ಸೋಮವಾರ, ಏಪ್ರಿಲ್ 23, 2018

ಬಸವಣ್ಣನವರಿಗೆ ಸಂಬಂಧಿಸಿದ ಶಾಸನಗಳು ಡಾ.ಸಿ.ನಾಗಭೂಷಣ

              ಬಸವಣ್ಣನವರಿಗೆ ಸಂಬಂಧಿಸಿದ  ಶಾಸನಗಳು
                                        ಡಾ.ಸಿ.ನಾಗಭೂಷಣ
  ಕನ್ನಡ ನಾಡಿನ ವಿವಿಧ ಅರಸು ಮನೆತನಗಳ ಸಾಮಂತರ ಆಳ್ವಿಕೆಯಲ್ಲಿ ಹುಟ್ಟಿದ ಶಾಸನಗಳು ನಾಡಿನ ಜನಾಂಗದ ಬದುಕಿನ ವಿಶ್ವಕೋಶಗಳಾಗಿವೆ.  ರಾಜರ ಆಳ್ವಿಕೆಯಲ್ಲಿ ಹುಟ್ಟಿದ ಶಾಸನಗಳಲ್ಲಿಯ ರಾಜಕೀಯ ಸಂಗತಿಗಳನ್ನು ಹೊರತು ಪಡಿಸಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳನ್ನು ಗುರುತಿಸುವ ಪ್ರಯತ್ನವು ಅನ್ಯ ಶಿಸ್ತುಗಳಡಿಯಲ್ಲಿ ಇತ್ತೀಚಿನ ದಿವಸಗಳಲ್ಲಿ ನಡೆಯುತ್ತಿದೆ. ಆಗಿನ ಕಾಲದಲ್ಲಿ ಜನರು ಯಾವ ರೀತಿ ಬದುಕಿದ್ದರು, ಅವರ ವಿದ್ಯಾಭ್ಯಾಸ, ಕಲೆ, ಧಾರ್ಮಿಕ ಕಲಾಪ, ಆಡಳಿತ, ಯುದ್ಧಗಳಲ್ಲಿ ಭಾಗವಹಿಸಿದ್ದರ ಚಿತ್ರಣ, ಲೋಕೋಪಯೋಗಿ ಕಾರ್ಯಗಳ ವಿವರಗಳು, ಅವರ ಜೀವನ ಮೌಲ್ಯಗಳನ್ನು ಕುರಿತ ಅಧ್ಯಯನ ಶಾಸನಗಳನ್ನಾಧರಿಸಿ ಗ್ರಹಿಸುವ ಪ್ರಯತ್ನ  ಮಹತ್ತರತೆಯನ್ನು ಪಡೆದಿದೆ. ಆದರೆ ಇತ್ತೀಚಿನ ದಿವಸಗಳಲ್ಲಿ  ಶಾಸನಗಳಿಂದ ವ್ಯಕ್ತವಾಗುವ ಸಂಗತಿಗಳನ್ನು ಅನ್ಯ ಶಿಸ್ತುಗಳಲ್ಲಿಯ ಆಕರಗಳ ಮೂಲಕ ಸಮರ್ಥಿಸುವ ಪ್ರಯತ್ನವೂ ನಡೆದಿದೆ.
    ಕನ್ನಡ ಕಾವ್ಯಗಳು ಮೂಲತಃ ಸಾಹಿತ್ಯ ಕ್ಷೇತ್ರಕ್ಕೆ ಸೇರಿದವುಗಳಾದರೂ ಆನುಷಂಗಿಕವಾಗಿ ಆಯಾಕಾಲದ ಚರಿತ್ರೆಗೆ ಸಲ್ಲುವಂತೆ, ಶಾಸನಗಳು ಚಾರಿತ್ರಿಕ ಸಂಗತಿಗಳ ಪ್ರಾತಿನಿಧಿಕವಾಗಿದ್ದರೂ ಆನುಷಂಗಿಕವಾಗಿ ಕಾವ್ಯ ಅಥವಾ ಸಾಹಿತ್ಯಕ್ಕೂ ಕೊಂಚಮಟ್ಟಿಗೆ ಸಲ್ಲುವ ಲಕ್ಷಣಗಳನ್ನು ಒಳಗೊಂಡಿವೆ. ಶಾಸನಗಳಿಗೂ ಕಾವ್ಯಗಳಿಗೂ ಇರುವ ಮುಖ್ಯ ವ್ಯತ್ಯಾಸ ಎಂದರೆ, ಶಾಸನರಚನೆ ಸಾಂದರ್ಭಿಕವಾದದ್ದು, ಅಂದರೆ ದಾನದತ್ತಿಗೆ ಸಂಬಂಧಿಸಿದ, ದೇವಾಲಯಗಳ ನಿರ್ಮಾಣ, ಲೋಕೋಪಯೋಗಿ ಕಾರ್ಯ, ನಿಸದಿಗೆ, ವೀರಗಲ್ಲು ಮಾಸ್ತಿಕಲ್ಲು ಸ್ಥಾಪಿಸುವುದು ಇತ್ಯಾದಿ ಕ್ರಿಯೆಯ ಸಂದರ್ಭಕ್ಕೆ ಸಂಬಂಧಪಟ್ಟಿದ್ದು, ಅವೆಲ್ಲ ನಿರ್ದೇಶಿತ ರಚನೆಗೆ ಸಂಬಂಧಪಟ್ಟವುಗಳು.
    ಶಾಸನಗಳು ಆರಂಭವಾದ ಕಾಲದಿಂದಲೂ ಪ್ರೌಢವಾದ ಚಂಪೂ ಶೈಲಿಯನ್ನೇ ಮಾದರಿಯಾಗಿಟ್ಟು ಕೊಂಡಿತು. ಹನ್ನೆರಡನೇ ಶತಮಾನದ ನಂತರ ಕನ್ನಡ ಸಾಹಿತ್ಯದಲ್ಲಿ ದೇಸಿ ಸಾಹಿತ್ಯ ಪ್ರಕಾರಗಳಾದ ವಚನ, ರಗಳೆ, ಷಟ್ಪದಿ, ಸಾಂಗತ್ಯ, ಇತ್ಯಾದಿ ಪ್ರಕಾರಗಳು ರೂಪುಗೊಂಡು ಜನಪ್ರಿಯತೆಯನ್ನು ಪಡೆಯಿತಾದರೂ ಆ ಕಾಲದ ಶಾಸನಗಳು ಎಂದಿನ ಚಂಪೂ ಶೈಲಿಯನ್ನೇ ಬಹುಮಟ್ಟಿಗೆ ಅನುಸರಿಸಿದವು. ಚಂಪೂ ಕವಿಗಳ-ಕಾವ್ಯಗಳ ಪ್ರಭಾವ ಶಾಸನ ಕವಿಗಳ ಮೇಲಾದ ಹಾಗೆ ದೇಸಿ ಸಾಹಿತ್ಯ ಪ್ರಕಾರಗಳ ಪ್ರಭಾವ ಶಾಸನಗಳ ಮೇಲಾಗಲಿಲ್ಲ. ಹೀಗಾಗಿ ಕನ್ನಡ ನಾಡಿನಲ್ಲಿ ದೊರೆಯುವ ಮೂವತ್ತು ಸಾವಿರಕ್ಕೂ ಮೇಲ್ಪಟ್ಟು ಕನ್ನಡ ಶಾಸನಗಳಲ್ಲಿ ಅಚ್ಚಗನ್ನಡ ಬೇಸಾಯಗಾರರಾದ ಶರಣರನ್ನು ಕುರಿತು, ಅವರ ವಚನಗಳಿಂದ ಪ್ರಭಾವಿತವಾದ ಶಾಸನಗಳ ಸಂಖ್ಯೆ ತೀರ ವಿರಳ ಎಂದೇ ಹೇಳಬೇಕು. ವಿರಳವಾಗಿ ಉಪಲಬ್ದವಿರುವ ಶರಣರನ್ನು ಉಲ್ಲೇಖಿಸುವ ಶಾಸನಗಳಲ್ಲಿ ಶಿವಶರಣರ ಹೆಸರು, ಜನ್ಮಸ್ಥಳ, ಅವರ ವಚನಗಳ ಉಲ್ಲೇಖ ಇತ್ಯಾದಿ ವಿವರಗಳು ಕ್ವಚಿತ್ತಾಗಿ ಕಂಡುಬರುತ್ತವೆಯೆ ಹೊರತು ಕಾವ್ಯ ಪುರಾಣಗಳಲ್ಲಿ ನಿರೂಪಿತವಾದಂತೆ ಸುದೀರ್ಘವಾದ ವೈಯುಕ್ತಿಕ ವಿವರಗಳು ಶಾಸನಗಳಲ್ಲಿ ಕಂಡು ಬರುವುದಿಲ್ಲ. ಅಪರೂಪಕ್ಕೆ ಮಾತ್ರ ಏಕಾಂತ ರಾಮಯ್ಯನ ಚರಿತ್ರೆ ಸುದೀರ್ಘವಾಗಿ ಉಲ್ಲೇಖಗೊಂಡಿದ್ದು ನಂತರ ಕಾಲದ ರಾಮಯ್ಯನನ್ನು ಕುರಿತು ಕಾವ್ಯ ಪುರಾಣಗಳನ್ನು ರಚಿಸಿದ ಕವಿಗಳಿಗೆ ಆಕರವಾಗಿದೆ.
   ವ್ಯಕ್ತಿಗಳನ್ನು ಕುರಿತ ಪುರಾಣ ಸಂಗತಿಗಳಿಗಿಂತ ಭಿನ್ನವಾದ ರೀತಿಯಲ್ಲಿ ಶುದ್ದ ಇತಿಹಾಸ ಶಾಸನಗಳಲ್ಲಿಯೂ ಸಿಗುತ್ತದೆಂಬುದಕ್ಕೆ ಶರಣರನ್ನು ಕುರಿತ ಕೆಲವು ಶಾಸನಗಳನ್ನು ಅದರಲ್ಲೂ ಏಕಾಂತದ ರಾಮಯ್ಯನ್ನು ಕುರಿತ ಅಬ್ಬಲೂರು ಶಾಸನ ಮತ್ತು ಬಸವಣ್ಣನವರನ್ನು ಕುರಿತ ಅರ್ಜುನವಾಡ ಶಾಸನಗಳನ್ನು ಉದಾಹರಿಸಬಹುದು. ಶರಣರನ್ನು ಅವರು ಜೀವಿಸಿದ್ದ ಕಾಲ ಘಟ್ಟಗಳಲ್ಲಿ ನಿಲ್ಲಿಸಿ ಕಾಲನಿರ್ಣಯ ಮಾಡಿ ವೀರಶೈವ ಧರ್ಮ ಹಾಗೂ ಸಾಹಿತ್ಯದ ಚರಿತ್ರೆಯನ್ನು ಕಾಲಬದ್ಧವಾಗಿ ರಚಿಸುವಲ್ಲಿ ಶರಣರನ್ನು ಕುರಿತ ಪುರಾಣ ಕಾವ್ಯಗಳಿಗಿಂತ ಕಾಲಸಹಿತ ವ್ಯಕ್ತಿ ನಿರ್ದೇಶನ ಮಾಡುವ ಶಾಸನಗಳು ಪ್ರಮುಖ ಪಾತ್ರವಹಿಸಿವೆ. ಹದಿಮೂರನೆಯ ಶತಮಾನದ ನಂತರದ ಶಾಸನಗಳಲ್ಲಿ ಶರಣರ ಚರಿತ್ರೆ ಸುದೀರ್ಘವಾಗಿ ವ್ಯಕ್ತವಾಗದಿದ್ದರೂ ಅವರ ಕಾರ್ಯಸಿದ್ದಿಯ ಕ್ಷೇತ್ರ, ಹೆಸರು ಇತ್ಯಾದಿಗಳ ಮೂಲಕ ಶರಣರ ಚರಿತ್ರೆಯನ್ನು  ರೂಪಿಸಲು ಕಾವ್ಯ ಪುರಾಣಗಳಲ್ಲಿ ದೊರೆಯುವ ಮಾಹಿತಿಗಳಿಗೆ ಪೂರಕವಾಗಿ ಶಾಸನಗಳು ಆಕರಗಳಾಗಿ ಕೆಲಸ ಮಾಡಿರುವುದು ಕಂಡು ಬರುತ್ತದೆ.
