ಶನಿವಾರ, ಫೆಬ್ರವರಿ 4, 2023

 

ನಂಜುಂಡಕವಿಯ ಕುಮಾರ ರಾಮನ ಸಾಂಗತ್ಯ: ವಿವೇಚನೆ

                          ಡಾ.ಸಿ.ನಾಗಭೂಷಣ

 

       ಯಾವುದೇ ಕಾಲಘಟ್ಟದ ಸಾಹಿತ್ಯದ ನಿರ್ಮಾಣಕ್ಕೆ ಅಲ್ಲಿಯ ಸಾಮಾಜಿಕ ಪರಿಸರ,ಧಾರ್ಮಿಕ ಪರಿಸರ, ಸಂಸ್ಕೃತಿ, ರಾಜಕೀಯ, ಆಡಳಿತಾತ್ಮಕ ಅಂಶಗಳು ಹಾಗೂ ಇನ್ನಿತರ ಅಂಶಗಳು ಪ್ರೇರಿತವಾಗಿರುತ್ತವೆ. ಹೀಗಾಗಿ ಯಾವುದೇ ಕಾಲದ ಸಾಹಿತ್ಯವನ್ನು ಆ ಕಾಲದ ಯುಗಧರ್ಮದ ಹಿನ್ನೆಲೆಯಲ್ಲಿ ಅರ್ಥೈಸಬೇಕಾಗುತ್ತದೆ. ಸಾಹಿತ್ಯಕಾಲಕ್ಕೆ ಹಿನ್ನೆಲೆಯಾದ ಸಾಂಸ್ಕೃತಿಕನೆಲೆ-ಬೆಲೆಗಳನ್ನು ಗುರುತಿಸುವು ದಾಗಿರುತ್ತದೆ. ಯಾವುದೇ ಒಂದು ಸಾಹಿತ್ಯಕ ಪಠ್ಯವನ್ನು ರೂಪಿಸುವುದರ ಉದ್ದೇಶ್ಯದ ಹಿಂದೆ, ಸಾಹಿತ್ಯ ನಿರ್ಮಾಣಕ್ಕೆ ಪೂರಕವಾದ ಪ್ರೇರಕವಾದ ಅಂಶಗಳ ಗ್ರಹಿಸುವಿಕೆಯು ಮುಖ್ಯವಾಗಿರುತ್ತದೆ. ಇದರ ಜೊತೆಗೆ ಸಾಹಿತ್ಯಾಭಿವ್ಯಕ್ತಿಯ ಮಾಧ್ಯಮಗಳಾದ ಭಾಷೆ, ಶೈಲಿ ಇನ್ನಿತರ ಸಾಹಿತ್ಯಕ ಅಂಶಗಳನ್ನು ಪರಿಚಯಿಸುವ ಉದ್ದೇಶ್ಯವು ಸಹ ಇರುತ್ತದೆ.

   ಹದಿನಾರನೆ ಶತಮಾನದಲ್ಲಿದ್ದ ನಂಜುಂಡ ಕವಿಯಿಂದ ರಚಿಸಲ್ಪಟ್ಟ ಕುಮಾರ ರಾಮನ ಸಾಂಗತ್ಯ ಕಾವ್ಯ ಉದ್ದೇಶ್ಯವು ಇದೇ ಆಗಿದೆ. ಚೆನ್ನಿಗರಾಮ,ಕುಮಾರ ರಾಮ, ರಾಮನಾಥ ಮೊದಲಾದ ಹೆಸರುಗಳಿಂದ ಕನ್ನಡಿಗರ ಮನೆಮಾತಾಗಿರುವ ಚಾರಿತ್ರಿಕನಾಗಿಯೂ ಪವಾಡ ಪುರುಷರ ಸಾಲಿಗೆ ಸೇರಿ ಹೋಗಿರುವ ಕಡುಗಲಿ,ಪರದಾರಸೋದರ ರಾಮನಾಥನ ಪರಾಕ್ರಮ ಹಾಗೂ ಪರದಾರ ಸೋದರತ್ವವನ್ನು, ಆ ಕಾಲದ ಯುಗಧರ್ಮಹಾಗೂ ಐತಿಹಾಸಿಕ ಅಂಶಗಳನ್ನು ಪರಿಚಯಿಸುವುದು ಇಲ್ಲಿಯ ಉದ್ದೇಶ್ಯವಾಗಿದೆ.ಅಂತೆಯೇ ನಡುಗನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಒಂದಾದ ಸಾಂಗತ್ಯ ಸಾಹಿತ್ಯ ಪ್ರಕಾರದ ಸಂಕ್ಷಿಪ್ತ ಪರಿಚಯದ ಜೊತೆಗೆ ಸಾಹಿತ್ಯಕ ಅಭಿವ್ಯಕ್ತಿ ಮಾಧ್ಯಮವಾದ ಸಾಂಗತ್ಯದಲ್ಲಿ ರಚಿತವಾಗಿರುವ ಕುಮಾರ ರಾಮನ ಸಾಂಗತ್ಯ ಕೃತಿಯನ್ನು ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಕೃತಿಯಾಗಿ ಅಭ್ಯಸಿಸುವುದರ ಮೂಲಕ ಮಧ್ಯಕಾಲೀನ ಸಾಹಿತ್ಯ-ಸಂಸ್ಕೃತಿ ಗಳೆರಡರ ನಡುವಿನ  ಅಂತರ ಸಂಬಂಧಗಳನ್ನು ಗ್ರಹಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

 ಕನ್ನಡದಲ್ಲಿ ಸಾಂಗತ್ಯ ಸಾಹಿತ್ಯ ಪ್ರಕಾರ : ಸಾಂಗತ್ಯ ಹೆಸರಿನ ಬಗ್ಗೆ ಚರ್ಚೆ:

     ಚಂಪೂ, ಗದ್ಯ, ರಗಳೆ, ಷಟ್ಪದಿ ಈ ಮೊದಲಾದ ಸಾಹಿತ್ಯ ಪ್ರಭೇದಗಳು ಕನ್ನಡ ಸಾಹಿತ್ಯದಲ್ಲಿ ತಲೆದೋರಿ ತಮ್ಮದೇ ಆದ ಚರಿತ್ರೆಗಳನ್ನು ನಿರ್ಮಿಸಿವೆ. ಇವುಗಳೆಲ್ಲದರ ನಂತರ ಬಂದ ಸಾಂಗತ್ಯ ಸಾಹಿತ್ಯ ಪ್ರಕಾರವು ಐದು ಶತಮಾನಗಳ ಸುಧೀರ್ಘವಾದ ಇತಿಹಾಸವನ್ನು ಹೊಂದಿದೆ. ಜನಪದರಿಗೆಂದು ನಿರ್ಮಿತವಾದ ಈ ದೇಶೀಯ ಕಾವ್ಯಪ್ರಕಾರ ಸುಮಾರು ಇನ್ನೂರಕ್ಕೂ ಮೇಲ್ಪಟ್ಟ ಕಾವ್ಯ-ಪುರಾಣಗಳನ್ನು ಹೊಂದಿರುವುದಲ್ಲದೆ ಇಂದಿನ ಇಪ್ಪತ್ತನೆಯ ಶತಮಾನದಲ್ಲಿಯೂ ಒಗ್ಗಿ ಬಂದಿರುವುದನ್ನು ಗಮನಿಸಬಹುದಾಗಿದೆ. ಆದರೂ ಈ ಪ್ರಕಾರಕ್ಕೆ ಲಭ್ಯವಾಗಿರುವ  ಪಟ್ಟವೆಂದರೆ  ಜ್ಞಾತವಾಸ  ಎಂದೇ  ಹೇಳಬಹುದು.  ಅಲ್ಲೊಂದು ಇಲ್ಲೊಂದು ಕಾವ್ಯಸಂಪಾದನೆ ಅಥವಾ ಲೇಖನ, ಪ್ರಸಿದ್ಧವೂ, ಜನಪ್ರಿಯವೂ ಆದ ಕೆಲವು ಕಾವ್ಯಗಳ ಪ್ರಕಟಣೆ ಮತ್ತು ಅವುಗಳ ಬಗೆಗಿನ ವಿಮರ್ಶಾತ್ಮಕ ಲೇಖನಗಳು ಇವಿಷ್ಟನ್ನೇ ಬಿಟ್ಟರೆ ಸಾಂಗತ್ಯ ಕವಿಗಳು ಮತ್ತು ಅವರ  ಕೃತಿಗಳು ಎಲೆಮರೆಕಾಯಿಯಂತೆ ಅಡಗಿ ಕುಳಿತಿವೆ.

     ಸಾಂಗತ್ಯ ಪ್ರಕಾರ ರೂಪ ಪಡೆದುಕೊಂಡ ಕಾಲವನ್ನು ಏಳು-ಎಂಟನೆಯ ಶತಮಾನ  ಮತ್ತು ಹನ್ನೆರಡನೆಯ ಶತಮಾನವೆಂದು ನಿರ್ಧರಿಸಲು ಅನೇಕ ಪ್ರಯತ್ನಗಳನ್ನು  ಮಾಡಿದ್ದಾರೆ. ಆ ಪ್ರಯತ್ನಗಳನ್ನು ಅನುಕ್ರಮದಲ್ಲಿ, ಶಾಸನಸ್ಥ ಪದ್ಯಗಳು, ಸಿರಿಭೂವಲಯಗ್ರಂಥ ಮತ್ತು ಬಸವಣ್ಣನವರ ಕಾಲಜ್ಞಾನ ವಚನಗಳು ಇವುಗಳಲ್ಲಿ ಸಾಂಗತ್ಯದ ಮೂಲರೂಪವನ್ನು ಗುರುತಿಸಲು ಕೆಲವರು ಹೊರಟಿದ್ದಾರೆ. ಆದರೆ ಶಾಸನಸ್ಥ ಪದ್ಯಗಳಲ್ಲಿ ಸಾಂಗತ್ಯದ ನಿರ್ದಿಷ್ಟ ರೂಪವಿಲ್ಲ. ಸಿರಿಭೂವಲಯ ಮತ್ತು ಕಾಲಜ್ಞಾನವಚನ  ಇವುಗಳ    ಕಾಲದಬಗ್ಗೆ  ಬಲವಾದ  ಸಂದೇಹಗಳಿವೆ. ಆದ್ದರಿಂದ ಉಪಲಬ್ಧವಿರುವ ಸಾಂಗತ್ಯ ಕೃತಿಗಳಿಂದ ಇದರ ಹುಟ್ಟು ಲಕ್ಷಣ ಗಳನ್ನು ಅಧಿಕೃತವಾಗಿ ನಿರೂಪಿಸಬೇಕಾಗಿದೆ.

  ದೇಪರಾಜಕವಿ ಬರೆದ  ಸೊಬಗಿನ ಸೋನ ಕೃತಿಯನ್ನು  ಸಾಂಗತ್ಯಸಾಹಿತ್ಯದ ಮೊದಲ ಕೃತಿಯೆಂದು  ತಿಳಿಯಲಾಗಿತ್ತು. ಆದರೆ  ಕ್ರಿ.ಶ 1439`ಕಲ್ಯಾಣಕೀರ್ತಿ'ಯನ್ನುಸಾಂಗತ್ಯ ಸಾಹಿತ್ಯದ ಮೊದಲ ಕವಿಯೆಂದೂ, ಆತನ ಕಾಮನಕಥೆ  ಸಾಂಗತ್ಯ ಸಾಹಿತ್ಯದ ಮೊದಲಕೃತಿಯೆಂದು ತಿಳಿಯಲು ಅವಕಾಶವಿದೆ. ಸಾಂಗತ್ಯವನ್ನು ಮೊದಲು ಪ್ರಯೋಗಿಸಿದವನು ಕಲ್ಯಾಣ ಕೀರ್ತಿಯೇ ಆದರೂ ಅದನ್ನು ಆ ಹೆಸರಿನಿಂದ ಕರೆದವನು ನೇಮರಸ. ಆದ್ದರಿಂದ ನಮಗೆ ತಿಳಿದಮಟ್ಟಿಗೆ ಕ್ರಿ.ಶ 1439ರ ಕಲ್ಯಾಣಕೀರ್ತಿ ಬಳಸಿದ ಛಂದೋರೂಪಕ್ಕೆ ಸಾಂಗತ್ಯವೆಂಬ  ಹೆಸರು ಬಂದುದು ಕ್ರಿ.ಶ  1484ರ ನೇಮರಸನಿಂದಲೇ.

      ಸಾಂಗತ್ಯವೆಂಬ ಹೆಸರಿನ ಬಗ್ಗೆ ವಿದ್ವಾಂಸರು ಸಾಕಷ್ಟು ಜಿಜ್ಞಾಸೆ ಮಾಡಿದ್ದಾರೆ. ಸಾಂಗತ್ಯ ಇದರ ಸಾಮಾನ್ಯ ಅರ್ಥ ಹೊಂದಿಕೆ,ಮೇಳ,  ಹೊಂದಿಕೊಳ್ಳುವಿಕೆ, ಕೂಟ, ಸಮಿತಿ ಎಂದು ಇದರ ವಿಶೇಷಾರ್ಥ ಸಂಗೀತ, ಸಾಂಗತ್ಯ, ಸಂಗತಿ, ಪಾಡುಗಬ್ಬ, ವರ್ಣಕಕಾವ್ಯ, ಪದ ಕವಿತೆ, ಪದಸ್ತುತಿ ಎಂದು ವಿವಿಧ ಹೆಸರುಗಳಿಂದ ಕರೆದಿದ್ದಾರೆ.ವಿದ್ವಾಂಸರು ಸಾಂಗತ್ಯವೆಂಬ ಹೆಸರಿನ ಔಚಿತ್ಯದ ಬಗ್ಗೆ ವಿಶೇಷವಾಗಿ ಚರ್ಚೆಮಾಡಿ ರುತ್ತಾರೆ.  ಅವರಲ್ಲಿ  ಕೆಲವು  ಪ್ರಮುಖರು ತಮ್ಮ ಅಭಿಪ್ರಾಯಗಳನ್ನು ಈ ರೀತಿಯಾಗಿ  ಸೂಚಿಸಿರುವುದನ್ನು ಕಾಣಬಹುದಾಗಿದೆ.

     ಸಾಂಗತ್ಯಕ್ಕೆ ದೊರೆತ ಹೆಸರಿನಷ್ಟು ಒಪ್ಪುವ ಹೆಸರು ಕನ್ನಡ ಮಟ್ಟುಗಳಲ್ಲಿ ಇನ್ನಾವುಕ್ಕೂ ದೊರೆತಿಲ್ಲ. ಸಾಂಗತ್ಯವು ಹಾಡುಗಬ್ಬಕ್ಕೆ ತುಂಬಾ ಅಳವಡುವ ಮಟ್ಟು. ಅದರ ರಾಗರಂಜನೆ ಅಪ್ರತಿಮವಾದುದು. ಈ ಮೊದಲೆ ತೋರಿಸಿದಂತೆ ಸ್ವರಸಾಂಗತ್ಯವು ಅದರ ಮುಖ್ಯ ಲಕ್ಷಣ ಸಂಗತಿ ಎಂದರೆ ಮೇಳದೊಡನೆ ಸಾಗುವ ಗತಿ ಎಂಬ  ದೃಷ್ಟಿಯಿಂದಲೂ ಸಾಂಗತ್ಯಕ್ಕೆ ಸಮಂಜಸವಾದ ಅರ್ಥವನ್ನು ಮಾಡಬಹುದು. ಅದು ವಾದ್ಯ ವಿಶೇಷದೊಡನೆ ಸಾಗುವ     ಸಂಗತಿ. ಇದರಿಂದ ಸಾಂಗತ್ಯ ಆಗಿರುವ ಸಾಧ್ಯತೆಯಿದೆ.

 ʻಸಂಗತಿ' ಎಂದರೆ ಕಥಾವಸ್ತು ಎಂಬುದಾಗಿ ತಿಳಿದರೆ, ಕಥಾವಸ್ತುವಿಗೆ ಅನುಗುಣವಾದ ಛಂದಸ್ಸು ಸಾಂಗತ್ಯ  ಎಂದಾಗಬಹುದು. ಸಂಗೀತದ  ಪರಿಭಾಷೆಯಾಗಿ  ಸಂಗತಿ ಎಂಬುದು ಮತ್ತೊಂದು  ಇರುವಂತಿದೆ. ಇದರಿಂದ ಸಾಂಗತ್ಯ  ಬಂದಿರಬಹುದೇನೋ? ಸಾಂಗತ್ಯವನ್ನು ವರ್ಣಚರಿತೆಯ ರಾಗ ಎಂದು ಕೂಡ ಆಗಾಗ ಹೇಳಿರುವುದುಂಟು.` ಸಾಂಗತ್ಯ'  ಎಂಬ ಶಬ್ದಕ್ಕೆ  `ಒಡಗೂಡಿರುವಿಕೆ' ಎಂದು ಅರ್ಥ. ಈ ಛಂದೋಬಂಧಕ್ಕೆ ಸಂಗತಿ  ಎಂಬ ಹೆಸರೂ ಕಂಡುಬರುತ್ತದೆ.  ಈ ಎರಡೂ  ಹೆಸರುಗಳ ಅಭಿಪ್ರಾಯವೂ  ಒಂದೇ ಆಗಿದೆ. ಏಳೆಗಳ `ಒಕ್ಕೂಟ' ಎಂಬ  ಕಾರಣದಿಂದಲೇ ಇದಕ್ಕೆ ಈ ಹೆಸರುಗಳು ಬಂದಿರಬೇಕೆಂದು ತೋರುತ್ತದೆ. ಸಾಂಗತ್ಯ ಬಂಧಕ್ಕೆ `ಚರಿತೆ' ಎಂಬ ಇನ್ನೊಂದು ಹೆಸರೂ ಪ್ರಸಿದ್ಧವಾಗಿದೆ. ಒಟ್ಟಿನಲ್ಲಿ `ಸಾಂಗತ್ಯ' ಎಂದರೆ ಸ್ವರದೊಡನೆ ಕೂಡಿಸಾಗುವ ಗತಿ. ವಾದ್ಯ ಮೇಳದೊಡನೆ ಬೆರೆತು ನಡೆಯುವ ಹಾಡು, ಸಂಗೀತಕ್ಕೆ ಹೊಂದಿಕೆಯಾದ ಕಾವ್ಯ, ಒಂದು ಘಟನೆ ಅಥವಾ ವಿವರಿಸುವ ಕೃತಿ ಎಂದು ಹೇಳಬಹುದು. "ಆಶಯ, ಅಭಿವ್ಯಕ್ತಿ, ಭಾವ,  ರೂಪ, ವಾದ್ಯ ಗೀತೆಗಳ ಸಹಿತತ್ವ', ಸಾಮರಸ್ಯ ಎಂಬ ಅರ್ಥ ಸಾಂಗತ್ಯ ಪದದಿಂದ  ಸೂಚಿತವಾಗುತ್ತದೆ. ತಾತ್ಫೂರ್ತಿಕವಾಗಿ  ಹೊಂದಿಕೊಂಡು ಸಾಗುವ ಮಟ್ಟು ಎಂಬ  ಅರ್ಥದಲ್ಲಿ ಸಾಂಗತ್ಯ ಪದ ರೂಢವಾಗಿದೆಯೆಂದು ಭಾವಿಸಬಹುದಾಗಿದೆ".                                                          

      ಸಾಂಗತ್ಯವು ಪುರಾತನ ಛಂದೋಗ್ರಂಥ, ಕಾವ್ಯ-ಶಾಸನಗಳಲ್ಲಿ ಸ್ಥಾನ ಪಡೆಯದಿದ್ದರೂ ಉಳಿದೆಲ್ಲಾ ಮಟ್ಟುಗಳಿಗಿಂತ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿತು. ಉಳಿದ ಬಂಧಗಳಲ್ಲಿಯೂ ಕೆಲವು ಬಿಡಿಬಿಡಿಯಾಗಿ ಕಾವ್ಯ-ಶಾಸನಗಳಲ್ಲಿಯೂ,ಇನ್ನೂ ಕೆಲವು ಬರಿಯ ಛಂದೋಗ್ರಂಥಗಳಲ್ಲಿಯೂ  ಮಾತ್ರ  ಕಾಣಿಸಿಕೊಂಡಿದ್ದರೆ, ಇದು  ಬಿಡಿಯಾಗಿ ಎಲ್ಲಿಯೂ ಕಾಣಿಸಿಕೊಳ್ಳದೇ ಒಮ್ಮೆಲೇ ಇಡಿಯಾಗಿ ಪ್ರಕಟವಾಗಿ  ವಿಪುಲ  ಸಂಖ್ಯೆಯ ಸಾಹಿತ್ಯ ಕೃತಿಗಳ ಮಾಧ್ಯಮವಾಯಿತು. ಕನ್ನಡದಲ್ಲಿ ಸಾಂಗತ್ಯದ ಉಗಮದ ಬಗ್ಗೆ ಅಧಿಕೃತ ಉಲ್ಲೇಖವಿಲ್ಲದಿದ್ದರೂ ಕೂಡ ಕನ್ನಡ ಸಾಹಿತ್ಯದಲ್ಲಿ ಅದು ಪಡೆದುಕೊಂಡ ಸ್ಥಾನ ಅತ್ಯಂತ ಗುಣಾತ್ಮಕವಾದದ್ದು.

 

ಸಾಂಗತ್ಯದ ವೈಶಿಷ್ಟ್ಯ:

       ಸಾಂಗತ್ಯ ಉಳಿದ ಪ್ರಕಾರಗಳಿಗಿಂತ ತಡವಾಗಿ  ಸಾಹಿತ್ಯ ರಂಗವನ್ನು ಪ್ರವೇಶಿಸಿದರೂ ಬಹುಬೇಗ  ಜನಪ್ರಿಯತೆಯನ್ನು  ಪಡೆದು ಅಸಂಖ್ಯಾತ ಕೃತಿಗಳಿಗೆ ಮಾಧ್ಯಮವಾಗಿ ಕನ್ನಡದ ಯಾವುದೇ ಪ್ರಕಾರದ ಕೃತಿಸಂಖ್ಯೆಗೆ ಸರಿಮಿಗಿಲಾಗಿ ನಿಲ್ಲುವ ಶಕ್ತಿಯನ್ನು ಗಳಿಸಿಕೊಂಡಿತು. ಇತರೆ ಪ್ರಕಾರಗಳಂತೆ ಇದರಲ್ಲಿಯೂ ಕೆಲವು ಉತ್ತಮ, ಕೆಲವು  ಮಧ್ಯಮ, ಕೆಲವು ತೀರಸಾಮಾನ್ಯ ಕೃತಿಗಳು ರಚನೆಗೊಂಡಿವೆ. ಸಾಂಗತ್ಯ ಅನ್ಯ  ಪ್ರಕಾರಗಳಿಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು, ವೈವಿಧ್ಯತೆಯನ್ನು ಹೊಂದಿದೆ.

  ಅತ್ಯಂತ ಚಿಕ್ಕ ಪದ್ಯಗಳಾದ ಏಳೆ ತ್ರಿಪದಿಗಳಲ್ಲಿ ದೊಡ್ಡ ಕಾವ್ಯಗಳನ್ನು ಬರೆಯುವುದು ಕಷ್ಟ ಮಾತ್ರವಲ್ಲದೇ  ದೀರ್ಘಕಾಲ ಮಿಡಿಯುವ ಭಾವವನ್ನಾಗಲಿ, ವಿಸ್ತಾರವಾದ ವರ್ಣನೆಯನ್ನಾಗಲಿ ಅದರ ಕಿರಿಕಟ್ಟಿನಲ್ಲಿ ಕೂರಿಸುವುದು ಅಸಾಧ್ಯ ಎರಡನೆಯ ಸಾಲನ್ನು ಪುನರುಕ್ತಗೊಳಿಸಿಕೊಂಡು ಬರೆದ  ತ್ರಿಪದಿಯ ನಾಲ್ಕುಸಾಲಿನ  ಚತುಷ್ಪದಿಯಾಗುವುದಾದರೂ ಪುನರುಕ್ತದ ಕಾರಣದಿಂದಾಗಿ ಅಲ್ಲಿನ ಭಾವಗಳನ್ನು ಮುಂದುವರೆಸ ಲಾಗುವುದಿಲ್ಲ. ಅಂಶಗಣದ ಚೌಪದದಲ್ಲಿಯಾದರೂ ಭಾವನಿರೂಪಣೆಯಾಗುವ ಸೌಲಭ್ಯವಿಲ್ಲ. ಅಕ್ಕರಗಳಲ್ಲಿ ದೊಡ್ಡದೂ,  ಪ್ರಸಿದ್ಧವಾದುದೂ ಆದ ಪಿರಿಯಕ್ಕರ ಕನ್ನಡ  ಚಂಪೂ  ಕಾವ್ಯಗಳಲ್ಲಿ ವಿಶೇಷವಾಗಿ ಬಳಕೆ ಹೊಂದಿದೆ. `ಕವಿಗಳು ವರ್ಣನೆಗೋ ವಿವರಗಳನ್ನು  ಕೊಡುವುದಕ್ಕಾಗಿಯೋ ಪಿರಿಯಕ್ಕರವನ್ನು ವಿನಿಯೋಗಿಸಿ ಕೊಂಡಿದ್ದಾರೆ'. ಹೀಗಾಗಿ ಇದು ಕಾವ್ಯಗಳ ಬಳಕೆಗೆ ಒಗ್ಗಿಬಂದಿಲ್ಲ.  ಸಾಂಗತ್ಯ ಪದ್ಯವನ್ನು ಎತ್ತಿಕೊಂಡರೆ ಇದು ಅತ್ಯಂತ ಚಿಕ್ಕದಾದ ಏಳೆ  ಪದ್ಯಕ್ಕಿಂತ  ವಿಸ್ತಾರವಾಗುವುದು ಮತ್ತು ಅತಿದೊಡ್ಡದು ಎನ್ನುವ ಷಟ್ಪದಿ, ಪಿರಿಯಕ್ಕರಗಳಿಗಿಂತ ಚಿಕ್ಕದಾದ ಪದ್ಯವೆನಿಸುವುದು. ಹೀಗೆ  ಹಿತಮಿತವಾದ  ಛಂದೋಬಂಧವೆನಿಸಿರುವುದರಿಂದಲೇ  ಸಾಂಗತ್ಯವು ನಿರರ್ಗಳವಾಗಿ ಓದುವುದಕ್ಕೆ ಸಹಕಾರಿಯಾಗಿದೆ. ಸಾಂಗತ್ಯವು ಉಳಿದ ದೇಶೀ ಛಂದೋಬಂಧಗಳಿಗಿಂತ ಹೆಚ್ಚಿನ ವೈಶಿಷ್ಟ್ಯವನ್ನು, ವೈವಿಧ್ಯವನ್ನು ಹೊಂದಿದೆ.  ಅವುಗಳನ್ನು  ಈ ರೀತಿಯಾಗಿ ಸಂಗ್ರಹಿಸಬಹುದು. 

      ೧.ಕನ್ನಡ ಸಾಹಿತ್ಯದ ಇತರ ಪ್ರಕಾರಗಳಂತೆ ಸಾಂಗತ್ಯದಲ್ಲಿಯೂ ಧಾರ್ಮಿಕ ಕೃತಿಗಳು ಹೇರಳವಾಗಿ ರಚನೆಗೊಂಡಿವೆ. ಕರ್ನಾಟಕದ ಪ್ರಮುಖ ಧರ್ಮಗಳಾದ ಜೈನ, ವೀರಶೈವ ಮತ್ತು ವೈದಿಕಮತದ ಕವಿಗಳು ತಮ್ಮ ತಮ್ಮ ಮತ ತತ್ವಗಳ ನಿರೂಪಣೆಯನ್ನೊಳಗೊಂಡ ಕೃತಿಗಳನ್ನು ಹೆಚ್ಚಾಗಿ ರಚಿಸಿದ್ದಾರೆ. ಕೆಲವು ಕೃತಿಗಳು ಕೇವಲ  ತತ್ವ ಪ್ರಧಾನವಾದರೆ ಇನ್ನೂ ಕೆಲವು ಕಾವ್ಯ ತತ್ವದ ಜೊತೆಗೆ ಧರ್ಮ ತತ್ವವನ್ನು ಬೆರೆಸಿಕೊಂಡು ಹೊರಬಂದಿವೆ.  ಸ್ವಮತಪ್ರಚಾರ,  ಹೆಗ್ಗಳಿಕೆ ಕೆಲವು ಕೃತಿಗಳಲ್ಲಿ ಕಂಡುಬಂದರೂ  ಅನ್ಯಮತ ದೂಷಣೆ, ಘರ್ಷಣೆ ಅಷ್ಟಾಗಿ ಇಲ್ಲ. ಅದಕ್ಕೆ ಬದಲು ಧರ್ಮ ಸಮನ್ವಯತೆ ಎದ್ದುಕಾಣುತ್ತದೆ. ಅನ್ಯಮತ  ದೂಷಣೆಗಿಂತ ಪೋಷಣೆ, ಪ್ರೇ  ಬೆಳೆದುಬಂದಿತ್ತು. ಈ   ಧರ್ಮ  ಸಮನ್ವಯವನ್ನು ಸಾಂಗತ್ಯ  ಕವಿಗಳಲ್ಲಿ ನಾವು ಹೆಚ್ಚಾಗಿಕಾಣುತ್ತೇವೆ. ಬೇರೆ ಮತದ  ಅರಸರು ಬೇರೆ ಮತದ ಕವಿಗಳಿಗೆ ಪೋಷಣೆಯಿತ್ತದ್ದು. ಕವಿ ಅನ್ಯಮತದವನಾದರೂ ಬೇರೆಮತದ ಅರಸನ ಪ್ರೀತಿಗೋಸ್ಕರ  ಅವನ ಮತ ಪರವಸ್ತುವನ್ನು ಸ್ವೀಕರಿಸಿ ಕೃತಿಗೈದುದು ಇದಕ್ಕೆ  ನಿದರ್ಶನವಾಗಿದೆ.

2.ಜೈನ, ವೀರಶೈವ, ವೈದಿಕರಂತೆ ಇತರ ಮತದ ಕವಿಗಳು ಹೆಚ್ಚಾಗಿ ಸಾಂಗತ್ಯದಲ್ಲಿ ಕೃಷಿಗೈದಿದ್ದಾರೆ. ಉದಾಹರಣೆಗೆ ಕುರುಬ ಮತದ ಕನಕದಾಸರು, ಶೂದ್ರಳಾದ ಸಂಚಿಹೊನ್ನಮ್ಮ ಮುಂತಾದವರು.                                                         

3.ಜೈನ ಕವಿಗಳು ಹೆಚ್ಚಾಗಿ ಪೂರ್ವದ ಪ್ರೌಢ ಪರಂಪರೆಯನ್ನು ಅನುಸರಿಸಿದ್ದಾರೆ. ಹಿಂದೆ ಚಂಪೂವಿನಲ್ಲಿ  ಹೇಳಿದ ತೀರ್ಥಂಕರರ ಚರಿತ್ರೆಗಳನ್ನು  ಕೆಲವರು  ಸಾಂಗತ್ಯದಲ್ಲಿ ಎರಕ ಹೊಯ್ದರೆ,  ಇನ್ನೂ ಕೆಲವರು  ಅವುಗಳ ಜೊತೆಗೆ ಕಾಮದೇವರು,  ಕೇವಲಿಗಳ ಚರಿತ್ರೆಗಳನ್ನು ಜೈನಪರ ರಾಮಾಯಣ ಮಹಾಭಾರತದ ಕಥೆಗಳನ್ನು ಆರಿಸಿಕೊಂಡು ಕೃತಿಗೈದಿದ್ದಾರೆ.

4.ವೀರಶೈವ ಕವಿಗಳು  ಹರಿಹರನ ವಿದಿತ  ಮಾರ್ಗವಿಡಿದು ಹರಲೀಲೆಗಳನ್ನು, ಹರಶರಣರ ಚರಿತ್ರೆಗಳನ್ನು ತಮ್ಮಕಾವ್ಯಗಳಿಗೆ ವಸ್ತುವನ್ನಾಗಿಸಿಕೊಂಡು ಸಾಗಿದ್ದಾರೆ.

 5.ವೈಷ್ಣವ ಕವಿಗಳು ಹೆಚ್ಚಾಗಿ ವಿಷ್ಣುಲೀಲಾಪರ ಕಾವ್ಯಗಳನ್ನು,  ಕೆಲವು ಮಹಾಭಾರತ ಕಥೆಗಳನ್ನೊಳಗೊಂಡ ಕೃತಿಗಳನ್ನು ರಚಿಸಿದ್ದಾರೆ.

 6.ಮತೀಯ  ಕೃತಿಗಳಂತೆ ಸಾಂಗತ್ಯದಲ್ಲಿ ಕೆಲವು   ಕಥಾ ಪ್ರಧಾನ ಕಾವ್ಯಗಳೂ ಹುಟ್ಟಿಕೊಂಡಿವೆ.  ಅವುಗಳಲ್ಲಿ  ಮತತತ್ವದ ಲೇಪವಿದ್ದರೂ  ಕಥೆಗೆ ಹೆಚ್ಚಿನ  ಮಹತ್ವ ಸಂದುದು ಕಂಡುಬರುತ್ತದೆ. ಕಥಾಸಾಹಿತ್ಯ ಸಾಂಗತ್ಯದಲ್ಲಿ ಸ್ವಲ್ಪ ಹೆಚ್ಚಿನ  ಪ್ರಮಾಣದಲ್ಲಿ ಬೆಳೆದುಬಂದಿತ್ತೆಂಬುದಕ್ಕೆ  ಸಾಕ್ಷಿ.   ಉದಾಹರಣೆಗೆ;  ಶೃಂಗಾರಕಥೆ, ಮದನ  ಮೋಹಿನಿಕಥೆ, ಶ್ರೀಪಾಲಚರಿತೆ...ಇತ್ಯಾದಿ.

