ಕರ್ನಲ್ ಕಾಲಿನ್ ಮೆಕೆಂಜಿ ದಾಖಲು ಸಾಹಿತ್ಯದ ಪಿತಾಮಹ
ಡಾ.ಸಿ.ನಾಗಭೂಷಣ
ಕನ್ನಡನಾಡಿನ ಚರಿತ್ರೆ ಮತ್ತು ಸಂಸ್ಕೃತಿಯ ಅಧ್ಯಯನದ ಇತಿಹಾಸದ ಅಭ್ಯುದಯದಲ್ಲಿ ಪಾಶ್ಚಿಮಾತ್ಯ ವಿದ್ವಾಂಸರ ಕೊಡುಗೆ ಗಮನಾರ್ಹವಾದುದಾಗಿದೆ. ಇವರು ರಾಜಕೀಯ, ಆರ್ಥಿಕ,ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಕ
ಕಾರ್ಯಕ್ಷೇತ್ರಗಳನ್ನು ಶ್ರೀಮಂತಗೊಳಿಸಿದರು. ಅಷ್ಟೇ ಅಲ್ಲ, ಆ ಮೂಲಕ ಮರೆಯಲಾಗದ ಕಾಣಿಕೆಯನ್ನು ನೀಡಿದರು. ಅದರಲ್ಲೂ ಬ್ರಿಟಿಷ್ ಅಧಿಕಾರಿಗಳ
ಕೊಡುಗೆಯು ಕಡಿಮೆ ಯೇನಲ್ಲ. ಅವರು
ಕನ್ನಡವನ್ನು ಕಲಿತಿದ್ದು ಆಡಳಿತ ನಡೆಸಲು
ಎಂಬುದು ನಿಜ. ಆದಾಗ್ಯೂ ಕೆಲವು ಅಧಿಕಾರಿಗಳು ತಮ್ಮ ಜ್ಞಾನತೃಷೆಯನ್ನು ನೀಗಿಸಿಕೊಳ್ಳುವ ಸಲುವಾಗಿ ಅಗತ್ಯಕ್ಕಿಂತ ಹೆಚ್ಚಾಗಿ ಕನ್ನಡ
ಅಧ್ಯಯನವನ್ನು ಕೈಗೊಂಡರು.
ತಾವು ಮನನ ಮಾಡಿದ ಹೊಸ ಅಂಶಗಳನ್ನು ಅಚ್ಚುಕಟ್ಟಾಗಿ ಶಾಸ್ತ್ರಬದ್ಧವಾಗಿ ಬರಹದಲ್ಲಿ ತಮ್ಮ ಮೂಡಿಸಿದರು. ಇನ್ನು ಕೆಲವು ಅಧಿಕಾರಿಗಳು ನಮ್ಮ ನಾಡಿನ ಪುರಾತನ ಅವಶೇಷಗಳು ಮತ್ತು
ದಾಖಲೆಗಳತ್ತ ತಮ್ಮ ಗಮನವನ್ನು ಹರಿಸಿದರು. ಅವುಗಳನ್ನು ಅವರು ವೈಜ್ಞಾನಿಕ
ರೀತಿಯಲ್ಲಿ ಅಭ್ಯಸಿಸಿ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಅನೇಕ ಅಲ್ಲಿಯವರೆಗೂ
ತಿಳಿಯದಿದ್ದ ಸಂಗತಿಗಳನ್ನು ಹೊರತಂದರು. ಅಂತಹ ಪಾಶ್ವಾತ್ಯ ವಿದ್ವಾಂಸರಲ್ಲಿ ಸರ್ ವಿಲಿಯಂ ಜೋನ್ಸ್, ಕಾಲಿನ್ ಕರ್ನಲ್ ಮೆಕೆಂಜಿ,
ಜೆ.ಎಫ್.ಪ್ಲೀಟ್, ಆರ್. ಎಫ್. ಕಿಟೆಲ್, ಬಿ.ಎಲ್. ರೈಸ್,
ಫ್ರಾನ್ಸಿಸ್ ಬುಕಾನನ್, ಅಬ್ಬೆದುಬಾಯ್, ಸರ್. ವಾಲ್ಟೇರ ಇಲಿಯಟ್,
ರಾಬರ್ಟ್ ಸೀವೆಲ್,
ಮುಂತಾದವರು ಪ್ರಮುಖರಾಗಿ ಕಂಡು ಬರುತ್ತಾರೆ. ಅವರ ಸೇವೆ
ಸ್ಮರಣೀಯವಾಗಿದೆ. ಕನ್ನಡ ನಾಡಿನ ಇತಿಹಾಸ ಮತ್ತು ಸಾಹಿತ್ಯದ ಅಭ್ಯುದಯಕ್ಕೆ ಅಪಾರ ಕೊಡುಗೆ ನೀಡಿದ ಪಾಶ್ಚಾತ್ಯ ವಿದ್ವಾಂಸರಲ್ಲಿ ಕರ್ನಲ್ ಮೆಕೆಂಜಿಯು
ಪ್ರಮುಖನಾಗಿ ಕಂಡು ಬರುತ್ತಾನೆ. ಚರಿತ್ರೆ ಮತ್ತು ಸಂಸ್ಕೃತಿಯ ಆಕರಗಳ ಸಮಗ್ರ
ಸಂಗ್ರಾಹಕ ಎಂಬ ಹಿರಿಮೆಗೆ ಪಾತ್ರನಾಗಿದ್ದಾನೆ. ಕರ್ನಲ್ ಕಾಲಿನ್ ಮೆಕೆಂಜಿ ಅಕಸ್ಮಾತ್ ತನ್ನ ಖಾಸಗಿ ಕೆಲಸಕ್ಕಾಗಿ
ಭಾರತಕ್ಕೆ ಬಂದು ನಂತರ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಮೋಜಣಿದಾರನಾಗಿ ತನ್ನ ಸರ್ಕಾರಿ ಕೆಲಸ
ಕಾರ್ಯಗಳ ಜೊತೆಗೆ ಇನ್ನು ತಾನು
ಸೇವೆ ಸಲ್ಲಿಸುತ್ತಿದ್ದ ಪ್ರದೇಶಗಳಲ್ಲಿನ ಸಮಾಜದ ಜನಜೀವನದ ಹಲವಾರು ಘಟನೆಗಳನ್ನು ಸಂಗ್ರಹಿಸಿ ಮಾಹಿತಿಗಳನ್ನು
ದಾಖಲಿಸಿ ಕೊಟ್ಟ ದಾಖಲೆಗಳು ನಂತರದ ಸಂಶೋಧಕರಿಗೆ
ಮಧ್ಯಕಾಲೀನ ಚರಿತ್ರೆ-ಸಂಸ್ಕೃತಿಯ ಅಧ್ಯಯನಕ್ಕೆ ಪ್ರಮುಖ
ಆಕರಗಳಾಗಿವೆ.
ಉತ್ತರ ಸ್ಕಾಟ್ಲೆಂಡ್‌ನ ಲೂಯಿಸ್ ದ್ವೀಪದಲ್ಲಿರುವ ಸ್ಟೋರ್ನೊವೆಯಲ್ಲಿ
ಕ್ರಿ.ಶ. 1754 ರಲ್ಲಿ ಮೆಕೆಂಜಿ
ಜನಿಸಿದ್ದು, ಈತನ ತಂದೆ ಮರ್ದೊಕ್, ತಾಯಿ ಬಾರ್ಬರಾ, ಮರ್ದೊಕ್ ಮೆಕೆಂಜಿ ಸ್ಟಾರ್ನವೇಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದನಂತೆ.
ಇವರ ಮೂರನೇ ಪುತ್ರನಾಗಿ ಮೆಕಂಜಿ ಕಾಲಿನ್ ಜನಿಸಿದನು ಇವನಿಗೆ ಮೇರಿ ಎಂಬ
ಅಕ್ಕ, ಅಲೆಕ್ಸಾಂಡರ್ ಎಂಬ ಅಣ್ಣ ಇದ್ದು ಕೆನೆಥ್ ಎಂಬ ತಮ್ಮ ಇದ್ದನು.
ಈತನ ಪ್ರಾರಂಭಿಕ ಶಿಕ್ಷಣದ ಬಗೆಗೆ ಹೆಚ್ಚಿನ ಮಾಹಿತಿ ದೊರೆಯುವುದಿಲ್ಲ.
ಮೆಕೆಂಜಿಗೆ ಗಣಿತವೆಂದರೆ
ಎಲ್ಲಿಲ್ಲದ ಆಸಕ್ತಿ. ಅದುವೇ ಆತನಿಗೆ ಭಾರತಕ್ಕೆ ಬರಲು ಪ್ರೇರಣೆ ನೀಡಿದ್ದು. ಹೆಸರಾಂತ ಗಣಿತಜ್ಞನಾದ ಅಲೆಕ್ಸಾಂಡರ್
ನೇಪಿಯರ್‌ನ ಬಗ್ಗೆ ಸ್ಕಾಟ್‌ಲೆಂಡಿನಲ್ಲಿ ಫ್ರಾನ್ಸಿಸ್ ಎಂಬುವರು
ಸಂಶೋಧನೆ ನಡೆಸುತ್ತಿದ್ದರು. ಗಣಿತ, ಖಗೋಳಶಾಸ್ತ್ರದ ತವರೂರು ಎಂದೇ
ಪ್ರಸಿದ್ಧಿಯಾಗಿದ್ದ ಭಾರತದಲ್ಲಿ ಗಣಿತಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿ ತರಲು
ಫ್ರಾನ್ಸಿಸ್‌ರ ಪ್ರಾಯೋಜಕತ್ವದ ಮೇರೆಗೆ ಕಾಲಿನ್ ಮೆಕೆಂಜಿ ಭಾರತಕ್ಕೆ ಕ್ರಿ.ಶ. 1783 ರಲ್ಲಿ
ಬಂದನು. ಭಾರತದಲ್ಲಿನ
ಲಘು ಗಣಿತ, ಖಗೋಳಶಾಸ್ತ್ರ
ಮತ್ತು ರೇಖಾಶಾಸ್ತ್ರಗಳು ಕುರಿತು ವಿವರ ಸಂಗ್ರಹಿಸಲು ಮದ್ರಾಸಿನ ಗವರ್ನರ್ ನ ಪತ್ನಿಯಾದ ನೇಪಿಯರ್‌ನ ಸಹೋದರಿಯ ಸಹಾಯ ಪಡೆದು ಕುಂಭಕೋಣಂ,ಚಿದಂಬರಂ, ಮಧುರೈ
ಮುಂತಾದೆಡೆ ಸುತ್ತಿ ಮಾಹಿತಿ ಸಂಗ್ರಹಿಸತೊಡಗಿದನು. ಆಗ ಅವನಿಗೆ ಭಾಷಾಸಮಸ್ಯೆ ಎದುರಾಯಿತು.
ಅದನ್ನು ಪರಿಹರಿಸುವ ದೃಷ್ಟಿಯಿಂದ ಆತ ಇಂಗ್ಲೀಷ್, ಸಂಸ್ಕೃತ, ತೆಲುಗು,ತಮಿಳು, ಕನ್ನಡ
ಭಾಷೆಗೆ ಪರಿಚಯವಿದ್ದ ನಿರರ್ಗಳವಾಗಿ ಮಾತನಾಡಬಲ್ಲ ದೇಸೀಯ ಪಂಡಿತರನ್ನು ಸಹಾಯಕ್ಕಾಗಿ
ನೇಮಿಸಿಕೊಂಡನು. ಆದರೆ ಮಾಹಿತಿ ಸಂಗ್ರಹದ ಕೆಲಸ ಆರಂಭಿಸಿದ ಕೆಲವೇ ತಿಂಗಳುಗಳಲ್ಲಿ ಇವನ
ಪ್ರಾಯೋಜಕತ್ವದ ಮಾಲೀಕನಾದ ಫ್ರಾನ್ಸಿಸ್ ಮರಣ ಹೊಂದಿದನು. ಇದರಿಂದ ಕಾಲಿನ್ ಮೆಕೆಂಜಿಗೆ ದಿಕ್ಕು
ತೋಚದಂತಾಗಿ ಅನಿವಾರ್ಯವಾಗಿ ಬೇರೊಂದು ಕೆಲಸವನ್ನು ಹುಡುಕಿ
ಕೊಳ್ಳ ಬೇಕಾಯಿತು. ಇದರಿಂದಾಗಿ ಅಪೂರ್ಣ ಗೊಂಡ ಕೆಲಸವನ್ನು ಮುಂದುವರಿಸಲಾರದ ಮೆಕಂಜಿಗೆ ಜೀವನೋಪಾಯಕ್ಕಾಗಿ
ಸ್ಕಾಟ್‌ಲೆಂಡಿಗೆ ಹಿಂತಿರುಗದೆ ಭಾರತದಲ್ಲಿಯೇ ಮದ್ರಾಸಿನಲ್ಲಿದ್ದ ಈಸ್ಟ್
ಇಂಡಿಯಾ ಕಂಪನಿಯ ಸೈನ್ಯಕ್ಕೆ ಸಂಬಂಧಿಸಿದ ಸಾರ್ವಜನಿಕ ಕಾಮಗಾರಿ ಇಲಾಖೆಯಲ್ಲಿ 'ಕೆಡೆಟ್ ಆಫ್
ಎಂಜಿನಿಯರ್' ಎಂಬ ಕೆಲಸಕ್ಕೆ ನೇಮಕವಾದನು. ಆ ಹುದ್ದೆಯಿಂದ ನಿಧಾನವಾಗಿ ತನ್ನ ಕೆಲಸದ ನಿಷ್ಠೆಯಿಂದ
ನಿಧಾನವಾಗಿ ಬಡ್ತಿ ಹೊಂದಿ ಫಸ್ಟ್ ಲೆಫ್ಟಿನೆಂಟ್ ಕ್ಯಾಪ್ಟನ್, ಮೇಜರ್, ಕರ್ನಲ್
ಹುದ್ದೆಯವರೆಗೂ ಕಾರ್ಯನಿರ್ವಹಿಸಿದನು. ಇದೇ ಸಂದರ್ಭದಲ್ಲಿ ಆತ ಸರ್ವೆ
(ಮೋಜಣಿದಾರ) ಯರ್
ಕಾರ್ಯವನ್ನೂ ಮಾಡಬೇಕಾಗಿತ್ತು. ಈ ಕೆಲಸ ಮಾಡುವಾಗ ಆತ ದೂರ ದೂರದ ಊರುಗಳಿಗೆ ಪ್ರಯಾಣ ಮಾಡುವ
ಅವಕಾಶ ಲಭ್ಯವಾಯಿತು. ಆಯಾ ಪ್ರದೇಶಗಳ ಸ್ಥಳೀಯ ಸಂಸ್ಕೃತಿಯ ಇತಿಹಾಸ ತಿಳಿವಳಿಕೆಯ
ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡು ಕುತೂಹಲಕ್ಕಾಗಿ ಆ ಸ್ಥಳಗಳ
ಬಗೆಗಿನ ಮಾಹಿತಿಗಳನ್ನು ಸಂಗ್ರಹಿಸತೊಡಗಿದನು. ಆ ಪ್ರದೇಶಗಳ
ಸಂಸ್ಕೃತಿ ಇತಿಹಾಸದ ಪರಿಚಯವಾಗಿ ಈ ಕುತೂಹಲ ಹೆಚ್ಚಾಗಿ ಇಲ್ಲಿನ ವಿಚಾರಗಳನ್ನು ತನ್ನ
ಸಹೋದ್ಯೋಗಿಗಳಿಗೆ ಅಲ್ಲದೆ ಇಂಗ್ಲೆಂಡಿಗೆ ಹಿಂತಿರುಗಿದ ನಂತರ ಪರಿಚಯಿಸಬೇಕೆಂಬ ಹಂಬಲವನ್ನು ಬೆಳೆಸಿಕೊಂಡ
ಬಗೆಗೆ 1809ರ ಫೆಬ್ರವರಿ 28ರಂದು ಬರೆದ ಪತ್ರವೊಂದರಲ್ಲಿ
ಸ್ಪಷ್ಟಪಡಿಸಿದ್ದಾನೆ.
"In a letter dated 28 February 1809 Mackenzie explained the purpose behind assembling his vast collections.
It would be my ambition to carry home with me body of materials that I conceive
may be very interesting to the public if properly brought forward and it is my
object now in remaining a few years longer in India to devote my chief
attention to it."(ಕಲ್ಪನುಡಿ ( ಸಂ.ಡಿ.ಎನ್. ಯೋಗೀಶ್ವರಪ್ಪ, ಪು,೧೩೫)
ಇನ್ನೊಂದು ಪತ್ರದಲ್ಲಿ ಆತ ಈ ದಾಖಲೆಗಳನ್ನುಪಯೋಗಿಸಿಕೊಂಡು
ಇಂಗ್ಲೆಂಡಿಗೆ ಹಿಂತಿರುಗಿದ ಮೇಲೆ ಪುಸ್ತಕ ಮತ್ತು ಲೇಖನಗಳನ್ನು ಬರೆಯುವ ಉದ್ದೇಶವಲ್ಲದೆ
ಸಂಶೋಧಕರಿಗೆ ಹಾಗೂ ತನ್ನ ಸಹೋದ್ಯೋಗಿಗಳಿಗೆ ಇವುಗಳನ್ನು ನೀಡುವ ಆಸೆಯನ್ನು ಇಟ್ಟುಕೊಂಡಿದ್ದನೆಂದು
ತಿಳಿಯುತ್ತದೆ. ಆದರೆ ಅವನ ಈ ಆಸೆ ಪೂರೈಸುವ ಮೊದಲೇ ಮರಣ
ಹೊಂದಿದ್ದು ದುರಾದೃಷ್ಟಕರ ಸಂಗತಿಯಾಗಿದೆ.
ಈಸ್ಟ್ ಇಂಡಿಯಾ ಕಂಪೆನಿಯ
ಅತ್ಯಂತ ವಿಶ್ವಾಸಕ ಮೋಜಣಿದಾರನಾಗಿದ್ದ ಮೆಕೆಂಜಿ ಕ್ರಿ.ಶ.1783 ರಿಂದ ಕ್ರಿ.ಶ.
1790 ದಿಂಡಿಗಲ್, ಕೊಯಮತ್ತೂರು, ಗುಂಟೂರು, ನೆಲ್ಲೂರ್
ಪ್ರಾಂತ್ಯಗಳಲ್ಲಿ ರವರೆಗೆ ಸೈನ್ಯ ಖಾತೆಯ ಕೆಲಸ ಮಾಡಿ ಅಪಾರ ಮನ್ನಣೆ ಪಡೆದನು. ಟಿಪ್ಪು ಸುಲ್ತಾನನ ವಿರುದ್ಧ ನಡೆದ ಮೂರನೇ ಮೈಸೂರು ಯುದ್ಧದಲ್ಲಿ (ಕ್ರಿ.ಶ. 1790-92)
ಭಾಗವಹಿಸಿದುದೇ ಅಲಲ್ಲೆ ಬ್ರಿಟೀಷರ ವಿಜಯಕ್ಕೆ ಕಾರಣಕರ್ತನಾಗಿ ಒಪ್ಪಂದದ ಅನೇಕ ಅಂಶಗಳಿಗೆ ಸಲಹೆ
ನೀಡಿದನು. ಅನಂತರ ಈತನನ್ನು 1793ರಲ್ಲಿ ಹೈದರಾಬಾದಿನ ನಿಜಾಮನಿಂದ ಈಸ್ಟ್ ಇಂಡಿಯಾ ಕಂಪೆನಿಗೆ
ಬಂದಿದ್ದ ಭೂ ಪ್ರದೇಶವನ್ನು ಅಳೆಯುವ ಕೆಲಸಕ್ಕೆ ನೇಮಕ ಮಾಡಲಾಯಿತು. ಈ
ಕೆಲಸ ಆತನ ಬದುಕಿಗೆ ತಿರುವನ್ನು ನೀಡಿತು. ನಗರ ಪ್ರದೇಶಗಳಿಗೆ ಸೀಮಿತವಾಗಿದ್ದು ಯುದ್ಧ
ಭೂಮಿಯಲ್ಲಿ ಬದುಕನ್ನು ನಡೆಸುತ್ತಿದ್ದ ಮೆಕೆಂಜಿಗೆ ಭೂಪ್ರದೇಶಗಳನ್ನು ಅಳೆಯುವ ಕೆಲಸದಿಂದ ಆತನಿಗೆ
ನಿಜವಾದ ಭಾರತ ಮತ್ತು ಅದರ ಇತಿಹಾಸ ಹಾಗೂ ಸಂಸ್ಕೃತಿಯನ್ನು ನೋಡುವ ಅವಕಾಶ ಸಿಕ್ಕಿತು. ಈ ಕೆಲಸದ ಜೊತೆಗೆ ಆತ ಸ್ಥಳೀಯ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಘಟನೆಗಳನ್ನು
ಸಂಗ್ರಹಿಸುವ ಮತ್ತು ದಾಖಲಿಸುವ ಕೆಲಸವನ್ನು ಮಾಡತೊಡಗಿದ. ಹಗಲು
ವೇಳೆಯಲ್ಲಿ ಸರ್ಕಾರಿ ಕೆಲಸ ಮಾಡಿದ ನಂತರ ರಾತ್ರಿ ವೇಳೆ ತನ್ನ ಡೇರೆಯಲ್ಲಿ ತಾನು ಹಗಲಿನಲ್ಲಿ
ಸಂಗ್ರಹಿಸಿದ್ದ ಮಾಹಿತಿಗಳನ್ನು ಓದಿ ಒಪ್ಪವಾಗಿಡುವ ಕೆಲಸವನ್ನು ಮಾಡುವಂತಾಯಿತು. ಹೀಗೆ ಸ್ವಾಮಿ ಕಾರ್ಯದ ಜೊತೆಗೆ ಸ್ವಕಾರ್ಯವನ್ನು ಮಾಡುತ್ತಿದ್ದ ಮೆಕೆಂಜಿಗೆ ಈಸ್ಟ್
ಇಂಡಿಯಾ ಕಂಪನಿಯು ಕ್ರಿ.ಶ 1796ರಲ್ಲಿ ಆತನನ್ನು ಭೂ ಪರಿವೀಕ್ಷಣೆ ಮಾಡಿ ವರದಿ ನೀಡಲು
ಶ್ರೀಲಂಕಾಕ್ಕೆ ಕಳುಹಿಸಿತು. ಆತ ಅಲ್ಲಿ ಎರಡು ವರ್ಷಗಳಕಾಲ ನೆಲೆಸಿದ್ದು ಅಲ್ಲಿನ ಪ್ರದೇಶಗಳ
ಮಾಹಿತಿ ಸಂಗ್ರಹಿಸಿ ವರದಿಯನ್ನು ಸಿದ್ಧಪಡಿಸಿ ಕ್ರಿ.ಶ. 1798 ರಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ
ಸಲ್ಲಿಸಿದನು. ಹೀಗೆ ಶ್ರೀಲಂಕಾ ಪ್ರವಾಸ ಅಂತ್ಯಗೊಂಡ ನಂತರ ಆತನನ್ನು ಪುನಃ
ಸೈನ್ಯಖಾತೆಯ ಕೆಲಸಕ್ಕೆ ನಿಯೋಜಿಸಲಾಯಿತು. ಕ್ರಿ.ಶ. 1799ರಲ್ಲಿ ಬ್ರಿಟೀಷರು ಟಿಪ್ಪೂವಿನ ವಿರುದ್ಧ ನಡೆಸಿದ ನಾಲ್ಕನೇ ಮೈಸೂರು ಯುದ್ಧದಲ್ಲಿ ಭಾಗಿಯಾಗಿದ್ದನು. ಟಿಪ್ಪು
ಹತ್ಯೆಯಾದನಂತರ ಬ್ರಿಟೀಷರು ಆ ರಾಜ್ಯವನ್ನು ನಾಲ್ಕು ಭಾಗಗಳಾಗಿ ಮಾಡಿ
ಹೈದರಾಬಾದಿನ ನಿಜಾಮ, ಮರಾಠರಿಗೆ ಒಂದೊಂದು
ಭಾಗ ನೀಡಿ ಉಳಿದೆರಡು ಭಾಗದಲ್ಲಿ ಒಂದನ್ನು ತಾವಿಟ್ಟುಕೊಂಡು ಉಳಿದ ಒಂದು ಭಾಗವನ್ನು ಮೈಸೂರು
ಮಹಾರಾಜರಿಗೆ ನೀಡಿ ಆ ಸಂಸ್ಥಾನಕ್ಕೆ ತಮ್ಮ ಕಣ್ಗಾವಲಿನಲ್ಲಿ ಆಡಳಿತ
ನಡೆಸಬೇಕೆಂಬ ಷರತ್ತಿನ ಮೇರೆಗೆ ರೆಸಿಡೆಂಟನನ್ನು ನೇಮಕ ಮಾಡಿದರು. ಈ ಸಂದರ್ಭದಲ್ಲಿ ಮೈಸೂರು
ಸಂಸ್ಥಾನಕ್ಕೆ ಸೇರಿದ ಭೂ ಪ್ರದೇಶಗಳನ್ನು ಅಳೆಯುವ ಕೆಲಸ ಮಾಡಲು ಮೆಕಂಜಿಯನ್ನು ನೇಮಕ ಮಾಡಲಾಯಿತು.
ಬ್ರಿಟೀಷರು ಕ್ರಿ.ಶ. 1799 ರಲ್ಲಿ ಶತ್ರುಗಳಿಂದ ವಶಪಡಿಸಿಕೊಂಡಿದ್ದ ಭೂ
ಪ್ರದೇಶಗಳ ಸರ್ವೆಮಾಡುವ ಕೆಲಸ ಆರಂಭಿಸಿದ ಮೆಕೆಂಜಿ ಸು. 11 ವರ್ಷಗಳ ಕಾಲ ಅಂದರೆ ಕ್ರಿ.ಶ.
1810ರವರೆಗೆ ಈ ಕೆಲಸದಲ್ಲಿ ನಿರತನಾಗಿದ್ದು ನಕ್ಷೆಗಳನ್ನು, ರೇಖಾಚಿತ್ರಗಳನ್ನು
ಬಿಡಿಸುವುದರ ಜೊತೆಗೆ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ಸಂಗ್ರಹಿಸಿ ದಕ್ಷಿಣ ಭಾರತದ ನಕ್ಷೆಯನ್ನು ರಚಿಸಿದನು. ದಕ್ಷಿಣ ಭಾರತದ ಶಾಸನ,
ಹಸ್ತಪ್ರತಿ ಹಾಗೂ ಪುರಾತನ ವಸ್ತುಗಳನ್ನು ಜೊತೆಗೆ
ಐತಿಹ್ಯ ಸ್ಥಳಪುರಾಣ ಮೊದಲಾದವುಗಳನ್ನು ಕಲೆಹಾಕಿದ್ದನು. ಅಲ್ಲದೆ ಪರಿವೀಕ್ಷಣೆಯ
ಕೆಲಸದ ಸಂದರ್ಭದಲ್ಲಿ ತಾನು ಕಂಡದ್ದನ್ನು ಮತ್ತು ಜನರ ಬಾಯಿಯಿಂದ ಕೇಳಿದ್ದನ್ನು ದಿನಚರಿಯಲ್ಲಿ
ವಿವರವಾಗಿ ಬರೆದುಕೊಳ್ಳುತ್ತಿದ್ದನು. ಇದು ಅವನ ಕಚೇರಿಯ ಕಾರ್ಯವೇನೂ ಆಗಿರಲಿಲ್ಲ, ಆರಂಭದಲ್ಲಿ ಕಂಪೆನಿ
ಸರಕಾರದಿಂದ ಅದಕ್ಕೆ ಪ್ರೋತ್ಸಾಹವೂ ಇರಲಿಲ್ಲ. ಮೇಲಾಗಿ ಅವನ ಸರ್ವೆಕೆಲಸವೇ ಅವನ ದಿನಚರಿಯ ಬಹು
ಪಾಲನ್ನು ಪಡೆಯುತ್ತಿದ್ದಿತು. ಇಂಥ ಸ್ಥಿತಿಯಲ್ಲಿ ತನಗೆ ಪೂರ್ವಪರಿಚಯ ಎಳ್ಳಷ್ಟೂ ಇರದ ಜನರೊಡನೆ
ಬೆರೆತು ನಾನಾ ವಿಷಯಕವಾದ ಸಾಮಗ್ರಿಯನ್ನು ಕಲೆಹಾಕಿದುದು ಅವನ ಜ್ಞಾನದಾಹಕ್ಕೆ ನಿದರ್ಶನವಾಗಿದೆ. ಈತನ ಸಂಗ್ರಹಗಳು ಕನ್ನಡವನ್ನು ಒಳಗೊಂಡಂತೆ ಬೇರೆ ಬೇರೆ
ಭಾಷೆಗಳಿಗೆ ಸಂಬಂಧಿಸಿದ ಬಹುದೊಡ್ಡ ಇತಿಹಾಸದ ನಿಧಿಯಾಗಿದೆ. ಒಮ್ಮೆಯೂ ಸ್ವದೇಶಕ್ಕೆ ಹೋಗದೆ ಅವನು ೩೪ ವರ್ಷಗಳ ದೀರ್ಘಾವಧಿಯನ್ನು
ಇದಕ್ಕಾಗಿ ಮೀಸಲಿರಿಸಿದನು. ಅವನ ಕೆಲಸಕ್ಕಾಗಿ ದೇಶೀಯ ಪಂಡಿತರ ಒಂದು ಕಛೇರಿಯೇ
ಸ್ಥಾಪಿತವಾಗಿದ್ದಿತು.
ಈತ ಮಾಡಿದ ದಕ್ಷಿಣ ಭಾರತದ ಸರ್ವೆಯು ಅವನ ಜೀವನದಲ್ಲಿ ಮಾಡಿದ
ಎಲ್ಲ ಸರ್ವೆಗಳಿಗಿಂತಲೂ ಅತ್ಯಂತ ದೊಡ್ಡ ಸರ್ವೆಯಾಗಿದೆ. ಇದರಿಂದ ಈಸ್ಟ್ ಇಂಡಿಯಾ ಕಂಪನಿಗೆ
ಸಂತೋಷವಾಗಿ ಆತನಿಗೆ ಕ್ರಿ.ಶ. 1810ರಲ್ಲಿ ಬಡ್ತಿ ನೀಡಿ ಮದ್ರಾಸ್ ಪ್ರಾಂತ್ಯದ ಸರ್ವೆಯರ ಜನರಲ್
ಹುದ್ದೆಯನ್ನು ನೀಡಿತು. ಹೀಗೆ ಈ ಹೊಸ ಹುದ್ದೆಯನ್ನು ಅಲಂಕರಿಸಿದ ಮೆಕೆಂಜಿಯ ಕ್ರಿ.ಶ. 1811
ರಲ್ಲಿ ಜಾವಾದ್ವೀಪಕ್ಕೆ ಪ್ರಯಾಣ ಬೆಳೆಸಿದನು. ಅಲ್ಲಿ ಬ್ರಿಟೀಷರು ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಕ್ರಿ.ಶ. 1815ರಲ್ಲಿ ಮದ್ರಾಸಿಗೆ ಹಿಂತಿರುಗಿದನು. ಈ ಸಮಯಕ್ಕೆ
ಆತನಿಗೆ ಇನ್ನೊಂದು ಬಡ್ತಿ ಸಿಗುವ ಅವಕಾಶ ಒದಗಿತು. ಈತನ ಎಲ್ಲಾ ಕೆಲಸಗಳನ್ನು ಸೂಕ್ಷ್ಮವಾಗಿ
ಗ್ರಹಿಸಿದ್ದ ಈಸ್ಟ್ ಇಂಡಿಯಾ ಕಂಪನಿ ಆತನನ್ನು ಕ್ರಿ.ಶ. 1815ರಲ್ಲಿ ಭಾರತದ ಸರ್ವೆಯರ್
ಜನರಲ್ ಆಗಿ ನೇಮಕ ಮಾಡಿತು. ಇದು ಅವರು ಹೊಸದಾಗಿ ಸೃಷ್ಟಿಸಿದ ಹುದ್ದೆಯಾಗಿತ್ತು.
ಬ್ರಿಟೀಷ್ ಭಾರತದ ಪ್ರಥಮ
ಸರ್ವೆಯರ್ ಜನರಲ್ ಆದ ಮೆಕೆಂಜಿಯು ಕ್ರಿ.ಶ. 1817ರಲ್ಲಿ ಮದ್ರಾಸ್ ಬಿಟ್ಟು
ಕಲ್ಕತ್ತಾಕ್ಕೆ ಹೋಗಬೇಕಾಯಿತು. ಈ ಸಂದರ್ಭದಲ್ಲಿ ತಾನು ದಕ್ಷಿಣ ಭಾರತದಲ್ಲಿ
ಸಂಗ್ರಹಿಸಿಟ್ಟುಕೊಂಡಿದ್ದ ಎಲ್ಲ ವಸ್ತುಗಳೊಂದಿಗೆ ಕಲ್ಕತ್ತಾಕ್ಕೆ ಹೋದನು. ಸರ್ಕಾರವು ಒದಗಿಸಿದ ಸೋಫಿಯಾ ಎಂಬ ವಿಶೇಷ ಹಡಗಿನಲ್ಲಿ ಅವನು ತಮ್ಮ ಅಪಾರ ಸಂಗ್ರಹಗಳೊಂದಿಗೆ ಕಲ್ಕತ್ತಾಗೆ ತೆರಳಿದರು. ಆತನು ಕವಲಿ ಲಕ್ಷ್ಮಯ್ಯನನ್ನೂ ಜೊತೆಯಲ್ಲಿ ಕರೆದೊಯ್ದ. ಮೆಕೆಂಜಿ
ತನ್ನ ಉಯಿಲಿನಲ್ಲಿ ಆಸ್ತಿಯ ಹತ್ತನೆಯ ಒಂದು ಭಾಗವನ್ನು ಕವಲಿ ಲಕ್ಷ್ಮಯ್ಯ ಮತ್ತು ಅವನ ತಮ್ಮ ಕವಲಿ ರಾಮಸ್ವಾಮಿಗೆ ಕೊಡಲು ಬರೆದಿದ್ದನು. ಆತನಿಗೆ ಈ ಎಲ್ಲ ವಸ್ತುಗಳನ್ನು ತನ್ನ ಊರಿಗೆ ಕೊಂಡೊಯ್ಯಬೇಕೆಂಬ
ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕ್ರಿ.ಶ. 1816 ರಿಂದ ಕಲ್ಕತ್ತಾದಲ್ಲಿ ನೆಲೆಸಿದ್ದ
ಆತನು ಆ ಭಾಗದಲ್ಲಿ ತನ್ನ ಕೆಲಸವನ್ನು ಮುಂದುವರಿಸಿದನು. ಆದರೆ ಕ್ರಿ.ಶ. 1821 ಮೇ ತಿಂಗಳ 8ನೇ
ತಾರೀಖಿನಂದು ಬಂಗಾಳಕೊಲ್ಲಿ ತೀರದ ಹೂಗ್ಲಿ ನದಿಯಲ್ಲಿ ದೋಣಿಯಲ್ಲಿ ಸಂಚರಿಸುತ್ತಿದ್ದಾಗ ಬಿರುಗಾಳಿಯ
ಹೊಡೆತಕ್ಕೆ ದೋಣಿ ಮಗುಚಿ ಸಹಾಯ ಮಾಡುವವರು ಯಾರೂ ಇಲ್ಲದಿದ್ದುದರಿಂದ ಚೇತರಿಸಿಕೊಳ್ಳಲು
ಸಾಧ್ಯವಾಗದೆ ಮರಣ ಹೊಂದಿದನು. ಮೆಕೆಂಜಿ ತನ್ನ ಕರ್ಮಭೂಮಿಯಾದ ಭಾರತಲ್ಲೇ ೧೮೨೧ ರಲ್ಲಿ ಕೊನೆಯುಸಿರು ಎಳೆದ. ಕಲ್ಕತ್ತಾದಲ್ಲಿನ
ಸೌತ್‌ಪಾರ್ಕ ರಸ್ತೆಯ ಸ್ಮಶಾನದಲ್ಲಿ ಅವನ ಸಮಾಧಿ ಮಾಡಲಾಯಿತು. ಅವನ ಪ್ರಾಚ್ಯವಸ್ತುಗಳ ಸಂಗ್ರಹವು ಮಡದಿ ಪೆಟ್ರೋನಿಲಾಳ ವಶಕ್ಕೆ ಬಂದಿತು.
