ತುಮಕೂರು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಯ ಪರಿಸರದ ಹಸ್ತಪ್ರತಿ ಸಂಪತ್ತು
ಡಾ.ಸಿ.ನಾಗಭೂಷಣ
ತುಮಕೂರು ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪರಿಸರವು ಅಸಂಖ್ಯಾತ ಹಸ್ತಪ್ರತಿಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿಯಾದರೂ ಹಸ್ತಪ್ರತಿಗಳ ಪರಿವಿಕ್ಷಣೆ ಸಂಗ್ರಹಣೆ ಸೂಚಿಕರಣದಂತಹ ಮಹತ್ತರ
ಕಾರ್ಯಗಳಲ್ಲಿ ಆಸಕ್ತ ಜನತೆ ತೊಡಗಿಕೊಳ್ಳದ ಹೊರತು ಹಸ್ತಪ್ರತಿಗಳ ಸಂಗ್ರಹಕ್ಕೆ ಸಂಬಂಧಿಸಿದ ಹಾಗೆ ವ್ಯವಸ್ಥಿತ ಕಾರ್ಯ ನಡೆದಿಲ್ಲವೆಂದೇ ಹೇಳಬೇಕಾಗುತ್ತದೆ. ಹೀಗಾಗಿ ಇಂದು ಕವಿಚರಿತೆ ಇತ್ಯಾದಿ ಪುಸ್ತಕಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ
ಈ ಜಿಲ್ಲೆಗಳ ಪರಿಸರದಲ್ಲಿಯ ಹಲವು ವ್ಯಕ್ತಿಗಳ ಸಂಗ್ರಹದಲ್ಲಿದ್ದ ಹಸ್ತಪ್ರತಿಗಳು ನಾಶವಾಗಿದ್ದು ಕೇವಲ
ಅವರಲ್ಲಿ ಹಿಂದೆ ಇದ್ದವು ಎಂಬ ಹೇಳಿಕೆಗೆ ಅಷ್ಟೇ ಸಮಾಧಾನ ಪಟ್ಟು ಕೊಳ್ಳಬೇಕಾಗಿದೆ.
ಕೆಲವರ ಪ್ರಕಾರ ಹಸ್ತಪ್ರತಿಗಳ ಸಂಗ್ರಹ ಕಾರ್ಯ ಪೂರ್ಣಗೊಂಡಿದೆ.
ಸಂಗ್ರಹದಂತಹ ಪ್ರಾಥಮಿಕ ಹಂತ ಮುಗಿದು ಹೋಗಿ ಏನಿದ್ದರೂ ಅವುಗಳ ವಿಭಿನ್ನ ಅಧ್ಯಯನಗಳನ್ನು ಕುರಿತು ಮಾತ್ರ
ಯೋಚಿಸಬೇಕಾಗಿದೆ ಎಂಬುದಾಗಿದೆ. ಆದರೆ ಸಂಗ್ರಹದ ಕೆಲಸವೇ ಅಪೂರ್ಣವಾಗಿದೆ. ಈ ಮಾತು ಇಲ್ಲಿಯ ಹಸ್ತಪ್ರತಿಗಳ
ಸಂಗ್ರಹದ ಕಾರ್ಯದ ವಿಷಯಕ್ಕೆ ಅನ್ವಯಿಸುತ್ತದೆ. ಈ ಜಿಲ್ಲೆಗಳ ಪರಿಸರದ ಹಸ್ತಪ್ರತಿಗಳಲ್ಲಿ ಬಹುಪಾಲು
ಪ್ರಕಟಿತ ಕೃತಿಗಳ ವಿಷಯವಿರುವ ಹಸ್ತಪ್ರತಿಗಳೇ ಮತ್ತೆ ಮತ್ತೇ ಲಭ್ಯವಾದಾಗ್ಯೂ ಅವುಗಳ ಬಗೆಗೂ ಆಸಕ್ತಿ
ವಹಿಸಬೇಕಾಗಿದೆ.
ಈ ಪರಿಸರದ ಹಸ್ತಪ್ರತಿಗಳಲ್ಲಿ ಸಾಹಿತ್ಯ, ಸಂಸ್ಕೃತಿ,
ಸಮಾಜ, ರಾಜಕೀಯ, ಆರ್ಥಿಕ, ವಿಜ್ಞಾನ, ತಂತ್ರಜ್ಞಾನ, ವಾಸ್ತುಶಿಲ್ಪ, ವೈದ್ಯ, ಸಂಗೀತ ಚಿತ್ರಕಲೆ, ನಾಟ್ಯಶಾಸ್ತ್ರ,
ಶಿಕ್ಷಣ, ಧಾರ್ಮಿಕ, ಜ್ಯೋತಿಷ್ಯ, ಖಗೋಳ, ಗಣಿತ ಎಲ್ಲಾ ಜ್ಞಾನಶಾಖೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು
ಒಳಗೊಂಡಿರುವುದನ್ನು ಕಾಣಬಹುದಾಗಿದೆ. ಹಸ್ತಪ್ರತಿಗಳ ಮಹತ್ವದ ಬಗೆಗೆ, ಪ್ರಾಮುಖ್ಯತೆಯ ಬಗೆಗೆ ಅರಿವು
ಬೆಳೆದು ಸ್ವಪ್ರೇರಣೆ ಹಾಗೂ ಆಸಕ್ತರ ಪ್ರಯತ್ನದಿಂದಾಗಿ ಈ ಜಿಲ್ಲೆಗಳಲ್ಲಿ ಕೆಲವು ಹಸ್ತಪ್ರತಿಗಳು ಮಾತ್ರ
ಸಂಗ್ರಹಿಸಲ್ಪಟ್ಟಿದೆ. ಬಹಳಷ್ಟು ಹಸ್ತಪ್ರತಿಗಳು ಇನ್ನೂ ಖಾಸಗಿ ವ್ಯಕ್ತಿಗಳಲ್ಲಿಯೇ ಉಳಿದಿವೆ. ಒಂದು
ಕಾಲಕ್ಕೆ ಜನಸಾಮಾನ್ಯರ ಬಳಿ ಇದ್ದಂತಹ ಹಸ್ತ ಪ್ರತಿಗಳು ಇಂದು ವಿದ್ವತ್ ವಲಯವನ್ನು ದಾಟಿ ಹೊರಬರುತ್ತಿಲ್ಲ.
ಹಸ್ತಪ್ರತಿಗಳ ಬಗೆಗಿನ ಮಹತ್ವವನ್ನು ಇಂದು ಜನತೆಯ ಬಳಿಗೆ ಮತ್ತೆ ತರಬೇಕಾಗಿದೆ.
ಇಲ್ಲಿಯ ಹಸ್ತಪ್ರತಿ ಸಂಪತ್ತಿನ ಬಗೆಗೆ ಹೇಳುವಾಗ ತುಮಕೂರು
ಪರಿಸರದ ಮಹಾನಾಡು ಪ್ರಭುಗಳ ಶಾರದಾ ಭಂಡಾರ ಹಾಗೂ ಅದರಲ್ಲಿದ್ದ ಹಸ್ತಪ್ರತಿಗಳ ಪುಷ್ಟಿಕೆಗಳು ಒದಗಿಸುವ
ಮಾಹಿತಿಗಳ ಮಹತ್ವದ ಬಗೆಗೆ ಪ್ರಸ್ತಾಪಿಸಲೇ ಬೇಕಾಗಿದೆ. 17ನೇ ಶತಮಾನದಲ್ಲಿ ಬಿಜ್ಜಾವರದ ಮಹಾನಾಡುಪ್ರಭುಗಳು
ಅದರಲ್ಲಿಯು ಇಮ್ಮಡಿ ಚಿಕ್ಕಪ್ಪಗೌಡರ ಆಳ್ವಿಕೆಯ ಕಾಲದಲ್ಲಿ ತಮ್ಮ ಅರಮನೆಯಲ್ಲಿ ಶಾರದಾ ಭಂಡಾರವನ್ನು
ಹೊಂದಿದ್ದರು ಎಂಬ ಸಂಗತಿ ಐತಿಹಾಸಿಕ ಮಹತ್ವ ಪಡೆದಿದೆ.
ತಮ್ಮ ಅರಮನೆಯ ಶಾರದಾ ಭಂಡಾರಕ್ಕೆ ಬೇರೆಯವರಿಂದ ಪ್ರತಿಮಾಡಿಸಿ ಸೇರಿಸುತ್ತಿದ್ದರು ಎಂಬುದು
ಗಮನಾರ್ಹ ಸಂಗತಿಯಾಗಿದೆ. ಮಹಾನಾಡು ಸಂಸ್ಥಾನದ ಶಾರದ ಭಂಡಾರದಲ್ಲಿ ಹಸ್ತಪ್ರತಿಗಳ ಬಗೆಗೆ ಸಂಬಂಧಿಸಿದ
ಹಾಗೆ ಕ್ರಿ.ಶ.16೦1 ರಿಂದ 1621 ಕಾಲಾವಧಿಯಲ್ಲಿ 7 ಹಸ್ತಪ್ರತಿಗಳ ಪುಷ್ಟಿಕೆಗಳು ಲಭ್ಯವಿವೆ. ಸಾನಂದ
ಪುರಾಣ, ಭರತೇಶ ಚರಿತೆ, ಪಂಚಪ್ರಕಾರ ಗದ್ಯ, ಪಾರಮಾರ್ಥಿಕ ಪುಸ್ತಕ ಸ್ತೋತ್ರಭಾಷ್ಯಗಳ ಪುಸ್ತಕ, ಆರಾಧ್ಯ
ಚಾರಿತ್ರೆ, ಜನವಶ್ಯ ಕೃತಿಗಳನ್ನು ಬರೆಸಿ ಶಾರದ ಭಂಡಾರಕ್ಕೆ ಸೇರಿಸಿದ್ದರ ಬಗೆಗೆ ಪುಷ್ಪಿಕೆಗಳಿಂದ
ತಿಳಿದು ಬರುತ್ತದೆ. 162೦ರಲ್ಲಿ ರಚಿತವಾದ ಸ್ತೋತ್ರಭಾಷ್ಯಗಳ ಪ್ರತಿಯ ಪುಷ್ಪಿಕೆಯಲ್ಲಿ ಇಮ್ಮಡಿ ಚಿಕ್ಕಪ್ಪಗೌಡರ
ಶಾರದಾ ಭಂಡಾರದ ಉಲ್ಲೇಖವಿದೆ. ಸ್ಥಳೀಯ ಅರಸರೊಬ್ಬರ ಆಳ್ವಿಕೆಯ ಕಾಲದಲ್ಲಿ ಸರಸ್ವತಿ ಭಂಡಾರದ ಸ್ಥಾಪನೆ
ಹಾಗೂ ಅದರ ಸಲುವಾಗಿ ವಿಶೇಷ ಆಸಕ್ತಿ ವಹಿಸಿ ಕೆಲವು ಪ್ರಮುಖ ಕೃತಿಗಳನ್ನು ಪ್ರತಿಮಾಡಿಸಿ ಶಾರದಾ
ಭಂಡಾರಕ್ಕೆ ಸೇರಿಸಿದ್ದು ಮಹತ್ತರ ಸಂಗತಿಯಾಗಿದೆ. ಹಸ್ತಪ್ರತಿ ಪುಷ್ಪಿಕೆಗಳ ವಿವರ ಇಂತಿದೆ.
೧. ರೌದ್ರಿ ಸಂವತ್ಸರದ
ಶ್ರಾವಣ ಶುದ್ಧ 11ಲ್ಲು ಶ್ರೀಮನ್ಮಹಾನಾಡಪ್ರಭು ಬಿಜ್ಜವರದ ಇಮ್ಮಡಿಚಿಕ್ಕಪ್ಪಗೌಡರಯ್ಯನವರ
ಶಾರದಾ ಭಂಡಾರಕ್ಕೆ ಅನುಭವದ ಸೊಂಪೆದೇವರ ಮಕ್ಕಳು ವೀರಸೋಂಪದೇವರು ಬರೆದ ಸ್ತೋತ್ರ ಭಾಷ್ಯಗಳ ಪುಸ್ತಕ
2 ಇದು ಪರಮೇಶ್ವರಾಂಘ್ರಿಸರಸೀರುಹ
ಷಟ್ಪದ ಶಾತ್ರವರ್ಗರ್ವದ ಪರ್ವತ ಶತಹೃದ ಕಾಮಿನೀಜನ ಲಸತ್ಕುಸುಮಾಸ್ತ್ರೀ ಸತ್ಕೃಪಾಕಾರ ಬುಧಕಲ್ಪ ಮಹೀರುಹ
ಸದ್ಗುರುಲಿಂಗಜಂಗಮ ಸೇವಾ ದುರಂಧರ ವೀರಶೈವ ನಿಷ್ಟಾ ಸಮವತರ್ತಿ ತೋಟ ಭೂಪಾಲ ಗರ್ಭಾಬ್ಧಿ ಪೂರ್ಣ ಹಿಮಕರ
ಸಂಗಮಾಂಬಾ ತನೂಜ ಪ್ರಭುಲಲಾಮಲಾಮ ಯಿಂಮಡಿ ತೋಟ ಭೂಪಾಲಕಂ ಬರಯಿಸಿದ ಮದನ ತಿಲಕದ ಪುಸ್ತಕ… ಸಿದ್ಧಾರ್ತಿ ಸಂವತ್ಸರದ ಕಾರ್ತಿಕ
ಶು.5 ಬುಧವಾರದಲೂ ತ್ತೋಂಟದೈಯ್ಯ ನಾಯಕರವರಿಗೆ ಚಿಟ್ಟನಹಳ್ಳಿಯ ಸೇನಭಾಗ ಲಿಂಗಪ್ಪನು
ಬರೆದು ಕೊಟ್ಟ ಮದನತಿಲಕದ ಪುಸ್ತಕ
3. ಪ್ಲವಸಂವತ್ಸರ ಮಾರ್ಗಶಿರ
ಬ.10ರಲ್ಲು ಶ್ರೀಮನ್ಮಹಾನಾಡ ಪ್ರಭು ಬಿಜ್ಜಾವರದ ಇಮ್ಮಡಿ ಚಿಕ್ಕಪ್ಪಗೌಡರು
ಬರೆಸಿದ ಸಾನಂದಪುರಾಣಂ. ಇದನು ಬರೆದಾತನು ಯಜ್ಞನಾರಾಯಣ ದೀಕ್ಷಿತರ ಮಗ ವಿಶ್ವನಾಥನು.
ಇದ ಬರೆಸಿದ ಇಮ್ಮಡಿ ಚಿಕ್ಕಪ್ಪ ಗೌಡರಿಗೆ ಅಷ್ಟ್ಯಶ್ವರ್ಯವೂ ಈಶ್ವರ ಕೃಪಾದೃಷ್ಟಿಯೂ
ಅಚಂದ್ರಾರ್ಕಮಸ್ತು.
ಮೈಸೂರು
ಜಿಲ್ಲೆಯ ಪರಿಸರದಲ್ಲಿ ಕೆಲವು ವ್ಯಕ್ತಿಗಳು ವೈಯಕ್ತಿಕವಾದ
ಶಾರದಾ ಭಂಡಾರವನ್ನು ಹೊಂದಿದ್ದು ತಾವೇ ಸ್ವತಹಃ ಪ್ರತಿಮಾಡಿಸಿ ಸೇರಿಸುತ್ತಿದ್ದರು ಎಂಬುದು ಗಮನಾರ್ಹ
ಸಂಗತಿಯಾಗಿದೆ. `` ಹದಿನಾಡ ಸೀಮೆಯ ಯಳವಂದೂರ ಸ್ಥಳಕ್ಕೆ ಪೂರ್ವಿಕರಾದ ಕಾಸ್ಯಪ ಗೋತ್ರದ ತಣಪಂಡಿತರ
ಕುಮಾರರಾದ ಸೂರಿ ಪಂಡಿತರ ಕಿರಿಯರ ಮಗ ಬೊಂಮರಸ ಪಂಡಿತನು ನಮ್ಮ ಶಾರದಾ ಭಂಡಾರಕ್ಕೆ ಪೊಸ್ತುಕವಾಗಬೇಕು
ಯೆಂದು ಬರೆದೆರಡು ಸನತ್ಕುಮಾರನ ಕೃತಿಯ ಪೊಸ್ತುಕಕ್ಕೆ( ಕ.ಹ.ವ.ಸೂ. ಸಂ.9 ಕ್ರ.ಸಂ.49). ಹಸ್ತಪ್ರತಿ ಪುಷ್ಪಿಕೆಗಳಲ್ಲಿಯ ಈ ತೆರನಾದ ಉಲ್ಲೇಖಗಳು ಸರಸ್ವತಿ
ಭಂಡಾರದ ಸ್ಥಾಪನೆ ಹಾಗೂ ಅದರ ಸಲುವಾಗಿ ವಿಶೇಷ ಆಸಕ್ತಿ ವಹಿಸಿ ಕೆಲವು ಪ್ರಮುಖ ಕೃತಿಗಳನ್ನು ಪ್ರತಿಮಾಡಿಸಿ
ಶಾರದಾ ಭಂಡಾರಕ್ಕೆ ಸೇರಿಸಿದ್ದು ಮಹತ್ತರತೆಯನ್ನು ಬಿಂಬಿಸುತ್ತವೆ. ಪೂರ್ವಿಕರಲ್ಲಿ ಕೆಲವರು ವೈಯಕ್ತಿಕವಾಗಿ
ಹಸ್ತಪ್ರತಿಗಳ ಸಂಗ್ರಹವನ್ನು ಹೊಂದಿದ್ದರ ಬಗೆಗೆ ಪುಷ್ಪಿಕೆಗಳಲ್ಲಿ ವಿವರಗಳು ದೊರೆಯುತ್ತವೆ. ನಿದರ್ಶನಕ್ಕೆ
ಕರೆವೃಷಭನ ಪುಸ್ತಕವು, ಕರಿಯ ಬಂಟನ ಪುಸ್ತಕ,ಪರಪ್ಪನ ಪುಸ್ತಕ, ನಾರಣರಾಜಯ್ಯ ಅರಸಿನವರ ಪುಸ್ತಕ, ಸಾಲೆ
ವೀರಂಣನ ಪುಸ್ತಕವು ಇತ್ಯಾದಿ.
ಹಸ್ತಪ್ರತಿಗಳಲ್ಲಿ ಬಹುಪಾಲು ಪ್ರಕಟಗೊಂಡಿರುವುದು ಸಾಹಿತ್ಯ
ಕ್ಷೇತ್ರದಲ್ಲಿ ಮಾತ್ರ. ಉಳಿದ ಜ್ಞಾನ ಶಾಖೆಗಳ ಹಸ್ತಪ್ರತಿಗಳಲ್ಲಿ ಕೆಲವು ಮಾತ್ರ ಪ್ರಕಟಗೊಂಡಿವೆ.
ಉಳಿದ ಹಸ್ತಪ್ರತಿಗಳು ಉಪೇಕ್ಷಿತ ಹಸ್ತ ಪ್ರತಿಗಳಾಗಿಯೇ ಉಳಿದಿವೆ. ಕೃತಿಗಳ ಹೆಸರು ಗೊತ್ತಿದ್ದು ಅವುಗಳ
ಹಸ್ತಪ್ರತಿಗಳು ದೊರೆತಿರುವುದಿಲ್ಲ. ಗೊತ್ತಿರದ ಎಷ್ಟೋ ಗ್ರಂಥಗಳು ಹಸ್ತಪ್ರತಿಗಳಲ್ಲಿ ಅಜ್ಞಾತವಾಗಿಯೇ
ಉಳಿದಿವೆ. ಅವುಗಳ ಬಗೆಗೆ ಆಸಕ್ತರ ಹಾಗೂ ಸಂಗ್ರಹಕಾರರ ಮನವೊಲಿಸಿ ಹೊರತೆಗೆಯಬೇಕಾಗಿದೆ. ಈ ಮೂರು ಜಿಲ್ಲೆಗಳ
ಪರಿಸರದಲ್ಲಿ ಕೆಲವು ಹಸ್ತಪ್ರತಿಗಳು ಈಗಾಗಲೇ ವಿವಿಧ ವಿದ್ವಾಂಸರುಗಳ ಮೂಲಕ ವಿಶ್ವವಿದ್ಯಾಲಯ ಹಾಗೂ
ಇನ್ನಿತರ ಸಂಸ್ಥೆಗಳಲ್ಲಿಯ ಹಸ್ತಪ್ರತಿಗಳ ಭಂಡಾರಗಳ ಸಂಗ್ರಹದಲ್ಲಿ ಸೇರ್ಪಡೆಯಾಗಿವೆ. ಈ ಭಾಗದ ಹಸ್ತಪ್ರತಿಗಳ
ಪ್ರತಿಕಾರ್ಯ ಹಾಗೂ ಹಸ್ತಪ್ರತಿಗಳ ಅಸ್ತಿತ್ವದ ಬಗೆಗೆ ವಿರಳವಾಗಿ ಮೈಸೂರು, ಧಾರವಾಡ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ
ಸಿದ್ಧಪಡಿಸಿರುವ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ, ಕೆಳದಿ ಪರಿಸರದ ಹಸ್ತಪ್ರತಿ ಸೂಚಿಗಳಲ್ಲಿ ದೊರೆಯುತ್ತವೆ.
ಈ ಅಂಶಗಳು ಇಲ್ಲಿಯ ಹಸ್ತಪ್ರತಿಗಳ ಇರುವಿಕೆಯ ಬಗೆಗೆ ಮಾಹಿತಿಯನ್ನು ಒದಗಿಸುತ್ತವೆ. ಮೈಸೂರು ಪರಿಸರದಲ್ಲಿಯ
ಕೆಲವು ಹಸ್ತಪ್ರತಿಗಳು ಈಗಾಗಲೇ ವಿವಿಧ ವಿದ್ವಾಂಸರುಗಳ ಮೂಲಕ ವಿಶ್ವವಿದ್ಯಾಲಯ ಹಾಗೂ ಇನ್ನಿತರ ಸಂಸ್ಥೆಗಳಲ್ಲಿಯ
ಹಸ್ತಪ್ರತಿಗಳ ಭಂಡಾರಗಳ ಸಂಗ್ರಹದಲ್ಲಿ ಸೇರ್ಪಡೆಯಾಗಿವೆ. ಇಲ್ಲಿಯ ಹಸ್ತಪ್ರತಿಗಳ ಅನ್ವೇಷಣೆ ಹಾಗೂ
ಸಂಗ್ರಹದ ಬಗೆಗೆ ಬಿ.ಎಲ್.ರೈಸ್, ಆರ್. ನರಸಿಂಹಾಚಾರ್, ಕೆ.ಬಿ.ಪಾಠಕ್. ಡಿ.ಎಲ್.ಎನ್. ತೀನಂಶ್ರೀ,
ಎಚ್.ದೇವೀರಪ್ಪ, ಪಿ.ಆರ್. ಕರಿಬಸವಶಾಸ್ತ್ರಿಗಳು ಎನ್.ಬಸವಾರಾಧ್ಯ, ಬಿ.ಎಸ್. ಸಣ್ಣಯ್ಯ, ಜಿ.ಜಿ.ಮಂಜುನಾಥನ್.
ವೈಸಿ.ಭಾನುಮತಿ, ಪಿ.ಎಂ.ಗಿರಿರಾಜು, ಮಂಜಪ್ಪಶೆಟ್ಟಿ
ಮೊದಲಾದ ವಿದ್ವಾಂಸರು ಆಸಕ್ತಿ ವಹಿಸಿ ಕಾರ್ಯೋನ್ಮುಖರಾಗಿದ್ದರ ಫಲವಾಗಿ ಹಸ್ತಪ್ರತಿಗಳ ಭಂಡಾರಗಳಲ್ಲಿ
ಹಸ್ತಪ್ರತಿಗಳು ಸುರಕ್ಷಿತವಾಗಿವೆ. ಸಾಹಿತ್ಯ ಪ್ರಧಾನವಾದ ಕೆಲವು ಸಂಪಾದನೆಗೊಂಡು ಪ್ರಕಟಿಸಲ್ಪಟ್ಟಿವೆ.
ಅದೇ ರೀತಿ ಶಿವಮೊಗ್ಗ ಪರಿಸರದ ವಿವಿಧೆಡೆ
ಲಭ್ಯವಿರುವ ಹಸ್ತಪ್ರತಿಗಳ ಸರ್ವೇಕ್ಷಣೆ, ಸಂಗ್ರಹಣೆ
ಮತ್ತು ಸೂಚಿಕರಣ, ಪ್ರಕಟಣೆಯಂತಹ ಕೆಲಸ ವ್ಯವಸ್ಥಿತವಾಗಿ ಕೆಳದಿ ಗುಂಡಾ ಜೋಯಿಸ್ ಅವರ ಕೆಳದಿ ವಸ್ತು
ಸಂಗ್ರಹಾಲಯದ ಮೂಲಕ ನಡೆದಿದೆ. ಅದೇ ರೀತಿ ಹೊಸನಗರ
ತಾಲೋಕಿನ ಹೊಂಬುಜ ಮಠದಲ್ಲಿಯು ಹಸ್ತಪ್ರತಿಗಳ ಸಂಗ್ರಹಣೆಯನ್ನು ಮಾಡಲಾಗಿದ್ದು ಸಮಗ್ರ ಹಸ್ತಪ್ರತಿಗಳ
ವರ್ಣನಾತ್ಮಕ ಸೂಚಿ ಪ್ರಕಟವಾದರೆ ಅಲ್ಲಿಯ ಅಪ್ರಕಟಿತ ಕೃತಿಗಳ ಬಗೆಗೆ ಬೆಳಕು ಚೆಲ್ಲುವಂತಾಗುತ್ತದೆ.
ಶಿವಮೊಗ್ಗ ಜಿಲ್ಲೆಯ ಕೆಲವು ಹಸ್ತಪ್ರತಿಗಳು ಈಗಾಗಲೇ ವಿವಿಧ ವಿದ್ವಾಂಸರುಗಳ ಮೂಲಕ ವಿಶ್ವವಿದ್ಯಾಲಯ
ಹಾಗೂ ಇನ್ನಿತರ ಸಂಸ್ಥೆಗಳಲ್ಲಿಯ ಹಸ್ತಪ್ರತಿಗಳ ಭಂಡಾರಗಳ ಸಂಗ್ರಹದಲ್ಲಿ ಸೇರ್ಪಡೆಯಾಗಿವೆ. ಇಲ್ಲಿಯ
ಹಸ್ತಪ್ರತಿಗಳ ಅನ್ವೇಷಣೆ ಹಾಗೂ ಸಂಗ್ರಹದ ಬಗೆಗೆ ಚೆನ್ನಮಲ್ಲಿಕಾರ್ಜುನ
ಮಾಸ್ತರರು, ಕೆಳದಿ ಗುಂಡಾಜೋಯಿಸ, ಜಿ.ಎಂ. ಉಮಾಪತಿ ಶಾಸ್ತ್ರಿ ಮುಂತಾದ ವಿದ್ವಾಂಸರು
ಆಸಕ್ತಿ ವಹಿಸಿ ಕಾರ್ಯೋನ್ಮುಖರಾಗಿದ್ದರ ಫಲವಾಗಿ ಹಸ್ತಪ್ರತಿಗಳ ಭಂಡಾರಗಳಲ್ಲಿ ಹಸ್ತಪ್ರತಿಗಳು ಸುರಕ್ಷಿತವಾಗಿವೆ.
ಚೆನ್ನಮಲ್ಲಿಕಾರ್ಜುನರು ತಮ್ಮ ಭಂಡಾರದಲ್ಲಿ ಸಾವಿರಾರು
ಓಲೆಕಟ್ಟುಗಳನ್ನು ಮತ್ತು ಕಾಗದದ ಪ್ರತಿಗಳನ್ನು ಸಂಗ್ರಹಿಸಿ ಸಂಪಾದಿಸುವ ಕಾಯಕದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದು,
ಅವರ ಹಸ್ತಪ್ರತಿಭಂಡಾರದಲ್ಲಿ ಜಿಲ್ಲೆಯ ಕೆಲವು ಹಸ್ತಪ್ರತಿಗಳು ಶೋಧನೆಗೊಂಡು ಸಂಗ್ರಹಿಸಲ್ಪಟ್ಟಿದ್ದವು.
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಹಸ್ತಪ್ರತಿಗಳು ಶಿವಯೋಗ ಮಂದಿರ ಮತ್ತು ಜಿ.ಎಂ.ಉಮಾಪತಿಶಾಸ್ತ್ರಿಗಳ
ಬಳಿ ಸೇರಿರುವುದಾಗಿ ತಿಳಿದು ಬಂದಿದೆ. ಇವರು ಶಿವಮೊಗ್ಗ ಜಿಲ್ಲೆಯ ಸೊರಬದ ತಾಲೋಕು ಚಿಕ್ಕಕಬ್ಬೂರ ಲಿಂಗಪ್ಪ ಶರಣರಲ್ಲಿ ಇದ್ದ
ಹಸ್ತಪ್ರತಿಯನ್ನು ಆಧರಿಸಿ ಪುರಾತನ ದೇವಿಯರ ವಾರ್ಧಕ, ಗುರುಸ್ತೋತ್ರ ತ್ರಿವಿಧಿ, ಸಿದ್ಧೇಶ್ವರನ ವಚನ,
ಮುಕ್ತ್ಯಂಗನಾ ಕಂಠಮಾಲೆ, ಗುರು ಶಂಕರೇಶ್ವರಾ ಶತಕ
ಇತ್ಯಾದಿ ಸಾಹಿತ್ಯ ಪ್ರಧಾನವಾದ ಕೆಲವು ಕೃತಿಗಳನ್ನು
ಸಂಪಾದಿಸಿ ಪ್ರಕಟಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಹಳಕಟ್ಟಿಯವರು ಹಸ್ತಪ್ರತಿಕ್ಷೇತ್ರದಲ್ಲಿ ತಮ್ಮನ್ನು
ತಾವು ಸಕ್ರಿಯವಾಗಿ ತೊಡಗಿಸಿಕೊಂಡ ಹಾಗೆ ಶಿವಮೊಗ್ಗ ಪರಿಸರದಲ್ಲಿ ಇವರು ಹಸ್ತಪ್ರತಿಗಳ ಸರ್ವೇಕ್ಷಣೆ, ಸಂಗ್ರಹಣೆ, ಸಂಪಾದನೆ, ಪ್ರಕಟನೆಯಲ್ಲಿ
ಸಕ್ರಿಯವಾಗಿ ತೊಡಗಿಸಿಕೊಂಡ ಫಲವಾಗಿ ಅನೇಕ ಅಪ್ರಕಟಿತ ಕೃತಿಗಳು ಬೆಳಕು ಕಾಣುವಂತಾಯಿತು. ಕೆಳದಿ ಗುಂಡಾಜೋಯಿಸ್
ಅವರು ಎಸ್.ಆರ್. ರಾವ್ ಒಡಗೂಡಿ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿಯನ್ನು ಸಿದ್ಧಪಡಿಸಿ 157 ಹಸ್ತಪ್ರತಿಗಳ
ಬಗೆಗೆ ಮಾಹಿತಿಯನ್ನು ಕೊಡಮಾಡಿದ್ದಾರೆ. ಇಲ್ಲಿಯ ಬಹುತೇಕ ಹಸ್ತಪ್ರತಿಗಳು ಶಿವಮೊಗ್ಗ ಜಿಲ್ಲೆ ಸಂಬಂಧಿಸಿದವುಗಳಾಗಿವೆ.
