ಶಾಸನಗಳ ಹಿನ್ನೆಲೆಯಲ್ಲಿ ಕನ್ನಡ ಭಾಷೆ, ಶಾಸ್ತ್ರೀಯ ಸ್ಥಾನಮಾನದ ಮಹತ್ವ
ಡಾ.ಸಿ.ನಾಗಭೂಷಣ
ಕನ್ನಡವು ಯಾವಾಗ ಒಂದು ಸ್ವತಂತ್ರ ಭಾಷೆಯೆನಿಸಿತು, ಯಾವಾಗ ಸಂಸ್ಕೃತದ ಸಂಪರ್ಕಕ್ಕೆ ಬಂತು, ಯಾವಾಗ ಲಿಪೀಕರಣಗೊಂಡಿತು ಎನ್ನುವ ಬಗ್ಗೆ ಖಚಿತ ಮಾಹಿತಿಯಿಲ್ಲ. ಆದರೆ
ಪ್ರಾಕೃತ, ಕನ್ನಡ, ಸಂಸ್ಕೃತವೂ ಸೇರಿದಂತೆ ಭಾರತದ ಅನೇಕ ಭಾಷೆಗಳ ಲಿಪಿಮೂಲ ಬ್ರಾಹ್ಮಿಯೇ
ಎಂದು ಹೇಳಲಾಗುತ್ತಿದೆ. ಅಶೋಕನ ಶಿಲಾಶಾಸನಗಳಿರುವುದೂ ಇದೇ ಲಿಪಿಯಲ್ಲಿ. ಪ್ರಾಕೃತದಂತೆ ಕನ್ನಡವೂ
ಸಂಸ್ಕೃತದಿಂದ ಕೆಲವನ್ನು ತತ್ಸಮವಾಗಿ, ಹಲವನ್ನು ತದ್ಭವವಾಗಿ ತೆಗೆದುಕೊಂಡಿತು. ಕಾಲನಿರ್ಣಯದ ದೃಷ್ಟಿಯಿಂದ ಶಾಸನಗಳು ಅತ್ಯಂತ
ವಿಶ್ವಾಸಾರ್ಹ ದಾಖಲೆಗಳು. ಇವುಗಳಲ್ಲಿ ಕದಂಬರ ದೊರೆ ಶಾಂತಿವರ್ಮನ ಒಂದು ಶಾಸನ ಗಮನಾರ್ಹ. ಇದು
ಕ್ರಿ.ಶ. 450ಕ್ಕೆ ಸೇರಿದ್ದು. ಇದರಲ್ಲಿ
‘ವೈಜಯಂತೀ ತಿಲಕ’, ‘ಸಮಗ್ರ ಕರ್ಣಾಟಕ
ಭೂವರ್ಗ ಭರ್ತ್ತಾರಂ’ ಎಂಬ ಉಲ್ಲೇಖಗಳಿವೆ. ಇದೇ ಅತ್ಯಂತ ಪ್ರಾಚೀನ ಸಾಕ್ಷಿ. ಹೀಗೆಯೇ ಗಂಗ ದೊರೆ
ಭೂವಿಕ್ರಮನ ತಾಮ್ರಶಾಸನ, ರಾಷ್ಟ್ರಕೂಟದ
ದಂತಿದುರ್ಗನ ತಾಮ್ರಶಾಸನ ಮೊದಲಾದವುಗಳಲ್ಲೂ ಕರ್ನಾಟಕ, ಕರ್ಣಾಟಕ ಎಂಬ ರೂಪಗಳಿವೆ. ಪಾಂಡ್ಯರಾಜ ಶೆಡೈಮನ್
ಪರಾಂತಕನ ತಾಮ್ರಶಾಸನವೊಂದರಲ್ಲೂ ‘ಕರುನಾಡಗನ್’ಎಂಬ ರೂಪವನ್ನು ಬಳಸಲಾಗಿದೆ. ಹೀಗೆ ಕನ್ನಡನಾಡಿನ
ಉಲ್ಲೇಖವುಳ್ಳ ಹೆಚ್ಚಿನ ಶಾಸನಗಳು ಉಪಲಬ್ಧವಿವೆ.
ಆಧುನಿಕ ಕಾಲಘಟ್ಟದಲ್ಲಿ
ನಾವು, ಪ್ರಾಚೀನ ಶಾಸನಸಾಹಿತ್ಯವನ್ನು ಒಳಗೊಂಡ ಹಾಗೆ ಆಧುನಿಕ ಪೂರ್ವಕಾಲದ ಕನ್ನಡ ಸಾಹಿತ್ಯವನ್ನು ಪ್ರಾಚೀನ
ಸಾಹಿತ್ಯ ಎಂಬುದಾಗಿ ಎಲ್ಲರಿಗೂ ತಿಳಿಯುವ ಹಾಗೆ ಕರೆದು ಶಾಸ್ತ್ರೀಯ ಭಾಷೆಯ ಅಧ್ಯಯನದ ಸಂದರ್ಭದಲ್ಲಿ
ಕೈಗೊಳ್ಳ ಬಹುದಾದ ಅಧ್ಯಯನಗಳನ್ನು ಪ್ರಾಚೀನ ಕನ್ನಡಭಾಷೆ, ಸಾಹಿತ್ಯ, ಸಂಸ್ಕೃತಿ ಎಂದು ಗುರುತಿಸಲಾಗಿದೆ.
ಕನ್ನಡದಲ್ಲಿ ದೊರೆಯುವ ಮೊತ್ತ ಮೊದಲ ಕನ್ನಡ ಗ್ರಾಂಥಿಕ ದಾಖಲೆ ‘ಕವಿರಾಜ ಮಾರ್ಗ’.
ಕನ್ನಡನಾಡು ನುಡಿ ಸಾಹಿತ್ಯ ಮತ್ತು ಜನತೆಯ ಬಗ್ಗೆ ಅಭಿಮಾನ ಪೂರ್ಣ ವಿವರಗಳನ್ನು ನೀಡುವ ಈ ಮಹತ್ವದ
ಕೃತಿ, ನಾಡಿನ ವಿಸ್ತಾರವನ್ನು
ವರ್ಣಿಸುತ್ತ “ಕಾವೇರಿ ಯಿಂದಮಾ ಗೋದಾವರಿ ವರಮಿರ್ದ ನಾಡದಾ ಕನ್ನಡದೊಳ್” ಎಂದು ಉಲ್ಲೇಖಿಸಿದೆ. ಈ
ಹೇಳಿಕೆಯಿಂದ, ನೃಪತುಂಗನ ಕಾಲಕ್ಕೆ
(9ನೇ ಶತಮಾನ) ಈ ರಾಜ್ಯ ದಕ್ಷಿಣದ
ಕಾವೇರಿಯಿಂದ ಉತ್ತರದ ಗೋದಾವರಿಯವರೆಗೆ ವಿಸ್ತರಿಸಿತ್ತು ಎಂಬುದು ಸ್ಪಷ್ಟವಾಗುತ್ತದೆ. ‘ರಾಮನಾಥ
ಚರಿತ್ರೆ’ಯನ್ನು ರಚಿಸಿದ ನಂಜುಂಡ ಕೂಡ ಕರ್ನಾಟಕವನ್ನು “ಕಾವೇರಿಯಿಂದ ಗೋದಾವರಿವರಗಮಿರ್ಪ
ವಸುಧಾತಳವಳಯ” ಎಂದಿದ್ದಾನೆ. ಕನ್ನಡ ನಿಷ್ಠಕವಿ ಆಂಡಯ್ಯ ತನ್ನ ‘ಕಬ್ಬಿಗರ ಕಾವ್ಯ’ದಲ್ಲಿ
‘ಕನ್ನಡಮೆನಿಪ್ಪಾ ನಾಡು’ ಎಂದು ಕರೆದಿದ್ದಾನೆ.
9 ನೇ
ಶತಮಾನಕ್ಕಿಂತ ಮುಂಚೆಯೇ ಕನ್ನಡ ಭಾಷೆಯ ಒಂದು ಸ್ಥಿತಿ( ಪೂರ್ವದ ಹಳೆಗನ್ನಡ) ಆಗಿ ಹೋಗಿರುವ ಬಗೆಗೆ
ಮತ್ತು ಕ್ರಿ.ಶ.5 ನೇ
ಶತಮಾನಕ್ಕಿಂತ ಪೂರ್ವದಲ್ಲಿಯೂ ಕನ್ನಡ ಇದ್ದಿದ್ದು ಅದು ಮೂಲಕನ್ನಡ ಎಂಬುದಾಗಿ ಗುರುತಿಸಲ್ಪಟಿದೆ. ಮೂಲ ಕನ್ನಡದ ಚಹರೆಗಳನ್ನು ಆಕಾಲ
ಘಟ್ಟದ ಶಾಸನಗಳಲ್ಲಿ ಗುರುತಿಸ ಬಹುದಾಗಿದೆ. ಶಾಸನಾಧಾರವನ್ನು ಪರಿಶೀಲಿಸಿದರೆ, ಪಂಪ ಪೂರ್ವಯುಗಕ್ಕೆ ಸೇರಿದ ಸಾವಿರದ ಸಂಖ್ಯೆಯನ್ನು ಮೀರಿದ ಶಾಸನಗಳು
ಪ್ರಕಟವಾಗಿವೆ. ಇವುಗಳಲ್ಲಿ ಕಾಲದ ದೃಷ್ಟಿಯಿಂದ ಕ್ರಿ.ಪೂ. ಮೂರನೆಯ ಶತಮಾನಕ್ಕೆ ಸೇರಿದ ಅಶೋಕನ
ಶಾಸನಗಳು ಪ್ರಾಕೃತ ಭಾಷೆಯಲ್ಲಿ ಬ್ರಾಹ್ಮೀ ಲಿಪಿಯಲ್ಲಿ ಇವೆ. ಇವುಗಳಲ್ಲಿ ಬ್ರಹ್ಮಗಿರಿ ಶಾಸನ
ಒಂದು. ಇದರಲ್ಲಿ ಇರುವ ‘ಇಸಿಲ’ ಎಂಬ ಶಬ್ದ ಕನ್ನಡವೆಂದು ಪ್ರೊ. ಡಿ.ಎಲ್. ನರಸಿಂಹಾಚಾರ್ಯರು ಬೇರೆ
ಬೇರೆ ಆಧಾರಗಳನ್ನು ನೀಡಿ ನಿರ್ಣಯಿಸಿದ್ದಾರೆ. ಆದ್ದರಿಂದ ಕನ್ನಡ ನುಡಿ ಕ್ರಿ.ಶಕದ ಹಿಂದಿನಿಂದಲೂ
ಇದ್ದು, ಕ್ರಿ.ಶ. ಎರಡು ಅಥವಾ
ಮೂರನೆಯ ಶತಮಾನಗಳಲ್ಲಿ ಅದಕ್ಕೆ ಲಿಪಿ ಪ್ರಾಪ್ತವಾಗಿರಬೇಕೆಂಬ ಅಭಿಪ್ರಾಯಕ್ಕೆ ಕೆಲವು ವಿದ್ವಾಂಸರು ಮುಟ್ಟಿದ್ದಾರೆ.
ತಮಿಳು ನಾಡಿನ ಸಿತ್ತಿನವಾಸಲ್ ಎಂಬಲ್ಲಿ ದೊರೆಕಿದ ಶಾಸನದಲ್ಲಿ ಕೆಲವು ಕನ್ನಡ ಪದಗಳು ಕಂಡುಬಂದಿರುವುದನ್ನು
ವಿದ್ವಾಂಸರು ಉಲ್ಲೇಖ ಮಾಡಿದ್ದಾರೆ. ಈ ಶಾಸನೋಕ್ತ ಉದಾಹರಣೆಗಳು ಕ್ರಿ.ಸ್ತಪೂರ್ವ 2 ನೇಶತಮಾನದಿಂದ ಮೂರನೆಯ ಶತಮಾನದ ಅವಧಿಗೆ ಸೇರಿದ
ದಾಖಲೆಗಳು . ಇದನ್ನು ಹೊರತು ಪಡಿಸಿದರೆ ಕ್ರಿ.ಶ. 450ರ ದೆಂದು ಬಹಳ ಮಂದಿ ವಿದ್ವಾಂಸರು ತೀರ್ಮಾನಿಸಿರುವ ಹಲ್ಮಿಡಿ ಶಾಸನವೇ ಕನ್ನಡ ನುಡಿಯ ಅತ್ಯಂತ
ಪ್ರಾಚೀನತಮ ದಾಖಲೆ. ಇಲ್ಲಿಯ ಪ್ರೌಢ ಭಾಷಾ ಸ್ವರೂಪವನ್ನು ಗಮನಿಸಿದರೆ, ಈ ಶಾಸನಕ್ಕಿಂತ ಕೊನೆಯಪಕ್ಷ ಎರಡು ಶತಮಾನಗಳ ಹಿಂದೆ ಕನ್ನಡ ಭಾಷೆಯ ಬರವಣಿಗೆ
ಪ್ರಾರಂಭವಾಗಿರಬೇಕೆಂದೂ ಅದಕ್ಕಿಂತ ಒಂದು ಶತಮಾನದ ಹಿಂದೆಯಾದರೂ ಈ ಭಾಷೆ ಅಸ್ತಿತ್ವಕ್ಕೆ ಬಂದಿರಬೇಕೆಂದೂ
ಭಾವಿಸಲು ಅಡ್ಡಿಯಿಲ್ಲ.
ನಮ್ಮ ಕೇಂದ್ರ ಸರ್ಕಾರವು ಒಂದು ಭಾಷೆಯನ್ನು ಕ್ಲಾಸಿಕಲ್ ಎಂದು
ಘೋಷಿಸಲು ನಿಗದಿಪಡಿಸಿರುವ ಮಾನದಂಡಗಳಲ್ಲಿ ಅತ್ಯಂತ ಪ್ರಮುಖವಾದುದು ಭಾಷೆಯ ದಾಖಲಿತ ಚರಿತ್ರೆ
ಅಥವಾ ಪ್ರಾಚೀನ ದಾಖಲೆಗಳು ಸಾವಿರ ವರ್ಷಗಳಿಗೂ ಹಿಂದಿನವಾಗಿರಬೇಕು ಎಂಬುದು. ಕನ್ನಡ ಭಾಷೆಗೆ ಈ ಮಾನದಂಡದ ಹಿನ್ನೆಲೆಯಲ್ಲಿ ನಾವು
ತೋರಿಸಬೇಕಾದ ನಿದರ್ಶನ ವೆಂದರೆ ಶಾಸನಗಳೇ ಆಗಿವೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಭಾಷಾ ವಿದ್ವಾಂಸ ಜಾರ್ಜ್ ಎಲ್. ಹಾರ್ಟ್ ಎಂಬುವವರು ಶಾಸ್ತ್ರೀಯ ಭಾಷೆಗೆ ಈ ಕೆಳಕಂಡ
ಚಹರೆಗಳನ್ನು ಗುರುತಿಸುತ್ತಾರೆ. ಭಾಷೆಯ ದಾಖಲಾದ ಇತಿಹಾಸ ಒಂದು ಸಾವಿರ ವರ್ಷಕ್ಕೂ ಪುರಾತನವಾಗಿರಬೇಕು(ತಮಿಳಿಗರ ಒತ್ತಾಯಕ್ಕೆ
ಮಣಿದು ಈಗ ಒಂದೂವರೆ ಸಾವಿರ ವರ್ಷ ಎಂದು ಬದಲಿಸಲಾಗಿದೆ) ಪುರಾತನ ಸಾಹಿತ್ಯ ತಲೆ ತಲೆಮಾರುಗಳ ಜನರಿಂದ ಅತ್ಯಂತ ಮೌಲಿಕ
ಪರಂಪರೆಯೆಂದು ಪರಿಗಣಿತವಾಗಿರಬೇಕು. ಸಾಹಿತ್ಯ ಪರಂಪರೆ ಸ್ವೋಪಜ್ಞವಾಗಿದ್ದು, ಬೇರೆ ಭಾಷೆ- ಸಮುದಾಯದಿಂದ ಸ್ವೀಕಾರವಾಗಿರಬಾರದು. ಕ್ಲಾಸಿಕಲ್ ಭಾಷೆ ಮತ್ತು ಅದರ ಸಾಹಿತ್ಯ , ಪ್ರಸ್ತುತ ಭಾಷೆ- ಸಾಹಿತ್ಯಕ್ಕಿಂತ ಭಿನ್ನವಾಗಿರಬೇಕು. ಇವರ ಈ ಚಹರೆಗಳು
ಪರಿಪೂರ್ಣವಾಗಿ ಕನ್ನಡ ಭಾಷೆಗೆ ಅನ್ವಯವಾಗುತ್ತವೆ.
ಸಾಹಿತ್ಯ ಅಕಾಡೆಮಿಯ
ಆಶ್ರಯದಲ್ಲಿ ಕೇಂದ್ರ ಸರಕಾರ ನೇಮಿಸಿದ ತಜ್ಞರ ಸಮಿತಿಯೊಂದು ಒಂದು ಭಾಷೆಯನ್ನು ಶಾಸ್ತ್ರೀಯ ಎಂದು
ಘೋಷಿಸಲು ಕೆಲವು ಮಾನದಂಡಗಳನ್ನು ಸೂಚಿಸಿತು.
· 1500-2000 ವರ್ಷಗಳಷ್ಟು ಪುರಾತನ ಲಿಪಿ ಅಥವಾ ದಾಖಲಾಗಿರುವ ಇತಿಹಾಸವಿರಬೇಕು
· ಆ ಭಾಷೆಯನ್ನಾಡುವವರು ಅನೇಕ ಪೀಳಿಗೆಗಳಿಂದ ತಮ್ಮ ಅಮೂಲ್ಯ ಪರಂಪರೆ ಎಂದು ಪರಿಗಣಿಸುವ ಪುರಾತನ
ಸಾಹಿತ್ಯವಿರಬೇಕು .
· ಈ ಸಾಹಿತ್ಯ ಪರಂಪರೆ ಬೇರಾವುದೇ ಭಾಷಾ ಸಮುದಾಯದ ಕವಲಾಗಿ ಬೆಳೆಯದೆ,ತಾನೇ ತಾನಾಗಿ ಅಭಿವೃದ್ಧಿಯಾಗಿರಬೇಕು.
· ಈ ಶಾಸ್ತ್ರೀಯ ಸ್ವರೂಪದ ಪುರಾತನ ಭಾಷೆ ಹಾಗೂ ಸಾಹಿತ್ಯ ,ಅವುಗಳ ಆಧುನಿಕ ಸ್ವರೂಪದಿಂದ ವಿಶಿಷ್ಟವಾಗಿದ್ದು , ಇವೆರಡು ಸ್ವರೂಪಗಳ ನಡುವಿನ ಕೆಲ ಕೊಂಡಿಗಳು ಕಳಚಿರುವ ಸಾಧ್ಯತೆಗಳೂ ಇರಬಹುದು.
ಈ
ಸೂಚನೆಗಳನ್ನು ಅಂಗೀಕರಿಸಿದ ಸರಕಾರವು, 2004ರಲ್ಲಿ ಈ ಮಾನದಂಡಗಳನ್ನು ಅನ್ವಯಿಸಿ, ತಮಿಳನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿತು. ಇದರ ಹಿಂದೆಯೇ , 2005ರಲ್ಲಿ ಸಂಸ್ಕೃತಕ್ಕೂ ಈ ಪಟ್ಟವನ್ನು ನೀಡಲಾಯಿತು.
ಇದು
ಕರ್ನಾಟಕ (ಮತ್ತು ಆಂಧ್ರ) ದಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡಿತು. ಈ ಎಲ್ಲಾ ಮಾನದಂಡಗಳೂ
ತಮಿಳಿನಷ್ಟೇ ಅನ್ವಯವಾಗುವ ಕನ್ನಡಕ್ಕೇಕೆ ಶಾಸ್ತ್ರೀಯ ಭಾಷಾ ಸ್ಥಾನವಿಲ್ಲ ಎಂಬ ಪ್ರಶ್ನೆಯನ್ನು
ಕನ್ನಡದ ಬುದ್ಧಿಜೀವಿಗಳು, ಸಾಹಿತಿಗಳು, ಭಾಷಾತಜ್ಞರುಗಳು ಕೇಳತೊಡಗಿದರು.
ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯಲ್ಲಿ ಸಿಕ್ಕಿದ , ಕ್ರಿ.ಶ. ಒಂದನೆಯ ಶತಮಾನದ, ಅಶೋಕನ ಶಾಸನದಲ್ಲಿ ’ಇಸಿಲ’ ಎಂಬ ಕನ್ನಡ ಶಬ್ದವಿರುವುದು, ಕನ್ನಡದಲ್ಲಿರುವ 5ನೆಯ ಶತಮಾನದ ಹಲ್ಮಿಡಿ ಶಾಸನ, ಒಂಭತ್ತನೆಯ ಶತಮಾನದ ಕನ್ನಡದ ಪ್ರಸಿದ್ಧ ಕೃತಿ “ಕವಿರಾಜಮಾರ್ಗ” ಹೀಗೆ ಪುರಾತನ ಹಾಗೂ
ಶ್ರೀಮಂತ ಭಾಷಾ, ಸಾಹಿತ್ಯಿಕ
ಪರಂಪರೆಯಿರುವ ಕನ್ನಡಕ್ಕೇಕಿಲ್ಲ ಶಾಸ್ತ್ರೀಯ ಸ್ಥಾನ ಎಂಬ ಧ್ವನಿಗಳು ದೊಡ್ಡದಾಗತೊಡಗಿದವು. ನಂತರದ
ಕಾಲದಲ್ಲಿ ಕನ್ನಡ ಭಾಷೆಗೂ ಶಾಸ್ತ್ರೀಯ ಸ್ಥಾನ ಲಭಿಸಿತು.
ಕನ್ನಡ ಶಾಸ್ತ್ರೀಯ
ಸ್ಥಾನಮಾನದ ಪರಿಕಲ್ಪನೆಯ ಹಿನ್ನೆಲೆಯಲ್ಲಿ
ಕನ್ನಡದ್ದೇ ಆದ ಒಂದು ಪರಂಪರೆಯನ್ನು, ಕನ್ನಡ ಜೀವನ ವಿಧಾನವನ್ನು, ಕನ್ನಡ ಆಹಾರ ಪದ್ಧತಿಯನ್ನು, ಕನ್ನಡ ನೈತಿಕತೆಯನ್ನು, ಕನ್ನಡಿಗರ ಗುಣಸ್ವಭಾವಗಳ ಹಿರಿಮೆಯನ್ನು ಕನ್ನಡತನವನ್ನು, ನಮ್ಮಕಲೆ, ಸಂಗೀತವನ್ನು ಹುಡುಕಿಕೊಂಡು ಗಟ್ಟಿತನ ಗೊಳಿಸಿಕೊಳ್ಳ ಬೇಕಾಗಿದೆ. ಶಾಸ್ತ್ರೀಯ ಭಾಷಾ ಅಧ್ಯಯನವೆಂದರೆ ಕನ್ನಡದ ಬರಹ ಸಂಸ್ಕೃತಿಯನ್ನು
ಅಧ್ಯಯನ ಮಾಡುವಷ್ಟೇ ಮುಖ್ಯವಾಗಿ ಮೌಖಿಕ ಸಂಪ್ರದಾಯವನ್ನು ಅಧ್ಯಯನ ಮಾಡಬೇಕಾಗುತ್ತದೆ. ಏಕೆಂದರೆ
ಕನ್ನಡ ಸಾಹಿತ್ಯ ದೃಷ್ಟಿ ಈ ಎರಡೂ ಪ್ರಕಾರಗಳಲ್ಲಿ ಆಗಿದೆ. ಹಾಗಾಗಿ ಮೌಖಿಕ ಮತ್ತು ಲಿಖಿಕ
ಸಾಂಸ್ಕೃತಿಕ ಪಠ್ಯಗಳ ಪೂರಕ ಅಧ್ಯಯನ ಅಗತ್ಯ. ಬರಹ ಸಂಸ್ಕೃತಿಯು ಮೌಖಿಕ ಸಂಸ್ಕೃತಿಯ ಒಂದು
ಅಂಗವಾಗಿಯೇ ಕೆಲಸ ಮಾಡುತ್ತಿತ್ತು.
ನಮ್ಮ ಹೆಚ್ಚಿನ ಜ್ಞಾನ ಶಾಖೆಗಳಾದ ಜ್ಯಾಮಿತಿ ಶಾಸ್ತ್ರ, ವೈದ್ಯ ಶಾಸ್ತ್ರ, ಖಗೋಳ ಶಾಸ್ತ್ರ ಇವೆಲ್ಲವೂ ಕನ್ನಡದಲ್ಲಿರುವುದು ನಮಗೆ ಗೊತ್ತಿದೆ. ತಲೆ ತಲಾಂತರದಿಂದ ಇವು
ಮೌಖಿಕ ಪರಂಪರೆಯಲ್ಲಿ ಗುರುವಿನಿಂದ ಶಿಷ್ಯನಿಗೆ ಹರಿದು ಬಂದಿದೆ. ಆ ರೀತಿಯ ಜ್ಞಾನ ಪ್ರಸಾರ ಹೇಗೆ
ಆಗುತ್ತಿತ್ತು ಎಂಬುದನ್ನು ನಾವು ಕಂಡುಹಿಡಿದುಕೊಳ್ಳಬೇಕಾಗಿದೆ. ಇದರ ಜತೆಗೆ ಹಲವಾರು ಬರಹ ರೂಪದಲ್ಲಿರುವ ಪುಸ್ತಕಗಳು
ಲಭ್ಯವಿದೆ. ಅವುಗಳನ್ನು ಅಧ್ಯಯನ ಮಾಡಲು ಹಳೆಗನ್ನಡದ ಪ್ರವೇಶ ಅತ್ಯಂತ ಜರೂರಿನಲ್ಲಿ ಆಗಬೇಕಾಗಿದೆ.
ಏಕೆಂದರೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಈಗ ಹಳೆಗನ್ನಡ ಕಲಿಸುವ ಅಧ್ಯಾಪಕರು ಸಿಗುವುದೇ ದುಸ್ತರ.
ಕನ್ನಡ ಶಾಸ್ತ್ರೀಯ ಸ್ಥಾನಮಾನದ ಪರಿಕಲ್ಪನೆಯ ಬಗೆಗೆ ಶಾಸನಗಳು ಒದಗಿಸುವ ಮಾಹಿತಿಗಳು ನೇರವಾಗಿ
ಕನ್ನಡದ ಅಸ್ತಿತ್ವದ ಹಳಮೆಯ ಬಗೆಗೆ ಮಾಹಿತಿಯನ್ನು ನೀಡಿವೆ. ಕೆಲವೆಡೆ ಪರೋಕ್ಷವಾಗಿ ಕನ್ನಡದ ಅಸ್ತಿತ್ವದ
ಬಗೆಗೆ ನಮಗೆ ಮಾಹಿತಿಯನ್ನು ಒದಗಿಸಿವೆ.
3ನೇ
ಶತಮಾನಕ್ಕೆ ಮುಂಚೆಯೇ ಅಂದಿನ ದಾಖಲೆಗಳೆನಿಸಿದ ತಮಿಳು ಶಾಸನಗಳಲ್ಲಿ ಕನ್ನಡ ಭಾಷೆಯ ಅಸ್ತಿತ್ವ
ಲಭ್ಯ. ಇದಲ್ಲದೆ ಕನ್ನಡದ ಮೊತ್ತಮೊದಲ ಶಾಸನ ಎಂದು ಹಲ್ಮಿಡಿ ಶಾಸನವನ್ನು ಗುರುತಿಸಲಾಗಿದೆ. ಅದರ
ಕಾಲ ಕ್ರಿ.ಶ. 450. ಮೊದಲ ಗದ್ಯ ಸಾಹಿತ್ಯ
ವಡ್ಡಾರಾಧನೆ ಕ್ರಿ.ಶ. 800, ಮೊದಲ ಲಕ್ಷಣ ಗ್ರಂಥ
ಕವಿರಾಜ ಮಾರ್ಗ ಕ್ರಿ.ಶ. 850 ಲಭ್ಯ.
ಭಾರತೀಯ ಭಾಷೆಗಳ ಲಾಕ್ಷಣಿಕ ಸಾಹಿತ್ಯದಲ್ಲಿ ಮಹತ್ತರವಾದ ಎರಡು ಕೃತಿಗಳಾದ ಕವಿರಾಜಮಾರ್ಗ ಮತ್ತು
ಕಾವ್ಯಾವಲೋಕನ ಕೃತಿಗಳು ಕನ್ನಡ ಭಾಷೆಯಲ್ಲಿ ರಚಿತವಾದ ಎರಡು ಅನನ್ಯ ಕೃತಿಗಳು. ಕೊಲಂಬಿಯಾ ವಿ.ವಿ.ಯ ಸಂಸ್ಕೃತ ಮತ್ತು ಭಾರತ ಅಧ್ಯಯನದ ಹಿರಿಯ ಪ್ರಾಧ್ಯಾಪಕರಾದ
ಡಾ. ಷೆಲ್ಡನ್ ಪೋಲಾಕ್ ಅವರು
ಕವಿರಾಜಮಾರ್ಗದ ಬಗೆಗೆ ಹೇಳಿರುವ ` ಜಗತ್ತಿನ ಯಾವುದೇ ಭಾಗದ ಆಧುನಿಕಪೂರ್ವದ ಸಾಹಿತ್ಯ ಸಂಸ್ಕೃತಿಯನ್ನು ಹೋಲಿಕೆಯಾಗಿಟ್ಟುಕೊಂಡು
ನೋಡಿದರೂ ಸರಿಯೇ ಕನ್ನಡ ಭಾಷೆಯ ಸಂದರ್ಭದಲ್ಲಿ ದೇಶ ಭಾಷಾ ನಿರ್ಮಾಣದ ಪ್ರಕ್ರಿಯೆಯನ್ನು ಇತಿಹಾಸವನ್ನೂ
ನಾವು ತಿಳಿಯ ಬಹುದಾದಷ್ಟೂ ನಿಖರವಾಗಿ ಇನ್ನಾವುದೇ ಇಂಥ ದೇಶ ಭಾಷಾನಿರ್ಮಿತಿಯನ್ನು ಅರಿಯಲಾಗುವುದಿಲ್ಲ. ಇವತ್ತಿನ ಭಾರತದ ದಕ್ಷಿಣ ಭಾಗದಲ್ಲಿ ಮಹಾರಾಷ್ಟ್ರ, ಆಂಧ್ರ ಮತ್ತು ತಮಿಳುನಾಡಿನ ರಾಜ್ಯಗಳ ನಡುವೆ ಕರ್ನಾಟಕ ವೆಂದು ಹೆಸರಾದ ಈ ಪ್ರಾಂತ್ಯದ ಆಡುಭಾಷೆಯಾಗಿರುವ ಕನ್ನಡದ ಒಂದು
ವಿಶೇಷವೆಂದರೆ ಇಲ್ಲಿ ಕ್ರಿ.ಶ. 5ನೇ ಶತಮಾನದಿಂದ ಆರಂಭಿಸಿ ಸತತವಾಗಿ ವಿಶ್ವಾತ್ಮಕತೆ ಮತ್ತು ದೇಶೀಯತೆಗಳ
ನಡುವಿನ ಚಲನಶೀಲ ಸಂಬಂಧವು ಬೆಳೆಯುತ್ತ ಬಂದಿರುವುದನ್ನು ನಾವು ನೋಡಲಿಕ್ಕೆ ಸಾಧ್ಯವಿದೆ. ಇಲ್ಲಿಯ ಬಹುತೇಕ ವಿದ್ಯಮಾನಗಳ
ನಿಖರ ಕಾಲನಿರ್ಣಯವು ನಮಗೆ ಲಭ್ಯವಿದೆ. ಜಗತ್ತಿನ ಇನ್ನಾವುದೇ ಪ್ರಾಂತೀಯ ಭಾಷೆಯಲ್ಲೂ ಇಷ್ಟು ದೀರ್ಘಕಾಲದ ಮತ್ತು
ಇಷ್ಟೇ ಕಾಲ ನಿರ್ಣಯದ ಅನುಕೂಲವು ನಮಗೆ ಲಭ್ಯವಾಗುವುದಿಲ್ಲ. ಇದರ ಜೊತೆಗೆ ಕನ್ನಡದ ಇನ್ನೊಂದು ವಿಶೇಷವೆಂದರೆ ಇಲ್ಲಿ ಲಭ್ಯವಾಗುವ
ಬಹುತೇಕ ಮಾಹಿತಿಗಳು ಶಾಸನಗಳನ್ನು ಆಧರಿಸಿದ
ಗಟ್ಟಿಯಾದ ಸಾಕ್ಷ್ಯಗಳು. ಅಂಥ ಲಭ್ಯ ಶಾಸನಗಳ ಮೊತ್ತ ಇಲ್ಲಿ ದಂಗು ಬಡಿಸುವಷ್ಟಿದೆ. ಜಗತ್ತಿನ ಯಾವುದೇ ಭಾಗಕ್ಕೆ ಹೋಲಿಸಿದರೂ ಇದು ತುಂಬ ಸಾಂದ್ರವಾದ ದಾಖಲೆಗಳನ್ನೊಳಗೊಂಡ ಒಂದು ಭೂಪ್ರದೇಶ. ಇಲ್ಲಿ ಸುಮಾರು 25 ಸಾವಿರದಷ್ಟು ಪ್ರಶಸ್ತಿ
ಉಂಬಳಿದಾನಪತ್ರ, ವಂಶಾವಳಿ ಒಪ್ಪಂದ ಮೊದಲಾದುವು ಸಿಗುತ್ತವೆ. ಈ ದಾಖಲೆಗಳು ಅಧಿರಾಜರು,ಮತ್ತು ಅಧೀನ ಪ್ರಭುಗಳ ಆಸ್ಥಾನದಿಂದ ಹೊರಟವುಗಳಂತಹವು ಮಾತ್ರವಲ್ಲ
ಗ್ರಾಮ ಸಮುದಾಯದ ಮೂಲದ ವೀರಗಲ್ಲುಗಳಂಥ ದಾಖಲೆಗಳು ಇಲ್ಲಿ ಸೇರಿವೆ. ಇಷ್ಟರ ಮೇಲೆ ಲಿಖಿತ ಸಾಹಿತ್ಯ ಪಠ್ಯಗಳು ಸೇರಿವೆ.. ಇವು ಈ ಉಪಖಂಡದಲ್ಲೇ ನಿಖರವಾದ ಕಾಲನಿರ್ಣಯಕ್ಕೆ ಸಿಗಬಲ್ಲ ಅತ್ಯಂತ ಪ್ರಾಚೀನ ಪಠ್ಯಗಳು( ತಮಿಳು ಪಠ್ಯಗಳು ಇವಕ್ಕಿಂತ ಹಳೆಯವು ನಿಜ, ಆದರೆ ಅಲ್ಲಿಯ ಆರಂಭಿಕ
ಸಾಹಿತ್ಯದ ಇತಿಹಾಸವು ತುಂಬ ಊಹಾಧಾರಿತ) ಈ ಪಠ್ಯಗಳಲ್ಲಿ ಬಹುಮುಖ್ಯವಾದದ್ದೊಂದು ಕವಿರಾಜ ಮಾರ್ಗ. ( ವಿಶ್ವಾತ್ಮಕ ದೇಶಭಾಷೆ: ಅನುವಾದಕೆ.ವಿ.ಅಕ್ಷರ, ಅಕ್ಷರ ಪ್ರಕಾಶನ, ಸಾಗರ, ಪು.90-91). ಜೆ.ಎಫ್. ಪ್ಲೀಟ್ ರವರು, ಆರ್. ನರಸಿಂಹಾಚಾರ್ಯರ ಕರ್ನಾಟಕ ಕವಿಚರಿತೆ ಯನ್ನು ವಿಮರ್ಶಿಸುತ್ತಾ ಹೇಳಿರುವ
ಮಾತುಗಳಾದ ‘ ಶಾಸನಗಳ ದಾಖಲೆಗಳಿಂದ ತಿಳಿದು ಬರುವಂತೆ ಪ್ರಾಕೃತವನ್ನು ಹೊರತು ಪಡಿಸಿದರೆ ದಕ್ಷಿಣ ಭಾರತದ ಪ್ರಾಚೀನತಮ
ದೇಶಭಾಷೆಯೆಂದರೆ ದಿಟವಾಗಿ ಕನ್ನಡವೇ. ಎನ್ನುವ ಮಾತುಗಳಲ್ಲಿ ಕನ್ನಡದ ಪ್ರಾಚೀನತೆಯ ಮಹತ್ವ ನಮಗಾಗುತ್ತದೆ. ಅದೇ ರೀತಿ ಬಿ.ಎಲ್. ರೈಸ್ ಅವರ ಮಾತುಗಳಾದ, ದಕ್ಷಿಣ ಭಾರತದಲ್ಲಿ ದ್ರಾವಿಡ ಭಾಷೆಗಳೆಂಬುದಾಗಿ ಕರೆಯಲ್ಪಡುವ
ಭಾಷೆಗಳಲ್ಲಿ ನಡೆದಿರುವ ಸಾಹಿತ್ಯ ಕೃಷಿಯ ವಿಷಯದಲ್ಲಿ ಕನ್ನಡಕ್ಕಿಂತ ಹೆಚ್ಚು ಪ್ರಾಚೀನತೆಯನ್ನು ಕೊಚ್ಚಿಕೊಳ್ಳುವ
ಭಾಷೆ ಬೇರೆ ಯಾವುದೂ ಇಲ್ಲ. ಆದರೆ ತಮಿಳು, ತೆಲುಗು ಈ ಸೋದರ ಭಾಷೆಗಳಲ್ಲಿ ಅವಕ್ಕೆ ಶ್ರದ್ಧಾನ್ವಿತರಾದ ಉಪನ್ಯಾಸಕರು
ಇರುವ ಹಾಗೆ ಕನ್ನಡ ಭಾಷೆಯ ಬಗೆಗೆ ಲಕ್ಷ್ಯ ಕೊಡುತ್ತಿರುವ ಪ್ರಾಚ್ಯ ವಿದ್ಯಾ ಪಂಡಿತು ಹೆಚ್ಚಾಗಿಲ್ಲ
ಎನ್ನುವ ಮಾತುಗಳು ನಿಜಕ್ಕೂ ಅಕ್ಷರ ಸಹ ಸತ್ಯ. ಸುಮಾರು ನೂರುವರ್ಷಗಳ ಹಿಂದೆ ಅವರು ವ್ಯಕ್ತಪಡಿಸಿರುವ ಈ ಅನಿಸಿಕೆ ಈ ಕಾಲಘಟ್ಟಕ್ಕಂತೂ
ಹಚ್ಚು ಅನ್ವಯವಾಗುತ್ತದೆ. ಅದೇ ರೀತಿ ಹರ್ಮನ್ ಮೋಗ್ಲಿಂಗ್ ಅವರು 1849 ರಲ್ಲಿ ಬಾರ್ತ ಎನ್ನುವ ವಿದ್ವಾಂಸರಿಗೆ ಬರೆದ ಪತ್ರದಲ್ಲಿಯ ‘ ಕನ್ನಡಿಗರ ಮನಃಪ್ರವೃತ್ತಿಯನ್ನು ಅವರ ಆಡುಭಾಷೆಯನ್ನು ಅರ್ಥಮಾಡಿಕೊಳ್ಳ
ಬೇಕಾದರೆ ಅವರ ಭಾಷೆಯ ಹಳೆಯ ದಾಖಲೆಗಳಲ್ಲಿ ಅವನ್ನು ಹುಡುಕಿ ತೆಗೆಯ ಬೇಕಾಗುತ್ತದೆ ಎನ್ನುವವ ಮಾತುಗಳು
ಕನ್ನಡ ಶಾಸ್ತ್ರೀಯ ಭಾಷೆಯ ಹಿರಿಮೆಗೆ ಸಾಕ್ಷ್ಯಿ ಭೂತವಾಗಿದೆ.
ಕನ್ನಡ ಭಾಷೆಯ ಪುರಾತನಕ್ಕೆ ಇತರ ಪುರಾವೆ:
ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಗುರುತಿಸಲು ಇರುವ ಮಾನದಂಡಗಳಲ್ಲಿ ಅತ್ಯಂತ ಮಹತ್ತರವಾದ ಆಕರಗಳು ಶಾಸನಗಳು. ಲಭ್ಯವಾಗಿರುವ
ಅತ್ಯಂತ ಹಳೆಯ ಕನ್ನಡ ಶಾಸನಗಳು ಮತ್ತು ಸಾಹಿತ್ಯಕ್ಕೆ ಮೊದಲಿನಿಂದಲೇ ಸುಮಾರು ಕ್ರಿ.ಪೂ.2 ನೇಶತಮಾನದಿಂದ ಕ್ರಿ.ಶ. 4 ನೇಶತಮಾನದ ಅವಧಿಯಲ್ಲಿ ತಮಿಳು-ಬ್ರಾಹ್ಮಿ ಲಿಪಿಗಳ ಮೇಲೆ ಹಳಗನ್ನಡದ
ಪ್ರಭಾವ ಆಗಿರುವುದು ಅಧ್ಯಯನದಿಂದ ತಿಳಿದು ಬಂದಿದೆ ಎನ್ನುವ ಡಾ.ಐರಾವತಮ್ ಮಹದೇವನ್ ಅವರು ತಮ್ಮ Early
Tamil Epigraphy ಪುಸ್ತಕದಲ್ಲಿಯ ಮಾತುಗಳು
ಕನ್ನಡ ಲಿಪಿಯು ಕ್ರಿ.ಪೂ.2 ನೇಶತಮಾನದ ವೇಳೆಗಾಗಲೇ ಅಸ್ತಿತ್ವದಲ್ಲಿದ್ದಿತು ಎನ್ನುವುದನ್ನು ಸಾಬೀತು ಪಡಿಸುತ್ತದೆ. ಜೊತೆಗೆ ಹಳಗನ್ನಡ ಪ್ರಭಾವ ತಮಿಳು ಭಾಷೆಯ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂಬುದನ್ನು
ಯಾರೂ ಸಂದೇಹವನ್ನು ವ್ಯಕ್ತಪಡಿಸದ ರೀತಿಯಲ್ಲಿ ಆಧಾರಪೂರ್ವಕವಾಗಿ ಮಂಡಿಸಿದ್ದಾರೆ. ಕ್ರಿ.ಪೂ. ಕೊನೆಯ ಎರಡು ಮೂರು ಶತಮಾನಗಳಲ್ಲಿ ಕನ್ನಡ ಪದಕೋಶ, ವ್ಯಾಕರಣ ಪ್ರಯೋಗ, ಸಂಬೋಧಕ ಪ್ರಕ್ರಿಯೆಗಳು
ಎಷ್ಟರ ಮಟ್ಟಿಗೆ ಬೆಳೆದಿದ್ದವು ಎಂಬುದನ್ನು ಮತ್ತು ಜೈನ ವಲಸಿಗರ ಮೂಲಕ ಸಮಕಾಲೀನ ತಮಿಳು ಬ್ರಾಹ್ಮಿ
ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಿದ್ದವು ಎಂಬುದನ್ನು ಸಾಧಾರಪೂರ್ವಕವಾಗಿ ವಿವರಿಸಿದ್ದಾರೆ.