7.ಚಾರಿತ್ರಿಕ ಕಾವ್ಯಗಳು ಸಾಂಗತ್ಯದಲ್ಲಿ ಉಳಿದ ಪ್ರಕಾರಗಳಿಂತ ಅಧಿಕಸಂಖ್ಯೆಯಲ್ಲಿ ರಚನೆ ಗೊಂಡಿವೆ. ಚಂಪೂ ಕಾವ್ಯಗಳಲ್ಲಿ ಕಥೆಗೆ  ಪರ್ಯಾಯವಾಗಿ ಕವಿಯ ಪೋಷಕ ಅರಸನಿಗಾಗಿ ಸಂಬಂಧಿಸಿದ ಕೆಲವು ಚಾರಿತ್ರಿಕ ಸಂಗತಿಗಳನ್ನು ಕಾಣುತ್ತೇವೆ. ಆದರೆ ಸಂಪೂರ್ಣ ಚಾರಿತ್ರಿಕವಾಗಿ  ರಚನೆಗೊಂಡ ಕೃತಿಗಳು ಹಿಂದೆ ಇರಲಿಲ್ಲ.  ಸಾಂಗತ್ಯದಲ್ಲಿ ಅಂಥ ಕೃತಿಗಳು ಸಿಕ್ಕುತ್ತವೆ. ಉದಾಹರಣೆಗೆ ನಂಜುಂಡ ಕವಿಯ `ಕುಮಾರರಾಮನಸಾಂಗತ್ಯ'. ಕಂಠೀರವ ನರಸರಾಜವಿಜಯ,ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ ಇತ್ಯಾದಿ ಕೆಲವು ಸಂಪೂರ್ಣವಾಗಿ ಐತಿಹಾಸಿಕವಾಗಿದ್ದರೆ,  ಇನ್ನೂ ಕೆಲವು ಐತಿಹಾಸಿಕ ಮಿಶ್ರಕೃತಿಗಳಾಗಿವೆ. ಇವು ಕನ್ನಡ ಸಾಹಿತ್ಯಕ್ಕೆ ಸಾಂಗತ್ಯರೂಪವು ನೀಡಿದ ಅಪೂರ್ವ ಕಾಣಿಕೆ ಎನಿಸಿವೆ.

 

                          ಸಾಂಗತ್ಯ ಕಾವ್ಯಗಳು

 

 1.ಇತಿಹಾಸಮಿಶ್ರ ಕಾವ್ಯಗಳು    2.ನೀತಿಪ್ರಧಾನ ಕಾವ್ಯಗಳು   3.ಧಾರ್ಮಿಕ ಕಾವ್ಯಗಳು

   

1.ಕುಮಾರರಾಮನ ಸಾಂಗತ್ಯ       1.ಹದಿಬದಿಯ ಧರ್ಮ

2.ಕಂಠೀರವ ನರಸರಾಜವಿಜಯಂ   2.ನೀತಿಶತಕದ ಸಾಂಗತ್ಯ

3.ಬಿಜ್ಜಳರಾಜ ಚರಿತೆ            3.ಚಿನ್ಮಯಚಿಂತಾಮಣಿ

4.ಮುನಿವಂಶಾಭ್ಯುದಯ         4.ಹರದನೀತಿ

೫. ಇಮ್ಮಡಿ ಚಿಕ್ಕಭೂಪಾಲ ಸಾಂಗತ್ಯ

 

 

   ಜೈನ                     ವೀರಶೈವ                   ವೈದಿಕ               

 1.ನೇಮಿಜನೇಶ ಸಂಗತಿ      1.ಭೈರವೇಶ್ವರ ಚರಿತೆ          1.ಪದ್ಮಿನಿಕಲ್ಯಾಣ

 2.ಭರತೇಶ ವೈಭವ         2.ಸಾನಂದಗಣೇಶ ಸಾಂಗತ್ಯ    2.ಕೃಷ್ಣಾಚಾರಿತ್ರೆ

 3.ನಾಗಕುಮಾರ ಚರಿತೆ       3.ದೀಪದಕಲಿಯರ ಕಾವ್ಯ     3.ಉದ್ಧಾಳನಕಥೆ      

 4.ಪದ್ಮಾವತಿ ಚರಿತೆ         4.ವೀರೇಶ್ವರ ಚರಿತೆ          4.ಪಶ್ಚಿಮರಂಗಧಾಮಸಾಂಗತ್ಯ

 

    ಜೈನ ಕವಿಗಳ ತರುವಾಯ ಕನ್ನಡ ಸಾಹಿತ್ಯ ಸರಸ್ವತಿಯ ಸೇವೆಗೆ ನಿಂತವರು ವೀರಶೈವ ಕವಿಗಳು. ಇವರು ಪ್ರೌಢಪರಂಪರೆಯನ್ನು ಬಿಟ್ಟು ಭಾವ ಭಾಷೆಗಳಲ್ಲಿ ಸರಳತೆಯನ್ನು ತಂದು ಜನ ಬದುಕಬೇಕೆಂದು  ಸಾಹಿತ್ಯ ಸೃಷ್ಟಿಸಿ, ಸಾಹಿತ್ಯ ಸರ್ವರಿಗಾಗಿ ಎಂಬ ಸಂದೇಶವನ್ನು ಸಾರಿದರು. ಇವರು ರಚಿಸಿದ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ಹಿರಿದಾದ ಸ್ಥಾನವನ್ನು ಗಳಿಸಿಕೊಂಡಿದೆ. `ವೀರಶೈವ ಸಾಹಿತ್ಯವೆಂದರೆ ಕನ್ನಡ ಸಾಹಿತ್ಯ'  ಎನ್ನುವಷ್ಟರ ಮಟ್ಟಿಗೆ ಇದು ಕನ್ನಡ ನಾಡಿನಲ್ಲಿ ತುಂಬಿ ಹರಿದಿದೆ.

    ಕರ್ನಾಟಕ ಕವಿಚರಿತೆಯ ಪ್ರಕಾರ ವೀರಶೈವ ಕವಿಗಳ ಸಂಖ್ಯೆ ಅಧಿಕ. ಅವರು ರಚಿಸಿದ ಕೃತಿಗಳು  ಕೇವಲ ಸಂಖ್ಯೆಯ  ದೃಷ್ಟಿಯಿಂದ ಹಿರಿದಾಗಿರದೆ  ಸತ್ವದ ದೃಷ್ಟಿಯಿಂದಲೂ ಮಹತ್ವ ಪಡೆದಿವೆ. "ಹರಿಹರ, ರಾಘವಾಂಕ, ಚಾಮರಸ,  ಷಡಕ್ಷರದೇವ. ಮೊದಲಾದ ಕವಿಗಳು ಮಹಾಕಾವ್ಯಗಳನ್ನು ರಚಿಸಿ ವೀರಶೈವ ಕವಿಗಳಲ್ಲಿಯೇ ಅಗ್ರಗಣ್ಯರೆನಿಸಿಕೊಂಡರೆ ಬಸವಾದಿ ಶಿವಶರಣರ ಕ್ರಾಂತಿಯಿಂದಾಗಿ ಕನ್ನಡಸಾಹಿತ್ಯದ ದಿಕ್ಕುಬದಲಾಗಿ ಅನೇಕ ದೇಸಿಪ್ರಕಾರಗಳು ಹುಟ್ಟಿಕೊಂಡವು. ಅವುಗಳ ಹುಟ್ಟಿಗೆ ವೀರಶೈವ ಕವಿಗಳು ಕಾರಣರಾದರು. ವಚನ, ರಗಳೆ, ಷಟ್ಪದಿ. ಪ್ರಕಾರಗಳಿಗೆ  ಆದಿಪುರುಷರೆನಿಸಿಕೊಂಡಂತೆ ಅಚ್ಛದೇಸಿಯವಾದ ಸಾಂಗತ್ಯಕ್ಕೂ ಮೂಲ ಪುರುಷರಾದರು.

     ಜನತೆಯಲ್ಲಿ ಅರಿವನ್ನು ಮೂಡಿಸಲು ಸಾಂಗತ್ಯವೆಂಬ ಹೊಸ ಪ್ರಕಾರವನ್ನು ಸ್ವೀಕರಿಸಿದ ವೀರಶೈವ ಕವಿಗಳು ಬಹುಸಂಖ್ಯಾತರಾಗಿ ಕಾವ್ಯ ರಚನೆಗೆ ತೊಡಗಿರುವುದನ್ನು ಕಾಣಬಹುದಾಗಿದೆ. ಹದಿನೈದನೆಯ ಶತಮಾನದ ಜೈನ ಸಾಂಗತ್ಯಗಳ  ಪ್ರವರ್ತತೆಯನ್ನು ಚೆನ್ನಾಗಿ ಪರಿಪುಷ್ಟವಾಗುವಂತೆ ಮಾಡಿದವರು ವೀರಶೈವ ಸಾಂಗತ್ಯ ಕವಿಗಳು.

     ಶೈವ ಕವಿಯೆನಿಸಿದ ದೇಪರಾಜನ ʻಸೊಬಗಿನ ಸೋನೆ' ಒಂದು ಶೃಂಗಾರಕಾವ್ಯ. ಮುಂದಿನ ಕಾವ್ಯಗಳೆಲ್ಲದರ ಮೇಲೆ ಹೆಸರು,  ಕಥೆ,  ಛಂದಸ್ಸು, ವರ್ಣನೆ ಮೊದಲಾದ ಎಲ್ಲಾ ಅಂಶಗಳಲ್ಲೂ ಅತ್ಯಂತ ಹೆಚ್ಚಿನ ಪ್ರಭಾವ ಬೀರಿದ ಕೃತಿ ಇದಾಗಿದೆ.  ವೀರಶೈವ ಧರ್ಮ ಪರವಾದಕೃತಿಗಳ ಭದ್ರವಾದ ಹೆಜ್ಜೆಯನ್ನು ಸಾಂಗತ್ಯವು ಹದಿನಾರನೆಯ ಶತಮಾನದಲ್ಲಿ ತೋರಿಸಿಕೊಟ್ಟಿದೆ. ಈ ಶತಮಾನದ  ವೀರಶೈವಸಾಹಿತ್ಯದಲ್ಲಿ ಬರುವ ಕೃತಿಗಳು ಸಂಖ್ಯೆಯಲ್ಲಿ ಹಿಂದಿನ  ಶತಮಾನಕ್ಕೆ ದ್ವಿಗುಣಿತವಾಗಿವೆ.  ಹರಿಶ್ಚಂದ್ರಸಾಂಗತ್ಯ, ವೀರಭದ್ರ ಲೀಲಾರತ್ನ  ಇವುಗಳು ಶಿವಪುರಾಣದಿಂದ ಉದ್ಧೃತವಾದ ಕಥಾನಕಗಳು.  ಜನ ಬದುಕಲೆಂದು ರಾಘವಾಂಕ ಬರೆದ ಹರಿಶ್ಚಂದ್ರ ಕಾವ್ಯವನ್ನು ಮಾದರಿಯಾಗಿಟ್ಟುಕೊಂಡು ಸಾಂಗತ್ಯ ಕೃತಿಗಳ ಕುರಿತಾಗಿ ಒಂದು ಸಂಪುಟವೇ ಬಂದಿದೆ.  "ಹರಿಶ್ಚಂದ್ರಕಾವ್ಯ  ಬರೆದ ರಾಘವಾಂಕನ ಹಲ್ಲನ್ನು ಹರಿಹರ  ಉದುರಿಸಿದ ಎಂಬ ದಂತಕಥೆ  ಸುಳ್ಳು ಎಂಬುದನ್ನು ಪೋಷಿಸಲು ಈ ಶತಮಾನದ ಕೆಲವು ಸಾಂಗತ್ಯ ಕವಿಗಳು ಆ ಕಾವ್ಯವನ್ನೇ ಎತ್ತಿಕೊಂಡು ಬರೆದಿರುವುದು ಸಾಕ್ಷಿಯಾಗಿದೆ." ಷಟ್ಪದಿಯ ರಾಘವಾಂಕನ ಉದ್ದೇಶ  ಮತ್ತಷ್ಟು ಸ್ಪಷ್ಟವಾಗಿ ಜನರ ಬದುಕಿನಲ್ಲಿ ಬೆರೆತದ್ದು ಈ ಶತಮಾನದ ಸಾಂಗತ್ಯಗಳಲ್ಲಿ ಧಾರ್ಮಿಕ ವಿಷಯಗಳಿಂದ ಇಡಿಕಿರಿದ ಸಾಹಿತ್ಯಕ್ಕೆ ಈ ಕೃತಿ ಸ್ವಲ್ಪಮಟ್ಟಿಗೆ ವೈವಿಧ್ಯವನ್ನು ಕಲ್ಪಿಸಿಕೊಟ್ಟಿದೆ.

      ಜೈನ ಧಾರ್ಮಿಕ  ಕವಿಗಳು ಹೇಳಿಕೊಂಡ  ಮುಕ್ತಿಲಾಭ, ಭವಭಯದುರಿತನಾಶನ ಇವನ್ನೇ ವೀರಶೈವ ಸಾಂಗತ್ಯ  ಕವಿಗಳು ಪ್ರಮುಖವಾಗಿ  ಹೇಳಿಕೊಂಡಿದ್ದಾರೆ. ಕೆಲವು ಕೃತಿಗಳಲ್ಲಿ ಮಾತ್ರ ಆ ಧಾರ್ಮಿಕ ಸಾಹಿತ್ಯದಲ್ಲಿಯೂ  ಕಾವ್ಯತ್ವದ ಮೌಲ್ಯವನ್ನು ಗಣಿಸಬೇಕೆಂಬ ಪ್ರಾರ್ಥನೆಗಳಿವೆ. ಸಾಂಗತ್ಯ ಪ್ರಕಾರವೆಂಬ ವಾಹಿನಿಯಲ್ಲಿ ಮಹಾಕೃತಿಗಳಾಗಿ  ಮೂಡಿಬಂದ ಜೈನ, ವೈದಿಕ, ವೀರಶೈವ ಕೃತಿಗಳು ಕೆಲವೇ  ಕೆಲವಾದರೂ  ಸಾಂದ್ರತೆಯನ್ನು, ರಮ್ಯತೆಯನ್ನು ಮೂಡಿಸಲು ಹಲವಾರು ವೀರಶೈವ ಸಾಂಗತ್ಯಗಳು ಪಣತೊಟ್ಟು ನಿಂತಿವೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ  ಸಾಂಗತ್ಯ ಶೈಲಿಯ ಪ್ರಸಾರತೆಯ ಕಾರ್ಯದಲ್ಲಿ ವೀರಶೈವ ಕವಿಗಳ ಸಾಧನೆ ಅದ್ಭುತವಾದುದು.

      ವೀರಶೈವ ಸಾಂಗತ್ಯ ಸಾಹಿತ್ಯವನ್ನು ನಾಲ್ಕು ಗುಂಪಿಗೆ ಅಳವಡಿಸಬಹುದು; 

1.ವೀರಶೈವ ಮಹಾಪುರುಷರ ಚರಿತೆಗಳು: ದೀಪದಕಲಿಯರ ಚರಿತೆ, ಸತ್ಯೇಂದ್ರಚೋಳನ ಚರಿತೆ

2.ಶಿವಭಕ್ತ ಶ್ರೇಷ್ಠರ ಚರಿತೆಗಳು : ಹರಿಶ್ಚಂದ್ರ ಸಾಂಗತ್ಯ,  ಅರವತ್ಮೂರು ಪುರಾತನರ ಸಾಂಗತ್ಯ 

3.ಮತ ಪ್ರಕ್ರಿಯೆ ನಿರೂಪಣ ಚರಿತೆಗಳು;  ಅನುಭವ ಮುದ್ರೆ,  ಪ್ರಸಾದ ಸಾಂಗತ್ಯ,  ಪರಮಾನುಭವ ಬೋಧೆ 

4.ಚರಿತ್ರೆಯನ್ನೊಳಗೊಂಡ ಚರಿತೆಗಳು: ಮಡಿವಾಳಯ್ಯನ ಚರಿತೆ, ಅಬ್ಬಲೂರು ಚರಿತೆ.

5. ಇತಿಹಾಸ ಬದ್ಧ ಕಾವ್ಯಗಳು: ನಂಜುಂಡ ಕವಿಯ ಕುಮಾರರಾಮನ ಸಾಂಗತ್ಯ, ಪಾಂಚಾಳಗಂಗನ ಚೆನ್ನರಾಮನ ಸಾಂಗತ್ಯ, ಇಮ್ಮಡಿ ಚಿಕ್ಕಭೂಪಾಲ ಸಾಂಗತ್ಯ, ಸಿದ್ಧಕವಿಯ ಸಿರುಮನ ಸಾಂಗತ್ಯ, ಚಾಮಯ್ಯನ ದೇವರಾಜೇಂದ್ರ ಸಾಂಗತ್ಯ ಇತ್ಯಾದಿ.               

   ಸಾಂಗತ್ಯವು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಹಾಗೂ ಉನ್ನತ ಸ್ಥಾನವನ್ನು ಪಡೆದು ಕೊಂಡಿದೆ. ಉಳಿದ ಪ್ರಕಾರಗಳೊಡನೆ ಹೋಲಿಸಿ ನೋಡಿದಾಗ, ಕೃತಿಸಂಖ್ಯೆ ಹಾಗೂ ಸತ್ಯದ ದೃಷ್ಟಿಯಿಂದ ಚಂಪೂ, ಷಟ್ಪದಿಗಳ ತರುವಾಯದ ಮೂರನೆಯ ಸ್ಥಾನ ಇದಕ್ಕೆ ಸಲ್ಲುತ್ತದೆ. ಆದರೆ ಜನಪ್ರಿಯತೆಯ ದೃಷ್ಟಿಯಿಂದ ಉಳಿದೆಲ್ಲ ಪ್ರಕಾರಗಳಿಗಿಂತಲೂ ಒಂದುಹೆಜ್ಜೆ ಮುಂದೆಯೇ ಇದೆಯೆಂದು ಹೇಳಿದರೆ ಅತಿಶಯೋಕ್ತಿಯೆನಿಸದು.

     ಸಾಂಗತ್ಯ ಬಹಳ ತಡವಾಗಿ ಬೆಳಕಿಗೆ ಬಂದರೂ ಕೂಡ ಬಹುಬೇಗ ಜನಪ್ರಿಯತೆಯನ್ನು ಪಡೆಯಿತು. ಮಹಾಕಾವ್ಯಗಳು, ಉತ್ಕೃಷ್ಟ ಮಹತ್ಕೃತಿಗಳು, ಸತ್ಕಾವ್ಯಗಳು ಇದರಲ್ಲಿ  ಮೈದಾಳಿ ಪ್ರಸಿದ್ಧಿಯನ್ನು ಪಡೆದು, ಉಳಿದ ಪ್ರಕಾರಗಳ ಕೃತಿಗಳ ಹೆಗಲೆಣೆಯಾಗಿ ನಿಲ್ಲದೆ ಅರ್ಹತೆಯನ್ನು ಹೊಂದಿ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆಗಳಾಗಿ ಪರಿಣಮಿಸಿದವು. ಅಷ್ಟೇ ಅಲ್ಲ ವಿಶ್ವ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯದ ಕೀರ್ತಿಯನ್ನು ಬೆಳಗಲು ಸಹಾಯಕವಾದವು.

     ಸಾಂಗತ್ಯ ಕನ್ನಡದಲ್ಲಿ ಎರಡು ವಿಧದಿಂದ ವೈಶಿಷ್ಟ್ಯವನ್ನು ಸಾಧಿಸಿದೆ. ಒಂದು ಛಂದೋ ರೂಪವಾಗಿ, ಮತ್ತೊಂದು  ಸಾಹಿತ್ಯ ಪ್ರಕಾರವಾಗಿ. ಮೊದಲನೆಯದಾಗಿ ಇದು ಕನ್ನಡದ ವಿಶಿಷ್ಟ ಛಂದೋರೂಪ. ಕನ್ನಡದಲ್ಲಿ ಕರ್ನಾಟಕದ ವಿಷಯಜಾತಿಗಳೆಂದು ಪ್ರಸಿದ್ಧವಾದ ಛಂದೋಬಂಧಗಳಲ್ಲಿ ಇದಕ್ಕೊಂದು ಪ್ರತ್ಯೇಕವಾದ ಗೌರವದಸ್ಥಾನ ಮೀಸಲಾಗಿದೆ.  ತಡವಾಗಿ ಪ್ರಕಟವಾಯಿತೆಂದೋ ಏನೋ  ಲಾಕ್ಷಣಿಕರ ಗಮನಕ್ಕೆ ಬಾರದೇ, ಕ್ಷ್ಯ-ಲಕ್ಷಣ ಸಮೇತ ಉಳಿದ  ಕನ್ನಡ ಮಟ್ಟುಗಳೊಡನೆ  ಛಂದೋಗ್ರಂಥಗಳಲ್ಲಿ  ಸ್ಥಾನ ಪಡೆಯದ ಸಾಂಗತ್ಯ. ಹೊರಬಂದ ಅಲ್ಪಾವಧಿಯಲ್ಲಿಯೇ ಅವುಗಳಿಗಿಂತ ಮಿಗಿಲಾದ ಪ್ರಚಾರ-ಪ್ರತಿಷ್ಠೆಗಳನ್ನು ಗಳಿಸಿ ಘನತೆಗೇರಿ ನಿಂತಿತು. ಇದು ಇತರ ಪ್ರಕಾರಗಳಂತೆ ತನ್ನ ಮೂಲ ಲಯವನ್ನು ಬಿಟ್ಟು ಕದಲದೇ ಶುದ್ಧ ದೇಶೀ ಬಂಧವಾಗಿ ಬಾಳಿ ಬದುಕಿದೆ. ಉಳಿದ ಕನ್ನಡ ಛಂದೋಬಂಧಗಳು  ಇಡಿಯಾಗಿ  ಕಾವ್ಯಕ್ಕೆ ವಾಹಕವಾಗಿದೆ.  ಕೇವಲ ಬಿಡಿಯಾಗಿ  ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಂಡರೆ ಸಾಂಗತ್ಯ ಬಿಡಿಯಿಂದ ಹಿಡಿದು ಇಡಿಯವರೆಗೆ ಕಿರುಕಾವ್ಯದಿಂದ ಹಿರಿಯ ಮಹಾಕಾವ್ಯಗಳವರೆಗೆ ಮೈಚಾಚಿ ನಿಂತಿತು. ಸಾಂಗತ್ಯವು ಯಾವ ಕನ್ನಡ ಬಂಧವು ತೋರದ ಹೊಸತನವನ್ನು ತೋರಿ ಸ್ವಚ್ಛಂದತೆ, ಸರಳತೆ, ನಯಗಾರಿಕೆಯನ್ನು ಮೈಗೂಡಿಸಿಕೊಂಡು ಮೆರೆದಿದೆ. ಎರಡನೆಯದಾಗಿ ಸಾಂಗತ್ಯ ಸಾಹಿತ್ಯ ರೂಪವನ್ನು ತಾಳಿ ಅಲ್ಲಿಯೂ ತನ್ನ ವಿಶಿಷ್ಟತೆಯನ್ನು ಪ್ರದರ್ಶಿಸಿದೆ. ಅದು ತನಗಿಂತ ಹಿಂದೆ ಕನ್ನಡದಲ್ಲಿ ಬೆಳೆದುಬಂದು ತಮ್ಮ ಸ್ಥಾನವನ್ನು  ಸ್ಥಿರಗೊಳಿಸಿಕೊಂಡ ಸಾಹಿತ್ಯ  ಪ್ರಕಾರಗಳ  ಸಾರರ‍್ವಸ್ವವನೆಲ್ಲಾ ಹೀರಿಕೊಂಡು ತನ್ನದೇ ಆದ ಹಾಗೂ  ಸ್ವಚ್ಛಂದ ಮಾರ್ಗವನ್ನು ಅನುಸರಿಸಿ  ಹೊಸದೊಂದು ಪ್ರಕಾರವಾಗಿ, ಅವುಗಳಷ್ಟೇ ಸುಸ್ಥಿರವಾದ ಸ್ಥಾನವನ್ನು ಗಳಿಸಿಕೊಂಡು ನಿಂತಿದೆ. ವಸ್ತು, ವರ್ಣನೆ, ತಂತ್ರ, ರಸ, ಪಾತ್ರ ಇತ್ಯಾದಿಗಳಲ್ಲಿ ಸ್ವಲ್ಪ ಮಟ್ಟಿನ ಪರಂಪರೆಯ ಅನುಕರಣೆ ಇದರಲ್ಲೂ ಕಂಡುಬಂದರೂ ಅದಕ್ಕಿಂತ ಹೆಚ್ಚಾಗಿ ಸ್ವತಂತ್ರತೆ, ಅನುಕರಣಾತೀತತೆ ಎದ್ದು ತೋರುತ್ತದೆ.

      ಇತರ ಪ್ರಕಾರಗಳಂತೆ ಸಾಂಗತ್ಯದಲ್ಲಿಯೂ ಜೈನ, ವೀರಶೈವ, ಬ್ರಾಹ್ಮಣ ಈ ತ್ರಿಮತದ ಕವಿಗಳು ಸಾಹಿತ್ಯ ಕೃತಿ ಮಾಡಿದ್ದಾರೆ.  ಅದರಂತೆ ಸ್ತ್ರೀಯರೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕನ್ನಡ ಸಾಹಿತ್ಯದಲ್ಲಿ ಸಾಂಗತ್ಯದ ಸ್ಥಾನಮಾನ ಹೆಚ್ಚುವಂತೆ, ಎದ್ದು ತೋರುವಂತೆ ಮಾಡಿದ್ದಾರೆ. ವಸ್ತುವಿನ  ದೃಷ್ಟಿಯಿಂದ ನೋಡಿದರೆ  ಸಾಂಗತ್ಯ ಸಾಹಿತ್ಯ ವೈವಿಧ್ಯಮಯ ವಸ್ತುಗಳನ್ನೊಳಗೊಂಡಿದೆ. ಇತರ  ಪ್ರಕಾರಗಳಂತೆ ಇದರಲ್ಲಿಯೂ ಮತತತ್ವ ಪ್ರಧಾನ ಕಾವ್ಯಗಳು ಹೆಚ್ಚಾಗಿ ಮೂಡಿ ಬಂದಿದ್ದರೂ ಅವು  ಕೇವಲ ಮತಪ್ರಚಾರಕ ಶುಷ್ಕ ಕಾವ್ಯಗಳಾಗಿರದೇ ಕಾವ್ಯ ತತ್ವಗಳನ್ನೊಳಗೊಂಡ  ಕಲಾಕೃತಿಗಳಾಗಿವೆ. ಐತಿಹಾಸಿಕ  ಕಾವ್ಯಗಳು  ಸಾಂಗತ್ಯ ಪ್ರಕಾರಗಳಲ್ಲಿ  ಹೆಚ್ಚಾಗಿ ರಚನೆಗೊಂಡಿವೆ. ಉಳಿದ ಪ್ರಕಾರಗಳಲ್ಲಿ  ಕಾಣಸಿಗದ ಚಾರಿತ್ರಿಕ ವಸ್ತುಗಳ ನ್ನೊಳಗೊಂಡ ಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯದಲ್ಲಿದ್ದ ಚಾರಿತ್ರಿಕ ಕಾವ್ಯಗಳ  ಕೊರತೆಯನ್ನು ತುಂಬಿದ ಕೀರ್ತಿ ಸಾಂಗತ್ಯಕವಿಗಳಿಗೆ ಸಲ್ಲುತ್ತದೆ.  ಇದು ಕನ್ನಡ ಸಾಹಿತ್ಯಕ್ಕೆ ಸಾಂಗತ್ಯ ಕೊಟ್ಟ ಉಜ್ವಲ ಕಾಣಿಕೆಯಾಗಿದೆ.

    ಶೃಂಗಾರ ಭಕ್ತಿ ಕರುಣ ರಸಗಳಿಗೆ ಸಾಂಗತ್ಯದಲ್ಲಿ ಹಿರಿದಾದ ಗೌರವಾನ್ವಿತಸ್ಥಾನ ಸಂದಿದೆ. ಉಳಿದ ರಸಗಳು ಅಲ್ಲಲ್ಲಿ ಪೋಷಕವಾಗಿ ಬಂದಿವೆ. ಕನ್ನಡ ಸಾಹಿತ್ಯಕ್ಕೆ ಸಾಂಗತ್ಯವು ಮಹಾಕಾವ್ಯವೊಂದನ್ನು  ತನ್ನ ಉತ್ಕೃಷ್ಟ  ಹಾಗೂ ಉನ್ನತ  ಕೊಡುಗೆಯಾಗಿ ಅರ್ಪಿಸಿದೆ. ಸಾಂಗತ್ಯದ ಏರಿಕೆಯ ಕಾಲ ಮುಗಿದ ಮೇಲೆ ಅದು ಇಡೀ ಕಾವ್ಯದಂತೆ ಬಿಡಿಬಿಡಿಯಾಗಿ ಮುಂದೆ ಯಕ್ಷಗಾನ, ಜನಪದ, ಹಾಡು, ಭಾವಗೀತೆಗಳಲ್ಲಿ ಎಡೆಪಡೆದು ತನ್ನ ಜೀವಂತಿಕೆಯನ್ನು ಪ್ರಕಟಪಡಿಸಿದೆ. ಇಂದಿಗೂ ಅದರ ಲಯ ಕವಿಗಳ ಮನವನ್ನು ಮಿಡಿದು ಕಾವ್ಯ ಸೃಷ್ಟಿಗೆ ಪ್ರಚೋದಿಸುತ್ತಾ ನಡೆದಿದೆ.

  ನಂಜುಂಡ ಕವಿ:   ಕ್ರಿ.ಶ. 1525 ಸುಮಾರಿನಲ್ಲಿ ಜೀವಿಸಿದ್ದ ನಂಜುಂಡ ಕವಿಯು ಚೆಂಗಾಳ್ವ ಕುಲಕ್ಕೆ ಸೇರಿದ ಎರಡನೇ ಮಾಧವನ ಮಗ. ಈತನು ಸಂಸ್ಕೃತ-ಕನ್ನಡ ಕಾವ್ಯಾಭ್ಯಾಸಗಳಿಂದ ರುಚಿ ಶುದ್ಧಿಯನ್ನು ಸಂಪಾದಿಸಿದವನು, ಮುಖ್ಯವಾಗಿ ಕನ್ನಡ ಕಾವ್ಯ ಶರಧಿಯಲ್ಲಿ ಓಲಾಡಿ ನುಡಿ ಮುತ್ತುಗಳನ್ನು ಆರಿಸಿ ತೆಗೆದವನು, ಚೆಂಗಾಳ್ವ ವಂಶದ ಪ್ರಭುವೂ ಸ್ವತ: ವೀರಯೋಧನೂ ಆಗಿದ್ದನು. ಚಿಕ್ಕಪ್ಪನಾದ ಮೂರನೆಯ ಮಂಗರಸನಂತೆ ಕವಿಗಳಲ್ಲಿ ಹೆಸರಾದನು. ತನಗಿಂತ ಮೊದಲು ಕನ್ನಡ ಜನಮನದಲ್ಲಿ ತುಡಿಯುತ್ತಿದ್ದ ರಾಮನಾಥನ ಪರಾಕ್ರಮವನ್ನೂ, ರತ್ನಾಜಿ ಒಡ್ಡಿದ ಸತ್ವ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪರದಾರಸೋದರಸ್ವ ಮೆರೆದುದು ಕರೆಮರೆಯಿಲ್ಲದ ಅವನ ಶೌಚ ಗುಣವನ್ನು ಸ್ಥಾಪಿಸುತ್ತವೆಂಬುದು ಕವಿಯ ಸ್ವಭಾವಕ್ಕೆ ಪ್ರಿಯವಾಯಿತು. ನಂಜುಂಡ ಕವಿ ಕುಮಾರರಾಮನಕಥೆಯನ್ನು ತನ್ಮಯತೆಯಿಂದ ವರ್ಣಿಸಿದ್ದಾನೆ. ‘ಈ ಕತೆಗಾವುದು ಮೊದಲೆನೆ ತೆರೆಗಳ ನೂಕು ತಾಕಿಂದ ರತ್ನಗಳ ಆಕರದಿಂದ ನಾನಾ ಜಲಚರಗಳಿಂದಾಕಡಲಿರದೊಪ್ಪುತಿಹುದು’ ಎಂದು ಕಾವ್ಯೋದ್ಯೋಗಕ್ಕೆ ತೊಡಗಿದ ನಂಜುಂಡ ಕವಿ ‘ಕಡೆಯ ಬೇಡಿನ್ನೆನ್ನನೆಂದು ಬೊಮ್ಮಗೆ ಮೊರೆಯಿಡುವ ಬಲ್ಸರವಿದೆಂಬಂತೆ ಕಡು ಸೊಗಯಿಪ ಘಳುಘಳುರವದಿಂದಾ ಕಡಲು ಕಣ್ಗೆಸೆದಿರುತಿಹುದು’ ಎಂಬುದಾಗಿ ಮುಂದಿನ ನಿವೇದನೆಗೆ ತೊಡಗಿದ್ದಾನೆ. ಇಲ್ಲಿ ಸಂಪ್ರದಾಯ ಶರಣನಾಗಿ ಸಮುದ್ರ ವರ್ಣನೆಯಿಂದಲೇ ಕಾವ್ಯಾರಂಭ ಮಾಡಿದ್ದರೂ ಅದಕ್ಕೊಂದು ಹೊಸ ಚಮಕು ಬೆರೆಸಿದ್ದಾನೆ. ಸಂಪ್ರದಾಯದಂತೆ ಕವಿ ಇಲ್ಲಿಯೂ ಕುಮಾರರಾಮನನ್ನು ವಿನೋದಾರ್ಥವಾಗಿ ಸೂಳೆಗೇರಿಯಲ್ಲಿ ಸುತ್ತಾಡಿಸುತ್ತಾನೆ. (ಆಶ್ವಾಸ 18 ಪದ್ಯ 1ರಿಂದ108).  ಈ ಐತಿಹಾಸಿಕ ಕಾವ್ಯದಲ್ಲಿ ಸಾಂಗತ್ಯ ಪದ್ಯಗಳೊಂದಿಗೆ ಕೆಲವು ಷಟ್ಪದಿಗಳು ಮತ್ತು ಬೆರಳೆಣಿಕೆಯ ಸಂಸ್ಕೃತ ವೃತ್ತಗಳು ಕಂಡು ಬರುತ್ತವೆ. ಪ್ರತೀ ಸಂಧಿಯ ಕೊನೆಗೆ ಒಂದೊಂದು ಷಟ್ಪದಿ ಮತ್ತು ಅಂತಿಮ ಆಶ್ವಾಸದ ಅಂತ್ಯಕ್ಕೆ ನಾಲ್ಕು ಷಟ್ಪದಿಗಳು ಕಂಡು ಬರುತ್ತವೆ.  ಪ್ರತೀ ಸಂಧಿಯ ಅಂತ್ಯದಲ್ಲಿ, ಈ ಕೆಳಕಂಡ

  ಇದು ಪರದಾರಸೋದರ ರಾಮನಾಥನ

  ಪದಕೃತಿಯೊಳಗೊಂದನೆಯ

  ವಿದಿತಾಶ್ವಾಸದೊಳೊಂದನೆಯದುಸಂಧಿ

  ಮೃದು ಪದಚಯ ಸಂಬಂಧಿ ಎಂಬ ಪದ್ಯವು ಕಂಡು ಬರುತ್ತದೆ. ಕಾವ್ಯವನ್ನು ಕುಮಾರರಾಮನ ಪೂರ್ವಾರ್ಧ ಹಾಗೂ ಉತ್ತರಾರ್ಧ ಎಂದು ಎರಡು ಭಾಗವಾಗಿ ವಿಭಜಿಸಿಕೊಂಡೂ ಪರಿಶೀಲಿಸಬಹುದು. ಪೂರ್ವಾರ್ಧದಲ್ಲಿ ಕಾವ್ಯ ನಾಯಕನ ಜನನ ಬಾಲ್ಯ ಯೌವನ ಮಿಥ್ಯಾರೋಪ ನಿರ್ಗಮನವೂ, ಉತ್ತರಾರ್ಧದಲ್ಲಿ ಆತನ ಪುನರಾಗಮನ ಹಾಗೂ ಕಡೆಯ ದಿನಗಳೂ ನಿರೂಪಿತಗೊಂಡಿವೆ. ನಂಜುಂಡ ಕವಿಯು ತನ್ನ ಕಾವ್ಯವನ್ನು ಕುರಿತು ʻಕನಸಿನೊಳಗೆ ಪರವೆಣ್ಣ ಕಂಡರಿಯದ ಘನ ಶುಚಿರತ್ನ ರಾಮುಗನ ವಿನೂತನ ಚರಿತ್ರೆ, ಧರೆ ಬೆಸಲಾಗದಂತೆ ಬಂದ ಸುರುತ್ರಾಣ ನರುಬಲಕಂಜದೆ ನೆರವ ಕರೆಯದೆ ಕಾವಿ ಕಪರ್ದಿಯ ಕಂಡ ಸಾಹಸ ವೀರನ ಕಥೆ. ವೀರತೆ ಶುಚಿತೆಯೆಂಬೆರಡು ಗುಣಂಗಳ ಮೇರೆಯ ಮೀರದೆ ನಡೆದು ಧಾರುಣಿಯನು ಮೆಚ್ಚಿಸಿದ ವೀರರಾಮನ, ಜಾತಿವೀರನ ಚಾರು ಚರಿತೆʼ ಎಂದು ಹೇಳಿರುವುದು ಕುಮಾರರಾಮನ ವೀರ ಮತ್ತು ಶೌಚಗುಣ ಹೆಗ್ಗಳಿಕೆಯ ದ್ಯೋತಕದ ಪ್ರತೀಕವಾಗಿದೆ.