ಜಿ.ಎಂ.ಉಮಾಪತಿಶಾಸ್ತ್ರಿ ಅವರು ತಮ್ಮ ಚೆನ್ನುಡಿ ಮತ್ತು ಚಿಂತಾಮಣಿ ಪುಸ್ತಕಗಳಲ್ಲಿ ಜಿಲ್ಲೆಯ ಹಸ್ತಪ್ರತಿಗಳ
ಬಗೆಗೆ ಬೆಳಕು ಚೆಲ್ಲಿದ್ದಾರೆ.
ತುಮಕೂರು ಜಿಲ್ಲೆಯ ಪರಿಸರದ ಹಸ್ತಪ್ರತಿಗಳ ಅನ್ವೇಷಣೆ ಹಾಗೂ
ಸಂಗ್ರಹದ ಬಗೆಗೆ ಆರ್. ನರಸಿಂಹಾಚಾರ್ಯರು, ಪಿ.ಆರ್.ಕರಿಬಸವಶಾಸ್ತ್ರಿಗಳು, ಡಿ.ಎಲ್.ಎನ್. ತೀನಂಶ್ರೀ,
ಕಾ.ವೆಂ. ರಾಘವಾಚಾರ್ಯರು, ಬಿ.ಶಿವಮೂರ್ತಿ ಶಾಸ್ತ್ರಿ,ಸಿ.ಮಹದೇವಪ್ಪ, ಮುಂತಾದ ವಿದ್ವಾಂಸರು ಆಸಕ್ತಿ ವಹಿಸಿ ಕಾರ್ಯೋನ್ಮುಖರಾಗಿದ್ದರ
ಫಲವಾಗಿ ಹಸ್ತಪ್ರತಿಗಳ ಭಂಡಾರಗಳಲ್ಲಿ ಕೆಲವು ಹಸ್ತಪ್ರತಿಗಳು ಸುರಕ್ಷಿತವಾಗಿವೆ. ಕೆಲವು ಸಂಪಾದನೆಗೊಂಡು
ಪ್ರಕಟಿಸಲ್ಪಟ್ಟಿವೆ. ಇತ್ತೀಚಿನ ದಿನಮಾನಗಳಲ್ಲಿ ಹಸ್ತಪ್ರತಿ ತಜ್ಞರಾದ ಎಸ್.ಶಿವಣ್ಣನವರ ಪ್ರೋತ್ಸಾಹದೊಂದಿಗೆ
ಜಿಲ್ಲೆಯ ಹಸ್ತಪ್ರತಿಗಳ ಅನ್ವೇಷಣೆ ಹಾಗೂ ಸಂಗ್ರಹ ಹಾಗೂ ಸಂಪಾದನೆಯಂತಹ ಚಟುವಟಿಕೆಗಳು ವಿದ್ವಾನ್.ಎಂ.ಎಸ್.ಬಸವರಾಜಯ್ಯ,
ಜಿ.ಎ.ಶಿವಲಿಂಗಯ್ಯ, ಸಾ.ಶಿ.ಮರುಳಯ್ಯ, ಬಿ.ನಂಜುಂಡಸ್ವಾಮಿ ಮುಂತಾದ ವಿದ್ವಾಂಸರುಗಳು ಕೈಗೊಂಡು ಜಿಲ್ಲೆಯ
ಅಮೂಲ್ಯ ಹಸ್ತಪ್ರತಿ ಸಂಪತ್ತನ್ನು ಶೋಧಿಸಿ ಬೆಳಕಿಗೆ ತಂದಿದ್ದಾರೆ. ನಿದರ್ಶನಕ್ಕೆ ಹೇಳುವುದಾದರೆ ತಿಪಟೂರು
ತಾಲೋಕ್ ಹೊನ್ನವಳ್ಳಿ ಕರಿಸಿದ್ಧೇಶ್ವರ ಮಠದಲ್ಲಿ ಅಜ್ಞಾತವಾಗಿದ್ದಂತಹ ಸಂಸ್ಕೃತ, ಕನ್ನಡ, ತೆಲುಗು
ಭಾಷೆಯ ಅಪ್ರಕಟಿತ ಸುಮಾರು 5೦೦ ಕೃತಿಗಳ ಹಸ್ತಪ್ರತಿಗಳ ಕಟ್ಟನ್ನು ಪತ್ತೆಹಚ್ಚಿರುವುದು. ಈ ಹಸ್ತಪ್ರತಿಗಳ ಶೋಧನೆಯಿಂದ ಮಹತ್ತರವಾದ
ಸಂಗತಿಗಳು ಬೆಳಕಿಗೆ ಬಂದವು. ಬೇರೆಡೆ ಎಲ್ಲಿಯೂ ದೊರೆಯದಂತಹ ಆರುಸಾವಿರ ವಚನಗಳ ಕಟ್ಟು ಈ ಮಠದಲ್ಲಿಯೇ
ದೊರೆತಿರುವುದು. ಇಲ್ಲಿಯವರೆಗೂ ಒಂದು ಸಾವಿರ, ಎರಡು ಸಾವಿರ, ಮೂರು ಸಾವಿರ ವಚನಗಳ ಕಟ್ಟುಗಳು ಮಾತ್ರ
ಲಭ್ಯಗೊಂಡಿದ್ದವು. ಈ ಕಟ್ಟಿನ ಸಹಾಯದಿಂದ ಅಕ್ಕಮಹಾದೇವಿಯ ಸುಮಾರು 6೦ಕ್ಕೂ ಹೆಚ್ಚಿನ ಹೊಸವಚನಗಳು,
ಮೊದಲಬಾರಿಗೆ ನೀಲಮ್ಮನ 162 ಹೊಸವಚನಗಳು ಹಾಗೂ ಸಿದ್ಧರಾಮರ ಅಪ್ರಕಟಿತ ವಚನಗಳನ್ನು ಸಾ.ಶಿ.ಮರುಳಯ್ಯ
ಹಾಗೂ ಎಸ್.ಶಿವಣ್ಣನವರು, ಎಂ.ಎಂ.ಕಲಬುರ್ಗಿ, ಪಿ.ಎಂ.ಗಿರಿರಾಜು ರವರು ಸಂಪಾದಿಸಿ ಪ್ರಕಟಿಸಿದ್ದಾರೆ.
ಈ ಮಠದ ಹಸ್ತಪ್ರತಿಯನ್ನೇ ಬಳಸಿ ಮೊತ್ತ ಮೊದಲಬಾರಿಗೆ ಸೋಮೆಕಟ್ಟೆ ಚೆನ್ನವೀರ ಸ್ವಾಮಿಗಳ 23 ಅಪ್ರಕಟಿತ
ಕೃತಿಗಳನ್ನು ಜಿ.ಎ.ಶಿವಲಿಂಗಯ್ಯ, ಸಾ.ಶಿ.ಮರುಳಯ್ಯ, ಬಿ.ನಂಜುಂಡಸ್ವಾಮಿಗಳು ಸಂಪಾದಿಸಿ ಗದುಗಿನ ವೀರಶೈವ
ಅಧ್ಯಯನ ಸಂಸ್ಥೆಯ ಮೂಲಕ ಪ್ರಕಟಿಸಿದ್ದಾರೆ.
ಇಂದು ನಮಗೆ ಮೂಲ ಪ್ರತಿಗಳು ಸಿಗುವುದಿಲ್ಲ. ಮೂಲ ಪ್ರತಿಗಳು
ದೊರೆತಿದ್ದರೆ ಇಷ್ಟೊಂದೆಲ್ಲ ಮಾತಾಡುವ ಅವಶ್ಯಕತೆ ನಮಗೆ ದೊರೆಯುತ್ತಿರಲಿಲ್ಲ. ಇವತ್ತು ಪ್ರಾಚೀನ ಕವಿಯ
ಸನಿಹದ ಕಾಲಾವಧಿಯಲ್ಲಿ ಹುಟ್ಟಿದಂತಹ ಹಸ್ತಪ್ರತಿಗಳು ಸಿಗುವುದು ಸಹ ವಿರಳವಾಗಿದೆ. ಇಲ್ಲಿಯವರೆಗೂ ಕವಿ
ಕೃತಿಯಿಂದಿಡಿದು ಪ್ರತಿ, ಮರು ಪ್ರತಿ ಇತ್ಯಾದಿ ರೂಪದಿಂದಲೂ ಹಸ್ತಪ್ರತಿಗಳು ಕಾಲಾಂತರದಲ್ಲಿ ಸಾಗಿ
ಬಂದಿರುವುದನ್ನು ಕಾಣುತ್ತೇವೆ. ಕವಿಯ ಮೂಲಪ್ರತಿಗೂ ನಕಲು, ಮರುನಕಲುಗೊಂಡ ಪ್ರತಿಗಳಿಗೂ ಬಹುಮಟ್ಟಿಗೆ
2೦೦-3೦೦ ವರ್ಷಗಳ ಅಂತರ ಇದೆ. ಪ್ರತಿಕಾರರು ನಾಡಿನ ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಅತ್ಯಂತ ಶ್ರದ್ಧೆಯಿಂದ
ದುಡಿದವರಾಗಿದ್ದಾರೆ. ಕನ್ನಡ ಕಾವ್ಯಗಳು ಸಾಹಿತ್ಯ ಸಂಸ್ಕೃತಿ ಪ್ರಸಾರದ ಮೂಲಕ ಸಹೃದಯರ ಕೈ ಸೇರುವಲ್ಲಿ
ಲಿಪಿಕಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹಸ್ತಪ್ರತಿಗಳ ಸ್ವರೂಪ ಮತ್ತು ಸ್ವಭಾವವೇ ಭೌತಿಕ ಹಾಗೂ
ಹೇಳುವ ಕೇಳುವ ಪರಂಪರೆಗೆ ಸೇರಿದುದಾಗಿದೆ. ತನ್ನ ಲಿಖಿತ ಗುಣದಲ್ಲಿ ಶ್ರವಣ ಪರಂಪರೆಯ ಬಹುಮುಖಿ ಲಕ್ಷಣಗಳನ್ನು
ಉಳಿಸಿಕೊಂಡು ಬಂದಿದೆ. ಲಿಪಿಕಾರರು ಪ್ರತಿಮಾಡುವ ಪಠ್ಯಗಳು ಬಹುಮುಖಿ ಸಂವೇದನೆಗಳನ್ನು, ಕಾಲದ ಒತ್ತಡಗಳನ್ನು
ಲಿಪಿಕಾರನ ಸಾಂಸ್ಕೃತಿಕ ಸಂದರ್ಭವನ್ನು ಒಳಗೊಂಡು ರೂಪುಗೊಂಡಿರುತ್ತವೆ. ಆದರೆ ಲಿಪಿಕಾರರು ಪ್ರತಿಮಾಡಿಕೊಳ್ಳುವಲ್ಲಿ,
ಪಾಠಶುದ್ಧತೆಯನ್ನು ಕಾಯ್ದುಕೊಳ್ಳುವಲ್ಲಿ ಅನುಸರಿಸಿದ ಮಾರ್ಗದ ಬಗ್ಗೆ ಯಾವ ಮಾಹಿತಿಯ ಲಭ್ಯ ಇಲ್ಲ.
ಲಿಪಿಕಾರರ ಉತ್ಸಾಹ, ಪರಿಶ್ರಮ, ಪ್ರಯತ್ನ ಮತ್ತು ಅವರ ಅರ್ಪಣ ಮನೋಭಾವದಿಂದ ತಾವು ಮಾಡಿದ ನಕಲು ಕಾರ್ಯದ
ಪರಿಣಾಮವಾಗಿ ಪ್ರಾಚೀನ ಸಾಹಿತ್ಯ ಮುಂದಿನ ಜನಾಂಗಕ್ಕೆ ತಲುಪುವಂತಾಗಿದೆ.
ನಿದರ್ಶನಕ್ಕೆ
ಈ ಮೂರುಜಿಲ್ಲೆಗಳ ಲಭ್ಯವಿರುವ ಹಸ್ತಪ್ರತಿಗಳ ವೈವಿಧ್ಯತೆಯನ್ನು ಈ ಕೆಳಕಂಡಂತೆ ಕೆಲವು ಮಾದರಿಗಳನ್ನು ಕೊಡಲಾಗಿದೆ.
1. ಸಾಧಾರಣ
ಸಂವತ್ಸರದ ಕಾರ್ತೀಕ ಬ13 ಭಾನುವಾರದಲ್ಲಿ ಕೊರಟಗೆರೆ ಬಳೆಸಾಲೆ ಚಿಕ್ಕನಂಜುಂಡಪ್ಪಗೆ ವುಪಾಧ್ಯ ತಂಮ್ಮೆಯ್ಯನವರ
ಕುಮಾರ ಭಾಸ್ಕರೈಯನು ಬರದು ಕೊಟ್ಟ ಅಖಂಡೇಶ್ವರ ವಚನಕ್ಕೆ ಶುಭಮಸ್ತು. (ಕ.ಹ.ವ.ಸೂ. ಸಂ.5, ಪು.33)
2. (ಕಾಲ.
17೦5) ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕವರುಷ್ಯಗಳು 1705ನೇ ಕ್ರೋದಿನಾಮ ಸಂವತ್ಸರದ ಶ್ರಾವಣ
211 ಪಲ್ವಂಗ ಸಂವತ್ಸರದ ಫಾಲ್ಗುಣ ಶುದ್ಧ 5ರವರೆಗೆ ಅಮಿಗಿದೇವಯ್ಯನವರ ಚರಿತ್ರೆ ಪುಸ್ತಕವನ್ನು ದೇವರಾಜಶ್ರೀ
ಹಾಗಲವಾಡಿ ಸೀಮೆ ಕೋಟೇ ಸ್ಥಳದ ಕುರುವಿನ ಮುದ್ಧಪುರದ ಲಿಂಗಣ್ಣನ ಮಗ ಭೈರಣ್ಣನಿಗೆ ವೋದಿಕೊಳ್ಳುವುದಕ್ಕೆ
ಬರದು ಕೊಟ್ಟ ಪುಸ್ತಕಕ್ಕೆ ಶುಭಮಸ್ತು. ಸಿದ್ಧರಾಮೈನವರ ಸಾಂಗತ್ಯ, ಅಮಿಗಿ ದೇವೈಯ್ಯನವರ ಕಾವ್ಯ ಸಮಾಪ್ತ.
3.
........ಸಾಲಿವಾಹನ ಶಕವರುಷ 1545 ಷಕೆ ಚಿಕ್ಕನಾಯಕನ ಹಳ್ಳಿಯ ಶಿವಭಕ್ತ ಮುದಿಯಪ್ಪನಾಯಕರಿಗೆ ಶಿವಲಿಂಗದೇವ
ಬರದು ಆರಾಧ್ಯಚಾರಿತ್ರ.....ಶುಭಮಸ್ತು. (ವೀರಶೈವ ಹಸ್ತಪ್ರತಿ ಪುಷ್ಟಿಕೆಗಳು ಪು.57)
4. ವ್ಯಯ
ಸಂವತ್ಸರದ ಫಾಲ್ಗುಣ ಶು1ಲ್ಲು ಬರೆದ ಹೊಸರಾಮನ ಸಾಂಗತ್ಯಕೆ ಚಿಕ್ಕನಾಯಕನಹಳ್ಳಿಯ ಸುಬ್ಬಯ್ಯನವರ ಮಗ
ಸುಬ್ಬಯ್ಯ ಬರೆದ ಪುಸ್ತಕಕ್ಕೆ ಶ್ರೀ. (ವೀರಶೈವ ಹಸ್ತಪ್ರತಿ ಪುಷ್ಟಿಕೆ, ಪು.12೦)
5. ಅರಮನೆಗೆ
ಮದ್ಧಗಿರಿ ಹನುಮಂತೈಯ್ಯನು ಬರದು ವಪ್ಪಿಸಿದ ಕೃಷ್ಣರಾಜ ವಿಲಾಸ. (ಅದೇ,ಪು.121)
6. ಪ್ಲವ
ಸಂ ಮಾಘ ಬ 1೦ ಶುಕ್ರವಾರದವರಿಗೆ ಶ್ರೀ ಗಿರಿಜಾ ಕಲ್ಯಾಣ ಮಹಾಪ್ರಬಂಧಮಂ ಮದ್ಧಗಿರಿ ಗುರಿಕಾರು ನಂಜಪ್ಪನವರ
ಕೊಮಾರ ಕುಮಾರಪ್ಪನು ಬರದಂಥಾ ಪ್ರತಿ ಯೀ ಪ್ರತಿ ತಂಮ ಮನಿಗೆಯೆಂಬುದಾಗಿ ಬರೆದಂಥಾ ಪ್ರತಿಗೆ ಶುಭಮಸ್ತು.
(ವೀರಶೈವ ಹಸ್ತಪ್ರತಿ ಪುಷ್ಟಿಕೆ,ಪು.157)
7. ಸದ್ಗುರುಲಿಂಗಜಂಗಮ ಸೇವಾಧುರಂಧರ ವೀರಶ್ಯೆವನಿಷ್ಟಾ ಸಮವರ್ತಿ
ತೋಟಭೂಪಾಲ ಗರ್ಭಾಬ್ದಿ ಪೂರ್ನ ಹಿಮಕರ ಸಂಗಮಾಂಬಾ ತನೂಜ ಪ್ರಭುಕುಲಲಲಾಮ ಯಿಂಮಡಿ ತೋಟಭೂಪಾಲಕಂ ಬರೆಯಿಸಿದ
ಮದನತಿಲಕದ ಪುಸ್ತಕ.....ಶ್ರೀ ಗಣಾಧಿಪತಿಯೇ ನಮಃ......ಶ್ರೀ (ಸಿ)ಧಲಿಂಗಾಯ ನಮಃ – ಅಂ: ಸಿಧಾರ್ತಿ ಸಂವತ್ಸರದ
ಕಾರ್ತೀಕ ಶು 5 ಬುಧವಾರದಲೂ ತ್ತೋಟಧೈಯ್ಯ ನಾಯಕರವರಿಗೆ ಚಿಟ್ಟನಹಳ್ಳಿಯ ಸೇನಭಾಗ ಲಿಂಗಪ್ಪನು ಬರೆದುಕೊಟ್ಟ
ಮದನತಿಲಕದ ಪುಸ್ತಕಕ್ಕೆ ಮಂಗಳಮಹಾ ಶ್ರೀ.
೮.“ಚೇಳೂರ ದೊಡ್ಡಶಾಮಣ್ಣನ ವಲ್ಲಭೆಯರು ಯಿಬ್ಬರು ಯಿಬ್ಬರು ಹೆಸರು ಪಾಯಂಮ್ಮಯೆಬ್ಬವರು ಅವರೊಳಗೆ
ಹಿರಿಯಂಮ್ಮ ಪಾಯಂಮ್ಮನವರ ಗರ್ಭದಲ್ಲಿ ಹುಟ್ಟಿದವನು ನಾನು ಬ್ರಂಮಪ್ಪ ಬರದಂತ್ತಾ ದ್ವಾದಶಾನುಪ್ರೇಕ್ಷೊ
ಸಮಾಪ್ತ ಮಂಗಲಮಹಾಶ್ರೀ'' (೩೧೨-ದ್ವಾದಶಾನುಪ್ರೇಕ್ಷೆ). ಈ ಪ್ರಶಸ್ತಿಯಲ್ಲಿ ವಾಕ್ಯದಲ್ಲಿ ಬರುವ ಬ್ರಂಮಪ್ಪ ತನ್ನವಿವರದಲ್ಲಿ ತನ್ನ ತಂದೆ, ಅವರಿಗೆ ಇಬ್ಬರು
ಹೆಂಡತಿಯರು, ಅವರಲ್ಲಿ ಹಿರಿಯರಾದ ಪಾಯಂಮ್ಮನವರು, ಅವರ ಮಗ ತಾನೆಂದು ತಿಳಿಸಿರುವುದು ವಿಶೇಷವೆನಿಸಿದೆ.
೯.“ತೋವಿನಕೆರೆ ವೀರಭದ್ರಪ್ಪನವರ ಪೌತ್ರ ಪುಟ್ಟಂನ ತನ್ನ ಕುಮಾರನಾದ ಜ್ವಾಲ್ನಪಗೆಬರದುಕೊಟ್ಟ''
(೧೫೮-ಧರ್ಮಪರೀಕ್ಷೆ ವ್ಯಾಖ್ಯಾನ.” ಕನ್ನಡ
ಹಸ್ತಪ್ರತಿಗಳ ವರ್ಣನಾತ್ಮಕಸೂಚಿ, ಶ್ರವಣಬೆಳಗೊಳ)
೧೦. ಪ್ಲವ
ಸಂ ಮಾಘ ಬ೧೦ ಶುಕ್ರವಾರದಲ್ಲೂ ಶ್ರೀ ಗಿರಿಜಾಕಲ್ಯಾಣ ಮಹಾಪ್ರಬಂಧಮಂ ಮದ್ದಗಿರಿ ಗುರಿಕಾರು
ನಂಜಪ್ಪನವರ ಕುಮಾರ ಕೊಮಾರಪ್ಪನು ಬರೆದಂಥಾ ಪ್ರತಿ ಈ ಪ್ರತಿ ತಂಮ ಮನಿಗೆಯೆಂಬುದಾಗಿ ಬರೆದಂಥ ಪ್ರತಿಗೆ
ಶುಭಮಸ್ತು. ಕುಮಾರ
ಕೊಮಾರಪ್ಪರು ಹವ್ಯಾಸಿಲಿಪಿಕಾರನಾಗಿದ್ದು ತನ್ನ ಮನೆಗೋಸ್ಕರವಾಗಿ ಗಿರಿಜಾ ಕಲ್ಯಾಣ ಕೃತಿಯನ್ನ ಪ್ರತಿಮಾಡಿಕೊಂಡಿರುವುದನ್ನು ನೋಡಬಹುದು.
( ಗಿರಿಜಾ ಕಲ್ಯಾಣದ
ಬಯಲಾಟದ ಹಸ್ತಪ್ರತಿ, ಪು.ಸಂ.೧)
೧೧. ಶ್ರೀಯಡೆಯೂರ
ಸಿದ್ಧಲಿಂಗ ಸ್ವಾಮಿಯವರ...ಭಾವನಾಮ ಸಂವತ್ಸರದ ಫಾಲ್ಗುಣದ
ಚಂನರಾಯದುರ್ಗದ ತಾಲೂಕಿಗೆ ಸಲುವ ಬುಕಪಟಣದ ಹೋಬಳಿ ವಳಿತವಾದ
ಜನಪಟ್ಟಣದ ಶ್ಯಾನುಭಾಗ ಶ್ಯಾಮಂಣಪ್ಪನವರ ಕೊಮಾರ ನಾರಾಣಪ್ಪನವರ ಮಗ ಶ್ಯಾಮಣನು
ಚರಿತ್ರೆ' (ಕ್ರ.ಸಂ. ೩೧೦೦, ಚಿತ್ರದುರ್ಗದ ಮುರುಘ
ರಾಜೇಂದ್ರ ಮಠದ ಹಸ್ತಪ್ರತಿಸೂಚಿ, ಸಂ.೧, ಪು.ಸಂ.೩೯೪)
ಚಂನರಾಯದುರ್ಗದ ತಾಲೂಕಿಗೆ
ಸಲುವ ಬುಕಪಟಣದ ಹೋಬಳಿ
ವಳಿತವಾದ ಚಂನಪಟ್ಟಣದ ಶ್ಯಾನುಭಾಗ ಶ್ಯಾಮಂಣಪ್ಪನವರ ಕೋಮಾರ ನಾರಾಣಪ್ಪನವರ
ಮಗನಾದ ಶ್ಯಾಮಂಣನು ಸಿದ್ಧಲಿಂಗೇಶ್ವರನ ಕಾವ್ಯವನ್ನು ಬರೆದಿದ್ದಾನೆ.
೧೨. ತೋವಿನಕೆರೆಯ
ಚಂದ್ರಸಾಗರವರ್ಣಿಯ ಮುಲ್ಲಾಶಾಸ್ತ್ರ ಕೃತಿಯು ಪ್ರಕಟಗೊಂಡಿರುವುದಿಲ್ಲ. ಮುಲ್ಲಾಶಾಸ್ತ್ರದ ಬಗೆಗೆ
`ಶ್ರೀಮುಖ ಸಂವತ್ಸರದ ಮಾರ್ಗಶಿರ ಬಹುಳ 14ವರಿಗೆ ಚಂದ್ರಸಾಗರರು ಮಾಡಿದ ಮುಲ್ಲಾ ಶಾಸ್ತ್ರದ ಪುಸ್ತಕ.
ಯುಪಾದರಿ ಪಾರಿಶಯ್ಯನ ಕುಮಾರ ಪುಟ್ಟಶಾಮಯ್ಯನು ಬರೆದ ಮುಲ್ಲಾ ಶಾಸ್ತ್ರದ ಪುಸ್ತಕ ಸಂಪೂರ್ಣ ಮಂಗಳಾ
ಮಹಾಶ್ರೀ' ಒಬ್ಬ ಜೈನಕವಿ ಮುಲ್ಲಾಶಾಸ್ತ್ರದ ಬಗೆಗೆ ಕಾವ್ಯ ರಚಿಸಿರುವುದು ಗಮನಾರ್ಹ ಹಾಗೂ ವಿಶೇಷ ಆಗಿದೆ.
ಈ ಕೃತಿಯ ಹಸ್ತಪ್ರತಿ ದೊರೆತಿದ್ದು ಸಂಪಾದನೆಗೊಂಡು ಪ್ರಕಟಗೊಳ್ಳಬೇಕಾಗಿದೆ.
ಕಡಬದ ನಂಜೇಶನ ಶಿಷ್ಯ ನಂಜನು ರಚಿಸಿರುವ ಸ್ವರವಚನಗಳು
ಇತ್ಯಾದಿ ಜಿಲ್ಲೆಯ ಅಲಕ್ಷಿತ ಕವಿಗಳ ಕೃತಿಗಳು ಹಾಡುಗಳ ಹಸ್ತಪ್ರತಿಗಳ ಬಗೆಗೆ ಸರ್ವೇಕ್ಷಣೆ ನಡೆಯಬೇಕಾಗಿದೆ.
ಕ್ರೀಡಾಪುರದ (ಗುಳೂರು) ಪ್ರೌಢಲಿಂಗಾರ್ಯ ಕವಿಯು ರೇಣುಕಾ
ಚರಿತ್ರೆಯೆಂಬ ವಚನ ಕಾವ್ಯವನ್ನು ರಚಿಸಿರುವುದಾಗಿ ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ. ಜಿಲ್ಲೆಯಲ್ಲಿ ಆಗಿಹೋಗಿರುವ ಉಪೇಕ್ಷೆಗೆ ಒಳಗಾಗಿರುವ ಕವಿಗಳ
ಕೃತಿಗಳು ಇನ್ನೂ ಹಸ್ತಪ್ರತಿಗಳಲ್ಲಿ ಅಜ್ಞಾತವಾಗಿ ಉಳಿದಿವೆ.
ಸಿದ್ಧಲಿಂಗೇಶ್ವರ ಕಾವ್ಯವನ್ನು ಬರೆದಿರುವ ಹೆಬ್ಬೂರು
ಹೇರಂಬ ಕವಿಯು ಘನಪುರಿವಾಸಾ ಅಂಕಿತದಲ್ಲಿ ನೀತಿಕಂದಗಳನ್ನು ಬರೆದಿದ್ದು ಅದು ಕಾಗದ ಪ್ರತಿಯಲ್ಲಿದೆ.
ಅದೇ ರೀತಿ ನಿಡುಮಾಮಿಡಿ ಕರಿಸಿದ್ಧಯ್ಯ ಲಿಂಗಸ್ತುತಿ ಎಂಬ ಕಾವ್ಯವನ್ನು ಮಂದಾನಿಲ ರಗಳೆಯಲ್ಲಿ ರಚಿಸಿದ್ದಾನೆ.
ಕೃತಿಯ ಆದಿಯಲ್ಲಿ ಕೃತಿಕಾರ ಘನಪುರಿವಾಸ ವಿಘ್ನೇಶನನ್ನು ಹೆಸರಿಸಿದ್ದಾನೆ. ಹೀಗಾಗಿ ಈ ಕೃತಿಕಾರ ಜಿಲ್ಲೆಯ
ಹೆಬ್ಬೂರಿನ ನಿವಾಸಿಯಾಗಿರಬೇಕು ಎಂದು ಊಹಿಸಬಹುದಾಗಿದೆ. ಈ ಕೃತಿಯ ಕಾಗದದ ಪ್ರತಿಯಾಗಿದ್ದು ಇದು ಬೆಂಗಳೂರಿನ
ಬೇಲಿಮಠ ಸಂಸ್ಥಾನದ ಸಂಗ್ರಹದಲ್ಲಿದೆ.
ಹಸ್ತಪ್ರತಿಗಳಲ್ಲಿಯ ಕೆಲವು ಪುಷ್ಟಿಕೆಗಳಲ್ಲಿಯ
ಉಲ್ಲೇಖಗಳು ಕವಿಗಳ ಹೆಸರನ್ನು ಕಾವ್ಯಗಳ ಕಾಲವನ್ನು ಅರ್ಥೈಸಲು ಸಹಕಾರಿಯಾಗಿವೆ. ಈ ಹಸ್ತಪ್ರತಿಗಳ
ಪುಷ್ಟಿಕೆಗಳಲ್ಲಿಯ ಸಂಗತಿಗಳು ಸಾಹಿತ್ಯ ಚರಿತ್ರೆಯ ಅಧ್ಯಯನದ ದೃಷ್ಟಿಯಿಂದ ಮಹತ್ವದ ಪಾತ್ರ
ವಹಿಸಿವೆ.
ಮಹಾನಾಡ ಪ್ರಭುಗಳ ಒಡ್ಡೋಲಗದಲ್ಲಿ ಕವಿ-ಗಮಕಿ-ವಾದಿ-ವಾಗ್ಮಿಗಳ ಕೂಟವಿದ್ದುದನ್ನು ಹಾಗೂ ಕುಮಾರರಾಮನ ಸಾಂಗತ್ಯದ ಓಲೆಕಟ್ಟೊಂದನ್ನು
ತಂದು ರಾಜನ ಆಸ್ಥಾನದಲ್ಲಿ ವಾಚಿಸಿದ ಸಂದರ್ಭವೊದನ್ನು ಇಮ್ಮಡಿ ಚಿಕ್ಕಭೂಪಾಲನ ಕೃತಿಯು ಪ್ರಸ್ತಾಪಿಸುವುದರಿಂದ
ಈ ಅರಸರುಗಳ ಸಾಹಿತ್ಯ ಪ್ರೇಮ ಎಂತಹದ್ದು ಎಂಬುದು ಮನದಟ್ಟಾಗುತ್ತದೆ.