ಈ ದಾಖಲೆಗಳನ್ನು ಪೆಟ್ರೋನಿಲಾಳಿಂದ 10 ಸಾವಿರ
ಪೌಂಡ್‌ಗಳಿಗೆ ಖರೀದಿಸಿದ ಈಸ್ಟ್ ಇಂಡಿಯಾ ಕಂಪನಿ ಕ್ರಿ.ಶ. 1823ಮತ್ತು ಕ್ರಿ.ಶ.
1825 ರಲ್ಲಿ ಬಹುಮುಖ್ಯವಾದವುಗಳನ್ನು ಇಂಗ್ಲೆಂಡಿಗೆ ಕಳುಹಿಸಿತು. ಅವನ ಸಂಗ್ರಹದ ಹೆಚ್ಚಿನ ದಾಖಲೆಗಳು, ಹಸ್ತಪ್ರತಿಗಳು, ಕಲಾಕೃತಿಗಳು, ನಾಣ್ಯಗಳಿಂದ ಹಿಡಿದು ಸ್ಮಾರಕ ಶಿಲ್ಪಗಳವರೆಗೆ ಅವರು ಸಂಗ್ರಹಿಸಿದ ಪ್ರಾಚೀನ ವಸ್ತುಗಳು
ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂ, ವಿಕ್ಟೋರಿಯಾ ಮತ್ತು ಆಲ್ಬರ್ಟ್
ಮ್ಯೂಸಿಯಂನಲ್ಲಿವೆ. ದಕ್ಷಿಣ ಭಾರತಕ್ಕೆ ಸಂಬಂಧಿಸಿದ ದಾಖಲೆಗಳು ಇಂಗ್ಲೀಷ್ ಭಾಷೆಗೆ
ಅನುವಾದಗೊಂಡು ಇಂಡಿಯಾ ಆಫೀಸ್‌ನ ಲೈಬ್ರರಿಯಲ್ಲಿವೆ. ಅವು ಮೆಕೆಂಜಿ ಸಂಗ್ರಹ ಭಾಗ-೨ ರಲ್ಲಿ ಪ್ರಕಟಗೊಂಡಿವೆ ಎಂದು
ಶ್ರೀನಿವಾಸ ಹಾವನೂರ ಅವರು ತಿಳಿಸಿದ್ದಾರೆ. ಮೆಕೆಂಜಿ ಅವರ ಮರಣದ ನಂತರ, ಲಕ್ಷ್ಮಯ್ಯ ಕಲ್ಕತ್ತಾದಲ್ಲಿ ಎರಡು
ವರ್ಷಗಳ ಕಾಲ ಮೆಕೆಂಜಿ ಸಂಗ್ರಹಗಳನ್ನು ಪಟ್ಟಿಮಾಡುವಲ್ಲಿ ಪಶ್ಚಿಮ
ಬಂಗಾಳದ ಏಶಿಯಾಟಿಕ್ ಸೊಸೈಟಿಯ ಸೆಕ್ರೆಟರಿಯಾಗಿದ್ದ ಎಚ್.
ಎಚ್. ವಿಲ್ಸನ್‌ಗೆ ಸಹಾಯ ಮಾಡಿದುದಾಗಿ ತಿಳಿದು ಬರುತ್ತದೆ.
ಉಳಿದ ಕೆಲವು ದಾಖಲೆಗಳನ್ನು
ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ರಕ್ಷಿಸಿಡಲಾಯಿತು. ಕ್ರಿ.ಶ. 1837
ರವರೆಗೂ ವಿಲಿಯಂ ಟೇಲರ್ ಎಂಬುವನು ಇದರ ವ್ಯವಸ್ಥೆ ನೋಡಿಕೊಂಡಿದ್ದರು. ಆನಂತರ ಕ್ರಿ.ಶ.1847ರವರೆಗೆ ಪುನಃ ಇದು ನಿರ್ಲಕ್ಷ್ಯಕ್ಕೆ ಗುರಿಯಾದಾಗ
ಸಿ.ಪಿ. ಬ್ರೌನ್ ಎಂಬುವನು ಸಂರಕ್ಷಣೆಯ ಹೊಣೆ ಹೊತ್ತು ಅದನ್ನು ಸರಿಯಾಗಿ ನಿರ್ವಹಿಸಿದನು. ಕೆಲವೊಂದು
ದಾಖಲೆಗಳ ನಕಲು ಪ್ರತಿ ಮಾಡಿಸಿದನು. ಕ್ರಿ.ಶ.1858ರಲ್ಲಿ
ಮದ್ರಾಸ್ ಓರಿಯಂಟಲ್ ಹಸ್ತಪ್ರತಿ ಲೈಬ್ರರಿ ಹೆಸರಿನಲ್ಲಿ ಈ
ಸಂಗ್ರಹವನ್ನು ಪ್ರೆಸಿಡೆನ್ಸಿ ಕಾಲೇಜಿನ ಸಂಸ್ಕೃತ ವಿಭಾಗದ ವಶಕ್ಕೆ ಒಪ್ಪಿಸಲಾಯಿತು. ಸ್ವಲ್ಪಭಾಗ ಚೆನ್ನೈನ ಸರ್ಕಾರಿ ಓರಿಯಂಟಲ್ ಹಸ್ತಪ್ರತಿ ಲೈಬ್ರರಿಯಲ್ಲೂ ಇವೆ.
ರಾಜ್ಯ ಪುನರ್‌ವಿಂಗಡಣೆ ನಂತರ ಅವುಗಳನ್ನು ಮೈಸೂರಿನ ಕನ್ನಡ ಅಧ್ಯಯನ
ಸಂಸ್ಥೆಗೆ ವರ್ಗಾಯಿಸಲಾಗಿದೆ. ರಾಜ್ಯ ಪುರಾತತ್ವ ಇಲಾಖೆ , ಧಾರವಾಡದ ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಅವುಗಳ ಪ್ರತಿಗಳು ಇವೆ. ಹೀಗೆ ಅಂದಿನಿಂದ ಇಲ್ಲಿಯವರೆಗೂ ಮೆಕೆಂಜಿಯು ಸಂಗ್ರಹಿಸಿದ್ದ ಕನ್ನಡ ಭಾಷೆಗೆ ಸಂಬಂಧಿಸಿದ ದಾಖಲು ಸಾಹಿತ್ಯದ ನಿಧಿ ವ್ಯವಸ್ಥಿತ ರೀತಿಯಲ್ಲಿ
ಸಾಗಿಬಂದಿದೆ.
ಮೆಕೆಂಜಿಗೆ
ದಾಖಲು ಸಾಹಿತ್ಯದ ಸಂಗ್ರಹದಲ್ಲಿ ಸಹಾಯ ಮಾಡಿದ ದೇಶೀಯ ಪಂಡಿತರು: ದಕ್ಷಿಣಭಾರತದಲ್ಲಿ
ಗಣಿತಶಾಸ್ತ್ರಕ್ಕೆ ಹೆಸರಾದ ಕುಂಭಕೋಣಂ, ಚಿದಂಬರಂ, ಮಧುರೈ ಮೊದಲಾದ ಸ್ಥಳಗಳಲ್ಲಿ ಮಾಹಿತಿ ಸಂಗ್ರಹಕ್ಕಾಗಿ ಹೊರಟಾಗ ಅವನಿಗೆ ಭಾಷಾಸಂಪರ್ಕ
ಸಮಸ್ಯೆ ಎದುರಾಯಿತು. ಅಲ್ಲಿಯ ವಿದ್ವಾಂಸರಿಗೆ ಇಂಗ್ಲಿಷ್ ಭಾಷೆ ತಿಳಿಯದು. ಮೆಕೆಂಜಿಗೆ ಸ್ಥಳೀಯ ಭಾಷೆ
ಬಾರದು. ಆಗ ಅವನಿಗೆ ಭಾಷಾಂತರಕಾರರ ಅಗತ್ಯಬಿದ್ದಿತು. ಆತ ಸ್ಥಳೀಯ ವಿದ್ವಾಂಸರನ್ನು ಸಂಪರ್ಕಿಸಿದ. ಆಗ
ನೇಮಕವಾದವನೇ ಕಾವಲಿ ವೆಂಕಟ ಬೋರಯ್ಯ. ಮೆಕೆಂಜಿಯ ಸಹಾಯಕರಲ್ಲಿ ಕವಲ್ಲಿ ವೆಂಕಟಬೋರೈಯ್ಯನ ಹೆಸರು ಎದ್ದು ಕಾಣುವಂತಹದು, ಅವನಿಗೆ
ಇಂಗ್ಲಿಷ್, ಸಂಸ್ಕೃತ ಮತ್ತು ಸ್ಥಳೀಯ ಭಾಷೆಗಳಾದ ತೆಲುಗು, ಕನ್ನಡ ಭಾಷೆಗಳ ಪರಿಚಯ ಚೆನ್ನಾಗಿಯೇ ಇತ್ತು. ಅರವೇಲು ನಿಯೋಗಿ ಬ್ರಾಹ್ಮಣ ಮನೆತನಕ್ಕೆ ಸೇರಿದ ಕವಲ್ಲಿ ಬಂಧುಗಳಲ್ಲೆಲ್ಲ ಹೆಚ್ಚು
ಬುದ್ಧಿವಂತನಾಗಿದ್ದನು. ತನ್ನ ೧೮ನೆಯ ವಯಸ್ಸಿನಲ್ಲಿಯೇ ಮೆಕೆಂಜಿಯ ಕಡೆಗೆ ಬಂದಿದ್ದ ಇವನು ದೇಶಿ ಭಾಷೆಗಳಲ್ಲಿ ಪರಿಣತಿ ಹೊಂದಿದ್ದನು. ಜ್ಯೋತಿಶಾಸ್ತ್ರವನ್ನೂ, ಪಾಶ್ಚಾತ್ಯ
ವಿಜ್ಞಾನಗಳನ್ನೂ ಮೆಕೆಂಜಿಯ ನೇತೃತ್ವದಲ್ಲಿ ಕಲಿತವನಾಗಿ ಅವನ ಪ್ರಮುಖ ಸಹಾಯಕನಾದನು. ಅವನ ಸಹಾಯದಿಂದ ಮಾಹಿತಿ ಸಂಗ್ರಹದ ಕೆಲಸ ಸುಗಮವಾಯಿತು.
ಅವರಿಬ್ಬರ ಈ ಸಂಬಂಧ ಮುಂದೆ ಬಹು ವರ್ಷದವರೆಗೆ ಮುಂದುವರಿಯಿತು. ಶ್ರೀರಂಗಪಟ್ಟಣದ ಮುತ್ತಿಗೆಯ ಕಾಲಕ್ಕೆ
ಬ್ರಿಟೀಶರ ಜೊತೆಗೆ ಇದ್ದುಕೊಂಡು ಆ ಘಟನೆಯನ್ನೂ ಮೈಸೂರರಸರ ಚರಿತ್ರೆಯನ್ನೂ
ತೆಲುಗಿನಲ್ಲಿ ಕವಿತಾರೂಪವಾಗಿ ರಚಿಸಿದ್ದಾನೆ (ಶ್ರೀರಂಗರಾಜ ಚರಿತ). ಮೆಕೆಂಜಿಯ ಮೈಸೂರ ಸಂಚಾರದ ಕಾಲದಲ್ಲಿ ಕನ್ನಡ ದಾಖಲೆಗಳನ್ನು ಓದುವುದಕ್ಕೆ ಯಾರೂ ಇರದಿದ್ದಾಗ ಬೋರಯ್ಯನೇ ಆ ಕೆಲಸವನ್ನು ಕೈಕೊಂಡನು. ತನ್ನ ಒಡೆಯನೊಡನೆ ಚಿತ್ರದುರ್ಗ, ಬೆಂಗಳೂರು, ಮುಂತಾದ ಸ್ಥಳಗಳಲ್ಲಿ ಗಳಲ್ಲಿ
ಸಂಚರಿಸಿದನು. ಮಾತಿನಲ್ಲಿ ಚತುರನಾಗಿದ್ದರಿಂದ ಹಳೆಯ ನಾಣ್ಯ ಮತ್ತು ಪ್ರಾಚೀನ ಕನ್ನಡ ಹಸ್ತಪ್ರತಿಗಳನ್ನು ಹೊರತೆಗೆಸುವಲ್ಲಿ ಅವನು ಪಳಗಿದ್ದನು. ಮೈಸೂರಿನಲ್ಲಿ ಹೀಗೆ ಕಾರ್ಯ ಪ್ರವೃತ್ತವಾಗಿದ್ದ ಮಧ್ಯದಲ್ಲಿಯೆ (ಕ್ರಿ.ಶ.೧೮೧೩) ಬೋರಯ್ಯನು ತೀರಿಕೊಂಡನು. ಭಾರತದಲ್ಲಿ ಈತನು ಮಾಡಿದ 38 ವರ್ಷಗಳ
ಸೇವೆಯ ಅವಧಿಯಲ್ಲಿ ಈತ ಸೈನ್ಯ ಕೆಲಸದ ಜೊತೆಗೆ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದ
ಕ್ಷೇತ್ರಕಾರ್ಯವನ್ನು ಮಾಡುತ್ತಾ ಬಂದಿದ್ದು ಮಹತ್ತರತೆಯನ್ನು ಪಡೆದಿದೆ. ಕ್ರಿ.ಶ.1803
ರಲ್ಲಿ ಬೋರಯ್ಯನ ಅಕಾಲಿಕ ಮರಣದ ನಂತರ, ಆತನ ತಮ್ಮ ಲಕ್ಷ್ಮಯ್ಯ, ಮತ್ತು
ಪುಲಿಗಡ್ಡ ಮಲ್ಲಯ್ಯ ಎಂಬ ಸ್ಥಳೀಯ ಭಾಷಾ ಬಲ್ಲಿದರನ್ನು ತನ್ನ
ಸಹಾಯಕ್ಕೆ ನೇಮಕ ಮಾಡಿಕೊಂಡು ಅವರಿಗೆ ತಾನೇ ತನ್ನ ಸ್ವಂತ ಕೈಯಿಂದ ಸಂಬಳವನ್ನು
ನೀಡಿದ್ದನು. ಇವರ
ಸಹಾಯದಿಂದ ತಾನು ಸಂಗ್ರಹಿಸಿದ್ದ ದಾಖಲೆಗಳನ್ನು ಅರ್ಥ ಮಾಡಿಕೊಂಡು ಅದನ್ನು ಒಪ್ಪವಾಗಿ ತನ್ನ
ಮನೆಯಲ್ಲಿ ಜೋಡಿಸಿ
ಕೊಂಡಿದ್ದನು. ಅವರೊಂದಿಗೆ ದೀರ್ಘಕಾಲದ ಮತ್ತು ನಿರಂತರ
ಒಡನಾಟವಿತ್ತು. ಹಳೆಗನ್ನಡವನ್ನು ಓದುವಲ್ಲಿ ಪರಿಣಿತನಾಗಿದ್ದ ಮೆಲೂರ್
ಧರ್ಮಯ್ಯನು ಮತ್ತೊಬ್ಬ ಮೆಕೆಂಜಿಯ ಪ್ರಸಿದ್ಧ ಸಹಾಯಕನಾಗಿದ್ದನು. ಮೆಕೆಂಜಿಯು ದೇಶೀಯ ವಿದ್ವಾಂಸರ ಸಹಾಯದಿಂದ ಸಾವಿರಾರು
ಹಸ್ತಪ್ರತಿ, ಶಾಸನಗಳು,
ಪ್ರಾಚ್ಯವಸ್ತು, ಕೈಫಿಯತ್ತು, ಬಖೈರು, ರಾಜವಂಶಾವಳಿ
ಮುಂತಾದವುಗಳನ್ನು ಸಂಗ್ರಹಿಸಲು ಸಾಧ್ಯವಾಯಿತು.
ಕರ್ನಲ್ ಮೆಕೆಂಜಿಯ
ಕನ್ನಡ ನಾಡನ್ನು ಒಳಗೊಂಡ ಹಾಗೆ ಭಾರತದ ಇತಿಹಾಸ ಸಂಸ್ಕೃತಿ ಸಾಹಿತ್ಯಕ್ಕೆ ಸಂಬಂಧಿಸಿದ ಆಕರಗಳ ಮಹತ್ತರವಾದ ಕೆಲಸವನ್ನು ಮೂರು ರೀತಿಯಲ್ಲಿ ವರ್ಗೀಕರಿಸಿದ್ದು,
ಕೊನೆಯಲ್ಲಿ ಸಂಗ್ರಹಿಸಿದ ದಾಖಲೆಗಳ ಕುರಿತ ಅಧ್ಯಯನದ ವಿವರಗಳನ್ನು ಕೊಡಮಾಡಿದೆ. (ಇಲ್ಲಿನ ಬಹುಪಾಲು
ವಿವರಗಳು ಕನ್ನಡ ಭಾಷೆಯ ದಾಖಲೆಗಳಿಗೆ ಮೀಸಲಾಗಿವೆ)
೨. ವಿವಿಧ ಭಾಷೆಗಳಹಸ್ತಪ್ರತಿಗಳ
ಸಂಗ್ರಹ
೪. ಮೆಕೆಂಜಿ ಸಂಗ್ರಹಿಸಿದ ದಾಖಲೆಗಳ ಕುರಿತ
ಅಧ್ಯಯನದ ತಾತ್ವಿಕತೆ
೧. ಶಾಸನಗಳ ಪಠ್ಯ ಸಂಗ್ರಹ ಮತ್ತು ಪಡಿಯಚ್ಚುಗಳು: ಕನ್ನಡ ಶಾಸನಾಧ್ಯಯನವೆನ್ನುವುದು ಹಲವು
ಜ್ಞಾನಶಿಸ್ತುಗಳ ಸಂಚಿತ ಕೋಶವಾಗಿದೆ. ಅದನ್ನು ಕಂಡುಕೊಳ್ಳಲು ವಿಸ್ತಾರವಾದ ಓದು, ಪಾರಂಪರಿಕ
ಜ್ಞಾನ, ವಿವಿಧ
ಜ್ಞಾನಶಿಸ್ತುಗಳ ತಿಳುವಳಿಕೆ,
ಇತಿಹಾಸದ ಘಟನಾವಳಿ,
ಸಮಕಾಲೀನ ಸಮಾಜದ ಪರಿಚಯ. ಸಾಂಸ್ಕೃತಿಕ ಚಹರೆಗಳು, ಅಲಂಕಾರ, ಛಂದಸ್ಸು, ವ್ಯಾಕರಣ, ಮೀಮಾಂಸೆಯನ್ನು
ಒಳಗೊಂಡ ಭಾಷೆಯ ತಲಸ್ಪರ್ಶಿ ಅಧ್ಯಯನ, ಸ್ಮಾರಕಗಳ ಪರಿಚಯ ಮುಂತಾದ ವಸ್ತು ವಿಷಯಗಳನ್ನು ಒಳಗೊಂಡ ಸಮಗ್ರ ಪರಿಕಲ್ಪನೆಯನ್ನು ಸಮರ್ಪಕವಾಗಿ ಕಂಡುಕೊಳ್ಳಬೇಕಾಗಿದೆ.
ಶಾಸನಗಳ ಅಧ್ಯಯನಕ್ಕೆ ಸಂಬಂಧಿಸಿದ ಈ ನೆಲೆಗಟ್ಟುಗಳ ಯಾವುದೇ
ಚೌಕಟ್ಟು ಇಲ್ಲದಂತಹ ಆರಂಭ ಕಾಲದಲ್ಲಿ ಕಾಣಿಸಿಕೊಂಡ ಕರ್ನಲ್ ಮೆಕೆಂಜಿಯು ಭೌಗೋಳಿಕ
ಸರ್ವೆ ಕೆಲಸ ಮಾಡುವಂತಹ ಸಮಯದಲ್ಲಿ ಆತನಿಗೆ ತನ್ನ ವ್ಯಾಪ್ತಿಗೆ ಒಳಪಟ್ಟ ಭೂ ಭಾಗದಲ್ಲಿ ಅಮೂಲ್ಯ
ಶಾಸನ ಸಂಪತ್ತು ದೊರೆತಾಗ ಅವುಗಳನ್ನು ನೋಡಿ ಅವುಗಳಲ್ಲಿ ಆಸಕ್ತಿ ವಹಿಸಿ ಶಾಸನ ಸಂಗ್ರಹಕ್ಕೆ ಮುಂದಾಗಿದ್ದು, ನಂತರದ ಶಾಸನಗಳ ಸಂಗ್ರಹ ಮತ್ತು ಅಧ್ಯಯನಕ್ಕೆ ದಿಕ್ಸೂಚಿಯಾಯಿತು.
ಭಾರತಕ್ಕೆ ಬಂದ ಪಾಶ್ಚಾತ್ಯರು
ಕೇವಲ ಆಳ್ವಿಕೆಯನ್ನು ಮಾಡುವವರಾಗಿರದೆ, ಅವರಲ್ಲಿ
ಕೆಲವರು ವಿದ್ವಾಂಸರಾಗಿದ್ದು,
ಕಲೆ, ಸಂಸ್ಕೃತಿಯನ್ನು
ಆಳವಾಗಿ ಅಧ್ಯಯನ ಮಾಡುವುದರಲ್ಲಿ ಆಸಕ್ತರು, ಚರಿತ್ರೆಯನ್ನು ಕಟ್ಟುವವರಲ್ಲಿ ರಾಗ, ದ್ವೇಷ
ಇಲ್ಲದೆ ಅಪಾರ ಜ್ಞಾನ ಭಂಡಾರ ಹೊಂದಿರುವ ಮುತ್ಸದ್ದಿಗಳು ಇದ್ದರೆಂದು
ತಿಳಿಯಬಹುದು. ಸರ್ ವಿಲಿಯಂ ಜೋನ್ಸ್ ಇವರು ಮೂಲತಹ ನ್ಯಾಯಾಧೀಶರಾಗಿದ್ದು, ಭಾರತೀಯ
ಸಂಸ್ಕೃತಿ ಅಧ್ಯಯನದಲ್ಲಿ ಆಸಕ್ತಿಯುಳ್ಳವರಾಗಿದ್ದು, ಕ್ರಿ.ಶ. 1784 ರಂದು
ಕಲ್ಕತ್ತೆಯಲ್ಲಿ "ಏಷಿಯಾಟಿಕ್ ಸೊಸೈಟಿ ಆಫ್
ಬೆಂಗಾಲ್” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. “ಈ ಸಂಸ್ಥೆಯ ಪರವಾಗಿ 1789 ರಲ್ಲಿ“ಏಸಿಯಾಟಿಕ್
ರೀಸರ್ಚ' ಹೆಸರಿನ
ಪತ್ರಿಕೆ ಪ್ರಾರಂಭವಾಯಿತು.” ಜೋನ್ಸ್ ರವರು ಪ್ರಾರಂಭಿಸಿದ "ಏಸಿಯಾಟಿಕ್ ರೀಸರ್ಚ' ಪತ್ರಿಕೆಯ
ಮೊದಲನೆ ಸಂಪುಟದಲ್ಲಿಯೇ ಕ್ರಿಶ. 1791 ರಲ್ಲಿ “A Royal Grand of Land in Carnata’ ಎಂಬ ಲೇಖನವು ಪ್ರಕಟವಾಯಿತು.
ಕಂಚಿಯಲ್ಲಿದ್ದ ತಾಮ್ರ ಪಟವನ್ನು ಅಲೆಕ್ಸಾಂಡರ್ ಮ್ಯಾಕ್ಷಿಯೋಡ್ (AlexanderMacleod) ಎಂಬ ಆಂಗ್ಲ ಅಧಿಕಾರಿಯ ಏಷಿಯಾಟಿಕ್ ಸೊಸಾಯಿಟಿಯ ಅಧ್ಯಕ್ಷರಿಗೆ ಕ್ರಿಶ. 1791ರಲ್ಲಿ ಕಳುಹಿಸಿಕೊಟ್ಟ
ಅದರ ಜೊತೆಯಲ್ಲಿ ಹೀಗೆ ಬರೆದಿದ್ದನು. "ಕಂಚಿಯ ದೇವಸ್ಥಾನದಲ್ಲಿದ್ದ
ತಾಮ್ರಪಟಗಳ ಪ್ರತಿಯನ್ನು ಇದರ ಜೊತೆಯಲ್ಲಿ ಕಳುಹಿಸಿಕೊಡಲು ನನಗೆ
ಸಂತೋಷವಾಗುತ್ತದೆ,
ಈ ಪ್ರತಿಯಲ್ಲಿ ಕಂಟದಿಂದ ಬರೆದ ಐದು ತಾಳೆಗಳಿವೆ; ಭಾಷೆಯ ದೇವವಾಣಿ, ಲಿಪಿ
ದೇವನಾಗರಿಕ ಇಲ್ಲಿಯ ಇಬ್ಬರು ಮಾತ್ರ ಅವುಗಳನ್ನು ಓದಿ ಅರ್ಥವನ್ನು ವಿವರಿಸಬಲ್ಲರು. ತಾನು
ಏನಿದ್ದರೂ ಭೂಮಿಯಿಂದ ವಜ್ರದ ಕಲ್ಲನ್ನು ಅಗೆಯುವ ಕೆಲಸಗಾರನೆಂದು ಅದನ್ನು ಕತ್ತರಿಸಿ, ಅದರಿಂದ
ರೂಪವನ್ನು ಚಿಮ್ಮಿಸುವ ಶಕ್ತಿ ನಿಮಗಿದೆ” ಎಂದು ವಿನಯದಿಂದ ಬರೆದಿದ್ದಾನೆ. ಸಂಸ್ಕೃತ
ಭಾಷೆಯಲ್ಲಿಯ ಈ ಶಾಸನದ ವಸ್ತು ವಿಜಯನಗರದ ಅರಸರು ತಮಿಳುನಾಡಿನ ಕಂಚಿ ದೇವಾಲಯಕ್ಕೆ ದತ್ತಿ ಕೊಟ್ಟ
ವಿಷಯವನ್ನು ಒಳಗೊಂಡಿತ್ತು. ಕರ್ನಾಟಕದ ಅರಸರಿಗೆ ಸಂಬಂಧಿಸಿದ್ದರಿಂದ ಈ ಶಾಸನವು ಕರ್ನಾಟಕದ ಪ್ರಥಮ
ಪ್ರಕಟಿತ ಶಾಸನ ಎನ್ನುವ ಖ್ಯಾತಿಗೆ ಒಳಗಾಗಿದೆ.
ಕರ್ನಲ್ ಮೆಕೆಂಜಿಯು (1753) ದಕ್ಷಿಣ ಭಾರತದಲ್ಲಿ ಚಾರಿತ್ರಿಕ
ದಾಖಲೆಗಳನ್ನು ಸಂಗ್ರಹಿಸಲು ಆರಂಭಿಸಿದ ಕಾಲದಿಂದ ಶಾಸನಗಳು, ಹಸ್ತಪ್ರತಿಗಳು, ಕೈಫಿಯತ್ತುಗಳು
ಮುಂತಾದ ಚಾರಿತ್ರಿಕ ದಾಖಲೆಗಳು ರಾಜಕೀಯ ಮತ್ತು ಸಾಂಸ್ಕೃತಿಕ ಅಧ್ಯಯನದ ಪ್ರಮುಖ ಆಕರಗಳೆಂದು
ಮಾನ್ಯವಾಗತೊಡಗಿತು. ಭೂಮಾಪನ ಮಾಡಲು ಬಂದ ಅಧಿಕಾರಿಯು ಆ ಭೂಪಟ ದೇಶದ
ಸಾಂಸ್ಕೃತಿಕ ಗತವೈಭವನ್ನು ಸಾರುವ ಶಾಸನಗಳ ಸಂಗ್ರಹದಲ್ಲಿ ಆಸಕ್ತಿ
ತಳೆದು ನಮ್ಮ ನಾಡಿನ ಪರಂಪರೆಯನ್ನು ಕಟ್ಟಿಕೊಡುವ ಚಾರಿತ್ರಿಕ ರಾಯಭಾರಿಯಾಗಿ ಪ್ರಸಿದ್ಧಿ
ಪಡೆದಿದ್ದು ಸಂತಸದ ಸಂಗತಿ. ಮೈಸೂರು ಪ್ರಾಂತದ ಭೌಗೋಳಿಕ ಪರಿವೀಕ್ಷಣೆಗೆ ತೊಡಗಿದ ಮೆಕೆಂಜಿಯು ಅಲ್ಲಿಯ 'ಸಾಂಸ್ಕೃತಿಕ
ದಾಖಲೆಗಳನ್ನು ಕಂಡು ಮೂಕವಿಸ್ಮಿತನಾದನು. ಒಂದು ಅಂದಾಜಿನ ಪ್ರಕಾರ
ಈತ ತನ್ನ 34 ವರ್ಷಗಳ ಜೀವಿತ ಕಾಲದಲ್ಲಿ 40 ಸಾವಿರ ಮೈಲುಗಳ ಭೂಭಾಗ ಸಂಚರಿಸಿ
ಸಂಗ್ರಹಿಸಿದ ದಾಖಲೆಗಳೆಂದರೆ, 8470 ಶಾಸನ ನಕಲುಗಳು ಮತ್ತು ಪಡಿಯಚ್ಚುಗಳು. ಇದು
ದಕ್ಷಿಣಭಾರತದ ಎಲ್ಲಾ ಭಾಷೆಗಳನ್ನೂ ಒಳಗೊಂಡಿತ್ತು. ಇಂತಹ ಪ್ರಾಚೀನ ಶಾಸನಗಳನ್ನು, ಬರಹಗಳನ್ನು
ರಕ್ಷಿಸಬೇಕು ಎಂಬುದು ಆತನ ಅಭಿಮತವಾಯಿತ್ತು. ಮೆಕೆಂಜಿಯು ತಾನು ಭೂ ಸರ್ವೆ
ಮಾಡುವಾಗ ಸಂಗ್ರಹಿಸಿರುವಂತಹ ಅನೇಕ ತಾಮ್ರಪಟಗಳನ್ನು ಶಿಲ್ಪಶಾಸನ ಹಸ್ತಪ್ರತಿಗಳನ್ನು ದೇಶೀಯ
ವಿದ್ವಾಂಸರ ನೆರವಿನಿಂದ ಓದಲು ಪ್ರಯತ್ನಿಸಿದ, ಕೆಲವು ಸುಲಭವಾಗಿ ಓದಲು ಸಾಧ್ಯವಾಗದೆ ಅತೀ
ಕಷ್ಟಕರವಾಗಿದ್ದವು.
ಆರಂಭದಲ್ಲಿ ಅವರಿಗೆ
ಕನ್ನಡ ಬರುತ್ತಿರಲಿಲ್ಲ. ಕ್ರಮೇಣವಾಗಿ ಆಂಗ್ಲಭಾಷೆಗೆ ಅನುವಾದಿಸುವುದರ ಮೂಲಕ ಪ್ರಾಚೀನ ಕನ್ನಡ ಮತ್ತು ತುಳುಶಾಸನಗಳ ಅನುವಾದಗಳನ್ನು ಸಂಗ್ರಹಿಸಿದನು. ಮುಂದೆ ಕ್ರಮೇಣವಾಗಿ ಹಿಂದೂಗಳ ಭೂವ್ಯವಸ್ಥೆಯ ಮೇಲೆ ಬೆಳಕು ಬೀರುವ ಶಾಸನಗಳ ಮತ್ತು
ತಾಮ್ರಪಟಗಳ ಸ್ವರೂಪ ಹಾಗು ಉಪಯೋಗ ಕುರಿತಾದ ಸುಮಾರು ೩೦೦೦ಕ್ಕಿಂತ ಹೆಚ್ಚಿನ ಬರಹಗಳನ್ನು ಕ್ರಿ.ಶ.
೧೮೦೦ ಸುಮಾರಿಗೆ ಸಂಗ್ರಹಿಸಿದನು. ಈ ಬರಹಗಳು ವೀರಗಲ್ಲು, ಮಾಸ್ತಿಕಲ್ಲು, ಪ್ರಾಚೀನವಸ್ತುಗಳ
ಪ್ರಾಮುಖ್ಯತೆ, ಈ
ನಾಡಿನಲ್ಲಿ ಬಾಳಿ ಬದುಕಿದ ಪ್ರಾಚೀನ ಜನರ ರೀತಿ-ನೀತಿಗಳನ್ನುತಿಳಿಸುತ್ತವೆ. ತಮಗೆ ದೊರೆತ
ಪ್ರಾಚೀನ ಶಾಸನಗಳನ್ನು ಓದಲು ಪ್ರಯತ್ನಿಸಿ ಯಶಸ್ವಿಯಾದನು. ಅವುಗಳ ಅನುವಾದವನ್ನು ಸಹ ಮಾಡಿಸಿದನು. ಇದರ ನಿಮಿತ್ತವಾಗಿ
ಕ್ರಿ.ಶ. ೧೮೦೭ ರಿಂದ ಕನ್ನಡಶಾಸನಗಳ ಪ್ರಕಟಣೆಯು ತೀವ್ರಗತಿಯಲ್ಲಿ ನಡೆಯಿತು.
