ಭಾನುವಾರ, ಏಪ್ರಿಲ್ 7, 2019

ನಂಬಿಯಣ್ಣ ಒಂದು ಅಧ್ಯಯನ ಕೃತಿಯಲ್ಲಿಯ ನಂಬಿಯಣ್ಣನನ್ನು ಕುರಿತ ಎಸ್.ವಿದ್ಯಾಶಂಕರ ಅವರ ಸಂಶೋಧನಾ ನಿಲುವುಗಳ ತಾತ್ವಿಕತೆ * ಡಾ.ಸಿ.ನಾಗಭೂಷಣ


ನಂಬಿಯಣ್ಣ ಒಂದು ಅಧ್ಯಯನ ಕೃತಿಯಲ್ಲಿಯ ನಂಬಿಯಣ್ಣನನ್ನು ಕುರಿತ ಎಸ್.ವಿದ್ಯಾಶಂಕರ ಅವರ        ಸಂಶೋಧನಾ ನಿಲುವುಗಳ ತಾತ್ವಿಕತೆ *                        
                              ಡಾ.ಸಿ.ನಾಗಭೂಷಣ
  ಎಸ್.ವಿದ್ಯಾಶಂಕರ ಅವರು ಮಧ್ಯಕಾಲೀನ ಕನ್ನಡ ಸಾಹಿತ್ಯ ಅದರಲ್ಲಿಯೂ ಶರಣ ಸಾಹಿತ್ಯ-ಸಂಸ್ಕೃತಿ ಕುರಿತ  ಕ್ರಿಯಾತ್ಮಕ ಸಂಶೋಧಕರಲ್ಲಿ ಅಗ್ರಗಣ್ಯರು. ಉತ್ತಮ ಸಂಶೋಧಕರಲ್ಲಿ ಇರಬಹುದಾದ ಕುತೂಹಲ, ಪ್ರಾಮಾಣಿಕತೆ, ಕ್ರಿಯಾ ಶೀಲತೆ, ತಾಳ್ಮೆ-ಸಂಯಮ, ವೈಜ್ಞಾನಿಕ ಮನೋಭಾವ, ಚಿಕಿತ್ಸಕ ಬುದ್ಧಿ, ನಿರ್ಬೀಡತ್ವ, ಬಿಚ್ಚು ಮನಸ್ಸಿನಿಂದ ಹೇಳುವಿಕೆ ಈ ಗುಣಗಳ ಪ್ರತೀಕವಾಗಿದ್ದವರು.  ವಿದ್ಯಾಶಂಕರ ಅವರ ಬರವಣಿಗೆಯಲ್ಲಿ ಸಂಶೋಧನಾತ್ಮಕ ಗುಣವೇ ಜೀವಾಳ. ಇಡೀ ತಮ್ಮ ಜೀವನವನ್ನು ಶರಣಸಾಹಿತ್ಯ-ಸಂಸ್ಕೃತಿ ಶೋಧನೆಗೆ ಮುಡುಪಾಗಿಟ್ಟವರು.
   ವೀರಶೈವ ಸಾಹಿತ್ಯ ಸಂಸ್ಕೃತಿಯ ಬಗೆಗಿನ ಇವರ ಸೂಕ್ಷ್ಮಸ್ತರವಾದ ಅಧ್ಯಯನದಿಂದಾಗಿ ಮಧ್ಯಕಾಲೀನ ಕನ್ನಡ ಸಾಹಿತ್ಯವು ಅನೇಕ ಹೊಸ ನೋಟಗಳು ಮತ್ತು ಮಾರ್ಪಾಟುಗಳಿಗೆ ಕಾರಣವಾಗಿದೆ.  ಇವರು ವೀರಶೈವ ಸಾಹಿತ್ಯವನ್ನು ರೂಪ ನಿಷ್ಠ ವಿಮರ್ಶೆಯಿಂದ ವಸ್ತು ನಿಷ್ಠ ವಿಮರ್ಶೆಯತ್ತ ಹೊರಳಿಸಿ ತೌಲನಿಕವಾಗಿ ವಿವೇಚಿಸಿದ್ದಾರೆ.  ಸಾಂಸ್ಥಿಕ ಅಥವಾ ಸಾಮೂಹಿಕ ಪ್ರಯತ್ನದಲ್ಲಿ  ಯೋಜನೆಯ ರೂಪದಲ್ಲಿ ಹಮ್ಮಿಕೊಳ್ಳ ಬಹುದಾದ ಪ್ರಯತ್ನವಾದ ಬೃಹತ್ ವೀರಶೈವ ಸಾಹಿತ್ಯ ಚರಿತ್ರೆಯ ಸಂಪುಟಗಳ ನಿರ್ಮಾಣವನ್ನು ಏಕಾಂಗಿಯಾಗಿ ಸಿದ್ಧ ಪಡಿಸಿ ನೀಡಿರುವುದು ಅವರ ಪಾಂಡಿತ್ಯ, ಆಳವೂ ವಿಸ್ತಾರವೂ ಆದ ಅಧ್ಯಯನ, ಶ್ರಮ, ಉತ್ಸಾಹದ ಪ್ರತೀಕವಾಗಿದೆ. ಜೊತೆಗೆ ಇವರು ಏಕಾಂಗಿಯಾಗಿ ಕೈಗೊಂಡಿರುವುದು ನಮ್ಮೆಲ್ಲರಿಗೂ ಆಶ್ಚರ್ಯ ಹಾಗೂ ದಿಗ್ ಭ್ರಮೆಯನ್ನು ಉಂಟುಮಾಡುತ್ತದೆ.  ಈ ಸಂಪುಟಗಳ ಮೂಲಕ ವೀರಶೈವ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯ ಆಸಕ್ತ ಅಧ್ಯಯನಕಾರರಿಗೆಲ್ಲರಿಗೂ ಸಂಪೂರ್ಣವಾಗಿಯೇ  ಆಗುತ್ತದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.   ವೀರಶೈವ ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ಇವರ ಸಾಹಿತ್ಯ ಕೃಷಿಯಲ್ಲಿ ಇಲ್ಲಿಯವರೆಗೂ ಸಂಶೋಧನೆ ಮತ್ತು ಅಧ್ಯಯನದ ಮೂಲಕ ಬೆಳಕಿಗೆ ಬಂದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಅವುಗಳ ಸತ್ಯಾಸತ್ಯತೆಯನ್ನು ಓರೆಗೆ ಹಚ್ಚಿ ಸಂಶೋಧನಾತ್ಮಕವಾಗಿ ಮತ್ತು ವಿಮರ್ಶಾತ್ಮಕವಾಗಿ  ನೀಡಿದ್ದಾರೆ ಅದರಲ್ಲಿ ನಂಬಿಯಣ್ಣನ ಕುರಿತ ವಿವರಗಳು ವಿಸ್ತೃತವಾಗಿ ದಾಖಲಾಗಿವೆ. ಇವರ ಸಂಶೋಧನೆಯಲ್ಲಿ ಯಾವುದೇ ರೀತಿಯ ಪೂರ್ವಾಗ್ರಹಕ್ಕೆ ಒಳಗಾಗದೆ ಸಮಾನ ಮನಸ್ಥಿತಿ ಹಾಗೂ ವಸ್ತುನಿಷ್ಠತೆಯ ಬದ್ಧತೆಯನ್ನು ಕಾಣಬಹುದಾಗಿದೆ.
    ಭಾರತದಲ್ಲಿ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಭಕ್ತಿಯು ಸಮಾಜದ ಬೇರೆ ಬೇರೆ ವರ್ಗ ಜಾತಿಗಳನ್ನು ಬೇರೆ ಬೇರೆ ಭಾಷೆಯ ಜನರನ್ನು ಒಂದು ಗೂಡಿಸುವ, ಅವರ ಹೃದಯಗಳನ್ನು ಬೆಸೆಸುವ ಕಾರ್ಯವನ್ನು ಮಾಡಿದೆ ಎಂಬುದಕ್ಕೆ ಕನ್ನಡ, ತಮಿಳು ಮತ್ತು ತೆಲುಗ ಭಾಷೆಯ ಭಕ್ತಿ ಸಾಹಿತ್ಯವೇ ನಿದರ್ಶನವಾಗಿದೆ ನಮ್ಮ ಸಾಹಿತ್ಯ ಇತಿಹಾಸದ ಹಾಗೂ ನಮ್ಮ ಸಾಂಸ್ಕೃತಿಕ ಇತಿಹಾಸದ ಪುನರವಲೋಕನಕ್ಕೆ  ಪ್ರಾಚೀನ ಸಾಹಿತ್ಯಕೃತಿಗಳ ಓದು, ಮರು ಓದು ತೀರಾ ಅವಶ್ಯಕ. ಇದಕ್ಕೆ ನಿದರ್ಶನ ಇವರ  ನಂಬಿಯಣ್ಣನನ್ನು ಕುರಿತ ಕೃತಿ.
        ಕನ್ನಡ ಸಾಹಿತ್ಯದ  ಮಹಾನ್ ಕವಿಗಳಲ್ಲಿ ಒಬ್ಬನಾದ ಹರಿಹರನನ್ನು ಕಂಡರೆ ಇವರಿಗೆ ಅತೀವವಾದ ಪ್ರೀತಿ. ಏಕೆಂದರೆ ವಚನ ಸಾಹಿತ್ಯದಿಂದ ಪ್ರೇರಣೆ ಪಡೆದೂ ತನ್ನದೇ ಹಾದಿಯನ್ನು ಕಂಡುಕೊಂಡು ಈ ಯುಗಮಾನದ ಕಣ್ಣು ತೆರೆಯಿಸಿದ ಕವಿ ಹರಿಹರ. ವಚನ ಸಾಹಿತ್ಯ ಪರಂಪರೆಯ ಮಹಾನ್ ಪ್ರತಿಭಾ ಪ್ರವಾಹವನ್ನು ತನ್ನಲ್ಲಿ ಮೈಗೂಡಿಸಿ ಕೊಂಡು ಸಾಹಿತ್ಯದ ದಿಕ್ಕನ್ನು ಬದಲಿಸಿದವನು. ಹರಿಹರನ  ಗಿರಿಜಾಕಲ್ಯಾಣ ಮತ್ತು ನೂತನ-ಪುರಾತನ ರಗಳೆಗಳು ವಸ್ತುಕ ಮತ್ತು ವರ್ಣಕದ ಪ್ರಕಾರಗಳ ಪ್ರತಿನಿಧಿಗಳಾದರೂ ಕನ್ನಡಕ್ಕೆ  ಒಂದು ತೆರನಾದ ಹೊಸ ವಸ್ತು ಪ್ರಪಂಚವನ್ನು ನೀಡುವುದರ ಮೂಲಕ ನೂತನ ಕಥನ ಪರಂಪರೆಯನ್ನು ಹುಟ್ಟು ಹಾಕಿದವನು.  ವಸ್ತು, ನಿರೂಪಣಾ ವಿಧಾನ, ಛಂದೋ ಬಳಕೆಯಲ್ಲಿ  ಹರಿಹರ ಯಾವ ರೀತ ನೂತನ ಮಾರ್ಗ ಪ್ರವರ್ತಕನಾದನು ಎಂಬುದನ್ನು ಹರಿಹರನನ್ನು ವಿಸ್ತೃತವಾಗಿ ಅಧ್ಯಯನ ಮಾಡುವುದರ ಮೂಲಕ  ಗುರುತಿಸಿದ್ದಾರೆ. ಅವನು ಪರಂಪರೆಯ ನಿರ್ಮಾಣಕಾರನೂ  ಹೌದು. ತನ್ನ ಮುಂದಿನವರಿಗೆ ಪ್ರೇರಕನೂ ಹೌದು. ಹಿಂದೆಯೇ ಹೇಳಿದಂತೆ ಅವನು ಕನ್ನಡದ ಶ್ರೇಷ್ಠ ಕಥನಕಾರ. ಶರಣ ಕಥಾಪರಂಪರೆಯ ರೂವಾರಿ. ವಸ್ತುಕ ವರ್ಣಕ ಕಾವ್ಯಪರಂಪರೆಯಲ್ಲಿ ವಿಶಿಷ್ಟ ದಾಖಲೆ ನಿರ್ಮಿಸಿದವನೂ ಅವನೇ. ವಿದ್ಯಾಶಂಕರ ಅವರು ಹರಿಹರ ಕವಿಯ ಕಾವ್ಯಗಳನ್ನು ಕುರಿತು ತಮ್ಮ ಸಮಗ್ರ ಸಂಶೋಧನಾ ಬರೆಹಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಇಲ್ಲಿಯವರೆಗೂ ನಡೆದಿರುವ ಸಂಶೋಧನೆಯ ಫಲಿತಗಳನ್ನು ಅಳವಡಿಸಿಕೊಂಡು ಅಧ್ಯಯನ ಮಾಡುವುದರ  ಮೂಲಕ ಅತ್ಯಂತ ವ್ಯವಸ್ಥಿತವಾಗಿ ಹರಿಹರನ ಬಗೆಗೆ ಮಾಹಿತಿಗಳನ್ನು ಒಂದೆಡೆ ಕಟ್ಟಿಕೊಟ್ಟಿದ್ದಾರೆ.
     ಹರಿಹರನ ಕಾವ್ಯದ ವಸ್ತು ಮಾತ್ರವಲ್ಲದೇ ಧೋರಣೆಯಲ್ಲಿಯೂ  ವಚನಕಾರರ ಪ್ರಭಾವವನ್ನು ಕಾಣಬಹುದು. ಹರಿಹರನ ರಗಳೆಗಳಲ್ಲಿ ಶಿವಭಕ್ತರ ಚರಿತ್ರೆಯೇ ಪ್ರಮುಖವಾಗಿದ್ದು, ಇವರು ಸಾಮಾನ್ಯ ನೆಲೆಯಿಂದ ಅಸಾಮಾನ್ಯ ನೆಲೆಗೆ ಏರಿದವರಾಗಿದ್ದಾರೆ. ಹರಿಹರನು ಶಿವಶರಣರ ಕಥೆಯನ್ನು ವಿವರಿಸುವ ರಗಳೆಗಳಲ್ಲಿ ಶಿವನ ಕೈಲಾಸದ ಒಡ್ಡೋಲಗದ ಚಿತ್ರಣವು ಕಥೆಗೊಂಡು ಪೌರಾಣಿಕ ಚೌಕಟ್ಟನ್ನು ಒದಗಿಸುತ್ತದೆ.ರಗಳೆಯ ಕಥಾನಾಯಕರು ಭೂಲೋಕಕ್ಕೆ ಬಂದು ಮಾಡುವ ಕೆಲಸಗಳೆಲ್ಲವೂ ವಚನಕಾರರು ಕಟ್ಟಿಗೊಂಡಿದ್ದ ಸಾಮಾಜಿಕ ಆದರ್ಶಗಳ ಸಾಂಕೇತಿಕ ಅಭಿವ್ಯಕ್ತಿಗಳೇ ಆಗಿವೆ.
