ಶನಿವಾರ, ಫೆಬ್ರವರಿ 4, 2023

 

ರತ್ನಾಕರವರ್ಣಿಯ  ಭರತೇಶ ವೈಭವ ಸಾಂಗತ್ಯ ಕಾವ್ಯ ಸಮೀಕ್ಷೆ

                        ಡಾ.ಸಿ.ನಾಗಭೂಷಣ

                                                       

     ಸಾಂಗತ್ಯ ಕನ್ನಡದಲ್ಲಿ ಎರಡು ವಿಧದಿಂದ ವೈಶಿಷ್ಟ್ಯವನ್ನು ಸಾಧಿಸಿದೆ. ಒಂದುಛಂದೋ ರೂಪವಾಗಿ, ಮತ್ತೊಂದು  ಸಾಹಿತ್ಯ ಪ್ರಕಾರವಾಗಿ. ಮೊದಲನೆಯದಾಗಿ ಇದು ಕನ್ನಡದ ವಿಶಿಷ್ಟ ಛಂದೋರೂಪ. ಕನ್ನಡದಲ್ಲಿ ಕರ್ನಾಟಕದ ವಿಷಯಜಾತಿಗಳೆಂದು ಪ್ರಸಿದ್ಧವಾದ ಛಂದೋಬಂಧಗಳಲ್ಲಿ ಇದಕ್ಕೊಂದು ಪ್ರತ್ಯೇಕವಾದ ಗೌರವದಸ್ಥಾನ ಮೀಸಲಾಗಿದೆ.  ತಡವಾಗಿ ಪ್ರಕಟವಾಯಿತೆಂದೋ ಏನೋ  ಲಾಕ್ಷಣಿಕರ ಗಮನಕ್ಕೆ ಬಾರದೇ, ಕ್ಷ್ಯ-ಲಕ್ಷಣ ಸಮೇತ ಉಳಿದ  ಕನ್ನಡ ಮಟ್ಟುಗಳೊಡನೆ  ಛಂದೋಗ್ರಂಥಗಳಲ್ಲಿ  ಸ್ಥಾನ ಪಡೆಯದ ಸಾಂಗತ್ಯವು ಹೊರಬಂದ ಅಲ್ಪಾವಧಿಯಲ್ಲಿಯೇ ಅವುಗಳಿಗಿಂತ ಮಿಗಿಲಾದ ಪ್ರಚಾರ-ಪ್ರತಿಷ್ಠೆಗಳನ್ನು ಗಳಿಸಿ ಘನತೆಗೇರಿ ನಿಂತಿತು. ಇದು ಇತರ ಪ್ರಕಾರಗಳಂತೆ ತನ್ನ ಮೂಲ ಲಯವನ್ನು ಬಿಟ್ಟು ಕದಲದೇ ಶುದ್ಧ ದೇಶೀ ಬಂಧವಾಗಿ ಬಾಳಿ ಬದುಕಿದೆ. ಉಳಿದ ಕನ್ನಡ ಛಂದೋಬಂಧಗಳು  ಇಡಿಯಾಗಿ  ಕಾವ್ಯಕ್ಕೆ ವಾಹಕವಾಗಿದ್ದರೆ,  ಕೇವಲ ಬಿಡಿಯಾಗಿ  ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಂಡರೆ ಸಾಂಗತ್ಯ ಬಿಡಿಯಿಂದ ಹಿಡಿದು ಇಡಿಯವರೆಗೆ  ಚಿಕ್ಕ ಕಾವ್ಯದಿಂದ ಹಿರಿಯ ಮಹಾಕಾವ್ಯಗಳವರೆಗೆ ಮೈಚಾಚಿ ನಿಂತಿತು. ಸಾಂಗತ್ಯವು ಯಾವ ಕನ್ನಡ ಬಂಧವು ತೋರದ ಹೊಸತನವನ್ನು ತೋರಿ ಸ್ವಚ್ಛಂದತೆ, ಸರಳತೆ, ನಯಗಾರಿಕೆಯನ್ನು ಮೈಗೂಡಿಸಿಕೊಂಡು ಮೆರೆದಿದೆ. ಎರಡನೆಯದಾಗಿ ಸಾಂಗತ್ಯ ಸಾಹಿತ್ಯ ರೂಪವನ್ನು ತಾಳಿ ಅಲ್ಲಿಯೂ ತನ್ನ ವಿಶಿಷ್ಟತೆಯನ್ನು ಪ್ರದರ್ಶಿಸಿದೆ. ಅದು ತನಗಿಂತ ಹಿಂದೆ ಕನ್ನಡದಲ್ಲಿ ಬೆಳೆದುಬಂದು ತಮ್ಮ ಸ್ಥಾನವನ್ನು  ಸ್ಥಿರಗೊಳಿಸಿಕೊಂಡ ಸಾಹಿತ್ಯ  ಪ್ರಕಾರಗಳ  ಸಾರಸ್ವವನ್ನೆಲ್ಲಾ ಹೀರಿಕೊಂಡು ತನ್ನದೇ ಆದ ಹಾಗೂ  ಸ್ವಚ್ಛಂದ ಮಾರ್ಗವನ್ನು ಅನುಸರಿಸಿ  ಹೊಸದೊಂದು ಪ್ರಕಾರವಾಗಿ, ಅವುಗಳಷ್ಟೇ ಸುಸ್ಥಿರವಾದ ಸ್ಥಾನವನ್ನು ಗಳಿಸಿಕೊಂಡು ನಿಂತಿದೆ. ವಸ್ತು, ವರ್ಣನೆ, ತಂತ್ರ, ರಸ, ಪಾತ್ರ ಇತ್ಯಾದಿಗಳಲ್ಲಿ ಸ್ವಲ್ಪ ಮಟ್ಟಿನ ಪರಂಪರೆಯ ಅನುಕರಣೆ ಇದರಲ್ಲೂ ಕಂಡುಬಂದರೂ ಅದಕ್ಕಿಂತ ಹೆಚ್ಚಾಗಿ ಸ್ವತಂತ್ರತೆ, ಅನುಕರಣಾತೀತತೆ ಎದ್ದು ತೋರುತ್ತದೆ.

      ಇತರ ಪ್ರಕಾರಗಳಂತೆ ಸಾಂಗತ್ಯದಲ್ಲಿಯೂ ಜೈನ, ವೀರಶೈವ, ಬ್ರಾಹ್ಮಣ ಈ ತ್ರಿಮತದ ಕವಿಗಳು ಸಾಹಿತ್ಯ ಕೃಷಿ ಮಾಡಿದ್ದಾರೆ.  ಅದರಂತೆ ಸ್ತ್ರೀಯರೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕನ್ನಡ ಸಾಹಿತ್ಯದಲ್ಲಿ ಸಾಂಗತ್ಯದ ಸ್ಥಾನಮಾನ ಹೆಚ್ಚುವಂತೆ, ಎದ್ದು ತೋರುವಂತೆ ಮಾಡಿದ್ದಾರೆ. ವಸ್ತುವಿನ  ದೃಷ್ಟಿಯಿಂದ ನೋಡಿದರೆ  ಸಾಂಗತ್ಯ ಸಾಹಿತ್ಯ ವೈವಿಧ್ಯಮಯ ವಸ್ತುಗಳನ್ನೊಳಗೊಂಡಿದೆ. ಇತರ  ಪ್ರಕಾರಗಳಂತೆ ಇದರಲ್ಲಿಯೂ ಮತತತ್ವ ಪ್ರಧಾನ ಕಾವ್ಯಗಳು ಹೆಚ್ಚಾಗಿ ಮೂಡಿ ಬಂದಿದ್ದರೂ ಅವು  ಕೇವಲ ಮತಪ್ರಚಾರಕ ಶುಷ್ಕ ಕಾವ್ಯಗಳಾಗಿರದೇ ಕಾವ್ಯ ತತ್ವಗಳನ್ನೊಳಗೊಂಡ  ಕಲಾಕೃತಿಗಳಾಗಿವೆ. ಐತಿಹಾಸಿಕ  ಕಾವ್ಯಗಳು  ಸಾಂಗತ್ಯ ಪ್ರಕಾರಗಳಲ್ಲಿ  ಹೆಚ್ಚಾಗಿ ರಚನೆಗೊಂಡಿವೆ. ಉಳಿದ ಪ್ರಕಾರಗಳಲ್ಲಿ  ಕಾಣಸಿಗದ ಚಾರಿತ್ರಿಕ ವಸ್ತುಗಳ ನ್ನೊಳಗೊಂಡ ಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯದಲ್ಲಿದ್ದ ಚಾರಿತ್ರಿಕ ಕಾವ್ಯಗಳ  ಕೊರತೆಯನ್ನು ತುಂಬಿದ ಕೀರ್ತಿ ಸಾಂಗತ್ಯಕವಿಗಳಿಗೆ ಸಲ್ಲುತ್ತದೆ.  ಇದು ಕನ್ನಡ ಸಾಹಿತ್ಯಕ್ಕೆ ಸಾಂಗತ್ಯವು ನೀಡಿದ ಮಹತ್ತರ ಕಾಣಿಕೆಯಾಗಿದೆ.

  ರತ್ನಾಕರ ಹಾಗೂ ಸಮಕಾಲೀನ ಪರಿಸರ :

      10ನೇ ಶತಮಾನದಲ್ಲಿ ಕನ್ನಡ ನಾಡಿನ ಅರಸು ಮನೆತನಗಳ್ನು ನಿಯಂತ್ರಿಸುವಷ್ಟರ ಮಟ್ಟಿಗೆ ಜೈನಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ರಾಜಾಶ್ರಯದ ನೆರವು ಜೈನಧರ್ಮಕ್ಕೆ ಪ್ರಬಲವಾಗಿದ್ದಿತು. ಆದರೆ ಬರುಬರುತ್ತಾ ರಾಜಾಶ್ರಯ ಸಡಿಲತೆ ಜೈನಧರ್ಮಕ್ಕೊದಗಿತು. ಜೊತೆಗೆ ವೀರಶೈವ ಧರ್ಮ ಮತ್ತು ವೈಷ್ಣವ ಧರ್ಮಗಳ ಹೊಸ ಸವಾಲುಗಳನ್ನು ಜೈನಧರ್ಮ ಎದುರಿಸಬೇಕಾಯಿತು.

      ಹೀಗಾಗಿ 15ನೇ ಶತಮಾನದ ವೇಳೆಗೆ ಜೈನಧರ್ಮ ಸಾಕಷ್ಟು ಅಡ್ಡಿ ಆತಂಕಗಳನ್ನು ಎದುರಿಸಬೇಕಾಯಿತು. ಹಿಂದೂ ಸಂಸ್ಕೃತಿಯ ಪುನರುತ್ಥಾನದ ಸಲುವಾಗಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯದಲ್ಲಿ ವೀರಶೈವ ಧರ್ಮ, ದ್ವೈ, ವಿಶಿಷ್ಟಾದ್ವೈತಗಳು ಹೆಚ್ಚಿನ ಪ್ರೋತ್ಸಾಹ ಪಡೆದಿದ್ದರಿಂದ ಜೈನಧರ್ಮ ಕರಾವಳಿ ಭಾಗದಲ್ಲಿ ತನ್ನ ಅಸ್ತಿತ್ವವನ್ನು ಹುಡುಕಿಕೊಳ್ಳುವ ಪ್ರಯತ್ನ ಮಾಡಬೇಕಾಯಿತು. ವೀರಶೈವಧರ್ಮ, ವೈಷ್ಣವ ಧರ್ಮಗಳು ತ್ಯಾಗ ಮಾಡದೆ ಮುಕ್ತಿ ಪಡೆಯಬಹುದೆಂದು ಸಾರುತ್ತಾ ಜನಪ್ರಿಯತೆಯನ್ನು ಪಡೆದವು. ಇಂತಹ ಸಂದರ್ಭದಲ್ಲಿ ವಿಜಯನಗರ ಮಾಂಡಳಿಕರಾಗಿದ್ದ ಕರಾವಳಿಯ ಸಾಮಂತರು ಜೈನ ಧರ್ಮಕ್ಕೆ ಆಶ್ರಯ ನೀಡಿದರು.

      ಕರಾವಳಿಯ ಭೈರವರಸರು, ಗೇರುಸೊಪ್ಪೆ, ಹಾಡುವಳ್ಳಿ ಸಾಮಂತರು, ಕಳಸ ಬಂಗಾಡಿಯ ಬಂಗರು, ಏಣೂರಿನ ಅಚಿಲರು, ಮೂಡಬಿದ್ರೆಯ ಚೌಟರು ಮುಂತಾದವರು ಜೈನಧರ್ಮಕ್ಕೆ ಆಶ್ರಯ ನೀಡಿದರು. ಪ್ರಮುಖ ಅರಸು ಮನೆತನಗಳ ರಾಜಾಶ್ರಯ ತಪ್ಪಿದ್ದರಿಂದ ಜೈನಧರ್ಮ ಕರ್ನಾಟಕದ ಒಂದು ಮೂಲೆಯಲ್ಲಿ ಜೀವಿಸಬೇಕಾಯಿತು. ರತ್ನಾಕರನಂತಹ ಕವಿ ಹುಟ್ಟಿ ಬೆಳೆಯುವ ಹೊತ್ತಿಗೆ ಕನ್ನಡನಾಡಿನಲ್ಲಿ ಜೈನಧರ್ಮ ಇಂಥ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಕರಾವಳಿಯ ಸಣ್ಣಪುಟ್ಟ ರಾಜರು ಜೈನಧರ್ಮ ಅಲ್ಲಿ ತಳವೂರಲು ಕಾರಣರಾದರು. ಈ ಹಿನ್ನೆಲೆಯಲ್ಲಿ ರತ್ನಾಕರ ಆರಿಸಿಕೊಂಡ ಕಾವ್ಯ ವಸ್ತುವನ್ನು ಪರಿಶೀಲಿಸಬೇಕಾಗುತ್ತದೆ. ಜೈನಧರ್ಮದ ಸಂಧಿಗ್ಧ ಸ್ಥಿತಿ, ಏಳು ಬೀಳುಗಳು ರತ್ನಾಕರನಂತಹ ಕವಿಗೆ, ಪಂಪ-ರನ್ನರ ಹಾಗೆ ತೀರ್ಥಂಕರರನ್ನು ಕುರಿತು ಕಾವ್ಯ ರಚನೆ ಮಾಡದೆ ಅವರನ್ನು  ಬಿಟ್ಟು  ಚಕ್ರವರ್ತಿಯ ಕಥೆಯನ್ನು  ಕಾವ್ಯದ ವಸ್ತುವನ್ನಾಗಿ ಆಯ್ಕೆ ಮಾಡಿಕೊಳ್ಳುವಂತಹ ಪರಿಸ್ಥಿತಿ  ಒಳಗಾಗುವಂತಾಯಿತು. ಜೈನಮಠ ರಾಜ ಪೀಠದಿಂದ ಸನ್ಮಾನಿತನಾಗಿ ತಾನೇ ತಾನಾಗಿ ಹರಡಿದ್ದ ಕಾಲದಲ್ಲಿ ಇದ್ದ ಧೋರಣೆಗೂ ಈಗ ಪ್ರಾಬಲ್ಯ ಕಡಿಮೆಯಾಗಿ ಅಳಿದುಳಿದ ಬೆಂಬಲದಲ್ಲಿ ಸಾಮಂತ ರಾಜರನ್ನು ನೆಚ್ಚಿಕೊಂಡು ಬದುಕಬೇಕಾದ ಕಾಲದ ಧೋರಣೆಗೂ ಇರುವ  ವ್ಯತ್ಯಾಸ ಎದ್ದು ಕಾಣುತ್ತದೆ.  ಕಠಿಣ ತಪಸ್ಸು, ವಿಪರೀತ ವೈರಾಗ್ಯ ಹೇಳುತ್ತಿದ್ದ ಜೈನಧರ್ಮವನ್ನು ನಿರಾಕರಿಸಿದ್ದ ಜನತೆ ಅದನ್ನೇ ಸವಿಸ್ತಾರವಾಗಿ ವರ್ಣಿಸುವ ತೀರ್ಥಂಕರ ಚರಿತ್ರೆ ಜನತೆಗೆ ರುಚಿಸುವುದಿಲ್ಲವೆಂದು ತಿಳಿದ ಈ ಕಾಲದ ಜೈನ ಕವಿಗಳು ಮಠದ ಹಿಡಿತದಲ್ಲಿ ಇರದೆ ರಾಜರ ಔದಾರ್ಯದಲ್ಲಿದ್ದರಿಂದ ತೀರ್ಥಂಕರರನ್ನು ಬಿಟ್ಟು ರಾಜರ ಚರಿತ್ರೆಗಳನ್ನು ಕುರಿತು ಕಾವ್ಯ ಕಟ್ಟಿದರು. ಪಂಪನಂತಹ ಕವಿಗಳು ರಾಜಾಶ್ರಯದಲ್ಲಿದ್ದೂ ಮಠದ ಮುನಿಗಳ ಹಿಡಿತಕ್ಕೆ ಸಿಕ್ಕಿದ್ದರಿಂದ ಅವರ ಕಾವ್ಯಧರ್ಮ ಲೌಕಿಕ-ಆಗಮಿಕವಾಗಿತ್ತು. ಆದರೆ ರತ್ನಾಕರವರ್ಣಿಯ ಕಾಲಕ್ಕೆ  ಲೌಕಿಕ-ಆಗಮಿಕ ಕಾವ್ಯಧರ್ಮ ನಿಂತುಹೋಗಿ ಅದಕ್ಕೆ ಬದಲಾಗಿ ಭೋಗದ ಪ್ರತೀಕಗಳಂತಿದ್ದ ರಾಜರ ವೈಭೋಗವೇ ಕಾವ್ಯಕ್ಕೆ ವಸ್ತುವಾಯಿತು. ಜೈನಕವಿಗಳ ಸಾಹಿತ್ಯಕ ಧೋರಣೆಯಲ್ಲಾದ ಈ ಮಾರ್ಪಾಡು ಧರ್ಮಕ್ಕೆ ಚರಿತ್ರೆಯ ಅನಿವಾರ್ಯ ಕೊಡುಗೆ ಎಂದು ಭಾವಿಸಬಹುದು. ರತ್ನಾಕರನಿಗಿಂತ ತುಸು ಪೂರ್ವದಲ್ಲಿಯೇ ವೃತ್ತವಿಲಾಸ ಮೊದಲಾದ ಜೈನಕವಿಗಳು ತೀರ್ಥಂಕರನ ಪುರಾಣ ಬಿಟ್ಟು ಇತರೆ ಧರ್ಮವನ್ನು ಹಾಸ್ಯಮಾಡಿ ಜನತೆಯನ್ನು ಆಕರ್ಷಿಸುವ ಕಾವ್ಯಗಳನ್ನು ಬರೆದರು. ಭಾಸ್ಕರನ ಜೀವಂಧರ ಚರಿತ್ರೆ, ಕಲ್ಯಾಣಕೀರ್ತಿಯ ಕೃತಿಗಳು, ವಿಜಯಣ್ಣನ ದ್ವಾದಶಾನುಪ್ರೇಕ್ಷೆ, ಬೊಮ್ಮರಸನ ಸನತ್ಕುಮಾರ ಚರಿತೆ ಶಿಶುಮಾಯಣನ ತ್ರಿಪುರ ದಹನ ಸಾಂಗತ್ಯ, ಅಂಜನಾ ಚರಿತ್ರೆ ಹೀಗೆ ಈ ಕಾಲದ ಜೈನ ಕವಿಗಳು ತಮ್ಮ ಕಾವ್ಯದ ವಸ್ತುವಿನ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಂಡಿರುವ ಹಿನ್ನೆಲೆ ರತ್ನಾಕರವರ್ಣಿಗೆ ಇದ್ದುದರಿಂದ ಸಹಜವಾಗಿ  ಭರತ ಚಕ್ರಿಯ ಕಥೆಯನ್ನು ಆರಿಸಿಕೊಂಡಿದ್ದಾನೆ.