ಈ ಹಿನ್ನಲೆಯಲ್ಲಿ ಶಾಸನಗಳನ್ನು, ಶರಣರನ್ನು ಕುರಿತು ಹಲವು ದೃಷ್ಟಿಕೋನದಿಂದ ನೋಡಬಹುದಾಗಿದೆ.
 1. ಶರಣರ ವೈಯುಕ್ತಿಕ ಚರಿತ್ರೆಯನ್ನು, ಅವರ ವಂಶಾವಳಿ, ಜನ್ಮ ಸ್ಥಳ ಇತ್ಯಾದಿಗಳನ್ನು ಗುರುತಿಸಲು, 2. ಶರಣರು ಬದುಕಿದ್ದ ಕಾಲದ ಧಾರ್ಮಿಕ ಸ್ವರೂಪವನ್ನು ಗುರುತಿಸಲು, 3. ಶರಣರ ಜೀವಿತದ ಕಾಲವನ್ನು ಅರ್ಥೈಸಲು. 4. ಶರಣರ ವಚನಗಳ ಅಂಕಿತದ ಶುದ್ಧಪಾಠವನ್ನು ಗುರುತಿಸಲು 5. ಶರಣರ ಕುರಿತ ಕಾವ್ಯ ಪುರಾಣಗಳಲ್ಲಿಯ ವಿವರಗಳಲ್ಲಿ ಒಡಮೂಡಿರುವ ಸಂದೇಹಗಳನ್ನು ಪರಿಹರಿಸಿಕೊಳ್ಳುವಲ್ಲಿ ಪ್ರಮುಖ ಆಕರಗಳಾಗಿ ಬಳಸಿಕೊಳ್ಳಬಹುದಾಗಿದೆ. ಅದೇ ರೀತಿ ಶರಣರ ವಚನಗಳ ಪ್ರಭಾವ ಸಮಕಾಲೀನ ಹಾಗೂ ನಂತರದ ಶಾಸನ ಕವಿಗಳ ಮೇಲಾಗಿರುವುದನ್ನು ಸ್ವಲ್ಪಮಟ್ಟಿಗೆ ಗುರುತಿಸಬಹುದಾಗಿದೆ.
     ಶಿವಶರಣರನ್ನು ಕುರಿತು ಪ್ರಥಮವಾಗಿ ಕಾವ್ಯ-ಪುರಾಣಗಳನ್ನು ರಚಿಸಿದ ಹರಿಹರ ಪಾಲ್ಕುರಿಕೆ ಸೋಮನಾಥರ ಕಾಲಕ್ಕಿಂತ ಪೂರ್ವದಲ್ಲಿಯೇ ಶಿವಶರಣರ ಚರಿತ್ರೆಯನ್ನು, ಶರಣರ ಹೆಸರು, ಸ್ಥಳ, ಅವರ ಶಿವಪಾರಮ್ಯಗೈದ ಸ್ಥಳ, ಶರಣರ ವಂಶಾವಳಿ, ಶರಣ ವಚನಗಳ ಅಂಕಿತ ಇತ್ಯಾದಿಗಳನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಉಲ್ಲೇಖಿಸಿರುವ ಹಲವು ಶಾಸನಗಳು ದೊರೆಯುತ್ತವೆ. ಕೊಂಡಗುಳಿ ಕೇಶಿರಾಜನನ್ನು ಉಲ್ಲೇಖಿಸುವ ಕ್ರಿ.ಶ.1102ರ ಎರಡು ಶಾಸನಗಳು, ಜೇಡರ ದಾಸಿಮಯ್ಯನನ್ನು ಉಲ್ಲೇಖಿಸುವ ಕ್ರಿ.ಶ.1114ರ ಗೊಬ್ಬೂರು ಶಾಸನ, ನೆಲವಿಗೆ ಸಾಂತಯ್ಯನ ಕ್ರಿ.ಶ. 1162ರ ಭೂಯಾರ ಶಾಸನ, ಹುಳಿಯಮೇಶ್ವರ ಚಿಕ್ಕಯ್ಯನನ್ನು ಉಲ್ಲೇಖಿಸುವ ಕ್ರಿ.ಶ.1168ರ ದೇವರ ಗುಡಿ ಶಾಸನ, ಕೆಂಬಾವಿ ಭೋಗಣ್ಣ, ಅಣಂಪೂರ ವರದಾನಿ ಗುಡ್ಡವ್ವೆ, ಮಾರುಡಿಗೆ ನಾಚಿತಂದೆ ಮುಂತಾದ ಶರಣರು ಅನ್ಯ ಧರ್ಮಗಳ  ವಿರುದ್ದ ಹೋರಾಡಿ ಶಿವಪಾರಮ್ಯವನ್ನು ಸಾಧಿಸಿದ ಸ್ಥಳಗಳನ್ನು ಉಲ್ಲೇಖಿಸುವ ಕ್ರಿ.ಶ 1184 ರ ತಾಳಿಕೋಟೆ ಶಾಸನ, ಏಕಾಂತದ ರಾಮಯ್ಯನ ವೈಯಕ್ತಿಕ ಚರಿತ್ರೆಯನ್ನು ಸುದೀರ್ಘವಾಗಿ ಪ್ರಸ್ತಾಪಿಸುವ ಕ್ರಿ.ಶ 1185ರ ಅಬ್ಬಲೂರು ಶಾಸನ. ಬಸವಣ್ಣನವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ಪ್ರಸ್ತಾಪಿಸಿರುವ ಕ್ರಿ.ಶ 1260ರ ಅರ್ಜುನವಾಡ ಶಾಸನ, ಕ್ರಿ.ಶ.1190 ರ ಚೂರ್ಗಿ ಶಾಸನದಿಂದ  ಹಿಡಿದು ಯಾದವ ಅರಸುಗಳ ಆಳ್ವಿಕೆಯ ಕಟನೂರು ಶಾಸನ ಹಾಗೂ ಮರಡಿಪುರ ಶಾಸನವರೆಗಿನ ಸಿದ್ಧರಾಮರಿಗೆ ಸಂಬಂಧಿಸಿದ 21 ಶಾಸನಗಳುಹರಿಹರ-ಪಾಲ್ಕುರಿಕೆ ಸೋಮನಾಥರ ಕಾವ್ಯ ಪುರಾಣಗಳ ರಚನೆಗಿಂತ ಪೂರ್ವದಲ್ಲಿ ಹಾಕಿಸಲ್ಪಟ್ಟವುಗಳಾಗಿವೆ. ಶರಣರನ್ನು ಚರಿತ್ರೆಯನ್ನು, ಬದುಕನ್ನು, ಶರಣರು ಶಿವಪಾರಮ್ಯಗೈದ ಸ್ಥಳ ಇತ್ಯಾದಿ ಸಂಗತಿಗಳನ್ನು ಉಲ್ಲೇಖಿಸುವ ಈ ಶಾಸನಗಳು  ಹೆಚ್ಚು ವಿಶ್ವಾಸನೀಯ ಎನ್ನಬೇಕಾಗುತ್ತದೆ. ಶರಣರನ್ನು ಕುರಿತ ಈ ಶಾಸನಗಳಲ್ಲಿ ಕೆಲವೆಡೆ ಪವಾಡಮಯ ಘಟನೆಗಳು ಮೇಳೈಸಿದ್ದರೂ ಅವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳು ನಂಬಲರ್ಹವಾಗಿವೆ. ಶರಣರ ಬದುಕಿನ ವಿವರಗಳನ್ನು ಐತಿಹಾಸಿಕವಾಗಿ ಅರ್ಥೈಸಲು ಶಾಸನಗಳು ನೆರವನ್ನು ನೀಡಿವೆ. ನಿದರ್ಶನಕ್ಕೆ ದೇವರ ದಾಸಿಮಯ್ಯ, ಕೊಂಡಗುಳಿ ಕೇಶಿರಾಜ, ಏಕಾಂತದ ರಾಮಯ್ಯ, ಆದಯ್ಯ, ಬಸವಣ್ಣ, ಸಿದ್ದರಾಮರನ್ನು ಕುರಿತ ಪ್ರತ್ಯಕ್ಷ ಹಾಗೂ ಪರೋಕ್ಷ ಶಾಸನಗಳನ್ನು ಪರಿಶೀಲಿಸಬಹುದಾಗಿದೆ.
