ ಪದ್ಯದಲ್ಲಿ ಈ ರೀತಿ ವರ್ಣಿಸಿದ್ದಾನೆ.
ಮರದಡಿಯೊಳ್ ಕಾನನದೊಳ್
ಗಿರಿತಟದೊಳ್
ಬಟ್ಟ ಬಯಲೊಳಂಬರತಳದೋಳ್
ಕರಿಯ ಬಿಸಿಲುರಿಯ ಬಿಸಿಲ
ಚ್ಚರಿಯ ಬಿಸಿಲ್ ಪಿರಿಯ ಬಿಸಿಲಖಂಡಿತದ ಬಿಸಿಲ್ ( ಆ.೯,
ಪ.ಸಂ.೨೩)
( ಮರದ ಕೆಳಗೆ,ಕಾಡಿನಲ್ಲಿ,ಬೆಟ್ಟದ
ತಪ್ಪಲಿನಲ್ಲಿ,ಬಯಲಿನಲ್ಲಿ, ಗಗನದಲ್ಲಿ ಕ್ರಮವಾಗಿ ಕರಿಯ ಬಿಸಿಲು,ಉರಿಯ ಬಿಸಿಲು,ಅಚ್ಚರಿಯ
ಬಿಸಿಲು,ಮತ್ತು ಅಖಂಡವಾದ ಬಿಸಿಲು ಹೀಗೆ ಎಲ್ಲೆಲ್ಲಿಯೂ ಬಿಸಿಲೇ
ಬಿಸಿಲ್)
ಮಳೆಗಾಲದ ವರ್ಣನೆ:
ಮಳೆಗಾಲದಲ್ಲಿ ಮಿಂಚಿನ ಗುಡುಗಿ ಆರ್ಭಟದ ವರ್ಣನೆ,
ಘುಳು ಘುಳು ಘಳ ಘಳ ಘುಡು ಘುಡು
ಘುಳು ಛಿಟಿ ಛಿಟಿ ಘಾರ್ಘುಳಂ ದಢಂ ಧಾಂಧಡ ಛಿಂ
ಛಿಳಿ ಛಿಳಿ ಭಿಂಭಿಂ ಘಡ ಘಡ
ಘಳ ಘಡ ಘಡಿಲೆಂದು ಮೊಳಗು ಮೊಳಗಿತು ನಭದೊಳ್ ( ಆ.೯,
ಪ.ಸಂ.೪೧)
( ಆಕಾಶದಲ್ಲಿ ಕಾರ್ಮೋಡಗಳು ಕವಿದು ಗುಡುಗು,ಮಿಂಚು,ಸಿಡಿಲುಗಳ
ಬಗೆ ಬಗೆಯ ಶಬ್ದವು ಮೊಳಗಿತು)
ಜಡಿಮಳೆಯ ವರ್ಣನೆ:
ಗಗನಂ ಕೆಟ್ಟುದು ಚಂದ್ರ ಸೂರ್ಯರಳಿದರ್ ದಿಕ್ಚಕ್ರ
ಮಿಲ್ಲಾಯ್ತುಂಬ
ಟ್ಟೆಗಳಸ್ಪಷ್ಟಮವಾದುವಾತ್ತ ಜಳದೊಳ್ ಪೂಳ್ದತ್ತು
ಧಾತ್ರಿತಳಂ
ಖಗ ಸಂಚಾರತೆ ಶೂನ್ಯಮಾದುದು, ನಿರುದ್ಯೋಗಕ್ಕೆ ಪಕ್ಕಾದುದೀ
ಜಗಮೆಂದೆಂಬಿನಮೆಯ್ದೆ ಕಟ್ಟಿಕಱೆದತ್ತಾಸಾರಮೀಲೋಕದೊಳ್ ( ಆ.೯, ಪ.ಸಂ.೫೫)
( ಜಡಿಮಳೆ ಹಿಡಿದಿದ್ದರಿಂದ
ಗಗನವು ಕೆಟ್ಟು ಹೋದಂತಾಗಿತ್ತು,ಚಂದ್ರಸೂರ್ಯರ
ದರ್ಶನವೇ ಇಲ್ಲದಂತಾಯಿತ್ತು,ದಿಕ್ಕೂ
ಕಾಣದಂತಾಯಿತ್ತು,
ದಾರಿಗಳು ಮಸಕಾದವು, ಭೂಮಿಯು ನೀರಿನಲ್ಲಿ ಮುಳುಗಿದಂತಾಗಿತ್ತು, ಪಕ್ಷಿಗಳ ಸಂಚಾರ ನಿಂತಾಂತಾಗಿತ್ತು, ಜಗತ್ತು ನಿರುದ್ಯೋಗಕ್ಕೆ
ಪಕ್ಕಾಗಿತ್ತೋ ಎಂಬಂತೆ ಜಡಿಮಳೆ ಸುರಿಯುತ್ತಿತ್ತು.)