ಕಾವ್ಯರಚನೆಯ ಹಿನ್ನೆಲೆ :

        ಚೆನ್ನಿಗರಾಮ, ಕುಮಾರರಾಮ, ರಾಮನಾಥ ಮೊದಲಾದ ಹೆಸರುಗಳಿಂದ ಕನ್ನಡಿಗರ ಮನೆಮಾತಾಗಿರುವ, ಚಾರಿತ್ರಿಕನಾಗಿಯೂ ಪವಾಡ ಪುರುಷರ ಸಾಲಿಗೆ ಸೇರಿ ಹೋಗಿರುವ ಕಡುಗಲಿ, ಪರದಾರ ಸೋದರ, ರಾಮನಾಥನನ್ನು ಕುರಿತು ಶಾಸನಗಳೂ, ಸಾಂಗತ್ಯ ಕಾವ್ಯಗಳೂ, ಜನಪದ ಗೀತೆಗಳೂ, ಯಕ್ಷಗಾನಗಳೂ ರಚಿತವಾಗಿವೆ. ಈತನನ್ನು ವಸ್ತುವನ್ನಾಗಿರಿಸಿಕೊಂಡು ಬರೆದ ಕಾವ್ಯಗಳಲ್ಲಿ ನಂಜುಂಡನ ಕುಮಾರ ರಾಮಚರಿತೆ, ಪಾಂಚಾಳಗಂಗನ ಚೆನ್ನರಾಮನ ಸಾಂಗತ್ಯ, ಹಂಪೆಯ ಚರಪತಿ ಮಹಾಲಿಂಗಸ್ವಾಮಿಯ ಬಾಲರಾಮನ ಸಾಂಗತ್ಯ ಜನಾದರಣೀಯವಾಗಿವೆ. ಈ ವಸ್ತುವನ್ನು ಹೊಳಲುಗೊಡುವ ಜನಜನಿತ ಇತರ ಕಥೆಗಳೂ ಕನ್ನಡದಲ್ಲಿವೆ. ಇದಕ್ಕಿಂತ ಹೆಚ್ಚಳವೆಂದರೆ ತೆಲುಗಿಗೂ ಈ ‘ಶಕಪುರುಷ’ನ ಚರಿತೆ ಹಬ್ಬಿರುವುದು; ‘ಕುಮಾರ ರಾಮುನಿ ಕಥಾ’ ತೆಲುಗು ಭಾಷೆಯಲ್ಲಿ ಪ್ರಚುರವಾಗಿದೆ. ತುಳು ಭಾಷೆಯಲ್ಲೂ ‘ಕೋಮಲ್ ರಾಮಚರಿತ್ರೆ’ ಎಂಬ ಪಾಡ್ಡನವಿದೆ. ಹೀಗೆ ಜನಪದದಿಂದ ಹಿಡಿದು ಹಿರಿಯ ಕಾವ್ಯದವರೆಗೆ ಹರಿದು ಬಂದ ಕಥೆಯ ವಿಕಾಸ ವಿಧಾನದ ಪರಾಮರ್ಶೆ ವಿಸ್ಮಯಜನ್ಯವಾಗಿದೆ. ರಾಮನಾಥನ ಬಗ್ಗೆ ಜನಾಭಿಪ್ರಾಯ ಬಹು ಹಿಂದೆಯೇ, ಅವನ ಜೀವಿತ ಕಾಲದಲ್ಲಿಯೇ ಚರಿತ್ರೆಯ ಚೌಕಟ್ಟು ದಾಟಿ ಪುರಾಣಗಳ ಸೀಮೆಗೆ ಸೇರಿ ಹೋಯಿತು. ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಅವನ ವಿಚಾರ ಮೈತಳೆದು, ಕಲ್ಪನೆಯ ಕಮಾನು ಕಟ್ಟಿಕೊಂಡು ಪ್ರತಿಭೆಯ ಕಾಮನ ಬಿಲ್ಲಿನಲ್ಲಿ ಕಾವ್ಯ ಸಿಂಹಾಸನದ ಮೇಲೆ ಮೋಹಕ ಠೀವಿಯಿಂದ ಪ್ರತಿಷ್ಠಿತವಾಗತೊಡಗಿತು. ಆತ ಚೆಲುವಿನಲ್ಲಿ (ಚೆನ್ನಿಗರಾಮ), ಅಕಳಂಕ ಶೀಲವ್ರತದಲ್ಲಿ (ಪರದಾರ ಸೋದರರಾಮ), ಧೈರ್ಯ ಸಾಹಸಗಳಲ್ಲಿ (ವೀರರಾಮ), ಮಾತಿಗೆ ತಪ್ಪದೆ ನಡೆಯುವಲ್ಲಿ (ಸತ್ಯ ರಾಮ), ಚಿಕ್ಕವನಾದರೂ ಕಿರಿಯ ವಯಸ್ಸಿಗೆ ಮೀರಿ ತೋರಿದ ಗುಣೋನ್ನತಿಯಲ್ಲಿ (ಬಾಲ ಕುಮಾರರಾಮ) ವಿಖ್ಯಾತನಾಗಿದ್ದನು. ಅದರಿಂದ ಸಹಜವಾಗಿಯೇ ನಂಜುಂಡ ಕವಿ, ಕನ್ನಡ ಕವಿ ಜಾಣ ಪಾಂಚಾಳ ಗಂಗ ಕವಿ (ಇವನಿಗೆ ಕವಿಜಾಣ ಗಂಗಯ್ಯ, ನಾಗ ಸಂಗಯ್ಯ, ಗಂಗ ಕವಿ, ಪಾಂಚಾಳ ಗಂಗ ಎಂಬ ನಾಲ್ಕು ಹೆಸರುಗಳಿವೆ), ಹಂಪೆಯ ಚರಪತಿ ಮಹಲಿಂಗ ಸ್ವಾಮಿ-ಇವರುಗಳು ಕುಮಾರರಾಮನ ಕಥೆಯನ್ನು ಆರಿಸಿಕೊಂಡು ಸುಮಾರು ನೂರು-ನೂರು ವರ್ಷಗಳ ಅಂತರದಲ್ಲಿ ಕೃತಿ ರಚನೆ ಮಾಡಿದ್ದಾರೆ. ಇವರಲ್ಲಿ ಎಲ್ಲ ವಿಧದಲ್ಲೂ ಉತ್ತಮನಾದ ಕವಿ ನಂಜುಂಡ.

     ವಸ್ತು ಸಂವಿಧಾನದಲ್ಲಾಗಲೀ ನಾಯಕನಾದ ವೀರರಾಮನ ಸಾಹಸೋನ್ನತಿಯ ಚಿತ್ರಣದಲ್ಲಾಗಲೀ ಕವಿಯ ಸ್ವತಂತ್ರ ಕಲ್ಪನೆಗಳನ್ನೂ ಮತ್ತು ಜನಜನಿತವಾಗಿ ಬೆಳೆದು ಬಂದ ವಾಡಿಕೆಯ ಕಥಾಸಾಮಗ್ರಿಯನ್ನೂ ವಿಂಗಡಿಸುವುದು ಕಷ್ಟ. ನಂಜುಂಡನ ಕಾಲಕ್ಕೆ ಕುಮಾರರಾಮನು ಅವತಾರಪುರುಷನೆಂಬ ಕಲ್ಪನೆ ಜನಮನದಲ್ಲಿ ಬೇರುಬಿಟ್ಟಿತ್ತೆಂಬುದು ಸ್ಪಷ್ಟ. ಹೀಗಾಗಿ ಆತನ ಕಥೆಗೆ ಊಹಾಪೋಹಗಳ ರೆಕ್ಕೆಪುಕ್ಕಗಳು ಹುಟ್ಟಿಕೊಂಡಿರಬಹುದು. ಜನಮನದ ಆರಾಧ್ಯ ವೀರನ ಚರಿತ್ರೆಗೆ ತನ್ನ ಕಲ್ಪನೆಯ ಸೊಗಸನ್ನೂ ಬೆರೆಸಿ ಕನ್ನಡ ಸಾಹಿತ್ಯದಲ್ಲಿ ಮೊದಲನೆಯ ವೀರಕಾವ್ಯವನ್ನು ಸೃಷ್ಟಿಸಿದ ಕೀರ್ತಿಗೆ ನಂಜುಂಡನು ಭಾಜನನಾಗಿದ್ದಾನೆ. ಆದರೂ ಇಲ್ಲಿʻ ಕವಿ ಕೇವಲ ಮಧ್ಯವರ್ತಿಯಾಗಿ ನಿಂತಂತಿದೆ. ಕರ್ಣಾಟಕದ ಜನಸಮುದ್ರವೇ ಕಾವ್ಯದ ನಿಜವಾದ ಕರ್ತೃವೆನ್ನಬಹುದುʼ ಎನ್ನುವ ವಿದ್ವಾಂಸರ ಮಾತು ಒಪ್ಪತಕ್ಕದ್ದಾಗಿದೆ.

     ಕುಮಾರರಾಮನು ಅವತಾರಪುರುಷನೆಂಬ ಕಲ್ಪನೆ ಜನ ಮನಸ್ಸಿನಲ್ಲಿ ಆಳವಾಗಿ ಬೇರುಬಿಟ್ಟ ಅಂಶವಾಗಿತ್ತೆಂಬುದಕ್ಕೆ ಆತನ ಚರಿತ್ರೆಯನ್ನು ಕುರಿತು ಇತರ ಕಾವ್ಯಗಳು ಒದಗಿಸುವ ಸತ್ಯ ಸಾಮಗ್ರಿಗಳು ಆಧಾರವಾಗಿವೆ. ನಂಜುಂಡನ ಕೃತಿ ಸಾಹಿತ್ಯದ ಪ್ರೌಢಭಾಷೆಯಲ್ಲಿ ಬಹುಕಾವ್ಯದ ಧಾಟಿಯಲ್ಲಿ ಬರೆದ ಕೃತಿಯಾದರೆ ಪಾಂಚಾಳಗಂಗನ ಕೃತಿ ಜನ ಸಾಮಾನ್ಯರ ಭಾಷೆಗೆ ಹತ್ತಿರವಾಗಿ ಸರಳವಾದ ಕನ್ನಡದಲ್ಲಿ ರಚಿತವಾಗಿದೆ. ವಸ್ತುವಿನಲ್ಲಿಯೂ ನಂಜುಂಡನ ಕೃತಿಗಿಂತ ಭಿನ್ನವಾದ ಕೆಲವು ಅಂಶಗಳು ಪಾಂಚಾಳಗಂಗನ ಕೃತಿಯಲ್ಲಿ ಕಂಡುಬರುತ್ತವೆ. ಕಾಣಿಕೆಯನ್ನು ನಿರೀಕ್ಷಿಸಿ ಬಂದ ಸುಲ್ತಾನನ ಪಾದುಕೆಗಳನ್ನು ರಾಮನು ಮೆಟ್ಟಿ ಹಾಸ್ಯ ಮಾಡುವ ಪ್ರಸಂಗ ಗಮನಾರ್ಹವಾಗಿದೆ. ನಂಜುಂಡನಲ್ಲಿ ಇದು ಇಲ್ಲ. ಆದರೂ ರಾಮನು ಅವತಾರ ಪುರುಷನೆಂಬ ತತ್ತ್ವ ಎರಡು ಕೃತಿಗಳಿಗೂ ಸಮಾನ ಅಂಶ. ನಂಜುಂಡನ ಸಮಗ್ರ ದೃಷ್ಟಿಯಾಗಲೀ ಪ್ರೌಢಿಮೆಯಾಗಲೀ ಪಾಚಾಳಗಂಗನ ಕೃತಿಯಲ್ಲಿ ಕಂಡುಬರುವುದಿಲ್ಲ. ಸಾಂಗತ್ಯ ಕವಿಗಳಲ್ಲಿ ನಂಜುಂಡನು ಗಂಗನೇ ಮುಂತಾದ ಅನಂತರದ ಕವಿಗಳಿಗೆ ಆದರ್ಶವಾಗಿದ್ದಾನೆ.

     ನಂಜುಂಡ ಕವಿಯ ಈ ಕೃತಿಯು  ಒಟ್ಟು ೧೧ ಆಶ್ವಾಸಗಳು,  ೪೭ ಸಂಧಿಗಳು ಮತ್ತು ಒಟ್ಟು ೫೬೫೫ ಪದ್ಯಗಳಲ್ಲಿ , ಪೀಠಿಕೆ, ಕರ್ನಾಟಕ ವರ್ಣನೆ, ಪಂಪಾಪುರದ ವರ್ಣನೆ, ಹೊಸಮಲೆ ವರ್ಣನೆ, ಕಂಪಿಲನ ವಿಭವ, ಈಶ್ವರನ ಒಡ್ಡೋಲಗ, ಹರಿಹರದೇವಿಯ ಪುತ್ರದೋಹದ, ಬಾಲ್ಯ ಮತ್ತು ಯುವರಾಜ ಪಟ್ಟ, ದಿವ್ಯಾಶ್ವಲಾಭ, ಹುಳಿಯೇರುಕಾಳಗ, ಯುದ್ಧ ಸಿದ್ಧತೆ,  ಪಂಥ ಪಾಡು, ಸಂಗ್ರಾಮಸಮಾಪ್ತಿ, ವೀರರುದ್ರನೊಡನೆ ಯುದ್ಧ, ವೀರ ರುದ್ರನ ಪರಾಜಯ, ಕಪಿಲೇಶ್ವರನ ಕಾಳಗ, ಡಿಳ್ಳಿಯ ಸುರತಾಳ, ಪಾವುಡ ಪ್ರಸಂಗ, ನೇಮಿಯ ದಂಡೆತ್ತಿ ಬಂದುದು, ನೇಮಿಯ ಪರಾಜಯ, ಶೂಲದ ಹಬ್ಬ,  ರಾಮನಾಥನನ್ನು ಕಂಡುದು, ರತ್ನಾಜಿಯ ವ್ಯಾಮೋಹ, ಸವಿನುಡಿ, ಮೆಲುನುಡಿ, ಚಿತ್ರಪಟ, ಬೇಟೆಯ ವಿವರಣೆ, ಚಂದ್ರಿಕಾ ವಿಹಾರ, ತಾಯಿ ಮಗ, ರಾಜನೀತಿ, ಚೆಂಡಾಟ, ಚೆಂಡು ಕೇಳಲು ಹೋದುದು, ಶುಚಿವೀರ, ಹುಸಿಯ ಹಸರ, ಮಂತ್ರಿ ತಿಲಕ ಬೈಚಪ್ಪ, ಇಂದ್ರಜಾಲ, ರತ್ನಾಜಿಯ ಪ್ರಲಾಪ, ರಾಮನಾಥನು ಹೊರಗೆ ಬಂದುದು, ದಿವ್ಯವಾಜಿ ಮಹಾರಾವುತ, ನೇಮಿಖಾನನ ಪಲಾಯನ, ಸೇನಾನಾಯಕಿ ಮಾತಂಗಿ, ವೀರಾಗ್ರಣಿ ಕಾಟಣ್ಣ, ನಿಶ್ಯಂಕ ವಿಕ್ರಮ ವೀರರಾಮ, ವೀರರಾಮನ ದಿವ್ಯ ತುರಗ, ಕನ್ನಡದ ಕಡುಗಲಿ, ರಾಮನಾಥನ ವಿಕ್ರಮಾಗ್ನಿಯ ಜ್ವಾಲೆ, ಗಣ ಪದವಿ ಇತ್ಯಾದಿ ವಿಷಯಗಳಿಗನುಗುಣವಾಗಿ ಕುಮಾರ ರಾಮನ ಚರಿತವನು ಎಣೆದಿದ್ದಾನೆ.

ನಂಜುಂಡಕವಿಯ ಕುಮಾರ ರಾಮನ ಸಾಂಗತ್ಯ ಕಥಾಸಾರ :

ಕರ್ನಾಟ ದೇಶದ ಹಂಪೆಯ ಕ್ಷೇತ್ರಕ್ಕೆ ದಕ್ಷಿಣದಲ್ಲಿ ಇದ್ದ ಹೊಸಮಲೆ ಎಂಬ ದುರ್ಗಕ್ಕೆ ರಾಜ ಕಂಪಿಲ. ಅವನ ಪಟ್ಟದರಾಣಿ ಹರಿಹರದೇವಿ; ಮಂತ್ರಿ ಬೈಚಪ್ಪ. ರತ್ನಾಜಿ ಎಂಬ ಬೇರೊಬ್ಬ ರಾಜಕುಮಾರಿ ಕಂಪಿಲನನ್ನು ಮದುವೆಯಾದಳು. ಅವಳು ಅವನ ಮನಸ್ಸನ್ನೊಲಿಸಿ ಸೂರೆಗೊಂಡಳು. ಹೀಗಿರಲು ಹರಿಹರದೇವಿಗೆ ಶಿವನ ಪ್ರಸಾದದಿಂದ ಒಬ್ಬ ಮಗ ಹುಟ್ಟಿದನು. ಅವನಿಗೆ ಕುಮಾರರಾಮನೆಂದು ಹೆಸರಾಯಿತು. ಅವನು ಬೆಳೆದು ವಿದ್ಯೆಯನ್ನು ಕಲಿತು ಶಾಸ್ತ್ರಗಳಲ್ಲಿ ನಿಪುಣನಾಗಿ ಹದಿನೆಂಟು ವರುಷದ ಹರೆಯದವನಾಗುತ್ತಾನೆ. ವೀರತೆ ಅವನ ಹುಟ್ಟುಗುಣ. ಆಗಿನ ಕಾಲದಲ್ಲಿ, ಎಂದರೆ ವಿಜಯನಗರ ಸ್ಥಾಪನೆಗಿಂತ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ, ಪ್ರಬಲರಾಗಿದ್ದ ರಾಜರು, ಬಲ್ಲಾಳರು, ಓರಂಗಲ್ಲಿನ ಕಾಕತೀಯ ರುದ್ರ ಕರಿಪತಿ ಕಪಿಲೇಶ್ವರ, ಡಿಲ್ಲಿಯ ಸುಲ್ತಾನನಾದ ಅಲ್ಲಾವುದೀನ-ಇವರು. ಕುಮಾರರಾಮನು ಬಲ್ಲಾಳನೊಡನೆ ಯುದ್ಧಮಾಡಿ ತನ್ನ ಪ್ರತಾಪವನ್ನು ಮೆರೆದನು. ಕಾಕತೀಯ ವೀರರುದ್ರನನ್ನು ಸೋಲಿಸಿದನು. ಇಬ್ಬರೊಡನೆ ಸಂಧಿಯ ಮಾತನ್ನು ಬೆಳಸಿ ಎಲ್ಲರೂ ಒಂದಾಗಿ ತುರುಕರ ದಾಳಿಯನ್ನು ತಡೆಗಟ್ಟುವ ಏರ್ಪಾಡಿನಲ್ಲಿದ್ದರು.

    ಇತ್ತ, ರಾಮನ ವೀರ ಕೀರ್ತಿ ಸುಲ್ತಾನರ ಮಗಳ ಕಿವಿಯನ್ನು ಮುಟ್ಟಿತು. ಅವಳಿಗೆ ರಾಮನಾಥನಲ್ಲಿ ಪ್ರೇಮವುಂಟಾಯಿತು. ಅದರ ಯಾತನೆಯಿಂದ ಅವಳು ಕುದಿಯುವುದನ್ನು ಅಲ್ಲಾವುದ್ದೀನ ಕಂಡು ರಾಮನಾಥನ ಚಿತ್ರಪಟವನ್ನು ತರಿಸಿದನು. ಅವನೇ ಮಗಳಿಗೆ ತಕ್ಕ ವರನೆಂದು ಗೊತ್ತಾದ ಮೇಲೆ ತನ್ನ ಮಗಳನ್ನು ಮದುವೆಯಾದರೆ ರಾಮನಾಥನನ್ನು ಪ್ರೀತಿಯಿಂದ ಕಾಣುತ್ತೇನೆಂದೂ, ಬಿದರೆ, ಸಗರ, ನಿಂಬಾಪುರ, ರಾಯಚೂರು ನಾಡುಗಳನ್ನು ಬಳುವಳಿಯಾಗಿ ಕೊಡುತ್ತೇನೆಂದೂ ಸುಲ್ತಾನನು ಕಂಪಿಲನಿಗೆ ಹೇಳಿ ಕಳುಹಿಸಿದನು. ನಮ್ಮನ್ನು ಆಳಾಗಿರಿಸಿಕೊಳ್ಳುವುದಕ್ಕೆ ಇದೊಂದು ನೆಪವೆಂದ ಕಂಪಿಲನು ಒಪ್ಪಲಿಲ್ಲ. ಆದ್ದರಿಂದ ಅಲ್ಲಾವುದೀನನಿಗೆ ದಂಡೆತ್ತಿ ಬರಲು ಇದೊಂದು ಕಾರಣವಾಯಿತು. ಅವನ ಉದ್ದೇಶ ರಾಮನಾಥನನ್ನು ಸೆರೆ ಹಿಡಿದು ಡಿಲ್ಲಿಗೆ ತಂದು ಮಗಳನ್ನು ಅವನಿಗೆ ಮದುವೆ ಮಾಡಬೇಕೆಂದು.

 ಎರಡನೆಯ ಕಾರಣವೂ ಒದಗುತ್ತದೆ. ಮುಂಗಲಿ ದೇಶದ ರಾಜನು ಸುಲ್ತಾನನಿಗೆ ಕಪ್ಪವನ್ನು ಕಳುಹಿಸುವಾಗ ಅದರೊಡನೆ ಸಿಂಗಾಡಿಯೆಂಬ ಬಿಲ್ಲನ್ನು ಕಳಿಸಿ “ಇದನ್ನು ಏರಿಸಿ ಏಳು ಕೊಪ್ಪರಿಗೆಗಳನ್ನು ಭೇದಿಸಿಕೊಂಡು ಹೋಗುವ ಹಾಗೆ ಬಾಣ ಬಿಡುವ ಕಲಿಗಳು ನಿನ್ನ ರಾಜ್ಯದಲ್ಲಿದ್ದಾರೆಯೇ?” ಎಂದು ಹುರುಪಿನ ಮಾತನ್ನು ಅಟ್ಟಿದನು. ಈ ಸಾಹಸವನ್ನು ಮಾಡಲು ಅಲ್ಲಾವುದೀನನ ಕಡೆಯ ಯಾವ ವಜೀರನೂ ಮಲ್ಲಿಕನೂ ಖಾನನೂ ಸಮರ್ಥನಾಗಲಿಲ್ಲ. ಕೊನೆಗೆ ಬಾದುರಖಾನ ಎಂಬಾತನು ಈ ಸಾಹಸದ ಕೆಲಸವನ್ನು ಮಾಡಿ, ದೊರೆಯಿಂದ ಜಹಗೀರುಗಳನ್ನು ಪಡೆದನು. ಇತರ ವಜೀರರಿಗೆ ಅಸೂಯೆಯುಂಟಾಯಿತು. ಇವನನ್ನು ಕೊಲ್ಲಲು ಪ್ರಯತ್ನಿಸಿದರು. “ತನಗಿಂತ ಶೂರನಾದ ಮನುಷ್ಯ ತನ್ನ ರಾಜ್ಯದಲ್ಲಿರುವುದನ್ನು ರಾಜ ಸಹಿಸುವುದಿಲ್ಲ” ಎಂಬ ಮಾತಿನಿಂದ ಇವನನ್ನು ಹೆದರಿಸಿದರು. ಬಾದುರಖಾನ ಪಲಾಯನ ಮಾಡಿ ಕರ್ನಾಟಕಕ್ಕೆ ಬಂದು ಕಂಪಿಲನಿಗೆ ಶರಣಾದನು. ಇವನನ್ನು ದಂಡಿಸುವುದಕ್ಕಾಗಿಯೂ ಅಲ್ಲಾವುದೀನನು ದಂಡನ್ನು ಕಳುಹಿಸಬೇಕಾಯಿತು. ರಾಮನಾಥನು ಮೊರೆಹೊಕ್ಕ ಬಾದುರನನ್ನು ಹಿಂದಿಕ್ಕಿಕೊಂಡು ಸುಲ್ತಾನನ ಸೈನ್ಯದೊಡನೆ ಕಾಳಗವಾಡಿ ಸೋಲಿಸಿದನು.

     ಇಲ್ಲಿಗೆ ಕಾವ್ಯದಲ್ಲಿ 26 ಸಂಧಿಗಳು ಮುಗಿಯುತ್ತವೆ. ಇದುವರೆಗಿನ ಕಥೆಯ ಉದ್ದೇಶ ರಾಮನಾಥನ ಶೌರ್ಯವನ್ನು ಹೊಗಳುವುದು ಆಗಿನ ಕಾಲದ ರಾಜಕೀಯ ಸ್ಥಿತಿಯನ್ನು ತಿಳಿಸುವುದು.

     ಮುಂದೆ ರತ್ನಾಜಿಯ ಮೋಹದ ಕಥೆ ಇರುತ್ತದೆ. ಹೊಸಮನೆಯಲ್ಲಿ ಒಂದು ದಿನ ಶೂಲದ ಹಬ್ಬ. ಅದಕ್ಕಾಗಿ ಅನೇಕ ಅರಸು ಮಕ್ಕಳು ಬಂದು ಬೀದಿಯಲ್ಲಿ ನೆರೆದಿದ್ದಾರೆ. ರತ್ನಾಜಿ ತನ್ನ ಉಪ್ಪರಿಗೆಯನ್ನು ಹತ್ತಿ ಸಖಿ ಸಂಗಾಯಿ ಹೇಳಿದ ಅರಸು ಮಕ್ಕಳ ವರ್ಣನೆಯನ್ನು ಕೇಳಿ ಕೊನೆಗೆ ಕುಮಾರರಾಮನಾಥನನ್ನು ಕಂಡು ಕಣ್ಬೇಟಕ್ಕೆ ಒಳಗಾದಳು.

     ಅವನನ್ನು ಹೇಗಾದರೂ, ಆ ಪ್ರಯತ್ನದಲ್ಲಿ ಜೀವ ಹೋದರೂ ಚಿಂತೆಯಿಲ್ಲ, ಒಲಿಸಬೇಕೆಂಬ ಹಂಬಲು ಅವಳಿಗೆ ಹಿರಿದಾಯಿತು. ಈ ರೀತಿ ಮಗನ ಮೇಲೆ ಮೋಹಗೊಳ್ಳುವುದು ತರವಲ್ಲವೆಂದು ಅವಳನ್ನು ಸಂಗಾಯಿ ತಡೆಯದೆ ಪ್ರೋತ್ಸಾಹಿಸಿ ಅವಳ ಮೋಹ ಬಲಿಯುವಂತೆ ಮಾತನಾಡಿ ರಾಮನೊಡನೆ ಅವಳ ಸಂಗಮ ದೊರೆಯುವಂತೆ ಮಾಡುತ್ತೇನೆಂದು ದೂತಿಯ ಕಾರ್ಯದಲ್ಲಿ ತೊಡಗಿದಳು; ಪೂಜೆಯಿಂದ ಕುಟಿಲ ದೇವತೆಗಳನ್ನು ಒಲಿಸಿದಳು. ರತ್ನಾಜಿ ವಿರಹತಾಪದಿಂದ ಕಂಗೆಟ್ಟಳು, ಬಾಡಿದಳು, ಕುಂದಿದಳು.

     ಕಂಪಿಲರಾಯನು ಒಂದು ದಿನ ಬೇಟೆಗೆ ಹೊರಟನು; ರಾಮನಾಥನನ್ನು ಜೊತೆಯಲ್ಲಿ ಬರುವಂತೆ ಹೇಳಿದನು. ಆದರೆ ಕುಟಿಲ ದೇವತೆಗಳ ಮಾಟದಿಂದ ಅಂದು ಅವನಿಗೆ ಬೇಟೆಗಿಂತ ನೀರಾಟದಲ್ಲಿ ಆಸೆ ಹೆಚ್ಚಾಯಿತು. ಗೆಳೆಯರೊಡನೆ ತುಂಗಭದ್ರೆಗೆ ಹೋಗಿ ಈಜಾಡಿ ಸಾಯಂಕಾಲಕ್ಕೆ ಊರಿಗೆ ಬಂದನು. ಇರುಳು ಅವನಿಗೆ ಶುಭಾಶುಭವಾ ಕನಸಾಯಿತು.

     ಮಾರನೆಯ ದಿನ ಚಂಡಾಟವಾಡಬೇಕೆಂದು ಆಸೆಯಾಯಿತು. ಗೆಳೆಯರನ್ನು ಕೂಡಿಸಿ ತಾಯಿಯ ಹತ್ತಿರ ಹೋಗಿ ಮುತ್ತಿನ ಚಂಡನ್ನು ಕೊಡಬೇಕೆಂದು ಕೇಳಿದನು. ಅವಳು “ಚೆಂಡಾಟವೇಕೆ ಹದಿನೆಂಟು ವರ್ಷದ ಹುಡುಗನಿಗೆ, ಮಕ್ಕಳಾಟಿಕೆಯ ಚಂಡು ಒಳ್ಳೆಯದಲ್ಲ, ರಾಜಕಾರ್ಯವಿದೆ, ಶತ್ರುಗಳು ದಂಡೆತ್ತಿ ಬರುವರು, ಕೋಟೆ ಕೊತ್ತಲಗಳನ್ನು ಭದ್ರಪಡಿಸು” ಎಂದು ಹೇಳುವಳು. ರಾಮನು, ತನ್ನ ಗೆಳೆಯರು ಕಾದಿರುವರೆಂದೂ ಚೆಂಡು ಕೊಡದಿದ್ದರೆ ಅವರಿಗೆ ನಿರಾಶೆಯಾಗುವುದೆಂದು  ತಾಯನ್ನು ಕೊನೆಗೆ ಒಡಂಬಡಿಸಿ ಚೆಂಡಾಡಲು ಹೊರಟನು.

     ಆಟದ ಬಯಲು ರತ್ನಾಜಿಯ ಅರಮನೆಗೆ ಹತ್ತಿರವಾಗಿತ್ತು. ರಾಮನಾಥನು ಗೆಳೆಯರೊಡನೆ ಲಗ್ಗೆ ಚೆಂಡಾಟವನ್ನು ಆರಂಭಿಸಿದನು. ಕೊಂಚ ಹೊತ್ತು ಆಟ ಸಾಗಿತು. ಇಂದು ರತ್ನಾಜಿ ಸಿಂಗರಿಸಿಕೊಂಡು ರಾಮನಾಥನ ಬರವನ್ನೇ ಕಾದು ಕುಳಿತಿದ್ದಳು. ಒಂದು ಸಲ ರಾಮನು ಚೆಂಡನ್ನು ಮೇಲಕ್ಕೆ ಎಸೆದನು. ಅದು ಕೆಳಕ್ಕೆ ಬರಲೇ ಇಲ್ಲ. ಕುಟಿಲ ದೇವತೆಗಳು ಅದನ್ನು ಅಲ್ಲಿಯೇ ಹಿಡಿದು ರತ್ನಾಜಿಯ ಪಾದಗಳ ಮುಂದೆ ಉರುಳಿಸಿದರು. ಅದನ್ನು ಕಂಡು ಅವಳಿಗೆ ರಾಮನಾಥನೇ ಬಂದಂತಾಯಿತು.