  ಹರಿಹರನು ಕನ್ನಡನಾಡಿನ ತಮಿಳುನಾಡಿನ ತೆಲುಗು ನಾಡಿನ ಶಿವನ ಭಕ್ತರ ಜೀವಿತ ಸಂಗತಿಗಳನ್ನು ಶಿವನ ನೆಚ್ಚಿನ ಭಕ್ತರ ಕಥೆಗಳನ್ನು ಕಲೆಹಾಕಿದ ಮಹಾಮೇಧಾವಿ.  ಅದ್ಭುತ ಕಥನಕಾರ. ಅವನ ಕಥನ ಚೌಕಟ್ಟು ಅವನೇ ನಿರ್ಮಿಸಿಕೊಂಡದ್ದಾಗಿರಬಹುದು. ಭಕ್ತರ ಭಕ್ತಿಪ್ರಪಂಚವು ಅವನದೇ ಸೃಷ್ಟಿಯಾಗಿರಬಹುದು. ಅನೇಕ ಕಾಲ್ಪನಿಕಾಂಶಗಳಿರಬಹುದು. ಕಥಾನಾಯಕರ ಚರಿತ್ರೆ ನಿರೂಪಣೆಯಲ್ಲಿ ಅಸಾಂಗತ್ಯಗಳಿರಬಹುದು. ಅದರೆ ಅವನ ಕಥನಕಲೆ ಕನ್ನಡ ಸಾಹಿತ್ಯ ಪ್ರವೇಶಕ್ಕೊಂದು ದಿಡ್ಡಿಬಾಗಿಲು ಅಗಿರುವುದರಿಂದ ಅದರಲ್ಲಿ ಏನೇ ಕೊರತೆಯಿದ್ದರೂ ಅವನದು ಮೊದಲ ಸಾಹಸ. ನೂತನ ಮತ್ತು ಪುರಾತನರ ಕಥೆಗಳನ್ನು ಹೇಳಿರದಿದ್ದರೆ ವೀರಶೈವ ಸಾಹಿತ್ಯ ಪ್ರಪಂಚದ ಕತ್ತಲೆಯಲ್ಲಿರುತ್ತಿತ್ತೋ ಏನೋ  ಹಿನ್ನಲೆಯಲ್ಲಿ ಅವನ ಪ್ರಯತ್ನ ಭೂತೋ ಭವಿಷ್ಯತಿ  ಎಂಬ ಹರಿಹರನ ಬಗೆಗೆ ತಮ್ಮ ಸಂಶೋಧನಾ ಬರೆಹಗಳ ಮೂಲಕ ಕಂಡುಕೊಂಡಿರುವ ಎಸ್,ವಿದ್ಯಾಶಂಕರ ಅವರ ತಾತ್ವಿಕ ನಿಲುವುಗಳು ಪರಿಶೀಲನಾರ್ಹವಾಗಿವೆ. ಇವರ ನಂಬಿಯಣ್ಣ ಒಂದು ಅಧ್ಯಯನ ಪುಸ್ತಕವು ಒಳಮುಖೀ ಅಧ್ಯಯನದ ಪ್ರತೀಕವಾಗಿದೆ. ಈ ಕೃತಿಯಲ್ಲಿ  ಸುದೀರ್ಘ ಅಧ್ಯಯನದ ಫಲಶ್ರುತಿಯಾಗಿ  ವಿವಿಧ ಭಾಷೆಗಳಲ್ಲಿ ನಂಬಿಯಣ್ಣನನ್ನು ಕುರಿತ ಕವಿಗಳ ಕೃತಿಗಳಲ್ಲಿ ವ್ಯಕ್ತಗೊಂಡಿರುವ  ಸೂಕ್ಷ್ಮ ಒಳನೋಟಗಳನ್ನು ಅವುಗಳ ಸಾಧಕ-ಬಾಧಕಗಳನ್ನು  ಅವರು ಕೊಡಮಾಡಿದ್ದಾರೆ. ಹರಿಹರನ ವಸ್ತುವಿನ ಆಯ್ಕೆಯಲ್ಲಿ ಅವನ ವೈಯಕ್ತಿಕ ಒಲವು-ನಿಲವು ಯಾವ ರೀತಿ ಪ್ರಧಾನ ಪಾತ್ರ ವಹಿಸಿದೆ ಮತ್ತು  ಶಿವನಲ್ಲಿ ಅನನ್ಯವೂ  ನಿಷ್ಠಾಪೂರ್ಣವೂ ಆದ ಭಕ್ತಿ, ಅರ್ಪಣ ಮನೋಭಾವವು ಆತನ ಭಕ್ತಿಯ ವಿಶಿಷ್ಟ ಲಕ್ಷಣವಾಗಿರುವುದನ್ನು   ಗುರುತಿಸಿರುವುದು ಅವರ ಸಂಶೋಧನಾ ನೆಲೆಯ ಗ್ರಹಿಕೆಯನ್ನು ಸೂಚಿಸುತ್ತದೆ. ಹರಿಹರನ ಜೀವನಾದರ್ಶಗಳಿಗೆ ತಮಿಳುನಾಡಿನ ಶೈವ ನಾಯನ್ಮಾರರುಗಳು ಬಹಳ ಸಮೀಪದಲ್ಲಿರುವರಾದ್ದರಿಂದ ಅವರ ಬದುಕು ಹರಿಹರನ ಕೃತಿಗಳಿಗೆ ಯಾವ ರೀತಿ ವಸ್ತು ವಾಯಿತು ಎಂಬ ನಿಲುವು ಯೋಚಿತವಾಗಿದೆ. ನಂಬಿಯಣ್ಣ ಒಂದು ಅಧ್ಯಯನ ಕೃತಿಯಲ್ಲಿ ಇವರ ವಿದ್ವತ್ ಪ್ರೌಢಿಮೆ, ಅಧ್ಯಯನಶೀಲತೆ,  ಕ್ರಿಯಾಶೀಲತೆ ಮತ್ತು ಪರಿಶ್ರಮ ಗಳಂತಹ ಮನೋಧರ್ಮದಿಂದಾಗಿ  ಗಾತ್ರಾತ್ಮಕ ಹಾಗೂ ಗುಣಾತ್ಮಕ ಕೆಲಸವನ್ನು ಕಾಣಬಹುದಾಗಿದೆ.
    ನಂಬಿಯಣ್ಣನನ್ನು ಕುರಿತು ಸಂಶೋಧನಾತ್ಮಕ ಮತ್ತು ತೌಲನಿಕ ಅಧ್ಯಯನ ಕೈಗೊಳ್ಳಲು ಮೂಲ ಹಿನ್ನೆಲೆ ಮತ್ತು ಪ್ರೇರಣೆಗಳೇನು ಎಂಬುದರ ಬಗೆಗಿನ ಹೇಳಿಕೆಯಲ್ಲಿ ಅವರ ಸಂಶೋಧನಾ ಪದ್ಧತಿಯ ಮಾರ್ಗವನ್ನು ಗುರುತಿಸ ಬಹುದಾಗಿದೆ. ಹರಿಹರ ತಮಿಳು ನಾಡಿನ ಅರವತ್ತು ಮೂವರ ಪುರಾತನರ ಬಗೆಗೆ ರಗಳೆಗಳನ್ನು ಬರೆಯಲು ಮೂಲ ಆಕರ ಯಾವುದು? ಪ್ರಶ್ನೆಗೆ ಖಚಿತವಾದ ಹಾಗೂ ಸಮಾನವಾದ ಅಭಿಮತವನ್ನು ನಮ್ಮ ವಿದ್ವಾಂಸರು ನೀಡಿಲ್ಲ. ಪ್ರೊ.ಡಿ.ಎಲ್.ನರಸಿಂಹಾಚಾರ್ಯ ರವರು ಹೇಳುವಂತೆ ಕನ್ನಡ ಬಲ್ಲ ತಮಿಳು ವಿದ್ವಾಂಸ ಹರಿಹರನ ಕೃತಿಗಳನ್ನು ಓದಿದಾಗ ಅವನಿಗೆ ಪರಿಚಿತವಾಗಿರುವ ಕಥೆಗಳಿಗೂ ಕಥೆಗಳಿಗೂ ಇರುವ ವ್ಯತ್ಯಾಸಗಳನ್ನು ನೋಡಿ ಚಕಿತನಾಗುತ್ತಾನೆ. ಹರಿಹರನ ಕಥೆಗಳಿಗೆ ತಮಿಳಿನಲ್ಲಿ ಮೂಲವಿಲ್ಲವಲ್ಲ ಎಂದು ಬೆರಗಾಗುತ್ತಾನೆ, ತಮಿಳನ್ನು ಬಲ್ಲ ಕನ್ನಡ ವಿದ್ವಾಂಸರಿಗೂ ಹೀಗೆಯೇ ಆಗುತ್ತದೆ. ಹಾಗೆಯೇ ತೀ.ನಂ.ಶ್ರೀಕಂಠಯ್ಯನವರು ಅಭಿಪ್ರಾಯ ಪಡುವಂತೆ ಹರಿಹರನು ನೇರವಾಗಿ ತಮಿಳು ಕೃತಿಗಳ ಪರಿಚಯ ಹೊಂದಿದವನು ಎಂಬಂತೆ ತೋರುವುದಿಲ್ಲ. ಅವನ ರಗಳೆಗಳಲ್ಲಿ ಸ್ವತಂತ್ರವಾದ ಹಾಗೂ ಅರವತ್ತು ಮೂವರು ಪುರಾತನರ ಬದುಕನ್ನು ಕುರಿತ ಪರಂಪರಾಗತ ಸಂಗತಿಗಳಿಗೆ ಅನೇಕ ವೇಳೆ ಭಿನ್ನವಾದ ರೀತಿಯಲ್ಲಿ ಬೆಳಕು ಚೆಲ್ಲುವ ಹೆಚ್ಚಿನ ಸಾಮಗ್ರಿಗಳಿವೆ. ಇದೊಂದು ಭ್ರಮಾತ್ಮಕ ಸಮಸ್ಯೆಯಾಗಿದೆ. ತಮಿಳು ಭಾಷೆ ಸಾಹಿತ್ಯಗಳ ಪರಿಚಯ ಚೆನ್ನಾಗಿ ಇರುವ ಕನ್ನಡದ ವಿದ್ವಾಂಸರೀರ್ವರ ತೀರ್ಮಾನವು  ನನ್ನ ಕೃತಿಯ ತೌಲನಿಕ ಅಧ್ಯಯನಕ್ಕೆ ಪ್ರೇರಣೆ ಎಂದರೆ ತಪ್ಪಾಗಲಾರದು ಎಂದು ಕೃತಿ ರಚನೆಯ ಹಿಂದಿನ ಆಶಯದಲ್ಲಿ ಈ ಕೃತಿಯ ಸಂಶೋಧನಾಧ್ಯಯನದ ರೂಪುರೇಷೆಗಳನ್ನು ಕಾಣಬಹುದಾಗಿದೆ.