ಚಳಿಗಾಲದ ವರ್ಣನೆ:
ಹಿಮಂತ ಋತುವಿನಲ್ಲಿ ಶೀತದ ಪ್ರಖರತೆಯನ್ನು ಕುರಿತು,
ಉದಯಂಶೀತೋದಯಮ
ಗ್ಗದ ಮಧ್ಯಾಹ್ನಂ ತುಷಾರಮಧ್ಯಾಹ್ನಂ ಮಿ
ಕ್ಕುದಯೂಸ್ತಮಯಂ ತಾನು
ಷ್ಣದಸ್ತಮಯಮೆನಿಸಿತಮಮ ಹಿಮವಿಭ್ರಮದೊಳ್ (ಆ.೯. ಪ.ಸಂ.೭೩)
( ಆ ಹಿಮದ ವಿಲಾಸದ ಸಮಯದಲ್ಲಿ ಉದಯವೆಂದರೆ ಶೀತದ ಉದಯವೇ,ಮಧ್ಯಾಹ್ನವೆಂದರೆ ಹಿಮದ ಮಧ್ಯಾಹ್ನವೆ,ಇನ್ನು ಉಳಿದ ಅಸ್ತಮಯವೆಂದರೆ ಉಷ್ಣದ ಅಸ್ತಮಯವೇ ಆಗಿತ್ತು)
ನುಡಿಯೆ ಹುಹು ನಡೆಯ ಮಾತೇ
ಕೂಡಲೆ
ಪ್ರಾಣಂಗೆ ಚಳಿಯ ಕುಪ್ಪಸಮಾಯ್ತೆಂ
ದೊಡೆ ಹಿಮದ ಮಹಿಮೆಯಂ ಪೇ
ಳ್ವೊಡೆ ಕೇಳ್ವವನಾವನೊರ್ವನುರ್ವೀತಳದೊಳ್(ಆ.೯.
ಪ.ಸಂ.೭೬)
( ಚಳಿಗಾಲದಲ್ಲಿ
ನುಡಿಯೆಲ್ಲವೂ ಹು|ಹು|ಹು| ಎಂಬ ಚೆಲುವಾದ ಎಂದಮೇಲೆ ನಡೆಯ ಮಾತೇಕೆ? ಒಡಲೇ ಪ್ರಾಣಕ್ಕೆ ಕುಪ್ಪಸ (ಹೊದಿಕೆ)ಎಂದಮೇಲೆ ಆ ಹಿಮದ
ಮಹಿಮೆಯನ್ನುಬಣ್ಣಿಸುವುದೇನು?)
ಮಾಗಿಯ ಕಾಲದಲ್ಲಿ ಚಳಿಯ ಪ್ರಖರತೆ
ಪುಟ್ಟಿತುಚಳಿ ಬಳೆದುದು ಚಳಿ
ಕೊಟ್ಟುದು ಚಳಿ ಕೊಂಡುದೆಲ್ಲಮಂ ಚಳಿಚಳಿಯೆಂ
ದುಟ್ಟುದು ಚಳಿ ತೊಟ್ಟುದು ಚಳಿ
ಮೆಟ್ಟಿತು ಚಳಿ ಮುಟ್ಟಿತೆಲ್ಲ ಚಳಿ ಪೊಸ ಚಳಿಯೊಳ್(ಆ.೯.