     ಇತ್ತ ರಾಮನಾಥನು ಚೆಂಡನ್ನು ತರುವುದಕ್ಕಾಗಿ ಅಣ್ಣ ಕಾಟಣ್ಣನನ್ನು ರತ್ನಾಜಿಯ ಬಳಿಗೆ ಕಳುಹಿಸುತ್ತಾನೆ. ಅವನು ಬಂದು ಕೇಳಿದನು, “ಚೆಂಡು! ಯಾವ ಚೆಂಡು; ಎಲ್ಲಿ ಬಂತು ಇಲ್ಲಿ ಇಲ್ಲವಲ್ಲಾ” ಎಂದು ಏನೂ ತಿಳಿಯದವಳಂತೆ ರತ್ನಾಜಿ ಮಾತನಾಡಿ ಕೊನೆಗೆ “ಚೆಂಡು ಬೇಕಾದರೆ ಅವನೇ ಬರಲಿ ಅವನು ಮಗನಲ್ಲವೇ, ನಾನು ಚಿಕ್ಕಮ್ಮನಲ್ಲವೇ. ಅವನಿಗೇಕೆ ಸಂಕೋಚ, ನಿನ್ನನ್ನೇಕೆ ಕಳುಹಿಸಬೇಕು” ಎಂದು ಕೊಡಲಿಲ್ಲ; ಕಾಟಣ್ಣ ಹಿಂದಕ್ಕೆ ಬಂದು ಕುಮಾರರಾಮನಿಗೆ ಸುದ್ದಿ ತಿಳಿಸಿದನು. “ಚಿಕ್ಕಮ್ಮ ಹೇಳಿದ್ದು ನ್ಯಾಯವೇ, ನಾನೇ ಹೋಗುತ್ತೇನೆ” ಎಂದು ಹೇಳಿ ಅವನೇ ಹೊರಟನು. ಬಂದವನನ್ನು ರತ್ನಾಜಿ ಕಂಡು ಹಿಗ್ಗಿ ಅವನನ್ನು ಒಳಕ್ಕೆ ಕರೆದುಕೊಂಡು ಹೋಗಿ ಹೂವು ಗಂಧಗಳನ್ನು ಮುಂದಿಟ್ಟು ವಸ್ತ್ರ ಒಡವೆಗಳನ್ನು ತೋರಿಸಿ ಶೃಂಗಾರ ಚೇಷ್ಟೆಯಿಂದ ಲಲ್ಲೆಗೆ ಮೊದಲಿಟ್ಟಳು. ರಾಮನಾಥನಾದರೆ ಇಷ್ಟು ಪ್ರೀತಿ ಇವಳಿಗೆ ನನ್ನಲ್ಲಿರಬೇಕಾದರೆ ಇವಳು ನಿಜವಾಗಿ ನನ್ನನ್ನು ಹೆತ್ತತಾಯಿ ಇರಬೇಕು ಎಂದು ಭಾವಿಸಿಕೊಳ್ಳುವನು. ರತ್ನಾಜಿಯ ಕಾಮುಕ ಪ್ರೀತಿಯ ಸುಳಿವು ಅವನಿಗೆ ತಿಳಿಯಲಿಲ್ಲ. ಕೊನೆಗೆ ಅವಳು ತಾನೇ ಮೇಲೆ ಬಿದ್ದು ತನ್ನ ಪ್ರೇಮವನ್ನು ಅವನಿಗೆ ವ್ಯಕ್ತಪಡಿಸಿದಳು. ರಾಮನು ಶಿವಶಿವ ಎಂದು ಕಿವಿ ಮುಚ್ಚಿ ಎದ್ದು ಹೋಗಲು ಸಿದ್ಧನಾದಾಗ ರತ್ನಾಜಿಯೂ ಅವಳ ಗೆಳತಿಯರೂ ಸೇರಿ ಅವನ ಮುಂದಲೆ ಹಿಡಿದು ಹಿಂಸಿಸುವರು. ಕಡೆಗೆ ರಾಮನು ಕೊಸರಿಕೊಂಡು ಹೊರಕ್ಕೆ ಬರುವನು.

     ತನ್ನ ಪ್ರಯತ್ನ ವಿಫಲವಾದದ್ದನ್ನು ನೋಡಿ ರತ್ನಾಜಿಗೆ ಕೋಪ ಬಂತು. ದೊರೆಗೆ ಚಾಡಿ ಹೇಳಿ ರಾಮನನ್ನು ಕೊಲ್ಲಿಸಲು ಸಂಕಲ್ಪಿಸಿದಳು. ಇದಕ್ಕಾಗಿ ಆಭರಣಗಳನ್ನು ಬಿಸುಟು ತಲೆಗೆದರಿಯಾಗಿ, ಕೊಳಕು ಬಟ್ಟೆಯನ್ನುಟ್ಟು, ಮೈಯಲ್ಲೆಲ್ಲಾ ನಖಕ್ಷತ, ದಂತಗಳನ್ನು ಮಾಡಿಕೊಂಡು, ದುಗುಡ ಸಿಂಗರದಿಂದ ಬೇಟೆಯಿಂದ ಹಿಂದಿರುಗಿಬಂದ ರಾಜನಿಗೆ ಕಾಣಿಸಿಕೊಂಡಳು. ಇವಳ ಹುಸಿಮಾತನ್ನು ರಾಜನು ನಿಜವೆಂದೇ ನಂಬಿ ತನ್ನ ಮಗನನ್ನೂ ಗೆಳೆಯರನ್ನೂ ಕೊಂದು ತಲೆಗಳನ್ನು ತಂದು ಮುಂದಿಡಬೇಕೆಂದು ಮಂತ್ರಿಯಾದ ಬೈಚಪ್ಪನಿಗೆ ನೇಮವಿತ್ತನು.

     ಮಂತ್ರಿ ಇವರನ್ನು ಕೊಲ್ಲಲೊಲ್ಲದೆ ನೆಲಮಾಳಿಗೆಯಲ್ಲಿ ಮುಚ್ಚಿಟ್ಟನು. ಇಂದ್ರಜಾಲದಿಂದ ಮಾಯಾ ಶಿರಸ್ಸುಗಳನ್ನು ತಂದು ರಾಜನಿಗೆ ತೋರಿಸಿದನು. ರಾಮನ ತಾಯಿ, ತಂದೆ, ಅಕ್ಕ ತಂಗಿಯರು, ರತ್ನಾಜಿ, ಪುರಜನರು, ರಾಮನಾಥನ ಐವರು ಪತ್ನಿಯರು-ಇವರ ಬಗೆ ಬಗೆಯಾದ ಶೋಕಗಳನ್ನು ಕವಿ ರಸಾವೇಶದಿಂದ ವರ್ಣಿಸಿದ್ದಾನೆ. ರತ್ನಾಜಿ ಪಶ್ಚಾತ್ತಾಪಗೊಂಡು ನಿರಾಶೆಯಲ್ಲಿ ಜೀವ ಬಿಡುವಳು.

     ರಾಮನಾಥನು ಸತ್ತನೆಂಬ ಸುದ್ದಿ ಅಲ್ಲಾವುದೀನನಿಗೆ ತಿಳಿದು ಕರ್ನಾಟಕ ರಾಜ್ಯವನ್ನು ಕೊಳ್ಳೆ ಹೊಡೆದು ಗೆಲ್ಲುವಕಾಲ ಬಂತೆಂದು ಭಾವಿಸಿ ಮಲ್ಲಿಕನ ನಾಯಕತ್ವದಲ್ಲಿ ದಂಡನ್ನು ಕಳುಹಿಸಿದನು. ಅದನ್ನು ಎದುರಿಸಿ ಸೋಲಿಸಿ ಓಡಿಸಲು ಸಮರ್ಥನಾಗಿದ್ದವನು ರಾಮನಾಥನೊಬ್ಬನೇ, ಅವನು ಈಗ ಇದ್ದಿದ್ದರೆ ಚೆನ್ನಾಗಿತ್ತಲ್ಲಾ ಎಂದು ರಾಜನು ವ್ಯಸನ ಪಡುವನು. ಮಂತ್ರಿ ಬೈಚಪ್ಪನು “ದು:ಖವೇಕೆ, ರಾಮನಾಥನಂಥ ವೀರರು ನಮ್ಮಲ್ಲಿ ಹಲವರಿದ್ದಾರೆ, ಈಗ ತಾನೇ ಒಬ್ಬ ಹೊಸ ವೀರ ನಮ್ಮ ನಾಡಿಗೆ ಬಂದಿದ್ದಾನೆ. ಅವನನ್ನು ಕರೆಯಿಸಿ ಯುದ್ಧಕ್ಕೆ ಬಿಟ್ಟರೆ ಜಯಸಿದ್ಧ” ಎಂದು ಹೇಳಿ ರಾಮನಾಥನನ್ನೂ, ಗೆಳೆಯರನ್ನೂ ನೆಲೆಮಾಳಿಗೆಯಿಂದ ಹೊರಕ್ಕೆ ಬಿಟ್ಟು ಕಾಳಗವಾಡಿಸುತ್ತಾನೆ. ಕಂಪಿಲರಾಯನಿಗೆ ಜಯ ಲಭಿಸುವುದು. ಆ ಹೊಸ ವೀರನನ್ನು ನೋಡಬೇಕೆಂದು ಅವನಿಗೆ ಆಸೆ. “ಅವನು ಈಗಲೇ ಬರುವಂತಿಲ್ಲ, ಕೆಲವು ದಿನ ಕಳೆಯಲಿ” ಎಂದು ಬೈಚಪ್ಪನ ಸಮಾಧಾನ.   

    ಸೋತ ಮಲ್ಲಿಕನು ಡಿಲ್ಲಿಗೆ ಹೋಗಿ ಸುಲ್ತಾನನ ಕೋಪಕ್ಕೆ ಪಾತ್ರನಾದನು. ಆಗ ಅಲ್ಲಿದ್ದ ಮಾತಂಗಿಯೊಬ್ಬಳು ನನಗೆ ವೀಳೆಯವನ್ನು ಕೊಡು, ರಾಮನಾಥನನ್ನು ಸೆರೆ ಹಿಡಿದು ತರುವೆನು’’ ಎಂದು ಪ್ರತಿಜ್ಞೆ  ಮಾಡಿದಳು. ಸರಿ ತಿರುಗಿ ದಂಡು ಹೊರಟು ಕಮ್ಮಟ ದುರ್ಗವನ್ನು ಮುತ್ತಿತು. ರಾಮನಾಥನು ದುರ್ಗದ ಹೊರಗೆ ಕಾದುತ್ತಿದ್ದನು. ಕಾಟಣ್ಣ ಬಾದುರಖಾನನು ದುರ್ಗದ ಒಳಗೆ ರಕ್ಷಣೆಗಾಗಿ ಇದ್ದರು. ಅಂದಿನ ಕಾಳಗದಲ್ಲಿ ತುರುಷ್ಕರ ಕೈ ಮೇಲಾಯ್ತು. ದುರ್ಗವನ್ನು ಲಗ್ಗೆ ಹತ್ತಿ ಭೇದಿಸಿ ಅವರ ಸೈನ್ಯ ಒಳ ಹೊಕ್ಕಿತು. ರಾಮನಾಥನು ಕುದುರೆ ಹತ್ತಿಕೊಂಡು ದೌಡಾಯಿಸಿ ದುರ್ಗದ ಒಳಗೆ ಬಂದನು. ಅಣ್ಣನನ್ನು ಕಂಡು ಅವನಿಗೆ ಸಂತೋಷ. ಕುದುರೆಯಿಂದಿಳಿದು ಅವನ ಬಳಿಗೆ ಹೋಗುವಷ್ಟರಲ್ಲಿ ಅದು ಹೊಳೆದು ಮಿಂಚಿನಂತೆ ಮಾಯವಾಯ್ತು. ಮಾತಂಗಿಯ ಸೈನ್ಯ ಗುಂಪು ಗುಂಪಾಗಿ ನಾನಾ ಕಡೆಗಳಿಂದ ಸುತ್ತುವರಿದು ಬಾಣಗಳನ್ನು ಸುರಿಸಿತು. ಕಾಟಣ್ಣ, ಬಾದುರಖಾನರು ಕಣ್ಣ ಮುಂದೆ ಮಡಿದರು. ರಾಮನಾಥನಿಗೆ ತನ್ನ ಕೊನೆಗಾಲ ಬಂತೆಂದು ಅನ್ನಿಸಿತು. ಕೊಳ್ಳಿಯ ನಾಗ, ಕಾಳಂಜಿಯ ಕೆಂಪನೇ ಮುಂತಾದ ಗೆಳೆಯರೆಲ್ಲ ಮಡಿದರು. ಆದರೆ ಶತ್ರುಗಳ ಬಾಣಗಳು ಹಾರಿ ಬಂದು ಇವನ ಕವಚವನ್ನು ಸೀಳಿ ಗಾಯಗೊಳಿಸಿ ರಕ್ತ ಸುರಿಸಿದವು. ಕೊನೆಗೆ ರಾಮನು ಶಕ್ತಿಗುಂದಿ ಒಂದು ಬಂಡೆಯ ಮೇಲೆ ನಿಂತನು. ನಿಂತು ಶಿವಧ್ಯಾನದಿಂದ ಸಮಾಧಿಗೆ ಸಂದು ಪ್ರಾಣ ಬಿಟ್ಟನು, ಅವನ ಜೀವ ಶಿವನು ಕಳಿಸಿದ ಪುಷ್ಪಕ ವಿಮಾನದಲ್ಲಿ ಕುಳಿತು ಅತ್ತ ಕೈಲಾಸಕ್ಕೆ ಹೋಯಿತು.

   ಮಾತಂಗಿ ರಾಮನಾಥನ ತಲೆಯನ್ನು ಕತ್ತರಿಸಿ ತಟ್ಟೆಯಲ್ಲಿಟ್ಟು ಇಲ್ಲಿಗೆ ಕಳುಹಿಸಿದಳು. ದಿನದಿನಕ್ಕೂ ಅದರ ಕಾಂತಿ ಕಳೆಯೇರುತ್ತಿತ್ತು. ಸುಲ್ತಾನನ ಮಗಳು ಅದನ್ನು ಕಂಡು ಇನಿಯ ಮಡಿದ ಶೋಕದಿಂದ ಕುಗ್ಗಿ ಪ್ರಾಣವನ್ನು ಬಿಟ್ಟಳು. ಆ ತಲೆಯಿಂದ ಅನಿಷ್ಟವಾಗುತ್ತದೆಯೆಂದು ಸುಲ್ತಾನ ಅದನ್ನು ಮರಳಿ ಕಮ್ಮಟಕ್ಕೆ ಕಳುಹಿಸಿದನು. ಅಲ್ಲಿ ಅದನ್ನು ಇಟ್ಟ ಕೂಡಲೇ ಅದು ಲಿಂಗವಾಯಿತು. ಇದು ಕಥಾ ತಡಿಕೆ.

ಕುಮಾರಾಮನ ಸಾಂಗತ್ಯದ ವಸ್ತು ವಿನ್ಯಾಸ :  ಕನ್ನಡದಲ್ಲಿ ‘ಚಾರಣಕಾವ್ಯ’ವೆನಿಸಿಕೊಳ್ಳಬಹುದಾಗಿ ದೊರೆಯುವ ಮೊದಲನೆಯ ಕಾವ್ಯವೆಂದರೆ ನಂಜುಂಡ ಕವಿಯ ‘ಕುಮಾರರಾಮನ ಕಥೆ’! ಎಂದು ಆಚಾರ್ಯ ಡಿ.ಎಲ್.ನರಸಿಂಹಾಚಾರ್ಯರು ಹೇಳಿರುವುದನ್ನು ಒಪ್ಪ ಬಹುದಾಗಿದೆ.  ವಿಜಯ ನಗರಕಾಲದ ಕನ್ನಡ ಸಾಹಿತ್ಯವನ್ನು ಪರಿಚಯಮಾಡಿಕೊಡುವ ಸಂದರ್ಭದಲ್ಲಿ ಡಿ.ಎಲ್.‌ಎನ್. ಅವರು  “.........ನಂಜುಂಡನ ಕುಮಾರರಾಮನ ಕಥೆ (ಸು.1525) ಕಲ್ಪನೆ ಮತ್ತು ಪ್ರಣಯ ಮಿಶ್ರಿತವಾದ ಚರಿತ್ರೆ. ಒಬ್ಬಿಬ್ಬರು ಚರಿತ್ರಕಾರರು ಈ ಕೃತಿಯನ್ನು ವಿಶ್ಲೇಷಿಸಿ, ಕೆಲವು ಚರಿತ್ರಾಂಶಗಳನ್ನು ಇತ್ಯರ್ಥಗೊಳಿಸಿರುತ್ತಾರೆ. ಕಾವ್ಯದ ದೃಷ್ಟಿಯಿಂದ ಪರಿಶೀಲಿಸಿದಲ್ಲಿ, ಈ ಕೃತಿಯನ್ನು ಸಂಪೂರ್ಣವಾಗಿ ಕಡೆಗಣಿಸುವಂತಿಲ್ಲ” ಎಂದು ಅಭಿಪ್ರಾಯ ಪಟ್ಟಿರುತ್ತಾರೆ. ಅಲ್ಲದೆ ಮತ್ತೊಂದು ಲೇಖನದಲ್ಲಿ, ನಂಜುಂಡನ ಕೃತಿಯನ್ನೇ ವಿಸ್ತಾರವಾಗಿ ಪರಿಶೀಲಿಸಿ “..........ಯಾವ ಕಡೆಯಿಂದ ನೋಡಿದರೂ ಈ ಕಾವ್ಯ ಉತ್ಕೃಷ್ಟವಾದದ್ದೆಂದು ಹೇಳಬಹುದು. ಇದರಲ್ಲಿ, ಮುಖ್ಯವಾಗಿ ರಾಜಕೀಯ ಚರಿತ್ರೆ, ಮೋಹ ಪ್ರೇಮಗಳ ಕಥೆ, ಪುರಾಣದ ಛಾಯೆ- ಈ ಮೂರು ಎಳೆಗಳನ್ನು ಒಟ್ಟಿಗೆ ನೆಯ್ದಿದೆ. ದೇಶಪ್ರೇಮವೂ ಧರ್ಮಾನುರಕ್ತಿಯೂ ಸ್ವಾತಂತ್ರ್ಯವೂ ಸಂಪ್ರದಾಯವೂ ಜೊತೆಗೆ ಸೇರಿ ಕಾವ್ಯವನ್ನು ರಮಣೀಯವಾಗಿ ಮಾಡಿವೆ. ಇಂಥ ಕಾವ್ಯ ಯಾರನ್ನು ತಾನೆ ಮೆಚ್ಚಿಸಲಾರದು? ಎಂದು ಮನಸಾರೆ ಹೊಗಳಿರುತ್ತಾರೆ. ರಂ.ಶ್ರೀ.ಮುಗಳಿ ಅವರು ತಮ್ಮ “ಕನ್ನಡ ಸಾಹಿತ್ಯ ಚರಿತ್ರೆ”ಯಲ್ಲಿ “ಶೂರ ಚರಿತ್ರೆಗಳಲ್ಲಿ ನಂಜುಂಡನ ‘ಕುಮಾರರಾಮನ ಕಥೆ’ ಮತ್ತು ಗಂಗನ ‘ಕುಮಟ ರಾಮನ ಕಥೆ’ ಇವೆರಡಿವೆ. ಎರಡರ ಕಥಾನಾಯಕರು ಕುಮಾರರಾಮ. ಎರಡೂ ಸಾಂಗತ್ಯದಲ್ಲಿ ಬರೆದವು. ಕುಮಾರರಾಮ ಕಥೆಯಲ್ಲಿ ಅಲ್ಲಲ್ಲಿ ಕೆಲವು ಷಟ್ಪದಿಗಳೂ ಇವೆ. ಸಾಮಾನ್ಯವಾಗಿ ವೀರಶೈವ ಕವಿಗಳು ಹರಿಹರನು ಹಾಕಿಕೊಟ್ಟ ವಿಷಯ ನಿಯಮವನ್ನು ಅನುಸರಿಸಿದ್ದಾರೆ. ಅದಕ್ಕೆ ಅಪವಾದವಾಗಿ ಇವರಿಬ್ಬರು ಕುಮಾರರಾಮನೆಂಬ ಕಂಪಿಲರಾಜನ ಮಗನು ತೋರಿದ ಶೌರ‍್ಯ ಸಚ್ಚಾರಿತ್ರ್ಯಗಳ ಲೌಕಿಕ ಕಥೆಯನ್ನು ನಿರೂಪಿಸಿದ್ದಾರೆ. ಧಾರ್ಮಿಕ ವಿಷಯಗಳಿಂದ ಇಡಿಕಿರಿದ ಸಾಹಿತ್ಯಕ್ಕೆ ಸ್ವಲ್ಪಮಟ್ಟಿಗೆ ವೈವಿಧ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ. ಕಥನ ಶೈಲಿಯಲ್ಲಿ ಮತ್ತು ವರ್ಣನೆಯಲ್ಲಿ ಸೊಗಸಿದೆ” ಎಂದು ತಿಳಿಸಿದ್ದಾರೆ. ಮುಖ್ಯವಾಗಿ,  ಕುಮಾರ ರಾಮ ಸಚ್ಚಾರಿತ್ರ್ಯ, ವೀರತ್ವ, ಶುಚಿತ್ವ, ಪರದಾರ ಸೋದರತ್ವ ಮತ್ತು ಪರಾಕ್ರಮಗಳನ್ನು ಲೋಕಕ್ಕೆ ತಿಳಿಸ ಬಯಸುವ ವಿಷಯವನ್ನೇ ನಂಜುಂಡ ಕವಿಯು ತನ್ನ ಕಾವ್ಯದ ಮೂಲ ಭಿತ್ತಿಯನ್ನಾಗಿಸಿಕೊಂಡಿದ್ದಾನೆ. ಕುಮಾರರಾಮನ ಕಥೆ ಕನ್ನಡ ಸಾಹಿತ್ಯಕ್ಕೆ ಒಂದು ವಿಶಿಷ್ಟ ಕಾಣಿಕೆ. ವಿಶೇಷವಾಗಿ ಗಮನಿಸ ಬಹುದಾದರೇ ನಂಜುಂಡ ಕವಿಯು ತನ್ನ ಕಾವ್ಯ ಮೂಲ ಸಾಮಗ್ರಿಯನ್ನು ಈ ಕೆಳಕಂಡ ನಾಲ್ಕು  ಪದ್ಯಗಳಲ್ಲಿ ಹೇಳಿದ್ದಾನೆ.

  ಕಂದುಕ ಬೀಳಲರಮನೆಗದನಿರದೆತ್ತಿ

  ತಂದಪೆನೆಂದು ಕಂಪಿಲನ

  ನಂದನನೆಯ್ದಲವನ ರೂಪಿಗೆ ಸೋತು

  ಬಂದು ಪಿಡಿದಳು ರತ್ನಾಜಿ|| (ಆ.೧. ಸಂ.೧.,ಪ.ಸಂ.೮೬)

  ಪಿಡಿಯೆ ಬಿಡಿಸಿಕಂಡು ಬರಲವನವಳಂದು

  ಕಡುನೊಂದು ಕಯ್ಯಬಳೆಗಳ

  ಒಡೆದು ತೋಳ್ತೊಡೆಗಳ ಕೆಡಿಸಿಕೊಂಡು

  ಬಿಡದೆ ತೋರಿದಳು ಕಂಪಿಲಗೆ|| (ಆ.೧. ಸಂ.೧.,ಪ.ಸಂ.೮೭)

  ನೆಲೆಯನರಿಯದವಕೊಲಿಸು ರಾಮನನೆಂದು

  ಒಲಿದು ಮಂತ್ರಿಗೆ ಪೇಳಲವನು

  ನೆಲಮಾಳಿಗೆಯೊಳಿಟ್ಟವನ ಕೊಲಿಸಿದನೆಂದು

  ನೆಲೆಮಾಡಲಾ ಸುದ್ದಿಯನು|| (ಆ.೧. ಸಂ.೧.,ಪ.ಸಂ.೮೮)

  ಕೇಳಿ ತುರುಕರ ದಾಳಿ ಬರಲವನನು ತ್ರಿ

  ಲೀಲೆಯಿಂ ತಂದಾ ಬಲವ

  ಕೋಲಾಹಲವ ಮಾಡಿಸಿದನೆಂಬುದು ಕಥಾ

  ಮೂಲವಿದನು ನಾನೊಲಿದು|| (ಆ.೧. ಸಂ.೧.,ಪ.ಸಂ.೮೯) ರಾಮನನ್ನು ರತ್ನಾಜಿ ಮೋಹಿಸಿದುದು, ಅವಳ ಮೋಹಕ್ಕೊಳಗಾಗದ ಕುಮಾರ ರಾಮ ತನ್ನ ಶುಚಿತ್ವವನ್ನು ಕಾಪಾಡಿಕೊಂಡು ಪ್ರಸಂಗವನ್ನೇ ಕಾವ್ಯ ಮುಖ್ಯ ಭಿತ್ತಿಯಾಗಿಸಿಕೊಂಡು ಉಳಿದೆಲ್ಲ  ಘಟನೆಗಳನ್ನು ಪೋಷಕವಾಗಿ ಬಳಸಿಕೊಂಡು ಕುಮಾರರಾಮನ ಶುಚಿತ್ವ ಮತ್ತು ವೀರತ್ವಗಳನ್ನು ವರ್ಣಿಸಿದ್ದಾನೆ. 

       ಕಥಾವಸ್ತುವಿನಲ್ಲಿ ಕಂಡ ಹಾಗೆಯೇ ಎರಡು ಪ್ರಧಾನ ಭಾಗಗಳುಂಟು. ಕುಮಾರರಾಮನ ಪರಾಕ್ರಮ ಕಾವ್ಯದ ಒಂದು ಭಾಗವೆನ್ನಿಸಿದರೆ, ಆತನ ಪರದಾರ ಸೋದರತ್ವವೇ ಇನ್ನೊಂದು ಭಾಗವಾಗುತ್ತದೆ. ಇದನ್ನು ನಂಜುಂಡ ಕವಿ “ವರಶುಚಿ ವೀರರಾಮನ ಚರಿತವನಿದನೊರೆವೆನೊಲಿದು ಸತ್ಪುರುಷರು ಇರದಾಲಿಪುದು ಶುಚಿತೆ ವೀರತೆ ಬಂದು ದೊರೆಕೊಂಬುದಂತರಂಗದೊಳು” ಎಂದು ಸ್ಪಷ್ಟವಾಗಿ ವಿಭಾಗಿಸಿಯೇ ಹೇಳಿದ್ದಾನೆ. ಎಷ್ಟಾದರೂ ಈತನು ನುರಿತ-ಪರಿಣಿತ ಕವಿ. ವಿಷಯವನ್ನು ಹೇಗೆ ವಿಂಗಡಿಸಿಕೊಳ್ಳಬೇಕೆಂದು ಯೋಚನೆ ಮಾಡಿರುತ್ತಾನೆ. ವಾಸ್ತವವಾಗಿ ನೋಡಿದರೆ, ಒಟ್ಟು ಕಥಾವಸ್ತುವಿನಲ್ಲಿ ಮೂಡಿ ಕಾಣುವ ಪ್ರಧಾನಾಂಶಗಳೆಂದರೆ ಈ ಎರಡೇ! ರಾಮನು ವೀರನೂ ಹೌದು, ಶುಚಿಯೂ ಹೌದು.

     ಮೊದಲು, ರಾಮನ ಸಾಹಸವಿಭಾಗದ ವಸ್ತುರಚನೆಯನ್ನು ನೋಡಬಹುದು. ರಾಮನು ಬಾಲ್ಯದಿಂದಲೇ ತುಂಬ ಸಾಹಸಿ, ಪರಾಕ್ರಮಶಾಲಿ ಎಂಬುದನ್ನು ತಿಳಿಯಪಡಿಸಲು ನಂಜುಂಡನು ಕವಿ ರನ್ನನ ಮಾರ್ಗವನ್ನು ಅನುಸರಿಸಿರುವುದು ವಿದಿತವಾಗುತ್ತದೆ. ಹರಿಹರದೇವಿ ಗರ್ಭಿಣಿಯಾಗಿರುವುದನ್ನು ವರ್ಣಿಸುತ್ತ “ಬಸಿರೊಳಗಣ ಮಗನಿರೆಯದಿರನು ರಿಪುವಸುಧೆಯನೆಂದು ಪೇಳ್ವಂತೆ, ಬಿಸಜಾಕ್ಷಿಗರಿಭೂಮಿಯ ಮೃತ್ತಿಕೆಯ ಸೇವಿಸುವ ಬಯಕೆ ಜನಿಸಿದುದು” ಎಂದು ಹೇಳಿರುತ್ತಾನೆ. ಇಂತೆಯೇ, “ಬರೆ ಬಸಿರಿಗೆ ವಸ್ತುವಾಹನಗಳು ಬಂದವರಮನೆಗಾ ಶಿಶು ಪುಟ್ಟೆ ಇರದೆ ಪುಟ್ಟಿತು ರಾಯಪದವಿ ಕಂಪಿಲಗಾ ತರುಣನ ಸೈಪನೇನೆಂಬೆ” ಎಂಬುದಂತೂ ರನ್ನನ “ಬರೆ ಗರ್ಭಕ್ಕರಿವಸ್ತುವಾಹನಚಯಂ ಕಯ್ಗಯ್ದೆ ವಂದತ್ತು ಪುಟ್ಟೆ ರಣೋತ್ಸಾಹದೆ ಚಕ್ರವರ್ತಿ ವಿಭವಂ ಪುಟ್ಟಿತ್ತು.......(ಗದಾಯುದ್ಧ 1-12)” ಎಂಬ ವಾಕ್ಯಗಳ ಪಡಿಯಚ್ಚಿನಂತಿದೆ. ಶುಭ ಮುಹೂರ್ತದಲ್ಲಿ ಹುಟ್ಟಿದ ರಾಮನಿಗೆ ಗುರುಮುಖದಿಂದ ಕ್ಷತ್ರಿಯ ವಿದ್ಯೆಗಳೆಲ್ಲವೂ ಪಾಠವಾಗುತ್ತವೆ. ಅವನ ರೂಪು, ಪ್ರತಾಪಗಳು ಒಟ್ಟೊಟ್ಟಿಗೇ ವರ್ಧಿಸುತ್ತವೆ.

     ನಂಜುಂಡನು ಕುಮಾರರಾಮನ ಸಾಹಸ ವಿಭಾಗವನ್ನು ಹುಳಿಯೇರು (ಹುಳಿಯಾರು?) ಕಾಳಗದಿಂದ ಮೊದಲು ಮಾಡುತ್ತಾನೆ. ಜಾಯಿಲಗಳ ಸಲುವಾಗಿ ಹುಳಿಯೇರಿನ ಅಧಿಪತಿಗೆ ಹೇಳಿ ಕಳುಹಿಸಲು, ಅವನು ಬಲ್ಲಾಳರಾಯನ ಸಾಮಂತನಾಗಿದ್ದುದರಿಂದ ನಿರಾಕರಿಸುವನು. ಅನಂತರ ಕುಪಿತನಾದ ಕುಮಾರರಾಮನು ಹುಳಿಯೇರನ್ನು ಮುತ್ತುವನು. ದೈವಾಂಶಸಂಭೂತನೂ, ದಿವ್ಯಾಶ್ವಸಮೇತನೂ ಆದ ರಾಮನನ್ನು ಅಡ್ಡಗಟ್ಟುವರಾರು? ಹುಳಿಯೇರಿನ ಅಧಿಕಾರಿಯ ಮದೋನ್ಮತ್ತವಾದ ಮಾತುಗಳಿಗೆ ಮಲೆತು ನಿಂತ ರಾಮನು  ಆ ಊರನ್ನು ಮುತ್ತುವುದೇ ತಡ ಯುದ್ಧ ಮೊದಲಾಯಿತು.  ಆ ಹೋರಾಟಕ್ಕೆ ತಾರಕೆಗಳು ಧ್ರುವಲೋಕಕ್ಕೆ ಗೂಳೆಯ ತೆಗೆದವಂತೆ! ನಿಮಿಷ ಮಾತ್ರದಲ್ಲಿ ಆ ಅಗ್ರಹಾರವು ಕಿಚ್ಚಿನ ಬೀಡಾಯ್ತು. ಅಧಿಕಾರಿ ರಾಮನ ಕೈಸೆರೆಯಾದನು. ಆತನನ್ನು ಹಿಡಿದು ತಂದು ತಂದೆಗೆ ಒಪ್ಪಿಸಿದನು. ಹರಿಹರದೇವಿ, ಬುಕ್ಕಾಂಬಿಕೆ (?) ಯರು ಕುವರನ ಸಾಹಸಕ್ಕೆ ಮೆಚ್ಚಿ ಹರಸಿದರು. ನಂಜುಂಡನಲ್ಲಿ ಈ ಕಿರುಗಾಳಗವೇ ಮುಂದೆ ಕದನ ಪರಂಪರೆಗೆ ಪೀಠಿಕೆಯಾಗುವುದು. ತನ್ನ ಸಾಮಂತನಿಗಾದ ಅವಮಾನವನ್ನು ಸಹಿಸಲಾರದೆ ಬಲ್ಲಾಳನು ಕಂಪಿಲನ ಮೇಲೆ ದಂಡೆತ್ತಿ ಬಂದನು. ಬಲ್ಲಾಳನ ಸೇನೆಯೆಂದರೆ ಕೇಳಬೇಕೆ! ತುರುಕ ರಾವುತರು, ಒಡ್ಡಿಯ ರಾವುತರು, ಕನ್ನಡರಾಯ ರಾವುತರು ಮೊದಲಾದ ನಾನಾ ದೇಶಗಳ ವೀರಾಧಿವೀರರು ನೆರೆದು ನಿಂತರು. ದಳಪತಿ ನರಸಿಂಗು, ಸೋಮದಂಡಾಧಿಪ ಮುಂತಾದ ಪ್ರಮುಖರು ಸೇನಾಸೂತ್ರವನ್ನು ಹಿಡಿದರು. ಕಂಪಿಲನೂ ತನ್ನ ಮಗ ರಾಮನೊಂದಿಗೆ ಬಲ್ಲಾಳನನ್ನು ಎದುರಿಸಿದನು. ಎರಡು ಪಡೆಗಳಿಗೂ ಭೀಕರವಾದ ಕಾಳಗ ನಡೆದು, ಕಡೆಗೆ ಆಯಾ ಪಕ್ಷದ ಮಂತ್ರಿಗಳ ಸಲಹೆಯ ಮೇರೆಗೆ ಸಂಧಿಯಲ್ಲಿ ಪರ್ಯವಸಾನವಾಯಿತು. ಈ ಸುದ್ದಿ ವೀರರುದ್ರನಿಗೆ ತಿಳಿದು ಬರುವುದು. ಸಾಲದ್ದಕ್ಕೆ ರಾಮನು “ನವಲಕ್ಕ ತೆಲುಗು ರಾಯರ ಮಿಂಡ” ಎಂಬ ಬಿರುದನ್ನು ಧರಿಸಿದ್ದಾನೆಂದು ಗೊತ್ತಾಗುವುದು. ಒಡನೆಯೇ ಅವನು ತಾನಾಗಿಯೇ ದಂಡೆತ್ತಿ ಬರುವನು. ಈ ಕದನವೂ, ಮೊದಮೊದಲು ಭರದಿಂದ ಸಾಗಿ, ಕಡೆಯಲ್ಲಿ ವೀರರುದ್ರನಿಗೆ ಸೋಲಾಗುವುದು. ಅನಂತರ  ಕಪಿಲೇಶ್ವರನ ಸರದಿ. ಈತನು ಸಮಸ್ತ ಸೇನೆಯೊಂದಿಗೆ ಕೂಡಿ ಕಂಪಿಲನ ಮೇಲೆ ದಂಡೆತ್ತಿ ಬರುವನು. ಆದರೆ, ಆಶಾಭಂಗಿತನಾಗುವನು. ಈ ರೀತಿ, ಹುಳಿಯೇರಿನ ಕಾಳಗದಿಂದ ಮೊದಲಾದ ರಾಮನ ವಿಜಯ ಪರಂಪರೆಯಿಂದ, ಆತನು ಚಿಕ್ಕವನಾದರೂ ಅಸಮ ಸಾಹಸಿಯೆಂಬುದು ದೃಢವಾಗಿ, ಅವನ ಕೀರ್ತಿ ಡಿಳ್ಳಿಯವರೆಗೂ ವ್ಯಾಪಿಸುತ್ತದೆ. ನಂಜುಂಡನ ಈ ಕಥಾಭಾಗ ಬಹು ಅಚ್ಚುಕಟ್ಟಾಗಿ ಹೆಣೆದುಕೊಂಡು ಬಂದಿದೆ.