ಹಾಗಲವಾಡಿ ಪಾಳೆಯಗಾರರಲ್ಲಿ ಕೆಲವು ಪಾಳೆಯಗಾರರ
ಪ್ರಸ್ತಾಪ ಹಸ್ತಪ್ರತಿಗಳ ಪುಷ್ಪಿಕೆಯಲ್ಲಿ ಸಿಗುತ್ತವೆ.
ಶ್ರೀ ರುಧಿರೋದ್ಗಾರಿ ಸಂವತ್ಸರದ ಚೈತ್ರ
ಶುದ್ಧ 6 ಬುಧವಾರದ ದಿವಶಕ್ಕೆ ಸಂದ ಸಾಲಿವಾಹನ ಶಖವರುಷ 1545 ಚಿಕನಾಯಕನಹಳ್ಳಿಯ
ಶಿವಭಕ್ತ ಮುದಿಯಪ್ಪನಾಯಕರ ಶಿವಲಿಂಗದೇವರು ಬರೆದ ಆರಾಧ್ಯ ಚಾರಿತ್ರ ಶಿವಮಸ್ತು. ( ಬೆ.ವಿ.ವಿ. ಕ.ಅ.ಕೇಂ.ಕೆ.1520.) ಅಮಿಗಿದೇವಯ್ಯನವರ ಚರಿತ್ರೆ ಪುಸ್ತಕವನ್ನು ದೇವರಾಜಶ್ರೀ ಹಾಗಲವಾಡಿ ಸೀಮೆ
ಕೋಟೇ ಸ್ಥಳದ ಕುರುವಿನ ಮುದ್ಧಪುರದ ಲಿಂಗಣ್ಣನ ಮಗ ಭೈರಣ್ಣನಿಗೆ ವೋದಿಕೊಳ್ಳುವುದಕ್ಕೆ ಬರದು
ಕೊಟ್ಟ ಪುಸ್ತಕಕ್ಕೆ ಶುಭಮಸ್ತು. ಸಿದ್ಧರಾಮೈನವರ
ಸಾಂಗತ್ಯ, ಅಮಿಗಿ ದೇವೈಯ್ಯನವರ ಕಾವ್ಯ ಸಮಾಪ್ತ.
ತುಮಕೂರು
ಜಿಲ್ಲೆಯಲ್ಲಿ ಆಗಿಹೋದ ಎಷ್ಟೋ ಜನ ಕವಿಗಳು ಬರೆದಿರುವ ಕೃತಿಗಳ ಹಾಡುಗಳು, ಸ್ವರವಚನಗಳ ಬಗೆಗೆ ಶೋಧ
ನಡೆಯಬೇಕಾಗಿದೆ. ಇವೆಲ್ಲವೂ ಹಸ್ತಪ್ರತಿಗಳಲ್ಲಿಯೇ ಅಜ್ಞಾತವಾಗಿಯೇ ಉಳಿದಿವೆ. ಶೋಧಕಾರ್ಯ ನಡೆಯಬೇಕಾಗಿದೆ.
19 ಹಾಗೂ 20ನೇ ಶತಮಾನದ ಆದಿಭಾಗದಲ್ಲಿದ್ದ ಅಜ್ಞಾತ ಕರ್ತೃಗಳ ಹಾಡುಗಳು ಕೃತಿಗಳ ಹಸ್ತಪ್ರತಿಗಳ ಶೋಧ
ಹಾಗೂ ಸೂಚಿಕಾರ್ಯ ಮಾಡಬೇಕಾಗಿದೆ.
ಮೈಸೂರು ಜಿಲ್ಲೆಯ ಹಸ್ತಪ್ರತಿ ಸಂಪತ್ತು ವೈವಿಧ್ಯತೆಯಿಂದ
ಕೂಡಿದೆ. ಹಸ್ತಪ್ರತಿಗಳ ಸಂಕಲನ, ಪರಿಷ್ಕರಣ, ಸಂಪಾದನಾ ಚಟುವಟಿಕೆಗೆ ಮೈಸೂರು ಜಿಲ್ಲೆಯ ಪರಿಸರ ಅದ್ವಿತೀಯವಾದ ಕೊಡುಗೆಯನ್ನು ನೀಡಿದೆ.
ಈ ಪರಿಸರದಲ್ಲಿ ಹವ್ಯಾಸಿ, ನಿಯುಕ್ತ ಹಾಗೂ ವೃತ್ತಿ ಲಿಪಿಕಾರರು ಲಿಪೀಕರಣ ಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಶ್ರೀ ಮಹಿಸೂರ ಚಾಮುಂಡಾದಿ ಪಂಚಗವಿ ಮಠಕ್ಕೆ ಕಾರಣಕರ್ತರಾದ
ಸುಲೆಗಾವಿ ಚರಮೂರ್ತಿಗಳು ಶಿವಬಸವ ದೇಶಿಕೇಂದ್ರರಿಗೋಸ್ಕರ ತಯಾರಾದ ಬಸವೇಶ್ವರನ ಷಡುಸ್ಥಲದ ವಚನ...
( ಕ.ಹ.ವ.ಸೂ. ಸಂ.7 ಕ್ರ.ಸಂ.15)
ಪರಸುಖ ಹಾರೈಕೆಯ ಹಿನ್ನೆಲೆಯಲ್ಲಿ ಸಕಲ ಕಾರ್ಯಸಿದ್ಧಿಯ ಅಂಗವಾಗಿ,
ಲಿಪಿಕರಣ ಕ್ರಿಯೆಯಲ್ಲಿ ತೊಡಗಿ ಕೊಂಡಿದ್ದಾರೆ.
.. ಚಿಕ್ಕದೇವರಾಯ ಸ್ವಾಮಿಯವರ ಕೊಮಾರತಿ ಆದ ಚಿಕ್ಕ ಅಮೃತಾಜಮ್ಮಣ್ಣಿಯವರ
ಪಾದ ದಯಕ್ಕೆ ಪಾತ್ರನಾದ ಬೊಕ್ಕಸ ಬಾಳೈನವರ ಮಕ್ಕಳು ಚನ್ನರಾಜಯ್ಯನವರ ಮಗ ಮರೈಯನು ಬರದು ವಪ್ಪಿಸಿದ
ಕನ್ನಡ ಕಾದಂಬರಿ ಪುಸ್ತಕಕ್ಕೆ ಶುಭಮಸ್ತು ಶೋಭನಮಸ್ತು, ಅಷ್ಟಪುತ್ರಿ ಬಹುಧನಮಸ್ತು ಸಕಲ ಕಾರ್ಯಸಿದ್ದಿರಸ್ತು
... ( ಕ.ಹ.ವ.ಸೂ. ಸಂ.5 ಕ್ರ.ಸಂ.332) ಇಲ್ಲಿ ಮರೈಯನು ನಿಯುಕ್ತ ಲಿಪಿಕಾರನಾಗಿದ್ದಾನೆ. ತನ್ನ ವಿಶಿಷ್ಟ
ಕಾರ್ಯಕ್ಕೆ ಸಂಭಾವನೆಯನ್ನು ಪಡೆಯುತ್ತಿದ್ದನ್ನು ಈ ಹೇಳಿಕೆ ಧ್ವನಿಸುತ್ತದೆ.
... ಭಕ್ತಗಣಂಗಳಿಗೆ
ಕೃಪೆಯಾಗಿ ಲೀಲಾವಿನೋದದಿಂದ ಬಂದಂತಾ ದೇವಾಪೃತ್ವಿ ಮಹಾಮಹತ್ತಿನೊಳಗಾದ ಷಟ್ಸ್ಥಲ ಲಿಂಗಾಂಗಭರಿತರಾದ
ಮಳೆಯ ಮಹಾಸ್ವಾಮಿಯ ಕರಸರೋಜದಲ್ಲಿ ಜನಿಸಿದಂತಾ ಸುತ್ತೂರ ಕೊಟ್ಟಪ್ಪ ದೇವರು ಅವರ ಸುಗರ್ಭದುದ್ಭವರಾದ
ಗುರುದೇವರು ನಮ್ಮ ಕಾರುಣ್ಯದ ಭಕ್ತರಾದ ಱಟ್ಟೆಹಳ್ಳಿಯ ಆನೆಯ ಬಸಟ್ಟಿಯರಿಗೆ ಆಯುರಾರೋಗ್ಯ ಅಯಿಶ್ವರ್ಯಾಭಿವೃದ್ದಿ
ಪುತ್ರೋತ್ಸವವಾಗಬೇಕೆಂದು ತ್ರಿಸಂದ್ಯ ಕಾಲದಲ್ಲು ಹರಸುವ ಅನೇಕ ಆಶಿರ್ವಾವುದಿಂದಲ್ಲು ಶೂಂನ್ಯ ಸಂಪಾದನೆಯ
ಪುಸ್ತಕವ ಬರೆದು ಕೊಟ್ಟಂತಾ ಪ್ರತಿಗೆ ಶುಭಮಸ್ತು ಶೋಭನಮಸ್ತು.. ( ಬೆ.ವಿ.ವಿ.ಹ.ವ.ಸೂ.ಸಂ.1. ಸಂ.371,ಕೆ.22ಂ)
“ಮಹಿಶೂರ
ಸಂಸ್ಥಾನದ ಕೃಷ್ಣರಾಜ ವಡೆರೈಯ್ಯನವರ ಬೊಕ್ಕಸದ ಗುರಿಕಾರ್ರು
ಮಾದೈಯ್ಯನವರ
ವಿವೇಕಚಿಂತಾಮಣಿ ಪುಸ್ತಕ (೮೭-ವಿವೇಕಚಿಂತಾಮಣಿ).`
(ಕನ್ನಡ
ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ. ಸಂಪುಟ, ೮. ಮೈಸೂರು ವಿಶ್ವವಿದ್ಯಾಲಯ, ಮೈಸೂರು.)
`.. ಉಮ್ಮತ್ತೂರ
ಹೊಸಬಸ್ತಿಯ ವರ್ಧಮಾನ ಸನ್ನಿಧಿಯಲ್ಲಿ ವರ್ಧಮಾನ ಶಿಖಾವಳಿಗೆ ಜೋಯಿಸರ ಸೂರಯ್ಯನು ಬರೆದ ತ್ರಿಪುರ ದಹನ
ಸಾಂಗತ್ಯ ಗುರುದತ್ತನ ಚರಿತೆ ಸಮಾಪ್ತ. (ಕ.ಗ್ರ.ಸಂ.328) ಸೂರಯ್ಯನು ಬಸದಿಯ
ಭಂಡಾರದಲ್ಲಿ ನಿಯುಕ್ತನಾಗಿದ್ದುಕೊಂಡು ಪ್ರತೀಕರಣ ಕಾರ್ಯದಲ್ಲಿ ತೊಡಗಿ ಕೊಂಡಿದ್ದುದು ಈ ಹಸ್ತಪ್ರತಿ
ಪುಷ್ಪಿಕೆಯಿಂದ ತಿಳಿದು ಬರುತ್ತದೆ.
`.. ಬರೆದನೀತ
ತೆರಕಣಾಂಬಿಪುರ ಭೂಸುರರೊಳುತ್ತಮ ಗಿರ್ಯಮಾಂಬಾ ವರತನುಜ ತಿಪ್ಪಣ್ಣ ಲೇಖರಿ ವಾಗ್ವಿಲಾಸ ಕವಿ ---- ತಿಪ್ಪಣಾಖ್ಯ
ಲೇಖರಿಯಪ್ಪ ಸೇನಾನಿ ದೇವರಾಯ ನಿಲಟದೊಳ್’’ (ಗ್ರ.ಸಂ.352)
`` ಸತ್ಯಗಾಲದ ಸ್ಥಳದ ವಡೇರ ಹಾಳ್ಯದ ಸಿದ್ಧನಂಜಯ್ಯನವರ ಕುಮಾರ
ಶಿವಲಿಂಗೈಯ್ಯನು ತನ್ನ ಸ್ವಹಸ್ತಾಕ್ಷರದಲ್ಲಿ ಬರೆದು ಈ ಶೈವ ಸಂಜೀವಿನಿ ಶಾಸ್ತ್ರವನ್ನು ಸಂಪೂರ್ಣಮಾಡಿ
ಬರೆದು ಒಪ್ಪಿದ್ದರಿಂದ ಈ ಪ್ರತಿ ಸಂಪೂರ್ಣ’’(ಕ.ಹ.ವ.ಸೂ. ಸಂ.4 ಕ್ರ.ಸಂ.1784 ಮತ್ತು ೧೮೯೮)
`` ತೆರಕಣಾಂಬಿಯ
ನೇಮಿಚಂದ್ರೋಪಾಧ್ಯಾಯರ ಅನ್ವಯದ ಪಾರಂಪರ‍್ಯವಾದ ದೇವಚಂದ್ರ ಪಂಡಿತರ ಕುಮಾರ ಚಲುವಯ್ಯನು ಬರೆದು ಸಂಪೂರ್ಣವಾಯಿತು.’
ತ್ಯರಕಣಾಂಬೆ ಚಲುವಯ್ಯ ಉಪಾಧ್ಯರ ಕನಿಷ್ಟಪುತ್ರ ವೋದುಕೊಳ್ಳುನಿಮಿತ್ಯ ಬರಕೊಂಡ (ಕ.ಹ.ವ.ಸೂ. ಸಂ.6 ಕ್ರ.ಸಂ.49)
` ಹದಿನಾಡ
ಯಿಂಮಡಿ ರಾಮರಾಜನಾಯಕರಿಗೆ ತಳಕಾಡ ದೇವರಸ ಉಪಾಧ್ಯರ ಲೀಲಾವತಿ..’’
(ಕ.ಹ.ವ.ಸೂ. ಸಂ.5 ಕ್ರ.ಸಂ.15೦5)
`` ಶ್ರೀ
ಚಾಮರಾಜ ವಡೆಯರವರ ಮಹಲಿನಲ್ಲಿರುವ ಗು|| ಬಸವಲಿಂಗಪ್ಪನವರ ಭಾವಮೈದ ನಂಜಪ್ಪನು ಬರೆದು’’( ಕ.ಹ.ವ.ಸೂ. ಸಂ.7 ಕ್ರ.ಸಂ.15)
ಮಹಿಶೂರ
ನಗರದ ಉಗ್ರಾಣದ ಕರಣಿಕರು ದೊಡ್ಡಯ್ಯನವರ ಮೊಮ್ಮಗ ಹುಚ್ಚಯ್ಯನು ( ಕ.ಹ.ವ.ಸೂ. ಸಂ.6 ಕ್ರ.ಸಂ.136)
` ಸರಸಿ
ಚೆಲುವಿ ಗೌರಮ್ಮಣ್ಣಿಯಿಂದಾಜ್ಞೆವೆತ್ತೀವರ ದಿವಿಯ ಮಹಾಸೂರಿ ಪ್ರಬಂಧಂ ವಿರೋಧಿಕರ ಬರಿಸದ ರಾಧಾಮಾಸದೊಳ್
ಗ್ರಂತಮೆಲ್ಲಂ ಬರೆದುದು ಶ್ರೀ ತತಿರ್ಮೈಮಗಾರರಿಂ’ (ಕ.ಗ್ರ.ಸಂ.138) ಮೈಸೂರಿನ ಅರಸಿ ಗೌರಮಣ್ಣಿಯು ಹಸ್ತಪ್ರತಿಯ
ಪೋಷಕಿಯಾಗಿ ಇಲ್ಲಿ ಕಾಣಿಸಿಕೊಂಡಿರುವುದು ಗಮನಿಸಬೇಕಾದ ಸಂಗತಿಯಾಗಿದೆ.
ಜಿಲ್ಲೆಯಲ್ಲಿಯ ಹಸ್ತಪ್ರತಿಗಳ ಸೃಷ್ಟಿಗೆ, ಪ್ರತಿಕರಣಕ್ಕೆ
ಮಠಗಳು,ಬಸದಿಗಳು ಆಸರೆಯಾಗಿರುವ ನಿದರ್ಶನಗಳು ದೊರೆಯುತ್ತವೆ.
` ದೊಡ್ಡಯ್ಯನು
ತನಗೆ ಬರೆದಂಥಾ ಜೀವಂಧರನ ಷಟ್ಪದಿ ಮೈಸೂರು ಚೈತ್ಯಾಲಯದಲ್ಲಿ ಸಂಪೂರ್ಣವಾಯ್ತು. (ಕ,ಗ್ರ.ಸಂ.343)
ಮಲೆಯೂರ
ಆದಿಪರಮೇಶ್ವರರ ಪಾದಸನ್ನಿಧಿಯಲ್ಲಿ ಬರೆದ.. ವಿಜಯಕುಮಾರಿಯ ಚರಿತ ( ಗ್ರ.ಸಂ.414)
`` ವುಮ್ಮತ್ತೂರ
ಹಳೆಯ ಬಸದಿಯ ಕಳಲೆ ಸೂರಿ ಪಂಡಿತರ ಮಗನು ತನಗೆ ಬೇಕಾಗಿ ಬರೆದ ಅಬ್ಧಿ ಕಲ್ಪಕ್ಕೆ ಮಂಗಲ..’’ ( ಕ.ಹ.ವ.ಸೂ. ಸಂ.1 ಕ್ರ.ಸಂ.63)
ಇಲ್ಲಿಯ
ಹಸ್ತಪ್ರತಿ ಸಂಪತ್ತಿನಲ್ಲಿ ಗಮನಿಸಬೇಕಾದ ಅಂಶವೆಂದರೆ, ಇಲ್ಲಿಯ ಕೆಲವು ಹಸ್ತಪ್ರತಿಗಳಲ್ಲಿ ಲಿಪಿಕಾರನ
ಹರಕೆ ಇರುವುದು. ಜೊತೆಗೆ ಯಾವ ಮಾತೃಕೆಯಿಂದ ನಕಲುಗೊಂಡಿದೆ ಎಂಬುದರ ವಿವರಗಳನ್ನು ಕಾಣಬಹುದು.
ಗೋವಿಂದವೈದ್ಯನ ಕಂಠೀರವ ನರಸರಾಜೇಂದ್ರ ವಿಜಯದ ಹಸ್ತಪ್ರತಿಯ
ಅಂತ್ಯದಲ್ಲಿ,`` ಸ್ವಸ್ತಿಶ್ರೀ ವಿಜಾಯಾಭ್ಯುದಯ ಶಾಲಿವಾಹನ ಶಕ 157೦ ಸಂದ ಸರ್ವಧಾರಿ ಸಂವತ್ಸರದ ಜೇಷ್ಠ
ಶುದ್ಧ11 ಚಂದ್ರವಾರದಲ್ಲೂ ಶ್ರೀ ಮನ್ಮಹಾದೇವ ದೇವೋತ್ತಮನಾದ ಶ್ರೀ ಲಕ್ಷ್ಮೀನರಸಿಂಹನು ಕಂಠೀರವ ನರಸರಾಜೇಂದ್ರನಿಗೆ
ಆಯುರಾರೋಗ್ಯೈಶ್ವರ್ಯಾಭಿವೃದ್ಧ್ಯಷ್ಟಪುತ್ರ ಬಹುಧನವನು ಕೊಟ್ಟು ರಕ್ಷಿಸಲಿ ಎಂದು ರಂಗನಾಥಸ್ವಾಮಿಯ
ಕೃಪೆಯಿಂದ ಶ್ರೀನಿವಾಸ ಪಂಡಿತರ ಮಗ ಗೋವಿಂದ ವೈದ್ಯನು ಕಂಠೀರವ ನರಸರಾಜ ವಿಜಯವನ್ನು ವಿರಚಿಸಿ ಅಚಂದ್ರಾರ್ಕವಾಗಿ
ಭೂಮಿಯೊಳಿರಲಿಯೆಂದು ಭಾರತಿ ನಂಜನ ಮುಖದಿಂದ ವಾಚಿಸಿ ರಾಜಾಸ್ಥಾನದಲ್ಲಿ ವಿಸ್ತಾರ ಪಡಿಸಿದುದು.
ಸ್ವಸ್ತಿ ಸಮಸ್ತವಾದ ಶಕವರುಷಂ 1444ಕ್ಕೆ ಸಲುವ ವ್ಯಯ ಸಂವತ್ಸರದ
ಆಶ್ವಯುಜ 7 ಮಿಯೂ ಗುರುವಾರದ ದಿವಸದಲ್ಲಿ ಪದನು 42೦7 ಪದಕ್ಕಂ ಸಂಪೂರ್ನವಾಗಿ ವೊಡೆಯರು ಭಕ್ತರ ಕೃಪೆಯಲಿ
ನಿರೂಪದಿಂದ ಮಯಿಸೂರ ಶ್ರೀಗಿರಿದೇವನು ಸುಪುತ್ರನಾದ ಚನ್ನಬಸವಯ್ಯನು ಬರೆದ ಆರಾಧ್ಯ ಚಾರಿತ್ರ... ಭೋಗವಾದಿಯ ಮಠದ ಅತಿಥಿ ಸಿದ್ಧವೀರೇಶ್ವರದೇವರ
ನಿರೂಪದಿಂದ ಮಹಿಸೂರ ಶ್ರೀ ಗಿರಿದೇವಯ್ಯನ ಸುಪುತ್ರನಾದ ಚನ್ನಬಸವಯ್ಯನು ಬರೆದ ಆರಾಧ್ಯ ಚಾರಿತ್ರ
ಮಹಾಮಹತ್ತಿನ ಸಿವಶಕ್ತರುಮಪ್ಪ ನಂಜನಗೂಡು ಎಂಬ ದಕ್ಷಿಣಕಾಶಿಗೆ
ದಕ್ಷಿಣದಲ್ಲಿ ಹುಣಿಸೆ ನೆಳಲೆಂಬ ಗ್ರಾಮದ ಶ್ರೀಶಿವಯೋಗಿ ಮಲ್ಲಿಕಾರ್ಜುನ ಸ್ವಾಮಿಯವರ ಕೊಮಾರರು ಕೊಡಗೆಹಳ್ಳಿಯ
ಮಲ್ಲಿಕಾರ್ಜುನದೇವರು ಅವರ ಕುಮಾರನು ಶ್ರೀಗುರುದ್ಯವರು ಬರದ... ಕ್ರೋದಿ ಸಂವತ್ಸರದ ಮಾರ್ಗಶಿರ ಶುದ್ಧ11ಯಲ್ಲು
ಯೀ ಗಣಭಾಷಿತ ರತ್ನಮಾಲೆಯು ಬರೆದು ಮುಕ್ತಾಯ( ಕ.ಹ.ವ.ಸೂ. ಸಂ.5 ಕ್ರ.ಸಂ.596)
ವಿಕಾರಿ
ಸಂವತ್ಸರದ ಮಾಗ ಶು 15 ಸೋಮವಾರ ಮೈಸೂರು ನಂಬ್ಯಣ್ಣದೇವರ ಮಕ್ಕಳು ಆಲೂರಲ್ಲಿ ಇಹನೋಟದ ನಂಬ್ಯಣ್ಣದೇವರ
ಮಕ್ಕಳು ಸಿದ್ಧವೀರೈಯ್ಯನ ಕುಮಾರ ಚೆನ್ನವೀರದೇವರಿಗೆ ಬರದುಕೊಟ್ಟ ನನ್ನಯ್ಯಗಳ ಚಾರಿತ್ರ
ಮಹಿಶೂರ ಅಠವಣೆ ಚಾವಡಿಯ ಕರಣಿಕ ದೇವರಸೈನವರ ಮಗ ಮದುವಣೈಯನು
ಧರ್ಮಪರೀಕ್ಷೆಯ ಬರೆದುಕೊಟ್ಟುಯಿರುವಂತಾ ಪುಸ್ತಕವನೋದಿದವರ್ಗೆ ಮನಮುಟ್ಟಿ ಕೇಳಿದವರ್ಗೆ, ವೋದಿಸಿ ಕೇಳಿದವರ್ಗೆ
ಸದ್ಧರ್ಮಾಭಿವೃದ್ಧಿರಸ್ತು. ( ಕ.ಹ.ವ.ಸೂ.
ಸಂ.2 ಕ್ರ.ಸಂ.7೦9)
ಮಹಾರಾಜ
ಶ್ರೀ ಬಷಿರು ಬಸವರಾಜೇ ಅರಶಿನವರಿಗೆ ಮಹಿಶೂರ ಯಾದವ ಕುಲದ ವೈದ್ಯ ವೆಂಕಟದಾಸೈನವರ ಮಗ ವೆಂಕಟ ರಮಣನು
ಬರೆದ ರಾಜಶೇಖರ ವಿಳಾಸಕ್ಕೆ ಶುಭಮಸ್ತು ಶೋಭನಮಸ್ತು ಆಯುರಾರೋಗ್ಯ ಆಯಿಶ್ವರ್ಯ್ಯಮಸ್ತು. (ಕ.ಸಾ.ಪ. ಕ್ರ.ಸಂ.ಕೆ.121)
... ಶ್ರೀ
ಮದ್ರಾಜಧಿರಾಜರಾದ ಬೆಟ್ಟದ ಚಾಮರಸವೊಡೆಯರವರ ಕುಮಾರಕರಾದ ಕಂಠೀರವ ನರಸರಾಜೇಂದ್ರಂಗೆ ಆಯುರಾರೋಗ್ಯ ಆಯಿಶ್ವರ‍್ಯಾಭಿವೃದ್ದಿಯಾಗಲಿಯೆಂದು
ಪುತ್ರ ಪೌತ್ರ ಪರಂಪರೆಯಾಗಲಿಯೆಂದು ಪೊಲುಕಂದಿ ಚಿಟ್ಟಿಯನ ಕುಮಾರನು ಭಾರತಿ ಅಯಣ್ಣನು ಬರೆದು ಕೊಟ್ಟಂಥಾ
ಲೀಲಾವತಿಯ ಪುಸ್ತಕ. ... ( ಕ.ಹ.ವ.ಸೂ.
ಸಂ.3 ಕ್ರ.ಸಂ.15೦7)
ಸುತ್ತೂರ ಸಿದ್ಧಕ್ಕನಿಗೆ ಸಮಸ್ತಕಂಟಕೆ ನಿವ್ರಿತ್ತಿರಸ್ತು
ರಂಗಧಾಮ ಕ್ರುಪಾನಿತ್ಯಾಸ್ತು ಗಜೇಂದ್ರ ಮೋಕ್ಷ ( ಕ.ಹ.ವ.ಸೂ. ಸಂ.5 ಕ್ರ.ಸಂ.59೦)
“ಮಹಿಶೂರನಗರದ ಲಕ್ಷ್ಮೀರಮಣಸ್ವಾಮಿಯವರ ದೇವಸ್ಥಾನದ ಸ್ನಾನಿಕ ಲಕ್ಷ್ಮಪ್ಪನವರ ಮಗ ಕೃಷ್ಣಯ್ಯನು
ತಾನು ತನಗೆ ಬರಕೊಂಡ ವಾಕ್ಯ ಭಾಗವತದ ಪುಸ್ತಕ ೧ ಕ್ಕ ಸ್ಕಂಧ ೪ ಬರೆದುಸಮಾಪ್ತ”(೧೧೩೫-ಭಾಗವತ[೧-೪,ಸ್ಕಂದ).
“ಇದನ್ನು ಬರದವರು ಸರಸ್ವತಿಬಾಯಿ ತಂದೆ ಸಣ್ಣವೀರಪ್ಪ ಕುದರಿಮೋತಿ ಯಿವರು!ಇದನ್ನೊದುವರು! ಇದರಲ್ಲಿ
ಏನಾದರೂ ಹಸ್ತದೋಷಗಳಿದ್ದರೆ ತಮ್ಮ ಪುತ್ರಿಯೆಂದು ಭಾವಿಸಿತಿದ್ದಿಕೊಂಡು ಓದಬೇಕೆಂದು ಬಿನ್ನಹಗಳು ಸಮಸ್ತ
ಗುರುವರ್ಯರ ಸಾಧುಸತ್ಪುರಷರಸದ್ಭಕ್ತರ ಪಾದಕಮಲಂಗಳಿಗೆ ನನ್ನ ಅನೇಕ ದೀರ್ಘದಂಡ ನಮಸ್ಕಾರಗಳು (ಶ್ರೀಗುರು
ಚಿದಾನಂದವಧೂತರ ಕೃಪೆಯಿಂದ ಗ್ರಂಥವು ಸಮಾಪ್ತವಾದುದು'' (೧೮೯-ಚಿದಾನಂದವಧೂತ
ಚಾರಿತ್ರ).
ಮೇಲಿನ ಹಸ್ತಪ್ರತಿ ಪ್ರಶಸ್ತಿಯಲ್ಲಿನ ಕ್ಳಿಷ್ಣಯ್ಯನು ಮಹಿಶೂರನಗರದ
ಲಕ್ಷ್ಮೀರಮಣಸ್ವಾಮಿಯ ದೇವಸ್ಥಾನದ ಸ್ಥಾನಿಕ(ಅರ್ಚಕ)ನಾಗಿದ್ದನೆಂದು ತಿಳಿಯುತ್ತದೆ. ಮೇಲಿನ ಹಸ್ತಪ್ರತಿಪ್ರಶಸ್ತಿಗಳ
ಪ್ರತಿಕಾರರು ಪುರುಷರಾದರೆ ಕೊನೆಯ ಪ್ರಶಸ್ತಿಯಲ್ಲಿ ಸ್ತ್ರೀಯೊಬ್ಬಳು ಪ್ರತಿಮಾಡಿರುವುದು ವಿಶೇಷವಾಗಿದೆ.
ತಪ್ಪಿದ್ದರೆ ತಿದ್ದಿಕೊಂಡು ಓದಬೇಕು ಎಂಬ ಅವಳ ಬಿನ್ನಹದಲ್ಲಿ ಲಿಪಿಕಾರ್ತಿಯ ವಿಧೇಯತೆ, ಹಿರಿಯರಲ್ಲಿನ
ಅವಳ ಗೌರವಭಾವನೆ ಮತ್ತು ಪ್ರಾಮಾಣಿಕತೆಗಳು ಎದ್ದುಕಾಣುತ್ತವೆ. ಕವಿಗಳು ಕೃತಿಗಳನ್ನು ರಚಿಸಿ ನಾಡಿನ ಜ್ಞಾನದೀಪವನ್ನು
ಹೊತ್ತಿಸಿದರೆ, ಅವುಗಳನ್ನು ತಮ್ಮ ಬರವಣಿಗೆಯ ಮೂಲಕ ಶತಮಾನಗಳುದ್ದಕ್ಕೂ ಸಂರಕ್ಷಿಸಿಕೊಂಡು ಬಂದಿರುವ
ಹಸ್ತಪ್ರತಿ ಲಿಪಿಕಾರರನ್ನು ಕನ್ನಡ ಸಾಹಿತ್ಯ ಚರಿತ್ರೆಯ ಅಧ್ಯಯನಕಾರರು ಸ್ಮರಿಸಬೇಕಾಗಿದೆ..