ಪ.ಸಂ.೮೨)
( ಹಿಮಂತ ಋತುವಿನಲ್ಲಿ
ಹುಟ್ಟಿದ್ದು,ಬೆಳೆದಿದ್ದು,ಕೊಟ್ಟದ್ದು,ಕೊಂಡದ್ದು,ಉಟ್ಟದ್ದು,ತೊಟ್ಟಿದ್ದು,ಮೆಟ್ಟಿದ್ದು ಹಾಗೂ ಮುಟ್ಟಿದ್ದು ಚಲಿಯೇ ಆಗಿತ್ತು.)
ತಪಸ್ಸಿನಲ್ಲಿದ್ದ ಶಿವನನ್ನು ಎಚ್ಚರಿಸಲು ಬಂದ ಮನ್ಮಥನು
ಶಿವ ಹಣೆಗಣ್ಣಿಗೆ ಸುಟ್ಟು ಬಲಿಯಾದುದನ್ನು ಕಂದ ಪದ್ಯದಲ್ಲಿ ವರ್ಣಿಸಿರುವ ರೀತಿ ಅಮೋಘವಾದುದು.
ಇಟ್ಟಣಿಸಿ ಘುಡುಘುಡಿಸಿ ಕಿಡಿ
ಗುಟ್ಟಿ ಕನಲ್ದಡಸಿ ಸಿಡಿಲ ಬಳಗದ ಮುಳಿಸಂ
ತೊಟ್ಟುದು ಬಿಸುಗಣ್ಣುರಿ ಪೊಱ
ಮಟ್ಟುದು ಸುಟ್ಟುದು
ರತೀಶನಂ ನಿಮಿಷಾರ್ಧಂ (ಆ.೮, ಪ.ಸಂ.೪೮)
ಒಟ್ಟಿನಲ್ಲಿ
ಹೇಳಬೇಕೆಂದರೆ ಪಂಪನ ಭಾರತ, ರನ್ನನ
ಗದಾಯುದ್ದಗಳನ್ನು ಬಿಟ್ಟರೆ ಒಂದು ಉತ್ತಮವಾದ,ಗಣ್ಯವಾದ, ವಿಶೇಷವಾದ, ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿದ ಕಾವ್ಯವೆಂದರೆ ಹರಿಹರ
ವಿರಚಿತ ಗಿರಿಜಾಕಲ್ಯಾಣ ಮಾತ್ರ. ಈ ಕವಿಯ ರಗಳೆಗಳ ಅವಲೋಕನದಲ್ಲಿ, ಅಭ್ಯಾಸದಲ್ಲಿ, ವೀಕ್ಷಿಸಿರುವಂತೆ
ಇಲ್ಲೂ ಪುನರುಕ್ತಿಗಳನ್ನು, ಭಾವಾವೇಶವನ್ನು, ಕಟ್ಟು ಬಿಟ್ಟ ಜಲದಂತೆ ನಿರರ್ಗಳವಾದ ಹರಿವಿಕೆಯನ್ನು, ಭಕ್ತಿಯ ದರ್ಶನವನ್ನು, ಪೂಜೆಯನ್ನು, ವಿಧಿಯನ್ನು, ಆರಾಧನವನ್ನು, ಅಭಿಮಾನ ಅಂತಃಕರಣದ ನಿಲುವನ್ನು ಶಿವಮಹಿಮೆಯನ್ನು ಸ್ವರೂಪವನ್ನು
ಮನಗಾಣಬಹುದು.
ಹರಿಹರನ ಗಿರಿಜಾ ಕಲ್ಯಾಣವು ಸುಂದರವಾದ ಚಂಪೂ ಕಾವ್ಯ.