ಮೆಕೆಂಜಿಯು ತನ್ನ ಸಹಾಯಕನಾಗಿ ನೇಮಿಸಿಕೊಂಡಿದ್ದ ಕವೆಲ್ಲಿ ಬೋರಯ್ಯನೆಂಬ ದೇಶಿ ಪಂಡಿತನ ಸಹಾಯವನ್ನು ಪಡೆದುಕೊಂಡು ಶಾಸನಾಧ್ಯಯನವನ್ನು ಮತ್ತಷ್ಟು ತೀವ್ರಗೊಳಿಸಿದನು. ಮೆಕೆಂಜಿಯು ಸಹ ತಾನು ಸಂಗ್ರಹಿಸಿರುವ ತಾಮ್ರಪಟಗಳನ್ನು ಏಷಿಯಾಟಿಕ್ ಸೂಸೈಟಿಗೆ
ಕಳುಹಿಸಿಕೊಟ್ಟನು.
ಈತನು 1807ರ ಏಸಿಯಾಟಿಕ್
ರಿಸರ್ಚಸ್ ಪತ್ರಿಕೆಯ ಒಂಬತ್ತನೆಯ ಸಂಪುಟದಲ್ಲಿ ಶ್ರವಣಬೆಳ್ಗೊಳಕ್ಕೆ ಸಂಬಂಧಿಸಿದ ಬುಕ್ಕರಾಯನ ಧರ್ಮಸಮನ್ವಯದ ಶಾಸನವನ್ನು
ಪ್ರಕಟಿಸಿದ.ಈ ಲೇಖನದಲ್ಲಿ ಬುಕ್ಕರಾಯನ ಶಾಸನವನ್ನು ವೆಂಕಟಬೋರಯ್ಯನೇ
ಅನುವಾದಿಸಿಕೊಟ್ಟಿರುವುದನ್ನು ದಾಖಲಿಸಿದ್ದಾನೆ. ಈ ಶಾಸನವು ಕ್ರಿ.ಶ. ೧೮೦೭ರಲ್ಲಿ ಪ್ರಕಟಗೊಂಡಿದೆ.
ಈ ಶಾಸನವು ಬುಕ್ಕರಾಯನ ಶಾಸನ ಎಂಬ ಹೆಸರನ್ನು ಪಡೆದಿದ್ದು, “ಬುಕ್ಕರಾಯನು ಜೈನರ ಮತ್ತು ವೈಷ್ಣವರ ವಿವಾದವನ್ನು
ಬಗೆಹರಿಸಿರುವುದರ ವಿಷಯವನ್ನು ಒಳಗೊಂಡಿದೆ” ವಿಜಯನಗರದ ರಾಜ ಬುಕ್ಕರಾಯನ ಶ್ರವಣಬೆಳಗೊಳದ
ಶಾಸನವನ್ನು ಬೋರಯ್ಯನಿಂದ ಓದಿಸಿ ಆಂಗ್ಲ
ಭಾಷೆಗೆ ಅನುವಾದಿಸಿ ಏಶಿಯಾಟಿಕ್ ರೀಸರ್ಚಸ್ ಪತ್ರಿಕೆಯಲ್ಲಿ ಪ್ರಕಟಿಸಿದ್ದ. ಈ ಶಾಸನವನ್ನು ಓದಲು ಮೆಕಂಜಿಯ ಸಹಾಯಕನಾಗಿ ಕನ್ನಡ ನಾಡಿನ ವಿದ್ವಾಂಸ “ಕವಲ್ಲಿ ಬೋರಯ್ಯ' ಎಂಬಾತನು
ಆತನೊಂದಿಗಿದ್ದ ಎಂಬುದು,“Information collected from a Swamy at Mudgere and translated for
Mackenzie by cavelly Boria, Brahmen” ಎಂಬ
ಉಲ್ಲೇಖದಿಂದ ತಿಳಿದು ಬರುತ್ತದೆ. ಆ ಶಾಸನವನ್ನು ಓದಿದ ಕೀರ್ತಿ
ನಮ್ಮ ದೇಶಿ ಬ್ರಾಹ್ಮಣ ವಿದ್ವಾಂಸನಾದ ಕವಲಿಬೋರಯ್ಯನಿಗೆ ಸಲ್ಲುತ್ತದೆ. “ಬುಕ್ಕರಾಯನ
ಶಾಸನವೇ ಕನ್ನಡಭಾಷೆಯ ಪ್ರಥಮ ಪ್ರಕಟಿತ ಶಾಸನ”. "ಕನ್ನಡ ಶಾಸನವನ್ನು ಮೊದಲು ಓದಿದ
ಕೀರ್ತಿ ಬೋರಯ್ಯನಿಗೆ ಸಲ್ಲುವಂತೆ ಕಾಣುತ್ತದೆ" ಎಂದು ಎಂ.ಎಂ.ಕಲಬುರ್ಗಿಯವರು
ಅಭಿಪ್ರಾಯಪಡುತ್ತಾರೆ. ಈತನನ್ನು "ಕರ್ನಾಟಕದ ಶಾಸನಗಳ ಅಧ್ಯಯನದ ವಿಷಯದಲ್ಲಿ ಮೊತ್ತ ಮೊದಲು
ಆಸಕ್ತಿ ವಹಿಸಿದ ಭಾರತೀಯ ವಿದ್ವಾಂಸ" ಎಂದು ಎಂ. ಚಿದಾನಂದ ಮೂರ್ತಿಯವರು ಭಾವಿಸುತ್ತಾರೆ. ಬೋರಯ್ಯ ಬಹುಭಾಷಾ ಬಲ್ಲವನು, ತೀಕ್ಷ್ಣಮತಿ ಹಾಗೂ ಆಶುಕವಿಯಾಗಿದ್ದ. ಇವನ ನೆರವು ಇಲ್ಲದಿದ್ದರೆ. ಮೆಕೆಂಜಿಯು ಇಂತಹ ಘನಕೀರ್ತಿ ಗಳಿಸುತ್ತಿರಲಿಲ್ಲ.
ಬೋರಯ್ಯನನ್ನು ಕುರಿತು ಹೇಳಿದ “When deciphered the Halkanada characters, inscribed on the talent
found of Do dare, which is now deposited in the museum of the Asiatic Society,
his matter was highly gratified and put his name on ” ಎಂಬ ಮಾತು ಬೋರಯ್ಯನ
ವಿದ್ವತ್ತಿನ ಹೆಗ್ಗುರತಾಗಿದೆ.
ಮೆಕೆಂಜಿಯು ಜೈನರ ಬಗೆಗೆ ಬರೆದಿದ್ದ
ಸುದೀರ್ಘವಾದ ಲೇಖನವು'ಏಶಿಯಾಟಿಕ್ ರಿಸರ್ಚಸ್' ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಏಷಿಯಾಟಿಕ್
ರಿಸರ್ಚಸ್ ಪತ್ರಿಕೆಯ 9ನೇ ಸಂಪುಟದಲ್ಲಿ (1807) ಮೆಕೆಂಜಿಯು ತಾನು ಕಂಡ ಕೆಲವು
ಶಿಲ್ಪಗಳನ್ನು ಶಾಸನಗಳನ್ನು ಹೆಸರಿಸಿದ್ದಾನೆ. 278ನೆಯ ಪುಟದಲ್ಲಿ ಕ್ರಿಶ. 1801 ರಲ್ಲಿ
ಮೆಕೆಂಜಿಯು ಸಂಗ್ರಹಿಸಿದ ಶಾಸನದ ಚಿತ್ರವಿದ್ದು. ಆ
ಚಿತ್ರದ ಕೆಳಗೆ ಈ ರೀತಿ ಅಚ್ಚಾಗಿದೆ.- “Ancient sculpture and inscription Sravangodya near
Madagasec(Characters unknown)”. ಮೆಕೆಂಜಿಯ
ಆ ಶಾಸನವನ್ನು ಓದಲು ಸಾಧ್ಯವಾಗಿಲ್ಲವಾದರೂ ಅದು ಅಮೂಲ್ಯವಾದ ಶಾಸನ ಎಂದು ಮಾತ್ರ ತಿಳಿಸಿದೆ. ಇದಲ್ಲದೆ ಏಷಿಯಾಟಿಕ್
ಸೊಸೈಟಿಗೆ ಎರಡು ತಾಮ್ರದ ಪಟಗಳು ಮತ್ತು ಆಗಿನ
ಅದಾನಿ ಜಿಲ್ಲೆಯ ಕುರಗೋಡಿನ ಶಿಲಾಶಾಸನಗಳನ್ನು ಮೆಕೆಂಜಿಯು ಅನುವಾದ ಮಾಡಿ ಕಳುಹಿಸಿದ್ದನು. ಈ ೧೨ನೆಯ ಶತಮಾನದ ಕನ್ನಡ
ಶಿಲಾಶಾಸನವನ್ನು ೧೮೦೧ ರಲ್ಲಿ ಆ ಸ್ಥಳದ ನಿವಾಸಿಗಳ ಅಪ್ಪಣೆ ಪಡೆದು ಮೆಕೆಂಜಿಯವರು-ಹಿಂದೂಗಳ
ಸಾಹಿತ್ಯದಲ್ಲಿ ಆಸಕ್ತರಾಗಿರುವ ವ್ಯಕ್ತಿಗಳು ಅದನ್ನು ಅಮೂಲ್ಯ ಆಸ್ತಿಯೆಂದು ಭಾವಿಸುತ್ತಾರೆ ಎಂಬ
ನಂಬಿಕೆಯಿಂದ ಕಲ್ಕತ್ತಾದ ಸೊಸೈಟಿಗೆ ಕಳುಹಿಸಿಕೊಟ್ಟಿದ್ದನಂತೆ.
ಮೈಸೂರಿನ ಸರ್ವೆ ಕಾಲದಲ್ಲಿ ಮೆಕೆಂಜಿಯು ೧೭೦೦ ಶಿಲಾಲೇಖ ಮತ್ತು ತಾಮ್ರ
ಶಾಸನ- ಪಡಿಯಚ್ಚುಗಳನ್ನೂ ೬೦೦ ಹಸ್ತ ಪ್ರತಿಗಳನ್ನೂ ಸಂಗ್ರಹಿಸಿದ್ದನು. ಇವುಗಳನ್ನು ಓದುವ
ಅರ್ಥೈಸುವ ಪ್ರಯತ್ನವನ್ನು ಈತ ಮಾಡಿದ. ಅವೆಲ್ಲವನ್ನು ಅವನು ಸರಕಾರಕ್ಕೆ
ಒಪ್ಪಿಸಿದ್ದನು. ಚಿತ್ರಗಳನ್ನು ಬರೆಯಲು ಮೆಕೆಂಜಿಗೆ ಸಹಾಯ ಮಾಡಿದವರು
ಆತನ ನೆಚ್ಚಿನ ಭಂಟ ಕವಲಿ ವೆಂಕಟ ಬೋರಯ್ಯ. ಮೆಕೆಂಜಿಯು
ನಿಜಾಂ ಕರ್ನಾಟಕದ ರಾಯಚೂರು, ದಿಗ್ಗಾವೆ, ದೇವದುರ್ಗ, ಅನ್ವೇರಿ, ಕೊಪ್ಪಳ, ಇಟ್ಟಿಗೆ, ಹಿರಿಯ ಗಬ್ಬೂರು
ಸ್ಥಳಗಳ ಶಾಸನಗಳನ್ನು ಸಂಗ್ರಹಿಸಿದ್ದು ಆ ಶಾಸನಗಳಲ್ಲಿ ಕೆಲವು ಮಹತ್ವದ ಶಾಸನಗಳನ್ನು ವಿ.ಶಿವಾನಂದ
ಅವರು ತಮ್ಮ ಹೈದ್ರಾಬಾದ್ ಕರ್ನಾಟಕ ಭಾಗದ ಶಿಲಾಶಾಸನಗಳು ಸಂಪುಟದಲ್ಲಿ ಸೇರಿಸಿ ಪ್ರಕಟಿಸಿದ್ದಾರೆ.
ಈತನ ಇಪ್ಪತ್ತಕ್ಕೂ ಹೆಚ್ಚು ವರ್ಷದ ದುಡಿಮೆಯ
ಫಲವಾಗಿ ೨೦೦೦ಕ್ಕೂ ಮಿಕ್ಕಿ ಶಾಸನಗಳು . ನಾಣ್ಯಗಳು, ಶಾಸನ ಪಡಿಯಚ್ಚುಗಳು, ವಿಗ್ರಹಗಳ ಶೋಧನೆ ಮತ್ತು
ಸಂಗ್ರಹವಾಯಿತು. ಕಡಿಮೆ ಕಾಲದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಹಿರಿಮೆ ಅವನದು. ೧೮೦೭ ರಲ್ಲಿ ಏಷಿಯಾಟಿಕ್ ರಿಸರ್ಚ್ ನ ಸಂಚಿಕೆಯಲ್ಲಿನ
೯ನೆಯ ಸಂಪುಟದಲ್ಲಿ ಬರೆದ ಲೇಖನಗಳು ದಕ್ಷಿಣ ಭಾರತದ ರಾಜವಂಶಗಳ ಕುರಿತಾದ ಬಹುಮುಖ್ಯ ದಾಖಲೆಯಾಗಿದೆ.
ಆಗಾಗ ಮೆಕೆಂಜಿ ಪ್ರಕಟಣೆಗಾಗಿ ಕಳಿಸುತ್ತಿದ್ದ ಕನ್ನಡ ಶಾಸನಗಳ ಕುರಿತಾಗಿಯೂ ಕೋಲ್‌ಬ್ರೂಕ್ ಕ್ರಿ. ಶ. ೧೨೦೦ ರಿಂದ ಕ್ರಿ. ಶ. ೧೭೨೧ರ ಮಧ್ಯೆ ಸುಮಾರು ೬೦೦ ಶಾಸನಗಳನ್ನು
ಸಂಗ್ರಹಿಸಿದ ಮೆಕೆಂಜಿಯ ಸಾಹಸ ಸಣ್ಣದಲ್ಲ ಎಂದು ಹೇಳಿದ್ದಾನೆ. ಮೆಕೆಂಜಿಯ ಸಂಗ್ರಹದ ಜೊತೆಗೆ ಜೋನ್ಸ್‌ರವರು
ಆರಂಭಿಸಿದ ಪತ್ರಿಕೆಯಿಂದ ದೇಶದ ಪ್ರಾಚೀನ ಬರಹಗಳು ಪ್ರಕಟವಾಗತೊಡಗಿದವು. ಕನ್ನಡ
ಶಾಸನಾಧ್ಯಯನಕ್ಕೆ ಶ್ರದ್ಧೆಯ ಹಿನ್ನಲೆ ಹಾಕಿದ ಕೀರ್ತಿ ಮೆಕೆಂಜಿಗೆ ಸಲ್ಲುತ್ತದೆ. ಅವರು ಹಳೆಯ ಕಾವ್ಯ,
ಶಾಸನಾದಿಗಳನ್ನು ಓದಿ, ಕಾಗದದ
ಮೇಲೆ ಬರೆದು ತೆಗೆಯಲು ಮತ್ತು ಅವುಗಳ ಅರ್ಥವನ್ನು ತನಗೆ ವಿವರಿಸಲೆಂದು, ಕೆಲವು ಸಿಬ್ಬಂದಿಯನ್ನ ಸಂಬಳದಮೇಲೆ ನೇಮಿಸಿಕೊಂಡಿದ್ದನು. ಅವರು ಕೂಡಾ ಮೆಕೆಂಜಿಯ
ವತಿಯಿಂದ ದೇಶದಮೂಲೆ ಮೂಲೆಗಳಲ್ಲಿ ಸಂಚರಿಸಿ ಪ್ರಾಚೀನ ವಸ್ತು ವಿಚಾರಗಳನ್ನು ಸಂಗ್ರಹಿಸಿದ್ದು ಮಹತ್ತರ
ಸಂಗತಿಯಾಗಿದೆ.
೨. ವಿವಿಧ ಭಾಷೆಗಳ ಹಸ್ತಪ್ರತಿಗಳ
ಸಂಗ್ರಹ: ಕರ್ನಾಟಕದ
ಹಸ್ತಪ್ರತಿಗಳ ಪರಿವೀಕ್ಷಣ ಮತ್ತು ಸಂಗ್ರಹಣಾ ಕಾರ್ಯವನ್ನು ಮೊದಲಿಗೆ ಪ್ರಾರಂಭಿಸಿದನು. ಕ್ರಿ.ಶ. ೧೭೯೬ ರಿಂದ
ಹವ್ಯಾಸವೆಂಬಂತೆ ಪ್ರಾಚ್ಯವಸ್ತುಗಳ ಸಂಗ್ರಹಕಾರವನ್ನು ಕೈಕೊಂಡ ಇವನು,
ಹಸ್ತಪ್ರತಿಗಳ ಸಂಗ್ರಹ ಕಾರ್ಯಕ್ಕೂ ಆದ್ಯತೆ ನೀಡಿದನು. ವಿಲ್ಸನ್‌ರ ಶಿಫಾರಸ್ಸಿನ ಮೇರೆಗೆ, ಈತನು ಸಂಗ್ರಹಿಸಿದ್ದ ದಕ್ಷಿಣ ಭಾರತದ ಭಾಷೆಗಳಲ್ಲಿಯ ಹೆಚ್ಚಿನ ಹಸ್ತಪ್ರತಿಗಳನ್ನು 1828 ರಲ್ಲಿ ಮದ್ರಾಸ್‌ಗೆ
ಕಳುಹಿಸಲಾಯಿತು. ಮದ್ರಾಸದಲ್ಲಿ ಅಲ್ಲಿಯ ಕಾಲೇಜು ಲೈಬ್ರರಿಗೆ, ಆಮೇಲೆ ಲಿಟರರಿ ಸೊಸೈಟಿಗೆ,
ಕೊನೆಗೆ ೧೮೫೮ರಲ್ಲಿ ಸ್ಥಾಪಿತವಾದ
ಗವರ್ನ್‌ಮೆಂಟ ಓರಿಯಂಟಲ್ ಮ್ಯಾನ್ಯುಸ್ಕ್ರಿಪ್ಪ ಲೈಬ್ರರಿಗೆ ವರ್ಗಾಯಿಸಲ್ಪಟ್ಟಿತು.
ಕಲಕತ್ತೆಯಲ್ಲಿ ಇನ್ನೆರಡು ಕಡೆಗೆ ಇವನ ಸಂಗ್ರಹವನ್ನು ರಕ್ಷಿಸಲಾಗಿದೆ ಎಂದು T. chandrashekhar ಅವರು ತಾವು ಸಂಪಾದಿಸಿರುವ
An alpha-betical index of kannada
manuscripts in the government Oriental Manuscripts Library Madras ಕೃತಿಯಿಂದ ತಿಳಿದುಬರುತ್ತದೆಂದು ಕಲಬುರ್ಗಿಯವರು
ತಮ್ಮ ಹಸ್ತಪ್ರತಿ ಶಾಸ್ತ್ರ ಕೃತಿಯಲ್ಲಿ ದಾಖಲಿಸಿದ್ದಾರೆ. ತಾಳೆಗರಿ ಹಸ್ತಪ್ರತಿ ಸಂಪುಟಗಳಲ್ಲಿ ಹೆಚ್ಚಿನ ಮೆಕೆಂಜಿ ಸಂಗ್ರಹವನ್ನು
ಮದ್ರಾಸ್ ವಿಶ್ವವಿದ್ಯಾಲಯದ ಸರ್ಕಾರಿ ಓರಿಯಂಟಲ್ ಹಸ್ತಪ್ರತಿ ಗ್ರಂಥಾಲಯ ಮತ್ತು ಸಂಶೋಧನಾ
ಕೇಂದ್ರದಲ್ಲಿ ಸಂರಕ್ಷಿಸಲಾಗಿದೆ. ಈ ಗ್ರಂಥಾಲಯವನ್ನು 1869 ರಲ್ಲಿ
ಮೆಕೆಂಜಿ ಸಂಗ್ರಹಕ್ಕಾಗಿಯೇ ಸ್ಥಾಪಿಸಲಾಯಿತು. ಅಲ್ಲಿಯವರೆಗೆ ಅವುಗಳನ್ನು ಮದ್ರಾಸ್
ಪ್ರೆಸಿಡೆನ್ಸಿ ಕಾಲೇಜು ಗ್ರಂಥಾಲಯದಲ್ಲಿ ಇರಿಸಲಾಗಿತ್ತು.
ಮದ್ರಾಸ ಗವರ್ನಮೆಂಟ
ಓರಿಯಂಟಲ್ ಮ್ಯಾನ್ಯುಸ್ಕ್ರಿಪ್ಟ ಲೈಬ್ರರಿಯಲ್ಲಿ ಮೆಕೆಂಜಿ ಸಂಗ್ರಹದ
ಹಸ್ತಪ್ರತಿಗಳಲ್ಲಿ, ಕವಿರಾಜಮಾರ್ಗ, ಲಿಂಗಣಾರಾಧ್ಯನ
ವೃತ್ತಿಯುಳ್ಳ ಶಬ್ದಮಣಿದರ್ಪಣ,
ಸಾಹಸಭೀಮವಿಜಯ ಮೊದಲಾದವುಗಳಿಗೆ ಸಂಬಂಧಿಸಿದ ಪ್ರಮುಖ ಹಸ್ತಪ್ರತಿಗಳೂ
ಬಹುಸಂಖ್ಯೆಯ ಕೈಫಿಯತ್ತುಗಳೂ ಹಾಡುಗಳೂ ಕಂಡುಬರುತ್ತವೆ. ೧೯೬೭ರಲ್ಲಿ
ಮೆಕೆಂಜಿ ಸಂಗ್ರಹವನ್ನು ಹೊರತುಪಡಿಸಿ ಲೇಡನ್ ಮತ್ತು ಸಿ.ಪಿ.ಬ್ರೌನ್
ಸಂಗ್ರಹಿಸಿದ್ದ ಎಲ್ಲಾ ಕನ್ನಡಹಸ್ತಪ್ರತಿಗಳನ್ನು ಮೈಸೂರು ಕನ್ನಡ ಅಧ್ಯಯನ ಸಂಸ್ಥೆ, ಪುರಾತತ್ವ
ಇಲಾಖೆ ಮತ್ತು ಧಾರವಾಡ ಕನ್ನಡ ಸಂಶೋಧನ ಸಂಸ್ಥೆಗಳಿಗೆ ಹಂಚಿಕೊಡಲಾಯಿತು. ಹಸ್ತಪ್ರತಿ ಸಂಗ್ರಹದಂತೆ
ಹಸ್ತಪ್ರತಿ ಸೂಚಿಯ ರಚನೆಯಲ್ಲಿಯೂ ಇದೇ ಸಂಸ್ಥೆ ಹೊಸ ಹೆಜ್ಜೆ ಇಟ್ಟಿತು. ಇದು ಕ್ರಿ.ಶ.೧೮೨೮
ರಲ್ಲಿ ಪ್ರಕಟಿಸಿದ 'ಮೆಕೆಂಜಿ ಕಲೆಕ್ಷನ್: ಎ ಡಿಸ್ಕ್ರಿಪ್ಟಿವ್ ಕ್ಯಾಟಲಾಗ್
ಆಫ್ ದಿ ಮ್ಯಾನ್ಯುಸ್ಕ್ರಿಪ್ಟ್' ಹೆಸರಿನ ಸೂಚಿಯು, ಹೆಸರೇ ಸೂಚಿಸುವಂತೆ ವಿವರಣಾತ್ಮಕವಾಗಿದ್ದು, ಇದನ್ನು ಎಂ.ಎಂ.ಕಲಬುರಗಿಯವರು ಕನ್ನಡ
ಹಸ್ತಪ್ರತಿ ಸೂಚಿ ಪರಂಪರೆಯ ಪ್ರಥಮ ಕೃತಿ ಎಂದು ಕರೆದಿದ್ದಾರೆ. ಈ
ಬಳಿಕ 'ಅಲ್ಪಾಬೆಟಿಕಲ್
ಇಂಡೆಕ್ಸ್ ಆಫ್ ಮ್ಯಾನ್ಯುಸ್ಕ್ರಿಪ್ಟ್ ಇನ್ ದಿ ಗವರ್ನಮೆಂಟ ಓರಿಯಂಟಲ್
ಮ್ಯಾನು ಸ್ಕ್ರಿಪ್ಟ್ ಲೈಬ್ರರಿ ಮದ್ರಾಸ(೧೮೮೩) ಮತ್ತು 'ಆನ್
ಆಲ್ಫಾಬೆಟಿಕಲ್ ಇಂಡೆಕ್ಸ್ಪ್ಸ್ ಇನ್ ದಿ ಗವರ್ನಮೆಂಟ ಓರಿಯಂಟಲ್ ಮ್ಯಾನುಸ್ಕ್ರಿಪ್ಟ್ ಲೈಬ್ರರಿ,ಆಫ್
ಕೆನರೀಸ್ ಮ್ಯಾನ್ಯುಇನ್ ದಿ ಗವರ್ನಮೆಂಟ ಮದ್ರಾಸ' (೧೯೨೯) ಮತ್ತು ಆನ್ ಅಲ್ಪಾಬೆಟಿಕಲ್
ಇಂಡೆಕ್ಸ್ ಆಫ್ ಕನ್ನಡಮ್ಯಾನ್ಯುಸ್ಕ್ರಿಪ್ಟ್, ಓರಿಯಂಟಲ್ ಮ್ಯಾನ್ಯು ಸ್ಕ್ರಿಪ್ಟ್ ಲೈಬ್ರರಿ ಮದ್ರಾಸ್' (೧೯೫೨) ಹೆಸರಿಗೆ ಸೂಚಿಗಳನ್ನು ಈ ಸಂಸ್ಥೆ ಪ್ರಕಟಿಸಿತು.
ಈ ಸೂಚಿಗಳಲ್ಲಿ ಮೆಕೆಂಜಿ ಸಂಗ್ರಹದ ಹಸ್ತಪ್ರತಿಗಳ ವಿವರಗಳು ದಾಖಲುಗೊಂಡಿವೆ.
ಇವೆಲ್ಲವುಗಳಿಗಿಂತ
ಮಿಗಿಲಾದ ಕೆಲಸವೆಂದರೆ 'ಎ ಡಿಸ್ಕ್ರಿಪ್ಪಿವ್ ಕೆಟಲಾಗ್ಆಫ್ ಕೆನರೀಸ್
ಮ್ಯಾನ್ಯುಸ್ಕ್ರಿಪ್ಟ್ ಇನ್ ದಿ ಗವರ್ನಮೆಂಟ ಓರಿಯಂಟಲ್ ಮ್ಯಾನ್ಯುಸ್ಕ್ರಿಪ್ಟ್
ಲೈಬ್ರರಿ, ಮದ್ರಾಸ' ಈ
ಹೆಸರಿನಲ್ಲಿ ಮೆಕೆಂಜಿ ಸಂಗ್ರಹಿಸಿದ್ದ
ಹಸ್ತಪ್ರತಿಗಳನ್ನು ಒಳಗೊಂಡ ತನ್ನಲ್ಲಿದ್ದ ಹಸ್ತಪ್ರತಿಗಳ ವಿವರಗಳನ್ನು ಏಳು
ಸಂಪುಟಗಳಲ್ಲಿ ಪ್ರಕಟಿಸಿತು. ಮೊದಲನೆಯ
ಸಂಪುಟ: ವ್ಯಾಕರಣ ೧-೧೨,
ನಿಘಂಟು ೧೩-೨೧,ಛಂದಸ್ಸು
೨೩-೨೭, ಇತಿಹಾಸ
ಮತ್ತು ಪುರಾಣ ೨೮-೧೩೮,
ಎರಡನೆಯ ಸಂಪುಟ: ಪುರಾಣ ೧೩೯-೨೭೮, ಅರ್ಥಶಾಸ್ತ್ರ ೨೭೯-೨೯೦, ಕಾಮಶಾಸ್ತ್ರ
೨೯೧-೨೯೭,ಯೋಗ
೨೯೮-೩೦೧, ವೇದಾಂತ
೩೦೨-೩೧೭, ಮೂರನೆಯ
ಸಂಪುಟ: ಜೈನಾಗಮ ೩೧೮-೪೩೪, ವೀರಶೈವ ಆಗಮ
೪೩೫-೪೭೬, ನಾಲ್ಕನೆಯ
ಸಂಪುಟ ವೀರಶೈವ ಆಗಮ ೪೭೭-೬೧೦,
ಕ್ರೈಸ್ತ ಕೃತಿ ೬೧೧-೬೧೪,
ಸ್ತೋತ್ರ ಮತ್ತುವೀರಶೈವ ಕೃತಿ ೬೧೫-೮೨೫, ಐದನೆಯ ಸಂಪುಟ: ಶ್ರೀವೈಷ್ಣವಮತ ೮೨೬-೮೩೧,ಸ್ತೋತ್ರಗಳು
೮೩೨-೮೬೭, ಕಾವ್ಯ
(ಪದ್ಯಕಾವ್ಯ) ೮೬೮-೧೦೩೮,
ಆರನೆಯ ಸಂಪುಟ:ಪದ್ಯಕಾವ್ಯ ೧೦೩೯-೧೧೨೧, ಚಂಪೂ ೧೧೨೨-೧೧೬೭, ಯಕ್ಷಗಾನ
೧೧೬೮-೧೨೨೦,ಗದ್ಯಕಾವ್ಯ
೧೨೨೧-೧೨೩೮, ಕಥೆಗಳು
೧೨೩೯-೧೨೪೮, ಅಲಂಕಾರ
೧೨೪೯-೧೨೬೧,ಏಳನೆಯ
ಸಂಪುಟ: ಸಂಗೀತ ೧೨೬೨-೧೩೩೪,
ಶಿಲ್ಪಶಾಸ್ತ್ರ ೧೩,೪೫, ಪಾಕಶಾಸ್ತ್ರ೧೩೩೬-೧೩೪೨, ವೈದ್ಯ
೧೩೪-೧೪೦೫( ಎಂ.ಎಂ.ಕಲಬುರ್ಗಿ, ಹಸ್ತಪ್ರತಿ ಶಾಸ್ತ್ರ, ಪು.೭೮-೭೦) ಹೀಗೆ ಇಷ್ಟು
ಪ್ರತಿಗಳ ವಿವರವಾದ ಪರಿಚಯ ಮಾಡಿಕೊಡುತ್ತವೆ.