“ಆಳಿದ ಮಹಾಸ್ವಾಮಿಯವರ ಅಪ್ಪಣೆ ಮೇರೆಗೆ ಚಂದ್ರವಿಲಾರಾಯಸದ
ಭಾಗವತ ಕೃಷ್ಣಪ್ಪನು ಬರದು ವಪ್ಪಿಸಿದ” (೧೭೯೨-(ಶ್ರೀಕೃಷ್ಣಕಥಾಸಾರಸಂಗ್ರಹ ಭಾಗ
೨).
“ಸುಬೇದಾರ್ರು ವೀರಣ್ಣನವರು ರಾಯಸ್ತ ವೆಂಕಟರಮಣಯ್ಯನ ಕೈಲಿ ಬರಸಿದ ಅಂಬಿಕಾವಿಜಯಕ್ಕೆ ನಿತ್ಯ
ಜಯ ಮಂಗಳ ಮಹಾಶ್ರೀ'' (೨೫೫೧-ಅಂಬಿಕಾವಿಜಯ)."”
“ಅರಮನೆ ಲೇಖರಿ ಕಾನಕಾನಹಳ್ಳಿ ದಾಸಪ್ಪನ ಬರಹಾ'' (೧೨೨-ಆದಿತ್ಯಪುರಾಣ).”
“ರಾಯಬೇಲೂರಸ್ಥಳದ ಶಾನಭೋಗಿ ನರಸಯ್ಯ ಬರದ ಜೋರಕಥೆ'**
“ಮಹಿಶೂರ ಸಂಸ್ಥಾನದ ಕೃಷ್ಣರಾಜ ವಡೆರೈಯ್ಯನವರ ಬೊಕ್ಕಸದ ಗುರಿಕಾರ್ರುಮಾದೈಯ್ಯನವರ ವಿವೇಕಚಿಂತಾಮಣಿ
ಪುಸ್ತಕ (೮೭-ವಿವೇಕಚಿಂತಾಮಣಿ).`
ಈ ಮೇಲ್ಕಂಡ ಪುಷ್ಪಿಕೆಗಳಲ್ಲಿಯ ಪ್ರತಿಕಾರರಾದ ಸನ್ನಿದಾನದ
ರಾಯಸದ ಸುಬ್ಬರಾಯ, ರಾಯಸದ ಭಾಗವತ ಕೃಷ್ಣಪ್ಪ, ರಾಯಸ್ತವೆಂಕಟರಮಣಯ್ಯ, ಅರಮನೆ ಲೇಖರಿ ದಾಸಪ್ಪ' ` ಶ್ಯಾನಭೋಗಿ
ನರಸಯ್ಯ ಇವರೆಲ್ಲ ರಾಜರ ಆಡಳಿತದಲ್ಲಿ ಅಧಿಕಾರವನ್ನು ಹೊಂದಿದವರು ಎಂಬುದು ಸ್ಪಷ್ಟವಾಗುತ್ತದೆ.
ಆದರೆ ಈ ವ್ಯಕ್ತಿಗಳು ಯಾವ ರಾಜರ ಆಡಳಿತದಲ್ಲಿ ಅಧಿಕಾರಿಯಾಗಿದ್ದರೆಂದು ಸ್ಪಷ್ಟವಾಗುವುದಿಲ್ಲ. ಆದರೆ
ಕೊನೆಯ ಪ್ರಶಸ್ತಿಯಲ್ಲಿ ಕಂಡುಬರುವ ಬೊಕ್ಕಸದ ಗುರಿಕಾರ ಮಾದಯ್ಯರು ಮೈಸೂರ ಸಂಸ್ಥಾನದ ಕೃಷ್ಣರಾಜ ಒಡೆಯರ ಅಧಿಕಾರಿ ಎಂಬುದು ಸ್ಪಷ್ಟವಾಗುತ್ತದೆ.
ಈ ರೀತಿಯ ಸ್ಥಳಿಯ ಅಧಿಕಾರಿಗಳ ವಿವರ ಹಸ್ತಪ್ರತಿಗಳ
ಪುಷ್ಪಿಕೆಗಳನ್ನು ಹೊರತು ಪಡಿಸಿ ಬೇರೇ ಎಲ್ಲಿಯೂ ದೊರೆಯುವುದಿಲ್ಲ.
ಆಡಳಿತದ ವಿವಿಧ ಸ್ಥಾನಗಳಲ್ಲಿ ಅಧಿಕಾರವನ್ನು
ಹೊಂದಿದವರ ಪರಿವಾರದವರೂ ಸಹ ಅರಸು ಮನೆತನದವರ, ಜನಸಾಮಾನ್ಯರ ಹಸ್ತಪ್ರತಿಗಳ ಆಗತ್ಯವನ್ನು ಪೂರೈಸಿರುವಂತಹ
ಪ್ರತಿಕಾರರರ ವಿವರಗಳು ಕಂಡು ಬರುತ್ತವೆ. ನಿದರ್ಶನಕ್ಕೆ :
“ಶ್ರೀಮದಜೈನದ್ವಿಜಾಂಬರ ಭಾಸ್ಕರ ಶೀಕರಣಿಕ ಮಗ್ಗೆಯ ದೇವಣ್ಣಗಳ ಆತ್ಮಜಾತ ಅನತಪ್ಪಗಳ ತನೂದ್ಭವ
ವಂಬಂಣನ ಬರಹ'' (೪೭೯-ರತ್ನಕರಂಡಕ ಕನ್ನಡ ವ್ಯಾಖ್ಯಾನ).
“ಮೈಸೂರ ದೊರೆಗಳ ವಂಶಾವಳಿ ಬರೆಯುವದಕ್ಕೆ ನಿರ್ವಿಘ್ನಮಸ್ತು ಅರಮನೆ ರಾಯಸಕಾಳ್ಳೆಯ್ಯನ ಮಗ ರಾಮಯ್ಯನ
ಪುಸ್ತಕ'' (೧೩೫೨-ಮೈಸೂರ ದೊರೆಗಳ ವಂಶಾವಳಿ, ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕಸೂಚಿ.
ಸಂಪುಟ, ೧. ಮೈಸೂರು ವಿಶ್ವವಿದ್ಯಾಲಯ, ಮೈಸೂರು.)
“ನಾಗನೂರ ಕರಣಿಕ ಬಸವಲಿಂಗಯ್ಯನ ಪುತ್ರ ಶಿವಲಿಂಗಯ್ಯ ಬರದ ಬರಸಿದವ ದಳವಾಯಿ
ಶಿವಪ್ಪ” (೧೩೧೬/೧-ಪ್ರಭುಲಿಂಗಲೀಲೆ, ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕಸೂಚಿ.
ಸಂಪುಟ, ೧. ಮೈಸೂರು ವಿಶ್ವವಿದ್ಯಾಲಯ, ಮೈಸೂರು)
“ಕಾಕೊಳುಸ್ತಳದ ಕರಣಿಕ ಹನುಮಂತರಾಯನ ಮಗ ಗಿರಿಯಪ್ಪನೆಂಬ ಬಾಲಕಂ ಯೀ
ಭಾಗವತ ಪುಸ್ತಕವಂನು ಬರೆದನು” (೨೯೦-ಭಾಗವತ ಅದೇ, ಸಂ.೨)
“ಶ್ರಾನಭಾಗ ಶ್ಕಾಮಂಣಪ್ಪನವರ ಕೊಮಾರ ನಾರಣಪ್ಪನವರ ಮಗ ಶ್ಕಾಮಂಣನು''
(೩೧೦೦-ಸಿದ್ಧಲಿಂಗೇಶ್ವರಕಾವ್ಯ).
“'ಶ್ರೀಮದ್ರಾಜಾಧಿರಾಜ।. ರಾಜಪರಮೇಶ್ವರುಲಲಲೀಮಹಿಶೂರ. ನಗರದ ಆಳಿದ
ಮಹಾಸ್ವಾಮಿ ಕೃಷ್ಣರಾಜ ವಡೆಯವರ ಆಗ್ಲಾಧಾರಕನಾದ
ವಳಬಾಗಿಲ ಗುರಿಕಾರ ದೇವೈಯ್ಯನವರ ಪುತ್ರನಾದ ಮಾದೈಯನ ಸ್ವಹಸ್ತ ಬರಹಾ''
(೧೮೮-ಆತ್ಮಲಿಂಗಪ್ರಣವಸಂಯೋಗಸ್ಥದತ್ರಿವಧಿ).
“ಮಹಿಶೂರ ನಗರದ ಅಠವಣೆ ಚಾವಡಿಯ ಕರಣಿಕ ದೇವರಸೈಯನವರ ಮಗಪದುಮಂಣೈಯನು ಧರ್ಮಪರೀಕ್ಷೆಯ ಬರೆದುಕೊಟ್ಟ''
(೭೧೦-ಧರ್ಮಪರೀಕ್ಷೆ, ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕಸೂಚಿ. ಸಂಪುಟ,
೩. ಮೈಸೂರು ವಿಶ್ವವಿದ್ಯಾಲಯ, ಮೈಸೂರು.)
“ಚಿಕ್ಕದೇವರಾಯಶ್ವಾಮಿಯವರ ಕೊಮಾರತಿ ಆದ ಚಿಕ್ಕಅಮೃತಾಜಮ್ಮಣಿಯವರಪಾದದ್ವಯಕ್ಕೆ
ಪಾತ್ರನಾದ ಬೊಕ್ಕಸ ಬಾಳೈಯನವರ ಮಕ್ಕಳು ಚನ್ನರಾಜಯ್ಕನವರ ಮಗಮರೈಯನು ಬರದು ವಪ್ಪಿಸಿದ'' (೩೩೨-ಕನ್ನಡ ಕಾದಂಬರಿ,ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕಸೂಜಿ, ಸಂಪುಟ, ೬. ಮೈಸೂರು ವಿಶ್ವವಿದ್ಯಾಲಯ,
ಮೈಸೂರು.)
“ಮಹಿಶೂರ ನಗರದ ಉಗ್ರಾಣದ ಕರಣಿಕರು ದೊಡ್ಡಯ್ಯನವರ ಮೊಮ್ಮಗ ಹುಚ್ಚಯ್ಕನು
ಸೂರಿಪಂಡಿತರ ದ್ವಿತಿಯ ಪುತ್ರ ವಿಜಯಣ್ಣಪಂಡಿತರಿಗೆ
ಬರೆದುಕೊಟ್ಟ'' (೧೩೬-ಜೀವಂಧರಚರಿತೆ, ಅದೇ. ಸಂಪುಟ, ೫.)
“ಯಿಂಮಡಿರಾಮರಾಜನಾಯಕರಿಗೆ ತಳಕಾಡ ದೇವರಸ ಉಪಾದ್ಯರು ಬರೆದ ಲೀಲಾವತಿಗಂ
ಮಂಗಲ ಮಹಾಪ್ರೀ” (೧೫೦೫-ಲೀಲಾವತಿ, ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕಸೂಚಿ. ಸಂಪುಟ,
೩. ಮೈಸೂರು ವಿಶ್ವವಿದ್ಯಾಲಯ, ಮೈಸೂರು.)
“'ಶ್ರೀಮದ್ರಾಜಧಿರಾಜರಾದ ಬೆಟ್ಟದ ಚಾಮರಸು ವೊಡೆಯರವರ ಕುಮಾರರಾದ ಕಂಠೀರವ ನರಸ ರಾಜೇಂದ್ರನಿಗೆ
ಆಯುರಾರೋಗ್ಯ ಅಯಿಶ್ವರಾಭಿವೃದ್ಧಿಯಾಗಲಿಯೆಂದು ಪುತ್ರ ಪೌತ್ರ ಪರಂಪರೆ ಯಾಗಲಿಯೆಂದು ಪೊಲುಕಂಡಿ ಬೆಟ್ಟಯ್ಕನ
ಕುಮಾರನು ಭಾರತಿ ಅಯಣ್ಣನು ಬರೆದುಕೊಟ್ಟಂಥಾ ಲೀಲಾವತಿ ಪುಸ್ತಕ” (೧೫೦೭-ಲೀಲಾವತಿ)."” ಕನ್ನಡ ಹಸ್ತಪ್ರತಿಗಳ
ವರ್ಣನಾತ್ಮಕಸೂಚಿ. ಸಂಪುಟ, ೩. ಮೈಸೂರು ವಿಶ್ವವಿದ್ಯಾಲಯ, ಮೈಸೂರು.
“ದೊಡ್ಡೈಯನವರ ಮಗನು ಶಾಂತೈಯನು ಯಳವಂದೂರ
ಮುದ್ದೈಯ್ಯ ಪಂಡಿತರ ಮಗಳು ಅಕ್ಕಂಮನವರಿಗೆ ಬರೆದುಕೊಟ್ಟಂಥಾ 'ಶ್ರೀಚಂದ್ರಪ್ರಭಚರಿತಕ್ಕೆ ಭದ್ರಂ ಶುಭಂಮಂಗಲಂ” (೬-ಚಂದ್ರನಾಥಚರಿತೆ).”
“ಮಳಲಿ ಶಾಂತೈಯನವರ ಕುಮಾರರಾದ ಜಿನಚಂದ್ರೈಯನವರಿಗೆ ಮಹಿಶೂರದೇವಸ್ಥಾನದ ರಾತ್ರಿ ಅರ್ಚಕ ನಾಗರಾಜೈಯನು
ಜೀವಂಧರನ ಷಟ್ಟದಿಯನ್ನು ಬರದುಕೊಟ್ಟ'” (೧೩೪-ಜೀವಂಧರಚರಿತ್ರೆ).”
ಹಸ್ತಪ್ರತಿಕಾರರು ಪ್ರತೀಕರಣ ಕಾರ್ಯವನ್ನು ಲೋಕೋಪಕಾರಾರ್ಥವಾಗಿ,
ಭಕ್ತಿ, ಸಮಯ ನಿಷ್ಠೆಗಾಗಿ ಸ್ವಂತ ಜ್ಞಾನ ಪ್ರಾಪ್ತಿಗಾಗಿ, ಪುಣ್ಯ ನಿಮಿತ್ತ, ಜ್ಞಾನಾರ್ಜನೆಗಾಗಿ,
ಜ್ಞಾನ ರಕ್ಷಣೆಗಾಗಿ, ಮನೋಭಿಷ್ಟ ಕಾರ್ಯ ಸಿದ್ಧಿಗಾಗಿ, ಸಕಲೈಶ್ವರ‍್ಯ ಜೀವನ ಸೌಖ್ಯಕ್ಕಾಗಿ ಅನಿಷ್ಟ ನಿವಾರಣೆಗಾಗಿ, ಕೈಗೊಂಡಿದ್ದು ಈ ಪರಿಸರದ ಹಸ್ತಪ್ರತಿಗಳ
ವೈವಿಧ್ಯತೆಯು ಮೇಲಿನ ನಿದರ್ಶನಗಳಿಂದ ತಿಳಿದು ಬರುತ್ತದೆ.
ಶಿವಮೊಗ್ಗ
ಪರಿಸರದ ಹಸ್ತಪ್ರತಿಗಳ ವೈವಿಧ್ಯತೆ ಈ ಕೆಳಕಂಡಂತಿದೆ.
ಮಂಗಳಾ
ಮಹಾಶ್ರೀ... ಹುಣಸೂರ ಸುರನ ಕಂನನಾಯಕನ ಮಗ ಹುಚ್ಚಗೆ ಧಿಗಟೆಕೊಪ್ಪದ ಪುಂಡಿ ಸಂಜಿವೈಯನ ಮಗ ಬರಮೈಯನು
ಬರೆಕೊಟ್ಟ ಪ್ರತಿಗೆ ಆಚಂದ್ರಾರ್ಕ ಮಸ್ತು. ಐರಾವತ
ಕೃತಿಯ ಪ್ರತಿಕಾರನಾದ ಈತನು ` ಅರ್ರಿಯದಲಿದಮ ಬರದುಯಿದ್ದನೆ!ಯಿದರಲು ತಪ್ಪು ಅರೆ ಅಕ್ಷರಯಿದಗು!ಬಲತ್ತಂ
ಗುರು ಹಿರಿಯರುತ್ರಿಧಿಮೆರಸುವುದು ಬೈಯಲಾಗದು ‘ ಎಂದು ವಿನಮ್ರತೆಯನ್ನು ವ್ಯಕ್ತಪಡಿಸಿದ್ದಾನೆ.
ಬೈದೂರ ವಾಸ್ತೈವ್ಯನ ಮಗ ಕ್ರುಷ್ಣನೂ ಹುಲಿಮನೆ ಶೇಷಪೈಯನವರ
ಮಗ ವೆಂಕಪ್ಪಯ್ಯನವರ್ರಿಗೆ ಬರಕೊಟ್ಟ ಕಾಶೀಖಾಂಡದ ಪುಸ್ತಕಕ್ಕೆ ಅಚಂದ್ರಾರ್ಕಮಸ್ತು ( ಹಸ್ತಪ್ರತಿ ಸೂಚಿ: ಕನ್ನಡ: ಪು15)
ಗುತ್ತಿಮನೆ ಕುಂಬಾರ ಮೂಲೆಮನೆ ಭದ್ರಂಣಗೆ ಪ್ರೀತಿಯಿಂದ ಬರದ್ದು
ಗಿರಿಜೆಸಂವಾದ ಪುಸ್ತಕವ ಬರೆದಾತ ಕೊಲ್ಲೂರ ಭಗವತ ತಿಂಮಂಣನ ಮಗ ಮರಿಯಪ್ಪನು ಬರದ ಪುಸ್ತಕಕ್ಕೆ ಶುಭಮಸ್ತು
(ಹಸ್ತಪ್ರತಿ ಸಂಖ್ಯೆ:216,
ಪು.29)
ʻಸರ್ವಜಿತು ಸಂ.ಆಶಾಡ ಸು5ಉ ಸಉಮ್ಮವಾರದಲ್ಲು
ತಾಸು 3ಕ್ಕೆ ಬರದು ಮುಗಿಸಿದಾತ ಗುಣವಂತ್ತಿಶ್ವರದ ವೆಂಕಟೈಸೆನಭೊವನ ಹಾಗೂ ಯೀ ಪುಸ್ತಕವಂನು! ಯಿ ಪುಸ್ತಕ
ಬಿಳದಿ ಪಡಿಯಾರ| ರಾಮಕ್ರುಷ್ಣಯ್ಯನ ಪುಸ್ತಕಕ್ಕೆ ನಿರ್ವಿಘ್ನಮಸ್ತು (ಜೈಮಿನಿ ಭಾರತ ಹಸ್ತಪ್ರತಿ ಹಸ್ತಪ್ರತಿಸೂಚಿ:
ಕನ್ನಡ 184, ಪು.39)
ಶಾಲಿವಾಹನ ಶಕವರುಷ 1೦೦೦ ಯೆಳುನೂರ ಅ 1753 ರೆನೆ ವರ್ತಮಾನಕ್ಕೆ
ಸಂದ ಸಲುವ ಸರ್ವದಾರಿ ಸಂವತ್ಸರದ ಮಾರ್ಗಿಶ್ವರ ಬ 6ಲು ಶನಿವಾರ ತಾಸು 3 ಕ್ಕೆ ಬರದು ಮುಗಿಸಿದ ಜಿನದತ್ತ
ರಾಯನ ಚರಿತೆಗೆ ಶುಭಮಸ್ತು! ಬರದ ತರಳ ಯತಾಪ್ರತಿ ಬರದು ಯಿದ್ದಾನೆ ಯತಾಪ್ರತಿ ಮಾನವಾಗಿ ಬರದು ಯಿದ್ದೆನೆ,
ಬರದವ ಬುರುಗಮನೆ ಪರಮ (ಹಸ್ತಪ್ರತಿ
ಸಂಖ್ಯೆ:276, ಪು36)
ಚಿತ್ರಭಾನು ಸಂವತ್ಸರದ ಚೈತ್ರ ಶು 1 ಗುರುವಾರದಲೂ ಅರಗದ
ದಣಾಯಕ ವೊಡೆಯರ ಮೊಮ್ಮಕ್ಕಳು ಅಳಿಯ ತಿಮ್ಮಣ್ಣ ವೊಡೆಯರಿಗೆ ಅರಗದ ಚಿನ್ನವರದ ಲಿಂಗಪ್ಪಗಳ ಮಗ ಭಾನಯ್ಯನೂ
ಬರದು ಒಪ್ಪಿಸಿದ ಅಗ್ಗಳನ ಪುಸ್ತಕಕ್ಕೆ ಶುಭಮಸ್ತು ಮಂಗಳಮಹಾಶ್ರಿ ( ಚಂದ್ರಪ್ರಭ ಪುರಾಣ, ಕನ್ನಡ ಹಸ್ತಪ್ರತಿಗಳ
ವರ್ಣನಾತ್ಮಕ ಸೂಚಿ, ಪು.44, ಶ್ರವಣ ಬೆಳಗೊಳ)
ಚಂನಗಿರಿ ತಾಲ್ಲೋಕ್ ಹೊದಿಗ್ಗೆರೆ ಮಾಗಣಿ ವಡ್ಡಹಾಳಲ್ಲಿರುವ
ಭೌಗೀರೆ ಮಲ್ಲಪ್ಪನವರ ಗರ್ಭೋದ್ಭವನಾದ ಬಾಲಚಂದ್ರ ಸ್ವರೂಪನಾದ ಕರೆವೃಷಭಪ್ಪನ ಪುಸ್ತಕವು (ಅಷ್ಟಾವರ್ಣದ ವಿವರ, ವೀರಶೈವ ಹಸ್ತಪ್ರತಿ
ಪುಷ್ಪಿಕೆಗಳು.ಪು.45)
ಶ್ರೀಮಜ್ಜೀಯಾಭ್ಯುದಯ ಶಾಲಿವಾಹನ ಸಕ ವರುಷ ಮನ್ಮಥ ಸಂವತ್ಸರದ
ವೈಶಾಖ ಬ 1ಂ ಚಂದ್ರವಾರಕ್ಕೆ ಅಬ್ಬಲೂರು ಚರಿತ್ರೆ ಸಮಾಪ್ತಂ. ( ಅಬ್ಬಲೂರು ಚರಿತೆ, ವೀರಶೈವ ಹಸ್ತಪ್ರತಿ
ಪುಷ್ಪಿಕೆಗಳು, ಪು.33)
ಸಿದ್ಧಾರ್ಥಿ ಸಂವತ್ಸರದ ಮಾಘ ಶು 1೦ ಲೂ ಶ್ರೀ ಮತ್ ಆಲದಹಳ್ಳಿ
ತಿಪ್ಪಣ್ಣನ ಮಗ ಗುರುಬಸವೈಗೆ ಓದಿಸುವ ಶೇಷಪ್ಪನು ಬರೆದು ಕೊಟ್ಟ ಕೋಡಗದ ಮಾರಯ್ಯನ ಚರಿತೆ. ಈ ಹಸ್ತಪ್ರತಿಯು
ಭದ್ರಾವತಿ ತಾಲೋಕ್ ಮಂಗೋಚೆಯ ಮಠದ ಕರಿಸಿದ್ದಯ್ಯನವರ ಸಂಗ್ರಹದಲ್ಲಿದ್ದ ಹಸ್ತಪ್ರತಿಯಿಂದ ದಿನಂಕ:
23-1-1956 ರಂದು ಶ್ರಂತಿ ಬಿ.ಕೆ.ಮಣಿಯವರು ಪ್ರತಿಮಾಡಿದ್ದಾರೆ, ( ಕೋಡಗದ ಮಾರಯ್ಯನ ಚರಿತೆ, ವೀರಶೈವ ಹಸ್ತಪ್ರತಿ
ಪುಷ್ಪಿಕೆಗಳು,ಪು.134)
ಪರಾಭವ ಸಂವತ್ಸರದ ಭಾದ್ರಪದ ಶು.13 ಗುರುವಾರ ಸಾಯಂಕಾಲಕ್ಕೆ
ಕರಿಯಭಂಟನ ಪುಸ್ತಕ ಸಮಾಪ್ತಯಿದುಇ ಬರದವ ಕುಂಮಶಿಯಲ್ಲಿರುವ ಸಂಸೆ ಮರಿಯಣಂನ ಮೊಂಮಗನಾದ ರಾಚೈಯ್ಯ (ಕರಿಯಬಂಟನಕಥೆ, ವೀರಶೈವ ಹಸ್ತಪ್ರತಿ ಪುಷ್ಪಿಕೆಗಳು,
ಪು.1೦6)
ಯೀ ಪುಸ್ತಕ
ಬರೆದಾತ ಕೆಳದಿ ಸೀಮೆ ಬೆಳೂರ ತಿರ್ಮಲೈಯ್ಯನ ಲಿಂಗಣ್ಣನಮಗ ತಿಮ್ಮಯ್ಯಾ---- ವಿಜಯ ಸಂವತ್ಸರ ಮಾರ್ಗಿಶಿರ
ಶುದ್ಧ 3ಲ್ಲೂ ಬೆಳೂರ ತಿರ್ಮಲೈಯನ ಲಿಂಗಪ್ಪನ ಮಗ ತಿಮ್ಮಯ್ಯನು ಬರೆದ ಪುಸ್ತಕವ ( ಉತ್ತರ ರಾಮಾಯಣ, ಹಸ್ತಪ್ರತಿ ಸೂಚಿ:
ಸಂಖ್ಯೆ: 258, ಪು.9)
ಈ ಪುಸ್ತಕ ಬರದಾತ ಆರಗದ ಪರಮೇಶ್ವರಭಟ್ಟರ ಮಗ ವೆಂಕೈಯನೂ
ತೊಡು ಊರಸೀಮೆ ಗೋಡೆಕ್ಯೋದ ಭದ್ರೈಯನವರ ಮಗ ವೀರಭದ್ರೈಯಗೆ ಬರದು ಕೊಟ್ಟ ಭೋ ಕೆಂಭಾವಿ ಭೋಗಂಣನ ಚರಿತ್ರೆ
ಪುಸ್ತುಗಾಕ್ಕೆ ಆಚಂದ್ರಾರ್ಕಮಸ್ತೂ ( ಕನ್ನಡ ಹಸ್ತಪ್ರತಿಗಳ ವರ್ಣಾನಾತ್ಮಕ ಸೂಚಿ. ಸಂ.1. ಪು.89)
ವೃಷಭನಾಮ ಸಂವತ್ಸರದ ಆಷಢ ಬಹುಳ 1೦ ದಶಮೆಯ ಗುರುವಾರದಲ್ಲು
ಶುಭಮುಹೂರ್ತದಲ್ಲೂ ಸೋದೆಯ ಮಟದ ಬಯಲದೇವರವರಿಗೆ ತಂಮ ಕರಕಮಲದಲ್ಲಿ ಉದ್ಭವಿಸಿದಂಥಾ ನಂದ್ಯಾಲದ ಸಿದ್ಧಲಿಂಗ
ದೇವರು ಭೈರವೇಶ್ವರನ ಕಾವ್ಯ ಬರೆದು ಕೊಟ್ಟರು (ಮೈ.ವಿ.ವಿ. ಕ.ಹ.ಪ್ರ.ಸೂ.ಸಂ.7. ಪು.252))
ಶಾಲಿವಾಹನ
ಶಕೆ 1791 ನೆ ಪ್ರತನಾಮಕ್ಕೆ ಸಲ್ಲುವ ಶುಕ್ಲಸಂವತ್ಸರದ ಭಾದ್ರಪದ ಕೃಷ್ಣಪಕ್ಷ 13ಲ್ಲು ಮಂಗಳವಾರದಲ್ಲೂ
ತಾಸು 5 ಕ್ಕೆ ಮಲೆಬೆಂನೂರಲ್ಲೂ ಮುಗದ್ದು ಚಂದ್ರಹಾಸನ ಕಥಾಸಂಗ್ರಹ
ಒಂದು ಪ್ರದೇಶದ ಧಾರ್ಮಿಕ ಚಾರಿತ್ರಿಕ ಹಾಗೂ ಭೌಗೊಳಿಕ
ತಿಳಿವಳಿಕೆ ವಿಸ್ತರಿಸಿಕೊಳ್ಳಲು ಈ ರೀತಿಯ ಹಸ್ತಪ್ರತಿ ಪುಷ್ಪಿಕೆಗಳ ಉಲ್ಲೇಖಗಳು ನೆರವನ್ನು ನೀಡುತ್ತವೆ.
ಆದರೆ ಈ ತೆರನಾದ ಹಸ್ತಪ್ರತಿಗಳು ಉಪೇಕ್ಷೆಗೆ, ವಿದ್ವಾಂಸರ ಅನಾದಾರಣೆಗೆ ಈಡಾಗಿವೆ. ಕನ್ನಡ ನಾಡಿನಾದ್ಯಂತ
ಹಾಗೂ ಹೊರಗಡೆ ಅಲ್ಲಲ್ಲಿ ಸಂಗ್ರಹಿಸಲ್ಪಟ್ಟಿದ್ದರೂ ಚದುರಿದಂತಿರುವ ಸಮಗ್ರ ಹಸ್ತಪ್ರತಿಗಳ `ಸಾಮಾನ್ಯ
ಸೂಚೀಕರಣವೇ, ವ್ಯವಸ್ಥಿತವಾಗಿ ಸಿದ್ಧಪಡಿಸಲು ಇನ್ನು ಸಾಧ್ಯವಾಗದೇ ಇರುವಾಗ ಸಮಗ್ರ ಹಸ್ತಪ್ರತಿಗಳ ಪುಷ್ಪಿಕೆಗಳಸೂಚಿ
ಸಿದ್ಧಪಡಿಸುವುದು ದೂರದ ಮಾತು. ಅಂತಹದರಲ್ಲಿ ನಾಡಿನಾದ್ಯಂತ ಲಭ್ಯ ಇರುವ ಹಸ್ತಪ್ರತಿಗಳ ಪುಷ್ಟಿಕೆಗಳನ್ನು
ವ್ಯವಸ್ಥಿತವಾಗಿ ಸಿದ್ಧಪಡಿಸುವಂತಹ ಸಾಂಸ್ಥಿಕ ಮಟ್ಟದ ಪ್ರಯತ್ನ ಸಾಧ್ಯವೇ ಎಂಬ ಪ್ರಶ್ನೆ ಇಂದು ಎದುರಾಗಿದೆ.