ಹರಿಹರನು ಪಂಡಿತರಿಗೂ ಪಾಮರರಿಗೂ ಪ್ರಿಯವಾಗುವ ಕಾವ್ಯವನ್ನು ಬರೆಯಬಲ್ಲನೆಂಬುದಕ್ಕೆ
ನಿದರ್ಶನವಾಗಿದೆ. ಪಾರ್ವತಿಯ ತಪಸ್ಸಿನ ವರ್ಣನೆ,ಕಾಮದಹನ
ಪ್ರಸಂಗ,ರತಿಪ್ರಲಾಪಗಳ ವರ್ಣನೆ, ಗಿರಿಜೆಗೆ ಶಿವನು
ವಟುವೇಷದಿಂದ ಪ್ರತ್ಯಕ್ಷವಾಗುವ ಸನ್ನಿವೇಶಗಳು ಹರಿಹರನ ಕೌಶಲಕ್ಕೆ ಉಜ್ವಲವಾದ
ಉದಾಹರಣೆಗಳಾಗಿವೆ. ಅದರಲ್ಲೂ ಪಾರ್ವತಿಯು ವಿಭೂತಿಯಿಂದ ಹೊಡೆಯಲು ಶಿವನು ಪ್ರತ್ಯಕ್ಷನಾಗುವ
ಸನ್ನಿವೇಶ ಕವಿಯ ಸ್ವತಂತ್ರ ಕಲ್ಪನೆಯಾಗಿದೆ. ಸ್ವತಂತ್ರ ಪ್ರವೃತ್ತಿಯವನಾದ ಹರಿಹರನು ತನ್ನದೇ ಆದ
ಕಾವ್ಯಮಾರ್ಗವನ್ನು ಸೃಷ್ಟಿಸಿಕೊಂಡು ಸುಂದರವಾದ ರಗಳೆಗಳನ್ನು ರಚಿಸಿದ್ದಾನೆ. ಗಿರಿಜಾ ಕಲ್ಯಾಣವು
ಈ ಕವಿಯು ಸ್ವತಂತ್ರ ಮಾರ್ಗವನ್ನು ಕಂಡುಕೊಳ್ಳಲು ನಡೆಸುತ್ತಿದ್ದ ಪ್ರಯತ್ನದ ಕಾಲದಲ್ಲಿ ರಚಿತವಾದುದ್ದು.
ಗಿರಿಜಾ ಕಲ್ಯಾಣ ಕೃತಿಯನ್ನು ರಚಿಸುವ ಮೂಲಕ ಚಂಪೂಕಾವ್ಯ ಪರಂಪರೆಯಲ್ಲಿ ಮಹತ್ತರವಾದ ಸ್ಥಾನವನ್ನು
ಪಡೆದುಕೊಂಡಿದ್ದಾನೆ. ʻಗಿರಿಜಾಕಲ್ಯಾಣʼ ಶಿವಲೀಲೆಯ, ದೇವಾಸುರ ಸಂಘರ್ಷದ ದೈವೀಕಥೆ.
ಒಂದರ್ಥದಲ್ಲಿ ಇದು ಸಾಂಕೇತಿಕಾರ್ಥವುಳ್ಳ ರೂಪಕವೂ ಹೌದು. ಮಾನವಪಾತ್ರಗಳ ನಿರೀಕ್ಷೆ ಇಲ್ಲಿರಬೇಕಾಗಿಲ್ಲ.