      ವ್ಯಕ್ತಿಗಳನ್ನು ಕುರಿತು ಪುರಾಣ ಸಂಗತಿಗಳಿಗಿಂತ ಭಿನ್ನವಾದ ರೀತಿಯಲ್ಲಿ ಶುದ್ಧ ಇತಿಹಾಸ ಶಾಸನಗಳಲ್ಲಿಯೂ ಸಿಗುತ್ತದೆಂಬುದಕ್ಕೆ ಶರಣರನ್ನು ಕುರಿತ ಶಾಸನಗಳನ್ನು ಅದರಲ್ಲಿಯೂ ಏಕಾಂತರಾಮಯ್ಯನನ್ನು ಕುರಿತ ಅಬ್ಬಲೂರು ಶಾಸನ, ಬಸವಣ್ಣರನ್ನು ಕುರಿತ ಅರ್ಜುನವಾಡ ಶಾಸನಗಳನ್ನು ಉದಾಹರಿಸಬಹುದು. ಶರಣರನ್ನು ಅವರು ಜೀವಿಸಿದ್ದ ಕಾಲಘಟ್ಟಗಳಲ್ಲಿ ನಿಲ್ಲಿಸಿ ಕಾಲನಿರ್ಣಯ ಮಾಡಿ ವೀರಶೈವ ಧರ್ಮ ಮತ್ತು ಸಾಹಿತ್ಯಚರಿತ್ರೆಯನ್ನು ಕಾಲಬದ್ಧವಾಗಿ ರಚಿಸುವಲ್ಲಿ ಶರಣರನ್ನು ಕುರಿತ ಪುರಾಣ ಕಾವ್ಯಗಳಿಗಿಂತ ಕಾಲಸಹಿತ ವ್ಯಕ್ತಿನಿರ್ದೇಶನ ಮಾಡುವ ಶಾಸನಗಳನ್ನು ಪ್ರಮುಖವಾಗಿ ಗಮನಿಸಬಹುದಾಗಿದೆ. ಶರಣರ ಹೆಸರು ಕಾರ್ಯಸಿದ್ಧಿಯ ಕ್ಷೇತ್ರ ಇತ್ಯಾದಿಗಳನ್ನು ಉಲ್ಲೇಖಿಸುವುದರ ಮೂಲಕ ಶರಣರ ಚರಿತ್ರೆಯನ್ನು ರಚಿಸಲು ಕಾವ್ಯಪುರಾಣಗಳಲ್ಲಿ ದೊರೆಯುವ ಮಾಹಿತಿಗಳಿಗೆ ಪೂರಕವಾಗಿ ಶಾಸನಗಳು ಆಕರಗಳಾಗಿ ಕೆಲಸಮಾಡಿವೆ.    ಬಸವಣ್ಣನವರ ಚರಿತ್ರೆಯನ್ನು ರೂಪಿಸುವಲ್ಲಿ ವಚನಗಳು, ಕಾವ್ಯ-ಪುರಾಣಗಳ ಜೊತೆಯಲ್ಲಿ ಕೆಲವು ಶಾಸನಗಳು ಸಹಕಾರಿಯಾಗಿವೆ. ಬಸವಣ್ಣನವರ ಚರಿತ್ರೆ ಹಾಗೂ ವ್ಯಕ್ತಿತ್ವದ ಮೇಲೆ ಪ್ರತ್ಯಕ್ಷವಾದ ಹಾಗೂ ಪರೋಕ್ಷವಾಗಿ ಬೆಳಕು ಚೆಲ್ಲುವ, ಸಂಶೋಧಕರಿಂದ ಮಾನ್ಯ ಮಾಡಲ್ಪಟ್ಟ ಹದಿಮೂರು ಶಾಸನಗಳು ಬೆಳಕಿಗೆ ಬಂದಿವೆ.
. ಬಸವಣ್ಣನ ಹೆಸರನ್ನು ಪ್ರಸ್ತಾಪಿಸುವ ಶಾಸನಗಳು: ಬಸವಣ್ಣನವರ ಪರ್ಯಾಯ ನಾಮಗಳನ್ನು ಪ್ರಸ್ತಾಪಿಸುವ ೧೧ ಶಾಸನಗಳು ಸಂಶೋಧಕರಿಂದ ಮಾನ್ಯತೆ ಪಡೆದ ಸರ್ವಸಮ್ಮತವಾದ ಶಾಸನಗಳಾಗಿವೆ. ಅವುಗಳೆಂದರೆ
ಕ್ರಿ.. ೧೨೫೯ರ ಹಿರಿಯೂರ ಶಾಸನ- ಬಸವಯ್ಯ
ಕ್ರಿ. ೧೨೬೦ರ ಅರ್ಜುನವಾಡ ಶಾಸನ - ಬಸವರಾಜ, ಸಂಗನಬಸವ
ಕ್ರಿ. ೧೨೬೩ ಚೌಡದಾನಪುರದ ಶಾಸನಗಳು _ಸಂಗಮೇಶನ ಪುತ್ರ, ಬಸವಯ್ಯ, ಸಂಗನ ಬಸವ
ಕ್ರಿ. ೧೨೭೯ ಕಲ್ಲೆದೇವರಪುರದ ಶಾಸನದಲ್ಲಿ _ ಬಸವರಾಜ
ಕ್ರಿ. ೧೨೮೦ರ ಮರಡಿಪುರದ ಶಾಸನ ಸಂಗನ ಬಸವಯ್ಯ
೧೪ನೇಯ ಶತಮಾನದ ಗುರಿಹಾಳ ಶಾಸನದಲ್ಲಿಯ ಬಸವರಾಜದೇವರು
ಕ್ರಿ.. ೧೬೨೪ ರ ನಾಗಲೂಟಿ ಶಾಸನ ಕಲ್ಯಾಣ ಬಸವೇಶ್ವರುನಿ
ಕ್ರಿ..೧೬೬೦ರ ಆನಂದಪುರ ಮಠದ ತಾಮ್ರಶಾಸನದಲ್ಲಿ ಬಸವೇಶ್ವರ
ಕ್ರಿ. ೧೬೮೬ ಜೋಡ ದಾಸೇನಹಳ್ಳಿಯ ಶಾಸನ ಬಸವರಾಜೇಂದ್ರ
ಕ್ರಿ. ೧೭೦೦ರ ಕಾನಕಾನಹಳ್ಳಿಯ ತಾಮ್ರ ಶಾಸನಗಳು ಬಸವೇಶ್ವರಸಾಮುಲು, ಕಲ್ಯಾಣದ ಬಸವಪ್ಪನವರು
ಮೇಲ್ಕಂಡ ಶಾಸನಗಳಲ್ಲಿಯ ಉಲ್ಲೇಖಿತ ವ್ಯಕ್ತಿಯ ಹೆಸರುಗಳು ಬಸವಣ್ಣನವರದ್ದೇ ಆಗಿದೆ.
ಬಸವಣ್ಣನವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ಪ್ರಸ್ತಾಪಿಸಿರುವ ಕ್ರಿ..೧೨೬೦ರ ಅರ್ಜುನವಾಡ ಶಾಸನ, ಕ್ರಿ..೧೨೫೯ರ ಹಿರಿಯೂರ ಶಾಸನ ಕ್ರಿ.. ೧೨೬೩ ಚೌಡದಾನಪುರ ಶಾಸನಗಳು ಹರಿಹರ-ಪಾಲ್ಗುರಿಕೆ ಸೋಮನಾಥರ ಕಾವ್ಯಗಳ ರಚನೆಗಿಂತ ಪೂರ್ವದಲ್ಲಿ ಹಾಕಿಸಲ್ಪಟ್ಟವುಗಳಾಗಿವೆ. ಬಸವಣ್ಣನ ಇತಿವೃತ್ತ, ಶಿವಪಾರಮ್ಯದ ವಿವರ, ಇತ್ಯಾದಿಗಳನ್ನು ಗುರುತಿಸುವಲ್ಲಿ ಇವು ವಿಶ್ವಾಸನೀಯಗಳಾಗಿವೆ.
1. ಬಸವಣ್ಣನವರ ಪೂರ್ವಿಕರ ಜನ್ಮಗ್ರಾಮ
ಬಸವಣ್ಣನವರ ತಂದೆಯವರನ್ನು ವೀರಶೈವ ಕಾವ್ಯ ಪುರಾಣಗಳು ಮಂಡಗೆಯ ಮಾದಿರಾಜ ಎಂದು ಕರೆದಿದೆ. ಮಾದಿರಾಜ ಎಂಬುದು ವ್ಯಕ್ತಿನಾಮವಾಗಿದ್ದು ವ್ಯಕ್ತಿನಾಮದ ಹಿಂದೆ ಇರುವಮಂಡಗೆಎಂಬ ಪದವು ಏನನ್ನು ಸೂಚಿಸುತ್ತದೆ ಎಂಬುದು ಕುತೂಹಲವನ್ನುಂಟು ಮಾಡುತ್ತದೆ. ನಿಟ್ಟಿನಲ್ಲಿ ಮಾದಿರಾಜರ ಹೆಸರಿನ ಹಿಂದಿರುವ ಮಂಡಗೆಯು ಗ್ರಾಮನಾಮ ಸೂಚಿಯಾಗಿದ್ದು ಅದು ಎಲ್ಲಿದೆ ಎಂಬುದನ್ನು ಬಿ.ಆರ್.ಹಿರೇಮಠ ರವರು ಶಾಸನಗಳ ಹಿನ್ನಲೆಯಲ್ಲಿ ಗುರುತಿಸಿದ್ದಾರೆ.
ವಚನಕಾರ ಘಟ್ಟಿವಾಳಯ್ಯನ ವಚನದಲ್ಲಿ ಬರುವ
ಕರವೂರ ನಿರಹಂಕಾರ ಸುಜ್ಞಾನಿದೇವಿಯರ
ಬಸುರಲ್ಲಿ ಬಂದರೆನ್ನಬಹುದೆ ಪ್ರಭುದೇವರ
ಮಂಡಗೆಯ ಮಾದಿರಾಜ-ಮಾದಲಾಂಬಿಕೆ……
ಬಸುರಲ್ಲಿ ಬಂದರೆನ್ನಬಹುದೆ ಬಸವೇಶ್ವರನ
ಮೊರಡಿಯ ಮುದ್ದುಗೌಡ ಸುಗ್ಗವ್ವೆಯರ
ಬಸುರಲ್ಲಿ ಬಂದರೆನ್ನಬಹುದೆ ಸಿದ್ಧರಾಮೇಶ್ವರನಎಂಬಲ್ಲಿಯ
ಪ್ರಭುದೇವರ ತಂದೆ ತಾಯಿಗಳಾದ ನಿರಹಂಕಾರ ಸುಜ್ಞಾನದೇವಿ ಎಂಬ ವ್ಯಕ್ತಿನಾಮಸೂಚಿಗಳ ಪದಗಳ ಹಿಂದಿರುವ ಕರವೂರು, ಸಿದ್ಧರಾಮರ ತಂದೆ ತಾಯಿ ಮುದ್ದುಗೌಡ ಸುಗ್ಗವ್ವೆ ಎಂಬ ವ್ಯಕ್ತಿನಾಮಸೂಚಿ ಪದಗಳ ಹಿಂದಿರುವ ಮೊರಡಿ ಪದಗಳು ಗ್ರಾಮನಾಮ ಸೂಚಿಯಾಗಿರುವ ಹಾಗೆ ಬಸವಣ್ಣನವರ ತಂದೆ ತಾಯಿಗಳಾದ ಮಾದಿರಾಜ ಮಾದಲಾಂಬಿಕೆ ಹೆಸರಿನ ಹಿಂದಿರುವ ಮಂಡಗೆಯು ಸಹ ಗ್ರಾಮನಾಮವಾಚಿ ಎಂದು ಭಾವಿಸಬಹುದಾಗಿದೆ.