ಇನ್ನು ಜಿಲ್ಲಾವಾರು ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿಕರಣದ ಬಗೆಗೆ ಮಾತನಾಡುವಂತಿಲ್ಲ. ಹಸ್ತಪ್ರತಿಗಳ
ಪುಷ್ಟಿಕೆಗಳನ್ನು ಸಿದ್ಧಪಡಿಸುವಲ್ಲಿ ವೈಜ್ಞಾನಿಕ ವಿಧಾನವನ್ನು ಅನುಸರಿಸಬೇಕಾಗಿದೆ. ಪುಷ್ಟಿಕೆಗಳಲ್ಲಿ
ಹಸ್ತಪ್ರತಿ ಹಾಗೂ ಲಿಪಿಕಾರರ ಬಗೆಗಿನ ಸಮಗ್ರ ವಿವರಗಳನ್ನು ತಿಳಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ವಿಭಾಗವು ಹೊರತಂದಿರುವ ಹಸ್ತಪ್ರತಿಗಳ ವರ್ಣನಾತ್ಮಕ
ಸೂಚಿಯ 15 ಸಂಪುಟಗಳನ್ನು ಹೆಸರಿಸಬಹುದು.
ತುಮಕೂರು ಜಿಲ್ಲೆಯ ಪರಿಸರವು ಹಸ್ತಪ್ರತಿ ಸಂಪತ್ತು ವೈವಿಧ್ಯತೆಯಿಂದ
ಕೂಡಿದೆ. ಹಸ್ತಪ್ರತಿಗಳ ಸಂಕಲನ, ಪರಿಷ್ಕರಣ, ಸಂಪಾದನಾ ಚಟುವಟಿಕೆಗೆ ತುಮಕೂರು ಜಿಲ್ಲೆಯ ಪರಿಸರ ಅದ್ವಿತೀಯವಾದ
ಕೊಡುಗೆಯನ್ನು ನೀಡಿದೆ.ಅಭಿನವ ಅಲ್ಲಮರೆಂದು ಖ್ಯಾತರಾದ ತೋಂಟದ ಸಿದ್ಧಲಿಂಗಯತಿಗಳು ತಮ್ಮ ಶಿಷ್ಯ-ಪ್ರಶಿಷ್ಯ
ಪರಂಪರೆಯ ಮೂಲಕ ಗ್ರಂಥಸಂಪಾದನೆಯ ವಿಧಿವಿಧಾನಗಳನ್ನು ಅನ್ವಯಿಸಿ ವಚನಗಳನ್ನು ಸಂಕಲಿಸುವ ವ್ಯಾಖ್ಯಾನಿಸುವಂತಹ
ಸಾಹಿತ್ಯಕ ಚಟುವಟಿಕೆಗಳನ್ನು ಕೈಗೊಂಡಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ವಿಶಿಷ್ಟವಾದುದಾಗಿದೆ.
ಕಲ್ಯಾಣ ಕ್ರಾಂತಿಯ ವಿಪ್ಲವದನಂತರ ಅಳಿದುಳಿದ ವಚನಸಾಹಿತ್ಯದ ಹಸ್ತಪ್ರತಿಗಳನ್ನು ಸಂರಕ್ಷಿಸುವ ಶೋಧಿಸುವ, ಸಂಕಲಿಸುವ, ವ್ಯಾಖ್ಯಾನಿಸುವ ಮೂಲಕ
ಕಾಪಾಡಿಕೊಂಡು ಬರಲು ಜಿಲ್ಲೆಯ ವಚನಕಾರರು, ಸಂಕಲನಕಾರರು ಕಾರಣರಾಗಿದ್ದಾರೆ. ಈ ಕಾರ್ಯ ವಿಧಾನದಲ್ಲಿ ಆಧುನಿಕ ಸಂಶೋಧನೆ ವಿಧಿವಿಧಾನಗಳಾದ
ಆಕರ ಸಂಗ್ರಹ, ಸಂಯೋಜನೆ, ವಿಶ್ಲೇಷಣೆ ಎಂಬ ಮೂರು ಹಂತಗಳನ್ನು ಗುರುತಿಸಬಹುದಾಗಿದೆ. ಹಸ್ತಪ್ರತಿಗಳಲ್ಲಿ
ಅಡಗಿದ್ದ ವಚನಗಳನು ಶೋಧಿಸುವಲ್ಲಿ, ಸಂಗ್ರಹಿಸುವಲ್ಲಿ, ನಾಮಾನುಗುಣವಾಗಿ, ವಿಷಯಾನುಗುಣವಾಗಿ
ಜೋಡಿಸುವಲ್ಲಿ, ತಾತ್ವಿಕ ದೃಷ್ಟಿಯಿಂದ ಸಂಕಲಿಸುವಲ್ಲಿ, ಸಂವಾದ ರೂಪದಲ್ಲಿ ಸಂಯೋಜಿಸಿ ಸಂಪಾದಿಸುವಲ್ಲಿ,
ವಚನಗಳ ಅಂತರಾರ್ಥ ಅರಿತು ವ್ಯಾಖ್ಯಾನಿಸುವಲ್ಲಿ ಆಧುನಿಕ ಗ್ರಂಥ ಸಂಪಾದನೆಯ ಸರ್ವ ಸಾಮಾನ್ಯ ತತ್ವಗಳನ್ನೇ
ಅನುಸರಿಸಿದ್ದಾರೆ. ಪಾಶ್ಚಾತ್ಯರ ಮೂಲಕ ಆಧುನಿಕ ಗ್ರಂಥ
ಸಂಪಾದನೆಯ ತತ್ವಗಳು ನಮ್ಮಲ್ಲಿಗೆ ಪ್ರವೇಶಿಸುವ ಪೂರ್ವದಲ್ಲಿಯೇ
ಆ ತತ್ವಗಳು ತುಮಕೂರು ಜಿಲ್ಲೆಯ ಸಂಕಲನಕಾರರಿಗೆ ತಿಳಿದಿದ್ದವು ಎಂಬುದು ದಾಖಲಾರ್ಹ ಸಂಗತಿಗಳಾಗಿವೆ.
ಈ ವಿಧಿ ವಿಧಾನವು ಸಂಶೋಧನೆಯಲ್ಲಿಯ ಆಕರ ಶೋಧನಿಷ್ಠ ಸಂಶೋಧನಾ ಪರಿಕಲ್ಪನೆಯ ಪ್ರತೀಕವಾಗಿದೆ.
ಆಕರ ವಸ್ತು ವಿನ್ಯಾಸ, ನಿರೂಪಣ ಕ್ರಮ, ನಾಟಕೀಯತೆಗಳಲ್ಲಿ
ತನ್ನದೇ ಆದ ವೈಶಿಷ್ಠ್ಯವನ್ನು ಪಡೆದು ಕನ್ನಡ ಸಾಹಿತ್ಯದಲ್ಲಿ
ವಿಶಿಷ್ಟಸ್ಥಾನ ಗಳಿಸಿರುವ ಶೂನ್ಯ ಸಂಪಾದನೆಗಳು ವಚನ ಸಂಕಲನ ಗ್ರಂಥಗಳಲ್ಲಿಯೇ ಮಹತ್ತರವಾಗಿದ್ದು ಸಿದ್ಧಲಿಂಗರ
ಶಿಷ್ಯರ ಮೂಲಕ ಸಂಪಾದನೆಗೊಂಡವುಗಳಾಗಿವೆ. ಮೊದಲನೆ ಶೂನ್ಯ ಸಂಪಾದನಾಕಾರ ಶಿವಗಣ ಪ್ರಸಾದಿಮಹದೇವಯ್ಯನನ್ನು
ಹೊರತುಪಡಿಸಿ ಉಳಿದ ನಾಲ್ವರು ಶೂನ್ಯಸಂಪಾದನಾಕಾರರು ಜಿಲ್ಲೆಯ ಪರಿಸರಕ್ಕೆ ನೇರವಾಗಿ ಸಂಬಂಧಪಟ್ಟವರಾಗಿದ್ದಾರೆ.
ಗೂಳೂರು ಸಿದ್ಧವೀರಣ್ಣೊಡೆಯ ಹಾಗೂ ಗುಮ್ಮಳಾಪುರದ ಸಿದ್ಧಲಿಂಗಯತಿಗಳು
ತೋಂಟದ ಸಿದ್ಧಲಿಂಗಯತಿಗಳ ಶಿಷ್ಯರಾಗಿದ್ದಾರೆ. ಹಲಗೆಯಾರ್ಯನು ಜಿಲ್ಲೆಯ ಪರಿಸರದ ಅದರಂಗಿಯವನಾಗಿದ್ದಾನೆ.
ಇತ್ತೀಚಿನ ಸಂಶೋಧನೆಗಳು ಕೆಂಚವೀರಣ್ಣೊಡೆಯನು ಶೂನ್ಯಸಂಪಾದನೆಯನ್ನು
ರಚಿಸಿದ್ದಾನೆನ್ನುವ ಎಂ.ಆರ್.ಶ್ರೀನಿವಾಸ ಮೂರ್ತಿ ಅವರ ವಾದವನ್ನು ಮತ್ತೇ ಜೀವಂತಗೊಳಿಸಿವೆ.
ಜಿಲ್ಲೆಯ ಹಸ್ತಪ್ರತಿಗಳಲ್ಲಿಯ ಕೆಲವು ಪುಷ್ಟಿಕೆಗಳಲ್ಲಿಯ
ಉಲ್ಲೇಖಗಳು ಕವಿಗಳ ಹೆಸರನ್ನು ಕಾವ್ಯಗಳ ಕಾಲವನ್ನು ಅರ್ಥೈಸಲು ಸಹಕಾರಿಯಾಗಿವೆ.ಈ ಹಸ್ತಪ್ರತಿಗಳ ಪುಷ್ಟಿಕೆಗಳಲ್ಲಿಯ
ಸಂಗತಿಗಳು ಸಾಹಿತ್ಯ ಚರಿತ್ರೆಯ ಅಧ್ಯಯನದ ದೃಷ್ಟಿಯಿಂದ ಮಹತ್ವದ ಪಾತ್ರ ವಹಿಸಿವೆ.
ಕ್ರಿ.ಶ.16೦3ರಲ್ಲಿ `ಪಂಚಪ್ರಕಾರ ಗದ್ಯವನ್ನು ಶ್ರೀಮದ್ವೀರಶೈವಾಚಾರವಿಸ್ತಾರ
ವೀರಮಾಹೇಶ್ವರಾಗ್ರಣಿ ವಿರಕ್ತ ಶಿಖಾಮಣಿ ಗೂಳೂರು ಸಿದ್ಧವೀರೇಶ್ವರದೇವರ ಶ್ರೀಪಾದಪದ್ಮಕ್ಕೆ ಬಿಜ್ಜಾವರಪುರವರ
ಗುರುಲಿಂಗ ಜಂಗಮಾಚಾರಾದಿವಾಚರಣ ಚಿಕ್ಕಭೂಪಾಲ ಭಕ್ತಿಯಿಂದೆ ಬರೆಯಿಸಿ ಸಮರ್ಪಿಸಿದರು' ಎಂಬ ಹಸ್ತಪ್ರತಿ
ಪುಷ್ಪಿಕೆಯಿಂದ ಪಂಚಪ್ರಕಾರ ಗದ್ಯಗಳನ್ನು ಇಮ್ಮಡಿ ಚಿಕ್ಕಭೂಪಾಲ ಭಕ್ತಿಯಿಂದ ಬರೆಯಿಸಿ ಗೂಳೂರು ಸಿದ್ಧವೀರೇಶ್ವರದೇವರ
ಶ್ರೀಪಾದ ಪದ್ಮಕ್ಕೆ ಅರ್ಪಿಸಿರುವುದು ತಿಳಿದುಬರುತ್ತದೆ. ಈ ಪ್ರತಿಯ ಕಾಲೋಲ್ಲೇಖದ ಪ್ರಕಾರ ಕ್ರಿ.ಶ.
16೦3ರಲ್ಲಿ ಗೂಳೂರು ಸಿದ್ಧವೀರೇಶ್ವರ ದೇವರು ಜೀವಿಸಿದ್ದರು ಎಂಬುದು ತಿಳಿದುಬರುತ್ತವೆ.
ಗೂಳೂರು ಸಿದ್ಧವೀರೇಶ್ವರದೇವರು ತೋಂಟದ ಸಿದ್ಧಲಿಂಗಯತಿಗಳ
ಶಿಷ್ಯರಾದ ನಾಗವಲ್ಲಿಯ ಬೋಳಬಸವರಶಿಷ್ಯರಾಗಿದ್ದು, ಐದನೆಯ ಶೂನ್ಯಸಂಪಾದನೆಯ ಸಂಕಲನಕಾರರಾಗಿದ್ದಾರೆ.
ಇವರ ಶೂನ್ಯಸಂಪಾದನೆಯನ್ನು ವಿರಕ್ತ ತೋಂಟದಾರ್ಯ ಕ್ರಿ.ಶ,1616ರಲ್ಲಿ ಪ್ರತಿಮಾಡಿದ್ದಾರೆ. ಈ ಹಸ್ತಪ್ರತಿಯ
ಪುಷ್ಟಿಕೆಯ ಕಾಲದ ಉಲ್ಲೇಖವು ತೋಂಟದ ಸಿದ್ಧಲಿಂಗಯತಿಗಳ ಕಾಲ ನಿರ್ಣಯಕ್ಕೆ ಆಕರವಾಗಿದೆ.
ನಾಲ್ಕನೇ ಶೂನ್ಯ ಸಂಪಾದನಾಕಾರನಾದ ಗುಮ್ಮಳಾಪುರದ ಸಿದ್ಧಲಿಂಗ
ಯತಿಗೂ ತುಮಕೂರು ಜಿಲ್ಲೆಯ ಪರಿಸರಕ್ಕೂ ಇದ್ದ ನಿಕಟ ಸಂಪರ್ಕದ ಬಗೆಗೆ ಜಿಲ್ಲೆಯ ಹಸ್ತಪ್ರತಿಗಳ ಪುಷ್ಟಿಕೆಗಳಲ್ಲಿಯ
ಉಲ್ಲೇಖಗಳು ಮಾಹಿತಿಯನ್ನು ಒದಗಿಸುತ್ತದೆ
ಜಕ್ಕಣಾರ್ಯ
ಸಂಕಲಿತ ಏಕೋತ್ತರ ಶತಸ್ಥಲ ಹಸ್ತಪ್ರತಿ ಸಂಬಂಧಿಸಿದ ಪುಷ್ಪಿಕೆಯ ಆದಿಯಲ್ಲಿ
ಶ್ರೀ ಗುಮಳಾಪುರ ಸಿದ್ಧಲಿಂಗಾಯ ನಮಃ| ಯೆಕೋತ್ತರ ಸ್ವರವಚನ|
ಪಿಂಡಸ್ಥಲ ರಾಗಮಧುಮಾಧವಿ ಬಿಂದು-ವಿನ್ನಾಣದೊಳಗಂದವಿಟ್ಟಿಹ..........ಎಂದು
ಅಂತ್ಯದಲ್ಲಿ......ಹೆಬ್ಬೂರ
ದೇವರು ಬರದ್ದು ಗುರುಲಿಂಗವೇ ಗತಿ, ಮತಿ,ಶುಭಮಸ್ತು, ನಿರ್ವಿಘ್ನಮಸ್ತು ಗುಮ್ಮಳಾಪುರದ ಸಿದ್ಧಲಿಂಗದೇವರ
ಪಾದವೆ ಗತಿ ಮತಿ ಅಯ್ಯ.......ಗುಂಮಳಾಪುರಾಧಿಪ ಸಿದ್ಧಲಿಂಗಾಯ ನಮಃ ಎಂದಿದೆ.
ಹಾಗೆಯೇ ಅದೇ ಕಟ್ಟಿನಲ್ಲಿಯ ಕೊನೆಯ ನಾಲ್ಕುಗರಿಗಳಲ್ಲಿ ವಾರ್ತೆ
ಸೋಮಣ್ಣನ `ಪಂಚೀಕರಣ ಪದಗಳು' ಪರಿವರ್ಧಿನಿಷಟ್ಪದಿಯ ಕೃತಿಯ ಆದಿಯಲ್ಲಿ ಶ್ರೀಗುರುಗುಮ್ಮಳಾಪುರ ಸಿದ್ಧಲಿಂಗಾಯ
ನಮಃ ಎಂದಿದೆ.
ಜಿಲ್ಲೆಯ
ಈ ಹಸ್ತಪ್ರತಿಗಳ ಉಲ್ಲೇಖಗಳು ಶೂನ್ಯ ಸಂಪಾದನಾಕಾರ ಗುಮ್ಮಳಾಪುರ ಸಿದ್ಧಲಿಂಗಯತಿಗೂ ತುಮಕೂರು ಜಿಲ್ಲೆಗೂ
ಇದ್ದ ಸಂಬಂಧ ಹಾಗೂ ತೋಂಟದ ಸಿದ್ಧಲಿಂಗಯತಿಗಳ ಶಿಷ್ಯ ಪರಂಪರೆಯವನು ಎಂಬುವುದಕ್ಕೆ ಪುರಾವೆಯನ್ನು ಒದಗಿಸುತ್ತದೆ.
ಹರಿಹರ ಕವಿಯ
ನಂತರ ಅವನು ಹುಟ್ಟು ಹಾಕಿದ ರಗಳೇ ಸಾಹಿತ್ಯ ಪ್ರಕಾರ ನಂತರದ ಸಾಹಿತ್ಯ ಚರಿತ್ರೆಯ ಪರಂಪರೆಯಲ್ಲಿ ಮುಂದುವರೆಯಲಿಲ್ಲ
ಎನ್ನುವ ಅಭಿಪ್ರಾಯ ವಿದ್ವಾಂಸರಿಂದ ವ್ಯಕ್ತವಾಗಿದೆ. ಆದರೆ ಈ ಅಭಿಪ್ರಾಯವನ್ನು ಜಿಲ್ಲೆಯಲ್ಲಿ ದೊರೆತ
ಹಸ್ತಪ್ರತಿಗಳ ಮೂಲಕ ನಿರಾಕರಿಸುವಂತಾಗಿದೆ. ಹರಿಹರನು ಹುಟ್ಟು ಹಾಕಿದ ರಗಳೆ ಸಾಹಿತ್ಯ ಪ್ರಕಾರವನ್ನು
ನಂತರದ ಕಾಲದಲ್ಲಿ ಅವನಷ್ಟು ವಿಪುಲವಾಗಿ ಹಾಗೂ ಸಮರ್ಥವಾಗಿ ಜಿಲ್ಲೆಯ ಶಂಕರಕವಿ, ವಿರಕ್ತ ತೋಂಟದಾರ್ಯ,
ಸೋಮೆಕಟ್ಟೆ ಚೆನ್ನವೀರಸ್ವಾಮಿಗಳು ಮುಂದುವರೆಸಿಕೊಂಡು ಬಂದಿದ್ದಾರೆ. ಈ ವಿಷಯವನ್ನು ಜಿಲ್ಲೆಯಲ್ಲಿ
ದೊರೆತ ಹಸ್ತಪ್ರತಿಗಳು ಸಮರ್ಥಿಸುತ್ತವೆ.
ಈ ಮೂರು ಜಿಲ್ಲೆಗಳ ಪರಿಸರದಲ್ಲಿ ಲಭ್ಯವಿರುವ ಹಸ್ತಪ್ರತಿಗಳನ್ನು ಕೇವಲ ಸಾಹಿತ್ಯ ಅಧ್ಯಯನದ ಪ್ರಾಚೀನ ಸಾಮಗ್ರಿಗಳಾಗಿ
ನೋಡಿದರಷ್ಟೇ ಸಾಲದಾಗಿದೆ. ಗ್ರಂಥಸಂಪಾದನೆಗಷ್ಟೇ ಸೀಮಿತವಾಗದೆ ಸಾಂಸ್ಕೃತಿಕ ಅಧ್ಯಯನದ ಆಕರಗಳಾಗಿ ಹಸ್ತಪ್ರತಿಗಳ
ಅಧ್ಯಯನವನ್ನು ವಿಸ್ತೃತಗೊಳಿಸಬೇಕಾಗಿದೆ. ಇವು ಸಂಸ್ಕೃತಿಯನ್ನು ದಾಖಲಿಸುವ ಪ್ರಮುಖ ಕೋಶಗಳಲ್ಲಿ ಒಂದಾಗಿವೆ.
ಶಾಸನಗಳು, ಕಡತಗಳು, ಬಖೈರುಗಳ ಮಾದರಿಯಲ್ಲಿ ಹಸ್ತಪ್ರತಿ ಪುಷ್ಪಿಕೆಗಳು ಸಹ ಸಂಸ್ಕೃತಿಯನ್ನು ಪುನರ್ರಚಿಸುವ
ಆಕರಗಳಾಗಿವೆ. ಹಸ್ತಪ್ರತಿಗಳಲ್ಲಿರುವ ಆದಿ, ಅಂತ್ಯದ ಹೇಳಿಕೆಗಳು ಕೃತಿಯನ್ನು ಬರೆದವರ, ಬರೆಯಿಸಿದವರ
ಚರಿತ್ರೆ ಮತ್ತು ಇತರೆ ವಿಷಯಗಳ ಬಗ್ಗೆ ಅಮೂಲ್ಯವಾದ ಮಾಹಿತಿಗಳನ್ನು ಒದಗಿಸುತ್ತವೆ. ಸ್ಥಳೀಯ ಸಂಸ್ಕೃತಿಯನ್ನು
ತಿಳಿಯುವಲ್ಲಿ ಪುಷ್ಪಿಕೆಗಳು ಪ್ರಧಾನವಾಗಿರುವುದರಿಂದ ಮೂಲ ಆಕರ ಸಾಮಗ್ರಿಗಳಾಗಿ ಪರಿಗಣಿಸಬಹುದಾಗಿದೆ.
ಹಸ್ತಪ್ರತಿ ಲಿಪಿಕಾರರು ಪುಷ್ಪಿಕೆಗಳಲ್ಲಿ ತಮ್ಮ ಚರಿತ್ರೆ ಹೇಳುವ ನೆಪದಲ್ಲಿ ನಾಡಿನ ಸಾಂಸ್ಕೃತಿಕ
ಚರಿತ್ರೆಗೆ ಉಪಯುಕ್ತವಾದ ಸಂಗತಿಗಳನ್ನು ನಿರೂಪಿಸಿದ್ದಾರೆ. ಸಂಸ್ಕೃತಿಯ ಸಂವಹನಕಾರರಾದ ಹಸ್ತಪ್ರತಿ
ಲಿಪಿಕಾರರ ಚರಿತ್ರೆಗೆ ಸಂಬಂಧಿಸಿದಂತೆ ಲಿಪಿಕಾರರ ಹೆಸರು, ವಾಸಿಸುತ್ತಿದ್ದ ಗ್ರಾಮ, ತಂದೆ, ಗುರು,
ಇಷ್ಟ ದೈವ, ವಂಶ, ಗೋತ್ರ ಇತ್ಯಾದಿ ವಿವರಗಳು ದೊರೆಯುತ್ತವೆ. ಲಿಪಿಕಾರರು ವಾಸಿಸುತ್ತಿದ್ದ ಗ್ರಾಮ
ಅಥವಾ ಪ್ರತಿಮಾಡಿದ ಸ್ಥಳಗಳು ಹಸ್ತಪ್ರತಿಗಳ ಪ್ರಾದೇಶಿಕತೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತವೆ.
ಪ್ರಾದೇಶಿಕತೆ ಪಾಠ ಪರಂಪರೆಯ ದೃಷ್ಟಿಯಿಂದ ಪ್ರಮುಖ ನಿದರ್ಶನಕ್ಕೆ:
ಮದ್ಧಗಿರಿ ಗುರಿಕಾರು ನಂಜಪ್ಪನವರ ಕೊಮಾರ ಕುಮಾರಪ್ಪ
ಮದ್ದಗಿರಿ- ಹನುಮಂತಯ್ಯ-ಕೃಷ್ಣರಾಜ ವಿಲಾಸ
ಚನ್ನಪಟ್ಲಕೆ ವಳಿತವಾದ
ಹೊಂಗನೂರು ನಾರಣೈಯ್ಯನು
“ತೋವಿನಕೆರೆ ವೀರಭದ್ರಪ್ಪನವರ ಪೌತ್ರ ಪುಟ್ಟಂನ ತನ್ನ ಕುಮಾರನಾದ ಜ್ವಾಲ್ನಪಗೆಬರದುಕೊಟ್ಟ''
ಕಂದಿಕೆರೆ
ಉಪಾಧ್ಯ ರಂಗಯ್ಯ
ಜವಳಿ ಅಂಗಡಿ ಕಾಳಿದಾಸ್ಕಯ್ಕನಿಗೆ
ವುಪಾದ್ಕ ವೆಂಕಟೈಯ್ಯನು ಬರೆದುಕೊಟ್ಟಂತಾ ಪುಸ್ತಕಾ
ಕೋಡಿಹಳ್ಳಿಸ್ಥಳದ ದಳವಾಯಿ ಬೈಲಪ್ಪನವರ
ಕುಮಾರನಾದ ಸಂಚವೈಯ್ಯನುಕೋಡಿಹಳ್ಳಿಸ್ಥಳದ ಗವುಡರು ಅಜ್ಜೆಗೌಡರ ಕುಮಾರ ಬೀರೇಗವುಡರಿಗೆ ಅತಿ
ಪ್ರೀತಿಯಿಂದಬರದುಕೊಟ್ಟ''
ಸ್ವಸ್ತಿಶ್ರೀ
ವಿಜಯಾಭ್ಯುದಯ ಸಾಲಿವಾಹನ ಶಕ ವರುಷಂಗಳು 1719 ಸಂದ ವರ್ತಮಾನವಾದ ಪೈಂಗಳ ನಾಮ ಸಂವತ್ಸರದ ಪುಷ್ಯ ಶುದ್ಧ
ಸಪ್ತಮಿಯ ರವಿವಾರ ಸುಭನಕ್ಷತ್ರ ಶುಭಯೋಗ ಶುಭಕರಣದಲ್ಲಿ ಅಭಿಜಿನ್ಮುಹೂರ್ತದಲ್ಲಿ ಕುಮಾರ ರಾಮನ ಸಾಂಗತ್ಯ
ಪೂರ್ಣವಾಯ್ತು.. ಆಂಗೀರಸ ಬಾರ್ಹಸ್ತ್ಯಮಾನ ತ್ರಿಯಾರಿಷ ಭಾರದ್ವಾಜಗೋತ್ರ ಅಶ್ವಲಾಯನ ಸೂತ್ರ ಋಕ್ ಶಾಖಾಧ್ಯಾಯಿಗಳಾದ
ಕಳಲೆ ನಗರಾಧಿಪರಾದ ತಿಮ್ಮರಾಜ ವಡೆಯರವರ ಪೌತ್ರರಾದ ಲಕ್ಷ್ಮೀಕಾಂತರಾಜಯ್ಯನವರ ಕುಮಾರ ಕಾಂತರಾಜಯ್ಯನವರ
ಸ್ವಹಸ್ತಾಕ್ಷರ ಲಿಖಿತದ್ದು ( ಕ.ಹ.ವ.ಸೂ.
ಸಂ.4, ಕ್ರ.ಸಂ.1668)
ಮಹಾಮಹತ್ತಿನೊಳಗಾದ ರಗಳೆಯ ದೇವರಿಗೆ ವಿಜಯಪುರದ ನಮಶಿವಾಯನ
ಕಯ್ಯಲು ದನುಗೂರ ದಳವಾಯಿ ಚಿಕ್ಕಮಲ್ಲೆಯದೇವರು ಬರೆಸಿದರು ಶಾ.ಸಕವರುಷ 1528 ಸಂದು ವರ್ತಮಾನ ಪರಾಭವ
ಸಂವತ್ಸರದ ಶ್ರಾವಣ ಶುದ್ಧ 15 ಗುರುವಾರದಲ್ಲು. (ಗುಬ್ಬಿ ಮಲ್ಲಣಾರ್ಯನ ಗಣಭಾಷ್ಯ ರತ್ನಮಾಲೆ)
(ವೀರಶೈವ ಹಸ್ತಪ್ರತಿ ಪುಷ್ಪಿಕೆಗಳು. ಪು.142)
ಸ್ವಸ್ತಿಶ್ರೀ
ವಿಜಯಾಭ್ಯುದಯ ಕಲಿಯುಗ ಪ್ರಮಾಣ 432೦ ವರುಷಕ್ಕೆ ಸಂದ ಕಲಿವರ್ಷ ಶಾಲಿವಾಹನ ಶಕವರುಷ 148೦ ಸಂದ ವರ್ತಮಾನ
ಕಾಳಾಯುಕ್ತ ಸಂವತ್ಸರದ ಆಷಾಡ ಬಹುಳ 7 ಗುರುವಾರದಲ್ಲೂ ಶ್ರೀ ಮತ್ಸಜ್ಜನ ಶುದ್ಧ ಶಿವಾಚಾರ ಜ್ಞಾನವೈರಾಗ್ಯ
ಸಂಪನ್ನರಾದ ಭೋಗೋದಿಮಠದ ಪಚ್ಚೆಕಂತೆದೇವರಿಗೆ ತಗಡೂರು ಬಸವರಸ ವುಪಾಧ್ಯರ ಮಗ ತಮ್ಮಪ್ಪನು ಬರೆದು ಮುಗಿಸಿದ
ದಶಗ್ರಂಥಿಯ ವ್ಯಾಖ್ಯಾನ ( ವೀರಣಾರ್ಯನ ದಶಗ್ರಂಥಿ) ( ಕ.ಹ.ವ.ಸೂ.