ಕೆಲವು ನಿದರ್ಶನಗಳು: ‘’ಎರುಮಿನಾಟು’’ ಎಂಬ
ಕನ್ನಡ ಪದದ ತಮಿಳು ರೂಪಾಂತರ ‘’ಎರುಮೈನಾಟು’’
ಕವುಟಿ ಎಂಬುದು ಒಬ್ಬ ವ್ಯಕ್ತಿಯ
ಇಲ್ಲವೇ ಮನೆತನದ ಹೆಸರು
ಗವುಡಿ ಗೌಡಿಗೆ ಸಮಾನವಾಗಿದೆ.
ಪೊಶಿಲ್ ಎಂದರೆ ದ್ವಾರ ಅಥವಾ ಬಾಗಿಲು- ಇದು ಕನ್ನಡದ ಹೊಸಿಲುವಿನಿಂದ
ಪಡೆದು ಕೊಳ್ಳಲಾಗಿದೆ. ತಾಯಿಯರ್ ಎಂಬ ಗೌರವ ಸೂಚಕ
ಪದವು ಕನ್ನಡ ಮೂಲದ್ದು. ವ್ಯಕ್ತಿನಾಮ ಮತ್ತು ಗೌರವ ಸೂಚಕ ತಮಿಳು ಪದಗಳ ಮೇಲೆ ಕನ್ನಡದ ಪ್ರಭಾವ ಇದೆ. ಈ ವಿವರಗಳು ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅಭಿಜ್ಞೆಗೆ
ಅಧಿಕೃತ ಆಕರಗಳು ಎಂದು ಭಾವಿಸ ಬಹುದಾಗಿದೆ.
ಪಾಣಿನಿಯ
ಅಷ್ಟಾಧ್ಯಾಯಿ, ಅಶೋಕನ ಶಾಸನ, ಪ್ರಾಕೃತ ಶಾಸನ, ಗ್ರೀಕ್ ಇತಿಹಾಸಕಾರ ಟಾಲೆಮಿಯ ಪಾಪಿರಸ್, ಗ್ರೀಕ್ ಪ್ರಹಸನ ಅಕ್ಸಿರಿಂಕಸ್ ಪವೈರಿ, ಪ್ರಾಕೃತದಲ್ಲಿನ ಮಳವಳ್ಳಿಯ ಶಾಸನ, ಹಾಲರಾಜನ ಗಾಥಾ ಸಪ್ತಶತಿ, ಪಲ್ಲವರ ಹಡಗಲಿಯ ತಾಮ್ರಶಾಸನ, ತಮಿಳಿನ ಶಿಲಪ್ಪದಿಕಾರಮ್‌ನ ‘ಕರುನಾಡಗರ್’ ಇವೆಲ್ಲ ಕನ್ನಡ ಭಾಷೆಯ
‘ಅಭಿಜಾತ ಸ್ಥಾನ’ ವನ್ನು ಸಾಬೀತು ಮಾಡಲು ಪೂರಕ ಮಹತ್ವದ ದಾಖಲೆಗಳು.
ಕನ್ನಡ ಕ್ರಿ.ಪೂ.6 ರಿಂದಲೇ ತನ್ನ
ಅಸ್ತಿತ್ವವನ್ನು ಗುರುತಿಸಿದೆ. ಶ್ರೀ ಸಾಮಾನ್ಯರೇ ಕ್ರಿ.ಪೂ. 3-4 ರಲ್ಲಿಯೇ ಆಡು ಭಾಷೆಯಾಗಿ
ಕನ್ನಡವನ್ನು ಬಳಸುತ್ತಿದ್ದರು. ಸಂಸ್ಕೃತ ಮತ್ತು ಪ್ರಾಕೃತದಿಂದಲೇ ಮೊತ್ತ ಮೊದಲಿಗೆ ಕನ್ನಡ ಭಾಷೆ
ಪ್ರಭಾವ ಹೊಂದಿದೆ. ಅದೇ ರೀತಿ ತಮಿಳಿಗೂ ಕನ್ನಡದ್ದೇ ಪ್ರಭಾವ.
ಕನ್ನಡ ನಾಡಿನ ವಿವಿಧ ಅರಸು ಮನೆತನಗಳ ಸಾಮಂತರ ಆಳ್ವಿಕೆಯಲ್ಲಿ
ಹುಟ್ಟಿದ ಶಾಸನಗಳು ನಾಡಿನ ಜನಾಂಗದ ಬದುಕಿನ ವಿಶ್ವಕೋಶಗಳಾಗಿವೆ. ರಾಜರ ಆಳ್ವಿಕೆಯಲ್ಲಿ ಹುಟ್ಟಿದ ಶಾಸನಗಳಲ್ಲಿಯ ರಾಜಕೀಯ
ಸಂಗತಿಗಳನ್ನು ಹೊರತು ಪಡಿಸಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳನ್ನು ಗುರುತಿಸುವ ಪ್ರಯತ್ನವು
ಅನ್ಯ ಶಿಸ್ತುಗಳಡಿಯಲ್ಲಿ ಇತ್ತೀಚಿನ ದಿವಸಗಳಲ್ಲಿ ನಡೆಯುತ್ತಿದೆ. ಆಗಿನ ಕಾಲದಲ್ಲಿ ಜನರು ಯಾವ
ರೀತಿ ಬದುಕಿದ್ದರು, ಅವರ ವಿದ್ಯಾಭ್ಯಾಸ, ಕಲೆ, ಧಾರ್ಮಿಕ ಕಲಾಪ, ಆಡಳಿತ, ಯುದ್ಧಗಳಲ್ಲಿ ಭಾಗವಹಿಸಿದ್ದರ ಚಿತ್ರಣ, ಲೋಕೋಪಯೋಗಿ ಕಾರ್ಯಗಳ ವಿವರಗಳು, ಅವರ ಜೀವನ ಮೌಲ್ಯಗಳನ್ನು ಕುರಿತ ಅಧ್ಯಯನ ಶಾಸನಗಳನ್ನಾಧರಿಸಿ
ಗ್ರಹಿಸುವ ಪ್ರಯತ್ನ ಮಹತ್ತರತೆಯನ್ನು ಪಡೆದಿದೆ.
ನಮ್ಮ ನಾಡಿನ ಚಾರಿತ್ರಿಕ ಆಧಾರಗಳ ಅಭಾವ, ಅಸಮರ್ಪಕತೆ, ಅವಿಶ್ವಾಸನೀಯತೆಗಳನ್ನು
ಗಮನಿಸಿದಾಗ ಶಾಸನಗಳ ಮಹತ್ತ್ವ ಹಾಗೂ ಪ್ರಾಮುಖ್ಯ ತಿಳಿಯುತ್ತದೆ. ಶಾಸನಗಳು ಪ್ರಮುಖವಾಗಿ ಒಂದು
ಕಾಲದಲ್ಲಿ ನಡೆದ ವ್ಯವಹಾರಗಳ ಲಿಖಿತ ದಾಖಲೆಗಳು; ಚಾರಿತ್ರಿಕ ಉದ್ದೇಶದಿಂದ ಸಂಗತಿಗಳನ್ನು ದಾಖಲಿಸುವ ಸಲುವಾಗಿ ರಚಿತವಾದವುಗಳು. ನಾಡಿನ
ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಅಂಶಗಳನ್ನು
ಅರ್ಥಮಾಡಿಕೊಳ್ಳುವ ಮೂಲ ಅಥವಾ ನೇರವಾದ ಸಾಮಗ್ರಿಗಳು. ರಾಜಕೀಯ ಹಾಗೂ ಸಾಂಸ್ಕೃತಿಕ ಚರಿತ್ರೆಯನ್ನು
ಪುನರ್ರಚಿಸುವಲ್ಲಿ ಉಳಿದೆಲ್ಲವುಗಳಿಗಿಂತ ಮಹತ್ತರವಾದ ಮತ್ತು ಅಧಿಕೃತ ದಾಖಲೆಗಳಾಗಿವೆ.
ಶಾಸನಗಳು
ಸಾಹಿತ್ಯವಾಗಬೇಕೆಂಬ ಉದ್ದೇಶದಿಂದ ರೂಪುಗೊಂಡವುಗಳು ಅಲ್ಲ. ಆದಾಗ್ಯೂ ಎಷ್ಟೋ ವೇಳೆ ಶಾಸನಗಳನ್ನು
ಬರೆಸಿದ ಅಥವಾ ಬರೆದ ವ್ಯಕ್ತಿಯ ಮನೋಧರ್ಮ ಅಥವಾ ಸಾಮರ್ಥ್ಯದಿಂದಾಗಿ ಶಾಸನಗಳಲ್ಲಿ ಸಾಹಿತ್ಯದ
ಸೊಗಸು ಕಾವ್ಯಗುಣ ಕಾಣಿಸಿಕೊಳ್ಳಬಹುದು.
ಶಾಸನದಲ್ಲಿ ವಿವರವು ವಾರ್ತೆ ಅಥವಾ ವರದಿಯ ನೆಲೆಯನ್ನು ಮೀರಿದಾಗ, ಅದು ಆಸ್ವಾದ ಹಾಗೂ ಪರಿಭಾವನೆಯ ವಿಷಯವಾದಾಗ ಕಾವ್ಯತ್ವದ ನೆಲೆಯನ್ನು
ಪ್ರವೇಶಿಸುತ್ತದೆ. ಅಭಿವ್ಯಕ್ತಿಗೆ ಒದಗುವ ಛಂದೋಬದ್ಧತೆಯ ಸೊಗಸಿನಿಂದ ಕಾವ್ಯಗುಣವನ್ನು
ಗುರುತಿಸಬಹುದು. ಶಾಸನಗಳು ಛಂದೋಬದ್ಧವಾದ ಬರವಣಿಗೆಗಳ (ಚಂಪೂ ಶೈಲಿ) ವ್ಯಾಪ್ತಿಗೆ ಒಳಪಡುವುದರಿಂದ
ಶಾಸನಗಳುದ್ದಕ್ಕೂ ಅಲ್ಲಲ್ಲಿ ಕಾವ್ಯಗುಣ ವ್ಯಕ್ತವಾಗಿರುವುದು ಕಂಡುಬಂದಿದೆ.
ರಾಜರ ಆಜ್ಞೆಗಳನ್ನು ಹೇಳುವುದಕ್ಕಾಗಿ ಹುಟ್ಟಿಕೊಂಡ ಶಾಸನಗಳು ಕಾಲ
ಕಳೆದಂತೆ ತನ್ನ ಸ್ವರೂಪದಲ್ಲಿ ಬದಲಾವಣೆಯನ್ನು ಹೊಂದಿದವು. ದಾನ-ದತ್ತಿ, ವಿಜಯೋತ್ಸವ
ಸಂದರ್ಭದಲ್ಲಿ ನೀಡಿದ ದಾನ, ರಾಜರ ಆಡಳಿತ ಮುಂತಾದ ವಿಷಯಗಳು
ಸೇರಿಕೊಂಡವು. ಇಂತಹ ವಿಷಯಗಳನ್ನೊಳಗೊಂಡ ಶಾಸನಗಳನ್ನು ಕಾವ್ಯಾತ್ಮಕವಾಗಿ ಹೇಳಲು ಸಾಧ್ಯವಿಲ್ಲ.
ಏಕೆಂದರೆ ಕಾವ್ಯಾತ್ಮಕವಾಗಿರ ಬೇಕೆಂಬುದು ಅವುಗಳ ಉದ್ದೇಶವೂ ಅಲ್ಲ. `ಎಷ್ಟೋ ವೇಳೆ
ಶಾಸನಗಳನ್ನು ಬರೆಸಿದ ಅಥವಾ ಬರೆದ ವ್ಯಕ್ತಿಯ ಮನೋಧರ್ಮ ಅಥವಾ ಸಾಮರ್ಥ್ಯದಿಂದಾಗಿ ಶಾಸನಗಳಲ್ಲಿ
ಸಾಹಿತ್ಯದ ಸೊಗಸು,
ಕಾವ್ಯಗುಣ ಕಾಣಿಸಿಕೊಳ್ಳಬಹುದು. ಏಕೆಂದರೆ ಶಾಸನಗಳನ್ನು ಬರೆಯಬೇಕಾದರೆ ಅಲ್ಲಿ ಸ್ಥಳದ ಮಿತಿ
ಇರುತ್ತದೆ. ಆ ಸ್ಥಳದ ಮಿತಿಯೊಳಗೆ ಹಾಗೂ ಹೇಳಬೇಕಾದ ವಿಷಯವನ್ನು ನೇರವಾಗಿ ಹೇಳುವಾಗ ಸಾಹಿತ್ಯಕ
ಅಂಶಗಳನ್ನು ಸೇರಿಸಬೇಕಾದರೆ ಅಂತಹ ಶಾಸನಗಳನ್ನು ಬರೆಯುವ ವ್ಯಕ್ತಿ ಜಾಣನೇ ಇರಬೇಕು. ಅಂದಾಗ ಮಾತ್ರ
ಈ ಕೆಲಸ ಮಾಡಲು ಸಾಧ್ಯ. ಶಾಸನಗಳು ಸಾಹಿತ್ಯಕವಾಗಬೇಕಾದರೆ ಅದಕ್ಕೆ ಕಾವ್ಯಗುಣ ಅವಶ್ಯಕ. ಅಂತಹ
ಕಾವ್ಯಗುಣಗಳು ಶಾಸನಗಳಲ್ಲಿ ಬಳಸಿರುವುದು ಕಂಡು ಬರುತ್ತದೆ. ಕಾವ್ಯಗಳಿರುವಂತೆ ಶಾಸನಗಳು ಇರಲು
ಸಾಧ್ಯವಿಲ್ಲ. ಏಕೆಂದರೆ ಕಾವ್ಯದಲ್ಲಿ ಕವಿಗೆ ಬರೆಯಲು ಇರುವಷ್ಟು ಅವಕಾಶಗಳಾಗಲಿ, ಸಂದರ್ಭಗಳಾಗಲಿ
ಶಾಸನ ಕವಿಗೆ ಸಿಗುವುದು ವಿರಳ. ಒದಗಿ ಬಂದ ಅವಕಾಶಗಳನ್ನೇ ಸದುಪಯೋಗ ಪಡಿಸಿಕೊಂಡು ಶಾಸನವನ್ನು
ಕಾವ್ಯಮಯವಾಗಿ ಮಾಡಬೇಕಾದರೆ ಶಾಸನ ರಚನಕಾರನಿಗೆ ಕಾವ್ಯದ ಪರಿಚಯ ಇದ್ದಿರಲೇಬೇಕು. ಅಂತಹ ಪ್ರತಿಭಾವಂತ
ಶಾಸನಕಾರರು ರಚಿಸಿದ ಶಾಸನಗಳು ಸಾಹಿತ್ಯಕ ಗುಣಗಳಿಂದ ಕೂಡಿರಲು ಸಾಧ್ಯ. ಶಾಸನಗಳನ್ನು ರಚಿಸಿದವರಲ್ಲಿ
ಎಷ್ಟೋ ಜನ ಕವಿಗುಣವುಳ್ಳವರು ಹಾಗೂ ಕವಿಗಳಾಗಿರುವುದರಿಂದ ತಾವು ಹೇಳಬೇಕಾದ ವಿಷಯವನ್ನು ತಮಗೆ
ಹಿನ್ನೆಲೆಯಾದ ಕಾವ್ಯ ಪರಂಪರೆಯ ಭಾಷಾ ಸಾಮಗ್ರಿಯಿಂದ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ.
ಶಾಸನಗಳು ಕಾವ್ಯವಾಗಿ ಉದ್ದಿಷ್ಟವಾಗದ ವ್ಯವಹಾರಿಕ ದಾಖಲೆಗಳು
ಆಗಿರುವುದರಿಂದ ಸಹಜವಾಗಿ ಒಂದು ಭಾಷೆಯ ಆರಂಭಕಾಲದಲ್ಲಿಯೇ ಅವು ಕಾಣಿಸಿಕೊಂಡಿವೆ. ಹೀಗಾಗಿ ಯಾವುದೇ ಭಾಷೆಯ ಮತ್ತು ಸಾಹಿತ್ಯದ ಉಗಮದ ವಿಷಯವಾಗಿ
ಶಾಸನಗಳ ನೆರವು ಅಪೇಕ್ಷಣೀಯ. ಈ ಅನಿಸಿಕೆ ಕನ್ನಡ ಭಾಷೆ ಮತ್ತು ಸಾಹಿತ್ಯದ ವಿಷಯದಲ್ಲಿಯೂ ಹೊರತಲ್ಲ.
ಆರಂಭಕಾಲದ ಶಾಸನಗಳಲ್ಲಿ ಭಾಷೆ ಸಂಸ್ಕೃತವಾದರೂ ಕೆಲವೆಡೆ ದತ್ತಿ ನೀಡಿದ ಭೂಮಿಯ ವಿವರಗಳು, ಮೇರೆಗಳ
ವಿವರಗಳನ್ನು ಕೊಡುವಾಗ ಕನ್ನಡ ಭಾಷೆಯನ್ನು ಉಪಯೋಗಿಸಿವೆ. ಬಾದಾಮಿ ಚಾಲುಕ್ಯರ, ಗಂಗರ
ಹಾಗೂ ರಾಷ್ಟ್ರಕೂಟ ಅರಸುಮನೆತನಗಳ ಕಾಲದ ಶಾಸನಗಳು ಕನ್ನಡ ಭಾಷೆಯನ್ನು ಅದರಲ್ಲಿಯೂ ವ್ಯವಹಾರಿಕ
ಭಾಷೆಯನ್ನು ಅಲ್ಲಲ್ಲಿ ಬಳಸಲ್ಪಟ್ಟಿವೆ. ಶಾಸನಗಳು
ಸಮಾಜದ ಅನೇಕ ವಿಷಯಗಳ ದಾಖಲೆಗಳನ್ನು ಒದಗಿಸಿದರೂ ಅದು ಭಾಷೆಯಲ್ಲಿಯೇ ಅಂತಸ್ಥಗೊಂಡಿರುತ್ತದೆ ಎಂಬುದು
ಗಮನಿಸ ತಕ್ಕ ಸಂಗತಿಯಾಗಿದೆ.
ಗದ್ಯ,
ಆಲೋಚನಾ ಪ್ರಧಾನವಾದರೆ ಪದ್ಯ ಭಾವನಾ ಪ್ರಧಾನವಾದುದು. ಗದ್ಯ ಮಾಡಿದ್ದು ಪದ್ಯ ಮೂಡಿದ್ದು
ಎಂದು ಹೇಳುವುದೂ ಉಂಟು. ಇವೆರಡೂ ಭಾಷೆಯ ಎರಡು ಮುಖಗಳು. ಎರಡರಲ್ಲೂ ಲಿಪಿ, ಪದ, ಪದಜೋಡಣೆ, ವ್ಯಾಕರಣ
ಒಂದೇ ಆದರೂ ಲಕ್ಷಣಗಳಲ್ಲಿ ಭಿನ್ನತೆಯಿದೆ. ಕನ್ನಡದಲ್ಲಿ ಮೊದಲು ದೊರೆಯುವುದು ಗದ್ಯಶಾಸನ. ಅನಂತರ
ಪದ್ಯಶಾಸನಗಳು. ಹಲ್ಮಿಡಿಯ ಗದ್ಯ ಶಾಸನಕ್ಕೆ ಮೊದಲು ಕನ್ನಡದಲ್ಲಿ ಪದ್ಯಗಳಿರಲಿಲ್ಲವೆ? ಎಂಬ
ಪ್ರಶ್ನೆಯು ಎದುರಾಗಿದೆ. ಕನ್ನಡದಲ್ಲಿ ಗದ್ಯವು ಶಾಸನಗಳಲ್ಲಿ, ಶಾಸ್ತ್ರಗ್ರಂಥಗಳಲ್ಲಿ, ಚಂಪೂಕೃತಿಗಳಲ್ಲಿ, ಗದ್ಯ
ಕಥೆಗಳಲ್ಲಿ ವೈವಿಧ್ಯರೂಪವಾಗಿ ಬೆಳೆದುಕೊಂಡು ಬಂದಿದೆ.
ಕನ್ನಡ ಸಾಹಿತ್ಯದ ಪ್ರಥಮ ಘಟ್ಟದ
ಅವಶೇಷಗಳೆಂದರೆ ಶಾಸನಗಳು. ಪಂಪಪೂರ್ವ ಯುಗದಲ್ಲಿ ಶ್ರೀಮಂತ ಸಾಹಿತ್ಯ ಕಂಡುಬರುವುದು ಶಾಸನಗಳಲ್ಲಿ
ಮಾತ್ರ. ಕವಿರಾಜಮಾರ್ಗಕ್ಕಿಂತ ಪೂರ್ವದಲ್ಲಿ ಸಿಗುವ ಸಾಹಿತ್ಯಕ ಸಾಮಗ್ರಿಗಳೆಂದರೆ ಶಾಸನ ಸಾಮಗ್ರಿ.
ಕವಿರಾಜಮಾರ್ಗದವರೆಗಿನ ಕನ್ನಡ ಸಾಹಿತ್ಯ ಚರಿತ್ರೆ ಶಾಸನ ಚರಿತ್ರೆಯೇ ಆಗಿದೆ. ಶಾಸನಗಳನ್ನು
ಸಾಹಿತ್ಯಕ ದೃಷ್ಟಿಯಿಂದ ಅಧ್ಯಯನ ಮಾಡುವಾಗ ಎರಡು ಬಗೆಯ ಶಾಸನಗಳು ಎದುರಾಗುತ್ತವೆ. ಒಂದು
ಸ್ವತಂತ್ರ ಶುದ್ದ ಕಾವ್ಯಗಳನ್ನೊಳಗೊಂಡ ಶಾಸನಗಳು. ಎರಡನೆಯದು ಚಾರಿತ್ರಿಕ, ಸಾಮಾಜಿಕ, ಧಾರ್ಮಿಕ
ಮುಂತಾದ ವಿಷಯಗಳನ್ನು ಸಾಹಿತ್ಯ ಬದ್ಧವಾಗಿ ಹೇಳುವ ಶಾಸನಗಳು. ಇಲ್ಲಿ ನಾವು ಶಾಸನಶಾಸ್ತ್ರದ
ದೃಷ್ಟಿಯಿಂದ ಅಧ್ಯಯನ ಮಾಡುವಾಗ ಎರಡನೆಯ ವರ್ಗದ ಶಾಸನಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಏಕೆಂದರೆ ಮೊದಲನೆ ವರ್ಗದ ಶಾಸನಗಳು ನಮಗೆ
ಶಾಸನಗಳೆನಿಸಿದರೂ ಅದರಲ್ಲಿ ಶಾಸನ ಹಾಗೂ ಕನ್ನಡ ಸಾಹಿತ್ಯಕ್ಕೆ ಅವಿನಾಭಾವ ಸಂಬಂಧವಿದೆ. ಆರಂಭದ
ಕನ್ನಡ ಶಾಸನಗಳಲ್ಲಿ ಕಂಡು ಬರುವ ಭಾಷೆ ಗದ್ಯಮಯವಾಗಿದ್ದು ಸಂಸ್ಕೃತ ಮತ್ತು ಕನ್ನಡ ಎರಡನ್ನು ಒಳಗೊಂಡಿದೆ. ಕನ್ನಡ
ನಾಡಿನ ಬಹುಪಾಲು ಗದ್ಯ ಶಾಸನಗಳನ್ನು ಸ್ಥೂಲವಾಗಿ
ಗ್ರಂಥಸ್ಥ ಭಾಷೆಯ ಗದ್ಯಶಾಸನ ಮತ್ತು ಕಂಠಸ್ಥ ಭಾಷೆಯ ಗದ್ಯ ಶಾಸನ ಎಂದು ವರ್ಗೀಕರಿಸ ಬಹುದಾಗಿದೆ.
ಪ್ರಥಮ ಕನ್ನಡ ಶಾಸನ ಹಲ್ಮಿಡಿ ಶಾಸನ ಗ್ರಂಥಸ್ಥ ಭಾಷೆಯಲ್ಲಿದ್ದರೆ ಮಂಗಲೀಶನ ಬಾದಾಮಿ ಶಾಸನದ
ಬಹುಭಾಗ ಕಂಠಸ್ಥ ಭಾಷೆಯಲ್ಲಿದೆ. ಕನ್ನಡ ಭಾಷಿಕ ಗದ್ಯಸಾಹಿತ್ಯದ ಇತಿಹಾಸವನ್ನು ಹಲ್ಮಿಡಿ
ಶಾಸನದಿಂದ (ಸು. 450) ಗುರುತಿಸಬೇಕಾಗುತ್ತದೆ.
ಸು. 5ನೆಯ
ಶತಮಾನದಿಂದ ಸು. 18ನೆಯ
ಶತಮಾನದವರೆಗೆ ಅಸಂಖ್ಯ ಹಾಗೂ ವೈವಿಧ್ಯಮಯ ಗದ್ಯ ಭಾಷೆಯ ಶಾಸನಗಳು ದೊರೆಯುತ್ತವೆ. ಅವುಗಳಲ್ಲಿ ವೀರಗಲ್ಲು, ಮಾಸ್ತಿಕಲ್ಲು, ದತ್ತಿಶಾಸನಗಳಲ್ಲಿಯ
ಗದ್ಯ ಆಯಾ ಕಾಲದ ಐತಿಹಾಸಿಕ, ಸಾಮಾಜಿಕ ಮತ್ತು ಇತರ ಸಂಗತಿಗಳೊಂದಿಗೆ
ಭಾಷಾಸ್ವರೂಪವನ್ನು ತಿಳಿಸುತ್ತದೆ. ಕನ್ನಡನಾಡಿನಲ್ಲಿ ಶಾಸನಸಾಹಿತ್ಯದಲ್ಲಿ, ಈಗ
ತಿಳಿದ ಮಟ್ಟಿಗೆ ಮೊದಲಿಗೆ ಕಾಣಿಸಿ ಕೊಂಡಿರುವವುಗಳೆಂದರೆ, ಕ್ರಿ.ಪೂ.3ನೇ
ಶತಮಾನದ ಮೌರ್ಯದೊರೆ ಅಶೋಕನ ಪ್ರಾಕೃತಭಾಷೆಯ ಧರ್ಮಲಿಪಿಗಳಿಂದ ಕೂಡಿದ ಪ್ರಾಕೃತಶಾಸನಗಳು. ರಾಯಚೂರು
ಮತ್ತು ಚಿತ್ರದುರ್ಗದ ಕೆಲವು ಪ್ರದೇಶಗಳಲ್ಲಿ ಕಂಡುಬಂದಿರುವ ಈ ಶಿಲಾಲೇಖಗಳು ಸರಳ ಸಹಜ
ಗದ್ಯದಲ್ಲಿದ್ದು ಇವು ಆಡು ಭಾಷೆಯ ಸಹಜ ಗತಿಗೆ ಹತ್ತಿರವಾಗಿವೆ. ಗದ್ಯದಲ್ಲಿಯ ಈ ಮಾಧ್ಯಮ
ಸಹಜೋಕ್ತಿ ಕ್ರಮದಲ್ಲಿ ವಸ್ತುನಿಷ್ಠೆಯ ಗುರಿಯನ್ನು ಸಮರ್ಥವಾಗಿ ಸಾಧಿಸಬಲ್ಲದು ಎಂಬ ವಿಚಾರ ಅಶೋಕನ
ಈ ಆರಂಭಕಾಲೀನ ಶಾಸನಗಳಿಂದಲೇ ನಮಗೆ ಮನವರಿಕೆಯಾಗುತ್ತದೆ. ಐದನೆಯ ಶತಮಾನದ ಪೂರ್ವಾರ್ಧದಲ್ಲಿಯೇ
ಕನ್ನಡದ ಪ್ರಥಮ ಬರಹವಾದ ಹಲ್ಮಿಡಿ ಶಾಸನ ಹುಟ್ಟಿದೆ. ಅದರ ಹಿಂದು ಮುಂದಿನ ಒಂದು ಶತಮಾನದ
ಅವಧಿಯಲ್ಲಿ,
ದೀರ್ಘತೆ ಮತ್ತು ಪ್ರೌಢಿಮೆಯಲ್ಲಿ ಅದನ್ನು ಸರಿಗಟ್ಟುವ ಬೇರೆ ಶಾಸನಗಳಿಲ್ಲ. ಇದಾದ ಮೇಲೆ
ತಮಟಕಲ್ಲು ಪದ್ಯ ಶಾಸನ ದೊರೆತಿದ್ದು ಹಲ್ಮಿಡಿ ಶಾಸನದಂತೆ ಇದೂ ಸಂಸ್ಕೃತ ಭೂಯಿಷ್ಠವಾಗಿದೆ. ಗುಣ
ಮಧುರನೆಂಬ ವ್ಯಕ್ತಿಯ ಪ್ರಶಸ್ತಿಯ ವಿವರಣೆ ಇದರಲ್ಲಿದೆ, ಐತಿಹಾಸಿಕವಾದ
ಯಾವುದೇ ಘಟನೆಯ ಪ್ರಸ್ತಾಪವಿಲ್ಲ. ಕನ್ನಡ ಮೂಲದವೆಂದು ಹೇಳಬಹುದಾದ ನಾಲ್ಕು ಶಬ್ದಗಳು ಮಾತ್ರ ಇದರಲ್ಲಿ
ಪ್ರಯೋಗ ಗೊಂಡಿವೆ.
ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕ್ರಿ.ಶ.850ರ
ವರೆಗಿನ ಸು.ನಾಲ್ಕು ನೂರರಷ್ಟು ಶಾಸನಗಳಲ್ಲಿ ಶೇ.50ರಷ್ಟು
ಮಾತ್ರ ಪದ್ಯ ಶಾಸನಗಳಾಗಿದ್ದು ಉಳಿದುವೆಲ್ಲಾ ಗದ್ಯ ಶಾಸನಗಳೇ ಆಗಿವೆ. ಒಟ್ಟಿನಲ್ಲಿ ಈ ಅವಧಿಯ ಶಾಸನಗಳನ್ನು
ಗದ್ಯ ಶಾಸನಗಳು ಪದ್ಯ ಶಾಸನಗಳು ಎಂದು ರೂಪವನ್ನನುಸರಿಸಿ ವಿಂಗಡಿಸಬಹುದು. ಇದರರ್ಥ ಈ ಅವಧಿಯಲ್ಲಿ
ಗದ್ಯ-ಪದ್ಯಗಳು ಮಿಶ್ರಗೊಂಡು ರಚಿತವಾದ ಶಾಸನಗಳು ಇಲ್ಲವೆಂದಲ್ಲ. ಕ್ರಿ.ಶ.ಏಳನೆಯ ಶತಮಾನದ ಬಾದಾಮಿ
ಶಾಸನ (ಇಂ.ಎ.10 ಪು.61) ಎಂಟನೆಯ ಶತಮಾನದ ಸೊರಬ ಶಾಸನ (ಎಪಿ,ಕ.8ಸೊರಬ1) ನರಸಿಂಹರಾಜಪುರ
ಶಾಸನಗಳು (ಮೈ,ಆ.ರಿ.1920 ಪು 23ಮತ್ತು 24) ಒಂಭತ್ತನೆಯ
ಶತಮಾನದ ಚಿಕ್ಕ ಬಳ್ಳಾಪುರ ಶಾಸನ (ಎಪಿ.ಕ.17 ಚಿಕ್ಕಬಳ್ಳಾಪುರ 66) ಇವು
ಗದ್ಯ ಪದ್ಯಗಳ ಮಿಶ್ರ ಬರವಣಿಗೆಗಳಾಗಿವೆ.
ಕನ್ನಡ ಕಾವ್ಯಗಳು ಮೂಲತಃ ಸಾಹಿತ್ಯ ಕ್ಷೇತ್ರಕ್ಕೆ ಸೇರಿದವುಗಳಾದರೂ ಆನುಷಂಗಿಕವಾಗಿ ಆಯಾಕಾಲದ
ಚರಿತ್ರೆಗೆ ಸಲ್ಲುವಂತೆ, ಶಾಸನಗಳು ಚಾರಿತ್ರಿಕ
ಸಂಗತಿಗಳ ಪ್ರಾತಿನಿಧಿಕವಾಗಿದ್ದರೂ ಆನುಷಂಗಿಕವಾಗಿ ಕಾವ್ಯ ಅಥವಾ ಸಾಹಿತ್ಯಕ್ಕೂ ಕೊಂಚಮಟ್ಟಿಗೆ
ಸಲ್ಲುವ ಲಕ್ಷಣಗಳನ್ನು ಒಳಗೊಂಡಿವೆ. ಶಾಸನಗಳಿಗೂ ಕಾವ್ಯಗಳಿಗೂ ಇರುವ ಮುಖ್ಯ ವ್ಯತ್ಯಾಸ ಎಂದರೆ, ಶಾಸನರಚನೆ ಸಾಂದರ್ಭಿಕವಾದದ್ದು, ಅಂದರೆ ದಾನದತ್ತಿಗೆ ಸಂಬಂಧಿಸಿದ, ದೇವಾಲಯಗಳ ನಿರ್ಮಾಣ, ಲೋಕೋಪಯೋಗಿ ಕಾರ್ಯ, ನಿಸದಿಗೆ, ವೀರಗಲ್ಲು ಮಾಸ್ತಿಕಲ್ಲು ಸ್ಥಾಪಿಸುವುದು ಇತ್ಯಾದಿ ಕ್ರಿಯೆಯ
ಸಂದರ್ಭಕ್ಕೆ ಸಂಬಂಧಪಟ್ಟಿದ್ದು, ಅವೆಲ್ಲ ನಿರ್ದೇಶಿತ ರಚನೆಗೆ ಸಂಬಂಧಪಟ್ಟವುಗಳು. ಶಾಸನಗಳ ನಿರ್ಮಾಣ ಮೂರು ಹಂತಗಳಲ್ಲಿ
ನಡೆಯುತ್ತದೆ.
1. ಶಾಸನಗಳನ್ನು ಹಾಕಿಸಬೇಕೆಂಬ ಪ್ರಭುವರ್ಗ, 2. ಪ್ರಭುವರ್ಗದ ನಿರ್ದೇಶನದ ಮೇರೆಗೆ ಆ ಸಂದರ್ಭದ ವಸ್ತುವಿಗೆ ತಕ್ಕ ಪದ
ಸಂಯೋಜನೆಯ ಮೂಲಕ ಶಾಸನ ಪಠ್ಯವನ್ನು ಸಿದ್ಧಪಡಿಸಿದ ವ್ಯಕ್ತಿ, 3. ಶಾಸನ ಪಾಠವನ್ನು ಕಲ್ಲಿನಲ್ಲಿ ಕಂಡರಿಸುವ ವ್ಯಕ್ತಿ.
ಶಾಸನ ರಚನೆಯ ಕ್ರಿಯೆ ಹಾಗಲ್ಲ. ಸಾಂದರ್ಭಿಕವಾದದ್ದು, ನಿರ್ದೇಶಿತವಾದದ್ದು. ತನ್ನ ಅಭಿವ್ಯಕ್ತಿಗೆ ಆಶ್ರಯಿಸಬೇಕಾದ ಮಾಧ್ಯಮದ
(ಶಿಲೆ-ಲೋಹ) ಪರಿಮಿತಿಯಿಂದ ನಿರ್ಬಂಧಿತವಾದದ್ದು. ಈ ಹಿನ್ನೆಲೆಯಲ್ಲಿ
ಶಾಸನಗಳಲ್ಲಿ ಒಂದು ವೇಳೆ ಕಾವ್ಯಗುಣವೇನಾದರೂ ಪ್ರಾಸಂಗಿಕವಾಗಿ ಕಂಡುಬಂದರೆ ಅದು ಶಾಸನ
ಸಿದ್ಧಪಡಿಸಿದವನ ಮನೋಧರ್ಮ ಹಾಗೂ ರಚನಾ ಸಾಮರ್ಥ್ಯದ ಪರಿಣಾಮವಲ್ಲದೆ ಬೇರೇನೂ ಅಲ್ಲ. ಶಾಸನಗಳನ್ನು ರಚಿಸಿದವರಲ್ಲಿ
ಎಷ್ಟೋ ಮಂದಿ ಕವಿಗುಣವುಳ್ಳವರೂ ಹಾಗೂ ಕವಿಗಳೂ ಆಗಿರುವ ಸಾಧ್ಯತೆ ಇರುವುದರಿಂದ ಹಾಗೂ ಅವು ಭಾಷಿಕ
ಸಂದರ್ಭದಲ್ಲಿಯೂ ಕೆಲಸ ಮಾಡುತ್ತಿರುವುದರಿಂದ ಹೇಳುವ ವಿಷಯವನ್ನು ತಮಗೆ ಹಿನ್ನೆಲೆಯಾದ ಕಾವ್ಯ
ಪರಂಪರೆಯ ಭಾಷಾ ಸಾಮಗ್ರಿಯಿಂದ ಕಟ್ಟಿಕೊಡುವ ಕಲೆಗಾರಿಕೆಯನ್ನು ಅಲ್ಲಲ್ಲಿ ಪ್ರಕಟಿಸಿದ್ದಾರೆ.
ಹೀಗಾಗಿ ಶಾಸನಗಳಲ್ಲಿ ಹಲವೆಡೆ ಕಾವ್ಯಗುಣ ಪ್ರಾಸಂಗಿಕವಾಗಿ ಕಾಣಿಸಿಕೊಂಡಿದ್ದು
ಕಡೆಗಣಿಸುವಂತಹದ್ದಲ್ಲವಾಗಿದೆ. ಉತ್ತಮ ಕಾವ್ಯದ ಯಾವುದೋ ಭಾಗವನ್ನು ಓದುವಾಗ ಉಂಟಾಗುವ ಅನುಭವ
ಕೆಲವು ಶಾಸನಗಳನ್ನು ಓದುವಾಗಲೂ ಆಗುತ್ತದೆ. ಶಾಸನಗಳಲ್ಲಿ ಕಾವ್ಯವಲ್ಲದ ಭಾಗವೂ ಉಂಟು.
ಕಾವ್ಯವೆಂದು ನಿಸ್ಸಂಶಯವಾಗಿ ಹೇಳಬಹುದಾದ ಭಾಗವೂ ಉಂಟು. ಆದಾಗ್ಯೂ ಶಾಸನ ಸಾಹಿತ್ಯವನ್ನು ಮಾರ್ಗ
ಸಾಹಿತ್ಯಕ್ಕಾಗಲೀ ದೇಶೀ ಸಾಹಿತ್ಯಕ್ಕಾಗಲೀ ಸೇರಿಸುವ ಪ್ರಶ್ನೆಯೇ ಇಲ್ಲ. ಅದು ಕನ್ನಡ ಸಾಹಿತ್ಯ
ವಾಹಿನಿಯ ಪಕ್ಕದಲ್ಲೆ ಹರಿಯುವ ಇನ್ನೊಂದು ನದಿ ಎಂದು ಹೇಳಬಹುದು. ಕನ್ನಡ ಸಾಹಿತ್ಯದಲ್ಲಿ ಅದರಲ್ಲೂ
ಹಳಗನ್ನಡ ಭಾಷೆ, ನುಡಿಕಟ್ಟುಗಳು, ಛಂದೋ ಪ್ರಯೋಗಗಳಲ್ಲಿ ಕನ್ನಡ ಸಾಹಿತ್ಯ ಕವಿಗಳ ಕೊಳುಕೊಡುಗೆ, ಪ್ರೇರಣೆ ಪ್ರಚೋದನೆಗಳನ್ನು ಗುರುತಿಸಬಹುದಾಗಿದೆ. ಶಾಸನಗಳು ನೇರ
ಜೀವನದಿಂದ ಹೊರಹೊಮ್ಮಿದವು; ಜೀವನವನ್ನೇ ಚಿತ್ರಿಸುವ ಉದ್ದೇಶವುಳ್ಳವು. ನಾಡಿನ ಸಾಂಸ್ಕೃತಿಕ ಚರಿತ್ರೆ ಕುರಿತು ಶಾಸನ
ಮತ್ತು ಪೂರಕ ಆಕರಗಳ ಮೂಲಕ ನಡೆದಿರುವ ಅಧ್ಯಯನವು ಸಂಶೋಧನಾ ಕ್ಷೇತ್ರದ ಬೇರೆ ಬೇರೆ ಆಯಾಮಗಳನ್ನು
ಗುರುತಿಸಲು ನೆರವಾಗಿದೆ. ಸಾಹಿತ್ಯದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಶಾಸನಗಳನ್ನು ಕುರಿತು
ಅಧ್ಯಯನ ಕೈಗೊಂಡ ಮೇಲೆ ಶಾಸನಗಳನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾವಣೆ ಉಂಟಾಯಿತು.
ಅಲ್ಲಿಯವರೆಗೂ ಐತಿಹಾಸಿಕ ದಾಖಲೆಗಳ ಆಕರಗಳು ಎಂದು ಭಾವಿಸಿದ್ದ ಶಾಸನಗಳನ್ನು ಸಾಂಸ್ಕೃತಿಕ
ಸಾಹಿತ್ಯಕ ಹಿನ್ನಲೆಯಲ್ಲಿ ನೋಡುವ ಪರಿಕಲ್ಪನೆ ಉಂಟಾಯಿತು.
ಶಾಸನಗಳನ್ನು ಸಾಹಿತ್ಯಿಕ ದೃಷ್ಟಿಯಿಂದ ಅಧ್ಯಯನ ಮಾಡುವಾಗ ಎರಡು ಬಗೆಯ ಶಾಸನಗಳು
ಎದುರಾಗುತ್ತವೆ. ಆರಂಭಕಾಲದಲ್ಲಿ ಕನ್ನಡ ಭಾಷೆಯನ್ನು ಒಂದು ಪ್ರಮಾಣ ಬದ್ದ ಭಾಷೆ ಎಂದೋ, ರಾಜ ಮನ್ನಣೆ ಪಡೆದ ಭಾಷೆ
ಎಂತಲೋ ಗುರುತಿಸಬೇಕಾದರೆ ಮತ್ತು ಆ ಭಾಷೆಯಲ್ಲಿ ಪ್ರಮಾಣಬದ್ಧವಾಗಿ
ಮಾತನಾಡುವ ಮತ್ತು ಲಿಖಿತ ರೂಪದ ಸಾಹಿತ್ಯ ಸೃಷ್ಟಿ ಆಗಿದೆ ಎಂದು ಸಾಧಿಸಿ ತೋರಿಸುವಲ್ಲಿ ಶಾಸನಗಳ
ಭಾಷೆಯ ಅಧ್ಯಯನವನ್ನೇ ಪ್ರಮುಖ ಆಕರಗಳಾಗಿ ತೆಗೆದು
ಕೊಳ್ಳ ಬೇಕಾಗುತ್ತದೆ. ಕನ್ನಡ ಶಾಸನಗಳಲ್ಲಿ ಬಳಕೆಯಾದ ಕನ್ನಡ ಯಾವ ಬಗೆಯದ್ದು, ಪ್ರಮಾಣೀಕರಣ ರೂಪದ್ದೇ? ಆಡು ಮಾತಿನ ರೂಪದ್ದೇ? ಪ್ರಮಾಣಿಕ ರೂಪದ್ದೇ ಎಂದು
ಹೇಳಿದರೂ ಅದರಲ್ಲಿ ಆಡುಮಾತಿನ ರೂಪಗಳು ದೊರೆಯುವುದಿಲ್ಲವೇ ಎಂಬ ನೆಲೆಯಲ್ಲಿ ಶಾಸನಗಳನ್ನು ಭಾಷಿಕವಾಗಿ
ನೋಡಬಹುದಾಗಿದೆ.