      ಹರಿಹರ ಮತ್ತು ಶೇಕ್ಕಿಳಾರರು ತಮಿಳುನಾಡಿನ ಅರವತ್ತಮೂವರು ಪುರಾತನರ ಕುರಿತು ಕೃತಿರಚನೆ ಮಾಡುವಾಗ ಕಥಾ ವಸ್ತುವನ್ನು ಸಂಸ್ಕೃತದಿಂದ ತೆಗೆದುಕೊಂಡಿರಹುದೆಂಬ ಊಹೆ ನಮ್ಮ  ಕೆಲವು ವಿದ್ವಾಂಸರಲ್ಲಿ ನಡೆದಿದೆ. ವಿಷಯದ ಬಗೆಗೆ ವಿಭಿನ್ನ ನಿಲುವನ್ನು ಹೊಂದಿರುವ  ತಮಿಳುನಾಡಿನ ವಿದ್ವಾಂಸರೂ ಅರವತ್ತು ಮೂವರ ಕಥೆಯನ್ನು ಹೇಳುವ ಸಂಸ್ಕೃತ ಕೃತಿಗಳಾದ ಅಗಸ್ತ್ಯ ಭಕ್ತವಿಲಾಸ,, ಉಪಮನ್ಯು ಭಕ್ತವಿಲಾಸ ಮತ್ತು ಶಿವರಹಸ್ಯ ಇವುಗಳ ಪ್ರಭಾವ ಶೇಕ್ಕಿಳಾರನ  ಪೆರಿಯಪುರಾಣದ ಮೇಲೆ ಆಗಿಲ್ಲ ಎನ್ನುವ ನಿಲುವನ್ನೇ ಪ್ರತಿಪಾದಿಸಿದ್ದಾರೆ. ಅದರಲ್ಲಿಯೂ ಈ ವಿಷಯಕ್ಕೆ ಸಂಬಂಧಿಸಿದಂತೆ ತಮಿಳು ವಿದ್ವಾಂಸರಾದ  ಪ್ರೊ.ಟಿ.ಪಿ.ಮೀನಾಕ್ಷಿ ಸುಂದರಂ ಮತ್ತು ಜೆ.ಎಂ.ನಲ್ಲಾಸ್ವಾಮಿ ಪಿಳ್ಳೈರ ಅಭಿಪ್ರಾಯಗಳನ್ನು ಪುಸ್ತಕದ ಎರಡನೇ ಅಧ್ಯಾಯದಲ್ಲಿ ಕ್ರೂಢೀಕರಿಸಿಕೊಟ್ಟಿದ್ದಾರೆ. ವಿವರ ಸಾರವನ್ನು ರೀತಿಯಾಗಿ ಗ್ರಹಿಸ ಬಹುದು. ತಮಿಳು ನಾಡಿನ ಭಕ್ತರನ್ನು ಕುರಿತು ಸಂಸ್ಕೃತದಲ್ಲಿ ಅಗಸ್ತ್ಯ ಭಕ್ತವಿಲಾಸ, ಉಪಮನ್ಯು ಭಕ್ತವಿಲಾಸ ಎಂಬ ಗ್ರಂಥಗಳು ಬಂದಿವೆ. ಇವೆರಡೂ ಕೃತಿಗಳು ಸ್ಕಾಂದ ಮಹಾ ಪುರಾಣದ ಭಾಗವೆಂದು ಹೇಳಬಹುದು. ಸ್ಕಾಂದ ಪುರಾಣವು ಬಹುಶಃ ಜನಪದ ಕಥೆಗಳನ್ನು ಆಧರಿಸಿ ತಮಿಳುನಾಡಿನ ಅರವತ್ತಮೂರು ಪುರಾತನರನ್ನು ಕುರಿತು ತನ್ನದೇ ಆದ ವಿವರಗಳನ್ನು ನೀಡಿರಬಹುದೆಂದು ಪ್ರೊ.ಟಿ.ಪಿ.ಮೀನಾಕ್ಷಿ ಸುಂದರಂ ರವರು ಅಭಿಪ್ರಾಯ ಪಡುವರು. ಅಗಸ್ತ್ಯ ಭಕ್ತವಿಲಾಸವು ಅಗಸ್ತ್ಯ ಮಹರ್ಷಿಗಳಿಂದ ಹೇಳಲಾಗಿದೆ ಎಂಬುದು ಪ್ರತೀತಿಯಲ್ಲಿರುವ ಅಭಿಪ್ರಾಯ. ಇದು ತಮಿಳು ಪೆರಿಯಾ ಪುರಾಣ ಮತ್ತು ಉಪಮನ್ಯು ಭಕ್ತವಿಲಾಸದಲ್ಲಿ ಸುಂದರ ಮೂರ್ತಿಯು ದಿವ್ಯ ವಿಮಾನವನ್ನೇರಿ ಸಶರೀರನಾಗಿ ಕೈಲಾಸವನ್ನು ಪ್ರವೇಶಿಸುತ್ತಿದ್ದಾಗ ಪರ್ವತದ ತಪ್ಪಲಿನಲ್ಲಿದ್ದ ಉಪಮನ್ಯು ಮುನೀಂದ್ರನು ತನ್ನ ಶಿಷ್ಯರಿಗೆ ಸುಂದರ ಮೂರ್ತಿಗಳ ಹಾಗೂ ಅವರ ತಿರುತ್ತೊಂಡತ್ತೊಗೈ ಕೃತಿಯಲ್ಲಿ ಬರುವ ಇತರ ಭಕ್ತರ ಕಥೆಗಳನ್ನು ತಿಳಿಯ ಹೇಳುವನು. ಟಿ.ಪಿ.ಮೀನಾಕ್ಷಿ ಸುಂದರಂ ರವರು ಉಪಮನ್ಯು ಭಕ್ತವಿಲಾಸವು ಶೇಕ್ಕಿಳಾರನ ಪೆರಿಯಪುರಾಣದ ಅನುವಾದವಾಗಿದೆ ಎಂದು ಅಭಿಪ್ರಾಯಪಡುವರು. ಕೃತಿಗಳಲ್ಲದೇ ಶಿವರಹಸ್ಯ ಎಂಬ ಮತ್ತೊಂದು ಸಂಸ್ಕೃತ ಕಥೆಯಲ್ಲಿ ಭಕ್ತರ ಕಥೆಗಳು ಸೇರ್ಪಡೆಯಾಗಿವೆ. ಶೇಕ್ಕಿಳಾರನ ಪೆರಿಯಾಪುರಾಣವು ಸಂಸ್ಕೃತ ಕೃತಿಗಳನ್ನು ಅನುಸರಿಸಿದಂತಿಲ್ಲ. ಅದೇ ರೀತಿ ಮತ್ತೊಬ್ಬ ತಮಿಳು ವಿದ್ವಾಂಸರಾದ ಜೆ.ಎಂ.ನಲ್ಲಾಸ್ವಾಮಿ ಪಿಳ್ಳೈರವರು  ಪೆರಿಯಾ ಪುರಾಣದಲ್ಲಿ ಭಕ್ತರ ಹೆಸರು. ವಾಸಸ್ಥಳಗಳನ್ನು ಉಲ್ಲೇಖಿಸುವಾಗ ಎಲ್ಲೂ ಸಂಸ್ಕೃತ ಕೃತಿಗಳಲ್ಲಿ ಹೇಳಿರುವಂತೆ ಹೇಳಿಲ್ಲ. ತಮಿಳಿನ ಮೂಲ ಹೆಸರುಗಳೇ ಉಲ್ಲೇಖಗೊಂಡಿವೆ. ಪುರಾತನರು ಜೀವಿಸಿದ್ದ ಕಾಲಮಾನದಲ್ಲಿ ತಮಿಳು ಸಾಹಿತ್ಯದ ಸ್ಥಿತಿ ಸ್ಥಾನಮಾನ ಹಾಗೂ ಸಂಸ್ಕೃತಿಯು ಅತ್ಯುತ್ಕೃಷ್ಟವಾಗಿದ್ದು ಚೇರ, ಚೋಳ ಮತ್ತು ಪಾಂಡ್ಯ ಅರಸರು ಪ್ರಪಂಚದ ಬೇರಾವ ಸಾಹಿತ್ಯದಲ್ಲಿಯೂ ಕಂಡುಬರದ ರೀತಿಯಲ್ಲಿ ಅದನ್ನು ಪ್ರೋತ್ಸಾಹಿಸಿ ಗೌರವಿಸಿ ಆರಾಧಿಸಿದರು. ಆದ್ದರಿಂದ ಪೆರಿಯಾಪುರಾಣವು ಅತ್ಯಂತ ಸುಂದರವೂ ಕಲಾತ್ಮಕವೂ ಆದ ಸ್ವತಂತ್ರ ತಮಿಳು ಕೃತಿಯೇ ಹೊರತು ಅನ್ಯಭಾಷೆಯಿಂದ ಬಂದ ಕೃತಿಯಂತೂ ಅಲ್ಲ ಎಂದು ಅಭಿಪ್ರಾಯಪಡುವರು.  ಪೆರಿಯಾಪುರಾಣವು ಸ್ವತಂತ್ರವಾದ ಮೂಲಕೃತಿಯಲ್ಲದೇ ಸಂಸ್ಕೃತ ಕೃತಿಯ ಆಧಾರಿತ ಗ್ರಂಥವೆಂದು ಹೇಳುವವರ ಬಗೆಗೆ ಕಾರಣವಾವುವೆಂಬುದನ್ನು ಅವರು ವಿವೇಚಿಸುತ್ತಾ ಪೆರಿಯಾ ಪುರಾಣದ ತಿರುಮಲೈ ಚಿರಪು ಎಂಬ ಅಧ್ಯಾಯದಲ್ಲಿ ಸುಂದರ ಮೂರ್ತಿಗಳು ಕೈಲಾಸ ಪ್ರವೇಶ ಮಾಡುತ್ತಿದ್ದ ಸಂದರ್ಭದಲ್ಲಿ ಉಪಮನ್ಯು ಮಹರ್ಷಿಯು ತನ್ನ ಶಿಷ್ಯರಿಗೆ ಸುಂದರರೇ ಮೊದಲಾದ ಶಿವಭಕ್ತರ ಕಥೆಗಳನ್ನು ಹೇಳಿದಂತೆ ತಂದಿರುವುದು ಪೆರಿಯಾಪುರಾಣವನ್ನು ಸಂಸ್ಕೃತಕ್ಕೆ ಪರಿವರ್ತಿಸಿದವರು ಇದನ್ನು ಉಪಯೋಗಿಸಿಕೊಂಡು ತಮ್ಮ ಕೃತಿಗೆ ಉಪಮನ್ಯುವಿನ ಹೆಸರನ್ನೇ ಕೊಡಹೊರಟರು ಎಂಬುದಾಗಿ  ತಮಿಳು ವಿದ್ವಾಂಸರ ಸಂಶೋಧನಾ ವಿವರಗಳನ್ನು ನೀಡಿದ್ದು ಇವೆಲ್ಲವೂ ಇನ್ನೂ ಹೆಚ್ಚಿನ ಸಂಶೋಧನೆಯನ್ನು ನಿರೀಕ್ಷಿಸುವಂತಹವುಗಳಾಗಿವೆ.
      ಈ ಸಂಶೋಧನಾ ಕೃತಿ ಹೊರ ಬರುವುದಕ್ಕಿಂತ ಪೂರ್ವದಲ್ಲಿ ಹರಿಹರನು ತಮಿಳುನಾಡಿನ ಶೈವ ಪುರಾತನರ ಬಗೆಗೆ ಕೃತಿರಚಿಸಲು ಶೇಕ್ಕಿಳಾರನ ಪೆರಿಯ ಪುರಾಣದಿಂದ ಎಂಬ ನಿಲುವು ಸಾರ್ವತ್ರಿಕವಾಗಿದ್ದಿತು. ಆದರೆ ಇದು ಸತ್ಯಕ್ಕೆ ದೂರವಾದದ್ದು ಎಂಬುದನ್ನು ಇವರು ಈ ಕೃತಿಯ ಮೂಲಕ ಸಾಬೀತು ಪಡಿಸಿದ್ದಾರೆ. ಹರಿಹರನ ತಮಿಳುನಾಡಿನ ಶೈವ ಪುರಾತರನನ್ನು ಕುರಿತು ರಚಿಸಿರುವ ರಗಳೆಗಳಿಗೆ ಇವರಿಗಿಂತ ಪೂರ್ವದ ವಿದ್ವಾಂಸರಲ್ಲಿ ಕೆಲವರು ತಮಿಳುನಾಡಿನ ಶೇಕ್ಕಿಳಾರನ ಪೆರಿಯಪುರಾಣವು ಪ್ರಮುಖ ಆಕರವೆಂಬ ಅಭಿಪ್ರಾಯ ವನ್ನು ವ್ಯಕ್ತಪಡಿಸಿದ್ದರು. ಆದರೆ ತೀನಂಶ್ರೀ, ಡಿ.ಎಲ್. ನರಸಿಂಹಾಚಾರ, ಎಚ್.ದೇವೀರಪ್ಪ, ಆರ್.ಸಿ. ಹಿರೇಮಠ  ಮೊದಲಾದ ವಿದ್ವಾಂಸರು ತಮ್ಮ ಪುಸ್ತಕಗಳಲ್ಲಿ ಪೆರಿಯಪುರಾಣವು ಹರಿಹರನ ತಮಿಳುನಾಡು ಶೈವಪುರಾತನರನ್ನು ಕುರಿತ ರಗಳೆಗಳಿಗೆ ಪ್ರಮುಖ ಆಕರವಾಗಿಲ್ಲ ಎಂಬ ಭಾಗಶಃ ನಿಲುವನ್ನು ವ್ಯಕ್ತಪಡಿಸಿದ್ದರು. ಆ ಶೋಧಗಳನ್ನು ಮುಂದುವರೆಸಿರುವ ಇವರ ಈ ಸಂಶೋಧನಾ ಪುಸ್ತಕದಲ್ಲಿ ಹರಿಹರನಿಗೆ ಪೆರಿಯಪುರಾಣವು ಪ್ರಮುಖ ಆಕರ ಕೃತಿಯಲ್ಲ ಎಂಬುದನ್ನು ತಮ್ಮ ಖಚಿತ ಮತ್ತು ಗಂಭೀರ ಶೋಧನೆಗಳ ಮೂಲಕ  ದೃಢಪಡಿಸಿದ್ದಾರೆ. ವಿದ್ಯಾಶಂಕರ ರವರು ಪೆರಿಯ ಪುರಾಣ ಮತ್ತು ಹರಿಹರನ ಪುರಾತನರ ರಗಳೆಗಳ ಬಗ್ಗೆ ವಿಸ್ತೃತವಾದ ತೌಲನಿಕ ಅಧ್ಯಯನವನ್ನು ಕೈಗೊಳ್ಳುವುದರ ಮೂಲಕ ಅಭಿಪ್ರಾಯವನ್ನು ಪರಿಷ್ಕರಿಸಿದ್ದಾರೆ. ಇವರು ಶೇಕ್ಕಿಳಾರನನ್ನು ಹರಿಹರ ಅನುಸರಿಸಿಲ್ಲ ಎನ್ನುವ ನಿಲುವನ್ನು ಮದ್ರಾಸ್ ವಿಶ್ವವಿದ್ಯಾಲಯದ ತಮಿಳು ವಿಭಾಗದ ಮುಖ್ಯಸ್ತರಾದ ಡಾ.ಸಂಜೀವಿ ರವರ ಬಳಿ ಚರ್ಚೆ ಮಾಡುವ ಸಂದರ್ಭದಲ್ಲಿ ವಿದ್ಯಾಶಂಕರ ರವರ ನಿಲುವಿಗೆ ಘಟ್ಟಿಯಾದ ಆಧಾರವಿದೆಯೇ ಎಂದು ತಮಿಳು ವಿದ್ವಾಂಸರು ಕೇಳಿದಾಗ ವಿದ್ಯಾಶಂಕರ ರವರು ಶೇಕ್ಕಿಳಾರ್ ಹಾಗೂ ಹರಿಹರ ಇವರ ತೌಲನಿಕ ಅಧ್ಯಯನ ನಡೆಸಿರುವುದನ್ನು ತಿಳಿಸಿ ಎಲ್ಲಿಯೂ ಶೇಕ್ಕಿಳಾರನ ಪ್ರಭಾವ ಹರಿಹರನ ರಗಳೆಗಳ ಮೇಲೆ ಆಗಿರುವುದು ಕಂಡುಬರುವುದಿಲ್ಲ ಎಂಬುದನ್ನು ಹಲವು ನಿದರ್ಶನಗಳೊಡನೆ ವಿವರಿಸಿದ್ದರು. ಆಗ ತಮಿಳು ವಿದ್ವಾಂಸರು ಇವರ ನಿಲುವನ್ನು ಭಾಗಶಃ ಒಪ್ಪುತ್ತಾ, ಶೇಕ್ಕಿಳಾರ್ ಅನಪಾಯ ಚೋಳರ ಕಾಲದಲ್ಲಿ (ಕ್ರಿ.. 1070-1104)) ಇದ್ದವನು. ಹರಿಹರನ ಕಾಲಕ್ಕೆ ಬಹುಶಃ ಅವನು ಪೆರಿಯ ಪುರಾಣವನ್ನು ರಚಿಸುತ್ತಿದ್ದಿರ ಬಹುದು ಇಲ್ಲವೇ ಕೃತಿ ರಚನೆಯನ್ನು ವೇಳೆಗೆ ಮಾಡಿ ಮುಗಿಸಿರಬಹುದು. ಅದು ಇನ್ನು ವ್ಯಾಪಕವಾದ ಪ್ರಚಾರವನ್ನು ಜನಮನ್ನಣೆಯನ್ನು ಪಡೆಯದೇ ಇದ್ದ ಕಾಲಮಾನದಲ್ಲಿ ಹರಿಹರ ನಾಯನ್ಮಾರರನ್ನು ಕುರಿತು ಕೃತಿ ರಚನೆ ಮಾಡಿರಬಹುದು ಎನ್ನುವ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು. ತಮಿಳು ವಿದ್ವಾಂಸರ ನಿಲುವು ವಿದ್ಯಾಶಂಕರ ರವರ ಹರಿಹರನ ಮೇಲೆ ಶೇಕ್ಕಿಳಾರನ ಪ್ರಭಾವ ಆಗಿಲ್ಲ ಎನ್ನುವ ನಿಲುವನ್ನು ಸದೃಢಗೊಳಿಸಿದೆ. ಹರಿಹರನು ಶೆಕ್ಕಿಳಾರನ ಕಾಲಕ್ಕೆ ಹತ್ತಿರದವನು,  ಹರಿಹರನು ಕೃತಿ ರಚನೆ ಮಾಡ ಹೊರಟಾಗ ಶೆಕ್ಕಿಳಾರ್ ಅದಾಗ ತಾನೆ ಪೆರಿಯ ಪುರಾಣವನ್ನು ಬರೆದು ಮುಗಿಸಿರ ಬೇಕು. ಹರಿಹರನ ಕೃತಿಗಳಿಗೂ ಪೆರಿಯಪುರಾಣದ ಕೃತಿಗಳಿಗೂ ನಿರೂಪಣೆಯ ದೃಷ್ಟಿಯಲ್ಲಿ ಗಮನಾರ್ಹವಾದ ವ್ಯತ್ಯಾಸಗಳಿವೆ ಎಂಬುದನ್ನು ಇವರೇ ತೌಲನಿಕ ಅಧ್ಯಯನದ ಮೂಲಕ  ಈ ಕೃತಿಯಲ್ಲಿ ನಿರೂಪಿಸಿದ್ದಾರೆ.    ಹೀಗೆ  ಹರಿಹರನಿಗೆ ಪೆರಿಯ ಪುರಾಣವು ಆಕರವಲ್ಲ ಎಂದು ಹೇಳುವುದರ ಮೂಲಕ ಈ ವಿಷಯವನ್ನು ಕುರಿತ ಪೂರ್ವದ ಸಂಶೋಧಕರ ನಿಲುವುಗಳಿಗೆ ಅಧಿಕೃತ ಸಮರ್ಥನೆಯನ್ನು ಒದಗಿಸಿದ್ದಾರೆ ಎಂಬ ಚಿದಾನಂದ ಮೂರ್ತಿಗಳ ಅನಿಸಿಕೆಯು ಈ ಕೃತಿಯ ಸಂಶೋಧನಾ ಮೌಲ್ಯವನ್ನು ಇಮ್ಮಡಿಗೊಳಿಸಿದೆ. ಪೆರಿಯ ಪುರಾಣದ ಸಂಪೂರ್ಣ ಪ್ರಭಾವಕ್ಕೆ ಹರಿಹರನು ಒಳಗಾಗಿದ್ದಾನೆ ಎಂಬ ವಿದ್ವಾಂಸರ ನಿಲುವು ಇಂದು ವಿದ್ಯಾಶಂಕರ ಅವರ ಸಂಶೋಧನೆಯ ಮೂಲಕ ಇಂದು ಪುನರ್ ಪರಿಶೀಲನೆಗೊಂಡು ಖಚಿತವಾದ ನಿಲುವನ್ನು ಪಡೆದಿದೆ.   