ಸಂ.2 ಕ್ರ.ಸಂ.664)
ಬರೆದಾತ
ಸ್ಥಾನಿಕ ಲಕ್ಷ್ಮೀರಮಣ ಸ್ವಾಮಿಯವರ ದೇವಸ್ಥಾನದ ಸ್ಥಾನಿಕ ಲಕ್ಷ್ಮೀರಮಣಪ್ಪನವರ ಮಗ ಕೃಷ್ಣಯ್ಯನು ತಾನು
ತನಗೆ ಬರೆದ ಭಾರತದ ಪುಸ್ತಕ ( ಕ.ಗ್ರ.ಶಾ. ಪು.48)
ಮಹಿಶೂರ
ದೇಸ್ಥಾನದ ರಾತ್ರಿ ಅರ್ಚಕ ನಾಗರಾಜೈಯ್ಯನು ಜೀವಂಧರನ ಷಟ್ಪದಿಯನ್ನು ಬರೆದು ಕೊಟ್ಟಿದ್ದಕ್ಕೆ ಮಂಗಳ
ಮಹಾಶ್ರೀ’ ( ಕ.ಹ.ವ.ಸೂ. ಸಂ.6 ಕ್ರ.ಸಂ.134)
ಈ ವಿವರಗಳು ಆಯಾ ಪ್ರದೇಶಗಳಲ್ಲಿ ಪ್ರಚಲಿತದಲ್ಲಿದ್ದ ಅಧ್ಯಯನದ
ವಿಷಯಗಳು, ಜನರ ಅಭಿರುಚಿ, ಆಸಕ್ತಿ, ಲಿಪಿಕಾರರ ಕಾಲದ ಭಾಷೆಯ ಸ್ವರೂಪ ಇತ್ಯಾದಿ ಸಂಗತಿಗಳ ಅಧ್ಯಯನಕ್ಕೆ
ಪುರಾವೆಯನ್ನೊದಗಿಸುತ್ತವೆ. ಇಂತಹ ಹಸ್ತಪ್ರತಿಗಳ ಪುಷ್ಪಿಕೆಗಳನ್ನು ನಾವು ಕ್ರೋಢಿಕರಿಸಿ ದೊರೆಯುವ
ಮಾಹಿತಿಗಳ ಮೂಲಕ ಜಿಲ್ಲೆಯ ಹಸ್ತಪ್ರತಿ ಲಿಪಿಕಾರರ ಚರಿತ್ರೆಯನ್ನು ಸಿದ್ಧಪಡಿಸಬೇಕಾಗಿದೆ. ಹಸ್ತಪ್ರತಿ
ಪುಷ್ಟಿಕೆಗಳಲ್ಲಿ ದೊರೆಯುವ ಮತ್ತೊಂದು ಮುಖ್ಯ ಸಂಗತಿ ಎಂದರೆ `ಸ್ಥಳೀಯ ಅರಸರ ಚರಿತ್ರೆ, ಇವತ್ತು ಇತಿಹಾಸದಲ್ಲಿ
ದಾಖಲಾಗದೆ ಇರುವ ಎಷ್ಟೋ ಸ್ಥಳೀಯ ವಿವರಗಳು ಹಸ್ತಪ್ರತಿಗಳ ಪುಷ್ಟಿಕೆಗಳಲ್ಲಿ ದೊರೆಯುತ್ತವೆ. ಜೊತೆಗೆ
ಅಧಿಕಾರ ಇತ್ಯಾದಿ ವಿವರಗಳು ದೊರೆಯುತ್ತಿದ್ದು ಸ್ಥಳೀಯ ಅರಸರಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡುವಲ್ಲಿ
ಪುಷ್ಪಿಕೆಗಳಲ್ಲಿಯ ಈ ಸಂಗತಿಗಳನ್ನು ಮೂಲ ಆಕರಗಳಾಗಿ ಪರಿಗಣಿಸ ಬೇಕಾಗಿದೆ. ನಿದರ್ಶನಕ್ಕೆ.
ಕಳಲೆ ನಂಜರಾಜನ ಹೆಸರಿನಲ್ಲಿ ದೊರೆಯುವ ಹಾಲಾಸ್ಯ ಮಾಹಾತ್ಮ್ಯ
ಇತ್ಯಾದಿ ಕೃತಿಗಳ ಹಸ್ತಪ್ರತಿಗಳಲ್ಲಿ ಚಂದ್ರವಂಶೋದ್ಭವರಾದ ಭಾರದ್ವಾಜ ಗೋತ್ರದಾಶ್ವಲಾಯನ ಸೂತ್ರದ ರುಗ್ವೇದಿಗಳಾದ
ಮಹಿಶೂರ ದಳವಾಯಿ ದೊಡ್ಡಯ್ಯನವರ ಪುತ್ರರಾದ ಕಳಿಲೆ ವೀರರಾಜಯ್ಯನವರ ಪುತ್ರರಾದ ನಂಜರಾಜೈಯ್ಯನವರು ಎಂಬ
(ಕ.ಹ.ವ.ಸೂ. ಸಂ.9 ಕ್ರ.ಸಂ.358) ವಿವರಗಳಿದ್ದು ಕಳಲೆ ಮನೆತನದ ಅರಸರ ಬಗೆಗೆ ವಿವರಗಳು ತಿಳಿದು ಬರುತ್ತವೆ. ಹದಿನೆಂಟನೆಯ ಶತಮಾನದಲ್ಲಿ ಮೈಸೂರು ಭಾಗದಲ್ಲಿ ಆಳ್ವಿಕೆ
ನಡೆಸಿದ್ದ ಕಳಲೆ ನಂಜರಾಜನ ಬಗೆಗೆ ಆತನೇ ರಚಿಸಿದ ಭಕ್ತವಿಲಾಸ ದರ್ಪಣ ಕೃತಿಯ ಹಸ್ತಪ್ರತಿಯ ಪುಷ್ಪಿಕೆಯಿಂದ
ಮಹತ್ತರವಾದ ಸಂಗತಿಗಳು ತಿಳಿದು ಬರುತ್ತವೆ.
ಕೃಷ್ಣ ಕಥಾರತ್ನಾಕರ
ಎಂಬ ಕೃತಿಯ ಆದಿಯಲ್ಲಿಯ ಶ್ರೀಕೃಷ್ಣರಾಜ ಮಹಾರಾಜ ಕಂಠೀರವರಿಂದ
ಶಕ 1787 ನೇ ರಕ್ತಾಕ್ಷಿ ಸಂವತ್ಸರದ ಚೈತ್ರಶುದ್ಧ 15 ಗುರುವಾರ ವಿರಚಿತಮಾದ ಎಂಬ ಹಾಗೂ ಅಂತ್ಯದಲ್ಲಿಯ
ಶ್ರೀ ಮದ್ರಾಜಾಧಿರಾಜ ರಾಜಮಾರ್ತಾಂಡ ಕಂಠೀರವಾದ್ಯನೇಕ ಬಿರುದಾಂಕಿತ ಚಂಡಪ್ರಚಂಡೋದ್ದಂಡ ರಿಪುತಿಮಿರಮಾರ್ತಾಂಡ
ಸರಸ ಕವಿತಾ ಚಮತ್ಕಾರ ಚತುರ ಶಿವಪೂಜಾ ಬದ್ಧ ದೀಕ್ಷಾ ದುರಂಧರ ನಂಜರಾಜಾಭಿದ ಮುಂಮಡಿ ಕೃಷ್ಣರಾಜ ವಡಯರವರಿಂ
ಪ್ರಕಾಶಿತವಾದ ಶ್ರೀಕೃಷ್ಣಕಥಾರತ್ನಾಕರ ವೆಂಬ ಗ್ರಂಥದೊಳ್ ಎಂಬ (ಕ.ಹ.ವ.ಸೂ. ಸಂ.1 ಕ್ರ.ಸಂ.327) ಉಲ್ಲೇಖದಲ್ಲಿ ಮೈಸೂರು ಒಡೆಯರ ವಿಶೇಷಣಗಳನ್ನು ಗುರುತಿಸ
ಬಹುದು. ಹಾಗೆಯೇ ಇಲ್ಲಿಯ ಹಸ್ತಪ್ರತಿಗಳಲ್ಲಿ ಮೈಸೂರರಸರ
ಪಟ್ಟಾಭಿಷೇಕ ಮುಹೂರ್ತ,ಮೈಸೂರು ಒಡೆಯರುಗಳಾದ ಚಾಮರಾಜ ಒಡೆಯರು ( ಶಾಲಿವಾಹನ ಶಕ 1493), ರಾಜವಡೆಯರು
ಬೆಟ್ಟದ ಚಾಮರಾಜ ಒಡೆಯರು( ಶಾಲಿವಾಹನ ಶಕ
1718) ಕೃಷ್ಣರಾಜ ಒಡೆಯರ ಆಳ್ವಿಕೆಯ( ಶಾಲಿವಾಹನ ಶಕ
1721) ವೃತ್ತಾಂತ, ಮೈಸೂರು ನಗರದ ಪೂರ್ವೋತ್ತರ ಸಂಗತಿ, ಮೈಸೂರು ರಾಜವಂಶಾವಳಿ ಇತ್ಯಾದಿ ವಿವರಗಳು
(ಕ.ಹ.ವ.ಸೂ. ಸಂ.9 ಕ್ರ.ಸಂ.58೦,581,582 583)
ದೊರೆಯುತ್ತವೆ. ಕಳಲೆ, ಹದಿನಾಡ ಮತ್ತು ಉಮ್ಮತ್ತೂರ ಅರಸರು ಮತ್ತು ಮೈಸೂರಿನ ಒಡೆಯರಿಗೆ ಸಂಬಂಧಿಸಿದ ಈ ಮಾಹಿತಿಗಳನ್ನು ಮೈಸೂರು ಒಡೆಯರ ಹಾಗೂ ಈ ಭಾಗದ ಸ್ಥಳೀಯ
ಅರಸರ ಇತಿಹಾಸದ ಪುನರ್ರಚನೆಯಲ್ಲಿ ಪೂರಕ ಆಕರಗಳಾಗಿ ಬಳಸಿ ಕೊಳ್ಳ ಬಹುದು.
`ಕುಜವಾರ
ತ್ಸಾ 1ರ್ಕೆ ಬರದ ಮುಗಿಸ್ತ ಜಯಮುನಿ ಪುಸ್ತುಕಕ್ಕೆ ಅಚಂದ್ರಾಕಮಸ್ತು ಶ್ರೀ ಶ್ರೀ ಬೊಂಮನಹಳಿ ಲಿಂಗಯ್ಯಗ
ಉಡರ ಪುಸ್ತಕಾ ಆಯುರಾರೋಗ್ಯ ಆಶ್ಚರ್ರಿರ್ಯಮಸ್ತು’ (ಜೈಮಿನಿ ಭಾರತ, ಹಸ್ತಪ್ರತಿಸೂಚಿ: ಕನ್ನಡ,198, ಪು.4೦)
ಶಾಲಿವಾಹನ ಶಕ ವರುಷ 1589 ನೆಯ ಪ್ಲವಂಗ ಸಂವತ್ಸರದ ಚೈತ್ರ
ಶು.6 ಬುಧವಾರ ಮುಗಿದ ಬಸವಪುರಾಣಕ್ಕೆ ಶುಭಮಸ್ತು. ಶೋಭನಮಸ್ತು| ಸಾತಳಲ ವಿರಂಣಗೌಡರ ಮಗ ಬ್ಯಚಯ್ಯಗೌಡರು
ಬರೆಸಿದ ಬಸವಪುರಾಣಕ್ಕೆ ಆಯುರಾರೋಗ್ಯ ಆಯಿಶ್ವರ್ಯಮಸ್ತು, ಯೀ ಬಸವೆಶ್ವರ ದೇವರ ಪುರಾಣವ ಬರದವ ಸಂಪಿಕೆಯ್ಯ
ತಂಮ --- ಬಸವ ಬರದಡಿ ವಸಪ-ಸಾಕಳೈ ಬ್ಯಚ್ಚಯ್ಯಗೌಡರು ಯಿ ಪುರಾಣವ ಉಡುಗಣಿ ಉಪುರಿಗೆ ಮಠದ ಚಂನಬಸಪ್ಪನವರಿಗೆ
ಕರಿಧಿಗೆ ಕೊಠದು
(ಬಸವಪುರಾಣ, ಹಸ್ತಪ್ರತಿ ಸೂಚಿ:ಕನ್ನಡ ಸಂ.155, ಪು.71)
ಕಾನುಗೊಡಮನೆ ಅಯಪ್ಪನ ನಾರಾಣಪ್ಪನು ಬರದು ಮುಗಿಸಿದ ಯೆಕಾದಶಸ್ಕಂದದ ಪುಸ್ತಕಕೆ
ಆಯುರಾರೋಗ್ಯ ಐಶ್ವರ್ಯಮಸ್ತು ( ಭಾಗವತ ಏಕಾದಶ ಸ್ಕಂಧ, ಹಸ್ತಪ್ರತಿ ಸೂಚಿ, ಸಂಖ್ಯೆ.165, ಪು.93)
ಸಾಗ್ರ ತಾಲ್ಕು|ಕೆಳದಿ ಮಾಗಣೆ ಮೆಳವರ್ಗೆ ಗ್ರಾಮದಲ್ಲುಯಿರುವ
ವೇದಮೂರ್ತಿಗಳಾದ ದೇವಣಭಟ್ಟರ ಮಗ ವೆಂಕಪ್ಪನವರ್ರಿಗೆ ಗಟ್ಟದ ಕೆಳಗಣ ಬೈದೂರ ಯಡರ್ರೆ ಮಂಜೈನವರ ಮಗ ಸುಬ್ರಾಯನು|ಮನ|ವಾಕ್ಕಾಯ|ಸಂತೋಷದಿಂದ|
ಉತ್ತರೋತ್ತರವಾಗಲೆಂದು ಹರಿಸಿಕೊಟ್ಟ ಪುಸ್ತಕಕ್ಕೆ ಅಚಂದ್ರಾರ್ಕಮಸ್ತು (ಭಾಗವತ ಏಕಾದಶ ಸ್ಕಂಧ, ಹಸ್ತಪ್ರತಿ ಸೂಚಿ,
ಸಂಖ್ಯೆ.149, ಪು.95)
ಶ್ರೀರಾಮಾಯಣ ಪುಸ್ತಕವಂನು ಮರಬಡಿ ಶಿಮೆ ಶಿರುಮನೆ ಅಪ್ಪಯಾನೆ
ಮಂಜೈಯ ಹೆಗ್ಗಡೇರ ಮಗ ಗಣಪಯ ಹೆಗ್ಗಡೆರ್ರಿಗೆ ಸರಳಹೊಳೆಮಾಲೆ ಗುಡಗಂಗೆ ತ್ತಿಮ್ಮಯನವರ ಮಗ ದೇವಪ್ಪನು
ಬರಕೊಟ್ಟ ರಾಮಾಯಣ ಪುಸ್ತಕಕ್ಕೆ ಆಯುರಾರೋಗ್ಯ ಐಶ್ವರ್ಯಮಸ್ತು (ವಾಲ್ಮೀಕಿ ರಾಮಾಯಣ, ಹಸ್ತಪ್ರತಿ ಸೂಚಿ,
ಸಂಖ್ಯೆ.3೦1, ಪು.132)
ಕುಮುಸಿ
ನಗರಕೆ ಉಂಟಾದ ಮಠಪತಿ ಗುರು ಸ್ಥಳೀಕ ಪುರಾಣ ಕಲ-ವ ಮನಿತನ ಪೂರ್ವ ಪೀಠಿಕರು--- ದೊಡ್ಡಯ್ಯ ತಮ್ಮ ಪ್ರೀತಿಯಲಿ
ಬರೆಸಿದ ಪುಸ್ತಕ. (ಕನ್ನಡ
ಹಸ್ತಪ್ರತಿಗಳು ಒಂದು ಅಧ್ಯಯನ, ಪು.133)
ಹೊಂನವಳಿ ತಾಲೂಕ್ಯು ವೋಟೆಕೆರೆ ಸ್ಥಳದ ಶ್ಯಾನಭೋಗ ಚಂನಪ್ಪನವರ ಕುಮಾರ ಚೆಲುವೈಯನು
ಕೆಲ್ಲಂಗರೆ ವಳಿತವಾದ ಹೊಂನೆನಹಳ್ಳಿ ಹನುಮೈಯಗೆಗೆ ವಂಶಾಭಿವೃದ್ಧಿಯಾಗಿ ಸುಖದಲ್ಲಿ ಬದುಕಲಿಯೆಂದು ಹರಸಿ
ಬರಕೊಟ್ಟಂತ್ತಾ ಜಯಮುನಿ ಸಮಾಪ್ತ (ಬೆ.ವಿ.ವಿ. ಕ.ಹ.ಪ್ರ.ಸೂ.ಸಂ.1.)
ಶಾಲಿವಾಹನ ಶಕವರ್ಷ ಸಂದು 1653 ವಿರೋಧಿಕೃತ ನಾಮ ಸಂವತ್ಸರ
ಕಾರ್ತಿಕ ಶುದ್ಧ ತದಿಗೆ ಸುಕ್ರವಾರ ದಿನದಲ್ಲಿ ಏಕೋತ್ತರ ಶತಸ್ಥಲ ಸಮಾಪ್ತ ಮಂಗಲ ಮಹ ಶ್ರೀ ಶ್ರೀ ಬಿದರೂರ
ಪಾದಪೂಜೆ ಮಟದ ವೀರಮಾಹೇಶ್ವರ ಚರಮೂರ್ತಿ ಸಿದ್ಧವೀರಸ್ವಾಮಿಗಳ ಮರಿಶಿವಲಿಂಗದೇಶಿಕ ಬರದು ಸಮಾಪ್ತಿ ಮಹಾ
ಶ್ರೀ (ಶ್ರೀ.ಮಹಾಲಿಂಗನ ಏಕೋತ್ತರ ಶತಸ್ಥಲ, ವೀರಶೈವ ಹಸ್ತಪ್ರತಿ ಪುಷ್ಪಿಕೆಗಳು,ಪು.83)
ಯಿದ ಬರೆದಾತ
ಸೂಳೆಕೆರೆಮಠದ ಚಂನಬಸವರಾಜದೇವರ ಕರಕಮಲೋದ್ಭವನಾದ ವೋದಿಸುವ ಚಂನಬಸವೈಯನು ಶ್ಯಾಡಗುಪ್ಪೆ ಮಠದ ಬಸವಲಿಂಗದೇವರ
ಸಂಣವರು ಮಕ್ಕಳಿಗೆ ಅಷ್ಟೈಶ್ವರ್ಯ ಸಂಪತ್ತು ಅಗಲಿಯೆಂದು ಹರಶಿ ಬರಕೊಟ್ಟ ನನ್ನೈಯ್ಯನವರ ಕಾವ್ಯಕ್ಕೆ
ಶುಭಮಸ್ತು (ನನ್ನಯ್ಯನ ಚಾರಿತ್ರ,ವೀರಶೈವ ಹಸ್ತಪ್ರತಿ ಪುಷ್ಪಿಕೆಗಳು.ಪು.237)
ಶ್ರೀನೇಮಿಚರಿತ
ಪುಸ್ತಕವಂನು ಸಮಾಪ್ತವಾಗಿ ಬರೆದಾತ ಚುಟರ ಶಿಮೆಯಂನ
ಮುಂಡುಕೂರ ಸ್ತಳದ ಲಕ್ಷುಮೈಯನವರ ಮಗ ರುದ್ರಪ್ಪನು ಬರದ ನೆಮಿಚರಿತೆ ಪುಸ್ತಕವಂನು ಮೊರಬಡಿಶಿಮೆ ಹಂಜಕ್ಕಿಯಲ್ಲುಯಿರುವ
ಸುಳನಾಡ ಶಿಮೆಕಳುರು ಬಿರೈಯಗೌಡರ ಮಗ ಜಟೈಯಗೌಡರಿಗೆ ಆಯುರಾರೋಗ್ಯ ಐಶ್ವರ್ಯ ಪುತ್ರ ಕಳತ್ರ ಅಭಿವೃದ್ಧಿಯಾಗಲೆಂದು
ಪರಿಸಿ ಕೊಟ್ಟ ನೇಮಿಚರಿತ ಪುಸ್ತಕಕ್ಕೆ ಶುಭಮಸ್ತು. ಅಣಲಯ್ಯಗೌಡರಿಗೆ ಕ್ರಯಕೊಟ್ಟು ಇದ್ದೇನೆ ಎಂಬ ವಿವರವು
ಗಮನಾರ್ಹವಾಗಿದೆ. (ಹಸ್ತಪ್ರತಿ ಸೂಚಿ ಪು.6ಂ).ಹಸ್ತಪ್ರತಿಗಳನ್ನು ಕ್ರಯಕ್ಕೆ ವಿಲೇವಾರಿ ಮಾಡುತ್ತಿದ್ದರು
ಎಂಬುದನ್ನು ಸೂಚಿಸುತ್ತದೆ.
ಗೀತಸಾರ ಹಸ್ತಪ್ರತಿಯನ್ನು ಬರದು ಮುಗ್ಸಿದ್ದು ಖಂಡಿಕದ ದೆವಸ್ತಾನದ
ಭೀಮಯ್ಯನು ಸ್ವಂತು ಬರಕೊಂಡ ಪುಸ್ತಕಾ! (ಹಸ್ತಪ್ರತಿ ಸಂಖ್ಯೆ:1೦1, ಪು.32).
ಪದ್ಮನಾಭ ಕವಿಯ ಜಿನದತ್ತರಾಯ ಚರಿತೆಯ ಹಸ್ತಪ್ರತಿಯಲ್ಲಿಯ,`
ಜಿನದತ್ತರಾಯನ ಪುಸ್ತಕವ ಬರೆಸಿದವರು ಸುಳುನಾಡ ಮೆಲುಮಂಗಿನ ಭಹವರು ಮಾಯ್ಯನ ಮಗ ತಿಂಮಯ್ಯ (ಹಸ್ತಪ್ರತಿ
ಸಂಖ್ಯೆ:292, ಪು.34).
ಸಿರ್ರಿವಂತೆ
ವಳಗಣ ಕೆಳದಿ ಸೀಮೆ ಕುಗ್ಗುವೆ|ಪರಮೈಯ್ಯನ| ತಿಂಮಪೈಯ್ಯನವರಿಗೆ ಗಟ್ಟಿಕೆಳಗಿನ ಕುಂದಾಪುರ ತಾಲೂಕು ಪಡುಕೋನೆ
ಸೀಮೆ ಪರಮೆಶ್ವರೈಯನ ಮಗ ತಿಂಮ್ಮಯನು ಬರಕೊಟ ಭಾರತ ಪುಸ್ತಕಕ್ಕೆ ಆಚಂದ್ರಾರ್ಕಮಸ್ತು. ವಿಕ್ರುತಿ ಸಂವತ್ಸರದ
ಆಶಾಡಾ ಬ5ಲ್ಲು ಶ್ರಿಮತು ದೆವಪ್ಪಯನವರ್ರಿಗೆ ಕುಗುವೆ ಮರೆಯನುಕೂಲ ಪುಸ್ತಕವಂನೂ ಕೊಟ್ಟು ಅದಕೆ ಪಾದಗಾಣಿಕೆ
ತಹ ಮಾಡಿದ್ದು ವಂದು ವರಾಹ1-ಂ|ಅಕ್ಷರದಲು ವರಹಾವಂನು ತೆಗದು ಕ್ರಯಮೂಲಕ ಕೊಠೆನಾಗಿ ಬರಕೊಟ ಬರ ಆದಂತ್ತ
ಪುಟೈಯಕಂ ತಂಮ ರಾಮೈಯನ ಸ್ವಹಸ್ತ ಬರಹಾ| ಶಾಂತಪರ್ವ1ಕ್ಕೆ ಸಂದಿ 28||ಪ 1೦9೦ ಕಲ್ಲದೇವಪ್ಪನ ಭಾರತದ
ಶಾಂತಿಪರ್ವ (ಶಾಂತಿಪರ್ವ,
ಹಸ್ತಪ್ರತಿ ಸೂಚಿ, ಸಂಖ್ಯೆ.212, ಪು.149).
ಶ್ರೀ ಬ್ರಹ್ಮಗೀತೆಗೆ
ಆಚಂದ್ರಾರ್ಕಮಸ್ತು||ಯಿಕ್ಕೆರ್ರಿ ಸಾಗ್ರ ತಾಲ್ಕು ಕೆಳದಿ ಮಾಗಣಿ ಹಾದ್ರಿಕೊಪ್ಪದ ವೆಂಕಪ್ಪನವರ್ರಿಗೆ
ಕೆಳದಿ ಹಾರೊಗೊಪ್ಪದಲ್ಲು ಯಿರ್ರುವ ಕಾಶಿವಾಸಿಗಳ ಮಗ ವೆಂಕಪ್ಪನು ಯೀ ಬ್ರಂಹ್ಮಗಿತ್ತೆಯಂನು ಬರಶಿಕೊಟ್ಟ
ಪುಸ್ತಕಕ್ಕೆಮಸ್ತು (ಬ್ರಹ್ಮಗೀತೆ,
ಹಸ್ತಪ್ರತಿಸೂಚಿ:ಕನ್ನಡ, ಸಂ.197, ಪು.77) ಈ ವಿವರಗಳು ಇಲ್ಲಿಯ ಹಸ್ತಪ್ರತಿಗಳಲ್ಲಿ ಹುದುಗಿರುವ
ಸಾಂಸ್ಕೃತಿಕ ಹಾಗೂ ಪ್ರಾದೇಶಿಕ ವಿವರಗಳ ಬಗ್ಗೆ ಮಾಹಿತಿಯನ್ನು
ಒದಗಿಸುತ್ತವೆ.
ಕೆಳದಿ ವಸ್ತು ಸಂಗ್ರಹಾಲಯದಲ್ಲಿರುವ 17 ನೇ ಶತಮಾನಕ್ಕೆ
ಸೇರಿದ ಶ್ರೀರಂಗಪಟ್ಟಣಕ್ಕೆ ಸಂಬಂಧಿಸಿದ ಇತಿಹಾಸ ಗ್ರಂಥ ಹಸ್ತಪ್ರತಿ (ಹಸ್ತಪ್ರತಿ ಸಂಖ್ಯೆ:244)ಯಲ್ಲಿರುವ
ಶ್ರೀರಂಗಪಟ್ಟಣದ ವರ್ಣನೆಯ ವಿವರ, ಹಸ್ರಪ್ರತಿಯಲ್ಲಿರುವ
ಶ್ರೀರಾಮಾನುಜಾಯ ನಮ:, ಶ್ರೀ ಕೃಷ್ಣದೇವರಾಯನ ಉಲ್ಲೇಖ,
ಬಿಜಾಪುರದ ಆಲಿ ಆದಿಲ್ ಷಾಹ, ಅಹಮ್ಮದ್ ನಗರದ ನಿಜಾಂಷಹ, ಗೋಲ್ಕಂಡದ ನವಾಬನ ಚಾರಿತ್ರಿಕ ಸಂಗತಿಗಳನ್ನು
ನಾಡಿನ ಸ್ಥಳೀಯ ಚರಿತ್ರೆಯ ಅಧ್ಯಯನಕ್ಕೆ ಬಳಸಿಕೊಳ್ಳಬಹುದಾಗಿದೆ. ಅದೇ ರೀತಿ ಶಿವಮೊಗ್ಗ ತಾಲೋಕಿನ ಕುಸ್ಕೂರಿನಲ್ಲಿ
ದೊರೆತು ಈಗ ಕೆಳದಿ ವಸ್ತು ಸಂಗ್ರಹಾಲಯದಲ್ಲಿರುವ ಕೆಳದಿ ಅರಸರ ನಿರೂಪಗಳು ಹಸ್ತಪ್ರತಿಯಲ್ಲಿಯ ಕೆಳದಿ
ಚೆನ್ನಾಮ್ಮಾಜಿಯ ವಿವರಗಳು, ಭದ್ರಪ್ಪನಾಯಕರು ವೆಂಕಟಗೆ ಬರಸಿ ಕಳುಹಿದ ಕಾರ್ಯ ಮುಂತಾದ ಚಾರಿತ್ರಿಕ
ದಾಖಲೆಗಳು ಕೆಳದಿ ಅರಸರನ್ನು ಅರ್ಥೈಸಲು ಸಹಕಾರಿಯಾಗಿವೆ. (ಹಸ್ತಪ್ರತಿ ಸಂಖ್ಯೆ:286. ಪು.23) ಬತ್ತಲೇಶ್ವರ ಕವಿಯ ಕೌಶಿಕ ರಾಮಾಯಣದ ಹಸ್ತಪ್ರತಿಗಳು ಶಿವಮೊಗ್ಗ
ಜಿಲ್ಲೆಯಲ್ಲಿ ದೊರೆತಿರುವುದು ವೈಶಿಷ್ಟ್ಯವಾಗಿದೆ. ಕೆಳದಿಯಲ್ಲಿ ದೊರೆತಿರುವ ಈಗ ಕೆಳದಿಯ ವಸ್ತು ಸಂಗ್ರಹಾಲಯದಲ್ಲಿರುವ, ಹಸ್ತಪ್ರತಿಗಳಲ್ಲಿ
ವ್ಯಾಕರಣ ಮತ್ತು ಛಂದಶ್ಯಾಸ್ತ್ರ ಗ್ರಂಥಗಳಿಗೆ ಸಂಬಂಧಿಸಿದ ಹಾಗೆ ವಿರೂಪಾಕ್ಷಸುತ ಲಿಂಗಮಂತ್ರಿ ವಿರಚಿತ
ಕಬ್ಬಿಗರ ಕೈಪಿಡಿಯೆಂಬ ಕರ್ಣಾಟಕ ನಿಘಂಟು, ಕರ್ನಾಟಕ ನಾಗವರ್ಮ ಛಂದಶ್ಯಾಸ್ತ್ರ, ಕರ್ನಾಟಕ ಚತುರಾಸ್ಯ
ನಿಘಂಟು, ಕರ್ನಾಟಕ ಶಬ್ದಮಂಜರಿ, ನಾನಾರ್ಥ ರತ್ನಮಾಲೆ ( ಕೋಶ-ಏಕಾಕ್ಷರ ಕಾಂಡ), ಕರ್ಣಾಟಕ ಭಾಷಾಭೂಷಣ
ವ್ಯಾಕರಣ ಇತ್ಯಾದಿ ಹಸ್ತಪ್ರತಿಗಳಿರುವುದು ಗಮನಾರ್ಹವಾಗಿದೆ.
ಈ ವಿವರಗಳು ಆಯಾ ಪ್ರದೇಶಗಳಲ್ಲಿ ಪ್ರಚಲಿತದಲ್ಲಿದ್ದ ಅಧ್ಯಯನದ
ವಿಷಯಗಳ, ಜನರ ಅಭಿರುಚಿ, ಆಸಕ್ತಿ, ಲಿಪಿಕಾರರ ಕಾಲದ ಭಾಷೆಯ ಸ್ವರೂಪ ಇತ್ಯಾದಿ ಸಂಗತಿಗಳ ಅಧ್ಯಯನಕ್ಕೆ
ಪುರಾವೆಯನ್ನೊದಗಿಸುತ್ತವೆ. ಇಂತಹ ಹಸ್ತಪ್ರತಿಗಳ ಪುಷ್ಪಿಕೆಗಳನ್ನು ನಾವು ಕ್ರೋಢಿಕರಿಸಿ ದೊರೆಯುವ
ಮಾಹಿತಿಗಳ ಮೂಲಕ ಹಸ್ತಪ್ರತಿ ಲಿಪಿಕಾರರ ಚರಿತ್ರೆಯನ್ನು ಸಿದ್ಧಪಡಿಸಬೇಕಾಗಿದೆ. ಹಸ್ತಪ್ರತಿ ಪುಷ್ಟಿಕೆಗಳಲ್ಲಿ
ದೊರೆಯುವ ಮತ್ತೊಂದು ಮುಖ್ಯ ಸಂಗತಿ ಎಂದರೆ `ಸ್ಥಳೀಯ ಅರಸರ ಚರಿತ್ರೆ, ಇವತ್ತು ಇತಿಹಾಸದಲ್ಲಿ ದಾಖಲಾಗದೆ
ಇರುವ ಎಷ್ಟೋ ಸ್ಥಳೀಯ ವಿವರಗಳು ಇಲ್ಲಿಯ ಹಸ್ತಪ್ರತಿಗಳ ಪುಷ್ಟಿಕೆಗಳಲ್ಲಿ ದೊರೆಯುತ್ತವೆ. ಜೊತೆಗೆ
ಅಧಿಕಾರ ಇತ್ಯಾದಿ ವಿವರಗಳು ದೊರೆಯುತ್ತಿದ್ದು ಸ್ಥಳೀಯ ಅರಸರಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡುವಲ್ಲಿ
ಪುಷ್ಪಿಕೆಗಳಲ್ಲಿಯ ಈ ಸಂಗತಿಗಳನ್ನು ಮೂಲ ಆಕರಗಳಾಗಿ ಪರಿಗಣಿಸಬೇಕಾಗಿದೆ. ನಿದರ್ಶನಕ್ಕೆ ಈಗಾಗಲೇ ಬಿಜ್ಜಾವರದ ಮಹಾನಾಡ ಪ್ರಭುಗಳು ಹಾಗೂ ಹಾಗಲವಾಡಿ ಪಾಳೆಯಗಾರರ
ಚರಿತ್ರೆಯನ್ನು ಅರಿಯುವಲ್ಲಿ ಹಸ್ತಪ್ರತಿಗಳ ಪುಷ್ಪಿಕೆಗಳು ಒದಗಿಸಿರುವ ಮಾಹಿತಿಗಳನ್ನು ನೆನಪಿಸಬಹುದು.