ಕವಿರಾಜಮಾರ್ಗದಂತಹ ಲಕ್ಷಣ ಕೃತಿಗಳನ್ನು
ಪರಿಶೀಲಿಸುವವರಿಗೆ ಅದಕ್ಕೂ ಹಿಂದೆ ಕನ್ನಡದಲ್ಲಿ ರಚನೆಯನ್ನು ಮಾಡಿದ ಗದ್ಯ-ಪದ್ಯ ಕವಿಗಳ ಉಲ್ಲೇಖ
ಮಾತ್ರ ವಿದಿತವಾಗುವುದಲ್ಲದೆ, ಅಂತಹ ಕವಿಗಳ ಕಾವ್ಯದ ಸ್ವರೂಪ ಯಾವ ವಿಧವಾಗಿದ್ದಿತು ಎಂಬುದನ್ನು ತಿಳಿಯುವಲ್ಲಿ ಆ ಕಾಲದ
ಶಾಸನ ಸಾಹಿತ್ಯದತ್ತ ಹೊರಳಿ ನೋಡಬೇಕಾಗುತ್ತದೆ.
ಕನ್ನಡ
ಸಾಹಿತ್ಯ ಮತ್ತು ಭಾಷೆಯ ಪ್ರಾಚೀನತೆಯನ್ನು
ಗುರುತಿಸುವಲ್ಲಿ ಶಾಸನಗಳನ್ನೇ ಅವಲಂಬಿಸಬೇಕಾಗಿದೆ. ಕವಿರಾಜಮಾರ್ಗ ಮತ್ತು ಇನ್ನಿತರ ಆಧಾರಗಳು
ಕ್ರಿ.ಶ.850ಕ್ಕಿಂತ
ಹಿಂದೆ ಕನ್ನಡ ಭಾಷೆ ಮತ್ತು ಸಾಹಿತ್ಯವಿದ್ದಿತು
ಎಂಬುದಕ್ಕೆ ಆಧಾರಗಳೇ ಹೊರತು ಎಷ್ಟು ಹಿಂದೆ ಎಂಬುದಕ್ಕಲ್ಲ. ಕ್ರಿ.ಪೂ.3ನೇ
ಶತಮಾನದ ಅಶೋಕನ ಬ್ರಹ್ಮಗಿರಿ ಶಾಸನದಲ್ಲಿಯ ಸುವಣ್ಣ ಗಿರೀತೆ ಅಯಪುತಸ ಮಹಾಮಾತಾನಂ ಚ ವಚನೇನ
ಇಸಿಲಸಿ ಮಹಾಮಾತಾ...’ ಎಂಬ ಪ್ರಾಕೃತ ವಾಕ್ಯದಲ್ಲಿ
ಬರುವ ‘ಇಸಿಲ’ ಎಂಬ ಸ್ಥಳವಾಚಿ ಪದವು ಅಚ್ಚಗನ್ನಡವೆಂದೂ, ತೇದಿಯುಳ್ಳ
ಅತ್ಯಂತ ಪ್ರಾಚೀನವಾದ ಕನ್ನಡ ಪದವೆಂದು ಮೊದಲಿಗೆ ಆಚಾರ್ಯ ಡಿ.ಎಲ್.ಎನ್. ಅವರು ವ್ಯಕ್ತಪಡಿಸಿದ್ದರು. ಅವರು ಅಭಿಪ್ರಾಯದಲ್ಲಿ ಕನ್ನಡದ
ಇಸು,
ತಮಿಳಿನಲ್ಲಿ ‘ಎಸೆ’ ಆಗುವುದು; ತಮಿಳಿನ ‘ಎಯಿಲ್’ ಪದ ‘ಕೋಟೆ’ಯನ್ನು ಸೂಚಿಸುವುದು; ಕೋಟೆಯೊಡನೆ ಎಸೆ ಸೇರಿದರೆ, ಕೋಟೆಯಿಂದೆಸೆ, ಅಂದರೆ ‘ಕೋಟೆಯಿಂದ ಬಾಣಬಿಡು’ ಎಂಬ
ವಿವರಗಳನ್ನು ಹೇಳುತ್ತಾ ಇಸಿಲ
ಎಂಬುದು ಕೋಟೆಯನ್ನು ಹೊಂದಿದ್ದ ಊರು ಎಂದು ಅರ್ಥೈಸಿರುವುದನ್ನು ಕಾಣಬಹುದಾಗಿದೆ. ತೀನಂಶ್ರೀ ಅವರು
ಕರ್ನಾಟಕ ಪರಂಪರೆ ಪುಸ್ತಕದಲ್ಲಿ ಇಸಿಲ ಎನ್ನುವ ಸ್ಥಳನಾಮವು ಕನ್ನಡ ಭಾಷೆ ಕ್ರಿ.ಪೂ.3ನೇ ಶತಮಾನದಲ್ಲಿ
ಅಸ್ತಿತ್ವದಲ್ಲಿದ್ದಿತು ಎಂಬುದಕ್ಕೆ ಪುರಾವೆಯಾಗಿದೆ
ಎಂಬುದನ್ನು ಸಾಧಾರವಾಗಿ ವಿವರಿಸಿದ್ದಾರೆ. ತೀನಂಶ್ರೀ.ಅವರು ಡಿಎಲ್‍ಎನ್‍ರವರಿಗಿಂತ ಹೆಚ್ಚು ಎಚ್ಚರಿಕೆ ಮತ್ತು
ಆತಂಕದಿಂದ ಮಾಡಿದ ಇವರ ಚರ್ಚೆಯ ಮುಖ್ಯ ಅಂಶಗಳೆಂದರೆ: ‘ಇಸಿಲ’ ಪದದ ವ್ಯುತ್ಪತ್ತಿಯನ್ನು
ಶೋಧಿಸುವುದು ಕಷ್ಟಕರ; ಇದು
‘ಇಸಿ’ ಶಬ್ದದಿಂದ ನಿಷ್ಪನ್ನವಾಗುವುದೆಂಬುದನ್ನು ಒಪ್ಪಲೂ ತೊಂದರೆಗಳಿವೆ; ಇಸಿಲಕ್ಕೂ ಎಸುವಿಗೂ ಸಂಬಂಧ ಕಲ್ಪಿಸುವುದೂ ಅಷ್ಟೇ
ಕಷ್ಟಸಾಧ್ಯ;
ಆದರೆ ಪ್ರೊ. ಡಿಎಲ್‍ಎನ್‍ರ
ವಿದ್ವತ್ಪೂರ್ಣ ಕಲ್ಪನೆ ಸರಿಯಾಗಿದ್ದ ಪಕ್ಷದಲ್ಲಿ ‘ಇಸಿಲ’ವು ಮೊದಲ ವಿಶ್ವಾಸಾರ್ಹ ಕನ್ನಡ
ಪದವಾಗುವ ಸಾಧ್ಯತೆ ಇದೆ ಎಂಬ ನಿಲುವನ್ನು ವ್ಯಕ್ತಪಡಿಸಿದ್ದರು. ಚಿದಾನಂದಮೂರ್ತಿಯವರು ಇವರೀರ್ವರ
ಅಭಿಪ್ರಾಯಗಳನ್ನು ‘ಸಂಗ್ರಹಿಸಿ’ 1972ರ ‘ಸಾಧನೆ’ ಸಂಚಿಕೆಯಲ್ಲಿ ಬರೆದ ಲೇಖನದಲ್ಲಿ, ‘ಇಸಿಲ’ ದಾಖಲೆಗೆ ದೊರಕುವ ಮೊದಲ ಕನ್ನಡ ಪದವೆಂದು, ಕ್ರಿ.ಪೂ. ಮೂರನೆಯ ಶತಮಾನಕ್ಕಿಂತ ಮುಂಚೆಯೇ ಕನ್ನಡ
ಪದಗಳು ಬಳಕೆಯಲ್ಲಿದ್ದವೆಂಬುದನ್ನು ಇದು ತೋರಿಸಿಕೊಡುವುದೆಂದು ಪ್ರತಿಪಾದಿಸಿ, ಈ ಹೆಸರಿನ ಊರು ಈಗಿರದಿದ್ದರೂ ಶಿವಮೊಗ್ಗ ಜಿಲ್ಲೆಯ 13ನೆಯ ಶತಮಾನದ ಶಾಸನವೊಂದರಲ್ಲಿ ಬರುವ ‘ಇಸಿಲಾಪುರ’ದ
ಬಗ್ಗೆ ಹಾಗೂ ಎಸಲಾಪುರ, ಯೆಸೂರು, ಎಸಲೋರು ಎಂದು ಈಗಲೂ ಚಾಲ್ತಿಯಲ್ಲಿರುವ ಗ್ರಾಮನಾಮಗಳ
ಬಗ್ಗೆ ಗಮನ ಸೆಳೆದು, ತಮ್ಮ
ವಾದ ಗಟ್ಟಿಗೊಳಿಸಿದ್ದರು. ಈ ಎಲ್ಲಾ ವಿವರಗಳನ್ನು ಸೂಕ್ಷ್ಮವಾಗಿ ಗಮನಿಸಿಯೋ ಅಥವಾ ಇವಾವನ್ನೂ
ಪ್ರಶ್ನಿಸದೆ ಸಾರಾಸಗಟಾಗಿ ಒಪ್ಪಿಕೊಂಡೋ, ಇಸಿಲವೇ ದಾಖಲೆಗೆ ಸಿಗುವ ಅತಿ ಪುರಾತನ ಕನ್ನಡ ಪದವೆಂಬ ಅಭಿಪ್ರಾಯವು
ಬಹುಮಟ್ಟಿಗೆ ಎಲ್ಲಾ ವಿದ್ವಾಂಸರೂ ಅಂಗೀಕರಿಸಿದ್ದರು. ಬ್ರಹ್ಮಗಿರಿ ಮತ್ತು ಸಿದ್ಧಾಪುರ ಶಾಸನಗಳಲ್ಲಿ ಇದು ಸ್ಥಳನಾಮವಾಗಿ
ಬಂದಿರುವುದರಿಂದ,
ತಮಿಳಿನ ಎಯಿಲ್ ಪದವನ್ನು
ಆಧರಿಸಿ,
ಇದು ಕೋಟೆಯಿಂದ ಸುತ್ತುವರಿದ
ನಗರವನ್ನು ಸೂಚಿಸುವುದೆಂಬ ನಿಲುವನ್ನು
ಸ್ವೀಕರಿಸಲಾಯಿತು.
ಜೊತೆಗೆ ಇಸಿಲವು ಈಗ ಆಡುನುಡಿಯಾಗಿರುವ ಪ್ರದೇಶದೊಳಗೆ ಇದ್ದ
ಒಂದು ಸ್ಥಳದ ಹೆಸರಾಗಿದೆ. ಕ್ರಿ.ಪೂ. 3 ನೇ ಶತಮಾದ ವೇಳೆಗೆ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯಲ್ಲಿ
ಕೋಟೆಯನ್ನು ಕಟ್ಟಿಕೊಂಡು ಆಳುತ್ತಿದ್ದ ಕನ್ನಡ ಅರಸ
ಇದ್ದನೆಂಬುದರ ಬಗೆಗೆ ಹಾಗೂ ಕನ್ನಡದ ಪ್ರಾಚೀನತೆಯನ್ನು ಮೌರ್ಯರ ಕಾಲಕ್ಕೆ ಕೊಡೊಯ್ಯುತ್ತದೆ
ಎಂಬುದನ್ನು ಸಾಕೇತಿಕವಾಗಿ ಸೂಚಿಸುತ್ತದೆ.
ಆದರೆ ಇತ್ತೀಚೆಗೆ ಡಾ.ಷ.ಶೆಟ್ಟರ್ ಅವರು
ಇಸಿಲ ಮತ್ತು ಸುವಣ್ಣಗಿರಿ
ಅಶೋಕನ ಸಾಮ್ರಾಜ್ಯದ ದಕ್ಷಿಣ ಗಡಿಯ ಎರಡು ಮುಖ್ಯ ಆಡಳಿತ ಕೇಂದ್ರಗಳಾಗಿದ್ದವು. ಆಗ ಪ್ರಚಲಿತವಿದ್ದ
ಪ್ರಾಕೃತ ಭಾಷೆಯಲ್ಲಿ ಇವನ್ನು ಅಶೋಕ ಹೆಸರಿಸಿದ್ದನು. ಆದರೆ ಇವು ಆತನೇ ಸೃಷ್ಟಿಸಿದ
ಸ್ಥಳನಾಮಗಳೆಂಬುದರ ಪರವಾಗಲೀ ವಿರೋಧವಾಗಲೀ ಸಾಕ್ಷ್ಯಾಧಾರಗಳಿಲ್ಲ. ಈ ಶಾಸನಗಳಲ್ಲಿ
ಪ್ರಸ್ತಾಪವಾಗಿರುವ ಇಸಿಲ ಪದವನ್ನು ಚರ್ಚಿಸಿದ ಕನ್ನಡ ವಿದ್ವಾಂಸರಾರೂ ಅಶೋಕಾನಂತರ ಬರೆಸಿದ ಕೆಲವು
ಪ್ರಾಕೃತ ಶಾಸನಗಳಲ್ಲಿ ಈ ಪದ ಮರುಕಳಿಸಿರುವುದನ್ನು ಗಮನಿಸಿಲ್ಲ ಎಂದು ಹೇಳುತ್ತಾ ಸಾ ತವಾಹನ ಅರಸ ವಾಸಿಷ್ಠೀಪುತ್ರ ಪುಳುಮಾವಿ
ಆಳುತ್ತಿದ್ದಾಗ ಧಾನ್ಯಕಟಕದ ಚೈತ್ಯಿಕ ಶಾಖೆಗೆ ಸೇರಿದ ಕಹುತರ ಮತ್ತು ಇಸಿಲ ಎಂಬ ದಾನಿಗಳು, ಮಹಾಚೈತ್ಯದ ಪಶ್ಚಿಮ ದಿಕ್ಕಿನಲ್ಲಿ
ಧರ್ಮಚಕ್ರವೊಂದನ್ನು ಸ್ಥಾಪಿಸಿದ್ದನ್ನು ಒಂದು ಪ್ರಾಕೃತ ಶಾಸನ ತಿಳಿಸುವುದು. ಈ ‘ಇಸಿಲ’ನು ಗಹಪತಿ
ಪುರಿಯ ಪುತ್ರನೆಂಬ, ನಾಗನಿಕಾಳ
ಪತಿ ಎಂಬುದಾಗಿ, ಈ ಧರ್ಮಕಾರ್ಯದಲ್ಲಿ ತಮ್ಮಿಬ್ಬರ ಮಕ್ಕಳನ್ನು ಇಸಿಲನ
ಸೋದರ ಸೋದರಿಯರನ್ನೂ ಒಳಗೊಳಿಸಿಕೊಂಡಿದ್ದನೆಂಬ, ವಿವರಗಳು ಬಂದಿವೆ. ಈ ಶಾಸನದ ಮುಖ್ಯ ಪಾಠ ‘ಕಹುತತ
ಗಹಪತಿಸ ಪುರಿಗಹಪತಿಸ ಚ ಪುತಸ ಇಸಿಲಿಸ ಸಭಾತುಕಸ...’ ಎಂದಿದೆ. ಇಲ್ಲಿ ಪುರುಷನಾಮವಾಗಿ ಇಸಿಲ ಪದ
ಬಂದಿದೆ,
ಆದರೆ ಈ ವ್ಯಕ್ತಿಯು ಇಸಿಲ
ಗ್ರಾಮದಿಂದ ಗುರುತಿಸಿಕೊಂಡ ಸಾಧ್ಯತೆ ಇಲ್ಲದಿಲ್ಲ ಎಂಬುದಾಗಿ ಚರ್ಚಿಸುತ್ತಾ ಇತ್ತೀಚಿನ ದಶಕದಲ್ಲಿ
ವಿಶೇಷ ಗಮನ ಸೆಳೆದಿರುವ ಕಲಬುರ್ಗಿ ಜಿಲ್ಲೆಯ ಚಿತಾಪು ತಾಲೋಕಿನ ಕನಗನಹಳ್ಳಿಯ ಪ್ರಾಕೃತ ಶಾಸನಗಳಲ್ಲೂ ಈ ಪದ
ಬಳಕೆಯಾಗಿರುವುದನ್ನು ಗಮನಿಸಿ ಆ ಹಿನ್ನೆಲೆಯಲ್ಲಿ ಮೇಲಿನ ವಿದ್ವಾಂಸರ ಅಭಿಪ್ರಾಯಕ್ಕೆ
ವ್ಯತಿರಿಕ್ತವಾಗಿ ತಮ್ಮ ನಿಲುವನ್ನು ಇಸಿಲದ ಬಗೆಗೆ ವ್ಯಕ್ತಪಡಿಸಿದ್ದಾರೆ.
ಕನಗನಹಳ್ಳಿಯ ಪ್ರಾಕೃತ ಶಾಸನಗಳ ಆ ಪಾಠಗಳು ಹೀಗಿವೆ:
ಅ) ‘ಥೇರಸ ಆಯ ಇಸಿರಖಿತಸ ಅತೇವಾಸಿನೀಯ ಭಿಖುನಿಯ ನಗುಯಾಯ ದೇಯ ಧಮ’ ಆ) ಸೇತಿವಯಿಕಾಯ
ಇಸಲಿನಿಕಾಯ ದಾನಮ್’ ಇ) ಮಾತಾಯ ಇಸಿಲಾಯ ದಾನಮ್ ಸತೋ’,
ಇಲ್ಲಿ ಇಸಿಲಪದ ವ್ಯಕ್ತಿನಾಮವಾಗಿ ಬಂದಿದೆ, ಸ್ಥಳನಾಮವಾಗಿ ಅಲ್ಲ. ‘ಇಸಿರಕ್ಷಿತಾ’ ಎಂಬುದು ಒಬ್ಬ
ಥೇರನನ್ನು,
ಮತ್ತು ‘ಇಸಿಪಾಲಿತಾ’ ಎಂಬುದು
ಸೇಟಿವಾಯಿಕ (ಶ್ರೀವಾಟಿಕಾ) ನಿವಾಸಿಯನ್ನು ಹೆಸರಿಸಿರುವವು. ಇಸಿಲ ಕೋಟೆಯ ರಕ್ಷಕನನ್ನಾಗಲೀ ಆಡಳಿತಗಾರನನ್ನಾಗಲೀ ಅಲ್ಲ. ಕೊನೆಯ ಶಾಸನವು ಇಸಿಲಮಾತೆಯನ್ನು
ಉಲ್ಲೇಖಿಸುವುದು. ‘ಇಸಿರಖಿತ’ ಎಂಬ ಥೇರನ ಹೆಸರುಗಳು ಈ ಕಾಲದ ಬೌದ್ಧ ಶಾಸನಗಳಲ್ಲಿ ಸಾಕಷ್ಟು ಕಡೆ
ಬಂದಿವೆ. ಸಾಂಚೀಯ ಶಾಸನಗಳಲ್ಲಿಯೇ ಇದು ಸುಮಾರು ಅರ್ಧ ಡಜನ್‍ಗೂ ಹೆಚ್ಚು ಬಾರಿ
ಬಳಕೆಯಾಗಿರುವುದನ್ನು ಗಮನಿಸಬಹುದು. ಕನಗನಹಳ್ಳಿಯ ಶಾಸನಗಳಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳೆಲ್ಲರೂ
ಬೌದ್ಧಮತದ ದಾನಿಗಳಾಗಿರುವರು ಎಂದು ಹೇಳುತ್ತಾ
ಡಿಎಲ್‍ಎನ್ ಮತ್ತು ತೀನಂಶ್ರೀ ಅವರು ಸ್ವಲ್ಪ ಆತಂಕದಿಂದಲೇ ‘ಇಸಿಲ’ವು ಕನ್ನಡ
ಪದವಾಗಿರಬಹುದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು, ಆದರೆ ಇದು ‘ರಿಷಿಲ’ವಾಗಲಾರದು ಎಂದು ಒತ್ತಿ
ಹೇಳಿದ್ದರು,
ಆದರೆ ಇದನ್ನು ಅವರಾಗಲೀ, ಅವರ ಅಭಿಪ್ರಾಯವನ್ನು ಒಪ್ಪಿದವರಾಗಲೀ, ಸಾಧಾರವಾಗಿ ಸ್ಪಷ್ಟೀಕರಿಸಲಿಲ್ಲ, ಅಲ್ಲದೆ ಆವರೆಗೂ ಬೌದ್ಧ ಶಾಸನಗಳನ್ನು ಸಂಪಾದಿಸಿದ
ಪಾಶ್ಚಾತ್ಯ ಮತ್ತು ಪೌರಾತ್ಯ ಪಂಡಿತರಾರೂ ಇವರ ನಿರ್ಣಯವನ್ನು ಎರಡನೆಯ ಗಹನವಾಗಿ ಪರಿಗಣಿಸಲಿಲ್ಲ.
‘ಇಸ’,
‘ಇಸಿ’ಯಿಂದ
ಪ್ರಾರಂಭವಾಗುವ ಪದಗಳೆಲ್ಲವನ್ನೂ ಪ್ರಾಕೃತ, ಭಾಷಾ ಪಂಡಿತರಾದ ಜೆ. ಬರ್ಜೆಸ್, ಜೆ. ಬೂಹ್ಲರ್, ಮತ್ತು ಲೂಡರ್ಸ್, ‘ರಿಸ’, ‘ರಿಸಿ’ ಎಂದೇ ಸಂಸ್ಕೃತೀಕರಿಸಿದ್ದರು, ಇವನ್ನು ಡಿಎಲ್‍ಎನ್ ಮತ್ತು ತೀನಂಶ್ರೀ ಏಕೆ
ಪರಿಗಣಿಸಲಿಲ್ಲವೋ ಅರ್ಥಮಾಡಿಕೊಳ್ಳಲಾಗುತ್ತಿಲ್ಲ. ಇವು ಅವರ ಗಮನಕ್ಕೆ ಬಂದಿರಲಿಕ್ಕಿಲ್ಲವೆಂದರೂ
ಸಮಕಾಲೀನ ಶಾಸನತಜ್ಞರಲ್ಲಿ ಯಾರಾದರೂ ಈ ಹಿನ್ನೆಲೆಯಲ್ಲಿ ನಮ್ಮ ಅಭಿಪ್ರಾಯವನ್ನು
ವ್ಯಕ್ತಪಡಿಸಬಹುದಾಗಿದ್ದಾದರೂ ಆಗಲಿಲ್ಲ. ನಮ್ಮ ಮಧ್ಯದಲ್ಲಿದ್ದ ಗೌರವಯುತ ಪ್ರಾಕೃತ ಪಂಡಿತರೂ ಈ
ಬಗ್ಗೆ ಮೌನ ತಾಳಿದ್ದರಿಂದ ಪ್ರಾಕೃತ ಉಲ್ಲೇಖಗಳೆಲ್ಲವೂ ಈ ಚರ್ಚೆಯ ಹೊರಗುಳಿದವು ಎಂದು
ಹೇಳಿದ್ದಾರೆ.
ಹಾಗೆಯೇ ಮುಂದುವರಿದು‘ ‘ಇಸ’, ‘ಇಸಿ’ಯಿಂದ ಪ್ರಾರಂಭವಾಗುವ ಪದಗಳು ರಿಸ’, ‘ರಿಸಿ’ ಎಂದೇ ಸಂಸ್ಕೃತೀಕರಣ ಗೊಂಡಿರುವುದಕ್ಕೆ
ಕೆಲವು ನಿದರ್ಶನಗಳನ್ನು ಕೊಡ ಮಾಡಿದ್ದಾರೆ. ಇಸದಾತ>ರಿಷಿದತ್ತ; ಇಸಿಮಿತ>ರಿಷಿಮಿತ್ರ; ಇಸಿಕ>ರುಷಿಕ; ಇಸಿದಿನಾ>ರಿಷಿದತ್ತ; ಇಸಿಗುತ>ರಿಷಿಗುಪ್ತ; ಇಸಿಕ-ರಿಷಿಕ; ಇಸಿದಸೀ-ರಿಷಿದಾಸಿ; ಇಸಿನದನ>ರಿಷಿನಂದನ; ಇಸಿನಿಕಾ>ರಿಷಿನಿಕಾ, ಎಂಬವು ಮುಂತಾದವು. ಕನ್ನಡ ಭಾಷೆಯ ಪುರಾತತ್ವಕ್ಕೆ ಸಂಬಂಧಿಸಿದ
‘ಇಸಿಲ’ ಪದದ ಮರುಚಿಂತನೆಗೆ ಶೆಟ್ಟರ್ ನಮ್ಮನ್ನು ಆಹ್ವಾನಿಸಿದ್ದಾರೆ. ಈಗ ಆರೇಳು ದಶಕಗಳಿಂದ
ಕನ್ನಡದ್ದೆಂದು ನಂಬುತ್ತಾ ಬಂದಿರುವ ಈ ಪದವು ಪ್ರಾಕೃತದ್ದೆಂದು, ಈ ಪದವನ್ನು ಅಶೋಕನು ಮೊದಲು ಇಲ್ಲಿ ಬಳಸಿದ್ದರೂ ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾದ
ಪದವಲ್ಲ ಎಂಬುದನ್ನು ಸಾದಾರವಾಗಿ ತೋರಿಸಿ ಕೊಟ್ಟಿದ್ದಾರೆ.
ಇಸಿಲ ಪದವನ್ನಾಧರಿಸಿ, ಕನ್ನಡ ಭಾಷೆಯ ಪುರಾತನತೆಯ ಬಗ್ಗೆ ಹಲವು ದಶಕಗಳ ಕಾಲದಿಂದಲೂ
ನಾವುಗಳು ತಾಳಿದ್ದ ನಿಲುವುಗಳನ್ನು ಶೆಟ್ಟರ್
ಅವರು ಮಂಡಿಸಿರು ವಾದದ ಹಿನ್ನೆಲೆಯಲ್ಲಿ ಪುನರ್
ಪರಿಶೀಲಿಸ ಬೇಕಾಗಿದೆ. ಆದರೆ
ಇಸಿಲ ಪದವನ್ನು ಕಳೆದುಕೊಂಡರೂ ಕನ್ನಡ ಭಾಷಾ ಚರಿತ್ರೆಯ ಪುರಾತನತೆ ಹೆಚ್ಚು ಬಾಧಕವಾಗಲಾರದು. ಕಾರಣ ಇಸಿಲದಷ್ಟೇ ಪೂರ್ವಕಾಲದ ಸ್ಥಳನಾಮಗಳು
ಕರ್ನಾಟಕದ ಪ್ರಾಕೃತ ಶಾಸನಗಳಲ್ಲಿ ದೊರಕುವುದು. ಇವುಗಳಲ್ಲಿ ಮುಖ್ಯವಾದ ಎರಡು ಸ್ಥಳನಾಮಗಳೆಂದರೆ:
ಕೂಪಣ (ಕೊಪ್ಪಳ) ಮತ್ತು ವನವಾಸಿಕ (ಬನವಾಸಿ). ಈ ಪದಗಳ ವಿಶೇಷತೆ ಎಂದರೆ, ಇಸಿಲದಂತೆ ಪ್ರಾಕೃತ ಭಾಷೆಯೊಡನೆ ಮಾತ್ರ ಸಂಬಂಧ
ಜೋಡಿಸಿಕೊಳ್ಳದಿರುವುದು; ಮತ್ತು
ಇಸಿಲದಷ್ಟೇ ಚಾರಿತ್ರಿಕ ಮಹತ್ವವನ್ನು ಹೊಂದಿರುವುದು ಹಾಗೂ ಇಂದಿಗೂ ಬಳಕೆಯಲ್ಲಿರುವುದು. ದಕ್ಷಿಣದಾದ್ಯಂತ
ಅನುಸರಿಸಿದ ಆಡಳಿತ ಸಂಹಿತೆಯಂತೆ ಅಶೋಕನು ತನ್ನ ಕಿರುಶಾಸನಗಳನ್ನು ಕೊಪ್ಪಳದಲ್ಲಿ ಕೊರೆಸುವಾಗ, ಸ್ಥಳದ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಆದರೆ
ಕ್ರಿಸ್ತಶಕದ ಆರಂಭದಲ್ಲಾಗಲೇ ಅದು ‘ಕೂಪಣ’ ಹೆಸರಿನಿಂದ ಗುರುತಿಸಿಕೊಂಡಿತ್ತು ಎನ್ನಲು
ಕನಗನಹಳ್ಳಿಯ ನಾಲ್ಕು ಶಾಸನಗಳು ನಿದರ್ಶನವಾಗಿವೆ. ಸಾತವಾಹನರು ಬರೆಸಿದ ಈ ಶಾಸನಗಳ ಆಧಾರದ ಮೇಲೆ
‘ಕೂಪಣ’ವು ಅಶೋಕನ ಕಾಲದಲ್ಲಿಯೇ ಒಂದು ಪ್ರಮುಖ ಆಡಳಿತ ಕೇಂದ್ರವಾಗಿ, ಬೌದ್ಧ ಕೇಂದ್ರವಾಗಿ, ಹೊರಹೊಮ್ಮಿತ್ತೆನ್ನುವುದನ್ನು ಸಾಬೀತು ಪಡಿಸ
ಬಹುದಾಗಿದೆ.
ಕನಗನಹಳ್ಳಿಯ ನಾಲ್ಕು ಶಾಸನಗಳಲ್ಲಿ ಎರಡು ‘ಖಜನಾಕಾರಸ ಮಹಿಸೇಸಕಸ ಕೂಪಣಸ ದಾನಮ್’ ಎಂಬ
ಪಾಠವನ್ನು ಮೂರನೆಯದು ‘ಕೂಪನ ರಥಿಕಸ ದಾನ’, ನಾಲ್ಕನೆಯದು ‘ಕೂಪಣ ರಥಿಕಸ ದೇಯ ಧ(ಮ)’ ಪಾಠಗಳನ್ನು
ಹೊಂದಿವೆ. ಈ ಹೆಸರನ್ನು ಒಮ್ಮೆ ‘ಕೂಪನ’ವೆಂದು, ಮೂರು ಬಾರಿ ‘ಕೂಪಣ’ವೆಂದು, ಉಚ್ಚರಿಸಲಾಗಿದೆ ವನವಾಸಿಕವು ಅಶೋಕನ ಕಾಲದಲ್ಲಿ
ಬೌದ್ಧ ಕೇಂದ್ರವಾಗಿತ್ತೆನ್ನಲು ಸಾಕಷ್ಟು ಪುರಾವೆಗಳಿವೆ. ಮೊಗ್ಗಲಿಪುತ್ತ ತಿಸ್ಸನು
ಧರ್ಮಪ್ರಸಾರಕ್ಕಾಗಿ ಇಲ್ಲಿಗೆ ಕಳುಹಿಸಿದ ರಖಿತನ ಉಲ್ಲೇಖವು ಕ್ರಿ.ಶ. ನಾಲ್ಕನೆಯ ಶತಮಾನದ
‘ಮಹಾವಂಸ’ದಲ್ಲಿ ಬಂದಿರುವುದನ್ನು ಬದಿಗಿರಿಸಿದರೂ ಅದಕ್ಕೂ ಮುಂದಿನ ಶಾಸನಗಳಲ್ಲಿ ಆಧಾರಗಳಿವೆ, ಈ ಕೇಂದ್ರವನ್ನು ಇವು ‘ವೈಜಯಂತಿಯೆ’ ಎಂದು
(ಗೌತಮೀಪುತ್ರ ಶಾತಕರ್ಣಿಯ ನಾಸಿಕ ಶಾಸನ) ಮತ್ತು ‘ವನವಾಸಿಕ’ (ಇಕ್ಷ್ವಾಕು ಮನೆತನದ ಕೊಡಬಾಲ
ಸಿರಿಯ ಶಾಸನ) ಎಂದು ಹೆಸರಿಸಿರುವವು. ಇವಲ್ಲದೆ ಶಿವಸ್ಕಂಧ ನಾಗಸಿರಿಯು ವನವಾಸಿಕದಲ್ಲಿ
ತಟಾಕವನ್ನೂ ವಿಹಾರವನ್ನೂ ನಿರ್ಮಿಸಿದ ಶಾಸನವೊಂದಿದೆ. ಇತ್ತೀಚೆಗೆ ಬೆಳಕಿಗೆ ಬಂದಿರುವ
ಕನಗನಹಳ್ಳಿಯ ಶಾಸನಗಳು, ಅಶೋಕನ
ಕಾಲಾನಂತರವೂ ಇದು ಬೌದ್ಧಕೇಂದ್ರವಾಗಿ ಮುಂದುವರಿದಿದ್ದುದನ್ನು ದೃಢಪಡಿಸುವುವು. ಈ ಅಪೂರ್ವ
ಉಲ್ಲೇಖಗಳು,
ಈ ಎರಡು ಸ್ಥಳಗಳ ಇತಿಹಾಸವನ್ನು
ಖಂಡಿತವಾಗಿಯೂ ಕ್ರಿಸ್ತ ಪೂರ್ವಕ್ಕೆ ಕೊಂಡೊಯ್ಯುವವು, ‘ಕೂಪನ’, ‘ಕೂಪಣ’, ‘ವನವಾಸಿಕ’ ಮತ್ತು ‘ವೈಜಯಂತಿಯಾ’ ಎಂಬ ಹೆಸರುಗಳು
ಹೇಗೆ ಹುಟ್ಟಿಕೊಂಡವು ಮತ್ತು ಅವು ಪ್ರಾಕೃತ, ಸಂಸ್ಕೃತದ ಪ್ರಭಾವಕ್ಕೊಳಗಾಗಿ, ಕನ್ನಡ ಜನಪದದಲ್ಲಿ ಹೇಗೆ ಬೆರೆತುಕೊಂಡವು, ಎಂಬ ಹೆಚ್ಚು ಕುತೂಹಲ ಕೆದಕುವ ಪ್ರಶ್ನೆಗಳನ್ನು
ಎದುರಿಸಬೇಕಾಗಿದೆ. ಇಸಿಲ ಪದದ ಶೋಧಕ್ಕಿಂತ ಹೆಚ್ಚು ಸುಲಭವಾಗಿ ಹಾಗೂ ಧೃಢವಾಗಿ ಇವನ್ನು
ನಿರ್ಧರಿಸಬಹುದಾಗಿದ್ದು, ಕನ್ನಡದ
ಪ್ರಾಚೀನತೆಯನ್ನು ಗುರುತಿಸಲು ಇವನ್ನು ಮಾನದಂಡವಾಗಿ ಬಳಸಿಕೊಳ್ಳ ಬಹುದು ಎಂದೆನಿಸುತ್ತದೆ.
ಕನ್ನಡ ಸಾಹಿತ್ಯ ಪ್ರಥಮ ಘಟ್ಟದ ಅವಶೇಷಗಳೆಂದರೆ ಶಾಸನಗಳು. ಎಂ ಗೋವಿಂದ ಪೈರವರು ಕ್ರಿ.ಶ 2ನೇ ಶತಮಾನದಷ್ಟು ಹಿಂದಿನಿಂದಲೂ ಕನ್ನಡ ಶಾಸನಗಳು ದೊರೆಯುತ್ತದೆಂದು ಹೇಳಿ ಅಂತಹ ಶಾಸನಗಳಲ್ಲಿ ಹಲವನ್ನು ನಮ್ಮ ಕನ್ನಡ ಸಾಹಿತ್ಯದಲ್ಲಿ ಹಳಮೆ ಲೇಖನದಲ್ಲಿ ಎತ್ತಿಕೊಟ್ಟಿದ್ದಾರೆ. ಸಾಹಿತ್ಯವಿಲ್ಲದೆ ಶಾಸನಗಳು ಹುಟ್ಟಲಾರವು ಎಂಬುದು ಖಂಡಿತವಿರುವುದರಿಂದ ಕ್ರಿ.ಶ. 1ನೇ ಶತಮಾನಕ್ಕೆ ಹಿಂದೆಯೇ ಕನ್ನಡದಲ್ಲಿ ಪ್ರಗಲ್ಭವಾದ ಸಾಹಿತ್ಯವಲ್ಲದಿದ್ದರೂ ಸಾಮಾನ್ಯವಾದ ಸಾಹಿತ್ಯವಾದರೂ ಹುಟ್ಟಿರಬೇಕು. ಎಂದು ಸಹಜವಾಗಿಯೇ ಅನುಮಾನಿಸಲಾಗುತ್ತದೆ ಎಂದು ಹೇಳುತ್ತಾರೆ.
ಕನ್ನಡದಲ್ಲಿ ಕ್ರಿ.ಶ.450 ಮತ್ತು ನಂತರದ ಕಾಲದ ಅರಸುಮನೆತನಗಳ ಶಾಸನಗಳು ಲಭ್ಯವಾಗಿವೆ. ಕದಂಬರು, ಗಂಗರು, ಬದಾಮಿ ಚಾಲುಕ್ಯರು ಮತ್ತು ಶ್ರವಣ ಬೆಳಗೊಳದ ನಿಸದಿ ಶಾಸನಗಳು ಕ್ರಿ.ಶ.8 ನೇ ಶತಮಾನದ ಅವಧಿಯಲ್ಲಿಯೇ ಲಭ್ಯವಿವೆ. ಬಾದಾಮಿ ಚಾಲುಕ್ಯರ
ಮತ್ತು ಅದಕ್ಕೂ ಪೂರ್ವದ ಕಾಲದ ಹಲವಾರು ಕನ್ನಡ ಶಾಸನಗಳು ನಮಗೆ ಲಭ್ಯ ಇವೆ. ಇವುಗಳಿಂದ ಈ
ಶಾಸನಗಳಲ್ಲಿ ಮಾತ್ರವಲ್ಲದೆ ಹೊರಗಡೆಯಲ್ಲಿಯೂ ಆ ಕಾಲದ ಕನ್ನಡ ಸಾಹಿತ್ಯದ ಸ್ವರೂಪ ಯಾವ ರೀತಿಯಲ್ಲಿ
ಇದ್ದಿತು ಎಂಬುದು ಕೆಲಮಟ್ಟಿಗೆ ತಿಳುವಳಿಕೆಯಾಗುತ್ತದೆ. 7-8 ನೇ ಶತಮಾನಗಳ
ಕಾಲದಿಂದ ಕನ್ನಡ ಸಾಹಿತ್ಯ ಸ್ವತಂತ್ರವಾಗಿ
ಮತ್ತು ಸುಪುಷ್ಟವಾಗಿ ಬೆಳೆದು ಬಂದಿದ್ದಿತು ಎಂಬುದಕ್ಕೆ ಶಾಸ್ತ್ರ ಕೃತಿಗಳಾದ ಕವಿರಾಜಮಾರ್ಗ, ಸೂಕ್ತಿ ಸುಧಾರ್ಣವ, ಶಬ್ದಮಣಿದರ್ಪಣ ಮುಂತಾದ
ಕೃತಿಗಳಲ್ಲಿ ಉಲ್ಲೇಖಿತರಾಗಿರುವ ಮಾರ್ಗಕವಿಗಳ ಕೃತಿಗಳು ಇಂದು ಲಭ್ಯವಿಲ್ಲ. ಕವಿರಾಜ
ಮಾರ್ಗಕ್ಕಿಂತ ಪೂರ್ವದಲ್ಲಿ ದೊರೆಯುವ ಶಾಸನಗಳ ಪದ್ಯದ ಭಾಷೆಗೂ ಕವಿರಾಜಮಾರ್ಗದ ಭಾಷೆಗೂ ಸಾಕಷ್ಟು
ವ್ಯತ್ಯಾಸ ಇರುವುದು ಎದ್ದು ಕಾಣುತ್ತದೆ. ಕವಿರಾಜಮಾರ್ಗದಲ್ಲಿ ಪೂರ್ವದ ಹಳಗನ್ನಡದ ಗ್ರಹಿಕೆಯನ್ನು
ಕಾಣುವುದು ದುಸ್ತರವಾಗಿದೆ. ಶಾಸನ ಪದ್ಯಗಳಲ್ಲಿಯಾದರೂ ಪೂರ್ವದ ಹಳಗನ್ನಡ ಸ್ವರೂಪವನ್ನು
ಗುರುತಿಸಬಹುದಾಗಿದೆ. ಈ ಶಾಸನಗಳ ಪದ್ಯಗಳಲ್ಲಿ ಸಂಸ್ಕೃತ-ಪ್ರಾಕೃತಗಳಿಂದ ಎರವಲು ಪಡೆದ ಪದಗಳೇ
ಅಧಿಕೃತವಾಗಿರುವುದು ಕಂಡುಬರುತ್ತವೆಯಾದರೂ ಅಚ್ಚಗನ್ನಡ ಪ್ರಯೋಗಗಳು ಬಳಕೆಯಾಗಿವೆ. ಬಾದಾಮಿಯ
ಕಪ್ಪೆ ಅರಭಟನ ಶಾಸನ, ಶ್ರವಣ ಬೆಳಗೊಳದ 22,
76, 88ನೇ ಸಂಖ್ಯೆಯ ಶಾಸನಗಳು ಮತ್ತು ವಳ್ಳಿಮಲೆ ಶಾಸನಗಳಲ್ಲಿ
ಸಂಸ್ಕೃತ ಮತ್ತು ಕನ್ನಡಗಳು ಹದವಾಗಿ ಬೆರೆತುಕೊಂಡಿರುವುದು ಕಂಡುಬರುತ್ತದೆ. ಈ ಶಾಸನ ಪದ್ಯಗಳು
ಕರ್ನಾಟಕದಾದ್ಯಂತ ದೊರೆತಿರುವುದು ಅಂದಿನ ಕನ್ನಡ ಸಾಹಿತ್ಯದ ಪ್ರಮಾಣ(Standard) ಭಾಷೆಯನ್ನು ಪ್ರತಿನಿಧಿಸುತ್ತದೆ. ಅಂದಿನ ಕಾಲದ
ಸಾಹಿತ್ಯಾಚಾರ್ಯರಿಂದ ಮನ್ನಣೆ ಪಡೆದ ಭಾಷೆಯ ಸ್ವರೂಪ ಬಹುಶಃ ಈ ಶಾಸನಗಳ ಪದ್ಯಗಳ ಭಾಷೆ ಯಂತಿದ್ದಿರಬಹುದು
ಎಂದು ಭಾವಿಸಿದರೆ ಆರಂಭ ಕಾಲದ ಕನ್ನಡ ಸಾಹಿತ್ಯ ಕೃತಿಗಳು ಭಾಷಿಕವಾಗಿ ಹೇಗಿದ್ದವು ಎಂಬುದನ್ನು
ಊಹೆ ಮಾಡಿಕೊಳ್ಳಬಹುದಾಗಿದೆ. ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಚಾರಿತ್ರಿಕವಾಗಿ
ಗುರುತಿಸಬಹುದಾದರೆ ಅದಕ್ಕೆ ನಿಶ್ಚಿತವಾದ ಮಾನದಂಡವನ್ನು ಶಾಸನಗಳಲ್ಲಿ ಹುಡುಕಬಹುದು.
ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಅರ್ಥಾತ್
ಪಂಪಪೂರ್ವಯುಗದ ಸಾಹಿತ್ಯದ ಸ್ವರೂಪವನ್ನು ಗುರುತಿಸುವಲ್ಲಿ ಶಾಸನಗಳನ್ನೇ ಅವಲಂಬಿಸಬೇಕಾಗಿದೆ.
ಕವಿರಾಜಮಾರ್ಗ ಮತ್ತು ಇನ್ನಿತರ ಆಧಾರಗಳು ಕ್ರಿ.ಶ. 850 ಕ್ಕಿಂತ ಹಿಂದೆ ಕನ್ನಡ
ಸಾಹಿತ್ಯವಿದ್ದಿತು ಎಂಬುದಕ್ಕೆ ಆಧಾರಗಳೇ ಹೊರತು ಎಷ್ಟು ಹಿಂದೆ ಎಂಬುದಕ್ಕಲ್ಲ. ನಮ್ಮ ಪ್ರಥಮ
ಶಾಸನವಾದ,ಸು. 450 ರ ಹಲ್ಮಿಡಿ ಶಾಸನ ಒಂದು ಗದ್ಯ
ಶಾಸವೇ ಆಗಿದೆ. ಹಲ್ಮಿಡಿ ಶಾಸನದ ಭಾಷೆ ಪೂರ್ವದ ಹಳಗನ್ನಡ ಗದ್ಯವಾಗಿದ್ದು ಆಗಲೇ ಸಂಸ್ಕೃತ ಭಾಷೆಯ
ಪೂರ್ಣಪ್ರಭಾವಕ್ಕೆ ಒಳಗಾಗಿರುವುದನ್ನು ಗುರುತಿಸಬಹುದಾಗಿದೆ. ಸಂಸ್ಕೃತ ಭಾಷೆಯ ಬೆಂಬಲದಿಂದ ವಚನ
ರೂಪವಾಗಿ ಪ್ರಕಟವಾದ ಹಲ್ಮಿಡಿ ಶಾಸನವು ಕನ್ನಡ ಸಾಹಿತ್ಯದ ಉಗಮದ ಕುರುಹುಗಳ ಪ್ರತೀಕವಾಗಿ
ಪರಿಣಮಿಸಿದೆ. ಇದು ಕನ್ನಡ ಭಾಷೆ ಸಾಹಿತ್ಯಗಳ
ಪ್ರಾಚೀನತೆಯನ್ನು ತಿಳಿಯಲು ಪ್ರಮುಖ ಆಕರವಾಗಿರುವುದರ ಜೊತೆಗೆ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನು
ದಾಖಲಿಸುತ್ತದೆ. ಹಲ್ಮಿಡಿ ಶಾಸನದ ಭಾಷೆ ಪೂರ್ವದ ಹಳಗನ್ನಡದ ಗದ್ಯವಾಗಿದ್ದು ಸಂಸ್ಕೃತ ಭಾಷೆಯ
ಪೂರ್ಣ ಪ್ರಭಾವಕ್ಕೆ ಒಳಗಾಗಿರುವುದನ್ನು ಗುರುತಿಸ ಬಹುದಾಗಿದೆ. ಹಲ್ಮಿಡಿ ಶಾಸನದ ಈ ಗದ್ಯ
ಭಾಷೆಯನ್ನು ಆಧಾರವಾಗಿಟ್ಟುಕೊಂಡು ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಕ್ರಿ.ಶ.5ನೇ ಶತಮಾನಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ. ಕನ್ನಡದ ಮೊತ್ತಮೊದಲ
ಶಾಸನವಾದ ಹಲ್ಮಿಡಿ ಶಾಸನವು ಕನ್ನಡ ಭಾಷೆಯಲ್ಲಿ ಮೊದಲ ಲಿಖಿತ ದಾಖಲೆಯೂ ಹೌದು. “ನಮಃ
ಶ್ರೀಮತ್ಕದಂಬಪನ್ ತ್ಯಾಗಸಂಪನ್ನನ್ ಕಲಭೋರನಾ ಅರಿ ಕ| ಕುಸ್ಥ ಭಟ್ಟೋರನಾಳೆ ನರಿದಾವಿಳೆನಾಡುಳೆ ಮೃಗೇಶ ನಾ| ಗೇಂದ್ರಭೀಳರ್ ಭಟಹರಪ್ಪೊರ್ ಶ್ರೀ ಮೃಗೇಶ ನಾಗಾಹ್ವಯ | ರಿರ್ವರಾ ಬಟರಿಕುಲಾಮಲವ್ಯೋಮ ತಾರಾಧಿನಾಥನ್ನಳಪ | ಗಣಪಶುಪತಿಯಾ ದಕ್ಷಿಣಾಪಥ ಬಹುಶತವಹನಾ |ಹವದುಳ್ ಪಶುಪ್ರದಾನ ಶೌರ್ಯೋದ್ಯಮಭರಿತೋನ್ ದಾನಪ | ಪಶುಪತಿಯೆಂದು ಪೊಗಳ್ಪೊಟ್ಟಣ ಪಶುಪತಿ |ನಾಮಧೇಯನಾಸರೆಕ್ಕೆಲ್ಲ ಭಟಾರಿಯಾ ಪ್ರೇಮಾಲಯ | ಸುತಂಗೆ ಸೇಂದ್ರಕ ಬಣೋಭಯದೇಶದಾ ವೀರಾಪುರ ಸಮಕ್ಷ | ದೆ ಕೇಕಯ ಪಲ್ಲವರು ಕಾದೆರಿದು ಪೆತ್ತ ಜಯನಾ ವಿಜ |ಅರಸಂಗೆ ಬಾಳ್ಗಳ್ಚ್
ಪಲ್ಮಿಡಿಉಂ ಮೂಳವಳ್ಳಿಉಂ ಕೊ | ಟ್ಟಾರ್...”ಎಂಬ ಪಠ್ಯವನ್ನು ಹೊಂದಿದೆ.
ಕದಂಬ ರಾಜನಾದ ಕಾಕುತ್ಸವರ್ಮನು ರಾಜ್ಯವಾಳುತ್ತಿದ್ದಾಗ ಸೇಂದ್ರಕ ಮತ್ತು ಬಾಣರ
ಸೈನ್ಯವನ್ನೊಳಗೊಂಡ ಕದಂಬರಿಗೂ ಕೇಕೆಯ ಸೈನ್ಯವನ್ನೊಳಗೊಂಡ ಪಲ್ಲವರಿಗೂ ನಡೆದ ಒಂದು ಯುದ್ಧದಲ್ಲಿ
ಭಟಾರಿಯ ಮಗನಾದ ವಿಜಾ ಅರಸನು ಮಿಗಿಲಾದ ಶೌರ್ಯದಿಂದ ಹೋರಾಡಿ ಪಲ್ಲವರನ್ನು ಪರಾಭವ ಗೊಳಿಸಲು
ಆತನಿಗೆ ನರಿದಾವಿಳೆ ನಾಡಿನ ಅಧಿಕಾರಿಗಳಾದ ಮೃಗೇಶ ಮತ್ತು ನಾಗರೆಂಬುವರು ಪಲ್ಮಡಿ ಮತ್ತು
ಮೂಳವಳ್ಳಿಗಳೆಂಬ ಎರಡು ಗ್ರಾಮಗಳನ್ನು ಕೊಡುಗೆಯಾಗಿ ಕೊಟ್ಟರು ಎಂಬ ಈ ದಾನಶಾಸನದ ಗದ್ಯ ಭಾಷೆ
ಪಕ್ವವಾದುದೆಂದು ಕೆಲವರೂ ಅಪರಿಷ್ಕೃತವೆಂದು ಕೆಲವರೂ ವಾದಿಸುವುದುಂಟು. ಆದಾಗ್ಯೂ ಸಂಸ್ಕೃತದ
ಪ್ರಭಾವವನ್ನೂ ಅಚ್ಚಕನ್ನಡತನವನ್ನು ಒಟ್ಟಿಗೆ ಕಂಡುಕೊಳ್ಳುಕೊಳ್ಳುವುದರ ಮೂಲಕ ಹಳಗನ್ನಡದ ಒಂದು
ಮಾದರಿಯನ್ನಿಲ್ಲಿ ಕಾಣಬಹುದು. ಹಲ್ಮಿಡಿ ಶಾಸನದ ಕವಿಯು
ಉಭಯ ಭಾಷಾ ವಿಶಾರದನಾಗಿದ್ದು ಕನ್ನಡದಲ್ಲಿಯೂ ಕಾವ್ಯ ರಚಿಸ ಬಲ್ಲಷ್ಟು ಬಲ್ಲಿದ
ನಾಗಿದ್ದನೆಂದು ಹೇಳ ಬಹುದಾಗಿದೆ. ಈ ಶಾಸನದಲ್ಲಿ `ಶ್ರೀ ಮತ್ ಕದಂಬಪನ್, ತ್ಯಾಗ ಸಂಪನ್ನನ, ಕಲಭೋರ ನಾ ಅರಿ
ಕಕುಸ್ಥಭಟ್ಟೋರನ್' ಅಳಪಗಣಪಶುಪತಿಯೂ ಆದ
ಪಶುಪತಿ ಇತ್ಯಾದಿ ವರ್ಣನೆ ಈ ಶಾಸನದಲ್ಲಿದೆ. ಶಾಸನ ಕವಿಗೆ ಸಂಸ್ಕೃತ ಭೂಯಿಷ್ಠವಾದ ಕನ್ನಡದಲ್ಲಿ
ಉಪಮೆ,ರೂಪಕ ಮೊದಲಾದ ಅಲಂಕಾರಗಳನ್ನು
ಎರಕ ಹೊಯ್ಯ ಬಲ್ಲ ಸಾಮರ್ಥ್ಯವಿದ್ದುದನ್ನು ಸೂಚಿಸುತ್ತದೆ.ಈ ಗದ್ಯ ಶಾಸನದಲ್ಲಿ ಸ್ವಲ್ಪ ಮಟ್ಟಿಗೆ
ಕಾವ್ಯಾತ್ಮಕ ಅಲಂಕಾರ ಉಕ್ತಿಗಳನ್ನು ಕಾಣಬಹುದಾಗಿದೆ. ಪಶುಪತಿ ಎಂಬುವನು ಬಟರಿಕುಲವೆಂಬ ಗಗನವನ್ನು
ಬೆಳಗಿದ ಚಂದ್ರನೆಂಬುದನ್ನು `ಬಟರಿ ಕುಲಾಮಲವ್ಯೋಮ ತಾರಾಧಿನಾಥನ್' ಎಂಬ ರೂಪಕದಲ್ಲಿ, ಆತ ನೂರಾರು
ಯುದ್ಧಗಳೆಂಬ ಯಜ್ಞಗಳಲ್ಲಿ ಶತ್ರುಗಳನ್ನು ಬಲಿಯಾಗಿ ನೀಡುವ ಶೌರ್ಯವುಳ್ಳಾತನೆಂದು ಕೀರ್ತಿಸುವಲ್ಲಿ
ಕಂಡು ಬರುವ ಶ್ಲೇಷ, ವಿಜ ಅರಸನನ್ನು
ಪ್ರೇಮಾಲಯ ಸುತನೆಂದು ಕರೆದಿರುವಲ್ಲಿ ಕಂಡು ಬರುವ ಅಲಂಕಾರೋಕ್ತಿ ವಿನ್ಯಾಸ ಅಲ್ಲದೆ ಈ ಶಾಸನದಲ್ಲಿ
ಬರುವ ಕೊಟ್ಟಾರ್ ಎಂಬ ಕ್ರಿಯಾಪದ, ಪೊಗಳೆಪ್ಪೊಟ್ಟ(ಹೊಗಳಲ್ಪಟ್ಟ) ಎಂಬ ಕರ್ಮಣಿ ಪ್ರಯೋಗ, ಪೆತ್ತಜಯನ್(ಜಯಶಾಲಿ) ಎಂಬ ವಿಲಕ್ಷಣ ರೂಪ ಇತ್ಯಾದಿಗಳನ್ನು ಗಮನಿಸಿದರೆ
`ಸಂಸ್ಕೃತದ ಪ್ರಭಾವಕ್ಕೆ ಒಳಗಾಗಿರುವ
ಮತ್ತು ಸಂಸ್ಕೃತದಲ್ಲಿ ವಾಕ್ಯಗಳನ್ನು ಕಲ್ಪಿಸಿಕೊಂಡು ಅವುಗಳನ್ನು ಕನ್ನಡಕ್ಕೆ ಅನುವಾದಿಸಿರುವ
ಒಬ್ಬ ಸಂಸ್ಕೃತ ವಿದ್ವಾಂಸನ ಭಾಷೆಯನ್ನು ಅಲ್ಲಿ
ಕಾಣಬಹುದಾಗಿದೆ ಎಂಬ ವಿದ್ವಾಂಸರ ಅನಿಸಿಕೆ ಗಮನಾರ್ಹವಾಗಿದೆ. ಈ ಶಾಸನದಲ್ಲಿ ಬಳಕೆಯಾಗಿರುವ ನಾಡುಳ್, ಅಪ್ಪೋರ್, ಇರ್ವ್ವರ್, ಎನ್ನುವ ರೂಪಗಳನ್ನು ಬಾಳ್ಗಳ್ಚ್ ಪದಗಳ ಬಳಕೆಯನ್ನು ಗಮನಿಸ ಬೇಕಾಗುತ್ತದೆ. ಹಲ್ಮಿಡಿ ಶಾಸನವು
ಕನ್ನಡದ ಪ್ರಾರಂಭಿಕ ಗದ್ಯಕ್ಕೆ ಉತ್ಕೃಷ್ಟ ಮಾದರಿ ಎಂಬುದಾಗಿ ವಿದ್ವಾಂಸರಿಂದ ಪ್ರಶಂಸೆಗೆ
ಒಳಗಾಗಿದೆ. ಹಲ್ಮಿಡಿ ಶಾಸನದಲ್ಲಿ ಬರುವ
ಪಲ್ಮಿಡಿಉಂ ಮೂಳವಳ್ಳಿಉಂ' ಎಂಬ ಶಿಥಿಲ ಸಂಧಿ,`ಭಟಾರಿ
ಕುಲದೊನಳುಕದಮ್ಬನ್ನಳ್ದೊನ್ ಮಹಾಪಾತಕನ್' ಎಂಬ ಸಂಧಿಗ್ಧ ವಾಕ್ಯ, `ಭಟ್ಟಗ್ಗೀಗಳ್ದೆ ಒಡ್ಡಲಿಆಪತ್ತೊಂದಿವಿಟ್ಟಾರಕರ'ಎಂಬ ವಾಕ್ಯದ ತೊಡಕು, `ಬಟರಿ ಕುಲಾಮಲ ವ್ಯೋಮ ತಾರಾಧಿ ನಾಥನ್ನಳಪಗಣಪಶುಪತಿಮಾ ದಕ್ಷಿಣಾಪಥ ಬಹುಶತ ಹವಾನಾಹವದುಳ್ ಪಶುಪ್ರಧಾನ
ಶೌರ್ಯೋದ್ಧಮ ಭರಿತೋನ್ದಾನ್' ಇತ್ಯಾದಿ ಸಂಸ್ಕೃತ ವಾಗಾಡಂಬರಗಳು ಈ ಗದ್ಯದ ಲಕ್ಷಣಗಳಾಗಿರುವುದರ ಜೊತೆಗೆ ಕನ್ನಡವು
ಸಂಸ್ಕೃತದ ವರ್ಚಸ್ಸನ್ನು ಹೇಗೆ ಒಳಗಾಗುತ್ತಾ ಮುನ್ನೆಡೆದಿತ್ತು ಎಂಬುದನ್ನು ಸೂಚಿಸುತ್ತವೆ. ಪೆತ್ತ ಜಯನ್ ಎನ್ನುವ ಪದವಂತೂ ಸಂಸ್ಕೃತ ಕನ್ನಡ ಪದಗಳ ವೈಶಿಷ್ಟಯುತವಾದ
ಸಮಾಸಪದವಾಗಿದ್ದು ಕನ್ನಡದ ಸಮನ್ವಯ ಪ್ರವೃತ್ತಿಗೆ ಪ್ರತ್ಯಕ್ಷ ನಿದರ್ಶನವಾಗಿದೆ. ಈ ಪ್ರವೃತ್ತಿ 7 ನೇ ಶತಮಾನದ ಬದಾಮಿ ಶಾಸನದಲ್ಲಿಯೂ ಮುಂದುವರೆದಿದೆ. ಆ ಶಾಸನದಲ್ಲಿಯ ಒಳ್ಳಿತ್ತು, ಪೊಲ್ಲದ, ಬಲ್ಲಿತ್ತು, ಕಟ್ಟೋದೇನ್, ಎಮಗೆಂದು ಎನ್ನುವ ಪದಗಳು
ಕನ್ನಡತನಕ್ಕೆ ಸಾಕ್ಷಿಯಾಗಿವೆ. ಇಂಥ ಗದ್ಯ ಬರಹದ ಶಾಸನಗಳಲ್ಲಿ ಸಾಹಿತ್ಯದ ಸೊಗಸಿಗೆ ಹಲ್ಮಿಡಿ ಶಾಸನವೇ
ಆದಿ. ಈ ಶಾಸನ ಕವಿಯು ಉಭಯ
ಭಾಷಾ ವಿಶಾರದನಾಗಿದ್ದನೆಂದೂ ಕನ್ನಡದಲ್ಲಿಯೂ ಕಾವ್ಯ ರಚಿಸುವ ಸಾಮರ್ಥ್ಯ ಅವನಲ್ಲಿದ್ದುದು
ಅಸಂಭವವಲ್ಲವೆಂದೂ ಊಹಿಸಬಹುದು. ಇದಕ್ಕೆ ನಿದರ್ಶನವಾಗಿ ಶ್ರೀಮತ್ ಕದಂಬಪನ್, ತ್ಯಾಗ ಸಂಪನ್ನನ ಕಲಭೋರ ನಾ ಆರಿ ಕಕುಸ್ಥಭಟ್ಟೋರನ್ ಎಂದು
ಕಾಕುಸ್ಥವರ್ಮನನ್ನು ಕುರಿತ ವಿಶೇಷಣಗಳು, ಹಾಗೂ ಈಗಾಗಲೇ ಮೇಲೆ ಉಲ್ಲೇಖಿಸಿರುವ ಉಪಮೆ ರೂಪಕ ಮೊದಲಾದ ಅಲಂಕಾರಗಳನ್ನು ಸಂಸ್ಕೃತ
ಭೂಯಿಷ್ಠವಾದ ಕನ್ನಡದಲ್ಲಿ ಲೀಲಾಜಾಲವಾಗಿ ಈ ಶಾಸನ ರಚಕ ಎರಕ ಹೊಯ್ಯಬಲ್ಲವನಾಗಿದ್ದನೆಂಬ ಅನಿಸಿಕೆ
ಉಂಟಾಗುತ್ತದೆ.
ಕನ್ನಡ
ಭಾಷೆಯು ಕ್ರಿ.ಶ. 450 ರಲ್ಲಿಯೇ ಲಿಖಿತ
ರೂಪವನ್ನು ಪಡೆಯ ಬೇಕಾದರೆ ಅದಕ್ಕಿಂತ ನೂರಾರು ವರ್ಷಗಳ ಹಿಂದೆಯೇ ಆಡು ಮಾತಿನ ರೂಪದ ಕನ್ನಡ ಭಾಷೆ ಇದ್ದಿತು
ಎಂದು ಸಾಧಿಸ ಬಹುದಾಗಿದೆ. ಏಕೆಂದರೆ ಒಂದು ಭಾಷೆಯಲ್ಲಿ ಲಿಖಿತ ರೂಪದ ಭಾಷಾ
ನಿರ್ಮಾಣ ಆಗ ಬೇಕಾದರೆ ಅದರಲ್ಲಿ ಅದಕ್ಕಿಂತ ಹಿಂದೆ ಆಡು ಮಾತಿನ ರೂಪ ಬಹಳ ದೀರ್ಘಕಾಲ ಇದ್ದಿರ ಬೇಕು. ಹಲ್ಮಿಡಿ ಶಾಸನದಲ್ಲಿ ಕರ್ಮಣಿ ಪ್ರಯೋಗದ ಬಳಕೆ ಆಗಿರುವುದರಿಂದ ಆ ಕಾಲಕ್ಕೆ
ಕನ್ನಡ ಭಾಷೆ ಹಲವು ಪ್ರಯೋಗಗಳಿಗೆ ಆಹ್ವಾನ ನೀಡಿತ್ತು ಎಂದೇಳಬಹುದಾಗಿದೆ. ಕನ್ನಡ ಒಂದು ಸ್ವತಂತ್ರ ಭಾಷೆಯಾಗಿ ಬೆಳೆದ ಮೇಲೆ ಅನೇಕ ಶತಮಾನಗಳ ಕಾಲ ಲಿಖಿತ
ರೂಪಕ್ಕಿಳಿಯದೆ ಕೇವಲ ಆಡುನುಡಿಯಾಗಿ ಉಳಿದಿದ್ದಂತೆ ತೋರುತ್ತದೆ.
ಪ್ರೌಢವಾದ ಕನ್ನಡ ಭಾಷೆ ಮೊದಲಿಗೆ ಕಂಡು ಬಂದಿರುವುದು
ಶಾಸನಗಳಲ್ಲಿಯೇ. ಪ್ರೌಢವಾದ ಮತ್ತು ಪ್ರಮಾಣ ರೂಪದ ಭಾಷೆಯೊಂದು ಬಳಕೆಯಾಗಬೇಕಾದರೆ ಆ ಭಾಷೆಗೆ ಒಂದು ಸಮೃದ್ಧವಾದ
ಮತ್ತು ದೀರ್ಘವಾದ ಇತಿಹಾಸ ಇರಲೇ ಬೇಕು ಎಂದೆನ್ನಿಸುತ್ತದೆ. ಮೊದಲು ಆಡು ಮಾತಿನ ರೂಪದಲ್ಲಿ
ಒಂದು ಭಾಷೆಯನ್ನು ಕಾಣುತ್ತೇವೆ. ಅನಂತರ ಅದರ ಲಿಖಿತ ರೂಪದ ಪ್ರಮಾಣ ಬದ್ಧ ಭಾಷೆಯನ್ನು ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ಶಾಸನಗಳಲ್ಲಿ
ಕನ್ನಡ ಬಳಕೆಯಾದ ಕಾಲ ಘಟ್ಟಕ್ಕಿಂತ ಮುಂಚೆ ಸಮೃದ್ಧವಾಗಿ ಕನ್ನಡ ಭಾಷೆ ಬೆಳೆದಿತ್ತು ಎಂದು ನಿರ್ಣಯಿಸ ಬಹುದಾಗಿದೆ. ಶಾಸನಗಳ ಹಿನ್ನೆಲೆಯಲ್ಲಿ 5 ನೇ ಶತಮಾನದ ವೇಳೆಗಾಗಲೇ ಕನ್ನಡದಲ್ಲಿ ಪ್ರಮಾಣಬದ್ಧ ಕನ್ನಡ ಮತ್ತು ಆಡು
ಮಾತಿನ ಕನ್ನಡದ ಎರಡು ರೂಪಗಳು ಇದ್ದವು ಎಂದು ಹೇಳ ಬಹುದಾಗಿದೆ.
ಕದಂಬರ ಅನೇಕ
ಶಾಸನಗಳು ಕನ್ನಡದಲ್ಲಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ತಾಳಗುಂದ, ಗುಂಡಾನೂರ, ಚಂದ್ರವಲ್ಲಿ, ಹಲಸಿ ಮತ್ತು
ಹಲ್ಮಿಡಿ. ಅಂದರೆ ಶಾಸನದಲ್ಲಿ ಕನ್ನಡದ ಬಳಕೆ ಆಗುತ್ತಿತ್ತು ಮತ್ತು ಕನ್ನಡ ಅಷ್ಟರಮಟ್ಟಿಗೆ
ಅಭಿವೃದ್ದಿ ಹೊಂದಿದ ಭಾಷೆಯಾಗಿತ್ತು ಎಂದು ತಿಳಿದು ಬರುತ್ತದೆ. ಬಾದಾಮಿಯಲ್ಲಿ ದೊರಕಿದ ಕಪ್ಪೆ ಆರಭಟ್ಟನ
ಶಿಲಾಶಾಸನ ಸುಮಾರು ಕ್ರಿ.ಶ. 700ರದ್ದು. ಈ ಶಿಲಾ ಶಾಸನ ಕನ್ನಡ ಮತ್ತು ಸಂಸ್ಕೃತಗಳ ಮಿಶ್ರಣವಾಗಿದೆ. ತ್ರಿಪದಿಯಲ್ಲಿ ಕನ್ನಡದ
ಕಾವ್ಯವನ್ನು ಈ ಶಿಲಾಶಾಸನದಲ್ಲಿ ನಾವು ಕಾಣಬಹುದು. ಕವಿರಾಜಮಾರ್ಗ ಕ್ರಿ.ಶ. 850ರ ಸುಮಾರಿನದು. ಕವಿರಾಜಮಾರ್ಗ ತನಗಿಂತ ಹಳೆಯ ಎಂಟು-ಹತ್ತು ಕವಿಗಳು
ಮತ್ತು ಬರಹಗಾರರನ್ನು ಹೆಸರಿಸುತ್ತದೆ. ಅವರಲ್ಲಿ ಮುಖ್ಯರಾದವರು ಕವೀಶ್ವರ, ಶ್ರೀವಿಜಯ, ವಿಮಲ, ಉದಯ, ನಾಗಾರ್ಜುನ, ಜಯಬಂಧು ಮತ್ತು ದುರ್ವಿನಿತ. ಇವರ ಕಾಲ ಮತ್ತು ಊರುಗಳ ಬಗ್ಗೆ ಹೆಚ್ಚು
ತಿಳಿದು ಬಂದಿಲ್ಲ. ಮತ್ತು ಅವರ ಕೃತಿಗಳು ಈಗ ಲಭ್ಯವಿಲ್ಲ. ದುರ್ವಿನಿತನ ಬಗ್ಗೆ ಸ್ವಲ್ಪ ಮಾಹಿತಿ
ದೊರೆತಿದೆ. ಈತ ಕ್ರಿ.ಶ. 450ರ ಆಸುಪಾಸಿನಲ್ಲಿದ್ದ ಕವಿ ಎಂದು ತಿಳಿದುಬಂದಿದೆ. ಅಂದರೆ ಕನ್ನಡ ಸಾಹಿತ್ಯ ಈ ಸಮಯದಲ್ಲೂ
ವರ್ಧಿಸುತ್ತಿತ್ತು ಎಂದು ತಿಳಿದು ಬರುತ್ತದೆ.
ಭೂಮಿಕಾಣಿಗಳ ಸಂಬಂಧವಾದ ವ್ಯವಹಾರದಲ್ಲಿ ಆ ಕಾಲದ
ಹಳ್ಳಿಗಳ ಸಾಮಾನ್ಯ ಜನರ ನಡುವೆ ಭಾಷೆ ಎಷ್ಟು ನಿರಾಡಂಬರ,ಸಹಜ
ಆಗಿರುತ್ತಿತ್ತು ಎಂಬುದನ್ನು ಕೆಲವು ಶಾಸನಗಳು ಸೂಚನೆ ಕೊಡುತ್ತವೆ. ನಿದರ್ಶನಕ್ಕೆ ಗಂಗರ ಕಾಲದ
ಗದ್ಯ ಶಾಸನದ ಒಂದು ತುಣುಕು.
`ಸ್ವಸ್ತಿ
ಶ್ರೀಮತ್ ಅಮಿತ ಭಟ್ಚಡಿಗಳ್ಗೆ ಕೆಸಿಲ್ಮನೆ ಒಡೆ ಒರ್ಗ್ಗಳೆಲ್ಲ ತಮ್ಮ ಕರೆಯ ಕೆಳಗೆ
ಕಳನಿ ಮಣ್ ಅವರ ಮಗನ್ದಿ ರ್ಸೋಮಡಿಗ ಕೊಟ್ಟರ್ ವನ್ನಿರ್ವರು ಸಾಕ್ಷಿ
ಅದಂಕೆಡಿಸಿದೊನ್ ಪಞ್ಚಮಹಾಪಾತಕನಕ್ಕು'
ದೇಸಿಯ
ಸತ್ವಶೈಲಿಯನ್ನೊಳಗೊಂಡ ಗದ್ಯವು ಅಪರೂಪಕ್ಕೊಮ್ಮೆ ಕನ್ನಡದ ಕೆಲವು ಗದ್ಯ ಶಾಸನಗಳಲ್ಲಿ
ಕಾಣಿಸಿಕೊಂಡಿದೆ. ಈಗಾಗಲೇ ಹೇಳಿರುವಂತೆ ಬಹುಪಾಲು ದತ್ತಿ ಶಾಸನಗಳಲ್ಲಿಯ ವಿವರಣೆಗಳಲ್ಲಿ
ಆಡುಮಾತಿನ ಗದ್ಯಭಾಷೆವನ್ನು ಗುರುತಿಸಬಹುದಾಗಿದೆ. ಕನ್ನಡದ ಗದ್ಯಭಾಷೆಯ ಶಾಸನಗಳಲ್ಲಿ ಗದ್ಯವು
ಕೆಲವೆಡೆ ವೈವಿಧ್ಯತೆಗಳಿಂದ ಕೂಡಿದೆಯಾದರೂ ಹೇಳಿಕೊಳ್ಳುವಷ್ಟು ಗದ್ಯ ಸಾಹಿತ್ಯವನ್ನು
ಒಳಗೊಂಡಿಲ್ಲ. ದಾನದ ವಿವರಗಳನ್ನು ಹೇಳುವ ಶಾಸನಗಳು ಬಹುಮಟ್ಟಿಗೆ ಇತಿವೃತ್ತಾತ್ಮಕವಾಗಿದ್ದು
ಕವಿಕಲ್ಪನೆಗೆ ಅವಕಾಶ ಕಡಿಮೆ. ಹೇಳುವ ವಿಷಯಗಳನ್ನು ನೇರವಾಗಿ ಹೇಳಿವೆ. ಅಚ್ಚಗನ್ನಡ ಶಬ್ದಗಳಿಂದ
ಕೂಡಿದ ಈ ಶಾಸನಗಳ ಪಠ್ಯವು ಅಂದಿನ ವ್ಯವಹಾರ ಮಾಧ್ಯಮದ ಭಾಷೆಗೆ ಮಾದರಿಗಳಾಗಿವೆ. ಕನ್ನಡ ನಾಡಿನ
ಆರಂಭ ಕಾಲೀನ ಗದ್ಯ ಶಾಸನಗಳು ಕೆಲಮಟ್ಟಿಗೆ ವ್ಯವಹಾರಿಕ ಸಾಮಾಜಿಕ ದಾಖಲೆಗಳು.
ಕನ್ನಡ ಸಾಹಿತ್ಯ ಪ್ರಥಮ ಘಟ್ಟದ ಅವಶೇಷಗಳೆಂದರೆ ಶಾಸನಗಳು. ಪಂಪಪೂರ್ವ ಯಗದಲ್ಲಿ ಶ್ರೀಮಂತ
ಸಾಹಿತ್ಯ ಕಂಡುಬರುವುದು ಅಥವ ಕಾವ್ಯಗುಣಗಳುಳ್ಳ ಬಿಡಿಮುಕ್ತಕಗಳು ಕಂಡುಬರುವುದು ಚಿತ್ರದುರ್ಗದ
ತಮಟ ಕಲ್ಲಿನ ಶಾಸನಗಳಲ್ಲಿ. ನಿಷಿಧಿ ಶಾಸನಗಳನ್ನು ನಾಡಿನ ಪ್ರಥಮ ಸಾಹಿತ್ಯ ಪಾಠಗಳೆಂದು
ವಿದ್ವಾಂಸರು ಗುರುತಿಸಿರುವುದು ಪರಿಶೀಲನಾರ್ಹವಾಗಿದೆ. ಪೂರ್ವ ಹಳಗನ್ನಡದ ಭಾಷೆಯನ್ನು ಒಳಗೊಂಡು ಸಾಹಿತ್ಯ ದೃಷ್ಟಿಯಿಂದ ಗಮನಾರ್ಹವಾದ ಶಾಸನವೆಂದರೆ ಚಿತ್ರದುರ್ಗ ಜಿಲ್ಲೆಯ ತಮಟಕಲ್ಲಿನ ಶಿಲಾಲೇಖನ (E.C.V 11. ಚಿತ್ರದುರ್ಗ 43) ಇದರ ಕಾಲ ನಿರ್ದಿಷ್ಟವಾಗಿ ಗೊತ್ತಿಲ್ಲವಾದರೂ ಸುಮಾರು ಐದನೆಯ ಶತಮಾನದ್ದಿರ ಬೇಕೆಂಬ ಊಹೆ ಸ್ವೀಕಾರಾರ್ಹವಾಗಿದೆ. ಕ್ರಿ.ಶ. 500 ರ ಚಿತ್ರದುರ್ಗದ ತಮಟಕಲ್ಲು
ಶಾಸನದಲ್ಲಿ ಬರುವ ಬಿಣಮಣಿ ಅಂತು ಭೋಗಿ ಎಂಬ ಶಾಸನದ ಸಾಲುಗಳು ಬದಾಮಿ ಚಾಲುಕ್ಯರ ಕಾಲದಲ್ಲಿಯೇ ಕನ್ನಡವು
ಸಾಹಿತ್ಯದ ಅಥವಾ ಕಾವ್ಯಭಾಷೆಯಾಗಿ ವಿಕಸನ ಹೊಂದಿದ್ದತಿತು ಎಂಬುದನ್ನು ಸೂಚಿಸುತ್ತದೆ.
ಇದರ ಲಿಪಿ ಮತ್ತು ಭಾಷೆಗಳೆರಡೂ ಇದು ಬಹುಪ್ರಾಚೀನ ಎಂಬುದಕ್ಕೆ ಸಾಕ್ಷಿಯಾಗಿರುವುದು ಮಾತ್ರವಲ್ಲದೆ. ಈ ವೃತ್ತದ ಛಂದಸ್ಸು ಅತ್ಯಂತ ಅಪೂರ್ವ ವಾದುದು ಇದರಲ್ಲಿನ ಸಂಸ್ಕೃತ ಶಬ್ದ ಬಾಹುಳ್ಯವು ಗಮನಾರ್ಹವಾಗಿರುವಂತೆ ಇದರ ಕಾವ್ಯ ಗುಣವು ಮನೋಜ್ಞವಾಗಿದೆ. ಇಂತಹ ಕಾವ್ಯಮಯವಾದ ಶಿಲಾಶಾಸನ ಹುಟ್ಟಬೇಕಾದರೆ ಅದಕ್ಕೂ ಹಿಂದೆ ಸಾಕಷ್ಟು ಸೃಷ್ಠಿ ನಡೆದಿರಬಹುದು ಎಂದು ಊಹಿಸಲು ಅವಕಾಶವಿದೆ. ಕನ್ನಡ ನಾಡಿನ ಯಾವುದೇ ಪ್ರಮುಖ ರಾಜ ಮನೆತನಕ್ಕೆ ಸೇರಿರದ ವ್ಯಕ್ತಿಯ ಗುಣ ವಿಶೇಷಗಳನ್ನು ಕುರಿತ ಈ ಕಾವ್ಯಸ್ವರೂಪದ ದಾಖಲೆಯ ಲಿಪಿಯೂ ಕನ್ನಡವೇ ಆಗಿದೆ. ಒಬ್ಬನೇ ವ್ಯಕ್ತಿಗೆ ಸಂಬಂಧಿಸಿದಂತೆ ಇರುವ ಎರಡು ಪ್ರತ್ಯೇಕ ವೀರ ಅಥವಾ ಪ್ರಶಸ್ತಿ ಶಾಸನಗಳ ಪೈಕಿ ಒಂದು ಕನ್ನಡ ಭಾಷೆ ಮತ್ತು ಲಿಪಿಯಲ್ಲೂ, ಮತ್ತೊಂದು ಸಂಸ್ಕೃತ ಭಾಷೆ ಮತ್ತು ಕನ್ನಡ ಲಿಪಿಯಲ್ಲೂ ಇವೆ. ಒಬ್ಬನೇ ವೀರನ ಎರಡು ಪ್ರಶಸ್ತಿ ಶಾಸನಗಳು ಒಂದೆಡೆಯೇ ಇರುವುದು ಒಂದು ಅಪರೂಪ ಎಂದೇ ಹೇಳಬೇಕು. ಈ ಶಾಸನದಲ್ಲಿ ದಾನ ಅಥವಾ ವೀರನ ಸಾವಿನ ಪ್ರಸ್ತಾಪ ಇಲ್ಲ. ಅಪ್ಪಟ ಗುಣ ವರ್ಣನೆ ಇದೆ. ಶಾಸನವು ಸಂಸ್ಕೃತ ಮತ್ತು ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿದೆ.
ಸಂಸ್ಕೃತ ಶಾಸನದ ಪಾಠ ಇಂತಿದೆ. ಮಾಸಿಕ್ಕಾಪುರಾಧಿಪತಿಯಾದ ಭಾರದ್ವಾಜ ವಂಶದ ಧನಾಗಮನ ಮಗ ಗುಣಮಧುರನು ತ್ಯಾಗವಂತನೆಂದು ಹೆಸರಾದವನು ಎಂಬ ವಿಶೇಷ ಗುಣವನ್ನು ಪ್ರಸ್ತಾಪಿಸುವ ಶಾಸನದ ಭಾಷೆ ಸಂಸ್ಕೃತ ಮತ್ತು ಲಿಪಿ ಕನ್ನಡ. ಶಾಸನದ ಪಕ್ಕದಲ್ಲೇ ಇರುವ ಗುಣಮಧುರನನ್ನೇ ಕುರಿತ ಕನ್ನಡ ಶಾಸನವೂ ಕಾವ್ಯಾತ್ಮಕವಾಗಿದೆ. ಬಿಣಿಮಣಿ (ಫಣಿಮಣಿ) ಅನ್ತುಭೋಗಿ ಬಿಣಿ (ಫಣ) ದುಳ್ಮಣಿ ಚಿಲ್ಮನದೋಳ್
ರಣಮುಖದುಳ್ಳ ಕೋಲಂ ನೆರೆಯರ್ಕುಮನಿದ್ದ್ಯ ಗುಣನ್
ಪ್ರಣಯಿ ಜನಕ್ಕೆ ಕಾಮನಸಿತೋದ್ಘಲ ವರ್ಣನವಣ್
ಗುಣಮಧುರಾಂಕ್ಕ ದಿವ್ಯಪುರುಷನ್ ಪುರುಷ ಪ್ರವರನ್
ಗುಣಮಧುರನು
ಹಣೆ(ಹೆಡೆ)ಯಲ್ಲಿ ರತ್ನವುಳ್ಳ ನಾಗನಂತೆ ಭೋಗಿ(ಸುಖಿ: ಹೆಡೆಯುಳ್ಳುದು). ಹಣೆಯಲ್ಲಿ ಭಾಗುವಿಕೆಯಿಲ್ಲದ ಮನಸ್ಸಿನವನು.(ಬಿಣದುಳ್-ಮಣಿವು-ಇಲ್-ಮನದೋನ್) ಅರ್ಥಾತ್ ಶತ್ರುಗಳಿಗೆ ಎಂದಿಗೂ ತಲೆಬಾಗದ ಧೀರನು. ಯುದ್ಧದಲ್ಲಿ ತನ್ನಲ್ಲಿರುವ ಬಾಣಗಳಿಂದ ತಿವಿಯುವವನು. ನಿಂದ್ಯವಲ್ಲದ ಗುಣವುಳ್ಳವನು. ಪ್ರಣಯಿಗಳಿಗೆ ಮನ್ಮಥನು. ನೀಲೋತ್ಫಲದ ಬಣ್ಣವುಳ್ಳವನು. ದಿವ್ಯ ಪುರುಷನು. ಪೌರುಷವುಳ್ಳವರಲ್ಲಿ ಶ್ರೇಷ್ಠನು.
ಈ ಶಾಸನದ ಮೂಲಕ ಕನ್ನಡದಲ್ಲಿ ಆರನೆಯ ಶತಮಾನದ ಹೊತ್ತಿಗಾಗಲೇ ಕಾವ್ಯ ಮೌಲ್ಯವುಳ್ಳ ಪದ್ಯರಚನೆ
ಪ್ರಾರಂಭವಾಗಿದ್ದರ ಜೊತೆಗೆ ಸಂಸ್ಕೃತ ವರ್ಣ ವೃತ್ತಗಳನ್ನು ಬಳಸುತ್ತಿದ್ದರು ಎಂಬುದು ತಿಳಿದು ಬರುತ್ತದೆ.
ಸಂಸ್ಕೃತ ಶಾಸನದಲ್ಲಿ ಪರಿಚಯಗೊಂಡ ಗುಣಮಧುರನ ಗುಣಸ್ವಭಾವಗಳನ್ನು ಕನ್ನಡ ವೃತ್ತದಲ್ಲಿ ವಿವರಿಸಲಾಗಿದೆ. ಈ ಗುಣಮಧುರ ಯಾವುದೇ ಪ್ರಸಿದ್ಧ ರಾಜಮನೆತನಕ್ಕೆ ಸೇರಿದ ವ್ಯಕ್ತಿಯಲ್ಲ. ಒಂದು ಪಟ್ಟಣದ ವ್ಯಾಪ್ತಿಗೆ ಸೇರಿದ್ದ ಪ್ರದೇಶದ ಅಧಿಪತಿ ಅಷ್ಟೇ. ಇಂತಹ ವ್ಯಕ್ತಿಯ ಪ್ರಶಸ್ತಿಗೆ ಸಂಸ್ಕೃತ ಮತ್ತು ಕನ್ನಡ ಭಾಷೆಗಳೆರಡರ ಬಳಕೆ ಆಗಿರುವುದು ಗಮನಿಸ ಬಹುದು. ಇನ್ನೊಂದು ಸಂಗತಿ ಎಂದರೆ ಸಂಸ್ಕೃತ ಭಾಷೆಯಲ್ಲಿ ಕೇವಲ ಪರಿಚಯವಿದೆ. ಗುಣ ವಿಶೇಷಣಗಳು ಕನ್ನಡದಲ್ಲಿವೆ. ಈ ವಿಷಯವನ್ನು ಗಮನಿಸಿದಾಗ ಪ್ರಬಲವಾಗುತ್ತಿದ್ದ ಕನ್ನಡ ಮತ್ತು ಸಾಂಪ್ರದಾಯಿಕವಾಗಿ ಮಾತ್ರ ಬಳಕೆಯಾಗುತ್ತಿದ್ದ ಸಂಸ್ಕೃತದ ಸ್ಥಿತಿಯನ್ನು ಗಮನಿಸಬಹುದು. ಸಂಸ್ಕೃತ ಮತ್ತು ಕನ್ನಡ ಎರಡು ಭಾಷೆಗಳನ್ನು
ಶಾಸನಗಳಲ್ಲಿ
ಬಳಸುವ ಕ್ರಮವು ಕ್ರಿ.ಶ. ಐದನೆಯ ಶತಮಾನದ ಕೊನೆಯ ಭಾಗದಲ್ಲಿ ಕಾಣಿಸಿ ಕೊಂಡಿದೆ.