    ತಮಿಳು ಸಾಹಿತ್ಯದಲ್ಲಿಯೇ ನಂಬಿಯಣ್ಣನನ್ನು ವಸ್ತುವಾಗಿಟ್ಟುಕೊಂಡು ಹುಟ್ಟಿದ ಕೃತಿಯಿಲ್ಲದಿರುವಾಗ ಚದುರಿ ಹೋಗಿದ್ದ ಸುಂದರ ಮೂರ್ತಿಯ ಜೀವನ ವೃತ್ತಾಂತವನ್ನು ಹಲವಾರು ಮೂಲಗಳಿಂದ ಕಲೆಹಾಕಿ ಕೃತಿ ರಚನೆ ಮಾಡಿದ ಶ್ರೇಯಸ್ಸು ಹರಿಹರನಿಗೆ ಅಂದರೆ ಕನ್ನಡ ಸಾಹಿತ್ಯಕ್ಕೆ  ಸಲ್ಲುತ್ತದೆ. `ಹರಿಹರನು ಪ್ರತಿಯೊಬ್ಬ ನಾಯನ್ಮಾರನ ಜನ್ಮಸ್ಥಳಕ್ಕೆ ಭೇಟಿ ನೀಡಿ ವಿಷಯ ಸಂಗ್ರಹಣೆ ಮಾಡಿರುವಂತಿದೆ. ತಿರುತ್ತೊಂಡತ್ತೊಗೈ, ತಿರುವಂದಾದಿ,, ತೇವಾರಂಗಳು, ಜನಪದದಲ್ಲಿ ಅರುವತ್ತು ಮೂವರು ಪುರಾತನರುಗಳ ಬಗೆಗೆ ಹರಡಿಕೊಂಡಿದ್ದ ಐತಿಹ್ಯಗಳು, ದಂತಕಥೆಗಳು, ಇವೆಲ್ಲವನ್ನು ಅಧರಿಸಿ ತನ್ನ ದೈವದತ್ತ ಪ್ರತಿಭೆಯಿಂದ ಪುರಾತನರ ಕಥಾಮಾಲಿಕೆಯನ್ನು ಹರಿಹರ ರಚಿಸಿದಂತಿದೆ.’ ಎಂಬ ವಿದ್ಯಾಶಂಕರ ಅವರ ಮಾತುಗಳು ಸ್ಪಷ್ಟವಾಗಿವೆ ಮತ್ತು ಬಹುಶಃ ನಿರ್ಣಾಯಕವಾಗಿವೆ
    ಇವರು ತಮಿಳುನಾಡಿನ ವಿವಿಧ ಪ್ರದೇಶಗಳಿಗೆ ಕ್ಷೇತ್ರಕಾರ್ಯ ಕೈಗೊಂಡು ಹರಿಹರನಿಗೆ ಯಾವ ರೀತಿ ತಮಿಳು ಭಾಷೆಯ ಪರಿಚಯವಿದ್ದಿತು ಎಂಬುದರ ಬಗೆಗೆ, ತನ್ನ ಕಾವ್ಯದಲ್ಲಿ ಹಲವೆಡೆಗಳಲ್ಲಿ ತೇವಾರಂಗಳನ್ನು ಅವು ಬಳಕೆಯಲ್ಲಿರುವಂತೆಯೇ ಯಾವರೀತಿ ಬಳಸಿದ್ದಾನೆ ಎಂಬುದರ ಬಗೆಗೆ, ಅವನ  ನಂಬಿಯಣ್ಣನ ರಗಳೆಯಲ್ಲಿ ಬರುವ (ಸ್ಥಲ.11) ಬರುವ  ತಿರುನಾಳಿನ ವರ್ಣನೆಯನ್ನು ಓದಿದವರಿಗೆ ಹರಿಹರನ ತಮಿಳುನಾಡಿನ ಸಾಂಸ್ಕೃತಿಕ ಹಿರಿಮೆಯ ಪರಿಚಯ ವಿದ್ದಿತು ಎಂಬುದು ಮನದಟ್ಟಾಗುವ ಬಗೆಗೆ, ಅವನು ತಮಿಳುನಾಡಿನ ಶೈವ ಪುರಾತನ ರಗಳೆಗಳಲ್ಲಿ ಬಳಸುವ ತಮಿಳು ಹೆಸರುಗಳು, ಪದಗಳು, ಸ್ಥಳನಾಮಗಳು ಇತ್ಯಾದಿ ಸಂಗತಿಗಳು   ತಮಿಳನಾಡಿನ ಬಗೆಗೆ ಸಾಕಷ್ಟು ಪರಿಚಯ ಹರಿಹರನಿಗೆ ಇರುವುದನ್ನು ಪ್ರಸ್ತಾಪಿಸುತ್ತಾ, ತಮಿಳುನಾಡಿನ ಉದ್ದಗಲಕ್ಕೂ ಹರಿಹರನು ಸಂಚರಿಸಿದ್ದಿರ ಬೇಕು ಎಂಬ ನಿಲುವನ್ನು ಈ ಪುಸ್ತಕದಲ್ಲಿ ವ್ಯಕ್ತಪಡಿಸಿದ್ದಾರೆ.ಇವರ ಈ ನಿಲುವು ಖಚಿತಗೊಳ್ಳಲು ಇನ್ನು ಹೆಚ್ಚಿನ ಆಧಾರಗಳನ್ನು ಬಯಸುತ್ತವೆ.
        ತಮಿಳುನಾಡಿನ ನಂಬಿ ಆರೂರ ಅಥವಾ ಸುಂದರ ನಂಬಿಯ( ನಂಬಿಯಣ್ಣ) ಕಥಾವಸ್ತುವನ್ನು ಮುಖ್ಯವಾಗಿಸಿಕೊಂಡು ತೌಲನಿಕ ಅಧ್ಯಯನ ಮಾಡಿದ್ದಾರೆ. ಸಂಸ್ಕೃತ, ತಮಿಳು, ಕನ್ನಡ, ತೆಲುಗು ಸಾಹಿತ್ಯಗಳಲ್ಲಿ ಸುಂದರ ನಂಬಿಯನ್ನು ಕೇಂದ್ರವಾಗಿರಿಸಿಕೊಂಡು ನಿರ್ಮಿತವಾಗಿರುವ ಸಾಹಿತ್ಯವಾಙ್ಮಯದ ಸಾಮ್ಯ-ವೈಷಮ್ಯಗಳನ್ನು ವಿಸ್ತಾರವಾಗಿ ಮತ್ತು ಅಧಿಕೃತವಾಗಿ  ನಿರೂಪಿಸಿದ್ದಾರೆ. ತಮಿಳುನಾಡಿನಲ್ಲಿ ನಂಬಿಯಣ್ಣನನ್ನು ಕುರಿತು ನಡೆದಿರುವ ಶೋಧಗಳನ್ನು ಈ ಪುಸ್ತಕದಲ್ಲಿ ಬಳಸಿಕೊಂಡಿದ್ದಾರೆ. ಕನ್ನಡದಲ್ಲಿ ಹರಿಹರನ ಸಾಹಿತ್ಯ ಮಾತ್ರವಲ್ಲದೆ ನಂಬಿಯಣ್ಣನನ್ನು ಕುರಿತು ಹುಟ್ಟಿರುವ ಇತರೆ ಸಾಹಿತ್ಯವನ್ನು ಸಮಗ್ರವಾಗಿ ದಾಖಲಿಸಿದ್ದಾರೆ. ಹೋಲಿಕೆಗಾಗಿ ತೆಲುಗು ಸಾಹಿತ್ಯದ ಉಲ್ಲೇಖಗಳನ್ನು ಕೊಡಮಾಡಿದ್ದಾರೆ. ಈ ಕೃತಿಯಲ್ಲಿ ಕಂಡು ಬರುವ ಮುಖ್ಯವಾದ ಸಂಗತಿಯೆಂದರೆ ನಂಬಿಯಣ್ಣನ ಕುರಿತಾದ ಸಾಹಿತ್ಯದಲ್ಲಿ ತಮಿಳಿನ ಕತೆಗೂ ಮತ್ತು ಕನ್ನಡ ಕತೆಗೂ ಕೆಲವು ಸ್ಪಷ್ಟ ವ್ಯತ್ಯಾಸಗಳಿರುವುದನ್ನು ಗುರುತಿಸಿರುವುದು.
ನಂಬಿಯಣ್ಣ ತಮಿಳುನಾಡಿನ ಶೈವ ಪುರಾತನದಲ್ಲಿ ಕೊನೆಯವನು ಸುಪ್ರಸಿದ್ಧ ತೇವಾರಂಗಳ ಕರ್ತೃ 7ನೇ ಶತಮಾನದ ಕೊನೆಯ ಭಾಗ ಮತ್ತು 8ನೇ ಶತಮಾನದ ಆದಿಭಾಗದಲ್ಲಿ ಇದ್ದವನು. ನಂಬಿಯಣ್ಣನ ರಗಳೆಯನ್ನು ಸಂಪಾದಿಸಿದ ತಿ.ನಂಶ್ರೀಯವರು ಮೊದಲನೇ ಮುದ್ರಣದಲ್ಲಿ ಯಾವುದೇ ಹೆಚ್ಚಿನ ಮಾಹಿತಿಯನ್ನು ಒದಗಿಸಿರಲಿಲ್ಲ 2ನೇ ಸಂಪುಟದಲ್ಲಿ ನೀಡುವುದಾಗಿ ತಿಳಿಸಿದ್ದರು. ಅವರು ಬದುಕಿದ್ದಿದ್ದರೆ ಕಾವ್ಯ ವಿಮರ್ಶೆ ತಮಿಳು ತೆಲುಗು ಸಂಸ್ಕೃತ ಗ್ರಂಥಗಳಲ್ಲಿ ದೊರೆಯುವ ಸುಂದರ ಮೂರ್ತಿಯ ವೃತ್ತಾಂತಗಳಿಗೂ ಹರಿಹರನ ನಿರೂಪಣೆಗೂ ಇರುವ ಸಾಮ್ಯ- ವೈಶಮ್ಯಗಳು, ಕನ್ನಡದಲ್ಲಿ ಸೌಂದರಪುರಾಣಗಳನ್ನು ರಚಿಸಿರುವ ಕವಿಗಳ ಮೇಲೆ ಹರಿಹರನ ಪ್ರಭಾವ ಮೊದಲಾದ ವಿಷಗಳನ್ನು ಒಳಗೊಂಡ ವಿಸ್ತರವಾದ ಪೀಠಿಕೆಯನ್ನು ಕೊಡುತ್ತಿದ್ದರೇನೋ ಯಾಕೆಂದರೆ ಅವರು ಕನ್ನಡದ ಜೊತೆಗೆ ತಮಿಳು ಸಂಸ್ಕೃತಗಳ ಬಗ್ಗೆ ಆಳವಾದ ಪಾಂಡಿತ್ಯವನ್ನು ಹೊಂದಿದ್ದವರಾಗಿದ್ದರು. ಅದೇ ರೀತಿ ಹರಿಹರ ಮತ್ತು ತಮಿಳು ನಾಡಿನ ಶೈವ ನಾಯನ್ಮಾರರ ಬಗೆಗೆ ಆಸಕ್ತಿಯನ್ನು ಹೊಂದಿದ್ದ ಹೆಚ್.ದೇವಿರಪ್ಪನವರು ತಮ್ಮಶರಣ ಚರಿತ ಮಾನಸ” ‘ಶಿವ ಶರಣ ಸಂಪುಟ ಕೃತಿಗಳಲ್ಲಿ ತಮ್ಮದೇ ನಿರ್ಣಯವನ್ನು ಮಂಡಿಸಿರುವರು. ಅದೇ ರೀತಿ ಮತ್ತೋರ್ವ ವಿದ್ವಾಂಸರಾದ ಆರ್.ಸಿ. ಹಿರೇಮಠರವರು ತಮ್ಮ ಸಂಪಾದಿತ ಕೃತಿಗಳಾದ ಸುರಂಗನ ತ್ರಿಷಷ್ಠಿ ಪುರಾತನರ ಸಾಹಿತ್ಯ ಹಾಗೂ ಹರಿಹರನ ಪುರಾತನರ ರಗಳೆಗಳು ಕೃತಿಗಳಲ್ಲಿಯ ವಿದ್ವತ್ಪೂರ್ಣ ಪ್ರಸ್ತಾವನೆಯು ಅಭ್ಯಾಸನೀಯವಾಗಿದೆ. ಆದರೆ ಕನ್ನಡದಲ್ಲಿ ನಂಬಿಯಣ್ಣನ ಬಗೆಗೆ ವಿಸ್ತೃತವಾದ ಅಧ್ಯಯನ ನಡೆಯದೇ ಇದ್ದ ಸಂದರ್ಭದಲ್ಲಿ ನಂಬಿಯಣ್ಣನನ್ನು ಕುರಿತು ವಿಸ್ತೃತವಾದ ತೌಲನಿಕ ಅಧ್ಯಯನದ ಬಗ್ಗೆ ಆಸಕ್ತಿ ವಹಿಸಿ ಕಾರ್ಯ ತತ್ಪರರಾಗಿ ಯಶಸ್ವಿಯಾದವರು ವಿದ್ಯಾಶಂಕರ ರವರು. ಇವರ ಕೃತಿ ಬಂದ ಮೇಲೆ  ಎನ್.ಎಸ್. ತಾರಾನಾಥ ಅವರು ಕನ್ನಡ ಸಾಹಿತ್ಯದಲ್ಲಿ ನಂಬಿಯಣ್ಣ ಎಂಬ ಕೃತಿಯನ್ನು ತಮ್ಮ ಪಿಎಚ್.ಡಿ. ಸಂಶೋಧನೆಗಾಗಿ ಸಿದ್ಧಪಡಿಸಿದ್ದಾರೆ.