  ಕಲಬುರ್ಗಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕ್ರಿ. ೧೧೨೯ರ ಮುದನೂರಿನ ಶಾಸನದಲ್ಲಿ ವಿವಿಧ ಗ್ರಾಮದ ವರ್ತಕರನ್ನು ಉಲ್ಲೇಖಿಸುವಾಗ ಮಂಡಗೆಯ ರಾಮಿಶೆಟ್ಟಿ ಎಂಬ ವ್ಯಕ್ತಿಯ ಉಲ್ಲೇಖವು ದಾಖಲಾಗಿದೆ. ವರ್ತಕ ರಾಮಶೆಟ್ಟಿಯು ಮಂಡಗೆ ಗ್ರಾಮದವನು ಎಂಬುದನ್ನು ಸ್ಪಷ್ಟವಾಗಿ ದಾಖಲಿಸಿದೆ. ಹಿನ್ನಲೆಯಲ್ಲಿ ಮಾದಿರಾಜನ ಹಿಂದಿರುವ ಮಂಡಗೆ ಪದವು ಗ್ರಾಮವಾಚಿ ಪದವೆಂಬುದು ಸೂಕ್ತವಾಗಿದೆ. ಮಂಡಗೆಯ ಮಾದಿರಾಜ ಎಂದರೆ ಮಂಡಗೆ ಗ್ರಾಮದ ಮಾದಿರಾಜ ಎಂದು ಪರಿಭಾವಿಸಬಹುದು.
   ಮುದೆನೂರು ಶಾಸನದಲ್ಲಿ ಮಂಡಗೆ ಗ್ರಾಮವು ಪರೋಕ್ಷವಾಗಿ ಉಲ್ಲೇಖಿತವಾಗಿರುವುದರಿಂದ ಗ್ರಾಮವು ಮುದೆನೂರು ಪರಿಸರದಲ್ಲಿಯ ಸಮೀಪದ ಗ್ರಾಮವೇ ಆಗಿದೆ. ಅಂದರೆ ಸಗರ ನಾಡಿನ ಪರಿಧಿಯಲ್ಲಿ ಮಂಡಗೆ ಗ್ರಾಮವು ಕಂಡುಬರುತ್ತದೆ. ಸಗರನಾಡಿನ ಪರಿಸರದಲ್ಲಿ ಕ್ಷೇತ್ರಕಾರ್ಯ ಕೈಗೊಳ್ಳುವುದರ ಮೂಲಕ ಬಸವಣ್ಣನವರ ಪೂರ್ವಜರ ಗ್ರಾಮವು ಮಂಡಗೆ ಎಂದು ಗುರುತಿಸುವ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ಈ ಗ್ರಾಮದ ಅಸ್ತಿತ್ವನ್ನು ಶೋಧಿಸಿದರೆ ಬಸವಣ್ಣನವರ ಪೂರ್ವಜರ ಬಗೆಗೆ ಹೆಚ್ಚಿನ ಸಂಗತಿಗಳು ವ್ಯಕ್ತಗೊಳ್ಳುವ ಸಾಧ್ಯತೆ ಇದೆ. ಮಾದಿರಾಜರು ಮೂಲತಃ ಸಗರ ನಾಡಿನ ಮಂಡಗೆ ಗ್ರಾಮದವರರಾಗಿದ್ದು ನಂತರದ ಕಾಲದಲ್ಲಿ ಬಾಗೇವಾಡಿಗೆ ಬಂದು ನೆಲೆಸಿರಬೇಕು ಎಂದೆನಿಸುತ್ತದೆ. ಸಗರ ನಾಡಿನ ಮಂಡಗೆ ಗ್ರಾಮಕ್ಕೂ ತರ್ದವಾಡಿ ನಾಡಿನ ಬಾಗೇವಾಡಿಗೂ ಹೆಚ್ಚಿನ ಅಂತರವು ಕಂಡುಬರುವುದಿಲ್ಲ   
ಬಸವಣ್ಣನವರ ವಂಶಾವಳಿ:     ಬಸವಣ್ಣನವರ ಚರಿತ್ರೆಯನ್ನು ಬಸವರಾಜದೇವರ ರಗಳೆ ಕೃತಿ ರೂಪದಲ್ಲಿ ರಚಿಸಿದ ಹರಿಹರನಿಗಿಂತಲೂ ಪೂರ್ವದಲ್ಲಿಯೇ ಬಸವಣ್ಣನವರಿಗೆ ಸಂಬಂಧಿಸಿದ ಕ್ರಿ. ೧೨೬೦ರ ಶಾಸನ ಅರ್ಜುನವಾಡದಲ್ಲಿ ದೊರೆತಿದೆ. ಶಾಸನವು ಹರಿಹರನ ಕೃತಿಯ ಬಸವಣ್ಣನ ವೈಯಕ್ತಿಕ ಚರಿತ್ರೆ, ಜನ್ಮಸ್ಥಳದ ಮೇಲೆ ಬೆಳಕು ಚೆಲ್ಲಿದೆ. ಅದಕ್ಕಿಂತ ಮುಖ್ಯವಾಗಿ ಬಸವರಾಜದೇವರ ರಗಳೆಯಲ್ಲಿಯ ಬಸವಣ್ಣನವರ ತಂದೆ ಊರುಗಳ ಬಗೆಗೆ ಇದ್ದ ಸಂದೇಹಗಳನ್ನು ಹೋಗಲಾಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಶಾಸನದಲ್ಲಿ ನಿರೂಪಿತವಾಗಿರುವ ಬಸವಣ್ಣನವರಿಗೆ ಸಂಬಂಧಿಸಿದ ಸಂಗತಿಗಳು ಕಾವ್ಯಗಳಿಗಿಂತ ಪ್ರಾಚೀನವಾಗಿದ್ದು ವಿಶ್ವಾಸನೀಯವಾಗಿದೆ.
ಅರ್ಜುನವಾಡ ಶಾಸನದಲ್ಲಿ ಬರುವಮತ್ತಂ ತರ್ದವಾಡಿ ಮಧ್ಯಗ್ರಾಮ ಭಾಗವಾಡಿ ಪುರವರಾಧೀಶ್ವರ ಮಾದಿರಾಜ ತನುಜಂ ಬಸವರಾಜನ ಮಹಿಮೆಯೆಂತೆಂದಡೆ”  ಎಂಬ ಸಂಗತಿಗಳು ಬಸವಣ್ಣನವರ ತಂದೆಯ ಹೆಸರು ಮತ್ತು ಜನ್ಮಸ್ಥಳದ ಬಗೆಗೆ ಸಂಶೋಧಕರು  ಹುಟ್ಟು ಹಾಕಿದ್ದ  ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರವನ್ನು ನೀಡುವುದರ ಮೂಲಕ ಹೋಗಲಾಡಿಸಿವೆ.
ಬಸವಣ್ಣನ ವೈಯಕ್ತಿಕ ಸಂಗತಿಗಳ ಬಗೆಗೆ, ವಂಶಾವಳಿಯ ಬಗೆಗೆ ಬೇರೆ ಎಲ್ಲಿಯೂ ದೊರೆಯದ ಕೆಲವು ಹೊಸ ಸಂಗತಿಗಳು ಶಾಸನದ ಮೂಲಕ  ಪ್ರಥಮ ಬಾರಿಗೆ ಬೆಳಕಿಗೆ ಬಂದಿವೆ. ಶಾಸನದಲ್ಲಿಯ
ಸಂಗನ ಬಸವನ ಅಗ್ರ()
(ಲಿಂ)ಗೈಕಂ ದೇವರಾಜಮುನಿಪನ ತನಯಂ
ಜಂಗಮ ಪರುಸಂ (ಕಾವ)
ಸಂಗಂ ಪ್ರಿಯಸುತನೆನಿಪ್ಪ ಕಲಿದೇವರಸಂ
ಎಂಬ ವಿವರದಲ್ಲಿ ಬಸವಣ್ಣನವರಿಗೆ ಒಬ್ಬ ಅಣ್ಣ ಇದ್ದನೆಂದು ಅಣ್ಣನ ಹೆಸರು ದೇವರಾಜ ಎಂದೂ ಆತನ ಮಗ ಕಲಿದೇವ ಹಾಗೂ ಆತನ ಮಗ ಹಾಲಬಸವಿ ದೇವರ ಉಲ್ಲೇಖವನ್ನು ಮೊಟ್ಟಮೊದಲ ಬಾರಿಗೆ ಬೆಳಕಿಗೆ ಬಂದಿತು. ವಿವರ ಬಸವಣ್ಣನವರನ್ನು ಕುರಿತ ಅಪಾರ ಸಂಖ್ಯೆಯಲ್ಲಿ ರಚನೆಯಾಗಿರುವ ವೀರಶೈವ ಕಾವ್ಯಪುರಾಣಗಳಲ್ಲಿ ಎಲ್ಲಿಯೂ ಉಲ್ಲೇಖಿತಗೊಂಡಿಲ್ಲ. ಶಾಸನದಲ್ಲಿ ಕಂದಪದ್ಯದಲ್ಲಿ ಲುಪ್ತವಾಗಿದ್ದ ನಾಲ್ಕು ಅಕ್ಷರಗಳನ್ನು .ಗು.ಹಳಕಟ್ಟಿ, ಎಸ್.ಶ್ರೀಕಂಠಶಾಸ್ತ್ರೀ, ಎನ್,ಲಕ್ಷ್ಮಿನಾರಾಯಣರಾಯ, ಕಪಟ್ರಾಳ ಕೃಷ್ಣರಾಯ, ಟಿ.ಎನ್.ಮಲ್ಲಪ್ಪ, ಶ್ರೀ ಚನ್ನಮಲ್ಲಿಕಾರ್ಜುನ, ಪಿ.ಬಿ.ದೇಸಾಯಿಯವರು ಊಹಾತ್ಮಕ ಪಾಠವನ್ನು ಕಟ್ಟಿಕೊಟ್ಟಿದ್ದಾರೆ. ಈಗಿನ ಮಟ್ಟಿಗೆ ಎನ್.ಲಕ್ಷ್ಮಿನಾರಾಯಣರಾಯರು ಕಟ್ಟಿಕೊಟ್ಟ ಪಾಠವನ್ನು ಅದರಿಂದ ಹೊರಡುವ ವಂಶಾವಳಿಯನ್ನು ವಿದ್ವಾಂಸರು ಮಾನ್ಯಮಾಡಿದ್ದಾರೆ. ಅದು ಕೆಳಕಂಡ ರೀತಿಯಲ್ಲಿದೆ.
                               ಮಾದಿರಾಜ
                                   |
                   |____________________________|
              ಸಂಗನ ಬಸವ                      ದೇವರಾಜಮುನಿಪ
                                                   |
                                                 ಕಾವರಸ
                                                    |
                                                ಕಲಿದೇವರಸ
                                                   
  ಶಾಸನವು ಬಸವಣ್ಣನವರ ಮನೆತನದ ವಂಶಾವಳಿಯ ಒಳನೋಟವನ್ನು ಉಲ್ಲೇಖಿಸಿದೆ.  