ಹಲ್ಮಿಡಿ ಶಾಸನದನಂತರ ಬಾದಾಮಿ ಚಾಳುಕ್ಯರಾಜ ಮಂಗಳೇಶನ
ಕ್ರಿ. ಶ. 578
ರ ಗದ್ಯಶಾಸನವನ್ನು ಹೆಸರಿಸಬೇಕು. ಹಲ್ಮಿಡಿ ಶಾಸನ ದೊರೆಯುವುದಕ್ಕಿಂತ ಮುಂಚೆ ಇದೇ
ಕನ್ನಡಸಾಹಿತ್ಯದ ಮೊತ್ತ ಮೊದಲನೆಯ ಶಾಸನವಾಗಿತ್ತು. ಈ ಶಾಸನದಲ್ಲಿ ಸಾಹಿತ್ಯಗುಣಗಳಿಲ್ಲದಿದ್ದರೂ
ಪೂರ್ವ ಹಳಗನ್ನಡ ಭಾಷೆಯ ವಿಶಿಷ್ಟ ರೂಪಗಳಿವೆ.
`ಸ್ವಸ್ತಿ ಶ್ರೀಮತ್ ಪ್ರಿಥಿವೀವಲ್ಲಭ
ಮಂಗಲೀಸನಾ
ಕಲ್ಮನೆಗೆ ಇತ್ತೊದು, ಲಂಜಿಗೇಸರಂ
ದೇವರ್ಕೆ ಪೂನಿರುವ
ಮಾಲಕಾರರ್ಗ್ಗೆ ಅರ್ಧವಿಸದಿ ಇತ್ತೊದಾನ್ ಅರಿವೋನ್
ಪಜ್ಚಮಹಾಪಾತಕನಕುಂ ಏಳನೆಯಾ ನರಕದಾ ಪುಳು ಅಕುಮ್) (8.ಬಾದಾಮಿ
ಚಾಲುಕ್ಯ:ಮಂಗಲೇಶ,ಕ್ರಿ.ಶ.578)
‘ಕಲ್ಮನಗೆ’
ಎಂದರೆ ವೈಷ್ಣ್ಣವ ಗವಿಯ ದೇವರಿಗೆ ‘ಲಂಜಿಗೇಸರ’ ಎಂಬ ಊರನ್ನೂ ದೇವರಿಗೆ ಹೂ ಮಾಲೆಗಾರನಿಗೆ
‘ಅರ್ಧವಿಸ’ದಂತೆ ಆದಾಯ ಅಥವಾ ತೆರಿಗೆಯಲ್ಲಿ ವಿನಾಯತಿ ಇತ್ತುದನ್ನೂ ತಿಳಿಸುತ್ತದೆ. ಗದ್ಯದ ಶೈಲಿಯ
ದೃಷ್ಟಿಯಿಂದ ಇದು ಸಾಮಾನ್ಯ ಮಟ್ಟದ್ದಾಗಿದೆ. ಕೊಪ್ಪಳದಲ್ಲಿ ದೊರೆತ ಚಿಕ್ಕ ಶಾಸನವೊಂದರ “ಶ್ರೀ
ಅಪ್ಪರಸನ್ ಆಜನ್ನಾ...... ಎಂಬ ಅಪೂರ್ಣ ಪಾಠ ದೊರೆತಿದ್ದು ಈ ಶತಮಾನಕ್ಕೇ ಸೇರಿದುದಾಗಿದೆ. `ಆಪ್ಪರಸನ್’ಎಂದು
ದೀರ್ಘ ಸ್ವರಕ್ಕೆ ಪದದಲ್ಲಿರುವ ಸಜಾತೀಯ ದ್ವಿತ್ವೊಂದು ಇಲ್ಲಿ ಗಮನಾರ್ಹವಾಗಿದೆ. ಇಂಥ
ದ್ವಿತ್ವಗಳು ಪ್ರಾಚೀನ ಕನ್ನಡದ ವೈಶಿಷ್ಟ್ಯಗಳಾಗಿವೆ.
ಈ ಕೆಲವು ಶಾಸನಗಳಿಂದ ಆರನೆಯ ಶತಮಾನದಲ್ಲಿ
ಹಳೆ ಮತ್ತು ಹೊಸ ರೂಪಗಳು ಒಟ್ಟೊಟ್ಟಿಗೆ ಪ್ರಯೋಗದಲ್ಲಿದ್ದವೆಂದು ಕಂಡು ಬರುತ್ತದೆ. ಈ ಎಲ್ಲ
ಸಂಗತಿಗಳನ್ನು ಗಮನಿಸಿದರೆ ಈ ಶತಮಾನದ ಯಾವುದೇ ಶಾಸನವು ಭಾಷಾ ಪ್ರೌಢಿಮೆಯಲ್ಲಾಗಲೀ ಶಾಸನ
ಶಿಲ್ಪದಲ್ಲಾಗಲೀ ಹಲ್ಮಿಡಿ ಶಾಸನಕ್ಕೆ ಸರಿದೂಗಲಾರದು.
ಬಾದಾಮಿ ಚಾಲುಕ್ಯದೊರೆ ಇಮ್ಮಡಿ ಪುಲಕೇಶಿಯ
ಪೆದ್ದವಡಗೂರು ಶಾಸನವು ದೊರೆತಿದ್ದು `ಎರತಿಯಡಿ’ ಎಂದು ಪುಲಕೇಶಿಯನ್ನು ಹೆಸರಿಸಿದೆ.
`ಎಳ್ಪಪತ್ತು
ಸಿಂಭಿಗೆ ಕೊಳ್ಗುಳ’ದಲ್ಲಿ ವಿಕ್ರಮನನ್ನು ರಣ ವಿಕ್ರಮನನ್ನು ಗೆದ್ದ ನಂತರ ನಾಡನೂರ ಮಹಾಜನರನ್ನು
ಕರೆದು ಅವರಿಗೆ ಬಾಣ ರಾಜರ ನಾಡಿನ ಅಗ್ರಹಾರಗಳನ್ನು `ತೆರೆಪೊನ್
ವೇಡಿಕೊಂಡು’ ದತ್ತಿಯಾಗಿ ಬಿಟ್ಟ ಸಂಗತಿಯನ್ನು ತಿಳಿಸುತ್ತದೆ.ಇದರ ಕಾಲ ಸು.640ಎಂದು ಊಹಿಸಲಾಗಿದೆ. ಶಾಸನ ಪಾಠ ಇಂತಿದೆ.
`ಸ್ಚಸ್ತಿ ಸತ್ಯಾಶ್ರಯ ಶ್ರೀಪೃಥುವೀವಲ್ಲಭ
ಮಹಾರಾಜಾಧಿರಾಜ ಪರಮೇಶ್ವರ ಭಟಾರರ ದತ್ತಿ ನಾಡನೂರೊಳ್ ರಣ ವಿಕ್ರಮನಾನೆರತಿಯಡಿಗಾಳ್ಳ್ ಎಳ್ಚತ್ತು
ಸಿಂಭಿಗೆ ಕೊಳ್ಗೊಳದುಳ್ ವೀಳೆ ಎರಿದು ಗೆಲ್ದು ಅಲ್ಲಿ ಮಹಾಜನಮಾನ್ ಕರೆದು
ನಿಗಳ ಬಾಳ್ವನ್ತು ಜೀವಿತಂ ಬೇಡಿಕೊಳ್ಳಿಮ್ ಎನ್ದೊಡೆ
ಆಮೆಲ್ಲ ಪ್ರಸಾದಪಟ್ಟಿ ಈ ಊರನ್ನ ಸರ್ವ್ವಬಾಧಾಪರಿಹಾರಮಾಗೆ ಪ್ರಸಾದಂಗೆಯಿ ಆಮಾಗ್ರ್ಗಮೆ ಕೊಟ್ಟಾರ್
ಅನ್ತೊ ಸಲೆ ಬಾಣರಾಜರ ವಿಷಯದ ಅಗ್ರಹಾರಂಗಳನ್
ತೆರೆಪೊನ್ವೇಡಿಕೊಣ್ಡು ನಾಡನೂರಾ ಮಹಾಜನಮಾನ್ ಕರೆದು ನೀಮು ನಿಮಗಪ್ಪಂದಿ ಹರಿಯಮೆನ್ದ್ ಬೇಡಿದೊಡೆ
ಗೋಳಿಮಡುವರ ಸಾನ್ತಪ್ಪ ಆ ಊರ ಸವ್ರ್ವಪಾದ ಪರಿಹಾರಮಪ್ಪನ್ತು ಎರೆಯಿತಿಯಿಡಿಗಳ್ ಪ್ರಸಾದಂಗೆಯ್ತ ಪೂರ್ವಾವತಾರ ಬಾನರಾಙ್ಗೆ.....ಣ್ಯಾರಂ
ವಿನ್ನಪ್ಪಂಗೆಯ್ದೊಡೆ ಅಡಿಗಳಾ ಪ್ರಸಾದಮಗೆಯ್ದನ್ತೆ ಸಲ್ಗೆನ್ದರ್.......ಲಕ್ಷರ ಪ್ರಸಾದಂ ಗೆಂಯ್ದಾರ್
ಆಚನ್ದ್ರತಾರಕಂ: ಸ್ವದೆತ್ತಂ ಪರದತ್ತಂ.......ಕ್ರಿಮಿಃ......ಈ ಶಿಲಾಶಾಸನಂ..ಬ..ದಾ ಮಹೇನ್ದ್ರ
ಪಲ್ಲವಾಚಾರಿಗೆ ಮಹಾಜನಂಇಪ್ಪತ್ತೆಳ್ಚಮುಂ
ನಾಡನೂರುಳ್ ಪನ್ನಿ......ತರ್ತ್ ರ್ಕ್ಕೆಯ್ಯಾನ್ ಪ್ರಸಾದಂ ಗೆಯ್ದೊಂ ಎಮ್ಮ ಸೆನ್ಧಾಯನ
.....ಹಿತಕ... ದಾತ.( 121
ಬಾದಾಮಿ ಚಾಲುಕ್ಯ-ಎರಡನೆ ಪೊಲಕೇಸಿ,ಕಾಲ.ಸು.7ನೇ ಶತಮಾನ)
ಇದರ ಮೊದಲಿನ ಆರು ಸಾಲುಗಳಲ್ಲಿ ದತ್ತಿಯೊಂದು ಪೂರ್ಣಗೊಂಡಿರುವುದು
ಸ್ಪಷ್ಟವಾಗಿದೆ. ಅನಂತರ 11ನೆಯ ಸಾಲಿನ ವರೆಗೆ ಮತ್ತೊಂದು ಮುಖ್ಯವಾದ ದತ್ತಿ ಇರುವಂತೆ
ಕಾಣುತ್ತದೆ. ಕೊನೆಯಲ್ಲಿ ಶಾಸನವನ್ನು ಬರೆದ ಮಹೇಂದ್ರ ವಿಕ್ರಮ ಪಲ್ಲವಾಚಾರಿಗೆ ಕೆಲವು ಭೂಮಿಯನ್ನು
ದಾನವಾಗಿ ಬಿಟ್ಟಿದೆ. 11-12ನೆಯ ಸಾಲುಗಳಲ್ಲಿ ಸಂಸ್ಕೃತ ಶ್ಲೋಕವಿದೆ. ಅರ್ಥದ ದೃಷ್ಟಿಯಿಂದ ಕೆಲವು
ಅಸ್ಪಷ್ಟತೆಗಳಿದ್ದರೂ ಈ ಶಾಸನದ ಮುಖ್ಯ ಸಂಗತಿಗಳೇನೆಂಬುದನ್ನು ಗ್ರಹಿಸಬಹುದಾಗಿದೆ.
ಇದರ ನಂತರ ಏಳನೆಯ ಶತಮಾನದ ಮಧ್ಯ ಕಾಲಾವಧಿಯಲ್ಲಿದ್ದ ಗಂಗ
ಶ್ರೀವಿಕ್ರಮನ ಎರಡು ಶಿಲಾಶಾಸನಗಳು ಎಪಿ.ಕ.17 ರಲ್ಲಿ
ಪ್ರಕಟವಾಗಿವೆ. ಇವುಗಳಲ್ಲಿ ಶ್ರೀನಿವಾಸಪುರ ತಾಲ್ಲೂಕು 116ರ ಶಾಸನ ಪಾಠ
ಸಾಧಾರಣ ಮಟ್ಟಿಗೆ ಚೆನ್ನಾಗಿದೆ. ಶ್ರೀವಿಕ್ರಮನ ನಂತರ ಅವನ ಮಗ ಒಂದನೆಯ ಶಿವಮಾರನ ಕುಳಗಾಣ
ತಾಮ್ರಪಟದಲ್ಲಿ ಕೆಲವು ಸಾಲುಗಳ ಕನ್ನಡ ಬರಹವಿದ್ದು ಅದು ಕನ್ನಡ ಭಾಷೆಯ ಪ್ರಯೋಗದಲ್ಲಿ ಒಂದು
ಮೈಲಿಗಲ್ಲಾಗಿದೆ. ಅದರ ಪಾಠ: ಇಂತಿದೆ. 36 ಸಾಲುಗಳ ಈ ಶಾಸನದಲ್ಲಿ ಮೊದಲ 16
ಸಾಲುಗಳು ಸಂಸ್ಕೃತದಲ್ಲಿದ್ದು ಉಳಿದ ಭಾಗ ಕನ್ನಡ ದಲ್ಲಿದೆ.
ಪತಿಃ
ಪೃಥಿವೀಂ ಕೊಡಗೂನ್ನಾಡಾ ಕೆಲ್ಲಿಪುಸೂರಾ ಚೇದಿಅಕ್ಕೆ ಕರ್ಗುಲಪ್ಪೊಲತ್ತಟುವಳ್ಳು ವೇರೆಉಂ
ವಸದಿಗಾಲುಂ ಎರಡು ಕಳನಿಉಂ ತೋಟ್ಟಮುಂ ಮನೆತ್ತಾನಮು(ಂ) ಪೃಥ್ವಿವೀ ಕೊಂಗಣಿ ಮುತ್ತರಸರ್
ಅನುಮತದೊಳಮ್ ಪಲ್ಲವೇಳಾರಸರ್ ಪೊಯ್ದಾರ್ ಕೊಕಂದಿಯುಂ [ಮೈ]ಲಕರೆಯುಂ ಮೇಲ್ಪಾಳ ಚಾದಿಗಾಲು
ಕೋಲಿಗನ್ಕೆರೆಕ್ಕಾಲು ಒಂನ್ದು ತೋಟ್ಟಮುಂ ಆರುಕಳನಿಉಮ್ಪೃಥಿವೀಕೊಂಗುಣಿ
ಮುತ್ತರಸರ್ ಅನುಮತದೊಳಮ್ ಗಂಞ್ಗೆನಾಡ ಕಣ್ಣಮನ್ ಪೊಯ್ದಾರ್ ಚನ್ತಸೇನಾಚಾರ್ಯ್ಯ ಕರ್ತ್ತಾರರ್ ಆಗ ಆದರ್ಕೆ ಸಾಕ್ಷಿ ಕೆಲ್ಲಿಪುಸೂರ್
ಪನ್ನಿರ್ವರುಮ್ ಆಯ್ಸಾಮನ್ತರುಮ್ ನಾಲತ್ತಾಣಿಉಂ. ಇದಾನಳಿದೊನ್ ಪಂಞ್ಚಮಹಾಪಾತಗನಪ್ಪೊನ್
ಮಾರಗೊಟ್ಟೆರರ್ ಒನ್ದು ತೋಟ್ಟಮ್ ಪೊಯ್ದಾರ್ ದೇವರಾ ಪಸುಗೊಟ್ಟು ಒಂದು ತೋಟ್ಟಮ್ ಕೊಣ್ಡತ್ತು ಗಂಜೆನಾಡಕ್. ಕಣ್ಣಮ್ಮನ್
ಕೊಡಗೂನ್ರ್ನಾಡಾಳ ಒರಂಕಲ್ವಾಯ್ಗರುಂ ಸೀಪಾಲ್ವೋಯ್ಗರುಂ
ಇವ್ರ್ವರುಮ್ ತುಪ್ಪೂರಾಳೆ ಅರಸರಾನ್ ಅನುಮತಪ್ಪಡಿಸಿ ಪೊಯ್ದುದು.ತುಳ್ದಿದಲ್ ಕಾಲ್ಕಿಲ್ಲಿ
ಪುಸೂರ್ ಚಿದಿಯಕ್ಕೆ,........ ಮೇಲ್ಪಾಳುಂ ಕೋಲಿಗನ್ಕೆರೆಕ್ಕಾಲುಂ ಕರ್ಗುಲದಾಪೊಲ
ತ್ತಟುವಳ್ಳುವೆರೆಉಂ ಏಳು ಕಳನಿ ಉಂ ನಾಲ್ಗುತೋಟ್ಟಮುಂ ಮನೆತ್ತಾಣನದು
ಚನ್ದ್ರಸೇನಾಚಾರ್ಯರ್ಕೆ ಉದಪೂವ್ರ್ವ ಕೊಟ್ಟಾರ್
ಅದಕ್ರ್ಕೇ ಸಾಕ್ಷಿ ಕೊಟ್ಟೆಳರುಂ ಕಾರೆ ಅರಕ.( 2ಂ2: ಗಂಗ-ಶಿವಮಾರ1:ಕಾಲ.ಸು.7-8
ನೇ ಶತಮಾನ)
ಈ
ಶಾಸನದಲ್ಲಿಯ 17ರಿಂದ22ನೆಯ
ಸಾಲುಗಳ ವರೆಗೆ ಕನ್ನಡ ಶಾಸನದ ಪರಿಪೂರ್ಣ ಚೌಕಟ್ಟುಗಳಲ್ಲಿ ಬರಹವಿದೆ. 25ರಿಂದ27ರ
ವರೆಗೆ ಮತ್ತೊಂದು ದತ್ತಿ ವರ್ಣಿತವಾಗಿದ್ದು ಕೊನೆಯ ಸಾಲುಗಳು ಮೊದಲಿನ ದತ್ತಿಯ
ಪುನರಾವರ್ತನವಾಗಿದೆ. ಇದರಲ್ಲಿ ಕೆರೆಕ್ಕಾಲು (ಎರಡು ಸಲ) ಕರ್ಗುಲಪ್ಪೊಲ, ಮನೆತ್ತನ
(ಎರಡು ಸಾರೆ) ಅನುಮತಪ್ಪಡಿಸಿ, ಹೀಗೆ ಆರೇಳು ಸಾರೆ ದ್ವಿತ್ವಸಂಧಿ
ಪ್ರಯೋಗಗಳಿವೆ. ತೋಟ್ಟ, ಕೋಟ್ಟೆ ಎಂಬ ಶಬ್ದ ರೂಪ. ಚನ್ದ್ರಸೇನಾಚಾರ್ಯರ್ಕ್ಕೆಎಂಬ ವಿಶಿಷ್ಟ ಚತುರ್ಥಿ ಕೋಲಿಗನ್ಕೆರೆಕ್ಕಾಲು ಎಂಬ ಷಷ್ಠಿ ನಾಲ್ಕು (ನಾಲ್ಕು) ನಾಲ್ ಎಂಬ ಸಂಖ್ಯಾ ರೂಪ
ಪೊಯ್ದಾರ್ ಎಂಬ ಕ್ರಿಯಾಪದ ಮುಂತಾದ ಹಲವಾರು ಅಪೂರ್ವ ಪ್ರಯೋಗಗಳು ಇದರಲ್ಲಿವೆ. ಇಷ್ಟು ಪ್ರಮಾಣದಲ್ಲಿ
ಪುರಾತನ ಕನ್ನಡದ ವೈಶಿಷ್ಟ್ಯಗಳು ಬೇರೆ ಯಾವ ಶಾಸನದಲ್ಲೂ ಕಂಡುಬರುವುದಿಲ್ಲ್ಲ. ಆದಾಗ್ಯೂ ಇದು
ತಾಮ್ರ ಶಾಸನವೆಂಬುದನ್ನು ಮರೆಯುವಂತಿಲ್ಲ. ಎಂದರೆ ಅಂದು ಪಂಡಿತವರ್ಗದಲ್ಲಿ ರೂಢಿಯಲ್ಲಿದ್ದ
ಸಾಹಿತ್ಯಕ ಗದ್ಯವನ್ನು ಈ ಶಾಸನ ಪ್ರತಿನಿಧಿಸುತ್ತದೆಯೆಂದು ಊಹೆ ಮಾಡಲು ಅವಕಾಶವಿದೆ.
ಈ
ಶತಮಾನದ ಉತ್ತರಾರ್ಧದಲ್ಲಿ ಅಳುಪ ಮತ್ತು ಸಾಂತರರ ಕೆಲವು ಅಚ್ಚುಕಟ್ಟಾದ ಶಾಸನಗಳಿವೆ. ಒಂದನೆಯ
ಚಿತ್ರವಾಹನ,
ಗುಣಸಾಗರನ ಕಿಗ್ಗದ ಶಾಸನಗಳು, ಸಾಂತರರ ಖಾಜಿಹೊಸಹಳ್ಳಿ, ಮಾಚೇನಹಳ್ಳಿ
ಮತ್ತು ಕಿಗ್ಗದ ಶಾಸನಗಳು ಗಮನಾರ್ಹವಾಗಿವೆ.
ನಿದರ್ಶನಕ್ಕೆ:ಖಾಜಿಹೊಸಹಳ್ಳಿ ಶಾಸನ:
ಸ್ವಸ್ತಿ ಶ್ರೀಮತ್ ಬಿ
ನಯಾದಿತ್ಯರಸರ್
ಕೊರಕುಣ್ಡಾಳ್ಕೆ ಮೂನೂರು
ಆಳುತ್ತಿಳ್ದು ತಿಳ್ಗಲೂರ ತಾ
ಯೆನ್ದಯರ ಪೂರ್ವ್ವಜರಾ ಪಡೆ
ದೊದು, ಉತ್ತಮಮೆಣ್ಚಿ, ಎಮ್ಬಾ
ಕಳ
ನಿ ಕಾಮೆಯಂಗೆ ಸರ್ವ್ವಪಾದ ಪರಿ
ಹಾರಮಾಗೆ ಬಿಟ್ಟುಕೊಟ್ಟರಿದಾನ್
ಅಳಿವೊನ್
ಸಾಸಿರ್ವ್ವಾಪ್ರ್ಪಾರ್ವ್ವರಂ ಸಾ
ಸಿರ ಕವಿಲೆಯು ಕೊನ್ದ ಪಞ್ಚಮಹಾ
ಪಾತಕನಕ್ಕುಂ ಆವೊನಾವೊನ್ ರಕ್ಷಿಕುಂ
ಆವಂಗೆ ಧರ್ಮ್ಮಂ ಚನ್ದ್ರಾದಿತ್ಯ ಉಳ್ಳಿಣ ನಿಲ್ಕೆ.
ಇದರಲ್ಲಿಯ ಚಿಕ್ಕ ಚಿಕ್ಕ ವಾಕ್ಯಗಳು ಇದ್ದ ಸಂಗತಿಯನ್ನು ಕ್ರಮವಾಗಿ ಹೇಳುವಲ್ಲಿ
ಸಾರ್ಥಕ್ಯ ಪಡೆದಿವೆ. ಮೊದಲಿನಿಂದ ಕೊನೆಯ ವರೆಗೆ ಶಾಸನದಲ್ಲಿ ಯಾವ ತೊಡಕು ಇಲ್ಲ ತಪ್ಪು ಅಥವಾ
ಸಂದಿಗ್ಧ ಭಾಗಗಳು ತೀರ ಕಡಿಮೆ ಎಂದೆನಿಸುತ್ತದೆ.
ಸು.685 ರ
ಕಾಲದ ವಿನಯಾದಿತ್ಯ ರಾಜಾಶ್ರಯನ ಬಳ್ಳಿಗಾಮೆ ಶಾಸನವು ಉತ್ತಮ ಗದ್ಯ ಶಾಸನಗಳಲ್ಲಿ ಒಂದಾಗಿದೆ. ಈತನು
ಆಳ್ವಿಕೆ ನಡೆಸುತ್ತಿರುವ ಸಂದರ್ಭದಲ್ಲಿ ಸೇಂದ್ರಕ ಪೊಗಿಲ್ಲಿಕಾಂದರ್ಬ ಎಂಬ ಅಧಿಕಾರಿಯ ಮುಖಾಂತರ
ಪೆರಿಯ ಒಸಗೆ,
ಅಪುತ್ರಕ ಮತ್ತು ಅಲವಣಗಳನ್ನು ದಾನವಾಗಿ ಬಿಟ್ಟ ಸಂಗತಿಯನ್ನು ತಿಳಿಸುತ್ತದೆ. ಮೊದಲ
ಹದಿನೆಂಟು ಸಾಲುಗಳು ಅವಶ್ಯಕವಾದ ಬಿಗುವಿನಿಂದ ಕೂಡಿವೆ. ಈ ಶಾಸನದ ಫಲಶ್ರುತಿ ಶಾಸನದಲ್ಲಿ ಬರುವ` ಇದಾನ್
ಕೊಳೆ ಈರ್ ಎಳ್ಪತ್ತರುಳಂ ಒಕ್ಕೊಲ್ತನಂ ಕೆಯ್ವೊನ್ ಆ
ವಿತ್ತಿದಲ್ಲಿ ವೆಳೆಯಾದೆ ಕೆಡುಗೆ' ಇದಾನ್ ಕಾದು ಸಲ್ವೋನ್ ಪರಮ ಕಲ್ಯಾಣ
ಭಾಗಿಗಳ್ ಅಪ್ಪೋರ್ (110: ಬಾದಾಮಿ ಚಾಲುಕ್ಯ- ವಿನಯಾದಿತ್ಯ
ರಾಜಾಶ್ರಯ:ಕಾಲ.ಸು.685) ಇತ್ಯಾದಿ ವಾಕ್ಯಗಳು ಗಮನಾರ್ಹವಾಗಿವೆ. ಪೂರ್ವದ ಹಳಗನ್ನಡದ ಗದ್ಯಭಾಷೆಯ ಸ್ವರೂಪವನ್ನು ಈ ಶಾಸನದ ಪಠ್ಯವು ಪ್ರತಿನಿಧಿಸುತ್ತದೆ ಎಂದೆನ್ನ
ಬಹುದು.
ಕ್ರಿಶ.ಸು.7,8ನೆಯ ಶತಮಾನಗಳ ಕನ್ನಡ ಗದ್ಯ ಭಾಷೆಯಶಾಸನಗಳು, ನಿರೂಪಿಸುವ
ವಸ್ತುವಿನ ವಿವರಗಳಿಗೆ ಸಾಮಾನ್ಯವಾಗಿ ಪ್ರವೇಶಿಸುವುದಿಲ್ಲ. ಮುಖ್ಯವಿಷಯದ ಉಲ್ಲೇಖವನ್ನಷ್ಟೇ `ನಿರ್ಭಾವ
ಗದ್ಯಧ್ವನಿ’ಯಲ್ಲಿ ವರದಿ ಮಾಡಿ ಕೃತಕೃತ್ಯವಾದಂತೆ ತೋರುತ್ತದೆ. ಇಲ್ಲಿಯೂ ಅವು ಒಂದು
ಪೂರ್ವಯೋಜಿತವಾದ ಚೌಕಟ್ಟಿನಲ್ಲಿಯೇ ಲಿಖಿತವಾಗಿರುತ್ತವೆ. ಶಾಸನದ ಕೊನೆಗೆ ಕೊಟ್ಟ ದಾನವನ್ನು
ಅಳಿಯುವಾತನಿಗೆ ಪಾಪ ಬರುತ್ತದೆಂದು ತಿಳಿಸುವ ಸಾಂಪ್ರಾದಾಯಿಕ ಶಾಪಾಶಯ ವಾಕ್ಯವಿರುತ್ತದೆ. ಮುಖ್ಯ
ವಿಷಯ ಮತ್ತು ಈ ಸಾಂಪ್ರಾದಾಯಿಕ ಶಾಪವಾಕ್ಯ ಸ್ವತಂತ್ರ ಶಾಸನವಾಗಿ ಲಿಖಿತವಾಗಿರುವಂತೆಯೇ
ಒಮ್ಮೊಮ್ಮೆ ಸಂಸ್ಕೃತ ಶಾಸನವೊಂದರ ಕೊನೆಯಲ್ಲಿ ಸೇರಿಕೊಂಡು ಬಂದಿರುವದು ಕೂಡ ಉಂಟು. ಸಂಸ್ಕೃತದ
ಶಾಸನ ಭಾಗ ಗದ್ಯಪದ್ಯಗಳಲ್ಲಿದ್ದರೆ ಹೀಗೆ ತೇಪೆಗೊಂಡು ಬರುವ ಕನ್ನಡ ಶಾಸನ ಭಾಗ ಗದ್ಯ
ಮಾತ್ರದಲ್ಲಿಯೇ ಇರುವುದು ಕುತೂಹಲಕರವಾಗಿದೆ. ಸಂಸ್ಕೃತ ಭಾಷೆಯಲ್ಲಿ ರಚಿತವಾದ ಗಂಗ ಕದಂಬ ಮತ್ತು
ಬಾದಾಮಿ ಚಾಲುಕ್ಯರ ಕಾಲದ ಶಾಸನಗಳು ಉತ್ತಮ ಸಾಹಿತ್ಯದ ಲಕ್ಷಣಗಳನ್ನು ಪ್ರಕಟಿಸುವ ಉತ್ಕೃಷ್ಟ
ಗದ್ಯಪದ್ಯಗಳಿಂದ ಅವುಗಳ ಯಥೋಚಿತ ವ್ಯಾಪ್ತಿ ವೈವಿಧ್ಯಗಳಿಂದ ಆಕರ್ಷಣೀಯವಾಗಿ ತೋರುತ್ತಿರುವುದಕ್ಕೆ
ತಾಳಗುಂದ ಐಹೊಳೆ ಮೊದಲಾದ ಕಡೆಯ ಸಂಸ್ಕೃತ ಭಾಷೆಯ ಶಾಸನಗಳನ್ನು ಉದಾಹರಿಸಬಹುದಾಗಿದೆ. ಇದೇ ಅವಧಿಯ
ಕನ್ನಡ ಶಾಸನಗಳಲ್ಲಿ ಭಾಷೆ ಶೈಲಿ, ಛಂದಸ್ಸುಗಳ ದೃಷ್ಟಿಯಿಂದ ಮೆಚ್ಚತಕ್ಕ
ಅಂಶಗಳು ಕೆಲವೆಡೆ ಕಂಡುಬರುತ್ತವೆ. ಈ ಶಾಸನಗಳ ಭಾಷೆಯ ಉದ್ದೇಶ, ಪ್ರಯೋಜನ
ಮುಂತಾದ ಸಾಹಿತ್ಯಕ ಉದ್ದೇಶ ಪ್ರಯೋಜನ ಇವುಗಳಿಂದ ಭಿನ್ನವಾಗಿದ್ದಿರಬೇಕು ಎಂದೆನಿಸುತ್ತದೆ. ಆದರೆ
ಸಂಸ್ಕೃತ ಭಾಷೆಯ ಪ್ರಶಸ್ತಿ ಶಾಸನಗಳು ಈ ವೇಳೆಗಾಗಲೇ ಉತ್ತಮ ಮಾದರಿಗಳನ್ನು ಸಾಹಿತ್ಯದೃಷ್ಟಿಯಿಂದ
ಸಿದ್ಧಪಡಿಸಿರಬೇಕಾದರೆ ಕನ್ನಡ ಅದರ ಪ್ರಭಾವಕ್ಕೆ ಒಳಗಾಗಿರಲಿಲ್ಲವೇ ಎಂಬ ಅನುಮಾನ ವಿದ್ವತ್
ವಲಯವನ್ನು ಕಾಡದೆ ಇರದು. ಜೊತೆಗೆ ಆ ಅರಸು
ಮನೆತನಗಳು ಸಂಸ್ಕೃತ ಭಾಷಾಭಿಮಾನದಿಂದ ಅದರ ಪರಂಪರಾಗತ ಸಾಹಿತ್ಯ ಸಂಪನ್ನತೆಗೆ ಮನಸೋತು ಕನ್ನಡವನ್ನು ಕಡೆಗಣಿಸಿದರೇ? ಕನ್ನಡ
ನಾಡಿನವರಾಗಿಯೂ ಕವಿಗಳು ಸಂಸ್ಕೃತ ಕವಿತ್ವರಚನೆ ತಮ್ಮ ಪಾಡಿತ್ಯ ಪರಿಶ್ರಮಗಳ ನಿಕಷವೆಂದು ತಿಳಿದು
ಅದನ್ನೇ ಅನುಸರಿಸಿದರೇ ಇತ್ಯಾದಿ ಹಲವು ಬಗೆಯ ಪ್ರಶ್ನೆಗಳೂ ಸಹಜವಾಗಿ ಉದ್ಭವಿಸುತ್ತವೆ.
ಇಂಥ
ಸಂದರ್ಭಗಳು ಏನಿದ್ದರೂ ಸು. 6 ರಿಂದ 8ನೆಯ
ಶತಮಾನದವರೆಗಿನ ಕನ್ನಡ ಗದ್ಯಶಾಸನಗಳಲ್ಲಿ ಮಾತ್ರ ಕಂಡುಬರುತ್ತವೆ. ಇವು ಕನ್ನಡ ಸಾಹಿತ್ಯದ
ಮಾದರಿಗಳ ರೀತಿಯ ರಚನೆಗಳಾಗಿಲ್ಲವೆಂಬುದು ನಿಜ. ಪ್ರಾಯಃ ಆಗಿನ್ನೂ ಕನ್ನಡ
ಕಣ್ತೆರೆಯುತ್ತಿದ್ದಿರಬಹುದು. ಹೆಚ್ಚು ಪಾಲು ಗದ್ಯ ಶಾಸನಗಳು ಸಾಹಿತ್ಯ ದೃಷ್ಟಿಯಿಂದ
ನೀರಸವೆಂಬುದು ನಿಜವಾದರೂ ಕೆಲವು ಶಾಸನಗಳಲ್ಲಿ ಒಳ್ಳೆಯ ಕಾವ್ಯದ ಎಳೆಗಳು ಅಲ್ಲಲ್ಲಿ ಮಿಂಚಿರುವುದು
ಗಮನಿಸಬಹುದಾಗಿದೆ. ನಿದರ್ಶನಕ್ಕೆ ಈಗಾಗಲೇ ವಿದ್ವಾಂಸರು ಗಮನಿಸಿರುವ ಕದಂಬ ಕಾಕುತ್ಸ್ಥವರ್ಮನ
ಕಾಲದ್ದೆನ್ನಲಾದ ಹಲ್ಮಿಡಿ ಶಾಸನ (ಸು.450)ಹಾಗೂ
ಶಿವಮೊಗ್ಗ ಜಿಲ್ಲೆಯ ಸೊರಬದ ಒಂದು ವೀರಗಲ್ಲು(ಸು.800)ಗಳ
ಪಾಠಗಳನ್ನು ಹೆಸರಿಸ ಬಹುದಾಗಿದೆ.
ಅಳುಪ, ಗಂಗ, ಬಾದಾಮಿ
ಚಾಲುಕ್ಯ ಈ ಮನೆತನಗಳ ಕಾಲದ ಕೆಲವು ಪ್ರಾಚೀನ ಗದ್ಯ ಶಾಸನಗಳು,ಸು.ಕ್ರಿ.ಶ 6
ರಿಂದ 8ನೆಯ
ಶತಮಾನಕ್ಕೆ ಸೇರಿದವು. ಮುಖ್ಯವಾಗಿ ಊರಳಿವು ಮುಂತಾದ ಸಂದರ್ಭಗಳಲ್ಲಿ ಕಾದಾಡಿ ಪ್ರಾಣಾರ್ಪಣೆ
ಮಾಡಿದ ವೀರನ ಸ್ಮರಣೆ,ಭೂದಾನ ಗೋದಾನಗಳ ಪ್ರಕಟಣೆ,ತೆರಿಗೆ
ವಿನಾಯಿತಿ,ದೇವಸ್ಥಾನ
ಅಥವಾ ಅದರ ಭಾಗಗಳ ನಿರ್ಮಾಣ ಈ ಮುಂತಾದವುಗಳನ್ನು ದಾಖಲಿಸುತ್ತವೆ. ಇವುಗಳಲ್ಲಿ ಹೆಚ್ಚಿನವು
ಪ್ರಮಾಣದಲ್ಲಿ ಚಿಕ್ಕವು; ಬಲುಮಟ್ಟಿಗೆ ಪ್ರತಿಪಾದಿಸಿದ ವಿಷಯಗಳು ಶುಷ್ಕ ವರದಿಗಳಿಂದ
ಕೂಡಿದವುಗಳಾಗಿವೆ. ಇವುಗಳಲ್ಲಿ ಮನಸ್ಸನ್ನು ಸೆರೆಹಿಡಿಯುವ ಸಾಹಿತ್ಯಾಂಶಗಳೇನು ಕಂಡುಬರುವುದಿಲ್ಲ.
ಆದರೆ ಬೆಡಗಿಲ್ಲದ ಈ ನುಡಿಗಳಲ್ಲಿ
ಅಚ್ಚಕನ್ನಡತನವೆಂಬ ಗುಣ ಅಡಗಿರುವುದನ್ನು ಗಮನಿಸ ಬಹುದಾಗಿದೆ.
ನಿದರ್ಶನಕ್ಕೆ:ಗಂಗದೊರೆ ಶ್ರೀಪುರುಷನ ಕಾಲದ ಬಿಡಿ
ಶಾಸನಗಳನ್ನು ಉದಾಹರಿಸ ಬಹುದಾಗಿದೆ.