        ನಂಬಿಯಣ್ಣ ಒಂದು ಅಧ್ಯಯನ ಕೃತಿಯ ರಚನೆಯಲ್ಲಿ ತಮಿಳು ಭಾಷೆಯ ಸಾಹಿತ್ಯದಲ್ಲಿ ನಂಬಿಯಣ್ಣನ ಬಗ್ಗೆ ಕೆಲಸ ಮಾಡಿರುವ ಡಾ.ಎಂ..ದೊರೈ ರಂಗಸ್ವಾಮಿ ರವರ ವಿದ್ವತ್ಪೂರ್ಣ ಕೃತಿ, ದಿ ರಿಲಿಜಿಯನ್ ಅಂಡ್ ಫಿಲಾಸಫಿ ಆಫ್ ತೇವಾರಂಪುಸ್ತಕದ ಭಾಗ 1 ಮತ್ತು 2ನೇ ಸಂಪುಟದಲ್ಲಿಯ ನಂಬಿ ಆರೂರನ ಕಾಲ ನಿರ್ಣಯದ ಬಗ್ಗೆ ನಡೆದಿರುವ ಚರ್ಚೆ, ನಂಬಿ ಆರೂರನ ತೇವಾರಂಗಳಿಂದ ಅವನ ಬದುಕಿನ ಅನೇಕ ಸಂಗತಿಗಳ ಮಾಹಿತಿಯನ್ನು ವಿದ್ಯಾಶಂಕರ ಅವರು ತಮ್ಮ ಕೃತಿಯ ಎರಡನೇ ಅಧ್ಯಾಯದಲ್ಲಿ ಬಳಸಿಕೊಂಡಿದ್ದಾರೆ.
    ವಿದ್ಯಾಶಂಕರ್ ರವರ ನಂಬಿಯಣ್ಣ ಒಂದು ಅಧ್ಯಯನ ಕೃತಿ ರಚನೆಗೆ ತಮಿಳು ನಾಡಿನಲ್ಲಿಯೂ ಕ್ಷೇತ್ರಕಾರ್ಯ ನಡೆಸಿದ್ದಾರೆ. ಅಧ್ಯಯನಕ್ಕೆ ನಂಬಿಯಾರೂರನ ತಿರುತ್ತೊಂಡತ್ತೊಗೈ”, ನಂಬಿಯಾಂಡಾರ್ ನಂಬಿಯಾ”, ತಿರುತೊಂಡಾರ್ ತಿರುವೊಂದಾದಿ, ಶೇಕ್ಕಿಳಾರನ ಪೆರಿಯ ಪುರಾಣ ಕೃತಿಗಳನ್ನು,  ನಂಬಿಯಣ್ಣನ ಬಗೆಗಿರುವ ಸ್ಥಳಪುರಾಣ ಮತ್ತು ಐತಿಹ್ಯಗಳು ಜನಪದ ಕತೆಗಳು, ದೇವಾಲಯಗಳಲ್ಲಿನ ಶಿಲ್ಪ ಹಾಗೂ ಚಿತ್ರಗಳನ್ನು ಅಧ್ಯಯನಕ್ಕೆ ಆಕರಗಳಾಗಿ ಬಳಸಿಕೊಂಡಿರುತ್ತಾರೆ. ಕ್ಷೇತ್ರಾಧ್ಯಯನದಲ್ಲಿ ನಂಬಿಯಣ್ಣನ ಬದುಕಿಗೆ ಸಂಬಂಧಿಸಿದ ಹಾಗೆ ಅನೇಕ ನೂತನ ಸಂಗತಿಗಳು ಲಭ್ಯವಾಗಿರುವುದನ್ನು ಪ್ರಸ್ತಾಪಿಸಿದ್ದಾರೆ. ನಂಬಿಯಣ್ಣನು ತನ್ನ ಜೀವಿತದ ಬಹುಭಾಗವನ್ನು ಕಳೆದ ತಿರುವಾರೂರನ್ನು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಇವರು ಸಂದರ್ಶಿಸಿದರು. ಸಂದರ್ಭದಲ್ಲಿ ಅವರಿಗೆ ಲಭ್ಯವಾದ ಮಾಹಿತಿಗಳು ಪೆರಿಯ ಪುರಾಣದಲ್ಲಿ ಲಭ್ಯವಿರುವುದಿಲ್ಲ ಅವು ವಾಗ್ ಪರಂಪರೆಯಲ್ಲಿ ಮಾತ್ರ ಕಂಡು ಬಂದಿರುವುದನ್ನು ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ನಿದರ್ಶನಕ್ಕೆ
1.    ‘’ನಂಬಿಯಾರೂರ ಭಕ್ತಿಯನ್ನು ಪರೀಕ್ಷಿಸಬೇಕೆಂದು ಶಿವ ಮತ್ತು ಪಾರ್ವತೀಯರು ವೃದ್ಧರ ವೇಶ ಧರಿಸಿ ಬರುವರು, ಶಿವನು ಕೊಳದಲ್ಲಿ ಜಾರಿ ಮುಳುಗಲು, ಪಾರ್ವತಿಯು ಸುತ್ತಮುತ್ತಲಿದ್ದವರನ್ನು ಕುರಿತು ಯಾರಾದರೂ ಪಾಪ ಮಾಡದವರು ನನ್ನ ಸ್ವಾಮಿಯನ್ನು ಮೇಲೆತ್ತಿ ಕಾಪಾಡಿ ಎಂದು ಕರುಳು ಕರಗುವಂತೆ ಪ್ರಾರ್ಥಿಸಿದಳು, ಯಾರೂ ಮುಂದೆ ಬರದಿರಲು ನಂಬಿ ಕೊಳದಲ್ಲಿ ಮುಳುಗಿ ಸ್ವಾಮಿಯನ್ನು ರಕ್ಷಿಸುವರು. ಶಿವ ಪಾರ್ವತಿಯರು ಮೆಚ್ಚಿ ದರ್ಶನ ನೀಡುವರು .
2.   ತಿರುನಾಟ್ಯತ್ತಾಂಕುಡಿ ಎಂಬ ಗ್ರಾಮದಲ್ಲಿ ನಂಬಿಯಣ್ಣ ಬಗೆಗಿನ ವಾಗ್ ಪರಂಪರೆಯ ವಿವರ:- ‘ನಂಬಿಯಾರೂರನನ್ನು ಪರೀಕ್ಷಿಸಲು ಶಿವ ಹಾಗೂ ಪಾರ್ವತಿಯರು ವಕ್ಕಲಿಗ ಮತ್ತು ವಕ್ಕಲಗಿತ್ತಿಯ ವೇಶ ಧರಿಸಿ ಗದ್ಧೆಯಲ್ಲಿ ನಾಟಿಯ ಕೆಲಸ ಮಾಡಿದ ಸ್ಥಳ ಇರುವುದನ್ನು ಊರಿನ ಹಿರಿಯರ ಮೂಲಕ ವಿದ್ಯಾಶಂಕರರು ತಿಳಿದುಕೊಂಡಿದ್ದನ್ನು ತಮ್ಮ ಪುಸ್ತಕದಲ್ಲಿ ದಾಖಲಿಸುತ್ತಾ ಪ್ರಸಂಗಗಳೆರಡೂ ಶೇಕ್ಕಿಳಾರನ ಪೆರಿಯ ಪುರಾಣದಲ್ಲಿ ಕಂಡುಬಂದಿಲ್ಲ, ಹರಿಹರನಲ್ಲಿ ಘಟನೆಗಳ ಪ್ರಸಂಗ ಪ್ರಸ್ತಾಪಿತವಾಗಿದೆ ಎಂದು ಹೇಳುತ್ತಾ ಸಂಗತಿಗಳು ಹರಿಹರನು  ಶೇಕ್ಕಿಳಾರನನ್ನು ಅನುಸರಿಸಿಲ್ಲವೆಂಬುದನ್ನು ಹೇಳುವುದರ ಜೊತೆಗೆ ಹರಿಹರನು ಕ್ಷೇತ್ರ ಸಂಚಾರ ಮಾಡಿ ವಿಷಯವನ್ನು ಸಂಗ್ರಹ ಮಾಡಿರಬೇಕು ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.   ಸಂಗತಿಗಳು ಇವರ ನೂತನ  ಶೋಧನೆಯ ಸಂಗತಿಗಳಾಗಿವೆ.
ಕೃತಿಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಇವರು ಕೆಲವು ಕನ್ನಡದ ಅಪ್ರಕಟಿತ ಹಸ್ತಪ್ರತಿಗಳನ್ನು ಪರಿಶೀಲಿಸಿದ್ದಾರೆ. ಅವುಗಳೆಂದರೆ, ಸಂಸ್ಕೃತದ ಉಪಮನ್ಯು ಭಕ್ತವಿಲಾಸದ ಕನ್ನಡ ರೂಪಾಂತರವಾದ ಕಳಲೆ ನಂಜರಾಜನಭಕ್ತವಿಲಾಸದರ್ಪಣ’(ಕಾಲ-1740) ಅಣ್ಣಾಜಿಯ ಸೌಂದರ ವಿಳಾಸ (ಕಾಲ-1600) ರಾಚ ಕವಿಯಸೌಂದರ್ಯ ನಂಬೆಣ್ಣನ ಪುರಾಣ’ (ಕಾಲ-1600) ಶಿವಯೋಗಿ ಸೋಮೇಶನ 63 ಪುರಾತನರ ಚರಿತ್ರೆ (ಕಾಲ-1560), ಕಳಲೆ ನಂಜರಾಜನ ಅರವತ್ತು ಮೂವರ ತ್ರಿವಿದಿ ಅಪ್ರಕಟಿತ ಕೃತಿಗಳ ಹಸ್ತಪ್ರತಿಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ. ಇವು ಇವರ ಸಂಶೋಧನಾ ಸಾಮಗ್ರಿಗಳ ಗಟ್ಟಿತನವನ್ನು ಸೂಚಿಸುತ್ತವೆ. ಇವರು ಪುಸ್ತಕದಲ್ಲಿ ಅಧ್ಯಯನದ ಅನುಕೂಲಕ್ಕಾಗಿ ಕೆಲವೊಂದು ನಂಬಿಯಣ್ಣನ ವಿಷಯಕ್ಕೆ ಸಂಬಂಧಿಸಿದ ಹಾಗೆ ಕೆಲವೊಂದು ಅಧ್ಯಾಯಗಳನ್ನು ಮಾಡಿಕೊಂಡಿದ್ದಾರೆ.
1.   ಹಿಂದೂಧರ್ಮದ ಪುನರುತ್ಥಾನದ ಹಿನ್ನೆಲೆಯಲ್ಲಿ ತಮಿಳುನಾಡಿನ ಧಾರ್ಮಿಕ ಆಂದೋಲನಎಂಬ ಅಧ್ಯಾಯದಲ್ಲಿ ತಮಿಳು ನಾಡಿನ ಅಂದೋನಕ್ಕೆ ಸಂಬಂಧಿಸಿದಂತೆ ಶೈವಧರ್ಮ ಹಾಗೂ ಪ್ರಾಚೀನತೆ, ದಕ್ಷಿಣ ಭಾರತದಲ್ಲಿ ಬೌದ್ಧ ಹಾಗೂ ಜೈನ ಧರ್ಮಗಳು, ತಮಿಳು ನಾಡಿನಲ್ಲಿ ಬೌದ್ಧ ಹಾಗೂ ಜೈನ ಧರ್ಮಗಳು, ಶೈವ ಧರ್ಮದ ಪುರುತ್ಥಾನ ಕಾರ್ಯದಲ್ಲಿ ಅಪ್ಪರ್ ತಿರುಜ್ಞಾನ ಸಂಬಂಧರ್, ಸುಂದರರ್ ಹಾಗೂ ಮಾಣಿಕ್ಯ ವಾಚಕರ್ ನಿರ್ವಹಿಸಿದ ಪಾತ್ರ, ಹಾಗೂ ಭಕ್ತಿ ಮಾರ್ಗದಲ್ಲಿ ನಾಯನ್ಮಾರರು ಹಾಗೂ ಆಳ್ವಾರರ ಪಾತ್ರವನ್ನು ವಿವರಿಸಿದ್ದಾರೆ.