      ಈ ಕಾಲಕ್ಕಾಗಲೇ ಚಂಪೂವನ್ನು ಧಿಕ್ಕರಿಸಿ ನಡೆದ ವಚನಕಾರರ ಹಿನ್ನೆಲೆ, ರಗಳೆ, ಶತಕ, ಷಟ್ಪದಿಗಳನ್ನು ರೂಪಿಸಿಕೊಂಡ ಹರಿಹರ-ರಾಘವಾಂಕರ ಪರಂಪರೆ ಇವರೆಲ್ಲರಿಂದ ಸ್ಫೂರ್ತಿ ಪಡೆದು ತಮ್ಮ ಭಾಗವತ ವೇದಾಂತವನ್ನು ಹೇಳಲು ಸರಳವಾದ ಕೀರ್ತನ ಶೈಲಿಯನ್ನು ರೂಪಿಸಿಕೊಂಡ ಹರಿದಾಸರ ಪಂಥ ಇವೆಲ್ಲವೂ  ಜೈನಕವಿಗಳ ಸಾಹಿತ್ಯರೂಪವನ್ನು ಷಟ್ಪದಿ ಮತ್ತು ಹಾಡಿಗೆ ಒಗ್ಗುವ ಸಾಂಗತ್ಯ ಪ್ರಕಾರಗಳಿಗೆ ಬದಲಾಯಿಸಿದವು. ಅಂದಿನ ಪರಿಸ್ಥಿತಿಗನುಗುಣವಾಗಿ ರತ್ನಾಕರನು ಚಕ್ರವರ್ತಿಯ ಕಥೆಯನ್ನು ಆಯ್ದುಕೊಂಡು ಅದರ ಧಾರ್ಮಿಕ ವಾಸನೆಯನ್ನು ಕಡಿಮೆ ಮಾಡಿ ರಂಜನೀಯವಾಗಿ ಹೇಳಲು ಪ್ರಯತ್ನಿಸುವುದು ಅನಿವಾರ್ಯವಾಯಿತು. ಅದಕ್ಕಾಗಿ ತನ್ನ ಕಾವ್ಯದ ಬಗೆಗೆ ʻʻಗಣನೆಯಿಲ್ಲದೆ ರಾಜ್ಯಸುಖದೊಳೋಲಾಡಿ ಧಾರಿಣಿ ಮೆಚ್ಚೆ ಜಿನಯೋಗಿಯಾಗಿ ಕ್ಷಣಕ್ಕೆ ಕರ್ಮವ ಸುಟ್ಟು ಜಿನನಾದ ಭೂಭುಜಾಗ್ರಣಿಯ ವೈಭವವ ಲಾಲಿಸಿರೊ”(ಸಂ.೧-ಪ.ಸಂ.೮) ಎಂದು ಹೇಳಿದ್ದು, ಆತನ ಕಾಲದ ಪರಿಸರದ ಸುತ್ತಲಿನ ರಾಜವೈಭವವೇ ಕಾರಣವಾಗಿದೆ. ಜೈನಮತದ ಇಳಿಗಾಲದ ಪ್ರತಿನಿಧಿಯಾಗಿ ಕಾಣಿಸಿಕೊಂಡಿರುವ ಕವಿಯು ಎಲ್ಲಾ ಕವಿಗಳ ಹಾಗೆ ತನ್ನ ಸಮಕಾಲೀನ ಪರಿಸರ ಪ್ರಭಾವಕ್ಕೊಳಗಾಗಿ ಕಾವ್ಯ ರಚಿಸಿದವನಾಗಿದ್ದಾನೆ.

ರತ್ನಾಕರ ಕವಿಯ ಕಾಲ-ವೈಯಕ್ತಿಕ ವಿಚಾರಗಳು:

      ಭರತೇಶವೈಭವ, ರತ್ನಾಕರಾಧೀಶ್ವರ ಶತಕ, ಅಪರಾಜಿತ ಶತಕ, ತ್ರಿಲೋಕಶತಕಗಳೆಂಬ ಶತಕ ತ್ರಯವನ್ನು ಹಾಗೂ ಸುಮಾರು ಎರಡು ಸಾವಿರ ಹಾಡುಗಳನ್ನು ರಚಿಸಿದ್ದಾನೆ. ರತ್ನಾಕರ ಕವಿಯ ಕಾಲದ ಬಗೆ, ಅವರ ತ್ರೈಲೋಕ ಶತಕದ ಕೊನೆಯ ವೃತ್ತದಲ್ಲಿ ವಿವರ ಹಾಗೂ ದೇವಚಂದ್ರನ ರಾಜಾವಳೀ ಕಥೆಯ ಒಂದು ಗದ್ಯಭಾಗವನ್ನು ಆಧರಿಸಿ ವಿದ್ವಾಂಸರು ಏಕಾಭಿಪ್ರಾಯವನ್ನು ತಾಳಿದ್ದಾರೆ.

ತ್ರಿಲೋಕ ಶತಕದ,

ಮಣಿಶೈಲಂ ಗತಿಯೆಂದು ಶಾಲಿಶಕ ಕಾಲಂ ಸಂಸಿರಲ್ತೌಳವಾಂ

ಗಣದೊಳ್ವೇಣುಪುರಾಂಕದೊಳ್ ಸೃಜಿಸಿದಂ ರತ್ನಾಕರಾರ್ಯಂ”

ಈ ವೃತ್ತದಲ್ಲಿಯ ಮಣಿ (ರತ್ನ)-9, ಶೈಲ-ಪರ್ವತ-7, ಗತಿ-4, ಇಂದು-ಚಂದ್ರ-1. 9೭೪1,  1479 ಶಾಲಿವಾಹನ ಶಕ. ಅರ್ಥಾತ್ ಕ್ರಿ.ಶ.1557 ಆಗುತ್ತದೆ. ಅಂದರೆ ಕವಿಯೇ ಹೇಳಿಕೊಂಡಿರುವ ಹಾಗೆ ತ್ರಿಲೋಕ ಶತಕದ ರಚನಾಕಾಲ ಕ್ರಿ.ಶ.1557 ಆಗಿದೆ.

      ದೇವಚಂದ್ರನ ರಾಜಾವಳಿಕಥೆಯಲ್ಲಿಯ ವಿವರಣೆಯ ಪ್ರಕಾರ ರತ್ನಾಕರವರ್ಣಿಯು ತುಳುವ ದೇಶದ ಮೂಡ ಬಿದರೆಯವನು, ತ್ರಿಲೋಕಶತಕವನ್ನು ತೌಳವಾಂಗಣದೊಳು ವೇಣುಪುರಾಂಕದೊಳ ಸೃಜಿಸಿದ ಎಂಬ ಹೇಳಿಕೆಯಲ್ಲಿ ಏಣುಪುರದವನು ಎಂದು ತಿಳಿದು ಬರುವುದಾದರೂ ಗೋವಿಂದ ಪೈಗಳು ವೇಣುಪುರ ಹಾಗೂ ಮೂಡಬಿದರೆ ಒಂದೇ ಎಂಬುದನ್ನು ಆಧಾರಗಳ ಮೂಲಕ ಖಚಿತ ಪಡಿಸಿದ್ದಾರೆ. ಕಾರ್ಕಳವು ರಾಜಧಾನಿಯಾಗಿದ್ದ ಸೋಮವಂಶದ ಭೈರಸ ಒಡೆಯರ ಆಳ್ವಿಕೆಗೆ ಮೂಡಬಿದರೆಯು ಒಳಪಟ್ಟಿತ್ತು.

      ಕವಿಯ ಬಗೆಗೆ ದೊರೆಯುವ ಆಂತರಿಕ ಹಾಗೂ ಬಾಹ್ಯ ಸಾಕ್ಷ್ಯಗಳನ್ನು ಆಧರಿಸಿ ರತ್ನಾಕರವರ್ಣಿಯು 16ನೇ ಶತಮಾನದ ಕವಿ ಎಂಬ ನಿಲುವಿಗೆ ವಿದ್ವಾಂಸರು ಬಂದಿದ್ದಾರೆ. ರತ್ನಾಕರನು ತನಗೆ ಶೃಂಗಾರ ಕವಿಯೆಂದು ಬಿರುದಿತ್ತ ಇಮ್ಮಡಿ ವೀರ ಭೈರವರಸನ ಆಳಿಕೆಯಲ್ಲಿ (ಸು.1490-1535) ಕ್ರಿ.ಶ.ಸು.1530-35 ರೊಳಗೆ ಭರತೇಶವೈಭವವನ್ನು ರಚಿಸಿದ್ದಾನೆಂದು ಗೋವಿಂದ ಪೈಗಳು ನಿರ್ಣಯಿಸಿದ್ದಾರೆ. ಹೀಗಾಗಿ ಕವಿಯು ಕ್ರಿ.ಶ.1500ರ ನೆರೆಯಲ್ಲಿ ಜನಿಸಿ ಸು.1530-35 ರೊಳಗೆ ಭರತೇಶವೈಭವವನ್ನು, ಸುಮಾರು 1550-60 ರೊಳಗೆ ಮೂರು ಶತಕಗಳನ್ನು ಬರೆದು ಸುಮಾರು 1560-70 ರ ವೇಳೆ ಕಾಲವಾಗಿರಬೇಕು ಎಂದು ಊಹಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ವಿದ್ವಾಂಸರು ನಿರ್ಣಯಿಸಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಕವಿಯ ಕಾಲ ಕ್ರಿ.ಶ.1500-1570 ಆಗಿದೆ.

      ಕವಿಯು ತನ್ನ ಕೃತಿಗಳಲ್ಲಿ ಸ್ವಕೀಯ ವಿವರಗಳ ಬಗೆಗೆ ಹೆಚ್ಚೇನನ್ನೂ ಹೇಳಿಲ್ಲ. ಭರತೇಶವೈಭವದಲ್ಲಿ ತನ್ನನ್ನು ಕ್ಷತ್ರಿಯವಂಶದವನೆಂದು ಹೇಳಿದ್ದಾನೆ. ದೀಕ್ಷಾಗ್ರ ಗುರು ಚಾರುಕೀರ್ತಿ ಯೋಗೀಶ್ವರ ಎಂದಷ್ಟೇ ಹೇಳಿದ್ದಾನೆ. ತಂದೆ,ತಾಯಿಗಳ ಬಗೆಗೆ ಏನನ್ನೂ ಹೇಳಿಲ್ಲ. ರತ್ನಾಕರಾಧೀಶ್ವರ ಶತಕದಲ್ಲಿ ತನ್ನ ಗುರು  ದೇವೇಂದ್ರ ಕೀರ್ತಿ ಎಂದು ಹೇಳಿಕೊಂಡಿದ್ದಾನೆ.

      ಜೈನನಾಗಿದ್ದ ರತ್ನಾಕರನು ವೀರಶೈವನಾಗಿ ಪುನ: ಜೈನಮತವನ್ನು  ಅಂಗೀಕರಿಸಿದ ಮೇಲೆ ದೇವೇಂದ್ರ ಕೀರ್ತಿಗಳನ್ನು ಗುರುವಾಗಿ ಸ್ವೀಕರಿಸಿದ್ದಿರಬೇಕು. ಎರಡನೇ ಬಾರಿ ಜೈನ ಮತವನ್ನು ಸ್ವೀಕರಿಸಿದ ಮೇಲೆ ರತ್ನಾಕರಾಧೀಶ್ವರ ಶತಕವನ್ನು ಬರೆದಿರಬೇಕು. ಹೀಗಾಗಿ ಚಾರುಕೀರ್ತಿ ಹಾಗೂ ದೇವೇಂದ್ರ ಕೀರ್ತಿಗಳಿಬ್ಬರು ಈತನ ಗುರುಗಳು ಎಂದು ಭಾವಿಸಬಹುದು. ರತ್ನಾಕರನ ಭರತೇಶವೈಭವೇ ಆತನ ಅಪೂರ್ವ ಕೊಡುಗೆ. ಅದು ಸಾಂಗತ್ಯಸಾಹಿತ್ಯದ ಕೀರ್ತಿ ಶಿಖರವಾಗಿ ಅಷ್ಟೇ ಅಲ್ಲ, ಇಡಿ ಕನ್ನಡ ಸಾಹಿತ್ಯದಲ್ಲಿಯೆ ಮೇರು ಕೃತಿಯಾಗಿ, ಮಹಾಕಲಾಕೃತಿಯಾಗಿ ಮೂಡಿ ಬಂದಿದೆ. ಸಾಹಿತ್ಯ ಪರಂಪರೆಯ ನಿರ್ಮಾಪಕರಾಗಿ ನೂತನ ಮಾರ್ಗ ಸ್ಥಾಪಿಸಿ ಮಹಾಕಾವ್ಯಗಳನ್ನು ರಚಿಸಿ ವಿಶ್ವಸಾಹಿತ್ಯದಲ್ಲಿ ಕನ್ನಡದ ಕೀರ್ತಿಧ್ವಜವನ್ನು ಹಾರಿಸಲು ಕಾರಣರಾದ ಪಂಪ, ಹರಿಹರ, ಕುಮಾರವ್ಯಾಸರ ಸಾಲಿನಲ್ಲಿ ಸರಿದೊರೆಯಾಗಿ ನಿಲ್ಲುವ ಅರ್ಹತೆಯನ್ನು ರತ್ನಾಕರವರ್ಣಿ ಪಡೆದುಕೊಂಡಿದ್ದಾನೆ. 

 ರತೇಶವೈಭವ ಕಾವ್ಯದ  ಸಂಕ್ಷಿಪ್ತ ಕಥಾಸಾರ:

   ಈ ಕಾವ್ಯವು ಸಾಂಗತ್ಯದ ಛಂದಸ್ಸಿನಲ್ಲಿ ಬರೆದಿರುವ ಸುಮಾರು ಹತ್ತು ಸಾವಿರ ಪದ್ಯಗಳನ್ನೊಳಗೊಂಡಿದೆ. ಈ ಗ್ರಂಥದ ಕೊನೆಯಲ್ಲಿ “ವೃಷಭಮಾಸದಿ ತೊಡಗಿತು ಕುಂಭಮಾಸಸದ್ವಿಷಯದಿ ಕೃತಿಪೂರ್ಣವಾಯ್ತು”ಎಂದು ಕವಿ ಹೇಳಿದ್ದಾನೆ. ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ ಹತ್ತು ಸಾವಿರ ಪದ್ಯಗಳನ್ನು ರಚಿಸುವುದೆಂದರೆ ಕವಿಯ ಶಕ್ತಿಯ ಅಸಾಧಾರಣವೇ ಸರಿ. ಅದರಲ್ಲಿಯೂ ಬೃಹತ್ ಕೃತಿಗೆ ಹೊಯ್‌ಕಯ್ಯಾದ ಮಹತ್ತು ಕಾವ್ಯದಲ್ಲಿ ಕಾಣಬರುವುದರಿಂದ ಕವಿ ಕಾವ್ಯಜಗತ್ತಿನ ಒಬ್ಬ ಪವಾಡಪುರುಷನಂತೆ ಕಾಣಬರುತ್ತಾನೆ.

 ಭರತೇಶ ವೈಭವದ ಕಥೆಯನ್ನು ರತ್ನಾಕರವರ್ಣಿ ಸಂಗ್ರಹವಾಗಿ ಹೀಗೆ ಹೇಳಿದ್ದಾನೆ.

   ಗಣನೆಯಿಲ್ಲದ ರಾಜ್ಯ ಸುಖದೊಳೋಲಾಡಿ ಧಾ

   ರಿಣಿ ಮೆಚ್ಚಿ ಜಿನಯೋಗಿಯಾಗಿ

   ಕ್ಷಣಕ್ಕೆ ಕರ್ಮವ ಸುಟ್ಟು ಜಿನನಾದ ಭೂಭುಜಾ

   ಗ್ರಣಿಯ ವೈಭವ ಲಾಲಿಸಿರೊ ( ಆಸ್ಥಾನ ಸಂಧಿ, ಆ.೧.ಪ.ಸಂ.೧೩)

      ಪ್ರಥಮ ತೀರ್ಥಂಕರ ವೃಷಭನಾಥನ ಹಿರಿಯಮಗನೂ, 16ನೆಯ ಮನುವೂ, ಪ್ರಥಮ ಚಕ್ರೇಶ್ವರನೂ ಆದ ಭರತನು ಅಯೋಧ್ಯೆಯಲ್ಲಿ ರಾಜ್ಯಭಾರ ಮಾಡುತ್ತಿದ್ದನು. ಉದಯದಲ್ಲಿಯೇ ಎದ್ದು, ದೇವತಾರ್ಚನೆಯನ್ನು ಮಾಡಿ, ಡ್ಡೋಲಗವನ್ನು ನೆರಹಿ, ಮಧ್ಯಾಹ್ನದವರೆಗೂ ಕವಿಗಾಯಕ ಗೋಷ್ಠಿಯಲ್ಲಿದ್ದು, ಅನಂತರ ಮುನಿಭಕ್ತಿ ನಿಯಮವನ್ನು ಪಾಲಿಸಿದ ಮೇಲೆ ಉಳಿದ ದಿನವನ್ನೆಲ್ಲ ಭೋಗಯೋಗಗಳ ಸಾಮರಸ್ಯದಲ್ಲಿ ಕಳೆಯುವುದು ಆತನ ದಿನಚರಿ. ವಿಸ್ತಾರವಾದ ತನ್ನ ರಾಜ್ಯವನ್ನು ಆತ ನಿಶ್ಚಿಂತೆಯಿಂದ ಸುಕ್ಷೇಮವಾಗಿ ಆಳುತ್ತಿರಲು, ದಿಗ್ವಿಜಯಸೂಚಕವಾದ ಚಕ್ರರತ್ನವು ಆತನ ಆಯುಧಾಗಾರದಲ್ಲಿ ಉದಯಿಸಿತು. ಭರತನು ದಿಗ್ವಿಜಯಕ್ಕೆ ಹೊರಟು ಹೆಚ್ಚು ಹೋರಾಟವಾಗಲೀ ರಕ್ತಪಾತವಾಗಲೀ ಇಲ್ಲದೆ ಷಟ್‌ಖಂಡಗಳನ್ನು ಜಯಿಸಿದನು. ಆತನ ಹೆಸರು ಹೇಳುತ್ತಲೇ ಭೂಚರ ಖೇಚರ ರಾಜರು ಆತನಿಗೆ ಶರಣಾಗತರಾಗಿ ವಜ್ರವೈಡೂರ‍್ಯಾದಿ ರತ್ನಗಳನ್ನೂ, ತಮ್ಮ ಕನ್ಯಾರತ್ನಗಳನ್ನೂ ಒಪ್ಪಿಸಿ ಕೃತಕೃತ್ಯರಾಗುತ್ತಾರೆ. ಭರತನ ಸಂಸಾರ ಶ್ರೀಮಂತವಾದುದು. ಆತನಿಗೆ 96,000 ಹೆಂಡಿರು. ಅನೇಕರು ದಿಗ್ವಿಜಯ ಕಾಲದಲ್ಲಿ ಮಕ್ಕಳನ್ನು ಹೆರುತ್ತಾರೆ. ಭರತನ ದಿಗ್ವಿಜಯ ಮದನನ ದಿಗ್ವಿಜಯದಂತೆ ವಿವಾಹೋತ್ಸವ, ಪುತ್ರೋತ್ಸವ ಸಂಭ್ರಮಗಳಲ್ಲಿ ಸಾಗಿ, ಆತನು ವಿಜಯದುಂದುಭಿಯೊಡನೆ ತನ್ನ ರಾಜಧಾನಿಗೆ ಹಿಂದಿರುಗುತ್ತಾನೆ. ಆತನು ಪೌದನಪುರದ ಬಳಿಗೆ ಹಿಂತಿರುಗಿದಾಗ ಮಾರ್ಗದರ್ಶಕವಾಗಿದ್ದ ಚಕ್ರರತ್ನವು ಮುಂದಕ್ಕೆ ಉರುಳದೆ ನಿಲ್ಲುತ್ತದೆ. ಅಲ್ಲಿಗೆ ರಾಜನಾದ ಭರತನ ತಮ್ಮ ಭುಜಬಲಿ ಅಣ್ಣನನ್ನು ಪ್ರತಿಭಟಿಸಿ ನಿಲ್ಲುತ್ತಾನೆ. ಆದರೇನು? ಅಣ್ಣನ ಮಾತುಗಳ ಮೋಡಿಗೆ ಸೋತು ಶರಣಾಗುತ್ತಾನೆ. ಭರತನು ಜಗತ್ತಿನ ಚಕ್ರವರ್ತಿಯಾಗುತ್ತಾನೆ. ಇಲ್ಲಿಂದ ಮುಂದೆ ಭರತನ ತಾಯಿ, ಅವನ ಮಕ್ಕಳಲ್ಲಿ ಹಲವರು ದೀಕ್ಷೆವಹಿಸುತ್ತಾರೆ; ತಂದೆಯಾದ ತೀರ್ಥಂಕರನು ಮುಕ್ತನಾಗುತ್ತಾನೆ; ಕನ್ನಡಿಯಲ್ಲಿ ನರೆಗೂದಲನ್ನು ಕಂಡು ಭರತನೂ ದೀಕ್ಷೆವಹಿಸುತ್ತಾನೆ; ಆಮೇಲೆ ಆತನ ಮಕ್ಕಳಾದ ಅರ್ಕಕೀರ್ತಿಯೂ ಆದಿರಾಜನೂ ಕೆಲಕಾಲ ರಾಜ್ಯಭಾರಮಾಡಿ ದೀಕ್ಷೆವಹಿಸುತ್ತಾರೆ.