1. ಸ್ವಸ್ತಿಶ್ರೀ ಶ್ರೀಪುರುಷ ಮಹಾರಾಜರ್
ಪೃಥುವೀರಾಜ್ಯಂ ಗೆಯೆ ಕೂಡಲೂರ್ಪಾಡಿ ಒಡೆಯ ನನ್ದಿಕಾಡವಾ ಎರನಾಗನಾ ವ್ಯವಹಾರದ್ ಅನ್ತರಂ ಸಾಲಂ
ಇಲ್ಲಾಂ ಎಕ್ಕೆ ಸಾಕ್ಷಿ ಲೋಕಾದಿತ್ಯ ಎಳ ಅರಸರ್ ಮ್ಮಗನ್ದಿರ್ ಮ್ಮಲ್ಲಡಿಯಂ ಕದಂಬೂರಾ ನಾಲ್ಪದಿನ್ಬರು
ವಿದತ್ತೂರು ನಾಮಿದ ಪಂದಮು ಅರಿಯ ಈರೆಒತ್ತರಾ ಪೊರಳ್ತುಟ್ಟುರ ಕಿಡಿವಿತ್ತು
( 221: ಗಂಗ
ಶ್ರೀಪುರುಷ:ಕಾಲ ಕ್ರಿ.ಶ.76ಂ)
2.ಎರೆಯಪ್ಪೋನ್ ಕೊವಳಾಲನಾಡು ಮೂನೂರುಂ
ಗಙ್ಗರು ಸಾಸಿರಮುಮ್ ಆಳುತ್ತಿರೆ ಕಂಮ್ಪಿಲಿಗೆ ಪಡೆವೋದಲ್ಲಿ ಕೊಮಾಲರಾ ಮಗನ್ ಪಾಣ್ದಪ್ಪ
ಕಾಳೆಗದೊಳ್ ಸತ್ತಲ್ಲಿ ಅವನ್ಗೆ ದುಗ್ಗಮಾರರಾ ಕೆಯ್ದ ಪ್ರಸಾದರ್ಮ ಅಪ್ಪದು ಸಾನ್ತನೂರೂಂ
ಎರೆಡಿಯೂರುಳಂ ವನ್ದ ತೂಮ್ಬ ಕಳನಿಯಂ ಅವರ ಮನೆಯು ವಾಳ್ಗಳ್ಚ್ ಪ್ರಸಾದ ಚ್ಗೆಯ್ದಾರ್ (224: ಗಂಗ
ಶ್ರೀಪುರುಷ:ಕಾಲ ಕ್ರಿ.ಶ.767)
3. ಅನ್ದು ತಳಿಕ್ಕಾಡಾ
ಇರ್ಪತ್ತ್ ಅಯ್ವರ್ಕಂ ಸಿನ್ದರಸರುಂ ದೇವಸತ್ತಿ ಅರಸರುಂ ಮನಸಿಜರುಂ ವಿನ್ನಪ್ಪ ಕೆಯೆ ಪರಮಕೂಳರ್
ಮ್ಮಗನ್ದಿರ್ ಅರಕೇಸಿಗಳು ಅಣತ್ತಿ ಆಗಪಳ್ಳಿಲ್ ವಿಟ್ಟು ಪ್ರಸಾದಂ ಗೆಯ್ದಾರ್ (221: ಗಂಗ
ಶ್ರೀಪುರುಷ: ಕಾಲ ಕ್ರಿ.ಶ.726)
4.ಸಿಙ್ಗದೀಕ್ಷರ್ ಬ್ಬಾಳಾಳ್ ಅರಟ್ಟಿತೀರಾರ್
ಕೂಡಲೂರ್ ಆಳೆ ಗೊಟ್ಟೆಮಡಿ ಒಡೆಯಾರ್ ಪೆರಾಳ್ವಿನ ಕೆಯ
ಅರಟ್ಟಿಗ ತಳರ ಕೂಡಲೂರ ವೃತ್ತಿ ನೊಕ್ಕಿ ಊರೊಳೆ ಅಗ್ಗಡಿಕಳೋಸ ಕೊಟ್ಟ ನೆಲ ತೆನೆನ್ದಕ
ಕಾಡೆರಕೂ ಸಾಕ್ಷಿ ಕೂಡಲೂರ್ ಪ್ಪಙ್ನುಲರು ಎಳಮಡಿಯರು ಬದರಿಯರುಂ ಮದುಗರುಂ ಕೋನಬ್ಬರುಂ (242: ಗಂಗ
ಶ್ರೀಪುರುಷ: ಕಾಲ ಕ್ರಿ.ಶ.8 ನೆ ಶತಮಾನ)
ಈ ಗದ್ಯ ಶಾಸನಗಳು ‘ವಡ್ಡಾರಾಧನೆಯಲ್ಲಿ ಮುಂದೆ ಕಂಡಂಥ ದೇಸಿಕವಿತ್ವದ ಮುನ್ಸೂಚನೆಗಳನ್ನು
ಕೆಲಮಟ್ಟಿಗೆ ಕೊಡುತ್ತವೆ. “ಪೋಗಿ ಪೋಗಿ ಕೊಳ್ವೋರುಂ ಕೊಂಡು ಉಣೋರುಂ”, “ಕೆಡಿಸಿದೋನುಂ
ಕೇಡು ವೇಡಿದೋನುಂ ಓತೋನುಂ ಒದವಿದೋನುಂ” ಎಂಬಂತಹ
ವರ್ಣಾವೃತ್ತಿಗೆ ಎಡೆಗೊಟ್ಟ ಒಂದೆರಡು ವಾಕ್ಯಗಳಲ್ಲಿ ಸಾಹಿತ್ಯದ ಸೊಗಸು ಸ್ವಲ್ಪಮಟ್ಟಿಗೆ ಕಂಡು
ಬರುತ್ತದೆ. ರಾಷ್ಟ್ರಕೂಟರು ಹಾಗೂ ನಂತರದ ಅರಸರ ಕಾಲದ ಕೆಲವು ಗದ್ಯಶಾಸನಗಳಲ್ಲಿ ಕೆಲಮಟ್ಟಿಗೆ
ಕಾವ್ಯಾತ್ಮಕ ಅಂಶಗಳನ್ನು ಗುರುತಿಸ ಬಹುದಾಗಿದೆ. ಚಾಲುಕ್ಯರ 2ನೇಪುಲಿಕೇಶಿಯ
ಕಾಲದ ಗದ್ದೆಮನೆಯಲ್ಲಿ ದೊರೆತ ವೀರಗಲ್ಲಿನ ಶಾಸನವು ಪೆಟ್ಟಣಿ ಎಂಬುವನ ಶೌರ್ಯವನ್ನು
ಕೀರ್ತಿಸಿದೆ. ಚಾಲುಕ್ಯರ ಇಮ್ಮಡಿ ಪುಲಕೇಶಿಯ ಕಾಲದ ಗದ್ದೆಮನೆಯ ವೀರಗಲ್ಲಿನ ಶಾಸನದಲ್ಲಿ
ಪೆಟ್ಟಣಿಯೆಂಬುವನ ಸಾಹಸವನ್ನು ನಿರೂಪಿಸಿರುವುದು ಹೀಗೆ:
“ಸ್ವಸ್ತಿಶ್ರೀ ಶಿಲಾದಿತ್ಯನ್ ದಿಶಾಂಭರ್ಗನ್ ಆಕೆವಾಳನ್ ಅಗ್ಗಳಕಂಟಕನ್ ಪೇರಾಳ್ಕೆ ವರೆ ಪೆಟ್ಟಣಿ
ಸಂತ್ಯಾಂಕನಟ್ಟುಳ್ವ ಭಟನ್ ಬೆದರೆ ಮಹೇಂದ್ರನ್ ಬೇಡರ ರಾಯರ ಮಲಪ್ಪರ
ಕಾಳೆಗದುಳೆ ಯಿರಿದು ಸ್ವರ್ಗಾಲಯಕ್ಕೇರಿದನ್”
ಈ ವೀರಗಲ್ಲಿನ ಭಾಷೆಶೈಲಿಗಳನ್ನು, ನಂತರ
ಕಾಲದ 11ನೇ
ಶತಮಾನದ ಕಲ್ಯಾಣ ಚಾಲುಕ್ಯರ ಆರನೆಯ ವಿಕ್ರಮಾದಿತ್ಯನ ಕೊರಗೋಡು ಗ್ರಾಮದ ದೇವೆಗೌಡ ಮಲ್ಲಗೌಡರ
ತುರುಗಾಳೆಗದ ವಿವರವನ್ನು ಕುರಿತ ಈ ಕೆಳಕಂಡ
ವೀರಗಲ್ಲಿನ ಗದ್ಯದ ಭಾಷೆ ಶೈಲಿಗಳೊಂದಿಗೆ ಹೋಲಿಸಿ ನೋಡಬಹುದು. “ಶ್ರೀಮನ್ಮಹಾಮಂಡೆಳೇಶ್ವರಂ ಜಗದೇವರಸರ ಬೆಸದಿಂ
ಮದಸಾಲೆಯ ಕಾಳರಸಂ ಸಮಸ್ತ ಸಾಮಾತ್ತಿಯಂ ಬೆರೆಸು ಬಂದು ಶ್ರೀಮದನಾದಿಯಗ್ರಹಾರಂ ಕುಪ್ಪಗುಡೆಯ ಹಳ್ಳಿ
ಕೊರಕೋಡನಿರಿದು ತುರುವಂ ಕೊಂಡುಡೆಯುರ್ಚ್ಚಿ ಹೋಹಾಗಳಲ್ಲಿ ಹುಟ್ಟಿದ ಬಾವಗಾವುಂಡನ ಮಗಂದಿರು
ದೇವಗಾವುಂಡನುಂ ಮಲ್ಲಗಾವುಂಡನುಂ ಬಿಲ್ಲನಂಬುಕೊಂಡಿರ್ವ್ವರುಂ ಹೆಬ್ಬಾಗಿಲೊಳಡ್ಡಂ ನಿಂದು ಗುಹೆಯ
ಬಾಗಿಲೊಳು ಸಿಂಹನಿರ್ಪ್ಪಂತೆ ತಾಗಿ ತಳ್ತೆಸುವಾಗಳು ಕಾರ ಮಳೆ ಕರೆದಂತೆಯುಂ ಕಡಂದುರ ಹುಟ್ಟಿಯಂ ಕೆಣಕಿದಂತೆಯುಂ... ಕುರಿಯ ಹಿಂಡಂ ತೋಳಂ ಪೊಕ್ಕಂತೆಯುಂ
ಕರ್ಬ್ಬುದೋಂಟುವನಾನೆ ಪೊಕ್ಕಂತೆಯುಂ...” ಎಂದು ವರ್ಣಿಸಲ್ಪಟ್ಟಿದೆ. ಈ ಎರಡು ಶಾಸನಗಳ ಗದ್ಯದ ಭಾಷೆಯ ವಿವರಣೆಯಿಂದ ಕನ್ನಡ
ಗದ್ಯಭಾಷೆಯ ವಿಕಸನದ ಬೆಳವಣಿಗೆಯಲ್ಲಿ ನಡೆದಿರುವ
ಪರಿಷ್ಕಾರ ಯಾವ ರೀತಿಯದು ಎನ್ನುವುದನ್ನು
ಗುರುತಿಸ ಬಹುದಾಗಿದೆ. ಇಲ್ಲಿ ಭಾಷೆ ಶೈಲಿಗಳು ಹೆಚ್ಚು ಪರಿಷ್ಕೃತವಾಗಿರುವುದೇ ಅಲ್ಲದೆ, ಸಾಹಿತ್ಯದ
ಸೊಗಸು ಇಣುಕಿ ಹಾಕಿರುವುದನ್ನು ಕಾಣಬಹುದು.
ಪ್ರಾರಂಭ ಕಾಲದಿಂದಲೂ ಕನ್ನಡವು ವ್ಯವಹಾರ ಭಾಷೆಯಾಗಿ ನಂತರದಲ್ಲಿ ಲಿಪಿರೂಪ ಪಡೆಯುವ
ವಿವರದ ಇತಿಹಾಸವನ್ನು ಎಂಟನೆಯ ಶತಮಾನದವರೆಗಿನ
ಶಾಸನಗಳು ಸೂಚಿಸುತ್ತವೆ. ಆರಂಭದಿಂದ ಸಂಸ್ಕೃತ ಭಾಷೆಯ ಶಾಸನಗಳ ನಡುವೆ ಕನ್ನಡವು
ತೂರಿಕೊಂಡು ಬರಲು ನಡೆಸುತ್ತಿದ್ದ ಅದರ ಪ್ರಯತ್ನ 6ನೆಯ
ಶತಮಾನಕ್ಕಾಗಲೇ ಕಂಡು ಬರುತ್ತಿದ್ದು ಅಲ್ಲಲ್ಲಿ ಕೆಲವು ಶಿಲಾ ಶಾಸನಗಳಿಗೆ ನೇರವಾಗಿ
ಪ್ರವೇಶಿಸಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಅನಂತರದಲ್ಲಿ ಪ್ರಗತಿ ಕಂಡು ಬರುತ್ತದೆ. ಎಂಟನೆಯ
ಶತಮಾನದಷ್ಟೊತ್ತಿಗೆ ಯಾವ ನಿರ್ಬಂಧವೂ ಇಲ್ಲದೆ ವ್ಯವಹಾರದ ಎಲ್ಲ ವಿಷಯಗಳಿಗೂ ಕನ್ನಡವು
ಪ್ರಯೋಗಗೊಂಡಿರುವುದು ಸ್ಪಷ್ಟ. ಗಂಗರ ಕಾಲದ ಶಾಸನಗಳಲ್ಲಿ ಕನ್ನಡ ಭಾಷೆಯ ಕನ್ನಡತನ, ಸಂಸ್ಕೃತದ
ರೀತಿ ರಚನೆಗಳನ್ನು ಅನುಕರಿಸದ ದೇಶೀಯತೆ ವ್ಯಕ್ತಗೊಂಡಿರುವುದನ್ನು ಕಾಣಬಹುದಾಗಿದೆ. ಅದರಲ್ಲಿಯೂ
ಭೂಮಿಕಾಣಿಗಳ ಸಂಬಂಧವಾದ ವ್ಯವಹಾರದಲ್ಲಿ ಆಕಾಲದ
ಹಳ್ಳಿಗಳ ಸಾಮಾನ್ಯ ಜನರ ನಡುವಿನ ಭಾಷೆ ಎಷ್ಟು ನಿರಾಡಂಬರ,ಸಹಜ
ಆಗಿರುತ್ತಿತ್ತು ಎಂಬುದನ್ನು ಗಂಗರ ಕಾಲದ ಶಾಸನಗಳು ಅತ್ಯುತ್ತಮ ನಿದರ್ಶನಗಳಾಗಿವೆ. ಉದಾ: ಶಿವಮಾರ
ಎರೆಅಪ್ಪೋರ್ ಕುಣುಂಗಿಲ್ ನಾಡಾಳೆ ಬಿಸಿಗೂರೂಳ್
ಬಾಳ್ವ ಪ್ರಜೆಗ್ ಎಲ್ಲಂ ಕೊಟ್ಟೊದು ಕಟ್ಟಾಣೆ ಕಾರಾಣ್ಮೆ ಕೊಟ್ಟಾರ್( ಕಾಲ ಕ್ರಿ.ಶ.8
ನೇ ಶತಮಾನ)
ಕನ್ನಡ ಸಾಹಿತ್ಯದ ಪ್ರಾಚೀನ ರೂಪಗಳ ಬಗೆಗೆ ಶಾಸನಗಳ ಕೆಲವು ಮಾಹಿತಿಗಳು ಲಭ್ಯವಿವೆ. ಕ್ರಿ.ಶ.800ರ ನಗರ ತಾಲ್ಲೂಕಿನ ಹುಂಚ ಶಾಸನದಲ್ಲಿಯ ಗಂಗರಸ ಸೈಗೊಟ್ಟ ಶಿವಮಾರನ ಗಜಾಷ್ಟಕ ಎಂಬ ಒನಕೆವಾಡು ಎಂಬ
ಪ್ರಾಚೀನ ಸಾಹಿತ್ಯ ರೂಪದ ಪ್ರಸ್ತಾಪದಿಂದ ಈ ಜಾತಿಯ ದೇಶಿಯ ಪದ್ಯರಚನೆ ಕನ್ನಡದಲ್ಲಿ ಕೆಲವು
ಕಾಲದಿಂದಲೂ ನಡೆಯುತ್ತಿದ್ದುದು ಮಾತ್ರವಲ್ಲದೆ ಕವಿಗಳ ಹಾಗೂ ಲಾಕ್ಷಣಿಕರ ಮನ್ನಣೆಗೂ
ಪಾತ್ರವಾಗಿದ್ದಿತು ಎಂಬುದು ತಿಳಿದುಬರುತ್ತದೆ. ಒನಕೆವಾಡು ಎಂದರೆ ಕುಟ್ಟುವ, ಬೀಸುವ, ಕೇರುವ ಹಾಡು. ಒನಕೆವಾಡುವಿನ ಬಗೆಗೆ 10ನೇ ಶತಮಾನದ ನಂತರದ ದುರ್ಗಸಿಂಹ, ನೇಮಚಂದ್ರ, ಸುರಂಗ, ಶಾಂತಲಿಂಗದೇಶಿಕ, ಷಡಕ್ಷರಿ ಕವಿಗಳ ಕೃತಿಗಳಲ್ಲಿಯೂ ಪ್ರಸ್ತಾಪ ಇದ್ದು ಒನಕೆವಾಡು
ಶೀರ್ಷಿಕೆಯ ಕೆಲಗೆ ಕೆಲವು ತ್ರಿಪದಿಗಳು ಕಂಡುಬರುತ್ತವೆ. ಈ ಹಿನ್ನೆಲೆಯಲ್ಲಿ ಒನಕೆವಾಡು
ಎನಿಸಿಕೊಂಡ ಗಜಾಷ್ಟಕ ಕುಟ್ಟುವಾಗ ಹಾಡಲು ಬಳಸುತ್ತಿದ್ದ ತ್ರಿಪದಿ ರೂಪವಾಗಿದ್ದಿರಬಹುದು ಎಂದು
ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಅಚ್ಛಗನ್ನಡ ದೇಶಿ ಛಂದೋರೂಪದ ಬಳಕೆ ಕ್ರಿ.ಶ.700ರ ಬಾದಾಮಿ ಶಾಸನದಲ್ಲಿ ಪ್ರಥಮವಾಗಿ ಕಂಡುಬರುತ್ತದೆ. ತ್ರಿಪದಿ ರೂಪದ ಈ
ಶಾಸನವು ಕನ್ನಡ ವೀರನೊಬ್ಬನ ಸುಸಂಸ್ಕೃತವಾದ ಗುಣವೈಶಿಷ್ಟ್ಯವನ್ನು ತಿಳಿಸುತ್ತದೆ. ಪ್ರಾಚೀನ
ಕನ್ನಡ ಶಾಸನ ಸಾಹಿತ್ಯದಲ್ಲಿ ವ್ಯಕ್ತಿ ಚಿತ್ರಣಕ್ಕೆ ಪ್ರಾಧಾನ್ಯತೆ ದೊರೆತಿರುವುದು ಇದರಿಂದ
ವ್ಯಕ್ತವಾಗುತ್ತದೆ. ಬಾದಾಮಿ ಶಾಸನದ ತ್ರಿಪದಿಗಳು ಆ ಕಾಲಕ್ಕಿಂತಲೂ ಹಿಂದಿನಿಂದಲೇ ಕನ್ನಡದಲ್ಲಿ
ಪ್ರಚಲಿತವಾಗಿದ್ದ ಜನಪದ ಗೀತ ಸಾಹಿತ್ಯವಿದ್ದಿರಬೇಕು ಎಂಬ ಅರಿವನ್ನು ಮೂಡಿಸುತ್ತದೆ. ಕ್ರಿ.ಶ. ಸು. 700 ರ ಬದಾಮಿಯ ಕಪ್ಪೆ ಅರಭಟನ ಶಾಸನದ ಭಾಷೆಯ ಹೆಚ್ಚು ಭಾಗ ಕನ್ನಡ ಮತ್ತು ಒಟ್ಟು ಹತ್ತು ಸಾಲಿನ ಶಾಸನದಲ್ಲಿ ಎರಡು ಸಾಲು ಮಾತ್ರ ಸಂಸ್ಕೃತ ಭಾಷೆಯನ್ನು ಒಳಗೊಂಡಿದೆ. ಸಂಸ್ಕೃತ ಶಾಸನವನ್ನು ದಾಖಲಿಸಲು ಕನ್ನಡ ಲಿಪಿಯನ್ನು ಬಳಸಲಾಗಿದೆ. ಕನ್ನಡದ ಮೊಟ್ಟ ಮೊದಲ ತ್ರಿಪದಿಯ ಬಳಕೆಯ ಶಾಸನವು ಹೌದು. ಈ ಪ್ರಶಸ್ತಿ ಶಾಸನದಲ್ಲಿ ಸಂಸ್ಕೃತ ಭಾಷೆಯ ಪ್ರಭಾವವು ಕೇವಲ ಒಂದು ಲೋಕ ನುಡಿಯನ್ನು ದಾಖಲಿಸಲಷ್ಟೇ ಬಳಕೆ ಆಗಿದೆ. ವರನ್ತೇಜಸ್ವಿನೋ
ಮೃತ್ಯುರ್ನತುಮಾನಾವ
ಖಡ್ಣನಮ್
, ಮೃತ್ತ್ಯುಸ್ತತ್ಕ್ಷಣಿಕೋದುಃಖ ಮ್ಮಾನಭಮಗನ್ದೀದಿನೇ’ ತಮಟ ಕಲ್ಲಿನ ಶಾಸನದನಂತರ ಕಾವ್ಯಾತ್ಮಕ ಶೈಲಿಯಲ್ಲಿರುವ ಶಾಸನ ಇದಾಗಿದೆ. ಜೊತೆಗೆ ಈ ಶಾಸನವು ಒಂದು ಸಾಹಿತ್ಯ ರೂಪವನ್ನು ಮತ್ತು ಎರಡು ಭಾಷೆಯನ್ನು ಒಳಗೊಂಡಿದೆ. ಈ ಶಾಸನ ಪಾಠದಲ್ಲಿ ಕನ್ನಡ ಪ್ರಭಾವವೇ ಅಧಿಕ. ಅಲ್ಲದೆ ಆ ಕಾಲದ ಜನರ ಪಾಂಡಿತ್ಯ ಮತ್ತು ದ್ವಿಭಾಷೆಗಳ ಮೇಲೆ ಇರತಕ್ಕ ಹಿಡಿತವನ್ನು ಸೂಚಿಸುತ್ತದೆ. ಭಾಷಿಕ ದೃಷ್ಟಿಯಿಂದ ಹೇಳುವುದಾದರೇ ಪುಲ್ಲಿಂಗವಾಚಿ ಇನ್ ಪ್ರತ್ಯಯ ಇಲ್ಲಿ ಬಳಕೆಯಾಗಿದೆ.
ಉದಾ: ಅರಭಟ್ಟನ್, ವಿಪರೀತನ್, ಈತನ್, ಪೆರನ್ ಇತ್ಯಾದಿ
ಅನುಸ್ವಾರದ ಬದಲಿಗೆ ಅಗತ್ಯಕ್ಕೆ ತಕ್ಕಂತೆ ಅನುನಾಸಿಕಗಳನ್ನು ಬಳಸಲಾಗಿದೆ.
ನಿದರ್ಶನಕ್ಕೆ: ಖಣ್ಡನಂ, ಮಾಧುರ್ಯಂಗೆ ಇತ್ಯಾದಿ
ಪದಾಂತ್ಯದಲ್ಲಿ ವ್ಯಂಜನಾಂತ್ಯಗಳು ಇಲ್ಲಿ ಬಳಕೆಯಾಗಿವೆ ಆದರೆ 12 ನೇಶತಮಾನನಂತರದಲ್ಲಿ ಬಹು ಮಟ್ಟಿಗೆ ಸ್ವರಾಂತ್ಯಗಳೇ ಬಳಕೆಯಾಗಿವೆ.
ಭಟ್ಟನ್, ವರನ್, ತತ್, ಈತನ್, ಪೆರನ್, ಆರ್, ಅಹತರ್, ಸತ್ತರ್ ಇತ್ಯಾದಿ
ಪಂಪಪೂರ್ವ ಯುಗದ ಕೆಲವು ಪ್ರಶಸ್ತಿ ಶಾಸನಗಳಲ್ಲಿಯ ಭಾಷೆಯು ಅಂದಂದಿನ ಆಡಳಿ ಅಥವಾ ಶಿಷ್ಟ ಎಂದು ಕರೆಯಿಸಿ ಕೊಳ್ಳುತ್ತಿದ್ದ ಭಾಷೆಯಲ್ಲಿಯೇ ಕಂಡು ಬರುತ್ತಿದ್ದರೂ ಈ ಪ್ರಶಸ್ತಿ ಶಾಸನಗಳಲ್ಲಿ ಸಹಜವಾಗಿ ಬಳಕೆಯಾಗಿರುವ ದೇಶ ಭಾಷೆಯ ಮೂಲಕ ಆಯಾ ಕಾಲದ ಆಯಾ ದೇಶ ಭಾಷೆಗಳ ಸ್ವರೂಪವನ್ನು ತಿಳಿಯಲು ಸಾಧ್ಯವಾಗುತ್ತದೆ. ಸಾಧ್ಯವಾದ ಮಟ್ಟಿಗೆ ಅಶೋಕನ ಕಾಲಕ್ಕೆ ಜನರ ಆಡುಭಾಷೆಯಾಗಿದ್ದ ಕನ್ನಡವು ಕದಂಬರು, ಗಂಗರ ಕಾಲಕ್ಕೆ ಆಡಳಿತಾತ್ಮಕವಾಗಿ ಮೇಲುಗೈ ಸಾಧಿಸದಿದ್ದರೂ ಜನರ ವ್ಯವಹಾರಗಳ ಭಾಷೆಯಲ್ಲಿ ಕನ್ನಡ ಬಳಕೆಯಾಗಿರುವುದನ್ನು ಗಮನಿಸ ಬಹುದಾಗಿದೆ. ಅದರಲ್ಲೂ ಗಂಗರ ಕಾಲದಲ್ಲಿ ಕನ್ನಡ ಲಿಪಿಯು ಬಳಕೆಯಲ್ಲಿದ್ದು ಸ್ಪಷ್ಟವಾಗಿ ತಿಳಿಯಲೇ ಬೇಕಾದ ಶಾಸನದ ಭಾಗಗಳು ಮಾತ್ರ ದೇಶಭಾಷೆಯಾದ ಕನ್ನಡದಲ್ಲಿಯೇ ಇರುತ್ತಿದ್ದು ಗಮನಿಸ ಬೇಕಾದ ಸಂಗತಿಯಾಗಿದೆ. ರಾಷ್ಟ್ರಕೂಟರ ಕಾಲಕ್ಕೆ ಕನ್ನಡವು ಶುದ್ಧ ಕನ್ನಡದಲ್ಲಿ ಕಾವ್ಯ ಸ್ವರೂಪವನ್ನು ಪಡೆದು ಕೊಂಡಿದ್ದು ಆಡಳಿತಾತ್ಮಕವಾಗಿ ಬಳಕೆಯಾಗಿದ್ದಿತು. ನಿದರ್ಶನಕ್ಕೆ, ಮುಮ್ಮಡಿಕೃಷ್ಣನ ಜೂರಾ ಪ್ರಶಸ್ತಿ ಶಾಸನ. ಈ ಶಾಸನ ಇರುವ ಮೇಲ್ಭಾಗ ಮತ್ತು ಕೆಳ ಭಾಗ ಇಂದು ಲಭ್ಯವಿಲ್ಲದಿದ್ದರೂ ಶಾಸನದ ಪಾಠವಿರುವ ಭಾಗ ಮಾತ್ರ ಲಭ್ಯವಿದೆ. ಲಭ್ಯವಿರುವ ಈ ಭಾಗದಲ್ಲಿ ಮುಮ್ಮಡಿ ಕೃಷ್ಣನ ಸಾಧನೆ ಮತ್ತು ವ್ಯಕ್ತಿತ್ವದ ವಿವರಗಳು ಕಂಡು ಬರುತ್ತವೆ. ಈ ಶಾಸನವು 10 ನೇ
ಶತಮಾನದ ವೇಳೆಗೆ ಸಾಮಾನ್ಯ ಜನತೆಯಲ್ಲಿಯೂ ಕನ್ನಡ ಭಾಷೆಯು ಪಡೆದಿದ್ದ ಪ್ರಾಮುಖ್ಯತೆಯನ್ನು ತೋರಿಸುವುದರ ಜೊತೆಗೆ ಕನ್ನಡ ಭಾಷೆಯು ಆಡಳಿತಾತ್ಮಕವಾಗಿ ಮನ್ನಣೆ ಪಡೆದಿದ್ದನ್ನು ಸೂಚಿಸುತ್ತದೆ.
ಶ್ರವಣಬೆಳ್ಗೊಳದ ಬಿಡಿಮುಕ್ತಕಗಳಲ್ಲಿ ಕೆಲವು ಒಳ್ಳೆಯ ಕಾವ್ಯದ ತುಣುಕುಗಳೇ ಆಗಿವೆ. ಈ
ಶಾಸನಗಳನ್ನು ಬರೆದವರು ಕಾವ್ಯರಚನೆಯನ್ನು ಬಲ್ಲವರಾಗಿರಬೇಕು.
ಸುರಚಾಪಂಬೊಲೆ
ವಿದ್ಯುಲ್ಲತೆಗಳ ತೆರವೋಲ್ ಮಂಜುವೋಲ್ ತೋರಿ ಬೇಗಂ
ಪಿರಿಗುಂ
ಶ್ರೀ ರೂಪ ಲೀಲಾ ಧನ ವಿಭವ ಮಹಾರಾಶಿಗಳ್ ನಿಲ್ಲವಾರ್ಗ್ಗಂ
ಪರಮಾರ್ಥಂ ಮೆಚ್ಚೆನಾನೀ
ಧರಿಣಿಯುಳಿರವಾನ್ದು ಸನ್ಯಾಸನಂಗೆ
ಯ್ದುರು ಸತ್ವನ್
ನಂದಿಸೇನ ಪ್ರವರ ಮುನಿವರನ್ ದೇವಲೋಕಕ್ಕೆ ಸಂನ್ದಾನ್||
ಕ್ರಿ.ಶ. 7ನೆಯ ಶತಮಾನದ ಶ್ರವಣ ಬೆಳಗೊಳದ ಈ ಶಾಸನವು ಸನ್ಯಸನ ವಿಧಿಯಿಂದ
ದೇಹತ್ಯಾಗ ಮಾಡಿದ ಮುನಿಯೊಬ್ಬನನ್ನು ಕುರಿತ ಸಂಗತಿ ಅಥವಾ ನಿರೂಪಣೆಗೆ ಮಾತ್ರ ಸೀಮಿತವಾಗದೆ
ಕಾವ್ಯೋಚಿತವಾದ ಉಪಮೆರೂಪಕಗಳ ಮೂಲಕ ಆ ಸನ್ನಿವೇಶವನ್ನು ಕಾವ್ಯಮಯವಾಗಿ ವರ್ಣಿಸುವ ಉದ್ದೇಶವುಳ್ಳದ್ದಾಗಿದೆ.
ಮನುಷ್ಯನ ಜೀವನ ಹಾಗೂ ಅದರ ಸುಖ ಭೋಗಗಳು ನಶ್ವರವೆಂಬುದನ್ನು ಸಂಕೇತಿಸುವ ಸುರಚಾಪ (ಕಾಮನಬಿಲ್ಲು) ಮಿಂಚಿನ ಬಳ್ಳಿ (ವಿದ್ಯುಲತೆ) ಮಂಜಿನ ಹನಿ ಇತ್ಯಾದಿ ರೂಪಕಗಳು ಶ್ರವಣಬೆಳಗೊಳದ ಶಾಸನದಲ್ಲಿ ಕಾವ್ಯಮಯವಾಗಿ ಅಭಿವ್ಯಕ್ತಗೊಂಡಿದ್ದು, ಈ ಅಭಿವ್ಯಕ್ತಿಯೆ ಸೊಗಸು ನಂತರದ ಕನ್ನಡದ ಪ್ರಮುಖ ಚಂಪೂ ಕವಿಗಳಾದ ಪಂಪ, ದುರ್ಗಸಿಂಹ, ಹಾಗೂ ಜನ್ನರ ಕಾವ್ಯಗಳಲ್ಲಿ ಅನುರಣನಗೊಂಡಿರುವುದನ್ನು ಮನಗಂಡರೆ ಕ್ರಿ.ಶ. 7ನೇ ಶತಮಾನದ ಈ ಶಾಸನದಲ್ಲಿಯೇ ಪದ್ಯ ಸಾಹಿತ್ಯದ ದೃಷ್ಠಿಯಿಂದ ಮಹತ್ತರವಾದುದು ಎಂದೆನಿಸುತ್ತದೆ.
ವೈರಾಗ್ಯ ಗೀತೆಯಂತಿರುವ ಈ ಶಾಸನದಲ್ಲಿ ಮಾತುಗಳ ಮೋಡಿ ಹಾಗೂ ಜೋಡಣೆಗಳು ಈ ಶಾಸನ ಕರ್ತೃವಿನ ಕವಿ ಹೃದಯವನ್ನು ದಿಗ್ಧರ್ಶಿಸುತ್ತವೆ. ಇಂತಹ ಪದ್ಯ ರಚನೆ ಶ್ರವಣಬೆಳಗೊಳದ ಸುಮಾರು 30 ಶಾಸನಗಳಲ್ಲಿ ದೊರೆಯುತ್ತವೆ ಎಂದು ತಿಳಿದುಬರುತ್ತದೆ. ಇವುಗಳ ಕರ್ತೃಗಳಲ್ಲಿ ಕೆಲವರು ಕಾವ್ಯಗಳನ್ನು ಬರೆದಿದ್ದರೂ ಬರೆದಿರಬಹುದು. ಕಾವ್ಯ ಕರ್ತೃಗಳಲ್ಲಿ ಕೆಲವರು ಶಾಸನ ಕರ್ತೃಗಳಾಗಿರುವುದು ಕಂಡುಬರುತ್ತದೆ. ಈ ಶಾಸನ ಕರ್ತೃಗಳಲ್ಲಿ ಕೆಲವರು ಕಾವ್ಯ ಕರ್ತೃಗಳಾಗಿದ್ದರೂ ಇರಬಹುದೆಂದು ಊಹಿಸಲು ಅವಕಾಶವಿದೆ. ಶ್ರವಣಬೆಳಗೊಳದ ನಿಷದಿ ಶಾಸನ ಪದ್ಯಗಳು ಕನ್ನಡ ಸಾಹಿತ್ಯದಲ್ಲಿ ಕವಿತ್ವರಚನೆ ಅದರ ಆರಂಭದ ದೆಸೆಯಲ್ಲಿ ತೊಟ್ಟು ತೊಟ್ಟಾಗಿ ತೊಡಗಿತೆಂಬುದನ್ನು ಸೂಚಿಸುತ್ತವೆ. ವೃತ್ತಬಂಧನ ವಿಶ್ಲೇಷಣೆಯಿಂದಲೂ ಈ ಅಂಶವನ್ನು ಸಮರ್ಥಿಸಿರುವುದು ಕಂಡುಬರುತ್ತದೆ,
ಪಟ್ಟದಕಲ್ಲಿನ ಒಂದು ಶಿಲಾ ಶಾಸನದಲ್ಲಿ ದೇವಯ್ಯಗಳಾ ಮಗ ಅಚಲ ಎಂಬ ಕವಿ ನಟನೊಬ್ಬನನ್ನು ಕುರಿತು “ಇನ್ನಾತನೇ ನರ್ತಕಂ ನಟರೊಳಗ್ಗಳಂ ಈ ಭೂವನಾನ್ತರಂಗದೋಳ್” ಎಂದು ಮುಕ್ತ ಕಂಠದಿಂದ ಹೊಗಳಲಾಗಿದೆ. ಮಧುರಾಚೆನ್ನರು ಈ ಶಿಲಾ ಶಾಸನದ ಕಾಲ ಕ್ರಿ.ಶ.8ನೇ ಶತಮಾನವೆಂದು ಹೇಳುತ್ತಾರೆ. ಈ ಹೇಳಿಕೆ ಸರಿ ಎಂದಾದರೆ 8ನೇ ಶತಮಾನದಷ್ಟು ಪೂರ್ವದಲ್ಲಿಯೇ ಒಬ್ಬ ಕವಿ ಮತ್ತು ನಟನ ವಿಷಯವಾಗಿ ನಮಗೆ ತಿಳಿದಂತಾಗುತ್ತದೆ. ಈ ಶಿಲಾ ಶಾಸನಗಳನ್ನು ಗಮನಿಸಿ ಹೇಳುವುದಾದರೆ ಕನ್ನಡ ಸಾಹಿತ್ಯದ ಇತಿಹಾಸವನ್ನು ಕ್ರಿ.ಶ. 650ಕ್ಕಿಂತ ಹಿಂದಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಾರದು. ಅದಕ್ಕಿಂತ ಹಿಂದೆ ಪದ್ಯ ಕಾವ್ಯಗಳು ಹುಟ್ಟಿದ್ದರೆ ಪದ್ಯರೂಪವಾದ ಕೆಲವು ಶಾಸನಗಳು ದೊರಕುತ್ತಿದ್ದವು. ಗದ್ಯ ಕೃತಿಗಳು ಹುಟ್ಟಿದ್ದರೆ ಒಳ್ಳೆಯ ಗದ್ಯವು ಶಾಸನಗಳಲ್ಲಿ ದೊರೆಯುತ್ತಿತ್ತು . ಕವಿರಾಜಮಾರ್ಗದಲ್ಲಿ ಉಲ್ಲೇಖಿಸಿರುವ ಕನ್ನಡ ಗದ್ಯ ಪದ್ಯ ಕವಿಗಳು 7ನೇ ಶತಮಾನಕ್ಕಿಂತ ಈಚಿನವರು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ.
ಪದ್ಯಕವಿಗಳು, ಪದ್ಯ ಕಾವ್ಯಗಳೂ ಕವಿರಾಜಮಾರ್ಗಕಾರನ ಕಾಲದಲ್ಲಿಯೂ ಅದರ ಮೊದಲು ಆಗಿಹೋದದ್ದು ಕನ್ನಡಕ್ಕೆ ವಿಶಿಷ್ಟವಾದ ಎರಡು ಪದ್ಯ ಕಾವ್ಯ ಪ್ರಕಾರಗಳೂ ಸಾಕಷ್ಟು ಹಿಂದಿನ ಕಾಲದಲ್ಲಿಯೇ ತಲೆದೋರಿದುದು ಮೇಲಿನ ಹೇಳಿಕೆಯಿಂದ ವಿಶದವಾಗುತ್ತದೆ. ಈ ಗದ್ಯ ಪದ್ಯ ಕೃತಿಗಳು ಕಾಲದ ಹಾವಳಿಗೆ ತುತ್ತಾಗಿ ಹಾಳಾಗಿದ್ದರೂ ನೃಪತುಂಗನ ಕಾಲಕ್ಕೆ ಅವು ಅತ್ಯಂತ ಜನಪ್ರಿಯವಾಗಿದ್ದವೆಂಬುದರಿಂದ ರಾಷ್ಟ್ರಕೂಟರ ಕಾಲಕ್ಕೆ ಕನ್ನಡ ಭಾಷೆ ಚನ್ನಾಗಿ ಬಲಿತ ಭಾಷೆಯಾಗಿತ್ತೆಂದು ಅದರಲ್ಲಿ ಸಾಕಷ್ಟು ಸಾಹಿತ್ಯವಿದ್ದಿತೆಂದು ತಿಳಿಯುವುದಾಗಿ ಕೆ.ಬಿ.ಪಾಠಕ್ ಕವಿರಾಜಮಾರ್ಗದ ತಮ್ಮ ಪರಿಷ್ಕರಣಕ್ಕೆ ಬರೆದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಕನ್ನಡ ವಾಕ್ಯಗಳಲ್ಲಿ ಸಾಮಾನ್ಯವಾಗಿ ಕರ್ತೃ-ಕರ್ಮ- ಮತ್ತು ಕ್ರಿಯಾಪದಗಳು ಕ್ರಮವಾಗಿ ಬರಬೇಕು. ಆದರೆ ಹತ್ತಾರು ವಾಕ್ಯಗಳು ಆಗಬಹುದಾದ ವಿವರವಾದ ರೂಪಕ್ಕೆ ಒಂದೇ ಒಂದು ಕ್ರಿಯಾಪದ ಬಳಸಿರುವ ನಿದರ್ಶನಗಳು ಹತ್ತನೇ ಶತಮಾನಕ್ಕಿಂತ ಪೂರ್ವದಲ್ಲಿಯೇ ಶಾಸನಗಳಲ್ಲಿ ಕಂಡು ಬಂದಿರುವುದನ್ನು ಕಾಣಬಹುದಾಗಿದೆ. ನಿದರ್ಶನಕ್ಕೆ 9 ನೇ
ಶತಮಾನದ ಹೊಸಕೋಟೆ ಶಾಸನದ ಈ ಭಾಗವನ್ನು ಪರಿಶೀಲಿಸ ಬಹುದಾಗಿದೆ.
“ ಮಹಾವಲಿ ಬಾಣರಸರ್ ಪ್ರಿಥುವೀ ರಾಜ್ಯಂಗೆಯೆ ಅಣಿಚೆಲ್ವನ್-
ಅಣುಮ ಪ್ರರಾಕ್ರಮನ್- ವೀರಮಹಾಮೇರು ಪೊಕ್ಕಿರಿವರ
ದೊಗರಾಜನ್- ತನ್ನನಾಳ್ವ ಪ್ರಭುಮೇರು ಬೆಸಸೆ- ಮೆಳೆನ್ದಿ
ಊರುಳ್ಕಾಡುವಟ್ಟಿಯ ಸಮಸ್ತಬಲಮುಮೇಗೆಳ್ತರೆ- ತಮ್ಮ
ಪಡೆಗೆಟ್ಟು ಬೆಟ್ಟನದರೆ ತನ್- ಇದಿರನೆ ನಡದು ನಾಯಕರುಳ್
ತಳ್ತಿರಿದೋಡಿಸಿ ಬಿಳ್ದನ್
ಈ ಶಾಸನದ ಇಡೀ ವಾಕ್ಯದಲ್ಲಿ ಬಿಳ್ದನ್ ಎನ್ನುವ ಕ್ರಿಯಾಪದವೊಂದೇ ಬಂದಿರುವದನ್ನು ಗಮನಿಸಬಹುದಾಗಿದೆ.
10 ನೇಶತಮಾನಕ್ಕಿಂತ ಪೂರ್ವದ ಶಾಸನಗಳಲ್ಲಿ ಪ್ರಾದೇಶಿಕ ಭಿನ್ನರೂಪಗಳು ಬಳಕೆಯಾಗಿವೆ.
ಕ್ರಿ.ಶ. 709 ರ ಐಹೊಳೆ ಶಾಸನದಲ್ಲಿ ಬರುವ “ ಒಂದು ಗಾಣದೊಳಗೊಂದು ಸೊಂಟಿಗೆ ತೇಲಮಾಗೆ ಕೊಟ್ಟಾರ” ಎಂಬ ವಾಕ್ಯದಲ್ಲಿಯ ಕೊಟ್ಟಾರ ಎನ್ನುವ ಇಂದಿಗೂ ಉತ್ತರ ಕರ್ನಾಟಕದಲ್ಲಿ ಬಳಸುತ್ತಿರುವ ಆಡುಮಾತಿನ ರೂಪದ ಪ್ರತೀಕವಾಗಿದೆ.
ಅದೇರೀತಿ 800ರ ಶಾಸನದಲ್ಲಿ ಬರುವ ಪೆರ್ಗ್ಗುಂಜಿಯ ಕೋಟೆಯನ್ ರೋಹಿಸಿ ಬಿಟ್ಟ ಎನ್ನುವ ವಾಕ್ಯದಲ್ಲಿಯ ಬಿಟ್ಟ ಎನ್ನುವ ರೂಪ ದಕ್ಷಿಣ ಕರ್ನಾಟಕದ ಆಡು ಮಾತಿನ ರೂಪ ವಾಗಿದೆ. ಕನ್ನಡ ಶಾಸನಗಳಲ್ಲಿ ಬಳಕೆಯಾದ ಕನ್ನಡ ಭಾಷೆಯ ಮೂಲಕ ಕನ್ನಡ ಭಾಷೆಯ ಪ್ರೌಢಿಮೆ ಮತ್ತು ಅದರ ಇತಿಹಾಸದ ಮೆಲೆ ಅನೇಕ ಮಹತ್ವದ ವಿಷಯಗಳನ್ನು ಕುರಿತಂತೆ ಬೆಳಕು ಚೆಲ್ಲಲು ಸಹಕಾರಿಯಾಗಿವೆ. ಕನ್ನಡ ಭಾಷೆಯ ರಚನೆಯ ದೃಷ್ಟಿಯಿಂದಲೂ ಕಾಲದಿಂದ ಕಾಲಕ್ಕೆ ಬದಲಾದ ಕನ್ನಡವನ್ನು ಶಾಸನಗಳ ಮೂಲಕವೇ ಗುರುತಿಸಲು ಸಾಧ್ಯವಾಗಿರುವುದು.
ಒಂದೇ ಬಗೆಯ ವಸ್ತು ರಚನೆಯ ಒಂಟಿ ಪದ್ಯಗಳಲ್ಲಿಯೇ ಕವಿತ್ವ ನಿರ್ಮಿತಿ ಕೃತ ಕೃತ್ಯವಾಗುವುದು. ಸಂಧಿ ಸಮಾಸಗಳು ವಾಕ್ಯರಚನೆ ಮೊದಲಾದವುಗಳು, ಭಾಷೆ ಹಲವೆಡೆ ವ್ಯಾಕರಣ ನಿಯಮಗಳಿಗೆ ಕಟ್ಟು ಬೀಳದಿರುವುದು ಹಾಗೂ ಕಟ್ಟು ಬಿದ್ದಿರುವುದು, ವೃತ್ತ ರಚನೆಗಳು ಪೂರ್ವದ ಹಳಗನ್ನಡವೆಂಬ ಭಾಷಾ ಸ್ವರೂಪವನ್ನು ಹೆಚ್ಚಾಗಿ ತೋರಿಸುತ್ತಿರುವುದು- ಇಂತಹ ಸಂಗತಿಗಳನ್ನು ಪರಿಶೀಲಿಸಿದರೆ ಪ್ರಾಯಃ ಸು. 600 -650 ರ ಅವಧಿಯಲ್ಲಿ ಕನ್ನಡ ಸಾಹಿತ್ಯ ಪ್ರಾಯೋಗಿಕ ಸ್ಥಿತಿಯಲ್ಲಿ ಕಣ್ಣು ಬಿಡುತ್ತಿದ್ದಿರುವುದು ಸಾಧ್ಯ ಎನ್ನಬೇಕಾಗುತ್ತದೆ. ಶಾಸನಗಳು ಒದಗಿಸುವ ಸಾಕ್ಷಿಗಳಿಂದ ಈ ನಿರ್ಣಯ ಪಾಕ್ಷಿಕವಾಗಿ ಮಾತ್ರ ಸರಿ. ಪ್ರಯೋಗಶೀಲ ಮತ್ತು ಪರಿಣಿತಿ ಎರಡಕ್ಕೂ ನಿದರ್ಶನಗಳು ತೋರುತ್ತಿರುವುದನ್ನು ಗಮನಿಸಿದರೆ ಪ್ರಾಯಶಃ ಪೂರ್ವದ ಹಳಗನ್ನಡ ಹಳಗನ್ನಡಕ್ಕೆ ತಿರುಗುತ್ತಿರುವ ಭಾಷಾ ಸ್ಥಿತಿಗರ ಅನುಗುಣವಾಗಿ ಛಂದಃ ಪ್ರಯೋಗತೀರಾ ಪ್ರಾಚೀನಕಾಲವು ಪರಿಷ್ಕೃತ ಛಂದಸ್ಸಿನ ಪರಿಣತಿಯ ಕಾಲದ ಕಡೆಗೆ ಸಾಗುವ ಯತ್ನದಲ್ಲಿದ್ದಿರಬಹುದೆಂದು ತೋರುತ್ತದೆ. ವಿಫುಲವಾಗಿ ಕನ್ನಡ ಶಾಸನಗಳು ರಚಿತವಾದ 7ನೇಯ ಶತಮಾನ ಮತ್ತು ಈಚಿನ ಕಾಲದ ಖ್ಯಾತ ಕರ್ಣಾಟಕಗಳೂ ಇತರ ವೃತ್ತಗಳೂ, ಸಂಸ್ಕೃತ ಭಾಷಾ ಸಾಹಿತ್ಯಗಳ ವರ್ಚಸ್ಸು ಕನ್ನಡದ ಮೇಲೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ತೋರಿಸಲು ಸಮರ್ಥವಾಗಿದೆ.