      ಪದ್ಯದಲ್ಲಿಕಾವರಸಂಗ ಪ್ರಿಯಸುತನೆನಿಪ ಕಲಿದೇವರಸಂಎಂಬಲ್ಲಿ ತನಯಂ ಎಂಬ ಪದಕ್ಕೆ ನೇರವಾದ ಮಗನೆಂದು ಪ್ರಿಯಸುತನೆಂದರೆ ಶ್ರೇಷ್ಠನೆಂದೂ ಅರ್ಥೈಸಬೇಕು  ಎಂದು ಎಂ.ಎಂ.ಕಲಬುರ್ಗಿಯವರು  ಅಭಿಪ್ರಾಯ ಪಟ್ಟಿದ್ದಾರೆಮುಂದುವರಿದು, ಯಾವ ವ್ಯಕ್ತಿಯೇ ಆಗಲಿ ತಾನು ತನ್ನ ತಂದೆಗೆ ಪ್ರೀತಿಯ ಮಗನು ಎಂದು ಹೇಳುವುದು ಕೃತ್ರಿಮ ಎನಿಸುತ್ತದೆ ಎಂಬ ನಿಲುವನ್ನು ವ್ಯಕ್ತ ಪಡಿಸಿದ್ದಾರೆ. ಹಿನ್ನೆಲೆಯಲ್ಲಿ ಕಂದಪದ್ಯವನ್ನು ಸಂಗನ ಬಸವನ ಅಣ್ಣನಾದ ಲಿಂಗೈಕ್ಯ ದೇವರಾಜನು ಜಂಗಮ ಪುರುಷನಾದ ಕಾವರಸನಿಗೂ (ಶಿಷ್ಯನೆಂಬ ಅರ್ಥದಲ್ಲಿ) ಪ್ರೀತಿಯ ಮಗನೆನಿಸಿದ ವಿಷಯ ವ್ಯಕ್ತವಾಗಿತ್ತದೆ. ಇದರಿಂದಾಗಿ ಕಲಿದೇವರಸನು ದೇವರಾಜನಿಗೆ ಉದರ ಸಂಜಾತನೂ ಕಾವರಸನಿಗೆ ಕರಸಂಜಾತನೂ ಆಗಿದ್ದನೆಂದು ಅರ್ಥ ಧ್ವನಿಸುತ್ತದೆ. ಅರ್ಥದಿಂದ ಹೊರಹೊಮ್ಮುವ ಸಂಗತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಂ.ಎಂ.ಕಲಬುರ್ಗಿರವರು, ಎಂ.ಲಕ್ಷ್ಮಿನಾರಾಯಣ ರಾಯರು ತುಂಬಿ ಕೊಟ್ಟಿದ್ದ ಅರ್ಜುನವಾಡ ಶಾಸನದ ಈ ತ್ರುಟಿತ  ಕಂದ ಪದ್ಯದಿಂದ ಹೊರಡುವ ಪಾಠವನ್ನು ಎಂ.ಎಂ ಕಲಬುರ್ಗಿರವರು ತಿದ್ದುಪಡಿಮಾಡಿ ಕೊಟ್ಟಿದ್ದಾರೆ. ಎನ್.ಲಕ್ಷೀನಾರಾಯಣರಾಯ ಮುಂತಾದ ವಿದ್ವಾಂಸರು ರೂಪಿಸಿದ್ದ ಬಸವಣ್ಣನ ವಂಶಾವಳಿಯನ್ನು ಈ ಕೆಳಕಂಡ ರೀತಿಯಲ್ಲಿ ಮಾರ್ಪಡಿಸಿಕೊಟ್ಟಿದ್ದಾರೆ.
                 ಮಾದಿರಾಜ
                      |
______________________________________________  
  |                  |                      |
ಕಾವರಸ          ದೇವರಾಜ              ಸಂಗನಬಸವ
 (ಪ್ರಿಯ ಸುತ)       (ಸುತ)
        |----------------|
               |
            ಕಲಿದೇವ
               |
           ಹಾಲಬಸವಿದೇವ
ಎಂಬ ಶಾಸನ ಪದ್ಯದ ಉಲ್ಲೇಖದಿಂದ ಬಸವಣ್ಣನವರ ಅಣ್ಣನ ಹೆಸರು ದೇವರಾಜ. ಆತನ ಮಗ ಕಲಿದೇವ ಹಾಗೂ ಆತನ ಮಗ ಹಾಲಬಸವಿದೇವರ ಉಲ್ಲೇಖ ಮೊಟ್ಟಮೊದಲ ಬಾರಿಗೆ ಬೆಳಕಿಗೆ ಬಂದಿತು. ಈ ಶಾಸನದಲ್ಲಿ ಬಸವಣ್ಣನವರ ಮನೆತನದ ವಂಶಾವಳಿಯ ಒಳನೋಟವನ್ನು ಉಲ್ಲೇಖ ಮಾಡಿದೆ. ಆದಾಗ್ಯೂ  ಹಿಂದು ಮುಂದು ಯಾವ ಅನ್ಯ  ಆಧಾರಗಳು ಇಲ್ಲದ ಯಾವುದೇ ನಂತರದ ಶಾಸನಗಳಲ್ಲಿ  ಉಲ್ಲೇಖ ಇರದ ವಂಶಾವಳಿಯಾಗಿದೆ. ಈ ವಿವರ ಬಸವಣ್ಣನವರನ್ನು ಕುರಿತು ಅಪಾರ ಸಂಖ್ಯೆಯಲ್ಲಿ ರಚಿತವಾಗಿರುವ ವೀರಶೈವ ಕಾವ್ಯ-ಪುರಾಣಗಳಲ್ಲಿ ಎಲ್ಲಿಯೂ ವ್ಯಕ್ತವಾಗಿಲ್ಲ.  ನೆಲದ ಮರೆಯ ನಿದಾನವಾಗಿದ್ದ ಬಸವಣ್ಣನವರ ಜೀವನಕ್ಕೆ ಸಂಬಂಧಪಟ್ಟ  ಕೆಲವು ನೂತನ ಸಂಗತಿಗಳನ್ನು ಈ ಶಾಸನ ಹೊರಗೆಡವಿರುವುದರಿಂದ ಈ ಶಾಸನಕ್ಕೆ ಚರಿತ್ರೆ ದೃಷ್ಟಿಯಿಂದ ಪ್ರಾಮುಖ್ಯತೆ ಸಲ್ಲುತ್ತದೆ. ಬಸವಣ್ಣನವರ ಅಣ್ಣನಾದ ದೇವರಾಜ ಮುನಿಪನ ಸಂತಾನ ಆತನ ಮೊಮ್ಮಗನಾದ  ಹಾಲ ಬಸವಿ ದೇವನ ನಂತರ ಏನಾಯಿತು ಎಂಬುದರ ಬಗೆಗೆ ಯಾವುದೇ ಉಲ್ಲೇಖಗಳು ನಂತರದ ಶಾಸನಗಳು, ಕಾವ್ಯ-ಪುರಾಣಗಳಲ್ಲಿ  ಲಭ್ಯವಿಲ್ಲ. ಅದರಲ್ಲಿಯೂ ಬಸವಣ್ಣನವರನ್ನು ಕುರಿತ ಕಾವ್ಯ-ಪುರಾಣಗಳು ಮತ್ತು  ವೀರಶೈವ ಕಥಾ ಸಂಕಲನ ಕೋಶಗಳಾದ ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ,  ಗುಬ್ಬಿಯ ಮಲ್ಲಣಾರ್ಯನ ವೀರಶೈವಾಮೃತ ಮಹಾಪುರಾಣ, ಶಾಂತಲಿಂಗದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ, ಉತ್ತರದೇಶದ ಬಸವಲಿಂಗನ ಬಸವೇಶ್ವರ ಪುರಾಣ ಕಥಾಸಾಗರ ಮುಂತಾದ ಸಂಕಲಿತ ಕೃತಿಗಳಲ್ಲಿ  ಉಲ್ಲೇಖ ಇಲ್ಲದಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಈ ಶಾಸನದಲ್ಲಿ ಬಸವಣ್ಣನವರನ್ನು ಕುರಿತು ಉಲ್ಲೇಖಿಸಿರುವ ಪುರಾತನ ಜಂಗಮ, ಲಿಂಗೈಕ್ಯಭಕ್ತಿ ನಿರ್ಭರ ಲೀಲಾಸಂಗಂ ಮತ್ತು ಸಮಯ ಭಕ್ತಿ ಸಂಪನ್ನಂ ಎಂಬ ವಿಶೇಷಣಗಳು ಅವರ ವ್ಯಕ್ತಿ ಸಿದ್ದಿಯ ಪ್ರಮುಖ ಅಂಶಗಳನ್ನು ಎತ್ತಿ ತೋರಿಸುತ್ತದೆ.
ಬಸವಣ್ಣನ ವ್ಯಕ್ತಿತ್ವ
      ಬಸವಣ್ಣನವರ ಘನವ್ಯಕ್ತಿತ್ವವನ್ನು ಶಾಸನಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರಸ್ತಾಪಿಸಿವೆ. ಅರ್ಜುನವಾಡ ಶಾಸನವು ಬಸವಣ್ಣನವರನ್ನು
ಮಂಗಳ ಕೀರ್ತಿ ಪುರಾತನ
ಜಂಗಮ ಲಿಂಗೈಕ ಭಕ್ತಿ ನಿರ್ಭರ ಲೀಲಾ
ಸಂಗಂ ಸಂಗನ ಬಸವಂ
ಸಂಗತಿಯಂ ಮಾಳ್ಕೆ ಭಕ್ತಿಯೊಳನವರತಂ
ಎಂದೂ ಸಮಯಭಕ್ತಿ ಸಂಪನ್ನಂ ಎಂದು ಸ್ತುತಿಸಿದೆ. ಪದ್ಯದಲ್ಲಿಯ ಪರಾತನ ಜಂಗಮ ಲಿಂಗೈಕ ಭಕ್ತಿ ನಿರ್ಭದ ಲೀಲಾಸಂಗಂ ಸಮಯಭಕ್ತಿ ಸಂಪನ್ನ ಎನ್ನುವ ವಿಶೇಷಣಗಳು ಆಗಿನ ಕಾಲಕ್ಕೆ ಬಸವಣ್ಣನವರು ಪಡೆದಿದ್ದ ಕೀರ್ತಿ, ಪಸರಿಸಿದ್ದ ಪ್ರಭಾವ ಇವುಗಳನ್ನು ಸೂಚಿಸುತ್ತದೆ.
      ಕ್ರಿ.ಶ೧೨೫೯ರ ಹಿರಿಯೂರ ( ಅರಸಿಕೆರೆ ತಾಲೋಕು) ಶಾಸನದಲ್ಲಿ ತಮಿಳುನಾಡಿನ ಅತಿಪುರಾತನರು ಹಾಗೂ ಪ್ರಾಚೀನ ಶರಣರ ಸಾಲಿನಲ್ಲಿ ಬಸವಣ್ಣನವರನ್ನುಸಿರಿಯಾಳ್ವಂ ಬಸವಯ್ಯ ನೊಳ್ವೆಸೆವ..ಬಾಣನುರಂ..ಸಿಂಧುಬಲ್ಲಾಳನೀಧರೆ ಕೊಂಡಾಡುವ ದಾಸಿಮಯ್ಯನೆನಿಸಿರ್ದೀ ಭಕ್ತಸಂದೋಹವಾ ಎಂದು ಉಲ್ಲೇಖಿಸಿದೆ. ಪುರಾತನರ ಶರಣರ ಸಾಲಿನಲ್ಲಿ ಬಸವಣ್ಣನವರನ್ನು ಮಾತ್ರ ಶಾಸನ ಪ್ರಸ್ತಾಪಿಸಿರುವುದು ಅವರ ಮಹಿಮೆಯ ದ್ಯೋತಕವಾಗಿದೆ.