2.   ತಮಿಳಿನಲ್ಲಿ ನಂಬಿ ಆರೂರನ ಜೀವನ ವೃತ್ತಾಂತಎಂಬ ಅಧ್ಯಾಯದಲ್ಲಿ ನಂಬಿಯಾರೂರರ ಹೆಸರು, ಕಾಲ, ದೇಶ, ಕೃತಿಗಳು, ನಂಬಿಯಾರೂರನ ಜೀವನ ಕುರಿತ ಇತರೆ ಕೃತಿಗಳ ಬಗೆಗೆ ವಿವರಿಸಿದ್ದಾರೆ.
3.   ಸಂಸ್ಕೃತದಲ್ಲಿ ನಂಬಿಯಣ್ಣನ ಕಥೆಯ ಬಗೆಗೆ ಸಂಕ್ಷಿಪ್ತವಾಗಿ ಕೊಡಮಾಡಿದ್ದಾರೆ.
4.   ತೆಲುಗಿನಲ್ಲಿ ನಂಬಿಯಣ್ಣನ ಕಥೆಯ ಬಗೆಗೆ  ಸಂಗ್ರಹಿಸಿಕೊಟ್ಟಿದ್ದಾರೆ.
5.   ಕನ್ನಡದಲ್ಲಿ  ನಂಬಿಯಣ್ಣನ ಕಥೆ’’ ಎಂಬ ಅಧ್ಯಾಯದಲ್ಲಿ ನಂಬಿಯಣ್ಣನನ್ನು ಕುರಿತಾದ ಸ್ವತಂತ್ರಕೃತಿಗಳು- ನಂಬಿಯಣ್ಣನ ರಗಳೆ, ಬೊಮ್ಮರಸನ ಸೌಂದರ ಪುರಾಣ, ಅಣ್ಣಾಜಿಯ ಸೌಂದರ ವಿಳಾಸ, ಚಿಕ್ಕರಾಚನ ನಂಬ್ಯಣ್ಣನ ಪುರಾಣ, ಶಾಂತವೀರ ದೇಶಿಕನ ಸೌಂದರೇಶ್ವರ ಯಕ್ಷಗಾನ ಕೃತಿಗಳ ಜೊತೆಗೆ  ನಂಬಿಯಣ್ಣನ ಬದುಕನ್ನು ಅರ್ಥೈಸಲು ನೆರವಾಗುವ ಪೂರಕ ಸಾಮಗ್ರಿಗಳು, ವಚನಗಳಲ್ಲಿ ನಂಬಿಯಣ್ಣ, ಹರಿಹರನ ನಿರೂಪಣೆಯಂತೆ ನಂಬಿಯಣ್ಣನ ಸಮಕಾಲೀನರಾದ ಮೆರೆಮಿಂಡದೇವರು, ಸೋಮಾಸಿಮಾರರು, ಜಡೆಯನಾರು, ಯಸ್ಯಜ್ಞಾನಿ ದೇವಿಯರು, ಚೇರಮ, ಪೆರುಮಳಲಿಯ ಕುರುಂಬರರ ಬಗ್ಗೆ ಲಭ್ಯವಿರುವ ಆಕರಗಳನ್ನು ಆಧರಿಸಿ ವಿವರಿಸಿದ್ದಾರೆ. ಹಾಗೂ ಹರಿಹರೇತರ ಕೃತಿಗಳಲ್ಲಿ ನಂಬಿಯಣ್ಣನ ಕಥೆಗಳನ್ನು ಚರ್ಚಿಸಿದ್ದಾರೆ.
6.   ಪೆರಿಯ ಪುರಾಣ ಹಾಗೂ ನಂಬಿಯಣ್ಣನ ರಗಳೆಗಳನ್ನು ಕುರಿತು ತೌಲನಿಕ ಅಧ್ಯಯನವನ್ನು ಸುಮಾರು ನೂರು ಪುಟಗಳಲ್ಲಿ ವಿಸ್ತೃತವಾಗಿ  ನಡೆಸಿದ್ದಾರೆ.   ಅಧ್ಯಾಯಗಳ ಶೀರ್ಷಿಕೆಗಳು ಇವರ ಸಂಶೋಧನಾ ನೆಲೆಯ ಗುಣಮಟ್ಟವನ್ನು ಪ್ರತಿನಿಧಿಸುತ್ತವೆ.
  ಕೃತಿಯ ಮೂಲಕ  ಕಂಡು ಕೊಂಡಿರುವ ಇವರ ಹೊಸ ಶೋಧಗಳನ್ನು ಕೆಳಕಂಡ ರೀತಿಯಲ್ಲಿ ಗುರುತಿಸ ಬಹುದಾಗಿದೆ.
. ಕ್ರಿ. ರಿಂದ ೮ನೇ ಶತಮಾನದ ವರೆಗೆ ತಮಿಳುನಾಡಿನಲ್ಲಿ ನಡೆದ ವರ್ಣ ಹಾಗೂ ವರ್ಗ ಭೇದಗಳಿಂದ ಮುಕ್ತವಾದ ಧಾರ್ಮಿಕ ಚಳುವಳಿಯು ಅದೊಂದು ಭಕ್ತಿ ಪ್ರಧಾನವಾದ ಸಾಮಾಜಿಕ ಚಳುವಳಿಯಾಗಿ ಮಾರ್ಪಟ್ಟು, ಹೊರಗಿನಿಂದ ಬಂದು ಸಂದರ್ಭ ಸನ್ನಿವೇಶಗಳ ಲಾಭ ಪಡೆದು   ನಾಡಿನ ನೆಲದಲ್ಲಿ ಬಲವಾಗಿ ಬೇರುಬಿಟ್ಟ ಬೌದ್ಧ ಹಾಗೂ ಜೈನಧರ್ಮಗಳನ್ನು ಉಚ್ಛಾಟಿಸುವಲ್ಲಿ ಬೌದ್ಧಿಕವಾಗಿ ಮಾನಸಿಕವಾಗಿ ತಮ್ಮನ್ನು ತಾವೇ ತೊಡಗಿಸಿಕೊಂಡ ತಮಿಳು ಜನತೆಯನ್ನು ಉದ್ದೀಪಿಸುವಲ್ಲಿ ನಾಯನ್ಮಾರರೂ ಹಾಗೂ ಆಳ್ವಾರರು ನಿರ್ವಹಿಸಿದ ಪಾತ್ರವನ್ನು ವಿವರಿಸಿದ್ದಾರೆ.
. ತಮಿಳು ಸಾಹಿತ್ಯದಲ್ಲಿ ನಂಬಿಯಾರೂರನ ಜೀವನ ವೃತ್ತಾಂತ ನಿರೂಪಣೆ ಗೊಂಡಿರುವ ವಿವರಗಳನ್ನು ನೀಡಿದ್ದಾರೆ. ನಂಬಿಯಾರೂರನತಿರುತ್ತೊಂಡತ್ತೊಗೈಕೃತಿಯು ,ತಮಿಳುನಾಡಿನ ಶೈವಸಂತರನ್ನು ಕುರಿತು ಮೊತ್ತಮೊದಲಿಗೆ ಮಾಹಿತಿಯನ್ನು ಕೊಡುವ ಕೃತಿಯಾಗಿದೆ . ಸೌಂದರನಂಬಿಯ ತೇವಾರಂಗಳ ನೆರವಿನಿಂದ ಅವನ ಬದುಕನ್ನು ಅರ್ಥೈಸುವ ಪ್ರಯತ್ನವನ್ನು ಮಾಡಿದ್ದಾರೆ.  ನಂಬಿಯ ಬದುಕಿನ ಬಗೆಗೆ ಇತರೆ ತಮಿಳು ಕೃತಿಗಳು ನೀಡುವ ವಿವರಗಳನ್ನು ಪ್ರಸ್ತಾಪಿಸಿದ್ದಾರೆ.
. ಸೌಂದರ ನಂಬಿಯ ಕಥೆ ಸಂಸ್ಕೃತ , ತೆಲುಗು ಭಾಷಾ ಸಾಹಿತ್ಯಗಳಲ್ಲಿ ನಿರೂಪಣೆಗೊಂಡಿರುವ ವಿವರಗಳನ್ನು ದಾಖಲಿಸಿದ್ದಾರೆ.
. ತಮಿಳು ಸಂಸ್ಕೃತ, ತೆಲುಗು ಭಾಷಾ ಸಾಹಿತ್ಯಗಳಲ್ಲಿ ಬಂದಿರುವ ನಂಬಿಯಣ್ಣನ ಕಥೆಯ ವ್ಯಾಪಕ ಅಧ್ಯಯನವನ್ನು ಮಾಡಿದ್ದಾರೆ.
 5. ಕನ್ನಡದಲ್ಲಿ ನಂಬಿಯಣ್ಣನನ್ನು ಕುರಿತು ರಚನೆಗೊಂಡಿರುವ ಸ್ವತಂತ್ರ ಕೃತಿಗಳ ವಿವೇಚನೆಯನ್ನು ಮಾಡಿದ್ದಾರೆ. ಶಿವಶರಣರ ವಚನಗಳ ಹಾಗೂ ಹರಿಹರನು ನಿರೂಪಿಸಿರುವ ನಂಬಿಯಣ್ಣನ ಸಮಕಾಲೀನ ಭಕ್ತರ ರಗಳೆಗಳಲ್ಲಿ ಇರುವ ನಂಬಿಯಣ್ಣನ ಮಾಹಿತಿಯನ್ನು ಕೊಟ್ಟಿದ್ದಾರೆ.
. ಕನ್ನಡದಲ್ಲಿ ಹರಿಹರನ ನಂತರದ ವೀರಶೈವ ಕವಿಗಳು ತಮ್ಮ ಕೃತಿಗಳಲ್ಲಿ ಪ್ರಾಸಂಗಿಕವಾಗಿ ನಂಬಿಯಣ್ಣನನ್ನು ಕುರಿತು ನೀಡಿರುವ ವಿವರಗಳ ಬಗೆಗೆ ಮತ್ತು   ಕನ್ನಡ ಕವಿಗಳ ಮೇಲೆ ಹರಿಹರನ ರಗಳೆಗಳು ಬೀರಿರುವ ಗಾಢವಾದ ಪ್ರಭಾವವನ್ನು ಗುರುತಿಸಿದ್ದಾರೆ.
. ನಂಬಿಯಣ್ಣನ ಜೀವಿತ ಕಥನವನ್ನು ನಿರೂಪಿಸಿರುವಲ್ಲಿ ಹರಿಹರನಿಗೆ ಒದಗಿ ಬಂದ ಪ್ರಭಾವ, ಪ್ರೇರಣೆಗಳು: ಹಿನ್ನೆಲೆಯಲ್ಲಿ ಶೇಕ್ಕಿಳಾರನ ಪೆರಿಯಪುರಾಣ ಹಾಗೂ ನಂಬಿಯಣ್ಣನ ರಗಳೆಗಳ ತೌಲನಿಕ ಅಧ್ಯಯನವನ್ನು ವಿಸ್ತೃತವಾಗಿ ಮಾಡಿದ್ದಾರೆ ಹಾಗೂ ಇದುವೇ ಈ ಕೃತಿಯ ಪ್ರಮುಖ ಭಾಗವಾಗಿದೆ.
         ಹರಿಹರನ ನಂಬಿಯಣ್ಣನ ರಗಳೆಯನ್ನು ರಚಿಸುವಾಗ ಸೌಂದರನು ಸ್ವತಃ ರಚಿಸಿದ ತೇವಾರಂಗಳನ್ನು ಗಮನಿಸಿರುವಂತಿದೆ. ಸೌಂದರನ ತೇವಾರಂಗಳಿಂದ ಸ್ಪೂರ್ತಿ ಪಡೆದ ಹರಿಹರನು ಅವುಗಳನ್ನು ಮೂಲಸ್ವರೂಪದಲ್ಲಿಯೋ ಇಲ್ಲವೇ ಅಲ್ಪಸ್ವಲ್ಪ ಬದಲಾವಣೆಗಳೊದನೆಯೋ ನಂಬಿಯಣ್ಣನ ರಗಳೆ ಯಲ್ಲಿ ಕೊಟ್ಟಿರುವನು. ಹರಿಹರನ ಇತರೆ ರಗಳೆಗಳಲ್ಲಿಯೂ ತೇವಾರಂಗಳ ಬಳಕೆಯಾಗಿರುವುದು ಕಂಡುಬರುತ್ತದೆ. ‘ತಿರುನಾಳ್ವೋವರ ರಗಳೆಯಲ್ಲಿ ತಿರುನಾಳಿನ ವರ್ಣನೆಯೊಂದು ಬಂದಿದೆ. ಅದೇ ರೀತಿ ನಂಬಿಯಣ್ಣನ ರಗಳೆಯ ಸ್ಥಲ 11 ರಲ್ಲಿ ಬರುವ ವರ್ಣನೆಯನ್ನು ಪ್ರಸ್ತಾಪಿಸಿದ್ದಾರೆ. ತಿರುನಾಳ್ವೋವರನೆಂಬ ಭಕ್ತ ತಾನು ಬಹುಕಾಲದಿಂದಲೂ ಕಾಣಬೇಕೆಂದಿದ್ದ ಪೊನ್ನಾಂಬಲದ ತಿರುನಾಳ ವೈಭವವನ್ನು ೧೨ ವರ್ಷಗಳ ನಂತರ ಕಾಣಲು ಸಾಧ್ಯವಾದಾಗ ಉತ್ಸವದಲ್ಲಿ ಭಕ್ತ ಭಾಗಿಯಾಗುವ ಪುಣ್ಯಾವಕಾಶ ಪ್ರಾಪ್ತವಾದಾಗ ಉತ್ಕಟವಾದ ಶಕ್ತಿ ರಸೋದ್ರೇಕಕ್ಕೆ ಅವನು ಒಳಗಾಗುವನು. ಆಗ ಆತನ ಬಾಯಿಂದ ಬರುವಅಡಿಯೆನ್ನಡಿಯೆಂಬಂದಂಗಾಣೋ, ಗುಡಿಗಟ್ಟೆಂ ಗುಡಿಗಟ್ಟೆಂ ಶಿವನೆ, ಕುಡಿವಾಳ್ದೆಂ  ಕುಡಿವಾಳ್ದೆಂ ಹರನೆ, ಅಡುಗೆಂ ನಡುಗೆಂ ವಾಣಾಲೊಡೆಯಾ,ಅಡುಗೆನ್ ಪಿರುಮಾಳೆ ವೊಲಘೊಡೆಯಾ’, ಎಂಬ ತಿರುಪದಿಕ ಸ್ತೋತ್ರ ವಿವರವನ್ನು ಹರಿಹರನು ನಂಬಿಯಣ್ಣನ ರಗಳೆಯಲ್ಲಿ ಕಥಾನಾಯಕನ ಬಾಯಲ್ಲಿ ಯಾವ ರೀತಿ  ಹಾಡಿಸಿದ್ದಾನೆ ಎಂಬುದನ್ನು ಉದಾಹರಿಸುತ್ತಾ ರಗಳೆಗಳಲ್ಲಿಯೂ ತೇವಾರಂಗಳ ಬಳಕೆಯಾಗಿರುವುದನ್ನು ಗುರುತಿಸಿದ್ದಾರೆ. ಈ ಮಾಹಿತಿಯು ಹರಿಹರನ ಪುರಾತನರ ರಗಳೆಗಳ ರಚನೆಯ ಆಶಯ ಮತ್ತು ತಾತ್ವಿಕತೆಯನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.     