ಆದರೆ, ಗಿರಿಜೆ ಮಾನವ ಅಂಶಗಳಿಂದ ಕೂಡಿದ ದೈವೀ ಪಾತ್ರವಾಗಿದ್ದಾಳೆ. ಪರ್ವತರಾಜನ ಮಗಳಾಗಿ ಹುಟ್ಟಿ ದೈವೀಸೌಂದರ್ಯ,
ತಪಶ್ಶಕ್ತಿಗಳುಳ್ಳವಳಾದರೂ, ಶಿವಭಕ್ತಿ ತನ್ಮಯಳಾದರೂ, ಮಾನವ ಸಹಜವಾದ ಸ್ವಾಭಿಮಾನ-ಕ್ರೋಧ-ಛಲಗಳನ್ನು
ಪ್ರಖರವಾಗಿ ತೋರಿಸುತ್ತಾಳೆ ಎಂಬ ರಂ.ಶ್ರೀ.ಮುಗಳಿ ಅವರ ಅನಿಸಿಕೆ ಗಿರಿಜೆಯ ಪಾತ್ರದ ಔನ್ನತ್ಯವನ್ನು ಸೂಚಿಸುತ್ತದೆ. (ಕನ್ನಡ
ಸಾಹಿತ್ಯ ಚರಿತ್ರೆ, ಪು.೧೬೨, ೨೦೦೫)
ಹರಿಹರನು ಚಂಪೂ ಪ್ರಕಾರದಲ್ಲೇ ಕಾವ್ಯ
ರಚಿಸಿದ್ದರೂ ಕಾವ್ಯದ ಭಾಷೆಯನ್ನು ಸರಳಗೊಳಿಸಿದ. ತನ್ನ ಕಾವ್ಯ ಕೇವಲ ಪಂಡಿತರಿಗಷ್ಟೇ ಮಾತ್ರವಲ್ಲದೇ
ಜನಸಾಮಾನ್ಯರಿಗೂ ತಲುಪಬೇಕೆಂಬ ಆಶಯವನ್ನು ಹೊಂದಿದವನು. ಭಾಷಾ ಪ್ರಯೋಗದಲ್ಲಿ ತೊಂದರೆಯನ್ನು
ಕೊಡುತ್ತಿದ್ದ ರಳ,ಕ್ಷಳ.ಕುಳಗಳ ಗೊಂದಲವನ್ನು ನಿವಾರಿಸಿದವನು.
ಪುರಾಣೇತಿಹಾಸಗಳಿಂದ ಗಿರಿಜಾ ಕಲ್ಯಾಣವನ್ನು ಆಯ್ದುಕೊಂಡರೂ ಹೊಸತನವನ್ನು ಅಳವಡಿಸಿಕೊಂಡನು. ಹರಿಹರನ
‘ಗಿರಿಜಾಕಲ್ಯಾಣ ಮಹಾಪ್ರಬಂಧ’ದಲ್ಲಿನ
ಕಾವ್ಯಸ್ವರೂಪ ಹಳೆಯ ಚಂಪೂ ಮಾದರಿಯದ್ದಾಗಿದ್ದರೂ ಅದರಲ್ಲಿ ಅಕ್ಷರವೃತ್ತಗಳಿದ್ದರೂ ಕಂದಗಳದೇ ಮೇಲುಗೈ. ಈ ಕಾವ್ಯದಲ್ಲಿ ದೀರ್ಘ ಸಮಾಸಯುಕ್ತ ಸಂಸ್ಕೃತಭೂಯಿಷ್ಠ ಪ್ರೌಢಭಾಷಾಶೈಲಿ
ಹಿಂದೆ ಸರಿದು ಬಿಡಿಪದಗಳ ಸರಳ ಕನ್ನಡ ತನ್ನ ಪ್ರಾಬಲ್ಯವನ್ನು ಹೊಂದಿದೆ. ‘ಮಾರ್ಗ’ ಕಾವ್ಯದ ಸಂಕ್ಷಿಪ್ತತೆ-ಸಂಕುಚಿತತೆಗಳು
ಹೋಗಿ ‘ದೇಸಿ’ಯ ವಿಸ್ತಾರ ಮೈವೆತ್ತಿದೆ. ನಿರೂಪಣೆಯ ಬದಲು ಭಾವುಕತೆ ಮೈಗೂಡಿದೆ. ಭಾಷಿಕ ನೆಲೆಯಲ್ಲಿಯೂ
ಹರಿಹರನದ್ದೂ ಕ್ರಾಂತಿಕಾರಿ ನಿಲುವಾಗಿದೆ. ಈ
ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯದಲ್ಲಿ
ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಕನ್ನಡ ಸಾಹಿತ್ಯದ ಹರವಿಗೊಂದು ಹೊಸ ತಿರುವನ್ನು ಕೊಟ್ಟವನು.