      ಕ್ರಿ. ೧೨೬೩ರ ಚೌಡದಾನಪುರ ಶಾಸನವು ಬಸವಣ್ಣನವರ ಲಿಂಗಜಂಗಮ ಸೇವೆ ಪ್ರಸಾದ ಸಿದ್ಧಿಗಳನ್ನು ವಿವರಿಸಿದೆ. ಅಂತಿಮ
ಲಿಂಗಕ್ಕೆ ಜಂಗಮಕ್ಕಂ
ಹಿಂಗದೆ ದಾಸತ್ವ ಮಾಳ್ಪುದೇ ಬೆಸನೆಂದಾ
ಸಂಗನಬಸವಂ
ಮೃಡಗಣ ವರಪ್ರಸಾದಮ
ಪಡೆದಂ ಜಗವರಿಯಲಂದು ಸಂಗನಬಸವಂ
ಪಡೆದ ಪ್ರಸಾದ ಸಿದ್ಧಿಯ
ಎಂದು ಹೇಳಿದ್ದು ಬಸವಣ್ಣನವರ ವ್ಯಕ್ತಿತ್ವಕ್ಕೆ ಕಳಸ ಹಿಡಿದಂತಿದೆ. ವಿಶೇಷಣಗಳು ಬಸವಣ್ಣನವರ ಲಿಂಗ, ದಾಸೋಹ, ಜಂಗಮಗಳು ಸಮಾಜದ ಮೇಲೆ ದಟ್ಟವಾಗಿ ಬೀರಿದ್ದ ಪ್ರಭಾವದ  ಪ್ರತೀಕವೆನಿಸಿವೆ.
  ಕ್ರಿ. ೧೨೭೯ರ ಕಲ್ಲೇದೇವರಪುರ ಶಾಸನದಲ್ಲಿಚೇರಚೋಳನಂಬಿ ಚಿಕ್ಕ, ಕಕ್ಕ, ಚೆಂನ ಹೊಂನ, ಬಂಕ, ಬಸವರಾಜ, ಭೊಜ ಮೊದಲಾದ ಮರ್ತ್ಯ ಲೋಕದ ಮಹಾಗಣಾಚಾರ ಧರಾಭಾರ ಧೌರೇಯ, ಲಿಂಗೈಕ್ಯಸಂಗ ಸದ್ಭಾವನಂ ಎಂಬುದಾಗಿ ಬಸವ ಪೂರ್ವಯುಗ ಹಾಗೂ ಬಸವ ಯುಗದ ಶರಣರನ್ನು ಕೀರ್ತಿಸಿದೆ.   ಶಾಸನದಲ್ಲಿ ಮರ್ತ್ಯಲೋಕದ ಪುರಾತನನೂತನ  ಮಹಾಗಣಗಳ ಸಮೂಹದ ನಡುವೆ ಬಸವಣ್ಣನ ಹೆಸರು ಪ್ರಸ್ತಾಪಿತವಾಗಿರುವುದು ಗಮನಿಸಬೇಕಾದ ಅಂಶವಾಗಿದೆ.
 ಕ್ರಿ. ೧೨೮೦ ಮರಡಿಪುರ ಶಾಸನದಲ್ಲಿ  ಓಹಿಲ, ಉದ್ಭಟ, ನಂಬಿ, ಕುಂಬಾರ ಗುಂಡ, ಆಂಡವಲ, ಕರಿಕಾಲ ಚೋಳ, ಭೋಗದೇವ, ಬಾಣ, ಮಯೂರ, ಕಾಳಿದಾಸ, ಕೇಶಿರಾಜ ದಣ್ನಾಯಕ, ಸುರಿಗೆಯ ಚಲ್ವಡರಾಯ, ಸಂಗನ ಬಸವಯ್ಯ, ಲಿನಿಮಿತಿ ಕೇಶವರಾಜ, ಜಗದೇವದಣ್ನಾಯಕ, ಏಕಾನ್ತದ ರಾಮಯ್ಯ, ಸೊನ್ನಲಿಗೆ ರಾಮಯ್ಯ, ಹುಲಿಗೆರೆಯ ಪೊನ್ನಯ್ಯ ನೆಲವಿಗೆಯ ಸಾಂತಯ್ಯ ಸಕಳಗಣ ಪರಿವೇಷ್ಟಿತ ಶ್ರೀ ಪ್ರಶಸ್ತಿ ಮಂಗಳಂ ಎಂಬುದಾಗಿ ಮರ್ತ್ಯಲೋಕದಲ್ಲಿ ಪ್ರಸಿದ್ಧರಾದ ನೂತನ ಪುರಾತನ ಗಣಂಗಳ ನಡುವೆ ಬಸವಣ್ಣನವರನ್ನು ಉಲ್ಲೇಖಿಸಿದೆ. ಬಸವಣ್ಣನವರನ್ನು ಸಂಗನ ಬಸವಯ್ಯ ಎಂದು ಉಲ್ಲೇಖಿಸಿದ್ದಾರೆ. ಇದು ಬಸವಣ್ಣನವರ ಇಷ್ಟದೈವ ಸಂಗಮೇಶ್ವರ ಮತ್ತು ಬಸವಣ್ಣನವರ ನಡುವಿನ ದೈವೀ ಸಂಬಂಧವನ್ನು ಸೂಚಿಸುತ್ತದೆ.
ಕ್ರಿ.. ೧೨೬೦ರ ಅರ್ಜುನವಾಡ ಶಾಸನದಲ್ಲಿ ಶ್ರೀಬಸವಂಣ ದಂಣಾಯಕರ ಕೆಯ್ ಎಂಬ ಉಲ್ಲೇಖವಿದ್ದು ಬಸವಣ್ಣನವರನ್ನು ದಂಡನಾಯಕ ಎಂದು ಕೀರ್ತಿಸಲಾಗಿದೆ.
    ಮೇಲ್ಕಂಡ ಶಾಸನಗಳಲ್ಲಿನ ಬಸವಣ್ಣನವರ ವ್ಯಕ್ತಿತ್ವವನ್ನು ಕುರಿತ ವಿವರಗಳು, ಬಸವಣ್ಣನವರನ್ನು ಕುರಿತ ಕಾವ್ಯ ಪುರಾಣಗಳಲ್ಲಿಯ ವಿವರಗಳಿಗಿಂತ ಪೂರ್ವದವುಗಳಾಗಿದ್ದು ವಿಶ್ವಾಸನೀಯ ದಾಖಲೆಗಳಾಗಿದೆ.
ಬಸವಣ್ಣನವರ  ಜೀವಿತದ ಪರಮಾವಧಿಯ ಕಾಲ: ವಚನಕಾರರು ಬದುಕಿದ್ದ ಕಾಲವನ್ನು ಖಚಿತವಾಗಿ ಗುರುತಿಸಲು ಶಾಸನಗಳು ಪ್ರಮುಖ ನೆರವನ್ನು ನೀಡಿವೆ. ಬಸವಣ್ಣನವರ ಜೀವಿತಾವಧಿಯ ಕಾಲವನ್ನು ಶಾಸನಗಳಲ್ಲಿ ಪೂರಕ ಮಾಹಿತಿಗಳಿಂದ ಕ್ರಿ.ಶ.1167ಕ್ಕೆ ಬದಲಾಗಿ ಕ್ರಿ.ಶ.1185-86 ಎಂದು ಸುಮಾರು 19 ವರ್ಷಗಳಷ್ಟು ಮುಂದಕ್ಕೆ ಹಾಕಲಾಗಿದೆ. ಬಸವಣ್ಣನವರ ಸಮಕಾಲೀನರೂ, ಅನುಯಾಯಿಗಳೂ, ಸಮಯವಯಸ್ಕರೂ ಆದ ಮಲ್ಲಿಕಾರ್ಜುನ ಪಂಡಿತಾರಾಧ್ಯರ ಶಾಸನ ಕ್ರಿ.ಶ.1187ರಲ್ಲಿ ತೆಲಂಗಾಣದಲ್ಲಿ ದೊರೆತಿದೆ. ಹೀಗಾಗಿ ಬಸವಣ್ಣನವರ ಅಭಿಮಾನಿ ಮತ್ತು ಅನುಯಾಯಿಯಾದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಉಕ್ತರಾಗುವುದಕ್ಕೆ ಒಂದು ವರ್ಷ ಮುಂಚೆ ಬಸವಣ್ಣನವರು ಐಕ್ಯರಾದರೆಂದು ಪಂಡಿತಾರಾಧ್ಯುಲ ಚರಿತ್ರೆಯಿಂದ ತಿಳಿದುಬರುತ್ತದೆ. ತೆಲಂಗಾಣ ಶಾಸನದಲ್ಲಿಯ ಉಲ್ಲೇಖದಿಂದ ಕ್ರಿ.ಶ.1187ರಲ್ಲಿ ಪಂಡಿತಾರಾಧ್ಯರು ಐಕ್ಯರಾದರು ಎಂದು ತಿಳಿದುಬರುವುದರಿಂದ ಅವರ ಸಮಕಾಲೀನರಾದ ಬಸವಣ್ಣನವರು ಕ್ರಿ.ಶ.1185-86ರವರೆಗೂ ಬದುಕಿದ್ದರು ಎಂಬುದಾಗಿ ಜೀವಿತದ ಪರಮಾವಧಿಯ ಕಾಲ ಕ್ರಿ.ಶ.1167ಕ್ಕೆ ಬದಲಾಗಿ ಕ್ರಿ.ಶ.1185-86 ಎಂದು ಇಟ್ಟುಕೊಳ್ಳಬಹುದಾಗಿದೆ. ಬಸವಣ್ಣನವರ ಜೀವಿತಾವಧಿಯ ಕಾಲವನ್ನು ಶಾಸನಗಳಲ್ಲಿಯ ಪೂರಕ ಮಾಹಿತಿಗಳಿಂದ ಕ್ರಿ.ಶ 1167ಕ್ಕೆ ಬದಲಾಗಿ 1185-86 ಎಂದು ಸುಮಾರು 19 ವರ್ಷಗಳಷ್ಟು ಮುಂದಕ್ಕೆ ಹಾಕಲಾಗಿದೆ. ಬಸವಣ್ಣನವರ ಸಮಕಾಲೀನರೂ ಅನುಯಾಯಿಗಳೂ ಸಮವಯಸ್ಕರೂ ಆದ ಮಲ್ಲಿಕಾರ್ಜುನ ಪಂಡಿತಾರಾಧ್ಯರ ಕೊನೆಯ ಶಾಸನ ಕ್ರಿ.ಶ 1187 ರಲ್ಲಿ ದೊರೆತಿದೆ. ಹೀಗಾಗಿ ಬಸವಣ್ಣನವರ ಕ್ರಿ. ಶ 1187 ರವರೆಗೂ ಬದುಕಿದ್ದರು ಎಂದು ತಿಳಿದುಬರುತ್ತದೆ. ಬಸವಣ್ಣನವರ ಅಭಿಮಾನಿ ಮತ್ತು ಅನುಯಾಯಿಯಾದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಐಕ್ಯರಾಗುವುದಕ್ಕೆ ಒಂದು ವರ್ಷ ಮುಂಚೆ ಬಸವಣ್ಣನವರರು ಐಕ್ಯರಾದರೆಂದು ಪಂಡಿತಾರಾಧ್ಯುಲ ಚರಿತ್ರೆಯಿಂದ ತಿಳಿಯಬಹುದಾಗಿದೆ. ತೆಲಂಗಾಣ ಶಾಸನದಲ್ಲಿಯ ಉಲ್ಲೇಖದಿಂದ ಕ್ರಿ. ಶ 1187 ಪಂಡಿತಾರಾಧ್ಯರು ಐಕ್ಯರಾದರು ಎಂದು ತಿಳಿದುಬರುವುದರಿಂದ ಅವರ ಸಮಕಾಲೀನರಾದ ಬಸವಣ್ಣನವರು ಕ್ರಿ. ಶ. 1185-86 ರವರೆವಿಗೂ ಬದುಕಿದ್ದರು ಎಂಬುದಾಗಿ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಬಸವಣ್ಣನವರ ಜೀವಿತದ ಪರಮಾವಧಿಯ ಕಾಲ ಕ್ರಿ. ಶ 1167 ಕ್ಕೆ ಬದಲಾಗಿ ಕ್ರಿ.ಶ 1185-86 ಎಂದು ಇಟ್ಟುಕೊಳ್ಳಬಹುದಾಗಿದೆ ಎಂಬ ನಿಲುವು ಇತ್ತೀಚೆಗೆ ಸಂಶೋಧಕರಿಂದ ವ್ಯಕ್ತವಾಗಿದೆ.