      ಮೇಲೆ ಹೇಳಿರುವ ಭರತ ಚಕ್ರಿಯ ಕಥೆ ರತ್ನಾಕರನ ಸ್ವಕಪೋಲಕಲ್ಪಿತವಾದುದಲ್ಲ. ಜಿನಸೇನ ಮುನಿಯು ತನ್ನ ಸಂಸ್ಕೃತದ ‘ಪೂರ್ವಪುರಾಣ’ದಲ್ಲಿಯೂ, ಆತನನ್ನು ಅನುಸರಿಸಿ ಆದಿಕವಿ ಪಂಪನು ತನ್ನ ಕನ್ನಡದ ಆದಿಪುರಾಣದಲ್ಲಿಯೂ, ಆದಿ ತೀರ್ಥಂಕರನ ಚರಿತ್ರೆಯನ್ನು ಬರೆಯುವಾಗ, ಪ್ರಥಮ ಚಕ್ರಿಯಾದ ಭರತನ ಕಥೆಯನ್ನು ಮುಖ್ಯಕಥೆಯ ಪರಿಶಿಷ್ಟವೆಂಬಂತೆ ಸಾಕಷ್ಟು ವಿಸ್ತಾರವಾಗಿಯೇ ಬರೆದಿದ್ದಾರೆ. ಆದರೆ, ಅವರು ಪ್ರಕರಣವನ್ನು ಮಾತ್ರ ವಿಸ್ತಾರವಾಗಿ ಪ್ರತಿಪಾದಿಸಿದ್ದಾರೆ. ಅವರು ಕೇವಲ ಸೂಚಿಸಿದ್ದನ್ನು ರತ್ನಾಕರನು ವಿಸ್ತರಿಸಿ, ಭರತನ ಭೋಗಜೀವನವನ್ನು ರಂಗುರಂಗಾಗಿ ಚಿತ್ರಿಸಿದ್ದಾನೆ. ಹಿಂದಿನ ಕವಿಗಳಾರೂ ಭರತನ ಕಥೆಯನ್ನೇ ಪ್ರತ್ಯೇಕವಾಗಿ ಪ್ರತಿಪಾದಿಸುವ ಗೋಜಿಗೆ ಹೋಗಿರಲಿಲ್ಲ. ಅವನ ದಿನದಿನದ ಜೀವನ ಹೇಗೆ ರಸಮಯವಾಗಿತ್ತೆಂಬುದನ್ನು ವರ್ಣಿಸುವ ಗೋಜಿಗೂ ಹೋಗಿರಲಿಲ್ಲ. ರತ್ನಾಕರನು ಇವೆರಡನ್ನು ತನ್ನ ಕಾವ್ಯದಲ್ಲಿ ಸಾಧಿಸಿ, ಸಾಹಿತ್ಯ ಪ್ರಪಂಚದಲ್ಲಿ ತನ್ನ ವ್ಯಕ್ತಿತ್ವನ್ನು ಸ್ಥಾಪಿಸಿಕೊಂಡಿದ್ದಾನೆ. ಭರತೇಶ ಪ್ರಥಮ ತೀರ್ಥಂಕರನ ಹಿರಿಯ ಮಗ. ಮೊದಲ ಚಕ್ರವರ್ತಿ. ಇಡೀ ಕಾವ್ಯ ಆತನ ನಿತ್ಯಜೀವನದ ದಿನಚರಿಯಂತದ್ದು, ಅವನ ಒಟ್ಟು ಬದುಕಿನ ವಿಸ್ತಾರ ವೈವಿಧ್ಯ ವಿಲಾಸ ವೈಭವಗಳ ಮಹೋನ್ನತಿಯನ್ನು ತುಂಬ ಕಲಾತ್ಮಕವಾಗಿ ಕನ್ನಡಿಸಿದೆ. ಆತನ ಬಹಿರಂಗದ ಭೋಗದ ಬದುಕಿನಂತೆ ಯೋಗದ ಅಂತರಂಗದ ಜೀವನವನ್ನೂ ಕವಿ ಬಣ್ಣಕಟ್ಟಿ ಕುಸುರಿ ಕೆಲಸದಂತೆ ನಯವಾಗಿ ಬಿಡಿಸಿದ್ದಾನೆ. ಈ ವಿಚಾರದಲ್ಲಿ ರತ್ನಾಕರವರ್ಣಿ ಜಿನಸೇನರ ಪೂರ್ಣಪುರಾಣ ಹಾಗೂ ಪಂಪನ ಆದಿಪುರಾಣಕ್ಕೆ ಋಣಿಯಾಗಿದ್ದರೂ ಮುಂದಿನ ಕವಿಗಳಿಗೆ ತಾನೇ ಆದರ್ಶದ ಗಣಿಯಾಗಿದ್ದಾನೆ. ಮಹಾಕವಿಯೆಂಬ ಹೆಸರಿಗೆ ಪಾತ್ರನಾಗಿದ್ದಾನೆ.

   ಭರತೇಶನ ಚರಿತ್ರೆಯೇ ಭರತೇಶ ವೈಭವ. ಇದರ ಗತಿ ಮತಿ ಆಯುಸ್ಸು, ಉಸಿರು ಹೆಸರು ಎಲ್ಲಾ ಅವನೆ. ಭರತನ ಸಾರ್ಥಕ ಜೀವನದ ಹಲವು ಪ್ರಮುಖ ಮಜಲುಗಳನ್ನು ಕುರಿತು ಮಾಡಿದ ಕಲಾತ್ಮಕವಾದ ಪಕ್ವವಿಮರ್ಶೆಯಂತೆ ಈ ಕೃತಿ ರೂಪುಗೊಂಡಿದೆ.  ಈ ಕೃತಿಯಲ್ಲಿ ಕವಿಯ ಸಮೃದ್ಧವಾದ ಅನುಭವ ಹಾಗೂ ವಿಕಸನಶೀಲವಾದ ವೈಚಾರಿಕತೆಗಳೆರಡು ಮುಪ್ಪರಿಗೊಂಡು ಬಂದಿವೆ. ಪುರಾಣವಾದುದನ್ನು ಕಾವ್ಯವನ್ನಾಗಿಸುವಲ್ಲಿ ಕವಿ ಅಪರೂಪ ಸಿದ್ಧಿಪಡೆದಿದ್ದಾನೆ ಎಂದೆನಿಸುತ್ತದೆ. ʻಜೈನವಸ್ತುವನ್ನೂ ವೈದಿಕ ಕಾವ್ಯವಿನ್ಯಾಸದ ಜತೆಗೆ ಜಾನಪದ ಸತ್ತ್ವದ ಉತ್ತಮ ಅಂಶಗಳನ್ನೂ ತೆಕ್ಕೆಹಾಕಿದ್ದಾನೆʼ ಎಂಬ ವಿದ್ವಾಂಸರ ಮಾತು ರತ್ನಾಕರನ ಬಗೆಗೆ ತೂಕಬದ್ಧ ಮಾತಾಗಿದೆ. ಜಾನಪದ ಪ್ರತಿಭೆಯ ಸಾಮುದಾಯಿಕ ಮನಸ್ಸಿನ ಪ್ರತ್ಯಕ್ಷ ಫಲಿತಗಳಾದ ಕಥೆಗಳು, ಕ್ರಿಯೆಗಳು, ಆಶಯಗಳು, ಕ್ರಿಯಾತ್ಮಕವಾದ ಮಾನವ ಜನ್ಮದಲ್ಲಿ ಏನೇನು ರೂಪಾಂತರ ಪಡೆಯಬಹುದೆಂಬುದಕ್ಕೆ ಭರತೇಶ ವೈಭವವು ಮಾದರಿಯಾಗಿದೆ.

      ಜೈನಪುರಾಣಾಂತರ್ಗವಾದ ಕಥೆಯ ಮೂಲರೇಖೆಗಳನ್ನು ರತ್ನಾಕರನು ತನ್ನ ಕಾವ್ಯದಲ್ಲಿ ಬಳಸಿಕೊಂಡಿರುವನಾದರೂ, ಅವುಗಳಲ್ಲಿ ಅಲ್ಲಲ್ಲಿಯೇ ಕೆಲವು ವ್ಯತ್ಯಾಸಗಳನ್ನು ಮಾಡಿದ್ದಾನೆ. ಈ ವ್ಯತ್ಯಾಸಗಳು ಮುಖ್ಯವಾಗಿ ಎರಡು ತೆರನಾದವು. ಮೂಲಕಥೆಯ ಆಶಯಕ್ಕೆ ಭಂಗಬಾರದಂತೆ ಕವಿಯು ಹೊಸದಾಗಿ ಸೃಷ್ಟಿಸಿ ಸೇರಿಸಿರುವ ಭಾಗಗಳು; ಮೂಲದಲ್ಲಿ ಇದ್ದ ಕಥಾಭಾಗಗಳ ಇವರ ವಿವರಣೆಯಲ್ಲಿ ವ್ಯತ್ಯಾಸ ಮಾಡಿಕೊಂಡಿರುವುದು. ಈ ಬದಲಾವಣೆಗಳ ಮೂಲಕ ಕವಿಯು ಕಥಾನಾಯಕನ ಪಾತ್ರವನ್ನು ಉದಾತ್ತವಾಗಿ, ಮಹೋನ್ನತವಾಗುವಂತೆ ಮಾಡಲು ಪ್ರಯತ್ನಿದ್ದಾನೆ. ಭರತ ಚಕ್ರಿಯನ್ನು ಕಥಾನಾಯಕನಾಗಿ ಆರಿಸಿಕೊಂಡಿರುವುದರಿಂದಲೇ ನಮಗೆ ಅರ್ಥವಾಗುತ್ತದೆ, ಕವಿಗೆ ಆತನಲ್ಲಿರುವ ಭಕ್ತಿ ಗೌರವಗಳು, ಕಾವ್ಯದ ಆರಂಭದಲ್ಲಿಯೇ ಕವಿ ಹೇಳುತ್ತಾನೆ “ಕಾವ್ಯಪತಿ ಚಕ್ರಿ ಸಾಮಾನ್ಯನಲ್ಲ”ಎಂದು. ಹೇಗೆ ಸಾಮಾನ್ಯನಾದಾನು? ಅಪಾರ ಪೂರ್ವಪುಣ್ಯದ ಫಲವಾಗಿ ಆತನು ಪ್ರಥಮ ತೀರ್ಥಂಕರನ ಮಗನಾಗಿ, ಚಕ್ರವರ್ತಿಯಾಗಿ ಜನಿಸಿದ್ದಾನೆ. ಆತನ ಸಾಧನೆಯೂ ಅಸಾಧಾರಣವಾದುದು. “ಕ್ಷತ್ರಿಯ ಕುಲರತ್ನಗಾಹಾರವುಂಟು, ಮಲವಿಲ್ಲ ಮೂತ್ರವಿಲ್ಲವೆಂದರಿ, ಲೋಕದ ಬಳಕೆಗಾರರ ಪೇಳ್ವ ತೆರನೆ?” ಸಾಧನೆಯಿಂದ ಪರಿಪಕ್ವಚೇತನವಾಗಿ, ವೀತರಾಗನಾಗಿ, ಚಿದಂಬರಪುರುಷನಾಗಿದ್ದಾನೆ ಆತ. ಆ ಸಿದ್ಧಜೀವಿ “ಮುರಿದು ಕಣ್ಣಿಟ್ಟರೆ ಕ್ಷಣಕ್ಕೆ ಮುಕ್ತಿಯ ಕಾಂಬ” ಮಹಾನುಭಾವ. ತೀರ್ಥಂಕರನ ಚರಿತ್ರೆಯಂತೆ ಭರತನ ಕಥೆಯೂ ಕೇಳುವವರಿಗೆ, ಓದುವವರಿಗೆ ಪುಣ್ಯಪ್ರದ, ಮೋಕ್ಷಪ್ರದ ಎಂಬುದು ಕವಿಯ ಆಶಯವಾಗಿದೆ.

      ಭರತೇಶ ವೈಭವದ ಗ್ರಂಥ ವಿಭಾಗದಲ್ಲಿಯೇ ಕವಿ ತನ್ನ ಕಥಾನಾಯಕನಿಗೆ ಹಿರಿದೊಂದು ಸ್ಥಾನವನ್ನು ಗಳಿಸಿಕೊಡಲು ಹೊರಟಿರುವಂತೆ ತೋರುತ್ತದೆ. ತೀರ್ಥಂಕರ ಚರಿತೆಯನ್ನು ಬರೆಯುವ ಜೈನ ಕವಿಗಳು ಗರ್ಭಾವತರಣವೇ ಮೊದಲಾದ ಪಂಚಕಲ್ಯಾಣಗಳನ್ನಾಗಿ ವಿಭಾಗಿಸಿಕೊಂಡು ಅದನ್ನು ಬರೆಯುವ ಪದ್ಧತಿ. ಭರತನು ಜಿನನಲ್ಲ. ಸಂಪ್ರದಾಯದ ಪಂಚಕಲ್ಯಾಣಗಳನ್ನು ಇಲ್ಲಿ ತರುವಂತಿಲ್ಲ. ಆದರೂ ಮೋಕ್ಷಜೀವಿಯಾದ ತನ್ನ ನಾಯಕ ಪಂಚಕಲ್ಯಾಣಗಳಿಗೆ ಅರ್ಹನೆಂದು ಕವಿ ಭಾವಿಸಿರುವಂತೆ ತೋರುತ್ತದೆ. ಆದ್ದರಿಂದ ಆತನು ತನ್ನ ಕಥಾನಾಯಕನಿಗೆ ಪ್ರತ್ಯೇಕವಾದ ಪಂಚಕಲ್ಯಾಣಗಳನ್ನು ಸಾಧಿಸಿಕೊಡಲು ಹೊರಟಿರುವಂತೆ ಕಾಣುತ್ತದೆ. ಇದನ್ನು ಕಾವ್ಯದ ಕೊನೆಯಲ್ಲಿ ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ-

      ಭೋಗವಿಜಯಪೂರ್ವಕವಾಗಿ ದಿಗ್ವಿಜಯ ಸು

      ಯೋಗ ವಿಜಯ ಮೋಕ್ಷವಿಜಯ

      ಈಗರ್ಕವಿಜಯವಾಗೆ ಮನಸಿಗೆ

      ಲಾಗಾಯ್ತು ಪಂಚಕಲ್ಯಾಣ”

ಇದನ್ನು ಓದಿದವರು “ಮುಕ್ತಿಗೆ ಮುಂದುವರಿದ ಸಿದ್ಧಾಂತಿ”

      ಭರತೇಶ ವೈಭವದ ಭೋಗವಿಜಯವು ಜಿನಜೀವನದ “ಗರ್ಭಾವತರಣ ಕಲ್ಯಾಣ”ಕ್ಕೆ ಸಂವಾದಿಯಾಗಿದೆ. ಜಿನಕಥೆಯಲ್ಲಿ ಜಿನನ ಜನ್ಮಾಂತರಗಳ ಸುಖ ಭೋಗದ ವರ್ಣನೆಯಾದರೆ ಇಲ್ಲಿ ಭರತನ ಭೋಗವರ್ಣನೆಯಿದೆ. ಜಿನಕಥೆಯಲ್ಲಿನ ಸ್ವರ್ಗಸುಖದ ನೆತ್ತಿಯ ಮೇಲೆ ಮೆಟ್ಟಿದಂತಿದೆ-ಭರತನ ಭೂಲೋಕದ ಭೋಗ ಜೀವನ. ಇದು ಸಂಪೂರ್ಣವಾಗಿ ಕವಿಯ ಸ್ವಂತ ಸೃಷ್ಟಿ. ಎರಡನೆಯದಾದ ದಿಗ್ವಿಜಯವು ಮುನಿ ಮಾರ್ಗೋಕ್ತವಾದ್ದು; ಇದರಲ್ಲಿ ಕವಿ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡಿದ್ದಾನೆ. ಅವುಗಳಲ್ಲಿ ಬಹು ಮುಖ್ಯವಾದುದು ಭರತ-ಬಾಹುಬಲಿಗಳ ಪ್ರಸಂಗ. ಮೂರನೆಯದು ಯೋಗವಿಜಯ. ಇದರಲ್ಲಿ ಭರತನು ಶಾಸ್ತ್ರಾಭ್ಯಾಸದಿಂದ ತನ್ನ ಆತ್ಮೋನ್ನತಿಯನ್ನು ಸಾಧಿಸುವ ಚಿತ್ರಣವಿದೆ. ಕ್ಲಿಷ್ಟವೂ ಕಷ್ಟ ಸಾಧ್ಯವೂ ಆದ ಈ ಭಾಗವು ರತ್ನಾಕರನ ಕೈಯಲ್ಲಿ ಸುಲಿದ ಬಾಳೆಯ ಹಣ್ಣಿನಂತೆ ಸುಲಭ-ಸರಳ. ನಾಲ್ಕನೆಯದು ಅರ್ಕಕೀರ್ತಿಯ ವಿಜಯ. ಕಥಾದೃಷ್ಟಿಯಿಂದ ಈ ಭಾಗಕ್ಕೆ ಭರತೇಶ ವೈಭವದಲ್ಲಿ ಔಚಿತ್ಯವೂ ಇಲ್ಲ, ಜೀವನ ಚರಿತ್ರೆಯಲ್ಲಿ ಚಕ್ರಿಯ ಚರಿತ್ರೆಯನ್ನು ಅದರ ಅಂಗವಾಗಿ ತರುವಂತೆ ಭರತನ ಕಥೆಯ ಒಂದು ಅಂಗವಾಗಿ ಅರ್ಕಕೀರ್ತಿಯ ಮದುವೆ, ರಸಿಕತೆ, ಯುದ್ಧ ಇತ್ಯಾದಿಗಳನ್ನು ಇಲ್ಲಿ ತಂದಿದ್ದಾನೆ. ಕಡೆಯದು ಮೋಕ್ಷವಿಜಯ. ಇದರಲ್ಲಿರುವುದು ಭರತನ ದೀಕ್ಷೆ ಮೋಕ್ಷಗಳ ಪ್ರಸಕ್ತಿ. ಜ್ಞಾನವಿಲ್ಲದೆ ಭೋಗಿಸುವವನು ರೋಗಿ, ಜ್ಞಾನಿಯಾಗಿ ಭೋಗಿಸುವವನು ಯೋಗಿ, ದೇಹ ಆತ್ಮಗಳು ಬೇರೆಯೆಂದು ಭಾವಿಸಿ ಒಳ ಅರಿವಿನಿಂದ ಭೋಗದಲ್ಲಿ ಮುಳುಗಿದವನಿಗೆ ಕರ್ಮದ ಬಳ್ಳಿ ಸುತ್ತುಕೊಳ್ಳುತ್ತದೆ. ಆದರೆ ನಿಷ್ಕಾಮ, ನಿರ್ಮೊಹ ಭೋಗಿಗೆ ಯಾವ ಬಂಧವೂ ಇಲ್ಲವೆನ್ನುತ್ತಾನೆ ಕವಿ.

ಭರತೇಶ ವೈಭವದ ಕಥಾ ವೈಶಿಷ್ಟ್ಯ:

      ಭರತೇಶ ಚಕ್ರವರ್ತಿಯ ಕಥೆ ಬಹಳ ಪ್ರಾಚೀನವಾದುದು. ಜೈನ ಧಾರ್ಮಿಕ ಸಾಹಿತ್ಯದಲ್ಲಿ ಹಲವು ಕಡೆ ನಿರೂಪಿತವಾಗಿರುವಂತಹದ್ದು. ಮೊಟ್ಟ ಮೊದಲಿಗೆ ಭರತನ ಚರಿತೆ ಕಂಡು ಬರುವುದು ಕ್ರಿ.ಶ.783ರಲ್ಲಿ ರಚಿತವಾದ ಜಿನಸೇನರ ಮಹಾಪುರಾಣದಲ್ಲಿ. ಆದಿತೀರ್ಥಂಕರನಾದ ಪುರುಪರಮೇಶ್ವರನ ಚರಿತೆಯ ಕೊನೆಯಲ್ಲಿ ಆತನ ಮಗನೂ ತ್ರಿಷಷ್ಟಿ ಶಲಾಕಾ ಪುರುಷರಲ್ಲಿ ಒಬ್ಬನು ಪ್ರಥಮ ಚಕ್ರಿಯೂ ಆದ ಭರತನ ಕಥೆ ವಿಸ್ತಾರವಾಗಿ ನಿರೂಪಿತವಾಗಿದೆ. ಇದೇ ಕಥೆ ಕನ್ನಡದಲ್ಲಿ ಮೊದಲಿಗೆ ಪಂಪನ ಆದಿಪುರಾಣದಲ್ಲಿ, ಬಳಿಕ ಚಾವುಂಡರಾಯನ ಚಾವುಂಡರಾಯ ಪುರಾಣದಲ್ಲಿ. ಇವೆರಡು ಧಾರ್ಮಿಕ ಗ್ರಂಥವಾದುದರಿಂದ ಇಬ್ಬರೂ ಕಥಾನಿರೂಪಣೆಯಲ್ಲಿ ಜಿನಸೇನರನ್ನೇ ಪ್ರಧಾನವಾಗಿ ಅನುಸರಿಸಿದ್ದಾರೆ. ತೀರ್ಥಂಕರರ ಚರಿತ್ರೆಯೊಂದಿಗೆ ಚಕ್ರವರ್ತಿ ಚರಿತೆಯನ್ನು ತಂದಿದ್ದಾರೆ. ಆದರೆ ಜಿನ ಚರಿತೆಯಿಂದ ಚಕ್ರವರ್ತಿ ಚರಿತ್ರೆಯನ್ನು ಪ್ರತ್ಯೇಕಿಸಿ ಅದೊಂದನ್ನೇ ಕಾವ್ಯಕ್ಕೆ ವಸ್ತುವನ್ನಾಗಿ ಮಾಡಿಕೊಂಡು ವಿಸ್ತಾರವಾಗಿ ವರ್ಣಿಸಿರುವ ಕೃತಿಗಳಲ್ಲಿ ರತ್ನಾಕರವರ್ಣಿಯ ಭರತೇಶವೈಭವವೇ ಮೊದಲನೆಯದ್ದಾಗಿದೆ. ಪುರು ಪರಮೇಶ್ವರನ ಹಿರಿಯ ಕುಮಾರನಾದ ಭರತೇಶನ ಚರಿತೆಯೇ ʻಭರತೇಶ ವೈಭವದʼ ಕಥಾವಸ್ತುವಾಗಿದೆ. “ಮುಂದು ಕಣ್ಣಿಟ್ಟರೆ ಕ್ಷಣಕ್ಕೆ ಮುಕ್ತಿಯ ಕಾಂಬ” ಭರತ ಚಕ್ರವರ್ತಿಯ ಸಾರ್ಥಕ ಬದುಕಿನ ಹಲವು ಘಟ್ಟಗಳನ್ನು ಕವಿಯು ಕಲಾತ್ಮಕವಾಗಿ ಬಣ್ಣಿಸಿದ್ದಾನೆ.