ಇಂದು ನಾಮಾವಶೇಷವಾಗಿರುವ ಮಠ ಮಾನ್ಯಗಳ ಹೆಸರು, ಮಠಾಧೀಶರ
ಹೆಸರು ಕಾಲಾವಧಿ, ಶಿಷ್ಯ ಪರಂಪರೆ ಇತ್ಯಾದಿ ಉಪಯುಕ್ತ ಮಾಹಿತಿಗಳು ಪುಷ್ಟಿಕೆಗಳಲ್ಲಿ ದೊರೆಯುತ್ತಿದ್ದು
ಈ ಪರಿಸರದ ಮಠಗಳ ಚರಿತ್ರೆ ಮಠಾಧೀಶರ ಕಾಲನಿರ್ಣಯದಲ್ಲಿ ಪ್ರಾಮುಖ್ಯತೆ ಪಡೆದಿವೆ.
ಕನ್ನಡ
ನಾಡಿನ ಅಸಂಖ್ಯಾತ ವೀರಶೈವ, ಜೈನ, ಬ್ರಾಹ್ಮಣ ಮಠಗಳ ಹೆಸರು. ಸಂಖ್ಯೆ, ಮಠಾಧೀಶರ ಹೆಸರು ಕಾಲಾವಧಿ,
ಶಿಷ್ಯ ಪರಂಪರೆ ಇತ್ಯಾದಿ ಉಪಯುಕ್ತ ಮಾಹಿತಿಗಳು ಪುಷ್ಪಿಕೆಗಳಲ್ಲಿ ದೊರೆಯುತ್ತಿದ್ದು ನಾಡಿನ ಮಠಗಳ
ಚರಿತ್ರೆ ಮತ್ತು ಮಠಾಧೀಶರ ಕಾಲನಿರ್ಣಯದಲ್ಲಿ ಪ್ರಾಮುಖ್ಯತೆ ಪಡೆದಿವೆ. ಅಲ್ಲದೆ ಆ ಕಾಲದ ಧಾರ್ಮಿಕ
ವಿಚಾರಗಳನ್ನು ಪುನಾರಚಿಸಲಿಕ್ಕೆ ನೆರವಾಗುತ್ತವೆ. ಈ ಮೂರು ಜಿಲ್ಲೆಗಳ ಹಸ್ತಪ್ರತಿಗಳಲ್ಲಿ ಹಿಂದೆ ಅಸ್ತಿತ್ವದಲ್ಲಿದ್ದ
ಮಠಗಳ ಬಗೆಗೆ ಉಲ್ಲೇಖ ಸಿಗುತ್ತದೆ. ನಿದರ್ಶನಕ್ಕೆ ಬಿದನೂರ ಪಾದಪೂಜೆ ಮಠ, ಹುಲ್ಕತ್ತಿಮಠ (ಪು.73)ಕೆಂಪನಂಜಯ್ಯ
ಮಠ ( ಹಂಸಭಾವಿ) (ಪು.766), ಕವಲೆದುರ್ಗ ತಾಲೋಕ್ ಗರಗಲ್ಲು ಮಠ ( ಪು.272), ತ್ಯಾವಣಿಗೆ ಮಠ, ಭದ್ರಾವತಿ
ತಾಲೋಕಿನ ಮಂಗೋಚೆಯ ಮಠ (ಪು.134), ಸೂಳೆಕೆರೆ ಮಠ, ಶ್ಯಾಡೆಗುಪ್ಪೆ ಮಠ, (ಪು.236) ವಾಟದ ಹೊಸಹಳ್ಳಿ
ಹುಲಕ್ಕತ್ತಿ ಮಠ (ಪು.254) ಉಡುಗಣಿ ಉಪುರಿಗೆ ಮಠ (ಬಸವಪುರಾಣ, ಹಸ್ತಪ್ರತಿ ಸೂಚಿ:ಕನ್ನಡ
ಸಂ.155, ಪು.71) ಇತ್ಯಾದಿ ಮಠಗಳ ಬಗೆಗೆ ಜಿಲ್ಲೆಯ
ಹಸ್ತಪ್ರತಿಗಳ ಪುಷ್ಪಿಕೆಯಲ್ಲಿ ಉಲ್ಲೇಖ ಸಿಗುತ್ತದೆ. ಅವುಗಳನ್ನು ಗುರುತಿಸುವ ಪ್ರಯತ್ನ ಮಾಡ ಬಹುದಾಗಿದೆ.
ವೀರಶೈವಸಾಹಿತ್ಯವನ್ನು ಉಳಿಸಿಕೊಂಡು ಬರುವಲ್ಲಿ ಮಠಗಳು ವಹಿಸಿದ ಪಾತ್ರವನ್ನು ಪುಷ್ಪಿಕೆಗಳ ಮೂಲಕ ಗುರುತಿಸಬಹುದಾಗಿದೆ.
ಪೂರ್ವಿಕರಲ್ಲಿ ಕೆಲವರು ವೈಯಕ್ತಿಕವಾಗಿ ಹಸ್ತಪ್ರತಿಗಳ ಸಂಗ್ರಹವನ್ನು ಹೊಂದಿದ್ದರ ಬಗೆಗೆ ಪುಷ್ಪಿಕೆಗಳಲ್ಲಿ
ವಿವರಗಳು ದೊರೆಯುತ್ತವೆ. ನಿದರ್ಶನಕ್ಕೆ ಕರೆವೃಷಭನ ಪುಸ್ತಕವು, ಕರಿಯ ಬಂಟನ ಪುಸ್ತಕ, ಇತ್ಯಾದಿ. ಕೆಲವು ವ್ಯಕ್ತಿಗಳು ಓದಿಸುವ ಕಾಯಕದಲ್ಲಿದ್ದರು ಎಂಬುದು
ವೋದಿಸುವ ಚಂನಬಸವೈಯ, ಓದಿಸುವ ಶೇಷಪ್ಪನು ಎಂಬ ವ್ಯಕ್ತಿ ವಿಶೇಷಣಗಳಿಂದ ತಿಳಿದು ಬರುತ್ತದೆ.
ಹಸ್ತಪ್ರತಿ ಸಂಪತ್ತಿನ ಬಗೆಗೆ ಮಾತನಾಡುವಾಗ ಕ್ರಿ.ಶ.184೦-1928ರ
ನಡುವೆ ಇದ್ದ ತುಮಕೂರು ಪರಿಸರದ ಹಸ್ತಪ್ರತಿ ಲಿಪಿಗಾರ
ಹಾಗಲವಾಡಿ ಅಳಗಯ್ಯ ಪ್ರಮುಖ ವ್ಯಕ್ತಿಯಾಗಿ ಕಂಡುಬರುತ್ತಾನೆ. ಬಹುಮುಖ ಪ್ರತಿಭೆಯ ಅಳಗಯ್ಯ ಜಿಲ್ಲೆಯ
ಪ್ರಮುಖ ಲಿಪಿಕಾರರು. ಶ್ರೀವೈಷ್ಣವ ಆಯುರ್ವೇದ ಶಾಸ್ತ್ರಜೋತಿಷ್ಯ ವೀರಶ್ಯೆವ ಅದ್ವೈತ ಭಾರತ ರಾಮಾಯಣಗಳನ್ನು
ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಹಾಡುಗಳನ್ನು ಲಘುಕೃತಿಗಳು ಹೀಗೆ ಸುಮಾರು
5೦ಕ್ಕೂ ಮೇಲ್ಪಟ್ಟು ಓಲೆಗರಿಗಳಲ್ಲಿ ಪ್ರತಿಮಾಡಿದ್ದಾರೆ. ಅವುಗಳ ಸೂಚಿಯನ್ನು ಮಾಡಲಾಗುತ್ತದೆ ಎಂದು
ಬಿ.ನಂಜುಂಡಸ್ವಾಮಿಯವರು ತಿಳಿಸಿದ್ದಾರೆ.
ಇವರು ಪ್ರತಿಮಾಡಿರುವ ಹಸ್ತಪ್ರತಿಗಳಲ್ಲಿ ತೊರವೆ ರಾಮಾಯಣ,
ಆಳ್ವಾರುಗಳ ತಿರುನಕ್ಷತ್ರ ತನಯಗಳು ಕರಣ ಹಸಿಗೆ, ವೈದ್ಯಸಂಗ್ರಹ, ಹಿಂದೂ ಯುನಾನಿ ವೈದ್ಯ ಮುಖ್ಯವಾಗಿವೆ.
ಇವರು ಪ್ರತಿಮಾಡಿರುವ ಪ್ರತಿಗಳ, ಕೊನೆಯ ಭಾಗದಲ್ಲಿ ಬರುವ ಮೇಷ್ಟರು ಅಳಗಯ್ಯನವರು ತಮ್ಮ ಸ್ವಂತಕ್ಕಾಗಿ
ಮಹಾಸಂಕಲ್ಪ ಬರೆಯುವುದಕ್ಕೆ ಶುಭಮಸ್ತು ಎನ್ನುವ ಪುಷ್ಟಿಕೆಯಲ್ಲಿಯ ಹೇಳಿಕೆಯು ಇವರ ಆಸಕ್ತಿಯನ್ನು ಸೂಚಿಸುತ್ತದೆ.
ಅನೇಕ ಕೃತಿಗಳನ್ನು ಓಲೆ ಮೇಲೆ ಬರೆದು ಹಸ್ತಪ್ರತಿಗಳ ಸಂಗ್ರಹವನ್ನು ಅಧಿಕಮಾಡಿಕೊಂಡಿದ್ದಾರೆ ಕೆಲವು
ಮುದ್ರಿತ ಪುಸ್ತಕಗಳನ್ನು ಮತ್ತೆ ಹಸ್ತಪ್ರತಿ ಪ್ರತಿಮಾಡಿಕೊಂಡಿದ್ದಾರೆ.
ಇಂತಹ ಎಷ್ಟೋ ಜನ ಲಿಪಿಕಾರರು ಆಗಿಹೋಗಿದ್ದು ಅನಾಮಧೇಯರಾಗಿಯೇ ಉಳಿದಿದ್ದಾರೆ. ಹಾಗೆಯೇ ಚಿಕ್ಕನಾಯಕನ
ಹಳ್ಳಿಯ ಶ್ಯಾನುಭೋಗ ವೃತ್ತಿಯ ಲಿಂಗಪ್ಪನು ಇನ್ನೊಬ್ಬ ಜಿಲ್ಲೆಯ ಪ್ರಮುಖ ಲಿಪಿಗಾರನಾಗಿ ಕಂಡು ಬರುತ್ತಾನೆ.
ಈತನು ಬಿಜ್ಜಾವರದ ಮಹಾನಾಡು ಪ್ರಭುಗಳ ಶಾರದಾ ಭಂಡಾರಕ್ಕೆ ಕೃತಿಗಳನ್ನು ನಕಲು ಮಾಡಿ ಒಪ್ಪಿಸಿದ್ದಾನೆ.
ಕನ್ನಡ ನಾಡಿನಾದ್ಯಂತ ಹಾಗೂ ಹೊರಗಡೆ ಅಲ್ಲಲ್ಲಿ ಸಂಗ್ರಹಿಸಲ್ಪಟ್ಟಿದ್ದರೂ
ಚದುರಿದಂತಿರುವ ಸಮಗ್ರ ಹಸ್ತಪ್ರತಿಗಳ `ಸಾಮಾನ್ಯ ಸೂಚೀಕರಣವೇ, ವ್ಯವಸ್ಥಿತವಾಗಿ ಸಿದ್ಧಪಡಿಸಲು ಇನ್ನು
ಸಾಧ್ಯವಾಗದೇ ಇರುವಾಗ ಸಮಗ್ರ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ ಸಿದ್ಧಪಡಿಸುವುದು ದೂರದ ಮಾತು. ಅಂತಹದರಲ್ಲಿ
ನಾಡಿನಾದ್ಯಂತ ಲಭ್ಯ ಇರುವ ಹಸ್ತಪ್ರತಿಗಳ ಪುಷ್ಟಿಕೆಗಳನ್ನು ವ್ಯವಸ್ಥಿತವಾಗಿ ಸಿದ್ಧಪಡಿಸುವಂತಹ ಸಾಂಸ್ಥಿಕ
ಮಟ್ಟದ ಪ್ರಯತ್ನ ಸಾಧ್ಯವೇ ಎಂಬ ಪ್ರಶ್ನೆ ಇಂದು ಎದುರಾಗಿದೆ. ಇನ್ನು ಜಿಲ್ಲಾವಾರು ಹಸ್ತಪ್ರತಿಗಳ ವರ್ಣನಾತ್ಮಕ
ಸೂಚಿಕರಣದ ಬಗೆಗೆ ಮತನಾಡುವಂತಿಲ್ಲ. ಹಸ್ತಪ್ರತಿಗಳ ಪುಷ್ಟಿಕೆಗಳನ್ನು ಸಿದ್ಧಪಡಿಸುವಲ್ಲಿ ವೈಜ್ಞಾನಿಕ
ವಿಧಾನವನ್ನು ಅನುಸರಿಸಬೇಕಾಗಿದೆ. ಪುಷ್ಟಿಕೆಗಳಲ್ಲಿ ಹಸ್ತಪ್ರತಿ ಹಾಗೂ ಲಿಪಿಕಾರರ ಬಗೆಗಿನ ಸಮಗ್ರ
ವಿವರಗಳನ್ನು ತಿಳಿಸಬೇಕಾಗುತ್ತದೆ.
ಹಸ್ತಪ್ರತಿ ಲಿಪೀಕರಣ ಕಾರ್ಯವು ಸ್ತ್ರೀಯರ ಶಿಕ್ಷಣದ ಹಿನ್ನೆಲೆಯಲ್ಲಿಯೂ ನಡೆದಿರುವ
ಈ ವಿವರಗಳು ಇಲ್ಲಿಯ ಹಸ್ತಪ್ರತಿಗಳ ಪುಷ್ಪಿಕೆಯಲ್ಲಿ
ದೊರೆಯುತ್ತಿದ್ದು ಸಾಂಸ್ಕೃತಿಕ ದೃಷ್ಟಿಯಿಂದ ಮಹತ್ವವೆನಿಸಿದೆ. ಲಿಪೀಕರಣ ಕ್ರಿಯೆಯಲ್ಲಿ ಗಮನಿಸತಕ್ಕ ಸಂಗತಿ ಹಸ್ತಪ್ರತಿಗಳು
ಆದಿ ಅಂತ್ಯದಲ್ಲಿನ ಅವರ ಪ್ರಶಸ್ತಿ ವಾಕ್ಯಗಳಿಂದ ಆ ಕಾಲದ ಸ್ತ್ರೀಯರ ಶಿಕ್ಷಣದ ಬಗೆಗೆ ಮಾಹಿತಿ ವ್ಯಕ್ತವಾಗುತ್ತದೆ
ಆಯಾ ಧರ್ಮದ ಚೌಕಟ್ಟಿನ ದೃಷ್ಟಿಯಿಂದ ಮಹಿಳೆಯರು ಜ್ಞಾನವನ್ನು ಅಭ್ಯಸಿಸಿದ್ದು ಅನ್ನುವ ಸಂಗತಿ ಮತ್ತು
ಆ ಹಿನ್ನೆಲೆಯಲ್ಲಿ ಹಸ್ತಪ್ರತಿಗಳು ಲಿಪೀಕರಣಗೊಂಡು ಪ್ರಸರಣಗೊಂಡಿದ್ದು ಗುರುತರವಾದದ್ದು. ಆಯಾ ಕಾಲಘಟ್ಟದ
ಹಿನ್ನೆಲೆಯಲ್ಲಿ ಹಸ್ತಪ್ರತಿಗಳಲ್ಲಿ
ಸಿಗುವಂತಹ ಇಂಥ ಮಾಹಿತಿಯನ್ನು ನಾವು ಹೆಕ್ಕಿ ತೆಗೆದು ವಿವಿಧ ದೃಷ್ಟಿಕೋನಗಳಿಂದ ಅಧ್ಯಯನ ಮಾಡಬೇಕಾಗಿದೆ.’
ಈ ಪರಿಸರದ ಹಸ್ತಪ್ರತಿಗಳನ್ನು ಕೇವಲ ಸಾಹಿತ್ಯ ಅಧ್ಯಯನದ
ಪ್ರಾಚೀನ ಸಾಮಗ್ರಿಗಳಾಗಿ ನೋಡಿದರಷ್ಟೇ ಸಾಲದಾಗಿದೆ. ಗ್ರಂಥಸಂಪಾದನೆಗಷ್ಟೇ ಸೀಮಿತವಾಗದೆ ಸಾಂಸ್ಕೃತಿಕ
ಅಧ್ಯಯನದ ಆಕರಗಳಾಗಿ ಹಸ್ತಪ್ರತಿಗಳ ಅಧ್ಯಯನವನ್ನು ವಿಸ್ತೃತಗೊಳಿಸಬೇಕಾಗಿದೆ. ಇವು ಸಂಸ್ಕೃತಿಯನ್ನು
ದಾಖಲಿಸುವ ಪ್ರಮುಖ ಕೋಶಗಳಲ್ಲಿ ಒಂದಾಗಿವೆ. ಶಾಸನಗಳು, ಕಡತಗಳು, ಬಖೈರುಗಳ ಮಾದರಿಯಲ್ಲಿ ಹಸ್ತಪ್ರತಿ
ಪುಷ್ಪಿಕೆಗಳು ಸಹ ಸಂಸ್ಕೃತಿಯನ್ನು ಪುನರ್ರಚಿಸುವ ಆಕರಗಳಾಗಿವೆ. ಹಸ್ತಪ್ರತಿಗಳಲ್ಲಿರುವ ಆದಿ, ಅಂತ್ಯದ
ಹೇಳಿಕೆಗಳು ಕೃತಿಯನ್ನು ಬರೆದವರ, ಬರೆಯಿಸಿದವರ ಚರಿತ್ರೆ ಮತ್ತು ಇತರೆ ವಿಷಯಗಳ ಬಗ್ಗೆ ಅಮೂಲ್ಯವಾದ
ಮಾಹಿತಿಗಳನ್ನು ಒದಗಿಸುತ್ತವೆ. ಸ್ಥಳೀಯ ಸಂಸ್ಕೃತಿಯನ್ನು ತಿಳಿಯುವಲ್ಲಿ ಪುಷ್ಪಿಕೆಗಳು ಪ್ರಧಾನವಾಗಿರುವುದರಿಂದ
ಮೂಲ ಆಕರ ಸಾಮಗ್ರಿಗಳಾಗಿ ಪರಿಗಣಿಸಬಹುದಾಗಿದೆ. ಹಸ್ತಪ್ರತಿಯಲ್ಲಿ ಉಕ್ತವಾದ ಸಾಮಾಜಿಕ ಅಂಶಗಳು ಆಗಿನ
ಕಾಲದ ಸಮಾಜದ ಸ್ಥಿತಿಗೆ ಹಿಡಿದ ಕನ್ನಡಿಯೆನ್ನಬಹುದು.
ಈ ಮೂರು ಜಿಲ್ಲೆಗಳಲ್ಲಿಯ ಹಸ್ತಪ್ರತಿಗಳ ಪ್ರತಿಕಾರ್ಯ
ಹಾಗು ಹಸ್ತಪ್ರತಿಗಳ ಅಸ್ತಿತ್ವದ ಬಗೆಗೆ ವಿರಳವಾಗಿ ಮೈಸೂರು, ಧಾರವಾಡ, ಬೆಂಗಳೂರು ವಿಶ್ವವಿದ್ಯಾಲಯದ
ಹಸ್ತಪ್ರತಿ ವಿಭಾಗದವರು ಹಾಗೂ ಶ್ರವಣಬೆಳಗೊಳದ ಶ್ರುತಕೇವಲಿ ಎಜುಕೇಶನ್ ಟ್ರಸ್ಟ್ ಅವರು ಸಿದ್ಧಪಡಿಸಿರುವ
ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿಯಲ್ಲಿ ದೊರೆಯುತ್ತವೆ. ಈ ಅಂಶಗಳು ಇಲ್ಲಿಯ ಹಸ್ತಪ್ರತಿಗಳ ಇರುವಿಕೆಯ
ಬಗೆಗೆ ಮಾಹಿತಿಯನ್ನು ಒದಗಿಸುತ್ತವೆ. ಹಸ್ತಪ್ರತಿಗಳ
ಸಂಕಲನ, ಪರಿಷ್ಕರಣ, ಸಂಪಾದನಾ ಚಟುವಟಿಕೆಗೆ ತುಮಕೂರು,
ಮೈಸೂರು, ಶಿವಮೊಗ್ಗ ಈ ಮೂರು ಜಿಲ್ಲೆಗಳ ಪರಿಸರವು ತನ್ನದೇ ಕೊಡುಗೆಯನ್ನು ನೀಡಿದೆ.
ಹಸ್ತಪ್ರತಿಗಳನ್ನು
ಸಾಂಸ್ಕೃತಿಕ ಅಧ್ಯಯನದ ಬಹುಮುಖ ನೆಲೆಗಟ್ಟುಗಳಲ್ಲಿ ರೂಪಿಸಿ ಕೊಳ್ಳುವುದಕ್ಕೂ ಮೊದಲು ಸಮಗ್ರ ಹಸ್ತಪ್ರತಿಗಳ
ಸಂಗ್ರಹ ಮತ್ತು ಸಂರಕ್ಷಣೆಯಾಗಬೇಕು. ಜೊತೆಗೆ ಲಭ್ಯವಿರುವ
ಸಾಹಿತ್ಯೇತರ ಹಸ್ತಪ್ರತಿಗಳನ್ನು ಪ್ರಕಟಿಸುವ
ವ್ಯವಸ್ಥೆ ಆಗಬೇಕಾಗಿದೆ. ಕನ್ನಡ ಹಸ್ತಪ್ರತಿಗಳ ಅಧ್ಯಯನ ಹೆಚ್ಚು ಚರ್ಚೆಗಳಿಲ್ಲದೆ ಕೇವಲ ಶಿಷ್ಟ ದಾಖಲೀಕರಣದ
ಉತ್ಪನ್ನ ಎನ್ನುವ ಸಾಮಾನ್ಯ ತಿಳಿವಳಿಕೆಯನ್ನು ಇಂದು ನಾವು ಮರುಪರಿಶೀಲಿಸಬೇಕಾಗಿದೆ. ಹಸ್ತಪ್ರತಿಗಳನ್ನು
ಮಾತೃಕೆಯ ಮೂಲಕ ರೂಪುತಾಳುವ ಪೀಳಿಗೆಗಳ ಅಧ್ಯಯನದ ಜೊತೆಗೆ
ಸಾಂಸ್ಕೃತಿಕ ನಿರ್ಮಾಣದ ಬಹುಪಠ್ಯೀಯ ನೆಲೆಗಳ ಹಿನ್ನೆಲೆಯಲ್ಲಿಯೂ ಅಧ್ಯಯನ ಮಾಡಬೇಕಾಗಿದೆ. ಹಸ್ತಪ್ರತಿಗಳು
ಒಂದೊಂದು ಪ್ರದೇಶದ ಸಾಂಸ್ಕೃತಿಕ ಸನ್ನಿವೇಶದ ಹಂಬಲದ ಪ್ರತೀಕವೂ ಆಗಿವೆ.
ಒಂದು ಕಾಲದ/ಪ್ರದೇಶದ ಭಾಷೆಯ ಸ್ವರೂಪವನ್ನು ತಿಳಿಯಲು ಹಸ್ತಪ್ರತಿಗಳನ್ನು
ಮುಖ್ಯ ಆಕರಗಳಾಗಿ ಬಳಸಿಕೊಳ್ಳಬಹುದಾಗಿದೆ. ಲಿಪಿಕಾರರ ವಂಶಾವಳಿ, ಅವರ ಉದ್ದೇಶ, ಆಶ್ರಯ, ಪ್ರತಿಮಾಡಿದ
ಸ್ಥಳ ಇತ್ಯಾದಿ ಸಾಂಸ್ಕೃತಿಕ ವಿವರಗಳು ನಮ್ಮ ಪೂರ್ವಿಕರ ಬದುಕಿನ ಹಲವು ಮಜಲುಗಳ ಬಗೆಗೆ ತಿಳಿವಳಿಕೆಯನ್ನು
ವಿಸ್ತರಿಸುವುದರ ಜೊತೆಗೆ ಹಸ್ತಪ್ರತಿ ಶಾಸ್ತ್ರವನ್ನು ಆಧುನಿಕ ಸಂದರ್ಭದೊಡನೆ ಮುಖಾಮುಖಿಯಾಗಿಸುವುದರ
ಮೂಲಕ ಪುನರ್ ಮೌಲ್ಯೀಕರಣ ಅಗತ್ಯತೆಯ ತುರ್ತನ್ನು ಸೂಚಿಸುತ್ತವೆ. ಲಿಪಿಕಾರರ ಹಸ್ತಪ್ರತಿಗಳ ಪ್ರತೀಕರಣ
ಕ್ರಿಯೆಯಲ್ಲಿ ಭಾಷಿಕವಾಗಿ ಶುದ್ಧ-ಅಶುದ್ಧತೆಯ ಪ್ರಶ್ನೆಗೆ ಅವಕಾಶವಿರುವುದಿಲ್ಲ. ಪ್ರತಿಮಾಡುವಾಗ ಲಿಪಿಕಾರನ
ಆಡು ರೂಪಗಳು ಹಸ್ತಪ್ರತಿಯಲ್ಲಿ ಕಾಣ ಸಿಗುತ್ತವೆ ಎಂಬುದಕ್ಕೆ ಇಲ್ಲಿಯ ಹಸ್ತಪ್ರತಿಗಳ ಪುಷ್ಪಿಕೆಗಳಲ್ಲಿ ಕಂಡು ಬರುವ ಆನಂದ
ಸಂಸ್ತರ, ಸಪತಮಿ, ತಿಂಮಯ್ಯನಾ, ಲ್ಲಿಂಗಯ್ಯಗ, ದುಗಯ್ಯನ, ಸುಳನಾಡ ಶಿಮೆ ಕಳುರ ಬಿರೈಯಗೌಡರಮಗ ಜಟೈಯಗೌಡ,
ಇತ್ಯಾದಿ ಆಡು ರೂಪಗಳು ನಿದರ್ಶನವಾಗಿದ್ದು ಅವುಗಳನ್ನು ಸಂಪಾದಕರು ಗಂಭೀರವಾಗಿ ತೆಗೆದುಕೊಳ್ಳ ಬೇಕೇ
ಹೊರತು ದೋಷವೆಂದು ವಿಕಲ್ಪವೆಂದು ತಿಳಿಯಬಾರದು.
ಸಂಸ್ಕೃತಿಯ
ಗ್ರಹಿಕೆಗಳ ಆಕರಗಳಾಗಿ ಈ ಪರಿಸರದ ಹಸ್ತಪ್ರತಿಗಳ ಪುಷ್ಪಿಕೆಗಳು:
ಇಂದು ನಾಡಿನ
ಸಂಸ್ಕೃತಿಯ ಅಧ್ಯಯನ ತನ್ನ ಪರಿಪೂರ್ಣತೆಯನ್ನು ಪಡೆಯ ಬೇಕಾದರೆ ಶಿಷ್ಟ ಆಕರಗಳ ಜೊತೆಗೆ ಆಯಾ ಸ್ಥಳಗಳ
ಜನಾಂಗ, ಸಮುದಾಯ, ಸಂಸ್ಕೃತಿಗಳೊಂದಿಗೆ ಬೆರತು ಅವರ ಆಚರಣೆ,ನಂಬಿಕೆ, ಸಂಪ್ರದಾಯಗಳನ್ನು ಯಾವುದೇ ಜಾತಿ
ಪಂಗಡ ಹಾಗೂ ಸಾಮಾಜಿಕ ಸ್ತರಗಳ ಪೂರ್ವಾಗ್ರಹ ಪೀಡಿತರಾಗದಂತೆ ಕಟ್ಟಿಕೊಡುವ ಸ್ಥಳೀಯ ಚರಿತ್ರೆಗಳ ಅಗತ್ಯತೆ
ತುರ್ತಾಗಿ ಬೇಕಾಗಿದೆ. ಒಂದು ಪ್ರದೇಶದ ಧಾರ್ಮಿಕ ಚಾರಿತ್ರಿಕ ಹಾಗೂ ಭೌಗೊಳಿಕ ತಿಳಿವಳಿಕೆ ವಿಸ್ತರಿಸಿಕೊಳ್ಳಲು
ಈ ರೀತಿಯ ಕೃತಿಗಳು ನೆರವನ್ನು ನೀಡುತ್ತವೆ. ಆದರೆ
ಈ ತೆರನಾದ ಕೃತಿಗಳು ಉಪೇಕ್ಷೆಗೆ, ವಿದ್ವಾಂಸರ ಅನಾದಾರಣೆಗೆ ಈಡಾಗಿವೆ. ಚರಿತ್ರೆಯಲ್ಲಿ ದಾಖಲಾಗದೆ
ಇರುವ ಸ್ಥಳೀಯ ಅರಸರ ಬಗೆಗೆ ಬೆಳಕು ಚೆಲ್ಲುವ ಹಸ್ತಪ್ರತಿಗಳು ಲಭ್ಯವಿದ್ದು ಅಪ್ರಕಟಿತ ಸ್ಥಿತಿಯಲ್ಲಿವೆ.
ಹಸ್ತಪ್ರತಿಯಲ್ಲಿ ಉಕ್ತವಾದ ಸಾಮಾಜಿಕ ಅಂಶಗಳು ಆಗಿನ ಕಾಲದ ಸಮಾಜದ ಸ್ಥಿತಿಗೆ ಹಿಡಿದ ಕನ್ನಡಿಯೆನ್ನಬಹುದು.