ಈ ಏಳೂ ಸಂಪುಟಗಳಲ್ಲಿ ಅಡಕವಾದ
ಪ್ರತಿಗಳಿಗೆ ಉದ್ದಕ್ಕೂ ಕ್ರಮಸಂಖ್ಯೆ ಕೊಡಲಾಗಿದ್ದು, ಒಟ್ಟು ೧೪೦೫
ಪ್ರತಿಗಳ ಪರಿಚಯವನ್ನುಈ ಸಂಪುಟಗಳಲ್ಲಿ ಕಾಣಬಹುದಾಗಿದೆ. ಕನ್ನಡ
ಹಸ್ತಪ್ರತಿಸೂಚಿಗ್ರಂಥಗಳಲ್ಲಿಯೇ ವಿವರಣೆ ದೃಷ್ಟಿಯಿಂದ ತುಂಬ ಉಪಯುಕ್ತ ಸಂಪುಟಗಳಿವು. ಹಸ್ತಪ್ರತಿಗಳ
ಸಂಗ್ರಹ ಮತ್ತು ಸೂಚಿ ರಚನೆಯೊಂದಿಗೆ ಸಂಪಾದನಾ
ಕೆಲಸವನ್ನೂ ಪೂರೈಸಿದುದು, ಈ ಸಂಸ್ಥೆಯ ವೈಶಿಷ್ಟ್ಯವಾಗಿದೆ. ಲೋಕೋಪಕಾರಂ, ರಟ್ಟಮತಂ, ಅಶ್ವಶಾಸ್ತ್ರ, ವಿವಿಧ
ವೈದ್ಯ ವಿಷಯಗಳು, ಸೂಪಶಾಸ್ತ್ರ, ವ್ಯವಹಾರಗಣಿತಂ
ಮೊದಲಾದ ಲೋಕಕಲ್ಯಾಣಶಾಸ್ತ್ರಗಳನ್ನೂ, ಜೀವಸಂಬೋಧನ, ಸದ್ಗುರುರಹಸ್ಯ ಮೊದಲಾದ ಕಾವ್ಯಗಳನ್ನೂ, ಅಭಿಧಾನರತ್ನ
ಮಾಲಾ, ಸಂಗೀತ
ರತ್ನಾಕರಮೊದಲಾದ ಶಾಸ್ತ್ರಕೃತಿಗಳನ್ನೂ ಇದು ಪರಿಷ್ಕರಿಸಿ, ಪ್ರಕಟಿಸಿದೆ. ಈ ಭಂಡಾರದ
ಹಸ್ತಪ್ರತಿಗಳನ್ನು ಬಳಸಿಕೊಂಡು ಮದ್ರಾಸ ವಿಶ್ವವಿದ್ಯಾಲಯದ ಕನ್ನಡ ವಿಭಾಗವು
ಲಿಂಗಣಾರಾಧ್ಯವೃತ್ತಿಯ ಶಬ್ದಮಣಿದರ್ಪಣಂ, ಕರ್ನಾಟಕ ಕವಿರಾಜಮಾರ್ಗ, ಮಂಗರಾಜನ
ಅಭಿನವಾಭಿಧಾನಂ, ಓಷಧಿಕೋಶಂ, ಕರ್ಣಪಾರ್ಯನ ನೇಮಿನಾಥ ಪುರಾಣಮ, ಪಾರ್ಶ್ವನಾಥಪಂಡಿತನ
ಪಾರ್ಶ್ವನಾಥಪುರಾಣಂ,
ಅಚಣ್ಣನವರ್ಧಮಾನಪುರಾಣಂ, ಇತ್ಯಾದಿ ಕೃತಿಗಳನ್ನು ಪರಿಷ್ಕರಿಸಿ, ಬೆಳಕಿಗೆ
ತಂದಿದೆ. ಮೆಕೆಂಜಿ ಸಂಗ್ರಹಿಸಿದ್ದ ೨೦೦ಕ್ಕೂ ಮಿಕ್ಕಿದ
ಕನ್ನಡಹಸ್ತಪ್ರತಿಗಳ ವಿವರಗಳನ್ನು ರೆವರೆಂಡ್ ಒನ್ ಸಂಪಾದಿತ ಮೆಕೆಂಜಿಯ ಸಂಗ್ರಹ" ಪುಸ್ತಕದಲ್ಲಿ
ಕೊಡಲಾಗಿದೆ. ಮೆಕೆಂಜಿಯು ತನಗೆ ದೊರೆತಿದ್ದ ಕನ್ನಡ ಕೃತಿಗಳನ್ನು ಪುರಾಣ, ಇತಿಹಾಸ, ಕಾವ್ಯ, ಕಥನ, ಶಾಸ್ತ್ರಗಳು, ಜೈನ ವಾಙ್ಮಯ ಎಂಬುದಾಗಿ ವಿಂಗಡಿಸಿದ್ದಾನೆ. ಈ
ವಿಂಗಡಣೆ ಅಥವಾ ವರ್ಗಿಕರಣವು ವ್ಯವಸ್ಥಿತವಾಗಿಲ್ಲವೆಂಬುದು ಸ್ಪಷ್ಟವಿದೆಯಾದರೂ, ಮುದ್ರಣವಿಲ್ಲದ
ಕಾಲದಲ್ಲಿ ಜನರಲ್ಲಿ ಪ್ರಚಲಿತವಾಗಿದ್ದ ಕನ್ನಡ ಕೃತಿಗಳಾವುವೆಂಬುದರ
ಸ್ಥೂಲ ಕಲ್ಪನೆಯನ್ನು ಅದು ತಂದುಕೊಡುತ್ತದೆ. ಕನ್ನಡ
ಕೃತಿಗಳಲ್ಲದೆ ಬೇರೆ ಬೇರೆ ಸ್ಥಳ ಪುರಾಣ ಐತಿಹ್ಯಗಳಿಗೆ ಸಂಬಂಧಿಸಿದ ವಿವಿಧ ಬರಹಗಳು ಮೆಕೆಂಜಿಯ
ಸಂಗ್ರಹದಲ್ಲಿದ್ದವು. ಅದರಲ್ಲಿಯ 'ಬಾಣ ಬಿರುಸು ಕ್ರಮ' ಮತ್ತು 'ಸೂಪ
ಶಾಸ್ತ್ರ' ಎಂಬ ಕೃತಿಗಳು ಭಾರತದ ಇನ್ನಾವ ಭಾಷಾ ಸಾಹಿತ್ಯಗಳಲ್ಲಿ ಕಂಡುಬಂದಿಲ್ಲವೆಂದು, ಸಂಪಾದಕ
ವಿಲನ್ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾನೆ. ಶಿಲ್ಪಶಾಸ್ತ್ರ, ಧನ್ವಂತರಿ
ನಿಘಂಟು. ವೈದ್ಯ ನಿಘಂಟು ಸಂಸ್ಕೃತದಲ್ಲಿದ್ದರೆ ಅದರ ಕನ್ನಡ ಟೀಕೆಯೂ ಇತ್ತು ವೈದ್ಯಕೀಯದಲ್ಲಿ
ಬಳಸುವ ಗಿಡಮೂಲಿಕೆಗಳ ಆಕಾರಾದಿ ಪಟ್ಟಿ, ಜ್ಯೋತಿಷ್ಯ ಸಂಗ್ರಹ ಶಕುನ ಶಾಸ್ತ್ರ
ಹಾಲಕ್ಕಿ ಶಕುನ ಗಣಿತಸಂಗ್ರಹ, ಭೂಮಿತಿ ತತ್ತ್ವಶಾಸ್ತ್ರ ವೈದ್ಯ ಜ್ಯೋತಿಷ್ಯ ವಿವಿಧ ವೃತ್ತಿಗಾರ
ಕೆಲಸದ ವಿಧಾನಬಳೆ ಮಾಡುವ ವಿಧಾನ, ಬಣಜಿಗರ ಪೂರ್ವೋತ್ತರು ತಾವು ಭೇಟಿ
ನೀಡಿದ ಸ್ಥಳಗಳ ವರ್ಣನ ಅಲ್ಲಿನ ಸಸ್ಯಸಂಪತ್ತು ಮತ್ತು ಪ್ರಾಣಿವೈವಿಧ್ಯದ ವಿವರ, ಬಿದನೂರ ಮೃಗಗಳು, ಸ್ಥಳ ವರ್ಣನೆ, ಅಲ್ಲಿ ದೊರೆತ ರಾಮಾಯಣ,ಮಹಾಭಾರತ ಭಾಗವತ ಹಲವು ಹನ್ನೊಂದು ಕೃತಿಗಳ ಅನೇಕ
ಪ್ರತಿಗಳನ್ನು ಅಲ್ಲಿ ಕಾಣಬಹುದು. ಮೆಕೆಂಜಿಯ
ಇತರ ಪುರಾತನ ಅಂಶಗಳ ಸಂಗ್ರಹವು ವ್ಯಾಪಕವೂ,
ವೈವಿಧ್ಯಮಯವೂ ಆಗಿದ್ದಿತು. ನಾಡಿನ
ಇತಿಹಾಸ ರಚನೆಗೆ ಕಚ್ಚಾ ಸಾಮಗ್ರಿಯನ್ನು ಒದಗಿಸಲು ಅದು ಸಮರ್ಥವಾಯಿತು. ಮೆಕೆಂಜಿಯು ಲೇಖನಗಳನ್ನು
ಹೆಚ್ಚಾಗಿ ಬರೆದುದಿಲ್ಲ. ಬರೆಯುವುದಕ್ಕೆ ಅವನಿಗೆ
ಬಿಡುವೇ ಇರಲಿಲ್ಲ. ಪ್ರಕಟವಾದ ಅವನ ಕೆಲವೇ ಲೇಖನಗಳಲ್ಲಿ ಜೈನಧರ್ಮವನ್ನು ಕುರಿತಾದ ಬರಹಗಳು ಆಗಿನ ವಿದ್ವಾಂಸರ ಗಮನವನ್ನು ಸೆಳೆದುವು. ಬೌದ್ಧ
ಮತ್ತು ಜೈನ ಧರ್ಮಗಳು ಬೇರೆ ಎಂಬ ಸ್ಪಷ್ಟ ಕಲ್ಪನೆಯು ಆ ಹಿಂದಿನವರಿಗೆ ಇದ್ದಿರಲಿಲ್ಲ. ಸ್ವತಃ ಮೆಕೆಂಜಿಗೆ ಅದರ ಅರಿವಾದುದು ಕರ್ನಾಟಕದಲ್ಲಿಯ ಜೈನ ಕಾವ್ಯ ಮತ್ತು ಶಾಸನಗಳನ್ನು ಪರಿಶೀಲಿಸಿದಾಗಲೇ. ಮೆಕೆಂಜಿಯ ಇನ್ನು ಕೆಲವು ಬಿಡಿ
ಬರಹಗಳಲ್ಲಿ ಮಾಧ್ವ ಗುರುಪರಂಪರೆಯನ್ನು ವಿವರಿಸಿದ ಲೇಖವೊಂದಿದೆ. ತಾನು ಸಂಗ್ರಹಿಸಿದ ವಿಷಯಗಳ ಸತ್ಯಾಸತ್ಯತೆಯ
ಗೊಡವೆಗೆ ಅವನು ಹೋಗಲೇ ಇಲ್ಲವೆಂಬುದು ಆ ಲೇಖನದಿಂದ ದೃಢಪಡುತ್ತದೆ ಎಂದು ಶ್ರೀನಿವಾಸ
ಹಾವನೂರ ಅವರು ಹೇಳಿದ್ದರೂ ಆ ಕಾಲಕ್ಕೆ ಆತನು ಮಾಡಿದ ಕೆಲಸವನ್ನು ಮರೆಯುವಂತಿಲ್ಲ. ಏಕೆಂದರೆ ಮೆಕೆಂಜಿ ಸಂಗ್ರಹಿಸಿದ ಹಸ್ತಪ್ರತಿಗಳು ಮರೆತುಹೋಗಿದ್ದ
ಮತ್ತು ಕೈಬಿಟ್ಟಿದ್ದ ತವನಿಧಿಗಳು.
ಕನ್ನಡ ಸಾಹಿತ್ಯಕ್ಕೂ ಮೆಕೆಂಜಿಗೂ ಮರೆಯಲಾಗದ
ಒಂದು ನಂಟು ಇರುವುದನ್ನು ಶ್ರೀನಿವಾಸ ಹಾವನೂರ ಅವರು ತಮ್ಮ ಹೊಸಗನ್ನಡದ ಅರುಣೋದಯ ಕೃತಿಯಲ್ಲಿ
ದಾಖಲಿಸಿದ್ದಾರೆ. ದೇವಚಂದ್ರನ ರಾಜಾವಳೀ ಕಥೆಯ ರಚನೆಗೆ ಅವನೇ
ನಿಮಿತ್ತವಾಗಿದ್ದಾನೆ. ಕ್ರಿ.ಶ. ೧೮೦೪ ರಂದು ಮೆಕೆಂಜಿಯು ತನ್ನ ಸಹಾಯಕನಾದ ಲಕ್ಷಣರಾಯನೊಡನೆ ಸೀಮೆಪೈಮಾಸಿಗೆಂದು ಕನಕಗಿರಿಗೆ ಬಂದು ಸ್ಥಳಪುರಾಣಮುಂಟೆ ಎಂದು ಕೇಳಿದನಂತೆ. ಅದಕ್ಕೆ ದೇವಚಂದ್ರನು ತಾನು ಹಿಂದೆ ರಚಿಸಿದ ಪೂಜ್ಯಪಾದ ಚರಿತೆಯನ್ನು ಓದಿ ಹೇಳಿದಾಗ ಮೆಕೆಂಜಿಯು ಕಮರಹಳ್ಳಿಯಲ್ಲಿ ಒಡ್ಡಿದ್ದ
ತನ್ನ ಗುಡಾರದ ಬಳಿಗೆ ದೇವಚಂದ್ರನನ್ನು ಕರೆದುಕೊಂಡು ಹೋಗಿ ಪೂರ್ವದ ವಾರ್ತೆಗಳನ್ನು ಮೂರು ರಾತ್ರಿ ಚೆನ್ನಾಗಿ ಆಲಿಸಿದನಂತೆ, ಮುಂದೆ ಎರಡು
ತಿಂಗಳು, ಪರ್ಯಂತ
ಬಿಡದೆ ದಿನ ಒಂದಕ್ಕೆ, ಗ್ರಾಸಕ್ಕೆ ಒಂದು ಹಣಮಂ ಕೊಡುತ್ತ, ರಾತ್ರಿ ಕಾಲದೊಳು, ಪೂರ್ವದ ಪ್ರಪಂಚಗಳು:
ಜಾತಿ ಭೇದಗಳು ಮೊದಲಾದ ವಿವರಗಳೆಲ್ಲವನ್ನು ಕೇಳಿಕೊಂಡನಂತೆ. ಅಲ್ಲಿಗೂ ದೇವಚಂದ್ರನನ್ನು ಬಿಡದೆ
ಬಂಗಾಲಕ್ಕೆ ಒಯ್ಯಬೇಕೆಂದಿದ್ದನಂತೆ. ಆದರೆ ಅವನು ಬಹು ವಿಧವಾಗಿ
ಹೇಳಿಕೊಂಡಿದ್ದರಿಂದಲೂ,
ಅವನ ಧರ್ಮೋಪಾಧ್ಯಾಯರು ಸಹ ಅಡ್ಡಿ ಮಾಡಿದ್ದರಿಂದಲೂ ದೇವಚಂದ್ರನ ಬಂಗಾಲ ಪ್ರಯಾಣವು ತಡೆದು ನಿಂತಿತು. ಆದರೆ ಕರ್ನಾಟ ದೇಶದೊಳು ನಡೆದ
ಪ್ರಪಂಚಗಳನ್ನೆಲ್ಲ ಕೋಢೀಕರಿಸಿ ಬರೆದು ನಾವು ಇದ್ದಲ್ಲಿಗೆ ತೆಗೆದುಕೊಂಡು ತಿಂಗಳೊಳಗೆ ಬಂದರೆ ಭಾರಿ ಸಂಬಳವನ್ನು ಮಾಡಿಸಿ ಕೊಡುತ್ತೇನೆಂದು ಹೇಳಿ, ಮೆಕೆಂಜಿಯು
ಲಕ್ಷಣರಾಯನ ಮಾರಿಪತ್ತು ೨೫
ಕುಂಪಣಿ ರೂಪಾಯಿಗಳನ್ನು ಕೊಡಿಸಿ, ಅಪ್ಪಣೆಕೊಟ್ಟು ಕಳುಹಿಸಿಕೊಟ್ಟನೆಂದು, ಆ ಪ್ರಕಾರ ದೇವಚಂದ್ರನು ಬರೆಯಲುಪಕ್ರಮಿಸಿ ಮುಗಿಸಲಿದ್ದಾಗ ಮೆಕೆಂಜಿಯು ಮೈಸೂರನ್ನು ಬಿಟ್ಟು ದೂರ
ಹೋಗಿಬಿಟ್ಟಿದ್ದನು. ( ದೇವಚಂದ್ರನ ರಾಜಾವಳಿ ಕಥಾಸಾರ (ಸಂ. ಬಿ.ಎಸ್.ಸಣ್ಣಯ್ಯ) ಪ್ರಸ್ತಾವನೆ
ಪು.೧೯.) ʻಇದುವೆ ರಾಜಾವಳಿಕಥೆಯ ಉದಯ. ಹೀಗೆ ದೇವಚಂದ್ರನು
ರಾಜಾವಳಿ ಕಥೆಯನ್ನು ಬರೆಯಲು ಮೆಕೆಂಜಿ ಒಂದು ರೀತಿಯಲ್ಲಿ ಕಾರಣ ಕರ್ತನಾಗಿದ್ದಾನೆ. ಕರ್ನಾಟಕ
ಕೋಶವೊಂದನ್ನು (ವಿಶ್ವಕೋಶ) ಸಿದ್ಧಪಡಿಸಲು ಮೆಕೆಂಜಿಯು ದೇವಚಂದ್ರನನ್ನು ಹುರಿದುಂಬಿಸಿದನಾದರೂ ಆ ಎಣಿಕೆಯಲ್ಲಿ
ರಾಜಾವಳಿ ಕಥೆಯು ಸಿದ್ಧವಾಗಲಿಲ್ಲ. ಆದಾಗ್ಯೂ ಆಧುನಿಕ ಪೂರ್ವಕನ್ನಡ
ಸಾಹಿತ್ಯ ಕೃತಿಯಲ್ಲಿ ಮೊತ್ತಮೊದಲಿಗೆ ಕಾಣಿಸಿಕೊಂಡ ಮತ್ತು ಪ್ರಸ್ತಾಪಗೊಂಡ
ಪಾಶ್ಚಾತ್ಯ ವ್ಯಕ್ತಿಯು ಮೆಕೆಂಜಿಯೇ ಆಗಿದ್ದಾನೆ.
೩. ದಾಖಲು ಸಾಹಿತ್ಯದ ಪ್ರಮುಖ ಭಾಗಗಳಾದ ಕೈಫಿಯತ್ತುಗಳ
ರಚನೆ ಮತ್ತು ಸಂಗ್ರಹ, ನಾಣ್ಯಗಳು ಮತ್ತು ಪ್ರಾಚ್ಯ ಅವಶೇಷಗಳ ಸಂಗ್ರಹ, ನಕಾಶೆಗಳ ನಿರ್ಮಾಣ: ಕರ್ನಲ್ ಕಾಲಿನ್ ಮೆಕೆಂಜಿಯು ಹೊರದೇಶದಿಂದ ಬಂದು ನಮ್ಮ ಸಂಸ್ಕೃತಿ, ನಮ್ಮಆಚಾರ-ವಿಚಾರಗಳನಲ್ಲದೆ, ನಮ್ಮ
ಭಾಷೆಯನ್ನು ಕಲಿತು ಕರ್ನಾಟಕವನ್ನು ಸುತ್ತಾಡಿ ಅನೇಕ ಕೈಫಿಯತ್ತುಗಳನ್ನು ಸ್ಥಳೀಯ ಪಂಡಿತರಾದ
ಕಾವಲ್ಲಿ ಭೋರಯ್ಯ,ಲಕ್ಷ್ಮಯ್ಯ, ಚಾಮರಾಜನಗರದ ದೇವಚಂದ್ರರಂಥ ಪಂಡಿತರ ಸಹಾಯ ಪಡೆದು ಆಯಾ ಜಾತಿಯ
ಧರ್ಮಗುರುಗಳಿಂದ, ಸಮಸ್ತಶಾನುಭೋಗರಿಂದ, ದೈವದವರಿಂದ, ಏಕವ್ಯಕ್ತಿಗಳಿಂದ ಕೈಫಿಯತ್ತುಗಳನ್ನು ಬರೆಸಿದ್ದು ಮಹತ್ತರ ಸಾಧನೆಯಾಗಿದೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ತನ್ನ ಸಂಶೋಧನ ಸಹಾಯಕರೊಂದಿಗೆ ಮೆಕೆಂಜಿಯು ಹೋದ
ಭಾಗಗಳಲ್ಲಿ ದೇಶೀಯವಿದ್ವಾಂಸರಿಂದ ಮೆಕೆಂಝಿ ಕೈಫಿಯತ್ತುಗಳನ್ನು ಬರೆಯಿಸಿಕೊಳ್ಳುತ್ತಿದ್ದನೆಂಬುದಕ್ಕೆ ಆತನ ಸಂಗ್ರಹದ
ಆಯಾ ಕೈಫಿಯತ್ತುಗಳ ಆದಿ-ಅಂತ್ಯ ಪ್ರಶಸ್ತಿಗಳೇ
ತಿಳಿಸಿಕೊಡುತ್ತವೆ. ಕೆಲವೊಮ್ಮೆ ಆತನ ಕೈಕೆಳಗಿನ ಅಧಿಕಾರಿಗಳೇ ಬರೆದುಕೊಂಡು, ಬರೆಯಿಸಿಕೊಂಡು
ಆಕರ ಸಾಮಗ್ರಿಯನ್ನು ತರುತ್ತಿದ್ದ ಬಗೆಗೆ ನಿದರ್ಶನಗಳಿವೆ.
ಕೆಳದಿ ನೃಪವಿಜಯವನ್ನು ಕುರಿತು “ಶಕವರ್ಷ ೧೨೭ನೆಯ ಕ್ರೋಧನ ಸಂ||ದ||ಬ॥ ೧೨ ಉ ಈ ವಂಶಾವಳಿ
ಪ್ರತಿಯನ್ನು ಫರಂಗಿ ಮೇಜರ ಮಕ್ಕಂಜಿಸಾಹೇಬರ ಕಡೆ ನಾರಾಯಣರಾಯರು ಕಡತದ ಮೇಲೆ ಬರೆಯಿಸಿಕೊಂಡು ಹೋದರು”
ಎಂಬ ವಿವರವು ಮದ್ರಾಸಿನ ಹಸ್ತಪ್ರತಿಗಳ ವರ್ಣನಾತ್ಮಕ
ಸೂಚಿ ಸಂಪುಟ ೫ ರ ಕ್ರಮಸಂಖ್ಯೆ ೧೧೨೩ ನೇ ಸಂಕ್ಯೆಯ ಹಸ್ತಪ್ರತಿಯಿಂದ ತಿಳಿದು ಬರುತ್ತದೆ. ಈ ಸಂಗತಿಗಳು
ಕೈಫಿಯತ್ತುಗಳ ನಿರ್ಮಾಣದಲ್ಲಿ ಅವನ ಸಹಾಯಕ
ಸಿಬ್ಬಂದಿಗಳೂ ಆಕರ ಸೃಷ್ಟಿ ಕಾವ್ಯದಲ್ಲಿ ಅವನಿಗೆ ನೆರವಾಗುತ್ತಿದ್ದರೆಂಬುದನ್ನು ತಿಳಿಸಿಕೊಡುತ್ತವೆ.
ಬ್ರಿಟೀಷ್ ಸರ್ಕಾರದಿಂದ ಸರ್ವೇಯರ್ ಅಗಿ ನೇಮಕ ಹೊಂದಿದ ಮೆಕೆಂಜಿಯು ಕ್ರಿ.ಶ. ೧೭೮೩ ರಿಂದ ೧೮೨೧ ರ ವರೆಗೆ ೩೮ ವರ್ಷ ಭಾರತದ ವಿವಿಧ
ಪ್ರಾಂತ್ಯಗಳನ್ನು ಸುತ್ತಿ ಸರ್ವೇಕ್ಷಣ ಪರಿಣಿತನೆನಿಸಿ ಸುಮಾರು ೭೯
ನಕ್ಷೆಗಳನ್ನು ರಚಿಸಿದ. ಅವನ ಕಾರ್ಯ ವೈಖರಿ ಮೆಚ್ಚಿದ ಕಂಪನಿಯು ಅವನ್ನು ಭಾರತದ ಪ್ರಥಮ ಸರ್ವೇಯರ್
ಜನರಲ್ ಆಗಿ ನೇಮಕಮಾಡಿತು. ಮೆಕೆಂಜಿ ಕೇವಲ ಭೂಮಾಪನ ಅಧಿಕಾರಿಯಾಗಿದ್ದರೆ ಸಾವಿರಾರು ಅಧಿಕಾರಿಗಳಲ್ಲಿ
ಒಬ್ಬರಾಗುತ್ತಿದ್ದನು, ಇತಿಹಾಸದಲ್ಲಿ ಅವರ ಹೆಸರು
ಅಜರಾಮರವಾಗುತ್ತಿರಲಿಲ್ಲ. ಅವನು ಬರಿ ಭೂಮಿಯನ್ನು ಮೋಜಣಿ ಮಾತ್ರ ಮಾಡದೆ ಅಲ್ಲಿನ ಜನ ಜೀವನವನ್ನು
ದಾಖಲೆ ಮಾಡಿದುದು ವಿಶೇಷವಾಗಿದೆ. ಕಾಗದದ ಬಳಕೆ ಅದೇ ತಾನೆ ಪ್ರಾರಂಭವಾಗಿದ್ದಿತು. ತಮ್ಮ ಸಹಾಯಕ್ಕಾಗಿ ಅಲ್ಲಿನ ಜನ ಹೇಳಿದುದನ್ನು ಬರೆದುಕೊಳ್ಳಲು ದೇಶೀಯ ಭಾಷೆ, ಸಂಸ್ಕೃತ ಮತ್ತು ಇಂಗ್ಲಿಷ್ ಬಲ್ಲ ವಿದ್ಯಾವಂತ
ಬ್ರಾಹ್ಮಣ ನೌಕರರನ್ನು ನೇಮಿಸಿಕೊಂಡರು. ಅಲ್ಲಿನ ಪ್ರತಿ ಊರಿನ ಜನರ
ಆಚಾರ-ವಿಚಾರ, ಜಾತಿ –ಜನಾಂಗ,ನಂಬಿಕೆ ಆಚರಣೆ , ಇತಿಹಾಸ – ಐತಿಹ್ಯ ಅಂದಂದೇ ಸ್ಥಳಿಯ ಲಿಪಿಕಾರರಿಂದ ಬರೆಸಿ ದಾಖಲೆ ಮಾಡಿ ಸಂಗ್ರಹಿಸಿದನು. ತಾನು ನೇಮಿಸಿಕೊಂಡಿದ್ದ ಸಹಾಯಕರ ಸಹಕಾರದಿಂದ ಆಯಾ ಊರುಕೇರಿಗಳ ಆಚಾರ-ವಿಚಾರ, ಜಾತಿ-ಜನಾಂಗ, ಕುಲಗೋತ್ರಗಳನ್ನೆಲ್ಲ
ಬರೆಯಿಸಿಕೊಳ್ಳುವುದನ್ನು ನೋಡಿದರೆ ಮೆಕೆಂಜಿಯ ಒಳಗೆ ಮಾನವಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ, ಚರಿತ್ರಕಾರ, ದಕ್ಷ
ಅಧಿಕಾರಿ ಹೀಗೆ ಅನೇಕಾನೇಕರು ಅಡಗಿರುವುದನ್ನು ಯಾರಾದರೂ ಗಮನಿಸಬಹುದು.
ಕ್ರಿ.ಶ.1799 ರಲ್ಲಿ ಟಿಪ್ಪು ಸೋಲಿನ ನಂತರ, 1800 ರಲ್ಲಿ
ಹೈದರಾಬಾದ್‌ನ ನಿಜಾಮ್ ಬ್ರಿಟಿಷರಿಗೆ ಹಸ್ತಾಂತರಿಸಿದ ಮೈಸೂರು ಪ್ರಾಂತ್ಯಗಳ ಬಗ್ಗೆ ಸಮೀಕ್ಷೆ
ನಡೆಸಲು ಮೆಕೆಂಜಿಯನ್ನು ಕೇಳಲಾಯಿತು. ಈ ಕೆಲಸಕ್ಕೆ ಮೆಕೆಂಜಿ ವ್ಯಾಖ್ಯಾನಕಾರರ, ಡ್ರಾಫ್ಟ್‌ಮನ್‌ಗಳ
ಮತ್ತು ಸಚಿತ್ರಕಾರ ಒಂದು ದೊಡ್ಡ ತಂಡವನ್ನು ರಚಿಸಿದರು. ಈ ತಂಡದ ಸಹಾಯದಿಂದ ಮೆಕೆಂಜಿಗೆ
ನೈಸರ್ಗಿಕ ಇತಿಹಾಸ, ಭೌಗೋಳಿಕತೆ, ವಾಸ್ತುಶಿಲ್ಪ, ಸ್ಥಳೀಯ
ಇತಿಹಾಸ, ಸಾಮಾಜಿಕ
ಪದ್ಧತಿಗಳು ಮತ್ತು ಮೈಸೂರು ಮತ್ತು ರಾಯಲಸೀಮಾ ಪ್ರದೇಶಗಳಲ್ಲಿನ ಜಾನಪದ ಕಥೆಗಳ ಮಾಹಿತಿಯ ನಿಧಿಯ
ಸಂಗ್ರಹಣೆ ಮಾಡಲು ಸಾಧ್ಯವಾಯಿತು.
ಮೆಕೆಂಜಿಯ ಭಾರತದಲ್ಲಿಯ ಸೇವೆಯಲ್ಲಿ ಪ್ರಮುಖವಾಗಿ ಕಂಡು ಬರುವುದು ಕೈಫಿಯತ್ತುಗಳು ಸಂಗ್ರಹ ಮತ್ತು ರಚನೆ ಕೆಲಸ. ಕೈಫಿಯತ್ತುಗಳ ಸಂಗ್ರಹದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿದ ಮೆಕೆಂಜಿಯು ಹಗಲಿನಲ್ಲಿ ಸರ್ವೆ ಕೆಲಸ
ಮುಗಿಸಿಕೊಂಡು ರಾತ್ರಿ ಡೇರೆಯಲ್ಲಿ ಕುಳಿತು ಹಲವಾರು ವಿದ್ಯಾವಂತ ಸಹಾಯಕರ ಒಡಗೂಡಿ ಕೈಫಿಯತ್ತುಗಳ
ಬರವಣಿಗೆಗೆ ತೊಡಗುತ್ತಿದ್ದನು. ಅವರಿಗೆ ತನ್ನ ವೇತನದಿಂದಲೇ ಸಂಬಳ ನೀಡಿ ದಾಖಲೆ
ಕಾರ್ಯಮುಂದುವರೆಸಿದ. ಸ್ಥಳೀಯ
ಆಡಳಿತ ಮತ್ತು ಆಡಳಿತಾಧಿಕಾರಿಗಳನ್ನು ಕುರಿತು ಸ್ಥಳೀಯರಿಂದಲೇ ಬರೆಯಲ್ಪಟ್ಟ ಬರಹವಿದು. ಸ್ಥಳಪುರಾಣ,
ಸ್ಥಳನಾಮ, ನಾಮೆ
ಮುಂತಾದ ಹೆಸರುಗಳಿಂದ ಗುರುತಿಸಲ್ಪಡುವ ಪ್ರಸ್ತುತ ಪ್ರಕಾರವು ಸ್ಥಳೀಯ ಸಣ್ಣಪುಟ್ಟ ಸಂಸ್ಥಾನಗಳ
ಚರಿತ್ರೆಯನ್ನು ರಂಜನೀಯವಾಗಿ ರಚಿಸಲು ಆಕರವಾಗಿದೆ. ಇದೆಲ್ಲದಕ್ಕೂ ಕಾರಣ ಕರ್ತೃ ಕರ್ನಲ್ ಮೆಕೆಂಜಿ. ರಾಜಾವಳಿ ಕೃತಿಕಾರ ದೇವಚಂದ್ರನು ". . . . ಎನ್ನ ಬಿಡದೆ
ಕಮರಹಳ್ಳಿ ಬಳಿಯ ಒಡ್ಡಿರ್ದ ಗುಡಾರದ ಬಳಿಗೆ ಕರೆದುಕೊಂಡುಹೋಗಿ . . . .ಎರಡು ತಿಂಗಳ ಪರಂತರು
ಬಿಡದೆ ದಿನ ಒಂದಕ್ಕೆ ಗ್ರಾಸಕ್ಕೆ ಒಂದು ಹಣಮಂ ಕೊಡುತ್ತ ರಾತ್ರಿ ಕಾಲದೊಳು ಪೂರ್ವದ ಪ್ರಪಂಚಂಗಳು ಜಾತಿಭೇದಂಗಳು ಮೊದಲಾದ ವಿವರಗಳನ್ನೆಲ್ಲವ
ಕೇಳುತ್ತಾ . . . ಜಾತಿ ಕೋಮುವಾರು, ಕುಳ,ಮನೆ, ಜನಜೀವನ ಮೊದಲಾದವು ಜಮಾಬಂದಿ ಮುಂತಾದವಂ ಬರೆಯಿಸಿಕೊಂಡು . . . .
ಲಕ್ಷ್ಮಣರಾಯನ ಮಾರಿಫತ್ತು ಇಪ್ಪತ್ತೈದು ಕುಂಪಣಿ
ರೂಪಾಯಿಯನ್ನು ಕೊಡಿಸಿ ಅಪ್ಪಣೆ ಕೊಟ್ಟು ಕಳಿಸಿಕೊಟ್ಟ" ಎಂದು ಹೇಳುವಲ್ಲಿ ಕೈಫಿಯತ್ತುಗಳ ಸೃಷ್ಟಿಕಾರರನ್ನು ಕಾಣುತ್ತೇವೆ. ಮೆಕೆಂಜಿ ಸಂಗ್ರಹಿಸಿದ ಕನ್ನಡ ಕೈಫಿಯತ್ತುಗಳಲ್ಲಿ
ಚಾರಿತ್ರಿಕ ಮಹತ್ವ ಉಳ್ಳಂತಹವು, ಪೌರಾಣಿಕ ಮಹತ್ವ ಉಳ್ಳವು, ಸಮಾಜದ
ಆಚಾರವಿಚಾರಗಳಿಗೆ ಸಂಬಂಧಿಸಿದವು ಮತ್ತು ಸ್ಥಳನಾಮ ಪರಿಚಯ ಉಳ್ಳವುಗಳು ಗಮನಾರ್ಹವಾಗಿವೆ. ಆ ದಾಖಲೆಗಳೇ ಅತ್ಯಮೂಲ್ಯವಾವಾದ, ವಿಶಿಷ್ಟವಾದ
ಐತಿಹಾಸಿಕ ಆಕರಗಳಾದ ಕೈಫಿಯತ್‌ಗಳೆನಿಸಿವೆ. ಮೆಕೆಂಜಿಯ ಪ್ರಕಾರ ಕೈಫಿಯತ್ ಎಂದರೆ ಸ್ಥಳ ಪುರಾಣ,
ಐತಿಹ್ಯ,ಜಾನಪದ ಮತ್ತು ಇತಿಹಾಸಗಳನ್ನು ಒಳಗೊಂಡಿದ್ದು,
ಅದರ ಮೂಲ ಸ್ಥಳೀಯ ಅಧಿಕಾರಿಗಳು,
ಪಟೇಲರು, ಶಾನುಭೋಗರು, ಪಂಡಿತರು
ಸ್ವತಃ ಬರೆದು ಕೊಟ್ಟಿದ್ದವುಗಳು. ಇವು ಸ್ಥಳೀಯ ಇತಿಹಾಸವನ್ನು ಅನಾವರಣಗೊಳಿಸುವ ಕೀಲಿ ಕೈ ಆಗಿವೆ. ಒಂದು ಅಂದಾಜಿನ ಪ್ರಕಾರ ಬ್ರಿಟಿಷ್ ಈಸ್ಟ್ ಇಂಡಿಯಾ
ಕಂಪೆನಿಯಲ್ಲಿ ಸರ್ವೇಯರ್ ಜನರಲ್ ಆಗಿದ್ದ ಕರ್ನಲ್ ಮೆಕೆಂಜಿಯು ೪೨೦೦ಮೈಲು ದೂರ ಸುತ್ತಾಡಿ, ಸ್ಥಳೀಯ ಚರಿತ್ರೆಯನ್ನೊಳಗೊಂಡ ಸುಮಾರು ೨೦೭೦ಕ್ಕೂ ಮಿಕ್ಕಿ ಕೈಫಿಯತ್ತುಗಳನ್ನು ಬರೆಯಿಸಿದ ಹಾಗೂ
ಬರೆದವುಗಳನ್ನು ಸಂಗ್ರಹಿಸಿದ ದಾಖಲಸ್ಥ ವಿದ್ವಾಂಸನೆನಿಸಿದ್ದಾನೆ.
ಹೈದ್ರಾಬಾದ ಮತ್ತು
ಮೈಸೂರು ಪ್ರಾಂತಗಳ ಭೂಪರಿವೀಕ್ಷಣೆಯ ಕಾರ್ಯ ಕೈಗೊಂಡಿರುವಾಗಲೇ
ಇಲ್ಲಿ ಸ್ಥಳೀಯ ಐತಿಹ್ಯಗಳನ್ನು
ಅಲ್ಲಲ್ಲಿನ ಹಿರಿಯರಿಂದ ಕೇಳಿ ದಾಖಲು ಮಾಡಿಕೊಂಡ ಬರಹ ರೂಪದ ಹೇಳಿಕೆಗಳೇ ಕೈಫಿಯತ್ತುಗಳು. ಆತ ಸಂಗ್ರಹಿಸಿದ ಈ
ಕೈಫಿಯತ್ತುಗಳು ಇಂದಿನ ಸಂಶೋಧಕರಿಗೆ ಬಹು ಬೆಲೆಯುಳ್ಳ ಆಕರ ಸಾಮಗ್ರಿಗಳು. ಅಂದಿನ ರಾಜಕೀಯ, ಆರ್ಥಿಕ, ಧಾರ್ಮಿಕ, ಸಾಮಾಜಿಕ, ಆಡಳಿತಾತ್ಮಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನೆಲ್ಲ ಇವು
ತನ್ನ ಒಡಲಲ್ಲಿ ಇಟ್ಟುಕೊಂಡಿವೆ.