      ಪೇಳುವೆ ಭರತೇಶಚಕ್ರಿಯ ಕಾವ್ಯವ ಎಂದು ರತ್ನಾಕರ ಕಾವ್ಯವನ್ನು ಮೊದಲು ಮಾಡಿದ್ದಾನೆ. ಭರತೇಶ ವೈಭವಕ್ಕೆ ಎರಡು ಮುಖಗಳು. 1.ಭೋಗವೈಭವ, 2.ಯೋಗವೈಭವ. ಚಕ್ರವರ್ತಿಯ ಭೋಗವನ್ನೇ ಅಲ್ಲದೆ ಯೋಗವನ್ನು ವರ್ಣಿಸಿರುವುದು ರತ್ನಾಕರ ಕವಿಯ ವಿಶೇಷ. ಭರತೇಶವೈಭವವು ಕೇವಲ ಒಬ್ಬ ಚಕ್ರವರ್ತಿಯ ಲೌಕಿಕ ವೈಭವವನ್ನು ಜನ್ಮದಾರಭ್ಯ  ಕೊನೆಯವರೆಗೆ ಅನೂಚಾನವಾಗಿ ಬಣ್ಣಿಸುವ ಕಾವ್ಯವಾಗಿಲ್ಲ. ಆ ಚಕ್ರವರ್ತಿಯ ಪ್ರತೀಕದಲ್ಲಿ ಮೈವೆತ್ತ ಆಧ್ಯಾತ್ಮ ವೈಭವವನ್ನು ಹಾಡಿ ಹೊಗಳಿದ ಕಾವ್ಯವಾಗಿಯೂ ವ್ಯಕ್ತಗೊಂಡಿದೆ.

      ಈ ಕಾವ್ಯದ ಕಥಾವಸ್ತು ಧಾರ್ಮಿಕವಾದುದು. ಕಾವ್ಯದ ನಾಯಕ ಸಾಮಾನ್ಯನಲ್ಲ. ಆತ ಪುರುದೇವನ ಹಿರಿಯ ಕುಮಾರ. ಪ್ರಥಮ ಚಕ್ರವರ್ತಿ. ಭೂಮಂಡಲದ ಏಕೈಕರಾಜ. ಶಲಾಕಾ ಪುರುಷ. ಸುದತಿರಾಜರ ರಾಜಮದನ, ರಾಜರ್ಷಿ ಎಂಬ ಹೆಸರಿಗೆ ಅರ್ಹನಾದ ರತ್ನಾಕರನ ಕಲ್ಪನೆಯ ಆದರ್ಶ ರಾಜನೇ ಭರತ ಚಕ್ರವರ್ತಿಯ ಪಾತ್ರದಲ್ಲಿ ಮೈದಾಳಿದ್ದಾನೆ.   ಕಾವ್ಯವು ಎಂಭತ್ತು ಸಂಧಿಗಳಲ್ಲಿ ವಿವರಿಸಲ್ಪಟ್ಟಿದ್ದರೂ , ಅದರ ವಿನ್ಯಾಸ ಯೋಜನೆ ಕಂಡರೆ ಸುಮಾರು ಎಪ್ಪತ್ತು ಸಂಧಿಗಳಲ್ಲಿ ಒಂದು ಸಂಸಾರದ ಸುಂದರ ಚಿತ್ರಣವೇ ಬರುವುದನ್ನು ಗುರುತಿಸಬಹುದಾಗಿದೆ. ಭೋಗವಿಜಯದ ಆಸ್ಥಾನ ಸಂಧಿಯಿಂದ, ಪಾರಣೆ ಸಂಧಿಯವರೆಗಿನ ಕಥೆಯಲ್ಲಿ ಹಾಗೆ ಬಂದಿರುವುದನ್ನು ನಿದರ್ಶನಕ್ಕೆ ನೋಡಬಹುದು. ಒಟ್ಟು ಇಲ್ಲಿ ಮೂರು ಬಗೆಯ ಘಟನೆಗಳು ನಡೆದಿವೆ. ಮೊದಲನೆಯ ಘಟನೆಯಲ್ಲಿ, ರಾಜಸ್ಥಾನದಲ್ಲಿ ಗಾಯನ, ಕವಿವರ್ಣನೆಗಳಿಂದ ಕಾವ್ಯ ಆರಂಭವಾದರೆ, ಎರಡನೇ ಘಟನೆಯಲ್ಲಿ  ಮುನಿಗಳು ಚರಿಗೆಗೆ ಬರುವುದು, ಜಿನಾಲಯದರ್ಶನ, ತತ್ವವಿವರ, ಧ್ಯಾನ, ವ್ರತ, ಉಪವಾಸಗಳು ಪ್ರಮುಖವಾಗಿ ಎಡೆವಡೆದಿವೆ. ಮೂರನೆಯ ಘಟನೆಯಲ್ಲಿ, ಊಟ, ದಂಪತಿ ವಿಶ್ರಾಂತಿ ಗಿಳಿಮಾತು, ಮೆಚ್ಚಿಗೆ, ಪ್ರಿಯಸತಿಸಂಗ, ವಾದ್ಯನುಡಿಸುವಿಕೆ, ನಾಟ್ಯ ಪ್ರಸಂಗಗಳು ಪ್ರಮುಖವಾಗಿವೆ.

      ಮಹಾಪುರಾಣದ ಕರ್ತೃವಾಗಲೀ ಅವರನ್ನು ಅನುಸರಿಸಿ ಕಾವ್ಯವನ್ನು ಕಟ್ಟಿರುವ ಇತರೆ ಕವಿಗಳಾಗಲಿ, ಭರತ ಚಕ್ರಿಯ ಗೃಹಜೀವನವನ್ನು ಚಿತ್ರಿಸಲು ಪ್ರಯತ್ನ ಪಟ್ಟಿಲ್ಲ. ಚಕ್ರವರ್ತಿಯಾಗಿರುವರೆಗೆ ಆತನ ಜೀವನವು ಹೇಗೆ ರಸಮಯ ವಾಗಿತ್ತೆಂಬುದನ್ನು ಹೇಳಿಲ್ಲ. ಇತರರು ಹೇಳದೆ ಬಿಟ್ಟ ಈ ಭಾಗವನ್ನು ತೆಗೆದುಕೊಂಡು ರತ್ನಾಕರವರ್ಣಿಯು ರಸಮಯವಾದ ಕಾವ್ಯವನ್ನು ಸೃಷ್ಟಿಸಿದ್ದಾನೆ. ಆತನ ಭೋಗ ಸಂಧಿ ಒಂದು ಶೃಂಗಾರರಸ ಸಾಗರ. ಅಲ್ಲಿನ ಒಂದೊಂದು ಚಿತ್ರವು ಒಂದೊಂದು ಸರಸ ಸಲ್ಲಾಪದ ಮಾಲೆಯಾಗಿದೆ.

      ಭೋಗ ವಿಜಯದಲ್ಲಿ ಯೋಗವನ್ನು ಬಿಡದೆ ಭೋಗಕ್ಕೆ ಬಲಿಯಾಗದೆ ಒಂದೊಂದು ದಿನ ಒಂದೊಂದು ತೆರನಾದ ಸುಖಭೋಗಗಳನ್ನು ಅನುಭವಿಸಿ ಸುಖಿಸುತ್ತಿದ್ದ ಭರತನ ಜೀವನದ ಉಜ್ವಲವೂ ರಮಣೀಯವೂ ಆದ ಭೋಗ ಚಿತ್ರಗಳ ಪರಂಪರೆ ಹೆಣೆದುಕೊಂಡಿದೆ. ಒಂದು ದಿನ ಪರಮಾತ್ಮ ಕಲೆಯನ್ನು ನಿರೂಪಿಸುವ ಸಂಗೀತ ಸಾಹಿತ್ಯ ಗೋಷ್ಠಿಗಳನ್ನು ಕೇಳಿ ಆನಂದ ಪಟ್ಟು ಮುನಿಭುಕ್ತಿಯನ್ನು ಭಕ್ತಿಯಿಂದ ನೆರವೇರಿಸಿ ಪತ್ನಿಯರ ಸಹ ಪಂಕ್ತಿ ಭೋಜನದಿಂದ ಹರ್ಷಿತನಾಗಿ ವಾರಿಜಾಕ್ಷಿಯರೊಡನೆ ಸರಸ ಸಲ್ಲಾಪದಲ್ಲಿ ಮಗ್ನನಾಗುತ್ತಾನೆ.

      ಕವಿಯ ದೃಷ್ಟಿಯಲ್ಲಿ ಕಲೆಯ ಸವಿಯನ್ನರಿಯದ ಬಾಳು ನಿರ್ಭಾಗ್ಯದ ಬಾಳು.

      ಕಲೆಯ ನರಿವ ಪುರುಷನ ಪಡೆವುದು ನಾರಿ ಮಾಡಿದ ಪುಣ್ಯ

      ಕಲೆಗನುಕೂಲೆಯ ಪಡೆವುದು ಆ ಪುರುಷನ ಬಲು ಪುಣ್ಯ ಎಂದಿದ್ದಾನೆ.

      ಸಮಾನ ಧರ್ಮಿಗಳಾದ ಸತಿಪತಿಯರ ಕಲಾಭಿಜ್ಞವಾದ ಭೋಗವನ್ನು ಚಿತ್ರಿಸಿರುವುದು ಇಲ್ಲಿಯ ಭೋಗವರ್ಣನೆಯ ವಿಶೇಷವಾಗಿದೆ. ಕವಿಯ ರಸಿಕತೆಯೇ ಭರತನ ರಸಿಕತೆಯಾಗಿ ಶೃಂಗಾರ ಸನ್ನಿವೇಶಗಳಲ್ಲಿ ಒಡಮೂಡಿದೆ. ಕವಿಯ ರಸಿಕತೆ, ಕಲಾಭಿಜ್ಞತೆ, ಸದಭಿರುಚಿಗಳಿಂದ ವ್ಯಂಜಿತವಾದ ಭೋಗ ಬಹು ಸ್ವಾದವಾಗಿ ನಿರೂಪಿತವಾಗಿದೆ.

      ಕಾವ್ಯದ ಉತ್ತರ ಭಾಗದಲ್ಲಿ ಕವಿಯ ಕಲಾಭಿಜ್ಞತೆಯ ಪ್ರದರ್ಶನಕ್ಕೆ ಅವಕಾಶವೇ ಇಲ್ಲ. ಭರತೇಶವೈಭವದಲ್ಲಿ ಕಲಾಭಿಜ್ಞತೆ ವ್ಯಕ್ತಗೊಂಡಿರುವುದು ಅದರ ಪೂರ್ವ ಭಾಗದಲ್ಲಿ ಮಾತ್ರ. ಹೀಗಾಗಿ ಭರತೇಶವೈಭವದ ಪೂರ್ವಭಾಗವೇ ಕಾವ್ಯದ ವೈಭವದ ಭಾಗವಾಗಿದೆ.

     ರತ್ನಾಕರ ಭೋಗವಿಜಯದಲ್ಲಿ ಭರತನ ಕೇವಲ ಭೋಗವನ್ನೇ ಚಿತ್ರಿಸಿಲ್ಲ. ಆದಾಗ್ಯೂ ಭೋದ ಜೊತೆ ಜೊತೆಯಲ್ಲಿಯೇ ಅವನ ಅನುದಿನದ ಆತ್ಮಯೋಗವನ್ನು ಜಿನಭಕ್ತಿ, ಮುನಿಭುಕ್ತಿಗಳನ್ನು ಚಿತ್ರಿಸಿ ಅವನು ಭೋಗದಲ್ಲಿ ಮೈಮರೆತಿರಲಿಲ್ಲವೆಂಬುದನ್ನು ತೋರಿಸಿದ್ದಾನೆ. ಭೋಗವರ್ಣನೆ ಬಂದಿರುವ ಪ್ರತಿಯೊಂದು ಸಂದರ್ಭದಲ್ಲೂ ಭರತನ ಬದುಕಿನಲ್ಲಿ ಶೃಂಗಾರ ಆಧ್ಯಾತ್ಮಗಳು ಅಳವಟ್ಟಿರುವ ರೀತಿಯನ್ನು ತೋರಿಸಿ, ಅವನ ತ್ಯಾಗಭೋಗದ ಮೋಡಿಯನ್ನು ಎತ್ತಿಹಿಡಿದಿದ್ದಾನೆ. ಉಪ್ಪರಿಗೆಯೋಲಗದಲ್ಲಿ ಮಡದಿಯ ಕಾವ್ಯರಚನೆಯನ್ನು ಕೇಳಿ ನಲಿದು ಕಾಂತೆಯದೊಡನೆ ಸರಸ ಸಲ್ಲಾಪ ಮಾಡುತ್ತಾ ರಸಿಕರಲ್ಲಿ ರಸಿಕನಾಗಿ ಮೆರೆದ ಭರತ ಚಕ್ರವರ್ತಿ ಓಲಗ ಹರೆಯಿತೊ ಇಲ್ಲವೋ ಕಾಲೋಚಿತವಾದ ಆತ್ಮಯೋಗಕ್ಕೆ ತೊಡಗುತ್ತಾನೆ. ಅದುವರೆಗೂ ಅನುಭವಿಸಿದ ಭೋಗದ ವಾಸನೆಯೂ ಬಳಿಗೆ ಸುಳಿಯದಂತೆ ಧ್ಯಾನಮಗ್ನನಾಗುತ್ತಾನೆ.

      ರತ್ನಾಕರನ ದಿಗ್ವಿಜಯ ಭಾಗದ ನಿರೂಪಣೆಯಲ್ಲಿ ಕಂಡು ಬರುವ ಒಂದು ವಿಶೇಷವೆಂದರೆ ದಿಗ್ವಿಜಯ ಕಾಲದಲ್ಲೂ ಭರತನ ಗೃಹಜೀವನವನ್ನು ವರ್ಣಿಸಿರುವುದು. ಕೌಟುಂಬಿಕ ಜೀವನದ ಪ್ರಶಾಂತ ರಮಣೀಯತೆಯನ್ನು ವರ್ಣಿಸುವುದೆಂದರೆ ಕವಿಗೆ ಎಲ್ಲಿಲ್ಲದ ಸಂತಸ. ದಿಗ್ವಿಜಯ ಯಾತ್ರೆ ನಡೆಯುತ್ತಿರುವಾಗಲೇ ಅವನಿಗೆ ಹಲವಾರು ಪುತ್ರರು ಜನಿಸುತ್ತಾರೆ. ಹಾಗೆ ಜನಿಸಿದಾಗಲೆಲ್ಲ ಮಗು ದೊಡ್ಡದಾಗುವವರೆಗೆ ಆರಾರು ತಿಂಗಳು ಒಂದೆಡೆಯಲ್ಲಿ ತಂಗಿದ್ದು ಬಳಿಕ ದಿಗ್ವಿಜಯವನ್ನು ಮುಂದುವರಿಸುತ್ತಾನೆ. ಅಲ್ಲಲ್ಲಿ ಓಲಗವನ್ನು ನೆರಹಿ ಮಕ್ಕಳ ಬಾಲಲೀಲೆಯನ್ನು ನೋಡಿ ಹಿಗ್ಗುತ್ತಾನೆ. ಜಿನಪೂಜೆ, ಆತ್ಮಯೋಗ, ನಲ್ಲೆಯರೊಂದಿಗೆ ಸರಸ ಭೋಗ ಎಲ್ಲವೂ ಸಾಂಗವಾಗಿ ನಡೆಯುತ್ತಲೇ ಇರುತ್ತದೆ. ಮಕ್ಕಳಿಗೆ ಕಾಲೋಚಿತವಾದ ಜಾತಕರ್ಮ, ಉಪನಯನ, ವಿವಾಹ ಮೊದಲಾದ ಹಲವು ಉತ್ಸವಗಳ ವಿಜೃಂಭಣೆಯಿಂದ ಜರುಗುತ್ತದೆ. ಇವುಗಳ ಜೊತೆ ಜೊತೆಯಲ್ಲಿಯೇ ಭರತನು ಹಲವೆಡೆ ಮದುವಣಿಗನಾಗಿ ನಿಂತು ಸಾವಿರಾರು ಕನ್ಯಾರತ್ನಗಳನ್ನು ಕೈ ಹಿಡಿಯುತ್ತಾನೆ. ಮದುವೆಯ ಕಾಲದಲ್ಲಿ ಅತ್ತಿಗೆ-ನಾದಿನಿಯರ ನಡುವೆ ನಡೆಯುವ ಸರಸ ವಿನೋದಗಳು ಭರತ ದಿಗ್ವಿಜಯಕ್ಕೆ ಬಂದಿದ್ದಾನೆಂಬುದನ್ನೇ ಮರೆಸುವಂತಿವೆ.   ಭರತ ಚಕ್ರವರ್ತಿಯ ಕುಟುಂಬವೇ ಒಂದು ಕಲಾಭವನ. ಅವನ ಪತ್ನಿಯರು ಕಲಾನಿಪುಣರು. ಕೆಲವರು ಗಾಯಕಿಯರು, ನರ್ತಕಿಯರು, ರಸಋಷಿಗಳು, ಕುಸುಮಾಜಿ ಅರಗಿಳಿಯೆದುರು ಪತಿ ಪ್ರೇಮವನ್ನು ತೋಡಿಸಿಕೊಳ್ಳುತ್ತಾಳೆ. ಅದನ್ನು ಕೇಳಿಸಿಕೊಂಡ ಸುಮನಾಜಿ ಅದಕ್ಕೆ ಛಂದೋರೂಪವನ್ನು ಕೊಡುತ್ತಾಳೆ. ಅಮರಾಜಿ ಅದನ್ನು ಬರಹ ರೂಪದಲ್ಲಿ ತಂದು ಅಂದಗೊಳಿಸುತ್ತಾಳೆ. ಈ ಅಮೂಲ್ಯ ಸಾಹಿತ್ಯ ಸಂಪತ್ತನ್ನು ತಂದು ತಮ್ಮ ಮನೋವಲ್ಲಭನಿಗೆ ಪ್ರೀತಿಪೂರ್ವಕವಾಗಿ ಅರ್ಪಿಸುತ್ತಾರೆ.

      ಅರವತ್ತು ಸಾವಿರ ವರ್ಷಗಳ ಕಾಲ ದಿಗ್ವಿಜಯ ಯಾತ್ರೆ ನಡೆಯುವಾಗ ಭರತನ ಗೃಹಜೀವನವನ್ನು ಕಡೆಗಣಿಸುವುದು ತರವಲ್ಲವೆಂದು ಕವಿಗೆ ತೋರಿರಬೇಕು. ಇಲ್ಲಿಯ ವಿವಾಹ ಮಂಗಳಗಳು ದಿಗ್ವಿಜಯ ಭಾಗದಲ್ಲೂ ಶೃಂಗಾರ ವರ್ಣನೆ ಮಾಡಲು ಕವಿಗೆ ಅವಕಾಶವನ್ನು ಕಲ್ಪಿಸಿವೆ. ಮೂಲದಲ್ಲಿ ಇವುಗಳು ನಾಲ್ಕಾರು ವಾಕ್ಯಗಳಲ್ಲಿ ಮಾತ್ರ ಬಂದಿವೆ.

ಭರತನ ಯೋಗ-ಭೋಗಗಳ ಚಿತ್ರಣಕ್ಕೆ ಕೆಲವು ನಿದರ್ಶನಗಳು:

1. ಭರತನು ಸತಿಯರೊಡನೆ ಕುಳಿತು ಆರೋಗಣೆ ಮಾಡುವ ಸಂತಸದಲ್ಲಿರುವಾಗಲೂ ಕಂಗಳಿಂದನ್ನವ ನೋಡಿ ಜ್ಞಾನದೊಳಂತರಂಗದೊಳಾತ್ಮನ ನೋಡಿ ತುಂಗಭಾವದೊಳನ್ನ ಪಾವನ ಹಂಸನಾಥಂಗೆ ಸಮರ್ಪಣೆಗೈದ ನಂತೆ 

2. ಉಪ್ಪರಿಗೆಯೋಲಗದಲ್ಲಿ ಸಮಸ್ತ ಪತ್ನೀ ಪರಿವೃತನಾಗಿ ಕುಳಿತು, ಇನಿಯಳ ಕಾವ್ಯರಚನೆಯನ್ನು ಕೇಳಿ ನಲಿದ ಭರತ ಓಲಗವನ್ನು ವಿಸರ್ಜಿಸಿದ್ದೇ ತಡ ಕಾಲೋಚಿತವಾದ ಆತ್ಮಯೋಗದಲ್ಲಿ ತೊಡಗುತ್ತಾನೆ.