        ಶೆಕ್ಕಿಳಾರನ ಪೆರಿಯ ಪುರಾಣ ಮತ್ತು  ಹರಿಹರನ ನಂಬಿಯಣ್ಣನ ರಗಳೆಗಳಲ್ಲಿ ಕೆಲವು ಪ್ರಸಂಗಗಳು ಭಿನ್ನವಾಗಿ ಮೂಡಿ ಬಂದಿರುವುದನ್ನು  ಆಧಾರಸಹಿತ ಗುರುತಿಸಿದ್ದಾರೆ. .ಸಂಕಿಲಿನಾಚಿ ಮತ್ತು ಸೌಂದರರ ಪ್ರಣಯ ಪ್ರಸಂಗದ ನಿರೂಪಣೆಯಲ್ಲಿ ಕಂಡು ಬರುವ ಭಿನ್ನತೆ. .ನಂಬಿಯಣ್ಣ ಹಾಗೂ ಪರವೆಯರ ಪುನರ್ಮಿಲನದ ಪ್ರಸಂಗಗಳನ್ನು ಹೆಸರಿಸ ಬಹುದಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಹರಿಹರನಿಗೆ ತಮಿಳು ಗೊತ್ತಿದ್ದಿತು ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅವನ ನಂಬಿಯಣ್ಣನ ರಗಳೆಯಲ್ಲಿ ಕೆಲವೆಡೆ ಬರುವ ಕುಶವರ್ ( ಪು.12 ಸಾ.138), ಕುಡಿಮಗಂ(ಪು.53 ಸಾ.5),  ಪಂಗುನಿ ತಿರುನಾಳ್ (ಪು.175.ಸಾ11), ಪೊನ್ನಾಂಬಲಂ (ಪು.356 ಸಾ.16) ಮೂವಾಯಿಲರ್ ( ಪು.17, ಸಾ.266), ತಿರುಪಾಟು( ಪು.180.ಸಾ.173), ಮೂವಾಯಿಲರ್ (ಪು.17, ಸಾ 266) ತಮಿಳು ಪದಗಳನ್ನು ಗುರುತಿಸಿ ತಮಿಳು ಪದಗಳು ಹರಿಹರನಲ್ಲಿ ಕನ್ನಡ ಪದಗಳೇ ಎನ್ನುವಷ್ಟು ಸಹಜವಾಗಿ ಬಳಕೆಗೊಂಡಿರುವುದನ್ನು ತೋರಿಸಿದ್ದಾರೆ. ಹರಿಹರನು ತನ್ನ ರಗಳೆಗಳಲ್ಲಿ ಕೊಡಮಾಡಿರುವ ಸ್ಥಳನಾಮ ಪದಗಳು ಬಹುತೇಖ ತಮಿಳುನಾಡಿನಲ್ಲಿ ಬಳಕೆಯಲ್ಲಿರುವಂತೆಯೇ ಇವೆ ಎಂಬುದನ್ನೂ ಪುಸ್ತಕದಲ್ಲಿ ಗಮನಿಸಿದ್ದಾರೆ. ಉದಾಹರಣೆಗೆ, ತಿರುನಾವಲೂರು (ನಂಬಿಯಣ್ಣರಗಳೆ ಸ್ಥ.1. ಸಾ.9)ತಿರುವಾರೂರು ( ಅದೇ,ಸ್ಥ.8. ಸಾ.79),ತಿರುಕೊಂಡೆಯೂರು ( ಅದೇ, ಸ್ಥ.11, ಸಾ.39),ತಿರುಕೊಳಲ್ ( ಅದೇ, ರ್ಸತ.11, ಸಾ.53), ತಿರುಮುಡುಗೊಂಡ (ಅದೇ, ಸ್ಥ.11, ಸಾ.88),ತಿರುಮಣಿ ಮುತ್ತಿನಾರು ( ಅದೇ, ಸ್ಥ.11, ಸಾ.98), ತಿರುಚಿಟ್ಟಾಂಬಲ, ತಿರುವಣ್ಣಾಮಲೈ ( ಅದೇ, ಸ್ಥಲ. 16, ಸಾ139-141),ತಿರುವಡಮರಂದೂರು(ಅದೇ, ಸ್ಥ.17, ಸಾ.101), ತಿರುಪಾಂಡ್ಯ ಕೊಡುಮುಡಿ ( ಸ್ಥ.18, ಸಾ.78) ಇತ್ಯಾದಿ ಪಟ್ಟಿ ಮಾಡಬಹುದಾಗಿದೆ.   ಹಿನ್ನೆಲೆಯಲ್ಲಿ  ಹರಿಹರನಿಗೆ ತಮಿಳುನಾಡಿನ  ಪ್ರಸಿದ್ಧ ಶೈವ ಮಠಗಳೊಡನೆ ಸಂಪರ್ಕವಿರುವ ಸಾಧ್ಯತೆಯಿದೆ ಎಂಬ ಊಹೆಯನ್ನು ವಿದ್ಯಾಶಂಕರರವರು ಮಾಡಿದ್ದಾರೆ. ಶ್ರೇಷ್ಠ ಭಕ್ತಕವಿಯಾದಂತಹ ಹರಿಹರ ಭಕ್ತಿಯ ನೆಲೆವೀಡಾದ ತಮಿಳುನಾಡಿನಾದ್ಯಂತ ಕ್ಷೇತ್ರ ಪರ್ಯಟನೆ ಕೈಗೊಂಡಿರಬಹುದಾದ ವಿಚಾರವನ್ನು ತಳ್ಳಿಹಾಕುವಂತಿಲ್ಲ.
      ಸಂಶೋಧನಾ  ಪುಸ್ತಕದಲ್ಲಿ ವಿದ್ಯಾಶಂಕರ ಅವರು  ಹರಿಹರನ ನಂಬಿಯಣ್ಣನ ರಗಳೆಯ ಬಗೆಗೆ ಕುರಿತು ಆಡಿರುವ ಮಾತುಗಳಾದ ನಂಬಿಯಣ್ಣನ ರಗಳೆ ಹರಿಹರನ ಕಥನಕಾವ್ಯಗಳಲ್ಲಿ ಅತ್ಯಂತ ಶ್ರೇಷ್ಠವಾದ ಕೃತಿ.ಅವನ ಬಸವರಾಜ ದೇವರರಗಳೆ ಯನ್ನೂ ಮೀರಿಸುವ ಭಕ್ತಿಕಾವ್ಯ. ನಂಬಿಯಣ್ಣನ ಜೀವಿತ ಕಥೆಯನ್ನು ಇಡಿಯಾಗಿ ಮೊದಲಿಗೆ ಹೇಳಿದ ಹರಿಹರ ಮುಂದಣ ಕವಿಗಳಿಗೆ ಮಾರ್ಗದರ್ಶಿಯಾಗಿರುವನು. ಶಿವನ ತೊತ್ತಾದ ನಂಬಿಯಣ್ಣ ತನ್ನ ಉಜ್ವಲ ಭಕ್ತಿಯಿಂದ ಜೀವನದುದ್ದಕ್ಕೂ ಭೋಗೋಪಭೋಗಗಳಲ್ಲಿ ರಾಜಕುಮಾರನಂತೆ ಬಾಳಿದ,ತನ್ನ ವಿಲಾಸಿ ಬದುಕಿನ ಬೇಡಿಕೆಗಳ ಪೂರೈಕೆಗಾಗಿ ತನ್ನ ಇಷ್ಟದೈವದ ಸೇವೆಯನ್ನೇ ಬಳಸಿಕೊಂಡ ಅನುಪಮ ಭಕ್ತ. ಸ್ವಾಮಿ-ಭೃತ್ಯರ ಲೀಲಾ ಕಥನವು ಕಾವ್ಯದ ಜೀವ ಜೀವಾಳವಾಗಿದ್ದು, ತನ್ನ ನಾಟ್ಯಗುಣದಿಂದ, ಸರಸ ನಿರೂಪಣೆಯಿಂದ ಸಹೃದಯರ ಮನಸ್ಸನ್ನು ಸೂರೆಗೊಂಡಿದೆ. ಭಕ್ತಿ-ಶೃಂಗಾರಗಳು ಕಾವ್ಯದುದ್ದಕ್ಕೂ ಅವಿನಾಭಾವ ಸಂಬಂಧವನ್ನು ಹೊಂದಿವೆ. ಶಿವ-ಹಾಗೂ ನಂಬಿಯಣ್ಣರು ಶಿವ-ಜೀವರ ಅನುಪಮ ಸಾಂಗತ್ಯದ ಸಂಕೇತವಾಗಿರುವವರು. ನಂಬಿ ಕರೆದರೆ ಎನ್ನುವ ದೇವ- ಹೀಗೆ ಭಕ್ತ-ದೇವರ ಸಂಬಂಧದ ಬಿಗುಹನ್ನು, ಕಟ್ಟಕ್ಕರೆಯನ್ನು, ಲೀಲಾ ವಿಲಾಸವನ್ನು ಕಂಡರಿಸಿರುವ ಅಪೂರ್ವ ಕೃತಿ. ಪಾತ್ರ ವೈಭವ, ದೃಶ್ಯ ವೈಭವ, ನಾಟ್ಯ ವೈಭವಗಳ ತ್ರಿಕೂಟ ಸಂಗಮವನ್ನು ನಂಬಿಯಣ್ಣನ ರಗಳೆಯಲ್ಲಿ ಕಾಣುವಷ್ಟು ನಿಚ್ಚಳವಾಗಿ ಹರಿಹರನ ಬೇರಾವ ರಗಳೆಯಲ್ಲಿಯೂ ಕಾಣಲಾಗದು, ಎನ್ನುವ ಇವರ ಮೌಲ್ಯಯುತವಾದ ಮಾತುಗಳು ಹರಿಹರನ ನಂಬಿಯಣ್ಣನ ರಗಳೆಯನ್ನು ಇವರು ಯಾವ ರೀತಿ ಸಂಶೋಧನಾ ನೆಲೆಯಲ್ಲಿ ಸೂಕ್ಷ್ಮವಾಗಿ ಗ್ರಹಿಸಿದ್ದಾರೆ. ಎಂಬುದನ್ನು ಸೂಚಿಸ ಬಯಸುತ್ತವೆ.
   ಇವರು ವಿದ್ವತ್ ಕೃತಿಯಲ್ಲಿ, ವಿಪುಲವಾದ ಆಕರ ಸಾಮಗ್ರಿಯನ್ನು ಒದಗಿಸುವುದರ ಮೂಲಕ ನಂಬಿಯಣ್ಣನ ಕುರಿತ ಸಂಶೋಧನೆಗೆ ಭದ್ರವಾದ ನೆಲೆಯನ್ನು ಒದಗಿಸಿದ್ದಾರೆ. ಅಲ್ಲದೆ  ಸಂಶೋಧಕನಾದವನು  ದೊರೆತ ಮಾಹಿತಿಗಳನ್ನು ಹೇಗೆ ಕ್ರೂಢೀಕರಿಸಿ ವಸ್ತು ನಿಷ್ಟವಾಗಿ ಕಥಾ ವ್ಯಕ್ತಿಯ  ಜೀವನದ  ಸಮಗ್ರ-ಸಮರ್ಥ ಚಿತ್ರಣವನ್ನು ಕಟ್ಟಿಕೊಡಬಹುದು ಎಂಬುದಕ್ಕೆ ಪುಸ್ತಕ ನಿದರ್ಶನವಾಗಿದೆ. ಇವರಿಗೆ ಮೂಲ ಆಕರಗಳ ಬಗೆಗೆ ಸಂಪೂರ್ಣ ಗ್ರಹಿಕೆ ಇರುವುದರಿಂದ ನೇರವಾಗಿ  ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದ್ದಾರೆ. ಎಲ್ಲಿಯೂ ಅಸ್ಪಷ್ಟತೆಯಾಗಲೀ ಗೊಂದಲವಾಗಲೀ ಕಂಡು ಬಂದಿಲ್ಲ.
     ಕನ್ನಡ ಸಾಹಿತ್ಯದಲ್ಲಿ ನಂಬಿಯಣ್ಣನನ್ನು ಕುರಿತು ಹರಿಹರನಲ್ಲದೆ, ಬೊಮ್ಮರಸನ ಸೌಂದರ ಪುರಾಣ, ಅಣ್ಣಾಜಿಯ ಸೌಂದರ ವಿಳಾಸ, ಚಿಕ್ಕರಾಚನ ಸೌಂದರ್ಯ ನಂಬೆಣ್ಣನ ಪುರಾಣ, ಶಾಂತವೀರದೇಶಿಕನ ಸೌಂದರೇಶ್ವರನ ಯಕ್ಷಗಾನ, ಬಸವಾದಿ ಪ್ರಮಥರ ವಚನಗಳಲ್ಲಿ ನಂಬಿಯಣ್ಣ,(ಜೇಡರ ದಾಸಿಮಯ್ಯ, ಬಸವಣ್ಣ, ಸಿದ್ಧರಾಮ, ಸೊಡ್ಡಳ ಬಾಚರಸ), ಹರಿಹರನ ರಗಳೆಗಳ ಆಧರಿಸಿ ಸಮಕಾಲೀನ ಶೈವಪುರಾತನರುಗಳ ಕಥೆಯಲ್ಲಿ ನಂಬಿಯಣ್ಣ ( ಮೆರೆಮಿಂಡ ದೇವರು, ಸೋಮಾಸಿ ಮಾರರು, ಜಡೆಯ ನಾಯನಾರು-ಯಸ್ಯಜ್ಞಾನಿ ದೇವಿಯರು,ಚೇರಮ,ವಿರುಪರಾಜ, ಚೇರಮಾಂಕ, ಶಂಕರ ದೇವ) ನಂಬಿಯಣ್ಣನ ಕಥೆಯು ಕನ್ನಡದಲ್ಲಿ ಯಾವ ರೀತಿ ಬೆಳೆದುಕೊಂಡು ಬಂದಿದೆ? ಅದರ ಮೇಲೆ ಹರಿಹರನ ಪ್ರಭಾವ ಯಾವ ರೀತಿ ಆಗಿದೆ ಇತ್ಯಾದಿ ಸಂಗತಿಗಳ ಸೂಕ್ಷ್ಮ ಸ್ತರದ ಅಧ್ಯಯನವನ್ನು ಇಲ್ಲಿ ಗಮನಿಸ ಬಹದಾಗಿದೆ.