ಕವಿರಾಜ ಮಾರ್ಗ ಪೂರ್ವದ ಶಾಸನಗಳು ಸಾಹಿತ್ಯಾಂಶಗಳ ದೃಷ್ಟಿಯಿಂದ ಹೇಳಿಕೊಳ್ಳುವಂತಹ
ಲಕ್ಷಣಗಳನ್ನು ಹೊಂದಿರದಿದ್ದರೂ ಭಾಷೆಯ ರಚನೆ, ವಿಚಾರ ಶಕ್ತಿ ಬಳಕೆಯ ಉದ್ದೇಶ ಗಳನ್ನು
ಅಭಿವ್ಯಕ್ತಿಸುತ್ತವೆ. ಅದರಲ್ಲೂ ಗದ್ಯ ಶಾಸನಗಳು ಕನ್ನಡ ಸಾಹಿತ್ಯದ ಹಳಮೆಯ ಬಗೆಗೆ ಬೆಳಕನ್ನು
ಚೆಲ್ಲುತ್ತವೆ. ಆಳುಪ ಗಂಗ ಬಾದಾಮಿ ಚಾಲುಕ್ಯ ಈ ಮನೆತನಗಳ ಕಾಲದ ಕೆಲವು ಪ್ರಾಚೀನ ಗದ್ಯ ಶಾಸನಗಳು, ಕ್ರಿಶ.6ರಿಂದ
8ನೆಯ
ಶತಮಾನಕ್ಕೆ ಸೇರಿದವೆಂದು ಇತಿಹಾಸ ಮತ್ತು ಲಿಪಿಯ ಆಧಾರಗಳಿಂದ ಸ್ಪಷ್ಟವಾಗಿ ತಿಳಿದುಬಂದಿರತಕ್ಕವು.
ಮುಖ್ಯವಾಗಿ ಇಲ್ಲಿ ಊರಳಿವು ಮುಂತಾದ ಸಂದರ್ಭಗಳಲ್ಲಿ ಕಾದಾಡಿ ಪ್ರಾಣಾರ್ಪಣೆ ಮಾಡಿದ ವೀರನ ಸ್ಮರಣೆ, ಭೂಮಿಯನ್ನೋ
ಗೋವುಗಳನ್ನೋ ಯಾರದೋ ಅರಸನ ಕಾಲದಲ್ಲಿ ಯಾರಿಗೋ ದಾನ ಕೊಟ್ಟದ್ದು, ಬೇರೆ ಬೇರೆ
ಕಾರಣಗಳಿಗಾಗಿ ತೆರಿಗೆಯ ವಿನಾಯತಿಯನ್ನು ಪ್ರಕಟಿಸಿದ್ದು, ದೇವಸ್ಥಾನ
ಅಥವಾ ಅದರ ಭಾಗಗಳ ನಿರ್ಮಾಣವನ್ನು ದಾಖಲೆಗೊಳಿಸಿದ್ದು ಈ ಮುಂತಾದ ವಿಷಯಗಳು ನಿರೂಪಿತವಾಗಿವೆ. ಈ
ಶಾಸನಗಳೆಲ್ಲ ಸಾಮಾನ್ಯವಾಗಿ ಗದ್ಯದಲ್ಲಿಯೇ ಲಿಖಿತವಾಗಿದ್ದು ಪ್ರಮಾಣದಲ್ಲಿ ಚಿಕ್ಕವಾಗಿದ್ದು, ಬಹುಮಟ್ಟಿಗೆ
ಪ್ರತಿಪದ್ಯ ವಿಷಯದ ಶುಷ್ಕವರದಿಗಳೆನ್ನುವಂತಿವೆ. ಇವುಗಳಲ್ಲಿ ಮನಸ್ಸನ್ನು ಸೆರೆಹಿಡಿಯುವ
ಸಾಹಿತ್ಯಾಂಶಗಳು ಕಾಣುವುದಿಲ್ಲ. ಆದರೆ ಬೆಡಗಿಲ್ಲದ ಈ ನುಡಿಗಳ ಗಡಣದಲ್ಲಿಯೇ ಅಚ್ಚ ಕನ್ನಡತನವೆಂಬ
ಗುಣ ಅಡುಗಿದೆಯೆಂಬುದನ್ನು ತಪ್ಪದೇ ಗಮನಿಸಬೇಕು. ಶ್ರವಣಬೆಳ್ಗೊಳದ ಮೃತ್ಯುಲೇಖನಗಳ ಪದ್ಯಗಳು
ಮುಂದೆ ಹೆಮ್ಮರವಾಗಿ ಬೆಳೆದ ಮಾರ್ಗಕವಿತ್ವದ ಲಕ್ಷಣಗಳ ಮುನ್ಸೂಚನೆಗಳನ್ನು ತೋರಿಸುವಂತೆ ಈ
ಗದ್ಯಶಾಸನಗಳು `ವಡ್ಡಾರಾಧನೆ’ಯಲ್ಲಿ
ಮುಂದೆ ಕಂಡಂಥ ದೇಸಿಕತ್ವ ಲಕ್ಷಣದ ಮುನ್ಸೂಚನೆಗಳನ್ನು ಕೆಲಮಟ್ಟಿಗೆ ಕೊಡುತ್ತದೆ.ಅಲ್ಲದೆ ಸಂದರ್ಭ
ವಿಶೇಷಗಳ ಅಧಿಕೃತ ದಾಖಲೆಗಳಾಗಬೇಕಾದ ಈ ಶಾಸನಗಳು ಕವಿತ್ವದ ಭಾಷೆಯನ್ನು ಅನುಸರಿಸುವುದು
ಅಸಂಭವ. ಗದ್ಯ ಶಾಸನಗಳಲ್ಲಿ ವರ್ಣಾವೃತ್ತಿಗೆ
ಎಡೆಗೊಟ್ಟ ವಾಕ್ಯವಿನ್ಯಾಸಗಳಲ್ಲಿ ಸಾಹಿತ್ಯದ ಸೊಗಸನ್ನು ನಾವು ಕಾಣಬೇಕಾದರೆ ಪ್ರಾಯಃ
ರಾಷ್ಟ್ರಕೂಟರ ಕಾಲಕ್ಕೇ ಅಂದರೆ 10ನೆಯ ಶತಮಾನದ
ಶಾಸನಗಳನ್ನು ನೋಡಬೇಕಾಗುತ್ತದೆ.
ವ್ಯವಹಾರ ಗದ್ಯದ ವಿಕಾಸವನ್ನು ಅರಿತುಕೊಂಡ
ಮೇಲೆ ನಮ್ಮ ಗಮನವನ್ನು ಸಾಹಿತ್ಯ ಗದ್ಯದ ಕಡೆಗೆ ಹೊರಳಿಸಬಹುದು. ಈ ಮುಂಚೆ ಹೇಳಿರುವಂತೆ ಸಾಹಿತ್ಯ
ಕಾಂತಿಯಿಂದ ಕೂಡಿದ ಗದ್ಯ ಶಾಸನಗಳ ಸಂಖ್ಯೆ ಈ ಅವಧಿಯಲ್ಲಿ ಕಡಿಮೆಯಾಗಿದೆ. ಸುಮಾರು
ಮುನ್ನೂರೈವತ್ತರಷ್ಟು ಕಂಡುಬರುವ ಈ ಕಾಲಾವಧಿಯ ಗದ್ಯ ಶಾಸನಗಳಲ್ಲಿ
ಶಿರೂರ-ನೀಲಗುಂದ ಮತ್ತು ಕಳಸ ಶಾಸನಗಳ ಗದ್ಯ ಮಾತ್ರ ಅಂಥ ಗುಣಮಟ್ಟದ್ದಾಗಿದೆ. ಆದರೆ ಸಾಹಿತ್ಯ
ಗದ್ಯದ ಹೊಳಹು ಈ ಅವಧಿಯ ಶಾಸನಗಳಲ್ಲಿ ತೀರ ಏನೂ ಇಲ್ಲವೆಂದು ಭಾವಿಸಬೇಕಾಗಿಲ್ಲ. ಕೆಲವು
ಶಾಸನಗಳಲ್ಲಿ ಶ್ರೇಷ್ಠ ಗದ್ಯದ ಲಕ್ಷಣ ಕಂಡು ಬಂದಿದೆ. ಹಲ್ಮಿಡಿ ಶಾಸನವಾದ ಮೇಲೆ ಲಕ್ಷಣವಾದ ಗದ್ಯ
ಶಾಸನಗಳು ಕಾಣಸಿಗುವುದು ಏಳನೆಯ ಶತಮಾನದಲ್ಲಿ. ಪೆದ್ದವಡಗೂರು, ಕುಳಗಾಣ
ಮುಂತಾದ ಶಾಸನಗಳನ್ನು ನಾವು ನೋಡಿದ್ದೇವೆ. ಅವುಗಳಲ್ಲಿ ಗಂಗ ಒಂದನೆಯ ಶಿವಮಾರನ ಗುಳಗಾಣ ಶಾಸನ
ಗಮನಾರ್ಹವಾದುದೆಂಬ ಸಂಗತಿಯನ್ನು ಈ ಹಿಂದೆ ತಿಳಿಸಿದೆ. ಕುಳಗಾಣ ಶಾಸನದಲ್ಲಿ ತೋರುವಷ್ಟು ಪುರಾತನ
ವೈಶಿಷ್ಟ್ಯಗಳು ಬೇರಾವ ಕನ್ನಡ ಶಾಸನದಲ್ಲಿ ತೋರುವುದಿಲ್ಲ ಎಂಬ ಸಂಗತಿಯನ್ನು ಆ ಶಾಸನವು ಸಾಧಾರಣವಾಗಿ ತೋರಿಸಿದೆ. 850ರ
ವರೆಗಿನ ಒಂದೊಂದು ಶಾಸನದಲ್ಲಿ ಈ ವೈಶಿಷ್ಟ್ಯಗಳು ಒಂದೋ ಎರಡೋ ತೋರಿ ಬರಬಹುದು. ಆದರೆ ಎಲ್ಲವೂ
ಒಂದೇ ಶಾಸನದಲ್ಲಿ ಒಟ್ಟು ಗೂಡಿಸಿದಂತೆ ಕಂಡು ಬರುವುದು ಕೃತಕತೆಯೆ ಸರಿ. ಸಾಹಿತ್ಯ ಭಾಷೆಯಲ್ಲಿ
ಇಂಥ ಕೃತಕತೆಯೇ ಸ್ವಾಭಾವಿಕವೆಂಬಂತೆ ತೋರುತ್ತದೆ. ಆದುದರಿಂದ ಕುಳಗಾಣ ಶಾಸನವು ಅಂದು ಪಂಡಿತ
ವರ್ಗದಲ್ಲಿ ಪ್ರಚುರವಾಗಿದ್ದ ಗದ್ಯವನ್ನು ಪ್ರತಿನಿಧಿಸುತ್ತದೆಂದು ಹೇಳಬಹುದು. ದುರ್ವಿನೀತಾದಿಗಳು
ತಮ್ಮ ಕಾವ್ಯಗಳನ್ನು ಗದ್ಯದಲ್ಲಿ ಬರೆಯಲು ಕುಳಗಾಣ ಶಾಸನದಂಥ ಅದಕ್ಕಿಂತ ವೈಶಿಷ್ಟ್ಯಗಳುಳ್ಳ
ಗದ್ಯವೇ ಪ್ರೇರಣೆ ನೀಡಿರಬೇಕು ಎಂದೆನಿಸುತ್ತದೆ.
ರಾಷ್ಟ್ರಕೂಟರ ಕಾಲದ ಶಾಸನಗಳಲ್ಲಿ ಶಾಸನ ಗದ್ಯಭಾಷೆಯ
ವಿಭಿನ್ನ ಮಾದರಿಗಳನ್ನು ಕಾಣಬಹುದಾಗಿದೆ. ಇದು ಐತಿಹಾಸಿಕವಾಗಿ ವೀರಯುಗವಾಗಿರುವಂತೆಯೆ ಕನ್ನಡ
ಸಾಹಿತ್ಯದ ಪ್ರಗತಿಯ ದೃಷಿಯಿಂದಲೂ ಸ್ವರ್ಣಯುಗವೂ ಆಗಿದೆ. ಕನ್ನಡ ಚಂಪೂಕಾವ್ಯಗಳಲ್ಲಿ ಸಂಸ್ಕೃತಭೂಯಿಷ್ಠವಾದ
ಪ್ರೌಢಗದ್ಯದ ಮಾದರಿಗಳನ್ನು ಕಾಣುವ ಹಾಗೆಯೇ ಈ ಕಾಲದ ಶಾಸನಗಳಲ್ಲಿಯೂ ಪ್ರೌಢಗದ್ಯದ ಜೊತೆಗೆ ಸತ್ವಶಾಲಿಯಾದ ದೇಸಿ ಗದ್ಯವು
ಕಂಡು ಬರುವುದನ್ನು ಗುರುತಿಸ ಬಹುದಾಗಿದೆ. ನಿದರ್ಶನವಾಗಿ ರಾಷ್ಟ್ರಕೂಟ ದೊರೆ ಮೂರನೆ ಗೋವಿಂದನ
ಕಾಲದ ಪ್ರಸಿದ್ಧವಾದ 8-9ನೆಯ ಶತಮಾನದ ಗಡಿಯಲ್ಲಿ ಹುಟ್ಟಿದ ಮಾವಳಿ ಶಾಸನವು ಸಾಹಿತ್ಯ ಗುಣದಿಂದ
ಶೋಭಿಸುತ್ತದೆ. ಅದೂ ವೀರಗಲ್ಲಾಗಿದ್ದು ತಕ್ಕಷ್ಟು ದೀರ್ಘವಾಗಿದೆ.
ಇದರಲ್ಲಿ ಹಲವಾರು ಘಟನೆಗಳನ್ನು ಸರಪಳಿಯೊಂದರ
ಕೊಂಡಿಗಳನ್ನು ಜೋಡಿಸಿದಂತೆ ಇರುವ ಮೂವತ್ತೈದರಷ್ಟು ಕ್ರಿಯಾ ರೂಪದ ಪದಗಳಿವೆ. ಗದ್ಯದ ನಡಿಗೆ ಅಥವಾ
ಬಂಧನ ದೃಷ್ಟಿಯಿಂದ ಈ ಅಂಶ ಗಮನಿಸತಕ್ಕದ್ದು. ರಾಜಾದಿತ್ಯರಸ, ಕಾಕರಸ, ಪುಗುತ್ತನ್ದು, ದೇವಗಣೆಕ್ಕಿಯರ್, ನಿಲಲಾರದೆ, ಅದನ್ವರಿಕೆ
(ಆ ಬಳಿಕೆ) ವೊಳಸಿ(?) ಅಲಮ್ಮಾನ್, ಸಾತ್ತುಗಾಮುಣ್ಡ, ಎನೆಬ್ಬರು
(ಎಂಟುಜನರು). ಮುಂತಾದ ವಿಶಿಷ್ಟವಾದ ಭಾಷಿಕ ಪ್ರಯೋಗಗಳೂ ಕಂಡು ಬಂದಿವೆ. ವೊದೊದ್ ಅಪ್ಪಿದಪ್ಪೊಲ್’
ಎಂಬ ಭಾಗದಲ್ಲಿ ತಪ್ಪುಗಳಿರುವವಾದರೂ ಕಣೆ ಹಂದಿಯ ಉಪಮೆ ಇರುವುದು ಸ್ಪಷ್ಟ. ಕುಲಮುದ್ದನು ಬಾಣಗಳು
ನಟ್ಟವನಾಗಿ ಕೆಳಗುರುಳುವಾಗ ಕಣೆ ಹಂದಿಯಂತೆ ಕಣೆ ಪಂಜರದೊಳೆರಗಿ ಭಿಷ್ಮನ್‍ವಿಲ್ದನ್ತೆ
ನೆಲಮುಟ್ಟದೆ ಬಿದ್ದನೆಂದು ಹೇಳಿರುವುದು ಶಾಸನ ಕವಿಯ ಹಸ್ತ ಸಿದ್ಧಿಯ ದ್ಯೋತಕವಾಗಿದೆ. ಬಿಲ್ಲು
ಬಿಲ್ಲಿನಲ್ಲೂ ಕುದುರೆ ಕುದುರೆಯಲ್ಲೂ ಕಿಟ್ಟಿ ಕಾದುತ್ತಿರೆ ಮೆಯ್ಮೆಯಮ್ಬಾಗೆ ಎಚ್ಚು, ‘ದೇವಗಣ್ಕಕೆಯರ್
ಆರ್ಗ್ದಮ್ಬಿಡಿದು ಬಂದು ಇದಿರ್ಗೊಂಡು ಉಯೆ’ ವೀರಲೋಕಕ್ಕೆ ಸನ್ದೋನ್, ಮೊದಲಾದ
ಭಾಗದಲ್ಲಿರುವ ಗ್ರಥನ ಕಲೆ ಮೆಚ್ಚುವಂಥದಾಗಿದೆ. ಅಲ್ಲದೆ ಪೆರ್ಗುಂಜಿಯ ಕೋಟೆಯಾಣ್ ರೋಹಿಸಿಬಿಟ್ಟು
ಎಂಬಲ್ಲಿ ಆರಂಭವಾಗಿ ವೀರಲೋಕಕ್ಕೆ ಸನ್ದೋನ್ ಎಂದು ಮುಗಿಯುವ ವರೆಗಿನ ಭಾಗದಲ್ಲಿ ಯುದ್ಧದ ವಿವಿಧ
ಘಟನಾವಳಿ,
ಅವುಗಳಲ್ಲಿಯ ಬೆಳವಣಿಗೆ ಕುಲಮುದ್ದನಿಗೆ ಕಾಕರಸನು ಇತ್ತ ಆಜ್ಞೆ. ಆತನವೀರ ಮರಣ ಇವೆಲ್ಲವೂ
ಚಿತ್ರವತ್ತಾಗಿ ಮೂಡಿವೆ. ಶಾಸನದ ಹತ್ತು ಹನ್ನೊಂದನೆಯ ಸಾಲಿನಲ್ಲಿ ಅರಸರು ಕುಲ ಮುದ್ದನ
ವೃತ್ತಾಂತವನ್ನೆಲ್ಲ ವಿಚಾರಿಸಿ ಅರಿತು ದೆಯೆಗೆಯ್ದು ದತ್ತಿಯನ್ನು ಬಿಟ್ಟರೆಂದು ಹೇಳಿದೆ. ಇಲ್ಲಿ
ಶೋಕ ಕಾವ್ಯಕ್ಕೆ ಹಿನ್ನೆಲೆಯಾಗಿರುವ ಕರುಣ ಭಾವದ ಸ್ಪರ್ಷವನ್ನು ಕಂಡುಕೊಳ್ಳಬಹುದಾಗಿದೆ. ಹೀಗೆ ಒಂದು
ಉತ್ತಮ ಮಟ್ಟದ ಕಲ್ಪನೆ, ಭಾವ, ಭಾಷೆಗಳ ಮುಪ್ಪುರಿಯಾಗಿದೆ ಈ ಶಾಸನ.
ಮಾವಳಿಯ ಕುಲಮುದ್ದನ ಶಾಸನವು ವೀರಗಲ್ಲಾಗಿದ್ದರೂ
ಸಾಹಿತ್ಯಗುಣದಿಂದ ಕೂಡಿದೆ. ಕುಲಮುದ್ದನ ಹೋರಾಟದ ವರ್ಣನೆ,ಅವನು
ಶತ್ರುಗಳ ಮೈ ಮೈಗಳು ಬಾಣವಾಗುವಂತೆ ಬಾಣ ಪ್ರಯೋಗ ಮಾಡಿದ ರೀತಿ, ಅವನ ಮೈತುಂಬ
ಬಾಣಗಳು ನಾಟಿದ್ದನ್ನು ಮುಳ್ಳು ಹಂದಿ ಬಂದು ಪ್ರೀತಿಯಿಂದ ತಬ್ಬಿಕೊಂಡತ್ತಿತ್ತು ಎಂಬ ಚಿತ್ರವಾಗಲೀ, ಭೀಷ್ಮನಂತೆ
ಬಿದ್ದರೂ ನೆಲವನ್ನು ಮುಟ್ಟಲಿಲ್ಲ, ಬಾಣಗಳ ಪಂಜರದಲ್ಲಿ ಒರಗಿದ ಎಂಬ ಪೌರಾಣಿಕ
ಚಿತ್ರವಾಗಲೀ ಗಮನಾರ್ಹವಾಗಿವೆ.ಈ ವೀರಗಲ್ಲಿನ ಶಾಸನಗದ್ಯದ ಪಾಠಗಳು ಪ್ರಾಚೀನ ಕನ್ನಡಭಾಷೆ ಮತ್ತು ಸಾಹಿತ್ಯದ ಸ್ವರೂಪವನ್ನು ಅದರಲ್ಲಿಯೂ ಗದ್ಯಸಾಹಿತ್ಯದ
ಸ್ವರೂಪವನ್ನು ನಿರ್ಧರಿಸುವಲ್ಲಿ ಸಹಕಾರಿಯಾಗಿವೆ. ಈ ಶಾಸನದಲ್ಲಿಯ ಕುಲಮುದ್ದನು ಬಾಣಗಳು
ನಟ್ಟವನಾಗಿ ಕೆಳಗುರುಳುವಾಗ ಕಣೇ ಹಂದಿಯಂತೆ,ಕಣೆ ಪಂಜರದೊಳೆರಗಿ
ಭೀಷ್ಮನ್ ವಿಳನ್ತೆ ನೆಲ ಮುಟ್ಟದೆ ಬಿದ್ದನೆಂದು ವರ್ಣಿಸಿರುವ ವರ್ಣಣೆ ಕವಿಯ ರಚನಾ
ಕೌಶಲ್ಯದ ಪ್ರತೀಕವಾಗಿದೆ. ಕುಲಮುದ್ದನೆಂಬ ಕಲಿಯು ಶೌರ್ಯದಿಂದ ಹೊರಾಡಿ ಗೆದ್ದು ವೀರ ಮರಣವನ್ನು
ಪಡೆದ ಒಂದು ಸಂದರ್ಭವನ್ನು ಮೊದಲ ಭಾಗವಾಗಿ ಒಳಗೊಂಡಿದೆ. ಗದ್ಯದಲ್ಲಿರುವ ಈ ಶಾಸನ ಘಟನೆ ಶುಷ್ಕವರದಿಯಾಗಿರದೆ
ಸಾಹಿತ್ಯ ದೃಷ್ಟಿಯಿಂದ ಮನೋಙ್ಮವಾದ ವರ್ಣಾನ ಅಂಶವನ್ನು ಒಳಗೊಂಡಿರುವುದು ಗಮನಾರ್ಹವಾಗಿದೆ. ಇಲ್ಲಿ
ನಾಟಕೀಯತೆ,
ವರ್ಣನೆ ದೃಷ್ಟಾಂತ, ದೃಶ್ಯ ಕಲ್ಪನೆ ಈ ಕೆಲವು ಸಾಹಿತ್ಯಿಕವಾದ ಅಂಶಗಳನ್ನು ನಾವು
ಕಾಣಬಹುದಾಗಿದೆ. ಈ ಗುಣಗಳು ಇಲ್ಲಿಂದ ಮುನ್ನಡೆದಂತೆಲ್ಲ ಹೆಚ್ಚು ಹೆಚ್ಚಾಗಿ ಶಾಸನಗಳಲ್ಲಿ
ಕಾಣಿಸಿಕೊಂಡಿವೆ. ಆದರೆ ಕ್ವಚಿತ್ತಾಗಿ ಕಂಡುಬರುವ ಇಂತಹ ನಿದರ್ಶನಗಳಿಂದ ತತ್ಕಾಲೀನವಾದ ಭಾಷಾ
ಸಾಹಿತ್ಯಗಳ ಬಗ್ಗೆ ಖಚಿತವಾದ ಯಾವುದೇ ನಿಲುವನ್ನು ತಳೆಯುವುದು ಸಾಧ್ಯವಿಲ್ಲವಾದರೂ , ಅದರಿಂದ
ಅವುಗಳ ಬೆಳವಣಿಗೆಯ ವಿಧಾನಗಳೆಲ್ಲ ಹೀಗೆಯೇ ನಡೆದಿರಬಹುದೆಂದು ಸ್ವಲ್ಪ ಮಟ್ಟಿಗೆ ಊಹಿಸ ಬಹುದಾಗಿದೆ.
ಬಾದಾಮಿ ಚಾಲುಕ್ಯರ ಕಾಲದ ಗದ್ಯಶಾಸನಗಳಲ್ಲಿಯೇ
ಲಕ್ಷ್ಮೇಶ್ವರದ ಗದ್ಯ ಶಾಸನ ದೀರ್ಘವಾದುದಾಗಿದೆ.
ಸ್ವಸ್ತಿಶ್ರಿ ವಿಕ್ರಮಾದಿತ್ಯಯುವರಾಜರ್ ಪೊರಿಗೆರಿಯಾ
ಮಹಾಜನಕ್ಕುಂನ
ಗರಕ್ಕುಂ ಪದಿನೆಣ್ಟು ಪ್ರಕೃತಿಗಳ್ಗುಂ ಕೊಟ್ಟ ಆಚಾರ ವ್ಯವಸ್ಥಿ(ಸ್ಥೆ)ರಾಜಪುರುಷರ್ಮ್ಮನೆಗಳೊಳ್
ವೀಡಿಲ್ಲಾದ
ದು ರಾಜದತ್ತ ರಾಜಶ್ರಾವಿತಂ ಸತ್ಪ್ರಮೆ ಮಯ್ರ್ಯಾದೆ
ತಾಂಬ್ರ ಶಾಸನಂ ಭುಕ್ತಾ
ನು ಭೋಗಂ.......ಅಯ್ದು ಧಮ್ರ್ಮದಾ ಜೀವಿತಂಗಳಾನ್ಯಾವೊದು
ಇದು ಮಹಾಜನಕ್ಕೆ
ನಗರ ಮಯ್ರ್ಯಾದೆ ಮನೆವೀಡಿಲ್ಲಾದದು ಓರಾಳ್ಕೆ ಒಮ್ರ್ಮೆ
ವೈಶಾಖಮಾಸದುಳ್
ದೇಶಾಧಿಪತಿಗಳಪ್ಪೊಗ್ರ್ಗೆ ಕುಡುವತೆರೆ ಉತ್ತಮಮಪ್ಪ
ಒಕ್ಕಲ್ಮಿ...ಸಂಪತ್ತು ಪಣವುಂ ಕನಿಷ್ಟರಯ್ದುಂ
ಕಣೀಯಸರ್ ಮೂರು ಮಂಟಪ್ಪ ಒಸಗೆ ಉತ್ಸಾಹಂಗಳ್ಗೆ
ಒಕ್ಕಲೊನ್ದು ಪುಟ್ಟಿ
ಗೆ ಮ.... ಚೋರಪಾಕದಣ್ಡ ದಶಾಪರಾಧಂಗಳಪ್ಪವೆಲ್ಲಂ
ಪೂರ್ವಾಚಾರಂ ಅ
ಪುತ್ರ ಧನಮೆನ್ವೋದು ತಾನೆ ಇಲ್ಲಿ ಗುತ್ತಂ ರೂವಂಗೆ
ಮಾತ್ರ್ತಿಕ ಮಾಸದುಳ್ಕೊಡುವದು ಪಾಣ್ಡಿಸೆಟ್ಟಿ ನಾಲ್ಫಾ
ಸಿರಂ ತಮ್ರ್ಮೆಸಗಡೆಣಕ್ಕೊ(?) ಪೊಳನಾಲಾಳೆ
ಕಞ್ಚಗಾರ,ಸೇಣಿಗೆ ಮನೆ ವೀಡಿಲ್ಲಾದದು ಉತ್ತ
ಮಮಪ್ಪ ಒಕ್ಕಲ್ಚೆಳದೆ ಇಪ್ರ್ಪತ್ತು ಪಲಂ ಮಧ್ಯಮಂ
ಪದಿನಯ್ದು ಕನಿಷ್ಠ ಪತ್ತುಂ ಕಣೀ
ಯಸಂ ಅಯ್ದು ಮಂತ್ತಪ್ಪ ಒಸಗೆ ಉತ್ಸಾಹಂಗಳ್ಗೆ ಸಮಾಹಂ
ಒತ್ರ್ತೊಳೆ ತೆಲ್ಲಿಗಸೇಣಿಗೆ
ಮನೆ ವೀಡಿಲ್ಲಾದದು ಕೂಳಲ್ಲಾದದು
ತೆರಿಯುಂ ಕೆಯುಳ್ಳಾರೆ ಅರೆವಾಡ ಕೆಯ್ಯಿಲ್ಲಾದದು ಸೊ
ರೆ ಮತ್ತಪ್ಪ
ಒಸೆಗೆ ಉತ್ಸಾಹಂಗಳ್ಗೆ ಳ್ತು ವಯಲಮುಂ ಪೆತ್ತವೀ
ವಯಲಮುಂ ಸೊವೆಗೆಯಾ
ಮರ್ಯಾದೆ ಇರ್ಪ್ಪತ್ತಾ ಅಯಿವಳ್ಳ ಕೆಯ್ಯಾ
ವಿಟ್ಟಿಯಾನ್ಕೆಯಿ.....ಗಾರಿ
ಸೇಣಿಗೆ ಉತ್ತಮಂ ಅ...............ಮಧ್ಯಮ
ಸಾಯಿರ...........................ಸಾಯಿರಂ(ಂ) ಕನಿಷ್ಠ(ಂ) ಕಣಿಃ
ಯಸಂ(ಇಲ್ಲಿ ಆಯ್ದ ಸಾಲು ಬರಹ ಕಾಣಿಸುವುದಿಲ್ಲ.)
......................................ಸೇಣಿಗೆ
ಅರಸ್ಯಾಳೆ....................................ಸ್ವಸ್ತಿ ಶ್ರೀಕುಪ್ಪರ್ಮದರಂ
ಗೆ ಕೊಟ್ಟ ಕೆಯಂ ಗೋಡಿಗರೊಡ ಮೂನೂವ್ರ್ವರುಮ ಒಕ್ಕಲುಂ ನಾಚ್ಗೌಮುಣ್ಣುನುಂ ಇಳ್ದು
ಕೊಟ್ಟಾರ್ ಇದಂ ಕೊಳ್ವೊಂ ವಾರಣಾಸಿವಮಂ ಅರಿದೊನ ಲೋಕಕ್ಕೆ
ಸನ್ದೊನಕ್ಕುಂ ಸಾಸಿರ್ವ್ವರ್ಪ್ಪಾವರುಂ ಸಾ
(ಯಿರ)(ಕವಿ)ಲೆಯಮಂಕೊನ್ದ ಲೊಕಕ್ಕೆ
ಸನ್ದೊ(ನಕ್ಕಂ)
ಬಾದಾಮಿ ಚಾಲುಕ್ಯ ಶಾಸನಗಳಲ್ಲಿ ಅತ್ಯಂತ
ದೀರ್ಘವಾದುದಾಗಿದ್ದು ಪೊರಿಗೊರೆಯ ಮಹಾಜನರಿಗೂ ಹದಿನೆಂಟು ಪ್ರಕೃತಿಗಳಿಗೂ ಕೊಟ್ಟ ಆಚಾರ
ವ್ಯವಸ್ಥೆಯನ್ನು ವಿವರಿಸುತ್ತದೆ. ಕ್ರಿ.ಶ850ರ ವರೆಗಿನ
ಯಾವ ಕನ್ನಡ ಶಾಸನಗಳಲ್ಲಿಯೂ ಲೌಕಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ರಾಜಾಜ್ಞೆಗಳಿಲ್ಲ. ಬಾದಾಮಿ
ಚಾಲುಕ್ಯರ ಆಸ್ಥಾನದಲ್ಲಿ ಸಂಸ್ಕೃತದ ಜೊತೆಗೆ ಕನ್ನಡವು ರಾಜ ಭಾಷೆಗೆ ಸಲ್ಲಬೇಕಾದ
ಮರ್ಯಾದೆಗಳನ್ನೆಲ್ಲ ಪಡೆದಿತ್ತೆಂದು ಹೇಳಲು ಇದು ಸ್ಪಷ್ಟ ಆಧಾರವಾಗಿದೆ. ಈ ಶಾಸನದಲ್ಲಿ ಅಲ್ಲಲ್ಲಿ
ಸ್ಖಾಲಿತ್ಯಗಳು ಉಳಿದು ಕೊಂಡಿವೆ. ಆದಾಗ್ಯೂ ಅಂದಿನ ವ್ಯವಹಾರ ಕನ್ನಡದ ತಿಳಿವಳಿಕೆಗೆ ಈ ಶಾಸನವು ಒಳ್ಳೆಯ
ಮಾದರಿಯಾಗಿದೆ. ಈ ಶಾಸನವು ಅಂದಿನ ಕರ್ನಾಟಕದ ನಗರಾಡಳಿತದ ವ್ಯವಸ್ಥೆಯ ಕೆಲವಂಶಗಳನ್ನು
ಪ್ರಸ್ತಾಪಿಸುತ್ತದೆ. ಅದಕ್ಕಿಂತ ಮುಖ್ಯವಾಗಿ ಈ ಶಾಸನದಲ್ಲಿ ಕನ್ನಡದಲ್ಲಿ ಅಂದು
ವ್ಯವಹರಿಸಲ್ಪಡುತ್ತಿದ್ದ ಭಾಷೆಯ ಮಾದರಿಯನ್ನು ತಕ್ಕ ಮಟ್ಟಿಗೆ ಗುರುತಿಸಲು ಸಹಾಯಕವಾಗಿದೆ.
ವೀರಗಲ್ಲು ಮತ್ತು ಮಾಸ್ತಿಗಲ್ಲುಗಳಲ್ಲಿ ಬರೆದ ಕನ್ನಡ ಭಾಷೆಯ ಗದ್ಯವು ಸರಳವಾದ ಆಡುಮಾತಿನ
ಸೊಗಡನ್ನು ಒಳಗೊಂಡ ಗದ್ಯವಾಗಿದೆ. ಶಾಸನಗಳು ಕನ್ನಡ ಭಾಷೆಯ ಎಲ್ಲಾ ಅವಸ್ಥಾಂತರಗಳನ್ನು
ಒಳಗೊಂಡಿರುವುದರ ಜೊತೆಗೆ ಕೆಲವೆಡೆ ದ್ವಿಭಾಷಿಕತ್ವವನ್ನು ಹೊಂದಿವೆ. ಶಾಸನಗಳಲ್ಲಿ ಶಾಸನ ಗದ್ಯದ
ವಿಭಿನ್ನ ಮಾದರಿಗಳನ್ನು ಅಲ್ಲಲ್ಲಿ ಗುರುತಿಸಬಹುದಾಗಿದೆ. “ಶುದ್ದ ಸಾಹಿತ್ಯದಲ್ಲಿ ಗದ್ಯಕ್ಕೆ ಒದಗುವ ಈ ಸ್ಥಿತಿ ಶಾಸನಗಳಲ್ಲಿ ಒದಗಲಿಲ್ಲ.
ಪೂರ್ಣವಾದ ಗದ್ಯದಲ್ಲಿರುವ ಶಾಸನಗಳು ಸಂಖ್ಯೆಯ ದೃಷ್ಟಿಯಿಂದ ಗೌಣವಾಗಿದ್ದರೂ ಶಾಸನಗಳಲ್ಲಿ ಗದ್ಯದ
ನಾನಾ ರೂಪಗಳನ್ನು ಕಾಣಬಹುದು. ಗದ್ಯ ತನ್ನ ನಿಜವಾದ ಸ್ವರೂಪದಲ್ಲಿ ಕಾಣಿಸಿಕೊಂಡಿರುವುದು ಶಾಸನಗಳಲ್ಲಿಯೇ.
ಪ್ರೌಢವಾದ ಗದ್ಯ ಬೇಕೆ? ಸಂಸ್ಕೃತ ಗದ್ಯ ಬೇಕೆ? ಪಡೆಸಾರ ಗದ್ಯ ಬೇಕೆ? ದೇಶಿ ಚೆಲುವಿನಿಂದ ಕೂಡಿದ ಗದ್ಯ ಬೇಕೆ? ಈ ಎಲ್ಲವೂ ಶಾಸನಗಳಲ್ಲಿ ದೊರೆಯುತ್ತದೆ. ಶುದ್ದ ಅಥವಾ ಪಕ್ಕಾ ಸಾಹಿತ್ಯದಲ್ಲಿ ಇಷ್ಟೊಂದು
ವೈವಿದ್ಯಮಯವಾದ ಗದ್ಯವನ್ನು ಕಾಣಲಾರೆವು.
ಕ್ರಿ.ಶ. ಪ್ರಾರಂಭ ಕಾಲದಿಂದ ಕನ್ನಡವು ವ್ಯವಹಾರ ಭಾಷೆಯಾಗಿ ಲಿಪಿರೂಪ ಪಡೆಯುವ ವರೆಗಿನ
ಸ್ಪಷ್ಟವಾದ ಚಿತ್ರಣದ ಸ್ವರೂಪವನ್ನು ಕ್ರಿ.ಶ.5ನೇ ಶತಮಾನದಿಂದ ಕ್ರಿ.ಶ. 850 ರ ವರೆಗಿನ ಕನ್ನಡದ ಗದ್ಯ ಶಾಸನಗಳಲ್ಲಿ ಗುರುತಿಸ
ಬಹುದಾಗಿದೆ. ಆರಂಭ ಕಾಲದಲ್ಲಿ ಸಂಸ್ಕೃತ ಭಾಷೆಯ
ಶಾಸನಗಳೊಂದಿಗೆ ಬೆರತು ಬರುತ್ತಿದ್ದ ಕನ್ನಡ ಭಾಷೆಯ ಶಾಸನಗಳು ಕ್ರಿ.ಶ.6ನೆಯ ಶತಮಾನದ ವೇಳೆಗಾಗಲೇ ಕೆಲವು ಶಾಸನಗಳಲ್ಲಿ ಕನ್ನಡವು ಗದ್ಯದ
ರೂಪದಲ್ಲಿ ನೇರವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು. ಏಳನೆಯ ಶತಮಾನದ ವೇಳೆಗಾಗಲೇ
ಪೂರ್ಣಪ್ರಮಾಣದಲ್ಲಿ ಕನ್ನಡವು ಶಾಸನಗಳಲ್ಲಿ ಬಳಕೆಯಾಗಲು ಪ್ರಾರಂಭಿಸಿತ್ತು. 8ನೇ ಶತಮಾನದ ವೊತ್ತಿಗಾಗಲೇ ಕನ್ನಡವು ಯಾವ ನಿರ್ಬಂಧವೂ ಇಲ್ಲದೆ
ವ್ಯವಹಾರಿಕ ಭಾಷೆಯಾಗಿ ಬಳಕೆಗೊಂಡಿದ್ದನ್ನು ಆ ಕಾಲದ ಗದ್ಯ ಶಾಸನಗಳು ಸಮರ್ಥಿಸುತ್ತವೆ. ಕ್ರಿ.ಶ. 5ನೇ ಶತಮಾನದಿಂದ 9ನೇ ಶತಮಾನದ ವರೆಗಿನ ಅವಧಿಯಲ್ಲಿ ಸುಮಾರು 350ಕ್ಕಿಂತ ಮೇಲ್ಪಟ್ಟು ಗದ್ಯ ಶಾಸನಗಳು ಕಂಡು
ಬರುತ್ತಿವೆಯಾದರೂ ಅವುಗಳಲ್ಲಿ ಬೆರಳೆಣಿಕೆಯ
ಶಾಸನಗಳಲ್ಲಿ ( ಹಲ್ಮಿಡಿ ಶಾಸನ,ದುರ್ವಿನೀತನ ಉತ್ತನೂರು ಶಾಸನ, ಶಿರೂರ ಶಾಸನ, ನೀರ್ಗುಂದ ಶಾಸನ
ಮತ್ತು ಕಳಸದ ಶಾಸನಗಳು) ಮಾತ್ರಗದ್ಯ ಸಾಹಿತ್ಯದ ಲಕ್ಷಣಗಳನ್ನು ಗುರುತಿಸ ಬಹುದಾಗಿದೆ. ಶ್ರೇಷ್ಠ
ಗದ್ಯದ ಲಕ್ಷಣಗಳನ್ನು ಇಲ್ಲಿ ಗುರುತಿಸ ಬಹುದಾಗಿದೆ. ಕ್ರಿ.ಶ. 850 ರಿಂದ1150 ರ ವರೆಗಿನ ಗದ್ಯಶಾಸನಗಳು ವಿಷಯವನ್ನು ನೇರವಾಗಿ ಸರಳವಾಗಿ
ತಿಳಿಸುತ್ತವೆ. ದಾನಶಾಸನಗಳು ಮತ್ತು ವೀರಗಲ್ಲುಗಳ ಶಾಸನಗಳ ಪಠ್ಯಗಳು ಯಾವ ಆಡಂಬರವೂ ಇಲ್ಲದೆ
ಸಾಧ್ಯವಾದಷ್ಟು ಕಿರಿದಾಗಿವೆ.ಆಳುವ ರಾಜನ ಹೆಸರು,ಅವನ ಬಿರುದಾವಳಿ,ಆಗ ನಡೆದ ವಿಷಯ, ಕೊಟ್ಟದಾನ, ನಡೆದ ಯುದ್ಧ, ಕಟ್ಟಿದ ದೇವಾಲಯ, ದತ್ತಿಯ
ನಿಬಂಧನೆಗಳಿಗೆ ತಪ್ಪಿದರೆ ಆಗುವಕೇಡು ಇಷ್ಟಕ್ಕೆ ಶಾಸನಗಳು ಮುಕ್ತಾಯಗೊಳ್ಳುತ್ತವೆ. ವಿರಳವಾಗಿ
ಕೆಲವು ಗದ್ಯಶಾಸನಗಳಲ್ಲಿಒಂದೋ ಎರಡೋ ಕಂದ ಮತ್ತು ವೃತ್ತಗಳು ಕಾಣಿಸಿಕೊಳ್ಳುವುದುಂಟು. ಜೊತೆಗೆ
ಗಂಗದೊರೆ ಎರೆಯಪ್ಪನ ಬೇಗೂರಿನ ವೀರಗಲ್ಲಿನ ಶಾಸನದ ಗದ್ಯವು ಸಂಸ್ಕೃತ ಭೂಯಿಷ್ಠವಾದ ಪ್ರೌಢವಾದ
ಗದ್ಯ ಶೈಲಿಯಿಂದ ಕೂಡಿದೆ. ಈ ಶಾಸನಗಳು ಹೆಚ್ಚಾಗಿ ವಸ್ತುನಿಷ್ಠವಾಗಿ ಬೆಳೆದಿದ್ದರೂ ಬೆಳೆದಿದ್ದರೂ ಅಲ್ಲಲ್ಲಿ ಗದ್ಯ ಶೈಲಿಯ ಸರಳತೆ,ಕೆಲವೊಮ್ಮೆ ಬಿಗುವು ನಿರಾಡಂಬರತೆಗಳನ್ನು ವಿಷಯ ನಿರೂಪಣೆಯ ಸೊಗಸನ್ನು
ಕಾಣ ಬಹುದಾಗಿದೆ
ಶಾಸನ ಗದ್ಯ ಕನ್ನಡ ಭಾಷೆ, ಕರ್ನಾಟಕ ಜನಜೀವನದ ನಾನಾ ಮುಖಗಳನ್ನು, ರುಚಿವಿಶೇಷಗಳನ್ನು ಎತ್ತಿತೋರಿಸುವ ಸತ್ತ್ವಶಾಲಿಯಾದ ಒಂದು
ಮಾಧ್ಯಮವಾಗಿದೆಯೆನ್ನಬಹುದು. ಕನ್ನಡ ಸಾಹಿತ್ಯ ಚರಿತ್ರೆಯ ಹಿನ್ನೆಲೆಯಲ್ಲಿ ಗುರುತಿಸಿರುವ ಕನ್ನಡ
ಭಾಷಾ ಅವಸ್ಥಾ ಬೇಧಗಳ ಕಾಲವನ್ನು ಕನ್ನಡ ಗದ್ಯಶಾಸನಗಳ ಭಾಷಾ ಬಳಕೆಯ ಸ್ವರೂಪವನ್ನಾಧರಿಸಿ
ಗುರುತಿಸಲು ಆಗುವುದಿಲ್ಲ. ಈಗಾಗಲೇ ಗುರುತಿಸಿರುವ ಹಳಗನ್ನಡ,ನಡುಗನ್ನಡ,ಹೊಸಗನ್ನಡಗಳ ಕಾಲಘಟ್ಟದಲ್ಲಿ ಹಿಂದುಮುಂದಾಗುವ ಸಾಧ್ಯತೆ ಇದೆ.