ಎತ್ತ ಹೋದುದೊ ಹೆಂಗಳಡನಿಂದಿಷ್ಟು ಹೊತ್ತು ತಾನಾಡಿದ ಲೀಲೆ

ಹತ್ತು ಸಾವಿರಕಾಲ ತಪಸು ಮಾಡಿದ ಮುನಿಪೋತ್ತಮನಂತಿರ್ದನಾಗ

3. ಕುಸುಮಾಜಿ ತನ್ನನ್ನು ಕುರಿತು ಕಾವ್ಯ ರಚನೆಮಾಡಿದುದಕ್ಕಾಗಿ ಅವಳಿಗೆ ಮೆಚ್ಚುಕೊಡಲು ಅವಳ ಮನೆಗೆ ಭೋಜನಕ್ಕೆ ಹೋಗಿ ಅವಳು ಕೈಯಾರೆ ಉಣಬಡಿಸಿದ ಸವಿಯೂಟವನ್ನು ಸವಿದ ಭರತ ಅವಳು ಊಟ ಮುಗಿಸಿ ಬರುವಷ್ಟರಲ್ಲಿ ನಸುನಿದ್ದೆ ಮಾಡಿ ಎದ್ದು ಆತ್ಮಯೋಗದಲ್ಲಿರುತ್ತಾನೆ. ತುಸು ಹೊತ್ತಿನಲ್ಲಿ ಅಂಬುಜಲೋಚನೆ ಬಹುದನರಿದು ಬಹಿರ್ಮುಖನಾಗಿ ಅವಳೊಡನೆ ಸರಸ ಸಲ್ಲಾಪಕ್ಕೆ ತೊಡಗುತ್ತಾನೆ. ಅವಳ ಮಧುರವಾದ ಗಾನ ವೀಣಾವಾದನಗಳನ್ನಾಲಿಸಿ ಆನಂದಿಸಿ ಅವಳೊಡನೆ ಕಲಾ ಪೂರ್ಣವಾದ ಸರಸ ದಾಂಪತ್ಯದ ಸವಿಯನ್ನು ಮನಸಾರ ಸವಿದ ಮೇಲೆ ಮೇಲ್ನೆಲೆಗೆ ಹೋಗಿ ಪುನ: ಆತ್ಮಯೋಗದಲ್ಲಿದ್ದು ‘ಮೆರೆದ ನಾಗಳೆಯಿಷ್ಟು ಹೊತ್ತು ನಲ್ಲಳ ಕೂಡೆ ಮೆರೆದುದು ಹಳೆಮರಹಾಯ್ತು. ಅರಿದನಾಗಳೆ ಕಂಡನಾಗಳೆ ಹಂಸನ ಕುರುಹನಾ ರಾಜಯೋಗೀಂದ್ರ.’

      ಪದ್ಮಿನಿಯೊಡನೆ ಭೋಗವನ್ನನುಭವಿಸಿ ಮಂಗಲ ನಿದ್ರೆ ಮಾಡಿದ ಭರತ ಬ್ರಾಹ್ಮೀ ಮುಹೂರ್ತಕ್ಕೆ ಎಚ್ಚೆತ್ತ ಪರಬ್ರಹ್ಮನ ಕಂಡ ತನ್ನೊಳಗೆ, ಮಾನಿನಿ ಕೆಲದೊಳಿದ್ದಳು ರಾಯನಿದ್ದನು ತಾನೆ ತಾನಾಗಿ ತನ್ನೊಳಗೆ.

      ಸುಭದ್ರೆಯೊಡನೆ ಅಪೂರ್ವವಾದ ಶೃಂಗಾರಭೋಗವನ್ನನುಭವಿಸಿ ಮುಗಿದ ಮೇಲೆ ಸಚ್ಚಿದಾನಂದ ವಸ್ತುವನ್ನಪ್ಪಿ ನೃಪತಿ ಕಣ್ಮುಚ್ಚಿದನು. ದೇಹ ಅವಳ ಸೊಂಕಿನಲ್ಲಿದ್ದರೂ ಮನದಾತ್ಮ ಕಲೆಯ ನೆಮ್ಮಿರ್ದುದಿನ್ನವನ.

      ಭೋಗಮುಗಿದೊಡನೆಯೇ ಬರುವ ಭರತನ ಯೋಗ ಚಿತ್ರಣಗಳಲ್ಲೇ ಅಲ್ಲದೆ ಯೋಗಕ್ಕೆ ಮೀಸಲಾದ ಸನ್ನಿವೇಶಗಳಲ್ಲೂ ಕವಿಯು ಅವನ ಭೋಗ ನಿರ್ಲಿಪ್ತತೆಯ ಕಡೆಗೆ ಹೆಚ್ಚಿನ ಒಲವನ್ನು ತೋರಿರುವುದನ್ನುಕಾಣಬಹುದಾಗಿದೆ.

      ಭರತ ಉಪವಾಸ ವ್ರತವನ್ನು ಕೈಗೊಂಡು ಜಿನಭವನದಲ್ಲಿ ಪತ್ನಿಯರಿಗೆ ತತ್ವೋಪದೇಶ ಮಾಡಲು ಹೊರಟಾಗ ಕಾಮತಂತ್ರದ ನುಡಿಯಿಲ್ಲ, ಭೋಗದೊಳೊಂದು ನಾಮಮಾತ್ರದ ನೆನಹಿಲ್ಲ. ಭರತ ಪತ್ನಿಯರನ್ನು ‘ಪೆಂಡಿರೆಂದೆಣಿಸದೆ ಯಿವರಿಂದು ತಪಸಿವೆಣ್ತಂಡವೆಂದೆಣಿಸಿ’ ನೋಡುವನು. ಸತಿಯರೂ ಸಹ ‘ಭೂಪನ ತಮ್ಮ ಗಂಡನೆಂದೆಣಿಸದಿಂದೊಬ್ಬ

ಮಂಡಲಾಚಾರ್ಯ ತಪೋಧನ ನೆಂದೆದೆಗೊಂಡು ನೋಡುವರು

     ರತ್ನಾಕರವರ್ಣಿಯು ಎಲ್ಲಾ ಸಂದರ್ಭಗಳಲ್ಲಿಯೂ ಭೋಗ-ಯೋಗಗಳನ್ನು ಪ್ರತ್ಯೇಕ ಘಟಕಗಳಾಗಿ ಚಿತ್ರಿಸಿದ್ದಾನೆ. ಭೋಗವಾದ ಕೂಡಲೇ ಯೋಗವನ್ನು ಚಿತ್ರಿಸಿ ಭರತ ಎಷ್ಟು ಸುಲಭವಾಗಿ ಭೋಗದಿಂದ ತನ್ನನ್ನು ಬಿಡಿಸಿಕೊಳ್ಳಲು ಸಮರ್ಥನಾಗಿದ್ದ ಎಂಬ ಅಂಶದ ಮೇಲೆ ಒತ್ತು ಬೀಳುವಂತೆ ಮಾಡಿದ್ದಾನೆ. ಭೋಗ-ಯೋಗಗಳನ್ನು ಪ್ರತ್ಯೇಕವಾಗಿ ಚಿತ್ರಿಸುವ ಮೂಲಕವೇ ಭರತನ ಭೋಗ ನಿರ್ಲಿಪ್ತತೆಯನ್ನು ಎತ್ತಿ ಹಿಡಿಯುವ ರಚನಾ ತಂತ್ರವನ್ನು ಪ್ರಯೋಗಿಸಿದ್ದಾನೆ.

      ಭೋಗವಾದ ಕೂಡಲೇ ಯೋಗ ವಿಚಾರ ಬಂದಿರುವ ಕತೆಗಳಲ್ಲೆಲ್ಲಾ ಕಾಣುವ ಒಂದು ಕೊರತೆಯೆಂದರೆ, ಭೋಗವರ್ಣನೆಗಳು ಶೃಂಗಾರ ರಸೋಚಿತವಾದ ಸನ್ನಿವೇಶಗಳ ಪರಿಕಲ್ಪನೆಗಳಿಂದ ಪುಷ್ಟಿ ಪಡೆದಿದ್ದು ಯೋಗವರ್ಣನೆಗಳು ಮಾತ್ರ ಸನ್ನಿವೇಶ ಕಲ್ಪನೆಯಿಲ್ಲದೆಯೇ ರಸಪದಿ ಪೋಷಣೆ ಹೊಂದದೆಯೇ ತಟಕ್ಕನೇ ಕವಿಯ ಹೇಳಿಕೆಯಾಗಿ ಬಂದಿದೆ. ಆದಾಗ್ಯೂ ಭೋಗ ಮುಗಿದ ಕೂಡಲೇ ಯೋಗಕ್ಕೆ ಏರಬೇಕಾದರೆ ಭರತನ ಆತ್ಮ ಸಂಯಮ ಎಷ್ಟು ದೃಢವಾದುದ್ದು ಎಂಬ ಕಲ್ಪನೆ ಮೆಚ್ಚತಕ್ಕದ್ದು.

      ಭೋಗವನ್ನನುಭವಿಸಿದ ಮರುನಿಮಿಷದಲ್ಲೇ ಯೋಗಕ್ಕೆ ತೊಡಗಿದರೂ ಭೋಗದ ವಾಸನೆಯೂ ಭರತನ ಬಳಿ ಸುಳಿಯುತ್ತಿರಲಿಲ್ಲ.

ಸಂದು ಭೋಗದೊಳಿದ್ದು ಯೋಗಕ್ಕೆ ಸಲುವಾಗ ಹಿಂದಣ ವಾಸನೆಯಿಲ್ಲ

ಒಂದ ಬಿಟ್ಟೊಂದು ವಸ್ತ್ರವ ಹೊದೆವಂತಿಹುದೆಂದೆಂದು ಭಾವನಾನೃಪಗೆ

ಹೀಗೆ ಭರತ ಯೋಗಕಾಲದಲ್ಲಿ ಭೋಗದ ಸೋಂಕೂ ಬಳಿಗೆ ಹೊದ್ದದಂತೆ ಯೋಗನಿರತನಾಗಿರುತ್ತಿದ್ದ. ಭೋಗ ಕಾಲದಲ್ಲಿ ಭೋಗಕ್ಕೆ ಅಂಟದೆ ಆತ್ಮಸಾಕ್ಷಿಯಾಗಿ ಅದನ್ನನುಭವಿಸುತ್ತಿದ್ದ ಭೋಗದ ವಾಸನೆಯಿಲ್ಲದ ಯೋಗ ಆತ್ಮಸಾಕ್ಷಿಯಾಗಿ ಅನುಭವಿಸುವ ಭೋಗ ಇದನ್ನೇ ಕವಿಯು ಭರತನ ತ್ಯಾಗ-ಭೋಗದ ಮೋಡಿ ಎಂದು ವರ್ಣಿಸಿದ್ದಾನೆ.

      ಭೋಗ ಸಂಮೃದ್ಧಿಯಿಂದ ಕೂಡಿ ಆಕರ್ಷಕವಾಗಿರುವ ಚಕ್ರವರ್ತಿ ಚರಿತ್ರೆ ರತ್ನಾಕರನಿಗೆ ಸಹಜವಾಗಿಯೇ ಕಾವ್ಯವಸ್ತುವಾಗಲು ಯೋಗ್ಯವಾಗಿ ಕಂಡಿದೆ. ತೀರ್ಥಂಕರನನ್ನು ಬಿಟ್ಟು ಚಕ್ರವರ್ತಿಯನ್ನು ಕಥಾನಾಯಕನನ್ನಾಗಿ ಮಾಡಿಕೊಂಡಿರುವುದೇಕೆ ಎಂಬ ಪ್ರಶ್ನೆಗೆ ಕವಿಯು ನೀಡಿರುವ ಉತ್ತರ ಈ ರೀತಿ ಇದೆ.

ಮುಕ್ತರೆಲ್ಲರು ಸರಿಯಹುದಾದದೇನಾತ್ಮ ಶಕ್ತಿಯನರಿದಿಲ್ಲಿ ಮೊದಲು

ವ್ಯಕ್ತ ಭೋಗದೊಳಿರ್ದು ಕ್ಷಣಕೆ ಮುಕ್ತಿಯ ಕೊಂಡ ಯುಕ್ತಿಗೆನ್ನದೆ ಸೂರೆವೋಯ್ತು

ಮುಟ್ಟಿದ ಗುರಿಗಾಗಿ ಮಾತ್ರವಲ್ಲದೆ ಮುಟ್ಟಿದ ರೀತಿಗಾಗಿ ಕವಿಯು ಭರತನನ್ನು ಮೆಚ್ಚಿಕೊಂಡಿದ್ದಾನೆ.

ಆದಿತೀರ್ಥಂಕರನ ಕಾಲದ ಭರತಚಕ್ರವರ್ತಿಯ ಬದುಕಿನ ಹಿರಿಮೆಯನ್ನು ಕೊಂಡಾಡುವುದೇ ರತ್ನಾಕರವರ್ಣಿಯ ವಿಸ್ತಾರವಾದ ಕೃತಿಯ ಏಕೈಕ ಧ್ಯೇಯ. ಹರಿಹರನಿಗೆ ರಗಳೆ ಹೇಗೆ ಒಲಿಯಿತೋ ರತ್ನಾಕರನಿಗೆ ಹಾಗೆ ಸಾಂಗತ್ಯ ಒಲಿದಿದೆಯೆನ್ನಬೇಕು. ಸಾಂಗತ್ಯ ಕವಿಗಳಲ್ಲಿ ಇವನು ಅಗ್ರಗಣ್ಯನೆನ್ನಬಹುದು. ಇವನ ಧಾರಾವಾಹಿಯಾದ ಶೈಲಿ ಮೆಚ್ಚುವಂಥಾದ್ದು. ಭರತ ಗಣನೆಗೆ ಸಿಕ್ಕದ ರಾಜ್ಯೈಶ್ವರ್ಯದ ಸುಖೋಪಭೋಗಗಳಲ್ಲಿ ಓಲಾಡಿ ಕೊನೆಗೆ ಕ್ಷಣಮಾತ್ರದಲ್ಲಿ ಕರ್ಮವನ್ನು ಸುಟ್ಟು ಜಿನನಾದ ವೈಭವವನ್ನು ಕವಿ ಈ ಕಾವ್ಯದಲ್ಲಿ ವರ್ಣಿಸಿದ್ದಾನೆ. ಜನರು ಅಲ್ಪರ ಕಥೆಗಳಿಗೆ ಮನಸ್ಸು ಕೊಟ್ಟು ಕೆಡಬಾರದೆಂಬ ಉದ್ದೇಶದಿಂದ ಅಂಗಸುಖಿಯ ಮೋಕ್ಷಸುಖಿಯ ಕಾವ್ಯವನಿಷ್ಟು ಶೃಂಗಾರದಲಿ ಹೇಳಿದುದಾಗಿ ಘೋಷಿಸಿದ್ದಾನೆ. ಸುಖಭೋಗದಲ್ಲಿ ಭಾಗವಹಿಸಿದರೂ ಪರಮ ವೈರಾಗ್ಯ ಭಾವದಿಂದ ನಡೆದುಕೊಳ್ಳುವ ಭರತನ ಮನೋಧರ್ಮ ಕಾವ್ಯದುದ್ದಕ್ಕೂ ಕಂಡು ಬರುತ್ತದೆ.  ಭರತನ ಸಾರ್ಥಕ ಜೀವನದ ಹಲವು ಪ್ರಮುಖ ಮಜಲುಗಳನ್ನು ಕುರಿತು ಮಾಡಿದ ಕಲಾತ್ಮಕವಾದ ಪಕ್ವವಿಮರ್ಶೆಯಂತೆ ಈ ಕೃತಿ ಮೈಪಡೆದಿದೆ. ಇದರಲ್ಲಿ ಕವಿಯ ಸಮೃದ್ಧವಾದ ಅನುಭವ ಹಾಗೂ ವಿಕಸನಶೀಲವಾದ ವೈಚಾರಿಕತೆ ಒಂದೇ ಲೋಹವಾಗಿ ಕರಗಿ ಬಂದಿದೆ. ಪುರಾಣವಾದುದನ್ನು ಕಾವ್ಯವನ್ನಾಗಿಸುವಲ್ಲಿ ಕವಿ ಅಪರೂಪ ಸಿದ್ಧಿಪಡೆದಿದ್ದಾನೆ.

ಮೊದಲಿಗೆ ಪಂಪಕವಿ ಆದಿ ಪುರಾಣದಲ್ಲಿ ಭರತ ಬಾಹುಬಲಿಗಳ ಯುದ್ಧ ಸಂದರ್ಭವನ್ನು ಲೋಕ ಪ್ರಸಿದ್ಧವಾದ ರೀತಿಯಲ್ಲಿ ಚಿತ್ರಿಸಿ ಕೃತಾರ್ಥನಾದನಷ್ಟೆ. ಇಲ್ಲಿ ಭರತೇಶ ವೈಭವದಲ್ಲಿ ರತ್ನಾಕರವರ್ಣಿ ಅದೇ ಸಂದರ್ಭವನ್ನೆತ್ತಿಕೊಂಡು ಚಮತ್ಕಾರವಾಗಿ ಅದಕ್ಕೊಂದು ತಿರುವು ಕೊಟ್ಟು ಯುದ್ಧವೇ ನಡೆಯದಂತೆ ಮಾಡಿದ್ದಾನೆ. ಈ ಭಾಗವೂ ಮೊದಲಿನ ಭೋಗಭಾಗವೂ ಬಹು ಸುಂದರವಾಗಿ ರೂಪುಗೊಂಡಿವೆ.  ಭರತೇಶ ತಮ್ಮ ತಮ್ಮಂದಿರಿಗೆಲ್ಲಾ ಪತ್ರ ಬರೆದು ಅವರುಗಳು ಬಂದು ತನಗೆ ನಮಿಸುವಂತೆ ಆದೇಶಿಸುತ್ತಾನೆ. ಆದರೆ ಸ್ವಾಭಿಮಾನಿಗಳಾದ ಅವರುಗಳು ಅಣ್ಣನಿಗೆ ಎರಗದೆ ತಂದೆಯಾದ ಪುರುದೇವನ ಬಳಿಗೆ ಹೋಗಿ ದೀಕ್ಷೆ ವಹಿಸುತ್ತಾರೆ. ಸಹೋದರರ ನಡುವಳಿಕೆಯನ್ನು ಕಂಡು ಭರತ ವ್ಯಥೆ ಪಡುತ್ತಾನೆ. ಎಲ್ಲರೂ ಒಟ್ಟಾಗಿ ಬಾಳಬೇಕೆಂಬ ಅವನ ಹಿರಿಯಾಸೆ ಫಲಿಸಲಿಲ್ಲ. ಬಾಹುಬಲಿಯನ್ನಾದರೂ ತನ್ನೊಡನೆ ಉಳಿಸಿಕೊಳ್ಳಬೇಕೆಂಬ ಹಂಬಲದಿಂದ ಪ್ರೀತಿ ಸ್ನೇಹ ತುಂಬಿದ ಮಾತುಗಳಿಂದ ಕೂಡಿದ ಒಕ್ಕಣೆಯನ್ನು ದಕ್ಷಿಣಾಂಕನೆಂಬ ರಾಯಭಾರಿಯೊಡನೆ ಕಳುಹಿಸುತ್ತಾನೆ.

ಬಾಹುಬಲಿ ಅಣ್ಣನ ಪತ್ರಕ್ಕೆ ನೆಲೆಕೊಡದೆ ವ್ಯಂಗ್ಯದ ಮಾತುಗಳಿಂದ ಭರತನನ್ನು ಹೀಯಾಳಿಸಿ ರಾಯಬಾರಿ ಹಿಂತಿರುಗುವಂತೆ ಮಾಡುತ್ತಾನೆ. ಬಾಹುಬಲಿ ಅಣ್ಣನನ್ನು ಯುದ್ಧಕ್ಕೆ ಆಹ್ವಾನಿಸುತ್ತಾನೆ. ಇದರಿಂದಾಗಿ ಸಹೋದರರಿಬ್ಬರಲ್ಲಿ ಯುದ್ಧ ಅನಿವಾರ್ಯವಾಗುತ್ತದೆ.

ರಣರಂಗದಲ್ಲಿ ಭರತ ಬಾಹುಬಲಿ ಇಬ್ಬರೂ ಎದುರಾಗುತ್ತಾರೆ. ಲೋಕಹಿತವನ್ನು ಬಯಸುವ ಭರತನಿಗೆ ಯುದ್ಧ ಬೇಕಾಗಿರಲಿಲ್ಲ. ಮೇಲಾಗಿ ಉನ್ನತ ಆದರ್ಶಗಳನ್ನು ಮೌಲ್ಯಗಳನ್ನು ಹೊಂದಿದ್ದ ತನ್ನ ನಾಯಕ ತಮ್ಮನೊಂದಿಗೆ ಕಾಳಗ ಮಾಡುವುದು ಹಿತವಾಗದೆ ಕವಿ ಯುದ್ಧ ಪ್ರಸಂಗವನ್ನು ಕೈಬಿಟ್ಟಿದ್ದಾನೆ. ಬದಲಾಗಿ ಅಹಂಕಾರವನ್ನು ಗೆಲ್ಲುವ ತ್ಯಾಗವನ್ನು ಉದಾತ್ತೀಕರಿಸುವ ಒಂದು ಹೃದಯಸ್ಪರ್ಶಿ ಸಂದರ್ಭವನ್ನಾಗಿ ಕವಿ ಚಿತ್ರಿಸಿದ್ದಾನೆ.