ಶಾಸನಗಳಲ್ಲಿ ಬಸವಣ್ಣನವರ ವಚನಗಳ ಪ್ರಭಾವ
   ಶಿವಶರಣರ ವಚನಗಳ ಪ್ರಭಾವ ನಂತರದ ಶಾಸನ ಕವಿಗಳ ಮೇಲೆ ಆಗಿರುವುದನ್ನು ಗುರುತಿಸಬಹುದಾಗಿದೆ. ಶಾಸನಗಳ ಮೇಲೆ ವಚನಗಳ ಪ್ರಭಾವ ಆಗಿರುವುದನ್ನು ಮನಗಂಡರೆ ಆ ಕಾಲಕ್ಕೆ  ವಚನಗಳು ಪಡೆದಿದ್ದ ಜನಪ್ರಿಯತೆ ವ್ಯಕ್ತವಾಗುತ್ತದೆ. ಬಸವಣ್ಣನವರು ಜೀವಿಸಿದ್ದ ಕಾಲಕ್ಕೆ ಅವರ  ವಚನಗಳು ಗಳಿಸಿದ ಜನಪ್ರಿಯತೆಯನ್ನು, ಆ ವಚನಗಳ ಪ್ರಭಾವದಿಂದಾಗಿ ಪ್ರೇರಿತರಾಗಿ ಶಾಸನಕವಿಗಳು ತಮ್ಮ ಶಾಸನಗಳನ್ನು ರಚಿಸುವಾಗ ಅದೇ ರೀತಿಯಲ್ಲಿ ಪದ್ಯಗಳನ್ನು ರಚಿಸಿರುವುದು ಕಂಡು ಬಂದಿದೆ.  ಕ್ರಿ. ಶ. 1191 ರ ಕಡೂರು ತಾಲ್ಲೂಕಿನ ಹೊಯ್ಸಳರ ( ಇಮ್ಮಡಿ ಬಲ್ಲಾಳ) ಕಾಲದ ಶಾಸನವು ಮಸಣಯ್ಯ ಎಂಬುವನು ದತ್ತಿ ಬಿಟ್ಟ  ವಿಷಯವನ್ನು ತಿಳಿಸುತ್ತದೆ. ಈ ಶಾಸನದಲ್ಲಿಯ ಹೊಯ್ಸಳ  ದೊರೆ ನರಸಿಂಹನನ್ನು ಹೊಗಳುವ ಶಾಸನವು ಸಂಪೂರ್ಣವಾಗಿ ಬಸವಣ್ಣನವರ ವಚನದಿಂದ ಪ್ರಭಾವಿತವಾಗಿರುವುದನ್ನು ಗುರುತಿಸಬಹುದಾಗಿದೆ.
                     ಅರಿಭೂಪಾಳ ಶಿರಗಳಿಂದ ಸೋರೆಯಂತದ್ಬಾಹು ಸಂದೋಹದಿಂ
                     ಕರೆಯಂ ದಂಡಿಗೆ ಮಾಡಿ ಬೆನ್ನಸೆವ ಬೀವಿಂ ತಂತಿಯಂ ಕಟ್ಟಿತ
                     ದ್ದುರ ದೊಳ್ ಪಾಡುತಮಿರ್ಪಳೊಲ್ದು ನಲವಿಂ ಶ್ರೀಕಾಂತೆಯಾನಂದದಿಂ
                     ಧರಣೀಶೋತ್ತಮ ನಾರಸಿಂಹ ನೃಪನು ಸದ್ಭಾವದಿಂ ಸಂತತಂ

     ಈ ಪದ್ಯಕ್ಕೆ ಬಸವಣ್ಣನವರ ,
                  ಎನ್ನ ಕಾಯವ ದಂಡಿಗೆಯ ಮಾಡಯ್ಯ
                  ಎನ್ನ ಶಿರವ ಸೋರೆಯ ಮಾಡಯ್ಯ
                  ಎನ್ನ ನರವ ತಂತಿಯ ಮಾಡಯ್ಯ
                  ಎನ್ನ ಬೆರಳ ಕಡ್ಡಿಯ ಮಾಡಯ್ಯ
                  ಬತ್ತೀಸ ರಾಗವ ಹಾಡಯ್ಯ ಉರಲೊತ್ತಿ ಬಾರಿಸು
                  ಕೂಡಲಸಂಗಮದೇವ
ಈ ವಚನವು ಪರೋಕ್ಷವಾಗಿ ಪ್ರಭಾವ ಬೀರಿರುವುದನ್ನು ಗುರುತಿಸಬಹುದು. ಕ್ರಿ. ಶ. 1282 ರ ಮಾವನೂರು ಶಾಸನದಲ್ಲಿಯ ಕೆಲವು ಪದ್ಯಗಳು ಬಸವಣ್ಣನವರ ವಚನಗಳ ಪ್ರಭಾವದಿಂದ  ಪ್ರೇರಿತವಾಗಿ ಮೂಡಿಬಂದಿವೆ.  ಈ ಶಾಸನವು ಮಾವನೂರಿನ ಚಿಕ್ಕವೊಡೆಯರಾದ ಅಪ್ಪರಸೈಯನ ವ್ಯಕ್ತಿತ್ವವನ್ನು ವೀರಶೈವ ಶಬ್ದಗಳಿಂದ ವರ್ಣಿಸುತ್ತದೆ. ಸಕಳ ಭಕ್ತರ ಪುಣ್ಯಶಾಲೆಯಂತೆ. ಶ್ರೀಪರ್ವತಾಧೀಶನಪ್ಪ ಮಲ್ಲಿಕಾರ್ಜುನನ ಕಾರುಣ್ಯಕಾನ್ತಿ ಕಾಯಮಂ ತಳೆವಂತೆ ಮೆರೆವ ಶೀವರವೆಂಬ ಮಹಗ್ರಾಮದೊಳು ಶ್ರೀಪರ್ವತಕ್ಕೆಡೆಯಾಡುತಿರ್ಪ ನೇಹಮಂ ಕಂಡು ಶ್ರೀಮಲ್ಲಿಕಾರ್ಜುನ ಗುರುಕಾರುಣ್ಯ ಮಾಡಲುವೇಡಿ ಗುರುಕಾರುಣ್ಯಪಡೆದು. ಭಕ್ತನೆಂದರಿದಡಿರೆಂದಂತೆ  ಮಹಾಮಹಿಮರೆನಿಸುವ ಅಪ್ಪೈದೇವರಸರು       
                  ತಿಲದ ಮಧ್ಯದೊಳಿರ್ಪ ತೈಲದಂತೆ
                  ಕಾಷ್ಟ ಮಧ್ಯದೊಳಿಪ್ಪ ಅಗ್ನಿಯಂತೆ
                 ಜಲದ ಮಧ್ಯದೊಳಿರ್ಪ ಕಮಳದಂತೆ ತಾವು ಮಾನುಷಚರಿತರಪ್ಪುದರಿಂ ಸಂಸಾರಮಂ ಸೋಂಕದೆ ಅಣೋರಣಿಯಾಂ ಮಹತೋಮಹೀಯಾಂ ಎಂಬ ಸ್ತುತಿಯುಂಟಾಗಿ. ಮೂಲೋಕಮಂ ತೀವಿದ ಶೈವಕೀರ್ತಿಯಂ ತಳೆದಪ್ಪೈಯದೇವರಸರು ಸುಖದೊಳಿರೆ || ಶಿವಶರಣು|| ಸಿವಸಂಸ್ಕಾರ ಸಂಪಂನರಪ್ಪ ಪರಮ ಮಾಹೇಶ್ವರರುಗಳಿಗೆ ನಿಯೋಗವ್ರತ್ತಿಯಾಗಿ ಧಾರಾಪೂರ್ವ್ವಕಂ ಮಾಡಿಕೊಟ್ಟರು ಈ ಶಾಸನವು ಶರಣರ ವಚನಗಂಧಿಯಾಗಿ ರೂಪಕಶಕ್ತಿಯಲ್ಲಿ ಕಂಡು ಬರುತ್ತದೆ. ಭಕ್ತನೆಂದರಿದಡಿರಿದಂತೆ ಮರಗುತುಂ ನಿಂದಿಸಿದವರ ಮೇಲೆ ನೇಹವ ಗಳಿಸುತಂ ಎಂಬುದು ಬಸವಣ್ಣನವರ ಎನ್ನ ಭಕ್ತರು ಸಮಯಾಚಾರಿಯೆಂಬರು ನಾನೇನು ಪಾಪವ ಮಾಡಿದೆನೋ ಹೊಯ್ದವರೆನ್ನ ಹೊರದವರೆಂಬೆ, ಬಯ್ಯುವರೆನ್ನ ಬಂಧುಗಳೆಂಬ ಎನ್ನುವ ವಚನ ಸಾಲುಗಳನ್ನು ನೆನಪಿಸುತ್ತವೆ.