      ಸ್ತ್ರೀಪಾತ್ರವರ್ಗದಲ್ಲಿ ರತ್ನಾಜಿಗೆ ಪ್ರಥಮಸ್ಥಾನ ಸಲ್ಲುತ್ತದೆ. ಕುಮಾರರಾಮನ ಕಥೆಯಲ್ಲಿ ಈ ಖಳ ಪಾತ್ರಧಾರಿಗೆ ಕಥಾನಾಯಕಿಯ ಪಟ್ಟವೂ ಸಲ್ಲುತ್ತದೆ ಎನ್ನಬಹುದು. ಈಕೆಯ ಪಾತ್ರಕ್ಕೆ ನಂಜುಂಡನು ಪೂರ್ವಜನ್ಮದ ಪೀಠಿಕೆಯನ್ನು ಕಲ್ಪಿಸಿ, ದೇವಲೋಕದ ಊರ್ವಶಿಯೇ ಈ ಜನ್ಮದಲ್ಲಿ ರತ್ನಾಜಿಯಾಗಿ ಜನಿಸಿ, ಕುಮಾರರಾಮನಾಗಿ ಹುಟ್ಟಿ ಬಂದಿದ್ದ ಅರ್ಜುನನ ಮೇಲೆ ಮತ್ತೊಮ್ಮೆ ತನ್ನ ಮಾಯಾಜಾಲವನ್ನು ಬೀಸಿದಳೆಂಬುದಾಗಿ ನಿರೂಪಿಸಿರುತ್ತಾನೆ. ಜನ್ಮಾಂತರದ ನಿಮಿತ್ತ ಹೇಗಿದ್ದರೂ ಸರಿಯೆ, ಈ ಕಾವ್ಯದಲ್ಲಿ ಚಿತ್ರಿತವಾಗಿರುವ ರತ್ನಾಜಿ ಅತ್ಯಂತ ಮಾಯಗಾತಿಯೇ ಸರಿ. ಆಕೆಗೆ ರಾಮನನ್ನು ಕಂಡ ಕ್ಷಣದಿಂದ ತನ್ನ ವಾವೆಯನ್ನೂ ಮರೆಯುವಷ್ಟರ ಮಟ್ಟಿಗೆ ವ್ಯಾಮೋಹ ಆವರಿಸಿಕೊಂಡು ಕಾಮೋದ್ರೇಕವಾಗುತ್ತದೆ. ಆಕೆಯ ಆಪ್ತಸಖಿಯಾದ ಸಂಗಿಗೇ ಒಡತಿಯ ಆ ವಿಪರೀತವಾದ ವರ್ತನೆ ಆತಂಕವನ್ನು ಉಂಟುಮಾಡುತ್ತದೆ. ಆಕೆಯ ಸ್ವಭಾವ ಹಸ್ತಿನಿ ಇಲ್ಲವೇ ಶಂಖಿನಿ ಜಾತಿಯ ಸ್ತ್ರೀಯನ್ನು ಹೋಲುತ್ತದೆ. ಆಕೆಯ ಹೃದಯಕ್ಷೋಭೆಯನ್ನು ನಂಜುಂಡಕವಿಯು ವಿವರವಾಗಿ ಬೆಳೆಸಿದ್ದಾನೆ. ರಾಮನ ಸಮಾಗಮನಕ್ಕಾಗಿ ಆಕೆ ದೇವತೆಗಳಲ್ಲಿ ಹರಸಿಕೊಳ್ಳುವ ಸನ್ನಿವೇಶವಾಗಲಿ, ರಾಮನ ಚಿತ್ರಪಟವನ್ನು ಕಂಡು ಆಕೆ ಪರಿತಪಿಸುವ ವಿರಹವ್ಯಾಕುಲವಾಗಲಿ ಹೇಳತೀರದು. ಆಕೆ ಕಾಟನ ಜೊತೆಯಲ್ಲಿ ಹೂಡುವ ನಟನೆ, ಹಡಪದ ಬೊಲ್ಲುಗನನ್ನು ನಾಚಿಸಿ ಕಳುಹಿಸುವ ನೆಪಗಳು ಅವಳ ಕುಟಿಲತನವನ್ನೂ ಜಾಣತನವನ್ನೂ ವ್ಯಕ್ತಪಡಿಸುತ್ತವೆ. ರಾಮನ ಸಮ್ಮುಖದಲ್ಲಿ ಆಡುವ ಒಂದೊಂದು ಮಾತೂ ಆಕೆಯ ನೀಚಸ್ವಭಾವವನ್ನು ಪದರ ಪದರವಾಗಿ ಪರಿಚಯ ಮಾಡಿಕೊಡುತ್ತದೆ. ರಾಮನನ್ನು ಒಲಿಸಿಕೊಳ್ಳುವ ಸಲುವಾಗಿ ಕಂಪಿಲನನ್ನು ಕೊಲ್ಲಿಸಲೂ ಹಿಂತೆಗೆಯದ ಹೆಂಗಸು ಅವಳು. ರಾಮನು ತಾನೂ ಆಕೆಯ ಮಗನೆಂದು ಎಚ್ಚರಿಸಿದರೆ, ತಂದೆಯೂ ಮಗನೂ ಒಂದೇ ಅಂದಳವನ್ನು ಏರಿಬರುವುದು ರೂಢಿಯಲ್ಲಿ ಇಲ್ಲವೆ ಎಂದು ಪ್ರಶ್ನಿಸುವಳು. ಪ್ರಾಣಿಗಳಲ್ಲಿ ಮಾತೃಗಮನವಿಲ್ಲವೆ ಎಂದು ಸವಾಲು ಹಾಕುವುದು ಆಕೆಯ ವಿಕೃತಕಾಮಕ್ಕೆ ತಕ್ಕ ಮಾತೇ ಸರಿ. ಆಕೆಯ ಈ ಒಂದೊಂದು ವಾದವೂ ರಾಮನನ್ನು ತಲೆತಗ್ಗಿಸುವಂತೆ ಮಾಡುತ್ತದೆ. ಆದರೆ, ಆಕೆಯ ಹೇಳಿಕೆಗೆ ಬೆಲೆಕೊಡಬಹುದಾದರೆ-ಎಂದರೆ, ಆಕೆ ರಾಮನಿಗಾಗಿಯೇ ನಿಶ್ಚಿತವಾದ ಕನ್ಯೆಯೆಂದೂ, ಕಂಪಿಲನು ಮೋಸಮಾಡಿ ವರಿಸಿದನೆಂದೂ ಆ ತರಳೆಗೆ ಮುದಿ ಮಹಾರಾಜನ ಸಹವಾಸ ಅಸಹನೀಯವೆಂದೂ ಹೇಳುವ ಮಾತುಗಳು-ಆಕೆಯ ಬಗ್ಗೆ ಅಲ್ಪ ಸ್ವಲ್ಪ ಸಹಾನುಭೂತಿಯನ್ನು ಉಂಟುಮಾಡುತ್ತದೆ. ಆದರೆ ಆ ನೆಪದಲ್ಲಿ ಆಕೆ ಕುಮಾರರಾಮನ ಇಂಗಿತವನ್ನು ಅರ್ಥಮಾಡಿಕೊಳ್ಳಲಾರದೆ ಅವನನ್ನು ಬಲಾತ್ಕರಿಸಲು ತೊಡಗುವುದು ಅಸಮರ್ಥನೀಯವೇ ಸರಿ. ಅನಂತರ, ಆಕೆ ನಾರಿಯಾಗಿದ್ದವಳು ಅಕ್ಷರಶ: ಮಾರಿಯೇ ಆಗುವಳು. ಯಾವ ಅಕಾರ್ಯಕ್ಕಾಗಿ ಕುಮಾರರಾಮನು ಹೆದರಿ ಆಕೆಯನ್ನು ನೂಕಿ ಬಂದನೋ ಆ ಅಕಾರ್ಯದ ಅಪವಾದವನ್ನೇ ಆತನ ತಲೆಯ ಮೇಲೆ ಹೊರಿಸುವಳು. ಬಯಸಿ ಬಯಸಿ ಪಡೆದಿದ್ದ ಮಗನನ್ನು ಇದಕ್ಕಾಗಿ ಕಂಪಿಲನು ತಲೆಕಡಿಯುವ ಆಜ್ಞೆ ಮಡುವಂತೆ ಮಹಾರಾಜನನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಳ್ಳುವಳು. ಆಕೆಯ ರೂಪಕ್ಕೂ ಲಾವಣ್ಯಕ್ಕೂ ಮರುಳಾಗಿದ್ದ ಕಂಪಿಲನಿಗೆ ಮಂತ್ರಿಯ ಹಿತೋಕ್ತಿಗಳಾವುವೂ ಹಿಡಿಸಲಾರದೆ ಹೋಗುವವು. ದುರುಳ ರತ್ನಿಗಾದರೋ ಕುಮಾರರಾಮನ ರುಂಡವನ್ನು ಕಾಣುವತನಕ ಸಮಾಧಾನವಿಲ್ಲ. ಬೈಚಪ್ಪನು ತಲೆಯನ್ನು ತಂದು ಕೊಟ್ಟಾಗ ಅದನ್ನು ಪರೀಕ್ಷಿಸಿ, ಮುಖ್ಯವಾಗಿ ಆಕೆಯ ಹಠ ನೆರವೇರಿತೋ ಇಲ್ಲವೋ ಎಂಬ ಆತಂಕ. ಅದೇ ಮೇರೆಗೆ, ಮುಂದೆ ವಾಸ್ತವಿಕವಾದ ವೃತ್ತಾಂತವು ಪ್ರಕಟವಾಗಲು, ರತ್ನಾಜಿ ಕ್ಷಣಮಾತ್ರವೂ ಜೀವಸಹಿತವಿರಲು ಆಗುವುದಿಲ್ಲ. ಈ ವೇಳೆಗಾಗಲೇ ಮನೆ ಮಂದಿಯವರ ಶಾಪವೂ, ಊರಿನವರ ಆಗ್ರಹವೂ ಸಾಕಾದಷ್ಟು ಅವಳಿಗೆ ತಟ್ಟಿತ್ತೋ ಏನೋ! ಅಂತೂ, ತನ್ನ ಕುಟಿಲತನ ಇನ್ನೂ ಪ್ರಕಟವಾಗುತ್ತಿದ್ದಂತೆಯೇ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಳು. ಅಂಥ ಒಡತಿಯ ಸಹವಾಸದೋಷಕ್ಕೆ ಬಲಿಯಾದಳೋ ಎನ್ನುವಂತೆ ಬಡ ಸಂಗಿಯೂ ಸಾಯುವಳು. ಕೆಲವು ಕೃತಿಗಳಲ್ಲಿ ರತ್ನಿಯ ಸೇಡನ್ನು ಇಲ್ಲಿಗೇ ಮುಗಿಸದೆ ಆಕೆ ಮತ್ತೆ ಮಾತಂಗಿಯಾಗಿ ಹುಟ್ಟಿ ಬಂದಳೆಂದು ನಿರೂಪಿತವಾಗಿದೆ. ಈ ಜನ್ಮಾಂತರದ ಕಥೆ ಹೇಗೇ ಇರಲಿ, ರತ್ನಾಜಿಯ ಪಾತ್ರ ಕುಮಾರರಾಮನ ಕಥೆಯಲ್ಲಿ ಅತ್ಯಂತ ಮಹತ್ವವುಳ್ಳದ್ದು. ಕುಮಾರರಾಮನೇ ಹೇಳುವಂತೆ ಆತನ ಪರದಾರಸೋದರತ್ವವನ್ನು ಶಿವನು ಪರೀಕ್ಷಿಸಿ ನೋಡುವ ಒರೆಗಲ್ಲು ರತ್ನಾಜಿ. ಆದ್ದರಿಂದ ಆಕೆಯ ಪಾತ್ರದಲ್ಲಿ ಕಂಡು ಬರುವ ಅತಿರೇಕಗಳು ರಾಮನ ಪಾತ್ರ ವೈಭವವನ್ನು ಹೆಚ್ಚಿಸುವ ಸಾಧನಗಳಾಗಿ ಈ ಕೃತಿಯಲ್ಲಿ ಒಡಮೂಡಿರುವುದನ್ನು ಕಾಣಬಹುದಾಗಿದೆ.

         ರತ್ನಾಜಿಯ ಕಾಮುಕಪ್ರವೃತ್ತಿ, ವಿರಹೋದ್ರೇ, ಅಸಹನೀಯವಾದ ಯಾತನೆ ಇವೇ ಮೊದಲಾದುವು ಈ ಪ್ರಸಂಗದ ಮುಖ್ಯಾಂಶಗಳು. ಇವುಗಳನ್ನು ನಮ್ಮ ಊಹೆಗೂ ಮೀರುವಷ್ಟು ದೀರ್ಘವಾಗಿ ನಂಜುಂಡನು ನಿರೂಪಿಸಿರುತ್ತಾನೆ. ರತ್ನಾಜಿ ಮತ್ತು ಸಂಗಿಯರ ಸಂಭಾಷಣೆಯೇ ಸಂಧಿಗಟ್ಟಲೆ ಸಾಗುತ್ತದೆ. ಶೂಲದ ಹಬ್ಬ ಮತ್ತು ಚೆಂಡಾಟಗಳ ಮಧ್ಯದ ಬಹುಭಾಗವನ್ನು ಈ ವರ್ಣನೆಗೆ ಮೀಸಲಿಟ್ಟಿದ್ದಾನೆ. ರತ್ನಿಗಿಂತ ಹೆಚ್ಚಾಗಿ ಸಂಗಿಯ ಸವಿನುಡಿ ಮೆಲ್ನುಡಿಗಳು ಅವಳ ಜಾಣತನವನ್ನೂ, ಕುಂಟಣಿತನದ ಪ್ರಾವೀಣ್ಯವನ್ನೂ ಪರಿಚಯ ಮಾಡಿಕೊಡುತ್ತವೆ. ಪ್ರೌಢವೂ ಗಾಢವೂ ಆದ ಈ ನಿರೂಪಣೆ ನಂಜುಂಡನ ಕಾವ್ಯದ ವಿಶೇಷ ಅಂಶಗಳಾಗಿವೆ ಎಂದರೂ ತಪ್ಪಾಗಲಾರದು.

 ಕಥಾ ವೈಶಿಷ್ಟ್ಯ:

     ಕುಮಾರರಾಮನ ಕಥೆಯಲ್ಲಿ ಸೇರಿದ ರತ್ನಾಜಿಯ ಪ್ರಕರಣದಿಂದ ನಾಯಕನ ಧರ್ಮನಿಷ್ಠೆಯನ್ನೂ ವೀರವ್ರತದೊಡನೆ ಶೌಚವ್ರತವನ್ನೂ ಒರೆಗೆ ಹಚ್ಚಿ ವರ್ಣಿಸಲು ಕವಿಗೆ ಅತ್ಯುತ್ತಮ ಅವಕಾಶವೊದಗಿದೆ. ಇದರಿಂದ ವೀರರಸದ ಏಕನಾದವನ್ನು ತಪ್ಪಿಸಿ ಭಿನ್ನರಸದ ಪರಿಭಾವನೆಯಿಂದ ವಸ್ತು ವೈವಿಧ್ಯವನ್ನು ತರಲು ಅವಕಾಶವಾಗಿದೆ. ಲೋಕಮೋಹಕವಾದ ಶೃಂಗಾರರಸದ ಪ್ರತಿಪಾದನೆಯಲ್ಲಿ ಕವಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾನೆ. ಇದರ ಪರಿಣಾಮವಾಗಿ ಕಂಪಿಲರಾಯನು ಕುಮಾರರಾಮನಿಗೆ ಮರಣ ದಂಡನೆಯನ್ನು ವಿಧಿಸಿದನು. ರಾಜ್ಯಕ್ಕೆ ಏಕೈಕ ಆಧಾರಸ್ತಂಭನೂ, ಅದ್ವಿತೀಯ ಸಾಹಸಿಯೂ ಆಗಿದ್ದ ಕುಮಾರರಾಮನಿಗೆ ಕಂಪಿಲನ ಸರ್ವ ವೈಭವಗಳಿಗೆ ತಾನೇ ಕಾರಣಪುರುಷ ಎಂಬ ಕೀಚಕಪ್ರಜ್ಞೆಯ ಅಹಂಭಾವವಿದ್ದಿದ್ದರೆ ಅದನ್ನು ತೋರ್ಪಡಿಸಿ ರಾಜಶಾಸನವನ್ನು ಧಿಕ್ಕರಿಸಬಹುದಿತ್ತು. ನಿರಪರಾಧಿಯಾದ ತನ್ನ ಮೇಲೆ ಸಿಡಿಲಿನಂತೆರಗಿದ ಅನ್ಯಾಯದ ರಾಜಶಾಸನವನ್ನು ಸಹ ಪ್ರತಿಭಟಿಸದೆ ತಲೆಬಾಗಿದ ಕುಮಾರರಾಮನ ವಿನಯ ಪ್ರದರ್ಶನ ಆತನ ವ್ಯಕ್ತಿತ್ವದ ಬಹು ಮುಖಗಳನ್ನು ತೋರಿಸಲು ಕವಿಗೆ ಸುವರ್ಣಾವಕಾಶವನ್ನೊದಗಿಸುತ್ತದೆ. ಆತನನ್ನು ನೆಲಮಾಳಿಗೆಯಲ್ಲಿರಿಸಿ ವಧೆಯ ನಾಟಕವನ್ನು ನಡೆಸಿದ ಮಂತ್ರಿ ಬೈಚಪ್ಪನ ಚಾತುರ್ಯ ಮತ್ತೆ ಯುದ್ಧಮಸೆದಂದು ಸುಲ್ತಾನನ ಸೇನೆಯ ವಿನಾಶಕ್ಕಾಗಿ ಆತನನ್ನು ಮತ್ತೊಮ್ಮೆ ರಣರಂಗಕ್ಕೆ ಕರೆತಂದ ಘಟನೆಗಳು ಮಹಾಭಾರತ ವಿರಾಟ ಪರ್ವದ ಕಥೆಯನ್ನು ಜ್ಞಾಪಕಕ್ಕೆ ತರುತ್ತವೆ. ಅವಿವೇಕದಿಂದ ಅನ್ಯಾಯದ ಶಾಸನಮಾಡಿ ತನ್ನ ವಧೆಯನ್ನು ಕೋರಿದ ತಂದೆಗೆ ಆಪತ್ಕಾಲದಲ್ಲಿ ನೆರವಾಗುವ ರಾಮನ ಸ್ವಾಮಿಭಕ್ತಿಯನ್ನೂ ರಾಷ್ಟ್ರಪ್ರೇಮವನ್ನೂ ಈ ಪ್ರಸಂಗದಿಂದ ಮನಗಾಣಬಹುದು. ಮಾಯಾ ಶಿರಸ್ಸುಗಳ ರಚನೆ, ಸಹಗಮನ, ನೆಲೆಮಾಳಿಗೆಯ ರಹಸ್ಯ, ಜೀವನ ಹಠಾತ್ತನೆ ಯುದ್ಧಾಗಮನ ಮುಂತಾದ ಚಮತ್ಕಾರದ ಪ್ರಸಂಗಗಳು ಈ ಮಹತ್ಕೃತಿಯಲ್ಲಿ ಅದ್ಭುತರಸ ಪ್ರತಿಪಾದನೆಗೆ ನೆರವಾಗುತ್ತವೆ. ಕುಮಾರನು ಸತ್ತನಂತರ ಕಂಪಿಲನ ಶೋಕ, ಮರುಕ, ಮುಂತಾದುವು ವಿಸ್ಮಯಕರವಾಗಿವೆ. ಹಲವಾರು ಬಗೆಯ ಆವರ್ತಗರ್ತಗಳಲ್ಲಿ ಸಿಕ್ಕಿ ವಸ್ತು ವೈವಿಧ್ಯವನ್ನು ಪಡೆದು ವಿಭಿನ್ನರಸಗಳ ಉತ್ಕರ್ಷದಿಂದ ಕಥೆ ಕುತೂಹಲದ ಸಮುದ್ರವಾಗುತ್ತದೆ. ಇತಿಹಾಸ ಭೂಮಿಯಾದರೂ ಪುರಾಣ ಭ್ರಾಂತಿಯನ್ನು ನಮ್ಮಲ್ಲಿ ಉಂಟುಮಾಡುತ್ತದೆ ಎಂಬ ವಿದ್ವಾಂಸರ ಅನಿಸಿಕೆ ಯೋಚಿಸತಕ್ಕದ್ದಾಗಿದೆ.

     ರಾಮಾಯಣ ಮಹಾಭಾರತ ಮುಂತಾದ ಮಹಾಕಾವ್ಯಗಳ ನಾಯಕರು ಮತ್ತೊಮ್ಮೆ ಇತಿಹಾಸ ಗರ್ಭದಲ್ಲಿ ಅವತರಿಸಿದರೋ ಎಂಬಷ್ಟು ಮಟ್ಟಿಗೆ ರೂಪಗುಣ ಸೌಂದರ್ಯನಿಧಿಯಾಗಿ ಕುಮಾರರಾಮನು ಕಾವ್ಯದ ಉದ್ದಕ್ಕೂ ರಂಜಿಸುತ್ತಾನೆ. ಈ ಕಥೆಯಲ್ಲಿನ ಎಲ್ಲ ಘಟನೆಗಳನ್ನೂ ಐತಿಹಾಸಿಕವೆಂದು ಸಿದ್ಧಪಡಿಸಲು ಸಾಕಷ್ಟು ಬಹಿರಂಗದ ಆಧಾರಗಳು ಇಲ್ಲವಾದರೂ ಇತಿಹಾಸ ದೃಷ್ಟಿಯಿಂದ ಅಸಂಭಾವ್ಯತೆಯೇನೂ ಇಲ್ಲಿ ಗೋಚರಿಸುವುದಿಲ್ಲ. ಇಷ್ಟು ಮಟ್ಟಿನ ಆದರ್ಶಗುಣಗಳ ಗಣಿಯಾದ ರಾಮನಾಥನನ್ನು ಅಂದಿನ ಜನ ಅರ್ಜುನನ ಅವತಾರವೆಂದು ಪೂಜಿಸಿದ್ದರೆ ಆಶ್ಚರ್ಯವಿಲ್ಲ. ಅದಕ್ಕೆ ಅನುಗುಣವಾಗಿ ರತ್ನಾಜಿ, ಸುಲ್ತಾನ, ಆತನ ಮಗಳು ಮುಂತಾದ ವ್ಯಕ್ತಿಗಳು ಊರ್ವಶಿ ಮುಂತಾದ ಪೌರಾಣಿಕ ಸಾಮ್ಯಗಳನ್ನು ಕಂಡುಕೊಳ್ಳಬೇಕಾಯಿತು. ಆದರೆ ಕವಿ ಇಲ್ಲಿ ತಂದಿರುವ ಪುರಾಣಕಥೆ ಕುಮಾರರಾಮನ ಕಥೆಯಲ್ಲಿ ಬೆರೆತು ಕಲಸುಮೇಲೋಗರವಾಗದೆ ಜನ್ಮಾಂತರದ ಕಥೆ ಎಂಬಂತೆ ಉದ್ದಕ್ಕೂ ಎಣ್ಣೆ ನೀರಿನ ಕೂಟವಾಗಿ ನಿಲ್ಲುತ್ತದೆ. ಆದ್ದರಿಂದ ಕುಮಾರರಾಮನನ್ನು ಕುರಿತ ಘಟನೆಗಳ ಐತಿಹಾಸಿಕತೆಗೆ ಅಪಚಾರವಾಗುವುದಿಲ್ಲ. ಪಂಪಭಾರತದಲ್ಲಿ ಪುರಾಣಕಥೆಗೆ ಕವಿ ಇತಿಹಾಸದ ಎಳೆಯನು ಜೋಡಿಸಲು ಯತ್ನಿಸಿದರೆ ಇಲ್ಲಿ ಕವಿ ಐತಿಹಾಸಿಕ ಕಾವ್ಯಕ್ಕೆ ಪುರಾಣದ ಎಳೆಯನ್ನು ಔಪಚಾರಿಕವಾಗಿ ಎಂಬಂತೆ ಜೋಡಿಸಲು ಯತ್ನಿಸಿರುವುದು ಸ್ಪಷ್ಟವಾಗುತ್ತದೆ. ಈವರೆಗಿನ ಸಂಶೋಧನೆಗಳಿಂದ ಕಂಪಿಲ, ಬೈಚಪ್ಪ, ಕುಮಾರರಾಮ ಮುಂತಾದವರು ಐತಿಹಾಸಿಕ ವ್ಯಕ್ತಿಗಳೆಂಬ ಅಂಶ ವ್ಯಕ್ತಪಟ್ಟಿರುವಂತೆ ಕುಮಾರರಾಮನ ವೀರಸಾಹಸಗಳಲ್ಲಿ ಅವನಿಗೆ ನೆರವಾದ ಅಥವಾ ಪ್ರತಿಭಟಿಸಿದ ವ್ಯಕ್ತಿಗಳ ಮತ್ತು ತತ್ಸಂಬಂಧವಾದ ಘಟನೆಗಳ ಐತಿಹಾಸಿಕತೆ  ನಂತರದ ಸಂಶೋಧಕರ  ಸಂಶೋಧನೆಗಳಿಂದ  ಸ್ವಲ್ಪ ಮಟ್ಟಿಗೆ ಸಾಬೀತಾಗಿದೆ.

     ಒಟ್ಟಿನಲ್ಲಿ ಐತಿಹಾಸಿಕ ವೀರನಾದರೂ ಪುರಾಣ ಕಾವ್ಯಗಳ ನಾಯಕರ ಮಹೋನ್ನತ ವ್ಯಕ್ತಿತ್ವಕ್ಕೆ ಯಾವ ರೀತಿಯಲ್ಲೂ ಕೀಳಲ್ಲದ ಕನ್ನಡ ಕಡುಗಲಿಯ ಕಥೆಯನ್ನು ತನ್ನ ‘ಮಹಾ ಪ್ರಬಂಧದ’ ಯೋಗ್ಯ ವಸ್ತುವೆಂದು ಆರಿಸಿಕೊಂಡು ಒಂದು ಸುದೀರ್ಘ ಮಹತ್ ಕೃತಿಯನ್ನು ನಿರ್ಮಿಸಿದ ಕವಿ ನಂಜುಂಡನು ಈ ಪರಂಪರೆಯ ಕನ್ನಡ ಕವಿಗಳಲ್ಲಿ ಮೊದಲಿಗನೂ ಅಪರೂಪದವನೂ ಆಗಿದ್ದಾನೆ ಎಂದರೆ ಅತಿಶಯೋಕ್ತಯಾಗಲಾರದು.

     ರತ್ನಾಜಿಯ ದೌರ್ಬಲ್ಯಕ್ಕೆ ಕಂಪಿಲನೇ ಹೊಣೆ ಎಂಬಂತೆ ಭಾವಿಸುವುದು ಅಷ್ಟು ಉಚಿತವಾಗಿ ತೋರುವುದಿಲ್ಲ. ಬಹು ಪತ್ನಿತ್ವವನ್ನು ಒಪ್ಪಿಕೊಂಡು ಕಿರಿಯ ರಾಣಿಯಾಗಿ ಬರುವ ಪ್ರತಿಯೊಬ್ಬಳೂ ತನ್ನ ಗಂಡನನ್ನು ಮುಪ್ಪಿನವನೆಂದು ಆರೋಪಿಸುವ ಪ್ರಸಂಗ ಬಂದಲ್ಲಿ ಈ ಮುಪ್ಪನ್ನು ಅಳೆಯುವ ಸಾಧನವಾದರೂ ಯಾವುದು ಎನ್ನಬೇಕಾಗುತ್ತದೆ. ತನ್ನ ಮೃಗೀಯ ತೃಷ್ಣೆ ಮಾನವೀಯವೂ ಹೌದು ಎಂಬುದಷ್ಟು ಸಾಲದೆ? ಇನ್ನೂ ಮುಂದುವರಿದು ಕಂಪಿಲನ ಮೇಲೆ ತನ್ನ ದೌರ್ಬಲ್ಯದ ಎಲ್ಲ ಜವಾಬ್ದಾರಿಯನ್ನೂ ಹೊರಿಸುವುದು ಸರಿಯಲ್ಲ. ‘ವಿಕೃತಿಯೇ ಅವಳ ಪ್ರಕೃತಿ ಮನಶ್ಯಾಸ್ತ್ರದ ಸ್ಥೂಲ ಪರಿಚಯವಿರುವವರಿಗೂ ಈ ವಿಕೃತಿಯ ಯಥಾರ್ಥತೆ ಅರ್ಥವಾಗುತ್ತದೆ......ಅವಳ ತಪ್ಪನ್ನೆಲ್ಲ ಒಮ್ಮೆಗೇ ಮರೆಯುವಂತಾಗುತ್ತದೆ’ ಎಂಬ ದೇ.ಜವರೇಗೌಡರ ಅಭಿಪ್ರಾಯವು ಯೋಚಿಸತಕ್ಕದ್ದಾಗಿದೆ.

     ಆದರೂ ಕಿರಿಯ ಹೆಂಡತಿಯ ಮೋಹದಲ್ಲಿ ಮುಂದುಗಾಣದ ದೊರೆ ಕಂಪಿಲನು ರತ್ನಾಜಿಯ ಚಾಡಿಯ ಮಾತಿಗೆ ರಾಮನನ್ನು ಕೊಲ್ಲಿಸಬಯಸಿದ್ದು, ಅದರಲ್ಲೂ ಅನುಭಾವಿಯಾದ ಮಂತ್ರಿಯ ಮಾತನ್ನು ತಿರಸ್ಕರಿಸಿ ಹಠ ಸಾಧನೆ ಮಾಡಿದ್ದು ಕಂಪಿಲನ ಅವಿವೇಕದ ನಿಶ್ಚಿತ ಕುರುಹು. ಆದರೂ ಇಂತಹ ಪ್ರಸಂಗದಲ್ಲಿ ಎಂತಹ ನಿಶಿತಮತಿಯೂ ಮುಂದುಗಾಣದೆ ಹೋಗುತ್ತಾನೆನ್ನಬಹುದು. ಇಲ್ಲಿ ನಿಜವಾದ ಅಪರಾಧಿ ಯಾರೆಂದು ಪತ್ತೆ ಹಚ್ಚುವುದು ತುಂಬಾ ಕಷ್ಟದ ಕೆಲಸ. ಇದರಲ್ಲಿ ಕಂಪಿಲನು ವಿವೇಕ ಭ್ರಷ್ಟನಾದದ್ದು ಆಶ್ಚರ್ಯವಲ್ಲ. ಎಲ್ಲಕ್ಕಿಂತ ಇಲ್ಲಿ ನಮಗೆ ಗೋಚರಿಸುವುದು ರಾಮನ ವಿನಯ ಗುಣ. ದೊರೆಗೆ ಮತ್ತು ಆತನ ಸಾಮ್ರಾಜ್ಯಕ್ಕೆ ಏಕೈಕ ಆಧಾರ ಸ್ತಂಭವೇ ತಾನಾಗಿದ್ದರೂ ಕೀಚಕ ಪ್ರಜ್ಞೆಗೆ ತಾರತಮ್ಯವಾಗಿರುವ ರಾಮನ ಆದರ್ಶ ವಿನಯ ಬೆರಗು ಗೊಳಿಸುವಂತಹುದು. ಇದು ನಿರಹಂಕಾರದ ಚರಮ ಸೀಮೆ. ಈತನು ಸಾಯಲಂಜಿದವನಲ್ಲ. ಆದರೆ ಪರನಾರೀಸೋದರನೆಂಬ ತನ್ನ ಬಿರುದು ಮಾಸದೆ ಸಾಯುವುದಾದರೆ ತಾನು ಕೃತಾರ್ಥ ಎಂಬುದು ಈತನ ಮಾನೋನ್ನತಿಯ ಪ್ರತೀಕವಾದ ಮಾತು.