ಜಾತಿ-ಜನಾಂಗ, ಕುಲಗೋತ್ರಗಳಲ್ಲದೆ ಅಂದಿನ ವಾಸ್ತು ವಾಣಿಜ್ಯ ವಿಷಯಗಳನ್ನು ಕರಾರುವಾಕ್ಕಾಗಿ ಹೇಳುತ್ತವೆ. ಹೊಯ್ಸಳ,
ಕಂಪಿಲ,
ವಿಜಯನಗರ,
ಮರಾಠ,
ಮುಸ್ಲಿಂ ಮುಂತಾದ ರಾಜಮನೆತನಗಳ
ಇತಿಹಾಸವಂತೂ ಹೇರಳವಾಗಿ ನೀಡುತ್ತವೆ. ಇತಿಹಾಸ ಮತ್ತು ಜನಾಂಗಿಕ ಅಭ್ಯಾಸಿಗಳಿಗೆ 'ಚನ್ನಯ್ಯ ಕುಲದ ಕೈಫಿಯತ್ತು,
ಕುಡಿಕುಂಬಾರ ಜಾತಿ ಕೈಫಿಯತ್ತು,
ಕೊರಮರುವಾಂಡಕೈಫಿಯತ್,
ತೆಲುಗು ಬಾಣಸಿಗರ ಕೈಫಿಯತ್ತು,
ಚಾರಿವಾಜು ಕೈಫಿಯತ್ತು,
ಮಣ್ಣುವ ಜಾತಿ ಕೈಫಿಯತ್,
ಮರಾಠವಾಡ ಕೈಫಿಯತ್ತು, ಗಂಗಡಿಕಾರ - ವಕ್ಕಲಿಗರ ಕೈಫಿಯತ್ತು,
ಉಪ್ಪಜಿ ಬಣಜಿಗರ ಕೈಫಿಯತ್ತು ಹೀಗೆ ಇತ್ಯಾದಿ ಕೈಫಿಯತ್ತುಗಳು ಜನಾಂಗೀಯ
ಅಧ್ಯಯನಕ್ಕೆ ಬಹುಮುಖ್ಯವಾಗಿವೆ. ಕರ್ನಾಟಕದ ಪ್ರತಿಷ್ಠಿತ ಮಠಗಳಾದ ಪುತ್ತಿಗೆ, ಕೃಷ್ಣಪುರ, ಪೇಜಾವರ, ಸೋದೆ, ಫಲಿಮಾರು
ಮುಂತಾದ ಮಠಗಳ ಸಾಂಸ್ಕೃತಿಕ ಚರಿತ್ರೆ ರೂಪಿಸುವ ಕೈಫಿಯತ್ತುಗಳು ಸಹ ಮೆಕೆಂಜಿ ಸಂಗ್ರಹದಲ್ಲಿವೆ. ಮೆಕೆಂಜಿಯ ಸಂಗ್ರಹಿಸಿದ ಕೈಫಿಯತ್ತುಗಳು ನಾಡಿನ ಐತಿಹ್ಯ,
ಚರಿತ್ರೆ,
ಪುರಾಣ,
ಮರಗಿಡ,
ನದಿಬೆಟ್ಟ,
ಜನಸಮೂಹ ಪ್ರಾಣಿಪಕ್ಷಿಗಳನ್ನೆಲ್ಲ
ಪರಿಚಯಿಸುತ್ತವೆ.
ಟಿಪ್ಪುಸುಲ್ತಾನನು ಆಂಗ್ಲ
ಅಧಿಕಾರಿಯೊಡನೆ ನಡೆಸಿದ ೫೮೬ ಪುಟಗಳ ಸಂಭಾಷಣೆ ಮೆಕೆಂಜಿಯ ಸಂಗ್ರಹದಲ್ಲಿದೆ. ಮರಾಠ
ಮನೆತನ, ಸಮಕಾಲೀನರ ನೆನಪಿನ ದಾಖಲೆ, ಚೋಳರಾಜಾಂಚೆಕಥಾ, ಘೋರ್ಪಡೆಯಾಂಚಿ ಕೈಫಿಯತ್ತು, ಲೋಹಾಚಲ ಮಹಾತ್ಮೆಗಳು ದಕ್ಷಿಣ ಭಾರತದ ಇತಿಹಾಸದ ಮಹತ್ವದ ಆಕರ ಸಾಮಗ್ರಿಗಳಾಗಿವೆ.
ಈತನು ದಾಖಲಿಸಿದ ಶಿವಮೊಗ್ಗದ ಚರಿತ್ರೆ ಬಗ್ಗೆ, ಆತ ಬರೆದ ಒಂದು
ಚಿತ್ರ ಕೆಳದಿ ಅರಸರ ಕಾಲದ ಶಿವಮೊಗ್ಗ ಹೇಗಿತ್ತು ಅನ್ನೋ ಚಿತ್ರಣವನ್ನು
ಕಣ್ಣ ಮುಂದೆ ತರುತ್ತದೆ. ಶಿವಮೊಗ್ಗಕ್ಕೆ ಬಂದು ಇಲ್ಲಿಯ ಇತಿಹಾಸವನ್ನು
ವರ್ಣಚಿತ್ರದಲ್ಲಿ ದಾಖಲಿಸಿದ್ದು ವಿಶೇಷವಾಗಿದೆ. ಇಡೀ ದಕ್ಷಿಣ
ಭಾರತದ ಇತಿಹಾಸದ ಬಗ್ಗೆ ಅಪಾರ ಆಸಕ್ತಿ ವಹಿಸಿ, ಊರೂರು ಸುತ್ತಾಡಿ, ಅಪರೂಪದ ಮಾಹಿತಿಗಳನ್ನು ದಾಖಲಿಸಿದ್ದು, ಇವು ಅತ್ಯಂತ ನಂಬಲರ್ಹ ಚಾರಿತ್ರಿಕ ದಾಖಲೆಗಳಾಗುತ್ತವೆ.
ಮೆಕೆಂಜಿ ವಿವಿಧ ಸ್ಥಳಗಳಲ್ಲಿ
ಸಂಗ್ರಹಿಸಿದ ಕೈಫಿಯತ್ತುಗಳ ಭಾಷೆಯಲ್ಲಿ ಏಕರೂಪತೆ ಇದೆ. ಸೋದೆ ಮನೆತನದ ರಾಮಚಂದ್ರ ನಾಯಕರು
ಮತ್ತು ಸದಾಶಿವ ನಾಯಕರು ಬಿದನೂರಿಗೆ ರಾಮಚಂದ್ರಪುರ' ಎಂದು ಹೆಸರಿಟ್ಟು
ಆಳಿದ ವಿವರಗಳನ್ನು ದಾಖಲಿಸಿದೆ. ಚೌಟ
ಅರಸರ ಕೈಫಿಯತ್ತನ್ನು ಮೆಕೆಂಜಿ ಬರೆಸಿದ. ಈ ಕೈಫಿಯತ್ತಿನಲ್ಲಿ ಬರುವ ಸಂಗತಿ
ಇತಿಹಾಸದಲ್ಲಿ ದಾಖಲಾಗಿರುವ ಸಂಗತಿಯೇ ಆಗಿದೆ. 2 ನೆ ಭೋಜರಾಯ (1470 – 1510) ಬಲಿಷ್ಟ ರಾಜನಾಗಿದ್ದನು; ಇವನು ಕೃಷ್ಣ ದೇವರಾಯನನ್ನು ಭೇಟಿ
ಮಾಡಿದನು. ಅವನು ಗೌರವಪೂರ್ವಕವಾಗಿ ಹಿಂದಿನ ಕಪ್ಪವನ್ನು ಮಾಫಿ ಬಿಟ್ಟು ಹೊಸ ಒಪ್ಪಂದ ಮಾಡಿಕೊಂಡು
ಭೋಜರಾಯನನ್ನು ಬಿರುದು ಬಾವಲಿಗಳನ್ನು ಕೊಟ್ಟು ಗೌರವಪೂರ್ವಕವಾಗಿ ಕಳಿಸಿದನು. ಆಗ ಸುಬ್ರಾಯ ದೇವರ
ವಿಗ್ರಹವನ್ನು ತಂದು ಕಡಂದಲೆಯಲ್ಲಿ ಸ್ಥಾಪಿಸಿದನು. ಬೋವಿ ಜನಾಂಗದವರಿಗೆ ಮೂಡಬಿದಿರೆಯಲ್ಲಿ
ಮಾರಿಗುಡಿಯನ್ನು ಕಟ್ಟಿಸಿಕೊಟ್ಟನು. (ಡಾ. ಪೀಟರ್ ವಿಲ್ಸನ್ ಪ್ರಭಾಕರ್, ತುಳು ಕರ್ನಾಟಕದ ಅರಸು ಮನೆತನಗಳು.
ಪ್ರಸಾರಾಂಗ, ಕನ್ನಡ
ವಿ. ವಿ. ಹಂಪಿ. 2000).ಈ ಕೈಫಿಯತ್ತಿನಲ್ಲಿಯ ವಿವರಗಳನ್ನುಳ್ಳ ಈ ಸ್ಥಳೀಯ
ಕತೆಗೆ ಇತಿಹಾಸದ ಆಧಾರವಿದೆ ಎನ್ನುವುದು ಮುಖ್ಯ. ಐತಿಹ್ಯಗಳು ಹೀಗೆ ಬಾಯಿಯಿಂದ
ಬಾಯಿಗೆ ಪ್ರಸಾರವಾಗುತ್ತ ಸುಮಾರು ನಾಲ್ಕುನೂರು ವರ್ಷಗಳ ನಂತರವೂ ಮೂಲದ ಆಶಯಕ್ಕೆ ಮತ್ತು ಕಥನದ
ತಳಹದಿಗೆ ಧಕ್ಕೆಯಾಗದಂತೆ ಉಳಿದುಕೊಂಡು ಬಂದಿವೆ ಎನ್ನುವುದು ಐತಿಹ್ಯಗಳ ಮಹತ್ವವನ್ನು
ಸೂಚಿಸುತ್ತದೆ. ಹೀಗೆ ಇತಿಹಾಸದ ಪ್ರಮುಖ ಘಟನೆಗಳು ಬಹುಶಃ ವೈಭವೀಕರಣಗೊಂಡು ಪ್ರಸಾರಗೊಳ್ಳುವ ರೀತಿ
ಹೇಗೆ ಎನ್ನುವ ಬಗ್ಗೆ ಅಧ್ಯಯನವಾದಂತಿಲ್ಲ.
ಶಿರ್ಸಿ ಮಾರಮ್ಮ ದೇವರ ಕೈಫಿಯತ್ತು : ಈ ಕೈಫಿಯತ್ತಿನಲ್ಲಿ ಮಾರಮ್ಮ
ಸಿರ್ಸಿಗೆ ಬಂದ ಕುತೂಹಲಕರ ಹಿನ್ನೆಲೆ ಇದೆ. ಈ ಕೈಫಿಯತ್ತಿನ ಸಾರಾಂಶ ಹೀಗಿದೆ: ಒಮ್ಮೆ ಮೊಗಲರ
ದಂಡು ಬಂಕಾಪುರದ ಕಿಲ್ಲೆಗೆ ಧಾಳಿಇಟ್ಟಿತು, ಆಗ ಅಲ್ಲಿಯ ಜನರೆಲ್ಲಾ ಮೊಗಲರ ಆಜ್ಞೆಯಂತೆ
ಗಡಿಪಾರಾಗಬೇಕಾಯ್ತು .ಆ ಸಮಯಕ್ಕಾಗಲೇ ಅಲ್ಲಿದ್ದ ಮಾರಿದೇವತೆಯನ್ನು ಪೆಟ್ಟಿಗೆಯಲ್ಲಿ ಹಾಕಿ ಅರಗಿನ
ಸೀಲು ಹಾಕಿದ್ದು, ಗಡಿ
ಪಾರಾದ ಜನರ ಪೈಕಿ ಒಬ್ಬ ಕೋಟೆಯಿಂದ ಹೊರಬರುವಾಗ ಆ ಪೆಟ್ಟಿಗೆಯನ್ನು, ಏನೋ
ಬೆಲೆಬಾಳುವ ವಸ್ತು ಇರಬೇಕೆಂದು ಹೊತ್ತು ತರುತ್ತಾನೆ. ಈ ಜನರೆಲ್ಲಾ ಸಿರ್ಸಿಯ ಕೋಟಿಕೆರೆ
ಮೇಲೆ ಇಳಿದುಕೊಂಡರು. ಆ ಸಮಯದಲ್ಲಿ ಆ ದೇವರು ಅಲ್ಲಿದ್ದ ಹುಡುಗನೊಬ್ಬನ ಮೇಲೆ ಬಂದು, 'ನಾನು
ಬಂಕಾಪುರದ ಮಾರಿ, ನನಗೆ
ಇಲ್ಲಿ ಇರಲು ಸರಿಯಾದ ಸ್ಥಳ ಮಾಡಿಕೊಡಿ' ಎಂಬ ಅಪ್ಪಣೆ ಆಯ್ತು. ಅದೇ ಪ್ರಕಾರ ಸಿರ್ಸಿ ಊರಿನ ಜನರೆಲ್ಲಾ ಕೂಡಿ
ವಿಜೃಂಭಣೆಯಿಂದ ಆ ದೇವತೆಯನ್ನು ಪೇಟೆಯೊಳಗೆ ತಂದು ಸ್ಥಾಪಿಸಿದರು. ಪೂಜೆ ಪುನಸ್ಕಾರಗಳಿಗೆ ಕೆಲವು
ಜಮೀನು ಬಿಡಲಾಯಿತು. ಅದೇ ಸಮಯಕ್ಕೆ ಮೂರು ವರ್ಷಕ್ಕೊಮ್ಮೆ ಹಬ್ಬ ಮಾಡಬೇಕೆಂತ ಅಪ್ಪಣೆಯೂ ಆಯ್ತು.
ಪೂಜೆಗೆ ಸಂಬಾಳ ನರಸಣ್ಣಯೆಂಬುವವನನ್ನು ನೇಮಿಸಲಾಯ್ತು. ಈಗಲೂ ಸಿರ್ಸಿಯ ಮಾರಮ್ಮ ಈ ಕಡೆ ಜನರಿಗೆ
ಪ್ರಸಿದ್ಧ ದೇವತೆಯಾಗಿದ್ದಾಳೆ,
ಇಲ್ಲಿ ಬ್ರಾಹ್ಮಣೇತರರಿಂದಲೇ ಪೂಜೆ ನಡೆಯುತ್ತಾ ಬಂದಿದೆ.(ಜಿ.ಎಂ.ಹೆಗಡೆ,
ಹಸ್ತಪ್ರತಿಗಳು: ಮೆಕೆಂಜಿ ಸಂಗ್ರಹ, ಮಣಿಹ,ಪು.೨೪೬) ಹೀಗೆ ಮೆಕೆಂಜಿಯು ಕೊಡ ಮಾಡಿರುವ ದಾಖಲಾರ್ಹ ವಿವರವು
ಶಿರಸಿಯ ಮಾರಮ್ಮನ ಚರಿತ್ರೆಯ ಅಧ್ಯಯನಕ್ಕೆ ಪ್ರಮುಖ ಆಕರವಾಗಿದೆ.
ಸ್ಥಳನಾಮ ಪರಿಚಯಿಸುವ ಕೈಫಿಯತ್:
ಕಸಬಾ ಶಿರಸಿಗೆ ಪಶ್ಚಿಮ
ದಿಕ್ಕಾಗ ಲಿಂಗದ ಕೊಣಾ ಯಂತ ಒಂದು ತಟಾಕ ಉಂಟು, ಯಿದಕ್ಕೆ ಲಿಂಗದ ಕೊಣಾಯಂತ ಹೆಸರು
ಬಂದದ್ದು ಹ್ಯಾಗೆಂದರೆ,
ಕೆಳಗೆ ಕೊಣಾ' ಮೇಲೆ'ಲಿಂಗ' ಇರುವುದರಿಂದ
ಜನರು ಈ ಎರಡೂ ಕೂಡಿಸಿ ಲಿಂಗದ ಕೊಣದರಾಮೇಶ್ವರ ದೇವರತ ಹೇಳುತ್ತಾರೆ.” ಇಂದಿಗೂ ಈ ಸ್ಥಳವನ್ನು
ನೋಡಬಹುದು. ಇಂದು ಈ ಸ್ಥಳಕ್ಕೆ ಲಿಂಗದ ಕೊಣದೆ ಬದಲಾಗಿ ಲಿಂಗದ ಕೋಣ' ಎಂದು
ಹೇಳುತ್ತಾರೆ. ಈ ಸ್ಥಳನಾಮಗಳು ಒಂದು ನಾಡಿನ ಸಾಂಸ್ಕೃತಿಕ ರಾಜಕೀಯ ಹಿನ್ನೆಲೆಯನ್ನು
ಅರ್ಥಮಾಡಿಕೊಳ್ಳುವಲ್ಲಿ ಸರಿಯಾದ ಆಧಾರಗಳನ್ನು ಒದಗಿಸಬಲ್ಲವುಗಳಾಗಿವೆ. (
ಅದೇ, ಪು.೨೪೭)
ಜಾತಿಗೆ ಸಂಬಂಧಿಸಿದ
ಕೈಫಿಯತ್ತು: ಭಾರತವು ಹಲವು ಧರ್ಮಗಳ ನೆಲೆವೀಡು ಹಿಂದು ಧರ್ಮದಲ್ಲಿ ಅನೇಕ ಪಂಗಡಗಳಿದ್ದು, ಇವರ
ಆಚಾರವಿಚಾರ ವಿಶಿಷ್ಟವಾಗಿದೆ. ಇವರು ಆಚರಿಸುವ ಹಬ್ಬ ಹರಿದಿನ ಇವುಗಳು ಸಮಾಜದಿಂದ ಇನ್ನೊಂದು
ಸಮಾಜಕ್ಕೆ ಭಿನ್ನವಾಗಿವೆ. ಇವುಗಳನ್ನು ಮೆಕೆ<ಜಿ ಸಂಗ್ರಹಿಸಿದ ಕೆಲವು ಕೈಫಿಯತ್ತುಗಳು ಸ್ಪಷ್ಟ ಪಡಿಸುತ್ತವೆ. ನಿದರ್ಶನಕ್ಕೆ ಮೇದರ ಜಾತಿಯ ಕೈಪಿಯತ್ತಿನ ವಿವರಗಳು.
“ಮೇದಾರ ಜಾತಿಯಲ್ಲಿ ಹಡೆದರೆ ಹೊಲೆ (ಸೂತಕ) ಆಯಿದು ದಿನಕ್ಕೆ ಹೋಗುವುದು, ಅನಂತರ ಆರವಿ, ಹಚ್ಚಡ
ಎಲ್ಲವನ್ನು ತೊಳೆದು, ಮನೆಸಾರಿಸಿ, ಕೂಶಿನ
ತೊಟ್ಟಿಲ ಒಳಗೆ ಹಾಕಿ ಕುಲದವರು ಕೂಡಿ ಊಟಮಾಡಬೇಕು. ಈ ಸಮಾಜದಲ್ಲಿ
ಹೆಣ್ಣಿಗೆ ತೆರ ಕೊಡುವ ಪದ್ಧತಿ ಇದೆ. ಜೋಯಿಸರ ಮನೆಗೆಹೋಗಿ ಲಗ್ನ
ಕಟ್ಟಿಸಿಕೊಡಬೇಕಾದರೆ,
ಒಂದು ಶಿದ್ದೆ ಅಕ್ಕಿ, ೫
ತೊಂಡೆಕಾಯಿತೆಗೆದುಕೊಂಡು ಹೋಗಿ ಕಟ್ಟಿಸಿಕೊಂಡು ಬರಬೇಕು. ಇದಾದ ಮೂರು ದಿನಕ್ಕೆ ಲಗ್ನಾಮಾಡಬೇಕು, ಉಡಿ ತುಂಬುವ
ಪದ್ಧತಿ ಇದೆ. ಬಿಳಿ ಶೀರೆ,
ಕುಬಸದ, ಒಂದು
ಕಡೆಗಜೋಡು, ಒಂದು
ಹೊಸ ಚಾಪೆ, ಪೂಜೆ
ಮಾಡಿ ಉಡಿ ತುಂಬಿ, ಗುರುಗಳು, ಗೌಡ,ಬುದ್ದಿವಂತ
ಇವರುಗಳಿಗೆ ವೀಳ್ಯ ಹಂಚಬೇಕು. ಸೋದರಮಾವ ಧಾರೆಯರೆಯಬೇಕು. ಮಂಗಳಸೂತ್ರ, ಬಾಸಿಗಗಳನ್ನು
ಕುಲದವರು ತರಬೇಕು, ಜೋಯಿಸರಿಗೆ
ಗಂಡಿನವರು ಹಣೆ, ಹೆಣ್ಣಿನವರು
ಹಣೆ ಕೊಡಬೇಕು. ನಾಲ್ಕನೇ ದಿವಸಕ್ಕೆ ನಾಗೋಲೆ ಶಾಸ್ತ್ರ ಮಾಡಿ ಕುಲದವರೆಲ್ಲಾ ಕೂಡಿ ಊಟಾ ಮಾಡಿ
ಗಂಡಿನ ಮನೆಗೆ ಕರೆದುಕೊಂಡು ಹೋಗಿ ಮನೆ ತುಂಬಿಸಿ ವೀಳ್ಯ ಕೊಂಡು ಬರಬೇಕು ಇತ್ಯಾದಿ ಮೇದರ
ಜನಾಂಗದ ಆಚರಣೆಯ ವಿವರಗಳನ್ನು ದಾಖಲಿಸಿದ್ದಾನೆ.
ಹಿಂದಿನ ಕೆಲವು ಪತ್ರ ಮತ್ತು ಅರ್ಜಿಗಳ ಮಾದರಿಯನ್ನು ಸಹ ಮೆಕೆಂಜಿ ಸಂಗ್ರಹಿಸಿದ್ದಾನೆ.
ಅವನ ಸಂಗ್ರಹದಲ್ಲಿಯ ಒಬ್ಬ ಪ್ರಜೆ ಸಬ್ ಕಲೆಕ್ಟರ್ ಅವರಿಗೆ ಬರೆದ ಒಂದು ಅರ್ಜಿಯ ಮಾದರಿ ಹೀಗಿವೆ:
ಸನ್ ೧೨೪೮ ನೇ ಫಸಲ್
ಮಾಹೆ ಜೂನ್ ತಾರೀಖು ೧ರಲ್ಲಿ ಹಾಲಿ ಪುತ್ತೂರಿನಲ್ಲಿರುವ
ಶಾಂತಪ್ಪನು ಅದಬಿನಿಂದಾ ಬರಕೊಂಡ ಅರ್ಜಿ, ನಾನು ಸಕುಟುಂಬಸ್ತ, ಕೇವಲ ಗರೀಬಾ, ನನಗೆ ಯಿದ್ಧ ಕೋರ್ಟು ಯಿಲಾಖೆ..ಖಾವಂದರು ದಯವಿಟ್ಟು ಯಾವುದಾದರೊಂದು ಯಿಸಂ ನನಗೆ ಮೊತ್ತ ಜರೂರು ಕೊಡುವಂತೆ
ಅಪ್ಪಣೆ ಆಗಿ ನನ್ನ ಕುಟುಂಬ ಸಮೇತ ರಕ್ಷಣೆ ಮಾಡಿಕೊಡಬೇಕಾಗಿ ಪ್ರಾರ್ಥಿಸುತ್ತೇನೆ.”ಶಾಂತಪ್ಪನ
ರುಜು.
(ಅದೇ, ಪು.೨೪೯)
ಕೈಫಿಯತ್‌ಗಳಲ್ಲಿ ವಿಜಯನಗರ,ಹೊಯ್ಸಳ ಅರಸರ, ಹಾಗೂ ಅನೇಕ
ಕಿರಿಯ ಸಂಸ್ಥಾನಿಕರ ವಿವರಗಳು ಸಂಗ್ರಹ ಗೊಂಡಿವೆ. ಕಂಪಿಲ, ಮುಸ್ಲಿಂ,ಮರಾಠ ಮತ್ತು
ವಿಜಯನಗರದ ರಾಜ ಕೆಳದಿ ಮತ್ತು ಇತರೆ ಮನೆತನದ ಇತಿಹಾಸದ ಮೇಲೆ ಅವು ಬೆಳಕು ಚೆಲ್ಲುತ್ತವೆ. ಅವರ
ಗಮನ ಬರಿ ಅರಸರ, ರಾಜರ ಮತ್ತು ಇನಾಂದಾರ ಮತ್ತು ಜಾಗೀರುದಾರರ ಮಾಹಿತಿ
ಸಂಗ್ರಹಕ್ಕೆ ಮಾತ್ರ ಮೀಸಲಾಗಿರಲಿಲ್ಲ. ಜನಸಾಮಾನ್ಯರ ನಡೆ ನುಡಿ, ಆಚಾರ ವಿಚಾರ ,ವೃತ್ತಿ
ಉದ್ಯೋಗ, ಮನರಂಜನೆ ಜೀವನ ವಿಧಾನವೂ ಅವರಿಗೆ ಅತಿ ಮುಖ್ಯವಾಗಿತ್ತು ಆದುದರಿಂದಲೇ ಚನ್ನಯ್ಯ ಕುಲದ
ಕೈಫಿಯತ್ತು, ಜಾತಿರಿವಾಜು ಕೈಫಿಯತ್ತು, ವಕ್ಕಲಿಗರ
ಕೈಫಿಯತ್ತು ಮೊದಲಾದ ಹಲವು ಕೈಫಿಯತ್ತು ಅಂದಿನ ಸಾಮಾಜಿಕ, ಧಾರ್ಮಿಕ
ಜೀವನದಮೇಲೆ ಬೆಳಕು ಚೆಲ್ಲುತ್ತವೆ. ಸೂಪಶಾಸ್ತ್ರ-ಬಾಣ ಬಿರುಸು ಕ್ರಮ-ಶಿಲ್ಪಶಾಸ್ತ್ರ-ಧನ್ವಂತರಿ
ನಿಘಂಟು-ವೈದ್ಯ ನಿಘಂಟು ಸಂಸ್ಕೃತದಲ್ಲಿದ್ದರೆ ಅದರ ಕನ್ನಡ ಟೀಕೆಯೂ ಇತ್ತು. ವೈದ್ಯಕೀಯದಲ್ಲಿ
ಬಳಸುವ ಗಿಡ ಮೂಲಿಕೆಗಳ ಆಕಾರಾದಿ ಪಟ್ಟಿ -ಜ್ಯೋತಿಷ್ಯ ಸಂಗ್ರಹ, ಶಕುನ
ಶಾಸ್ತ್ರ ,ಹಾಲಕ್ಕಿ ಶಕುನ,ಗಣಿತ ಸಂಗ್ರಹ- ಭೂಮಿತಿ, ತತ್ವಶಾಸ್ತ್ರ, ವೈದ್ಯ, ಜ್ಯೋತಿಷ್ಯ , ವಿವಿಧ
ವೃತ್ತಿಗಾರ ಕೆಲಸದ ವಿಧಾನ, ಬಳೆ ಮಾಡುವ ವಿಧಾನ-ಬಣಜಿಗರ ಪೂರ್ವೋತ್ತರ, ತಾವು ಭೇಟಿ
ನೀಡಿದ ಸ್ಥಳಗಳ ವರ್ಣನೆ, ಅಲ್ಲಿನ ಸಸ್ಯಸಂಪತ್ತು ಮತ್ತು ಪ್ರಾಣಿ ವೈವಿಧ್ಯದ ವಿವರ, ಬಿದುನೂರ
ಮೃಗಗಳು- ಸ್ಥಳ ವರ್ಣನೆ ರಾಮಾಯಣ, ಮಹಾಭಾರತ , ಭಾಗವತ ಹಲವು ಹನ್ನೊಂದು ಕೃತಿಗಳ
ಅನೇಕ ಪ್ರತಿಗಳನ್ನು ಅಲ್ಲಿ ಕಾಣಬಹುದು. ಜೊತೆಗೆ ರಾಜವಂಶೀಯರ ವಿವರ, ಗ್ರಾಮಚರಿತ್ರೆ, ಆಡಳಿತ ಸಂಬಂಧಿ
ದಾಖಲೆಗಳನ್ನೂ ಬರೆಸಿದ. ಅವನ ಸಹಾಯಕರಾದ ದೇಶೀಯ ವಿದ್ವಾಂಸರು ಹಲವು ದಾಖಲೆಗಳ ಇಂಗ್ಲಿಷ್
ಅನುವಾದವನ್ನು ಮಾಡಿದರು. ಅದರ ಜೊತೆಯಲ್ಲಿಯೇ ಅಲ್ಲಿರುವ ವಿಶೇಷ ವಿಗ್ರಹಗಳು, ಚಲಾವಣೆಯಲ್ಲಿರುವ
ನಾಣ್ಯಗಳ ಸಂಗ್ರಹ ಕಾರ್ಯವನ್ನು ತೊಡಗಿಸಿಕೊಂಡ. ಆಡು ಮುಟ್ಟದ ಸೊಪ್ಪಿಲ್ಲ ಮೆಕೆಂಜಿ ಮುಟ್ಟದ
ಪ್ರಾಚ್ಯ ವಸ್ತುವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪ್ರಾಚ್ಯ ವಸ್ತುಗಳ ಸಂಗ್ರಹದಲ್ಲಿ ತನ್ನನ್ನು
ತಾನು ಸಕ್ರೀಯವಾಗಿ ತೊಡಗಿಸಿಕೊಂಡ. ಮೆಕೆಂಜಿಯ ಈ ಮಹತ್ ಸಾಧನೆಯು ಹೆಚ್ಚು ಕಡಿಮೆ ಈಗಿನ ಗೆಜೆಟಿಯರ್‌ಗಳ ಕೆಲಸವನ್ನೇ ಮಾಡಿದ ರೀತಿಯಲ್ಲಿದೆ. ಯಾವುದೇ ಪ್ರದೇಶದ ಸರ್ವೆ
ಮಾಡಿದರೆ ಅಲ್ಲಿನ ಎಲ್ಲ ಮಾಹಿತಿಯೂ ದಾಖಲು ಮಾಡಿರುವುದರಿಂದ ಒಂದು ರೀತಿಯಲ್ಲಿ ವಿಶ್ವ ಕೋಶವೇ
ನಿರ್ಮಿಸುತ್ತಿದ್ದನೆನ್ನಬಹುದು. ಕರ್ನಲ್‌ಮೆಕೆಂಜಿ ಲಿಪಿಕಾರರರೊಂದಿಗೆ ಈ ಕೈಫಿಯತ್ತುಗಳು
ವಿಶೇಷವಾಗಿ ಧಾರ್ಮಿಕ ಕೇಂದ್ರಗಳ ದೈನಂದಿನ ಆಚರಣೆಯ ವಿವರವನ್ನು ಕೊಡುತ್ತವೆ. ಪೇಜಾವರ, ಪುತ್ತಿಗೆ, ಮೊದಲಾದ ಅಷ್ಟ
ಮಠಗಳ ಕೈಫಿಯತ್ತುಗಳಲ್ಲಿ ಅಲ್ಲಿನ ದೈನಂದಿನ ಆಚರಣೆಯ ಮಾಹಿತಿ ದೊರೆಯುವುದು. ಕೈಫಿಯತ್ತುಗಳ ಕರ್ತಾರ, ಕೈಫಿಯತ್ತು
ಪ್ರಕಾರವೊಂದನ್ನು ನಮ್ಮ ನಾಡಿನಲ್ಲಿ ಹುಟ್ಟುಹಾಕಿದ ಮೊದಲಿಗ ಮೆಕೆಂಜಿ ಎಂಬ ಡಾ. ಕಲಬುರ್ಗಿಯವರ ಮಾತಿನಲ್ಲಿ ತುಂಬಾ ಸತ್ಯಾಂಶವಿದೆ. ಈತನು ಸಂಗ್ರಹಿಸಿದ
ಕೈಫಿಯತ್ತುಗಳನ್ನು ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನ ಭಂಡಾರದಲ್ಲಿ ಸಂರಕ್ಷಿಸಲಾಗಿದೆ. ಈ
ಭಂಡಾರದ ಒಂದು ಭಾಗಗಳಾಗಿ ಕೈಫಿತ್ತುಗಳು ಕಾಣಸಿಗುತ್ತವೆ ಇವು ಬಹುತೇಕ ಮೆಕೆಂಜಿ ಅವರಿಂದ
ಯುರೋಪಿಯನ್ ಕಾಗದದ ಮೇಲೆ ಬರೆಯಿಸಿದ ದಾಖಲೆಗಳಾಗಿವೆ ಎಂದು ಹೇಳಬಹುದಾಗಿದೆ. ಮೆಕೆಂಜಿಯು ಹೆಚ್ಚು ಕಡಿಮೆ ಈಗಿನ
ಗೆಜೆಟಿಯರ್‌ಗಳ ಕೆಲಸವನ್ನೇ ಮಾಡಿದ್ದಾನೆ. ಯಾವುದೇ ಪ್ರದೇಶದ ಸರ್ವೇ
ಮಾಡಿದರೆ ಅಲ್ಲಿನ ಎಲ್ಲ ಮಾಹಿತಿಯೂ ದಾಖಲು ಮಾಡಿರುವುದರಿಂದ ಒಂದು ರೀತಿಯಲ್ಲಿ ವಿಶ್ವಕೋಶವೇ ನಿರ್ಮಿಸುತ್ತಿದ್ದ ನೆನ್ನಬಹುದು ಇವನ ಕಾರ್ಯವು ಸಾಂಸ್ಕೃತಿಕ ಲೋಕಕ್ಕೆ ಬೇಕಾದ ಸಾಮಗ್ರಿಗಳ ಗಣಿಯೇ
ಆಗಿವೆ. ಇವು ಸಂಸ್ಕೃತಿಯ ಭಾಗವಾಗಿವೆ. ಕರ್ನಾಟಕ ಇತಿಹಾಸ ಸಂಶೋಧನ
ಕಾರ್ಯದಲ್ಲಿ ಕೈಫಿಯತ್ತುಗಳು ಬಹು ಮಹತ್ವದ ಪಾತ್ರವನ್ನು ವಹಿಸಿವೆ ಸ್ಥಳ ಪುರಾಣ ಇತಿಹಾಸ ರಾಜಕೀಯ ಸಮಾಜ ಹಾಗೂ ಧಾರ್ಮಿಕ ಅಂಶಗಳನ್ನು ಒಳಗೊಂಡ ಅವು
ಚರಿತ್ರೆಯ ಅಧ್ಯಯನಕ್ಕೆ ಹೊಸ ಆಯಾಮವನ್ನು ನೀಡಿವೆ. ಮೆಕೆಂಜಿ ಸಂಗ್ರಹಿಸಿದ ಕೈಫಿಯತ್ತುಗಳನ್ನು ಬಿಎಸ್‌ಪುಟ್ಟಸ್ವಾಮಿ ಅವರು ಕರ್ನಲ್ ಮೆಕೆಂಜಿ
ಮತ್ತು ಕೈಫಿಯತ್ತುಗಳು ಎನ್ನುವ ತಮ್ಮ ಸಂಶೋಧನಾ ಕೃತಿಯಲ್ಲಿ ಪ್ರಕಟಿತ,ಅಪ್ರಕಟಿತ, ಲಭ್ಯ,ಅಲಭ್ಯ ಕೈಫಿಯತ್ತುಗಳನ್ನು ಮುಖ್ಯವಾಗಿ 'ಸ್ಥಳಗಳಿಗೆ ಸಂಬಂಧಿಸಿದ
ಕೈಫಿಯತ್ತುಗಳು ೧೧೨, ವ್ಯಕ್ತಿಗಳು ಮತ್ತು ವಂಶಾವಳಿಗೆ ಸಂಬಂಧಪಟ್ಟ ಕೈಫಿಯತ್ತುಗಳು
೧೬೪, ಜಾತಿಗಳು ಮತ್ತು ಬುಡಕಟ್ಟುಗಳಿಗೆ ಸಂಬಂಧಪಟ್ಟ ಕೈಫಿಯತ್ತುಗಳು೨೦೯, ದೇವಾಲಯಗಳ ಅಥವಾ ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಪಟ್ಟ ಕೈಫಿಯತ್ತುಗಳು ೨೩೪, ಇತರೆ ವಿಷಯಗಳಿಗೆ ಸಂಬಂಧಪಟ್ಟ ಕೈಫಿಯತ್ತುಗಳು - ೦೫. ಎಂದು ವರ್ಗೀಕರಿಸಿದ್ದಾರೆ. ಇವುಗಳಿಂದ ಗ್ರಹಿಸಬಹುದಾದ ವಿಷಯವೆಂದರೆ ಭಾಷೆ ಸಾಹಿತ್ಯ
ವಾಸ್ತುಶಿಲ್ಪ ಪ್ರಕೃತಿ ವೈಚಿತ್ರ ಮೊದಲಾದ ವಿಷಯಗಳ ಜೊತೆಗೆ
ಸ್ಥಳವ್ಯಕ್ತಿ ಹಾಗೂ ಅವರ ವಂಶಾವಳಿ ಜಾತಿ ಹಾಗೂ ಬುಡಕಟ್ಟು ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ
ಕೈಫಿಯತ್ತುಗಳನ್ನು ಸಂಗ್ರಹಿಸಿದನು ಎಂಬುದು ತಿಳಿಯುತ್ತದೆ. ಹಾಗಾಗಿ ಕರ್ನಾಟಕ
ಸಂಸ್ಕೃತಿಯನ್ನು ಕಟ್ಟುವಲ್ಲಿ ಮೆಕೆಂಜಿಯಂತಹ
ಪಾಶ್ಚಾತ್ಯ ವಿದ್ವಾಂಸರ ಪಾತ್ರ ಅಪಾರವಾದುದು
ಕಂಪನಿ ಸರ್ಕಾರದ ಸೈನ್ಯ ಮತ್ತು ಭೂಮಾಪನ ಅಧಿಕಾರಿಯಾಗಿ ಬಂದ ಕರ್ನಲ್ ಮೆಕೆಂಜಿ ಆ
ಹುದ್ದೆಗಳ ಜೊತಜೊತೆ ಕರ್ನಾಟಕದ ಸಾಂಸ್ಕೃತಿಕ ಇತಿಹಾಸವನ್ನೇ ಕೈಫಿಯತ್ತುಗಳಲ್ಲಿ ಕಂಡರಿಸಿದ ಮಹತ್ಕಾರ್ಯವನ್ನು
ನೆರವೇರಿಸಿದನೆನ್ನುವುದು ಗಮನಿಸ
ಬೇಕಾದ ಸಂಗತಿ.