ಭರತ ತನ್ನ ಪರಾಕ್ರಮ ಪ್ರತಿಷ್ಠೆ ಅಭಿಮಾನಗಳೆಲ್ಲವನ್ನು ಬದಿಗೊತ್ತಿ ತಮ್ಮನಿಗಾಗಿ ಹಿತವಚನಗಳನ್ನು ಹೇಳುತ್ತಾನೆ. ತನ್ನ ನಯವಾದ ಮಾತುಗಾರಿಕೆಯಿಂದ ಬಾಹುಬಲಿಯನ್ನು ಒಲಿಸಿಕೊಳ್ಳಲು ಯತ್ನಿಸುತ್ತಾನೆ. ನಿನಗಾನು ಪಗೆಯೆ ನೀನೆನಗೆ ಪಗೆಯೆ ಪೇಳು, ಜಿನಪುತ್ರರಿದನು ನಾವಿಂದು ನೆನೆದಾಗ ಮುಂದೆ ಸಮಸ್ತಗರ್ಗೆ ದ್ರೋಹ ಶಾಸನವ ಬರೆದು ಕೊಟ್ಟವಲ್ತೆ ಇತ್ಯಾದಿಯಾಗಿ ಎಂಥ ಕಠಿಣ ಹೃದಯವೂ ಕರಗುವಂತೆ ಪ್ರೀತಿ, ವಾತ್ಸಲ್ಯ ತುಂಬಿದ ತನ್ನ ಅಂತರಂಗದ ಮಾತುಗಳನ್ನು ತಮ್ಮನಿಗೆ ಹೇಳುತ್ತಾನೆ. ನಾನು ನಿನಗಿಂತಲೂ ಹಿರಿಯನಾದ ಕಾರಣಕ್ಕೆ ಧರ್ಮವನ್ನು ಭೋಧಿಸಲು ಬಂದಿದ್ದೇನೆ. ಎಂದು ಮುಂತಾಗಿ ತನ್ನ ಅಂತರಂಗದ ಸದ್ಭಾವನೆಯನ್ನು ವ್ಯಕ್ತಪಡಿಸುತ್ತಾನೆ. ಸದ್ಗುಣಗಳ ಗಣಿಯಾದ ಭರತನ ವ್ಯಕ್ತಿತ್ವ ಸನ್ನಿವೇಶದಲ್ಲಿ ಹಿಮಾಚಲ ಸದೃಶವಾಗಿದೆ. ಭರತ ಮನುಷ್ಯ ಸಹಜವಾದ ಎಲ್ಲಾ ಅಹಂಕಾರಗಳನ್ನು ತೊರೆದು ವಿಶ್ವಾದರ್ಶವನ್ನು ತೋರಿ ವಿಶ್ವನಾಯಕನಾಗಿದ್ದಾನೆ.

ನನ್ನೊಡನೆ ಯುದ್ಧಮಾಡುವ ಮನಸ್ಸು ನಿನಗೇಕೆ ಬಂದಿತು? ನಿಷ್ಕಾರಣವಾಗಿ ಯುದ್ಧ ಮಾಡುವುದರಿಂದ ಬರುವ ಘನತೆ ಏನು? ನಿನ್ನೊಡವೆಯನ್ನು ನಾನು ತೆಗೆದುಕೊಂಡಿಲ್ಲ. ನೀನು ನನ್ನದನ್ನು ತೆಗೆದುಕೊಂಡಿಲ್ಲ. ತಂದೆ ನಮ್ಮಿಬ್ಬರನ್ನು ರಾಜ, ಯುವರಾಜರಂತೆ ಇರಿಸಿದ್ದಾರೆ. ಹಾಗೆಯೇ ನಡೆದುಕೊಳ್ಳುತ್ತಿದ್ದೇವೆ. ಅಣ್ಣ ತಮ್ಮನನ್ನು ನೋಡಬೇಕೆಂದು ಬಯಸಿ ಹೇಳಿಕಳುಹಿಸಿದರೆ ಅದು ತಪ್ಪೇ?” ಎಂದು ಅತ್ಯಂತ ವಿನಯದಿಂದ ಕೇಳುತ್ತಾನೆ

   ಬಾಹುಬಲಿಯನ್ನು ಓಲೈಸುವಂತೆ ಭರತ ಚಕ್ರ ರತ್ನಕ್ಕೆ ಹೇಳಿದರೂ ಬಾಹುಬಲಿಗೆ ನಿವೇದಿಸಿಕೊಳ್ಳುವ ಪುಣ್ಯವಿಲ್ಲವೆಂದು ಭರತನ ಮುಂದೆಯೆ ಬಂದು ನಿಲ್ಲುತ್ತದೆ. ಅಣ್ಣ ತಮ್ಮಂದಿರಲ್ಲಿ ಕಲಹ ನಿನ್ನಿಂದಲೇ ಹುಟ್ಟಿತೆಂದು ಭರತ ಚಕ್ರರತ್ನವನ್ನು ದೂಷಿಸುತ್ತಾನೆ. ಗರುಡ ಮಂತ್ರಕ್ಕೆ ವಿಷವಿಳಿದ ಹಾಗೆ ಭರತನ ವಾತ್ಸಲ್ಯಭರಿತ ಮಾತುಗಳನ್ನು ಕೇಳಿದ ಬಾಹುಬಲಿಯ ಕೋಪವೆಲ್ಲಾ ಸೇರಿಹೋಗಿ ಅವನ ಹೃದಯ ತಂಪಾಯ್ತು. ಯುದ್ಧಕ್ಕೆ ಆಹ್ವಾನ ಕೊಡದೆ ನಯವಿನಯ ಮಾತುಗಳಿಂದಲೇ ತಮ್ಮನನ್ನು ಗೆದ್ದ ಭರತೇಶನನ್ನು ಕಂಡು ಮಂತ್ರಿಗಳು, ಸಾಮಂತ ರಾಜರುಗಳು, ಸೈನ್ಯ ಎಲ್ಲರೂ ಭರತನನ್ನು ಹಾಡು ಹೊಗಳಿದ್ದಾರೆ. ಬಾಹುಬಲಿ ಅಹಂಕಾರವೆಲ್ಲ ಉಡುಗಿಹೋದಾಗ ಅವನ ಮನಸ್ಸಿನಲ್ಲಿ ವಿರಕ್ತಿ ಹುಟ್ಟುತ್ತದೆ. ಐಹಿಕವಾದ ಸುಖ, ಭೋಗ, ಅಧಿಕಾರ ರಾಜಪದವಿ, ಪ್ರತಿಷ್ಠೆ ಕೀರ್ತಿ ಎಲ್ಲವೂ ನಶ್ವರವೆಂಬ ಭಾವನೆ ಹುಟ್ಟಿ ಸರ್ವಸ್ವವನ್ನು ತ್ಯಜಿಸಿ ತನ್ನ ಇನ್ನಿತರ ಸಹೋದರರಂತೆ ಪುರದೇವನ ಬಳಿಗೆ ಹೋಗಿ ದೀಕ್ಷೆ ಸ್ವೀಕರಿಸುತ್ತಾನೆ. ರತ್ನಾಕರನ ಭರತ ಸೋಲುವುದಿಲ್ಲ. ಯುದ್ಧವೇ ತಪ್ಪಿ ಹೋದ ಮೇಲೆ ಸೋಲುಗೆಲವುಗಳ ಮಾತಿಲ್ಲ. ಭರತನ ಸಾಮ್ರಾಟ ಶಕ್ತಿಯನ್ನು ಬಾಹುಬಲಿ ತನ್ನ ತಪೋ ಶಕ್ತಿಯಿಂದ  ಸೋಲಿಸುವುದಿಲ್ಲ. ಭರತನ ಮಾತಿನ ವಶೀಕರಣಕ್ಕೆ ಬಾಹುಬಲಿಯೇ ಸೋಲುತ್ತಾನೆ. ರತ್ನಾಕರ ಚಿತ್ರಿಸಿರುವ ಭರತ ಸಹೃದಯನಾಗಿ ದಯಾಳುವಾಗಿ, ಶಾಂತಿಪ್ರಿಯವಾಗಿ, ಸಹೋದರನ ಹಿತೈಷಿಯಾಗಿ ಸೂಕ್ಷ್ಮ ಸಂವೇದನೆಯನ್ನುಳ್ಳ ಓರ್ವ ಮಹಾಪುರುಷನಾಗಿ ರೂಪುಗೊಂಡಿದ್ದಾನೆ. ರತ್ನಾಕರವರ್ಣಿಯ ಈ ಬದಲಾವಣೆ ಕತೆಯನ್ನು ಮಹಾಕಥೆಯನ್ನಾಗಿಸಿದೆ. ಈ ಪ್ರಸಂಗದಲ್ಲಿ ಬಾಹುಬಲಿಯ ಸತ್ವ ಭರತನಷ್ಟು ಇಲ್ಲ. ರತ್ನಾಕರವರ್ಣಿ ತನ್ನ ಕಾವ್ಯದ ಉದ್ದೇಶಕ್ಕೆ ಅನುಗುಣವಾಗಿ ತನ್ನ ನಾಯಕನ ಆದರ್ಶ ಗುಣಗಳನ್ನು ವೈಭವೀಕರಿಸಿರುವುದು ಸಹಜ. ಆದರೆ ಪಂಪ ಮೊದಲಾದ ಕವಿಗಳು ಬಾಹುಬಲಿಯನ್ನು ಒಂದು ಮಹೋನ್ನತ ಪಾತ್ರವಾಗಿ ಚಿತ್ರಿಸಿ ಜನಮಾನಸದಲ್ಲಿ ಬಾಹುಬಲಿಗೆ ಚಿರಸ್ಥಾಯಿಯಾದ ಸ್ಥಾನವನ್ನು ಕಲ್ಪಿಸಿದ್ದಾರೆ ಎಂಬುದನ್ನು ಮರೆಯಲಾಗದು.   ರತ್ನಾಕರವರ್ಣಿ ತನ್ನ ಕಾವ್ಯದಲ್ಲಿ ಪಂಪನ ಭರತ-ಬಾಹುಬಲಿ ಪ್ರಸಂಗವನ್ನು ಬದಲಾವಣೆ ಮಾಡಿ ಸೌಮ್ಯ ಸ್ವಭಾವದ ಭರತನು ಪ್ರೀತಿ ತುಂಬಿದ ಮೃದುವಾದ ಮಾತುಗಳಿಂದ ಬಾಹುಬಲಿಯನ್ನು ಒಲಿಸಿಕೊಂಡು ಯುದ್ಧವನ್ನು ನಿವಾರಿಸಿದಂತೆ ನಿರೂಪಿಸಿದ್ದಾನೆ. ಈ ಮಾರ್ಪಾಡು ಭೋಗ ಯೋಗಗಳಲ್ಲಿ ಸಮನ್ವಯ ಸಾಧಿಸಿದ ಸ್ಥಿತಪ್ರಜ್ಞ ಭರತನ ವ್ಯಕ್ತಿತ್ವಕ್ಕೆ ಸೂಕ್ತವಾಗಿದೆ.

ಕವಿಯ ಕಥನ ಕಲೆ:

      ರತ್ನಾಕರವರ್ಣಿ ಚತುರ ಕಲೆಗಾರ. ಕೇಳುವವರು ಕಿವಿತೆರೆದು ಕೇಳುವಂತೆ ಬಣ್ಣಿಸಿ ಬಣ್ಣಿಸಿ ಕಥೆಯನ್ನು ಹೇಳಬಲ್ಲ ಕಲಾವಿದ. ಅವನಿಗೆ ವರ್ಣಕ ಕಾವ್ಯದ ಹೆಚ್ಚಿನ ಆಸಕ್ತಿ ಭರತೇಶವೈಭವದಲ್ಲಿ ಕಥೆ ಕಿರಿದು ವರ್ಣನೆ ಹಿರಿದು, ಕಾವ್ಯದ ಒಟ್ಟು ಗಾತ್ರಕ್ಕೆ ಅದರ ಕಥಾವಸ್ತು ವಸ್ತುವನ್ನು ಹೋಲಿಸುವುದೆಂದರೆ ಆನೆಗೂ ಇರುವೆಗೂ ಹೋಲಿಸಿದಂತೆ ಕಥೆಯ ಒಂದೊಂದು ಸಂಗತಿಯನ್ನು ಒಂದೊಂದು ಸಂಧಿಯಲ್ಲಿ ವಿಸ್ತಾರವಾಗಿ ವರ್ಣಿಸುತ್ತಾ ಕಥೆ ಹೇಳುವುದು ಅವನಿಗೆ ತುಂಬ ಪ್ರಿಯ. ವರ್ಣನೆ ಅವನ ಕಥನ ಕಲೆಯ ಅವಿಭಾಜ್ಯ ಅಂಗ. ಇದರ ಪರಿಣಾಮವಾಗಿ ಕಥೆ ಬಹುಮುಖವಾಗಿ ಸಾಗುತ್ತದೆ.

      ತಾನು ವರ್ಣಿಸಲು ಹೊರಟ ವಿಷಯವನ್ನು ಕಣ್ಣಿಗೆ ಕಟ್ಟುವಂತೆ ಕಿವಿಗೆ ತಟ್ಟುವಂತೆ ಮನಮುಟ್ಟುವಂತೆ ನಿರೂಪಿಸುವ ಕಲೆಗಾರಿಕೆ. ಕವಿಯ ವರ್ಣನಾ ಸಾಮರ್ಥ್ಯ ಅಸಾಧಾರಣವಾದುದು. ರಾಜಾಸ್ಥಾನ, ರಾಜಲಾವಣ್ಯ, ಗಾನ, ನರ್ತನ, ಆರೋಗಣೆ ಅಂತ:ಪುರ ಅರಗಿಳಿಯಾಲಾಪ, ಪ್ರಿಯರ ಸರಸ ಸಲ್ಲಾಪ, ವಿವಾಹ, ಸ್ವಯಂವರ ಹೀಗೆ ವಿಷಯ ಯಾವುದೇ ಇರಲೀ ಎಲ್ಲವನ್ನೂ ಸೂಕ್ತ ರೀತಿಯಲ್ಲಿ ಅಚ್ಚುಕಟ್ಟಾಗಿ ವರ್ಣಿಸಬಲ್ಲವನಾಗಿದ್ದಾನೆ. ಒಂದು ವಿಷಯವನ್ನು ಪರಿಪರಿಯಾಗಿ ಬಣ್ಣಿಸುವುದೆಂದರೆ ಕವಿಗೆ ಬಹಳ ಇಷ್ಟ. ಉಪಮೆಗಳ ಮೇಲೆ ಉಪಮೆಯನ್ನು ತಂದು, ದೃಷ್ಟಾಂತಗಳ ಮೇಲೆ ದೃಷ್ಟಾಂತಗಳನ್ನು ಕೊಟ್ಟು ಓದುಗರನ್ನು ಆಶ್ಚರ್ಯ ಚಕಿತರನ್ನಾಗಿಸಿದ್ದಾನೆ.

ನಿದರ್ಶನಕ್ಕೆ: ಸೊಕ್ಕು ಜವ್ವನೆಯರ ಮೊತ್ತದೊಳಾತುರ ಮಿಕ್ಕರ್ತಿ ಬಂದಂತೆ ನೃಪತಿ

ಚೊಕ್ಕನಾನಂದಿಸುತಿರ್ದನು ಮದಗಜ ಪೊಕ್ಕು ನೀರಾಟವಾಡುವೊಲು

ಶೃಂಗಾರ ಸೊಬಗಿಂದ ಬಗೆಬಗೆಯಾದಚ್ಛ ವೆಂಗಳೊಳಾ ರಾಜಮೋಹಿ

ಸಂಗಸಂದಿರ್ದನು ಪೂದೋಟದೊಳು ಮತ್ತ ಭೃಂಗವಾನಂದಿಸುವಂತೆ

      ಕವಿಯ ಕಥನ ಕಲೆಯಲ್ಲಿ ಕಾಣುವ ರಂಜನೀಯವಾದ ಅಂಶವೆಂದರೆ ಕಥೆಯ ಉದ್ದಕ್ಕೂ ವಿವಿಧ ಪಾತ್ರಗಳ ನಡುವೆ ಬಂದಿರುವ ಚತುರವಾದ ಸಂಭಾಷಣೆಗಳು. ಶ್ರವ್ಯಕಾವ್ಯಕ್ಕೆ ಇವು ಅಲ್ಲಲ್ಲಿ ದೃಶ್ಯಕಾವ್ಯದ ಬೆಡಗನ್ನಿತ್ತಿರುವುದೇ ಅಲ್ಲದೆ, ಕವಿಯ ಬಾಯಿಂದಲೆ ಉದ್ದಕ್ಕೂ ಕಥೆಯನ್ನು ಕೇಳಬೇಕಾಗುವ ಏಕತಾನತೆಯನ್ನು ತಪ್ಪಿಸಿದೆ. ಭರತ-ಕುಸುಮಾಜಿಯರ ಜಾಣ್ಣುಡಿ. ಭರತ-ಮಕರಂದಾಜಿಯರ ಸರಸ, ಅತ್ತಿಗೆ-ನಾದಿನಿಯರ ವಿನೋದ ಇಂತಹ ಸನ್ನಿವೇಶಗಳಲ್ಲಿ ಮೈವೆತ್ತಿರುವ ನಾಟಕೀಯತೆ ಕಥೆಗೆ ಕಳೆಗಟ್ಟಿದೆ.

      ಭರತೇಶಕಾವ್ಯದ ಕಥಾವಸ್ತು ಪೌರಾಣಿಕವೇ ಆಗಿದ್ದರೂ ತಾನು ಕಂಡು ಕೇಳಿರುವ ಸಾಮಾಜಿಕ ಚಿತ್ರಗಳಿಂದಲೂ ಕೌಟುಂಬಿಕ ಚಿತ್ರಗಳಿಂದಲೂ ಕಥಾವಿವರಗಳನ್ನು ಅಲಂಕರಿಸಿರುವುದರಿಂದ ಕಾವ್ಯದ ಮೊದಲಿನಿಂದ ಕೊನೆಯವರೆಗೂ ನಮ್ಮ ಕೇರಿಯಲ್ಲಿ ನಮ್ಮ ನೆರೆಹೊರೆಯಲ್ಲಿ, ನಮ್ಮ ಗೃಹಕೃತ್ಯಗಳಲ್ಲಿ ಜರುಗಬಹುದಾದ, ಜರುಗುವ ದೈನಂದಿನ ವಿದ್ಯಮಾನಗಳಿಗೆ ಯಥೋಚಿತವಾದ ಲಲಿತ ವಚನರೂಪವನ್ನು ಒದಗಿಸಿ ಕಥನದಂತೆ ಭಾಸವಾಗುತ್ತದೆ.   ಕಾವ್ಯದಲ್ಲಿ ಒಂದು ಸಂಸಾರದ ಸುಖ, ಸಂತಸ, ಕಾಲಕ್ಷೇಪ ಪೂಜೆ, ಊಟ, ಹರಟೆ, ಮಾತು, ವಿನೋದ, ಚೇಷ್ಟೆಗಳು ಎಲ್ಲೆಡೆ ಕಾಣಿಸಿಕೊಂಡಿವೆ. ಭರತ ಮತ್ತು ಅವನ ರಾಣಿಯರ ಸಂಬಂಧಗಳು, ಗಂಡ ಹೆಂಡಿರ ಪ್ರೀತಿ, ಪ್ರೇಮ, ಸರಸ, ಮುನಿಸು, ವಿರಸಗಳ ಆಪ್ತ ಕ್ಷಣಗಳನ್ನು ಸಾಹಜಿಕವಾಗಿ ತೆರೆದಿಡುವಲ್ಲಿ ಕಲಾತ್ಮಕತೆ  ಮೈವೆತ್ತಿರುವುದನ್ನು ಕಾಣಬಹುದಾಗಿದೆ. ಅದರಂತೆ ತಂದೆ, ತಾಯಿ, ಮಕ್ಕಳು, ಬಂಧು, ಬಾಂಧವರು, ನಾದಿನಿ, ಮೈದುನ, ಭಾವ, ಸೊಸೆ ಹೀಗೆ ಅನೇಕ ಆಪ್ತೇಷ್ಟರ ಸಂಬಂಧಗಳು, ಜನಜೀವನದ ಅನುಭವ ದ್ರವ್ಯದಲ್ಲಿಯೇ ಸಶಕ್ತವಾಗಿ ಜೀವದಾಳುತ್ತವೆ. ತಾಯಿ ಯಶಸ್ವತೀದೇವಿ ಮಗ ಮತ್ತು ಸೊಸೆಯರನ್ನು ಪ್ರೀತಿ ವಿಶ್ವಾಸದಿಂದ ಕಂಡುದು, ಭರತ ತಾಯಿಯನ್ನು ತೂಗು ತೊಟ್ಟಿಲಲ್ಲಿಟ್ಟು, ತೂಗಿ ಗೌರವಿಸಿದುದು, ನಾದಿನಿ ಮಕರಂದಾಜಿಯನ್ನು ಪೀಡಿಸಿದುದು, ಭಾವಮೈದುನರಾದ ವಿನಮಿ, ನಮಿಯರೊಂದಿಗೆ ಭರತೇಶ ವರ್ತಿಸಿದ ಬಗೆ, ಮಕ್ಕಳ ಜೊತೆಗೆ ತಂದೆಯು ಸಂತಸ ಪಡೆದುದು. ಹೀಗೆ ಈ ಕಾವ್ಯದಲ್ಲಿ ರಕ್ತಸಂಬಂಧಗಳೆಲ್ಲ ಜನಜೀವನದ ನಿತ್ಯ ಸಂಗಾತಿಗಳಾಗೆ ತುಂಬ ವಾಸ್ತವ ಮತ್ತು ಸಹಜವೂ ಆಗಿ ಮೂಡಿ ಬಂದಿರುವುದನ್ನು ಕಾಣಬಹುದಾಗಿದೆ..