     ಮಂತ್ರಿ ಬೈಚಪ್ಪನ ಚಾತುರ್ಯವೂ ನೆಲವೂ ಮಾಳಿಗೆಯ ವಾಸವೂ ಮಾಯದ ಶಿರಸ್ಸುಗಳ ಪ್ರಸಂಗವೂ ವಿಸ್ಮಯಕಾರಿಯಾಗಿ ಕುತೂಹಲವನ್ನು ಕೆರಳಿಸುತ್ತಾ ಹೋಗುತ್ತವೆ. ಸುಲ್ತಾನನೊಡನೆ ಕೊನೆಗೆ ಯುದ್ಧದ ಸಂದರ್ಭದಲ್ಲಿ ರಾಮನು ಮಾತಂಗಿಯಿಂದ ಹತನಾಗುವ ರೀತಿ ಭೀಷ್ಮನ ಅಂತ್ಯವನ್ನು ನೆನಪಿಗೆ ತರುತ್ತದೆ. ತನ್ನ ಶುಚಿತ್ವವೇ ಕಾರಣವಾಗಿ ಕಡೆಗೆ ಹೆಂಗಸಿನಿಂದಲೇ ಮರಣ ಹೋಗಬೇಕಾದದ್ದು ವಿಧಿ ವಿಚಿತ್ರ. ಕಥೆ ಐತಿಹಾಸಿಕವಾದರೂ ಪುರಾಣದ ವೀರರು ಮತ್ತೊಮ್ಮೆ ಕಾಣಿಸಿಕೊಂಡಂತೆ ಭಾಸವಾಗುತ್ತದೆ. ‘ಇದರಲ್ಲಿ ಮುಖ್ಯವಾಗಿ ರಾಜಕೀಯ ಚರಿತ್ರೆ, ಮೋಹ ಪ್ರೇಮಗಳ ಕಥೆ, ಪುರಾಣದ ಛಾಯೆ- ಈ ಮೂರು ಎಳೆಗಳನ್ನೂ ಒಟ್ಟಿಗೆ ನೆಯ್ದಿದೆ. ದೇಶಪ್ರೇಮವೂ ಧರ್ಮಾನುರಕ್ತಿಯೂ, ಸ್ವಾತಂತ್ರ್ಯವೂ, ಸಂಪ್ರದಾಯವೂ ಜೊತೆಗೆ ಸೇರಿ ಕಾವ್ಯವನ್ನು ರಮಣೀಯವಾಗಿ ಮಾಡಿವೆ. ಇಂಥ ಕಾವ್ಯ ಯಾರನ್ನು ತಾನೆ ಮೆಚ್ಚಿಸಲಾರರು’ ಎಂಬ ಡಿ.ಎಲ್.ನರಸಿಂಹಾಚಾರ್ಯರ ಮಾತು ಇದಕ್ಕೆ ಸೂಕ್ತವಾಗಿದೆ.                 

     ವಸಂತ ಋತುವಿನಲ್ಲಿ ಆಚರಿಸುವ ಶೂಲದ ಹಬ್ಬದಲ್ಲಿ ಸಂಗಾಯಿ ರತ್ನಾಜಿಗೆ ಮನ್ನೆಯ ರಾಜರ, ಕುಮಾರರ ಪರಿಚಯ ಮಾಡಿಕೊಡುತ್ತಾಳೆ. ಇದು, ಸ್ವಯಂವರ ಶಾಲೆಯಲ್ಲಿ ರಾಜ ಕುಮಾರಿಗೆ, ಸಖಿಯೊಬ್ಬಳು ನೆರೆದ ಅರಸು ಮಕ್ಕಳ ಪರಿಚಯ ನಿರೂಪಿಸಿದ ಪರಿಯಲ್ಲಿದೆ. ರಾಮನಾಥನ ವಯಸ್ಸು ಕಿರಿದು, ವರ್ಚಸ್ಸು ಹಿರಿದು. ಪ್ರಾಯದ ಪೆಂಪಿನೊಡನೆ ನಿಜೇಶನ ನಚ್ಚೂ ಮೇಳೈಸಿದೆ. ಸುಲ್ತಾನನ ಆಗ್ರಹಕ್ಕೆ ಗುರಿಯಾಗಿ ಪಲಾಯನಿಸಿದ ಬಾದೂರನಿಗೆ ಆಶ್ರಯ ಕೊಟ್ಟು ಕಾಪಾಡಿದ; ನೇಮಿಯೆಂಬ ದಂಡಾಧಿಪತಿ ಎರಡು ಸಲ ದಂಡಯಾತ್ರೆ ಮಾಡಿ ರಾಮನ ಪರಾಕ್ರಮದಿಂದ ಪರಾಭವ ಹೊಂದುತ್ತಾನೆ. (ಮಾತಂಗಿಯ ಗೆಲುವು ಉತ್ತರಾರ್ಧದ ಕಥೆ). ಇಂಥ ಚಿಗುರ ಮೀಸೆಯ ಚೆಲುವನನ್ನು ರತ್ನಾಜಿ ಮೋಹಿಸುತ್ತಾಳೆ. ಹೆಣ್ಣು ಗಂಡು ಪರಸ್ಪರ ಪ್ರೇಮಿಸುವುದು ಅಸಹಜವಲ್ಲ. ಆದರೆ ರತ್ನಾಜಿ ವಿವಾಹಿತಳು, ಅದಕ್ಕೂ ಮೀರಿ ರಾಮನ ತಾಯಿಯ ಸ್ಥಾನದಲ್ಲಿರುವವಳು. ಇದೊಂದು ವಿಷಮವಾದ ಪ್ರಸಂಗ. ಬಡವ ಬಲ್ಲಿದ, ಆಳರಸರೆಂಬ ವ್ಯತ್ಯಾಸಗಳಿಲ್ಲದೆ ಜನಜೀವನದಲ್ಲಿ ನಡೆಯಬಹುದಾದ, ಕಾಲ ದೇಶ ಮತ ಭೇದಗಳಿಂದ ಅತೀತವಾದ ಮಾನವ ಸಾಧಾರಣ ಘಟನೆಯಿದು. ಇಂಥ ವಿಷಮ ಪ್ರಸಂಗಗಳು ನಮ್ಮ ಪುರಾಣದಲ್ಲೂ ರಾಮಾಯಣ ಮಹಾಭಾರತಗಳಲ್ಲೂ ಹೊಳಲುಗೊಡುತ್ತವೆ. ಮಹಾಭಾರತದ ಅರ್ಜುನ-ಊರ್ವಶಿಯರ ಕಥೆಯಲ್ಲಿ ಇದರ ಮೂಲಬಿಂಬವೇ ಕಾಣುತ್ತದೆ. ಇಂದ್ರನ ಅಂಶದ ಮಗ ಅರ್ಜುನ, ಊರ್ವಶಿ ಇಂದ್ರನ ಪ್ರಿಯಳು. ಹೀಗಿದ್ದೂ ಊರ್ವಶಿ ಇಂದ್ರನನ್ನು ಕ್ಷಣಕಾಲ ಮರೆತು ಅರ್ಜುನನಲ್ಲಿ ಅನುರಕ್ತಳಾಗುತ್ತಾಳೆ, ಮೋಹ ಪರವಶಳಾಗುತ್ತಾಳೆ. ಕಾಮೋದ್ರೇಕದ ಭರತದಲ್ಲಿ ಅವಳು ಕೊಚ್ಚಿ ಬಂದಾಗ ಅರ್ಜುನ ವಿವೇಕ ಸಂಯಮದ ಎಚ್ಚರ ತೋರುತ್ತಾನೆ. ಈ ಕಥೆಯನ್ನು ಕವಿ ನೆನಸಿಕೊಂಡು ರಾಮನಾಥನ ಕಥೆಗೆ ಪೌರಾಣಿಕ ಹೊದಿಕೆ ಹಾಕುತ್ತಾನೆ. ಮಾನವರ ಮನೋವ್ಯಾಪಾರಗಳನ್ನು ಸೂಕ್ಷ್ಮವಾಗಿ ದರ್ಶಿಸಿದ ಕವಿ ಲೋಕಾನುಭವದಿಂದ ಅದನ್ನು ರಸವತ್ತಾಗಿ ಪ್ರದರ್ಶಿಸಿದ್ದಾನೆ.

 ಕುಮಾರರಾಮನ ಸಾಂಗತ್ಯ: ಇತಿಹಾಸ-ಪುರಾಣ: ಮನುಷ್ಯರ ನಡವಳಿಕೆಗಳಲ್ಲಿ, ನಿಡುಬಾಳಿನಲ್ಲಿ ಅದೃಷ್ಟವಾದ ಶಕ್ತಿಯೊಂದರ ಕೈವಾಡವಿರುತ್ತದೆಂಬುದನ್ನು ತೋರಿಸುವುದಕ್ಕಾಗಿ ಕಾವ್ಯದಲ್ಲಿ ಪುರಾಣದ ನೆರಳನ್ನು ಬೆಳೆಸಿರಬಹುದು. ಅಂದಿನ ಅರ್ಜುನನೇ ಇಂದಿನ ರಾಮನಾಥ, ಗಣನಾಥನಾದ ಅರ್ಜುನ ಶಿವನ ಅಣತಿ ತಳೆದು ನೆಲದಲ್ಲಿ ರಾಮನಾಥನಾಗಿ ಅವತರಿಸಿದ್ದಾನೆ. ಆದ್ದರಿಂದ ರಾಮನಾಥ ಕಲಿಕಾಲಪಾರ್ಥ. ಅದರಂತೆ ಅಂದಿನ ಊರ್ವಶಿ ಇಂದು ರತ್ನಾಜಿಯಾಗಿ ಹುಟ್ಟಿದ್ದಾಳೆ. ಹಿಂದಿನ ಘಟನೆಯೇ ಪುನ: ಸಂಭವಿಸಿ ಅರ್ಜುನಾಂಶದ ರಾಮನಾಥ ಗೆದ್ದು ಊರ್ವಶಿಯ ಅಂಶಳಾದ ರತ್ನಾಜಿ ಪರಾಜಿತಳಾಗಿದ್ದಾಳೆ. ಹೀಗೆಯೇ ಹಿಂದೆ ಅರ್ಜುನನನ್ನು ಅಂತರಂಗದಲ್ಲಿ ಅತಿಯಾಗಿ ಪ್ರೀತಿಸುತ್ತಿದ್ದ ದ್ರೌಪದಿ ಇಂದು ಅಲ್ಲಾವುದೀನ ಸುಲ್ತಾನನ ಮಗಳಾಗಿ ಹುಟ್ಟಿ ರಾಮನನ್ನು ಪ್ರೀತಿಸಿದ್ದಾಳೆ. ಇದೇ ರೀತಿ ಅಂದು ಮಹಾಭಾರತದ ಯುದ್ಧವೆಲ್ಲ ಮುಗಿದಾಗ ಭೀಮಾರ್ಜುನರನ್ನು, ಕಡು ರೋಷದಿಂದ ಕೌರವನ ತಾಯಿ ಗಾಂಧಾರಿ ತನ್ನ ತೋಳ ತಕ್ಕೆಯಲ್ಲಿ ನುಚ್ಚು ನುರಿಮಾಡಲು ಹವಣಿಸಿದಳಾದರೂ ಸಾಧ್ಯವಾಗಲಿಲ್ಲ. ಈಗ ಗಾಂಧಾರಿಯೇ ಮಾತಂಗಿಯಾಗಿ ಜನಿಸಿ ಅಂದಿನ ಹಗೆಯನ್ನು ತೀರಿಸಿಕೊಂಡಳು. ಅಂದಿನ ನಿವಾತಕವಚರು ಇಂದು ತುರುಷ್ಕರಾಗಿದ್ದಾರೆ. ಉಚ್ಛೈಶ್ವವವೆಂಬ ದೈವಾಶ್ವ ಬೊಲ್ಲ ಎಂಬ ಕುದುರೆಯಾಗಿದೆ. ಕುಮಾರರಾಮನ ರುಂಡ ಮುಂದೆ ಲಿಂಗಾಕೃತಿಯಾಯಿತು. ಆದ್ದರಿಂದ ಆತ ಅವತಾರ ಪುರುಷ. ಈ ರೀತಿಯಾಗಿ ಕವಿ ಪರಿಭಾವಿಸಿ ಪ್ರಕೃತದ ಕಾವ್ಯದ ಕಥೆಗೆ ಪುರಾಣದ ಕಲ್ಪನೆಯ ಕವಚ ತೊಡಿಸಿದ್ದಾನೆ. ಇದರ ಔಚಿತ್ಯವನ್ನು ಪ್ರಶ್ನಿಸಲು ಅವಕಾಶವಿದ್ದರೂ ಕಾವ್ಯಾಸ್ವಾದನೆಗೆ ಭಂಗಬರುವುದಿಲ್ಲವೆಂಬುದನ್ನು ಮರೆಯುವಂತಿಲ್ಲ. ಜತೆಗೆ ಅಲ್ಲಲ್ಲಿ ಪುರಾಣ ಪ್ರಪಂಚ ಸದೃಶವಾದ ಇಂದ್ರಜಾಲದ ಪವಾಡಗಳೂ ನುಸುಳಿವೆ. ಇದರಿಂದ ಕಾವ್ಯದಲ್ಲಿ ಅದ್ಭುತ ರಸ ಪ್ರದರ್ಶನಕ್ಕೆ ಅವಕಾಶ ಒದಗಿರುವುದನ್ನು ಕಾಣಬಹುದಾಗಿದೆ.

 ಕುಮಾರರಾಮನ ಪಾತ್ರವಿಶ್ಲೇಷಣೆ :     ಕುಮಾರರಾಮನ ಮಾಹಾತ್ಮೆಗೆ ಆತನ ಕಲಿತನ ಎಷ್ಟರಮಟ್ಟಿಗೆ ಕಾರಣವೋ ಆತನ ಪರದಾರ ಸೋದರತ್ವವೂ ಅಷ್ಟೇ ಕಾರಣವಾಗಿದೆ ನಂಜುಂಡನ ಕುಮಾರರಾಮನು ಈ ಗುಣವನ್ನು ಗಣಪದವಿಯಲ್ಲಿರುವಾಗಲೇ ವ್ಯಕ್ತಪಡಿಸುತ್ತಾನೆ. ಇನ್ನು ಆತನ ಇಡೀ ಜೀವನವೇ ಈ ಮಹಿಮೆಗೆ ಮೀಸಲಾಗುತ್ತದೆ. ಕುಮಾರರಾಮನು ಸೌಂದರ್ಯಕ್ಕೂ ಹೆಸರುವಾಸಿಯಾಗಿ ಚೆನ್ನಿಗರಾಮನೆನಿಸಿದ್ದನು. ಆತನನ್ನು ಕಂಡ ಹೆಂಗಸರು ವ್ಯಾಮೋಹಗ್ರಸ್ತರಾಗಿ ಮಕ್ಕಳು, ಮರಿ, ಮನೆ, ಮಠಗಳನ್ನು ಮರೆಯುವುದು ಮಾತ್ರವಲ್ಲದೆ ಕೈಹಿಡಿದ ಗಂಡಂದಿರನ್ನೇ ಮರೆಯುತ್ತಿದ್ದರು. ಅಷ್ಟೇ ಅಲ್ಲ; ಅಂಥವರನ್ನು ಕೈಹಿಡಿಯುವಂತೆ ಮಾಡಿದ ವಿಧಿಯನ್ನೂ ನಿಂದಿಸುತ್ತಿದ್ದರು. ಪರಸ್ತ್ರೀಯರು ತನಗೆ ತಾಯಿಯ ಸಮಾನವೆಂದೂ ಅಕ್ಕತಂಗಿಯರ ಸಮಾನವೆಂದೂ ದೃಢವಾಗಿ ನಂಬಿದ್ದನು. ಕುಮಾರರಾಮ. ಕಂಪಿಲನು ರತ್ನಾಜಿಯನ್ನು ಮದುವೆಯಾಗಿ ಮನೆಗೆ ಕರೆತಂದ ದಿನವೇ ಹರಿಯಾಲದೇವಿ ಮಗನ ಕಾಲಿಗೆ ಪರದಾರಸೋದರನೆಂಬ ಪೆಂಡೆಯವನ್ನು ತೊಡಿಸಿ ಆತನಿಂದ ವಾಗ್ದಾನವನ್ನು ಪಡೆಯುವಳು. ಕುಮಾರರಾಮನು ಹೊತ್ತು ಹೋಗದೆ ಮುತ್ತಿನ ಚೆಂಡನ್ನು ಆಡಲು ಬಯಸಿ ತಾಯಿಯ ಬಳಿ ಬರಲು ಆತನನ್ನು ಆಕೆ ಪರಿಪರಿಯಾಗಿ ಕೋರುವಳು. ಪರಸ್ತ್ರೀಯರ ಕಣ್ಣು ಮಗನ ಮೇಲೆ ಬಿದ್ದು ಕೆಡುಕಾದೀತೆಂದು ಆಕೆಯ ಆತಂಕ. ರಾಮನು ತನ್ನ ಶಪಥವನ್ನು ಹೇಳಿದರೂ ಅವಳಿಗೆ ಸಮಾಧಾನವಿಲ್ಲ. ಸವತಿ ರತ್ನಿಯ ಕಣ್ಣು ತನ್ನ ಮಗನ ಮೇಲೆ ಬಿದ್ದಿದೆಯೆಂದು ಆಕೆಯ ಶಂಕೆ ಬಲವಾಗಿದೆ. ಕುಮಾರರಾಮನಿಗೆ ಪರಸ್ತ್ರೀಯರು ಮಾರಕವಾಗಿ ಪರಿಣಮಿಸುವುದಕ್ಕಿಂತಲೂ ಆತನ ಚಿಕ್ಕಮ್ಮನೇ ಮಾರಿಯಾಗಿ ಪರಿವರ್ತನೆಯಾಗುವುದು ಆತನ ದುರದೃಷ್ಟವೇ ಸರಿ. ಆತನನ್ನು ಕಂಡಕ್ಷಣದಿಂದ ವಿರಹ ವ್ಯಾಕುಲಳಾಗಿದ್ದ ರತ್ನಿ, ರಾಮನು ಚೆಂಡನ್ನು ಬೇಡಲು ಬಂದಾಗ ಆತನನ್ನು ಮರುಳು ಮಾಡುವ ಪ್ರಸಂಗ ಕಾವ್ಯದಲ್ಲಿ ಅದ್ಭುತವಾಗಿ ಚಿತ್ರಿತವಾಗಿದೆ. ಕುಮಾರರಾಮನು ಚಿಕ್ಕಮ್ಮನ ವರ್ತನೆಗೆ ಮೊದಮೊದಲು ನಾಚುವನು; ಅನಂತರ ಜುಗುಪ್ಸೆಗೊಂಡು ಆಕೆಯನ್ನು ತಿರಸ್ಕರಿಸಿ ತೆರಳುವನು. ಆಕೆಯ ದೂರಿನ ಪರಿಣಾಮವಾಗಿ ತನ್ನ ತಲೆಯನ್ನೇ ತೆರಬೇಕಾಗಿ ಬಂದಾಗ ಆತನಿಗೆ ಸಾಯಲು ಸಂಕಟವಿಲ್ಲ. ಮಂತ್ರಿ ಬೈಚಪ್ಪನನ್ನು ತನಗೆ ಬಂದಿರುವ ಅಪಖ್ಯಾತಿಯನ್ನು ಹೇಗಾದರೂ ಮಾಡಿ ಹೋಗಲಾಡಿಸಬೇಕೆಂದು ಬೇಡಿಕೊಳ್ಳುವನು. ಅಂತೂ ಕುಮಾರರಾಮನು ತನ್ನ ಸದ್ಗುಣಕ್ಕೆ ಪ್ರತಿಯಾಗಿ ಅಜ್ಞಾತವಾಸವನ್ನು ಅನುಭವಿಸಬೇಕಾಗಿ ಬಂದಿತು. ಕಡೆಗೂ ಈ ವೀರನಿಗೆ ಸ್ತ್ರೀಯೇ ಕಂಟಕಳಾಗಿ ಪರಿಣಮಿಸುವಳು. ಅವನ ಪರಸ್ತ್ರೀ ಗೌರವ ಭಾವನೆಯೇ ಅವನ ಸಾವಿಗೆ ಕಾರಣವಾಗುವುದು. ಮಾತಂಗಿಗೆ ತಾನು ತೋರಿಸಿದ ಔದಾರ್ಯವೇ ಅವನಿಗೆ ಉರುಳಾಗುವುದು. ಆದರೆ, ಕುಮಾರರಾಮನ ಅಕಾಲಮರಣ ಅವನಿಗೆ ಭೂಷಣವಾಗಿರುವಂತೆ ಅವನ ಸದ್ಗುಣದ ಪ್ರತಿಫಲವಾದ ಈ ದುರಂತವೇ ಅವನ ಹೆಗ್ಗಳಿಕೆಗೆ ಕೈಗಂಬವಾಗಿದೆ. ಕುಮಾರರಾಮನು ಕಲಿಗಳಲ್ಲಿ ಕಲಿ; ಶುಚಿಗಳಲ್ಲಿ ಶುಚಿ ಯಾಗಿ ಈ ಕಾವ್ಯದಲ್ಲಿ ಕಂಡು ಬರುತ್ತಾನೆ.

     ಈ ತರುಣವೀರನಲ್ಲಿ ವಿದಿತವಾಗುವ ಇತರ ಗುಣಗಳಲ್ಲಿ ಆತನು ಮರೆಹೊಕ್ಕವರಿಗೆ ತೋರುವ ಔದಾರ್ಯ ಹೆಸರುವಾಸಿಯಾಗಿದೆ. ಅನ್ಯಮತೀಯನಾದರೂ ಆಶ್ರಯವನ್ನು ಆಶಿಸಿ ಬಂದ ಬಾದೂರನಿಗೆ ಆತನು ತೋರುವ ಸೌಜನ್ಯ ಸುತ್ತ್ಯಾರ್ಹವಾದುದು. ಆತನ ದೆಸೆಯಿಂದ ಮಹಾವಿಪತ್ತು ಒದಗುವುದೆಂದು ಹಿತೈಷಿಯಾದ ಬೈಚಪ್ಪನು ಸಕಾಲದಲ್ಲಿ ಎಚ್ಚರಿಸಿದರೂ ಹಿಂದೂಧರ್ಮ ಹಿಡಿದೆತ್ತಿ ಕುಮಾರರಾಮನು ಬಾದೂರನಿಗೆ ಆಶ್ರಯವನ್ನು ನೀಡುವನು. ಅನತಿ ಕಾಲದಲ್ಲಿಯೇ ಬಾದೂರನು ಕಂಪಿಲ ಮತ್ತು ಕುಮಾರರಾಮರ ಅನುಗ್ರಹಕ್ಕೆ ಪಾತ್ರನಾಗುವನು. ಕಡೆಯ ಕಾಳಗದಲ್ಲಿ ತನ್ನ ತಂದೆ ತಾಯಿಗಳೊಂದಿಗೆ ಬಾದೂರನನ್ನೂ ಸುರಕ್ಷಿತವಾದ ಸ್ಥಳಕ್ಕೆ ಕಳುಹಿಸಬೇಕೆಂದು ರಾಮನು ಸೂಚಿಸುವನು. ಅನಂತರ ಬಾದೂರನ ಮರಣವನ್ನು ಕಂಡಾಗ, ಆತನನ್ನು ರಕ್ಷಿಸಲು ಸಾಧ್ಯವಾಗದೆ ಹೋದುದಕ್ಕಾಗಿ ಸಂಕಟಪಡುವನು. ಇದೇ ರೀತಿ, ಕುಮಾರರಾಮನಿಗೂ ದೇವಿಶೆಟ್ಟಿಯ ಲಿಂಗನಿಗೂ ಆದ ಸ್ನೇಹ ಎಂದೆಂದಿಗೂ ಮರೆಯಲಾಗದ್ದು. ಪೂರ್ವ ಜನ್ಮದ ಅಣ್ಣತಮ್ಮಂದಿರಂತೆ ಅವರು ಅನಿರೀಕ್ಷಿತವಾಗಿ ಸಂಧಿಸುವರು. ರಾಮನನ್ನು ಕಂಡಕೂಡಲೇ ದೇವಿಶೆಟ್ಟಿ ತನ್ನನ್ನೇ ನಿವೇದಿಸಿಕೊಳ್ಳುವನು. ರುದ್ರನ ಆಗ್ರಹವನ್ನು ಎಣಿಸದೆ ಬೊಲ್ಲನನ್ನು ಪಡೆಯಲು ನೆರವಾಗುವನು. ಇವರಿಬ್ಬರ ಈ ಮೈತ್ರಿ ಬಹು ಪ್ರಶಂಸಾರ್ಹವಾದುದು. ರಾಮನ ಒಂದು ಭುಜ ಕಾಟಣ್ಣನಾದರೆ ಮತ್ತೊಂದು ಭುಜವೇ ದೇವಿಶೆಟ್ಟಿಯ ಲಿಂಗ. ಕಡೆಯ ಕಾಳಗದಲ್ಲಿ ಈತನಿಗೆ ಮರಣ ಪ್ರಾಪ್ತವಾಗಲು ರಾಮನಿಗೆ ಸಹೋದರನೊಬ್ಬನನ್ನು ಕಳೆದುಕೊಂಡಂತಾಗುವುದು. ಇತರರ ವಿಷಯದಲ್ಲಿಯೇ ರಾಮನ ಅಭಿಮಾನ ಹೀಗೆ ತುಂಬುಹೊಳೆಯಂತೆ ಹರಿಯುವಂತಿದ್ದರೆ ತನ್ನ ಒಡನಾಡಿಯೂ ಒಡಹುಟ್ಟಿದವನೂ ಆದ ಕಾಟಣ್ಣನನ್ನು ಕಂಡರೆ ಆತನ ವಿಶ್ವಾಸ ಹೇಳತೀರದು. ರಾಮನ ದೈವಭಕ್ತಿ, ಮಾತಾಪಿತೃಗಳಲ್ಲಿನ ಸದ್ಭಾವನೆ ಮೊದಲಾದವುಗಳನ್ನು ಬೆಳಸಬೇಕಾಗಿಲ್ಲ. ತನಗೆ ಮೃತ್ಯುಪ್ರಾಯಳಾದ ರತ್ನಿ ಆತ್ಮಹತ್ಯೆಯನ್ನು ಮಾಡಿಕೊಂಡಳೆಂದು ಕೇಳಿದಾಗ ರಾಮನು ಪಶ್ಚಾತ್ತಾಪಪಡುವುದು ಅವನ ಹೃದಯ ವೈಶಾಲ್ಯಕ್ಕೆ ಹೆಗ್ಗುರುತು. ದೇ.ಜ.ಗೌ. ಅವರು ಹೇಳಿರುವ ʻ  ಕುಮಾರ ರಾಮನು ಯುವರಾಜನಾದರೂ ಚಕ್ರವರ್ತಿಯಂತೆ ಪ್ರಸಿದ್ಧಿ ಪಡೆದವನು. ವೀರನಾದರೂ ತಂದೆ ತಾಯಿಯರ ಆಜ್ಞಾಧಾರಕನಾಗಿ, ಒಡ ಹುಟ್ಟಿದವರ ಮತ್ತು ಪರಿಜನರ ಕಣ್ಣಿಗೆ ತಂಪಾಗಿ ಬಾಳಿದನು. ಕಂದರ್ಪ ಸುಂದರನಾದರೂ ಜಿತೇಂದ್ರಿಯನಾಗಿ ಶುಚಿಯಾಗಿ ಜೀವನ ನಡೆಸಿದವನು. ಭೂತದಯಾ ಪಶ್ಚಾತ್ತಾಪವುಳ್ಳವನಾದರೂ ನಾಡಿನ ಕ್ಷೇಮಕ್ಕಾಗಿ ಆತ್ಮ ರಕ್ಷಣೆಗಾಗಿ ಹಗೆಗಳೊಡನೆ ಕಾದಾಡಿದವನು. ಅಂಥ ಮಹಾನುಭಾವ ಕನ್ನಡ ಜನರ ಹೃನ್ಮಂದಿರದಲ್ಲಿ ಪೂಜ್ಯ ಸ್ಥಾನವನ್ನು ಪಡೆದಿದ್ದರಲ್ಲಿ ಆಶ್ಚರ್ಯವಿಲ್ಲ.ʼ ಎಂಬ ಮಾತು  ಒಪ್ಪತಕ್ಕದ್ದಾಗಿದೆ. ಒಟ್ಟಿನಲ್ಲಿ ಕುಮಾರರಾಮನ ಪಾತ್ರ   ನಂಜುಂಡನ ಕೃತಿಯಲ್ಲಿ ಪುಷ್ಟವಾಗಿ ನಿರೂಪಿತವಾಗಿದೆ. ಆತನನ್ನು ಅವತಾರಪುರುಷನೆಂದು ಭಾವಿಸಿದಾಗ್ಗೂ ಆತನು ಮಾನವ ಸಹಜವಾದ ಹಲವಾರು ಗುಣಗಳನ್ನು ಒಳಗೊಂಡು ಜೀವಂತವಾಗಿ ತೋರಿಬರುತ್ತಾನೆ. ಆತನ ಕಲಿತನ, ಶುಚಿತ್ವ ಮತ್ತು ಮೈತ್ರಿಗಳು ಅವನ ಜೀವನದ ಮುಖ್ಯ ಸೂತ್ರಗಳು ಎನ್ನಬಹುದು. ಆತನ ದಾಂಪತ್ಯ ಜೀವನವನ್ನು ಇಲ್ಲಿ ಬಿಂಬಿಸದಿದ್ದರೂ, ಅದು ಆಗಾಗ್ಗೆ ಮಿಂಚಿನಂತೆ ಬೆಳಗುವುದನ್ನು ನಾವು ನೋಡಬಹುದು.

          ಕಾವ್ಯದಲ್ಲಿ ಬರುವ ಪಾತ್ರಗಳಲ್ಲಿ ಕಂಪಿಲರಾಯ, ಹರಿಹರದೇವಿ, ಕುಮಾರರಾಮ, ರತ್ನಾಜಿ, ಸಖಿ ಸಂಗಾಯಿ (ಸಂಗಿ), ಕಾಟಣ್ಣ, ಮಾತಂಗಿ (ಪೂರ್ವಭವದಲ್ಲಿ ಗಾಂಧಾರಿ), ಸುರತಾಳನ ಮಗಳು (ಬಾಚಮ್ಮ, ಹಿಂದೆ ದ್ರೌಪದಿ), ಕುಮಾರರಾಮನ ಮಗ ಜಟ್ಟಂಗಿರಾಮ, ಬೈಚಪ್ಪ ಮೊದಲಾದವರು ಓದುಗರ ಚಿತ್ತ ಭಿತ್ತಿಯಲ್ಲಿ ಅಚ್ಚೊತ್ತಿದಂತೆ ನಿಲ್ಲುತ್ತಾರೆ. ಕುಮಾರರಾಮನ ಕಥೆಯಲ್ಲಿನ ಜೀವಂತವಾದ ಪಾತ್ರಗಳಲ್ಲಿ ಅವನ ಕುದುರೆ ಬೊಲ್ಲ ಕೂಡ ಒಂದೆಂಬುದನ್ನು ಮೊದಲೇ ನೆನೆಯಬೇಕು. ಬೊಲ್ಲ ಎಂಬ ಹೆಸರಿನ ಈ ದಿವ್ಯಾಶ್ವ ಕಥಾನಾಯಕನ ಅವಿಭಾಜ್ಯ ಅಂಗ. ಅದರ ಸಮಯೋಚಿತ ಚಾತುರ್ಯ ವರ್ತನೆ ಪ್ರಭುನಿಷ್ಠೆ ಅಂತ:ಕರಣವನ್ನು ಮಿಡಿಯುತ್ತದೆ. ನಾಯಕನಂತೆ ಕುದುರೆಯೂ ಕಡೆ ಕಡೆಗೆ (ಕವಿ) ಜನ ಕಲ್ಪನೆಯಲ್ಲಿ ಪೌರಾಣಿಕ ಪ್ರಾಣಿಯಾಗಿ ಪರಿಣಮಿಸಿದೆ. ಉಚ್ಛೈಶವಸ್ಸಿನ ಅಂಶವಾದ ಬೊಲ್ಲಗುದುರೆ ತನ್ನ ಒಡೆಯರ ಕರುಣೆಯಿಂದ ಕಲ್ಲಾಯಿತೆಂಬ ಕಥಾ ವ್ಯತ್ಯಾಸಕ್ಕೂ ಈ ಮಮತೆಯೇ ಕಾರಣ. ಈ ಶ್ರೇಷ್ಠ ಅಶ್ವ, ಕಾದಂಬರಿ ಕಾವ್ಯದ ಇಂದ್ರಾಯುಧದಂತೆ ಪಂಪ ನಾರಣಪ್ಪರ ಕಾವ್ಯಗಳ ಸುಪ್ರತೀಕ ಗಜವನ್ನೂ ನೆನಪಿಗೆ ತರುತ್ತದೆಂದು ವಿದ್ವಾಂಸರ ಮಾತು ಇಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ.

     ಕಂಪಿಲರಾಯ ಆದರ್ಶಪ್ರಭು, ಪ್ರಜೆಗಳ ಕ್ಷೇಮ ಚಿಂತಕ. ಕುಮಾರನಲ್ಲಿ ಕಟ್ಟಕ್ಕರೆ. ಅಪರಾಧಿ ಮಗನೇ ಆದರೂ ಶಿಕ್ಷಾರ್ಹನೆಂಬುದು ಅವನ ಖಚಿತಾಭಿಪ್ರಾಯ (13-187ರಿಂದ 198). ಆದರೆ ದೊರೆ ದುಡುಕಿ. ಅಲ್ಲದೆ ಇತಿಹಾಸದಲ್ಲಿ ತಿಳಿದು ಬರುವ ವೀರ ಸೇನಾನಿ ಕಂಪಿಲರಾಯ, ಕನ್ನಡ ಕುಮಾರರಾಮ ಚರಿತೆ ಸಂಬಂಧಿಯಾದ ಕಾವ್ಯಗಳಲ್ಲಿ ಮಂಕಾಗಿದ್ದಾನೆ, ಕಿರಿಯ ರಾಣಿ ರತ್ನಾಜಿಯ ಮೋಹದಲ್ಲಿ ಮರೆಯಾಗಿದ್ದಾನೆ. ಕುಮಾರನ ಪರಾಕ್ರಮದ ಮುಂದೆ ಕಂಪಿಲನ ಸಾಹಸ ಪೇಲವವಾಗುತ್ತದೆ. ಮಂತ್ರಿ ಬೈಚಪ್ಪ ಅಪರೂಪದ ನಿಷ್ಠಾವಂತ ಸಚಿವೋತ್ತಮ; ವಿಜಯನಗರದ ಕೃಷ್ಣದೇವರಾಯನ ಮಂತ್ರಿ ಅಪ್ಪಾಜಿಯನ್ನು ಹೋಲುತ್ತಾನೆ. ಅವನ ಚಾತುರ್ಯ, ನಾಡನ್ನೂ ದೊರೆಯನ್ನೂ ಕುಮಾರನನ್ನು ಕಾಪಾಡಿತು. ಅವನ ಸಮಯಸ್ಪೂರ್ತಿ ಸ್ವಾಮಿ ಭಕ್ತಿ ಆಲೋಚನಾ ಶಕ್ತಿ ಸ್ನೇಹ ಸೌಜನ್ಯ  ಶೌರ್ಯಾದಿಗಳು ಎಲ್ಲ ಕಾಲಕ್ಕೂ ಜವಾಬ್ದಾರಿ ಸ್ಥಾನದಲ್ಲಿ ಇರುವವರಿಗೊಂದು ಮೇಲ್ಪಂಕ್ತಿ. 

 ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳು:

   ನಂಜುಂಡನ ಕುಮಾರರಾಮ ಸಾಂಗತ್ಯವು ಸಮಕಾಲೀನ ಜೀವನವನ್ನು ಪ್ರತಿಬಿಂಬಿಸುವ ದೃಷ್ಟಿಯಿಂದ ಅತ್ಯುತ್ತಮ ಕೃತಿ ಎನ್ನಬಹುದು. ಐತಿಹಾಸಿಕ ಕಾವ್ಯವಾದ್ದರಿಂದ ಅಂದಿನ ಜನ ಜೀವನವನ್ನು ಚಿತ್ರಿಸಲು ಇದರಲ್ಲಿ ಕವಿಗೆ ಶ್ರೇಷ್ಠ ಅವಕಾಶವೊದಗುತ್ತದೆ. ನಂಜುಂಡನು ಈ ಸುವರ್ಣಾವಕಾಶವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡಿದ್ದಾನೆ. ಆ ಕಾಲದ ಜನರ ಸಂಸ್ಕೃತಿಯ ಹಿರಿಮೆ, ಆಚಾರ ವ್ಯವಹಾರಗಳು, ರಸಿಕತೆ, ಧ್ಯೇ, ದರ್ಶನಗಳೂ ಇಲ್ಲಿ ಮುದ್ರೆಯೊತ್ತಿ ನಿಂತಿವೆ. ವಿವಾಹ ಸಂದರ್ಭಗಳು, ಸ್ತ್ರೀಪುರುಷರ ವೇಷಭೂಷಣಗಳು, ಆಭರಣಗಳು, ಅಲಂಕಾರ ಸಾಧನಗಳು, ಹಬ್ಬಹುಣ್ಣಿಮೆಗಳು, ಉತ್ಸವಗಳು, ನಂಬಿಕೆಗಳು, ಗಾದೆಮಾತುಗಳು ಮುಂತಾದ ಮಧ್ಯಕಾಲೀನ ಕಾಲದ ಕರ್ಣಾಟಕದ ಸಂಸ್ಕೃತಿಯ ಸತ್ಯಕಥನವನ್ನು ನಂಜುಂಡನಂತಹ ಕವಿಗಳ ಕೃತಿಗಳಲ್ಲಿಯೇ ಕಾಣಬೇಕಾಗುತ್ತದೆ. ಇದಲ್ಲದೆ ಅಂದಿನ ಯುದ್ಧ ಕ್ರಮಗಳು, ಸೇನಾತಂತ್ರಗಳು, ಯುದ್ಧ ಸಾಧನಗಳು, ವಾಹನಗಳು, ಆಯುಧಗಳು, ಯುದ್ಧನೀತಿ ಮುಂತಾದ ಅಂಶಗಳನ್ನು ಅರಿಯಲು ನಂಜುಂಡನ ಕೃತಿ ಅಪೂರ್ವ ಆಕರವಾಗಿದೆ. ಅಚ್ಚಗನ್ನಡತನವನ್ನು ಪ್ರತಿನಿಧಿಸುವ ಜಾತಿ ಕಸುಬು ಮುಂತಾದುವನ್ನು ಸೂಚಿಸುವ ನಾಮವಾಚಕಗಳು ಕನ್ನಡ ಜನಪದ ಜೀವನವನ್ನು ಹಸಿಹಸಿಯಾಗಿ ಚಿತ್ರಿಸುತ್ತವೆ. ಗಿಂಡಿಯ ಲಕ್ಕ, ಗಂಟೆಯ ನಾಗರಂಗುಗ, ಕಂಚುಗಾರರ ತಿಪ್ಪ ಇತ್ಯಾದಿ ಹೆಸರುಗಳ ಸಹಜತೆಯನ್ನು ಇಲ್ಲಿ ಗಮನಿಸಬಹುದು. ಅಂದಿನ ಜನರ ಬೇಟೆಯ ಹವ್ಯಾಸ ಮತ್ತು ವಿಧಾನಗಳು, ಶೂಲದ ಹಬ್ಬ, ಸ್ವಪ್ನಫಲ ಸಂಬಂಧಿ ನಂಬಿಕೆಗಳು, ಸಹಗಮನದಿಂದ ಮಾಸತಿಯಾಗುವ ಪದ್ಧತಿ ಇತ್ಯಾದಿಯಾಗಿ ನಂಜುಂಡನ ಕೃತಿ ಅಂದಿನ ಜನಜೀವನದ ಯಥಾರ್ಥ ದರ್ಶನವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ.

ಕನ್ನಡಕಾವ್ಯ ಪರಂಪರೆ ಮತ್ತು ನಂಜುಂಡ :

     ನಂಜುಂಡನು ತನ್ನ ಹಿಂದಿನ ಕನ್ನಡ ಕವಿಗಳಿಂದ ಪ್ರಭಾವಿತನಾಗಿರುವ ಅಂಶ ಆತನ ಕಾವ್ಯದ ಉದ್ದಕ್ಕೂ ಕಂಡು ಬರುತ್ತದೆ. ಹಳೆಯ ಕವಿಗಳ ಕಾವ್ಯಗಳಿಂದ ಆಯ್ದುಕೊಂಡ ನುಡಿಗಟ್ಟುಗಳೂ ಉಪಮಾನಗಳೂ ಕಾವ್ಯದ ಉದ್ದಕ್ಕೂ ಸಿಕ್ಕುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಗದುಗಿನ ಭಾರತದ ಉಪಮಾ ವೈಖರಿಯೂ ವರ್ಣನಾ ವಿಲಾಸವೂ ನಂಜುಂಡನಲ್ಲಿ ಪದೇ ಪದೇ ಪ್ರತಿಧ್ವನಿತವಾಗುತ್ತದೆ. ‘ಗಂಗನ ಗಂಗೆಯ ಪರಿಕಾಲ್ಗಳ ಪರಿಯಂತೆ’-‘ಗಂಗನ ಗಂಗಾನದಿಯ ಕಾಲುವೆ ತೆಗೆದರೆನೆ’ (ದ್ರೋಣಪರ್ವ 3-4) ಎಂಬಂತಹ ಹಲವು ಉದಾಹರಣೆಗಳನ್ನು ಕೊಡಬಹುದು. ಹಳೆಯಕವಿಗಳ ವರ್ಣನಾ ವೈಖರಿ ಸಾಂಗತ್ಯದಲ್ಲಿ ಹೊಸರೂಪ ಪಡೆದು ಈತನಲ್ಲಿ ಎದ್ದು ಕಾಣುವ ಮಹಾಭಾರತದ ಪ್ರಸಂಗಗಳ ಸಮಯೋಚಿತ ಉದಾಹರಣೆಗಳು ಉದ್ದಕ್ಕೂ ಎದುರಾಗುತ್ತವೆ. ಸಾಂಗತ್ಯವನ್ನು ಪ್ರೌಢಕಾವ್ಯಕ್ಕೆ ಬಳಸಿದ ಕವಿ ಎಂಬ ಕೀರ್ತಿಯಲ್ಲದೆ, ಸಾಧ್ಯವಾದ ಮಟ್ಟಿಗೂ ಅದನ್ನು ನವರಸ ವಾಹಕವನ್ನಾಗಿಸುವಲ್ಲಿ ಕವಿ ಅಪೂರ್ವ ಯಶಸ್ಸು ಗಳಿಸಿದ್ದಾನೆ. ದುರ್ಬಲರ ಕೈಯಲ್ಲಿ ಸಾಂಗತ್ಯದ ಮಟ್ಟು ಜಾಳು ಜಾಳಾಗುತ್ತದೆ. ಆದರೆ ಸಮರ್ಥ ಕವಿಗಳಲ್ಲಿ ಸೊಗಸು ಬೀರುತ್ತದೆ. ವೀರರೌದ್ರರಸಗಳ ಪ್ರತಿಪಾದನೆಯಲ್ಲಿ ಒಗ್ಗದ ಈ ಛಂದಸ್ಸನ್ನು ಆದಷ್ಟು ಮಟ್ಟಿಗೆ ಹುರಿಯೇರಿಸಲು ಕವಿ ಮಾಡಿರುವ ಪ್ರಯತ್ನ ಮೆಚ್ಚಬಹುದಾಗಿದೆ. ಆದ್ದರಿಂದ ಡಿ.ಎಲ್.ನರಸಿಂಹಾಚಾರ್ ಹೇಳುವಂತೆ ‘ಯಾವ ಕಡೆಯಿಂದ ನೋಡಿದರೂ ಈ ಕಾವ್ಯ ಉತ್ಕೃಷ್ಟವಾದದ್ದೆಂದು ಹೇಳಬಹುದು’ ಎಂಬ ಮಾತು ಸತ್ಯ.

   ಕುಮಾರರಾಮ ಸಾಂಗತ್ಯದಲ್ಲಿ ನಂಜುಂಡನ ಸಾಧನೆ ಸಿದ್ಧಿಗಳು ಅಪೂರ್ವವಾದವು. ಪಂಪ, ರನ್ನ, ಕುಮಾರವ್ಯಾಸ, ಹರಿಹರರಂತೆ ನಂಜುಂಡನು ಪ್ರಥಮ ದರ್ಜೆಯ ಕವಿಯಲ್ಲವಾದರೂ ದ್ವಿತೀಯ ದರ್ಜೆಯ ಕವಿಗಳಲ್ಲಿ ಉನ್ನತ ಸ್ಥಾನ ಈತನದು. ಪಂಡಿತ ಪಾಮರ ಪ್ರಿಯನೆನಿಸಿದ ಕವಿ ನಂಜುಂಡನು ಛಂದಸ್ಸು, ವಸ್ತು, ನಿರೂಪಣೆ, ಧ್ಯೇಯ ಮುಂತಾದ ಎಲ್ಲ ದೃಷ್ಟಿಗಳಿಂದಲೂ ಕ್ರಾಂತಿಪುರುಷ. ರಗಳೆ ಷಟ್ಪದಿಗಳ ಸವೆದ ಜಾಡನ್ನು ತೊರೆದು ಸಾಂಗತ್ಯದ ಜನಪದಮಟ್ಟಿಗೆ ಪ್ರೌಢಕಾವ್ಯದ ಪಟ್ಟಗಟ್ಟಿದ್ದೂ, ಪುರಾಣಗಳ ಗಗನ ಕುಸುಮ ಸೌಂದರ್ಯವನ್ನು ಭೂಮಿಗೆಳೆದುತಂದು ಇತಿಹಾಸದ ಕಲ್ಲಿನಲ್ಲಿ ಕೆತ್ತಿ ದಿಟವೂ ಶಾಶ್ವತವೂ ಆದ ಚಿತ್ರವನ್ನು ಬಿಡಿಸಿದ್ದೂ, ಅನಂತರದ ಕವಿಗಳಿಗೆ ಆದರ್ಶದ ಹೆದ್ದಾರಿಯನ್ನೂ ಹಾಕಿ ಜನಾಂಗ ಪ್ರಜ್ಞೆಯ ರಸಜಿಹ್ವೆಯಾಗಿ ನುಡಿದು ಕನ್ನಡ ಸಂಸ್ಕೃತಿಯ ಭಂಡಾರವಾಗಿ ಮೆರೆದದ್ದೂ ಆತನನ್ನು ಸೀಮಾಪುರುಷರ ಸ್ಥಾನಕ್ಕೇರಿಸಿ ನಿಲ್ಲಿಸಿವೆ. ನಂಜುಂಡನಿಂದ ಕನ್ನಡ ಸಾಹಿತ್ಯದಲ್ಲಿ ಸಾಂಗತ್ಯದ ಯುಗವೇ ಆರಂಭವಾಗುತ್ತದೆ. ಮುಂದಿನ ಕವಿಗಳು ಈತನ ಕಾವ್ಯ ತತ್ವಗಳನ್ನೂ, ಧ್ಯೇಯಗಳನ್ನೂ ಗೌರವಿಸಿ ಅನುಸರಿಸಿದರು. ಆದ್ದರಿಂದ ಕನ್ನಡ ಸಾಹಿತ್ಯದಲ್ಲಿ ನಂಜುಂಡನ ಸ್ಥಾನವೇನು ಎಂಬುದು ವಿದಿತವಾಗುತ್ತದೆ. ಈತನಂತೆ ಐತಿಹಾಸಿಕ ವಸ್ತುವನ್ನಿಟ್ಟುಕೊಂಡು ಮುಂದಿನ ಕವಿಗಳು ಇಮ್ಮಡಿ ಚಿಕ್ಕಭೂಪಾಲಸಾಂಗತ್ಯ, ಸಿರುಮನ ಸಾಂಗತ್ಯ ಚಿಕ್ಕದೇವರಾಜ ವಿಜಯ, ಕಂಠೀರವ ನರಸರಾಜ ವಿಜಯ, ಕೃಷ್ಣರಾಜ ವಿಲಾಸ, ವಜ್ರಬಾಹು ಚರಿತೆ, ಕೆಳದಿನೃಪ ವಿಜಯ ಮುಂತಾದ ಐತಿಹಾಸಿಕ ಕಾವ್ಯಗಳನ್ನು ರಚಿಸಲು ದಾರಿಯಾಯಿತು.

 ಕಾವ್ಯಾತ್ಮಕ ಅಂಶಗಳು:         

      ಕವಿ ಸಮಕಾಲೀನ ಕಥೆಯನ್ನೆತ್ತಿಕೊಂಡು ಅದಕ್ಕೆ ಬೇರೆ ಪುಷ್ಟಿ ಕೊಡುವ ಪೋಷಕ ಸಾಮಗ್ರಿಯನ್ನು ಹೊಂದಿಸುವುದರಲ್ಲಿ ಸ್ವಂತ ವಿವೇಚನೆಯನ್ನೂ ಧೀರ ಸ್ವಾತಂತ್ರ್ಯವನ್ನೂ ತೋರಿಸಿದ್ದಾನೆ. ಪರಂಪರೆಗೆ ಶರಣಾಗಿದ್ದರೂ ಸ್ವಂತಿಕೆಯನ್ನು ತೋರಿಸಿದ್ದಾನೆ; ಕಾವ್ಯದ ಅತ್ಯಂತ ವಿಷಮ ಸಂದರ್ಭವಾದ ರತ್ನಾಜಿ-ರಾಮನಾಥರ ಸಂದರ್ಶನ ಪ್ರಸಂಗದಲ್ಲಿ ಅವರಿಬ್ಬರಿಗೆ ನಡೆದ ಸಂಭಾಷಣೆಯನ್ನು ಕವಿ ನಯಗಾರಿಕೆಯಿಂದ ಬಿಡಿಸಿದ್ದಾನೆ.

     ರತ್ನಾಜಿಯ ಬೆಡಗು ಬಿನ್ನಾಣಗಳನ್ನು ಕಾಮಾತುರವನ್ನೂ ವಿರಹೋದ್ರೇಕವನ್ನೂ ನಂಜುಂಡ ಕವಿ ಸವಿಸ್ತಾರವಾಗಿ ವರ್ಣಿಸಿದ್ದಾನೆ. ಅವಳ ಗೆಳತಿ ಸಂಗಿಯೂ ಸವಿನುಡಿ ಮೆಲ್ನುಡಿಗಳ ಮಳೆಗರೆದು ರತ್ನಾಜಿಯನ್ನು ಅಸಹನೀಯ ಕಾಮುಕ ಪ್ರವೃತ್ತಿಗೆ ಎಳೆಯುತ್ತಾಳೆ. ಅವಳು ಕುಂಟಣಿ. ಕುಂಟಣಿತನದ ಪರಿಣತಿಗೆ ಮೀರಿದ ಬೇರೆ ಅಸಿಜಾಣತನ ಅವಳಲ್ಲಿಲ್ಲ. ರಾಮನಾಥನ ಪುರುಷ ವ್ರತದ ಮುಂದೆ ಇವರಿಬ್ಬರ ಬೇಳೆ ಬೇಯಲಿಲ್ಲ. ರಾಮನಾಥನನ್ನು ತನ್ನವನನ್ನಾಗಿಸಲು ವಿಕೃತ ಕಾಮಪ್ರವೃತ್ತವಾಗಿ ರತ್ನಾಜಿ ಪಟ್ಟ ಪಾಡು ಅಷ್ಟಿಷ್ಟಲ್ಲ! ‘ನಾನು ನಿನ್ನ ಮಗ’ ಎಂದು ರಾಮ ಅರಿಕೆ ಮಾಡಿದರೆ ತಂದೆಯೂ ಮಗನೂ ಒಂದೇ ಅಂದಣವೇರಿ ಬರುವುದು ರೂಢಿಯಲ್ಲವೇ? ಪ್ರಾಣಿಗಳು ಮಾತೃಗಮನ ಮಾಡುವುದಿಲ್ಲವೇ? ಎಂದು ಮರು ಮಾತು ಗುಡುತ್ತಾಳೆ. ಅದರಲ್ಲೂ ವಿಫಲಳಾದಾಗ ತನ್ನ ಅಕಾರ್ಯವನ್ನೆಲ್ಲ ರಾಮನ ಮೇಲೆ ಹೇರಿ, ನಾರಿಯಾಗಿದ್ದವಳು  ಮಾರಿಯಾಗಿ ಸೇಡಿಗೆ ಹಾತೊರೆಯುತ್ತಾಳೆ. ಈ ಪ್ರಕರಣದುದ್ದಕ್ಕೂ ಕವಿ ಕುಮಾರರಾಮನ ಶೀಲದ ಒರೆಗಲ್ಲಾಗಿ ನಿಲ್ಲುವಂತೆ ರತ್ನಾಜಿಯ ಪಾತ್ರವನ್ನು ಚಿತ್ರಿಸಿದ್ದಾನೆ. ಪಾತ್ರಗಳು ಜೀವಂತವಾಗಿವೆ. ರತ್ನಾಜಿ, ಅವಳ ಸಂಗಾತಿ ಸಂಗಿ ಖಳಪಾತ್ರಗಳು. ರತ್ನಾಜಿಯದು ಅಧರ್ಮ ಪ್ರೇಮ. ಡಿ.ಎಲ್.ಎನ್.ರವರು ಹೇಳುವಂತೆ “ಇಲ್ಲಿ ಬರುವ ಇಬ್ಬಗೆಯಾದ ಪ್ರೇಮದಲ್ಲಿ ರತ್ನಾಜಿಯದು ಕಾಳ್ಕಚ್ಚಿನಂಥದು, ಅಲ್ಲಾವುದೀನನ ಮಗಳ ಪ್ರೀತಿ ಮನೆಯನ್ನು ಬೆಳಗುವ ದೀಪದಂಥದು. ರತ್ನಾಜಿಯಿಂದ ಕಂಪಿಲನ ಸಂಸಾರ ಒಡೆಯಿತಲ್ಲದೆ ಕರ್ನಾಟಕ ಕೆಟ್ಟು ಹೆರರಿಗೆ ಕಾಲು ಬಟ್ಟೆಯಾಯಿತು”.

ಕರ್ನಾಟಕ ಇತಿಹಾಸ ಹಾಗೂ ಕುಮಾರರಾಮನ ಸಾಂಗತ್ಯ:

     ಕುಮಾರರಾಮನ ಸಾಂಗತ್ಯವು ಸಾಹಿತ್ಯ-ಇತಿಹಾಸಗಳ ಮಿಶ್ರಣದಿಂದ ಕೂಡಿದೆ. ಐತಿಹಾಸಿಕ ವಿಷಯವನ್ನು ಕಾವ್ಯದಲ್ಲಿ ಬೆರಸಿ ಹೇಳುವ ಪದ್ಧತಿ ನಂಜುಂಡನ ಕಾಲಕ್ಕೆ ಹೊಸತೇನೂ ಆಗಿರಲಿಲ್ಲ. ಈಗಾಗಲೇ ಪಂಪಕವಿ ಹಾಗೂ ರನ್ನಕವಿ ಈ ಪದ್ಧತಿಯನ್ನು ಅನುಸರಿಸಿದ್ದರು. ತಮ್ಮ ಕಾವ್ಯಗಳಲ್ಲಿ ತಮ್ಮ ಆಶ್ರಯದಾತರನ್ನು ನೇರವಾಗಿ ಹೊಗಳದೆ ಕಾವ್ಯದ ಕಥಾನಾಯಕನೊಂದಿಗೆ ಸಮೀಕರಿಸಿ ನಿರೂಪಿಸಿದ್ದರು. ಇವರ ಕಾವ್ಯಗಳ ವಸ್ತುವಿನಲ್ಲಿ ಚರಿತ್ರಾಂಶವು ಪ್ರಾಸಂಗಿಕವಾಗಿ ನಿರೂಪಿತವಾಗಿದೆ. ನಂತರದ ಕಾಲದಲ್ಲಿ ಈ ಸಂಪ್ರದಾಯಕ್ಕೆ ಅಷ್ಟಾಗಿ ಮಾನ್ಯತೆ ದೊರೆಯಲಿಲ್ಲ. ಭಕ್ತಿಯುಗದ ಹರಿಹರನಂತಹ ಕವಿಗಳು ರಾಜತ್ವಕ್ಕೆ ಮನ್ನಣೆ ಕೊಡಲಿಲ್ಲ.

     16ನೇ ಶತಮಾನದ ನಂಜುಂಡನಂತ ಶೈವಕವಿಯು ಬೇಡರ ವೀರನೊಬ್ಬನನ್ನು ಕಥಾನಾಯಕನನ್ನಾಗಿಟ್ಟುಕೊಂಡು ಸಾಂಗತ್ಯದ ಕಾವ್ಯರಚಿಸಿರುವುದು ಮಹತ್ತರ ಸಂಗತಿಯಾಗಿದೆ. ತನ್ನ ಕಾವ್ಯವು ವೀರತೆ ಶುಚಿತೆ ಯೆಂಬೆರಡು ಗುಣಂಗಳ ಮೇರೆಯ ಮೀರದೆ ನಡೆದು ಧಾರುಣಿಯನು ಮೆಚ್ಚಿಸಿದ ವೀರರಾಮನ ಚಾರು ಚರಿತವನು ಒಳಗೊಂಡಿರುವುದಾಗಿ ಕವಿಯು ಹೇಳಿಕೊಂಡಿದ್ದಾನೆ. ತನ್ನ ಕಾವ್ಯದ ನಾಯಕ ಚಾರಿತ್ರಿಕ ವ್ಯಕ್ತಿಯಾಗಿದ್ದರೂ ದೈವಾಂಶ ಸಂಭೂತನೆಂದು ಭಾವಿಸಿ ಆತನ ಸಾಹಸ ಕಾರ್ಯಗಳನ್ನು ನಿರೂಪಿಸಿದ್ದಾನೆ.

         ನಂಜುಂಡ ಕವಿಯು ತಾನು ಕಂಡುಕೇಳಿದ ಸಂಗತಿಗಳನ್ನು ಆಧರಿಸಿ ಅದಕ್ಕೊಪ್ಪುವ ಐತಿಹಾಸಿಕ ಹಿನ್ನಲೆಯನ್ನು, ರಸಿಕರಿಗೆ ಮನವೊಪ್ಪುವಂತಹ ರತ್ನಾಜಿಯ ಪ್ರಸಂಗವನ್ನೂ, ಕಾವ್ಯದ ಮಹತ್ವವು ಮಿಗಿಲಾಗುವಂತೆ ಪೌರಾಣಿಕ ವೃತ್ತಾಂತವನ್ನು ಮೇಳೈಸಿ ಕಾವ್ಯವನ್ನು ರಚಿಸಿರುವುದು ಆತನ ನೈಪುಣ್ಯತೆಯ ಪ್ರತೀಕವಾಗಿದೆ. ಐತಿಹಾಸಿಕ ವಸ್ತುವನ್ನು ಒಳಗೊಂಡು ರಚಿತವಾಗಿದ್ದ ಕನ್ನಡ ಕಾವ್ಯಗಳಲ್ಲಿ ನಂಜುಂಡ ಕವಿಯ ಈ ಕೃತಿಗೆ ಮುಖ್ಯ ಸ್ಥಾನ ಇದೆ. ನಂಜುಂಡನ ಕುಮಾರರಾಮನ ಸಾಂಗತ್ಯದ ಕಥೆಯ ಸಂವಿಧಾನವನ್ನೇ ನಂತರ ಬಂದ ಗೋವಿಂದವೈದ್ಯನು ತನ್ನ ಕಂಠೀರವ ನರಸರಾಜ ವಿಜಯದಲ್ಲಿ ಅನುಸರಿಸಿದ್ದಾನೆ.

     ವಿಜಯನಗರದ ಸ್ಥಾಪನೆಗೆ ಪೂರ್ವಭಾವಿಯಾಗಿ ಆ ಪ್ರದೇಶದ ಸುತ್ತಮುತ್ತಲಿನ ರಾಜಕೀಯ ಪರಿಸ್ಥಿತಿ ಹೇಗಿದ್ದಿತು ಎಂಬುದನ್ನು ಇಲ್ಲಿ ಮನಗಾಣಬಹುದು. ಮುಸಲ್ಮಾನರ ದಾಳಿಗೆ ಸಿಕ್ಕಿ ದೇವಗಿರಿಯ ರಾಮದೇವರಾಯ, ಕಾಕತೀಯ ರುದ್ರನು ಆಹುತಿಯಾಗಿದ್ದ ಕಾಲವದು. ಹೊಯ್ಸಳ ಬಲ್ಲಾಳನು ತುರುಕರೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಕಪ್ಪ ಕಾಣಿಕೆಗಳನ್ನು ತೆತ್ತ ಕಾಲವದು. ಇಂಥ ಕಷ್ಟಕಾಲದಲ್ಲಿ ಬೇಡನಾಯಕನೊಬ್ಬನು ಪ್ರಬಲರಾದ ಶತ್ರುಗಳನ್ನು ಹೇಗೆ ಎದುರಿಸಿ ನಿಂತನೆಂಬ ಸಂಗತಿ ಇಲ್ಲಿ ಅಡಕವಾಗಿದೆ. ಕಂಪಿಲರಾಯನ ಹೆಸರನ್ನು ಮಾತ್ರ ಕೇಳುತ್ತಿದ್ದವರಿಗೆ, ಆತನ ಪೂರ್ವೋತ್ತರಗಳು, ಆತನ ಅಧಿಕಾರಾವಧಿಯಲ್ಲಿ ನಡೆದಿರಬಹುದಾದ ಕಾಳಗಗಳು, ಆತನ ಶತ್ರುವರ್ಗ ಮುಂತಾದ ಇತರ ಸಂಗತಿಗಳನ್ನು ಇವು ಪರಿಚಯಮಾಡಿಕೊಡುತ್ತವೆ. ಕಂಪಿಲನ ಆಸ್ಥಾನದಲ್ಲಿ ಭಾವಸಂಗಮ, ಹರಿಹರ ಮತ್ತು ಬುಕ್ಕ ಎಂಬುವರು ಇದ್ದರೆಂದು ಈ ಕೃತಿಗಳಲ್ಲಿ ಹೇಳಿರುವುದರಿಂದಲೇ ವಿಜಯನಗರದ ಸ್ಥಾಪನೆಗೆ ಇವರೇ ಮೂಲ ಪುರುಷರಿರಬಹುದೆ ಎಂಬ ಅಭಿಪ್ರಾಯವೊಂದು ವಿದ್ವಾಂಸರಲ್ಲಿ  ಉದಯವಾಗಿದೆ. ಮುಖ್ಯವಾಗಿ, ಕುಮಾರರಾಮನ ಸಾಂಗತ್ಯದಲ್ಲಿ ಕಂಡುಬರುವ ಪ್ರತಿಯೊಂದು ವಿಷಯವನ್ನೂ ಐತಿಹಾಸಿಕವೆಂದು ಹೇಳಲಾಗದಿದ್ದರೂ, ಆಗಿನ ಕಾಲದ ಚರಿತ್ರೆಯನ್ನು ಬರೆಯುವವರಿಗೆ ಈ ಕೃತಿಗಳನ್ನು ಒಂದು ಆಧಾರವಾಗಿ ಪರಿಗಣಿಸುವಷ್ಟು ಮಟ್ಟಿಗೆ ಸ್ಥೂಲವಾಗಿ ಇಲ್ಲಿ ಕೆಲವು ಸಂಗತಿಗಳು ದೊರೆಯುತ್ತವೆ.

     ಕುಮಾರರಾಮನ ಸಾಂಗತ್ಯ”ಗಳಲ್ಲಿ ವೀರಚರಿತೆಯ ಕೆಲವು ಲಕ್ಷಣಗಳು ವಿಶದವಾಗುತ್ತವೆ. ಸಾಹಸ ಮತ್ತು ಅನುರಾಗಗಳು ವೀರಚರಿತೆಗೆ ಬಹು ಪ್ರಿಯವಾದ ವಸ್ತುಗಳು. ನಂಜುಂಡನ ಹೇಳಿಕೆಯ ಮೇರೆಗೆ ಪ್ರಕೃತ ಕಥಾವಸ್ತುವಿನಲ್ಲಿ ವೀರತೆ ಮತ್ತು ಶುಚಿತೆಗಳು ಪ್ರಧಾನವಾದ ಅಂಶಗಳು. ಇಲ್ಲಿ ನಾಯಕನ ಅನುರಾಗವು ಸಾಹಸಕ್ಕೆ ಪ್ರೇರಕವಾಗಿಲ್ಲದಿದ್ದರೂ ಭಾರತೀಯ ಸಂಸ್ಕೃತಿಯ ಹಿರಿಮೆಗೆ ತಕ್ಕಂತೆ ಅದು “ಪರದಾರ ಸೋದರತ್ವ”ವನ್ನು ಕುರಿತುದಾಗಿದೆ.