7-8ನೇಶತಮಾನದ ಗಂಗರ
ಕೆಲವು ಗದ್ಯಶಾಸನಗಳಲ್ಲಿ ಭಾಷೆಯ ರಚನೆ,ಭಾವವಾಹಿತ್ವಶಕ್ತಿ,ವಿಚಾರ ಶಕ್ತಿ,ಬಳಕೆಯ ಉದ್ದೇಶ ಇತ್ಯಾದಿ ಸ್ವರೂಪಗಳನ್ನು ಗುರುತಿಸ ಬಹುದಾಗಿದೆ.
ಅದಕ್ಕಿಂತ ಮುಖ್ಯವಾಗಿ ಕನ್ನಡ ಭಾಷೆಯ ಕನ್ನಡತನ, ಸಂಸ್ಕೃತದ ರೀತಿ ರಚನೆಗಳನ್ನು ಅನುಕರಿಸದ ದೇಶಿಯತೆ ಎದ್ದು ಕಾಣುತ್ತದೆ. ಭೂಮಿಕಾಣಿಗಳ
ಸಂಬಂಧವಾದ ವ್ಯವಹಾರದಲ್ಲಿ ಆ ಕಾಲದ ಹಳ್ಳಿಗಳ ಸಾಮಾನ್ಯ ಜನರ ನಡುವೆ ಭಾಷೆ ಎಷ್ಟು ನಿರಾಡಂಬರ,ಸಹಜ ಆಗಿರುತ್ತಿತ್ತು ಎಂಬುದನ್ನು ಕೆಲವು ಶಾಸನಗಳುಸೂಚನೆ ಕೊಡುತ್ತವೆ.
ನಿದರ್ಶನಕ್ಕೆ ಗಂಗರ ಕಾಲದ ಗದ್ಯ ಶಾಸನದ ಒಂದು ತುಣುಕು.
ಸಾಮಾನ್ಯ ಜನತೆ ಹಾಕಿಸಿರುವ ಶಾಸನಗಳಲ್ಲಿ
ಹಾಗೂ ದತ್ತಿದಾನದ ವಿವರಣೆಗಳನ್ನೊಳಗೊಂಡ ಕನ್ನಡ ಶಾಸನ ಗದ್ಯಗಳಲ್ಲಿಯ ಭಾಷಾ ಸ್ವರೂಪವು ಪ್ರಾಚೀನ ಕರ್ನಾಟಕದ ಆಡುಭಾಷೆಯ ಸ್ವರೂಪದಂತಿದೆ. ಈ
ಗದ್ಯ ಶಾಸನಗಳೇ ಒಂದು ರೀತಿಯಲ್ಲಿ ಪ್ರಾಚೀನ ಕರ್ನಾಟಕದ ಆಡುಭಾಷೆಯನ್ನು ಅಧ್ಯಯನ ಮಾಡುವವರಿಗೆ ಆಕರಗಳಾಗಿವೆ.
ಕವಿ
ಬಳಸುವ ಗ್ರಂಥಸ್ಥ ಭಾಷೆ ಆಕಾಲದ ಕಂಠಸ್ಥ ಭಾಷೆಯ ಪರಿಷ್ಕೃತ ರೂಪವಾಗಿರುವ ಹಾಗೆ ಆ ಕಾಲಕ್ಕೆ
ಪ್ರಾಚೀನವಾದ ರೂಪವೂ ಆಗಿರುತ್ತದೆ. ಆದರೆ ಒಂದೇ ಕಾಲದ ಗ್ರಂಥಸ್ಥ ಭಾಷೆಯ ಶಾಸನ ಅವುಗಳ ಭಾಷಾರೂಪ
ತೀರ ಭಿನ್ನವಾಗಿ ಕಂಡು ಬರುತ್ತದೆ. ಅಂದರೆ ಶಾಸನಗಳ ಗದ್ಯದ ಭಾಷೆ ಅಂದಂದಿನ ಗ್ರಂಥಸ್ಥ ಭಾಷೆಯನ್ನು
ಸಾಮಾನ್ಯವಾಗಿ ಅನುಸರಿಸಿದರೂ ಪ್ರಚಲಿತ ಭಾಷೆಯಲ್ಲಿಯ ದೇಶ್ಯ ಶಬ್ದಗಳನ್ನು,ರೂಪಗಳನ್ನು ಅಲ್ಲಿ ಒಳಗೊಂಡಿದ್ದು ಪ್ರೌಢಭಾಷೆಗಿಂತ ಬೇರೆಯಾದ ಸರಣಿಯನ್ನು
ಹೊಂದಿರುತ್ತದೆ. ಇದಕ್ಕೆ ಕೆಲವು ಗದ್ಯ ಶಾಸನಗಳ
ಪ್ರಯೋಗವನ್ನು ಕೊಡ ಬಹುದಾಗಿದೆ.
ಕ್ರಿ.ಶ. 1035ರ ಬಾಗಳಿ ಶಾಸನದಲ್ಲಿಯ` ಹಾಡುವ ಕಾಮವೆ ನಾಗವೆಯ ಮಗಳುಂ, ಶ್ರೀ ಕಲಿದೇವರ ತೊತ್ತು ಪಾತ್ರದ ಸಿರಿಯವೆ, ಕಲ್ಲಕೇರಿಯ ತನ್ನ ಮನೆಯನಾ ದೇವರಿಗೆ ಕೊಟ್ಟು ಆ ಮನೆಯೊಳಗೆ ತನುಂ ತನ್ನ ವಂಶಜರಾರಿರ್ದೊಡಂ
ಆಚಂದ್ರಾರ್ಕತಾರಂಬರಂ ದೇವರ ನಂದಾದೀವಿಗೆಗೆ ವರ್ಷಂಪ್ರತಿ ಪಣವೆರಡುಂ ಕೊಟ್ಟು ಮನೆಯೊಳಗೆ
ಸುಖದಿನಿಪ್ಪುದು' (ಎಸ್.ಎಸ್.ಐ.ಸಂ.9-1ಬಾಗಳಿ) ಈ ಶಾಸನವು ಸಾಹಿತ್ಯ ಚರಿತ್ರೆಯ ಕಾಲದ ದೃಷ್ಟಿಯಿಂದ
ಹಳಗನ್ನಡಕ್ಕೆ ಸೇರಿದರೆ, ಆ ಶಾಸನದ ಭಾಷಾ
ಪ್ರಯೋಗ ರಚನೆಗಳೆಲ್ಲಾ ತೀರ ನಡುಗನ್ನಡದವುಗಳು ಎಂದೆನಿಸುತ್ತದೆ. ಅದೇರೀತಿ ಕ್ರಿ.ಶ. 1303 ರ ಬಾಗವಾಳ ಶಾಸನದ ಭಾಷೆಯು ಸಾಹಿತ್ಯ ಚರಿತ್ರೆಯ
ಹಿನ್ನೆಲೆಯಲ್ಲಿ ಹಾಗೂ ಭಾಷಾ ಅವಸ್ಥಾ ಬೇಧಕ್ಕನುಗುಣವಾಗಿ ಹೇಳುವುದಾದರೆ ನಡುಗನ್ನಡ
ವಾಗಿದೆ. ಈ ಗದ್ಯ ಶಾಸನದ ಭಾಷೆಯಲ್ಲಿ
ಅಂತ್ಯಾನುಸ್ವಾರಗಳೆಲ್ಲ ಉದುರಿ ಹೋಗಿ ಹೊಸಗನ್ನಡದ ಲಕ್ಷಣಗಳನ್ನು ಹೊಂದಿದೆ.
ಅದೇ
ರೀತಿ ಕ್ರಿ.ಶ.16
ನೇ ಶತಮಾನದ ಜಾವಗಲ್ಲಿನ ಶಾಸನದಲ್ಲಿಯ ` ಭೈರವಭೂಪಾಲನು ಜಾವಗಲಿನಲಿ
ಸುಖಸಂಕಥಾವಿನೋದದಿಂದ ರಾಜ್ಯವನ್ನು ಪರಿಪಾಲಿಸುತಲು ತಮಗೆ ನಿರವಧಿಕವಾಗಿದ್ದ ಧರ್ಮ
ಕೀರ್ತಿಗಳಾಗಬೇಕೆಂದು ಅಚಂದ್ರಾರ್ಕಸ್ಥಾಯಿಯಾಗಿರೂ ಹಾಗೆ ಚಾವಗಲ್ಲ ದಕ್ಷಿಣಭಾಗದಲು ಬಯಿರ
ಸಮುದ್ರವೆಂಬ ಮಹಾ ತಟಾಕವನ್ನು ನೇಮಿಸಿ, ಆ ತಟಾಕದ ನಂದನ ವನಕೆ ಗತಿಯಾಗಿದ್ದ
ಕ್ಷೇತ್ರಪ್ರತಿಷ್ಠೆಯನ್ನು ಮಾಡಿ,ಜಾವಗಲ್ಲ ಪೂರ್ವದ ಕರೆಗೆ ಸಾಳುವನ
ಅಳಗವೆಂಬ ಕಾಲುವೆಯನ್ನು ಹೊಸತಾಗಿ ತೆಗಿಸಿ ಕೆರೆಗಳು ದೃಢವಹ ಹಾಗೆ ಮಾಡಿಸ್ತರು. 16 ನೇ ಶತಮಾನದ ಈ ಗದ್ಯ ಶಾಸನದ ಭಾಷೆಯು 16 ನೇ
ಶತಮಾನದ್ದೆಂದು ಹೇಳಲಾಗದಷ್ಟು ಹೊಸಗನ್ನಡ ಭಾಷೆಯ ಸ್ವರೂಪವನ್ನು ಪಡೆದಿದೆ. ಗ್ರಾಂಥಿಕ ಭಾಷೆ
ಮೂಲತಃ ಮಾರ್ಗ ಕಾವ್ಯದಲ್ಲಿ ಕಾಲಕಾಲಕ್ಕೆ ಆಡುನುಡಿಯಲ್ಲಿ ಆಗುವ ಬದಲಾವಣೆಗಳನ್ನು ತನ್ನಲ್ಲಿ
ಅಳವಡಿಸಿ ಕೊಳ್ಳದೆ ಇರುವಾಗ ಶಾಸನಗಳು ಅದನ್ನು ಕೆಲಮಟ್ಟಿಗೆ ಮೂಡಿಸಿರುತ್ತವೆ. ಈ ಹಿನ್ನೆಲೆಯಲ್ಲಿ
ಶಾಸನ ಗದ್ಯಭಾಷೆವನ್ನು ಪ್ರಗತಿಪರವಾದ ಗದ್ಯ ಭಾಷೆ ಎಂದು ಕರೆಯ ಬಹುದಾಗಿದೆ. ಕನ್ನಡ ಸಾಹಿತ್ಯ
ಚರಿತ್ರೆಯ ಹಿನ್ನೆಲೆಯಲ್ಲಿ ಗುರುತಿಸಿರುವ ಕನ್ನಡ ಭಾಷಾ ಅವಸ್ಥಾ ಬೇಧಗಳ ಕಾಲವನ್ನು ಗದ್ಯಶಾಸನಗಳ
ಭಾಷಾ ಬಳಕೆಯ ಸ್ವರೂಪವನ್ನಾಧರಿಸಿ ಗುರುತಿಸಲು ಆಗುವುದಿಲ್ಲ. ಈಗಾಗಲೇ ಗುರುತಿಸಿರುವ ಹಳಗನ್ನಡ, ನಡುಗನ್ನಡ,ಹೊಸಗನ್ನಡಗಳ
ಕಾಲಘಟ್ಟದಲ್ಲಿ ಹಿಂದುಮುಂದಾಗುವ ಸಾಧ್ಯತೆ ಇದೆ. ಜನಸಾಮಾನ್ಯರ ಹೋರಾಟದ ಸಂದರ್ಭಗಳಾದ ತುರುಗೋಳು, ಗಡಿಗಾಳೆಗ,ಪೆಣ್ಬುಯ್ಯಲು,ಊರಳಿವು
ಈ ಮುಂತಾದವುಗಳಲ್ಲಿ ಭಾಗಿಯಾಗಿ ಪ್ರಾಣಾರ್ಪಣೆ ಮಾಡಿದ ಗ್ರಾಮದ ವೀರರ ನೆನಪಿಗೆ ನಿಲ್ಲಿಸಿದ ವೀರಗಲ್ಲುಗಳು ಸರಳವಾದ ಕನ್ನಡ ಗದ್ಯ ಭಾಷೆ ಯಲ್ಲಿಯೇ
ಇರುವುದು ಎಲ್ಲರೂ ತಿಳಿದಿರ ತಕ್ಕದ್ದೇ ಆಗಿದೆ. ಬ್ರಾಹ್ಮಣರಿಗೆ ವೃತ್ತಿ ಹಾಕಿಕೊಟ್ಟ ದಾನಶಾಸನಗಳು
ಸಂಸ್ಕೃತದಲ್ಲಿದ್ದರೂ ವೀರಗಲ್ಲು ಮಾಸ್ತಿಗಲ್ಲುಗಳು ಹಾಗೂ ಜನಸಾಮಾನ್ಯರು ದೇವಾಲಯಗಳಿಗೆ
ನೀಡುತ್ತಿದ್ದ ದಾನಗಳೂ ಸಹಜವಾಗಿ ದೇಸಿ ಗದ್ಯಭಾಷೆಯಲ್ಲಿ ನಿರೂಪಿತವಾಗಿವೆ. ಇಲ್ಲಿ ಅತ್ಯುಕ್ತಿ
ಅಲಂಕಾರೋಕ್ತಿಗಳೇನೂ ಇಲ್ಲ; ತಾರ್ಕಿಕವಾದ ವಸ್ತುನಿಷ್ಠೆಯ ವಿವರಗಳಷ್ಟೆ
ಸುಲಭ ಗದ್ಯದಲ್ಲಿ ಬರುತ್ತದೆ. ಅಂದಿನ ಕಾಲದ ವ್ಯಾಪಾರವಸ್ತುಗಳು ಸುಂಕ ತೆರಿಗೆಗಳು ಅಳತೆ
ತೂಕಗಳನ್ನು ಸುಲಭ ವ್ಯಾವಹಾರಿಕ ಗದ್ಯದ ನಿರೂಪಣೆಗಳಿಂದಲೇ ತಿಳಿಯಬಹುದಾಗಿದೆ. ನಿದರ್ಶನಕ್ಕೆ ಗಂಗರ ಕಾಲದ ಶಾಸನಗಳನ್ನು ಉದಾಹರಿಸ
ಬಹುದಾಗಿದೆ.
ಗಂಗದೊರೆ
ಮಾರಸಿಂಹನ ಶಾಸನ:
ಪೊಂಗಡ್ಯಾಣವ್ ಇರ್ಪ್ಪತ್ತ್ ಉಪದೇಯ ಪ್ರಮಾಣಮ್ ಧಾನ್ಯಂ ಖಣ್ಡುಗಂ ನಾಲ್ನೂರ ತಸ್ಯ
ಸೀಮಾಂತರಂ ಆಗ್ನೇಯದ ಕೋಣೊಳ್ ಮುಗ್ಗುದ್ದೆಯ ನೊಸೆಕಲ್ಲೆಂಬ ಬಿಳಿಯ ಕಲ್ಲ ತೆಂಕಣ ದೆಸೆಯೊಳ್ ಅಂತೆ
ಬರೆ ಕಲ್ಸರಡು ಅಂತೆ ಬರೆ ಗುವಿಯುಂಗಲು ಅಂತೆ ಬರೆ ಪುಣುಸೆಯ ಕಿರೆಯ ಕೆರೆ ಅಂತೆ ಬರೆ
ಪಾಲೆರೆಯ ತೆಂಕಣ ಕಡೆಗೂಡಿ ಅಂತೆ ಬರೆ ಅಂಕೋಲೆಯ ಪೆರ್ಮ್ಮಳೆ ಅಂತೆ ಬರೆ ತೆಂಕ ಮೈಯಾರಿಸಿ ಕಿರುಗೊಲ್ಲಿಯುಳ್
ಪೊಕ್ಕು ನೈರಿತಿಯ ಕೋಣೊಳ್ ಕಾವೇರಿಯಲ್ ಕೂಡಿ ಅಂತೆ ತೊರೆಯ ನಡುವನೆಯಿದಿರೇರು ಪಡುವ ಪೆಯ್ತು ವಾಯುವ್ಯದ
ಕೋಣೊಳ್ ಪೆಗ್ಗೊಲ್ಲಿಯ ನೀರ್ವ್ವುಗಿಲು ಬಡಗಣ ದೆಸೆಯೊಳ್ ಅಂತೆ ಬರೆ ಪೇರೊರ್ಬ್ಬೆ ಅಂತೆ ಬರೆ ಎರಡು
ಕಿರು ಮೊರಿದಿಯ
ನಡುವಣ ಕಿರುಗಲ್ಲು ಅಂತೆ ಬರೆ ಬಿಳಿಯ ಪಡುಂಗಲ್ಲು ಅಂತೆ ಬರೆ ಪೇರೊಬ್ಬೆ ಅಂತೆ ಬರೆ ಮಲ್ಲಿಗೆವಾವಿ
ಅಂತೆ ಬರೆ ಪಾಲ್ಗೊಂಬ್ ಎಂಬ ಪುಣುಸೆ ಅಂತೆ ಬರೆ ಒಬ್ಬೆಯೊಳಗಣ ಬಿಳಿಯ ಬಟ್ಟಗಲ್ಲು ಅಂತೆ ಬಡಯ ಕೋಣ್
ಬೊಕ್ಕು ಕಲ್ಲತ್ತಿ ಅಂತೆ ಬರೆ ಈಶಾನದ ಕೋಣೊಳ್ ಮುಗ್ಗುಡ್ಡೇಯ ಮೊರಡಿಯ ಮೇಗಣ ಬಿಳಿಯ ಬಟ್ಟಗಲ್ಲು
ಅಂತೆ ಬರೆ ಕೆನ್ನಾಯ್ ಮೊರಡಿ ಅಂತೆ ಬರೆ ಮೂಡಣ ದೆಸೆಯೊಲ್ ಎರಡು ಬೆಟ್ಟದ ನಡುವಣ ಪೆರ್ಗ್ಗಡಹು
ಅನ್ತೆ ಬರೆ ಬೆಟ್ಟದ ಮೇಗಣ ಕೊಳವಾವಿ ಅನ್ತೆ ಬನ್ದ್ ಆಗ್ನೇಯದ ಕೋಣೊಳ್ ಕೂಡಿತ್ತು.
(ಶಾ.ಸಂ.856, ಗಂಗ-ಮಾರಸಿಂಹ, ಕ್ರಿ.ಶ.962-63)
ಗದ್ಯದ ಸರಳಶೈಲಿಗೆ ಭೂ ವಿವಾದವೊಂದರಲ್ಲಿ ಊರಿನವರು ನ್ಯಾಯತೀರ್ಮಾನ
ಮಾಡಿದ ಈ ಶಾಸನದ ಭಾಗವನ್ನು ನೋಡಬಹುದಾಗಿದೆ. (ಎ.ಕ.7.ಸಂ.ಎಸ್.ಕೆ.49)
“ಆವೂರು
ಪ್ರಜೆಗಳು ಯಿಂತಿವರುಗಳು ಸಮಕ್ಷದಲು ಕೊಟ್ಟ ವೋಲೆಯ ಕ್ರಮವೆಂತದೊಡೆ ಕಮ್ಮಟೇಶ್ವರ ದೇವರ ಸ್ಥಾನದ
ಭೂಮಿಯಲ್ಲಿ ಹೆಚ್ಚು ಕುಂದುಂಟೆಂದು ವಿವಾದಿಸಿದಲ್ಲಿ ಆ ಸ್ಥಳದ ಪ್ರಜೆಗಳುಂ ಆ ಪೊನ್ನಚ್ಚಸೆಟ್ಟಿ ಜೀಯರುಂ ಆ ಗವುಂಡುಗಳುಂ
ಚವನ ಗಾವೆಯವರುಂ ನೆರೆದು ಆ ಸ್ಥಳವ ನೋಡಿ ಅನಾದಿತೊಡಗಿ ದೇವರ ದಾನವಲ್ಲಯೆಂದು ತಿಳಿದು ನೋಡಿಮಿದನು
ನೀವು ವಿವಾದಿಸುಹ ಮರಿಯಾದೆ ಅಲ್ಲ ಎಂದು ಆ ಸೆಟ್ಟಿಯರುಂ ಆ ಗವುಂಡುಗಳುಂ ಆವೂರ ಪ್ರಜೆಗಳುಂ ಆ
ಚವುಗಾವೆಯವರುಂ ಆ ಸ್ಥಾನಿಕರಿಗೆ ಹೇಳಲು ಆಸ್ಥಾನಿಕರು ಭೂಮಿಯಲ್ಲಿ ಅನಾದಿ ತೊಡಗಿ ನಾವು ಭೊಗಿಸುವ
ಭೂಮಿ ಎಮ್ಮದು ಅಗ್ರಹಾರವಾದಂದು ತೊಡಗಿ ಮಹಾಜನಂಗಳು ಭೋಗಿಸುವ ಭೂಮಿ ಮಹಾಜನಂಗಳದು ಎವಗವ್ಯಂ
ಮಹಾಜನಂಗಳಿಗವ್ಯಂ ಭೂಮಿ ವಿಷಯಾವಾಗಿ ಹಳ್ಳಿ ಹಿರಿಯೂರಲು ಕಾವಣ ಕರಣವಿಲ್ಲ ಎಂದು ಆ ಮಹಾಜನಂಗಳಿಗೆ
ಆ ಸ್ಥಾನಿಕರು ಕೊಟ್ಟ ವೋಲೆ,”
ಜನಪದ ಸಂಸ್ಕೃತಿಯ ಭಾಗವಾದ ಶಾಪಾಶಯ ವಾಕ್ಯಗಳಂತೂ ಓಜಸ್ವಿಯಾದ ಗದ್ಯಭಾಷೆಯ ತುಣುಕುಗಳು.
ಹೀಗೆ ಶಾಸನ ಗದ್ಯ ಕನ್ನಡ ಭಾಷೆ, ಕರ್ನಾಟಕ ಜನಜೀವನದ ನಾನಾ ಮುಖಗಳನ್ನು, ರುಚಿವಿಶೇಷಗಳನ್ನು
ಎತ್ತಿತೋರಿಸುವ ಸತ್ತ್ವಶಾಲಿಯಾದ ಮಾಧ್ಯಮವಾಗಿದೆ.
ಸಾಮಾನ್ಯ ಜನತೆ ಹಾಕಿಸಿರುವ ಶಾಸನಗಳಲ್ಲಿ ಹಾಗೂ ದತ್ತಿದಾನದ ವಿವರಣೆಗಳನ್ನೊಳಗೊಂಡ ಕನ್ನಡ
ಶಾಸನ ಗದ್ಯಗಳಲ್ಲಿಯ ಭಾಷಾ ಸ್ವರೂಪವು ಪ್ರಾಚೀನ ಕರ್ನಾಟಕದ ಆಡುಭಾಷೆಯ ಸ್ವರೂಪದಂತಿದೆ. ಜನಪದ ಸಂಸ್ಕೃತಿಯ
ಭಾಗವಾದ ಫಲಶೃತಿ ಶ್ಲೋಕಗಳು ಹಾಗೂ ಶಾಪಾಶಯಗಳು ಗದ್ಯದಲ್ಲಿಯೇ ನಿರೂಪಿತವಾಗಿವೆ. ದತ್ತಿ ವಿವರಣೆಯ
ಭಾಗದಲ್ಲಿ ದೈನಂದಿನ ವ್ಯವಹಾರಿಕ ಕನ್ನಡ ಅಭಿವ್ಯಕ್ತಗೊಂಡಿದೆ. ಶಾಸನಗಳ ಶೈಲಿಯಲ್ಲಿ ಎಲ್ಲಾರೀತಿಯ
ಭಾಷಾ ಧೋರಣೆಯನ್ನು ಗುರುತಿಸಬಹುದಾಗಿದೆ. ಶಾಸನಗಳು ಬಹುಮಟ್ಟಿಗೆ ಕನ್ನಡ ಭಾಷಾ ಅವಸ್ಥಾಂತರದ
ಎಲ್ಲಾ ಪ್ರಭೇದಗಳನ್ನು ಪ್ರತಿನಿಧಿಸಿವೆ. ಈ ಗದ್ಯ ಶಾಸನಗಳೇ ಒಂದು ರೀತಿಯಲ್ಲಿ ಪ್ರಾಚೀನ
ಕರ್ನಾಟಕದ ಆಡು ಭಾಷೆಯನ್ನು ಅಧ್ಯಯನ ಮಾಡುವವರಿಗೆ ಆಕರಗಳಾಗಿವೆ. ಶಾಸನದ ಗದ್ಯ ಕನ್ನಡದ ಗದ್ಯ ಸಾಹಿತ್ಯಕ್ಕೆ ಹಿರಿದಾದ
ಕೊಡುಗೆಯನ್ನು ಕೊಟ್ಟಿದೆ. ಮುಖ್ಯವಾಗಿ ಶಾಸನಗಳಲ್ಲಿ ಅಂದಿನ ಆಡು ಮಾತಿನ, ಗ್ರಂಥಸ್ಥ
ಭಾಷೆಯ, ವ್ಯಾವಹಾರಿಕ
ಹಾಗೂ ಆಡಳಿತ ಭಾಷೆಯ ಕಾವ್ಯ ಭಾಷೆಯ, ಪ್ರಾದೇಶಿಕ ಸೊಗಡಿನ ಎಲ್ಲ ಸ್ತರಗಳನ್ನೂ
ಕಾಣಬಹುದಾಗಿದೆ.
ಒಟ್ಟಾರೆ ಶಾಸನಗಳು ಸಾಹಿತ್ಯಾತ್ಮಕವಾಗಿ ಹುಟ್ಟಿದವುಗಳಲ್ಲ. ಅವುಗಳ ಉದ್ದೇಶವೇ ಬೇರೆಯಾಗಿದೆ.
ಶಾಸನಗಳಲ್ಲಿ ಸಾಹಿತ್ಯಕ ಮೌಲ್ಯವಿದ್ದರೆ ಅದು ಕೇವಲ ಪ್ರಾಸಂಗಿಕ. ಶಾಸನ ಸಾಹಿತ್ಯವನ್ನು ಮಾರ್ಗ
ಸಾಹಿತ್ಯಕ್ಕಾಗಲೀ ದೇಸೀ ಸಾಹಿತ್ಯಕ್ಕಾಗಲೀ ಸೇರಿರುವ ಪ್ರಶ್ನೆಯೇ ಇಲ್ಲ. ಅದು ಕನ್ನಡ ಸಾಹಿತ್ಯ
ವಾಹಿನಿಯ ಪಕ್ಕದಲ್ಲೇ ಹರಿಯುವ ಇನ್ನೊಂದು ನದಿ ಎಂದು ಹೇಳಬಹುದು. ಆದಾಗ್ಯೂ ಸಾಹಿತ್ಯ ಮೌಲ್ಯವಿರುವ
ಶಾಸನಗಳು ಆರಂಭದಿಂದಲೂ ಭಾಷೆ ಮತ್ತು ರಚನೆಯ ದೃಷ್ಟಿಯಿಂದ ಚಂಪೂ ಕಾವ್ಯಗಳನ್ನು ಅನುಸರಿಸಿ
ಸೃಷ್ಟಿಯಾಗಿದ್ದು ನಂತರದ ಕಾಲದಲ್ಲಿ ದೇಸೀ ಸಾಹಿತ್ಯ ಪ್ರಕಾರಗಳಿಂದಲೂ ವಿರಳವಾಗಿ
ಪ್ರಭಾವಿತವಾಗಿವೆ. ಈ ಹಿನ್ನೆಲೆಯಲ್ಲಿ ಸಾಹಿತ್ಯಕ ಹಾಗೂ ಭಾಷಿಕ ಮಹತ್ವ ಪಡೆದ ಶಾಸನಗಳನ್ನು
ತೆಗೆದುಕೊಂಡು ಕನ್ನಡ ಭಾಷೆಯ ಹಳಮೆ-ಹಿರಿಮೆಗಳನ್ನು, ಗುರುತಿಸಲು ಅವು ಯಾವ ರೀತಿ ಆಕರಗಳಾಗಿವೆ ಎಂಬ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಕನ್ನಡ ಶಾಸನಗಳ ಸಾಮಾನ್ಯ ಸ್ವರೂಪ, ಅವುಗಳಲ್ಲಿ ದಾಖಲೆಯಾದ ಇತಿಹಾಸ ಸಮಾಜ ಮೊದಲಾದವುಗಳ ಜೊತೆಗೆ ಅವುಗಳ
ಭಾಷೆ, ಛಂದಸ್ಸು ಮೊದಲಾದವು
ನಾಡು ನುಡಿಗಳ ಪರಂಪರೆಯನ್ನು ತಿಳಿಯಲು ನಮಗೆ ಅಧಿಕೃತ ಆಕರಗಳಾಗಿವೆ. ಭಾಷೆ ಸಾಹಿತ್ಯಗಳಿಗೆ
ಸಂಬಂಧಿಸಿ ಹೇಳುವುದಾದರೆ ಇವುಗಳಿಂದ ನಮ್ಮ ಭಾಷೆ ಬೆಳೆದು ಬಂದಿರುವ ರೀತಿ ಗೊತ್ತಾಗಿದೆ; ಸಾಹಿತ್ಯದ ಪ್ರಾಚೀನತೆ, ಬೆಳವಣಿಗೆ, ಸತ್ವ ಸೌಂದರ್ಯಗಳು ಮನವರಿಕೆಯಾಗಿವೆ; ಗ್ರಂಥಸ್ಥ ಸಾಹಿತ್ಯದ ಸಂಶೋಧನೆಗೆ ಪೂರಕಸಾಮಗ್ರಿ ದೊರೆತಿದೆ; ಹೊಸ ಸಂಗತಿಗಳ ತಿಳುವಳಿಕೆಯು ಹಳೆಯ ಸಮಸ್ಯೆಗಳ ಪರಿಹಾರವೂ
ಸಾಧ್ಯವಾಗಿವೆ. ಶಾಸನಗಳ ಪ್ರಕಟನೆಯೂ ಅಭ್ಯಾಸವೂ ಪೂರ್ಣಗೊಂಡಿಲ್ಲ. ಶಾಸನಗಳ ಭಾಷೆಯ, ಸಾಹಿತ್ಯಗಳ ಬಹುಮುಖ ಅಧ್ಯಯನವು
ವ್ಯವಸ್ಥಿತ ಕ್ರಮಗಳಲ್ಲಿ ಇನ್ನು ನಡೆಯಬೇಕಾಗಿದೆ. ವಾಸ್ತವವಾಗಿ ಸಂಸ್ಕೃತ ಪ್ರಾಕೃತ
ಶಾಸನಗಳ ವಿಷಯದಲ್ಲಿ ನಡೆದಿರುವಷ್ಟು ವ್ಯಾಪಕವಾದ ಅಭ್ಯಾಸ ಕನ್ನಡ ಶಾಸನಗಳ ವಿಷಯದಲ್ಲಿ ಆಗಿಲ್ಲ.
ಶಾಸನಗಳ ಭಾಷೆ ಛಂದಸ್ಸು ಕವಿಗಳು ಶಬ್ದಗಳ ಮತ್ತು ಸಂದರ್ಭಗಳ ಅಕಾರಾದಿ, ಸಂಕಲನ ಗ್ರಂಥಗಳು, ಸಾಹಿತ್ಯ ವಿವೇಚನೆ, ವಿಶಿಷ್ಟ ಶಬ್ದಗಳ
ಮತ್ತು ಸಂದರ್ಭಗಳ ಕೋಶಗಳು ಹೀಗೆ ವಿವಿಧ ಮುಖಗಳಲ್ಲಿ ಕೆಲಸಗಳು ನಡೆಯುವುದರ ಮೂಲಕ ಕನ್ನಡ ಶಾಸ್ತ್ರೀಯ
ಸ್ಥಾನಮಾನವನ್ನು ಇನ್ನೂ ಗಟ್ಟಿತನ ಗೊಳಿಸ ಬೇಕಾಗಿದೆ.
ನಾಡು ನುಡಿಗಳ ಚರಿತ್ರೆಯ ಅಧ್ಯಯನಕ್ಕೆ ಶಾಸನಗಳೇ ಅಧಿಕೃತ
ಮೂಲ ಸಾಮಗ್ರಿಗಳು. ಶಾಸನಗಳ ಅಧ್ಯಯನ ವಿವಿಧ ಮುಖಗಳಲ್ಲಿ ವ್ಯವಸ್ಥಿತವಾಗಿ
ಇನ್ನೂ ಹೆಚ್ಚಿನ ಮಟ್ಟದಲ್ಲಿ ನಡೆಯಬೇಕಾಗಿದೆ. ಈಗಾಗಲೇ ಬಹುಪಾಲು
ಶಾಸನಗಳ ಮೂಲಪಠ್ಯಗಳು ತಮ್ಮ ಮಾಧ್ಯಮವಾದ ಶಿಲೆ ಮತ್ತು ಲೋಹಗಳಿಂದ ಕಾಗದ ಮುದ್ರಣದ ರೂಪಕ್ಕೆ ಇಳಿದಿವೆ. ಆದಾಗ್ಯೂ ಇವು ಇಂದು ಈಗಿನ ಕಚ್ಚಾ ರೂಪದಲ್ಲಿ ಮಾತ್ರವಲ್ಲದೆ ಕವಿಲಿಖಿತವಾದ
ಶುದ್ಧ ಛಂದೋರೂಪಗಳಿಗೆ ಪರಿವರ್ತಿತವಾಗಿ ಅಧ್ಯಯನಕ್ಕೆ ಲಭ್ಯವಾಗಬೇಕಾಗಿವೆ. ಶಾಸನಗಳನ್ನು ಇತಿಹಾಸ, ಸಂಸ್ಕೃತಿ, ಸಮಾಜ, ಧರ್ಮ ಇವುಗಳ
ವ್ಯವಸ್ಥಿತ ಅಧ್ಯಯನಕ್ಕೆ ಉಪಯೋಗಿಸುವುದರ ಜೊತೆಗೆ ಅವುಗಳ ಭಾಷೆ, ಶೈಲಿ, ಛಂದಸ್ಸು, ವಿಶಿಷ್ಟ ಶಬ್ದಗಳು
ಇವುಗಳ ಅಧ್ಯಯನವನ್ನು ಹೊಸ ನೆಲೆಗಟ್ಟಿನಲ್ಲಿ ಮಾಡಬೇಕಾಗಿದೆ. ನಾಡು
ನುಡಿಗಳ ಪರಂಪರೆಗೆ ಶಾಸನಗಳ ಕೊಡುಗೆ ಏನು ಎಂಬುದನ್ನು ವ್ಯವಸ್ಥಿತವಾಗಿ ಮತ್ತು ವಿಸ್ತೃತವಾಗಿ ಕೈಗೊಳ್ಳ
ಬೇಕಾಗಿದೆ. ಶಾಸನಗಳಲ್ಲಿ ಉಲ್ಲೇಖಿತಗೊಂಡ ಸ್ಥಳನಾಮಳು ಮತ್ತು
ವ್ಯಕ್ತಿ ನಾಮಗಳ ವಿಶ್ಲೇಷಣೆಯೂ ನಡೆಯ ಬೇಕಾಗಿದೆ. ಈ ತೆರನಾಸ
ಶಾಸನಗಳ ವ್ಯವಸ್ಥಿತ ಅಧ್ಯಯನದ ಮೂಲಕ ಕನ್ನಡ ಶಾಸ್ತ್ರೀಯ ಸ್ಥಾನಮಾನದ ಗಟ್ಟಿತನವನ್ನು ಇನ್ನೂ ಗಟ್ಟಿಗೊಳಿಸ
ಬಹುದಾಗಿದೆ.
ಪರಾಮರ್ಶನ ಗ್ರಂಥಗಳು
1. ಮೊದಲ ಸಹಸ್ರಮಾನದ ಕನ್ನಡ ಶಾಸನಗಳು (ಸಂ.ಎಸ್.ಷಟ್ಟರ್)
( ಕ್ರಿ.ಶ.450-1000)
2. ಎಂ.ಬಿ.ನೇಗಿನಹಾಳ: ಪೂರ್ವದ ಹಳಗನ್ನಡ
ಶಾಸನಗಳ ಸಾಹಿತ್ಯಕ ಅಧ್ಯಯನ
ಪ್ರಸಾರಾಂಗ,ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ,1994
3. ಷ.ಶೆಟ್ಟರ್: ಪ್ರಾಕೃತ ಜಗದ್ವಲಯ,( ಪ್ರಾಕೃತ- ಕನ್ನಡ -ಸಂಸ್ಕೃತ ಭಾಷೆಗಳ ಅನುಸಂಧಾನ) ಅಭಿನವ ಪ್ರಕಾಶನ, ಬೆಂಗಳೂರು,
4.ಟಿ.ವಿ.ವೆಂಕಟಾಚಲ ಶಾಸ್ತ್ರೀ: ಶಾಸ್ತ್ರೀಯ
ಸಂ.2, ಸ್ವಪ್ನಬುಕ್
ಹೌಸ್, ಬೆಂಗಳೂರು,1999
5. ಎಂ.ಚಿದಾನಂದಮೂರ್ತಿ: ಹೊಸತು ಹೊಸತು, ಪ್ರಸಾರಾಂಗ,
ಕನ್ನಡ
ವಿಶ್ವವಿದ್ಯಾಲಯ,
ಹಂಪಿ.1993 65.
6.ಎಂ.ಎಂ.ಕಲಬುರ್ಗಿ: ಶಾಸನ ವ್ಯಾಸಂಗ ,ಸಂ.1. ಪ್ರಸಾರಾಂಗ
ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ,1974
7. ಸಿ.ನಾಗಭೂಷಣ: ಸಾಹಿತ್ಯ ಸಂಸ್ಕೃತಿ
ಹುಡುಕಾಟ
ಅಮೃತವರ್ಷಿಣಿ ಪ್ರಕಾಶನ, ರಾಯಚೂರು 2ಂಂ2
ಶಾಸನಗಳು ಮತ್ತು ಕನ್ನಡ ಸಾಹಿತ್ಯ,ಪ್ರಸಾರಾಂಗ
ಗುಲಬರ್ಗಾ ವಿಶ್ವವಿದ್ಯಾಲಯ,ಗುಲಬರ್ಗಾ 2ಂಂ5
8.ಶಾಸನ ಸಾಹಿತ್ಯ ಸಂಚಯ (ಸಂ:
ಎ.ಎಂ.ಅಣ್ಣಿಗೇರಿಮತ್ತು ಮೇವುಂಡಿ ಮಲ್ಲಾರಿ)
ಕನ್ನಡ
ಸಂಶೋಧನಾ ಸಂಸ್ಥೆ,
ಧಾರವಾಡ,1961
9. ಶಾಸ್ತ್ರೀಯ ಭಾಷೆ ನಡೆದು ಬಂದ ದಾರಿ ಸಂ: ಡಾ.ಸಿದ್ಧಲಿಂಗಯ್ಯ
ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು 2012
11, ಶಾಸನಗಳು ಮತ್ತು ಕನ್ನಡ ಶಾಸ್ತ್ರೀಯತೆ ಸಂ: ಮಾರುತಿ ಆರ್.ತಳವಾರ
ಮತ್ತು ರಾಜಶೇಖರ ಮಠಪತಿ
ಕುಕ್ಕೆಶ್ರೀ ಪ್ರಕಾಶನ,ಬೆಂಗಳೂರು
2009