ಮೆಕಂಜಿಯು ೧೭೯೦-೧೮೨೧ ರ ವರೆಗೆ ಸಂಗ್ರಹಿಸಿದ, ಬರೆಸಿದ
ಕೈಫಿಯತ್ತುಗಳು ಪ್ರಾಚೀನ,ಮಧ್ಯಕಾಲೀನ ಸಮಕಾಲೀನ
ಭೌಗೋಲಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಸ್ಥಿತಿಗತಿಗಳ ನೈಜ ಚಿತ್ರಣವಾಗಿದೆ. ಹೀಗೆ ಸಂಗ್ರಹಿಸುವಾಗ
ಅವರಲ್ಲಿ ಮಾನವ ಶಾಸ್ತ್ರಜ್ಞ,ʻಸಮಾಜ
ಶಾಸ್ತ್ರಜ್ಞ ಮತ್ತು ಇತಿಹಾಸಕಾರರ ಮೂರೂ ಗುಣಗಳೂ ಅವರಲ್ಲಿ ಮುಪ್ಪರಿಗೊಂಡಿದ್ದವು.
ಮೆಕೆಂಜಿ ಸಂಗ್ರಹವು
ಬೃಹದಾಕಾರವಾಗಿದ್ದು, ಮುಗಿಯದಂತಹುದು. ಮೇಲೆ ನೀಡಿದ
ದಾಖಲೆಗಳಲ್ಲದೆ, ಪಶುಪಕ್ಷಿ
ವಿವರ,ಗಿಡಮರಗಳ
ಹೆಸರಿನ ಪಟ್ಟಿ, ಬೆಳೆ
ಬೇಸಾಯಗಳ ಮಾಹಿತಿ ಇವುಗಳೆಲ್ಲಾ ಸೇರಿವೆ. ದೂರದ ದೇಶದಲ್ಲಿ ಹುಟ್ಟಿ, ತನ್ನದಲ್ಲದ
ಭಾಷೆ, ಜನಾಂಗಗಳ
ಮೇಲ ಅಭಿಮಾನವಿಟ್ಟು, ಹಳ್ಳಿ ಹಳ್ಳಿಗಳೆಲ್ಲೆಲ್ಲಾ ಕುದುರೆಯ
ಮೇಲೆ ಸಂಚರಿಸಿ, ಹಳ್ಳಿಯ
ನಿಷ್ಕಲ್ಮಷ ಬುದ್ಧಿಯ ಜನರಿಂದ ಇಷ್ಟೆಲ್ಲಾ ದಾಖಲೆಗಳನ್ನು
ಸಂಗ್ರಹಿಸಿದ ಈಮಹನೀಯನನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ. ದಕ್ಷಿಣ ಭಾರತದ ಇತಿಹಾಸದಲ್ಲಿ
ಇವನಿಗೊಂದು ಇಂದಿಗೂ ಉನ್ನತವಾದ ಸ್ಥಾನವಿದೆ ಎಂಬುದನ್ನು ನಾವು ಮರೆಯುವಂತಿಲ್ಲ.
ಬ್ರಿಟಿಷ್‌ಮ್ಯೂಜಿಯಂ
ಮತ್ತು ಲೈಬ್ರರಿಯಲ್ಲಿರುವ ಮೆಕೆಂಜಿಯ ಸಂಗ್ರಹವು ಇಂದಿಗೂ ಸಂಶೋಧಕರ
ಪಾಲಿಗೆ ಅಮೂಲ್ಯ ನಿಧಿ. ತೆಲುಗು, ಒರಿಯಾ,
ಮರಾಠಿ, ಹಿಂದಿ, ಅರಾಬಿಕ್,
ತಮಿಳು ಭಾಷೆಯ, ಸ್ಥಳೀಯ ಇತಿಹಾಸ, ಜೀವನ ಚರಿತ್ರೆ ಅಧ್ಯಯನ ಮಾಡುವವರು ಮೊದಲು ಮೆಕೆಂಜಿಯನ್ನು ಸ್ಮರಿಸ ಬೇಕಾಗಿದೆ. ಮೆಕಂಜಿಯವರ ಸಂಗ್ರಹದಲ್ಲಿ
ಕನ್ನಡ, ತುಳು, ಮರಾಠಿ, ತೆಲುಗು, ತಮಿಳು ಮೊದಲಾದ ೧೪ ಭಾಷೆಗಳ ಮತ್ತು೧೭ ಲಿಪಿಗಳಲ್ಲಿ
ಕೈಫಿಯತ್ತುಗಳು ಇವೆ. ಇವು ಅವನು ಬಹುಭಾಷೆ ಬಲ್ಲಿದರಾಗಿರುವುದನ್ನು ಸಾಬೀತು ಪಡಿಸುತ್ತವೆ.
ದೇವಚಂದ್ರನು ತನ್ನ
ರಾಜಾವಳಿಕಥಾಸಾಗರ ಕೃತಿಯಲ್ಲಿ . . ಸೀಮೆ ಪೈಮಾಸಿಯಂ ಮಾಡಲ್ ಮಕಂಜಿ ಸರದಾರುಲಕ್ಷ್ಮಣರಾಯವರಸು
ಬಂದಲ್ಲಿ . . . . ರಾಜ್ಯ ಸೀಮೆಗಳ ಚಕ್ರದಿಂದಳೆದು ವಿಂಗಡಿಸುತ್ತಾ,
ಗ್ರಾಮಾಧಿಗ್ರಾಮಂಗಳಿಗೆ
ನಕ್ಷೆಯಂಬರಯಿಸಿ” ಎಂಬ ಉಲ್ಲೇಖ ಈ ದೃಷ್ಟಿಯಿಂದ ಗಮನಾರ್ಹ. ಲಕ್ಷ್ಮಣರಾಯನೆಂಬ ಸ್ಥಳೀಯ ವ್ಯಕ್ತಿಯ
ಸಹಕಾರದಿಂದ ಭೂನಕ್ಷೆ ಸಿದ್ಧಪಡಿಸುತ್ತಿದ್ದು
ಮೆಕೆಂಜಿಯ ಶ್ರಮವನ್ನು ರಾಜಾವಳಿಕಥೆ ವಿಶಿಷ್ಟ ರೀತಿಯಿಂದ ವಿವರಿಸುತ್ತದೆ. ನಂತರ ಕ್ರಿ. ಶ.
೧೮೧೩ರಲ್ಲಿ ಮದ್ರಾಸ ಸರ್ಕಾರವು “ದಕ್ಷಿಣ ಹಿಂದುಸ್ತಾನದ ಪ್ರಧಾನ ಭೂಮಾಪನ ಅಧಿಕಾರಿ'ಯೆಂದು ನೇಮಿಸಿ ಆದೇಶ ಹೊರಡಿಸಿತು. ಅಧಿಕಾರ ಸ್ವೀಕರಿಸಿದ
ಮೆಕೆಂಜಿ ಅತ್ಯಂತ
ದಕ್ಷತೆಯಿಂದ ಕಾರ್ಯನಿರ್ವಹಿಸಿ ಇಡಿ ದಖನ್
ಪ್ರದೇಶವನ್ನೇ ಕೂಲಂಕಷವಾಗಿ ಪರಿಶೀಲಿಸುವ ಮೂಲಕ ಆತ ಶಾಸ್ತ್ರೀಯವಾದ ಭೂಪಟವನ್ನು ತಯಾರಿಸಿದ್ದನ್ನು
ಎಂ.ಎಂ. ಕಲಬುರ್ಗಿಯವರು ಗುರುತಿಸಿದ್ದಾರೆ. ಈ ಭೂಪಟವು ಕಂಪನಿ ಸರ್ಕಾರದ ಗಮನ ಸೆಳೆಯುವಲ್ಲಿ
ಯಶಸ್ವಿಯಾಯಿತು. ತಕ್ಷಣವೇ ಕ್ರಿ. ಶ. ೧೮೧೫ರಲ್ಲಿ ಆತನನ್ನು ಭಾರತದ ಪ್ರಥಮ ಪ್ರಧಾನ ಭೂಮಾಪನ
ಅಧಿಕಾರಿಯೆಂದು ಘೋಷಿಸಲಾಯಿತು. ಭಾರತ ಸರ್ಕಾರದ ಈ ಆದೇಶದಿಂದ ಮೆಕೆಂಜಿಯ ಕಾರ್ಯಕ್ಷೇತ್ರ ಉತ್ತರ ಭಾರತಕ್ಕೂ ವ್ಯಾಪಿಸಿತು. ಈ ಎಲ್ಲ ಅಗಾಧ ಮತ್ತು ಮಹತ್ತರ ಕೆಲಸವು ವೈಜ್ಞಾನಿಕ ಉಪಕರಣಗಳು ಇಲ್ಲದ, ಆಧುನಿಕ ಸಾರಿಗೆ ಸಂಪರ್ಕವಿಲ್ಲದ ಕಾಲದಲ್ಲಿ
ಅವನ ಸಂಗ್ರಹ ಕಾರ್ಯವು ಶ್ರಮ, ಶ್ರದ್ಧೆ ಮತ್ತು ಬದ್ಧತೆಯ ಸೂಚಕವಾಗಿದೆ.'
ಭಾರತದಲ್ಲಿದ್ದ ಮೆಕಂಜಿ ಮಿಲಿಟರಿ
ಇಂಜಿನಿಯರ್ ಆಗಿದ್ದರೂ ಆತನ ಸಾಧನೆ ಕೇವಲ ಆಕಾಲದ ಮಿಲಿಟರಿ ಚರಿತ್ರೆಯ ಸುತ್ತ
ಹೆಣೆದುಕೊಂಡಿಲ್ಲ. ಬ್ರಿಟೀಷ್ ಸರ್ಕಾರ ಆತನಿಗೆ ವಹಿಸಿದ ಎರಡು ಬಹುದೊಡ್ಡ ಯೋಜನೆಗಳು ಅವನನ್ನು
ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯನ್ನಾಗಿಸಿವೆ.
ಆ ಯೋಜನೆಗಳು ಯಾವುವೆಂದರೆ,
1. ಹೈದರಾಬಾದಿನ ನಿಜಾಮನ ಪ್ರಾಂತ್ಯದ ಸರ್ವೆ (ಕ್ರಿ.ಶ. 1792-98)
2. ಮೈಸೂರು ಸರ್ವೆ (ಕ್ರಿ.ಶ. 1799-1810)
ಈ ಎರಡೂ ಸರ್ವೆಗಳನ್ನು ಆತನಿಗೆ ನೀಡಲು ಬ್ರಿಟೀಷರಿಗೆ ಇದ್ದ ಕಾರಣವೆಂದರೆ, ಕ್ರಿ.ಶ. 1792ರಲ್ಲಿ
ಮೂರನೇ ಆಂಗ್ಲೋ-ಮೈಸೂರು ಯುದ್ಧ ಮುಗಿದು ಬ್ರಿಟೀಷರು ಜಯ ಗಳಿಸಿದ ನಂತರ ಮೈಸೂರು ರಾಜ್ಯಕ್ಕೆ ಸೇರಿದ್ದ ಕಡಪಾ ಮತ್ತು ಕರ್ನೂಲುಗಳನ್ನು ಹೈದರಾಬಾದಿನ
ನಿಜಾಮನಿಗೆ ಬಿಟ್ಟುಕೊಟ್ಟರು. ಇದರಿಂದ ನಿಜಾಮನ ಪ್ರಾಂತ್ಯದ ರಾಜಕೀಯ ಗಡಿಗಳನ್ನು
ಗುರ್ತಿಸಬೇಕಾದುದು ಅನಿವಾರ್ಯವಾಯಿತು. ಅದೇ ರೀತಿ ಕ್ರಿ.ಶ. 1799
ರಲ್ಲಿ ಬ್ರಿಟೀಷರು ಟಿಪ್ಪುಸುಲ್ತಾನನ್ನು ಸೋಲಿಸಿ ನಂತರ ಒಡೆಯರ್ ವಂಶದ
ರಾಜರನ್ನು ಮೈಸೂರು ಸಿಂಹಾಸನವಾದ ಮೇಲೆ ಪುನರ್ ಪ್ರತಿಷ್ಠಾಪಿಸಿದ ನಂತರ ಆ ಪ್ರಾಂತ್ಯದ ಗಡಿಗಳನ್ನು
ಗುರುತಿಸಬೇಕಾಯಿತು. ಒಟ್ಟಾರೆ ಹೇಳುವುದಾದರೆ ಕ್ರಿ.ಶ. 1792 ಮತ್ತು 1799 ರ ಆಂಗ್ಲೋ ಮೈಸೂರು ಯುದ್ಧಗಳಲ್ಲಿ ಜಯಪಡೆದ ಬ್ರಿಟೀಷರು ಭಾರತದಲ್ಲಿನ ದೇಶೀಯ ರಾಜರ ರಾಜಕೀಯ ಗಡಿಗಳನ್ನು ಗುರುತಿಸಿಕೊಡುವ ಉದ್ದೇಶದಿಂದ ಹೈದರಾಬಾದ್ ಮತ್ತು
ಮೈಸೂರು ಪ್ರಾಂತ್ಯದ ಗಡಿ ಸರ್ವೆಮಾಡಬೇಕಾಯಿತು ಈ ಸರ್ವೆಗಳು ಕ್ರಿ.ಶ. 1792 ರಿಂದ 1810 ರವರೆಗೂ ಅಂದರೆ 18
ವರ್ಷಗಳ ನಡೆದವು. ಇಷ್ಟೊಂದು ದೀರ್ಘ ಅವಧಿಯನ್ನು ಮೆಕಂಜಿ ತೆಗೆದುಕೊಳ್ಳಲು ಕಾರಣವನ್ನು
ಪರಿಶೀಲಿಸಿದಾಗ, ಆತ ಕೇವಲ ಸರ್ವೆ ಅಧಿಕಾರಿ ಆಗಿರದೆ ಮಿಲಿಟರಿ
ಅಧಿಕಾರಿಯೂ ಆಗಿದ್ದು ಎರಡೂ ಕೆಲಸಗಳನ್ನು ಆತ ಮಾಡಬೇಕಾಗಿತ್ತು. ಈ ಸರ್ವೆ ಮಾಡುವಾಗ ಈ ಜಿಲ್ಲೆಯ
ಹಲವಾರು ಭೂ ಪ್ರದೇಶಗಳಲ್ಲಿ ತಿರುಗಾಡಿ ಆನೇಕ ಮಾಹಿತಿಗಳನ್ನು ಕಲೆಹಾಕಿದ್ದು
ಸಾಕ್ಷಿಯಾಗಿದೆ. ಈ ಎರಡೂ ಸರ್ವೆಗಳಲ್ಲಿ ಆತ ಮಾಡಿದ
ಮೈಸೂರು ಸರ್ವೆಯೇ ಅತ್ಯಂತ ದೊಡ್ಡದು. ಮೆಕೆಂಜಿಯು
ಮೈಸೂರು ಸರ್ವೆ ಮಾಡುವಾಗ ಆತನಿಗೆ ಮತ್ತು ಆತನ ಕೆಲಸಕ್ಕೆ ಯಾವುದೇ ಅಡಚಣೆಯಾಗದೆ
ಆ ಕೆಲಸ ನಿರಂತರವಾಗಿ ಸಾಗಿತು ಈ ಸರ್ವೆಯನ್ನು ಆತ ಕ್ರಿ.ಶ. 1800-1801
ರಲ್ಲಿ ನಡೆಸಿ ಅದನ್ನು ಈಸ್ಟ್ ಇಂಡಿಯಾ ಕಂಪನಿಯ ಸರ್ಕಾರಕ್ಕೆ ಮಾರ್ಚ್ 15,
1803 ರಂದು ಮದ್ರಾಸಿನಲ್ಲಿ ಸಲ್ಲಿಸಿದನು.
ಈ ಸರ್ವೆ ವರದಿಯಲ್ಲಿ ತುಮಕೂರು ಜಿಲ್ಲೆ
ಮತ್ತು ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿ ಕೊಡ ಮಾಡಿದ್ದಾನೆ. ಈ ವಿವರಗಳ ಬಗೆಗೆ ವಿಸ್ತೃತವಾಗಿ ಡಿ.ಎನ್.ಯೋಗೀಶ್ವರಪ್ಪ
ಅವರು ಕಲ್ಪನುಡಿ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿರುವ ಕಾಲಿನ್ ಮೆಕೆಂಜಿ ದಾಖಲೆಗಳಲ್ಲಿ ತುಮಕೂರು
ಪ್ರದೇಶಗಳು ಲೇಖನದಲ್ಲಿ ಕೊಡ ಮಾಡಿದ್ದಾರೆ.
ಆತನು ಚಿತ್ರದುರ್ಗ, ಮಾಯಕೊಂಡ ಹೊಳಲಕೆರೆ, ಹೊಸದುರ್ಗ, ಹಿರಿಯೂರು, ಆಂಜಿ, ಕಣಕುಪ್ಪೆ
ಮತ್ತು ಬಿಳಿಜೋಡು ಈ ಏಳೂ ಚಿತ್ರದುರ್ಗ ಪರಗಣಕ್ಕೆ ಸೇರಿದ್ದವು ಇವುಗಳನ್ನು ಆತ ಜಿಲ್ಲೆಗಳೆಂದು
ಕರೆದಿದ್ದಾನೆ. ಈ ಜಿಲ್ಲೆಗಳೇ ಅಲ್ಲದೆ ಆತ ಬೂದಿಹಾಳು, ಮೊಳಕಾಲೂರು, ತಳಕು, ಜರಿಮಲೈ, ಗುಡೇಕೋಟೆ,ಹರಿಹರ, ಗರುಡನಗಿರಿ, ಬಾಣಾವರ
ದೊಡ್ಡರಿ ಚನ್ನರಾಯಪಟ್ಟಣ,
ಬಸವಾಪಟ್ಟಣ ಮತ್ತು ಸಂತೆಬೆನ್ನೂರು,ಇವುಗಳ ಜೊತೆಗೆ ತುಮಕೂರು ಜಿಲ್ಲೆಯ ಸಿರಾ, ಮಧುಗಿರಿ, ಪಾವಗಡ, ನಿಡುಗಲ್
ಪ್ರದೇಶಗಳ ವಿವರಣೆಯನ್ನು ನೀಡಿದ್ದಾನೆ. ಈ ಹಸ್ತಪ್ರತಿಯು ಈಗ ಇಂಗ್ಲೆಂಡಿನ
ಬ್ರಿಟೀಷ್ ಲೈಬ್ರರಿಯಲ್ಲಿದೆ ಎಂಬುದಾಗಿ ತಿಳಿದು ಬಂದಿದೆ. (ಇಂಡಿಯಾ ಆಫೀಸ್ ಲೈಬ್ರರಿ ಲಂಡನ್)
ಈ ದಾಖಲೆಯ ಪ್ರಮುಖವಾಗಿ ಐದು ಪ್ರಮುಖ ಅಂಶಗಳನ್ನೊಳಗೊಂಡಿದೆ.
ಅವುಗಳೆಂದರೆ.
1.ಕ್ರಿ.ಶ. 1799-1800ರ ಅವಧಿಯ ಪ್ರತಿ ಜಿಲ್ಲೆಯ ಆಯಾ ಸ್ಥಳದ ಅಧಿಕೃತ
ದಾಖಲೆಯಲ್ಲಿರುವಂತೆ
ಗ್ರಾಮಗಳ ಕ್ರೂಢೀಕೃತ ಪಟ್ಟಿ.
2.ಆಯಾ ಜಿಲ್ಲೆಯ ಉಪ ವಿಭಾಗದಲ್ಲಿನ ನೋಂದಣಿಯಾಗಿರುವ ಗ್ರಾಮಗಳ ಪಟ್ಟಿ
ಮತ್ತು ಅವುಗಳನ್ನು ಸರ್ವೆಮೂಲಕ ಪರಿಶೀಲಿಸುವುದು.
3.ಪ್ರತಿಯೊಂದು ಜಿಲ್ಲೆಯ ಪ್ರಮುಖ ಸ್ಥಳದ ಕಾಲಾನುಕ್ರಮದಲ್ಲಿ
ಐತಿಹಾಸಿಕ ಘಟನೆಗಳ ವಿವರಣಾತ್ಮಕದಲ್ಲಿ ದಾಖಲಿಸುವುದು, ಅದರಲ್ಲಿ ಕಳೆದ ಮೂರು ಶತಮಾನಗಳಲ್ಲಿ ಆಯಾ
ಪ್ರದೇಶದಲ್ಲಿ ಆಳ್ವಿಕೆ ನಡೆಸಿದ ಸ್ಥಳೀಯ ರಾಜರು, ಪಾಳೆಯಗಾರರು
ಮತ್ತು ರಾಜರ ಮೂಲ ಹಾಗೂ ಅದರ ಉತ್ತರಾಧಿಕಾರಿಗಳ ವಿವರಣಾತ್ಮಕ ಚರಿತ್ರೆಯನ್ನು ದಾಖಲಿಸಿರುವುದು.
೪. ಸರ್ವೆ ಕಾಲದಲ್ಲಿ ಆ ಪ್ರದೇಶದಲ್ಲಿ ಸಂಗ್ರಹಿಸಿದ ಮಾಹಿತಿಗಳಾದ ಖನಿಜ, ಮಣ್ಣಿನ
ಫಲವತ್ತತೆ
ಬೆಳೆ, ಉತ್ಪಾದನೆ ಮತ್ತು ನಿವಾಸಿಗಳ ಬಗ್ಗೆ ವಿವರಣೆ ನೀಡಿ ಅಭಿಪ್ರಾಯ
ದಾಖಲಿಸುವುದು ಅದರಲ್ಲಿ ಆ ಶತಮಾನದ ಸಾಮಾನ್ಯ ವಿವರಣೆಯನ್ನೊಳಗೊಂಡಿರುವುದು.
5. ಸ್ಥಳೀಯ
ಬುಡಕಟ್ಟುಗಳ ಅಥವಾ ಜಾತಿಗಳ ಕುಟುಂಬಗಳ ಅಥವಾ ಮನೆಗಳಿಂದ ಜನಸಂಖ್ಯೆಯನ್ನು ಸಾಮಾನ್ಯ ಕೋಷ್ಟಕದ
ಮೂಲಕ ತಯಾರಿಸಿ ಅನಾವರಣ ಮಾಡುವುದಲ್ಲದೆ ಗ್ರಾಮಗಳ ಪಟ್ಟಿಕೋಟೆಗಳು, ಮನೆಗಳು, ಅಲ್ಲಿನ
ನಿವಾಸಿಗಳ ಜಾತಿಗಳು, ನೀರಾವರಿ
ಬಗೆಗೂ ದಾಖಲಿಸಿದ್ದಾನೆ.
ಈ ಎಲ್ಲ
ವಿವರಗಳನ್ನೊಳಗೊಂಡ ಉತ್ತರ ಪರಗಣದ ಸರ್ವೆ ಮಾಡಿದ ದಾಖಲೆಯನ್ನು ಮೆಕೆಂಜಿಯು ಜುಲೈ 13, 1803 ರಂದು
ಮದ್ರಾಸಿನಲ್ಲಿ ಬ್ರಿಟೀಷ್ ಸರ್ಕಾರಕ್ಕೆ ಸಲ್ಲಿಸಿದೆನು. ಆ ದಾಖಲೆಯಲ್ಲಿ ತುಮಕೂರು ಪ್ರದೇಶದ
ವಿವರಗಳನ್ನು ಕೊಡ ಮಾಡಿದ್ದಾನೆ. ಉತ್ತರ ಪರಗಣದ ಒಟ್ಟು 22 ಜಿಲ್ಲೆಗಳಲ್ಲಿ
ತುಮಕೂರು ಪ್ರದೇಶದ ನಾಲ್ಕು ಜಿಲ್ಲೆಗಳು ಸೇರಿವೆ. ಕ್ರಿ.ಶ. 1799 ರಲ್ಲಿ
ಶ್ರೀರಂಗಪಟ್ಟಣದಲ್ಲಿ ಟಿಪ್ಪು ಪತನ ಹೊಂದಿದ ನಂತರ ಉತ್ತರ ಪರಗಣದ
ಸರ್ವೆಕೆಲಸಕ್ಕೆ ಬ್ರಿಟೀಷರ ಸರ್ಕಾರದಿಂದ ನೇಮಕವಾದ ಕಾಲಿನ್ ಮೆಕೆಂಜಿ ಅಧಿಕಾರ ವಹಿಸಿಕೊಂಡು
ಕ್ರಿ.ಶ.1800ರ
ಮೇ ತಿಂಗಳಿನಲ್ಲಿ ಈ ಜಿಲ್ಲೆಯ ಸಿರಾಕ್ಕೆ ಬರುತ್ತಾನೆ. ಅಲ್ಲಿ ಜೂನ್‌ವರೆಗೂ ಇದ್ದು ಪುನಃನವೆಂಬರ್
1801ರಲ್ಲಿ
ಸಿರಾಕ್ಕೆ ಬಂದು ತಾನು ಸಂಗ್ರಹಿಸಬೇಕಾಗಿದ್ದ ದಾಖಲೆಗಳನ್ನೆಲ್ಲಾ
ಪರಿಶೀಲಿಸಿ ಪಡೆದುಕೊಂಡಿದ್ದಾನೆ. ಸಿರಾದ ಅಮುಲ್ದಾರರ ಕಛೇರಿಗೆ ತೆರಳಿ ಅವರ ಬಳಿ ಇದ್ದ
ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಉದ್ದೇಶದಿಂದ ಆಂಗ್ಲಭಾಷೆಯಲ್ಲಿ ಕೈಬರಹದ
ಮೂಲಕ ಬರೆದುಕೊಂಡಿದ್ದಾನೆ. ಸಿರಾವು ರತ್ನಗಿರಿ ಪಾಳೆಯಗಾರರ
ಅಧೀನದಲ್ಲಿದ್ದ ರಾಜ್ಯವಾಗಿತ್ತು. ಅದನ್ನು ಮೊದಲಿಗೆ ಕ್ರಿ.ಶ. 1638ರಲ್ಲಿ
ಬಿಜಾಪುರದ ಆದಿಲ್ ಶಾಹಿಗಳು ಗೆದ್ದುಕೊಂಡು ಆಳ್ವಿಕೆ ಮಾಡಿದರು. ಈ ಪ್ರದೇಶವನ್ನು 18ನೇ ಶತಮಾನದ
ಉತ್ತರಾರ್ಧದಲ್ಲಿ ಹೈದರಾಲಿ ಟಿಪ್ಪಸುಲ್ತಾನರ ಆಳ್ವಿಕೆಗೆ ಒಳಪಟ್ಟು ಟಿಪ್ಪು ಪತನದ ನಂತರ ಮೈಸೂರು ಒಡೆಯರ ಆಳ್ವಿಕೆಗೆ ಸೇರಿಸಲಾಯಿತು. ಆತನ ದಾಖಲೆಯಲ್ಲಿ ಕ್ರಿ.ಶ. 1799-1800ರ
ಅವಧಿಯಲ್ಲಿ ಸಿರಾ ಜಿಲ್ಲೆಯನ್ನು ಹನ್ನೊಂದು ತರಫ್‌ಗಳನ್ನಾಗಿ ವಿಂಗಡಿಸಲಾಗಿತ್ತು. ಅವುಗಳೆಂದರೆ, ಸಿರಾ, ಹುಂಜನಾಳ, ಅಗ್ರಹಾರ, ಬರಗೂರು, ಮಂಚಲದೊರೆ.ಬುಕ್ಕಾಪಟ್ಟಣ, ಚಿಕ್ಕನಹಳ್ಳಿ, ತಾವರೆಕೆರೆ, ಹೊಸೂರು
ಹದಿನಕುಂಟೆ, ಹುಲಿಕುಂಟೆ.
ಇದರಲ್ಲಿ ಆತ ಗ್ರಾಮಗಳು,
ಜಲಮೂಲಗಳು, ಕೋಟೆಗಳು, ಉತ್ಪಾದನಾ
ವಸ್ತುಗಳು, ಮನೆಗಳ
ಅಂಕಿಸಂಖ್ಯೆನೀಡಿದ್ದಾನೆ. ಕ್ರಿ.ಶ. 1897ರ ವೇಳೆಗೆ ಮುಸ್ಲಿಂರ
ಜನಸಂಖ್ಯೆ ಧಾರ್ಮಿಕ ಕೇಂದ್ರಗಳ ಬಗ್ಗೆ ಮಾಹಿತಿ ನೀಡಿರುವ ಮೆಕೆಂಜಿ ಸಿರಾ ಜಿಲ್ಲೆಯ 11 ತರಫ್‌ಗಳಿಂದ
ಹಿಂದೂ ದೇವಾಲಯಗಳು 182, ಬಸದಿ-1, ಮಸೀದಿ 17
ಇದ್ದವೆಂದೂ ಅವುಗಳಲ್ಲಿ ಸಿರಾದಲ್ಲೇ 43 ದೇವಾಲಯ, 17
ಮಸೀದಿಗಳಿದ್ದವೆಂದು ಉಲ್ಲೇಖಿಸಿದ್ದಾನೆ. ಇವುಗಳೇ ಅಲ್ಲದೆ ಸಿರಾದ ಸ್ಥಳೀಯಚರಿತ್ರೆಗೆ
ಸಂಬಂಧಿಸಿದಂತೆ ಒಟ್ಟು 07 ದಾಖಲೆಗಳನ್ನು ಸ್ಥಳೀಯರಿಂದ ಸಂಗ್ರಹಿಸಿದ್ದಾನೆ. ಅವುಗಳನ್ನು ಇಂಗ್ಲೀಷ್
ಭಾಷೆಗೆ ತರ್ಜುಮೆಯನ್ನು ತನ್ನ ಸಹಾಯಕರಿಂದ ಮಾಡಿಸಿ ದಾಖಲಿಸಿಕೊಂಡಿದ್ದಾನೆ.
ಈ ದಾಖಲೆಯಲ್ಲಿ ಕ್ರಿ.ಶ.
1686 ರಿಂದ ಕ್ರಿ.ಶ. 1756 ರವರೆಗೆ ಸಿರಾದಲ್ಲಿ ಆಳ್ವಿಕೆ ನಡೆಸಿದ 16 ಜನ ಸುಬೇದಾರರ ಹೆಸರನ್ನು
ಖಾನಖಾನ್‌ನಿಂದ ಹಿಡಿದು ದಿಲಾವರ್ ಖಾನನವರೆಗೆ ನಮೂದಿಸಲಾಗಿದೆ. ಕ್ರಿ.ಶ. 1756 ನಂತರ ಈ
ಪ್ರದೇಶದಲ್ಲಿ ಆಳಿದ ಮರಾಠರು ಅನಂತರ ಹೈದರಾಲಿ ಟಿಪ್ಪು ಸುಲ್ತಾನರಸರಾದ
ಮೇಲಿನ ಆಕ್ರಮಣಗಳು ಕ್ರಿ.ಶ. 1799 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸಿರಾ ಗೆದ್ದುಕೊಂಡು ಅಲ್ಲಿ
ಸೇನಾ ನೆಲೆಯನ್ನು ಸ್ಥಾಪಿಸಿದ್ದರ ಮಾಹಿತಿಯನ್ನು ಸಂಕ್ಷಿಪ್ತವಾಗಿ ಕೊಡಮಾಡಿದ್ದಾನೆ.