ಕೆಳದಿ
ಅರಸರು, ಇಕ್ಕೇರಿ ಅರಸರು, ಸ್ವಾದಿ ಅರಸರು, ಬಿದನೂರಿನ ಅರಸರನ್ನು ಉಲ್ಲೇಖಿಸುವ ಹಸ್ತಪ್ರತಿಗಳನ್ನು
ಶೋಧಿಸಿ ಅಧ್ಯಯನಕ್ಕೊಳಪಡಿಸಬೇಕಾಗಿದೆ, ಶಿವಮೊಗ್ಗ ಜಿಲ್ಲೆಯ ಕೆಳದಿ ಅರಸರ ಕಾಲದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಜೀವನದ ಮೇಲೆ ಬೆಳಕು
ಚೆಲ್ಲುವಂತಹ ಲಿಂಗಣ್ಣ ಕವಿಯ ಕೆಳದಿ ನೃಪವಿಜಯ, ಇಮ್ಮಡಿ ಬಸವಪ್ಪನಾಯಕನ ಶಿವತತ್ವರತ್ನಾಕರ, ಕೆಳದಿ ಗಂಗದೇವಿಯದೆಂದು ಹೇಳಲಾದ ಕೆಳದಿ ರಾಜಾಭ್ಯುದಯ, ಬಸವರಾಜಾಭುದ್ಯಯ, ಕರ್ನಾಟಕ ಶಿವಗೀತೆ, ಪರಮದೇವ ಕವಿ ವಿರಚಿತ ತುರಂಗ ಭಾರತ
ಹಾಗೂ ಕೆಳದಿ ಅರಸರನ್ನು ಪರೋಕ್ಷವಾಗಿ ಉಲ್ಲೇಖಿಸಿರುವ
ಕೀರ್ತನೆಗಳು ಇತ್ಯಾದಿ ಲಭ್ಯವಿರುವ ಹಸ್ತಪ್ರತಿಗಳೆಲ್ಲವನ್ನು ವ್ಯವಸ್ಥಿತವಾಗಿ ಅಧ್ಯಯನಕ್ಕೆ ಒಳಪಡಿಸುವ ಮೂಲಕ ಹೊಸ ಅಂಶಗಳನ್ನು ಹೊರತೆಗೆಯ ಬೇಕಾಗಿದೆ. ಈ ನಿಟ್ಟಿನಲ್ಲಿ ಕೆಳದಿ ವೆಂಕಟೇಶ ಜೋಯಿಸ್ ಅವರು ಕೆಳದಿ ನೃಪ ವಿಜಯವನ್ನು ಐತಿಹಾಸಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಅಧ್ಯಯನಕ್ಕೊಳ
ಪಡಿಸಿ ಲೇಖನ ಪ್ರಕಟಿಸಿರುವುದನ್ನು ಗಮನಿಸಬಹುದು.
ಮೈಸೂರು. ವಿ.ವಿಯ ಕನ್ನಡ ಅಧ್ಯಯನ ಸಂಸ್ಥೆಯ ವರ್ಣನಾತ್ಮಕ
ಹಸ್ತಪ್ರತಿ ಸೂಚಿ ಸಂಪುಟ 1 ರಲ್ಲಿಯ (ಪು.2೦3) ಕದಿರೇರಾಯರ
ಪೂರ್ವ ವೃತ್ತಾಂತ ಕಾಲ.175೦, ಹಸ್ತಪ್ರತಿಯಲ್ಲಿ ಕದಿರೆರಾಯರ ಆಳ್ವಿಕೆಗೆ ಸಂಬಂಧಪಟ್ಟ ಗ್ರಾಮಗಳು,
ಅವರ ಅಧೀನರು, ಹುದ್ದೆದಾರರ ಅಧಿಕಾರದ ವಿವರಗಳು, ಅವರ ವೇತನಾದಿಗಳು, ಗ್ರಾಮದಾನ ( ದೇವಸ್ಥಾನ ಮುಂತಾದವುಗಳಿಗೆ)ವಿವರವು,
ಸಾಳುವ ಕೃಷ್ಣದೇವರಸವಡೇರು ಮೊದಲು ಮಾಡಿ ಬೆಳಗುತ್ತಿ ವಂಶಾವಳಿಯಲ್ಲಿ ಚಲುವ ರಂಗಪ್ಪ ನಾಯಕರ ಮಗ ಮಾರಭೂಪರಾಯರ
ವರೆಗಿನ ವಿವರಗಳಲ್ಲಿ ಶಿವಮೊಗ್ಗ ಜಿಲ್ಲೆಯ ಪರಿಸರದ ಇತಿಹಾಸದ ವಿವರಗಳನ್ನು ಕಾಣಬಹುದು.
ಚೆಲುವ ರಂಗಪ್ಪ
ನಾಯ್ಕನು ಹೊಂನಾಳಿಯಂಬುದಾಗಿ ದೊಡ್ಡದಾಗಿ ಕೋಟೆ ಕಟ್ಟಿದ್ದು, ಹೊನ್ನಾಳಿ ಕಿಲ್ಲೇದ ಅಧಿಕಾರ ಮಾಡಿದ್ದು
ಶಕ 1283 ಪ್ರವಸಂವತ್ಸರದ ಆರಭ್ಯ ಶಕ 13೦3 ದುರ್ಮತಿ ವರೆಗೆ 2೦ ವರುಷ ಆಳಿದ್ದರ ಬಗೆಗೆ, ಇದೇ ಅವಧಿಯಲ್ಲಿಯೇ ಹೊನ್ನಾಳಿಯ
ಕೋಟೆಯನ್ನು ನಿರ್ಮಿಸಿದ ಬಗೆಗೆ ವಿವರ ನೀಡಿದೆ. ಜೊತೆಗೆ ಈ ಹಸ್ತಪ್ರತಿಯಲ್ಲಿ ಶಿವಮೊಗ್ಗೆ ಪೂರ್ವರಾಯರ
ವೃತ್ತಾಂತ, ಪೂರ್ವರಾಯರ ಪೈಕಿ ನಗರದ ವೃತ್ತಾಂತ, ಸಾಗರದ ಪೂರ್ವ ರಾಯರ ವೃತ್ತಾಂತ, ಹೊದಿಗೆರೆ ವೃತ್ತಾಂತ,
ಸೂಳೇಕೆರೆ ಪೂರ್ವರಾಯರ ವೃತ್ತಾಂತ ಇತ್ಯಾದಿ ವಿವರಗಳು ಇವೆ. ಈ ವಿವರಗಳು ಆಯಾ ಸ್ಥಳೀಯ ಅರಸರ ಕಾಲ ನಿರ್ಣಯಮಾಡಲು
ಸಹಕಾರಿಯಾಗಿದೆ. ಈ ಹಸ್ತಪ್ರತಿಯಲ್ಲಿಯ ಮಾಹಿತಿಗಳನ್ನು ಪೂರಕ ಆಕರಗಳೊಂದಿಗೆ ಅಧ್ಯಯನಕ್ಕೆ ಬಳಸಿ ಕೊಳ್ಳಬಹುದಾಗಿದೆ.
ಕೆಳದಿಯ ವಸ್ತುಸಂಗ್ರಹಾಲಯದಲ್ಲಿಯ ಕಳಲೆ ನಂಜರಾಜಯ್ಯಕೃತ
ಬಧಿರಾಚಲ ಮಹಾತ್ಮೆ ಕೃತಿಯ ಹಸ್ತಪ್ರತಿಯಲ್ಲಿ ಕಳಲೆ ನಂಜರಾಜನ ವಿಶೇಷಣಗಳನ್ನು ಕುರಿತ ಉಲ್ಲೇಖವಿದೆ.
`ಯಿಂತು ಮಹೀಶೂರ ಸೆನಾಪತಿ ಕಳಲೆ ದೊಡ್ಡರಾಜ ಸುತ ವಿಬುಧನುತ ವೀರಧರಣೀಶತನಯ ನಂಜನರೇಂದ್ರ ವಿರಚಿತಮಾದ
ಶ್ರೀ ಬ್ರಹ್ಮಾಂಡ ಪುರಾಣೋಕ್ತ ಬಧಿರಗಿರಿ ಮಹಿಮೆಯೊಳು ಕರ್ನಾಟಕ ಭಾಷಾರಚಿತ ಟೀಕೆ ನೊಳೈದನೆ ಅಧ್ಯಾಯದರ್ಥ
ಎಂಬ ವಿವರದಲ್ಲಿ ಕಳಲೆನಂಜರಾಜಯ್ಯನ ವಂಶವೃಕ್ಷವನ್ನು ನೋಡಬಹುದು.
ಶಿವಮೊಗ್ಗ ಜಿಲ್ಲೆಯಲ್ಲಿ ದೊರೆಯುವ ಅದರಲ್ಲೂ ಕೆಳದಿ ಅರಸರ
ಕಾಲದ ಕನ್ನಡ ಮತ್ತು ನಾಗರಿ ಲಿಪಿಯಲ್ಲಿರುವ ನಿರೂಪಗಳ
ಅಪ್ರಕಟಿತ ಹಸ್ತಪ್ರತಿಗಳನ್ನು ಶೋಧಿಸಿ ಅವುಗಳಲ್ಲಿರುವ ಮಾಹಿತಿಗಳು ಯಾವರೀತಿ ಅಂದಿನ ಕಾಲದ ಧಾರ್ಮಿಕ
ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಸಹಾಯಕವಾಗಿರುವುದನ್ನು ಅಧ್ಯಯನ ಮಾಡಬಹುದಾಗಿದೆ.
ನಿರೂಪಗಳನ್ನೊಳಗೊಂಡ ಹಸ್ತಪ್ರತಿಗಳ ಶೋಧನೆ, ಸಂಗ್ರಹ ಮತ್ತು ಅಧ್ಯಯನದಲ್ಲಿ ಈಗಾಗಲೇ ಎ.ಕೆ.ಶಾಸ್ತ್ರಿ,
ಕೆಳದಿ ವೆಂಕಟೇಶ, ಶ್ರೀ ಜಯದೇವಪ್ಪ ಜೈನಕೇರಿ ಅವರ ಕೆಲಸವನ್ನು ಗಮನಿಸ ಬಹುದಾಗಿದೆ. ಜಿಲ್ಲೆಯಲ್ಲಿಯ ಮೋಡಿ ಲಿಪಿಗಳಲ್ಲಿರುವ ಹಸ್ತಪ್ರತಿಗಳ ಅಧ್ಯಯನ
ಶ್ರೀ ಕೆಳದಿ ಗುಂಡಾಜೋಯಿಸರವರು ಮಾಡಿರುವುದನ್ನು ಈಗಾಗಲೇ ವಿದ್ವಾಂಸರು ಗಮನಿಸಿದ್ದಾರೆ.
ಈ ಮೂರು ಜಿಲ್ಲೆಗಳಲ್ಲಿಯ ಕೃತಿಗಳ ಕುರಿತ ಲಭ್ಯವಿರುವ ಹಸ್ತಪ್ರತಿಗಳ ಸಂಖ್ಯೆಯ ಆಧಾರದ
ಮೇಲೆ ಆ ಕಾಲದ ಓದುಗವರ್ಗದ ಮನೋಭಾವವನ್ನು ಚರ್ಚೆಗೊಳಪಡಿಸ ಬಹುದಾಗಿದೆ. ಇಲ್ಲಿ ಲಭ್ಯವಿರುವ ಹಸ್ತಪ್ರತಿಗಳಲ್ಲಿ
ಜೈಮಿನಿ ಭಾರತ, ಬಸವಪುರಾಣ, ಅನುಭವಾಮೃತ, ಉತ್ತರರಾಮಯಣ, ನಾಗಕುಮಾರನ ಚರಿತೆ, ತೊರವೆ ರಾಮಾಯಣ, ಭಾಗವತ,
ಐರಾವತ, ಚೆನ್ನಬಸವಪುರಾಣ, ಕೀರ್ತನೆಗಳು, ಯಕ್ಷಗಾನ ಕೃತಿಗಳು ಇತ್ಯಾದಿ ದೇಸೀ ಕಾವ್ಯದ ಹಸ್ತಪ್ರತಿಗಳೇ
ಮೇಲುಗೈ ಪಡೆದಿವೆ. ಈ ದೇಶೀ ಕಾವ್ಯಗಳೇ ಏಕೇ ಅಧಿಕ ಸಂಖ್ಯೆಯಲ್ಲಿ ದೊರೆಯುತ್ತವೆ. ಯಶೋಧರ ಚರಿತೆ, ರಾಮಚಂದ್ರಚರಿತಪುರಾಣ
ದಂತಹ ಚಂಪೂಕೃತಿಗಳ ಹಸ್ತಪ್ರತಿಗಳೇಕೆ ಅಷ್ಟು ಸಂಖ್ಯೆಯಲ್ಲಿ ದೊರೆಯುವುದಿಲ್ಲ ಎಂಬುದನ್ನು ಅಧ್ಯಯನಕ್ಕೊಳಪಡಿಸ
ಬಹುದಾಗಿದೆ. ಒಂದು ಕೃತಿಯ ಹಸ್ತಪ್ರತಿಗಳು ದೊರೆಯುವ ಭೌಗೋಳಿಕ ಪ್ರದೇಶಗಳನ್ನು ಗಮನದಲ್ಲಿರಿಸಿಕೊಂಡು
ಪ್ರಾದೇಶಿಕ ಭಿನ್ನಪಾಠಗಳನ್ನು ಗುರುತಿಸಬಹುದಾಗಿದೆ. ಯಾವ ಯಾವ ಪ್ರದೇಶದಲ್ಲಿ ಯಾವ ಯಾವ ಕವಿಯ ಕೃತಿಗಳನ್ನು
ಅಧ್ಯಯನ ಮಾಡುವ ಓದುವ ವರ್ಗ ಇದ್ದಿತು? ಅವರ ಮನೋಭಾವ ಎಂತಹದ್ದು ಎಂಬುದನ್ನು ಗುರುತಿಸ ಬಹುದು. ಜೊತೆಗೆ
ಕೃತಿಗಳ ಜನಪ್ರಿಯತೆ ಹೇಗಿತ್ತು? ಏನಿತ್ತು? ಆಕಾಲದ ಜನರ ಮನೋಧೋರಣೆ ಯಾವ ರೀತಿಯಾಗಿತ್ತು? ಎಂಬ ಅಂಶವು
ಮನದಟ್ಟಾಗುತ್ತದೆ.
ಇತ್ತೀಚಿನ ದಿನಮಾನಗಳಲ್ಲಿ ಹಸ್ತಪ್ರತಿಗಳ ಸಂರಕ್ಷಣೆಯತ್ತ
ಯಾರೂ ಹೆಚ್ಚಾಗಿ ಆಸಕ್ತಿ ವಹಿಸುತ್ತಿಲ್ಲ ಎಂಬ ಕಳವಳ ವ್ಯಕ್ತವಾಗಿದೆ. ಇಂದಿನ ಎಷ್ಟೋ ಮನೆಗಳಲ್ಲಿ ವೈಯಕ್ತಿಕ
ಸಂಗ್ರಹದ ರೂಪದಲ್ಲಿ ಹಸ್ತಪ್ರತಿಗಳು ಅಡಗಿ ಕುಳಿತಿದ್ದು ಧೂಳು ತಿನ್ನುತ್ತಾ ಹಾಗೂ ಇನ್ನಿತರ ಕಾರಣಗಳಿಂದಾಗಿ
ಶಿಥಿಲಾವಸ್ಥೆಯನ್ನು ತಲುಪುವಂತಿವೆ. ಹೀಗಾಗಿ ಇವತ್ತು
ಈ ಮೂರು ಜಿಲ್ಲೆಗಳನ್ನೊಳಗೊಂಡ ಹಾಗೆ ನಾಡಿನ ಹಸ್ತಪ್ರತಿಗಳ ಕುರಿತು ಆಗಬೇಕಾದ ಮಹತ್ತರ ಕಾರ್ಯಗಳೆಂದರೆ
1. ಮೂರು
ಜಿಲ್ಲೆಯಾದ್ಯಂತ ಹಸ್ತಪ್ರತಿಗಳು ಇರುವಿಕೆಯನ್ನು ಗುರುತಿಸುವ, ಅನ್ವೇಷಿಸುವ ಕಾರ್ಯ ಆಗಬೇಕಾಗಿದೆ.
2. ಹಸ್ತಪ್ರತಿಗಳ
ಐತಿಹಾಸಿಕ ಮಹತ್ವದ ಬಗೆಗೆ ಜನತೆಯಲ್ಲಿ ಅರಿವು ಮೂಡಿಸಬೇಕಾದರೆ ಶಿಥಿಲಾವಸ್ಥೆಯನ್ನು ತಲುಪಿರುವ ಹಸ್ತಪ್ರತಿಗಳು
ಪೂರ್ಣನಾಶವಾಗುವ ಮೊದಲೇ ಸಂಗ್ರಹಿಸಿ ಅತ್ಯಾಧುನಿಕ ವಿಧಾನಗಳನ್ನು ಬಳಸಿ ಸಂರಕ್ಷಿಸಬೇಕಾಗಿದೆ.
3. ಸಂಗ್ರಹಿಸಿದ
ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ ಸಿದ್ಧಪಡಿಸಬೇಕಾಗಿರುವುದು. ನನಗೆ ತಿಳಿದ ಮಟ್ಟಿಗೆ ಜಲ್ಲೆಯಲ್ಲಿ,
ಶ್ರೀ.ಸಿದ್ಧಗಂಗಾ ಮಠದ ಹಸ್ತಪ್ರತಿ ಭಂಡಾರದ ಹಸ್ತಪ್ರತಿಗಳು ಹಾಗೂ ತಿಪಟೂರು ತಾಲೋಕ್ ಹೊನ್ನವಳ್ಳಿ
ಕರಿಸಿದ್ಧೇಶ್ವರ ಮಠದ ಹಸ್ತಪ್ರತಿಗಳ ಸೂಚಿಕರಣ ನಡೆದಿದೆ.
4. ಇಲ್ಲಿಯ
ಸಮಗ್ರ ಹಸ್ತಪ್ರತಿಗಳ ಪುಷ್ಟಿಕೆಗಳನ್ನು ಸಿದ್ಧಪಡಿಸಿ ಪ್ರಕಟಿಸುವುದು. ಹಸ್ತಪ್ರತಿ ಲಿಪಿಕಾರರ ಸ್ವರೂಪ-ವೈವಿಧ್ಯತೆಯನ್ನು
ಅಧ್ಯಯನ ಮಾಡುವುದು. ಹಸ್ತಪ್ರತಿಗಳ ಪುಷ್ಟಿಕೆಗಳ ಆದಿ-ಅಂತ್ಯಗಳಲ್ಲಿಯ ಮಾಹಿತಿಗಳನ್ನು ಸಾಹಿತ್ಯೇತರ
ಅಧ್ಯಯನದ ನೆಲೆಗಟ್ಟಿನಲ್ಲಿ ನೋಡಬೇಕಾಗಿರುವುದು.
ಇಲ್ಲಿಯವರೆಗೂ ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಸಂಪಾದನೆ ಯಂತಹ ಪಾರಂಪರಿಕ
ಕೆಲಸಗಳ ಮೂಲಕ ಬಹುಪಾಲು ಪಠ್ಯ ಕೇಂದ್ರಿತ ಸಂಪಾದನೆಯ ಪ್ರಕ್ರಿಯೆಗಳೇ ಹೆಚ್ಚಾಗಿ ನಡೆದಿರುವುದು.ಇಂದು
ಈ ಪ್ರಕ್ರಿಯೆಯ ಜೊತೆಗೆ ಹಸ್ತಪ್ರತಿಗಳನ್ನು ಸಾಮಾಜಿಕ, ಸಾಂಸ್ಕೃತಿಕ ನೆಲೆಗಟ್ಟುಗಳ ಮೂಲಕವೂ ಅಧ್ಯಯನ
ಕೈಗೊಳ್ಳಬೇಕಾಗಿದೆ. ಈ ಮಾತು ಕೇವಲ ಈ ಮೂರು ಜಿಲ್ಲೆಯ ಹಸ್ತಪ್ರತಿಗಳಿಗಷ್ಟೇ ಅಲ್ಲ, ನಾಡಿನ ಎಲ್ಲಾ
ಹಸ್ತಪ್ರತಿಗಳಿಗೂ ಅನ್ವಯಿಸಿ ಹೇಳಬೇಕಾಗಿದೆ.
ಹಸ್ತಪ್ರತಿ ಅಧ್ಯಯನವು ತನ್ನ ಅರಿವಿನ ಕಾಲಘಟ್ಟದಲ್ಲಿ ತನ್ನನ್ನು ಸಕಾಲಿಕಗೊಳಿಸುವುದು ಅನಿವಾರ್ಯವಾಗಿದೆ. ಮಾಹಿತಿ
ತಂತ್ರಜ್ಞಾನಯುಗದ ಸಂದರ್ಭದಲ್ಲಿ ಹಸ್ತಪ್ರತಿಗಳ ಅನ್ವಯಕತೆ ಮತ್ತು ಸಂವಹನ ಕ್ರಿಯಾ ವಿಧಾನಗಳು ಬದಲಾಗ
ಬೇಕಾಗಿದೆ. ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ ಮತ್ತು ಸಂಯೋಜನೆಯಷ್ಟೇ ಅದರ ಮಾಹಿತಿಯನ್ನು ಹರಡುವುದು ಮುಖ್ಯವಾಗಿದೆ. ನಮ್ಮ ದೇಸಿ
ಜ್ಞಾನ ಪರಂಪರೆಯನ್ನು ಮರು ಶೋಧಿಸಿ ಆ ಮೂಲಕ ನಮ್ಮ ಸಂಸ್ಕೃತಿಯ ಅಸ್ತಿತ್ವವನ್ನು ಸದೃಢಪಡಿಸ ಬೇಕಾಗಿದೆ. ಹಸ್ತಪ್ರತಿ ಭಂಡಾರಗಳಲ್ಲಿ ಸಂಗ್ರಹಗೊಂಡು
ಅನಾದಾರಣೆಗೆ ಒಳಗಾಗಿರುವ ಉಪೇಕ್ಷಿತ ಹಸ್ತಪ್ರತಿಗಳೆಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡಿರುವ ಶಾಸ್ತ್ರಕೃತಿಗಳನ್ನು
ಜರೂರಾಗಿ ಸಂಪಾದಿಸಿ ಪ್ರಕಟಗೊಳಿಸುವುದರ ಮೂಲಕ ಅವುಗಳಲ್ಲಿ ಹುದುಗಿರುವ ದೇಸಿಪರಂಪರೆಯನ್ನು ಶೋಧಿಸಿ
ಜನತೆಯ ಕಲ್ಯಾಣಕ್ಕೆ ಅನ್ವಯವಾಗುವಂತಿದ್ದರೆ ಅವುಗಳನ್ನು ಬಳಸಿಕೊಳ್ಳಬಹುದಾಗಿದೆ. ಪ್ರಸ್ತುತ ಹಸ್ತಪ್ರತಿಗಳಲ್ಲಿರುವ
ಅಪಾರ ವಿಷಯ ಸಾಮಗ್ರಿಗಳನ್ನು, ಮಾಹಿತಿಗಳನ್ನು ಆಧುನಿಕ ಚಿಂತನಾ ಕ್ರಮಕ್ಕೆ ಅಳವಡಿಸಬೇಕಾಗಿದೆ. ಹಸ್ತಪ್ರತಿಗಳಲ್ಲಿಯ
ಮಾಹಿತಿ ಸಂಪತ್ತನ್ನು ಸಮಕಾಲೀನ ಮೌಲ್ಯಗಳೊಂದಿಗೆ ಸಮೀಕರಿಸುವುದು, ಪ್ರಾಚೀನ ನಂಬಿಕೆ, ವಿಚಾರ, ಮೌಲ್ಯಗಳನ್ನು
ಸಂವಾದಕ್ಕೆ ಪ್ರೇರೇಪಿಸುವುದು, ಆಯಾ ಜ್ಞಾನಶಾಸ್ತ್ರಗಳ ಪಾರಂಪರಿಕ ಹಾಗೂ ಸಮಕಾಲೀನ ಕ್ಷೇತ್ರಗಳ ಮೌಲ್ಯ
ವಿವೇಚನೆ ಮಾಡುವುದು, ಹಸ್ತಪ್ರತಿ ಸಂಪತ್ತನ್ನು ಇಂದಿನ ಬದುಕಿಗೆ ಉಪಯೋಗವಾಗುವ ರೀತಿಯಲ್ಲಿ ಅನ್ವಯಿಸುವುದು.
ಆಧುನಿಕ ವೈಜ್ಞಾನಿಕ- ವೈಚಾರಿಕ ಚಿಂತನೆಗಳ ನೆಲೆಯಲ್ಲಿ ಪಾರಂಪರಿಕ ಮೌಲ್ಯಗಳನ್ನು ಅದ್ದಿ ತೆಗೆದು ಅವುಗಳ
ಸಾರ್ವತ್ರಿಕ ಮಹತ್ವಗಳನ್ನು ದಾಖಲಿಸುವುದರ ಮೂಲಕ ಅವುಗಳ
ಪರಿಚಯವಿಲ್ಲದ ಆಧುನಿಕ ಸಮಾಜಕ್ಕೆ ಹಸ್ತಪ್ರತಿಗಳ ಮಹತ್ವದ ಬಗೆಗೆ ಅರಿವು ಮೂಡಿಸ ಬೇಕಾಗಿದೆ. ಹಸ್ತಪ್ರತಿಗಳಲ್ಲಿ
ಅಡಗಿರುವ ಮಾಹಿತಿ ಕಣಜವನ್ನು ಹಾಗೂ ಸಾಂಸ್ಕೃತಿಕ ಸಂಪತ್ತನ್ನು ವಿವಿಧ ಮಗ್ಗುಲಗಳಿಂದ ಅಧ್ಯಯನ ಮಾಡಿ
ಅವುಗಳ ಶಾಸ್ತ್ರೀಯ ಜ್ಞಾನಕ್ಷೇತ್ರದ ಮಹತ್ವವನ್ನು
ಆಧುನಿಕ ಜಗತ್ತಿಗೆ ಪರಿಚಯಿಸ ಬೇಕಾಗಿದೆ.
ಪರಾಮರ್ಶನ ಗ್ರಂಥಗಳು
1.ಕಲ್ಪಸಿರಿ
( ಸಂ: ಬಿ.ನಂಜುಂಡಸ್ವಾಮಿ)
ಅಖಿಲಭಾರತ
69ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಪುಟ
ಕನ್ನಡ ಸಾಹಿತ್ಯ
ಪರಿಷತ್ತು, ಬೆಂಗಳೂರು. 2೦೦2.
2.ಎಸ್.ಶಿವಣ್ಣ:
ಬಿಡುಮುತ್ತುಗಳು( ಸಂಶೋಧನ ಲೇಖನಗಳು)
ಕನ್ನಡ ಸಾಹಿತ್ಯ
ಪರಿಷತ್ತು, ಬೆಂಗಳೂರು. 2೦೦4.
3.ಸಿ.ನಾಗಭೂಷಣ
: ಸಾಹಿತ್ಯ-ಸಂಸ್ಕೃತಿ ಹುಡುಕಾಟ
ಅಮೃತವರ್ಷಿಣಿ
ಪ್ರಕಾಶನ, ರಾಯಚೂರು, 2೦೦2
4.ಮಹಾನಾಡು
ಪ್ರಭುಗಳು (ಪ್ರಧಾನ ಸಂಪಾದಕರು: ಎಂ.ಎಂ.ಕಲಬುರ್ಗಿ)
ನೊಳಂಬ ವೀರಶೈವ
ಸಂಘ, ಬೆಂಗಳೂರು, 1995+.
೫.ಹಸ್ತಪ್ರತಿ
ಅಧ್ಯಯನದ ಹೊಸ ಸಾಧ್ಯತೆಗಳು
(ಸಂ:ವೀರೇಶ
ಬಡಿಗೇರ, ಎಸ್.ಆರ್. ಚೆನ್ನ ವೀರಪ್ಪ)
ಪ್ರಸಾರಾಂಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ, 2೦೦3
೬. ಮಣಿಹ
ಸಂ: ಎಂ.ವಿ.ಸೀತಾರಾಮಯ್ಯ
ಬಿ.ಎಂ.ಶ್ರೀ. ಪ್ರತಿಷ್ಠಾನ, ಬೆಂಗಳೂರು. 197೦
೭. ವೀರಶೈವ
ಹಸ್ತಪ್ರತಿ ಪುಷ್ಪಿಕೆಗಳು ಸಂ: ಎಸ್.ಶಿವಣ್ಣ
ವೀರಶೈವ ಅಧ್ಯಯನ ಸಂಸ್ಥೆ, ಗದಗ 1994
೮. ಸಿ.ನಾಗಭೂಷಣ.
ಸಾಹಿತ್ಯ-ಸಂಸ್ಕೃತಿ ಅನ್ವೇಷಣೆ
ಸಿ.ವಿ.ಜಿ.ಪಬ್ಲಿಕೇಷನ್, ಬೆಂಗಳೂರು, 2೦೦7
೯. ಹಸ್ತಪ್ರತಿ ಅಧ್ಯಯನ ಸಂ: ಎಫ್.ಟಿ.ಹಳ್ಳಿಕೇರಿ,
ಸಂ.4, ಸಂ.5, ಜುಲೈ-ಡಿಸೆಂಬರ್, ಪ್ರಸಾರಾಂಗ, ಕ.ವಿ.ವಿ.
ಹಂಪಿ
೧೦. ಬಿ.ಕೆ.ಹಿರೇಮಠ,
ಕನ್ನಡ ಹಸ್ರಪ್ರತಿಗಳು ಒಂದು ಅಧ್ಯಯನ
ವೀರಶೈವ ಅಧ್ಯಯನ ವೇದಿಕೆ, ಮುಧೋಳ, 1992
೧೧. ಕನ್ನಡ
ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ ಸಂಪುಟಗಳು 1 ರಿಂದ 9
ಮೈಸೂರು ವಿಶ್ವವಿದ್ಯಾಲಯ, ಮೈಸೂರು.
೧೨. ಕನ್ನಡ
ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ ಸಂ. ಬಿ.ಎಸ್.ಸಣ್ಣಯ್ಯ
ಶ್ರುತಕೇವಲಿ ಎಜುಕೇಶನ್ ಟ್ರಸ್ಟ್, ಶ್ರವಣ ಬೆಳಗೊಳ
1997
೧೩. ಎಫ್.ಟಿ.ಹಳ್ಳಿಕೇರಿ, ಕಂಠಪತ್ರ, ವಿಕಾಸ ಪ್ರಕಾಶನ
ಹೊಸಪೇಟೆ, 2೦೦3
೧೪. ಮಹಾನಾಡ ಪ್ರಭುಗಳು ಸಂ: ಕೆ.ಆರ್.ಬಸವರಾಜು, ಎಸ್.ಪರಮಶಿವಮೂರ್ತಿ
ನೊಳಂಬ ವೀರಶೈವ
ಸಂಘ, ಬೆಂಗಳೂರು, ೧೯೯೫