 ಕಾವ್ಯದಲ್ಲಿ ವರ್ಣನೆಗಳು:

   ನಂಜುಂಡನು ಮಹಾಕಾವ್ಯದ ಸರಣಿಯನ್ನು ಅನುಸರಿಸಿ, ತನ್ನ ಕಾವ್ಯವನ್ನು ಸಮುದ್ರವರ್ಣನೆಯಿಂದ ಆರಂಭಿಸಿದ್ದಾನೆ “ಕಥೆಗಾವುದು ಮೊದಲೆನೆ ತೆರೆಗಳ ನೂಕು ತಾಕಿಂದ ರತ್ನಗಳ ಆಕರದಿಂದ ನಾನಾ ಜಲಚರಗಳಿಂದಾ ಕಡಲಿರದೊಪ್ಪುತಿಹುದು” ಎಂದು ಪ್ರಾರಂಭಿಸಿ, “ಕಡೆಯ ಬೇಡಿನ್ನೆನ್ನನೆಂದು ಬೊಮ್ಮಗೆ ಮೊರೆಯಿಡುವ ಬಲ್ಸರವಿದೆಂಬಂತೆ ಕಡು ಸೊಗಯಿಪ ಘುಳುಘಳುರವದಿಂದಾ ಕಡಲು ಕಣ್ಗೆಸೆದಿರುತಿಹುದು”, “ನೀರೀಂಟ ಪೋಪ ಕುಡಿಯಲಿರದೈತಪ್ಪ ವಾರಿದಗಳ ವಂಗಡದ ಆರಭಟೀವೃತ್ತಿಯಿಂದಾ ನೀರಭಂಡಾರ ಬೆಡಂಗಾಗಿಹುದು” ಎಂಬುದಾಗಿ ಎರಡು ನುಡಿಗಳನ್ನು ಆಡಿ, ಮುಂದೆ ಕುಂತಳ ದೇಶ, ಕರ್ನಾಟ ಮಹೀಮಂಡಲ, ಪಂಪಾಕ್ಷೇತ್ರ ಮತ್ತು ಹೊಸಮಲೆದುರ್ಗಗಳನ್ನು ವರ್ಣಿಸುವನು. ಈ ಪುರವರ್ಣನೆಯಲ್ಲಿ ಹೆಜ್ಜೆ ಹೆಜ್ಜೆಗೂ ನಂಜುಂಡನ ಸಾಂಪ್ರದಾಯಿಕ ಶ್ರದ್ಧೆಯನ್ನು ಕಾಣಬಹುದು. “ಹರಿಯರಮನೆ ಹರನಾಡುಂಬೊಲ ಸರಸಿರುಹಸಂಭವನೊಸೆದಿರ್ಪ ಕರುಮಾಡಮೆನೆ ಕನಕಾಚಲವದು ಕಣ್ಗೆ ಕರಮೆಸೆದಿಹುದು ಚೆಲ್ವಿಂಡ” ಎಂದು ಕನಕಪರ್ವತವನ್ನು ಪರಿಪರಿಯಾಗಿ ವಿವರಿಸಿ, ಆ ಮೇರುಪರ್ವತಕ್ಕೆ ದಕ್ಷಿಣದಲ್ಲಿ “ಕರ್ನಾಟ ಮಹೀಮಂಡಲಗಾಡಿವೆತ್ತು” ಕಾಣುವುದು ಎನ್ನುವನು. ಕನ್ನಡ ದೇಶದ ವರ್ಣನೆಯಂತೂ “ಕಾವೇರಿಯಿಂದ ಗೋದಾವರಿವರೆಗಮಿರ್ದಾ ವಸುಧಾತಳವಳಯ ಭಾವಿಸೆ ಕರ್ನಾಟಕ ಜನಪದವನಾವನೊಲಿದು ಬಣ್ಣಿಸುವನು” ಎಂದು ನೃಪತುಂಗನ ಮಾರ್ದನಿಯಿಂದಲೇ ಮೊದಲಾಗುತ್ತದೆ. ಸುಮಾರು ನಲ್ವತ್ತೈದು ಪದ್ಯಗಳಷ್ಟು ವಿಸ್ತಾರವಾಗಿ ಕನ್ನಡನಾಡಿನ ಮತ್ತು ಜನರ ವರ್ಣನೆಯನ್ನು ಮಾಡಿರುತ್ತಾನೆ. ಈ ವಿಸ್ತಾರವಾದ ಕರ್ನಾಟಕದ ಮಧ್ಯೆ ಭೂಸತಿಯ ಕುಂತಣದಂತೆ”, “ಮಾನಿತ ಕುಂತಣ ಜನಪದ ಸಿರಿಯಿಂದಾ ನಾಕವನೇಳಿಸುತ” ಇದೆ ಎನ್ನುವನು. ಈ ನಾಡಿನಲ್ಲಿಯೇ “ಶ್ರೀ ಕೈಲಾಸ ಕೇತಾರ ಕಾಂಚೀಪುರ ಗೋಕರ್ಣಗಳನೇಳಿಸುತ ಲೋಕವಿನುತ ಪಂಪಾಕ್ಷೇತ್ರ” ನೆಲಸಿರುವುದು. ಹಂಪೆಯೆಂದ ಕೂಡಲಡ ತುಂಗಭದ್ರಾನದಿಯನ್ನು ನೆನೆಯದವರಾರು! “ಫೇನ್ನ ತರಂಗಾವರ್ತ ಕರ್ಕಟಕ ಪಾಠೀನ ಕವಠ ಕುಲದಿಂದ ತಾನುರೆ ಕಣ್ಗೆಸೆದಿಹುದಲ್ಲಿ ತುಂಗಭದ್ರಾ ನದಿ ಕಡು ಚೆಲ್ವುವಡೆದು” ಎಂದು ನಂಜುಂಡನು ತನ್ನ ಕಾಣಿಕೆಯನ್ನು ನದಿಗೆ ಅರ್ಪಿಸುವನು. ಒಂದು ಕಡೆ, ಪಂಪಾ ಸರೋವರ ಮನೋಹರವಾಗಿ ತೋರಿಬರುತ್ತದೆ; ಮತ್ತೊಂದು ಕಡೆ ಮಂದರ ಪರ್ವತ ಸದೃಶವಾದ ಮಾತಂಗ ಪರ್ವತ ಕಂಡುಬರುತ್ತದೆ. ಹೀಗೆ “ಆ ಕಮಲಾಕರ ಮೊದಲಾದ ತೀರ್ಥಾನೀಕದಿಂದಾ ಪಂಪಾಕ್ಷೇತ್ರ ಆ ಕಾಶಿಯನಾ ಕೇತಾರಮನಾ ಗೋಕರ್ಣವ ನಗುತಿಹುದು.” “ಆ ಕ್ಷೇತ್ರದ ಮಧ್ಯದಲಿ ಪಂಪಾಪುರಿ ಸಾಕ್ಷಾತ್ಕರಿಸಿ ಕಣ್ಗೆಸೆವ ಮೋಕ್ಷದಂತಿರ್ಪುದು ವಿಶ್ವಧಿಪ ವಿರೂಪಾಕ್ಷಲಿಂಗನನೊಳಕೊಂಡು” ನಂಜುಂಡನಿಗೆ ಇಷ್ಟಕ್ಕೇ ತೃಪ್ತಿಯಾಗದೆ, ಹಂಪೆಯ ಕ್ಷೇತ್ರವನ್ನು ಒಂದು ಸಂಧಿ ಪೂರ್ತಿಯಾಗಿ ವಿವರಿಸಿರುವನು. ತರುವಾಯ ಕುಮಾರರಾಮನ ಕಥೆಗೆ ಸಂಬಂಧಿಸಿದಂತೆ ಹೊಸಮಲೆಯದುರ್ಗದ ಪರಿಚಯಕ್ಕೆ ಮೊದಲು ಮಾಡುವನು. “ಆ ವಿರೂಪಾಕ್ಷನ ನಿಳಯದ ದಕ್ಷಿಣ ಭೂವಳಯದೊಳು ಮೃಗಗಳ ಆವಾಸದಂತಿರ್ಪುದು ಹೊಸಮಲೆಯದನಾವನೊಲಿದು ಬಣ್ಣಿಸುವನು” ಎಂದು ಈ ವಿಷಯಕ್ಕೆ ಪ್ರವೇಶಿಸುವನು. ಈ ಹೊಸಮಲೆಯೆಂಬುದು ಅತ್ಯಂತ ವಿಸ್ತಾರವಾದ ಒಂದು ವಿಪಿನ. “ಇಡಿಕಿರಿದಿರ್ದ ನಾನಾ ಕುಜಕುಲದಿಂದ ಗಿಡು ಮಳೆ ಪಳ್ಳ ಕೊಳ್ಳಗಳ ಗಡಣದಿಂದೆಲರಡಿಯಿಡದಲ್ಲಿ ರವಿ ಕೈದುಡುಕಲಮ್ಮನು ಪೇಳ್ವೆನೇನ” ಎನ್ನುವಷ್ಟು ಮಟ್ಟಿಗೆ ಅದು ಗಹನ; ಭಯಂಕರ. ಅದರ ಮಧ್ಯೆ ಒಂದು ಗಿರಿದುರ್ಗವಿತ್ತು. ಆ ದುರ್ಗದ ಎತ್ತರವನ್ನು ಈ ಒಂದೇ ಒಂದು ಪದ್ಯದ ಮೂಲಕ ಊಹಿಸಿಕೊಳ್ಳಬಹುದು. “ಪಿರಿದು ಮಾತೇನಾ ದುರ್ಗದ ಮೇಗಣ ಮರಗೊಂಬುಗಳ ಪಾಯ್ದೊದೆದು ಸುರಿವವು ಮುಗಿಲಮುತ್ತುಗಳೆಂದೆನಲದರಿರವನದೇನ ಬಣ್ಣಿಸುವೆ” ಎನ್ನುತ್ತಾನೆ ಕವಿ. “ ಗರುಡನಗರಿಗೆ ಗಂಧರ್ವಪುರಿಗೆ ಕಿನ್ನರ ಪಟ್ಟಣಕೆ ಚೆಲ್ವಿಂದ ಸರಿದೊರೆ ಪಡಿಯೆಮದೆನೆ ಪೊಳಲೊಂದಾ ಗಿರಿಯ ಮೇಲಿಹುದೊಪ್ಪವೆತ್ತು.” ಈ ಊರಿನ ರಚನೆ, ಜನ, ಹೊಲ, ಗದ್ದೆ, ಪೈರು, ಪಚ್ಚೆ ಮುಂತಾದವುಗಳನ್ನೆಲ್ಲ ಕವಿ ಹಿಗ್ಗಿ ಹಾಡಿರುತ್ತಾನೆ. ಈ ಸೊಬಗಿನ ಮಧ್ಯೆ “ಪುರಮೆಂಬ ಪುಂಡರೀಕದ ನಟ್ಟನಡುವಣ ವರಕರ್ಣಿಕೆಯಿದೆಂಬಂತೆ ಸಿರಿಯಿಂದ ಸಿಂಗರದಿಂದರಮನೆ ಕಣ್ಗೆ ಕರಮೆಸೆದಿಹುದು ಚೆಲ್ವಿಂದ.” ಅದರ ಒಡೆಯನೇ ಕರ್ಣಾಟಪತಿ ಕಂಪಿಲ. ಆತನ ಧರ್ಮಪತ್ನಿಯೇ ಹರಿಹರದೇವಿ. ಈ ರೀತಿ ನಂಜುಂಡನು ತನ್ನ ಕಾವ್ಯದ ಆದಿಯಲ್ಲಿ ಹೊಸಮಲೆದುರ್ಗದ ವರ್ಣನೆಗೆ ಬಹು ದೀರ್ಘವಾದ ಪೀಠಿಕೆಯನ್ನು ರಚಿಸಿದ್ದಾನೆ.

     ಶೂಲದಹಬ್ಬದಂದು ರಾಮನನ್ನು ಕಂಡಕೂಡಲೆ ರತ್ನಾಜಿಯ ಚಿತ್ತ ಅಸ್ತವ್ಯಸ್ತವಾಯಿತು. ಆಕೆಯ ವಿರಹವೇದನೆ ನಿಮಿಷ ನಿಮಿಷಕ್ಕೂ ನಿಡಿದಾಯಿತು. ಇಂಥ ಸನ್ನಿವೇಶವೊಂದು ನಂಜುಂಡನಂಥ ನಿಪುಣನಿಗೆ ಸಿಕ್ಕಿದರೆ ಆತನ ನಾಲಿಗೆಗೆ ಬಿಡುವೆಲ್ಲಿದ್ದಿತು! ರತ್ನಾಜಿ ಕರುಮಾಡದಿಂದಿಳಿದು ತನ್ನ ಅರಮನೆಗೆ ಬಂದು, ದೂತಿಯಾದ ಸಂಗಿಯೊಡನೆ ತನ್ನ ತಳಮಳವನ್ನು ತೋಡಿಕೊಳ್ಳತೊಡಗಿದಳು. “ಲಕ್ಕಣಿಕೆಯ ಪಿಡಿದೊಸೆದು ಚಿತ್ರಿಗ ಕಣ್ಣಿಕ್ಕಿ ಬರೆದ ಗಂಡುರೂಪ ಮಿಕ್ಕುತೋರುವ ರಾಮನ ರೂಪಿಗೆ ಮನವಿಕ್ಕಿದೆನಕ್ಕ” ಎಂದು ಮಾತನ್ನು ಮೊದಲು ಮಾಡಿದಳು. “ಕುಮುದಬಂಧುವಿನೊಡನೊಸೆದು ನೆರೆಯದಿರ್ಪ ಕಮಲಿನಿಯಂತಿವನೊಡನೆ ರಮಿಸದೆನ್ನೀ ಜನ್ಮವಾಯ್ತು ನಿರರ್ಥಕ” ಎಂದು ಪರಿತಪಿಸಿದಳು. ಆಕೆ ಮುಚ್ಚುಮರೆಯಿಲ್ಲದೆ ತನ್ನ “ಅಂತರಂಗವ ಹಿಕ್ಕಿ ಕೆಳದಿಯೊಳಾಡಿದಳು.” “ಕೋಳುವೋಯ್ತೆರ್ದೆಗೋಟೆ ಮನಸಿಜನೃಪನ ಕಾಲಾಳ ಕಾಲಾಟ ಮಸಗಿತು ತಾಳಲಾರೆನು ವಿರಹಾಗ್ನಿಯುರಿಯನು” ಎಂದು ಹೇಳಿಕೊಂಡಳು. “ಮತಿಮಣಿದರ್ಪಣ ಸೂರೆವೋದುದು ಬಾಳ್ವಗತಿಯ ಪೇಳೆನಗೇಣನೇತ್ರೆ”, “ಕುಸುಮ ಕೋದಂಡನಂತೆಸೆವ ಕುವರನ ಗಂಡಗಾಡಿಯನ್ನೆರ್ದೆಗೋಟೆಯ ಕೋಳುಗೊಂಡುದಕ್ಕಾಜಿ”, “ಏಸು ಪುಣ್ಯವ ಮಾಡಿ ಪಡೆದಳೊ ತಾಯಿ ತಾನಾ ಸುಕುಮಾರಂಗನನು, ಆಸೆವಟ್ಟಾವ ನೋಂಪಿಯ ನೋಂತು ರಾಣಿವಾಸರೊ ಪೆಣ್ಗಳವಗೆ”, “ಇವನಿಗೆ ಪಡಿಯೆ ಮದನನೆಂಬವನು,” “ತಂದಿತ್ತವನೆನಗಕ್ಕನಾದೆಪೆಯೊ ಪೇಳಿಂದುವದನೆ ತಾರದವನ ಕೊಂದೆನ್ನ ನಿನ್ನುದರದೊಳು ಬರಿಸಿಕೊಂಡುಸಂದ ಜನನಿಯಾದಪೆಯೊ”- ಎಂಬುದಾಗಿ ದೂತಿಯೊಂದಿಗೆ ಬಗೆಬಗೆಯಾಗಿ ಭಿನ್ನವಿಸಿಕೊಂಡಳು. ಚತುರಳಾದ ಸಂಗಿ ರತ್ನಾಜಿಯನ್ನು ಬುದ್ಧಿವಂತಿಕೆಯಿಂದ ಸಮಾಧಾನ ಮಾಡಲು ತೊಡಗಿದಳು. “ಪಲ್ಲವಾಧರೆ ಕುಂಟಣಿತನಕಾನಲ್ಲದಿಲ್ಲ” ಎಂದು ಆತ್ಮಪ್ರಶಂಸೆಯನ್ನು ಮಾಡಿಕೊಳ್ಳಲೂ ಹಿಂತೆಗೆಯದೆ, ಒಡತಿಯೊಂದಿಗೆ ತನ್ನ ಪ್ರವೀಣತೆಯನ್ನೆಲ್ಲಾ ವಿವರಿಸಿದಳು. ಆದಾಗ್ಯೂ ರತ್ನಿಗೆ ಸಮಾಧಾನವಾಗಲಿಲ್ಲ. “ಅಗ್ನಿಯ ಮೇಲೆ ತುಪ್ಪದ ತುಂತುರು ಬಿದ್ದಂತವಳ ಅಂತರಂಗದೊಳಂಗಜಾಗ್ನಿಪೊಗೆವುತೋರಂತೆ ಪೆರ್ಚಿದುದು.” ಆಕೆ, “ಕಿಚ್ಚೆಳೆ ನೀರೆ ಪೊಯ್ಯದೆ ಹೊಯ್ದ ಪೆನೆಂದುಚ್ಚರಿಸಿದೊಡೆ ಕೆಡುವುದೆ ಮಚ್ಚಿದಿನಿಯನ ತೋರದೆ ತೋರಿಸುವೆನೆಂದೊಡಚ್ಚಿಗಪೆರ್ಚದೆ ಪೆಣ್ಗೆ” ಎಂದು ಸಂಗಿಯನ್ನು ಆಕ್ಷೇಪಿಸಿದಳು. ಒಡತಿಯ ಒಳಗುದಿಯನ್ನು ಕಂಡು ದೂತಿಯಾದ ಸಂಗಿ ಶೈತ್ಯೋಪಚಾರಗಳನ್ನು ಮಾಡಿದಳು. ಆದರೇನು? ಆಕೆಯ ಶರೀರದ ಮೇಲೆ ತಂದು ಹೊದಿಸಿದ್ದ ತಾವರೆಯ ದಂಟುಗಳು “ದಾವಶಿಖಿಯ ಮೇಲಿಕ್ಕಿದ ಜೋಳದ ಕಾವುಗಳಂತೆ ಪೊಗೆದವು” ರತ್ನಾಜಿಗೆ ಭರವಸೆಯಿತ್ತು, ಆಕೆಯನ್ನು ಸೆಜ್ಜೆಮನೆಗೆ ಕರೆದೊಯ್ದಳು. “ಕಳಹಂಸೆ ಬಂದುನ್ನತ ಪುಳಿನ ಸ್ಥಳದೊಳಗೆ ಮೈಯಿಕ್ಕುವಂತವಳು ಬೆಳುವಟ್ಟೆವಾಸಿನ ಸೆಳೆಮಂಚದ ಮೇಲೆ ಬಳಲುತ ಬಂದೊರಗಿದಳು.” ಸಂಗಿ ರತ್ನಾಜಿ ತನ್ನ ವಿರಹಯಾತನೆಯನ್ನು ಹಾಗೆ ಪ್ರಕಟಿಸುವುದು ವಿಹಿತವಲ್ಲವೆಂದು ಬುದ್ಧಿವಾದವನ್ನು ಹೇಳಿದಳು. ಹಾದರಮಾಡಿದರೂ ಎಚ್ಚರವಾಗಿರಬೇಕೆಂದು ಸೂಚಿಸಿದಳು. ಇಲ್ಲದಿದ್ದಲ್ಲಿ ಅದು “ಸಾವಿನ ತವರು”, “ಖಡ್ಗಧಾರೆಯ ಜೇನಯ್ಯನೊಲಿದು ಸೇವಿಸುವಂತೆ” ಎಂದು ತಿಳಿಸಿದಳು. ಅತಿ ವಿಸ್ತಾರವಾಗಿ ಒಡತಿಯ ರೂಪಲಾವಣ್ಯಗಳ ವೈಭವವನ್ನೂ, ಆಕೆಯ ಆಕಾಂಕ್ಷೆಯನ್ನೂ ಪ್ರಶಂಸೆಮಾಡಿದಳು. ರತ್ನಾಜಿಗಾದರೋ ಮನಸ್ಸು ಮಸೆಯುತ್ತಿತ್ತು. ಕ್ಷಣಕಾಲ ಭವರತಿಯನ್ನೂ ಅನುಭವಿಸಿ ಭ್ರಮಿಸಿದಳು. ಮರುಗಳಿಗೆಯಲ್ಲಿ ಕುಮಾರರಾಮನ ಕನಸನ್ನೂ ಕಾಣಲಾರಂಭಿಸಿದಳು. “ಕುದಿದುಕ್ಕಿ ಬೀಳ್ವ ಕಾದೆಸರ ಬಿಂದುಗಳಂತೊದವಿ ಸುರಿಯೆ ಕಂಬನಿಗಳು ಮದನಾತುರದಿಂದ ಮರುಗುತ ಮಾನಿನಿ ಬೆದೆ ಬೇಟಗೊಂಡಳೆದೆಯೊಳು.” ಬೆಳಗಾಗಲು, ಆಕೆ ಕಳೆಗುಂದಿದಂತಿದ್ದರೂ, ಇತರರಿಗೆ ಗೊತ್ತಾದೀತೆಂದು ಶಂಕಿಸಿ ಎಂದಿನಂತೆಯೇ ವ್ಯವಹರಿಸತೊಡಗಿದಳು. ಈ ಒಟ್ಟು ಸಂದರ್ಭವನ್ನು ನಂಜುಂಡನು ಬಹು ದೀರ್ಘವಾಗಿಯೂ ಪರಿಣಾಮಕಾರಿಯಾಗಿಯೂ ಚಿತ್ರಿಸಿರುತ್ತಾನೆ. ಆತನ ಪಾಂಡಿತ್ಯ ಪ್ರತಿಭೆಗಳು ಸಮಜೋಡಿಯಾಗಿ ನಿಂತು ಸಾಗುತ್ತವೆ. ರತ್ನಾಜಿಯ ಒಳತೋಟಿಯನ್ನು ಮನಸೆಳೆಯುವಂತೆ ಎಳೆ ಎಳೆಯಾಗಿ ಬಿಡಿಸಿ ತೋರಿಸಿದ್ದಾನೆ.

ಕಾವ್ಯದ ಶೈಲಿ:

     ಕವಿಯ ಸ್ವಭಾವಕ್ಕೆ ಅನುಗುಣವಾಗಿ ಆತನ ಶೈಲಿಯೂ ವಿಶಿಷ್ಟವಾಗಿರುತ್ತದೆಯಷ್ಟೆ. ಕವಿಯಾದವನು ಸರ್ವಾನುಭವದಿಂದಲೂ, ಇತರರ ಕೃತಿಗಳನ್ನು ಅಭ್ಯಾಸಮಾಡುವುದರಿಂದಲೂ ತನ್ನ ಕೃತಿರಚನೆಗೆ ತಕ್ಕ ಸಾಮರ್ಥ್ಯವನ್ನು ಸಂಪಾದಿಸುತ್ತಾನೆ. ಆತನ ದೃಷ್ಟಿ ಪ್ರಾಚೀನ ಮತ್ತು ನವೀನ ಸಂಪ್ರದಾಯಗಳನ್ನು ಸಮನ್ವಯಗೊಳಿಸುವುದಕ್ಕೆ ಪ್ರಯತ್ನಿಸುತ್ತದೆ. ಆದ್ದರಿಂದ ಯಾವ ಪ್ರೌಢ ಕಾವ್ಯವನ್ನೇ ಆಗಲಿ ಓದಿ ನೋಡಿದಾಗ ಪರಂಪರಾನುಗತಿಕವಾಗಿ ಬಂದಿರುವ ಕವಿಸಮಯಗಳೂ, ಪಾಂಡಿತ್ಯಪೂರ್ಣವಾದ ಅಲಂಕಾರಾದಿಗಳೂ, ಕವಿಯ ಜೀವನಾನುಭವದ ಆಧಾರದ ಮೇಲೆ ರಚಿತವಾಗಿರುವ ಉಪಮಾನಗಳೂ ಆತನು ಕಂಡು ಕೇಳಿದ ನಾಣ್ಣುಡಿಗಳೂ ಗಮನಕ್ಕೆ ಬರುತ್ತವೆ. ನಂಜುಂಡನು ಬಹುಮಟ್ಟಿಗೆ ವಿದ್ವಜ್ಜನಪ್ರಿಯನಾದ ಕವಿಯಾಗಿರುವುದರಿಂದ ಆತನಲ್ಲಿ ಪಂಡಿತಪ್ರಿಯವಾದ ಕವಿಸಮಯಗಳು, ವಿವಿಧ ಅಲಂಕಾರ ಚಮತ್ಕಾರಗಳು, ಪ್ರಾಚೀನ ಕವಿಪ್ರಿಯವಾದ ಉಪಮಾನಾದಿಗಳು ಕಂಡು ಬರುತ್ತವೆ. ಅಲ್ಲದೆ, ಆತನ ಅನುಭವಕ್ಕೆ ಬಂದ ಇತರ ಹೋಲಿಕೆಗಳು ಕಾವ್ಯದ ಸ್ವಾರಸ್ಯವನ್ನು ಹೆಚ್ಚಿಸಿರುತ್ತವೆ.

     ನಂಜುಂಡನ ರಚನೆಯಲ್ಲಿ ಚಿರಪರಿಚಿತವಾದ ಉಪಮಾನಗಳೂ ಹೊಸಹೊಸದಾದ ಉಪಮಾನಗಳೂ ಕೂಡಿಕೊಂಡು ಬರುತ್ತವೆ. ತನ್ನ ಕಥಾನಾಯಕನನ್ನು ಅರ್ಜುನನ ಅವತಾರವೆಂದು ನಂಬಿರುವ ಈ ಕವಿ ಕುಮಾರರಾಮನನ್ನು ವರ್ಣಿಸುವಾಗ ಅನೇಕ ಬಾರಿ ಭಾರತ, ರಾಮಾಯಣ, ಭಾಗವತಗಳಿಗೆ ಸಂಬಂಧಿಸಿದ ಉದಾಹರಣೆಗಳನ್ನು ಕೊಟ್ಟು ಚಿತ್ರಿಸಿರುತ್ತಾನೆ. ಆದ್ದರಿಂದ ಈತನ ಉಪಮಾನಗಳನ್ನು ಬೇರೆ ಬೇರೆ ಗುಂಪುಗಳನ್ನಾಗಿ ವಿಂಗಡಿಸಿಕೊಂಡು ಪರಿಶೀಲಿಸ ಬಹುದಾಗಿದೆ.

     ಪ್ರಾಚೀನಕವಿಗಳನ್ನು ಹೃತ್ಪೂರ್ವಕವಾಗಿ ಸ್ತುತಿಸಿರುವ ನಂಜುಂಡನಿಗೆ ಅವರ ರೀತಿ ರಚನೆಗಳು ಮೇಲ್ಪಂಕ್ತಿಯಿದ್ದಂತೆ. “ರಾಹು ಚಂದ್ರನ ತಾಗುವಂತೆ”, “ಗಿರಿಯ ಮೋಹರವ ಗೀರ್ವಾಣೇಂದ್ರ ಪೊಗುವಂತೆ”, “ಬೆಟ್ಟಗಳನು ಸುರಪತಿ ವಜ್ರದಿಂ ಕಡಿದಟ್ಟಿ ಬೆನ್ನಟ್ಟುವಂದದಲಿ”, “ನೀರದ ನಿನದವ ಕೇಳ್ದ ಸಾಮಜ ವೈರಿಯಂದದಲಿ”-ಇವೇ ಮೊದಲಾದ ಸುಪ್ರಸಿದ್ಧವಾದ ಪ್ರಯೋಗಗಳು ಕಾವ್ಯದ ಉದ್ದಕ್ಕೂ ಕಂಡುಬರುತ್ತವೆ.

     ಪೌರಾಣಿಕ ದೃಷ್ಟಾಂತಗಳನ್ನು ನೋಡಿದರೆ ಕವಿಗೆ ಮಹಾಭಾರತದ ಮೇಲೆ ಹೆಚ್ಚಿನ ಅಭಿಮಾನವಿದ್ದಂತಿದೆ. ತನ್ನ ಕಥಾನಾಯಕ ಅರ್ಜುನನ ಅಂಶವಾದ್ದರಿಂದ ಪುನ: ಪುನ: ಭಾರತದಿಂದ ಉದಾಹರಣೆಗಳನ್ನು ಆರಿಸಿ ಕೊಟ್ಟಿರುವನು. ರಾಮನ ಸಾಹಸಕ್ಕೆ ಸಂಬಂಧಿಸಿದ ಕೆಲವು ಸಾದೃಶ್ಯಗಳನ್ನು ನೋಡಬಹುದು. “ಮಾರುತಿಗೆಣೆ ಪಾರ್ಥಗೆ ಪಾಟಿ ತರಣಿ ಕುಮಾರಗೆ ಸರಿಯೆಂದೊರೆಯರೆ ಈ ರಾಮನನು”, “ ಅಂದು ಗೋಗ್ರಹಣದೊಳಗೆ ಕುಬಲಕಿಂದ್ರನಂದನ ಮಲೆತು ನಿಂದಂತೆ ಸುರುತ್ರಾಣಬಲಕೋರ್ವನೆ ರಾಮನಾದನು” “ಕೊಳುಗುಳದೊಳು ಕಾದಿ ರವಿಸೂನು ರಥ ಕಳಕುಳವಾಗಲಾತ್ಮಯೋಗದೊಳು ಬಳಿಸಂದು ನಿಂದ ತೆರದೊಳು”, “ಮಲೆತನೇಕಾಂಗದೊಳಗೆ ಭೀಮ ಕೌರವಬಲಕಿದಿರಾಗಿ ನಿಂದಂತೆ”, “ಪೆಂಡಿರ ಮಾತ ಕೇಳಿದ ರಾಮನಂತೆ”-ಇಂತೆಯೇ ಇತರ ಅನೇಕ ಪೌರಾಣಿಕ ಸಂದರ್ಭಗಳನ್ನು ಕಾವ್ಯದಲ್ಲಿ ಕಾಣಬಹುದು.

     ಈ ಅಪಾರವಾದ ಪ್ರಾಚೀನ ಪ್ರಯೋಗಗಳ ಮಧ್ಯೆ ಒಮ್ಮೊಮ್ಮೆ ಹೊಸ ಹೊಸ ಹೋಲಿಕೆಗಳನ್ನು ಕಂಡಾಗ ಯಾರಿಗಾದರೂ ಆನಂದವಾಗದೆ ಇರದು. ನಿದರ್ಶನಕ್ಕೆ, “ತೆಲುಗರ ಮೋಹರವಿದೆ ಮೇರೆಯ ಮೀರದ ಜಲನಿಧಿಯಂತೆ ಕಂಪಿಲನ ಬಲವಿದೆ ಬೆಂಚೆಯವೊಲು”, “ಅಗ್ನಿಯ ಮೇಲೆ ತುಪ್ಪದ ತುಂತುರು ಬಿದ್ದಂತವಳ ಅಂತರಂಗದೊಳಂಗಜಾಗ್ನಿ ಪೊಗೆವುತೋರಂತೆ ಪೆರ್ಚಿದುದು”, “ಒರ್ವ ಶಬರನೆಸೆದನು ಬಿಡದೆ ಕೋಣನನೇರಿ ಪೋಪ ಕೃತಾಂತನಂತೆ”, “ಕಾಟಣ್ಣ ಕೇಳು ನಾವಾಡಿದಿಂದಿನ ಲಗ್ಗೆಯಾಟ ಸಗ್ಗದ ಸೂಳೆಯರ ಕೂಟಕೆ ಕುಂಟಣಿಯಾಯ್ತು”, “ಜೋಳದ ಕೆಯ ಕಾಯಿಸುವೆನೆನುತ ಸುರುತಾಳನ ಭಟರ ಜರೆದಳು”- ಈ ಮಾತುಗಳನ್ನು ನೋಡಿದರೆ ನಂಜುಂಡನು ಹೇಗೆ ಹೊಸ ಹೊಸದಾಗಿ ಸಾದೃಶ್ಯಗಳನ್ನು ಸೃಷ್ಟಿಸಬಲ್ಲನೆಂಬುದು ವಿದಿತವಾಗುತ್ತದೆ. ಇಂಥ ಸೂಕ್ತಿಗಳು ಬಹಳಷ್ಟು ಕಾವ್ಯಗಳಲ್ಲಿ ಕಂಡು ಬರುತ್ತವೆ.

     ನಂಜುಂಡನು ಉದಾಹರಿಸಿರುವ ನಾಣ್ಣುಡಿಗಳು ಅವನ ಜೀವನಾನುಭವವನ್ನು ಸ್ವಲ್ಪಮಟ್ಟಿಗಾದರೂ ಪರಿಚಯಮಾಡಿಕೊಡಬಲ್ಲವು. “ಅಂಗೈಯ ನೆಲ್ಲಿಯ ಕಾಯಂತೆ ಲೋಕಂಗಳು ನಿನ್ನರಿವಿನೊಳು ಪಿಂಗದೆ ನೆಲಸಿಹವು”, “ಮೊಲದಾ ತಲೆಯ ಕೋಡಿವರು ತೆಗೆದರು”, “ಬಲ್ಲಿದಗೆ ಬಟ್ಟೆ ಸಸಿನವದೆಂಬ ಗಾದೆ” “ ಉಗುರಿಂದ ಪೋಪುದಕೇತಕೆ ಕೊಡಲಿಯ ತೆಗೆವೆ”ಅರಸಿಂಗಾರು ಬಾಯೆಂದೆಂಬ ಗಾದೆ ಇಂಥ ನಾಣ್ಣುಡಿಗಳು ವಿಪುಲವಾಗಿವೆ.

     ಪಂಪನು ಅರಿಕೇಸರಿಯನ್ನೇ ಅರ್ಜುನನೆಂದು ಭಾವಿಸಿದರೆ ನಂಜುಂಡನು ಕುಮಾರರಾಮನನ್ನು ಅರ್ಜುನನ ಅಂಶವೆಂದು ಗ್ರಹಿಸಿದ್ದಾನೆ. ಹರಿಹರ ಕವಿಯ  ಭಕ್ತಶಿರೋಮಣಿಗಳು ಕೈಲಾಸದಲ್ಲಿ ನಡೆದ ಯಾವುದೋ ಒಂದು ಘಟನೆಯ ಪರಿಣಾಮವಾಗಿ ಭೂಮಿಗೆ ಇಳಿದು ಬಂದಂತೆ ನಂಜುಂಡ ಕವಿಯ ಕುಮಾರರಾಮನೂ ತನ್ನ ಪರದಾರಸೋದರತ್ವದ ಪರೀಕ್ಷಾರ್ಥವಾಗಿಯೇ ಜನ್ಮ ತಾಳುತ್ತಾನೆ. ನಂಜುಂಡನ ಶೈಲಿಯಲ್ಲಿ ಹಿರಿಯ ಕವಿಗಳ ಹಿರಿಮೆಯೂ ಸ್ವತಂತ್ರವಾದ ಕಾವ್ಯಶಕ್ತಿಯೂ ಸರಿಸಮನಾಗಿ ಕಂಡುಬರುತ್ತವೆ. ಆತನ ಕಾಲದಲ್ಲಿ ಪ್ರಚಲಿತವಾಗಿದ್ದ ಸಾಮಾನ್ಯ ಕಥೆಯೊಂದನ್ನು, ಅದು ಪುರಾಣೋಕ್ತವಲ್ಲದಿದ್ದರೂ, ದಿಟ್ಟತನದಿಂದ ವಸ್ತುವನ್ನಾಗಿಟ್ಟುಕೊಂಡು, ಅದರಲ್ಲಿ ರಸವನ್ನೂ ಭಾವವನ್ನೂ ತುಂಬಿ ಹೇಳಿರುವ ಕವಿಯ ಶೈಲಿಯು ಸ್ವಾದವಾಗಿಯೂ ಶಕ್ತಿಯುವಾಗಿಯೂ ಇದೆ.  ಕುಮಾರ ರಾಮನಂತಹ  ವೀರನ ಪರಾಕ್ರಮ ಹಾಗೂ ಶೌಚಗುಣಗಳನ್ನು ಕಥಾನಕದ ಮೂಲಕ ಸ್ಥಿರಸ್ಥಾಯಿಯಾಗಿರುವಂತೆ ಚಿತ್ರಿಸಿರುವ ನಂಜುಂಡಕವಿಯ ಹೆಸರು ಕನ್ನಡಸಾಹಿತ್ಯಪರಂಪರೆಯಲ್ಲಿ  ಅಚ್ಚಳಿಯದೇ ಉಳಿದಿದೆ.

  ಪರಾಮರ್ಶನ ಗ್ರಂಥಗಳು

1.ನಂಜುಂಡ ಕವಿಯ ರಾಮನಾಥ ಚರಿತೆ (ಸಂ:ಎಚ್.ದೇವೀರಪ್ಪ)

 ಪ್ರಾಚ್ಯವಿದ್ಯಾ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ,1959,1964.

2. ಕುಮಾರ ರಾಮನಸಾಂಗತ್ಯ ಸಂಗ್ರಹ ( ಎನ್.ಅನಂತರಂಗಾಚಾರ್)

 ಮೈಸೂರು ವಿಶ್ವವಿದ್ಯಾಲಯ

3. ಜಿ.ವರದರಾಜರಾವ್ , ಕುಮಾರರಾಮನ ಸಾಂಗತ್ಯಗಳು

   ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು,1966

4. ದೇಜಗೌ, ನಂಜುಂಡಕವಿ

  ಉಷಾ ಸಾಹಿತ್ಯಮಾಲೆ, ಮೈಸೂರು

5.ಡಿಎಲ್,ನರಸಿಂಹಾಚಾರ್: ಪೀಠಿಕೆಗಳು ಮತ್ತು ಲೇಖನಗಳು

  ಡಿ.ವಿ.ಕೆ. ಮೂರ್ತಿಪ್ರಕಾಶನ, ಮೈಸೂರು,1971

6.ಹಂಪ.ನಾಗರಾಜಯ್ಯ, ಸಾಂಗತ್ಯ ಕವಿಗಳು

 ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಮಾಲೆ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ,1975

7. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ( ಸಂ: ಜಿ.ಎಸ್.ಶಿವರುದ್ರಪ್ಪ)

   ಸಂಪುಟ.5, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, 1978

೮. ವೀರಣ್ಣ ರಾಜೂರ: ಕನ್ನಡ ಸಾಂಗತ್ಯ ಸಾಹಿತ್ಯ

   ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.೧೯೮೫

 

  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...