 ಅದೇ ರೀತಿ  ಬಳ್ಳಾರಿ ಜಿಲ್ಲೆಯ ಹಡಗಲಿ ಶಾಸನದಲ್ಲಿಯ,
                  ಜಗದೊಳಗತ್ಯ ಪೂರ್ವ ದಿಟವೇ ದಿಟವಾಗುವುದು ಸಾವೀತೀರ್ಥ ಮೀ
                  ಯುಗದೊಳ್ಮೂರ್ತಿಗೊಂದು ಬರವೀವುದು ಜಂಗಮತೀರ್ಥವಾಗಿ ಕೈ
                  ಮುಗಿಯಲು ಬೇಡ ಬಣ್ಣಿಸಲು ಬೇಡ ಕೆಲಕ್ಕೆಡೆಯಾಡಬೇಡ ನೀಂ
                  ನಗುತ ಶರಣ್ಯವೆಂದು ಬಗೆದುರ್ಪುದು ಬೇರ್ಪುದು ನಾಗವರ್ಮನಾ 
    ಈ ಶಾಸನಪದ್ಯದಲ್ಲಿ ವೀರಶೈವ ಧರ್ಮದ ಶರಣ, ಜಂಗಮ ಇತ್ಯಾದಿ ಪದಗಳು ಬಳಕೆಗೊಂಡಿರುವುದರ ಜೊತೆಗೆ ಬಸವಣ್ಣನವರ ಕಳಬೇಡ, ಕೊಲಬೇಡ ಇದಿರ ಹಳಿಯಲು ಬೇಡ ಎಂಬ ವಚನದ ಸಾಲುಗಳನ್ನು ನೆನಪಿಸುತ್ತದೆ. ಶಿವಶರಣರ ವಚನಗಳ ಪ್ರಭಾವ ನಂತರದ ಶಾಸನ ಕವಿಗಳ ಮೇಲೆ ಆಗಿರುವುದನ್ನು ಗುರುತಿಸಬಹುದಾಗಿದೆ. ಶಾಸನಗಳ ಮೇಲೆ ವಚನಗಳ ಪ್ರಭಾವ ಆಗಿರುವುದನ್ನು ಮನಗಂಡರೆ ಆ ಕಾಲಕ್ಕೆ  ವಚನಗಳು ಪಡೆದಿದ್ದ ಜನಪ್ರಿಯತೆ ವ್ಯಕ್ತವಾಗುತ್ತದೆ.   ಕೆಲವು ಶಾಸನಗಳಲ್ಲಿಯ ಗದ್ಯವು  ಬಸವಣ್ಣನವರ ವಚನಗಳನ್ನು ನೆನಪಿಸುತ್ತವೆ. ಉದಾ: ಕ್ರಿ.ಶ. 1284 ರ ಮಾವನೂರು ಶಾಸನದಲ್ಲಿ ಬರುವ `ಚಂದ್ರಂಗೆ ಬೆಳುದಿಂಗಳಂ|ಬೆಳುದಿಂಗಳಿಂಗೆ ಪರಿಮಳಮಂ| ಪರಿಮಳಕ್ಕೆ ಸವಿಯಂ| ಸವಿಗೆರೂಪಂ| ರೂಪಿಂಗೆಸೌಂದರ್ಯಮಂ ಕೊಡುವಂತೆ ವುಪದೇಶಂ ಮಾಡೆ| ಕೈಕೊಂಡಪ್ಪೈಯದೇವರಸರು ಪುಟವಿಟ್ಟ ಪುಣ್ಯ ಪುರುಷಾಕಾರವಾದಂತೆ ಶಾಂತಿ ಸಾಕಾರವೆತ್ತಂತೆ|ಪರಮಾರ್ಥಂ ಶರೀರ ವಡೆದಂತೆ| ಭಕ್ತಿಜ್ಞಾನಂ ಸಂಸಾರವಂ ಸವಿದಂತೆ...............ಭೋಗಕ್ಕೆಳಸದ ಕರಣಾವಳಿಯ ಮಹಾಮಹಿಮರೆನಿಸುವ ಅಪ್ಪೈದೇವರಸರು  ಎಂಬ ಸಾಲುಗಳನ್ನು ಉದಾಹರಿಸ ಬಹುದಾಗಿದೆ.
    ಬಸವಣ್ಣನವರು ಜೀವಿಸಿದ್ದ ಕಾಲಕ್ಕೆ ಅವರ ವಚನಗಳು ಗಳಿಸಿದ ಜನಪ್ರಿಯತೆಯನ್ನು, ಆ ವಚನಗಳ ಪ್ರಭಾವದಿಂದಾಗಿ ಪ್ರೇರಿತರಾಗಿ ಶಾಸನಕವಿಗಳು ತಮ್ಮ ಶಾಸನಗಳನ್ನು ರಚಿಸುವಾಗ ಅದೇ ರೀತಿಯಲ್ಲಿ ಪದ್ಯಗಳನ್ನು ರಚಿಸಿರುವುದು ಕಂಡು ಬಂದಿದೆ
     ಹರಿಹರನ ಬಸವರಾಜ ದೇವರ ರಗಳೆಯಲ್ಲಿ ಬರುವ ಬಿಜ್ಜಳನ ಆಸ್ಥಾನದಲ್ಲಿದ್ದ ಬ್ರಾಹ್ಮಣರ ಹೆಸರುಗಳು ಬಳ್ಳಾರಿ ಜಿಲ್ಲೆಯ ಶಾಸನಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಉಲ್ಲೇಖಗೊಂಡಿವೆ. ಈ ಶಾಸನಗಳು ಕೊಡುವ ಮಾಹಿತಿಗಳು ಹರಿಹರ ಕವಿಯ ಕಾಲ ನಿರ್ಣಯ ಹಾಗೂ ಕಲ್ಯಾಣ ಕ್ರಾಂತಿಗೆ ಸಂಬಂಧಿಸಿದ ಸಂಗತಿಗಳನ್ನು ಹುಡುಕಲು ಬಹುಶಃ ನೆರವನ್ನು ನೀಡಲು ಸಹಾಯಕವಾಗಿವೆ ಎಂದೆನಿಸುತ್ತದೆ.
     ಗದ್ದುಗೆಯ ಮೇಲೆ ಬಸವನಿರೆ ಪಿಂತಣ ಮೈಯೊಳು ಬಿಜ್ಜಳನ ಗುರುವಪ್ಪ ನಾರಾಯಣ ಭಟ್ಟನೊಡನೆ ಮಂಚ್ಯಣ ಕ್ರಮಿತಂ, ಕೂಚಿಗಂ, ಪೋಚಿಪೆದ್ದಿಗೌ ಮೊದಲಾದ ವೇದಜಡರ್ ಎನ್ನುವ  ರಗಳೆಯ (ಬಸವರಾಜದೇವರ ರಗಳೆ ಸ್ಥಲ 6, ಸಾಲು 60) ಲ್ಲಿ ಹೆಸರುಗಳು ಕ್ರಿ.ಶ.1215ರ ಶಾಸನದಲ್ಲಿ `ಕೂಚೆಂಣ, ಬ್ರಹ್ಮದೇವ ಪಟ್ಟವರ್ಧನ, ಚಂದ್ರಮಂಚಿಯಣ್ಣ, ಗುಂಡದೇವಪೆದ್ದಿ' ಇತ್ಯಾದಿಯಾಗಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಬಂದಿವೆ.
     ಒಟ್ಟಾರೆ  ಬಸವಣ್ಣನವರಿಗೆ ಸಂಬಂಧಿಸಿದ ಶಾಸನಗಳು ಅವರ ಬಗೆಗಿನ ಸಂಗತಿಗಳನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ, ಉಲ್ಲೇಖಿಸಿರುವುದರ ಮೂಲಕ ಒಂದಿಲ್ಲೊಂದು ರೀತಿಯಲ್ಲಿ ಬೇರೆಡೆ ಎಲ್ಲಿಯೂ ದೊರೆಯದ ಸಂಗತಿಗಳನ್ನು ಹೊರಗೆಡವಿವೆ. ಕೆಲವು ಶಾಸನಗಳು ಇವರ ವಂಶಾವಳಿಯ ಬಗೆಗೆ,  ಪೂರ್ವಜರ ಸ್ಥಳ,  ಅವರ ವ್ಯಕ್ತಿತ್ವ, ಜೀವಿತದ ಪರಮಾವಧಿಯ ಕಾಲ ಇತ್ಯಾದಿ ಸಂಗತಿಗಳನ್ನು ನಿರೂಪಿಸಿವೆ. ಬಹುತೇಕ ಹೆಚ್ಚಿನ ಶರಣರ ಕಾರ್ಯಕ್ಷೇತ್ರ ಭಾಗವಾದ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಶಾಸನಗಳು ಎಲ್ಲವೂ ಪ್ರಕಟಗೊಂಡಾಗ ಅವುಗಳ ಮೂಲಕ ಬಸವಣ್ಣನವರನ್ನು ಒಳಗೊಂಡ ಹಾಗೆ ಇತರ ಶರಣನ್ನು ಕುರಿತ ಹೆಚ್ಚಿನ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.
                  ಪರಾಮರ್ಶನ ಗ್ರಂಥಗಳು
1.ಎಂ.ಎಂ.ಕಲಬುರ್ಗಿ: ಶಾಸನಗಳಲ್ಲಿ ಶಿವಶರಣರು, ಶ್ರೀ.ಜಗದ್ಗುರು ತೋಂಟದಾರ್ಯ ಮಠ, ಗದಗ, 1978
                  ಮಾರ್ಗ ಸಂ. ೨ ಮತ್ತು 4. ಸ್ವಪ್ನ ಪುಸ್ತಕಾಲಯ,ಬೆಂಗಳೂರು 2004
2. ಎಂ.ಚಿದಾನಂದಮೂರ್ತಿ: ಸ್ಥಾವರ-ಜಂಗಮ, ಸ್ವಪ್ನ ಪುಸ್ತಕಾಲಯ,ಬೆಂಗಳೂರು 2004
3. ಎಂ.ಜಿ.ನಾಗರಾಜು, ಸಾಂಸ್ಕೃತಿಕ ವೀರಶೈವ, ಶ್ರೀ ದೇಗುಲ ಮಠ, ಕನಕಪುರ, 2005
4.ಬಸವೇಶ್ವರ ಸಮಕಾಲೀನರು: ಬಸವ ಸಮಿತಿ, ಬೆಂಗಳೂರು 2000 (ದ್ವಿ.ಮು)
5. ಸಿ.ನಾಗಭೂಷಣ: 1.ಸಾಹಿತ್ಯ ಸಂಸ್ಕೃತಿ ಹುಡುಕಾಟ, ಅಮೃತವರ್ಷಿಣಿ ಪ್ರಕಾಶನ, ಯರಗೇರ-ರಾಯಚೂರು, 2002
              2. ವೀರಶೈವ ಸಾಹಿತ್ಯ ಕೆಲವು ಒಳನೋಟಗಳು, ವಿಜೇತ ಪ್ರಕಾಶನ, ಗದಗ, 2008
             3. ಶಾಸನಗಳು ಮತ್ತು ಕನ್ನಡ ಸಾಹಿತ್ಯ: ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರ್ಗಿ, 2005 
                                      
               




  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...