ಒಟ್ಟಾರೆ ಮೆಕೆಂಜಿಯು
ಕೊಡ ಮಾಡಿರುವ ಈ ಎಲ್ಲಾ ದಾಖಲೆಗಳು ವಿಜಯನಗರ-ನಗರೋತ್ತರ ಕಾಲದ ಸ್ಥಳೀಯ ಚರಿತ್ರೆ
ರಚಿಸಲು ಮತ್ತು 1799-1800 ರ ಅವಧಿಯಲ್ಲಿ ಅಲ್ಲಿನ ಅಮುಲ್ದಾರರ ಕಛೇರಿಯ ಕಡತದಲ್ಲಿದ್ದ ಸಮಾಜೋ-ಆರ್ಥಿಕ
ವ್ಯವಸ್ಥೆಗೆ ಸಹಾಯವಾಗಬಲ್ಲ ಅಂಕಿ ಅಂಶಗಳನ್ನು ನೀಡುತ್ತದೆ. ಇದರಿಂದ ಆಕಾಲದ ಸಮಾಜೋ-ಆರ್ಥಿಕ
ಇತಿಹಾಸ ರಚಿಸದೆ ನೆರವಾಗಬಲ್ಲ ಅಮೂಲ್ಯ ಮಾಹಿತಿ ಒಳಗೊಂಡಿದೆ.
ತುಮಕೂರು ಜಿಲ್ಲೆಯ ಮಧುಗಿರಿಗೂ
ಮೆಕೆಂಜಿಯು ಭೇಟಿ ನೀಡಿ ಅಲ್ಲಿ ತಾನು ಸಂಗ್ರಹಿಸಿದ ಮಾಹಿತಿಗಳನ್ನು ಕೊಡ ಮಾಡಿದ್ದಾನೆ. ಮೆಕೆಂಜಿ ಮಧುಗಿರಿಗೆ ಭೇಟಿ ನೀಡುವ ಒಂದು ವರ್ಷ ಮೊದಲೇ
ಫ್ರಾನ್ಸಿಸ್ ಬುಕಾನನ್ ಎಂಬ ಬ್ರಿಟೀಷ್‌ರಿಂದ ನೇಮಿಸಲ್ಪಟ್ಟ ಅಧಿಕಾರಿ ಈ ಪ್ರದೇಶಕ್ಕೆ ಭೇಟಿ ನೀಡಿ ತಾನು ಕಣ್ಣಾರೆ ನೋಡಿದ ಮತ್ತು ಕಿವಿಯಾರೆ ಕೇಳಿದ ವಿಚಾರಗಳನ್ನು ಆಯಾ
ಸ್ಥಳದಲ್ಲಿ ಸಂಗ್ರಹಿಸಿ "A journey from Madras through the countries at Mysore Malabar and
Canara" ಎಂಬ
ಕೃತಿಯಲ್ಲಿ ನಮೂದಿಸಿದ್ದಾನೆ. ಅದರಲ್ಲಿ ಆತ ಮಧುಗಿರಿಗೆ ಕ್ರಿ.ಶ. 1800ರ ಜುಲೈ 24 ರಂದು ಬಂದು
ಜುಲೈ 29 ರವರೆಗೆ ವಾಸ್ತವ್ಯ ಹೂಡಿ ಅಲ್ಲಿನ ಮಣ್ಣಿನ ಗುಣ ಬೆಳೆ ಅಳತೆ ಮಾಪನ ಮಧುಗಿರಿ ಬೆಟ್ಟ ,ಜಾತಿಯ ಸಂಪ್ರದಾಯ ಮೊದಲಾದವಿವರಗಳನ್ನು ದಾಖಲಿಸಿಕೊಂಡು ಜುಲೈ 30 ಬಡವನಹಳ್ಳಿಗೆ ಆಗಸ್ಟ್
1 ರಿಂದ 6 ರವರೆಗೆ ಸಿರಾದಲ್ಲೂ ಆನಂತರ ಪುನಃ
ಮಧುಗಿರಿಗೆ ಬರುತ್ತಾನೆ. ಆತ ಆಗಸ್ಟ್ 10ನೇ ದಿನ ಮಧುಗಿರಿಗೆ ಬಂದು ಎರಡುದಿನದ ನಂತರ
ಚನ್ನರಾಯದುರ್ಗಕ್ಕೆ 12 ರಂದು ತೆರಳಿದನು. ಇದೇ
ಮಧುಗಿರಿಗೆ ಮೆಕೆಂಜಿಯು ಕ್ರಿ.ಶ. 1801 ರ ಸೆಪ್ಟೆಂಬರ್ ತಿಂಗಳಲ್ಲಿ ಆಗಮಿಸಿ ಅಕ್ಟೋಬರ್‌ವರೆಗೂ ಇದ್ದು ಸರ್ಕಾರ ತನಗೆ ವಹಿಸಿದ್ದ ಕೆಲಸವನ್ನು
ಯಶಸ್ವಿಯಾಗಿ ಮುಗಿಸಿದನು. ಈತ ಈ ಅವಧಿಯಲ್ಲಿ ಮಧುಗಿರಿಯ ಅಮುಲ್ದಾರರ ಕಛೇರಿಗೆ ತೆರಳಿ ಸರ್ಕಾರದ ದಾಖಲೆಗಳನ್ನು
ಪರಿಶೀಲಿಸಿ ಆ ಜಿಲ್ಲೆಗೆ ಸೇರಿದ ಒಟ್ಟು 12 ತರಫ್‌ಗಳಲ್ಲಿನ ಹಳ್ಳಿಗಳ ಹೆಸರು ಕೆರೆ ಕುಂಟೆಕಟ್ಟಿ
ನದಿ ಕೋಟೆ ಕಾಲುವೆ ದೇವಾಲಯ ಮಸೀದಿಗಳನ್ನು ಗ್ರಾಮವಾರು ಪಟ್ಟಿ ಮಾಡಿದ್ದಾನೆ. ಒಟ್ಟು 12 ದರ್ಗಾಗಳ ಹೆಸರನ್ನು ಆತ ತಿಳಿಸಿದ್ದಾನೆ. ಮಧುಗಿರಿ, ಚಂದ್ರಗಿರಿ, ಮಿಡಿಗೇಸಿ, ಕೊಡಿಗೇನಹಳ್ಳಿ, ಹಂಪೆಸಮುದ್ರ, ಹಿರೆಮಾಲ್ಲೂರ
ಏಳೂರ್ ಸಿದ್ದಾಪುರ, ಕೊಲ್ಲಾಪುರ, ಚಿಕ್ಕಮಾಲೂರು, ಕಿತ್ತಾಗಳ್ಳಿ, ಕಡಗತ್ತೂರು
ಈ ಹನ್ನೆರಡು ತರಫ್‌ಗಳಿಂದ ಒಟ್ಟು 383 ಗ್ರಾಮಗಳ ತರಫ್ವಾರು ಪಟ್ಟಿಯನ್ನು
ನೀಡಿದ್ದಾನೆ.
ಮೆಕಂಜಿ ಮಧುಗಿರಿಗೆ ಸಂಬಂಧಿಸಿದ ಒಟ್ಟು ಒಂಭತ್ತು ದಾಖಲೆಗಳನ್ನು
ಸಂಗ್ರಹಿಸಿದ್ದಾನೆ. ಅವುಗಳೆಂದರೆ:
ಮಧುಗಿರಿ ಜಿಲ್ಲೆಯ
ಜಾತಿವಾರು ಪಟ್ಟಿ ಜೊತೆಗೆ ಕುಟುಂಬಗಳ ಸಂಖ್ಯೆ, ತರಫ್ವಾರು ಗ್ರಾಮಗಳ ಪಟ್ಟಿ, ತರಫ್
ವಾರು ಕ್ರೂಡೀಕೃತ ಮಾಹಿತಿ, ಇದರಲ್ಲಿ ಗ್ರಾಮಗಳು, ಜಲಮೂಲ
ಸೌಕರ್ಯ, ಮನೆಗಳಸಂಖ್ಯೆ, ಕುಟುಂಬಗಳ
ಸಂಖ್ಯೆ, ದೇವಾಲಯ, ಮಸೀದಿಗಳ
ಸಂಖ್ಯೆ, ಕೋಟೆ
ವಿವರವಿದೆ. ಮಧುಗಿರಿ
ಜಿಲ್ಲೆಯ ಸಾಮಾನ್ಯ ವಿವರ, ಮಧುಗಿರಿಯ ಕೋಟೆಯೊಳಗಿನ ಕಟ್ಟಡಗಳ ಲೆಕ್ಕದ
ವಿವರ ಮಧುಗಿರಿಯಲ್ಲಿನ ಭೂಮಾಪನದ ವಿವರ, ಕ್ರಿ.ಶ. 1801 ರ ಅಕ್ಟೋಬರ್ 1
ರಂದು ಶ್ಯಾನುಭೋಗ ಸೀನೆಪೆಯ್ಯ ಎಂಬುವನಿಂದ ಸಂಗ್ರಹಿಸಿದ ಮಿಡಿಗೇಸಿಯ ಐತಿಹಾಸಿಕ ದಾಖಲೆ ಮತ್ತು
ಮಿಡಿಗೇಸಿ ತರಫ್‌ನ ಬಗ್ಗೆ ಷರಾ (Remarks)
ಈ ಎಲ್ಲಾ ದಾಖಲೆಗಳನ್ನು ಕ್ರೂಢೀಕರಿಸಿ ಮೆಕೆಂಜಿಯು ಈಸ್ಟ್ ಇಂಡಿಯಾ ಕಂಪನಿಗೆ 1803ರಲ್ಲಿ ಮದ್ರಾಸಿನಲ್ಲಿ ಸಲ್ಲಿಸಿದನು. ಈ ಎಲ್ಲ
ದಾಖಲೆಗಳು ಮಧುಗಿರಿ ಮಿಡಿಗೇಶಿಯನ್ನಾಳಿದ ರಾಜಮನೆತನಗಳ ವಿವರವಲ್ಲದೆ ಆ ಜಿಲ್ಲೆಯ ಆಡಳಿತ
ವ್ಯಾಪ್ತಿಯ ಗಡಿಗಳನ್ನು ಗುರುತಿಸಲು ಸಹಾಯವಾಗುತ್ತದೆ. ಅಲ್ಲದೆ ಅಂದು ಆ
ಪ್ರದೇಶದಲ್ಲಿನ ನೀರಾವರಿ, ಬೆಳೆ, ಜಾತಿ ಕುಟುಂಬಗಳು, ಮನೆಗಳು ಮೊದಲಾದ ಸಾಮಾಜಿಕ ಸಂಗತಿಗಳನ್ನು
ತಿಳಿಯಲು ಸಹಾಯವಾಗುತ್ತದೆ. ಇವನ ಈ ದಾಖಲೆಗಳು ವಿಜಯನಗರೋತ್ತರ ಕಾಲದ ಚರಿತ್ರೆಗೆ ಅಮೂಲ್ಯವಾದ ದಾಖಲೆಗಳಾಗಿದ್ದು
ಪ್ರಸ್ತುತ ತುಮಕೂರು ಉತ್ತರ ಭಾಗದ ಚರಿತ್ರೆ ಮತ್ತು ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಹಾಯಕವಾದ ಪ್ರಮುಖ ಆಕರಗಳಾಗಿವೆ.
ಮೆಕೆಂಜಿ ಅವರು ನಡೆಸಿದ
ಭಾರತದ ಸಮೀಕ್ಷೆಯಿಂದ ದಕ್ಷಿಣ ಭಾರತದ ಮೊದಲ ಅಧಿಕೃತ ಭೌಗೋಳಿಕ ನಕ್ಷೆ ತಯಾರಾಯಿತು. ಅಷ್ಟೇ ಅಲ್ಲ,
ಸಮೀಕ್ಷೆಯ ಸಮಯದಲ್ಲಿ ಅವರು ಕಲೆಹಾಕಿದ ಅಪಾರ ಹಸ್ತಪ್ರತಿಗಳು ಮತ್ತು ಇತರ ಪ್ರಾಚ್ಯ ಅವಶೇಷಗಳು ದಕ್ಷಿಣ
ಭಾರತದ ಇತಿಹಾಸ ಮತ್ತು ಪರಂಪರೆಯ ಅಮೂಲ್ಯ ಸಾಕ್ಷಿಗಳಾದವು. ಮೆಕೆಂಜಿಯವರ ಅಪಾರ ಶ್ರಮದ ಅಧಿಕ್ಯವನ್ನು
ಅವರ ಅಪಾರ ಸಂಗ್ರಹದ ಭಾಗವಾಗಿರುವ ಈ ಕೆಳಕಂಡ ವೈವಿಧ್ಯಮಯ ದಾಖಲು ಸಾಹಿತ್ಯ ಸಂಖ್ಯೆಯಿಂದ
ಅಳೆಯಬಹುದು.
1. ಶಾಸನಗಳ
ಸಂಖ್ಯೆ 8,070
2. ಬರ್ಮೀಸ್
ಮತ್ತು ಜಾವಾನೀಸ್ ಸೇರಿದಂತೆ ಸುಮಾರು 13 ಭಾಷೆಗಳಲ್ಲಿ ಹಸ್ತಪ್ರತಿಗಳ ಸಂಖ್ಯೆ 1,568.
3. ಸ್ಥಳಪುರಾಣಗಳು
ಒಟ್ಟು 2159.
4. ಕಾವ್ಯಗಳು
2000
ಕ್ಕಿಂತ ಹೆಚ್ಚು (ಇಂಗ್ಲಿಷ್‌ಗೆ ಅವುಗಳ ಅನುವಾದಗಳು ಒಳಗೊಂಡು 75 ಸಂಪುಟಗಳಾಗಿವೆ.)
5. ರೇಖಾಚಿತ್ರಗಳು
ಒಟ್ಟು 2,630
6. ನಕ್ಷೆಗಳು
ಒಟ್ಟು 79.
7. ಚಿನ್ನ, ಬೆಳ್ಳಿ
ಮತ್ತು ತಾಮ್ರದಲ್ಲಿನ ವಿವಿಧ ರಾಜವಂಶಗಳ ನಾಣ್ಯಗಳು ಒಟ್ಟು 6000
8. ಪುರಾತತ್ವ
ಪ್ರತಿಮೆಗಳು ಮತ್ತು ಶಿಲ್ಪಗಳು ಒಟ್ಟು 146
ಈ ಅಪಾರವಾದ ಸಂಗ್ರಹವನ್ನು
ಭಾರತದಲ್ಲಿ ಒಬ್ಬ ಪಾಶ್ಚಾತ್ಯ ವ್ಯಕ್ತಿಯು ಮಾಡಿದ ಭಾರತಕ್ಕೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳ
ಅತ್ಯಂತ ವಿಸ್ತಾರವಾದ ಸಂಗ್ರಹವೆಂದು ಪರಿಗಣಿಸಲಾಗಿದೆ. ಪ್ರಥಮ ಬಾರಿಗೆ
ಹಂಪಿಯಲ್ಲಿನ ವಿಜಯನಗರದ ಅವಶೇಷಗಳ ಶ್ರೀಮಂತ ವಾಸ್ತುಶಿಲ್ಪ ಪರಂಪರೆಯನ್ನು ಬೆಳಕಿಗೆ ತಂದವನು
ಕಾಲಿನ್ ಮೆಕೆಂಜಿ. ಪ್ರಾಚ್ಯ ಅವಶೇಷಗಳ ಸಮೀಕ್ಷೆಯ ಭಾಗವಾಗಿ, ಅವನು ಕ್ರಿ.ಶ.1799
ರಲ್ಲಿ ಆ ಸ್ಥಳಕ್ಕೆ ಭೇಟಿ ನೀಡಿದನು. ಅಲ್ಲಿಯ ಸ್ಮಾರಕಗಳ
ಕೆಲವು ನೀರಿನ ಬಣ್ಣದ ವರ್ಣಚಿತ್ರಗಳನ್ನು ಬರೆಸಿನು.ಈತನು ಬರೆಸಿದ ಹಂಪಿಯ ಪೆನ್ಸಿಲ್ ಚಿತ್ರ ಬ್ರಿಟಿಷ್ ಮ್ಯೂಸಿಯಂನಲ್ಲಿರುವುದಾಗಿ ತಿಳಿದು
ಬಂದಿದೆ. ಗುಂಟೂರು ಬಳಿಯ ಪ್ರಾಚೀನ ಬೌದ್ಧ ತಾಣವಾದ ಅಮರಾವತಿಗೆ ಭೇಟಿ ನೀಡಿ
ಶಿಲ್ಪಗಳ ಹಲವಾರು ರೇಖಾಚಿತ್ರಗಳನ್ನು ಮಾಡಿಸಿದ್ದಾನೆ.
ಮಹಾಬಲಿಪುರಂನಲ್ಲಿಯ
ರೇಖಾಚಿತ್ರಗಳು ಮತ್ತು ನಕ್ಷೆಗಳು ಈಗ ಬ್ರಿಟಿಷ್ ಲೈಬ್ರರಿಯಲ್ಲಿ ಏಷ್ಯಾ ಪೆಸಿಫಿಕ್
ಸಂಗ್ರಹಗಳಲ್ಲಿವೆ. ಶ್ರವಣಬೆಳಗೊಳದಲ್ಲಿರುವ ಗೋಮಟೇಶ್ವರನ ಬೃಹತ್
ಪ್ರತಿಮೆಯನ್ನು ನಿಖರವಾಗಿ ಅಳೆಯುವ ಹೆಗ್ಗಳಿಕೆಗೂ ಮೆಕೆಂಜಿ ಪಾತ್ರನಾಗಿದ್ದಾನೆ. ಇವುಗಳು ಮೆಕೆಂಜಿಯ ಪ್ರಾಚ್ಯ ಅವಶೇಷಗಳ ಆಸಕ್ತಿ
ಮತ್ತು ಅಧ್ಯಯನದ ಹೆಗುರುತುಗಳಾಗಿವೆ.
ಮೆಕೆಂಜಿ ಅವರ ಹೆಸರು
ದಕ್ಷಿಣ ಭಾರತದ ಹಸ್ತಪ್ರತಿಗಳು, ಸ್ಥಳೀಯ ಇತಿಹಾಸಗಳು, ಚಾರ್ಟ್‌ಗಳು, ನಕ್ಷೆಗಳು, ರೇಖಾಚಿತ್ರಗಳು, ನಾಣ್ಯಗಳು, ವರ್ಣಚಿತ್ರಗಳು, ಪ್ರತಿಮೆಗಳು ಇಂದಿಗೂ ಭಾರತದ ಇತಿಹಾಸ ಮತ್ತು ಸಂಸ್ಕೃತಿಯ
ಮೇಲೆ ಪ್ರಭಾವ ಬೀರುವ ಇತರ ಕಲಾಕೃತಿಗಳೊಂದಿಗೆ ಸದಾಕಾಲಕ್ಕೆ ಬೆಸೆದುಕೊಂಡಿವೆ. ಆತನು ಹೋದಲ್ಲೆಲ್ಲ ಸ್ಥಳೀಯ ಇತಿಹಾಸಗಳು,
ಶಾಸನಗಳು,
ಧಾರ್ಮಿಕ ಆಚರಣೆಗಳು,
ಹಬ್ಬಗಳು ಮತ್ತು ಸಾಮಾಜಿಕ
ಶಿಷ್ಟಾಚಾರಗಳ ವಿವರಗಳನ್ನು ಸಂಗ್ರಹಿಸುತ್ತಾ ಬಂದನು. ಆತನ ಸಂಗ್ರಹಗಳು ಇಂಗ್ಲೆಂಡ್ ಮತ್ತು
ಭಾರತದಲ್ಲಿನ ಹಲವಾರು ವಸ್ತುಸಂಗ್ರಹಾಲಯಗಳು ಮತ್ತು ಗ್ರಂಥಾಲಯಗಳಲ್ಲಿದ್ದು ಅಮೂಲ್ಯವಾದ ಆಸ್ತಿಯಾಗಿವೆ. ಮೆಕೆಂಜಿಯ ಪುರಾತತ್ವ ವಸ್ತುಗಳ
ಸಂಗ್ರಹ ಮಧ್ಯಕಾಲೀನ ಇತಿಹಾಸ ಆಕರಗಳ ಸಾಗರವೆನ್ನಬಹುದು. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ
ಹಾಗೂ ಬರ್ಮಾ ಮತ್ತು ಜಾವಗಳ ಇತಿಹಾಸ, ಸಾಹಿತ್ಯ ,ಮಧ್ಯಕಾಲೀನ ಜನಜೀವನ ಮತ್ತು ರಾಜಕೀಯ ಅಧ್ಯಯನ
ಮಾಡುವವರು ಮೆಕೆಂಜಿಯನ್ನು ಸ್ಮರಿಸದೇ ಅವರು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು
ಸಾಧ್ಯವಿಲ್ಲವೆಂದೇ ಹೇಳ ಬೇಕಾಗಿದೆ. ಮೆಕೆಂಜಿಯ ಸಂಗ್ರಹವೇ ಅವರಿಗೆ ಅತಿ ಮುಖ್ಯ
ಆಕರ. ಕೋವಿ ಹಿಡಿದು ಯುದ್ಧದಲ್ಲಿ ಜಯಸಾಧನೆ
ಸರ್ವೆಕ್ಷಣೆ ಮಾಡುವಾಗ ಇತಿಹಾಸ ಸಂಶೋಧನೆ ” ಎಂಬುದು ಕರ್ನಲ್ ಕಾಲಿನ್ ಮೆಕೆಂಜಿಯ ಕಾರ್ಯ
ವೈಖರಿ. ದಕ್ಷಿಣ
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಿದ, ಅವನ ಶ್ರಮವನ್ನು ಕೈಫಿಯತ್ತುಗಳ
ಕರ್ತಾರನಾಗಿ ಇತಿಹಾಸ ರಚನೆಗೆ ಸಮಗ್ರ ಮಾಹಿತಿಯ ಆಕರವನ್ನೂ ಒದಗಿಸಿದ ಬಗೆಯಲ್ಲಿ ಗುರುತಿಸಬಹುದಾಗಿದೆ.
ಅಂದಿನ ಕಾಲದಲ್ಲೇ ಸುಮಾರು ಇಪ್ಪತ್ತು ಸಾವಿರಕ್ಕೂ ಮಿಗಿಲಾಗಿ ಶಾಸನ, ಹಸ್ತಪ್ರತಿ, ನಾಣ್ಯ, ನಕ್ಷೆ,
ಕೈಫಿಯತ್ತುಗಳನ್ನು ೧೩ ಭಾಷೆಗಳಲ್ಲಿ ೧೭ ಲಿಪಿಗಳಲ್ಲಿ
ಸುಮಾರು ೪೦ ಸಾವಿರ ಮೈಲು ಸಂಚರಿಸಿ ೩೮ ವರ್ಷಗಳಕಾಲ ನುಡಿ ಸೇವೆ ಮಾಡಿದ್ದು ಚಾರಿತ್ರಾತ್ಮಕ
ದಾಖಲೆ. ಕನ್ನಡದ
ಕೈಫಿಯತ್, ಬಖೈರು ಮತ್ತು
ಕಡತಗಳಗಳ ನಿರ್ಮಾಣಕ್ಕೆ ಕಾರಣಕರ್ತ ಕರ್ನಲ್ ಕಾಲಿನ್‌ಮೆಕಂಜಿ. ಅದರ ಪರಿಣಾಮವಾಗಿ ಇಂದು
ನಮಗೆ ದಕ್ಷಿಣಭಾರತದ ಮಧ್ಯಕಾಲೀನ
ಇತಿಹಾಸ,ಜನ ಜೀವನ ಮತ್ತು ಆಚರಣೆಗಳ ಸ್ಪಷ್ಟ ಚಿತ್ರಣ ಹಾಗೂ ಒಳನೋಟವು
ಲಭ್ಯವಾಗಿದೆ.
ದಕ್ಷಿಣ
ಭಾರತಕ್ಕೆ ಸಂಬಂಧಿಸಿದ ದಾಖಲೆಗಳು ಇಂಗ್ಲೀಷ್ ಭಾಷೆಯಲ್ಲಿ ಅನುವಾದಗೊಂಡು ಲಂಡನ್ನಿನ ಇಂಡಿಯಾ ಆಫೀಸಿನ ಲೈಬ್ರರಿಯಲ್ಲಿವೆ.ಅವು Mackenzie Collection
part || ಎಂಬ
ಕೆಟಲಾಗ್‌ನಲ್ಲಿ ಸೇರ್ಪಡೆಯಾಗಿವೆ. ಇದು ೧೯೫೦ರ ಸುಮಾರಿಗೆ ಮುದ್ರಣಗೊಂಡಿದ್ದರೂ ಅದಕ್ಕೊಂದು
ವಿಷಯಸೂಚಿಯನ್ನು (Index) ಸಿದ್ಧಪಡಿಸಲಿಲ್ಲವಾದ್ದರಿಂದ
ಪ್ರಕಟವಾಗದೇ ಉಳಿದುಬಿಟ್ಟಿತು.(ಶ್ರೀನಿವಾಸ ಹಾವನೂರ, ಹೊಸಗನ್ನಡದ
ಅರುಣೋದಯ, ಪು.೧೪೦)
ವೈಜ್ಞಾನಿಕ
ಸಾಧನ ಮತ್ತು ಸಾರಿಗೆ ಸಂಪರ್ಕವಿಲ್ಲದ ಅಂದಿನ ದಿನಮಾನದಲ್ಲಿ ಕಾಲಿನ್ ಮೆಕೆಂಜಿ ಮಾಡಿದ ಸಾಧನೆಗಳು ಖಂಡಿತಾ
ಅದ್ವಿತೀಯವಾದವು, ಧಾರ್ಮಿಕ ಕೇಂದ್ರಗಳಲ್ಲಿ ಮತ್ತು ಪ್ರತಿಷ್ಠಿತರ ಮನೆಯಲ್ಲಿದ್ದ
ಹಸ್ತಪ್ರತಿಗಳನ್ನು ಕ್ಷೇತ್ರಕಾರ್ಯದುದ್ದಕ್ಕೂ ಸಂಗ್ರಹಿಸುತ್ತಾ
ಬಂದದ್ದರಿಂದಲೇ ಆ ಸಂಖ್ಯೆ ಹದಿನೈದುನೂರು ಮಿಕ್ಕಿದೆ. ಮೆಕೆಂಜಿ ಸಂಗ್ರಹಿಸಿದ ಬಹುಪಾಲು ಸಾಮಗ್ರಿಯನ್ನು ಲಂಡನ್ ಸರ್ಕಾರ ತನ್ನ ಇಂಡಿಯಾ ಆಫೀಸ್ ಲೈಬ್ರರಿ
ಮೂಲಕ ಪ್ರಕಟಿಸಲು ಪ್ರಯತ್ನಿಸಿತು. ಅದರಲ್ಲಿಯ Mackenzie Collection, Part
II-GENERAL ಎಂಬ
ಕೃತಿಯಲ್ಲಿ ವ್ಯಕ್ತವಾದ ನಮ್ಮ ಸ್ಥಳಪರಿಚಯ, ಬಖೈರು, ಕೈಫಿಯತ್ತು ಮತ್ತು ನಕ್ಷೆಗಳನ್ನು ಸಿ. ಆರ್. ಶ್ಯಾಮಲ ಹಾಗೂ ಡಾ. ಶ್ರೀನಿವಾಸ ಹಾವನೂರರು ಶೋಧಿಸಿದ್ದಾರೆ. ಅದರಂತೆ ಹೈದ್ರಾಬಾದ, ವಿಜಯನಗರ, ಆನೇಗೊಂದಿ, ಮೈಸೂರು
ಮತ್ತು ಮರಾಠರ ಆಳ್ವಿಕೆಯ ಮೇಲೆ ಹೊಸ ಬೆಳಕು ಚೆಲ್ಲುವ ಅನೇಕ ದಾಖಲೆಗಳು ಇಲ್ಲಿರುವುದನ್ನು ಅವರು
ತೋರಿಸಿದ್ದಾರೆ. ಶಿವಾಜಿ ಮತ್ತು ಆತನ ತಂದೆಯ ಕುರಿತಾಗಿ JASBಯ ೧೩ನೆಯ ಸಂಪುಟದಲ್ಲಿ ಬರೆದ ಮೆಕೆಂಜಿಯ ಲೇಖನ ಸಹ ಮರಾಠರ ಮನೆತನದ ಬಹು
ಮುಖ್ಯ ದಾಖಲೆ. ಕಾಲಿನ್ ಮೆಕೆಂಜಿಯ ಸಾಹಸಮಯ ಜೀವನ ಅತ್ಯಂತ ವೈವಿಧ್ಯಮಯವಾದುದು.
ಆತನು ಭರತ ಖಂಡದಲ್ಲಿ ಸವೆಸಿದ
ಆತನ ೩೮ ವರ್ಷಗಳ ಸುದೀರ್ಘ ಸಮಯದ ಕ್ರಮ ಇಂದು ಹತ್ತಾರು ಪಿಎಚ್.ಡಿ. ಗಳಿಗೆ ಆಕರವಾಗಿದೆ. ಮೆಕೆಂಜಿ
ಮತ್ತು ಆತನ ಸಂಗ್ರಹದ ವಿಷಯವಾಗಿ ವಿಲ್ಸನ್ ಸಿದ್ಧಪಡಿಸಿದ A e
dug, A. doop wo Colonel Colin Mackenzie: First Surveyor General of India ಹೆಸರಿನ ಗ್ರಂಥ, ಜೊತೆಗೆ
ಒಂದೆರಡು ಲೇಖನಗಳು ಮಹತ್ತರವಾದ ದಾಖಲೆಗಳೆಂಬುದನ್ನು ಡಾ. ಕಲಬುರ್ಗಿಯವರು
ಸೂಚಿಸಿದ್ದಾರೆ.
ಮೆಕೆಂಜಿ ಸಂಗ್ರಹದ ಅಧ್ಯಯನಗಳು
ಕರ್ನಲ್‌ಮೆಕೆಂಜಿ ಬಹು ಭಾಷಾವಿದ್ವಾಂಸ. ಅದರಿಂದಲೇ ಅವನ
ಸಂಗ್ರಹದಲ್ಲಿ ವಸ್ತುಗಳ ವೈವಿದ್ಯತೆ ಅಪಾರ.ದಾಖಲೆಗಳಂತೂ ಹಲವು ಹತ್ತು ಭಾಷೆಗಳಲ್ಲಿವೆ. ಅವನ
ಸಂಗ್ರಹದಲ್ಲಿನ ದಾಖಲೆಗಳ ಸೂಚಿ ೧೮೯೩ರಲ್ಲಿ ಮದ್ರಾಸಿನಲ್ಲಿ ಪ್ರಾರಂಭವಾಯಿತು. ಅದು ೧೯೫೨ ರ ವರಗೆ
ಮುಂದುವರೆಯಿತು ಎಂದರೆ ಅದರ ಅಗಾಧತೆಯ ಅರಿವು ಎಂತಹದ್ದು ಎಂಬುದು ಆ ಕ್ಷೇತ್ರದ ಆಸಕ್ತರಿಗೆ ಉಂಟಾಗುವುದು ಸಹಜ.