      ಕಥೆಯ ವರ್ಣನೆಗಳಲ್ಲಿಯೂ ಸಂಭಾಷಣೆಗಳಲ್ಲಿಯು ಬರುವ ದೇಸೀಯ ಬೆಡಗು ಕಥಾಶ್ರವಣದ ಸೌಖ್ಯವನ್ನು ಹೆಚ್ಚಿಸಿದೆ. ದೇಸಿ ಸಾಹಿತ್ಯ ರೂಪವಾದ ಸಾಂಗತ್ಯದ ಶೈಲಿ ನಿರರ್ಗಳವಾಗಿ ಕಥೆಯನ್ನು ಹೇಳಲು ಯಾವ ರೀತಿ ಸಹಾಯಕವಾಗಿದೆ ಎಂಬುದಕ್ಕೇ ಈ ಕೃತಿಯೇ ನಿದರ್ಶನ.

ಭರತೇಶವೈಭವ ಕಾವ್ಯದ ಪಾತ್ರ ಸಮೀಕ್ಷೆ:

      ರತ್ನಾಕರವರ್ಣಿಯು ತನ್ನ ಕಾವ್ಯ ಪ್ರಾರಂಭಿಸುವ ಮೊದಲೇ ತನ್ನ ಕಾವ್ಯ ನಾಯಕ ಭರತೇಶನ ವ್ಯಕ್ತಿತ್ವದ ಘನತೆ, ಪಾವಿತ್ರ್ಯತೆಯನ್ನು ರಸಿಕರ ಮನಕ್ಕೆ ಬಿಂಬಿಸುತ್ತಾನೆ.

      ಕಾವ್ಯದ ನಾಯಕ ಚಕ್ರಿ ಸಾಮಾನ್ಯನಲ್ಲ. ಭರತ ಅಸಾಮಾನ್ಯ ಗುಣಗಳುಳ್ಳ ಷಟ್‌ಖಂಡಗಳ ಚಕ್ರವರ್ತಿ. ಪುರುಪರಮೇಶ್ವರನ ಹಿರಿಯ ಕುಮಾರ. ನರಲೋಕಕ್ಕೆಲ್ಲಾ ಏಕಚಕ್ರಾಧಿಪತಿ. ಸುದತಿ ಜನರ ರಾಜಮದನನಾಗಿಯೂ ಕ್ಷಣದಲ್ಲೇ ಕರ್ಮ ಸುಟ್ಟು ಸೂರೆ ಮಾಡಬಲ್ಲ ಆತ್ಮ ಬಲವುಳ್ಳ ವ್ಯಕ್ತಿ. ಹದಿನಾರನೆಯ ಮನುವೂ ಪ್ರಥಮ ಚಕ್ರಿಯೂ ಆದ ಆತನಿಗೆ ಆ ಕ್ಷತ್ರಿಯ ಕುಲರತ್ನಗಾಹಾರವುಂಟು, ಮಲವಿಲ್ಲ, ಮೂತ್ರವಿಲ್ಲ. ಕೋಮಲಾಂಗ, ಹೇಮವರ್ಣ, ಜಗವೆಲ್ಲಾ ಕಾಮಿಸತಕ್ಕೆ ಚೆನ್ನಿಗ. 

      ಅರಸರು ಸ್ವಾಭಾವಿಕವಾಗಿ ಭೋಗಿಗಳು. ಲೋಕಕಲ್ಯಾಣಕ್ಕಾಗಿ ಅವರು ಯೋಗಿಗಳು ಆಗಿರಬೇಕು. ರಾಗರಸಿಕರಾಗಿದ್ದು ದೀಪರಾಗ ರಸಿಕರು ಆಗಿರಬೇಕು ಎಂದು ಭರತ ಚಕ್ರಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಹೇಳಿದ್ದಾನೆ.

   ಷಡ್ಖಂಡದ ದೊರೆಯ ಭೋಗಕ್ಕೆ ಕೊರತೆ ಎಂಬುದಿಲ್ಲ. ಅವನ ಸಂಸಾರ ಭೋಗಾಂಬುಧಿ ಅವನಿಗೆ ಹೆಂಡಂದಿರೇ ತೊಂಬತ್ತಾರು ಸಾವಿರ. ಇಂದ್ರಿಯ ತೃಪ್ತಿಗೆ ಬೇಕಾದ ರಸರುಚಿಗಳಿಗೆ ಕೊರತೆಇಲ್ಲ. ಅಷ್ಟಿದ್ದರೂ ಕೀಳುಭೋಗದ ಕೋಳ್ಕೆಸರಿನಲ್ಲಿ ಸಿಕ್ಕು ಒದ್ದಾಡದೆ ಕಮಲದಂತೆ ಊರ್ಧ್ವಮುಖಿಯಾಗಿ ಬದುಕಿದ್ದಾನೆ. ಭರತ ಕೇವಲ ರಾಜನಲ್ಲ ರಾಜಯೋಗಿ. ಭರತನ  ಪಾತ್ರ ಶ್ರೀಕೃಷ್ಣನನ್ನು ಕೆಲವೆಡೆ ಹೋಲುತ್ತದೆ ಎಂಬ ಅಭಿಪ್ರಾಯವೂ ವಿದ್ವಾಂಸರಿಂದ ವ್ಯಕ್ತವಾಗಿದೆ. ಭರತನ ಜೀವನ ಚಿತ್ರ ಶ್ರೀಕೃಷ್ಣನ ಜೀವನ ಚಿತ್ರವನ್ನು ಬಹುಮಟ್ಟಿಗೆ ಹೋಲುತ್ತದೆ. ಒಂದು ಮತ್ತೊಂದಕ್ಕೆ ಸ್ಫೂರ್ತಿದಾಯಕವೆಂಬಂತಿದೆ. ಕೃಷ್ಣನು ಹದಿನಾರು ಸಾವಿರ ಗೋಪಿಕಾಸ್ತ್ರೀಯರಿಂದ ಪರಿವೃತನಾಗಿ ಮೇಲುಪ್ತಿಯಲ್ಲಿರುವಂತೆ ಕಂಡು ಬಂದರೂ ಆತನು ಯೋಗಿ. ಅದೇ ರೀತಿ ತೊಂಭತ್ತಾರು ಸಹಸ್ರ ರಾಣಿಯರಿಂದ ಸಂಸೇವ್ಯನಾಗಿ ಕೇವಲ ರಾಗರಸದಲ್ಲಿ ಮುಳುಗಿದಂತೆ ತೋರುತ್ತಿದ್ದರೂ ಭರತನೂ ಮಹಾಯೋಗಿ. ಹದಿನಾರುಸಾವಿರ ಸ್ತ್ರೀಯರೊಡನೆ ಹದಿನಾರು ಸಾವಿರ ರೂಪಗಳಿಂದ ಸಂತೋಷಪಡಿಸಬಲ್ಲವನು ಶ್ರೀಕೃಷ್ಣ ಭರತನೂ ಕಡಿಮೆಯಿಲ್ಲ. ತೊಂಭತ್ತಾರುಸಾವಿರ ಭರತರ ರೂಪಿನಿಂದ ತನ್ನ ಸತಿಯರನ್ನು ತಣಿಸಿ ಕುಣಿಸಬಲ್ಲ ಗೀತೋಕ್ತ ಜೀವನವನ್ನು ನಡೆಸುತ್ತಿದ್ದ ಕೃಷ್ಣನಂತೆ ಭರತನೂ ಆಧ್ಯಾತ್ಮ ಯೋಗಿ, ಅಂತರ್ಮುಖಿ. ಹಲವೆಡೆಯಂತೂ ಭರತ ಶ್ರೀಕೃಷ್ಣನಿಗಿಂತ ಬೇರೆಯಾಗಿ ನಮಗೆಲ್ಲ ತೀರ ಸಮೀಪದವನಾಗಿ ಕಾಣುತ್ತಾನೆ. ಜೈನ ಕಾವ್ಯಗಳಲ್ಲಿ ಭೋಗಿಗಳು ಸಾಕಷ್ಟು ಜನಿಸಿದ್ದರೂ ಭರತನಂತಹ ರಸಿಕ ಹೃದಯ ಸಿಗುವುದು ದುಸ್ತರ. ಭೋಗದ ಮಹಾಪೂರವೇ ಬಂದರೂ ಅದರಲ್ಲಿ ಮುಳುಗಿ ಮೈಮರೆತವನಲ್ಲ ಭರತ. ಸಂಗೀತ ಗೋಷ್ಠಿಯೇ ನಾಟ್ಯರಂಗವೋ ಆದ ಭರತನ ಹೃದ್ರಂಗ ಮರುಕ್ಷಣದಲ್ಲೆ ಅರುಹನ ಜಿನಾಲಯವಾಗುತ್ತದೆ.

      ಅಡುಗೆ ಮನೆಯಿಂದ ಶಯ್ಯಾಗೃಹದವರೆಗೆ ತನ್ನ ರಾಣಿಯರೊಡನಾಡಿದ ಸರಸ-ಶೃಂಗಾರ ಸನ್ನಿವೇಶಗಳು, ಊಟ ಬೇಟಗಳನ್ನು ನೋಡಿದರೆ ಲೌಕಿಕ ಭರತೇಶನ ಅಲೌಕಿಕ ರಸಿಕತೆಯ ಅರಿವಾಗುತ್ತದೆ. ಅವನು ತನ್ನ ತೊಂಭತ್ತಾರು ಸಾಸಿರ ಹೆಂಡಂದಿರೊಡನೆ ಕುಳಿತು ಉಂಡರೂ ‘ಹಸಿವಿಲ್ಲದವನೊಬ್ಬ ಬಂಧುಗಳೊತ್ತಿ ಪ್ರಾರ್ಥಿಸಲು ದಾಕ್ಷಿಣ್ಯ ಕುಂಬಂತೆ’ ಊಟವಾಗುತ್ತದೆ.

      ಅಂಬರದೊಳಗಿದ್ದ ಸೂರ್ಯನೊಬ್ಬನು ಜಲತುಂಬಿದ ಹಲವು ಕುಂಭದೊಳು ಬಿಂಬಿಸುವಂತೆಲ್ಲ ಪೆಂಗಳೆದೆಯೊಳು ಏಕಕಾಲಕ್ಕೆ ಬಿಂಬಿಸುವ ಪುರುಷ ತೇಜ, ಎತ್ತ ಹೋದುದೋ ಹೆಂಗಳೊಡನುಬ್ಬಿನಿಂದಿಷ್ಟು ಹೊತ್ತು ತಾನಾಡಿದ ರೀತಿ ಹತ್ತು ಸಾವಿರ ಕಾಲ ತಪವ ಮಾಡಿದ ಮುನಿಪೋತ್ತಮನಂತಿರುವ ಗಾಂಭೀರ್ಯ ಇವೆಲ್ಲವೂ ಭರತೇಶನನ್ನು ಸಾಮಾನ್ಯತೆಯಿಂದ ದೂರವಿರಿಸುತ್ತವೆಯಾದರೂ ಇದು ಅಲೌಕಿಕತೆಯಲ್ಲ. ಯಾವುದೇ ನೋಂಪಿಯಿಂದ ಸಾಧಿಸಿದ್ದು, ಅಂಥ ಸಾಧನೆಯನ್ನು ಷಡ್ಖಂಡದ ದೊರೆತನದ ಜಂಜಡದಲ್ಲಿಯೂ ಸಾಗಿಸಿಕೊಂಡು ವ್ರತ, ನಿಮ ಆಚರಿಸಿ ಆಧ್ಯಾತ್ಮಿಕ ಔನ್ನತ್ಯಕ್ಕೇರಿದ್ದು ಬರಿಯ ಅಚ್ಚರಿ ಪಡಬೇಕಾದ ಮಾತಲ್ಲ.

      ರತ್ನಾಕರನ ಭರತ ಕುಮಾರವ್ಯಾಸನ ಕೃಷ್ಣನಂತೆ, ಚಾಮರಸನ ಪ್ರಭುವಿನಂತೆ ಅಲ್ಲ. ಅವನು ಚಕ್ರವರ್ತಿ, ಷಟ್ಖಂಡದ ಯೋಗಕ್ಷೇಮ ಅವನ ಹೊಣೆ, ಮೇಲಾಗಿ ಅವನು ಸಂಸಾರಿ. ಅಗಣಿತ ಹೆಂಡರು ಮಕ್ಕಳು ಪ್ರಜೆ ಪರಿವಾರದೊಡಗೂಡಿ ಅಗಣಿತರಾಜ್ಯ ಸುಖದೊಳೋಲಾಡುವ ರಾಜಯೋಗಿ, ಶೃಂಗಾರಯೋಗಿ ಎಂದು ವರ್ಣಿಸಲ್ಪಟ್ಟಿದ್ದರೂ ಇದಕ್ಕೂ ಹೆಚ್ಚಾಗಿ ಅವನು ಸಂಸಾರಯೋಗಿ. ಈ ಸಂಸಾರಯೋಗಿ ಬದುಕಿನ ಏರಿಳಿತಗಳಲ್ಲಿ ಚಿತ್ತಸ್ಥಿರತೆ ಕಳೆದುಕೊಳ್ಳದೆ ಬದುಕಿದ್ದಾನೆ. ಅವನಿಗೆ ದುಃಖ ಇಲ್ಲವೆಂದಲ್ಲ. ಆದರೆ ಸುಖಭೋಗದಲ್ಲಿ ಮೈ ಮರೆತು ಹೋಗದೆ ದುಃಖಭೋಗದ ಆಳದಲ್ಲಿ ಮುಳುಗಿ ಹೋಗದೆ ಹಂಸನಾಥನಲ್ಲಿ ಲೀನವಾಗಿರುವ ಸ್ಥಿತಿಯನ್ನು ಪಡೆದುಕೊಂಡಿದ್ದ ಎಂದು ಅರ್ಥ.

ಕುಸುಮಾಜಿ:

      ಭರತೇಶನ ಹೆಂಡತಿಯರಲ್ಲಿ ಶಿರೋಮಣಿಯಾಗಿದ್ದು ಭರತನಿಗೆ ಹೆಚ್ಚು ಪ್ರಿಯವಾಗಿದ್ದವಳು. ಭರತ ತನ್ನ 96 ಸಾವಿರ ಹೆಂಡಂದಿರಲ್ಲಿ ಸಮಾನವಾಗಿ ಪ್ರೀತಿಯನ್ನು ತೋರಿಸುತ್ತಿದ್ದರೂ ತನ್ನ ಗುಣಗಳಿಗೆ ಕುಸುಮಾಜಿ ಹೆಚ್ಚಾಗಿ ಸೋತುದರಿಂದಾಗಿ ಭರತೇಶನಿಗೆ ಕುಸುಮಾಜಿ ಹೆಚ್ಚು ಪ್ರೀತಿ ಪಾತ್ರದವಳಾಗಿದ್ದಾಳೆ. ರಾಜಲಾವಣ್ಯ ಸಂಧಿಯಲ್ಲಿ ಕುಸುಮಾಜಿಯ ವ್ಯಕ್ತಿತ್ವ ಕವಯಿತ್ರಿಯಾಗಿ ಚಿತ್ರಿತವಾಗಿದೆ. ಅರಗಿಳಿಯೊಡನೊಯ್ದ ಕುಸುಮಾಜಿ ಆಡಿದ ಮಾತುಗಳನ್ನು ಸುಮನಾಜಿ ಕೇಳಿ ಅಮರಾಜಿ ಬರೆದು ರಾಜಲಾವಣ್ಯ ಎಂಬ ಕಾವ್ಯ ರಚಿಸಲ್ಪಟ್ಟಿತು. ಅಂದರೆ ರಾಜಲಾವಣ್ಯ ಕಾವ್ಯದ ಕರ್ತೃ ಕುಸುಮಾಜಿಯೇ.

      ಭೋಗಯೋಗ ಸಮರ್ಥನಾದ ಭರತೇಶನ ಅಚ್ಚುಮೆಚ್ಚಿನ ಮಡದಿ ಕುಸುಮಾಜಿ ಮಹಾಯೋಗ್ಯತಾ ಸಂಪನ್ನಳು.ಭರತೇಶನ ಅಂತರಂಗ-ಬಹಿರಂಗ ಪ್ರಕೃತಿಗಳಿಗೆ ಸರಿಹೊಂದುವ ಜಿನೇಶ್ವರ-ಕುಸುಮಾಜಿಯವರು ಎರಡು ಸೀಮಾ ವ್ಯಕ್ತಿತ್ವ ದಾರಿಗಳು. ಅಂತರಂಗದ ಪ್ರಕೃತಿಗೆ ಜಿನೇಶ್ವರನು ಹೇಗೆ ಪ್ರಿಯನೋ ಹಾಗೆ ಬಹಿರಂಗ ಪ್ರಕೃತಿಗೆ ಕುಸುಮಾಜಿ ಪ್ರಿಯಳು. ಭರತೇಶನಿಗೆ ಪ್ರೇಮದ ಸಂಕೇ ಕುಸುಮಾಜಿ. ಕುಸುಮಾಜಿಯ ಪಾತ್ರ ಕನ್ನಡ ಸಾಹಿತ್ಯದಲ್ಲಿಯೇ ಅನುಪಮ, ಅಪೂರ್ವವಾದುದು. ಈಕೆಯ ಕಾವ್ಯ ಕಲೆಯೂ ವೀಣಾವಾದನವೂ ಸಂಗೀತವೂ ಆಕೆಯ ಅಸಾಮಾನ್ಯ ಕುಶಲಮತಿಯನ್ನುಪ್ರದರ್ಶಿಸುತ್ತದೆ. ಅವಳ ಕಲಾಪರಿಣತಿಯೇ ಕುಸುಮಾಜಿಯನ್ನು ಉಳಿದ ಸ್ತ್ರೀಯರಿಗಿಂತ ಬಲು ಎತ್ತರದ ಮಟ್ಟಕ್ಕೆ ಏರಿಸುತ್ತದೆ. ಆಕೆಯ ಪಾತ್ರಸೃಷ್ಟಿಯ ವೈಶಿಷ್ಟ್ಯವೇ ಅವಳ ಕಲಾರಾಧನೆಯಲ್ಲಿದೆ. ಭರತೇಶನ ಲೋಕವ್ಯವಹಾರ, ಕಾಮಜೀವನ ಕಲಾಜೀವನಗಳಲ್ಲಿ ಕುಸುಮಾಜಿಯೇ ಎದ್ದು ನಿಲ್ಲುವಂತಹ ಪಾತ್ರ. ಭರತೇಶನ ವ್ಯಕ್ತಿತ್ವ ಶ್ರೇಯಸ್ಸಿನ ಅರ್ಧಭಾಗ ಕುಸುಮಾಜಿಗೆ.

      ಸ್ತ್ರೀ ಪಾತ್ರಗಳೆಲ್ಲ ಪೂರ್ಣವಾಗಿ ಆದರ್ಶಪಾತ್ರಗಳು, ಆದರೆ ಇವು ನಿರ್ಮಿಸುವ ಜೀವನಾನುಭವ ಮಾತ್ರ ಅದ್ಭುತವಾದದ್ದು. ಕುಸುಮಾಜಿ, ಸುಮನಾಜಿ, ಮಕರಂದಾಜಿ ಈ ಪಾತ್ರಗಳು ಪೂರ್ಣವಾಗಿ ರತ್ನಾಕರನ ಕಾವ್ಯಲೋಕದ ವಿನೂತನ ಸೃಷ್ಟಿಗಳಾಗಿವೆ. ಅವುಗಳ ಕಲಾವಂತಿಕೆ, ರಸಿಕತೆ, ಪತಿಭಕ್ತಿ, ಧರ್ಮಪರಾಯಣತೆ, ಸರಸ, ವಿನೋದ, ತುಂಟಾಟಗಳು ಬದುಕಿನ ರುಚಿಯನ್ನು ಹೆಚ್ಚಿಸುವಂಥವುಗಳಾಗಿವೆ. ಪಂಡಿತೆಯಂಥ ಪಾತ್ರಕ್ಕೆ ಸಂಸ್ಕೃತ ಕನ್ನಡ ಆದಿಪುರಾಣಗಳು ಪ್ರೇರಣೆಯಾಗಿದ್ದರೂ ಅದಕ್ಕೆ ಒದಗಿರುವ ಮಹತ್ವ ಒಂದು ಕಡೆ ವಿಜಯನಗರ ಕಾಲದ ಅಂತಃಪುರದ ಸುಖಭೋಗಗಳ ಚಿತ್ರಕ್ಕೆ ಕಾರಣವಾದಂತೆ ಭರತನ ಬದುಕಿನ ಶೃಂಗಾರಮಯತೆಗೆ ವೇಗವರ್ಧಕವಾಗಿದೆ ಎಂಬ ವಿದ್ವಾಂಸರ ಮಾತು ಸೂಕ್ತವಾದುದಾಗಿದೆ.