ಭಾಷೆ,ವಸ್ತು, ಶೈಲಿ,ಛಂದಸ್‌ಗಳಲ್ಲಿ ಹೊಸತನವನ್ನು ಹಾಕಿಕೊಟ್ಟು ಕ್ರಾಂತಿಕಾರಕ
ಕವಿಯೆನಿಸಿದನು. ಮುಂದಿನ ಕವಿಗಳಿಗೆ ಮಾರ್ಗದರ್ಶಿಯಾಗುವುದರ ಮೂಲಕ ಸಾಹಿತ್ಯ ಪರಂಪರೆಯ ನಿರ್ಮಾಪಕನಾಗಿ
ಸಾಹಿತ್ಯ ಚರಿತ್ರೆಯಲ್ಲಿ ಗುರುತಿಸಲ್ಪಟ್ಟವನಾಗಿದ್ದಾನೆ.
ಪರಾಮರ್ಶನ ಗ್ರಂಥಗಳು:
೧. ಗಿರಿಜಾ ಕಲ್ಯಾಣ ಮಹಾ ಪ್ರಬಂಧಂ
(ಸಂ: ಎಸ್.ಜಿ.
ನರಸಿಂಹಾಚಾರ್ ಮತ್ತು ಎಂ.ಎ. ರಾಮಾನುಜ ಅಯ್ಯಂಗಾರ್) ಕಾವ್ಯಕಲಾನಿಧಿಮಾಲೆ, ಮೈಸೂರು. 1905,
೨. ಗಿರಿಜಾ ಕಲ್ಯಾಣ ಮಹಾ ಪ್ರಬಂಧಂ (ಸಂ:ಶಿ.ಚ. ನಂದೀಮಠ) ಲಿಂಗಾಯತ ವಿದ್ಯಾಭಿವೃದ್ಧಿ
ಸಂಸ್ಥೆ, ಧಾರವಾಡ. 1943,
೩.
ಗಿರಿಜಾಕಲ್ಯಾಣ, (ಸಂ:ಎಚ್. ದೇವೀರಪ್ಪ ಮತ್ತು ದೇ. ಜವರೇಗೌಡ) ಸಂಗ್ರಹ ಆವೃತ್ತಿ, ಮೈಸೂರು1951,
೪. ಗಿರಿಜಾ
ಕಲ್ಯಾಣ ಮಹಾ ಪ್ರಬಂಧಂ (ಸಂ, ಎಂ.ಜಿ. ನಂಜುಂಡಾರಾಧ್ಯ)(ಗದ್ಯಾನುವಾದದೊಂದಿಗೆ) ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 1976.
೫.
ಡಿ.ಎಲ್. ನರಸಿಂಹಾಚಾರ್, ಹಂಪೆಯಹರಿಹರ, ಪ್ರಚಾರೋಪನ್ಯಾಸಮಾಲೆ, ಮೈಸೂರುವಿಶ್ವವಿದ್ಯಾಲಯ, ಮೈಸೂರು. 1939.
೬. ಮಹಾಕವಿ
ಹರಿಹರದೇವ, ಸಂ:ಕೆ.ಜಿ.ಕುಂದಣಗಾರ, ರಾಜಾರಾಮ ಕಾಲೇಜು, ಕೊಲ್ಲಾಪುರ , 1932
೭. ಹರಿಹರ-
ಸಾಂಸ್ಕೃತಿಕ ಮುಖಾಮುಖಿ, ಸಂ:ಶಿವಾನಂದ ವಿರಕ್ತಮಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ೨೦೦೩
8.
ಎಸ್.ವಿದ್ಯಾಶಂಕರ: ವೀರಶೈವ ಸಾಹಿತ್ಯ ಚರಿತ್ರೆ ಸಂಪುಟ-೨ ( ಹರಿಹರದೇವ ಯುಗ),
ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೧೩