     ಕೃತಿ ರಚನೆಯಲ್ಲಿ ಇವರ ಸಾಧನೆ ಅನನ್ಯವಾದುದು. ನಿರಂತರ ಅಧ್ಯಯನ ಶೀಲತೆ,ಅಳವಾದ ಪರಿಶೀಲನಾ ಮನೋಭಾವ ಮತ್ತು ಬದ್ದತೆಗಳು ಮಾದರಿಯಾಗಿರುವಂತಹವುಗಳು. ವಿದ್ಯಾಶಂಕರ ಅವರ ಈ ಪುಸ್ತಕ ತೌಲನಿಕ ಸಾಹಿತ್ಯದ ಅಭ್ಯಾಸಿಗಳಿಗೆ ಉಪಯುಕ್ತವೂ ಮಾರ್ಗದರ್ಶನೀಯವೂ ಆಗಿದೆ. ಈ ಕೃತಿ ರಚನೆಯ ಹಿಂದೆ ಅಪಾರವಾದ ಶ್ರಮ, ಏಕಾಗ್ರತೆ, ವ್ಯತ್ಪತ್ತಿಜ್ಞಾನ  ಮತ್ತು ಖಚಿತವಾದ ನಿಲುವು ಇರುವುದನ್ನು ಕಾಣಬಹುದಾಗಿದೆ. ವಿದ್ಯಾಶಂಕರ ಅವರ ಈ ವಿದ್ವತ್ ಕೃತಿ ವಿಸ್ಮಯ ಹುಟ್ಟಿಸುವ ಶ್ರೇಷ್ಠಕೃತಿ. ಎಸ್.ವಿದ್ಯಾಶಂಕರ ಅವರ ನಂಬಿಯಣ್ಣ ಒಂದು ಅಧ್ಯಯನ ಸಂಶೋಧನಾ ಪುಸ್ತಕವು ತೌಲನಿಕ, ಉತ್ಕೃಷ್ಠ ಮತ್ತು ಉಪಯುಕ್ತವಾದುದು. ಕನ್ನಡ-ತಮಿಳು-ತೆಲುಗು ವೀರಶೈವ ಸಾಹಿತ್ಯದ  ಸಮಾನ ವಸ್ತು-ಧೋರಣೆಯ, ವೈಶಿಷ್ಟ್ಯವನ್ನು ಈ ಕೃತಿ ಸಾಬೀತು ಪಡಿಸಿದೆ. ಇವರಿಗಿಂತ ಪೂರ್ವದಲ್ಲಿ ಕನ್ನಡ-ತಮಿಳು, ತೆಲುಗುಗಳಲ್ಲಿಯ ಶೈವ-ವೀರಶೈವ ಸಾಹಿತ್ಯ-ಧರ್ಮಗಳನ್ನು ಕುರಿತ ಹಾಗೆ ಸ್ವಲ್ಪ ಮಟ್ಟಿಗೆ ನಡೆದಿದೆಯಾದರೂ ವ್ಯಾಪಕ ಮಟ್ಟದಲ್ಲಿ ಈ ಕೃತಿಯ ಮೂಲಕ ಪ್ರಥಮ ಬಾರಿಗೆ ನಡೆದಿದೆ. 
     ಕನ್ನಡದಲ್ಲಿ ಇಲ್ಲಿಯವರೆಗೂ ನಂಬಿಯಣ್ಣನ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಬಂದಿರುವ ಕೃತಿಗಳಲ್ಲಿ,  ಗಾತ್ರ ಮತ್ತು ಗುಣಮಟ್ಟದ ಎರಡರಲ್ಲಿಯೂ ದೊಡ್ಡದು. ನಂಬಿಯಣ್ಣನ ಬಗೆಗಿನ ಆಕರಗಳನ್ನು ಅತ್ಯಂತ ವ್ಯವಸ್ಥಿತವಾಗಿ  ಕಟ್ಟಿಕೊಡುವುದರ ಮೂಲಕ  ವೀರಶೈವ ಸಾಹಿತ್ಯ-ಸಂಸ್ಕೃತಿ ಕುರಿತಾದ ಅಧ್ಯಯನಗಳ ಮಾಲಿಕೆಯಲ್ಲಿ ಮೇರುಕೃತಿಯಾಗಿದೆ.   ಒಟ್ಟಾರೆ ಮಹತ್ವದ ಪುಸ್ತಕದಲ್ಲಿ ವಿದ್ಯಾಶಂಕರ ಅವರು ಸಂಸ್ಕೃತ, ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಂಬಿಯಣ್ಣನ ಬಗೆಗೆ ಬಂದಿರುವ ಸಾಹಿತ್ಯವನ್ನು ಜೊತೆಗೆ ಪೂರಕವಾಗಿ ತಮಿಳುನಾಡು ಪ್ರದೇಶದಲ್ಲಿ ಕ್ಷೇತ್ರಕಾರ್ಯ ನಡೆಸಿ ನಾಯನ್ಮಾರರ ಜನ್ಮಸ್ಥಳಗಳನ್ನು ಶೋಧಿಸಿ ನೂತನ ಮಾಹಿತಿಗಳನ್ನು ಸಂಗ್ರಹಿಸಿ ಅವೆಲ್ಲವನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಂಡು ತೀನಂಶ್ರೀ ಅವರಿಂದ ಪ್ರಾರಂಭಗೊಂಡು ಅಲ್ಲಿಯೇ ನಿಂತು ಹೋಗಿದ್ದ ನಂಬಿಯಣ್ಣನ ಬಗೆಗಿನ ಸಂಶೋಧನಾ ಅಧ್ಯಯನವನ್ನು ಮೊದಲಬಾರಿಗೆ ಪೂರ್ಣಗೊಳಿಸಿದ ಯಶಸ್ಸಿಗೆ ಭಾಜನರಾಗಿದ್ದಾರೆ. ಸಂಸ್ಕೃತ ಕೃತಿಗಳಲ್ಲಿ ತಮಿಳು ಹೆಸರುಗಳನ್ನು ಸಂಸ್ಕೃತೀಕರಿಸಿರುವುದು ಸ್ಪಷ್ಟವಾಗಿ ಕಂಡುಬರುವುದರಿಂದ ಸಂಸ್ಕೃತ ಕವಿಗಳು ಹರಿಹರನಿಗೆ ಮೂಲ ಆಕರವಾಗಿರಬಹುದೆಂದು ಹೇಳಲು ಸಾಧ್ಯವಿಲ್ಲ. ಹರಿಹರನು ತನ್ನ ಕೃತಿಗಳಲ್ಲೆಲ್ಲೂ  ಸಂಸ್ಕೃತದ ಹೆಸರುಗಳನ್ನು ಬಳಸಿರುವುದು ಕಂಡುಬರುವುದಿಲ್ಲವಾದ್ದರಿಂದ ಹರಿಹರ ರಗಳೆಗಳಿಗೆ ಸಂಸ್ಕೃತ ಕೃತಿಗಳು ಮೂಲ ಆಕರ ಗ್ರಂಥಗಳಲ್ಲವೆಂದು ಖಚಿತವಾಗಿ ಹೇಳಬಹುದು ಎಂಬುದನ್ನು ಎರಡೂ ಸಾಹಿತ್ಯಗಳ ತೌಲನಿಕ ಅಧ್ಯಯನದ ಮೂಲಕ   ಸ್ಪಷ್ಟಗೊಳಿಸಿದ್ದಾರೆ.  ಅದಕ್ಕಿಂತ ಮುಖ್ಯವಾಗಿ ಹಲವು ವರ್ಷಗಳ ತಮ್ಮ ವ್ಯಾಪಕ ಅಧ್ಯಯನದ ಮೂಲಕ ಹರಿಹರನ ಪುರಾತನರ ರಗಳೆಗಳಿಗೆ ಶೇಕ್ಕಿಳಾರನ ಪೆರಿಯಾಪುರಾಣ ಮೂಲ ಆಕರ ಗ್ರಂಥವಲ್ಲವೆಂಬುದನ್ನು  ಹಾಗೂ  ಶೇಕ್ಕಿಳಾರನ ಪೆರಿಯಪುರಾಣವು ಹರಿಹರನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಿಲ್ಲ ಎಂಬುದನ್ನು ಖಚಿತವಾಗಿ ಮೊದಲಬಾರಿಗೆ ತೋರಿಸಿಕೊಟ್ಟಿದ್ದಾರೆ. ದಕ್ಷಿಣಭಾರತದ ಮೂರುಭಾಷೆಗಳಲ್ಲಿ ಪ್ರಕಟವಾಗಿರುವ ನಂಬಿಯಣ್ಣನ ಸಾಹಿತ್ಯವನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ  ಸಂಶೋಧನಾತ್ಮಕವಾಗಿ ವಿಶ್ಲೇಷಣೆಗೊಳಪಡಿಸಿರುವುದು ಇವರ ಸಂಶೋಧನೆಯ ಹೆಗ್ಗುರುತಾಗಿದೆ. ನಂಬಿಯಣ್ಣನ ಕುರಿತ ಸಮೃದ್ಧ ಸಾಹಿತ್ಯ ಸೃಷ್ಟಿ ಕನ್ನಡ, ತಮಿಳು, ತೆಲುಗು ಭಾಷೆಯ ಸಾಹಿತ್ಯಲ್ಲಿ ಕಂಡು ಬರುತ್ತಿದ್ದು   ಆ ವಿವರಗಳನ್ನೆಲ್ಲಾ ಅತ್ಯಂತ ವ್ಯವಸ್ಥಿತವಾಗಿ  ಇವರು ಕಟ್ಟಿಕೊಟ್ಟಿರುವುದನ್ನು ಕಾಣಬಹುದಾಗಿದೆ. ಎಸ್.ವಿದ್ಯಾಶಂಕರ ಅವರ ಈ ಸಂಶೋಧನಾ ಕೃತಿಯು ಖಚಿತ ದೃಷ್ಟಿಕೋನಗಳಿಂದ ಕೂಡಿದ್ದು ಮೌಲ್ಯೀಕತೆಯನ್ನು ಪಡೆದಿವೆ.  ಈ ರೀತಿಯ ವ್ಯಾಪಕ ಅಧ್ಯಯನದಿಂದಾಗಿ  ನಂಬಿಯಣ್ಣನ ಬಗೆಗೆ ಮತ್ತು ಅವನನ್ನು ಕುರಿತು ಕಾವ್ಯ ರಚಿಸಿರುವ ಕವಿಗಳ ಬಗೆಗೆ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿದೆ.  ವಿಪುಲವಾದ ಆಕರ ಸಂಪತ್ತು ಮತ್ತು ವಿದ್ವತ್ ಪ್ರೌಢಿಮೆಯನ್ನು ಹೊಂದಿರುವ ಈ ವಿದ್ವತ್ಕೃತಿಯು  ಎಸ್.ವಿದ್ಯಾಶಂಕರ ಅವರು ನಾಡಿನ ಪ್ರಸಿದ್ಧ ಸಂಶೋಧಕರು ಎಂಬುದರ ಹೆಗ್ಗುರುತಾಗಿದೆ.
        ಪರಾಮರ್ಶನ ಗ್ರಂಥಗಳು
1. ಎಸ್.ವಿದ್ಯಾಶಂಕರ: ನಂಬಿಯಣ್ಣ ಒಂದು ಅಧ್ಯಯನ
   ಸ್ನೇಹಪ್ರಕಾಶನ, ಬೆಂಗಳೂರು,  1985
   ವೀರಶೈವ ಸಾಹಿತ್ಯ ಚರಿತ್ರೆ ಸಂ.2 ( ಹರಿಹರಯುಗ)
   ಸ್ನೇಹಪ್ರಕಾಶನ, ಬೆಂಗಳೂರು  2015
2.  ಹರಿಹರನ ನಂಬಿಯಣ್ಣನ ರಗಳೆ ಸಂ: ತೀ..ಶ್ರೀ.ಕಂಠಯ್ಯ
    ಕಾವ್ಯಾಲಯ ಪ್ರಕಾಶನ, ಮೈಸೂರು, 1963
3.ಪುರಾತನರ ರಗಳೆಗಳು ಸಂ: ಆರ್.ಸಿ.ಹಿರೇಮಠ
 ಕರ್ನಾಟಕ ವಿಸ್ವವಿದ್ಯಾಲಯ ಧಾರವಾಡ, 1973
 4. ಸಿ.ನಾಗಭೂಷಣ: ನುಡಿ ಪಸರ
   ಧಾತ್ರಿ ಪುಸ್ತಕ, ಬೆಂಗಳೂರು  2011
                                    ಡಾ.ಸಿ.ನಾಗಭೂಷಣ
                                      ಪ್ರಾಧ್ಯಾಪಕರು
                                  ಕನ್ನಡ ಅಧ್ಯಯನ ವಿಭಾಗ
                                  ಬೆಂ.ವಿ.ಸ್ನಾತಕೋತ್ತರ ಕೇಂದ್ರ
                                 ಮಂಗಸಂದ್ರ ಸಮೀಪ, ಮಾಲೂರು ರಸ್ತೆ
                                 ಬೆಗ್ಲಿ ಹೊಸಹಳ್ಳಿ ಅಂಚೆ, ಕೋಲಾರ ತಾ ಮತ್ತು ಜಿ. 563103

 ಬೆಂಗಳೂರಿನ ಡಾಎಸ್.ವಿದ್ಯಾಶಂಕರ ಪ್ರತಿಷ್ಠಾನವು ದಿನಾಂಕ: 10-12-2017 ರಂದು ಕನ್ನಡ ಸಾಹಿತ್ಯ ಪರಿಷ್ಮನ್ಮಂದಿರದಲ್ಲಿ ಆಯೋಜಿಸಿದ್ದ  ವಿದ್ಯಾರತ್ನ ಸಂಸ್ಮರಣ ಗ್ರಂಥ ಬಿಡುಗಡೆ ಮತ್ತು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಂಡಿಸಿದ್ದರ ಪ್ರಬಂಧದ ವಿಸ್ತೃತ ರೂಪ.


  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...