ರತ್ನಾಕರ ವರ್ಣಿ ಮತ್ತು ದೇಸಿಯತೆ:

     ಭರತೇಶ ವೈಭವದಲ್ಲಿ ಬಳಕೆಗೊಂಡ ಭಾಷೆ ಕನ್ನಡದ ಎಲ್ಲಾ ಸಾಂಗತ್ಯ ಕಾವ್ಯಗಳಲ್ಲಿ ತುಂಬ ಸುಲಲಿತವೂ, ಸಂವಹನಶೀಲವೂ ಆಗಿದೆ. ಕವಿ ಜನಭಾಷೆಗೆ ತುಂಬ ಆಸ್ಪದ ನೀಡಿದ್ದು, ಓದಿದಂತೆ ಸಾಂಸ್ಕೃತಿಕ ಚಿತ್ರಗಳು ತಾನಾಗಿಯೇ ಮೂಡಿ ನಿಲ್ಲುತ್ತದೆ. ಜನರ ಪಾಲಿಗೆ ಮೇಲಿನ ದಿನನಿತ್ಯದ ಶಬ್ದಗಳ ಪ್ರಯೋಗದಲ್ಲಿ ಕವಿ ಚತುರತೆ ತೋರಿದ್ದಾನೆ. ಮುತ್ತ ಮುದುಕಿ, ಬಟ್ಟಜವ್ವನೆ, ಎಕ್ಕಡಿಗೆ, ಗಾಡಿ, ತಬ್ಬಿಬ್ಬು, ತಗಡು, ಬಜಾವಣೆ, ಆಯತವಾಗು, ಠಕ್ಕು, ಚಕ್ಕನೆ, ಕಿಗ್ಗಣ್ಣು, ಕೆಂಬಾಯ, ಗೋಣು, ಗಿಂಡಿ, ಮುಕ್ಕಳಿಸು, ಚಲ್ಲಣ, ಹೂಣಿ, ಕೊಂಡಾಟ, ಜಕ್ಕುಲಿಸು, ಕರುಮಾಡ, ಜತನ, ಗಹನ, ದಿಬ್ಬಣ, ದಂಡೆ ಇತ್ಯಾದಿ ನೂರಾರು ದೇಸಿಪದಗಳ ಬಳಕೆಯಿಂದ ಕಾವ್ಯದ ಪರಿಸರ ಜೀವಂತವಾಗಿದೆ; ಅರ್ಥಪೂರ್ಣವಾಗಿದೆ. ಈ ಬಗೆಯ ನೂರಾರು ಮಾತ್ರವಲ್ಲ ಸಾವಿರಾರು ದೇಸಿ ಪದಗಳು ಕಾವ್ಯದಲ್ಲಿ ಸ್ಥಾನ ಪಡೆದಿವೆ. ಗಾದೆ, ಪಡೆನುಡಿಗಳ ಅಕೃತ್ರಿಮ ಸೇರ್ಪಡೆಯ ಕಾರಣ ಕಾವ್ಯಕ್ಕೆ ಒಂದು ಬಗೆಯ ಸೊಬಗು ಪ್ರಾಪ್ತಿಸಿದೆ.

   ರತ್ನಾಕರವರ್ಣಿಗೆ ಶಬ್ದಗಳ ಕೊರತೆಯಿಲ್ಲ. ಕನ್ನಡ ಶಬ್ದಭಂಡಾರವು ಕವಿಗೆ ಅಂಗೈ ಮೇಲಣ ನೆಲ್ಲಿಕಾಯಿಯಂತೆ, ಶಬ್ದಗಳು, ಅವುಗಳಿಗಿರುವ ಅರ್ಥ-ಭಾವ-ನಾದ-ಧ್ವನಿಕೋಶಗಳ ಬೆಡಗಿನಿಂದ ಅಡೆತಡೆಯಿಲ್ಲದೆ ನಿರರ್ಗಳವಾಗಿ ಈ ಕೃತಿಯಲ್ಲಿ ಹೊರ ಹೊಮ್ಮಿವೆ. ಹಾಗೆಯೇ ಕನ್ನಡ ಸಾಂಗತ್ಯ ಪ್ರಕಾರದ  ವಿಲಾಸಮಯ ಸರಳ ಸುಂದರ ಶೈಲಿ, ದೃಶ್ಯಚಿತ್ರಗಳಿಂದ ಮನೋಜ್ಞವಾಗಿದೆ. ಕೆಲವೊಮ್ಮೆ ಒಂದೊಂದು ಪದ್ಯದಲ್ಲಿಯೂ  ಒಂದೊಂದು ಉಜ್ವಲಚಿತ್ರ ಮೂಡುತ್ತ, ಅವೆಲ್ಲ ಒಟ್ಟಾಗಿ ಕೂಡುತ್ತ, ಒಂದು ಅನುಭವ ಕೇಂದ್ರಿತವಾಗಿ ಹೊರ ಹೊಮ್ಮಿರುವುದನ್ನು ಕಾಣಬಹುದಾಗಿದೆ.  ಕಥಾನಕದಲ್ಲಿ ರಾಜತ್ವ, ಪದವಿ, ಅಧಿಕಾರ, ಅರಮನೆಗಳ ಪರಿಸರವನ್ನು ಬಲವಾಗಿ ಚಿತ್ರಿಸುವುದಿಲ್ಲ. ಕಾವ್ಯದ ಒಳಗೆ ಕಲೆ, ಸಂಸ್ಕೃತಿ, ಸಂಗೀತ, ಚಿತ್ರ, ಹಾಡು, ವಾದ್ಯ, ನಾಟಕ, ನೃತ್ಯ, ಪ್ರದರ್ಶಕ ಮತ್ತು ವೃತ್ತಿ ಕಲೆಗಳ, ಕಲಾವಿದರ ದೊಡ್ಡ ಮೆರವಣಿಗೆಯೇ ಬಂದಿದ್ದು, ಬದುಕಿನ ದೇಸಿಯತೆ ಅಲ್ಲಿ ಮೈದೋರಿದೆ. ಒಬ್ಬರು ಹೇಳುವ ಮೂಲ ವೃತ್ತಾಂತವನ್ನು, ಇನ್ನೊಬ್ಬರು ಆಶುಕವಿತೆ ಮಾಡಿ, ಕಲಾವಿದೆ ಹಾಡುಗಾರ ಹಾಡುವುದು ಜನಪದದಲ್ಲಿ ಒಂದು ಪರಂಪರೆಯಾಗಿದೆ. ಅದನ್ನು ರಾಜಲಾವಣ್ಯ, ಮನ್ನಣೆ ಸಂಧಿಗಳಲ್ಲಿ ಕಾಣಬಹುದು. ರತ್ನಾಕರನಿಗೆ ಭಾಷೆ ಉಸಿರಾಡಿದಷ್ಟು ಸಹಜವಾಗಿಬಿಟ್ಟಿದೆ. ಭಾವನೆಗಳನ್ನು ಅಭಿವ್ಯಕ್ತಿಸುವಲ್ಲಿ ಅದು ಅಸಾಧಾರಣವಾಗಿ ವಿಸ್ಮಯಗೊಳಿಸುತ್ತದೆ.

·        ನಾಗಲೋಕದೊಳಿದ್ದರೇನಲ್ಲಿ ಗರುಡಾತ್ಮಗೆ ನಾಗರ ಬಾಧೆಗಳುಂಟೆ?

·        ಸುಖಬಾಳು ಬಾಳು ದುಃಖದ ಬಾಳು ಸಾವು

·        ಗೂಳಿ ನಡೆವ ಹೆಜ್ಜೆ ತೋರುವುದಲ್ಲದೆ ಗಾಳಿಯ ಹೆಜ್ಜೆ ತೋರುವುದೆ?

·        ಹುರಿದು ಬಿತ್ತಿದ ಬೀಜ ಮೊಳೆವುದೆ?

·        ಹಾಲು ಬಪ್ಪಲ್ಲಿ ನೆತ್ತರ ಬರಿಸಿದೆ

·        ದಬ್ಬಣದೊಳು ದಾರ ಸಲುವಂತೆ

·        ಕುಸುಮವಿದ್ದಡೆಗೆ ಮಧುವ್ರತ ಹೋಹಂತೆ

·        ಉಂಡುಪವಾಸಿ ಬಳಸಿ ಬ್ರಹ್ಮಚಾರಿ ಭೂಮಂಡಲವಿದ್ದು ನಿಸ್ಸಂಗ

·        ಬಾಳ ಬಿಸಾಡಿ ಹೋದವನಲ್ಲ

·        ಬಡಿದರೆ ಹಲ್ಲೆಲ್ಲ ಕವಡೆಯ ಚೀಲ ಕೊಡಹಿದಂತುದಿರ್ದುವು ಧರೆಗೆ

·        ತಾನೊಂದು ನೆನೆದರೆ ವಿಧಿಯೊಂದ ನೆನೆವುದು

·        ಅರಸು ಬಿಟ್ಟಲ್ಲಿ ಪಟ್ಟಣ

·        ಮರಸಿದ ಗಿಳಿಯೋದ ಕಂಡಂತೆ ಪೇಳ್ದನೆಂ

·        ಕಂಮಕಂಮನೆ ತೀಡಿತೊಂದು ತಂಗಾಳಿ

·        ಕೊಡುವ ಕೈಮೇಲು ಕೊಂಬವನ ಕೈ ಕೆಳಗು

·        ಮೋಕ್ಷವೆಂದರೆ ಬಿಡುಗಡೆಗೆ ಪೆಸರು

·        ಮೊಲೆಯ ಮೇಲಿರ್ದ ಯೋಗಿಗಳುಂಟು ಬೆಟ್ಟದ ಶಿಲೆಯ ಮೇಲಿಹ ಮೋಹಿನಿಯಂಟು

·        ಸೂಜಿಯ ಮೊನೆಯಷ್ಟು ಕೊರತೆ ಹೊದ್ದದ

·        ಮನೆಯ ದಂದುಗ ಬಿಟ್ಟ ನಿಸ್ಪೃಹನಂತೆ

·        ಬೆಳಗನೆ ಮೀವಂತೆ ಬೆಳಗನೆ ಪಾಯ್ದಂತೆ ಬೆಳಗಿನೋಕುಳಿಯಾಡುವಂತೆ

·        ಠಣಠಣನಿಳಿದರು ಧರೆಗೆ

·        ಮೈಯುಳ್ಳಮದನ

·        ಮನಸಿನ ಗಂದೆಯ ತುರಿಸುವಂತಾಯ್ತು

·        ಮುದುಕಿ ಮುದುಕರೊಮ್ಮೆ ಹೊಕ್ಕರಾ ಮನೆಗಳು ಬೆದೆಬೆದೆಗೊಳಿಸಿ ಕಾಡುವುವು

·        ಮರನಲುಗದ ಮಾತು ಹುಟ್ಟದ ಹೊತ್ತದು

·        ಠಮಠಮಯೆಂದು ವಾದ್ಯವು ಕುಟ್ಟಲು

·        ಕಡಲ ನಗುವ ಗಂಭೀರ

·        ಕಡಲನೊತ್ತದೆ ಕಡಲುದಕವ ತುಂಬುವ

·        ಏರಿದ ಹೆಡೆಯಿಳಿವಂತೆ

·        ಕುಡಿದ ನೀರಲ್ಲಾಡದು ಸುರುಬ್ಬಸದಾಯಾಸ ಬಡದೆಯ್ದುತಿರ್ದುದು ಕಟಕಾ

·         ಗಿಳಿ ಬಿಳಿದಾದರೆ ಚೋದ್ಯವೆಂಬರು ಹಂಸೆ ಬಿಳಿದಅಗೆ ಚೋದ್ಯಮೆ

·        ಬುಡು ಬುಡು ಭೋರ್ಭೋರು ಝಲ್ಲು ಝಲ್ಲೆನುತ

·        ಕೋಗಿಲೆ ದನಿಯಂತೆ ವೀಣಾರವದಂತೆ

·        ಮಳೆಗಾಲು ಬಂದುದು ಬೆಳುಗಾಲ ಬಂದುದು

·        ಬರಸಿಡಿಲೆರಗೆ ಪಾಸರೆ ಬಿರಿವಂತೆ

·        ಹನಿಗೂಡಿ ಹಳ್ಳ  ನಾರೊಡಗೂಡಿ ಹಗ್ಗವೆಂಬನು

·        ಬಡವಗೆ ಬಲುರೋಗ ಬಂದು ಬಾಯ್ಬಿಡಲೊರ್ವ

   ಇಂಥ ಉಕ್ತಿಗಳನ್ನು ಕಾವ್ಯದಲ್ಲಿ ಎಲ್ಲಿ ಬೇಕಾದರೂ ಕಾಣಬಹುದು; ಚಿತ್ರಗಳನ್ನು ರೂಪಿಸುವಲ್ಲಿ ಹೃದಯದ ಭಾವನೆಗಳನ್ನು ಪ್ರಕಟಪಡಿಸುವಲ್ಲಿ; ಕಥೆಗೆ ಚಾಲನೆ ನೀಡುವಲ್ಲಿ ಸಾಂಗತ್ಯದ ಗೇಯತೆಯೊಂದಿಗೆ ಬೆರೆತ ಈ ಭಾಷೆ ವಚನ ಸಾಹಿತ್ಯ ಹಾಗೂ ಜಾನಪದ ಸ್ಮೃತಿಗಳಿಂದ ನಿಬಿಡವಾಗಿದೆ. 

    ಕವಿ ಎಂಥ ಗಹನವಾದ ಮತ್ತು ಗಮನವಾದ  ವಿಚಾರಗಳನ್ನೂ ನಿರಾಯಾಸವಾಗಿ ಸಂವಹನಿಸುವ ಸಾಮರ್ಥ್ಯವುಳ್ಳವನು. ನಾಟಕೀಯ ಸನ್ನಿವೇಶಗಳು ಅನುಭವಗಳನ್ನು ಇಂದ್ರಿಯಗಮ್ಯವನ್ನಾಗಿಸಿವೆ. ಈ ಗುಣಗಳಿಂದಾ ಈ ಸಾಂಗತ್ಯ ಕಾವ್ಯವು ಹೆಚ್ಚಿನ ಎತ್ತರ ನಿಲುಕಲು ಸಾಧ್ಯವಾಗಿದೆ. ಕಾವ್ಯದಲ್ಲಿ ನೆನಪಿನ ನಾಲಗೆಯ ಮೇಲೆ ಬಹುಕಾಲ ರಸ ಒಸರಿಸುವ ಪರಿಭಾವ್ಯ ಪದ್ಯಗಳು, ಪ್ರಸಂಗಗಳು ಅಧಿಕವಾಗಿವೆ. ಭೋಗವಿಜಯ ಸಂಧಿಗಳು ಭಾವಗೀತೆಗಳಾಗಿ ಮೆಚ್ಚುಗೆಗೆ ಪಾತ್ರವಾಗಿವೆ.    ರತ್ನಾಕರವರ್ಣಿಯ ಪ್ರಕಾರ ಭರತೇಶ ವೈಭವವು ಅಂಗಸುಖ ಮತ್ತು ಮೋಕ್ಷಸುಖ ಎರಡನ್ನೂ ಸಮನ್ವಯಗೊಳಿಸುವ ಕಾವ್ಯವಾಗಿದೆ.

   “ ಭರತೇಶ ವೈಭವವು ಭರತೇಶನ ದಿನಚರಿಯಂತಿದ್ದು ಅವನ ಬದುಕಿನ ವಿಸ್ತಾರ, ವೈವಿಧ್ಯ, ವಿಲಾಸ, ವೈಭವಗಳ ಮಹೋನ್ನತಿಯನ್ನು ಕಲಾತ್ಮಕವಾಗಿ ಕನ್ನಡಿಸುತ್ತದೆ” ಎಂಬ ವಿದ್ವಾಂಸರ ಅನಿಸಿಕೆ ಸ್ವೀಕರಾರ್ಹವಾಗಿದೆ. ಕಾವ್ಯದಲ್ಲಿ ಭರತೇಶ ತೀರ್ಥಂಕರರ ಗೌರವಾದರಗಳನ್ನು, ಚಕ್ರವರ್ತಿಯ ವೈಭೋಗವನ್ನು ಪಡೆದರೂ, ಜನಸಾಮಾನ್ಯರಂತೆ ಸಂವೇದನೆಗಳನ್ನು ಹೊಂದಿದ್ದಾನೆ. ಒಟ್ಟಾರೆ ಈ ಕಾವ್ಯದಲ್ಲಿ,   ಭರತನ ಪರಿಪೂರ್ಣ ವ್ಯಕ್ತಿತ್ವ, ಆತ್ಮಜ್ಞಾನ, ತ್ಯಾಗ ಭೋಗಗಳ ಸಮನ್ವಯ, ಜಿನಭಕ್ತಿ, ಪೂಜೆಗೆ ಹೋಗುವಾಗ ಅವನ ಸರಳತೆ ಇವುಗಳ ಸಹಜ ಸುಂದರ ಚಿತ್ರಣವು ಈ ಕಾವ್ಯದ ಪ್ರಮುಖ ಅಂಶವಾಗಿದೆ.  ಹಾಗೆಯೆ ಭರತೇಶ ಮತ್ತು ಅವನ ತಾಯಿಯ ನಡುವಣ ಪ್ರೀತಿ ವಾತ್ಸಲ್ಯ ಅಪ್ರತಿಮವೆನಿಸುತ್ತದೆ. ಮೆಚ್ಚಿನ ರಾಣಿ ಕುಸುಮಾಜಿ ಹಾಗೂ ಅವನ ನಡುವಣ ನಲ್ಮಾತುಗಳು ಸುಂದರವಾಗಿವೆ. ಭರತ ಬಾಹುಬಲಿಯರ ಸಂವಾದ, ಭರತನ ಔದಾರ್ಯ, ಬಾಹುಬಲಿಯ ಮನಃಪರಿವರ್ತನೆ ಹೃದಯಸ್ಪರ್ಶಿಯಾಗಿದೆ. ಕಡೆಗೆ ಭರತೇಶ ದೀಕ್ಷಾಬದ್ಧನಾಗಿ ಹೊರಟಾಗ ಯಾರಿಗೂ ಬೇಡವಾದ ಅರಮನೆ, ಅವನ ಮಕ್ಕಳು ರಾಣಿಯರು ದೀಕ್ಷೆಗಾಗಿ ಹಂಬಲಿಸುವುದು ಇಂತಹ ಆತ್ಮೀಯ ಸನ್ನಿವೇಶಗಳ ನಿರೂಪಣೆಯಲ್ಲಿ ಕವಿಯ ಸೃಜನಶೀಲ ಪ್ರತಿಭೆ ವ್ಯಕ್ತಗೊಂಡಿರುವುದನ್ನು ಕಾಣಬಹುದಾಗಿದೆ.

     ಒಟ್ಟಾರೆ ರತ್ನಾಕರವರ್ಣಿಯ ಭರತೇಶ ವೈಭವ ಕಾವ್ಯವನ್ನು ಕುರಿತ ಇಲ್ಲಿಯವರೆಗೂ ನಡೆದಿರುವ ಅಧ್ಯಯನಗಳಲ್ಲಿ ರತ್ನಾಕರವರ್ಣಿಯು ಭರತೇಶ ಚಕ್ರವರ್ತಿಯನ್ನು ಜಿನನಿಗಿಂತಲೂ ಮಿಗಿಲೆಂದು ಕವಿ ಯಾಕೆ ಭಾವಿಸಿದ? ಚಕ್ರವರ್ತಿಯನ್ನೇ ನಾಯಕನನ್ನಾಗಿ ಮಾಡಿಕೊಳ್ಳಲು ಇದು ಕಾರಣವೇ? ನಾಯಕನ ಭೋಗ ಮತ್ತು ಯೋಗಗಳ ನಡುವೆ ಅಭಿನ್ನತೆಯನ್ನು ದರ್ಶನ ಮಾಡಿಕೊಳ್ಳಲು ಕಾರಣವೇನು? ೯೬ ಸಾವಿರ ಹೆಂಡತಿಯರನ್ನು ಬಳಸಿ ಯೋಗಿಯಾಗಿಯೇ ಇರುವ ಭರತೇಶನ ವೈಭವವು ಒಂದು ಸಾಂಕೇತಿಕ ಕಾವ್ಯವೆಂದು ಭಾವಿಸಬಹುದೇ ಇತ್ಯಾದಿ  ಅಂಶಗಳ ಶೋಧನೆಯ ಹುಡುಕಾಟವನ್ನು ನೆಲೆಗಳನ್ನು ಕಾಣಬಹುದಾಗಿದೆ.

ಪರಾಮರ್ಶನ ಗ್ರಂಥಗಳು

೧. ರತ್ನಾಕರವರ್ಣಿಯ ಭರತೇಶ ವೈಭವ ಪ್ರಥಮಭಾಗ ಭೋಗವಿಜಯ ಮತ್ತು ದ್ವಿತೀಯ ಭಾಗ ದಿಗ್ವಿಜಯ

  ಸಂ: ಉಗ್ರಾಣ ಮಂಗೇಶರಾವ್‌, ಜೈನಯುವಕ ಸಂಘ, ಪುತ್ತೂರು,೧೯೨೩,೧೯೨೪

2. ರತ್ನಾಕರ ವರ್ಣಿಯ ಭರತೇಶ ವೈಭವ  ಸಂ: .ಸು.ಶಾಮರಾಯ

   ಮೈಸೂರು ವಿಶ್ವವಿದ್ಯಾಲಯ, ೧೯೮೬

3. ಭರತೇಶ ವೈಭವ ಸಾಂಸ್ಕೃತಿಕ ಮುಖಾಮುಖಿ ಸಂ: ಅಮರೇಶ ನುಗಡೋಣಿ,

   ಕನ್ನಡ ವಿಶ್ವವಿದ್ಯಾಲಯ ಹಂಪಿ. 2013

4. ಹಂಪ.ನಾಗರಾಜಯ್ಯ, ಸಾಂಗತ್ಯ ಕವಿಗಳು

  ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಮಾಲೆ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ,1975

5. ರತ್ನಾಕರವರ್ಣಿ, ಕವಿಕಾವ್ಯ ಪರಂಪರೆ ಸಂ:ದಿ.ವಿ.ಸೀತಾರಾಮಯ್ಯ, ಐ.ಬಿ.ಎಚ್.‌ ಪ್ರಕಾಶನ,

    ಬೆಂಗಳೂರು, ೧೯೮೪

 

 

  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...