ಈಸ್ಟ್ ಇಂಡಿಯಾ ಕಂಪನಿಯ ಲೈಬ್ರರಿಯನ್ನು ತಲುಪಿದ ಅತ್ಯಂತ
ವ್ಯಾಪಕವಾದ ಸಂಗ್ರಹಗಳಲ್ಲಿ ಒಂದಾದ ಮದ್ರಾಸ್ ಇಂಜಿನಿಯರ್‌ಗಳ ಅಧಿಕಾರಿಯಾಗಿದ್ದ ಕಾಲಿನ್ ಮೆಕೆಂಜಿ
ಓರಿಯೆಂಟಲ್ ಭಾಷೆಯಲ್ಲಿರುವ,
ಹಸ್ತಪ್ರತಿಗಳು,
ಅನುವಾದಗಳು,
ಯೋಜನೆಗಳು ಯುರೋಪಿಯನ್
ಹಸ್ತಪ್ರತಿಗಳು, ಮುದ್ರಣಗಳು ಮತ್ತು ರೇಖಾಚಿತ್ರಗಳು ಮತ್ತು ನಕ್ಷೆಗಳು ಸೇರಿದಂತೆ
ಭಾರತದ ಕಛೇರಿಯ ಸಂಗ್ರಹಣೆಗಳ ಪ್ರತಿಯೊಂದು ವಿಭಾಗದಲ್ಲೂ ಅದರ ಸಾಮಗ್ರಿಗಳು ಕಂಡುಬರುತ್ತವೆ. ಮದ್ರಾಸ್‌ನ ಸರ್ಕಾರಿ ಪ್ರಾಚ್ಯ ಹಸ್ತಪ್ರತಿಗಳ ಗ್ರಂಥಾಲಯದಲ್ಲಿ
ದಕ್ಷಿಣ ಭಾರತೀಯ ಭಾಷೆಗಳ ಹಸ್ತಪ್ರತಿಗಳು ಸೇರಿದಂತೆ. ಮೆಕೆಂಜಿಯವರ ಸ್ವಂತ ಅಂದಾಜಿನ ಪ್ರಕಾರ,
ಇಪ್ಪತ್ತೊಂದು ವಿಭಿನ್ನ
ಅಕ್ಷರಗಳಲ್ಲಿ ಬರೆಯಲಾದ ಹದಿನೈದು ಓರಿಯೆಂಟಲ್ ಭಾಷೆಗಳಿಗಿಂತ ಕಡಿಮೆಯಿಲ್ಲ. ೧೪
ಭಾಷೆಗಳ ಹಾಗೂ ೧೭ ಲಿಪಿಗಳಲ್ಲಿ ಹಲವಾರು ಆಕರ ಸಾಮಗ್ರಿಗಳನ್ನು ಸಂಗ್ರಹಿಸಿದ ಕರ್ನಲ್ ಮೆಕೆಂಜಿಗೆ,
ಅಷ್ಟೂ ಭಾಷೆ ಮತ್ತು ಲಿಪಿಯ ಜ್ಞಾನವು
ಆತನಿಗಿತ್ತೆನ್ನುವದೇ ಆಶ್ಚರ ತರುವ ವಿಚಾರ. ಅದಕ್ಕೆಂದೆ ಪಾಶ್ಚಾತ್ಯ ವಿದ್ವಾಂಸರು ಈತನನ್ನು ಪ್ರಾಚೀನ ವಸ್ತುಗಳ ಅಪ್ರತಿಮ ಯಶಸ್ವಿ ಸಂಗ್ರಾಹಕ"(An ardent and successful
collector of antiquities") ಎಂದು ಪ್ರಶಂಸಿಸಿದ್ದಾರೆ. ಈತ ಸಂಗ್ರಹಿಸಿದ ಅಪಾರ ಸಾಮಗ್ರಿಗಳ ಕುರಿತಾಗಿ ಈತನ ಸಮಕಾಲೀನರು ಹಾಗೂ
ತರುವಾಯದ ವಿದ್ವಾಂಸರಾದ ಕವಲ್ಲಿ ಬೋರಯ್ಯ, ದೇವಚಂದ್ರ, ಚವಲಿ ಲಕ್ಷ್ಮಯ್ಯ, ಪುಲಿಗಡ್ಡ ಮಲ್ಲಯ್ಯ, ವಿಲ್ಸನ್,ಪ್ರಿನ್ಸೆಫ್, ಕೋಲ್‌ಬ್ರುಕ್, ಬ್ರೌನ್ಸ್ ಹವಡೆನ್ ಹೀಗೆ ಇನ್ನು ಹಲವರ ನೆನಪಿನ ಟಿಪ್ಪಣಿಗಳು ನಮಗಿಂದು ಕರ್ನಲ್ ಮೆಕೆಂಜಿಯ
ಸಾಧನೆಯನ್ನು ಸಾದರಪಡಿಸುತ್ತಿವೆ. ಅಲ್ಲದೆ ಸ್ವತಃ ಮೆಕೆಂಜಿಯ ಕ್ರಿ. ಶ. ೧೮೦೭ರ
ಏಸಿಯಾಟಿಕ್ ರಿಸರ್ಚಸ್ ಸಂಚಿಕೆಯ ೯ನೆಯ ಸಂಪುಟದಲ್ಲಿ ಬರೆದ ಲೇಖನಗಳು ಸಹ
ಉದಾಹರಣೆಯಾಗಿವೆ. ಮೆಕೆಂಜಿ ಕಲೆಕ್ಷನ್
೧೯೨೮ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು. ಅದು ಹಸ್ತ ಪ್ರತಿಗಳು ಸಾಹಿತ್ಯ, ಇತಿಹಾಸ, ಪುರಾತತ್ವ ವಸ್ತುಗಳು ಮತ್ತು ಇತರೆ
ಐತಿಹಾಸಿಕ ಆಕರಗಳ ವರ್ಣನಾತ್ಮಕ ಕ್ಯಾಟಲಾಗ್,-ಎಚ್‌ಎಚ್ ವಿಲ್ಸನ್‌ನಿಂದ
ಪ್ರಪ್ರಥಮವಾಗಿ ಕಲ್ಕತ್ತಾದಲ್ಲಿ ಪ್ರಕಟವಾಯಿತು. ಪ್ರಸಿದ್ಧ ಪ್ರಾಚ್ಯಶಾಸ್ತ್ರಜ್ಞರಾದ ಹೊರೇಸ್ ಹೇಮನ್ ವಿಲ್ಸನ್ ಅವರು ಆಗಸ್ಟ್ 1822 ರಲ್ಲಿ ಗಮನಿಸಿದ ಹೇಳಿಕೆಯ ಪ್ರಕಾರ ಮೆಕೆಂಜಿಯ ಮರಣದ ನಂತರ,
ಸಂಗ್ರಹದ ಪಟ್ಟಿಯನ್ನು
ಕೈಗೊಳ್ಳಲು ಸ್ವಯಂಪ್ರೇರಿತರಾಗಿ, ಮೆಕೆಂಜಿ ಅವಧಿಯ ಕಾಲದಲ್ಲಿ ಸಂಗ್ರಹಿಸಲ್ಪಟ್ಟ 1,568 ಸಾಹಿತ್ಯಕ ಹಸ್ತಪ್ರತಿಗಳು,
ಇನ್ನೂ 2,070 ಸ್ಥಳೀಯ ಕರಪತ್ರಗಳು,
8,076 ಶಾಸನಗಳು ಮತ್ತು 2,159 ಅನುವಾದಗಳು,
ಜೊತೆಗೆ ಎಪ್ಪತ್ತೊಂಬತ್ತು
ಯೋಜನೆಗಳು, 8,630 ಯೋಜನೆಗಳು, 8,630 ರೇಖಾಚಿತ್ರಗಳನ್ನು ಪಟ್ಟಿ ಮಾಡಿದ್ದಾರೆ. ಭಾರತಕ್ಕೆ ಸಂಬಂಧಿಸಿದಂತೆ ಯುರೋಪ್ ಅಥವಾ
ಏಷ್ಯಾದಲ್ಲಿ ಏಕ ವ್ಯಕ್ತಿಯಿಂದ ಮಾಡಲ್ಪಟ್ಟ ಐತಿಹಾಸಿಕ
ದಾಖಲೆಗಳ ಅತ್ಯಂತ ವಿಸ್ತಾರವಾದ ಮತ್ತು ಅತ್ಯಮೂಲ್ಯವಾದ ಸಂಗ್ರಹ ಇದಾಗಿದೆ.
ಮೆಕೆಂಜಿ ಸಂಗ್ರಹಿಸಿದ ದಾಖಲು ಸಾಹಿತ್ಯದ ವಿವರಗಳನ್ನು ತಿಳಿಯಲು ಬಹಳಷ್ಟು ವಿದ್ವಾಂಸರು ವರ್ಷಾನುಗಟ್ಟಲೆ ಶ್ರಮಿಸುತ್ತಿದ್ದಾರೆ. ಈಗಾಗಲೇ ಅವರ ಕಾರ್ಯ
ಸಾಧನೆಯ ಫಲವಾಗಿ ಸಂಪಾದಿಸಿದ ಏಳು ಸಂಪುಟಗಳು ಹೊರ ಬಂದಿವೆ. ತಮಿಳುನಾಡಿನ ಕುಪ್ಪುಸ್ವಾಮಿ, ಶಂಕರರಾವ್, ಟಿ.ವಿ.ಚಂದ್ರಶೇಖರ ಶಾಸ್ತ್ರಿ ಮತ್ತು ಇತರ ದೇಶಿ
ವಿದ್ವಾಂಸರು ಶ್ರಮವಹಿಸಿ ದುಡಿದಿದ್ದಾರೆ. ಆದಾಗ್ಯೂ ಇನ್ನೂ ಮೆಕೆಂಜಿ ಸಂಗ್ರಹದ ದಾಖಲು ಸಾಹಿತ್ಯದ ಹಲವು ಆಯಾಮಗಳ
ಅಧ್ಯಯನ ನಡೆಯ ಬೇಕಾಗಿದೆ.
ಮದ್ರಾಸಿನ
ಗೌರ್ನಮೆಂಟ್
ಓರಿಯಂಟಲ್ ಮ್ಯಾನುಸ್ಕ್ರಿಪ್ಟ್ ಲೈಬ್ರರಿಯು ಮೆಕೆಂಜಿ ಸಂಗ್ರಹಿಸಿದ ಹಸ್ತಪ್ರತಿಗಳ
ಅಕಾರಾದಿಸೂಚಿಯನ್ನು ಕ್ರಿ. ಶ. ೧೮೯೩ರಲ್ಲಿ ಸಿದ್ಧಪಡಿಸಿತು. ನಂತರ ಕ್ರಿ. ಶ. ೧೯೨೯, ಕ್ರಿ. ಶ.
೧೯೫೨ ರಲ್ಲೂ ಈ ಕಾರ್ಯ ಮುಂದುವರಿಯಿತು. ಇಲ್ಲಿಯ ಸಂಸ್ಕೃತ,
ತೆಲುಗು, ತಮಿಳು, ಕನ್ನಡ, ತುಳು, ಮರಾಠಿ, ಉರ್ದು, ಅರೇಬಿಕ್, ಪರ್ಶಿಯನ್, ಹಿಂದುಸ್ತಾನಿ ಹೀಗೆ ಅನೇಕ ಬಗೆಯ ಭಾಷೆಯ ಹಸ್ತಪ್ರತಿಗಳು ಮೊದಲ
ಬಾರಿಗೆ ಬೆಳಕು ಕಂಡವು. ಬೆಂಗಳೂರಿನ ಕೆ,
ಅಭಿಶಂಕರ ಅವರುಗಳಲ್ಲಿ ಮೆಕೆಂಜಿ ಸಂಗ್ರಹದ
ಕೆಲಪ್ರತಿಗಳು ದೊರೆಯುವ ಬಗ್ಗೆ ದಾಖಲೆಗಳಿವೆ.
ಲೆಫ್ಟಿನೆಂಟ್ ಕರ್ನಲ್ ಮೆಕೆಂಜಿ
ಸಂಗ್ರಹಿಸಿದ ಸಾವಿರಾರು ಕೈಫಿಯತ್ತುಗಳು. ಕನ್ನಡ, ತೆಲುಗು ಮತ್ತು ತಮಿಳು
ಭಾಷೆಗಳಲ್ಲಿದ್ದ ಅವುಗಳಲ್ಲಿ ತಮಿಳು, ತೆಲುಗಿನ ಕೈಫಿಯತ್ತುಗಳು ಸಾಕಷ್ಟು ಸುರಕ್ಷಿತವಾಗಿದ್ದುವು.
ಆದರೆ ಕನ್ನಡ ಕೈಫಿಯತ್ತುಗಳ ಪರಿಸ್ಥಿತಿ ಚಿಂತಾಜನಕವಾಗಿತ್ತು. ಈ ಕುರಿತು ನಾನು ಆಗ ಮದ್ರಾಸು
ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರೂ ನನ್ನ ಗುರುಗಳೂ ಆಗಿದ್ದ ಪ್ರೊ. ಕುಶಾಲಪ್ಪ
ಗೌಡರಿಗೆ ತಿಳಿಸಿದಾಗ, ಅವರು ಮೆಕೆಂಜಿ ಕೈಫಿಯತ್ತುಗಳ ಬಗ್ಗೆ ಪರಿಚಯಾತ್ಮಕವಾದ ಸಂಪ್ರಬಂಧವೊಂದನ್ನು
ಸಿದ್ಧಪಡಿಸಲು ಸೂಚಿಸಿದರು ಮತ್ತು ತಾವೇ ಅದಕ್ಕೆ ಮಾರ್ಗದರ್ಶನ ಮಾಡಿದರು. ಆ ಸಂದರ್ಭದಲ್ಲಿ ಅಲ್ಲಿ
ಸಂಗ್ರಹಿಸಿಡಲಾದ ಮೆಕೆಂಜಿ ಕೈಫಿಯತ್ತುಗಳನ್ನೂ ಅವಕ್ಕೆ ಸಂಬಂಧಿಸಿದಂತೆ ನಡೆದ ಕೆಲಸಗಳನ್ನೂ
ಪರಿಶೀಲಿಸುವ ಅವಕಾಶ ಪ್ರಾಪ್ತವಾಯಿತು. ಈ ಸಂಪ್ರಬಂಧವು ಮುಂದೆ 1985ಲ್ಲಿ ‘
ಮೆಕೆಂಜಿ ಕೈಫಿಯತ್ತುಗಳು’ ಎಂಬ ಹೆಸರಿನಲ್ಲಿಯೇ ಪ್ರಕಟವಾಯಿತು. 1983ರಲ್ಲಿ ಪ್ರೊ.
ಕುಶಾಲಪ್ಪ ಗೌಡ ಮತ್ತು ಡಾ. ಚಿನ್ನಪ್ಪ ಗೌಡರು ಜೊತೆಯಾಗಿ ಮೆಕೆಂಜಿ ಸಂಗ್ರಹದಲ್ಲಿನ ದಕ್ಷಿಣ
ಕನ್ನಡಕ್ಕೆ ಸೇರಿದ ಕೈಫಿಯತ್ತುಗಳನ್ನು ಆಯ್ದು ವಿಸ್ತಾರವಾದ ಪೀಠಿಕೆಯೊಂದಿಗೆ ಪ್ರಕಟಿಸಿದರು. ಈ
ಪುಸ್ತಕದಲ್ಲಿರುವ ಕೈಫಿಯತ್ತುಗಳು ತನ್ನ ಭಾಷೆ, ವಸ್ತು ಮತ್ತು ವಿಷಯ ಮಂಡನಾ
ಕ್ರಮಗಳಿಂದ ಸಂಶೋಧಕರಿಗೆ ಪ್ರಿಯವಾಯಿತು ಎಂದು ಪುರುಷೋತ್ತಮ ಬಿಳಿಮಲೆ ಅವರು ಮೆಕೆಂಜಿ ಸಂಗ್ರಹಿಸಿದ್ದ ಕನ್ನಡ ಕೈಫಿಯತ್ತುಗಳ ಬಗೆಗಿನ
ಸ್ಥಿತಿಗತಿಯನ್ನು ತಮ್ಮ ಲೇಖನವೊಂದರಲ್ಲಿ
ತಿಳಿಸಿದ್ದಾರೆ.
ಅನೇಕ ಶಿಲಾಮೂರ್ತಿಗಳು,
ಒಂದು ಹಳಗನ್ನಡ ಶಿಲಾಶಾಸನ (ಅಮರಾವತಿಯಲ್ಲಿದ್ದದ್ದು), ತಾಮ್ರ ಶಾಸನಗಳು ಕೆಲವು.ಹಳೆಯಕಾಲದ ತೂಕದ
ಬಟ್ಟುಗಳು, ಮಣಿ, ಉಂಗುರ, ಉಂಡಿಗೆ
ಇತ್ಯಾದಿ ಇನ್ನೂ ಅನೇಕ ಪ್ರಾಚ್ಯ ವಸ್ತುಗಳು ಮೆಕೆಂಜಿಯ ಸಂಗ್ರಹದಲ್ಲಿದ್ದವು. ಈ ಎಲ್ಲ ಅಗಾಧ ಕೆಲಸವು
ವೈಜ್ಞಾನಿಕ ಉಪಕರಣಗಳು ಇಲ್ಲದ, ಆಧುನಿಕ
ಸಾರಿಗೆ ಸಂಪರ್ಕವಿಲ್ಲದ ಕಾಲದಲ್ಲಿ ಮಾಡಲಾಗಿರುವುದು ಅವನ ಶ್ರಮ,
ಶ್ರದ್ಧೆ ಮತ್ತು ಬದ್ಧತೆಯ ಸೂಚಕವಾಗಿದೆ.
ಕರ್ನಾಟಕಕ್ಕೆ
ಸಂಬಂಧಪಟ್ಟ, ಅಲ್ಲಲ್ಲಿ
ಅಪೂರ್ವವೆನಿಸುವ ದಾಖಲೆಗಳಿವೆ. ಕ್ರಿ.ಶ. ದ ೧೮ನೆಯ ಶತಮಾನದ ಅಂತ್ಯದ ವರೆಗೆ ಅದರ
ಹರಹು. ಅದರಲ್ಲಿಯೂ ವಿಜಯನಗರ ಹಾಗೂ ಮೈಸೂರೊಡೆಯರ ಕಾಲದವು ಹೆಚ್ಚಿನ ಸಂಖ್ಯೆಯಲ್ಲಿವೆ. ಕಟ್ಟು ಕತೆ
ಹಾಗೂ ಅತಿರಂಜಿತವೆನ್ನಬಹುದಾದ ಅಂಶಗಳನ್ನು ಬಿಟ್ಟರೆ ಆ ಕಾಲದ ಶಿಲ್ಪ, ಇತರ
ನಕ್ಷೆಗಳು, ಇವನ್ನು
ಬಿಡಿಸಿದ ಚಿತ್ರಗಳು ಇವೆ. ಅದರಲ್ಲಿಯೂ ಕೃಷ್ಣದೇವರಾಯನ ಸಿಂಹಾಸನ, ಆನೆಗಳ ಲಾಯ, ಹೈದರ್, ಟೀಪೂ
ಸುಲ್ತಾನ ಇವರಿಗೆ ಸಂಬಂಧಿಸಿದ ಅನೇಕಾನೇಕ ದಾಖಲೆಗಳು ಗಣನೀಯವಾಗಿವೆ. ವಿಜಯನಗರೋತ್ತರಕಾಲದ
ಕರ್ನಾಟಕ ಮರಾಠಾ ಸಂಬಂಧವನ್ನು ಬೆಳಕಿಗೆ ತರುವಂತಹ ದಾಖಲೆಗಳು ಇದ್ದದ್ದು ಈ ಕೆಟಲಾಗ್‌ನಿಂದ ತಿಳಿದು ಬರುತ್ತದೆ. ಹೀಗೆ ದಾಖಲೆಗಳೇನೋ
ವಿಪುಲವಾಗಿದೆ. ಆದರೆ ವಿಶ್ವಸನೀಯವಾಗಿರುವ ಅಂಶಗಳನ್ನು, ಪ್ರಮಾಣೀಕರಿಸಿಯೇ ಕಂಡುಕೊಳ್ಳಬೇಕಾಗಿದೆ.
ಮೆಕೆಂಜಿಯು ಭಾರತದ ಪ್ರಾಚೀನ ವಸ್ತುಗಳ ಕುರಿತಾದ ವಿಶೇಷ ಆಸಕ್ತಿಯಿಂದಾಗಿ ಏಕಾಂಗಿಯಾಗಿ 40,000 ಚದರ ಮೈಲುಗಳಷ್ಟು ಸ್ಥಳಾಕೃತಿಯ ಸಮೀಕ್ಷೆ,
ಭಾರತದ ಸಾಮಾನ್ಯ ನಕ್ಷೆ ಮತ್ತು ಅನೇಕ ಪ್ರಾಂತೀಯ
ನಕ್ಷೆಗಳು, ಸಮೀಕ್ಷೆಯ
ನಿರೂಪಣೆಯನ್ನು ಏಳು ಸಂಪುಟಗಳಲ್ಲಿ ಒಳಗೊಂಡಿರುವ ಮೌಲ್ಯಯುತವಾದ ಆತ್ಮಚರಿತ್ರೆ , ಐತಿಹಾಸಿಕ ಮತ್ತು ಪ್ರಾಚೀನ
ಆಸಕ್ತಿ. ಮೆಕೆಂಜಿ ಸಂಗ್ರಹದ ಹಸ್ತಪ್ರತಿಗಳು
ಕ್ರಿ.ಶ. 1600 ರ ನಂತರದ ದಕ್ಷಿಣ ಭಾರತದ ರಾಜಕೀಯ, ಆರ್ಥಿಕ ಮತ್ತು ಆಡಳಿತ ಇತಿಹಾಸದ ಅಧ್ಯಯನಕ್ಕಾಗಿ ಅವು ನಮಗೆ ಪ್ರಾಥಮಿಕ
ಮೂಲ ಆಕರಗಳನ್ನು ಒದಗಿಸುತ್ತವೆ. "ಭಾರತದ ನಕ್ಷೆ ನಿರ್ಮಿಸಿದ
ಮೊದಲ ವ್ಯಕ್ತಿ "ಎಂಬ ಹೆಗ್ಗಳಿಕೆಯ ಜೊತೆ ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ಪುರಾತತ್ವ
ಸಂಪತ್ತನ್ನು ಸಂಶೋಧಿಸಿ ಅನಾವರಣಮಾಡಿದ ಏಕಮೇವಾದ್ವಿತೀಯ ಸಂಶೋಧಕನೆಂಬ ಹಿರಿಮೆಗೂ ಪಾತ್ರನಾದ. ಈತನನ್ನು
ನಂತರದ ಪ್ರಾಚ್ಯ ಸಂಶೋಧಕರು ದಕ್ಷಿಣ ಭಾರತದ ಹಸ್ತಪ್ರತಿ ಮನುಷ್ಯ ಎಂದು ಗುರುತಿಸಿರುವುದು ಆತನ ಪ್ರಾಚ್ಯ ವಸ್ತುಗಳ ಕುರಿತ ಹಿರಿಮೆಯ ದ್ಯೋತಕವಾಗಿದೆ.
ಪಾಶ್ಚಾತ್ಯ ಪಂಡಿತರು ಕನ್ನಡಕ್ಕೆ ಕೊಟ್ಟ
ಕೊಡುಗೆ ಅಪಾರವೆಂಬುದಕ್ಕೆ ಇದುವರೆಗಿನ ಕರ್ನಲ್ ಮೆಕೆಂಜಿಯ ವಿವರಣೆಯ ಜೀವಂತ
ಸಾಕ್ಷಿ. ಇಂಥ ವ್ಯಕ್ತಿಗಳ ಅಧ್ಯಯನ ಹಲವು ಮಗ್ಗಲುಗಳಿಂದ ಆಗಬೇಕಾದದ್ದು ಇಂದಿನ ಅತ್ಯಂತ
ಅನಿವಾರ್ಯಗಳಲ್ಲೊಂದು. ಬಿ.ಎಲ್.ರೈಸ್, ಆರ್ ಎಫ್.ಕಿಟೆಲ್, ಜೆ.ಎಫ್.ಪ್ಲೀಟ್,
ಬುಕನನ್, ಮಾಲ್ಕಮ್, ವಿಲಿಯಂ
ಹೆನ್ರಿ, ಮೇಜರ್
ಡಿಕ್ಷನ್, ವಿಲ್ಸನ್
ಮುಂತಾದ ಶ್ರೇಷ್ಠ ವಿದ್ವಾಂಸರ ಸಾಲಿನಲ್ಲಿ ಕರ್ನಲ್ ಮೆಕೆಂಜಿಗೆ ಮಹತ್ವದ ಸ್ಥಾನವಿದೆ. ಹತ್ತಾರು
ಬಗೆಗಳಲ್ಲಿ ಆತನ ಕಾರ್ಯಕ್ಷೇತ್ರಗಳಿರುವುದರಿಂದ ಆ ಮೂಲಕವೇ ನಾವೀಗ ನಡೆಯ ಬೇಕಿದೆ. ಈ ಎಲ್ಲಾ ದೃಷ್ಟಿಯಿಂದ ಕರ್ನಲ್ ಮೆಕೆಂಜಿ
ಕರ್ನಾಟಕ ಆಕರ ಸಾಮಗ್ರಿಗಳ ಕಣ್ಣು" ಎಂದರೂ ತಪ್ಪಾಗಲಾರದು.
ಅನುಬಂಧ:
ಮೆಕೆಂಜಿ ಸಂಗ್ರಹಿಸಿದ್ದ ಕನ್ನಡ ಹಸ್ತಪ್ರತಿಗಳ ವಿವರ
(ಎಚ್.ಎಚ್.
ವಿಲ್ಸನ್ ಅವರ The Mackenzie collection descriptive
catalogueನ ಪ್ರಕಾರ)
ಜೈನ ಸಾಹಿತ್ಯ: ೨೧
ಹಳಗನ್ನಡ ಗ್ರಂಥಗಳು: ೪೮
ಸ್ಥಳ ಪುರಾಣ, ಜೀವನ ಚರಿತ್ರೆ: ೧೭
ಕಥೆ,
ಕವನ, ನೀತಿ, ಧರ್ಮ: ೧೮
ವ್ಯಾಕರಣ, ಜ್ಯೋತಿಷ, ವೈದ್ಯ ಇತ್ಯಾದಿ: ೧೬
ಕಡತದಲ್ಲಿ ಚರಿತ್ರೆ, ಕೈಗಾರಿಕೆ, ವಂಶಾವಳಿ
ಇತ್ಯಾದಿ: ೩೨
ಒಟ್ಟು ೧೫೨
೨. ಅದೇ ಕ್ಯಾಟಲಾಗಿನ
ಪೀಠಿಕೆಯಲ್ಲಿ (ಪುಟ ೧೪) ಕೊಟ್ಟಿರುವ ಪಟ್ಟಿಯಲ್ಲಿರುವ ದಾಖಲುಗಳ ವಿವರ:
* ಹಳೆಯ ಮೈಸೂರಿನ
ಸ್ಥಳಪುರಾಣ, ಚರಿತ್ರೆ
ಮುಂತಾದವು ೨೦ ಸಂಪುಟಗಳಲ್ಲಿ ಒಟ್ಟು: ೧೪೬
* ಪಶ್ಚಿಮ ತೀರಕ್ಕೆ (ಕರಾವಳಿ ಭಾಗWestern
Coast) ಸಂಬಂಧಿಸಿದವು
೯ ಸಂಪುಟಗಳಲ್ಲಿ:ಒಟ್ಟು:೯೩
* ಕನ್ನಡ ಶಾಸನ ನಕಲುಗಳು : ೨೮ ಬೃಹತ್
ಸಂಘಟಗಳಲ್ಲಿ ಒಟ್ಟು ೪೦೦೦
* ಸ್ಥಳೀಯ ವೃತ್ತಾಂತಗಳು (Local tracts, etc), ಶಾಸನಗಳ
ನಕಲುಗಳು (Inscriptions), ಆಂಗ್ಲಾನುವಾದಗಳು
(Translations, etc.)
ಇತ್ಯಾದಿ ಕರ್ನಾಟಕದ ಇತಿಹಾಸ ಸಂಸ್ಕೃತಿಗಳಿಗೆ ನೇರವಾಗಿ
ಸಂಬಂಧಪಟ್ಟಕನ್ನಡಕೈಬರಹಗಳುಒಟ್ಟು:೨೦೭
* ಸ್ಥಳ ಪುರಾಣ, ಚರಿತ್ರೆ ಮುಂತಾದವುಗಳ ಅನುವಾದಗಳು(ಸಂಪುಟಗಳಲ್ಲಿ) ೭೪
(ಇವು
ಈಗ ಕಾಮನ್ ವೆಲ್ತ್ ಲೈಬ್ರರಿಯಲ್ಲಿವೆ ಎಂಬುದಾಗಿ ತಿಳಿದು ಬರುತ್ತವೆ)
(ಮೆಕೆಂಜಿಯ
ಈ ಎಲ್ಲ ಸಂಗ್ರಹಗಳೂ ಈಗಲೂ ಮದರಾಸಿನ ಪ್ರಾಚೀನ ಹಸ್ತಪ್ರತಿಭಂಡಾರದಲ್ಲಿವೆ.)
ಎಚ್.
ದೇವೀರಪ್ಪನವರು ತಮ್ಮ ಕನ್ನಡ ಹಸ್ತಪ್ರತಿಗಳ ಇತಿಹಾಸ,ಪುಸ್ತಕದಲ್ಲಿ ಕೊಡಮಾಡಿರುವ ಮೆಕೆಂಜಿಯ
ದಾಖಲು ಸಾಹಿತ್ಯದ ಒಟ್ಟು ವಿವರ ಈ ರೀತಿ ಇದೆ.
ಮೆಕೆಂಜಿಯ ಒಟ್ಟು ಸಂಗ್ರಹ:
* ದಕ್ಷಿಣ ಭಾರತದ ಶಾಸನಗಳ ನಕಲುಗಳ ಸಂಖ್ಯೆ ೮,೦೭೬
* ಬರ್ಮಿ ಮತ್ತು ಜಾಪನೀಸ್ ಭಾಷೆಗಳೂ ಸೇರಿ ೧೩
ಭಾಷೆಗಳಹಸ್ತಪ್ರತಿಗಳು ೧೫೬೮
ʻLocal Tracts' ಎಂಬ
ಸ್ಥಳಪುರಾಣ, ಕೈಫಿಯತ್, ಬಖೈರ್,
ರಾಜರ ವಂಶಾವಳಿ ಮುಂತಾದವನ್ನೊಳಗೊಂಡ ಬೃಹತ್
ಸಂಪುಟಗಳು (ಒಟ್ಟು ೨೦೭೦
ವೃತ್ತಾಂತಗಳು)
೨೬೪
* ಇವುಗಳ ಅನುವಾದಗಳನ್ನೊಳಗೊಂಡ ಸಂಪುಟಗಳು ೭೫
* ನಕ್ಷೆಗಳು (Plans) ೬೯
* ಚಿತ್ರಗಳು (Drawings) ೨೬೩೦
* ಬೇರೆ ಬೇರೆ ಕಾಲದ, ದೇಶೀಯ ಮತ್ತು ವಿದೇಶೀಯ ಚಿನ್ನದಬೆಳ್ಳಿಯ,
ತಾಮ್ರದ
ನಾಣ್ಯಗಳು
೬೨೧೮
* ಕಂಚು, ಹಿತ್ತಾಳೆ, ತಾಮ್ರದ ಮೂರ್ತಿಗಳು
೧೦೬
ಪರಾಮರ್ಶನ ಗ್ರಂಥಗಳು:
1. ಕರ್ನಾಟಕದ ಕೈಫಿಯತ್ತುಗಳು(ಸಂ) ಎಂ.ಎಂ. ಕಲಬುರ್ಗಿ, ಪ್ರಸಾರಾಂಗ, ಕನ್ನಡ
ವಿಶ್ವವಿದ್ಯಾಲಯ ಹಂಪಿ-೧೯೯೮
೨. ಐ.ಮಾ. ಮುತ್ತಣ್ಣ-ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ,
ಉಷಾ ಪ್ರೆಸ್; ಮೈಸೂರು,೧೯೬೯
೩.ಎಂ.ಎಂ.ಕಲಬುರ್ಗಿ, ಕನ್ನಡ ಹಸ್ತಪ್ರತಿ ಶಾಸ್ತ್ರ
ಸ್ನೇಹ ಪ್ರಕಾಶನ, ಬೆಂಗಳೂರು ೧೯೯೩
೪ ಶ್ರೀನಿವಾಸ ಹಾವನೂರ, ಹೊಸಗನ್ನಡದ ಅರುಣೋದಯ,
ಕನ್ನಡ ಪುಸ್ತಕ ಪ್ರಾಧಿಕಾರ,
ಬೆಂಗಳೂರು, ಮೂರನೆಯ ಮುದ್ರಣ ೨೦೧೧
೫. ಮಣಿಹ( ಫ.ಗು.ಹಳಕಟ್ಟಿ, ಸಂಸ್ಮರಣ ಸಂಪುಟ)ಪ್ರ. ಸಂ: ಸಿದ್ಧಯ್ಯ ಪುರಾಣಿಕ ಮತ್ತು ಇತರರು
ಬಿ.ಎಂ.ಶ್ರೀ. ಪ್ರತಿಷ್ಠಾನ, ಬೆಂಗಳೂರು,೧೯೮೨
೬. ಮಹಾಮಾರ್ಗ ಸಂ: ಸದಾನಂದ ಕನವಳ್ಳಿ ಮತ್ತು ವೀರಣ್ಣ ರಾಜೂರ
ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು
ತೋಂಟದಾರ್ಯ ಮಠ, ಗದಗ ೧೯೯೮
೭. ಎಚ್.ದೇವೀರಪ್ಪ, ಕನ್ನಡ ಹಸ್ತಪ್ರತಿಗಳ ಇತಿಹಾಸ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು೧೯೭೭
೮. ಸಿ.ನಾಗಭೂಷಣ, ಕನ್ನಡ ಶಾಸನಗಳ ತಾತ್ವಿಕ ಅಧ್ಯಯನ
ಮಂಟಪಮಾಲೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.2009
೯. ಹೈದರಾಬಾದು ಕರ್ನಾಟಕ ಭಾಗದ ಕನ್ನಡ ಶಿಲಾ
ಶಾಸನಗಳು ಸಂ.ವಿ.ಶಿವಾನಂದ
ಭಾರತೀಯ ಭಾಷಾ ವಿಭಾಗ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ,೧೯೯೨
೧೦.ಪಂಡಿತ ಕೆ ರಾಠೋಡ, ಕರ್ನಾಟಕ ಕೈಫಿಯತ್ತುಗಳು
ಸ್ಥಳೀಯ ಜನಜೀವನದ ಸಾಂಸ್ಕೃತಿಕ ಕಥನ
ಶ್ರೀ ವಿಘ್ನೇಶ್ವರ ಪ್ರಕಾಶನ ,ಇಲವಾಲ, ಬೆಂಗಳೂರು, ೨೦೨೦
೧೧. ಕಲ್ಪನುಡಿ, ಪ್ರಧಾನ ಸಂಪಾದಕರು ಡಿ.ಎನ್.ಯೋಗೀಶ್ವರಪ್ಪ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತುಮಕೂರು,೨೦೨೨
೧೨. ಬಿಎಸ್‌ಪುಟ್ಟಸ್ವಾಮಿ: ಕೈಫಿಯತ್ತು ಕಂಡ ಮೈಸೂರು ರಾಜಕೀಯ ಚರಿತ್ರೆ
ಕೆ.ಎಸ್. ಮುದ್ಧಪ್ಪ ಸ್ಮಾರಕ ಟ್ರಸ್ಟ್, ಕೃಷ್ಣಾಪುರ
ದೊಡ್ಡಿ, ೨೦೦೭
೧೩. ಕುಶಾಲಪ್ಪಗೌಡ ಮತ್ತು ಕೆ.ಚಿನ್ನಪ್ಪಗೌಡ, ದಕ್ಷಿಣ ಕನ್ನಡ ಜಿಲ್ಲೆ ಕೈಫಿಯತ್ತುಗಳು
೧೪. ಪ್ರಬುದ್ಧ ಕರ್ನಾಟಕ, ಸಂಪುಟ ೮೬, ಸಂಚಿಕೆ,೩೩೯ ಮತ್ತು ೩೪೦, ೨೦೦೮
೧೫.ನಂದೀಶ ಎಚ್.ಎನ್. ಅವರ ಕರ್ನಲ್ ಕಾಲಿನ್ ಮೆಕೆಂಜಿ: ದಕ್ಷಿಣ ಭಾರತದ ಹಸ್ತಪ್ರತಿ ಮನುಷ್ಯ
ಅಂತರ ಜಾಲದಲ್ಲಿ ಪ್ರಕಟವಾಗಿರುವ ಲೇಖನ
ಮೆಕೆಂಜಿ ಸಿದ್ಧಪಡಿಸಿದ ದಕ್ಷಿಣ ಭಾರತದ ನಕಾಶೆ
ಅಕ್ಟೋಬರ್ 1791 ರಲ್ಲಿ ಬ್ಯಾಟರಿಗಳು ಫೈರಿಂಗ್‌ನೊಂದಿಗೆ ನಂದಿಡ್ರಗ್ ಅನ್ನು ತೋರಿಸುವ ಮೆಕೆಂಜಿ ಸಂಗ್ರಹದಿಂದ ಜಲವರ್ಣ. ಬ್ಯಾಟರಿಗಳ ಸ್ಥಾನವನ್ನು ಮೆಕೆಂಜಿ ನಿರ್ಧರಿಸಿದರು ಮತ್ತು ಟಿಪ್ಪು ಸುಲ್ತಾನ್ ವಿರುದ್ಧದ ವಿಜಯದಲ್ಲಿ ಮೆಕೆಂಜಿ ಅವರ ಪಾತ್ರಕ್ಕಾಗಿ ಲಾರ್ಡ್ ಕಾರ್ನ್‌ವಾಲಿಸ್ ಅವರನ್ನು ಶ್ಲಾಘಿಸಿದರು. (ಮೂಲ: ಬ್ರಿಟಿಷ್ ಲೈಬ್ರರಿ)
ಮದ್ರಾಸಿನ ಓರಿಯಂಟಲ್ ಲೈಬ್ರರಿಯಲ್ಲಿಯ ಮೆಕೆಂಜಿ ಸಂಗ್ರಹದ ಹಸ್ತಪ್ರತಿಗಳು